Sunday, December 30, 2007

ಹೆಂಡತಿಯೊಬ್ಬಳು ಮನೆಯೊಳಗೆ, ಪ್ರೇಯಸಿಯರು ಮನದೊಳಗೆ!

ಸುಮ್ಮನೆ ಕೇಳಿಕೊಳ್ಳಿ!
ಪತ್ನಿಗೆ ನಿಷ್ಠನಾಗಿರುವ ಏಕಪತ್ನೀವ್ರತಸ್ಥನ ಹೆಂಡತಿ ಸುಖವಾಗಿರುತ್ತಾಳಾ? ರಸಿಕನಾದ ಬಹುಜನಪ್ರಿಯನ ಹೆಂಡತಿ ಸುಖವಾಗಿರುತ್ತಾಳಾ?
ಎಫ್ಪೆಮ್ಮಿನ ಮಸ್ತ್ ಮಯೂರಿ ವಿಚಿತ್ರವಾಗಿ ಕರೆಯುವಂತೆ `ನಮ್ಮ ಭಾಮಂದಿರು' ಏಕಪತ್ನೀವ್ರತಸ್ಥನನ್ನೇ ಹೆಚ್ಚು ಮೆಚ್ಚುತ್ತಾರೆ. ಏಕಪತ್ನಿವ್ರತಸ್ಥ ಎನ್ನುವುದೇ ಒಂದು ಸಾಧನೆ, ಅದೇ ಒಂದು ಅರ್ಹತೆ ಎಂಬಂತೆ ಮಾತಾಡುತ್ತಾರೆ. ಒಳ್ಳೇ ಗಂಡ, ಬೇರೊಂದು ಹೆಣ್ಣನ್ನು ತಲೆಯೆತ್ತಿಯೂ ನೋಡಲ್ಲ ಅನ್ನುತ್ತಾರೆ. ಆಫೀಸು ಬಿಟ್ಟು ನೇರವಾಗಿ ಮನೆಗೇ ಬರುತ್ತಾನೆ. ಒಂದು ದುರಭ್ಯಾಸ ಇಲ್ಲ ಎಂದು ಹೇಳಿ ಹೇಳಿ ಎಲ್ಲಾ ಹವ್ಯಾಸಗಳನ್ನೂ ಹತ್ತಿಕ್ಕುವುದನ್ನೂ ನಾವು ನೋಡಿದ್ದೇವೆ.
ಈ ಒಳ್ಳೆಯತನ ಅಷ್ಟು ಒಳ್ಳೆಯದೇನಲ್ಲ. ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿ ಅನ್ನುವ ಪ್ರಶಸ್ತಿ ಗಳಿಸಿದವನು ಶ್ರೇಷ್ಠನೋ ಧೀಮಂತನೋ ಆಗಿರಬೇಕಾಗಿಲ್ಲ. ಹೇಡಿಯೂ ಆಗಿರಬಹುದು. ಇದು ಎಲ್ಲದಕ್ಕೂ ಅನ್ವಯವಾಗುತ್ತದೆ. ಬಿವಿ ಕಾರಂತರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹತ್ತು ಹನ್ನೆರಡನೆಯ ವಯಸ್ಸಿಗೆ ಅವರು ಪುತ್ತೂರಿನಿಂದ ಮೈಸೂರಿಗೆ ಓಡಿಬಂದವರು. ಅವರು ಓಡಿ ಬಂದಾಗ ಅವರ ಮನೆಯಲ್ಲಿ, ಓರಗೆಯಲ್ಲಿ, ನೆಂಟರಷ್ಟರಲ್ಲಿ ಏನೇನು ಮಾತುಕತೆ ನಡೆದಿರಬಹುದು ಊಹಿಸಿ. ಕೆಟ್ಟ ಹುಡುಗ, ಪೋಲಿಬಿದ್ದು ಹೋದ, ಸದ್ಯ ನಮ್ಮ ಮಕ್ಕಳು ಹಾಗಾಗಲಿಲ್ಲವಲ್ಲ, ಚೆನ್ನಾಗಿ ಓದುತ್ತಾರೆ, ಓದದೇ ಇದ್ದರೂ ಓಡಿಹೋಗಲಿಲ್ಲ, ಮಕ್ಕಳನ್ನು ನಾವು ಹದ್ದುಬಸ್ತಿನಲ್ಲಿ ಇಟ್ಟು ಚೆನ್ನಾಗಿ ಬೆಳೆಸಿದ್ದೇವೆ ಎಂದೆಲ್ಲ ಅವರ ಹೆತ್ತವರು ಮಾತಾಡಿಕೊಂಡಿರಬಹುದು.
ಆದರೆ ಅರುವತ್ತು ವರುಷಗಳ ತರುವಾಯ ನೋಡಿದರೆ, ಚಿತ್ರ ಹೇಗೆ ಬದಲಾಗಿದೆ. ಶಿಸ್ತುಬದ್ಧವಾಗಿ, ಅಪ್ಪಅಮ್ಮಂದಿರ ಮಾತು ಕೇಳಿಕೊಂಡು, ಯಾವ ತರಲೆಯನ್ನೂ ಮಾಡದೇ ಶಾಲೆಗೆ ಹೋಗಿ ಒಳ್ಳೇ ಮಾರ್ಕು ತೆಗೆಯುತ್ತಿದ್ದ ಹುಡುಗರ ಪೈಕಿ ಯಾರ ಹೆಸರೂ ನಮಗೆ ಗೊತ್ತಿಲ್ಲ. ಬಿವಿ ಕಾರಂತರ ಜೊತೆಗೆ ಓದುತ್ತಿದ್ದ ಮೂವತ್ತೋ ಮೂವತ್ತೈದೋ ಹುಡುಗರ ಪೈಕಿ ಆ ಕಾಲಕ್ಕೆ ಕೆಟ್ಟವರಂತೆ ಕಂಡ ಕಾರಂತರೊಬ್ಬರೇ ಇವತ್ತು ಚಿರಸ್ಥಾಯಿ.
ಹೀಗಾಗಿ ಯಾವ ನಡೆಯನ್ನೂ ಆ ಕ್ಪಣಕ್ಕೆ ಹೀಗೇ ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ಹಾಗೆ ನಿರ್ಧರಿಸುವುದು ತಪ್ಪು ಕೂಡ. ಕಾಲದ ತಕ್ಕಡಿಯಲ್ಲಿ ತೂಗಿ ನೋಡಿದಾಗ ಲಘುವಾದದ್ದು ಘನವಾಗಿಯೂ ಭಾರವಾಗಿ ಕಂಡದ್ದು ಹಗುರಾಗಿಯೂ ಕಾಣುವ ಸಾಧ್ಯತೆಯಿದೆ.
ಟಿ.ಎನ್. ಸೀತಾರಮ್ ನಿರ್ದೇಶಿಸುತ್ತಿರುವ `ಮೀರಾ ಮಾಧವ ರಾಘವ'ದ ಕತೆಯನ್ನು ಯೋಚಿಸುತ್ತಿದ್ದಾಗ ನೆನಪಾದದ್ದು ಇದೆಲ್ಲ. ಏಕಪತ್ನಿವ್ರತಸ್ಥನ ಸಜ್ಜನಿಕೆ ಮತ್ತು ಬಹುಜನ ಪ್ರಿಯನ ರಸಿಕತೆ ಕೂಡ ಆಗಲೇ ಹೊಳೆದದ್ದು. ರಾಮಾಯಣ ಮತ್ತು ಭಾಗವತವನ್ನು ಮುಂದಿಟ್ಟುಕೊಂಡು ಇದನ್ನು ನೋಡೋಣ;
ಶ್ರೀರಾಮಚಂದ್ರ ಏಕಪತ್ನೀವ್ರತಸ್ಥ. ಆದರೆ ರಾಮಾಯಣದುದ್ದಕ್ಕೂ ಸೀತೆ ಶೋಕತಪ್ತೆ. ಶ್ರೀರಾಮ ಪುರುಷೋತ್ತಮ. ಆದರೆ ಅವನ ಸುತ್ತಲಿದ್ದ ಮಂದಿಗೆ ಸದಾ ಕಷ್ಟ. ಅಮ್ಮ, ಅಪ್ಪ, ಮಲತಾಯಿ, ಸೋದರ, ಮಿತ್ರ- ಎಲ್ಲರನ್ನೂ ಶ್ರೀರಾಮ ಕಷ್ಟಕ್ಕೆ ದೂಡಿದ್ದ. ಅಥವಾ ಅವನಿಗಾಗಿ ಅವನಿಂದಾಗಿ ಅವರೆಲ್ಲ ಕಷ್ಟಕ್ಕೆ ಸಿಲುಕಿಹಾಕಿಕೊಂಡಿದ್ದರು. ಕಡೆಗೆ ಅಷ್ಟೆಲ್ಲ ಕಷ್ಟಪಟ್ಟ ಸೀತೆಯನ್ನೂ ಅಗ್ನಿಪರೀಕ್ಪೆಗೆ ಒಡ್ಡುತ್ತಾನೆ ರಾಮ. ಅವನಿಗೆ ಪುರುಷೋತ್ತಮ ಅನ್ನಿಸಿಕೊಳ್ಳುವ ಆಸೆ. ಗೋಪಾಲಕೃಷ್ಣ ಅಡಿಗರು ಹೇಳುವ `ಸುಟ್ಟಲ್ಲದೆ ಮುಟ್ಟೆನೆಂಬುಡಾಫೆ'ಯ ಮತ್ತೊಂದು ವರ್ಷನ್ನು ಅದು.
ಅದೇ ಶ್ರೀಕೃಷ್ಣನನ್ನು ತೆಗೆದುಕೊಳ್ಳಿ. ಹದಿನಾರು ಸಾವಿರ ನೂರಾ ಎಂಟು ಹೆಂಡಿರಿದ್ದರೂ ರುಕ್ಮಿಣಿ ಸಂಪ್ರೀತೆ. ದಾಸರು ಹಾಡಿದ ಹಾಗೆ `ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತಾ, ಅಂಗನೆ ಲಕ್ಪ್ಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನ್ನುತ'. ರುಕ್ಮಿಣಿಯನ್ನು ಶೀಕೃಷ್ಣ ಮದುವೆಯಾದದ್ದು ಮೋಸದಿಂದ. ಅವಳನ್ನು ಶಿಶುಪಾಲನಿಗೆ ಕೊಡಬೇಕು ಎಂಬ ನಿರ್ಧಾರಕ್ಕೆ ಭೀಷ್ಮಕರಾಯ ಬಂದಿದ್ದಾಗ ಅಲ್ಲಿಗೆ ಹೋಗಿ ಅವಳನ್ನು ರಥದಲ್ಲಿ ಹಾರಿಸಿಕೊಂಡು ಬಂದು ಮದುವೆಯಾದವನು ಅವನು. ಅದೇನೇ ಇದ್ದರೂ ರುಕ್ಮಿಣಿ ಪರಮಸಂಪ್ರೀತೆ. ತುಲಭಾರದಲ್ಲಿ ತೂಗಿದಾಗಲೂ ಅವಳೇ ಒಂದು ಕೈ ಮೇಲೆ. ಜೊತೆಗೇ ಸಣ್ಣ ಸಣ್ಣ ಆಶೆಗಳ ಸತ್ಯಭಾಮೆಯೂ ಇದ್ದಾಳೆ. ಅವಳೂ ಸುಖಿಯೇ.
******
ಸೀತಾರಾಮ್ ಹೇಳಿದ ಕತೆಯಲ್ಲೂ ಇಂಥದ್ದೇ ಒಂದು ವಿಚಿತ್ರ ಸಂಯೋಗವಿದೆ. ಕಾಲದ ಕುಲುಮೆಯಲ್ಲಿ ಕಾದು ನಮ್ಮನಮ್ಮ ಪಾತ್ರಕ್ಕೊಗ್ಗುವ ಮೂರ್ತಿಯಾಗುವ ನಾವು ನಮಗೇ ಗೊತ್ತಿಲ್ಲದ ಹಾಗೆ ಇನ್ನೇನೋ ಆಗುತ್ತಾ ಹೋಗುತ್ತೇವೆ. ಇಡೀ ರಾಷ್ಟ್ರಕ್ಕೇ ಅಪೂರ್ವ ಬುದ್ಧಿವಂತರಂತೆ ಕಾಣಿಸಿದ ಸರ್ ಎಂ ವಿಶ್ವೇಶ್ವರಯ್ಯ ಅವರ ಪತ್ನಿಯ ಕಣ್ಣಿಗೆ ಅಂಥ ಗ್ರೇಟ್ ಅನ್ನಿಸಲಿಲ್ಲ. ಕಸ್ತೂರಬಾ ಕಣ್ಣಿಗೆ ಗಾಂಧೀಜಿಯ ಶ್ರೇಷ್ಠತೆ ಅರ್ಥವಾಗಿರಲಿಕ್ಕಿಲ್ಲ. ಸಹವಾಸ, ಸಹಚರ್ಯ ಎನ್ನುವುದು ನಮ್ಮ ಸಂವೇದನೆಯನ್ನು ಕೊಲ್ಲುತ್ತಾ ಹೋಗುತ್ತದೆ. ಹೊರಗಿನಿಂದ ನೋಡುವವರಿಗೆ ನಿಜಕ್ಕೂ ಮಾನವೀಯರೂ ಹಾಸ್ಯಪ್ರಜ್ಞೆ ಉಳ್ಳ ಧೀಮಂತರೂ ಆಗಿ ಕಾಣಿಸುವ ವ್ಯಕ್ತಿಗಳು ಜೊತೆಗೇ ವಾಸಿಸುವವರ ಪಾಲಿಗೆ ಕ್ರೂರಿಗಳಾಗಿ ಕಾಣಿಸಬಹುದು.
ಆದರೆ ಅದನ್ನೆಲ್ಲ ಅದುಮಿಟ್ಟುಕೊಂಡು ಬದುಕುವವರೂ ಇದ್ದಾರೆ. ಹಾಗೆ ಬದುಕುವುದು ಆ ಸವಲತ್ತುಗಳಿಗೋಸ್ಕರ. ಜನಪ್ರಿಯ ವಾಣಿಜ್ಯೋದ್ಯಮಿಯ ಜೊತೆಗೆ ಸಂಸಾರ ಮಾಡುವುದು ಆಕೆಗೆ ಸಾಧ್ಯವೇ ಇರುವುದಿಲ್ಲ. ಆದರೆ ಅವನನ್ನು ತೊರೆದು ಹೋಗಿ ಬದುಕುವ ಕಷ್ಟ ಆಕೆಗೆ ಬೇಡವಾಗಿರುತ್ತದೆ. ಹೀಗಾಗಿ ಅಲ್ಲಿದ್ದುಕೊಂಡೇ ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಂಡು ಆಕೆ ಜೀವಿಸುತ್ತಾಳೆ. ಆಕೆಯ ಮನಸ್ಸು ಇನ್ನೆಲ್ಲೋ ಇರುತ್ತದೆ, ದೇಹ ಅಲ್ಲಿರುತ್ತದೆ. ಇಂಥದ್ದೊಂದು ವಿಭಜಿತ ಸ್ಥಿತಿಯಲ್ಲೇ ಬದುಕು ಸಾಗುತ್ತದೆ.
ಆದರೆ ಮತ್ತೆ ಕೆಲವರು ಅದನ್ನು ಮೀರುತ್ತಾರೆ. ತುಂಬ ತೀವ್ರವಾಗಿ ಬದುಕುವ ನಿರ್ಧಾರಕ್ಕೆ ಬರುತ್ತಾರೆ. ಆ ತೀವ್ರತೆಯಲ್ಲಿ ಉರಿದು ಬೂದಿಯಾಗುತ್ತೇವೇ ವಿನಾ, ಬೂದಿ ಮುಚ್ಚಿದ ಕೆಂಡದ ಹಾಗೆ ಇರುವುದಿಲ್ಲ ಅನ್ನುತ್ತಾರೆ. ಅಂಥವರನ್ನು ಹಿಡಿದಿಡುವುದು ಕಷ್ಟದ ಕೆಲಸ. ಯಾವ ಐಷಾರಾಮ, ಪ್ರತಿಷ್ಠೆ, ಶಿಷ್ಟಾಚಾರ ಕೂಡ ಅವರನ್ನು ಬಂಧಿಸಲಾರದು.
ಪಾತಿವ್ರತ್ಯ, ಸಹಜೀವನ, ಬಂಧನ ಇತ್ಯಾದಿಗಳು ಹೊಸ ಅರ್ಥವನ್ನು ಪಡೆದುಕೊಳ್ಳುತ್ತಿರುವ ಇವತ್ತಿನ ಪರಿಸರದಲ್ಲಿ ಸೀತಾರಾ್ ಹೇಳುತ್ತಿರುವ ಕತೆ ಹೆಣ್ಣಿನ ಒಳಮನಸ್ಸನ್ನು ಶೋಧಿಸುವ ಪ್ರಯತ್ನ.
*******
ಅರ್ಥಪೂರ್ಣ ಸಿನಿಮಾ ಮಾಡಬೇಕು ಎಂದು ಹೊರಡುವವರಿಗೆ ಇದು ಕಷ್ಟಕಾಲ. ಕನ್ನಡ ಚಿತ್ರರಂಗವನ್ನು ಐವತ್ತು ವರುಷ ಆಳಿದ ಕತೆಗಳನ್ನೇ ನೋಡಿ. ಸಾಹಿತ್ಯದಲ್ಲಿರುವಂತೆ ಇಲ್ಲೂ ವಿವಿಧ ಘಟ್ಟಗಳನ್ನು ನೀವು ಗುರುತಿಸಬಹುದು. ಆರಂಭದಲ್ಲಿ ಇತಿಹಾಸ ಮತ್ತು ಪುರಾಣದ ಕತೆಗಳನ್ನು ಸಿನಿಮಾ ಮಾಡುತ್ತಿದ್ದರು. ದಶಾತತಾರದಿಂದ ಬಭ್ರುವಾಹನನ ತನಕ ಎಲ್ಲವೂ ಬಂತು. ಆಮೇಲೆ ಸಾಮಾಜಿಕ ಸಿನಿಮಾಗಳು ಬಂದವು. ಅಲ್ಲಿದ್ದ ಕತೆಗಳಲ್ಲಿ ಒಂದಾಗಿ ಬಾಳು, ಬಂಗಾರದ ಮನುಷ್ಯ, ಕರುಣೆಯೆ ಕುಟುಂಬದ ಕಣ್ಣು ಮುಂತಾದ ಕತೆಗಳೇ ಹೆಚ್ಚು. ಆಗಷ್ಟೇ ಒಡೆಯುತ್ತಿದ್ದ ಅವಿಭಕ್ತ ಕುಟುಂಬವನ್ನು ಹಿಡಿದಿಡುವ ಪ್ರಯತ್ನಗಳಾಗಿದ್ದವು ಅವು.
ಅದು ಭೂಮಾಲೀಕರ ಕಾಲವೂ ಆಗಿತ್ತು. ಊರಿಗೊಬ್ಬ ಜಮೀನ್ದಾರನಿದ್ದ, ಪಟೇಲನಿದ್ದ. ಅವರ ವಿರುದ್ಧ ತಿರುಗಿ ಬೀಳುವ ರೋಷತಪ್ತ ಯುವಕರ ಕತೆ ಬಂತು. ಜಮೀನ್ದಾರನ ಮಗಳನ್ನು ಪ್ರೀತಿಸ ಮದುವೆಯಾಗುವ ಕತೆಗಳು ಬಂದವು. ಜಮೀನ್ದಾರರು ತೋಪೆದ್ದು ಹೋಗಿ ತೋಪೇಗೌಡರಾಗುತ್ತಿರುವ ಕಾಲಕ್ಕೆ ಜಾತಿಸಮಸ್ಯೆ ತಲೆಯೆತ್ತಿತ್ತು, ಮೇಲುಜಾತಿಯ ಹುಡುಗಿಯನ್ನು ಕೆಳಜಾತಿಯ ಹುಡುಗ ಪ್ರೀತಿಸಿ ಮದುವೆಯಾಗುವುದು ಜನಪ್ರಿಯವಾಯಿತು. ಈ ಮಧ್ಯೆ ಅತ್ತೆಸೊಸೆ, ವಿಧವಾ ವಿವಾಹ, ಬಾಲ್ಯವಿವಾಹ ಮುಂತಾದ ಸಾಮಾಜಿಕ ಪಿಡುಗುಗಳ ಕತೆಗಳು ಬಂದುಹೋದವು. ದೇಶಪ್ರೇಮ, ಕನ್ನಡಪ್ರೇಮದ ಕತೆಗಳೂ ಬಂದವು.
ಈಗ ಅವ್ಯಾವುವೂ ಸಮಸ್ಯೆಗಳೇ ಅಲ್ಲ. ಅಂತಸ್ತು, ಜಾತಿ ಅಂದಾಕ್ಪಣ ಜನ ತಮಾಷೆ ಮಾಡುತ್ತಾರೆ. ಪ್ರೇಮದ ಕುರಿತ ಚಿತ್ರಗಳು ಒಂದೋ ಎರಡೋ ಬರಬಹುದು. ಮನುಷ್ಯ ಸಂಬಂಧಗಳ ವಿವಿಧ ಆಯಾಮಗಳನ್ನು ಶೋಧಿಸುವ ಚಿತ್ರಗಳು ಅಲ್ಲೊಂದು ಇಲ್ಲೊಂದು ಯಶಸ್ವಿಯಾಗುತ್ತಿವೆ. ನಾಯಕ ರೌಡಿಯಾಗುವ ಕತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನೂ ಪ್ರೇಕ್ಪಕರ ನಿರಾಕರಿಸಿದ್ದಾನೆ.
ಈಗ ನಮಗೆ ನಿಜಕ್ಕೂ ಏನು ಬೇಕು?
ಈ ಪ್ರಶ್ನೆಗೆ ಹಿಂದಿ, ತೆಲುಗು, ಕನ್ನಡ, ತಮಿಳು ಸೇರಿದಂತೆ ಎಲ್ಲೂ ಉತ್ತರ ಸಿಗುತ್ತಿಲ್ಲ. ಇಂಟರ್ ನೆಟ್ ಬಂದ ನಂತರ ಸೆಕ್ಸು ಕೂಡ ರಹಸ್ಯವಾಗಿ ಉಳಿದಿಲ್ಲ. ರಾಜಕಾರಣಿಗಳು ಭ್ರಷ್ಟರು ಅನ್ನುವುದು ಕಥಾವಸ್ತುವೇ ಅಲ್ಲ.
ಹಾಗಿದ್ದರೆ ಎಲ್ಲರನ್ನೂ ಸೆಳೆಯುವಂಥ ಕತೆ ಯಾವುದು?
ಸಾಹಿತ್ಯ, ಸಿನಿಮಾ ಎರಡೂ ಜೊತೆಯಾಗಿ ಹುಡುಕಾಡುತ್ತಿದೆ. ಬಹುಶಃ ವ್ಯಕ್ತಿತ್ವ ವಿಕಸನದ ಕತೆ, ಕೀಳರಿಮೆಯನ್ನು ಮೀರುವ ಕತೆ, ತನ್ನೊಳಗಿನ ಮರಳುಗಾಡನ್ನು ದಾಟುವ ಕತೆಯನ್ನು ಯಾರಾದರೂ ಸಿನಿಮಾ ಮಾಡಿದರೆ ಇಷ್ಟವಾಗಬಹುದೋ ಏನೋ?
ಯಾಕೆಂದರೆ ಈ ಕಾಲದ ಶತ್ರು ಒಳಗೇ ಇದ್ದಾನೆ.

ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ....

ಮನುಷ್ಯನ ಜೀವನದ ಅತ್ಯಂತ ನಿರ್ಣಾಯಕ ಘಳಿಗೆ ಯಾವುದು ಎಂದು ಕೇಳಿಕೊಳ್ಳಿ. ಅದನ್ನು ಇನ್ನಷ್ಟು ಸರಳಗೊಳಿಸಿ `ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ ಯಾವುದಾಗಿರುತ್ತದೆ' ಅಂತ ಪ್ರಶ್ನಿಸಿಕೊಳ್ಳಿ. ತಕ್ಷಣಕ್ಕೆ ಉತ್ತರ ಸಿಕ್ಕುವುದಿಲ್ಲ. `ನಾನು ಇಂತಿಂಥವರ ಮಗನಾಗಿಯೋ ಮಗಳಾಗಿಯೋ ಹುಟ್ಟಿದ್ದು. ಇಂಥ ಸ್ಕೂಲಿಗೆ ಹೋಗಲು ಇಚ್ಚಿಸಿದ್ದು. ಇಂಥ ಕೋರ್ಸು ತೆಗೆದುಕೊಂಡದ್ದು, ಇಂಥಿಂಥಾ ಗೆಳೆಯರನ್ನು ಆರಿಸಿಕೊಂಡಿದ್ದು. ಇಂಥಾ ಕೆಲಸಕ್ಕೆ ಸೇರಿದ್ದು. ಇಂಥ ಹುಡುಗನಿಗೆ ಮನಸೋತದ್ದು..'. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದೂ ನಿರ್ಣಾಯಕವೇ ಅನ್ನಿಸಿಬಿಡುತ್ತದೆ. ಒಂದು ವೇಳೆ ನಮ್ಮೂರಿನಲ್ಲಿ ಕಾಲೇಜು ಮುಗಿಸಿ ಮೈಸೂರು ಯೂನಿವರ್ಸಿಟಿಗೆ ಬಂದಿದ್ದರೆ ಒಳ್ಳೆಯ ಮೇಷ್ಟರ ಕೈಲಿ ಪಾಠ ಹೇಳಿಸಿಕೊಳ್ಳಬಹುದಿತ್ತು. ಮೈಸೂರಿನವಳೇ ಆದ ಅಷ್ಟಿಷ್ಟು ಹಾಡುವುದಕ್ಕೂ ಬರುವ ಮುಗುದೆಯೊಬ್ಬಳನ್ನು ಮದುವೆಯಾಗಬಹುದಿತ್ತು. ಅಥವಾ ಮೈಸೂರಿನಲ್ಲೇ ಮನೆಯಿರುವ ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿಗೆ ಕರೆದೊಯ್ಯುವ ಜಾಣನ ಕೈ ಹಿಡಿಯಬಹುದಿತ್ತು. ಹಾಗೆಲ್ಲ ಮನಸ್ಸು ಹರಿದಾಡುತ್ತದೆ. ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ನಾವು ಚಲಿಸುತ್ತೇವೆ.
ಅದೇ ಸಾಹಿತ್ಯ. ಹೀಗನ್ನಿಸಿದ್ದನ್ನು ಯಾರೋ ಬರೆದಾಗ ಮೆಚ್ಚುಗೆಯಾಗುತ್ತದೆ. ಅದನ್ನು ಓದುತ್ತೇವೆ. ಓದಿದ ಪಾತ್ರದ ಜೊತೆ ನಮ್ಮನ್ನು ಗುರುತಿಸಿಕೊಳ್ಳುತ್ತೇವೆ. ನಾವೇ ವಾಸಿ ಅನ್ನಿಸುತ್ತದೆ ಅಥವಾ ನಾನು ಅನಿವಾಸಿ ಎನಿಸುತ್ತದೆ. ಒಂದು ಸಣ್ಣ ಬದಲಾವಣೆ ನಮ್ಮಲ್ಲಿ ನಮಗೆ ಗೊತ್ತಿಲ್ಲದೆ ಆಗುತ್ತದೆ. ಅದು ಸಾಹಿತ್ಯಕ್ಕಿರುವ ಶಕ್ತಿ.
ಸೀತೆಯಂಥ ಸೀತೆಯೇ ಕಾಡಲ್ಲಿದ್ದಳು, ಪಾಂಡವರಂಥ ಧರ್ಮಾತ್ಮರು ವನವಾಸಕ್ಕೊಳಪಟ್ಟರು, ಐವರು ಗಂಡರ ದ್ರೌಪದಿಗೆ ಮಾನಭಂಗವಾದಾಗ ಯಾರೂ ನೆರವಿಗೆ ಬರಲಿಲ್ಲ, ಅಷ್ಟು ಚೆನ್ನಾಗಿ ಅಡುಗೆ ಮಾಡುತ್ತಿದ್ದ ನಳನಿಂದ ದಮಯಂತಿ ದೂರಾದಳು, ಅಷ್ಟೆಲ್ಲ ಇದ್ದೂ ಸಿದಾ್ಧರ್ಥ ಎಲ್ಲ ಬಿಟ್ಟು ಹೊರಟನಲ್ಲ. ಇನ್ನು ನಮ್ದೇನು ಮಹಾ? ಇದು ಸಾಹಿತ್ಯಕ್ಕಿರುವ ಸಾಂತ್ವನ.
ಹೇಗೆ ನೋಡಿದರೂ ನಮಗೆ ಪಾಠ ಕಲಿಸುವುದು ಅಕ್ಪರವೇ ಹೊರತು ಅನುಭವವಲ್ಲ.ಕಲೆಯೇ ಹೊರತು ಜೀವನವಲ್ಲ. ಅನುಭವದಿಂದ ಪಾಠ ಕಲಿಯಬೇಕು ಅನ್ನುತ್ತೇವೆ. ಆದರೆ ನಮ್ಮೆದುರಿಗೇ ನಡೆದ ಘಟನೆಯಿಂದ ನಾವು ಪಾಠ ಕಲಿಯುವುದಿಲ್ಲ. ನಮ್ಮ ಕಣ್ಮುಂದೆ ಕಾಣುವ ಮೋಚಿಯ ಕಷ್ಟ ನಮಗೆ ಕಾಣುವುದಿಲ್ಲ. ಭಾರತೀಪ್ರಿಯ `ಮೋಚಿ' ನಮ್ಮ ಕಡು ಅನುಕಂಪಕ್ಕೆ ಕಾರಣನಾಗುತ್ತಾನೆ. ನಮ್ಮ ಕಣ್ಣೆದುರಿಗಿನ ತಬರನ ಕಷ್ಟಕ್ಕೆ ನಾವು ಸ್ಪಂದಿಸುವುದಿಲ್ಲ. ತೇಜಸ್ವಿ ತಬರನ ಕತೆ ಬರೆದರೆ ನಿಟ್ಟುಸಿರಿಡುತ್ತೇವೆ.
ಅಂದರೆ, ಕಲೆ ಜೀವನದ ಪ್ರತಿಬಿಂಬವಾಗಿದ್ದೂ ಜೀವನಕ್ಕಿಂತ ಆಪ್ತವಾಗುವುದಕ್ಕೆ ಕಾರಣವೇನು? ಉತ್ತರ ಅಷ್ಟು ಸರಳವಾಗಿಲ್ಲ. ಅದು ನಮ್ಮನ್ನು ತಲುಪಬೇಕಾದ ರೀತಿಯಲ್ಲಿ, ತಲುಪಬೇಕಾದ ಸ್ತರದಲ್ಲಿ ಮತ್ತು ತಲುಪಬೇಕಾದ ಮನಸ್ಥಿತಿಯಲ್ಲಿ ತಲುಪುತ್ತದೆ. ಬಸ್ಸು ಸಿಗದೆ ಒದ್ದಾಡುತ್ತಾ, ಪರವೂರಲ್ಲಿ ಸತ್ತು ಬಿದ್ದಿರುವ ಅಪ್ಪನ ಅಂತ್ಯಕ್ರಿಯೆಗೆ ಹೋಗಲಾರದವನ ಕಷ್ಟವನ್ನು ಓದಿದವನಿಗೆ ಆಗುವ ಅನುಭವ, ಅವನ ಪಕ್ಕದಲ್ಲೇ ನಿಂತಿದ್ದ ಅವನ ಗೆಳೆಯನಿಗೆ ಆಗುವುದಿಲ್ಲ. ಯಾಕೆಂದರೆ ಆ ಗೆಳೆಯ ಕೂಡ ಕಷ್ಟದಲ್ಲಿರುವವನ ಸಹಪ್ರಯಾಣಿಕ. ಅವನೂ ಆ ಕಷ್ಟದಲ್ಲಿ ಭಾಗಿ. ಹೀಗಾಗಿ ಅವನಿಗೆ ಆ ಪ್ರಸಂಗ ಅನುಭವಕ್ಕೆ ಬಂದಿದೆ. ಅದರ ಹಿನ್ನೆಲೆ ಮುನ್ನೆಲೆಗಳು ಗೊತ್ತಿವೆ.
ಸಾಹಿತ್ಯ, ಕಲೆಗಳಿಗಿರುವ ಶಕ್ತಿಯೇ ಅದು. ಅವು ಬದುಕನ್ನು ಹತ್ತಿರಕ್ಕೆ ತರುತ್ತವೆ. ನಮ್ಮ ಕಷ್ಟಗಳ ನಡುವೆ ನಿಂತುಕೊಂಡು ಮತ್ತೊಬ್ಬರ ಕಷ್ಟಗಳನ್ನು ನೋಡುವ ಹೊತ್ತಿಗೆ ನಮಗೆ ನಮ್ಮ ರಗಳೆಗಳೇ ಸಾಕಾಗಿರುತ್ತವೆ. ಆದರೆ ನಿರಾಳವಾಗಿರುವ ಹೊತ್ತಿನಲ್ಲಿ ಓದುತ್ತಾ ಕುಳಿತಾಗ ಇನ್ನೊಂದು ಜೀವನದ ದರ್ಶನವಾಗುತ್ತದೆ.
-2-
ಹಿಂದೊಂದು ಪದ ಬಳಕೆಯಲ್ಲಿತ್ತು, ಬಹುಶ್ರುತ. ತುಂಬ ಓದಿಕೊಂಡವನು ಎನ್ನುವುದು ಧ್ವನ್ಯರ್ಥ. ತುಂಬ ಕೇಳಿಸಿಕೊಂಡವನು ಅನ್ನುವುದು ಪದಾರ್ಥ. ಹೀಗೆ ಓದಿಕೊಂಡು ಹಿರಿಯನಾದವನು ಕಿರಿಯರಿಗೆ ತಿಳಿಸಿಹೇಳಬೇಕು ಅನ್ನುವ ಕ್ರಮವೊಂದಿತ್ತು. ಕಿರಿಯಲು ಹಿರಿಯರ ಸಲಹೆ ಕೇಳಬೇಕಾಗಿತ್ತು.
ಆದರೆ ಈಗ ಬಹುಶ್ರುತರೆಲ್ಲಿದ್ದಾರೆ? ಇವತ್ತಿನ ಸಿದಾ್ಧಂತವೇ ಬೇರೆ. ಅಗತ್ಯಕ್ಕೆ ತಕ್ಕಷ್ಟನ್ನು ಓದಿಕೊಂಡರೆ ಸಾಕು ಎಲ್ಲ ಪ್ರಾಕ್ಟಿಕ್ ಮನುಷ್ಯರು ನಾವು. ಪರೀಕ್ಪೆ ಪಾಸಾಗುವುದಕ್ಕೆ, ನಿತ್ಯದ ವ್ಯವಹಾರ ಸರಿದೂಗಿಸುವುದಕ್ಕೆ ಎಷ್ಟು ಬೇಕೋ ಅಷ್ಟಿದ್ದರೆ ಸಾಕು. ಇವತ್ತು ಎಲ್ಲಕ್ಕಿಂತ ಮುಖ್ಯ ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು, ಅದು ಮಾನವೀಯವೋ ಅಮಾನವೀಯವೋ ಎಂದು ನೋಡದೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು. ಆದಷ್ಟು ಕಡಿಮೆ ಜನರ ಜೊತೆ ಸಂಪರ್ಕ ಇಟ್ಟುಕೊಳ್ಳುವುದು. ಯಾರಿಗೂ ನಮ್ಮ `ಕತೆ'ಗಳನ್ನು ಹೇಳಿಕೊಳ್ಳದೇ ಇರುವುದು. ಆದಷ್ಟು ಗೌಪ್ಯವಾಗಿ ಬದುಕುವುದಕ್ಕೆ ಯತ್ನಿಸುವುದು. ಕರ್ತವ್ಯನಿಷ್ಠರಾಗುವುದು.
ರಾಬರ್‌ ಲೂಯಿ್ ಸ್ಟೀವ್ಸ್ ತನ್ನ ಒಂದು ಪ್ರಬಂಧದಲ್ಲಿ ಬರೆಯುತ್ತಾನೆ;
ಅವಸರದಲ್ಲಿ ಓಡುತ್ತಿದ್ದ ಗೆಳೆಯನನ್ನು ಕರೆದೆ; `ಸ್ವಲ್ಪ ನಿಲ್ಲೋ ಗೆಳೆಯ'.
`ಪುರುಸೊತ್ತಿಲ್ಲ' ಅಂದ.
`ಯಾಕೆ'
`ಬ್ಯಾಂಕಿಗೆ ಹೋಗಬೇಕು. ಎಷ್ಟು ಕೆಲಸ ಇದೆ ಗೊತ್ತಾ? ಊಟಕ್ಕೂ ಟೈಮಿರೋಲ್ಲ.'
`ಬ್ಯಾಂಕಿಗೆ ಯಾಕೆ ಹೋಗ್ತೀಯಾ'
`ಅಂದ್ರೆ... It's my business'
`ಬಿಸಿನೆ್... ಹಾಗಂದ್ರೇನು?'
`ಕರ್ತವ್ಯ ಕಣಯ್ಯಾ... ಡ್ಯೂಟಿ'
ಅಂದರೆ ಒಬ್ಬನ ವ್ಯಾಪಾರವೇ ಅವನ ಕರ್ತವ್ಯವೂ ಹೌದಾ? ಅವನು ಹೋದ ನಂತರ ಯೋಚಿಸಿದೆ. ಬ್ಯಾಂಕು ನಡೆಸುವುದು ನನ್ನ ಕರ್ತವ್ಯವಂತೂ ಅಲ್ಲ. ಅಂದ ಮೇಲೆ ನನ್ನ ಗೆಳೆಯನಿಗೆ ಹೇಗೆ ಅದು ಕರ್ತವ್ಯವಾಯಿತು? ಹಾಗಂತ ಅವನಿಗೆ ಯಾರು ಹೇಳಿದರು? ಭಗವದ್ಗೀತೆಯಲ್ಲಿ ಹಾಗೆ ಬರೆದಿದೆಯಾ? ಬ್ಯಾಂಕಿನಲ್ಲಿ ಕೆಲಸ ಮಾಡುವುದು ಒಳ್ಳೆಯ ಕೆಲಸ ಎಂದು ಆತ ಹೇಗೆ ಅಂದುಕೊಂಡ? ಒಂದು ವೇಳೆ ಬ್ಯಾಂಕಿನಲ್ಲಿ ಅವನಿಗೆ ಕೆಲಸ ಸಿಕ್ಕಿರದೇ ಇದ್ದರೆ ಅದು ಅವನ ಕರ್ತವ್ಯ ಆಗಿರುತ್ತಿತ್ತಾ? ಇಂಥ ಪ್ರಶ್ನೆಗಳನ್ನೆಲ್ಲ ಕೇಳಿಕೊಂಡು ಸಾಕಾದ ನಂತರ ಅವನ್ನೆಲ್ಲ ಒಂದಾಗಿಸಿ ಕೇಳಿಕೊಂಡೆ; ನನ್ನ ಗೆಳೆಯನೇಕೆ ಬ್ಯಾಂಕ್ ಆದ?
ನನಗೆ ಉತ್ತರ ನಿಧಾನವಾಗಿ ಹೊಳೆಯಿತು. ಅವನೇನು ಆಸೆಪಟ್ಟು ಬ್ಯಾಂಕ್ ಆಗಲಿಲ್ಲ. ಅವನನ್ನು ಹಾಗಾಗುವಂತೆ ಮಾಡಿದ್ದು ಅವನ ಸುತ್ತಮುತ್ತಲಿನ ಮಂದಿ. ಅವನ ಓದು, ಅವನ ಹಿನ್ನೆಲೆ ಎಲ್ಲವೂ ಆತ ಬ್ಯಾಂಕಿನಲ್ಲೊಂದು ಉದ್ಯೋಗ ಹಿಡಿಯುವಂತೆ ಪ್ರೇರೇಪಿಸಿರಬೇಕು.
ಅವನು ಬ್ಯಾಂಕಿನಲ್ಲಿ ಉದ್ಯೋಗಿಯಾದಂತೆ ಒಬ್ಬೊಬ್ಬರು ಒಂದೊಂದು ಕಡೆ ನೆಲೆ ಕಂಡುಕೊಳ್ಳುತ್ತಾರೆ. ಕೆಲವರು ತಮ್ಮ ತಂದೆಯ ಓಬೀರಾಯನ ಕಾಲದ ಬಣ್ಣಮಾಸಿದ ಅಂಗಡಿಗಳಲ್ಲಿ, ಮತ್ತೆ ಕೆಲವರು ತಮ್ಮದೇ ಆಫೀಸುಗಳಲ್ಲಿ ದುಡಿಯುತ್ತಾರೆ. ಕಾಲೇಜು ಮೆಟ್ಟಲು ಹತ್ತುವ ಆಸೆಯಿದ್ದರೂ ಅದಕ್ಕೆ ಬೇಕಾದ ಸಂಪತ್ತಿದ್ದರೂ ಕರ್ತವ್ಯಕ್ಕೆ ಅಂಟಿಕೊಂಡು ಉದ್ಯೋಗಸ್ಥರಾದವರಿದ್ದಾರೆ.
ಆದರೆ ಯಾರೂ ಯಾಕೆ ಸಾಹಿತ್ಯವನ್ನು, ಬರೆಯುವುದನ್ನು ವೃತ್ತಿಯಾಗಿ ಸ್ವೀಕರಿಸುವುದಿಲ್ಲ. ಬರೆಯುವುದು ಯಾಕೆ ಕರ್ತವ್ಯವಲ್ಲ. ಅದೇಕೆ ಹವ್ಯಾಸವಾಗುತ್ತದೆ? ಬ್ಯಾಂಕಿಗೆ ಹೋಗಿ ದುಡಿಯುವುದು ಹವ್ಯಾಸವಾಗಿ, ನಾಟಕ ಮಾಡುವುದು ವೃತ್ತಿಯಾಗುವ ಕಾಲ ಯಾವತ್ತು ಬರುತ್ತದೆ?
-3-
ಈ ಪ್ರಶ್ನೆಗಳು ಸ್ಟೀವ್ಸ್ನಲ್ಲಿ ಮೂಡಿದ್ದು 1880ರ ಹೊತ್ತಿಗೆ. ಆತ ಹೇಗೆ ಅನೇಕರು ತಮ್ಮ ಸ್ವಂತ ಆಯ್ಕೆಯೇ ಇಲ್ಲದವರಂತೆ ಒಂದೇ ವೃತ್ತಿ ಹಿಡಿಯುತ್ತಾರೋ ಹಾಗೇ ಅಭ್ಯಾಸಗಳೂ ಒಂದೇ ಆಗಿರುತ್ತವೆ ಎನ್ನುವುದನ್ನೂ ಗಮನಿಸಿದ. ಇಂಗ್ಲೆಂಡಿನವನು ಗಟಗಟ ಬಿಯ್ ಕುಡಿಯುತ್ತಾನೆ; ಫ್ರೆಂಚ ನಾಲಗೆ ತುದಿಯಲ್ಲಿಟ್ಟುಕೊಂಡು ವೈ್ ಹೀರುತ್ತಾನೆ. ಹೀಗಾಗಿ ಫ್ರೆಂಚ ಅರ್ಧಗ್ಲಾ್ ವೈನನ್ನು ಇಡೀ ಮಧ್ಯಾಹ್ನ ಕುಡೀತಿರಬಲ್ಲ. ಇಂಗ್ಲಿ್ನವನಿಗೆ ಬಾ್ನಲ್ಲಿ ತುಂಬ ಹೊತ್ತು ಕಳೆಯುವುದು ಇಷ್ಟವಿಲ್ಲ. ಆ ಅಲ್ಪಾವಧಿಯಲ್ಲೇ ಆತ ಒಂದು ಬಕೆ್ ಬಿಯ್ ಕುಡಿಯಬೇಕು. ಬ್ರಿಟನ್ನಿನವನು ಪ್ರತಿದಿನ ಮುಂಜಾನೆ ತಣ್ಣೀರ ಸ್ನಾನ ಮಾಡುತ್ತಾನೆ. ಫ್ರೆಂಚಿನ ಮನುಷ್ಯ ಅಪರೂಪಕ್ಕೆ ಬಿಸಿನೀರು ಸ್ನಾನ ಮಾಡುತ್ತಾನೆ.
ಹೀಗೆ... ಇಲ್ಲಿ ಸ್ವಂತದ್ದೇನೂ ಇಲ್ಲ. ನಾವು ಏನೂ ಮಾಡುವುದಿಲ್ಲ, ಓನೂ ಓದುವುದಿಲ್ಲ, ಏನೂ ಕೇಳುವುದಿಲ್ಲ, ಏನೂ ಹೇಳುವುದಿಲ್ಲ. ಎಲ್ಲರೂ ಒಂದು ರಾಷ್ಟ್ರ ಏನು ಮಾಡುತ್ತದೋ ಅದನ್ನೇ ಮಾಡುತ್ತಾರೆ. ಕ್ರಿಕೆ್ ಮ್ಯಾಚು ನಡೆಯುತ್ತಿದ್ದರೇ ಇಡೀ ರಾಷ್ಟ್ರವೇ ಮ್ಯಾಚು ನೋಡುತ್ತಿರುತ್ತದೆ. ಸುದ್ದಿ ಬಿತ್ತರವಾಗುತ್ತಿದ್ದರೆ ಇಡೀ ದೇಶವೇ ಸುದ್ದಿ ಕೇಳುತ್ತಿರುತ್ತದೆ. ಹೀಗಾಗಿ ಒಂದು ರಾಷ್ಟ್ರದ ಯೋಚನೆ, ಚಿಂತನೆ ಒಂದೇ ಆಗಿರುತ್ತದೆ. ಯಾರೂ ಯಾಕೆ ಒರಿಜಿನ್ ಆಗಿ ಚಿಂತಿಸುವುದಿಲ್ಲ?
ಈ ದೃಷ್ಟಿಯನ್ನಿಟ್ಟುಕೊಂಡು ನೋಡಿದಾಗ ಲೇಖಕ ಅಪಾರ ಜೀವನಾನುಭವದ ಮನುಷ್ಯ ಆಗಿರಬೇಕಾದದ್ದು ಮುಖ್ಯವಾಗುತ್ತದೆ. ಒಬ್ಬ ಸ್ಕೂಲು ಮಾಸ್ತರನ ಕಷ್ಟ ಮತ್ತು ಒಬ್ಬ ಹೊಟೆಲಿನ ಮಾಣಿಯ ಕಷ್ಟ ಎರಡೂ ಅವನಿಗೆ ಗೊತ್ತಿರಬೇಕಾಗುತ್ತದೆ. ಶಿವರಾಮ ಕಾರಂತರು `ಚೋಮನದುಡಿ' ಬರೆದಾಗ ಎದುರಾದದ್ದು ಅಥೆಂಟಿಸಿಟಿಯ ಪ್ರಶ್ನೆ.

