Thursday, November 29, 2007

ರಾಂಗ್ ನಂಬರ್!


ಅದೆಲ್ಲ ಶುರುವಾದದ್ದು ಒಂದೇ ಒಂದು ಫೋನ್ ಕಾಲ್‌ನಿಂದ. ನಿವೃತ್ತ ಲೆಕ್ಕದ ಮೇಷ್ಟ್ರು ಶಿವಲಿಂಗಯ್ಯನವರಿಗೆ ಆ ಮುಸ್ಸಂಜೆ ಇದ್ದಕ್ಕಿದ್ದಂತೆ ಹಾಸನದಲ್ಲಿರುವ ತಮ್ಮನ ಜೊತೆ ಮಾತಾಡಬೇಕು ಅನ್ನಿಸಿತು. ಆಗಷ್ಟೇ ಸಂಜೆ ಕರಗಿತ್ತು, ರಾತ್ರಿ ಇಳಿದಿರಲಿಲ್ಲ. ಅವರ ಮನೆಯ ಹಜಾರದಲ್ಲಿ ಇನ್ನೂ ಬೆಳಕಾಡುತ್ತಿತ್ತು. ಆ ಹೊತ್ತಲ್ಲಿ ಮೇಷ್ಟರು ಕಿಟಕಿಯ ಬಳಿ ಕುಳಿತುಕೊಂಡು ಅಲ್ಲೇ ಪಕ್ಕದಲ್ಲಿಟ್ಟಿದ್ದ ಹಳೇ ಕಾಲದ ಫೋನಿನ ಮುಕ್ಕಾಲು ಕೇಜಿ ಭಾರದ ರಿಸೀವರ್ ಎತ್ತಿಕೊಂಡರು. ಆಮೇಲೆ ಅದರ ಪಕ್ಕದಲ್ಲಿದ್ದ ಟೆಲಿಫೋನ್ ಡೈರಿ ಎತ್ತಿಕೊಂಡು ಐ ಜೆ ಕೆ ಎಲ್ ಎಮ್ ಎಂದು ಹುಡುಕಾಡಿ, ಮಹೇಶ ಅನ್ನುವ ಹೆಸರನ್ನು ಹುಡುಕಿ, ಅದರ ಪಕ್ಕದಲ್ಲಿ ಚಿತ್ತುಚಿತ್ತಾಗಿ ಬರೆದಿದ್ದ ಹತ್ತು ಅಂಕಿಗಳ ನಂಬರನ್ನು ಟರ್ರ.. ಟ್‌ಟ್‌ರ್ರಾ... ಟರ್ರ್.. ಟರ್ರ್‌ರ್ರ್... ಎಂದು ಹತ್ತು ಸಲ ತೋರು ಬೆರಳಿನಿಂದ ತಿರುಗಿಸುತ್ತಾ ಡಯಲ್ ಮಾಡಿದರು.
ಅವರಿಗೆ ಆ ಹಳೇ ಕಾಲದ ಡಯಲ್ ಫೋನೆಂದರೆ ಇಷ್ಟ. ಈ ಕಾಲದ ಒತ್ತುಗುಂಡಿ ಫೋನೆಂದರೆ ಅಷ್ಟಕ್ಕಷ್ಟೇ. ಅದು ಸಿಡಿಲು ಬಂದರೆ ಸುಟ್ಟು ಹೋಗುತ್ತೆ, ಮಳೆ ಬಂದರೆ ಕೆಟ್ಟು ಹೋಗುತ್ತದೆ. ಸರಿಯಾಗಿ ಕೇಳಿಸೋದಿಲ್ಲ ಅಂತ ನಂಬಿದ್ದರು ಅವರು. ಅದಕ್ಕೆ ಸರಿಯಾಗಿ ಮಳೆ ಬಂದಾಗೆಲ್ಲ ಆ ಹೊಸ ಫೋನುಗಳು ಸುಟ್ಟು ಹೋದ ಉದಾಹರಣೆಗಳು ಅವರ ಕಿವಿಗೆ ಬೀಳುತ್ತಿದ್ದವು. ಹೀಗಾಗಿ ಅವರು ಆ ಹಳೇ ಕಾಲದ ಫೋನೇ ವಾಸಿ ಅನ್ನುವ ಖಚಿತ ತೀರ್ಮಾನಕ್ಕೆ ಬಂದಿದ್ದರು.
ಶಿವಲಿಂಗಯ್ಯ ಆ ಹಳೇ ಪೋನಿನಿಂದ ತಮ್ಮನ ಮೊಬೈಲಿಗೆ ಫೋನ್ ಮಾಡಿ ಕಾದರು. ಅತ್ತಲಿಂದ ಫೋನು ರಿಂಗಾಗುವ ಸದ್ದು ಕೇಳಿ ಬರಲಿಲ್ಲ. ಅದರ ಬದಲಿಗೆ ಕೇಳಿಬಂದದ್ದು ಶಿವಲಿಂಗಯ್ಯನವರು ತುಂಬ ಮೆಚ್ಚಿದ್ದ ಹಿಂದಿ ಹಾಡು: ಹಮೇ ತುಮ್‌ಸೇ ಪ್ಯಾರ್ ಕಿತ್‌ನಾ, ಯೇ ಹಮ್ ನಹೀ ಜಾನ್‌ತೇ.. ಮಗರ್ ಜೀ ನಹೀ ಸಕ್‌ತೇ.. ತುಮ್ಹಾರೇ ಬಿನಾ..
ಶಿವಲಿಂಗಯ್ಯನಿಗೆ ಅರೆಕ್ಷಣ ಆಶ್ಚರ್ಯವಾಯಿತು. ತಾವು ಫೋನ್ ಮಾಡಿದ್ದು ಮೊಬೈಲಿಗೋ ಯಾವುದಾದರೂ ರೇಡಿಯೋ ಸ್ಟೇಷನ್ನಿಗೋ ಎಂಬ ಅನುಮಾನ ಬಂತು. ಫೋನ್ ಲೈನಿಗೆ ಯಾವುದಾದರೂ ರೇಡಿಯೋ ಸ್ಟೇಷನ್ನು ಸಿಕ್ಕಿಬಿಟ್ಟಿದೆಯೋ ಎಂದುಕೊಂಡು ಫೋನ್ ಕಟ್ ಮಾಡೋಣ ಅಂದುಕೊಳ್ಳುವಳ್ಳುವಷ್ಟರಲ್ಲಿ ಅವರ ಕಿವಿಗೆ ಹಲೋ ಅನ್ನುವ ಮಧುರವಾದ ದನಿಯೊಂದು ಕೇಳಿಸಿತು.
ಅಂಥ ಸುಮಧುರ ಕಂಠವನ್ನು ಅವರು ಕೇಳಿಯೇ ಇರಲಿಲ್ಲ. ಅದು ಕಿವಿಗೆ ಬೀಳುತ್ತಲೇ ಶಿವಲಿಂಗಯ್ಯ ಒಂದು ಸಾರಿ ದಂಗಾಗಿಹೋದರು. ಆ ಸ್ಥಿತಿಯಲ್ಲಿ ಅವರಿಗೆ ಮಾತೇ ಹೊರಡಲಿಲ್ಲ. ಆಗಷ್ಟೇ ಕೇಳಿದ ಹಮೇ ತುಮ್‌ಸೇ ಪ್ಯಾರ್ ಕಿತ್‌ನಾ ಹಾಡು, ಅದು ಕರೆದುಕೊಂಡು ಹೋದ ಯೌವನದ ದಿನಗಳ ನೆನಪು, ಆ ನೆನಪಿನ ಬೆನ್ನಿಗೇ ಎಂದೂ ಕೇಳಿರದ, ಎಲ್ಲಿಯೋ ಕೇಳಿದ್ದೇನೆ ಅನ್ನಿಸಿದ ಆ ಮಂಜುಳ ಧ್ವನಿ. ಶಿವಲಿಂಗಯ್ಯ ಕಂಪಿಸಿದರು.
ಹಲೋ ಯಾರು ಮಾತಾಡ್ತಿರೋದು ಹೇಳೀ..
ಆ ಧ್ವನಿ ಮತ್ತೊಮ್ಮೆ ಉಲಿಯಿತು. ನಾನು ಅನ್ನುವುದಕ್ಕೆ ಯತ್ನಿಸಿದರು. ಧ್ವನಿ ಹೊರಗೆ ಬರಲು ನಿರಾಕರಿಸಿದಂತಿತ್ತು. ಆ ಸ್ವರದಲ್ಲಿರುವ ಆಪ್ತತೆ, ಮಾಧುರ್ಯ ಮತ್ತು ಅದು ಸೃಷ್ಟಿಸಿರುವ ಅಪೂರ್ವ ಜಗತ್ತು ತಮ್ಮ ಒಂದು ಮಾತಿನಿಂದ ಕರಗಿಹೋಗುತ್ತದೆ ಅನ್ನುವ ಆತಂಕದಲ್ಲಿ ಶಿವಲಿಂಗಯ್ಯ ಸುಮ್ಮನೆ ಉಳಿದುಬಿಟ್ಟರು.
ಆಕೆ ಮತ್ತೆ ಮಾತಾಡಿದಳು. ಹಲೋ... ಮಾತಾಡಿ ಪ್ಲೀಸ್.. ಕೇಳಿಸ್ತಾ ಇದೆಯಾ. ಯಾರು ಬೇಕಾಗಿತ್ತು ನಿಮಗೆ.. ಎಲ್ಲಿಂದ ಮಾತಾಡ್ತಿದ್ದೀರಿ.. ಹಲೋ... ಹಲೋ..’ ಹಲೋ ಅನ್ನುವ ದನಿ ಅವರ ಚಿತ್ತಪ್ರಥ್ವಿಯಲ್ಲಿ ಅನುರಣಿಸುತ್ತಾ ಸಾಗಿತು. ಆ ದನಿಯೆಂಬ ಮಾಯಾಜಿಂಕೆಯ ಹಿಂದೆ ಮನಸ್ಸು ವೈದೇಹಿಯಾಯಿತು.

