Tuesday, October 9, 2007

ಉತ್ತರ ಕೊಡುವ ಪದ್ಯಗಳಿಗಿಂತ ಉತ್ತರವಿಲ್ಲದೆ ಕೊನೆಯಾಗುವ ಪದ್ಯಗಳು ಹೆಚ್ಚು ಪರಿಣಾಮಕಾರಿನಟರಾಜ ಹುಳಿಯಾರ್
ತಾನು ಲೇಖಕನೋ ಅಲ್ಲವೋ ಎಂಬ ಬಗೆಗೆ ಕೂಡ ಖಾತ್ರಿಯಿರದ ವಿಲಿಯಂ ಷೇಕ್ಸ್‌ಪಿಯರ್ ನಾಲ್ಕು ನೂರು ವರ್ಷಗಳ ಹಿಂದೆ ಬರೆದ ನಾಟಕಗಳನ್ನು, ಕಾವ್ಯವನ್ನು ಜೀವನದ ಗಾಢಸತ್ಯಗಳ ಪವಿತ್ರ ಗ್ರಂಥಗಳನ್ನು ಓದುವಂತೆ ಜನ ಇವತ್ತಿಗೂ ಓದುತ್ತಿದ್ದಾರೆ. ಇಡೀ ಜಗತ್ತಿನ ಅಕ್ಷರಸ್ಥ ವಲಯದಲ್ಲಂತೂ ಷೇಕ್ಸ್‌ಪಿಯರ್ ಒಂದಲ್ಲ ಒಂದು ಬಗೆಯ ಸ್ಪಂದನ ಹುಟ್ಟಿಸಿಯೇ ಇದ್ದಾನೆ. ಅವನಿಂದ ನಾಟಕ ಬರೆಯುವುದನ್ನು ಕಲಿತವರ, ಕತೆ, ಕಾದಂಬರಿಗಳ ಪಾತ್ರಗಳನ್ನು ನಿರ್ವಹಿಸುವುದನ್ನು ಕಲಿತವರ, ಪದ್ಯ ಬರೆಯುವುದನ್ನು ಕಲಿತವರ ಸಂಖ್ಯೆಯನ್ನು ಪಟ್ಟಿ ಮಾಡುವುದು ಕೂಡ ಕಷ್ಟ. ಹಾಗೆಯೇ ಇಂಗ್ಲಿಷ್ ಬಲ್ಲವರೆಲ್ಲ ಅವನ ಯಾವುದಾದರೂ ಒಂದು ನುಡಿಗಟ್ಟನ್ನಾದರೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಬಳಸಿಯೇ ಇರುತ್ತಾರೆ. ಅವನ ವಾಕ್ಯಗಳನ್ನು ಸಂದರ್ಭದಿಂದ ಹೊರತೆಗೆದು ಪ್ರಯೋಗಿಸಿರುತ್ತಾರೆ. ಸಿನಿಮಾ ಜಗತ್ತೂ ಸೇರಿದಂತೆ ಬಹುತೇಕ ಎಲ್ಲಾ ಕಲಾಜಗತ್ತುಗಳೂ ಷೇಕ್ಸ್‌ಪಿಯರ್‌ನಿಂದ ಕಲಿತಿವೆ, ಕದ್ದಿವೆ ಅಥವಾ ಅವನ ಪ್ರತಿಭಾವಿಲಾಸದ ಕಾಣ್ಕೆಯಿಂದ ಬಗೆಬಗೆಯ ಪ್ರೇರಣೆಗಳನ್ನು ಪಡೆದಿವೆ.
ಕನ್ನಡ ಸಾಹಿತ್ಯದ ಅನೇಕ ದೊಡ್ಡ ಬರಹಗಾರರು ಷೇಕ್ಸ್‌ಪಿಯರ್ ಪ್ರತಿಭೆಯ ಒಂದಲ್ಲಾ ಒಂದು ಬಗೆಯ ಮಿಂಚಿನಿಂದ ಬೆಳಕು ಪಡೆದಿದ್ದಾರೆ. ಇಂಥ ಪರಂಪರೆಯೊಳಗೆ, ಕವಿ ಜಿ.ಎನ್. ಮೋಹನ್ ಕೂಡ ಷೇಕ್ಸ್‌ಪಿಯರ್ ಲೋಕವನ್ನು ಎದುರಾಗಲೆತ್ನಿಸಿದ್ದಾರೆ.
ಕವಿಯೊಬ್ಬ ಮಾತ್ರ ಎತ್ತಬಲ್ಲ ಬಹುಸೂಕ್ಷ ಪ್ರಶ್ನೆಗಳನ್ನು ಎತ್ತಿದವನು ಷೇಕ್ಸ್‌ಪಿಯರ್. ಇದು ಭಾಷೆಯ ಅದ್ಭುತ ಒಲಿಯುವಿಕೆಯಿಂದಾಗಿಯೇ ಅವನಿಗೆ ಸಾಧ್ಯವಾಗಿರಬಹುದು. ಅವನು ಕವಿಯಾಗಿ ತನ್ನ ನಾಟಕಗಳನ್ನು ಬರೆದಿದ್ದರಿಂದಲೇ ಅವನ ನಾಟಕಗಳಲ್ಲಿ ಅಷ್ಟೊಂದು ಸ್ತರಗಳಿರುವುದು ಹಾಗೂ ಧ್ವನಿಶಕ್ತಿ ಇರುವುದು ಎಂಬ ಸಂಗತಿ ಈಗ ಎಲ್ಲರಿಗೂ ಗೊತ್ತಿದೆ. ಮಾನವ ವರ್ತನೆಯ ವೈಚಿತ್ರ ಗಳನ್ನು ಹಾಗೂ ಊಹಾತೀತತೆಯನ್ನು ಶೋಧಿಸಿರುವವರು ತೀರಾ ಕಡಿಮೆ. ಕಾವ್ಯಭಾಷೆಯನ್ನು ನಾಟಕಕ್ಕೆ ಅದ್ಭುತವಾಗಿ ಒಗ್ಗಿಸಿದ ಷೇಕ್ಸ್ ಪಿಯರ್‌ನ ಪಾತ್ರಗಳು ಬಳಸುವ ಮಾತುಗಳ ಚಕಮಕಿಯಲ್ಲಿ ಮಾನವ ಸತ್ಯಗಳು ಹಾಗೂ ನಮ್ಮ ಕಣ್ಣಿಗೆ ಕಾಣದ ವಾಸ್ತವಗಳು ಇನ್ನಷ್ಟು ಸಂಕೀರ್ಣವಾಗಿ ಚಿಮ್ಮುತ್ತವೆ. ಖ್ಯಾತ ವಿಮರ್ಶಕ ಹೆರಾಲ್ಡ್ ಬ್ಲೂಮ್ ಷೇಕ್ಸ್ ಪಿಯರ್ ನನ್ನು ಪ್ರಶ್ನಿಸುವ ಅವಕಾಶವೇನಾದ್ರೂ ಸಿಕ್ಕರೆ ತಾನು ತಕ್ಷಣ ಕೇಳುವ ಪ್ರಶ್ನೆ ಇದು ಅನ್ನುತ್ತಾನೆ- -Did it comfort you to have fashioned women and men more real than living men and women?