Friday, December 21, 2007

ಆಸ್ಕರ್ ಕನ್ನಡಕ್ಕೆ ಕೂಗಾಡಿದವರನ್ನು ನೆನೆದು

ನಾನು ಬೆಂಗಳೂರಿಗೆ ಬರುವ ತನಕ ನನಗೆ ಕುವೆಂಪು ಗೊತ್ತಿರಲಿಲ್ಲ. ಆದರೆ ಕಾರ್ನಾಡ್ ಗೊತ್ತಿತ್ತು.
ಹಾಗಂತ ಒರಿಸ್ಸಾದಿಂದ ಬಂದವರೊಬ್ಬರು ಮಾತಾಡುತ್ತಿದ್ದರು. ಕೇಳುತ್ತಿದ್ದವರ ನಮ್ಮವರ ಪೈಕಿ ಹಿರಿಯರೊಬ್ಬರು `ಕುವೆಂಪುಗಿಂತ ಕಾರ್ನಾಡರು ಶ್ರೇಷ್ಠ ಅನ್ನೋ ಥರ ಮಾತಾಡ್ತಿದ್ದೀರಲ್ರೀ' ಅಂತ ಎದ್ದು ನಿಂತು ಪ್ರತಿಭಟಿಸಿದರು. ಕನ್ನಡದ ಶಕ್ತಿ, ಕನ್ನಡದ ಪ್ರಾಣ, ಕನ್ನಡದ ತ್ರಾಣ ಕುವೆಂಪು ಅಂತ ಕಿರುಚಾಡಿದರು. ಭಾಷಣ ಮಾಡುತ್ತಿದ್ದವರಿಗೆ ಅದೊಂದೂ ಅರ್ಥವಾದಂತೆ ಕಾಣಲಿಲ್ಲ. ಯಾಕೆಂದರೆ ಇವರು ಪ್ರಶ್ನಿಸಿದ್ದು ಕನ್ನಡದಲ್ಲಿ.
ಆಮೇಲೆ ಅವರು ತಮ್ಮ ಮಾತಿನ ಇಂಗಿತ ವಿವರಿಸಿದರು. ನನಗೆ ಕಾರ್ನಾಡರು ಯಾಕೆ ಗೊತ್ತಿದ್ದರು ಅಂದರೆ ಅವರ ನಾಟಕಗಳು ಇಂಗ್ಲಿಷಿಗೆ ಅನುವಾದಗೊಂಡಿದ್ದವು. ಕುವೆಂಪು ಅವರ ಕೃತಿಗಳು ಅನುವಾದಗೊಂಡಿದ್ದವೋ ಏನೋ ಗೊತ್ತಿಲ್ಲ. ಆದರೆ ಅವು ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಪ್ರತಿಯೊಂದು ಭಾಷೆಯ ಲೇಖಕರ ಕುರಿತೂ ಕುತೂಹಲ ಇಟ್ಟುಕೊಂಡಿದ್ದೇನೆ. ಹಾಗೆ ನೋಡಿದರೆ ನಮ್ಮ ದೇಶೀಯ ಭಾಷೆಗಳಲ್ಲೇ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಮೊನ್ನೆ ಮೊನ್ನೆ ಪ್ರತಿಭಾ ನಂದಕುಮಾರ್ ಪದ್ಯದ ಅನುವಾದ ಓದಿದೆ. ಇಂಡಿಯಾದಲ್ಲೇ ಕವಿತೆ ಬರೆಯುತ್ತಿರುವವರ ಪೈಕಿ ಅವರು ಬೆಸ್ಟು. ಶಶಿ ದೇಶಪಾಂಡೆ ಇಂಗ್ಲಿಷಿನಲ್ಲಿ ಬರೆಯುತ್ತಾರೆ, ಆದರೆ ಅವರ ಬರಹಗಳಿಗೆ ಅಂಥ ಸತ್ವವಿಲ್ಲ. ಅವರಿಗಿಂತ ಎಂಕೆ ಇಂದಿರಾ ಬರೆದ ಫಣಿಯಮ್ಮ ಬೆಸ್ಟ್. ತೇಜಸ್ವಿಯ ಕತೆಯೊಂದನ್ನು ನಾನು ಅನುವಾದದಲ್ಲಿ ಓದಿದೆ. ದೆವ್ವಗಳಿದ್ದಾವೋ ಇಲ್ಲವೋ ಅಂತ ಸ್ಮಶಾನದಲ್ಲಿ ಕಾಯುತ್ತೂ ಕೂರುವ, ಅವರನ್ನು ಕೊನೆಗೆ ನಾಯಿ ಹಿಂಬಾಲಿಸಿಕೊಂಡು ಬರುವ ವಿಚಿತ್ರ ಕತೆ ಅದು. ಆದರೆ ನನಗೆ ಅನುವಾದದಲ್ಲಿ ಅದು ಇಷ್ಟವಾಗಿರಲಿಲ್ಲ. ಇಲ್ಲಿಗೆ ಬಂದಾಗ ಗೆಳೆಯರೊಬ್ಬರು ಅದನ್ನು ಸರಳವಾಗಿ ವಿವರಿಸಿದರು. ಎಂಥ ಗ್ರೇಟ್ ಕತೆ ಅನ್ನಿಸಿತು. ಕಾರಂತರ ಚೋಮನನ್ನೂ ಅನುವಾದದಲ್ಲಿ ಓದಿದ್ದೇನೆ. ಚೋಮಾ'ಸ್ ಡ್ರಮ್ ಅಂತೇನೋ ಅದು ಅನುವಾದಗೊಂಡಿದೆ. ಅದರ ಮೊದಲ ವಾಕ್ಯ, ಕತ್ತಲೋ ಕತ್ತಲು ಅನ್ನುವುದು ಇಂಗ್ಲಿಷಿಗೆ ಬರುವ ಹೊತ್ತಿಗೆ It's pitch dark ಅಂತಾಗಿತ್ತು. ಈಗೀಗ ಕೊಂಚ ಕನ್ನಡ ಕಲಿತ ನಂತರ ಅವರೆಡರ ವ್ಯತ್ಯಾಸ ಸ್ಪಷ್ಟವಾಗುತ್ತಿದೆ.
ಹೀಗೆ ಅವರು ಸ್ಪಷ್ಟವಾಗಿ ಮಾತಾಡುತ್ತಾ ಹೋದರು. ಇಂಥ ಪುಟ್ಟ ಸೆಗಳಲ್ಲೇ ಸತ್ಯ ಹೊರಬೀಳುತ್ತದೆ. ಗುಂಪುಗುಂಪಾಗಿ ಸೇರಿದಾಗ ಬರೀ ಪೊಲಿಟಿಕ್ ಕರೆಕಎಂಬ ಸವಕಲು ಪದಕ್ಕೆ ಅರ್ಥ ತುಂಬುವುದಕ್ಕೆ ನಾವು ಪಾಡುಪಡುತ್ತಿರುತ್ತೇವೆ.
ಕೇರಳದಿಂದ ಬಂದ ಮತ್ತೊಬ್ಬ ಲೇಖಕರ ಪೈಕಿ ಕನ್ನಡ ಸಾಹಿತ್ಯ ಪರಿಷತ್ತು ಮೂರ್ಖ ಕೆಲಸ ಮಾಡುತ್ತಿದೆ. ಇಂಗ್ಲಿ್ ಬೋರ್ಡುಗಳಿಗೆ ಮಸಿ ಬಳಿಯುವುದು, ಎಲ್ಲಾ ಬೋರ್ಡುಗಳೂ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳುವುದು ಒಂದು ಭಾಷೆಯನ್ನು ಉಳಿಸುವ, ಬೆಳೆಸುವ ಕ್ರಮ ಅಲ್ಲ. ಅವರ ವಾದ ಎಷ್ಟು ಸಮರ್ಥವಾಗಿತ್ತು ಅಂದರೆ ಪರಭಾಷಿಗರಿಗೆ ಕನ್ನಡ ಕಲಿಸುವ ಮೊದಲು ನೀವು ಕನ್ನಡಿಗರಿಗೇ ಕನ್ನಡ ಓದುವುದಕ್ಕೆ ಬರೆಯುವುದಕ್ಕೆ ಕಲಿಸಬೇಕು. ಕರ್ನಾಟಕದಲ್ಲಿ ಅಕ್ಪರತೆಯ ಪ್ರಮಾಣ ಎಷ್ಟಿದೆ ಅಂತ ಅವರು ಕೇಳಿದ್ದಕ್ಕೆ ನಮ್ಮಲ್ಲಿ ಸರಿಯಾದ ಉತ್ತರ ಇರಲಿಲ್ಲ. ಮೊದಲು ಅನಕ್ಪರಸ್ತ ಕನ್ನಡಿಗರಿಗೆ ಅಕ್ಪರ ಕಲಿಸಿ, ಅವರು ಕನ್ನಡ ಓದುವಂತೆ ಮಾಡಿ. ಆಮೇಲೆ ಪರಭಾಷಿಗರು ಕನ್ನಡ ಕಲಿಯುವಂತೆ ಮಾಡೋಣ. ಅರ್ಧಕ್ಕರ್ಧದಷ್ಟು ಮಂದಿಯಾದರೂ ಭಾಷೆ ಗೊತ್ತಿಲ್ಲದವರು ಇದ್ದಾರೆ ತಾನೇ? ಅವರು ಕನ್ನಡ ಕಲಿತು ಓದೋಕೆ ಶುರುಮಾಡಿದರೆ ಸಾಕು, ಕನ್ನಡ ಉದ್ಧಾರವಾಗುತ್ತದೆ.
ಅವರ ಮತ್ತೊಂದು ವಾದ ಮತ್ತೂ ಚೆನ್ನಾಗಿತ್ತು. ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಬೇಕು. ಒಬ್ಬ ಕನ್ನಡ ಲೇಖಕ ರಾಷ್ಟ್ರಕ್ಕೆ, ದೇಶವಿದೇಶಗಳಿಗೆ ಪರಿಚಯ ಆದನೆಂದರೆ ಆ ಭಾಷೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಿತು ಅಂತಲೇ ಅರ್ಥ. ಯುರೋಪಿನ ಸಣ್ಣಪುಟ್ಟ ಭಾಷೆಗಳೆಲ್ಲ ಬದುಕಿರೋದು ಅಲ್ಲಿನ ಸಾಹಿತ್ಯದಿಂದಲೇ. ಸ್ಪ್ಯಾನಿಷ್ ಭಾಷೆ ಮಾತಾಡುವ ಮಂದಿ ಜಗತ್ತಿನಲ್ಲಿ ಕನ್ನಡಿಗರಿಗಿಂತ ಕಡಿಮೆ. ಆದರೆ ಮಾರ್ಕೆಸ್ ನಿಂದಾಗಿ ಇವತ್ತು ಎಲ್ಲರಿಗೂ ಸ್ಪ್ಯಾನಿಷ್ ಬಗ್ಗೆ ಗೊತ್ತು. ನೊಬೆಲ್ ಪ್ರಶಸ್ತಿ ಗೆದ್ದವರ ಪಟ್ಟಿ ನೋಡಿದರೆ ಅರ್ಧಕ್ಕಿಂತ ಹೆಚ್ಚು ಮಂದಿ ಇಂಗ್ಲಿಷ್ ಗೊತ್ತಿಲ್ಲದವರೇ ಇದ್ದಾರೆ. ಅವರೆಲ್ಲ ಅನುವಾದಗೊಂಡು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
ಕುವೆಂಪು ಸಾಧನೆಯೇನೂ ಕಡಿಮೆ ಅಲ್ಲ. ಅವರು ಬರೆಯುತ್ತಿದ್ದಾಗಿನ ಪರಿಸ್ಥಿತಿಯನ್ನು ನಾನು ಅಧ್ಯಯನ ಮಾಡಿದ್ದೇನೆ. ಹೇಗೆ ಅವರು ಏಕಕಾಲಕ್ಕೆ ಅನಕ್ಪರಸ್ತರ ಘನತೆಯನ್ನು ಎತ್ತಿಹಿಡಿಯುತ್ತಲೇ, ಅಕ್ಪರಸ್ತರ ಪ್ರೀತಿಯನ್ನು ಸಂಪಾದಿಸಿದರು ಅನ್ನೋದು ಕುತೂಹಲಕಾರಿ. ಅವರು ಆಡುಭಾಷೆಯಲ್ಲಿ ಬರೆದಿದ್ದರೆ ಅದನ್ನು ಸಾಹಿತ್ಯಕ್ಪೇತ್ರ ಖಂಡಿತಾ ತಿರಸ್ಕರಿಸುತ್ತಿತ್ತು. ಆದರೆ ಯಾವಾಗ ಅವರು ಶಿಷ್ಠ ಭಾಷೆಯಲ್ಲಿ ಘನವಾಗಿ ಬರೆದರೋ ಆಗ ಅವರ ಒಟ್ಟು ವ್ಯಕ್ತಿತ್ವಕ್ಕೂ ಒಂದು ಮೆರುಗು ಬಂತು. ಮಾತಾಡುವ ಮುಂಚೆ ಮಾತಾಡುವುದಕ್ಕೆ ಬೇಕಾದ ಘನತೆಯನ್ನು ಅಧಿಕಾರಯುತ ನಿಲುವನ್ನು ಗಳಿಸಿಕೊಳ್ಳುವುದು ಮುಖ್ಯ. ಹೇಳುವವನ ವ್ಯಕ್ತಿತ್ವ ಕೂಡ ಆಡುವ ಮಾತಿಗೆ ತೂಕ ತರುತ್ತದೆ.

ಒಂದು ಟಿಪ್ಪಣಿ- ಕೊಂಕಣಿ ಮಾತೃಭಾಷೆ ಆಗಿರುವ ಆಸ್ಕರ್ ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ತಪ್ಪಾಗಿ ಒಂದೆರಡು ಪದಗಳನ್ನು ಉಚ್ಛರಿಸಿದರು. ಅಷ್ಟಕ್ಕೇ ಸಿಟ್ಟಾದ ಕನ್ನಡ ಹೋರಾಟಗಾರರು ಗದ್ದಲ ಆರಂಭಿಸಿದರು. ಇದು ಕನ್ನಡಕ್ಕಷ್ಟೇ ಸೀಮಿತವಾದ ವಿಚಿತ್ರ ಪ್ರತಿಭಟನೆ. ಮುಂದೆ ಆಸ್ಕರ್ ಎಂದೂ ಸಾಹಿತ್ಯ ಸಮ್ಮೇಳನಕ್ಕೆ ಬರುವುದಿಲ್ಲ. ಕನ್ನಡ ಮಾತಾಡುವುದಿಲ್ಲ.
ಪಾರ್ವತಮ್ಮ ರಾಜ್ ಕುಮಾರ್ ಹೇಳುತ್ತಿದ್ದರು- ನಮ್ಮ ಕನ್ನಡ ಪ್ರೀತಿ ವಿಚಿತ್ರ. ಹೊರಗಿನಿಂದ ಪ್ರತಿಭಾವಂತರನ್ನು ಕರೆಸುತ್ತೇವೆ. ಅವರು ಇಂಗ್ಲಿಷಿನಲ್ಲಿ ಮಾತಾಡುವಾಗ ಒಂದು ಕೀರಲು ಸ್ವರ ಕನ್ನಡದಲ್ಲಿ ಮಾತಾಡಯ್ಯೋ ಅಂತ ಕಿರುಚುತ್ತದೆ. ಆತ ಕನ್ನಡ ಮಾತಾಡಿದರೆ ನಮ್ಮ ಭಾಷೆ ಉಳಿಯುತ್ತಾ ಇಲ್ಲವಾ ಬೇರೆ ಪ್ರಶ್ನೆ. ಕನ್ನಡದ ಮಾನವಂತೂ ಹೋಗುತ್ತೆ.

Thursday, December 20, 2007

ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು

ಹನ್ನೆರಡನೆಯ ಶತಮಾನದ ವಚನಕಾರರು ಬರೆದರು

ನಡೆದಡೆ
ನಡೆಗೆಟ್ಟ ನಡೆಯ ನಡೆವುದಯ್ಯ
ನುಡಿದಡೆ
ನುಡಿಗೆಟ್ಟ ನುಡಿಯ ನುಡಿವುದಯ್ಯ
ಒಡಲ ಹಿಡಿದಡೆ
ಹಿಡಿಯದೆ ಹಿಡಿವುದಯ್ಯ
ಕೂಡುವೆಡೆ
ಕೇಡಿಲ್ಲದೆ ಕೂಟವ ಕೂಡುವುದಯ್ಯ

ಆಮೇಲೆ ಬಂದ ದಾಸರು ಬರೆದರು;

ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿ ಎನಿಸಿ
ಭಿನ್ನವಿಲ್ಲದೆ ಅರ್ಧದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ

ಇದೇ ಸುಮಾರಿಗೆ ಬಂದ ಕುಮಾರವ್ಯಾಸ ಬರೆದ;

ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥಭಾಷಣ ಭೀತ ಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ

ಇಪ್ಪತ್ತೊಂದನೆಯ ಶತಮಾನದ ಕವಿ ಬರೆದ;

ಶರ್ಯಣಾವ್ಗಿರಿಶ್ರೇಣಿಯನು ಗುರಿಯಿಟ್ಟು
ತುರ್ವಶರ ರಾಜ್ಯದಿಂದೀಚೆ ಭೂಸಂಚಾರ
ಮುಂಬರಿಯುತಾನವರ ರಾಜ್ಯದೊಳು ಹಾಯ್ದಿರಲು
ಮುನ್ನಡೆದ ವಿಶ್ವರಥನವರಿವರ ಕೇಳಿ.
ಮರು್ವೃಧಾ-ಅಸಿಕ್ನೀನದಿಗಳೊಂದಾಗುತ್ತ
ವಿತಸ್ತೆಯ ಕೂಡುತೊಲಿಯುವಲ್ಲಿ ಸಿಂಧುವಿಗೆ
ಆನವರಿದ್ದರಾ...

