Friday, March 30, 2007

ಪದ್ಯ ಸಲೀಸು ಅಂದು­ಕೊಂ­ಡಿ­ರುವ ಯುವ­ಕ­ವಿ­ಗ­ಳಿಗೆ...


ಯಾರೋ ಹೇಳಿ­ದರು; ಹೊಸ­ದಾಗಿ ಬರೆ­ಯಲು ಶುರು­ಮಾ­ಡಿ­ರುವ ಲೇಖ­ಕ­ರೆಲ್ಲ ಪದ್ಯ ಬರೆ­ಯು­ತ್ತಾರೆ. ಒಂದು ಲೇಖ­ನ­ವನ್ನೋ ಕತೆ­ಯನ್ನೋ ಬರೆ­ಯಲು ತುಂಬ ಸಮಯ ಬೇಕಾ­ಗು­ತ್ತದೆ. ಆದರೆ ಪದ್ಯ ಹಾಗಲ್ಲ, ಎಲ್ಲೆಂ­ದ­ರಲ್ಲಿ ಥಟ್ಟನೆ ಬರೆ­ದು­ಬಿ­ಡ­ಬ­ಹುದು. ದೀಪಾ­ವಳಿ ವಿಶೇ­ಷಾಂ­ಕಕ್ಕೋ, ಇನ್ಯಾ­ವುದೋ ಸಂಕ­ಲ­ನಕ್ಕೋ ಪದ್ಯ ಕೇಳಿ­ದರೆ ಕೂಡಲೇ ಕಳಿ­ಸು­ತ್ತಾರೆ. ಅದೇ ಕತೆ­ಯನ್ನೋ ಪ್ರಬಂ­ಧ­ವನ್ನೋ ಕೇಳಿ­ದರೆ ತಡ­ಮಾ­ಡು­ತ್ತಾರೆ.


ಕವಿ­ತೆ­ಯೆಂ­ದರೆ ಸಂಗ್ರ­ಹ­ವಾಗಿ ಹೇಳು­ವುದು ಅನ್ನುವ ನಂಬುಗೆ ಹೊಸ­ಕಾ­ಲದ ಕವಿ­ಗ­ಳ­ಲ್ಲಿದೆ. ಬಹುಶಃ ಅದು ಎಲ್ಲ ಕಾಲದ ತರುಣ ಕವಿ­ಗ­ಳಲ್ಲೂ ಇತ್ತೆಂದು ಕಾಣು­ತ್ತದೆ. ಕವಿ­ತೆಯ ಮೂಲಕ ಏನು ಹೇಳ­ಬೇಕು ಅನ್ನು­ವುದು ಕೂಡ ಮೊದಲೇ ನಿರ್ಧಾ­ರ­ವಾ­ಗಿ­ಬಿ­ಟ್ಟಂತೆ ಅನೇ­ಕರು ಬರೆ­ಯು­ತ್ತಾರೆ. `ಸ­ಬ್ಜೆಕ್ಟು ರೆಡಿ­ಯಾ­ಗಿದೆ. ಬರೆ­ಯೋದು ಮಾತ್ರ ಬಾಕಿ. ಒಂದೆ­ರಡು ದಿನ­ದಲ್ಲಿ ಬರೆ­ದು­ಕೊ­ಡು­ತ್ತೇನೆ' ಅಂತ ಅನೇಕ ಕವಿ­ಗಳು ಹೇಳು­ವು­ದುಂಟು. ಆಧು­ನಿಕ ಸಂದ­ರ್ಭ­ದಲ್ಲಿ ನಾನು ಸ್ವತಂ­ತ್ರಳು ಅಂದು­ಕೊಂ­ಡಿ­ರುವ ಮಹಿಳೆ ಸೂಕ್ಪ್ಮಾ­ವಾಗಿ ಹಿಂದಿನ ಕಾಲ­ಕ್ಕಿಂತ ಹೆಚ್ಚು ಶೋಷ­ಣೆಗೆ ಒಳ­ಗಾ­ಗಿ­ದ್ದಾಳೆ. ಇದರ ಬಗ್ಗೆ ಒಂದು ಪದ್ಯ ಬರೀ­ತಿ­ದ್ದೀನಿ ಅಂತ ಕವಿ­ಯೊ­ಬ್ಬರು ಸಂದ­ರ್ಶ­ನ­ವೊಂ­ದ­ರಲ್ಲಿ ಹೇಳಿ­ಕೊಂ­ಡಿ­ದ್ದರು.


ಹಾಗೆ ಹೇಳಿ ಕೇಳಿ ಬರು­ವುದು ಕವಿ­ತೆ­ಯಾ­ಗು­ತ್ತದಾ? ಕವಿ­ತೆಯ ಮೂಲಕ ಏನನ್ನು ಹೇಳ­ಬೇಕೋ ಅದನ್ನು ನಾಲ್ಕು ಸಾಲಲ್ಲೋ ಒಂದು ಪ್ಯಾರಾ­ದಲ್ಲೋ ಹೇಳಿ­ಬಿ­ಡ­ಬ­ಹು­ದಾ­ದರೆ ಕವಿತೆ ಯಾಕೆ ಬೇಕು? ಅದನ್ನು ಹಾಗೇ ಮಾತಲ್ಲೇ ಹೇಳಿ ಸುಖ­ವಾ­ಗಿ­ರ­ಬ­ಹು­ದಲ್ಲ? ಪದ್ಯ­ವೆಂ­ಬುದು ಕವಿ­ತೆ­ಯೆಂ­ಬುದು ಒಂದು ಮಾಧ್ಯಮ ಮಾತ್ರವಾ? ಅದು ಕೇವಲ ಒಂದು ಪ್ರಕಾ­ರವಾ? ಹಾಗೆ ಹೇಳು­ವು­ದನ್ನು ಹೀಗೆ ಹೇಳುವ ಒಂದು ವಿಧಾ­ನವಾ?


ಬಾವಿ­ಯೊ­ಳ­ಗಡೆ ನೀರು; ಮೇಲ­ಕ್ಕಾವಿ;
ಆಕಾ­ಶ­ದು­ದ್ದಕೂ ಅದರ ಕಾರಣ ಬೀದಿ;
ಕಾರ್ಮು­ಗಿಲ ಖಾಲಿ ಕೋಣೆಯ ಅಗೋ­ಚರ ಬಿಂದು
ನವ­ಮಾ­ಸವೂ ಕಾವ ಭ್ರೂಣ­ರೂಪಿ-
ಅಂತ­ರ­ಪಿ­ಶಾಚಿ ಗುಡು­ಗಾಟ, ಸಿಡಿ­ಲಿನ ಕಾಟ-
ಭೂತ­ರೂ­ಪಕ್ಕೆ ಮಳೆ ವರ್ತ­ಮಾನ.
ಅಗೆ­ದುತ್ತ ಗದ್ದೆ­ಗಳ ಕರ್ಮ­ಭೂ­ಮಿಯ ವರಣ;
ಭತ್ತ­ಗೋ­ಧುವೆ ಹಣ್ಣು ಬಿಟ್ಟ ವೃಂದಾ­ವನ.
ಗುಡಿ­ಗೋ­ಪು­ರ­ಗಳ ಬಂಗಾರ ಶಿಖರ.


ಯಾವ ಮೇಷ್ಟ್ರು ಕೂಡ ಈ ಸಾಲು­ಗ­ಳನ್ನು ಅರ್ಥ­ಮಾ­ಡಿ­ಸ­ಲಾರ. ಪದ್ಯ ಅರ್ಥ­ವಾ­ಗು­ವು­ದಕ್ಕೆ ಇರುವ ಸಂಗ­ತಿಯೇ ಅಲ್ಲ. ಅದು ಅನು­ಭ­ವ­ಕ್ಕಷ್ಟೇ ದಕ್ಕುವ ಅಕ್ಪ­ರ­ಲೋಕ. ಏನೂ ಹೇಳದೇ ಎಲ್ಲ­ವನ್ನೂ ಹೇಳು­ವುದು ಕವಿ­ತೆಯ ಜಾಯ­ಮಾನ. ಏನಾ­ದರೂ ಹೇಳ­ಲಿ­ಕ್ಕೆಂದೇ ಹೊರ­ಟರೆ ಅದು ಸುತ್ತೋ­ಲೆ­ಯಾ­ಗು­ತ್ತದೆ. ಕರ­ಪತ್ರ ವಾಗು­ತ್ತದೆ. ವರ­ದಿಯೋ ಟೀಕೆಯೋ ಹೇಳಿ­ಕೆಯೋ ಆಗು­ತ್ತದೆ. ಪದ್ಯ ಅದಾ­ವುದೂ ಅಲ್ಲ. ಅದು ಮಂತ್ರದ ಹಾಗೆ ವೇದ್ಯ­ವಾ­ಗು­ವಂ­ಥದ್ದು. ಅರ್ಥ­ವನ್ನು ಮೀರಿದ್ದು.


ಮೇಲೆ ಸೂಚಿ­ಸಿದ ಗೋಪಾ­ಲ­ಕೃಷ್ಣ ಅಡಿ­ಗರ `ಭೂತ' ಕವ­ನ­ವನ್ನು ಓದುತ್ತಾ ಹೋಗಿ; ಹುಟ್ಟು, ಸಾವು, ವಿಷಾದ, ಅವ­ಮಾನ, ತಲ್ಲಣ, ನಿರಾಶೆ ಎಲ್ಲವೂ ಸುತ್ತಿ ಸುಳಿದು ಹೋಗು­ತ್ತವೆ. ಕೊನೆ­ಯಲ್ಲಿ ಕಣ್ಣ­ಮುಂದೆ ಅನೂ­ಹ್ಯ­ವಾದ ಚಿತ್ರ­ವೊಂ­ದನ್ನು ಅನಾ­ಯಾ­ಸ­ವಾಗಿ ಮೂಡು­ತ್ತದೆ. ಭೂತ ರೂಪಕ್ಕೆ ಮಳೆ ವರ್ತ­ಮಾನ ಅನ್ನುವ ಸಾಲಿಗೆ ಬರುವ ಹೊತ್ತಿಗೆ ಸಾವು ಬದು­ಕಾಗಿ ಮಾರ್ಪಾಟು ಹೊಂದಿ­ರು­ತ್ತದೆ.
ಇದು ಎಲ್ಲ­ರಿಗೂ ಹೀಗೇ ಆಗ­ಬೇ­ಕೆಂ­ದಿಲ್ಲ. ಕವಿ­ತೆಯ ಶಕ್ತಿಯೇ ಅದು. ಅದು ಒಬ್ಬೊ­ಬ್ಬ­ರನ್ನು ಒಂದೊಂದು ತೆರ­ನಾಗಿ ಸ್ಪರ್ಶಿ­ಸು­ತ್ತದೆ;


ಮೈಯೆಲ್ಲ ಗಡ­ಗು­ಟ್ಟು­ತ್ತ­ಲಿ­ದೆಯೇ?
ಬೆದ­ರಿ­ಸಿ­ದ­ವ­ರಾರು?
ಮುಖ ತೊಯ್ದಿದೆ, ಕಣ್ಣೀ­ರಿನ ಹನಿ­ಯನು
ಹರಿ­ಯಿ­ಸಿ­ದ­ವ­ರಾರು?
ಯಾರೂ ಕಾಣದ ಆ ಮರೆ­ಯೊ­ಳಗೆ
ಕುಲು­ಕುಲು ಎನು­ತಿದೆ ಮೆಲು­ನ­ಗೆಯ ನೊರೆ
ನಿನ್ನೆಯ ಹಾಡಿನ ದನಿ­ಯಿನ್ನೂ ಗುಣು-
ಗುಣಿ­ಸುವ ಮಾಯೆ­ಯೆಂ­ಥದು ಹೇಳು.
ಏ ಗಾಳಿ,
ಆ ಕತೆ­ಯ­ನೊ­ರೆದು ಮುಂದಕೆ ತೆರಳು


**­*­**


ಕವಿ­ತೆ­ಯೆಂ­ದರೆ ಬದುಕು. ಬರೆ­ಯ­ದಿ­ರು­ವುದು ಸಾವು. ಅಡಿ­ಗ­ರೊಮ್ಮೆ ಹೇಳಿ­ದರು;ಕಾವ್ಯ ನನಗೆ ಜೀವ­ನ್ಮ­ರ­ಣದ ಪ್ರಶ್ನೆ. ಬಹುಶಃ ಅದೇ ಸರಿ. ಹಸಿ­ವೆಯ ಹಾಗೆ ಕಾಡ­ದಿ­ದ್ದರೆ, ದಾಹದ ಹಾಗೆ ಕಂಗೆ­ಡಿ­ಸದೇ ಇದ್ದರೆ, ಕಾಮದ ಹಾಗೆ ತಪಿ­ಸದೇ ಇದ್ದರೆ, ಸಾವಿನ ಹಾಗೆ ಮೋಹಿ­ಸದೇ ಹೋದರೆ ಪದ್ಯ ಬರೆ­ಯ­ಬಾ­ರದು. ಕವಿತೆ ಬರೆದು ಕವಿ­ಯಲ್ಲ ಅನ್ನಿ­ಸಿ­ಕೊ­ಳ್ಳುವ ಬದಲು, ಬರೆ­ಯದೇ ಒಂದಲ್ಲ ಒಂದು ದಿನ ಕವಿ­ಯಾ­ದೇನು ಅಂತ ಕಾಯು­ವುದು ಮೇಲು.


ಕಾವ್ಯಕ್ಕೆ ವಿಚಿ­ತ್ರ­ವಾದ ಸಮ­ಸ್ಯೆ­ಗ­ಳಿವೆ. ಅನಂ­ತ­ಮೂ­ರ್ತಿ­ಯ­ವರ ಬರ­ಹ­ಗ­ಳಲ್ಲಿ ಆಗುವ ಹಾಗೆ, ಎಷ್ಟೋ ಸಾರಿ ಗದ್ಯಕ್ಕೆ ಪದ್ಯದ ತಳ­ಮ­ಳ­ಗ­ಳನ್ನು ಹೊತ್ತು­ಕೊ­ಳ್ಳುವ ಶಕ್ತಿ­ಯಿದೆ. ಆದರೆ ಪದ್ಯ ಹಾಗಲ್ಲ, ಅದು ಗದ್ಯದ ಭಾರಕ್ಕೆ ಮುಳು­ಗು­ತ್ತದೆ. ಜಯಂತ ಕಾಯ್ಕಿಣಿ ಬರೆದ ಅನೇಕ ಕವಿ­ತೆ­ಗ­ಳನ್ನೂ ಇದಕ್ಕೆ ಉದಾ­ಹ­ರ­ಣೆ­ಯಾಗಿ ಕೊಡ­ಬ­ಹುದು.


ಕವಿ­ಗಳ ಸಮ­ಸ್ಯೆ­ಯೆಂ­ದರೆ ಅವರು ಗೊತ್ತಿ­ರುವ ಸಂಗ­ತಿ­ಗಳ ಕುರಿತು ಬರೆ­ಯು­ತ್ತಾರೆ. ಗೊತ್ತಿ­ರು­ವು­ದರ ಕುರಿತು ಬರೆ­ದದ್ದು ಯಾವತ್ತೂ ಕವಿತೆ ಆಗ­ಲಾ­ರದು. ಬರೆ­ಯುವ ಹೊತ್ತಿಗೆ ಕವಿಗೂ ಗೊತ್ತಿ­ಲ್ಲದೇ ಹೋದದ್ದು ಮಾತ್ರ ಕಾವ್ಯ­ವಾಗಿ ಒಡ­ಮೂ­ಡು­ತ್ತದೆ. ಮಹಾ­ಭಾ­ರ­ತವೋ ರಾಮಾ­ಯ­ಣವೋ ಕಾವ್ಯ­ವಾ­ಗು­ವುದ ಅದ­ರ­ಲ್ಲಿ­ರುವ ಕಥ­ನದ ಅಂಶ­ದಿಂ­ದಲ್ಲ, ಬೆರ­ಗು­ಗೊ­ಳಿ­ಸುವ ಕವಿಗೂ ಗೊತ್ತಿ­ಲ್ಲದ ಸತ್ಯ­ಗಳ ಅನಾ­ವ­ರ­ಣ­ದಿಂದ.


ಗೊತ್ತಿ­ಲ್ಲದ್ದು ಗೊತ್ತಾ­ಗುವ ಕ್ಪಣಕ್ಕೆ ಒಳ್ಳೆಯ ಉದಾ­ಹ­ರಣೆ ಲಂಕೇ­ಶರ ಅವ್ವ;


ಕಾಲು ಶತ­ಮಾ­ನದ ಬಳಿಕ;
ಜಗ­ಳ­ಗಂ­ಟಿ­ಯಾ­ಗಿದ್ದ ಈ ಅವ್ವ ಈಗ ನನ್ನಲ್ಲಿ
ವಿನಯ ಮತ್ತು ಮೌನ.


