Tuesday, June 19, 2007

ಭಟ್ಟರಿಗೆ ಮಾಸ್ತಿ ಬಂತು


ಲಕ್ಪ್ಮೀನಾರಾಯಣ ಭಟ್ಟರಿಗೆ ಮಾಸ್ತಿ ಬಂತು.
ದೊಡ್ಡ ಗಂಟಲಿನ, ಸ್ಪಷ್ಟ ಮಾತಿನ, ಕಾವ್ಯವನ್ನೂ ವಿವರಿಸಬಲ್ಲ ಅಪಾರ ಆತ್ಮವಿಶ್ವಾಸದ, ತನ್ನ ಕಾವ್ಯದಲ್ಲಿ ತಾನೇ ನಂಬಿಕೆ ಇಟ್ಟುಕೊಂಡ ಭಟ್ಟರಿಗೆ ಮಾಸ್ತಿ ಮನ್ನಣೆ.
ಅವಜ್ಞೆಗೆ ಒಳಗಾದ, ಮನ್ನಣೆಗಳು ದಕ್ಕದ, ಪ್ರಶಸ್ತಿಗಳು ಅಷ್ಟಾಗಿ ಒಲಿಯದ, ಸಾಕಷ್ಟು ಒಳ್ಳೆಯ ಕವಿತೆಗಳನ್ನು ಕೊಟ್ಟರೂ ಅಷ್ಟಾಗಿ ಗಮನ ಸೆಳೆಯದ, ಅಕ್ಪರವ್ಯಾಮೋಹಿ, ಶ್ರದ್ಧಾವಂತ, ಶ್ರಮಜೀವಿ ಭಟ್ಟರಿಗೆ ಮಾಸ್ತಿ ಪ್ರಶಸ್ತಿ.
ಶರೀಫರನ್ನು ಪರಿಚಯಿಸಿದ, ಯೇಟ್ಸನ ಕವಿತೆಗಳನ್ನು ಕನ್ನಡಿಸಿದ, ಎಲಿಯಟ್ ಪದ್ಯಗಳನ್ನು ಅನುವಾದಿಸಿದ, ಶೇಕ್ಸ್ ಪಿಯರ್ ಸಾನೆಟ್ಟುಗಳನ್ನು ಸುನೀತಗೊಳಿಸಿದ, ನಾಟಕ ಬರೆದ, ವಿಮರ್ಶೆ ಬರೆದ, ಪ್ರಬಂಧ ಬರೆದ ಭಟ್ಟರಿಗೆ ಅರ್ಹ ಗೌರವ.
*****
ಎ್. ಎಸ್. ಲಕ್ಪ್ಮೀನಾರಾಯಣ ಭಟ್ಟರಿಗೂ ಭಾವಗೀತೆಗೂ ಇರುವ ಸಂಬಂಧವನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವುದು ಕಷ್ಟ. ತುಂಬ ಸರಳವಾಗಿ, ಅಂಥ ಶ್ರಮವಿಲ್ಲದೆ ಬರೆಯುವಂತೆ ತೋರುವ ಭಟ್ಟರ ರಚನೆಗಳ ಮಾಧುರ್ಯವನ್ನು ಯಾರೂ ನಿರಾಕರಿಸುವುದಕ್ಕೆ ಸಾಧ್ಯವೇ ಇಲ್ಲ. ಅಡಿಗರ ಹಾಗೆ ಗಾಢವಾಗಿ, ಬೇಂದ್ರೆಯವರ ಹಾಗೆ ಗೂಢವಾಗಿ, ಕೆಎಸ್ ನರಸಿಂಹ ಸ್ವಾಮಿಗಳ ಹಾಗೆ ನಿಬಿಡವಾಗಿ ಭಟ್ಟರು ಬರೆದಿಲ್ಲ ಅನ್ನುವ ವಿಮರ್ಶಕರ ಸಣ್ಣ ಸಣ್ಣ ಆಕ್ಪೇಪಗಳನ್ನು ಪಕ್ಕಕ್ಕಿಟ್ಟ ಹೇಳಿ; ನಿಮ್ಮನ್ನು ಮೊದಲು ಸೆಳೆದ ಭಾವಗೀತೆ ಯಾರದ್ದು?

`ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲೀ ಸಾಲ
ಮೀಟಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ.. ಮನವು.. ಎಲ್ಲೆ ಮೀರಿತೋ..

ಇದನ್ನು ಹಾಡಿದ್ದು ಬಹುಶಃ ರತ್ನಮಾಲಾ ಇರಬೇಕು. ಈ ಸಾಲುಗಳು ಮೂಡುತ್ತಿದ್ದಂತೆಯೇ ಅದರ ಮುಂದಿನ ಸಾಲಿಗೆ ಕಾಯುತ್ತಿತ್ತು ಮನಸ್ಸು;

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಭಾವಸಂಗಮದ ಗೀತೆಗಳಿವು. ಭಟ್ಟರ ಮೇಲೆ ಅಗಾಧವಾದ ಪ್ರೀತಿ ಮತ್ತು ಗೌರವ ಹುಟ್ಟಲಿಕ್ಕೆ ಈ ಆರೆಂಟು ಸಾಲುಗಳೇ ಸಾಕು. ಆದರೆ ಭಟ್ಟರು ಇಂಥ ಅಸಂಖ್ಯ ಸಾಲುಗಳನ್ನು ಕೊಟ್ಟಿದ್ದಾರೆ;

ನೂರಾರು ನದಿ ಕುಡಿದೂ ಮೀರದಾ ಕಡಲು
ಭೋರೆಂದು ಸುರಿಸುರಿದೂ ಆರದಾ ಮುಗಿಲು
ಸೇರಿಯೂ ಕೋಟಿ ತಾರೆ ತುಂಬದಾ ಬಯಲು
ಯಾರದೀ ಮಾಯೆ ಯಾವ ಬಿಂಬದಾ ನೆರಳು.

ಶರೀಫರ ಪದ್ಯಗಳನ್ನು ಬಗೆದು ತಂದು, ಅವನ್ನೆಲ್ಲ ತಿದ್ದಿ ತೀಡಿ ಒಪ್ಪ ಮಾಡಿ ಕೊಟ್ಟ ಭಟ್ಟರು `ಕಲ್ಲು ಸಕ್ಕರೆ ಕೊಳ್ಳಿರೋ' ಎಂಬ ಪುಸ್ತಕ ಸಂಪಾದಿಸಿ ಸಣ್ಣದೊಂದು ವಿವಾದಕ್ಕೂ ಒಳಗಾದರು. ಸಾಕಷ್ಟು ಶತ್ರುಗಳನ್ನೂ ಅವರು ಸಂಪಾದಸಿದ್ದಾರೆ. ಅವರನ್ನು ಲಂಕೇಶರೂ ರಾಮಚಂದ್ರ ಶರ್ಮರೂ ಸೇರಿಕೊಂಡು ಕ್ಯಾಸೆಟ್ ಕವಿ ಎಂದು ಲೇವಡಿ ಮಾಡಿ ನಕ್ಕದ್ದು ಹಳೇ ಸುದ್ದಿ. ಶರ್ಮರ ಕವಿತೆಗಳು ಇವತ್ತು ನಾಪತ್ತೆ. ಭಟ್ಟರೂ ಚಂಡಿ ಹಿಡಿದವರಂತೆ ಅವರ ಟೀಕೆಗಳನ್ನು ನುಂಗಿ ಕೊಂಡು ಬರೆಯುತ್ತಾ ಹೋದರು. ಅದನ್ನು ವಿವಿಧ ಗಾಯಕರಿಂದ ಹಾಡಿಸಿದರು. ಗರ್ತಿಕೆರೆ ರಾಘಣ್ಣನಂಥ ಗಾಯಕರನ್ನು ಪರಿಚಯಿಸಿದರೆ. ಮೀರಾ ಭಜ್ಗಳನ್ನು ಸೊಗಸಾಗಿ ಕನ್ನಡಕ್ಕೆ ತಂದರು.
ಮೃದುಮಧುರ ಸಾಲುಗಳನ್ನು ಪ್ರೇಮ, ದಾಂಪತ್ಯ, ವಿರಹದ ಕ್ಪಣಗಳನ್ನು ರೂಪಕವಾಗಿಸುವ ದಟ್ಟಪ್ರತಿಭೆ ಭಟ್ಟರಿದೆ ಸಿದ್ಧಿಸಿಬಿಟ್ಟಿತು. ಉದಾಹರಣೆಗೆ ಅವರ ಈ ಕೆಳಗಿನ ಸಾಲುಗಳನ್ನು ಓದಿ;

ಮುಗಿಲ ಮಾಲೆ ನಭದಲಿ
ಹಾಲು ಪಯಿರು ಹೊಲದಲಿ
ರೂಪಿಸುತಿವೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ
(ಬಾರೆ ನನ್ನ ದೀಪಿಕಾ)

ತೀರುತಿರುವ ಹರುಷದಂತೆ
ಆರುತಿರುವ ದೀಪವು
ಮೀರಿ ಉರಿದು ಕೊರಗು ಹರಿದು
ಕೊನೆಯಾಯಿತು ಶಾಪವು
(ಎಂದೂ ಕಾಣದಂಥ ಕನಸು)

ಏಕೆ ಹೀಗೆ ನಮ್ಮ ನಡುವೆ
ಮಾತು ಬೆಳೆದಿದೆ
ಕುರುಡು ಹಮ್ಮು ಬೇಟೆಯಾಡಿ
ಪ್ರೀತಿ ನರಳಿದೆ


ಹಮ್ಮು ಬೆಳೆದು ನಮ್ಮ ಬಾಳು
ಆಯ್ತು ಎರಡು ಹೋಳು
ಕೂಡಿಕೊಳಲಿ ಮತ್ತೇ ಪ್ರೀತಿ
ತಬ್ಬಿಕೊಳಲಿ ತೋಳು
(ಏಕೆ ಹೀಗೆ)

ಬೆಳಕೊಂಡು ಸೀರೆಯುಟ್ಟು
ತೇಲಿ ನಡೆವ ರೂಪ
ಗರ್ಭಗುಡಿಯಲಿ ದೇವರೆದುರಲಿ
ಉರಿವ ಶಾಂತ ದೀಪ

ರಾಗದಲ್ಲಿ ಸೇರಿ ಕವಿತೆ ಹಾಡು ಮೂಡುವಂತೆ
ಸಂಜೆ ಸುಳಿವ ಗಾಳಿಗೆ ಹೊನ್ನ ಬಿಸಿಲ ಲೀಲೆಗೆ
ಮುಗಿಲಾಡುವಂತೆ
(ಎಂಥ ಚೆಲುವೆ ನನ್ನ ಹುಡುಗಿ)

****
ನವ್ಯ ಚಳವಳಿಯಲ್ಲೂ ಒಂದಷ್ಟು ಕವಿತೆಗಳನ್ನು ಬರೆದೇ ಬರೆದರು ಭಟ್ಟರು. ಆದರೆ ಅವರ ನವ್ಯ ಕವಿತೆಯ ತುಂಬ ಅಡಿಗರ ಕಾವ್ಯದ ನೆರಳು.

ಬಾ ಮಗೂ ಅಲ್ಲೆ ನಿನ್ನದೆ ಮತ್ತೆ ಹಿಂದಕ್ಕೆ
ನಿನ್ನದೇ ನೆಲಕ್ಕೆ ನಿನ್ನದೇ ಜಲಕ್ಕೆ
ನಿನ್ನ ಒಳಹೊರಗನ್ನು ಸೃಷ್ಟಿಸಿಕೊಟ್ಟ ಸತ್ವಕ್ಕೆ
ಹಿಂದುಮುಂನ್ನುಗಳ ತಕ್ಕ ಛಂದದಲ್ಲಿಟ್ಟು ನಿನ್ನ
ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ
ನಿನ್ನ ಬೆನ್ನಿಗೆ ನಿಂತ ಪುರಾಣ ಇತಿಹಾಸಗಳ
ಬಿಸಿಯುಸಿರು ಬಡಿಯುವೀ ವರ್ತಮಾನಕ್ಕೆ