ಮೊನ್ನೆ ಮೊನ್ನೆ ರೇಡಿಯೋದಲ್ಲಿ ಯಾರೋ ಅನ್ನುತ್ತಿದ್ದರು;

ಮಧ್ಯಾಹ್ನದ ವಿರಾಮ
ಕರ್ಣಗಳಿಗೆ ಸಂತೋಷ

ನಿಜಕ್ಕೂ ಕನ್ನಡ ಎಷ್ಟು ಕ್ಲಿಷ್ಟವಾಗುತ್ತಾ ಬಂದಿದೆ? ಸುಲಿದ ಬಾಳೆಯ ಹಣ್ಣಿನಂದದಿ ಇದ್ದ ಭಾಷೆ ಹೇಗಾಗಿಬಿಟ್ಟಿದೆ?
ಆಡದಿದ್ದರೆ ಆಡದೇ ಉಳಿದರು ಎಂಬ ಅಂಕೆ. ಆಡಿದರೆ ಅದು ಕನ್ನಡವೇ ಎಂಬ ಶಂಕೆ. ರುಂಡವೊಂದು ಕಡೆ ಮುಂಡವೊಂದು ಕಡೆ ಮದುವೆಯಾಗುವುದು ಯಾವ ಕಡೆ ಎಂದು ಸರಳವಾಗಿ ಕೇಳಿದ ಮೊನ್ನೆ ಮೊನ್ನೆಯ ಸಿನಿಮಾ ಹಾಡುಗಳು ಕೂಡ ಇವತ್ತಿಲ್ಲ. ಇವತ್ತು ಅದೇನು ಹಾಡುತ್ತಾರೋ ಗೊತ್ತಾಗುವುದಿಲ್ಲ. ಕನ್ನಡ ಬಲ್ಲ ಹಂಸಲೇಖ ಹಿನ್ನೆಲೆಗೆ ಸರಿದಿದ್ದಾರೆ.
*****
ಇದನ್ನೆಲ್ಲ ನೋಡುತ್ತಿದ್ದರೆ ನೆನಪಾಗುವುದು ಲಂಕೇಶರು ಅನುವಾದಿಸಿದ ಬೋಧಿಲೇರನ `ಪಾಪದ ಹೂವುಗಳು'. ಚಾರ್‌‌ಸ ಬೋಧಿಲೇರ್ ಕಾವ್ಯವನ್ನು ಲಂಕೇಶರು ಎಷ್ಟು ನವಿರಾಗಿ ಅನುವಾದಿಸಿದ್ದರು?;
ಅತ್ಯಂತ ಉಲ್ಲಾಸದ ಆಕೆಗೆ
ನಿನ್ನ ಶಿರ, ನಿನ್ನ ಚಲನೆ, ನಿನ್ನ ನಡಿಗೆ ಎಲ್ಲವೂ ಮೋಹಕ ಹೊಲದಂತಿದೆ. ಸ್ವಚ್ಛ ಆಕಾಶದಲ್ಲಿ ತಣ್ಣನೆ ಗಾಳಿಯ ಹಾಗೆ ನಗೆ ನಿನ್ನ ಮುಖದ ಮೇಲೆ ಲಾಸ್ಯವಾಡುತ್ತಿದೆ.
ಬೇಸರದಿಂದ ಮುಖ ಸಿಂಡರಿಸಿಕೊಂಡ ದಾರಿಹೋಕ ನಿನ್ನ ಮೈ, ಭುಜಕ್ಕೆ ಸೋಕಿದೊಡನೆ ನಿನ್ನ ದೇಹದಿಂದ ಉಕ್ಕುವ ಆರೋಗ್ಯದಿಂದ ಉತ್ಸಾಹಗೊಳ್ಳುತ್ತಾನೆ.
ನನ್ನ ಜಡದೇಹವನ್ನು ನಾನು ಕೆಲವೊಮ್ಮೆ ಸುಂದರತೋಟದ ನಡುವೆ ಎಳೆದುಕೊಂಡು ಹೋಗುವಾಗ ಅಲ್ಲಿಯ ಸೂರ್ಯಪ್ರಕಾಶ ನನ್ನ ಚೇತನವನ್ನು ವ್ಯಂಗ್ಯದಿಂದ ಹೇಗೆ ಸೀಳಿತೆಂದರೆ, ತೋಟದ ವಸಂತಕಾಲ ಮತ್ತು ಶ್ರೀಮಂತ ಹಸಿರು ಹೇಗೆ ಅಣಕಿಸಿತೆಂದರೆ, ಪ್ರಕೃತಿಯ ಭಂಡತನವನ್ನು ದ್ವೇಷಿಸಿ ಶಿಕ್ಪೆಗೆ ಗುರಿಪಡಿಸಿದ್ದೇನೆ.
ಹಾಗೆಯೇ ಒಂದಾನೊಂದು ರಾತ್ರಿ, ನನ್ನ ಕಾಮ ಕೆರಳಿದ ಘಳಿಗೆ, ಕಳ್ಳನ ಹಾಗೆ ಮೆಲ್ಲಗೆ ನಿನ್ನ ದೇಹದ ಸಿರಿವಂತಿಕೆಯತ್ತ ಸದ್ದಿಲ್ಲದೆ ತೆವಳಿ ನಿನ್ನ ದೇಹದ ಅನರ್ಘ್ಯ ಮಾಂಸಖಂಡವನ್ನು ದಂಡಿಸಬೇಕು. ಚಕಿತಗೊಂಡ ನಿನ್ನಲ್ಲಿ ಆಳವಾದ ಗಾಯಮಾಡಬೇಕು. ಆಹಾ, ಹಷೋತ್ಕಟತೆಯಿಂದ ನನ್ನನ್ನು ಕುರುಡನನ್ನಾಗಿಸುವ ನಿನ್ನ ಶುಭ್ರ ತುಟಿಗಳಲ್ಲಿ ನನ್ನ ವಿಷವನ್ನು ಹಾಕಬೇಕು. ನನ್ನ ತಂಗಿ.
****
ಲಂಕೇಶರು ಬೋದಿಲೇರನ ಪುಟ್ಟ ಚಿತ್ರ ಕೊಡುತ್ತಾರೆ;
ಮೋಜುಗಾರನಾದ ಬೋದಿಲೇ್, ನೀಳವಾದ ಮೂಗಿನ, ಹೊಳೆವ ಕಣ್ಣುಗಳ, ತುಂಬುಗೂದಲ, ಯೌವನದಿಂದ ತುಳುಕುವ ತರುಣನಾಗಿದ್ದ ಬೋದಿಲೇ್; ಉಲ್ಲಾಸ, ಸಂಭ್ರಮ ಅವನ ಉಸಿರಾಯಿತು. ಅತ್ಯುತ್ತಮ ಬಟ್ಟೆ ಬೇಕಾಗಿತ್ತವನಿಗೆ; ಮೊದಲನೆಯ ದರ್ಜೆಯ ಚಿತ್ರಗಳಾಗಬೇಕು; ಶ್ರೇಷ್ಠ ಸಂಗೀತವಾಗಬೇಕು. ತಾಯಿಗೆ ಇವನ ಬದುಕಿನ ಶೈಲಿ ಕಂಡು ದಿಗಿಲಾಗಿ ಹಿತವಚನ ಹೇಳಿದಳು. ತಾಯಿಯ ಬಗ್ಗೆ ಆತನಿಗೆ ಪ್ರೀತಿಯಿತ್ತು. ಆದರೆ ಸ್ನೇಹಿತರ ಬಗ್ಗೆ ಅದಕ್ಕಿಂತ ಹೆಚ್ಚು ವಿಶ್ವಾಸವಿತ್ತು.
ಉದಾರನಾಗಿದ್ದಜ ಬೋದಿಲೇ್ ಎಂದೂ ಸ್ನೇಹಿತರಿಂದ ಖರ್ಚು ಮಾಡಿಸುತ್ತಿರಲಿಲ್ಲ. ಹಣವನ್ನು ನೀರಿನಂತೆ ಚೆಲ್ಲುತ್ತಿದ್ದ. ವೇಶ್ಯೆಯರೊಂದಿಗೆ ಚಿನ್ನಾಟ, ಇಡೀ ರಾತ್ರಿಗಳ ಕೇಲಿ. ಅನುಭವದ ಹೊಸ ಬಾಗಿಲುಗಳು ತೆರೆದವು. ಬೋದಿಲೇರನಿಗೆ ಬೇಕಾದದ್ದು ಎಂಥದೂ ಇರಲಿಲ್ಲ. ತರುಣನೊಬ್ಬ ಬಯಸುವ ಎಲ್ಲವೂ ಅವನಿಗಿತ್ತು.'
ಯಾವಾಗಲೂ ಕುಡಿದ ಸ್ಥಿತಿಯಲ್ಲಿರು ಎಂದು ಬೋಧಿಸಿದ ಬೋದಿಲೇ್. ಕುಡಿಯುವುದು ಏನನ್ನು? ವೈ್, ಕಾವ್ಯ, ಸಜ್ಜನಿಕೆ -ಯಾವುದಾದರೂ ಸರಿಯೆ. ಕಳ್ಳರಿಗೆ ಮಾತ್ರ ಪೂರ್ಣ ಶ್ರದ್ಧೆ ಸಾಧ್ಯ ಎಂದು ಸಾರಿದ.
*****
ನಮ್ಮ ಕವಿಗಳಲ್ಲಿ ಇಂಥವರು ಕಡಿಮೆ. ದುರಂತವನ್ನು ವೈಫಲ್ಯವನ್ನು ಕಾವ್ಯವಾಗಿಸಿದವರು ಅಷ್ಟಾಗಿ ಸಿಗುವುದಿಲ್ಲ. ಸಾಮಾಜಿಕವಾಗಿ ರಾಜಕೀಯವಾಗಿ ಹಣಿಯಲ್ಪಟ್ಟು ಅತ್ಯಂತ ಅಸಹನೀಯ ಸ್ಥಿತಿಯಲ್ಲಿ ಕಾವ್ಯ ಬರೆದವರೂ ಕೂಡ ಅಷ್ಟಾಗಿ ಇಲ್ಲ. ನಮ್ಮ ಲೇಖಕರಲ್ಲಿ ಬಹಳಷ್ಟು ಮಂದಿ ಸುಖಪುರುಷರು. ಅನೇಕರಿಗೆ ಅವರ ಅರ್ಹತೆ ಮತ್ತು ಯೋಗ್ಯತೆಯಿಂದ ಹೆಚ್ಚಿನ ಮನ್ನಣೆ ಮತ್ತು ಸಂಪತ್ತು ಸಿಕ್ಕಿದೆ.
ಆದರೆ ಯುರೋಪಿನ ಬಹುತೇಕ ಲೇಖಕರು ಬದುಕನ್ನೇ ಪಣವಾಗಿಟ್ಟು ಬರೆದವರು. ಸರ್ವಾಧಿಕಾರದಿಂದ ತಪ್ಪಿಸಿಕೊಂಡು ರಾಜ್ಯಭ್ರಷ್ಟರಾಗಿ ಭೂಗತರಾಗಿ ಬರೆಯುತ್ತಾ ಹೋದವರು. ಅವರಲ್ಲಿ ಅನೇಕರು ಬರೆದದ್ದು ಜನಕ್ಕೆ ತಲುಪಿದ್ದು ಅವರು ತೀರಿಕೊಂಡ ನಂತರವೇ. ಆ ಮಟ್ಟದ ಕಷ್ಟದಿಂದ ಬರೆದವರು ನಮ್ಮಲ್ಲಿ ಸಿಗುವುದಿಲ್ಲ. ನಮ್ಮಲ್ಲಿ ಬಡತನ ಬಿಟ್ಟರೆ ಬೇರೆ ಕಷ್ಟಗಳೇ ಇರಲಿಲ್ಲ. ಅರಸೊತ್ತಿಗೆ ಯಾವತ್ತೂ ಲೇಖಕರನ್ನು ಕಾಡಲಿಲ್ಲ.

Saturday, December 15, 2007

ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆ

-1-

ಗೋಪಾಲಕೃಷ್ಣ ಸೋಮಯಾಜಿ ಒಬ್ಬನೇ ಬರಲಿಲ್ಲ. ಅವನ ಜೊತೆಗೆ ಅವನ ಮಗಳು ನರ್ಮದೆಯೂ ಉಪ್ಪಿನಂಗಡಿಗೆ ಬಂದಳು. ನರ್ಮದೆಯ ಪುಟ್ಟ ತಂಗಿ ಜಾಹ್ನವಿಯೂ ಜೊತೆಗಿದ್ದಳು.ನರ್ಮದೆ ಆಗಷ್ಟೇ ಕೇರಳದಲ್ಲಿ ಹನ್ನೆರಡನೆ ತರಗತಿ ಓದುತ್ತಿದ್ದಳು. ಗೋಪಾಲಕೃಷ್ಣ ಸ್ಕೂಲಿನ ಮೇಷ್ಟ್ರುಗಳ ಹತ್ತಿರ ಮಾತನಾಡಿ, ಮತ್ತೆ ಪರೀಕ್ಷೆಗೆ ಹಾಜರಾಗುತ್ತಾಳೆಂದೂ ಅಷ್ಟು ದಿನ ಮನೆಯಲ್ಲೇ ಓದಿಕೊಳ್ಳುತ್ತಾಳೆಂದೂ ದಯವಿಟ್ಟು ಹಾಜರಿ ಕೊಡಬೇಕೆಂದೂ ವಿನಂತಿಸಿಕೊಂಡು ನರ್ಮದೆಯನ್ನು ಉಪ್ಪಿನಂಗಡಿಗೆ ಕರೆದುಕೊಂಡು ಬಂದಿದ್ದ.
ಅವಳನ್ನು ಗುರುವಾಯೂರಿನಲ್ಲೇ ಬಿಟ್ಟು ಬರಲು ಅವನಿಗೆ ಭಯ.ನರ್ಮದೆ ತುಂಬುಸುಂದರಿ. ಹದಿನೇಳನೆಯ ವಯಸ್ಸಿಗೇ ಯೌವನ ಅವಳನ್ನು ಮನೆತುಂಬಿಸಿಕೊಂಡಿತ್ತು. ತೆಳುಮಧ್ಯಾಹ್ನದ ನೀಲಾಕಾಶವನ್ನು ಹೋಲುವ ಕಣ್ಣುಗಳಲ್ಲಿ ಆರ್ದ್ರತೆಯಿತ್ತು. ತೇವ ಆರದ ಕೆನ್ನೆಗಳಲ್ಲಿ ಹೊಳಪಿತ್ತು. ಕೊಂಚ ಮೊಂಡು ಎನ್ನಬಹುದಾದ ಮೂಗಿನಲ್ಲಿ ಉಡಾಫೆಯಿತ್ತು. ಸಮುದ್ರದ ಅಲೆಗಳನ್ನು ನೆನಪಿಸುವಂಥ ಮುಂಗುರುಳು ಯಾವ ಬಂಧನಕ್ಕೂ ಸಿಲುಕಲಾರೆ ಎಂಬಂತೆ ಅವಳ ಹಣೆಕಪೋಲಗಳನ್ನು ಕೆಣಕುತ್ತಿತ್ತು. ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆಯಿದ್ದುದನ್ನು ಪ್ರಯತ್ನಪಟ್ಟರೆ ಗುರುತಿಸಬಹುದಾಗಿತ್ತು.
ಅಂಥ ಸುಂದರಿಯನ್ನು ಗುರುವಾಯೂರಿನಲ್ಲಿ ಬಿಟ್ಟು ಬಂದರೆ ಏನಾಗುತ್ತದೆ ಅನ್ನುವುದು ಗೋಪಾಲಕೃಷ್ಣನಿಗೆ ಗೊತ್ತಿತ್ತು. ಹೀಗಾಗಿ ಆತ ಅವಳನ್ನು ಉಪ್ಪಿನಂಗಡಿಗೆ ಕರೆತಂದು ಅಲ್ಲೇ ಓದುವಂತೆ ತಾಕೀತು ಮಾಡಿದ. ಆಕೆ ಓದಿ ಸಾಧಿಸಬಹುದಾದದ್ದೇನೂ ಇಲ್ಲ ಅನ್ನುವುದು ಅವನಿಗೆ ಗೊತ್ತಿತ್ತು.ಆದರೆ ಗೋಪಾಲಕೃಷ್ಣನ ಹೆಂಡತಿ ಮೀರಾಳ ಆಸೆ ಬೇರೆಯೇ ಆಗಿತ್ತು. ಆಕೆಗೆ ಗಂಡ ಕೈಗೊಂಡ ವೃತ್ತಿಯಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಅವರಿವರ ಮನೆಯಲ್ಲಿ ತಿಥಿ, ಮುಂಜಿ, ಮದುವೆ ಮಾಡಿಸಿಕೊಂಡಿರುವ ಪುರೋಹಿತರ ಹೆಂಡತಿಯಾಗಿ ಬಾಳುವುದರ ಕಷ್ಟದ ಅರಿವು ಆಕೆಗಿತ್ತು. ಆ ಬದುಕಿನ ಕಠೋರ ಶ್ರದ್ಧೆಯ ನಡುವೆ ವಿಶ್ರಾಂತಿಗೆ ಬಿಡುವೇ ಇಲ್ಲ ಎನ್ನವುದು ಆಗಲೇ ಅವಳ ಗಮನಕ್ಕೆ ಬಂದಿತ್ತು.
ನರ್ಮದೆಯ ಸೌಂದರ್ಯ ಅವಳ ಅಮ್ಮ ಮೀರಾಳಿಂದ ಬಂದದ್ದು. ಆಕೆಯೂ ಅಪ್ರತಿಮ ಸುಂದರಿಯೇ. ಕಾಸರಗೋಡು ಪ್ರಾಂತ್ಯದಲ್ಲಿ ತೀರಾ ಅಪರೂಪವೆನ್ನಬಹುದಾದ ಕೋಟ ಬ್ರಾಹ್ಮಣರ ಕುಟುಂಬದ ಮಗಳು ಆಕೆ. ತಂದೆತಾಯಿಗಳು ತೀರಾ ಬಡವರಾದ್ದರಿಂದ ಗೋಪಾಲಕೃಷ್ಣ ಸೋಮಯಾಜಿಯನ್ನು ಆಕೆ ಮದುವೆಯಾಗಲೊಪ್ಪಿದ್ದು. ಆದರೆ ಆಕೆಗೆ ಆ ಮದುವೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಸಾಧ್ಯವಿದ್ದರೆ ದೂರದ ಊರಲ್ಲಿ ಆಫೀಸರ್‌ ಆಗಿದ್ದವನ ಕೈಹಿಡಿದು ಬಾಳಬೇಕು ಎಂದುಕೊಂಡಿದ್ದವಳು ಆಕೆ. ಅದಕ್ಕೆ ಪ್ರೇರಣೆಯಾದದ್ದು ಆಕೆ ಓದುತ್ತಿದ್ದ ಸಾಯಿಸುತೆಯ ಕಾದಂಬರಿಗಳು. ಅಲ್ಲಿ ಬರುವ ಸ್ನಿಗ್ಧಮುಗ್ಧ ಸುಂದರಿಯರ ಜೊತೆ ತನ್ನನ್ನು ಹೋಲಿಸಿಕೊಂಡು ಮೀರಾ ತನ್ನ ಗಿರಿಧರನಿಗಾಗಿ ಕಾಯುತ್ತಿದ್ದಳು.
ಗೋಪಾಲಕೃಷ್ಣ ಸೋಮಯಾಜಿಯನ್ನು ಮದುವೆಯಾದ ಒಂದೇ ವಾರಕ್ಕೆ ಆಕೆಗೆ ತನ್ನ ಭವಿಷ್ಯದ ಪೂರ್ತಿ ಚಿತ್ರಣ ಸಿಕ್ಕಿಬಿಟ್ಟಿತು. ಬೆಳಗಾಗೆದ್ದರೆ ಒದೆಯುವ ಗೌರಿಹಸುವನ್ನು ಪುಸಲಾಯಿಸಿ ಹಾಲು ಕರೆಯುವುದು. ನಂತರ ತಣ್ಣೀರಿನಲ್ಲಿ ಸ್ನಾನ ಮುಗಿಸಿ, ಒದ್ದೆ ಬಟ್ಟೆ ಉಟ್ಟುಕೊಂಡು ನೈವೇದ್ಯ ತಯಾರುಮಾಡುವುದು. ಅದಾದ ನಂತರ ಗಂಡ ಪೂಜೆ ಮಾಡುವ ತನಕ ಕಾದಿದ್ದು, ನಂತರ ಅವನಿಗೆ ತಿಂಡಿ ಕೊಟ್ಟು ನಂತರ ತಾನು ಕಾಫಿ ಕುಡಿಯುವುದು. ಮತ್ತೆ ಮಧ್ಯಾಹ್ನ ಯಾರದೋ ಮನೆಯಲ್ಲಿ ಸೋಮಯಾಜಿ ಊಟ ಮಾಡಿದರೆ ಅವಳಿಗೆ ಹೊತ್ತಿಗೆ ಸರಿಯಾಗಿ ಊಟ.
ಶೂದ್ರರ ಮನೆಗೆ ಪೌರೋಹಿತ್ಯಕ್ಕೆ ಹೋದರೆ ಅವರು ಬರುವ ತನಕ ಕಾಯಬೇಕು. ಊಟವಾಗುವುದು ಸಂಜೆ ನಾಲ್ಕಾಗುವುದೂ ಉಂಟು. ಮುಸ್ಸಂಜೆ ಹೊತ್ತಿಗೆ ಸೋಮಯಾಜಿ ಕುಮಾರವ್ಯಾಸ ಭಾರತದ ಪಾರಾಯಣ ಶುರುಮಾಡುತ್ತಾನೆ. ಅದನ್ನು ಭಕ್ತಿಯಿಂದ ಕೇಳುತ್ತಾ ಕುಳಿತುಕೊಳ್ಳಬೇಕು. ಆಕಳಿಕೆ ಬಂದರೂ ಆಕಳಿಸಕೂಡದು. ಅದು ಮುಗಿಯುತ್ತಿದ್ದಂತೆ ಮುತ್ತೆೈದೆಯರಿಗೆ ಕುಂಕುಮ ಕೊಡಬೇಕು. ಅವರ ಕಾಲಿಗೆ ಬೀಳಬೇಕು.ಅದರಿಂದೆಲ್ಲ ಪಾರಾದದ್ದು ಗೋಪಾಲಕೃಷ್ಣ ಸೋಮಯಾಜಿ ಊರು ಬಿಟ್ಟು ಕೇರಳಕ್ಕೆ ಹೋಗುವ ನಿರ್ಧಾರಕ್ಕೆ ಬಂದಾಗ. ಗುರುವಾಯೂರಿನ ದೇವಸ್ಥಾನದಲ್ಲಿ ಅವನಿಗೊಂದು ಕೆಲಸ ಸಿಕ್ಕಿತು. ದೇವಸ್ಥಾನದ ಪಕ್ಕದಲ್ಲೇ ಉಳಿದುಕೊಳ್ಳಲು ಮನೆಯೂ ಸಿಕ್ಕಿತು.
ದೇವಸ್ಥಾನದ ಇತರ ಅರ್ಚಕರ ಪತ್ನಿಯರೂ ಮೀರಾಳಂತೆ ಸೌಂದರ್ಯವತಿಯರೇ. ಹೀಗಾಗಿ ಅವರೆಲ್ಲರ ಆಸೆಗಳೂ ಒಂದೇ ಆಗಿದ್ದವು. ಅವರ ಜೊತೆಗೆ ಸೇರಿ ತನ್ನ ಅತೃಪ್ತ ಆಶೆಗಳನ್ನು ಹೇಳಿಕೊಳ್ಳುತ್ತಾ ಮೀರ ಕಷ್ಟಗಳನ್ನು ಮರೆತಳು. ಇಬ್ಬರು ಹೆಣ್ಣುಮಕ್ಕಳು ಎಂಟು ವರುಷದ ಅಂತರದಲ್ಲಿ ಹುಟ್ಟಿದರು. ಬದುಕು ಏಕತಾನತೆಗೆ ಹೊಂದಿಕೊಂಡಿತು.ಅಷ್ಟರಲ್ಲೇ ಮತ್ತೆ ಊರುಬಿಟ್ಟು ಹೋಗುವ ಯೋಚನೆ ಸೋಮಯಾಜಿಗೆ ಬಂದದ್ದು ಮೀರಾಳನ್ನು ಕಂಗೆಡಿಸದೇ ಇರಲಿಲ್ಲ. ಆದರೆ ಈ ಬಾರಿ ಗೋಪಾಲಕೃಷ್ಣ ಮತ್ತೊಂದಷ್ಟು ಆಮಿಷಗಳನ್ನು ಒಡ್ಡಿದ. ಎಲ್ಲ ಸರಿಹೋದರೆ ಪೌರೋಹಿತ್ಯ ಬಿಟ್ಟು ಒಂದು ಅಂಗಡಿ ತೆರೆಯುವುದಾಗಿ ಘೋಷಿಸಿದ. ವ್ಯಾಪಾರಕ್ಕೆ ಇಳಿಯುವುದಾಗಿ ಆಣೆ ಮಾಡಿದ. ಅದರಿಂದ ಪ್ರೇರಿತಳಾಗಿ ಮೀರಾ ಮಕ್ಕಳ ಸಹಿತ ಉಪ್ಪಿನಂಗಡಿಗೆ ಬಂದು ನೆಲೆಯಾದಳು.
ಆದರೆ ನಂತರ ನಡೆದ ಘಟನಾವಳಿಗಳು ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅನಂತಕೃಷ್ಣ ಸೋಮಯಾಜಿಗಳು ಮುಖ್ಯಮಂತ್ರಿಗಳು ತಮ್ಮ ಅಕೌಂಟಿನಲ್ಲಿಟ್ಟ ದುಡ್ಡನ್ನು ನಂಬಿ, ತಮಗೆ ಗೊತ್ತಿದ್ದ ಕಡೆಯಿಂದೆಲ್ಲ ಯಾಜಕರನ್ನು ಕರೆಸಿದರು. ಅವರಿಗೆಲ್ಲ ಒಂದು ಮೊತ್ತದ ಸಂಭಾವನೆ ನಿಗದಿ ಮಾಡಿದರು. ಇತ್ತ ಅಯುತ ಚಂಡಿಕಾ ಯಾಗಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಅದು ಮುಖ್ಯಮಂತ್ರಿಗಳ ಪ್ರೀತ್ಯರ್ಥ ನಡೆಯುತ್ತಿರುವ ಯಾಗ ಎನ್ನುವುದು ಜಗಜ್ಜಾಹೀರಾಗಿ ಸ್ಥಳೀಯ ರಾಜಕೀಯ ಮುಖಂಡರೆಲ್ಲ ಅದರ ಮುಂದಾಳತ್ವ ವಹಿಸಿಕೊಂಡಿದ್ದರು. ದೊಡ್ಡ ಸಂಭ್ರಮದ ವಾತಾವರಣ ನೆಲೆಗೊಂಡಿತ್ತು.
ಈ ಸಂಭ್ರಮದ ನಡುವೆಯೇ ಅಯುತ ಚಂಡಿಕಾಯಾಗ ನಡೆದೂಹೋಯಿತು. ಅತಿಥಿಗಳು ಅಭ್ಯಾಗತರು ಬಂದರು. ಹಳ್ಳಿಗೆ ಹಳ್ಳಿಯೇ ನೆರೆದು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಸಂತೋಷಪಟ್ಟಿತು. ಧರ್ಮರಾಯನ ಅಶ್ವಮೇಧ ಯಾಗಕ್ಕೆ ಅದನ್ನು ಹೋಲಿಸಿ ಲೋಕ ಸಂತೋಷಪಟ್ಟಿತು.ಆದರೆ, ಸೋಮಯಾಜಿಗಳಿಗೆ ಸಮಸ್ಯೆ ನಂತರ ಶುರುವಾಯಿತು. ಅವರು ಕರೆಸಿಕೊಂಡ ಪುರೋಹಿತರಿಗೆ ಸಂಭಾವನೆ ಕೊಡುವುದಕ್ಕೆ ಯಾರೂ ಮುಂದೆ ಬರಲಿಲ್ಲ. ಗೋಪಾಲಕೃಷ್ಣ ಸೋಮಯಾಜಿ ಕರೆಸಿಕೊಂಡ ಅಡುಗೆಯವರಿಗೆ ಸಲ್ಲಬೇಕಾದ ಮಜೂರಿ ಕೊಡುವುದಕ್ಕೆ ಯಾರೂ ಬರಲಿಲ್ಲ. ಮುಖ್ಯಮಂತ್ರಿಯವರ ಬಳಿ ಹೋಗಿ ಕೇಳೋಣ ಎಂದುಕೊಂಡರೆ ಅಷ್ಟು ಹೊತ್ತಿಗಾಗಲೇ ಅವರು ಅಧಿಕಾರ ಕಳಕೊಳ್ಳುವ ಹಂತ ತಲುಪಿದ್ದರು. ಅವರನ್ನು ಸಂಪರ್ಕಿಸುವುದು ಕೂಡ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ನಿಮ್ಮ ಕೈಗೆ ಕೋಟ್ಯಂತರ ರುಪಾಯಿ ಕೊಟ್ಟಿರಬೇಕಲ್ಲ ಸೋಮಯಾಜಿಗಳೇ ಎಂದು ಊರಿನ ಮುಖಂಡರು ಕೈತೊಳೆದುಕೊಂಡರು. ಪುರೋಹಿತರ, ಅಡುಗೆಯವರ ಪೀಡನೆಯಿಂದ ಪಾರಾಗುವ ದಾರಿಕಾಣದೆ ಸೋಮಯಾಜಿಗಳು ಸಾಲ ಸೋಲ ಮಾಡಿ, ತಾವು ಆಸ್ತಿ ಮಾರಿದ ದುಡ್ಡನ್ನೂ ಸೇರಿಸಿ ಎಲ್ಲರಿಗೂ ಒಂದಷ್ಟು ಕಾಸು ಕೊಟ್ಟು ಆಪತ್ತಿನಿಂದ ಪಾರಾದರು.ಅಲ್ಲಿಗೆ ಅವರ ಖ್ಯಾತಿಯೂ ಸಾಲವೂ ಏಕಪ್ರಕಾರವಾಗಿ ಬೆಳೆದವು.
ಗೋಪಾಲಕೃಷ್ಣ ಸೋಮಯಾಜಿಯ ವ್ಯಾಪಾರ ಮಾಡುವ ಆಸೆ ಮುರುಟಿಹೋಗಿ ವಾಪಸ್ಸು ಗುರುವಾಯೂರಿಗೆ ಹೋಗುವುದಕ್ಕೂ ಸಾಧ್ಯವಾಗದೆ ಆತ ಉಪ್ಪಿನಂಗಡಿಯಲ್ಲೊಂದು ಜ್ಯೋತಿಷ್ಯಶಾಲೆ ಆರಂಭಿಸಿದ.ಸೋಮಯಾಜಿಗಳು ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಒಂಟಿಯಾದರು.

-2-

ಆನಂದನಿಗೊಂದು ಆಸೆಯಿತ್ತು.ಇಡೀ ಜಗತ್ತೇ ತನ್ನನ್ನು ಎದುರಿಸಿ ನಿಂತರೂ ಸರಿ, ಸುಗಂಧಿಯನ್ನೇ ಮದುವೆಯಾಗಬೇಕು. ಅವಳನ್ನು ಮದುವೆಯಾಗುವ ಮೂಲಕ ಇಷ್ಟು ವರ್ಷ ಅಪ್ಪ ಬದುಕಿಕೊಂಡು ಬಂದ ಏಕತಾನತೆಯ ಬದುಕಿಗೊಂದು ರೋಚಕ ತಿರುವು ನೀಡಬೇಕು. ಸುಗಂಧಿಯಂಥ ಸುಗಂಧಿಯ ಜೊತೆ ಕೂಡ ಸುಖವಾಗಿ ಬಾಳಲು ಸಾಧ್ಯ ಅನ್ನುವುದನ್ನು ತೋರಿಸಿಕೊಡಬೇಕು. ಬಿಟ್ಟುಕೊಳ್ಳುವುದರಲ್ಲೂ ಜಿಪುಣತನ ತೋರಿಸುವ ತನ್ನ ಜಾತಿಯ ಹುಡುಗಿಯರ ಮುಂದೆ ಸುಗಂಧಿಯಂಥ ಸುಂದರಿಯನ್ನು ಕಟ್ಟಿಕೊಂಡು ಓಡಾಡುತ್ತಾ ಅವರಲ್ಲಿ ಅಸೂಯೆ ಹುಟ್ಟಿಸಬೇಕು.
ಅವನ ಆಸೆಗಳಿಗೊಂದು ಹಿನ್ನೆಲೆಯೂ ಇತ್ತು. ಆನಂದ ನಡೆಯುವಾಗ ಕೊಂಚ ಕುಂಟುತ್ತಿದ್ದ. ಅದನ್ನು ಮರೆಮಾಚುವುದಕ್ಕೆ ಗಂಭೀರವಾಗಿ ನಿಧಾನವಾಗಿ ನಡೆಯುತ್ತಿದ್ದ. ಕ್ರಮೇಣ ಕೊಯಮತ್ತೂರಿಗೆ ಹೋಗಿ ಪಳನಿಸ್ವಾಮಿಯ ಹತ್ತಿರ ನವಿಲೆಣ್ಣೆ ತಿಕ್ಕಿಸಿಕೊಂಡು ಬರುವುದಕ್ಕೆ ಆರಂಭಿಸಿದ. ನಿಜವಾಗಿ ಅದು ಪರಿಣಾಮ ಬೀರಿತೋ ಅಥವಾ ಆನಂದನ ಆತ್ಮವಿಶ್ವಾಸ ಹೆಚ್ಚಿತೋ ಅವನ ಕಾಲಂತೂ ಸರಿಹೋಯಿತು.ಆದರೆ ಬಾಲ್ಯದ ಅವಮಾನವನ್ನು ಅವನು ಮರೆತಿರಲಿಲ್ಲ. ಶಾಲೆ ತಪ್ಪಿಸಿ ಗುರುವಾಯನ ಕೆರೆಯ ಹಿಂದಿನ ದಟ್ಟ ಕಾಡುಗಳಲ್ಲಿ ಅಬುಳಕ್ಕ, ಮುಳ್ಳುಹಣ್ಣು, ನೇರಳೆಹಣ್ಣು ಹುಡುಕಿಕೊಂಡು ಹೋಗುತ್ತಿದ್ದ ಆನಂದನನ್ನು ಹೆಡ್ಮಾಸ್ಟರ್‌ ನೇಮಿರಾಜ ಹೆಗಡೆಯವರು ಕರೆಸಿ ಶಾಲೆಗೆ ಮೂರು ಸುತ್ತು ಓಡುವಂತೆ ಹೇಳಿದ್ದರು.
ಕುಂಟುತ್ತಾ ಓಡಿದ ಆನಂದನನ್ನು ನೋಡಿ ಶಾಲೆಗೆ ಶಾಲೆಯೇ ನಕ್ಕಿತ್ತು. ಸುತ್ತಿ ಬಂದ ನಂತರ ಕುಂಟನಿಗೆ ಎಂಟು ಚೇಷ್ಟೆ ಅಂತ ಗಾದೆ ಇದೆ. ಅದನ್ನು ನಿನ್ನನ್ನು ನೋಡಿಯೇ ಮಾಡಿರಬೇಕು ಎಂದು ನೇಮಿರಾಜ ಹೆಗಡೆ ಗೇಲಿಮಾಡಿ ನಕ್ಕಿದ್ದರು.ಆನಂದನಿಗೆ ಆ ನಗುವನ್ನು ಮರೆಯುವುದು ಇವತ್ತಿಗೂ ಸಾಧ್ಯವಾಗಿಲ್ಲ. ಅವನ ಬ್ರಾಹ್ಮಣ್ಯ ಹೆಡೆಯೆತ್ತುವುದು ಆವಾಗಲೇ.
ತಾನೇನೂ ತಪ್ಪು ಮಾಡದೇ ಇದ್ದಾಗಲೂ ಶಿಕ್ಷೆ ಕೊಟ್ಟು ನಕ್ಕರಲ್ಲ, ಅವರನ್ನು ಮೀರಿ ಬೆಳೆಯಬೇಕು. ಅವರೆದುರೇ ತಪ್ಪು ಮಾಡಬೇಕು. ಆದರೆ ಅವರಿಗೆ ಶಿಕ್ಷಿಸುವ ಅಧಿಕಾರ ಇರಬಾರದು. ನೋಡು..... ನನಗೆ ಸರಿಯೆಂಬಂತೆ ಬದುಕುತ್ತಿದ್ದೇನೆ. ನನ್ನಿಷ್ಟದಂತೆ ನಡೆಯುತ್ತಿದ್ದೇನೆ. ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ನೇಮಿರಾಜರಿಗೆ ಹೇಳುವುದಕ್ಕೋಸ್ಕರವೇ ಆನಂದ ಏಳನೇ ಕ್ಲಾಸು ಮುಗಿಯುತ್ತಿದ್ದಂತೆ ಆ ಶಾಲೆ ಬಿಟ್ಟು, ದೂರದ ಸುಬ್ರಹ್ಮಣ್ಯದ ಕಾಲೇಜು ಸೇರಿದ.
ಎಂಟನೆ ತರಗತಿಯಲ್ಲಿದ್ದಾಗಲೇ ನೇಮಿರಾಜರ ಮುಂದೆ ಸಿಗರೇಟು ಸೇದುತ್ತಾ ನಡೆದ. ನೇಮಿರಾಜರು ಕರೆದು ಬುದ್ಧಿ ಹೇಳಿದ್ದರು.‘ಇಷ್ಟು ಸಣ್ಣ ವಯಸ್ಸಿನಲ್ಲಿ ಸಿಗರೇಟು ಸೇದಬಾರದು?’‘ನನಗೂ ನಿಮಗೂ ಏನು ಸಂಬಂಧ ? ನಿಮ್ಮ ಕೆಲಸ ನೋಡಿಕೊಳ್ಳಿ’ ಕಟುವಾಗಿ ಉತ್ತರಿಸಿದ್ದ ಆನಂದ.
ಆಮೇಲೆ ಅವನಿಗೆ ತನ್ನ ಉತ್ತರವನ್ನು ತಿದ್ದಿಕೊಳ್ಳಬಹುದಾಗಿತ್ತು ಅನ್ನಿಸಿತು.
ಅದಾದ ಮೂರು ವರುಷಗಳ ನಂತರವೂ ಅವನು ನೇಮಿರಾಜರನ್ನು ಬಿಡಲಿಲ್ಲ. ಅವರು ಲಕ್ಷ್ಮೀ ನಿವಾಸಕ್ಕೆ ಕಾಪಿ ಕುಡಿಯುವುದಕ್ಕೆ ಬಂದಾಗ ಹೇಳಿದ್ದ.‘ನೀವೇನು ಸರ್‌. ನಿಮಗೆ ಬೇಜಾರೂ ಆಗೋಲ್ವಾ? ಈ ಮಕ್ಕಳಿಗೆ ಈತ ಗಣಪ, ಆತ ಈಶ ಅನ್ನುವ ಪಾಠವನ್ನು ಎಷ್ಟು ವರ್ಷ ಅಂತ ಹೇಳಿಕೊಡ್ತೀರಿ ? ನಿಮ್ಮ ಜೀವನ ಇಷ್ಟಕ್ಕೇ ಸೀಮಿತ ಆಯ್ತು ಅಂತ ನಿಮಗೆ ಬೇಸರ ಆಗೋಲ್ವಾ? ಬದುಕೆಂದರೆ ಅಷ್ಟೇನಾ ಸಾರ್‌? ಮಕ್ಕಳಿಗೆ ಅ ಆ ಇ ಈ ಕಲಿಸೋದು. ಅಲ್ಲಿಂದ ಮುಂದೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ ? ಇನ್ನೊಂದು ಐದಾರು ವರ್ಷಕ್ಕೆ ರಿಟೈರ್‌ ಆಗ್ತೀರಿ. ಏನು ಸಾಧಿಸಿದ ಹಾಗಾಯ್ತು? ನೀವು ಕಲಿಸಿದ ವಿದ್ಯಾರ್ಥಿಗಳು ದೊಡ್ಡ ಸಾಹಿತಿಗಳೋ ಮಂತ್ರಿಗಳೋ ಕಲಾವಿದರೋ ಅಧಿಕಾರಿಗಳೋ ಆಗ್ತಾರೆ. ಆಗಿರಬಹುದು. ಆದರೆ ನೀವು ಏನು ಮಾಡಿದ ಹಾಗಾಯ್ತು ಸರ್‌. ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ? ಸರ್ಕಾರ ಕೊಡುವ ತಿಂಗಳ ಸಂಬಳ... ಎಷ್ಟು ಹೇಳಿ.... ಎಂಟುನೂರು ರುಪಾಯಿ... ಅಷ್ಟೆ ಅಲ್ವಾ.... ಅಂದರೆ ವರ್ಷಕ್ಕೆ ಅಬ್ಬಾ ಅಂದ್ರೆ ಹತ್ತು ಸಾವಿರ. ನೀವು ಮೂವತ್ತು ವರುಷ ಸರ್ವೀಸು ಮಾಡಿದ್ದೀರಾ... ಮೂವತ್ತು ಗುಣಿಸು ಹತ್ತು ಸಾವಿರ.. ಅಂದ್ರೆ ಮೂರು ಲಕ್ಷ. ಏನು ಬರುತ್ತೆ ಮೂರು ಲಕ್ಷಕ್ಕೆ... ಒಂದು ಮನೆ ತಗೋಳ್ಳೋಕ್ಕಾಗುತ್ತಾ..... ಮಗಳ ಮದುವೆ ಮಾಡೋಕ್ಕಾಗುತ್ತಾ... ಅದನ್ನು ಯೋಚನೆ ಮಾಡಿದ್ದೀರಾ.... ಅದನ್ನೆಲ್ಲ ಯೋಚನೆ ಮಾಡೋದು ಬಿಟ್ಟು ಸುಮ್ನೆ ಸಣ್ಣ ಮಕ್ಕಳನ್ನು ಅವಮಾನ ಮಾಡಿ ಸಂತೋಷ ಅನುಭವಿಸ್ತೀರಲ್ಲ. ನಿಮಗೆ ನೆನಪುಂಟಾ.... ನಾನು ಕುಂಟ ಅಂತ ಗೊತ್ತಿದ್ದೂ ನನ್ನನ್ನು ಶಾಲೆಯ ಸುತ್ತಲೂ ಓಡಿಸಿದ್ದು... ಸರಿಯಲ್ಲ ಸರ್‌. ನಾನು ಅವಮಾನವನ್ನು ನುಂಗಿಕೊಂಡೆ. ಆದರೆ ನಿಮಗೇನಾಯ್ತು ? ಹಾಗೇ ಇದ್ದೀರಿ...ಆನಂದ ಮಾತಾಡುತ್ತಾ ಆಡುತ್ತಾ ತನಗೇ ಗೊತ್ತಿಲ್ಲದ ಹಾಗೆ ಆರ್ದ್ರನಾಗಿದ್ದ.

