Wednesday, May 23, 2007

ಕಡ­ತಂ­ದದ್ದು ಮನೆ­ತ­ನಕ, ಒಡ­ಹು­ಟ್ಟಿದ್ದು ಕೊನೆ­ತ­ನಕ


ಅದು ಮುದು­ಕ­ರಿಗೆ ತಕ್ಕ ನಾಡಲ್ಲ. ತೋಳ­ಸೆ­ರೆ­ಯಲ್ಲಿ
ಯುವ­ಜ­ನರು, ಮರ­ಮ­ರ­ದಲ್ಲು ಹಕ್ಕಿ­ಗಳು
-ಎಲ್ಲ ಸಾವ­ಕೊಂಬ ಸಂತಾ­ನ­ಗಳೆ-ತಂ­ತಮ್ಮ ಹಾಡು­ಗ­ಳಲ್ಲಿ
ಸಾಲ್ಮ್ ಪಾತ­ಗಳು, ಮ್ಯಕ­ರೆಲ್ ಗಿಜಿ­ಗು­ಟ್ಟುವ ಸಮು­ದ್ರ­ಗಳು
ಭೂ, ಜಲ, ಜಂತು­ಗಳು ಇಡೀ ಗ್ರೀಷ್ಮ ಸ್ತುತಿ­ಸು­ವುದು ಮುದ­ದಲ್ಲಿ
ಪಡು­ವು­ದನ್ನು, ಹುಟ್ಟು­ವು­ದನ್ನು, ಸಾಯು­ವು­ದನ್ನು...

ಹೀಗೆ ಅನು­ವಾ­ದ­ಗೊಂ­ಡದ್ದು ಯೇಟ್ಸನ ಸೈಲಿಂಗ್ ಟು ಬೈಜಾಂ­ಟಿಯಂ ಎಂಬ ಪದ್ಯ. ಅನು­ವಾ­ದಿ­ಸಿ­ದ­ವರು ಯು. ಆರ್. ಅನಂ­ತ­ಮೂರ್ತಿ. ಇಂಥ ಪದ್ಯ­ಗಳು ಅರ್ಥ­ವಾ­ಗು­ವು­ದಿಲ್ಲ ಎಂದಾಗ ನವ್ಯದ ಎಲ್ಲ ಕವಿ­ಗಳೂ ಒಕ್ಕೊ­ರ­ಲಿ­ನಿಂದ ಹೇಳಿ­ದ್ದಿಷ್ಟೇ. ಪದ್ಯ ಓದು­ವು­ದಕ್ಕೂ ಸಿದ್ಧತೆ ಬೇಕು. ಹೀಗಾಗಿ ಪದ್ಯ ಬಗೆ­ಯುವ ಬಗೆ ಎಂಬ ಅಂಕಣ ಶುರು­ವಾ­ಯಿತು. ಒಂದು ಪದ್ಯ­ವನ್ನು ಅರ್ಥ ಮಾಡಿ­ಕೊ­ಳ್ಳು­ವುದು ಹೇಗೆ ಎಂಬ ಬಗ್ಗೆ ಪುಸ್ತ­ಕ­ಗಳು ಬಂದವು. ಅಲ್ಲಿ ಅಂಡ­ರ್­ಸ್ಟಾಂ­ಡಿಂಗ್ ಪೊಯೆಟ್ರಿ ಅಂತ ಬರೆ­ದಾಗ ಇಲ್ಲೂ ಅಂಥ­ದ್ದೇನೋ ಬಂತು.
ಮೇಲಿನ ಇಂಗ್ಲಿಷ್ ಪದ್ಯದ ಮೂಲ ಸಾಲು­ಗ­ಳನ್ನೇ ಓದಿ;
That is no country for old men. The young
In one another's arms, birds in the trees
The salmon falls, the mackerel-crowded seas,
Fish, Flesh or fowl, commend all summer long
whatever is begotten, born and dies.


ಇಂಗ್ಲಿಷ್ ಬಲ್ಲ­ವ­ರಿಗೆ ಇವ­ತ್ತಿಗೂ ಇಂಗ್ಲಿಷೇ ಸುಲಭ. ಇಂಗ್ಲಿಷ್ ತಿಳಿ­ಯ­ದ­ವ­ರಿಗೆ ಅದು ಕನ್ನಡ ಅನು­ವಾ­ದ­ದಲ್ಲೂ ತಿಳಿ­ಯದು. ಹಾಗಿದ್ದೂ ಅಂಥ ಅನು­ವಾ­ದದ ಪ್ರಯ­ತ್ನ­ಗಳು ತುಂಬ ಗಂಭೀ­ರ­ವಾ­ಗಿಯೇ ನಡೆ­ದವು.
ಕಾವ್ಯದ ಅನು­ವಾದ ಕಷ್ಟ ಅನ್ನು­ವು­ದಕ್ಕೆ ಅನೇಕ ಕಾರ­ಣ­ಗ­ಳನ್ನು ಕೊಡ­ಬ­ಹುದು. ಎಕೆ ರಾಮಾ­ನು­ಜ್ ಕೂಡ ಕೂಡಲ ಸಂಗಮ ಅನ್ನು­ವು­ದನ್ನು God of meeting rivers ಎಂದು ಅನು­ವಾ­ದಿಸಿ ನಗೆ­ಪಾ­ಟಲು ಮಾಡಿ­ದ್ದರು. ನಮ್ಮ ಭಾವ­ಗೀ­ತೆ­ಗ­ಳನ್ನು ಕೂಡ ಅನು­ವಾ­ದಿ­ಸು­ವುದು ಕಷ್ಟವೇ. ಯಾಕೆಂ­ದರೆ ಕವಿತೆ ಒಂದು ಮಣ್ಣಿನ ಗುಣ­ವನ್ನು ಮೈಗೂ­ಡಿ­ಸಿ­ಕೊಂಡು ಅರ­ಳಿ­ರುತ್ತೆ. ನಮ್ಮ ಸಂಪ್ರ­ದಾಯ, ತಿಳು­ವ­ಳಿಕೆ, ನೆನಪು, ಗ್ರಹಿಕೆ ಮತ್ತು ಆಚಾ­ರ­ವಿ­ಚಾ­ರ­ಗಳ ಜೊತೆಗೇ ಕವಿತೆ ಹುಟ್ಟು­ತ್ತದೆ. ತೀರಾ ಸರ­ಳ­ವಾದ `ನ­ವಿ­ಲೂರ ಮನೆ­ಯಿಂದ ನುಡಿ­ಯೊಂದ ತಂದಿ­ಹೆನು, ಬಳೆಯ ತೊಡಿ­ಸು­ವು­ದಿಲ್ಲ ನಿಮಗೆ' ಎಂಬ ಸಾಲನ್ನು ಇಂಗ್ಲಿ­ಷಿಗೆ ಅನು­ವಾ­ದಿ­ಸಿ­ದರೆ ಅವ­ರಿಗೆ ಏನು ಅರ್ಥ­ವಾ­ಗು­ತ್ತದೆ. ಯಾವತ್ತೂ ಬಳೆ­ಯನ್ನೇ ತೊಡ­ದ­ವರು, ಬಳೆ­ಗಾ­ರ ಗಂಡ­ಸಿಗೆ ಬಳೆ ತೊಡಿ­ಸು­ವು­ದಿಲ್ಲ ಎಂಬ ಸಾಲಿನ ಹಿಂದಿನ ಗೇಲಿ­ಯನ್ನೋ ನವಿ­ಲೂರ ಮನೆ­ಯಿಂದ ತಂದ ನುಡಿ­ಯನ್ನೋ ಹೇಗೆ ಗ್ರಹಿ­ಸು­ತ್ತಾರೆ. ಹಾಗೇ ಯೇಟ್ಸ್ ಮತ್ತು ಕೀಟ್ಸ್ ಕೂಡ. ಅಲ್ಲಿಯ ಕಾವ್ಯ­ವನ್ನು ಅಲ್ಲಿಗೆ ಒಪ್ಪು­ವಂತೆ ಸವಿ­ಯ­ಬೇಕು. ಅನು­ವಾ­ದಿ­ಸು­ವು­ದಕ್ಕೇ ಹೋಗ­ಬಾ­ರದು. ಎಲ್ಲೋ ಒಂದೆ­ರಡು ಎಲ್ಲ­ರಿಗೂ ಒಪ್ಪುವ ಸಾಲು­ಗಳು ಇಷ್ಟ­ವಾ­ದರೆ ಸಂತೋ­ಷ­ಪ­ಡ­ಬೇಕು.
ಅದ­ರಲ್ಲೂ ಕನ್ನ­ಡ­ದಿಂದ ಬೇರೆ ಭಾಷೆಗೆ ಅನು­ವಾ­ದಿ­ಸು­ವು­ದಕ್ಕೆ ಕಷ್ಟ­ವಾ­ಗುವ ಪದ್ಯ­ಗ­ಳೆಂ­ದರೆ ದಾಸ­ರವು.
ಇದೊಂದು ಕೀರ್ತ­ನೆ­ಯನ್ನೇ ನೋಡಿ;


ಶೃಂಗಾ­ರ­ವಾ­ಗಿ­ಹುದು ಶ್ರೀಹ­ರಿಯ ಮಂಚ
ಅಂಗನೆ ರುಕ್ಮಿ­ಣಿ­ಯ­ರಸ ಮಲ­ಗಿ­ರುವ ಮಂಚ

ಬಡಗಿ ಮುಟ್ಟದ ಮಂಚ ಕಡ­ಲಿ­ನೊ­ಳ­ಗಿನ ಮಂಚ
ಮೃಡನ ತೋಳಿ­ನಲಿ ಅಡ­ಗಿ­ರುವ ಮಂಚ
ಸಡ­ಗ­ರ­ವುಳ್ಳ ಮಂಚ ಹೆಡೆ­ಯುಳ್ಳ ಹೊಸ ಮಂಚ

... ಹೀಗೆ ಸಾಗು­ತ್ತದೆ ಈ ಗೀತೆ. ಇದನ್ನು ಯಾರಾ­ದರೂ ಇಂಗ್ಲಿ­ಷಿಗೆ ಫ್ರೆಂಚಿಗೂ ಅನು­ವಾ­ದಿ­ಸಿ­ದರೆ ಅಲ್ಲಿಯ ಓದು­ಗ­ನಿಗೆ ಏನಾ­ದರೂ ದಕ್ಕು­ವು­ದಕ್ಕೆ ಸಾಧ್ಯವೇ? ಎಷ್ಟೇ ಟಿಪ್ಪ­ಣಿ­ಗ­ಳನ್ನು ಕೊಟ್ಟರೂ ಈ ಕಲ್ಪನೆ ಮೂಡು­ವು­ದಕ್ಕೆ ಸಾಧ್ಯವೇ?
ಈ ಒಂದೇ ಒಂದು ಹಾಡು ಹತ್ತಾರು ಕತೆ­ಗ­ಳನ್ನು ಹೇಳು­ತ್ತದೆ ಅನ್ನು­ವು­ದನ್ನು ಗಮ­ನಿಸಿ. ಪಲ್ಲ­ವಿ­ಯಲ್ಲೇ ಇದು ಅಂಗನೆ ರುಕ್ಮಿ­ಣಿ­ಯ­ರಸ ಅನ್ನು­ವಲ್ಲಿ, ಶ್ರೀಹ­ರಿಯ ಪತ್ನಿ ರುಕ್ಮಿಣಿ ಅನ್ನು­ತ್ತದೆ. ಅಲ್ಲಿಗೆ ಕೃಷ್ಣಾ­ವ­ತಾ­ರದ ಕತೆ ಗೊತ್ತಿ­ಲ್ಲ­ದ­ವ­ರಿಗೆ ರುಕ್ಮಿ­ಣಿಯೇ ಲಕ್ಪ್ಮಿ ಅನ್ನು­ವುದು ಗೊತ್ತಾ­ಗು­ವುದು ಸಾಧ್ಯ­ವಿಲ್ಲ. ಅಲ್ಲಿಂದ ಮುಂದೆ ಬಡಗಿ ಮುಟ್ಟದ ಮಂಚ ಎನ್ನು­ವು­ದನ್ನು ಅರ್ಥ­ಮಾ­ಡಿ­ಕೊಂ­ಡರೂ ಹಾಲಿನ ಸಮು­ದ್ರ­ದಲ್ಲಿ ವಿಷ್ಣು ಮಲ­ಗಿ­ರು­ತ್ತಾನೆ ಎನ್ನುವ ಕಲ್ಪನೆ ಇಲ್ಲ­ದ­ವ­ರಿಗೆ ಕಡ­ಲಿ­ನೊ­ಳ­ಗಿಹ ಮಂಚ ಎಂಬ ಸಾಲು ಗ್ರಹಿ­ಕೆಗೆ ನಿಲು­ಕದ್ದು. ಶಿವ ತೋಳಿಗೆ ಹಾವನ್ನು ಸುತ್ತಿ­ಕೊಂ­ಡಿ­ರು­ತ್ತಾನೆ ಅನ್ನೋದು ಗೊತ್ತಾ­ಗದ ಹೊರತು ಮೃಡನ ತೋಳಿ­ನಲಿ ಅಡ­ಗಿ­ರುವ ಮಂಚ ಎಂಬು­ದರ ಗೂಢಾರ್ಥ ಅರಿ­ವಾ­ಗದು. ಮತ್ತೆ ಈಶ್ವ­ರ­ನನ್ನು ಮೃಡ ಎಂದೇಕೆ ಕರೆ­ಯು­ತ್ತಾರೆ ಅನ್ನು­ವು­ದಕ್ಕೆ ಮತ್ತೊಂದು ಕತೆ ಕೇಳ­ಬೇ­ಕಾ­ಗು­ತ್ತದೆ.
ಇನ್ನೂ ಮುಂದಕ್ಕೆ ಓದು­ತ್ತಿ­ದ್ದಂತೆ ಮತ್ತೊಂ­ದೊಂದೇ ಕತೆ­ಗಳು ಎದು­ರಾ­ಗು­ತ್ತವೆ. ಕಾಳ­ಗ­ದೊ­ಳ­ರ್ಜು­ನನ ಮಕುಟ ಕೆಡ­ಹಿದ ಮಂಚ ಎಂಬ ಸಾಲಿ­ನಲ್ಲಿ ತಕ್ಪ­ಕನ ಕತೆ­ಯಿದೆ. ಅರ್ಜು­ನನ ಮಕು­ಟ­ವನ್ನೇ ಅದ್ಯಾಕೆ ಕೆಡ­ವಿತು ಅನ್ನು­ವುದು ಮತ್ತೊಂದು ಕತೆ.
ಕತೆ­ಯನ್ನು ಅನು­ವಾ­ದಿ­ಸ­ಬ­ಹುದು. ನಾಟ­ಕ­ವನ್ನು ಮತ್ತೊಂದು ಭಾಷೆಗೆ ಅಳ­ವ­ಡಿ­ಸ­ಬ­ಹುದು. ಕಷ್ಟ­ಪ­ಟ್ಟರೆ ಪ್ರಬಂ­ಧ­ವನ್ನೂ ನಮ್ಮ­ದ­ಲ್ಲದ ಭಾಷೆ­ಯಿಂದ ತಂದು ಓದಿ ಸುಖಿ­ಸ­ಬ­ಹುದು. ಆದರೆ ಕಾವ್ಯ ಮಾತ್ರ ಅದೇ ಭಾಷೆ­ಯಲ್ಲಿ ಹುಟ್ಟ­ಬೇಕು. ಅಷ್ಟೇ ಅಲ್ಲ, ಒಂದು ಭಾಷೆ­ಯಲ್ಲಿ ಒಂದು ರೂಪ­ದಲ್ಲಿ ಅರ­ಳಿದ ಕವಿ­ತೆ­ಯನ್ನು ಮತ್ತೊಂದು ರೂಪ­ದಲ್ಲಿ ಪ್ರಕ­ಟ­ಪ­ಡಿ­ಸು­ವುದೂ ಕಷ್ಟವೇ. ಮಂಕು­ತಿ­ಮ್ಮನ ಕಗ್ಗ­ವನ್ನೋ, ಅಂತಃ­ಪು­ರ­ಗೀ­ತೆ­ಯನ್ನೋ ಇನ್ನೊಂದು ಥರ ಬರೆ­ಯ­ಬ­ಹುದಾ ಯೋಚಿಸಿ ನೋಡಿ!
ಸರ್ವಜ್ಞ ಬರೆದ ಮೂರು ಸಾಲಿನ ತ್ರಿಪ­ದಿ­ಗ­ಳನ್ನು ಮತ್ತೊಂದು ಭಾಷೆಗೆ ಅನು­ವಾ­ದಿ­ಸ­ಲಿಕ್ಕೆ ಹೊರ­ಟರೆ ಎಂಥ ಅನಾ­ಹು­ತ­ವಾ­ದೀತು ಯೋಚಿಸಿ;
ಬೆರೆ­ವಂಗೆ ರೋಗ­ವೂ ಮೊರೆ­ವಂಗೆ ರಾಗ­ವೂ
ಬರೆ­ವಂಗೆ ಓದು- ಬರು­ವಂತೆ ಸಾಧಿ­ಪ­ಗೆ
ಬಾರ­ದಿ­ಹು­ದುಂಟೆ? ಸರ್ವಜ್ಞ.

ಉಂಡು ಕೆಂಡವ ಕಾಸಿ ಉಂಡು ಶತ­ಪಥ ನಡೆ­ದು
ಉಂಡೆ­ಡದ ಮಗ್ಗುಲಲಿ ಮಲಗೆ ವೈದ್ಯ­ನಾ
ಭಂಡಾ­ಟ­ವಿಲ್ಲ! ಸರ್ವಜ್ಞ.
ಚಿತ್ರ- ಈ ಫೊಟೋ ಕಳುಹಿಸಿಕೊಟ್ಟದ್ದು ಗೆಳೆಯ ಹರಿಪ್ರಸಾದ್. ಅವರಿಗೆ ಅವರ ಗೆಳೆಯರಾರೋ ಕಳುಹಿಸಿದರಂತೆ. ಇದನ್ನು ಹಿಡಿದವನ ಹೆಸರು ಕೃಷ್ಣ ಘುಲೆ. ಹಾವು ಹಿಡಿಯುವುದರಲ್ಲಿ ಆತ ನಿಷ್ಣಾತ. ಈ ಇಪ್ಪತ್ತು ಕೇಜಿ ತೂಗುವ ಹನ್ನೆರಡು ಅಡಿ 3 ಇಂಚು ಉದ್ದದ ಹಾವನ್ನು ಆತ ಹಿಡಿದದ್ದು ಗೋವಾದಲ್ಲಿ.

Monday, May 21, 2007

ತಿಳಿ­ಯದೇ ಔಷಧಿ ಕುಡಿ­ದರೂ ರೋಗ ಮಾಯವಾಗುವ ಹಾಗೆ...

