Saturday, May 12, 2007

ತುಳ­ಸೀ­ಪೂಜೆ ಮಾಡ­ಬೇಕಾ? ಮನೆ­ಮುಂದೆ ತುಳ­ಸೀ­ಕಟ್ಟೆ ಇರ­ಬೇಕಾ?

ನೀವು ತುಳ­ಸೀ­ಪೂಜೆ ಮಾಡೋಲ್ವಾ?
ಹಾಗೊಂದು ಪ್ರಶ್ನೆ ಎದು­ರಾ­ಯಿತು. `ತು­ಳಸೀ' ಅಂದ­ರೇನು? -ಮ­ರು­ಪ್ರಶ್ನೆ ಬಂತು. ನಿಮ್ಮ ಮನೆ ಮುಂದೆ ತುಳ­ಸೀ­ಕ­ಟ್ಟೆಯೂ ಇಲ್ವಾ? ಗಾಬ­ರಿಯ ಪ್ರಶ್ನೆ ಎದು­ರಾ­ಯಿತು. ತುಳ­ಸೀಗೆ ಕಟ್ಟೇನಾ? ಇಲ್ಲಿ ಅಚ್ಚ­ರಿ­ಯಿತ್ತು. ತುಳಸಿ, ಯೂ ನೋ, ಇಟ್ಸ್ ಎ ಪ್ಲಾಂಟ್. ವೆರಿ ಆಸ್ಪೀ­ಶಿ­ಯಸ್ ಅಂತ ಉದ್ಗಾ­ರ­ವಾ­ಯಿತು. ದೂರ­ದ­ಲ್ಲೆಲ್ಲೋ ವಿದ್ಯಾ­ಭೂ­ಷ­ಣರು ಹಾಡಿದ ಹಾಡು ಅನು­ರ­ಣಿ­ಸು­ತ್ತಿತ್ತು;
ಒಂದು ದಳ ಶ್ರೀತು­ಳ­ಸಿ
ಬಿಂದು ಗಂಗೋ­ದ­ಕ­ವು
ಇಂದಿ­ರಾ­ರ­ಮ­ಣಗೆ ಅರ್ಪಿ­ತ­ವೆ­ನು­ತ
ಒಂದೇ ಮನ­ಸಿ­ನ­ಲಿ ಸಿಂಧು­ಶ­ಯನ
ಮುಕುಂ­ದ­ನ­­ ನೆ­ನ­ದರೆ ಎಂದೆಂದೂ
ವಾಸಿ­ಸುವ ಮಂದಿ­ರ­ದೊ­ಳ­ಗೆ­....

