Monday, August 25, 2008

ಶ್ರೀನಿಧಿಯ ಕಥಾ ಸಂಕಲನ

ನನ್ನನ್ನು ನೀವು ಚಿಕ್ಕಂದಿನಿಂದಲೂ ನೋಡಿದ್ದೀರಿ. ಬಂದು ನಾಲ್ಕು ಮಾತಾಡಿ ಹರಸಿದರೆ ತುಂಬ ಖುಷಿಯಾಗುತ್ತೆ. ಬೇರೆ ಲೇಖಕರ ಕೈಲೋ ಸಿನಿಮಾ ನಟರ ಕೈಲೋ ಬಿಡುಗಡೆ ಮಾಡಿಸಬಹುದು. ಆದರೆ ಅವರಿಗೂ ನನಗೂ ವ್ಯಾವಹಾರಿಕ ಸಂಬಂಧ. ನಿಮ್ಮಷ್ಟು ಪ್ರೀತಿಯಿಂದ ಯಾರೂ ಮಾತಾಡೋದಕ್ಕೆ ಸಾಧ್ಯವಿಲ್ಲ. ನೀವು ದಯವಿಟ್ಟು ಒಪ್ಪಿಕೊಳ್ಳಬೇಕು.
ಶ್ರೀನಿಧಿ ಬರೆದ ಪತ್ರವನ್ನು ರಾಮಣ್ಣ ಮೇಷ್ಟರು ನಾಲ್ಕನೇ ಸಾರಿ ಓದಿದರು. ಅದರ ಜೊತೆಗೇ ಆತ ಕಥಾಸಂಕಲನದ ಕರಡು ಪ್ರತಿಯನ್ನೂ ಕಳಿಸಿಕೊಟ್ಟಿದ್ದ. ತನ್ನ ಕೈಯಲ್ಲಿ ಪೆಟ್ಟು ತಿಂದೂ ನಗುತ್ತಿದ್ದ ಶ್ರೀನಿಧಿ ಕಣ್ಮುಂದೆ ಬಂದ. ಅವನನ್ನು ನೋಡಿ ಇಪ್ಪತ್ತು ವರುಷವಾದರೂ ಆಗಿರಬೇಕು. ತಾನು ಅವನಿಗೆ ಪಾಠ ಹೇಳಿದ್ದು ಎಂಟನೇ ತರಗತಿಯಲ್ಲಿ. ಆಗ ಶ್ರೀನಿಧಿ ಮಹಾ ತಂಟೆಕೋರ ಹುಡುಗನಾಗಿದ್ದ. ಕ್ಲಾಸಿಗೂ ಸರಿಯಾಗಿ ಬರುತ್ತಿರಲಿಲ್ಲ. ಜೂನಿಯರ್ ಕಾಲೇಜಲ್ಲಿ ವಾರ್ಷಿಕೋತ್ಸವದ ದಿನ ನಡೆದ ಗಲಾಟೆಯಲ್ಲಿ ಅವನೂ ಭಾಗಿಯಾಗಿದ್ದನಲ್ಲವೇ ಎಂದು ರಾಮಣ್ಣ ನೆನಪಿಸಿಕೊಳ್ಳಲು ಯತ್ನಿಸಿದರು.
ಹೇಗಿದ್ದ ಹುಡುಗ ಹೇಗಾದ ಅಂತ ರಾಮಣ್ಣ ಮೇಷ್ಟರಿಗೆ ಖುಷಿಯಾಯಿತು. ತಮ್ಮ ವಿದ್ಯಾರ್ಥಿಗಳ ಪೈಕಿ ಸಾಧನೆ ಮಾಡಿದವನು ಅವನೊಬ್ಬನೇ ಇರಬೇಕು. ಅಂತೂ ದೊಡ್ಡ ಹೆಸರು ಮಾಡಿದ್ದಾನೆ. ಅದಕ್ಕಿಂತ ಹೆಚ್ಚಾಗಿ ತನ್ನನ್ನಿನ್ನೂ ಮರೆತಿಲ್ಲ ಎಂದು ರಾಮಣ್ಣ ಮೇಷ್ಟರು ಕೃತಜ್ಞರಾದರು. ತಕ್ಷಣವೇ ಶ್ರೀನಿಧಿಗೊಂದು ಪತ್ರ ಬರೆದು ತಮ್ಮ ಸಮ್ಮತಿಯನ್ನೂ ಸೂಚಿಸಿದರು.
****
ಜುಲೈ ಹನ್ನೆರಡಕ್ಕೆ ನಾನು ಊರಲ್ಲಿರೋಲ್ಲ. ಬೆಂಗಳೂರಿಗೆ ಹೋಗ್ತಿದ್ದೀನಿ. ಅಲ್ಲಿ ನನ್ನ ವಿದ್ಯಾರ್ಥಿ, ನಮ್ಮೂರಿನವನೇ, ನಿಮಗೂ ಗೊತ್ತಿರಬಹುದು, ಶ್ರೀನಿಧಿ ಅಂತ, ಅವನ ಕಥಾಸಂಕಲನ ಬಿಡುಗಡೆ. ಈಗ ಬೆಂಗಳೂರಲ್ಲಿ ದೊಡ್ಡ ಹೆಸರು ಮಾಡಿದ್ದಾನೆ ಎಂದು ಮಾರನೆ ದಿನದಿಂದ ಕೇಳಿದವರಿಗೂ ಕೇಳದೇ ಇದ್ದವರಿಗೂ ರಾಮಣ್ಣ ಹೇಳಿಕೊಂಡು ಬಂದರು.
ರಾಮಣ್ಣ ಮೇಷ್ಟರು ಅದೇ ಮೊದಲ ಬಾರಿಗೆ ಕಥಾಸಂಕಲನವೊಂದನ್ನು ಬಿಡುಗಡೆ ಮಾಡುವವರಿದ್ದರು. ಅವರು ಜೂನಿಯರ್ ಕಾಲೇಜಿನಲ್ಲಿದ್ದಾಗ ಕೂಡ ಅವರನ್ನು ಯಾರೂ ಪುಸ್ತಕ ಬಿಡುಗಡೆಯಂಥ ಸಮಾರಂಭಗಳಿಗೆ ಆಹ್ವಾನಿಸಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಲಯನ್ಸ್ ಕ್ಲಬ್ಬಿನವರೋ, ಯುವಕಸಂಘದವರೋ ಅವರನ್ನು ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭಕ್ಕೆ ಕರೆಸಿದ್ದು ಬಿಟ್ಟರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡದ್ದೇ ಇಲ್ಲ.
ನಿವೃತ್ತನಾಗಿ ಹನ್ನೆರಡು ವರುಷಗಳ ನಂತರ ಇದ್ದಕ್ಕಿದ್ದ ಹಾಗೆ ಒದಗಿಬಂದ ಅವಕಾಶದಿಂದ ರಾಮಣ್ಣ ಮೇಷ್ಟರಿಗೆ ರೋಮಾಂಚನವಾಯಿತು. ಶ್ರೀನಿಧಿಯ ಕಥಾಸಂಕಲನದ ಬಗ್ಗೆ ಸುದೀರ್ಘವಾಗಿ ಮಾತನಾಡಬೇಕು ಅಂದುಕೊಂಡರು. ಕ್ಯಾಲೆಂಡರ್ ತೆಗೆದು, ಸಮಾರಂಭಕ್ಕೆ ಎಷ್ಟು ದಿನ ಉಳಿದಿದೆ ಎಂದು ಲೆಕ್ಕಹಾಕಿದರು. ಪರೀಕ್ಷೆಗೆ ಸಿದ್ಧನಾಗುವ ಒಳ್ಳೆಯ ವಿದ್ಯಾರ್ಥಿಯ ಹಾಗೆ ಗಂಡ ಮಾಡಿಕೊಳ್ಳುತ್ತಿರುವ ಸಿದ್ಧತೆ ನೋಡಿ, ಸೀತಾಲಕ್ಷ್ಮಿಗೆ ಆಶ್ಚರ್ಯವಾಯಿತು.
****
ಶ್ರೀನಿಧಿಯ ಅಷ್ಟೂ ಕತೆಗಳನ್ನು ಒಂದೇ ರಾತ್ರಿ ಕುಳಿತುಕೊಂಡು ರಾಮಣ್ಣ ಮೇಷ್ಟರು ಓದಿಯೇ ಓದಿದರು. ಆಮೇಲೇ ಅವರಿಗೆ ಗಾಬರಿಯಾದದ್ದು. ಆ ಕತೆಗಳನ್ನು ಹೇಗೆ ವಿಮರ್ಶಿಸಬೇಕು ಅನ್ನುವುದು ಅವರಿಗೆ ಹೊಳೆಯಲೇ ಇಲ್ಲ. ರಾಮಣ್ಣ ಮೇಷ್ಟರು ಕನ್ನಡ ಸಣ್ಣಕಥೆಗಳ ಪ್ರಕಾಂಡ ಓದುಗರೇನೂ ಆಗಿರದೇ ಹೋದರೂ, ಸಾಕಷ್ಟು ಕತೆಗಳನ್ನು ತರಂಗ, ಸುಧಾ, ಮಯೂರ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಓದಿದ್ದರು. ಮಾಸ್ತಿ, ಅನಂತಮೂರ್ತಿ, ರಾಮಚಂದ್ರ ಶರ್ಮ, ಶ್ರೀಕೃಷ್ಣ ಆಲನಹಳ್ಳಿ ಮುಂತಾದವರ ಕತೆಗಳನ್ನು ಓದಿಕೊಂಡಿದ್ದರು.
ಶ್ರೀನಿಧಿಯ ಕತೆಗಳು ಅವರು ಓದಿದ ಯಾವ ಕತೆಗಳ ಹಾಗೂ ಇರಲಿಲ್ಲ. ಕೆಲವು ಕತೆಗಳಲ್ಲಿ ಪಾತ್ರಗಳೇ ಇರಲಿಲ್ಲ. ಕೆಲವು ಕತೆಗಳಲ್ಲಿ ಘಟನೆಗಳೇ ಇರಲಿಲ್ಲ. ಕೊನೆಯ ಕತೆಯಂತೂ ಎಷ್ಟು ಸಾರಿ ಓದಿದರೂ ಅವರಿಗೆ ಒಂದಿಷ್ಟು ಅರ್ಥವಾಗಲಿಲ್ಲ. ಆ ಕತೆಯ ಶೀರ್ಷಿಕೆ ‘ವಿಕ್ಷಿಪ್ತ’ಕ್ಕೂ ಕತೆಗೂ ಸಂಬಂಧವೇನು ಅನ್ನುವುದು ಅವರಿಗೆ ಹೊಳೆಯಲೇ ಇಲ್ಲ.
ಶ್ರೀನಿಧಿ ಇದನ್ನು ತನಗೆ ಕೊಟ್ಟು ತನ್ನನ್ನು ಪರೀಕ್ಷೆ ಮಾಡುತ್ತಿದ್ದಾನೇನೋ ಅನ್ನುವ ಅನುಮಾನವೂ ಅವರಿಗೆ ಬಂತು. ಕತೆಗಳ ಬಗ್ಗೆ ಮಾತನಾಡದೇ, ಶ್ರೀನಿಧಿಯ ಕುರಿತು ನಾಲ್ಕು ಮಾತು ಹೇಳಿ ಹರಸಿ ಬರುವುದೇ ಸರಿ. ಒಳ್ಳೆಯ ಕತೆ ಬರೆದಿದ್ದಾನೆ ಎಂದು ಹೇಳಿ, ನಾಲ್ಕೈದು ಕತೆಗಳ ಹೆಸರುಗಳನ್ನು ಉದಾಹರಿಸಿ ಬಂದರೆ ಸಾಕು ಎಂದು ಮನಸ್ಸಿನಲ್ಲೇ ಅಂದುಕೊಂಡು ರಾಮಣ್ಣ ಮೇಷ್ಟರು ನಿಸೂರಾದರು.
ಅವರ ನೆಮ್ಮದಿ ತುಂಬ ಕಾಲ ಬಾಳಿಕೆ ಬರಲಿಲ್ಲ. ಮಾರನೇ ದಿನವೇ ಪೋಸ್ಟ್ ಮ್ಯಾನ್ ದುಗ್ಗಪ್ಪ ರಾಮಣ್ಣನ ಹೆಸರಿಗೆ ಬಂದ ಪೋಸ್ಟ್ ತಂದುಕೊಟ್ಟ. ಅದರಲ್ಲಿ ಶ್ರೀನಿಧಿ ಕಳಿಸಿದ ಕವರ್ರೂ ಒಂದಿತ್ತು. ಅದನ್ನು ರಾಮಣ್ಣ ಮೇಷ್ಟರು ಪ್ರೀತಿಯಿಂದ ಸಾವಕಾಶ ಬಿಡಿಸಿ ಓದಿಕೊಂಡರು. ಅದರಲ್ಲಿದ್ದ ವಿವರಗಳ ಪೈಕಿ ಅವರನ್ನು ಕಂಗೆಡೆಸಿದ್ದು ಒಂದೇ ಒಂದು ಸಾಲು. ಕೃತಿ ಬಿಡುಗಡೆ: ಡಾ. ಪರಶಿವಮೂರ್ತಿ. ಖ್ಯಾತ ಸಾಹಿತಿ. ಕೃತಿಯ ಬಗ್ಗೆ ಮಾತು: ಮೇಲಂತಬೆಟ್ಟು ರಾಮಣ್ಣ, ನಿವೃತ್ತ ಶಿಕ್ಷಕ.
ಶ್ರೀನಿಧಿಯ ಕತೆಗಳನ್ನು ಓದಿ ಅರ್ಥಮಾಡಿಕೊಂಡು, ಘನತೆಯಿಂದ ಮಾತಾಡದೇ ಬೇರೆ ದಾರಿಯಿಲ್ಲ ಅನ್ನುವುದು ರಾಮಣ್ಣ ಮೇಷ್ಟರಿಗೆ ಖಾತ್ರಿಯಾಯಿತು. ಆವತ್ತಿಡೀ ಕುಳಿತುಕೊಂಡು ಆ ಕತೆಗಳನ್ನು ಮತ್ತೊಮ್ಮೆ ಓದಿದರು. ಅವುಗಳ ಒಳಾರ್ಥಗಳನ್ನು ಗ್ರಹಿಸುವ ಪ್ರಯತ್ನ ಮಾಡಿದರು. ಎಷ್ಟೇ ಪ್ರಯತ್ನ ಮಾಡಿದರೂ ಆ ಕತೆಗಳು ಅವರೊಳಗೆ ಇಳಿಯುತ್ತಲೇ ಇರಲಿಲ್ಲ.
ಆಗ ಅವರಿಗೆ ನೆನಪಾದದ್ದು ಮಂಗಳೂರು ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದ ಕೆ. ಟಿ. ಮಾಧವ. ಆತ ಸಣ್ಣಕತೆಗಳ ಬಗ್ಗೆ ರೀಸರ್ಚ್ ಮಾಡಿ ಡಾಕ್ಟರೇಟ್ ತಗೊಂಡಿದ್ದ ಎನ್ನುವುದನ್ನು ರಾಮಣ್ಣ ಪತ್ರಿಕೆಗಳಲ್ಲಿ ಓದಿದ್ದರು. ಹೀಗಾಗಿ ಅವನ ಹತ್ತಿರ ಮಾತಾಡುವುದೇ ಸರಿ ಎಂದುಕೊಂಡು ರಾಮಣ್ಣ ಮೇಷ್ಟರು ಮಾರನೇ ದಿನ ಹೋಗಿ ಅವನನ್ನು ಭೇಟಿಯಾದರು.
ಶ್ರೀನಿಧಿಯ ಕತೆಗಳನ್ನು ಅವನಿಗೆ ತೋರಿಸುವುದಕ್ಕೆ ಹೋಗಲಿಲ್ಲ ರಾಮಣ್ಣ. ಬದಲಾಗಿ ಈಗಿನವರ ಕತೆಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂಬ ಪೀಠಿಕೆಯೊಂದಿಗೆ ಅವರು ಮಾತು ಶುರುಮಾಡಿದರು. ಒಂದಷ್ಟು ಕತೆಗಳ ಬಗ್ಗೆ ಏನಾದರೂ ಬರೆಯೋಣ ಅಂದುಕೊಂಡಿದ್ದೆ ಎಂದರು. ಮಾಧವ ಅದಕ್ಕೆ ನನ್ನ ಡಾಕ್ಟರೇಟ್ ಗ್ರಂಥ ಸಹಾಯ ಮಾಡುತ್ತದೆ ನೋಡಿ ರಾಮಣ್ಣ ಎಂದು ಹೇಳಿ, ನಾನ್ನೂರೈವತ್ತು ರುಪಾಯಿ ತೆಗೆದುಕೊಂಡು ಆರುನೂರೈವತ್ತು ಪುಟಗಳ ಮಹಾಪ್ರಬಂಧವನ್ನು ಅವರ ಕೈಗಿಟ್ಟ.
****
ಸಣ್ಣಕತೆ ಎಂಬ ಪ್ರಕಾರವೇ ಕನ್ನಡದ್ದಲ್ಲ. ಇಂಗ್ಲಿಷ್ನಲ್ಲಿ ಶಾರ್ಟ್ ಸ್ಟೋರಿ ಎಂಬ ಪ್ರಕಾರ ಇತ್ತು. ಕನ್ನಡಕ್ಕೂ ಅದು ಬಂತು. ಕನ್ನಡದಲ್ಲಿ ಸಣ್ಣಕತೆಯನ್ನು ಪ್ರಚುರಪಡಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅವರದು ನವೋದಯದ ಶೈಲಿ, ನಂತರ ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಚಳವಳಿಗಳಲ್ಲಿ ಸಣ್ಣ ಕತೆ ಬೆಳೆಯಿತು ಮುಂತಾದ ವಿವರಗಳನ್ನು ರಾಮಣ್ಣ ಮೇಷ್ಟ್ರು ಆಸಕ್ತಿಯಿಂದ ಓದಿ ಟಿಪ್ಪಣಿ ಮಾಡಿಕೊಂಡರು. ಎಸ್ ದಿವಾಕರ್ ಹೊರತಂದಿದ್ದ ಶತಮಾನದ ಸಣ್ಣಕತೆಗಳು ಪುಸ್ತಕವನ್ನು ಕೊಂಡು ತಂದು, ದಿವಾಕರ್ ಬರೆದಿದ್ದ ಪಾಂಡಿತ್ಯ ಪೂರ್ಣ ಮುನ್ನುಡಿಯನ್ನು ಓದಿ ಬೆರಗಾದರು. ಅದನ್ನು ಓದುತ್ತಿದ್ದಂತೆ ಶ್ರೀನಿಧಿಯ ಕತೆಗಳ ಕುರಿತು ಮಾತಾಡುವುದಕ್ಕೆ ತಮಗಿರುವ ಜ್ಞಾನ ಏನೇನೂ ಸಾಲದು ಅಂತ ಅವರಿಗೆ ಅನ್ನಿಸಿಬಿಟ್ಟಿತು.
ಒಪ್ಪಿಕೊಂಡದ್ದನ್ನು ನಿರಾಕರಿಸುವ ಹಾಗೂ ಇರಲಿಲ್ಲ. ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿ ಹೋಗದೆ ಉಳಿದರೆ ಹೇಗೆ ಎಂಬ ಯೋಚನೆ ಬಂತು. ಅದೇ ಸರಿ ಅಂದುಕೊಂಡು ಮೇಷ್ಟರು ಶ್ರೀನಿಧಿಯ ಕಥಾಸಂಕಲನವನ್ನು ಎತ್ತಿ ಪಕ್ಕಕ್ಕಿಟ್ಟು ದೊಡ್ಡದೊಂದು ಬಿಡುಗಡೆ ಸಿಕ್ಕ ಆನಂದ ಅನುಭವಿಸಿದರು.
ಆದರೆ, ಆ ಆನಂದವನ್ನೂ ಅನುಭವಿಸುವುದಕ್ಕೆ ಅವರಿಗೆ ಶ್ರೀನಿಧಿ ಅವಕಾಶ ಕೊಡಲಿಲ್ಲ. ಉಪ್ಪಿನಂಗಡಿಯಿಂದ ರಾಮಣ್ಣ ಮೇಷ್ಟರನ್ನು ಕರೆದುಕೊಂಡು ಬರಬೇಕು ಅಂತ ಶ್ರೀನಿಧಿ, ಗೆಳೆಯ ಮೃತ್ಯುಂಜಯನಿಗೆ ಹೇಳಿದ್ದ. ಮೃತ್ಯುಂಜಯ ಹತ್ತನೇ ತಾರೀಖಿನಂದೇ ರಾಮಣ್ಣ ಮೇಷ್ಟ್ರ ಮನೆಗೆ ಹೋಗಿ ಹನ್ನೊಂದನೇ ತಾರೀಖು ಹತ್ತು ಗಂಟೆಗೆ ರೆಡಿಯಿರಿ ಮೇಷ್ಟ್ರೇ. ನಾನೇ ಕರೆದುಕೊಂಡು ಹೋಗುತ್ತೇನೆ. ಏಸಿ ಕಾರಲ್ಲಿ ಹೋಗೋಣ. ನಿಮಗೆ ಒಂದಿಷ್ಟೂ ಸುಸ್ತಾಗೋದಿಲ್ಲ. ಮಡಿಕೇರಿ ಮೇಲೆ ಹೋಗೋಣ. ಸಣ್ಣ ಘಾಟಿ ಅಂತ ಹೇಳಿ ಅವರನ್ನು ಕಂಗಾಲು ಮಾಡಿದ.
ಅವನು ಹೋದ ಕ್ಷಣದಿಂದ ಮೇಷ್ಟರು ನಿದ್ದೆ ಮಾಡಲಿಲ್ಲ. ಶ್ರೀನಿಧಿಯ ಕಥಾಸಂಕಲನವನ್ನು ಕಣ್ಣಲ್ಲಿ ಕಣ್ಣಿಟ್ಟು ಅಕ್ಷರಕ್ಷರ ಬಿಡಿಸಿ ಓದಿದರು. ಒಂದೊಂದು ಪದವನ್ನು ಹತ್ತು ಹತ್ತು ಸಲ ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರು. ಓದುತ್ತಲೇ, ತಾವು ಕನ್ನಡ ಸಣ್ಣಕಥಾ ಪ್ರಪಂಚದ ಕುರಿತು ಓದಿದ ಲೇಖನಗಳನ್ನು ಮನಸ್ಸಿಗೆ ತಂದುಕೊಂಡು ಟಿಪ್ಪಣಿ ಮಾಡಿಕೊಳ್ಳತೊಡಗಿದರು. ಜುಲೈ ಹತ್ತರ ರಾತ್ರಿ ಆ ಟಿಪ್ಪಣಿಯನ್ನು ಮುಂದಿಟ್ಟುಕೊಂಡು ಭಾಷಣ ಬರೆಯಲು ಕುಳಿತರು.
ಶ್ರೀನಿಧಿಯ ಕತೆಗಳಲ್ಲಿ ಅವರಿಗೆ ಅಲ್ಪಸ್ವಲ್ಪ ಅರ್ಥವಾದದ್ದು ಮಹಾಪ್ರಸ್ಥಾನ ಎಂಬ ಕತೆ. ನಲುವತ್ತನೇ ವಯಸ್ಸಿಗೆ ಮದುವೆಯಾಗುವ ಧೀರೇಂದ್ರನನ್ನು ಅವನ ಗೆಳೆಯರು ಇಪ್ಪತ್ಮೂರು ವರುಷದ ಹುಡುಗಿಯ ಜೊತ ಏಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಗೇಲಿ ಮಾಡುತ್ತಾರೆ. ಹಂತಹಂತವಾಗಿ ಹೇಗೆ ಆತ ವಿಫಲನಾಗುತ್ತಾ ಹೋಗುತ್ತಾನೆ ಎನ್ನುವುದನ್ನು ಹೇಳಿ ಅವನನ್ನು ಕಂಗಾಲಾಗಿಸುತ್ತಾರೆ. ಪ್ರಸ್ತದ ದಿನ ಅವನ ಉದ್ವೇಗ, ಆತಂಕ ಮಿತಿಮೀರುತ್ತದೆ. ಆಕೆ ಕೋಣೆಯ ಬಾಗಿಲು ತೆರೆಯುತ್ತಾಳೆ. ಒಳಗೆ ಬರುತ್ತಾಳೆ. ಮಲಗಿರುವ ಧೀರೇಂದ್ರನನ್ನು ಮುಟ್ಟುತ್ತಾಳೆ. ಧೀರೇಂದ್ರನ ಮೈ ಹಾವಿನ ಮೈಯಂತೆ ತಣ್ಣಗಿರುತ್ತದೆ.
ಅದನ್ನು ಮುಖ್ಯವಾಗಿಟ್ಟುಕೊಂಡು ಮಾತು ಆರಂಭಿಸಬೇಕು ಎಂದುಕೊಂಡು ರಾಮಣ್ಣ ಮೇಷ್ಟರು ಹದಿನೈದು ಪುಟಗಳ ಭಾಷಣ ಬರೆದೇ ಬರೆದರು. ಅದನ್ನು ತಾವೇ ಒಮ್ಮೆ ಓದಿದರು. ಓದಿ, ತನ್ನನ್ನು ಕರೆದೊಯ್ಯಲು ಬರಲಿರುವ ಮೃತ್ಯುಂಜಯನ ಕಾರಿಗೆ ಕಾಯುತ್ತಾ ಕೂತರು.
****
ಇವತ್ತು ನನ್ನ ಕಥಾಸಂಕಲನದ ಕುರಿತು ನನ್ನ ಪರಮ ಪ್ರೀತಿಯ ಗುರುಗಳಾದ ರಾಮಣ್ಣ ಮೇಷ್ಟ್ರು ಮಾತನಾಡಬೇಕಿತ್ತು. ನನ್ನ ಕತೆಗಳ ಮೇಲೆ ಅವರು ಹದಿನೈದು ಪುಟಗಳ ವಿಸ್ತೃತವಾದ ವಿಮರ್ಶೆಯನ್ನೂ ಬರೆದಿಟ್ಟಿದ್ದರು. ಅವರು ನಿನ್ನೆ ರಾತ್ರಿಯಷ್ಟೇ ದಿವಂಗತರಾದರು. ಈ ಹೊತ್ತು ನಮ್ಮೊಂದಿಗೆ ಇಲ್ಲದಿರುವ ಅವರ ಆತ್ಮಕ್ಕೆ ಚಿರಶಾಂತಿ ಕೋರೋಣ. ಈಗ ಎರಡು ನಿಮಿಷಗಳ ಮೌನ ಎಂದು ಶ್ರೀನಿಧಿ ಮಾತು ಶುರುಮಾಡಿದ.
ಕಥಾಸಂಕಲನ ಬಿಡುಗಡೆ ಮಾಡಲು ಬಂದಿದ್ದ ಪರಶಿವಮೂರ್ತಿ ಕಣ್ಣೊರೆಸಿಕೊಂಡು ಕೈಯನ್ನು ಮುಂದಕ್ಕೆ ಕಟ್ಟಿ ವಿಷಾದದ ಪರಾಕಾಷ್ಠೆ ತಲುಪಿದವರಂತೆ ಸ್ತಬ್ಧರಾಗಿ ನಿಂತರು. ಸಭಿಕರೂ ಎದ್ದುನಿಂತರು.