ಅಡಿಗರದೇ ಲಯ. ಅಡಿಗರದ್ದೇ ಮಾತು. ಇಂಥ ಕವಿತೆಗಳ ಮೂಲಕ ಭಟ್ಟರು ನಮ್ಮನ್ನು ಕಾಡುವುದಿಲ್ಲ. ಅವರದೇನಿದ್ದರೂ ಮೊದಲೇ ಹೇಳಿದ ಹಾಗೆ `ಇಹದ ಪರಿಮಳದ ಹಾದಿ.'
ಎಪ್ಪತ್ತರಲ್ಲೂ ಭಟ್ಟರು ಉತ್ಸಾಹ ಕಳಕೊಂಡಿಲ್ಲ. ಮುಂಚಿನ ಹಾಗೇ ಜಗಳ ಆಡುತ್ತಾರೆ. ಅಮೇರಿಕಾಕ್ಕೆ ಹೋಗಿ ಭಾಷಣ ಮಾಡುತ್ತಾರೆ. ಅಲ್ಲಿ ಬಿಡುಗಡೆ ಮಾಡಿದ ಸೀಡಿಯನ್ನು ಇಲ್ಲೂ ಬಿಡುಗಡೆ ಮಾಡುತ್ತಾರೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮನೆಯಲ್ಲೇ ಕೂತು ಮಾತಾಡಿ, ಆ ಸೀಡಿಯನ್ನು ಕನ್ನಡ ಪ್ರೇಮಿ ಅಮೆರಿಕನ್ನಡಿಗರಿಗೆ ಕೊಟ್ಟು, ಅಲ್ಲಿ ಭಾಷಣ ಮಾಡಿ ಸಂಭ್ರಮಿಸುತ್ತಾರೆ.
ಬೇಸರದ ಸಂಗತಿಯೆಂದರೆ ಭಾವಗೀತೆಗಳನ್ನು ಬರೆಯುವುದನ್ನು ಬಿಟ್ಟಿದ್ದಾರೆ. ಸಂತೋಷದ ಸಂಗತಿಯೆಂದರೆ ನವ್ಯ ಕವಿತೆಗಳನ್ನೂ ಬರೆಯುವುದನ್ನೂ ನಿಲ್ಲಿಸಿದ್ದಾರೆ.
ಭಟ್ಟರ ಒಟ್ಟಾರೆ ನಿಲುವಿನ ಬಗ್ಗೆಹೇಳಬಹುದಾದ ಎರಡು ಸಾಲುಗಳನ್ನು ಅವರೇ ಬರೆದಿದ್ದಾರೆ;

ಕಲ್ಲುದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು
ಶರಣಾದ ಜೀವಕ್ಕೆ ಮರುಗಿ ಸಂತೈಸದೇ
ದೂರವಾದರೆ ಹೇಗೆ ಒಲವು.

ಟಿಪ್ಪಣಿ- ಮೇಲಿನ ಚಿತ್ರ ಅನನ್ಯಾ ಕಾಸರವಳ್ಳಿ ಅವರದ್ದು. ಭಟ್ಟರ ಕವಿತೆಗಳಿಗೂ ಅನನ್ಯಾ ಕಾಸರವಳ್ಳಿ ಅವರಿಗೂ ಸಂಬಂಧ ಇಲ್ಲ ನಿಜ. ಆದರೆ ಭಟ್ಟರ ಎಂಥಾ ಹದವಿತ್ತೇ, ಹರೆಯಕೆ ಏನು ಮುದವಿತ್ತೇ, ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವಿಯಿತ್ತೇ ಹಾಡನ್ನು ಚಿತ್ರೀಕರಿಸಿದರೆ ಆ ಪುಟ್ಟ ತುಂಟಿಯ ಪಾತ್ರಕ್ಕೆ ಅನನ್ಯಾ ಒಪ್ಪುತ್ತಾರೆ ಅಂತ ನಮಗೆ ಅನೇಕರಿಗೆ ಅನ್ನಿಸಿದ್ದಕ್ಕೆ ಆ ಫೋಟೋ. ಅನನ್ಯಾರ ಭಾವಪೂರ್ಣ ಕಣ್ಣುಗಳನ್ನು ಗಮನಿಸಿ. ಅಲ್ಲೊಂದು ಕವಿತೆ ಅವಿತು ಕೂತಂತಿದೆ.

Tuesday, June 12, 2007

ಎಷ್ಟು ಮಳೆ ಹೊಯ್ದರೂ ಏನೂ ನೆನಪಾಗ್ತಿಲ್ವಲ್ರೀ...ಕರ್ಮ!