ಪುರಾ­ಣ­ದಲ್ಲಿ ಬರುವ ಪ್ರತಿ­ಯೊಂದು ಕತೆ­ಯೊ­ಳಗೂ ಇರುವ ಮ್ಯಾಜಿ­ಕ್ ರಿಯ­ಲಿ­ಸ­ಮ್ಮಿನ ಅಂಶ­ಗ­ಳನ್ನು ನೋಡಿ­ದರೆ ಅಚ್ಚ­ರಿ­ಯಾ­ಗು­ತ್ತದೆ. ಅಷ್ಟೇ ಅಲ್ಲ, ಒಂದು ಕತೆಗೂ ಅದಕ್ಕೆ ಸಂಬಂ­ಧವೇ ಇಲ್ಲ­ವೆಂದು ತೋರುವ ಮತ್ತೊಂದು ಕತೆಗೂ ಆಳ­ದ­ಲ್ಲೊಂದು ಸಂಬಂ­ಧ­ವಿ­ರು­ವು­ದನ್ನು ಗಮ­ನಿ­ಸಿ­ದರೆ ಮಹಾ­ಭಾ­ರ­ತ­ದಂಥ ಮಹಾ­ಕಾ­ವ್ಯ­ವನ್ನು ಕವಿ ಎಷ್ಟು ಎಚ್ಚ­ರ­ದಿಂದ ಬರೆ­ದಿ­ದ್ದಾನೆ ಅನ್ನು­ವುದು ಅರ್ಥ­ವಾ­ಗು­ತ್ತದೆ. ಸಾವಿ­ರಾರು ಪಾತ್ರ­ಗಳು ಬಂದಿ­ದ್ದರೂ ಅಲ್ಲಿ ಪಾತ್ರ­ಗಳ ನಡು­ವಿನ ಸಂಬಂಧ ಮತ್ತು ವಯಸ್ಸು ಎಲ್ಲೂ ಏರು­ಪೇ­ರಾ­ಗಿಲ್ಲ. ಸಾಮಾ­ನ್ಯ­ವಾಗಿ ಮಹಾ­ಕಾ­ದಂ­ಬ­ರಿ­ಗ­ಳನ್ನು ಬರೆ­ಯುವ ಹೊತ್ತಿಗೆ, ಅದ­ರಲ್ಲೂ ಪೂರ್ವ­ಜ­ನ್ಮದ ಕತೆ­ಗ­ಳನ್ನು ಹೇಳು­ತ್ತಿ­ರು­ವಾಗ ಇಂಥ ಏರು­ಪೇ­ರು­ಗ­ಳಿಗೆ ಅವ­ಕಾ­ಶ­ವಿ­ರು­ತ್ತದೆ. ಅದ­ನ್ನೆಲ್ಲ ಗಮ­ನ­ದ­ಲ್ಲಿ­ಟ್ಟು­ಕೊಂಡೇ ಕವಿ ಅದ­ನ್ನೆಲ್ಲ ಹೆಣೆ­ಯುತ್ತಾ ಹೋಗಿದ್ದು ಆತನ ಪ್ರತಿ­ಭೆಗೆ ಸಾಕ್ಪಿ.
ಇನ್ನೊಂದು ಕುತೂ­ಹ­ಲ­ಕರ ಸಂಗ­ತಿ­ಯೆಂ­ದರೆ ಇಡೀ ಮಹಾ­ಭಾ­ರ­ತ­ವನ್ನು ಒಬ್ಬರು ಇನ್ನೊ­ಬ್ಬ­ರಿಗೆ ಹೇಳಿ­ದಂತೆ ರಚಿ­ತ­ಗೊಂ­ಡದ್ದು. ಅಲ್ಲಿ ಯಾವು­ದನ್ನೂ ಕವಿ ತನ್ನ­ದೆಂದು ಹೇಳು­ವು­ದಿಲ್ಲ. ಭಾರತ ಮತ್ತು ಭಾಗ­ವತ ಎರಡೂ ಕೂಡ ಯಾರೋ ಯಾರಿಗೋ ಹೇಳಿ­ದ್ದನ್ನು ಕವಿ ಇಲ್ಲಿ ಹೇಳು­ತ್ತಿ­ದ್ದಾನೆ ಅಷ್ಟೇ. ಹೀಗಾಗಿ ಕವಿಗೆ ಗೊತ್ತಿ­ರು­ವು­ದೆಲ್ಲ ಕೇಳಿದ ಕತೆ­ಗಳೇ.
ಉದಾ­ಹ­ರ­ಣೆಗೆ ಪರೀ­ಕ್ಪಿ­ತ­ರಾ­ಜ­ನಿಗೆ ಶುಕ­ಮುನಿ ಹೇಳಿದ ಅಸಂಖ್ಯ ಕತೆ­ಗಳ ಪೈಕಿ ಅಜಾ­ಮಿ­ಳನ ಕತೆಯೂ ಒಂದು. ಅದು ಹೀಗೆ ಆರಂ­ಭ­ವಾ­ಗು­ತ್ತದೆ;
ಪರೀ­ಕ್ಪಿ­ದ್ರಾಜ; ಗುರು­ದೇವಾ, ಅರಿತೋ ಅರಿ­ಯ­ದೆಯೋ ಪಾಪ ಮಾಡಿದ ಮೇಲೆ ನರ­ಕ­ಶಿ­ಕ್ಪೆ­ಯನ್ನು ಅನು­ಭ­ವಿ­ಸ­ಲೇ­ಬೇ­ಕ­ಲ್ಲವೆ? ಅದ­ರಿಂದ ತಪ್ಪಿ­ಸಿ­ಕೊ­ಳ್ಳಲು ಉಪಾ­ಯ­ವೇನು?
ಶುಕ­ಮುನಿ; ರೋಗಕ್ಕೆ ತಕ್ಕ ಚಿಕಿತ್ಸೆ ಮಾಡುವ ಹಾಗೆ, ಪಾಪಕ್ಕೆ ತಕ್ಕ ಪ್ರಾಯ­ಶ್ಚಿತ್ತ ಮಾಡಿ­ಕೊ­ಳ್ಳ­ಬೇಕು.
ಪರೀ­ಕ್ಪಿ­ದ್ರಾಜ; ಆನೆಯು ನೀರಿ­ನಲ್ಲಿ ಮುಳುಗಿ, ಪುನಃ ಮಣ್ಣನ್ನು ಮೈಮೇಲೆ ಎರ­ಚಿ­ಕೊ­ಳ್ಳುವ ಹಾಗೆ ಪ್ರಾಯ­ಶ್ಚಿತ್ತ ಮಾಡಿ­ಕೊಂಡು ಪುನಃ ಪಾಪ ಮಾಡಿ­ದರೆ?
ಶುಕ­ಮುನಿ;ಪ್ರಾ­ಯ­ಶ್ಚಿ­ತ್ತ­ವೆಂ­ಬುದು ರೋಗದ ಉಪ­ಶ­ಮ­ನ­ಕ್ಕಾಗಿ ತೆಗೆ­ದು­ಕೊ­ಳ್ಳುವ ಔಷಧಿ ಇದ್ದ­ಹಾಗೆ. ಅದ­ರಿಂದ ರೋಗ ಪೂರ್ತಿ ವಾಸಿ­ಯಾ­ಗು­ವು­ದೇನೂ ಇಲ್ಲ. ಕರ್ಮ­ದಿಂದ ಕರ್ಮಕ್ಕೆ ಪರಿ­ಹಾ­ರ­ವೆಂ­ದಿಗೂ ಆಗು­ವು­ದಿಲ್ಲ. ಪ್ರಾಯ­ಶ್ಚಿ­ತ್ತ­ದಿಂದ ತಾತ್ಕಾ­ಲಿ­ಕ­ವಾದ ಪಾಪ ನೀಗು­ತ್ತ­ದೆಯೇ ಹೊರತು ಹಿಂದು­ಮುಂ­ದಿನ ಕರ್ಮ ನಿವಾ­ರ­ಣೆ­ಯಾ­ಗದು.
ಪರೀ­ಕ್ಪಿತ; ಹಾಗಿ­ದ್ದರೆ ಕರ್ಮ ಬುಡ­ಸ­ಮೇತ ನಿರ್ಮೂಲ ಮಾಡು­ವುದು ಹೇಗೆ?
ಈ ಪ್ರಶ್ನೆಗೆ ಉತ್ತ­ರ­ವಾಗಿ ಶುಕ­ಮುನಿ ಕತೆ­ಯೊಂ­ದನ್ನು ಹೇಳು­ತ್ತಾರೆ. ಅದು ಅಜಾ­ಮಿಳ ಎಂಬ ಬ್ರಾಹ್ಮ­ಣನ ಕತೆ. ಅದು ಹೀಗೆ;
ಅಜಾ­ಮಿಳ ಕನ್ಯಾ­ಕು­ಬ್ಜದ ಪ್ರಜೆ. ವೇದ­ಪಾ­ರಂ­ಗತ. ಆಚಾ­ರ­ವಂತ. ಪರ­ಸ್ತ್ರೀ­ಯನ್ನು ಕಣ್ಣೆ­ತ್ತಿಯೂ ನೋಡ­ದ­ವನು, ದಯಾಳು, ಪರೋ­ಪ­ಕಾರಿ.
ಈತ ಒಮ್ಮೆ ಕಾಡಿಗೆ ಹೋದಾಗ ಸುಂದ­ರಿ­ಯಾದ ಹೆಣ್ಣೊ­ಬ್ಬ­ಳನ್ನು ನೋಡು­ತ್ತಾನೆ. ಅವಳು ಕಂಠ­ಪೂರ್ತಿ ಹೆಂಡ ಕುಡಿದು ಮತ್ತೇ­ರಿ­ದ್ದಾಳೆ. ಅವಳ ಜೊತೆ­ಗೊಬ್ಬ ಹುಡುಗ ಅವ­ಳಷ್ಟೇ ನಿರ್ಲಜ್ಜ ಸ್ಥಿತಿ­ಯಲ್ಲಿ ಕುಡಿದು ಮತ್ತೇ­ರಿ­ದ್ದಾನೆ. ಇಬ್ಬರೂ ವಿನೋದ ವಿಹಾ­ರ­ದಲ್ಲಿ ಮಗ್ನ­ರಾ­ಗಿ­ದ್ದಾರೆ.
ಅದನ್ನು ನೋಡಿದ ದಿನ­ದಿಂದ ಅಜಾ­ಮಿ­ಳನ ಬಾಳಿನ ದಾರಿ ಬೇರೆ­ಯಾ­ಯಿತು. ಆತ ಆ ಹೆಣ್ಣಿನ ಚಿಂತೆ­ಯಲ್ಲಿ ಮುಳು­ಗಿದ. ಅವ­ಳನ್ನು ಒಲಿ­ಸಿ­ಕೊ­ಳ್ಳುವ ಪ್ರಯ­ತ್ನಕ್ಕೆ ಬಿದ್ದ. ತನ್ನ ಮಡ­ದಿ­ಯನ್ನು ಮರೆತು ಸಂಪಾ­ದ­ನೆ­ಯ­ನ್ನೆಲ್ಲ ಅವಳ ಕಾಲ­ಡಿಗೆ ಸುರಿದ. ಮನೆ, ಆಸ್ತಿ ಎಲ್ಲರೂ ಕರ­ಗಿ­ಹೋಗಿ ನಿರ್ಗ­ತಿ­ಕ­ನಾದ. ಕೊನೆಗೆ ಮೋಸ, ವಂಚನೆ, ಕಳ್ಳ­ತನ ಮಾಡುವ ಮಟ್ಟ­ಕ್ಕಿ­ಳಿದ.
ಕ್ರಮೇಣ ಅದೇ ಅವನ ವೃತ್ತಿಯೂ ಆಗಿ­ಹೋ­ಯಿತು. ಹಣ­ವಿ­ಲ್ಲದ ದಿನ ಪ್ರಾಣಿ­ಗ­ಳನ್ನು ಕೊಂದು ಮಾಂಸ ತಿನ್ನುತ್ತಾ ಆತ ಕಾಲ­ಕ­ಳೆದ. ಹತ್ತು ಮಕ್ಕ­ಳಿದ್ದ ಅವನ ಕೊನೆಯ ಮಗನ ಹೆಸರು ನಾರಾ­ಯಣ. ಎಂಬ­ತ್ತೆಂ­ಟನೆ ವಯ­ಸ್ಸಿಗೆ ಕಾಯಿಲೆ ಬಿದ್ದು ಬಸ­ವ­ಳಿದ ಆತ ಕೊನೆಯ ಮಗ­ನಾದ ನಾರಾ­ಯ­ಣನ ಹೆಸರು ಕರೆ­ಯುತ್ತಾ ಆತ ತನ್ನ ಬಳಿ­ಯಲ್ಲೇ ಇರ­ಬೇಕು ಅಂತ ಬಯ­ಸು­ತ್ತಿದ್ದ. ಇಂತಿಪ್ಪ ಒಂದು ದಿನ ಅವನ ಮುಂದೆ ಯಮ­ದೂ­ತರು ಬಂದು ನಿಂತಾಗ ಅಜಾ­ಮಿಳ `ನಾ­ರಾ­ಯಣಾ' ಎಂದು ಮಗ­ನನ್ನು ಕೂಗಿ ಕರೆದ.
ತಕ್ಪಣ ಅಲ್ಲಿ ಯಮ­ದೂ­ತರ ಪಕ್ಕ­ದಲ್ಲಿ ದೇವ­ದೂ­ತರೂ ಪ್ರತ್ಯ­ಕ್ಪ­ರಾ­ದರು. ಯಮ­ದೂ­ತ­ರಿಗೂ ದೇವ­ದೂ­ತ­ರಿಗೂ ಜಗಳ ಶುರು­ವಾ­ಯಿತು. ಅಜಾ­ಮಿಳ ಮಹಾ­ಪಾ­ಪಿ­ಯೆಂದೂ ಆತ ಯಮ­ಲೋ­ಕಕ್ಕೆ ಸಲ್ಲ­ಬೇ­ಕೆಂದೂ ಯಮ­ದೂ­ತರು ವಾದಿ­ಸಿ­ದರು. ಮರ­ಣ­ಕಾ­ಲ­ದಲ್ಲಿ ಅಜಾ­ಮಿಳ ನಾರಾ­ಯಣ ಸ್ಮರಣೆ ಮಾಡಿ­ದ್ದ­ರಿಂದ ಅವನು ಯಮ­ಲೋ­ಕಕ್ಕೆ ಹೋಗ­ಕೂ­ಡ­ದೆಂದು ದೇವ­ದೂ­ತರು ವಾದ­ಕ್ಕಿ­ಳಿ­ದರು. ಅವ­ರಿ­ಬ್ಬರ ನಡುವೆ ಹೀಗೆ ಮಾತಾ­ಯಿತು;
ದೇವ­ದೂತ; ಧರ್ಮಾ­ಧ­ರ್ಮದ ನಿರ್ಣಯ ಹೇಗೆ?
ಯಮ­ದೂತ; ವೇದ ಒಪ್ಪಿದ್ದು ಧರ್ಮ. ಅದಕ್ಕೆ ವಿರೋ­ಧ­ವಾ­ದದ್ದು ಅಧರ್ಮ. ಭಗ­ವಂತ ವೇದ­ಸ್ವ­ರೂಪ. ಆದ್ದ­ರಿಂದ ಅಧರ್ಮ ಮಾಡಿ­ದ­ವನು ಶಿಕ್ಪಾರ್ಹ.
ದೇವ­ದೂತ; ಜಗ­ತ್ತಿನ ಎಲ್ಲರೂ ಮಾಡುವ ಪಾಪ­ಗ­ಳನ್ನು ನೀವು ಕಣ್ಣಿಟ್ಟು ನೋಡು­ತ್ತೀರೋ?
ಯಮ­ದೂತ; ನಾವು ನೋಡ­ದಿ­ದ್ದರೂ ಸೂರ್ಯ, ಅಗ್ನಿ, ಆಕಾಶ, ದೇವ­ತೆ­ಗಳು, ಗೋವು­ಗಳು, ಚಂದ್ರ, ಸಂಧ್ಯೆ, ಜಲ, ಭೂಮಿ, ಕಾಲ, ಯಮ­ಧರ್ಮ ಎಂಬ ಹನ್ನೊಂದು ಮಂದಿ ಸದಾ ನೋಡು­ತ್ತಿ­ರು­ತ್ತಾರೆ.
ದೇವ­ದೂತ; ಹಾಗಿ­ದ್ದರೆ ಮನು­ಷ್ಯರು ಒಳ್ಳೆಯ ಕೆಲ­ಸ­ಗ­ಳನ್ನೇ ಮಾಡುತ್ತಾ ದೇವರ ಪ್ರೀತಿಗೆ ಪಾತ್ರ­ರಾಗಿ ಸುಖ­ವಾಗಿ ಇರು­ವು­ದಿಲ್ಲ ಯಾಕೆ?
ಯಮ­ದೂತ; ಇರ­ಬ­ಹುದು, ಆದರೆ ಇರು­ವು­ದಿ­ಲ್ಲ­ವಲ್ಲ? ಅವ­ರಿ­ಗದು ಸಾಧ್ಯ­ವಲ್ಲ. ಇಂದಿನ ದೇಹ­ಪೋ­ಷ­ಣೆಗೆ ಅಗ­ತ್ಯ­ವಾದ ಕೆಲಸ ಮಾಡುತ್ತಾ ಪಾಪ­ಗ­ಳನ್ನೂ ಮಾಡು­ತ್ತಾರೆ.
ದೇವ­ದೂತ; ಕೆಲಸ ಮಾಡು­ವುದು ದೇಹ, ಅದೇ ಬಿದ್ದು ಹೋದ ಮೇಲೆ ಶಿಕ್ಪೆ ಯಾರಿಗೆ?
ಯಮ­ದೂತ; ಪಂಚ­ಭೂ­ತ­ಗ­ಳಿಂ­ದಾದ ಈ ದೇಹ­ದಲ್ಲಿ ಐದು ಕರ್ಮೇಂ­ದ್ರಿ­ಯ­ಗ­ಳಿವೆ. ಇವು ಮನ­ಸ್ಸಿಗೆ ಅಧೀನ. ಸ್ಥೂಲ­ದೇಹ ಬಿದ್ದು ಹೋದರೂ ಲಿಂಗ­ದೇಹ ಅವ­ನಿಗೆ ಅಂಟಿ­ಕೊಂ­ಡಿ­ರು­ತ್ತದೆ. ಅದು ಈ ಜನ್ಮದ ಪಾಪ­ಗ­ಳನ್ನು ಹೊತ್ತು­ಕೊಂಡೇ ಮುಂದಿನ ಜನ್ಮಕ್ಕೆ ಹೋಗು­ತ್ತದೆ.
ದೇವ­ದೂತ; ಅದೆಲ್ಲ ಸರಿ, ಆದರೆ ನೀವೊಂದು ತಪ್ಪು ಮಾಡಿ­ದ್ದೀರಿ. ಅಜಾ­ಮಿಳ ಸಾಯುವ ಕಾಲಕ್ಕೆ ನಾರಾ­ಯಣ ಎಂದು ವಿಷ್ಣು­ವಿನ ಹೆಸರು ಕರೆ­ದಿ­ದ್ದಾನೆ. ಹೀಗಾಗಿ ಅವನ ಪಾಪ­ಗ­ಳೆಲ್ಲ ನಾಶ­ವಾ­ಗಿವೆ.
ಯಮ­ದೂತ; ಆದರೆ ಅಜಾ­ಮಿಳ ಕರೆ­ದದ್ದು ಹರಿ­ಯ­ನ್ನಲ್ಲ, ತನ್ನ ಮಗ­ನನ್ನು.
ದೇವ­ದೂತ; ಆದ­ರೇ­ನಂತೆ. ತಿಳಿದೋ ತಿಳಿ­ಯ­ದೆಯೋ ದೇವರ ಹೆಸರು ಕೂಗಿ­ದರೆ ಪಾಪ ನಾಶ­ವಾ­ಗು­ತ್ತದೆ. ತಿಳಿ­ಯದೇ ಔಷಧಿ ಕುಡಿ­ದರೆ ರೋಗ ಗುಣ­ವಾ­ಗು­ವು­ದಿ­ಲ್ಲವೇ?
ಅಲ್ಲಿಗೆ ವಾದ ಮುಗಿ­ಯು­ತ್ತದೆ. ಯಮ­ದೂ­ತರು ವಿಷ್ಣು­ದೂ­ತರ ಮಾತಿಗೆ ಗೌರವ ಕೊಟ್ಟು ಅಜಾ­ಮಿ­ಳ­ನನ್ನು ಬಿಡು­ತ್ತಾರೆ. ಅಜಾ­ಮಿಳ ವಿಷ್ಣು­ಸ­ನ್ನಿ­ಧಿ­ಯನ್ನು ಸೇರು­ತ್ತಾನೆ.
ತುಂಬ ಸರ­ಳ­ವಾದ ಉಪಾ­ಯ­ವೊಂ­ದನ್ನು ಶುಕ­ಮುನಿ, ಪರೀ­ಕ್ಪಿ­ತ­ನಿಗೆ ಬೋಧಿ­ಸಿ­ದ್ದಾರೆ. ಪಾಪ­ನಾ­ಶಕ್ಕೆ ನಾಮ­ಸ್ಮ­ರ­ಣೆ­ಗಿಂತ ಒಳ್ಳೆಯ ಉಪಾಯ ಬೇರೊಂ­ದಿಲ್ಲ. ಅದಕ್ಕೇ ಹಿಂದಿನ ಕಾಲದ ಮಂದಿ ಮಕ್ಕ­ಳಿಗೆ ಶಂಕರ, ನಾರಾ­ಯಣ ಎಂಬಿ­ತ್ಯಾದಿ ಹೆಸ­ರಿ­ಡು­ತ್ತಿ­ದ್ದರು.
ತಮಾ­ಷೆ­ಯೆಂ­ದರೆ ಈಗಿನ ಕೆಲವು ಹೆಸ­ರು­ಗಳು ಕೂಡ ಆ ಅರ್ಥದಲ್ಲಿ ಪಾಪೋಹಂ ಆಗಿವೆ. ಉದಾ­ಹ­ರ­ಣೆಗೆ ಮಿಲನ್, ರತಿ, ಮಿಥುನ್!

Friday, May 18, 2007

ಅಂಥ ಸುಂದರಿಯನ್ನೂ ಅವನು ಕಣ್ಣೆತ್ತಿ ನೋಡಲಿಲ್ಲ!

ಓದುತ್ತಾ ಕುಳಿತರೆ ಬೆರಗುಗೊಳಿಸುವುದು ಇವತ್ತಿಗೂ ಕುಮಾರವ್ಯಾಸನ ಭಾರತ. ಅದರಲ್ಲಿ ಬರುವ ಪ್ರತಿಯೊಂದು ಪ್ರಸಂಗದ ಕುರಿತೂ ಸುದೀರ್ಘವಾಗಿ ಬರೆಯಬಹುದು. ಬಿಡಿಸುತ್ತಾ ಹೋದಂತೆ ಅರಳಿಕೊಳ್ಳುತ್ತಾ ಹೋಗುವ ಪದ್ಯಗಳನ್ನು ಕುಮಾರವ್ಯಾಸ ಬರೆದಿದ್ದಾನೆ.
ಈ ಪ್ರಸಂಗದಲ್ಲಿ ರಸಿಕ ಶಿಖಾಮಣಿ ಎಂದು ಕರೆಸಿಕೊಂಡ ಅರ್ಜುನ ಕೂಡ ಸಂಯಮದಿಂದ ವರ್ತಿಸಿದ ಒಂದು ಸನ್ನಿವೇಶದ ಚಿತ್ರಣ ಇದೆ. ಅನೇಕ ಕಾರಣಗಳಿಗೆ ಇದು ನನಗಿಷ್ಟ. ಇದರಲ್ಲಿ ಅರ್ಜುನನಾಗಿ ರಾಜ್ ಕುಮಾರ್ , ಊರ್ವಶಿಯಾಗಿ ಜಯಪ್ರದ ನಟಿಸಿದ್ದರೆ ಹೇಗಿರುತ್ತಿತ್ತು ಅಂತ ಇದನ್ನು ಓದುವಾಗೆಲ್ಲ ಅನ್ನಿಸುತ್ತಿತ್ತು.ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೋ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿದೇವತೆಯೋ ವರ್ಣಿಸುವೊಡರಿದೆಂದ

ಕುಮಾರವ್ಯಾಸ ಶೃಂಗಾರರಸಕ್ಕೆ ಇಳಿದನೆಂದರೆ ಅವನದು ನಿಜಕ್ಕೂ ಕಂಠಪತ್ರದ ಉಲುಹುಗೆಡದಗ್ಗಳಿಕೆಯೇ! ಚೆಲುವೆಯರ ರೂಪವನ್ನು ಹಾಗೇ ಮನಸ್ಸಿನ ಮುಂದೆ ಸಾಕಾರಗೊಳ್ಳುವಂತೆ ವರ್ಣಿಸುತ್ತಾನೆ ಅವನು. ದ್ರೌಪದಿಯ ವರ್ಣನೆಯೇ ಇರಬಹುದು. ಅರಣ್ಯಪರ್ವದಲ್ಲಿ ಬರುವ ಊರ್ವಶಿಯ ಸೊಬಗಿನ ವರ್ಣನೆಯೇ ಇರಬಹುದು, ಅವನದ್ದು ಅಖಂಡ ರಸಿಕತೆ. ಶೃಂಗಾರಕ್ಕಿಳಿದರೆ ಅವನಿಗೆ ಅಲ್ಲಿ ಯಾವ ಸಂಕೋಚವೂ ಇಲ್ಲ. ಏನು ಮಾಡಿದರೂ ಮಾಫಿ. ಏನು ನೋಡಿದರೂ ಮಾಫಿ!
ಕುಮಾರವ್ಯಾಸನ ವರ್ಣನೆಗೆ ಊರ್ವಶಿಯೇ ಆಗಬೇಕು ಅಂತೇನಿಲ್ಲ. ಅದು ದ್ರೌಪದಿಯಾದರೂ ಸರಿಯೇ. ಕಥಾನಾಯಕಿಯನ್ನೂ ಕುಮಾರವ್ಯಾಸ ಅಪ್ಪಟ ರಸಿಕತೆಯಿಂದ ವರ್ಣಿಸುತ್ತಾನೆ;
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ

ಇದನ್ನು ವಿವರಿಸುವ ಅಗತ್ಯವಿಲ್ಲ. ಇದರ ಮುಂದಿನ ಸಾಲಲ್ಲಿ ಕುಮಾರವ್ಯಾಸ ಮತ್ತೂ ರಸಿಕನಾಗುತ್ತಾನೆ; ಹೊಲಬುಗೆಡವೇ ಹೊಳೆವ ವಕ್ಪಸ್ಥಳದೊಳಗೆ ಜನದೃಷ್ಟಿ.. ಅವಳ ಹೊಳೆವ ಎದೆಯೊಳಗೆ ಸಿಲುಕಿದ ದೃಷ್ಟಿ ದಾರಿತಪ್ಪುತ್ತದಂತೆ. ಹೆಣ್ಣು ಹೇಗಿರಬೇಕು ಅನ್ನುವ ವಿವರವನ್ನೂ ಅವನು ಕೊಡುತ್ತಾನೆ;
ಅಸಿಯ ನಡುವಿನ ನಿಮ್ನನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಜಾನು ಜಂಘೆಯ ಚರಣ ಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪ...
ಸಪೂರ ಸೊಂಟ, ಗುಳಿಬಿದ್ದ ಹೊಕ್ಕಳು, ಎದೆಯ ನಡುವಿನಿಂದ ಹೊಕ್ಕಳಿನ ತನಕ ರೇಖಾಕೃತಿಯಲ್ಲಿರುವ ಕಂಡೂ ಕಾಣದಂತಿರುವ ತೆಳುಕೂದಲ ಸಾಲು, ತುಂಬುಸ್ತನ, ಹೊಳೆಯುವ ತೊಡೆ, ಮಿನುಗುವ ಮೀನಖಂಡ... ಹೀಗೆ ವರ್ಣನೆ ಸಾಗುತ್ತದೆ. ಸಣ್ಣ ಸಣ್ಣ ವಿವರಗಳನ್ನು ಕೂಡ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾನೆ ಅವನು. ಗಂಡಸಿನ ಸೌಂದರ್ಯವನ್ನು ಭರತೇಶವಭವದಲ್ಲಿ ವರ್ಣಿಸಿದಷ್ಟೇ ಸೊಗಸಾಗಿ ಇಲ್ಲಿ ಹೆಣ್ಣಿನ ಸೌಂದರ್ಯದ ವಿವರಗಳು ಬರುತ್ತವೆ.
ಆದರೆ ಊರ್ವಶಿ ಮತ್ತು ಅರ್ಜುನರ ಪ್ರೇಮ ಪ್ರಕರಣವನ್ನು ವರ್ಣಿಸುವ ರೀತಿಯೇ ಬೇರೆ.
ಬಂದಳೂರ್ವಶಿ ಬಳ್ಳಿ ಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜ ಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾರವದ ಸೊಗ
ಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ

ಸುಳಿ ಮಿಂಚ ಬಳ್ಳಿಯ ನಡುವೆ ಮರಿಮುಗಿಲೊಂದು ಇಳಿದ ಹಾಗೆ ಪಲ್ಲಕ್ಕಿಯಿಂದ ಊರ್ವಶಿ ಇಳಿದು ಬಂದಳು ಅನ್ನುತ್ತಾನೆ ಕುಮಾರವ್ಯಾಸ. ಹೆಣ್ಣನ್ನು ಹೋಲಿಸುವ ಹೊತ್ತಿಗೆ ಅವನು ಆಶ್ಚರ್ಯಕರವಾಗಿ ಮುಗಿಲನ್ನು ಹೋಲಿಕೆಯಾಗಿ ತೆಗೆದುಕೊಳ್ಳುತ್ತಾನೆ. ಸಾಮಾನ್ಯವಾಗಿ ಎಲ್ಲರೂ ಮುಗಿಲನ್ನು ಹೋಲಿಕೆಯಾಗಿ ತೆಗೆದುಕೊಳ್ಳುವುದು ಮುಂಗುರುಳಿಗೆ. ಕುಮಾರವ್ಯಾಸ ಅದಕ್ಕೇ ವಿಶಿಷ್ಟ.