`ಇಡೀ ಜಗತ್ತೇ ಒಂದು ರಂಗಭೂಮಿ; ನಾವೆಲ್ಲ ನಟ ನಟಿಯರು' ಎಂದು ಷೇಕ್ಸ್‌ಪಿಯರ್‌ನ ಪಾತ್ರವೊಂದು ಧ್ಯಾನಸ್ಥಸ್ಥಿತಿಯಲ್ಲಿ ನುಡಿಯುತ್ತದೆ. ಇಂಥ `ವಿಧಿಧ್ವನಿ'ಯ ನಿರ್ಲಿಪ್ತ ಮಾತನ್ನು ತನ್ನ ನಾಟಕದ ಕೇಂದ್ರದಲ್ಲಿಟ್ಟರೂ, ಷೇಕ್ಸ್‌ಪಿಯರ್‌ಗೆ ಮಾನವ ಜೀವನದಲ್ಲಿ ಯಾರಿಗೂ ನಿಗದಿತ ಪಾತ್ರಗಳಿಲ್ಲ ಎಂಬ ಸತ್ಯ ಚೆನ್ನಾಗಿ ಗೊತ್ತಿತ್ತು. ಅವನಿಗೆ ಈ ಸತ್ಯ ಗೊತ್ತಿದ್ದರಿಂದಲೇ, ಆ ಕಾಲದ ಎಲ್ಲರಿಗೂ ಪರಿಚಿತವಿದ್ದ ನಾಟಕಗಳನ್ನು, ಕತೆಗಳನ್ನು , ಚರಿತ್ರೆಯ ಪಾತ್ರಗಳನ್ನು ಆರಿಸಿಕೊಂಡರೂ ಅವನ್ನು ಬೇರೆ ರೀತಿಯಲ್ಲಿ ಶೋಧಿಸುವ ಸಾಧ್ಯತೆಯಿದೆಯೆಂದು ಷೇಕ್ಸ್‌ಪಿಯರ್‌ಗೆ ಹೊಳೆದಿತ್ತು. ಜೊತೆಗೆ, ಮನುಷ್ಯನ ಜೀವನದ ಪುಟ್ಟ ಪುಟ್ಟ ಸಂಗತಿಗಳೇ ಬೃಹತ್ ದುರಂತ ನಾಟಕದ ವಸ್ತುಗಳಾಗಿರುತ್ತವೆ ಎಂಬ ಅರಿವೂ ಅವನಿಗಿತ್ತು. ಮುದುಕ ಕಿಂಗ್‌ಲಿಯರ್ ತನ್ನ ರಾಜ್ಯ ಹಂಚಲು ಸಿದ್ಧನಾದ ಮೇಲೆ, ಆ ವೃದ್ಧಾಪ್ಯದಲ್ಲಿ ತನ್ನ ಕಿರಿಯ ಮಗಳಿಂದ ಪ್ರೀತಿಯ ಗ್ಯಾರಂಟಿಗಾಗಿ, ಅದರಲ್ಲೂ ಹುಸಿವಾಕ್ಯಗಳಲ್ಲಿ ಚಿಮ್ಮುವ ಪ್ರೀತಿಯ ಘೋಷಣೆಗಾಗಿ, ಯಾಕೆ ಪರಿತಪಿಸಬೇಕಿತ್ತು! ಅದು ಹಾಳಾಗಲಿ, ಮಗಳು ಕಾರ್ಡೀಲಿಯಾ `ತನ್ನ ತಂದೆ, ಪಾಪ, ಪ್ರೀತಿಯ ಮಾತಿಗಾಗಿ ಪರಿತಪಿಸುತ್ತಿದ್ದಾನೆ' ಎಂದು ತನ್ನ ಪ್ರೀತಿಯನ್ನು ಒಂದೆರಡು ಉತ್ಪ್ರೇಕ್ಷಿತ ಶಬ್ದಗಳಲ್ಲಿ ಹೇಳಿದ್ದರಾಗುತ್ತಿರಲಿಲ್ಲವೆ? ಹಾಗೆ ಹೇಳಲಾಗದೆ `ಒಬ್ಬ ಮಗಳು ತನ್ನ ತಂದೆಯನ್ನು ಪ್ರೀತಿಸುವಷ್ಟು ಮಾತ್ರ ನಿನ್ನನ್ನು ಪ್ರೀತಿಸುತ್ತೇನೆ' ಎಂದು ಯಾಕೆ ಹೇಳಿಬಿಟ್ಟಳೋ? ಆ ಮಾತೇ ಯಾಕೆ ದುರಂತ ಸರಣಿಯನ್ನು ಉದ್ಘಾಟಿಸಿತೋ? ಈ ಪ್ರಶ್ನೆಗಳಿಗೆಲ್ಲಾ ಉತ್ತರಗಳಿವೆಯೆ? ಮಾನವನ ಬದುಕಿನ ದುರಂತವೆಂದರೆ, ಎಲ್ಲ ಪ್ರಶ್ನೆಗಳಿಗೂ ಮಾನವನಿಗೆ ಉತ್ತರಗಳು ಗೊತ್ತಿದ್ದರೂ ಅವು ಸರಿಯಾದ ಗಳಿಗೆಗೆ ಒದಗಿ ಬರದಿರುವುದು. ಆದ್ದರಿಂದ, ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿವೆ ಎಂದ ಮಾತ್ರಕ್ಕೆ ದುರಂತವನ್ನು ತಡೆಯಲು ಸಾಧ್ಯವಿಲ್ಲ ಎಂಬುದೇ ಷೇಕ್ಸ್‌ಪಿಯರ್, ಸೊಫೊಕ್ಲಿಸ್, ಈಸ್ಕಿಲಸ್, ಯೂರಿಪಿಡೀಸರು ಕಂಡುಕೊಂಡ ಗಾಢಸತ್ಯ.