ನೇಮಿರಾಜರಿಗೆ ಏನನ್ನಿಸಿತ್ತೋ ಏನೋ ಅವರೂ ವಿಷಾದದಿಂದ ಕೂತಿದ್ದರು. ಲಕ್ಷ್ಮೀ ನಿವಾಸದ ಮಂದಿ ನಿಬ್ಬೆರಗಾಗಿ ಅರ್ಧ ತಿಂದ ಬನ್ಸು, ಬಿಸ್ಕುಟ್‌ ರೊಟ್ಟಿಗಳನ್ನು ಮುರಿದು ಬಾಯಿಗೆ ಹಾಕಿಕೊಳ್ಳುವುದನ್ನೂ ಮರೆತು ಕೂತಿದ್ದರು. ಅಷ್ಟು ಹೇಳಿ ಆನಂದ ಅಪಾರ ದುಃಖಿತನಂತೆ ಬೇಕಂತಲೇ ಮತ್ತಷ್ಟು ಕುಂಟುತ್ತಾ ಹೊರಗೆ ನಡೆದಿದ್ದ. ತನ್ನ ಬೆನ್ನ ಹಿಂದೆ ಒಂದು ಗೆಲುವಿದೆ ಅಂತ ಆಗ ಅವನಿಗೆ ಅನ್ನಿಸಿತ್ತು.ಅದು ಆನಂದನ ಒರಟುತನದ ಒಂದು ರೂಪ ಮಾತ್ರ. ತನ್ನ ಬದುಕೇ ಬದುಕು. ಅದಕ್ಕೆ ಯಾರ ಕಟ್ಟುಪಾಡುಗಳೂ ಇಲ್ಲ ಎಂಬಂತೆ ಅವನು ಬದುಕುತ್ತಾ ಬಂದಿದ್ದಾನೆ. ತನ್ನನ್ನು ಯಾರೂ ಮೀರಬಾರದು ಎಂಬ ಕಾರಣಕ್ಕೆ ಅನಗತ್ಯವಾಗಿ ಕಟುವಾಗುತ್ತಾನೆ. ಕಣ್ಣಿಗೆ ಕೈಹಾಕಿದಂತೆ ಮಾತಾಡುತ್ತಾನೆ.
ಸುಗಂಧಿಯನ್ನು ನೋಡದೆ ತುಂಬ ದಿನವಾಯಿತು ಅಂದುಕೊಂಡ. ನಿರಂಜನನ ಸಾವಿನ ಗಲಾಟೆಯಲ್ಲಿ ಅವಳನ್ನು ಮರೆತೇ ಬಿಟ್ಟೆನಲ್ಲ ಅಂತ ಹಳಹಳಿಸಿದ. ಆ ಗುರುವಾರದ ಮಧ್ಯಾಹ್ನ ತನ್ನ ಆಫೀಸಿನ ಬಾಗಿಲು ಮುಚ್ಚಿ, ಗೇರುಕಟ್ಟೆಯಲ್ಲೊಂದು ಬೀಡಿ ಕಾರ್ಮಿಕರ ಸಭೆ ಇದೆ, ಬರಬೇಕು ಎಂದು ಆಹ್ವಾನ ಪತ್ರ ತಂದುಕೊಟ್ಟ ಪುಟ್ಟಣ್ಣನನ್ನು ಆಫೀಸಿನ ಹೊರಗೆ ನಿಲ್ಲಿಸಿಯೇ ಎರಡೇ ನಿಮಿಷ ಮಾತಾಡಿಸಿ, ಆನಂದ ಸುಗಂಧಿಯ ಮನೆ ಕಡೆ ಹೆಜ್ಜೆಹಾಕಿದ.ಸುಗಂಧಿಯ ಅಂಗಳದಲ್ಲಿ ನೆರಳಿತ್ತು. ಕೋಳಿಯಾಂದು ತನ್ನ ಮರಿಗಳೊಂದಿಗೆ ಇಡೀ ಮನೆಯ ಸರ್ವಾಧಿಕಾರಿ ತಾನೇ ಎಂಬಂತೆ ಗಂಭೀರವಾಗಿ ಅಂಗಳದಲ್ಲೇ ಕವಾಯತು ನಡೆಸಿತ್ತು. ಗೇಟು ತೆಗೆದು ಬದಿಗಿಟ್ಟು ಸುಗಂಧಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಾ, ಅವಳನ್ನು ಹೇಗೆ ರಮಿಸಬೇಕೆಂದು ಒಳಗೊಳಗೇ ಮುದಗೊಳ್ಳುತ್ತಾ ಆನಂದ ಅಂಗಳವನ್ನು ದಾಟಿ ಎರಡು ಮೆಟ್ಟಲು ಹತ್ತಿ ಬಾಗಿಲ ಹತ್ತಿರ ನಿಂತು ಬಾಗಿಲ ಮೇಲೆ ಮೆತ್ತಗೆ ಬಡಿದ.
ಒಳಗೆ ಪಾತ್ರೆ ಬಿದ್ದ ಸದ್ದಾಯಿತು. ಪಾತ್ರೆ ಇಡುವ ಹಲಗೆಯ ಮೇಲೆ ಸ್ವಸ್ಥ ಮಲಗಿಕೊಂಡಿದ್ದ ಬೆಕ್ಕು ಸುಖವಾಗಿ ನೆಲಕ್ಕೆ ಜಿಗಿದು ಮೈಮುರಿದು ಎತ್ತಲೋ ಓಡಿಹೋಯಿತು.
ಆನಂದ ಬಾಗಿಲ ಪಕ್ಕದಲ್ಲಿದ್ದ ಕಿಟಕಿಯಲ್ಲಿ ನೋಡುತ್ತಿದ್ದವನು ಮತ್ತೊಮ್ಮೆ ಸುಗಂಧೀ ಎಂದು ಕರೆದ.

Friday, December 7, 2007

ಎಲ್ಲ ನದಿಗಳಿಗೂ ಕಡಲು ಇರುವುದಿಲ್ಲ...

ಕಾದಂಬರಿ ನದಿಯ ಹಾಗೆ!

ನದಿ ಹುಟ್ಟುವುದು ಒಂದು ಸಣ್ಣ ಸೆಲೆಯಾಗಿ. ಕ್ರಮೇಣ ಅದಕ್ಕೆ ಉಪನದಿಗಳು ಸೇರಿಕೊಳ್ಳುತ್ತವೆ. ಗುಪ್ತಗಾಮಿನಿಯಾಗಿ ಮತ್ತಾವುದೋ ಸೆಲೆ ಬಂದು ಕೂಡಿಕೊಳ್ಳುತ್ತದೆ. ಹೀಗೆ ತನ್ನನ್ನು ಕೂಡಿಕೊಂಡದ್ದನ್ನೆಲ್ಲ ತೆಕ್ಕೆಗೆ ತೆಗೆದುಕೊಂಡು ನದಿ ಹರಿಯುತ್ತದೆ.

ಕಾದಂಬರಿಯೂ ಹಾಗೆಯೇ. ನನ್ನ ಪ್ರಕಾರ ಸಣ್ಣಕತೆಯೆಂದರೆ ಶಿಕಾರಿ. ನಿಗೂಢದಲ್ಲಿ ಹೊಂಚಿ ಕುಳಿತವನ ಸುಳಿವೇ ತಿಳಿಯದೆ ಬರುವ ಮೃಗವನ್ನು ಕೆಡವಿ ಉರುಳಿಸುವುದು. ಕವಿತೆಯೆಂದರೆ ಬೆಸ್ತನ ಹಾಗೆ ಕಾಲದ ಹೊಳೆಗೆ ಗಾಳ ಹಾಕುತ್ತಾ ಕೂರುವುದು.

ಆದರೆ ಕಾದಂಬರಿ ಹಾಗಲ್ಲ. ಅದರ ವಿಸ್ತಾರ ದೊಡ್ಡದು; ಅದು ಒಳಗೊಳ್ಳುವ ಸಂಗತಿಗಳೂ. ಅದು ಇಡೀ ಮನುಕುಲದ ಕತೆಯೂ ಹೌದು. ಹೀಗಾಗಿ ಕಾದಂಬರಿಯ ಕರ್ತೃ ಎಲ್ಲವನ್ನೂ ಔದಾರ್ಯದಿಂದ ಮತ್ತು ಅನುಮಾನದಿಂದ ನೋಡಬೇಕಾಗುತ್ತದೆ. ಚಂಚಲತೆಯ ಜೊತೆ ತನ್ಮಯತೆಯನ್ನೂ ಗಳಿಸಿಕೊಳ್ಳಬೇಕಾಗುತ್ತದೆ.

ಆದರೆ ಈ ಕಾಲ ಕಷ್ಟದ್ದು. ನಮ್ಮ ಅನುಭವಗಳಲ್ಲಿ ಟೊಳ್ಳೆಷ್ಟು , ನಿಜವೆಷ್ಟು ಅನ್ನುವುದು ನಮಗೇ ಅರಿವಾಗದ ಕಾಲ. ನಮ್ಮನ್ನು ಯಾವ್ಯಾವ ಶಕ್ತಿಗಳೋ ನಿಯಂತ್ರಿಸುತ್ತವೆ. ಜಾತಿ, ರಾಜಕಾರಣ ಮತ್ತು ಧರ್ಮ ನಮ್ಮ ಶ್ರದ್ಧೆಯನ್ನು ಮೀರಿ ವ್ಯಾಪಿಸಿದೆ. ಹಳ್ಳಿಗಳು ಕ್ರಮೇಣ ನಗರಗಳಾಗುತ್ತಿವೆ. ಟೀವಿ ಎಂಬ ಮಾಯೆ ಪ್ರತಿಯಾಬ್ಬರನ್ನೂ ವಿಶಿಷ್ಟವಾಗಿ ತಬ್ಬಿದೆ. ಎಲ್ಲೋ ಏನೋ ತಪ್ಪಿದೆ ಎಂಬ ಶಂಕೆಯಲ್ಲೇ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾಗಿದೆ.
ನದಿಯ ನೆನಪಿನ ಹಂಗು ಇಂಥ ಕಷ್ಟಕಾಲದಲ್ಲಿ ಹುಟ್ಟಿದ ಕೃತಿ. ಅದರ ಮೂಲಸೆಲೆ ಯಾವುದು ಅನ್ನುವುದು ನನಗೂ ಮರೆತುಹೋಗಿದೆ. ನದಿಗೆ ನೆನಪುಗಳಿರುವುದಿಲ್ಲ ಅನ್ನುತ್ತಾರೆ. ಯಾಕೆಂದರೆ ಅದು ಎಲ್ಲವನ್ನೂ ತೊಳೆಯುತ್ತಾ ಸಾಗುತ್ತದೆ. ಆದರೆ ನದಿಯ ನೆನಪಿನ ಹಂಗಿನಿಂದ ನೀವ್ಯಾರೂ ಪಾರಾಗಲಾರಿರಿ ಅನ್ನುವುದು ನನಗೆ ಗೊತ್ತಿದೆ. ಇದ್ದ ನದಿಗಿಂತ ಗಾಢವಾಗಿ ಇರದ ನದಿ ಕಾಡುತ್ತದೆ. ನೋಡಿದ ಮುಖಕ್ಕಿಂತ ತೀವ್ರವಾಗಿ ನೋಡದ ಮುಖ ಕಾಡುವ ಹಾಗೆ!

ಬರೆಯುವುದು ಎಂದರೆ ದಾಖಲಿಸುವುದು, ಅದಕ್ಕಿಂತ ಹೆಚ್ಚಾಗಿ ಕನೆಕ್ಟ್ ಮಾಡುವುದು. ಈ ಕಾದಂಬರಿ ನಿಮ್ಮನ್ನೂ ನನ್ನನ್ನೂ ಕನೆಕ್ಟ್ ಮಾಡುವ ಹಾಗೆ, ನಿಮ್ಮನ್ನೂ ನಿಮ್ಮ ಬಾಲ್ಯವನ್ನೂ ಸೇರಿಸಲಿ. ನಿಮ್ಮ ನೆನಪುಗಳ ಜೊತೆ ವಾಸ್ತವವನ್ನು ಬೆಸೆಯಲಿ.

ಈ ಕೃತಿಗೆ ಅಂಥ ಮಹದೋದ್ದೇಶಗಳಿಲ್ಲ . ಇದು ಪ್ರೀತಿಯಿಂದ ಬರೆಸಿಕೊಂಡ, ಪ್ರೀತಿಯಿಂದ ಓದಿಸಿಕೊಳ್ಳಬೇಕಾದ ಪ್ರಸಂಗ. ಇದು ಯಾವ ರೂಪದಲ್ಲಿ ತನ್ನನ್ನು ಪ್ರಕಟಿಸಿಕೊಳ್ಳುತ್ತದೆ ಎಂಬ ಕುತೂಹಲ ನಿಮ್ಮಷ್ಟೇ ನನಗೂ ಇದೆ. ಹೀಗಾಗಿ ಲೇಖಕ ಕೂಡ ಇಲ್ಲಿ ಒಬ್ಬ ಓದುಗನಷ್ಟೇ ಮುಗ್ಧ ಕುತೂಹಲಿ.

ನದಿ ನಿಮ್ಮ ಬಳಿಗೆ ಹರಿದು ಬಂದಿದೆ. ಇನ್ನು ಮೇಲೆ ನೀವುಂಟು ನದಿಯುಂಟು. ಮುಂದಿನದು ದೇವರಾ ಚಿತ್ತ.
****
ಇದನ್ನು ಗೆಳೆಯ ಎಸ್ ಕೆ ಶಾಮಸುಂದರ್ ತಮ್ಮ ವೆಬ್ ಸೈಟಿನಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ. ಮಿತ್ರರಾದ ಬಿ. ಸುರೇಶ್ ನಾಕುತಂತಿ ಪ್ರಕಾಶನದಲ್ಲಿ ಇದನ್ನು ಪ್ರಕಟಿಸುತ್ತಿದ್ದಾರೆ. ಕಾದಂಬರಿಯನ್ನು ಓದಿದ ಅನೇಕ ಓದುಗ ಮಿತ್ರರು ಮೆಚ್ಚುಗೆಯ ಮಾತಾಡಿದ್ದಾರೆ. ಗೆಳೆಯ ಗುರುಪ್ರಸಾದ ಕಾಗಿನೆಲೆ ಮುನ್ನುಡಿ ಬರೆದು ಹಾರೈಸಿದ್ದಾರೆ. ಹಸ್ತಪ್ರತಿಯಲ್ಲೇ ಓದಿದ ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮೆಚ್ಚಿ ಹರಸಿದ್ದಾರೆ. ಅಪಾರ ರಘು ನನ್ನ ಕಾಟವನ್ನೆಲ್ಲ ಸಹಿಸಿಕೊಂಡು ಮುಖಪುಟ ಮಾಡಿಕೊಟ್ಟಿದ್ದಾರೆ.
ಇವರೆಲ್ಲರಿಗೆ ಕೃತಜ್ಞತೆ ಮತ್ತು ಪ್ರೀತಿ.
ಉದಯ ಮರಕಿಣಿ, ಸೂರಿ, ಎಚ್ ಆರ್ ರಂಗನಾಥ್, ರವಿ ಹೆಗಡೆ, ರವಿ ಬೆಳಗೆರೆ, ಲಿಂಗದೇವರು, ವಿವೇಕ್ ಶಾನಭಾಗ, ಟಿ ಎನ್ ಸೀತಾರಾಮ್, ಡಾವೆಂಕಿ, ಕಾನುಗೋಡು ರಾಜೇಶ್, ಕುಂಟಿನಿ, ಗಣೇಶ್, ಜಿ ಎನ್ ಮೋಹನ್, ವೀರೇಶ್, ವಸುಧೇಂದ್ರ - ಹೀಗೆ ಎಲ್ಲಾ ಗೆಳೆಯರ ಪ್ರೀತಿ ಜಾರಿಯಲ್ಲಿದೆ. ಬೆಳದಿಂಗಳ ಹಾಗೆ ಆಪ್ಯಾಯಮಾನವಾಗಿದೆ. ಓದುಗರ ಪ್ರೀತಿ ಗರಿಕೆಯ ಕುಡಿಯಂತೆ ಹಬ್ಬುತ್ತಿದೆ.
-ಜೋಗಿ

(ನದಿಯ ನೆನಪಿನ ಹಂಗು -ಕಾದಂಬರಿಗೆ ಬರೆದ ಮುನ್ನುಡಿ)

Thursday, December 6, 2007

ಸತ್ಪುರುಷನ ಹೆಣಕ್ಕೆ ಸಜ್ಜನನ ಹೆಗಲು ಹಾಗೂ ಧ್ಯಾನವೆಂಬ ಐಷಾರಾಮ

ಈ ಕೆಳಗಿನ ಎರಡೂ ಪದ್ಯಗಳನ್ನು ಸುಮ್ಮನೆ ಓದಿಕೊಳ್ಳಿ. ಮತ್ತೆ ಮತ್ತೆ ಓದಿಕೊಳ್ಳಿ. ಮೊದಲನೆಯದು ಎ. ಕೆ. ರಾಮಾನುಜ್ ಬರೆದದ್ದು. ಎರಡನೆಯ ಪದ್ಯ ಮೂಡ್ನಾಕೂಡು ಚಿನ್ನಸ್ವಾಮಿಯವರದು. ಎರಡರಲ್ಲೂ ಕವಿ ತಾನೊಂದು ಮರವಾಗಿರುವ ಸ್ಥಿತಿಯ ಬಗ್ಗೆ ಧ್ಯಾನಿಸಿದ್ದಾರೆ.

ಧ್ಯಾನ ಫಲಿಸಿದರೆ

ಇಡೀ ದಿನ ನಾನು ಒಂದು ಮರ
ನಾನೂ ಒಂದು ಕರಿಯ ವಾಲ್ನಟ್ ಮರ ಅಂತ
ಧ್ಯಾನ ಮಾಡಿದೆ.
ಸಂಜೆ ಹೊತ್ತಿಗೆ ಮೂರನೇ ಮನೆಯ ಬಿಳಿಜೂಲುನಾಯಿ
ಮೂಸುತ್ತಾ ಬಂದು ಹಿಂಗಾಲೆತ್ತಿ ನನ್ನ ಕಾಲ ಮೇಲೆ
ಬೆಚ್ಚಗೆ
ಒಂದ ಮಾಡಿತು.
ರಾತ್ರಿ ದೊಡ್ಡ ಮಳೆ, ಬಿರುಗಾಳಿ ಬೀಸಿ
ಬುಡಸಮೇತ ಮರ ಉರುಳಿ ಆಕಾಶಕ್ಕೆ
ಬೇರೆತ್ತಿ ತೋರಿಸಿತು.
ಮುನಿಸಿಪಾಲಿಟಿಯವರು ಲಾರಿ
ಎಲೆಕ್ಟ್ರಿಕಗರಗಸ ತಂದು ಕಡಿದು
ತುಂಬಿಕೊಂಡು ಹೋದರು.
ಬಡಗಿ ಸಣ್ಣ ಗರಗಸ ಆಡಿಸಿ ಹತ್ತರಿ ಹೊಡೆದು
ಜೇನುಗೂಡಿನ ಮೇಣ ಹಾಕಿ ಪಾಲಿಷ್ ಮಾಡಿ
ಮೇಜು ಕುರ್ಚಿ ಎಲ್ಲಾ ಮಾಡಿಕೊಟ್ಟ.
ಉಳಿದ ಎಲೆ ತೊಗಟೆ ನಾರು ಇದನ್ನೆಲ್ಲ ಅರೆದು
ಸೋಸಿ ಪೇಪ್ ಕಾರ್ಖಾನೆ
ಕಾಗದ ಮಾಡಿಕೊಟ್ಟಿತು.
ಈಗ ಇಲ್ಲಿ ಕುರ್ಚಿಯ ಮೇಲೆ ಕೂತು
ಮೇಜಿನ ಮೇಲೆ ಕಾಗದ ಹರಡಿ ಇದನ್ನೆಲ್ಲ
ಬರೆಯುತ್ತಿರುವುದು
ನಾನು ನನ್ನ ರುಂಡಮುಂಡದ ಮೇಲೆ.
ಅದೇನೋ ಕಾಲೇ ಕಂಬ ಶಿರವೇ ಕಲಶ
ಅಂದರಲ್ಲ ಹಾಗೆ ಆಗಿಬಿಟ್ಟಿದೆ.

ನಾನೊಂದು ಮರವಾಗಿದ್ದರೆ

ನಾನೊಂದು ಮರವಾಗಿದ್ದರೆ
ಹಕ್ಕಿಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಿಸಿಲು ನನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ
ತಂಬೆಲರ ಕೂಡ ಎಲೆಗಳ ಸ್ನೇಹ
ಮಧುರವಾಗಿರುತ್ತಿತ್ತು.
ಮಳೆ ಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯುತ್ತಿರಲಿಲ್ಲ. ನಾನು
ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ
ಮಡಿ ಮಡಿ ಎಂದು ಓಡುತ್ತಿರಲಿಲ್ಲ.
ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜಿ
ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
ಅಡಗಿಕೊಂಡ ಮುಕ್ಕೋಟಿ ದೇವತೆಗಳು
ನನ್ನನ್ನು ಮುಟ್ಟಿಸಿಕೊಳ್ಳುತ್ತಿದ್ದರು.
ಯಾರಿಗೆ ಗೊತ್ತು
ನನ್ನ ಅಂತ್ಯಕಾಲದಲ್ಲಿ
ಕಡಿದು ತುಂಡಾದ ಒಳ ಸೀಳೊಂದು
ಹೋಮಾಗ್ನಿಯಲ್ಲಿ ಬೆಂದು
ಪಾವನವಾಗುತ್ತಿತ್ತೇನೋ
ಅಥವಾ
ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ
ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೇ?