ಬರೆ­ವ­ಣಿ­ಗೆ­ಯಲ್ಲಿ ಎರಡು ಥರ; ಆಹಾ ಎಷ್ಟು ಚೆನ್ನಾ­ಗಿದೆ ಕವಿತೆ. ಸೊಗ­ಸಾ­ಗಿದೆ ಕತೆ ಅನಿ­ಸು­ವಂತೆ ಬರೆ­ಯು­ವುದು ಒಂದು. ಆಹಾ ಎಷ್ಟು ಚೆನ್ನಾಗಿ ಬರೆ­ದಿ­ದ್ದಾನೆ ಅನ್ನಿ­ಸು­ವುದು ಮತ್ತೊಂದು. ಆಹಾ ಎಷ್ಟು ಚೆನ್ನಾ­ಗಿದೆ ಕವಿತೆ ಅನ್ನಿ­ಸಿ­ದರೆ ಕವಿತೆ ಗೆಲ್ಲು­ತ್ತದೆ, ಕವಿಯೂ ಗೆಲ್ಲು­ತ್ತಾನೆ. ಆಹಾ ಎಷ್ಟು ಚೆನ್ನಾಗಿ ಬರೆ­ದಿ­ದ್ದಾನೆ ಅನ್ನಿ­ಸಿ­ದಾಗ ಕವಿತೆ ಸೋಲು­ತ್ತದೆ, ಆ ಕ್ಪಣಕ್ಕೆ ಕವಿ ಗೆಲ್ಲು­ತ್ತಾನೆ.
ಒಬ್ಬ ಬರ­ಹ­ಗಾ­ರನ ಕಷ್ಟ ಇದೇ. ಆತ ಬರ­ಹದ ಮೇಲೆ ತನ್ನ ನೆರಳು ಕೂಡ ಸುಳಿ­ಯ­ದಂತೆ ಬರೆ­ಯ­ಬೇ­ಕಾ­ಗು­ತ್ತದೆ. ತನ್ನ ಅನು­ಭ­ವದ ಭಾರ ಕೃತಿ­ಯನ್ನು ಜಗ್ಗ­ದಂತೆ ನೋಡಿ­ಕೊ­ಳ್ಳ­ಬೇ­ಕಾ­ಗು­ತ್ತದೆ. ಆ ಕಾರ­ಣಕ್ಕೇ ಅನು­ಭ­ವ­ದಿಂದ ಒಳ್ಳೆಯ ಕೃತಿ ಬರು­ತ್ತದೆ ಅನ್ನು­ವುದು ಸುಳ್ಳು. ಅನು­ಭ­ವ­ದಿಂ­ದಲೇ ಅನೇಕ ಬಾರಿ ಬರಹ ಸೋಲು­ವು­ದುಂಟು.
ಹಾಗೇ, ಒಬ್ಬ ಲೇಖಕ ತನ್ನ ಛಾಪು ಮೂಡು­ವಂತೆ ಬರೆ­ಯು­ವುದೂ ಅಷ್ಟು ಒಳ್ಳೆ­ಯ­ದಲ್ಲ. ನನ್ನ ಶೈಲಿ­ಯಿಂ­ದಲೇ ಅದು ನನ್ನ ಬರಹ ಎಂದು ಓದು­ಗರು ಗುರು­ತಿ­ಸು­ತ್ತಾರೆ ಎಂದು ಕೆಲ­ವರು ತುಂಬ ಹೆಮ್ಮೆ­ಯಿಂದ ಹೇಳಿ­ಕೊ­ಳ್ಳು­ವು­ದುಂಟು. ಆದರೆ ಹಾಗೆ ಶೈಲಿ­ಯಿಂದ ಗುರು­ತಿ­ಸಿ­ಕೊ­ಳ್ಳು­ವುದೂ ಕೂಡ ಅಷ್ಟೇ ಕೆಟ್ಟದ್ದು. ಶೈಲಿ­ಯಿಂದ ಗುರು­ತಿ­ಸಿ­ಕೊ­ಳ್ಳುವ ಲೇಖಕ, ಕ್ರಮೇಣ ಚಿಂತ­ನಾ­ಕ್ರ­ಮ­ದಿಂದ, ವಿಚಾ­ರ­ಧಾ­ರೆ­ಯಿಂದ, ಮಂಡ­ನಾ­ವಿ­ಧಾ­ನ­ದಿಂದ ಕೂಡ ಗುರು­ತಿ­ಸಿ­ಕೊ­ಳ್ಳು­ತ್ತಾನೆ. ಬರ­ಬ­ರುತ್ತಾ ಆ ಶೈಲಿಯೇ ರಾಜ­ಕೀಯ ಪಕ್ಪದ ಗುರು­ತಿ­ನಂತೆ ಕಾಣಿ­ಸ­ತೊ­ಡ­ಗು­ತ್ತದೆ. ಒಬ್ಬ ಗಾಯ­ಕ­ನನ್ನು ದನಿಯ ಮೂಲಕ ಗುರುತು ಹಿಡಿ­ದರೆ ಅದು ಸರಿ, ರಾಗದ ಮೂಲಕ ಗುರುತು ಹಿಡಿ­ದರೆ? ಅದು ಆ ಗಾಯ­ಕನ ಮಿತಿ. ಲೇಖ­ಕನ ವಿಚಾ­ರ­ದಲ್ಲೂ ಹಾಗೆ.
ಉದಾ­ಹ­ರ­ಣೆಗೆ ಯಶ­ವಂತ ಚಿತ್ತಾ­ಲರು. ಅವರ ಕತೆ­ಯನ್ನು ಮೂರು ಪುಟ ಓದು­ವು­ದ­ರೊ­ಳಗೆ ನಿಮಗೆ ಇದು ಚಿತ್ತಾ­ಲರ ಬರ­ವ­ಣಿಗೆ ಎನ್ನು­ವುದು ಗೊತ್ತಾ­ಗಿ­ಬಿ­ಡು­ತ್ತದೆ. ಅವರು ಶೈಲಿ­ಯಲ್ಲಿ ವಿವ­ರ­ಗ­ಳಲ್ಲಿ ಮತ್ತು ಒಮ್ಮೊಮ್ಮೆ ಭಾವು­ಕ­ತೆ­ಯಲ್ಲೂ ಅದೇ ಚಿತ್ತಾ­ಲ­ರಾಗಿ ಉಳಿ­ಯು­ತ್ತಾರೆ. ಕಂಬಾ­ರರು ತಮ್ಮ ಭಾಷೆಯ ಬಳ­ಕೆ­ಯಿಂದ ಗುರು­ತಾ­ದರೆ ಚಿತ್ತಾ­ಲರು ಗುರು­ತಾ­ಗು­ವುದು ಭಾವ­ದಿಂದ. ಅದೇ ಕಾರ­ಣಕ್ಕೆ ಅವರ ನಂತ­ರದ ಕಾದಂ­ಬ­ರಿ­ಗ­ಳನ್ನು ಓದು­ವುದು ಕಷ್ಟ. ಅದೇ ಬೀದಿ­ಯಲ್ಲಿ ಅವರು ಸುತ್ತಾ­ಡು­ತ್ತಿ­ರು­ವಂತೆ ಭಾಸ­ವಾ­ಗು­ತ್ತದೆ.
ಇದಕ್ಕೆ ತದ್ವಿ­ರು­ದ್ಧ­ವಾದ ಉದಾ­ಹ­ರಣೆ ಡಿವಿ­ಜಿ­ಯ­ವ­ರದ್ದು. ಅವರು ಬರೆದ ಕೃತಿ­ಗ­ಳ­ನ್ನೆಲ್ಲ ಒಂದೊಂ­ದಾಗಿ ನೋಡುತ್ತಾ ಬನ್ನಿ. ಬಾಳಿ­ಗೊಂದು ನಂಬಿ­ಕೆ­ಯನ್ನು ಬರೆದ ಡಿವಿ­ಜಿ­ಯ­ವರೇ ಅನ್ತಃ­ಪು­ರ­ಗೀ­ತ­ವನ್ನೂ ಬರೆ­ದಿ­ದ್ದಾರೆ. ಎರ­ಡನ್ನೂ ಪ್ರತ್ಯೇ­ಕ­ವಾಗಿ ಓದಿ­ದರೆ ಅವನ್ನು ಒಬ್ಬನೇ ವ್ಯಕ್ತಿ ಬರೆ­ದಿ­ದ್ದಾನೆ ಅಂತ ಊಹಿ­ಸು­ವುದೂ ಕಷ್ಟ. ಮಹಾ­ಚು­ನಾ­ವ­ಣೆ­ಯಂಥ ಕೃತಿಯ ಜೊತೆಗೇ ಉಮ­ರನ ಒಸ­ಗೆ­ಯಿದೆ. ಸಂಸ್ಕೃ­ತಿಯ ಕುರಿ­ತಾದ ಕೃತಿ­ಯೊಂ­ದಿಗೇ ವಿದ್ಯಾ­ರಣ್ಯ ವಿಜ­ಯ­ವಿದೆ. ಇವೆ­ಲ್ಲಕ್ಕೂ ಕಳ­ಸ­ವಿ­ಟ್ಟಂತೆ `ಮಂ­ಕು­ತಿ­ಮ್ಮನ ಕಗ್ಗ'ವಿದೆ.
ಇವೆ­ಲ್ಲ­ಕ್ಕಿಂತ ಕುತೂ­ಹಲ ಹುಟ್ಟಿ­ಸು­ವುದು ಡಿವಿ­ಜಿ­ಯ­ವರು ಬರೆದ ವ್ಯಕ್ತಿ­ಚಿ­ತ್ರ­ಗಳು. ನಾವು ಭೇೇಟಿ­ಯಾದ, ಮಾತಾ­ಡಿದ, ನಮ್ಮ ಸಂಸ­ರ್ಗಕ್ಕೆ ಬಂದ ವ್ಯಕ್ತಿ­ಯನ್ನು ನಾವು ಏಕಾಂ­ತ­ದಲ್ಲಿ ನೆನ­ಪಿ­ಸಿ­ಕೊ­ಳ್ಳು­ತ್ತೇ­ವಲ್ಲ, ಅಂಥ ಬರ­ಹ­ಗಳು ಅವು. ಅದು ಹೊಗ­ಳಿ­ಕೆ­ಯಲ್ಲ, ಟೀಕೆ­ಯಲ್ಲ, ಟಿಪ್ಪ­ಣಿಯೂ ಅಲ್ಲ. ಗೆಳೆ­ಯನ ಬಗ್ಗೆ ಮತ್ತೊಬ್ಬ ಗೆಳೆ­ಯನ ಹತ್ತಿರ ಹೇಳಿ­ಕೊಂಡು ಸಂಭ್ರ­ಮಿ­ಸಿ­ದಂಥ ಬರ­ಹ­ಗಳು.
ಡಾಕ್ಟರ್ ಗುಂಡ­ಣ್ಣ­ನ­ವರ ಚಿತ್ರ ನೋಡಿ;
ಗುಂಡ­ಣ್ಣ­ನ­ವ­ರನ್ನು ನೋಡಿ­ದ್ದ­ವರು ಯಾರೂ ಅವ­ರನ್ನು ಮರೆ­ತಿ­ರು­ವುದು ಅಸಂ­ಭವ. ಅಷ್ಟು ಮನೋ­ಮು­ದ್ರ­ಕ­ವಾ­ದದ್ದು ಅವರ ವ್ಯಕ್ತಿ­ಮ­ಹಿಮೆ. ಸುಮಾರು 25-30 ವರ್ಷ­ಗಳ ಕಾಲ ಅವರ ಹೆಸರು ನೂರಾರು ಮನೆ­ಗ­ಳಲ್ಲಿ ಪ್ರತಿ­ದಿ­ನವೂ ನಚ್ಚು­ಮೆ­ಚ್ಚಿನ ಮಾತಾ­ಗಿತ್ತು. ರೋಗ ಪ್ರಸಂ­ಗ­ಗ­ಳಲ್ಲಿ ಮಾತ್ರವೇ ಅಲ್ಲ ಅವರ ನೆನಪು ಬರು­ತ್ತಿ­ದ್ದದ್ದು; ಎಂಥ ವಿಶೇಷ ಮಾನವ ಪ್ರಸಂಗ ಒದ­ಗಿ­ದರೂ ಆಗ ಆಪ್ತ ಬಂಧು­ಗಳ ಸ್ಮರಣೆ ಬಂದಂತೆ ಗುಂಡ­ಣ್ಣ­ನ­ವರ ಸ್ಮರಣೆ ಬರು­ತ್ತಿತ್ತು.
ಒಂದು ದಿನ ಸಂಜೆ ಸುಮಾರು ಏಳು ಗಂಟೆ ಇರ­ಬ­ಹುದು. ಒಬ್ಬಾ­ನೊಬ್ಬ ಮುಸ­ಲ್ಮಾನ ಸಾಹು­ಕಾ­ರರು ಒಂದು ಸೊಗ­ಸಾದ ಖಾಸ್ ಜಟ­ಕಾ­ದಲ್ಲಿ ಬಂದು ಚಿಕಿ­ತ್ಸಾ­ಲ­ಯದ ಮುಂದೆ ಇಳಿದು ಬೊಬ್ಬೆ ಹಾಕುತ್ತಾ ಒಳಗೆ ಹೆಜ್ಜೆ­ಯಿ­ಟ್ಟರು. ಹಿಂದು­ಸ್ತಾ­ನಿ­ಯಲ್ಲಿ `ಬ­ಹಳ ನೋವು ಮಹ­ರಾ­ಯರೇ, ಬಹಳ ನೋವು' ಎಂದು ಕಿರಿ­ಚಿ­ದರು.
ಗುಂಡಣ್ಣ; (ಹಿಂ­ದು­ಸ್ತಾ­ನಿ­ಯಲ್ಲಿ) ಎಲ್ಲಯ್ಯ ನೋವು?
ಸಾಹು­ಕಾರ; ಬೆಟ್ಟಿ­ನಲ್ಲಿ ಸ್ವಾಮಿ, ಬೆಟ್ಟಿ­ನಲ್ಲಿ.
ಗುಂಡಣ್ಣ; ಯಾವ ಬೆಟ್ಟಿ­ನಲ್ಲಿ? ಎಲ್ಲಿಯ ಬೆಟ್ಟಿ­ನ­ಲ್ಲಯ್ಯ? (ಎ­ಲ್ಲ­ರಿಗೂ ನಗು)
ಸಾಹು­ಕಾರ; ಎಡಗೈ ತೋರಿಸಿ - ಈ ನಡು­ಬೆ­ರ­ಳಿ­ನಲ್ಲಿ.
ಗುಂಡ­ಣ್ಣ­ನ­ವರು ಆ ಬೆರ­ಳನ್ನು ಹಿಡಿದು ನೋಡಿ­ದರು. ಆಮೇಲೆ ಇನ್ನೊಂದು ದೊಡ್ಡ ಎಲೆ­ಕ್ಟ್ರಿಕ್ ದೀಪ­ವನ್ನು ಹಾಕಿ­ನೋಡಿ -
`ಸಾ­ಹು­ಕಾ­ರರೇ ಬೆಳಗ್ಗೆ ಬನ್ನಿ ನೋಡೋಣ. ಈಗ ದೀಪದ ಬೆಳ­ಕಿ­ನಲ್ಲಿ ಇದು ಚೆನ್ನಾಗಿ ಕಾಣಿ­ಸು­ವು­ದಿಲ್ಲ' ಎಂದರು.
ಸಾಹು­ಕಾರ; ಈಗ ನಾನು ಸಾಯು­ತ್ತೇನೆ.
ಗುಂಡಣ್ಣ; ಇಲ್ಲ, ನೀವು ಸಾಯು­ವು­ದಿಲ್ಲ. ನಾನು ಭರ­ವಸೆ ಕೊಡು­ತ್ತೇನೆ. ಬೆಳಗ್ಗೆ ಬದು­ಕಿ­ರು­ತ್ತೀರಿ.
ಸಾಹು­ಕಾರ; ಇಲ್ಲ ಸ್ವಾಮಿ, ನಾನು ಈಗ ರೈಲಿಗೆ ಹೊರ­ಟಿ­ದ್ದೇನೆ. ಬೆಳಗ್ಗೆ ಈ ಊರ­ಲ್ಲಿ­ರು­ವು­ದಿಲ್ಲ.
ಗುಂಡಣ್ಣ; ಹಾಗಾ­ದರೆ ಬೆರ­ಳನ್ನು ...ದಲ್ಲಿ ಸಿಕ್ಕಿ­ಸಿ­ಕೊಳ್ಳಿ.
ಅಲ್ಲಿ­ದ್ದ­ವ­ರೆಲ್ಲ ನಕ್ಕರು. ಸಾಹು­ಕಾ­ರ­ರಿಗೆ ಕೋಪ ಬಂತು. `ಏನು ಸ್ವಾಮಿ. ಎಷ್ಟು ದಿವ­ಸ­ದಿಂದ ನಿಮ್ಮನ್ನು ನಂಬಿ­ಕೊಂ­ಡಿ­ದ್ದೇನೆ. ಎಷ್ಟು ಸಲ ನಮ್ಮ ಮನೆಗೆ ಬಂದಿ­ದ್ದೀರಿ. ಈಗ ನನಗೆ ಹೀಗೆ ಅವ­ಮಾನ ಮಾಡು­ತ್ತೀ­ರಲ್ಲ?'
ಗುಂಡಣ್ಣ; ಕೋಪ ಬೇಡ ಸಾಹೇ­ಬರೇ. ನಾನು ಹೇಳಿದ್ದು ತಪ್ಪು ಮಾತು ಏನೂ ಅಲ್ಲ. ಇಲ್ಲಿ ನಗು­ತ್ತಿ­ರುವ ಬೇಕೂ­ಫ­ರಿಗೆ ಸಂದರ್ಭ ಗೊತ್ತಿಲ್ಲ. ನಿಮ್ಮ ಬೆಟ್ಟಿ­ನಲ್ಲಿ ಏನೋ ಏಳು­ತ್ತಿದೆ. ಅದಕ್ಕೆ ತಕ್ಕ ಚಿಕಿ­ತ್ಸೆ­ಯಲ್ಲಿ ಮೂರು ಅಂಶ­ಗಳು ಸೇರಿ­ರ­ಬೇಕು; ಉಷ್ಣ, ತೇವ, ಒತ್ತಡ (heat, moisture, pressure). ಈ ಮೂರು ಅಂಶ­ಗಳು ನಾನು ಹೇಳಿದ ಜಾಗ­ದಲ್ಲಿ ಇರು­ತ್ತವೆ'.

