Friday, April 27, 2007

ಹುಲಿ ಬಂತು ಹುಲಿ.

ನೀವು ಎಂದಾ­ದರೂ ಮಡಿ­ಕೇ­ರಿ­ಯಿಂದ ಸುಳ್ಯ ಮಾರ್ಗ­ವಾಗಿ ಸುಬ್ರ­ಹ್ಮ­ಣ್ಯಕ್ಕೆ ಹೋಗಿ­ದ್ದರೆ ನಾನು ಹೇಳು­ವುದು ನಿಮಗೆ ಕಣ್ಣಿಗೆ ಕಟ್ಟಿ­ದಂತೆ ಅರ್ಥ­ವಾ­ಗು­ತ್ತದೆ. ಈ ಪ್ರದೇ­ಶ­ಗ­ಳಲ್ಲಿ ನೀವು ಓಡಾ­ಡಿ­ದ­ವರು ಆಗಿ­ರದೇ ಇದ್ದರೂ ಕಾಡಿನ ನಿಬಿ­ಢ­ತೆಯ ಪರಿ­ಚಯ ಇದ್ದ­ವರೂ ಇದನ್ನು ಗ್ರಹಿ­ಸು­ವುದು ಕಷ್ಟ­ವಾ­ಗ­ಲಿ­ಕ್ಕಿಲ್ಲ ಎನ್ನು­ವುದು ನನ್ನ ಭಾವನೆ.
ಮಡಿ­ಕೇ­ರಿ­ಯಿಂದ ಸಂಪಾಜೆ ಘಾಟಿ­ರ­ಸ್ತೆಯ ಮೂಲಕ ನೀವು ಸುಲ­ಭ­ವಾಗಿ ಸುಳ್ಯ ತಲು­ಪ­ಬ­ಹುದು. ಸುಳ್ಯ­ದಿಂದ ನೆಲ್ಲೂರು ಕೆಮ್ರಾಜೆ, ಗುತ್ತಿ­ಗಾರು ಮಾರ್ಗ­ವಾಗಿ ಸುಬ್ರ­ಹ್ಮ­ಣ್ಯಕ್ಕೆ ಹೋಗುವ ಹಾದಿ­ಯಲ್ಲಿ ದಟ್ಟ­ವಾದ ಕಾಡು ಸಿಗು­ತ್ತದೆ. ಇವತ್ತು ಈ ಕಾಡಿನ ನಡುವೆ ಸಾಕಷ್ಟು ಮನೆ­ಗಳೂ ಅಡಕೆ ತೋಟ­ಗಳೂ ಕಾಣಿ­ಸು­ತ್ತ­ವೆ­ಯಾ­ದರೂ ಸುಮಾರು ಐವತ್ತು ವರು­ಷ­ಗಳ ಹಿಂದೆ ಇಲ್ಲಿ ಅಷ್ಟಾಗಿ ಮನೆ­ಗ­ಳಿ­ರ­ಲಿಲ್ಲ. ಮಳೆ­ಗಾ­ಲ­ದಲ್ಲಿ ಬಿಡದೇ ಸುರಿ­ಯುವ ಮಳೆ, ಬೇಸ­ಗೆ­ಯಲ್ಲಿ ಥರ­ಥರ ಒಣ­ಗಿಸಿ ತರ­ಗೆಲೆ ಮಾಡುವ ಬಿಸಿಲು ಮತ್ತು ಮಳೆ­ಗಾಲ ಶುರು­ವಾ­ದೊ­ಡನೆ ಅಮ­ರಿ­ಕೊ­ಳ್ಳು­ತ್ತಿದ್ದ ಮಲೇ­ರಿಯಾ ಈ ಪ್ರದೇ­ಶ­ವನ್ನು ವಾಸಿ­ಸಲು ಅಪಾ­ಯ­ಕಾ­ರಿ­ಯ­ನ್ನಾಗಿ ಮಾಡಿ­ದ್ದವು. ಚಳಿ­ಗಾ­ಲ­ದ­ಲ್ಲಂತೂ ಹತ್ತು ಗಂಟೆಯ ತನಕ ಮಂಜು ದಟ್ಟೈ­ಸಿ­ಕೊಂ­ಡಿ­ರು­ತ್ತಿತ್ತು.
ಈ ಪ್ರದೇ­ಶ­ಗ­ಳಲ್ಲಿ ಅನೇಕ ಬುಡ­ಕ­ಟ್ಟು­ಗ­ಳಿಗೆ ಸೇರಿ­ದ­ವರು ವಾಸಿ­ಸು­ತ್ತಿ­ದ್ದರು. ಇವರು ಯಾವ ಬುಡ­ಕ­ಟ್ಟಿಗೆ ಸೇರಿ­ದ­ವರು ಅನ್ನು­ವುದು ಈಗ ಯಾರಿಗೂ ನೆನ­ಪಿಲ್ಲ. ಕರ್ರಗೆ ಬಿಳಿ­ಚಿ­ಕೊಂ­ಡಿ­ರು­ತ್ತಿದ್ದ ಇವರು ಆ ಕಾಡಿನ ಕ್ರೌರ್ಯಕ್ಕೆ ಸಿಕ್ಕಿ ಬದುಕಿ ಉಳಿ­ದದ್ದೇ ಒಂದು ಪವಾಡ. ಇವರು ಬೇಸಾ­ಯ­ಗಾ­ರ­ರಲ್ಲ. ಮಾಡು­ವು­ದಕ್ಕೆ ಉದ್ಯೋ­ಗವೂ ಇರ­ಲಿಲ್ಲ. ಬಿದಿ­ರಿನ ಬುಟ್ಟಿ ಹೆಣೆ­ಯು­ವುದೂ ಇವ­ರಿಗೆ ಗೊತ್ತಿ­ರ­ಲಿಲ್ಲ. ಹೀಗಾಗಿ ಇವರ ಆಹಾ­ರ­ವೆಂ­ದರೆ ಕಾಡು ಪ್ರಾಣಿ­ಗಳು ಮತ್ತು ಗೆಡ್ಡೆ­ಗೆ­ಣಸು.
ಅದು ಹೇಗೋ ಏನೋ ಈ ಬುಡ­ಕ­ಟ್ಟಿಗೆ ಸೇರಿದ ಗಂಡ­ಸರು ಕರ್ರಗೆ ಪೀಚಲು ಪೀಚ­ಲಾ­ಗಿ­ದ್ದರೆ, ಹೆಂಗ­ಸರು ಮಾತ್ರ ಮೈಕೈ ತುಂಬಿ­ಕೊಂಡು ಕಂಗೊ­ಳಿ­ಸು­ತ್ತಿ­ದ್ದರು. ಕಾಡಿ­ನಲ್ಲಿ ಅವ­ರನ್ನು ಥಟ್ಟನೆ ಕಂಡರೆ ಬೇಲೂರು ಹಳೆ­ಬೀ­ಡಿನ ಶಿಲ್ಪ­ಕ­ನ್ನಿ­ಕೆ­ಯ­ರಿಗೆ ಜೀವ ಬಂದು ತಿರು­ಗಾ­ಡು­ತ್ತಿ­ರು­ವಂತೆ ಕಾಣಿ­ಸು­ತ್ತಿ­ದ್ದರು ಎಂದೂ ಅನೇ­ಕರು ಬರೆ­ದಿ­ದ್ದಾರೆ.
ಈ ಪ್ರದೇ­ಶ­ಗ­ಳಲ್ಲಿ ಹಿಂಸ್ರ­ಪ­ಶು­ಗಳ ಕಾಟ­ವೇನೂ ಇರ­ಲಿಲ್ಲ. ಕಾಡಿ­ನಲ್ಲಿ ಜಿಂಕೆ, ಮೊಲ, ಕಡವೆ, ಕಾಡೆ­ಮ್ಮೆ­ಗಳ ಸಂತತಿ ವಿಪು­ಲ­ವಾ­ಗಿತ್ತು. ಹೀಗಾಗಿ ಹುಲಿ, ಚಿರತೆ, ತೋಳ ಮತ್ತು ಕಿರು­ಬ­ಗ­ಳಿಗೆ ಆಹಾ­ರ­ಕ್ಕೇನೂ ಕೊರ­ತೆ­ಯಿ­ರ­ಲಿಲ್ಲ. ಆದ್ದ­ರಿಂದ ಅವು­ಗಳು ಕಾಡಿ­ನಲ್ಲೇ ಅಲೆ­ದಾ­ಡಿ­ಕೊಂ­ಡಿ­ರು­ತ್ತಿದ್ದ ಈ ಬುಡ­ಕಟ್ಟು ಜನಾಂ­ಗದ ಮಂದಿಗೆ ಯಾವ ತೊಂದ­ರೆ­ಯನ್ನೂ ಮಾಡು­ತ್ತಿ­ರ­ಲಿಲ್ಲ. ಅಕ­ಸ್ಮಾತ್ ಕಾಡಿ­ನಲ್ಲಿ ಹುಲಿ­ಯೊಂದು ಎದು­ರಾ­ದರೆ ಇವರೂ ಅಂಜಿ ಓಡು­ತ್ತಿ­ದ್ದಿಲ್ಲ. ಹುಲಿಯೇ ಮನು­ಷ್ಯ­ರನ್ನು ಕಂಡ ಸಂಕೋ­ಚ­ದಲ್ಲಿ ತೆಪ್ಪಗೆ ಹೊರ­ಟು­ಹೋ­ಗು­ತ್ತಿತ್ತು.
**­*­*­**
ಇಂಥ ನಿರ್ಭ­ಯದ ಕಾಡು ಇದ್ದ­ಕ್ಕಿ­ದ್ದಂತೆ ಎಲ್ಲರ ಗಮನ ಸೆಳೆ­ಯು­ವು­ದಕ್ಕೆ ಕಾರಣ ಸ್ವಾತಂತ್ರ ಬಂದದ್ದೇ ಇರ­ಬೇಕು. ಆಗಷ್ಟೇ ಪಂಚ­ವಾ­ರ್ಷಿಕ ಯೋಜ­ನೆ­ಗಳು ಶುರು­ವಾ­ಗಿ­ದ್ದವು. ಕೃಷಿಗೆ ಆದ್ಯತೆ ಕೊಡ­ಬೇ­ಕೆಂದು ಸರ್ಕಾರ ಹೇಳ­ಲಾ­ರಂ­ಭಿ­ಸಿತ್ತು. ಅದರ ಜೊತೆಗೇ ಹೈನು­ಗಾ­ರಿ­ಕೆಯ ಕುರಿತೂ ಬೇರೆ ಬೇರೆ ರಾಷ್ಟ್ರ­ಗಳ ಉದಾ­ಹ­ರ­ಣೆ­ಯನ್ನು ಮುಂದಿಟ್ಟು ಅನೇ­ಕರು ಮಾತಾ­ಡ­ತೊ­ಡ­ಗಿ­ದ್ದರು. ಹೈನು­ಗಾ­ರಿಕೆ ಭಾರ­ತ­ದಂಥ ಕೃಷಿ­ಪ್ರ­ದಾನ ರಾಷ್ಟ್ರ­ದಲ್ಲಿ ಅತ್ಯಂತ ಲಾಭ­ದಾ­ಯಕ ಉದ್ಯಮ ಎಂದು ಜನ ನಂಬ­ತೊ­ಡ­ಗಿ­ದ್ದರು. ಅದೇ ಸುಮಾ­ರಿಗೆ ಸುಳ್ಯ­ದಲ್ಲೂ ಅನೇ­ಕರು ಹೆಚ್ಚಿನ ಸಂಖ್ಯೆ­ಯಲ್ಲಿ ಹಸು­ಗ­ಳನ್ನೂ ಎಮ್ಮೆ­ಗ­ಳನ್ನೂ ಸಾಕುತ್ತಾ ಹೈನು­ಗಾ­ರಿ­ಕೆ­ಯನ್ನು ದೊಡ್ಡ ಮಟ್ಟ­ದಲ್ಲೇ ಆರಂ­ಭಿ­ಸಿ­ದ್ದರು.
ಅಂಥ­ವರ ಪೈಕಿ ಕೇನ್ಯ ರಾಮಣ್ಣ ಶೆಟ್ಟರೂ ಒಬ್ಬರು.
ಅವರು ಬ್ರಿಟಿ್ ಅಧಿ­ಪ­ತ್ಯ­ದಲ್ಲಿ ಉದ್ಯೋ­ಗ­ದ­ಲ್ಲಿ­ದ್ದ­ವರು. ಗಾಂಧೀ­ಜಿಯ ಕರೆಗೆ ಓಗೊಟ್ಟು ಕೆಲ­ಸಕ್ಕೆ ರಾಜೀ­ನಾಮೆ ಕೊಟ್ಟು ಕೃಷಿ­ಕ­ರಾ­ದ­ವರು. ಹೈನು­ಗಾ­ರಿ­ಕೆಯ ಕುರಿತು ಅವರ ಆಸಕ್ತಿ ಕುದು­ರು­ತ್ತಿ­ದ್ದಂತೆ ಹಾಸ­ನಕ್ಕೆ ಹೋಗಿ ಹತ್ತೆಂಟು ಎಮ್ಮೆ­ಗ­ಳನ್ನೂ ಸುಬ್ರ­ಹ್ಮ­ಣ್ಯದ ಆಸು­ಪಾ­ಸಿ­ನಿಂದ ಹತ್ತಿ­ಪ್ಪತ್ತು ಹಸು­ಗ­ಳನ್ನೂ ಕೊಂಡು­ತಂದು ದೊಡ್ಡ ಮಟ್ಟ­ದಲ್ಲಿ ಹಾಲು ಉತ್ಪಾ­ದನೆ ಆರಂ­ಭಿ­ಸಿಯೇ ಬಿಟ್ಟರು.
ಅವರ ಸಮಸ್ಯೆ ಶುರು­ವಾ­ದದ್ದೇ ಆಗ.
ಹಾಲು ಉತ್ಪಾ­ದ­ನೆ­ಯೇನೋ ದೊಡ್ಡ ಮಟ್ಟ­ದಲ್ಲೇ ಆಯಿತು. ಕೊಂಡು ತಂದ ದನ­ಗ­ಳಿಂದ ದಿನಕ್ಕೆ ನೂರು ನೂರೈ­ವತ್ತು ಲೀಟರ್ ಹಾಲು ದೊರ­ಕ­ತೊ­ಡ­ಗಿತು. ಆದರೆ ಆ ಹಾಲನ್ನು ಏನು ಮಾಡು­ವುದು ಅನ್ನುವ ಪ್ರಶ್ನೆಗೆ ಸರ್ಕಾ­ರದ ಹತ್ತಿರ ತಕ್ಪಣ ಉತ್ತ­ರ­ವಿ­ರ­ಲಿಲ್ಲ.
ಸರ್ಕಾರ ಹೈನು­ಗಾ­ರಿಕೆ ಆರಂ­ಭಿಸಿ ಎಂದು ಘೋಷಣೆ ಕೊಟ್ಟಿತ್ತೇ ವಿನಾ ಯಾರಾ­ದ­ರೊ­ಬ್ಬರು ಅದನ್ನು ತಕ್ಪ­ಣವೇ ಕಾರ್ಯ­ರೂ­ಪಕ್ಕೆ ತರು­ತ್ತಾರೆ ಎಂದು ಊಹಿ­ಸಿ­ರಲೇ ಇಲ್ಲ. ಯಾರಾ­ದ­ರೊ­ಬ್ಬರು ಯಾವುದೋ ಒಂದು ಮೂಲೆ­ಯಲ್ಲಿ ಹೈನು­ಗಾ­ರಿಕೆ ಆರಂ­ಭಿ­ಸಿ­ದರೆ ಆ ಹಾಲನ್ನು ಕೊಂಡು­ಕೊಂಡು ಸರ್ಕಾರ ಕೂಡ ಏನೂ ಮಾಡುವ ಹಾಗಿ­ರ­ಲಿಲ್ಲ. ಆಗಿನ್ನೂ ಕ್ಪೀರ­ಕ್ರಾಂ­ತಿಯ ಕನಸೂ ಸರ್ಕಾ­ರಕ್ಕೆ ಬಿದ್ದಿ­ರ­ಲಿಲ್ಲ.
ರಾಮಣ್ಣ ಶೆಟ್ಟರು ಆಗ ನಿಜಕ್ಕೂ ಹತಾ­ಶ­ರಾ­ದರು. ಕೊಂಡು ತಂದ ಜಾನು­ವಾ­ರು­ಗ­ಳನ್ನು ಸುಮ್ಮನೆ ಸಾಕು­ವುದು ಅವ­ರಿ­ಗಂತೂ ಸಾಧ್ಯ­ವಿ­ರ­ಲಿಲ್ಲ. ಆಗೆಲ್ಲ ಈಗಿ­ನಂತೆ ಹಾಲು ಸ್ಥಳೀ­ಯ­ವಾಗಿ ಮಾರಾ­ಟ­ವಾ­ಗು­ತ್ತಲೂ ಇರ­ಲಿಲ್ಲ. ಪ್ರತಿ­ಯೊಂದು ಮನೆ­ಯಲ್ಲೂ ಒಂದೊ ಎರಡೋ ಕರಾವು ಇದ್ದೇ ಇರು­ತ್ತಿತ್ತು. ಒಂದು ವೇಳೆ ಒಂದೆ­ರಡು ಮನೆ­ಗ­ಳಿಗೆ ಹಾಲು­ಬೇ­ಕಿ­ದ್ದರೂ ಅದನ್ನು ಕೊಂಡು­ಹೋಗಿ ಕೊಡು­ವುದು ತುಂಬ ದುಬಾ­ರಿ­ಯಾ­ಗು­ತ್ತಿತ್ತು. ಹೀಗಾಗಿ ರಾಮಣ್ಣ ಶೆಟ್ಟರು ಹಸು­ಗ­ಳ­ನ್ನೆಲ್ಲ ಮಾರು­ವು­ದಕ್ಕೆ ನಿಶ್ಟ­ಯಿ­ಸಿ­ದರು. ಆದರೆ ಅವರು ಕೊಂಡ ಅರ್ಧ­ಬೆ­ಲೆಗೂ ಅವು­ಗ­ಳನ್ನು ಕೊಳ್ಳು­ವ­ವರು ಅವ­ರಿಗೆ ಸಿಗ­ಲಿಲ್ಲ. ರಾಮಣ್ಣ ಶೆಟ್ಟರ ಕ್ಷೀರ­ಕ್ರಾಂತಿ ಆ ಪ್ರದೇ­ಶ­ದ­ಲ್ಲೆಲ್ಲಾ ಪ್ರಚಾ­ರ­ವಾ­ಗಿತ್ತು.
ಆಗ ಅವ­ರಿಗೆ ಹೊಳೆದ ಉಪಾ­ಯ­ವೆಂ­ದರೆ ಹಸು­ಗ­ಳ­ನ್ನೆಲ್ಲ ಒಯ್ದು ಗುತ್ತಿ­ಗಾ­ರಿಗೋ ಎಡ­ಮಂ­ಗ­ಲಕ್ಕೋ ಕೊಲ್ಲ­ಮೊ­ಗ್ರು­ವಿಗೋ ಸಮೀ­ಪ­ವಿ­ರುವ ಹುಲ್ಲು­ಗಾ­ವ­ಲಿ­ನಲ್ಲಿ ಬಿಟ್ಟು­ಬಿ­ಡು­ವುದು. ಅಲ್ಲಿ ಯಥೇ­ಚ್ಛ­ವಾಗಿ ದನ­ಗ­ಳಿಗೆ ಮೇವು ಸಿಗು­ವು­ದಂತೂ ಖಾತ್ರಿ. ಅಲ್ಲೊಂದು ಗೋಮಾ­ಳ­ವನ್ನು ಕಟ್ಟಿ ಸುತ್ತಲೂ ಬೇಲಿ­ಹಾ­ಕಿಸಿ ಬಿಟ್ಟು­ಬಿ­ಟ್ಟರೆ ಹಸು­ಗಳೂ ಎಮ್ಮೆ­ಗಳೂ ಖರ್ಚಿ­ಲ್ಲದೇ ಮೇವು ತಿಂದು­ಕೊಂಡು ಇರು­ತ್ತವೆ. ಅವು­ಗಳ ವಂಶಾ­ಭಿ­ವೃ­ದ್ಧಿಯೂ ಆಗು­ತ್ತದೆ. ಮುಂದೆ ಸರ್ಕಾ­ರದ ಯೋಚನೆ ಕೈಗೆ­ಟು­ಕು­ವಂ­ತಾ­ದಾಗ ಅವು­ಗ­ಳನ್ನು ವಾಪಸ್ಸು ಹೊಡೆ­ದು­ಕೊಂಡು ಬಂದ­ರಾ­ಯಿತು.
ಈ ಯೋಚನೆ ಬಂದಿದ್ದೇ ತಡ ರಾಮಣ್ಣ ಗೌಡರು ಗುತ್ತಿ­ಗಾ­ರಿನ ಕಡೆಗೆ ಪಯಣ ಬೆಳೆ­ಸಿ­ದರು. ಸುಳ್ಯ­ದಿಂದ ಸುಮಾರು ಮೂವತ್ತು ಮೈಲಿ ದೂರ­ದಲ್ಲಿ ಅವ­ರಿ­ಗೊಂದು ಸೊಗ­ಸಾದ ಹುಲ್ಲು­ಗಾ­ವಲು ಕಂಡಿತು. ಅದರ ಆಸು­ಪಾ­ಸಿ­ನಲ್ಲಿ ಬುಡ­ಕಟ್ಟು ಜನಾಂ­ಗಕ್ಕೆ ಸೇರಿದ ಆರೆಂಟು ಮನೆ­ಗ­ಳಿ­ದ್ದವು. ಆ ಜಾಗದ ಪಕ್ಕ­ದಲ್ಲೇ ಸಣ್ಣ­ದೊಂದು ತೊರೆಯೂ ಹರಿ­ಯು­ತ್ತಿತ್ತು. ಅಲ್ಲೇ ತನ್ನ ಗೋವು­ಗ­ಳನ್ನು ಸಾಕು­ತ್ತಿ­ದ್ದರೆ ಮುಂದೊಂದು ದಿನ ಆ ಜಾಗವೂ ತನ್ನ­ದಾ­ಗು­ತ್ತದೆ ಎಂಬ ದುರಾ­ಸೆಯೂ ಶೆಟ್ಟ­ರನ್ನು ಕಾಡಿ­ರ­ಬೇಕು. ಬುಡ­ಕಟ್ಟು ಜನಾಂ­ಗಕ್ಕೆ ಸೇರಿದ ಕೊಲ್ಲಿ ಎಂಬ­ವ­ನನ್ನು ಸಂಬ­ಳಕ್ಕೆ ಗೊತ್ತು­ಮಾ­ಡಿ­ಕೊಂಡು ಅಲ್ಲೊಂದು ವಿಶಾ­ಲ­ವಾದ ಹುಲ್ಲು­ಗಾ­ವ­ಲಿಗೆ ಬೇಲಿ ಹಾಕಿಸಿ. ಮಳೆ ಬಂದಾಗ ದನ­ಗ­ಳಿಗೆ ನಿಲ್ಲು­ವು­ದ­ಕ್ಕೊಂದು ವಿಶಾ­ಲ­ವಾದ ಚಪ್ಪರ ಹಾಕಿ­ಸಿ­ಕೊಟ್ಟು ರಾಮ­ಣ್ಣ­ಗೌ­ಡರು ತಮ್ಮ ಎಮ್ಮೆ ಮತ್ತು ಹಸು­ಗ­ಳನ್ನು ಆ ಗೋಮಾ­ಳಕ್ಕೆ ತಂದೇ­ಬಿ­ಟ್ಟರು.
ಅದು ಸುಮಾರು ಹತ್ತೆ­ಕರೆ ವಿಸ್ತಾ­ರದ ಗೋಮಾಳ. ಅದಕ್ಕೆ ಬೇಲಿ ಹಾಕಿ­ಸು­ವು­ದಕ್ಕೇ ಅವ­ರಿಗೆ ಸುಮಾರು ಖರ್ಚಾ­ಗಿತ್ತು. ಹಸು­ಗ­ಳನ್ನು ಸಾಕು­ವು­ದ­ಕ್ಕಿಂತ ಹೆಚ್ಚಾಗಿ ಅವ­ರನ್ನು ಆಕ­ರ್ಷಿ­ಸಿದ್ದು ಆ ಜಾಗ­ವನ್ನು ತಾವು ಹೊಡೆ­ದು­ಕೊ­ಳ್ಳ­ಬ­ಹುದು ಎಂಬ ದುರಾಸೆ.
ಹೀಗೆ ಅಲ್ಲಿಗೆ ತಮ್ಮ ಜಾನು­ವಾ­ರು­ಗ­ಳನ್ನು ತಂದು­ಬಿಟ್ಟ ರಾಮಣ್ಣ ಶೆಟ್ಟರು ಅದರ ಉಸ್ತು­ವಾ­ರಿ­ಯನ್ನು ತಮ್ಮ ಏಕೈಕ ಮಗ­ನಾದ ಸುಬ್ಬಣ್ಣ ಶೆಟ್ಟಿಗೆ ಒಪ್ಪಿ­ಸಿ­ದರು.
ಎಡ­ವ­ಟ್ಟಾ­ದದ್ದು ಅಲ್ಲೇ.
**­*­**
ಸುಬ್ಬಣ್ಣ ಶೆಟ್ಟಿ ಮೆಟ್ರಿಕತನಕ ಓದಿದ್ದ. ಮುಂದೆಯೂ ಓದುವ ಆಸೆ­ಯಿ­ಟ್ಟು­ಕೊಂ­ಡಿದ್ದ. ಮಂಗ­ಳೂ­ರಿಗೆ ಹೋಗಿ ಓದು ಮುಂದು­ವ­ರಿ­ಸಿ­ದರೆ ತನ್ನ ಉಕ್ಕು­ತ್ತಿ­ರುವ ಯೌವ­ನಕ್ಕೂ ನ್ಯಾಯ ಸಲ್ಲಿ­ಸ­ಬ­ಹುದು ಎಂಬ ಸಣ್ಣ ಆಸೆ ಇಟ್ಟು­ಕೊಂ­ಡಿದ್ದ ಸುಬ್ಬ­ಣ್ಣ­ನನ್ನು ರಾಮಣ್ಣ ಶೆಟ್ಟರು ಬೈದು ಕೃಷಿ­ಕಾ­ಯ­ಕಕ್ಕೆ ನೂಕಿ­ದ್ದರು. ಓದಿ ಮಗ ಯಾರ ಚಾಕ­ರಿ­ಯನ್ನೂ ಮಾಡ­ಬೇ­ಕಾ­ಗಿಲ್ಲ ಎನ್ನು­ವುದು ಅವರ ಆಲೋ­ಚ­ನೆ­ಯಾ­ಗಿತ್ತು. ಒಲ್ಲದ ಮನ­ಸ್ಸಿ­ನಿಂದ ಗದ್ದೆ, ತೆಂಗಿ­ನ­ತೋಟ ನೋಡಿ­ಕೊ­ಳ್ಳು­ತ್ತಿದ್ದ ಸುಬ್ಬ­ಣ್ಣ­ಶೆ­ಟ್ಟಿ­ಯನ್ನು ಕರೆದು ರಾಮಣ್ಣ ಶೆಟ್ಟರು ಗುತ್ತಿ­ಗಾರು ಸಮೀ­ಪದ ಗೋಮಾ­ಳ­ವನ್ನು ನೋಡಿ­ಕೊ­ಳ್ಳ­ಬೇ­ಕೆಂದು ತಾಕೀತು ಮಾಡಿ­ದರು. ತಿಂಗ­ಳಿಗೆ ಒಂದು ಸಲ­ವಾ­ದರೂ ಅಲ್ಲಿಗೆ ಹೋಗಿ ಬರ­ಬೇ­ಕೆಂದು ಕಟ್ಟು­ನಿ­ಟ್ಟಾಗಿ ಆಜ್ಞಾ­ಪಿ­ಸಿ­ದರು.
ರಾಮಣ್ಣ ಶೆಟ್ಟರ ಹತ್ತಿರ ಒಂದು ಹಳೆಯ ಮಿಲಿಟ್ರಿ ಜೀಪಿತ್ತು. ಅದ­ನ್ನ­ವರು ತೀರಾ ಕಡಿಮೆ ಬೆಲೆಗೆ ಕೊಂಡು­ಕೊಂ­ಡಿ­ದ್ದರು. ಅದು ಟ್ರಾಕ್ಟ­ರ್­ನಷ್ಟೇ ವೇಗ­ವಾಗಿ ಓಡು­ತ್ತಿತ್ತು. ಅಲ್ಲಲ್ಲಿ ಕೆಟ್ಟು ನಿಲ್ಲು­ತ್ತಿತ್ತು. ಆಗೆಲ್ಲ ಅದನ್ನು ತಳ್ಳಿ ಸ್ಟಾರ್ಟ್ ಮಾಡ­ಬೇ­ಕಾ­ಗು­ತ್ತಿತ್ತು. ಹೀಗಾಗಿ ಅದ­ಕ್ಕೊಬ್ಬ ಡ್ರೈವ­ರ್­ನನ್ನೂ ಶೆಟ್ಟರು ನೇಮಿ­ಸಿ­ದ್ದರು. ಸುಬ್ಬಣ್ಣ ಶೆಟ್ಟಿ ಆ ಜೀಪಿ­ನಲ್ಲಿ ತಿಂಗ­ಳಿ­ಗೊಮ್ಮೆ ಗೋಮಾ­ಳಕ್ಕೆ ಹೋಗಿ ಬರ­ಬೇ­ಕಾ­ಗಿತ್ತು. ಅವನ ಜೀವ­ನ­ದಲ್ಲಿ ಅತ್ಯಂತ ನಿಷ್ಪ್ರ­ಯೋ­ಜಕ ಕೆಲ­ಸ­ವೆಂ­ದರೆ ಅದು ಎಂದು ಸುಬ್ಬಣ್ಣ ರೈ ಅಂದು­ಕೊಂ­ಡಿದ್ದ. ಹತ್ತಾರು ಬಾರಿ ರಾಮಣ್ಣ ಶೆಟ್ಟ­ರಿಂದ ಹೇಳಿ­ಸಿ­ಕೊ­ಳ್ಳದೇ ಆತ ಅತ್ತ ಕಡೆ ತಲೆ­ಹಾ­ಕು­ತ್ತಿ­ರ­ಲಿಲ್ಲ. ಇಂಥ ಮಗ­ನನ್ನು ಹೇಗಪ್ಪಾ ದಾರಿಗೆ ತರು­ವುದು ಎಂದು ಯೋಚಿ­ಸು­ತ್ತಿದ್ದ ರಾಮಣ್ಣ ರೈಗ­ಳಿಗೆ ಕತ್ತ­ಲ­ಕಾ­ಡಿನ ನಡುವೆ ಬೆಳ­ಕಿನ ಕೋಲಿ­ನಂತೆ ಕಾಣಿ­ಸಿದ್ದು ಸುಬ್ಬಣ್ಣ ಶೆಟ್ಟಿಯ ಬದ­ಲಾದ ವರ್ತನೆ.
**­*­**
ಸುಬ್ಬಣ್ಣ ಇದ್ದ­ಕ್ಕಿ­ದ್ದಂತೆ ತಿಂಗ­ಳಿ­ಗೆ­ರಡು ಸಾರಿ ಗೋಮಾ­ಳಕ್ಕೆ ಹೋಗಿ­ಬ­ರಲು ಆರಂ­ಭಿ­ಸಿದ್ದ. ಹೋದ­ವನು ಒಂದೆ­ರಡು ದಿನ ಅಲ್ಲೇ ಇದ್ದು­ಬಿ­ಡು­ತ್ತಿದ್ದ. ವಾಪಸ್ಸು ಬರು­ವಾಗ ಮತ್ತಷ್ಟು ಉತ್ಸಾ­ಹ­ದಿಂದ ನಳ­ನ­ಳಿ­ಸು­ತ್ತಿದ್ದ. ಅಂತೂ ಮಗ­ನಿಗೆ ಹಳ್ಳಿಯ ಹುಚ್ಚು ಹತ್ತಿತು, ಇನ್ನು ಪರ­ವಾ­ಗಿಲ್ಲ ಅಂದು­ಕೊಂಡು ರಾಮಣ್ಣ ಶೆಟ್ಟರು ತಮ್ಮ ಮಗನ ಬದ­ಲಾದ ವರ್ತ­ನೆ­ಯನ್ನು ಕಂಡ­ಕಂ­ಡ­ವರ ಹತ್ತಿರ ಹೇಳಿ­ಕೊಂಡು ಹೆಮ್ಮೆ ಪಟ್ಟು­ಕೊಂ­ಡರು.
ಸುಬ್ಬಣ್ಣ ಬದ­ಲಾ­ದ­ದ್ದಕ್ಕೆ ಕಾರ­ಣ­ವಿತ್ತು. ಗೋಮಾಳ ನೋಡಿ­ಕೊ­ಳ್ಳಲು ರಾಮ­ಣ್ಣ­ಶೆ­ಟ್ಟರು ನೇಮಿ­ಸಿದ ಕೊಲ್ಲಿ ಎಂಬ ಬುಡ­ಕಟ್ಟು ಜನಾಂ­ಗದ ವಯೋ­ವೃ­ದ್ದ­ನಿ­ಗೊ­ಬ್ಬಳು ಸುಂದರಿ ಮಗ­ಳಿ­ದ್ದಳು. ಆ ಜನಾಂ­ಗದ ಎಲ್ಲ­ರಿ­ಗಿಂತ ಒಂದು ಕೈ ಮಿಗಿಲು ಅನ್ನಿ­ಸು­ವಷ್ಟು ಆಕೆ ಮೈಕೈ ತುಂಬಿ­ಕೊಂಡು ಕಂಗೊ­ಳಿ­ಸು­ತ್ತಿ­ದ್ದಳು. ಸುಬ್ಬಣ್ಣ ಶೆಟ್ಟಿ ಅವ­ಳಿಗೆ ಮೈಮ­ರೆ­ತಿದ್ದ. ಕೊಲ್ಲಿ­ಯನ್ನು ಯಾವುದೋ ಕೆಲ­ಸಕ್ಕೆ ಕಳಿ­ಸಿಯೋ, ಆಕೆ­ಯನ್ನು ಜೀಪಿ­ನಲ್ಲಿ ಕಾಡಿನ ಮತ್ತೊಂದು ಮೂಲೆಗೆ ಕರೆ­ದೊಯ್ದೋ ಸುಬ್ಬಣ್ಣ ಆಕೆಯ ಜೊತೆ ಚಕ್ಕಂ­ದ­ವಾ­ಡ­ತೊ­ಡ­ಗಿದ್ದ. ಆಕೆಯೂ ಹಳ್ಳಿ­ಯಿಂದ ಪಾರಾಗಿ ಪಟ್ಟಣ ಸೇರು­ವು­ದಕ್ಕೆ ಇದೊಂದು ಅಪೂರ್ವ ಅವ­ಕಾಶ ಎಂದು­ಕೊಂಡು ಆತ­ನನ್ನು ಸಂಪೂ­ರ್ಣ­ವಾಗಿ ತನ್ನ ತೆಕ್ಕೆಗೆ ತೆಗೆ­ದು­ಕೊಂ­ಡಿ­ದ್ದಳು.
ಈ ಮಧ್ಯೆ ಮಗನ ಕಾಡಿನ ನಿಷ್ಠೆ­ಯನ್ನು ಅಪಾರ್ಥ ಮಾಡಿ­ಕೊಂಡ ಶೆಟ್ಟರು ಅವ­ನಿ­ಗೊಂದು ಮದುವೆ ಗೊತ್ತು­ಮಾ­ಡಿ­ದರು. ಸುಬ್ಬಣ್ಣ ಅದನ್ನೂ ವಿರೋ­ಧಿ­ಸ­ಲಿಲ್ಲ. ಕಾಡಿ­ನ­ಲ್ಲೊಂದು ನಾಡಿ­ನ­ಲ್ಲೊಂದು ಹೆಣ್ಣು ಸಿಕ್ಕರೆ ತನ್ನ ವಂಚಿತ ನಗ­ರ­ಜೀ­ವ­ನದ ವೈವಿ­ಧ್ಯ­ಮಯ ಆಸೆ­ಗ­ಳನ್ನು ಪೂರೈ­ಸಿ­ಕೊ­ಳ್ಳ­ಬ­ಹುದು ಎಂದು ಅವ­ನಿಗೂ ಅನ್ನಿ­ಸ­ತೊ­ಡ­ಗಿತ್ತು. ಅದಕ್ಕೆ ತಕ್ಕಂತೆ ನಿರ್ವಿ­ಘ್ನ­ವಾಗಿ ಅವನ ಮದು­ವೆಯೂ ನಡೆ­ದು­ಹೋ­ಯಿತು. ತಿಂಗ­ಳಿಗೆ ನಾಲ್ಕು ಬಾರಿ ಕೊಲ್ಲಿಯ ಮಗ­ಳನ್ನು ಭೇಟಿ­ಯಾ­ಗು­ತ್ತಿದ್ದ ಸುಬ್ಬಣ್ಣ ಈಗೀಗ ತಿಂಗ­ಳಿ­ಗೆ­ರಡು ಭೇಟಿಗೆ ತೃಪ್ತ­ನಾದ.
ಈ ಮಧ್ಯೆ ಮತ್ತೊಂದು ಅನಾ­ಹುತ ಸಂಭ­ವಿ­ಸಿತು. ಕೊಲ್ಲಿಯ ಮಗಳು ಗರ್ಭಿ­ಣಿ­ಯಾ­ಗಿ­ದ್ದಳು. ಅದನ್ನು ಕಂಡು­ಹಿ­ಡಿ­ದ­ವಳು ಕೊಲ್ಲಿ­ಯಲ್ಲ. ಅವನ ಹೆಂಡತಿ ಎಂದೋ ತೀರಿ­ಕೊಂ­ಡಿ­ದ್ದಳು. ಆದರೆ ಆ ಮನೆಗೆ ಆಗಾಗ ಬಂದು­ಹೋ­ಗು­ತ್ತಿದ್ದ ಪಕ್ಕದ ಹಾಡಿಯ ಕೊಲ್ಲಿಯ ಚಿಕ್ಕಮ್ಮ ಕೊಲ್ಲಿಗೆ ಈ ಆಘಾ­ತ­ಕಾರಿ ಸುದ್ದಿ­ಯನ್ನು ತಿಳಿ­ಸಿ­ದಳು.
ಅವರ ಜನಾಂ­ಗ­ದಲ್ಲಿ ಅದು ಅಂಥ ಅಪ­ರಾ­ಧ­ವೇನೂ ಆಗಿ­ರ­ಲಿಲ್ಲ. ಆದ್ದ­ರಿಂದ ಕೊಲ್ಲಿ ಮಗ­ಳನ್ನು ಗದ­ರು­ವು­ದ­ಕ್ಕೇನೂ ಹೋಗ­ಲಿಲ್ಲ. ಬದ­ಲಾಗಿ ಮಗ­ಳ­ನ್ನಿ­ಟ್ಟು­ಕೊಂಡು ವ್ಯಾಪಾರ ಮಾಡಲು ನಿರ್ಧ­ರಿ­ಸಿದ. ಮುಂದಿನ ಸಾರಿ ಸುಬ್ಬಣ್ಣ ಶೆಟ್ಟಿ ಬಂದಾಗ ಏನು ಮಾಡ­ಬೇ­ಕೆಂದು ಮಗ­ಳಿಗೆ ತಿಳಿ­ಸಿ­ಹೇ­ಳಿದ.
ಮಗಳು ಅಪ್ಪನ ಮಾತನ್ನು ಮೀರ­ಲಿಲ್ಲ. ಸುಬ್ಬಣ್ಣ ಶೆಟ್ಟಿಗೆ ತಾನು ಗರ್ಭಿ­ಣಿ­ಯಾದ ಸಂಗ­ತಿ­ಯನ್ನು ತಿಳಿ­ಸಿ­ದಳು. ತಮ್ಮ ಬುಡ­ಕ­ಟ್ಟಿನ ಸಂಪ್ರ­ದಾ­ಯದ ಪ್ರಕಾರ ತನ್ನನ್ನು ಕೂಡಿಕೆ ಮಾಡಿ­ಕೊ­ಳ್ಳ­ಬೇ­ಕೆಂ­ದಳು. ಆವತ್ತು ಆಕೆ­ಯಿಂದ ಅದು ಹೇಗೋ ತಪ್ಪಿ­ಸಿ­ಕೊಂಡು ಸುಬ್ಬಣ್ಣ ಶೆಟ್ಟಿ ಒಂದೇ ಉಸಿ­ರಲ್ಲಿ ಸುಳ್ಯಕ್ಕೆ ಕಾಲು­ಕಿತ್ತ. ಮತ್ತೆಂದೂ ಗೋಮಾ­ಳದ ಕಡೆಗೆ ತಲೆ­ಹಾ­ಕ­ದಿ­ರಲು ನಿರ್ಧ­ರಿ­ಸಿದ.
ರಾಮಣ್ಣ ಶೆಟ್ಟ­ರಿಗೆ ಇದು ಮತ್ತೊಂದು ಸಮ­ಸ್ಯೆ­ಯಾಗಿ ಕಂಡಿತು. ಮದುವೆ ಮಾಡಿದ ತಕ್ಪಣ ಮಗ ಹೆಂಡ­ತಿಯ ಗುಲಾ­ಮ­ನಾಗಿ ಕರ್ತ­ವ್ಯ­ವಿ­ಮು­ಖ­ನಾದ ಎಂದ­ವರು ಭಾವಿ­ಸಿ­ದರು. ಮಗ­ನನ್ನು ಮತ್ತೆ ಮತ್ತೆ ಮಾಳದ ಕಡೆ ಹೋಗು­ವಂತೆ ಒತ್ತಾ­ಯಿ­ಸಿ­ದರು. ಅವನು ಹೋಗ­ದಿ­ದ್ದರೇ ತಾನೇ ಹೋಗು­ವು­ದಾಗಿ ಬೆದ­ರಿಕೆ ಹಾಕಿ­ದರು.
ಈ ಮಧ್ಯೆ ಇನ್ನೊಂದು ಅಪಾಯ ಎದು­ರಾ­ಯಿತು. ಕೊಲ್ಲಿ ಮತ್ತು ಅವನ ಮಗಳು ಒಂದು ದಿನ ರಾಮಣ್ಣ ಶೆಟ್ಟರ ಮನೆ­ಯಂ­ಗ­ಳ­ದಲ್ಲಿ ಪ್ರತ್ಯ­ಕ್ಪ­ರಾ­ದರು. ಆವತ್ತು ಅದೃ­ಷ್ಟ­ವ­ಶಾತ್ ರಾಮಣ್ಣ ಶೆಟ್ಟರು ಮನೆ­ಯ­ಲ್ಲಿ­ರ­ಲಿಲ್ಲ. ಸುಬ್ಬಣ್ಣ ಶೆಟ್ಟಿಯ ಹೆಂಡತಿ ತವ­ರಿಗೆ ಹೋಗಿ­ದ್ದಳು. ತಕ್ಪಣ ಸುಬ್ಬಣ್ಣ ಶೆಟ್ಟಿ ಕೊಲ್ಲಿಯ ಕೈಗೊಂ­ದಷ್ಟು ದುಡ್ಡು ತುರುಕಿ ಮುಂದಿ­ನ­ವಾ­ರವೇ ಬಂದು ಮಗ­ಳಿ­ಗೊಂದು ಗತಿ ಕಾಣಿ­ಸು­ವು­ದಾಗಿ ಹೇಳಿದ. ಇಷ್ಟು ದಪ್ಪ ಹೊಟ್ಟೆ ಹೊತ್ತು­ಕೊಂಡು ಅವನ ಕಣ್ಣಿಗೆ ಒಂದಿಡೀ ಸಮ­ಸ್ಯೆ­ಯಂತೆ ಕಾಣಿ­ಸು­ತ್ತಿದ್ದ ಕೊಲ್ಲಿಯ ಮಗ­ಳನ್ನೂ ಕರೆದು ಏನೋ ಉಸು­ರಿದ.
**­*­*­**
ಇದಾದ ಮೇಲೆ ಘಟ­ನೆ­ಗಳು ವೇಗ­ವಾಗಿ ನಡೆ­ದವು. ಒಂದು ವಾರ­ದಲ್ಲಿ ಗೋಮಾ­ಳಕ್ಕೆ ಬರು­ವು­ದಾಗಿ ಹೇಳಿದ ಸುಬ್ಬಣ್ಣ ರೈ ಮಾರನೇ ದಿನವೇ ಅಲ್ಲಿಗೆ ಜೀಪಿ­ನಲ್ಲಿ ಹೋದ. ಅಲ್ಲಿ ಅಪ್ಪ­ನಿಗೂ ಹೇಳದೇ ತನ­ಗಾಗಿ ಕಾಯುತ್ತಾ ಕೂತಿದ್ದ ಕೊಲ್ಲಿಯ ಮಗ­ಳನ್ನು ಜೀಪಿಗೆ ಹತ್ತಿ­ಸಿ­ಕೊಂಡು ಮರಳಿ ಬರುವ ದಾರಿ­ಯಲ್ಲಿ ಅವಳ ಕತ್ತು ಹಿಸುಕಿ ಕೊಂದ. ಸುಬ್ಬಣ್ಣ ಶೆಟ್ಟಿಯೂ ಜೀಪು ಡ್ರೈವರ್ ಗುರು­ವ­ಪ್ಪನೂ ಅವಳ ಹೆಣ­ವನ್ನು ಹಾದಿ­ಯಲ್ಲಿ ಸಿಗುವ ಕೆರೆ­ಯೊಂ­ದಕ್ಕೆ ಕಲ್ಲು­ಕಟ್ಟಿ ಎಸೆ­ದರು.
ಇದಾದ ಒಂದು ವಾರದ ನಂತರ ಸುಬ್ಬಣ್ಣ ಶೆಟ್ಟಿ ಗೋಮಾ­ಳಕ್ಕೆ ಹೋದ. ಮಗಳು ನಾಪ­ತ್ತೆ­ಯಾದ ದುಃಖ­ದಲ್ಲಿ ಕೊಲ್ಲಿ ಕುಸಿ­ದು­ಹೋ­ಗಿದ್ದ. ಅವ­ನಿಗೆ ಸುಬ್ಬಣ್ಣ ಶೆಟ್ಟಿಯ ಮೇಲೂ ಅನು­ಮಾ­ನ­ಗ­ಳಿ­ದ್ದವು. ಅದೇ ಅನು­ಮಾನ ಮತ್ತು ಸಿಟ್ಟಲ್ಲಿ ಆತ ಒಂದಷ್ಟು ಕೂಗಾ­ಡಿದ. ರಾಮಣ್ಣ ರೈಯ­ವ­ರಿಗೆ ಇದ­ನ್ನೆಲ್ಲ ತಿಳಿ­ಸು­ವು­ದಾ­ಗಿಯೂ ತನ್ನ ಮಗ­ಳನ್ನು ಸುಬ್ಬಣ್ಣ ಶೆಟ್ಟಿಯೇ ಕಾಣೆ­ಯಾ­ಗಿ­ಸಿ­ದ್ದಾ­ನೆಂದೂ ಅರ­ಚಾ­ಡಿದ. ಸುಬ್ಬಣ್ಣ ಶೆಟ್ಟಿ ಮತ್ತು ಡ್ರೈವರ್ ಸೇರಿ ಕೊಲ್ಲಿ­ಯನ್ನು ಅವನ ಗುಡಿ­ಸ­ಲಲ್ಲೇ ಕೊಂದರು. ಅದು ಬೇಸ­ಗೆಯ ಕಾಲ­ವಾ­ದ್ದ­ರಿಂದ ಅವನ ಗುಡಿ­ಸ­ಲಿಗೆ ಬೆಂಕಿ ಹಚ್ಚಿ­ದರು. ಕೊಲ್ಲಿಯ ಅರ್ಧ­ಸುಟ್ಟು ಕರ­ಕ­ಲಾ­ಗಿದ್ದ ಶವ­ವನ್ನು ಮೂರು ದಿನ­ಗಳ ನಂತರ ಅವನ ಬುಡ­ಕ­ಟ್ಟಿನ ಮಂದಿ ತಮ್ಮ ಶಾಸ್ತ್ರೋಕ್ತ ದಫನ್ ಮಾಡಿ­ದರು.
ಒಂದು ಪ್ರೇಮ ಪ್ರಕ­ರಣ ಎರಡು ಕೊಲೆ­ಯಲ್ಲಿ ಅಂತ್ಯ­ವಾ­ಯಿತು.
**­*­*­**
ಇಲ್ಲಿಗೆ ಎಲ್ಲವೂ ಮುಗಿ­ದು­ಹೋ­ಗ­ಬೇ­ಕಾ­ಗಿತ್ತು.
ಮತ್ತೆ ಆ ಪ್ರದೇ­ಶಕ್ಕೆ ಸುಬ್ಬಣ್ಣ ಶೆಟ್ಟಿ ಕಾಲಿ­ಡದೇ ಹೋಗಿ­ದ್ದರೆ ಬಹುಶಃ ಮುಗಿ­ಯು­ತ್ತಿತ್ತೋ ಏನೋ? ಎರಡು ಕೊಲೆ­ಯಲ್ಲಿ ಭಾಗ­ವ­ಹಿ­ಸಿದ್ದ, ಸುಬ್ಬಣ್ಣ ಶೆಟ್ಟಿಯ ಗುಟ್ಟು­ಗ­ಳೆಲ್ಲ ಗೊತ್ತಿದ್ದ ಡ್ರೈವರ್ ಗುರು­ವಪ್ಪ ತನ್ನ ಜಾಣ­ತನ ತೋರಿ­ಸ­ಲಿಕ್ಕೆ ಆರಂ­ಭಿ­ಸದೇ ಹೋಗಿ­ದ್ದರೂ ಎಲ್ಲ ಮುಗಿ­ಯು­ತ್ತಿತ್ತೋ ಏನೋ?
ಆದರೆ ಹಾಗಾ­ಗ­ಲಿಕ್ಕೆ ಇಬ್ಬರೂ ಬಿಡ­ಲಿಲ್ಲ.
ಗುರು­ವಪ್ಪ ತಾನು ಬಾಯ್ಮು­ಚ್ಚಿ­ಕೊಂ­ಡಿ­ರು­ವು­ದ­ಕ್ಕಾಗಿ ಪ್ರತಿ­ತಿಂ­ಗಳೂ ಸಾವಿರ ರುಪಾ­ಯಿ­ಯನ್ನು ಸುಬ್ಬಣ್ಣ ಶೆಟ್ಟಿ­ಯಿಂದ ಪೀಕಿ­ಸ­ತೊ­ಡ­ಗಿದ. ಅಷ್ಟೊಂದು ದುಡ್ಡನ್ನು ಅಪ್ಪ­ನಿಂದ ಕೇಳು­ವುದು ಸಾಧ್ಯ­ವಾ­ಗದೇ ಸುಬ್ಬಣ್ಣ ನಾನಾ ಕಡೆ ಸಾಲ ಮಾಡ­ಬೇ­ಕಾಗಿ ಬಂತು. ಈ ಡ್ರೈವರ್ ಗುರು­ವ­ಪ್ಪ­ನನ್ನೂ ಮುಗಿ­ಸ­ಬೇಕು ಎಂದು ಆಗಾಗ ಆತ­ನಿಗೆ ಅನ್ನಿ­ಸಿತ್ತು. ಆದರೆ ತನ­ಗಿಂತ ಬಲಾ­ಢ್ಯ­ನಂತೆ ಕಾಣು­ತ್ತಿದ್ದ ಆತ­ನನ್ನು ಕೊಲ್ಲು­ವು­ದಕ್ಕೆ ಸುಬ್ಬ­ಣ್ಣ­ನಿಗೆ ಧೈರ್ಯ ಬಂದಿ­ರ­ಲಿಲ್ಲ.
ಈ ನಡುವೆ, ಕೊಲ್ಲಿಯ ಕೊಲೆ ನಡೆದು ಎಂಟು ತಿಂಗ­ಳಾ­ಗಿತ್ತು. ಸುಬ್ಬಣ್ಣ ಶೆಟ್ಟಿ, ತನ್ನ ಹೆಂಡತಿ ಮತ್ತು ಮೂರು ತಿಂಗಳ ಮಗು­ವಿನ ಜೊತೆ ಗೋಮಾ­ಳಕ್ಕೆ ಹೋದ. ಅಲ್ಲಿ ಒಂದು ಪುಟ್ಟ ಮನೆ ಕಟ್ಟುವ ಯೋಚ­ನೆಯೂ ಅವ­ನಿಗೆ ಬಂದಿತ್ತು. ಒಂದಿಡೀ ದಿನ ಅಲ್ಲಿದ್ದು ಗೋಮಾ­ಳದ ಅಂಚಲ್ಲಿ ಅಲೆ­ದಾ­ಡುತ್ತಾ ಗಂಡ, ಹೆಂಡತಿ ಮತ್ತು ಮಗು ವಾಪಸ್ಸು ಹೊರ­ಡುವ ತಯಾ­ರಿ­ಯ­ಲ್ಲಿ­ದ್ದರು. ಯಥಾ­ಪ್ರ­ಕಾರ ಜೀಪು ಕೈಕೊ­ಟ್ಟಿ­ದೆ­ಯೆಂದು ಗುರು­ವಪ್ಪು ರಿಪೇ­ರಿ­ಯಲ್ಲಿ ತೊಡ­ಗಿ­ಕೊಂ­ಡಿದ್ದ. ಅದನ್ನು ಆಸ­ಕ್ತಿ­ಯಿಂದ ನೋಡುತ್ತಾ ಸುಬ್ಬಣ್ಣ ನಿಂತಿದ್ದ. ಹೆಂಡತಿ ಮತ್ತು ಮಗು ಅಲ್ಲೇ ಅಡ್ಡಾ­ಡುತ್ತಾ ಅಟ­ವಾ­ಡು­ತ್ತಿ­ದ್ದರು.
ಇದ್ದ­ಕ್ಕಿ­ದ್ದಂತೆ ಮಗು ಅಳ­ತೊ­ಡ­ಗಿತು.
ಕಾಡಿ­ನಲ್ಲಿ ಅಳ­ಬಾ­ರದು ಎನ್ನುವ ಮೂಲ­ ನಿ­ಯಮ ಮಗು­ವಿ­ಗಷ್ಟೇ ಅಲ್ಲ, ಸುಬ್ಬ­ಣ್ಣ­ನಿಗೂ ಗೊತ್ತಿ­ರ­ಲಿಲ್ಲ. ಅಳುವ ಮಗು­ವನ್ನು ಎತ್ತಿ­ಕೊ­ಳ್ಳ­ಲೆಂದು ತಾಯಿ ಹತ್ತಿರ ಬರು­ತ್ತಿ­ದ್ದಂತೆ ಸುಬ್ಬಣ್ಣ ತಿರುಗಿ ನೋಡಿದ. ಅವನು ಕಣ್ಮುಚ್ಚಿ ಕಣ್ತೆ­ಗೆ­ಯು­ವ­ಷ್ಟ­ರಲ್ಲಿ ಒಂದು ಆಕೃತಿ ಪೊದೆ­ಯಿಂದ ಛಂಗನೆ ಜಿಗಿದು ಅವನ ಮಗು­ವನ್ನೂ ಹೆಂಡ­ತಿ­ಯನ್ನೂ ಬಾಯಲ್ಲಿ ಕಚ್ಚಿ­ಕೊಂಡು ನೆಗೆ­ದು­ಹೋ­ಯಿತು. ಮರು­ಕ್ಪಣ ಅವನ ಹೆಂಡತಿ ಮತ್ತು ಮಗು­ವಿದ್ದ ಜಾಗ­ದಲ್ಲಿ ಯಾರೂ ಇರ­ಲಿಲ್ಲ. ಆತ ಗಾಬ­ರಿ­ಯಿಂದ ಥರ ಥರ ನಡು­ಗುತ್ತಾ ಹಾಹಾ­ಕಾರ ಮಾಡುತ್ತಾ ಜೀಪನ್ನೂ ಅಲ್ಲೇ ಬಿಟ್ಟು ಡ್ರೈವ­ರನ ಜೊತೆ ಪರಾ­ರಿ­ಯಾದ.
ಮಾರ­ನೆಯ ದಿನ ರಾಮಣ್ಣ ಶೆಟ್ಟರೂ ಮಗನ ಮತ್ತು ಡ್ರೈವ್ ಜೊತೆ ಅಲ್ಲಿಗೆ ಆಗ­ಮಿ­ಸಿ­ದರು. ಬುಡ­ಕಟ್ಟು ಜನಾಂ­ಗ­ದ­ವರ ಜೊತೆ ಸೇರಿ ಇಡೀ ಕಾಡನ್ನು ಜಾಲಾ­ಡಿ­ದರು. ಸೊಸೆಯ ಮೊಮ್ಮ­ಗು­ವಿನ ಪತ್ತೆ ಹತ್ತ­ಲಿಲ್ಲ. ಅವರು ನಿರಾ­ಸೆ­ಯಲ್ಲಿ ಹೊರಟು ಹೋದರು. ಸುಬ್ಬಣ್ಣ ಮತ್ತು ಡ್ರೈವರ್ ಅಲ್ಲೇ ಉಳಿ­ದು­ಕೊಂ­ಡರು.
ನಡು­ರಾ­ತ್ರಿಯ ಹೊತ್ತಿಗೆ ಸುಬ್ಬಣ್ಣ ದೇಹ­ಬಾಧೆ ತೀರಿ­ಸಿ­ಕೊ­ಳ್ಳ­ಲಿಕ್ಕೆ ಗುಡಿ­ಸ­ಲಿ­ನಿಂದ ಹೊರಗೆ ಬಂದ. ಕುಳಿ­ತು­ಕೊಂಡು ನಿದ್ದೆ­ಗ­ಣ್ಣಲ್ಲಿ ಉಚ್ಚೆ­ಹೊ­ಯ್ಯು­ತ್ತಿ­ದ್ದ­ವ­ನಿಗೆ ತನ್ನ­ಮುಂದೆ ಆಕೃ­ತಿ­ಯೊಂದು ನಿಂತದ್ದು ಕಾಣಿ­ಸಿ­ತಷ್ಟೇ. ಮರು­ಕ್ಪ­ಣವೇ ಅದು ಭೀಕ­ರ­ವಾಗಿ ಗರ್ಜಿಸಿ ಸುಬ್ಬ­ಣ್ಣ­ನನ್ನು ಹೆಗ­ಲಿಗೆ ಹಾಕಿ­ಕೊಂಡು ಕಾಡಿ­ನೊ­ಳಗೆ ಓಡಿ­ಹೋ­ಯಿತು. ಆ ಗರ್ಜ­ನೆಗೆ ಎದ್ದು ಕೂತ ಡ್ರೈವರ್ ಗುರು­ವಪ್ಪ ಉಟ್ಟ­ಬ­ಟ್ಟೆ­ಯಲ್ಲೇ ಒಂದು ಎರಡು ಮಾಡಿ­ಕೊಂಡು ಅದೇ ವಾಸ­ಲೆ­ಯಲ್ಲೇ ಗುಡಿ­ಸ­ಲಿ­ನಿಂದ ಹೊರ­ಬ­ರ­ಲಾ­ಗದೆ ರಾತ್ರಿ ಬೆಳಗು ಮಾಡಿದ. ಬೆಳ­ಗಾ­ಗು­ತ್ತಲೇ ಭಯ­ಗ್ರ­ಸ್ತ­ನಾಗಿ ಓಡಿ ಹೋಗಿ ಜೀಪು ಹತ್ತಿ­ಕೊಂಡು ಶರ­ವೇ­ಗ­ದಿಂದ ಸುಳ್ಯದ ಕಡೆ ಧಾವಿ­ಸಿದ.
ಗುತ್ತಿ­ಗಾರು ಸುಳ್ಯದ ರಸ್ತೆ­ಯಲ್ಲಿ ಸಿಗುವ ಕೆರೆ­ಯೊಂ­ದ­ರಲ್ಲಿ ಅವನ ಜೀಪು ಮುಕ್ಕಾಲು ಭಾಗ ಮುಳು­ಗಿ­ದ್ದು­ದನ್ನು ಮೂರು ದಿನ­ಗಳ ನಂತರ ಯಾರೋ ನೋಡಿ ರಾಮಣ್ಣ ಶೆಟ್ಟ­ರಿಗೆ ವರದಿ ಮಾಡಿ­ದರು. ಅವರು ಬಂದು ಜೀಪು ಎತ್ತಿ­ಸುವ ಹೊತ್ತಿಗೆ ಗುರು­ವ­ಪ್ಪನ ಶವ­ವನ್ನು ಕೆರೆಯ ಮೀನು­ಗಳು ತಿಂದು ಮುಗಿ­ಸಿ­ದ್ದವು.
ಗುರು­ವಪ್ಪ ಜೀಪಿ­ನೊಂ­ದಿಗೆ ಬಿದ್ದು ಸತ್ತ ಕೆರೆಯೂ ಸುಬ್ಬಣ್ಣ ಮತ್ತು ಗುರು­ವಪ್ಪ ಸೇರಿ ಕೊಲ್ಲಿಯ ಮಗ­ಳನ್ನು ಕಲ್ಲು­ಕಟ್ಟಿ ಎಸೆದ ಕೆರೆಯೂ ಒಂದೇ ಆಗಿ­ದ್ದದ್ದು ಮಾತ್ರ ಕಾಕ­ತಾ­ಳೀಯ.
**­*­**
ಆ ಪ್ರದೇ­ಶ­ದಲ್ಲಿ ಮತ್ತೆಂದೂ ಹುಲಿ ಕಾಣಿ­ಸಿ­ಕೊಂ­ಡ­ದ್ದನ್ನು ಯಾರೂ ಕಾಣ­ಲಿಲ್ಲ. ಸತ್ತ ಕೊಲ್ಲಿಯೇ ದೆವ್ವ­ವಾಗಿ ಹುಲಿಯ ರೂಪ­ದಲ್ಲಿ ಬಂದು ಸೇಡು ತೀರಿ­ಸಿ­ಕೊಂಡ ಎಂದು ಅನೇ­ಕರು ಮಾತಾ­ಡಿ­ಕೊಂ­ಡರು. ಕ್ರಮೇಣ ಈ ಸುದ್ದಿ ರಾಮಣ್ಣ ಶೆಟ್ಟರ ಕಿವಿಗೂ ಬಿತ್ತು. ಇದ್ದೊಬ್ಬ ಮಗ­ನನ್ನು ಕಳ­ಕೊಂಡ ದುಃಖ­ದಲ್ಲಿ ಶೆಟ್ಟರು ಐಹಿಕ ವ್ಯಾಪಾ­ರ­ಗ­ಳಲ್ಲಿ ಆಸಕ್ತಿ ಕಳ­ಕೊಂಡು ಕೃಶ­ರಾ­ಗುತ್ತಾ ಬಂದರು.
ಒಂದು ದಿನ ಇದ್ದ­ಕ್ಕಿ­ದ್ದಂತೆ ಕಾಣೆ­ಯಾ­ದರು. ಅವ­ರನ್ನು ಹುಡು­ಕಿ­ಕೊಂಡು ಬಂದ­ವ­ರಿಗೆ ಅವರ ಮನೆಯ ಅಂಗ­ಳ­ದಲ್ಲಿ ಹುಲಿಯ ಹೆಜ್ಜೆ­ಗು­ರು­ತು­ಗಳು ಕಾಣಿ­ಸಿ­ದ್ದು­ವಂತೆ.
ಆ ಕಾಲದ ದಿನ­ಪ­ತ್ರಿ­ಕೆ­ಗ­ಳಲ್ಲಿ ಸುಳ್ಯದ ಮಂದಿ ಒಂದು­ವಾರ ಕಾಲ ಹುಲಿ­ಭೀ­ತಿ­ಯಿಂ­ದಾಗಿ ಮನೆ­ಯಿಂದ ಹೊರಗೆ ಬರದೇ ಕಾಲ­ಕ­ಳೆದ ಬಗ್ಗೆ ವರದಿ ಬಂದಿ­ದ್ದನ್ನು ಈಗಲೂ ನೂರು ಸಮೀ­ಪಿ­ಸು­ತ್ತಿ­ರುವ ಮಂದಿ ನೆನ­ಪಿ­ಸಿ­ಕೊ­ಳ್ಳು­ತ್ತಾರೆ.

