Thursday, July 26, 2007

ಕಾಡ ಬೆಳದಿಂಗಳು


ಸುದೇಷ್ಣೆ ಸ್ಪಾಟಿಗೆ ಬರುವ ಹೊತ್ತಿಗೆ ಆಕೆಯ ಪತ್ರಿಕೆಯ ಫೋಟೋಗ್ರಾಫರು ಫೋಟೋ ತೆಗೆದದ್ದು ಮುಗಿಸಿ ಕೆಮರಾವನ್ನು ಬ್ಯಾಗಿಗೆ ತುರುಕುತ್ತಿದ್ದ. ಅವಳನ್ನು ನೋಡಿದ್ದೇ ತಡ, ಆಗಲೇ ಬರಬೇಕಾಗಿತ್ತು ಅಂತ ಗೊಣಗಿದ. ಅವನು ಮಾತಾಡುವುದೇ ಹಾಗೆ, ಗೊಣಗಿದಂತೆ ಕೇಳಿಸುತ್ತದೆ.

ಸುದೇಷ್ಣೆ ತನ್ನ ಮುಂದೆ ಕರಕಲಾಗಿ ಬಿದ್ದಿದ್ದ ದೇಹಗಳನ್ನೊಮ್ಮೆ ನೋಡಿದಳು. ಯಾವುದನ್ನೂ ಗುರುತು ಹಿಡಿಯುವ ಹಾಗಿರಲಿಲ್ಲ. ಹತ್ತೋ ಇಪ್ಪತ್ತೋ ಹರೆಯದ ಜೀವಗಳು ಕಮರಿ ಹೋಗಿದ್ದವು. ಕೈಕಾಲು ಕಳೆದುಕೊಂಡು ವಿರೂಪಗೊಂಡು ಬಿದ್ದಿದ್ದವು. ಕಣ್ಣಲ್ಲೇ ಎಣಿಸಲು ಯತ್ನಿಸಿದಳು. ಏನು ಮಾಡಿದರೂ ಲೆಕ್ಕ ಸಿಗಲಿಲ್ಲ. ಅಗಾಧ ರಾಕ್ಪಸನೊಬ್ಬ ಅಂಗೈಯಲ್ಲಿ ತಿಕ್ಕಿ ಎಸೆದಂತೆ ದೇಹ ಮಾಂಸದ ಉಂಡೆಯಾಗಿ ಬಿದ್ದದ್ದು ನೋಡಿ ಸುದೇಷ್ಣೆಗೆ ಕರುಳು ಒತ್ತರಿಸಿ ಬಂತು. ಕಣ್ಮುಚ್ಚಿ ಅಲ್ಲಿಂದ ಕಾಲ್ತೆಗೆದಳು.

ನಕ್ಸಲೀಯರ ಬಾಂಬು ತಯಾರಿಕಾ ಕೇಂದ್ರ ಸ್ಪೋಟ. ಮೂವತ್ತಮೂರು ಸಾವು ಎಂದು ಹೆಡ್ಡಿಂಗು ಬರೆದು ತನ್ನ ವರದಿಯನ್ನು ಕಂಪೋಸಿಂಗ್ ಸೆಕ್ಪನ್ನಿಗೆ ಕಳಿಸಿಕೊಡುವ ಹೊತ್ತಿಗೆ ಗಂಟೆ ಹನ್ನೊಂದು ದಾಟಿತ್ತು. ಬ್ಯಾಗು ಜೋಡಿಸಿಕೊಂಡು ಇನ್ನೇನು ರೂಮಿಗೆ ವಾಪಸ್ಸಾಗಬೇಕು ಅನ್ನುವಷ್ಟರಲ್ಲಿ ಸಂಪಾದಕ ಹಿಡಿದುಕೊಂಡ. ಮೂವತ್ತಮೂರು ಸಾವು ಅಂತ ಹೇಳಿದರೆ ಏನು ಹೇಳಿದ ಹಾಗಾಯಿತು. ಆ ಮೂವತ್ತ ಮೂರು ಮಂದಿ ಯಾರ್ಯಾರು, ಎಲ್ಲಿಯವರು ಅನ್ನುವ ವಿವರ ಮುಖ್ಯ. ವಾಟ್ ಆರ್ ಯೂ ಟ್ರೈಯಿಂಗ್ ಟು ಪ್ರೂವ್. ಘಟನೆಯ ಅಗಾಧತೆ ಹೇಳೋಕೆ ಹೊರಟಿದ್ದೀಯಾ ಅಥವಾ ಜನರಿಗೆ ಸಹಾಯ ಮಾಡೋದಕ್ಕೆ ಹೊರಟಿದ್ದೀಯಾ ಅಂತ ದಬಾಯಿಸಿದ. ನಥಿಂಗ್ ಡೂಯಿಂಗ್, ಈ ವರದಿ ನನಗೆ ಬೇಕಾಗಿಲ್ಲ. ಸತ್ತವರ ಪಟ್ಟಿ ಜೊತೆಗೆ ಹೋಗಬೇಕು ಅಂತ ಪಟ್ಟುಹಿಡಿದ.

ಮತ್ತೆ ಸೀಟಿಗೆ ಬಂದು ಕುಳಿತು ಸುದೇಷ್ಣೆ ಇನ್‌ಸಪೆಕ್ಟರ್ ಆಲಿಯನ್ನು ಲೈನಿಗೆ ತೆಗೆದುಕೊಂಡಳು. ಹೇಗಾದರೂ ಮಾಡಿ ಸತ್ತವರ ಹೆಸರು ಕೊಡಿ ಅಂತ ಗೋಗರೆದಳು. ಅವನು ಫೋನನ್ನು ಹೆಡ್ ಕಾನ್ ಸ್ಟೇಬಲ್ ಕುಮಾರಪ್ಪನಿಗೆ ದಾಟಿಸಿದ. ಲಿಸ್ಟೇ ಬಂದಿಲ್ಲ ಅಂತ ಗೊಣಗುತ್ತಾ ಕುಮಾರಪ್ಪ ಕೊನೆಗೊಂದು ಪಟ್ಟಿ ಓದಿ ಹೇಳಿದ. ಆತ ನಿಧಾನವಾಗಿ ಓದಿ ಹೇಳಿದ್ದನ್ನು ಗ್ರಹಿಸುತ್ತಾ ಹನ್ನೆರಡು ನಿಮಿಷದ ಕೊನೆಗೆ ಮೂವತ್ತಮೂರನೇ ಹೆಸರನ್ನು ಸುದೇಷ್ಣೆ ಬರೆದುಕೊಂಡಳು; ಚಂದ್ರಹಾಸ, ಸನ್ನಾಫ್ ಶಿವರಾಮಯ್ಯ,32, ಕೊಪ್ಪ ವಿಲೇಜ್ ಮತ್ತು ಪೋಸ್ಟ್, ಬಾಳೆಹೊನ್ನೂರು ತಾಲೂಕು.

ಕೊಪ್ಪ ಮೂಡಿಗೆರೆ ತಾಲೂಕಲ್ಲಿದೆಯೋ, ನರಸಿಂಹರಾಜಪುರದಲ್ಲಿದೆಯೋ ಚಿಕ್ಕಮಗಳೂರಲ್ಲಿದೆಯೋ ಬಾಳೆ ಹೊನ್ನೂರಲ್ಲಿದೆಯೋ ಅಥವಾ ಬಾಳೆಹೊನ್ನೂರು ತಾಲೂಕು ಕೇಂದ್ರ ಹೌದೋ ಅಲ್ಲವೋ ಅನ್ನುವುದು ಸುದೇಷ್ಣೆಗೂ ಹೊಳೆಯಲಿಲ್ಲ, ಆ ಹೆಡ್ ಕಾನ್ ಸ್ಟೇಬಲ್ ಯೋಚಿಸುವುದಕ್ಕೂ ಹೋಗಲಿಲ್ಲ.******

ಶಿವರಾಮಯ್ಯನಿಗೆ ಸುದ್ದಿ ತಿಳಿದದ್ದು ಮಾರನೆಯ ದಿನ ಮಧ್ಯಾಹ್ನದ ಹೊತ್ತಿಗೆ. ಆ ಊರಿಗೆ ಹೋಗುವ ಪತ್ರಿಕೆಯಲ್ಲಿ ಸತ್ತವರ ಹೆಸರು ಪ್ರಕಟವಾಗಿರಲಿಲ್ಲ. ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದ ದುಷ್ಕರ್ಮಿಗಳು ಅಂತ ಕೆಟ್ಟದಾಗಿ ಹೆಡ್ಡಿಂಗು ಕೊಟ್ಟು, ಮೂವತ್ತೆಂಟು ಮಂದಿ ಕ್ರಿಮಿನ್ ಹಿನ್ನೆಲೆಯ ನರಹಂತಕರು ಸತ್ತಿದ್ದಾರೆ ಅನ್ನುವಂತೆ ಆ ಸುದ್ದಿಯನ್ನು ಆ ಪತ್ರಿಕೆ ಪ್ರಕಟಿಸಿತ್ತು.

ಅದನ್ನು ಓದುವ ಹೊತ್ತಿಗೆ ಶಿವರಾಮಯ್ಯ, ಗೆಳೆಯ ಚಂದ್ರಶೇಖರಯ್ಯನ ಮನೆಯಲ್ಲಿದ್ದರು.

ಚಂದ್ರಶೇಖರಯ್ಯ ನಿವೃತ್ತ ಮೇಷ್ಟರು. ಶಿವರಾಮಯ್ಯ ಕೃಷಿಕ. ಎಂಟು ವರುಷದ ಹಿಂದೆ ಒಂದೆಕರೆ ಹೊಲದಲ್ಲಿ ಅದೆಷ್ಟೋ ಕ್ವಿಂಟಾಲ್ ಬತ್ತ ಬೆಳೆದು ಮಾದರಿ ಕೃಷಿಕ ಅನ್ನಿಸಿಕೊಂಡಿದ್ದರು. ಹನ್ನೆರಡೆಕರೆ ಗದ್ದೆ, ಎಂಟೆಕರೆ ತೆಂಗಿನ ತೋಟವಿತ್ತು. ಆದರೆ ದುಡಿಯುವ ತ್ರಾಣ ಇರಲಿಲ್ಲ. ಆಗಲೇ ಎಪ್ಪತ್ತೆಂಟು ದಾಟಿ, ಎಂಬತ್ತಕ್ಕೆ ಕಾಲಿಟ್ಟಿದ್ದರು ಶಿವರಾಮಯ್ಯ.

ಚಂದ್ರಶೇಖರಯ್ಯನ ವಯಸ್ಸೂ ಹೆಚ್ಚೂ ಕಡಿಮೆ ಅಷ್ಟೇ ಇತ್ತು. ಆದರೆ ಸರ್ವೀಸಿನಲ್ಲಿದ್ದಾಗ ಮೇಲಧಿಕಾರಿಗಳು ಅವರನ್ನು ಕನಿಷ್ಠ ಹದಿನೈದು ಬಾರಿ ಎಲ್ಲೆಲ್ಲಿಗೋ ವರ್ಗಾ ಮಾಡಿದ್ದರು. ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮಕ್ಕೆ ವರ್ಗಾ ಆಗಿ ಹೋದ ವರುಷ ಅವರನ್ನೊಂದು ವಿಚಿತ್ರ ಕಾಯಿಲೆ ಅಮರಿಕೊಂಡಿತು. ಅದನ್ನು ಮಂಗನ ಕಾಯಿಲೆ ಅಂತಲೂ ಮೆದುಳುಜ್ವರ ಅಂತಲೂ ಕರೆದು ವೈದ್ಯರು ತಮ್ಮ ಪರಿಣತಿ ಹೆಚ್ಚಿಸಿಕೊಂಡರು. ಮೂರು ತಿಂಗಳ ಕಾಲ ಎಡೆಬಿಡದೆ ಕಾಡಿದ ದ್ವರ ನಿಂತಾಗ ಚಂದ್ರಶೇಖರಯ್ಯ ಎಲುಬಿನ ಗೂಡಾಗಿದ್ದರು. ಆಮೇಲೆ ಅವರ ದೇಹವನ್ನು ಯಾವ ಆರೈಕೆ ಕೂಡ ಮುಟ್ಟಲಿಲ್ಲ.

ಹಾದಿ ತಪ್ಪುತ್ತಿರುವ ಯುವಕರ ಬಗ್ಗೆ, ಹೆಚ್ಚುತ್ತಿರುವ ನಕ್ಸಲೀಯ ಚಟುವಟಿಕೆಗಳ ಬಗ್ಗೆ, ತೋಟದಲ್ಲಿ ಅತಿಯಾಗುತ್ತಿರುವ ಕಳ್ಳತನಗಳ ಬಗ್ಗೆ ಹರಟುತ್ತಾ ಕುಳಿತಾಗಲೇ ಶಿವರಾಮಯ್ಯನವರನ್ನು ಆ ಸುದ್ದಿ ತಲುಪಿದ್ದು. ಅವರ ಮಗ ಚಂದ್ರಹಾಸ ಬಾಂಬ್ ಬ್ಲಾಸ್ಟ್ ಆಗಿ ಸತ್ತ ಸುದ್ದಿ. ಅಲ್ಲಿಯ ತನಕ ಕೇವಲ ಸುದ್ದಿಯಷ್ಟೇ ಆಗಿದ್ದ ಮಾಹಿತಿ, ಇದೀಗ ಅವರನ್ನು ಅಲ್ಲಾಡಿಸುವ ಸತ್ಯವಾಗಿ ಪರಿಣಮಿಸಿತು. ಒಂದೂ ಮಾತಾಡದೇ ಶಿವರಾಮಯ್ಯ ಎದ್ದು ಮನೆಗೆ ಹೋದರು. ಆಗಷ್ಟೇ ತಿಂಡಿ ತಿನ್ನುತ್ತಿದ್ದ ಹೆಂಡತಿ ವಿಶಾಲಾಕ್ಪಿ ತಿಂಡಿ ತಿನ್ನುವ ತನಕ ಕಾದಿದ್ದು ಅವಳನ್ನು ಹೊರಡಿಸಿಕೊಂಡು ಮಂಗಳೂರಿಗೆ ಹೊರಟರು. ಕೊಪ್ಪದಿಂದ ಮಂಗಳೂರಿಗೆ ಆರು ಗಂಟೆಯ ಹಾದಿ.

*****

ಸತ್ತಿದ್ದು ತನ್ನ ಮಗ ಚಂದ್ರಹಾಸ ಅಲ್ಲ, ಚಂದ್ರಶೇಖರಯ್ಯನ ಮಗ ಸುಮತೀಂದ್ರ ಅನ್ನುವುದು ಮೂರು ದಿನಗಳ ನಂತರ ಶಿವರಾಮಯ್ಯನವರಿಗೆ ಗೊತ್ತಾಯಿತು. ಹಾಗೆ ಗೊತ್ತಾಗುವ ಹೊತ್ತಿಗಾಗಲೇ ಅವರು ಮಗನನ್ನು ಕಳೆದುಕೊಂಡ ದುಃಖ ಅನುಭವಿಸಿ ಆಗಿತ್ತು. ಪೊಲೀಸರು ತಾವು ಆ ರೆಕಾರ್ಡ್ ಬದಲಿ ಮಾಡಿಕೊಳ್ಳುತ್ತೇವೆ ಅಂತ ಹೇಳಿ ಶಿವರಾಮಯ್ಯನವರ ಕೈಯಿಂದ ಸ್ವಲ್ಪ ದುಡ್ಡು ಕೀಳಲಿಕ್ಕೆ ನೋಡಿದರು. ಅದಕ್ಕೆ ಶಿವರಾಮಯ್ಯ ಮಣಿಯಲಿಲ್ಲ. ಯಾರಿಗೂ ಚಿಕ್ಕಾಸೂ ಕೊಡದೇ, ಚಂದ್ರಶೇಖರಯ್ಯನವರಿಗೆ ವಿಷಯ ತಿಳಿಸಿ ಅವರನ್ನೇ ಕಳಿಸುವುದಾಗಿ ಹೇಳಿ ಹೊರಟುಬಿಟ್ಟರು.

ದಾರಿಯಲ್ಲಿ ಬರುವಾಗ ಯೋಚನೆಯಾಯಿತು. ಈ ವಿಚಾರವನ್ನು ಚಂದ್ರಶೇಖರಯ್ಯನಿಗೆ ಹೇಳುವುದಾದರೂ ಹೇಗೆ? ಅವರು ಇದನ್ನು ಹೇಗೆ ಸ್ವೀಕರಿಸಬಹುದು. ತನ್ನಂಥವನಿಗೆ, ಹೆಂಡತಿ ಇರುವ ತನ್ನಂಥವನಿಗೇ ಒಂದು ಕ್ಪಣ ತಡೆದುಕೊಳ್ಳಲಾಗದೇ ಹೋದ ಸಂಗತಿಯನ್ನು ಆತ ಹೇಳಿ ತಾಳಿಕೊಂಡಾನು. ಅಷ್ಟಕ್ಕೂ ಅವನ ಮಗ ಮನೆಗೆ ಬರದೇ ವರುಷಗಳೇ ಕಳೆದಿವೆ. ಅವನು ಎಲ್ಲಿದ್ದಾನೆ ಅನ್ನುವುದೂ ಅಪ್ಪ ಅನ್ನಿಸಿಕೊಂಡವನಿಗೆ ಗೊತ್ತಿಲ್ಲ. ಆ ಅನೂಹ್ಯದಲ್ಲಿ ಅವನು ಇದ್ದುಬಿಡಲಿ. ಮಗ ಎಲ್ಲೋ ಬದುಕಿದ್ದಾನೆ ಅನ್ನುವ ಸಣ್ಣ ಸಂತೋಷವಾದರೂ ಅವನಿಗಿರಲಿ. ಸತ್ತಿದ್ದು ಯಾರೋ ಏನೋ ಅಂತ ಹೇಳಿದರಾಯಿತು ಅಂದುಕೊಂಡರು ಶಿವರಾಮಯ್ಯ. ಮಗ ಬಂದು ಪಿಂಡ ಇಡ್ತಾನೆ ಅಂತ ಕಾಯ್ತಿರುತ್ತೆ ಜೀವ. ಇಂಥ ಸುದ್ದಿ ಮುಚ್ಚಿಡೋದು ನ್ಯಾಯವೇ ಅಂತ ವಿಶಾಲಾಕ್ಪಿ ಆತಂಕದಲ್ಲಿ ಕೇಳಿದ್ದಕ್ಕೆ ಶಿವರಾಮಯ್ಯ ಉತ್ತರ ಕೊಡಲಿಲ್ಲ. ಆದರೆ ಊರಿಗೆ ಬಂದವರು ಸತ್ತದ್ದು ನನ್ನ ಮಗ ಅಲ್ಲ ಅಂತಷ್ಟೇ ಹೇಳಿ ಸುಮ್ಮನಾದರು. ಮತ್ಯಾರು ಅಂತ ಚಂದ್ರಶೇಖರಯ್ಯ ಕೇಳಿದ್ದರೆ ಖಂಡಿತಾ ಸಮಸ್ಯೆ ಆಗುತ್ತಿತ್ತು ಶಿವರಾಮಯ್ಯನಿಗೆ. ಆದರೆ ಚಂದ್ರಶೇಖರಯ್ಯ ಕೇಳಲಿಲ್ಲ.

*****

ಆದರೆ ಆಮೇಲೆ ಚಂದ್ರಶೇಖರಯ್ಯನವರನ್ನು ಭೇಟಿ ಆದಾಗಲೆಲ್ಲ ಶಿವರಾಮಯ್ಯನವರನ್ನು ಒಂಥರದ ಪಾಪಪ್ರಜ್ಞೆ ಕಾಡತೊಡಗಿತು. ಅದಕ್ಕೆ ತಕ್ಕಂತೆ ಚಂದ್ರಶೇಖರಯ್ಯ ಆಗಾಗ ತನ್ನ ಮಗನ ಬಗ್ಗೆ ಹೇಳುತ್ತಿದ್ದರು. ಎಲ್ಲಿದ್ದಾನೋ ಏನೋ, ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ, ಸಂಬಂಧ ದೊಡ್ಡದು ಅನ್ನುತ್ತಿದ್ದರು. ಆಗೆಲ್ಲ ಶಿವರಾಮಯ್ಯ ಆಕಾಶ ನೋಡುತ್ತಾ ಕೂತು ಬಿಡುತ್ತಿದ್ದರು, ನೆಲ ನೋಡಿದರೆ ಎಲ್ಲಿ ಕಣ್ಣಿಂದ ಒಂದು ಹನಿ ಜಾರೀತೊ ಅನ್ನುವ ಭಯಕ್ಕೆಂಬಂತೆ ಅವರು ಆಕಾಶ ನೋಡುತ್ತಿದ್ದರು.