ಈ ವಿವ­ರ­ಣೆ­ಯನ್ನು ಕೇಳಿ ಸಾಹು­ಕಾ­ರ­ರಿಗೂ ನಗು­ಬಂತು.
ಇನ್ನೊಂದು ಪ್ರಸಂಗ ಕೇಳಿ. ಇದು ಎಸ್. ವಿ. ನಂಜುಂ­ಡ­ಯ್ಯ­ನ­ವ­ರಿಗೆ ಸಂಬಂ­ಧಿ­ಸಿದ್ದು;
ನಂಜುಂ­ಡ­ಯ್ಯ­ನ­ವರು ಕೆಲವು ಕಾಲ ಶಿವ­ಮೊ­ಗ್ಗಿ­ಯ­ಲ್ಲಿ­ದ್ದಾಗ ಬೆಂಗ­ಳೂ­ರಲ್ಲಿ ಒಂದು ಪ್ರಸಂಗ ನಡೆ­ಯಿತು. ಒಬ್ಬಾ­ನೊಬ್ಬ ಯುವಕ ಬಿ.ಎ. ಪ್ಯಾ್ ಮಾಡಿ ಸರ­ಕಾ­ರದ ಚಾಕ­ರಿಗೆ ಅರ್ಜಿ ಹಾಕಿದ್ದ. ಆತ ಹೈಕೋ­ರ್ಟಿಗೂ ಅರ್ಜಿ ಹಾಕಿದ್ದ. ಒಂದಾ­ನೊಂದು ದಿನ ಹೈಕೋ­ರ್ಟಿನ ಕಾರ್ಯಾ­ಲ­ಯದ ಮುಖ್ಯಾ­ಧಿ­ಕಾ­ರಿಯು ಆತ­ನನ್ನು ಇಂಟ­ರ್ವ್ಯೂ­ಗಾಗಿ ಆಹ್ವಾ­ನಿ­ಸಿದ. ಅವರ ನಡುವೆ ನಡೆದ ಮಾತು­ಕತೆ ಹೀಗಿದೆ;
ಅಧಿ­ಕಾರಿ; ನೀವು ಯಾವ ಜಾತಿ­ಯ­ವರು.
ಯುವಕ; ನಾನು ಶ್ರೌತಿ.
ಅಧಿ­ಕಾರಿ; ಓಹೋ ಹಾಗೆಯೇ, ನಿಮ್ಮ ಜನ ಯಾರಾ­ದರೂ ದೊಡ್ಡ ಅಧಿ­ಕಾ­ರ­ಗ­ಳಲ್ಲಿ ಇದ್ದಾರೋ?
ಯುವಕ; ಯಾರೂ ಇಲ್ಲ,
ಅಧಿ­ಕಾರಿ; ಹಾಗೆಯೇ. ಅಯ್ಯೋ ಪಾಪ. ಇರಲಿ ಮುಂದಿನ ಶನಿ­ವಾರ ಬನ್ನಿ. ನೋಡಿ ಹೇಳು­ತ್ತೇನೆ.
ಯುವ­ಕನು ಹೊರ­ಟು­ಹೋದ ಮೇಲೆ ಆ ಅಧಿ­ಕಾ­ರಿಯು ಅದೇ ಚೀಫ್ ಕೋರ್ಟಿ­ನಲ್ಲಿ ತನ್ನ ಸಹೋ­ದ್ಯೋ­ಗಿ­ಯಾ­ಗಿದ್ದ ಎಂ. ಎಲ್. ಪುಟ್ಟ­ಣ್ಣ­ರನ್ನು ಕರೆದು ಕೇಳಿದ.
ಅಧಿ­ಕಾರಿ; ಶ್ರೌತಿ ಅಂದರೆ ಯಾವ ಜನ ಸ್ವಾಮಿ?
ಪುಟ್ಟಣ್ಣ; ಶ್ರೌತಿ ಅಂದರೆ ಶ್ರೋತ್ರಿಯ. ಶ್ರುತಿ ಅಂದರೆ ವೇದ. ಬ್ರಾಹ್ಮ­ಣ­ರಲ್ಲಿ ವೇದಾ­ಧ್ಯ­ಯನ ಸಂಪ­ನ್ನ­ರಾಗಿ ವೈದಿಕ ಕರ್ಮ­ನಿಷ್ಠೆ ಇಟ್ಟು­ಕೊಂ­ಡ­ವ­ರನ್ನು ಶ್ರೋತ್ರಿ­ಯರು ಎಂದು ಕರೆ­ಯು­ವುದು ಪದ್ಧತಿ.
ಅಧಿ­ಕಾರಿ; ಹಾಗಿ­ದ್ದರೆ ಅವರು ಬ್ರಾಹ್ಮ­ಣರೇ ಅಂತನ್ನಿ.
ಪುಟ್ಟಣ್ಣ; ಅಲ್ಲವೇ? ಅದ­ರ­ಲ್ಲಿಯೂ ಉತ್ತಮ ದರ್ಜೆಯ ಬ್ರಾಹ್ಮ­ಣರು.
ಅಧಿ­ಕಾರಿ; ಸರಿ­ಸರಿ. ಅದು ನನಗೆ ತಿಳಿ­ದಿ­ರ­ಲಿಲ್ಲ. ಸುಮ್ಮನೆ ಕೇಳಿದೆ
.
ಇದಾದ ನಂತರ ಆತ ಮತ್ತೆ ಕೆಲಸ ಕೇಳಿ­ಕೊಂಡು ಬರು­ತ್ತಾನೆ. ಆತ­ನಿ­ಗೊಂದು ಪರೀಕ್ಪೆ ಕೊಡು­ತ್ತಾನೆ ಅಧಿ­ಕಾರಿ. ಅದ­ರ­ಲ್ಲೇನೋ ಕರಾ­ಮತ್ತು ನಡೆ­ಸಿ­ದ್ದ­ರಿಂದ ಶ್ರೋತ್ರಿ­ಯ­ನಿಗೆ ಕೆಲಸ ಸಿಗು­ವು­ದಿಲ್ಲ. ಆತ ಈ ಕೆಲಸ ಸಿಗ­ದಿ­ರಲು ಪುಟ್ಟ­ಣ್ಣ­ಯ್ಯನೇ ಕಾರಣ ಎಂದು ಆಗ್ರಹ ಕಾರು­ತ್ತಾನೆ. ತನಗೆ ಸಂಬಂ­ಧವೇ ಇಲ್ಲದ ಸಂಗ­ತಿಗೆ ತಾನು ಬಾಧ್ಯ­ನಾದ ಸಂಗತಿ ಕೇಳಿ ಪುಟ್ಟ­ಣ್ಣ­ಯ್ಯ­ನ­ವ­ರಿಗೆ ಬೇಸ­ರ­ವಾ­ಗು­ತ್ತದೆ. ಆಗ ಅವ­ರಿಗೆ ನಂಜುಂ­ಡ­ಯ್ಯ­ನ­ವರು ಒಂದು ಪತ್ರ ಬರೆ­ಯು­ತ್ತಾರೆ;
ಶ್ರೌತಿ­ಗ­ಳಿಗೆ ನಿಮ್ಮ ಮೇಲೆ ಕೋಪ ಬಂದದ್ದು ಸಹ­ಜ­ವಾ­ಗಿಯೇ ಇದೆ. ನಿಮ್ಮನ್ನು ಆ ಅಧಿ­ಕಾರಿ ಅರ್ಥ­ವಿ­ವ­ರಣೆ ಕೇಳಿ­ದಾಗ ನೀವು ಬೇರೆ ಅರ್ಥ­ವನ್ನು ಯಾಕೆ ಹೇಳ­ಲಿಲ್ಲ. ಶ್ರುತಿ ಅಂದರೆ ಮೇಳ­ದಲ್ಲಿ ಹೊರ­ಡುವ ಒಂದು ಜೊತೆಯ ಶಬ್ದ. ಶ್ರುತಿ ಹಿಡಿ­ಯು­ವುದು ಎಂದರೆ ಓಲಗ ಊದು­ವುದು. ಆದ ಕಾರಣ ಶ್ರೌತಿ ಎಂದರೆ ಬಾಜಾ­ಬ­ಜಂ­ತ್ರಿ­ಯ­ವರು. ಹೀಗೆಂದು ನೀವು ಅರ್ಥ ಹೇಳ­ಬೇ­ಕಾ­ಗಿತ್ತು. ಹೀಗೆ ಹೇಳಿ­ದ್ದಿ­ದ್ದರೆ ಆತ­ನಿಗೆ ಚಾಕರಿ ಸಿಗು­ತ್ತಿತ್ತು. ನೀವು ಅದನ್ನು ತಪ್ಪಿ­ಸಿ­ದಿ­ರಲ್ಲ? ಚಾಕರಿ ತಪ್ಪಿಸಿ ಜಾತಿ ಉಳಿ­ಸಿ­ದರೆ ಏನಾ­ಯಿತು?
**­**
ಇಂಥ ಪ್ರಸಂ­ಗ­ಗ­ಳನ್ನು ಬರೆ­ಯು­ವು­ದಕ್ಕೆ ಹಾಸ್ಯ­ಪ್ರ­ಜ್ಞೆ­ಯಿ­ದ್ದರೆ ಸಾಲದು. ಮಾನ­ವೀ­ಯತೆ ಬೇಕು. ಇನ್ನೊ­ಬ್ಬ­ರನ್ನು ಕೂಲಂ­ಕ­ಷ­ವಾಗಿ ಗಮ­ನಿ­ಸುವ, ಪ್ರೀತಿ­ಸುವ ಮನಸ್ಸು ಬೇಕು. ವ್ಯಕ್ತಿ­ಕೇಂ­ದ್ರಿ­ತ­ವಾ­ಗುತ್ತಾ ನಡೆ­ದಿ­ರುವ ನಮಗೆ ಅಷ್ಟೆಲ್ಲ ತಾಳ್ಮೆ ಎಲ್ಲಿದೆ. ಯಾರಾ­ದರೂ ತಮ್ಮ ಬಗ್ಗೆ ಹೇಳಲು ಶುರು­ಮಾ­ಡಿ­ದರೆ ನಮಗೆ ಅಸ­ಹ­ನೆ­ಯಾ­ಗು­ತ್ತದೆ. ಕತೆ ಕೇಳುವ ಬದಲು `ಬಂದ ವಿಷಯ ಹೇಳಿ, ಹೊರ­ಟು­ಬಿಡಿ' ಅನ್ನು­ತ್ತೇವೆ.
ನಮ್ಮ ಜ್ಞಾಪಕ ಚಿತ್ರ­ಶಾ­ಲೆ­ಯಲ್ಲಿ ನೆನ­ಪು­ಗಳೇ ಇಲ್ಲ!