ಮನಸ್ಸು ಗೊಂದ­ಲ­ಪುರಿ!
ತುಳ­ಸೀ­ಪೂಜೆ ಮಾಡ­ಬೇಕಾ? ಮನೆ­ಮುಂದೆ ತುಳ­ಸೀ­ಕಟ್ಟೆ ಇರ­ಬೇಕಾ? ಇನ್ಫೋ­ಸಿ­ಸ್ ನಲ್ಲಿ ಕೆಲಸ ಮಾಡು­ವ­ವನು ಗೋಪೂಜೆ ಯಾಕೆ ಮಾಡ­ಬೇಕು? ಅದ­ಕ್ಕೋ­ಸ್ಕರ ಒಂದು ದಿನದ ಮಟ್ಟಿಗೆ ಅದೆ­ಲ್ಲಿಂ­ದಲೋ ಗೋವು­ಗ­ಳನ್ನು ಕರೆ­ಸಿ­ಕೊಂಡು ಪೂಜೆ ಮಾಡೋ­ದ­ರಿಂದ ಏನು ಪ್ರಯೋ­ಜನ? ಯಾವುದೋ ಪತ್ರಿ­ಕೆ­ಯಲ್ಲಿ ಕೆಲಸ ಮಾಡುವ ಗಂಡ, ಬ್ಯಾಂಕಿ­ನಲ್ಲಿ ದುಡಿಯೋ ಹೆಂಡತಿ, ಕಾನ್ವೆಂ­ಟಿ­ನಲ್ಲಿ ಓದೋ ಹುಡು­ಗ­ನಿಗೆ ದೀಪಾ­ವಳಿ ಯಾಕೆ? ಜೊತೆಗೇ ಕ್ಲಬ್ಬಿಗೆ ಹೋಗಿ ಬರುವ ಹೆಂಡ­ತಿಗೆ ಭೀಮನ ಅಮಾ­ವಾಸ್ಯೆ ಬೇಕೆ?
ನಮಗೆ ಅಲ್ಲೂ ಇರುವ, ಇಲ್ಲೂ ಇರುವ ಆಸೆ! ಅದನ್ನು ಬಿಡುವ ಧೈರ್ಯ­ವಿಲ್ಲ; ಇದರ ಮೇಲೆ ನಂಬಿ­ಕೆ­ಯಿಲ್ಲ. ಅದು ಅಪ್ಪನ ಆಸ್ತಿ­ಯಂತೆ ಪಿತ್ರಾ­ರ್ಜಿತ; ಇದು ಸ್ವಂತ ದುಡಿ­ಮೆಯ ಸ್ವಯಾ­ರ್ಜಿತ. ಸ್ವಯಾ­ರ್ಜಿ­ತದ ಜೊತೆಗೆ ಪಿತ್ರಾ­ರ್ಜಿ­ತವೂ ಇರಲಿ ಎಂಬ ಆಸೆ. ಅಲ್ಲಿಂದ ಬಂದಿ­ದ್ದ­ನ್ನೆಲ್ಲ ಒಂದು ಕೋಣೆ­ಯ­ಲ್ಲಿಟ್ಟು ಬೀಗ ಜಡಿದು ವರು­ಷ­ಕ್ಕೊಮ್ಮೆ ಬಾಗಿಲು ತೆರೆದು ನೋಡಿ `ಆಹಾ' ಎಂದು ಹಳೆಯ ಕಮಟು ವಾಸ­ನೆಗೆ ಬೆರ­ಗಾಗಿ, ಇಂಥ ವಾಸನೆ ಈಗೆ­ಲ್ಲಿ­ಹೋ­ಯಿತು ಅಂತ ಮೂಗನ್ನು ವಿಸ್ಕಿ ಬಾಟ­ಲಿಗೆ ತಿಕ್ಕಿ ಹೊಳಪು ಮಾಡಿ­ಕೊಂಡು ಹೊರ­ಟು­ಬಿ­ಡು­ತ್ತೇವೆ ನಮ್ಮದೇ ಆದ ರೂಟಿಗೆ, ಬೇಟೆಗೆ! ಬದುಕು ಮಾಯೆಯ ಮಾಟ; ಮಾತು `ನೆ­ರೆ­ತೊರೆ'ಯಾಟ!