ಹಾಗೆ ಗೊತ್ತಿ­ಲ್ಲದೇ ಹುಟ್ಟಿದ್ದು ರಾಮಾ­ಯಣ. ಗೊತ್ತಿ­ಲ್ಲದೇ ಹುಟ್ಟಿದ್ದು ಕುಮಾ­ರ­ವ್ಯಾ­ಸನ ಭಾರತ. ಬೇಂದ್ರೆಯ ಎಷ್ಟೋ ಕವಿ­ತೆ­ಗ­ಳಿಗೆ ಗೊತ್ತಿಲ್ಲ, ಗುರಿ­ಯಿಲ್ಲ. ತುಂಬ ಸರ­ಳ­ವಾಗಿ ಹೇಳ­ಬೇ­ಕೆಂ­ದರೆ ಕೆಎಸ್ ನರಸಿಂಹಸ್ವಾಮಿ ಬರೆ­ದದ್ದೂ ಅದೇ;
ಗೋರಿ­ದೀ­ಪದ ಕೆಳಗೆ ಹಲ್ಲಿ ಐದರ ಹರಕೆ
ತಳ­ವಿ­ರದ ತಟ್ಟೆ­ಯಲ್ಲಿ ಐದು ಗೆಜ್ಜೆ
ಪಳ­ಯು­ಳಿಕೆ ಕನ­ಸಾ­ಚೆ­ಗೈದು ಬಣ್ಣದ ಹಸೆಗೆ
ಬಂದ ಸುಂದರಿ ನಿನಗೆ ಎಷ್ಟು ಲಜ್ಜೆ?


ಮಾತಿ­ನಲ್ಲಿ ಹುಟ್ಟಿದ್ದು ಗದ್ಯ, ಆತ್ಮ­ದಲ್ಲಿ ಹುಟ್ಟಿದ್ದು ಪದ್ಯ; ಒಳ್ಳೆಯ ಕವಿ­ಗಾಗಿ ಮಾತಿ­ಗಾಗಿ ತಡ­ಕಾ­ಡು­ತ್ತಾನೆ. ಥಟ್ಟನೆ ಹೊರ­ಹೊ­ಮ್ಮಿ­ದರೆ ಅದು ಚಿಕ್ಕ­ಮ­ಗ­ಳೂರು ಕಣ್ಣ್ ಸಾಹಿ­ತ್ಯ­ವಾ­ಗು­ತ್ತ­ದೆಯೇ ಹೊರತು ಕವಿತ್ವ ಆಗು­ವು­ದಿಲ್ಲ. ಕವಿ ಏನನ್ನೋ ಹೇಳ­ಹೊ­ರ­ಟಾಗ ಅದು ಅನು­ಭ­ವವೂ ಆಗಿ­ರು­ವು­ದಿಲ್ಲ, ಅನು­ಭಾ­ವವೂ ಆಗಿ­ರು­ವು­ದಿಲ್ಲ. ಅವೆ­ರ­ಡನ್ನೂ ಮೀರಿದ ಇನ್ನೇನೋ ಆಗಿ ಅವ­ನಿಗೇ ಗೊತ್ತಾ­ಗದ ಹಾಗೆ ಬರೆ­ಸಿ­ಕೊಂಡು ಬಿಡು­ತ್ತದೆ;


Nor dread nor hope attend
A dying animal;
A man awaits his end
Dreading and hoping all
Many times he died
Many times rose again
A great man in his pride
confronting murderous man
casts derision upon
Supersession of breath;
He knows death to the bone
Man has created death.


ಯೇಟ್ಸನ ಈ ಪದ್ಯದ ಸೊಬ­ಗನ್ನು ನೋಡಿ. ಇಲ್ಲಿಯ ಒಂದು ಅಕ್ಪ­ರ­ವನ್ನು ಕಿತ್ತರೂ ಕೂಡ ಇಡೀ ಪದ್ಯ ಅರ್ಥ ಕಳ­ಕೊ­ಳ್ಳು­ತ್ತದೆ. ಸಾವಿನ ನಿಗೂ­ಢ­ತೆ­ಯನ್ನು ಮೀರಿ ನಿಲ್ಲುವ ಪ್ರಯತ್ನ ಇದಲ್ಲ. ಕೇವಲ ಚಿಂತ­ನೆ­ಗ­ಳನ್ನೇ ಹರ­ಳು­ಗ­ಟ್ಟಿ­ರುವ ಈ ಸಾಲು­ಗ­ಳನ್ನು ಒಟ್ಟಾಗಿ ಓದಿ­ಕೊಂ­ಡಾಗ ಅವು ಕೇವಲ ಚಿಂತ­ನೆ­ಗ­ಳಷ್ಟೇ ಆಗಿ ಉಳಿ­ಯು­ವು­ದಿಲ್ಲ. ಕೊನೆ­ಯಲ್ಲಿ ಅರಿ­ವಾ­ಗುವ ಭಾವ ಇಡೀ ಕವಿ­ತೆ­ಯನ್ನು ಬೆಳ­ಕಾ­ಗಿ­ಸು­ತ್ತದೆ. ಮನುಷ್ಯ ತನ್ನ ಯೋಚ­ನೆ­ಯಲ್ಲಿ, ಬುದ್ಧಿ­ವಂ­ತಿ­ಕೆ­ಯಲ್ಲಿ, ಜ್ಞಾನ­ದಲ್ಲಿ ಸಾಯುವ ಮೊದಲೇ ಸಾವನ್ನು ಕಾಣ­ಬಲ್ಲ. ಅದರ ಭೀಕ­ರ­ತೆ­ಯನ್ನು ಅರಿ­ಯ­ಬಲ್ಲ. ಆದರೆ ಪ್ರಾಣಿ­ಗ­ಳಿಗೆ ಸಾವೆಂ­ಬುದೇ ಇಲ್ಲ. ಯಾಕೆಂ­ದರೆ ಅವು­ಗ­ಳಿಗೆ ಸಾವಿನ ಬಗ್ಗೆ ಏನೇನೂ ಗೊತ್ತಿಲ್ಲ!
ಒಂದು ಕವಿ­ತೆ­ಯಲ್ಲಿ ಒಬ್ಬ ಕವಿಯ ವ್ಯಕ್ತಿತ್ವ ಅಭಿ­ವ್ಯ­ಕ್ತ­ಗೊ­ಳ್ಳು­ತ್ತದೆ ಅನ್ನು­ವುದೂ ಸುಳ್ಳು. ಕವಿ ಯಾವುದು ಅಲ್ಲವೋ ಅದು ಕವಿ­ತೆ­ಯಾಗಿ ಮೂಡು­ತ್ತದೆ. ಹೀಗಾಗಿ ಬೇಂದ್ರೆ ಹೇಳಿದ್ದು ನಿಜ; ಬೇಂದ್ರೆ­ಯೊ­ಳಗೆ ಒಬ್ಬ ಕವಿ­ಯಿ­ದ್ದಾನೆ. ಆ ಕವಿ ಬೇಂದ್ರೆಯೇ ಆಗಿ­ರ­ಬೇ­ಕಿಲ್ಲ. ಹಾಗೆ ನೋಡಿ­ದರೆ ಯಾವ ಲೇಖ­ಕನೂ ಇಡಿ­ಯಾಗಿ ಅವ­ನೊ­ಬ್ಬನೇ ಆಗಿ­ರು­ವು­ದಿಲ್ಲ. ಆತ ತನ್ನ ಕಾಲದ ಅಸಂ­ಖ್ಯಾತ ರೂಪ­ಕ­ಗಳ, ಪ್ರತಿ­ಮೆ­ಗಳ, ತಲ್ಲ­ಣ­ಗಳ ಒಟ್ಟು ಮೊತ್ತ.


ದೇವರು ರುಜು ಮಾಡಿ­ದನು; ಕವಿ ಪರ­ವ­ಶ­ನಾ­ಗುವ ಅದ ನೋಡಿ­ದನು!


ಅಲ್ಲಿ ಬರೀ ಕುವೆಂಪು ಮಾತ್ರ ಇದ್ದಿ­ದ್ದರೆ ಬಹುಶಃ ಅವರು ಪರ­ವ­ಶ­ರಾ­ಗು­ತ್ತಿ­ರ­ಲಿಲ್ಲ; ಬರೀ ನೋಡು­ತ್ತಿ­ದ್ದರು.

(ಚಿತ್ರ- ಅಪಾರ.)

ನನ್ನ ಸಂಕಲನವೊಂದಕ್ಕೆ ಅಪಾರ ವಿನ್ಸಾಸಗೊಳಿಸಿದ್ದು.

Wednesday, March 28, 2007

ಎರಡು ಬಯಲುಗಳಲ್ಲೂ ಒಂದೆ ಮೌನ....

ಮನುಷ್ಯನ ಅಂತರಾಳದ ದುರಂತ ಇದು;ತನಿಗಿರುವುದು ಒಂದೇ ಬಾಲ್ಯ, ಒಂದೆ ಹರೆಯ. ಆತ ಕೇವಲ ಒಂದೇ ಒಂದು ಸಾರಿ ತೀವ್ರವಾಗಿ ಪ್ರೀತಿಸಬಲ್ಲ. ಎರಡನೆಯ ಸಲದ ಪ್ರೀತಿ, ಕೇವಲ ಆಕರ್ಷಣೆಯೋ ಅನುಕೂಲವೋ, ಅಹಂಕಾರವೋ, ತೆವಲೋ ಆಗಿರುತ್ತದೆ. ಮೊದಲನೆಯ ಸಲದ್ದು ಪ್ರೀತಿ, ಆಮೇಲಿನದ್ದೆಲ್ಲ ನಟನೆ.ದು ಸ್ನೇಹಕ್ಕೂ ಒಪ್ಪುವ ಮಾತು. ಬಾಲ್ಯದಲ್ಲಿ ಕುದುರಿದ ಸ್ನೇಹದಷ್ಟು ತೀವ್ರವಾಗಿ ನಡುವಯಸ್ಸಿನ ಸ್ನೇಹ ಗಾಢವಾಗುವುದಿಲ್ಲ. ಬಾಲ್ಯದ ಗೆಳೆತನ ಮುಂಜಾವದ ಬಿಸಿಲಿನ ಹಾಗೆ ಶುರುವಾಗಿ, ದಿನದ ಏರಿಳಿತಗಳನ್ನು ಕಂಡು ಮುಸ್ಸಂಜೆಯಲ್ಲಿ ಇಂಗುತ್ತದೆ. ಆದರೆ ನಡುವಯಸ್ಸಿನ ಗೆಳೆತನ ಸಂಜೆಯ ಬಿಸಿಲಿನ ಹಾಗೆ. ಜೊತೆಗಿದ್ದಷ್ಟು ಹೊತ್ತು ಮಾತ್ರ ಆಪ್ಯಾಯಮಾನ.

ಇದು ಯೌವನ ಮತ್ತು ನಡುವಯಸ್ಸಿನ ಮಾತಾಯಿತು. ವೃದ್ಧಾಪ್ಯ ಮತ್ತು ಬಾಲ್ಯ ಹೇಗಿರುತ್ತದೆ. ಬಾಲ್ಯ ಸಾವಿನ ಕಲ್ಪನೆಯಾಗಲೀ, ನೆರಳಾಗಲೀ ಸುಳಿಯದ ಅಮರತ್ವದ ಅವ. ಮುಪ್ಪು ಈ ಜನ್ಮದಲ್ಲಾಗಲೀ, ಮರುಜನ್ಮದಲ್ಲಾಗಲೀ ನಂಬಿಕೆ ಉಳಿಸಿಕೊಳ್ಳಲಾಗದ ಕಡುಕಷ್ಟದ ಕಾಲ. ಬಾಲ್ಯದ ಗೆಳೆತನದ ಹಾಗೆ, ಮುಪ್ಪಿನ ಸ್ನೇಹ ಕೂಡ ಸೆಳೆಯುತ್ತದಾ? ಅರುವತ್ತರ ನಂತರದ ಸಂಬಂಧ ಹೇಗಿರುತ್ತದೆ? ವೃದ್ಧಾಪ್ಯದ ತಲ್ಲಣ, ಆತಂಕ ಮತ್ತು ಭರವಸೆಯಿಲ್ಲದ ಗಳಿಗೆಗಳನ್ನು ಮುಂದಿಟ್ಟುಕೊಂಡು ಕುಳಿತವನ ಕಣ್ಣಲ್ಲಿ ಜಗತ್ತು ಹೇಗೆ ಕಾಣಿಸುತ್ತದೆ.

ನೆನಪಾಗುತ್ತದೆ ಹಾಯಿಕು;

1
ದಟ್ಟವಾಗುತ್ತಿದೆ ಇರುಳು
ಬತ್ತದ ಕಣಜದಲ್ಲಿ
ಮೌನ
ಮಿರುಗುವ ಕ್ಪೀರಪಥ

ಕಣ್ಣಕೊಳದಲ್ಲಿ
ನಾಳೆ ನಾಲಗೆ ರುಚಿಯಾಗುವ
ಬಾತುಕೋಳಿಗಳ ಕವಕವ


ಪಾರಿಜಾತದ
ಹೂಗಳ ನಡುವೆ ಗುಬ್ಬಚ್ಚಿಗಳ ಕಣ್ಣಾಮುಚ್ಚಾಲೆ
ಶಿಶಿರದ ಏಕಾಂತದಲ್ಲಿ
ನಮ್ಮಪ್ಪನ ಮುದಿಗಣ್ಣಿಗೆ
ಮಂಜುಗಟ್ಟಿದ ಗಿರಿಶಿಖರ

ಸೂರ್ಯ ಗಡಗಡ
ಶಿಶಿರದಲ್ಲಿವನು ಕೊನೆಗೂ
ಮುಟ್ಟುತ್ತಾನಾ ಆಚೆದಡ*********
ಚಂದ್ರಶೇಖರ ಕಂಬಾರರ ಕವಿತೆಗಳ ಪೈಕಿ ಮತ್ತೆ ಮತ್ತೆ ಕಾಡುವ ಪದ್ಯವೊಂದಿದೆ. ಬದುಕು ಸಾವಿನ, ಪ್ರಸಿದ್ಧಿ ಮತ್ತು ಹತಾಶೆಯ, ಸತ್ಯ ಮತ್ತು ಭ್ರಮೆಯ ಜಗತ್ತನ್ನು ಅದರಷ್ಟು ಸಮರ್ಥವಾಗಿ ಹಿಡಿದಿಟ್ಟ ಮತ್ತೊಂದು ಕವಿತೆ ಕನ್ನಡದಲ್ಲಿಲ್ಲ. ನಮ್ಮ ಎಲ್ಲಾ ಚಟುವಟಿಕೆಗಳನ್ನೂ ಅದು ಅಣಕಿಸುತ್ತದೆ. ಮೇಲುಮೇಲಿನ ತತ್ವಜ್ಞಾನವನ್ನು, ಆಳಕ್ಕಿಳಿಯಲಾರದ ನಮ್ಮ ಸೋಗಲಾಡಿತನವನ್ನು, ಎದುರಿಸಲಾಗದ ದಿಗಿಲನ್ನು ಈ ಕವಿತೆ ಬೊಟ್ಟು ಮಾಡಿ ತೋರಿಸುತ್ತದೆ. ಪದ್ಯ ಶುರುವಾಗುವುದು ಹೀಗೆ;

ಹೊಂಡದ ದಂಡೆಯ ಮೇಲೆ ಒಂದು ಮರ
ಹೊಂಡದಲ್ಲಿ ಒಂದು ಮರ
ಮೇಲೆ ನಿಜವಾದ ಮರೆಳಗೆ ಬಿಂಬಿಸಿದ ಮರ

ಕೊಳದ ದಡದಲ್ಲಿರುವ ಮರ ಹಾಗೂ ಕೊಳದಲ್ಲಿ ಮೂಡಿದ ಅದರ ಪ್ರತಿಬಿಂಬವನ್ನಿಟ್ಟುಕೊಂಡು ಬರೆಯುತ್ತಾರೆ ಕಂಬಾರ. ಹೊಂಡದ ಮೇಲಿರುವ ಮರ ನಾವು, ಕೊಳದಲ್ಲಿ ಪ್ರತಿಬಿಂಬಿಸಿದ್ದು ನಮ್ಮ ಸುಪ್ತ ಮನಸ್ಸು ಅಂತಿಟ್ಟುಕೊಂಡರೆ ಹಾದಿ ಸುಗಮ. ಹಾಗಿಟ್ಟುಕೊಳ್ಳಲೇಬೇಕು ಅಂತೇನಿಲ್ಲ. ಬೇರೆ ಅರ್ಥಗಳನ್ನೂ ಅವರವರ ಭಾವಕ್ಕೆ ತಕ್ಕಂತೆ ಕಂಡುಕೊಳ್ಳಬಹುದು. ಅದು ಬದುಕು ಮತ್ತು ಸಾಹಿತ್ಯವೂ ಆಗಬಹುದು. ಏನೋ ಒಂದು!