Thursday, August 21, 2008

ಈ ಕತ್ತಲೊಳಗೆ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ!

ನೀನು ನಂಗೆ ಬೇಕು!
ಅವಳ ದನಿಯಲ್ಲಿ ಅಪ್ಪಟ ಪ್ರಾಮಾಣಿಕತೆ ಇತ್ತು, ತೀವ್ರತೆಯಿತ್ತು. ನಂಗೂ ನೀನು ಬೇಕು ಎಂದು ಹೇಳಿಬಿಡಬೇಕು ಎಂದು ಕಾತರಿಸುವಂತ ಪ್ರೀತಿಯಿತ್ತು. ಹಾಗೆ ಹೇಳುವುದೂ ಕಷ್ಟವೇನಲ್ಲ. ಮಹಾನಗರಗಳಲ್ಲಿ ಸಂಬಂಧಗಳು ಗುಪ್ತವಾಗಿ ಹುಟ್ಟಿ, ಹೆಸರಿಲ್ಲದೆ ಬೆಳೆದು, ಕುರುಹಿಲ್ಲದೆ ಸಾಯುತ್ತವೆ. ಅಂಥ ಸಂಬಂಧಗಳನ್ನು ಸಲಹುವುದೂ ಕಷ್ಟವೇನಲ್ಲ. ಮುಸ್ಸಂಜೆಗಳಲ್ಲಿ ಮಾತು, ಒಂದು ಅಚಾನಕ ಭೇಟಿ, ಬೆರಳುಗಳ ಬೆಸುಗೆ, ಕದ್ದುಮುಚ್ಚಿ ಒಂದು ಉಮ್ಮಾ’ , ಮುಸ್ಸಂಜೆಯಲ್ಲಿ ಜಡಿಮಳೆ ಸುರಿದರೆ ತಬ್ಬುಗೆ, ಅವಳಿಗೆ ತೀರ ಬೇಸರವಾದಾಗ ಎರಡು ಸವಿಮಾತು, ಅವನು ನೊಂದಾಗ ಅವಳದೊಂದಷ್ಟು ಲವ್ ಯೂ, ಯೂ ಆರ್ ಮೈ ವರ್ಲ್ಡ್, ನಾನಿದ್ದೀನಿ ಕಣೋ, ಟೇಕ್ ಕೇರ್, ಎಲ್ಲಾ ಬಿಟ್ಟು ಬಂದ್ಬಿಡ್ತೀನಿ ನಿಂಗೋಸ್ಕರ...
ಎಲ್ಲವೂ ಸರಳ. ಮನಸು ಮಾಯೆಯ ಮಾಟ, ಮಾತು ನೊರೆತೆರೆಯಾಟ. ಇನ್ನೆಲ್ಲೋ ಇನ್ನೇನೋ ಇದೆ ಎನ್ನುವ ತಡಕಾಟ. ಮನಸಿಗೆ ಅದೆಂಥದೋ ಬೇನೆ. ಮನಸ್ಸು ಹೇಳುತ್ತದೆ: ಈ ಕತ್ತಲಲ್ಲಿ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ!
ಮಹಾನಗರಗಳ ಜಾಡು ಬದಲಾಗಿದೆ. ದಾಂಪತ್ಯದ ಗೂಡು ಬೆಚ್ಚಗಿಲ್ಲ. ಅಭದ್ರತೆಯ ಭಯ ಕಣ್ಮರೆಯಾಗುತ್ತಿದೆ. ಒಂಟಿಯಾಗಿ ಬದುಕಬಲ್ಲೆ ಎಂಬ ಛಲ ಮತ್ತು ನೀನು ನನ್ನನ್ನು ವಿನಾಕಾರಣ ಅವಮಾನಿಸುತ್ತೀಯ ಎಂಬ ಆಕ್ರೋಶಗಳಲ್ಲಿ ದಾಂಪತ್ಯದ ಸೂರು ಸೋರತೊಡಗುತ್ತದೆ. ಮತ್ತೊಂದು ಸಂಬಂಧಕ್ಕೆ ಜೀವ ಮಿಡುಕುತ್ತದೆ. ಎಲ್ಲರೂ ಒಂದೇ ಎರಕ, ಜೊತೆಗಿರುವ ಎಲ್ಲರ ಬಾಳೂ ನರಕ ಅನ್ನುವ ಮಾತು ಆ ಕ್ಷಣ ಮರೆತುಹೋಗುತ್ತದೆ. ಅಂದಿಗಂದಿನ ಬದುಕು. ಎಲ್ಲವೂ ಆ ಕ್ಷಣದ ಸತ್ಯ ಎಂಬ ನಂಬಿಕೆ ಬಲವಾಗುತ್ತದೆ. ನಾಳೆಯೆಂಬುದು ಬರೆಯದ ಹಾಳೆ, ನಿನ್ನೆಯೆಂಬುದು ಚಿತ್ತಾದ ಓಲೆ. ನಿನ್ನೆನಾಳೆಯ ನಡುವೆ ಇಂದೆಂಬ ತೂಗುಯ್ಯಾಲೆ.
ಅದು ಸುಖದ ಹುಡುಕಾಟವಾ? ಬರೀ ಸುಖವಷ್ಟೇ ಸಾಲದು, ಸಖ ಬೇಕು, ಸಖಿ ಬೇಕು. ಅರ್ಥ ಮಾಡಿಕೊಳ್ಳುವ ಸಖ ಬೇಕು. ನೊಂದಾಗ ಸಂತೈಸಬೇಕು. ಬೇಸರದಲ್ಲಿದ್ದಾಗ ಗಲ್ಲ ಹಿಡಿದು ನಿಡುಸುಯ್ಯಬೇಕು. ತವಕದಲ್ಲಿದ್ದಾಗ ತಣಿಸಬೇಕು. ತಲ್ಲಣದಲ್ಲಿದ್ದಾಗ ಕಣ್ಣಲ್ಲಿ ಕಣ್ಣಿಟ್ಟು ನೀನು ಹಾಗಲ್ಲ, ನಿನ್ನ ಶಕ್ತಿ ನಿನಗೇ ಗೊತ್ತಿಲ್ಲ ಎಂದು ಸಾಂತ್ವನ ಹೇಳಬೇಕು.
ಅಷ್ಟೇ. ಅದು ಸಾಂತ್ವನಕ್ಕೆ ಹಾತೊರೆಯುವ ಮನ. ದಾಂಪತ್ಯದ ನಡುವೆ ಮಾತು ಸತ್ತುಹೋದಾಗ, ಮಾತು ವ್ಯವಹಾರ ಆದಾಗ ಮನಸ್ಸು ಚಿಂತಾಮಣಿಯಲ್ಲಿ ಕಂಡ ಮುಖಕ್ಕೆ ಹಾತೊರೆಯುತ್ತದೆ.

ಮತ್ತೆ ಯಾವಾಗ ಮರುಭೇಟಿ,
ಕಣ್ಣುಕಣ್ಣುಗಳ ಸಮ್ಮಿಲನ,
ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ,
ಆತ್ಮೀಯ ದೀವಿಗೆ ಬರಬಲ್ಲೆನೆ ಏಳು ಕಡಲುಗಳ ದಾಟಿ,
ಬಂದರೂ ಕೂಡ ದೊರೆವುದೆ ಹೇಳು ಈ ಇಂಥ ಸರಿಸಾಟಿ.