***
ಹಬ್ಬಕ್ಕೆ ಇವ­ತ್ತಿಗೂ ರಜೆ; ಸ್ವಾತಂತ್ರ ದಿನಾ­ಚ­ರ­ಣೆಯ ಹಾಗೆ. ನಾಗ­ರ­ಪಂ­ಚ­ಮಿ­ಯಿಂದ ತುಳ­ಸೀ­ಪೂ­ಜೆಯ ತನಕ ನಡುವೆ ಹತ್ತಾರು ಹಬ್ಬ­ಗಳು. ಬಲಿ­ಪಾಡ್ಯ, ಸೋಮನ ಬಿದಿಗೆ, ಅಕ್ಪಯ ತದಿಗೆ, ಗಣೇ­ಶನ ಚೌತಿ, ನಾಗ­ರ­ಪಂ­ಚಮಿ, ಕುಕ್ಕೆ ಷಷ್ಠಿ, ರಥ­ಸ­ಪ್ತಮಿ, ಕೃಷ್ಣಾ­ಷ್ಟಮಿ, ಮಹಾ­ನ­ವಮಿ, ವಿಜ­ಯ­ದ­ಶಮಿ,ಪ್ರ­ಥಮ ಏಕಾ­ದಶಿ, ಉತ್ಥಾನ ದ್ವಾದಶಿ.. ಹೀಗೆ ಹನ್ನೆ­ರಡು ನಿಗ­ದಿತ ಹಬ್ಬ­ಗಳ ನಡುವೆ ಮತ್ತಷ್ಟು ಸಂಭ್ರಮ. ನರಕ ಚತು­ರ್ದಶಿ, ದೀಪಾ­ವಳಿ, ಗೋಪೂಜೆ, ಲಕ್ಪ್ಮೀ­ಪೂಜೆ.. ಹೀಗೆ.
ಅದ­ನ್ನೆಲ್ಲ ಇವತ್ತೂ ಎಲ್ಲರೂ ಆಚ­ರಿ­ಸ­ಬೇಕೇ? ಅಂಥ­ದ್ದೊಂದು ಭಾಷಣ ಸಾಗು­ತ್ತಿತ್ತು; ನಾವು ನಮ್ಮ ಆಚ­ರ­ಣೆ­ಗ­ಳನ್ನು, ಹಬ್ಬ­ಗ­ಳನ್ನು ಮರೆ­ತು­ಬಿ­ಟ್ಟಿ­ದ್ದೇವೆ. ಹಬ್ಬ­ಗ­ಳಿಗೆ ವಿಶೇ­ಷ­ವಾದ ಅರ್ಥ­ವಿದೆ. ಅವು­ಗಳು ಕೇವಲ ಸಂಭ್ರ­ಮದ ಆಚ­ರ­ಣೆ­ಗ­ಳಲ್ಲ. ಅದ­ಕ್ಕೊಂದು ಸಾಮಾ­ಜಿಕ ಮಹ­ತ್ವ­ವಿದೆ. ಅವು­ಗ­ಳನ್ನು ನಾವು ಮರೆ­ಯು­ತ್ತಿ­ರು­ವುದು ವಿಷಾ­ದ­ನೀಯ!
ಹೌದಾ?
ಸುಮ್ಮನೆ ಯೋಚಿ­ಸೋಣ; ಈ ಹಬ್ಬ­ಗ­ಳಿಗೂ ನಮ್ಮ ಜೀವ­ನ­ಕ್ರ­ಮಕ್ಕೂ ಏನಾ­ದರೂ ಸಂಬಂಧ ಇದೆಯೆ? ಇವತ್ತು ನಗ­ರ­ಗ­ಳಲ್ಲಿ ವಾಸಿ­ಸು­ತ್ತಿ­ರುವ ನಮ್ಮ ಜೀವನ ಶೈಲಿಯೇ ಬೇರೆ­ಯಾ­ಗಿ­ಲ್ಲವೆ? ನಮ್ಮ ಜೀವ­ನ­ಶೈಲಿ ಬೇರೆ­ಯಾ­ಗಿ­ದ್ದರೂ ನಾವು ಯಾಕೆ ನಮಗೆ ಅರ್ಥವೇ ಆಗದ, ಕಾರ್ಯ­ಕಾ­ರಣ ಸಂಬಂ­ಧವೇ ಇಲ್ಲದ ಹಬ್ಬ­ಗ­ಳನ್ನು ಆಚ­ರಿ­ಸ­ಬೇಕು?