ಶಿವರಾಮಯ್ಯನವರನ್ನು ಜೀವನದ ನಶ್ವರತೆ ಕಾಡಲಾರಂಭಿಸಿದ್ದು ಆಗಲೇ. ತನ್ನ ಮಗ ಸತ್ತದ್ದೇ ಆ ಮನುಷ್ಯನಿಗೆ ಗೊತ್ತಿಲ್ಲ. ಮಗ ಮರಳುತ್ತಾನೆ ಅನ್ನುವ ಭರವಸೆಯಲ್ಲಿ ಅವನು ಬದುಕುತ್ತಿದ್ದಾನೆ. ಅಷ್ಟು ಭರವಸೆ ಅವನಿಗೆ ಸಾಕು. ಮಗ ಒಂದು ವೇಳೆ ಬದುಕಿದ್ದರೂ ವಾಪಸ್ಸು ಬರುತ್ತಿರಲಿಲ್ಲ. ಈಗ ಸತ್ತಿದ್ದರಿಂದ ವಾಪಸ್ಸು ಬರುತ್ತಿಲ್ಲ ಅಷ್ಟೇ. ಆದರೆ ತನ್ನ ಮಗ ಎಲ್ಲೋ ಇದ್ದಾನೆ ಅನ್ನುವ ನಂಬಿಕೆ ಅವನಲ್ಲಿ ವಿಚಿತ್ರ ಜೀವನೋತ್ಸಾಹ ಹುಟ್ಟುಹಾಕಿದೆ.

ತನ್ನ ಮಗನೂ ಅಷ್ಟೇ ತಾನೇ. ಈ ಅಪಾರ ಆಸ್ತಿಯನ್ನು ತನಗೇ ಬಿಟ್ಟು ಹೋಗಿದ್ದಾನೆ. ತೀರ ವೈಫಲ್ಯ ಕಾಡಿದರೆ ಊರಲ್ಲಿ ಆಸ್ತಿಯಿದೆ ಅನ್ನುವ ಭರವಸೆ ಅವನ ಬೆನ್ನಿಗಿದೆ. ಆದರೆ ಅಪ್ಪ ಇದ್ದಾರೆ ಅನ್ನುವ ನೆನಪೂ ಅವನಿಗೆ ಇದ್ದಂತಿಲ್ಲ. ಅವನೂ ತನ್ನ ಪಾಲಿಗೆ ಸತ್ತಂತೆಯೇ. ಮಗ ಬದುಕಿದ್ದಾನೆ ಅನ್ನುವುದು ಕೇವಲ ಸುದ್ದಿ ಮಾತ್ರ. ಅದಕ್ಕಿಂತ ಹೆಚ್ಚಿನ ಮಹತ್ವ ಅದಕ್ಕಿಲ್ಲ.

ಹೀಗೆ ಯೋಚಿಸುತ್ತಿದ್ದಂತೆ ಅವರನ್ನು ಅನಾಥಭಾವ ಕಾಡತೊಡಗಿತು. ಅಂಥದ್ದೇ ಅನಾಥಪ್ರಜ್ಞೆ ಚಂದ್ರಶೇಖರಯ್ಯನನ್ನೂ ಕಾಡುತ್ತದೆ ಅಂತ ಅವರಿಗೆ ಗೊತ್ತಿತ್ತು.ಹೀಗಾಗಿ ಬಿಡುವಿದ್ದಾಗೆಲ್ಲ ಹೋಗಿ ಚಂದ್ರಶೇಖರಯ್ಯನವರ ಜೊತೆ ಮಾತಾಡುತ್ತಿದ್ದರು. ಹಾಗೆ ಮಾತಾಡಲು ಅವರು ಹೋದ ಗುರುವಾರದಂದೇ ಚಂದ್ರಶೇಖರಯ್ಯ ಹಾಗೆ ವರ್ತಿಸಿದ್ದು.

*******

ಚಂದ್ರಹಾಸ ಸತ್ತ ಸುದ್ದಿ ಅದು ಹೇಗೋ ಚಂದ್ರಶೇಖರಯ್ಯನಿಗೆ ಗೊತ್ತಾಗಿಬಿಟ್ಟಿದೆ ಅನ್ನುವುದು ಶಿವರಾಮಯ್ಯನವರಿಗೆ ಗೊತ್ತಾಯಿತು. ಸುಳ್ಳು ಹೇಳಿದ್ದಕ್ಕೆ ಚಂದ್ರಶೇಖರಯ್ಯ ತರಾಟೆಗೆ ತಗೋತಾನೆ ಅಂತ ಖಾತ್ರಿಯಾಗಿ ಗೊತ್ತಿದ್ದ ಶಿವರಾಮಯ್ಯನಿಗೇ ಆಶ್ಚರ್ಯವಾಗುವಂತೆ ಚಂದ್ರಶೇಖರಯ್ಯ ಹೇಳಿದರು;

ಸತ್ತಿದ್ದು ನನ್ನ ಮಗ ನಿಜ. ಆದರೆ ಸಂಕಟ ಪಟ್ಟದ್ದು ನೀನು. ನೀನು ನನ್ನ ಪರವಾಗಿ ನನ್ನ ಮಗನಿಗಾಗಿ ಸಂಕಟಪಟ್ಟೆಯೋ ಅಥವಾ ನಿನ್ನ ಮಗನ ನೆನಪು ಬಂದು ನೋವು ಅನುಭವಿಸಿದೆಯೋ ನನಗೆ ಗೊತ್ತಿಲ್ಲ. ಒಂದು ವಯಸ್ಸು ದಾಟಿದ ನಂತರ ಸತ್ತವನು ನನ್ನ ಮಗನೋ ನಿನ್ನ ಮಗನೋ ಅನ್ನೋದು ಮುಖ್ಯ ಆಗುವುದಿಲ್ಲ. ನಮ್ಮಂಥ ಮುದುಕರ ಪಾಲಿಗೆ ನಮ್ಮ ಮಕ್ಕಳು ಎಂದೋ ಸತ್ತು ಹೋಗಿರುತ್ತಾರೆ. ಅಥವಾ ನಾವು ಅವರ ಪಾಲಿಗೆ ಸತ್ತಿರುತ್ತೇವೆ. ನಾವು ಸತ್ತರೆ ಅವರಿಗೆ ನಿರಾಳ, ಮಕ್ಕಳು ಸತ್ತರೆ ನಮಗೆ ಆತಂಕ. ಪರಸ್ಪರ ಒಬ್ಬರು ಇನ್ನೊಬ್ಬರ ಹಂಗಿನಲ್ಲೋ ಆಧಾರದಲ್ಲೋ ಇಲ್ಲದಿದ್ದರೂ ಸಂಕಟ.

ಇದನ್ನು ಯೋಚಿಸುತ್ತಿದ್ದಾಗ ಒಂದು ವಿಲಕ್ಪಣ ಸಂಗತಿ ಹೊಳೆಯಿತು. ನಾವು ಮಕ್ಕಳನ್ನು ನಮ್ಮ ಮತ್ತೊಂದು ಬಾಲ್ಯ, ಮತ್ತೊಂದು ಯೌವನ ಎಂಬಂತೆ ನೋಡುತ್ತಿರುತ್ತೇವೆ. ಅದೇ ಮಕ್ಕಳ ಪಾಲಿಗೆ ನಾವು ಮುಂದೆಂದೋ ಬರಬಹುದಾಗ ವೃದ್ಧಾಪ್ಯ ಮತ್ತು ಸಾವಿನ ಥರ ಕಾಣಿಸುತ್ತೇವೆ. ನಾವು ಬಾಲ್ಯಕ್ಕೆ ಹಂಬಲಿಸಿದ ಹಾಗೇ, ಅವರು ಸಾವಿನಿಂದ ವೃದ್ದಾಪ್ಯದಿಂದ ನೀಗಿಕೊಳ್ಳಲು ಹೆಣಗುತ್ತಾರೆ.

ನಾನೂ ಆ ವಯಸ್ಸಿನಲ್ಲಿ ಹಾಗೇ ಇದ್ದೆ. ಆದರೆ ಅಪ್ಪ ಸತ್ತ ತಕ್ಪಣ ಅವರ ವಯಸ್ಸು ಮತ್ತು ಆತಂಕ ನನ್ನ ತಲೆಯೊಳಗೆ ಬಂದು ಕೂತುಬಿಟ್ಟಿತು. ಅದನ್ನು ನಾನು ಕಳಚಿಕೊಂಡದ್ದು ನನ್ನ ಮಗನ ಸಾವಿನ ಮೂಲಕ.

******

ಚಂದ್ರಶೇಖರಯ್ಯ ಏನು ಹೇಳುತ್ತಿದ್ದಾರೆ ಅನ್ನುವುದು ಶಿವರಾಮಯ್ಯನಿಗೆ ಅರ್ಥವೇ ಆಗಲಿಲ್ಲ. ಅರ್ಥ ಆಗಲಿಲ್ಲ ಯಾಕೆಂದರೆ ಅವರು ಮಾತಾಡುವುದೇನನ್ನೂ ಇವರು ಕೇಳಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅಂತ ಇವರು ಮಾತಾಡುತ್ತಿದ್ದರು. ತನಗಲ್ಲ ಅಂತ ಅವರು ಕೂತಿದ್ದರು.

ಮಾತು ಇಬ್ಬರ ಮಧ್ಯೆ ಸಾಯುತ್ತಾ ಬದುಕುತ್ತಾ ಸಾಯುತ್ತಾ ಬದುಕುತ್ತಾ ಸಾಯುತ್ತಾ ಬದುಕುತ್ತಾ...


(ನನ್ನ ಜೋಗಿಕತೆಗಳು ಸಂಕಲನದ ಚಂದ್ರಹಾಸ, 32 ಕತೆ ಇದು. ಇದನ್ನೇ ಲಿಂಗದೇವರು ಸಿನಿಮಾ ಮಾಡಿದ್ದು. ನಾನು ಮತ್ತು ಉದಯ ಮರಕಿಣಿ ಇದನ್ನು ಚಿತ್ರಕತೆ ಮಾಡಿ ಸಂಭಾಷಣೆ ಬರೆದೆವು. ಕಾಡ ಬೆಳದಿಂಗಳು ಈ ವಾರ ಓಷಿಯಾನೋ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಈ ಸಂದರ್ಭದಲ್ಲಿ ಈ ಕತೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ)

Saturday, July 21, 2007

ಒಂದು ಪುಟ್ಟ ಸಂಭ್ರಮ

(ಹಿರಿಯ ನಟ ಲೋಕನಾಥ್ ಮತ್ತು ದತ್ತಣ್ಣ- ಕಾಡಬೆಳದಿಂಗಳು ಚಿತ್ರಕ್ಕೆ ಜೀವಂತಿಕೆ ತುಂಬಿದವರು)
(ನನ್ನ ಮೆಚ್ಚಿನ ನಟಿ ಅನನ್ಯಾ ಕಾಸರವಳ್ಳಿ ಮತ್ತು ಭಾರ್ಗವಿ ನಾರಾಯಣ್)
(ಕೆ.ಎಂ.ವೀರೇಶ್ ಮತ್ತು ಉದಯ ಮರಕಿಣಿ ನಡುವೆ)

(ಲೋಕನಾಥ್ ಅಂಕಲ್ ಮತ್ತು ದತ್ತಣ್ಣ)

(ಒಂದು ಗಾಢವಿಷಾದದ ಗಳಿಗೆಯಲ್ಲಿ ದತ್ತಣ್ಣ)

ಆತ್ಮೀಯರೇ,
ಒಂದು ಸಂತೋಷದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಬರೆದ ಕತೆ -ಚಂದ್ರಹಾಸ,32- ಆಧರಿಸಿದ ಕಾಡ ಬೆಳದಿಂಗಳು ಚಿತ್ರಕ್ಕೆ ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕೊಟ್ಟಿದೆ. ನಾನು ಮತ್ತು ಗೆಳೆಯ ಉದಯ ಮರಕಿಣಿ ಸೇರಿ ಚಿತ್ರಕತೆ ಸಂಭಾಷಣೆ ಬರೆದ ಚಿತ್ರ ಇದು. ಇದನ್ನು ನಿರ್ದೇಶಿಸಿದವರು ಗೆಳೆಯ ಲಿಂಗದೇವರು. ಹಾಗೇ ಈ ಚಿತ್ರಕ್ಕೆ ಮತ್ತೊಬ್ಬ ಮಿತ್ರ ಎಚ್ ಎಂ ರಾಮಚಂದ್ರ ಛಾಯಾಗ್ರಹಣ ನೀಡಿದ್ದಾರೆ. ಗೆಳೆಯರಾದ ಕೆಎಂ ವೀರೇಶ್ ಮತ್ತು ಇತರರು ಸೇರಿ ಇದನ್ನು ನಿರ್ಮಿಸಿದ್ದೇವೆ. ದೈನಿಕದ ಏಕತಾನತೆಯ ನಡುವೆ ನಮ್ಮದೇ ಖುಷಿಗೆಂದು ನಾವು ತೊಡಗಿಸಿಕೊಂಡ ಸಿನಿಮಾ ಇದು. ಇದನ್ನು ಪ್ರಶಸ್ತಿ ಆಯ್ಕೆ ಸಮಿತಿ ಗುರುತಿಸಿದ್ದು ಖುಷಿ ಕೊಟ್ಟಿದೆ.
ಹಾಗೇ ನನಗೆ ವೈಯಕ್ತಿಕವಾಗಿ ಅತ್ಯುತ್ತಮ ಕತೆ ಪ್ರಶಸ್ತಿ ಬಂದಿದೆ. ಈ ಎರಡೂ ಸಂಭ್ರಮಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ಖುಷಿಯಾಗುತ್ತಿದೆ.
ನಾನಿಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಾಗಿದ್ದು ಗೆಳೆಯ ರವಿ ಬೆಳಗೆರೆ ಅವರನ್ನು. ಈ ಕತೆ ಬರೆಯುವ ಒತ್ತಾಯ ತಂದವರೇ ಅವರು. ಅವರ ಪ್ರೀತಿ ಮತ್ತು ಒತ್ತಾಯ ಇಲ್ಲದೇ ಹೋಗಿದ್ದರೆ ನಾನಿದನ್ನಷ್ಟೇ ಅಲ್ಲ, ನನ್ನ ಕಥಾಸಂಕಲನದ ಅನೇಕ ಕತೆಗಳನ್ನು ಬರೆಯುತ್ತಲೇ ಇರಲಿಲ್ಲ.
-ಜೋಗಿ


Monday, July 16, 2007

ಕೇಳಿರಿ.... ಕೇಳಿರಿ...

ಗೆಳೆಯರೇ,

ಕನ್ನಡದ ಕವಿತೆ, ಕಥಾಸಂಕಲನ, ಕಾದಂಬರಿ. ಪ್ರಬಂಧ ಸಂಕಲನಗಳನ್ನು ಪರಿಚಯಿಸುವ, ಒಳಗೊಳ್ಳುವ, ಆಪ್ತವಾಗಿಸುವ ಉದ್ದೇಶದಿಂದ ಓದು ಜನಮೇಜಯ ಎಂಬ ಹೊಸ ಬ್ಲಾಗ್ ಒಂದನ್ನು ಆರಂಭಿಸಲಾಗಿದೆ. ಇದರಲ್ಲಿ ಇತ್ತೀಚೆಗೆ ಬಂದ ಸಂಕಲನಗಳ ಬಗ್ಗೆ, ಹಳೆಯ ಸಂಕಲನಗಳ ಬಗ್ಗೆ, ಸಹಲೇಖಕರು ಬರೆಯಬಹುದು. ಇದೊಂದು ಒಳ್ಳೆಯ ಚರ್ಚೆಗೆ ವೇದಿಕೆ ಆದರಂತೂ ಸಂತೋಷ.
ಈ ಬ್ಲಾಗ್ ವಿಳಾಸ- http://kannadabooks.blogspot.com/
ಇದರ ಮೊದಲ ಲೇಖನ ವಿಕ್ರಮ್ ಹತ್ವಾರ್ ಬರೆದಿದ್ದಾರೆ.
ದಯವಿಟ್ಟು ಓದಿ.

-ಜೋಗಿ

Sunday, July 15, 2007

ತಾಯೆ ಬಾರ, ಮೊಗವ ತೋರ, ಕನ್ನ­ಡಿ­ಗರ ಮಾತೆಯೆ!


ಬಣ್ಣದ ತಗ­ಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿ­ಗಮ ಪದ­ನಿಸ ಊದಿ­ದನು
ಸನಿ­ದಪ ಮಗ­ರಿಸ ಊದಿ­ದನು

ಇದನ್ನು ನಾಲ್ಕೈದು ರಾಗ­ಗ­ಳಲ್ಲಿ ಹಾಡಿ ತೋರಿಸಿ ಅವರು ಕೇಳಿ­ದರು; ಹ್ಯಾಗಿದೆ ಹಾಡು? ಎಷ್ಟೊಂದು ಚೆನ್ನಾ­ಗಿ­ದೆ­ಯ­ಲ್ಲವೇ? ಆದರೂ ನಮ್ಮ ಹುಡು­ಗ­ರಿಗೆ ಇದು ಬೇಡ. ಅವರು ಬಾಯಿ­ತೆ­ರೆ­ದರೆ ಹಾಡು­ವುದು ಇಂಗ್ಲಿಷ್ ರೈಮು­ಗ­ಳನ್ನೇ. ಜಾನಿ ಜಾನಿ ಯೆಸ್ ಪಪ್ಪಾ... ಈಟಿಂಗ್ ಶುಗರ್ ನೋ ಪಪ್ಪಾ.. ಅದ­ಕ್ಕೊಂದು ಅರ್ಥ­ವಾ­ದರೂ ಇದೆಯಾ? ಅದ­ಕ್ಕಿಂತ ನಮ್ಮ `ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?' ಹಾಡನ್ನು ಅದೇ ರಾಗ­ದಲ್ಲಿ ಹಾಡೋ­ಕ್ಕಾ­ಗ­ಲ್ಲವಾ? ಯಾಕೆ ಇಂಗ್ಲಿಷ್ ಹಾಡೇ ಬೇಕು?
ಉತ್ತ­ರಿ­ಸು­ವುದು ಕಷ್ಟ. ಮಕ್ಕ­ಳಿಗೆ ಇಂಗ್ಲಿಶ್ ಹಾಡೇ ಯಾಕೆ ಇಷ್ಟ­ವಾ­ಗು­ತ್ತದೆ. ಅವ­ರಿ­ಗೇನೂ ಭಾಷೆಯ ಬಗ್ಗೆ ಮೇಲು ಕೀಳು ಭಾವನೆ ಇರು­ವು­ದಕ್ಕೆ ಸಾಧ್ಯ­ವಿ­ಲ್ಲ­ವಲ್ಲ. ಒಂದು ಇಂಗ್ಲಿಶ್ ಹಾಡನ್ನೂ ಒಂದು ಕನ್ನಡ ಹಾಡನ್ನೂ ಒಟ್ಟಿಗೇ ಕಲಿ­ಸಿ­ದರೆ ಮಗು ಯಾಕೆ ಇಂಗ್ಲಿಶ್ ಹಾಡನ್ನೇ ಬೇಗ ಕಲಿ­ತು­ಬಿ­ಡು­ತ್ತದೆ?
ಉತ್ತ­ರಿ­ಸು­ವುದು ಇನ್ನೂ ಕಷ್ಟ. ಯೋಚಿ­ಸಿ­ದಾಗ ಅನೇ­ಕಾ­ನೇಕ ಕಾರ­ಣ­ಗಳು ಹೊಳೆ­ಯುತ್ತಾ ಹೋದವು. ಬಣ್ಣದ ತಗ­ಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಎಂದು ಈಗಿನ ಮಗು ಯಾಕೆ ಹಾಡ­ಬೇಕು? ಆ ಮಗು ಯಾವ­ತ್ತಾ­ದರೂ ಬಣ್ಣದ ತಗ­ಡಿನ ತುತ್ತೂ­ರಿ­ಯನ್ನು ನೋಡಿ­ರೋ­ದಕ್ಕೆ ಸಾಧ್ಯವೇ? ತಾನು ನೋಡದೇ ಇರುವ ತುತ್ತೂ­ರಿಯ ಬಗ್ಗೆ ಅದಕ್ಕೆ ಯಾವ ಪ್ರೀತಿ ಇರ­ಲಿಕ್ಕೆ ಸಾಧ್ಯ?
ತುತ್ತೂ­ರಿ­ಯೂ­ದುತ ಕೊಳದ ಬಳಿ, ಕಸ್ತೂರಿ ನಡೆ­ದನು ಸಂಜೆ­ಯಲಿ ಎಂಬ ಸಾಲು­ಗಳು ಇವತ್ತು ಯಾವ ಮಗು­ವಿ­ಗಾ­ದರೂ ಅನು­ಭ­ವಕ್ಕೆ ಬರೋ­ದಕ್ಕೆ ಸಾಧ್ಯವೇ? ಬೆಂಗ­ಳೂ­ರಿ­ನಂಥ ನಗ­ರ­ದಲ್ಲಿ ಸಂಜೆ­ಯೆ­ಲ್ಲಿದೆ? ಕೊಳ­ವೆ­ಲ್ಲಿದೆ? ಇದ್ದರೂ ಕೊಳದ ಬಳಿಗೆ ಹೋಗು­ವು­ದಕ್ಕೆ ಕಸ್ತೂರಿ ಕಂದ­ಮ್ಮ­ಗ­ಳಿಗೆ ಪುರು­ಸೊ­ತ್ತೆ­ಲ್ಲಿದೆ?
ನೋಡುತ್ತಾ ಹೋದರೆ ನಮ್ಮ ಬಹ­ಳಷ್ಟು ಮಕ್ಕಳ ಗೀತೆ­ಗಳು ಹೀಗೇ ಸವ­ಕ­ಲಾ­ಗಿವೆ ಅನ್ನಿ­ಸಿತು. ಕೆಲವು ಉದಾ­ಹ­ರ­ಣೆ­ಗ­ಳನ್ನು ನೋಡೋಣ;
ರೊಟ್ಟಿ ಅಂಗಡಿ ಕಿಟ್ಟಪ್ಪ!
ನಂಗೊಂದು ರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಬತ್ತು ಕಾಸಿಗೆ ಕಟ್ಟಪ್ಪ!