ಹಲೋ.. ಮಾತಾಡಿ... ಹಲೋ.. ಕೇಳಿಸ್ತಿಲ್ಲ.. ನಾನೇ ಮಾಡ್ತೀನಿ ಇರಿ... ಎಂದು ಮತ್ತೊಮ್ಮೆ ಕೊಂಚ ಎತ್ತರದ ದನಿಯಲ್ಲಿ ಮಾತಾಡಿ, ಆಮೇಲೆ ಫೋನ್ ಕಟ್ ಮಾಡಿದ್ದೂ ಶಿವಲಿಂಗಯ್ಯನವರಿಗೆ ಗೊತ್ತಾಗಲೇ ಇಲ್ಲ. ಅವರು ರಿಸೀವರ್ ಹಿಡಿದುಕೊಂಡು ಹಾಗೇ ಕೂತಿದ್ದರು. ಸ್ವಲ್ಪ ಹೊತ್ತಿನ ನಂತರ ಅವರ ಕಿವಿಗೆ ಕೇಳಿಸುತ್ತಿದ್ದದ್ದು ಡಿಸ್‌ಕನೆಕ್ಟ್ ಆದ ಫೋನ್ ಲೈನಿನ ಗುಯ್‌ಗುಡುವ ಸದ್ದು. ಶಿವಲಿಂಗಯ್ಯ ಹಾಗೇ ಕೂತುಬಿಟ್ಟರು.
ಹಲೋ.. ಎಂಬ ಸುಸ್ವರದ ಅಲೆ ಅವರ ಮನಸ್ಸಿನೊಳಗೆ ಉಯ್ಯಾಲೆ ಆಡುತ್ತಿತ್ತು. ಮತ್ತೆ ಅವಳಿಗೆ ಫೋನ್ ಮಾಡೋಣ ಅಂದುಕೊಂಡರು. ಆದರೆ ತಾನು ಡಯಲ್ ಮಾಡಿದ ಆ ರಾಂಗ್ ನಂಬರ್ ಯಾವುದು ಅನ್ನುವುದು ಅವರಿಗೆ ನೆನಪಾಗಲೇ ಇಲ್ಲ.
*******
ಆವತ್ತಿನಿಂದ ಶಿವಲಿಂಗಯ್ಯ ತಾನಾಗಿ ಉಳಿಯಲಿಲ್ಲ. ಅವರನ್ನು ಆ ದನಿ ಹಗಲೂ ಇರುಳೂ ಕಾಡಿತು. ಯಾವ ದಿವ್ಯ ವೀಣೆಯಿದು.. ಯಾರೀ ಸುರವೈಣಿಕ ಎಂದು ಬೆಳಗ್ಗೆ ರೇಡಿಯೋ ಉಲಿಯುತ್ತಿದ್ದರೆ ಅವರ ಮನಸ್ಸು ಆ ಸ್ವರದತ್ತ ಹಾಯುತ್ತಿತ್ತು. ಎಲ್ಲಾದರೂ ಏನಾದರೂ ಸದ್ದಾದರೆ ಆ ದನಿ ಮರುಕಳಿಸುತ್ತಿತ್ತು. ಈ ಜನ್ಮವನ್ನು ಸಾರ್ಥಕಗೊಳಿಸುವುದಕ್ಕೆ ಬಂದ ಅಮರನಾದ ಅದು ಅನ್ನುವುದು ಅವರಿಗೆ ಕ್ರಮೇಣ ಖಾತ್ರಿಯಾಗತೊಡಗಿತು.
ಲೆಕ್ಕದ ಮೇಷ್ಟ್ರು ಶಿವಲಿಂಗಯ್ಯನ ಲೆಕ್ಕ ತಪ್ಪುತ್ತಾ ಇದೆ ಅನ್ನುವುದು ಮೊದಲು ಗೊತ್ತಾದದ್ದು ಅವರ ಗೆಳೆಯ ಪುಟ್ಟಲಿಂಗಯ್ಯನಿಗೆ. ಸದಾ ಸಂಜೆ ವಾಕಿಂಗಿಗೆ ಶಿವಲಿಂಗಯ್ಯನ ಜೊತೆ ಹೋಗುತ್ತಿದ್ದ ಪುಟ್ಟಲಿಂಗಯ್ಯ ಮಾರನೇ ಸಂಜೆ ಬಂದಾಗ ಶಿವಲಿಂಗಯ್ಯ ಟೆಲಿಫೋನಿನ ಮುಂದೆ ಕೂತಿದ್ದರು. ವಾಕಿಂಗ್ ಬರೋಲ್ವಾ ಅಂತ ಕೇಳಿದ್ದಕ್ಕೆ, ಇಲ್ಲ ಯಾವುದೋ ಫೋನ್ ಬರೋದಿದೆ ಅಂತ ಹೇಳಿ, ಅವನನ್ನು ಸಾಗಹಾಕಿದರು. ಫೋನಿನ ಮುಂದೆ ಪ್ರತಿಷ್ಠಾಪಿತರಾಗಿ ಅಹೋರಾತ್ರಿ ಕಾದರು.ಟೆಲಿಫೋನಿನ ಮುಂದೆ ಕೂತು ಅದೇನು ತಪಸ್ಸು ಮಾಡ್ತಿದ್ದೀರಿ ಅನ್ನುವ ಹೆಂಡತಿ ಗಿರಿಜೆಯ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ. ತಾನೇಕೆ ಫೋನಿನ ಮುಂದೆ ಕಾಯುತ್ತಿದ್ದೇನೆ ಅನ್ನುವುದು ಅವರಿಗೂ ಗೊತ್ತಿರಲಿಲ್ಲ.
ಆಗಷ್ಟೇ ಡಿಸೆಂಬರ್ ಕಾಲಿಡುತ್ತಿತ್ತು. ಶಿವಲಿಂಗಯ್ಯನನ್ನೂ ಮಂಜು ಮುಸುಕಿದ ಮುಂಜಾನೆ, ಇಬ್ಬನಿ ಹನಿಸುವ ಸಂಜೆ, ಚಂದಿರನೂ ಮಂಕಾಗಿ ಉರಿಯುವ ಬೆಳದಿಂಗಳ ರಾತ್ರಿ ಬಿಡಲಿಲ್ಲ. ಫೋನ್ ಮುಂದೆ ಕೂತು, ಊಟಕ್ಕೆ ಕುಳಿತಾಗ, ಸ್ನಾನ ಮಾಡುವ ಹೊತ್ತಿಗೆ, ದೇವರ ಮುಂದೆ ಪೂಜೆಗೆ ಕೂತಾಗ ಶಿವಲಿಂಗಯ್ಯ ಒಂದೇ ಒಂದು ಸಾರಿ ಫೋನ್ ಮಾಡು ಅಂತ ತಮ್ಮೊಳಗೇ ಕೇಳಿಕೊಂಡರು. ಮತ್ತೆ ಕುಳಿತು ಲೆಕ್ಕ ಹಾಕಿದರು. ನಾನು ಫೋನ್ ಮಾಡ್ತೀನಿ ಅಂತ ಹೇಳಿದಳಲ್ಲ. ಹಾಗಿದ್ದರೆ ಯಾಕೆ ಮಾಡಲಿಲ್ಲ. ತನ್ನ ನಂಬರು ಅವಳ ಮೊಬೈಲಿನಲ್ಲಿ ದಾಖಲಾಗಿರಲೇಬೇಕು. ಹಾಗಿದ್ದರೆ ಇಂದಲ್ಲ ನಾಳೆ ಫೋನ್ ಮಾಡೇ ಮಾಡುತ್ತಾಳೆ. ಮಾಡೇ ಮಾಡುತ್ತಾಳೆ.
********
ಫೋನಿನ ಮುಂದೆ ಕುಳಿತು, ಅದು ರಿಂಗಾದಾಗೆಲ್ಲ ಉಲ್ಲಸಿತರಾಗುತ್ತಾ, ರಿಸೀವರ್ ಎತ್ತಿದಾಗೆಲ್ಲ ಅದೇ ಹಳೆಯ ದನಿಗಳು ಮುರುಕು ಮುರುಕಾಗಿ ಬಂದು ಕಿವಿಗೆ ಅಪ್ಪಳಿಸಿದಾಗ ಬೇಸರ ಪಡುತ್ತಾ ಶಿವಲಿಂಗಯ್ಯನ ದಿನಗಳು ಉರುಳಿದವು. ಮುಸ್ಸಂಜೆ ಫೋನ್ ರಿಂಗಣಿಸಿದರೆ ಅವಳದೇ ಇರಬೇಕು ಅನ್ನುವ ಊಹೆ. ಒಂದು ದಿನ ಅವರ ಗಿರಿಜೆ ಮುಸ್ಸಂಜೆಯ ಕರೆಯೊಂದಕ್ಕೆ ಉತ್ತರಿಸಿದ್ದು ಆಗಷ್ಟೇ ಮನೆಗೆ ಬರುತ್ತಿದ್ದ ಅವರಿಗೆ ಕೇಳಿಸಿತ್ತು. ಆಕೆ ಅಯ್ಯ... ರಾಂಗ್ ನಂಬರ್.. ಇಡಮ್ಮಾ ಫೋನು... ನೋಡ್ಕೊಂಡು ಮಾಡೋಕ್ಕಾಗಲ್ವಾ’ ಅಂತ ರೇಗುವುದಷ್ಟೇ ಕೇಳಿಸಿತು. ಶಿವಲಿಂಗಯ್ಯ ಸಿಟ್ಟಲ್ಲಿ ಬಂದು ಫೋನ್ ಎತ್ತಿಕೊಳ್ಳುವ ಹೊತ್ತಿಗೆ ಫೋನ್ ಕಟ್ಟಾಗಿತ್ತು. ಆವತ್ತು ಗಿರಿಜೆ ಹೊಡೆಸಿಕೊಳ್ಳಲಿಲ್ಲ ಅಷ್ಚೇ. ಯಾರದು, ದನಿ ಹೇಗಿತ್ತು.. ಏನಂದಳು ಅಂತ ಮತ್ತೆ ಮತ್ತೆ ಕೇಳಿದರು. ಗಿರಿಜೆ ಯಾವಳೋ ಹಾಳು ಮುಂಡೇ, ಅದ್ಯಾಕೆ ಹಾಗಾಡ್ತೀರಿ
ಅಂತ ತನ್ನ ತವರಿಗೆ ಭಾಷೆಗೆ ಮರಳುವ ತನಕ ಅವಳನ್ನು ಕಾಡಿದರು.
ದಿನ ಉರುಳಿದ ಹಾಗೇ ಆ ದನಿ ಅವರೊಳಗೆ ಹರಳುಗಟ್ಟುತ್ತಾ ಹೋಯಿತು. ಮತ್ತೊಂದು ಮುಸ್ಸಂಜೆ ಆ ದನಿ ಯಾವುದು ಅನ್ನುವುದನ್ನು ಪತ್ತೆ ಮಾಡಲೇಬೇಕು ಅಂದುಕೊಂಡು ಶಿವಲಿಂಗಯ್ಯ ನಿರ್ಧಾರ ಮಾಡಿಬಿಟ್ಟರು. ಮೊದಲ ದಿನ ಫೋನ್ ಮಾಡಿದ ಭಂಗಿಯನ್ನೇ ಕೂತು, ತಮ್ಮನ ನಂಬರ್ ಹುಡುಕಿ ರಿಸೀವರ್ ಎತ್ತಿಕೊಂಡು ತಮ್ಮನ ನಂಬರ್ ಡಯವ್ ಮಾಡಿದರು, ತಮ್ಮನೇ ಫೋನೆತಿತ್ತಿಕೊಂಡು ಏನಣ್ಣಾ, ಚೆನ್ನಾಗಿದ್ದೀಯ’ ಅಂತ. ಹೂಂ ಅನ್ನದೇ ಉಹೂಂ ಅನ್ನದೇ ಫೋನಿಟ್ಟರು.
ಅಂದರೆ ತಾನು ಯಾವುದೋ ಒಂದು ನಂಬರ್ ಬೇರೆ ಒತ್ತಿದ್ದೇನೆ. ಆಗ ಅದು ದೇವಕನ್ನಿಕೆಗೆ ಹೋಗಿದೆ. ಯಾವ ನಂಬರ್ ಬೇರೆ ಒತ್ತಿರಬಹುದು. ಹತ್ತಂಕಿಯ ನಂಬರ್ ಮುಂದಿಟ್ಟುಕೊಂಡು ಶಿವಲಿಂಗಯ್ಯ ಅದರ ವಿವಿಧ ಸಂಭವನೀಯತೆಯನ್ನು ಲೆಕ್ಕ ಹಾಕಿದರು. ೯೪೮೦೪೪೯೪೪೭ ನಂಬರಲ್ಲಿ ತಪ್ಪಾದರೆ ಏನಾಗಿರಬಹುದು. ಮೊದಲ ಮೂರಂಕಿ ತಪ್ಪಾಗಿರಲಿಕ್ಕಿಲ್ಲ. ಆಮೇಲಿನ ಸಂಖ್ಯೆ ತಪ್ಪಾಗಿರಬಹುದೇ. ಇದರಿಂದ ಎಷ್ಟು ನಂಬರ್ ಹುಟ್ಟುವುದಕ್ಕೆ ಸಾಧ್ಯ.
ಶಿವಲಿಂಗಯ್ಯ ಬರೆಯುತ್ತಾ ಹೋದರು: ೯೪೮೦೧೪೯೪೪೭, ೯೪೮೦೨೪೯೪೪೭, ೯೪೮೦೩೪೯೪೪೭, ೯೪೮೦೫೪೯೪೪೭... ಹೀಗೆ ಬರೆಯುತ್ತಾ ಬರೆಯುತ್ತಾ ಅವರ ಮುಂದೆ ಐನೂರೆಪ್ಪತ್ತಕ್ಕೂ ಹೆಚ್ಚು ಫೋನ್ ನಂಬರ್‌ಗಳಿರುವ ಪಟ್ಟಿ ಸಿದ್ದವಾಯ್ತು.
ಆವತ್ತಿನಿಂದ ಅವರದು ಅದೇ ಕೆಲಸ ಆಯ್ತು. ಬೆಳಗಾಗೆದ್ದು ಆ ಟೆಲಿಫೋನ್ ಪಟ್ಟಿಯನ್ನೆತ್ತಿಕೊಂಡು ಒಂದೊಂದೇ ನಂಬರ್ ಡಯಲ್ ಮಾಡುವುದು. ಆ ಹಳೇ ಫೋನಿನಲ್ಲಿ ನಂಬರ್ ಡಯಲ್ ಮಾಡುತ್ತಾ, ಅದು ಟರ್ರ.. ಟ್‌ಟ್‌ರ್ರಾ... ಟರ್ರ್.. ಟರ್ರ್‌ರ್ರ್... ಎಂದು ಸದ್ದು ಮಾಡುತ್ತಾ, ಮರು ಕ್ಷಣವೇ ಗೊಗ್ಗರು ದನಿಯೊಂದು ಹಲೋ ಅನ್ನುತ್ತಿದ್ದಂತೆ ಫೋನ್ ಕಟ್ ಮಾಡುತ್ತಾ, ಹಲೋ, ಪೊಲೀಸ್ ಸ್ಚೇಷನ್, ಹಲೋ ಕಟ್ಟಿಗೆ ಡಿಪೋ, ಹಲೋ ಹಾಲಿನ ಡೈರಿ, ಯಾವ ನಂಬರ್ ಬೇಕ್ರೀ, ರಾಂಗ್ ನಂಬರ್, ಫೋನ್ ಮಾಡಿ ಮಾತಾಡೋದಕ್ಕೇನ್ರೀ ರೋಗ, ಈ ನಂಬರ್ ಅಸ್ತಿತ್ವದಲ್ಲಿ ಇಲ್ಲ, ನೀವು ಕರೆ ಮಾಡಿರುವ ಚಂದಾದಾದರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಸದ್ಯಕ್ಕೆ ದೊರಕುತ್ತಿಲ್ಲ, ಸ್ವಿಚಾಫ್ ಮಾಡಿದ್ದಾರೆ, ದಯವಿಟ್ಟು ನೀವು ಡಯಲ್ ಮಾಡಿದ ನಂಬರ್ ಸರಿಯಿದೆಯೋ ಪರೀಕ್ಷಿಸಿ....
ಹೀಗೆ ಶಿವಲಿಂಗಯ್ಯನವರ ಹಗಲು ರಾತ್ರಿಗಳು ಸಾಗಿದವು. ಆ ತಿಂಗಳ ಬಿಲ್ಲು ಆರು ಸಾವಿರದ ಎಪ್ಪತ್ತೆಂಟು ಬಂತು. ಶಿವಲಿಂಗಯ್ಯ ಅಲ್ಲಾಡಲಿಲ್ಲ. ಆವತ್ತು ಗಿರಿಜೆ ಅವರನ್ನು ಹಿಡಕೊಂಡು ರೇಗಾಡಿ ಕೂಗಾಡಿದರು. ನಿಮಗೆ ಹುಚ್ಚು ಹಿಡಿದಿದೆ ಅಂದರು. ಒಂದು ದಿನ ಇದರಿಂದ ಬೇಸತ್ತು, ಶಿವಲಿಂಗಯ್ಯನವರಿಗೆ ಗೊತ್ತಾಗದ ಹಾಗೆ ಫೋನಿನ ವೈರು ಕತ್ತರಿಸಿಟ್ಟರು.
ಆವತ್ತು ಫೋನ್ ಮೌನವಾಗಿತ್ತು. ಅದು ಮೌನವಾಗಿದ್ದದ್ದೂ ಅರಿವಿಗೆ ಬಾರದ ಹಾಗೆ ಶಿವಲಿಂಗಯ್ಯ ಫೋನ್ ಮಾಡುತ್ತಲೇ ಇದ್ದರು. ಇವರಿಗೇನಾಗಿದೆ ಅಂತ ಕೇಳಿಕೊಂಡು ಬರೋಣ ಅಂತ ಗಿರಿಜೆ ಸಂತೆಪೇಟೆಯಲ್ಲಿದ್ದ ತನ್ನ ಅಣ್ಣ ಮಹಾದೇವಯ್ಯನನ್ನು ಕೇಳೋಣ ಅಂತ ಅಲ್ಲಿಗೆ ಹೋಗಿ ಅಣ್ಣನ ಜೊತೆ ಮನೆಗೆ ಮರಳುವ ಹೊತ್ತಿಗೆ ರಿಸೀವರ್ ಕೆಳಗೆ ಬಿದ್ದಿತ್ತು.
ಗಾಬರಿಯಲ್ಲಿ ಇಬ್ಬರೂ ಸೇರಿ ಶಿವಲಿಂಗಯ್ಯನವರನ್ನು ಹಾಸಿಗೆಯ ಮೇಲೆ ಮಲಗಿಸುವ ಹೊತ್ತಿಗೆ ಅವರ ಆತ್ಮವು ವ್ಯಾಪ್ತಿ ಪ್ರದೇಶದಲ್ಲಿ ಇರಲಿಲ್ಲ. ಅವನ ತಮ್ಮನಿಗಾದ್ರೂ ಫೋನ್ ಮಾಡಿ ಹೇಳೋಣ ಅಂದುಕೊಂಡು ಮಹಾದೇವಯ್ಯ, ಕೆಳಗೆ ಬಿದ್ದ ರಿಸೀವರ್ ಎತ್ತಿಕೊಂಡರು. ಫೋನ್ ಡೆಡ್ ಆಗಿದ್ಯಾ ಕೇಳಿದರು. ಇಲ್ಲಾ ಕನೆಕ್ಷನ್ ತೆಗೆದಿದ್ದೀನಿ ನೋಡಿ, ಅಲ್ಲಿ ಅಂತ ಗಿರಿಜೆ ತೋರಿಸಿದಳು.
********
ಮಹಾದೇವಯ್ಯ ಫೋನಿನ ಆ ಹಳೇ ಕಾಲದ ಫೋನಿನ ಮುಕ್ಕಾಲು ಕೇಜಿ ಭಾರದ ರಿಸೀವರ್ ಎತ್ತಿಕೊಂಡರು. ಆಮೇಲೆ ಅದರ ಪಕ್ಕದಲ್ಲಿದ್ದ ಟೆಲಿಫೋನ್ ಡೈರಿ ಎತ್ತಿಕೊಂಡು ಐ ಜೆ ಕೆ ಎಲ್ ಎಮ್ ಎಂದು ಹುಡುಕಾಡಿ, ಮಹೇಶ ಅನ್ನುವ ಹೆಸರನ್ನು ಹುಡುಕಿ, ಅದರ ಪಕ್ಕದಲ್ಲಿ ಚಿತ್ತುಚಿತ್ತಾಗಿ ಬರೆದಿದ್ದ ಹತ್ತು ಅಂಕಿಗಳ ನಂಬರನ್ನು ಟರ್ರ.. ಟ್‌ಟ್‌ರ್ರಾ... ಟರ್ರ್.. ಟರ್ರ್‌ರ್ರ್... ಎಂದು ಹತ್ತು ಸಲ ತೋರು ಬೆರಳಿನಿಂದ ತಿರುಗಿಸುತ್ತಾ ಡಯಲ್ ಮಾಡಿದರು.
ಅತ್ತಲಿಂದ ಫೋನು ರಿಂಗಾಗುವ ಸದ್ದು ಕೇಳಿ ಬರಲಿಲ್ಲ. ಅದರ ಬದಲಿಗೆ ಕೇಳಿಬಂದದ್ದು ಹಮೇ ತುಮ್‌ಸೇ ಪ್ಯಾರ್ ಕಿತ್‌ನಾ, ಯೇ ಹಮ್ ನಹೀ ಜಾನ್‌ತೇ.. ಮಗರ್ ಜೀ ನಹೀ ಸಕ್‌ತೇ.. ತುಮ್ಹಾರೇ ಬಿನಾ..
ಮಹಾದೇವಯ್ಯನಿಗೆ ಅರೆಕ್ಷಣ ಆಶ್ಚರ್ಯವಾಯಿತು. ತಾವು ಫೋನ್ ಮಾಡಿದ್ದು ಮೊಬೈಲಿಗೋ ಯಾವುದಾದರೂ ರೇಡಿಯೋ ಸ್ಟೇಷನ್ನಿಗೋ ಎಂಬ ಅನುಮಾನ ಬಂತು. ಫೋನ್ ಲೈನಿಗೆ ಯಾವುದಾದರೂ ರೇಡಿಯೋ ಸ್ಟೇಷನ್ನು ಸಿಕ್ಕಿಬಿಟ್ಟಿದೆಯೋ ಎಂದುಕೊಂಡು ಫೋನ್ ಕಟ್ ಮಾಡೋಣ ಅಂದುಕೊಳ್ಳುವಳ್ಳುವಷ್ಟರಲ್ಲಿ ಅವರ ಕಿವಿಗೆ ಹಲೋ ಅನ್ನುವ ಮಧುರವಾದ ದನಿಯೊಂದು ಕೇಳಿಸಿತು.
ಅಂಥ ಸುಮಧುರ ಕಂಠವನ್ನು ಅವರು ಕೇಳಿಯೇ ಇರಲಿಲ್ಲ. ಅದು ಕಿವಿಗೆ ಬೀಳುತ್ತಲೇ ಮಹಾದೇವಯ್ಯ ಒಂದು ಸಾರಿ ದಂಗಾಗಿಹೋದರು. ಆ ಹಾಡಿನ ಬೆನ್ನಿಗೇ ಎಂದೂ ಕೇಳಿರದ, ಎಲ್ಲಿಯೋ ಕೇಳಿದ್ದೇನೆ ಅನ್ನಿಸಿದ ಆ ಮಂಜುಳ ಧ್ವನಿ.
ಹಲೋ ಯಾರು ಮಾತಾಡ್ತಿರೋದು ಹೇಳೀ..
ಆ ಧ್ವನಿ ಮತ್ತೊಮ್ಮೆ ಉಲಿಯಿತು. ನಾನು ಅನ್ನುವುದಕ್ಕೆ ಯತ್ನಿಸಿದರು. ಧ್ವನಿ ಹೊರಗೆ ಬರಲು ನಿರಾಕರಿಸಿದಂತಿತ್ತು. ಆ ಸ್ವರದಲ್ಲಿರುವ ಆಪ್ತತೆ, ಮಾಧುರ್ಯ ಮತ್ತು ಅದು ಸೃಷ್ಟಿಸಿರುವ ಅಪೂರ್ವ ಜಗತ್ತು ತಮ್ಮ ಒಂದು ಮಾತಿನಿಂದ ಕರಗಿಹೋಗುತ್ತದೆ ಅನ್ನುವ ಆತಂಕದಲ್ಲಿ ಮಹಾದೇವಯ್ಯ ಸುಮ್ಮನೆ ಉಳಿದುಬಿಟ್ಟರು.
ಆಕೆ ಮತ್ತೆ ಮಾತಾಡಿದಳು. ಹಲೋ... ಮಾತಾಡಿ ಪ್ಲೀಸ್.. ಕೇಳಿಸ್ತಾ ಇದೆಯಾ. ಯಾರು ಬೇಕಾಗಿತ್ತು ನಿಮಗೆ.. ಎಲ್ಲಿಂದ ಮಾತಾಡ್ತಿದ್ದೀರಿ.. ಹಲೋ... ಹಲೋ..’ ಹಲೋ ಅನ್ನುವ ದನಿ ಅವರ ಚಿತ್ತಪ್ರಥ್ವಿಯಲ್ಲಿ ಅನುರಣಿಸುತ್ತಾ ಸಾಗಿತು. ಆ ದನಿಯೆಂಬ ಮಾಯಾಜಿಂಕೆಯ ಹಿಂದೆ ಮನಸ್ಸು ವೈದೇಹಿಯಾಯಿತು.
ಗಿರಿಜೆ ಮಲಗಿದ್ದ ಶಿವಲಿಂಗಯ್ಯನವರ ದೇಹದ ಮುಂದೆ ಅಸ್ತಿತ್ವದಲ್ಲಿಲ್ಲದ ನಂಬರಿನ ಹಾಗೆ ಕೂತೇ ಇದ್ದರು.

Saturday, November 24, 2007

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ...

ಇವತ್ತು ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ಅಂತ ಬರೆಯುವಾಗ ಸ್ವಲ್ಪ ಗೊಂದಲವಾಯಿತು. ನಾವು ಅನಾದಿಕಾಲದಿಂದ ಶೆಡ್ಯೂಲ್ ಅಂತ ಹೇಳಿಕೊಂಡು ಬಂದಿದ್ದನ್ನು ಈಗಿನ ಕಾಲದ ಹುಡುಗರು ಸ್ಕೆಡ್ಯೂಲ್ ಅನ್ನುತ್ತಾರೆ. ಅದು ಬಹುಶಃ ಅಮೆರಿಕನ್ ಉಚ್ಛಾರಣೆ ಇರಬಹುದು. ನಾವು ಕಲಿತದ್ದು ರೂಢಿಸಿಕೊಂಡದ್ದು ಬ್ರಿಟಿಷರ ಇಂಗ್ಲಿಷನ್ನು. ಆದರೆ ಪಿಜ್ಜಾ ಹಟ್, ಕೆಎಫ್ಸಿಗಳ ಜೊತೆಗೆ ಅಮೆರಿಕ್ ಇಂಗ್ಲಿಶ್ ನಮಗೆ ಹತ್ತಿರವಾಗಿಬಿಟ್ಟಿತು. ಡೈರೆಕ್ಟ್ ಅವರ ಪ್ರಕಾರ ಡಿರೆಕ್ಟ್, ನಮ್ಮ ಫೈನಾನ್ಷಿಯಲ್ ಪ್ರಾಬ್ಲೆಮ್ ಅವರಿಗೆ ಕೇವಲ ಫಿನಾನ್ಷಿಯಲ್ ಪ್ರಾಬ್ಲಂ. ಅವರ ಹೊಸ ಶಬ್ದಭಂಡಾರವೂ ವಿಚಿತ್ರವಾಗಿದೆ. ಎಲ್ಲ ಸರಿಯಾಗಿದೆ ಅನ್ನುವುದಕ್ಕೆ ಅವರು Cool ಅಂತಾರೆ. ನಮಗಿದ್ದದ್ದು ಗುಡ್ ಮಾರ್ನಿಂಗು ಮತ್ತು ಗುಡೀವ್ನಿಂಗು ಮಾತ್ರ. ಈಗ ಗುಡ್ಡೇ ಕೂಡ ಶುರುವಾಗಿದೆ. ಆಲ್ ದಿ ಬೆಸ್ಟ್ ಜೊತೆಗೆ ಟೇಕ ಕೇರ್ ಕೂಡ ಅಂಟಿಕೊಂಡಿದೆ.
ಇಂಥ ನೂರೆಂಟು ಪದಗಳನ್ನು ಹುಡುಕಬಹುದು. ಸಿಕಅನ್ನುವುದು ಅಂಥದ್ದೇ ಮತ್ತೊಂದು ಪದ. ನಮಗಿಷ್ಟವಾಗದೇ ಹೋದದ್ದಕ್ಕೆಲ್ಲ ಈಗಿನ ಕಾಲದ ಹುಡುಗರು sick ಅನ್ನುವ ಪದ ಬಳಸುತ್ತಾರೆ. ನಾವು ದರಿದ್ರ, ಡಬ್ಬಾ, ಅಸಹ್ಯ ಅನ್ನುತ್ತಿದ್ದದ್ದಕ್ಕೆಲ್ಲ ಸಿಕ್ ಅನ್ನುವ ಒಂದೇ ಪದ ಬಳಸಬಹುದಾ?
ಮತ್ತೆ ಆರಂಭದ ಸಾಲಿಗೇ ಬಂದರೆ, ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ನಮಗಿರುವ ಏಕೈಕ ಖುಷಿಯೆಂದರೆ ಹಳೆಯ ಕಾಲಕ್ಕೆ ಮರಳುವುದು. ಅದು ಅತ್ಯಂತ ಅಗ್ಗದ ಮನರಂಜನೆ ಕೂಡ. ಎಲ್ಲೆಂದರಲ್ಲಿ ಕುಂತಲ್ಲಿ ನಿಂತಲ್ಲಿ ನಾವು ಯಾರ ಹಂಗೂ ಇಲ್ಲದೇ ಅವರವರ ಶಕ್ತ್ಯಾನುಸಾರ ಹತ್ತೋ ಇಪ್ಪತ್ತೋ ಮೂವತ್ತೋ ವರುಷ ಹಿಂದಕ್ಕೆ ಹೋಗಿಬಿಡಬಹುದು. ಕಾಲದಹೊಳೆಯಲ್ಲಿ ಹೀಗೆ ಹಿಂದಕ್ಕೆ ಹೋಗುವುದಕ್ಕೆ ನಮಗೊಂದು ಹಾಯಿದೋಣಿ ಬೇಕೆ ಬೇಕು ಅನ್ನುವ ಬಗ್ಗೆ ಬಹುಶಃ ತಕರಾರುಗಳಿಲ್ಲ. ಅಂಥ ಹಾಯಿದೋಣಿಯಾಗಿ ನೆರವಿಗೆ ಬರುವ ಸಂಗತಿಗಳು ಮೂರು; ಹಳೆಯ ಗೆಳೆಯರು, ಹಳೆಯ ಫೊಟೋ ಮತ್ತು ಹಳೆಯ ಹಾಡು.
ಸುಮ್ಮನೆ ಕೈಲೊಂದು ಕನ್ನಡ ಚಿತ್ರಗೀತೆಗಳು ಎಂಬ ಪುಸ್ತಕ ಹಿಡಿದುಕೊಂಡು ಕುಳಿತುಕೊಳ್ಳಿ. ಅದರ ಯಾವುದೋ ಒಂದು ಪುಟವನ್ನು ತಿರುವಿಹಾಕಿ. ಅಲ್ಲೊಂದು ಹಾಡು ಸಿಗುತ್ತದೆ;
ಬೆಡಗಿನ ಹೆಣ್ಣಾ ಅರಳಿದ ಕಣ್ಣಾ
ಸೊಗಸು ಕಂಡೆಯೇನೋ
ಜಿನ್ ಜಿನ್ನಾಕ್ಕಡಿ ಜಿನ್ ಜಿನ್ನಾ..
ಮತ್ತೊಂದು ಪುಟ ತೆರೆಯಿರಿ;
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆಬಡಿದ ಸಂಭ್ರಮದ ನೆಪವೋ..
ರಾಮನ ಅವತಾರ ರಘುಕುಲ ಸೋಮನ ಅವತಾರ..
ಈ ಹಾಡುಗಳಿಗೂ ನಮ್ಮ ಬದುಕಿಗೂ ಸಂಬಂಧವೇ ಇರುವುದಿಲ್ಲ. ಅವು ನಮ್ಮ ಜೀವನದ ಕತೆಗಳನ್ನೇನೂ ಹೇಳುವುದಿಲ್ಲ. ಆದರೂ ಆ ಗೀತೆಗಳೊಂದಿಗೆ ಒಂದು ನೆನಪು ಬೆಸೆದುಕೊಂಡಿರುತ್ತದೆ. ಸುಮ್ಮನೆ ನೆನಪಿಸಿಕೊಳ್ಳಿ. ಒಲಿದ ಜೀವ ಜೊತೆಯಲಿರಲು ಬಾಳೂ ಸುಂದರ... ಎಂಬ ಗೀತೆ ಕೇಳಿದ ತಕ್ಪಣ ಮೂಡಿಗೆರೆಯ ಪುಟ್ಟ ಟೆಂಟಿನಲ್ಲಿ ಹಳೆಯ ಗೆಳೆಯ ವಿಶ್ವನ ಜೊತೆ ಕುಳಿತು ಬೆಂಕಿಯ ಬಲೆ ಸಿನಿಮಾ ನೋಡಿದ್ದು ನೆನಪಾಗುತ್ತದೆ. ಆ ಗೆಳೆಯ ವಿಶ್ವನಿಗೆ ಮದುವೆಯಾದದ್ದು, ಅವನ ಮೊದಲ ಮಗುವಿನ ನಾಮಕರಣಕ್ಕೆ ಶೃಂಗೇರಿಗೆ ಹೋಗಿದ್ದು, ಶೃಂಗೇರಿಯಿಂದ ಮರಳಿ ಬರುವಾಗ ಸೀಟಿನ ಪಕ್ಕದಲ್ಲೇ ನಿರಾಭರಣೆ ಸುಂದರಿಯೊಬ್ಬಳು ಕೂತಿದ್ದು, ಅಲ್ಲಿಂದ ಬಂದ ಮೂರೇ ದಿನಕ್ಕೆ ಹೊಸ ಕೆಲಸ ಸಿಕ್ಕಿದ್ದು.. ಹೀಗೆ ನೆನಪುಗಳು ಸುರುಳಿಬಿಚ್ಚುತ್ತಾ ಹೋಗುತ್ತವೆ.
ಇದೊಂದೇ ಅಲ್ಲ; ಚಿತ್ರಗೀತೆಗಳ ಒಂದು ಪುಸ್ತಕ ಕೈಯಲ್ಲಿದ್ದರೆ ಹತ್ತಾರು ಕಷ್ಟದ ವರುಷಗಳನ್ನು ಕಳೆದುಬಿಡಬಹುದು. ಇವತ್ತಿಗೂ ನಾಗರಹೊಳೆ ಚಿತ್ರದ `ಇಲ್ಲೇ ಸ್ವರ್ಗ ಇಲ್ಲೇ ನರಕ, ಮೇಲೇನಿಲ್ಲ ಸುಳ್ಳು' ಗೀತೆ ಕಣ್ಣಿಗೆ ಬಿದ್ದರೆ ನಲುವತ್ತರ ಆಸುಪಾಸಿನಲ್ಲಿರುವ ಎಲ್ಲರಿಗೂ ರೋಮಾಂಚವಾಗುತ್ತದೆ. ಆ ಹಾಡನ್ನು ನಾವೆಲ್ಲ ಕೇಳಬಾರದ ವಯಸ್ಸಲ್ಲಿ ಕೇಳಿರುತ್ತೇವೆ ಅನ್ನುವುದನ್ನು ನೆನಪಿಡಿ. ಸ್ವರ್ಗ ನರಕಗಳ ಬಗ್ಗೆ ಯೋಚಿಸುವ ವಯಸ್ಸೇ ಅಲ್ಲ ಹದಿನೆಂಟು. ಆದರೆ ಆ ವಯಸ್ಸಲ್ಲೇ ಹುಟ್ಟುಸಾವು ಎರಡರ ನಡುವೆ ಮೂರು ದಿನದ ಬಾಳು ಎಂಬ ಸಾಲು ಬೇರೊಂದು ಥರ ಖುಷಿ ಕೊಟ್ಟಿರುತ್ತದೆ.
ಅದಕ್ಕೆ ಕಾರಣಗಳೂ ಇವೆ; ನಡುವಯಸ್ಸು ದಾಟಿದ ಮೇಲೆ ಮೂರು ದಿನದ ಬಾಳು ಎಂಬ ಕಲ್ಪನೆ ಅಷ್ಟು ಸಹ್ಯವಾಗುವುದಿಲ್ಲ. ಆದರೆ ಬಾಲ್ಯದಲ್ಲಿ ನಮಗೆಲ್ಲ ಎಂಥ ಆತ್ಮವಿಶ್ವಾಸ ಮತ್ತು ಅಮರತ್ವದಲ್ಲಿ ಎಂಥ ನಂಬಿಕೆ ಇರುತ್ತದೆ ಅಂದರೆ ಜೀವನ ನಶ್ವರ ಅನ್ನುವುದೂ ತಮಾಷೆಯಾಗಿ ಕೇಳಿಸುತ್ತದೆ.
ಇದನ್ನು ಇಂಗ್ಲಿಷಿನಲ್ಲಿ ನಾಸ್ಟಾಲ್ಜಿಯ ಅನ್ನುತ್ತಾರೆ. ಕನ್ನಡದಲ್ಲಿ ಅದಕ್ಕೆ ಹಳೆಯ ನೆನಪುಗಳ ಗೀಳು ಅನ್ನುವ ಅರ್ಥ. ಸವಿನೆನಪು ಅನ್ನುವ ಪದವನ್ನು ನಾವು ಬಳಸಬಹುದು. ಇದು ಒಬ್ಬ ಬರಹಗಾರನಲ್ಲಿ ಅತಿಯಾದಾಗ ಆತ ಸಮಕಾಲೀನತೆಯಿಂದ ದೂರ ಸರಿಯುತ್ತಾನೆ ಅನ್ನುವ ಆರೋಪಕ್ಕೆ ತುತ್ತಾಗುತ್ತಾನೆ. ಕುವೆಂಪು ಬರೆದ ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ, ಮಲೆಯ ನಾಡಿಗೆ, ಮಳೆಯ ಬೀಡಿಗೆ.. ಅನ್ನುವ ಹಾಡು ನಾಸ್ಟಾಲ್ಜಿಯಕ್ಕೆ ಅತ್ಯುತ್ತಮ ಉದಾಹರಣೆ.
ಆದರೆ ಹಾಡುಗಳಲ್ಲೋ ನೆನಪಲ್ಲೋ ಹಿಂದಕ್ಕೆ ಹೋದಷ್ಟು ಸುಲಭವಾಗಿ ನಿಜಜೀವನದಲ್ಲಿ ಹಿಂದಕ್ಕೆ ಹೋಗಲಾಗುವುದಿಲ್ಲ. `ತೋಟದಾಗೆ ಹೂವ ಕಂಡೆ, ಹೂವ ಒಳಗೆ ನಿನ್ನ ಕಂಡೆ. ನನ್ನ ರಾಜ ರೋಜ ಹಿಂಗೆ ನಗ್ತಾ ಇರ್ಲಿ ಯಾವತ್ತೂ..' ಅನ್ನುವ ಹಾಡು ಕೇಳುತ್ತಾ ಹಿಂದಕ್ಕೆ ಹೋದಾಗ ಅಲ್ಲಿ ತೋಟವೂ ಇರುತ್ತದೆ, ಹೂವೂ ಇರುತ್ತದೆ. ರಾಜ ರೋಜಾ ನಗುತ್ತಲೇ ಇರುತ್ತದೆ. ಆದರೆ ನಿಜವಾಗಿಯೂ ಹೋಗಿ ನೋಡಿದರೆ ತೋಟವೇ ಇರುವುದಿಲ್ಲ!
ಬೇರೆ ಕವಿತೆಗಳಿಗೆ ಅರ್ಥ ಮಾತ್ರ ಇರುತ್ತದೆ. ಆದರೆ ಚಿತ್ರಗೀತೆಗಳ ಜೊತೆಗೆ ಪ್ರತಿಯೊಬ್ಬರಿಗೂ ಅವರದೇ ಆದ ಚಿತ್ರವೊಂದು ಇರುತ್ತದೆ. ಆ ಹಾಡು ಓದುತ್ತಿದ್ದಾಗ ಮಾತ್ರ ಆ ಚಿತ್ರ ನೆನಪಾಗುತ್ತದೆ. ಹಾಡು ಕೇಳುವ ಹೊತ್ತಿಗೆ ಸುತ್ತಮುತ್ತ ಯಾರೋ ಇರುತ್ತಾರೆ. ಅವರ ಮಾತು, ನಗು, ಗದ್ದಲದಲ್ಲಿ ಮನಸ್ಸು ಹಿಂದಕ್ಕೆ ಹೋಗುವುದಿಲ್ಲ. ಆದರೆ ಒಬ್ಬರೇ ಕೂತು ಚಿತ್ರಗೀತೆಗಳ ಪುಸ್ತಕ ಕೈಗೆತ್ತಿಕೊಂಡಾಗ ಒಂದೊಂದು ಹಾಡೂ ಒಂದೊಂದು ಘಟನೆಯೊಂದಿಗೆ ನೆನಪಿಗೆ ಬರುತ್ತದೆ.
ನೋಟದಾಗೆ ನಗೆಯ ಮೀಟಿ, ಮೋಜಿನಾಗೆ ಎಲ್ಲೆಯ ದಾಟಿ... ಅಂತ ಓದುತ್ತಿದ್ದ ಹಾಗೇ ತುಂಬತೋಳಿನ ಉದ್ದಲಂಗದ ಮೀನಕಂಗಳ ಹೆಸರೇ ಗೊತ್ತಿಲ್ಲದ ಹುಡುಗಿ ಹಾಗೆ ಸುಳಿದು ಹೀಗೆ ಮರೆಯಾಗುತ್ತಾಳೆ.
ಜೀವಿಸುವುದಕ್ಕೆ ಮತ್ತೊಂದು ಕಾರಣ ಸಿಗುತ್ತದೆ.

Tuesday, November 20, 2007

ತುಂಗೆಯ ತೆನೆ ಬಳುಕಿನಲ್ಲಿ ಕಾವ್ಯಕನ್ನಿಕೆಯ ಜಳಕ

ಭಾಸ್ಕರ ಅಸ್ತಂಗತನಾದ ಎಂದು ಹೇಳಬೇಡಿ. ಸೂರ್ಯ ಕಂತಿದ ಎಂದು ಬರೆದರೆ ನಿಮ್ಮ ಗಂಟೇನು ಹೋಗುತ್ತದೆ ನೋಡುವಾ ಎಂದು ಸುಮಾರು ಇಪ್ಪತ್ತು ವರುಷಗಳ ಹಿಂದೆ ಶಿವರಾಮ ಕಾರಂತರು ಗುಡುಗಿದ್ದರು. ಹೀಗೆ ಹೇಳಿದ ಕಾರಂತರೇ ಕವಿತೆಗಳನ್ನೂ ಬರೆದಿದ್ದರು ಅಂದರೆ ಆಶ್ಚರ್ಯವಾಗುತ್ತದೆ. ಸರಳವಾಗಿ ಹೇಳುವುದೇ ಒಂದು ದೀಕ್ಪೆಯೋ ಪಟುತ್ವವೋ ಆಗಿಬಿಟ್ಟಾಗ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಅನಗತ್ಯವಾಗಿ ಎಲ್ಲವನ್ನೂ ಸರಳಗೊಳಿಸುವುದಕ್ಕೆ ನಾವು ಶುರುಮಾಡುತ್ತೇನೆ. ಹನ್ನೆರಡನೆಯ ಶತಮಾನದಲ್ಲೇ ವಚನಕಾರರು ಎಷ್ಟು ಸರಳವಾಗಿ ಬರೆದಿದ್ದರು ನೋಡಿ. ಇಪ್ಪತ್ತನೇ ಶತಮಾನದ ಕುವೆಂಪು ಯಾಕೆ ಅಷ್ಟೊಂದು ಕ್ಲಿಷ್ಟವಾಗಿ ಬರೆಯಬೇಕು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳುತ್ತೇವೆ.
ಸರಳವಾಗಿ ಬರೆಯಬೇಕು ಎನ್ನುವುದು ಗದ್ಯಕಾರರ ಸಂಕಲ್ಪ. ಆದರೆ ಗದ್ಯದಲ್ಲಿ ಸರಳವಾಗಿ ಹೇಳಿದ್ದು ಒಂದು ಅನುಭವವಾಗಿ ನಮ್ಮನ್ನು ತಾಕುತ್ತದೆಯೇ? ಅಲ್ಲು ತುಂಬ ಬಿಡುವಾಗಿದ್ದಾಗ ಓದಿ ಮರೆತುಬಿಡುವ ಬರಹ ಮಾತ್ರ ಆಗಿಬಿಡುವ ಸಾಧ್ಯತೆ ಇಲ್ಲವೇ? ತುಂಬ ಸರಳವಾಗಿ ಹೇಳಿದಾಗ ಇಷ್ಟೇನಾ ಅನ್ನಿಸಿ ಇಡೀ ಅನುಭವದ ಗಾಢತೆಯೇ ನಮ್ಮನ್ನು ತಟ್ಟದೇ ಇರುವ ಸಾಧ್ಯತೆಗಳು ಇಲ್ಲವೆ? ಇವನ್ನೆಲ್ಲ ಸರಳತೆಯ ಬಗ್ಗೆ ಮಾತಾಡುವ ಮಂದಿ ಗಮನಿಸಿದ್ದಾರಾ? ಅಷ್ಟಕ್ಕೂ ಯಾರು ಸರಳವಾಗಿ ಬರೆಯಬೇಕು, ಕವಿಗಳೋ ಕತೆಗಾರರೋ?
ಅಷ್ಟಕ್ಕೂ ತನಗೆ ಬೇಕಾದ ಶೈಲಿಯನ್ನೂ ಭಾಷೆಯನ್ನೂ ಸಂಕೀರ್ಣತೆಯನ್ನೂ ಕಂಡುಕೊಳ್ಳುವುದು ಕಾವ್ಯವೇ ಅಲ್ಲವೇ? ಒಂದು ಒಳ್ಳೆಯ ಕವಿತೆಯನ್ನು ಅದರ ಸದ್ಯದ ಸ್ವರೂಪದಿಂದಲೂ ಮೈಯಿಂದಲೂ ಬೇರ್ಪಡಿಸಿ ನೋಡುವುದಕ್ಕೆ ಸಾಧ್ಯವೇ? ಹಾಗೆ ನೋಡಿದಾಗ ಅದು ಪದ್ಯವಾಗಿಯೇ ಉಳಿಯುತ್ತದೆಯೆ? ಹೀಗೆ ಕಾವ್ಯವನ್ನು ಗಮನಿಸುವಾಗ ಅನೇಕ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಷೇಕಪಿಯ್ ಥರದ ಕವಿಗಳು ಕಾವ್ಯವನ್ನೂ ಅದಕ್ಕೆ ತುಂಬ ಹತ್ತಿರದ ನಾಟಕವನ್ನೂ ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಆಯ್ದುಕೊಂಡರು. ಕಾಳಿದಾಸ ಕಾವ್ಯ-ನಾಟಕ ಬಿಟ್ಟು ಬೇರೇನೂ ಬರೆಯುವುದಕ್ಕೆ ಹೋಗಲಿಲ್ಲ. ಆದರೆ ಕಾಳಿದಾಸನ ನಾಟಕವೂ ಕಾವ್ಯವೂ ಒಂದೇ. ಕಾರ್ನಾಡರು ಬೇರೇನೂ ಬರೆದರೂ ಕೊನೆಗೂ ನೆನಪಿರುವುದು ಅವರ ನಾಟಕಗಳು ಮಾತ್ರ. ಅನಂತಮೂರ್ತಿ ಕವಿತೆಗಳನ್ನು ಬರೆದರೂ ಕತೆಗಳಷ್ಟೇ ನೆನಪಲ್ಲಿರುತ್ತವೆ. ಲಂಕೇಶರ ವಿಚಾರದಲ್ಲೂ ಇದು ಸತ್ಯ. ಬೇಂದ್ರೆ ಅಡಿಗರ ಪುಟಗಟ್ಟಲೆ ಗದ್ಯ ಸಾಹಿತ್ಯವನ್ನು ಮತ್ತೊಮ್ಮೆ ಓದಬೇಕು ಅಂತಲೂ ಅನ್ನಿಸದೇ ಇದ್ದರೆ ಅದಕ್ಕೆ ಕಾರಣ ಅವರ ಅತ್ಯುತ್ತಮ ಪ್ರತಿೆಯೆಲ್ಲ ಕಾವ್ಯಕ್ಪೇತ್ರಕ್ಕೆ ಸಂದಾಯವಾಗಿರುವುದು.
ನಮ್ಮ ಅಭಿವ್ಯಕ್ತಿ ಮಾಧ್ಯಮ ಯಾವುದಿರಬೇಕು ಎಂಬ ತರುಣ ಲೇಖಕರ ಪ್ರಶ್ನೆ ಎದುರಿಗಿದೆ. ಹೊಸದಾಗಿ ಬರೆಯಲು ಶುರುಮಾಡುವ ಸಾವಿರಾರು ಮಂದಿ, ಕನಿಷ್ಠ ನೂರಾರು ಮಂದಿ, ನಾನೇನು ಬರೆಯಲಿ ಎಂಬ ಗೊಂದಲಕ್ಕೆ ಬೀಳುತ್ತಾರೆ. ಅನೇಕರಿಗೆ ಕವಿತೆ ಬರೆಯುವುದು ಸುಲಭ, ಗದ್ಯ ಕಷ್ಟ ಅನ್ನುವ ಭಾವನೆಯಿದೆ. ಮತ್ತೆ ಹಲವರಿಗೆ ಈ ಕಾಲದ ಅಭಿವ್ಯಕ್ತಿ ಮಾಧ್ಯಮ ಯಾವುದು ಅನ್ನುವುದೇ ಗೊತ್ತಿಲ್ಲ. ಹಾಗೆಲ್ಲ ಕಾಲಕ್ಕೊಂದು ಅಭಿವ್ಯಕ್ತಿ ಮಾಧ್ಯಮ ಇರುವುದಿಲ್ಲ ಎಂದರೂ ಅವರು ನಂಬುವುದಿಲ್ಲ. ಒಂದು ಕಾಲದಲ್ಲಿ ಸಣ್ಣಕತೆಗಳನ್ನು ತುಂಬ ಓದುತ್ತಿದ್ದರಂತೆ. ಈಗ ಹನಿಗವಿತೆ ಓದುತ್ತಾರಂತೆ. ಹನಿಗವಿತೆ ಬರೆಯೋಣವೇ ಎಂದು ನೇರವಾಗಿ ವಿಷಯಕ್ಕೆ ಬರುವ ತರುಣ ಕವಿಗಳೂ ಇದ್ದಾರೆ.
ಅಷ್ಟಕ್ಕೂ ಇದು ಗಂಭೀರವಾಗ ಸಮಸ್ಯೆಯಾ? ತನ್ನ ಅಭಿವ್ಯಕ್ತಿ ಮಾಧ್ಯಮವನ್ನು ಕಂಡುಕೊಳ್ಳುವ ಜವಾಬ್ದಾರಿ ಆಯಾ ಬರಹಗಾರನದೇ ಅಲ್ಲವೇ? ಹಿಂದೆ ಮೇಷ್ಟ್ರುಗಳು `ನೋಡಯ್ಯಾ, ನಿನಗೆ ಕಾವ್ಯ ಆಗಿಬರೋಲ್ಲ. ನೀನು ಕಾದಂಬರಿ ಬರಿ' ಎಂದು ತಮ್ಮ ಶಿಷ್ಯಂದಿರನ್ನು ತಿದ್ದುತಿದ್ದರಂತೆ. ಹಾಗೆ ತಿದ್ದುವ ಮೂಲಕ ಎಷ್ಟೊ ಕವಿಗಳನ್ನು ಆ ಮೇಷ್ಟ್ರುಗಳು ಹುಟ್ಟುವ ಮೊದಲೇ ಸಾಯಿಸಿರಬಹುದು!
ಅಭಿವ್ಯಕ್ತಿ ಮಾಧ್ಯಮ ಯಾವುದಿರಬೇಕು ಅನ್ನುವುದನ್ನು ನೋಡುವ ಮೊದಲು ಇದೊಂದು ಉದಾಹರಣೆ ನೋಡೋಣ;
ಜೋಗದಲ್ಲಿ ಶರಾವತಿ ನದಿ ಅದೆಷ್ಟೋ ಮೀಟ್ ಎತ್ತರದಿಂದ ಧುಮುಕುತ್ತಾಳೆ. ಆ ಜೋಗ ಜಲಪಾತದ ಬಗ್ಗೆ ಅನೇಕರು ಅನೇಕ ಕವಿತೆಗಳನ್ನು ಬರೆದಿದ್ದಾರೆ. ಸಾಯೋಕ್ಮುಂಚೆ ಒಂದ್ಸಾರಿ ನೋಡು ಜೋಗಾದ್ಗುಂಡೀ ಅನ್ನುವ ಮೂಗೂರು ಮಲ್ಲಪ್ಪನ ಗೀತೆಯಿಂದ ಹಿಡಿದು ವಿಶ್ವೇಶ್ವರಯ್ಯ ಹೇಳಿದರು ಎನ್ನಲಾದ ` ಎಂಥಾ ಅಗಾಧ ನಷ್ಟ' ಎಂಬ ಉದ್ಗಾರದ ತನಕ ಜೋಗ ಎಲ್ಲರನ್ನೂ ಒಂದಲ್ಲ ಒಂದು ಭಾವನೆಯನ್ನು ಹುಟ್ಟುಹಾಕಿದೆ.
ಎಲ್ಲರೂ ಜೋಗದ ಬಗ್ಗೆ ಬರೆದಿದ್ದನ್ನು ಓದಿದ ನಂತರ ನಾಲ್ಕನೇ ತರಗತಿಯ ಕನ್ನ ಪಾಠ ಪುಸ್ತಕ ನೋಡಿ. ಜೋಗ ಜಲಪಾತದಿಂದ ಧುಮ್ಮಿಕ್ಕುವ ನೀರನ್ನು ಹಿಡಿದು ಹೇಗೆ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಅದು ಹೇಗೆ ಕರ್ನಾಟಕದ ಮನೆ ಮನೆಯನ್ನು ಬೆಳಗುತ್ತದೆ ಅನ್ನುವ ವಿವರಗಳಿವೆ.
ಇದನ್ನೆಲ್ಲ ಕಾವ್ಯದಲ್ಲಿ ಹೇಗೆ ಹಿಡಿದಿಡಬಹುದು?
ಈ ಪ್ರಶ್ನೆಗೆ ಉತ್ತರವಾಗಿ ನೀವು ನಿಸಾರರ ಕವಿತೆ ಓದಬೇಕು. ಒಂದು ವಿಸ್ತೃತವಾದ ಪ್ರಾಸೆಸ್ಸು ಕವಿಯ ಕೈಗೆ ಸಿಕ್ಕಾಗ ಎರಡೇ ಪದಗಳಲ್ಲಿ ಹೇಗೆ ಅಭಿವ್ಯಕ್ತಗೊಳ್ಳುತ್ತದೆ ಅನ್ನುವುದನ್ನು ನೋಡಬೇಕು. ಶರಾವತಿ ನದಿ ಜೋಗದಲ್ಲಿ ಧುಮುಕಿ ಕರೆಂಟು ಉತ್ಪಾದಿಸುವ ಯಂತ್ರಗಳನ್ನು ಹಾದು, ಆ ಕರೆಂಟು ತಂತಿಗಳಲ್ಲಿ ಸಾಗಿ ಮೊಳಕಾಲ್ಮೂರಿನ ಬೀದಿಗಳನ್ನು ಬೆಳಗಿತು ಅನ್ನುವುದು ನಿಸಾ್ ಎಷ್ಟು ಚಿಕ್ಕದಾಗಿ ಹೇಳಿದ್ದಾರೆ; ಜೋಗದ ಸಿರಿಬೆಳಕಿನಲ್ಲಿ....ಈ ಎರಡು ಪದಗಳನ್ನೇ ಒಂದು ಕತೆಯಿದೆ, ಇತಿಹಾಸವಿದೆ, ಪ್ರಾಸೆಸ್ಸಿದೆ. ಹಾಗೇ ತುಂಗೆಯ ತೆನೆ ಬಳುಕಿನಲ್ಲಿ... ಅನ್ನುವ ಪದದಲ್ಲಿರುವ ಅಚ್ಚರಿ ಗಮನಿಸಿ. ಇದನ್ನು ಇಂಗ್ಲಿಷಿಗೆ ಅನುವಾದಿಸುವುದಂತೂ ಕಷ್ಟ. ತುಂಗೆ ಹರಿಯುತ್ತಾಳೆ. ಅವಳ ನೀರಿನಿಂದ ಎಲ್ಲೋ ಬತ್ತ ಬೆಳೆಯುತ್ತದೆ. ಆ ಭತ್ತ ತೆನೆಬಿಡುತ್ತದೆ. ಇಷ್ಟೆಲ್ಲವೂ ಸೇರಿ, ತುಂಗೆಯ ತೆನೆ ಬಳುಕಿನಲ್ಲಿ ಎಂದು ಒಂದು ಉದ್ಗಾರದಲ್ಲಿ ಬಂದುಹೋಗುತ್ತದೆ. ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ಅನ್ನುವ ಸಾಲಲ್ಲೂ ಒಂದು ಬೆರಗಿದೆ. ಲೋಹದ ಅದಿರು ಅಡಗಿರುವುದು ಆಳದಲ್ಲಿ, ಭೂಗರ್ಭದಲ್ಲಿ. ಆದರೆ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ಅಂತಾರೆ ನಿಸಾ್.
ಕುವೆಂಪು ಕಾವ್ಯದ ಭಾಷೆಯೂ ಅಷ್ಟೇ. ಅದು ಕ್ಲಿಷ್ಟ ಅನ್ನುವವರು ಈ ಸಾಲುಗಳನ್ನು ಬೇರೆ ಥರ, ಕನಿಷ್ಟ ಗದ್ಯದಲ್ಲಾದರೂ ವಿವರಿಸಲಿ ನೋಡೋಣ;