Monday, June 11, 2007

L


ಅವನು ನೇಪಾಳದ ಕವಿ. ಇಂಗ್ಲಿಷಿನಲ್ಲಿ ಬರೆಯುತ್ತಾನೆ. ಬರೆದ ಒಂದೇ ಒಂದು ಕವಿತೆ ಎಲ್ಲೂ ಪ್ರಕಟವಾಗಿಲ್ಲ. ಮುಗಿಲ ಹಚ್ಚಡದ ಕೆಳಗೆ ನಿಚ್ಚಳ ಬೆಳದಿಂಗಳು ಎಂಬ ಸರಳ ಸಾಮಾನ್ಯ ಸಾಲುಗಳಿಂದ ಹಿಡಿದು `ನನ್ನ ಬದುಕು ನನ್ನದು ಅಂದುಕೊಂಡು ಬದುಕುತ್ತಿದ್ದೆ. ಒಂದು ಬೆಳಗ್ಗೆ ಕನ್ನಡಿ ನೋಡಿಕೊಂಡಾಗ ನನ್ನ ಬದಲು ನನ್ನ ಯಜಮಾನ ಕಾಣಿಸಿದ. ಕನ್ನಡಿ ಒರೆಸಿ ನೋಡಿದೆ, ಅಲ್ಲಿ ಯಜಮಾನನ ಬದಲು ಡಾಲರ್ ಇತ್ತು. ನಾನೊಂದು ಡಾಲರ್ ಮುದ್ರಿಸುವ ಯಂತ್ರ ಎಂದು ಆಮೇಲೆ ಗೊತ್ತಾಯಿತು' ಎಂಬಂಥ ಬಡಿದೆಬ್ಬಿಸುವ ಸಾಲುಗಳೂ ಅವನ ಕವಿತೆಗಳಲ್ಲಿವೆ.
ಅವನ ಹೆಸರು ಎಲ್. ಅವನೇ ರಚಿಸಿದ ಪುಟ್ಟ ವಿಸಿಟಿಂಗ್ ಕಾರ್ಡಿನಲ್ಲಿರುವುದು ಅದೊಂದೇ ಅಕ್ಪರ. ಅದರಲ್ಲಿ ವಿಳಾಸ ಕೂಡ ಇಲ್ಲ. ಒಂದು ಈಮೇಲ್ ವಿಳಾಸ ಮಾತ್ರ ಇದೆ. l@ell.com. ಕೇಳಿದರೆ ನನ್ನನ್ನು ಯಾರೂ ಸಂಪರ್ಕಿಸುವುದು ಇಷ್ಟವಿಲ್ಲ ಅನ್ನುತ್ತಾನೆ. ಅವನಾಗಿಯೂ ಯಾರನ್ನೂ ಸಂಪರ್ಕಿಸುವುದೂ ಇಲ್ಲ. ನವ್ಯದ ಆರಂಭದ ದಿನಗಳ ಉಡಾಫೆಯ ಕವಿಯಂತೆ ಕಾಣುವ ಎಲ್ ನೇಪಾಳಿ ಭಾಷೆಯಲ್ಲೇಕೆ ಬರೆಯುವುದಿಲ್ಲ.
'ಉಪಯೋಗ ಇಲ್ಲ. ನನ್ನ ಭಾಷೆ ಸತ್ತಿದೆ. ನನ್ನ ಭಾಷೆಗೆ ನಾನು ಹೇಳಬೇಕಾದ್ದನ್ನು ದಾಟಿಸುವ ಶಕ್ತಿಯಿಲ್ಲ. ನಾನು ಹೇಳಬೇಕಾದ್ದನ್ನು ನನ್ನ ಭಾಷೆ ಬಲ್ಲವರಿಗೆ ಹೇಳುವ ಅಗತ್ಯವೂ ನನಗಿಲ್ಲ. ನನ್ನ ಭಾಷೆಯ ಮಂದಿ ನನ್ನ ಭಾಷೆಯನ್ನು ಪ್ರೀತಿಸುವುದನ್ನು ಯಾವತ್ತೋ ಮರೆತಿದ್ದಾರೆ. ಅವರಿಗೆ ಇಂಗ್ಲಿಷ್ ಬೇಕು'.
ಯಾರಿಗೂ ಭಾಷೆ ಬೇಕಾಗಿರುವುದಿಲ್ಲ, ಬೇಕಾಗಿರುವುದು ಕಂಟೆಂಟ್. ಹೇಳಬೇಕಾದ ವಿಷಯ ಚೆನ್ನಾಗಿದ್ದಾಗ ಯಾವ ಭಾಷೆಯಲ್ಲಿ ಹೇಳಿದರೂ ಓದುತ್ತಾರೆ ಎಂದರೆ ಎಲ್ ಸಿಟ್ಟಾಗುತ್ತಾನೆ.
`ನಿನಗೆಲ್ಲೋ ತಲೆಕೆಟ್ಟಿದೆ. ಕಂಟೆಂಟ್ ಯಾರಿಗೆ ಬೇಕಾಗಿದೆ. ಎಲ್ಲರಿಗೂ ಬೇಕಾಗಿರುವುದು ಸಂವಹನಕ್ಕೊಂದು ಭಾಷೆ ಅಂದುಕೊಂಡರೆ ಅದೂ ತಪ್ಪು. ಎಲ್ಲರೂ ಈಗ ಮಾರುಹೋಗಿರುವುದು ಅಬ್ಬರಕ್ಕೆ, ಶಬ್ದಕ್ಕೆ. ಈಗಿನ ಹುಡುಗ ಹುಡುಗಿಯರು ಎಷ್ಟು ದೊಡ್ಡ ದನಿಯಲ್ಲಿ ಮಾತಾಡುತ್ತಾರೆ ಕೇಳಿದ್ದೀರಾ? ಯಾರಿಗಾದರೂ ಪಿಸುಮಾತಿನ ಶಕ್ತಿ ಏನು ಅಂತ ಗೊತ್ತಿದೆಯಾ? ಪ್ರೇಯಸಿಯ ಜೊತೆಗೆ ಕೂಡ ದೊಡ್ಡ ದನಿಯಲ್ಲಿ ಹರಟುತ್ತಿರುತ್ತಾರೆ. ಶಬ್ದದ ಸಾಮ್ರಾಜ್ಯದಲ್ಲಿ ನಾದಕ್ಕೆ ನಿನಾದಕ್ಕೆ ಜಾಗವೇ ಇಲ್ಲ. ಅಂಥವರಿಗೋಸ್ಕರ ಯಾಕೆ ಬರೆಯಲಿ?'
ಎಲ್ ಬೆಚ್ಚಿಬೀಳಿಸುತ್ತಾನೆ. ಕವಿ ಯಾಕೆ ಬರೆಯಲಿ ಅಂತ ಸುಮ್ಮನಾಗುವುದು ಅಪಾಯಕಾರಿ. ಅದರಲ್ಲೂ ಒಳ್ಳೆಯ ಕವಿ ಯಾರಿಗೋಸ್ಕರ ಬರೆಯಲಿ ಅನ್ನುವ ನಿಲುವು ತಾಳಿದಾಗ ಒಂದು ತಲೆಮಾರು ತುಂಬ ಮೌಲಿಕವಾದದ್ದನ್ನು ಕಳೆದುಕೊಳ್ಳುತ್ತದೆ. ತುಂಬ ಸೂಕ್ಪ್ಮವಾದದ್ದನ್ನು ಕಳೆದುಕೊಳ್ಳುತ್ತದೆ.
ಅಷ್ಟಕ್ಕೂ ಎಲ್ ಗೆ ತನ್ನ ಭಾಷೆಯ ಮೇಲೇಕೆ ಸಿಟ್ಟು? ಆ ಭಾಷೆ ಜಡ್ಡುಗಟ್ಟಿದೆಯಾ? ಅದರ ಮೂಲಕ ಏನನ್ನೂ ಹೇಳೋದಕ್ಕೆ ಸಾಧ್ಯವಿಲ್ಲ ಅನ್ನಿಸಿದೆಯಾ?
'ಎರಡೂ ಆಗಿಲ್ಲ. ಒಂದು ಭಾಷೆ ಹೀಗೆ ಆಗಾಗ ತನ್ನ ಘನತೆಯನ್ನೂ ನಂಬಿಕೆಯನ್ನೂ ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗೆ ಘನತೆ ಕಳಕೊಂಡ ಭಾಷೆಯಲ್ಲಿ ಎಷ್ಟೇ ಮೌಲಿಕವಾದ ನಿತ್ಯಸತ್ಯಗಳನ್ನು ಹೇಳಹೊರಟರೂ ಅದು ಅಷ್ಟು ಘನವಾಗಿ ಉಳಿಯುವುದಿಲ್ಲ. ಅದು ತುಂಬ ನೀರಸವೂ ಸರಳವೂ ಆಗಿ ಕಾಣಿಸುತ್ತದೆ. ಹೀಗೆ ಸರಳವಾಗುವ, ಸಸಾರವಾಗುವ ಮಾತು ಬಹಳ ಬೇಗ ಬಿದ್ದು ಹೋಗುತ್ತದೆ. ನಮ್ಮ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗಿ ಮತ್ತೊಂದು ಭಾಷೆಯ ಮೇಲಿನ ಮೋಹ ಅತಿಯಾದಾಗ ಹೀಗಾಗುತ್ತದೆ. ಆಗ ಆ ಭಾಷೆಯನ್ನೇ ಗೊಡ್ಡು ಅಂತ ತೀರ್ಮಾನಿಸಿ ಬಿಟ್ಟುಬಿಡುವುದು ಒಳ್ಳೆಯದು'.
ಅವನ ಅಳಲುಗಳು ಒಂದೆರಡಲ್ಲ. ಅವನ ಪ್ರಕಾರ ಅವನು ಬರೆಯುವುದು ತನ್ನ ಕಾಲದ ಯುವಕರಿಗೋಸ್ಕರ. ಆದರೆ ಯುವಕರು ಅದನ್ನೆಲ್ಲ ಓದುವುದಿಲ್ಲ. ತರುಣ ತರುಣಿಯರಿಗೆ ಅರ್ಥವಾಗಲಿ ಎಂದು ಬರೆದದ್ದು ಅವರನ್ನು ತಲುಪುವುದೇ ಇಲ್ಲ. ತುಂಬ ವಯಸ್ಸಾಗಿರುವ ಮುದಿ ವಿಮರ್ಶಕರು ಅವನ್ನೆಲ್ಲ ಓದಿ ತಮ್ಮ ನಿರ್ಣಯ ಮಂಡಿಸುತ್ತಾರೆ. ಕವಿತೆ ಬರೆಯುವುದು ಓದಿಗಾಗಿಯೇ ಹೊರತು ವಿಮರ್ಶೆಗಾಗಿ ಅಲ್ಲ. ವಿಮರ್ಶಕರಿಂದಾಗಿ ಕವಿತೆ ಅಮರವಾಗುತ್ತದೆ ಎಂದು ಭಾವಿಸುವವರಿದ್ದಾರೆ. ಆದರೆ ಕವಿತೆಗೆ ಗೋರಿ ಕಟ್ಟುವವರೇ ವಿಮರ್ಶಕರು'.
ಇಂಥ ಪ್ರಖರ ಯೋಚನೆಯ ಎಲ್ ಕವಿತೆ ಬಿಟ್ಟು ಬೇರೆ ಏನನ್ನೂ ಬರೆಯುವುದಿಲ್ಲ. ಸಾಹಿತ್ಯ ಅಂದರೆ ಕವಿತೆ ಅನ್ನುವುದು ಅವನ ನಂಬಿಕೆ. ಹೇಳಬೇಕಾದದ್ದನ್ನು ಉದ್ದುದ್ದಕ್ಕೆ ಗದ್ಯದಲ್ಲಿ ಹೇಳುವುದಕ್ಕೆ ಕವಿತ್ವ ಯಾಕೆ ಬೇಕು? ಮೂರು ಪದಗಳಲ್ಲಿ ನಿನಗನ್ನಿಸಿದ್ದನ್ನೆಲ್ಲ ಹೇಳಿಬಿಡು. ಅದು ಮುನ್ನೂರು ಪದಗಳಲ್ಲಿ ಕೇಳುವವನನ್ನು ತಲುಪಲಿ. ಅರ್ಥವಾಗುವಾಗ ವಿವರಗಳು ತುಂಬಿಕೊಳ್ಳಲಿ. ಅದು ಬಿಟ್ಟು ಹೇಳುವಾಗಲೇ ವಿವರಗಳನ್ನು ಕೊಟ್ಟರೆ ಕೇಳುವವನ ಪ್ರತಿಭೆಯನ್ನು ನೀನು ನಿರ್ಲಕ್ಪ್ಯ ಮಾಡಿದಂತಾಗುತ್ತದೆ ತಿಳಕೋ' ಎಂದು ಸಿಟ್ಟಾಗುತ್ತಾನೆ ಎಲ್.
ಎಲ್ ಅಷ್ಟು ಸಂಗ್ರಹವಾಗಿ ಬರೆಯಬಲ್ಲ ಕೂಡ.`ಸಾವು ನಾಮಪದ, ಬದುಕು ಕ್ರಿಯಾಪದ. ಬಿಡುವಿದ್ದರೆ ಸಾವು, ಬಿಡುವಿಲ್ಲದ ಬದುಕು. ಸಾವು ಬಿಡು-ಗಡೆ' ಎನ್ನುವುದು ಅವನ ಮತ್ತೊಂದು ಕವಿತೆ. ಅದು ಎಲ್ ಮಾತುಗಳ ಹಾಗೆ ವಿಕ್ಪಿಪ್ತವಾಗುತ್ತಾ ಸಾಗುತ್ತದೆ.
ಎಲ್ ನೇಪಾಳಿಯಲ್ಲಿ ಬರೆದರೆ ಅವನ ಕವಿತೆಗಳು ಅಚ್ಚಾಗುತ್ತಿದ್ದವಾ?
`ಅವನಿಗೂ ಗೊತ್ತಿಲ್ಲ. ಅಚ್ಚಾಗುವುದಕ್ಕಿಂತ ಓದುವುದು ಮುಖ್ಯ. ಓದಿಸಿಕೊಳ್ಳುವವರು ಇಲ್ಲದ ಮೇಲೆ ಅಚ್ಚಾದರೆಷ್ಟು? ಆಗದಿದ್ದರೆಷ್ಟು? ಯಾರೂ ಓದುವುದು ಬೇಡ ಎಂದು ಬರೆಯುವವನು ಕವಿಯಲ್ಲ, ವ್ಯಾಮೋಹಿ. ಎಲ್ಲರೂ ಓದಲಿ ಎಂದು ಬರೆಯುವವನೂ ಕವಿಯಲ್ಲ, ವ್ಯಾಮೋಹಿ. ಈ ಎರಡೂ ವ್ಯಾಮೋಹವನ್ನು ಮೀರಿದಾಗಲೇ ನಾನು ಹುಟ್ಟುತ್ತೇನೆ, ಬದುಕುತ್ತೇನೆ ಮತ್ತು .....
ಸಾ ಯು ವ ದಿ ಲ್ಲ!
ಎಲ್. ಎಲ್ಲೆಲ್ಲಿಯೂ ಎಲ್. ಎಲ್ಲೆಲ್ಲೆಲ್ಲೆಲ್ಲೆಲ್!Wednesday, June 6, 2007