ಈ ಕತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇವತೆಗಳ ಶತ್ರುಗಳನ್ನು ಗೆದ್ದ ಅರ್ಜುನನನ್ನು ಇಂದ್ರ ಕರೆಸಿಕೊಂಡಿದ್ದಾನೆ. ಅವನಿಗೆ ಸನ್ಮಾನ ಗೌರವ ನಡೆಯುತ್ತದೆ. ಇಂದ್ರನ ಮಗನೂ ಆಗಿದ್ದರಿಂದ ಅರ್ಜುನನಿಗೆ ವಿಶೇಷ ಮರ್ಯಾದೆಯಿದೆ.
ಆಮೇಲೆ ಅರ್ಜುನನಿಗೆ ಜೊತೆಯಾಗಲು ಊರ್ವಶಿಯನ್ನು ಕಳುಹಿಸಿಕೊಡುತ್ತಾನೆ ಇಂದ್ರ. ಊರ್ವಶಿ ಅತೀವ ಸಂತೋಷದಿಂದ ಅರ್ಜುನನನ್ನು ನೋಡಲು ಬರುತ್ತಾಳೆ. ಅರ್ಜುನ ಉಳಿದುಕೊಂಡಿದ್ದ ಮನೆಯ ಮುಂದೆ ಅವಳು ಮೇನೆಯಿಂದ ಇಳಿಯುವುದು ಹೀಗೆ;
ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಯೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕಂಡಳಂಗನೆ ಮಣಿಯ ಮಂಚದಲಿ
ನವಿಲುಗಣ್ಣಿನ ಹೆಣ್ಣುಗಳು ಬಾಗಿಲು ಬಾಗಿಲಲ್ಲಿ ನಿಂತಿದ್ದರು. ಅಂತಃಪುರದ ಬಾಗಿಲಲ್ಲಿ ಚಾಮರದ ಜೊತೆ ಚಪಲೆಯರಿದ್ದರು, ಹೆಣ್ಣನ್ನು ಚಂಚಲೆ ಅನ್ನುವ ಬದಲು ಚಪಲೆ ಅನ್ನುತ್ತಾರೆ ಕುಮಾರವ್ಯಾಸ. ಅವರ ನಡುವೆ ಆ `ಗರುವೆ' ಶತಯಾಗ ಸುತನನ್ನು ಮಣಿಯ ಮಂಚದಲ್ಲಿ ನೋಡುತ್ತಾಳಂತೆ. ಶತಯಾಗ ಅಂದರೆ ಇಂದ್ರ. ನೂರು ಅಶ್ವಮೇಧ ಯಾಗಗಳನ್ನು ಮಾಡಿದವನು ಇಂದ್ರ, ಅರ್ಜುನ ಇಂದ್ರನ ಮಗ ಅನ್ನುವುದನ್ನು ಉದ್ದಕ್ಕೂ ಹೇಳುತ್ತಲೇ ಬರುತ್ತಾನೆ ಕವಿ. ಅದಕ್ಕೆ ಕಾರಣ ಮುಂದೆ ಸಿಗುತ್ತದೆ.
ಆಕೆ ಒಳಗೆ ಬರುತ್ತಾಳೆ. ಅವಳ ಕುಡಿನೋಟದಲ್ಲಿ ಬೆಳಕು ಸೂಸುತ್ತದೆ. ತನ್ನ ಗೆಳತಿಯರ ಕೊರಳಿನ ಸುತ್ತ ಕೈಹಾಕಿಕೊಂಡು ಆಕೆ ಅವನ ಮಂದೆ ನಿಲ್ಲುತ್ತಾಳೆ. ತರುಣಿ ನಿಂದಳು ನೃಪಕುಲತಿಲಕನ ಅಂಗೋಪಾಂಗದಲಿ ಹರಹಿದಳು ಕಣ್ಮನವಾ..
ಅಷ್ಟು ಹೊತ್ತಿಗೆ ಅರ್ಜುನ ಮಲಗಿದ್ದ. ಆಕೆಯ ಆಗಮನದಿಂದ ಮಲಗಿದ್ದವನ ಎದೆಯೊಳಗೂ ನದಿಯೊಂದು ಓಡಿದಂತಾಗುತ್ತದೆ. ಆತ ಎದ್ದು ನೋಡುತ್ತಾನೆ; ಮೈ ಮುರಿದು ಕಂಡನಪೂರ್ವ ಪರಿಮಳ ಸಾರ್ಥದಲಿ ಪಾರ್ಥ, ಕರಣ ಲಹರಿಯ ದಿವ್ಯ ರತ್ನಾಭರಣ ರುಚಿರತರ ಪ್ರಭಾ ಪಂಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ..
ಆಗ ಎಚ್ಚರಾಗುತ್ತದೆ ಅವನ ವಿವೇಕ. ಆ ಸೌಂದರ್ಯವನ್ನು ನೋಡಿಯೂ ಆತ ಸ್ಥಿಮಿತ ಕಳಕೊಳ್ಳುವುದಿಲ್ಲ ಅನ್ನುವುದನ್ನು ಸೂಚಿಸುತ್ತಾನೆ ಕುಮಾರವ್ಯಾಸ. ಬಂದವಳು ಊರ್ವಶಿ, ಇಂದ್ರನ ರಾಣಿ. ಇಂದ್ರ ತನಗೆ ತಂದೆ. ಅವನ ಅಂತಃಪುರದೊಳಗೆ ಇರುವ ಊರ್ವಶಿ ತನಗೆ ತಾಯಿ ಸಮಾನ. ಆತ ಥಟ್ಟನೆ ಯಾವ ತಪ್ಪು ಅಭಿಪ್ರಾಯಕ್ಕೂ ಅವಕಾಶ ಕೊಡದೇ ಕೇಳುತ್ತಾನೆ;
ಈ ಮಗನಿಂದ ಏನಾಗಬೇಕಿತ್ತು ಹೇಳಿ?
ಊರ್ವಶಿ ಅದನ್ನು ನಿರೀಕ್ಪಿಸಿರಲೇ ಇಲ್ಲ.
ನುಡಿಗೆ ಬೆರಗಾದಳು, ಮನೋಜನ ಸಡಗರಕೆ ತೆಕ್ಕಿದಳು, ಪಾರ್ಥನ ನಡವಳಿಗೆ ಮೆಚ್ಚಿದಳು, ಬೆಚ್ಚಿದಳಂಗಜಾಸ್ತ್ರದಲಿ. ಕಡುಗಿದಳು ಖಾತಿಯಲಿ ಲಜ್ಜೆಯ ಬಿಡೆಯದಲಿ ಭಯಗೊಂಡಳಂಗನೆ ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ.
ಅವಳಿಗೆ ಆಗ ಅನ್ನಿಸಿದ್ದಿಷ್ಟು; ಇವನು ವಿಕಲ ಮತಿಯೋ ನಪುಂಸಕನೋ ಜಡಭರತನೋ ಶ್ರೋತ್ರಿಯನೋ ರೋಗಗ್ರಸ್ತನೋ ಖಳನೋ ಖೂಳನೋ ಅಥವಾ ಇದೊಂದು ಮಾನವ ವಿಕಾರವೇ? ತನ್ನ ಎಡಗಾಲಿನಿಂದ ವಿಕಟ ತಪಸಿನ ದೇವ ದಾನವರ ಕಿರೀಟವನ್ನೇ ಒದ್ದಂಥ ಈ ಸುಂದರಿಗೆ ಇಂಥ ಅಪಮಾನವೇ..
ಅಲ್ಲಿ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯುತ್ತದೆ. ಹೇಗಾದರೂ ಅರ್ಜುನನನ್ನು ಪಡೆದೇ ತೀರುತ್ತೇನೆ ಎಂಬಂತೆ ಊರ್ವಶಿ ಮುನ್ನುಗ್ಗುತ್ತಾಳೆ. ಆತನ ನಿರಾಕರಣೆ ತನ್ನ ಸೌಂದರ್ಯಕ್ಕೇ ಒಡ್ಡಿದ ಸವಾಲು ಎಂದು ನಿರ್ಧರಿಸುತ್ತಾಳೆ. ಅರ್ಜುನ ತರ್ಕಬದ್ಧವಾಗಿಯೇ ತನ್ನ ವಾದ ಮಂಡಿಸುತ್ತಾನೆ; ನೋಡಮ್ಮಾ ನೀನು ಬಹಳ ಹಿಂದೆ ನಮ್ಮ ಕುಲದ ಹಿರಿಯನಾದ ಪುರೂರವನ ಹೆಂಡತಿಯಾಗಿದ್ದೆ. ಅವನ ಮಗ ಆಯು. ಅವನ ಮಗ ನಹುಷ. ಆಮೇಲೆ ನಹುಷನಿಂದ ನಮ್ಮ ರಾಜಪರಂಪರೆ ಹುಟ್ಟಿತು. ಹೀಗಾಗಿ ನೀವು ನಮ್ಮ ಹಿರಿಯಜ್ಜಿ ಅನ್ನುತ್ತಾನೆ. ಅದಕ್ಕೆ ಆಕೆ ಹೇಳುತ್ತಾಳೆ; ಇಂಥ ಲೆಕ್ಕಾಚಾರವೆಲ್ಲ ಪಕ್ಕಕ್ಕಿಡು. ಅದೇನಿದ್ದರೂ ನಿಮ್ಮ ಜಗತ್ತಿನದು. ಇಲ್ಲಿ ಅದೆಲ್ಲ ಇಲ್ಲ. ತಾತಮುತ್ತಾತ ಮರಿತಾತ ಎಲ್ಲರಿಗೂ ನಾನೊಬ್ಬಳೇ. ಸುಮ್ಮನೆ ಬಂದು ನನ್ನನ್ನು ಸ್ವೀಕರಿಸು ಅಂತಾಳೆ ಆಕೆ.
ಅರ್ಜುನ ಅದಕ್ಕೊಂದು ವಾದ ಮಂಡಿಸುತ್ತಾನೆ; ನಿಮ್ಮ ರೀತಿನೀತಿ ಬೇರೆ ಅಂತೀರಿ ಒಪ್ಪಿಕೊಳ್ಳೋಣ. ಆದರೆ ನಾನು ಮನುಷ್ಯ. ಈ ಜನ್ಮದಲ್ಲಿ ಅದರ ಧರ್ಮ ಪಾಲಿಸುತ್ತೇನೆ. ಸತ್ತು ದೇವಲೋಕಕ್ಕೆ ಬಂದ ಮೇಲೆ ಮುಂದಿನ ಮಾತು. ಊರ್ವಶಿ ಅದಕ್ಕೆ ಗೇಲಿ ಮಾಡುತ್ತಾಳೆ;
ಅಹುದಹುದಲೇ ಶ್ರೌತಪಥದಲಿ
ಬಹಿರಿ ನೀವೇ ಸ್ಮಾರ್ತವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ..
ಒಂದು ಹೆಣ್ಣನ್ನು ಐದು ಮಂದಿ ಅನುಭವಿಸ್ತಾ ಇರೋ ನೀವು ಬಲು ಪ್ರಾಮಾಣಿಕರು ಬಿಡಿ ಅಂತ ಗೇಲಿ ಮಾಡುತ್ತಾಳೆ ಊರ್ವಶಿ. ಏನು ಹೇಳಿದರೂ ಆಕೆ ಒಪ್ಪದೇ ಇರುವಾಗ ಊರ್ವಶಿ ಸಿಟ್ಟಾಗುತ್ತಾಳೆ. ಅವಳು ಬೈಯುವ ಭಾಷೆ ಕೂಡ ಅಷ್ಟೇ ಕಟುವಾಗಿದೆ. ಅವಳ ಸೌಂದರ್ಯಕ್ಕೂ ಆ ಭಾಷೆಗೂ ಸಂಬಂಧವೇ ಇಲ್ಲವೇನೋ ಅನ್ನುವಂತಿದೆ;

ಎಲವೋ ಭಂಡರ ಭಾವ, ಖೂಳರ ನಿಳಯ, ಖಳರಧಿನಾಥ, ವಂಚಕ ತಿಲಕ, ಗಾವಿಲರೊಡೆಯ, ದುಷ್ಟನಾಯಕರ ಬಂಧು.. ಹಾಗಂತ ಬೈದು ಆಕೆ ಶಪಿಸುತ್ತಾಳೆ;
ನರಮೃಗಾಧಮ ನಿಮ್ಮ ಭಾರತ ವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು. ಹೋಗಿ ಯಾರ ಹತ್ರ ಬೇಕಾದ್ರೂ ಹೇಳಿಕೋ ಆದರೆ ಈ ಶಿಕ್ಪೆ ನಿನಗೆ ತಪ್ಪದು.
ಅರ್ಜುನ ಅಂದುಕೊಳ್ಳುತ್ತಾನೆ;
ತಪಸ್ಸು ಮಾಡಿದಾಗ ಪಾಶುಪತ ಸಿಕ್ಕಿತು. ಧರ್ಮವೇ ತಪಸ್ಸು ಎಂದು ಆಚರಿಸಿದ್ದಕ್ಕೆ ಸಿಕ್ಕಿದ್ದು ಈ ಷಂಡತನದ ಶಾಪ!
ಇಂಥ ನಾಟಕೀಯ ಕತೆಯೊಳಗಿನ ರೋಚಕತೆ, ಶೃಂಗಾರ ಮತ್ತು ಊರ್ವಶಿಯ ವ್ಯಾಮೋಹವನ್ನೂ ಮೀರುವ ಅರ್ಜುನನ ನಿಲುವು ಗಮನಾರ್ಹ.


ಚಿತ್ರ- ರವಿವರ್ಮನ ಕಲಾಕೃತಿ. ದ್ರೌಪದಿ ಸೈರಂಧ್ರಿಯಾಗಿ ಸುದೇಷ್ಣೆಯ ಅಪ್ಪಣೆಯ ಮೇರೆಗೆ ಕೀಚಕನಿಗೆ ಹಾಲು-ಜೇನು ಕೊಂಡೊಯ್ಯುತ್ತಿದ್ದಾಳೆ.
ಚಿತ್ರಕೃಪೆ-http://commons.wikimedia.org/wiki/Raja_Ravi_Varma

Saturday, May 12, 2007

ತುಳ­ಸೀ­ಪೂಜೆ ಮಾಡ­ಬೇಕಾ? ಮನೆ­ಮುಂದೆ ತುಳ­ಸೀ­ಕಟ್ಟೆ ಇರ­ಬೇಕಾ?

ನೀವು ತುಳ­ಸೀ­ಪೂಜೆ ಮಾಡೋಲ್ವಾ?
ಹಾಗೊಂದು ಪ್ರಶ್ನೆ ಎದು­ರಾ­ಯಿತು. `ತು­ಳಸೀ' ಅಂದ­ರೇನು? -ಮ­ರು­ಪ್ರಶ್ನೆ ಬಂತು. ನಿಮ್ಮ ಮನೆ ಮುಂದೆ ತುಳ­ಸೀ­ಕ­ಟ್ಟೆಯೂ ಇಲ್ವಾ? ಗಾಬ­ರಿಯ ಪ್ರಶ್ನೆ ಎದು­ರಾ­ಯಿತು. ತುಳ­ಸೀಗೆ ಕಟ್ಟೇನಾ? ಇಲ್ಲಿ ಅಚ್ಚ­ರಿ­ಯಿತ್ತು. ತುಳಸಿ, ಯೂ ನೋ, ಇಟ್ಸ್ ಎ ಪ್ಲಾಂಟ್. ವೆರಿ ಆಸ್ಪೀ­ಶಿ­ಯಸ್ ಅಂತ ಉದ್ಗಾ­ರ­ವಾ­ಯಿತು. ದೂರ­ದ­ಲ್ಲೆಲ್ಲೋ ವಿದ್ಯಾ­ಭೂ­ಷ­ಣರು ಹಾಡಿದ ಹಾಡು ಅನು­ರ­ಣಿ­ಸು­ತ್ತಿತ್ತು;
ಒಂದು ದಳ ಶ್ರೀತು­ಳ­ಸಿ
ಬಿಂದು ಗಂಗೋ­ದ­ಕ­ವು
ಇಂದಿ­ರಾ­ರ­ಮ­ಣಗೆ ಅರ್ಪಿ­ತ­ವೆ­ನು­ತ
ಒಂದೇ ಮನ­ಸಿ­ನ­ಲಿ ಸಿಂಧು­ಶ­ಯನ
ಮುಕುಂ­ದ­ನ­­ ನೆ­ನ­ದರೆ ಎಂದೆಂದೂ
ವಾಸಿ­ಸುವ ಮಂದಿ­ರ­ದೊ­ಳ­ಗೆ­....