ಷೇಕ್ಸ್‌ಪಿಯರ್ ನಾಟಕಗಳಿಂದ ಚಿಮ್ಮುವ ಚಿಂತನೆಗಳನ್ನು ಒಂದೆಡೆ ಇಟ್ಟು ನೋಡಲೆತ್ನಿಸಿದರೆ, ಅಲ್ಲಿ ಅನೇಕ ವೈರುಧ್ಯಗಳು ಕಾಣುತ್ತವೆ. ನಾವು ಸ್ವಲ್ಪ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅವು ನಮ್ಮೆಲ್ಲರ ಬದುಕಿನ ವೈರುಧ್ಯಗಳೇ ಆಗಿವೆ ಎಂಬುದು ಮೆಲ್ಲಮೆಲ್ಲಗೆ ನಮಗೆ ಅರಿವಾಗತೊಡಗುತ್ತದೆ. ಅವನ ಪಾತ್ರಗಳ ಜೊತೆ ಹೆಚ್ಚು ಹೆಚ್ಚು ಒಡನಾಡಿದಂತೆಲ್ಲಾ ಅವು ನಮ್ಮ ವ್ಯಕ್ತಿತ್ವಗಳಿಗೆ ಹಿಡಿದ ಅಸಲಿ ಕನ್ನಡಿಗಳಂತೆ ಕಾಣತೊಡಗುತ್ತವೆ. ನಾವು ಸುಲಭವಾಗಿ ಒಪ್ಪಿದಂತೆ ಕಾಣುವ, ಅಥವಾ ತೇಲಿಸಿಕೊಂಡು ಮುಂದೆ ಸಾಗುವ ಮೌಲ್ಯಲೋಕಗಳ ತೀವ್ರ ಪರೀಕ್ಷೆಗಳೂ ಅಲ್ಲಿ ಕಾಣುತ್ತವೆ. ಅದರಲ್ಲೂ ನಾವು ಅಂತಿಮ ಮೌಲ್ಯಗಳೆಂದು ತಿಳಿದ ಅನೇಕ ಅಂಶಗಳನ್ನು ಷೇಕ್ಸ್‌ಪಿಯರ್ ಜಗತ್ತು ತೀವ್ರಪರೀಕ್ಷೆಗೆ ಒಳಪಡಿಸುತ್ತದೆ. ಅದರಲ್ಲೂ ಆ ಪ್ರಶ್ನೆಗಳು ಭಾಷೆಯ ಅತಿ ಸೂಕ್ಷ ಸ್ತರದಲ್ಲಿ ಮಂಡಿತವಾಗುತ್ತವೆ....
`ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ' ಸಂಕಲನದ ಕವಿ ಜಿ.ಎನ್. ಮೋಹನ್ ಕೆಲವೆಡೆ ಸರಳವಾದ ಹಾಗೂ ಇನ್ನೂ ಕೆಲವೆಡೆ ಸೂಕ್ಷ ವಾದ ಪ್ರಶ್ನೆಗಳೊಂದಿಗೆ ಷೇಕ್ಸ್‌ಪಿಯರ್‌ನನ್ನು ಮುಖಾಮುಖಿಯಾಗುತ್ತಾರೆ. ಈ ಪ್ರಶ್ನೆಗಳು ಷೇಕ್ಸ್‌ಪಿಯರ್‌ನ ಕಲ್ಪನಾ ವಿಲಾಸದಲ್ಲಿ ತಂತಾವೇ ಜೋಡಣೆಗೊಂಡಿರಬಹುದಾದ ಘಟನೆಗಳನ್ನು ಎದುರಾಗುತ್ತವೆ. ಆದರೆ ಷೇಕ್ಸ್ ಪಿಯರನೇ ಈ ಘಟನೆಗಳನ್ನು ಪ್ರಜ್ಞಾಪೂರ್ವಕವಾಗಿಯೇ ಜೋಡಿಸಿರಬಹುದು ಎಂಬ ಊಹೆಯಲ್ಲಿ ಕೂಡ ಈ ಪ್ರಶ್ನೆಗಳು ಎರಗುತ್ತವೆ. ಯುದ್ಧ ಗೆದ್ದು ಊರಿಗೆ ಮರಳಿದ ಸೇನಾಧಿಪತಿ ಮ್ಯಾಕ್‌ಬೆತ್‌ಗೆ ಯಾಕೆ ಜಕ್ಕಿಣಿಯರನ್ನು ಮುಖಾಮುಖಿಯಾಗಿಸಿದೆ: ಅಥವಾ ಡೆಸ್ಡಿಮೋನಾ ತನ್ನ ಕರವಸ್ತ್ರವನ್ನು ಯಾಕೆ ಬೀಳಿಸುವಂತೆ ಮಾಡಿ ದುರಂತಕ್ಕೆ ಕಾರಣನಾದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಇಲ್ಲಿ ಷೇಕ್ಸ್‌ಪಿಯರ್‌ಗೆ ಎಸೆಯಲಾಗುತ್ತದೆ. `ಊಟದ ಬಟ್ಟಲುಗಳ ನಡುವೆ ಎದ್ದು ನಿಲ್ಲುವ ಪ್ರೇತಗಳನ್ನು ಸೃಷ್ಟಿಸಿದವನಿಗೆ, ಸುಂದರ ಕನಸುಗಳ ಮಧ್ಯೆ ಒಂದೊಂದು ನಿಟ್ಟುಸಿರು ಹೆಣೆದವನಿಗೆ' ಈ ಬಗೆಯ ಪ್ರಶ್ನೆಗಳ ದಾಳಿ ಮುಂದುವರಿಯುತ್ತದೆ. ಅತಿ ಸಾಧಾರಣವಾದ ಸಂಗತಿಗಳು ಹಾಗೂ ಆಕಸ್ಮಿಕ ಸಂಗತಿಗಳೇ ಬದುಕನ್ನು ನಿಯಂತ್ರಿಸುತ್ತವೇನೋ ಎಂಬ ಸಂದೇಹ ಷೇಕ್ಸ್‌ಪಿಯರ್‌ಗೆ ಹೇಗೋ ಹಾಗೆಆಔಪಿi ಅವನನ್ನು ಪ್ರಶ್ನಿಸುತ್ತಿರುವ ಕವಿಗೂ ಇದೆ. ಹೀಗಾಗಿಯೇ ಷೇಕ್ಸ್‌ಪಿಯರ್‌ಗೆ ಮುಖಾಮುಖಿಯಾದ ಪ್ರಶ್ನೆಗಳು ಅಂತಿಮವಾಗಿ ಬದುಕಿನ ವೈರುಧ್ಯಗಳನ್ನು ಗುರುತಿಸುವ ಗಂಭೀರ ಪ್ರಶ್ನೆಗಳೂ ಆಗುತ್ತವೆ.