-1-
ಎ.ಕೆ. ರಾಮಾನುಜ್ ಬರೆದಿರುವ `ಧ್ಯಾನ ಫಲಿಸಿದಾಗ' ಕವಿತೆ ದೈನಿಕದಿಂದ ಆಧ್ಯಾತ್ಮಿಕ ಜಗತ್ತಿಗೆ ಏರಲು ನಿರಂತರ ಹವಣಿಸುತ್ತಾ ಒಬ್ಬ ಬರಹಗಾರನ ಶ್ರದ್ಧೆ, ನಿಷ್ಠೆ ಮತ್ತು ಏಕಾಗ್ರತೆಯ ದರ್ಶನ ಮಾಡಿಸುತ್ತದೆ. ಕವಿ ಇಲ್ಲಿ ತಾನೊಂದು ಮರ ಎಂಬಂತೆ ಧ್ಯಾನಿಸುತ್ತಾನೆ. ಈ ಧ್ಯಾನದ ಪ್ರಸ್ತಾಪದ ಮರುಸಾಲಲ್ಲೇ ಆ ಏಕಾಗ್ರತೆಯನ್ನು ಗೇಲಿ ಮಾಡುವ `ಒಂದು ನಾಯಿ ಹಿಂಗಾಲೆತ್ತಿ ಒಂದಮಾಡುವ' ಪ್ರಸ್ತಾಪವಿದೆ. ಧ್ಯಾನಸ್ಥ ಸ್ಥಿತಿಯಲ್ಲಿ ಮುಟ್ಟಬಾರದ ಶ್ವಪಚ ಶ್ವಾನದಿಂದ ಮುಟ್ಟಿಸಿಕೊಳ್ಳಬೇಕಾಗಿ ಬರುತ್ತದೆ ಅನ್ನುವುದನ್ನೂ ಕವಿ ಸೂಚ್ಯವಾಗಿ ಹೇಳುತ್ತಿರುವಂತಿದೆ. ಇಲ್ಲಿ ಕವಿ ಧ್ಯಾನದ ಸ್ಥಿತಿಯನ್ನು ಉದ್ದಕ್ಕೂ ನಿರಾಕರಿಸುತ್ತಾ ಹೋಗಿದ್ದಾರೆ ಅನ್ನುವ ಭಾವನೆಯನ್ನು ಮೂಡಿಸುತ್ತಾರೆ. ಉದಾಹರಣೆಗೆ ಧ್ಯಾನಸ್ಥನಾಗಿದ್ದ ಹೊತ್ತಲ್ಲೇ ಆ `ಮರಕವಿ'ಯನ್ನು ಗಾಳಿ ಬುಡಮೇಲು ಮಾಡುತ್ತದೆ. ಕಾರ್ಪೋರೇಷನ್ನಿನವರು ಕತ್ತರಿಸಿ ಕೊಂಡು ಹೋಗುತ್ತಾರೆ. ಬಡಗಿ ಅದರಿಂದ ಮೇಜು ಕುರ್ಚಿ ಮಾಡುತ್ತಾನೆ. ತೊಗಟೆ ಮತ್ತು ಎಲೆಗಳಿಂದ ಕಾಗದ ತಯಾರಾಗುತ್ತದೆ.
ಅಲ್ಲಿಗೇ ಕವಿತೆ ಮುಗಿದಿದ್ದರೆ ಅದೊಂದು ತಮಾಷೆಯ ಪದ್ಯವಾಗಿಯೇ ಉಳಿದುಬಿಡುತ್ತಿತ್ತು. ಧ್ಯಾನ ಫಲಿಸುವುದು ಕೊನೆಯ ಸಾಲುಗಳಲ್ಲಿ; ನಾನೀಗ ಇದನ್ನು ಬರೆಯುತ್ತಿರುವುದು ನನ್ನ ರುಂಡಮುಂಡದ ಮೇಲೆ ಎನ್ನುವ ಹೊತ್ತಿಗೆ ಕವಿಗೆ ಮತ್ತೊಂದು ಜಗತ್ತಿನ ದರ್ಶನವೂ ಆಗಿಹೋಗಿದೆ. ಕವಿ ಸತ್ತು ಬದುಕಿ ಬರೆದಾಗಲೇ ಕಾವ್ಯ ಹುಟ್ಟುತ್ತದೆ ಅನ್ನುವ ಹಳೆಯ ನಂಬಿಕೆ. ಬರೆಯುತ್ತಾ ಬರೆಯುತ್ತಾ ಆ ಅನುಭವಕ್ಕೆ ಸಾಯುತ್ತಾ ಹೋಗುತ್ತಾನೆ ಅನ್ನುವ ಪಾಶ್ಚಾತ್ಯ ಸಿದಾ್ಧಂತ, ಎಲ್ಲಾ ಅನುಭವಗಳನ್ನೂ ಆತ ಮೈಗೂಡಿಸಿಕೊಂಡು ಬರೆಯಬೇಕು, ನಾಯಿಯಿಂದ ಒಂದ ಮಾಡಿಸಿಕೊಂಡ ಅವಮಾನ, ಗರಗಸದಿಂದ ಕತ್ತರಿಸಿಕೊಂಡ ನೋವು, ರೂಪಾಂತರಗೊಂಡು ಕಾಗದವಾಗುವ ಪ್ರಕ್ರಿಯೆ, ಮೇಜುಕುರ್ಚಿಯಾಗಿ ಉಪಯುಕ್ತವಾಗುವ ಸಾಧ್ಯತೆ- ಎಲ್ಲವೂ ಇದ್ದಾಗಷ್ಟೇ ಕಾವ್ಯ ಅರ್ಥಪೂರ್ಣವಾಗುತ್ತದೆ ಎನ್ನುವ ಅರಿವಿನೊಂದಿಗೆ ಪದ್ಯ ಕೊನೆಯಾಗುತ್ತದೆ. ಕೊನೆಯಲ್ಲಿ ಬಸವಣ್ಣನ ವಚನದ ಸಾಲನ್ನು ಕೊಂಚ ತಮಾಷೆಯಾಗಿಯೇ ತಂದಿದ್ದಾರೆ ರಾಮಾನುಜ್. ಕಾಲೇ ಕಂಬ ಶಿರವೇ ಕಲಶ ಆಗುವುದು ಕೂಡ ಕಾವ್ಯದಷ್ಟೇ ಕಷ್ಟದ ಕೆಲಸ. ಕಾವ್ಯ ಬರೆಯುವಷ್ಟೇ ತಾದಾತ್ಮ್ಯದ ಕೆಲಸ ಅನ್ನುವುದನ್ನೂ ಕವಿತೆ ಸೂಕ್ಪ್ಮವಾಗಿ ಹೇಳುತ್ತದೆ. ಇಲ್ಲಿಯ ಕವಿಯ ಧ್ಯಾನ
ಐಹಿಕದ ಅವಮಾನಗಳನ್ನೂ ಪಡಿಪಾಟಲುಗಳನ್ನೂ ಮೀರಿದ್ದು. ಕವಿ ತಾನೊಂದು ಮರ ಅಂತ ಧ್ಯಾನಿಸಿದಾಗಷ್ಟೇ ಆತನಿಗೆ ಇಂಥ ಅನುಭವ ಮೂಡಲು ಸಾಧ್ಯ. ಆತ ಹಾಗೆ ಧ್ಯಾನಿಸುವುದಕ್ಕೆ ವಿರಾಮ, ನೆಮ್ಮದಿ, ಐಷಾರಾಮ ಎಲ್ಲವೂ ಬೇಕು.
-2-
ಮೂಡ್ನಾಕೂಡು ಚಿನ್ನಸ್ವಾಮಿ ಬರೆದ `ನಾನೊಂದು ಮರವಾಗಿದ್ದರೆ' ಧ್ಯಾನ ಫಲಿಸಿದಾಗದಂಥ ಕವಿತೆಗಿಂತ ಭಿನ್ನವಾದದ್ದು. ಇಲ್ಲಿ ನಾನೊಂದು ಮರವಾಗಿದ್ದರೆ ಅನ್ನುವ ಆಶಯ ಧ್ಯಾನವಲ್ಲ, ಅವಮಾನವನ್ನು ಮೀರುವ ಸನ್ನಾಹ. ತನ್ನ ಸ್ಥಿತಿಯನ್ನು ದಾಟುವ ಅಪ್ರಜ್ಞಾಪೂರ್ವಕ ಹವಣಿಕೆ. ಅದು ಕವಿಯ ಕಾವ್ಯಾತ್ಮಕ ಅಭಿವ್ಯಕ್ತಿಯೋ ಧ್ಯಾನವೋ ಅಲ್ಲ. ಅವಮಾನಿತ ವ್ಯಕ್ತಿಯೊಬ್ಬನ ಆಶಯ.
ತಾನು ಮರವಾಗಿದ್ದರೆ ತನ್ನ ಸಾಮಾಜಿಕ ನೆಲೆ, ಸ್ವೀಕಾರ ಇದಕ್ಕಿಂತ ಉತ್ತಮವಾಗಿರುತ್ತಿತ್ತು ಅನ್ನುವುದನ್ನು ಇಲ್ಲಿ ಕವಿ ಯಾವ ಸಂಕೇತಗಳ ನೆರವೂ ಇಲ್ಲದೇ ಹೇಳುತ್ತಾ ಹೋಗುತ್ತಾನೆ.
ಇಷ್ಟೊಂದು ನೇರವಾಗಿ ಮತ್ತು ಮುಕ್ತವಾಗಿ ಹೇಳುವುದು ಸಾಮಾನ್ಯವಾಗಿ ಕವಿತೆಯಾಗುವುದಿಲ್ಲ. ಕವಿಯ ಮರವಾಗಿದ್ದರೆ ಅನ್ನುವ ಕಲ್ಪಿತ ಸ್ಥಿತಿಯೂ, ಸುಂದರ ಹುಡುಗಿ ಎದೆಗವಚಿಕೊಂಡು ನಡೆಯುವ ಪುಸ್ತಕ ನಾನಾಗಿದ್ದರೆ ಅನ್ನುವ ಪಡ್ಡೆ ಹುಡುಗನ ಆಶಯಕ್ಕೂ ಮೇಲ್ನೋಟಕ್ಕೆ ಅಂಥ ವ್ಯತ್ಯಾಸ ಇಲ್ಲ. ಆದರೆ ಮೂಡ್ನಾಕೂಡು ಈ ಸರಳ ಆಶಯವನ್ನು ತಮ್ಮ ತಣ್ಣನೆಯ ವ್ಯಂಗ್ಯದಿಂದ, ನಿರುಮ್ಮಳದ ದನಿಯಿಂದ ಮತ್ತು ಒಂದು ಹಂತದಲ್ಲಿ ವಿನಯ ಎಂದೇ ಭಾಸವಾಗುವ ಮಾತುಗಳಿಂದ ಕಾವ್ಯವಾಗಿಸುತ್ತಾರೆ. ಮರವಾಗಿದ್ದರೆ ಅನ್ನುವ ಆಶಯವೊಂದು ನಮಗೇ ಗೊತ್ತಿಲ್ಲದ ಹಾಗೆ ನಮ್ಮೊಳಗೆ ರೂಪಕವಾಗಿ ಬೆಳೆಯುತ್ತದೆ.
ಕವಿ ಸೂಕ್ಪ್ಮಜ್ಞನಲ್ಲದೇ ಹೋಗಿದ್ದರೆ ನಾನೊಂದು ಮರವಾಗಿದ್ದರೆ, ನನ್ನನ್ನು ಶ್ವಪಚನೆಂದ ಕರೆದವನ ಮೇಲೆ ಉರುಳಬಹುದಾಗಿತ್ತು. ಕೊಡಲಿಯ ಕಾವಾಗಿ ಆತನನ್ನು ಸಂಹಾರ ಮಾಡಬಹುದಾಗಿತ್ತು. ಅಂಥವರ ವಂಶ ನಿರ್ವಂಶ ಮಾಡುವ ಕಾಡ್ಗಿಚ್ಚಿಗೆ ಸೌದೆಯಾಗಿ ಒದಗಬಹುದಾಗಿತ್ತು ಎಂದೆಲ್ಲ ಹೇಳಿ ಆಕ್ರೋಶ ಸೂಚಿಸುತ್ತಿದ್ದ. ಹಾಗೆ ಹೇಳಿದಾಗ ಅದು ಸಮಾಜದಿಂದ ದೂರ ಉಳಿಯುವ, ಕನ್ನಡ ಸಿನಿಮಾಗಳಲ್ಲಿ ಕಂಡು ಬರುವ, ರೋಷಾವೇಷದ ಭಾಷಣಗಳಂತೆಯೋ, ಸಿದ್ಧಲಿಂಗಯ್ಯನವರ ಆರಂಭದ ಕವಿತೆಗಳಲ್ಲಿದ್ದ ಆಕ್ರೋಶದಂತೆಯೋ ಕಂಡುಬರುತ್ತಿತ್ತು. ಆದರೆ ನಿಮ್ಮ ಮಧ್ಯೆ ಮರವಾಗಿದ್ದಾದರೂ ನಿಮ್ಮಂತಾಗುತ್ತೇನೆ. ನಿಮಗೆ ಹತ್ತಿರವಾಗುತ್ತೇನೆ, ನಿಮ್ಮಲ್ಲೊಬ್ಬನಾಗುತ್ತೇನೆ ಅನ್ನುವ ವಿನಯವೇ ಆ ಆಕ್ರೋಶಕ್ಕಿಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಇತ್ತೀಚಿನ ವರುಷಗಳಲ್ಲಿ ಬಂದ ಒಂದು ಪರಿಪೂರ್ಣ ಕವಿತೆಯಾಗಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಕಾವ್ಯ ಕಂಗೊಳಿಸುತ್ತದೆ.
*****
ಸಾಮಾಜಿಕ ಸ್ಥಿತಿಗತಿಯೇ ಹೇಗೆ ಕಾವ್ಯಕಟ್ಟುವ ಕ್ರಮವನ್ನೂ ಚಿಂತನೆಯನ್ನೂ ಧ್ಯಾನಿಸುವ ಪರಿಯನ್ನೂ ನಿರ್ಧರಿಸುತ್ತದೆ ಅನ್ನುವುದಿಲ್ಲಿ ಕುತೂಹಲಕಾರಿ. ಮನಸ್ಸು ಮಾಡಿದರೆ ಮೂಡ್ನಾಕೂಡು ಒಂದಲ್ಲ ಒಂದು ದಿನ ಎಕೆ ರಾಮಾನುಜ್ ಬರೆದಂಥ ಪದ್ಯ ಬರೆಯಬಹುದು. ಆದರೆ ರಾಮಾನುಜ್ ಥರದ ಕವಿಗಳಿಗೆ ಮೂಡ್ನಾಕೂಡು ಬರೆದ ಹಾಗೆ ಬರೆಯುವುದು ಸಾಧ್ಯವೇ ಆಗುತ್ತಿರಲಿಲ್ಲ. ಒಂದೇ ವೇಳೆ ಬರೆದಿದ್ದರೂ ಅದು ಆರೋಪಿಸಿಕೊಂಡ ಭಾವದಂತೆ ಭಾಸವಾಗುತ್ತಿತ್ತೇ ವಿನಾ ಅದರಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇರುತ್ತಿರಲಿಲ್ಲ.
ನಮ್ಮ ಕಾವ್ಯಲೋಕ ಎಷ್ಟು ಶ್ರೀಮಂತ ಅನ್ನುವುದಕ್ಕೆ ಸಾಕ್ಪಿಯಾಗಿಯೂ ಈ ಕವಿತೆಗಳನ್ನು ಒಟ್ಟೊಟ್ಟಿಗಿಟ್ಟು ನೋಡಬಹುದು.
ಹೀಗೆ ಥಟ್ಟನೆ ಇವೆರಡೂ ಪದ್ಯಗಳು ನೆನಪಾಗುವಂತೆ ಮಾಡಿದ್ದು ಕೆ. ವಿ. ಅಕ್ಪರ ಸಂಪಾದಿಸಿದ ದೇಶಕಾಲ ಪ್ರಕಟಿಸಿದ `ಪದ್ಯದ ಮಾತು ಬೇರೆ' ಸಂಕಲನ. ಇಂಥ ಪ್ರಯತ್ನಗಳು ನಡೆದಾಗಲೇ ಕಾವ್ಯ ಮರುಹುಟ್ಟು ಪಡಕೊಳ್ಳುತ್ತಾ ಹೋಗುತ್ತದೆ ಅಲ್ಲವೇ?

ಕಡುಚಳಿಯ ಇರುಳಿಗೊಂದು ಬಿಸಿಬಿಸಿ ಹಾಡು


ಕಾರ್ತೀಕದ ತಂಪುಹೊತ್ತಲ್ಲಿ ಬೆಚ್ಚಗಿಡುವುದಕ್ಕೊಂದು ಕುರುಕು ಪದ್ಯ ಸಿಕ್ಕರೆ!
ಈ ಜನಪದ ಗೀತೆ ಓದಿ. ಇದು ಸಂವಾದದ ಶೈಲಿಯಲ್ಲಿ ಅವರಿಬ್ಬರ ರಸಿಕತನವನ್ನೂ ಹೇಳುತ್ತಾ ಹೋಗುತ್ತದೆ. ಪ್ರೇಮದ ಉತ್ಕಟತೆಯನ್ನೂ ತೋರುತ್ತದೆ. ಎಲ್ಲಿಂದಲೋ ಶುರುವಾಗಿ ಎಲ್ಲಿಗೋ ತಲುಪುತ್ತದೆ.
ಬಹುಶಃ ಮತ್ತಷ್ಟು ಗಾಢವಾಗಿ ಒಳಹೊಕ್ಕರೆ ಮತ್ತಷ್ಟು ಅರ್ಥಗಳನ್ನೂ ಇದು ಹೊಳೆಯಿಸುತ್ತದೋ ಏನೋ?
ಊರ ಮುಂದಲ ತೋಟ ಮಾಡಯ್ಯ ಚೆನ್ನಾರಿ ಚೆಲುವಾ
ನಿನ್ನ ನೋಡುತ ನೀರ ತರುವೇನೂ
ಊರ ಮುಂದಲ ತೋಟ ಮಾಡಿದರೆ ಚೆನ್ನಾರಿ ಚೆಲುವೆ
ದನ ಕರುಗಳ ಕಾಟ ಬಹಳಲ್ಲೇ
ದನಕರುಗಳ ಕಾಟವಾದಾರೆ ಚೆನ್ನಾರಿ ಚೆಲುವ
ಜಾಲಿ ಕಡಿದು ಬೇಲಿ ನಡಿಸಯ್ಯೋ
ಜಾಲಿ ಕಡಿದು ಬೇಲಿ ನಡಿಸಿದರ ಚೆನ್ನಾರಿ ಚೆಲುವಿ
ಮಂಗಮುಶಗಳ ಕಾಟ ಬಹಳಲ್ಲೇ
ಮಂಗಮುಶಗಳ ಕಾಟವಾದಾರ ಚೆನ್ನಾರಿ ಚೆಲುವಾ
ತೋಟಕೊಂದು ಆಳನಿರಿಸಯ್ಯೋ
ತೋಟಕೊಂದು ಆಳನಿರಿಸಿದರ ಚೆನ್ನಾರಿ ಚೆಲುವೆ
ಕಾಗೆ ಕೋಗಿಲೆ ಕಾಟ ಬಹಳಲ್ಲೇ
ಕಾಗೆ ಕೋಗಿಲೆ ಕಾಟವಾದಾರೆ ಚೆನ್ನಾರಿ ಚೆಲುವ
ಆಳ ಕೈಗೊಂದು ಕವಣೆ ಕೊಡಿಸಯ್ಯೋ
ಆಳ ಕೈಗೊಂದು ಕವಣೆ ಕೊಟ್ಟರೆ ಚೆನ್ನಾರಿ ಚೆಲುವೆ
ಜೇನುಗೂಡಿಗೆ ಏಟು ಬಿತ್ತಲ್ಲೆ
ಜೇನು ಗೂಡಿಗೆ ಏಟು ಬಿದ್ದರ ಚೆನ್ನಾಗಿ ಚೆಲುವ
ಜೇನುತುಪ್ಪದ ರುಚಿಯ ನೋಡಯ್ಯೋ!

Wednesday, December 5, 2007

ಹಂಗಿನರಮನೆಯ ಹೊರಗೆ


ಆತ್ಮೀಯರೇ,


ನನ್ನ ಕಾದಂಬರಿಯೊಂದು ಪ್ರಕಟಣೆಗೆ ಸಿದ್ಧವಾಗುತ್ತಿದೆ. ಅದರ ಹೆಸರು ನದಿಯ ನೆನಪಿನ ಹಂಗು. ನಾನು ತುಂಬ ಹಿಂದೆ ಗೆಳೆಯ ಶಾಮಸುಂದರ್ ಪೋರ್ಟಲ್ಲಿಗೆ ಬರೆದ ಕಾದಂಬರಿ ಇದು. ಅಲ್ಲಿ ನನ್ನ ಹೆಸರು ಪ್ರಕಟವಾಗಿರಲಿಲ್ಲ. ಆಮೇಲೆ ಇದನ್ನು ನನ್ನದೇ ಬ್ಲಾಗಿನಲ್ಲಿ ಹಾಕಲು ಆರಂಭಿಸಿದೆ. ಅದೃಷ್ಟವಶಾತ್ ಅದನ್ನು ಪೂರ್ತಿಯಾಗಿ ಹಾಕವುದು ಸಾಧ್ಯವಾಗಲೇ ಇಲ್ಲ.

ಇದನ್ನು ತಾಂತ್ರಿಕ ಕಾರಣಗಳಿಗಾಗಿ ಕಾದಂಬರಿ ಎಂದು ಕರೆದಿದ್ದೇನೆ ಅಷ್ಟೇ. ಇದಕ್ಕೆ ಕಾದಂಬರಿಯ ಯಾವ ಗುಣವೂ ಇಲ್ಲ. ಅದು ನೆನಪಿನ ದಾಖಲೆಗಳಷ್ಟೇ. ನನ್ನ ನೆನಪಿಗೆ ದಕ್ಕಿದ್ದನ್ನು ಹಾಗ್ಹಾಗೇ ಬರೆದುಕೊಂಡು ಹೋಗಿದ್ದೇನೆ. ಓದುವ ಕುತೂಹಲ ಉಳಿಸಿಕೊಂಡದ್ದು ಗಾಢವಾಗಿ ತಟ್ಟುತ್ತದೆ ಅನ್ನುವುದು ಸುಳ್ಳು. ಗಾಢವಾಗಿ ಏನನ್ನೋ ಕಟ್ಟಿಕೊಡಲು ಹೊರಟಾಗ ಓದುವ ಕುತೂಹಲ ಉಳಿಸಿಕೊಳ್ಳುವುದು ಕಷ್ಟ.

ಕಾದಂಬರಿಗೆ ಅಪಾರ ಸೊಗಸಾದ ಮುಖಪುಟ ಮಾಡಿದ್ದಾರೆ. ಗೆಳೆಯ ಬಿ ಸುರೇಶ್ ಪ್ರಕಟಿಸುವ ಸಾಹಸ ಮಾಡುತ್ತಿದ್ದಾರೆ. ಕಾದಂಬರಿಗೆ ಬಿಡುಗಡೆಯಿಲ್ಲ. ಪುಸ್ತಕ ಸಾಹಿತ್ಯ ಸಮ್ಮೇಳನದ ಹೊತ್ತಿಗೆ ಪುಸ್ತಕದಂಗಡಿಗಳಲ್ಲಿ ಸಿಗುತ್ತದೆ.

ಮುಂದಿನದು ದೇವರಾ ಚಿತ್ತ.

-ಜೋಗಿ

Saturday, December 1, 2007

ಓದುಗ ಪ್ರಭು ಮತ್ತು ಲೇಖಕ ಮಹಾಶಯ!