ಮನಸ್ಸು ಗೊಂದ­ಲ­ಪುರಿ!
ತುಳ­ಸೀ­ಪೂಜೆ ಮಾಡ­ಬೇಕಾ? ಮನೆ­ಮುಂದೆ ತುಳ­ಸೀ­ಕಟ್ಟೆ ಇರ­ಬೇಕಾ? ಇನ್ಫೋ­ಸಿ­ಸ್ ನಲ್ಲಿ ಕೆಲಸ ಮಾಡು­ವ­ವನು ಗೋಪೂಜೆ ಯಾಕೆ ಮಾಡ­ಬೇಕು? ಅದ­ಕ್ಕೋ­ಸ್ಕರ ಒಂದು ದಿನದ ಮಟ್ಟಿಗೆ ಅದೆ­ಲ್ಲಿಂ­ದಲೋ ಗೋವು­ಗ­ಳನ್ನು ಕರೆ­ಸಿ­ಕೊಂಡು ಪೂಜೆ ಮಾಡೋ­ದ­ರಿಂದ ಏನು ಪ್ರಯೋ­ಜನ? ಯಾವುದೋ ಪತ್ರಿ­ಕೆ­ಯಲ್ಲಿ ಕೆಲಸ ಮಾಡುವ ಗಂಡ, ಬ್ಯಾಂಕಿ­ನಲ್ಲಿ ದುಡಿಯೋ ಹೆಂಡತಿ, ಕಾನ್ವೆಂ­ಟಿ­ನಲ್ಲಿ ಓದೋ ಹುಡು­ಗ­ನಿಗೆ ದೀಪಾ­ವಳಿ ಯಾಕೆ? ಜೊತೆಗೇ ಕ್ಲಬ್ಬಿಗೆ ಹೋಗಿ ಬರುವ ಹೆಂಡ­ತಿಗೆ ಭೀಮನ ಅಮಾ­ವಾಸ್ಯೆ ಬೇಕೆ?
ನಮಗೆ ಅಲ್ಲೂ ಇರುವ, ಇಲ್ಲೂ ಇರುವ ಆಸೆ! ಅದನ್ನು ಬಿಡುವ ಧೈರ್ಯ­ವಿಲ್ಲ; ಇದರ ಮೇಲೆ ನಂಬಿ­ಕೆ­ಯಿಲ್ಲ. ಅದು ಅಪ್ಪನ ಆಸ್ತಿ­ಯಂತೆ ಪಿತ್ರಾ­ರ್ಜಿತ; ಇದು ಸ್ವಂತ ದುಡಿ­ಮೆಯ ಸ್ವಯಾ­ರ್ಜಿತ. ಸ್ವಯಾ­ರ್ಜಿ­ತದ ಜೊತೆಗೆ ಪಿತ್ರಾ­ರ್ಜಿ­ತವೂ ಇರಲಿ ಎಂಬ ಆಸೆ. ಅಲ್ಲಿಂದ ಬಂದಿ­ದ್ದ­ನ್ನೆಲ್ಲ ಒಂದು ಕೋಣೆ­ಯ­ಲ್ಲಿಟ್ಟು ಬೀಗ ಜಡಿದು ವರು­ಷ­ಕ್ಕೊಮ್ಮೆ ಬಾಗಿಲು ತೆರೆದು ನೋಡಿ `ಆಹಾ' ಎಂದು ಹಳೆಯ ಕಮಟು ವಾಸ­ನೆಗೆ ಬೆರ­ಗಾಗಿ, ಇಂಥ ವಾಸನೆ ಈಗೆ­ಲ್ಲಿ­ಹೋ­ಯಿತು ಅಂತ ಮೂಗನ್ನು ವಿಸ್ಕಿ ಬಾಟ­ಲಿಗೆ ತಿಕ್ಕಿ ಹೊಳಪು ಮಾಡಿ­ಕೊಂಡು ಹೊರ­ಟು­ಬಿ­ಡು­ತ್ತೇವೆ ನಮ್ಮದೇ ಆದ ರೂಟಿಗೆ, ಬೇಟೆಗೆ! ಬದುಕು ಮಾಯೆಯ ಮಾಟ; ಮಾತು `ನೆ­ರೆ­ತೊರೆ'ಯಾಟ!
***
ಹಬ್ಬಕ್ಕೆ ಇವ­ತ್ತಿಗೂ ರಜೆ; ಸ್ವಾತಂತ್ರ ದಿನಾ­ಚ­ರ­ಣೆಯ ಹಾಗೆ. ನಾಗ­ರ­ಪಂ­ಚ­ಮಿ­ಯಿಂದ ತುಳ­ಸೀ­ಪೂ­ಜೆಯ ತನಕ ನಡುವೆ ಹತ್ತಾರು ಹಬ್ಬ­ಗಳು. ಬಲಿ­ಪಾಡ್ಯ, ಸೋಮನ ಬಿದಿಗೆ, ಅಕ್ಪಯ ತದಿಗೆ, ಗಣೇ­ಶನ ಚೌತಿ, ನಾಗ­ರ­ಪಂ­ಚಮಿ, ಕುಕ್ಕೆ ಷಷ್ಠಿ, ರಥ­ಸ­ಪ್ತಮಿ, ಕೃಷ್ಣಾ­ಷ್ಟಮಿ, ಮಹಾ­ನ­ವಮಿ, ವಿಜ­ಯ­ದ­ಶಮಿ,ಪ್ರ­ಥಮ ಏಕಾ­ದಶಿ, ಉತ್ಥಾನ ದ್ವಾದಶಿ.. ಹೀಗೆ ಹನ್ನೆ­ರಡು ನಿಗ­ದಿತ ಹಬ್ಬ­ಗಳ ನಡುವೆ ಮತ್ತಷ್ಟು ಸಂಭ್ರಮ. ನರಕ ಚತು­ರ್ದಶಿ, ದೀಪಾ­ವಳಿ, ಗೋಪೂಜೆ, ಲಕ್ಪ್ಮೀ­ಪೂಜೆ.. ಹೀಗೆ.
ಅದ­ನ್ನೆಲ್ಲ ಇವತ್ತೂ ಎಲ್ಲರೂ ಆಚ­ರಿ­ಸ­ಬೇಕೇ? ಅಂಥ­ದ್ದೊಂದು ಭಾಷಣ ಸಾಗು­ತ್ತಿತ್ತು; ನಾವು ನಮ್ಮ ಆಚ­ರ­ಣೆ­ಗ­ಳನ್ನು, ಹಬ್ಬ­ಗ­ಳನ್ನು ಮರೆ­ತು­ಬಿ­ಟ್ಟಿ­ದ್ದೇವೆ. ಹಬ್ಬ­ಗ­ಳಿಗೆ ವಿಶೇ­ಷ­ವಾದ ಅರ್ಥ­ವಿದೆ. ಅವು­ಗಳು ಕೇವಲ ಸಂಭ್ರ­ಮದ ಆಚ­ರ­ಣೆ­ಗ­ಳಲ್ಲ. ಅದ­ಕ್ಕೊಂದು ಸಾಮಾ­ಜಿಕ ಮಹ­ತ್ವ­ವಿದೆ. ಅವು­ಗ­ಳನ್ನು ನಾವು ಮರೆ­ಯು­ತ್ತಿ­ರು­ವುದು ವಿಷಾ­ದ­ನೀಯ!
ಹೌದಾ?
ಸುಮ್ಮನೆ ಯೋಚಿ­ಸೋಣ; ಈ ಹಬ್ಬ­ಗ­ಳಿಗೂ ನಮ್ಮ ಜೀವ­ನ­ಕ್ರ­ಮಕ್ಕೂ ಏನಾ­ದರೂ ಸಂಬಂಧ ಇದೆಯೆ? ಇವತ್ತು ನಗ­ರ­ಗ­ಳಲ್ಲಿ ವಾಸಿ­ಸು­ತ್ತಿ­ರುವ ನಮ್ಮ ಜೀವನ ಶೈಲಿಯೇ ಬೇರೆ­ಯಾ­ಗಿ­ಲ್ಲವೆ? ನಮ್ಮ ಜೀವ­ನ­ಶೈಲಿ ಬೇರೆ­ಯಾ­ಗಿ­ದ್ದರೂ ನಾವು ಯಾಕೆ ನಮಗೆ ಅರ್ಥವೇ ಆಗದ, ಕಾರ್ಯ­ಕಾ­ರಣ ಸಂಬಂ­ಧವೇ ಇಲ್ಲದ ಹಬ್ಬ­ಗ­ಳನ್ನು ಆಚ­ರಿ­ಸ­ಬೇಕು?
ಬಲಿ­ಪಾ­ಡ್ಯ­ದಿಂದ ಹಿಡಿದು ನರಕ ಚತು­ರ್ದಶಿ ತನ­ಕದ ಎಲ್ಲ ಹಬ್ಬ­ಗಳೂ ಕೃಷಿ­ಪ್ರ­ಧಾ­ನ­ವಾದ ಸಮಾ­ಜಕ್ಕೆ ಹೊಂದಿ­ಕೊ­ಳ್ಳು­ವಂಥ ಆಚ­ರ­ಣೆ­ಗಳು. ಪ್ರಕೃ­ತಿಗೆ ಹತ್ತಿ­ರಾ­ಗಿ­ರು­ವ­ವರ ಸಂಭ್ರಮ ಅದು.ಬ­ಲಿ­ಪಾ­ಡ್ಯದ ದಿನ ಪಾತಾ­ಳ­ದಲ್ಲಿ ಅಡಗಿ ಕುಳಿತು ಒಳ್ಳೆಯ ಬೆಳೆ ಕೊಟ್ಟ ಬಲಿ­ಚ­ಕ್ರ­ವ­ರ್ತಿಗೆ ಕೃತ­ಜ್ಞತೆ ಸಲ್ಲಿ­ಸ­ಲಾ­ಗು­ತ್ತದೆ. ಇವತ್ತು ಬಲಿ ಚಕ್ರ­ವರ್ತಿ ಯಾರು ಅನ್ನು­ವು­ದನ್ನು ತಿಳಿಸಿ ಹೇಳು­ವು­ದಕ್ಕೆ ಮೂರು ತಿಂಗಳ ಡಿಪ್ಲೊಮಾ ಕೋರ್ಸ್ ಬೇಕು. ವಿಷ್ಣು ಎಂಬ ಎಟಿಎಂ ಅರ್ಥಾತ್ ಎನಿ ಟೈಮ್ ಮ್ಯಾನ್ ವಾಮನ ರೂಪ­ದಲ್ಲಿ ಬಂದು ಬಲಿ­ಚ­ಕ್ರ­ವ­ರ್ತಿಯ ಬಳಿ ಮೂರು ಅಡಿ ದಾನ ಬೇಡಿದ್ದು. ಎರಡೇ ಅಡಿ­ಯಲ್ಲಿ ಇಡೀ ಜಗ­ತ್ತನ್ನೇ ಅಳೆ­ದದ್ದು. ಮೂರನೆ ಅಡಿ­ಯನ್ನು ಬಲಿಯ ತಲೆ­ಮೇ­ಲಿಟ್ಟು ಪಾತಾ­ಳಕ್ಕೆ ತಳ್ಳಿದ್ದು- ಇವೆಲ್ಲ ಇವ­ತ್ತಿನ ಹ್ಯಾರಿ­ಪಾ­ಟ್ ಮುಂದೆ ಹಳೇ ಐಡಿ­ಯಾ­ಗ­ಳಂತೆ ಕಾಣಿ­ಸ­ಬ­ಹುದು. ಕಾರ್ಟೂ­ನು­ಗ­ಳಿಗೂ ಪುರಾ­ಣ­ಗ­ಳಿಗೂ ಇರುವ ವ್ಯತ್ಯಾಸ ಅದೇ. ಪುರಾಣ ಎಲ್ಲ­ವನ್ನೂ ಘನ­ವಾಗಿ ತೋರಿ­ಸು­ತ್ತದೆ. ಕಾರ್ಟೂನು ಅದನ್ನೇ ತಮಾ­ಷೆ­ಯಾಗಿ ತೋರಿ­ಸು­ತ್ತದೆ. ಪುರಾ­ಣ­ದಿಂದ ಒಂದು ರೀತಿಯ ನಂಬಿಕೆ ಸೃಷ್ಟಿ­ಯಾ­ಗು­ತ್ತದೆ, ಕಾರ್ಟೂ­ನಿಗೆ ಆ ಶಕ್ತಿ­ಯಿಲ್ಲ. ರಂಜಿ­ಸುವ ಶಕ್ತಿ ಎರ­ಡಕ್ಕೂ ಸಮಾನ.
ಇದೊಂದೇ ಅಲ್ಲ, ಎಲ್ಲಾ ಹಬ್ಬ­ಗಳೂ ಕೃಷಿ ಪ್ರಧಾನ, ಪರಿ­ಸ­ರಕ್ಕೆ ಹತ್ತಿ­ರಾ­ದದ್ದು. ಹಳ್ಳಿ­ಗ­ಳಲ್ಲಿ ಸದಾ ಕಾಡಿನ ನಡುವೆ ಇರೋ­ದ­ರಿಂದ ಹಾವನ್ನು ನೋಡು­ವುದು ಸರ್ವೆ­ಸಾ­ಮಾನ್ಯ. ಅದ­ಕ್ಕೊಂದು ನಾಗ­ರ­ಪಂ­ಚಮಿ. ಬೆಳೆ ಬೆಳೆದು ಫಸಲು ಬಿಡುವ ಹೊತ್ತಲ್ಲಿ ಕ್ರಿಮಿ­ಕೀ­ಟ­ಗಳ ಕಾಟ; ಅವನ್ನು ಓಡಿ­ಸಲು ದೀಪಾ­ವ­ಳಿಯ ಸದ್ದು ಮತ್ತು ಪಟಾ­ಕಿ­ಯಿಂದ ಬರುವ ಗಂಧ­ಕದ ಹೊಗೆ. ಮನೆ­ಯಲ್ಲೇ ಹತ್ತಾರು ಗೋವು­ಗಳು. ಅವು­ಗ­ಳಿಗೆ ಕೃತ­ಜ್ಞತೆ ಸಲ್ಲಿ­ಸೋ­ದಕ್ಕೆ ಗೋಪೂಜೆ. ಭತ್ತ ತೆನೆ­ಬಿ­ಟ್ಟಾದ ಹೊಸ ಅಕ್ಕಿ ಊಟ. ಬತ್ತ ಮನೆಗೆ ಬಂದಾಗ ಮತ್ತೊಂದು ಸಂಭ್ರಮ. ಏನೂ ಇಲ್ಲ­ದಿ­ದ್ದಾಗ ಸತ್ಯ­ನಾ­ರಾ­ಯಣ ಪೂಜೆ.
ನಗ­ರ­ದ­ಲ್ಲಿ­ರುವ ನಮ್ಮ ವೃತ್ತಿ ಕೃಷಿ ಅಲ್ಲ. ಹಿಂದೆ ಮನುಷ್ಯ ತನ್ನ ಅಗ­ತ್ಯ­ಗ­ಳಿ­ಗ­ಲ್ಲದೆ ಬೇರೇ­ನಕ್ಕೂ ದುಡಿ­ಯು­ತ್ತಿ­ರ­ಲಿಲ್ಲ. ಉದಾ­ಹ­ರ­ಣೆಗೆ ಹಳೆಯ ವೃತ್ತಿ­ಗ­ಳನ್ನೇ ತೆಗೆ­ದು­ಕೊಳ್ಳಿ. ಹೊಟ್ಟೆ­ಗಿ­ಕ್ಕು­ವು­ದಕ್ಕೆ ರೈತ, ಕೃಷಿಗೆ ಬೇಕಾಗ ಉಪ­ಕ­ರಣ ಮಾಡು­ವು­ದಕ್ಕೆ ಕಮ್ಮಾರ, ಬಟ್ಟೆ ನೇಯ್ದು ಕೊಡು­ವು­ದಕ್ಕೆ ನೇಕಾರ, ಹೊಲಿದು ಕೊಡು­ವು­ದಕ್ಕೆ ದರ್ಜಿ, ಕಾಲ್ಮೆ­ಟ್ಟು­ವಿಗೆ ಚಮ್ಮಾರ- ಇಂಥ ವೃತ್ತಿ­ಗಳೇ ಇದ್ದದ್ದು. ಇಂಥ ಜೀವ­ನೋ­ಪಾ­ಯ­ಗ­ಳನ್ನು ಬಿಟ್ಟು ಯಾರೂ ಕೂಡ ಯಾವುದೋ ಕಂಪ್ಯೂ­ಟರ್ ಪ್ರೋಗ್ರಾಮ್ ಬರೆ­ದು­ಕೊಂಡೋ, ತಮಗೇ ಗೊತ್ತಿ­ಲ್ಲದ ಯಂತ್ರ­ವೊಂ­ದರ ಬಿಡಿ­ಭಾ­ಗ­ಗ­ಳನ್ನು ತಯಾ­ರಿ­ಸಿ­ಕೊಂಡೋ ಬದು­ಕು­ತ್ತಿ­ರ­ಲಿಲ್ಲ. ಇವತ್ತು ನಾವು ಮಾಡುವ ಅಸಂ­ಖ್ಯಾತ ಉದ್ಯೋ­ಗ­ಗಳ ಪೈಕಿ ತೊಂಬ­ತ್ತ­ರಷ್ಟು ನಮಗೆ ಸಂಬಂ­ಧವೇ ಇಲ್ಲದ್ದು!
**­**
ವೃತ್ತಿ ಬದ­ಲಾ­ಗಿದೆ; ಪರಿ­ಸರ ಬದ­ಲಾ­ಗಿದೆ; ಪದ್ಧತಿ ಬದ­ಲಾ­ಗಿದೆ. ಆದರೂ ನಾವು ಹಳೆಯ ಸಂಪ್ರ­ದಾ­ಯ­ಗ­ಳನ್ನು ಉಳಿ­ಸಿ­ಕೊ­ಳ್ಳ­ಬೇಕು ಅಂದು­ಕೊ­ಳ್ಳು­ತ್ತೇವೆ. ಬೆಂಗ­ಳೂರು ಹಬ್ಬ ಮಾಡು­ತ್ತೇವೆ; ನಾಟಕ ಮಾಡು­ತ್ತೇವೆ; ರಂಗ­ಶಂ­ಕರ ಮಾಡು­ತ್ತೇವೆ. ಯಾವುದೂ ನಮಗೆ ಹತ್ತಿರ ಅನ್ನಿ­ಸು­ವು­ದಿಲ್ಲ. ಕಲೆಗೂ ಬದು­ಕಿಗೂ ಈಗ್ಗೆ ಅಷ್ಟೊಂದು ಅಂತರ ಆಗಿ­ಬಿ­ಟ್ಟಿದೆ. ಅದೇ `ಫಿಲ್ಥ್' ಎಂಬ ನಾಟ­ಕ­ವನ್ನು ಈ ಕಾಲದ ತರು­ಣರು ಮುಗಿ­ಬಿದ್ದು ನೋಡು­ತ್ತಾರೆ. ಅದು ಅವ­ರಿಗೆ ಹತ್ತಿ­ರ­ವಾ­ಗಿದೆ.
ಯಕ್ಪ­ಗಾನ, ನಾಗ­ಮಂ­ಡಲ, ದೊಡ್ಡಾಟ, ಭೂತಾ­ರಾ­ಧನೆ- ಇವ­ನ್ನೆಲ್ಲ ಇವತ್ತು ಮತ್ತೆ ನೋಡಿ ಮೆಚ್ಚ­ಬೇ­ಕಾ­ದರೆ ಅವು ನಮ್ಮನ್ನು ಬೇರೆಯೇ ರೂಪ­ದಲ್ಲಿ ಪ್ರವೇ­ಶಿ­ಸ­ಬೇಕು. ಆ ರೂಪ ಯಾವುದು ಅನ್ನು­ವು­ದನ್ನು ಕಾಲ ಒಂದೇ ನಿರ್ಧ­ರಿ­ಸ­ಬ­ಲ್ಲದು. ಅದ­ಕ್ಕಾಗಿ ಕಾಯು­ವುದು ಬಿಟ್ಟು ; ಹಳೆ­ಯ­ದೆಲ್ಲ ಸಾಯು­ತ್ತಿದೆ ಅಂತ ಹಪ­ಹ­ಪಿ­ಸು­ವು­ದ­ರಲ್ಲಿ ಅರ್ಥ­ವಿಲ್ಲ.
ಅಡಿ­ಗರು ಯಾವತ್ತೋ ಬರೆ­ದ­ರಲ್ಲ; ಹೊಸ್ತಿ­ಲಾ­ಚೆಗೆ ನಿಂತು ಹಿಂದೆ­ಮುಂದೆ ನೋಡು­ವ­ಗತ್ಯ ಇಲ್ಲ; ಇದು ಹೊಸ್ತಿಲೇ ಅಲ್ಲ!

Tuesday, May 8, 2007

ಕರಿಯವ್ವನ ಗುಡಿತಾವ ಅರಳ್ಯಾವೆ ಬಿಳಿಹೂವು..ದಾರೀಲಿ ನೆನೆದೆ ಕೈಹಿಡಿದೆ ನೀನು
ತಣ್ಣಗೆ ಅಂತ ನಾ ತಿಳಿದು
ಬಿಡಲೊಲ್ಲೆ ಇನ್ನೂನೂ ಬೂದಿ ಮುಚ್ಚೀದ
ಕೆಂಡ ಇದಂಥ ಹೊಳೆದು
ಮಗಿಲನ ಕತ್ತರಿಸಿ ನೆಲಕ ಬಿದ್ದರ
ನೆಲಕ ನೆಲಿ ಎಲ್ಲಿನ್ನ
ಆ ಗಾದಿ ಮಾತು ನಂಬಿ ನಾನು
ದೇವರಂಥ ತಿಳಿದಿಯೇನ ನೀ ನನ್ನ


ಆ ಹುಡುಗ ಉತ್ಸಾಹದಿಂದ ಹಾಡುತ್ತಿದ್ದ. ದನಿಯಲ್ಲಿ ಆರ್ದ್ರತೆಯೂ ಇತ್ತು, ವಿಷಾದವೂ ಇತ್ತು. ಅದನ್ನು ಮೀರಿದ ಅಬ್ಬರವಿತ್ತು. ಸತ್ತ ಮಗನನ್ನು ಎದುರಿಗೆ ಮಲಗಿಸಿಕೊಂಡು ಬೇಂದ್ರೆ ಬರೆದ ಪದ್ಯ ಅದು. ಅದನ್ನು ಅಷ್ಟೊಂದು ಅಬ್ಬರದಿಂದ ಹಾಡಬಾರದು ಅಂತ ಹೇಳಬೇಕೋ ಬೇಡವೋ ಗೊಂದಲವಾಯಿತು. ಪದ್ಯದ ಗುಣವೇ ಅದು. ಅದನ್ನು ಕವಿ ಯಾವ ಸ್ಥಿತಿಯಲ್ಲಿ ಬರೆದಿದ್ದಾನೆ ಅನ್ನೋದು ಓದುಗನಿಗೆ ಯಾಕೆ ಮುಖ್ಯವಾಗಬೇಕು. ಓದುಗ ತನ್ನ ಸ್ಥಿತಿಯ ಜೊತೆ ಅದನ್ನು ಹೋಲಿಸಿಕೊಂಡು, ತನ್ನ ಅವಸ್ಥೆಗೆ ಅದನ್ನು ಸಮೀಕರಿಸಿಕೊಂಡು ಹಾಡುತ್ತಾನೆ. ಹಾಗೆ ಹಾಡಿದ ತಕ್ಪಣವೇ ಅದು ನಮ್ಮ ಹಾಡಾಗುತ್ತದೆ. ಕಾಪಿರೈಟ್ ಕಾನೂನಿನ ಪ್ರಕಾರ ಅದರ ಹಕ್ಕು ಕವಿಯದ್ದೇ ನಿಜ. ಆದರೆ ಭಾವನಾತ್ಮಕವಾಗಿ ಅದು ನಮ್ಮ ಹಾಡೇ. ಹಾಗಾಗದೇ ಹೋದ ಎಷ್ಟೋ ಹಾಡುಗಳು ಕೇವಲ ಕವಿಯ ಹಾಡಷ್ಟೇ ಆಗಿ ಉಳಿದುಬಿಟ್ಟಿವೆ. ಲೋಕದ ಹಾಡಾಗದ ಹೊರತು ಏನು ಸುಖ?
ಮೇಲಿನ ಕವಿತೆಯಲ್ಲಿ ಬೇಂದ್ರೆ ಬರೆದ ಅರ್ಥವೇ ಬೇರೆ. ಆತ ಹಾಡುವಾಗ ಹೊಮ್ಮುತ್ತಿದ್ದ ಅರ್ಥವೇ ಬೇರೆ. ಬೇಂದ್ರೆ ಬರೆದದ್ದು ಹೀಗೆ;
ಧಾರೀಲೆ ನೆನೆದ ಕೈಹಿಡಿದೆ ನೀನು
ತಣ್ಣಗ ಅಂತನ ತಿಳಿದು
ಬಿಡವೊಲ್ಲಿ ಇನ್ನೂನು ಬೂದಿ ಮುಚ್ಚಿದ
ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ
ನೆಲಕ ನೆಲ ಎಲ್ಲನ್ನ

ಹಾಡುವ ಉತ್ಸಾಹದಲ್ಲಿ ಅರ್ಥ ಮಾಡಿಕೊಳ್ಳುವ ಆತುರದಲ್ಲಿ ಧಾರೆಯೆರೆದು ಕೊಡುವಾಗ ನೆನೆದ ಕೈ ಹಿಡಿದದ್ದು -ದಾರೀಲಿ ನೆನೆದೆ ಕೈ ಹಿಡಿದೆ ಆಗುತ್ತದೆ. ಅದು ತಪ್ಪೇನಲ್ಲ. ಈಗ ಧಾರೆಯಲ್ಲಿ ಏನೇನು ನಡೆಯುತ್ತದೆ ಅನ್ನುವುದೂ ಹೆಚ್ಚಿನವರಿಗೆ ಗೊತ್ತಿಲ್ಲ. ರಿಜಿಸ್ಟ್ರಾರ್ ಕಛೇರಿಯಲ್ಲೋ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡೋ ಮದುವೆ ಆಗುವವರ ಕೈ ಧಾರೆಯಲ್ಲಿ ನೆನೆಯುವುದೂ ಇಲ್ಲ. ಅವರು ನೆನೆಯುವುದು ದಾರಿಯಲ್ಲಿ, ಕೈ ಹಿಡಿಯುವುದು ದಾರಿಯಲ್ಲೇ. ಹಾಗೇ ಮುಗಿಲು ಕಪ್ಪರಿಸಿ ನೆಲಕ್ಕೆ ಬೀಳುವುದು ಅಂದರೆ ಮುಗಿಲು ಕತ್ತರಿಸಿ ಬೀಳುವುದಲ್ಲ!
ಆದರೆ ಹೇಗೆ ನಾವೆಲ್ಲ ನಮಗೆ ಬೇಕಾದಂತೆ ಕವಿತೆಗಳನ್ನು ಅರ್ಥಮಾಡಿಕೊಳ್ಳುತ್ತಾ ಖುಷಿ ಪಡುತ್ತಾ ಹೋಗುತ್ತೇವೆ ಅನ್ನುವುದು ಕುತೂಹಲಕಾರಿ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಥರ ಅರ್ಥವಾಗುವ, ಒಬ್ಬೊಬ್ಬರ ಮುಂದೆ ಒಂದೊಂದು ಅರ್ಥ ಹೊರಡಿಸುವ ಶಕ್ತಿ ಒಳ್ಳೆಯ ಪದ್ಯಕ್ಕೆ ಮಾತ್ರ ಇರುತ್ತದೆ. ಚಿತ್ರಗೀತೆಗೂ ಕವಿಗಳ ಹಾಡಿಗೂ ಏನು ವ್ಯತ್ಯಾಸ ಅಂತ ಗೆಳೆಯರೊಬ್ಬರು ಕೇಳಿದರು. ಎರಡೂ ಹಾಡೇ ತಾನೇ? ನೀವ್ಯಾಕೆ ಚಿತ್ರಗೀತೆಗಳ ಕುರಿತು ಬರೆಯಬಾರದು. ಬೇಂದ್ರೆಯಷ್ಟೇ ಚೆನ್ನಾಗಿ ಹಂಸಲೇಖ ಕೂಡ ಬರೆಯುತ್ತಾರೆ ಅಂದರು. ಕವಿ ಸಾಂದರ್ಬಿಕವನ್ನು ಸಾರ್ವತ್ರಿಕ ಆಗಿಸಬಲ್ಲ. ಸಿನಿಮಾ ಕವಿಗೆ ಆ ಶಕ್ತಿಯಿರುವುದಿಲ್ಲ. ಆ ಹಾಡುಗಳನ್ನು ಹಾಡಲು ಅಂಥದ್ದೇ ಸಂದರ್ಭಕ್ಕಾಗಿ ಹುಡುಕಾಡಬೇಕಾಗುತ್ತದೆ. ಕವಿಗಳು ಬರೆದ ಹಾಡು ಕೂಡ ಈ ಅಪಾಯದಿಂದ ಎಷ್ಟೋ ಸಲ ಪಾರಾಗುವುದಿಲ್ಲ. ಆದರೆ ಬೇಂದ್ರೆಯ ನೀ ಹೀಂಗ ನೋಡಬ್ಯಾಡ ನಿನ್ನ ದಿನೇ ದಿನೇ ಅರ್ಥವಾಗುತ್ತಾ ಹೋಗುವ, ಓದಿದಷ್ಟೂ ನಾವು ಬೆಳೆದಷ್ಟೂ ಬೆಳೆಯುತ್ತಾ ಹೋಗುವ ಕವಿತೆ. ಬೇಕಿದ್ದರೆ ಈ ಕೊನೆಯ ಸಾಲುಗಳನ್ನು ನೋಡಿ;
ಇಬ್ಬನಿ ತೊಳೆದರು ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿವೀ ಚಂದಿರನ ಹೆಣಾ ಬಂತೋ ಮುಗಿಲಾಗ ತೇಲತ ಹಗಲ