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ;
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಪ್ಮಿ ನೀ, ಚತುರ್ಮುಖನ ರಾಣಿ;
ದಿವ್ಯವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು ವಾಣಿ.
ಅಭವದೊತ್ತಾದೆ, ಭವದ ಬಿತ್ತಾದೆ, ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ, ತುಂಬಿ ತಾ ಬೆಳಗೆ ಜೀವಕೇಂದ್ರದಲ್ಲಿ;
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥಿವಿಯಲ್ಲಿ..


ಕಾವ್ಯವನ್ನು ಬೇರೆ ಥರ ಹೇಳಕ್ಕಾಗಲ್ಲ ಅನ್ನುವ ಕಾರಣಕ್ಕೇ ಅದು ಕಾವ್ಯ. ಬೇರೆ ಥರ ಹೇಳಲಿಕ್ಕೆ ಸಾಧ್ಯವಾದರೆ ಅದು ವರದಿ.

Monday, November 19, 2007

ಸೂರಿಯ ಷೇಕ್ಸ್ ಪಿಯರ್ ಸಂಜೆ

ಷೇಕ್ಸ್ ಪಿಯರ್ ಹೇಗಿದ್ದ. ಅವನು ನಮ್ಮ ಹಾಗೆ ಕೊಂಚ ಎಡವಟ್ಟನೂ ಸೋಮಾರಿಯೂ ಆಗಿರಲಿಲ್ಲವೇ? ಎಲ್ಲರೂ ಮೇಷ್ಟ್ರುಗಳ ಥರ ಇದ್ದು ಬಿಟ್ಟರೆ ಬರೆದದ್ದೆಲ್ಲ ಪಠ್ಯವಾಗುತ್ತದೆಯೇ ವಿನಾ ಕಾವ್ಯವಾಗುವುದು ಸಾಧ್ಯವಾ? ಬದುಕಲ್ಲಿ ಶಿಸ್ತು ಮುಖ್ಯವಾ? ಶಿಸ್ತಿನಿಂದ ಬದುಕುತ್ತಾ ಬದುಕುತ್ತಾ ಯಾಂತ್ರಿಕವಾಗುತ್ತಾ ಹೋಗುತ್ತೇವಾ? ಷೇಕ್ಸ್ ಪಿಯರ್ ಅಸಾಧ್ಯ ಅಶಿಸ್ತಿನ ಜಗಳಗಂಟ, ವ್ಯಾಮೋಹಿ, ಕುಡುಕನಾಗಿದ್ದ ಅಂತ ಊಹಿಸಿದರೆ ಅದು ತಪ್ಪಾ?
ಹಾಗೆಲ್ಲ ಯೋಚಿಸುವ ಹೊತ್ತಿಗೇ ಷೇಕ್ಸ್ ಪಿಯರ್ ಹೇಳಿದ್ದು ನೆನಪಾಗುತ್ತದೆ; Suit the word to the action, the action to the word. ಬಸವಣ್ಣನವರ ಮಾತಲ್ಲಿ ಹೇಳುವುದಾದರೆ ನುಡಿದಂತೆ ನಡೆ, ನಡೆದಂತೆ ನುಡಿ. ಅದೇ ಅಂತರಂಗ ಶುದ್ಧಿ.
ಮತ್ತೆ ಮತ್ತೆ ಷೇಕ್ಸ್ ಪಿಯರ್ ನೆನಪಾಗುತ್ತಿದ್ದಾನೆ. ಅವನ ನಾಟಕವನ್ನು ಮೊಟ್ಟ ಮೊದಲು ನೋಡಿದ ಮಹಿಳೆಯೊಬ್ಬರು ಇದೇನ್ರೀ ಬರೀ ಉದ್ಗಾರಗಳೇ ಇವೆಯಲ್ಲ ಅಂತ ಉದ್ಗರಿಸಿದ್ದಳಂತೆ. ಷೇಕ್ಸ್ ಪಿಯರ್ ಅನೇಕರಿಗೆ ಗೊತ್ತಿರುವುದು ಆತನ ಪ್ರಸಿದ್ಧ ಕೊಟೇಶ್ಗಳ ಮೂಲಕ. ಆತನ ನಾಟಕದ ಸಂಭಾಷಣೆಗಳೆಲ್ಲ ತತ್ವಶಾಸ್ತ್ರದ ಸಾಲುಗಳಂತಿದ್ದವು. ಪ್ರೇಮಕ್ಕೆ, ಕಾಮಕ್ಕೆ, ಮದುವೆಗೆ, ವ್ಯಾಮೋಹಕ್ಕೆ, ಸಾವಿಗೆ, ಬದುಕಿಗೆ ಅವನ ಬಳಿ ಮಾತುಗಳಿದ್ದವು. ಆ ಮಾತುಗಳೋ ಬುದ್ಧಿಜೀವಿಗಳ ಹೇಳಿಕೆಗಳಂತಿರಲಿಲ್ಲ. ಜನಪದದ ಜಾಣನ ಸರಳ ಉದ್ಗಾರಗಳಂತೆ ತೋರುತ್ತಿದ್ದವು. ಹೆಣ್ಣನ್ನು ಹೊಗಳುವ ಹೊತ್ತಿಗೂ ಆತ ಸುಮ್ಮನೆ ; age cannot wither her, nor custom stale her infinite variety ಅಂದುಬಿಡುತ್ತಿದ್ದ. ತೃಪ್ತಿಯಾಗುವಂತೆ ಬಡಿಸಿದ ಮೇಲೂ ಹಸಿವೆ ಉಳಿಯುವಂತೆ ಮಾಡಬಲ್ಲವಳು ಅನ್ನುತ್ತಿದ್ದ. ಹರೆಯ ಮತ್ತು ವೃದ್ಧಾಪ್ಯ ಎಂದೂ ಜೊತೆಗಿರಲಾರದು. ಹರೆಯ ಬೇಸಗೆಯ ಸುಡುಹಗಲು, ವೃದ್ದಾಪ್ಯ ಚಳಿಗಾಲದ ಇಳಿಸಂಜೆ ಎಂದು ಸರಳವಾಗಿ ಮಾತಾಡಿಸಿಬಿಡುತ್ತಿದ್ದ. ಕುಡಿತದ ಮಾತು ಬಂದಾಗ ಅಷ್ಟೇ ಬಿಡುಬೀಸಾಗಿ `ಆಲ್ಕೋಹಾಲು ಆಸೆಗಳನ್ನು ಕೆರಳಿಸುತ್ತದೆ, ಕ್ರಿಯೆಯನ್ನು ಮಂಕುಗೊಳಿಸುತ್ತದೆ' ಅಂತ ಅಪ್ಪಟ ಅನುಭವಿಯ ಮಾತು ಆಡಿಬಿಡುತ್ತಿದ್ದ. ನಮ್ಮ ಕಷ್ಟಕ್ಕೆ ನಮ್ಮ ಹತ್ರಾನೇ ಪರಿಹಾರ ಇದೆ. ಆದ್ರೆ ನಾವು ಉದಾರಿಗಳು. ಸುಮ್ಮನೆ ದೇವರು ಕಾಪಾಡಿದ ಅಂತೀವಿ ಎಂದು ಗೇಲಿ ಮಾಡುತ್ತಿದ್ದ. ತುಂಬ ಕಾವ್ಯಾತ್ಮಕವಾಗಿ ಕಾಲದ ಕೇಳದ ಹೆಜ್ಜೆಯ ಸದ್ದು ಎಂದು ಬರೆದುಬಿಡುತ್ತಿದ್ದ. ಪ್ರೀತಿ ನಿನ್ನನ್ನು ಕಷ್ಟಕ್ಕೆ ಸಿಲುಕಿಸಿತು ಅಂತ ಒಂದೇ ಒಂದು ಸಲ ಅಂದುಕೊಂಡರೂ ಸಹಿತ ನೀನು ಪ್ರೀತಿಸಿದ್ದೇ ಸುಳ್ಳು ಅಂದುಬಿಡಬಲ್ಲ ಶಕ್ತಿ ಅವನಿಗಿತ್ತು. ಹೆಂಗಸರ ಬಗ್ಗೆ ತುಂಬ ಪ್ರೀತಿಯಿಂದಲೇ ತಮಾಷೆ ಮಾಡುತ್ತಿದ್ದ; ನಾನು ಹೆಣ್ಣು ಕಣೋ. ನನ್ನ ಪ್ರಕಾರ ಯೋಚನೆ ಮಾಡೋದು ಅಂದ್ರೆ ಮಾತಾಡೋದು ಎಂದು ತನ್ನ ಪಾತ್ರವೊಂದರ ಕೈಲಿ ಹೇಳಿಸಿದ್ದ.
ಹೀಗೆ ಶೇಕಓದುತ್ತಾ ಹೋದರೆ ನೆನಪಾಗುವುದು ನಮ್ಮ ಜನಪದ. ಅವನು ಇಂಗ್ಲೆಂಡಿನ ಜನಪದವೇ ಆಗಿದ್ದನೋ ಏನೋ? ಅವನು ತುಂಬ ಪಾಲಿಷ್ಡ್ ಆದ ಕವಿ ಆಗಿದ್ದಿರಲಾರ. ಅವನು ನಾಟಕಗಳನ್ನು ಒಂದು ಕಡೆ ಶಿಸ್ತಿನಿಂದ ಕೂತು ಬರೆದಿರಲಿಕ್ಕಿಲ್ಲ. ಒಂದೇ ಸಾರಿ ಇಡೀ ನಾಟಕವನ್ನು ಬರೆದು ಕೊಟ್ಟಿರಲಿಕ್ಕಿಲ್ಲ. ಅವನು ತುಂಬ ಚಂಚಲನಾಗಿರಬೇಕು.
ಹಾಗನ್ನಿಸುತ್ತದೆ. ಅವನು ನಿಜಕ್ಕೂ ಹೇಗಿದ್ದ ಅನ್ನುವುದನ್ನು ತಿಳಿಯುವುದು ಕಷ್ಟವೇನಲ್ಲ. ಆತನ ಜೀವನ ಚರಿತ್ರೆಯೇ ಮೂರು ಸಾವಿರ ಪುಟಗಳಷ್ಟು ಅಚ್ಚಾಗಿದೆ. ಒಬ್ಬೊಬ್ಬರು ಒಂದೊಂದು ಥರ ಅವನ ಬಗ್ಗೆ ಬರೆದಿದ್ದಾರೆ. ಆದರೆ ನಮಗದು ಮುಖ್ಯವಾಗುವುದೇ ಇಲ್ಲ. ಕವಿಯ ಬಗ್ಗೆ ನಾವು ಊಹಿಸಿಕೊಂಡದ್ದು ಉತ್ತಮ, ಬೇರೆಯವರಿಂದ ಕೇಳಿದ್ದು ಮಧ್ಯಮ, ಓದಿ ತಿಳಿದದ್ದು ಅಧಮ. ಯಾಕೆಂದರೆ ಬರೆಯುವ ಹೊತ್ತಿಗೆ ಅಲ್ಲಿ ತಮಾಷೆ, ವ್ಯಂಗ್ಯ, ಆಪ್ತತೆ, ಪ್ರೀತಿ ಎಲ್ಲಾ ನಾಶವಾಗಿರುತ್ತದೆ. ಕೇವಲ ಪದವ್ಯಾಮೋಹ ಮತ್ತು ನಮ್ಮನ್ನು ನಾವು ಕಂಡುಕೊಳ್ಳುವ ಕಷ್ಟವಷ್ಟೇ ಉಳಿದಿರುತ್ತದೆ.
******
ಹೀಗೆ ಷೇಕ್ಸಪಿಯರ್ ಈ ನಡುಬೇಸಗೆಯ ಸುಡುಸುಡು ಸಂಜೆ ನೆನಪಾಗುವಂತೆ ಮಾಡಿದ್ದು ಸೂರಿ. ಷೇಕ್ಸಪಿಯರ್ ನಾಟಕವೊಂದನ್ನು ಅವರು ಕನ್ನಡಕ್ಕೆ ತಂದಿದ್ದಾರೆ. ಕಾಮಿಡಿ ಆಫ್ ಎರರ್ಸ್ ನಾಟಕವನ್ನು ನಮ್ಮ ಭಾಷೆ, ನಮ್ಮ ನುಡಿಗಟ್ಟು, ನಮ್ಮ ತಮಾಷೆಗಳನ್ನಿಟ್ಟುಕೊಂಡು ನಮ್ಮ ಮುಂದಿಟ್ಟಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಹೆಸರು ನೀನಾನಾದ್ರೆ ನಾ ನೀನೇನಾ?.
ಷೇಕ್ಸಪಿಯರ್ ಭಾಷೆಯನ್ನು ಅನುವಾದಿಸುವುದು ಕಷ್ಟ. ಹದಿನಾರನೇ ಶತಮಾನದ ಸುಮಾರಿಗೆ ಆತ ಬರೆದ ನಾಟಕವನ್ನು ಯಥಾವತ್ತಾಗಿ ಕನ್ನಡಕ್ಕೆ ತರುವುದೂ ದಡ್ಡತನ. ಸೂರಿ ಆ ಕೆಲಸ ಮಾಡುವುದಕ್ಕೆ ಹೋಗಿಲ್ಲ. ಇಡೀ ನಾಟಕ ಸೂರಿಯ ಪ್ರತಿಭೆಯಲ್ಲಿ ಅರಳಿಕೊಂಡಿದೆ. ಅಲ್ಲಿ ಆಡುವ ಮಾತುಗಳು ನಮ್ಮವು ಅನ್ನಿಸುವಂತೆ ಮುಂದಿನ ಮಾತು ನಮಗೆ ಹೊಳೆದೂ ಹೊಳೆಯದಂತೆ ಹೊಳೆಯದೆಯೂ ಹೊಳೆಯುವಂತೆ ಸೂರಿ ಬರೆಯಬಲ್ಲರು. ಒಂದು ಅನುವಾದದ ಶಕ್ತಿ ಇರುವುದು ಅಂಥ ಭಾವಾನುವಾದದಲ್ಲೇ.
ಸೂರಿ ಕನ್ನಡ ಸಿನಿಮಾಗಳನ್ನು ದಂಡಿಯಾಗಿ ಗೇಲಿ ಮಾಡುತ್ತಾರೆ. ಕನ್ನಡ ಸಿನಿಮಾಗಳಲ್ಲಿ ಒಂದೊಂದು ಸನ್ನಿವೇಶಕ್ಕೂ ಒಂದೊಂದು ಹಾಡು ಬಳಸುವುದು ಈ ನಾಟಕದಲ್ಲಿ ನಗು ಹುಟ್ಟಿಸುತ್ತದೆ. ಈ ನಾಟಕ ನೋಡಿದ ನಂತರ, ಹಳೆಯ ಕನ್ನಡ ಸಿನಿಮಾ ನೋಡಿದರೆ ಮತ್ತಷ್ಟು ನಗು ಉಕ್ಕುವುದು ಖಂಡಿತಾ. ಅದರಲ್ಲೂ ಕಳೆದು ಹೋದ ಮಕ್ಕಳನ್ನು ಹುಡುಕುವ ಮಾರ್ತಾಂಡರಾಯ ಹಾಡುವ `ಯುನೈಟಿಂಗ್ ಸಾಂಗ್' ಚಿಕ್ಕ ಮಕ್ಕಳು.. ಚಿಕ್ಕ ಚಿಕ್ಕ ಮಕ್ಕಳು, ಪುಟ್ಟ ಮಕ್ಕಳು ಪುಟ್ಟ ಪುಟ್ಟ ಮಕ್ಕಳು' ಅದ್ಭುತ ಕಲ್ಪನೆ.
ಇಡೀ ನಾಟಕ ನಿಲ್ಲುವುದು ಮಾತಿನ ಮೇಲೆ. ಮಾತಲ್ಲೇ ಅವರು ನಗೆಯ ಸೌಧ ಕಟ್ಟುತ್ತಾರೆ. ನಾನು ಯಾರು ಅನ್ನುವುದನ್ನು ಪಾತ್ರಗಳೇ ಮರೆತಿವೆಯೇನೋ ಅನ್ನುವ ಅನುಮಾನ ಹುಟ್ಟಿಸುವಂಥ ಗೊಂದಲವನ್ನೂ ಅವರು ನಿರಾಯಾಸದಿಂದ ನಿಭಾಯಿಸಿದ್ದಾರೆ.
ಇದನ್ನೇ ಸಿನಿಮಾ ಮಾಡುವುದು ಸುಲಭ. ಯಾಕೆಂದರೆ ಸಿನಿಮಾದಲ್ಲಿ ದ್ವಿಪಾತ್ರದ ಅನುಕೂಲವಿದೆ. ನಾಟಕದಲ್ಲಿ ಹಾಗಲ್ಲ. ಎರಡೂ ಪಾತ್ರಗಳು ಏಕಕಾಲದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಹಾಗಿದ್ದೂ ಅಲ್ಲಿ ಇಬ್ಬರಿದ್ದಾರೆ ಅನ್ನಿಸುತ್ತಿರಬೇಕು. ಆ ಗೊಂದಲದಲ್ಲೇ ಹಾಸ್ಯ ಸೃಷ್ಟಿಯಾಗಬೇಕು. ಅದನ್ನು ಸಾಧಿಸಬೇಕಿದ್ದರೆ ತುಂಬ ನಾಜೂಕಾದ ಲೆಕ್ಕಾಚಾರದ ಮಾತುಗಳು ಮತ್ತು ಸನ್ನಿವೇಶಗಳು ಬೇಕಾಗುತ್ತವೆ. ಅದನ್ನು ಗಣಿತಜ್ಞನ ಪರಿಣತಿಯಿಂದ ಸೂರಿ ಸಾಧಿಸಿದ್ದಾರೆ. ಕೊನೆಯ ಸನ್ನಿವೇಶವಂತೂ ಅವರ ಕಲ್ಪನಾಶಕ್ತಿಗೆ ಕನ್ನಡಿ ಹಿಡಿಯುತ್ತದೆ. ತಾವೇ ಸೃಷ್ಟಿಸಿದ ನಾಲ್ಕು ಪಾತ್ರಗಳನ್ನು ಎರಡಕ್ಕೆ ಇಳಿಸುವಲ್ಲಿ ಅವರ ಜಾಣ್ಮೆ ವ್ಯಕ್ತವಾಗುತ್ತದೆ.
ಖಳನಾಯಕನ ಪಾತ್ರವಂತೂ ನಮ್ಮ ಚಿತ್ರರಂಗದ ಡಾನ್ ಗಳನ್ನು ನಿವಾಳಿಸಿ ಎಸೆಯುವಂತಿದೆ. ಆತನ ಅಸಹಾಯಕತೆ, ಗೊಂದಲ ಮತ್ತು ಮಿತಿಗಳನ್ನು ಸೂರಿ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾರೆ. ನರಸಿಂಹಯ್ಯನವರ ಕಾದಂಬರಿಯನ್ನು ಓದಿ ಅದರ ಸನ್ನಿವೇಶಗಳನ್ನು ಊಹಿಸಿಕೊಳ್ಳುವುದೂ ಮಜವಾಗಿದೆ.
******
ನಾಟಕ ನೋಡಿದ ನಂತರ ಸಿಕ್ಕ ಇಂಗ್ಲಿಷ್ ಪಂಡಿತರೊಬ್ಬರು ಅದು ಷೇಕ್ಸಪಿಯರ್ ನಾಟಕ ಅಲ್ಲ. ಅವನು ಅದನ್ನು ರೋಮ್ ನಾಟಕಕಾರ ಪ್ಲೂಟಸ್ ನಾಟಕದಿಂದ ಎರವಲು ತಗೊಂಡಿದ್ದು ಎಂದು ಅದ್ಯಾವುದೋ ವಿಚಿತ್ರ ಹೆಸರು ಹೇಳಿದರು. ಮೂಲ ನಾಟಕಕ್ಕೂ ಶೇಕನಾಟಕಕ್ಕೂ ವ್ಯತ್ಯಾಸ ಏನಿತ್ತು ಎಂಬ ಪ್ರಶ್ನೆಗೆ ಷೇಕ್ಸಪಿಯರ್ ನಾಟಕಕ್ಕೆ ಪನ್ ಪ್ರಾಣ ಅಂದರು. ಭಾಷೆಯೇ ಅದರ ಶಕ್ತಿ ಅಂದರು.
ಸೂರಿ ನಾಟಕದಲ್ಲೂ ಅದೇ ಆಗಿದೆ. ಭಾಷೆಯೇ ಅದರ ಸತ್ವ. ಕನ್ನಡವನ್ನು ಸೂರಿ ರಣಧೀರ ಕಂಠೀರವನ ಖಡ್ಗದಂತೆ ಬಳಸುತ್ತಾರೆ.
******
ಮತ್ತೆ ಷೇಕ್ಸಪಿಯರ್ ತಂಟೆಗೆ ಬಂದರೆ ಆತನ ಮತ್ತಷ್ಟು ಮಾತುಗಳು ನೆನಪಾಗುತ್ತವೆ. ಒಮ್ಮೆ ಮಹಾನ್ ತರಲೆಯಂತೆ, ಒಮ್ಮೊಮ್ಮೆ ಗಾಢ ಪ್ರೇಮಿಯಂತೆ ಕಾಣುವ ಆತ ಎಷ್ಟೆಷ್ಟು ಒಳ್ಳೆಯ ಪ್ರೇಮಗೀತೆಗಳನ್ನು ಬರೆದ. `ಪಾತ್ರ ಬದಲಿಸುವ ಅವಕಾಶ ಇದ್ದಾಗಲೂ ಬದಲಾಗದೆ ಹರಿಯುವುದೇ ಪ್ರೇಮ' ಎಂದ. I am a man more sinned against sinning ಎಂದು ಬರೆದ. ಕಷ್ಟಗಳು ಬರುವಾಗ ಒಂಟಿಯಾಗಿ ಬರುವುದಿಲ್ಲ ಎಂದು ಕೊರೆದ. ಹತಾಶರಿಗೆ ಆಶೆಯೇ ಮದ್ದು ಎಂದ. ಹೆಂಡತಿಯನ್ನು ಕರುಣೆಯಿಂದಷ್ಟೋ ಕೊಲ್ಲಬಲ್ಲಿರಿ ಎಂದು ಸಾರಿದ. ನಾನು ಸಹಜವಾಗಿ ಪ್ರಾಮಾಣಿಕನಲ್ಲ, ಆಕಸ್ಮಿಕವಾಗಿ ಒಮ್ಮೊಮ್ಮೆ ಪ್ರಾಮಾಣಿಕನಂತೆ ಕಾಣಿಸ್ತೇನೆ ಎಂದು ನಕ್ಕ.
ಅಂದಹಾಗೆ ಶೇಕಮಾತುಗಳೆಲ್ಲ ಅವನ ಪಾತ್ರಗಳ ಮೂಲಕವೇ ಹೊರಹೊಮ್ಮಿದವು, ಅವನ ಪಾತ್ರಗಳೇ ಆಡಿದ ಮಾತುಗಳವು. ಹೀಗಾಗಿ ಆಯಾ ಪಾತ್ರದ ಸಮಯ ಸಂದರ್ಭಕ್ಕೆ ತಕ್ಕಂತಿವೆ ಆ ಮಾತುಗಳು. ಆದರೆ ನಾಟಕವನ್ನು ಹೊರತು ಪಡಿಸಿ ನೋಡಿದರೂ ಆ ಮಾತುಗಳಿಗೆ ವಿಶೇಷ ಅರ್ಥವಿದೆ.
ಷೇಕ್ಸಪಿಯರ್ ಓದಿದ ನಂತರ ಇಂಗ್ಲೆಂಡಿನ ಕವಿಯೊಬ್ಬ ಹೇಳಿದನಂತೆ; ಚೆನ್ನಾಗಿ ಬರೀತಾನೆ ಅಂತ ಎಲ್ಲರೂ ಹೇಳ್ತಿದ್ರು. ಆದ್ರೆ ಅವನು ನಿಜವಾಗ್ಲೂ ಚೆನ್ನಾಗೇ ಬರೀತಾನೆ ಕಣ್ರೀ.