ಮೊನ್ನೆ ಹೀಗೊಬ್ಬರು ವಾದಿಸಿದರು;
ಓದುಗರು ಮುಖ್ಯ, ಓದುಗರೇ ಸರ್ವಸ್ವ, ಓದುಗರು ದೇವರು, ಓದುಗ ಆತ್ಮಬಂಧು ಅಂತೆಲ್ಲ ಅನೇಕ ಕತೆಗಾರರು ಹೇಳುತ್ತಿರುತ್ತಾರೆ. ನಟರು ಪ್ರೇಕ್ಷಕರ ತೀರ್ಮಾನವೇ ಅಂತಿಮ ಅನ್ನುತ್ತಾರೆ. ಪ್ರೇಕ್ಷಕ ಪ್ರಭು ಅಂತಾರೆ, ಪ್ರೇಕ್ಷಕರನ್ನು ದೇವರು ಅಂತ ಕರೆಯುತ್ತಾರೆ. ಓದುಗರನ್ನೋ ಪ್ರೇಕ್ಷಕರನ್ನೋ ಅಷ್ಟೆತ್ತರದ ಸ್ಥಾನದಲ್ಲಿ ಕೂರಿಸುವುದು ಈ ಬರಹಗಾರರ, ನಟರ ತಂತ್ರ ಅಲ್ಲವೇ? ಎಷ್ಟೇ ಓಲೈಸಿದರೂ ಪೂಸಿ ಹೊಡೆದರೂ ಮುದ್ದಾಡಿದರೂ ಓದುಗ ತನಗೆ ಇಷ್ಟವಾಗದ ಕೃತಿಯನ್ನೇನೂ ಓದುವುದಿಲ್ಲ.
ಅಲ್ಲದೇ ಓದುಗನಿಗೆ ಓದುವುದರಿಂದ ಮನರಂಜನೆ ಸಿಗುತ್ತದೆ ಎಂದು ಓದುತ್ತಾನೆ. ಅವನ ಜ್ಞಾನ ಹೆಚ್ಚಾಗಲಿ ಅಂತ ಓದುತ್ತಾನೆ, ಲೇಖಕ ತನಗೆ ಅನ್ನಿಸಿದ್ದನ್ನೇ ಹೇಳುತ್ತಾನೆ ಎಂದು ಓದುತ್ತಾನೆ. ತನ್ನಿಷ್ಟದ ಗಾಯಕನ ಹಾಡು ಕೇಳುತ್ತಾನೆ. ಅಂದ ಮೇಲೆ ಓದುಗನನ್ನು ಹಾಡಿ ಹೊಗಳುವುದರಲ್ಲಿ ಏನರ್ಥ?
ಲಂಕೇಶರು ಯಾವುದೋ ಒಂದು ಸಂದರ್ಭದಲ್ಲಿ ನೀನೊಬ್ಬ ಜುಜುಬಿ ಓದುಗ’ ಅಂದಿದ್ದು ಸರಿಯಾಗಿಯೇ ಇದೆ.
ಅವರ ವಾದ ತಪ್ಪೋ ಸರಿಯೋ ಎನ್ನುವುದಕ್ಕಿಂತ ಹಾಗೆ ಹೇಳಿದವರು ಲೇಖಕರಾಗಿರಲಿಲ್ಲ. ಅವರು ಒಳ್ಳೆಯ ಓದುಗ. ಹೊಸ ಪುಸ್ತಕಗಳನ್ನು ಕೊಂಡು ಓದುತ್ತಾರೆ. ತನಗಿಷ್ಟವಾದದ್ದನ್ನು ಮೆಚ್ಚುತ್ತಾರೆ. ಯಾವತ್ತೂ ಲೇಖಕರ ಹತ್ತಿರ ಹೋದವರೇ ಅಲ್ಲ. ನಿಮ್ಮ ಪುಸ್ತಕ ಚೆನ್ನಾಗಿದೆ ಅಂತ ಹೇಳಿದವರೂ ಅಲ್ಲ. ನಾನೊಬ್ಬ ಅಜ್ಞಾತ ಓದುಗ. ಲೇಖಕನೂ ಅಜ್ಞಾತನಾಗೇ ಇರಬೇಕು. ನಾವು ಪರಸ್ಪರ ಕೃತಿಯ ಮೂಲಕ ಭೇಟಿಯಾದರೆ ಸಾಕು ಅನ್ನುವುದು ಅವರ ನಿಲುವು.
ಈ ಮಾತು ಚರ್ಚೆಗೆ ಬಿತ್ತು. ಅನೇಕರು ಇದನ್ನು ಒಪ್ಪಲಿಲ್ಲ. ಓದುಗರು ದೇವರು ಎನ್ನುವುದು ನಿಜ. ಅವರಿಲ್ಲದೇ ಹೋದರೆ ನೀವು ಯಾರಿಗೋಸ್ಕರ ಬರೆಯುತ್ತೀರಿ ಅಂತ ಮತ್ತೊಬ್ಬರು ವಾದಿಸಿದರು. ಓದುಗರು ಇರುವುದರಿಂದಲೇ ಲೇಖಕರಿಗೆ ಬರೆಯುವುದಕ್ಕೆ ಸ್ಪೂರ್ತಿ ಎಂದು ಇನ್ನೊಬ್ಬರು ಹೇಳಿದರು. ಮಾತಿಗೆ ರಂಗೇರಿತು.
ಓದುಗರಿಲ್ಲದೇ ಹೋದರೆ ಯಾರಿಗೆ ಬರೆಯುತ್ತೀರಿ ಅನ್ನುವುದು ಒಳ್ಳೆಯ ಪ್ರಶ್ನೆ. ಆದರೆ ಲೇಖಕ ಬರೆದಾಕ್ಷಣ ಓದುಗರು ಅದನ್ನು ಓದುತ್ತಾರೆ ಅಂತ ಏನೂ ಖಾತ್ರಿ. ಆತನ ಕೃತಿ ಚೆನ್ನಾಗಿದ್ದರೆ ಮಾತ್ರ ಕೊಳ್ಳುತ್ತಾನೆ. ಲೇಖಕ ಬಡವ, ಒಳ್ಳೆಯವನು, ಕುಡುಕನಲ್ಲ, ಸಭ್ಯ, ದಿನಾ ಸ್ನಾನ ಮಾಡುತ್ತಾನೆ, ಕರುಣಾಳು- ಅನ್ನುವ ಕಾರಣಕ್ಕೆ ಯಾರೂ ಕೆಟ್ಟ ಕೃತಿಯವನ್ನು ಕೊಳ್ಳುವುದಿಲ್ಲ. ಕೆಟ್ಟ ಕೃತಿಕಾರ ಒಳ್ಳೆಯ ಮನುಷ್ಯನಾಗಿರಬಹುದು. ಒಳ್ಳೆಯ ಕೃತಿಕಾರ ಕೆಟ್ಟವನಾಗಿರಬಹುದು. ಎರಡನ್ನೂ ನೀವು ಮಿಕ್ಸ್ ಮಾಡುವುದು ತಪ್ಪು. ಒಳ್ಳೆ ಲೇಖಕನಾಗಿರುವುದು ಬೇರೆ, ಒಳ್ಳೇ ಮನುಷ್ಯನಾಗಿರುವುದು ಬೇರೆ. ಲೇಖಕ ಹೆಂಡತಿಯನ್ನು ಹೊಡೆಯುತ್ತಾನಾ, ಅಪ್ಪ ಅಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಅನ್ನುವುದೆಲ್ಲ ಬೇರೆ ಮಾತು. ಅವನ ಕೃತಿಯಷ್ಟೇ ನಮಗೆ ಮುಖ್ಯ. ಉಳಿದಂತೆ ಅವನು ಏನಾದರೂ ಮಾಡಿಕೊಳ್ಳಲಿ ಎಂದು ಇವರು ಪಟ್ಟು ಹಿಡಿದರು.
ಇದಕ್ಕಿರುವ ಆಯಾಮಗಳನ್ನು ಲೆಕ್ಕ ಹಾಕಿನೋಡಿ. ತಾನು ಸಮಾಜವಾದಿ ಅಂತ ಹೇಳಿಕೊಳ್ಳುವ ಲೇಖಕನೊಬ್ಬ ಕಾರಿನಲ್ಲಿ ಓಡಾಡುತ್ತಾನೆ. ಮಾನವತಾವಾದಿ ಅನ್ನಿಸಿಕೊಂಡವನು ಮನೆಯಲ್ಲಿ ಕ್ರೂರಿಯಾಗಿರುತ್ತಾನೆ. ಅವನನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಹಿಂಜರಿಯುತ್ತದೆ. ಅವನನ್ನು ಸೋಗಲಾಡಿ ಎಂದು ಮನಸ್ಸು ಹೇಳುತ್ತದೆ.
ಆದರೆ ಅವನ ಕೃತಿಗಳನ್ನು ಓದುವುದಕ್ಕೆ ಇದರಿಂದೇನಾದರೂ ತೊಂದರೆ ಆಗುತ್ತದಾ? ರಾಮಾಯಣ ಬರೆದ ವಾಲ್ಮೀಕಿಯ ಬಗ್ಗೆ ನಮಗೆ ಗೊತ್ತಿರುವ ಕತೆಗಳೆಲ್ಲ ನಿಜವಾ? ವೇದವ್ಯಾಸರು ಹೇಗಿದ್ದರು? ಕುಮಾರವ್ಯಾಸನ ಜೀವನ ಹೇಗಿತ್ತು? ಅವನು ತನ್ನವರನ್ನು ಚೆನ್ನಾಗಿ ನೋಡಿಕೊಂಡಿದ್ದನೇ?
ಕಾಲಾಂತರದಲ್ಲಿ ಉಳಿಯುವುದು ಕೃತಿಯೊಂದೇ. ಎಲ್ಲಾ ಕ್ರೌರ್ಯವನ್ನೂ ನುಂಗಿ ಹಾಕುತ್ತದೆ ಪ್ರತಿಭೆ. ಆ ಪ್ರತಿಭೆಯಿಂದ ಹೊರಹೊಮ್ಮಿದ ಕೃತಿ ನಮಗೆ ಕೊಡುವ ಸಂತೋಷ.
ಇಲ್ಲಿಗೆ ಮಾತು ಮತ್ತೆಲ್ಲಿಗೋ ಹೊರಳಿದ ಹಾಗಾಯಿತು ಅಂದುಕೊಂಡು ಮತ್ತೆ ಮೂಲಕ್ಕೇ ಬಂದರೆ ಯಾವ ಅಭಿಮಾನಿ ಕೂಡ ಅಭಿಮಾನಕ್ಕೆಂದು ಸಿನಿಮಾ ನೋಡುವುದಿಲ್ಲ. ಹಿಡಿಸದೇ ಹೋದರೆ ಎರಡನೇ ಸಾರಿ ನೋಡುವುದಿಲ್ಲ. ಸೂಪರ್‌ಸ್ಟಾರ್ ರಜನೀಕಾಂತ್ ಚಿತ್ರಗಳು ಕೂಡ ಸೋತುಹೋಗಿವೆ. ಟಾಲ್‌ಸ್ಟಾಯ್ ಬರೆದದ್ದರಲ್ಲೂ ಮೆಚ್ಚಲಾಗದ್ದು ಸಾಕಷ್ಚಿದೆ. ಹೀಗಾಗಿ ಓದುಗನನ್ನು ಕಲಾವಿದ, ಕೃತಿಕಾರ ತನ್ನ ಕೃತಿಯಿಂದ ಮೆಚ್ಚಿಸಬೇಕೇ ಹೊರತು ಇನ್ನಾವುದರಿಂದಲೂ ಅಲ್ಲ.
ಅದು ಸರಿ, ಆದರೆ ಓದುಗ ತನ್ನ ಪಾಲಿಗೆ ಏನೇನೂ ಅಲ್ಲ ಅಂತ ಕೃತಿಕಾರ ದಾರ್ಷ್ಟ್ಯದಿಂದ ಹೇಳಿಕೊಳ್ಳಬಹುದೇ? ಅದರ ಅವಶ್ಯಕತೆ ಇಲ್ಲ. ಅಂಥ ಪ್ರಮೇಯವೇ ಬರುವುದಿಲ್ಲ. ಓದುಗ ಮೊಂಡು ಹಿಡಿದು ಜಗಳಕ್ಕೆ ಬಂದು ನಾನೇ ನಿನ್ನ ಓದುಗ, ನಿನ್ನನ್ನು ಉದ್ಧರಿಸಿದವನು ನಾನೇ ಎಂದಾಗ ಅಂಥ ಮಾತು ಬರಬಹುದೇ ವಿನಾ, ಓದುಗ ಮತ್ತು ಲೇಖಕರ ನಡುವೆ ಅದನ್ನು ಮೀರಿದಂಥ ಸಂಬಂಧ ಇರಲಾರದು, ಇರಲೂಬಾರದು. ಪ್ರತಿಯೊಬ್ಬ ಪ್ರತಿಭಾವಂತನೂ ತನ್ನ ತನ್ನ ಮಾಧ್ಯಮದ ಮೂಲಕವೇ ಪ್ರಕಟಗೊಳ್ಳುವುದು ಸರಿಯಾದ ಕ್ರಮ. ನಟ ನಟನೆಯ ಮೂಲಕ, ನಾಟಕಕಾರ ಮತ್ತು ನಿರ್ದೇಶಕ ನಾಟಕ, ಸಿನಿಮಾಗಳ ಮೂಲಕ, ಗಾಯಕ ಹಾಡಿನ ಮೂಲಕ.. ಇವರಿಗೆಲ್ಲ ತಮ್ಮನ್ನು ತೋರ್ಪಡಿಸಿಕೊಳ್ಳುವುದಕ್ಕೇ ಮತ್ತೊಂದು ಮೈ ಇದೆ. ಓದುಗರಿಗೆ ಸ್ವೀಕರಿಸುವುದಕ್ಕೆ ಕೂಡ. ಅಲ್ಲಿಗೆ, ಬೇರೆ ಯಾವುದೇ ಥರದ ಮುಖಾಮುಖಿ ಅಗತ್ಯವಿಲ್ಲ ಎಂದ ಹಾಗಾಯಿತಲ್ಲ.
ಅಷ್ಟಕ್ಕೂ ಮೀರಿ, ಈ ಕತೆಯ ಹಿನ್ನೆಲೆ ಏನು, ಈ ಕೃತಿ ಹುಟ್ಟಿದ ಸಂದರ್ಭ ಯಾವುದು, ಇದನ್ನು ಏತಕ್ಕಾಗಿ ಬರೆದಿರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕುತೂಹಲಕ್ಕೆ, ಹರಟೆಯ ಸಂತೋಷಕ್ಕೆ ಕೇಳಬಹುದು. ಕಾಲಾಂತರದಲ್ಲಿ ಅವಕ್ಕೆಲ್ಲ ಪ್ರಾಮುಖ್ಯತೆ ಇಲ್ಲ. ವಿಮರ್ಶೆಯೂ ಅಷ್ಟೇ, ಕಾಲಕಾಲಕ್ಕೆ ಒಂದು ಕೃತಿ ಹೊಸ ವಿಮರ್ಶೆಯೊಂದಿಗೆ ಹಾಜರಾಗದೇ ಹೋದರೆ ವಿಮರ್ಶೆ ಕೂಡ ಸ್ವೀಕಾರಾರ್ಹವಲ್ಲ. ಯಾಕೆಂದರೆ ವಿಮರ್ಶೆ ಎನ್ನುವುದು ವರ್ತಮಾನ ಒಂದು ಕೃತಿಯ ಜೊತೆ ನಡೆಸುವ ಮುಖಾಮುಖಿ.
ಇವೆಲ್ಲ ಯೋಚನೆಗಳ ಜೊತೆಗೆ ರಾಘವಾಂಕ ಹೇಳಿರುವ ಮಾತುಗಳನ್ನು ಓದೋಣ:
ಅವನು ಹೀಗೆ ಶುರುಮಾಡುತ್ತಾನೆ. ಇದು ಕಥಾ ಬೀಜ, ಇದನ್ನು ಬಿತ್ತಿ ಬೆಳೆಸಿದ್ದೇನೆ. ಇದೀಗ ಕಾವ್ಯವೃಕ್ಷವಾಗಿದೆ. ಇದಕ್ಕೆ ಪುಳಕದ ಗೊಬ್ಬರ ತಳಿದು, ಆನಂದ ಜಲ ಎರೆದು ಸಲಹುದು ರಸಿಕರ ಕೆಲಸ. ರಸದಲ್ಲಿ, ಅರ್ಥದಲ್ಲಿ, ಭಾವದಲ್ಲಿ, ಅಲಂಕಾರದಲ್ಲಿ, ಹೊಸ ಶೈಲಿಯಲ್ಲಿ, ಬಂಧದಲ್ಲಿ, ಲಕ್ಷಣದಲ್ಲಿ, ಪದವಿಸರದಲ್ಲಿ ತಪ್ಪುಗಳಿದ್ದರೆ ಅದನ್ನು ತಿದ್ದುವುದು, ಕೊಂಡಾಡಿ ಲಾಲಿಸಿ ಕೇಳುವುದು ನಿಮ್ಮ ಹೊಣೆ. ನಾನು ನಿಮ್ಮ ಕಂದ, ನನ್ನಲ್ಲಿ ಕುಂದಿಲ್ಲ ಎಂದು ಭಾವಿಸಬೇಡಿ ಎಂದು ಕೇಳಿಕೊಳ್ಳುತ್ತಾನೆ ಆತ.
ತಪ್ಪುಗಳಿರಬಹುದು ಅನ್ನುವುದಕ್ಕೆ ಅವನು ಕೊಡುವ ಮತ್ತೊಂದು ಕಾರಣ ಇದು:
ನಡೆವರೆಡಹದೆ ಕುಳಿತರೆಡಹುವರೆ ಕಾವ್ಯಮಂ
ನಡೆಸುವಾತಂ ರಸಾವೇಶ ಮರಹಾಲಸ್ಯ
ವೆಡೆಗೊಡಲು ತಪ್ಪುಗಲ್ಲದೆ ಕಾವ್ಯಕರ್ತೃಂ ತಪ್ಪುವನೆವೊಂದೆರಡೆಡೆಯೊಳು.
ತಪ್ಪುಗಳಿರಬಹುದು. ಆದರೆ ಅದನ್ನೇ ಹಿಡಿದು ಸಾಧಿಸಬೇಡಿ. ಒಳ್ಳೆಯ ಅಂಶಗಳು ಏನಿವೆಯೋ ಅದನ್ನು ನೋಡಿ. ಹಾಗೆ ಮಾಡೋದಕ್ಕೆ ನಿಮಗೇನು ರೋಗ? ಕವಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳದ ನೀರಸರನ್ನು ಯಾಕಾದರೂ ಸೃಷ್ಟಿಸಿದನೋ ಏನೋ ಆ ಬ್ರಹ್ಮ?
ಅಲ್ಲಿಂದಾಚೆ ಅವನ ಸಿಟ್ಟು ಸಹಕವಿಗಳತ್ತ ತಿರುಗುತ್ತದೆ:
ವ್ಯಾಕರಣ ಪರಿಣತನೂ ಅಲಂಕಾರ ಪರಿಚಿತನೂ ಅನೇಕ ರಸ ನಿಪುಣನೂ ಅಭಿದಾನ ಪ್ರವೀಣನೂ ಕಲಾಕುಶಲನೂ ಆದವನು ಕವಿ. ಅವನ ಎದುರು ಏನೂ ಗೊತ್ತಿಲ್ಲದ ಕಾಕುದುರ್ಬೋಧಕರೂ ಕವಿ ಎಂದು ಕರೆಸಿಕೊಂಡರೆ ಮಹಾಕವಿಯ ಖ್ಯಾತಿಗೇನೂ ಕುಂದು ಬರುವುದಿಲ್ಲ. ಜಲಶಯನ ವಿಷ್ಣು ಹರಿ ಎಂದು ಕರೆಸಿಕೊಳ್ಳುವ ಹಾಗೇ, ನೀರಲ್ಲಿರುವ ಮೊಸಳೆಯನ್ನೂ ಹರಿ ಅನ್ನುತ್ತಾರೆ. ಆದರೆ ಈ ಹರಿ, ಆ ಹರಿಯನ್ನು ಕೊಂದಿದ್ದು ಗೊತ್ತಿದೆ ತಾನೇ?
ಅಲ್ಲಿಂದ ಮುಂದೆ ಅವನು ಈ ಲೇಖನದ ಆರಂಭದಲ್ಲಿ ಪ್ರಸ್ತಾಪವಾದ ಮಾತಿಗೆ ಬರುತ್ತಾನೆ:
ಕವಿಯಧಿಕನಿರ್ದೊಡೆ ಕೇಳ್ವರಿಲ್ಲದೊಡೆ ಗಾ
ನವಿನೋದಿಯಿರ್ದೊಡೇಂ ಜಾಣರಿಲ್ಲದೊಡೆ ಜಾ
ತಿವಿದಗ್ಧೆಯಿದ್ದೊಡೇಂ ಸುವಿಟರಿಲ್ಲದೊಡೆ ಪೊಸ ಪೂಮಾಲೆಯಿದ್ದೊಡೇನು
ತವೆ ಮುಡಿವರಿಲ್ಲದೊಡೆ ನಾನಾ ಕಳಾನ್ವಿತರ
ನಿವಹವಿದ್ದೇನಾ ಕಲಾಪ್ರೌಢರಿಲ್ಲದೊಡೆ
ಕೇಳುವವರಿಲ್ಲದೇ ಹೋದರೆ, ಶ್ರೇಷ್ಠ ಕವಿಯಿದ್ದೇನು ಪ್ರಯೋಜನ? ಜಾಣ ಶೋತೃಗಳಿಲ್ಲದೇ ಇದ್ದಾಗ ಗಾನವಿನೋದಿ ಇದ್ದರೇನಂತೆ? ಮುಡಿಯುವವರೇ ಇಲ್ಲದಿದ್ದಾಗ ಹೂಮಾಲೆ ಇದ್ದು ಏನು ಉಪಯೋಗ? ಕಲಾಪ್ರೌಡರು ಇಲ್ಲದೇ ಇದ್ದಾಗ ಕಲಾವಿದರಿದ್ದು ಏನು ತಾನೇ ಮಾಡಲು ಸಾಧ್ಯ?
ವೈಯನ್ಕೆ ಹೇಳುತ್ತಿದ್ದ ಮಾತೊಂದು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇದ್ದಂತಿದೆ:
ಸಕ್ಕರೆ ಸಿಹಿಯೋ ಕಹಿಯೋ ಯಾರಿಗೆ ಗೊತ್ತು. ಅದು ನಾಲಗೆಯನ್ನು ಸೇರಿ ಜೊಲ್ಲಿನ ಜೊತೆ ಬೆರೆತಾಗಲೇ ಅದರ ರುಚಿ ಗೊತ್ತಾಗುವುದು. ಕೃತಿಯೂ ಅಷ್ಟೇ, ಶ್ರೇಷ್ಠವೋ ಅಲ್ಲವೋ ನಿರ್ಧಾರವಾಗುವುದು ಓದುಗರ ಸನ್ನಿಧಿಯಲ್ಲೇ. ಓದುಗ ಒಳ್ಳೇ ಕೃತಿಯನ್ನೂ ಓದುತ್ತಾನೆ, ಕೆಟ್ಟದ್ದನ್ನೂ ಓದುತ್ತಾನೆ. ಒಳ್ಳೆಯ ಕೃತಿ ಉಳಿಯುತ್ತದೆ. ಕೆಟ್ಟದ್ದು ಅಳಿಯುತ್ತದೆ.
ಅಳಿದ ಮೇಲೆ!