ಬಲಿ­ಪಾ­ಡ್ಯ­ದಿಂದ ಹಿಡಿದು ನರಕ ಚತು­ರ್ದಶಿ ತನ­ಕದ ಎಲ್ಲ ಹಬ್ಬ­ಗಳೂ ಕೃಷಿ­ಪ್ರ­ಧಾ­ನ­ವಾದ ಸಮಾ­ಜಕ್ಕೆ ಹೊಂದಿ­ಕೊ­ಳ್ಳು­ವಂಥ ಆಚ­ರ­ಣೆ­ಗಳು. ಪ್ರಕೃ­ತಿಗೆ ಹತ್ತಿ­ರಾ­ಗಿ­ರು­ವ­ವರ ಸಂಭ್ರಮ ಅದು.ಬ­ಲಿ­ಪಾ­ಡ್ಯದ ದಿನ ಪಾತಾ­ಳ­ದಲ್ಲಿ ಅಡಗಿ ಕುಳಿತು ಒಳ್ಳೆಯ ಬೆಳೆ ಕೊಟ್ಟ ಬಲಿ­ಚ­ಕ್ರ­ವ­ರ್ತಿಗೆ ಕೃತ­ಜ್ಞತೆ ಸಲ್ಲಿ­ಸ­ಲಾ­ಗು­ತ್ತದೆ. ಇವತ್ತು ಬಲಿ ಚಕ್ರ­ವರ್ತಿ ಯಾರು ಅನ್ನು­ವು­ದನ್ನು ತಿಳಿಸಿ ಹೇಳು­ವು­ದಕ್ಕೆ ಮೂರು ತಿಂಗಳ ಡಿಪ್ಲೊಮಾ ಕೋರ್ಸ್ ಬೇಕು. ವಿಷ್ಣು ಎಂಬ ಎಟಿಎಂ ಅರ್ಥಾತ್ ಎನಿ ಟೈಮ್ ಮ್ಯಾನ್ ವಾಮನ ರೂಪ­ದಲ್ಲಿ ಬಂದು ಬಲಿ­ಚ­ಕ್ರ­ವ­ರ್ತಿಯ ಬಳಿ ಮೂರು ಅಡಿ ದಾನ ಬೇಡಿದ್ದು. ಎರಡೇ ಅಡಿ­ಯಲ್ಲಿ ಇಡೀ ಜಗ­ತ್ತನ್ನೇ ಅಳೆ­ದದ್ದು. ಮೂರನೆ ಅಡಿ­ಯನ್ನು ಬಲಿಯ ತಲೆ­ಮೇ­ಲಿಟ್ಟು ಪಾತಾ­ಳಕ್ಕೆ ತಳ್ಳಿದ್ದು- ಇವೆಲ್ಲ ಇವ­ತ್ತಿನ ಹ್ಯಾರಿ­ಪಾ­ಟ್ ಮುಂದೆ ಹಳೇ ಐಡಿ­ಯಾ­ಗ­ಳಂತೆ ಕಾಣಿ­ಸ­ಬ­ಹುದು. ಕಾರ್ಟೂ­ನು­ಗ­ಳಿಗೂ ಪುರಾ­ಣ­ಗ­ಳಿಗೂ ಇರುವ ವ್ಯತ್ಯಾಸ ಅದೇ. ಪುರಾಣ ಎಲ್ಲ­ವನ್ನೂ ಘನ­ವಾಗಿ ತೋರಿ­ಸು­ತ್ತದೆ. ಕಾರ್ಟೂನು ಅದನ್ನೇ ತಮಾ­ಷೆ­ಯಾಗಿ ತೋರಿ­ಸು­ತ್ತದೆ. ಪುರಾ­ಣ­ದಿಂದ ಒಂದು ರೀತಿಯ ನಂಬಿಕೆ ಸೃಷ್ಟಿ­ಯಾ­ಗು­ತ್ತದೆ, ಕಾರ್ಟೂ­ನಿಗೆ ಆ ಶಕ್ತಿ­ಯಿಲ್ಲ. ರಂಜಿ­ಸುವ ಶಕ್ತಿ ಎರ­ಡಕ್ಕೂ ಸಮಾನ.