ಕವಳಿ ಕಂಟಿಯಾ ಹಣ್ಣನ್ನು ಇಬ್ಬನಿ ತೊಳೆದರೂ ಯಾಕೆ ಹಾಲು ಮೆತ್ತಿದಂತಿರುತ್ತದೆ. ದಿಗಿಲಾಗಿ ಜೀವ ಏನನ್ನುತ್ತದೆ? ಹುಣ್ಣಿವೀ ಚಂದಿರನ ಹೆಣಾ ಹಗಲೇ ಯಾಕೆ ಮುಗಿಲಾಗೆ ತೇಲಿ ಬರುತ್ತದೆ? ಹುಣ್ಣಿಮೆಯ ದಿನ ಸೂರ್ಯಾಸ್ತದೊಂದಿಗೆ ಚಂದ್ರೋದಯವಾಗಿ, ಸೂರ್ಯೋದಯದೊಂದಿಗೆ ಚಂದ್ರಾಸ್ತ ತಾನೇ?
ಇದೇ ಕವಿತೆಯ ಕೊನೆಯ ಸಾಲು ಕೇಳಿ;
ಎವೆಬಡಿಸಿ ಕೆಡವು. ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
ಬಿರಿಗಣ್ಣು ಬೇಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ ಅನ್ನುವುದೆಲ್ಲ ಸರಿಯೆ. ಆದರೆ ಎವೆಬಡಿಸಿ ಕೆಡವು ಅನ್ನೋದು ಏನು? ಕೆಡವು ಅಂದರೆ ಕೆಡಹು ಅಂತಲಾ..
******
ಇಂಥ ಒಗಟಿನ ಸಾಲುಗಳ ಸೊಬಗು ಒಂದು ಕಡೆಯಾದರೆ ಅರ್ಥವಾದರೂ ಮತ್ತೆ ಮತ್ತೆ ಅರ್ಥಮಾಡಿಕೊಳ್ಳಬೇಕು ಅನ್ನಿಸುವಂಥ ಸಾಲುಗಳು ಮತ್ತೊಂದು ಕಡೆ. ಖರ್ಜೂರದ ಸವಿ ತುಂಬ ಹೊತ್ತು ನಾಲಗೆಯಲ್ಲೇ ನೆಲೆಯಾಗಿ ಸುಖ ಕೊಡುವ ಹಾಗೆ ಮಾಯಾಕಿನ್ನರಿಯ ಸಾಲುಗಳು ಕೂಡ ಘಮಘಮಿಸುತ್ತಿರುತ್ತವೆ;
ಆಡುತಾಡುತ ಬಂದು ಸಿಂಗಾರ ಸೊಳ್ಳಿ ಹಾಂಗ
ಹಾಡಿಲೆ ಕಿವಿಗಲ್ಲ ಕಡಿದ್ಯೇನ
ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ
ಗುಣುಗುಣು ಗೊಣಗುಟ್ಟಿ ನುಡಿದ್ಯೇನ
ತನ್ನೊಡೆಯನ ಕೂಡ ಚಿನ್ನಾಟ ನಡಿಸೀದ
ಕುನ್ನಿ ಕುಂಞಗುಡುವಾಟ ಹಿಡಿದ್ಯೇನ
ಮುಟ್ಟಿದರೆ ಮುರುಕುವ ವಯ್ಯಾರ ಕಲಿತೆಲ್ಲಿ
ಸುಳ್ಳೇನ ಸಿಡಿಮಿಡಿ ಸಿಡಿದ್ಯೇನ
ಮರುಳು ಸಿದ್ಧನನ್ನು ಮಯಾ ಕಿನ್ನರಿ ಮರುಳು ಮಾಡುವ ರೀತಿಯನ್ನು ನೋಡಿ. ಇದನ್ನು ಯಾರು ತಾನೇ ದೃಶ್ಯದಲ್ಲಿ ಹಿಡಿದಿಡಲು ಸಾಧ್ಯ. ಬಹುಶಃ ಎಲ್ಲಾ ಮಾಧ್ಯಮಗಳು ಅಕ್ಪರಕ್ಕೆ ಶರಣಾಗಬೇಕು ಅನ್ನುವುದಕ್ಕೆ ಇಂಥ ಕಲ್ಪನೆಗಳೇ ಕಾರಣ ಇರಬೇಕು. ಯಾಕೆಂದರೆ ಇವನ್ನು ಯಾರು ಕೂಡ visualise ಮಾಡಲಾರರು. ಹಾಗೆ ಕಣ್ಮುಂದೆ ತಂದೊಡನೆ ಅದು ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಹಾಡನ್ನು ನಾಗಾಭರಣ ಚಿತ್ರೀಕರಿಸಿದಷ್ಟೇ ಪೇಲವವಾಗಿ, ಸಪ್ಪೆಯಾಗಿ ಕಾಣುತ್ತದೆ. ಇದರ ಮುಂದಿನ ಸಾಲುಗಳಂತೂ ಇನ್ನೂ ಅದ್ಭುತ.
ಎದೆಗೊತ್ತಿ ಹಿಡಿದರು ಮುತ್ತಿಟ್ಟು ಮತ್ತಿಷ್ಟು
ಮುಳುಮುಳು ಸುಮ್ಮನೆ ಅತ್ತೇನ
ಕೈಯಾಡಿಸಿದಂತೆ ಮೈಕದ್ದು ನಡುಗುವಿ
ಇದು ಹೊಸ ಗಮಕದ ಗತ್ತೇನ
ಮೊದಲ ಭೆಟ್ಟಿಗೆ ಬಂದ ಮಳ್ಹೆಣ್ಣು ಮಾಡಿಧಾಂಗ
ತುಟಿ ಕಚ್ಚಿ ತಡವರಿಸಿ ತಡದೇನ..
ಈ ಸಾಲುಗಳಲ್ಲಿ ಸೊಗಸಾದ ಲಯವಿದೆ. ನಾಟ್ಯವಿದೆ. ಪದಗಳಲ್ಲೇ ಎಲ್ಲಾ ಕಲಾಮಾಧ್ಯಮದ ಸಾಧ್ಯತೆಗಳನ್ನು ಬೇಂದ್ರೆ ತಂದುಬಿಟ್ಟಿದ್ದಾರೆ. ಆಕೆ ತುಟಿ ಕಚ್ಚಿ ತಡೆಯುವ ನಾಟ್ಯವಿದೆ, ಗಮಕದ ಗತ್ತಿದೆ, ಮುತ್ತಿಟ್ಟು ಮತ್ತಿಷ್ಟು ಸುಮ್ಮನೆ ಅಳುವ ನಟನೆಯಿದೆ.ಮುಂದೆ ಆಕೆಯನ್ನು ಆತ ಕರೆಯುವ ರೀತಿ ಕೇಳಿ;
ಕರಗಿ ಬಾ, ಅರಗಿ ಬಾ, ಎರಗಿ ಬಾ ಸಣ್ಣಾಗಿ
ಸಕ್ಕರೆ ಬೆರೆಧಾಂಗ ಹಾಲಾಗ

ಅಲ್ಲಿಂದ ಮುಂದೆ ನಡೆಯುವುದೆಲ್ಲ ಎಲ್ಲ ಮಾತನ್ನೂ ಮೀರಿದ್ದು. ಕೇವಲ ಅನೂಹ್ಯ ಪದಗಳಷ್ಟೇ ಕಟ್ಟಿಕೊಡಬಹುದಾದಂಥದ್ದು. ಕೇವಲ ಅನುಭವದಿಂದ ಅರಿಯಬೇಕಾದ್ದು. ಆ ಅನುಭವವೂ ಎಂಥಾದ್ದು. ಜ್ಞಾನೋದಯದಂಥದ್ದು. ಅನುಭವಿಸಬೇಕಾದದ್ದೂ ಮನಸ್ಸಿನೊಳಗೆ.
ನಲ್ಲ ಮುಟ್ಟಿದ ಗಲ್ಲ, ನಲ್ಲೆಯ ಮೈಯೆಲ್ಲ
ಹಿಗ್ಗಿನ ಮುಳ್ಳಿಗೆ ಸಿಕ್ಕ್ಹಾಂಗ
ಜುಮುಜುಮು ರುಮುಜುಮು ಗಂಗುಣು ದುಮುದುಮು
ನಾದದ ನದಿಯೊಂದು ನಡೆಧಾಂಗ
ಗಲ್ಲ ಗಲ್ಲಕೆ ಹಚ್ಚಿ ನಲ್ಲನಲ್ಲೆಯರಿರುಳು
ಗುಜುಗುಜು ಗುಲುಗುಲು ನುಡಿಧಾಂಗ
ಅದಕ್ಕೇ ಹೇಳಿದ್ದು ಇದು ಐಹಿಕ, ದೈಹಿಕ ಅನುಭವಕ್ಕೆ ದಕ್ಕುವಂಥದ್ದು ಅಲ್ಲವೇ ಅಲ್ಲ ಅಂತ. ನಲ್ಲೆಯ ಮೈ ಹಿಗ್ಗಿನ ಮುಳ್ಳಿಗೆ ಸಿಕ್ಕ ರೋಮಾಂಚನ ಗಂಡಸಿನ ಅನುಭವಕ್ಕೆ ಬಾರದ ಸಂಗತಿ. ಎಷ್ಟೋ ದಾಂಪತ್ಯದಲ್ಲಿ ಗಲ್ಲಗಲ್ಲಕ್ಕೆ ಹಚ್ಚಿ ನಲ್ಲನಲ್ಲೆಯರು ಇರುಳಿಡೀ ಗುಜುಗುಜು ಗುಲುಗುಲು ನುಡಿಯುವುದೂ ಕಷ್ಟವೇ.
ಮುಂದೆ ಮತ್ತೊಂದು ಘಟ್ಟಕ್ಕೆ ಆ ಜಗತ್ತು ದಾಟಿಕೊಳ್ಳುತ್ತದೆ. ಅಲ್ಲಿ ಬೇಂದ್ರೆ ಬಳಸುವ ರೂಪಕವನ್ನು ಅಪೂರ್ವ.
ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದ ನಿಂಧಾಂಗ
ಈ ಸಾಲುಗಳನ್ನು ಇಡಿಯಾಗಿ ಅರ್ಥಮಾಡಿಕೊಳ್ಳುವುದು ಕೂಡ ಪ್ರಯಾಸವೇ. ಅದು ಎಷ್ಟು ದಕ್ಕುತ್ತದೋ ಅಷ್ಟೇ. ಅವರವರ ಬಾಯಿ ರುಚಿಗೆ ತಕ್ಕಂತೆ ಕಲ್ಲುಸಕ್ಕರೆ ತನ್ನ ರುಚಿಯನ್ನು ಬಿಟ್ಟುಕೊಡುವಂತೆ, ಬೇಂದ್ರೆ ಕಾವ್ಯ. ನಮ್ಮ ನಾಲಗೆಯ ರುಚಿ ಸರಿಯಾಗಿದ್ದರೆ ಕಾವ್ಯವೂ ಅರ್ಥವಾಗುತ್ತದೆ.
ಹಾಸಾದ ಹಾಡೀಗೆ ಹೊಕ್ಕಾತು ಕಿನ್ನರಿ
ನೇಯ್ಗಿಯೊಳಗೆ ನೂಲು ಹೋಧಾಂಗ
ಹಾಸು-ಹೊಕ್ಕು ಅನ್ನುವ ನುಡಿಗಟ್ಟನ್ನು ಇದಕ್ಕಿಂತ ಚೆನ್ನಾಗಿ ಹಿಡಿದಿಟ್ಟ ಸಾಲು ಕನ್ನಡದಲ್ಲಿದೆಯೇ?
ಜಗತ್ತಿನಲ್ಲೇ ಬೇಂದ್ರೆಗಿಂತ ಅರ್ಥಪೂರ್ಣವಾಗಿ ಬರೆದ ಕವಿ ಸಿಗುವುದಕ್ಕೆ ಸಾಧ್ಯವೇ?
*****
ಹಳೆಯ ಮಾತು;
ಪ್ರತಿಭೆಗೂ ಪ್ರಕೃತಿಗೂ ಸಂಬಂಧವೇ ಇಲ್ಲ. ಪ್ರಕೃತಿ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಅತ್ಯಂತ ಪ್ರತಿಭಾವಂತನನ್ನೂ ಅತ್ಯಂತ ದಡ್ಡನನ್ನೂ ಕಾಲ ನಿರ್ದಯವಾಗಿ ಕೊಲ್ಲುತ್ತದೆ. ನಿಸರ್ಗಕ್ಕೆ ನಮ್ಮ ಹಾಡು, ಕತೆ, ಕವಿತೆ, ಅಭಿನಯ, ನಗು, ಉಲ್ಲಾಸ ಯಾವುದೂ ಬೇಕಾಗಿಲ್ಲ. ಅದನ್ನು ವಿಧಿಯೆನ್ನುತ್ತಾರೆ, ದೈವ ಅನ್ನುತ್ತಾರೆ. ನೂರೆಂಟು ಹೆಸರಿಟ್ಟು ಕರೆದು ಗೌರವಿಸಿ, ಭಕ್ತಿಯಿಂದ ನಮಿಸಿ, ಧಿಕ್ಕರಿಸಿ ಸಾಗುತ್ತಾರೆ.
ಕರಿಯವ್ವನ ಗುಡಿತಾವ ಪಣತೊಟ್ಟು ಗೆದ್ದವರು
ಇನ್ನೂ ಬದುಕೇ ಅವರೆ ಸರದಾರರು
ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ
ಕತೆಗಳ ಮಾರಾಣಿ ಐರಾವತಿ
ಅಂತ ಬರೆದ ಲಂಕೇಶ್, ಮತ್ತೊಂದು ಸಾಲು ಬರೆದರು;
ಯೌವನದಲ್ಲಿ ಹುಲಿಗಳ ಬೇಟೆಯಾಡಿದ
ಶೂರ
ಇಳಿವಯಸ್ಸಿನಲ್ಲಿ ತಾನು ಕೊಂದ
ಹುಲಿಯ ಚರ್ಮಗಳ ತೋರಿಸಿ
ನಿಮ್ಮನ್ನು ನಂಬಿಸಲು ಯತ್ನಿಸುತ್ತಾನೆ.


ಎಲ್ಲವೂ ಅಷ್ಟೇ!


Saturday, May 5, 2007

ಗೋಕುಲ ಎಂಬ ನಮ್ಮೂರು, ಮಧುರೆಯೆಂಬ ಬೆಂಗಳೂರು


ಬನ್ನಿರಿ ನಾವೆಲ್ಲ ಮಧುರೆಗೆ
ಬಿಲ್ಲ ಹಬ್ಬಕೆ ಹೋಗುವಾ...
ಹಾಗಂತ ಮಧುರೆಯಿಂದ ಬಂದ ಅಕ್ರೂರ ಕರೆಯುತ್ತಾನೆ. ಬಲರಾಮ ಹೊರಟು ನಿಲ್ಲುತ್ತಾನೆ. ಬೇರೆ ದಾರಿಯಿಲ್ಲದೆ ಕೃಷ್ಣ ಕೂಡ ಅವನ ಜೊತೆ ಹೊರಡಲೇ ಬೇಕಾಗುತ್ತದೆ. ಕೊಳಲ ಬಿಸುಟು ಕೃಷ್ಣ ಮಧುರಾನಗರಿಗೆ ಹೊರಡುತ್ತಾನೆ. ಮಧುರೆಯ ಕರೆ ಕೇಡಿನ ಕರೆ ಅಂತ ಗೊತ್ತಿದ್ದರೂ ಕೃಷ್ಣ ಅದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.
****
ಹೇಗಿತ್ತು ಗೋಕುಲ?
ಅಲ್ಲಿದೆ ಬೃಂದಾವನ, ಅದು ಆನಂದ ನಿಕೇತನ. ಯಮುನೆಯ ತೆರೆತೆರೆ ತಾಳ ಹಾಕುತ್ತದೆ. ತೀರದ ಗಿಡಮರ ಅಭಿನಯ ಮಾಡುತ್ತದೆ. ಲತೆಲತೆ ಬಳುಕಿ, ಗಾಳಿಗದರ ಸೊಂಟ ಉಳುಕಿ ಕೊಳಲಿನ ಗಾನಕ್ಕೆ ಯಮುನೆಗೆ ಮತ್ತೇರುತ್ತದೆ.
ಕೊಳಲು ಊದುತ್ತಿರುವವನು ಯಾರು? ಊದಿಯೇ ಊದುವ ಕೊಳಲ, ಯಾವನೋ ಮರುಳ. ನಾವು ಹೀಗೆಯೇ ಕೂತು ಕಳೆಯೋಣ ಇರುಳ ಅನ್ನಿಸುವಂಥ ಕೊಳಲಗಾನ ಅದು.
ಗೋಕುಲದಲ್ಲಿ ಕೃಷ್ಣನಿದ್ದಾನೆ. ಅವನ ಕೊಳಲಿನ ಕರೆ ಆಲಿಸಿದರೆ ಏನೇನಾಗುತ್ತದೆ;
ಕೃಷ್ಣನಾ ಕೊಳಲಿನ ಕರೆ
ತೊಟ್ಟಿಲಿನ ಹಸುಗೂಸ ಮರೆಮರೆ
ಪಕ್ಕದ ಗಂಡನ ತೊರೆ ತೊರೆ
ಬೃಂದಾವನಕೆ ತ್ವರೆ ತ್ವರೆ..
ಆ ಕೊಳಲ ಗಾನ ಕೇಳುತ್ತಾ ಮೈಮರೆತ ಗೋಪಿಯರ ಪಾಲಿಗೆ ಅವನು ಯೋಗೇಶ್ವರನಲ್ಲ, ಬಡಜೋಗಿ!
ಎಳ್ಳಿನ ಹೊಲವ ಬಿಟ್ಟೆ
ಒಳ್ಳೆಯ ಗಂಡನ ಬಿಟ್ಟೆ
ಕಳ್ಳಾಟದ ಜೋಗಿ ಕೂಡೆ ಹೋಗಬಹುದೇ ನಾರಿ..
ಅನ್ನುವಲ್ಲಿ ಬರುವ ಜೋಗಿಯೂ ಕೃಷ್ಣನೇ. ಅವನದು ಕೊಳಲು, ಇವನದು ಕಿನ್ನರಿ. ಕರೆಯ ಬೆರಗು ಒಂದೇ.
ಹೊತ್ತಾರೆ ಹೊರೆಗೆಲಸ ಮಿಕ್ಕರೆ ಮಿಗಲಿ
ಮಿಕ್ಕಾದ ನೆರೆಹೊರೆ ನಕ್ಕಾರೆ ನಗಲಿ

ಅನ್ನುತ್ತಾ ಅವರು ಹೊರಟು ನಿಲ್ಲುತ್ತಾರೆ ಬೃಂದಾವನಕ್ಕೆ.
ಅಲ್ಲಿ ಕೃಷ್ಣನಿದ್ದಾನೆ ರಂಜಿಸುವುದಕ್ಕೆ. ಯಾವ ಜಂಜಾಟವೂ ಇಲ್ಲದ, ಯಾವ ಕಾಟವನ್ನೂ ಕೊಡದ, ಯಾವ ಅಪ್ಪಣೆಯನ್ನೂ ಪಾಲಿಸಬೇಕಿಲ್ಲದ ಕೃಷ್ಣ. ಯಮುನೆಯಂಥ ಮನಕ್ಕೆ ಮನಯಮುನಾ ತೀರದಲ್ಲಿ ಯಾನ. ಕೃಷ್ಣನೆಂದರೆ ಕೊಳಲು. ಕೊಳಲೆಂದರೆ ಮೆಲ್ಲುಲಿ. ಯಾವ ರಾಗದ್ವೇಷಗಳೂ ಇಲ್ಲದೇ ಕೇಳಿ ಸುಖಿಸಬಹುದಾಗ ರಾಗಮಾಲಿಕೆ. ಮೇಲುಕೀಳಿಲ್ಲದ, ಹಂಗಿಲ್ಲದ, ಯಾವ ಲಜ್ಜೆಯೂ ಇಲ್ಲದ, ಒಜ್ಜೆಯೂ ಇಲ್ಲದ ನಿರಾತಂಕ ಸ್ಥಿತಿ ಅದು. ಕೊಳಲ ಗಾನ ಬೆಳದಿಂಗಳ ಹಾಗೆ ಹಬ್ಬುತ್ತದೆ, ಬಡವನ ಮೇಲೆ ಹೇಗೋ ಸಿರಿವಂತನ ಮೇಲೂ ಹಾಗೆ!
ಕೊಳಲ ಗಾನ ಕೇಳಿದವರು ಹಾಡುತ್ತಾರೆ ಕೇಳಿ;
ಸಕಲೇಂದ್ರಿಯಂಗಳಿಗು ನೇತ್ರವೇ ಮಿಗಿಲೆಂದು
ಲೋಕ ನುಡಿಯುವುದಿರಲಿ ಆದೊಡಿಂದು
ಈ ಹಳುವೊಳೀ ಗಾನವಾಲಿಸಲು ತೋರುವುದು
ಶ್ರೋತ್ರವೇ ಎಲ್ಲದಕೂ ಮಿಗಿಲು ಎಂದು.
ಕೃಷ್ಣ ಕೊಳಲನೂದಿ ಏನು ಮಾಡುತ್ತಾನೆ? ಮುಪ್ಪಿನ ಬೇಸರ ಹೋಗಲಾಡಿಸುತ್ತಾನೆ. ಯೌವನದ ದಿಗಿಲು ಕಳೆಯುತ್ತಾನೆ. ನಾಳೆಯ ಆತಂಕವನ್ನು ಅಳಿಸುತ್ತಾನೆ. ಭವದ ಮಾಯೆ ಕರಗುವಂತೆ, ಅಹಂಕಾರ ಅಳಿಯುವಂತೆ ಕೊಳಲನೂದುತ್ತಾನೆ. ನನ್ನದು ಎನ್ನುವುದೆಲ್ಲವೂ ನಿನ್ನದಾಗುವಂತೆ ಹಾಡುತ್ತಾನೆ. ಒಲಿದು ಹಾಡುತ್ತಾನೆ. ನನ್ನೊಳು ನಾ, ನಿನ್ನೊಳು ನೀ ಎಂಬ ಭಾವನೆ ಮಾಯವಾಗಿ, ನಿನ್ನೊಳು ನಾ, ನನ್ನೊಳು ನೀ- ಎನ್ನುವ ಅವಿನಾಭಾವ ಸಂಬಂಧಕ್ಕೆ ನೆಪವಾಗುತ್ತಾನೆ.
*******
ಎಲ್ಲ ಊರುಗಳಲ್ಲೂ ಒಬ್ಬೊಬ್ಬ ಕೃಷ್ಣನಿರುತ್ತಾನೆ. ಎಲ್ಲರಿಗೂ ಒಬ್ಬೊಬ್ಬ ಕೃಷ್ಣನಿರುತ್ತಾನೆ. ಅವನು ನಮ್ಮ ಬದುಕನ್ನು ಸಹ್ಯವಾಗಿಸುತ್ತಾ ಇರುತ್ತಾನೆ. ಅಪ್ಪನ ಹುರಿಮೀಸೆ, ಅಮ್ಮನ ಕಟ್ಟುಪಾಡು, ಅಣ್ಣನ ಗದರುನೋಟ, ತಮ್ಮನ ತುಂಟಾಟ, ಅತ್ತೆಯ ಬಿರುನೋಟ, ಮಾವನ ನಿರ್ಲಕ್ಪ್ಯಗಳನ್ನೆಲ್ಲ ಮೀರಬಲ್ಲ ಮಿತ್ರನೊಬ್ಬ ಇದ್ದರೆ ಅವನ ಹೆಸರು ಕೃಷ್ಣ, ಅಂಥ ಗೆಣೆಕಾರ ಬೇಕೆನ್ನಿಸಿದರೆ ಅವನೇ ಕೃಷ್ಣ.
ಕೃಷ್ಣನಿಗೆ ಜವಾಬ್ದಾರಿಯಿಲ್ಲ. ನೀತಿಯ ಹಂಗಿಲ್ಲ, ಕಟ್ಟು ಪಾಡುಗಳಿಲ್ಲ. ನಿನ್ನೆಯ ಹೊರೆಯಿಲ್ಲ, ನಾಳೆಯ ಕರೆಯಿಲ್ಲ. ಅವನು ಮಣ್ಣಿನಿಂದ ಮೊಳಕೆಯೊಡೆದ ಸೌಗಂಧಿಕಾ ಪುಷ್ಪದಂಥವನು, ಮಳೆಯ ಬರವಿಗೆ ನೆಲದಿಂದೆದ್ದ ಚಿಟ್ಟೆಯಂಥವನು. ಸುಮ್ಮನೆ ಸಂತೋಷ ಕೊಡುವುದಷ್ಟೇ ಅವನಿಗೆ ಗೊತ್ತು.
ನಿಮ್ಮೂರಲ್ಲೂ ಅಂಥವರಿದ್ದಾರೆ. ಹೊರಗೆ ಆಡಲು ಹೋಗಬೇಡ ಅಂತ ಅಮ್ಮ ಗದರುವ ಹೊತ್ತಿಗೆ ಅವನು ಸೈಕಲ್ ಬೆಲ್ಲಿನ ಸದ್ದಾಗಿ ಅವಳ ಕಿವಿಗೆ ತಲುಪುತ್ತಾನೆ. ಬಾಗಿಲ ಬಳಿ ನಿಲ್ಲಬೇಡ ಎಂದು ಅಪ್ಪ ಬುಸುಗುಡುವ ಹೊತ್ತಿಗೆ ಅವನು ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದಿರನಾಗಿ ಬೆಳಕು ಚೆಲ್ಲುತ್ತಾನೆ. ನಾಳೆ ಎಷ್ಟೊಂದು ಸುಂದರ, ಬದುಕು ಎಷ್ಟೊಂದು ಸರಳ ಅನ್ನಿಸುವಂತೆ ಬದುಕುತ್ತಾನೆ.
ಅಂಥ ಕೃಷ್ಣನ ಜೊತೆ ನಮಗೆ ಅವಿನಾಭಾವ ಸಂಬಂಧವೂ ಬೆಳೆಯುತ್ತದೆ. ಕುವೆಂಪು ಪದ್ಯದಲ್ಲಿ ಬರುವ ಗೋಪಾಲ ಅವನು;
ಸದ್ದಿರದ ಪಸರುಡೆಯ ಮಲೆನಾಡ ಬನಗಳಲಿ
ಹರಿವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿವ್ಮುನೆನಗಿರಲಿ.