Tuesday, April 24, 2007

ಪಯ­ಣ­ದಲಿ ಜೊತೆ­ಯಾಗಿ ನಾನಿ­ಲ್ಲವೆ?


ಪ್ರಖರ ಸಂಜೆ­ಗಳು ಅಪಾ­ಯ­ಕಾರಿ. ಅವು ಸೀದಾ ನಮ್ಮನ್ನು ಬಾಲ್ಯಕ್ಕೆ ಕೊಂಡೊ­ಯ್ಯು­ತ್ತವೆ. ಮುಂಜಾ­ನೆಯ ಮಂದ ಬೆಳಕು ಹುಟ್ಟಿ­ನಂತೆ, ಮಧ್ಯಾ­ಹ್ನದ ಸುಡು­ಸುಡು ಬಿಸಿಲು ಸಾವಿ­ನಂತೆ ನಮ್ಮನ್ನು ತಲು­ಪಿ­ದರೆ ಸಂಜೆಯ ಇಳಿ­ಬಿ­ಸಿ­ಲಿಗೋ ಹಳೆಯ ನೆನ­ಪು­ಗಳ ಹ್ಯಾಂಗೋ­ವರ್. ಒಂದು ಪ್ರಖರ ಬೆಳ­ಕಿನ ಸಂಜೆಗೆ ನಿಮ್ಮನ್ನು ಒಡ್ಡಿ­ಕೊಂಡು ನೋಡಿ ಬೇಕಿ­ದ್ದರೆ; ಜಲ­ಪಾ­ತ­ದಲ್ಲಿ ಜಾರಿ­ದಂತೆ ಕನಿಷ್ಠ ಹತ್ತು ವರುಷ ಹಿಂದಕ್ಕೆ ಹೊರಟು ಹೋಗು­ತ್ತೀರಿ. ಹಿಂದೆಂದೋ ಒಂದು ದಿನ ಇಂಥದ್ದೇ ಸಂಜೆ­ಯಲ್ಲಿ ಧ್ಯಾನಿ­ಸಿದ್ದೋ, ಪ್ರೇಮಿ­ಸಿದ್ದೋ ಬರಿದೆ ಅಡ್ಡಾ­ಡಿದ್ದೋ ನಿನ್ನೆ­ಯಷ್ಟೆ ಓದಿದ ಕವಿ­ತೆ­ಯಷ್ಟು ನಿಚ್ಚ­ಳ­ವಾಗಿ ನೆನ­ಪಾ­ಗು­ತ್ತದೆ.
ಬಹುಶಃ ಅದಕ್ಕೇ ಇರ­ಬೇಕು, ನಾವು ಬಹ­ಳಷ್ಟು ಮಂದಿ ಸಂಜೆ­ಗ­ಳನ್ನು ನಿರಾ­ಕ­ರಿ­ಸು­ತ್ತೇವೆ. ಹಳ್ಳಿ­ಗ­ಳಲ್ಲಿ ಸಂಜೆಗೂ ಮಧ್ಯಾ­ಹ್ನಕ್ಕೂ ವ್ಯತ್ಯಾ­ಸವೇ ಇರು­ವು­ದಿಲ್ಲ. ಮಲೆ­ನಾ­ಡಿ­ನ­ಲ್ಲಂತೂ ನೋಡ­ನೋ­ಡು­ತ್ತಿದ್ದ ಹಾಗೇ ಬಂಗಾ­ರದ ಸಂಜೆ ಇರು­ಳೊ­ಳಗೆ ಬಚ್ಚಿ­ಟ್ಟು­ಕೊಂ­ಡಿ­ರು­ತ್ತದೆ. ಸಂಜೆಯ ಗುಣವೇ ಅದು. ಯಾವತ್ತೂ ಅದು ನಿಮಗೆ ಇಡಿ­ಯಾಗಿ ಸಿಗು­ವು­ದಿಲ್ಲ. ಒಂದು ಒಳ್ಳೆಯ ಹವ­ಳ­ಗೆಂ­ಪಿನ ಸಂಜೆ ನಿಮ್ಮ ಕೈಸೇ­ರ­ಬೇ­ಕಿ­ದ್ದರೆ ಜನ್ಮಾಂ­ತ­ರದ ಪುಣ್ಯ ಬೇಕು.
ಇಂಥ ಸಂಜೆಯ ಬಗ್ಗೆ ಯಾರೂ ಕವಿತೆ ಬರೆ­ದಿಲ್ಲ. ಸಂಜೆಯ ರಾಗಕೆ ಬಾನು ಕೆಂಪೇ­ರಿದೆ.. ಎನ್ನುವ ಸಾಲು ಓದಿ ಆಹಾ, ಸಂಜೆಯ ಮೇಲೊಂದು ಹಾಡು ಸಿಕ್ಕಿತು ಎಂದು ಖುಷಿ­ಯಾ­ದರೆ ಅಷ್ಟ­ರಲ್ಲೇ ಅದು ಮುಸ್ಸಂ­ಜೆಯ ಹಾಡಾಗಿ ರೂಪಾಂ­ತರ ಹೊಂದು­ತ್ತದೆ-ತಿಂ­ಗಳು ಮೂಡಿ ಬೆಳ­ಕಿನ ಕೋಡಿ ಚೆಲ್ಲಾ­ಡಿದೆ! ಬೇರೆ ಕವಿ­ತೆ­ಗ­ಳನ್ನು ನೋಡಿ­ದರೆ ಸಂಜೆಯ ಬಗ್ಗೆ ಕವಿ­ತೆ­ಗ­ಳಿ­ವೆಯೇ ಹೊರತು ಸಂಜೆಯೇ ಕವಿ­ತೆ­ಯಾಗಿ ರೂಪು­ಗೊಂ­ಡಿಲ್ಲ. ಯಾಕೆ ಕವಿ­ಗ­ಳಿಗೆ ಸಂಜೆಯ ಬಗ್ಗೆ ಅಷ್ಟೊಂದು ಅವಜ್ಞೆ!
ಸಂಜೆ­ಗೊಂದು ಕನ­ಸಿನ ಗುಣ­ವಿದೆ. ಸಂಜೆ­ಗೊಂದು ನಿರ್ಲಿ­ಪ್ತ­ತೆ­ಯಿದೆ. ಅದು ಇರು­ಳಿನ ಹಾಗೆ ನಿರ್ಲ­ಜ್ಜ­ವಲ್ಲ. ಮುಂಜಾ­ನೆಯ ಹಾಗೆ ನಿಗೂ­ಢವೂ ಅಲ್ಲ. ಹಳೆಯ ಗೆಳೆ­ಯನ ಹಾಗೆ ಸಂಜೆ ಹಾಜ­ರಾ­ಗು­ತ್ತದೆ. ಅದಕ್ಕೆ ನಿಮ್ಮ ವಿಶೇಷ ಗಮನ ಬೇಕಿಲ್ಲ. ಕರೆದು ಕೂರಿ­ಸುವ ಅಗ­ತ್ಯ­ವಿಲ್ಲ, ಸತ್ಕ­ರಿ­ಸ­ಬೇ­ಕಾದ ಅವ­ಶ್ಯ­ಕ­ತೆಯೂ ಇಲ್ಲ.
ಅಂಥ ಸಂಜೆ­ಗ­ಳಲ್ಲೇ ಪೂರ್ವ­ಜನ್ಮ ನೆನ­ಪಾ­ಗು­ತ್ತದೆ. ಕಳೆದು ಹೋದ ದಿನ­ಗಳು ನೆನ­ಪಿಗೆ ಬರು­ತ್ತವೆ. ಹಳೆಯ ಪ್ರೇಮ ಕಣ್ಣೆ­ದುರು ಕುಣಿ­ಯು­ತ್ತದೆ. ಸುಮ್ಮನೆ ಒಂದು ಮುತ್ತು ಸಂಜೆಗೆ ಮೈಮ­ನ­ವ­ನ್ನೊಡ್ಡಿ ಕುಳಿ­ತು­ಕೊಳ್ಳಿ.
**­*­*­**
ಅಂಥ ಸಂಜೆ­ಯಲ್ಲೇ ಕಾಡುವ ಹಾಡು ಇದು.
ಹತ್ತು ವರು­ಷದ ಹಿಂದೆ ಮುತ್ತೂರ ತೇರಿ­ನಲಿ
ಅತ್ತಿತ್ತ ಸುಳಿ­ದ­ವರು ನೀವ­ಲ್ಲವೆ?
ಹತ್ತಿ­ರದ ಹೆಣ್ಣೆಂದು ಮತ್ತೆ ಮುತ್ತೂ­ರಿ­ನಲಿ
ಒಪ್ಪಿ ಕೈಹಿ­ಡಿ­ದ­ವರು ನೀವ­ಲ್ಲವೆ?
ಅವರ ಮದು­ವೆ­ಯಾಗಿ ಹತ್ತು ವರು­ಷ­ಗಳು ಸಂದಿವೆ. ಅದೊಂದು ಮುತ್ತು ಸಂಜೆಗೆ ಮೈಯೊಡ್ಡಿ ಕುಳಿತ ಆಕೆಗೆ ಮುತ್ತೂರ ತೇರು ನೆನ­ಪಾ­ಗು­ತ್ತದೆ, ಅಲ್ಲಿ ಅತ್ತಿತ್ತ ಸುಳಿ­ದ­ವರು ನೆನ­ಪಾ­ಗು­ತ್ತಾರೆ.
ಸಂಜೆಯ ನೆಪ­ವಿ­ಲ್ಲದೇ ಹೋದರೆ ಅದು ಯಾಕಾ­ದರೂ ನೆನ­ಪಾ­ಗ­ಬೇಕು? ಅವರು ಎದುರೇ ಕೂತಿ­ರು­ವಾಗ ಹಳೆ­ಯ­ದನ್ನು ಆಕೆ ನೆನ­ಪಿ­ಸಿ­ಕೊಂಡು ಯಾಕೆ ಸುಮ್ಮಾನ ಪಡ­ಬೇಕು. ಬೆಟ್ಟ­ಗಳ ಬೆನ್ನಿ­ನಲಿ ಬೆಟ್ಟ­ಗಲ ದಾರಿ­ಯಲಿ ಕಟ್ಟಿ­ಕೊಂಡು ಅಲೆದ ಕ್ಪಣ­ಗ­ಳನ್ನು ವರ್ತ­ಮಾ­ನದ ತಂತಿಗೆ ಯಾಕಾ­ದರೂ ತೂಗು­ಹಾ­ಕ­ಬೇಕು.
ಅವ­ನಾ­ದರೂ ಅಷ್ಟೇ; ತಿಟ್ಟಿ­ನಲಿ ಮುಂದಾಗಿ, ಕಣಿ­ವೆ­ಯಲಿ ಹಿಂದಾಗಿ ನಡೆ­ದ­ವನು. ತಿಟ್ಟು ಹತ್ತುವ ಹೊತ್ತಿಗೆ ಆಕೆಯ ಕೈಹಿ­ಡಿದು ಏರಿಸಿ, ಕಣಿ­ವೆ­ಯಲ್ಲಿ ಬೆನ್ನ­ಹಿಂ­ದಿನ ಭಯಕ್ಕೆ ಆಸ­ರೆ­ಯಾಗಿ, ಸೆರ­ಗೆ­ಳೆದು ನಿಲ್ಲಿಸಿ, ಜಡೆ­ಯೆ­ಳೆದು ನೋಯಿಸಿ, ತೊತ್ತೆಂದು ಜರೆದು, ಮುತ್ತೆಂದು ಕರೆದು ಮೊದ­ಲಿ­ರುಳ ಹೊಂಗ­ಸನ ಮುನ್ನೀರ ದಾಟಿ­ಸಿ­ದ­ವನು.
ಹತ್ತು ವರು­ಷದ ದಾಂಪ­ತ್ಯದ ಚಿತ್ರ ಇಷ್ಟು ಸೊಗ­ಸಾಗಿ ಮೂವ­ತ್ತಾರು ಸಾಲು­ಗ­ಳಲ್ಲಿ ಮೂಡಿದ್ದು ಎಂಥ ಅಚ್ಚರಿ. ಕವಿ­ತೆಯ ಬೆಡಗೇ ಅದು. ಯಾರೋ ಒಬ್ಬರು ತಮ್ಮ ಮಧುರ ದಾಂಪ­ತ್ಯದ ನೆನ­ಪನ್ನು ಸಾವಿರ ಪುಟ­ಗ­ಳಲ್ಲಿ ಬರೆ­ಯ­ಬ­ಹುದು. ಆ ಸಾವಿರ ಪುಟ­ಗಳ ಅನು­ಭವ ಅವ­ರೊ­ಬ್ಬ­ರದೇ ಆಗಿ­ರು­ತ್ತದೆ. ಆದರೆ ಇಲ್ಲಿ ಹಾಗಲ್ಲ; ಮೂವ­ತ್ತಾರು ಸಾಲು­ಗಳ ಕವಿ­ತೆ­ಯಲ್ಲಿ ಮೂಡಿದ ಅನು­ಭವ ಎಲ್ಲ­ರದ್ದೂ ಆಗಿ­ಬಿ­ಡು­ತ್ತದೆ. ಮದುವೆ ಆಗ­ದ­ವನೂ ಅದನ್ನು ಸವಿ­ಯ­ಬಲ್ಲ.
ಬಾಗಿ­ಲಿಗೆ ಬಂದ­ವರು ಬೇಗ ಬಾ ಎಂದ­ವರು
ಬಂದು­ದೇ­ಕೆಂ­ದ­ವರು ನೀವ­ಲ್ಲವೆ?
ನೋಡು ಬಾ ಎಂದ­ವರು ಬೇಡ ಹೋಗೆಂ­ದ­ವರು
ಎಂದಿಗೂ ಬಿಡ­ದ­ವರು ನೀವ­ಲ್ಲವೆ?
ಇಲ್ಲಿಯ ಕೊನೆಯ ಸಾಲನ್ನು ವರ್ತ­ಮಾ­ನಕ್ಕೆ ತಂದರೆ ವಿನಂ­ತಿ­ಯಾ­ಗು­ತ್ತದೆ; ಎಲ್ಲಿ­ದೆಯೋ ಅಲ್ಲೇ ಇಟ್ಟು ನೋಡಿ­ದರೆ ಪ್ರೀತಿ­ಯಾ­ಗು­ತ್ತದೆ. ಹಾಗೇ ಒಂದೇ ಮಾತಲ್ಲಿ ಆಸೆ ಮತ್ತು ತೃಪ್ತಿ ಎರ­ಡನ್ನೂ ಹೇಳಿ­ದ್ದಾರೆ ಕವಿ; ನೀನೇ ಸಾಕೆಂ­ದ­ವರು, ನೀನೇ ಬೇಕೆಂ­ದ­ವರು, ಚಿತ್ತ­ದಲಿ ನಿಂತ­ವರು ನೀವ­ಲ್ಲವೆ?
ಸಾಕು ಅನ್ನು­ವುದು ತೃಪ್ತಿ, ಬೇಕು ಎನ್ನು­ವುದು ದಾಹ. ಎರಡೂ ದಾಂಪ­ತ್ಯ­ದಲ್ಲಿ ಹೇಗೆ ಫಲಿ­ಸಿದೆ ನೋಡಿ.
ಆತ ತುರು­ಬಿ­ಗಿಟ್ಟ ಮಲ್ಲಿ­ಗೆ­ಯನ್ನು ಆಕೆ ನೆನ­ಪಿ­ಸಿ­ಕೊ­ಳ್ಳುವ ರೀತಿ ನೋಡಿ. ಹೂ ಮುಡಿ­ಸು­ವುದು ಗಂಡ­ಸಿಗೆ ಗೊತ್ತಿ­ಲ್ಲದ ಕೆಲಸ. ಹೆಣ್ಣಿ­ನಷ್ಟು ನಾಜೂ­ಕಾಗಿ ಆತ ಎಂದೂ ಹೂಮು­ಡಿ­ಸ­ಲಾರ; ಮಲ್ಲಿ­ಗೆಯ ದಂಡೆ­ಯನು ತುರು­ಬಿ­ನಲಿ ಗಿಡಿ­ದ­ವರು.. ಅಂತಾಳೆ ಆಕೆ.
ಹೀಗೆ ಹತ್ತು ವರು­ಷದ ದಾಂಪ­ತ್ಯದ ನೆನಪು ಕೊನೆ­ಯಲ್ಲಿ ವರ್ತ­ಮಾ­ನದ ಜಗ­ಲಿಗೆ ಬರು­ತ್ತದೆ. ಆಕೆ ಕೇಳು­ತ್ತಾಳೆ;
ಪಯ­ಣ­ದಲಿ ಜೊತೆ­ಯಾಗಿ ನಾನಿ­ಲ್ಲವೆ?
**­*­*­**
ಈ ಹಾಡಿಗೂ ಸಂಜೆಗೂ ಏನು ಸಂಬಂ­ಧವೋ ಗೊತ್ತಿಲ್ಲ. ಆದರೆ ಪ್ರತಿ ಸಂಜೆ­ಯಲ್ಲೂ ಇದು ನೆನ­ಪಾ­ಗು­ತ್ತದೆ.
ಮುಸ್ಸಂ­ಜೆಯ ಮುಂದೆ ಬೆತ್ತಲೆ ನಿಂತ ಸಂಜೆ­ಯೆಂಬ ಗರು­ಡ­ಗಂ­ಭಕ್ಕೆ ಮನ ಜೋತು­ಬೀ­ಳು­ತ್ತದೆ.
ಟಿಪ್ಪಣಿ- ಇದು ಕಾಡಬೆಳದಿಂಗಳು ಚಿತ್ರಕ್ಕೆ ಲೊಕೇಶನ್ ಹುಡುಕುವುದಕ್ಕೆ ಬಸರಿಕಟ್ಟೆಗೆ ಹೊರಟ ದಾರಿಯಲ್ಲಿ ವೀರೇಶ್ ಕೆಮರಾಕ್ಕೆ ಸೆರೆಸಿಕ್ಕ ಸಂಜೆ. ಆಮೇಲೆ ನೆಲ್ಲಿಹಡ್ಲು ನಾಗಭೂಷಣ್ ಅವರ ನೆರವಿನಿಂದ ಅದೇ ಆಸುಪಾಸಲ್ಲಿ ಶೂಟಿಂಗು ಮುಗಿಸಿದ್ದೂ ಆಯ್ತು. ಈ ಸಂಜೆ ಮರೆಯಲಾರದ ಪ್ರಖರ ಸಂಜೆಗಳಲ್ಲಿ ಒಂದು. ನೆನಪಿನಂತೆ ಹರಿವ ನದಿ. ಮನಸಿನಂತೆ ಹಬ್ಬಿದ ಸಂಜೆಬಿಸಿಲು. ಪಯಣವೋ ನಿಲುಗಡೆಯೋ ತಿಳಿಯದ ಭಾವ.