ನಾನೊಬ್ಬ ಜುಜುಬಿ ಓದುಗ. ನನ್ನ ಹಾಡು ನನ್ನದು

ಕದಡಿದ ನೀರು ಕೊಂಚ ತಿಳಿಯಾಗಿದೆ. ಯು. ಆರ್. ಅನಂತಮೂರ್ತಿ ಮಾತು ಕಡಿಮೆ ಮಾಡಿ ಓದುವುದರಲ್ಲಿ ತೊಡಗಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಎಸ್. ಎಲ್. ಭೈರಪ್ಪ ಅನಂತಮೂರ್ತಿ ಹೇಳಿಕೆಯ ಕುರಿತು ಮಾತಾಡುವುದಕ್ಕೇ ಹೋಗಲಿಲ್ಲ. ‘ಆವರಣ’ದ ಓದು ಅನ್ನುವ ಒಂದು ಚರ್ಚೆಯಲ್ಲಿ ಭಾಗವಹಿಸಿದಾಗಲೂ ಅವರು ಅನಂತಮೂರ್ತಿಯವರ ಬಗ್ಗೆ ಮಾತಾಡಲಿಲ್ಲ.
ಈ ಅನಗತ್ಯ ವಿವಾದ ನಮಗೆ ಬೇಕಿರಲಿಲ್ಲ. ನಾವ್ಯಾರೂ ಒಂದು ಕೃತಿ ವಿವಾದಾತ್ಮಕ ಅನ್ನುವ ಕಾರಣಕ್ಕೆ ಅದನ್ನು ಓದುವುದಕ್ಕೆ ಹೋಗುವುದಿಲ್ಲ. ಓದು ನಮ್ಮ ಖಾಸಗಿ ಖುಷಿ. ಕೇವಲ ವಾದ ಮಾಡುವವರೂ ಬರೆಯುವವರೂ ಚರ್ಚಾಪಟುಗಳೂ ವಿಮರ್ಶಕರೂ ಒಂದು ಕೃತಿಯನ್ನು ಅಧ್ಯಯನದ ದೃಷ್ಟಿಯಿಂದ ಓದಬಹುದು. ಅಂಥವರು ಸಾವಿರ ಓದುಗರಲ್ಲಿ ಒಬ್ಬರೋ ಇಬ್ಬರೋ ಆಗಿರಬಹುದು. ಅವರೂ ಕೂಡ ಆ ಕೃತಿಯನ್ನು ದುಡ್ಡುಕೊಟ್ಟು ಕೊಂಡುಕೊಂಡಿರಲಿಕ್ಕಿಲ್ಲ. ಕಾಂಪ್ಲಿಮೆಂಟರಿ ಕಾಪಿ ಓದಿಕೊಂಡು ಅವರು ಅಧ್ಯಯನಾಸಕ್ತರಾಗುತ್ತಾರೆ.
ಆದರೆ, ಓದುಗ? ಭೈರಪ್ಪನವರ ಪುಸ್ತಕ ಬಂದಿದೆ ಅನ್ನುವುದು ಗೊತ್ತಾಗುತ್ತಿದ್ದಂತೆ ಪಾರ್ಕಿಂಗಿಗೆ ಒದ್ದಾಡಿ, ಕೆಲಸದ ನಡುವೆ ಹೇಗೋ ಬಿಡುವು ಮಾಡಿಕೊಂಡು ಪುಸ್ತಕದಗಂಡಿಗೆ ನುಗ್ಗಿ ರಿಯಾಯಿತಿಗೂ ಕಾಯದೇ ಪುಸ್ತಕ ಕೊಂಡುಕೊಂಡು ಅದರ ಮುಖಪುಟ ಕೊಳೆಯಾಗದಂತೆ ಮನೆಗೆ ಕೊಂಡೊಯ್ದು, ತನ್ನ ಏಕಾಂತದಲ್ಲಿ ಓದುತ್ತಾ, ಗೆಳೆಯರಿಗೆ ಇಂಥದ್ದೊಂದು ಪುಸ್ತಕ ಓದ್ತಿದ್ದೇನೆ ಅಂತ ಹೇಳಿ ಸುಖಿಸುತ್ತಾ, ತನಗೆ ತಾನೇ ಹೆಮ್ಮೆ ಪಡುತ್ತಾ, ಹೊಸ ಹೊಳಹೊಂದು ಕಂಡರೆ ಖುಷಿಪಡುತ್ತಾ ಇದ್ದುಬಿಡುತ್ತಾನೆ. ಆ ಸಂಭ್ರಮ ಬೈರಪ್ಪನವರ ಕೃತಿಯ ಬಗ್ಗೆ ಮಾತ್ರವಲ್ಲ, ಅನಂತಮೂರ್ತಿ, ತೇಜಸ್ವಿ, ಕಂಬಾರ, ರವಿ ಬೆಳಗೆರೆ ಯಾರು ಬರೆದರೂ ಅವರವರ ಓದುಗರಿಗೆ ಇದ್ದೇ ಇರುತ್ತದೆ.
ಆದರೆ ನಮ್ಮಂಥ ಓದುಗರ ಬಗ್ಗೆ ಈ ಲೇಖಕರಿಗೆ ನಿಜಕ್ಕೂ ಪ್ರೀತಿ ಇರುತ್ತದಾ? ಒಮ್ಮೆ ಲಂಕೇಶರು ಓದುಗನೊಬ್ಬನಿಗೆ ‘ನೀನೊಬ್ಬ ಜುಜುಬಿ ಓದುಗ’ ಎಂದು ಬೈದಿದ್ದರು. ಇವತ್ತಿಗೂ ನನ್ನ ಕೃತಿ ಏನನ್ನಿಸಿತು ಅಂತ ಒಬ್ಬ ಓದುಗನನ್ನೂ ಲೇಖಕ ಕೇಳುವುದಿಲ್ಲ. ಅವನಿಗೆ ಓದುಗರ ಅಭಿಪ್ರಾಯ ಮುಖ್ಯವೇ ಅಲ್ಲ. ಯಾಕೆಂದರೆ ಅದು ದಾಖಲಾಗುವುದಿಲ್ಲ ಅನ್ನುವುದು ಲೇಖಕನಿಗೆ ಗೊತ್ತು. ಅದರ ಬದಲು ಅವರು ವಿಮರ್ಶಕರ ಅಭಿಪ್ರಾಯಕ್ಕಷ್ಟೇ ಬೆಲೆ ಕೊಡುತ್ತಾರೆ. ಸಾಹಿತ್ಯ ಚರಿತ್ರೆಯಲ್ಲಿ ತಮಗೊಂದು ಸ್ಥಾನ ದೊರಕಿಸಿಕೊಡುವವರು ಅವರೇ ತಾನೇ?
ಆದರೆ ಯಾವ ಓದುಗ ಕೂಡ ವಿಮರ್ಶಕನನ್ನು ನೆಚ್ಚಿಕೊಂಡಿಲ್ಲ. ಕರ್ವಾಲೋ ಕುರಿತು ವಿಮರ್ಶೆ ಪ್ರಕಟವಾಗುವ ಮೊದಲೇ ಅದನ್ನು ಮೆಚ್ಚಿಕೊಂಡವರ ಸಂಖ್ಯೆ ಲಕ್ಷಾಂತರ. ‘ಪರಿಸರದ ಕತೆಗಳು’ ಕುರಿತು ವಿಮರ್ಶೆಯೇ ಬಂದಿಲ್ಲ. ಯಾಕೆಂದರೆ ಅಲ್ಲಿ ವಿಮರ್ಶಕನಿಗೆ ಪ್ರವೇಶಕ್ಕೆ ಅವಕಾಶವೇ ಇಲ್ಲವಲ್ಲ? ಹಾಗೇ, ಕಾರಂತರ ಕಾದಂಬರಿಗಳು, ಕುವೆಂಪು ಕಾದಂಬರಿಗಳೂ, ನಾವು ಓದಿದ ಎಷ್ಟೋ ಕತೆ, ಕವಿತೆ, ಕಾದಂಬರಿಗಳೂ ಯಾವ ಗದ್ದಲವನ್ನೂ ಮಾಡಲಿಲ್ಲ. ಅವರು ಕತೆಗಾರರೋ ಕಾದಂಬರಿಕಾರರೋ ಎಂದು ಪ್ರಶ್ನಿಸುವುದಕ್ಕೂ ಓದುಗರು ಹೋಗಲಿಲ್ಲ. ಕತೆ ಇಷ್ಟವಾಯಿತೋ ಇಲ್ಲವೋ ಅನ್ನುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನ ಪ್ರಶ್ನೆಯನ್ನೇನೂ ಓದುಗ ಕೇಳಿಲ್ಲ.
ಒಂದು ಕೃತಿಯಿಂದಾಗಿ ಸಮಾಜವೇ ಬದಲಾಗುತ್ತದೆ. ಕೋಮುವಾದ, ಜಾತೀವಾದ, ಜನಾಂಗೀಯವಾದ ತಲೆದೋರುತ್ತದೆ ಅನ್ನುವುದೆಲ್ಲ ಸುಳ್ಳು ಅನ್ನಿಸುವುದಿಲ್ಲವೇ? ಆವರಣದಲ್ಲಿ ಅದೆಲ್ಲ ಇದೆ ಅಂತ ಇವರು ಹೇಳುವ ಮುಂಚೆಯೇ ಅದನ್ನು ಅರ್ಧ ಲಕ್ಷ ಮಂದಿ ಓದಿಯಾಗಿತ್ತು. ಅದರಿಂದಾಗಿ ಎಲ್ಲೂ ಸೌಹಾರ್ದ ಹಾಳಾದದ್ದು ಸುದ್ದಿಯಾಗಿಲ್ಲ. ತುಂಬ ಆಳಕ್ಕೆ ಇಳಿದು ತರ್ಕ ಕುತರ್ಕಗಳನ್ನು ಮುಂದಿಟ್ಟುಕೊಂಡು ಯೋಚಿಸುವ ಅಗತ್ಯ ಇದೆ ಅನ್ನಿಸುತ್ತದೆಯಾ? ಅಷ್ಟಕ್ಕೂ ಸಾಹಿತ್ಯ ಎನ್ನುವುದು ಇವರು ಭಾವಿಸಿದಷ್ಟು ಪ್ರಭಾವ ಬೀರುವ ಮಾಧ್ಯಮವಾ? ತಾವು ಮುಖ್ಯ ವಕ್ತಾರರು ಅಂದುಕೊಂಡಿರುವ ಸಾಹಿತಿಗಳ ಹೆಸರು ನಮ್ಮ ರಾಜ್ಯದ ಶೇಕಡಾ ಒಂದರಷ್ಟು ಮಂದಿಗೆ ಗೊತ್ತಿರಬಹುದಾ? ಅವರಲ್ಲಿ ಶೇಕಡಾ ಒಂದರಷ್ಟು ಮಂದಿ ಅವರ ವಿಮರ್ಶೆ ಓದಿರಬಹುದಾ? ಹಾಗಿದ್ದರೆ ಯಾಕೆ ಪಂಚಕೋಟಿ ಕನ್ನಡಿಗರ ನಾಡಲ್ಲಿ ಸಾವಿರ ಪ್ರತಿಗಳನ್ನು ಮಾರುವುದಕ್ಕೂ ಕಷ್ಟವಾಗುತ್ತಿದೆ?
ಸುಮ್ಮನೆ ಇದೆಲ್ಲ ನೆನಪಾಯಿತು. ಕವಿ ಯಾರು ಅನ್ನುವುದೂ ಗೊತ್ತಿಲ್ಲದೇ ಕೇಳಿ ಮೆಚ್ಚಿದ ‘ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನಾ ಕಣ್ಣಲ್ಲಿ ನಿನ್ನ ಹೆಸರು’ ಹಾಡು ನೆನಪಾಯಿತು. ಇವತ್ತಿಗೂ ಕವಿ ಯಾರೆಂದು ಗೊತ್ತಿಲ್ಲದ ಅದೆಷ್ಟೋ ಹಾಡುಗಳು ನೆನಪಾಗುತ್ತಿವೆ.
ಮಳೆ ಶುರುವಾಗುವುದರಲ್ಲಿದೆ. ಮಳೆಯ ಸಂಜೆ ಕಿಟಕಿಯ ಪಕ್ಕ ಕುಳಿತು ನೋಡುತ್ತಿದ್ದರೆ ಖುಷಿಯಾಗುತ್ತದೆ ಎಂದಾಕ್ಷಣ, ಅಲ್ಲಿ ಪಕ್ಕದ ಬೀದಿಯಲ್ಲಿ ಬಡವನ ಮನೆಗೆ ನೀರು ನುಗ್ಗುತ್ತಿದೆ. ಖುಷಿಪಡುವ ನೀನು ಜೀವವಿರೋಧಿ ಅಂದರೆ ಏನು ಸಾಯೋಣ?

Sunday, June 3, 2007

ನಾವೇಕೆ ಪ್ರೀತಿ­ಗಾಗಿ ಸಾಯು­ತ್ತೇವೆ?