ಈ ಸಂಕಲನದಲ್ಲಿ ಷೇಕ್ಸ್‌ಪಿಯರ್‌ಗೆ ಮಾತ್ರ ಪ್ರಶ್ನೆಗಳಿಲ್ಲ. ಈ ಪ್ರಶ್ನಾ ಮಾದರಿಯ ಶೋಧನೆ ಈ ಸಂಕಲನದ ಹಲವು ಪದ್ಯಗಳಲ್ಲಿ ಮುಂದುವರಿಯುತ್ತದೆ. ಸಾಹಿತ್ಯವಲಯದಲ್ಲಿ ಹಾಗೂ ಸಾಮಾನ್ಯರ ಜಗತ್ತಿನಲ್ಲಿ ಚಿರಪರಿಚಿತವಿರುವ ಪಾತ್ರಗಳು ಹಾಗೂ ಘಟನೆಗಳನ್ನು ಕುರಿತಂತೆ ಈ ಕವನಗಳು ಬೀರುವ ಸೀಳು ನೋಟ ಹಾಗೂ ಅದರ ಜೊತೆಜೊತೆಗೇ ಒಸರುವ ಪ್ರಶ್ನೆಗಳು ಕೂಡ ಕುತೂಹಲಕರವಾಗಿವೆ. ಇವು ಹಿಂದಿನ ಸಾಹಿತ್ಯಕೃತಿಗಳ ಖಾಸಗಿ ಓದುಗಳಂತೆಯೂ ಕಾಣುತ್ತವೆ; ಈ ಕೃತಿಗಳನ್ನು ಕುರಿತಂತೆ ಕವಿ ಹಾಗೂ ಅವನೊಳಗಿನ ಮುಗ್ಧ ಮನುಷ್ಯನೊಬ್ಬ ಎತ್ತಿದ ಪ್ರಶ್ನೆಗಳಂತೆಯೂ ಕಾಣತೊಡಗುತ್ತವೆ. ಧರ್ಮರಾಯ, ಊರ್ಮಿಳೆ, ಕರ್ಣ, ಮ್ಯಾಕ್‌ಬೆತ್, ಸಂಗ್ಯಾ ಮುಂತಾದವರ ಜೊತೆ ಮೋಹನ್ ಅವರ ಕಾವ್ಯ ಜಗತ್ತು ವಿಸ್ಮಯ, ವಿಮರ್ಶೆ, ಸಂದೇಹಗಳ ಮೂಲಕ ನಡೆಸುವ ಮಾತುಕತೆಗಳು ಸಾಹಿತ್ಯ ಕೃತಿಗಳ ಹೊಸ ಓದಿನಂತೆಯೂ ಕಾಣತೊಡಗುತ್ತವೆ.
ಈ ದೃಷ್ಟಿಯಿಂದ ನೋಡಿದರೆ, ಈ ಸಂಕಲನದ ಅನೇಕ ಪದ್ಯಗಳು ಹಲವು ಸಾಹಿತ್ಯ ಕೃತಿಗಳಿಗೆ ಅಂತರ್‌ಪಠ್ಯೀಯವಾಗಿವೆ: ಅಂದರೆ, ಈಗಾಗಲೇ ಇರುವ ಪಠ್ಯಗಳ ಜೊತೆ ಸಂಬಂಧ ಸಾಧಿಸಿ ಹೊಸ ಅರ್ಥ ಹೊಳೆಯಿಸುತ್ತವೆ ಹಾಗೂ ಹಳೆಯ ಪಠ್ಯಗಳ ಓದನ್ನು ಮಾರ್ಪಾಡು ಮಾಡುತ್ತವೆ. ಹೀಗೆ ಮಾರ್ಪಾಡುಗೊಳಿಸಲು ಕವಿ ಮಾಡಿಕೊಂಡಿರುವ ನಿರೂಪಣಾ ತಂತ್ರಗಳು ನಾಟಕೀಯವಾಗಿವೆ. ತನ್ನನ್ನು ಬಿಟ್ಟುಹೋದ ಶಕುಂತಲೆಯನ್ನು ಕುರಿತು ಕಣ್ವರ ವನದ ಜಿಂಕೆಯೊಂದು ಮುಗ್ಧ ಪ್ರಶ್ನೆಗಳ ಮೂಲಕ ಶಕುಂತಲೆಯ ಸ್ಥಿತಿಯನ್ನು ಗ್ರಹಿಸಲೆತ್ನಿಸುತ್ತದೆ. ಇಲ್ಲಿ ಪ್ರೀತಿಯಿತ್ತು, ಸಖಿಯರಿದ್ದರು. ಜೊತೆಗೆ ನಾನಿದ್ದೆ. ಆದರೂ ಶಕುಂತಲೆ ಯಾಕೆ ಒಂದು ಜೊತೆ ಕಣ್ಣುಗಳಿಗೆ ಸೋತುಬಿಟ್ಟಳು? `ಒಂದು ನಗೆ, ಒಂದು ನಿಟ್ಟುಸಿರು, ಒಂದು ಹಾಡು ಸಾಕಾಯಿತೇನು ಶಕುಂತಲೆಗೆ, ಬೆನ್ನು ಹತ್ತಲು ಗೊತ್ತಿಲ್ಲದ ನಾಡಿನವನನ್ನು' ಎಂದು ಜಿಂಕೆ ನಿಟ್ಟುಸಿರುಬಿಡುತ್ತದೆ.
ಈ ಬಗೆಯ ಮುಗ್ಧ ಪ್ರಶ್ನೆಗಳಿಗೂ ಈ ಸಂಕಲನದಲ್ಲಿ ಎದ್ದು ಕಾಣುವ ಮುಗ್ಧತೆಯ ಹುಡುಗಾಟಕ್ಕೂ ಸಂಬಂಧವಿದೆ. ಆಧುನಿಕ ಕವಿಗಳ ಖಾಯಂ ಹುಡುಕಾಟಗಳಲ್ಲಿ ಮುಗ್ಥತೆಯ ಹುಡುಕಾಟವೂ ಒಂದು ಎಂಬುದು ಆಧುನಿಕ ಕಾವ್ಯದ ಓದುಗರಿಗೆಲ್ಲ ಗೊತ್ತಿರುತ್ತದೆ. ಮೋಹನ್ ಪದ್ಯಗಳಲ್ಲಿ ಮಗುವಿನ ಪ್ರಶ್ನೆಗಳು, ಮಗುವಿಗೆ ಕತೆ ಹೇಳುವ ರೂಪಕಗಳು ಆಗಾಗ್ಗೆ ಕಾಣಿಸಿಕೊಳ್ಳುವುದು ಈ ಹಿನ್ನೆಲೆಯಲ್ಲಿಯೇ.
`....ರೆಪ್ಪೆ ಮೇಲಿಂದ ಆಗಲೋ ಈಗಲೋ ಜಾರಿಬಿಡುವ ನಿದ್ದೆ'ಗಣ್ಣಿನ ಮಗು ನಿದ್ರಾಸುಂದರಿಯ ಕತೆ ಹೇಳು ಎಂದು ಕೇಳುತ್ತಿದೆ. ಕಿನ್ನರಿಯರ, ಜಕ್ಕಿಣಿಯರ ಕತೆ ಬೇಕೆಂದು ತಂದೆಯನ್ನು ಕೇಳುತ್ತಿದೆ. ಆದರೆ ಕತೆ ಹೇಳುತ್ತಿದ್ದವನ ಚಿತ್ತದಲ್ಲಿ ನಿದ್ರಾಸುಂದರಿಯ ಚಿತ್ರ ಇನ್ನೊಂದು ರೀತಿಯಲ್ಲಿ ಹಬ್ಬತೊಡಗುತ್ತದೆ. ಆದರೆ ಮಗುವಿನ ನಿದ್ರಾಸುಂದರಿಯ ಹುಡುಕಾಟದ ಅರ್ಥವೇ ಬೇರೆ: ತಂದೆಯ ಅರ್ಥವೇ ಬೇರೆ. ಆದರೂ ಎರಡೂ ಹುಡುಕಾಟಗಳಲ್ಲಿ ಭ್ರಾಮಕ ಜಗತ್ತಿಗಾಗಿ ಹಂಬಲಿಸುವ ಮುಗ್ಧತೆಯಿದೆ. ಮಗು ತನ್ನ ಮುಗ್ಧತೆಯ ಸ್ಥಿತಿಯಲ್ಲಿ ಈ ಹುಡುಕಾಟದಲ್ಲಿದ್ದರೆ, ವಯಸ್ಕನು ತನ್ನ ಅನುಭವದ ಜಗತ್ತಿನ ಹೊರೆಯಿಂದ ಪಾರಾಗಲು ಈ ಸ್ಥಿತಿಯ ಹುಡುಕಾಟದಲ್ಲಿರುವಂತೆ ಕಾಣುತ್ತದೆ....