Monday, April 23, 2007

ಮುಚ್ಚಿದ ಮುಷ್ಟಿಯಲ್ಲಿ ಮುರಿದ ಹೆಬ್ಬೆರಳಿತ್ತು!


ವೋ.....ವ್.... ವೊವ್.. ವೊವ್.. ವೋ...ವ್..
ಆ ಅಪರಾತ್ರಿಯ ಆರ್ತನಾದಕ್ಕೆ ವಿದ್ಯಾಶಂಕರನಿಗೆ ಥಟ್ಟನೆ ಎಚ್ಚರವಾಯಿತು. ಯಾರೋ ತನ್ನ ತಲೆಯ ಹತ್ತಿರ ನಿಂತಿದ್ದಾರೆ ಅನ್ನಿಸತೊಡಗಿತು. ಮಲಗಿದಲ್ಲಿಂದ ಹೊರಳಿ ನೋಡುವುದಕ್ಕೆ ಧೈರ್ಯವಾಗಲಿಲ್ಲ. ಹೊದ್ದುಕೊಂಡಿದ್ದ ಕಂಬಳಿಯ ಒಳಗಿನಿಂದಲೇ ಕೈಗೆ ಟಾರ್ಚು ಸಿಗುತ್ತದೇನೋ ಅಂತ ತಡಕಾಡಿದ. ತಲೆಯ ಹತ್ತಿರ ಕುಳಿತ ಆಕೃತಿ ಮಿಸುಕಾಡಿದಂತೆ ಅನ್ನಿಸಿತು. ಹಾಗನ್ನಿಸುವ ಹೊತ್ತಿಗೆ ಕೈಗೆ ಟಾರ್ಚು ಸಿಕ್ಕಿತು.
ಹೊರಗೆ ಗಾಢಾಂಧಕಾರ. ಕರೆಂಟು ಹೋಗಿ ಬಹಳ ಹೊತ್ತಾಗಿತ್ತೆಂದು ಕಾಣಿಸುತ್ತದೆ. ಕತ್ತಲನ್ನೆಲ್ಲ ಯಾರೋ ತಂದು ಮನೆಯೊಳಗೆ ರಾಶಿ ಹಾಕಿದ್ದಾರೆ ಅನ್ನಿಸುವಂತಿತ್ತು. ವಿದ್ಯಾಶಂಕರನ ಕೈಗೆ ಟಾರ್ಚ್ ಲೈಟು ಸಿಗುವ ಹೊತ್ತಿಗೆ ರೆಕ್ಕೆಗಳನ್ನು ಭಯಂಕರ ಸದ್ದಿನೊಂದಿಗೆ ಫಟಫಟಿಸುತ್ತಾ ಬೃಹದಾಕಾರದ ಬಾವಲಿಯೊಂದು ಎಲ್ಲಿಗೋ ಹಾರಿಹೋಯಿತು.
ಆ ಸದ್ದಿಗೆ ವಿದ್ಯಾ ಮತ್ತೊಮ್ಮೆ ಬೆಚ್ಚಿಬಿದ್ದ.ಕೈಗೆ ಟಾರ್ಚು ಸಿಗುತ್ತಲೇ ವಿದ್ಯಾಶಂಕರ ಥಟ್ಟನೆ ಹೊದ್ದುಕೊಂಡಿದ್ದ ಕಂಬಳಿ ಕಿತ್ತೆಸೆದ. ಅದೇ ಅವನು ಮಾಡಿದ ತಪ್ಪು.
ಹೊದಿಕೆ ಕಿತ್ತೆಸೆಯುತ್ತಿದ್ದಂತೆ ಬೀದಿಯ ಕೊನೆಯಲ್ಲಿ ನಾಯಿ ಮತ್ತೊಮ್ಮೆ ವಿಕಾರವಾಗಿ ಅರಚಿತು. ನಾಯಿಗಳು ಸಾಮಾನ್ಯವಾಗಿ ಬೊಗಳುತ್ತವೆಯೇ ಹೊರತು ಊಳಿಡುವುದಿಲ್ಲ. ಹಾಗೆ ಊಳಿಡಬೇಕಿದ್ದರೆ ಅವುಗಳಿಗೂ ಭಯವಾಗಿರಬೇಕು ಮತ್ತು ಅವುಗಳ ಕಣ್ಣಿಗೆ ವಿಚಿತ್ರ ಆಕೃತಿಗಳು ಗೋಚರವಾಗಿರಬೇಕು. ಅದು ನೆನಪಾಗುತ್ತಿದ್ದಂತೆ ವಿದ್ಯಾಶಂಕರನ ರೋಮಗಳು ಸೆಟೆದುನಿಂತವು. ಏನಾದರಾಗಲಿ ಅಂದುಕೊಂಡು ಟಾರ್ಚಿನ ಸ್ವಿಚ್ಚು ಅದುಮಿದ.
ಟಾರ್ಚು ಹತ್ತಿಕೊಳ್ಳಲಿಲ್ಲ !
ಶಂಕರ ತನಗೆ ಅರಿವಿಲ್ಲದೆ ಮೆತ್ತಗೆ ಚೀರಿಕೊಂಡ. ಕತ್ತಲೆಯಲ್ಲಿ ಆ ಸ್ವರ ಕರಗಿಹೋಯಿತು. ಅದೇ ಹೊತ್ತಿಗೆ...ಅತ್ಯಂತ ಕರ್ಕಶ ಧ್ವನಿಯಲ್ಲಿ ಪಕ್ಕದಲ್ಲೇ ಯಾರೋ ನಕ್ಕಂತಾಯಿತು.
ಅದೇ ಕೊನೆ.
ಅಲ್ಲಿಂದಾಚೆ ಮೂರು ವರುಷಗಳ ಕಾಲ ವಿದ್ಯಾಶಂಕರ ನಿದ್ದೆ ಮಾಡಲಿಲ್ಲ!
ಅದೇ ಆರಂಭ!
-2-
ಅದು ಬೆಳಗಾವಿಯ ರಾಯಭಾಗ ತಾಲೂಕಿನ ಒಂದು ಹಳ್ಳಿ. ಜಲಾಲಬಾಗಕ್ಕೆ ಹತ್ತಿರವಿದ್ದ ಆ ಹಳ್ಳಿಗೆ ಹೆಸರೇ ಇರಲಿಲ್ಲ. ಅಲ್ಲಿದ್ದ ಒಂದೇ ಒಂದು ದೊಡ್ಡ ಮನೆಯೆಂದರೆ ವಿದ್ಯಾಶಂಕರನದು. ಆತ ತಕ್ಕಮಟ್ಟಿಗೆ ಅನುಕೂಲವಂತ. ಆತನ ತಾತಮುತ್ತಾತಂದಿರು ಆಗರ್ಭ ಶ್ರೀಮಂತರು. ಅವರು ಮಾಡಿಟ್ಟ ಆಸ್ತಿಯನ್ನು ಶಂಕರ ಅನುಭವಿಸುತ್ತಿದ್ದನೇ ಹೊರತು, ಆತ ಒಂದು ಚಿಕ್ಕಾಸನ್ನೂ ಸಂಪಾದಿಸುವುದಕ್ಕೆ ಹೋಗಲಿಲ್ಲ. ಅವನ ಈ ಸೋಮಾರಿ ಪ್ರವೃತ್ತಿಗೆ ಬೇಸತ್ತು ಅವನ ಹೆಂಡತಿಯೂ ತವರಿಗೆ ವಾಪಸ್ಸಾದಳು. ಆದರೆ ಅವನ ಅತೀವ ಕಾಮಲಾಲಸೆಯೇ ಹೆಂಡತಿಯನ್ನು ಮನೆಯಿಂದ ಓಡಿಸಿದೆ ಅಂತ ಆಸುಪಾಸಿನ ಜನ ಮಾತಾಡಿಕೊಳ್ಳುತ್ತಿದ್ದರು.
ಶಂಕರನಲ್ಲಿ ಅದೆಂಥ ದೈತ್ಯ ಶಕ್ತಿಯಿತ್ತೋ ಗೊತ್ತಿಲ್ಲ, ಆತ ದಿನಕ್ಕೆ ಏಳೆಂಟು ಸಾರಿ ಹೆಂಡತಿಯನ್ನು ಪ್ರೀತಿ ಮಾಡುತ್ತಿದ್ದನಂತೆ. ಅವನ ಈ ವ್ಯಸನವನ್ನು ಕೇಳಿದವರು ಆತ ವಾಮಾಚಾರಿಯಾಗಲು ಲಾಯಕ್ಕು ಎನ್ನುತ್ತಿದ್ದರು.
ಶಂಕರನಿಗೊಬ್ಬ ಮಂಕುಬಡಿದ ಅಣ್ಣನಿದ್ದ. ಹೇಳಿದ ಕೆಲಸ ಮಾಡುತ್ತಾ, ಕೆಲಸವಿಲ್ಲದಾಗ ಸದಾ ಜಗಲಿಯ ಮೇಲೆ ಕೂರುತ್ತಿದ್ದ ಆತ ಒಂದು ದಿನ ಎಲ್ಲಿಗೋ ಹೊರಟುಹೋದ. ಹೀಗಾಗಿ ಆ ವಾಡೆಯಂಥ ಮನೆಯಲ್ಲಿ ಉಳಿದವನು ಶಂಕರ ಒಬ್ಬನೇ. ಆತ ಅಲ್ಲಿಂದ ಯಾವತ್ತೂ ಹೊರಗೆ ಬಂದವನಲ್ಲ. ಯಾರ ಜೊತೆಗೂ ಬೆರೆತವನೂ ಅಲ್ಲ.
ಇದ್ದಕ್ಕಿದ್ದಂತೆ ಶಂಕರನ ಮನೆಯೊಳಗೆ ವಿಚಿತ್ರ ಘಟನೆಗಳು ನಡೆಯತೊಡಗಿದವು. ಆತ ಮಲಗಿದ ತಕ್ಷಣ ಯಾರೋ ಅವನ ಕತ್ತು ಹಿಸುಕಿದಂತಾಗುತ್ತಿತ್ತು. ಎದೆಯ ಮೇಲೆ ಕುಳಿತು ಮುಖಕ್ಕೆ ಏನನ್ನೋ ಒತ್ತಿಹಿಡಿದಂತಾಗುತ್ತಿತ್ತು. ಅದೆಲ್ಲ ಭ್ರಮೆ ಅಂದುಕೊಂಡು ಆತ ಧೈರ್ಯ ತಂದುಕೊಂಡು ನಿದ್ದೆಹೋಗಲಿಕ್ಕೆ ಯತ್ನಿಸಿ ಒಂದು ವಾರ ಕತ್ತುನೋವಿಂದ ಮಲಗಿದ್ದೂ ಆಯ್ತು.ಈ ಕತೆ ನನಗೆ ಗೊತ್ತಾದದ್ದು ನಾನು ಚಿಕ್ಕೋಡಿ ತಾಲೂಕಿನ ಬೇಡ್ಕಿಹಾಳದಲ್ಲಿರುವ ನನ್ನ ಸ್ನೇಹಿತನ ಮನೆಗೆ ಹೋದಾಗ.
ಚಿಕ್ಕೋಡಿ ರಾಯಭಾಗದ ಪಕ್ಕದ ತಾಲೂಕು. ಅಲ್ಲಿನ ಒಂದೇ ಒಂದು ಸ್ಥಳೀಯ ಪತ್ರಿಕೆಯಲ್ಲಿ ವಿದ್ಯಾಶಂಕರನ ದೆವ್ವದ ಬಂಗಲೆಯ ಸುದ್ದಿ ಬಂದಿತ್ತು. ಅಲ್ಲಿ ರಾತ್ರಿ ಹೋಗಿ ಇರುವುದಕ್ಕೆ ಯತ್ನಿಸಿ ಹೆದರಿ ಓಡಿಬಂದವರ ಕತೆಯನ್ನೂ ವರದಿಗಾರ ಬರೆದಿದ್ದ. ಅದಕ್ಕಿಂತ ಹೆಚ್ಚಾಗಿ ಬೈಲಹೊಂಗಲದಿಂದ ದೆವ್ವದ ಗುಟ್ಟು ತಿಳಿಯುವುದಕ್ಕೆ ಬಂದ ವಿಜ್ಞಾನದ ಮೇಷ್ಟ್ರು ಪರಮಶಿವಯ್ಯ ಅವರನ್ನು ದೆವ್ವ ಕತ್ತು ಹಿಸುಕಿ ಕೊಂದುಹಾಕಿದ ಕತೆಯೂ ಅಲ್ಲಿತ್ತು. ಪೋಲೀಸರು ದೆವ್ವದ ಕತೆಯನ್ನು ನಂಬದೆ ವಿದ್ಯಾಶಂಕರನ ಮೇಲೆ ಕೇಸು ಜಡಿದಿದ್ದರು.ಬೇಕಿದ್ದರೆ ಪೋಲಿಸರೇ ಒಂದು ರಾತ್ರಿ ನನ್ನ ಮನೆಯೊಳಗೆ ಇದ್ದು ನೋಡಲಿ ಎಂದು ವಿದ್ಯಾಶಂಕರ ಕೋರ್ಟಿಗೆ ಸವಾಲು ಹಾಕಿದ್ದ. ತಾನೇ ತಾನಾಗಿ ಬಂದ ವಿಜ್ಞಾನದ ಅಧ್ಯಾಪಕರು ಸತ್ತು ಬಿದ್ದಿದ್ದಕ್ಕೆ ಅವರೇ ಹೊಣೆಯೇ ಹೊರತು ತಾನಲ್ಲ ಎಂದು ಅವನ ಕಡೆಯ ವಕೀಲರು ವಾದಿಸಿದ್ದರು. ವಿದ್ಯಾಶಂಕರ ಆರೋಪ ಮುಕ್ತನಾಗುವ ಎಲ್ಲ ಸಾಧ್ಯತೆಯೂ ಇತ್ತು.
ನನ್ನ ಕುತೂಹಲಕ್ಕೆ ಕಾರಣವಾದ ಮತ್ತೊಂದು ಸಂಗತಿಯೆಂದರೆ ಆವತ್ತು ರಾತ್ರಿ ಇನ್ಸ್ ಪೆಕ್ಟರ್ ಆರ್. ಎಸ್. ಶಹಾಪೂರ ಅವರು ವಿದ್ಯಾಶಂಕರನ ಮನೆಯೊಳಗೆ ಒಂಟಿಯಾಗಿ ಕೂರುವುದಾಗಿ ಹೇಳಿಕೆ ಕೊಟ್ಟದ್ದು. ನನಗೆ ಶಹಪೂರ ಚೆನ್ನಾಗಿ ಪರಿಚಿತರು. ಮುಂಬಯಿಯಲ್ಲಿ ನಾವು ಮೂರು ವರ್ಷ ಜೊತೆಗಿದ್ದವರು. ಅದನ್ನು ಓದಿದ ತಕ್ಷಣ ನಾನು ಶಹಾಪೂರರನ್ನು ನೋಡಬೇಕೆಂದು ಇಚ್ಚಿಸಿದೆ. ನನ್ನ ಸ್ನೇಹಿತನ ಜೊತೆಗೆ ಇಬ್ಬರೂ ಜಲಾಲಭಾಗಕ್ಕೆ ಹೊರಟೆವು.
ಅಲ್ಲಿಗೆ ತಲುವುವ ಹೊತ್ತಿಗೆ ಮನೆಮುಂದೆ ದೊಡ್ಡದೊಂದು ಜನಸಂದಣಿಯೇ ನೆರೆದಿತ್ತು. ಅದೊಂದು ನೂರಿಪ್ಪತ್ತು ಗುಡಿಸಲುಗಳ ಪುಟ್ಟ ಹಳ್ಳಿ. ಅಲ್ಲಿದ್ದ ಏಕೈಕ ದೊಡ್ಡಮನೆಯಂದರೆ ವಿದ್ಯಾಶಂಕರನದ್ದು. ಆತನ ಹಿರಿಯರು ಆ ನಿರ್ಜನ ಪ್ರದೇಶದಲ್ಲಿ ಅಷ್ಟು ದೊಡ್ಡ ವಾಡೆಯಂಥ ಮನೆ ಯಾಕೆ ಕಟ್ಟಿದರು ಎಂದು ಆಶ್ಚರ್ಯಪಡುತ್ತಲೇ ನಾನು ಶಹಾಪೂರರನ್ನು ನೋಡಿದೆ.
ಅವರಿಗೆ ನನ್ನನ್ನು ನೋಡಿ ಅತೀವ ಆಶ್ಚರ್ಯವಾಯಿತು. ಜೊತೆಗೆ ಸಂತೋಷವೂ ಆಯ್ತು. ಮಾತುಕತೆಯ ನಂತರ ನಾವಿಬ್ಬರೂ ಆ ರಾತ್ರಿಯನ್ನು ಮನೆಯೊಳಗೆ ಕಳೆಯುವುದೆಂದು ತೀರ್ಮಾನಿಸಿದೆವು. ನನ್ನ ಹಾಗೂ ದೆವ್ವಗಳ ಸಂಬಂಧ ಅವರಿಗೂ ಗೊತ್ತಿತ್ತು. ನೀವು ಉಳಿದವರಂತೆ ಉಡಾಫೆಯಾಗಿ ಮಾತಾಡುವುದಿಲ್ಲ. ಗೊತ್ತಿಲ್ಲದೆ ಯಾವುದನ್ನೂ ತಳ್ಳಿಹಾಕುವುದಿಲ್ಲ ಎಂದು ಅವರು ನನ್ನ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
ವಿದ್ಯಾಶಂಕರನ ಮನೆಯಿದ್ದದ್ದು ವಿಶಾಲವಾದ ಬಯಲಿನಂಥ ಜಾಗದಲ್ಲಿ. ಅಲ್ಲಿ ಸುತ್ತಮುತ್ತ ಒಂದೇ ಒಂದು ಮರಮಟ್ಟೂ ಇರಲಿಲ್ಲ. ಮನೆಯಿಂದ ಒಂದು ಫರ್ಲಾಂಗು ದೂರದಲ್ಲಿ ಒಂದು ಅರೆಮುಚ್ಚಿದ ಕೆರೆಯಿತ್ತು. ಅದರ ಸುತ್ತ ಕಾಡುಮರಗಳು ಬೆಳೆದಿದ್ದವು. ಕೆರೆಯ ನೀರು ಯಾರೂ ಬಳಸದೆ ಪಾಚಿಗಟ್ಟಿತ್ತು. ಅದರಾಚೆಗೆ ತುಂಬ ದೂರದಲ್ಲಿ ಗುಡಿಸಲುಗಳಿದ್ದವು.
-3-
ನಾನು ಮತ್ತು ಶಹಾಪೂರ ಮನೆಯೊಳಗೆ ಕಾಲಿಟ್ಟದ್ದು ಸಂಜೆ. ಇಬ್ಬರೂ ಇಡೀ ಮನೆಯನ್ನೊಮ್ಮೆ ಸುತ್ತಾಡಿದೆವು. ಎಲ್ಲಾದರೂ ಅನುಮಾನಾಸ್ಪದವಾದದ್ದೇನಾದರೂ ಕಾಣುತ್ತದೆಯೋ ಎಂದು ಗಮನಿಸುತ್ತಾ ಹೋದೆವು. ಕೆಲವು ಹಳೆಯ ಮನೆಗಳಲ್ಲಿ ನೆಲಮಾಳಿಗೆಗಳಿರುತ್ತವೆ. ಅವುಗಳಿಗೆ ಗುಪ್ತ ಬಾಗಿಲುಗಳಿರುತ್ತವೆ. ಅವು ಮನೆಯಲ್ಲಿ ವಾಸಮಾಡುವವರಿಗೇ ಗೊತ್ತಿರುವುದಿಲ್ಲ. ಅವುಗಳ ಒಳಗೆ ಹೆಗ್ಗಣಗಳು ಸೇರಿಕೊಂಡು ಗಲಾಟೆ ಮಾಡುವುದುಂಟು. ಹಿಂದೊಂದು ಸಾರಿ ಇಂಥದ್ದೆ ಒಂದು ದೊಡ್ಡ ಮನೆಯ ನೆಲಮಾಳಿಗೆಯಲ್ಲಿ ನಾಯಿಯೊಂದು ಸೇರಿಕೊಂಡಿತ್ತು. ರಾತ್ರಿಯೆಲ್ಲ ಅದು ಬೊಗಳುತ್ತಿರುವುದನ್ನು ಮನೆಯವರು ನಾಯಿದೆವ್ವ ಎಂದುಕೊಂಡಿದ್ದರು.
ವಿದ್ಯಾಶಂಕರನ ಮನೆಯಲ್ಲಿ ಅಂಥ ಅನುಮಾನಾಸ್ಪದ ಸಂಗತಿಗಳು ನನ್ನ ಕಣ್ಣಿಗೆ ಬೀಳಲಿಲ್ಲ. ಶಹಾಪೂರರ ಪೊಲೀಸ್ ಕಣ್ಣಿಗೂ ಬೀಳಲಿಲ್ಲ. ನಮ್ಮ ಜೊತೆಗೆ ಒಳಬಂದ ವಿದ್ಯಾಶಂಕರ ಮುಸ್ಸಂಜೆಯಾಗುತ್ತಿದ್ದಂತೆ ಹೊರಟುಹೋದ. ಕತ್ತಲು ಕವಿಯುತ್ತಿದ್ದಂತೆ ಮನೆಯೊಳಗೆ ನಾವಿಬ್ಬರೇ ಉಳಿದುಬಿಟ್ಟೆವು.ಉಸಿರುಕಟ್ಟಿದಂತಾಗುವುದಕ್ಕೆ ಏನೇನು ಕಾರಣ ಇರಬಹುದು ಎಂದು ಊಹಿಸುತ್ತಾ ಕುಳಿತೆ. ಕೆಲವು ಮನೆಗಳಲ್ಲಿ ಗಾಳಿಯ ಸಂಚಾರವಿಲ್ಲದೆ ಒಂದೊಂದು ಕೋಣೆಯಲ್ಲಿ ಉಸಿರುಗಟ್ಟಿದಂತಾಗುವುದು ಶಕ್ಯವಿತ್ತು. ಮನೆಯ ಪಕ್ಕದಲ್ಲಿ ಹುಣಸೇ ಮರವಿದ್ದರೆ ಹೀಗಾಗುವುದುಂಟು. ಹುಣಸೇ ಮರದ ಎಲೆಗಳು ರಾತ್ರಿ ಮುಚ್ಚಿಕೊಳ್ಳುವುದರಿಂದ ಅಲ್ಲಿ ಆಮ್ಲಜನಕ ಉತ್ಪತ್ತಿಯಾಗುವುದಿಲ್ಲ. ಅದಕ್ಕೆ ಹುಣಸೇ ಮರದ ಕೆಳಗೆ ರಾತ್ರಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ಕಾರಣಕ್ಕೆ ಹುಣಸೇ ಮರದಲ್ಲಿ ದೆವ್ವಗಳು ವಾಸಿಸುತ್ತವೆ ಎಂಬ ನಂಬಿಕೆ ಬಂದಿರಲಿಕ್ಕೂ ಸಾಕು.ಶಹಾಪೂರರಿಗೂ ಅಂಥ ಕಾರಣಗಳು ಹೊಳೆಯಲಿಲ್ಲ.
ಕತ್ತಲು ಕೋರೈಸುತ್ತಿತ್ತು.
ನಾವಿಬ್ಬರು ನಮ್ಮೊಡನೆ ತಂದಿದ್ದ ಚಪಾತಿ ತಿಂದು ಮುಗಿಸಿದೆವು. ಅದೂ ಇದೂ ಮಾತನಾಡುತ್ತಾ ಮಲಗುವ ಕೋಣೆಯಲ್ಲಿ ಕುಳಿತುಕೊಂಡೆವು. ಅಲ್ಲೊಂದು ದೊಡ್ಡ ಮಂಚವಿತ್ತು. ಅದರ ಪಕ್ಕದಲ್ಲೇ ಒಂದು ದೊಡ್ಡ ಟೇಬಲ್ಲು. ಅದರ ಮೇಲೊಂದು ಲಾಟೀನು ಇಟ್ಟುಕೊಂಡು ಇಬ್ಬರೂ ಕುಳಿತೆವು. ಉದ್ದೇಶಪೂರ್ವಕವಾಗಿಯೇ ಇಬ್ಬರೂ ನಡುರಾತ್ರಿಯಾಗುತ್ತಿದ್ದಂತೆ ಮೌನವಾಗಿರಬೇಕು ಎಂದು ತೀರ್ಮಾನಿಸಿದ್ದೆವು.
ಪ್ರಯಾಣದ ಸುಸ್ತಿಗೋ ಆ ಮೌನದಿಂದಲೋ ಏನೋ ನನಗೆ ಸಣ್ಣಗೆ ನಿದ್ದೆ ಹತ್ತಿತು. ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಎಚ್ಚರವಾಗಿ ಕಣ್ತೆರೆದು ನೋಡಿದರೆ ಇಡೀ ಕೋಣೆ ಕತ್ತಲಲ್ಲಿತ್ತು. ಒಂದು ಕ್ಷಣ ನನಗೇ ಭಯವಾಯ್ತು. ನಾನು ಎಲ್ಲಿದ್ದೇನೆ ಅನ್ನುವುದೇ ಗೊತ್ತಾಗಲಿಲ್ಲ. ಮೆತ್ತಗೆ ಶಹಾಪೂರ್ ಎಂದು ಉಸುರಿದೆ. ಯಾರೂ ಓಗೊಡಲಿಲ್ಲ. ಯಾರೋ ನನ್ನ ಮುಂದೆ ಕುಳಿತಿದ್ದಾರೆ ಅನ್ನುವ ವಿಲಕ್ಷಣ ಭಯವೊಂದು ನನ್ನನ್ನು ಆವರಿಸಿಬಿಟ್ಟಿತು. ಏನು ಮಾಡಿದರೂ ಅದರಿಂದ ಪಾರಾಗುವುದು ಸಾಧ್ಯವಾಗಲಿಲ್ಲ.
ದೆವ್ವದ ವಿಚಾರದಲ್ಲಿ ನಮ್ಮನ್ನು ಕಂಗೆಡಿಸುವುದು ಇಂಥ ಭಯವೇ. ಒಮ್ಮೆ ಭಯ ಹುಟ್ಟಿದರೆ ಸಾಕು ಎಲ್ಲವೂ ದೆವ್ವದ ಕೆಲಸದಂತೆಯೇ ಕಾಣತೊಡಗುತ್ತದೆ. ನನಗೆ ಆದದ್ದೂ ಅದೇ. ನಖಶಿಖಾಂತ ನಡುಗುತ್ತಾ ನಾನು ಜೋಬಿಗೆ ಕೈಹಾಕಿ ಬೆಂಕಿಪೊಟ್ಟಣ ಹೊರಗೆ ತೆಗೆಯಬೇಕು ಅನ್ನುವಷ್ಟರಲ್ಲಿ ದೂರದಲ್ಲಿ ಒಂದು ಬೆಂಕಿಯ ಕಿಡಿ ಕಂಡಂತಾಯಿತು. ಕೆಂಪಗೆ ಚುಕ್ಕಿಯಿಟ್ಟಂತೆ ಅದು ಕಾಣಿಸುತ್ತಿತ್ತು. ನಾನು ಅದುರಿಬಿದ್ದು ಜೋರಾಗಿಯೇ ಶಹಾಪೂರ್ ಎಂದು ಕೂಗಿಕೊಂಡೆ.
ಆಗ ಗೊತ್ತಾಯಿತು, ಆ ಕೆಂಪು ಬೆಂಕಿ ಶಹಾಪೂರರ ಸಿಗರೇಟಿನದು ಎಂದು. ಅವರು ಎದ್ದು ಟಾಯ್ಲೆಟ್ಟಿಗೆ ಹೋಗಿದ್ದರು. ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದುದರಿಂದ ತುಂಬ ಹೊತ್ತು ದೇಹಬಾಧೆ ತೀರಿಸಿಕೊಳ್ಳದೆ ಕುಳಿತಿರುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ನಾನು ಕೂಗಿದ್ದೇ ತಡ ಹೊರಗಿಟ್ಟಿದ್ದ ಕಂದೀಲು ತೆಗೆದುಕೊಂಡು ಬಂದೇ ಬಿಟ್ಟರು. ಏನಾಯಿತು ಅಂತ ಕೇಳಿದರು.. ನೀವಿಲ್ಲಿ ಕಾಣಿಸಲಿಲ್ಲ ನೋಡಿ.. ಅದಕ್ಕೇ ಕರೆದೆ ಎಂದು ನಾನು ಸಮಾಧಾನ ಹೇಳಿದೆ.
ಅವರು ಸಿಗರೇಟಿನ ಕೊನೆಯ ದಮ್ಮೆಳೆದು ಅದನ್ನು ಪಕ್ಕಕ್ಕೆಸೆದು ಲಾಟೀನನ್ನು ಟೇಬಲ್ ಮೇಲಿಟ್ಟಿದ್ದರೋ ಇಲ್ಲವೋ, ದೂರದಲ್ಲಿ ವಿಕಾರ ಸ್ವರದಲ್ಲಿ ನಾಯಿಯೊಂದು ಊಳಿಡುವ ಸದ್ದು ಕೇಳಿಸಿತು. ಫಟಫಟಿಸುತ್ತಾ ಅನಾಥ ಪಕ್ಷಿಯೊಂದು ಅನಂತ ಆಕಾಶದಲ್ಲಿ ಹಾರಿಹೋಯಿತು. ಅದೇ ಹೊತ್ತಿಗೆ ಟೇಬಲ್ ಮೇಲಿಟ್ಟಿದ್ದ ಲಾಟೀನು ಪಕಪಕನೆ ಅಲ್ಲಾಡಿ ನಂದಿಹೋಯಿತು.
ಇದೇನ್ರೀ ಹೀಗಾಯ್ತು... ಕೇಳಿದೆ.ನನ್ನ ಮಾತು ಮುಗಿಯುವುದರೊಳಗಾಗಿ ಕಿಟಕಿಯೊಂದು ರಪ್ಪನೆ ತೆರೆದುಕೊಂಡು ಮುಚ್ಚಿಕೊಂಡಿತು.ಗಾಳಿಗಿರಬೇಕು ಅನ್ನುತ್ತಾ ಶಹಾಪೂರರು ತಮ್ಮ ಜೋಬಿನಿಂದ ಬೆಂಕಿಪೊಟ್ಟಣ ತೆಗೆದು ಕಡ್ಡಿಗೀರಿದರು.
ಹತ್ತಿಕೊಳ್ಳಲಿಲ್ಲ. ಬಹುಶಃ ಟಾಯ್ಲೆಟ್ಟಿಗೆ ಹೋದಾಗ ಅಲ್ಲಿ ಬೀಳಿಸಿದ್ದರು ಅಂತ ಕಾಣುತ್ತೆ. ನಾನು ನನ್ನ ಕೈಲಿದ್ದ ಬೆಂಕಿಪೊಟ್ಟಣದಲ್ಲಿ ದೀಪ ಹಚ್ಚಲು ಯತ್ನಿಸಿದೆ. ನನ್ನ ಬೆಂಕಿಪೊಟ್ಟಣದ ಕಡ್ಡಿಗಳೂ ಒದ್ದೆಯಾದಂತೆ ಟುಸ್ಸೆನ್ನುತ್ತಿದ್ದವು.ಅದೇ ಹೊತ್ತಿಗೆ ನನ್ನ ಮುಂದಿನ ಟೇಬಲ್ಲು ಅಲ್ಲಾಡಿತು. ಅದರ ಮೇಲಿಟ್ಟಿದ್ದ ಆರಿದ ಲಾಂದ್ರ ಟಣ್ಣೆಂದು ನೆಲಕ್ಕೆ ಬಿದ್ದು ಅದರ ಗಾಜು ಒಡೆದ ಸದ್ದು ಕೇಳಿಸಿತು.
ಶಹಾಪೂರ ನಿಧಾನ ಅಂದೆ ನಾನು. ಆ ಕಡೆಯಿಂದ ಉತ್ತರ ಬರಲಿಲ್ಲ. ಶಹಾಪೂರ ಎಲ್ಲಿದ್ದೀರಿ ಕೇಳಿದೆ. ಯಾವ ಉತ್ತರವೂ ಇಲ್ಲ.ಸುತ್ತಲೂ ಕುರುಡುಗತ್ತಲೆ. ನಾನು ನನ್ನ ಪಕ್ಕದಲ್ಲೇ ಇಟ್ಟುಕೊಂಡಿದ್ದ ಟಾರ್ಚನ್ನಾದರೂ ಉರಿಸೋಣ ಎಂದುಕೊಂಡು ಪಕ್ಕಕ್ಕೆ ಕೈಹಾಕಿದೆ. ಟಾರ್ಚು ಅಲ್ಲಿರಲಿಲ್ಲ.ಅಷ್ಟು ಹೊತ್ತಿಗೆ ನನ್ನ ಮುಂದೆ ಯಾರೋ ದೊಪ್ಪೆಂದು ಬಿದ್ದ ಸದ್ದು ಕೇಳಿಸಿತು. ನಾನು ಶಹಾಪೂರ್ ಎಲ್ಲಿದ್ದೀರಿ ಎಂದು ಕುರುಡನಂತೆ ಅರಚುತ್ತಾ, ಅಲೆಯುತ್ತಾ ತಡಕಾಡಿದೆ.
ಯಾವ ಸದ್ದೂ ಇರಲಿಲ್ಲ. ಇದ್ದಕ್ಕಿದ್ದಂತೆ ಮೂಗಿಗೆ ತಣ್ಣನೆಯ ಗಾಳಿ ಹೊಡೆದಂತಾಯಿತು. ಕಮಟು ಮಣ್ಣಿನ ವಾಸನೆ ಅಡರಿಕೊಂಡಿತು. ಅದರ ಮರುಗಳಿಗೆಯೇ ಯಾರೋ ನನ್ನ ಮೇಲೆ ಬಿದ್ದಂತಾಯಿತು. ನನ್ನ ಕತ್ತು ಅದುಮುತ್ತಿದ್ದಾರೆ ಅನ್ನಿಸಿತು. ಇದ್ಯಾಕೆ ಶಹಾಪೂರ್ ಹೀಗೆ ಮಾಡುತ್ತಿದ್ದಾರೆ ಅಂದುಕೊಂಡು ಕತ್ತನ್ನು ಬಳಸಿದ ಕೈಯನ್ನು ಬಿಗಿಯಾಗಿ ಹಿಡಿದುಕೊಂಡೆ. ಒಂದಷ್ಟು ಹೊತ್ತು ಹೋರಾಟ ನಡೆಯಿತು. ಇದ್ದಕ್ಕಿದ್ದಂತೆ ಏನೋ ಲಟಕ್ಕನೆ ಮುರಿದ ಸದ್ದು ಕೇಳಿಸಿತು. ಅದೇ ನಾನು ಕೇಳಿದ ಕೊನೆಯ ಸದ್ದು.
-4-
ಎಚ್ಚರಾಗುವ ಹೊತ್ತಿಗೆ ನಾನು ಹಾಸಿಗೆಯ ಮೇಲೆ ಮಲಗಿದ್ದೆ. ಶಹಾಪೂರ ಪಕ್ಕದಲ್ಲಿದ್ದರು. ನನ್ನ ಬಟ್ಟೆ ಪೂರ್ತಿಯಾಗಿ ಹರಿದುಹೋಗಿತ್ತು. ಕೆಸರು ಮೆತ್ತಿಕೊಂಡು ನಾನು ವಿಕಾರವಾಗಿ ಕಾಣಿಸುತ್ತಿದೆ. ನನ್ನ ಬಲ ಅಂಗೈ ಮಡಿಚಿಕೊಂಡಿತ್ತು.ಎಲ್ಲವನ್ನೂ ನೆನಪಿಸಿಕೊಳ್ಳಲಿಕ್ಕೆ ಯತ್ನಿಸುತ್ತಿದ್ದಂತೆ ಶಹಾಪೂರ್ ನನ್ನ ಕತ್ತು ಹಿಸುಕಲಿಕ್ಕೆ ಯತ್ನಿಸಿದ್ದೂ ನೆನಪಿಗೆ ಬಂತು.
ಅವರ ಮುಖ ನೋಡಿದೆ.ನೀವು ಸತ್ತೇ ಹೋಗಿದ್ದೀರಿ ಅಂತ ತಿಳ್ಕೊಂಡೆ. ನಾನು ಹೇಗೋ ರಾತ್ರಿಯೇ ಹೊರಬಿದ್ದೆ. ನಿಮ್ಮನ್ನು ಕರೆದರೂ ನೀವು ಬರಲಿಲ್ಲ. ಮನೆಯ ಚಿಲಕ ಹೊರಗಿನಿಂದ ಹಾಕಿತ್ತು. ಹಿಂದಿನ ಬಾಗಿಲು ತೆಗೆದು ಓಡಿದೆ. ಸದ್ಯ ಅಷ್ಟೇ ಆಯ್ತಲ್ಲ ಅಂದರು ಶಹಾಪೂರ.
ನಾನು ಏನೊಂದೂ ಅರ್ಥವಾಗದೇ ಪಿಳಿಪಿಳಿ ನೋಡಿದೆ. ಏನು ನಡೆಯಿತು ಅನ್ನುವುದು ಪೂರ್ತಿ ಸ್ಪಷ್ಟವಾಗಲಿಲ್ಲ. ಬಲಗೈಯಲ್ಲೇನೋ ಇದೆ ಎನ್ನಿಸಿ ಮುಷ್ಟಿ ಬಿಡಿಸಿ ನೋಡಿದರೆ ಅಲ್ಲೊಂದು ಮುರಿದ ಹೆಬ್ಬೆರಳು.
ಅಂತೂ ಅಲ್ಲಿ ದೆವ್ವವಿದೆ ಅನ್ನುವುದು ಖಚಿತವಾಯಿತು. ಹಗಲಲ್ಲಿ ಕೋಣೆಯಲ್ಲಿ ಮತ್ತಷ್ಟು ಹುಡುಕಾಟ ನಡೆಸಿದೆವು. ನೆಲದ ಮೇಲೆ ಕೆಸರ ಹೆಜ್ಜೆ ಗುರುತುಗಳು ಕಂಡವು. ಬಾಗಿಲಿಗೆ ಸಿಕ್ಕಿಕೊಂಡಿದ್ದ ಹೆಂಗಸಿನ ತಲೆಗೂದಲಿನಷ್ಟು ಉದ್ದದ, ಆದರೆ ಅಷ್ಟು ನಯವಲ್ಲದ ಕೂದಲುಗಳು ಸಿಕ್ಕಿದವು. ಈ ನಡುವೆ ನಮಗೊಂದಷ್ಟು ಮಾಹಿತಿಗಳೂ ಸಿಕ್ಕಿದವು. ಶಹಾಪೂರರು ತಮ್ಮ ಮೇಲಧಿಕಾರಿಗಳ ಜೊತೆ ಮಾತಾಡಿ, ನ್ಯಾಯಾಧೀಶರ ಜೊತೆ ಮಾತಾಡಿ ಒಂದು ತೀರ್ಮಾನಕ್ಕೆ ಬಂದರು.
-5-
ವಿದ್ಯಾಶಂಕರನ ಮನೆಯಿಂದ ಫರ್ಲಾಂಗು ದೂರದಲ್ಲಿರುವ ಕೆರೆಯಿಂದ ದೆವ್ವ ಬರುತ್ತದೆ ಅನ್ನುವುದು ನಮಗೆ ಖಚಿತವಾಗಿತ್ತು. ಆ ಪಾಳುಬಿದ್ದ ಕೆರೆಯ ಮಣ್ಣೂ ಮನೆಯೊಳಗೆ ಸಿಕ್ಕಿದ ಮಣ್ಣೂ ಒಂದೇ ಆಗಿತ್ತು. ನ್ಯಾಯಾಧೀಶರ ಸಮ್ಮುಖದಲ್ಲಿ ಕೆರೆಯನ್ನು ಅಗೆಸಿದಾಗ ಸಿಕ್ಕಿದ್ದು ಒಂದು ಅಸ್ಥಿಪಂಜರ. ಅದರ ತಲೆಕೂದಲು ಮಾತ್ರ ಉದ್ದ ಬೆಳೆದಿತ್ತು.ನೋಡಿ, ಅದರ ಬಲಗೈ ಹೆಬ್ಬೆರಳು ತುಂಡಾಗಿದೆ ಮತ್ತು ಅದು ಇಲ್ಲಿದೆ.. ಎನ್ನುತ್ತಾ ಶಹಾಪೂರರು ಆ ರಾತ್ರಿ ನನ್ನ ಕೈಗೆ ಸಿಕ್ಕಿ ತುಂಡಾದ ಹೆಬ್ಬೆರಳಿನ ಮೂಳೆಯನ್ನು ತೋರಿಸಿದರು.
ಅದು ಆ ಅಸ್ಥಿಪಂಜರದ ಹೆಬ್ಬೆರಳಿಗೆ ಸರಿಯಾಗಿ ಹೊಂದುತ್ತಿತ್ತು.
ತನಿಖೆಯ ನಂತರ ಗೊತ್ತಾದದ್ದು ಇಷ್ಟು-ವಿದ್ಯಾಶಂಕರನ ಅಣ್ಣ ಓಡಿಹೋಗಿರಲಿಲ್ಲ. ಅವನನ್ನು ವಿದ್ಯಾಶಂಕರನೇ ಕೊಲೆ ಮಾಡಿ ಆ ಕೆರೆಯಲ್ಲಿ ಹೂತುಹಾಕಿದ್ದ. ಆತ ಪೆದ್ದ ಎಂಬ ಕಾರಣಕ್ಕೆ ಅವನಿಗೆ ವಿದ್ಯಾಶಂಕರ ಮದುವೆ ಮಾಡಿರಲಿಲ್ಲ. ಆದರೆ ಆಸೆ ಕೆರಳಿದಾಗೆಲ್ಲ ಆತ ವಿದ್ಯಾಶಂಕರನ ಹೆಂಡತಿಯ ಮೇಲೇರಿ ಹೋಗುತ್ತಿದ್ದ. ಆಕೆಗೂ ಅದು ಆಪ್ಯಾಯಮಾನವಾಗಿತ್ತೋ ಏನೋ. ಒಂದು ಬಾರಿ ಅವರಿಬ್ಬರೂ ವಿದ್ಯಾಶಂಕರನ ಕೈಗೆ ಸಿಕ್ಕಿಬಿದ್ದರು. ಅಣ್ಣನನ್ನು ಆತ ಕೆರೆಯ ಬಳಿ ಒಯ್ದು ಜೀವಂತ ಸಮಾಧಿ ಮಾಡಿದ.ತನ್ನನ್ನು ಉಸಿರುಗಟ್ಟಿ ಸಾಯಿಸೋದಕ್ಕೆ ಯತ್ನಿಸಿದ ತಮ್ಮನನ್ನು ಉಸಿರುಗಟ್ಟಿ ಸಾಯಿಸೋದಕ್ಕೆ ಅಣ್ಣನ ದೆವ್ವ ಯತ್ನಿಸುತ್ತಿತ್ತು ಅನ್ನುವುದನ್ನು ನ್ಯಾಯಾಲಯ ಒಪ್ಪಲಿಲ್ಲ. ವಿಜ್ಞಾನ ಅಧ್ಯಾಪಕರ ಕೊಲೆಗೆ ವಿದ್ಯಾಶಂಕರನಿಗೆ ಶಿಕ್ಷೆಯಾಗಲಿಲ್ಲ.

