Saturday, September 29, 2007

ಶಚೀತೀರ್ಥದಾಳದಲ್ಲಿ ಶಕುಂತಲೆಯ ಉಂಗುರ..


ಶಾಪಗ್ರಸ್ತರ ಪೈಕಿ ಅತ್ಯಂತ ಕುತೂಹಲಕಾರಿ ಕತೆಯೆಂದರೆ ಶಕುಂತಲೆಯದು. ಈ ಕತೆಯೊಳಗೆ ಪ್ರೇಮ, ವಿರಹ, ತಂದೆ-ಮಗಳ ಪ್ರೀತಿ, ಗೆಳೆತನ, ಮರೆವು ಎಲ್ಲವೂ ಬರುತ್ತದೆ. ಪ್ರೇಮದಷ್ಟೇ ಕ್ರೌರ್ಯ, ಸಾತ್ವಿಕತೆಯಷ್ಟೇ ದರ್ಪ ತುಂಬಿಕೊಂಡಿರುವ ಕತೆಯಿದು.
ಶಕುಂತಲೆಯ ಹುಟ್ಟಿನಿಂದ ಆಕೆಯ ಕತೆ ಆರಂಭವಾಗುತ್ತದೆ. ವಿಶ್ವಾಮಿತ್ರ ಮತ್ತು ಮೇನಕೆಯರ ಪ್ರಣಯಕ್ಕೆ ಹುಟ್ಟಿದ ಬೇಡದ ಕೂಸು ಶಕುಂತಲಾ. ಆಕೆಗೆ ಬಹುಶಃ ಹೆತ್ತವರು ಹೆಸರಿಡಲೇ ಇಲ್ಲ. ವಿಶ್ವಾಮಿತ್ರನಿಗೆ ತನ್ನ ತಪಸ್ಸಿನ ಫಲವನ್ನು ಕಳೆದುಕೊಳ್ಳವುದಕ್ಕೆ ಕಾರಣವಾದ ಮೋಹದ ಫಲ ಬೇಡವಾಗಿತ್ತು. ಮೇನಕೆಗೆ ತನ್ನ ಕರ್ತವ್ಯ ಮುಗಿಸುವುದಷ್ಟೇ ಬೇಕಿತ್ತು. ಹೀಗೆ ಇಬ್ಬರೂ ಕೈಬಿಟ್ಟು ಹೋದ ಮಗುವನ್ನು ಶಕುಂತ ಪಕ್ಪಿಗಳು ಪೋಷಿಸಿದವು. ಹೀಗಾಗಿ ಅವಳನ್ನು ಶಕುಂತಲಾ ಎಂದು ಕಣ್ವ ಮಹರ್ಷಿಗಳು ಕರೆದರು. ಸಾಕಿ ಬೆಳೆಸಿದರು.
ಮುಂದೆ ಶಕುಂತಲಾ ಮತ್ತು ದುಷ್ಯಂತರ ನಡುವೆ ಪ್ರಣಯಾಂಕುರವಾದದ್ದು ಇಬ್ಬರೂ ಒಂದಾದದ್ದು ದುಷ್ಯಂತ ಆಕೆಗೆ ಉಂಗುರ ಕೊಟ್ಟದ್ದು ಬೇರೊಂದು ಕತೆ.
ವಿಶ್ವಾಮಿತ್ರನೂ ಋಷಿ. ಸಾಕಿದ ಕಣ್ವರೂ ಮುನಿಗಳೇ. ಹೀಗೆ ಹೆತ್ತವರೂ ಸಾಕಿದವರೂ ಋಷಿಗಳೇ ಆಗಿದ್ದರೂ ಶಾಕುಂತಲೆಗೆ ಮತ್ತೊಬ್ಬ ಋಷಿ-ದೂರ್ವಾಸ- ಶಾಪ ಕೊಡುತ್ತಾನೆ.
ಇದು ಕಾಳಿದಾಸನ ಕಲ್ಪನೆ. ಇವತ್ತು ಜಾರಿಯಲ್ಲಿರುವುದು ಈ ಕಾಳಿದಾಸನ ಕಲ್ಪನೆಯ ಶಕುಂತಲೆಯೇ. ಆದರೆ ಮಹಾಭಾರತದಲ್ಲಿ ಬರುವ ಶಕುಂತಲೆಯ ಕತೆಯಲ್ಲಿ ಉಂಗುರದ ಪ್ರಸ್ತಾಪವೇ ಇಲ್ಲ. ಅಲ್ಲಿ ದೂರ್ವಾಸರ ಶಾಪದ ಪ್ರಸಂಗವೂ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಶಾಕುಂತಲೋಪಖ್ಯಾನದ ಎರಡು ಪ್ರಮುಖ ಪಾತ್ರಗಳಾದ ಪ್ರಿಯಂವದೆ ಎಂಬ ಸಖಿ ಮತ್ತು ಅನಸೂಯೆ ಎಂಬ ಮುನಿಕನ್ನಿಕೆಯರ ಪ್ರಸ್ತಾಪವೂ ಇಲ್ಲ.
ಆದರೆ ಮಹಭಾರತದಲ್ಲಿ ಬರುವ ಶಕುಂತಲೆಯ ಕತೆ ಪ್ರೇಮಕತೆಯೂ ಅಲ್ಲ, ವಿರಹದ ಕತೆಯೂ ಅಲ್ಲ. ದುಷ್ಯಂತ ಒಮ್ಮೆ ಕಣ್ವರ ನಿರ್ಜನವಾದ ಆಶ್ರಮಕ್ಕೆ ಬರುತ್ತಾನೆ. ಅಲ್ಲಿ ಶಕುಂತಲೆ ಎದುರಾಗುತ್ತಾಳೆ. ದುಷ್ಯಂತ ಆಕೆಯ ಕತೆ ಹೇಳಿ ಅವಳನ್ನು ಮೋಹಿಸುತ್ತಾನೆ. ಮೋಹಾವೇಶದಲ್ಲೂ ಶಕುಂತಲೆ ತನ್ನನ್ನು ತಾನು ಮರೆಯುವುದಿಲ್ಲ. ತನ್ನ ಮಗನಿಗೇ ರಾಜ್ಯ ಕೊಡುತ್ತೇನೆ ಎಂಬ ಭರವಸೆಯನ್ನು ಪಡೆದುಕೊಂಡೇ ಆಕೆ ದುಷ್ಯಂತನಿಗೆ ತನ್ನನ್ನು ಒಪ್ಪಿಸಿಕೊಳ್ಳುತ್ತಾಳೆ.
ಆಕೆಯ ಜೊತೆ ಕೆಲವು ದಿನ ಕಳೆದ ದುಷ್ಯಂತ ಅವಳನ್ನು ಶಾಸ್ತ್ರೋಕ್ತವಾಗಿ ಮದುವೆಯಾಗುತ್ತೇನೆ ಎಂದು ಹೇಳಿ ನಗರಕ್ಕೆ ಮರಳುತ್ತಾನೆ.
ಮುಂದೆ ಶಕುಂತಲೆ ಗರ್ಭಿಣಿಯಾದ ಮೂರು ವರುಷದ ನಂತರ ಆಕೆಗೆ ಮಗನು ಹುಟ್ಟುತ್ತಾನೆ. ಹುಟ್ಟುವಾಗಲೇ ನಾಲ್ಕು ಹಲ್ಲು, ಸಿಂಹದ ಮೈಕಟ್ಟು ಇರುವ ಬಾಲಕನಿಗೆ ಸರ್ವದಮನ ಎಂದು ಹೆಸರಿಡುತ್ತಾರೆ. ಈ ಮಧ್ಯೆ ದುಷ್ಯಂತ ಅವಳನ್ನು ಕರೆಯಿಸಿಕೊಳ್ಳುವ ಯೋಚನೆಯಲ್ಲಿದ್ದವನು ಕ್ರಮೇಣ ಅವಳನ್ನು ಮರೆತೇಬಿಡುತ್ತಾನೆ. ಆತನಿಗೆ ಹನ್ನೆರಡು ವರುಷವಾಗುತ್ತಿದ್ದಂತೆ ಶಕುಂತಲೇ ಆತನನ್ನು ಕರೆದುಕೊಂಡು ದುಷ್ಯಂತನ ಬಳಿಗೆ ಬರುತ್ತಾಳೆ. ಹದಿನೈದು ವರುಷಗಳ ನಂತರ ಬಂದ ಶಕುಂತಲೆಯನ್ನು ದುಷ್ಯಂತ ನಿರಾಕರಿಸುತ್ತಾನೆ. ಕೊನೆಗೆ ಆತ ಅವರನ್ನು ಒಪ್ಪಿಕೊಳ್ಳುತ್ತಾನೆ.
:::
ಶಾಪಗ್ರಸ್ತರಿಗೆ ವಿಮೋಚನೆಯಿಲ್ಲ. ಮಹಾಭಾರತದಲ್ಲಿ ಬರುವ ಪ್ರತಿಯೊಬ್ಬರೂ ಶಾಪಗ್ರಸ್ತರೇ. ಪರಶುರಾಮನಿಂದ ಕರ್ಣನಿಗೆ ಶಾಪ. ಊರ್ವಶಿಯಿಂದ ಅರ್ಜುನನಿಗೆ ಶಾಪ, ಮತ್ಯಾವುದೋ ಮುನಿಯಿಂದ ಕೃಷ್ಣನಿಗೆ ಶಾಪ, ಗೌತಮರಿಂದ ಇಂದ್ರನಿಗೆ ಶಾಪ, ಅವತಾರ ಎತ್ತುವಂತೆ ವಿಷ್ಣುವಿಗೆ ಶಾಪ, ಬ್ರಹ್ಮಕಪಾಲಿಯಾಗಿ ಭಿಕ್ಪೆ ಬೇಡುವಂತೆ ಶಿವನಿಗೆ ಶಾಪ, ನಾಲ್ಕು ತಲೆಯವನಾಗುವಂತೆ ಬ್ರಹ್ಮನಿಗೆ ಶಾಪ. ಅರಸರಿಗೂ ದೇವತೆಗಳನ್ನೂ ಶಾಪ ಬಿಡಲಿಲ್ಲ.
ಶಾಪದಷ್ಟೇ ವರವೂ ನಮ್ಮ ಪುರಾಣಗಳಲ್ಲಿವೆ. ಆದರೆ ವರದಿಂದ ಪಡೆದದ್ದರ ಬಗ್ಗೆ ಹೆಚ್ಚಿನ ವಿವರಣೆಯಿಲ್ಲ. ದಶರಥ ಮಾಡುವ ಪುತ್ರಕಾಮೇಷ್ಠಿ ಯಾಗದಿಂದ ಆತನಿದಂ ಪುತ್ರೋತ್ಸವ ಆಯಿತು ಅನ್ನುವುದನ್ನು ಕೇಳಿದ್ದೇವೆ. ಆದರೆ ಪುತ್ರಕಾಮೇಷ್ಠಿ ಅನ್ನುವುದರ ಅರ್ಥ ಮಕ್ಕಳನ್ನು ಹೊಂದುವ ಬಯಕೆಯನ್ನು ಸುಡುವುದು ಎಂದು. ನಮ್ಮ ಬಯಕೆಗಳನ್ನು ನೀಗಿಕೊಂಡಾಗ ಅದು ಈಡೇರುತ್ತದೆ ಅನ್ನುವುದು ತುಂಬ ಪ್ರಸಿದ್ಧವಾದ ನಂಬಿಕೆ. ನೀಗಿಕೊಂಡ ಮೇಲೆ ಪೂರೈಸಿದರೆ ಏನು ಫಲ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. ಆದರೆ ಫಲಾಫೇಕ್ಪೆಯಿಲ್ಲದೆ ಬಂದದ್ದನ್ನು ಅನುಭವಿಸಬೇಕು ಅನ್ನುವ ತತ್ವಜ್ಞಾನವೂ ಅಲ್ಲಿದೆ.
ಈ ಶಾಪ ಉಃಶಾಪಗಳ ಒಟ್ಟಾರೆ ಅರ್ಥವೇನು?
ಮನುಷ್ಯ ಸುಖಿಯಲ್ಲ, ಸ್ವತಂತ್ರನೂ ಅಲ್ಲ. ಆತ ಪರಿಸ್ಥಿತಿಗೆ ಬಂದಿ. ಒಂದೋ ಶಾಪ ಅಥವಾ ಸ್ಥಿತಿ ಅವನನ್ನು ಸುತ್ತಿಕೊಂಡೇ ಇರುತ್ತದೆ. ಅದರಿಂದ ಆತ ಸುಲಭವಾಗಿ ಬಿಡಿಸಿಕೊಂಡು ಹೊರಗೆ ಬರುವಂತಿಲ್ಲ.
ಎಂಬಲ್ಲಿಗೆ ಶಾಪ ಎನ್ನುವುದು ಒಂದು ಸ್ಥಿತಿ ಮತ್ತು ಗತಿ ಎರಡೂ ಆದಂತಾಯಿತಲ್ಲ.