ಈಗ ರೊಟ್ಟಿ ಅಂಗಡಿ ಎಲ್ಲಿದೆ? ಅಲ್ಲಿ ಕಿಟ್ಟ­ಪ್ಪ­ನೆ­ಲ್ಲಿ­ದ್ದಾನೆ? ಈಗಿ­ರು­ವುದು ರೋಟಿ ಘರ್. ಅಲ್ಲಿ ರೊಟ್ಟಿ­ಯನ್ನು ತಟ್ಟು­ವು­ದಿಲ್ಲ. ಒಂಬತ್ತು ಕಾಸು ಎಂದರೆ ಕಿಟ್ಟ­ಪ್ಪ­ನಿಗೆ ಅರ್ಥವೇ ಆಗು­ವು­ದಿಲ್ಲ. ಇನ್ನು ಇದನ್ನು ರಾಗ­ವಾಗಿ ಹಾಡುವ ಪುಟ್ಟ­ಪ್ಪ­ನಿಗೆ ಎಲ್ಲಿಂದ ಅರ್ಥ­ವಾ­ಗ­ಬೇಕು?

ಗಂಟೆಯ ನೆಂಟನೆ ಓ ಗಡಿ­ಯಾರ
ಬೆಳ್ಳಿಯ ಬಣ್ಣದ ಗೋಳಾ­ಕಾರ
ಕಿವಿ­ಯನು ಹಿಂಡಲು ನಿನ­ಗದು ಕೂಳು
ಟಿಕ್ ಟಿಕ್ ಗೆಳೆಯಾ.. ಟಿಕ್ ಟಿಕ್ ಟಿಕ್

ಈಗಂತೂ ಕಿವಿ­ಯನು ಹಿಂಡುವ ಗಡಿ­ಯಾ­ರ­ಗಳೇ ಇಲ್ಲ. ಅವು ಟಿಕ್ ಟಿಕ್ ಸದ್ದು ಮಾಡು­ವುದೂ ಇಲ್ಲ. ಹಾಗೇ ಅಜ್ಜನ ಕೋಲಿದು ನನ್ನಯ ಕುದುರೆ ಎಂದು ಹಾಡು­ವು­ದಕ್ಕೆ ಮನೆ­ಯಲ್ಲಿ ಅಜ್ಜನೇ ಇರು­ವು­ದಿಲ್ಲ. ಅಜ್ಜ­ನಿ­ದ್ದರೂ ಅವನು ಕೋಲೂರಿ ನಡೆ­ಯು­ವು­ದಿಲ್ಲ.
ಕುವೆಂಪು ಅಂತೂ ಕನ್ನ­ಡ­ದಲ್ಲಿ ಹರಿ ಬರೆ­ಯು­ವನು; ಕನ್ನ­ಡ­ದಲಿ ಹರ ತಿರಿ­ಯು­ವನು ಎಂದು ಕನ್ನ­ಡದ ಕುರಿ­ತೊಂದು ಪದ್ಯ ಬರೆ­ದರು. ಇವ­ತ್ತಿನ ಮಕ್ಕಳು ಕನ್ನ­ಡವೂ ಬೇಡ, ತಿರಿದು ತಿನ್ನುವ ಸ್ಥಿತಿಯೂ ಬೇಡ ಎಂದು ಇಂಗ್ಲಿಶ್ ಹಾಡಿಗೆ ಮೊರೆ ಹೋಗಿ­ರ­ಲಿಕ್ಕೂ ಸಾಕು.
ಹಾಗಂತ ಇಂಗ್ಲಿಶ್ ನರ್ಸರಿ ರೈಮು­ಗಳ ಪುಸ್ತಕ ತೆಗೆದು ನೋಡಿ­ದರೆ ಅವೇನೂ ಅಷ್ಟು ಖುಷಿ­ಕೊ­ಡು­ವಂತೆ ಏನಿಲ್ಲ. ಹಾಟ್ ಕ್ರಾಸ್ ಬನ್ಸ್.. ಹಾಟ್ ಕ್ರಾಸ್ ಬನ್ಸ್... ಎಂಬ ಹಾಡು ರೊಟ್ಟಿ ಅಂಗಡಿ ಕಿಟ್ಟ­ಪ್ಪ­ನಿ­ಗಿಂತ ಉತ್ತ­ಮ­ವಾ­ದ­ದ್ದೇ­ನಲ್ಲ. ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಗಿಂತ ಮಿನು­ಗೆಲೆ ಮಿನು­ಗೆಲೆ ನಕ್ಪತ್ರ ಎಂಬ ಸಾಲೇ ಆಪ್ತ ಎನಿ­ಸು­ತ್ತದೆ. ಜಾಕ್ ಅಂಡ್ ಜಿಲ್ ವೆಂಟ್ ಅಪ್ ದಿ ಹಿಲ್ ಎಂಬು­ದ­ಕ್ಕಿಂತ ತಿಂಗಳ ಬೆಳ­ಕಿನ ಇರು­ಳಿ­ನೊ­ಳಂ­ದು ಅಮ್ಮನು ಕೆಲ­ಸ­ದೊ­ಳಿ­ರು­ವುದ ಕಂಡು ಗೋಪಿಯೂ ಪುಟ್ಟೂ ಹೊರ­ಗಡೆ ಬಂದು ಬಾವಿಗೆ ಇಣು­ಕಿ­ದ­ರು­ ಎಂಬ ಕಲ್ಪ­ನೆಯೇ ರೋಚ­ಕ­ವಾ­ಗಿದೆ.
ಹಾಗಿ­ದ್ದರೂ ಇಂಗ್ಲಿಶ್ ಹಾಡೇ ಯಾಕೆ ಜನ­ಪ್ರಿಯ.
ಉತ್ತ­ರಿ­ಸು­ವುದು ಕಷ್ಟ.
-2-
ಒಂದು ಭಾಷೆ ಆಡುತ್ತಾ ಆಡುತ್ತಾ ಸವ­ಕ­ಲಾ­ಗು­ತ್ತದೆ. ಆ ಭಾಷೆಯ ಮೂಲಕ ಹೊಸ­ತೇ­ನನ್ನೂ ಹೇಳು­ವು­ದಕ್ಕೆ ಸಾಧ್ಯ­ವಿಲ್ಲ ಎನ್ನಿ­ಸು­ತ್ತದೆ. ಹೊಸ­ದನ್ನು ಹೇಳಿ­ದರೂ ಹಳೆ­ಯ­ದ­ರಂತೆ ಕೇಳಿ­ಸುವ ಜಡತ್ವ ಒಂದು ಭಾಷೆ­ಯನ್ನು ಒಂದು ಹಂತ­ದಲ್ಲಿ ಅಮ­ರಿ­ಕೊ­ಳ್ಳು­ತ್ತದೆ. ಆಗ ಆ ಭಾಷೆಯೇ ತನ್ನನ್ನು ತಿದ್ದಿ ತೀಡಿ­ಕೊಂಡು ಕಾಯ­ಕಲ್ಪ ಮಾಡಿ­ಕೊ­ಳ್ಳ­ಬೇ­ಕಾ­ಗು­ತ್ತದೆ.
ಆದರೆ ಆ ಶಕ್ತಿ ಪ್ರಾದೇ­ಶಕ ಭಾಷೆ­ಗ­ಳಿಗೆ ಅಷ್ಟು ಸುಲ­ಭ­ವಾಗಿ ದೊರ­ಕು­ವು­ದಿಲ್ಲ. ಅದಕ್ಕೆ ಕಾರಣ ಅದನ್ನು ಬಲ್ಲ­ವರ ಸಂಖ್ಯಾ­ಮಿತಿ. ಸಂಸ್ಕೃತ ಮೃತ­ಭಾ­ಷೆ­ಯಾ­ದದ್ದು ಇದೇ ಕಾರ­ಣಕ್ಕೆ. ತನ್ನ ವಿಪ­ರೀತ ಮಡಿ­ವಂ­ತಿ­ಕೆ­ಯಿಂ­ದಾಗಿ ಸಂಸ್ಕೃತ ಮತ್ತು ಕನ್ನಡ ಪದ­ಗಳ ಸಂಧಿ ಕೂಡ ಅಕ್ಪಮ್ಯ ಅಪ­ರಾ­ಧ­ವಾ­ಗಿತ್ತು. ಸಂಸ್ಕೃತ ಭಾಷೆ ತನ್ನನ್ನು ಒಂದಿಷ್ಟೂ ಬಿಟ್ಟು ಕೊಡಲು ಒಪ್ಪ­ಲಿಲ್ಲ. ಹೀಗಾಗಿ ಅದು ಕ್ರಮೇಣ ಬಳ­ಕೆ­ಯಿಂ­ದಲೇ ಮಾಯ­ವಾ­ಯಿತು. ಲ್ಯಾಟಿನ್ ಭಾಷೆಗೆ ಆದದ್ದೂ ಅದೇ. ಆದರೆ ಕನ್ನ­ಡವು ಸಂಸ್ಕೃ­ತ­ದಿಂದ ಪದ­ಗ­ಳನ್ನು ಕಡ ತಂದು­ಕೊಂ­ಡಂತೆ ಇಂಗ್ಲಿಶ್ ಲ್ಯಾಟಿನ್ ಪದ­ಗ­ಳನ್ನು ಹೇಗೆಂ­ದರೆ ಹಾಗೆ ತೆಗೆ­ದು­ಕೊಂ­ಡಿತು. ಹೇಗೆ ಬೇಕೋ ಹಾಗೆ ಬಳ­ಸಿ­ಕೊಂ­ಡಿತು. ಇವತ್ತು ಇಂಗ್ಲಿ­ಷಿಗೆ ಮಡಿ­ವಂ­ತಿ­ಕೆಯೇ ಇಲ್ಲ. ಅದು ಕಂಗ್ಲಿಶ್ ಎಂಬ ಪದ­ವನ್ನು ಯಾವ ಮುಜು­ಗ­ರವೂ ಇಲ್ಲದೆ ಸ್ವೀಕ­ರಿ­ಸ­ಬ­ಲ್ಲದು. ಬಂಗಾ­ಲಿ­ಗಳು ಮಾತಾ­ಡುವ ಇಂಗ್ಲಿ­ಷನ್ನು ಬಿಂಗ್ಲಿಶ್ ಎಂದು ಕರೆ­ಯ­ಬ­ಲ್ಲದು.
ಆ ಮಟ್ಟಿ­ಗಿನ ಔದಾರ್ಯ ಕನ್ನ­ಡಕ್ಕೆ ಸಾಧ್ಯ­ವಾ­ಗಲೇ ಇಲ್ಲ. ಇವತ್ತು ಹಿಂದಿ­ಯಲ್ಲಿ ಬೆರೆ­ತಷ್ಟು ಸಲೀ­ಸಾಗಿ ಕನ್ನ­ಡದ ಜೊತೆ ಇಂಗ್ಲಿಶ್ ಬೆರೆ­ತರೆ ಕನ್ನ­ಡಿ­ಗರು ಸಂಕಟ ಪಡು­ತ್ತಾರೆ. ಸಿಂಪ್ಲಿ ಟಾಕಮಾಡಿ ಅನ್ನುವ ಬೆರಕಿ ಕನ್ನ­ಡ­ವನ್ನು ಬೈಯು­ತ್ತಾರೆ. ಆದರೆ ಸಿಂಪ್ಲಿ ಟಾಕಮಾಡಿ ಅಂತ ಮಾತಾ­ಡು­ವುದೂ ಕನ್ನ­ಡವೇ ಅನ್ನು­ವು­ದಾ­ಗಲೀ, ಅದನ್ನು ನಿರಾ­ಕ­ರಿ­ಸಿ­ದರೆ ತಿರ­ಸ್ಕ­ರಿ­ಸಿ­ದರೆ ಅವರು ಪೂರ್ತಿ ಇಂಗ್ಲಿ­್ಗೆ ಮೊರೆ­ಹೋ­ಗು­ತ್ತಾರೆ ಎನ್ನು­ವು­ದಾ­ಗಲೀ ನಮಗೆ ಹೊಳೆ­ಯು­ವುದೇ ಇಲ್ಲ.
ಇದಕ್ಕೆ ಬಹು­ತೇಕ ನಮ್ಮ ಪತ್ರಿ­ಕೆ­ಗಳ ಭಾಷೆ ಕಾರಣ. ಇಡೀ ಕನ್ನ­ಡ­ನಾ­ಡಲ್ಲಿ ಯಾರೂ ಕೂಡ ರಸ್ತೆ ಅಪ­ಘಾ­ತ­ದಲ್ಲಿ ಮೂವರು ಸ್ಥಳ­ದಲ್ಲೇ ತೀರಿ­ಕೊಂ­ಡರು ಎನ್ನು­ವು­ದಿಲ್ಲ. ರೋಡ್ ಆಕ್ಸಿ­ಡೆಂ­ಟಲ್ಲಿ ಮೂರು ಜನ ಸತ್ತ­ರಂತೆ ಅಂತಾರೆ. ಆದರೆ ಪತ್ರಿಕೆ ಇವ­ತ್ತಿಗೂ ರಸ್ತೆ ಅಪ­ಘಾತ ಎಂದೇ ಬಳ­ಸು­ತ್ತದೆ. ಆಕ್ಸಿ­ಡೆಂ­ಟಲ್ಲಿ ಅನ್ನು­ವು­ದನ್ನು ಕೇಳುತ್ತಾ ಬೆಳೆದ ಮಗು ಪತ್ರಿಕೆ ಓದಲು ಆರಂ­ಭಿ­ಸಿ­ದಾಗ ಅದಕ್ಕೆ ಇಂಗ್ಲಿಶ್ ಪತ್ರಿ­ಕೆಯೇ ಹೆಚ್ಚು ಸುಲಭ ಮತ್ತು ಸಲೀ­ಸಾಗಿ ಕಾಣು­ತ್ತ­ದೆಯೇ ಹೊರತು ಕನ್ನಡ ಪತ್ರಿಕೆ ಅಲ್ಲ.
ಇಂಥ ಅನೇಕ ಉದಾ­ಹ­ರಣೆ ಕೊಡ­ಬ­ಹುದು. ಎಲ್ಲರೂ ನಾಳೆ ಕರೆಂ­ಟಿ­ಲ್ಲ­ವಂತೆ ಎಂದು ಮಾತಾ­ಡಿ­ಕೊ­ಳ್ಳು­ತ್ತಿ­ದ್ದರೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತ ಎಂದು ಪತ್ರಿ­ಕೆ­ಗಳು ಬರೆ­ಯು­ತ್ತವೆ.ರೋಡ್ ರಿಪೇರಿ ನಡೀ­ತಿದೆ ಅನ್ನು­ವು­ದನ್ನು ರಸ್ತೆ ದುರ­ಸ್ತಿ­ಕಾರ್ಯ ಎಂದು ಬರೆ­ದರೆ ಹೊಸ­ಗ­ನ್ನ­ಡದ ಹುಡು­ಗ­ರಿಗೆ ಹೇಗೆ ಅರ್ಥ­ವಾ­ಗ­ಬೇಕು?
ಅದು ಅರ್ಥ­ವಾ­ಗ­ಬೇ­ಕಾ­ದರೆ ಇಡೀ ನಾಡಿನ ಭಾಷೆಯೇ ಬದ­ಲಾ­ಗ­ಬೇಕು. ಹಾಗಾ­ಗು­ವು­ದಂತೂ ಸಾಧ್ಯ­ವಿಲ್ಲ. ಕನಿಷ್ಠ ಹಳ್ಳಿ­ಗ­ಳ­ಲ್ಲಾ­ದರೂ ಅದು ಸಾಧ್ಯ ಎನ್ನು­ವುದು ಕೂಡ ಇವತ್ತು ಭ್ರಮೆ. ಯಾಕೆಂ­ದರೆ ಎಲ್ಲಾ ಟೀವಿ ಚಾನ­ಲ್ಲು­ಗ­ಳಲ್ಲಿ ಪ್ರಸಾ­ರ­ವಾ­ಗುವ ಧಾರಾ­ವಾ­ಹಿ­ಗ­ಳದ್ದು ಬೆಂಗ­ಳೂ­ರಿನ ಭಾಷೆಯೇ. ಎಲ್ಲರೂ ಸೀರಿ­ಯ­ಲ್ಲು­ಗ­ಳನ್ನು ನೋಡು­ತ್ತಿ­ದ್ದರೆ ಪತ್ರಿ­ಕೆ­ಗ­ಳಲ್ಲಿ ಆವತ್ತು ಪ್ರಸಾ­ರ­ವಾ­ಗುವ ಧಾರಾ­ವಾ­ಹಿ­ಗಳ ಪ್ರಸ್ತಾಪ ಇರು­ತ್ತದೆ. ಧಾರಾ­ವಾ­ಹಿಯೇ ಸೀರಿ­ಯಲ್ಲು ಅನ್ನು­ವುದು ಮಗು­ವಿಗೆ ಹೇಗೆ ಅರ್ಥ­ವಾ­ಗ­ಬೇಕು?
ಇಂಥದ್ದೇ ಇನ್ನೊಂದು ಹಠ­ಮಾ­ರಿ­ತನ ಕನ್ನಡ ಅಂಕಿ­ಗ­ಳಿಗೆ ಸಂಬಂ­ಧಿ­ಸಿದ್ದು. 639 ಎಂಬು­ದನ್ನು ಕನ್ನಡ ಅಂಕಿ­ಯಲ್ಲಿ ಬರೆದ ಪತ್ರ ಬಂದಾಗ ಅದ­ಕ್ಕಾಗಿ ಕೊರಿ­ಯ್ ಹುಡುಗ ಪಡುವ ಕಷ್ಟ ಅವ­ನಿಗೇ ಗೊತ್ತು. ಆತ ಒಂದು ದಿನ­ವಿಡೀ ಬೀದಿ ಬೀದಿ ಅಲೆದು ಆ ಸಂಖ್ಯೆ ಎಷ್ಟೆಂದು ತಿಳಿ­ಯದೇ ಒದ್ದಾಡಿ ಹಲ­ವಾರು ಮಂದಿ­ಯಿಂದ ಅದನ್ನು ಇಂಗ್ಲಿಶ್ ಅಂಕಿಗೆ ಅನು­ವಾ­ದಿ­ಸಿ­ಕೊಂಡು ಸಂಕ­ಟ­ಪ­ಟ್ಟಿದ್ದ.
ಇವೆಲ್ಲ ಕನ್ನ­ಡದ ಕಷ್ಟ­ಗಳು. ಕನ್ನಡ ಸಿನಿ­ಮಾ­ಗ­ಳಂತೆ ಕನ್ನಡ ಸಾಹಿತ್ಯ ಕೂಡ ಕಷ್ಟ­ದ­ಲ್ಲಿದೆ. ಕಾರಣ ತುಂಬ ಸರ­ಳ­ವಾ­ಗಿದೆ. ಇವತ್ತು ನಾವು ನೋಡುವ ಜಾಹೀ­ರಾ­ತು­ಗ­ಳಲ್ಲಿ ಬರುವ ಮಾಡೆ­ಲ್­ಗ­ಳೆಲ್ಲ ಹಿಂದಿ ಸಿನಿಮಾ ನಟ­ನ­ಟಿ­ಯರು. ನಮಗೆ ಲಕಹಾಕಿ­ಕೊಂಡು ಸ್ನಾನ ಮಾಡಿ ಎಂದು ಉಪ­ದೇ­ಶಿ­ಸು­ವುದು ಐಶ್ವರ್ಯ ರೈ ಅಂದ ಮೇಲೆ ನಾವು ಅವಳ ಸಿನಿ­ಮಾ­ವನ್ನೇ ನೋಡು­ವು­ದಕ್ಕೆ ಹೋಗು­ತ್ತೇವೆ. ನಮ್ಮ ಕನ್ನ­ಡದ ನಟ­ನ­ಟಿ­ಯರು ಯಾವ ಜಾಹೀ­ರಾ­ತ­ಲ್ಲಾ­ದರೂ ಕಾಣಿ­ಸಿ­ಕೊಂ­ಡ­ದ್ದನ್ನು ನೀವು ನೋಡಿ­ದ್ದೀರಾ? `ಆ­ರೋಕ್ಯ' ಹಾಲು ಬಿಟ್ಟರೆ!
ಹಾಗೆ ಟೀವಿ ಧಾರಾ­ವಾ­ಹಿ­ಗ­ಳಲ್ಲಿ ಯಾವ ಪಾತ್ರ­ವಾ­ದರೂ ಕನ್ನ­ಡದ ಕಾದಂ­ಬ­ರಿ­ಗ­ಳನ್ನೋ ಪತ್ರಿ­ಕೆ­ಗ­ಳನ್ನೋ ಓದು­ವು­ದನ್ನು ನೋಡಿ­ದ್ದೀರಾ? ಯಾವು­ದಾ­ದರೂ ಟೀವಿ ಸೀರಿ­ಯ­ಲ್ಲಿನ ಪಾತ್ರ ಎಸ್ ಎಲ್ ಭೆರ­ಪ್ಪ­ನ­ವರ `ಮಂದ್ರ' ಓದಿದೆ ಎಂದಿದ್ದು ನಿಮಗೆ ಗೊತ್ತಾ? ಅವರು ಓದು­ವುದು ಸಿಡ್ನಿ ಶೆಲ್ಡ­ನ್­ನನ್ನೋ, ಹ್ಯಾರಿ ಪಾಟ­ರನ್ನೋ. ಅಂದ ಮೇಲೆ ಅದನ್ನು ನೋಡು­ವ­ವರು ಯಾಕೆ `ಮಂದ್ರ' ಓದು­ತ್ತಾರೆ?
-3-
ಇವೆಲ್ಲ ಪ್ರಶ್ನೆ­ಗ­ಳಲ್ಲ. ಇವ­ತ್ತಿನ ಸ್ಥಿತಿ­ಯನ್ನು ವಿವ­ರಿ­ಸು­ವು­ದಕ್ಕೆ ಇಷ್ಟೆಲ್ಲ ಹೇಳ­ಬೇ­ಕಾ­ಯಿತು. ಕನ್ನ­ಡದ ಓದು­ಗರು ಕಡಿ­ಮೆ­ಯಾ­ಗಿ­ದ್ದಾರೆ. ಕಾವ್ಯ­ವನ್ನೂ ಸಣ್ಣ­ಕ­ತೆ­ಯನ್ನೂ ಕಾದಂ­ಬ­ರಿ­ಗ­ಳನ್ನೂ ಅವರು ಓದು­ತ್ತಿಲ್ಲ ಎಂಬ ಚರ್ಚೆ ಇತ್ತೀ­ಚೆಗೆ ಮುನ್ನೂರ ಹದಿ­ನಾ­ರನೇ ಸಾರಿ ನಡೆ­ಯಿತು. ಪುಸ್ತ­ಕ­ಗಳ ಬೆಲೆ ಗಗ­ನ­ಕ್ಕೇ­ರಿದೆ. ಹೀಗಾಗಿ ಕೊಂಡು ಓದು­ವ­ವ­ರಿಲ್ಲ ಎಂಬ ವಾದ­ವನ್ನು ಹಲವು ಲೇಖ­ಕರು ಮುಂದಿ­ಟ್ಟರು. ಅದೂ ಒಂದು ಅರ್ಥ­ದಲ್ಲಿ ನಿಜವೇ? ರಾಘ­ವೇಂದ್ರ ಪಾಟೀ­ಲರ 141 ಪುಟದ ಕಾದಂ­ಬ­ರಿಯ ಬೆಲೆ 120 ರುಪಾಯಿ.
ಹಾಗಂತ ಬೆಲೆ ಕಡಿಮೆ ಇಟ್ಟರೆ ಪುಸ್ತ­ಕ­ಗಳು ಖರ್ಚಾ­ಗಿ­ಬಿ­ಡು­ತ್ತವೆ ಅನ್ನು­ವುದೂ ಸರಿ­ಯಲ್ಲ. ಕುವೆಂಪು ಬರೆದ `ರಾ­ಮಾ­ಯಣ ದರ್ಶನಂ' ಅವೆನ್ಯೂ ರಸ್ತೆ­ಯಲ್ಲಿ ಹತ್ತು ರುಪಾ­ಯಿಗೆ ಸಿಗು­ತ್ತದೆ. ಕಾರಂ­ತರ ಮೂಕ­ಜ್ಜಿಯ ಕನ­ಸು­ಗಳು ಕಾದಂ­ಬ­ರಿಯ ಇಪ್ಪತ್ತೋ ಇಪ್ಪ­ತ್ತೈದೋ ಪ್ರತಿ­ಗಳು ಮಲ್ಲೇ­ಶ್ವ­ರಂನ ಸೆಕೆಂಡ್ ಹ್ಯಾಂಡ್ ಪುಸ್ತ­ಕ­ದಂ­ಗ­ಡಿ­ಯಲ್ಲಿ ನಾಲ್ಕಾರು ವರು­ಷ­ಗ­ಳಿಂದ ಬಿದ್ದಿದೆ. ಜನ ಎತ್ತಿ ನೋಡಿ ಆಘ್ರಾ­ಣಿಸಿ ಹಾಗೆ ಬಿಟ್ಟು ಹೋಗು­ತ್ತಾರೆ. ಐದು ರುಪಾ­ಯಿಗೆ ಕಾರಂ­ತರ ಜ್ಞಾನ­ಪೀಠ ಪ್ರಶಸ್ತಿ ವಿಜೇತ ಕೃತಿ ಸಿಗು­ತ್ತದೆ ಎಂಬ ಕಾರ­ಣ­ಕ್ಕಾ­ದರೂ ಅದನ್ನು ಮನೆಗೆ ಒಯ್ಯು­ವು­ದಿಲ್ಲ.
ಕಾರಣ ಇಷ್ಟೇ; ಸಹೃ­ದಯ ಓದುವ ವರ್ಗ ಮೂರು ಸೀಳಾ­ಗಿದೆ. ಹಿಂದೆ ಓದದೇ ಇದ್ದ­ವರು ಇಂದೂ ಓದು­ತ್ತಿಲ್ಲ. ಹಿಂದೆ ಓದು­ತ್ತಿ­ದ್ದ­ವ­ರಲ್ಲಿ ಅರ್ಧ­ದಷ್ಟು ಮಂದಿ ಟೀವಿಯ ಮುಂದೆ ಪ್ರತಿ­ಷ್ಠಾ­ಪನೆ ಆಗಿ­ದ್ದಾರೆ. ಇನ್ನರ್ಧ ಮಂದಿ ಇಂಗ್ಲಿಶ್ ಕೃತಿ­ಗ­ಳನ್ನು ಓದು­ವು­ದಕ್ಕೆ ಶುರು­ಮಾ­ಡಿ­ದ್ದಾರೆ. ಮತ್ತೊಂ­ದಷ್ಟು ಕಟ್ಟಾ ಓದು­ಗರು ತೀರಿ­ಕೊಂ­ಡಿ­ದ್ದಾರೆ.
ಇವೆ­ಲ್ಲ­ವನ್ನೂ ಅರ್ಥ­ಮಾ­ಡಿ­ಕೊ­ಳ್ಳದೇ ಓದು­ಗರು ಕಡಿಮೆ ಆಗಿ­ದ್ದಾರೆ ಅನ್ನು­ವುದು ತಪ್ಪಾ­ಗು­ತ್ತದೆ. ಅಂದ ಹಾಗೆ ಸರ್ಕಾರಿ ಅಂಕಿ­ಅಂ­ಶ­ಗಳ ಪ್ರಕಾರ ಓದು­ಗರ ಸಂಖ್ಯೆ ಅತೀವ ಹೆಚ್ಚಾ­ಗಿದೆ. ಯಾಕೆಂ­ದರೆ ಸರ್ಕಾರ ತನ್ನ ಗ್ರಂಥಾ­ಲ­ಯ­ಗ­ಳಿ­ಗಾಗಿ ಕೊಳ್ಳುವ ಪುಸ್ತ­ಕ­ಗಳ ಸಂಖ್ಯೆ ಆರು ಪಟ್ಟು ಹೆಚ್ಚಿದೆ.
ಆದರೆ ಗ್ರಂಥಾ­ಲ­ಯ­ಗಳ ಜಾಗ ಅಷ್ಟೇ ಇದೆ.
-4-
ಮತ್ತೊಂದು ಮಕ್ಕಳ ಗೀತೆ­ಯೊಂ­ದಿಗೆ ಮುಗಿ­ಸೋಣ. ಪಂಜೆ ಮಂಗೇ­ಶರಾಯರು ಬರೆದ ಈ ಸಾಲು­ಗ­ಳನ್ನು ಓದು­ತ್ತಿ­ದ್ದರೆ ಬಾಲ್ಯ­ದಲ್ಲೂ ರೋಮಾಂ­ಚ­ನ­ವಾ­ಗು­ತ್ತಿತ್ತು. ಕಾರಣ; ಅದು ಅರ್ಥ­ವಾ­ಗು­ತ್ತಿತ್ತು. ಅರ್ಥ­ವಾ­ಗು­ವಂತೆ ತಿಳಿಸಿ ಹೇಳು­ವು­ದಕ್ಕೆ ಹೆತ್ತ­ವ­ರಿಗೂ ಮೇಷ್ಟ­ರಿಗೂ ಗೊತ್ತಿತ್ತು.
ಆದರೆ ಇವತ್ತು ಈ ಸಾಲು­ಗಳ ಅರ್ಥ ಹೇಳ­ಬಲ್ಲ ಮೇಷ್ಟ­ರು­ಗಳು ಎಷ್ಟು ಸಿಗು­ತ್ತಾರೆ ಹೇಳಿ­ರಣ್ಣ?