ಆದರೆ ಅಣ್ಣನ ಕೊಲೆಯ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆಯಾಯಿತು.
ಚಿತ್ರ- ಕತೆಗಾರ ನಾಗರಾಜ ವಸ್ತಾರೆ ಸಂಗ್ರಹ. ನಾಗರಾಜ ವಸ್ತಾರೆ ಇಂಥ ಹಳೆ ಮನೆಗಳ ಬಗ್ಗೆ ಕನ್ನಡಪ್ರಭದಲ್ಲಿ -ಹಳೆಮನೆ ಕತೆ- ಎಂಬ ಸೊಗಸಾದ ಲೇಖನಮಾಲೆ ಬರೆದಿದ್ದಾರೆ. ಆರ್ಕಿಟೆಕ್ಚರ್ ಬಗ್ಗೆ ಹೀಗೂ ಬರೆಯಬಹುದಾ ಎಂದು ನಾವೆಲ್ಲ ಬೆರಗಾದ ಬರಹಗಳು ಅವು. ಅಂದಹಾಗೆ ನಾಗರಾಜ ವಸ್ತಾರೆ ಕಥಾಸಂಕಲನ -ಹಕೂನ ಮಟೂಟ- ಓದಿ. ಅವರು ಮನೆ ಕಟ್ಟುವ ಹಾಗೆ ಕತೆ ಕಟ್ಟುತ್ತಾರೆ. ಕಟ್ಟುಕತೆ ಅನ್ನುವ ಮಾತಿಗೆ ಹೊಸ ಅರ್ಥ ಬಂದಂತಿದೆ ಅಲ್ಲವೇ?

Wednesday, April 18, 2007

ಎಡಕುಮೇರಿಯ ಸುರಂಗದಲ್ಲಿ...ಕ್ರೀ.......ಚ್!

ಆಕೆ ಚೀರಿ­ಕೊಂಡ ಸದ್ದು ಸಾಕಷ್ಟು ಸ್ಪಷ್ಟ­ವಾ­ಗಿಯೇ ಕೇಳಿ­ಸಿತು!
ನಾನು ಮಲ­ಗಿದ್ದ ಆ ಪುಟ್ಟ ಗುಡಿ­ಸ­ಲಿ­ನಿಂದ ಹೊರಗೆ ಬಂದು ನೋಡಿದೆ. ಮಾದೇ­ವನ ಗುಡಾ­ರ­ದಿಂದ ನೀಲಿ ಹೊಗೆ ಏಳು­ತ್ತಿತ್ತು. ಆಗಷ್ಟೇ ಹುಣ್ಣಿ­ಮೆಯ ಚಂದ್ರ ಮೂಡಿದ್ದ. ಇಡೀ ಪ್ರದೇಶ ಹಗಲೂ ಅಲ್ಲದ ರಾತ್ರಿಯೂ ಅಲ್ಲದ ವಿಚಿತ್ರ ಬಣ್ಣ­ದಲ್ಲಿ ಮೀಯು­ತ್ತಿತ್ತು. ದೂರದ ಮಸಕು ಬೆಟ್ಟ­ಗಳ ಮೇಲೆ ಬೆಳು­ದಿಂ­ಗಳ ಚಾದರ ಹೊದ್ದು­ಕೊಂಡು ನಿಂತಿದ್ದ ಹೆಸ­ರಿ­ಲ್ಲದ ಮರ­ಗಳ ಗುಂಪು ಕ್ಪಣ­ಕ್ಕೊಂದು ರೂಪು ತಳೆ­ಯು­ತ್ತಿತ್ತು. ಕಡ್ಡಿ­ಗೀರಿ ಗಡಿ­ಯಾರ ನೋಡಿದೆ. ನಡು­ರಾತ್ರಿ ದಾಟಿ ಇಪ್ಪತ್ತು ನಿಮಿ­ಷ­ಗಳು. ಮತ್ತೊಮ್ಮೆ ಚೀರಿದ ಸದ್ದು ಕೇಳಿ­ಸು­ತ್ತದೋ ಏನೋ ಎಂದು­ಕೊಂಡು ಅಲು­ಗಾ­ಡದೆ ನಿಂ­ತಿದ್ದೆ. ಸರಿ­ಯಾಗಿ ನಲು­ವತ್ತು ಸೆಕೆಂ­ಡು­ಗಳ ನಂತರ ಮತ್ತೆ ಮೈನ­ವಿ­ರೇ­ಳಿ­ಸುವ, ಬೆನ್ನು ಹುರಿ­ಯು­ದ್ಧಕ್ಕೂ ಭಯದ ಛಳು­ಕೊಂ­ದನ್ನು ಮೂಡಿ­ಸುವ ಸದ್ದೊಂದು ಮತ್ತೆ ಕೇಳಿ­ಸಿತು. ಆ ಸದ್ದು ಮೊದಲು ಕೇಳಿದ ಆರ್ತ­ನಾ­ದ­ದಂ­ತಿ­ರ­ಲಿಲ್ಲ. ಯಾರೋ ಚೀರಿ­ಕೊಂ­ಡಂ­ತೆಯೂ ಇರ­ಲಿಲ್ಲ. ಗಮ­ನ­ವಿಟ್ಟು ಕೇಳಿದೆ.
ಜೋರಾಗಿ ನಕ್ಕು ಬಿಟ್ಟೆ. ಅದು ರೈಲು ಇಂಜಿ­ನ್ನಿನ ಸದ್ದು. ಅಂದರೆ ಮಂಗಳಾ ಎಕ­ಪ್ರೆಸ್ ಮಾದೇ­ವನ ಗುಡಾ­ರ­ವನ್ನು ದಾಟಿ ಹೋಗು­ತ್ತಿದೆ. ಕ್ರಮೇಣ ಸುರಂ­ಗ­ದಿಂದ ರೈಲು ಹೊರಗೆ ಬಂದ ಸದ್ದೂ, ಅದು ಬಾಗಿ­ದಂ­ತಿ­ರುವ ರೇಲು ಹಳಿ­ಗಳ ಮೇಲೆ ಚಲಿ­ಸು­ವಾಗ ಘರ್ಷ­ಣೆ­ಯಿಂ­ದಾದ ಕ್ರೀಚ್ ಕ್ರೀಚ್ ಸದ್ದು­ಗಳೂ ಕಿವಿಗೆ ಬಿದ್ದವು. ಹೊರಗೆ ಬಂದು ನಿಂತೆ. ಕಂಬಳಿ ಹುಳು­ವಿನ ಹಾಗೆ ಕಪ್ಪ­ಗಿನ ರೇಲು ನಿರಾ­ತಂಕ ಸಾಗು­ತ್ತಿತ್ತು.
ಆಗ ಇದ್ದ­ಕ್ಕಿ­ದ್ದಂತೆ ಕಾಣಿ­ಸಿತು ಆ ಆಕೃತಿ!
ಅದು ಅಸ್ಪ­ಷ್ಟ­ವಾಗಿ ರೇಲಿನ ಹಿಂದೆ ಓಡಿ­ಹೋ­ಗು­ತ್ತಿತ್ತು. ನನಗೆ ಮಾದೇ­ವನ ಕತೆ ನೆನ­ಪಾ­ಯಿತು.-ಮಾ­ದೇ­ವನ ಕತೆ-
ನಾನು ಮಾದೇ­ವ­ನನ್ನು ಹುಡು­ಕಿ­ಕೊಂಡು ಬರು­ವು­ದಕ್ಕೆ ಬೇರೆ ಕಾರ­ಣ­ಗಳೇ ಇರ­ಲಿಲ್ಲ. ಎಡ­ಕು­ಮೇ­ರಿಯ ಆಸು­ಪಾ­ಸಿ­ನ­ಲ್ಲೆಲ್ಲ ರಾತ್ರಿ­ಹೊತ್ತು ಭೀಕರ ಆರ್ತ­ನಾದ ಕೇಳಿ ಬರು­ತ್ತ­ದೆಂದೂ ಜನ­ರೆಲ್ಲ ಹೆದ­ರಿ­ಹೋ­ಗಿ­ದ್ದಾ­ರೆಂದೂ ನೆಟ್ಟಣ ಎಂಬ­ಲ್ಲಿ­ರುವ ಭಾರ­ತೀಯ ರಬ್ಬರ್ ಸಂಶೋ­ಧನಾ ಕೇಂದ್ರ­ದಲ್ಲಿ ಅಧಿ­ಕಾ­ರಿ­ಯಾ­ಗಿ­ರುವ ಗೆಳೆಯ ಕೃಷ್ಣ­ಪ್ರ­ಸಾದ ಪತ್ರ ಬರೆ­ದಿದ್ದ. ಇಂಥ ವಿಚಾ­ರ­ಗ­ಳಲ್ಲಿ ನಮ­ಗಿ­ಬ್ಬ­ರಿಗೂ ಆಸಕ್ತಿ. ಇಬ್ಬರೂ ನಾಸ್ತಿ­ಕ­ರಾ­ಗಿ­ದ್ದರೂ ರಾತ್ರಿಯ ನಿಗೂ­ಢ­ತೆ­ಯಲ್ಲಿ ನಂಬಿಕೆ ಇಟ್ಟ­ವರು. ದೇವ­ರಿ­ಲ್ಲದೆ ಇದ್ದರೂ ದೆವ್ವ­ಗ­ಳಿಗೆ ಎಂದು ನಂಬು­ವು­ದಕ್ಕೆ ಯತ್ನಿ­ಸು­ತ್ತಿ­ದ್ದ­ವರು. ನಮಗೆ ದೆವ್ವ ಕಾಣು­ವುದು ಬೇಕಿತ್ತು. ಅದರ ರೋಚ­ಕತೆ ಬೇಕಿತ್ತು. ಕಪ್ಪು­ಕಾ­ಡಿನ ಕತ್ತ­ಲಲ್ಲಿ ಒಂಟಿ­ಯಾಗಿ ನಡೆ­ಯುತ್ತಾ ಬೆನ್ನ ಹಿಂದೆ ದೆವ್ವ­ವೊಂದು ಹಿಂಬಾ­ಲಿ­ಸಿ­ಕೊಂಡು ಬರು­ತ್ತಿದೆ, ಯಾವ ಹೊತ್ತಿಗೆ ಬೇಕಾ­ದರೂ ನಿಮ್ಮ ಬೆನ್ನ ಮೇಲೆ ಕೈ ಹಾಕು­ತ್ತದೆ ಎಂಬ ರೋಮಾಂಚ ಯಾರಿಗೆ ತಾನೆ ಬೇಕಿ­ರು­ವು­ದಿಲ್ಲ ಹೇಳಿ? ಅಂಥ ಪುಳ­ಕ­ಕ್ಕಾ­ಗಿಯೇ ನಾವು ಸುತ್ತಾ­ಡದ ಕಾಡಿಲ್ಲ, ಓಡಾ­ಡದ ಸ್ಥಳ­ಗ­ಳಿಲ್ಲ. ಆದರೆ ದುರ­ದೃ­ಷ್ಟ­ವ­ಶಾ್ ನಮ್ಮ ಕಣ್ಣಿ­ಗಂತೂ ದೆವ್ವ ಬಿದ್ದಿ­ರ­ಲಿಲ್ಲ. ಅದು ದೇವ­ಗ­ಣದ ಮನು­ಷ್ಯ­ರಿಗೆ ಕಾಣಿ­ಸು­ವು­ದಿಲ್ಲ ಎಂದು ಚಂದ್ರ­ಜೋ­ಯಿ­ಸರು ಹೇಳಿ ನಮ್ಮನ್ನು ನಿರಾ­ಶೆ­ಗೊ­ಳಿ­ಸಲು ಯತ್ನಿ­ಸಿ­ದ್ದರು. ಆದರೂ ನಮ್ಮದು ದೇವ­ಗಣ ಎನ್ನು­ವುದು ದೆವ್ವ­ಗ­ಳಿಗೆ ಗೊತ್ತಾ­ಗ­ಲಿ­ಕ್ಕಿಲ್ಲ ಎಂಬ ಭರ­ವ­ಸೆ­ಯಲ್ಲಿ ನಮ್ಮ ಹುಡು­ಕಾಟ ಮುಂದು­ವ­ರಿ­ಸಿ­ದ್ದೆವು.
ಕೃಷ್ಣ­ಪ್ರ­ಸಾ­ದನ ಪತ್ರ ಬಂದ ಮೂರು ವಾರ­ಗಳ ನಂತರ ನಾನು ನೆಟ್ಟ­ಣಕ್ಕೆ ಹೋದೆ. ಅವನ ಮನೆ­ಯಿ­ರು­ವುದು ಕಾಡಿನ ನಡುವೆ. ಅಲ್ಲಿ ರಬ್ಬರು ತೋಟ ಮಾಡಿ­ಕೊಂ­ಡಿದ್ದ. ಒಂದು ಫೋನು ಕೂಡ ಇಲ್ಲದ ಕುಗ್ರಾಮ ಅದು. ಅಲ್ಲಿಗೆ ನಾನು ಹೋಗುವ ಹೊತ್ತಿಗೆ ಆತ ಯಾವುದೋ ಸಂಶೋ­ಧನಾ ಸಮ್ಮೇ­ಳ­ನ­ಕ್ಕೆಂದು ಕೊಟ್ಟಾ­ಯಂಗೆ ಹೋಗಿದ್ದ. ಬರು­ವುದು ಒಂದು ವಾರ­ವಾ­ಗುತ್ತೆ ಅಂತ ಅವನ ಮನೆಯ ಕೆಲ­ಸ­ದಾಳು ಹೇಳಿದ. ಹೀಗಾಗಿ ಅವನು ಪತ್ರ­ದಲ್ಲಿ ಕೊಟ್ಟ ಸೂಚ­ನೆ­ಗ­ಳನ್ನು ಕಣ್ಣ­ಮುಂ­ದಿ­ಟ್ಟು­ಕೊಂಡು ನಾನೊ­ಬ್ಬನೇ ಮಾದೇ­ವ­ನನ್ನು ಹುಡು­ಕಿ­ಕೊಂಡು ಹೊರಟೆ.
ಅದಕ್ಕೆ ಕೆಲವೇ ವರು­ಷ­ಗಳ ಹಿಂದಷ್ಟೇ ಬೆಂಗ­ಳೂರು-ಮಂ­ಗ­ಳೂರು ನಡುವೆ ರೇಲು ಸಂಚಾರ ಆರಂ­ಭ­ವಾ­ಗಿತ್ತು. ಮಂಗ­ಳೂ­ರಿ­ನಿಂದ ಬೆಂಗ­ಳೂ­ರಿಗೆ ಮುನ್ನೂರು ಕಿಲೋ­ಮೀ­ಟರು ಅಂತ­ರ­ವಿ­ದ್ದರೂ, ರೇಲು ಮೂವ­ತ್ತಾರು ಸುರಂ­ಗ­ಗ­ಳನ್ನೂ ಕಡಿ­ದಾದ ಬೆಟ್ಟ­ಗಳ ತಪ್ಪ­ಲನ್ನೂ ಆಳ­ವಾದ ಕಣಿ­ವೆ­ಗಳ ಹಾದಿ­ಯನ್ನೂ ಕ್ರಮಿ­ಸ­ಬೇ­ಕಾ­ಗಿತ್ತು. ಅದ­ರಲ್ಲೂ ಅರ­ಸೀ­ಕೆ­ರೆ­ಯಿಂದ ಮುಂದೆ ಸುಬ್ರ­ಹ್ಮ­ಣ್ಯದ ತನಕ ತೀರಾ ಕಡಿ­ದಾದ ರಸ್ತೆ. ಅಲ್ಲಿ ರೇಲು ತೆವ­ಳಿ­ಕೊಂಡು ಚಲಿ­ಸ­ಬೇ­ಕಿತ್ತು. ಒಂದೊಂದು ಬಾರಿ ತೀರಾ ಮಳೆ­ಬಿ­ದ್ದರೆ ರೇಲು ಅಲ್ಲೇ ದಿನ­ಗ­ಟ್ಟಲೆ ನಿಂತು­ಬಿ­ಡು­ವುದೂ ಇತ್ತು. ಅಲ್ಲದೆ, ಅಕ್ಕ­ಪ­ಕ್ಕದ ಗುಡ್ಡ ಜರಿದು ಕಲ್ಲೂ ಮಣ್ಣೂ ಹಳಿ­ಗಳ ಮೇಲೆ ಸಂಗ್ರ­ಹ­ವಾ­ಗು­ತ್ತಿತ್ತು. ಹೀಗಾಗಿ ಎಷ್ಟೋ ದಿನ ರೇಲು ಸಂಚಾ­ರವೇ ಇರು­ತ್ತಿ­ರ­ಲಿಲ್ಲ. ಅದ­ರಿಂ­ದಾಗಿ ಯಾರೂ ರೇಲು ಹತ್ತುವ ಧೈರ್ಯ ಮಾಡು­ತ್ತಿ­ರಲೇ ಇಲ್ಲ. ಬಸ್ಸೇ ಆರಾಮ ಎಂದು­ಕೊಂಡು ಬಸ್ಸಲ್ಲೇ ಹೋಗಿ­ಬ­ರು­ತ್ತಿ­ದ್ದರು.ಈ ರೇಲು­ರ­ಸ್ತೆ­ಯ­ಲ್ಲಿ­ರುವ ಒಂದು ಪುಟ್ಟ ಸ್ಟೇಶ­ನ್ನಿನ ಹೆಸರು ಯಡ­ಕು­ಮೇರಿ. ಅಲ್ಲಿ ಟ್ರೇನು ಸ್ವಲ್ಪ ಹೊತ್ತು ನಿಂತು ಹೋಗು­ವುದು ಪದ್ಧತಿ. ಒಂದು ವೇಳೆ ರಸ್ತೆ­ಯಲ್ಲಿ ಅಡೆ­ತ­ಡೆ­ಗ­ಳಿದ್ದು ರೇಲು ಹೋಗು­ವುದು ದಿನ­ಗ­ಟ್ಟಲೆ ತಡ­ವಾ­ಗು­ತ್ತಿ­ದ್ದರೆ ರೇಲಿ­ನ­ಲ್ಲಿ­ರು­ವ­ವ­ರಿಗೆ ತಿಂಡಿ­ತೀರ್ಥ ಸರ­ಬ­ರಾಜು ಮಾಡು­ವು­ದಕ್ಕೆ ಅಲ್ಲೊಂದು ಹೊಟೆಲೂ ಇತ್ತು. ಅದನ್ನು ನಡೆ­ಸು­ತ್ತಿ­ದ್ದ­ವ­ನು­ ಕೃ­ಷ್ಣ­ಪ್ರ­ಸಾ­ದನ ಗೆಳೆಯ. ಅವನೇ ಆ ಜಾಗ­ದ­ಲ್ಲಿ­ರುವ ವಿಚಿತ್ರ ಸದ್ದಿನ ಬಗ್ಗೆ ಕೃಷ್ಣ­ಪ್ರ­ಸಾ­ದ­ನಿಗೆ ಹೇಳಿದ್ದು.
ಯಡ­ಕು­ಮೇ­ರಿ­ಯಿಂದ ಆರು ಮೈಲಿ ದೂರ­ದ­ಲ್ಲೊಂದು ಒಂದೂ­ವರೆ ಫರ್ಲಾಂಗು ಉದ್ದದ ಸುರಂ­ಗ­ವಿದೆ. ಆ ರೇಲ್ವೆ ಹಳಿ­ಯ­ಲ್ಲಿ­ರುವ ಸುರಂ­ಗಳ ಪೈಕಿ ಅದೇ ದೀರ್ಘ­ವಾ­ದದ್ದು. ಆದರೆ ಆ ಸುರಂಗ ಎಷ್ಟು ಕಿರಿ­ದಾ­ಗಿ­ತ್ತೆಂ­ದರೆ ರೇಲು ಬಂದರೆ ಬದಿ­ಗೊತ್ತಿ ನಿಲ್ಲು­ವು­ದಕ್ಕೆ ಅಲ್ಲಿ ಜಾಗವೇ ಇರ­ಲಿಲ್ಲ.ಸಾ­ಮಾ­ನ್ಯ­ವಾಗಿ ಓಡಾ­ಡು­ವ­ವ­ರಿಗೆ ತೊಂದ­ರೆ­ಯಾ­ಗ­ದಿ­ರಲಿ ಎಂದು ಸುರಂ­ಗ­ದೊ­ಳಗೆ ಅಲ್ಲಲ್ಲಿ ನಿಲ್ಲು­ವು­ದಕ್ಕೆ ಜಾಗ ಮಾಡಿ­ರು­ತ್ತಾರೆ. ಅದೆಲ್ಲ ಮಣ್ಣು ಕುಸಿದು, ಪೊದೆ­ಗಳು ಬೆಳೆದು ಮುಚ್ಚಿ­ಹೋ­ಗಿತ್ತು.
ಆ ಸುರಂ­ಗ­ದಿಂದ ಆ ಪ್ರದೇ­ಶದ ಜನ­ರಿ­ಗೊಂದು ಉಪ­ಕಾ­ರ­ವಾ­ಗಿತ್ತು. ಅದನ್ನು ದಾಟಿ ಅವರು ನಡೆ­ದು­ಕೊಂಡೇ ಸುಬ್ರ­ಹ್ಮ­ಣ್ಯಕ್ಕೋ ಶಿರಾ­ಡಿಗೋ ಹೋಗಿ ಬರ­ಬ­ಹು­ದಾ­ಗಿತ್ತು.ಹೀ­ಗಾಗಿ ಅವ­ರೆಲ್ಲ ಆ ಮಾರ್ಗ­ವಾ­ಗಿಯೇ ನಡೆ­ದು­ಕೊಂಡು ಹೋಗು­ತ್ತಿ­ದ್ದರು. ಆ ದಾರಿ­ಯಲ್ಲಿ ಬರುವ ರೈಲಿಗೆ ಹೊತ್ತು­ಗೊ­ತ್ತು­ಗಳೇ ಇರ­ಲಿಲ್ಲ. ಮಳೆ ಮತ್ತು ಡ್ರೈವ­ರನ ಮರ್ಜಿಗೆ ಅನು­ಸಾ­ರ­ವಾಗಿ ಅದು ನಡೆ­ಯು­ತ್ತಿತ್ತೇ ವಿನಾ, ವೇಳಾ­ಪ­ಟ್ಟಿ­ಯೆಂ­ಬುದೇ ಅದ­ಕ್ಕಿ­ರ­ಲಿಲ್ಲ. ಹೀಗಾಗಿ ಸುರಂ­ಗ­ದೊ­ಳಗೆ ಕಾಲಿ­ಡು­ವ­ವರು ಎಷ್ಟು ಎಚ್ಚ­ರಿಕೆ ವಹಿ­ಸಿ­ದರೂ ಸಾಕಾ­ಗು­ತ್ತಿ­ರ­ಲಿಲ್ಲ. ತಿಂಗ­ಳಿಗೆ ಒಬ್ಬರೋ ಇಬ್ಬರೋ ಸಾಯು­ತ್ತಲೇ ಇದ್ದರು.
ಈ ಮಧ್ಯೆ ಇನ್ನೊಂದು ರಗ­ಳೆಯೂ ಎದು­ರಾ­ಯಿತು. ಪಕ್ಕದ ರಬ್ಬರು ತೋಟಕ್ಕೆ ಬರುವ ಕೂಲಿ ಹೆಂಗ­ಸರ ಜೊತೆ ಮಲ­ಗು­ವು­ದಕ್ಕೆ ಆ ಸುರಂ­ಗ­ವನ್ನು ತೋಟ­ದ­ವರ ಮಕ್ಕಳು ಬಳ­ಸ­ತೊ­ಡ­ಗಿ­ದರು. ಇದು ಯಾವ ಮಟ್ಟಕ್ಕೆ ಹೋಗಿ­ಯಿ­ತೆಂ­ದರೆ ಅರೆ­ಬೆ­ತ್ತ­ಲೆ­ಯಾ­ಗಿದ್ದ ಜೋಡಿ­ಶ­ವ­ವೊಂದು ರಕ್ತ­ಸಿಕ್ತ ಸ್ಥಿತಿ­ಯಲ್ಲಿ ಸುರಂ­ಗದ ಮಧ್ಯ­ಭಾ­ಗ­ದಲ್ಲಿ ಒಮ್ಮೆ ಪತ್ತೆ­ಯಾ­ಯಿತು. ಆ ಶವ ಗುರುತು ಕೂಡ ಹಿಡಿ­ಯ­ಲಾ­ಗದ ಸ್ಥಿತಿ­ಯ­ಲ್ಲಿತ್ತು. ಆ ಬಗ್ಗೆ ಪತ್ರಿ­ಕೆ­ಗ­ಳಲ್ಲಿ ವರ­ದಿ­ಗಳು ಬಂದವು. ಜನ ರೊಚ್ಚಿ­ಗೆ­ದ್ದರು. ಸುರಂ­ಗ­ದೊ­ಳಗೆ ಲೈಟು ಹಾಕಿ­ಸ­ಬೇಕು ಎಂಬ ಅವಿ­ವೇಕಿ ಉಪಾ­ಯ­ಗ­ಳನ್ನು ಕೆಲ­ವರು ಕೊಟ್ಟರು. ಇದ­ಕ್ಕೆಲ್ಲ ಪರಿ­ಹಾರ ಕಂಡು­ಕೊ­ಳ್ಳುವ ಕೊನೆಯ ಪ್ರಯ­ತ್ನ­ವಾಗಿ ಸುರಂಗ ಎರಡೂ ಬದಿ­ಯಲ್ಲಿ ಒಬ್ಬ ಕಾವ­ಲು­ಗಾ­ರ­ನನ್ನು ರೇಲ್ವೆ ಇಲಾಖೆ ನೇಮಿ­ಸಿತು. ಹಾಗೆ ನೇಮ­ಕ­ವಾ­ದ­ವನು ನಮ್ಮ ಕಥಾ­ನಾ­ಯಕ ಮಾದೇವ.ಮಾದೇವ ಬೆಳ­ಗಾ­ವಿ­ಯ­ವನು. ಬಯಸು ಸೀಮೆ­ಯ­ಲ್ಲಿದ್ದ ಅವ­ನಿಗೆ ಕಾಡು ಕಂಡೇ ಗೊತ್ತಿ­ರ­ಲಿಲ್ಲ. ಹೀಗಾಗಿ ಧುತ್ತೆಂದು ಕಾಡಿನ ನಡುವೆ ಕೆಲಸ ಮಾಡ­ಬೇ­ಕಾಗಿ ಬಂದಾಗ ಅವನು ಕೆಲಸ ಬಿಡು­ವು­ದೆಂದೇ ತೀರ್ಮಾ­ನಿ­ಸಿದ್ದ. ಆದರೆ ಅವನ ಮನೆಯ ಪರಿ­ಸ್ಥಿತಿ ಅಷ್ಟೇನೂ ಚೆನ್ನಾ­ಗಿ­ರ­ಲಿಲ್ಲ. ಬೆಳ­ಗಾಂನ ತನ್ನ ಹಳ್ಳಿಗೆ ಹೋಗಿ ಬದು­ಕುವ ಸ್ಥಿತಿ­ಯಲ್ಲೂ ಅವನು ಇರ­ಲಿಲ್ಲ. ಹೀಗಾಗಿ ಆತ ಅನಿ­ವಾ­ರ್ಯ­ವಾಗಿ ಅಲ್ಲಿ ಕೆಲಸ ಮಾಡ­ಬೇ­ಕಾಯ್ತು.
ಅಲ್ಲಿ ಮಾಡು­ವು­ದ­ಕ್ಕೇನೂ ಇರ­ಲಿಲ್ಲ. ದಿನ­ಕ್ಕೊಮ್ಮೆ ಬಂದು ಹೋಗುವ ಒಂದೇ ಒಂದು ರೈಲಿ­ಗಾಗಿ ಕಾಯು­ವುದು ಬಿಟ್ಟರೆ ಬೇರೆ ಕೆಲ­ಸವೇ ಇರ­ಲಿಲ್ಲ. ಒಮ್ಮೆ ರೈಲು ಬಂದು ಹೋದರೆ ಮತ್ತೆ ಇಪ್ಪತ್ತು ಗಂಟೆ­ಗಳ ಕಾಲ ಬರೋ­ದಿಲ್ಲ ಅನ್ನೋದು ಅವ­ನಿಗೆ ಖಾತ್ರಿ­ಯಾ­ಗಿತ್ತು. ಕ್ರಮೇಣ ಅವನು ಸುರಂ­ಗ­ದಾಟಿ ಹೋಗು­ವ­ವರ ಕೈಲಿ ಒಂದು ರುಪಾ­ಯಿಯೋ ಐವತ್ತು ಪೈಸೆಯೋ ಲಂಚ ತೆಗೆ­ದು­ಕೊಂಡು ಅವ­ರನ್ನು ಹೋಗಲು ಬಿಡು­ತ್ತಿದ್ದ. ಗುಡ್ಡ ಬಳ­ಸಿ­ಕೊಂಡು ಜೀಪಿ­ನಲ್ಲಿ ಹೋದರೆ ಐದಾರು ರುಪಾಯಿ ಖರ್ಚಾ­ಗು­ತ್ತಿ­ದ್ದು­ದ­ರಿಂದ ಅವರು ಒಂದು ರುಪಾಯಿ ಲಂಚ ಕೊಟ್ಟು ಹೋಗು­ವುದೇ ಲಾಭ ಎಂದು­ಕೊಂ­ಡಿ­ದ್ದರು. ಅದ­ರಿಂದ ಮಾದೇ­ವ­ನಿಗೆ ಕಾಫಿ ಖರ್ಚು ಗಿಟ್ಟು­ತ್ತಿತ್ತು.
ಆಗಲೇ ಆತ­ನಿಗೆ ಜಲ­ಜಳ ಪರಿ­ಚ­ಯ­ವಾ­ದದ್ದು. ಆಕೆ ರಬ್ಬರು ತೋಟಕ್ಕೆ ಕೆಲ­ಸಕ್ಕೆ ಬರು­ತ್ತಿದ್ದ ಧಾರ­ವಾ­ಡದ ಹುಡುಗಿ. ಅವಳ ಕುಟುಂಬ ಬರ ತಾಳ­ಲಾ­ರದೆ ಯಡ­ಕು­ಮೇ­ರಿಗೆ ಬಂದಿತ್ತು. ಅಲ್ಲಿ ರಬ್ಬರು ತೋಟ­ದಲ್ಲಿ ಕೆಲಸ ಮಾಡಿ­ಕೊಂ­ಡಿತ್ತು. ಎಲ್ಲ ಹುಡು­ಗಿ­ಯರ ಹಾಗೆ ಜಲಜ ರಬ್ಬರು ತೋಟಕ್ಕೆ ಹೋಗದೇ ಬೀಡಿ ಕಟ್ಟು­ವು­ದನ್ನು ಆರಂ­ಭಿ­ಸಿ­ದಳು. ಅದ­ರಿಂದ ತಿಂಗ­ಳಿಗೆ ಐನೂರೋ ಸಾವಿ­ರವೋ ಸಂಪಾ­ದನೆ ಮಾಡು­ತ್ತಿ­ದ್ದಳು. ಕಟ್ಟಿದ ಬೀಡಿ­ಯನ್ನು ಕೊಂಡು­ಹೋಗಿ ಬೀಡಿಬ್ರಾಂಚಿಗೆ ಕೊಡ­ಬೇ­ಕಾ­ದರೆ ಆಕೆ ಸುರಂಗ ದಾಟಿ ಹೋಗ­ಬೇ­ಕಾ­ಗಿತ್ತು. ದಿನ­ಕ್ಕೊಂದು ಬಾರಿ ಸುರಂಗ ದಾಟಿ ಹೋಗು­ತ್ತಿದ್ದ ಆಕೆ ಮಾದೇ­ವ­ನನ್ನು ಸೆಳೆ­ದಳು. ಮಾದೇ­ವ­ನಿಗೂ ಮದುವೆ ಆಗಿ­ರ­ಲಿಲ್ಲ. ಹೀಗಾಗಿ ಅವನೂ ಆಕೆ­ಯನ್ನು ಮದು­ವೆ­ಯಾ­ಗುವ ಆಮಿ­ಷ­ವೊಡ್ಡಿ ತನ್ನ ಬಲೆಗೆ ಕೆಡ­ವಿ­ಕೊಂಡ.
ಬಲೆಗೆ ಕೆಡ­ವಿ­ಕೊಂಡ ಎನ್ನು­ವು­ದ­ಕ್ಕಿಂತ ಪ್ರೀತಿ­ಸಿದ ಎನ್ನು­ವುದೇ ವಾಸಿ. ಅವನ ಉದ್ದೇಶ ಕೆಟ್ಟ­ದಾ­ಗಿ­ರ­ಲಿಲ್ಲ. ಆತ ಆಕೆಗೆ ಮೋಸ ಮಾಡುವ ಉದ್ದೇಶ ಹೊಂದಿ­ರ­ಲಿಲ್ಲ.ಹ­ದಿ­ಹ­ರೆ­ಯದ ಗುರಿ­ಯಿ­ಲ್ಲದ ಪ್ರೀತಿ­ಯಂತೆ ಅವನ ಪ್ರೀತಿಯೂ ಇತ್ತು. ಆಕೆಗೂ ಅದು ಬೇಕಾ­ಗಿತ್ತು.
ಆದರೆ ಅದು ಕೊನೆ­ಯಾ­ದದ್ದು ದುರಂ­ತ­ದಲ್ಲಿ. ಆಗಸ್ಟ್ ತಿಂಗಳ ಒಂದು ಭಾನು­ವಾರ ಮಧ್ಯಾಹ್ನ ಜಲಜ ಇದ್ದ­ಕ್ಕಿ­ದ್ದಂತೆ ನಾಪ­ತ್ತೆ­ಯಾ­ದಳು. ಸುರಂ­ಗದ ಒಳಗೆ ಸಾಗಿ­ಹೋದ ಆಕೆ ಹೊರಗೆ ಬರ­ಲಿಲ್ಲ. ಊರಿ­ನ­ವ­ರಿಗೂ ಆಕೆಯ ತಂದೆಗೂ ಅನು­ಮಾನ ಬಂದದ್ದು ಮಾದೇ­ವನ ಮೇಲೆ. ಅವನೇ ಏನೋ ಮಾಡಿ­ರ­ಬೇಕು ಎಂದು­ಕೊಂಡು ಅವ­ರೆಲ್ಲ ಮಾದೇ­ವನ ಮೇಲೆ ಏರಿ­ಬಂ­ದರು. ಈ ಮಧ್ಯೆ ಪೊಲೀ­ಸ­ರಿಗೂ ಸುದ್ದಿ ತಲುಪಿ ಅವರು ಹುಡು­ಕಾಟ ಆರಂ­ಭಿ­ಸಿ­ದರು. ಕೊನೆಗೆ ಸುರಂ­ಗದ ಮಧ್ಯ­ಭಾ­ಗ­ದಲ್ಲಿ ಗೋಡೆಯ ಪಕ್ಕ ಬೆಳೆ­ದಿದ್ದ ಪೊದೆ­ಯೊ­ಳಗೆ ಜಲ­ಜಳ ಬಟ್ಟೆ­ಗಳು ಸಿಕ್ಕಿ­ದವು. ಅವು­ಗಳು ರಕ್ತ­ಸಿ­ಕ್ತ­ವಾ­ಗಿ­ದ್ದವು. ಮಾದೇ­ವ­ನನ್ನು ಪೋಲಿ­ಸರು ಒಯ್ದರು. ಶವ ಸಿಗದೇ ಇದ್ದ­ಕಾ­ರಣ, ಯಾವುದೇ ಸಾಕ್ಪಿ­ಯಿ­ಲ್ಲದ ಕಾರಣ ಮಾದೇ­ವ­ನಿಗೆ ಶಿಕ್ಪೆ­ಯಾ­ಗ­ಲಿಲ್ಲ. ಜಲಜ ರೇಲಿಗೆ ಸಿಕ್ಕಿ ಸತ್ತಿ­ದ್ದಾಳೆ ಎಂದು ಕೋರ್ಟಿ­ನಲ್ಲಿ ತೀರ್ಮಾ­ನ­ವಾ­ಯಿತು.ಅಲ್ಲಿಗೆ ಒಂದು ಅಧ್ಯಾಯ ಮುಕ್ತಾ­ಯ­ವಾ­ಯಿತು ಅಂತ ಎಲ್ಲರೂ ಅಂದು­ಕೊಂ­ಡರು. ಆದರೆ ಹಾಗಾ­ಗ­ಲಿಲ್ಲ. ಸುರಂ­ಗ­ದೊ­ಳ­ಗಿ­ನಿಂದ ಹೋಗು­ವ­ವ­ರಿಗೆ ಮಧ್ಯ­ಭಾ­ಗ­ದಲ್ಲಿ ಯಾವುದೋ ಆಕೃತಿ ಕಣ್ಣಿಗೆ ಬೀಳು­ತ್ತದೆ ಎಂಬ ವದಂ­ತಿ­ಗಳು ಹಬ್ಬಿ­ದವು. ಗುಂಪಾಗಿ ಹೋದ­ವರು ಕೂಡ ಅದನ್ನೇ ಹೇಳುತ್ತಾ ಭಯ­ಪಟ್ಟು ಓಡಿ­ಬಂದು ಜ್ವರ ಹಿಡಿದು ತಿಂಗ­ಳು­ಗ­ಟ್ಟಲೆ ಮಲ­ಗಿ­ದರು. ಅಂತೂ ಆ ಸುರಂ­ಗ­ದೊ­ಳಗೆ ಜಲ­ಜಳ ಪ್ರೇತ ಓಡಾ­ಡು­ತ್ತದೆ ಎಂಬ ಪ್ರತೀತಿ ಎಲ್ಲ ಕಡೆ­ಯಲ್ಲೂ ಹಬ್ಬಿತು.
ಅದೇ ದೆವ್ವ ಒಂದು ದಿನ ಮಾದೇ­ವ­ನಿಗೂ ಕಣ್ಣಿಗೆ ಬಿತ್ತು. ಆ ದೆವ್ವ ಜಲ­ಜ­ಳದೇ ಅನ್ನು­ವುದು ಮಾದೇ­ವ­ನಿಗೆ ತಕ್ಪ­ಣವೇ ಗುರುತು ಹತ್ತಿತು. ಗುರುತು ಹತ್ತಿದ್ದೇ ತಡ ಆತ ಆ ಜಲ­ಜಳ ಪ್ರೇಮ­ದಲ್ಲಿ ಮತ್ತೆ ಬಿದ್ದ. ಆ ದೆವ್ವ­ವನ್ನೇ ಜಲ­ಜ­ಳೆಂ­ಬಂತೆ ಪ್ರೀತಿ­ಸ­ತೊ­ಡ­ಗಿದ. ಶೂನ್ಯದ ಜೊತೆ ಮಾತಾ­ಡ­ತೊ­ಡ­ಗಿದ. ತನ್ನ ಕೆಲಸ ಮಾಡು­ವು­ದನ್ನೇ ಮರೆತ. ಅದೇ ಅವ­ಧಿ­ಯಲ್ಲಿ ಅಲ್ಲೊಂದು ರೇಲು ಅಪ­ಘಾ­ತವೂ ಘಟಿ­ಸಿತು. ಆ ಅಪ­ಘಾ­ತ­ದಲ್ಲಿ ಹದಿ­ನಾರು ಮಂದಿ ತೀರಿ­ಕೊಂ­ಡರು. ಆ ಅಪ­ಘಾ­ತಕ್ಕೆ ಮಾದೇ­ವನ ಬೇಜ­ವಾ­ಬ್ದಾ­ರಿಯೇ ಕಾರಣ ಎಂದು ಹೇಳಿ ಇಲಾಖೆ ಅವ­ನನ್ನು ಸಸ್ಪೆಂಡು ಮಾಡಿತು. ಆದರೆ ಅಮೇಲೆ ಕೂಡ ಮಾದೇವ ಆ ಜಾಗ ಬಿಟ್ಟು ಕದ­ಲ­ಲಿಲ್ಲ. ಅಲ್ಲೇ ಕುಳಿ­ತು­ಕೊಂಡು ಜಲ­ಜ­ಳಿ­ಗಾಗಿ ಕಾಯು­ತ್ತಿದ್ದ. ಆತ ಜಲ­ಜಳ ಜೊತೆ ಮಾತಾ­ಡು­ವು­ದನ್ನು ಕಂಡಿ­ದ್ದೇವೆ ಎಂದು ತೀರಾ ನಂಬಿ­ಕ­ಸ್ತರೂ ಕೃಷ್ಣ­ಪ್ರ­ಸಾ­ದ­ನಿಗೆ ಹೇಳಿದ ನಂತ­ರವೇ ಆತ ನನಗೆ ಕಾಗದ ಬರೆ­ದಿದ್ದು. ನಾನು ಬೆಂಗ­ಳೂ­ರಿ­ನಿಂದ ಒಬ್ಬನೇ ಬಂದು ಕೃಷ್ಣ­ಪ್ರ­ಸಾ­ದನ ಗೈರು ಹಾಜ­ರಿ­ಯಲ್ಲಿ ಮಾದೇ­ವ­ನನ್ನು ಹುಡು­ಕಿ­ಕೊಂಡು ಹೊರ­ಟಿದ್ದು.ನಾನು ಆ ಜಾಗ ತಲು­ಪುವ ಹೊತ್ತಿಗೆ ಸಂಜೆ ಇಳಿ­ದಿತ್ತು. ಸುರಂ­ಗದ ಕೊನೆ ಕಣಿ­ವೆಯ ಕೆಳ­ಭಾ­ಗ­ದ­ಲ್ಲಿದ್ದು ಎರಡೂ ಬದಿ­ಯಲ್ಲಿ ಗುಡ್ಡ­ಗ­ಳಿ­ದ್ದವು. ಗುಡ್ಡದ ಒಂದು ತುದಿ­ಯಲ್ಲಿ ಖಾಲಿ ಗುಡಿ­ಸಲು ಒಂದಿತ್ತು. ಅದು ಜಲ­ಜ­ಳಿದ್ದ ಮನೆ­ಯಂತೆ. ಸುರಂ­ಗದ ಬಾಯಿಯ ಹತ್ತಿರ ಮಾದೇವ ಗುಡಾರ ಇತ್ತು. ನಾನು ಆ ಇಳಿ­ಸಂ­ಜೆ­ಯಲ್ಲಿ ಮಾದೇ­ವನ ಗುಡಾ­ರದ ಹತ್ತಿರ ಹೋಗಿ ಅವ­ನಿ­ಗಾಗಿ ಹುಡು­ಕಾ­ಡಿದೆ. ಅವನು ಕಾಣಿ­ಸ­ಲಿಲ್ಲ. ಎಲ್ಲೋ ಹೋಗಿ­ರ­ಬ­ಹುದು, ಬೆಳಗ್ಗೆ ನೋಡೋಣ ಎಂದು­ಕೊಂಡು ಗುಡ್ಡ ಹತ್ತು­ತ್ತಿ­ದ್ದಂತೆ ಕೆಳ­ಗ­ಡೆ­ಯಿಂದ ಯಾರೋ ನಕ್ಕ ಸದ್ದು ಕೇಳಿ­ಸಿತು. ತಿರುಗಿ ನೋಡಿ­ದರೆ ಸಂಜೆ­ಗ­ಪ್ಪಿ­ನಲ್ಲಿ ಮಾದೇ­ವನ ಆಕೃತಿ ಅಸ್ಪಷ್ಟ ಕಂಡಿತು. ಅವನೇ ಮಾದೇವ ಇರ­ಬೇಕು ಎಂದು ನಾನಂ­ದು­ಕೊಂಡೆ. ನಿನ್ನ ಹತ್ತಿರ ಮಾತಾ­ಡ­ಬೇಕು, ಬೆಳಗ್ಗೆ ಬರು­ತ್ತೇನೆ ಎಂದು ಹೇಳಿದೆ. ಆ ಆಕೃತಿ ಮತ್ತೆ ನಕ್ಕು ಕ ಬೀಸಿತು.
ಅದೇ ರಾತ್ರಿ ನನಗೆ ಆ ಕ್ರೀ..ಚ್ ಸದ್ದು ಕೇಳಿ­ಸಿದ್ದು. ಅದಾದ ನಂತರ ರೇಲು ಭೀಕರ ಸದ್ದು ಮಾಡುತ್ತಾ ಹಾದು ಹೋದದ್ದು.-2-ಬೆಳಗ್ಗೆ ಯಥಾ­ಪ್ರ­ಕಾರ ಎದ್ದು ನಾನು ಮಾದೇ­ವನ ಗುಡಾ­ರದ ಹತ್ತಿರ ಹೋದೆ. ಅಲ್ಲಿ ಕೆಲಸ ಮಾಡು­ವುದು ನಿಜಕ್ಕೂ ಸ್ವರ್ಗ­ಸ­ಮಾನ ಎನ್ನಿ­ಸಿತು. ಹಸಿರು ನಳ­ನ­ಳಿ­ಸುವ ಬೆಟ್ಟ­ಗಳು, ಜುಳು­ಜುಳು ಹರಿ­ಯುವ ನೀರ­ಝರಿ, ಬಣ್ಣ­ಬ­ಣ್ಣ­ದ­ಹ­ಕ್ಕಿ­ಗಳು, ಎಂತೆಂ­ಥದೋ ಹೂವು­ಗಳು.. ಇಡೀ ಪ್ರಕೃತಿ ಕಣ್ಣು­ತ­ಣಿ­ಸು­ವಂ­ತಿತ್ತು.
ಮಾದೇ­ವನ ಗುಡಾ­ರದ ಬಳಿಗೆ ಹೋಗಿ ನಾನು ಅವ­ನನ್ನು ಒಂದೆ­ರಡು ಸಾರಿ ಕರೆದೆ. ಯಾರೂ ಬಾಗಿಲು ತೆರೆ­ಯ­ಲಿಲ್ಲ. ಎಲ್ಲಿಗೋ ಹೋಗಿ­ರ­ಬ­ಹುದು ಅಂದು­ಕೊಂಡು ಮೆತ್ತಗೆ ಬಾಗಿಲು ತಳ್ಳಿದೆ. ಒಳಗೆ ಕತ್ತಲು ತುಂಬಿತ್ತು. ಜೇಡರ ಬಲೆ ಮುತ್ತಿ­ಕೊಂಡು ಆ ಗುಡಾ­ರ­ದೊ­ಳಗೆ ಇತ್ತೀ­ಚೆಗೆ ಯಾರೂ ಕಾಲಿ­ಡಲೇ ಇಲ್ಲ­ವೇನೋ ಎಂಬಂ­ತಿತ್ತು. ಹಾಗಿ­ದ್ದರೆ ಮಾದೇವ ಎಲ್ಲಿ ಮಲ­ಗು­ತ್ತಾನೆ, ನಿನ್ನೆ ಅವ­ನನ್ನು ನಾನು ಇಲ್ಲೇ ತಾನೇ ನೋಡಿದ್ದು. ಆವನು ಬೇರೆ ಮನೆ ಮಾಡಿ­ಕೊಂ­ಡಿ­ದ್ದಾನಾ ಎಂದು ಯೋಚಿ­ಸುತ್ತಾ ಆ ಗುಡಾ­ರ­ದಂಥ ಮನೆಯ ಕಿಟಕಿ ತೆರೆದೆ.
ಆ ಬೆಳ­ಕಿ­ನ­ಲ್ಲಿ­ ನ­ನಗೆ ಕಂಡ­ದ್ದು­ಮ­ನೆಯ ಚಾವ­ಣಿ­ಯಿಂದ ನೇತಾ­ಡು­ತ್ತಿದ್ದ ಒಂದು ಅಸ್ಥಿ­ಪಂ­ಜರ ಮಾತ್ರ. ನಾನು ಒಂದೇ ಉಸಿ­ರಿಗೆ ಹೊರಗೆ ಓಡಿದೆ. ಅದೇ ಉಸಿ­ರಲ್ಲಿ ಬೆಂಗ­ಳೂ­ರಿಗೆ ಕಂಬಿ­ಕಿತ್ತೆ. ಈಗಲೂ ಒಮ್ಮೊಮ್ಮೆ ರಾತ್ರಿ ಕನ­ಸಲ್ಲಿ ಆ ಅಸ್ಥಿ­ಪಂ­ಜರ ಬರು­ತ್ತದೆ. ನಾನು ವಿಹ್ವ­ಲ­ನಾ­ಗು­ತ್ತೇನೆ. ಮತ್ತೆ ಆ ಜಾಗಕ್ಕೆ ಹೋಗೋಣ ಅನ್ನು­ತ್ತದೆ ಮನಸ್ಸು.
ನಾನು ಬೆಂಗ­ಳೂ­ರಿಗೆ ಬಂದು ಒಂದು ತಿಂಗ­ಳಾದ ನಂತರ ಕೃಷ್ಣ­ಪ್ರ­ಸಾ­ದನ ಕಾಗದ ಬಂತು. ನೀನು ಊರಿಗೆ ಬರುವ ಹೊತ್ತಿಗೆ ನಾನು ಇರ­ಲಾ­ಗ­ಲಿಲ್ಲ.ಅ­ರ್ಜೆಂ­ಟಾಗಿ ಕೇರ­ಳಕ್ಕೆ ಹೋಗ­ಬೇ­ಕಾಗಿ ಬಂತು. ನೀನು ಬಂದು ಹೋಗಿದ್ದು ಗೊತ್ತಾ­ಯಿತು. ಆದರೆ ಈಗ ಬಂದು ಏನೂ ಉಪ­ಯೋ­ಗ­ವಿಲ್ಲ. ಮಾದೇವ ಆವತ್ತೇ ತನ್ನೂ­ರಿಗೆ ಹೊರಟು ಹೋದ ಅಂತ ಕಾಣುತ್ತದೆ. ಇತ್ತೀಚೆಗೆ ನಾನು ಅವನನ್ನು ನೋಡಲೇ ಇಲ್ಲ ಎಂದು ಆತ ಬರೆ­ದಿದ್ದ.
ಅದನ್ನು ನಾನು ಈಗಲೂ ಜೋಪಾ­ನ­ವಾ­ಗಿ­ಟ್ಟು­ಕೊಂ­ಡಿ­ದ್ದೇನೆ. ಆ ನೆನ­ಪು­ಗಳ ಅಸ್ಥಿ­ಪಂ­ಜ­ರದ ಜೊತೆಗೆ.
(ಪುತ್ತೂರಿನಿಂದ ಬೆಂಗಳೂರಿಗೆ ಮಂಗಳಾ ಎಕ್ಸ್ ಪ್ರೆಸ್ ಟ್ರೇನಿನಲ್ಲಿ ಬರುತ್ತಾ ಒಮ್ಮೆ ಎಡಕುಮೇರಿಯಲ್ಲಿ ಟ್ರೇನು ಎರಡೂವರೆ ದಿನ ನಿಂತೇ ಬಿಟ್ಟಿತ್ತು. ಅಲ್ಲಿರುವ ಪುಟ್ಟ ಹೊಟೆಲಿನ ತಿಂಡಿ ಖಾಲಿಯಾಗಿ, ಅಂಗಡಿಯ ಬಿಸ್ಕತ್ತುಗಳು ಅಷ್ಟೂ ಖರ್ಚಾಗಿ ಆಮೇಲೆ ನಾವು ಹಸಿ ಈರುಳ್ಳಿ ಮತ್ತು ಅಲಸಂದೆ ತಿನ್ನುತ್ತಾ ಕಾಲಕಳೆದದ್ದು ಮರೆಯದ ನೆನಪು. ಆ ನೆನಪಿಗೆ ಹುಟ್ಟಿದ್ದು ಈ ಕತೆ)