Monday, September 24, 2007

ಮತ್ತೊಂದು ಪುಸ್ತಕ ಬಂತು

ಜಾನಕಿ ಕಾಲಂ-2 ಕೃತಿಯನ್ನು ರಮೇಶ್ ಅರವಿಂದ್ ಬಿಡುಗಡೆ ಮಾಡಿದರು.

ಯು ಆರ್ ಅನಂತಮೂರ್ತಿಯವರು ಅದರ ಕುರಿತು ಮಾತಾಡಿದರು.

ಸೆಪ್ಟೆಂಬರ್ 23ರ ಮುಂಜಾನೆ ಈ ಸಂಭ್ರಮಕ್ಕೆ ಕಾರಣರಾದವರು

ಗೆಳೆಯ ವಸುಧೇಂದ್ರ.


ಉಳಿದಂತೆ

ಹೊಳೆದದ್ದು ತಾರೆ, ಉಳಿದದ್ದು ಆಕಾಶ.

ಅಗೆವಾಗ ಸಿಕ್ಕಿದ್ದು ಕೆಂಪು ಕುಂಕುಮ ಭೂಮಿ

ಗುದ್ದಲಿಯ ಕೆಲಸ

ಅಲ್ಲಿಗೆ ನಿಂತಿದೆ.Sunday, September 23, 2007

ಒಂದು ಸಂಭಾಷಣೆ, ಅದರೊಳಗೊಂದು ಶೋಧನೆ

ಹಾಗಿದ್ದರೆ ಜೀವನದ ಅರ್ಥವೇನು!
ಏನಾದರೂ ಕೇಳಲೇಬೇಕಿತ್ತು, ಕೇಳಿದೆ.
ಜೀವನಕ್ಕೆ ಅರ್ಥವಿಲ್ಲ. ನೀವೆಲ್ಲ ಅರ್ಥವಿದೆ ಅಂದುಕೊಂಡು ಓಡಾಡುತ್ತೀರಿ. ಅರ್ಥವಿದೆ ಅಂದುಕೊಂಡು ಬದುಕುತ್ತೀರಿ.
ಅದು ಅಷ್ಟೇ ಆಗಿರುವುದಕ್ಕೆ ಸಾಧ್ಯವಿಲ್ಲ. ಅರ್ಥವಿಲ್ಲ ಅನ್ನುವುದಾದರೆ ಯಾರೋ ಯಾಕೆ ಬರೆಯಬೇಕು. ಯಾರೋ ಯಾಕೆ ಓದಬೇಕು? ಯಾರೋ ಯಾಕೆ ಸಂಶೋಧನೆ ಮಾಡಬೇಕು? ಮತ್ಯಾರೋ ಯಾಕೆ ಕಷ್ಟಪಡಬೇಕು. ಯಾವುದಕ್ಕೂ ಅರ್ಥವಿಲ್ಲ ಎಂದು ಕುಳಿತುಕೊಂಡಿದ್ದರೆ ಜಗತ್ತು ಹೇಗಿರುತ್ತಿತ್ತು ಯೋಚಿಸಿ. ಈ ಯಾವ ಅಭಿವೃದ್ಧಿಯೂ ಆಗುತ್ತಿರಲಿಲ್ಲ.’
ಆಗಬೇಕಾಗಿಲ್ಲ. ನೀವೆಲ್ಲ ಮಾತಾಡುತ್ತಿರುವುದು ನಿಮ್ಮ ಸುತ್ತಮುತ್ತ ಆಗುತ್ತಿರುವ ಅಭಿವೃದ್ಧಿಯ ಬಗ್ಗೆ. ಅದರಿಂದ ಪ್ರಕೃತಿಗೆ ಯಾವ ಲಾಭವೂ ಇಲ್ಲ, ಆಸಕ್ತಿಯೂ ಇಲ್ಲ. ನೀವಿನ್ನೂ ಕಾಲಿಟ್ಟಿರದ ದುರ್ಗಮವಾದ ಅರಣ್ಯಗಳಲ್ಲಿ (ಅವರು OPAQUE FOREST ಅಂದರು) ಇನ್ನೂ ಹುಲಿಕರಡಿ ನರಿಚಿರತೆ ಗಿಳಿಕೋಗಿಲೆಗಳು ಹಾಗೇ ಬದುಕುತ್ತಿಲ್ಲವೇ? ಆ ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ ನೋಡಿ. ನೀವು ಕೋಟ್ಯಂತರ ರುಪಾಯಿ ಖರ್ಚು ಮಾಡಿ ನೋಡುತ್ತಿರುವುದು ಏನನ್ನು ಗೊತ್ತೇ? ಕಾಡಿನ ಪ್ರಾಣಿಗಳು ತಮ್ಮಿಚ್ಛೆಯಂತೆ ಬದುಕುವುದನ್ನು. ನಿಮಗೀಗ ಬೇಸಿಕ್ ಇನ್‌ಸ್ಟಿಂಕ್ಟ್ ಮುಖ್ಯ ಅನ್ನುವುದು ಗೊತ್ತಾಗಿಬಿಟ್ಟಿದೆ. ಇನ್‌ಫಾರ್ಮೇಷನ್‌ಗಿಂತ ಇನ್‌ಟ್ಯೂಷನ್ ದೊಡ್ಡದು ಅನ್ನುವುದು ಅರ್ಥವಾಗಿದೆ.
ಹಾಗಿದ್ದರೆ ವಿದ್ಯೆ, ಕಲೆ, ಸಾಧನೆ, ಸಂಶೋಧನೆಗಳ ಅರ್ಥವೇನು?’
ನಿಮ್ಮನ್ನು ನಾಶ ಮಾಡುವುದಕ್ಕೆ ಅದೇ ಸಾಕು. ವಿದ್ಯೆಯಂತೆ ವಿದ್ಯೆ, ಸುಡುಗಾಡು. ಏನು ಕಲಿಯುತ್ತಿದ್ದೀರಿ ನೀವೆಲ್ಲ. ಬದುಕಿಗೂ ನೀವು ಕಲಿಯುತ್ತಿರುವುದಕ್ಕೂ ಸಂಬಂಧ ಇದೆಯಾ? ಕಾಲ್‌ಸೆಂಟರ್‌ಗಳಲ್ಲಿ ಮಾಡೋ ಕೆಲಸಕ್ಕೂ ಅವರು ಕಲಿತದ್ದಕ್ಕೂ ಸಂಬಂಧ ಇಲ್ಲ ಅಂದೆಯಲ್ಲ? ನೀನು ಮಾಡುತ್ತಿರುವ ಕೆಲಸಕ್ಕೂ ಬದುಕಿಗೆ ಸಂಬಂಧ ಇದೆಯಾ? ಜೀವಿಸುವುದಕ್ಕೆ ಅದೆಲ್ಲ ಯಾತಕ್ಕೆ ಬೇಕು? ನಿಮ್ಮ ಪತ್ರಿಕೆ, ನಿಮ್ಮ ಕಛೇರಿ, ನಿಮ್ಮ ರಾಜ್ಯಾಂಗ, ನಿಮ್ಮ ಶಾಸಕರು, ನಿಮ್ಮ ರಾಜಕೀಯ, ನಿಮ್ಮ ಅಧಿಕಾರ ಹಸ್ತಾಂತರ ಇದೆಲ್ಲ ಇಲ್ಲದೆ ಬದುಕುವುದಕ್ಕೇ ಆಗುವುದಿಲ್ಲವಾ? ಯಾವ ಪ್ರಾಣಿಯೂ ಬೆಳಗ್ಗೆ ಎದ್ದ ತಕ್ಷಣ ಮತ್ತೊಂದು ಪ್ರಾಣಿ ಏನು ಮಾಡಿತು ಅನ್ನುವುದನ್ನು ತಿಳಿದುಕೊಳ್ಳಬಯಸುವುದಿಲ್ಲ. ಯಾವ ಹಕ್ಕಿಗೂ ರಾತ್ರಿ ಮಲಗುವ ಮುಂಚೆ ಮತ್ತೊಂದು ಜೋಡಿ ಹಕ್ಕಿ ಪ್ರೀತಿ ಮಾಡುವುದನ್ನು ನೋಡುವ ಆಸೆಯಿಲ್ಲ. ಬೇಟೆಗಾರನೊಬ್ಬ ತನ್ನ ಜೊತೆಗೇ ಇದ್ದ ತನ್ನಂತೆಯೇ ಇರುವ ಜಿಂಕೆಯೊಂದನ್ನು ಮತ್ತೊಂದು ಜಿಂಕೆ ಬಾಯಿ ಚಪ್ಪರಿಸಿಕೊಂಡು ನೋಡುವುದಕ್ಕೆ ಇಷ್ಟಪಡುವುದಿಲ್ಲ. ಆ ಸುದ್ದಿಯೂ ಅದಕ್ಕೆ ಬೇಕಿಲ್ಲ. ಆದರೆ ನಿಮಗೆ ಹಾಗಲ್ಲ, ಬೇರೆಯವರ ಕಾಮ, ಕ್ರೋಧ, ಮದ, ಮತ್ಸರಗಳ ಬಗ್ಗೆ ಆಸಕ್ತಿ. ಬೇರೊಬ್ಬ ಕೊಲೆ ಮಾಡಿದ್ದನ್ನು ಮಹಾನ್ ಆಸಕ್ತಿಯಿಂದ ಓದುತ್ತೀರಿ, ಬೇರೆಯವರ ಕಾಮಕೇಳಿಯನ್ನು ಬಾಯಲ್ಲಿ ನೀರು ಸುರಿಸಿಕೊಂಡು ನೋಡುತ್ತೀರಿ. ತೆರೆಯ ಮೇಲೆ, ರಂಗದ ಮೇಲೆ ಬದುಕನ್ನು ಮತ್ತೆ ತಂದುಕೊಂಡು...
ಅದು ನಟನೆ. ಕೇವಲ ಮನುಷ್ಯರಿಗೆ ಮಾತ್ರ ಗೊತ್ತಿರುವ ವಿದ್ಯೆ. ಬದುಕಿನ ಪ್ರತಿಬಿಂಬ. ಜೀವನದ ಪ್ರತಿರೂಪ.’
ಸುಡುಗಾಡು...ಅದು ಕಲೆಯಲ್ಲ. ಕಲೆ ಅನ್ನುವುದು ನೀವು ನಿಮ್ಮ ಮನರಂಜನೆಗೆ ಸೃಷ್ಟಿಸಿಕೊಂಡದ್ದು. ಜೀವನಕ್ಕೆ ಮನರಂಜನೆ ಬೇಕಿಲ್ಲ. ಮನಸ್ಸಿಗೆ ರಂಜನೆ ಬೇಕಿಲ್ಲ.
ಅವರೊಂದಿಗೆ ಮಾತಾಡಿ ಉಪಯೋಗವಿಲ್ಲ ಅನ್ನಿಸಿತು. ಎಲ್ಲವನ್ನೂ ನಿರಾಕರಿಸುವುದು ಕೂಡ ಜೀವನ್ಮುಖಿ ಧೋರಣೆ ಅಲ್ಲವಲ್ಲ. ಅವರ ಹಾಗೆ ಮಾತಾಡುತ್ತಾ ಹೋದರೆ ಎಲ್ಲವನ್ನೂ ತಳ್ಳಿಹಾಕುತ್ತಾ ಬರಬಹುದು. ಆದರೆ ಅವರು ನಿಜಕ್ಕೂ ಹೇಳಹೊರಟದ್ದೇನು ಅನ್ನುವುದನ್ನು ತಿಳಿದುಕೊಳ್ಳಬೇಕು ಅನ್ನಿಸಿತು. ಕೊಂಚ ಕಟುವಾಗಿಯೇ ಪ್ರತಿಕ್ರಿಯಿಸುವುದು ಒಳ್ಳೆಯದು ಎಂದುಕೊಂಡು ನೇರವಾಗಿ ಕೇಳಿದೆ.
ನಿಮ್ಮ ಈ ತತ್ವಜ್ಞಾನ ಕೂಡ ಹಾಗಿದ್ದರೆ ಬದುಕಿಗೆ ಬೇಕಾಗಿಲ್ಲ. ನಿಮ್ಮ ಉಪದೇಶ ಕೂಡ ಬೇಕಾಗಿಲ್ಲ. ಅವರವರು ಅವರಿಗೆ ಇಷ್ಟಬಂದಂತೆ ಬದುಕಿಕೊಳ್ಳಲು ಬಿಡಿ’.
ನೀವ್ಯಾರೂ ನಿಮಗಿಷ್ಟಬಂದಂತೆ ಬದುಕುತ್ತಿಲ್ಲ. ನಿಮ್ಮೆದುರಿಗಿರುವ ಒಂದು ಮಾದರಿಯನ್ನು ಅನುಸರಿಸುತ್ತಿದ್ದೀರಿ ಅಷ್ಟೇ. ನಕಲು... ಪ್ರತಿ ಬದುಕೂ ನಕಲು. ಮಗ ತಂದೆಯನ್ನು, ತಂದೆ ತಾತನನ್ನು , ತಾತ ಮುತ್ತಾತನನ್ನು, ಮುತ್ತಾತ ತನ್ನ ಪೂರ್ವಜನನ್ನು ನಕಲು ಮಾಡಿಕೊಂಡೇ ಬಂದಿದ್ದೀರಿ. ಅದರಿಂದ ಹೊರಗೆ ಬರುವ ಧೈರ್ಯ ನಿಮಗಿಲ್ಲ. ಸ್ವಂತವಾಗಿ ಯೋಚಿಸುವ ಶಕ್ತಿಯೇ ನಿಮಗಿಲ್ಲ.
ನಿಮ್ಮ ಪ್ರಕಾರ ಯೋಚಿಸುವುದೇ ತಪ್ಪಲ್ಲವೇ? ಬದುಕಿಗೆ ಯೋಚನೆ, ಚಿಂತನೆ ಯಾಕೆ ಬೇಕು?