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು
ಕವಣೆ ತಿರಿ­ಕ­ಲ್ಲಾಟ ಹಗ್ಗಕೆ ಸೆಳೆ­ದರೋ ಹೆಬ್ಬಾ­ವನು
ಸವರಿ ಆನೆಯ ಸೊಂಡಿ­ಲಿನ ರಣ­ಕೊಂ­ಬ­ನಾರ್ ಭೋರ್ಗ­ರೆ­ದರೋ
ಸವಿದು ಸವೆ­ಯದ ಸಾಹ­ಸ­ತ್ವದ ಕ್ಪಾತ್ರ ಬೇಟೆಯ ಮೆರೆ­ದರೋ
ಅವರು ಸೋಲ್ ಸಾವ­ರಿ­ಯರು
ಅವರೆ ಕಡು­ಗಲಿ ಗರಿ­ಯರು
ಅವರು ಕೊಡ­ಗಿನ ಹಿರಿ­ಯರು!

ಇದನ್ನು ಓದಿದ ನಂತರ ಭಾರ­ತೀ­ಸುತ ಬರೆದ ಹುಲಿಯ ಹಾಲಿನ ಮೇವು ಕಾದಂ­ಬರಿ ಓದಿ­ದರೆ ಆಗುವ ರೋಮಾಂ­ಚ­ನದ ಬಗ್ಗೆ ಹೇಳು­ವುದು ವ್ಯರ್ಥ.
ನಾವು ಮತ್ತೆ ಬೊಮ್ಮನ ಹಳ್ಳಿಯ ಕಿಂದ­ರಿ­ಜೋ­ಗಿ­ಯಿಂದ ಆರಂ­ಭಿ­ಸ­ಬೇಕು ಅನ್ನಿ­ಸು­ವು­ದಿ­ಲ್ಲವೇ?

Friday, July 13, 2007

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು...

ಅವ್ಯ­ಕ್ತಾ­ದೀನಿ ಭೂತಾನಿ
ವ್ಯಕ್ತ­ಮ­ಧ್ಯಾನಿ ಭಾರ­ತ
ಅವ್ಯ­ಕ್ತ­ನಿ­ಧ­ನಾ­ನ್ಯೇವ
ತತ್ರ ಕಾ ಪರಿ­ದೇ­ವ­ನಾ­

ತುಂಬ ಬಳ­ಕೆ­ಯಾದ, ನಮ್ಮ ಜೀವ­ನದ ನಶ್ವ­ರ­ತೆ­ಯನ್ನು ಅತ್ಯಂತ ಗಾಢ­ವಾಗಿ ಹೇಳುವ ಶ್ಲೋಕ ಇದು. ಇದು ಅನೇಕ ಲೇಖ­ಕರ ಕೃತಿ­ಗ­ಳಲ್ಲಿ ಬಂದು ಹೋಗಿವೆ. ಅಡಿ­ಗರ `ಶ್ರೀ­ರಾಮ ನವ­ಮಿಯ ದಿವಸ' ಕವಿ­ತೆ­ಯಲ್ಲಿ ಇದೊಂದು ದಟ್ಟ ರೂಪ­ಕ­ವಾಗಿ ಬರು­ತ್ತದೆ;

ಶ್ರೀರಾ­ಮ­ನ­ವ­ಮಿಯ ದಿವಸ ರಾಮ­ನಾ­ಮಾ­ಮೃ­ತವೆ
ಪಾನಕ, ಪನಿ­ವಾರ, ಕೋಸಂ­ಬರಿ;
ಕರ­ಬೂಜ ಸಿದ್ದೋ­ಟು­ಗಳ ಹೋಳು, ಸೀಕ­ರಣೆ:
ವ್ಯಕ್ತ­ಮ­ಧ್ಯಕ್ಕೆ ಬಂದು­ರಿವ ಶಬರಿ.

ಇಲ್ಲಿ ಬರುವ ವ್ಯಕ್ತ­ಮ­ಧ್ಯ­ವನ್ನು ಅಡಿ­ಗರು ಭಗ­ವ­ದ್ಗೀ­ತೆ­ಯಿಂ­ದಲೇ ಎತ್ತಿ­ಕೊಂ­ಡದ್ದು. ಆದರೆ,ಉಮರ್ ಖಯ್ಯಾಮ ಭಗ­ವ­ದ್ಗೀ­ತೆ­ಯನ್ನು ಓದಿ­ದ್ದಾನೆ ಅನ್ನು­ವು­ದಕ್ಕೆ ಯಾವ ಪುರಾ­ವೆಯೂ ಇಲ್ಲ. 1048ರಲ್ಲಿ ಆತ ಪರ್ಶಿ­ಯಾ­ದಲ್ಲಿ ಹುಟ್ಟಿ­ದ­ವನು. ಅವನು ತನ್ನ ರುಬಾ­ಯಿ­ಯೊಂ­ದ­ರಲ್ಲಿ ಹೀಗೆ ಬರೆ­ದಿ­ದ್ದಾನೆ;

There was the door to which I found no key;
There was a veil through which I might not see:
Some little talk awhile of me and Thee
There was- and then no more of Thee and Me.

ಇದನ್ನು ಡಿವಿಜಿ ಅನು­ವಾ­ದಿ­ಸಿ­ರು­ವುದು ಹೀಗೆ;

ಹಿಂದೊಂದು ಬಾಗಿಲ್, ಆ ಬೀಗಕ್ಕೆ ಕೈಯಿಲ್ಲ;
ಮುಂದೊಂದು ತೆರೆ. ಅದ­ನೆತ್ತಿ ನೋಡ­ಲ­ಳ­ವಲ್ಲ:
ಈ ಎಡೆ­ಯೊ­ಳೊಂ­ದೆ­ರೆಡು ದಿನ ನೀನು ನಾನೆಂದು
ಹರ­ಟು­ವೆವು; ಬಳಿ­ಕಿಲ್ಲ ನೀನು ನಾನು­ಗಳು.

ಅವ್ಯಕ್ತ ಆದ್ಯಂ­ತದ ಮತ್ತು ವ್ಯಕ್ತ­ಮ­ಧ್ಯದ ಕಲ್ಪನೆ ಹಾಗಿ­ದ್ದರೆ ಭರ­ತ­ಖಂ­ಡ­ಕ್ಕಷ್ಟೇ ಸೀಮಿ­ತ­ವಲ್ಲ ಎಂದಂ­ತಾ­ಯಿ­ತಲ್ಲ. ಮತ್ತೀಗ ಕೃಷ್ಣ ಏನ­ನ್ನು­ತ್ತಾನೆ ಕೇಳೋಣ.
ಆತ್ಮನು ಅವಿ­ನಾಶಿ. ಆದ್ದ­ರಿಂದ ಯಾವ ಪ್ರಾಣಿ­ಗಳ ವಿಚಾ­ರ­ದಲ್ಲೂ ಶೋಕಿ­ಸು­ವುದು ಸರಿ­ಯಲ್ಲ ಎಂದು ಉಪ­ದೇ­ಶಿ­ಸು­ತ್ತಲೇ ಕೃಷ್ಣ ಮತ್ತೊಂದು ಮಾತನ್ನೂ ಆಡು­ತ್ತಾನೆ;
ಕ್ಪತ್ರಿ­ಯ­ನಿಗೆ ಧರ್ಮ­ಯು­ದ್ಧ­ಕ್ಕಿಂತ ಉತ್ತ­ಮ­ವಾ­ದದ್ದು ಬೇರೊಂ­ದಿಲ್ಲ. ಈ ಯುದ್ಧ ತಾನಾ­ಗಿಯೇ ಬಂದಿದೆ. ಇಚ್ಛಿ­ಸದೇ ಬಂದಿದೆ. ನಿನ­ಗಾಗಿ ಸ್ವರ್ಗ ಬಾಗಿ­ಲನ್ನು ತೆರೆ­ಯುವ ಈ ಯುದ್ಧ ಕೇವಲ ಭಾಗ್ಯ­ಶಾ­ಲಿ­ಗ­ಳಿ­ಗಷ್ಟೇ ಒದ­ಗಿ­ಬ­ರು­ತ್ತದೆ. ಈ ಧರ್ಮ­ಯುದ್ಧ­ವನ್ನು ನೀನು ಮಾಡ­ದಿ­ದ್ದರೆ ನಿನ್ನ ಸ್ವಧರ್ಮ ಮತ್ತು ಕೀರ್ತಿ ಹಾಳಾ­ಗು­ತ್ತದೆ. ನೀನು ಪಾಪ­ವನ್ನು ಗಳಿ­ಸು­ತ್ತೀಯ. ಜನರು ನಿನ್ನನ್ನು ಹೇಡಿ ಎಂದು ಕರೆ­ಯು­ತ್ತಾರೆ. ಆಗ, ಸಂಭಾ­ವಿ­ತಸ್ಯ ಚಾಕೀರ್ತಿಃ ಮರ­ಣಾ­ದ­ತಿ­ರಿ­ಚ್ಯ­ತೇ­- ಸಂಭಾ­ವಿ­ತ­ರಿಗೆ ಅವ­ಮಾ­ನ­ಕ್ಕಿಂತ ಸಾವೇ ಮೇಲು. ನೀನು ಹೆದರಿ ಯುದ್ಧ­ಸ್ಥಾ­ನ­ದಿಂದ ಓಡಿ­ಹೋದೆ ಎಂದು ಶೂರರು ಎಣಿ­ಸು­ತ್ತಾರೆ ಮತ್ತು ನಿನ್ನ ಶೌರ್ಯ­ವನ್ನು ಮೆಚ್ಚಿ­ದ­ವರೇ ನಿನ್ನನ್ನು ಲಘು­ವಾಗಿ ಕಾಣು­ತ್ತಾರೆ.
ಭಗ­ವ­ದ್ಗೀತೆ ಹತ್ತಿ­ರ­ವಾ­ಗು­ವುದು ಇಲ್ಲೇ. ಅದು ಎರಡು ನೆಲೆ­ಗ­ಳಲ್ಲಿ ಕಾರ್ಯ­ನಿ­ರ್ವ­ಹಿ­ಸು­ತ್ತದೆ. ಏಕ­ಕಾ­ಲಕ್ಕೆ ಐಹಿ­ಕ­ವನ್ನೂ ಪಾರ­ಮಾ­ರ್ಥಿ­ಕ­ವನ್ನೂ ಬೋ­ಸು­ತ್ತದೆ. ಹಾಗ­ಲ್ಲ­ದಿ­ದ್ದರೆ ಹೀಗೆ ನಿಮ್ಮನ್ನು ಒಲಿ­ಸಿ­ಕೊ­ಳ್ಳು­ತ್ತೇನೆ ಎಂದು ಹೊರ­ಡು­ತ್ತದೆ. ಆತ್ಮದ ಅವಿ­ನಾ­ಶಿ­ತ್ವ­ದಿಂದ ಅರ್ಜು­ನ­ನಿಗೆ ಕನ್ವಿನ್ಸ್ ಆಗ­ಲಿಲ್ಲ ಎಂದು ಗೊತ್ತಾ­ದ­ವ­ನಂತೆ ಕೃಷ್ಣ ಅಲ್ಲಿಂದ ಥಟ್ಟನೆ ಜನ­ಸಾ­ಮಾ­ನ್ಯ­ರಂತೆ ಮಾತಿಗೆ ತೊಡ­ಗು­ತ್ತಾನೆ.
ನಿನ್ನ ಸಾಮ­ರ್ಥ್ಯ­ವನ್ನು ಹಳಿ­ಯುತ್ತಾ ಜನ ಆಡ­ಬಾ­ರದ ಮಾತಾ­ಡು­ತ್ತಾರೆ. ಇದ­ಕ್ಕಿಂದ ಹೆಚ್ಚಿಗೆ ವೇದ­ನೆ­ಯುಂಟು ಮಾಡು­ವಂ­ಥದ್ದು ಮತ್ತೇ­ನಿದೆ? ಯುದ್ಧ­ದಲ್ಲಿ ಸತ್ತರೆ ವೀರ­ಸ್ವರ್ಗ ಸೇರುತ್ತಿ, ಗೆದ್ದರೆ ರಾಜ್ಯ­ಯೋಗ ನಿನ್ನ­ದಾ­ಗು­ತ್ತದೆ. ಆದ್ದ­ರಿಂದ ; ಯುದ್ಧಾಯ ಕೃತ­ನಿ­ಶ್ಚಯಃ.
`ಏ­ನಾ­ಗುತ್ತೋ ಆಗ್ಲಿ. ನಾನಿದ್ದೀನಿ ಕಣೋ..ಜಮಾಯಿಸೋ ಮಚ್ಚಾ' ಎನ್ನುವ ಗೆಳೆ­ಯ­ನಂತೆ ಕೃಷ್ಣ ಪುಸ­ಲಾ­ಯಿ­ಸು­ವು­ದನ್ನು ಕಂಡಾಗ ನಗು ಬರು­ತ್ತದೆ. ಹೇಗಾ­ದರೂ ಮಾಡಿ ಯುದ್ಧಕ್ಕೆ ಅರ್ಜು­ನ­ನನ್ನು ಎಳೆದು ತರ­ಬೇಕು ಎಂಬ ಏಕೈಕ ಉದ್ದೇ­ಶ­ದಿಂದ ಅರ್ಥ­ವಿ­ಲ್ಲದ ಸಾಮಾನ್ಯ ವಾದ­ಗ­ಳನ್ನೂ ಕೃಷ್ಣ ಮುಂದಿ­ಡು­ತ್ತಾನೆ.