Friday, April 13, 2007

ಒಲಿ­ಸಿ­ಕೊಂ­ಡ­ವಳೇ ಕೊಲಿ­ಸಿ­ದಳೆ?


ನೀವು ಬೆಂಗ­ಳೂ­ರಿ­ನಿಂದ ಮಂಗ­ಳೂ­ರಿಗೆ ಹೊರ­ಟರೆ, ನಿಮ­ಗಿ­ರು­ವುದು ಎರಡೂ ಮತ್ತೊಂದು ದಾರಿ. ಹಾಸ­ನ­ದಿಂದ ಬೇಲೂರು, ಮೂಡಿ­ಗೆರೆ ಮಾರ್ಗ­ವಾಗಿ ಚಾರ್ಮುಡಿ ಘಾಟಿಯ ಮೂಲಕ ಹೋಗು­ವುದು ಒಂದು. ಹಾಸ­ನ­ದಿಂದ ನೇರ­ವಾಗಿ ಹೋಗಿ ಶಿರಾಡಿ ಘಾಟಿ ಇಳಿದು ಹೋಗು­ವುದು ಇನ್ನೊಂದು. ತೀರ ತಲೆಕೆಟ್ಟರೆ ಬಿಸಲೆ ಘಾಟಿ ಹಾದು, ಸುಬ್ರಹ್ಮಣ್ಯದ ಹತ್ತಿರ ಮತ್ತೆ ಮರಳಿ ಗುಂಡ್ಯಕ್ಕೆ ಬಂದು ಉಪ್ಪಿನಂಗಡಿ ಸೇರುವುದಕ್ಕೆ ಅಡ್ಡಿಯಿಲ್ಲ.

ಶಿರಾಡಿ ಘಾಟಿ ಇಳಿದು ನೆಲ್ಯಾ­ಡಿಗೆ ಕಾಲಿ­ಡುವ ಮೊದಲು ಅತ್ತಿತ್ತ ತಿರು­ಗಾ­ಡಿ­ದರೆ ನಿಮಗೆ ಸಿಕ್ಕುವ ಅರ­ಸಿ­ನ­ಮಕ್ಕಿ, ವಳಾಲು, ಕೊಕ್ಕಡ ಮುಂತಾದ ಊರು­ಗಳ ಆಸು­ಪಾ­ಸಿ­ನಲ್ಲಿ ಕೇರ­ಳ­ದಿಂದ ಬಂದ ಕೊಚ್ಚಿ ಕ್ರಿಶ್ಚಿ­ಯ­ನ್ನರು ರಬ್ಬರ್ ತೋಟ ಮಾಡಿ­ಕೊಂ­ಡಿ­ದ್ದಾರೆ. ಜೊತೆಗೇ ಟಾಪಿ­ಯೋಕಾ ಎಂದು ಬೆಂಗ­ಳೂ­ರಿನ ಮಂದಿ ಕರೆ­ಯುವ ಮರ­ಗೆ­ಣಸು ಬೆಳೆ­ಯು­ತ್ತಾರೆ.
ನೆಲ್ಯಾ­ಡಿ­ಯಿಂದ ಸುಮಾರು ನಲು­ವತ್ತು ಮೈಲಿ ಮುಂದಕ್ಕೆ ಮಂಗ­ಳೂ­ರಿಗೆ ಹೋಗುವ ದಾರಿ­ಯಲ್ಲಿ ಸಾಗಿ­ದರೆ ರಸ್ತೆಯ ಎರಡೂ ಬದಿ­ಯಲ್ಲಿ ನೀವು ಇಟ್ಟಿಗೆ ಗೂಡು­ಗ­ಳನ್ನು ಕಾಣ­ಬ­ಹುದು. ಅಲ್ಲೆಲ್ಲಾ ಜೇಡಿ­ಮಣ್ಣು ವಿಪು­ಲ­ವಾಗಿ ಸಿಕ್ಕು­ತ್ತಿ­ದ್ದು­ದ­ರಿಂ­ದಲೂ ಮುರ­ಕ­ಲ್ಲು­ಗ­ಳಿಗೆ ವಿಪ­ರೀತ ಬೆಲೆ ಇದ್ದು­ದ­ರಿಂ­ದಲೂ ಇಟ್ಟಿ­ಗೆ­ಗ­ಳಿಗೆ ಅಪಾರ ಬೇಡಿ­ಕೆ­ಯಿತ್ತು. ಹೀಗಾಗಿ ಹೆಜ್ಜೆ­ಗೊಂ­ದ­ರಂತೆ ಇಟ್ಟಿಗೆ ಗೂಡು­ಗಳು ಹುಟ್ಟಿ­ಕೊಂ­ಡಿ­ದ್ದವು.
ನಾನೊಮ್ಮೆ ಮಂಗ­ಳೂ­ರಿಗೆ ಹೋಗುವ ದಾರಿ­ಯಲ್ಲಿ ಅಡ್ಯಾ­ರಿನ ಬಳಿ ಇಂಥ ಇಟ್ಟಿಗೆ ಗೂಡು­ಗ­ಳನ್ನು ನೋಡಿ ಅವು­ಗಳ ಫೊಟೋ ತೆಗೆ­ಯ­ಲೆಂದು ಕಾರು ನಿಲ್ಲಿ­ಸಿದೆ. ಅಷ್ಟು ಹೊತ್ತಿ­ಗಾ­ಗಲೇ ಹಾಲೋ ಬ್ಲಾಕ್ ಎಂಬ ಹೊಸ ಥರದ ಸಿಮೆಂಟು ಇಟ್ಟಿಗೆ ಪ್ರಸಿ­ದ್ಧ­ವಾ­ಗಿತ್ತು. ಬಹ­ಳಟ್ಟು ಇಟ್ಟಿಗೆ ಗೂಡು­ಗಳು ಪಾಳು­ಬಿ­ದ್ದಿ­ದ್ದವು. ಅವು ಮಳೆ­ಗಾ­ಳಿ­ಬಿ­ಸಿ­ಲಿಗೆ ಸಿಕ್ಕಿ ವಿಚಿತ್ರ ಬಣ್ಣಕ್ಕೆ ತಿರು­ಗಿ­ದ್ದವು. ಫೋಟೋ­ಗ್ರಾ­ಫ­ರನ ಸ್ವರ್ಗ ಎನ್ನ­ಬ­ಹು­ದಾದ ಜಾಗ ಅದು.
ಅಲ್ಲಿ ತಿರು­ಗಾ­ಡು­ವಾ­ಗಲೇ ನನಗೆ ಆಗ ಅಗಾ­ಧ­ವಾದ ಇಟ್ಟಿಗೆ ಗೂಡು ಕಂಡಿದ್ದು.ಅದು ಒಂದು ದೊಡ್ಡ ಮನೆ­ಯ­ಷ್ಟಿತ್ತು. ಮೇಲ್ಗಡೆ ಮಂಗ­ಳೂರು ಹೆಂಚು ಹೊದಿ­ಸಿದ್ದ ಒಂದು ಹೆಂಚಿನ ಗೂಡೂ ಅಲ್ಲಿತ್ತು.

ಅಲ್ಲಿ ಶಿವಣ್ಣ ಹೆಂಚು ತಯಾ­ರಿ­ಸು­ತ್ತಿದ್ದ ಅಂತ ಆಮೆಲೆ ಗೊತ್ತಾ­ಯಿತು.ಪ­ಕ್ಕ­ದಲ್ಲೇ ಇದ್ದ ಮತ್ತೊಂದು ಅಗಾಧ ಗಾತ್ರದ ಇಟ್ಟಿಗೆ ಗೂಡಿ­ನೊ­ಳಗೆ ಒಣಗಿ ಕಪ್ಪಾದ, ಸುಟ್ಟು ಕರ­ಕ­ಲಾದ ಇಟ್ಟಿ­ಗೆ­ಗಳು ಅಡ್ಡಾ­ದಿ­ಡ್ಡಿ­ಯಾಗಿ ಬಿದ್ದಿ­ದ್ದವು. ಅದು ಅದನ್ನು ಯಾಕೆ ಹೇಗೆ ಪಾಳು­ಬಿ­ಟ್ಟಿ­ದ್ದಾರೆ ಅನ್ನು­ವುದು ಗೊತ್ತಾ­ಗ­ಲಿಲ್ಲ. ಅದ­ನ್ನೇಕೆ ಪಾಳು ಬಿಟ್ಟಿ­ದ್ದಾರೆ. ಅಲ್ಲಿ­ರುವ ಇಟ್ಟಿ­ಗೆ­ಗ­ಳ್ನ­ನೇಕೆ ಯಾರೂ ಬಳ­ಸು­ತ್ತಿಲ್ಲ ಎಂದು ವಿಚಾ­ರಿ­ಸಿ­ದಾ­ಗಲೇ ಅಲ್ಲಿ­ರುವ ಕೆಲ­ವರು ನನಗೆ ರಮೇ­ಶನ ಹೆಸರು ಹೇಳಿದ್ದು. ಅವನ ಮನೆಯ ವಿಳಾಸ ಕೊಟ್ಟದ್ದು.
ಆ ವಿಳಾಸ ತೆಗೆ­ದು­ಕೊಂಡು ನಾನು ರಮೇ­ಶನ ಮನೆಗೆ ಹೋದೆ. ಆತ ಕುಳ್ಳ­ಗಿನ ತೆಳ್ಳ­ಗಿನ ಹುಡುಗ. ಆಗಷ್ಟೇ ಮದು­ವೆ­ಯಾ­ಗಿದ್ದ. ಅರ­ಸೀ­ಕೆ­ರೆ­ಯ­ವ­ನಾ­ಗಿ­ದ್ದರೂ ಅಡ್ಯಾ­ರಿ­ನಲ್ಲೇ ಸೆಟ್ಲಾ­ಗಿದ್ದ. ಅವನೇ ನನಗೆ ಈ ಕತೆ ಹೇಳಿದ್ದು.
ರಮೇಶ ಹೇಳಿದ ಕತೆ