ಅದೀಗ ಸರಿಯಾದ ಪ್ರಶ್ನೆ. ಚಿಂತನೆ ಬೇಡ ಅಂತಲೇ ನಾನು ಹೇಳುತ್ತಿರುವುದು. ಆದರೆ ನಿಮ್ಮೆಲ್ಲರ ನಡವಳಿಕೆಯೂ ನಿಂತಿರುವುದು ಚಿಂತನೆಯ ಮೇಲೆ. ನೀವೆಲ್ಲ ಬೇರೆಯವರಿಗೋಸ್ಕರ ಬದುಕುತ್ತಿದ್ದೀರಿ. ನಿಮ್ಮ ಜೊತೆಗಾರರನ್ನು ಮೀರಿಸುವ ಆಶೆ ನಿಮಗೆ. ಅದೆಂಥ ಕೆಟ್ಟ ಆಶೆ ಅನ್ನುವುದು ನಿಮಗೆ ಗೊತ್ತಿದೆಯಾ? ಅರ್ಥ ಆಗಿದೆಯಾ? ನಿಮ್ಮ ಸಹಜೀವಿಯನ್ನು ಹಣಿಯುವುದಕ್ಕೆ ಅವನಿಗಿಂತ ಮೇಲು ಅನ್ನಿಸಿಕೊಳ್ಳುವುದಕ್ಕೆ ನೀವೆಷ್ಟು ಹೆಣಗಾಡುತ್ತೀರಿ? ಅವನಿಗಿಂತ ಒಳ್ಳೆಯ ಬಟ್ಟೆ, ಅವನಿಗಿಂತ ದೊಡ್ಡ ಮನೆ, ಅವನಿಗಿಂತ ದುಬಾರಿ ಕಾರು, ಅವನಿಗಿಂತ ಚೆಂದದ ಹೆಂಡತಿ, ಅವಳಿಗಿಂತ ಶ್ರೀಮಂತ ಗಂಡ, ಅವರಿಗಿಂತ ವಿಧೇಯ ಮಕ್ಕಳು ಅಂತೆಲ್ಲ ಬೀಗುತ್ತೀರಿ. ನಿಮಗೆ ನಾಚಿಕೆಯಾಗಬೇಕು? ನೀವು ಯಾವತ್ತಾದರೂ ನಿಮಗೋಸ್ಕರ ಬದುಕಿದ್ದಿದೆಯಾ? ಒಬ್ಬಂಟಿಯಾಗಿದ್ದಾಗ ಕೂಡ ನಿಮ್ಮ ಬಗ್ಗೆ ಯೋಚಿಸುತ್ತೀರಾ? ನಿಮ್ಮ ಮನಸ್ಸಿನೊಳಗೆ ಬೇರೆಯವರೇ ಕೂತು ನಿಮ್ಮನ್ನು ನಿಯಂತ್ರಿಸುತ್ತಿರುತ್ತಾರಲ್ಲ, ಅದಕ್ಕೇನಂತೀರಿ?
ಈ ಪ್ರಶ್ನೆಗಳಿಗೆ ಉತ್ತರ ಇರಲಿಲ್ಲ. ಅವುಗಳಲ್ಲಿ ಕೆಲವು ಹೌದಲ್ಲ ಅನ್ನಿಸುವ ಪ್ರಶ್ನೆಗಳಿದ್ದವು. ಮತ್ತೆ ಕೆಲವು ಭಯ ಹುಟ್ಟಿಸುವಂತಿದ್ದವು. ನಾವು ನಮಗೋಸ್ಕರ ಬದುಕಲು ಏನು ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ. ಅದನ್ನೇ ಕೇಳಿದೆ.
ಅದನ್ನು ನೀವೇ ಕಂಡುಕೊಳ್ಳಬೇಕು. ಪ್ರತಿಯೊಬ್ಬನೂ ತನಗೋಸ್ಕರ ತಾನು ಹೇಗೆ ಬದುಕಬೇಕು ಅನ್ನುವುದು ಅರ್ಥ ಮಾಡಿಕೊಳ್ಳಬೇಕು. ನಾನು ಅದನ್ನು ಕಂಡುಕೊಂಡಿದ್ದೇನೆ. ಅದು ನನಗಷ್ಟೇ ಸಾಧ್ಯವಿರುವ, ಬೇಕಾಗಿರುವ ಕ್ರಮ. ಅದನ್ನು ನಿಮಗೆ ಹೇಳುವುದಕ್ಕಾಗಲೀ, ಅನ್ವಯಿಸುವುದಕ್ಕಾಗಲೀ ಸಾಧ್ಯವಿಲ್ಲ. ನಿಮ್ಮ ಬದುಕು ನಿಮ್ಮದು, ನಿಮಗಷ್ಟೇ ಸ್ವಂತ.
ಇದೀಗ ಸಿಕ್ಕಿಬಿದ್ದರು ಎಂದು ಖುಷಿಯಾಯಿತು. ಅವರ ವಾದವನ್ನು ಅವರೇ ನಿರಾಕರಿಸುತ್ತಿದ್ದಾರೆ. ಅದನ್ನಿಟ್ಟುಕೊಂಡು ಮತ್ತೊಂದು ಪ್ರಶ್ನೆ ಹಾಕಿದೆ.
ಪ್ರಾಣಿಗಳ ಥರ ಇರಬೇಕು. ಯಾರೂ ವಿಶಿಷ್ಟ ಅಲ್ಲ. ಯಾರ ಬದುಕಲ್ಲೂ ವಿಶೇಷ ಇಲ್ಲ. ಎಲ್ಲ ಜೀವಗಳ ಉದ್ದೇಶವೂ ಒಂದೇ, ಜೀವಿಸುವುದು ಅಂದಿರಲ್ಲ. ಈಗ ಅವರವರ ಬದುಕನ್ನು ಅವರವರು ಕಂಡುಕೊಳ್ಳಬೇಕು ಅನ್ನುತ್ತೀರಲ್ಲ. ನಿಮ್ಮ ಮಾತಲ್ಲೇ ವಿರೋಧಾಭಾಸ ಇದೆ’.
ವಿರೋಧಾಭಾಸ ಜೀವನದಲ್ಲೇ ಇದೆ. ನಾನು ಹೇಳಿದ್ದನ್ನು ಒಂದೊಂದು ಘಟಕವಾಗಿ ತೆಗೆದುಕೊಂಡು ಅರ್ಥ ಮಾಡಿಕೊಂಡರೆ ನಿಮಗೆ ವಿರೋಧಾಭಾಸ ಕಾಣುತ್ತದೆ. ಸಮಗ್ರವಾಗಿ ನೋಡಿದರೆ ಅದರ ಸಮನ್ವಯ ಹೊಳೆಯುತ್ತದೆ.
ನೀವು ಹತ್ತು ತೆಂಗಿನ ಮರ ಒಂದೇ ದಿನ, ಒಂದೇ ಮಣ್ಣಲ್ಲಿ ನೆಟ್ಟು ನೋಡಿ. ಅದಕ್ಕೆ ಒಂದೇ ಥರ ನೀರು ಹನಿಸುತ್ತೀರಿ. ಹತ್ತೂ ಮರಗಳು ಬೆಳೆದ ನಂತರ ಹೋಗಿ ಗಮನಿಸಿ. ಸೂಕ್ಷ್ಮವಾಗಿ ಗಮನಿಸದ ಹೊರತು ಆ ಹತ್ತು ಮರಗಳೂ ಒಂದೇ ಥರ ಕಾಣಿಸುತ್ತವೆ. ಆದರೆ ಗಮನಿಸಿ ನೋಡಿದರೆ ವ್ಯತ್ಯಾಸ ಗೊತ್ತಾಗುತ್ತದೆ. ಒಂದು ಮರದಂತೆ ಇನ್ನೊಂದಿರುವುದಿಲ್ಲ. ಫಸಲು ಕೂಡ ಅಷ್ಟೇ. ಯಾಕೆ ಎಲ್ಲ ಮರಗಳು ಒಂದೇ ಥರ ಇರೋದಿಲ್ಲ ಹೇಳಿ..
ಮರಗಳನ್ನು ಯಾಕೆ ಗಮನಿಸಬೇಕು? ಅದಕ್ಕೂ ನನ್ನ ಬದುಕಿಗೂ ಏನು ಸಂಬಂಧ?’
ನಿಮ್ಮನ್ನು ಒಂದು ದುರ್ಭರವಾದ ಕಾಡಿನ ಮಧ್ಯೆ ಬಿಟ್ಟು ಬರುತ್ತಾರೆ ಅಂತಿಟ್ಟುಕೊಳ್ಳಿ. ಆಗ ಏನು ಮಾಡುತ್ತೀರಿ? ಅಲ್ಲಿಂದ ಹೊರಬರುವ ದಾರಿ ಗೊತ್ತಿರುವುದಿಲ್ಲ. ತಿನ್ನುವುದಕ್ಕೆ, ಕುಡಿಯುವುದಕ್ಕೆ ಏನೂ ಇರುವುದಿಲ್ಲ. ಆಗ ಹಸಿವೆ ತಾಳಲಾರದೆ ಕೈಗೆ ಸಿಕ್ಕಿದ ಸೊಪ್ಪನ್ನೋ ಹಣ್ಣನ್ನೋ ತಿನ್ನುತ್ತೀರಿ. ಅದನ್ನೇ ತಿಂದು ಬದುಕುವುದಕ್ಕೆ ನೋಡುತ್ತೀರಿ. ರುಚಿಯಾಗಿದ್ದನ್ನು ಆರಿಸಿಕೊಳ್ಳುತ್ತೀರಿ. ಯಾವ ಹಣ್ಣು ತಿನ್ನಬೇಕು, ಯಾವುದು ವಿಷ ಎಂದು ಹೇಗೆ ಗುರುತಿಸುತ್ತೀರಿ? ಅದಕ್ಕಾಗಿ ನೀವು ತಿನ್ನುವ ಮೊದಲು ಆ ಹಣ್ಣನ್ನು ಯಾವುದಾದರೂ ಹಕ್ಕಿಯೋ ಪ್ರಾಣಿಯೋ ತಿನ್ನುತ್ತದಾ ಎಂದು ನೋಡುತ್ತೀರಿ. ಹಕ್ಕಿ ತಿನ್ನುತ್ತಿದ್ದರೆ ನೀವೂ ತಿನ್ನುತ್ತೀರಿ. ಹೀಗೆ ಲಕ್ಷಾಂತರ ವರುಷಗಳ ಹಿಂದೆ ನಿಮ್ಮ ಮೂಲಮಾನವ ಬದುಕುವುದನ್ನು ಕಲಿತ. ಹಣ್ಣುಗಳನ್ನು ಎಚ್ಚರಿಕೆ ವಹಿಸಿ ತಿಂದ. ಆಮೇಲೆ ಅವುಗಳನ್ನು ಬೆಳೆಯತೊಡಗಿದ. ಅಂಥ ಸ್ಥಿತಿಯಲ್ಲಿ ಯಾವ ರಂಜನೆ ಇತ್ತು, ಯಾವ ಕಲೆಯಿತ್ತು. ಯಾವ ಕಾಡು ಪ್ರಾಣಿಯ ಬಾಯಿಗೂ ಬೀಳದೇ, ಹಸಿವೆ ಬೀಳದೇ ಬದುಕುವುದಷ್ಟೇ ಮುಖ್ಯವಾಗಿದ್ದ ದಿನಗಳವು. ಈಗ ಆ ಹುಡುಕಾಟ ನಿಂತಿದೆ. ಯಾರೋ ಅನ್ನ ಸಂಪಾದಿಸಿ ನಿಮ್ಮ ತಟ್ಟೆಗೆ ಸುರಿಯುತ್ತಾರೆ. ಅದನ್ನು ನೀವು ಪುಷ್ಕಳವಾಗಿ ತಿನ್ನುತ್ತೀರಿ. ದೇಹಕ್ಕೆ ಅಗತ್ಯವಿಲ್ಲದೇ ಇದ್ದರೂ ತಿನ್ನುತ್ತೀರಿ. ನಿಮ್ಮ ವಯಸ್ಸು ಮೂವತ್ತು ದಾಟಿದ್ದರೆ ನೀವು ಮತ್ತೆ ತಿನ್ನುವ ಅಗತ್ಯವಿಲ್ಲ ಗೊತ್ತೇ?
ಅಂದರೆ, ತಿನ್ನದೇ ಹೋದರೆ ಬದುಕೋದು ಹೇಗೆ?’
ತಿನ್ನುವುದಕ್ಕೆ ಮೂರು ಕಾರಣ. ಬೆಳವಣಿಗೆಗೆ, ಉಳಿವಿಗೆ, ರುಚಿಗೆ. ಮೂವತ್ತರ ತನಕ ಬೆಳವಣಿಗೆಗೆ, ಆಮೇಲೆ ಉಳಿವಿಗೆ ತಿನ್ನುತ್ತಿದ್ದರೆ ಸಾಕು. ನೀವು ರುಚಿಗೆ ತಿನ್ನುವುದಕ್ಕೆ ಹೋಗುತ್ತೀರಿ. ತಿನ್ನುವುದನ್ನೂ ಅದಕ್ಕೋಸ್ಕರ ಅಡುಗೆ ಮಾಡುವುದನ್ನೂ ವೃತ್ತಿ ಮಾಡಿಕೊಂಡು ಬಿಟ್ಟಿದ್ದೀರಿ. ಯಾವ ಪ್ರಾಣಿಲೋಕದಲ್ಲಾದರೂ ಇಂಥದ್ದೊಂದು ವೈಚಿತ್ರ್ಯ ಕಂಡಿದ್ದೀರಾ? ನೀವು ಜೊತೆ ಸೇರುವುದಾದರೂ ಯಾಕೆ? ಊಟ ಮಾಡುವುದಕ್ಕೆ. ಹುಟ್ಟಿದರೂ ಊಟ, ಸತ್ತರೂ ಊಟ, ಸಂತೋಷಕ್ಕೂ ಊಟ, ದುಃಖಕ್ಕೂ ಊಟ. ಎಲ್ಲದಕ್ಕೂ ಭೂರಿಭೋಜನ. ಎದುರು ಸಿಕ್ಕಿದವರೆಲ್ಲರ ಹತ್ರಾನೂ ಕೇಳ್ತೀರಿ, ಊಟ ಆಯ್ತಾ. ಮದುವೆಗೆ ಹೋಗಿ ಬಂದರೆ ಕೇಳ್ತೀರಿ, ಊಟ ಚೆನ್ನಾಗಿತ್ತಾ. ತಿನ್ನೋದು ಬಿಟ್ಟರೆ ಬೇರೆ ಯೋಚನೆ ನಿಮಗಿದೆಯಾ?
ಹಾಗಿದ್ದರೆ ಜೀವನದ ಅರ್ಥವೇನು?
ಕೇಳಲೇಬೇಕಾಗಿತ್ತು, ಕೇಳಿದೆ.
ಅದಕ್ಕೆ ಅವರು ಉತ್ತರಿಸಲಿಲ್ಲ. ಎದ್ದು ಹೋದರು. ಗಣೇಶ ಚತುರ್ಥಿಯ ಹಿಂದಿನ ದಿನ ಹೊರಟೇಹೋದರು ಎಂದು ಹಳೆಯ ಮಿತ್ರ ಫೋನ್ ಮಾಡಿ ಹೇಳಿದ.
ಹಾಗಿದ್ದರೆ ಜೀವನದ ಅರ್ಥವೇನು?
ಇನ್ಯಾವತ್ತೂ ಕೇಳಬಾರದು ಅಂದುಕೊಂಡಿದ್ದೇನೆ, ಯಾರನ್ನೂ!