ಅಂಥ ತಿಮ್ಮ ಪ್ರತಿಯೊಬ್ಬರಿಗೂ ಸಿಗುತ್ತಾನೆ. ಮರೆಯಲಾಗದಂತೆ ಕಾಡುತ್ತಾನೆ. ಅವನು ಗಂಡನಾಗಲಾರ, ತಂದೆಯಾಗಲಾರ, ತಮ್ಮನಾಗಲಾರ, ಅಣ್ಣನಾಗಲಾರ. ಬರೀ ದೂರದ ಗೆಳೆಯ ಅವನು. ಗುಟ್ಟಾಗಿ ಪಾರಿಜಾತ ತಂದುಕೊಡುವ, ಕೊಳಲೂದಿ ಖುಷಿಪಡಿಸುವ, ಸಂಜೆಯ ಎಳೆಬಿಸಿಲಲ್ಲಿ ಹೊಸಿಲ ಬಳಿ ನಿಂತು ನೋೋಡುವವಳ ಖುಷಿಗೆಂದೇ ಹಾಡುತ್ತಾ ಹೋಗುವ, ಹಾವು ಹಿಡಿದು ಆಟವಾಡುವ, ಕಾಡಲ್ಲಿ ಅಲೆಯುವ, ನವಿಲುಗರಿ ತಂದುಕೊಡುವ ಹುಡುಗ. ಅವನೇ ಒಂದು ಕೊಳಲು. ಅವಳ ನಿಟ್ಟುಸಿರಿಗೆ ಆ ಕೊಳಲು ದನಿಯಾಗುತ್ತದೆ!
******
ಅಂಥ ಕೃಷ್ಣ ಕೂಡ ಕೊಳಲನ್ನು ಬಿಸುಟು ಮಧುರೆಗೆ ಹೊರಡಬೇಕಾಗುತ್ತದೆ ಮಧುರೆಯೆಂಬುದು ಕರ್ಮಭೂಮಿ. ಗೋಕುಲವೆಂಬುದು ರಮ್ಯ ಭೂಮಿ. ಸಾಧಿಸಬೇಕಾದರೆ ಮಧುರೆಗೆ ಬಾ ಅನ್ನುತ್ತಾನೆ ಬಲರಾಮ. ಕೃಷ್ಣ ಹೊರಟು ನಿಂತನೆಂದರೆ;
ಅಕೋ ಶ್ಯಾಮ ಅವಳೆ ರಾಧೆ ನಲಿಯುತಿಹರು ಕಾಣಿರೇ
ನಾವೇ ರಾಧೆ ಅವನೆ ಶ್ಯಾಮ ಬೇರೆ ಬಗೆಯ ಮಾಣಿರೇ
ಅನ್ನುವುದೆಲ್ಲ ಬರಿ ನೆನಪು. ಆದರೆ ಅಕ್ರೂರ ತನ್ನ ಹೆಸರಿಗೇ ವಿರುದ್ಧ. ಅವನು ಹುಂಬ ಬಲರಾಮನ ಮನಸ್ಸು ಕೆಡಿಸಿದ್ದಾನೆ;
ಹಳುವ ಹಳ್ಳಿಯ ಬಿಡುತ ಸೊಗಸಿನ ಹೊಳಲ ಜಾತ್ರೆಗೆ ಹೋಗುವ ಎಂದು ಪ್ರಲೋಭನೆ ಒಡ್ಡಿದ್ದಾನೆ.
ಹೈ ಹಚಚ್ಚಾ ಎಂದು ತುರುಗಳ ಹಣ್ಣು ಮುದುಕರೆ ಕಾಯಲಿ
ಹಟ್ಟಿಯೊಳೆ ನಿಟ್ಟುಸಿರನಿಡುತ ಹೆಂಗಳುಳಿಯಲಿ ಊರಲಿ

ಎಂದು ಇನ್ನಿಲ್ಲದ ಕ್ರೌರ್ಯ ಪ್ರದರ್ಶಿಸುತ್ತಾ ಬಲರಾಮ ತರುಣರನ್ನೆಲ್ಲ ಮಧುರೆಗೆ ಹೋಗಲು ಪ್ರೇರೇಪಿಸುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ; ಹೊರನಾಡಿನ ಕರೆ, ಕೇಡಿನ ಕರೆ. ಮಧುರೆಯ ಕರೆ ಕೇಡಿನ ಕರೆ.
ಆದರೆ ಅಕ್ರೂರ ಬಿಡುವುದಿಲ್ಲ. ಅವನು ಆಗಲೇ ಎಲ್ಲರನ್ನೂ ಭ್ರಷ್ಟಗೊಳಿಸಿದ್ದಾನೆ. ಅಣ್ಣ ಬಲರಾಮೇ ಅಕ್ರೂರನಿಗೆ ಒಲಿದಿದ್ದಾನೆ.
ಬಾಬಾ ಮಧುರೆಗೆ ಬಾ
ಹಳುವನುಳಿದು ಬಾ
ಕೊಳಲನೆಸೆದು ಬಾ
ಹೆಂಗಳ ಹಂಬಲ ತೊರೆಯುತ ಬಾರೈ
ಬಾಬಾ ಮಧುರೆಗೆ ಬಾ
ಹೊಸ ಮನದೊಳು ಬಾ
ಹೊಸ ಬಾಳಿಗೆ ಬಾ
ಎಂದು ಕರೆಯುತ್ತಾನೆ. ಅದು ಬೇಡಿಕೆಯೂ ಹೌದು, ಅಪ್ಪಣೆಯೂ ಹೌದು. ಬರದೇ ಹೋದರೆ ಹಾಳಾಗಿ ಹೋಗುತ್ತಿ ಅನ್ನೋ ಎಚ್ಚರಿಕೆಯೂ ಹೌದು.
ಕೃಷ್ಣ ಬೇರೆ ದಾರಿ ಕಾಣದೇ ಹೊರಡುತ್ತಾನೆ. ಕೊಳಲ ಬಿಸುಟು ಹೊರಡುತ್ತಾನೆ. ಹೊಳಲಿಗೆ ಕೊಳಲಿದು ತರವಲ್ಲ, ಮಧುರೆಗಿದರ ಸವಿ ಸಲ್ಲ ಅನ್ನುತ್ತಾನೆ. ಗೆಳತಿಯರು ಹಾಡುತ್ತಾರೆ; `ನಿಲ್ಲಿಸದಿರೋ ವನಮಾಲಿ ಕೊಳಲಗಾನವ..' ಅವನ ಕೊಳಲ ಗಾನ ಅವರಿಗೆ ಬೇಕು; ನೀರು ನಿಂತು ಕೊಳೆಯುವಂತೆ, ನಮಗಹುದೋ ನೂರು ಚಿಂತೆ, ಕೊಳಲುಲುಹಿನ ನೆರೆಯ ನುಗ್ಗಿ, ಜೀವ ಹರಿಯಲೆಂಥ ಸುಗ್ಗಿ. ನಿನ್ನ ಗಾನದನುರಾಗವು, ಬದುಕ ತುಂಬಲಿ ಅನುಗಾಲವೂ, ನಿಲ್ಲಿಸದಿರು ವನಮಾಲಿ ಕೊಳಲಗಾನವ..
*****
ಕೃಷ್ಣ ಕೊಳಲ ಬಿಸುಟು ಮಧುರೆಗೆ ಹೋಗುತ್ತಾನೆ. ಮತ್ತೆ ಬಂದು ಕೊಳಲನ್ನು ಎತ್ತಿಕೊಳ್ಳುತ್ತೇನೆ ಅಂದುಕೊಳ್ಳುತ್ತಾನೆ. ಮಧುರಾನಗರಿ ಅದಕ್ಕೆ ಅವಕಾಶ ಕೊಡುವುದೇ ಇಲ್ಲ. ಕೃಷ್ಣ ಮಧುರೆಯಲ್ಲಿ ಕಳೆದುಹೋಗುತ್ತಾನೆ.
ಕೊಳಲ ಬಿಸುಟವನು ಶಂಖ ಕೈಗೆತ್ತಿಕೊಳ್ಳುತ್ತಾನೆ. ಅನುರಾಗದ ಕೊಳಲು ಹೋಗಿ ಅನುವರದ ಶಂಖ ಕೈಗೆ ಬರುತ್ತದೆ. ರಾಧೆಯನ್ನು ಮತ್ತೆಂದೂ ಕೃಷ್ಣ ನೋಡುವುದಿಲ್ಲ. ಕೃಷ್ಣನನ್ನು ರಾಧೆ ಕೂಡ. ಗೋಕುಲದಲ್ಲಿ ಕಾಯುತ್ತಿರುವ ಗೆಳೆಯರು, ಮುಪ್ಪಿನ ಮುದುಕರು, ಹೆಂಗಳೆಯರ ಪಾಲಿಗೆ ಕೃಷ್ಣನಿಲ್ಲ. ಅವನು ಯಾರನ್ನೋ ಗೆಲಿಸಲು, ಯಾರನ್ನೋ ಕೊಲಿಸಲು ಹೊರಟ ಜಗನ್ನಾಟಕ ಸೂತ್ರಧಾರಿ.
*****
ನಾವೆಲ್ಲ ಗೋಕುಲ ಬಿಟ್ಟು ಬೆಂಗಳೂರೆಂಬ ಮಧುರಾನಗರಿಗೆ ಬಂದಿದ್ದೇವೆ. ಕೊಳಲ ಮರೆತಿದ್ದೇವೆ. ನಮ್ಮವರ ಮರೆತಿದ್ದೇವೆ. ಮತ್ತೆ ಹೋಗಿ ಕೊಳಲನ್ನು ಎತ್ತಿಕೊಳ್ಳುತ್ತೇವೆ ಅನ್ನುವ ನಂಬಿಕೆಯಿಂದಲೇ ಹೊರಟವರಿಗೆ ಮತ್ತೆ ಮರಳುತ್ತೇವೆ ಅನ್ನುವ ನಂಬಿಕೆಯಿಲ್ಲ. ನಮ್ಮ ಕೈಗೂ ಶಂಖ ಬಂದಿದೆ. ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿದ್ದೇವೆ.
ಅಲ್ಲಿ ನಮ್ಮೂರಿನಲ್ಲಿ ತರುಣರಿಲ್ಲ. ಕೊಳಲನಾದವಿಲ್ಲ, ಹೋಗಿ ಮತ್ತೆ ಕೊಳಲೂದುವುದು ಕಷ್ಟವೇನಲ್ಲ, ಆದರೆ ಬಲರಾಮ ನಮ್ಮನ್ನೆಲ್ಲ ಬಲಿತೆಗೆದುಕೊಂಡಿದ್ದಾನೆ. ಕೃಷ್ಣನೊಳಗೆ ಬಲರಾಮ ಒಂದಾಗಿಬಿಟ್ಟಿದ್ದಾನೆ. ಮುದುಕರು ದನ ಕಾಯಲಿ, ಹೆಂಗಳೆಯರು ನಿಟ್ಟುಸಿರಡಲಿ ಊರಲಿ ಅನ್ನುವ ನಿರ್ಲಕ್ಪ್ಯಕ್ಕೆ ಕೊಳಲು ಒಡೆದು ಬಿದ್ದಿದೆ.
ಚಿಕ್ಕಪ್ಪನ ರೂಪದಲ್ಲೋ ಮೇಷ್ಟ್ರ ರೂಪದಲ್ಲೋ ನಗರ ಸೇರಿದ ಗೆಳೆಯನ ರೂಪದಲ್ಲೋ ಕೆಲಸದ ರೂಪದಲ್ಲೋ ಅಕ್ರೂರ ಬರುತ್ತಾನೆ. ನಮ್ಮನ್ನು ನಮ್ಮ ನೆಲ, ನಮ್ಮ ಗೆಳತಿಯರು, ನಮ್ಮ ಕಲೆ, ನಮ್ಮ ಅಲೆದಾಟ, ನಮ್ಮ ಸಂಭ್ರಮಗಳಿಂದ ಬಿಡಿಸಿ ರಾಜಧಾನಿಗೆ ತಂದು ಚೆಲ್ಲುತ್ತಾರೆ.
******
ಬನ್ನಿರಿ ನಾವೆಲ್ಲ ಮಧುರೆಗೆ
ಬಿಲ್ಲ ಹಬ್ಬಕೆ ಹೋಗುವಾ...

ಹಾಗಂತ ಕರೆಯುತ್ತಾ ಮಧುರೆಯಿಂದ ಅಕ್ರೂರ ಬರುತ್ತಾನೆ. ಯಾವ ಕ್ಷಣದಲ್ಲಿ ಬೇಕಾದರೂ ಬರಬಹುದು.
ಹುಷಾರಾಗಿರಿ.

ಚಿತ್ರ- ಕೆ ಎಂ ವೀರೇಶ್. ಈ ಗೋಕುಲದಂಥ ಊರು ಕಾಡಿನ ನಡುವೆ ಕಣ್ಣು ಮಿಟುಕಿಸುತ್ತಿದೆ. ಪಕ್ಕದಲ್ಲೇ ಗೋವರ್ಧನಗಿರಿಯಂಥ ಮೇರ್ತಿಗಿರಿ ಇದೆ. ಗಿರೀಶ್ ಕಾಸರವಳ್ಳಿ ತಮ್ಮೊಂದು ಸಿನಿಮಾವನ್ನು ಇದೇ ಪ್ರದೇಶದಲ್ಲಿ ಶೂಟಿಂಗು ಮಾಡಿದ್ದರು.

Thursday, May 3, 2007

ದೆವ್ವ­ಗಳ ಮನೆಗೆ ಸರಿ­ರಾತ್ರಿ ಹೋಗಿ ಬಂದ­ಮೇಲೆ....