ಮುಂದಿನ ಸಾಲುಗಳಲ್ಲಿ ಕಂಬಾರ ಇವೆರಡನ್ನೂ ವಿಸ್ತರಿಸುತ್ತಾ, ಅನ್ವಯಿಸುತ್ತಾ ಹೋಗುತ್ತಾರೆ;

ತೆರೆ ಎದ್ದಾಗ ಒಂದು ನಡುಗುತ್ತದೆ
ಇನ್ನೊಂದು ನಗುತ್ತದೆ

ತೆರೆ ಏಳದ ಹೊರತು ಯಾವುದು ನಿಜವಾದ ಮರ, ಯಾವುದು ಬಿಂಬಿಸಿದ ಮರ ಅನ್ನುವುದು ಥಟ್ಟನೆ ಹೊಳೆಯದು. ಅದರ ಚಿತ್ರ ಬರೆದು ತೆಲೆಕೆಳಗಾಗಿಸಿದರೆ ಎರಡೂ ಒಂದೇ ಥರ ಕಾಣಿಸೀತು. ಆದರೆ ಸತ್ವ ಗೊತ್ತಾಗಬೇಕಿದ್ದರೆ ತೆರೆ ಏಳಬೇಕು.
ತೆರೆ ಎದ್ದಾಗ ನಡುವುದು ಮರವಲ್ಲ, ನೀರು. ನೀರು ಕಂಪಿಸಿದರೆ ಮರವೂ ಕಂಪಿಸೀತು. ಕಂಪಿಸುವುದು ನೀರೊಳಗಿನ ಮರ, ದಡದ ಮೇಲಿರುವ ಮರ ನಗುತ್ತದೆ. ಆ ನಗು ಕೂಡ ಹೊಂಡದಲ್ಲಿನ ಮರದಲ್ಲಿ ಬಿಂಬಿಸುತ್ತದಾ?

ಹಾಗೆ ಬಿಂಬಿಸದೇ ಹೋದರೆ ಅದು ಬಿಂಬಿಸಿದ ಮರ ಹೇಗಾದೀತು? ಪ್ರತಿಬಿಂಬದಲ್ಲಿ ಆದ ಬದಲಾವಣೆ ಮೂಲದಲ್ಲೂ ಆಗದೇ ಹೋದರೆ ಎರಡಕ್ಕೂ ಸ್ವತಂತ್ರ ಅಸ್ತಿತ್ವವಿದೆ ಅನ್ನೋಣವೇ? ಬಿಂಬ-ಪ್ರತಿಬಿಂಬಗಳ ಇಂಬುಗೆಡಿಸಿದ್ದು ಹಾಗಾದರೆ, ಮರವೇ, ಮಾಧ್ಯಮವೇ? ಕವಿಯ ಮರೆವೇ?

ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒಂದೇ ಈ ಮರಗಳಿಗೆ

ಈ ಮೂಲಭೂತ ಎಚ್ಚರದೊಂದಿಗೆ ಕವಿ ನಮ್ಮ ಮುಂದೆ ಮತ್ತೊಂದಷ್ಟು ವಿಚಿತ್ರ ಸತ್ಯಗಳನ್ನು ಇಡುತ್ತಾರೆ;

ನೀನೊಂದು ಮರ ಹತ್ತಿದರೆನ್ನೊಂದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ

ಇದು ನೋಡಿ ಸಮಸ್ಯೆ. ನಾವು ಇಹದಲ್ಲಿ ತಲೆಮೇಲಾಗಿ ಹತ್ತುತ್ತಿದ್ದೇವೆ ಅಂದುಕೊಳ್ಳುವ ಹೊತ್ತಿಗೇ ಇನ್ನೆಲ್ಲೋ ತಲೆಕೆಳಗಾಗಿ ಇಳಿಯುತ್ತಿರುತ್ತೇವೆ. ನಮ್ಮನ್ನು ಎತ್ತರಕ್ಕೆ ಕೊಂಡೊಯ್ದ ಏಣಿ ಕೂಡ ಮತ್ತೆಲ್ಲೋ ನಮ್ಮನ್ನು ಕೆಳಗೆ ಇಳಿಸಿರುತ್ತದೆ. ಹತ್ತುವುದು ಕೂಡ ಇಳಿಯುವುದೇ ತಾನೇ!ಂದು ಪುಟ್ಟ ಉದಾಹರಣೆ ತೆಗೆದುಕೊಳ್ಳಿ. ಯಾವ ಖ್ಯಾತಿಯಾಗಲೀ, ಪ್ರಸಿದ್ಧಿಯಾಗಲೀ ಇಲ್ಲದೇ ಇದ್ದ ದಿನಗಳಲ್ಲಿ ಇಡೀ ಊರೇ ಅವನದ್ದಾಗಿರುತ್ತದೆ. ಆತ ಎಲ್ಲಿ ಬೇಕಾದರೂ ಓಡಾಡಬಲ್ಲ, ಯಾರ ಜೊತೆ ಬೇಕಿದ್ದರೂ ಮಾತಾಡಬಲ್ಲ, ಎಲ್ಲಾದರೂ ಇರಬಲ್ಲ, ಹೇಗಾದರೂ ಬದುಕಬಲ್ಲ. ಆದರೆ ಅವನು ಸ್ಟಾ್ ಆದ ಅಂತಿಟ್ಟುಕೊಳ್ಳಿ. ಕೋಟ್ಯಂತರ ರುಪಾಯಿ ಸಂಪಾದಿಸಿದ ಅಂತಿಟ್ಟುಕೊಳ್ಳಿ. ಅವನ ಜಗತ್ತು ಇದ್ದಕ್ಕಿದ್ದಂತೆ ಕುಗ್ಗಿಹೋಗುತ್ತದೆ. ಅಷ್ಟಗಲದ ಕೋಣೆ, ಕಪ್ಪುಗಾಜಿನ ಕಾರು, ಯಾರನ್ನೂ ಮಾತಾಡಿಸಲಾರದ, ನೋಡಲಾರದ ಸ್ಥಿತಿ. ಬೆರೆಯುವುದಂತೂ ಆಗದ ಮಾತು.ದು ನಿಜವಾದ ಮರವೋ ಬಿಂಬಿಸಿದ ಮರವೋ? ಅವನು ಹತ್ತಿದ್ದಾನೋ ಇಳಿದ್ದಿದಾನೋ?

ಮ್ಯಾಲೆ ನೀಲಿಯ ಬಯಲು
ಕೆಳಗದರ ನಕಲು
ಎರಡು ಬಯಲುಗಳಲ್ಲು ಒಂದೆ ಮೌನ

ಮೌನವನ್ನು ಮೀರುವ ಬಗೆಯೆಂತು? ಅದನ್ನು ಮೀರುವುದು ನಮ್ಮ ಉದ್ದೇಶವೋ, ಗುರಿಯೋ, ಅನಿವಾರ್ಯವೋ, ಕರ್ಮವೋ, ಕರ್ತವ್ಯವೋ? ಪ್ರಶ್ನೆಗಳನ್ನು ಬದಿಗಿಟ್ಟು ಕಂಬಾರರು ಆತ್ಮಕ್ಕೆ ಲಗ್ಗೆ ಹಾಕುತ್ತಾರೆ:

ಹತ್ತುತ್ತಾ ಹತ್ತುತ್ತಾ ಗಾಳಿಯಾಗುತ್ತಿ ಅಂತ ತಿಳಿ
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂಳಿಯೋದು ನಿನ್ನ ಕೈ ಮೀರಿದ್ದು.

ಹತ್ತಿದವರು ಸ್ವರ್ಗ ಸೇರುವರೆಂದು ಸುದ್ದಿ
ನಮಗದು ಖಾತ್ರಿಯಿಲ್ಲ
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೋಬಹುದು.

ಅಲ್ಲಿಗೆ ಕತೆ ಮುಗಿಯುತ್ತದೆ. ಕವಿತೆ ಮತ್ತೊಂದು ಸ್ತರಕ್ಕೆ ಏರುತ್ತದೆ. ಏರುತ್ತಾ ನಮ್ಮನ್ನೂ ಜೊತೆಗೇ ಕರೆದೊಯ್ಯುತ್ತದೆ. ಇಡೀ ಬದುಕಿನ ಸಾವಿನ ಅವರೆಡರೂ ಕೂಡಿಕೊಂಡಿರುವ ಕತ್ತಲುಬೆಳಕಿನ ಗಳಿಗೆಯನ್ನು ಅವರು ಹಿಡಿದಿಟ್ಟು ಹೇಳುತ್ತಾರೆ;ಕತೆಯ ದುರಂತದೋಷ ಯಾವುದೆಂದರೆ;

ನಿಜವಾದ ಮರ ಮತ್ತು
ನೀರಿನ ಮರವೆರಡೂ ಒಂದಾದ ಸ್ಥಳ
ಮಾಯವಾಗಿರೋದು

ಬದುಕು-ಸಾವು ಸಂಸುವ ಜಾಗದ ಹಾಗೆ, ಏಕಾಂತ ಮತ್ತು ಲೋಕಾಂತ ಮುಟ್ಟಿರುವ ಜಾಗ ದೂರವಾಗಿರುವ ಹಾಗೆ, ಕತ್ತಲು ಬೆಳಕು ಕೂಡದೆಯೂ ಕೂಡಿದ ಹಾಗೆ. ಮುಟ್ಟಿಯೂ ಮುಟ್ಟದ ಹಾಗೆ. ಕತ್ತಲು ಮುಟ್ಟಿದರೆ ಬೆಳಕು ಮೈಲಿಗೆಯಾಗುವ ಹಾಗೆ. ಬೆಳಕು ಮುಟ್ಟಿದರೆ ಕತ್ತಲೆ ಸಾಯುವ ಹಾಗೆ!

ಹಾಗಿದ್ದರೆ ನಾವೇನು ಮಾಡಬೇಕು..
ಅದಕ್ಕೇ ಹೇಳುತ್ತೇನೆ ಗೆಳೆಯಾ
ಮ್ಯಾಲೆ ಹತ್ತಿದರೂ
ತಲೆ ಕೆಳಗಾಗಿ ನೇತಾಡುವುದು ತಪ್ಪಿದ್ದಲ್ಲ
ಮ್ಯಾಲಿಂದ ಜಿಗಿದು ತಳಮುಟ್ಟಿ
ಮಾಯವಾದ ನೆಲವ
ಹುಡುಕಬೇಕೋ ಹುಡುಕಿ ಬದುಕಬೇಕೋ..

ಹಾಗಂತ ಹುಡುಕುತ್ತಾ ಹೊರಟರೆ, ಯಾರಾದರೂ ಮಾತಾಡಿಯಾರು ಎಂದು ಕಾದರೆ, ಎಲ್ಲೋ ದನಿ ಕೇಳೀತು ಎಂದು ಕಾತರಿಸಿದರೆ ಎರಡು ಬಯಲುಗಳಲ್ಲೂ ಒಂದೆ ಮೌನ.

Tuesday, March 27, 2007

ಕಾಡಮೂಲಕವೇ ಪಥ ಆಗಸಕ್ಕೆ...ಒಂದು ಮಳೆಗಾಲದ ಸಂಜೆ ಬೆಂಗಳೂರಿನಿಂದ ಹೊರಟು, ಮೈಸೂರಿಗೆ ಹೋಗಿ, ಅಲ್ಲಿಂದ ಗೋಪಾಲಸ್ವಾಮಿ ಬೆಟ್ಟ ಬಳಸಿಕೊಂಡು ಗುಂಡ್ಲುಪೇಟೆಗೊಂದು ಸುತ್ತುಹೊಡೆದು, ರಸ್ತೆಯುದ್ದಕ್ಕೂ ಆನೆಯ ಊರಿಗೆ ಬಾರದಂತೆ ಮಾಡಿದ ಕಂದಕಗಳನ್ನು ನೋಡುತ್ತಾ, ಅಲ್ಲೆಲ್ಲೋ ಕೃಪಾಕರ ಮತ್ತು ಸೇನಾನಿ ಮನೆಮಾಡಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾ ಬಂಡೀಪುರದ ಕಡೆ ಹೊರಟಿದ್ದೆವು. ರಜಾದಿನಗಳಲ್ಲಿ ಸುತ್ತಾಡುವುದಕ್ಕೆ ಕಾಡಿಗಿಂತ ಸೊಗಸಾದ ಜಾಗ ಬೇರೊಂದಿಲ್ಲ. ಮಕ್ಕಳ ರಜಾ ಬಂದ ತಕ್ಪಣ, ದೇವಸ್ಥಾನ, ರೆಸಾರ್ಟು ಅಂತ ಹೊರಡುವವರು ಸ್ವಲ್ಪ ನಿಧಾನಿಸಿ ಕಾಡಿನ ಕಡೆಗೆ ಮುಖ ಮಾಡಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಕಾಡಿನ ಬಗ್ಗೆ ಅನನ್ಯ ಪ್ರೀತಿ ಹುಟ್ಟುವ ಹಾಗೆ ಮಾಡಿಬಿಟ್ಟರೆ ಅವರಿಗೆ ಮತ್ತೇನೂ ಕಲಿಸುವ ಅಗತ್ಯವಿಲ್ಲ.


ಬಂಡೀಪುರ, ನಾಗರಹೊಳೆ, ದಾಂಡೇಲಿ, ಬನ್ನೇರುಘಟ್ಟ, ಮುತ್ತೆತ್ತಿ, ಬನ್ನೇರುಘಟ್ಟ ಮುಂತಾದ ಅಭಯಾರಣ್ಯಗಳಿಗೆ ಹೋಗುವುದರಲ್ಲಿ ಅಂಥ ಮಜವೇನಿಲ್ಲ. ಅಲ್ಲಿ ನಾವೇ ಪ್ರಾಣಿಗಳೇನೋ ಎಂಬಂತೆ ಒಂದು ಬಸ್ಸಿನಲ್ಲಿ ಎಲ್ಲರನ್ನೂ ಒಟ್ಟಿ, ಕಾಡಿನಲ್ಲಿ ಸುತ್ತಿಸಿ ವಾಪಸ್ಸು ಕರೆದುಕೊಂಡು ಬರುತ್ತಾರೆ. ಅದನ್ನೆ ಸಫಾರಿ ಅಂತ ಕರೆಯುತ್ತಾರೆ. ಬನ್ನೇರುಘಟ್ಟದಲ್ಲಂತೂ ನೂರಾಹತ್ತು ರುಪಾಯಿ ಕೊಟ್ಟರೆ, ಮಿನಿಬಸ್ಸಲ್ಲಿ ಮೂವತ್ತು ಮಂದಿಯನ್ನು ಪೇರಿಸಿಕೊಂಡು ಕಾಡಿನಲ್ಲೊಂದು ಸುತ್ತು ಕರೆದುಕೊಂಡು ಹೋಗುತ್ತಾರೆ. ಅದಕ್ಕೆ ಗ್ರಾಂಡ್ ಸಫಾರಿ ಅನ್ನುವ ಹೆಸರುಬೇರೆ. ದಾರಿಯುದ್ದಕ್ಕೂ ಹುಲಿ, ಸಿಂಹಗಳು ನಮ್ಮ ಕನ್ನಡ ಸಿನಿಮಾಗಳ ಹಿರಿಯ ನಟರ ಹಾಗೆ ಆಕಳಿಸುತ್ತಾ ಬಿದ್ದುಕೊಂಡಿರುತ್ತವೆ. ಅವನ್ನು ಕಿಟಕಿಯಿಂದ ಇಣುಕಿ ನೋಡಿ ಸಂತೋಷಪಟ್ಟುಕೊಳ್ಳಬೇಕು.