Friday, September 14, 2007

ಆ ಸೇತುವೆ ಇನ್ನೂ ಕಣ್ಣ ಮುಂದೆಯೇ ಇದೆ

ಹೀಗೊಂದಷ್ಟು ಪ್ರಶ್ನೆಗಳೂ ಗೊಂದಲವೂ ರಾಮಾಯಣವೂ..

ಚಿಕ್ಕಂದಿನಲ್ಲಿ ಅಜ್ಜಿ ಅವರದೇ ಭಾಷೆಯಲ್ಲಿ ರಾಮನ ಕತೆ ಹೇಳುತ್ತಿದ್ದರು. ರಾಮ ಶಿವಧನಸ್ಸು ಮುರಿದು ಸೀತೆಯ ಕೈ ಹಿಡಿದದ್ದು, ಮಂಥರೆ ಚಾಡಿ ಹೇಳಿದ್ದು, ಕೈಕೆಯಿ ಕೆರಳಿದ್ದು, ರಾಮ ವನವಾಸಕ್ಕೆ ಹೋದದ್ದು, ಶೂರ್ಪನಖಿಯ ಮೂಗು ಕತ್ತರಿಸಿದ್ದು, ಮಾರೀಚ ಮಾಯಾ ಜಿಂಕೆಯಾಗಿ ಬಂದದ್ದು, ರಾವಣ ಸೀತೆಯನ್ನು ಕದ್ದದ್ದು, ಜಟಾಯು ರಾವಣನನ್ನು ಎದುರಿಸಿದ್ದು, ಹನುಮಂತ ಲಂಕೆಗೆ ಹಾರಿದ್ದು, ಸೀತೆಯನ್ನು ಕಂಡದ್ದು, ವಾನರ ಸೇನೆ ಕಡಲನ್ನು ದಾಟಲು ಸೇತುವೆ ಕಟ್ಟಿದ್ದು, ಆಗ ಪುಟ್ಟ ಅಳಿಲು ಸೇವೆ ಮಾಡಿದ್ದು...