ಎಂಬ ಅಡಿಗರ ಪ್ರಶ್ನೆ ಅಡಿಗಡಿಗೂ ನೆನಪು. ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ, ನಿಲ್ಲದಾಯಿತೋ!
-2-
ಆಕೆ ಫ್ರಾನ್ಸೆಸ್ಕಾ. ಇಟಾಲಿಯನ್ ಸುಂದರಿ. ಗಂಡ ಮತ್ತು ಮಕ್ಕಳೊಂದಿಗೆ ಅಯೋವಾದಲ್ಲಿ ವಾಸಿಸುವಾಕೆ.. ಸುಖಜೀವಿ ಅನ್ನುವುದಕ್ಕಿಂತ ಹೆಚ್ಚಾಗಿ ಭಾವಜೀವಿ. ಅವಳ ಆಸಕ್ತಿಗಳೇ ಬೇರೆ. ಸಂಗೀತವೆಂದರೆ ಪಂಚಪ್ರಾಣ, ಸುತ್ತಾಡುವುದೆಂದರೆ ಆಸಕ್ತಿ, ಪ್ರಕೃತಿಯೆಂದರೆ ಅಕ್ಕರೆ, ಪೇಂಟಿಂಗ್, ಸಾಹಿತ್ಯ ಎಲ್ಲದರ ಮೇಲೂ ಪ್ರೀತಿ.
ಅವಳ ಗಂಡ ಕೃಷಿಕ. ಹಗಲೂ ರಾತ್ರಿ ಶ್ರಮಪಟ್ಟು ದುಡಿಯುತ್ತಾನೆ. ರಟ್ಟೆಯಲ್ಲಿ ಬಲವಿದೆ. ದುಡಿದು ಮನೆಗೆ ಬಂದರೆ ಹೊಟ್ಟೆಗೆ ಹಿಟ್ಟು, ಬೆಚ್ಚಗಿನ ನಿದ್ದೆ. ಮಧ್ಯರಾತ್ರಿಯಲ್ಲಿ ಎಚ್ಚರಗೊಂಡರೆ ಅವಳ ಸಾಂಗತ್ಯ. ಅಷ್ಟೇ ಬದುಕು. ಅವನಿಗ ಗೆಳೆಯರಿಲ್ಲ. ಮುದ್ದು ಮುದ್ದು ಮಾತಾಡುವುದು ಗೊತ್ತಿಲ್ಲ. ಓಲೈಸುವುದು ಮೊದಲೇ ತಿಳಿದಿಲ್ಲ. ಅವಳು ಹಾಡು ಕೇಳುತ್ತಿದ್ದರೆ ಅವಳು ಜೋಳದ ಬೆಲೆಯೆಷ್ಟು ಎಂದು ಕೇಳುವುದಕ್ಕೆ ಬೇರೊಂದು ಚಾನಲ್ಲು ಹಾಕುತ್ತಾನೆ.
ತಮ್ಮಿಬ್ಬರ ನಡುವೆ ಸಾಮರಸ್ಯವೇ ಇಲ್ಲ ಅನ್ನುವುದು ಅವಳಿಗೆ ಎಂದೋ ಗೊತ್ತಾಗಿಹೋಗಿದೆ. ಆದರೆ ಅದರಿಂದ ಬಿಡುಗಡೆ ಹೇಗೆ ಅನ್ನುವುದು ಅವಳಿಗೆ ಹೊಳೆದಿಲ್ಲ. ಬದುಕು ಹೀಗೇ ಇರುತ್ತದೇನೋ ಎಂಬ ನಂಬಿಕೆಯಲ್ಲಿ, ಅದಕ್ಕಿಂತ ಹೆಚ್ಚಿನದೇನೂ ಸಾಧ್ಯವಾಗದು ಎಂಬ ನಿರಾಸೆಯಲ್ಲಿ ಅವಳಿರುತ್ತಾಳೆ.
ಅಂಥ ಬರಡುಬಾಳಲ್ಲಿ ಇದ್ದಕ್ಕಿದ್ದಂತೆ ಒಂದು ಅಚ್ಚರಿ. ಗಂಡ ಮಕ್ಕಳು ಪರವೂರಿಗೆ ಹೋಗಿದ್ದಾರೆ. ಬರುವುದು ಒಂದು ವಾರ ಅನ್ನುವುದು ಖಚಿತವಾಗಿ ಗೊತ್ತು. ಆ ಸ್ವಾತಂತ್ರ್ಯಕ್ಕೆ ಮುದಗೊಳ್ಳುತ್ತಿರಬೇಕಾದರೆ ಮನಸ್ಸು, ಅವನು ಬರುತ್ತಾನೆ. ನ್ಯಾಷವಲ್ ಜಿಯಾಗ್ರಫಿಕ್ ಚಾನಲ್ಲಿನ ಫೋಟೋಗ್ರಾಫರ್. ಅವಳಿರುವ ಮ್ಯಾಡಿಸನ್ ಕೌಂಟಿಯ ಹಳೆಯ ಸುಂದರ ಸೇತುವೆಗಳ ಫೊಟೋ ತೆಗೆಯಲು ಬರುವ ಸುಂದರಾಂಗ.
ಅವಳಿಗೆ ಪ್ರೀತಿಯೆಂಬ ನವಿಲಿಗೆ ಅಷ್ಟೊಂದು ಬಣ್ಣದ ಅಸಂಖ್ಯ ಗರಿಗಳಿವೆ ಅನ್ನುವುದು ಅವಳಿಗೆ ಅರಿವಾಗುವುದೇ ಆಗ. ಅವಳು ಏನೂ ಹೇಳದೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ, ಅವಳು ಕೇಳದೇ ಎಲ್ಲವನ್ನೂ ಕೊಡುವ, ಅವಳಿಗಿಷ್ಟವಾಗುವ ಜಾಗಗಳನ್ನು ತೋರಿಸುವ, ಅವಳನ್ನು ಮಳೆಯಲ್ಲಿ ತೋಯಿಸುವ, ಕಾಮನಬಿಲ್ಲಲ್ಲಿ ಕೂರಿಸುವ, ಜಲಪಾತದಲ್ಲಿ ಜಾರಿಸುವ, ವೇಗದ ಉತ್ಕರ್ಷವನ್ನು ತೋರಿಸುವ ಎಗ್ಗಿಲ್ಲದ ಒಡನಾಡಿ.
ನಾಲ್ಕೇ ದಿನ. ಆ ನಾಲ್ಕು ದಿನ ನಾಲ್ಕು ಶತಮಾನವಾಗಲಿ ಎಂದು ಹಂಬಲಿಸುವಂಥ ರಮ್ಯಕಾಲ. ಎಲ್ಲಾ ಬಿಟ್ಟು ಅವನೊಂದಿಗೆ ಓಡಿಬಿಡಬೇಕು ಅನ್ನಿಸುತ್ತದೆ ಆಕೆಗೆ. ಅದೇನೂ ಕಷ್ಟವೂ ಅಲ್ಲ. ಇನ್ನೇನು ಅವನ ಜೊತೆ ಹೋಗುವುದೆಂದು ನಿರ್ಧಾರವೂ ಆಗಿಬಿಡುತ್ತದೆ. ಅಲ್ಲಿಗೆ ಎಲ್ಲಾ ನಿರುತ್ಸಾಹಕ್ಕೆ, ಎಲ್ಲಾ ಯಾಂತ್ರಿಕತೆಗೆ, ಎಲ್ಲ ಬಗೆಯ ಯಾತನೆಗೆ ಕೊನೆ.
ಅವಳು ಹೋಗುವುದಿಲ್ಲ. ತಾನೇಕೆ ಹೋಗಲಿಲ್ಲ ಅವನ ಜೊತೆ ಅನ್ನುವುದನ್ನು ಆಕೆ ಒಂದು ಡೈರಿಯಲ್ಲಿ ಬರೆದಿಡುತ್ತಾಳೆ. ಅವಳು ಸತ್ತ ನಂತರ ಅದು ಮಕ್ಕಳ ಕೈಗೆ ಸಿಗುತ್ತದೆ. ಅಮ್ಮ ತಮ್ಮಿಂದ ಬಚ್ಚಿಟ್ಟ ಲೋಕದ ದರ್ಶನ ಅವರಿಗಾಗುತ್ತದೆ. ಅವಳು ಅಷ್ಟು ವರುಷ ಆ ಒರಟುತನ, ಏಕಾಂತ, ಪ್ರೇಮರಾಹಿತ್ಯ ಸ್ಥಿತಿ- ಎಲ್ಲವನ್ನೂ ಹೇಗೆ ಒಂದು ಪ್ರೀತಿಯಿಂದಾಗಿ ಸಹಿಸಿಕೊಳ್ಳಲು ಸಾಧ್ಯವಾಯಿತು ಎಂಬುದು ಅರ್ಥವಾಗುತ್ತದೆ.
ನಾನು ಅವನ ಜೊತೆ ಓಡಿಹೋಗಬಹುದಾಗಿತ್ತು. ಓಡಿ ಹೋಗಬೇಕು ಅಂದುಕೊಂಡಿದ್ದೆ. ಆದರೆ ಆ ಬದುಕಿನ ಮಿತಿಯನ್ನೂ ನಾನು ಅರ್ಥ ಮಾಡಿಕೊಂಡೆ. ಪ್ರೀತಿ ಶಾಶ್ವತವಾಗಿರಬೇಕು ಎಂದು ಬಯಸುವ ನಮ್ಮ ಸ್ವಾರ್ಥದಲ್ಲೇ ನಮ್ಮ ದುರಂತವೂ ಅಡಗಿದೆ ಅನ್ನುವುದು ಅರ್ಥವಾಯ್ತು. ಹೀಗಾಗಿ, ಆ ಪ್ರೀತಿಯ ನೆನಪಲ್ಲಿ ನಾನು ನನ್ನ ಇಡೀ ಬದುಕನ್ನು ಬೆಳಗಿಕೊಳ್ಳಬಲ್ಲೆ ಎನ್ನುವುದು ಆಕೆಗೆ ಅರ್ಥವಾಗಿಬಿಟ್ಟಿತ್ತು.
ಪ್ರೀತಿ ಶಾಶ್ವತವಲ್ಲ. ಅದರ ಮಧುರ ಅನುಭೂತಿಯಷ್ಟೇ ಶಾಶ್ವತ. ಅವನು ಕಣ್ಮರೆಯಾಗುತ್ತಾನೆ. ಅವನು ಉಳಿಸಿಹೋಗುವುದು ಆ ಕ್ಷಣಗಳು ಹೊಮ್ಮಿಸಿದ ಬೆಳಕನ್ನು ಮಾತ್ರ. ಅದು ಎಲ್ಲ ಕತ್ತಲೆಯನ್ನು ಹೊರದಬ್ಬುವುದಕ್ಕೆ ಸಾಕು.
ಹಾಗನ್ನಿಸಿದ ದಿನ ಕೊರಗು ಹರಿದಿರುತ್ತದೆ. ಬೆರಗು ಉಳಿದಿರುತ್ತದೆ!
-3-
ಬಿ ಆರ್ ಲಕ್ಷ್ಮಣರಾವ್ ಬರೆದ ಕವಿತೆಗಳನ್ನು ಸುಮ್ಮನೆ ಓದುತ್ತಾ ಕುಳಿತಾಗ ಸಿಕ್ಕ ನಾಲ್ಕಾರು ಸಾಲುಗಳು ಮತ್ತೆ ಮತ್ತೆ ಕಾಡುತ್ತಿವೆ:

ಬಾಳ ಗೆಳತಿಯೆ ತರವೇ ನನ್ನಲ್ಲಿ ಈ ಕೋಪ
ಮೊದಲಿನಂತೆ ನಾನಿಲ್ಲ ಎನ್ನುವ ಆರೋಪ

ಎಲ್ಲಾ ದಾಂಪತ್ಯದ ಆರೋಪವೂ ಅದೇ. ಮೊದಲು ನೀವು ಹೀಗಿರಲಿಲ್ಲ ಎಂಬುದು ಎಲ್ಲರ ತಕರಾರು. ಮೊದಲೂ ಆಮೇಲೂ ಹಾಗೇ ಇರುತ್ತಾರೆ ಎಲ್ಲರೂ. ಆದರೆ, ಹಾಗನ್ನಿಸುತ್ತದೆ ಅಷ್ಟೇ. ಅದನ್ನು ತುಂಬಿಕೊಳ್ಳಬೇಕಾದವರೂ ಅವರವರೇ.
ಮನೆಯ ತಲೆಬಾಗಿಲಲ್ಲಿ ಒಣಗಿದ್ದರೆ ತೋರಣ
ನಾನೊಬ್ಬನೇ ಅಲ್ಲ, ನೀನೂ ಕಾರಣ
ಅಕ್ಷಯ ಪಾತ್ರೆಯಲ್ಲ, ದಾಂಪತ್ಯದ ಒಲವು
ತಂದು ತುಂಬಬೇಕು ನಾವೇ ಪ್ರತಿಸಲವು.


ಅದು ನಾವೇ ತಂದು ತುಂಬಬೇಕಾದ ಪಾತ್ರೆ ಅನ್ನುವುದನ್ನು ನಿರಾಕರಿಸೋಣ. ಮತ್ತೆ ಮತ್ತೆ ತಂದು ತುಂಬುವುದಕ್ಕೆ ಬೇಕಾದ ಉತ್ಸಾಹವನ್ನು ಕಳೆದುಕೊಳ್ಳಲಿಕ್ಕೆ ಬದುಕಲ್ಲಿ ಸಕಾರಣಗಳಿರುತ್ತವೆ. ಆದರೆ, ಯಾರೋ ತಂದು ತುಂಬಿದ ಸಂತೋಷ ಕೂಡ ದಾಂಪತ್ಯವನ್ನು ಬೆಳಗಿಸಲಾರದೆ? ಬೇರೆಲ್ಲ ಸಂಬಂಧಗಳಿಗಿಂತ ಬೇರೆಯೇ ಆದ ಸಂಬಂಧ ಅದು. ಉಳಿದವರೊಂದಿಗೆ ಏನೆಲ್ಲ ಎಷ್ಟೆಲ್ಲ ಹಂಚಿಕೊಂಡರೂ ಕೊನೆಗೂ ಮನಸ್ಸು ತುಡಿಯುವುದು ಮರಳಿ ಮನೆಗೆ. ಆ ಮನೆಯೊಳಗೆ ಎಲ್ಲವೂ ಸ್ವಂತ. ಉಳಿಸಿಕೊಳ್ಳಬಹುದಾದ ಸಂಬಂಧ ಕಡಿದುಕೊಳ್ಳಬಹುದಾದ ಸಂಬಂಧವೂ ಹೌದಲ್ಲ! ಬೇರೊಂದು ಸಂಬಂಧದಲ್ಲಿ ಕಡಿದುಕೊಳ್ಳುವುದಕ್ಕೂ ಏನೂ ಇರುವುದಿಲ್ಲ. ಕಡಿದುಕೊಂಡಾಗ ಕನಿಷ್ಠ ವಿಷಾದ ಕೂಡ.
ಅಲ್ಲಿಂದಾಚೆ ವೆಂಕಟೇಶಮೂರ್ತಿಯವರ ನಾಲ್ಕು ಸಾಲುಗಳತ್ತ ಹೊರಳಿಕೊಂಡರೆ ಮತ್ತೊಂದು ಜಗದ ದರ್ಶನ:

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?

ಇವೆಲ್ಲಕ್ಕೂ ಉತ್ತರಿಸುವುದು ಕೆ ಎಸ್ ನ ಕವಿತೆ:
ನಗುವಾಗ ನಕ್ಕು ಅಳುವಾಗ ಅತ್ತು
ಮುಗಿದಿತ್ತು ಅರ್ಧದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ
ಬಿಳಿಬಿಳಿಯ ಹಕ್ಕಿ ಹಾರಿ.

ಹಾರದೆ ಉಳಿದ ಹಕ್ಕಿ, ಮುಗಿಯದ ಅರ್ಧ ದಾರಿ, ಕನ್ನಡಿಯಲ್ಲಿ ಮಿಂಚಿ ಮರೆಯಾದ ಮುಖ. ಅಷ್ಟು ಸಾಕಲ್ಲ. ಅಥವಾ ವಿವರವಾಗಿ ಹೇಳಬೇಕಾ-
ಈ ಕತ್ತಲೊಳಗೆ ಹುಡುಕುವುದು ಬೇಡ,
ಅಲ್ಲಿಹುದು ನಿನ್ನ ವೀಣೆ.

Wednesday, August 20, 2008

ಕಾಡು ಕಾಡೆಂ­ದರೆ ಕಾಡೇನ ಬಣ್ಣಿ­ಸಲಿ...