ಸುಖ­ದುಃಖೇ ಸಮೇ ಕೃತ್ವಾ
ಲಾಭಾ­ಲಾಭೌ ಜಯಾ­ಜ­ಯೌ
ತತೋ ಯುದ್ಧಾಯ ಯುಜ್ಯಸ್ವ
ನೈವಂ ಪಾಪ­ಮ­ವಾ­ಪ್ಸ­ಸಿ­

ಸುಖ­ದುಃಖ, ಲಾಭ­ನಷ್ಟ ಮತ್ತು ಸೋಲು­ಗೆ­ಲು­ವು­ಗ­ಳನ್ನು ಸಮ­ನಾಗಿ ಕಂಡು ಯುದ್ಧಕ್ಕೆ ಸಿದ­್ಧ­ನಾಗು. ಆಗ ನಿನ್ನನ್ನು ಪಾಪ ಮೆತ್ತಿ­ಕೊ­ಳ್ಳು­ವು­ದಿಲ್ಲ ಅನ್ನು­ತ್ತಾನೆ ಕೃಷ್ಣ. ಸೋಲು­ಗೆ­ಲುವು ಮುಖ್ಯ­ವಲ್ಲ, ಭಾಗ­ವ­ಹಿ­ಸು­ವು­ದಷ್ಟೇ ಮುಖ್ಯ ಎಂಬ ತೀರಾ ಸವ­ಕ­ಲಾದ ಹೇಳಿ­ಕೆ­ಯಂತೆ ಇದು ಇವತ್ತು ಕಾಣಿ­ಸು­ತ್ತದೆ. ಆದರೆ ಒಮ್ಮೆ ಯುದ್ಧಕ್ಕೆ ಒಪ್ಪಿ­ಕೊಂ­ಡರೆ ಅರ್ಜು­ನ­ನನ್ನು ಹೇಗೆ ಗೆಲ್ಲು­ವಂತೆ ಮಾಡ­ಬೇಕು ಅನ್ನು­ವುದು ತನಗೆ ಗೊತ್ತಿದೆ ಎಂಬ ಆತ್ಮ­ವಿ­ಶ್ವಾ­ಸ­ದಿಂ­ದಲೇ ಈ ಮಾತು­ಗ­ಳನ್ನು ಕೃಷ್ಣ ಆಡು­ತ್ತಾನೆ.
ಇವಿಷ್ಟೂ ಮಾತು ಸಾಂಖ್ಯ­ಯೋ­ಗ­ದಲ್ಲಿ ಬರು­ತ್ತವೆ. ಇಲ್ಲಿಂ­ದಾ­ಚೆಗೆ ಕೃಷ್ಣ ಅರ್ಜುನ ಕಂಡು ಕೇಳ­ರಿ­ಯದ ಮಾತು­ಗಳ ಮೂಲಕ ಅವ­ನನ್ನು ಬದ­ಲಾ­ಯಿ­ಸು­ವು­ದಕ್ಕೆ ಯತ್ನಿ­ಸು­ತ್ತಾನೆ. ಆತ ಹೇಳು­ತ್ತಾನೆ. ಇದು­ವ­ರೆಗೆ ನಾನು ಬೋ­ಧಿಸಿ­ರು­ವುದು ಸಾಂಖ್ಯ­ವನ್ನು ಕುರಿತ ವಿವೇಕ. ಈಗ ಯೋಗದ ಕುರಿತು ಹೇಳು­ತ್ತೇನೆ. ಈ ರಹ­ಸ್ಯ­ವನ್ನು ತಿಳಿ­ಯುವ ಮೂಲಕ ನೀನು ಕರ್ಮದ ಕಟ್ಟನ್ನು ಕಳ­ಚಿ­ಕೊ­ಳ್ಳುತ್ತಿ. ಈ ಯೋಗ­ಭ್ಯಾ­ಸ­ದಿಂದ ನಷ್ಟ­ವೇನೂ ಆಗು­ವು­ದಿಲ್ಲ. ಅದ­ರಲ್ಲಿ ಏನೊಂದು ಹಾನಿಯೂ ಇಲ್ಲ. ಸ್ವಲ್ಪ ಅಭ್ಯಾಸ ಮಾಡಿ­ದರೂ ಅದು ದೊಡ್ಡ ಭಯ­ದಿಂದ ನಿನ್ನನ್ನು ಪಾರು ಮಾಡು­ತ್ತದೆ ಎಂದು ಕೃಷ್ಣ ಕಸ್ತೂರಿ ಮಾತ್ರೆ ಮಾರು­ವ­ವನ ಧಾಟಿ­ಯಲ್ಲಿ ಹೇಳು­ತ್ತಾನೆ. ಭಗ­ವ­ದ್ಗೀ­ತೆಗೆ ಈ ಓಲೈ­ಸುವ ಧಾಟಿ ಬೇಕಿತ್ತೇ ಎಂದು ಅನೇಕ ಸಾರಿ ಅನು­ಮಾನ ಮೂಡು­ತ್ತದೆ.
ಇದ್ದ­ಕ್ಕಿ­ದ್ದಂತೆ ವೇದಾ­ಚ­ರ­ಣೆ­ಗಳ ಕುರಿತ ಟೀಕೆಯೂ ಇಲ್ಲಿ ಕಾಣಿ­ಸಿ­ಕೊ­ಳ್ಳು­ತ್ತದೆ. ಅವಿ­ವೇ­ಕಿ­ಗಳು ವೇದ­ಗ­ಳ­ಲ್ಲಿನ ಕರ್ಮ­ಭಾ­ಗ­ವನ್ನೇ ಶ್ರೇಷ್ಠ ಎಂದು ಪ್ರಶಂ­ಸಿ­ಸು­ತ್ತಾರೆ. ಸ್ವರ್ಗ­ವನ್ನು ಗುರಿ­ಯಾ­ಗಿ­ಟ್ಟು­ಕೊಂಡು ಆಶೆ­ಗ­ಳಿಂದ ತುಂಬಿ­ದ­ವ­ರಾಗಿ ಕರ್ಮ­ಗ­ಳಿಗೆ ಪ್ರತಿ­ಫಲ ಅಪೇ­ಕ್ಪಿ­ಸುತ್ತಾ ವಿವಿಧ ಕಾರ್ಯ­ಗ­ಳನ್ನು ಮಾಡು­ತ್ತಾರೆ. ಅವರ ಆಸ­ಕ್ತಿ­ಯೇ­ನಿ­ದ್ದರೂ ಯೋಗ ಮತ್ತು ಸಂಪ­ತ್ತಿ­ನಲ್ಲಿ. ಆದ್ದ­ರಿಂದ ಅವರ ಮನಸ್ಸು ಸ್ಥಿರ­ವಾ­ಗಿ­ರು­ವು­ದಿಲ್ಲ. ಹೀಗಾಗಿ ಅವ­ರಿಗೆ ತೃಪ್ತಿಯೂ ಇಲ್ಲ.
ಇಲ್ಲಿ ಸ್ವರ್ಗದ ಆಶೆ­ಯಿಂದ ಕರ್ಮಾ­ಸ­ಕ್ತ­ರಾ­ಗು­ತ್ತಾರೆ ಎಂದು ಜರೆ­ಯುವ ಕೃಷ್ಣ, ಇದಕ್ಕೂ ಮೊದಲು ಅರ್ಜು­ನ­ನಿಗೇ ಸ್ವರ್ಗದ ಆಮಿಷ ಒಡ್ಡಿ­ರು­ತ್ತಾನೆ ಅನ್ನು­ವು­ದನ್ನು ಗಮ­ನಿಸಿ;
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗ್.. ಸತ್ತರೆ ಸ್ವರ್ಗ ಸೇರು­ತ್ತೀಯೆ ಎಂದ­ವನ ಬಾಯಲ್ಲೇ ಕಾಮಾ­ತ್ಮಾನಃ ಸ್ವರ್ಗ­ಪರಾ ಜನ್ಮ­ಕ­ರ್ಮ­ಫ­ಲ­ಪ್ರ­ದಾ್.. ಎಂಬ ಮಾತೂ ಬರು­ತ್ತದೆ ಅಂದ ಮೇಲೆ ಯಾವುದು ಸತ್ಯ? ಯಾವುದು ಮಿಥ್ಯ?
ಅಥವಾ ಎರಡೂ ಮಾತು­ಗ­ಳನ್ನೂ ಬೇರೆ ಬೇರೆ contextನಲ್ಲಿ­ಟ್ಟು­ಕೊಂಡು ನೋಡ­ಬೇಕೇ?

Thursday, July 12, 2007

ಏನಿದು... ಏನಿದೇನಿದು... ಏನಿದೇನು ಗೋಜಿದು...ನೀವೇ ಊಹಿಸಿ...

Wednesday, July 11, 2007

ನಿನ್ನ ನೀನು ಮರೆತರೇನು ಸುಖವಿದೆ?


ನಿನ್ನಯ ತಾವರೆ ತೆರ­ನ­ಡಿ­ಗ­ಳಲಿ
ಎನ್ನ­ದೆಂಬ ಈ ತನು­ಮ­ನ­ಗ­ಳನು
ಚೆನ್ನ­ಕೇ­ಶವ ಇರಿ­ಸುತ ಒಂದು
ಬಿನ್ನಹ ಕುಸು­ಮ­ವ­ನಿದ ನೀಡಿ­ರು­ವೆನು..

ಬಹುಶಃ ಮಾಸ್ತಿ­ಯ­ವ­ರ­ದ್ದಿ­ರ­ಬೇಕು ಈ ಪದ್ಯ. ಇದನ್ನು ಓದಿ­ದಾ­ಗೆಲ್ಲ ನಮ್ಮ ಬಿನ್ನ­ಹ­ಗ­ಳನ್ನೂ ಅರ್ಪಿ­ಸು­ವು­ದಕ್ಕೆ ಯಾರಾ­ದರೂ ಇದ್ದಿ­ದ್ದರೆ ಚೆನ್ನಾ­ಗಿತ್ತು ಅನ್ನಿ­ಸು­ತ್ತದೆ. ನಮಗೆ ಯಾರೂ ಇಲ್ಲ­ವಲ್ಲ ಅನ್ನುವ ಅನಾ­ಥ­ಪ್ರಜ್ಞೆ ಕಾಡು­ತ್ತದೆ. ತುಂಬ ಗಾಢ­ವಾಗಿ ಯಾರನ್ನು ನಂಬ­ಬೇಕು ಅನ್ನುವ ಜಿಜ್ಞಾಸೆ ಎದು­ರಾ­ಗು­ತ್ತದೆ.
ನಾಸ್ತಿ­ಕರ ಸಂಕ­ಷ್ಟ­ಗ­ಳಲ್ಲಿ ಇದೂ ಒಂದು. ಮೊದಲೇ ನಮ್ಮ ದೇಶದ ತುಂಬ ದೇವರು. ನಾಸ್ತಿ­ಕ­ರಿಗೆ ಹೇಳಿ­ಮಾ­ಡಿ­ಸಿದ ದೇಶ ಇದ­ಲ್ಲವೇ ಅಲ್ಲ. ಇಲ್ಲಿ ಯಾವ ಬೀದಿಗೆ ಹೋದರೂ ಅಲ್ಲೊಂದು ದೇವ­ಸ್ಥಾನ. ಕಲೆ­ಯನ್ನೂ ಸೌಂದ­ರ್ಯ­ವನ್ನೂ ಹುಡು­ಕಿ­ಕೊಂಡು ಹೊರ­ಟ­ವನು ಕೊನೆಗೆ ತಲು­ಪು­ವುದು ದೇವ­ಸ್ಥಾ­ನಕ್ಕೇ. ಅಷ್ಟೇ ಯಾಕೆ ಅತ್ಯು­ತ್ತಮ ನ್ಯಾಯಾಂಗ ವ್ಯವಸ್ಥೆ ಬೇಕಿ­ದ್ದರೂ ದೇವ­ಸ್ಥಾ­ನವೇ ಗತಿ. ಯಾರ­ನ್ನಾ­ದರೂ ನಂಬಿ­ಸ­ಬೇ­ಕಾ­ದರೂ ಆ ದೇವ­ರನ್ನೇ ಎಳೆದು ತರ­ಬೇಕು. `ದೇ­ವ­ರಾಣೆ ನಾನು ಹಾಗೆ ಮಾಡಿಲ್ಲ ಮಾರಾಯ' ಅಂದು­ಬಿ­ಡು­ತ್ತಾರೆ. ಈತ ದೇವ­ರನ್ನೇ ನಂಬು­ವು­ದಿಲ್ಲ. ಹೀಗಾಗಿ ಅವನ ಆಣೆಗೆ ಯಾವ ಲೆಕ್ಕ?
ಯಾರೋ ಬರು­ತ್ತಾರೆ; ತಿರು­ಪ­ತಿಗೆ ಹೋಗಿ ಬಂದೆ ಅಂತ ಲಾಡು ಕೊಡು­ತ್ತಾರೆ. ತಿರು­ಪತಿ ತಿಮ್ಮ­ಪ್ಪ­ನಿಗೆ ಮುಡಿ­ಯನ್ನೂ ಅದು­ವ­ರೆಗೆ ಸಂಪಾ­ದಿ­ಸಿದ ದುಡ್ಡಿನ ಒಂದು ಭಾಗ­ವನ್ನೂ ಕೊಟ್ಟು ಬಂದಿ­ರು­ತ್ತಾರೆ. ಕೊಂಚ ಇಕ­ನಾ­ಮಿಕ್ಸು ಗೊತ್ತಿ­ದ್ದ­ವ­ನಿಗೂ ಕರ್ನಾ­ಟ­ಕದ ಸಂಪ­ತ್ತಿನ ಬಹು­ಪಾಲು ಹೋಗಿ ಸೇರು­ವುದು ಆಂಧ್ರದ ತಿರು­ಪ­ತಿಗೆ, ಮಂತ್ರಾ­ಲ­ಯಕ್ಕೆ ಮತ್ತು ಮಹಾ­ರಾ­ಷ್ಟ್ರದ ಶಿರ­ಡಿಗೆ ಅನ್ನು­ವುದು ಅರ್ಥ­ವಾ­ಗು­ತ್ತದೆ.
ನಾಸ್ತಿ­ಕನ ನಿಜ­ವಾದ ಸಮಸ್ಯೆ ಇದ್ಯಾ­ವುದೂ ಅಲ್ಲ. ಅತ್ಯಂತ ದುಃಖದ ಗಳಿ­ಗೆ­ಗ­ಳಲ್ಲಿ ಯಾರ ಹತ್ತಿರ ನೋವು ಹಂಚಿ­ಕೊ­ಳ್ಳ­ಬೇಕು ಅನ್ನುವ ಪ್ರಶ್ನೆ ಕೇವಲ ನಾಸ್ತಿ­ಕ­ನನ್ನು ಮಾತ್ರ ಕಾಡ­ಬ­ಲ್ಲದು. ಪರಮ ಆಸ್ತಿ­ಕ­ನಾ­ದ­ವನು `ನೀನೇ ಅನಾಥ ಬಂಧು, ಕಾರುಣ್ಯ ಸಿಂಧು' ಅಂತ ದೇವರ ಹತ್ತಿರ ತನ್ನ ಅಹ­ವಾಲು ಹೇಳಿ­ಕೊ­ಳ್ಳ­ಬಲ್ಲ. ನಾನೇಕೆ ಪರ­ದೇಶಿ, ನಾನೇಕೆ ಬಡ­ವನೋ, ಶ್ರೀನಿಧೇ ಹರಿ­ಯೆ­ನಗೆ ನೀನಿ­ರುವ ತನಕ ಎಂದು ನೆಮ್ಮ­ದಿ­ಯಿಂದ ಇರ­ಬಲ್ಲ. ಅಷ್ಟೇ ಯಾಕೆ ತೀರಾ ತಲೆ­ಕೆ­ಟ್ಟರೆ ` ನಿನ್ನಂಥ ಸ್ವಾಮಿ ಎನ­ಗುಂಟು, ನಿನ­ಗಿಲ್ಲ. ನಿನ್ನಂಥ ದೊರೆ ಎನ­ಗುಂಟು ನಿನ­ಗಿಲ್ಲ. ನಿನ್ನಂಥ ತಂದೆ ಎನ­ಗುಂಟು ನಿನ­ಗಿಲ್ಲ. ನಿನ್ನ­ರಸಿ ಲಕುಮಿ ಎನ್ನ ತಾಯಿ, ನಿನ್ನ ತಾಯಿಯ ತೋರೋ' ಎಂದು ಹಾಡ­ಬಲ್ಲ. ಅಲ್ಲ ಕಣಯ್ಯಾ, ನಾನು ಕಷ್ಟ­ಬಂ­ದರೆ ಬೇಡಿ­ಕೊ­ಳ್ಳೋ­ದಕ್ಕೆ ನೀನಿ­ದ್ದೀಯ. ನಿಂಗೇ ಕಷ್ಟ­ಬಂ­ದರೆ ಯಾರಿ­ದ್ದಾ­ರಪ್ಪಾ ಅನ್ನೋ ಲಾ ಪಾಯಿಂಟು ಹಾಕಿ ದೇವ­ರನ್ನೇ ಅನಾ­ಥ­ಪ್ರ­ಜ್ಞೆ­ಯಲ್ಲಿ ಒದ್ದಾ­ಡುವ ಹಾಗೆ ಮಾಡುವ ಕಿಲಾಡಿ ದಾಸ­ರಿ­ದ್ದಾರೆ. ಇಲ್ಲಿ ಗಮ­ನಿ­ಸ­ಬೇ­ಕಾದ್ದು ಇಷ್ಟು; ನಿನ್ನಂಥ ಸ್ವಾಮಿ ಎನ­ಗುಂಟು ಅಂತ ಈ ದಾಸರು ನಂಬಿ­ದ್ದಾರೆ.