Monday, November 12, 2007

ಹೊಸ ನೀರು ಬಂದರೂ ಅದೇ ಪುರಾತನದಮಲು


ಇದನ್ನು ಹೇಗೆ ಶುರುಮಾಡಿದರೂ ಕೊಂಚ ನಾಟಕೀಯವಾಗುತ್ತದೆ. ಬಹುಶಃ ನಾಟಕೀಯತೆಯಲ್ಲೇ ಇದು ಆಪ್ತವಾಗುತ್ತದೋ ಏನೋ? ಕೆಲವು ಸಂಗತಿಗಳೇ ಹಾಗೆ. ಅವು ನಿಜವಾಗುವುದು ತಮ್ಮ ಉತ್ಕಟತೆಯಲ್ಲೇ; ಅರ್ಥವಾಗುವುದು ತಮ್ಮ ತೀವ್ರತೆಯಲ್ಲೇ; ಸತ್ಯಕ್ಕೆ ಹತ್ತಿರವಾಗುವುದು ಅತಿರೇಕದ ಸ್ಥಿತಿಯಲ್ಲೇ. ಉದಾ; ಸಾವು.
ಇದು ಸಾವಿನ ಕುರಿತ ಪ್ರಸ್ತಾಪ ಅಲ್ಲ. ಸಾವು ಎಲ್ಲವನ್ನೂ ಬದಲಾಯಿಸುತ್ತದೆ ಅಂತ ತಿಳಿಯುವುದು ತಪ್ಪು. ಅದಕ್ಕೆ ಆ ಶಕ್ತಿಯಿಲ್ಲ. ಸಾವಿನ ಹತ್ತಿರಕ್ಕೆ ಹೋಗಿ ಬಂದವರು ಕೂಡ ಬದಲಾಗದೆ ಇರುವುದನ್ನು ನಾವು ನೋಡಿದ್ದೇವೆ. ಸಾವಿಗೆ ಅತ್ಯಂತ ಭಯಪಡುವವರು ಕೂಡ ಅದನ್ನು ನಿರ್ಲಕ್ಷ್ಯಿಸಿರುತ್ತಾರೆ. ಅಂಥದ್ದೊಂದು ಉಡಾಫೆ ಈ ಬದುಕಿಗೆ ಸಾಧ್ಯ ಅನ್ನುವ ಕಾರಣಕ್ಕೆ ಜೀವನ ಸಾವಿಗಿಂತ ದೊಡ್ಡದು. ಸಾವನ್ನು ಕೃತಿಯ ಮೂಲಕ ಮೀರಲು ಯತ್ನಿಸಿದವರನ್ನು ನಾವು ನೋಡಿದ್ದೇವೆ. ವಿಕೃತಿಯ ಮೂಲಕ ಎದುರಿಸಲು ಯತ್ನಿಸಿದವರಿದ್ದಾರೆ. ಪ್ರಕೃತಿಯ ಮೂಲಕ ದಾಟಲು ಹೊರಟವರಿದ್ದಾರೆ. ಅದ್ಯಾವುದೂ ಇಲ್ಲಿ ಮುಖ್ಯವಲ್ಲ.
ಈಗ ಈ ಕತೆ ಕೇಳಿ. ಇದೊಬ್ಬ ಅನಾಮಿಕನ ಕತೆ. ಅವನ ಉತ್ಕಟ ಆಕಾಂಕ್ಪೆಗಳ ಕತೆ. ಇದು ಮೇಲ್ನೋಟಕ್ಕೆ ಸುಳ್ಳು ಸುಳ್ಳೇ ಕತೆ ಅನ್ನಿಸಬಹುದು. ಈ ಕತೆಯ ಮೂಲಕ ಇನ್ನೇನನ್ನೋ ನೀವು ನೋಡಲು ಯತ್ನಿಸಿದರೆ ನಿರಾಶೆಯಾಗಬಹುದು. ಆದರೂ ಇದಕ್ಕೊಂದು ವಿಚಿತ್ರ ಶಕ್ತಿಯಿದೆ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಕತೆ ಹೀಗೆ ಆರಂಭವಾಗುತ್ತದೆ;
ಕ್ಪೇಮೇಂದ್ರನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಆತನ ಮೇಲಿರುವುದು ಕೊಲೆ ಆರೋಪ. ತನ್ನ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಗಂಡ ಹೆಂಡತಿ ಮತ್ತು ಅವರ ಇಪ್ಪತ್ತಾರು ವರುಷದ ಮಗನನ್ನು ಕೊಲೆ ಮಾಡಿದ್ದಾನೆ ಅನ್ನುವ ಆರೋಪ ನಿಜವೇ ಎಂದು ನ್ಯಾಯಾಧೀಶರು ಕೇಳಿದಾಗ ಕ್ಷೇಮೆಂದ್ರ ಇಲ್ಲ ಎನ್ನಲಿಲ್ಲ. ಹೌದು ಎನ್ನಲಿಲ್ಲ. ಇದ್ದರೂ ಇರಬಹುದು. ಇಲ್ಲದೆಯೂ ಇರಬಹುದು ಎಂದು ಉತ್ತರಿಸಿದ. ಅವನ ಗಂಟಿಕ್ಕಿದ ಮುಖ, ನೋಟದಲ್ಲಿರುವ ಉಡಾಫೆ ಮತ್ತು ನ್ಯಾಯಾಧೀಶರನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಧಾಟಿಯನ್ನು ನೋಡಿದ ಎಲ್ಲರಿಗೂ ಅವನ ಮೇಲೆ ಸಿಟ್ಟು ಬಂತು.
ನ್ಯಾಯಾಧೀಶರಿಗೂ ಸಿಟ್ಟು ಬಾರದೇ ಇರಲಿಲ್ಲ. ಕೋರ್ಟಿನಲ್ಲಿ ಹಾಗೆಲ್ಲ ಅಸ್ಪಷ್ಟವಾಗಿ ಸಾಂಕೇತಿಕವಾಗಿ ಮಾತನಾಡಬಾರದು. ಕೊಲೆ ಮಾಡಿದ್ದೀಯೋ ಇಲ್ಲವೋ ಸ್ಪಷ್ಟವಾಗಿ ಹೇಳು ಎಂದು ಅವರು ಅಬ್ಬರಿಸಿದರು. ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಳ್ಳದ ಹೊರತು ಶಿಕ್ಷೆ ವಿಧಿಸುವ ಹಾಗೇ ಇರಲಿಲ್ಲ. ಯಾಕೆಂದರೆ ಕೊಲೆಯಾದ ಮನೆಯಲ್ಲಿ ಒಂದು ಹಳೆಯ ಗ್ರಾಮಾಫೋನು ಬಿಟ್ಟರೆ ಬೇರೇನೂ ಕಳುವಾಗಿರಲಿಲ್ಲ. ಆ ಗ್ರಾಮಾಫೋನಿಗೋಸ್ಕರ ಯಾರಾದರೂ ಮೂರು ಕೊಲೆ ಮಾಡುತ್ತಾರೆ ಅಂತ ಹೇಳಿದರೆ ನಂಬುವುದು ಕಷ್ಟವಾಗುತ್ತಿತ್ತು.
ಆತ ಕೊಲೆ ಮಾಡಿದೆ ಅಂತಿಟ್ಟುಕೊಳ್ಳಿ ಎಂದ.