ಈ ಪುಟ್ಟ ಕತೆ ಹೀಗೇ ಯಾಕಿ­ರ­ಬೇಕು ಅಂತ ನಂಗೊ­ತ್ತಿಲ್ಲ. 1937ರಲ್ಲೇ ಆತ ಬರೆದ ಈ ಪುಟ್ಟ ಕತೆ ಇವತ್ತು ಓದಿ­ದರೂ ಸಾಕು ತಲ್ಲ­ಣಿ­ಸು­ವಂತೆ ಮಾಡು­ತ್ತದೆ. ಬರೆ­ದಾ­ತನ ಹೆಸರು ಯೊಹಾ­ನ್ನೆಸ್ ಯೆನ್­ಸೆನ್ ಡೆನ್ಮಾ­ರ್ಕಿನ ಕತೆ­ಗಾರ.
ಈತನ ಕತೆ ಹೀಗೆ;
ಒಬ್ಬ ರೈತ. ನಾಲ್ಕು ಕಾಸು ಸಂಪಾ­ದಿ­ಸಿದ ನಂತರ ದುಡಿ­ಯು­ವು­ದ­ಕ್ಕೊಬ್ಬ ಗುಲಾಮ ಬೇಕು ಅನ್ನಿ­ಸು­ತ್ತದೆ. ಸಂತೆಗೆ ಹೋಗು­ತ್ತಾನೆ. ಅಲ್ಲಿ ಒಬ್ಬ ವ್ಯಾಪಾರಿ ಗುಲಾ­ಮ­ರನ್ನು ಮಾರು­ತ್ತಿ­ದ್ದಾನೆ. ರೈತ­ನಿಗೆ ಆ ಗುಲಾ­ಮರು ಯಾರೂ ಇಷ್ಟ­ವಾ­ಗ­ಲಿಲ್ಲ.
ವ್ಯಾಪಾರಿ ಕೊನೆಗೆ ಒಳಗೆ ಮಲ­ಗಿದ್ದ ಎಲ್ಲ ಗುಲಾ­ಮ­ರನ್ನೂ ಕರೆ­ಯು­ತ್ತಾನೆ. ಒಬ್ಬೊ­ಬ್ಬ­ರ­ನ್ನಾಗಿ ತೋರಿ­ಸು­ತ್ತಾನೆ. ಪ್ರತಿ­ಯೊ­ಬ್ಬ­ರನ್ನೂ ಸೂಕ್ಪ್ಮ­ವಾಗಿ ಪರೀ­ಕ್ಪಿ­ಸು­ತ್ತಾನೆ ಗುಲಾಮ. ಕೊನೆ­ಗೊಬ್ಬ ಗುಲಾ­ಮ­ನನ್ನು ಮುಂದಿಟ್ಟು `ಈತ ಹ್ಯಾಗಿ­ದ್ದಾನೆ ನೋಡು. ಕಟ್ಟು­ಮಸ್ತು ಆಸಾಮಿ. ಒಂದೇಟು ಕೊಟ್ಟು ನೋಡು. ಕಮಕ್ ಕಿಮಕ್ ಅನ್ನೋಲ್ಲ. ಮಾಂಸ­ಖಂ­ಡ­ಗಳು ಹೇಗಿವೆ ನೋಡು' ಎನ್ನು­ತ್ತಾನೆ. ಗುಲಾ­ಮನ ಬಾಯಿ ತೆಗೆಸಿ, ಚೂರಿಯ ಹಿಡಿ­ಯಲ್ಲಿ ಹಲ್ಲು­ಗ­ಳನ್ನು ತೋರಿ­ಸು­ತ್ತಾನೆ.
ರೈತ ಕೊಂಚ ಹೊತ್ತು ಯೋಚಿ­ಸು­ತ್ತಾನೆ. ಪರೀ­ಕ್ಪಿ­ಸು­ವಂತೆ ಗುಲಾ­ಮನ ಹೊಟ್ಟೆ­ಗೊಂದು ಏಟು ಹಾಕು­ತ್ತಾನೆ. ಗುಲಾಮ ಮಿಸು­ಕಾ­ಡೋ­ದಿಲ್ಲ. ಪರ­ವಾ­ಗಿಲ್ಲ ಅನ್ನಿಸಿ ವ್ಯಾಪಾರಿ ಹೇಳಿದ ರೇಟನ್ನು ಗೊಣ­ಗು­ತ್ತಲೇ ಕೊಟ್ಟು ಗುಲಾ­ಮ­ನನ್ನು ಮನೆಗೆ ಕರೆ­ತ­ರು­ತ್ತಾನೆ.
ದುರ­ದೃಷ್ಟ. ರೈತ ಮನೆಗೆ ಕರೆ­ತಂದ ಕೆಲವೇ ದಿನ­ಗ­ಳಲ್ಲಿ ಗುಲಾಮ ಕಾಯಿಲೆ ಬಿದ್ದು ಬಡ­ವಾ­ಗುತ್ತಾ ಹೋಗು­ತ್ತಾನೆ. ಅವನು ನಿತ್ಯವೂ ತಾನು ಬಿಟ್ಟು ಬಂದ ಕಾಡು­ಗ­ಳಿ­ಗಾಗಿ ಹಂಬ­ಲಿ­ಸು­ತ್ತಿ­ದ್ದಾನೆ ಅನ್ನೋದು ರೈತ­ನಿಗೆ ಗೊತ್ತಾ­ಗು­ತ್ತದೆ. ರೈತ­ನಿಗೆ ಆತನ ಹಂಬ­ಲದ ಬಗ್ಗೆ ಅಂಥ ಅನಾ­ದ­ರ­ವೇನೂ ಇಲ್ಲ. ಹಂಬ­ಲಿ­ಸುವ ಮನುಷ್ಯ ಮಾತ್ರ ಉಪ­ಯೋ­ಗಕ್ಕೆ ಬರ­ಬಲ್ಲ ಅನ್ನು­ವುದು ರೈತ­ನಿಗೂ ಗೊತ್ತು. ಕನ­ಸು­ಗಳೂ ಆಶೆ­ಗಳೂ ಇರು­ವ­ವ­ರ­ನ್ನಷ್ಟೇ ದುಡಿ­ಸಿ­ಕೊ­ಳ್ಳ­ಬ­ಹುದು. ಸ್ಥಿತ­ಪ್ರ­ಜ್ಞರು ದುಡಿ­ಯು­ವು­ದಿಲ್ಲ.
ರೈತ ನಿರಾ­ಸ­ಕ್ತಿ­ಯಿಂದ ಮಲ­ಗಿ­ರುವ ಗುಲಾ­ಮನ ಹತ್ತಿರ ಹೋಗಿ ಹೇಳಿದ. `ನೀ­ನೇನೂ ಚಿಂತೆ ಮಾಡ­ಬೇಡ. ನಿನ್ನ ಕಾಡು­ಗ­ಳಿ­ರುವ ಜಾಗಕ್ಕೆ ನಾನೇ ನಿನ್ನನ್ನು ಕಳು­ಹಿ­ಸು­ತ್ತೇನೆ. ಇದು ಪ್ರಮಾಣ. ನೀನಿನ್ನೂ ತರುಣ. ಐದೇ ಐದು ವರುಷ ಕಷ್ಟ­ಪಟ್ಟು ಕೆಲಸ ಮಾಡು. ನಾನು ನಿನ್ನನ್ನು ಬಿಟ್ಟು­ಬಿ­ಡ್ತೇನೆ. ನಿನ­ಗಿಷ್ಟ ಬಂದ ಕಡೆ ಹೋಗು­ವಿ­ಯಂತೆ. ನಾನೂ ನಿನ್ನನ್ನು ದುಡ್ಡು ಕೊಟ್ಟು ಕೊಂಡು­ಕೊಂ­ಡಿ­ದ್ದೇನೆ ಅಲ್ವಾ. ನನಗೂ ನಷ್ಟ­ವಾ­ಗ­ಬಾ­ರದು ತಿಳೀ­ತಲ್ಲ'
ಮಾತು ಮಂತ್ರ­ವಾಗಿ ಕೆಲಸ ಮಾಡಿತು. ಗುಲಾಮ ಮೈಮು­ರಿಯೆ ದುಡಿ­ಯ­ತೊ­ಡ­ಗಿದ. ರೈತ ನೋಡ­ನೋ­ಡು­ತ್ತಿ­ದ್ದಂತೆ ಗುಲಾಮ ಬಿಡು­ವಿ­ಲ್ಲದೆ ಕೆಲಸ ಮಾಡ­ತೊ­ಡ­ಗಿದ. ರೈತ­ನಿಗೆ ಕಟ್ಟಿಗೆ ಒಡೆ­ಯು­ವಾಗ, ನೀರು ಸೇದು­ವಾಗ, ಹಾರೆ­ಯಲ್ಲಿ ನೆಲ ಅಗೆ­ಯು­ವಾಗ ತೋಳು­ಗ­ಳಲ್ಲಿ ಪುಟಿ­ಯುವ ಗುಲಾ­ಮನ ಮಾಂಸ­ಖಂ­ಡ­ಗ­ಳನ್ನು ನೋಡು­ವುದೇ ಖುಷಿ ಅನ್ನಿ­ಸ­ತೊ­ಡ­ಗಿತು.
ಗುಲಾಮ ವರು­ಷ­ಗಳ ಲೆಕ್ಕ ಹಾಕು­ತ್ತಿದ್ದ. ಐದು ವರುಷ ಎಂದರೆ ಐದು ಸಂಕ್ರ­ಮ­ಣ­ಗಳು. ತನ್ನ ಕೈಯಲ್ಲಿ ಎಷ್ಟು ಬೆರ­ಳು­ಗ­ಳಿ­ವೆಯೋ ಅಷ್ಟು ಸಂಕ್ರ­ಮ­ಣ­ಗಳು. ಪ್ರತಿ­ದಿ­ನವೂ ಸೂರ್ಯ ಮುಳು­ಗು­ವು­ದನ್ನೇ ನೋಡು­ತ್ತಿದ್ದ ಗುಲಾಮ. ಸೂರ್ಯ ಮುಳು­ಗಿ­ದಂ­ತೆಲ್ಲ ಖುಷಿ. ಒಂದು ಕಲ್ಲೆತ್ತಿ ಪಕ್ಕ­ಕ್ಕಿ­ಡು­ತ್ತಿದ್ದ. ಮೊಟ್ಟ ಮೊದ­ಲಿಗೆ ಸೂರ್ಯ ಪಥ ಬದ­ಲಾ­ಯಿ­ಸಿ­ದಾಗ ಗುಲಾಮ ತನ್ನ ಹೆಬ್ಬೆ­ರಡು ಮಡಿ­ಚಿದ. ಹಾಗೇ ಮತ್ತೊಂದು ಸಂಕ್ರ­ಮಣ ಕಳೆ­ಯಿತು, ತೋರು ಬೆರಳು ಮಡಿ­ಚಿದ. ಗುಲಾ­ಮ­ನಿಗೆ ತನ್ನ ಬಿಡು­ಗ­ಡೆಗೆ ಕಾರ­ಣ­ವಾ­ಗು­ತ್ತಿ­ರುವ ಎರಡು ಬೆರ­ಳು­ಗಳ ಮೇಲೆ ಎಲ್ಲಿ­ಲ್ಲದ ಪ್ರೀತಿ. ಉಳಿದ ಮೂರು ಬೆರ­ಳು­ಗಳು ಗುಲಾ­ಮ­ಗಿ­ರಿಯ ಸಂಕೇತ ಅನ್ನಿಸಿ ಬೇಸ­ರ­ವಾ­ಗು­ತ್ತಿತ್ತು.
ಹೀಗೆ ಗುಲಾಮ ಸೂರ್ಯ­ನನ್ನು ನೋಡುತ್ತಾ ಕಾಲ ಸರಿ­ಯು­ವು­ದನ್ನು ನೋಡುತ್ತಾ ದುಡಿ­ಯು­ತ್ತಿದ್ದ ಗುಲಾಮ. ಕ್ರಮೇಣ ಅವನ ಲೆಕ್ಕ­ಗಳು ಆಳವೂ ವಿಶಾ­ಲವೂ ಆದವು. ಹಿಗ್ಗಿ­ದವು. ಗೋಜಲು ಗೋಜ­ಲಾದ ದೊಡ್ಡ ಗಂಟು­ಗ­ಳಾಗಿ ಸಾಗು­ತ್ತಿದ್ದ ವರು­ಷ­ಗ­ಳನ್ನು ಹಿಡಿ­ಯು­ವುದು ಅವನ ಅಳ­ವಿಗೆ ಮೀರಿದ್ದು. ಆದರೆ ಹೊತ್ತು ಮುಳು­ಗುವ ಪುಟ್ಟ ಕ್ಪಣ ಅವ­ನಿಗೆ ನಿಲು­ಕು­ವಂ­ತದ್ದು. ವರ್ತ­ಮಾ­ನ­ದಲ್ಲಿ ಕಣ್ಮ­ರೆ­ಯಾದ ಕಾಲ ಭೂತಕ್ಕೆ ಸೇರಿ­ಕೊ­ಳ್ಳುವ ಸೂರ್ಯಾ­ಸ್ತದ ಘಳಿ­ಗೆ­ಯಲ್ಲೇ ಆತ ತನ್ನ ಬದು­ಕನ್ನು ಪುನ­ರ್ರೂ­ಪಿ­ಸಿ­ಕೊ­ಳ್ಳು­ತ್ತಿದ್ದ. ಭೂತ­ಕಾ­ಲ­ವೆ­ನ್ನು­ವುದು ಎಂದೂ ಹಿಂದಿ­ರು­ಗ­ಲಾ­ರದ ಹಾದಿ­ಯಂತೆ, ಭವಿ­ಷ್ಯ­ವೆಂ­ಬುದು ಎಂದೂ ದಾಟ­ಲಾ­ರದ ಮರ­ಳು­ಗಾ­ಡಿ­ನಂತೆ ಕಾಣಿ­ಸು­ತ್ತಿತ್ತು.
ಹೀಗೆ ಕಾಲದ ಬಗ್ಗೆ ಚಿಂತಿ­ಸುತ್ತಾ ಗುಲಾ­ಮನ ಒಳ­ಜ­ಗತ್ತು ವಿಸ್ತಾ­ರ­ಗೊಂ­ಡಿತು.ಅ­ವನ ಹಂಬ­ಲವೇ ಕಾಲ­ಕ್ಕೊಂದು ಅನಂ­ತ­ತೆ­ಯನ್ನು ತಂದು­ಕೊ­ಟ್ಟಿತ್ತು. ಜಗತ್ತು ಅನಂ­ತ­ವಾ­ಗುತ್ತಾ ಸಾಗಿತ್ತು. ಪ್ರತಿ­ಯೊಂದು ಸೂರ್ಯಾ­ಸ್ತವೂ ಅವನ ಬದು­ಕನ್ನು ಅರ್ಥ­ಪೂ­ರ್ಣ­ವಾ­ಗಿ­ಸುತ್ತಾ ಹೋಗು­ತ್ತಿತ್ತು.
ಕೊನೆಗೂ ಐದು ವರುಷ ಕಳೆ­ಯಿತು. ಗುಲಾಮ ರೈತನ ಬಳಿಗೆ ಬಂದು ಬಿಡು­ಗಡೆ ಕೋರಿದ. ಕಾಡು­ಗಳ ನಡುವೆ ಇದ್ದ ತನ್ನ ಮನೆಗೆ ಹೋಗ­ಬೇಕು ಅನ್ನಿ­ಸಿತು. ರೈತ ಯೋಚಿಸಿ ಹೇಳಿದ;
`ನಿನ್ನ ಕೆಲ­ಸಕ್ಕೆ ಮೆಚ್ಚಿ­ದ್ದೇನೆ. ನೀನು ಹೋಗ­ಬ­ಹುದು. ಆದರೆ ನಿನ್ನ ಮನೆ ಎಲ್ಲಿದೆ? ಪಶ್ಚಿ­ಮಕ್ಕಾ? ನೀನು ಆ ದಿಕ್ಕನ್ನೇ ನೋಡು­ತ್ತಿ­ದ್ದು­ದನ್ನು ನಾನೂ ನೋಡಿ­ದ್ದೇನೆ'
`ಹೌದು, ಪಶ್ಚಿ­ಮಕ್ಕೆ' ಎಂದ ಗುಲಾಮ.
`ಹಾ­ಗಿ­ದ್ದರೆ ಅದು ತುಂಬ ದೂರ. ಅಲ್ಲಿಗೆ ಹೋಗು­ವು­ದಕ್ಕೆ ನಿನ್ನ ಹತ್ತಿರ ಹಣ­ವಾ­ದರೂ ಎಲ್ಲಿದೆ? ದುಡ್ಡಿ­ಲ್ಲದೆ ಅಲ್ಲಿಗೆ ಹೇಗೆ ಹೋಗ್ತೀಯ? ಒಂದು ಕೆಲಸ ಮಾಡು. ಮೂರು ವರುಷ, ಉಹುಂ.. ಎರಡೇ ಎರಡು ವರುಷ ಕೆಲಸ ಮಾಡು. ನಿಂಗೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡ್ತೀನಿ'
ಗುಲಾಮ ತಲೆ­ದೂ­ಗಿದ. ಮತ್ತೆ ಗೆಯ್ಮೆ ಶುರು­ಮಾ­ಡಿದ. ಆದರೆ ಮೊದ­ಲಿ­ನಂತೆ ದಿನ­ಗಳ ಲೆಕ್ಕ ಇಡೋದು ಅವ­ನಿಗೆ ಸಾಧ್ಯ­ವಾ­ಗ­ಲಿಲ್ಲ. ಹಗ­ಲು­ಗ­ನಸು ಕಾಣು­ತ್ತಿದ್ದ ಗುಲಾಮ ನಿದ್ದೆ­ಯಲ್ಲಿ ಅಳುತ್ತಾ ಮಾತಾ­ಡು­ತ್ತಿದ್ದ. ಮತ್ತೆ ಕಾಯಿಲೆ ಬಿದ್ದ.
ಈ ಬಾರಿ ರೈತ ಮತ್ತೆ ಅವನ ತಲೆಯ ಬಳಿ ಕೂತು ಪ್ರೀತಿ­ಯಿಂದ ಮಾತಾ­ಡಿದ;
`ನಾ­ನೀಗ ಮುದುಕ. ನನಗೂ ಪಶ್ಚಿ­ಮದ ಕಾಡು­ಗ­ಳತ್ತ ಹೋಗ­ಬೇಕು ಅನ್ನೋ ಹಂಬ­ಲ­ವಿತ್ತು. ಆದರೆ ಆಗ ನನ್ನ ಬಳಿ ದುಡ್ಡಿ­ರ­ಲಿಲ್ಲ. ಈಗ ದುಡ್ಡಿ­ದ್ದರೂ ಅಲ್ಲಿಗೆ ಹೋಗ­ಲಾರೆ. ಆದರೆ ನೀನು ಹುಡುಗ, ಬಲ­ಶಾಲಿ. ಮೊದಲು ಕಾಯಿ­ಲೆ­ಯಿಂದ ಸುಧಾ­ರಿ­ಸಿಕೋ'.
ಗುಲಾ­ಮನ ಕಾಯಿಲೆ ನಿಧಾ­ನ­ವಾಗಿ ಗುಣ­ವಾ­ಗ­ತೊ­ಡ­ಗಿತು. ಆದರೆ ಕೆಲ­ಸ­ದಲ್ಲಿ ಹಳೆಯ ಉತ್ಸಾಹ ಇರ­ಲಿಲ್ಲ. ಕೆಲ­ಸದ ನಡುವೆ ನಿದ್ದೆ ಮಾಡು­ವು­ದನ್ನೂ ಅಭ್ಯಾಸ ಮಾಡಿ­ಕೊಂಡ. ಅದ­ಕ್ಕೋ­ಸ್ಕರ ರೈತ­ನಿಂದ ಏಟು ತಿಂದ. ಬಿಕ್ಕಿ ಬಿಕ್ಕಿ ಅತ್ತ.
ಹೀಗೆ ಎರಡು ವರುಷ ಕಳೆ­ಯಿತು. ರೈತ ಗುಲಾ­ಮ­ನನ್ನು ಬಿಟ್ಟು­ಬಿಟ್ಟ. ಗುಲಾಮ ಪಶ್ಚಿ­ಮದ ಕಡೆಗೆ ಹೆಜ್ಜೆ ಹಾಕಿದ. ಎಷ್ಟೋ ತಿಂಗ­ಳು­ಗಳ ನಂತರ ಆತ ನಿರಾಶೆ ಮತ್ತು ಹತಾ­ಶೆ­ಯಿಂದ ಜರ್ಜ­ರಿ­ತ­ನಾಗಿ ವಾಪಸ್ಸು ಬಂದ. ಅವ­ನಿಗೆ ತನ್ನ ಕಾಡು­ಗಳ ಸುಳಿವು ಸಿಕ್ಕಿ­ರ­ಲಿಲ್ಲ.
ರೈತ ಹೇಳಿದ `ಪೂರ್ವ ದಿಕ್ಕಿಗೆ ಹೋಗು. ಅಲ್ಲಾ­ದರೂ ನಿನ್ನ ಕಾಡು­ಗಳು ಸಿಗ­ಬ­ಹುದು'.
ಗುಲಾಮ ಪೂರ್ವಕ್ಕೆ ಅಲೆದ. ತುಂಬ ದಿನ ನಡೆದ ನಂತರ ಅವ­ನಿಗೆ ಅವನ ಕಾಡು­ಗಳು ಸಿಕ್ಕವು. ಆದರೆ ಆ ಕಾಡು­ಗಳ ಪರಿ­ಚ­ಯವೇ ಅವ­ನಿಗೆ ಇರ­ಲಿಲ್ಲ. ಆತ ಅಲ್ಲಿಂ­ದಲೂ ನಿರಾ­ಶ­ನಾಗಿ ಮರ­ಳಿದ, ರೈತನ ಬಳಿ ತನ್ನ ಕಾಡು­ಗಳು ಎಲ್ಲಿಯೂ ಇಲ್ಲ ಎಂದ. ರೈತ ಹಾಗಿ­ದ್ದರೆ ನನ್ನ ಜೊತೆ­ಗಿರು ಎಂದು ಪ್ರೀತಿ­ಯಿಂ­ದಲೇ ಹೇಳಿದ.
ಗುಲಾಮ ಅಲ್ಲೇ ಉಳಿದ. ಹೊಟ್ಟೆ ತುಂಬ ತಿನ್ನು­ತ್ತಿದ್ದ. ಆರೋಗ್ಯ ಕಾಪಾ­ಡಿ­ಕೊ­ಳ್ಳು­ತ್ತಿದ್ದ. ಕಷ್ಟ­ಪಟ್ಟು ದುಡಿ­ಯು­ತ್ತಿದ್ದ. ತಪ್ಪು ಮಾಡಿ­ದಾಗ ಏಟು ತಿನ್ನು­ತ್ತಿದ್ದ. ಪ್ರತಿ­ಭಾ­ನು­ವಾರ ಪಶ್ಚಿ­ಮ­ದತ್ತ ನೋಡುತ್ತಾ ಕೂರು­ತ್ತಿದ್ದ. ಕ್ರಮೇಣ ಅವ­ನಿ­ಗೊ­ಬ್ಬಳು ದಾಸಿಯೂ ಸಿಕ್ಕಳು.
ವರುಷ ಸಂದವು. ರೈತನ ಮನೆ­ಯಲ್ಲಿ ಗುಲಾ­ಮನ ಆರು ಮಕ್ಕಳು ದುಡಿ­ಯು­ತ್ತಿ­ದ್ದರು. ಫಸಲು ಹುಲು­ಸಾ­ಗಿತ್ತು. ಮಕ್ಕ­ಳಿಗೆ ಕಾಡಿನ ಕಲ್ಪ­ನೆಯೂ ಇರ­ಲಿಲ್ಲ. ದುಡಿ­ಯು­ತ್ತಿ­ದ್ದರೆ ಕಾಲ ಸರಿ­ಯು­ತ್ತದೆ ಮತ್ತು ನಮ್ಮನ್ನು ಶಾಶ್ವ­ತ­ವಾದ ಕಾಡು­ಗ­ಳಿಗೆ ಕರೆ­ದೊ­ಯ್ಯು­ತ್ತಾರೆ ಎಂದು ರೈತ ಹೇಳು­ತ್ತಿದ್ದ. ಪ್ರತಿ­ಭಾ­ನು­ವಾರ ಗುಲಾಮ ಮಕ್ಕ­ಳನ್ನೂ ದಿಬ್ಬದ ಮೇಲೆ ಕರೆ­ದೊಯ್ದು ಸೂರ್ಯಾಸ್ತ ತೋರಿ­ಸು­ತ್ತಿದ್ದ. ಅವ­ರಿಗೂ ಹಂಬ­ಲಿ­ಸು­ವು­ದನ್ನು ಕಲಿ­ಸು­ತ್ತಿದ್ದ.
ರೈತ­ನಿಗೆ ವಯ­ಸ್ಸಾ­ಗಿದೆ. ಆತ ಏಳ­ಲಾರ ಕೂರ­ಲಾರ. ಆತನ ಮಗ ಇನ್ನೂ ಎಳಸು. ಆದರೆ ರೈತ­ನಿಗೆ ಚಿಂತೆ­ಯಿಲ್ಲ. ಯಾಕೆಂ­ದರೆ ಗುಲಾ­ಮ­ರಿ­ದ್ದಾರೆ. ಒಬ್ಬೊ­ಬ್ಬರು ಬಲ­ಶಾ­ಲಿ­ಗಳು. ಯಾರ ಭಯವೂ ಇಲ್ಲ.
ಎಲ್ಲ­ಕ್ಕಿಂತ ಹೆಚ್ಚಾಗಿ ಈ ಗುಲಾಮ ಹುಡು­ಗರು ಕೊಡಲಿ ಬೀಸಿ ಮರ­ಗ­ಳನ್ನು ಕಡಿ­ಯು­ತ್ತಿ­ದ್ದಾರೆ. ಅವ­ರಿಗೆ ಕಾಡೇ ಇಲ್ಲ.