ಎಷ್ಟೋ ಸಲ ದಾಸ­ನಾ­ಗ­ಬೇಕು ಅನ್ನಿ­ಸು­ತ್ತದೆ. ಒಡೆ­ಯ­ನಾ­ಗು­ವು­ದ­ಕ್ಕಿಂತ ದಾಸ­ನಾ­ಗು­ವುದೇ ಸುಖ. ದಾಸ­ನಾ­ದರೆ ಒಡೆ­ಯ­ನೊಬ್ಬ ಹೇಳಿದ ಕೆಲಸ ಮಾಡಿ­ಕೊಂಡು ಇದ್ದ­ರಾ­ಯಿತು. ಅದೇ ಒಡೆ­ಯ­ನಾ­ದರೆ ಎಲ್ಲರ ಕೆಲ­ಸ­ಗ­ಳನ್ನೂ ಮಾಡ­ಬೇಕು. ಈ ಹರಿ­ದಾ­ಸರು ಸಾಮಾ­ನ್ಯ­ರೇ­ನಲ್ಲ. ದಾಸ­ದಾ­ಸರ ಮನೆಯ ದಾಸಾ­ನು­ದಾಸ ಅಂತ ತಮ್ಮನ್ನು ಕರೆ­ದು­ಕೊ­ಳ್ಳುವ ನೆಪ­ದಲ್ಲಿ, ದೇವ­ರನ್ನೇ ಭಕ್ತರ ಮನೆಯ ದಾಸ­ರ­ನ್ನಾಗಿ ಮಾಡಿ­ದ್ದಾರೆ. ದೇವರು ಭಕ್ತಿ­ಯಿಂದ ಕೇಳಿ­ದರೆ ಏನು ಬೇಕಾ­ದರೂ ಮಾಡು­ತ್ತಾ­ನಂತೆ. ಅಂಥ ಭಕ್ತರು ಸಹಸ್ರ ಸಹಸ್ರ ಸಂಖ್ಯೆ­ಯ­ಲ್ಲಿ­ದ್ದರೆ ದೇವರ ಗತಿ­ಯೇ­ನಾ­ಗ­ಬೇಕು ಹೇಳಿ? ಈ ಭಕ್ತ­ದಾ­ಸರ ಬೇಡಿ­ಕೆ­ಗ­ಳನ್ನು ಪೂರೈ­ಸುತ್ತಾ ಅವನ ಆಯು­ಷ್ಯವೇ ಮುಗಿ­ದು­ಹೋ­ಗ­ಬೇಕು. ಅದೃ­ಷ್ಟ­ವ­ಶಾ್ ದೇವ­ರಿಗೆ ಆಯುಷ್ಯ ನಿಗ­ದಿ­ಯಾ­ಗಿಲ್ಲ ಬಿಡಿ.
ಮೊನ್ನೆ ಯಾರೋ ದೊಡ್ಡ ದನಿ­ಯಲ್ಲಿ ಹಾಡು­ತ್ತಿ­ದ್ದರು; ಬಾಗಿ­ಲನು ತೆರೆದು ಸೇವೆ­ಯನು ಕೊಡೋ ಹರಿಯೇ. ಬಾಗಿ­ಲನ್ನೂ ಅವನೇ ತೆರೆ­ಯ­ಬೇಕು, ಸೇವೆ­ಯನ್ನೂ ಅವನೇ ಕೊಡ­ಬೇಕು ಎಂದರೆ ಹೇಗೆ? ಇದನ್ನೆ ಮುಂದಿ­ಟ್ಟು­ಕೊಂಡು ಇನ್ಯಾರೋ ಉಡು­ಪಿ­ಯಲ್ಲಿ ಕನ­ಕನ ಕಿಂಡಿ ಮೊದಲೇ ಇತ್ತು. ಅಲ್ಲಿ ಕಿಂಡಿ­ಯಿ­ಲ್ಲದೇ ಹೋಗಿ­ದ್ದರೆ ಆ ಕಿಂಡಿ­ಗೊಂದು ಬಾಗಿಲು ಇಲ್ಲದೇ ಹೋಗಿ­ದ್ದರೆ ಕನ­ಕ­ದಾ­ಸರು ಬಾಗಿ­ಲನು ತೆರೆದು ಅಂತ ಯಾಕೆ ಹಾಡು­ತ್ತಿ­ದ್ದರು. ಅವರು `ಗೋ­ಡೆ­ಯನು ಒಡೆದು ಸೇವೆ­ಯನು ಕೊಡೋ ಹರಿಯೇ' ಅಂತ ಹಾಡ­ಬೇ­ಕಿ­ತ್ತಲ್ಲ ಅಂತ ವಾದಿ­ಸು­ತ್ತಿ­ದ್ದರು. ಅದ­ರಲ್ಲೂ ಒಂಥ­ರದ ತರ್ಕ­ಬ­ದ್ಧ­ತೆ­ಯಿದೆ ಅಲ್ವೇ?
ಇನ್ನೊಂದು ಥರದ ಸಂವಾ­ದಿ­ಗ­ಳಿ­ದ್ದಾರೆ. ಅವ­ರದು ದೇವರ ಹತ್ತಿ­ರವೂ ಉಲ್ಟಾ ಥಿಯರಿ; ಕರು­ಣಾ­ಕರ ನೀನೆಂ­ಬು­ವು­ದ್ಯಾ­ತಕೋ ಭರ­ವಸೆ ಇಲ್ಲೆ­ನೆಗೆ. ಕರು­ಣಾ­ಕರ ನೀನಾ­ದರೆ ಈಗಲೇ ಕರ­ಪಿ­ಡಿ­ದೆ­ನ್ನನು ನೀ ಕಾಯೋ. ಈ ಥರದ ಅವ­ಸ­ರ­ದ­ವ­ರನ್ನು ಕಂಡು ಮತ್ತೊಂ­ದಷ್ಟು ಮಂದಿ ಬೇರೆ ಥರದ ವಾದ ಶುರು­ಮಾ­ಡಿ­ದರು; ತಲ್ಲ­ಣಿ­ಸ­ದಿರು ಕಂಡ್ಯ ತಾಳು ಮನವೆ. ಎಲ್ಲ­ರನು ಸಲ­ಹು­ವನು, ಇದಕೆ ಸಂಶ­ಯ­ವಿಲ್ಲ.
ಆದರೆ ಇವ­ರೆಲ್ಲ ದೇವ­ರನ್ನು ವರ್ಣಿ­ಸು­ವು­ದನ್ನು ಕಂಡರೆ ದೇವ­ರಾ­ಗು­ವುದು ಎಷ್ಟು ಕಷ್ಟದ ಕೆಲಸ ಅಂತ ಯಾರಿ­ಗಾ­ದರೂ ಅನ್ನಿ­ಸದೇ ಇರ­ಲಿ­ಕ್ಕಿಲ್ಲ; ಕಲ್ಲಿ­ನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ ಅಲ್ಲಿ­ಗ­ಲ್ಲಿಗೆ ಆಹಾರ ಇತ್ತ­ವರು ಯಾರು? ಎಂಬ ಪ್ರಶ್ನೆಗೆ ಉತ್ತರ; ದೇವರು. ಒಂಥರ ಪತ್ರ­ಕ­ರ್ತರು ಮತ್ತು ಪೊಲೀ್ ಡಿಪಾ­ರ್‌­ಮೆಂ­ಟಿನ ಕೆಲಸ ದೇವ­ರದು. ಪರ­ಮ­ಪ­ದ­ದೊ­ಳಗೆ ವಿಷ­ಧ­ರನ ತಲ್ಪ­ದ­ಲಿ ಸಿರಿ­ಸ­ಹಿತ ಕ್ಪೀರ­ವಾ­ರಿ­ಧಿ­ಯೊ­ಳಿ­ರ­ಲು­­ಕ­ರಿ­ರಾಜ ಕಷ್ಟ­ದಲಿ ಆದಿ­ಮೂಲಾ ಎಂದು­­ಕ­ರೆ­ಯ­ಲಾ­ಕ್ಪಣ ಬಂದು ಒದ­ಗಿ­ದೆಯೋ ನದ­ಹ­ರಿ­ಯೆ­ ಎನ್ನು­ತ್ತಲೇ ಸಮ­ಯಾ­ಸ­ಮ­ಯ­ವುಂಟೆ ಭಕ್ತ­ವ­ತ್ಸಲ ನಿನಗೆ ಅನ್ನು­ತ್ತಾರೆ ದಾಸರು. ದೇವರು ಒಂಥರ ಎಟಿಎಂ ಇದ್ದ ಹಾಗೆ. ಎನಿ ಟೈ್ ಮ್ಯಾ್! ಭಕ್ತ­ವ­ತ್ಸ­ಲ­ನೆಂಬ ಬಿರುದು ಪೊತ್ತ­ಮೇಲೆ ಭಕ್ತ­ರಾ­ಧೀ­ನ­ನಾ­ಗಿ­ರ­ಬೇ­ಡವೇ ಸಾ್!
ಇನ್ನೊಂದು ತಮಾಷೆ ಕೇಳಿ; ಇನ್ಫೋ­ಸಿ­್­ನಲ್ಲಿ ಕೆಲಸ ಮಾಡು­ವ­ವ­ರನ್ನು ಕಂಡ ಖಾಸಗಿ ಕಂಪೆ­ನಿಯ ಮಂದಿ ಮೆಚ್ಚಿ, ಬೆರ­ಗಾ­ಗು­ವು­ದಿತ್ತು. ಅಂಥ ಕೆಲಸ ನಮಗೂ ಸಿಗ­ಬಾ­ರದೇ ಅನ್ನು­ವು­ದಿತ್ತು. ಅಂಥ ಕಲ್ಪ­ನೆ­ಯನ್ನು ದೇವ­ರಿಗೂ ಅನ್ವ­ಯಿ­ಸಿ­ದರೆ?
`ಏನು ಧನ್ಯಳೋ ಲಕುಮಿ, ಎಂಥ ಮಾನ್ಯ­ಳೋ ಸಾನು­ರಾ­ಗ­ದಿಂದ ಹರಿಯ ತಾನೇ ಸೇವೆ ಮಾಡು­ತಿ­ಹ­ಳು­ ಸಾನು­ರಾ­ಗ­ದಿಂದ, ವಿತ್ ಲವ್ ಸೇವೆ ಮಾಡು­ವುದೇ ಧನ್ಯ­ತೆಯೇ ಹಾಗಿ­ದ್ದರೆ?
**­*­**
ಸದ್ಯಕ್ಕೆ ಈ ತಮಾ­ಷೆ­ಯ­ನ್ನೆಲ್ಲ ಬಿಟ್ಟು ನಾಸ್ತಿ­ಕರ ಕಷ್ಟ­ಗ­ಳನ್ನು ಯೋಚಿ­ಸೋಣ. ನಮಗೆ ನಂಬು­ವು­ದಕ್ಕೆ ದೇವ­ರಿಲ್ಲ. ಮನು­ಷ್ಯರು ಈ ದೇವರ ಹಾಗೆ ಕರೆದ ತಕ್ಪಣ ಬಂದೊ­ದ­ಗು­ವು­ದಿಲ್ಲ. ಎಂಥ ಆತ್ಮೀಯ ಗೆಳೆ­ಯ­ನಿಗೂ ಸಮ­ಯಾ­ಸ­ಮಯ ಇದ್ದೇ ಇರು­ತ್ತದೆ. ಕಟ್ಟಿ­ಕೊಂಡ ಹೆಂಡತಿ ಕೂಡ ಸಾನು­ರಾ­ಗ­ದಿಂದ ಸೇವೆ ಮಾಡು­ತ್ತಾಳೆ ಅಂತ ನಿರೀ­ಕ್ಪಿ­ಸಿ­ದರೆ ಅಂಥ­ವ­ರನ್ನು ಎಂಸೀ­ಪಿ­ಗಳು ಅನ್ನು­ತ್ತಾರೆ ಮಹಿ­ಳಾ­ವಾ­ದಿ­ಗಳು.
ಹಾಗಿ­ದ್ದರೆ ನಾಸ್ತಿ­ಕರು ಯಾರನ್ನು ನೆಚ್ಚಿ­ಕೊ­ಳ್ಳ­ಬೇಕು? ಕರೆಂಟು ಹೋದ ನಡು­ರಾ­ತ್ರಿ­ಯಲ್ಲಿ ಧಿಗ್ಗ­ನೆದ್ದು ಕೂತಾಗ, ದಾರಿಯ ತೋರೋ ಗೋಪಾಲ ಎಂದು ಯಾರನ್ನು ಕೇಳ­ಬೇಕು? ಟೀವಿ­ಯ­ಲ್ಲೊಂದು ಅತ್ಯಂತ ಕೆಟ್ಟ ಕಾರ್ಯ­ಕ್ರಮ ಬಂದಾಗ `ಬಂ­ದ­ದ್ದೆಲ್ಲ ಬರಲಿ, ಗೋವಿಂ­ದನ ದಯೆ ನನ­ಗಿ­ರಲಿ' ಎಂದು ಯಾವ ಗೋವಿಂ­ದ­ನನ್ನು ನೆನೆ­ಯ­ಬೇಕು?
ನಾಸ್ತಿ­ಕರ ಕಷ್ಟ ಒಂದೆ­ರ­ಡಲ್ಲ. ಅವ­ರಿಗೆ ತಕ್ಪಣ ಬೇಕಾ­ಗಿ­ರು­ವುದು ನಂಬು­ವು­ದ­ಕ್ಕೊಬ್ಬ ದೇವರು. ಯಾರೂ ನಂಬದ, ಯಾರನ್ನೂ ನಂಬದ ನಿಜದ ದೇವರು!
ಮತ್ತೆ ಮಾಸ್ತಿ­ಯ­ವರ ಹಾಡಿ­ನತ್ತ ಮರ­ಳಿ­ದರೆ ಮತ್ತೆ­ರಡು ಸಾಲು ಹೀಗಿದೆ;
ಬಿನ್ನ­ಹ­ವಿದು ನಿನ್ನ­ಡಿ­ಗ­ಳ­ಲಿ­ರಲಿ
ಎನ್ನಯ ತನು­ಮನ ನಿನ್ನ ಅರಿ­ಯಲಿ
ಎನ್ನದು ಎನ್ನು­ವು­ದೆ­ಲ್ಲವು ಸಂತತ
ಚೆನ್ನ­ಕೇ­ಶವ ನಿನ್ನೊಳು ನಿಲಲಿ.