ಹೀಗೆ ಈ ಪದ್ಯಗಳಲ್ಲಿ ಕಣ್ವರ ಆಶ್ರಮದ ಜಿಂಕೆ, ನಿದ್ರಾಸುಂದರಿಯನ್ನು ಬಯಸುವ ಮಗು ಹಾಗೂ ತಂದೆಯ ಕಾತರ ಬೇರೆ ಬೇರೆ ರೂಪಗಳಲ್ಲೂ ಕಾಣಿಸಿಕೊಳ್ಳುತ್ತವೆ. ಈ ಬಗೆಯ ಮುಗ್ಧತೆಯ ಮಂಡನೆಯ ಜೊತೆಜೊತೆಗೇ ಮುಗ್ಧತೆಯ ವಿನಾಶದ ಬಗೆಗಿನ ಹಳಹಳಿಕೆ ಕೂಡ ಇಲ್ಲಿನ ಪದ್ಯಗಳಲ್ಲಿ ಕಾಣಿಸಿಕೊಳ್ಳುತ್ತದೆ. ''Ceremony of innocence is drowned' ಎಂದು ಕವಿ ಯೇಟ್ಸ್ ತನ್ನ ಪ್ರಖ್ಯಾತ ಪದ್ಯ `ದಿ ಸೆಕೆಂಡ್ ಕಮಿಂಗ್'ನಲ್ಲಿ ವಿಷಾದ ಪಡುತ್ತಾನೆ. ಮುಗ್ಧತೆಯನ್ನು ಕಳೆದುಕೊಂಡ ಮ್ಯಾಕ್‌ಬೆತ್ ಜಕ್ಕಿಣಿಯರಿಗೆ ಬಲಿಯಾದದ್ದನ್ನು ಮೋಹನ್‌ರ ಪದ್ಯವೊಂದು ಹೇಳುತ್ತದೆ. ಈ ಜಕ್ಕಿಣಿಯರು ನಮ್ಮ ಮನಸ್ಸಿನೊಳಗೆ ಸದಾ ಇರುವ ವಿಚಿತ್ರ ಚಾಲಕ ಶಕ್ತಿಗಳ ಕಾಲ್ಪನಿಕ ರೂಪಗಳೂ ಹೌದು. ಜಕ್ಕಿಣಿಯರು ಭಯ, ಬಯಕೆಗಳೆರಡರ ರೂಪವಾಗಿಯೂ ಮ್ಯಾಕ್‌ಬೆತ್‌ಗೆ ಕಾಣಿಸಿಕೊಳ್ಳುತ್ತಾರೆ. ಅದರ ನಡುವೆಯೇ ಲೇಡಿ ಮ್ಯಾಕ್‌ಬೆತ್ ಹಾಗೂ ಮ್ಯಾಕ್‌ಬೆತ್ ಮುಗ್ಧತೆಯನ್ನೂ, ತಮ್ಮ ನಿದ್ರೆಯವ್ಪ್ರಿ ಕಳೆದುಕೊಂಡದ್ದು ಇಲ್ಲಿ ನೆನಪಾಗುತ್ತದೆ. ಷೇಕ್ಸ್‌ಪಿಯರ್ ಹೇಳುವ ಮುಗ್ಧತೆ ಕಳೆದುಕೊಂಡ ಸ್ಥಿತಿ ಹಾಗೂ ಯೇಟ್ಸ್ ಹೇಳುವ ಮುಗ್ಧತೆಯ ಮಾರಣಹೋಮಗಳೆರಡೂ ಮೋಹನ್ ಪದ್ಯಗಳಲ್ಲಿ ಬೆರೆಯಲೆತ್ನಿಸುತ್ತವೆ.

ಸೆಕೆಂಡ್ ಟೇಕ್ಈ ಸಂಕಲನದ ಪದ್ಯಗಳನ್ನು ಓದುವಾಗ, ಮೋಹನ್ ಇಪ್ಪತ್ತು ವರ್ಷಗಳ ಕೆಳಗೆ ಬರೆದ, ಕೊಂಚ ಭಾವಗೀತೆಯ ಕಡೆಗೆ ಜಾರುವ ಬಂಡಾಯ ಪದ್ಯಗಳು, `ಪಂಪ ಬಿಕ್ಕುತಾನೆ' ಎಂಬಂಥ ಕೆಂಪು ಪದ್ಯಗಳು ಹಾಗೂ `ಪ್ರೇಮ ಶೋಕ'ದ `ಬಿಕ್ಕು' ಪದ್ಯಗಳು ನೆನಪಾಗುತ್ತವೆ. `ನ...ದಿ...ಯಾ ಕಮಾನ್ಸೆ, ಮ..ನ..ದಾ..ಳದಿ...' ಎಂದು ಖ್ಯಾತ ಆಟಗಾರ್ತಿ ನದಿಯಾ ಕಮಾನ್ಸೆ ಕುರಿತ ಪದ್ಯವನ್ನು ಇನ್ನೇನು ಶಿವರಂಜಿನಿ ರಾಗಕ್ಕೆ ಜಾರುವ ಹಾಗೆ ಮೋಹನ್ ಓದುತ್ತಿದ್ದುದೂ ನೆನಪಾಗುತ್ತದೆ. ಕ್ರಾಂತಿ, ಪ್ರೇಮ, ರಮ್ಯತೆ, ಬದ್ಧತೆ ಎಲ್ಲದರ ಮಿಶ್ರಣ ಮಾಡಿ ಬರೆಯುತ್ತಿದ್ದ ಮೋಹನ್ ಪತ್ರಿಕೋದ್ಯಮದ ಓದು ಮುಗಿಸುವ ಹೊತ್ತಿಗೆ ಶಬ್ದಗಳ ಹುಲಗೂರ ಸಂತೆಯಾದ ಪತ್ರಿಕೋದ್ಯಮದ ಕೈ ಹಿಡಿದಿದ್ದರು.