Tuesday, August 19, 2008

ಒಂದು ವಿಪ್ಲವ ರಾತ್ರಿಗೆ

ಕಟ್ಟಕಡೆಯ ಕರೆಗೆ ಕಾಯುತ್ತ ಕೂತ
ಕನಕನ ಹಾಗೆ ಕಿಂಡಿಯಿರದ
ಗೋಡೆಯಾಚೆಗೆ ಅರೆಬೆತ್ತಲೆ ಮೈ.
ಬಿಲ್ಲಿನ ಹಾಗೆ ಬಾಗಿದ ಬೆನ್ನಿಗೆ ಯಜುರ್ವೇದಿಗಳ
ಕುಹಕ ಮಂತ್ರೋಚ್ಚಾರ, ಶಂಖಜಾಗಟೆಯ ಜೊತೆ
ಉಚ್ಛಾಟನೆಯ ಮೊದಲ ಹಂತ.
ಅಶ್ವಯುಜ ಕಾರ್ತೀಕ-ಶರದೃತು

ಕಂಪ್ಯೂಟರಿನ ಮೇಲೆ ಬೀಜಾಕ್ಷರದ
ಕುರುಹು. ಯಾರ ಅಂಗಕ್ಕೋ ತೆಕ್ಕೆಬಿದ್ದ
ಲಿಂಗಕ್ಕೆ ಅಂಗಮರ್ದನದ
ನರುಗಂಪು.
ಶ್ರಾವಣದ ಮಳೆಗೆ
ನಡುರಾತ್ರಿಯ ಏದುಸಿರ ಲಯ.
ಮೇಷ ವೃಷಭ ಮಿಥುನ.

ಪಂಚತಂತ್ರಕ್ಕೆ
ಚತುರೋಪಾಯದ ಬೆಂಗಾವಲು.
ಚತುಷ್ಪದದಲ್ಲಿ ಭಾಮಿನಿಯ ನುಡಿಸಿದರೆ
ಕೊನೆಗೂ ಷಟ್ಪಧಿಯ ಶ್ರೀರಕ್ಷೆ.
ಮುಗಿಲಿಂದ ಮಿಂಚಿಳಿದು
ಮೈತುಂಬ ನವಿಲುಗರಿ.
ಚಂದ್ರಮಂಚಕ್ಕೆ ಬಂದ ಚಕೋರಿಗೆ
ಚಾತಕ ಪಕ್ಷಿಯ ಸುಡುದಾಹ!
ಪ್ರಭವ ವಿಭವ ಶುಕ್ಲ.

ಬಂಡೆಹೊತ್ತು ಬೆಟ್ಟ
ಹತ್ತುವ ಇಳಿವ ಸಿಸಿಫಸ್ಸನ ಕರ್ಮಕಾಂಡ.
ತುದಿಯೇರಿದ ಮರುಕ್ಷಣ
ತಳಸ್ಪರ್ಶಿ ಅನುಭವ.
ನಿರರ್ಥಕತೆಯ ಅಂತ್ಯಕ್ಕೆ
ಅನೂಹ್ಯ ತಿರುವು
ಮಾರ್ಚ್ ಏಪ್ರಿಲ್ ಮೇ
or May not.
(ಹಾಯ್ ಬೆಂಗಳೂರಲ್ಲಿ ಪ್ರಕಟಗೊಂಡಿದೆ)

Sunday, August 17, 2008

ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ!

ನಾನು ಮತ್ತು ಗೋಪಾಲಕೃಷ್ಣ ಗಾಂಧೀಪಾರ್ಕಿನ ಕಟ್ಟೆಯ ಮೇಲೆ ಕೂತು, ಸುಮಾರು ಇಪ್ಪತ್ತು ವರುಷಗಳ ಹಿಂದಿನ ಸಂಜೆಗಳನ್ನು ಮೆಲುಕುಹಾಕುತ್ತಿರುವ ಹೊತ್ತಿಗೇ, ಸೋಮಣ್ಣ ಏದುಸಿರುಬಿಡುತ್ತಾ ಓಡಿ ಬರುವುದು ಕಾಣಿಸಿತು. ಇಲ್ಲಿಂದ ಪಾರಾಗೋಣ, ಬಾ. ಸೋಮಣ್ಣನ ಕೈಗೆ ಸಿಕ್ಕಿಹಾಕ್ಕೊಂಡರೆ ಜೀವ ತಿಂತಾನೆ ಎಂದು ಎದ್ದುಹೋಗುವ ವ್ಯರ್ಥ ಪ್ರಯತ್ನ ಮಾಡಿದ ಗೋಪಾಲಕೃಷ್ಣ. ಆದರೆ, ಸೋಮಣ್ಣನ ಗುರಿ ಅವನೇ ಆಗಿದ್ದರಿಂದ ತನ್ನ ಕುಂಟುಕಾಲನ್ನು ಬೀಸ ಬೀಸ ಹಾಕುತ್ತಾ ಸೋಮಣ್ಣ ಸಮೀಪಿಸಿಯೇ ಬಿಟ್ಟ.

ಸೋಮಣ್ಣನಿಗೆ ನನ್ನ ಗುರುತು ಹತ್ತಲಿಲ್ಲ. ಅವನು ನನ್ನನ್ನು ನೋಡಿ ಇಪ್ಪತ್ತು ವರ್ಷ ಕಳೆದಿರಬೇಕು. ನಾನು ಉಪ್ಪಿನಂಗಡಿ ಬಿಡುವ ಹೊತ್ತಿಗೆ ಅವನು ಗಾಂಧೀಪಾರ್ಕಿನಿಂದ ಸರ್ಕಾರಿ ಕಾಲೇಜಿಗೆ ಹೋಗುವ ರಸ್ತೆಯಲ್ಲೊಂದು ಸ್ಕೂಟರ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಅವನನ್ನು ನಮ್ಮೂರಿನ ಯಾರೂ ಮೆಕ್ಯಾನಿಕ್ ಎಂದು ಪರಿಗಣಿಸಿರಲಿಲ್ಲ. ಹೀಗಾಗಿ ಹಳೆಯ ಬಜಾಜ್ ಸ್ಕೂಟರಿನ ಪ್ಲಗ್ ಕ್ಲೀನ್ ಮಾಡುವುದಕ್ಕೋ ಕಿತ್ತುಹೋದ ಕ್ಲಚ್ ಕೇಬಲ್ ಹಾಕಿಸುವುದಕ್ಕೋ ಮಾತ್ರ ಅವನಲ್ಲಿಗೆ ಬರುತ್ತಿದ್ದುದು. ಮೇಜರ್ ರೀಪೇರಿ ಇದ್ದರೆ ಅವರೆಲ್ಲ ದೂರದ ಪುತ್ತೂರಿಗೆ ಹೋಗುತ್ತಿದ್ದರು. ಹೇಗಾದ್ರೂ ಪುತ್ತೂರು ತನಕ ಹೋಗೋ ಹಾಗೆ ಮಾಡ್ಕೊಡೋ ಮಾರಾಯ, ಅಲ್ಲಿ ರಿಪೇರಿ ಮಾಡಿಸ್ತೀವಿ ಅಂತ ಅವನ ಹತ್ತಿರವೇ ಹೇಳಿ ಹೋಗುತ್ತಿದ್ದರೂ ಅವನಿಗೇನೂ ಅದರಿಂದ ಬೇಸರ ಆಗುತ್ತಿರಲಿಲ್ಲ. ಎಲ್ಲಾದರೂ ಮಾಡಿಸ್ಕೊಳ್ಳಲಿ ಬಿಡಿ, ಊರಿನವರು ಅಂದ್ರೆ ಎಲ್ಲರಿಗೂ ಸಸಾರ. ನಮ್ಮ ಬೆಲೆ ಗೊತ್ತಾಗಬೇಕಿದ್ರೆ ಬೇರೆ ಊರಿಗೆ ಹೋಗಬೇಕು ಅಂತ ತನ್ನ ಹತಾಶೆಯನ್ನು ಇಡೀ ಊರಿನ ಮೇಲೆ ಕಾರಿಕೊಂಡು ಸೋಮಣ್ಣ ಸುಮ್ಮನಾಗುತ್ತಿದ್ದ.

ನನಗೂ ಫಕ್ಕನೆ ಸೋಮಣ್ಣನ ಗುರುತು ಹತ್ತಲಿಲ್ಲ. ನಾನು ಊರು ಬಿಡುವ ಹೊತ್ತಿಗೆ ಅವನು ನೀಲಗಪ್ಪು ಬಣ್ಣದ ಪ್ಯಾಂಟು ಅದೇ ಕಲ್ಲರಿನ ಶರ್ಟು ಹಾಕಿಕೊಂಡು ಜೋಬಲ್ಲಿ ಸದಾ ಕಟಿಂಗ್ ಪ್ಲೇಯರ್, ಸ್ಕ್ರೂಡ್ರೈವರ್ ಇಟ್ಟುಕೊಂಡು ಓಡಾಡುತ್ತಿದ್ದ. ಮೆಕ್ಯಾನಿಕ್ ಆಗಿರುವುದು ಎಂದರೆ ಕೈಗೆ ಬಟ್ಟೆಗೆ ಗ್ರೀಸ್ ಮೆತ್ತಿಕೊಂಡು ಸಾಧ್ಯವಾದಷ್ಟೂ ಕೊಳಕಾಗಿರುವುದು ಎಂದು ಅವನೇ ನಿರ್ಧಾರ ಮಾಡಿದಂತಿತ್ತು. ಅವನ ಶರ್ಟು ಮುಟ್ಟಿದರೆ, ಆಗ ತಾನೇ ಪ್ರಿಂಟಾದ ಪೇಪರ್ ಮುಟ್ಟಿದಂತೆ ಕೈಯೆಲ್ಲ ಕಪ್ಪಾಗುತ್ತಿತ್ತು.