ನಾವು ಸಿನಿಮಾ ನೋಡು­ವುದು ಯಾಕೆ?
ಮನ­ರಂ­ಜ­ನೆಗೆ, ಹೊತ್ತು ಕಳೆ­ಯು­ವು­ದಕ್ಕೆ, ಕಲಾ­ಪ್ರೀ­ತಿಗೆ, ಸಿನಿಮಾ ಒಂದು ಅದ್ಭುತ ಮಾಧ್ಯಮ ಎನ್ನುವ ಕಾರ­ಣಕ್ಕೆ...
ಎಲ್ಲವೂ ಸುಳ್ಳು. ಅದ್ಯಾ­ವುದೂ ಕಾರ­ಣ­ಗಳೇ ಅಲ್ಲ. ಹದಿ­ಹ­ರೆ­ಯದ ಹುಡು­ಗ­ರಿಂದ ಹಿಡಿದು ವಯಸ್ಸು ಮಾಗಿ­ಸಿದ ಪ್ರಬು­ದ್ಧರ ತನಕ ಎಲ್ಲರೂ ಚಿತ್ರ­ಮಂ­ದಿ­ರಕ್ಕೆ ಹೋಗು­ವುದು;
ಪ್ರೀತಿ­ಸು­ವು­ದನ್ನು ಕಲಿ­ಯು­ವು­ದಕ್ಕೆ.
ಇದು ನಮ್ಮ ಊಹೆ­ಯಲ್ಲ, ನಮ್ಮ ತೀರ್ಮಾ­ನವೂ ಅಲ್ಲ. ಯುರೋಪು ರಾಷ್ಟ್ರ­ಗ­ಳಲ್ಲಿ ನಡೆದ ಒಂದು ಸಮೀ­ಕ್ಪೆ­ಯಿಂದ ಹೊರ­ಬಿದ್ದ ಸತ್ಯ. ನೀವು ಸಮೀ­ಕ್ಪೆ­ಗ­ಳನ್ನು ನಂಬು­ತ್ತೀ­ರಾ­ದರೆ ಇದನ್ನೂ ನಂಬ­ಬೇಕು.
ಅಂತಿ­ಮ­ವಾಗಿ ಸಿನಿಮಾ ಕಲಿ­ಸು­ವುದು ಹೇಗೆ ಪ್ರೀತಿ­ಸ­ಬೇಕು ಅನ್ನು­ವು­ದನ್ನು. ನಮ್ಮ ಪ್ರೀತಿ­ಯನ್ನು ಹೇಗೆ ವ್ಯಕ್ತ­ಪ­ಡಿ­ಸ­ಬೇಕು ಎನ್ನು­ವು­ದನ್ನು. ನಾನು ಪ್ರೀತಿ­ಸಿದ ಹುಡು­ಗಿ­ಯನ್ನು ನಾನು ಹೇಗೆ ಕೇರ್ ಮಾಡ­ಬೇಕು, ಅವ­ಳನ್ನು ಹೇಗೆ ಮುಚ್ಚ­ಟೆ­ಯಾಗಿ ನೋಡಿ­ಕೊ­ಳ್ಳ­ಬೇಕು ಅನ್ನು­ವು­ದನ್ನು ಕಲಿ­ಸುವ ವಿಶ್ವ­ವಿ­ದ್ಯಾ­ಲಯ ಈ ಜಗ­ತ್ತಿ­ನಲ್ಲೇ ಇಲ್ಲ. ಅದ­ನ್ನೆಲ್ಲ ಯಾರೂ ಹೇಳಿ­ಕೊ­ಡು­ವುದೂ ಇಲ್ಲ. ಎಲ್ಲರೂ ಗುಟ್ಟಾಗಿ ಪ್ರೀತಿ­ಸು­ತ್ತಾರೆ, ಬಹಿ­ರಂ­ಗ­ವಾಗಿ ಮದು­ವೆ­ಯಾ­ಗು­ತ್ತಾರೆ. ಮದು­ವೆ­ಯಾದ ನಂತರ ಗಂಡ-ಹೆಂ­ಡಿರ ಸಂಬಂಧ ಹೇಗಿ­ರುತ್ತೆ ಅನ್ನು­ವುದು ಜಗ­ತ್ತಿಗೇ ಗೊತ್ತು. ಆದರೆ ಪ್ರೇಮಿ­ಸು­ವುದು ಹೇಗೆ? ಅದನ್ನು ಯಾರು ಹೇಳು­ತ್ತಾರೆ.
ಸಿನಿ­ಮಾ­ಗಳು ಹೇಳು­ತ್ತವೆ, ಕಾದಂ­ಬ­ರಿ­ಗಳು ಹೇಳು­ತ್ತವೆ ಎಂಬ ಕಾರ­ಣಕ್ಕೇ ಅವು ಜನ­ಪ್ರಿ­ಯ­ವಾ­ಗಿವೆ. ಟೈಟಾ­ನಿಕಚಿತ್ರ­ವನ್ನು ನಾವು ನೋಡಿದ್ದು ಅವ­ರಿ­ಬ್ಬರ ಪ್ರೇಮದ ತೀವ್ರ­ತೆ­ಗೋ­ಸ್ಕ­ರವೇ ಹೊರತು, ಹಡಗು ಮುಳು­ಗಿದ ದುರಂ­ತ­ಕ್ಕೋ­ಸ್ಕರ ಅಲ್ಲ. ಹಡಗು ಮುಳು­ಗಿ­ದ್ದನ್ನು ಪತ್ರಿ­ಕೆ­ಯಲ್ಲಿ ಓದಿ ತಿಳಿ­ಯ­ಬ­ಹುದು. ಆದರೆ ಮುಳು­ಗು­ತ್ತಿ­ರುವ ಹಡ­ಗಿ­ನಲ್ಲಿ ಅವ­ರಿ­ಬ್ಬರೂ ಹೇಗೆ ಪ್ರೀತಿ ಮಾಡಿ­ದರು ಅನ್ನು­ವು­ದನ್ನು ಯಾರೂ ಹೇಳು­ವು­ದಿಲ್ಲ. ಈ ಜಗತ್ತೇ ಒಂದು ಸಾಗರ, ಈ ಬದುಕೇ ಒಂದು ಟೈಟಾ­ನಿಕಇದು ಮುಳು­ಗಿ­ಹೋ­ಗುವ ಮುನ್ನ ಹೇಗಯ್ಯಾ ಪ್ರೀತಿ ಮಾಡಲಿ.. ಹೇಳಿ ಕೊಡು ಬಾ..
ಹೇಳಿ­ಕೊ­ಟ್ಟಿದೆ ಸಿನಿಮಾ.
ಹಾಗಿ­ದ್ದರೆ ಪ್ರೀತಿ ಏನು? ಅದೊಂದು ಕಲೆಯಾ? ಕಲೆ­ಯಾ­ದರೆ ಅದನ್ನು ತಿಳು­ವ­ಳಿಕೆ ಮತ್ತು ಸ್ವಪ್ರ­ಯ­ತ್ನ­ದಿಂದ ಮೈಗೂ­ಡಿ­ಸಿ­ಕೊ­ಳ್ಳ­ಬೇಕಾ? ಅಥವಾ ಅದೊಂದು ಆಪ್ತ ಸಂವೇ­ದನೆ ಮಾತ್ರವಾ? ಹಾಗೊಂದು ವೇಳೆ ಅದೊಂದು ಆಪ್ತ ಸಂವೇ­ದ­ನೆ­ಯಷ್ಟೇ ಆಗಿ­ದ್ದರೆ ಅದು ಸಂಭ­ವಿ­ಸು­ವುದು ಕೇವಲ ಮ್ಯಾಟರ್ ಆಫ್ ಚಾಯ್ಸ್ ಹೌದಾ? ಅದೃ­ಷ್ಟ­ವಂ­ತರು ಮಾತ್ರ ಪ್ರೀತಿ­ಯಲ್ಲಿ ಬೀಳು­ತ್ತಾರಾ? ಹಾಗಿ­ದ್ದರೆ ಬಹು­ತೇಕ ಮಂದಿ ದುರ­ದೃ­ಷ್ಟ­ವಂ­ತರಾ?
ಪ್ರೀತಿ­ಸುವ ಹಂತ­ದಲ್ಲಿ ಎಲ್ಲರೂ ಅದೊಂದು ಕಲೆ ಎಂದೇ ನಂಬು­ತ್ತಾರೆ. ಪ್ರೀತಿ ಮಾಡೋ­ದನ್ನು ಕಲೀ­ಬೇಕು ಅಂತ ಒದ್ದಾ­ಡು­ತ್ತಾರೆ. ಬೇರೆ­ಯ­ವರ ಸಲಹೆ ತೆಗೆ­ದು­ಕೊ­ಳ್ಳು­ತ್ತಾರೆ. ಒಂದು ಹುಡು­ಗಿ­ಯನ್ನು ಪ್ರೀತಿ­ಸು­ತ್ತಿ­ದ್ದೇನೆ, ಆಕೆ­ಯನ್ನು ಹೇಗೆ ಅಪ್ರೋಚ್ ಮಾಡ­ಬೇಕು ಎಂದು ಸಲಹೆ ಕೇಳು­ತ್ತಾರೆ. ಸಲಹೆ ಸಿಗು­ವು­ದಿಲ್ಲ. ಗಂಟೆ­ಗ­ಟ್ಟಲೆ ಪಾರ್ಕಿ­ನಲ್ಲಿ ಅವನೂ ಅವಳೂ ಕೂತು ಏನು ಮಾತಾ­ಡು­ತ್ತಾರೆ ಅನ್ನು­ವುದು ಹೊರ­ಗಿ­ನಿಂದ ನೋಡುತ್ತಾ ನಿಂತ ಮುಗ್ಧ­ಮಾ­ನ­ವ­ನಿಗೆ ಗೊತ್ತಾ­ಗು­ವುದೇ ಇಲ್ಲ. ಹಾಗಂತ ಹಾಗೆ ಮಾತಾ­ಡಿದ ಹುಡು­ಗ­ನನ್ನು ಕೇಳಿ­ನೋಡಿ. ಅವನು ಏನೂ ಹೇಳು­ವು­ದಿಲ್ಲ.
ಆಗ ಪ್ರೀತಿ­ಸು­ವು­ದನ್ನು ಹೇಗಾ­ದರೂ ಕಲಿ­ಯ­ಬೇಕು ಅನ್ನಿ­ಸು­ತ್ತದೆ. ಪ್ರೇಮ­ಗೀತೆ ಕೇಳು­ತ್ತೇವೆ, ಸಿನಿಮಾ ನೋಡು­ತ್ತೇವೆ, ಪ್ರೇಮ­ಕತೆ ಓದು­ತ್ತೇವೆ. ಪ್ರೀತಿ­ಸು­ವು­ದನ್ನು ಕಲಿ­ಯು­ವು­ದಕ್ಕೆ ಏನೇನು ಸಾಧ್ಯವೋ ಅದ­ನ್ನೆಲ್ಲ ಮಾಡು­ತ್ತೇವೆ.
ಪ್ರೀತಿಯ ಸಮ­ಸ್ಯೆ­ಗಳು ಅನೇಕ. ತಾನು ಪ್ರೀತಿ­ಸು­ತ್ತಿ­ಲ್ಲವೋ ಅಥವಾ ಪ್ರೀತಿ­ಸ­ಲ್ಪ­ಡು­ತ್ತಿ­ಲ್ಲವೋ ಅನ್ನು­ವುದು ಅನೇ­ಕ­ರಿಗೆ ಗೊತ್ತಾ­ಗು­ವು­ದಕ್ಕೇ ಸಾಕಷ್ಟು ಕಾಲಾ­ವ­ಕಾಶ ಬೇಕಾ­ಗು­ತ್ತದೆ. ತನಗೆ ಪ್ರೀತಿ­ಸುವ ಶಕ್ತಿಯೇ ಇಲ್ಲ­ವೇನೋ ಅಂತಲೂ ಅನೇ­ಕ­ರಿಗೆ ಆಗಾಗ್ಗೆ ಅನಿ­ಸು­ವು­ದುಂಟು. ಪ್ರೀತಿ­ಪಾ­ತ್ರ­ನಾ­ಗು­ವುದು ಹೇಗೆ ಎನ್ನು­ವುದು ಎಲ್ಲ ಗಂಡ­ಸಿನ ಸಮಸ್ಯೆ.
ಈ ಸಮ­ಸ್ಯೆಗೆ ಗಂಡಸು ಕಂಡು­ಕೊಂ­ಡಿ­ರುವ ಪರಿ­ಹಾ­ರ­ವೆಂ­ದರೆ ಯಶ­ಸ್ಸಿನ ಮೆಟ್ಟಿ­ಲೇ­ರು­ವುದು, ಅಧಿ­ಕಾ­ರ­ದಲ್ಲಿ ಎತ್ತ­ರೆ­ತ್ತ­ರಕ್ಕೆ ಏರು­ವುದು, ಶ್ರೀಮಂ­ತ­ನಾ­ಗು­ವುದು. ಹೆಣ್ಣು ಕಂಡು­ಕೊಂ­ಡಿ­ರುವ ಮಾರ್ಗ­ವೆಂ­ದರೆ ಸುಂದ­ರಿಯೂ ಆಕ­ರ್ಷ­ಕಳೂ ಆಗು­ವುದು. ಇತ್ತಿ­ತ್ತ­ಲಾಗಿ ಅಂತ­ಸ್ತು­ಗಳ ಕಲ್ಪನೆ ಬದ­ಲಾ­ಗು­ತ್ತಿ­ದ್ದಂತೆ ಸಾಮಾ­ಜಿ­ಕ­ವಾಗಿ ತುಂಬ ರಿಫೈನ್ಡ್ ಆಗಿ ವರ್ತಿ­ಸುವ ಮೂಲಕ ಆಕ­ರ್ಷಿ­ಸುವ ಪ್ರಯ­ತ್ನ­ಗಳು ಶುರು­ವಾ­ಗಿವೆ. ತುಂಬ ಸೊಗ­ಸಾಗಿ ಮಾತಾ­ಡುವ ಮೂಲಕ, ನೆರ­ವಾ­ಗುವ ಮೂಲಕ, ವಿನ­ಯ­ದಿಂದ, ಘನ­ತೆ­ಯಿಂದ ಪರ­ಸ್ಪ­ರರು ಆಕ­ರ್ಷಿ­ಸಲು ಆರಂ­ಭಿ­ಸಿ­ದ್ದಾರೆ.