ಇದೊಂದೇ ಅಲ್ಲ, ಎಲ್ಲಾ ಹಬ್ಬ­ಗಳೂ ಕೃಷಿ ಪ್ರಧಾನ, ಪರಿ­ಸ­ರಕ್ಕೆ ಹತ್ತಿ­ರಾ­ದದ್ದು. ಹಳ್ಳಿ­ಗ­ಳಲ್ಲಿ ಸದಾ ಕಾಡಿನ ನಡುವೆ ಇರೋ­ದ­ರಿಂದ ಹಾವನ್ನು ನೋಡು­ವುದು ಸರ್ವೆ­ಸಾ­ಮಾನ್ಯ. ಅದ­ಕ್ಕೊಂದು ನಾಗ­ರ­ಪಂ­ಚಮಿ. ಬೆಳೆ ಬೆಳೆದು ಫಸಲು ಬಿಡುವ ಹೊತ್ತಲ್ಲಿ ಕ್ರಿಮಿ­ಕೀ­ಟ­ಗಳ ಕಾಟ; ಅವನ್ನು ಓಡಿ­ಸಲು ದೀಪಾ­ವ­ಳಿಯ ಸದ್ದು ಮತ್ತು ಪಟಾ­ಕಿ­ಯಿಂದ ಬರುವ ಗಂಧ­ಕದ ಹೊಗೆ. ಮನೆ­ಯಲ್ಲೇ ಹತ್ತಾರು ಗೋವು­ಗಳು. ಅವು­ಗ­ಳಿಗೆ ಕೃತ­ಜ್ಞತೆ ಸಲ್ಲಿ­ಸೋ­ದಕ್ಕೆ ಗೋಪೂಜೆ. ಭತ್ತ ತೆನೆ­ಬಿ­ಟ್ಟಾದ ಹೊಸ ಅಕ್ಕಿ ಊಟ. ಬತ್ತ ಮನೆಗೆ ಬಂದಾಗ ಮತ್ತೊಂದು ಸಂಭ್ರಮ. ಏನೂ ಇಲ್ಲ­ದಿ­ದ್ದಾಗ ಸತ್ಯ­ನಾ­ರಾ­ಯಣ ಪೂಜೆ.
ನಗ­ರ­ದ­ಲ್ಲಿ­ರುವ ನಮ್ಮ ವೃತ್ತಿ ಕೃಷಿ ಅಲ್ಲ. ಹಿಂದೆ ಮನುಷ್ಯ ತನ್ನ ಅಗ­ತ್ಯ­ಗ­ಳಿ­ಗ­ಲ್ಲದೆ ಬೇರೇ­ನಕ್ಕೂ ದುಡಿ­ಯು­ತ್ತಿ­ರ­ಲಿಲ್ಲ. ಉದಾ­ಹ­ರ­ಣೆಗೆ ಹಳೆಯ ವೃತ್ತಿ­ಗ­ಳನ್ನೇ ತೆಗೆ­ದು­ಕೊಳ್ಳಿ. ಹೊಟ್ಟೆ­ಗಿ­ಕ್ಕು­ವು­ದಕ್ಕೆ ರೈತ, ಕೃಷಿಗೆ ಬೇಕಾಗ ಉಪ­ಕ­ರಣ ಮಾಡು­ವು­ದಕ್ಕೆ ಕಮ್ಮಾರ, ಬಟ್ಟೆ ನೇಯ್ದು ಕೊಡು­ವು­ದಕ್ಕೆ ನೇಕಾರ, ಹೊಲಿದು ಕೊಡು­ವು­ದಕ್ಕೆ ದರ್ಜಿ, ಕಾಲ್ಮೆ­ಟ್ಟು­ವಿಗೆ ಚಮ್ಮಾರ- ಇಂಥ ವೃತ್ತಿ­ಗಳೇ ಇದ್ದದ್ದು. ಇಂಥ ಜೀವ­ನೋ­ಪಾ­ಯ­ಗ­ಳನ್ನು ಬಿಟ್ಟು ಯಾರೂ ಕೂಡ ಯಾವುದೋ ಕಂಪ್ಯೂ­ಟರ್ ಪ್ರೋಗ್ರಾಮ್ ಬರೆ­ದು­ಕೊಂಡೋ, ತಮಗೇ ಗೊತ್ತಿ­ಲ್ಲದ ಯಂತ್ರ­ವೊಂ­ದರ ಬಿಡಿ­ಭಾ­ಗ­ಗ­ಳನ್ನು ತಯಾ­ರಿ­ಸಿ­ಕೊಂಡೋ ಬದು­ಕು­ತ್ತಿ­ರ­ಲಿಲ್ಲ. ಇವತ್ತು ನಾವು ಮಾಡುವ ಅಸಂ­ಖ್ಯಾತ ಉದ್ಯೋ­ಗ­ಗಳ ಪೈಕಿ ತೊಂಬ­ತ್ತ­ರಷ್ಟು ನಮಗೆ ಸಂಬಂ­ಧವೇ ಇಲ್ಲದ್ದು!