ನಮ್ಮಜ್ಜಿ ಸುಳ್ಳು ಹೇಳುತ್ತಿರಲಿಲ್ಲ. ಹೀಗಾಗಿ ಅವರು ಹೇಳಿದ ರಾಮಾಯಣ ಸುಳ್ಳಿನ ಕಂತೆ ಎಂದು ಆಗಲೂ ಅನ್ನಿಸಿರಲಿಲ್ಲ, ಈಗಲೂ ಅನ್ನಿಸಿರಲಿಲ್ಲ. ನಮ್ಮ ಕಲ್ಪನೆಗಳನ್ನು ವಿಸ್ತರಿಸಿ ಒಂದು ಮಾಯಾಲೋಕವನ್ನು ಸೃಷ್ಟಿಸಿದ್ದು ಅಜ್ಜಿ ಹೇಳಿದ ಈ ಕತೆ.
ಇವತ್ತು ಪುರಾತತ್ವ ಇಲಾಖೆ ಮತ್ತು ಸರ್ಕಾರ ರಾಮಾಯಣ ಬರೀ ಕಲ್ಪನೆ ಎಂದು ಪ್ರಮಾಣ ಪತ್ರ ಸಲ್ಲಿಸಿದಾಗ, ನಮ್ಮಜ್ಜಿ ನಿಜಕ್ಕೂ ತೀರಿಕೊಂಡರು.
******
ರಾಮಸೇತುವನ್ನು ಕತ್ತರಿಸಿ ದಾರಿ ಮಾಡಿಕೊಟ್ಟರೆ ಎರಡು ಊರುಗಳ ನಡುವಣ ಅಂತರ ಕಡಿಮೆಯಾಗುತ್ತದಂತೆ. ಆದರೆ ನಮ್ಮ ಮನಸ್ಸಿವಲ್ಲಿ ಬಾಲ್ಯದಿಂದ ಮನೆ ಮಾಡಿಕೊಂಡಿರುವ ರಾಮಸೇತುವನ್ನು ಹೇಗೆ ಕತ್ತರಿಸಿ ಎಸೆಯುತ್ತೀರಿ. ಯಾರ ಅನುಕೂಲಕ್ಕೋಸ್ತರ ಈ ಸಮೀಪದ ಹಾದಿ ಕೊರೆಯುತ್ತೀರಿ?
ಈ ಜಗತ್ತಿನಲ್ಲಿ ನಮ್ಮ ವಾಸಕ್ಕಿಷ್ಟು ಜಾಗ, ಪ್ರಾಣಿಗಳಿಗೊಂದಿಷ್ಟು ಜಾಗ, ಆಳುವವರಿಗೊಂದಿಷ್ಟು ಜಾಗ -ಹೀಗೆ ಎಲ್ಲರಿಗೂ ಅವರದ್ದೇ ಆದ ಸ್ಪೇಸ್ ಬಿಟ್ಟುಕೊಟ್ಟಿದ್ದೇವೆ.
ನಮ್ಮ ಕಲ್ಪನೆಗಳಿಗೂ ಒಂದಷ್ಟು ಸ್ಪೇಸ್ ಇರಲಿ. ಅದನ್ನೂ ನಾಶ ಮಾಡಿ ಏನು ಸಾಧನೆ ಮಾಡಬೇಕಾಗಿದೆ?
******
ಶ್ರೀರಾಮಚಂದ್ರನ ಕತೆ ಬರೀ ಕಲ್ಪನೆ. ರಾಮಾಯಣ ನಡೆದಿತ್ತು ಅನ್ನುವುದಕ್ಕೆ ಆಧಾರ ಇಲ್ಲ. ಆಯೋಧ್ಯೆ ಇತ್ತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಅವೆಲ್ಲವೂ ಕಾಲ್ಪನಿಕ ಕಟ್ಟುಕತೆ!
ಹಾಗಂತ ಹೇಳುವ ಮೂಲಕ ಸರ್ಕಾರ ಒಂದು ರಾಷ್ಟ್ರದ ನಂಬಿಕೆಯನ್ನೇ ಅಲ್ಲಗಳೆಯುವ ಕೆಲಸ ಮಾಡಿದೆ. ಈ ಹೇಳಿಕೆಯೇನೂ ಹೊಸದಲ್ಲ. ದಶಕಗಳ ಹಿಂದೆ ಅಕಾಡೆಮಿಕ್ ವಲಯದಲ್ಲಿ ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಸಿಂಧುತ್ವದ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಬಹುಶಃ ಅಂಥ ವಾಗ್ವಾದ ಸಾಧ್ಯವಿದ್ದದ್ದು ಭಾರತೀಯ ಸಂದರ್ಭದಲ್ಲಿ ಮಾತ್ರ. ಜಗತ್ತಿನ ಇತರೇ ಧರ್ಮಗಳ ಕುರಿತು, ದೇವರುಗಳ ಅಸ್ತಿತ್ವದ ಕುರಿತು ಯಾವ ಚರ್ಚೆಯೂ ನಡೆದಿಲ್ಲ.
ಅದಕ್ಕೆ ಕಾರಣವೂ ಇದೆ. ಮಹಾಕಾವ್ಯಗಳನ್ನು ಅವುಗಳಲ್ಲಿ ಬರುವ ಪಾತ್ರಗಳ ಅಸ್ತಿತ್ವವನ್ನು ಪ್ರಶ್ನಿಸುವುದೇ ಹುಂಬತನ. ಒಂದು ರಾಷ್ಟ್ರದ ಜನತೆ ಆಯಾ ದೇಶದ ಪುರಾಣಗಳನ್ನೂ, ಮಹಾಕಾವ್ಯಗಳನ್ನೂ ಭಾವನಾತ್ಮಕವಾಗಿ ಒಪ್ಪಿಕೊಂಡಿರುತ್ತಾರೆ. ಎಲ್ಲಾ ಮಹಾಕಾವ್ಯಗಳೂ ಅಂತಿಮವಾಗಿ ಜೀವನಮಟ್ಟವನ್ನು ಉತ್ತಮಗೊಳಿಸುವ, ಬದುಕುವ ಬಗೆಯನ್ನು ಕಲಿಸುವ, ನಮ್ಮ ನಡೆನುಡಿಗಳನ್ನು ನಾಗರಿಕಗೊಳಿಸುವ ಕೆಲಸವನ್ನೇ ಮಾಡುತ್ತಾ ಬಂದಿವೆ. ಒಳಿತನ್ನು ಹೇಳುವ ಕಾವ್ಯದ, ಪುರಾಣದ ಸತ್ಯಾಸತ್ಯತೆಯನ್ನು ಪ್ರಶ್ನಿಸುವುದೇ ಜೀವವಿರೋಧಿ ನಿಲುವು.
ಹಾಗೆ ನೋಡಿದರೆ, ಭಾರತದಲ್ಲಿ ಕಾನೂನು ಮತ್ತು ನ್ಯಾಯಶಾಸ್ತ್ರ ನಿಂತಿರುವುದೇ ಮಹಾಕಾವ್ಯಗಳ ತಳಹದಿಯ ಮೇಲೆ. ಅದರಲ್ಲೂ ರಾಮಾಯಣದ ಆದರ್ಶಗಳು ಭಾರತೀಯ ಜೀವನಕ್ರಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ. ನ್ಯಾಯಶಾಸ್ತ್ರದ ಮೂಲಮಂತ್ರವಾದ ಸತ್ಯಮೇವ ಜಯತೇ ಅನ್ನುವುದನ್ನೂ, ಧರ್ಮೋ ರಕ್ಷತಿ ರಕ್ಷಿತಃ ಅನ್ನುವುದನ್ನೂ ಪ್ರತಿಪಾದಿಸುವ ಕಥಾನಕ ಅದು. ಭಾರತೀಯ ನ್ಯಾಯಸಂಹಿತೆ ಕೂಡ ಬ್ರಿಟಿಷರ ಪ್ರವೇಶ ಆಗುವ ತನಕ ಭಾರತೀಯ ಧರ್ಮಸಂಹಿತೆಯ ಒಂದು ಭಾಗವೇ ಆಗಿತ್ತು.
ಇದೀಗ ಪುರಾಣಗಳನ್ನೇ ಅಲ್ಲಗಳೆಯುವ ಮೂಲಕ, ತರ್ಕ ಮತ್ತು ಸಾಕ್ಷ್ಯಗಳ ಅಗತ್ಯವನ್ನು ಪುರಾಣಕ್ಕೂ ವಿಸ್ತರಿಸುವ ಮೂಲಕ ಭಾರತೀಯರ ನಂಬಿಕೆಯನ್ನೇ ಅಲ್ಲಾಡಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಒಂದು ಕಡೆ, ಪುರಾಣಗಳಾಗಲೀ, ಇತಿಹಾಸವಾಗಲೀ ಇಲ್ಲದ ರಾಷ್ಟ್ರಗಳು ತಮಗೊಂದು ಐತಿಹ್ಯ ಇರಬೇಕಿತ್ತು ಎಂದು ತುಡಿಯುತ್ತಿರುವ ಹೊತ್ತಲ್ಲಿ, ಇರುವ ಐತಿಹ್ಯವನ್ನು, ಪರಂಪರೆಯ ಶ್ರೀಮಂತಿಕೆಯನ್ನು ನಿರಾಕರಿಸುವ ಮೂಲಕ ಭಾರತದ ಸಮೃದ್ಧ ಪರಂಪರೆಯನ್ನು ಸರ್ಕಾರ ಧಿಕ್ಕರಿಸುವುದಕ್ಕೆ ಹೊರಟಿದೆ.
ರಾಮಾಯಣ ಭಾರತೀಯ ಮನಸ್ಸುಗಳ ಪಾಲಿಗೆ ಯಾವತ್ತೂ ಯಾರೋ ಕಲ್ಪಿಸಿಕೊಂಡು ಬರೆದ ಕಟ್ಟುಕತೆ ಆಗಿರಲೇ ಇಲ್ಲ. ಅದು ಕೇವಲ ತಾಳೆಗರಿಗಳಲ್ಲಿ ಅವಿತುಕುಳಿತ ಕಾವ್ಯವಷ್ಟೇ ಅಲ್ಲ ಅನ್ನುವುದಕ್ಕೆ ದೇಶಾದ್ಯಂತ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ರಾಮಾಯಣದ ಪಾತ್ರಗಳು ಸಂಚರಿಸಿದ ಪ್ರದೇಶಗಳು ದಕ್ಷಿಣ ಮತ್ತು ಉತ್ತರ ಭಾರತಗಳಲ್ಲಿ ಕಾಣಸಿಗುತ್ತವೆ. ಸೀತಾಮಾತೆ ನೀರು ಕುಡಿದ ಎಂದೂ ಬತ್ತದ ಚಿಲುಮೆಗಳು, ಶ್ರೀರಾಮಚಂದ್ರ ಕುಳಿತ ಕಲ್ಲು, ಲಕ್ಷಣತೀರ್ಥ, ರಾಮತೀರ್ಥ, ಹನುಮಗಿರಿ- ಮುಂತಾದ ಜಾಗಗಳ ಐತಿಹ್ಯವನ್ನೂ ಸರ್ಕಾರದ ಹೇಳಿಕೆ ಅಲ್ಲಗಳೆದಿದೆ. ರಾಮಾಯಣ ಕಟ್ಟುಕತೆ ಅನ್ನುವ ಮೂಲಕ ದೇಶಾದ್ಯಂತ ಹಬ್ಬಿರುವ ಇಂಥ ಅಸಂಖ್ಯಾತ ಪ್ರಾದೇಶಿಕ ಅಚ್ಚರಿಗಳ ಹಿಂದಿರುವ ಬೆರಗನ್ನೂ ಅದು ಅಳಿಸಿಹಾಕಲು ಹೊರಟಿದೆ.
ರಾಮರಾಜ್ಯದ ಕಲ್ಪನೆಯನ್ನೇ ನೋಡಿ. ಇದೇ ರಾಜಕಾರಣಿಗಳು ‘ನಮ್ಮದು ರಾಮರಾಜ್ಯ’ ಎನ್ನುತ್ತಾರೆ. ಆ ಹೊತ್ತಿಗೆ ಅವರಿಗೆ ರಾಮಾಯಣ ಕಟ್ಟುಕತೆ ಅನ್ನುವುದು ಮನಸ್ಸಿನಲ್ಲಿರುವುದಿಲ್ಲ. ಅವರ ಅನುಕೂಲಕ್ಕೆ ರಾಮಾಯಣ ಬೇಕು. ಧರ್ಮನಿಷ್ಠೆ, ಪುರುಷೋತ್ತಮತ್ವ, ಸದಾಚಾರ ಸಂಪನ್ನತೆ, ಸತ್ಯಸಂಧತೆಯನ್ನು ಉದಾಹರಿಸಲು ರಾಮಾಯಣ ಬೇಕು.
ಪುರಾತತ್ವ ಇಲಾಖೆಯದು ಮತ್ತೊಂದು ರೀತಿಯ ಎಡಬಿಡಂಗಿ ನಿಲುವು. ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಜಾಗಗಳನ್ನು ಪುರಾತತ್ವ ಇಲಾಖೆ ಗುರುತಿಸಿ ಅದನ್ನು ಕಾಪಾಡುವ ಹೊಣೆ ಹೊತ್ತುಕೊಂಡಿದೆ. ನಮ್ಮ ಬಹುತೇಕ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡು ನಿಯಂತ್ರಿಸುತ್ತದೆ. ಅವುಗಳಿಂದ ಬರುವ ಆದಾಯದ ಮೇಲೆ ಸರ್ಕಾರಕ್ಕೆ ಹಕ್ಕಿದೆ ಅಂದಾದರೆ ಅವುಗಳನ್ನು ನಂಬಿ ಬರುವ ಭಕ್ತರ ನಂಬಿಕೆಗಳಿಗೆ ಸರ್ಕಾರದಲ್ಲಿ ಬೆಲೆಯೇ ಇಲ್ಲವೇ?
ಅಷ್ಟಕ್ಕೂ ರಾಮಾಯಣ ನಡೆದೇ ಇಲ್ಲ ಎಂದು ಸರ್ಟಿಫಿಕೇಟು ಕೊಟ್ಟ ಪುರಾತತ್ವ ಇಲಾಖೆಯ ಪಂಡಿತೋತ್ತಮರು ಆ ಕುರಿತು ಏನು ಅಧ್ಯಯನ ಮಾಡಿದ್ದಾರೆ. ಲಕ್ಷಾಂತರ ವರುಷಗಳ ಹಿಂದಿನ ‘ಕಥೆ’ಯನ್ನು ಪುರಸ್ಕರಿಸುವುದಕ್ಕಾಗಲೀ ನಿರಾಕರಿಸುವುದಕ್ಕಾಗಲೀ ಅವರ ಬಳಿ ಸಾಕ್ಷಿ ಏನಿದೆ? ಪುರಾತತ್ವ ಇಲಾಖೆಗೆ ನಮ್ಮ ಪುರಾಣದ ಕಲ್ಪನೆಗಳನ್ನು ನಿರಾಕರಿಸುವ ಹಕ್ಕು ಕೊಟ್ಟವರು ಯಾರು? ಅದರಲ್ಲೂ, ನಾಲ್ಕೈದು ತಿಂಗಳ ಅವಧಿಯಲ್ಲಿ ಸದರಿ ಇಲಾಖೆ ರಾಮಾಯಣ ಕಾಲ್ಪನಿಕ ಎನ್ನುವ ನಿರ್ಧಾರಕ್ಕೆ ಬಂದದ್ದಾದರೂ ಹೇಗೆ? ಭಾರತೀಯ ವೈದ್ಯಶಾಸ್ತ್ರ ಕೂಡ ಪುರಾತನ ಋಷಿಮುನಿಗಳ ಗ್ರಂಥದಿಂದ ಪಡಿಮೂಡಿದ್ದಲ್ಲವೇ? ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ವೈಮಾನಿಕ ಶಾಸ್ತ್ರ, ಸಂಖ್ಯಾಶಾಸ್ತ್ರ- ಎಲ್ಲವೂ ಭಾರತೀಯ ಪರಂಪರೆಯಿಂದ ಸಾಕಷ್ಟು ಅಂಶಗಳನ್ನು ಪಡೆದುಕೊಂಡೇ ಅಭಿವೃದ್ಧಿ ಹೊಂದಿದ್ದಲ್ಲವೇ?
ಸರ್ಕಾರದ ಒಂದು ಪ್ರಮಾಣ ಪತ್ರ, ನಮ್ಮ ದೇಶದ ಎಲ್ಲ ಕವಿಗಳನ್ನೂ, ಸಂತರನ್ನೂ, ಮಹಾಕಾವ್ಯಗಳನ್ನೂ, ಇವುಗಳ ಆಧಾರದ ಮೇಲೆ ಜನತೆಯ ನಂಬಿಕೆಗೆ ಪಾತ್ರವಾಗಿರುವ ಎಲ್ಲಾ ಧರ್ಮಕ್ಷೇತ್ರಗಳನ್ನೂ ಒಂದೇ ಏಟಿಗೆ ನಿರಾಕರಿಸುವಂಥ ಕೆಲಸ ಮಾಡಿದೆ. ಶ್ರೀರಾಮಚಂದ್ರ ಪ್ರತಿಷ್ಠಾಪಿಸಿದ ಎಂಬ ನಂಬಿಕೆಯಿರುವ ರಾಮೇಶ್ವರ, ರಾವಣ ಶಿವನಿಂದ ಪಡೆದ ಆತ್ಮಲಿಂಗ ನೆಲೆಗೊಂಡ ಕ್ಷೇತ್ರ ಎಂದು ಭಕ್ತರು ನಂಬಿರುವ ಗೋಕರ್ಣ- ಮುಂತಾದ ಹತ್ತು ಹಲವು ಧಾರ್ಮಿಕ ಕೇಂದ್ರಗಳ ಬಗ್ಗೆ ಇರುವ ನಂಬಿಕೆಗಳನ್ನೂ ಈ ಪ್ರಮಾಣಪತ್ರ ತಳ್ಳಿಹಾಕಿದಂತಾಗುವುದಿಲ್ಲವೇ?
ಜಗತ್ತಿನ ರಾಷ್ಟ್ರಗಳ ಪೈಕಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿರುವ ದೇಶ ನಮ್ಮದು. ಇಂಥ ಪರಂಪರೆಯೊಂದರ ಗುರುತಿಸಿಕೊಳ್ಳುವುದಕ್ಕೆ ಅನೇಕ ರಾಷ್ಟ್ರಗಳು ತವಕಿಸುತ್ತಿರುವ ಹೊತ್ತಲ್ಲಿ, ಪಡೆದುಕೊಂಡಿರುವುದನ್ನು ಒಂದು ಚಿಲ್ಲರೆ ಕಾರಣಕ್ಕಾಗಿ ಕಳೆದುಕೊಳ್ಳುವ ಅವಿವೇಕಕ್ಕೆ ನಮ್ಮ ಸರ್ಕಾರ ಕೈ ಹಾಕಿರುವುದು ಮತ್ತಷ್ಟು ಸಮಸ್ಯೆಗಳಿಗೆ ಬೀಜವಾಗಬಹುದು. ಉದಾಹರಣೆಗೆ ರಾಮನೇ ಕಲ್ಪನೆ ಎಂದಾದರೆ ರಾಮಜನ್ಮಭೂಮಿ ವಿವಾದದ ಕತೆ ಏನು?