ಕವಿಯ ಜೀವನ ವಿವರಗಳನ್ನು ಕಾವ್ಯಕ್ಕೆ ತಾಳೆ ಹಾಕುವುದು ತಪ್ಪು ಎಂದು ನಂಬುವವರಲ್ಲಿ ನಾನೂ ಒಬ್ಬ. ಅದಕ್ಕೇ ಮತ್ತೆ ನೇರವಾಗಿ ಈ ಕವಿಯ ಈಚಿನ ಕಾವ್ಯದ ಕಡೆಗೆ ನೋಡೋಣ. ಹಿಂದಿನ ಸಂಕಲನ ಪ್ರಕಟವಾಗಿ ಸುಮಾರು ಹದಿನೈದು ವರ್ಷಗಳ ನಂತರ ಬಂದ ಈ ಸಂಕಲನದ ಪದ್ಯಗಳಲ್ಲಿ ಹಳೆಯ ಭಾವಗೀತಾತ್ಮಕತೆ ಕಡಿಮೆಯಾಗಿದೆ. ಆ ಕಾರಣದಿಂದ ಈ ಪದ್ಯಗಳು ಹೆಚ್ಚು ಇಮ್ಮಿಡಿಯೆಟ್ ಆಗಿವೆ; ಆದರೆ ಇನ್ನು ಕೆಲವೆಡೆ ಸರಳ ಗದ್ಯದಿಂದಾಗಿ ಮಿಡಿಯದೆ ಮೊಂಡಾಗಿಯೂ ಇವೆ. ಹೀಗೆಂದುಕೊಳ್ಳುತ್ತಲೇ, ಈ ಸಂಕಲನದ ಪದ್ಯಗಳನ್ನು ಓದುತ್ತಿದ್ದಾಗ ಈ ಕವಿಯ ಇವತ್ತಿನ ಎಲೆಕ್ಟ್ರಾನಿಕ್ ಮಾಧ್ಯಮದ ವೃತ್ತಿಗೂ ಅವನ ಕಾವ್ಯಕ್ಕೂ ಏರ್ಪಟ್ಟಿರುವ ನಂಟು ನನ್ನನ್ನು ಮತ್ತೆ ಮತ್ತೆ ಸೆಳೆಯಿತು. ಪ್ರತಿನಿತ್ಯ ಲಕ್ಷಾಂತರ ಜನರನ್ನು ತಲುಪಬಲ್ಲ ಟೆಲಿವಿಷನ್ ಸಂಸ್ಥೆಯೊಂದರ ವಾರ್ತಾವಿಭಾಗದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಕೆಲವೇ ಮಂದಿಯನ್ನು ತಲುಪುವ ಕಾವ್ಯವನ್ನು ಯಾಕೆ ಆತುಕೊಳ್ಳುತ್ತಾನೆ ಎಂಬ ಕುತೂಹಲಕರ ಪ್ರಶ್ನೆ ಎದುರಾಯಿತು. ಈ ಬಗ್ಗೆ ಮೋಹನ್ ಜೊತೆ ಒಮ್ಮೆ ಮಾತಾಡಿದ್ದು ನೆನಪಿದೆ. `ಹಿಂದೊಮ್ಮೆ ಶಬ್ದಗಳನ್ನು ಅತಿಯಾಗಿ ಬಳಸುತ್ತಿದ್ದ ಪತ್ರಿಕೋದ್ಯಮ ಬಿಟ್ಟು ಟೆಲಿವಿಷನ್ ಪತ್ರಿಕೋದ್ಯಮಕ್ಕೆ ಹೋದ ಮೇಲೆ ಸಿಕ್ಕ ಒಂದು ರೀತಿಯ ಮೌನವು ಶಬ್ದಗಳ ಜೊತೆಗೆ ಇನ್ನೊಂದು ಬಗೆಯ ಸಂಬಂಧ ಸ್ಥಾಪಿಸಲು ನೆರವಾಯಿತು' ಎಂxಪಿ ಅವರು ಹೇಳಿದ ನೆನಪು. ಅದೇನೇ ಇದ್ದರೂ, ದಿನನಿತ್ಯದ ಸಂಗತಿಗಳನ್ನು, ಸಮಸ್ಯೆಗಳನ್ನು ಹೇಳಲು ಶಬ್ದಗಳನ್ನು ಕಡಿಮೆ ಬಳಸಿ, ಚಿತ್ರಗಳನ್ನು ಹೆಚ್ಚಾಗಿ ಬಳಸಬೇಕಾದ ವೃತ್ತಿಜೀವಿಯೊಬ್ಬ ಮತ್ತೆ ಶಬ್ದಗಳ ತಾಯಿ ಮಡಿಲಿನತ್ತ ಜಾರಲೆತ್ನಿಸುತ್ತಿರುವುದನ್ನು ಈ ಪದ್ಯಗಳು ಸೂಚಿಸುತ್ತಿವೆ:
ಸಂತೆಯ ಮಧ್ಯೆ ಇದ್ದೇನೆ
ಶಬ್ದಗಳ ನಡುವಿನಿಂದ
ಕರಗಿ ಹೋಗುವುದನ್ನು ಕಲಿಸು
ಎಂದು ಮೋಹನ್ ಪದ್ಯವೊಂದು ಆರ್ತವಾಗಿ ಪ್ರಾರ್ಥಿಸುತ್ತದೆ. ಈ ದೃಷ್ಟಿಯಿಂದ, ಪದ್ಯಗಳ ಬರವಣಿಗೆಯಲ್ಲಿ ತೊಡಗುವ ಕೆಲಸವೇ ಯಾರ ಹಂಗೂ ಇಲ್ಲದೆ ಲೋಕವನ್ನು ಪರಿಶೀಲಿಸುವ, ಹುಡುಕಿಕೊಳ್ಳುವ ಅವಕಾಶವನ್ನು ಮೋಹನ್‌ಗೆ ಕೊಟ್ಟಿದೆ. ಮಾತಿನ ಪರಿಣಾಮವನ್ನು ಮಂಕಾಗಿಸುವಂತೆ ಎರಗುವ ಚಿತ್ರಗಳ, ಅಂದರೆ ವಿಷುವಲ್ಸ್‌ಗಳ ಲೋಕದ ವೃತ್ತಿವಂತ ಮೋಹನ್. ಅಥವಾ ಅವರ ವಾರ್ತಾಲೋಕವನ್ನು ವಿಷುವಲ್ಸ್‌ಗೆ ಸ್ಪರ್ಧೆ ನೀಡಲೇಬೇಕಾದ ಒತ್ತಡದಿಂದ ಚಿಮ್ಮುವ ಸಂಕ್ಷಿಪ್ತ ಶಬ್ದಗಳ ಲೋಕ ಎಂದರೂ ಸರಿಯಾದೀತು. ಈ ಮಾತು ಸ್ವಲ್ಪ ಅಸ್ಪಷ್ಟ ಎನ್ನಿಸಿದರೆ, ವಾರ್ತಾ ಪ್ರಸಾರಗಳಲ್ಲಿ ಒಟ್ಟೊಟ್ಟಿಗೇ ಎರಗುವ ಚಿತ್ರ ಹಾಗೂ ಶಬ್ದಗಳ ಪ್ರಹಾರವನ್ನು ನೆನಪಿಸಿಕೊಳ್ಳಿ: ಈ ಮಾತು ಹೆಚ್ಚು ಸ್ಪಷ್ಟವಾದೀತು! ಅದೇನೇ ಇರಲಿ, ಈ ಬಗೆಯ ಟೆಲಿವಿಷನ್ ವಾರ್ತಾ ಲೋಕದ ಪೂರ್ಣಾವಧಿ ವೃತ್ತಿಜೀವಿಯೊಬ್ಬ ಶಬ್ದಗಳ ಮಾಂತ್ರಿಕ ಶಕ್ತಿಯನ್ನು ನೆಚ್ಚಿ ಹೊರಟಿದ್ದಾನೆ. ಆದರೂ ಈ ಪಯಣದಲ್ಲಿ ಹುಟ್ಟಿದ ಪದ್ಯಗಳನ್ನು ವಿಷುವಲ್ ಇಮ್ಯಾಜಿನೇಷನ್‌ನ ಹೊಸ ಲೋಕ ಹೆಚ್ಚು ಪ್ರಭಾವಿಸಿದಂತಿದೆ. ಪ್ರತಿಯೊಂದು ಹೊಸ ಅಭಿವ್ಯಕ್ತಿ ಮಾಧ್ಯಮವೂ ತನಗಿಂತ ಹಿಂದೆ ವಿಕಾಸಗೊಂಡಿರುವ ಅಭಿವ್ಯಕ್ತಿ ಮಾಧ್ಯಮವನ್ನು ಪ್ರಭಾವಿಸಿ ಮಾರ್ಪಡಿಸಲೆತ್ನಿಸುತ್ತದೆ. ಆ ಸೂಚನೆಗಳನ್ನು ಮೋಹನ್ ಪದ್ಯಗಳಲ್ಲೂ ಕಾಣಬಹುದು.
ಹಲವು ವರ್ಷಗಳಿಂದ ಪದ್ಯ ಬರೆಯುತ್ತಿರುವ ಮೋಹನ್ ಅವರ ಈಚಿನ ಪದ್ಯಗಳು ಅವರ ಹಿಂದಿನ ಪದ್ಯಗಳಿಗಿಂತ ಭಿನ್ನವಾಗಿವೆ; ಅವರ ಹಳೆಯ ಪದ್ಯಗಳಿಗಿದ್ದ ಭಾವಗೀತೆಯ ಸ್ಪರ್ಶ ಇಲ್ಲಿ ಕಡಿಮೆಯಾಗಿದೆ; ತಕ್ಷಣ ತಲುಪುವ ತುರ್ತು ಹೆಚ್ಚಿದೆ. ಈ ಪದ್ಯಗಳಲ್ಲಿ ಸಂವಹನದ ತೊಡಕು ಹೆಚ್ಚು ಇಲ್ಲದೆ ಇರುವುದಕ್ಕೆ ಅವರ ಎಲೆಕ್ಟ್ರಾನಿಕ್ ಮಾಧ್ಯಮದ ವೃತ್ತಿ ಅವರ ವಸ್ತುಗಳನ್ನು, ಪ್ರತಿಮಾ ನಿರ್ಮಾಣದ ರೀತಿಯನ್ನು ನಿರ್ದೇಶಿಸಿರುವುದು ಕೂಡ ಕಾರಣವಿರಬಹುದು. ಅದರ ಜೊತೆಗೇ, ಟೆಲಿವಿಷನ್ ಜಗತ್ತಿನ ಪ್ರತಿಮೆಗಳು ಈ ಪದ್ಯಗಳ ಮೂಲಕ ಮೊದಲಬಾರಿಗೆ ದೊಡ್ಡ ಮಟ್ಟದಲ್ಲಿ ಕನ್ನಡ ಕಾವ್ಯದೊಳಕ್ಕೆ ಬಂದಿವೆ. `ಸೆಕೆಂಡ್ ಟೇಕ್' ರೀತಿಯ ಪದ್ಯಗಳು ಟೆಲಿವಿಷನ್ ಜಗತ್ತಿನ ಹೊಸ ನುಡಿಗಟ್ಟುಗಳನ್ನು ಬಳಸುತ್ತಾ, ಅಲ್ಲಿನ ದಿನಚರಿಯನ್ನು ರೂಪಕವಾಗಿಸಲೆತ್ನಿಸುತ್ತವೆ. ಹಬ್ಬವೊಂದರ ಸಡಗರದ ನಡುವೆ `ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್' ಎಂಬ ವಿಡಿಯೋ ಸಿನಿಮಾ ನೋಡುವ ಮಧ್ಯಮ ವರ್ಗ ಸಿನಿಮಾದ ಘಟನೆಗಳಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಅಡ್ಡಾಡುವುದನ್ನು ವಿಮರ್ಶಿಸುವ `ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್' ಪದ್ಯ ಕೂಡ ಪರಿಣಾಮಕಾರಿಯಾಗಿದೆ. ವಿಷುವಲ್ ಮಾಧ್ಯಮವೇ ಪರಿಣಾಮಕಾರಿ ಎಂದು ನಂಬುವ ಈ ಕಾಲದಲ್ಲಿ ಮಾನವ ದುರಂತಗಳು ಮಾತ್ರ ಯಾಕೆ ಯಾವ ಮಾಧ್ಯಮದ ಮೂಲಕವೂ ಮನುಷ್ಯರ ಮನಸ್ಸನ್ನು ತೀವ್ರವಾಗಿ ತಟ್ಟುತ್ತಿಲ್ಲ, ಬೆಚ್ಚಿಸುತ್ತಿಲ್ಲ ಎಂಬ ಸ್ವವಿಮರ್ಶೆಯ ದನಿಯೂ ಈ ಪದ್ಯದಲ್ಲಿದೆ. ಪ್ರತಿಯೊಂದು ವೃತ್ತಿಯೂ ತನ್ನೊಳಗಿಂದಲೇ ವಿಮರ್ಶೆಯ ದನಿಗಳನ್ನೂ ಹುಟ್ಟಿಸುತ್ತದೆ ಎಂಬುದನ್ನು ಈ ರೀತಿಯ ಪದ್ಯಗಳು ಸೂಚಿಸುವಂತಿವೆ. `ಕೋಡಂಗಿಗೆ ಇನ್ನು ಕೆಲಸವಿಲ್ಲ' ಎಂಬ ಪದ್ಯದಲ್ಲಿ ಈ ಬಗೆಯ ವಿಮರ್ಶೆ ಇನ್ನಷ್ಟು ಸೂಕ್ಷ ರೂಪ ತಾಳುತ್ತದೆ.