Tuesday, July 10, 2007

ಪೂರ್ಣವಿರಾಮ ಅಲ್ಲ, ಬರೀ ಕಾಮ


ಒಂದೆರಡು ತಿಂಗಳ ಮಟ್ಟಿಗೆ ಸತ್ತು ಹೋಗಬೇಕು. ಯಾರ ಕೈಗೂ ಸಿಗಬಾರದು. ಯಾರನ್ನೂ ಭೇಟಿಯಾಗಬಾರದು. ಯಾರ ಮಾತಿಗೂ ಬಲಿಬೀಳಬಾರದು. ಕಂಬಳಿಹುಳ ಕೋಶದೊಳಗೆ ಕೂತು ಧ್ಯಾನಸ್ಥವಾಗುವಂತೆ ಎಲ್ಲಾದರೂ ಕಣ್ಮರೆಯಾಗಿಬಿಡಬೇಕು.
ಹಾಗನ್ನಿಸುತ್ತದೆ ಎಷ್ಟೋ ಸಾರಿ.
ಸ್ವಾಮೀಜಿಗಳು ಇದನ್ನೇ ಚಾತುರ್ಮಾಸ ಅನ್ನುತ್ತಿದ್ದರು. ಅಷ್ಟೂ ದಿನ ಯಾರಿಗೂ ಸಿಗದಂತೆ ಏಕಾಂತದಲ್ಲಿರುತ್ತಿದ್ದರು. ಅವನ ಅನುಸಂಧಾನ ತಂತಮ್ಮ ಜೊತೆಗೋ ತಾವು ನಂಬಿದ ದೇವರ ಜೊತೆಗೋ ಇರುತ್ತಿತ್ತು. ಹೆಚ್ಚೆಂದರೆ ಅಕ್ಪರದ ಜೊತೆಗೆ, ಕಾವ್ಯದ ಜೊತೆಗೆ.
ಆದರೆ ನಾಲ್ಕು ನಿಮಿಷ ಸುಮ್ಮನಿರಲಾಗುವುದಿಲ್ಲ. ಮೊಬೈಲು ಬೇಡ ಅಂತ ಆಫ್ ಮಾಡಿಟ್ಟರೂ ಆಗಾಗ ಆನ್ ಮಾಡಿ ಮೆಸೇಜಿದೆಯಾ ಅಂತ ಹುಡುಕುತ್ತದೆ ಮನಸ್ಸು. ಫೋನು ಬರದಿದ್ದರೆ, ಯಾರದೋ ದನಿ ಕೇಳಿಸದೇ ಹೋದರೆ, ರೇಡಿಯೋ ಗುಣುಗುಣಿಸದೇ ಇದ್ದರೆ ಜೀವಕ್ಕೆ ಬೇಸರವಾಗುತ್ತದೆ. ಐದನೇ ಕ್ಲಾಸಿನ ಹುಡುಗ ಪ್ರಬಂಧ ಬರೆಯುತ್ತಾನೆ; ಮಾನವನು ಸಮಾಜಜೀವಿ. ಆತ ಸಮಾಜದಿಂದ ದೂರವಾಗಿ ಒಂಟಿಯಾಗಿ ಬಾಳಲಾರ. ಐವತ್ತು ವರುಷಗಳ ಹಿಂದೆಯೂ ಅದನ್ನೇ ಬರೆಯುತ್ತಿದ್ದ. ಇವತ್ತೂ ಅದನ್ನೇ ಬರೆಯುತ್ತಿದ್ದಾರೆ. ಅದನ್ನೇ ಜಿಎಸ್ಎಸ್ ಕವಿತೆ ಮಾಡುತ್ತಾರೆ; ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ. ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ.
ಈ ಬೇಕು ಬೇಡಗಳ ನಡುವೆ ಬದುಕುವುದು ಹೇಗೆ? ನಿಜಕ್ಕೂ ಮನಸ್ಸಿಗೇನು ಬೇಕು? ಪ್ರೀತಿಯ, ಆಸರೆಯಾ, ನೌಕರಿಯಾ, ವಿರಾಮವಿರದ ದುಡಿಮೆಯಾ, ಒತ್ತಡವಾ, ಒಸಗೆಯಾ? ಎಲ್ಲವೂ ಬೇಕೆನಿಸುತ್ತದೆ. ಎಲ್ಲವೂ ಸಾಕೆನಿಸುತ್ತದೆ. ಸಾಕಪ್ಪ ಈ ದುಡಿತ, ಇದರಿಂದೆಲ್ಲ ಏನು ಸಾಸುವುದಕ್ಕಿದೆ. ಮೊಬೈಲು, ಸೈಟು, ಮನೆ, ಐಪಾಡು, ಲೆನೋವಾ, ಇನ್ನೋವಾ, ಕ್ಲಬ್ಬು ಮೆಂಬರ್ ಶಿಪ್ಪು, ಸ್ಕಾಚು, ಗೋಡಂಬಿ, ಗೆಳತಿ, ಎಸ್ಸೆಮ್ಮೆಸ್ಸು, ಗೆಳೆಯ, ಎಮ್ಮೆಮ್ಮೆಸ್ಸು, ಮೊಬೈಲಿನಲ್ಲಿ ಕೆಮರಾ, ಅದಕ್ಕೆ ಇಷ್ಟೆಲ್ಲ ಇದ್ದರೂ ಬೋರಾಗುತ್ತದಲ್ಲ ಬದುಕು? ಎಷ್ಟಿರಬೇಕು ದುರಹಂಕಾರ ಈ ಬದುಕಿಗೆ? ಎಷ್ಟಿರಬೇಡ ದುರಾಸೆ ಈ ಜೀವಕ್ಕೆ?
ಸಾಕು ಅಂತ ಕಾರೆತ್ತಿಕೊಂಡು ಕಾಡಿಗೆ ಹೊರಟರೆ ಕಾಡೂ ಕಾಡುತ್ತದೆ, ನಾಡಿಗಿಂತ ಭೀಕರವಾಗಿ. ಇಲ್ಲಿದ್ದರೆ ಕಾಡು ಬಾ ಅನ್ನುತ್ತದೆ. ಅಲ್ಲಿಗೆ ಹೋದರೆ ನಾಡು ಕರೆಯುತ್ತದೆ. ಒಂದು ಕ್ಪಣ ಸುಮ್ಮನೆ ಕುಳಿತರೆ ಅಪರಾಧೀ ಪ್ರಜ್ಞೆ. ಏನು ಮಾಡ್ತಾನೇ ಇಲ್ಲವಲ್ಲ ಎಂಬ ವಿಷಾದ, ಪಾಪಪ್ರಜ್ಞೆ. ದುಡಿಯುವುದೇ ಜೀವನ, ಬಿಡುವಾಗಿರುವುದೇ ಮರಣ ಅಂತ ನಂಬಿದವರ ಹಾಗೆ ನಮಗೆ ದುಡಿಯುವುದನ್ನು ಕಲಿಸಿದೆ ಬದುಕು. ಪ್ರಕೃತಿಯ ಕಣ್ಣಲ್ಲಿ ದುಡಿಯುವವರೂ ಒಂದೇ ದುಡಿಯದೇ ಇರುವವರೂ ಒಂದೆ. ದುಡಿಮೆ ಎನ್ನುವುದು ನಮ್ಮೊಳಗಿನ ಸ್ವಾರ್ಥ, ಗೆಲ್ಲುವ ಛಲ, ಮೀರುವ ದಾಹ, ಏರುವ ಮೋಹ ಕಲಿಸಿಕೊಟ್ಟ ವಿದ್ಯೆ. ಹಾಗೆ ನೋಡಿದರೆ ದುಡಿಯದಿರುವವನು ಬರೀ ಸೋಮಾರಿ. ದುಡಿಮೆಗಾರ ಅಪಾಯಕಾರಿ. ಯಾವುದೋ ಸಂಸ್ಥೆಯಲ್ಲಿ ಒಬ್ಬ ನೌಕರ ಕಷ್ಟಪಟ್ಟು ಹಗಲಿರುಳೂ ದುಡಿಯುತ್ತಿದ್ದಾನೆ ಅಂದರೆ ಹುಷಾರಾಗಿರಿ, ಅವನು ಒಂದಲ್ಲ ಒಂದು ದಿನ ಯಜಮಾನನಾಗೇ ಆಗುತ್ತಾನೆ.
ಮೊನ್ನೆ ಹೀಗೇ ಮಾತು; ಎಷ್ಟು ದುಡಿಯೋದು ದಿನಾ? ಯಾರಿಗೋಸ್ಕರ? ಯಾಕೆ ದುಡಿಯಬೇಕು? ಬರೀ ಬೋರು, ಬೇಜಾರು. ಹಾಗಂತ ಎಲ್ಲರಿಗೂ ಅನ್ನಿಸೋದಕ್ಕೆ ಶುರುವಾಗಿದೆ. ಅದೇನು ಸೀಸನ್ನಾ, ಟೆನ್ಷನ್ನಾ? ಅದೇ ಕೆಲಸ ಮಾಡುತ್ತಾ ಬಂದಿದ್ದೇವೆ ವರುಷಗಳಿಂದ. ಆದರೂ ಕೆಲಕಾಲ ಇದ್ದಕ್ಕಿದ್ದಂತೆ ಬೇಸರ ಕಾಡುತ್ತದೆ. ಎಲ್ಲಾದರೂ ಹೊರಟೇ ಬಿಡೋಣ ಅನ್ನಿಸುತ್ತದೆ. ಐ ನೀಡ್ ಎ ಬ್ರೇಕ್.
ವಿರಾಮ, ವಿಶ್ರಾಂತಿ ತೆಗೆದುಕೊಂಡು ಎಲ್ಲಿಗೆ ಹೋಗೋಣ. ಮಾನವನು ಸಂಘಜೀವಿ, ಆತ ಒಂಟಿಯಾಗಿ ಬಾಳಲಾರ! ಎಲ್ಲಿಗೆ ಹೋದರೂ ಇದೇ ಮಂದಿ ಹಿಂಬಾಲಿಸುತ್ತಾರೆ. ಬನ್ನಿ, ದುಡೀರಿ, ಕೊಡಿ, ಕೆಲಸ ಮಾಡಿ, ಸಾಸಿ, ಚೆನ್ನಾಗಿ ಬರೀರಿ, ಇನ್ನೂ ದುಡೀರಿ, ಬ್ಯಾಲೆನ್ಸ್ ಶೀಟ್ ಮುಗಿಸಿ, ವೆರಿಗುಡ್. ಕೀಪಿಟ್ ಅಪ್. ಮೆಚ್ಚುಗೆಯ ನುಡಿ. ದುಡಿಮೆಗೆ ಬೆಲೆ; ಸಂಬಳ, ಮೆಚ್ಚುಗೆ ಮತ್ತು ಮತ್ತಷ್ಟು ದುಡಿಮೆ.
The Grave Yard is full of inevitable people ಅಂತ ಯಾರೋ ಅಂದರು. ಸ್ಮಶಾನದ ತುಂಬ ನಾನು ತುಂಬ ಅನಿವಾರ್ಯ ಅಂದುಕೊಂಡವರ ಸಮಾಧಿ. ನಾವು ದುಡಿಯದೇ ಹೋದರೆ ಏನೇನೋ ಆಗುತ್ತದೆ ಅಂದುಕೊಳ್ಳುತ್ತೇವೆ. ತಾನು ನಟಿಸದೇ ಹೋದರೆ ಜನರಿಗೆ ಮನರಂಜನೆಯೇ ಸಿಗುವುದಿಲ್ಲ ಅಂತ ಸೂಪರ್ ಸ್ಟಾರ್ ಭಾವಿಸುತ್ತಾನೆ. ತಾನು ಹಾಡದೇ ಹೋದರೆ ಜನಗಣಮನ ಮೌನವಾಗುತ್ತದೆ ಎಂದು ಭಾವಿಸುತ್ತಾರೆ. ಹಾಗೆ ಏನೇನೋ ಅಂದುಕೊಂಡು ದುಡಿಯುತ್ತೇವೆ. ಹಣಕ್ಕೆ, ಹೆಸರಿಗೆ, ಸುಮ್ಮನಿರಲಾಗದ್ದಕ್ಕೆ. ಯಾವ ಪುರುಷಾರ್ಥಕ್ಕೆ ಅಂತ ಕೇಳಿದರೆ ಸಾಕು ಭಗವದ್ಗೀತೆ ಹಾಜರಾಗುತ್ತದೆ;
ಕರ್ಮಣ್ಯೇವಾಕಾರಸ್ತೇ. ಇದ್ಯಾವ ಕರ್ಮದ ರಸ್ತೆ!
*****
ಜೀವನ ಕೂಡ ಟರ್ನೋವರ್. ವ್ಯಾಪಾರಸ್ತರು ಬಳಸುವ ಪದ ಅದು. ಏನೂ ಸಂಪಾದನೆ ಇಲ್ಲ ಜಸ್ಟ್ ಟರ್ನೋವರ್ ಅಷ್ಟೇ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ. ಅದು ಇವರದೂ ಅಲ್ಲ, ಅವರದೂ ಅಲ್ಲ. ಅವರು ಏನನ್ನೂ ತಂದಿಲ್ಲ, ಏನನ್ನು ಒಯ್ಯುವುದೂ ಇಲ್ಲ. ತಂದಿದ್ದೆಲ್ಲವನ್ನು ಇಲ್ಲಿಂದಲೇ ತಂದಿದ್ದಾರೆ, ಕೊಟ್ಟದ್ದೆಲ್ಲ ಇಲ್ಲಿಗೇ ಕೊಟ್ಟಿದ್ದಾರೆ. ಕೊಡುವುದಕ್ಕೆ ಏನು ತಂದಿದ್ದೀಯಾ, ಹೋಗುವಾಗ ಏನು ಕೊಂಡೊಯ್ಯುತ್ತೀಯಾ? ಯಾರೂ ಸಂಗಡ ಬಾಹೋರಿಲ್ಲ! ಒಂಬತ್ತು ಬಾಗಿಲ ಮನೆಯೊಳಗೆ, ತುಂಬಿದ ಸಂದಣಿ ಇರಲು, ಕಂಬ ಮುರಿದು ಡಿಂಬ ಬಿದ್ದು, ಅಂಬರಕ್ಕೆ ಹಾರಿತಯ್ಯೋ..
ಗಿಣಿಯು ಪಂಜರದೊಳಿಲ್ಲ!
ಪ್ರಕೃತಿಗೆ ಗಿಳಿಯ ಚಿಂತೆಯಿಲ್ಲ. ಅಳಿವ ಚಿಂತೆಯಿಲ್ಲ. ಮುಂಜಾನೆ ಹೂವರಳಿ, ಸಂಜೆಗೆ ಬಾಡಿ ಉರುಳಿ, ಮತ್ತೆ ನಡುರಾತ್ರಿಯಿಂದ ನಸುಕಿನ ತನಕ ಮೊಗ್ಗೊಡೆದು ಬಿರಿದು.. ಕತ್ತಲಲ್ಲಿ ಬೆಳೆವುದೊಂದೆ ಕೆಲಸ. ನಸುಕು ಹರಿಯೆ ಮೃದುಹಾಸ. ಹಣ್ಣಿಗಿಲ್ಲ, ಚಿಗುರಿಗಿಲ್ಲ, ಮಳೆಗಿಲ್ಲ, ಗಾಳಿಗಿಲ್ಲ, ಗಾಳಿ ಸವರುವ ಮೋಡಕ್ಕೂ ಇಲ್ಲ ನಶ್ವರತೆಯ ಚಿಂತೆ, ಅಮರತ್ವದ ಆಶೆ. ಅದೇನಿದ್ದರೂ ನಮ್ಮ ಚಿಂತೆ. ಪ್ರಕೃತಿ ಮಾಡುವ ಯಾವ ಕೆಲಸವೂ ದುಡಿಮೆಯಲ್ಲ. ಹೂವಿಗೆ ಅರಳುವುದು ದುಡಿಮೆ ಅಲ್ಲ. ಬೀಜಕ್ಕೆ ಮೊಳಕೆ ಒಡೆಯುವುದು ದುಡಿಮೆ ಅಲ್ಲ. ಮೋಡ ಮಳೆಯಾಗುವುದು ದುಡಿಮೆಯಲ್ಲ. ಅವೆಲ್ಲ ಸಹಜ ಕ್ರಿಯೆಗಳು. ನಮಗೆ ಅಂಥ ಸಹಜ ಕ್ರಿಯೆಗಳೇ ಇಲ್ಲ. ಮುಂಜಾನೆದ್ದರೆ ಶುರುವಾಗುತ್ತದೆ ಕೆಲಸ. ನಿದ್ದೆ ಕೂಡ ದುಡಿಮೆ ಹೆಚ್ಚಿಸುವ ಕೆಲಸ.
****
ಒಂದು ದಿನ ಇದ್ಯಾವುದನ್ನೂ ಮಾಡದೇ ಕಳೆಯಬೇಕು. ದೈನಿಕದ ಎಲ್ಲ ವ್ಯವಹಾರ ಆವತ್ತು ಬಂದ್. ಆ ದಿನ ಪ್ರಕೃತಿಗೆ ಅರ್ಪಣೆ. ಎಚ್ಚರವಾದಾಗ ಎದ್ದು, ಇಷ್ಟಬಂದಲ್ಲಿ ನಡೆದಾಡಿ, ಸಿಕ್ಕಿದ್ದನ್ನು ತಿಂದು, ಸುಸ್ತಾದಾಗ ಮಲಗಿ, ಮನಸ್ಸನ್ನು ಅಂಡಲೆಯಲು ಬಿಟ್ಟು, ಕಂಡದ್ದನ್ನು ಕಣ್ತುಂಬಿಸಿಕೊಳ್ಳುತ್ತಾ, ನಾಳೆಯನ್ನು ಮರೆತು, ನಿನ್ನೆಯ ಜಗಳಗಳ ನೆನಪಿಸಿಕೊಳ್ಳದೆ, ಪ್ರಜ್ಞೆ ಮತ್ತು ಪರಿಸರದ ನಡುವಿನ ಸಂಬಂ`ವನ್ನು ಮರೆತು ಬದುಕುತ್ತಿರಬೇಕು.
ಒಂದು ಪ್ರಖ್ಯಾತ ಝೆನ್ ಹೇಳಿಕೆಯಿದೆ;Sitting quietly doing nothing and the grass grows by itself. ಸುಮ್ಮನಿರು, ಏನೂ ಮಾಡದಿರು. ಗರಿಕೆ ಹುಲ್ಲು ತಾನಾಗೇ ಬೆಳೆಯುತ್ತದೆ.
ಇದನ್ನು ನಂಬಿಕೊಂಡು ಕೂರುವ ಹೊತ್ತಿಗೇ ಮತ್ತೊಂದು ಝೆನ್ ಹೇಳಿಕೆ ನೆನಪಾಗುತ್ತದೆ; ವರುಷಗಳಿಂದ ಮನೆ ಸೋರುತ್ತಿತ್ತು, ಒಂದು ಹೆಂಚು ಸರಿಪಡಿಸಿ, ರಿಪೇರಿ ಮಾಡಿದೆ.
ಎಲ್ಲಿ ನಿಷ್ಕ್ರಿಯನಾಗಿರಬೇಕೋ ಅಲ್ಲಿ ನಿಷ್ಕ್ರಿಯನಾಗಿರು, ಎಲ್ಲಿ ಕಾರ್ಯೋನ್ಮುಖನಾಗಬೇಕೋ ಅಲ್ಲಿ ಕಾರ್ಯೋನ್ಮುಖನಾಗು. ಆದರೆ ಇವೆರಡರ ನಡುವಿನ ವ್ಯತ್ಯಾಸ ಕಂಡುಕೊಳ್ಳುವುದು ಹೇಗೆ?
ಮುದುಕಿಯೊಬ್ಬಳು ನಡುರಾತ್ರಿ ಕೊಡದಲ್ಲಿ ನೀರು ತರುತ್ತಿದ್ದಳು. ಚಂದ್ರ ತನ್ನ ಕೊಡದೊಳಗಿದ್ದಾನೆ ಎಂದು ಬೀಗುತ್ತಿದ್ದಳು. ಬಿದ್ದು ಕೊಡ ಒಡೆಯಿತು. ಒಳಗಿದ್ದ ಚಂದ್ರಬಿಂಬವೂ ಮಾಯವಾಯಿತು.
No Water, No Moon
ಅಷ್ಟೇ. ಎಷ್ಟೇ ಮಾಡಿದರೂ ಕೊನೆಗೆ ನೋ ವಾಟರ್, ನೋ ಮೂನ್. ಮಾಡದೇ ಹೋದರೆ ಮಾಡು ಸೋರುತ್ತದೆ. ಮಾಡು ಸೋರಿದರೆ ಮನೆಯೊಳಗೆ ಹುಲ್ಲು ಮೊಳೆಯುತ್ತದೆ. ಹುಲ್ಲು ಮೊಳೆಯುವುದನ್ನು ನೋಡುತ್ತಾ ಕೂತರೆ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂದು ಅನುಮಾನವಾಗುತ್ತದೆ.

Sunday, July 8, 2007

ಗೆಳೆಯರ ಪ್ರೀತಿಯ ಒಂದು ಕ್ಷಣ
ನನಗೆ ತುಂಬ ಖುಷಿಕೊಟ್ಟ ಕ್ಷಣ ಅದು. ನನ್ನನ್ನು ಪತ್ರಿಕೋದ್ಯಮಕ್ಕೆ ಕರೆತಂದ ಪರಮಗುರು ರವಿ ಬೆಳಗೆರೆ, ಈಗ ನಾನು ಕೆಲಸ ಮಾಡುತ್ತಿರುವ ಕನ್ನಡ ಪ್ರಭವನ್ನು ನಾನು ಮತ್ತಷ್ಟು ಪ್ರೀತಿಸುವುದಕ್ಕೆ ಕಾರಣರಾದ ಸಂಪಾದಕ ಎಚ್. ಆರ್. ರಂಗನಾಥ್, ನಾನು ತುಂಬ ಮೆಚ್ಚುವ ನಾಟಕಕಾರ ಮತ್ತು ನಿರ್ದೇಶಕ ಟಿ. ಎನ್. ಸೀತಾರಾಮ್ ನನ್ನ ಕತೆಗಳ ಸಂಕಲನವನ್ನು ಬಿಡುಗಡೆ ಮಾಡಿದರು.
ಮುಂದಿನದು ದೇವರಾ ಚಿತ್ತ...

Tuesday, July 3, 2007

ಕನ್ನಡಿ ಒಳಗೆ ಗಳಗನಾಥರಿರಲಿಲ್ಲ...