ಆದರೆ, ಆ ಸಂಜೆ ನಮ್ಮಮುಂದೆ ಹಾಜರಾದ ಸೋಮಣ್ಣ ಹಾಗಿರಲಿಲ್ಲ. ಬಿಳಿ ಪ್ಯಾಂಟು, ಬಿಳಿ ಶರ್ಟು, ಬೆಳ್ಳಗಿನ ಚಪ್ಪಲಿ, ಎಡಗೈಯಲ್ಲಿ ನಾಲ್ಕು , ಬಲಗೈಯಲ್ಲಿ ಎರಡು ಉಂಗುರ ಹಾಕಿಕೊಂಡಿದ್ದ. ಅವನ ಮಾತೂ ಬದಲಾಗಿತ್ತು.

ಒಂದು ಅನಾಹುತ ಆಗಿದೆ. ನೀವೇ ಏನಾದ್ರೂ ಮಾಡಬೇಕು ಎಂದು ಸೋಮಣ್ಣ ನನ್ನ ಮುಂದೆ ಹೇಳಲೋ ಬೇಡವೋ ಅಂತ ಅನುಮಾನಿಸಿದ. ಗೋಪಿ ನನ್ನ ಪರಿಚಯ ಮಾಡಿಕೊಡುತ್ತಾನೆ ಎಂದು ನನಗೆ ಖಾತ್ರಿಯಾಗುತ್ತಿದ್ದಂತೆ ನಾನು ನೀವು ಮಾತಾಡಿಕೊಳ್ಳಿ, ನಾನೀಗ ಬಂದೆ ಎಂದು ವಜ್ರನ ಅಂಗಡಿಯತ್ತ ಕಾಲು ಹಾಕಿದೆ.

ಅಯ್ಯೋ, ಅವನ ಸಮಸ್ಯೆಗೆ ಪರಿಹಾರವೇ ಇಲ್ಲ, ಮಾರಾಯ. ಯಾವತ್ತೂ ಇದೇ ರಗಳೆ ಅನ್ನುತ್ತಾ ಗೋಪಿ ಬೇಸರದ ಮುಖ ಮಾಡಿಕೊಂಡು ಸಿಗರೇಟು ಸೇದುತ್ತಾ ನಿಂತ ನನ್ನ ಹತ್ತಿರ ಬರುವ ಹೊತ್ತಿಗೆ ಪೂರ್ತಿ ಕತ್ತಲಾಗಿತ್ತು. ಸೋಮಣ್ಣ ಮತ್ತೆ ಮತ್ತೆ ಗೋಪಿಗೆ ಕೈ ಸನ್ನೆ ಮಾಡುತ್ತಾ ಶಿವಕೀರ್ತಿ ಹೊಟೆಲಿನ ಪಕ್ಕದಲ್ಲಿದ್ದ ಬಾರಿನೊಳಗೆ ಕಣ್ಮರೆಯಾದ. ಸೋಮಣ್ಣನ ಸಮಸ್ಯೆ ಏನು ಎಂದು ಕೇಳುವ ಉತ್ಸಾಹವೂ ನನ್ನಲ್ಲಿರಲಿಲ್ಲ. ನಮ್ಮ ಸಂಜೆಯನ್ನು ಹಾಳು ಮಾಡಿದವನ ಬಗ್ಗೆ ಸಿಟ್ಟು ಉಕ್ಕುತ್ತಿತ್ತು.

ಸುರೇಂದ್ರನ ಪುಟ್ಟ ಗೂಡಲ್ಲಿ ನಾವು ಸ್ಥಾಪಿತರಾಗಿ, ಅವನು ಬಹಳ ದಿನಗಳಿಂದ ನನಗೋಸ್ಕರ ಅಂತ ತಂದಿಟ್ಟಿದ್ದ ವಿಸ್ಕಿಗೆ ತುಟಿಯಿಟ್ಟಾಗ ಸೋಮಣ್ಣನ ಕತೆ ಮತ್ತೆ ಬಿಚ್ಚಿಕೊಂಡಿತು. ಆ ದಿನಗಳಲ್ಲಿ ಸೋಮಣ್ಣ ನಮ್ಮ ತಮಾಷೆಗೆ ವಸ್ತುವಾಗಿದ್ದವನು. ಅವನನ್ನು ನಾವೆಲ್ಲ ಆಕ್ಸಿಡೆಂಟ್ ಸೋಮಣ್ಣ ಅಂತಲೇ ಕರೆಯುತ್ತಿದ್ದದ್ದು. ಅವನು ವಿಧವಿಧವಾಗಿ ಅಪಘಾತಕ್ಕೆ ತುತ್ತಾಗುತ್ತಿದ್ದ.

ಅವನು ತಲೆಯೊಡೆದುಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾಗ ಒಂದು ಸ್ವಾರಸ್ಯಕರ ಕತೆ ಹಬ್ಬಿತ್ತು. ಆಗಷ್ಟೇ, ಸೋಮಣ್ಣ ನಮ್ಮೂರ ಶಾನುಭೋಗರ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರನ್ನು ರಿಪೇರಿ ಮಾಡುವುದಾಗಿ ಹೇಳಿ ತಂದಿಟ್ಟುಕೊಂಡಿದ್ದ.ಅವರಿಗೆ ಯಾವುದೋ ಕಾಲದಲ್ಲಿ ಯಾರೋ ಬ್ರಿಟಿಷ್ ಅಧಿಕಾರಿ ಬಳುವಳಿಯಾಗಿ ಕೊಟ್ಟ ಕಾರದು. ನಮ್ಮೂರಿನ ದೇವಸ್ಥಾನದ ಜಾತ್ರೆಗೆ ಅದೇ ಕಾರಲ್ಲಿ ಅವರು ಬರಬೇಕು. ಆ ದಿನ ಬಿಟ್ಟರೆ ಆ ಕಾರು ಓಡಿದ್ದನ್ನು ಯಾರೂ ಕಂಡಿಲ್ಲ. ಉಳಿದ ದಿನಗಳಲ್ಲಿ ಅದು ರಿಪೇರಿಯಲ್ಲಿರುತ್ತಿತ್ತು. ಅದರ ಸ್ಪೇರ್ ಪಾರ್ಟುಗಳೂ ಸಿಗುತ್ತಿರಲಿಲ್ಲ.

ಅದನ್ನು ರಿಪೇರಿ ಮಾಡುವ ಗುರುತರ ಜವಾಬ್ದಾರಿ ಹೊತ್ತುಕೊಂಡು ಉಪ್ಪಿನಂಗಡಿ ಪೇಟೆಗೆ ತಂದ ಸೋಮಣ್ಣ ಅದರಿಂದಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಅವನ ಎರಡು ತಿಂಗಳ ಸತತ ಪ್ರಯತ್ನದಿಂದ ಒಂದು ಮುಂಜಾನೆ ಆ ಕಾರು ಅಂತೂ ಸ್ಟಾರ್ಟಾಯಿತು. ಆ ಖುಷಿಯಲ್ಲಿ ಅವನು ಅದನ್ನು ಶಾನುಭೋಗರ ಮನೆಗೆ ತಲುಪಿಸಲು ಹೊರಟಿದ್ದ. ವೇಗ ಕಮ್ಮಿಮಾಡಿದರೆ ಇಂಜಿನ್ನಿಗೆ ಪೆಟ್ರೋಲು ಸರಬರಾಜಾಗದೇ ಬಂದ್ ಬೀಳುತ್ತಿತ್ತು. ಹೀಗಾಗಿ ಅವನು ಒಂದು ವೇಗವನ್ನು ಮೇಂಟೇನ್ ಮಾಡಲೇಬೇಕಿತ್ತು.

ಹಾಗೆ ಒಂದೇ ವೇಗದಲ್ಲಿ ತನ್ನ ಮನೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ಸೋಮಣ್ಣನ ಮುಂದೆ ಸೊಸೈಟಿಗೆ ಹಾಲು ಒಯ್ಯುತ್ತಿದ್ದ ಸೀನ ಸೈಕಲ್ಲಿನಲ್ಲಿ ಹೋಗುತ್ತಿದ್ದ. ಅವನ ವೇಗಕ್ಕೂ ಸೋಮಣ್ಣನ ವೇಗಕ್ಕೂ ತಾಳೆಯಾಗುತ್ತಿರಲಿಲ್ಲ. ಸೋಮಣ್ಣ ಎಷ್ಟು ಹಾರ್ನ್ ಮಾಡಿದರೂ ಸೀನ ಸೈಡ್ ಬಿಟ್ಟುಕೊಡಲಿಲ್ಲ. ಸೋಮಣ್ಣನ ಪಿತ್ಥ ನೆತ್ತಿಗೇರಿ, ಮತ್ತಷ್ಟು ಹಾರ್ನ್ ಮಾಡಿದರೂ ಸೀನ ತಿರುಗಿಯೂ ನೋಡಲಿಲ್ಲ. ಹಾವಿನ ಹಾಗೆ ರಸ್ತೆತುಂಬ ಹರಿದಾಡುತ್ತಾ ತನ್ನ ವೇಗದಲ್ಲೇ ಸಾಗುತ್ತಿದ್ದ. ಕೊನೆಗೆ ಸೋಮಣ್ಣ ಕ್ಲಚ್ ಮೇಲೆ ಕಾಲಿಟ್ಟು ಅನಗತ್ಯವಾಗಿ ಆಕ್ಸಲರೇಟರ್ ತುಳಿದು ಕಾರೋಡಿಸಬೇಕಾಗಿ ಬಂತು.

ಮುಖ್ಯರಸ್ತೆಗೆ ಬರುತ್ತಿದ್ದಂತೆ ಸೋಮಣ್ಣ ಕೆಂಡಾಮಂಡಲವಾಗಿದ್ದ. ಸೀನನನ್ನು ಓವರ್ ಟೇಕ್ ಮಾಡಿಕೊಂಡು ಹೋಗಿ, ಅವನ ಸೈಕಲ್ಲಿನ ಮುಂದೆ ಕಾರು ನಿಲ್ಲಿಸಿ, ಕೊಲ್ತೀನಿ ನಿನ್ನ, ಫಟಿಂಗ ಎಂದು ಅವಡುಗಚ್ಚಿ ಕಾರಿಂದ ಹೊರಗೆ ತಲೆ ಅಪ್ಪಳಿಸಿ ಅಬ್ಬರಿಸಿದ.

ಅವನಿಗೆ ಎಚ್ಚರವಾದದ್ದು ಕೆಜಿಭಟ್ಟರ ಆಸ್ಪತ್ರೆಯಲ್ಲೇ. ಸಿಟ್ಟಿನ ಭರದಲ್ಲಿ ಕಾರಿನ ಗಾಜು ಏರಿಸಿದ್ದನ್ನೂ ಮರೆತು ಸೋಮಣ್ಣ ತಲೆಯನ್ನು ಬಲವಾಗಿ ಹೊರಗೆ ಹಾಕಿ, ಸೀನನತ್ತ ಆರ್ಭಟಿಸಿದ್ದ. ಆ ರಭಸಕ್ಕೆ ಕಾರಿನ ಗಾಜು ಪುಡಿಪುಡಿಯಾಗಿ ಸೋಮಣ್ಣನ ಹಣೆ ಒಡೆದುಹೋಗಿತ್ತು. ಹೊರಗೆ ಸೈಕಲ್ಲಿಗೆ ಕತ್ತರಿಕಾಲು ಹಾಕಿ ನಿಂತಿದ್ದ ಸೀನನಿಗೆ ಸೋಮಣ್ಣ ತನ್ನ ಮುಂದೆ ಕಾರು ನಿಲ್ಲಿಸಿ ಗಾಜಿಗೆ ತಲೆ ಚಚ್ಚಿಕೊಂಡದ್ದು ಯಾಕೆ ಅನ್ನುವುದು ಗೊತ್ತೇ ಆಗಿರಲಿಲ್ಲ.

ಅಂಥ ಸೋಮಣ್ಣನಿಗೆ ಇದ್ದಕ್ಕಿದ್ದಂತೆ ಲಾರಿ ಕೊಳ್ಳುವ ಹುಚ್ಚು ಹಿಡಿಯಿತಂತೆ. ಸುಬ್ರಹ್ಮಣ್ಯದ ಇಸ್ಮಾಯಿಲ್ ಸಾಹೇಬರು ಇವನ ತಲೆ ಕೆಡಿಸಿದ್ದು. ಒಳ್ಳೇ ಬಾಡಿಗೆ ಸಿಗುತ್ತೆ, ಲಾರಿ ತಗೊಳ್ಳಿ ಅಂತ ಇಸ್ಮಾಯಿಲ್ ಸಾಹೇಬರಿಗೆ ದುಬೈಯಲ್ಲಿರುವ ಅವರ ಅಣ್ಣನ ಮಗ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದನಂತೆ. ಅದಕ್ಕೆ ಬೇಕಾದ ದುಡ್ಡನ್ನೂ ಅವನೇ ಕಳಿಸಿಕೊಟ್ಟಿದ್ದನಂತೆ.

ಕೊನೆಗೂ ಇಸ್ಮಾಯಿಲ್ ಸಾಹೇಬರು ಮನಸ್ಸು ಮಾಡಿ ಸೆಕೆಂಡ್ ಹ್ಯಾಂಡ್ ಲಾರಿಯೊಂದನ್ನು ಕೊಂಡು ತಂದರು. ಅದನ್ನು ಓಡಿಸುವುದಕ್ಕೆ ಕೇರಳದಿಂದ ಹಮೀದ್ ಎಂಬ ತಾರುಣ್ಯ ಉಕ್ಕುವ ಡ್ರೈವರನನ್ನೂ ಗೊತ್ತು ಮಾಡಿಕೊಂಡರು.

ಅವನು ಸಾಹೇಬರ ಮನೆಯಲ್ಲಿದ್ದದ್ದು ಮೂರೇ ವಾರ. ಒಂದು ಬೆಳಗ್ಗೆ ಎದ್ದು ನೋಡುವ ಹೊತ್ತಿಗೆ ಸಾಹೇಬರ ಮೂರನೇ ಹೆಂಡತಿ ಜಲೀಲಳೂ ಇರಲಿಲ್ಲ. ಹಮೀದನೂ ಇರಲಿಲ್ಲ. ತನ್ನನ್ನು ಈ ಸಂಕಟಕ್ಕೆ ತಳ್ಳಿದ್ದು ಲಾರಿಯೇ ಎಂದು ನಿರ್ಧರಿಸಿದ ಸಾಹೇಬರು ಲಾರಿ ಮಾರಲು ನಿರ್ಧಾರ ಮಾಡಿಬಿಟ್ಟಿದ್ದರು. ೨೦೦೫ ಮಾಡೆಲ್ ಲಾರಿ, ಐದೇ ಲಕ್ಷ, ಎಲ್ಲ ಚೆನ್ನಾಗಿ ಆದರೆ ಎರಡೇ ವರ್ಷಕ್ಕೆ ದುಡಿಯಬಹುದು, ಬ್ಯಾಂಕ್ ಲೋನ್ ಕೂಡ ಸಿಗುತ್ತೆ ಅಂತ ಇಸ್ಮಾಯಿಲ್ ಸಾಹೇಬರು ಆಕರ್ಷಕವಾಗಿ ಹೇಳಿದ್ದನ್ನು ಕೇಶವ ಮಣಿಯಾಣಿ ಸೋಮಣ್ಣನಿಗೆ ಹೇಳಿ ತಲೆಕೆಡಿಸಿದ. ಸೋಮಣ್ಣ ಸಿಂಡಿಕೇಟ್ ಬ್ಯಾಂಕಲ್ಲಿ ಐದು ಲಕ್ಷ ಸಾಲ ಮಾಡಿ ಲಾರಿ ಕೊಂಡುಕೊಂಡೇ ಬಿಟ್ಟ.

ಚಿಕ್ಕನಾಯಕನ ಹಳ್ಳಿಯಿಂದ ಮಂಗಳೂರಿಗೆ ಅದಿರು ಸಾಗಿಸುವ ಲಾರಿಗಳ ಸಾಲಿಗೆ ಸೋಮಣ್ಣನ ಲಾರಿಯೂ ಸೇರಿಕೊಂಡಿತು. ಮೂರು ತಿಂಗಳು ಒಳ್ಳೆಯ ಲಾಭವೂ ಬಂತು. ಸೋಮಣ್ಣ ಊರವರ ಹತ್ತಿರ ಈ ತೋಟ, ಹೈನುಗಾರಿಕೆ, ಕೃಷಿ ಎಲ್ಲಾ ವೇಶ್ಟು. ಒಂದು ಲಾರಿ ಇಟ್ಟುಕೊಂಡ್ರೆ ಆರಾಮಾಗಿ ಬದುಕಬಹುದು. ನಾನು ಇಷ್ಟರಲ್ಲೇ ಇನ್ನೊಂದು ಲಾರಿ ತಗೋತೀನಿ ಅಂತೆಲ್ಲ ಹೇಳುತ್ತಿದ್ದ. ಎಲ್ಲರೂ ಅಸೂಯೆ ಪಡುವ ಹಾಗೆ ಹೊಸ ಅವತಾರದಲ್ಲಿ ಕಂಗೊಳಿಸತೊಡಗಿದ.