ಆತ ಯಾಕೆ ಕೊಲೆ ಮಾಡಿದ ಅನ್ನುವುದಕ್ಕೆ ಪೊಲೀಸರು ಕಾರಣ ಕಂಡು ಹಿಡಿದರು. ಅದು ಹೀಗಿತ್ತು;
ಕ್ಷೇಮೇಂದ್ರ ಹಳ್ಳಿಯಿಂದ ಬಂದವನು. ತೀರಾ ಬಡವ. ಅವನ ಪಕ್ಕದ ಮನೆಯಲ್ಲಿ ಗಂಡ-ಹೆಂಡತಿ-ಮಗ ವಾಸಮಾಡುತ್ತಿದ್ದರು. ಅವರ ಬಳಿ ಒಂದು ಗ್ರಾಮಾಫೋನಿತ್ತು. ಅವರ ಬಳಿ ಇದ್ದ ಒಂದೇ ಒಂದು ಪ್ಲೇಟ್ ಹಾಕಿ ದಿನವಿಡೀ ಅಪ್ಪ ಹಾಡು ಕೇಳುತ್ತಾ ಕೂರುತ್ತಿದ್ದ. ಆ ಹಾಡು ಪಕ್ಕದ ಮನೆಯಲ್ಲಿರುವ ಕ್ಷೇಮೇಂದ್ರನಿಗೂ ಕೇಳಿಸುತ್ತಿತ್ತು.
ಕೆಲವು ತಿಂಗಳಲ್ಲೇ ಆ ಹಾಡು ಕೇಳುವುದು ಕ್ಷೇಮೇಂದ್ರನಿಗೆ ಅಭ್ಯಾಸವಾಗಿಹೋಯ್ತು. ಸದಾ ಅದೇ ಹಾಡನ್ನು ಗುನುಗುನಿಸುತ್ತಿದ್ದ. ಮರೆತು ಹೋದಾಗಲೆಲ್ಲ ಮಾರನೆ ದಿನ ಕೇಳಿಸಿಕೊಳ್ಳುತ್ತಿದ್ದ. ಈ ಮಧ್ಯೆ ಆ ಮನೆಯ ಯಜಮಾನನಿಗೆ ಉಬ್ಬಸ ಶುರುವಾಯಿತು. ಆತ ಹೊರಗಿನಿಂದ ಸ್ವಲ್ಪ ಗಾಳಿ ಒಳನುಗ್ಗಿದರೂ ಸಾಕು ಕೆಮ್ಮುತ್ತಿದ್ದ. ಹೀಗಾಗಿ ಹೊರಗಿನ ಗಾಳಿ ಒಳಗೆ ಬರಕೂಡದು ಎಂದು ಆ ಮನೆಯ ಕಿಟಕಿಗಳನ್ನು ಮುಚ್ಚಿದರು. ಒಳಗಿನಿಂದ ಹಾಡು ಕೇಳುವುದು ನಿಂತುಹೋಯಿತು. ಕ್ಪೇಮೇಂದ್ರ ಚಡಪಡಿಸಿದ.
ಆತ ಹೀಗೆ ಮೂರು ವರುಷ ಹಾಡಿಲ್ಲದೆ ಒದ್ದಾಡಿದ. ಅವನಿಗೆ ಆಗೀಗ ಹಾಡು ಅಲ್ಪಸ್ವಲ್ಪ ನೆನಪಾಗುತ್ತಿತ್ತು. ಅದನ್ನೇ ಹಾಡಿಕೊಂಡು ಆತ ಮರೆತುಹೋದ ಭಾಗಗಳನ್ನು ನೆನಪಿಸಿಕೊಳ್ಳಲು ಯತ್ನಿಸುತ್ತಿದ್ದ. ಆದರೆ ಒಂದು ನಾಲ್ಕನೆಯ ವರುಷದ ಹೊತ್ತಿಗೆ ಅವನಿಗೆ ಇಡೀ ಹಾಡು ಮರೆತುಹೋಯಿತು. ಪಕ್ಕದ ಮನೆಗೆ ಹೋಗಿ ಹಾಡು ಕೇಳಿಸುವಂತೆ ವಿನಂತಿಸಿಕೊಂಡ. ಅವರು ಆಗೋಲ್ಲ ಎಂದರು. ಸಿಟ್ಟಿಗೆದ್ದು ಆತ ಆ ಮನೆಯಲ್ಲಿದ್ದ ಮೂವರನ್ನೂ ಕೊಲೆ ಮಾಡಿ ಆ ಗ್ರಾಮಾಫೋನನ್ನು ತನ್ನ ಮನೆಗೆ ತಂದಿಟ್ಟುಕೊಂಡ.
ಹೀಗೊಂದು ಪ್ರಸಂಗವನ್ನು ವಿವರಿಸಿದ ಪೊಲೀಸರು ` ಇದೇ ಆ ಗ್ರಾಮಾಫೋನು' ಎಂದು ಒಂದು ಗ್ರಾಮಾಫೋನನ್ನು ನ್ಯಾಯಾಧೀಶರ ಮುಂದಿಟ್ಟರು. ಅದರಲ್ಲಿ ಹಾಡು ಕೇಳಿಸಿದರು. ಕ್ಷೇಮೇಂದ್ರ ಮುಗುಳುನಗುತ್ತಾ ಹಾಡು ಕೇಳುತ್ತಾ ತಾನು ಅದನ್ನು ಗುನುಗುನಿಸುತ್ತಾ ತಲೆಯಾಡಿಸಿದ. ಹಾಡು ನಿಂತೊಡನೆ ಅವನ ನಗುವೂ ನಿಂತುಹೋಯಿತು.
ಹಾಡಿಗೋಸ್ಕರ ಕೊಲೆ ಮಾಡಿದ ಎಂಬ ಕಾರಣಕ್ಕೆ ಕ್ಷೇಮೇಂದ್ರನಿಗೆ ಜೈಲು ಶಿಕ್ಪೆಯಾಯಿತು. ಆದರೆ ನ್ಯಾಯಾಧೀಶರಿಗೆ ಆ ಶಿಕ್ಪೆ ತೃಪ್ತಿ ಕೊಡಲಿಲ್ಲ. ಅವರ ಮನಸ್ಸಿನಲ್ಲಿ ಅವರು ಕೇಳಿದ ಹಾಡೇ ಸುಳಿಯುತ್ತಿತ್ತು. ಗ್ರಾಮೋಫೋನು ತರಿಸಿಕೊಂಡು ಅವರೂ ಒಂದೆರಡು ಸಾರಿ ಹಾಡು ಕೇಳಿದರು. ಮೂರನೆ ಸಲ ಹಾಡು ಕೇಳಿದವರೇ ಸೀದಾ ಜೈಲಿಗೆ ಹೋದರು. ಅಲ್ಲಿ ಶಿಕ್ಪೆ ಅನುಭವಿಸುತ್ತಿದ್ದ ಕ್ಷೇಮೇಂದ್ರನಿಗಾಗಿ ಹುಡುಕಾಡಿದರು.
ಆದರೆ ಕ್ಷೇಮೇಂದ್ರ ಜೈಲಿನಲ್ಲೇ ಇರಲಿಲ್ಲ. ಆ ಹೆಸರಿನ ಯಾರೂ ಇತ್ತೀಚಿನ ದಿನಗಳಲ್ಲಿ ಆ ಜೈಲಿಗೇ ಬಂದಿರಲಿಲ್ಲ. ಹಾಗಿದ್ದರೆ ಕ್ಷೇಮೇಂದ್ರ ಎಲ್ಲಿಗೆ ಹೋದ ಎಂಬ ಚಿಂತೆ ನ್ಯಾಯಾಧೀಶರನ್ನು ಕಾಡತೊಡಗಿತು. ಆತನಿಗಾಗಿ ಹುಡುಕುತ್ತಾ ಅವರು ಊರೆಲ್ಲ ಅಲೆದಾಡತೊಡಗಿದರು. ಆದರೆ ಆ ಊರಿನ ಯಾರೂ ಕ್ಪೇಮೇಂದ್ರನೆಂಬ ವ್ಯಕ್ತಿಯನ್ನೇ ನೋಡಿರಲಿಲ್ಲ.
ನ್ಯಾಯಾಧೀಶರಿಗೆ ಇನ್ನೂ ಕಳವಳವಾಯಿತು. ತಾನು ಶಿಕ್ಪೆ ಕೊಟ್ಟ ಮನುಷ್ಯ ಯಾವ ಜೈಲಿನಲ್ಲೂ ಇಲ್ಲ ಎಂದರೆ ಅರ್ಥವೇನು?
ಅವರು ಮತ್ತಷ್ಟು ವಿಚಾರಣೆ ನಡೆಸಿದಾಗ ಮತ್ತೊಂದು ಸತ್ಯ ಗೊತ್ತಾಗುತ್ತದೆ. ಕ್ಷೇಮೇಂದ್ರ ಅನ್ನುವ ಮನುಷ್ಯನಿಗೆ ಶಿಕ್ಪೆಯೇ ಆಗಿಲ್ಲ. ಹಾಗಿದ್ದರೆ ತಾನು ತೀರ್ಪು ನೀಡಿದ್ದು ಸುಳ್ಳಾ? ಕೊಲೆಗಾರ ತಪ್ಪಿಸಿಕೊಂಡು ಬಿಟ್ಟನೇ? ನ್ಯಾಯಾಧೀಶರು ಪೊಲೀಸರಿಗೆ ಕೊಲೆಯಾದವರ ವಿವರಗಳನ್ನು ನೀಡುವಂತೆ ಹೇಳುತ್ತಾರೆ. ಆದರೆ ಪೊಲೀಸರು ಆ ನಿರ್ದಿಷ್ಟ ದಿನ ಆ ನಿರ್ದಿಷ್ಟ ಪ್ರದೇಶದಲ್ಲಿ ಯಾವ ಕೊಲೆಯೂ ನಡೆದಿಲ್ಲ ಅನ್ನುತ್ತಾರೆ. ದಿಗ್ಭ್ರಾಂತರಾದ ನ್ಯಾಯಾಧೀಶರು ಹೋಗಿ ನೋಡಿದರೆ ಆ ಮನೆಯಲ್ಲಿ ಗಂಡ ಹೆಂಡತಿ ಮಗ ವಾಸಿಸುತ್ತಿದ್ದಾರೆ. ಪಕ್ಕದ ಮನೆಯಲ್ಲಿ ಕ್ಷೇಮೇಂದ್ರ ಎಂಬ ವ್ಯಕ್ತಿಯಿದ್ದಾನೆ.
ನ್ಯಾಯಾಧೀಶರು ವಿಚಾರಿಸಿದಾಗ ಆ ಮನೆಯ ಯಜಮಾನ ಹೇಳುತ್ತಾನೆ; ಕೊಲೆಗಿಲೆ ಏನೂ ನಡೆದಿಲ್ಲ. ಆದರೆ ನಮ್ಮ ಮನೆಯಲ್ಲಿದ್ದ ಗ್ರಾಮಾಫೋನು ಕಳುವಾಗಿದೆ. ಅದನ್ನು ತಾವು ಹುಡುಕಿಸಿಕೊಟ್ಟರೆ ಸಾಕು.
ನ್ಯಾಯಾಧೀಶರಿಗೆ ನಿಜವಾಗಿಯೂ ಭಯವಾಗುತ್ತದೆ. ನೇರವಾಗಿ ಮನೆಗೆ ಹೋಗಿ ನೋಡಿದರೆ ಅವರ ಮಂಚದ ಪಕ್ಕದಲ್ಲೇ ಆ ಗ್ರಾಮಾಫೋನಿದೆ.
ನ್ಯಾಯಾಧೀಶರು ಆತಂಕ ತಾಳಲಾರದೆ ಡ್ರಾಯ್ ಎಳೆದು ರಿವಾಲ್ವರ್ ಕೈಗೆತ್ತಿಕೊಂಡು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಕಥೆ ಹೀಗೆ ಮುಗಿಯುತ್ತದೆ. ಒಂದು ದಂತಕತೆಯಂತೆ, ಆಖ್ಯಾನದಂತೆ ಸಾಗುವ ಈ ಕತೆಯಲ್ಲಿ ತರ್ಕವಿಲ್ಲ, ರೂಪಕಗಳಿವೆ. ರೂಪಕಗಳಂತೆ ಕಾಣುವ ಸಂಕೇತಗಳಿವೆ. ಈ ರೂಪಕಗಳಿಗೆ ರೂಪ ಕೊಡುತ್ತಾ ಹೋದರೆ ಮರೆತ ರಾಗಗಳು ಕಣ್ಣಮುಂದೆ ಸುಳಿಯುತ್ತವೆ.
*****
ಇಷ್ಟಕ್ಕೂ ಕತೆ ಏನು ಹೇಳುತ್ತದೆ?
ನ್ಯಾಯಾಧೀಶ ಕಳ್ಳನಾದ ದುರಂತವನ್ನೇ?
ಆ ಗ್ರಾಮಾಫೋನು ಯಾವುದಕ್ಕೆ ಸಂಕೇತ?
ಕ್ಷೇಮೇಂದ್ರನ ಮುಗ್ಧತೆಗೇ?
ಯೋಚಿಸುತ್ತಾ ಹೋದರೆ ಮತ್ತೊಂದು ಸಿದ್ಧಾಂತವನ್ನೇ ಈ ಕತೆ ಹೊಳೆಯಿಸುತ್ತದೆ. ನಾವು ಹೇಗೆ ಕ್ಪಣಕ್ಪಣಕ್ಕೂ ಪುನರ್ನಿರ್ಮಾಣಗೊಳ್ಳುತ್ತಾ ಹೋಗುತ್ತೇವೆ ಅನ್ನುವುದನ್ನು ಸಾಕ್ಪಿ ಸಮೇತ ಮುಂದಿಡುತ್ತದೆ. ಇದು ಅರ್ಥವಾಗಬೇಕಿದ್ದರೆ ಹೀಗೊಂದಷ್ಟು ವಿವರಗಳಿಗೆ ಸಾಗಬೇಕು.
ನಾವೆಲ್ಲರೂ ಹುಟ್ಟುವುದು ಒಂದೂರಿನಲ್ಲಿ. ಬೆಳೆಯುವುದು ಮತ್ತೊಂದೂರಿನಲ್ಲಿ. ಊರು ಒಂದೇ ಆಗಿದ್ದಾಗ ಕಾಲ ಬದಲಾಗುತ್ತದೆ. ಒಂದು ಕಾಲದೇಶದಲ್ಲಿ ಜನ್ಮತಳೆದ ನಾವು ಕ್ಪಣಕ್ಪಣವೂ ಹೊಸ ಹುಟ್ಟು ಪಡೆಯುತ್ತಾ ಹೋಗುತ್ತೇವೆ. ಮೇಡ್ ಇನ್ ಇಂಡಿಯಾದ ಮನುಷ್ಯ ಒಂದಷ್ಟು ವರುಷ ಅಮೆರಿಕಾದಲ್ಲಿ ವಾಸವಾಗಿದ್ದರೆ ರೀಮೇಡ್ ಇನ್ ಅಮೆರಿಕಾ ಆಗುತ್ತಾನೆ. ಆ ಅವಧಿಯಲ್ಲಿ ಆತನ ಹುಟ್ಟುಗುಣಗಳು ಬದಲಾಗಿರುತ್ತವೆ. ಹವ್ಯಾಸ, ಶೈಲಿ ಎಲ್ಲವೂ ಬೇರೆಯೇ ಆಗಿರುತ್ತದೆ.
ಬೇಕಿದ್ದರೆ ನೋಡಿ. ಹಳ್ಳಿಯಲ್ಲಿದ್ದಾಗ ಹರಿವ ತೊರೆಯ ನೀರು ಕುಡಿಯುತ್ತಿದ್ದ ಹುಡುಗ, ನಗರಕ್ಕೆ ಬಂದು ಅಧಿಕಾರಿಯಾಗುತ್ತಿದ್ದಂತೆ ಬಾಟಲು ನೀರಿಗೆ ಮೊರೆಹೋಗುತ್ತಾನೆ. ಮತ್ತೊಮ್ಮೆ ಆತ ಹಳ್ಳಿಗೆ ಕಾಲಿಟ್ಟರೂ ತೊರೆಯ ನೀರು ಕುಡಿಯುವುದಿಲ್ಲ. ಇದನ್ನು ಹೈಜೀನಿಕ್ ಎಂದು ಭಾವಿಸಬಹುದಾದರೂ ಇಂಥ ಅನೇಕ ಬದಲಾವಣೆಗಳು ಒಬ್ಬನನ್ನು ಮಾರ್ಪಾಡು ಮಾಡುವುದನ್ನು ನಾವು ನೋಡಬಹುದು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬಂದು ವಾಸಿಸಿದ ತಕ್ಪಣ ಹೊಸ ಪರಿಸರದ ಸಂಸ್ಕೃತಿ ಮತ್ತು ಸಂಗತಿಗಳು ಆತನನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತವೆ. ಅವುಗಳೇ ಪರಮಶ್ರೇಷ್ಠ ಅನ್ನುವ ಭಾವನೆ ದಟ್ಟವಾಗುತ್ತದೆ. ಯಾವುದು ಹೊಸತೋ ಅದನ್ನು ಬದುಕು ಆಯ್ದುಕೊಳ್ಳುತ್ತದೆ. ಹಳೆಯದನ್ನು ತಿರಸ್ಕಾರದಿಂದ ನೋಡುತ್ತದೆ.
ಹಾಗಿದ್ದರೆ ಪುನರ್ನಿರ್ಮಾಣದ ಪ್ರಭಾವಗಳನ್ನು ಮೀರುವುದು ಹೇಗೆ? ಅದನ್ನು ಸಾಂಸ್ಕೃತಿಕವಾಗಿ ಮೀರಬೇಕಾ? ಅಥವಾ ಸಾಮಾಜಿಕವಾಗಿಯೋ? ನಮ್ಮನ್ನು ರೂಪಿಸಿದ ಪ್ರದೇಶದ ಬಗ್ಗೆ ಪ್ರೀತಿ ಇಟ್ಟುಕೊಂಡೂ ಅದರಿಂದ ನಾವೇಕೆ ಕಳಚಿಕೊಳ್ಳಲು ಯತ್ನಿಸುತ್ತೇವೆ. ಆ ಪರಿಸರಕ್ಕೆ ನಮ್ಮ ದೌರ್ಬಲ್ಯಗಳೂ ಗೊತ್ತಿವೆ ಎಂಬ ಭಯದಿಂದಲೇ? ನಾವು ಪಡಕೊಂಡ ಜ್ಞಾನವಷ್ಟೇ ಶಾಶ್ವತ ಎಂಬ ಭ್ರಮೆಯಿಂದಲೇ? ಹಳೆಯ ದಿನಗಳ ಭಾರದಿಂದ ಪೂರ್ತಿ ಹಗುರಾಗುವ ಆಸೆಯೇ? ಆ ಆಸೆಗೆ ಅರ್ಥವೇನು?
ಸಾಹಿತ್ಯವನ್ನೇ ನೋಡಿ. ಒಬ್ಬ ಕವಿ ಆರಂಭದ ದಿನದಲ್ಲಿ ಬರೆದ ಕವಿತೆಗೂ ಅದಾದ ಮೂವತ್ತು ವರುಷಗಳ ನಂತರ ಬರೆದ ಕವಿತೆಗೂ ಅದೆಂಥ ವ್ಯತ್ಯಾಸ ಇರುತ್ತದೆ ಗೊತ್ತೇ? ಈ ವ್ಯತ್ಯಾಸ ಓದಿನಿಂದ ಬಂದಿದ್ದಲ್ಲ. ತಿಳುವಳಿಕೆಯಿಂದ ಬಂದಿದ್ದಲ್ಲ, ಗ್ರಹಿಕೆಯಿಂದ ಬಂದಿದ್ದೂ ಅಲ್ಲ. ಅದು ಪ್ರಜ್ಞಾಪೂರ್ವಕವಾದದ್ದು. ತನ್ನ ವ್ಯಕ್ತಿತ್ವದ ಒಂದು ಭಾಗವಾಗಿರುವ ಭೂತಕಾಲವನ್ನು ಮೀರುವ ಹಂಬಲದಿಂದ ಹುಟ್ಟಿದ್ದು.
ಈ ಎರಡು ದೃಷ್ಟಾಂತಗಳನ್ನು ನೋಡಿ. ಇವನ್ನು ಪಿ. ಲಂಕೇಶರ ಚಿತ್ರಸಮೂಹದಿಂದ ಆಯ್ದುಕೊಳ್ಳಲಾಗಿದೆ.


ಕಲಿಯುವಾಶೆಯ ಮನದಿ ಬೆಳಗಿರಲಿ ಬೆಳ್ಳಿ;
ನವಿಲು ಗರಿಗೆದರಿರಲಿ ಕವಿಯ ಮನದಲ್ಲಿ!
ಮನೆಯಲ್ಲಿ ಅರ್ಧಾಂಗಿ ರಂಭೆಯಾಗಿರಲಿ;
ಮನೆಮನೆಯ ಗೋವುಗಳು ಗಂಗೆಯಾಗಿರಲಿ;
ಮಳೆ ಬರಲಿ ನಮ್ಮಿಳೆಗೆ ಮಧು ಹನಿಯಲಿಲ್ಲಿ;
ಹಸುರಾಗಲೆಮ್ಮ ನೆಲ ಹೂ ಚುಕ್ಕಿ ಚೆಲ್ಲಿ!
(ಹಾರೈಕೆ, 1956)


ಹದಿನೆಂಟು ವರುಷದ ಹಿಂದೆ ಕಂಡ ನವಿಲು
ಇಂದು ಕನಸು.
ಕನಸಿನಲ್ಲಿ ಕಂಡ ನವಿಲು
ನರಿಯಾಗುವ ಸಂಭವಕ್ಕೆ
ನಡುಗುವ ಅಗತ್ಯ ಕೂಡ ಇಲ್ಲ.
(ಕನಸಿನಲ್ಲಿ ಕಂಡ ನವಿಲು, 1997)


ಇವೆರಡರ ವ್ಯತ್ಯಾಸ ದಟ್ಟವಾಗಿದೆ. ಇಲ್ಲಿ ಗ್ರಹಿಕೆ ಬದಲಾಗಿದೆ ಅನ್ನುವುದು ತುಂಬ ದುಬಾರಿ ಹೇಳಿಕೆಯಾಗುತ್ತದೆ. ಬದಲಾಗುವುದು ನಮ್ಮ ಒಟ್ಟು ದೃಷ್ಟಿಕೋನ. ನಾವು ಸಂಗತಿಗಳನ್ನು ಗ್ರಹಿಸುವ ಕ್ರಮ ಮಾತ್ರ ಅದೇ ಆಗಿದ್ದರೂ ಗ್ರಹಿಸುವ ಪರಿಸರ ಬೇರೆಯಾಗಿರುತ್ತದೆ. ಹೀಗಾಗಿ ಹಳೆಯದೆಲ್ಲ ಒಂದೋ ಸ್ವರ್ಗದಂತೆ ಅಥವಾ ನರಕದಂತೆ ಕಾಣಿಸತೊಡಗುತ್ತದೆ.
****
ಇಷ್ಟು ಹೇಳಿ ನಿಲ್ಲಿಸುವುದು ಸುಲಭ. ಆದರೆ ಇದಕ್ಕೆ ಇನ್ನೊಂದು ಆಯಾಮವೂ ಇದೆ. ಕ್ಷೇಮೇಂದ್ರನ ಕತೆಯಲ್ಲಿ ಬರುವ ಮ್ಯಾಜಿಕ್ ರಿಯಲಿಸಮ್ಮು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಂಡಿರುತ್ತದೆ. ನಮ್ಮ ಕಣ್ಮುಂದೆ ಇಲ್ಲದೆ ಇರುವ ಸಂಗತಿಗಳನ್ನು ನಾವು ಸುಖಕ್ಕೋಸ್ಕರ, ಸಂಕಟಕ್ಕೋಸ್ಕರ ಊಹಿಸಿಕೊಳ್ಳುತ್ತೇವೆ. ನಮ್ಮ ಅನುಕೂಲಕ್ಕೋಸ್ಕರ ಬದಲಾಯಿಸುತ್ತೇವೆ. ಭದ್ರಾವತಿಯಿಂದ ಬಂದು ಬೆಂಗಳೂರಲ್ಲಿ ನೆಲೆಸಿದ ವ್ಯಕ್ತಿಗೆ ಕ್ರಮೇಣ ಭದ್ರಾವತಿಯ ಪೇಪರ್ ಟೌನಿನ ಹಳೆಯ ಆಟೋ ಮತ್ತು ಭದ್ರಾ ನದಿಯ ನೀರು ತನ್ನನ್ನು ಎಂದೂ ಕಾಡದ ಸಂಗತಿಯಾಗಬೇಕೇಂಬ ಆಸೆಯಿರುತ್ತದೆ. ನಡುವಯಸ್ಸು ತಲುಪುತ್ತಿದ್ದಂತೆ ಬಾಲ್ಯದಲ್ಲಿ ಕೇಳಿದ ಅಮ್ಮನ ಜೋಗುಳ ಕೂಡ ಚರಮಗೀತೆಯಂತೆ ಮರುದನಿಸುತ್ತದೆ.
ನಾವು ಕ್ಪಣಕ್ಪಣಕ್ಕೂ ಪುನರ್ನಿರ್ಮಾಣಗೊಳ್ಳುತ್ತಾ ಸಾಗುತ್ತೇವೆ.
ಮೇಡ್ ಇನ್ ಬ್ಯಾಲದಕೆರೆ ಎನ್ನುತ್ತಿದ್ದವನು ಸ್ವಲ್ಪ ಕಾಲದ ನಂತರ ರೀಮೇಡ್ ಇನ್ ಬ್ಯಾಂಗಲೂರ್ ಎಂದುಕೊಂಡು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ಓಡಾಡಲು ಆರಂಭಿಸುತ್ತಾನೆ.
ಬ್ಯಾಲದಕೆರೆ ಯಾಕಾದರೂ ಇದೆಯೋ ಅನ್ನಿಸುತ್ತದೆ!