`ಸ್ವರ್ಗದ ಬಾಗಿಲಲ್ಲಿ ನಿಂತು' ಎಂಬ ಆ ಪದ್ಯದಲ್ಲಿ ಸ್ವರ್ಗದ ಬಾಗಿಲಲ್ಲಿ ನಿಂತ ಧರ್ಮರಾಯ ಉಳಿದವರು ಸ್ವರ್ಗ ಹೊಕ್ಕರೋ ನರಕ ಹೊಕ್ಕರೋ ಎಂದು ಚಕಿತಗೊಂಡಿರುತ್ತಾನೆ. ಹೀಗೆ ಮಹಾಕಾವ್ಯದ ನಾಯಕನೊಬ್ಬ ತನ್ನ ಮಹಾಪ್ರಯಾಣದ ಕೊನೆಯಲ್ಲಿ ಯಾವ ಉತ್ತರವೂ ಇಲ್ಲದೆ, ಹಠಾತ್ತನೆ ಸಂದಿಗ್ಧ ಸ್ಥಿತಿಯಲ್ಲಿ ನಿಲ್ಲುವ ಚಿತ್ರ ಅನೇಕ ಅರ್ಥಗಳನ್ನು ಕೊಡುತ್ತದೆ. ಹಾಗೆ ನೋಡಿದರೆ ಈ ಸಂಕಲನದಲ್ಲಿ ಉತ್ತರ ಕೊಡುವ ಪದ್ಯಗಳಿಗಿಂತ ಉತ್ತರವಿಲ್ಲದೆ ಕೊನೆಯಾಗುವ ಪದ್ಯಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಈ ಸಂಕಲನದಲ್ಲಿ ಬೇಗ ಬೇಗ ಮುಕ್ತಾಯಗೊಳ್ಳಲು ಧಾವಂತಪಡುವ ಪದ್ಯಗಳಿಗಿಂತ, ತಡವರಿಸುತ್ತಾ ಸತ್ಯ ಹುಡುಕುವ ಪದ್ಯಗಳಲ್ಲೇ ಹೆಚ್ಚು ಕಸುವು ಇರುವಂತಿದೆಯೆಂಬುದನ್ನೂ ಇಲ್ಲಿ ಸೂಚಿಸಬೇಕು.


ಹಲವು ವರ್ಷಗಳ ನಂತರ ಮತ್ತೆ ತಮ್ಮ ಮೂಲ ಕಸುಬಿನತ್ತ ಮರಳುತ್ತಿರುವ ಮೋಹನ್ ಸೃಜನಶೀಲ ಬರವಣಿಗೆಯಲ್ಲಿ ಕಾವ್ಯವೊಂದನ್ನೇ ಗಟ್ಟಿಯಾಗಿ ಹಿಡಿದವರು. ವಿವಿಧ ಮಾಧ್ಯಮಗಳ ಜೊತೆ ಅಡ್ಡಾಡುವ ಮಿತ್ರ ಮೋಹನ್ ಮತ್ತೆ ಕಾವ್ಯಕ್ಕೆ ಮರಳಿ ಬಂದಿದ್ದಾರೆ. ಹೊಸ ಉಡುಪಿನಲ್ಲಿ ಪ್ರತ್ಯಕ್ಷವಾಗಿ, ಕ್ಷಿಪ್ರವಾಗಿ ತಲುಪುವ ಗುಣ ಪಡೆದಿರುವ ಅವರ ಹೊಸ ಕಾವ್ಯ ಎಲ್ಲರನ್ನೂ ಮುಟ್ಟಲಿ ಎಂದು ಹಾರೈಸುವೆ.


(ಜಿ ಎನ್ ಮೋಹನ್ ಅವರ ಕವಿತಾ ಸಂಕಲನಕ್ಕೆ ನಟರಾಜ್ ಹುಳಿಯಾರ್ ಬರೆದಿರುವ ಮುನ್ನುಡಿ ಇದು. ಕವಿತೆಗಳನ್ನು ಓದಿದವರಿಗೆ ಅವುಗಳನ್ನು ಮತ್ತೊಮ್ಮೆ ಓದುವಂತೆ ಈ ಮುನ್ನುಡಿ ಪ್ರೇರೇಪಿಸುತ್ತದೆ ಎಂಬ ನಂಬಿಕೆಯೊಂದಿಗೆ ಇದನ್ನಿಲ್ಲಿ ಕೊಡಲಾಗಿದೆ)

2 comments:

ಟೀನಾ said...

ಜೋಗಿಯವರಿಗೆ,
ಮೋಹನ್ ರ ಕೆಲವು ಒಳ್ಳೆಯ ಕವಿತೆಗಳನ್ನು ಓದಲು ಅನುವುಮಾಡಿಕೊಟ್ಟಿದ್ದೀರಿ. ಧನ್ಯವಾದಗಳು. ನಟರಾಜ್ ಹುಳಿಯಾರರ ಮುನ್ನುಡಿಯನ್ನು ನಾನು ಕವಿತೆಗಳನ್ನು ಓದಿದ ನಂತರ ನೋಡಿದೆ. ನನಗೂ ಮೊದಲು ಕಾಡಿದ ಪ್ರಶ್ನೆಯೆಂದರೆ ಸೆಲೆಕ್ಟಿವ್ ಓದುಗರಿಗೆ ಮಾತ್ರ ತಲುಪಬಹುದಾದ ಕವಿತಾವಸ್ತುಗಳ ಆಯ್ಕೆ. ಆದರೆ ಮೋಹನರ ಸಮಜಾಯಿಷಿಯೂ ಸರಿಯಾಗಿಯೆ ಇದೆ. ಬರೆಯಬೇಕೆಂದಿರುವುದನ್ನು ಅದು ಹೊಮ್ಮಿದಾಗ ತಡೆಯಲಾಗುತ್ತದೆಯೆ? ಶೇಕ್ ಸ್ಪಿಯರ್ ಇಂದಿನ ಸಾಹಿತ್ಯ ಅಧ್ಯಯನಕ್ಕೆ ಎಷ್ಟು ಅವಶ್ಯ ಎನ್ನುವಂತಹ ಚರ್ಚೆಗಳು ನಡೆಯುತ್ತಿರುವ ಈ ಸಮಯಕ್ಕೆ ಸರಿಯಾಗಿ ಈ ಸಂಕಲನ ಹೊರಬರುತ್ತ ಇದೆ. ಸುಂದರವಾದ ಮುಖಪುಟ ವಿನ್ಯಾಸ. ಹಗುರವಾಗಿ ಮತ್ತೆ ಮತ್ತೆ ಓದಿಸಿಕೊಳ್ಳುತ್ತ ಹೋಗುವ ಕವಿತೆಗಳು.

Anonymous said...

preetiya jogi,
thumbaa koredubittidira...sorry