ಹಾಳೂರಿನ ಕತೆ-2

ವೆಂಕ­ಣ್ಣ­ಯ್ಯ­ನ­ವರು ಸಂಜೆಗೆ ಹೊರಟು ರಾತ್ರಿ ಹೊತ್ತಿಗೆ ಸೇರಿದ್ದು ದೆವ್ವ­ಗಳೇ ವಾಸ­ವಾ­ಗಿ­ರುವ ಹಾಳೂರು ಅನ್ನು­ವು­ದನ್ನೂ, ದೆವ್ವ­ಗಳ ಕೈಗೆ ಅವರು ಸರ್ಕಾ­ರಕ್ಕೆ ಕಟ್ಟ ಬೇಕಾ­ಗಿದ್ದ ನೂರೈ­ವತ್ತು ರುಪಾ­ಯಿ­ಗಳ ಹಮ್ಮಿ­ಣಿ­ಯನ್ನು ಕೊಟ್ಟರು ಅನ್ನು­ವು­ದನ್ನೂ ಹಿಂದಿನ ಪುಟದಲ್ಲಿ ಓದಿ­ದ್ದೀರಿ. ತ. ಸು. ಶಾಮ­ರಾ­ಯರು ಬರೆದ ತಳು­ಕಿನ ವೆಂಕ­ಣ್ಣ­ಯ್ಯ­ನ­ವರ ಜೀವನ ಚರಿ­ತ್ರೆ­ಯಲ್ಲಿ ಬರುವ ಹಾಳೂ­ರಿನ ಅನು­ಭವ ಎಂಬ ಅಧ್ಯಾ­ಯದ ಮುಂದಿನ ಹಾಗೂ ಕೊನೆಯ ಭಾಗ ಹೀಗಿದೆ;
ತಮ್ಮ ಅಧಿ­ಕಾ­ರದ ತೀರ ಕಡೆಯ ಭಾಗ­ದಲ್ಲಿ ಇದೆಂಥ ಪ್ರಮಾದ ಸಂಭ­ವಿ­ಸಿತು. ಇದೆಂಥ ಅವ­ಮಾನ, ಶ್ರೀರಾ­ಮ­ಚಂದ್ರಾ, ಈ ವಿಪ­ತ್ತಿ­ನಿಂದ ನನ್ನನ್ನು ಪಾರು ಮಾಡು. ನೀನೇ ಗತಿ ಎಂದು ಮಹ­ತ್ತ­ರ­ವಾಗಿ ಚಿಂತಿ­ಸುತ್ತಾ ಕುದು­ರೆಗೆ ಥಡಿ ಹಾಕಿ, ತಮ್ಮ ಬಂಧು­ಗ­ಳಿದ್ದ ಚೆನ್ನ­ಮ್ಮ­ನಾ­ಗ­ತಿ­ಹ­ಳ್ಳಿಗೆ ಪ್ರಯಾಣ ಬೆಳೆ­ಸಿ­ದರು.
ಚೆನ್ನಮ್ಮ ನಾಗ­ತಿ­ಹ­ಳ್ಳಿಯ ರಾಮಣ್ಣ ಜೋಯಿ­ಸರ ತಂದೆ ಅಪ್ಪಣ್ಣ ಜೋಯಿ­ಸರು ಸುಪ್ರ­ಸಿ­ದ್ದ­ರಾದ ಮಂತ್ರ­ವಾ­ದಿ­ಗಳು. ಭೂತ-ಪ್ರೇ­ತ­ಗ­ಳನ್ನು ಅವರು ಮನ­ಬಂ­ದಂತೆ ಕುಣಿ­ಸು­ವ­ರೆಂದು ಪ್ರತೀತಿ ಇತ್ತು. ದೆವ್ವ ಹಿಡಿ­ದ­ವ­ರನ್ನು ಅವರ ಬಳಿಗೆ ಕರೆ­ತಂದು ಅದರ ಉಚ್ಛಾ­ಟ­ನೆ­ಯನ್ನು ಮಾಡಿ­ಸು­ತ್ತಿ­ದ್ದು­ದುಂಟು. ಅಮಾ­ವಾ­ಸ್ಯೆಯ ರಾತ್ರಿ­ಗ­ಳಲ್ಲಿ ಅಪ್ಪ­ಣ್ಣ­ನ­ವರು ಸ್ಮಶಾ­ನ­ದಲ್ಲಿ ಕುಳಿತು ಮಂತ್ರ­ಸಾ­ಧನೆ ಮಾಡು­ತ್ತಿ­ದ್ದ­ರಂತೆ. ಅವರು ಸುಪ್ರ­ಸಿ­ದ್ಧ ವೈದ್ಯರೂ ಆಗಿ­ದ್ದರು. ಅವರು ಎಂದೂ ತಮ್ಮ ವಿದ್ಯೆ­ಯನ್ನು ಮಾರಿ­ಕೊ­ಳ್ಳ­ಹೊ­ರ­ಟ­ವ­ರಲ್ಲ. ಕೇವಲ ಧರ್ಮ­ದೃ­ಷ್ಟಿ­ಯಿಂದ ಪರೋ­ಪ­ಕಾರ ಮಾಡಿ ಪರೋ­ಪ­ಕಾರಿ ಅಪ್ಪಣ್ಣ ಎಂದು ಹೆಸರು ಗಳಿ­ಸಿ­ದ್ದ­ವರು. ಅವ­ರಿಗೆ ಒಬ್ಬನೇ ಮಗ ರಾಮಣ್ಣ ಹದಿ­ಹ­ರೆ­ಯ­ದ­ಲ್ಲಿದ್ದ. ಅವ­ನಿಗೂ ತಕ್ಕ­ಮ­ಟ್ಟಿಗೆ ಆಯು­ರ್ವೇದ ಮತ್ತು ಭೂತ­ವಿ­ದ್ಯೆ­ಗಳು ಕರ­ಗ­ತ­ವಾ­ಗಿ­ದ್ದವು. ತಂದೆ­ಮ­ಕ್ಕ­ಳಿ­ಬ್ಬರೂ ಸುತ್ತ­ಮು­ತ್ತಿನ ಹತ್ತಾರು ಹಳ್ಳಿ­ಗ­ಳಿಗೆ ಪುರೋ­ಹಿ­ತ­ರಾ­ಗಿ­ದ್ದರು. ಅದೇ ಅವರ ಜೀವ­ನ­ವೃತ್ತಿ. ಅದ­ರಿಂದ ಬಂದ ಉತ್ಪ­ತ್ತಿ­ಯಲ್ಲಿ ಬಡ­ತ­ನದ ಜೀವನ ನಡೆ­ಸು­ತ್ತಿ­ದ್ದರು.
ಒಮ್ಮೆ ನಮ್ಮೂ­ರಿನ (ತ­ಳು­ಕಿನ) ಮಹಿ­ಳೆ­ಯೊ­ಬ್ಬಳು ಅಪ್ಪ­ಣ್ಣ­ನ­ವ­ರಿಂದ ಭೂತ­ಬಾಧೆ ನಿವಾ­ರಣೆ ಮಾಡಿ­ಕೊಂ­ಡ­ದ್ದನ್ನು ನಾನೇ ಪ್ರತ್ಯ­ಕ್ಪ­ವಾಗಿ ಕಂಡಿ­ದ್ದೇನೆ. ಅಲ್ಲೊಬ್ಬ ಬಡ ದಂಪ­ತಿ­ಗಳು. ಅವ­ರಿಗೆ ಆದ ಮಕ್ಕ­ಳೊಂದೂ ಉಳಿ­ಯು­ತ್ತಿ­ರ­ಲಿಲ್ಲ. ಅಪ್ಪ­ಣ್ಣ­ನ­ವ­ರಿಂದ ಭೂತ­ಬಾಧೆ ನಿವಾ­ರ­ಣೆ­ಯಾದ ಮೇಲೆ ಹುಟ್ಟಿದ ಒಂದು ಗಂಡು­ಮಗು ಸುಖ­ವಾಗಿ ಎಂಬಿ­ಬಿ­ಎಸ್ ಪರೀ­ಕ್ಪೆ­ಯಲ್ಲಿ ತೇರ್ಗಡೆ ಹೊಂದಿ ಪ್ರಸಿ­ದ್ಧ ವೈದ್ಯ­ನೆಂದು ಹೆಸ­ರಾ­ಗಿ­ದ್ದಾನೆ. ಅತನ ಮನೆ ಹೆಣ್ಣು, ಗಂಡು ಮಕ್ಕ­ಳಿಂದ ತುಂಬಿ ನಂದ­ಗೋ­ಕು­ಲ­ದಂ­ತಿದೆ.
ಅಪ್ಪಣ್ಣ ರಾಮ­ಣ್ಣ­ನ­ವರ ಶಕ್ತಿ ಸಾಮ­ರ್ಥ್ಯ­ಗ­ಳನ್ನು ಬಲ್ಲ ವೆಂಕ­ಣ್ಣ­ಯ್ಯ­ನ­ವರು ಹಾಳೂ­ರಿ­ನಿಂದ ನೇರ­ವಾಗಿ ಚೆನ್ನ­ಮ್ಮ­ನಾ­ಗ­ತಿ­ಹ­ಳ್ಳಿಗೆ ಧಾವಿ­ಸಿ­ದರು. ಹಿರಿ­ಯ­ರಾದ ಅಪ್ಪ­ಣ್ಣ­ನ­ವರ ಮುಂದೆ ತಮ­ಗಾದ ಅನು­ಭ­ವ­ವನ್ನು ಆದ್ಯಂ­ತ­ವಾಗಿ ವಿವ­ರಿಸಿ `ಮಾವಾ, ನನ್ನ ಗತಿ ಏನು?' ಎಂಗು ಕಣ್ಣೀ­ರಿ­ಟ್ಟರು. ಅಪ್ಪ­ಣ್ಣ­ನ­ವರು ಅವ­ರನ್ನು ಸಮಾ­ಧಾನ ಪಡಿಸಿ ವೆಂಕ­ಣ್ಣಯ್ಯ ಆ ಹಾಳೂ­ರಿನ ವಿಷ­ಯ­ವೆಲ್ಲ ನನಗೆ ಚೆನ್ನಾಗಿ ಗೊತ್ತು. ಅದು ಸಂಪೂ­ರ್ಣ­ವಾಗಿ ನಾಶ­ವಾ­ಗುವ ಮೊದಲು ಕೆಲ­ಸ­ಜನ ವಾಸ­ವಾ­ಗಿ­ದ್ದನ್ನು ಕಂಡಿದ್ದೆ. ಮಾರ­ಮ್ಮನ ಬೇನೆ­ಯಿಂದ ಆ ಊರು ನಿರ್ನಾ­ಮ­ವಾ­ಯಿತು. ಈಗ ನೀನೊಂದು ಕೆಲಸ ಮಾಡು. ನಿನ್ನೆ ನೀನು ಅಲ್ಲಿಗೆ ಹೋದ ಹೊತ್ತಿಗೇ ಸರಿ­ಯಾಗಿ ಅಲ್ಲಿಗೆ ಹೋಗು. ನಿನಗೆ ಯಾವು­ದೊಂದು ತೊಂದ­ರೆಯೂ ಭಯವೂ ಆಗ­ದಂತೆ ನಾನು ಮಂತ್ರಾ­ಕ್ಪ­ತೆ­ಯನ್ನು ಮಂತ್ರಿ­ಸಿ­ಕೊ­ಡು­ತ್ತೇನೆ. ನಿನ್ನೆ­ಯಂತೆ ಇಂದೂ ಅದೇ ಶಾನು­ೋಗ ನಿನ್ನನ್ನು ಕಾಣ­ಲೆಂದು ಬರು­ತ್ತಾನೆ. ನೀನು ಏನೂ ಅರಿ­ಯ­ದ­ವ­ನಂತೆ ಅವ­ನೊಂ­ದಿಗೆ ವ್ಯವ­ಹ­ರಿಸಿ. ಯಾವು­ದಾ­ದ­ರೊಂದು ನೆಪ­ವೊಡ್ಡಿ ನಿನ್ನೆ ನೀನು ಕೊಟ್ಟ ಹಣ­ವನ್ನು ಹಿಂದಕ್ಕೆ ಕೊಡು­ವಂತೆ ಕೇಳು. ಅವನು ಕೊಡು­ತ್ತಾನೆ. ಅದನ್ನು ತೆಗೆ­ದು­ಕೊಂಡ ಒಡ­ನೆಯೇ ಹಿಂದಿ­ರು­ಗಿ­ಬಿಡು. ನಿನ್ನ ರಕ್ಪ­ಣೆಗೆ ಯಾರ­ನ್ನಾ­ದರೂ ಕಳು­ಹಿ­ಸು­ವಂತೆ ಆ ಶಾನು­ೋ­ಗ­ನನ್ನು ಕೇಳು. ಅವನು ಕಳು­ಹಿ­ಸು­ತ್ತಾನೆ'. ವೆಂಕ­ಣ್ಣ­ಯ್ಯ­ನ­ವರು ಮಾವನ ಮಾತಿ­ನಂತೆ ಧೈರ್ಯ­ವಾಗಿ ಆ ಸಾಹ­ಸ­ಕಾ­ರ್ಯಕ್ಕೆ ಕೈ ಹಾಕಿ­ದರು.
ವೆಂಕ­ಣ್ಣ­ಯ್ಯ­ನ­ವರು ಮಾವನ ಮಾತಿ­ನಂತೆ ಕುದು­ರೆಗೆ ಥಡಿ ಹಾಕಿ ಪ್ರಯಾಣ ಬೆಳೆ­ಸಿ­ದ­ವರೇ ಹಿಂದಿನ ದಿನ ಬಂದಿದ್ದ ಹೊತ್ತಿಗೆ ಸರಿ­ಯಾಗಿ ಈ ದಿನವೂ ಹಾಳೂ­ರಿಗೆ ಹೋದರು. ಎಲ್ಲವೂ ಹಿಂದಿನ ದಿನ­ದಂ­ತೆಯೇ ನಡೆ­ಯಿತು. ಶಾನು­ಭೋ­ಗ­ನಿಂದ ಯೋಗ­ಕ್ಪೇಮ, ಗರ­ಣಿ­ಯಲ್ಲಿ ಸಂಧ್ಯಾ­ವಂ­ದನೆ, ಶಾನು­ಭೋ­ಗರ ಮನೆ­ಯಿಂದ ಚಾಪೆ, ಜಮ­ಖಾನೆ, ಶೇಕ­ದಾ­ರರ ಫಲಾ­ಹಾ­ರ­ಕ್ಕಾಗಿ ಹಾಲು-ಹಣ್ಣು, ಅವು­ಗಳ ಸೇವನೆ- ಎಲ್ಲವೂ ನಿನ್ನೆ­ಯಂ­ತೆಯೇ ನಡೆ­ಯಿತು. ಲೋಕಾ­ಭಿ­ರಾ­ಮ­ವಾಗಿ ಮಾತಾ­ಡುತ್ತಾ ವೆಂಕ­ಣ್ಣ­ಯ್ಯ­ನ­ವರು `ತಿ­ಮ್ಮ­ಪ್ಪ­ನ­ವರೇ, ನಿನ್ನೆ ನಾನು ನಿಮ್ಮ ಕೈಯಲ್ಲಿ ಕೊಟ್ಟ ಹಣದ ಚೀಲ­ವನ್ನು ಹಿಂದಕ್ಕೆ ಕೊಡು­ವಿರಾ? ಇಬ್ಬರು ಅಸಾ­ಮಿ­ಗಳ ಲೆಕ್ಕ­ದಲ್ಲಿ ಪೊರ­ಪಾ­ಟಾ­ಗಿದೆ. ಲೆಕ್ಕಕ್ಕೂ ಹಣಕ್ಕೂ ತಾಳೆ ನೋಡ­ಬೇ­ಕಾ­ಗಿದೆ. ಇಂದು ರಾತ್ರಿಯೇ ಅದನ್ನು ಮುಗಿಸಿ ನಾಳೆಯ ದಿನ ಕಛೇ­ರಿಗೆ ಹಣ­ವನ್ನು ಇರ­ಸಾಲು ಮಾಡ­ಬೇಕು'ಎಂದು ಕೇಳಿ­ದರು. ಆಗ ಶಾನು­ೋಗ `ಅ­ದ­ಕ್ಕೇನು ಮಹಾ­ಸ್ವಾಮಿ, ಈಗಲೇ ತಂದು­ಕೊ­ಡು­ತ್ತೇನೆ ಎಂದು ಹೇಳಿ ಮೇಲೆದ್ದು ಹೊರ­ಟ­ವನೇ ಎರಡೇ ನಿಮಿ­ಷ­ದಲ್ಲಿ ಆ ಹಣದ ಚೀಲ­ವನ್ನು ಶೇಕ­ದಾ­ರರ ಕೈಲಿಟ್ಟು `ನೋ­ಡಿ­ಕೊಳ್ಳಿ ಸ್ವಾಮಿ, ತಮ್ಮ ಚೀಲ­ವನ್ನು ಕೊಟ್ಟ ಹಾಗೆಯೇ ಮುಚ್ಚಿ­ಟ್ಟಿದ್ದು ಹಿಂದಕ್ಕೆ ತಂದಿ­ದ್ದೇನೆ' ಎಂದ. ವೆಂಕ­ಣ್ಣ­ಯ್ಯ­ನ­ವರು ಅದನ್ನು ಕೈಲಿ ಎತ್ತಿ­ಕೊ­ಳ್ಳು­ತ್ತಲೇ ಅದು ಸರಿ­ಯಾ­ಗಿದೆ ಎಂದು ತೂಕ­ದಿಂ­ದಲೇ ತಿಳಿದು, ಅವ­ರನ್ನು ಬಾಯ್ತುಂಬಾ ಹೊಗಳಿ ` ಚೆನ್ನ­ಮ್ಮ­ನಾ­ಗ­ತಿ­ಹ­ಳ್ಳಿ­ಯಲ್ಲಿ ಆಸಾ­ಮಿ­ಗಳು ನನ­ಗಾಗಿ ಕಾಯು­ತ್ತಿ­ದ್ದಾರೆ. ಅವರ ಲೆಕ್ಕ­ಗ­ಳಲ್ಲೇ ಪೊರ­ಪಾ­ಟಾ­ಗಿ­ರು­ವುದು. ಈಗಲೇ ನಾವು ಹೊರ­ಡ­ಬೇಕು. ದಯ­ವಿಟ್ಟು ಕುದು­ರೆಗೆ ಥಡಿ ಹಾಕಿಸಿ, ಇಬ್ಬರು ಆಳು­ಗ­ಳನ್ನು ರಕ್ಪ­ಣೆಗೆ ಕಳು­ಹಿ­ಸಿ­ಕೊಡಿ. ತುಂಬ ಕತ್ತ­ಲಾ­ಗಿದೆ. ಅಲ್ಲದೇ ಕೈಲಿ ಭಾರೀ ಹಣ­ವಿದೆ' ಅಂದರು. ಶಾನು­ಭೋಗ ತಿಮ್ಮಪ್ಪ `ಅ­ಗ­ತ್ಯ­ವಾಗಿ ಆಗಲಿ ಮಹಾ­ಸ್ವಾಮಿ' ಎಂದು ಹೇಳಿ ತಳ­ವಾ­ರ­ನನ್ನು ಕರೆದು `ನಿಂಗ, ನಿನ್ನ ಜೊತೆಗೆ ಇನ್ನೊ­ಬ್ಬ­ನನ್ನು ಕರೆ­ದು­ಕೊಂಡು , ಸುಡಿಗೆ ಹಿಡಿದು ಸ್ವಾಮಿ­ಯ­ವರ ಸಂಗಡ ಚೆನ್ನ­ಮ್ಮ­ನಾ­ಗ­ತಿ­ಹ­ಳ್ಳಿ­ಯ­ವ­ರೆಗೆ ಹೋಗಿ, ಅವ­ರನ್ನು ಕ್ಪೇಮ­ವಾಗಿ ಅಲ್ಲಿಗೆ ಮುಟ್ಟಿಸಿ ಬಾ ಎಂದು ಅಪ್ಪಣೆ ಮಾಡಿದ.
ಒಡ­ನೆಯೇ ಕುದುರೆ ಥಡಿ­ಯೊಂ­ದಿಗೆ ಸಿದ್ಧವಾ­ಯಿತು. ಇಬ್ಬರು ಆಳು­ಗಳು ಗರಿ­ಯಿಂದ ಮಾಡಿದ ಸುಡಿ­ಗೆ­ಯನ್ನು ಹಿಡಿದು ಸಿದ್ಧ­ರಾ­ದರು. ಶೇಕ­ದಾರ ಸಾಹೇ­ಬರು ಕುದು­ರೆ­ಯ­ನ್ನೇರಿ ಕುಳಿ­ತರು. ತಿಮ್ಮಪ್ಪ ಎರಡೂ ಕೈಗ­ಳನ್ನೂ ಜೋಡಿಸಿ ವಿನೀ­ತ­ಭಾ­ವ­ದಿಂದ `ಮ­ಹಾ­ಸ್ವಾಮಿ, ಮಹಾ­ನು­ಭಾ­ವ­ರಾದ ತಮ್ಮ ಪಾದ­ಧೂ­ಳಿ­ಯಿಂದ ನಮ್ಮ ಗ್ರಾಮ ಪುನೀ­ತ­ವಾ­ಯಿತು. ತಮ್ಮನ್ನು ಆದ­ರ­ದಿಂದ ಕಂಡ ನನ್ನ ಜನ್ಮ ಸಾರ್ಥ­ಕ­ವಾ­ಯಿತು. ನನ್ನ ಮೇಲೆ ಆಶೀ­ರ್ವಾದ ಬಿದ್ದರೆ ನಾನು ಉದ್ದಾ­ರ­ವಾದ ಹಾಗೆ' ಎಂದು ಬಿನ್ನ­ವಿ­ಸಿದ.
ಶಾನು­ಭೋ­ಗರು ಕಳು­ಹಿ­ಸಿದ ಆಳು­ಗ­ಳಿ­ಬ್ಬರೂ ಆ ಕಡೆ­ಯೊಬ್ಬ, ಈ ಕಡೆ­ಯೊಬ್ಬ ದೀವ­ಟಿಗೆ ಹಿಡಿದು ದಾರಿ ತೋರಿ­ಸುತ್ತಾ ಮುಂದೆ ಮುಂದೆ ನಡೆ­ದರು. ಸ್ವಲ್ಪ ದೂರ ಹೋಗು­ತ್ತಲೇ ಆ ಆಳು­ಗ­ಳಿ­ಬ್ಬರ ಮನು­ಷ್ಯಾ­ಕಾರ ಮಾಯ­ವಾ­ಯಿತು. ಬರಿಯ ದೀವ­ಟಿ­ಗೆ­ಗಳೇ ಮುಂದು­ವ­ರಿ­ಯು­ತ್ತಿ­ದ್ದವು. ಅದನ್ನು ಕಂಡು ವೆಂಕ­ಣ್ಣ­ಯ್ಯ­ನ­ವ­ರಿಗೆ ವಿಸ್ಮ­ಯ­ವಾ­ಯಿತು, ಸ್ವಲ್ಪ ಭಯವೂ ಆಯಿತು. ಪಂಚೆಯ ಸೆರ­ಗಿ­ನ­ಲ್ಲಿದ್ದ ಮಂತ್ರಾ­ಕ್ಪ­ತೆಯ ಧೈರ್ಯ­ದಿಂದ ಅವರ ಪ್ರಯಾಣ ಮುಂದೆ ಸಾಗಿತು. ಊರ ಮುಂದಿ­ನ­ವ­ರೆಗೆ ಅವರು ಸಾಗಿ­ಬ­ರು­ತ್ತಲೇ ದೀವ­ಟಿ­ಗೆ­ಗಳು ಮಾಯ­ವಾ­ದವು. ವೆಂಕ­ಣ್ಣ­ಯ್ಯ­ನ­ವರು ತಮ್ಮ ಬಂಧು­ಗಳ ಮನೆ­ಯನ್ನು ಸೇರಿ­ದರು.
ಭಾರೀ ಗಂಡಾಂ­ತ­ರ­ವೊಂದು ಶ್ರೀರಾ­ಮ­ಚಂ­ದ್ರನ ಕೃಪೆ­ಯಿಂದ ಕಳೆ­ದಂ­ತಾ­ಯಿತು.
**­*­**
ತ. ಸು. ಶಾಮ­ರಾ­ಯರು ಒಮ್ಮೆ ವೆಂಕ­ಣ್ಣ­ಯ್ಯ­ನ­ವ­ರನ್ನು ಕೇಳಿ­ದರು;
`ನೀ­ವೇಕೆ ಶ್ರೀಕೃ­ಷ್ಣ­ನನ್ನು ಕುರಿತು ಒಂದು ಗ್ರಂಥ ಬರೆ­ಯ­ಬಾ­ರದು. ಅವ­ನನ್ನು ಕುರಿತು ನೀವು ಭಾಷಣ ಮಾಡು­ವು­ದನ್ನು ಕೇಳಿ­ದ್ದೇನೆ. ಅದು ತುಂಬ ಬೋಧ­ಪ್ರ­ದ­ವಾ­ಗಿ­ರು­ತ್ತದೆ'. ಅವರು ನಗುತ್ತಾ `ಏಕೆ ಬರೆ­ಯ­ಬೇಕು?' ಎಂದು ಕೇಳಿ­ದರು. `you must leave the foot prints on the sand of time' ಅಂದರು ಶಾಮ­ರಾ­ಯರು. ಅವರು ಕ್ಪಣ­ಕಾಲ ಅಂತ­ರ್ಮು­ಖಿ­ಗ­ಳಾ­ಗಿದ್ದು ಅನಂ­ತರ ಮುಗು­ಳು­ನ­ಗೆ­ಯೊಂ­ದನ್ನು ತುಟಿ­ಗಳ ಮೇಲೆ ಕುಣಿ­ಸುತ್ತ ಭವಿ­ಷ್ಯದ ತೆರೆ­ಯನ್ನು ಓರೆ ಮಾಡಿ ನೋಡಿದ ಕಾರ­ಣ­ಪು­ರು­ಷ­ರಂತೆ `ಓಹೇ, ನಿನ್ನ ಅಣ್ಣ ಬಹು­ದೊ­ಡ್ಡ­ವ­ನೆಂದು ನೀನು ಭಾವಿ­ಸಿ­ದ್ದಿ­ಯ­ಲ್ಲವೇ? ನೀನೊಬ್ಬ ಶುದ್ಧ ದಡ್ಡ. ಲೋಕದ ಜನ ನನ್ನನ್ನು ಎಂದೆಂ­ದಿಗೂ ನೆನೆ­ಯು­ವ­ರೆಂದು, ನೆನೆ­ಯ­ಬೇ­ಕೆಂದು ಭಾವಿ­ಸು­ತ್ತಿ­ರು­ವೆ­ಯ­ಲ್ಲವೇ? ಜನ ಶ್ರೀರಾಮ ಶ್ರೀಕೃ­ಷ್ಣ­ನಂ­ತ­ಹ­ವ­ರನ್ನೇ ನೆನೆ­ಯು­ವುದು ಕಷ್ಟ. ಈ ಯಃಕ­ಶ್ಚಿತ್ ವೆಂಕ­ಣ್ಣ­ಯ್ಯ­ನನ್ನು ನೆನೆ­ಯ­ಬೇಕೇ? ವೇದ­ದ್ರ­ಷ್ಟಾ­ರ­ರಂ­ಥ­ವರೇ ತಮ್ಮನ್ನು ಜನ ನೆನೆ­ಯ­ಬೇಕು ಅಂದು­ಕೊ­ಳ್ಳ­ಲಿಲ್ಲ. ತಮ್ಮ ಹೆಸ­ರನ್ನು ಹೇಳಿ­ಕೊ­ಳ್ಳ­ಲಿಲ್ಲ. ನಾನು ಹೇಳಿ­ಕೊ­ಳ್ಳ­ಬೇಕೇ?' ಎಂದರು.
ವೆಂಕ­ಣ್ಣ­ಯ್ಯ­ನ­ವರು ಕಾಲ­ವಾದ ಕೆಲ­ತಿಂ­ಗಳ ನಂತರ ಈ ವಿಚಾ­ರ­ವನ್ನು ಶಾಮ­ರಾ­ಯರು ಕೆವಿ ಪುಟ್ಟ­ಪ್ಪ­ನ­ವ­ರಿಗೆ ಹೇಳಿ­ದರು. ಅದಕ್ಕೆ ಕುವೆಂಪು ನಕ್ಕು `ನಿಜ, ಹೆಸ­ರಿನ ಶಾಶ್ವ­ತ­ತೆ­ಗಿಂ­ತಲೂ ಹಿರಿ­ದಾ­ದುದು ಇದೆ­ಯಯ್ಯಾ, ಬದುಕು ಸಾಧಿ­ಸು­ವು­ದಕ್ಕೆ. ಅವ­ರೊಬ್ಬ ಮಹಾ­ಸಾ­ಧ­ಕರು' ಎಂದರು. ಆಗ ತಾವು ಬರೆ­ಯು­ತ್ತಿದ್ದ ಶ್ರೀರಾ­ಮಾ­ಯಣ ದರ್ಶನಂ ಮಹಾ­ಕಾ­ವ್ಯ­ವನ್ನು ಅವ­ರಿಗೆ ಅರ್ಪಿ­ಸು­ವು­ದಾ­ಗಿಯೂ , ಶ್ರೀರಾ­ಮಾ­ಯಣ ದರ್ಶನಂ ಇರು­ವಷ್ಟು ಕಾಲವೂ ಅವರ ಹೆಸರು ಉಳಿ­ಯು­ವು­ದಾ­ಗಿಯೂ ತಿಳಿ­ಸಿ­ದರು.
**­**
ತ.ಸು. ಶಾಮ­ರಾ­ಯರು ಬರೆದ `ಮೂರು ತಲೆ­ಮಾರು' ಕೃತಿ­ಯಲ್ಲಿ ಬರುವ ವೆಂಕ­ಣ್ಣ­ಯ್ಯ­ನ­ವರ ಜೀವನ ಚಿತ್ರ ನಮ್ಮನ್ನು ವಿನೀ­ತ­ರ­ನ್ನಾ­ಗಿ­ಸು­ತ್ತದೆ, ಪುನೀ­ತ­ರನ್ನೂ ಆಗಿ­ಸು­ತ್ತದೆ.

Tuesday, May 1, 2007

ತ.ಸು. ಶಾಮರಾಯರ ತುಸು ನೆನೆದು...


ತುಂಬ ಒಳ್ಳೆಯ ಕೃತಿಗೆ ವಿಮ­ರ್ಶ­ಕನ ಹಂಗಿಲ್ಲ. ತುಂಬ ಕೆಟ್ಟ ಕೃತಿಗೂ ವಿಮ­ರ್ಶಕ ಬೇಕಿಲ್ಲ. ಒಳ್ಳೆ­ಯದೋ ಕೆಟ್ಟದೋ ಅಂಥ ಗೊತ್ತಾ­ಗ­ದಂಥ ಕೃತಿ­ಗ­ಳನ್ನು ಮನ­ದಟ್ಟು ಮಾಡಿ­ಸು­ವು­ದ­ಕ್ಕಷ್ಟೇ ನಮಗೆ ಟೀಕಾ­ಕಾರ ಬೇಕು.
ಆದರೆ ಕೆಲ­ವೊಮ್ಮೆ ಯಾರ ಹಂಗೂ ಇಲ್ಲದ ಕೃತಿ­ಗಳು ಬರು­ವು­ದುಂಟು. ಅವು ದೂರ­ಬೆ­ಟ್ಟದ ತಪ್ಪ­ಲಲ್ಲಿ ಸಹ­ಜ­ವಾಗಿ ಅರ­ಳುವ ಕಾಡು ಹೂವಿ­ನಂತೆ ನಳ­ನ­ಳಿ­ಸು­ತ್ತಿ­ರು­ತ್ತವೆ. ಆ ಹೂವು ಹೇಗೆ ಅರ­ಳಿತು, ಅದಕೆ ನೀರೆ­ರೆ­ದ­ವರು ಯಾರು? ಆ ಹೂವಿ­ಗೇಕೆ ಅಷ್ಟೊಂದು ಬಣ್ಣ? ಮುಂತಾದ ಪ್ರಶ್ನೆ­ಗ­ಳನ್ನೇ ಹುಟ್ಟುಹಾ­ಕದ ಆ ಹೂವು ಸುಮ್ಮನೆ ಖುಷಿ­ಕೊ­ಡು­ತ್ತದೆ.
ಹಾಗೆ ಅರ­ಳಿದ ಹೂವಿ­ನಂಥ ಕೃತಿ­ಯೊಂದು ಇಲ್ಲಿದೆ;