ಆದರೆ ಕಾಡಿನ ಖುಷಿಯಿರುವುದು ಪ್ರಾಣಿಗಳಲ್ಲಷ್ಟೇ ಅಲ್ಲ. ನೀವು ಅಪಾರ ದೈವಭಕ್ತರಾಗಿದ್ದರೂ ಸುಬ್ರಹ್ಮಣ್ಯಕ್ಕೋ ಧರ್ಮಸ್ಥಳಕ್ಕೋ ಹೊರನಾಡಿಗೋ ಶೃಂಗೇರಿಗೋ ಹೋದಾಗ ನಿಮ್ಮ ಇಷ್ಟ ದೈವದ ದರ್ಶನ ಮಾಡಿಕೊಂಡ ನಂತರ ಒಂದು ಸುತ್ತು ಕಾಡಲ್ಲೂ ಅಡ್ಡಾಡುವುದನ್ನು ಮರೆಯಬೇಡಿ. ನಮ್ಮ ಎಲ್ಲಾ ದೇವರುಗಳೂ ಕಾಡುಪಾಲಾದವರೇ. ಹೀಗಾಗಿ ದಟ್ಟವಾದ ಕಾಡಿನ ಸೊಬಗನ್ನು ಎಲ್ಲಿ ಬೇಕಾದರೂ ಅನುಭವಿಸಬಹುದು. ಆ ಕಾಡುಗಳಲ್ಲಿ ಅಂಥ ಯಾವ ಅಪಾಯವೂ ಇರುವುದಿಲ್ಲ. ಕಾಡಿನ ನಡುವಿರುವ ಜಾಗಕ್ಕೆ ಹೋದಾಗಲೂ ರೂಮಲ್ಲಿ ಮಲಗಿಕೊಂಡು ಸ್ಟಾರ್ ಪ್ಲಸ್ ನೋಡುವುದು ಯಾವ ಕರ್ಮ?


ಕಾಡಿಗೊಂದು ವಿಶಿಷ್ಟ ಮೌನವಿದೆ. ವಿಚಿತ್ರ ಉಲ್ಲಾಸವಿದೆ. ಅಪರೂಪದ ಸ್ತಬ್ಧತೆಯಿದೆ. ಅದು ಹೊರಡಿಸುವ ಸಂಗೀತ ಕೂಡ ಅಷ್ಟೇ ವಿಶಿಷ್ಟ. ಬಜಗೋಳಿ ಎಂಬ ಊರಿನಿಂದ ಶೃಂಗೇರಿಗೆ ದಾಟಿಕೊಳ್ಳುವ ಮುಂಚೆ ಸಿಗುವ ಎಸ್ ಕೆ ಬಾರ್ಡರ್ ಎಂಬ ಪುಟ್ಟ ಊರಲ್ಲಿ, ಆಗುಂಬೆಯ ಘಾಟಿಯಲ್ಲಿ, ಚಾರ್ಮಾಡಿಯ ಓರೆಕೋರೆ ರಸ್ತೆಗಳಲ್ಲಿ, ಶಿರಾಡಿ ಘಾಟಿಯ ನಿರಾತಂಕ ಮೌನದಲ್ಲಿ, ಮಡಿಕೇರಿಯಿಂದ ಸುಳ್ಯಕ್ಕೆ ಇಳಿಯುವ ಸಂಪಾಜೆಯ ಸಂಭ್ರಮದಲ್ಲಿ ಬದುಕು ಸಂಪನ್ನಗೊಳ್ಳುವುದನ್ನು ಅನುಭವಿಸಿಯೇ ತಿಳಿಯಬೇಕು.


ಕಾಡು ದಿನಕ್ಕೆ ಮೂರು ರೂಪಗಳಲ್ಲಿ, ವರುಷಕ್ಕೆ ಮೂರು ಅವತಾರಗಳಲ್ಲಿ ನಮ್ಮನ್ನು ಎದುರುಗೊಳ್ಳುತ್ತದೆ. ಬೆಳಗ್ಗೆ ನೋಡಿದ ಕಾಡು ಮಧ್ಯಾಹ್ನದ ಹೊತ್ತಿಗೆ ತನ್ನ ನಿಗೂಢತೆಯನ್ನು ಕಳಕೊಂಡು ತುಂಬ ವರುಷ ಸಂಸಾರ ಮಾಡಿದ ಸಂಗಾತಿಯ ಹಾಗಾಗಿಬಿಟ್ಟಿರುತ್ತದೆ. ಸಂಜೆಯ ಹೊತ್ತಿಗೆ ಅದು ಮತ್ತೆ ಬಣ್ಣ ಬದಲಾಯಿಸಿಕೊಂಡು ಆಕಾಶದಿಂದ ಓರೆಯಾಗಿ ಕಾಡಿನೊಳಗೆ ಬಾಣದ ಹಾಗೆ ನುಗ್ಗಲು ಯತ್ನಿಸುವ ಇಳಿಸಂಜೆಯ ಬೆಳಕಿನ ಜೊತೆ ಸೇರಿಕೊಂಡು ವಿಚಿತ್ರ ವಿನ್ಯಾಸಗಳನ್ನು ಸೃಷ್ಟಿಸಿಬಿಡುತ್ತದೆ. ರಾತ್ರಿಯಂತೂ ಕಾಡು ಸಾವಿನ ಹಾಗೆ ಕಾಣಿಸುವುದಕ್ಕೆ ಶುರುವಾಗುತ್ತದೆ. ಆದರೆ ಅದು ಆಕರ್ಷಣೆ ಹುಟ್ಟಿಸುವ ಸಾವು. ಆಳವಾದ ಹೊಳೆಯ ನಡುವಲ್ಲಿ ಹೊಕ್ಕುಳಿನ ಹಾಗೆ ಸೆಳೆಯುವ ಚಕ್ರತೀರ್ಥದ ಆಕರ್ಷಣೆಯೇ ಕಾಡಿಗೂ ಬಂದುಬಿಡುತ್ತದೆ. ಅವಳೊಮ್ಮೆ ಹೆರಳ ಕೆದರಿ, ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ, ದೂರದಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ..


*****


ಇಂಥ ಕಾಡಿಗೆ ನುಗ್ಗುವ ಮುಂಚೆ ನೀವು ಮರೆಯಬೇಕಾದ ಕೆಲವು ವ್ಯಕ್ತಿಗಳಿದ್ದಾರೆ. ಅಂಥವರ ಪೈಕಿ ಪರಿಸರವಾದಿಗಳು ಮತ್ತು ವೈಲ್ಡ್ ಲೈಫ್ ಕನ್ಸರ್ವೇಟರ್ಸ್. ಇವರ ಕಾಯಿಲೆ ಒಂದೇ. ಕಾಡನ್ನು ತಾವೇ ಗುತ್ತಿಗೆಗೆ ತೆಗೆದುಕೊಂಡಂತೆ ವರ್ತಿಸುತ್ತಾರೆ. ನಾವು ಒಮ್ಮೆ ಬಂಡೀಪುರಕ್ಕೆ ಆತುಕೊಂಡಂತಿರುವ ಬುಶ್ ಬೆಟ್ಟದ ಕಾಡುಗಳಲ್ಲಿ ಅಲೆದಾಡುತ್ತಿದ್ದಾಗ ಕೆಮರಾ ಹಿಡಿದುಕೊಂಡು ವಿಪರೀತ ಸದ್ದು ಮಾಡುವ ಒಂದು ತರಕಲಾಂಡಿ ಜೀಪಿನಲ್ಲಿ ಬಂದ ಮೂವರು ಕಾಡಿನಲ್ಲಿ ಅಲೆದಾಡುವುದು ಎಂಥ ಅಪಾಯ ಎಂದು ಅಕಾರವಾಣಿಯಿಂದ ಉಪದೇಶ ಮಾಡಲು ಆರಂಭಿಸಿದ್ದರು. ತಮಾಷೆಯೆಂದರೆ ಅವರ ಜೀಪಿನ ಸದ್ದು, ಅದರಿಂದ ಹೊರಹೊಮ್ಮುತ್ತಿದ್ದ ಹೊಗೆ ಮತ್ತು ಅವರ ಆರ್ಭಟಕ್ಕಿಂತ ದೊಡ್ಡ ಪರಿಸರ ಹಾನಿ ಆಗುವುದು ಸಾಧ್ಯವೇ ಇರಲಿಲ್ಲ. ನಮ್ಮ ಕಾಡುಗಳಲ್ಲಿ ಸುತ್ತಾಡಿ, ಅರಣ್ಯ ಇಲಾಖೆಯ ಸಖ್ಯ ಬೆಳೆಸಿಕೊಂಡು ಪ್ರಾಣಿಗಳ ಫೋಟೊ ತೆಗೆದು ಅವನ್ನು ಮಾರಿ ಹೊಟ್ಟೆಹೊರೆಯುವವರೂ ಇವತ್ತು ವನ್ಯಸಂರಕ್ಪಕರು. ಕೆಎಂ ಚಿನ್ನಪ್ಪನವರಂಥ ನಿಜವಾದ ಕಾಳಜಿಯುಳ್ಳವರ ಜೊತೆ, ಉಲ್ಲಾಸ ಕಾರಂತರಂಥ ನಿಜವಾದ ಪ್ರೀತಿ ಉಳ್ಳವರ ನಡುವೆಯೇ ಇದನ್ನೆ ದಂಧೆ ಮಾಡಿಕೊಂಡಿರುವವರೂ ಇದ್ದಾರೆ. ಬಡವರ ಪಾಲನೆ ಮಾಡುವ ಎನ್ ಜಿ ಓಗಳ ಹಾಗೆ, ಸಿಟಿಯಲ್ಲಿ ಕೂತುಕೊಂಡು ಬಿಯ್ ಹೀರುತ್ತಾ ಲ್ಯಾಪ್ ಟಾಪಲ್ಲಿ ಕಾಡಿನ ಬಗ್ಗೆ ವಿಚಿತ್ರ ವರದಿ ತಯಾರಿಸಿ ಅದನ್ನು ವಿದೇಶಿ ಸಂಸ್ಥೆಗಳಿಗೆ ಕಳುಹಿಸಿ ಅಲ್ಲಿಂದ ಗ್ರಾಂಟ್ ತರಿಸಿಕೊಂಡು ಪ್ರಾಣಿ ರಕ್ಪಣೆ ಮಾಡುವವರ ತಂಡವೂ ಇದೆ. ಅಂಥವರಿಂದ ದೂರ ನಿಂತು ನೋಡಿದಾಗಲೇ ಕಾಡಿನ ಸೌಂದರ್ಯ ಮನಸ್ಸಿಗೆ ತಾಕುತ್ತದೆ.


******


ಹುಲಿಯ ಬಗ್ಗೆ, ತಮ್ಮ ಕಾಡಿನ ಅನುಭವಗಳ ಬಗ್ಗೆ ಉಲ್ಲಾಸ ಕಾರಂತರು ಮೂರು ಪುಸ್ತಕ ಬರೆದಿದ್ದಾರೆ. ಮೂರನ್ನೂ ನವಕರ್ನಾಟಕದ ರಾಜಾರಾಮ್ ಪ್ರಕಟಿಸಿದ್ದಾರೆ. ಈ ಮೂರೂ ಪುಸ್ತಕಗಳು ಕೂಡ ಒಂದೆ ಗುಟುಕಿಗೆ ಓದಿ ಮುಗಿಸುವಂಥ ಚೆಂದದ ಕೃತಿಗಳು.ಕೆಲವು ವರುಷಗಳ ಹಿಂದೆ ನಾಗರಹೊಳೆಯ ಅನುಭವಗಳನ್ನು ಕೆಎಂ ಚಿನ್ನಪ್ಪ ಬರೆದಿದ್ದರು. ಅದನ್ನು ನಿರೂಪಿಸಿದವರು ಟಿ. ಎಸ್. ಗೋಪಾಲ್. ತೇಜಸ್ವಿಯವರ ಸರಳ ಶೈಲಿಯನ್ನು ಹೋಲುವ ಭಾಷೆ ಟಿ. ಎಸ್. ಗೋಪಾಲ್ ಅವರಿಗೂ ತಕ್ಕಮಟ್ಟಿಗೆ ಸಿದ್ಧಿಸಿದೆ. ಕೆಲವು ಕಡೆ ಉದ್ದೇಶಪೂರ್ವಕವಾಗಿ ಸರಳವಾಗಿದೆ ಅನ್ನಿಸಿದರೂ ಓದುವುದಕ್ಕೆ ತೊಂದರೆ ಆಗುವುದಿಲ್ಲ. ಅವರು ಉಲ್ಲಾಸ ಕಾರಂತರ ಅನುಭವಗಳನ್ನು ಅಕ್ಪರ ರೂಪಕ್ಕೆ ತಂದಿದ್ದಾರೆ. ಇದೊಂದು ಅನುಭವ ಕೇಳಿ;


ಮುಳುಗುವ ಸಂಜೆಯ ಸೂರ್ಯನ ಕಿರಣಗಳು ಕಾಡಿನ ಎಲೆಗಳ ನಡುವೆ ತೂರಿಬಂದು ಹುಲಿಯ ಮೈಯನ್ನು ಹೊಳೆಯ ತಾಮ್ರವರ್ಣಕ್ಕೆ ಪರಿವರ್ತಿಸಿದ್ದವು. ಮೇಲುಭಾಗದ ಚರ್ಮ ಕಡುಕಿತ್ತಳೆ ಬಣ್ಣದ್ದಾದರೆ, ಕೆಳಭಾಗ, ಹೊಟ್ಟೆ, ಒಳಗಾಲುಗಳ ಬಣ್ಣ ಎದ್ದು ಕಾಣುವಂಥ ಬಿಳುಪು. ತುಂಬು ಶರೀರದ ಮೇಲೆಲ್ಲ ವಿಶಿಷ್ಟವಾದ ಕಪ್ಪು ಪಟ್ಟೆಗಳ ವಿನ್ಯಾಸದ ಚಿತ್ತಾರ.
ನಾಗರಹೊಳೆ ಕಾಡಿನ ಅಂತರಾಳದಲ್ಲೊಂದು ಕಡೆ, ಕಾಲುಚಾಚಿ ಮಲಗಿದ್ದ ಹುಲಿಯ ಸುತ್ತ ಗುಂಪುಕಟ್ಟಿ ಬೆವರಿಳಿಸುತ್ತ ನಿಂತ ನಮ್ಮ ಗುಂಪನ್ನು ಯಾರಾದರೂ ಅಪರಿಚಿತನೊಬ್ಬ ಕಂಡಿದ್ದರೆ ಏನೆಂದು ಭಾವಿಸುತ್ತಿದ್ದನೋ ಏನೋ? ಬಹುಶಃ ಅವನಿಗೆ ಬ್ರಿಟಿಷ್ ದೊರೆಗಳ ಕಾಲದ ಶಿಕಾರಿಯ ಯಾವುದೋ ಮಸುಕು ಫೋಟೋ ಜ್ಞಾಪಕಕ್ಕೆ ಬರುತ್ತಿತ್ತೆಂದು ಕಾಣುತ್ತದೆ. ಇನ್ನೂ ಸ್ವಲ್ಪ ಹತ್ತಿರ ಬಂದಿದ್ದರೆ, ಅವನಿಗೆ ಹಳೆಯ ಚಿತ್ರದಲ್ಲಿನ ಪಿತ್ ಹ್ಯಾಟ್ ಧರಿಸಿದ ಬಿಳಿಯ ದೊರೆಯಾಗಲೀ, ಪೇಟಧಾರಿ ಮಹಾರಾಜನಾಗಲೀ ಕಾಣಿಸುತ್ತಿರಲಿಲ್ಲ. ಹುಲಿಯ ದೇಹದ ಮೇಲೆ ಬೂಟುಗಾಲಿರಿಸಿ, ಬಲಗೈಲಿ ಬಂದೂಕು ಹಿಡಿದ ಠೀವಿ ಇಲ್ಲಿರಲಿಲ್ಲ. ಇನ್ನೂ ಸಮೀಪಕ್ಕೆ ಬಂದರೆ ಗೊತ್ತಾಗುತ್ತಿತ್ತು, ಈ ಹುಲಿ ಸತ್ತಿಲ್ಲ, ಜೀವಂತವಾಗಿದೆಯೆಂದು. ಹುಲಿಯ ಪಕ್ಕ ಟಾರ್ಪಾಲಿನ ಮೇಲಿದ್ದ ಆಯುಧ ಗುಂಡು ತುಂಬಿಸಿದ ಕೋವಿಯಲ್ಲ. ಅದು ಕೇವಲ ಅರಿವಳಿಕೆ ಮದ್ದು ತುಂಬಿದ ಸಿರಿಂಜುಗಳನ್ನು ಮಾತ್ರ ಸದ್ದಿಲ್ಲದೆ ಹಾರಿಸಬಲ್ಲ ಡಾರ್ಟ್ ಎಂದು ತಿಳಿಯುತ್ತಿತ್ತು.
ನಮ್ಮ ಗುಂಪಿನಲ್ಲಿದ್ದವರು ಖಾಕಿ ಬಟ್ಟೆ ತೊಟ್ಟ ಸ್ಥಳೀಯ ಜೇನುಕುರುಬ ಬುಡಕಟ್ಟು ಜನಾಂಗದ ಜನ. ತಮ್ಮಲ್ಲೆ ಗೊಣಗೊಣ ಮಾತನಾಡಿಕೊಳ್ಳುತ್ತಾ, ಸುತ್ತ ಹಾರಾಡುವ ನೀಲಿನೊಣಗಳಂತೆ ಸದ್ದು ಮಾಡುತ್ತಿದ್ದರು. ಅವರೆಲ್ಲರ ಹಿಂದೆ ಎತ್ತರವಾಗಿ ನಿಂತಿದ್ದರು, ಆರಡಿ ನಾಲ್ಕಿಂಚಿನ ಉಕ್ಕಿನ ಮನುಷ್ಯ- ರೇಂಜ್ ಚಿಣ್ಣಪ್ಪ!
(ಹುಲಿರಾಯನ ಆಕಾಶವಾಣಿ, ನವಕರ್ನಾಟಕ ಪ್ರಕಾಶನ)

ಇಂಥ ಪುಸ್ತಕಗಳು ಕಾಡಿನ ಕುರಿತ ನಮ್ಮ ಪ್ರೀತಿಯನ್ನು ಹೆಚ್ಚಿಸುತ್ತವೆ. ಹಾಗೇ ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಬೇಟೆಯ ಅನುಭವಗಳನ್ನೂ ಕೆದಂಬಾಡಿ ಜತ್ತಪ್ಪ ರೈ ಬರೆದ ಕಾಡಿನ ಕತೆಗಳನ್ನೂ ಓದಬಹುದು. ಇವೆಲ್ಲಕ್ಕಿಂತ ಶ್ರೇಷ್ಠವಾದದ್ದು ಕಾನೂರು ಸುಬ್ಬಮ್ಮ ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು. ಇವೆರಡನ್ನು ಓದುತ್ತಿದ್ದರೆ ಸಹ್ಯಾದ್ರಿಯ ಶ್ರೇಣಿಯಲ್ಲಿ ಹತ್ತಾರು ದಿನಗಳ ಕಾಲ ನಡೆದಾಡಿ ಬಂದ ಅನುಭವವಾಗುತ್ತದೆ.