ನಾನು ಮನೆ­ಬಿಟ್ಟು ಓಡಿ­ಬಂ­ದದ್ದು ಯಾವು­ದಾ­ದರೂ ಹೊಟೆ­ಲ್­ನಲ್ಲಿ ಕೆಲಸ ಮಾಡು­ವು­ದ­ಕ್ಕೆಂದು. ಆದರೆ ನನ್ನ ಅದೃಷ್ಟ ಚೆನ್ನಾ­ಗಿತ್ತು. ಬಂದ­ವ­ನಿಗೆ ಸಿಕ್ಕಿದ್ದು ಶಿವಣ್ಣ. ಒಂದು ಸಾರಿ ಹೊಟೆ­ಲಿಗೆ ಚಾ ಕುಡಿ­ಯಲು ಬಂದಿ­ದ್ದ­ವನು, ಆ ಹೊಟೆಲ್ ಮಾಲಿ­ಕರ ಹತ್ತಿರ ನಾನು ಕೆಲ­ಸ­ಕ್ಕಾಗಿ ಅಂಗ­ಲಾ­ಚು­ತ್ತಿ­ರು­ವು­ದನ್ನು ನೋಡಿದ. ನನ್ನನ್ನು ಕರೆದು ತನ್ನ ಜೊತೆಗೆ ಕರೆ­ದೊಯ್ದ. ಆವ­ತ್ತಿ­ನಿಂದ ನನ್ನನ್ನು ತಮ್ಮನ ಹಾಗೆ ನೋಡಿ­ಕೊಂಡ. ಅವ­ನನ್ನು ನಾನು ಶಿವಣ್ಣ ಎಂದೇ ಕರೆ­ಯು­ತ್ತಿದ್ದೆ.ಆತ ನನ್ನನ್ನು ತಮ್ಮಾ ಎನ್ನು­ತ್ತಿದ್ದ.
ಶಿವ­ಣ್ಣನ ಇಟ್ಟಿಗ ಗೂಡಿ­ನಲ್ಲಿ ನಲು­ವತ್ತೋ ಐವತ್ತೋ ಮಂದಿ ಕೆಲಸ ಮಾಡಿ­ಕೊಂ­ಡಿ­ದ್ದರು. ಅವ­ರೆಲ್ಲ ದಿನ­ಗೂಲಿ ನೌಕ­ರರು. ವಾರ­ಕ್ಕೊಂದು ರಜಾ ಹಾಕಿ, ಕೊಟ್ಟ ಸಂಬ­ಳ­ವನ್ನು ಕುಡಿದು ಹಾಳು­ಮಾ­ಡು­ತ್ತಿ­ದ್ದ­ವರು. ಅವರ ಪೈಕಿ ಯಾರಿಗೂ ಅಕ್ಪರ ಜ್ಞಾನವೂ ಇರ­ಲಿಲ್ಲ. ಅಂಥ­ವರ ನಡುವೆ ನನ­ಗೊಂದು ಗೌರ­ವ­ವಾದ ಸ್ಥಾನ­ವಿತ್ತು. ನಾನು ಎಸ್ಸೆ­ಸ್ಸೆ­ಲ್ಸಿ­ವ­ರೆಗೆ ಓದಿ­ದ್ದ­ರಿಂದ ಶಿವಣ್ಣ ಅವರ ಲೆಕ್ಕ ಬರೆ­ಯುವ ಜವಾ­ಬ್ದಾ­ರಿ­ಯನ್ನು ನನಗೆ ವಹಿ­ಸಿದ್ದ.
ಇಟ್ಟಿಗೆ ಗೂಡಿಗೆ ಕೆಲ­ಸಕ್ಕೆ ಬರು­ತ್ತಿ­ದ್ದ­ವರ ಪೈಕಿ ಐತಪ್ಪ ಎನ್ನುವ ಮುದು­ಕ­ನೊ­ಬ್ಬ­ನಿದ್ದ. ಅವನು ಶಿವ­ಣ್ಣನ ಅಪ್ಪನ ಕಾಲ­ದಿಂ­ದಲೇ ಕೆಲ­ಸ­ಕ್ಕಿ­ದ್ದ­ವ­ನಂತೆ. ಸದ್ಯಕ್ಕೆ ಕೆಲಸ ಮಾಡುವ ತಾಕ­ತ್ತಿ­ಲ್ಲ­ದಿ­ದ್ದರೂ ಬಂದು ಹೋಗು­ತ್ತಿದ್ದ. ಶಿವ­ಣ್ಣನೂ ಕರು­ಣೆ­ಯಿಂದ ಅವ­ನಿಗೆ ಸಂಬಳ ಕೊಡು­ತ್ತಿದ್ದ. ಶಿವಣ್ಣ ಸಂಬಳ ಕೊಡು­ತ್ತಿ­ದ್ದದ್ದು ಐತ­ಪ್ಪನ ಮೇಲಿನ ಕರು­ಣೆ­ಯಿಂದ ಅಲ್ಲ, ಅವನ ಮಗಳು ಚಂಪಾಳ ಮೇಲಿನ ಪ್ರೀತಿ­ಯಿಂದ ಅನ್ನೋದು ನನಗೆ ಆಮೇಲೆ ಗೊತ್ತಾ­ಯಿತು.
ಶಿವಣ್ಣ ಆಕೆ­ಯನ್ನು ಮನ­ಸಾರೆ ಪ್ರೀತಿ­ಸು­ತ್ತಿದ್ದ.
ಆ ಪ್ರೇಮ­ಕ­ತೆಗೆ ಸಾಕ್ಪಿ­ಯಾ­ಗಿ­ದ್ದ­ವನು ನಾನೊ­ಬ್ಬನೇ. ಆರಂ­ಭ­ದಲ್ಲಿ ಒಬ್ಬನೇ ಅಡುಗೆ ಮಾಡಿ­ಕೊಂಡು ಊಟ ಮಾಡು­ತ್ತಿದ್ದ ಶಿವಣ್ಣ ಕ್ರಮೇಣ ಚಂಪಾಳ ಮನೆಗೆ ಊಟಕ್ಕೆ ಹೋಗ­ತೊ­ಡ­ಗಿದ. ಐತ­ಪ್ಪ­ನಿಗೆ ಆಗೀಗ ಕರೆದು ಭಕ್ಪೀಸು ಕೊಡು­ತ್ತಿದ್ದ. ಚಂಪಾ­ಳೇ­ನಾ­ದರೂ ಅತ್ತಿತ್ತ ಸುಳಿ­ದರೆ ಪುಲ­ಕಿ­ತ­ನಾ­ಗು­ತ್ತಿದ್ದ. ಅವ­ಳಿಂದ ಅದೆಂ­ಥದೋ ಒಂದು ಸಂತೋ­ಷ­ವನ್ನು ಆತ ಪಡೆ­ಯು­ತ್ತಿದ್ದ. ಚಿಕ್ಕ­ವ­ನಾದ ನನಗೆ ಅದೇನು ಅನ್ನೋದು ಗೊತ್ತಿ­ರ­ಲಿಲ್ಲ. ಅದು ಗೊತ್ತಾ­ದದ್ದು ಆ ಊರಿಗೆ ಮ್ಯಾಥ್ಯೂ ಬಂದ ನಂತರ.
ಮ್ಯಾಥ್ಯೂ ಕೇರ­ಳ­ದ­ವನು. ಗೋವಾಕ್ಕೂ ಹೋಗಿ ಬಂದಿ­ದ್ದ­ನಂತೆ. ನಿರ­ರ್ಗ­ಳ­ವಾಗಿ ಇಂಗ್ಲೀಷು ಮಾತಾ­ಡು­ತ್ತಿದ್ದ. ತುಂಬ ದಿವಿ­ನಾಗಿ ಸಿಂಗ­ರಿ­ಸಿ­ಕೊ­ಳ್ಳು­ತ್ತಿದ್ದ. ಅವನು ಪಕ್ಕ ಸುಳಿ­ದರೆ ಅದೆಂ­ಥದ್ದೋ ಪರಿ­ಮಳ ಘಮ್ಮೆ­ನು­ತ್ತಿತ್ತು. ಅದ­ಕ್ಕಿಂತ ಹೆಚ್ಚಾಗಿ ಆತ ಎಲ್ಲ­ರಂತೆ ಬೀಡಿ ಸೇದು­ತ್ತಿ­ರ­ಲಿಲ್ಲ. ಇಷ್ಟು­ದ್ದದ ಕಪ್ಪು ಸಿಗ­ರೇಟು ಸೇದು­ತ್ತಿದ್ದ. ಅದಿ­ಲ್ಲದೇ ಹೋದರೆ ಪೈಪ್ ಸೇದು­ತ್ತಿದ್ದ. ಅಡ್ಯಾ­ರಿನ ಉರಿ­ಬಿ­ಸಿ­ಲಿಗೂ ಜಗ್ಗದೆ ಕಲ್ಲು ಕಟ್ಟೆಯ ಮೇಲೆ ಕುಳಿ­ತು­ಕೊಂಡು ಆತ ಪೈ್ ಸೇದುತ್ತಾ ಚಹಾ ಕುಡಿ­ಯು­ವು­ದನ್ನು ನಾನೂ ಅನೇಕ ಸಲ ಬೆರ­ಗಿ­ನಿಂದ ನೋಡಿದ್ದೆ.
ಆತ ಆ ಊರಿಗೆ ಬಂದದ್ದು ಒಂದು ತೋಟದ ಮಾಲಿ­ಕ­ನಾಗಿ. ಅಲ್ಲೇ ಪಕ್ಕ­ದ­ಲ್ಲಿದ್ದ ತೋಟ­ವೊಂ­ದನ್ನು ಆತ ದುಬಾರಿ ಬೆಲೆ ಕೊಟ್ಟು ಕೊಂಡು­ಕೊಂ­ಡಿ­ದ್ದ­ನಂತೆ. ಆ ತೋಟಕ್ಕೆ ಹೋಗ­ಬೇ­ಕಾ­ದರೆ ನಮ್ಮ ಇಟ್ಟಿಗೆ ಗೂಡಿನ ಮೇಲೆ ಹಾದು ಹೋಗ­ಬೇ­ಕಾ­ಗಿತ್ತು. ಹಾಗೆ ಹಾದು ಹೋಗು­ವಾ­ಗ­ಲೆಲ್ಲ ಆತ ಕಣ್ಣಿಗೆ ಬೀಳು­ತ್ತಿದ್ದ. ಆರಂ­ಭ­ದಲ್ಲಿ ನಡೆ­ದು­ಕೊಂಡು ಹೋಗು­ತ್ತಿ­ದ್ದ­ವನು ಸ್ವಲ್ಪೇ ದಿನಕ್ಕೆ ಒಂದು ಬುಲೆಟ್ ಕೊಂಡು­ಕೊಂಡ. ಅದರ ಮೇಲೆ ಅವನ ಸವಾರಿ ಹೋಗು­ವು­ದನ್ನು ನಾವು ಸಖೇ­ದಾ­ಶ್ಚ­ರ್ಯ­ದಿಂದ ನೋಡುತ್ತಾ ನಿಂತಿ­ರು­ತ್ತಿ­ದ್ದೆವು.
ಈ ನಡುವೆ ಯಾಕೋ ಶಿವಣ್ಣ ಮಂಕಾ­ಗ­ತೊ­ಡ­ಗಿದ. ಅವನ ಸಮ­ಸ್ಯೆ­ಯೇ­ನೆಂ­ಬುದು ಸ್ವತಃ ನನಗೂ ತಿಳಿ­ಯು­ತ್ತಿ­ರ­ಲಿಲ್ಲ. ಕೆಲ­ಸ­ದಲ್ಲಿ ಮೊದ­ಲಿ­ನಂತೆ ಆಸ­ಕ್ತಿ­ಯಿ­ರ­ಲಿಲ್ಲ. ನಾನು ಲೆಕ್ಕದ ಪುಸ್ತಕ ಮುಂದಿ­ಟ್ಟರೆ ಮಂಕಾಗಿ ಅದನ್ನೇ ನೋಡು­ತ್ತಿದ್ದು ಸರಿ ಎನ್ನು­ತ್ತಿದ್ದ. ಮೊದ­ಲಿನ ಹಾಗೆ ಪ್ರಶ್ನೆ­ಗ­ಳನ್ನು ಕೇಳು­ತ್ತಿ­ರ­ಲಿಲ್ಲ. ಬಹುಶಃ ಆತ­ನಿಗೆ ನನ್ನ ಮೇಲೆ ಸಿಟ್ಟು ಬಂದಿ­ರ­ಬ­ಹುದು, ಅಥವಾ ನಾನು ಹಣ ನುಂಗಿ­ದ್ದೇನೆ ಎಂಬ ಗುಮಾನಿ ಇರ­ಬ­ಹುದು ಎಂಬ ಅನು­ಮಾನ ನನಗೆ ಬಂತು. ಯಾಕೆಂ­ದರೆ ಕೆಲ­ವರು ನನ್ನ ಹತ್ತಿರ ಹಾಗೆ ಮಾತಾ­ಡಿ­ದ್ದರು. ಒಳ್ಳೆ ಲಾಭ ಬರೋ ಕೆಲ­ಸಾನೇ ಹಿಡಿ­ದಿದ್ದಿ ಎನ್ನು­ತ್ತಿ­ದ್ದರು. ನನ­ಗಿಂತ ಮೊದಲು ಕೆಲ­ಸ­ಕ್ಕಿ­ದ್ದ­ವನು ಕೆಲ­ಸಕ್ಕೆ ಬಾರ­ದ­ವರ ಹೆಸ­ರೆಲ್ಲ ಸೇರಿಸಿ ಹಣ ಹೊಡೆ­ಯು­ತ್ತಿ­ದ್ದ­ನಂತೆ. ಆತ­ನಿಗೆ ನನ್ನ ಮೇಲೆ ಅಸ­ಮಾ­ಧಾ­ನ­ವಿ­ದ್ದರೆ ಒಂದು ಬಾರಿ ಅವ­ನೊ­ಡನೆ ಅದನ್ನು ಇತ್ಯರ್ಥ ಮಾಡಿ­ಕೊ­ಳ್ಳ­ಬೇಕು ಎಂದು­ಕೊಂಡೆ. ಆದರೆ ಶಿವಣ್ಣ ನನಗೆ ಒಂಟಿ­ಯಾಗಿ ಸಿಗಲೇ ಇಲ್ಲ. ಇಟ್ಟಿಗೆ ಗೂಡಿಗೆ ಬರು­ವು­ದನ್ನೂ ಕಮ್ಮಿ ಮಾಡಿದ್ದ. ಹೊಸ ಆರ್ಡ­ರು­ಗ­ಳನ್ನೂ ನಾನೇ ನಿಭಾ­ಯಿ­ಸ­ಬೇ­ಕಾ­ಗಿತ್ತು.
ಈ ಮಧ್ಯೆ ನಾನು ಒಂದೆ­ರಡು ಬಾರಿ ಚಂಪಾ­ಳನ್ನು ಮ್ಯಾಥ್ಯೂ ತನ್ನ ಬುಲೆ­ಟ್­ನಲ್ಲಿ ಕೂರಿ­ಸಿ­ಕೊಂಡು ಹೋಗು­ವು­ದನ್ನು ನೋಡಿದ್ದೆ. ಶಿವ­ಣ್ಣ­ನಿಗೆ ಇದ­ರಿಂದ ಅಸ­ಮಾ­ಧಾ­ನ­ವಾ­ಗಿ­ರ­ಬ­ಹುದು ಎಂದು­ಕೊಂಡೂ ಇದ್ದೆ. ಹೀಗೇ ಒಂದು ಮಧ್ಯಾಹ್ನ ನಾನು ಚಂಪಾ ಮತ್ತು ಮ್ಯಾಥ್ಯೂ ಅಂಟಿ­ಕೊಂಡು ಹೋಗು­ತ್ತಿ­ರು­ವು­ದನ್ನು ನೋಡು­ತ್ತಿ­ದ್ದಂತೆ ಹೆಗಲ ಮೇಲೆ ಯಾರೋ ಕೈಯಿ­ಟ್ಟಂ­ತಾ­ಯಿತು. ತಿರು­ಗಿ­ದರೆ ಶಿವಣ್ಣ ನಿಂತಿದ್ದ.ಗಂ­ಭೀ­ರ­ವಾ­ಗಿದ್ದ. ನಾನು ಏನೋ ಹೇಳ­ಬೇಕು ಅನ್ನು­ವ­ಷ್ಟ­ರಲ್ಲಿ ಅಲ್ಲಿಂದ ಹೊರ­ಟೇ­ಹೋದ.
ಆ ರಾತ್ರಿ ನಾನು ಹೇಗಾ­ದರೂ ಮಾಡಿ ಶಿವ­ಣ್ಣನ ಜೊತೆ ಮಾತಾ­ಡ­ಬೇ­ಕೆಂದು ಅವನ ರೂಮಿಗೆ ಹೋದೆ. ಬೀಗ ಹಾಕಿತ್ತು. ಐತ­ಪ್ಪನ ಮನೆಗೆ ಊಟಕ್ಕೆ ಹೋಗಿ­ರ­ಬ­ಹುದು ಎಂದು ಪಕ್ಕದ ರೂಮಿ­ನಾತ ಹೇಳಿದ. ಐತ­ಪ್ಪನ ಮನೆ ಸಮೀ­ಪಿ­ಸು­ತ್ತಿ­ದ್ದಂತೆ ಹೊರ­ಗಡೆ ನಿಲ್ಲಿ­ಸಿದ್ದ ಬುಲೆಟ್ ಕಣ್ಣಿಗೆ ಬಿತ್ತು. ಮನೆ­ಯೊ­ಳ­ಗಡೆ ಮಂದ­ಬೆ­ಳ­ಕಿತ್ತು. ನಾನು ಒಂದು ಕ್ಪಣ ಆ ಕತ್ತ­ಲಲ್ಲಿ ಅಲ್ಲೆ ನಿಂತೆ. ಒಳಗೆ ಹೋಗಲೋ ಬೇಡವೋ ಎಂಬ ಅನು­ಮಾ­ನ­ದಲ್ಲಿ ಕಾದೆ. ಅಷ್ಟು ಹೊತ್ತಿಗೆ ಬಾಗಿಲು ತೆರೆ­ಯಿತು. ಒಳ­ಗಿ­ನಿಂದ ಮ್ಯಾಥ್ಯೂ ಹೊರ­ಬಂದ. ಅವ­ನನ್ನು ತಬ್ಬಿ­ಕೊಂ­ಡಂತೆ ಚಂಪಾ ನಿಂತಿ­ದ್ದಳು. ನಾನು ಒಂದು ಕ್ಪಣ ಅದು­ರಿ­ಹೋದೆ. ಇದನ್ನು ಶಿವಣ್ಣ ನೋಡಿ­ದರೆ ಎಂದು ಭಯ­ವಾಯ್ತು.
ಚಂಪಾ ಆತ­ನನ್ನು ಬೀಳ್ಕೊಟ್ಟು ಒಳಗೆ ಹೋದಳು. ನಾನು ಅಲ್ಲೇ ಗರ­ಬ­ಡಿ­ದ­ವ­ನಂತೆ ನಿಂತಿದ್ದೆ.
ಅಷ್ಟ­ರಲ್ಲಿ ಯಾರೋ ನನ್ನನ್ನು ಜೋರಾಗಿ ಅಲು­ಗಾ­ಡಿ­ಸಿ­ದಂ­ತಾ­ಯಿತು. ಬೆಚ್ಚಿ­ಬಿದ್ದು ಹಿಂತಿ­ರು­ಗಿ­ದರೆ ಕತ್ತ­ಲ­ಲ್ಲೊಂದು ಆಕೃತಿ ಪಿಸು­ಗು­ಟ್ಟಿತು "ಯಾರು ನೀನು'. ಆ ಕತ್ತ­ಲಲ್ಲೂ ಆ ಉಡು­ಗಿದ ದನಿ ಶಿವ­ಣ್ಣ­ನದು ಅನ್ನೋದು ನನಗೆ ಗೊತ್ತಾ­ಯಿತು. ನಾನು ರಮೇಶ ಅಂದೆ. ಶಿವಣ್ಣ ಮರು­ಮಾ­ತಾ­ಡದೆ ನನ್ನ ಕೈ ಹಿಡಿದು ಅಲ್ಲಿಂದ ದರ­ದರ ಎಳೆ­ದು­ಕೊಂಡು ಹೋದ. ಕತ್ತ­ಲಲ್ಲಿ ಎಡ­ವುತ್ತಾ ಅವನ ಹಿಂದೆ ಸಾಗಿದೆ. ಸುಮಾರು ಅರ್ಧ ಮೈಲಿ ಹಾಗೆ ನಡೆ­ದಿ­ರ­ಬ­ಹುದು. ಅಲ್ಲೊಂದು ಕಡೆ ಶಿವಣ್ಣ ಕುಸಿದು ಕುಳಿತ. ನಾನೂ ಕುಳಿತೆ. ಶಿವಣ್ಣ ಮಾತಾ­ಡದೇ ಬಿಕ್ಕಿ ಬಿಕ್ಕಿ ಅಳ­ತೊ­ಡ­ಗಿದ. ತನ್ನ ಪ್ರೇಮದ ಕತೆ­ಯನ್ನು ಬಿಕ್ಕು­ತ್ತಲೇ ಹೇಳಿದ. ಚಂಪಾ ಒಳ್ಳೆ­ಯ­ವ­ಳೆಂದೂ ಆ ಮ್ಯಾಥ್ಯೂ ಆಕೆ­ಯನ್ನು ಬುಟ್ಟಿಗೆ ಹಾಕಿ­ಕೊಂ­ಡಿ­ದ್ದಾ­ನೆಂದೂ ಹಲು­ಬಿದ. ಆತ ಅಳು­ತ್ತಿ­ರು­ವು­ದನ್ನು ನೋಡಿದ ನನಗೆ ಮ್ಯಾಥ್ಯು­ವನ್ನು ಸಾಯಿ­ಸ­ಬೇ­ಕೆ­ನ್ನು­ವಷ್ಟು ಸಿಟ್ಟು ಬಂತು. ನಾನೂ ದೊಡ್ಡ­ವ­ನಾ­ಗಿ­ರ­ಬೇ­ಕಿತ್ತು ಅಂದು­ಕೊಂಡೆ.
ಅತ್ತು ಅತ್ತು ಸಮಾ­ಧಾ­ನ­ವಾದ ನಂತರ ಶಿವಣ್ಣ ಎದ್ದು ನಿಂತ. ಇನ್ನೊಂದು ವಾರ ನಾನು ಯಾರಿಗೂ ಕಾಣಿ­ಸಿ­ಕೊ­ಳ್ಳು­ವು­ದಿ­ಲ್ಲ­ವೆಂದೂ ಇಟ್ಟಿಗೆ ಗೂಡು ಮತ್ತು ಹೆಂಚಿನ ಮನೆಯ ಜವಾ­ಬ್ದಾರಿ ನನ್ನ­ದೆಂದೂ ಹೇಳಿದ. ಆತನ ಮನ­ಸ್ಸಲ್ಲಿ ಯಾವುದೋ ಯೋಜನೆ ರೂಪು­ಗೊ­ಳ್ಳು­ತ್ತಿ­ದ್ದಂ­ತಿತ್ತು.
ಅದಾದ ಮೂರ­ನೆಯ ದಿನಕ್ಕೆ ನಾನು ಒಬ್ಬನೇ ಲೆಕ್ಕ ಬರೆ­ಯುತ್ತಾ ಹೆಂಚು­ಗೂ­ಡಿನ ಪಕ್ಕ­ದ­ಲ್ಲಿ­ರುವ ಕೋಣೆ­ಯಲ್ಲಿ ಕುಳಿ­ತಿದ್ದೆ. ಶಿವಣ್ಣ ರಾತ್ರಿ­ಯೆಲ್ಲ ಕೆಲ­ಸ­ವಿ­ದ್ದಾಗ ಮಲ­ಗು­ತ್ತಿದ್ದ ಕೋಣೆ ಅದು. ಇದ್ದ­ಕ್ಕಿ­ದ್ದಂತೆ ನನ್ನ ಮುಂದೆ ಯಾರೋ ನಿಂತಂ­ತಾ­ಯಿತು. ತಲೆ­ಯೆತ್ತಿ ನೋಡಿ­ದರೆ ಶಿವಣ್ಣ. ನಾನು ತಲೆ­ಯೆತ್ತಿ ನೋಡು­ತ್ತಿ­ದ್ದಂತೆ ಆತ ಅಲ್ಲಿಂದ ತಿರುಗಿ ಹೋದ. ನಾನು ಲೆಕ್ಕದ ಪುಸ್ತಕ ಬದಿ­ಗಿಟ್ಟೆ. ಶಿವಣ್ಣ ಆ ಅಪ­ರಾತ್ರಿ ಯಾಕೆ ಬಂದ? ಬಂದ­ವನು ಯಾಕೆ ಮಾತಾ­ಡದೇ ಹೊರ­ಟು­ಹೋದ? ಆತ ನನ­ಗೇ­ನಾ­ದರೂ ಹೇಳು­ವು­ದಿತ್ತೇ? ಒಂದೂ ತೋಚದೇ ಆತ­ನನ್ನೇ ಹಿಂಬಾ­ಲಿ­ಸಿದೆ.
ಶಿವಣ್ಣ ತಿರು­ಗಿಯೂ ನೋಡದೇ ಮುಂದೆ ಮುಂದೆ ಹೋಗು­ತ್ತಿದ್ದ. ನಾನು ಅಚ್ಚ­ರಿ­ಯಿಂದ ಹಿಂಬಾ­ಲಿ­ಸಿದೆ. ಆತ ಕತ್ತ­ಲಲ್ಲಿ ನಡೆ­ಯು­ತ್ತಿ­ದ್ದ­ವನು ನನ್ನ ಕಣ್ಣ­ಮುಂ­ದಿ­ನಿಂದ ಇದ್ದ­ಕ್ಕಿ­ದ್ದಂತೆ ಮಾಯ­ವಾದ. ನಾನೂ ಅವ­ಸ­ರ­ದಲ್ಲಿ ಕೈಯಲ್ಲಿ ಟಾರ್ಚ್ ಇಲ್ಲದೆ ಹೊರ­ಟಿದ್ದೆ. ಶಿವಣ್ಣ ಎಲ್ಲಿಗೆ ಹೋದ ಅನ್ನು­ವುದೂ ತಿಳಿ­ಯ­ಲಿಲ್ಲ. ಇದ್ದ­ಕ್ಕಿ­ದ್ದಂತೆ ನನ್ನ ಸುತ್ತಲೂ ದಟ್ಟ ಕತ್ತಲೆ ಕವಿ­ದಂ­ತಾ­ಯಿತು. ನಾನು ಗಾಬ­ರಿ­ಯಲ್ಲಿ ಓಡೋಡಿ ನನ್ನ ಕೋಣೆ ತಲು­ಪಿದೆ.
ಆವ­ತ್ತಿಡೀ ನನಗೆ ನಿದ್ದೆ ಬರ­ಲಿಲ್ಲ. ಬೆಳಗ್ಗೆ ಎದ್ದ­ವನೇ ಶಿವ­ಣ್ಣನ ರೂಮಿಗೆ ಹೋದೆ. ಆತ ಅಲ್ಲಿ­ರ­ಲಿಲ್ಲ. ಮತ್ತೊಂ­ದೆ­ರಡು ಬಾರಿ ಹೋದಾ­ಗಲೂ ಶಿವಣ್ಣ ಸಿಗ­ಲಿಲ್ಲ. ಕೊನೆ­ಗೊಂದು ದಿನ ಚಂಪಾಳ ಮನೆಗೂ ಹುಡು­ಕಿ­ಕೊಂಡು ಹೋದೆ. ಆಕೆ ಯಾವ ಶಿವಣ್ಣ ಎಂದು ಸಿಟ್ಟಾಗಿ ಕೇಳಿ ಬಾಗಿಲು ಮುಚ್ಚಿ­ಕೊಂ­ಡಳು.
ಆ ರಾತ್ರಿ ನಾನು ಮತ್ತೆ ಹೆಂಚಿನ ಗೂಡಿಗೆ ಹೋದೆ. ಅಲ್ಲಿ ಒಂಟಿ­ಯಾಗಿ ಕೂತಿದ್ದೆ. ಗೂಡು ಧಗ­ಧಗ ಉರಿ­ಯು­ತ್ತಿತ್ತು. ಅಲ್ಲಿ ಸ್ವಲ್ಪ ಹೊತ್ತಿದ್ದು ಲೆಕ್ಕ ಬರೆ­ಯುವ ರೂಮಿಗೆ ಬಂದೆ.
ಆ ರಾತ್ರಿ ಮತ್ತೆ ಶಿವಣ್ಣ ಕಾಣಿ­ಸಿ­ಕೊಂಡ. ಹಿಂದಿನ ದಿನ­ದಂ­ತೆಯೇ. ಇವತ್ತು ಬಿಡ­ಬಾ­ರದು ಎಂದು­ಕೊಂಡು ಅವ­ನನ್ನೇ ಹಿಂಬಾ­ಲಿ­ಸಿದೆ. ಆತ ಹಿಂದಿನ ದಿನ­ದಂ­ತೆಯೇ ಮುಂದೆ ಮುಂದೆ ಹೋದ. ನಾನು ಕಣ್ಣಲ್ಲಿ ಕಣ್ಣಿಟ್ಟು ನೋಡು­ತ್ತಿದ್ದೆ. ನೋಡ­ನೋ­ಡು­ತ್ತಿ­ದ್ದಂ­ತೆಯೇ ಆತ ಹೆಂಚಿನ ಗೂಡಿನ ಬೆಂಕಿ­ಯೆ­ದುರು ನಿಂತ. ಅವನ ಮೈ ಎಷ್ಟು ಪಾರ­ದ­ರ್ಶ­ಕ­ವಾ­ಗಿ­ತ್ತೆಂ­ದರೆ ಅದ­ರೊ­ಳ­ಗಿಂತ ಬೆಂಕಿ ಕಾಣಿ­ಸು­ತ್ತಿತ್ತು. ನಾನು ಇನ್ನೇನು ಚೀರಿ­ಕೊ­ಳ್ಳ­ಬೇ­ಕೆ­ನ್ನು­ವ­ಷ್ಟ­ರಲ್ಲಿ ಆತ ಬೆಂಕಿಯ ಒಳಗೇ ಹೊರ­ಟು­ಹೋದ.
ನಾನು ಕುಸಿ­ದು­ಬಿದ್ದೆ.
2
ಅಷ್ಟು ಹೇಳಿ ರಮೇಶ ಕತೆ ನಿಲ್ಲಿ­ಸಿದ. ಆ ಘಟ­ನೆಯ ನಂತರ ಆತ ಒಂದು ತಿಂಗಳು ಹಾಸಿಗೆ ಹಿಡಿ­ದಿ­ದ್ದ­ನಂತೆ. ಬೆಂಕಿ ನೋಡಿ­ದಾ­ಗ­ಲೆಲ್ಲ ಅದ­ರೊ­ಳಗೆ ಯಾರೋ ಹೊಕ್ಕಿ­ದಂತೆ ಕಾಣಿ­ಸು­ತ್ತಿ­ತ್ತಂತೆ. ಶಿವಣ್ಣ ಬೆಂಕಿ­ಯೊ­ಳಗೆ ಹೋದ ಎಂದು ಆತ ಹೇಳು­ವು­ದನ್ನು ಯಾರೂ ಸೀರಿ­ಯ­ಸ್ಸಾಗಿ ತೆಗೆ­ದು­ಕೊ­ಳ್ಳ­ಲಿಲ್ಲ. ಆದರೆ ಆ ಊರಿಗೆ ಹೊಸ­ದಾಗಿ ಬಂದಿದ್ದ ಪೊಲೀಸ್ ಪೇದೆ­ಯೊಬ್ಬ ಶಿವಣ್ಣ ಮಾಯ­ವಾ­ದ­ದ್ದಕ್ಕೂ ರಮೇ­ಶನ ಮಾತಿಗೂ ಸಂಬಂಧ ಇರ­ಬ­ಹುದು ಅಂದು­ಕೊಂಡು ಆತ ರಮೇ­ಶ­ನಿಗೆ ಕಾಣಿ­ಸಿ­ಕೊಂಡ ಹೆಂಚಿನ ಗೂಡನ್ನು ಕೆದ­ಕಿ­ನೋ­ಡಿ­ದಾಗ ಅರೆ­ಸುಟ್ಟ ಮನು­ಷ್ಯರ ಎಲುಬು­ಗಳು ಸಿಕ್ಕ­ವಂತೆ.
ಮುಂದೆ ಆತ ಇಡೀ ಪ್ರಕ­ರ­ಣದ ಬೆನ್ನು­ಹತ್ತಿದ. ಮ್ಯಾಥ್ಯು ಆರೋಪಿ ಸ್ಥಾನ­ದಲ್ಲಿ ನಿಂತ. ಅಷ್ಟು ಹೊತ್ತಿ­ಗಾ­ಗಲೇ ಆತ ಆ ಊರು ಬಿಟ್ಟು ಕೇರ­ಳಕ್ಕೆ ಓಡಿ ಹೋಗಿದ್ದ.ಅ­ದಾದ ಕೆಲವು ದಿನ­ಗಳ ನಂತರ ಚಂಪಾ ಒಮ್ಮೆ ಹೆಂಚಿನ ಗೂಡಿನ ಬಳಿ ಕಾಣಿ­ಸಿ­ಕೊಂ­ಡ­ವಳು, ಆ ನಂತರ ಕಾಣೆ­ಯಾ­ದಳು. ಆಕೆ­ಯನ್ನು ಶಿವ­ಣ್ಣನ ದೆವ್ವವೇ ಕೊಂದಿ­ರ­ಬೇ­ಕೆಂದು ಭಾವಿ­ಸಿದ ಊರಿನ ಮಂದಿ ಆ ಇಟ್ಟಿಗೆ ಗೂಡಿ­ನತ್ತ ಸುಳಿ­ಯು­ವು­ದನ್ನೂ ಬಿಟ್ಟು­ಬಿ­ಟ್ಟರು.
ಈಗಲೂ ರಾತ್ರಿ ಹೊತ್ತು ಆ ಇಟ್ಟಿಗೆ ಗೂಡು ತನ್ನಿಂ­ತಾನೇ ಹತ್ತಿ ಉರಿ­ಯು­ತ್ತ­ದಂತೆ. ಅದರ ಮುಂದೆ ಶಿವಣ್ಣ ಅನಾ­ಥ­ನಂತೆ ನಿಂತಿ­ರು­ತ್ತಾ­ನಂತೆ. ಯಾರಾ­ದರೂ ನೋಡಿ­ದರೆ ಬೆಂಕಿ­ಯೊ­ಳಗೆ ನಡೆ­ದು­ಹೋ­ಗು­ತ್ತಾ­ನಂತೆ. ಒಂದೊಂದು ರಾತ್ರಿ ಅಲ್ಲಿ ಒಂದು ಗಂಡೂ ಒಂದು ಹೆಣ್ಣೂ ಜಗ­ಳ­ವಾ­ಡುವ ಶಬ್ದ ಕೇಳಿ­ಬ­ರು­ತ್ತ­ದಂತೆ.
ಬೇಕಿ­ದ್ದರೆ ನೀವೇ ನೋಡಿ ಎಂದು ಮಾರನೆ ದಿನ ಬೆಳಗ್ಗೆ ಆ ಪಾಳು­ಬಿದ್ದ ಇಟ್ಟಿಗೆ ಗೂಡಿನ ಬಳಿಗೆ ನನ್ನನ್ನು ಕರೆ­ದೊಯ್ದ ರಮೇಶ, ಆಗಷ್ಟೇ ಆರಿ­ದಂ­ತಿದ್ದ ಕೆಂಡ­ವನ್ನೂ ಇನ್ನೂ ನವಿ­ರಾ­ಗಿ­ರುವ ಬೂದಿ­ಯನ್ನೂ ತೋರಿ­ಸಿದ. ಗೂಡು ಮುಟ್ಟಿ­ನೋಡಿ ಅಂದ. ಮುಟ್ಟಿದೆ.
ಆ ಮಂಜು ಬೀಳು­ತ್ತಿ­ರುವ ಮುಂಜಾ­ನೆ­ಯಲ್ಲೂ ಆಗಷ್ಟೇ ಉರಿದು ಆರಿದ ಅಗ್ನಿ­ಕುಂ­ಡದ ಥರ ಗೂಡು ಬೆಚ್ಚ­ಗಿತ್ತು.
ನನಗೆ ಯಾಕೋ ಭಯ­ವಾ­ಯಿತು.


(ಈ ಕತೆ ನನಗೆ ಎಲ್ಲಿ ಸಿಕ್ಕಿತೋ ಗೊತ್ತಿಲ್ಲ. ಒಂದು ಅಪರಾತ್ರಿಯಲ್ಲಿ ನಾನು ಮತ್ತು ದಟ್ಸ್ ಕನ್ನಡದ ಶಾಮಸುಂದರ್ ಜೊತೆಗೆ ಕೂತುಕೊಂಡಿದ್ದಾಗ ನೆನಪಿಗೆ ಬಂತು. ಅದನ್ನು ಶಾಮ್ ಒತ್ತಾಯಿಸಿ ಬರೆಸಿಕೊಂಡರು. ಹೀಗಾಗಿ ಇದು ಶಾಮ್ ಗೆ ಅರ್ಪಣೆ)
Thursday, April 12, 2007

ನಮ್ಮೂರ ಬಂಡಿ­ಯಲಿ ನಿಮ್ಮೂರ ಬಿಟ್ಟಾಗ....

ಬಂಡಿ­ಹೊ­ಳೆಯು ಸಣ್ಣ ಹಳ್ಳಿ; ನೂರೈ­ವ­ತ್ತೆ­ರಡು ಮನೆ­ಗಳು ಇರು­ತ್ತವೆ. ಜನ­ಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈ­ನೂರು. ಪೂರ್ವ­ದಿ­ಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕು­ಗ­ಳಲ್ಲಿ ಹೇಮಾ­ವತಿ ನದಿ ಈ ಊರಿನ ಎಲ್ಲೆ­ಯೆಂದು ಹೇಳ­ಬ­ಹುದು. ಊರಿನ ಸುತ್ತಲೂ ಪೈರು­ಪ­ಚ್ಚೆ­ಗ­ಳಿಂದ ತುಂಬಿದ ಹೊಲ­ಗ­ದ್ದೆ­ಗಳೂ ಹಸುರು ಹುಲ್ಲಿನ ಗೋಮಾ­ಳ­ಗಳೂ ಪ್ರಕೃ­ತಿಯ ದಿನ­ಕ್ಕೊಂದು ವಿಧ­ವಾದ ಸೊಬ­ಗಿನ ನೋಟವೂ ನಮ್ಮೂ­ರಿನ ಕಳೆ­ಯನ್ನು ಹೆಚ್ಚಿ­ಸಿ­ದ್ದವು. ಊರಿನ ಸುತ್ತಲೂ ಕಳ್ಳಿ­ಬೂ­ತಾ­ಳೆ­ಗಳ ಬಲ­ವಾದ ಬೇಲಿ­ಗ­ಳಿ­ದ್ದವು. ಇತ್ತೀ­ಚೆಗೆ ಅದು ಕಮ್ಮಿ­ಯಾ­ಗು­ತ್ತಿದೆ. ಹೊರ ಊರು­ಗ­ಳಿಂದ ಬರುವ ದಾರಿ­ಗ­ಳಲ್ಲಿ ಹೇಮ­ಗಿ­ರಿ­ಯಿಂದ ಬರುವ ದಾರಿಯೇ ಸ್ವಲ್ಪ ಸುಮಾ­ರಾ­ಗಿತ್ತು. ಇದೇ ಹೆದ್ದಾರಿ. ಈ ಮಾರ್ಗ­ವಾಗಿ ಬರು­ವಾಗ ಬಲ­ಗಡೆ ಶ್ರೀಕಂ­ಠೇ­ಶ್ವರ ಸ್ವಾಮಿ ದೇವ­ಸ್ಥಾ­ನವು ಸಿಕ್ಕು­ವುದು. ಇದನ್ನು ಕಟ್ಟಿ ನೂರಾರು ವರ್ಷ­ಗ­ಳಾ­ದವು. ಆಳಿದ ಮಹಾ­ಸ್ವಾ­ಮಿ­ಯ­ವ­ರ­ರಾದ ಮುಮ್ಮಡಿ ಕೃಷ್ಣ­ರಾಜ ಒಡೆ­ಯ­ರ­ವರ ತಾಯಿ­ಯ­ವ­ರಾದ ಮಾತೃಶ್ರೀ ದೇವ­ರಾ­ಜ­ಮ್ಮ­ಣ್ಣಿ­ಯ­ವರು ಈ ದೇವ­ಸ್ಥಾ­ನ­ವನ್ನು ಕಟ್ಟಿಸಿ ಇದರ ಸೇವೆ­ಗಾಗಿ ವೃತ್ತಿ­ಗ­ಳನ್ನು ಬಿಟ್ಟಿ­ರು­ವರು. ಈ ಪುಣ್ಯಾ­ತ್ಮರ ವಿಗ್ರ­ಹವೂ ಅವರ ಜ್ಞಾಪ­ಕಾ­ರ್ಥ­ವಾಗಿ ಇದೇ ದೇವ­ಸ್ಥಾ­ನ­ದಲ್ಲಿ ಪ್ರತಿ­ಷ್ಠಾ­ಪಿ­ಸ­ಲ್ಪ­ಟ್ಟಿ­ರು­ವುದು.
ಊರಿನ ದಕ್ಪಿಣ ಭಾಗ­ದಲ್ಲಿ ಸ್ವಲ್ಪ ದೂರ­ವಾಗಿ ಏಳೂ­ರ­ಮ್ಮನ ತೋಪು ಮತ್ತು ಗುಡಿ­ಗ­ಳಿವೆ. ಪೂರ್ವ­ಕಾ­ಲ­ದಲ್ಲಿ ಇಲ್ಲಿಗೆ ಸುತ್ತು­ಮು­ತ್ತ­ಲಿನ ಏಳೂರು ಶಿಡಿ ತೇರು­ಗಳು ಬಂದು ದೊಡ್ಡ ಜಾತ್ರೆ­ಯಾಗಿ ಕುಸ್ತಿ ದೊಂಬ­ರಾಟ ಎಲ್ಲ ಆಗು­ತ್ತಿ­ದ್ದ­ವಂತೆ. ಈಗ ಏನೂ ಇಲ್ಲ. ಗುಡಿಯ ಮುಂದೆ ಏಳು ಕಲ್ಲು­ಗ­ಳಿವೆ. ಒಳಗೆ ಏಳು ದೇವ­ರು­ಗ­ಳಿವೆ. ನಮ್ಮೂ­ರಿ­ನಲ್ಲಿ ಐದಾರು ಮನೆ­ಗಳು ಬ್ರಾಹ್ಮ­ಣ­ರದು. ಉಳಿ­ದ­ದ್ದೆಲ್ಲಾ ಒಕ್ಕಲು ಮಕ್ಕ­ಳದು. ಬಡ­ಗಿ­ಗಳು ಅಕ್ಕ­ಸಾ­ಲಿ­ಗಳು, ವಾದ್ಯ­ದ­ವರು, ಅಗ­ಸರು, ಕುಂಬಾ­ರರ ಒಂದೆ­ರಡು ಮನೆ­ಗ­ಳಿ­ದ್ದವು.ಊರ ಹೊರಗೆ ದಕ್ಪಿಣ ದಿಕ್ಕಿ­ನಲ್ಲಿ ಹದಿ­ನಾರು ಗುಡಿ­ಸ­ಲು­ಗ­ಳಿ­ದ್ದ­ವಲ್ಲ ಅವೆಲ್ಲಾ ಹೊಲೆ­ಯ­ರದು. ಇವರು ತಮ್ಮ ಗುಡಿ­ಸ­ಲು­ಗಳ ಮಧ್ಯೆ ಒಂದು ಹೆಂಚಿನ ಮನೆ­ಯನ್ನು ಕಟ್ಟಿ ಅದ­ರಲ್ಲಿ ಮಾಯಮ್ಮ ದೇವ­ರ­ನ್ನಿಟ್ಟು ಪೂಜಿ­ಸು­ತ್ತಿ­ದ್ದರು.
ಊರಿನ ಹವಾ­ಗು­ಣವು ಆರೋ­ಗ್ಯ­ವಾ­ಗಿ­ದ್ದಿತು. ವ್ಯವ­ಸಾ­ಯವೇ ಮುಖ್ಯ­ವಾ­ಗಿ­ದ್ದು­ದ­ರಿಂದ ತಿಪ್ಪೇ­ಗುಂ­ಡಿ­ಗಳು ಊರಿಗೆ ಸಮೀ­ಪ­ವಾ­ಗಿ­ದ್ದವು. ಹಳೇ ಸಂಪ್ರ­ದಾ­ಯದ ಬೀದಿ­ಗಳೂ ಕೆಲ­ವಿ­ದ್ದವು. ಬೆಳ­ಕಿಗೆ ಅನು­ಕೂಲ ಕಮ್ಮಿ. ದನ­ಕ­ರು­ಗ­ಳನ್ನು ಮನೆ­ಯೊ­ಳಗೆ ಕಟ್ಟು­ತ್ತಿ­ದ್ದರು. ಇತ್ತೀ­ಚೆಗೆ ಗ್ರಾಮ­ಪಂ­ಚಾಯ್ತಿ ಏರ್ಪಾ­ಡಾಗಿ ಮೇಲಿನ ಕಷ್ಟ­ಗ­ಳೆಲ್ಲ ನಿವಾ­ರ­ಣೆ­ಯಾ­ಗು­ತ್ತ­ಲಿವೆ. ಬಾಲ್ಯ­ದಲ್ಲಿ ನೋಡಿದ ಬಂಡಿ­ಹೊ­ಳೆಯು ಈಗೀಗ ಗುಣ­ಮು­ಖ­ನಾದ ರೋಗಿಯು ಹಾಸಿ­ಗೆ­ಯಿಂ­ದೆದ್ದು ತಿರು­ಗಾ­ಡು­ವಂತೆ ಕಾಣು­ತ್ತಿ­ದ್ದಿತು. ಊರೊ­ಳಗೆ ಕಾಹಿಲೆ ಹರ­ಡಿ­ದಾಗ ಆರು ಮೈಲಿ ಆಚೆ­ಗಿ­ರುವ ವೈದ್ಯರು ಬಂದು ಔಷ­ಧಿ­ಗ­ಳನ್ನು ಕೊಡು­ತ್ತಿ­ದ್ದರು. ರೈತರು ವ್ಯವ­ಸಾ­ಯ­ಕ್ಕಾಗಿ ಊರಿಗೆ ದೂರ­ವಾದ ಬೈಲು­ಗ­ಳಲ್ಲೇ ಹೆಚ್ಚಾಗಿ ಕೆಲಸ ಮಾಡು­ತ್ತಿ­ದ್ದು­ದ­ರಿಂದ ಅನಾ­ರೋ­ಗ್ಯಕ್ಕೆ ಅವ­ಕಾ­ಶವು ಕಮ್ಮಿ­ಯಾ­ಗಿತ್ತು.


**­*­**

ಅರ್ಚಕ ಬಿ. ರಂಗ­ಸ್ವಾಮಿ ಯಾರು? ಈ ವ್ಯಕ್ತಿಯ ಬಗ್ಗೆ ಯಾಕೆ ಯಾರೂ ಬರೆ­ದಿ­ರ­ಲಿಲ್ಲ. 1933ರಲ್ಲಿ ಪ್ರಕ­ಟ­ವಾದ ಈ ಕೃತಿಯ ಬಗ್ಗೆ ಯಾವ ವಿಮ­ರ್ಶೆಯೂ ಯಾಕೆ ಬಂದಿಲ್ಲ. ಇದು ಬೇರೆ ಬೇರೆ ವಿಶ್ವ­ವಿ­ದ್ಯಾ­ಲ­ಯ­ಗಳ ಜಾನ­ಪದ ವಿದ್ಯಾ­ರ್ಥಿ­ಗ­ಳಿಗೆ ಆಕ­ರ­ಗ್ರಂ­ಥ­ವಾ­ಗಿದೆ ಎನ್ನುವ ಮಾತು ಮುನ್ನು­ಡಿ­ಯ­ಲ್ಲಿದೆ. ಆದಕೆ ಕೇವಲ ಆಕ­ರ­ಗ್ರಂ­ಥ­ವಾಗಿ ಉಳಿ­ಯು­ವಂಥ ಕೃತಿಯೇ ಇದು. ನವ­ರ­ತ್ನ­ರಾ್ ಅವರ ಕೆಲವು ನೆನ­ಪು­ಗಳು, ಎಂ. ಆರ್. ಶ್ರೀಯ­ವರ ರಂಗ­ಣ್ಣನ ಕನ­ಸಿನ ದಿನ­ಗಳು, ಬಿಜಿ­ಎಲ್ ಸ್ವಾಮಿ ಬರೆದ ಹಸು­ರು­ಹೊನ್ನು ಕೃತಿ­ಗ­ಳಂತೆ ಇದೂ ಕೂಡ ಯಾಕೆ ಪ್ರಸಿ­­ದ್ಧ­ವಾ­ಗ­ಲಿಲ್ಲ.

ಉತ್ತ­ರ­ಗ­ಳನ್ನು ಮರೆ­ತು­ಬಿ­ಡೋಣ. ಕೆ. ಆರ್. ಪೇಟೆ ತಾಲೂ­ಕಿನ ಬಂಡಿ­ಹೊಳೆ ಎಂಬ ಗ್ರಾಮದ ಕುರಿತು ಅರ್ಚಕ ಬಿ. ರಂಗ­ಸ್ವಾಮಿ ಬರೆ­ದಿ­ರುವ ಈ 200 ಪುಟ­ಗಳ ಪುಸ್ತ­ಕ­ವನ್ನು ತೀನಂಶ್ರೀ, ಗೊರೂರು ರಾಮ­ಸ್ವಾಮಿ ಅಯ್ಯಂ­ಗಾರ್, ಜೀಶಂಪ ಮುಂತಾ­ದ­ವರು ಮೆಚ್ಚಿ­ಕೊಂ­ಡಿ­ದ್ದರು ಅನ್ನು­ವುದು ಅವರು ಬರೆದ ಪತ್ರ­ದಿಂದ ಗೊತ್ತಾ­ಗು­ತ್ತದೆ. ಗೊರೂರು 1933ರಲ್ಲೇ ಇದನ್ನು ಆಕ­ಸ್ಮಿ­ಕ­ವಾಗಿ ಓದಿ ಸಂತೋ­ಷ­ಪ­ಟ್ಟ­ದ್ದನ್ನು ಲೇಖ­ಕ­ರಿಗೆ ಬರೆದು ತಿಳಿ­ಸಿದ್ದೂ ಪುಸ್ತ­ಕದ ಕೊನೆ­ಯ­ಲ್ಲಿದೆ. ಅವೆಲ್ಲ ಶಿಫಾ­ರ­ಸು­ಗ­ಳನ್ನು ಮರೆತು ಕೂಡ ಸುಖ­ವಾಗಿ ಓದಿ­ಸಿ­ಕೊಂಡು ಹೋಗುವ ವಿಚಿತ್ರ ಗುಣ ಈ ಪುಸ್ತ­ಕಕ್ಕೇ ಅದು ಹೇಗೋ ದಕ್ಕಿ­ಬಿ­ಟ್ಟಿದೆ.

**­*­*­*­**

ನಮ್ಮೂ­ರಿನ ವಾರ್ಷಿಕ ಉತ್ಪ­ನ್ನವು ನಾಲ್ಕು ತಿಂಗ­ಳಿಗೆ ಸಾಕಾ­ಗು­ವಂ­ತಿತ್ತು. ಮೂರು ತಿಂಗಳು ಕೂಲಿ­ಯಿಂದ ಜೀವನ. ಇನ್ನು­ಳಿದ ತಿಂಗ­ಳಲ್ಲಿ ಇದ್ದ ಗದ್ದೆ ಹೊಲ ಮಾರಿ ಜೀವನ. ಬೆಳೆಯು ಕಮ್ಮಿ­ಯಾದ ವರ್ಷ ನಮ್ಮೂ­ರಿನ ಪಾಡು ದೇವ­ರಿಗೇ ಪ್ರೀತಿ. ಹರಕು ಬಟ್ಟೆಯು ಸಾರ್ವ­ತ್ರಿ­ಕ­ವಾ­ಗಿತ್ತು. ತಲೆಗೆ ಎಣ್ಣೆ ಕಾಣ­ದ­ವರೂ ಎರಡು ಹೊತ್ತು ಊಟ­ವಿ­ಲ್ಲದೇ ಇರು­ವ­ವರೂ ಅನೇ­ಕ­ರಿ­ದ್ದರು. ಇನ್ನೇನೂ ಉಳಿ­ದಿ­ಲ್ಲ­ವೆಂದು ತಿಳಿದ ಮೇಲೆ ಕಾಫಿ­ತೋ­ಟಕ್ಕೆ ಹೋಗಿ ಸೇರುವ ವಾಡಿಕೆ. ಒಟ್ಟಿನ ಮೇಲೆ ಬಡ­ತ­ನವು ಅಸಾ­ಧ್ಯ­ವಾಗಿ ಸಂತೋ­ಷ­ದಿಂದ ನಗು­ವುದೂ ಮಾಮೂಲು ಮೀರ­ಲಾ­ಗದೇ ವಿನಾ­ನಿ­ಜ­ವಾದ ಸನ್ನಿ­ವೇ­ಶ­ದಿಂದ ಇರ­ಲಿಲ್ಲ. ಕೊಟ್ಟ ಕಾಳು­ಗ­ಳನ್ನು ಕಟ್ಟಿ­ಕೊ­ಳ್ಳಲು ತಮಗೆ ಬಟ್ಟೆ­ಯಿ­ಲ್ಲ­ದು­ದ­ರಿಂದ ಕಷ್ಟ­ಪ­ಡು­ವ­ವ­ರನ್ನೂ ನಾಚಿ­ಕೊ­ಳ್ಳು­ವ­ವ­ರನ್ನೂ ನೋಡಿತು ಈ ಕಣ್ಣು, ಮರು­ಗಿತು ಈ ಮನವು.