Friday, September 7, 2007

ಈಗ ಆ ಊರಿನಲ್ಲಿ ತರುಣರೇ ಇಲ್ಲ...


ಕರಾವಳಿ ತೀರದ ಹೆಸರಿಲ್ಲದ ಒಂದು ಹಳ್ಳಿ. ಇಡೀ ಹಗಲು ಸಮದ್ರದ ಮೇಲಿನಿಂದ ಬೀಸಿ ಬರುವ ಗಾಳಿಯಿಂದಾಗಿ ಧಗೆ. ಸಂಜೆ ಹೊತ್ತಿಗೆ ಅದೇ ಗಾಳಿ ತಂಪಾಗುತ್ತದೆ. ಹಗಲಿಡೀ ದುಡಿದ ಜನ ಸಂಜೆ ಹೊತ್ತಿಗೆ ನಿಸೂರಾಗುತ್ತಾರೆ. ಹೆಗಲಿಗೊಂದು ಬೈರಾಸ ಹಾಕಿಕೊಂಡು ಗಡಂಗಿನ ಮುಂದೆ ಕೂರುತ್ತಾರೆ. ಹೊಟ್ಟೆ ತುಂಬ ಕಳ್ಳು ಕುಡಿದು, ತೂರಾಡುತ್ತಾ, ಬೈಯುತ್ತಾ ರಾತ್ರಿ ಹೊತ್ತಿಗೆ ಮನೆ ತಲುಪುತ್ತಾರೆ. ಮತ್ತೆ ಬೆಳಗ್ಗೆ ಏನೂ ಆಗಿಲ್ಲವೆಂಬಂತೆ ಕೆಲಸ ಶುರುಮಾಡುತ್ತಾರೆ. ಕಣ್ಣಲ್ಲಿ ಆಯಾಸದ ಸುಳಿವೇ ಇರುವುದಿಲ್ಲ. ವಯಸ್ಸಾಗಿದ್ದು ಸುಕ್ಕುಗಟ್ಟಿದ ಹಣೆಯಿಂದಷ್ಟೇ ಗೊತ್ತಾಗುತ್ತದೆ.
ಇದು ನಡುವಯಸ್ಕರ ಕತೆ. ಇನ್ನು ಹದಿಹರೆಯದ ಹುಡುಗರಿಗೆ ಕೆಲಸವೇ ಇಲ್ಲ. ಅವರು ಯಥಾಶಕ್ತಿ ವಾಲಿಬಾ್, ಕ್ರಿಕೆ್, ಚೆನ್ನೆಮಣೆ, ಚದುರಂಗ- ಮುಂತಾದ ಆಟಗಳಲ್ಲಿ ತೊಡಗಿಕೊಂಡಿದ್ದವರು. ಬೇಸಗೆಯ ಸಂಜೆಗಳಲ್ಲಿ ಯಕ್ಪಗಾನವೋ ನಾಟಕವೋ ಸಂಗೀತ ಸಂಜೆಯೋ ಏನಾದರೊಂದು ಹತ್ತಿರದ ಪಟ್ಟಣದಲ್ಲಿ ನಡೆದರೆ ಅಲ್ಲಿ ಇವರೆಲ್ಲ ಹಾಜರು. ಅದಾದ ಮೇಲೆ ಸಮೀಪದ ಚಿತ್ರಮಂದಿರದ ಮುಂದೆ ಇವರ ಪಾಳಿ. ಅಂತೂ ಸಂಜೆಯ ಹೊತ್ತು ಊರಿಗೆ ಕಾಲಿಟ್ಟರೆ ತರುಣರೋ ತರುಣರು.
ಅಂಥ ಊರುಗಳು ಈಗ ಹೇಗಾಗಿವೆ ಗೊತ್ತೇ? ಆ ಊರುಗಳಲ್ಲಿ ತರುಣರೇ ಇಲ್ಲ. ಯೌವನ ಆ ಬೀದಿಗಳಲ್ಲಿ ಮೆರವಣಿಗೆ ಹೊರಟು ದಶಕಗಳೇ ಕಳೆದಿವೆ. ಯುವ ತಲೆಮಾರು ಹಲವಾರು ಹಳ್ಳಿಗಳಲ್ಲಿ ಕಾಣಸಿಗುವುದೇ ಇಲ್ಲ. ನೆರಿಗೆ ಚಿಮ್ಮಿಸುತ್ತಾ ನಡೆಯುವ ಹುಡುಗಿಯರಿಲ್ಲದ, ಹುಸಿ ಗಾಂಭೀರ್ಯದಿಂದ ಚಿಗುರುಮೀಸೆ ತಿರುವಿಕೊಳ್ಳುತ್ತಾ ತುಟಿಯಂಚಲ್ಲೇ ನಗುವ ಹುಡುಗರಿಲ್ಲದ ಹಳ್ಳಿಯನ್ನು ಊಹಿಸಿಕೊಳ್ಳಿ. ಅದೊಂದು ಘಟನೆಗಳೇ ಇಲ್ಲದ ದಿನದಂತೆ ನೀರಸವಾಗಿರುತ್ತದೆ. ಅಂಥ ವಾತಾವರಣ ಪ್ರತಿ ಹಳ್ಳಿಯಲ್ಲೂ ಇದೆ.
ಅಷ್ಟೆ ಅಲ್ಲ, ಮೊದಲೆಲ್ಲ ಒಂದು ಹಳ್ಳಿಯನ್ನು ಅಲ್ಲಿ ಕೂತು ಬರೆಯುತ್ತಿರುವ ಲೇಖಕರ ಹೆಸರಿನಿಂದಲೇ ಗುರುತಿಸುವಷ್ಟು ಎಲ್ಲರೂ ಓದಿಕೊಂಡಿರುತ್ತಿದ್ದರು. ಬೀರಣ್ಣ ನಾಯಕ ಮೊಗಟಾ, ಗೋಪಾಲಕೃಷ್ಣ ವಂಡ್ಸೆ, ನಿರಂಜನ ವಾನಳ್ಳಿ.. ಹೀಗೆ ಹಂದ್ರಾಳ, ಬಳ್ಳಾರಿ, ಚೊಕ್ಕಾಡಿ, ಬರಗೂರು, ನಾಗತಿಹಳ್ಳಿಯಂಥ ಊರುಗಳೆಲ್ಲ ಅಲ್ಲಿ ಕೂತು ಬರೆಯುತ್ತಿದ್ದ ಲೇಖಕರಿಂದಾಗಿಯೇ ಪ್ರಸಿದ್ಧವಾಗಿದ್ದವು. ಒಂದೊಂದು ಹಳ್ಳಿಯಲ್ಲೇ ಹತ್ತಾರು ಲೇಖಕರು ಸಿಗುತ್ತಿದ್ದರು. ಅವರೆಲ್ಲ ವಾರಪತ್ರಿಕೆಗಳಿಗೆ, ಮಾಸಪತ್ರಿಕೆಗಳಿಗೆ, ದಿನಪತ್ರಿಕೆಗಳ ದೂರುಗಂಟೆ, ವಾಚಕರವಾಣಿ ವಿಭಾಗಕ್ಕೆ ಬರೆಯುತ್ತಿದ್ದರು. ಕತೆ ಚೆನ್ನಾಗಿದೆ ಎಂದೋ ಆತ್ಮಕ್ಕೆ ಸಾವಿಲ್ಲ ಎಂದೋ ಪತ್ರ ಬರೆಯುತ್ತಿದ್ದರು. ಒಬ್ಬೊಬ್ಬ ಸಂಪಾದಕನ ಮುಂದೆಯೂ ಅಕ್ಪರಶಃ ನೂರ ತೊಂಬತ್ತೆಂಟು ಲೇಖನಗಳಿರುತ್ತಿದ್ದವು. ಆ ಲೇಖನಗಳನ್ನು ಪ್ರಕಟಿಸಿ ಎಂದು ಪತ್ರಗಳನ್ನು ಬರೆಯುವವರಿದ್ದರು. ಪತ್ರಿಕಾ ಸಂಪಾದಕರೋ ಸಹಲೇಖಕರೋ ಮತ್ತೊಂದು ಹಳ್ಳಿಗೆ ಹೋದರೆ ಅಲ್ಲಿಯ ಪತ್ರಿಕಾ ಏಜಂಟನ ಮೂಲಕ ಆ ಹಳ್ಳಿಯ ಲೇಖಕನ ಮನೆ ಪತ್ತೆ ಮಾಡಬಹುದಾಗಿತ್ತು. ಹಲವಾರು ಗೆಳೆಯರು ಹುಟ್ಟಿಕೊಳ್ಳುತ್ತಿದ್ದುದು ಹಾಗೆಯೇ.
ಆದರೆ ಇವತ್ತು ಪತ್ರಿಕೆಗಳಿಗೆ ಹಳ್ಳಿಗಳಿಂದ ಲೇಖನಗಳು ಬರುತ್ತಿಲ್ಲ. ಹೊಸ ಹೊಸ ಲೇಖಕರು ಬರೆಯುತ್ತಿಲ್ಲ. ಹೊಸ ಹೆಸರುಗಳು ಕಾಣಿಸುತ್ತಿಲ್ಲ. ಅದೇ ಹಳೆಯ ಲೇಖಕರೇ ಹೊಸ ಥರ ಬರೆಯಲು ಯತ್ನಿಸುತ್ತಾರೆ. ಅದನ್ನು ಯುವಕರು ಓದುವುದಿಲ್ಲ. ಅದರ ಬಗ್ಗೆ ಚರ್ಚಿಸುವುದಿಲ್ಲ. ಲೋಹಿಯಾ ವಾದ ಯಾವತ್ತೋ ಸತ್ತು ಹೋಗಿದೆ. ಮಾರ್ಕ್ಸನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಹಿಟ್ಲರ್ ಮೇಲೆ ಯಾರಿಗೂ ಸಿಟ್ಟಿಲ್ಲ. ಗಾಂಧೀವಾದ ಶೂದ್ರನ ಸೊತ್ತಾಗಿಬಿಟ್ಟಿದೆ.
ಇದು ಸಾಮಾಜಿಕ ಸ್ಥಿತ್ಯಂತರದ ಮಾತಾದರೆ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿಯೂ ಇಂಥದ್ದೇ ಶೂನ್ಯ ಎಲ್ಲೆಲ್ಲೂ ಇದೆ. ಆಧ್ಯಾತ್ಮಿಕವಾಗಿಯೂ ಅದರ ಪ್ರಭಾವಗಳನ್ನು ನೋಡಬಹುದು. ಒಂದು ಕಾಲದಲ್ಲಿ ಲೇಖಕರನ್ನು ಗಾಢವಾಗಿ ಪ್ರಭಾವಿಸಿದ್ದ ಜಿಡ್ಡು ಕೃಷ್ಣಮೂರ್ತಿ, ರಜನೀ್, ವಿವೇಕಾನಂದ, ಪರಮಹಂಸ ಮುಂತಾದವರು ಕಣ್ಮರೆಯಾಗಿದ್ದಾರೆ. ಯಾವ ಹುಡುಗನೂ ತನ್ನ ಓದುವ ಕೋಣೆಯಲ್ಲಿ ಇವತ್ತು ವಿವೇಕಾನಂದರ ಫೋಟೋ ಅಂಟಿಸಿಕೊಳ್ಳುವುದಿಲ್ಲ. ಕಣ್ಮುಂದೆ ವಿವೇಕಾನಂದರನ್ನು ಇಟ್ಟುಕೊಂಡು ಟೀವಿಯಲ್ಲಿ ಮಲ್ಲಿಕಾ ಶೆರಾವ್ಳ ನಗ್ನಾವತಾರವನ್ನು ನೋಡುವಾಗ ಆತನನ್ನು ದ್ವಂದ್ವ ಕಾಡುತ್ತದೆ.