ಗಳ­ಗ­ನಾ­ಥರು ಬೆಚ್ಚಿ­ಬಿ­ದ್ದರು!
ಯಾವ­ತ್ತಿನ ಹಾಗೆ ಕನ್ನ­ಡಿಯ ಮುಂದೆ ಹೋಗಿ ನಿಂತ ಗಳ­ಗ­ನಾ­ಥ­ರಿಗೆ ಕನ್ನ­ಡಿ­ಯಲ್ಲಿ ಪ್ರತಿ­ಬಿಂಬ ಕಾಣಿ­ಸ­ಲಿಲ್ಲ. ಕಣ್ಣು ಮಂಜಾ­ಗಿದೆ ಅನ್ನಿಸಿ ಹೊಸ­ಕಿ­ಕೊಂಡು ನೋಡಿ­ದರು. ಆದರೂ ಪ್ರತಿ­ಬಿಂಬ ಕಾಣಿ­ಸ­ಲಿಲ್ಲ. ಗಾಬ­ರಿ­ಯಿಂದ ಕಿಟ­ಕಿ­ಯಾಚೆ ನೋಡಿ­ದರು. ಹೊರಗೆ ದೂರ­ದಲ್ಲಿ ಸ್ವಸ್ಥ ನಿಂತ ಗುಡ್ಡ, ಅದರ ತುತ್ತ­ತು­ದಿ­ಯಲ್ಲಿ ಯಾರ ಹಂಗಿ­ಲ್ಲದೆ ಬೆಳೆದ ತಾಳೆ­ಮರ, ಅದರ ಬುಡ­ದಲ್ಲಿ ಚೌಡೇ­ಶ್ವ­ರಿಯ ಗುಡಿ, ಬೆಟ್ಟದ ತಡಿ­ಯಲ್ಲಿ ನಸು­ಕಂ­ದು­ಬ­ಣ್ಣದ ಹೂಮು­ಡಿದ ರೆಂಜೆ ಮರ, ಅದರ ಬುಡ­ದಲ್ಲಿ ಹರಿ­ಯು­ತ್ತಿ­ರುವ ಹೆಸ­ರಿ­ಲ್ಲದ ಹಳ್ಳ... ಎಲ್ಲವೂ ಸ್ಪಷ್ಟ­ವಾಗಿ ಕಾಣಿ­ಸಿತು.
ಮತ್ತೆ ಕನ್ನಡಿ ನೋಡಿ­ಕೊಂ­ಡರು. ಕನ್ನಡಿ ಕಣ್ಣಿಗೆ ಬಿತ್ತು;ಕ­ನ್ನ­ಡಿ­ಯೊ­ಳಗೆ ಗಳ­ಗ­ನಾ­ಥ­ರಿ­ರ­ಲಿಲ್ಲ. ಎಡ­ವನ್ನು ಬಲ­ಮಾಡಿ, ಬಲ­ವನ್ನು ಎಡ­ಮಾಡಿ ತೋರಿ­ಸುವ ಕನ್ನಡಿ ಆವತ್ತು ತನ್ನ ಮುಂದೆ ಗಳ­ಗ­ನಾ­ಥರು ನಿಂತೇ ಇಲ್ಲ­ವೇನೋ ಎಂಬಂತೆ ನಿರ್ಲಿ­ಪ್ತ­ವಾ­ಗಿ­ದ್ದೇಕೆ ಅನ್ನು­ವುದು ಗಳ­ಗ­ನಾ­ಥ­ರನ್ನು ಕಾಡ­ತೊ­ಡ­ಗಿತು. ಕೈಯೆ­ತ್ತಿ­ದ್ದರು, ಹೆಗ­ಲಿಗೆ ಹಾಕಿ­ಕೊಂ­ಡಿದ್ದ ಬೈರಾ­ಸನ್ನು ಕನ್ನಡಿ ಮುಂದೆ ಹಿಡಿ­ದರು, ಒಂದು ಹೆಜ್ಜೆ ಹಿಂದೆ ನಿಂತು ಕನ್ನ­ಡಿ­ಯಲ್ಲಿ ಬೇರೇ­ನಾ­ದರೂ ಕಾಣು­ತ್ತದಾ ನೋಡಿ­ದರು.
ಗಳ­ಗ­ನಾ­ಥ­ರೊ­ಬ್ಬ­ರನ್ನು ಬಿಟ್ಟು ಕನ್ನಡಿ, ಎಲ್ಲ­ವನ್ನೂ ಪ್ರತಿ­ಫ­ಲಿ­ಸು­ತ್ತಿತ್ತು. ಬಾಗಿ­ದಾಗ ಹೆಂಚು ಹೊದೆ­ಸಿದ ಮಾಡು, ವಾರೆ­ಯಾಗಿ ನೋಡಿ­ದಾಗ ಮೂಲೆ­ಯ­ಲ್ಲಿದ್ದ ಮಂಚ ಎಲ್ಲವೂ ಸ್ಪಷ್ಟ­ವಾಗಿ ಕಾಣು­ತ್ತಿತ್ತು. ಕನ್ನಡಿ ಯಾಕೋ ತನ್ನನ್ನು ಹಿಡಿ­ದಿ­ಡಲು ಹಿಂಜ­ರಿ­ಯು­ತ್ತಿದೆ ಅನ್ನಿಸಿ ಗಳ­ಗ­ನಾ­ಥ­ರಿಗೆ ಅವ­ಮಾ­ನ­ವಾ­ಯಿತು.
ಅಷ್ಟಕ್ಕೂ ತಾನೇನು ಮಾಡಿ­ದ್ದೇನೆ ಅಂತ ಗಳ­ಗ­ನಾ­ಥರು ಕನ್ನಡಿ ಮುಂದೆ ನಿಂತೇ ಯೋಚಿ­ಸ­ತೊ­ಡ­ಗಿ­ದರು. ಒಳಗೆ ಹೆಂಡತಿ ಅಡು­ಗೆಯ ಸಿದ್ಧ­ತೆ­ಯ­ಲ್ಲಿ­ದ್ದ­ವಳು ಮೂರ­ನೆಯ ಮಗ­ಳಿಗೆ ದಬ­ದಬ ಬಡಿ­ಯು­ತ್ತಿ­ದ್ದಳು. ಮೊದಲ ಮಗಳು ಕಾಲೇ­ಜಿಗೆ ಹೊರ­ಡಲು ಸಿದ­್ಧ­ಳಾ­ಗುತ್ತಾ ಗಳ­ಗ­ನಾ­ಥರು ಕ್ಷೌರ ಮುಗಿಸಿ ಕನ್ನಡಿ ಬಿಟ್ಟೇ­ಳು­ವು­ದನ್ನೇ ಕಾಯು­ತ್ತಿ­ದ್ದಳು. ಗಳ­ಗ­ನಾ­ಥರು ಅನು­ಮಾ­ನದ ಪ್ರಾಣಿ­ಯಂತೆ ಮತ್ತೆ ಮತ್ತೆ ಕನ್ನಡಿ ನೋಡು­ವು­ದನ್ನು ನೋಡಿ ಬೇಜಾ­ರಾಗಿ ` ಸಾಕು, ಬಾರಪ್ಪಾ, ನಾನು ಕಾಲೇ­ಜಿಗೆ ಹೊರ­ಡ­ಬೇಕು' ಅನ್ನುತ್ತಾ ಅವ­ರನ್ನು ಪಕ್ಕಕ್ಕೆ ಕರೆ­ದಳು.
ಗಳ­ಗ­ನಾ­ಥರು ಮಗಳು ಮೇಕಪ್ಪು ಮಾಡಿ­ಕೊ­ಳ್ಳು­ವು­ದನ್ನು ದೂರ ನಿಂತು ಗಮ­ನಿ­ಸಿ­ದರು. ಅವ­ಳಿಗೆ ಅವಳ ಪ್ರತಿ­ಬಿಂಬ ಕಾಣು­ತ್ತಿದೆ ಅನ್ನು­ವುದು ಅವಳ ಭಾವ­ಭಂ­ಗಿ­ಯಿಂ­ದಲೇ ತಿಳಿ­ಯು­ತ್ತಿತ್ತು. ತುಟಿ­ಯನ್ನು ಅಗ­ಲಿಸಿ ಲಿ್­ಸ್ಟಿಕ್ಕು ಮೆತ್ತಿ­ಕೊಂಡು ಆಮೇಲೆ ಎರಡೂ ತುಟಿ­ಯನ್ನು ಒತ್ತಿ­ಕೊಂಡು ತುಟಿ­ಯಾ­ಚೆಗೆ ಸರಿದ ಲಿ್­ಸ್ಟಿ­ಕ್ಕನ್ನು ಟವ­ಲಿನ ಚುಂಗಿ­ನಿಂದ ವರೆ­ಸಿ­ಕೊಂಡು ಕಣ್ಣನ್ನು ವಿಕಾರ ಮಾಡಿ ಕಣ್ಕಪ್ಪು ಹಚ್ಚಿ­ಕೊಂಡು ಮುಂಗು­ರುಳು ತೀಡಿ­ಕೊ­ಳ್ಳುತ್ತಾ ಇದ್ದ ಮಗ­ಳನ್ನು ಕನ್ನಡಿ ಕಣ್ತುಂ­ಬಿ­ಕೊಂ­ಡಿದೆ. ಹಾಗಿ­ದ್ದರೆ ಆಗ ತಾನು ಕನ್ನಡಿ ನೋಡಿದ್ದೇ ಸುಳ್ಳಿ­ರ­ಬೇಕು. ಅದು ತನ್ನನ್ನು ನಿರಾ­ಕ­ರಿ­ಸಿದ್ದೇ ಸುಳ್ಳಿ­ರ­ಬೇಕು. ನೋಡಿಯೇ ಬಿಡೋಣ ಅಂತ ಗಳ­ಗ­ನಾ­ಥರು ಛಂಗನೆ ಕನ್ನಡಿ ಮುಂದೆ ಜಿಗಿ­ದರು. ಅವರು ಜಿಗಿದ ರಭ­ಸಕ್ಕೆ ಕನ್ನಡಿ ಮುಂದೆ ನಿಂತಿದ್ದ ಮಗಳು ಅನಾ­ಮ­ತ್ತಾಗಿ ಪಕ್ಕಕ್ಕೆ ಸರಿದು ಅಪ್ಪ­ನನ್ನು ಗದ­ರಿ­ಕೊಂ­ಡಳು.
ಗಳ­ಗ­ನಾ­ಥ­ರಿಗೆ ಕನ್ನ­ಡಿ­ಯೊ­ಳಗೆ ಗಳ­ಗ­ನಾ­ಥರು ಕಾಣಿ­ಸ­ಲಿಲ್ಲ.
ಅಪ್ಪ ಇವ­ತ್ಯಾಕೆ ಇಷ್ಟು ಹೊತ್ತು ಕನ್ನಡಿ ಮುಂದೆ ನಿಂತಿ­ದ್ದಾರೆ ಅಂತ ಅಚ್ಚ­ರಿ­ಪ­ಡುತ್ತಾ ಮಗಳು ಅಪ್ಪನ ಮುಖ ನೋಡು­ತ್ತಲೇ ಗಾಬ­ರಿ­ಯಾ­ದಳು. `ಇ­ದ್ಯಾ­ಕಪ್ಪಾ ನಿನ್ನ ಮುಖ ಹಾಗಾ­ಗಿದೆ. ರಾತ್ರಿ ನಿದ್ದೆ ಮಾಡಿಲ್ವಾ. ಕಣ್ಣು ನೋಡು, ಎಷ್ಟೊಂದು ಕೆಂಪ­ಗಿದೆ' ಅಂದಳು. ಗಳ­ಗ­ನಾ­ಥ­ರಿಗೆ ಮತ್ತಷ್ಟು ಗಾಬ­ರಿ­ಯಾ­ಯಿತು. `ಯಾಕೇ, ಏನಾ­ಗಿದ್ಯೇ' ಅಂತ ಕೇಳಿ­ದರು ಗಳ­ಗ­ನಾ­ಥರು. `ನಂಗೆ ನೋಡೋ­ಕ್ಕಾ­ಗಲ್ಲ... ನೀವೇ ಒಂದ್ಸಾರಿ ಕನ್ನ­ಡೀಲಿ ಮುಖ ನೋಡ್ಕೊ­ಳ್ಳೀಪ್ಪಾ' ಎನ್ನುತ್ತಾ ಮಗಳು ಪುಸ್ತಕ ಹಿಡ­ಕೊಂಡು ಬೀದಿಗೆ ಬಿದ್ದಳು.
**­*­**
ಆವ­ತ್ತಿಡೀ ಗಳ­ಗ­ನಾ­ಥ­ರನ್ನು ಕನ್ನಡಿ ಕಾಡಿತು. ಎದು­ರಿಗೆ ಸಿಕ್ಕ­ವ­ರೆಲ್ಲ `ಇ­ದೇನು ಹೀಗಾ­ಗಿ­ಹೋ­ಗಿ­ದ್ದೀರಿ, ಆರೋಗ್ಯ ಸರಿ­ಯಿಲ್ವೇ' ಅಂತ ಕೇಳಿ ಕೇಳಿ ಸತಾ­ಯಿ­ಸಿ­ದರು. ಹೇಗಾ­ಗಿ­ದ್ದೀನಿ ಅಂತ ನೋಡಿ­ಕೊ­ಳ್ಳಲು ಕನ್ನಡಿ ಮುಂದೆ ನಿಂತರೆ ಕನ್ನ­ಡಿ­ಯಲ್ಲಿ ತನ್ನ ಮುಖ ಮಾತ್ರ ಕಾಣಿ­ಸು­ತ್ತಿ­ರ­ಲಿಲ್ಲ. ಮನೆಯ ಕನ್ನ­ಡಿ­ಯೊಂದೇ ತನಗೆ ಕೈಕೊ­ಟ್ಟಿ­ರ­ಬೇಕು ಅಂದು­ಕೊಂಡು ಗಳ­ಗ­ನಾ­ಥರು ತಾನು ಸಾಮಾ­ನ್ಯ­ವಾಗಿ ಹೋಗುವ ಗೋವಿಂ­ದನ ಕ್ಷೌರ­ದಂ­ಗ­ಡಿಗೆ ಹೋದರು. ಗೋವಿಂದ ಅಂಗಡಿ ತುಂಬ ಕನ್ನ­ಡಿ­ಗ­ಳನ್ನು ಇಟ್ಟಿದ್ದ. ಒಂದು ಮುಖ­ವನ್ನು ಹತ್ತಾಗಿ ಇಪ್ಪ­ತ್ತಾಗಿ ತೋರಿ­ಸು­ವಂತೆ ಅವು­ಗ­ಳನ್ನು ಜೋಡಿ­ಸಿದ್ದ.
ಕ್ಷೌರ­ದಂ­ಗ­ಡಿಗೆ ಹೋಗು­ತ್ತಲೆ ಅವ­ರನ್ನು ಕುರ್ಚಿ­ಯಲ್ಲಿ ಕೂರಿ­ಸಿಯೇ ಬಿಟ್ಟ ಗೋವಿಂದ. ಗಳ­ಗ­ನಾ­ಥರು ಮತ್ತೊಮ್ಮೆ ಬೆಚ್ಚಿ­ಬಿ­ದ್ದರು. ಅವ­ರಿಗೆ ಖಾಲಿ ಖುರ್ಚಿ ಕಾಣು­ತ್ತಿತ್ತೇ ವಿನಃ ಅದ­ರಲ್ಲಿ ಕೂತ ಗಳ­ಗ­ನಾ­ಥರು ಕಾಣಿ­ಸ­ಲಿಲ್ಲ. ತಲೆಯ ಮೇಲ್ಗಡೆ ಗೋವಿಂ­ದನ ಕತ್ತರಿ ಆಡುವ ಸದ್ದು ಕೇಳಿ­ಸು­ತ್ತಿತ್ತು. ಮೈಮೇಲೆ ಕತ್ತ­ರಿ­ಸಿದ ಕೂದಲು ಬೀಳು­ತ್ತಿತ್ತು. ಆದರೆ ಕನ್ನಡಿ ಮೌನ­ವಾ­ಗಿತ್ತು. ಕನ್ನಡಿ ತನ್ನ ಮೇಲೆ ಯಾಕೋ ಮುನಿ­ಸಿ­ಕೊಂ­ಡಿದೆ ಅನ್ನಿಸಿ ಗಳ­ಗ­ನಾ­ಥ­ರಿಗೆ ಒಂಥ­ರದ ಭಯ ಕಾಡ­ತೊ­ಡ­ಗಿತು. ಇದ್ದ­ಕ್ಕಿದ್ದ ಹಾಗೆ ತಾನು ನಿಜ­ವಾ­ಗಿಯೂ ಇದ್ದೇನೋ ಇಲ್ಲವೋ ಅನ್ನುವ ಅನು­ಮಾನ ಕಾಡ­ತೊ­ಡ­ಗಿತು. ತಲೆ­ಬ­ಗ್ಗಿಸಿ ತಮ್ಮ ಕೈಕಾ­ಲು­ಗ­ಳನ್ನೂ ಹೊಟ್ಟೆ­ಯನ್ನೂ ನೋಡಿ­ಕೊಂ­ಡರು. ಗೋವಿಂದ ತಲೆ­ಯನ್ನು ಹಿಂದಕ್ಕೆ ಹಿಡಿ­ದೆತ್ತಿ ಕತ್ತ­ರಿ­ಸ­ತೊ­ಡ­ಗಿದ.
ಗೋವಿಂ­ದ­ನಿಗೆ ಕಾಸು ಕೊಟ್ಟು ಹೊರ­ಬಂ­ದಾಗ ಗಳ­ಗ­ನಾ­ಥ­ರಿಗೆ ಎಂಥ ಅನಾ­ಥ­ಪ್ರಜ್ಞೆ ಕಾಡ­ತೊ­ಡ­ಗಿತು ಅಂದರೆ ಇಡೀ ಜಗ­ತ್ತಿ­ನಲ್ಲಿ ತಾನು ಯಾರಿಗೂ ಕಾಣಿ­ಸು­ತ್ತಿ­ಲ್ಲ­ವೇನೋ ಅನ್ನುವ ಅನು­ಮಾನ ಕಾಡ­ತೊ­ಡ­ಗಿತು. ಇಂಥ ಸಮಸ್ಯೆ ಯಾರಿ­ಗಾ­ದರೂ ಎದು­ರಾ­ಗಿ­ದೆಯಾ? ಡಾಕ್ಟರ ಹತ್ತಿರ ಹೋದರೆ ಇದಕ್ಕೆ ಔಷಧಿ ಸಿಗ­ಬ­ಹುದಾ? ಇದು ಕಣ್ಣಿನ ದೋಷವೋ ಕನ್ನ­ಡಿಯ ದೋಷವೋ?
ಅದೇ ಹೊತ್ತಿಗೆ ಅವ­ರಿಗೆ ಶಾಸ್ತ್ರಿ­ಗಳು ನೆನ­ಪಾ­ದರು. ಶಾಸ್ತ್ರಿ ಮಹಾ್ ಪಂಡಿ­ತರು. ಆಯು­ರ್ವೇದ ಮತ್ತು ಜ್ಯೋತಿ­ಷ್ಯ­ಶಾಸ್ತ್ರ ಎರ­ಡನ್ನೂ ಬಲ್ಲ­ವರು. ಅವರ ಬಳಿಗೆ ಸ್ನಾನ ಮಾಡದೇ ಹೋಗು­ವಂ­ತಿ­ರ­ಲಿಲ್ಲ. ಗಳ­ಗ­ನಾ­ಥರು ಓಡೋಡಿ ಮನೆಗೆ ಬಂದು ಸ್ನಾನ ಮುಗಿ­ಸಿ­ದರು. ಸ್ನಾನ ಮಾಡುವ ಹೊತ್ತಿಗೆ ನೀರ ಹಂಡೆ­ಯ­ಲ್ಲಾ­ದರೂ ತನ್ನ ಮುಖ ಕಂಡೀತು ಅಂತ ಹಾರೈ­ಸಿ­ದರು; ಹಂಡೆಯ ನೀರು ಕಂಪಿ­ಸು­ತ್ತಿತ್ತು. ಅದ­ರೊ­ಳಗೆ ಯಾರ ಮುಖವೂ ಇರ­ಲಿಲ್ಲ.
**­*­**
ಶಾಸ್ತ್ರಿ­ಗಳ ಹತ್ತಿರ ಗಳ­ಗ­ನಾ­ಥರು ತಮ್ಮ ಸಮ­ಸ್ಯೆ­ಯ­ನ್ನೇನೂ ಹೇಳಿ­ಕೊ­ಳ್ಳ­ಲಿಲ್ಲ. ಕನ್ನ­ಡಿ­ಯಲ್ಲಿ ಮುಖ ಕಾಣು­ವು­ದಿಲ್ಲ ಅನ್ನು­ವು­ದನ್ನು ಹೇಳಿ­ಕೊ­ಳ್ಳು­ವುದು ಹೇಗೆ ಅನ್ನುವ ಪ್ರಶ್ನೆ­ಗಿನ್ನೂ ಅವ­ರಿಗೆ ಉತ್ತರ ಸಿಕ್ಕಿ­ರ­ಲಿಲ್ಲ. ಹೀಗೆ ತಮ್ಮ ಕೆಮ್ಮು, ಬೆನ್ನು ನೋವು­ಗಳ ಬಗ್ಗೆ ಮಾತಾ­ಡಿ­ದರು. ಮೊದ­ಲನೆ ಮಗ­ಳಿಗೆ ಯಾವ ಕಡೆಯ ಗಂಡು ಸಿಗ­ಬ­ಹುದು ಅಂತ ವಿಚಾ­ರಿ­ಸಿ­ದರು.
ಕೊನೆ­ಯಲ್ಲಿ ಎದ್ದು ಬರು­ವಾಗ ಗಳ­ಗ­ನಾ­ಥರು ಕೇಳಿ­ಯೇ­ಬಿ­ಟ್ಟರು.`ಶಾ­ಸ್ತ್ರಿ­ಗಳೇ. ಮೊನ್ನೆ ನಮ್ಮ ಹಳೆಯ ಪರಿ­ಚ­ಯದ ಒಬ್ಬರು ಸಿಕ್ಕರು. ಅವ­ರ­ದ್ದೊಂದು ವಿಚಿತ್ರ ಸಮಸ್ಯೆ. ಕನ್ನಡಿ ಮುಂದೆ ನಿಂತರೆ ಅವ­ರಿಗೆ ಅವರ ಮುಖ ಕಾಣಿ­ಸೋ­ದಿ­ಲ್ಲ­ವಂತೆ' ಅಂದರು.
ಶಾಸ್ತ್ರಿ­ಗಳು ಒಂಚೂರೂ ಯೋಚಿ­ಸದೇ ಹೇಳಿ­ದರು; `ಆ ಹೊತ್ತಿಗೆ ಅದು ಹಾಗೇ' ಎನ್ನುತ್ತಾ ಶಾಸ್ತ್ರಿ­ಗಳು ಎದ್ದು ಒಳಗೆ ಹೋದರು.
ಆ ಹೊತ್ತಿಗೆ ಅಂದರೆ ಯಾವ ಹೊತ್ತಿಗೆ? ಸಾಯುವ ಕಾಲಕ್ಕೆ ಎಂದಿ­ರ­ಬ­ಹುದೇ? ಸತ್ತ ಮೇಲೆ ಈ ದೇಹ ಇರು­ವು­ದಿ­ಲ್ಲ­ವಂತೆ. ಮನಸ್ಸು ಮಾತ್ರ ಓಡಾ­ಡುತ್ತಾ ಇರು­ತ್ತ­ದಂತೆ. ಹಾಗಿ­ದ್ದರೆ ತಾನು ಸತ್ತು ಹೋಗಿ­ರ­ಬ­ಹುದೇ? ಹಾಗಿ­ದ್ದರೆ ಬೇರೆ­ಯ­ವ­ರಿಗೆ ಯಾಕೆ ಕಾಣಿ­ಸು­ತ್ತಿ­ದ್ದೇನೆ? ಅವರ ಪಾಲಿಗೆ ಬದುಕಿ, ತನ್ನ ಪಾಲಿಗೆ ಸತ್ತು ಹೋಗಿ­ದ್ದೇನಾ?
ಹಾಗಾ­ಗಲು ಸಾಧ್ಯವೇ? ಇನ್ನೊ­ಬ್ಬ­ರಿ­ಗಷ್ಟೇ ಯಾರಾ­ದರೂ ಬದು­ಕಿ­ರು­ತ್ತಾರಾ? ಹಾಗಿ­ದ್ದರೆ ನನ­ಗಷ್ಟೇ ಬದು­ಕಿದ್ದು, ಇನ್ನೊ­ಬ್ಬರ ಪಾಲಿಗೆ ಸತ್ತಂ­ತಿ­ದ್ದರೆ ನಾನು ನನಗೆ ಮಾತ್ರ ಕಾಣಿ­ಸು­ತ್ತೇನಾ?
ಗಳ­ಗ­ನಾ­ಥರು ಯೋಚಿ­ಸು­ತ್ತಲೇ ಮನೆಗೆ ಬಂದರು. ಕೊನೆಯ ಬಾರಿಗೆ ಕನ್ನಡಿ ಮುಂದೆ ನಿಂತು ಮುಖ ನೋಡಿ­ಕೊ­ಳ್ಳು­ತ್ತೇನೆ. ಬಹುಶಃ ಈಗ ಕಾಣಿ­ಸಿ­ದರೂ ಕಾಣಿ­ಸ­ಬ­ಹುದು ಅಂತ ಆಶೆ­ಪ­ಟ್ಟರು. ಅಂಗ­ಳಕ್ಕೆ ಬಂದು ಕಾಲು­ತೊ­ಳೆದು ಬಾಗಿಲು ತಟ್ಟಿ­ದರು. ಬಾಗಿಲು ತೆರೆ­ದು­ಕೊಂ­ಡಿತು.
ನೇರ­ವಾಗಿ ಒಳಗೆ ಹೋಗಿ ಕನ್ನಡಿ ಮುಂದೆ ನಿಂತರು. ಕನ್ನ­ಡಿ­ಯೊ­ಳಗೆ ಯಾರೂ ಕಾಣಿ­ಸ­ಲಿಲ್ಲ. ಮತ್ತೆ ಮತ್ತೆ ದಿಟ್ಟಿ­ಸಿ­ನೋ­ಡಿ­ದರೆ ಅದ­ರೊ­ಳಗೆ ನಿಧಾ­ನ­ವಾಗಿ ಹೆಂಡ­ತಿಯ ಮುಖ ಕಾಣಿ­ಸಿತು.
ಗಳ­ಗ­ನಾ­ಥರು ತಿರುಗಿ ನೋಡಿ­ದರು. ಆಗಷ್ಟೇ ಸ್ನಾನ­ಮು­ಗಿಸಿ ಒದ್ದೆ ಕೂದ­ಲಿ­ಗೊಂದು ಟವ್ ಕಟ್ಟಿ­ಕೊಂಡು ಕುಂಕುಮ ಇಡುತ್ತಾ ಹೆಂಡತಿ ನಿಂತಿ­ದ್ದಳು. ಎದು­ರಿಗೇ ನಿಂತ ತನ್ನನ್ನು ನೋಡಿ­ದರೂ ನೋಡದ ಹಾಗೆ ಸುಮ್ಮ­ನಿ­ದ್ದ­ವ­ಳನ್ನು ಕಂಡು ಗಳ­ಗ­ನಾ­ಥ­ರಿಗೆ ಗಾಬ­ರಿ­ಯಾ­ಯಿತು. ಏನೋ ಹೇಳಲು ಯತ್ನಿ­ಸಿ­ದರು. ಏನೂ ಹೇಳ­ಲಿಲ್ಲ ಅನ್ನಿ­ಸಿತು.
ಹೆಂಡತಿ ಒದ್ದೆ ಕೂದ­ಲನ್ನು ಬಿಚ್ಚಿ ಹರ­ವಿ­ಕೊ­ಳ್ಳುತ್ತಾ ಮಗ­ಳನ್ನು ಕೇಳಿ­ದಳು;
ಅಪ್ಪ ಎಲ್ಲಿಗೆ ಹೋಗ್ತೀನಿ ಅಂದ್ರು?
ಮಗಳು ಒಬ್ಬಳೇ ಕೂತು ಚೌಕಾ­ಭಾರ ಆಡು­ತ್ತಿ­ದ್ದ­ವಳು;
`ನಂ­ಗೊ­ತ್ತಿಲ್ಲ' ಅಂದಳು.

ಗೆಳೆಯರೇ,

ಈ ಭಾನುವಾರ, ಜುಲೈ 8,2007, ಬೆಳಗ್ಗೆ ಹತ್ತೂವರೆಗೆ ನನ್ನ ಕಥಾಸಂಕಲನ ಬಿಡುಗಡೆ. ರವಿ ಬೆಳಗೆರೆ ಪುಸ್ತಕ ಬಿಡುಗಡೆ ಮಾಡುತ್ತಾರೆ. ಟಿಎನ್ ಸೀತಾರಾಮ್ ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಎಚ್ ಆರ್ ರಂಗನಾಥ್ ಅಧ್ಯಕ್ಷತೆ ವಹಿಸುತ್ತಾರೆ. ಇಪ್ಪತ್ತೊಂದು ಕತೆಗಳಿರುವ ಆ ಸಂಕಲನದ ಒಂದು ಕತೆ ಇದು. ಸೂರಿ ಮುನ್ನುಡಿ ಮತ್ತು ವಿವೇಕ ಶಾನಭಾಗ ಬೆನ್ನುಡಿ ಬರೆದಿದ್ದಾರೆ. ಅಂಕಿತದ ಕಂಬತ್ತಳ್ಳಿ ಪ್ರಕಾಶ್ ಪುಸ್ತಕ ಹೊರತಂದಿದ್ದಾರೆ.ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬಿಡುಗಡೆ.
ದಯವಿಟ್ಟು ಬನ್ನಿ.