ಆದರೆ, ಒಮ್ಮೆ ಮಾರನಹಳ್ಳಿ ಚೆಕ್‌ಪೋಸ್ಟಿನ ಹತ್ತಿರ ಲಾರಿ ಕೆಟ್ಟು ನಿಂತಿತು. ಡ್ರೈವರ್ ಮೋನಪ್ಪ ಇಂಜಿನ್ ಆಯಿಲ್ ಚೆಕ್ ಮಾಡಿರಲಿಲ್ಲ ಎಂದು ಸೋಮಣ್ಣ ಅವನ ಮೇಲೆ ಕೂಗಾಡಿದ. ಲಾರೀನ ಸರ್ವೀಸೇ ಮಾಡಿಸ್ತಿರಲಿಲ್ಲ. ಈ ಸ್ಕೂಟರ್‌ನ ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡುವವ ಲಾರಿ ಸರ್ವೀಸ್ ಮಾಡ್ತೀನಿ ಅಂದ್ರೆ ಹೀಗೇ ಆಗೋದು ಅಂತ ಮೋನಪ್ಪ ಎಲ್ಲರ ಹತ್ತಿರವೂ ಸೋಮಣ್ಣನೇ ಲಾರಿ ರಿಪೇರಿ ಮಾಡುತ್ತಿದ್ದದ್ದನ್ನು ಗುಟ್ಟಾಗಿ ಹೇಳಿಕೊಂಡು ಬಂದ. ಹೀಗೆ ಎರಡು ಮೂರು ಸಾರಿ ಆಗುವಷ್ಟರಲ್ಲಿ ಚಿಕ್ಕನಾಯ್ಕನಹಳ್ಳಿಯಲ್ಲಿ ಗ್ರಾಮಸ್ಥರೆಲ್ಲ ದಂಗೆಯೆದ್ದು ಗಣಿಗಾರಿಕೆ ನಿಂತೇ ಹೋಯಿತು. ಸೋಮಣ್ಣನ ಲಾರಿ ಅವನ ಮನೆ ಮುಂದಿನ ರಸ್ತೆ ಬದಿಯಲ್ಲಿ ಠಿಕಾಣಿ ಹೂಡಿತು.

ಏನಾದ್ರೂ ಬಾಡಿಗೆ ಇದ್ರೆ ಹೇಳಿ ಅಂತ ಸೋಮಣ್ಣ ಅಡಕೆ ತೋಟದವರ ಹತ್ತಿರ ಕೇಳಿನೋಡಿದ. ಅವರೆಲ್ಲ ಮಾರುತಿ ಓಮ್ನಿ ಕೊಂಡುಕೊಂಡು, ಅದರ ಹಿಂದಿನ ಸೀಟು ಕಿತ್ತುಹಾಕಿ, ಅದರಲ್ಲೇ ಅಡಕೆ ಸಾಗಿಸುವ ಉಪಾಯ ಕಂಡುಕೊಂಡಿದ್ದರು. ಲಾರಿಯಲ್ಲಿ ಸಾಗಿಸುವಷ್ಟು ಅಡಕೆ ಯಾರ ಬಳಿಯೂ ಇರಲಿಲ್ಲ. ಉಪ್ಪಿನಂಗಡಿಯಿಂದ ಮಂಗಳೂರಿಗೆ ನೇತ್ರಾವತಿ ನದಿಯಿಂದ ಮರಳು ಸಾಗಿಸಿ ದುಡ್ಡು ಮಾಡಬಹುದು ಅನ್ನುವ ಉಪಾಯವನ್ನು ಮೋನಪ್ಪನೇ ಸೂಚಿಸಿದ. ಆದರೆ ಉಪ್ಪಿನಂಗಡಿ ಮಂಡಲ ಪಂಚಾಯತ್‌ನವರು ಆ ವರ್ಷದ ಮರಳು ತೆಗೆಯುವ ಕಂಟ್ರಾಕ್ಟನ್ನು ಇನ್ಯಾರಿಗೋ ಕೊಟ್ಟುಬಿಟ್ಟಿದ್ದರು.

ಈ ಮಧ್ಯೆ ಬ್ಯಾಂಕಿನವರು ಸೋಮಣ್ಣನಿಗೆ ಕಂತು ಕಟ್ಟುವಂತೆ ಪೀಡಿಸತೊಡಗಿದರು. ಒಂದು ರಾತ್ರಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅದರ ಹಿಂಭಾಗ ಸೊಟ್ಟಗಾಯಿತು.

******

ಸೋಮಣ್ಣನ ದುರಾದೃಷ್ಟ ಶುರುವಾದದ್ದೇ ಆಮೇಲೆ ಎಂದ ಗೋಪಾಲಕೃಷ್ಣ. ಅವನ ಲಾರಿಯನ್ನು ಕೇಳಿಕೊಂಡು ಸಕಲೇಶಪುರದಿಂದ ಇಬ್ಬರು ವ್ಯಾಪಾರಿಗಳು ಬಂದಿದ್ದರಂತೆ. ಸಕಲೇಶಪುರದ ಹತ್ತಿರ ರೆಸಾರ್ಟ್ ಕಟ್ಟುತ್ತಿದ್ದೇವೆ. ಮರಮಟ್ಟು ಸಾಗಿಸೋದಕ್ಕೆ ಬೇಕು ಎಂದವರು ಲಾರಿಯನ್ನು ಬಾಡಿಗೆಗೆ ಕೇಳುವುದಕ್ಕೆ ಬಂದಿದ್ದರು. ಬಾಡಿಗೆಗೆ ಕೊಡೋದಿಲ್ಲ, ಬೇಕಿದ್ರೆ ಮಾರ್ತೀನಿ ಅಂದ ಸೋಮಣ್ಣ. ಐದು ಲಕ್ಷಕ್ಕೆ ಮಾತಾಗಿ, ಮೂರೂವರೆ ಲಕ್ಷಕ್ಕೆ ಲಾರಿ ಮಾರಾಟವೂ ಆಯ್ತು.

ಈಗ ಸೋಮಣ್ಣನ ಸಮಸ್ಯೆ ಏನು ಅನ್ನುವುದು ಅರ್ಥವಾಗಲಿಲ್ಲ. ಗೋಪಾಲಕೃಷ್ಣ ವಿವರಿಸಿದ ಬ್ಯಾಂಕ್ ಲೋನ್ ತೀರಿಸದೇ ಲಾರಿ ಅವರ ಹೆಸರಿಗೆ ಟ್ರಾನ್ಸ್‌ಫರ್ ಮಾಡುವ ಹಾಗಿರಲಿಲ್ಲ. ಅವರೂ ಆರ್‌ಸಿ ಬುಕ್ ಆಮೇಲೆ ಕೊಡ್ತೀನಿ

ಅಂದದ್ದಕ್ಕೆ ಒಪ್ಪಿಕೊಂಡಿದ್ದರಂತೆ. ಹೀಗಾಗಿ ಲಾರಿ ಅವರ ಕೈಲಿತ್ತು, ಮಾಲೀಕತ್ವ ಸೋಮಣ್ಣನ ಹೆಸರಲ್ಲಿತ್ತು.

ಆ ಲಾರಿ ಬಿಸಲೆ ಘಾಟಿಯಲ್ಲಿ ಕಳ್ಳನಾಟ ಸಾಗಿಸುವಾಗ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿತ್ತು. ಡ್ರೈವರ್ ಲಾರಿಯಿಂದ ಜಿಗಿದು ಪರಾರಿಯಾಗಿದ್ದ. ಮೂಲ ಹುಡುಕಿದ ಪೊಲೀಸರು ಸೋಮಣ್ಣನ ಮನೆಗೆ ಬಂದು ಬೆದರಿಕೆ ಹಾಕಿ ಹೋಗಿದ್ದರು. ಈ ಮಧ್ಯೆ ಬ್ಯಾಂಕಿನವರು ಸಾಲ ತೀರಿಸದೇ ಲಾರಿ ಮಾರಿದ್ದು ಅಪರಾಧ ಎಂದು ಅವನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೆದರಿಸಿದ್ದರು. ಲಾರಿ ಉಪ್ಪಿನಂಗಡಿ ಸ್ಟೇಷನ್ನಿನ ಮುಂದೆ ಕಳ್ಳನಾಟ ತುಂಬಿಕೊಂಡು ನಿಂತಿತ್ತು. ಅದನ್ನು ಬಿಡಿಸಿಕೊಡಿ ಅಂತ ಕೇಳಿಕೊಳ್ಳುವುದಕ್ಕೆ ಆ ಸಂಜೆ ಸೋಮಣ್ಣ ಗಾಂಧೀಪಾರ್ಕಿಗೆ ಬಂದದ್ದು. ಅವನು ಈ ಸಮಸ್ಯೆಯಿಂದ ಪಾರಾಗುವುದು ಸಾಧ್ಯವೇ ಇಲ್ಲ ಅನ್ನಿಸಿತು ನನಗೆ.

******

ಅದಾದ ನಾಲ್ಕು ತಿಂಗಳ ನಂತರ ನಾನು ಮತ್ತೊಮ್ಮೆ ನಮ್ಮೂರಿಗೆ ಹೋದೆ. ಗೋಪಾಲಕೃಷ್ಣ, ಸುರೇಂದ್ರನ ಜೊತೆ ಮಾತಾಡುವ ಹೊತ್ತಿಗೆ ಸೋಮಣ್ಣ ನೆನಪಾದ. ಅವನಿಗೇನಾಗಿದೆ, ಆರಾಮಾಗಿ ಓಡಾಡಿಕೊಂಡಿದ್ದಾನೆ. ಮೂರೂವರೆ ಲಕ್ಷ ಹೊಡ್ಕೊಂಡು ಬಿಟ್ಟ ಅಂದ ಗೋಪಾಲಕೃಷ್ಣ.

ಆವತ್ತು ಗೋಪಾಲಕೃಷ್ಣ ಅದ್ಯಾರಿಗೋ ಮಾತಾಡಿ, ಹಳೇ ತಾರೀಖಿಗೆ ಲಾರಿ ಕಳುವಾಗಿದೆ ಎಂದು ಪೊಲೀಸ್ ಕಂಪ್ಲೇಂಟ್ ರಿಜಿಸ್ಟರ್ ಮಾಡಿಸಿಕೊಟ್ಟನಂತೆ. ಅಲ್ಲಿಗೆ, ಲಾರಿ ಕದ್ದು, ಕಳ್ಳನಾಟ ಸಾಗಿಸಿದ ಅಪರಾಧ ಇನ್ಯಾರಿಗೋ ವರ್ಗವಾಯಿತು. ಬ್ಯಾಂಕಿನವರಿಗೆ ಕಂತು ಕಟ್ಟೋದಕ್ಕಾಗೋಲ್ಲ, ಲಾರಿ ಮಾರಿಕೊಳ್ಳಿ ಅಂತ ಹೇಳಿ ಸೋಮಣ್ಣ ಬಚಾವಾದ. ಕೇಸು ಮುಗಿಯುವ ತನಕ ಲಾರಿ ಬಿಡುವುದಿಲ್ಲ ಅಂತ ಪೊಲೀಸರು ಪಟ್ಟು ಹಿಡಿದರು.. ಸಕಲೇಶಪುರದವರು ಕೊಟ್ಟ ಮೂರೂವರೆ ಲಕ್ಷ ಸೋಮಣ್ಣನಿಗೆ ಲಾಭ. ಈಗ ಒಂದು ೪೦೫ ಟೆಂಪೋ ತಗೊಂಡಿದ್ದಾನೆ ಎಂದು ಸುರೇಂದ್ರ ಗಹಗಹಿಸಿ ನಕ್ಕ.

ನನಗೆ ಒಂದು ಕ್ಷಣ ನಾನು ಎಲ್ಲಿದ್ದೇನೆ ಅನ್ನುವುದೇ ಮರೆತಂತಾಯಿತು. ಹೊರಗೆ ನಡುರಾತ್ರಿಯ ಕಾಳಗತ್ತಲು. ಧಾರಾಕಾರ ಮಳೆ. ಹೊರಜಗತ್ತಿಗೂ ನಮಗೂ ನಾನಿರುವ ಬೆಂಗಳೂರಿಗೂ ಸೋಮಣ್ಣನಿಗೂ ಏನು ಸಂಬಂಧ ಅನ್ನುವುದೇ ಹೊಳೆಯಲಿಲ್ಲ. ಸೋಮಣ್ಣನ ಇಡೀ ಕತೆ ನನ್ನೊಳಗೆ ಗಾಳಿಯಂತ್ರದ ಹಾಗೆ ಸುತ್ತುತ್ತಿತ್ತು. ಸೋಮಣ್ಣ ನಿಜಕ್ಕೂ ಅದನ್ನೆಲ್ಲ ಯಾವ ಉತ್ಸಾಹದಿಂದ ಮಾಡುತ್ತಿದ್ದಾನೆ. ಮತ್ತೆ ಮತ್ತೆ ಅಪಘಾತಕ್ಕೆ ತುತ್ತಾಗುವ ಅವನನ್ನು ಮತ್ತೂ ಬದುಕುವಂತೆ ಪ್ರೇರೇಪಿಸುವ ಶಕ್ತಿ ಯಾವುದು. ಅದು ಅವನೊಳಗಿನ ಅಜ್ಞಾನದಿಂದ ಹುಟ್ಟಿದ್ದಾ, ಹುಂಬತನದಿಂದ ಬಂದದ್ದಾ, ನಾಚಿಕೆಗೀಡಿತನದಿಂದ ಹುಟ್ಟಿದ್ದಾ ಎಂದು ಯೋಚಿಸುತ್ತಾ ನಾನು ಮಂಕಾಗಿ ಕುಳಿತದ್ದನ್ನು ನೋಡಿ ಸುರೇಂದ್ರ ಉಪ್ಪಿನಕಾಯಿ ತುಂಬಿದ್ದ ಪ್ಲೇಟನ್ನು ಮುಂದಿಟ್ಟು ಒಂಚೂರು ನೆಂಚಿಕೋ, ಎಲ್ಲ ಸರಿಹೋಗುತ್ತೆ ಅಂದ.

Friday, August 15, 2008

ಕುಲವೊಂದು ಕವಲೆರಡುಎರಡು ಸಂತೋಷದ ಸುದ್ದಿಗಳನ್ನು ಹಂಚಿಕೊಳ್ಳಬೇಕಿದೆ. ನಮ್ಮೆಲ್ಲರ ಪ್ರೀತಿಯ ಕತೆಗಳನ್ನು ಬರೆದ ನೇಮಿಚಂದ್ರ ಈ ಸಾರಿಯ ಫಿಷ್ ಮಾರ್ಕೆಟ್ಟಿನಲ್ಲಿ ನಮ್ಮನ್ನು ಎದುರಾಗಲಿದ್ದಾರೆ. ನೇಮಿಚಂದ್ರ ಅನ್ನುವ ಹೆಸರಲ್ಲೇ ಅನೇಕ ನಿಗೂಢಗಳಿವೆ. ನೇಮಿಚಂದ್ರ ಅವರ ಕಾವ್ಯನಾಮವಾ ಎಂದು ಕೇಳುವವರಿಂದ ಹಿಡಿದು, ಅವರ ಮಿಸೆಸ್ ಹೆಸರೇನು ಅಂತ ಕುತೂಹಲಿಗಳಾಗುವವರ ತನಕ, ನೇಮಿಚಂದ್ರ ಆಸಕ್ತಿ ಉಳಿಸಿಕೊಂಡವರು. ಹತ್ತು ಹಲವು ಸಂಗತಿಗಳ ಕುರಿತು, ಅದೇ ಆಸ್ಥೆ, ಆಸಕ್ತಿ ಮತ್ತು ಪ್ರೀತಿ ಇಟ್ಟುಕೊಂಡು ಬರೆಯುವವರು. ಅವರು ಫಿಶ್ ಮಾರ್ಕೆಟ್ಟಿಗೆ ಬರುತ್ತಿರುವುದು ಸಂತೋಷ. ಅವರ ಕತೆ ಕಾದಂಬರಿ ಮತ್ತು ಪ್ರವಾಸ ಕಥನಗಳ ಜೊತೆಗೆ ಅವರನ್ನು ಎದುರುಗೊಳ್ಳೋಣ.
ಕನಸುಗಳಿಗೆ ರೆಕ್ಕೆ ಹಟ್ಟಿ ಹಾರುವವರು ಎಂದು ಅವರನ್ನು ಜಿ ಎನ್ ಮೋಹನ್ ವರ್ಣಿಸಿದ್ದಾರೆ. ಆ ಮಾತಿಗೆ ಇನ್ನೊಂದು ಅರ್ಥವೂ ಉಂಟು. ಅವರು ವಿಮಾನ ಕಾರ್ಖಾನೆಯಲ್ಲಿ ಉದ್ಯೋಗಿ. ಹೀಗಾಗಿ ಹಲವರ ಹಾರುವ ಕನಸಿಗೂ ಅವರೇ ರೆಕ್ಕೆ.