ಇದು ಒಂದು ಮುಖ. ಇನ್ನೊಂದು ಕಡೆ ಪುಟ್ಟ ಹಳ್ಳಿಗಳಲ್ಲಿ ಒಂದಷ್ಟು ಹರಟೆ ಕೇಂದ್ರಗಳಿದ್ದವು. ಅವು ಹಳೆಯ ಕಾಲದ ಸೇತುವೆ, ಟೈಲ್ ಅಂಗಡಿ, ಪತ್ರಿಕಾ ಏಜಂಟನ ಪುಟ್ಟ ಸ್ಟಾಲು, ನಾಲ್ಕಾಣೆಗೆ ಒಂದು ಟೀ ಮಾರುತ್ತಿದ್ದ ಶೆಟ್ಟರ ಹೊಟೆಲ್ಲು, ಹೊಳೆತೀರದ ಬಂಡೆಗಲ್ಲು. ಇವತ್ತು ಇವೆಲ್ಲ ಅನಾಥವಾಗಿವೆ. ಟೈಲ್ ಅಂಗಡಿಗೆ ಕಾಲಿಡುವುದನ್ನೇ ಹಳ್ಳಿ ಮತ್ತು ಪಟ್ಟಣದ ಹುಡುಗರು ಮರೆತಿದ್ದಾರೆ. ಶೇಡೆ್ ಜೀ್‌ಸಗೆ ಹುಡುಗಿಯರು ಮಾರು ಹೋಗಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಒಂದೂರಿಗೂ ಇನ್ನೊಂದೂರಿಗೂ ಇರುವ ವ್ಯತ್ಯಾಸ ಬದಲಾಗಿದೆ. ಅರೇಅಂಗಡಿಯಲ್ಲಿರುವ ರಾಮತೀರ್ಥಕ್ಕೂ ದರ್ಬೆಯಲ್ಲಿರುವ ಲಕ್ಪ್ಮಣ ತೀರ್ಥಕ್ಕೂ ಏನು ಫರಕು ಎಂದು ಕೇಳಿದರೆ ಆಯಾ ಊರಿನ ಮಂದಿಯೇ ನಿಬ್ಬೆರಗಾಗುತ್ತಾರೆ. ಯಾವುದೇ ಊರಿಗೆ ಹೋದರೂ ಅದೇ ತಿಂಡಿ ತೀರ್ಥ ಸಿಗುತ್ತದೆ. ಅದೇ ರುಚಿಯ ಕೋಕಾಕೋಲಗಳು ಎಲ್ಲೆಲ್ಲೂ ಇವೆ. ಎಲ್ಲರೂ ಒಂದೇ ಥರದ ಬಟ್ಟೆ ತೊಟ್ಟುಕೊಂಡು ಓಡಾಡುತ್ತಾರೆ. ಎಲ್ಲ ಊರಿನ ಮಕ್ಕಳೂ ಒಂದೇ ಥರ ಮಾತಾಡುತ್ತವೆ. ಒಂದೇ ನರ್ಸರಿ ರೈಮನ್ನು ಒಂದೇ ರಾಗದಲ್ಲಿ ಹಾಡುತ್ತವೆ. ಜಾನಿ ಜಾನಿ ಯೆ್ ಪಪ್ಪಾ...
ಜಾಗತೀಕರಣದ ಬಗ್ಗೆ ಮಾತಾಡುವವರು ಇದನ್ನೆಲ್ಲ ಗಮನಿಸುವುದು ಒಳ್ಳೆಯದು. ಒಂದು ಊರು ಅಲ್ಲಿಯ ಜೀವನ ಅಲ್ಲಿಯ ತರುಣತರುಣಿಯರು ಆ ಊರಲ್ಲಿ ಮಳೆಗಾಲದಲ್ಲಿ ಅಗಲವಾಗಿ ಬೇಸಗೆಯಲ್ಲಿ ಕಿರಿದಾಗಿ ಹರಿಯುವ ನದಿ, ಅಲ್ಲಲ್ಲಿಯ ಮಂದಿ ತೊಡುವ ಉಡುಪು- ಎಲ್ಲವೂ ವಿಶಿಷ್ಟವಾಗಿರುತ್ತಿತ್ತು. ಜಾಗತೀಕರಣಕ್ಕಿಂತ ಮೊದಲೇ ಶಿಕ್ಪಣ ಇದನ್ನೆಲ್ಲ ಬದಲಾಯಿಸಿತು. ಓದಿದವರ ಹವ್ಯಾಸಗಳೂ ಓದದವರ ಹವ್ಯಾಸಗಳೂ ಬೇರೆಬೇರೆಯಾದವು. ಹಳ್ಳಿಗಳಿಂದ ತರುಣರೆಲ್ಲ ದೊಡ್ಡ ಊರುಗಳಿಗೆ ವಲಸೆ ಹೋದರು. ಪ್ರತಿಯೊಂದು ಹಳ್ಳಿಯೂ ನಡುವಯಸ್ಕರ ನಿಲ್ದಾಣದಂತೆ ಕಾಣಿಸತೊಡಗಿತು. ಆ ನಡುವಯಸ್ಕರು ಯಾವ ನಿರ್ಧಾರವನ್ನೂ ಕೈಗೊಳ್ಳಲಾರದೆ, ಕಿರುಚಲಾರದೆ, ತೊಂದರೆಯಾದಾಗ ದೊಡ್ಡ ದನಿಯಲ್ಲಿ ಹೇಳಿಕೊಳ್ಳಲಾರದೆ ವಿಚಿತ್ರ ದಿಗ್ಭ್ರಾಂತಿಯಲ್ಲಿ ಬದುಕತೊಡಗಿದರು.
ಈಗ ಅವರಿಗೆಲ್ಲ ವಯಸ್ಸಾಗಿದೆ.
*****
ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪುಟ್ಟ ಪ್ರಸಂಗವನ್ನು ಹೇಳಬೇಕಿದೆ. ಇತ್ತೀಚೆಗೆ ಗೆಳೆಯ ಬಿ. ಗಣಪತಿ ಅಮಾಸೆಗೌಡ ಎಂಬ ವ್ಯಕ್ತಿಯೊಬ್ಬನ ಕತೆ ಹೇಳಿದರು. ಈ ಅಮಾಸೆಗೌಡ ಗಜಾನನ ಹೆಗಡೆಯವರ ಮನೆಯಲ್ಲಿ ದುಡಿಯುತ್ತಿದ್ದ. ಆತನ ಸುಂದರಿ ಹೆಂಡತಿಯನ್ನು ಗಜಾನನ ಹೆಗಡೆ ತನ್ನವಳನ್ನಾಗಿ ಮಾಡಿಕೊಂಡಿದ್ದ. ಅದನ್ನು ಪ್ರತಿಭಟಿಸುವ ಆರ್ಥಿಕವಾದ ಮತ್ತು ಸಾಮಾಜಿಕವಾದ ತಾಕತ್ತು ಅಮಾಸೆ ಗೌಡನಿಗೆ ಇರಲಿಲ್ಲ. ಆದರೆ ಅವರ ಪ್ರತಿಭಟನೆ ವ್ಯಕ್ತವಾಗದೇ ಇರುತ್ತಿರಲಿಲ್ಲ. ಅದಕ್ಕೆ ಆತ ಒಂದು ಉಪಾಯ ಕಂಡುಕೊಂಡಿದ್ದ.
ಹೆಂಡತಿಯನ್ನು ಅಪಾರವಾಗಿ ಪ್ರೀತಿಸುವ ಅವಳನ್ನು ಯಾವ ಕಾರಣಕ್ಕೂ ನೋಯಿಸಲು ಇಚ್ಚಿಸದ ಆತ ರಾತ್ರಿ ಕಂಠಪೂರ್ತಿ ಕುಡಿಯುತ್ತಿದ್ದ. ಕುಡಿದ ಮತ್ತಿನಲ್ಲಿ ಮನೆಗೆ ಬಂದು ಹೆಂಡತಿಯನ್ನು ಜಪ್ಪುತ್ತಿದ್ದ. ಮನೆಗೆ ಬರುವ ಹಾದಿಯಲ್ಲಿ ಗಜಾನನ ಹೆಗಡೆಯವರ ಮನೆ ಮುಂದೆ ನಿಂತು ` ಏನೋ.. ಗಜಾನನ ಹೆಗಡೆ... ನಿನಗೆ ಮಜಾ ಮಾಡೋದಕ್ಕೆ ನನ್ನ ಹೆಂಡ್ತೀನೇ ಬೇಕೇನೋ... ಸೂ..ಮಗನೇ.. ನನಗೂ ನಿನ್ನ ಹೆಂಡ್ತೀನ ಕೊಡೋ... ಮಾನಗೆಟ್ಟೋನೆ' ಎಂದು ಏರುದನಿಯಲ್ಲಿ ಬೈಯುತ್ತಿದ್ದ. ಅದನ್ನು ಕೇಳಿಸಿಕೊಂಡ ನಂತರವೇ ಗಜಾನನ ಹೆಗಡೆಯ ಕುಟುಂಬ ಮಲಗುತ್ತಿದ್ದುದು.
ಮಾರನೆಯ ಬೆಳಗ್ಗೆ ಎಂಟೂವರೆಗೆಲ್ಲ ನಿಯತ್ತಾಗಿ ಅದೇ ಗಜಾನನ ಹೆಗಡೆಯ ಮನೆ ಮುಂದೆ ಹಾಜರಾಗಿ ದೇಹವನ್ನು ಹಿಡಿಯಾಗಿಸಿ ಅವರ ಮುಂದೆ ನಿಲ್ಲುತ್ತಿದ್ದ. ಅವರು ಗಂಭೀರವಾಗಿ ರಾತ್ರಿ ಜಾಸ್ತಿಯಾಯ್ತೇನೋ ಅನ್ನುತ್ತಿದ್ದರು. ಆತ ಅಬೋಧ ಮುಗ್ಧತೆಯ ನಗು ನಕ್ಕು `ಕಳ್ಳಮುಂಡೇದು ಸೋಮಿ. ಕುಡಿದದ್ದೂ ಗೊತ್ತಾಗಲ್ಲ, ಮನೆಗೆ ಹೋಗಿದ್ದೂ ಗೊತ್ತಾಗಲ್ಲ' ಅನ್ನುತ್ತಿದ್ದ.
ಪ್ರತಿಭಟನೆ, ವಿರೋಧ ಹೇಗೆಲ್ಲ ವ್ಯಕ್ತವಾಗುತ್ತದೆ ನೋಡಿ. ಬಹುಶಃ ಅಮಾಸೆಗೌಡನ ಹೆಂಡತಿಯ ಹಾದರ ಕೂಡ ಆಕೆಯ ಪ್ರತಿಭಟನೆಯ ಅಸ್ತ್ರವೇ ಇದ್ದೀತೋ ಏನೋ? ಆದರೆ ಸಾಮಾಜಿಕವಾಗಿ ಆಕೆ ತನ್ನ ಗಂಡನನ್ನು ಶೋಷಿಸುತ್ತಿರುವವನ ಜೊತೆ ಸೇರಿ ಗಂಡನ ಅನ್ಯಾಯವನ್ನು ವಿರೋಧಿಸುತ್ತಿದ್ದಳಾ ಅನ್ನುವುದನ್ನು ನೆನೆದಾಗ ಗೊಂದಲವಾಗುತ್ತದೆ.
******
ಈಗ ಹೇಳಿ!
ಜಾಗತೀಕರಣವನ್ನಾಗಲೀ ಬದಲಾದ ಕಾಲಮಾನವನ್ನಾಗಲೀ ಅಷ್ಟು ಸುಲಭವಾಗಿ ಹಿಡಿದಿಡುವುದು ಸಾಧ್ಯವೇ?