**­*­*­**

ಇದು ಮತ್ತೊಂದು ಚಿತ್ರ. ಹಳ್ಳಿಯ ಜೀವ­ನದ ಎರಡೂ ಮುಖ­ಗ­ಳನ್ನೂ ರಂಗ­ಸ್ವಾಮಿ ಕಂಡಂತೆ ತುಂಡ­ರಿಸಿ ನಮ್ಮ ಮುಂದಿ­ಟ್ಟಿ­ದ್ದಾರೆ. ಆದಷ್ಟೂ ತಮ್ಮ ಸಹಾ­ನು­ಭೂತಿ, ಮರುಕ ಮತ್ತು ಭಾವು­ಕ­ತೆ­ಗ­ಳನ್ನು ಬದಿ­ಗಿಟ್ಟು ಬರೆ­ದಿ­ದ್ದಾರೆ. ಇಂಥ ಪ್ರಬಂ­ಧ­ಗ­ಳನ್ನು ಬರೆ­ಯುವ ಹೊತ್ತಿಗೆ ಒಂದೋ ಅಹಂ­ಕಾರ ಇಲ್ಲವೇ ಆತ್ಮಾ­ನು­ಕಂಪ ಲೇಖ­ಕ­ರನ್ನು ಬಾಧಿ­ಸು­ವು­ದಿದೆ. ಇವೆ­ರ­ಡರ ನೆರಳೂ ಬೀಳ­ದಂತೆ ಬರೆ­ಯ­ಹೊ­ರ­ಟಾಗ ಅದು ವರ­ದಿ­ಯಾ­ಗುವ ಅಪಾ­ಯವೂ ಇದೆ. ಆದರೆ ರಂಗ­ಸ್ವಾಮಿ ತಮ್ಮೂ­ರನ್ನೂ ಸಾಧ್ಯ­ವಾ­ದಷ್ಟೂ ನಿರು­ದ್ವಿ­ಗ್ನ­ವಾಗಿ ನಿರು­ಮ್ಮ­ಳ­ವಾಗಿ ನೋಡಿ­ದ್ದಾರೆ. ತಾವೂ ಕೂಡ ಅದೇ ಹಳ್ಳಿಯ ಒಂದು ಭಾಗ ಎಂಬಂತೆ ಅನು­ಭ­ವಿ­ಸಿ­ದ್ದನ್ನು ಬರೆ­ದಿ­ದ್ದಾರೆ.

**­*­*­**

ಹಿಂದ­ಣ­ವರು ತಿಳಿ­ದಿದ್ದ ಆತ್ಮೀಯ ತೃಪ್ತಿ, ಆಧ್ಯಾ­ತ್ಮಿಕ ಶಾಂತಿಯೇ ಮುಖ್ಯ­ಲ­ಕ್ಪ­ಣ­ವಾದ ನಾಗ­ರಿ­ಕ­ತೆಯು ಈಗ ಇರ­ಲಿಲ್ಲ. ಮೊದಲ ಕಾಲ­ದ­ವರು ಒಬ್ಬೊ­ಬ್ಬ­ರಿ­ದ್ದ­ರಲ್ಲ ಅವರು ಮಂಡಿ­ಯಿಂದ ಮೇಲೆ ದಟ್ಟಿ ಸುತ್ತಿ­ದ್ದರು. ಆದ­ರದು ಸ್ವಚ್ಛ­ವಾ­ಗಿತ್ತು. ಅವರ ಮೈಕಟ್ಟು ತೇರಿನ ಹೂರ್ಜಿ ಹಗ್ಗ­ದಂತೆ ಗಟ್ಟಿ­ಯಾ­ಗಿಯೂ ವಿಭ­ಕ್ತ­ವಾ­ಗಿಯೂ ಪುಷ್ಟ­ವಾ­ಗಿಯೂ ಇತ್ತು. ಮುಖ­ದಲ್ಲಿ ಆರ್ಯ­ಜ­ನಾಂಗ ಸೂಚ­ಕ­ವಾದ ಗಂಧ­ವಿ­ಭೂತಿ ನಾಮದ ಚಿನ್ಹೆ­ಗಳು ಅವರ ಅಂತ­ಸ್ತೃ­ಪ್ತಿ­ಯನ್ನು ತುಂಬಿ­ಕೊಂಡ ಮುಖ­ಕುಂ­ಭ­ಕ್ಕೊ­ತ್ತಿದ ಮುದ್ರೆ­ಯಂತೆ ಕಾಣು­ತ್ತಿ­ದ್ದವು. ಒಟ್ಟಿನ ಮೇಲೆ ಸರಳ ಜೀವನ ದೇಹ­ಪ­ಟುತ್ವ, ಶುಚಿತ್ವ ಸಾಮಾ­ನ್ಯ­ವಾಗಿ ಇಹ­ಪ­ರ­ಗಳ ಜ್ಞಾನ ಇವೆಲ್ಲ ಹಳೇ ನಾಗ­ರಿ­ಕ­ತೆಯ ಹಳ್ಳಿ­ಗನ ಲಕ್ಪ­ಣ­ಗ­ಳಾ­ಗಿ­ದ್ದಿತು. ಇತ್ತೀ­ಚೆಗೆ ಘನ­ಗಾ­ಬ­ರಿಯ ನಾಗ­ರಿ­ಕತೆ ಬಂದಿದೆ.
ಅರ್ಧ ಶತ­ಮಾ­ನಕ್ಕೆ ಹಿಂದೆ ಕೂಲಿ ಮಠ­ಗ­ಳಿ­ದ್ದವು. ಆಗ ಜೈಮಿನಿ ಭಾರತ, ಅಮ­ರ­ಕೋಶ, ರಾಮಾ­ಯಣ, ಅಡ್ಡ, ಹಾಗ, ಮುಪ್ಪಾ­ಗದ ಲೆಕ್ಕ­ಗಳು ಇವೆಲ್ಲಾ ಬಳ­ಕೆ­ಯ­ಲ್ಲಿ­ದ್ದವು. ಆಗಿನ ಕಾಲದ ಹಳ­ಬರು ಅನೇ­ಕ­ವಾಗಿ ಬಾಯಲ್ಲಿ ಹೇಳು­ತ್ತಿ­ದ್ದರು. ಇತ್ತೀ­ಚೆಗೆ ನೂತನ ರೀತಿಯ ಪಾಠ­ಶಾಲೆ ಬಂದಿದೆ. ಸಮು­ದ್ರದ ಏರಿ­ಳಿ­ತ­ದಂತೆ ಒಂದು ಸಲ ಅತ್ಯು­ನ್ನತ ಸ್ಥಿತಿಗೆ ಬರು­ತ್ತದೆ.
ಬ್ರಾಹ್ಮ­ಣರ ಮನೆ ನಾಲ್ಕೈದು ಮಾತ್ರ­ವೆಂದು ಹೇಳಿ­ದೆ­ಯಷ್ಟೇ. ಇವರು ಸ್ನಾನ ಜಪ ದೇವ­ರ­ಪೂ­ಜೆ­ಯಲ್ಲೇ ವಿಶೇಷ ಆಸ­ಕ್ತ­ರಾ­ಗಿ­ದ್ದರು. ಶ್ರುತಿ­ಸ್ಮೃ­ತಿ­ಗಳ ವಿಚಾ­ರ­ದಲ್ಲಿ ಸಂದೇಹ ಬಂದರೆ ಮಸೂ­ರಿಗೆ ಹೋಗಿ ಪಂಡಿ­ತ­ರಿಂದ ಸರಿ­ಯಾದ ವಿಷಯ ತಿಳಿ­ದು­ಕೊಂಡು ಬರು­ತ್ತಿ­ದ್ದರು. ಅಕ­ಸ್ಮಾತ್ತು ಯಾರಾ­ದರೂ ತಪ್ಪು ಮಾಡಿ­ದರೆ ಇಬ್ಬರು ಬ್ರಾಹ್ಮ­ಣರು ವಿಧಿ­ಸಿದ ತೀರ್ಮಾ­ನ­ವನ್ನು ಒಪ್ಪಿ­ಕೊಂಡು ತಪ್ಪಿ­ನಿಂದ ಬಿಡು­ಗ­ಡೆ­ಯಾ­ಗ­ಬೇ­ಕಿತ್ತು. ಮದುವೆ ಸಮ­ಯ­ದಲ್ಲಿ ಮತ­ತ್ರಯ, ಸ್ಥಳ, ಪರ­ಸ್ಥಳ, ಕಾವೇರಿ ಸಂಧ್ಯಾ­ಮಂ­ಟಪ ಮುಂತಾ­ದ­ವು­ಗ­ಳಿಗೆ ತಾಂಬೂ­ಲ­ವೆ­ತ್ತು­ತ್ತಿ­ದ್ದರು. ಕಾವೇರಿ ಸಂಧ್ಯಾ­ಮಂ­ಟ­ಪದ ತಾಂಬೂ­ಲ­ವನ್ನು ಯಾಕೆ ಎತ್ತ­ಬೇ­ಕೆಂಬ ಚರ್ಚೆ ಪ್ರತಿ ಮದು­ವೆ­ಯಲ್ಲೂ ಇತ್ತು. ಒಂದು ಸಲ ಪುರೋ­ಹಿ­ತ­ರಿಗೆ ತಾಂಬೂಲ ಕೊಡು­ವು­ದನ್ನು ಮರೆ­ತರು. ` ಓಹೋ ಬ್ರಹ­ಸ್ಪತಿ ಪೀಠಕ್ಕೆ ಅವ­ಮಾ­ನ­ವಾಗಿ ಹೋಯ್ತು' ಎಂದು ಪುರೋ­ಹಿ­ತರು ಆಗಲೇ ಮೂಟೆ ಹೆಗ­ಲಿಗೆ ಹಾಕಿ­ದ್ದರು. ಅವ­ರನ್ನು ಸಮಾ­ಧಾನ ಮಾಡುವ ಹೊತ್ತಿಗೆ ಸಾಕಾಗಿ ಹೋಯ್ತು.

**­*­*­**

ನಾಸ್ಟಾ­ಲ್ಜಿಯ ಯಾರೆಷ್ಟೇ ಕೆಟ್ಟದು ಎಂದರೂ ಅದ­ರಿಂದ ತಪ್ಪಿ­ಸಿ­ಕೊ­ಳ್ಳು­ವುದು ಕಷ್ಟ. ರಂಗ­ಸ್ವಾಮಿ ಪುಸ್ತ­ಕ­ವನ್ನು ಓದುತ್ತಾ ಇದ್ದರೆ ಕಾಲದ ಕಾಲು­ವೆ­ಯಲ್ಲಿ ಹಿಂದಕ್ಕೆ ಪ್ರಯಾಣ ಮಾಡಿ­ದಂತೆ ಭಾಸ­ವಾ­ಗು­ತ್ತದೆ. ಬೆಂಗ­ಳೂ­ರಿನ ಜನ­ಜಂ­ಗುಳಿ, ಟೀವಿ, ಸಿನಿಮಾ, ಮೆಜೆ­ಸ್ಟಿ­ಕ್ಕಿನ ಗದ್ದಲ, ಕ್ರಿಕೆ್ ಮ್ಯಾಚು ಎಲ್ಲ­ವನ್ನೂ ಮರೆ­ತು­ಬಿ­ಡ­ಬೇಕು ಅನ್ನಿ­ಸು­ತ್ತದೆ. ಊರ ತುಂಬ ದನ­ಕ­ರು­ಗಳು, ಗಾಳಿ ಮಳೆ ಬಿಸಿ­ಲಿಗೆ ಜಪ್ಪಯ್ಯ ಎನ್ನದೆ ನಿಂತ ಮಾವಿನ ತೋಪು, ಆಷಾ­ಢದ ಗಾಳಿಗೆ ಮನೆ­ಯೊ­ಳಗೆ ನುಗ್ಗಿ­ಬ­ರುವ ಕಸ­ಕಡ್ಡಿ ಮರಳು ಮಣ್ಣು, ಬೇಸ­ಗೆ­ಯಲ್ಲೂ ತಣ್ಣ­ಗಿ­ರುವ ಹೊಳೆ, ಚಪ್ಪಲಿ ಹಾಕದ ಕಾಲಿಗೆ ಹಿತ­ವಾಗಿ ಒದ­ಗುವ ಹಳ್ಳಿಯ ನೆಲ, ಮುದ್ದೆ, ಅನ್ನ, ಸಾರು, ಚಟ್ನಿಯ ಊಟ. ಜಗ­ಲಿ­ಯಲ್ಲಿ ಗಾಳಿಗೆ ಕಾಯುತ್ತಾ ಮಲಗಿ ಸುಖಿ­ಸುವ ಅಪ­ರಾಹ್ಣ, ಶಾಲೆ­ಯಲ್ಲಿ ಕನ್ನ­ಡ­ದಲ್ಲಿ ಪಾಠ ಓದುತ್ತಾ ಕನ್ನಡ ಹಾಡು ಹೇಳುವ ಮಕ್ಕಳು, ಹಬ್ಬ ಬಂದಾಗ ಹೊಸ ಬಟ್ಟೆ ತೊಟ್ಟು ಕುಣಿ­ಯುವ ಮಕ್ಕಳು, ಹೊಳೆ­ದಂ­ಡೆ­ಯಲ್ಲಿ ಗುಟ್ಟಾಗಿ ಜಿನು­ಗುವ ಪ್ರೀತಿ, ಧೋ ಎಂದು ಸುರಿ­ಯವ ಮಳೆಗೆ ಸೋರುವ ಮನೆ­ಯೊ­ಳಗೆ ಆಡುವ ಆಟ...
ನಾಗ­ರಿ­ಕತೆ ಎಲ್ಲ­ವನ್ನೂ ಮರೆ­ಸು­ತ್ತದೆ. ಹಳ್ಳಿ­ಗ­ಳಲ್ಲೇ ಉಳಿ­ದು­ಬಿ­ಟ್ಟ­ವ­ರಿಗೆ ಇವು ಲಕ್ಪು­ರಿ­ಯಲ್ಲ. ಆದರೆ ನಗ­ರಕ್ಕೆ ಬಂದು ಬೀರು­ಬಾ­ರು­ಗಳ, ಕ್ರೆಡಿಟ್ ಕಾರ್ಡು­ಗಳ, ಏಸಿ ರೂಮು­ಗಳ, ಚಿಕ್ ಬಿರಿ­ಯಾ­ನಿ­ಗಳ ಲೋಕಕ್ಕೆ ಸಂದ­ವ­ರಿಗೆ ಹಳ್ಳಿಯ ಕಷ್ಟ­ಕಾ­ರ್ಪ­ಣ್ಯದ ದಿನ­ಗಳ ನೆನಪೇ ಒಂದು ಲಕ್ಪುರಿ. ಆದರೆ ಅಂಥ ವ್ಯಕ್ತಿ ಕೊಂಚ ಸೃಜ­ನ­ಶೀ­ಲನೂ ಮಾನ­ವೀ­ಯನೂ ಆಗಿ­ದ್ದರೆ ನೆನ­ಪು­ಗ­ಳಲ್ಲೇ ಆತ ಮರು­ಹುಟ್ಟು ಪಡೆ­ಯ­ಬಲ್ಲ ಕೂಡ.
ಹಾಗೆ ಮರು­ಹು­ಟ್ಟಿಗೆ ಕಾರ­ಣ­ವಾ­ಗುವ ಶಕ್ತಿ ಅರ್ಚಕ ರಂಗ­ಸ್ವಾ­ಮಿ­ಯ­ವರ ಕೃತಿ­ಗಿದೆ. ಎಲ್ಲಾ­ದರೂ ಸಿಕ್ಕರೆ ಬಿಡದೆ ಓದಿ.
**­*­**
ಬಂಡೀ­ಹ­ಳ್ಳಿಯ ಮಾತು­ಗಳು ಹೇಗಿ­ರು­ತ್ತವೆ ಅನ್ನು­ವು­ದ­ಕ್ಕೊಂದು ಉದಾ­ಹ­ರಣೆ ತಗೊಳ್ಳಿ;
ವಾದಿ- ಇದೋ ನೀವು ಹತ್ತೂ ಜನ ಸೇರಿ­ದ್ದೀರಿ. ನಾನು ಬಡವೆ, ತಿರ­ಕೊಂಡು ತಿಂಬೋಳು. ನನ್ನ ಕೋಳೀನ ನೆನ್ನೆ ರಾತ್ರಿ ಇವ­ರಿ­ಬ್ಬರೂ ಸೇರಿ ಮುರ್ದವ್ರೆ. ನ್ಯಾಯಾನ ನೀವೇ ಪರಿ­ಹ­ರಿಸಿ.
ಪ್ರತಿ­ವಾ­ದಿ­ಗಳು- ನಾನಲ್ಲ, ದೇವ್ರಾಣೆ, ನನ್ನಾಣೆ, ನಿಮ್ಮಾಣೆ ನಾವಲ್ಲ.
ಮುಖಂ­ಡರು ಕಾಗ­ದ­ವನ್ನು ತರಿಸಿ `ನೋಡೀ ಕೆಟ್ಹೋ­ಗ್ತೀರಿ, ಬ್ಯಾಡೀ, ಬ್ಯಾಡೀ, ಪೊಲೀ­ಸ್ರಿಗೆ ಅರ್ಜಿ ಕೊಡ್ತೀವಿ, ನಿಜಾ ಹೇಳ್ರೀ'
ಪ್ರತಿ­ವಾ­ದಿ­ಗಳು (ಮೆ­ತ್ತಗೆ)- ನಾವು ಬತ್ತಾ ಹರ್ಡಿದ್ದೋ, ಮೇಯೋಕೆ ಕೋಳಿ­ಗಳು ಬಂದೊ, ದೊಣ್ಣೇಲಿ ಹಿಂಗಂದೊ ನೆಗೆದು ಬಿದ್ಹೋದೋ. ಹೊತ್ತಾ­ರೀಕೆ ಕೊಡೋನೆ ಅಂತ ರಾತ್ರಿ ಮನೇಲಿ ಮಡ­ಗಿದ್ದೊ.
ಮುಖಂ­ಡರು ನಾನಲ್ಲ ನಾನಲ್ಲ ಅಂತ ಸುಳ್ಳು ಹೇಳಿ­ದ್ದ­ಕ್ಕಾಗಿ ನಾಲ್ಕಾಣೆ ಜುಲ್ಮಾನೆ ವಿಧಿಸಿ ನಾಲ್ಕಾ­ಣೆ­ಯನ್ನೂ ಕೋಳಿ­ಗ­ಳನ್ನೂ ವಾದಿಗೆ ಕೊಡಿಸಿ ಉಳಿದ ನಾಲ್ಕಾ­ಣೆ­ಯನ್ನು ಊರೊ­ಟ್ಟಿನ ಹಣಕ್ಕೆ ಸೇರಿ­ಸಿ­ದರು.
ಸಭಿ­ಕ­ರ­ಲ್ಲೊಬ್ಬ- ಹೋಗ್ರಯ್ಯ. ಎಂತಾ ನ್ಯಾಯ ಹೇಳಿದ್ರಿ. ಅವ­ರಿ­ಬ್ಬರ ಮೇಲೂ ಕೋಳಿ ಹೊರ್ಸಿ ಊರೆಲ್ಲ ಮೆರ­ವ­ಣಿಗೆ ಮಾಡಿ­ಸೋದು ಬಿಟ್ಟು ಜುಲ್ಮಾ­ನೆ­ಯಂತೆ ಜುಲ್ಮಾನೆ.
ಮುಖಂ­ಡರು- ಓಹೋ.. ಇಲ್ಲಿ ಸೇರಿರೋ ಜನವೇ ಊರೆಲ್ಲಾ ಆಯ್ತು. ಇನ್ನು ತಿರುಗಿ ಬೇರೆ ಮಾನಾ ಹೋಗ­ಬೇಕೋ
.

**­*­*­**

ಇದನ್ನು ಓದಿದ ನಂತರ ವಿವ­ರಿ­ಸು­ವು­ದಕ್ಕೆ ಹೋಗ­ಬಾ­ರದು. ಅದು ಅಧಿ­ಕ­ಪ್ರ­ಸಂ­ಗ­ವಾ­ಗು­ತ್ತದೆ.

Tuesday, April 10, 2007

ಕವಿತೆ ಕಾಮ­ಸೂತ್ರಕವಿತೆ ಹೇಗಿ­ರ­ಬೇಕು?
ಹಾಗೆ ಕೇಳುತ್ತಾ ಕೇಳುತ್ತಾ ರಾಮ­ಚಂದ್ರ ಶರ್ಮ­ರಂಥ ಜಯ­ನ­ಗ­ರದ ಹಿರಿಯ ಕವಿ­ಗಳು ಒಂದಷ್ಟು ಉದಾ­ಹ­ರ­ಣೆ­ಗ­ಳನ್ನು ಕ್ರಿಸ್ತ­ಪೂ­ರ್ವ­ದಿಂ­ದಲೇ ಕೊಡುತ್ತಾ ಬಂದಿ­ದ್ದಾರೆ. ಅವರೇ ಹೇಳಿದ ಮಾನ­ದಂ­ಡ­ದಿಂದ ಅಳೆ­ದರೆ ಅವರ ಕವಿ­ತೆ­ಗಳೇ ದಡ­ಸೇ­ರಲು ನಿರಾ­ಕ­ರಿ­ಸು­ತ್ತವೆ. ಕವಿತೆ ಹೇಗಿ­ರ­ಬೇಕು ಅಂತ ಹೇಳು­ವುದು ಸುಲಭ, ಬರೆ­ಯು­ವುದು ಕಷ್ಟ.
ಆದರೆ ಕವಿತೆ ಹೀಗಿ­ರ­ಬೇಕು ಅನ್ನಿ­ಸು­ವಂಥ ಕವಿ­ತೆ­ಗಳು ಒಮ್ಮೊಮ್ಮೆ ಕಣ್ಣಿಗೆ ಬೀಳು­ತ್ತವೆ. ಯಾವತ್ತೋ ಓದಿದ ಕವಿ­ತೆ­ಗಳೂ ಮತ್ತೆ ಮತ್ತೆ ಕಾಡು­ತ್ತವೆ. ಒಂದು ನಿರ್ದಿಷ್ಟ ಘಟ­ನೆಯ ನೆನ­ಪಾ­ದಾಗ ಆ ಕವಿ­ತೆಯೂ ನೆನ­ಪಾಗಿ, ಆ ಘಟ­ನೆ­ಯನ್ನು ವರ್ಣಿ­ಸಲು ಬೇರೆ ಪದ­ಗಳೇ ಸಿಗ­ದಂತೆ ಮಾಡು­ತ್ತವೆ.
ಅರಿವೆ ಇರ­ಲಿಲ್ಲ; ಪರಿವೆ ಇರ­ಲಿಲ್ಲ ಅನ್ನು­ವುದು ಅಂಥ ಒಂದು ಸಾಲು. ಇಲ್ಲಿ ಅರಿವೆ ಅನ್ನುವ ಪದವೇ ಅರಿವು ಮತ್ತು ಅರಿವೆ ಎರಡೂ ಆಗಿ­ಬಿ­ಡ­ಬ­ಹು­ದಾ­ಗಿತ್ತು. ಹಾಗಾ­ದಾಗ ಪರಿವೆ ಇರ­ಲಿಲ್ಲ ಅನ್ನುವ ಪದ­ವನ್ನು ಬಳ­ಸುವ ಅಗ­ತ್ಯವೇ ಇರ­ಲಿಲ್ಲ. ಹಾಗಿ­ದ್ದರೂ ಗಂಗಾ­ಧರ ಚಿತ್ತಾ­ಲರು ಅರಿವೆ, ಪರಿವೆ ಎರ­ಡನ್ನೂ ಬಳ­ಸು­ತ್ತಾರೆ. ಎರ­ಡರ ಅರ್ಥವೂ ಒಂದೆ ಅನ್ನು­ವುದು ಗೊತ್ತಿದ್ದೂ ಅವರು ಅರಿವೆ ಮತ್ತು ಪರಿ­ವೆ­ಯನ್ನು ಬಳ­ಸಿ­ದ್ದೇಕೆ ಎಂದು ಅಚ್ಚ­ರಿ­ಗೊ­ಳ್ಳು­ತ್ತಿ­ರು­ವಾ­ಗಲೇ ಮುಂದಿನ ಸಾಲು­ಗಳು ಬೆಚ್ಚಿ­ಬೀ­ಳಿ­ಸು­ತ್ತವೆ; ಅರೆ­ನಾಚಿ ಮರೆ­ಮಾಚಿ ಸರಿ­ವು­ದಿ­ರ­ಲಿಲ್ಲ.
ಹಾಗಿ­ದ್ದರೆ ಅದೇನು ಅಂಥ ಆಟ? ಸಹಜ ಕುತೂ­ಹ­ಲ­ದಿಂ­ದಲೇ ಮನಸ್ಸು ಕೇಳು­ತ್ತದೆ. ಕವ­ನದ ಶೀರ್ಷಿಕೆ ಓದಿ ಮುಂದು­ವ­ರಿ­ದರೆ ಆ ಕುತೂ­ಹ­ಲವೂ ಇರ­ಕೂ­ಡದು. ಆದರೂ ಮನಸ್ಸು ಮುಂದಿನ ಮಾತಿ­ಕಾಗಿ ತಡ­ಕಾ­ಡು­ತ್ತದೆ;


ಜೀವ ಝಲ್ಲೆನೆ ಪೂರ್ಣ ನಗ್ನ­ರಾಗಿ
ಒಬ್ಬ­ರ­ಲ್ಲೊ­ಬ್ಬರು ನಿಮ­ಗ್ನ­ರಾಗಿ
ಕೊಂಬೆ­ಕೊಂ­ಬೆಗೆ ತೂಗಿ ಬೀಗಿ ಬಯ­ಕೆಯ ಹಣ್ಣು
ಹೊಡೆಯೆ ಕಣ್ಣು
ತಡೆ­ಯ­ಲಾ­ರದೆ ಬಂದೆ­ವೆ­ದು­ರು­ಬ­ದುರು
ಮೈಯೆಲ್ಲ ನಡುಕ, ತುಟಿ­ಯೆಲ್ಲ ಅದುರು.
ಅಂದು ಬೆತ್ತಲೆ ರಾತ್ರಿ.


ಮತ್ತೆ ಚಿತ್ತಾ­ಲರು ಆರಂ­ಭದ ಸಾಲಿಗೆ ಬಂದು­ಬಿ­ಡು­ತ್ತಾರೆ. ಅಂದು ಬೆತ್ತಲೆ ರಾತ್ರಿ ಅನ್ನುವ ಎರಡು ಪದವೇ ಉಳಿದ ಕ್ರಿಯೆ­ಗ­ಳ­ನ್ನೆಲ್ಲ ಹೇಳು­ತ್ತದೆ. ಕವಿಗೆ ತಾನು ಬಳ­ಸುವ ಪದ­ಗಳ ಬಗ್ಗೆ ಅನು­ಮಾನ ಇದ್ದಾಗ, ಆತ ಮುಚ್ಚಿಟ್ಟು ಹೇಳು­ತ್ತಾನೆ; ಕೆ. ಎಸ್. ನರ­ಸಿಂ­ಹ­ಸ್ವಾ­ಮಿ­ಯ­ವ­ರಂತೆ. ತನ್ನ ಪದ­ಗಳ ಲೋಲು­ಪ­ತೆಯ ಬಗ್ಗೆ ಮೋಹ­ವಿ­ದ್ದಾಗ ಬಿಚ್ಚಿ ಹೇಳು­ತ್ತಾನೆ; ಆಲ­ನ­ಹ­ಳ್ಳಿ­ಯಂತೆ. ಆದರೆ ತಾನು ಬಳ­ಸುವ ಪದ­ಗಳ ಮೇಲೆ ನಂಬಿ­ಕೆ­ಯಿ­ದ್ದಾಗ ಚಿತ್ತಾ­ಲ­ರಂತೆ ಹೇಳು­ತ್ತಾನೆ. ಯಾವುದೇ ಕ್ಪಣ­ದಲ್ಲಿ ಬೇಕಾ­ದರೂ ಅವೇ ಪದ­ಗಳು ತಮ್ಮ ಅರ್ಥದ ಲಕ್ಪ್ಮ­ಣ­ರೇ­ಖೆ­ಯನ್ನು ದಾಟಿ­ಬಿ­ಡ­ಬ­ಹು­ದಾ­ಗಿತ್ತು. ಬೇಕಿ­ದ್ದರೆ;


ತುಟಿಗೆ ತುಟಿ ಮುಟ್ಟಿ­ಸಿತು ಎಂಥ ಮಾತು
ಕಂಠ­ನಾ­ಳ­ದ­ಲೆಲ್ಲ ನಾಗ­ಸಂ­ಪ­ಗೆ­ಯಂತೆ ಉಸಿರು ಹೂತು
ಬಾಯ್ತುಂಬ ಜೇನು, ಕೈತುಂಬ ಮೊಲೆಹೂ
ಮಗ್ಗಲು ತಿರು­ವಿ­ದ­ಲ್ಲೆಲ್ಲ ಸುಖದ ಉಲುಹು.


ಇಲ್ಲಿ ಮನಸ್ಸು ಜಾಣ­ತ­ನ­ದಿಂದ ಮೊಲೆಹೂ ಅನ್ನು­ವು­ದನ್ನು ಸ್ವಲ್ಪ ಒತ್ತಿ, ಮೊಲ್ಲೆ ಹೂ ಎಂದು­ಕೊಂಡು ಮುಂದೆ ಸಾಗು­ತ್ತದೆ. ಹಾಗೆ ಒತ್ತುವ ಕ್ರಿಯೆ ಕೂಡ ಉದ್ದೇ­ಶ­ಪೂ­ರ್ವ­ಕ­ವಾ­ದದ್ದೇ. ಯಾಕೆಂ­ದರೆ ಕವಿ­ತೆಯ ಹೆಸರೇ ಕವಿ­ತೆಯ ಲಯ­ವನ್ನೂ ಏರಿ­ಳಿ­ತ­ವನ್ನೂ ಏದು­ಸಿ­ರನ್ನೂ ನಿರ್ಧ­ರಿ­ಸಿ­ಬಿ­ಟ್ಟಿದೆ; ಕಾಮ­ಸೂತ್ರ.


**­**


ಗಂಗಾ­ಧರ ಚಿತ್ತಾ­ಲರು ಎಂಥ ಕವಿ.
ಅವರ ಪ್ರತಿ­ಯೊಂದು ಕವಿತೆ ಓದಿ­ದಾ­ಗಲೂ ಜೀವ ಮಿಡು­ಕು­ತ್ತದೆ. ಅಡಿ­ಗರು ಕೊಂಚ ಅಬ್ಬ­ರಿಸಿ ಹೇಳಿ­ದ್ದನ್ನು ಕೂಡ ಚಿತ್ತಾ­ಲರು ತಣ್ಣಗೆ ಹೇಳಿ ಸುಮ್ಮ­ನಾ­ಗು­ತ್ತಾರೆ.


ಕೆಳ­ಗಿಲ್ಲಿ
ಮಣ್ಣಲ್ಲಿ
ಬರುವ ಹೋಗುವ ಬರುವ
ಜೀವ­ಜಾ­ತದ ಗೌಜು.


ಬರುವ ಹೋಗುವ ಬರುವ ಅಂತ ಬಳ­ಸಿ­ದ್ದಾ­ರಲ್ಲ ಚಿತ್ತಾ­ಲರು. ಬರುವ ಹೋಗುವ ಸರಿ, ಮತ್ತೆ ಬರುವ ಎಂದೇಕೆ ಅಂದರು. ಮರಳಿ ಬರು­ವು­ದ­ರಲ್ಲಿ ಅವ­ರಿಗೆ ನಂಬಿಕೆ ಇತ್ತಾ? ಇಂಥ ಪ್ರಶ್ನೆ­ಗ­ಳ­ನ್ನೆಲ್ಲ ಚಿತ್ತಾ­ಲರ ಕಾವ್ಯ ಎತ್ತು­ತ್ತದೆ. ಅದ­ನ್ನೆಲ್ಲ ಒತ್ತ­ಟ್ಟಿ­ಗಿಟ್ಟು ಮೂರು ಭಾಗ­ಗ­ಳಲ್ಲಿ ಸಾಗುವ ಕಾಮ­ಸೂ­ತ್ರ­ವನ್ನೇ ನೋಡೋಣ;
ಅದು ಹುಡು­ಗನ ಕಾಮೋ­ನ್ಮುಖ ಸ್ಥಿತಿ­ಯನ್ನು ವರ್ಣಿ­ಸು­ತ್ತದೆ. ಕಾಮಕ್ಕೆ ಬೆರ­ಗಾದ ಹುಡುಗ ಅಚ್ಚ­ರಿ­ಯನ್ನು ಚಿತ್ತಾ­ಲರು ಒಂದೇ ಪದ­ದಲ್ಲಿ ವರ್ಣಿ­ಸು­ತ್ತಾರೆ; ಯೋನಿ­ಚ­ಕಿತಾ!


ಆಕೆಗೋ ನೆಲ ಕಾಣ, ನಿನಗೆ ದೇಶವೆ ಕಾಣ
ಲೋಹ­ಚುಂ­ಬಿ­ಸಿದೆ ಗುರಿ, ಹೆದೆ­ಗೇ­ರು­ತಿದೆ ಪ್ರಾಣ


ಅಲ್ಲಿಂದ ಕವಿ­ತೆಯ ಎರ­ಡ­ನೆಯ ಭಾಗ ಶುರು­ವಾ­ಗು­ತ್ತದೆ. ಅದು ಅವಳ ಜಗತ್ತು. ಸುಖ­ಸು­ಖ­ಸು­ಖದೀ ಮಿಂಚು. ಸಂಚ­ರಿ­ಸಲಿ ಒಡ­ಲಿನ ಒಳ ಒಳ ಅಂಚು ಅಂತ ಕಾಯು­ತ್ತಾಳೆ ಹುಡುಗಿ. ಇಬ್ಬರೂ ಕಾದು ನಿಂತ ಕ್ಪಣವೇ ಹಾಗಾ­ಗು­ತ್ತದೆ;


ಇದು ಬಯಕೆ ಇದು ಹಸಿವೆ ಇದುವೆ ದಾಹಾ
ಒಂದೆ ಉಸಿ­ರಿ­ನ­ಲಿತ್ತು ಅಯ್ಯೋ ಅಹಾ
ಹೊಲ­ದುದ್ದ ನಡೆ­ದಿತ್ತು ನೇಗಿನ ಮೊನೆ
ಬಸಿದು ಹೊರ­ಚೆ­ಲ್ಲಿತ್ತು ಜೀವದ ಸೊನೆ

ಅದಕ್ಕೂ ಮುಂಚೆ ನಡೆ­ದದ್ದೇ ಬೇರೆ. ಬೆದೆಯ ಕಾವಿಗೆ ಸಿಕ್ಕು ಮೆತ್ತೆ ಮೆತ್ತೆ, ಬಿಗಿ­ದಪ್ಪಿ ಮುತ್ತಿಟ್ಟು ಮತ್ತೆ ಮತ್ತೆ, ತುಟಿ ತೆರೆದು ಕಟಿ ತೆರೆದು ಎಲ್ಲ ತೆರೆದು, ಒಡಲ ಹೂವ­ನ್ನ­ರಸಿ ಹೊಕ್ಕು ಬೆರೆದು- ಎಲ್ಲವೂ ಮುಗಿ­ದಿದೆ.
ತುಂಬ ಅಶ್ಲೀಲ ಅನ್ನಿ­ಸ­ಬ­ಹು­ದಾದ ರತಿ­ಯನ್ನೂ ಚಿತ್ತಾ­ಲರು ಮಜು­ಗ­ರ­ಗೊ­ಳ್ಳ­ದಂತೆ ಬರೆ­ಯು­ತ್ತಾರೆ. ಇನ್ನೆ­ಲ್ಲಿಗೋ ಸಾಗು­ತ್ತಾ­ರಲ್ಲ ಅನ್ನಿ­ಸುವ ಹೊತ್ತಿಗೆ ಮತ್ತೆ ದಾರಿಗೆ ಬರು­ತ್ತಾರೆ;


ಬೇಕಾದ್ದ ತಿನು ಎಂದೆ
ನನ್ನ ತೋಳು­ಗ­ಳಲ್ಲಿ ಇಡಿಯ ನೀನು
ಬೇಕಾದ್ದ ತಗೋ ಎಂದೆ
ನಿನ್ನ ತೋಳು­ಗ­ಳಲ್ಲಿ ಇಡಿಯ ನಾನು


ಅಷ್ಟಕ್ಕೂ ಅಲ್ಲಿ ತಿನ್ನು­ವು­ದಕ್ಕೋ ತಗೊ­ಳ್ಳು­ವು­ದಕ್ಕೋ ಇದ್ದ­ದ್ದಾ­ದರೂ ಏನು? ಅರಿವೆ ಇರ­ಲಿಲ್ಲ, ಪರಿವೆ ಇರ­ಲಿಲ್ಲ ಅಂತ ಕವಿ ಮೊದಲೇ ಹೇಳಿ­ದ್ದಾ­ನಲ್ಲ?
ಅದು ಜ್ಞಾನೋ­ದ­ಯದ ಘಳಿಗೆ. ಚಿತ್ತಾ­ಲರು ಅದನ್ನು ಅದ­ಮ್ಯ­ವಾಗಿ ಅನು­ಭ­ವಿ­ಸಿ­ದ­ವರ ತೀವ್ರ­ತೆ­ಯಲ್ಲಿ ಬರೆ­ಯು­ತ್ತಾರೆ;


ಕೊಟ್ಟು­ದೆ­ನಿತು ನಾವು ಕೊಂಡು­ದೆ­ನಿತು
ಉಣ್ಣಿ­ಸಿ­ದು­ದೆ­ನಿತು ಉಂಡು­ದೆ­ನಿತು
ಕಣ್ಮು­ಚ್ಚಿಯೂ ಕೂಡ ಕಂಡು­ದೆ­ನಿತು
ಮಾತಿ­ಲ್ಲ­ದೆಯು ಕೂಡ ಅಂದು­ದೆ­ನಿತು
ಅಂದು ಬೆತ್ತಲೆ ರಾತ್ರಿ.