**­**
ವೃತ್ತಿ ಬದ­ಲಾ­ಗಿದೆ; ಪರಿ­ಸರ ಬದ­ಲಾ­ಗಿದೆ; ಪದ್ಧತಿ ಬದ­ಲಾ­ಗಿದೆ. ಆದರೂ ನಾವು ಹಳೆಯ ಸಂಪ್ರ­ದಾ­ಯ­ಗ­ಳನ್ನು ಉಳಿ­ಸಿ­ಕೊ­ಳ್ಳ­ಬೇಕು ಅಂದು­ಕೊ­ಳ್ಳು­ತ್ತೇವೆ. ಬೆಂಗ­ಳೂರು ಹಬ್ಬ ಮಾಡು­ತ್ತೇವೆ; ನಾಟಕ ಮಾಡು­ತ್ತೇವೆ; ರಂಗ­ಶಂ­ಕರ ಮಾಡು­ತ್ತೇವೆ. ಯಾವುದೂ ನಮಗೆ ಹತ್ತಿರ ಅನ್ನಿ­ಸು­ವು­ದಿಲ್ಲ. ಕಲೆಗೂ ಬದು­ಕಿಗೂ ಈಗ್ಗೆ ಅಷ್ಟೊಂದು ಅಂತರ ಆಗಿ­ಬಿ­ಟ್ಟಿದೆ. ಅದೇ `ಫಿಲ್ಥ್' ಎಂಬ ನಾಟ­ಕ­ವನ್ನು ಈ ಕಾಲದ ತರು­ಣರು ಮುಗಿ­ಬಿದ್ದು ನೋಡು­ತ್ತಾರೆ. ಅದು ಅವ­ರಿಗೆ ಹತ್ತಿ­ರ­ವಾ­ಗಿದೆ.
ಯಕ್ಪ­ಗಾನ, ನಾಗ­ಮಂ­ಡಲ, ದೊಡ್ಡಾಟ, ಭೂತಾ­ರಾ­ಧನೆ- ಇವ­ನ್ನೆಲ್ಲ ಇವತ್ತು ಮತ್ತೆ ನೋಡಿ ಮೆಚ್ಚ­ಬೇ­ಕಾ­ದರೆ ಅವು ನಮ್ಮನ್ನು ಬೇರೆಯೇ ರೂಪ­ದಲ್ಲಿ ಪ್ರವೇ­ಶಿ­ಸ­ಬೇಕು. ಆ ರೂಪ ಯಾವುದು ಅನ್ನು­ವು­ದನ್ನು ಕಾಲ ಒಂದೇ ನಿರ್ಧ­ರಿ­ಸ­ಬ­ಲ್ಲದು. ಅದ­ಕ್ಕಾಗಿ ಕಾಯು­ವುದು ಬಿಟ್ಟು ; ಹಳೆ­ಯ­ದೆಲ್ಲ ಸಾಯು­ತ್ತಿದೆ ಅಂತ ಹಪ­ಹ­ಪಿ­ಸು­ವು­ದ­ರಲ್ಲಿ ಅರ್ಥ­ವಿಲ್ಲ.
ಅಡಿ­ಗರು ಯಾವತ್ತೋ ಬರೆ­ದ­ರಲ್ಲ; ಹೊಸ್ತಿ­ಲಾ­ಚೆಗೆ ನಿಂತು ಹಿಂದೆ­ಮುಂದೆ ನೋಡು­ವ­ಗತ್ಯ ಇಲ್ಲ; ಇದು ಹೊಸ್ತಿಲೇ ಅಲ್ಲ!