Thursday, November 8, 2007

ಸರಳವಾಗಿ ಸಾಗುವ ಕತೆಗಳ ನಿರುತ್ಸಾಹದಿಂದ ನೋಡಬಾರದು

ಕತೆಗಳು ವಿಚಿತ್ರವಾಗಿರುತ್ತವೆ. ಬಹಳಷ್ಟು ಕತೆಗಳಲ್ಲಿ ನಾವು ನಿರೀಕ್ಪಿಸುವಂಥ ನಾಟಕೀಯತೆಯೇನೂ ಇರುವುದಿಲ್ಲ. ಜೀವನ ಕಾಸರವಳ್ಳಿಯವರ ಸಿನಿಮಾದಂತೆ ಒಂದು ಲಯದಲ್ಲಿ ಸಾಗುತ್ತಲೇ ಇರುತ್ತದೆ. ಥಟ್ಟನೇ ಏನೋ ಬದಲಾವಣೆಯಾಗಬೇಕು. ಅಚ್ಚರಿಗಳು ಬೇಕು, ದಿಗ್ಭ್ರಮೆ ಹುಟ್ಟಿಸುವಂತ ತಿರುವುಗಳು ಬೇಕು. ಒಂದೊಂದು ಪಾತ್ರದ ವರ್ತನೆಯೂ ಬೆಚ್ಚಿ ಬೀಳಿಸಬೇಕು ಎಂದು ನಿರೀಕ್ಪಿಸುವವರಿಗೆ ಇಂಥ ಕತೆಗಳು ಇಷ್ಟವಾಗಲಾರವು.
ಆದರೆ ನಮ್ಮ ಪರಿಸರ, ನಾವು ದಿನನಿತ್ಯ ನೋಡುವ ಸೀರಿಯ್ ಸಿನಿಮಾಗಳು ನಮ್ಮನ್ನು ಒಂದು ರೀತಿಯ ಅನಿರೀಕ್ಪಿತತೆಗೆ ಅಣಿಮಾಡಿವೆ. ಕಾಲೇಜಿಗೆ ಹೋಗುವ ಹುಡುಗಿಗೊಂದು ಪ್ರೇಮಪ್ರಕರಣ ಇರಬೇಕು. ಆ ಪ್ರೇಮಿ ಆಕೆಗೆ ಕೈಕೊಡಬೇಕು, ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಥವಾ ಅವಿವಾಹಿತ ತಾಯಿಯಾಗಿ ಕಷ್ಟಕಾರ್ಪಣ್ಯದಲ್ಲಿ ಬದುಕಬೇಕು. ಕಾಲೇಜಿಗೆ ಹೋಗುವ ಹುಡುಗನಿಗೆ ಡ್ರ್ , ಕುಡಿತ ಎರಡರಲ್ಲೊಂದು ಚಟ ಇರಬೇಕು. ಮನೆಯಾತನಿಗೆ ಇನ್ನೊಂದು ಹೆಣ್ಣಿನ ಸಂಪರ್ಕ ಇರಬೇಕು. ಹೆಂಡತಿ ಗಂಡನನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು. ಮಾವ ಶಕುನಿಯಂಥವನಾಗಿರಬೇಕು..
ಹೀಗೆ ನಮ್ಮ ಮನಸ್ಸು ಕ್ರಮೇಣ ಕೇವಲ ಅಚ್ಚರಿಗಳನ್ನೂ ಷಾಕಗಳನ್ನೂ ಸ್ವೀಕರಿಸುವುದಕ್ಕಷ್ಟೇ ಸಿದ್ಧವಾಗಿಬಿಡುತ್ತದೆ. ಆಗ ಸಹಜವಾದ ನಡೆಗಳೂ ನುಡಿಗಳೂ ನೀರಸವಾಗಿ ಕಾಣಿಸತೊಡಗುತ್ತವೆ. ವಿಕ್ಪಿಪ್ತ ನಡವಳಿಕೆಗಳೂ ಸಿನಿಕತೆಯೂ ಅತಿರೇಕಗಳೂ ಇಷ್ಟವಾಗುತ್ತವೆ. ಮಾಸ್ತಿಯವರ ಕತೆಗಳಲ್ಲಿ ನಾವು ಆಸಕ್ತಿ ಕಳೆದುಕೊಳ್ಳುತ್ತೇವೆ.
ಆದರೆ ಜಗತ್ತಿನ ಅತ್ಯುತ್ತಮ ಕತೆಗಳು ಸರಳವಾದದ್ದೇ ಆಗಿರುತ್ತವೆ. ರಾಮಾಯಣ ಅಚ್ಚರಿಯನ್ನು ಒಳಗೊಂಡಿದ್ದೂ ಸರಳವಾಗಿದೆ. ಅಲ್ಲಿ ಒದಗುವ ಅಚ್ಚರಿ ಬದುಕಿನ ವಿಕೃತಿಯಿಂದ ಹುಟ್ಟಿದ್ದೇನೂ ಅಲ್ಲ. ವಿಕೃತಿಯನ್ನೂ ಪ್ರಕೃತಿ ಎಂದು ತೋರಿಸುವ ಪ್ರಯತ್ನಕ್ಕೆ ಸಾಕ್ಪಿ ಮಂಥರೆ. ತಪ್ಪು ಮಾಡಿದ ತಾಯಿ ಸ್ಪಲ್ಪ ಹೊತ್ತಲ್ಲೇ ತನ್ನ ತಪ್ಪನ್ನು ಅರಿತುಕೊಂಡು ಮಾನವೀಯಳಾಗುತ್ತಾಳೆ. ಶ್ರೀರಾಮ ತಂದೆಯ ಆಸೆಯನ್ನು ಪೂರೈಸಲು ಕಾಡಿಗೆ ಹೋಗುತ್ತಾನೆ. ಆದರೆ ಭರತ ತಾಯಿಯ ಆಸೆಯನ್ನು ಪೂರೈಸುವ ಸಲುವಾಗಿ ಪಟ್ಟವೇರುವುದಿಲ್ಲ. ಇಂಥ ಬೆರಗುಗೊಳಿಸುವ ವಿವರಗಳೊಂದಿಗೆ ಅದು ಸಾಗುತ್ತದೆ.
ನಾರ್ವೆಯ ಲೇಖಕಿ ಸಿಂಗ್ರಿದ್ ಉಂದ್ ಸೆತ್ ಕೂಡ ಯಾವುದೇ ಅತಿರೇಕಗಳಿಲ್ಲದ ಕತೆಗಳನ್ನು ಬರೆದಿದ್ದಾಳೆ. ಬಯಲುಸೀಮೆಯ ಅನಂತಹಾದಿಯಲ್ಲಿ ನಿಧಾನವಾಗಿ ಸಾಗುವ ರೇಲುಗಾಡಿಯಲ್ಲಿ ಪಯಣಿಸಿದ ಅನುಭವಗಳನ್ನು ಇಂಥ ಕತೆಗಳು ಕೊಡುತ್ತವೆ. ಅಲ್ಲಲ್ಲಿ ಕಣ್ಣುತೂಗುತ್ತದೆ. ನಿದ್ದೆ ಸೆಳೆಯುತ್ತದೆ. ಆದರೆ ಸಾವರಿಸಿಕೊಂಡು ಕುಳಿತು ಓದಿದರೆ ಈಕೆಯ ಜೆನ್ನಿ ಕಾದಂಬರಿ ಖಂಡಿತ ಇಷ್ಟವಾಗುತ್ತದೆ.
ಈಕೆಯ ಕತೆಯೊಂದನ್ನು ಎಸ್. ದಿವಾಕ್ ಅನುವಾದಿಸಿಕೊಟ್ಟಿದ್ದಾರೆ. ಉಂದ್ ಸೆತ್ ಬದುಕಿನತ್ತ ತಿರುಗಿ ನೋಡಿದರೆ ಆಶ್ಚರ್ಯವಾಗುತ್ತದೆ. ಕೆಥೊಲಿಕಧರ್ಮಕ್ಕೆ ಮತಾಂತರಗೊಂಡ ಈಕೆ, ಹಿಟ್ಲರನ ಭಯಕ್ಕೆ ನಾರ್ವೆ ತೊರೆದು ಅಮೆರಿಕಾಕ್ಕೆ ಓಡಿಹೋಗಿದ್ದಳು. ಈ ಹಿನ್ನೆಲೆಯಲ್ಲಿ ಈ ಕತೆ ಅವಳ ಕತೆಯೂ ಹೌದು.
ಕತೆಯ ನಾಯಕಿ ಇಂಗರ್ ವೈಲ್ಡ್ ನಿರ್ವಿಣ್ಣಳಾಗಿದ್ದಾಳೆ. ಕಾರಣ ಆಕೆಗೇ ಗೊತ್ತಿಲ್ಲ. ನೆಚ್ಚಿಕೊಳ್ಳುವುದಕ್ಕೇನೂ ಇಲ್ಲ ಅನ್ನುವುದು ಆ ಬೇಸರಕ್ಕೊಂದು ಕಾರಣ ಎನ್ನುವ ಊಹೆ ಮಾತ್ರ ಆಕೆಗಿದೆ. ಆಕೆಯ ಅಮ್ಮ ಕೆಲಸ ಕಳಕೊಂಡಿದ್ದಾಳೆ. ಹೀಗಾಗಿ ಅವರು ಕಡಿಮೆ ಬಾಡಿಗೆಯ ಸಣ್ಣ ಅಪಾರ್‌ಮೆಂಟಿಗೆ ಹೋಗಬೇಕಿತ್ತು. ಅದಕ್ಕೂ ಮುಂಚೆ ಮನೆಯಲ್ಲಿದ್ದ ವಸ್ತುಗಳನ್ನು ಮಾರಬೇಕಾಗಿತ್ತು. ಹೀಗೆ ಎಲ್ಲವನ್ನೂ, ಕಪಾಟಿನಲ್ಲಿದ್ದ ಕಥೆಪುಸ್ತಕಗಳನ್ನೂ ಮಾರಿದ ನಂತರ ಇಡೀ ಮನೆ ಅಣಕಿಸುವಂತೆ ಖಾಲಿಖಾಲಿಯಾಗಿ ಕಾಣಿಸುತ್ತಿತ್ತು.
ಇಷ್ಟಕ್ಕೇ ಆಕೆಯ ಕಷ್ಟಗಳು ನಿಲ್ಲಲಿಲ್ಲ. ಯಾವುದೋ ಒಂದು ಸ್ಕೂಲಲ್ಲಿ ಇಂಗ ರ್ ವೈಲ್ಡಳನ್ನು ಬಿಟ್ಟಿಯಾಗಿ ಓದಿಸುವ ನಿರ್ಧಾರಕ್ಕೆ ಅಮ್ಮ ಬಂದಿದ್ದಳು. ಅದಕ್ಕಿಂತ ಅವಮಾನ ಮತ್ತೊಂದಿಲ್ಲ ಎಂದು ಮಗಳು ನಂಬಿದ್ದಳು. ಅಲ್ಲದೇ ಬೇರೆ ಸ್ಕೂಲಿಗೆ ಹೋದರೆ ಇಷ್ಟವಿಲ್ಲದ ಸಬ್ಜೆಕ್ಟುಗಳನ್ನು ಉರುಹೊಡೆಯಬೇಕು ಎಂಬ ಭಯವೂ ಆಕೆಗಿತ್ತು.
ನಿಧಾನವಾಗಿ ಅವಳು ಅಮ್ಮನ ಜೊತೆ ಹೊಸಮನೆಗೆ ಹೋದಳು. ಅಲ್ಲಿಯ ವಾತಾವರಣ ಚೆನ್ನಾಗಿತ್ತು. ಯಾವುದೇ ಮುಜುಗರವಿಲ್ಲದೇ ಓಡಾಡಬಹುದಾದಂಥ ಮನೆಗಳಿದ್ದವು. ಮನೆಯಿಂದ ಬೆಟ್ಟಗುಡ್ಡ ಕಣಿವೆ ಕಾಣಿಸುತ್ತಿತ್ತು. ಮನೆಯೊಳಗೆ ಸೊಗಸಿಲ್ಲದೇ ಇದ್ದರೂ ನೆಮ್ಮದಿಗೆ ಕೊರತೆಯಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆಕೆಗೆ ಖುಷಿಕೊಟ್ಟದ್ದು ಬಡತನವನ್ನು ಮುಚ್ಚಿಟ್ಟುಕೊಳ್ಳುವ ಅಗತ್ಯ ಇಲ್ಲ ಎನ್ನುವುದು.
ಮನೆಯನ್ನು ಇಂಗರ್ ವೈಲ್ಡ್ ಜೋಡಿಸುತ್ತಾಳೆ. ಅಮ್ಮ ರಚಿಸಿದ ವರ್ಣಚಿತ್ರಗಳನ್ನು ಗೋಡೆಗೆ ಹಾಕುತ್ತಾಳೆ. ಮರುದಿನ ಬೆಳಗ್ಗೆ ಬಹುಬೇಗ ಏಳುತ್ತಾಳೆ. ಆಗ ಆಕೆಗಾಗುವ ಸಣ್ಣ ಸಂತೋಷವನ್ನು ವಿವರಿಸಿರುವ ರೀತಿ ನೋಡಿ. ಇಲ್ಲಿ ಯಾವ ಬೆರಗೂ ಇಲ್ಲ, ಅತಿರೇಕವೂ ಇಲ್ಲ, ಅಚ್ಚರಿಯೂ ಇಲ್ಲ, ಕತೆಯಲ್ಲಿ ಇರಬೇಕು ಎಂದು ಹೇಳುವ ತಿರುವು, ಸಂದಿಗ್ಧ ಏನೂ ಇಲ್ಲ. ಬ್ರಹ್ಮಾನಂದದ ಒಂದು ತುಣುಕಿನಂತಿರುವ ಈ ಸಾಲುಗಳನ್ನು ಸುಮ್ಮನೆ ಓದಿ;
`ಹೊರಗೆ ಎಳೆಬಿಸಿಲು ಮುಡಿದುಕೊಂಡ ಬೆಟ್ಟ. ಅದರ ಮೇಲೆ ಬೆಳೆದಿದ್ದ ಹುಲ್ಲು, ಕಾಡುಗಿಡಗಳು ಹಳದಿಯಾಗಿ ಹೊಳೆಯುತ್ತಿದ್ದವು. ಬೆಟ್ಟದ ಮೇಲೆ ತಿಳಿಯಾಗಿದ್ದ ನೀಲಿ ಆಕಾಶ. ಇದೆಲ್ಲ ನೋಡಿದ್ದೇ ಅವಳಿಗೆ ಎಷ್ಟು ಸಂತೋಷವಾಯಿತೆಂದರೆ ಎದೆಯಲ್ಲಿ ಒಂದು ಬಗೆಯ ನೋವು ಕಾಣಿಸಿಕೊಂಡಿತು.
ಹಾಗೆ ನೋಡಿದರೆ ಇಷ್ಟು ಸಂತೋಷಪಟ್ಟು ಅದೆಷ್ಟು ದಿನವಾಗಿತ್ತೋ. ತಕ್ಪಣ ಅಪ್ಪನ ನೆನಪಾಯಿತು. ಅವಳಿಗೆ ಅಪ್ಪ ಎಂದರೆ ಪಂಚಪ್ರಾಣ. ಅಷ್ಟು ಯಾರನ್ನೂ ಹಚ್ಚಿಕೊಂಡಿರಲಿಲ್ಲ. ಅವರನ್ನು ಇನ್ನಷ್ಟು ಹಚ್ಚಿಕೊಂಡು ಅವರಿಗೆ ಸಂತೋಷವಾಗುವ ಹಾಗೆ ನಡಕೊಳ್ಳಬೇಕಿತ್ತು ಅಂದುಕೊಂಡಳು. ಆದರೆ ಈಗ ಕಾಲ ಮಿಂಚಿಹೋಗಿದೆ. ಅಲ್ಲದೇ ಕಾಲ ನಿಲ್ಲುವುದಿಲ್ಲ ಎಂದೂ ಅವಳಿಗೆ ಗೊತ್ತಾಗಿಬಿಟ್ಟಿದೆ. ಬದುಕಬೇಕಾದವರ ಮತ್ತು ಸಾಯಬೇಕಾದವರ ನಡುವೆ ಇರುವ ಗೆರೆಯನ್ನು ಯಾರೂ ಅಳಿಸಲಾರರು. ಪ್ರಪಂಚದಲ್ಲಿ ಎಷ್ಟೆಲ್ಲ ಕೆಡುಕಿದೆ, ತನಗೆ ಎಟುಕದ ಎಷ್ಟೆಲ್ಲ ಸುಖವಿದೆ ಎಂದು ಅವಳಿಗೆ ತಿಳಿದುಹೋದಂತಿತ್ತು. ಕೆಡುಕನ್ನು ನೋಡಿ ನಡುಗಬೇಕು. ಸುಖ ಬಂದಾಗ ಕುಣಿಯಬೇಕು. ಇದನ್ನು ನೆನೆದೇ ಅವಳು ಸಾಕಷ್ಟು ದಣಿದುಹೋದಳು. ಹೊರಗಡೆ ಬಿಸಿಲಿನಲ್ಲಿ ಮಿಂಚುತ್ತಿರುವ ಬೆಟ್ಟ. ತನ್ನ ದುರಂತದ ಗಾಯವನ್ನು ವಾಸಿಮಾಡಿಕೊಂಡು ಹತ್ತಿರ ಹತ್ತಿರ ಬರುತ್ತಿರುವ ಮನೆ, ಬಯಲಲ್ಲಿ ತನಗಾಗಿ ಕಾಯುತ್ತಿರುವ ಸ್ವಾತಂತ್ರ...
ಆಹಾ... ಎಷ್ಟು ಸಂತೋಷವಾಯಿತೆಂದರೆ ಆ ಸಂತೋಷವನ್ನು ಸಹಿಸುವ ಶಕ್ತಿಯೇ ಅವಳಿಗಿರಲಿಲ್ಲ.'