******


ಕಾಡಿನಲ್ಲಿ ಅಲೆದಾಡುವುದೂ ಅಪಾಯ. ಸಕಲೇಶಪುರದ ಸಮೀಪ ಮೂವರು ಹಾಗೇ ಮಾಯವಾಗಿಹೋದರು. ಕಾರ್ಕಳ, ಶೃಂಗೇರಿ, ಚಿಕ್ಕಮಗಳೂರಿನ ಕಡೆ ನಕ್ಸಲರಿದ್ದಾರೆ ಎಂದು ಹೆದರಿಸುವವರಿದ್ದಾರೆ. ಆದರೆ ಅದ್ಯಾವುದೂ ಸಮಸ್ಯೆಯೇ ಅಲ್ಲ. ಸಕಲೇಶಪುರದಿಂದ ಸುಮ್ಮನೆ ಶನಿವಾರ ಸಂತೆ ಬಳಸಿಕೊಂಡು ಬಿಸಲೆ ಘಾಟಿಯ ಕಡೆ ನಡೆದುಬಿಟ್ಟರೆ ಕಣ್ಮುಂದೆ ಹಬ್ಬಿದ ಮಹಾರಣ್ಯ ಸರಣಿ ಬೆಚ್ಚಿಬೀಳಿಸುತ್ತದೆ. ಸರ್ರನೆ ಹೋಗಿ ಮಂಜುನಾಥನಿಗೊಂದು ಸುತ್ತುಬಂದು ಭರ್ರನೆ ವಾಪಸ್ಸು ಬರುತ್ತೇವೆ ಅನ್ನುವ ಧೋರಣೆ ಇದ್ದರೆ ಕಾಡಿನ ಮಾತು ಬಿಡಿ. ಆದರೆ ದೇವರು ಕೂಡ ಸಿಗುವುದು ಕಾಡಿನಲ್ಲೇ. ಅಷ್ಟಲ್ಲದೇ ಗೋಪಾಲಕೃಷ್ಣ ಅಡಿಗರು ಬರೆದಿದ್ದಾರಾ?; ಕಾಡಮೂಲಕವೇ ಪಥ ಆಗಸಕ್ಕೆ...


ಕಾಡು ನಿಮ್ಮನ್ನು ಚಿಗುರಿಸಲಿ, ಅರಳಿಸಲಿ, ಹಳೆಯ ಎಲೆಗಳು ಉದುರಿ ಹೊಸ ಎಲೆಗಳು ಚಿಗುರಲಿ.


(ಚಿತ್ರ- ಮೌನಿ ನಿರ್ದೇಶಕ ಲಿಂಗದೇವರು, ಚಿತ್ರಲೋಕದ ಗೆಳೆಯ ವೀರೇಶ್, ದಟ್ಸ್ ಕನ್ನಡ ಶಾಮ್ ಮತ್ತು ಕನ್ನಡ ಪ್ರಭದ ಉದಯ ಮರಕಿಣಿ ಜೊತೆಗೆ, ಕಬಿನಿ ಹಿನ್ನೇರಿನ ಪರಿಸರದಲ್ಲಿ.)


ಫೋಟೋ- ಕೆ. ಎಂ. ವೀರೇಶ್.

Sunday, March 25, 2007

ರಾಘವೇಂದ್ರ ಖಾಸನೀಸ- ಬದುಕು ಮುಗಿದು ಕತೆ ಶುರುವಾದದ್ದು ಎಲ್ಲಿ?

ನಾನು ರವಿ ಬೆಳಗೆರೇನ ನೋಡಬೇಕು. ಅವನಿಗೆ ಮಾತ್ರ ನನ್ನ ಮಾತು ಅರ್ಥ ಆಗ್ತದೆ. ನಿಮಗೆ ಏನೂ ತಿಳಿಯೂದಿಲ್ಲ. ನನ್ನ ರವಿ ಆಫೀಸಿಗೆ ಕರಕೊಂಡು ಹೋಗ್ರೀ..ಖಾಸನೀಸರು ಕೊನೆಯ ಬಾರಿ ಆಸ್ಪತ್ರೆ ಸೇರುವುದಕ್ಕೆ ಎರಡು ದಿನ ಮುಂಚೆ ಹಾಗಂದಿದ್ದರು ಅಂತ ಅವರ ಕೊನೇ ಮಗಳು ಅರ್ಚನಾ ಅನನ್ಯಾ ಆಸ್ಪತ್ರೆಯ ವಾರ್ಡ್ ನಂಬರ್ ಇನ್ನೂರ ಏಳರಲ್ಲಿ ಕೈಮುಗಿದು, ಕಣ್ಣುತುಂಬಿಕೊಂಡು ಹೇಳುವ ಹೊತ್ತಿಗೆ ಖಾಸನೀಸರು ವಿಸ್ಮೃತಿ ಮತ್ತು ವಿಕಲ್ಪದ ಸ್ಥಿತಿಯಿಂದ ಪಾರಾಗುವುದಕ್ಕೆ ಕೇವಲ ಒಂದೂವರೆ ಗಂಟೆಯಷ್ಟೇ ಉಳಿದಿತ್ತು ಅನ್ನುವುದು ನನಗಾಗಲೀ, ಆಕೆಗಾಗಲೀ ಗೊತ್ತಿರಲಿಲ್ಲ.
ಖಾಸನೀಸರ ದೇಹ ಹೊರಜಗತ್ತಿನ ಪರಿವೆ ಇಲ್ಲದೆ, ಒಳಜಗತ್ತಿನ ಪರಿವೆಯೂ ಇಲ್ಲದೆ ಮುದುಡಿ ಮಲಗಿತ್ತು. ತಬ್ಬಲಿಗಳು ಎಂಬ ಮನುಕುಲದ ಯಾತನೆಯನ್ನೆಲ್ಲ ಕ್ರೋಢೀಕರಿಸಿ ಬರೆದಂತಿದ್ದ ಕತೆಯನ್ನು ಬರೆದ ಖಾಸನೀಸರಂಥ ಖಾಸನೀಸರನ್ನು ಕೂಡ ಬದುಕು ಮತ್ತು ಸಾವು ಹೀಗೆ ನಡೆಸಿಕೊಳ್ಳುತ್ತದಾ ಎಂಬ ದಿಗ್ಭ್ರಮೆಯಲ್ಲಿ ನಾನು ನಿಂತುಬಿಟ್ಟಿದ್ದೆ. ಆಸ್ಪತ್ರೆಯ ಸಿಬ್ಬಂದಿಗಳ ಪೈಕಿ ಯಾರಿಗೂ ಅವರು ಬರೆದ ಕತೆಗಳ ಶ್ರೇಷ್ಠತೆ, ಅಕ್ಪರದ ಮೂಲಕ ಅವರು ಹಿಡಿದಿಟ್ಟ ಸತ್ಯಸುಳ್ಳಿನ ಕಲ್ಪನೆ ಇರುವುದಕ್ಕೆ ಸಾಧ್ಯವೇ ಇರಲಿಲ್ಲ.
ಡಾಕ್ಟರುಗಳ ಪ್ರಕಾರ ಖಾಸನೀಸರು ಒಳರೋಗಿ! ಪಾರ್ಕಿನ್ಸ್ ಎಂಬ ಕ್ಪುದ್ರ ಕಾಯಿಲೆ ನಾಲ್ಕನೆ ಹಂತಕ್ಕೆ ತಲುಪಿರುವ, ಯಾವ ಔಷ ಕೂಡ ಉಳಿಸಲಾರದ, ವೈದ್ಯ ಜಗತ್ತು ಕೈಕಟ್ಟಿಕೊಂಡು ವಿರ್ವಿಣ್ಣವಾಗುವಂತೆ ಮಾಡಿದ ರೋಗವೊಂದನ್ನು ಮೈದುಂಬಿಕೊಂಡಿರುವ ಪೇಷಂಟು! ಖಾಸನೀಸರು ಯಾವತ್ತೂ `ಪೇಷಂಟ್' ಆಗಿರಲೇ ಇಲ್ಲ. ಅವರು ಬರೆದ ಕತೆಗಳಲ್ಲಿನ ಜೀವನೋತ್ಸಾಹಕ್ಕೆ ಎಣೆಯಿಲ್ಲ. ಅತೀವ ಕಷ್ಟ ಮತ್ತು ಅಸೀಮ ಯಾತನೆಯನ್ನು ಚಿತ್ರಿಸುವ ಹೊತ್ತಿಗೂ ಅವರು ಬದುಕಿನಿಂದ ವಿಮುಖರಾಗುವುದಿಲ್ಲ. ಅಮರತ್ವದ ಕಡೆಗೆ ಅವರ ಪಾತ್ರಗಳು ತುಡಿಯದೇ ಇದ್ದರೂ ಅಂಥ ಆಶೆಯೊಂದು ಎಲ್ಲಾ ಪಾತ್ರಗಳಲ್ಲೂ ಜೀವಂತವಾಗಿರುತ್ತದೆ. ಸುಖದ ಅಲೆಯೊಂದು ಅನವರತ ಪ್ರವಹಿಸುತ್ತಿರುವ ಶಾಂತಸಾಗರದಂತೆ ಅವರ ಕತೆಗಳನ್ನು ನಮಗೆ ಭಾಸವಾಗುತ್ತವೆ. ಸಂಕಷ್ಟಗಳ ನಡುವೆಯೇ ಸುಖವನ್ನು ಹುಡುಕುವ ಪ್ರಯತ್ನ ಮಾಡಬೇಕು ಎಂಬ ಎಚ್ಚರ ಮತ್ತು ಅಸಹಾಯಕತೆ ಎರಡನ್ನೂ ಮುಂದಿಟ್ಟುಕೊಂಡು ಖಾಸನೀಸರು ಕಥಾಯಾನಕ್ಕೆ ಹೊರಡುತ್ತಾರೆ.
ಖಾಸನೀಸರು ಸುಮಾರು ಇಪ್ಪತೈದು ವರುಷಗಳ ಕಾಲ ಲೈಬ್ರೇರಿಯ್ ಆಗಿದ್ದವರು. ಬೆಂಗಳೂರು ಯೂನಿವರ್ಸಿಟಿಯಲ್ಲಿ ಕೆಲಸ ಮಾಡಿದವರು. ವಿಜಾಪುರದ ಇಂಡಿಯಿಂದ ಬೆಂಗಳೂರಿಗೆ ಬಂದು ಇಲ್ಲಿ ಮನೆ ಮಾಡಿ, ಸಂಸಾರ ಹೂಡಿ ತನ್ನ ಮೌನ ಮತ್ತು ಸಂಕೋಚಗಳ ನಡುಗುಡ್ಡೆಯಲ್ಲಿ ಬಾಳುತ್ತಿದ್ದವರು ಖಾಸನೀಸ;

ನಡುಗುಡ್ಡೆ ಬಹಳ ಚಿಕ್ಕದು. ಹಾಗೆ ನೋಡಿದರೆ ಅದು ನಡುಗುಡ್ಡೆ ಅಲ್ಲವೇ ಅಲ್ಲ. ಕೃಷ್ಣಾನದಿಯ ವಿಶಾಲವಾದ ಪಾತ್ರದ ಮಧ್ಯೆ ಅನಾದಿಕಾಲದ ಹಿಂದೆ ಎತ್ತರವಾಗಿ ಸಿಡಿದೆದ್ದ ಪ್ರಚಂಡ ಬಂಡೆಗಳ ಸಮೂಹವೇ ಆ ನಡುಗುಡ್ಡೆ. ಅಲ್ಲಿ ಮೀನುಗಾರರ ಸುಳಿವಿಲ್ಲ. ಪ್ರವಾಸಿಗಳ ಕಾಟವಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಕೊರಚಲು ಕೊರಚಲಾಗಿ ಬೆಳೆದ ಸಸ್ಯರಾಶಿಯ ಮೇಲೆ ಗೂಡು ಕಟ್ಟಿಕೊಂಡಿರುವ ಅಸಂಖ್ಯ ಕಾಗೆಗಳ ಸಮೂಹವೇ ಆ ದ್ವೀಪದ ವಾರಸುದಾರರು.

ಹಾಗಂತ `ಅಶ್ವಾರೋಹಿ' ಕತೆಯ ತಂದೆ ಅಂದುಕೊಳ್ಳುತ್ತಾನೆ. ಅವನಿಗೂ ನಡುಗುಡ್ಡೆಯ ವ್ಯಾಮೋಹ. ತಾಯಿಯ ಜಗತ್ತೇ ಬೇರೆ ಹೇಳುತ್ತದೆ;

ನಮ್ಮ ದಾಂಪತ್ಯ ಜೀವನವನ್ನು ಹಿಂದಿರುಗಿ ನೋಡಿದಾಗ, ಕಾಲ ಪ್ರವಾಹದಲ್ಲಿ ನಮ್ಮ ಬಾಳದೋಣಿ ತೇಲಿಕೊಂಡು ಬಂದಾಗ, ನನಗೆ ಕಾಣಿಸಿದ್ದಿಷ್ಟು; ಅಲ್ಲಿ, ಎಲ್ಲಿಯೂ ವಿಶ್ರಮಿಸಲು ದಾರಿಯಲ್ಲಿ ನಡುಗುಡ್ಡೆಗಳೇ ಸಿಗಲಿಲ್ಲ.ನಾವಿಬ್ಬರೂ ಜತೆಗೂಡಿ ಹುಟ್ಟುಹಾಕುತ್ತಾ ಹೊರಟಾಗ ಈ ಪಯಣ ಎಲ್ಲಿಗೆ ಎನ್ನುವ ನಿಶ್ಚಿತವಾದ ಪೂರ್ವಕಲ್ಪನೆಯೂ ಇರಲಿಲ್ಲ.ಖಾಸನೀಸರು ಬದುಕಿದ್ದೂ ಹಾಗೇ. ಅವರನ್ನು ತುಂಬ ಕಾಡಿದ್ದು ಮಗ ರಾಜೀವನ ಪಲಾಯನ. ಮಗ ಯಾಕೆ ಮನೆ ಬಿಟ್ಟು ಓಡಿಹೋದ ಅನ್ನುವುದು ಅವರಿಗೆ ಬಗೆಹರಿಯದ ಪ್ರಶ್ನೆ ಆಗಿತ್ತು;