ಅಂದರೆ ವ್ಯಕ್ತಿ­ತ್ವದ ಒಳ್ಳೆಯ ಗುಣ­ಗ­ಳನ್ನು ಬಿಟ್ಟು ಪ್ರೀತಿ ಬಾಳ­ಲಾ­ರದು. ಅದು ನಂಬಿ­ರು­ವುದು ಕೇವಲ ಸಂಪತ್ತು, ಘನತೆ, ಸದ್ಗುಣ ಮತ್ತು ಸಚ್ಚಾ­ರಿ­ತ್ರ­ಗ­ಳನ್ನು ಅಂದ­ಹಾ­ಗಾ­ಯಿತು. ಜೊತೆ­ಗೊಂ­ದಷ್ಟು ಸೌಂದರ್ಯ ಮತ್ತು ಸವಿ­ಮಾ­ತು­ಗಳು ಸೇರಿ­ದರೆ ಯಾರು ಯಾರನ್ನು ಬೇಕಾ­ದರೂ ಪ್ರೀತಿ­ಸ­ಬ­ಹುದಾ?
ಇಲ್ಲಿಯೇ ಪ್ರೀತಿ­ಸು­ವುದು, ಪ್ರೀತಿ­ಸ­ಲ್ಪ­ಡು­ವುದು ಅಷ್ಟು ಮುಖ್ಯವಾ ಎಂಬ ಪ್ರಶ್ನೆಯೂ ಮೂಡು­ತ್ತದೆ. ಮದು­ವೆ­ಯಾದ ನಂತ­ರವೂ ಪ್ರೀತಿ­ಸದೇ ಇರು­ವ­ವ­ರನ್ನು, ಪ್ರೀತಿ­ಸಿಯೂ ಮದು­ವೆ­ಯಾ­ಗ­ದ­ವ­ರನ್ನು ನಾವು ಕಾಣು­ತ್ತೇವೆ. ಎಷ್ಟೋ ಪ್ರಕ­ರ­ಣ­ಗ­ಳಲ್ಲಿ ಪ್ರೀತಿ ಎಂಬುದು ಏಕಾಂ­ತ­ದಿಂದ ಪಾರಾ­ಗುವ ವಿಫಲ ಯತ್ನ­ವಷ್ಟೇ ಆಗಿ­ರು­ತ್ತದೆ. ಮತ್ತೆಷ್ಟೋ ಪ್ರಯ­ತ್ನ­ಗ­ಳಲ್ಲಿ ಪ್ರೀತಿ ಏಕಾಂ­ಗಿ­ತ­ನ­ವನ್ನು ಸಫ­ಲ­ವಾಗಿ ಹುಟ್ಟು­ಹಾ­ಕು­ತ್ತದೆ.
ನಾವು ಪ್ರೀತಿ­ಸು­ವು­ದನ್ನು ಕಲಿ­ತದ್ದು ಇಂಗ್ಲಿ­ಷ­ರಿಂದ ಅಂದು­ಕೊಂ­ಡಿ­ದ್ದೇವೆ. ನಮ್ಮ ಇಂಗ್ಲಿಷ್ ವಿದ್ಯಾ­ಭ್ಯಾಸ, ನಡ­ವ­ಳಿಕೆ ಎಲ್ಲವೂ ಅಮೆ­ರಿಕಾ ಮತ್ತು ಇಂಗ್ಲೆಂ­ಡಿ­ನಿಂದ ಆಮ­ದಾ­ದದ್ದು. ಇವತ್ತು ನಾವು ಅಮೆ­ರಿ­ಕ್ ಸಂಸ್ಕೃ­ತಿ­ಯನ್ನೇ ಹೆಚ್ಚು ಉದಾ­ರ­ವಾಗಿ ಸ್ವೀಕ­ರಿ­ಸಿ­ದ್ದರೂ ಪ್ರೀತಿಯ ಮೊದಲ ಪಾಠ­ಗ­ಳನ್ನು ನಮಗೆ ಕಲಿ­ಸಿ­ದ­ವರು ಬ್ರಿಟಿ­ಷರು. ಆದರೆ ಬ್ರಿಟಿ­ಷರು ತಮ್ಮ ದೇಶ­ದಲ್ಲಿ ನಮ­ಗಿಂತ ಹೆಚ್ಚು ಸಂಪ್ರ­ದಾ­ಯ­ಸ್ಥರೂ ಕಟ್ಟು­ನಿ­ಟ್ಟಿ­ನ­ವರೂ ಆಗಿ­ದ್ದ­ವರು. ಭಾರ­ತೀಯ ಕಾವ್ಯ­ಗ­ಳಲ್ಲಿ ದುಷ್ಯಂತ, ಶಕುಂ­ತ­ಲೆ­ಯ­ರಿ­ದ್ದಾರೆ, ಅಮೃ­ತ­ಮತಿ ಮತ್ತು ಅಷ್ಟಾ­ವ­ಕ್ರ­ರಿ­ದ್ದಾರೆ, ಯಶೋ­ಧರ ಚರಿ­ತೆ­ಯಿದೆ. ಇಂಗ್ಲಿಷ್ ಪ್ರೇಮ­ಕಾವ್ಯ ಆ ಮಟ್ಟಿಗೆ ತುಂಬ ಬಡ­ತ­ನದ್ದು. ಅಲ್ಲಿ­ರುವ ಏಕೈಕ ಜನ­ಪ್ರಿಯ ಪ್ರೇಮ­ಜೋಡಿ ರೊಮಿಯೋ-ಜೂ­ಲಿ­ಯಟ್. ಅದೂ ದುರಂತ ಪ್ರೇಮ.
ಬೇರೆ ದೇಶ­ಗಳ ಪ್ರೇಮ ಚರಿ­ತ್ರೆ­ಗ­ಳನ್ನೇ ನೋಡಿ, ಗ್ರೀಕ್ ರೋಮ್ ಮುಂತಾದ ತುಂಬ ಪ್ರಾಚೀ­ನ­ವಾದ ಪುರಾಣ ಕಥಾ­ನ­ಕ­ಗ­ಳಿ­ರು­ವಲ್ಲಿ ಕೂಡ ಭಾರ­ತ­ದ­ಲ್ಲಿ­ರು­ವಷ್ಟು ಗಾಢ­ವಾದ ಪ್ರೇಮ, ವಿರ­ಹ­ಗಳ ಕತೆ­ಯಿಲ್ಲ. ಅಲ್ಲಿ­ರು­ವುದು ಕೇವಲ ಕಾಂಪ್ಲೆ­ಕ್ಸು­ಗಳು. ಪ್ರೇಮವೂ ಒಂದು ಕಾಂಪ್ಲೆಕ್ಸು. ಅದು ಕಾಮ­ವಾಗಿ ಬದ­ಲಾ­ಗು­ತ್ತದೆ. ಆದರೆ ನಮ್ಮ ಪುರಾ­ಣ­ಗ­ಳಲ್ಲಿ ಕಾಮಕ್ಕೂ ಪ್ರೇಮಕ್ಕು ಅಂಥ ದೊಡ್ಡ ವ್ಯತ್ಯಾ­ಸ­ವೇ­ನಿಲ್ಲ. ಎರಡೂ ಕೂಡ ಆರೋ­ಗ್ಯ­ಕ­ರ­ವಾದ ಪ್ರಕ್ರಿಯೆ.
ಇವತ್ತು ಕೂಡ ಪ್ರೇಮ­ಚಿ­ತ್ರ­ಗಳು ಜನ­ಪ್ರಿ­ಯ­ವಾ­ಗಿ­ದ್ದರೆ ಒಪ್ಪ­ಬ­ಹು­ದಾ­ಗಿತ್ತು. ಆದರೆ ಆಗೊಂದು ಈಗೊಂದು ಬಂದು ಹೋಗುವ ಸುಂದರ ಪ್ರೇಮ­ಕ­ತೆ­ಗ­ಳನ್ನು ಬಿಟ್ಟರೆ ಈಗಿನ ಆಸ­ಕ್ತಿ­ಗಳೇ ಬೇರೆ. ಗಂಡಸು ಮತ್ತು ಹೆಂಗಸು ಕೊಳ್ಳು­ಬಾ­ಕ­ತ­ನ­ದತ್ತ ಮಾರು­ಹೋ­ಗಿ­ದ್ದಾರೆ. ಹೀಗೆ ತಮ್ಮ ಏಕಾಂತ ಮತ್ತು ವ್ಯಸ­ನ­ಗ­ಳನ್ನು ಬೇರೆ ಬೇರೆ ಆಸ­ಕ್ತಿ­ಗಳ ಮೂಲಕ ತೀರಿ­ಸಿ­ಕೊ­ಳ್ಳು­ತ್ತಿ­ದ್ದಾರೆ. ಕಂತಿ­ನಲ್ಲಿ ಏನೇನೋ ಸಾಮಾನು ಕೊಂಡು ಮನೆ­ತುಂ­ಬಿ­ಸಿ­ಕೊ­ಳ್ಳುವ ಗಂಡು­ಹೆ­ಣ್ಣು­ಗಳೂ ತಮ­ಗೆ­ದು­ರಾ­ಗುವ ವ್ಯಕ್ತಿ­ಗ­ಳನ್ನೂ ಹಾಗೇ ನೋಡಲು ಆರಂ­ಭಿ­ಸಿ­ದ್ದಾರೆ. ಆಕ­ರ್ಷಕ ಎನ್ನು­ವುದು ನಾಲ್ಕಂಕಿ ಸಂಬಳ, ಸ್ವಂತ­ದ್ದೊಂದು ಮನೆ, ಓಡಾ­ಡಲು ಕಾರು, ಕ್ರೆಡಿಟ್ ಕಾರ್ಡು, ಕ್ಲಬ್ಬು ಮೆಂಬ­ರ್­ಶಿ­ಪ್ಪು­ಗ­ಳಾಗಿ ಅರ್ಥ ಪಡೆ­ದು­ಕೊಂ­ಡಿದೆ. ಓಣಿಯ ತಿರು­ವಿನ ಬೋರ್ ವೆಲ್ ಪಕ್ಕ ನಿಂತು ಪಿಸು­ಗು­ಟ್ಟುವ ಗಂಡು­ಹೆ­ಣ್ಣು­ಗಳ ಪ್ರೀತಿ ಹಳೆ­ಯ­ದಾ­ಗಿದೆ.
ಚೌಕಾ­ಸಿ­ಯಾ­ಗಿದ್ದ ಪ್ರೀತಿ ಇವತ್ತು ಲೆಕ್ಕಾ­ಚಾ­ರ­ಗ­ಳನ್ನು ದಾಟಿ ನಿಂತಿದೆ. ನನಗೆ ಪ್ರೀತಿ­ಸೋ­ದಕ್ಕೆ ಪುರು­ಸೊ­ತ್ತಿಲ್ಲ. ನಿನ­ಗೇನು ಬೇಕು ಕೇಳು ತಂದು­ಹಾ­ಕು­ತ್ತೀನಿ ಎಂಬ­ಲ್ಲಿಗೆ ಬಂದು ನಿಂತಿದೆ. ಪ್ರೀತಿ­ಸ­ದಿ­ದ್ದರೆ ಹಾಳಾ­ಗಿ­ಹೋಗು, ನನಗೆ ಇಂಥದ್ದು ಬೇಕು ಎಂದು ಕೇಳು­ವ­ಲ್ಲಿಗೆ ತಲು­ಪಿದೆ.
ಹೀಗಾಗಿ ಪ್ರೇಮಿ­ಗ­ಳೀಗ ಸಿನಿಮಾ ನೋಡು­ವು­ದಿಲ್ಲ, ಪಿಸು­ಗು­ಟ್ಟು­ವು­ದಿಲ್ಲ, ಕಟ್ಟೆಯ ಬಳಿಯೋ ಬೆಟ್ಟದ ಬಳಿಯೋ ನಿಂತು ಮಾತಾ­ಡು­ವು­ದಿಲ್ಲ. ಆ ಬೆಟ್ಟ­ದಲ್ಲಿ ಬೆಳ­ದಿಂ­ಗ­ಳಲ್ಲಿ ಸುಳಿ­ದಾ­ಡ­ಬೇಡ ಗೆಳತಿ ಎಂದು ಈತ ಹಾಡು­ವು­ದಿಲ್ಲ.
ಬದ­ಲಾಗಿ ಎಸ್ಸೆ­ಮ್ಮೆ­ಸ್ಸು­ಗಳೂ ಈ ಮೇಲು­ಗಳೂ ಚಾಟ್ ­ಗಳೂ ಎಕ್ಸ್­ಚೇಂ­ಜಾ­ಗು­ತ್ತಿ­ರು­ತ್ತವೆ. ತನು­ಮ­ನ­ಧ­ನ­ಗ­ಳನ್ನು ಒತ್ತೆ­ಯಿಟ್ಟು ದಕ್ಕಿ­ಸಿ­ಕೊ­ಳ್ಳ­ಬೇ­ಕಾ­ಗಿದ್ದ ಪ್ರೀತಿಗೆ ಈಗ ಧನ­ವೊಂ­ದಿ­ದ್ದರೆ ಸಾಕು.
ಧನ­ವಿ­ದ್ದರೆ ಬಾ, ಈ ತನುವೂ ನಿನ್ನದು ಮನವೂ ನಿನ್ನದು ಎನ್ನು­ವ­ವರು ಸಾಲು­ಗಟ್ಟಿ ನಿಲ್ಲು­ತ್ತಾರೆ.
ಈಗ ಹೇಳಿ.
ಪ್ರೀತಿ ಕಲೆಯಾ, ವಿಜ್ಞಾ­ನವಾ ಅಥವಾ....
ಕೇವಲ ಅಜ್ಞಾ­ನವಾ?