10 comments:

Anonymous said...

Preetiya Jogi,
This is a logical discussion about habba and acharanegalu. But my experience has been quite different. When you have a tulasi katte with your whole heart and enjoy lighting the lamp rather than compulsion it is a different anubhava all together :-)

Anonymous said...

jogayya,

Mahantesh said...

yaake namma habba haridinagaLu ,puratana raajara saamrajyada haage kanmare aagata ive? jaagatikaraNada parOkSha karaNava? yaake naavugaLu ittichige New year ,Chrismas maatra acharita idivi?
habba acharisoke haLLene sOktana?
tuLasikatte maaDidare elli parking jaaga kademe agutte anno dinagaLalli tuLasi aMdre enu? adara mahatva kaaneyaguttiruvadu tumba viShadada saMgati...

Anonymous said...

ಬೇರೆ ವಿಚಾರಗಳು ನನಗೆ ಗೊತ್ತಿಲ್ಲ.. ಆದರೇ ಕಾರ್ತಿಕಕ್ಕೆ ಅವಲಕ್ಕಿ ಬೆಲ್ಲ ಮುಕ್ಕಲಿಕ್ಕಾಗಿ, ಪೂಜೆಗೆ ಮುಂಚೆ ಕಬ್ಬು, ನೆಲ್ಲಿಕಾಯಿಯನ್ನು ಕದ್ದು ತಿನ್ನಲು, ಕತ್ತಲಿನ ನಿರಾಳತೆಯಲ್ಲಿ ತುಳಸಿಗೆ ಮಂಟಪ ಕಟ್ಟಿ ಸುತ್ತಲೂ ದೀಪ ಹಚ್ಚಿ , ದೀಪಾವಳಿಯಲ್ಲಿ ಹೊಡೆಯದೇ ಉಳಿದ ಪಟಾಕಿಗಳನ್ನೆಲ್ಲಾ ಪಟ ಪಟ ಸುಡಲು, ನನಗಂತೂ ತುಳಸಿಕಟ್ಟೆ ಬೇಕೆ ಬೇಕು..

ಕಿರಣ್

Anonymous said...

ಬೇರೆ ಯಾವುದಕ್ಕೆ ತುಳಸಿ ಬೇಕೋ ಬೇಡವೋ, ಕೆಮ್ಮಿನಿಂದ ಹಿಡಿದು ಕಾಮದವರೆಗೆ ಕೆಲಸ ಮಾಡುವ ಅದರ ಓಷಧೀಯ ಗುಣಕ್ಕಾದರೂ ಅದು ಬೇಕು. ಆಚರಣೆಗಳ ಬಗ್ಗೆ ದೊಡ್ಡ ಪ್ರಶ್ನೆ ಎತ್ತಿದ್ದೀರಿ.

- ಸೀತಾಳಭಾವಿ

suresh said...

ತುಳಸಿಗೆ ಔಷಧೀಯ ಗುಣಗಳಿರುವುದರಿಂದಲೇ ಅದು ಮನೆಗೆ ಮತ್ತು ಮನಕ್ಕೆ ಹತ್ತಿರ. ತಣ್ಣನೆಯ ನೀರಿಗೆ ಒಂದೆಸಳು ತುಳಸಿ ಹಾಕಿ ನಾವು ಕುಡಿದರೂ ಅರ್ಚಕರು ಕೊಟ್ಟರೂ ಅದು `ತೀರ್ಥ'ವೇ. ಏಕೆಂದರೆ ತುಳಸಿಯ ಸಂಗ ಮಾಡಿದ ಆ ನೀರಿಗೂ ಔಷಧೀಯ ಗುಣ ಬಂದಿರುತ್ತದೆ. ಅದನ್ನು ಕುಡಿದವರು ಪವಿತ್ರರಾಗುತ್ತಾರೆ ಅಂದರೆ ದೇಹದೊಳಗೆ ಸಣ್ಣ ಪ್ರಮಾಣದ ಶುದ್ಧೀಕರಣ ಪ್ರಕ್ರಿಯೆ ನಡೆದಿರುತ್ತದೆ. ಹಾಗಾಗಿ ಅದು ದೇವರು ಕೊಟ್ಟಿದ್ದು; ತುಳಸಿ ದೇವರ ಸಮಾನ.