ರಿತ್ವಿಕನ ಈ ದುರ್ದೆಶೆಗೆ ತಾವೇ ಹೊಣೆ ಅನ್ನುವ ಕಾರಣ ಅವರಿಗೆ ಹೊಳೆದಿರಬಹುದೆ? ಚಿಕ್ಕಂದಿನಿಂದಲೂ ಅವನಿಗೆ ಬೇಡಿದಷ್ಟು ಹಣ ನೀಡಿದರು. ಆದರೆ ಪ್ರೀತಿಯನ್ನು ನೀಡಲಿಲ್ಲ. ಅವನಿಗೆ ಸ್ವಾತಂತ್ರ ಕೊಟ್ಟಿದ್ದೇನೆಂದು ಭ್ರಮಿಸಿ, ಸ್ವೈರವೃತ್ತಿ ಕಲಿಸಿದರು. ಅವನು ಒಬ್ಬ ನಿರ್ದಯಿ ಕಟುಕನಾಗಿ ಬೆಳೆದ. ತಂದೆ ಮಗನ ಸಂಬಂಧವೇ ಚಿಗುರಲಿಲ್ಲ. ಅಂತೆಯೇ, ಅವನು ಪುನಃ ಪುನಃ ಮನೆ ಬಿಟ್ಟು ಓಡಿಹೋಗಿ, ದುಡ್ಡಿನಿಂದ ಹೆಚ್ಚಿನ ದುಡ್ಡಿಗಾಗಿ ಏನೆಲ್ಲವನ್ನೂ ಮಾಡಿ, ಕೊನೆಯ ಮಟ್ಟವಾದ ಮಾದಕದ್ರವ್ಯ ಸೇವನೆಯ ವ್ಯಸನಕ್ಕೂ ಬಿದ್ದ. ಮನೆಯ ಎಲ್ಲರ ಜೊತೆಯಲ್ಲೂ ಅವನ ಸಂಬಂಧಗಳು ಎಂದೋ ಕುಸಿದುಬಿದ್ದಿದ್ದವು.
(ಅಶ್ವಾರೋಹಿ)

ಹೀಗೆ ಕತೆ ಮತ್ತು ಬದುಕು ಎಲ್ಲೋ ಸಂಗಮಿಸಿದೆ ಎಂಬ ಭ್ರಮೆ ಹುಟ್ಟಿಸುವಂತೆ ಬರೆದವರು ಖಾಸನೀಸ. ಅವರ ಕತೆಗಳು ಅವರ ಆತ್ಮಚರಿತ್ರೆಯ ಭಾಗಗಳೇನೋ ಎಂಬಂತೆ ನಮ್ಮನ್ನು ತಟ್ಟುತ್ತದೆ. ಎಷ್ಟೋ ಕಡೆ ಅವು ನಮ್ಮ ಆತ್ಮಚರಿತ್ರೆಯೂ ಇರಬಹುದೇನೋ ಅನ್ನಿಸುತ್ತದೆ. ಬದುಕಿನ ಕ್ರೌರ್ಯ, ಅನೂಹ್ಯ ಮತ್ತು ಅಚ್ಚರಿಯನ್ನು ಅವರು ಸೆರೆಹಿಡಿಯುವ ರೀತಿ ನೋಡಿ;

"ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಕುದುರೆಯ ಮೇಲೇರಿ ಸಾಗುತ್ತಾನೆ. ಇದು ಕತೆ ಕನಸು ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾಗಿದ್ದು, ದಾರಿಯಲ್ಲಿ ಏನನ್ನೂ ಗುರುತಿಸಲಿಕ್ಕಾಗುವುದಿಲ್ಲ. ನಿರ್ಜನವಾದ ಆ ಪ್ರದೇಶದಲ್ಲಿ ತೆಳ್ಳಗಿನ ಹಿಮದ ಪದರಿನ ಮೇಲೆ ಕುದುರೆಯ ಖುರಪುಟದ ಸದ್ದೂ ಇಲ್ಲದೆ ಸಾಗಿರುವ ಆ ಕುದುರೆ ಸವಾರನು ಕೊನೆಗೊಮ್ಮೆ. ನೆರೆದಿದ್ದ ಜನರ ಚಿಕ್ಕ ಗುಂಪೊಂದನ್ನು ಗಮನಿಸಿ ಕುದುರೆಯನ್ನು ನಿಲ್ಲಿಸುತ್ತಾನೆ. ಜನ ಅವನನ್ನು ಸುತ್ತುಗಟ್ಟಿ, ತಬ್ಬಿಬ್ಬಾಗಿ, ಯಾಕೋ ಪವಾಡ ಪುರುಷನನ್ನು ನೋಡಿದಂತೆ ನೋಡುತ್ತಾರೆ. ತಾನು ಹುಡುಕಲಿದ್ದ ಸರೋವರನ್ನು ಹೆಸರಿಸಿ `ಅದೆಲ್ಲಿ' ಎಂದು ಅವರಿಗೆ ಸವಾರ ಕೇಳುತ್ತಾನೆ. ನೆರೆದವರೆಲ್ಲ ಮೂಕ ವಿಸ್ಮಿತರು. ಅವರಲ್ಲೊಬ್ಬ ಹೇಳುತ್ತಾನೆ; `ನೀವು ಇದುವರೆಗೆ ಬಂದದ್ದೇ ಆ ಸರೋವರದ ಮೇಲಿಂದ. ಅದು ದಾರಿಯಲ್ಲ, ಮೇಲೆ ಕಾಣುವ ತೆಳ್ಳಗೆ ಹೆಪ್ಪುಗಟ್ಟಿದ ಹಿಮ. ಆ ಸರೋವರದ ಮೇಲಿನ ಪಾತಳಿ.' ಅಶ್ವಾರೋಹಿ ಅವಾಕ್ಕಾದ. ತಾನು ಬಂದದ್ದು ನೀರಿನ ಮೇಲಿಂದ! ನಿಶ್ಚಿತವಾಗಿದ್ದ ಸಾವಿನ ಕಲ್ಪನೆಯನ್ನು ಅವನು ಸಹಿಸದಾದ. ಅದರಿಂದಾದ ಆಘಾತದಿಂದ ತಕ್ಪಣ ಅಲ್ಲಿಯೇ ಕುಸಿದುಬಿದ್ದ.'

ಖಾಸನೀಸರು ಇದಕ್ಕೊಂದು ಟಿಪ್ಪಣಿ ಬರೆಯುತ್ತಾರೆ;

"ನನಗೂ ಇದ್ದಕ್ಕಿದ್ದಂತೆ, ಅಂಥದ್ದೇ ಆಘಾತದ ಅನುಭವವಾಯಿತು. ಸಾವು, ಹುಟ್ಟಿದಂದಿನಿಂದಲೂ ಬೇತಾಳದಂತೆ ನನ್ನ ಬೆನ್ನ ಮೇಲೆ ಕುಳಿತು ಹೊಂಚು ಹಾಕಿಕೊಂಡೇ ಇದೆ. ಸಾವಿನ ತೆಳ್ಳಗಿನ ಶಿಥಿಲ ಹಿಮಪಾತಳಿಯ ಮೇಲೆಯೇ ನಡೆಯುತ್ತಾ ಬಂದಿದ್ದೇನೆ. ರಿತ್ವಿಕ್ ಹಾಗೂ ಚಾರು ನನ್ನ ಹಾಗೇ ಸರೋವರವೊಂದನ್ನು ಹುಡುಕುತ್ತಾ ಹೊರಟಿದ್ದಾರೆ. ಆದರೆ ಅವರಿಗೆ ಗೊತ್ತೇ ಇಲ್ಲ, ತಾವು ನಡೆಯುತ್ತಿರುವ ಸರೋವರದ ನೀರ ಮೇಲಿಂದಲೇ ತಾವು ನಡೆಯುತ್ತಾ ಹೊರಟಿದ್ದಾರೆಂಬುದು.'ಅದು ನಮಗಾದರೂ ಗೊತ್ತಿದೆಯಾ?

******

ತುಂಬ ಸರಳವಾಗಿ, ಕಠೋರ ಸತ್ಯವನ್ನು ಹೇಳಬಲ್ಲ ವಿಚಿತ್ರ ಶಕ್ತಿಯೊಂದು ಖಾಸನೀಸರಿಗೆ ಸಿದ್ಧಿಸಿತ್ತು. ಸಾವಿನ ಕಲ್ಪನೆಯಿಂದ ಹುಟ್ಟಿದ ಧೈರ್ಯ ಅದಾಗಿತ್ತೋ ಎಂದು ಊಹಿಸುವುದು ಕೂಡ ಕಷ್ಟ. ಆದರೆ ಕೆಲವೊಮ್ಮೆ ಅವಧೂತನ ವಿಲಕ್ಪಣ ಅರಿವು, ನಿರಾಸಕ್ತಿ ಹಾಗೂ ಸತ್ಯಸಂಧತೆ ಬಂದುಬಿಡುತ್ತಿತ್ತು.

"ಇದ್ದಕ್ಕಿದ್ದಂತೆ ನಾನಾಡಿದ ಮಾತುಗಳೆಲ್ಲ ಒಡೆದುಹೋಗಿ, ಅರ್ಥ ಸೋರಿ, ಶಬ್ದಗಳು ಬರೀ ತಿರುಳಿಲ್ಲದ ತೊಗಟೆಗಳಂತೆ ನನಗೆ ಭಾಸವಾಗುತ್ತಿವೆ. ತುಂಬ ದಣಿದಿದ್ದೀಯ. ಇಂದ್ರಿಯಗಳ ಮೇಲಿನ ನಿನ್ನ ಹತೋಟಿ ಕ್ರಮೇಣ ತಪ್ಪತೊಡಗಿದಂತೆ ನನಗೆ ಭಾಸವಾಗುತ್ತಿದೆ. ದೃಷ್ಟಿಯು ವಿಕೇಂದ್ರಿತವಾಗಿ, ಕಣ್ಣೆದುರಿನ ಪ್ರತಿಮೆಗಳು ಛಿನ್ನ, ವಿಚ್ಛಿನ್ನವಾದಂತೆನಿಸುತ್ತಿದೆ.
ತಿನ್ನು, ಉಣ್ಣು, ಮಲಗು, ಬದುಕು. ಮನುಷ್ಯನ ಬಾಳುವೆಗೆ ಸಲ್ಲದ ಮೌಲ್ಯಗಳನ್ನು ಆರೋಪಿಸುವ ಭ್ರಮೆಗೊಳಗಾಗಬೇಡ.'

******
ಖಾಸನೀಸರ ಪಾರ್ಕಿನ್ಸನ್ ಕಾಯಿಲೆಗೆ ತೆಗೆದುಕೊಳ್ಳುತ್ತಿದ್ದ ಔಷಯಿಂದಾಗಿ ಅವರನ್ನು ಒಂಥರದ ಹೆಲ್ಯೂಸಿನೇಷ್ ಕಾಡುತ್ತಿತ್ತು. ಆ ಭ್ರಮೆಯಲ್ಲಿ ಅವರು ಏನನ್ನೋ ಕಾಣುತ್ತಿದ್ದರು. ಯಾರೋ ಬಂದಂತೆ, ಮಾತಾಡಿದಂತೆ, ಏನನ್ನೋ ಹೇಳಿದಂತೆ, ಏನನ್ನೋ ಕೇಳಿಸಿಕೊಂಡಂತೆ ಅವರಿಗೆ ಭಾಸವಾಗುತ್ತಿತ್ತು. ಅದು ಭ್ರಮೆಯೋ ವಾಸ್ತವವೋ ಎಂದು ನಿರ್ಧರಿಸುವ ಸ್ಥಿತಿಯಲ್ಲೂ ಅವರು ಇರಲಿಲ್ಲ. ಆದರೆ ಅವರು ಭ್ರಮಾಧೀನರು ಅನ್ನುವ ಸಂಗತಿ ಮನೆಯವರಿಗೆ ಗೊತ್ತಿತ್ತು.ಅಂಥ ಭ್ರಮಾಧೀನ ಸ್ಥಿತಿಯ ಉತ್ತುಂಗದಲ್ಲಿ ಅವರಂಥ ಸೂಕ್ಪ್ಮ ಮನಸ್ಸಿನ ಲೇಖಕನಿಗೆ ನಿಜಕ್ಕೂ ಏನನ್ನಿಸಿರಬೇಡ? ಭ್ರಮೆ ಮತ್ತು ವಾಸ್ತವದ ನಡುವಿನ ತೆಳ್ಳಗಿನ ಗೆರೆ ಮಾಯವಾಗಿ, ನಿನ್ನೆ ಮತ್ತು ಇಂದುಗಳು ಕಲಸಿಹೋಗಿ, ದೇಶಕಾಲದ ಪರಿವೆ ಇಲ್ಲದೆ ಸುಮಾರು ವರುಷಗಳ ಕಾಲ ಖಾಸನೀಸರು ರಾಜಾಜಿನಗರದ ಮನೆಯಲ್ಲಿ ಹೆಂಡತಿ ಮತ್ತು ಮಗಳ ಜೊತೆಗಿದ್ದರು. ಅವರೆಲ್ಲರನ್ನೂ ಪೊರೆದದ್ದು ಖಾಸನೀಸರ ಪೆನ್ಶನ್ನು ಮತ್ತು ಪತ್ನಿ ಕಾಂತಾರ ಸ್ವಾಭಿಮಾನ.
ಖಾಸನೀಸರನ್ನು ಅತೀವ ಅನುಕಂಪದಲ್ಲೋ ಸಹಾನುಭೂತಿಯಿಂದಲೋ ನೋಡುವುದು ಬೇಡ. ಅವರಿಗೆ ಅದು ಇಷ್ಟವಾಗುತ್ತಿರಲಿಲ್ಲ. ಒಬ್ಬ ಪ್ರತಿಭಾವಂತ ಕತೆಗಾರ. ಶ್ರೇಷ್ಠ ಕತೆಗಳನ್ನು ಬರೆದು ನಿರ್ಗಮಿಸಿದ ಧೀಮಂತ ಎಂಬ ಭಾವನೆಯನ್ನಷ್ಟೇ ಉಳಿಸಿಕೊಂಡು ಅವರ ನೆನಪನ್ನು ಚಿರಗೊಳಿಸುವ ಆಸೆಯೊಂದಿಗೆ ಈ ಪುಟ್ಟ ಟಿಪ್ಪಣಿ ಮುಗಿಯುತ್ತದೆ. ಖಾಸನೀಸರ ಬಗ್ಗೆ ಕೇಳಿದ್ದು ಹೇಳಿದ್ದು ಎಲ್ಲವೂ ಸುಳ್ಳಾಗಲಿ, ಅವರು ಬರೆದ ಉತ್ಕೃಷ್ಠ ಕತೆಗಳಷ್ಟೇ ನಿಜವಾಗಲಿ;
ಗೋಳಗುಮ್ಮಟದಲ್ಲಿ ದನಿ ಒಂದಕ್ಕೆ ಹತ್ತಾದರೆ ಆ ತಪ್ಪು ಅದರದೇ ಹೊರತು ಮಾತಾಡಿದವನದಲ್ಲ!

Saturday, March 24, 2007

UG ಅಲ್ಲ ಗುರೂಜಿ


Gurus play a social role, so do prostitutes!