**­**
ಕಾಮ­ಸೂತ್ರ ಕೊನೆ­ಯಾ­ಗು­ವುದು `ನಾ­ವಿಂದು ಮನು­ಕು­ಲದ ತಂದೆ­ತಾಯಿ' ಎಂಬ ದೈವಿಕ ಸಾಲಿ­ನಿಂದ. ಈ ಸಾಲಿಗೆ ಬರು­ತ್ತಲೇ ಕವಿಯೇ ಹೇಳಿ­ದಂತೆ ಆ ಒಂದು ಗಳಿ­ಗೆ­ಯಲ್ಲಿ ಏನು ಗೈದರು ಮಾಫಿ; ಕಾಡಿ­ದರು ಬೇಡಿ­ದರು ಹಿಡಿ­ಹಿ­ಡಿದು ಆಡಿ­ದರು ಮಾಫಿ. ಯಾವ ಗುಟ್ಟನು ಕೆದ­ಕಿ­ದರು ಮಾಫಿ.
ಈ ಕವಿತೆ ಮತ್ತೆ ಮತ್ತೆ ಮನ­ಸ್ಸಲ್ಲಿ ಉಳಿ­ಯು­ವುದು ಸ್ವರ­ವಾಗಿ. ನಾದ­ವಾಗಿ. ಪದ­ಗ­ಳಲ್ಲಿ ಉಳ­ಕೊ­ಳ್ಳುವ ಕವಿ­ತೆಗೆ ಆಯಸ್ಸು ಕಡಿಮೆ. ರಾಗ­ದಲ್ಲಿ ಉಳ­ಕೊ­ಳ್ಳುವ ಕವಿ­ತೆಗೆ ತಲು­ಪುವ ಶಕ್ತಿ ಕ್ಪೀಣ. ಆದರೆ ಲಯ­ದಲ್ಲಿ ಉಳಿ­ದು­ಕೊ­ಳ್ಳುವ ಕವಿ­ತೆ­ಯಷ್ಟೇ ಒಳ­ಗಿ­ಳಿ­ಯು­ತ್ತದೆ. ನಾಕು­ತಂ­ತಿಯ ಹಾಗೆ. ನಾಕೇ ನಾಕು ತಂತಿಯ ಹಾಗೆ.
ಚಿತ್ತಾ­ಲ­ರನ್ನು ಪೂರ್ತಿ­ಯಾಗಿ ಓದೋಣ; ಅವರ ನಾದ ನಮ್ಮಲ್ಲೂ ತುಂಬಿ­ಕೊ­ಳ್ಳಲಿ.

Monday, April 9, 2007

ಕಾಕ­ನ­ಕೋಟೆಯ ಕಾಡೊಳಗೆ ಭಾವಸಂಚಾರ
ಬೆಟ್ಟದಾ ತುದಿ­ಯಲ್ಲಿ ಕಾಡು­ಗಳ ಎದೆ­ಯಲ್ಲಿ
ಕಪಿ­ನೀಯ ನದಿ­ಯೆಲ್ಲಿ ಉಗು­ತಿ­ರು­ವು­ದಲ್ಲಿ;
ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ
ಪಡೆ­ಗೂ­ಡು­ವುದು ಗಾಡ ಒಟ್ಟೊಟ್ಟಿ ಅಲ್ಲಿ;
ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿ­ಬ­ಳಗ
ಬೆಳು­ತಿಂ­ಗ­ಳಿನ ತಳಗ ನಡೆ­ಯು­ವುದು ಅಲ್ಲಿ;
ಯಾವಲ್ಲಿ ಸಾರಂಗ ಕೆಚ್ಚು­ಕೋ­ಡಿನ ಸಿಂಗ
ನೋಡುತ ನಿಂತ್ಹಂಗ ನಿಲ್ಲು­ವುದು ಅಲ್ಲಿ;
ಎಲ್ಲಿ ಎರ­ಳೆಯ ಹಿಂಡು ಹುಲಿಯ ಕಣ್ಣನು ಕಂಡು
ಹೆದರಿ ಹಾರುವ ದಂಡು ಚೆಲ್ಲು­ವುದು ಅಲ್ಲಿ;
ಗಿಳಿ­ಗೊ­ರವ ಕೋಗೀಲೆ ಹಾರು ಹಕ್ಕಿಯ ಮಾಲೆ
ಹಾಡು­ತಿದೆ ದನಿ­ಮೇಲೆ ದನಿ­ಯೇರಿ ಎಲ್ಲಿ;
ಎಲ್ಲಿ ಏಕಾ­ಏಕಿ ಗಂಡು ನಮಿ­ಲಿಯ ಕೇಕಿ
ಬೋರ­ಗ­ಲ್ಲಿಗೆ ತಾಕಿ ಗೆಲ್ಲು­ವುದು ಅಲ್ಲಿ;
ಹೆಜ್ಜೇನು ಯಾವಲ್ಲಿ ಇದ್ದಲ್ಲೇ ಹೂವಲ್ಲಿ
ಕದ್ದೊಂದು ಮೇವಲ್ಲಿ ತಣಿ­ದಿ­ರು­ವು­ದಲ್ಲಿ;
ದಿನ ದಿನಾ ಸಂಪಂಗಿ ಇರು­ವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ ಅರ­ಳು­ವುದು ಎಲ್ಲಿ;
ಯಾವಲ್ಲಿ ಜಾಲಾರಿ ಎದೆಯ ಕಂಪನು ಕಾರಿ
ತನ್ನ ತಾಣವ ಸಾರಿ ಬಾ ಎಂಬು­ದಲ್ಲಿ;
ಯಾವಲ್ಲಿ ಹೆಬ್ಬ­ಲಸು ಕೈಗೆ ಕಾಲಿಗೆ ಗೊಲಸು
ಅಂತ ಹಣ್ಣನು ಹುಲುಸು ಹೊತ್ತಿ­ರು­ವು­ದಲ್ಲಿ
ಎಲ್ಲಿ ಕರಿ ಸಿರಿ­ಗಂಧ ಮರ ಬೆಳೆದು ತಾ ಮುಂದ
ಮಾದೇ­ಶ್ವ­ರಗೆ ಚೆಂದ ಮೆಚ್ಚು­ವುದು ಅಲ್ಲಿ..ಈ ಹಾಡು ಬರೆ­ದದ್ದು ಮಾಸ್ತಿ ವೆಂಕ­ಟೇಶ ಅಯ್ಯಂ­ಗಾ­ರರು ಹೌದಾ? ಹಾಗೆ ಬೆರ­ಗಾ­ಗು­ವಂಥ ವೈವಿಧ್ಯ ಇದ­ರ­ಲ್ಲಿದೆ. ಮಾಸ್ತಿ­ಯ­ವರ ನವ­ರಾ­ತ್ರಿಯ ಪದ್ಯ­ಗ­ಳನ್ನೂ ಇತರ ಗೀತೆ­ಗ­ಳನ್ನೂ ಓದಿ­ದ­ವ­ರಿಗೆ ಇದನ್ನೂ ಅವರೇ ಬರೆ­ದಿ­ದ್ದಾರೆ ಎಂದರೆ ನಂಬಲು ಕಷ್ಟ­ವಾ­ಗು­ತ್ತದೆ. ಮಾಸ್ತಿ­ಯ­ವರ ಕತೆ­ಗ­ಳನ್ನು ಓದಿ­ದ­ವ­ರಿಗೆ ಪರಿ­ಚಿ­ತ­ವಾ­ಗಿ­ರುವ ಸರ­ಳತೆ ಮತ್ತು ಸ್ಪಷ್ಟತೆ ಅವರ ಈ ನಾಟ­ಕದ ಗೀತೆ­ಯಲ್ಲೂ ಕಾಣಿ­ಸು­ತ್ತದೆ.
ಇದು `ಕಾ­ಕ­ನ­ಕೋಟೆ' ನಾಟ­ಕಕ್ಕೆ ಮಾಸ್ತಿ­ಯ­ವರು ಬರೆದ ಗೀತೆ. ನಾಟ­ಕದ ಆರಂ­ಭ­ದಲ್ಲೇ ಬರು­ತ್ತದೆ. ಇದಕ್ಕೆ ಅಶ್ವ್‌ಥ ಅಷ್ಟೇ ನಾಜೂ­ಕಾಗಿ ಸಂಗೀತ ಸಂಯೋ­ಜಿ­ಸಿ­ದ್ದಾರೆ. ಸಂಗೀ­ತದ ಅಗ­ತ್ಯವೇ ಇಲ್ಲ ಎನ್ನಿ­ಸು­ವಂಥ ಲಯ­ಬ­ದ್ಧ­ತೆಯೂ ಈ ಗೀತೆ­ಯ­ಲ್ಲಿದೆ. ಎಲ್ಲಿ ಏಕಾ­ಏಕಿ ಗಂಡು ನಮಿ­ಲಿಯ ಕೇಕಿ ಬೋರ­ಗ­ಲ್ಲಿಗೆ ತಾಕಿ ಗೆಲ್ಲು­ವುದು ಅಲ್ಲಿ- ಎಂಬ ಸಾಲು­ಗ­ಳನ್ನು ಕಾಡಿನ ಬಗ್ಗೆ ವಿಶೇ­ಷ­ವಾದ ಮತ್ತು ಗಾಢ­ವಾದ ತಿಳು­ವ­ಳಿಕೆ ಇರದ ಹೊರತು ಬರೆ­ಯು­ವುದು ಸುಲ­ಭ­ವಲ್ಲ. ದಿನ ದಿನಾ ಸಂಪಂಗಿ ಇರು­ವಂತಿ ಮಲ್ಲಂಗಿ ಎನ್ನುವ ಸಾಲಿನ ಜೊತೆಗೇ ಅಚ್ಚ­ರಿ­ಗೊ­ಳಿ­ಸು­ವಂಥ ಮೊಲ್ಲೆ ಅದರ ತಂಗಿ... ಎಂಬ ಸಾಲಿದೆ. ಒಂದು ಹೆಸ­ರಿ­ಲ್ಲದ ಮೊಲ್ಲೆ­ಯಂಥ ಹೂವನ್ನು ಅದರ ತಂಗಿ ಎಂದು ಕರೆ­ಯು­ವುದು ಅವ­ರಿ­ಗಷ್ಟೇ ಸಾಧ್ಯ­ವಿತ್ತಾ? ಅದಾದ ತುಂಬ ವರು­ಷ­ಗಳ ನಂತರ ಕೆ ಎಸ್್ ನರ­ಸಿಂ­ಹ­ಸ್ವಾಮಿ ` ತಾರೆ­ಗಳ ಜರ­ತಾರಿ ಅಂಗಿ ತೊಡಿ­ಸು­ವ­ರಂತೆ ಚಂದಿ­ರನ ತಂಗಿ­ಯರು ನಿನ್ನ ಕರೆದು..' ಎಂದು ಬಳ­ಸಿ­ದಾಗ ಥಟ್ಟನೆ ನೆನ­ಪಾ­ದದ್ದು ಮಾಸ್ತಿ­ಯ­ವರ `ಮೊಲ್ಲೆ... ಅದರ ತಂಗಿ' ಪ್ರಯೋಗ.ನಮ್ಮಲ್ಲಿ ಅನೇ­ಕರು ತುಂಬ ಕಡೆ­ಗ­ಣಿ­ಸಿದ ಲೇಖ­ಕರ ಪೈಕಿ ಪುತಿ­ನ­ರಂತೆ ಮಾಸ್ತಿ ಕೂಡ ಒಬ್ಬರು. ಮಾಸ್ತಿ­ಯ­ವರು ಕನ್ನ­ಡದ ಆಸ್ತಿ ಎನ್ನು­ವುದು ಈಗ ಕೇವಲ ಸ್ಲೋಗ­ನ್ನಷ್ಟೇ ಆಗಿ ಉಳಿ­ದು­ಬಿ­ಟ್ಟಿದೆ. ಟಾಲ್ ಸ್ಟಾಯ್ ಕತೆ­ಗ­ಳನ್ನು ಮೀರಿ­ಸ­ಬಲ್ಲ ಒಳ­ನೋಟ ಮತ್ತು ಬದು­ಕಿನ ಗಾಢ ಅರಿವು ಮಾಸ್ತಿ ಕತೆ­ಗ­ಳಲ್ಲಿ ಕಾಣಿ­ಸು­ತ್ತದೆ. ಅವರು ಕತೆ ಬರೆದು ಎಪ್ಪ­ತ್ತೆಂ­ಬತ್ತು ವರು­ಷ­ಗ­ಳಾದ ನಂತರ ದೃಶ್ಯ­ಮಾ­ಧ್ಯ­ಮ­ವಾದ ಸಿನಿಮಾ ಅವರ ಶೈಲಿ­ಯನ್ನು ಕಂಡು­ಕೊ­ಳ್ಳಲು ತುಡಿ­ಯು­ತ್ತಿದೆ. ಮಾಸ್ತಿ­ಯ­ವ­ರಷ್ಟು ನಿರು­ಮ್ಮ­ಳ­ವಾಗಿ, ತಣ್ಣ­ನೆಯ ದನಿ­ಯಲ್ಲಿ ಮತ್ತು ಅಬ್ಬ­ರ­ವಿ­ಲ್ಲದ ಧಾಟಿ­ಯಲ್ಲಿ ಒಂದು ಕಥಾ­ನ­ಕ­ವನ್ನು ಅರು­ಹು­ವುದು ಸಾಧ್ಯ­ವಾ­ದರೆ ಎಷ್ಟು ಚೆನ್ನ ಎಂದು ಈಗ ಎಲ್ಲ­ರಿಗೂ ಅನ್ನಿ­ಸ­ತೊ­ಡ­ಗಿದೆ.ಮಾಸ್ತಿ­ಯ­ವರ ಕತೆ­ಯಷ್ಟೇ ಬೆರ­ಗು­ಗೊ­ಳಿ­ಸುವ ಕೆಲವು ನಾಟ­ಕ­ಗ­ಳಿವೆ. ಅವರು ಬರೆದ ಆರೆಂಟು ನಾಟ­ಕ­ಗಳ ಪೈಕಿ ಇವ­ತ್ತಿನ ಸಂದ­ರ್ಭಕ್ಕೆ ತುಂಬ ಆಪ್ತ ಅನ್ನಿ­ಸು­ವುದು ಕಾಕ­ನ­ಕೋಟೆ. ಇವತ್ತು ನಾವು ಹಿಡಿ­ಯ­ಲೆ­ತ್ನಿ­ಸು­ತ್ತಿ­ರುವ ಜಾಗ­ತೀ­ಕ­ರ­ಣದ ವಿರು­ದ್ಧದ ರೂಪ­ಕಕ್ಕೆ ಕಾಕ­ನ­ಕೋ­ಟೆ­ಗಿಂತ ಪ್ರಬ­ಲ­ವಾದ ಮತ್ತೊಂದು ದೃಷ್ಟಾಂತ ಸಿಗ­ಲಾ­ರದು. ನಮ್ಮ ರಾಜ­ಕೀಯ ಸ್ಥಿತಿ­ಯನ್ನು ತುಘ­ಲಕಇವ­ತ್ತಿಗೂ ಹೇಗೆ ಪ್ರತಿ­ನಿ­ಧಿ­ಸು­ತ್ತ­ದೆಯೋ ಅಷ್ಟೇ ಸಮ­ರ್ಥ­ವಾಗಿ ಕಾಕ­ನ­ಕೋಟೆ ನಮ್ಮ ಗ್ರಸ್ತ ಆರ್ಥಿಕ ಸ್ಥಿತಿ­ಯನ್ನು ಹಿಡಿ­ದಿ­ಡು­ತ್ತದೆ.
ಹಾಗೆ ನೋಡಿ­ದರೆ ನಾವು ಸಂಸ­ರನ್ನೂ ಶ್ರೀರಂ­ಗ­ರನ್ನೂ ನಾಟ­ಕ­ಕಾ­ರ­ರೆಂದು ಒಪ್ಪಿ­ಕೊಂ­ಡಷ್ಟು ಪುತಿ­ನ­ರನ್ನೂ ಮಾಸ್ತಿ­ಯ­ವ­ರನ್ನೂ ಒಪ್ಪಿ­ಕೊ­ಳ್ಳು­ವು­ದಿಲ್ಲ. ಪುತಿನ ಕಾವ್ಯ­ದಲ್ಲಿ ಮಾಸ್ತಿ ಸಣ್ಣ­ಕ­ತೆ­ಯಲ್ಲಿ ಅಗಾ­ಧ­ವಾಗಿ ಸಾಧಿ­ಸಿ­ದ್ದ­ರಿಂದ ಅವರ ಇತರ ಬರ­ಹ­ಗಳು ಮೂಲೆ­ಗುಂ­ಪಾ­ಗಿ­ರುವ ಸಾಧ್ಯ­ತೆಯೂ ಇದೆ. ಆದರೆ ಬಿವಿ ಕಾರಂ­ತರು ಗೋಕುಲ ನಿರ್ಗ­ಮ­ನ­ವನ್ನು ಆಡಿ­ಸದೇ ಹೋಗಿ­ದ್ದರೆ ಅದರ ಅಂತಃ­ಶಕ್ತಿ ಇವ­ತ್ತಿಗೂ ಒಡೆ­ದು­ಕೊ­ಳ್ಳದೇ ಹೋಗು­ತ್ತಿತ್ತೋ ಏನೋ? ಹಾಗೇ, ಮಾಸ್ತಿ­ಯ­ವರ ಕಾಕ­ನ­ಕೋಟೆ ಕೂಡ.ಕಾಕ­ನ­ಕೋ­ಟೆಯ ಕಥಾ­ವಿ­ಸ್ತ­ರವೇ ಬೆಚ್ಚಿ­ಬೀ­ಳಿ­ಸು­ವಂ­ತಿದೆ. ಕಾಡು­ಕು­ರು­ಬರ ಹಟ್ಟಿಯ ಬುದ್ಧಿ­ವಂತ ಕಾಕ, ತನ್ನ ಬೂಡನ್ನು ಪರ­ಕೀ­ಯ­ರಿಂದ ಕಾಪಾ­ಡು­ವು­ದಕ್ಕೆ ಯತ್ನಿ­ಸು­ವುದು, ಆ ಹಂತ­ದಲ್ಲಿ ಆತ ಸಂಸ್ಥಾ­ನದ ವಿರು­ದ್ಧ ತಿರು­ಗಿ­ನಿ­ಲ್ಲದೆ ಅವ­ರಿಗೆ ನಿಷ್ಠ­ನಾ­ಗಿ­ದ್ದು­ಕೊಂಡೇ ತನ್ನ ಸ್ವಂತಿ­ಕೆ­ಯನ್ನು ಉಳಿ­ಸಿ­ಕೊ­ಳ್ಳು­ವುದು ಇದರ ವಸ್ತು. ಕುರು­ಬರು ಅರ­ಸೊ­ತ್ತಿ­ಗೆಗೆ ಸಲ್ಲಿ­ಸ­ಬೇ­ಕಾದ ಕಪ್ಪ­ವನ್ನು ಸಲ್ಲಿ­ಸದೇ ಹೋದಾಗ ಉಂಟಾ­ಗುವ ಪರಿ­ಸ್ಥಿ­ತಿ­ಯನ್ನು ಕಾಕ ನಿಭಾ­ಯಿ­ಸುವ ಶೈಲಿ­ಯಲ್ಲೇ ಕಾಡಿನ ಮಕ್ಕ­ಳಿಗೆ ಸಹ­ಜ­ವಾದ ಬುದ್ಧಿ­ವಂ­ತಿಕೆ ಮತ್ತು ಸ್ವಯಂ­ಸ್ಪೂರ್ತಿ ಎದ್ದು ಕಾಣು­ತ್ತದೆ.ಇಲ್ನೋಡಿ;ಕಂದಾಯ ವಸೂಲಿ ಮಾಡುವ ಕರ­ಣೀಕ ಹೇಳು­ತ್ತಾನೆ; ಅದೆಲ್ಲ ಆಗೋಲ್ಲ. ಇದೇ ಕೊನೇ ಮಾತು.
ಅದಕ್ಕೆ ಕಾಕನ ಉತ್ತರ; ಅದ್ಯಾಕ ನನ್ನೊ­ಡೆಯ ಹಂಗಂ­ತೀರ? ಜೀವ ಇರ­ಬೇ­ಕಾ­ದರೆ ಇದ­ನ್ಯಾಕ ಕೊನೆ ಮಾತು ಅಂತೀರ?
ಅದಕ್ಕೆ ಕರ­ಣೀಕ ರೇಗು­ತ್ತಾನೆ. ಕಾಕ ಮತ್ತೂ ಮುಂದು­ವ­ರಿ­ಸು­ತ್ತಾನೆ; ಕೊನೇ ಮಾತಾ­ಗ­ಬ್ಯಾಡ ಅಂದಿ ಬುದ್ಧಿ. ಕೊನೇ ಮಾತಾ­ಗೋದೆ ನಿಮಗೆ ಚಂದ ಅಂದರೆ ಹಂಗೆ ಆಗ­ಲೇ­ಳಿರ. ಅಮ್ಮಾ­ವರ ತಾತಿ­ಬಲ ಎಷ್ಟೊ ಅಷ್ಟೆ ಆಯಿತು.ನಾಟ­ಕಕ್ಕೆ ಬೇಕಾದ ರೋಚ­ಕತೆ, ಕ್ರಿಯೆ ಮತ್ತು ಘಟ­ನೆ­ಗಳ ಸರ­ಮಾ­ಲೆಯೇ ಈ ನಾಟ­ಕ­ದ­ಲ್ಲಿದೆ. ಕಾಕ ತಾನು ಕಾಕ ಅಲ್ಲ ಎಂದು ಹೇಳಿ­ಕೊಂಡು ಕಂದಾಯ ವಸೂ­ಲಿಗೆ ಬರುವ ಹೆಗ್ಗ­ಡೆ­ಯನ್ನು ಭೇಟಿ­ಯಾ­ಗು­ತ್ತಾನೆ. ಹೆಗ್ಗ­ಡೆಗೆ ಅವನೇ ಕಾಕ ಎಂದು ಗೊತ್ತಾಗಿ ಆತ­ನನ್ನು ಬಂಧಿ­ಸುವ ಯತ್ನ ಮಾಡು­ತ್ತಾನೆ. ಹಾಗೆ ಬಂಧಿ­ಸುವ ಹುನ್ನಾರ ಮೊದಲೇ ಗೊತ್ತಾಗಿ ಕಾಕ ಅದ­ರಿಂದ ತಪ್ಪಿ­ಸಿ­ಕೊಂಡು ಹೆಗ್ಗ­ಡೆ­ಯ­ವರ ಮಗ­ನನ್ನು ಕರ­ಣೀ­ಕ­ರನ್ನು ಅಪ­ಹ­ರಿ­ಸು­ತ್ತಾನೆ. ಹಾಗೆ ಅಪ­ಹ­ರಿ­ಸಿ­ಕೊಂಡು ಹೋದ ಹೆಗ್ಗ­ಡೆ­ಯ­ವರ ಮಗ ಕಾಕನ ಮಗ­ಳನ್ನು ಪ್ರೀತಿ ಮಾಡು­ತ್ತಾನೆ. ಕೊನೆ­ಯಲ್ಲಿ ಕಾಕನ ಮಗಳು ಹೆಗ್ಗ­ಡೆ­ಯ­ವರ ಮಗ­ನನ್ನು ಮದು­ವೆ­ಯಾ­ಗು­ತ್ತಾಳೆ. ಕುರು­ಬರ ಬೂಡಿಗೆ ಮಹ­ರಾ­ಜನ ಆಗ­ಮ­ನವೂ ಆಗು­ತ್ತದೆ. ಕರ­ಣೀ­ಕರ ವಂಚ­ನೆಯೂ ಬಯ­ಲಾ­ಗು­ತ್ತದೆ.ವಿಸ್ತಾ­ರ­ವಾದ ಹಾಗೂ ಪುನ­ರ್ ­ವ್ಯಾ­ಖ್ಯಾ­ನದ ಮರು ಓದನ್ನು ಬೇಡುವ ಕೃತಿ­ಗಳ ಪೈಕಿ ಕಾಕ­ನ­ಕೋಟೆ ಕೂಡ ಒಂದು. ಇವತ್ತು ಓದಿ­ದಾಗ ಅದ­ರೊ­ಳ­ಗಿ­ರುವ ಅನೇಕ ಹೊಸ ಅರ್ಥ­ಗಳು ಬಿಚ್ಚಿ­ಕೊ­ಳ್ಳುತ್ತಾ ಹೋಗು­ತ್ತವೆ. ತುಂಬ ಸರ­ಳ­ವಾದ ಒಂದು ಮಾತು ಇವ­ತ್ತಿಗೆ ಹೇಗೆ ಹೊಂದಿ­ಕೆ­ಯಾ­ಗು­ತ್ತದೆ ಅನ್ನು­ವು­ದನ್ನು ಗಮ­ನಿಸಿ;ಕಾಕ ಹೇಳು­ತ್ತಾನೆ- ಹಿರಿ­ಯರು ಅಂದಿ­ದಾರೆ ಕಾಡು ನಾಡಾ­ಗ­ಬೇಡ ನಾಡು ಬಯ­ಲಾ­ಗ­ಬೇಡ ಅಂತ. ಕಾಡು ದೇವರು ಒಲಿ­ದಿರೋ ಮಂದಿ ಊರ ಕಟ್ಟ­ತೀವಿ ಅನ್ನ­ಬಾ­ರ­ದಂತೆ. ಈಗ ನಮ್ಮ ಹಕ್ಕಳು ಕಾಡಾಗೆ ನಡೀ­ತಿ­ರ­ಲೀಕೆ ಹರಿ­ದಾ­ರೀ­ಲಿರೋ ಆನೆ ಕಂಪು ಮೂಗಿಗೆ ತಿಳೀ­ತದೆ. ತರ­ಗಿ­ನೊ­ಳ­ಗಿರೋ ತೆಕ್ಕೆ ಬಿದ್ದಿರೋ ಸರಪಾ ಕಣ್ಣಿಗೆ ಕಾಣು­ತದೆ. ಜಿಂಕೆ ಹಿಂದೆ ನಡಿಯೋ ಹುಲಿ ಹೆಜ್ಜೆ ಸಪ್ಪಳ ಕೊಂಬಿನ ದೂರ­ದಲ್ಲಿ ಕಿವಿಗೆ ಕೇಳ­ತದೆ. ಜೇನ ಹುಡು­ಕುತಾ ಹೋಗ­ತಿದ್ರೆ ನೊಣ ಬಂದು ದಾರಿ ತೋರ­ತದೆ. ಊರು ಕಟ್ಟಿ ನಿಂತಿವಿ, ಇದೊಂದೂ ಆಗಲ್ಲ.ಇವ­ತ್ತಿಗೂ ನಾವು ಪ್ರೀತಿ­ಯಂದ ಕೇಳುವ ನೇಸರ ನೋಡು.. ನೇಸರಾ ನೋಡು ಗೀತೆ­ಯನ್ನೂ ಬರೆ­ದ­ವರು ಮಾಸ್ತಿ. ಇನ್ನೊಂದು ವಿಚಿತ್ರ ನೋಡಿ. ಕಂಬಾರ, ಮಾಸ್ತಿ, ಲಂಕೇ್ ಮುಂತಾ­ದ­ವರು ಸಿನಿಮಾ ಮಾಡು­ತ್ತಿ­ದ್ದಾಗ ಅದಕ್ಕೆ ಹೊಂದುವ ಗೀತೆ­ಗ­ಳನ್ನೂ ತಾವೇ ಬರೀ­ತಿ­ದ್ದರು. ಅವು ಇವ­ತ್ತಿಗೂ ಅಷ್ಟೇ ಹೊಸ­ದಾಗಿ ಉಳ­ಕೊಂ­ಡಿವೆ. ಎಲ್ಲಿದ್ದೇ ಇಲ್ಲೀ ತನಕ, ಕೆಂಪಾ­ದವೋ ಎಲ್ಲಾ ಕೆಂಪಾ­ದವೋ, ಕರಿ­ಯ­ವ್ವನ ಗುಡಿ­ತಾವ ಅರ­ಳ್ಯಾವೆ ಬಿಳಿ­ಹೂವು, ನೇಸರ ನೋಡು, ಸಂಗೀತಾ, ಕಾಡು­ಕು­ದುರೆ ಓಡಿ­ಬಂ­ದಿತ್ತಾ ಇವಿ­ತ್ಯಾದಿ ಹಾಡು­ಗ­ಳಿಗೆ ಸಾವಿಲ್ಲ.ಇಂಥದ್ದೇ ಇನ್ನೊಂ­ದಷ್ಟು ಗೀತೆ­ಗಳೂ ಇಲ್ಲಿವೆ. ಉದಾ­ಹ­ರ­ಣೆಗೆ ಕಾಕ ಹಾಡುವ ಮತ್ತೊಂದು ಹಾಡು ಹೀಗಿದೆ;ಮಾದೇ­ಶ್ವರ ನಿನ್ನ ನಂಬದ ಮಂದಿ
ಬಾಳಲ್ಲ ಸಾಯಲ್ಲ ಬಾಡು­ವರು ಕಂದಿ
ಮಾದೇ­ಶ್ವರಾ ನನ್ನ ಸಲ­ಹೆಂದ ಉಸುರು
ಬಾಡಲ್ಲ ಬಳ­ಲಲ್ಲ ಎಂದೆಂದು ಹಸುರು.

ಹಾಗೇ ಆಶೀ­ರ್ವ­ಚನ ಗೀತ­ದಂ­ತಿ­ರುವ ಈ ಸಾಲು­ಗ­ಳನ್ನು ಓದಿ;
ಕರಿ­ಹೈ­ದ­ನ­ವ್ವನಾ ಹೆಸ­ರೆಂದು ನಿಲ್ಲಲಿ
ಅವನ ಬಳಿ­ಯೆಂ­ದೆಂದು ಒಳ್ಳಿ­ದನು ಮೆಲ್ಲಲಿ
ಅವನ ಹೆತ್ತಾ ಕಾಡು ಎಂದೆಂದು ಚಿಗು­ರಲಿ
ಅವನ ಬಳಿ ಎಂದೆಂದು ಮಿಕ್ಕಿ­ರಲಿ ಹೊಗ­ರಲಿ
ಅವನ ಹಾಡಿ­ಗ­ಳಿ­ರಲಿ ಎಂದೆಂದು ಸೊಗ­ದಲಿ
ಅವನ ಬಳಿ­ಗೆಂ­ದೆಂದು ನಗೆ­ಯಿ­ರಲಿ ಮೊಗ­ದಲಿ
ಅವನ ಹೊಗ­ಳುವ ಹಾಡು ಎಂದೆಂದು ಹಾಡಲಿ
ಅವನ ಬಳಿ ಎಂದೆಂದು ಹಬ್ಬ­ವನು ಮಾಡಲಿ


**­*­*­**
ಕಾಕ­ನ­ಕೋಟೆ ಅನೇಕ ಪ್ರಶ್ನೆ­ಗ­ಳನ್ನು ಹುಟ್ಟು­ಹಾ­ಕು­ತ್ತದೆ. ಅನೇಕ ಪ್ರಶ್ನೆ­ಗ­ಳಿಗೆ ಉತ್ತ­ರಿ­ಸು­ತ್ತದೆ. ನಾವು ನಮ್ಮನ್ನು ಆವ­ರಿ­ಸುವ ಆಧು­ನಿ­ಕತೆ ಎಂಬ ಕಾಯಿ­ಲೆ­ಯನ್ನು ಹೇಗೆ ಎದು­ರಿ­ಸ­ಬೇಕು ಅನ್ನು­ವು­ದಕ್ಕೆ ಆಧು­ನಿ­ಕ­ತೆ­ಯಲ್ಲಿ ಉತ್ತ­ರ­ವಿಲ್ಲ. ಉತ್ತರ ಹುಡು­ಕ­ಬೇ­ಕಾ­ದರೆ ನಾವು ಮತ್ತೆ ನಮ್ಮ ಹಳೆಯ ಕಾಲಕ್ಕೆ ಮರ­ಳ­ಬೇಕು. ನಾಗ­ರೀ­ಕ­ತೆಯ ಉತ್ತುಂ­ಗಕ್ಕೆ ತಲು­ಪಿದ ಒಂದು ಸಂಸ್ಕೃತಿ ಮಾಡು­ವುದು ಅದನ್ನೇ. ಅದೇ ಕಾರ­ಣಕ್ಕೆ ಪಾಶ್ಚಾತ್ಯ ದೇಶ­ಗಳು ಪೂರ್ವದ ಒಡ­ಪು­ಗ­ಳಲ್ಲಿ, ಶ್ಲೋಕ­ಗ­ಳಲ್ಲಿ, ಮಾಂತ್ರಿ­ಕ­ತೆ­ಯಲ್ಲಿ, ಪವಾ­ಡ­ದಲ್ಲಿ ಉತ್ತರ ಹುಡು­ಕಲು ಯತ್ನಿ­ಸಿದ್ದು.ಆಧು­ನಿ­ಕತೆ ಒಂದು ಸ್ಥಿತಿ­ಯಲ್ಲ; ಅದೊಂದು ರೋಗ. ಅದು ರೋಗ ಅನ್ನು­ವುದು ನಮಗೆ ತಕ್ಪ­ಣಕ್ಕೆ ಗೊತ್ತಾ­ಗು­ವು­ದಿಲ್ಲ. ಸಮೂ­ಹ­ಸ­ನ್ನಿ­ಯಲ್ಲಿ ಅದೊಂದು ವರ­ದಂತೆ ಕಾಣಿ­ಸುವ ಸಾಧ್ಯ­ತೆಯೇ ಹೆಚ್ಚು. ಆದರೆ ಏಕಾಂ­ತ­ದಲ್ಲಿ ಮುಂಜಾ­ವದ ಒಂಟಿ­ತ­ನ­ದಲ್ಲಿ ಆಧು­ನಿ­ಕ­ತೆಯ ಶಾಪ ನಮ್ಮನ್ನು ತಟ್ಟು­ತ್ತದೆ. ನಾವು ಜೀವಿ­ಸಲು ತೀರ ಅಗ­ತ್ಯ­ವಾದ `ಚಾ­ವಡಿ'ಯಂಥ ಜಾಗ­ಗ­ಳನ್ನು, ಜಗ­ಲಿ­ಯನ್ನು, ಹಿತ್ತಿ­ಲನ್ನು ಅದು ನಾಶ­ಮಾ­ಡು­ತ್ತದೆ.ನಗ­ರ­ಗ­ಳಲ್ಲಿ ಮನೆಗೆ ಜಗ­ಲಿ­ಗ­ಳಿಲ್ಲ. ಜಗ­ಲಿಯ ಮೇಲೆ ಕುಳಿತು ಮಾತಾ­ಡುವ ಬಳೆ­ಗಾ­ರ­ನಿಲ್ಲ, ಬಳೆ­ಗಾರ ಹೊತ್ತು ತರುವ ಸುದ್ದಿ­ಗಾಗಿ ಕಾಯುವ ರೋಮಾಂ­ಚ­ವಿಲ್ಲ. ಸುದ್ದಿ­ಮೂ­ಲ­ಗಳೂ ಮಾಹಿ­ತಿ­ಕೇಂ­ದ್ರ­ಗಳು ಇವತ್ತು ಬದ­ಲಾ­ಗಿವೆ. ಅಅ­ದಕ್ಕೆ ತಕ್ಕಂತೆ ನಮ್ಮ ನಿಲು­ವು­ಗಳೂ ಬದ­ಲಾ­ಗು­ತ್ತಿವೆ. ಮನೆ ತುಂಬ ಜನ­ರಿಂದ ತುಂಬಿ­ಕೊಂಡು ಕಲ­ಕಲ ಅನ್ನು­ತ್ತಿ­ದ್ದರೆ ಖುಷಿ­ಯಾ­ಗು­ತ್ತಿದ್ದ ದಿನ­ಗಳು ಈಗಿಲ್ಲ. ಈಗ ಪ್ರತಿ­ಯೊ­ಬ್ಬ­ರಿಗೂ ನೀರವ ಏಕಾಂತ ಬೇಕು.ಇದು ಜಾಗ­ತೀ­ಕ­ರ­ಣದ ಕೊಡುಗೆ ಎಂದು ಭಾವಿ­ಸು­ವುದು ತಪ್ಪು. ಇದು ನಮ್ಮ ಆಧು­ನಿಕ ಶಿಕ್ಪ­ಣ­ದಿಂದ ಬಂದದ್ದು. ಐವತ್ತು ವರು­ಷ­ಗಳ ಹಿಂದೆ ಇಂಗ್ಲಿಷ್ ಜ್ಞಾನ ಆ ಕಾಲದ ಲೇಖ­ಕನ ಮತ್ತು ಓದು­ಗನ ಕನ್ನಡ ಪ್ರೀತಿ­ಯನ್ನು ಹೆಚ್ಚಿ­ಸುವ ಕೆಲಸ ಮಾಡು­ತ್ತಿತ್ತು. ಇವತ್ತು ಅದಕ್ಕೆ ತದ್ವಿ­ರು­ದ್ಧ­ವಾ­ದದ್ದು ನಡೆ­ಯ­ತ್ತಿದೆ.ಮೊನ್ನೆ ಗೋಪಾ­ಲ­ಕೃಷ್ಣ ಅಡಿಗ ಟ್ರಸ್ಟ್ ನಡೆ­ಸಿದ ಅಡಿಗ ಸಂಸ್ಮ­ರಣೆ ಕಾರ್ಯ­ಕ್ರ­ಮ­ದಲ್ಲಿ ಮಾತ­ನಾ­ಡುತ್ತಾ ಕಿ.ರಂ. ನಾಗ­ರಾಜ ಅಡಿ­ಗರ ಕೆಲವು ಸಾಲು­ಗ­ಳನ್ನು ಉದಾ­ಹ­ರಿ­ಸಿ­ದರು;

ಮನೆಯ ಮಕ್ಕಳ ಕೂಡೆ ಆಡ ಬಂದರೆ ಊರ
ಹುಡುಗ ಪಾಳೆಯ, ತಿಂಡಿ ಕೊಟ್ಟು ನಗಿಸು;
ಅಲ್ಲೆ ತಳ­ವೂ­ರಿ­ಸಲು ಬಯಸಿ ತೆಳ್ಳ­ಗೆ­ಮಾಡ
ಬೇಡ ಇರು­ವಷ್ಟು ತಂಭಾಲು ಗುಟುಕು.

ಕಟ್ಟೆ­ಯೊ­ಳ­ಗಡೆ ನೀರ ಹಣಿ­ಸಿ­ದರೆ ಬೆಳವ ಮರ
ತಲೆ­ಮೇಲೆ ತಳೆ­ಯು­ವುದು ಗೂಡ ಮಾಲೆ
ಅದ­ರೊ­ಳಗೆ ಬಂದ­ಳಿಕೆ ಬೆಳೆವ ವಿಶ್ವ­ವಿ­ಶಾಲ
ಭಾವವೇ ಬಿಡು­ಗ­ಡೆಗೆ ಬಿಟ್ಟ ಕೂಳೆ.

ಮೆಟ್ರೋ-ದಂಥ ಬಹು­ರಾ­ಷ್ಟ್ರೀಯ ಸಂಸ್ಥೆ­ಗ­ಳನ್ನು ಹೇಗೆ ನಿಭಾ­ಯಿ­ಸ­ಬೇಕು ಅನ್ನು­ವು­ದಕ್ಕೆ ಉತ್ತರ ಈ ಕಾವ್ಯ­ದ­ಲ್ಲಿದೆ ಅನ್ನುವ ಕಾರ­ಣಕ್ಕೆ ಅಡಿ­ಗ­ರನ್ನು ಎಲ್ಲ ಕಾಲಕ್ಕೂ ಸಲ್ಲುವ ಕವಿ ಎಂದು ಕರೆ­ಯ­ಬ­ಹು­ದಲ್ಲ.ಅವ­ರದೇ ಮತ್ತೊಂದು ಸಾಲು ನೋಡಿ;ಮಾಡಿ ಮಡಿ­ಯದೆ ಬದುಕಿ ಉಳಿ­ಯ­ಬಾ­ರದು, ಮಡ್ಡಿ;
ಕರ್ಪೂ­ರ­ವಾ­ಗದೆ ಬೆಂಕಿ ಬಳಿಗೆ
ಸುಳಿ­ಯ­ಬಾ­ರದು; ಹೊತ್ತಿ ಹೊಗೆವ ಮಡ್ಡಿಯ ಕಂಪು
ಹೊರ­ಗ­ಡೆಗೆ; ಒಳಗೆ ಕೊನೆ­ಯಿ­ಲ್ಲದ ಧಗೆ.ಇದು ಇವ­ತ್ತಿನ ಸ್ಥಿತಿ. ನಾವೆಲ್ಲ ಕರ್ಪೂ­ರ­ವಾ­ಗದೇ ಬೆಂಕಿ ಬಳಿಗೆ ಸುಳಿ­ಯು­ತ್ತಿ­ದ್ದೇವಾ?