ಇನ್ನು, ಮನೆಗೆ ದಾಳಿ ಇಡುವ ವಿಷಜಂತುಗಳಿಂದ ರಕ್ಷಿಸಿಕೊಳ್ಳಲೂ ಮನೆ ಮುಂದೆ ತುಳಸಿ ಕಟ್ಟೆ ಇರಬೇಕು ಎಂದು ವಾದ ಮಾಡುವವರೂ ಇದ್ದಾರೆ. ತುಳಸಿಯ ಪರಿಮಳಕ್ಕೆ ಹೀಗೆ ವಿಷಜಂತುಗಳಿಂದ ರಕ್ಷಿಸುವ ಗುಣವಿದೆ ಅಂತ ಯಾರೋ ಹೇಳಿದ್ದನ್ನು ಕೇಳಿದ್ದ ನೆನಪು. ವೈಜ್ಞಾನಿಕವಾಗಿ ಇದು ಎಷ್ಟು ಸತ್ಯವೋ ಗೊತ್ತಿಲ್ಲ.

ಇದಕ್ಕೆ ವ್ಯತಿರಿಕ್ತವಾದ ಒಂದು ಘಟನೆ ನಡೆದಿದ್ದು ಬೆಂಗಳೂರಿನಲ್ಲಿ. ಮನೆ ಮುಂದೊಂದು ತುಳಸಿ ಕಟ್ಟೆ ಇರಬೇಕು, ಅದರೊಳಗೆ ತುಳಸಿ ಗಿಡ ಇರಬೇಕು ಎಂಬ ಸಂಪ್ರದಾಯಕ್ಕೆ ಬದ್ಧನಾಗಿ ಎಲ್ಲಿಂದಲೋ ಒಂದು ತುಳಸಿ ಗಿಡ ಸಂಪಾದಿಸಿಕೊಂಡು ಬಂದು ಕಟ್ಟೆಯೊಳಗೆ ನೆಟ್ಟರೆ... ಆ ರಾತ್ರಿಯೇ ಆ ಪುಟ್ಟ ಪಾಪದ ದೇವರ ಗಿಡವನ್ನು ಹೆಗ್ಗಣವೊಂದು ನಿರ್ದಾಕ್ಷಿಣ್ಯವಾಗಿ ಕಿತ್ತುಹಾಕಿಬಿಡುವುದೇ?!

ಬೆಂಗಳೂರಿನಲ್ಲಿ ಮನುಷ್ಯರಿಗಷ್ಟೇ ಅಲ್ಲ, ಹೆಗ್ಗಣಗಳಿಗೂ ದಪ್ಪ ಚರ್ಮವಿದೆ ಎಂಬುದಂತೂ ಇದರಿಂದ ಖಾತ್ರಿಯಾಗುತ್ತದೆ!!!

Anonymous said...

ಗೋಪೂಜೆ ಮಾಡಬೇಕಾ? ಅಂತಲೂ ಸೇರಿಸಿಕೊಂಡು ಇದನ್ನು ಓದಬಹುದಲ್ಲವೇ??

Anonymous said...

jogi.visheshavaada hesaru.neevu yaake aa hesaru ittukondidiri

pradyumna said...

kadepaksha eegina makkalige haleya sampradayagala sogadu tilisalendadaru navu habbagalannu adara aacharanegalannu kaapadikondu baralebeku brother

Anonymous said...

Govina Pooje madabeka??
I believe all these poojegalu has tried to instill love for plants and animals in our culture. Illi Tulasi has medicinal values and Govu for milk..so these two are treated as Gods..pooje avugalige ondu respect and appreciation thorisuva reethi. We had an occasion very recently where we had to do Govina Pooje. I asked my daughter to do the pooja vidhi...my daughter being very passionate about animals really enjoyed patting the cow with water and kumkuma hachuvudu and most importantly feeding the Govu. I could really keep her fully awake in the wee hours.
In my opinion If we keep arguing about whether one should do acharanegalu or not, the basic fun will be lost. Adu ellindalo thanda Govagiddaru...we really enjoyed her presence.
As far as I am concerned, just go ahead and do it if your heart likes it..illadiddare..I am sure no body can force you to :-)