ಹಾಗಂತ ಹೇಳಿಯೂ ಪರಮಗುರು ಎಂದು ಕರೆಸಿಕೊಂಡ ಯುಜಿ ಕೃಷ್ಣಮೂರ್ತಿ ನಿರ್ಗಮಿಸಿದ್ದಾರೆ. ಮಾತುಗಳೆಲ್ಲ ಸುಳ್ಳು, ಮನಸ್ಸೆಂಬುದು ಮಾಯೆ, ನಮಗೆ ಒಂಟಿಯಾಗಿ ನಿಲ್ಲುವ ಧೈರ್ಯವಿಲ್ಲ, ಹೀಗಾಗಿ ನಾವು ಸಂಘಜೀವಿಗಳು, ಎಲ್ಲಾ ತತ್ವಜ್ಞಾನವೂ ಬೊಗಳೆ, ಎಲ್ಲಾ ಉಪದೇಶಗಳೂ ರಗಳೆ ಎನ್ನುತ್ತಿದ್ದ ಯೂಜಿ ಹಠಾತ್ತನೇ ತೆರಳಿದ್ದು ಮೊನ್ನೆ, ಮಾರ್ಚ್ 22ರಂದು.
ಬೆಂಗಳೂರಿಗೆ ಆಗಾಗ ಬರುತ್ತಿದ್ದ, ಬಂದಾಗಲೆಲ್ಲ ಗೆಳೆಯ ಚಂದ್ರಶೇಖರ್ ಮನೆಯಲ್ಲಿ ಉಳಿದುಕೊಂಡು ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದ, ಎಲ್ಲರನ್ನೂ ಖಂಡಿಸುತ್ತಿದ್ದ, ಇಂದಿರಾ ಗಾಂಧಿಯಿಂದ ಹಿಡಿದು ಜಿಡ್ಡು ಕೃಷ್ಣಮೂರ್ತಿಯ ತನಕ ಎಲ್ಲರ ಕುರಿತೂ ಮಕ್ಕಳ ಹಾಗೆ, ಬಿಡುಬೀಸಾಗಿ ಮಾತಾಡುತ್ತಿದ್ದ ಯೂಜಿ ನನಗೆ ಪರಿಚಯವಾದದ್ದು ವೈಎನ್ಕೆ ದೆಸೆಯಿಂದ. ಈ ಬರಹದ ಶೀರ್ಷಿಕೆ ಕೂಡ ವೈಎನ್ಕೆ ಅವರ ಕುರಿತು ಬರೆದ ಪುಸ್ತಕದ್ದು.
ವೈಎನ್ಕೆಗೆ ಇಂಥ ಅವದೂತರ ಬಗ್ಗೆ ಅಚ್ಚರಿ ಮತ್ತು ಮೆಚ್ಚುಗೆ. ಹೀಗಾಗಿ ಅವರು ಯುಜಿ ಬಂದಾಗೆಲ್ಲ ನನ್ನನ್ನೂ ಜೊತೆಗೆ ಕರೆದುಕೊಂಡು ಕೆಆರ್ ರಸ್ತೆಯಲ್ಲಿರುವ ಚಂದ್ರಶೇಖರ್ ಮನೆಗೆ ಹೋಗುತ್ತಿದ್ದರು. ಅಲ್ಲಿ ಯುಜಿ ಕೂತಿರುತ್ತಿದ್ದರು.
ಬೆಳ್ಳಗಿನ ಹತ್ತಿ ಪೈಜಾಮ, ಮೇಲೊಂದು ಜುಬ್ಬ. ಮೈ ಕೂಡ ಹ್ತತಿಯಿಂದಲೇ ಮಾಡಿದಷ್ಟು ಬಿಳಿ. ಮೇಲ್ನೋಟಕ್ಕೆ ಪರಿಶುದ್ಧ ದೇಹಿ ಅನ್ನಿಸುವಂಥ ರೂಪ. ನಕ್ಕರೆ ಮನೆಯೊಳಗೆ ಬೆಳ್ಳಗಿನ ಬೆಳಕು ಹಬ್ಬಿದ ಹಾಗೆ. ಮಾತಾಡಿದರೂ ಅಷ್ಟೇ ಮೃದು. ಆದರೆ ಮಾತಿನೊಳಗಿನ ಮಾತಿನಲ್ಲಿ ಕಾಠಿಣ್ಯ. ಎಲ್ಲವನ್ನೂ ಧಿಕ್ಕರಿಸಿ ಬದುಕಿಯೇನು ಎಂಬ ಬಿಂಕ.
ಆಗ ನಾವಿನ್ನೂ ಜಿಡ್ಡು ಕೃಷ್ಣಮೂರ್ತಿಯನ್ನು ಮೆಚ್ಚಿಕೊಂಡವರು. ಕೆ. ಎನ್. ಅರುಣ್ ಬರೆದ ಪ್ರೀತಿ ನದಿಯಂತೆ ಪುಸ್ತಕದ ಜಿಡ್ಡು ನಮಗೆ ಪ್ರಿಯ. ಯೂಜಿ ಅಂದರೆ ಅಲರ್ಜಿ. ಆದರೆ ಕ್ರಮೇಣ ಆ ವಯಸ್ಸಿಗೋ ಏನೋ ಯೂಜಿಯ ಉಡಾಫೆ ಕೂಡ ಇಷ್ಟವಾಗತೊಡಗಿತು. ನಮ್ಮ ಕವಿ ರಾಮಚಂದ್ರ ಶರ್ಮರ ಹಾಗೆ ಯೂಜಿ ಮಾತಾಡುತ್ತಿದ್ದಾರೆ ಅನ್ನಿಸುತ್ತಿತ್ತು.
ಯೂಜಿ ತನಗೊಂದು ವ್ಯಕ್ತಿತ್ಲವೇ ಇಲ್ಲ. ನನ್ನನ್ನು ಯಾರೂ ನಿರಾಕರಿಸಲಾರರು, ಬೇಸರ ಪಡಿಸಲಾರರು, ಅವಮಾನಿಸಲಾರರು ಎಂಬಂತೆ ಇರುತ್ತಿದ್ದರು. ಏನೇ ಹೇಳಿದರು ಅದನ್ನು ಥಟ್ಟನೆ ನಿರಾಕರಿಸುವ ಪ್ರತ್ಯುತ್ಪನ್ನ ಮತಿಯಂತೂ ಅವರಿಗೆ ಸಿದ್ಧಿಸಿತ್ತು. ಅವರ ಮಾತುಗಳ್ಲಲೇ ವಿರೋಧಭಾಸ ಕಾಣಿಸುತ್ತಿತ್ತು. ಆದರೆ ಅದೆಲ್ಲವೂ ಯೋಚಿಸಿ ಯೋಜಿಸಿ ಆಡಿದ ಮಾತಲ್ಲ ಅನ್ನುವುದೂ ಗೊತ್ತಾಗುತ್ತಿತ್ತು.
ಶಿಕ್ಷಣದ ಕುರಿತು ಅವರಿಗಿದ್ದ ಅಭಿಪ್ರಾಯವೇ ದಿಗ್ಱ್ಬಮೆ ಹುಟ್ಟಿಸುವಂತಿತ್ತು. ಮಕ್ಕಳಿಂದ ನಾವು ಕಲಿಯುವುದೇ ಸಾಕಷ್ಟಿದೆ. ಅದನ್ನು ಬಿಟ್ಟು ನಾವು ಅವರಿಗೆ ಕಲಿಸುವುದಕ್ಕೆ ಹೊರಡುತ್ತಿದ್ದೇವೆ. ಇದಕ್ಕಿಂತ ದೊಡ್ಡ ತಮಾಷೆ ಮತ್ತೇನಿದೆ ಎಂದವರು ಹಾಸ್ಯ ಮಾಡುತ್ತಿದ್ದರು. ಸಂತೋಷವನ್ನು ಎಲ್ಲಿಯ ತನಕ ಹುಡುಕುತ್ತೀರೋ ಅಲ್ಲಿ ತನಕ ನಿಮಗೆ ಸಿಗುವುದು ಅಸಂತೋಷ ಎಂಬಂಥ ನುಡಿಮುತ್ತುಗಳನ್ನೂ ಆಗಾಗ ಉದುರಿಸುತ್ತಿದ್ದರು. ಗುರುವಿನ ಮಾತು ಕೇಳಬೇಡಿ ಅನ್ನುತ್ತಿದ್ದರು. ನಾವು ಅಪ್ಪಣೆ ಗುರುವೇ ಅನ್ನುತ್ತಿದ್ದೆವು.
ಅವರನ್ನು ನೋಡುವುದಕ್ಕೆ ಬರುತ್ತಿದ್ದವರು ಕೂಡ ಅಂತಿಂಥವರಲ್ಲ. ಒಮ್ಮೆ ಮಹೇಶ್ ಭಟ್ ಮಗಳು ಪೂಜಾಳ ಜೊತೆ ಬಂದಿದ್ದರು. ಆಗಷ್ಟೇ ಪೂಜಾಗೆ ಮಹೇಶ್ ಭಟ್ ವಿಚಿತ್ರ ಸಲಹೆ ಕೊಟ್ಟು ಸುದ್ದಿಯಾಗಿದ್ದರು. ಯಾರ ಜೊತೆಗಾದರೂ ಓಡಾಡು. ಆದರೆ ಬಸಿರಾಗಬೇಡ ಅನ್ನುವ ಅಪ್ಪನ ಹೇಳಿಕೆ ಎಲ್ಲರನ್ನೂ ಕಂಗಾಲಾಗಿಸಿತ್ತು. ಅಂಥ ಹೊತ್ತಲ್ಲಿ ಯುಜಿ ಜೊತೆ ಮತ್ತು ತಂದೆ ಮಗಳು ಕೆಲವು ದಿನ ಇದ್ದರು.
ಯುಜಿ ಮರೆಯಾಗಿದ್ದಾರೆ. ಅವರ ಜೊತೆಗಿನ ಹತ್ತೆಂಟು ಭೇಟಿಗಳಿಂದ ಹೆಕ್ಕಿದ ನೆನಪುಗಳು ಸಾಕಷ್ಟಿವೆ. ಏನನ್ನೂ ತಿನ್ನದೇ, ಏನೂ ಕುಡಿಯದೇ, ಮಾತೇ ಆಡದೇ, ಪತ್ರಿಕೆ ಓದದೇ, ಟೀವಿ ನೋಡದೇ ಯುಜಿ ಬದುಕಬಲ್ಲವರಾಗಿದ್ದರು ಅನ್ನುವುದು ಆಗ ನಮಗೆಲ್ಲ ಬೆರಗಿನ ಸಂಗತಿ.
ಅವರು ಹಾಗಿದ್ದರಾ.. ನಮಗೆ ಹಾಗೆ ಕಂಡಿದ್ದರಾ.. ನಮ್ಮ ಆಸೆಗಳನ್ನೆಲ್ಲ ಅವರು ಸಾಕಾರಗೊಳಿಸಿದವರಂತೆ ಕಾಣುತ್ತಿದ್ದರಾ. ವೈಎನ್ಕೆಗೆ ಅವರು ಯಾಕೆ ಇಷ್ಟವಾದರು.
ಒಂದೂ ಗೊತ್ತಾಗುತ್ತಿಲ್ಲ.

ಲಿಕರ್ ಈಸ್ ಕ್ವಿಕರ್, ಕ್ಯಾಂಡಿ ಈಸ್ ಡ್ಯಾಂಡಿ!

ಒಳ್ಳೆಯವರಿಗಿದು ಕಾಲವಲ್ಲ!
ಕುಡುಕರಿಗೀಗ ಮರ್ಯಾದೆಯೇ ಇಲ್ಲ. ಆಲ್ಕೋಹಾಲು ಎಂಬ ಪರಮ ಪವಿತ್ರ ಎನರ್ಜಿ ಪೇಯ ಕಸಕ್ಕಿಂತ ಕೀಳಾಗಿಬಿಟ್ಟಿದೆ. ಟೀವಿಗಳಲ್ಲಿ ಸಿನಿಮಾಗಳಲ್ಲಿ ಮದ್ಯದ ಜಾಹೀರಾತು ತೋರಿಸುವಂತಿಲ್ಲ. ಅದನ್ನು ಸೋಡಾ ಅಂತ ತೋರಿಸಿ ಸಮಾಧಾನಪಟ್ಟುಕೊಳ್ಳಬೇಕು. ಕುಡುಕರನ್ನು ಹಿಡಿಯುವುದಕ್ಕೆಂದೇ ವಿಶೇಷ ತನಿಖಾ ದಳ ಬೇರೆ. ಅವರ ಮೂಗೇ ಬ್ರೆಥ್ ಅನಲೈಸರ್ರು. ಕುಡಿದವರ ಮಾತಿನ ಮಧ್ಯೆ ಅವರು ಮೂಗು ತೂರಿಸಿ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಒಟ್ಟಿನಲ್ಲಿ ಈ ಜಗತ್ತು ಕುಡುಕನನ್ನು ವಿಚಿತ್ರ ಅನುಮಾನದಿಂದ ನೋಡುತ್ತದೆ. ಅವಮಾನಿಸುತ್ತದೆ. ಅದಕ್ಕೆ ಕಾರಣ ಕುಡುಕರ ಬಗ್ಗೆ ಜಗತ್ತಿಗಿರುವ ಅಸೂಯೆಯೇ ಕಾರಣ ಎಂದು ನಾನಂತೂ ತೀರ್ಮಾನಕ್ಕೆ ಬಂದಿದ್ದೇನೆ. ಇಲ್ಲದೇ ಹೋದರೆ ಜುಜುಬಿ ಎರಡು ರುಪಾಯಿ ಕೊಟ್ಟು ಬೈಟೂ ಕಾಫಿ ಕುಡಿಯುವ ವ್ಯಕ್ತಿಗಿರುವ ಮರ್ಯಾದೆ ಎರಡು ಸಾವಿರ ರುಪಾಯಿಯ ಸ್ಕಾಚ್ ವಿಸ್ಕಿ ಕುಡಿಯುವವನಿಗೆ ಇಲ್ಲ ಅಂದರೆ? ಕಾಲ ಎಲ್ಲಿಗೆ ಬಂತು?ಮೊನ್ನೆ ಮೊನ್ನೆ ಶಾರದಾಪ್ರಸಾದ್ ಬರೆದ ಪುಸ್ತಕವೊಂದನ್ನು ಓದುತ್ತಿದ್ದೆ. ಅವರ ಒಬ್ಬ ವ್ಯಕ್ತಿಯನ್ನು ಮೆಚ್ಚಿಕೊಳ್ಳುತ್ತಾ ಅವನಿಗೆ ಒಳ್ಳೆಯ ಇಂಗ್ಲಿಷು ಗೊತ್ತಿತ್ತು, ಒಳ್ಳೆಯ ಸಾಹಿತ್ಯ ಓದುತ್ತಿದ್ದ, ವಿದೇಶ ಸುತ್ತುತ್ತಿದ್ದ, ಎಲ್ಲಕ್ಕಿಂತ ಮುಖ್ಯವಾಗಿ ರಾಯಲ್ ಸಲ್ಯೂಟ್ ವಿಸ್ಕಿಯನ್ನು ಹೇಗೆ ಕುಡಿಯಬೇಕು ಅನ್ನುವುದು ಅವನಿಗೆ ಗೊತ್ತಿತ್ತು ಎನ್ನುವ ಮಾತು ಬರೆದಿದ್ದರು. ವಿಸ್ಕಿಯನ್ನು ಕುಡಿಯುವುದು ಕೂಡ ಕಲೆ ಎಂದು ಭಾವಿಸಿದವರ ನಾಡೆಲ್ಲಿ? ವಿಸ್ಕಿ ಕುಡಿದವನು ಅಪರಾಧಿ ಎಂದು ಭಾವಿಸುವ ನಮ್ಮ ನಾಡೆಲ್ಲಿ!ಯಾಕೆ ಕುಡೀತೀರಿ, ಅದಕ್ಕೇನು ಕಾರಣ, ಅದೇನು ಸಂತೋಷ ಕೊಡುತ್ತೆ ಅಂತ ಕೇಳುತ್ತಾರೆ ಕುಡಿತದ ಸೊಗಸನ್ನು ಅರಿಯದೇ ಇದ್ದವರು. ಆಗೆಲ್ಲ ನಾನು ಇಂಗ್ಲಿಷ್ ಕವಿಯೊಬ್ಬ ಬರೆದ ಪದ್ಯವೊಂದನ್ನು ಹೇಳುತ್ತೇನೆ;
If all be true that I do think
There are five reasons
we should drink
Good wine-a Friend-or
being dryOr lest we
should be by and by
Or any other reason Why?
ಸ್ಕಾಚು ಕುಡಿಯುವುದನ್ನು ನಮಗೆ ಕಲಿಸಿದ್ದೇ ಇಂಗ್ಲಿಷರು. ಭಾರತದ ತಣ್ಣನೆಯ ಸ್ಥಳಗಳಲ್ಲಿ ಬೆಚ್ಚನೆಯ ಮನೆಗಳನ್ನು ನಿರ್ಮಿಸಿ ಅಲ್ಲೊಂದು ಸೊಗಸಾದ ಗುಂಡು ರೂಮು ಮಾಡಿಕೊಂಡು ಅಲ್ಲಿ ರೋಸ್ವುಡ್ ಕಪಾಟುಗಳಲ್ಲಿ ವಿಸ್ಕಿಬಾಟಲುಗಳನ್ನು ಅಂದವಾಗಿ ಜೋಡಿಸಿಟ್ಟು ಅದನ್ನು ತುಂಬ ಅರ್ಥಪೂರ್ಣ ಘನತೆಯಿಂದ ಹೀರುತ್ತಾ ಸುಖಿಸುತ್ತಿದ್ದವರು ಅವರು. ಅಷ್ಟು ಅಚ್ಚುಕಟ್ಟಾಗಿ ಕುಡಿಯುತ್ತಿದ್ದವರು ವೈಎನ್ಕೆ.
ಕುಡಿಯೋದು ಸ್ಲೋ ಪಾಯ್ಸನ್ ಅಂತ ಯಾರೋ ಅಂದದ್ದಕ್ಕೆ ಪಕ್ಕಾ ಕುಡುಕನೊಬ್ಬ ಹೇಳಿದನಂತೆ -ಪರವಾಗಿಲ್ಲ ಬಿಡಿ, ನಂಗೇನು ಅಂಥ ಅರ್ಜೆಂಟಿಲ್ಲ. ಅರ್ಜೆಂಟಿದ್ದವರು ವಿಷಾ ಕುಡೀಲಿ.
ಬೇರೆ ಪೇಯಗಳಿಗೂ ಗುಂಡಿಗೂ ಇರುವ ವ್ಯತ್ಯಾಸವನ್ನು ಯಾರೂ ಸರಿಯಾಗಿ ಅರ್ಥಮಾಡಿಕೊಂಡಂತಿಲ್ಲ. ಕಾಫಿಯನ್ನೋ ಟೀಯನ್ನೋ ನಾವು ದಿನವಿಡೀ ಕುಡಿಯುತ್ತಲೇ ಇರುತ್ತೇವೆ. ಯಾಕೆ ಕುಡಿಯುತ್ತೀರಿ ಅಂತ ಕೇಳಿದರೆ ಅದೊಂದು ಚಟ ಸ್ವಾಮಿ ಅಂತೇವೆ. ಆದರೆ ಅದೊಂದು ನಿರುಪಯೋಗಿ ಚಟ. ಕಾಫಿ ಕುಡಿದಾಗ ಯಾರಲ್ಲೂ ಯಾವ ಬದಲಾವಣೆಯೂ ಆಗಿದ್ದನ್ನು ನಾನು ಈ ವರೆಗೆ ಕಂಡಿಲ್ಲ. ಆದರೆ ಮದ್ಯ ಹಾಗಲ್ಲ. ಅದು ಸುಪ್ತಸಾಗರದಲ್ಲಿ ಅಡಗಿದ್ದ ಆಲೋಚನೆಗಳನ್ನೆಲ್ಲ ಹೊರಗೆ ಹಾಕುತ್ತದೆ. ನಮ್ಮನ್ನು ಒಂದು ಕ್ಪಣ ಅಲ್ಲಾಡಿಸಿಬಿಡುತ್ತದೆ. ನಮ್ಮ ಸ್ಪಿರಿಟ್ಟನ್ನು ಉತ್ತುಂಗಕ್ಕೆ ಒಯ್ಯುತ್ತದೆ. ಗುಂಡಿಲ್ಲದೆ ಯಾರ ಜೊತೆಗಾದರೂ ಆರು ಗಂಟೆಗಳ ಕಾಲ ಸತತವಾಗಿ ಮಾತಾಡಲು ಯತ್ನಿಸಿ. ನೀವು ಬೋರಾಗಿ ಸತ್ತು ಹೋಗುತ್ತೀರಿ. ಅದೇ ಮುಂದೊಂದು ಬಾಟಲಿ ಸ್ಕಾಚ್ ವಿಸ್ಕಿ ಇಟ್ಟುಕೊಳ್ಳಿ. ದೇಶಕಾಲ ಎರಡೂ ಮರೆಯುತ್ತದೆ.
ಗುಂಡು ಕೂಡ ಪ್ರೇಮದಂತೆ; ಮೊದಲ ಹನಿ ಮಾಂತ್ರಿಕ, ಎರಡನೆಯದು ಆತ್ಮೀಯ, ಮೂರನೆಯದು ಯಾಂತ್ರಿಕ ಅಂತ ಅದರ ಸೊಗಸು ಗೊತ್ತಿಲ್ಲದೇ ಇರುವವರು ಹೇಳಿದ್ದನ್ನು ನಾವು ಒಪ್ಪಿಕೊಳ್ಳಬೇಕಿಲ್ಲ. ಗುಂಡಿನ ಮಹಿಮೆ ಗೊತ್ತಿದ್ದವರಿಗಷ್ಟೇ ಗೊತ್ತು.First you take a drink, then the drink takes a drink, then the drink takes you ಅಂದಿದ್ದ ಅನುಭವಿ ಕುಡುಕ. ವೈಎನ್ಕೆ ಅದನ್ನೇ ಸೊಗಸಾಗಿ ಬರೆದಿದ್ದರು. ಪ್ರತಿ ಪೆಗ್ಗಿಗೂ ನಾನು ಹೊಸ ಮನುಷ್ಯ. ಮತ್ತು ಹೊಸ ಮನುಷ್ಯನಿಗೆ ಮತ್ತೊಂದು ಪೆಗ್ಗು. ಮತ್ತೆ ಹೊಸ ಮನುಷ್ಯ, ಮತ್ತೊಂದು ಪೆಗ್ಗು. ಮತ್ತು ಮತ್ತು ಮತ್ತು ಮತ್ತೂ..
ಕುಡಿಯದೇ ಒದ್ದಾಡುವವರ ಬಗ್ಗೆ ಬರೆದ ಮತ್ತೊಂದು ಸಾಲು ಇನ್ನೂ ಚೆನ್ನಾಗಿದೆ:
And he that will go to bed sober
Falls with leaf still in october