ಹಾಳೂ­ರಿನ ಅನು­ಭವ

ವೆಂಕ­ಣ್ಣ­ಯ್ಯ­ನ­ವರು ಶೇಕ­ದಾ­ರ­ರಾದ ಮೇಲೆ ಆಗಿನ ಕಾಲದ ಪದ್ಧ­ತಿ­ಯಂತೆ ಒಂದು ಒಳ್ಳೆಯ ಕುದು­ರೆ­ಯನ್ನು ಕೊಂಡು, ಅದರ ಮೇಲೆ ಹಳ್ಳಿ­ಗ­ಳಿಗೆ ಹೋಗಿ­ಬ­ರು­ತ್ತಿ­ದ್ದರು. ಸಾಯ್ ಬಾಬಿನ ಹಣ­ವನ್ನು ಅವರೇ ಖುದ್ದಾಗಿ ವಸೂ­ಲ್ಮಾಡಿ ತಾಲ್ಲೂಕು ಕಛೇ­ರಿಗೆ ಜಮಾ ಮಾಡಿ­ಸ­ಬೇ­ಕಿತ್ತು. ಸಾಮಾ­ನ್ಯ­ವಾಗಿ ಪ್ರತಿ­ತಿಂ­ಗಳೂ ಈ ಕೆಲ­ಸ­ವಿದ್ದೇ ಇರು­ತ್ತಿತ್ತು. ಅವರು ಬೆಳ­ಗಿನ ಪೂಜೆ, ಉಪಾ­ಹಾ­ರ­ಗ­ಳನ್ನು ಮಾಡಿ ಮುಗಿಸಿ, ತಾಲ್ಲೂ­ಕಿನ ಮುಖ್ಯ­ಸ್ಥ­ಳ­ವಾದ ಚಳ್ಳ­ಕೆ­ರೆಗೆ ಹೋಗಿ ಸಂಜೆ­ಯೊ­ಳ­ಗಾಗಿ ಆ ಕೆಲ­ಸ­ವನ್ನು ಮುಗಿಸಿ ಮರು­ದಿನ ಬೆಳಗೆರೆಗೆ ಹಿಂದಿ­ರುಗಿ ಬರುವ ಪದ್ಧತಿ. ಹೀಗಿ­ರು­ತ್ತಿ­ರಲು ಅವರು ಒಮ್ಮೆ ಸಂಜೆ ನಾಲ್ಕು ಗಂಟೆೆಯ ಮೇಲೆ ಚಳ್ಳ­ಕೆ­ರೆಗೆ ಹೊರ­ಟರು. ಸಾಯ್ ಬಾಬಿನ ಐನೂರು ರುಪಾ­ಯಿ­ಗ­ಳನ್ನು ಅವರು ಕೊಡ­ಹೋ­ಗ­ಬೇ­ಕಾ­ಗಿತ್ತು. ಎಲ್ಲವೂ ಬೆಳ್ಳಿಯ ರುಪಾ­ಯಿ­ಗಳು. ಆ ಹಣ­ವನ್ನು ಹಮ್ಮಿ­ಣಿ­ಯಲ್ಲಿ ತುಂಬಿ ನಡು­ವಿಗೆ ಕಟ್ಟಿ­ಕೊಂಡು ದೇವರೇ ಗತಿ ಎಂದು ಪ್ರಯಾಣ ಹೊರ­ಟರು. ಸಂಜೆ ಮಬ್ಬು­ಗ­ತ್ತಲು ಪಸ­ರಿ­ಸುವ ವೇಳೆಗೆ ಉಳ್ಳ­ರ್ತಿ­ಯನ್ನು ಸೇರಿ­ದರು. ಅಲ್ಲಿಂದ ಚಳ್ಳ­ಕೆ­ರೆಗೆ ಒಂಬತ್ತು ಮೈಲಿ. ಉಳ್ಳ­ರ್ತಿ­ಯಿಂದ ಮೂರು ಮೈಲಿ ಪ್ರಯಾಣ ಮಾಡು­ವ­ಷ್ಟ­ರಲ್ಲಿ ಕತ್ತಲು ಕವಿ­ಯಿತು. ಹಾದಿ­ಯಲ್ಲಿ ಒಂದು ಹಳ್ಳ-ಅ­ದನ್ನು ಗರಣಿ ಎಂದು ಕರೆ­ಯು­ತ್ತಾರೆ. ಅದನ್ನು ದಾಟು­ತ್ತಲೇ ಒಂದು ಹಳ್ಳಿ ಕಾಣಿ­ಸಿತು. ಊರಿನ ತುಂಬ ಜನ ತುಂಬಿ­ದ್ದಾರೆ. ಮನೆ­ಮ­ನೆ­ಯಿಂ­ದಲೂ ದೀಪದ ಬೆಳಕು ಇಣುಕು ಹಾಕು­ತ್ತಿದೆ. ಊರ ಮುಂದಿನ ಒಂದು ಕಟ್ಟೆಯ ಮೇಲೆ ಊರಿನ ಶಾನು­ಭೋೋಗ, ಪಟೇಲ ಹಾಗೂ ಕೆಲವು ದೊಡ್ಡ ಮನು­ಷ್ಯರು ಕೂತು ಮಾತಾ­ಡು­ತ್ತಿ­ದ್ದಾರೆ. ವೆಂಕ­ಣ್ಣ­ಯ್ಯ­ನ­ವ­ರಿಗೆ ಇದು ಯಾವುದೋ ಪರಿ­ಚಿತ ಗ್ರಾಮು­ವೆಂಬ ಭಾವನೆ ಬಂತು. ಅಲ್ಲಿ ಮಾತ­ನಾ­ಡುತ್ತಾ ಕುಳಿ­ತಿದ್ದ ಜನ­ಗಳೂ ಪರಿ­ಚಿ­ತ­ರೆಂ­ಬಂ­ತೆಯೇ ಭಾಸ­ವಾ­ಯಿತು. ಆದರೆ ಅದು ಯಾವ ಗ್ರಾಮ, ಯಾವಾಗ ನೋಡಿದ್ದು ಎಂಬುದು ಮಾತ್ರ ನೆನ­ಪಾ­ಗ­ಲೊ­ಲ್ಲದು. ಈ ಸಂದಿ­ಗ್ಧ ಮನ­ಸ್ಸಿ­ನ­ಲ್ಲಿಯೇ ಅವರು ಊರ­ಬಾ­ಗಿ­ಲನ್ನು ಸೇರಿ­ದರು. ಒಡ­ನೆಯೇ ಅಲ್ಲಿ ಕುಳಿ­ತಿ­ದ್ದ­ವ­ರಲ್ಲಿ ಒಬ್ಬ ತಟ್ಟನೆ ಮೇಲ­ಕ್ಕೆದ್ದು ಒಂದು ಭಯ ಭಕ್ತಿ­ಯಿಂದ ಕೈಜೋ­ಡಿಸಿ `ಶೇ­ಕ­ದಾರ ಸ್ವಾಮಿ­ಯ­ವ­ರಿಗೆ ನಮ­ಸ್ಕಾರ. ದಯ­ಮಾ­ಡಿ­ಸ­ಬೇಕು' ಎಂದು ಸ್ವಾಗ­ತಿ­ಸಿದ. ಅಲ್ಲಿಯೇ ಹತ್ತಿ­ರ­ದ­ಲ್ಲಿದ್ದ ಮತ್ತೊ­ಬ್ಬ­ನನ್ನು `ಎಲೋ ನಿಂಗ, ನಮ್ಮ ಮನೆಗೆ ಹೋಗಿ ಒಂದು ಜಮ­ಖಾ­ನ­ವನ್ನೂ ಒಂದು ಚಾಪೆ­ಯನ್ನೂ ತಂದು ಆಂಜ­ನೇ­ಯನ ದೇವ­ಸ್ಥಾ­ನ­ದಲ್ಲಿ ಹಾಸು' ಎಂದು ಹೇಳಿದ. ಅವನು ಓಡುತ್ತಾ ಹೋಗಿ ಚಾಪೆ, ಜಮ­ಖಾನ ತಂದು ಹಾಸಿದ ಮೇಲೆ ಕುದು­ರೆಯ ಮೇಲೆ ಹಾಕಿದ್ದ ಥಡಿ­ಯನ್ನು ತೆಗೆದು, ಗುಡಿ­ಯೊ­ಳ­ಗಿಟ್ಟ, ಕುದು­ರೆ­ಯನ್ನು ದೇವ­ಸ್ಥಾ­ನದ ಮುಂದೆ ಕಟ್ಟಿ­ಹಾಕಿ, ಹುಲ್ಲು ತಂದು ಹಾಕಿದ. ದೇವ­ಸ್ಥಾ­ನ­ದಲ್ಲಿ ಮಾರು­ತಿಯ ಎದು­ರಿಗೆ ದೀಪ ಢಾಳಾಗಿ ಉರಿ­ಯು­ತ್ತಿತ್ತು. ವೆಂಕ­ಣ್ಣ­ಯ್ಯ­ನ­ವರು ಒಳಗೆ ಹೋಗಿ, ದೇವ­ರಿಗೆ ನಮ­ಸ್ಕ­ರಿಸಿ, ಜಮ­ಖಾ­ನದ ಮೇಲೆ ಕುಳಿ­ತರು. ಅವ­ರೊ­ನಿದ್ದ ಆಗಂ­ತುಕ `ಸ್ವಾಮಿ, ನಾನು ಇಲ್ಲಿನ ಶಾನು­ಭೋೋಗ. ಏಳಿ ಮನೆಗೆ ಹೋಗೋಣ, ನಿಮ್ಮ ಆಹ್ನಿ­ಕಕ್ಕೂ ಭೋಜ­ನಕ್ಕೂ ವ್ಯವಸ್ಥೆ ಮಾಡು­ತ್ತೇನೆ' ಎಂದು ಆದ­ರ­ದಿಂದ ಆಹ್ವಾ­ನಿ­ಸಿದ. ವೆಂಕ­ಣ್ಣ­ಯ್ಯ­ನ­ವರು `ಶಾ­ನು­ಭೋಗರೇ, ನಾನು ರಾತ್ರಿಯ ಹೊತ್ತು ಊಟ ಮಾಡು­ವು­ದಿಲ್ಲ. ಹತ್ತಿ­ರ­ದ­ಲ್ಲಿಯೇ ಹಳ್ಳ­ವಿದೆ. ಅಲ್ಲಿಯೇ ಕೈಕಾಲು ತೊಳೆದು ಸಂಧ್ಯಾ­ವಂ­ದನೆ ಮಾಡಿ ಬರು­ತ್ತೇನೆ. ಅಲ್ಲಿ­ಯ­ವ­ರೆಗೆ ಇಲ್ಲಿ ಯಾರ­ನ್ನಾ­ದರೂ ಕಾವ­ಲಿ­ರು­ವಂತೆ ಅಪ್ಪಣೆ ಮಾಡಿ' ಎಂದು ಹೇಳಿ­ದರು. ಆ ಶಾನು­ಭೋಗ ತಳ­ವಾ­ರ­ನನ್ನು ಕೂಗಿ ಕರೆದು ಅಲ್ಲಿ ಕಾವ­ಲಿ­ರು­ವಂತೆ ಅಪ್ಪಣೆ ಮಾಡಿದ.ದೇ­ವ­ಸ್ಥಾ­ನ­ದಿಂದ ಇಪ್ಪತ್ತು ಹೆಜ್ಜೆ ದೂರ­ದ­ಲ್ಲಿಯೇ ಹರಿ­ಯು­ತ್ತಿದ್ದ ಹಳ್ಳ­ದಲ್ಲಿ ವೆಂಕ­ಣ್ಣ­ನ­ವರು ಕಾಲು ತೊಳೆದುು, ಸಂಧ್ಯಾ­ವಂ­ದನೆ ಮಾಡಿ ಮುಗಿ­ಸಿ­ದರು. ಅಲ್ಲಿಂದ ಅವರು ದೇವ­ಸ್ಥಾ­ನಕ್ಕೆ ಮರಳಿ ಬರುವ ವೇಳೆಗೆ ಒಂದು ಶುಭ್ರ­ವಾದ ಹಿತ್ತಾ­ಳೆಯ ಪಾತ್ರೆ ತುಂಬ ಸಕ್ಕರೆ ಬೆರೆ­ಸಿದ ಘಮ­ಘ­ಮಿ­ಸುವ ಹಸು­ವಿನ ಹಾಲನ್ನೂ, ಸೊಗ­ಸಾದ ಒಂದು ಚಿಪ್ಪು ಬಾಳೆ­ಹ­ಣ್ಣನ್ನೂ ತಂದಿ­ಟ್ಟು­ಕೊಂಡು ಕಾದಿ­ದ್ದರು. ` ಈ ಬಡ­ವನ ಮನೆ­ಯಲ್ಲಿ ಊಟ­ವ­ನ್ನಂತೂ ಮಾಡು­ವಂ­ತಿಲ್ಲ. ಈ ಹಾಲು-ಹ­ಣ್ಣು­ಗ­ಳ­ನ್ನಾ­ದರೂ ಸ್ವೀಕ­ರಿಸಿ ನನ್ನ ಪುನೀ­ತ­ನ­ನ್ನಾಗಿ ಮಾಡ­ಬೇಕು. ಇಲ್ಲ­ದಿ­ದ್ದರೆ ಈ ಬಡ­ವನ ಮನ­ಸ್ಸಿಗೆ ಸಮಾ­ಧಾನ ಆಗು­ವು­ದಿಲ್ಲ' ಎಂದು ಅಂಗ­ಲಾಚಿ ಬೇಡಿ­ಕೊಂಡ. ವೆಂಕ­ಣ್ಣ­ಯ್ಯ­ನ­ವರು ಆತನ ಪ್ರಾರ್ಥ­ನೆ­ಯನ್ನು ನಿರಾ­ಕ­ರಿ­ಸ­ಲಾ­ಗದೆ, ಹಾಲು ಹಣ್ಣು­ಗ­ಳನ್ನು ಆ ರಾಮ­ದೂ­ತ­ನಿಗೆ ನೈವೇದ್ಯ ಮಾಡಿ, ಶ್ರೀರಾ­ಮ­ರ­ಕ್ಪಾ­ಮಂ­ತ್ರ­ದಿಂದ ಪುನೀ­ತ­ವಾ­ಗಿದ್ದ ಆ ಹಣ್ಣು­ಗ­ಳನ್ನು ತಿಂದು,ಹಾಲು ಕುಡಿ­ದರು. ಅವೆ­ರಡೂ ತುಂಬ ರುಚಿ­ಯಾ­ಗಿ­ದ್ದವು.
ಶೇಕ­ದಾ­ರರು ಬಳಿಕ ಶಾನು­ಭೋೋ­ಗ­ನೊ­ಡನೆ ಲೋಕಾ­ಭಿ­ರಾಮ­ವಾಗಿ ಮಾತಾ­ಡುತ್ತಾ, ಆ ಊರಿನ ಹೆಸರು ಹೊಸ­ಹ­ಳ್ಳಿ­ಯೆಂದೂ, ಚಳ್ಳ­ಕೆರೆ ತಾಲೂಕು ತಳುಕು ಹೋಬ­ಳಿಗೆ ಸೇರಿದ ಗ್ರಾಮ­ವೆಂದೂ, ಆ ಊರಿಗೆ ಶಾನು­ಭೋೋ­ಗ­ನಾದ ಆತನ ಹೆಸರು ತಿಮ್ಮ­ಪ್ಪ­ನೆಂದೂ ತಿಳಿ­ದು­ಕೊಂ­ಡರು. ಆತ ಶೇಕ­ದಾ­ರ­ರನ್ನು ಕುರಿತು ` ಮಹಾ­ಸ್ವಾಮಿ, ತಮ್ಮಂಥ ಹಿರಿ­ಯರ ಆಶೀ­ರ್ವಾ­ದ­ದಿಂದ ನನಗೆ ಯಾವ ತೊಂದ­ರೆಯೂ ಇಲ್ಲ. ತಮ್ಮಂ­ತಹ ಸತ್ಬ್ರಾ­ಹ್ಮ­ಣರ ಸೇವೆ­ಯಿಂದ ನಾನು ಧನ್ಯ­ನಾದೆ. ಇಲ್ಲಿಗೆ ಸಮೀ­ಪದ ಹಳ್ಳಿ­ಗಳು ಪರ­ಶು­ರಾ­ಮ­ಪುರ ಹೋಬ­ಳಿಗೆ ಸೇರಿ­ದವು. ಅಲ್ಲಿಗೆ ತಾವು ಬಂದು ಹೋಗು­ವಾಗ ನಾನು ತಮ್ಮನ್ನು ಅನೇಕ ಸಲ ನೋಡಿ­ದ್ದೇನೆ. ತಮ್ಮ ಗುರುತು ನನಗೆ ಚೆನ್ನಾ­ಗಿಯೇ ಇದೆ' ಎಂದ ಹೊಗ­ಳಿದ. ಆ ವೇಳೆಗೆ ರಾತ್ರಿ ಹತ್ತು­ಗಂ­ಟೆ­ಯಾ­ಯಿತು. ಶಾನು­ಭೋಗ ತನ್ನ ಅತಿ­ಥಿ­ಯನ್ನು ಕುರಿತು `ಮ­ಹಾ­ಸ್ವಾಮಿ ತಾವಿನ್ನು ಮಲ­ಗೋ­ಣ­ವಾ­ಗಲಿ, ನಾನೂ ಮನೆಗೆ ಹೋಗು­ತ್ತೇನೆ' ಎಂದು ಅವ­ರಿಗೆ ನಮ­ಸ್ಕ­ರಿಸಿ ಮೇಲೆದ್ದ.
ಆಗ ವೆಂಕ­ಣ್ಣ­ಯ್ಯ­ನ­ವರು `ತಿ­ಮ್ಮ­ಪ್ಪ­ನ­ವರೇ, ಇದು ಪರ­ಸ್ಥಳ. ದೇವ­ಸ್ಥಾ­ನದ ಬಾಗಿಲು ಭದ್ರ­ವಿ­ರು­ವಂತೆ ಕಾಣು­ತ್ತಿಲ್ಲ. ಅಲ್ಲದೇ ಇದು ಊರ ಹೊರ­ಗಿದೆ. ನನ್ನ ಹತ್ತಿರ ಈಗ­ತಾನೇ ವಸೂ­ಲಾದ ಭಾರೀ ಹಣ­ವಿದೆ. ನಾನು ಹುಷಾ­ರಾ­ಗಿ­ರು­ವುದು ಮೇಲು. ಇದು ನಾಳೆಯ ದಿನ ಖಜಾ­ನೆಗೆ ಇರ­ಸಾ­ಲಾ­ಗ­ಬೇ­ಕಾದ ಹಣ. ರಾತ್ರಿ­ಯಲ್ಲಿ ಒಂಟಿ­ಯಾ­ಗಿ­ರ­ಬೇ­ಕಾದ ನನ್ನ ಬಳಿ ಇಷ್ಟು ದೊಡ್ಡ ಮೊತ್ತ ಇರು­ವುದು ಸರಿ­ಯಲ್ಲ. ಆದ್ದ­ರಿಂದ ಈ ಹಣ­ವನ್ನು ರಾತ್ರಿ ನಿಮ್ಮಲ್ಲೇ ಜೋಪಾ­ನ­ವಾ­ಗಿ­ಟ್ಟು­ಕೊಂ­ಡಿದ್ದು, ಬೆಳಗೆರೆಗೆ ನಾನು ಹೊರ­ಡುವ ಹೊತ್ತಿಗೆ ಹಿಂದಕ್ಕೆ ತಂದು­ಕೊಡಿ' ಎಂದು ಹೇಳಿ, ತಮ್ಮ ಸೊಂಟ­ದ­ಲ್ಲಿದ್ದ ಹಮ್ಮಿ­ಣಿ­ಯ್ನು ಬಿಚ್ಚಿ ತೆಗೆದು ಶಾನು­ಭೋ­ಗರ ಕೈಲಿ ಕೊಟ್ಟರು. ಶಾನುಭೋಗ ತಿಮ್ಮಪ್ಪ ` ಅಗ­ತ್ಯ­ವಾಗಿ ಆಗಲಿ ಮಹಾ­ಸ್ವಾಮಿ. ತಾವು ನಿಶ್ಚಿಂ­ತೆ­ಯಾಗಿ ನಿದ್ದೆ ಮಾಡೋ­ಣ­ವಾ­ಗಲಿ' ಎಂದು ಹೇಳಿ ಹಣದ ಹಮ್ಮಿ­ಣಿ­ಯೊಂ­ದಿಗೆ ತನ್ನ ಮನೆಗೆ ಹೋದ. ವೆಂಕ­ಣ್ಣ­ಯ್ಯ­ನ­ವರು ಹಾಯಾಗಿ ನಿದ್ರೆ ಹೋದರು.
ವೆಂಕ­ಣ್ಣ­ಯ್ಯ­ನ­ವರು ಮಾಮೂಲು ಪದ್ಧತಿ­ಯಂತೆ ಪಂಚ­ಪಂಚ ಉಷಃ­ಕಾ­ಲ­ಕ್ಕೆದ್ದು ಹಾಸಿ­ಗೆ­ಯಲ್ಲಿ ಕುಳಿತು ಕಣ್ಮು­ಚ್ಚಿ­ಕೊಂಡೇ ಪ್ರಾತಃ­ಸ್ಮ­ರ­ಣೆ­ಯನ್ನು ಮಾಡಿ ಮುಗಿ­ಸಿ­ದರು. ಆ ವೇಳೆಗೆ ಸಾಮಾ­ನ್ಯ­ವಾಗಿ ಕೋಳಿ ಕೂಗ­ಬೇಕು. ನೇಗಿ­ಲ­ಯೋಗಿ ಎತ್ತು­ಗ­ಳ­ನ್ನ­ಟ್ಟಿ­ಕೊಂಡು ಹೊಲ­ಗಳ ಹಾದಿ ಹಿಡಿ­ಯ­ಬೇಕು; ಹೆಣ್ಣು­ಗ­ಳೆದ್ದು ಹಾಡುತ್ತಾ ರಾಗಿ ಬೀಸ­ಬೇಕು, ಅಕ್ಕಿ ಕುಟ್ಟ­ಬೇಕು, ಅಂಗ­ಣಕ್ಕೆ ಸಗಣಿ ನೀರು ಹಾಕ­ಬೇಕು. ದನ­ಗ­ಳಿಗೆ ಹುಲ್ಲು ಹಾಕಿ ಹಾಲು ಕರೆ­ಯ­ಬೇಕು. ಹಕ್ಕಿ­ಗಳು ಮರ­ಗಳ ಮೇಲೆ ಕುಳಿತು ಚಿಲಿ­ಪಿ­ಲಿ­ಗು­ಟು್ಟ­ತ್ತಿ­ರ­ಬೇಕು. ಆದರೆ ಅದೊಂದೂ ಅಲ್ಲಿ ಕಾಣಿ­ಸ­ಲಿಲ್ಲ. ಶೇಕ­ದಾ­ರರು ಅರ್ಧ­ಂಟೆ ಕಾದರು. ಕೋಳಿ ಕೂಗ­ಲಿಲ್ಲ. ಜನರ ಚಲ­ನ­ವ­ಲನ ಇಲ್ಲ. ಬೆಳಕು ಹರಿ­ಯುತ್ತಾ ಬಂದಂತೆ ತಾವು ಮಲ­ಗಿದ್ದ ಹಾಸಿಗೆ ಕಾಣಿ­ಸ­ಲಿಲ್ಲ.ಅ­ದಕ್ಕೆ ಬದ­ಲಾಗಿ ಸೊಪ್ಪು­ಸ­ದೆ­ಗಳ ರಾಸು ಕಾಣಿ­ಸಿತು. ಎದ್ದು ಗುಡಿಯ ಮುಂದಿನ ಕಟ್ಟೆಯ ಮೇಲೆ ನಿಂತು ನೋಡಿ­ದರು.
ಅಲ್ಲೇ­ನಿದೆ? ಮನೆ­ಗಳೂ ಇಲ್ಲ, ಜನರೂ ಇಲ್ಲ. ಹರಕು ಮುರುಕು ಗೋಡೆ­ಗಳು, ಅಸ್ತ­ವ್ಯಸ್ತ ಬಿದ್ದಿ­ರುವ ಕಲ್ಲು­ರಾಶಿ, ಮಣ್ಣಿನ ಗುಪ್ಪೆ. ಅವು­ಗಳ ನಡುವೆ ಬೆಳೆ­ದಿ­ರುವ ಕಾಡು­ಗಿ­ಡ­ಗಳು. ಅಲ್ಲ­ಲ್ಲಿಯೇ ಹರಿ­ದಾ­ಡು­ತ್ತಿ­ರುವ ಹುಳ ಹುಪ್ಪಟೆ. ಅದೊಂದು ಹಾಳೂರು.
ವೆಂಕ­ಣ್ಣ­ಯ್ಯ­ನ­ವ­ರಿಗೆ ದಿಗ್ಭ್ರ­ಮೆ­ಯಾ­ಯಿತು. ತಾವೆಂಥ ಅವಿ­ವೇ­ಕ­ವನ್ನು ಮಾಡಿದ ಹಾಗಾ­ಯಿತು. ಐದು­ನೂರು ರುಪಾ­ಯಿ­ಗಳ ದೊಡ್ಡ ಗಂಟನ್ನು ಶಾನು­ಭೋೋಗ ದೆವ್ವದ ಕೈಯಲ್ಲಿ ಕೊಟ್ಟು­ದಾ­ಯಿ­ತಲ್ಲ. ಅಷ್ಟು ದೊಡ್ಡ ಮೊತ್ತ­ವನ್ನು ಮತ್ತೆ ಜೋಡಿ­ಸು­ವುದು ಹೇಗೆ? ಯಾರು ಕೊಟ್ಟಾರು? ಎಲ್ಲಿಂದ ತರ­ಬೇಕು? ಇರ­ಸಾ­ಲಿನ ಹಣ ಒಡ­ನೆಯೇ ಪಾವತಿ ಆಗ­ದಿ­ದ್ದರೆ ತಮ್ಮ ಗತಿ ಏನು? ಸರ್ಕಾರ ತಮ್ಮನ್ನು ಸುಮ್ಮನೇ ಬಿಟ್ಟೀತೇ?
**­*­**
ತ. ಸು. ಶಾಮ­ರಾ­ಯರು ಬರೆದ ` ಮೂರು ತಲೆ­ಮಾರು' ಕೃತಿಯ ಆಯ್ದ ಅಧ್ಯಾ­ಯದ ಮೊದಲ ಭಾಗ ಇದು. ಎಲ್ಲಾ ಪ್ರಶ್ನೆ­ಗ­ಳನ್ನೂ ಮರೆತು ಇದರ ರೋಚ­ಕ­ತೆ­ಯನ್ನು ಅನು­ಭ­ವಿಸಿ. ಮುಂದಿನ ಭಾಗ ನಾಳೆ. ಅಲ್ಲಿಯ ತನಕ ದೆವ್ವದ ನೆನಪು.