Thursday, September 6, 2007

ಕಾದಂಬರಿಗೆ ವರ್ಗವಾಗಿದೆ!

ಗೆಳೆಯರೇ,

ಎಲ್ಲರೂ ಕಾದಂಬರಿ ಪ್ರಿಯರಲ್ಲ. ಕಾದಂಬರಿಯ ಮಧ್ಯೆ ಮತ್ತೊಂದು ಲೇಖನ ತೂರಿಸಿದರೆ ನದಿಯ ಸರಾಗ ಹರಿವಿಗೆ ಭಂಗವಾಗುತ್ತದೆ. ಹಾಗಿದ್ದರೆ ಏನು ಮಾಡಬೇಕು?
ಅನೇಕ ಗೆಳೆಯರು ಸೂಚಿಸಿರುವಂತೆ ಅದಕ್ಕಾಗಿ ಮತ್ತೊಂದು ಬ್ಲಾಗ್ ಆರಂಭಿಸಿದ್ದೇನೆ. ಹೆಸರು: http://uppinangady.blogspot.com.
ಅಲ್ಲಿ ಕೇವಲ ಕಾದಂಬರಿ ಇರುತ್ತದೆ. ಜೋಗಿಮನೆ ಎಂದಿನಂತೆ ಮುಂದುವರಿಯುತ್ತದೆ.

-ಜೋಗಿ