ಕುಡಿಯದೇ ಮಲಗುವ ಅವಿವೇಕಿ ತಲೆ
ಶಿಶಿರ ಬರುವ ಮುನ್ನವೇ ಉದುರುವ ಎಲೆ

ಕುಡಿತವೆಂದರೆ ತಮಾಷೆಯಲ್ಲ, ಕುಡಿಯುವುದೂ ತಮಾಷೆ ಅಲ್ಲ. ಗುಂಡು ಎಂದರೆ ಗಂಟಲಿಂದ ಹೊರಟು ಅನ್ನನಾಳದಲ್ಲಿ ಸಾಗುವ ಪಂಜಿನ ಮೆರವಣಿಗೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಅಂತ ಸಿದ್ಧಲಿಂಗಯ್ಯ ಬರೆದಿದ್ದಾರೆ ನಿಜ. ಆದರೆ ಹನಿಹನಿಯೂ ಹೋರಾಟಕ್ಕೆ ನಮ್ಮನ್ನು ಪ್ರೇರೇಪಿಸಬಹುದು ಅನ್ನುವುದಕ್ಕೆ ಸಾಕ್ಪಿ ಗುಂಡು. ಹನಿಗೂಡಿ ಹಳ್ಳ ಅನ್ನುವುದು ನಿಜಕ್ಕೂ ಅರ್ಥಪೂರ್ಣವಾಗುವುದು ಗುಂಡು ಹಾಕಿ ಬೈಕು ಓಡಿಸಿದಾಗ. ಕುಡಿದ ಹನಿ ನಮ್ಮನ್ನು ಖಂಡಿತಾ ಹಳ್ಳಕ್ಕೇ ಒಯ್ಯತ್ತದೆ.
******
ಈ ತಮಾಷೆ ನನ್ನ ಉದ್ದೇಶ ಆಗಿರಲಿಲ್ಲ. ಹಾಗೆ ನೋಡಿದರೆ ಇದು ವಿಷಾದದಿಂದ ಕೂಡಿದ ಲೇಖನ. ಕ್ರಮೇಣ ಜಗತ್ತು ಹೇಗೆ ತನ್ನ ಘನತೆಯನ್ನೂ ಅಭಿರುಚಿಯನ್ನೂ ಸ್ವಾತಂತ್ರವನ್ನೂ ಅರಾಜಕತೆಯನ್ನೂ ಉದ್ದಟತನವನ್ನೂ ಕಳೆದುಕೊಂಡು ಗುಲಾಮಗಿರಿಯತ್ತ ಸಾಗುತ್ತಿದೆ ಎಂದು ಯೋಚಿಸಿ. ಬ್ರಿಟಿಷರೇ ವಾಸಿ, ಅವರು ನಮ್ಮನ್ನು ಮನುಷ್ಯರಂತೆ ಕಂಡರು. ಈಗ ಅಮೆರಿಕನ್ನರ ಸುಖಕ್ಕಾಗಿ, ಅವರು ರಾತ್ರಿ ಸುಖನಿದ್ದೆ ಮಾಡಬೇಕು ಅನ್ನುವ ಕಾರಣಕ್ಕಾಗಿ ನಾವು ಕಾಲ್ ಸೆಂಟರುಗಳಲ್ಲಿ ರಾತ್ರಿ ನಿದ್ದೆಗೆಡುತ್ತೇವೆ!
ಪ್ರಶ್ನೆ ಇದ್ಯಾವುದೋ ಅಲ್ಲ. ಸರಿಯಾದ ಬುದ್ಧಿವಂತರಾದ ಶಿಷ್ಯವರ್ಗವಿಲ್ಲದೇ ಹೋದರೆ ಹೇಗೆ ಒಂದು ಪ್ರತಿಭಾವಂತರ ಸಮೂಹವೇ ಅವಗಣನೆಗೆ ಒಳಗಾಗುತ್ತದೆ ಎಂಬುದನ್ನು ಯೋಚಿಸಿದಾಗ ಗಾಬರಿಯಾಗುತ್ತದೆ. ಅದಕ್ಕೆ ಎರಡು ಉದಾಹರಣೆಗಳನ್ನು ನೋಡೋಣ;
ಒಬ್ಬ ಪ್ರತಿಭಾವಂತರು ಕೈಲಾಸಂ. ಕಂಠಪೂರ್ತಿ ಕುಡಿದು ಅದೇ ಸ್ಥಿತಿಯಲ್ಲಿ ಸೊಗಸಾದ ನಾಟಕ ಬರೆಯುತ್ತಿದ್ದವರು ಅವರು. ಅವರ ಕುಡಿತದ ಬಗ್ಗೆಯೇ ರೋಚಕವಾದ ದಂತಕತೆಗಳಿದ್ದವು. ಅವರ ತೀರ್ಥಯಾತ್ರೆಯ ಬಗ್ಗೆ, ತೀರ್ಥ ಕ್ಪೇತ್ರದ ಬಗ್ಗೆ, ತೀರ್ಥ ಸ್ನಾನದ ಬಗ್ಗೆ ಸೊಗಸಾದ ಕತೆಗಳನ್ನು ಅವರ ಶಿಷ್ಯಂದಿರು ಅತೀವ ಭಕ್ತಿ ಮತ್ತು ಪ್ರೀತಿಯಿಂದ ಹೇಳುತ್ತಿದ್ದರು. ಕೈಲಾಸಂ ಸಿಗರೇಟು ಸೇದುವುದು, ಹೊಗೆಯಲ್ಲೇ ಹೆಸರು ಬರೆಯುವುದು, ಅವರು ಕುಡಿದಾಗ ಆಡುತ್ತಿದ್ದ ಮಾತು, ಅವುಗಳ ಸ್ವಾರಸ್ಯ ಎಲ್ಲವನ್ನು ರುಚಿಕಟ್ಟಾಗಿ ವರ್ಣಿಸುತ್ತಿದ್ದರು. ಆ ವರ್ಣನೆಯನ್ನು ಕೇಳುವಾಗೆಲ್ಲ ಕುಡಿತ ತಪ್ಪು ಅನ್ನಿಸುತ್ತಲೇ ಇರಲಿಲ್ಲ. ಕೈಲಾಸಂ ನಮ್ಮ ಕಣ್ಣಿಗೆ ಕುಡುಕರಂತೆ ಕಾಣಲಿಲ್ಲ. ಅದು ಬದುಕನ್ನು ಪ್ರೀತಿಸುವ, ಆರಾಧಿಸುವ, ಅನುಭವಿಸುವ ಒಂದು ಸರಳ ವಿಧಾನ ಅನ್ನಿಸುತ್ತಿತ್ತು.
ವೈಎನ್ಕೆಯವರ ಪಿ. ಎಚ್. ಡಿ.ಕೂಡ ಅಷ್ಟೇ. ಅವರು ತಮ್ಮನ್ನು ಸನ್ಡೌನರ್ ಅಂತ ಕರೆದುಕೊಳ್ಳುತ್ತಿದ್ದರು. ಅಂದರೆ ಸೂರ್ಯ ಮುಳುಗಿದ ತಕ್ಪಣ ಗುಂಡಿನತ್ತ ಧಾವಿಸುವ ವ್ಯಕ್ತಿ. ಕುಡಿತದ ಸಮಯವನ್ನು PHD, Precious Hours of Drinking ಎನ್ನುತ್ತಿದ್ದರು. ಕುಡಿಯುವ ಮೊದಲು ಚೌಕ ರೂಮು, ಕುಡಿದ ನಂತರ ಗುಂಡು ರೂಮು ಅಂತ ಬರೀತಿದ್ದರು.
ಬೆಳಗ್ಗೆ ಸಂಜೆ ಮಧ್ಯಾಹ್ನ,
ಕುಡೀತೀನ್ ನಾನು ಮದ್ಯಾನ
ಅಂತ ತಮಾಷೆ ಮಾಡುತ್ತಿದ್ದರು. ಗುಡ್ ಮ್ಯಾನ್, ಅವನು ಕುಡೀತಾನೆ ಅಂತ ಮೆಚ್ಕೋತಿದ್ದರು.
ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು ಅಂತ ಹಾಡಿದ್ದೂ ಅವರೇ. ಗುಂಡುಹಾಕುವ ಪತ್ರಕರ್ತನನ್ನು ಬೀರಬಲ್ ಅಕ್ಬಾರಾವಾಲಾ ಅಂದಿದ್ದೂ ಅವರೇ.ಅವರನ್ನು ಯಾರೂ ಕುಡುಕ ಅನ್ನಲಿಲ್ಲ. ಅವರ ಗುಂಡಿನ ಬಗ್ಗೆ ಗೌರವ, ಪ್ರೀತಿ ಇಟ್ಟುಕೊಂಡವರು ಅದರ ಬಗ್ಗೆ ಕತೆಗಳನ್ನು ಹೇಳುತ್ತಾ, ಆ ಸಾಹಸಕತೆಗಳನ್ನು ಪ್ರಚಾರ ಮಾಡುತ್ತಾ ಅವರ ಜೊತೆಗೆ ಕುಡಿಯುವುದೇ ಒಂದು ಸೌಭಾಗ್ಯ ಎಂದು ಭಾವಿಸುವಂತೆ ಮಾಡುತ್ತಿದ್ದರು.
ಅದು ಬೇರೆಯೇ ಕಾಲ. ಈಗ ಹಾಗಿಲ್ಲ. ಪತ್ರಿಕೋದ್ಯಮದಲ್ಲೂ ಸಾಹಿತ್ಯವಲಯದಲ್ಲೂ ಚಿತ್ರರಂಗದಲ್ಲೂ `ಗುಂಡಿನ' ಸದ್ದಿಲ್ಲ. ಈಗ ಪತ್ರಿಕೋದ್ಯಮದಂಥ ರೋಚಕ ಕೆಲಸ ಕೂಡ ಗುಮಾಸ್ತಗಿರಿಯಾಗಿದೆ. ಅತಿರೇಕಕ್ಕೆ ಹೋಗದೆ ಸತ್ಯದ ದರ್ಶನ ಆಗುವುದಿಲ್ಲ ಅನ್ನುವ ಸಿದ್ಧಾಂತವನ್ನು ಇವತ್ತು ಯಾರೂ ಒಪ್ಪುವುದಿಲ್ಲ.
ಸೊಫಿಸ್ಟಿಕೇಷನ್ ಅನ್ನುವುದು ಶಾಪ. ನಾವು ಹೆಚ್ಚು ಹೆಚ್ಚು ಸೊಫಿಸ್ಟಿಕೇಟ್, ಗೌರವಾನ್ವಿತರಾಗುತ್ತಾ ಹೋದ ಹಾಗೆ, ಜೊಳ್ಳಾಗುತ್ತಾ, ನಕಲಿಶಾಮರಾಗುತ್ತಾ, ಯಾರನ್ನೋ ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಅವಿವೇಕಿಗಳಾಗುತ್ತಾ ಹೋಗುತ್ತೇವೆ. ನಾವು ನಮ್ಮಂತೆಯೇ ಇದ್ದಾಗ, ನಮ್ಮಿಚ್ಛೆಯ ಹಾಗೆ ನಡೆದಾಗ ನಮ್ಮ ನಮ್ಮ ಸತ್ಯಗಳನ್ನು ನಾವು ಕಂಡುಕೊಂಡಾಗ ಸಿಗುವ ಸಂತೋಷವೇ ಬೇರೆ.
ಗುಂಡು ಇಲ್ಲಿ ನೆಪಮಾತ್ರ. ಅದು ಒಂದು ಭವ್ಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿತ್ತು ಅನ್ನುವುದನ್ನು ನೆನಪಿಸಿಕೊಳ್ಳುತ್ತಾ, ಪ್ರತಿಭಾವಂತರ ಜೊತೆಗೆ ಸುಮ್ಮನೆ ಕೂತು ಅವರ ಅಮಲಿನ ವಚನಗಳನ್ನು ಕೇಳಿ ಹುರುಪುಗೊಳ್ಳುವ ಅವಕಾಶದಿಂದ ವಂಚಿತರಾದವರ ಬಗ್ಗೆ ಅನುಕಂಪ ವ್ಯಕ್ತಪಡಿಸುವುದನ್ನು ಬಿಟ್ಟು ಈಗ ಇನ್ನೇನು ಮಾಡಲು ಸಾಧ್ಯ.

-'ತೀರ್ಥ ' ರೂಪಿ ವೈಎನ್ಕೆ ನೆನಪಿಗೆ