Monday, November 5, 2007

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ

ಕತೆಗಾರರು ಬಡತನದಲ್ಲಿ ಹುಟ್ಟುತ್ತಾರೆ. ಬಡತನದ ಅನುಭವಗಳನ್ನು ಬರೆದು ಶ್ರೀಮಂತರಾಗುತ್ತಾರೆ. ಆ ಬಡತನದ ಅನುಭವಗಳನ್ನು ಓದಿದ ಶ್ರೀಮಂತರು ತಾವೆಷ್ಟು ಬಡವರು ಅಂದುಕೊಂಡು ಒಳಗೊಳಗೇ ಕೊರಗುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಗಾಲ್ಸ್ ವರ್ದಿ. ಜಾನ್ ಗಾಲ್ಸ್ ವರ್ದಿ.
ಇಂಗ್ಲಿಷ್ ನಾಟಕಕಾರ ಮತ್ತು ಕಾದಂಬರಿಕಾರ. 1932ರಲ್ಲಿ ಅವನಿಗೆ ನೊಬೆಲ್ ಬಂತು. ಮೇಲ್ಮಧ್ಯಮ ವರ್ಗದ ಬ್ರಿಟಿಷರ ಬದುಕನ್ನೂ ಇಂಗ್ಲೆಂಡಿನ ಸಾಮಾಜಿಕ ಸ್ಥಿತಿಗತಿಯನ್ನೂ ತೆಳುವಾಗಿ ಗೇಲಿ ಮಾಡುತ್ತಾ ಬರೆದವನು ಗಾಲ್ಸ್ ವರ್ದಿ. ಆತ ಕಾದಂಬರಿಯೇ ತನ್ನ ಸಾಮಾಜಿಕ ನಿಲುವುಗಳನ್ನು ಹೇಳುವುದಕ್ಕೆ, ಚಳವಳಿಗೆ ನ್ಯಾಯಯುತ ಮಾರ್ಗ ಎಂದು ಭಾವಿಸಿದವನು. ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಗಾಢವಾಗಿ ನಂಬಿದ್ದ ಆ ಕಾಲದ ಏಕೈಕ ಸಾಹಿತಿಯೂ ಹೌದು. ಕತೆಗಾರನ ಕೆಲಸ ಸಮಸ್ಯೆಯತ್ತ ಬೆಳಕು ಚೆಲ್ಲುವುದೇ ಹೊರತು ಅದಕ್ಕೆ ಪರಿಹಾರ ಸೂಚಿಸುವುದಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದೂ ಇದೇ ಗಾಲ್ಸ್ ವರ್ದಿ.
ಗಾಲ್ಸ್ ವರ್ದಿ ಹುಟ್ಟಿದ್ದೂ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ. ಓದಿದ್ದು ಕಾನೂನು.ಓದುತ್ತಿದ್ದ ದಿನಗಳಲ್ಲಿ ಗಾಲ್ಸ್ ವರ್ದಿ ಹೆಸರು ಮಾಡಿದ್ದು ಕ್ರಿಕೆಚ್ ಮತ್ತು ಫುಟ್ ಬಾಲ್ ಆಟಗಾರನಾಗಿ.ಕಾನೂನು ಓದಿದರೂ ಗಾಲ್ಸ್ ವರ್ದಿ ವಕೀಲನಾಗಲಿಲ್ಲ. ಅಷ್ಟು ಹೊತ್ತಿಗಾಗಲೇ ಆತ ಪ್ರೇಮದಲ್ಲಿ ಸೋತಿದ್ದ. ಆಕೆಯನ್ನು ಮರೆಯುವುದಕ್ಕೋಸ್ಕರ ಪ್ರವಾಸ ಹೊರಟುನಿಂತ. ಹಾಗೆ ಹೊರಟಾಗ ಸಿಕ್ಕಿದ್ದು ಬರಹಗಾರ ಜೋಸೆಫ್ ಕಾನ್ರಾಡ್. ಆ ಭೇಟಿಯ ಪರಿಣಾಮವೆಂದರೆ ಗಾಲ್ಸ್ ವರ್ದಿ ಸಾಹಿತಿಯಾಗಲು ತೀರ್ಮಾನಿಸಿದ್ದು. ಕೊಂಚ ಸಂಕೋಚದಿಂದಲೇ ಆತ ನಾಲ್ಕು ಕೃತಿಗಳನ್ನು ಜಾನ್ ಸಿನ್ ಜಾನ್ ಎಂಬ ಗುಪ್ತನಾಮದಲ್ಲಿ ಬರೆದ. ತುಂಬ ವರುಷದ ನಂತರ ಗಾಲ್ಸ್ ವರ್ದಿಯೇ ತಾನು ಆರಂಭದಲ್ಲಿ ಬರೆದದ್ದೆಲ್ಲ ತುಂಬ ಭಾರವಾಗಿದ್ದ ಬರಹಗಳು ಮತ್ತು ಅವುಗಳ ಮೇಲೆ ಕಿಪ್ಲಿಂಗ್ ಪ್ರಭಾವ ಧಾರಾಳವಾಗಿತ್ತು ಎಂದು ಹೇಳಿ ಅವನ್ನೆಲ್ಲ ನಿರಾಕರಿಸಿದ್ದೂ ಉಂಟು.
ಗಾಲ್ಸ್ ವರ್ದಿಯ ಮದುವೆಯೂ ವಿಚಿತ್ರವಾಗಿದೆ. ಮದುವೆಯಾದ ಹತ್ತುವರುಷಗಳ ತನಕ ಆತ ಅದನ್ನು ಬಹಿರಂಗಪಡಿಸಲಿಲ್ಲ. ಈ ಮದುವೆ ತನ್ನ ಅಪ್ಪನನ್ನು ಕೆರಳಿಸಬಹುದು ಎಂಬ ಕಾರಣಕ್ಕೆ. ಆತನ ಅನೇಕ ಕಾದಂಬರಿಗಳ ನಾಯಕಿಯರಿಗೆ ಆಕೆಯೇ ಸ್ಪೂರ್ತಿಯಾಗಿದ್ದಳು.ಒಂದು ಕಾಲದಲ್ಲಿ ಆತ ಕುದುರೆಗಳ ಮೇಲೊಂದು ಥೀಸೀಸ್ ಬರೆಯಲು ಹೊರಟಿದ್ದ. ಆ ಅನುಭವ ಅವನ ಕತೆಗಳಲ್ಲೂ ನಾಟಕಗಳಲ್ಲೂ ಬಂದಿವೆ. ಒಂದು ಸಂಭಾಷಣೆ ಹೀಗಿದೆ;
ಹುಡುಗಿ- ನಿಂಗೆ ಹುಡುಗೀರ್ನ ಕಂಡ್ರಾಗೋಲ್ಲ. ಅಲ್ವಾ..
ಆತ- ಅಷ್ಟಕ್ಕಷ್ಟೇ..
ಹುಡುಗಿ- ಯಾಕೇಂತ ಹೇಳಬಾರ್ದಾ?
ಆತ- ಹೇಳ್ಲೇಬೇಕೂಂದ್ರೆ ಹುಡುಗೀರು ಕುದುರೆಗಳಿಗಿಂತ ಹರಾಮಿಯರು.
ಹುಡುಗಿ- ಹರಾಮಿತನ ತುಂಬ್ದೋರು ಯಾರು?
ಆತ- ಎಲ್ಲರೂ ಗಂಡಸರೇ ಅಂತಾರೆ. ನೀನೂ ಅದನ್ನ ನಂಬ್ತೀಯಾ.
ಹುಡುಗಿ - ಗೊತ್ತಿಲ್ಲಪ್ಪ. ಕುದುರೆಗಳಿಗೂ ಹರಾಮಿತನ ತುಂಬೋದು ಗಂಡಸರೇನಾ?
ಇದು ಎಸ್ಕೇಪ್ ನಾಟಕದ ಒಂದು ಪುಟ್ಟ ದೃಶ್ಯ. ಈ ನಾಟಕ ಎರಡು ಬಾರಿ ಸಿನಿಮಾ ಆಯಿತು. ಟ್ವೆಂಟಿಯ್ ಸೆಂಚುರಿ ಫಾಕ್ಸ್ ಇದನ್ನು ಚಲನಚಿತ್ರವಾಗಿಸಿದಾಗ ರೆಕ್ಸ್ ಹ್ಯಾರಿಸನ್ ಮುಖ್ಯ ಪಾತ್ರದಲ್ಲಿದ್ದ. ಇದರ ಕತೆಯೂ ಕನ್ನಡಕ್ಕೆ ಒಗ್ಗುವಂಥದ್ದೇ. ಒಬ್ಬ ನಿಯತ್ತಿನ ಮನುಷ್ಯ ಒಬ್ಬ ವೇಶ್ಯೆಯನ್ನು ಭೇಟಿಯಾಗುತ್ತಾನೆ. ಅವಳನ್ನು ರಕ್ಪಿಸುವ ಭರದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡುತ್ತಾನೆ. ಜೈಲಿನಿಂದ ತಪ್ಪಿಸಿಕೊಂಡು ಓಡುತ್ತಾನೆ. ಈ ಹಂತದಲ್ಲಿ ಹೊಸ ಹೊಸ ಅನುಭವಗಳಿಗೆ ಪಕ್ಕಾಗುತ್ತಾನೆ. ಇದಿಷ್ಟು ಕತೆ.ಗಾಲ್ಸ್ ವರ್ದಿಯ ಮತ್ತೊಂದು ಪುಟ್ಟ ಕತೆ ಹೀಗಿದೆ. ಒಂದು ಮಾಗಿಯ ಸಂಜೆ ಗೆಳೆಯರೆಲ್ಲ ತೋಟದ ಮನೆಯಲ್ಲಿ ಸೇರಿಕೊಂಡು ಗುಂಡು ಹಾಕುತ್ತಿರ್ತುತಾರೆ. ಮಾತುಗಳು ಅವರ ಕೈಯಲ್ಲಿನ ಸಿಗರೇಟಿನಿಂದ ಉದುರುವ ಕಿಡಿಗಳಂತೆ ಬಿದ್ದು ಸತ್ತು ಹೋಗುತ್ತಿರುತ್ತದೆ. ಅವರು ಹಾಗೇ ಮಾತಾಡುತ್ತಿರಬೇಕಾದರೆ ಅಲ್ಲಿಗೆ ಆ ಊರಿನಲ್ಲೇ ಕುಪ್ರಸಿದ್ಧಳಾದ ಹೆಣ್ಣು ಬರುತ್ತಾಳೆ.ಅಲ್ಲಿಗೆ ಮಾತು ನಿಲ್ಲುತ್ತದೆ. ಪ್ರತಿಯೊಬ್ಬನಿಗೂ ಅವಳನ್ನು ಕಂಡರೆ ಭಯ. ಅವಳಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ಆಶೆ. ಆಕೆ ಅಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಪ್ರತಿಯೊಬ್ಬರೂ ಆ ರಾತ್ರಿ ಆಕೆಯೊಡನೆ ಅಪರಿಚಿತರಂತೆ ವರ್ತಿಸುತ್ತಾರೆ. ಪ್ರತಿಯೊಬ್ಬರೂ ಅವಳೊಂದಿಗೆ ಸುಖಿಸಿದವರೇ. ಆದರೆ ಎಲ್ಲರೊಂದಿಗೆ ಇರುವಾಗ ಆಕೆ ಎದುರಾದ ತಕ್ಪಣ ಪ್ರತಿಯೊಬ್ಬರ ನೈತಿಕ ಪ್ರಜ್ಞೆ, ಸ್ವಾಭಿಮಾನ, ಅಂತಸ್ತು ಜಾಗೃತವಾಗುತ್ತದೆ. ಕೊನೆಗೆ ಒಬ್ಬೊಬ್ಬರಾಗಿ ಅಲ್ಲಿಂದ ಎದ್ದು ಹೋಗುತ್ತಾರೆ. ಕೊನೆಗೆ ಉಳಿಯುವ ಒಬ್ಬಾತ ಆಕೆಯನ್ನು ತಬ್ಬಿ ಕರೆದುಕೊಂಡು ಹೋಗುತ್ತಾನೆ.ಮೇಲ್ಮಧ್ಯಮವರ್ಗದ ನೈತಿಕತೆಯ ಬಲೂನನ್ನು ಇಂಥ ಕತೆಗಳ ಮೂಲಕ ಗಾಲ್ಸ್ ವರ್ದಿ ಒಡೆಯುತ್ತಿದ್ದ.ಬಹುಶಃ ಕತೆಗಾರರನ್ನು ಕಂಡರೆ ಇದೇ ಕಾರಣಕ್ಕೆ ಪ್ರಜೆಗಳಿಗೂ ಪ್ರಭುಗಳಿಗೂ ಭಯ. ಲೇಖಕರು ಎಲ್ಲರ ಪೊಳ್ಳನ್ನು ಒಡೆಯುತ್ತಿರುತ್ತಾರೆ. ನೈತಿಕತೆಯನ್ನು ಗೇಲಿ ಮಾಡುತ್ತಾರೆ. ದೊಡ್ಡ ದನಿಯಲ್ಲಿ ಅಸಂಬದ್ಧ ಭಾಷಣ ಮಾಡುವವನ ಮುಂದೆ ನಿಂತು ಕೀರಲು ದನಿಯಲ್ಲಿ ಕಿಚಾಯಿಸುತ್ತಾರೆ.ಬೇಕಿದ್ದರೆ ನೋಡಿ; ಒಳ್ಳೆಯ ಸಾಹಿತಿಗಳೆಲ್ಲ ಆಯಾ ದೇಶದ ವಿರುದ್ಧ ತಿರುಗಿಬಿದ್ದವರೇ. ದೇಶಪ್ರೇಮಿ ಖಂಡಿತಾ ಒಳ್ಳೆಯ ಲೇಖಕ ಆಗಲಾರ. ಪ್ರಭುತ್ವವನ್ನು ಮೆಚ್ಚಿಕೊಂಡು ಹಾಡುವವನು ಒಳ್ಳೆಯ ಕವಿ ಆಗಲಾರ.

Friday, November 2, 2007

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು


ಕನಕದಾಸರು ಉಡುಪಿಯ ಶ್ರೀಕೃಷ್ಣನನ್ನು ತಮ್ಮ ಕಡೆಗೆ ತಿರುಗಿಸಿಕೊಂಡದ್ದು, ಗೋಡೆಯಲ್ಲೊಂದು ಕಿಂಡಿ ಮೂಡಿ ಕೃಷ್ಣ ದರ್ಶನ ನೀಡಿದ್ದು ಜನಜನಿತ. ಹೊರಗಡೆ ನಿಂತು ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಕನಕದಾಸ ಹಾಡಿದ್ದೂ ಮನೆಮಾತು.
ಈ ಭಕ್ತಿಗೀತೆಯಲ್ಲೇ ಬರುವ ಮತ್ತೊಂದು ಸಾಲು ನಿಮಗೆ ನೆನಪಿರಬಹುದು; ಕರಿರಾಜ ಕಷ್ಟದಲಿ ಆದಿಮೂಲ ಎಂದು ಕರೆಯಲಾಕ್ಪಣ ಬಂದು ಒದಗಿದೆಯೋ ನರಹರಿಯೆ
ಇಂಥ ಪದಗಳನ್ನು ಹಾಡುವವರಿಗೂ ಕೇಳುವವರಿಗೂ ಕರಿರಾಜನಿಗೆ ಬಂದ ಕಷ್ಟವೇನು? ಅವನ ಕಷ್ಟಕ್ಕೆ ಆದಿಮೂಲ ಬಂದು ಒದಗಿದ್ದಾದರೂ ಹೇಗೆ ಅನ್ನುವುದು ತಿಳಿಯದೇ ಹೋದರೆ ಹಾಡು ಪೂರ್ತಿಯಾಗಿ ಅರ್ಥವಾಗುವುದಿಲ್ಲ.
ಈ ಗಜೇಂದ್ರ ಮೋಕ್ಪದ ಕತೆಯ ಸುತ್ತ ಎರಡು ಶಾಪದ ಪ್ರಸಂಗಗಳಿವೆ. ಎರಡೂ ಕತೆಗಳೂ ಅಷ್ಟೇ ವಿಚಿತ್ರವಾಗಿವೆ. ಒಂದಕ್ಕೊಂದು ಸಂಬಂಧ ಇಲ್ಲದೇ ಹೋದರೂ ಎರಡರ ಸನ್ನಿವೇಶಗಳೂ ಬಹುತೇಕ ಒಂದೇ.
ಮೊದಲ ಕತೆ;
ಇಂದ್ರದ್ಯುಮ್ನ ಎಂಬವನು ಪಾಂಡ್ಯದೇಶದ ರಾಜ. ಮಹಾ ವಿಷ್ಣುಭಕ್ತ. ವಿಷ್ಣುವಿನ ಧ್ಯಾನದಲ್ಲಿ ಎಷ್ಟು ತಲ್ಲೀನನಾಗಿರುತ್ತಿದ್ದ ಎಂದರೆ ಒಮ್ಮೆ ತನ್ನಲ್ಲಿಗೆ ಬಂದ ಅಗಸ್ತ್ಯ ಮಹರ್ಷಿಯನ್ನು ಈಗ ಗಮನಿಸುವುದೇ ಇಲ್ಲ. ಈ ಋಷಿಗಳದೊಂದು ಗೋಳು. ಅವರು ಅಪಾಯಿಂಟಿಲ್ಲದೇ ಬರುವವರು. ಬಂದೊಡನೆ ಒಳಗೆ ಕರೆದು ಆತಿಥ್ಯ ನೀಡದಿದ್ದರೆ ಸಿಟ್ಟಾಗುವವರು. ದೂರ್ವಾಸರು ಇದಕ್ಕೆ ಹೆಸರುವಾಸಿಯಾದರೂ ಅಗಸ್ತ್ಯರ ಸಿಟ್ಟೇನೂ ಕಡಿಮೆಯಲ್ಲ. ಅಗಸ್ತ್ಯರು ಆನೆಯಂತೆ ಕಣ್ಮುಚ್ಚಿಕೊಂಡು ಅಲ್ಲಾಡದೇ ಕುಳಿತಿದ್ದ ಇಂದ್ರದ್ಯುಮ್ನನನ್ನು ಗಜಜನ್ಮ ಪಡೆಯುವಂತೆ ಶಪಿಸುತ್ತಾರೆ.
ಮುಂದೆ ಈ ಗಜೇಂದ್ರ ಒಂದು ಕೊಳದಲ್ಲಿ ನೀರು ಕುಡಿಯುತ್ತಿದ್ದಾಗ ಮೊಸಳೆಯೊಂದು ಬಂದ ಈತನ ಕಾಲು ಹಿಡಿದುಕೊಳ್ಳುತ್ತದೆ. ಆಗ ವಿಷ್ಣುವಿನಲ್ಲಿ ಮೊರೆಯಿಡುವ ಗಜೇಂದ್ರ ತನ್ನ ಪೂರ್ವಜನ್ಮ ಸಂಸ್ಕಾರದಿಂದ ವಿಷ್ಣುವಿನ ಮೊರೆಹೋಗುತ್ತಾನೆ. ವಿಷ್ಣು ಪ್ರತ್ಯಕ್ಪನಾಗಿ ಮೊಸಳೆಯನ್ನು ಒಂದು ಗಜೇಂದ್ರನನ್ನು ರಕ್ಪಿಸುತ್ತಾನೆ.
ಮತ್ತೊಂದು ಕತೆ;
ಕರ್ದನು ಬ್ರಹ್ಮನ ಸಂದರ್ಶನ ಮಾತ್ರದಿಂದಲೇ ತೃಣಬಿಂದು ಪುತ್ರಿಯಾದ ದೇವಹೂತಿಗೆ ಅವಳಿ ಮಕ್ಕಳಾಗುತ್ತವೆ. ಅವರ ಹೆಸರು ಜಯ-ವಿಜಯ. ಇವರಿಬ್ಬರ ತಮ್ಮ ಕಪಿಲ ಮುನಿ. ಈ ಜಯವಿಜಯರು ವಿಷ್ಣು ಭಕ್ತಿ ಸಂಪನ್ನರು. ಇಂದ್ರಿಯಗಳನ್ನು ಜಯಿಸಿದವರು ಎಂಬ ಹೆಗ್ಗಳಿಕೆಯೂ ಇವರಿಗಿತ್ತು. ಅದಕ್ಕೆ ಸಂಬಂಧಿಸಿದ ಕತೆಗಳೂ ಇವೆ. ಅವೆಲ್ಲ ಇಲ್ಲಿ ಅನಗತ್ಯ. ಪ್ರತಿದಿನ ಪೂಜಾಸಮಯಕ್ಕೆ ಭಗವಂತ ಇವರಿಗೆ ದರ್ಶನ ನೀಡುತ್ತಿದ್ದನಂತೆ.
ಒಮ್ಮೆ ಇವರಿಬ್ಬರೂ ಮರುತ್ತರಾಜನ ಯಕ್ಪಕ್ಕೆ ಹೋದರು. ಯಜ್ಞಬ್ರಹ್ಮನಾಗಿ ಜಯ ಕುಳಿತಿದ್ದ. ಯಾಗದ ಪ್ರಧಾನ ಋತ್ವಿಜನಾಗಿ ವಿಜಯನಿದ್ದ. ಇವರು ಯಜ್ಞವನ್ನು ನಿರ್ವಹಿಸಿದ ಚಾತುರ್ಯಕ್ಕೆ ಎಲ್ಲರೂ ಬೆರಗಾದರು. ಮರುತ್ತ ಇವರಿಗೆ ವಿಪುಲ ಸಂಪತ್ತನ್ನು ನೀಡುತ್ತಾನೆ.
ಆಶ್ರಮಕ್ಕೆ ಹಿಂತಿರುಗುವ ಹಾದಿಯಲ್ಲಿ ಆ ಸಂಪತ್ತನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ವಿಚಾರದಲ್ಲಿ ಇಬ್ಬರಿಗೂ ಜಗಳವಾಗುತ್ತದೆ. ಇಬ್ಬರು ಸಮಪಾಲು ಮಾಡಿಕೊಳ್ಳಬೇಕು ಎಂದು ಜಯನೂ, ಅವರವರ ಸಂಪಾದನೆ ಅವರದು ಎಂದು ವಿಜಯನೂ ಕಿತ್ತಾಡುತ್ತಾರೆ. ಈ ಜಗಳದಲ್ಲಿ ಸಿಟ್ಟು ಬಂದು ಜಯ ನೀನು ಮಹಾಜಿಪುಣ, ಮೊಸಳೆಯಾಗು' ಎಂದು ಶಾಪ ಕೊಡುತ್ತಾನೆ. ವಿಜಯನೂ ಸಿಟ್ಟು ಹತ್ತಿ `ನೀನು ಮದೋನ್ಮತ್ತ, ಆನೆಯಾಗು' ಎಂದು ಶಾಪ ಕೊಡುತ್ತಾನೆ. ಈಗಿನ ಮಕ್ಕಳೂ ಸಿಟ್ಟಲ್ಲಿ ಕತ್ತೆ, ಕೋತಿ, ಗೂಬೆ ಎಂದು ಬೈದುಕೊಳ್ಳುವುದು ಸದ್ಯ, ಕಾರ್ಯರೂಪಕ್ಕೆ ಬರುವುದಿಲ್ಲ.
ಇಬ್ಬರೂ ಶಾಪಗ್ರಸ್ತರಾದರು. ವಿಷ್ಣುವಿನ ಮುಂದೆ ಪೂಜಾ ಸಮಯದಲ್ಲಿ ತಮ್ಮ ತಪ್ಪೊಪ್ಪಿಕೊಂಡರು. ವಿಷ್ಣು ನಾನು ನಿಮಗೆ ಕೆಲಕಾಲ ನಂತರ ಬಿಡುಗಡೆ ನೀಡುವೆ ಎಂದು ಭರವಸೆ ಕೊಟ್ಟ.
ಇದಾಗಿ ಎಷ್ಟೋ ಕಾಲದ ನಂತರ ಆನೆಯಾಗಿದ್ದ ಜಯ ನೀರು ಕುಡಿಯಲು ಗಂಡಕಿ ನದಿಗೆ ಇಳಿದಾಗ ಅಲ್ಲಿ ಮೊಸಳೆಯಾಗಿದ್ದ ವಿಜಯ ಆತನನ್ನು ಹಿಡಿಯುತ್ತಾನೆ. ಜಯ ವಿಷ್ಣುವಿನ ಮೊರೆ ಹೋಗುತ್ತಾನೆ. ವಿಷ್ಣು ಅಲ್ಲಿಗೆ ಬಂದು ಸುದರ್ಶನ ಚಕ್ರದಿಂದ ಇಬ್ಬರೂ ಸಾಯುತ್ತಾರೆ. ವಿಷ್ಣು ಅವರಿಗೆ ಸಾರೂಪ್ಯಮುಕ್ತಿಯನ್ನು ಅನುಗ್ರಹಿಸಿ ತನ್ನ ದ್ವಾರಪಾಲಕರನ್ನಾಗಿ ಮಾಡಿಕೊಳ್ಳುತ್ತಾನೆ. ಇಬ್ಬರೂ ಅದೇ ಹೆಸರಿನಿಂದ ವೈಕುಂಠಕ್ಕೆ ಸೇರುತ್ತಾರೆ. ವಿಷ್ಣು ಕಾಲಿಟ್ಟ ಜಾಗ ಎಂಬ ಕಾರಣಕ್ಕೆ ಗಂಡಕೀ ನದಿಗೆ ಹರಿಕ್ಪೇತ್ರ ಎಂಬ ಹೆಸರು ಬಂತು. ವಿಷ್ಣುವಿನ ಸುದರ್ಶನ ಚಕ್ರ ನೀರಿನಲ್ಲಿ ತಿರುಗಿದಾಗ ಅಲ್ಲಿದ್ದ ಶಿಲೆಗಳ ಮೇಲೆ ಚಕ್ರದ ಗುರುತುಗಳು ಮೂಡಿದುವಂತೆ. ಅದನ್ನೇ ವೈಷ್ಣವರು ಸಾಲಿಗ್ರಾಮ ಎಂದು ಪೂಜಿಸುತ್ತಾರೆ.
ಮುಂದೆ ಇದೇ ಜಯವಿಜಯರು ಮತ್ತೊಮ್ಮೆ ಸನಕಾದಿ ಮುನಿಗಳನ್ನು ಅಡ್ಡಗಟ್ಟಿ ಮತ್ತೊಮ್ಮೆ ಶಾಪಗ್ರಸ್ತರಾಗಿ ಮೂರು ರಾಕ್ಪಸಜನ್ಮ ಎತ್ತಿದ್ದು ಮತ್ತೊಂದು ಕತೆ.