ಆ ಶನಿವಾರ ಬಿಟ್ಟು ಸೋಮವಾರಕ್ಕೆ ದಾಟಿಕೊಂಡರೆ ಚೇತನಾ ತೀರ್ಥಹಳ್ಳಿ ಕಥಾ ಸಂಕಲನ ಬಿಡುಗಡೆ. ಸೆನೆಟ್ ಹಾಲ್-ನಲ್ಲಿ ಕಥಾ ಕಾಲಕ್ಷೇಪ. ಆವತ್ತು ವೇದಿಕೆಯಲ್ಲಿ ಎಲ್ಲರಿಗೂ ವಿವೇಕ. ಸಭಾಂಗಣವೇ ಟೀನಾ ಝೋನ್, ಮಯೂರ-ವರ್ಮ ಬಸವರಾಜ್ ಕೂಡ ಜೊತೆಗಿರುತ್ತಾರೆ. ತೀರ್ಥಹಳ್ಳಿಯ ಚೇತನಾರಷ್ಟೇ ಚಂದಕ್ಕೆ ಪುಸ್ತಕವೂ ಹೊರಬಂದಿದೆ.
ಎರಡೂ ಸಂಭ್ರಮಗಳೂ ಈ ಮಳೆಗಾಲದ ತಂಪುಹೊತ್ತಲ್ಲಿ ನಿಮ್ಮನ್ನು ಬೆಚ್ಚಗಿರಿಸಲಿ, ವಿಸ್ಕಿಯಂತೆ.


Tuesday, August 5, 2008

ಮುಸ್ಸಂಜೆಯ ಮೂರು ಗಳಿಗೆ

ಸಂಜೆ ಮುಗಿದಿರಲಿಲ್ಲ. ಇರುಳು ಶುರುವಾಗಿರಲಿಲ್ಲ. ಬಿಸಿಲು ಕಣ್ಮರೆಯಾಗಿದ್ದರೂ, ಸೂರ್ಯನ ನೆರಳು ಚಾಚಿಕೊಂಡಿತ್ತು. ಮನೆಯೊಳಗೆ ಯಾರೋ ಅರೆಮನಸ್ಸಿನಿಂದ ಎಸೆದ ನಸುಬೆಳಕು, ಪುಟ್ಟ ಮಗು ಚೌಕಕ್ಕೆ ತುಂಬಿದ ಕಪ್ಪುಬಣ್ಣದ ನಡುವೆ ಖಾಲಿ ಉಳಿದ ಜಾಗದಂತೆ ಕಾಣಿಸುತ್ತಿತ್ತು. ಹಳೇ ಕಾಲದ ಮೇಜಿನಡಿ ಜೋಡಿನೆರಳುಗಳು ತೆಕ್ಕೆಬಿದ್ದು ಹೆಣೆಯಾಡುತ್ತಿದ್ದವು.
ಅಷ್ಟು ಹೊತ್ತಿಗೆ ಬೆಳಕಾಯಿತು. ದೂರದಲ್ಲೆಲ್ಲೋ ಟ್ರೇನು ಬಂದು ನಿಂತ ಸದ್ದು. ಆ ಸದ್ದಿಗೂ ಕತ್ತಲೆಯ ಸುದ್ದಿ ತಿಳಿದಿತ್ತೋ ಎಂಬಂತೆ ಎಂದಿಗಿಂತ ವೇಗವಾಗಿಯೇ ಅದು ಆ ಕತ್ತಲನ್ನು ಆಗಷ್ಟೇ ಹೊರಹಾಕಿದ್ದ ಮನೆಯ ಒಳಗನ್ನೂ ತಲುಪಿತು.
ಬೆಳಕು ಆವತ್ತು ಮಾತಾಡಲಿಲ್ಲ. ಮಾತಾಡುವುದಕ್ಕೆ ಏನೂ ಉಳಿದೇ ಇಲ್ಲವೇನೋ ಎಂಬಂತೆ ಕತ್ತಲು ಕೂಡ ನೆರಳಿನ ಕೂಡ ಜಗಳ ಆಡುತ್ತಿರಲಿಲ್ಲ. ನಾವಿಬ್ಬರೂ ಸಹಬಾಳ್ವೆ ನಡೆಸಬೇಕಾದ ಜಾಗ ಇದು ಎನ್ನುವುದು ಸ್ಪಷ್ಟವಾಗಿ ಗೊತ್ತಿದ್ದವರ ಹಾಗೆ ಅವೆರಡೂ ಒಂದೇ ತಾಯಿಯ ಮಕ್ಕಳೋ ಎಂಬಷ್ಟು ಸಹಜವಾಗಿ ಆಪ್ತವಾಗಿ ಒಡನಾಡಿಕೊಂಡಿದ್ದವು.
ಮನೆಗೆ ಅಂಗಳ ಇರಲಿಲ್ಲ. ಬೀದಿಗೇ ಚಾಚಿಕೊಂಡಿದ್ದ ಬಾಗಿಲು. ಹಾದಿಹೋಕ ತಪ್ಪಿ ಒಂದು ಹೆಜ್ಜೆ ಪಕ್ಕಕ್ಕಿಟ್ಟರೆ ಮನೆಯೊಳಗೆ ಬರಬಹುದಾಗಿತ್ತು. ಆದರೆ, ಹಾಗೆ ತಪ್ಪಿ ಒಳಬಂದವರನ್ನು ಆ ಮನೆ ಯಾವತ್ತೂ ನೋಡಿರಲಿಲ್ಲ. ಬರಬೇಕಾಗಿದ್ದವರೇ ಬಾರದೇ ಉಳಿದ ಮನೆ ಅದು. ಹೀಗಾಗಿ ಅಪರಿಚಿತರ ಪಾಲಿಗಂತೂ ಅದು ಮುಚ್ಚಿದ ಬಾಗಿಲು. ಆ ಬಾಗಿಲಿಗೆ ಒಮ್ಮೊಮ್ಮೆ ಬೀಗ ಜೋತುಬಿದ್ದು, ಇಡೀ ಮನೆಯ ರಕ್ಷಣೆಯ ಹೊಣೆ ನನ್ನದು ಎನ್ನುವ ಅಹಂಕಾರದಲ್ಲಿ ಕೂತಿರುತ್ತಿತ್ತು. ಅದರ ಅಹಂಕಾರವನ್ನು ಅಣಕಿಸುತ್ತಾ, ಕಳ್ಳರ ಅತೀವ ಚಾಣಾಕ್ಷತನಗಳು ಆ ಮನೆಯ ಮುಂದೆಯೇ ಓಡಾಡಿದ್ದುಂಟು. ಅಂಥ ಜಾಣ್ಮೆಗೆ ಸವಾಲಾಗುವ ಶಕ್ತಿಯಂತೂ ಆ ಬೀಗಕ್ಕಿರಲಿಲ್ಲ. ಅದು ಅಷ್ಟು ವರುಷ ನಿಯತ್ತಿನ ಕಾವಲುಗಾರನಾಗಿ ಉಳಿದಿದ್ದಕ್ಕೆ ಕಾರಣ ಅದನ್ನು ಮುಟ್ಟದೇ ಮುಂದೆ ಸಾಗಿದ ಕಸಬುಗಾರಿಕೆಯ ಕರುಣೆಯೇ ಹೊರತು, ಬೀಗದ ಶಕ್ತಿಸಾಮರ್ಥ್ಯ ಅಲ್ಲ.
ರಸ್ತೆ ಆಚೆ ಬದಿಗೆ ಬೀದಿದೀಪವಿತ್ತು. ಅದರ ಬೆಳಕಿಗೆ ಮನೆಯೊಳಗಿನ ಕತ್ತಲೆಯ ಬಗ್ಗೆ ಅತೀವ ಮರುಕವೂ ಇತ್ತು. ಬಾಗಿಲು ತೆಗೆದಾಗೊಮ್ಮೆ ಆ ಬೆಳಕು ಮನೆಯೊಳಗೆ ಕಾಲಿಟ್ಚು ಒಳಗೆ ಮನೆಮಾಡಿದ್ದ ಅರೆಗತ್ತಲ ಹರೆಯಕ್ಕೊಂದು ಕಣ್ಣುಹೊಡೆದು ಮರಳುತ್ತಿತ್ತು. ಆ ಕತ್ತಲನ್ನು ಕೂಡಿ, ತನ್ನ ಪ್ರಜ್ವಲತೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಅವಕಾಶವಂತೂ ಅದಕ್ಕೆ ಸಿಕ್ಕಿರಲೇ ಇಲ್ಲ. ಆ ಬಗ್ಗೆ ಬೀದಿ ದೀಪದ ಬೆಳಕಿಗೆ ಅಪಾರ ಸಿಟ್ಟೂ ಇದ್ದಂತಿತ್ತು. ಆದರೆ ಆ ಸಿಟ್ಟನ್ನು ವಿಷಾದದ ಅರಿವೆಯಲ್ಲಿ ಸುತ್ತಿಟ್ಟು ಅದು ಮಂದವಾಗಿ ಉರಿಯುತ್ತಿತ್ತು.
ಅಡುಗೆ ಮನೆಯಲ್ಲಿ ತಟ್ಟೆ ಸದ್ದು ಮಾಡಿತು. ಅದಕ್ಕೆ ವರಾಂಡದಲ್ಲಿ ಕುರ್ಚಿಯ ಮೇಲೆ ಕೂತಿದ್ದ ಕಾಲುಗಳು ಭಂಗಿ ಬದಲಾಯಿದವು. ಸ್ವಲ್ಪ ಹೊತ್ತಿಗೆಲ್ಲ ಶಂಖದ ದನಿ ಮನೆಯೊಳಗಿನ ಅರೆಗತ್ತಲ ನಿದ್ದೆಯನ್ನು ಅರೆಕ್ಷಣ ಓಡಿಸುತ್ತದೆ ಅನ್ನುವುದು ಕತ್ತಲೆಗೂ ಗೊತ್ತಿತ್ತು.
ಮನೆಯೊಳಗೆ ಅದೇನೋ ಸದ್ದಾಯಿತು. ಆ ಅಪರಿಚಿತ ಸದ್ದಿಗೆ ನಾಲ್ಕು ಕಣ್ಣುಗಳೂ ನಾಲ್ಕು ಕಿವಿಗಳೂ ಚುರುಕಾದವು. ಆ ಸದ್ದಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಎಂಟೂ ದಿಕ್ಕುಗಳೂ ತೆಪ್ಪಗಿದ್ದವು. ಆ ನೀರವದಲ್ಲಿ ದೂರದಲ್ಲೆಲ್ಲೋ ಮಳೆಯಾದ ಘಮಲು ತೇಲಿಕೊಂಡು ಬಂದು ಕತ್ತಲ ಮೈಗೆ ಸವರಿತು.


ಕತ್ತಲು ಪುಳಕಗೊಂಡು, ಆ ಪರಿಮಳಕ್ಕೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟಿತು.
ಕೇಶವಮೂರ್ತಿ ರೇಲು ಬಂತು, ಹೋಯ್ತು ಎಂದು ಪಿಸುಗುಟ್ಟಿಕೊಂಡರು. ಶಾಂತಮ್ಮನ ನಿಟ್ಟುಸಿರು ಆ ಪಿಸುಮಾತಿಗೆ ಮುತ್ತಿಡಲು ಹೆಜ್ಜೆ ಮುಂದಿಟ್ಟಿತು. ಅವೆರಡೂ ಕ್ಷಣಾರ್ಧದಲ್ಲಿ ದಿವಂಗತವಾದವು.
-೨-
ಹೊರಟ ಹಾದಿಯಲ್ಲಿ ಹೂಬಿಸಿಲಿತ್ತು. ಅದು ಮಧ್ಯಾಹ್ನದ ಹೊತ್ತಿಗೆ ದೂರ್ವಾಸರ ಹಾಗೆ ಕೆಂಡಾಮಂಡಲವಾಗಿ, ಮತ್ತೆ ಊರ್ವಶಿಯ ಹಾಗೆ ತಂಪಾಗಿ, ಕೊನೆಯಲ್ಲಿ ಮೇನಕೆಯ ಹಾಗೆ ಮೈ ಚಾಚಿಕೊಳ್ಳುವುದಕ್ಕೆ ಕಾಯುತ್ತಿತ್ತು.
ಚಿರಪರಿಚಿತ ರಸ್ತೆ. ತನ್ನನ್ನು ತುಳಿದು ಸಾಗಿದವರನ್ನು ಅದು ಯಾವತ್ತೂ ನಿರಾಸೆ ಮಾಡಿದ್ದಿಲ್ಲ. ಹೊರಟವರನ್ನು ಹೊರಟಲ್ಲಿಗೆ ತಲುಪಿಸಿ ಮರಳಿ ಕರೆತಂದ ಖ್ಯಾತಿ ಅದಕ್ಕಿತ್ತು.
ಚಪ್ಪಲಿ ತೊಟ್ಟ ಪಾದಗಳ ವಿಚಾರದಲ್ಲಿ ಆ ರಸ್ತೆಗೆ ತಕರಾರು. ಬರಿಗಾಲಲ್ಲಿ ನಡೆಯುವವರನ್ನು ಕಂಡರೆ ಅಚ್ಚುಮೆಚ್ಚು. ತೀರ ಸಂತೋಷ ಉಕ್ಕಿದಾಗ ಒಂದೆರಡು ಹಳದಿ ಹೂವುಗಳನ್ನು ಅರಳಿಸಿ ಅದು ರೋಮಾಂಚಗೊಳ್ಳುತ್ತಿತ್ತು. ಆ ಹೂವುಗಳಿಗೆ ದೀರ್ಘಾಯುಷ್ಯವಿಲ್ಲ ಎನ್ನುವ ಕೊರಗೂ ಆ ರಸ್ತೆಗಿತ್ತು. ಆದರೆ, ಶಾಶ್ವತವಾದದ್ದು ಯಾವತ್ತೂ ಸುಂದರವಾಗಿರುವುದಿಲ್ಲ ಎಂಬ ಸತ್ಯವನ್ನು ಅನೇಕರು ಆ ರಸ್ತೆಗೆ ಕಲಿಸಿಕೊಟ್ಟಿದ್ದರು.
ತನಗೊಂದು ಕೊನೆಯಿದೆ ಮತ್ತು ಮೊದಲಿದೆ ಅನ್ನುವುದೇ ಗೊತ್ತಿಲ್ಲದ ಹುಂಬ ರಸ್ತೆ ಅದು. ನಡೆದಷ್ಟೂ ತೆರೆದುಕೊಳ್ಳುತ್ತಿದ್ದ ಅದನ್ನು ಮೆಟ್ಟಿಕೊಂಡು ಹೊರಟವ ಕಾಲುಗಳೆಲ್ಲ ಅರ್ಧಕ್ಕೇ ಹಳಿ ಬದಲಾಯಿಸುತ್ತಿದ್ದವು. ತನ್ನನ್ನು ನಂಬಿದವರನ್ನು ಒಂದು ಗುರಿಗೆ ಖಂಡಿತಾ ತಲುಪಿಸಬಲ್ಲೆ ಎಂಬ ನಂಬಿಕೆಯಿಂದ ಆ ರಸ್ತೆ, ತನ್ನನ್ನೇ ನೆಚ್ಚಿಕೊಂಡು ನಡೆಯುವ ಕಾಲುಗಳಿಗಾಗಿ ಕಾಯುತ್ತಿತ್ತು.
ಅದರ ಆಯಸ್ಸೇನೂ ತೀರಿರಲಿಲ್ಲ. ಧೋ ಎಂದು ಮಳೆಸುರಿದಾಗ ಅದು ತನ್ನ ಸ್ವರೂಪ ಕಳಕೊಂಡು ಎಡಬಲದ ಬಯಲಲ್ಲಿ ಒಂದಾಗುತ್ತಿತ್ತು. ಮತ್ತೆ ಬೇಸಗೆ ಕಾಲಿಟ್ಟಾಗ ಅದು ಮತ್ತೆ ಹಳೆಯ ರೂಪಕ್ಕೇ ಬರುತ್ತಿತ್ತು. ಚಳಿಗಾಲದಲ್ಲಿ ರಸ್ತೆ ನಡುವೆ ಬೆಳೆದ ಹುಲ್ಲಿನ ತುದಿಯಲ್ಲಿ ಕಿರುಜೇಡ ಕಟ್ಟಿದ ಬಲೆಗೆ ಮಂಜಿನ ಹನಿಗಳು ಮುತ್ತಿನ ತೋರಣ ಕಟ್ಟಿ ಸಂಭ್ರಮಿಸುತ್ತಿದ್ದವು. ಅಂಥ ರಸ್ತೆಯ ಮೇಲೆ ಕಾಲಿಟ್ಟ ಆ ಪಾದಗಳು ಆದಷ್ಟು ಬೇಗ ರಸ್ತೆಯ ಸಹವಾಸ ಮುಗಿದರೆ ಸಾಕಪ್ಪ ಎಂಬಂತೆ ದಾಪುಗಾಲು ಹಾಕಿದ್ದವು.
ತನ್ನನ್ನು ತುಳಿಯುವ ಕಾಲುಗಳು ದಾರಿತಪ್ಪದಂತೆ ಕಾಪಾಡುವ ಕಣ್ಣುಗಳು ತನ್ನ ಮೇಲಿದೆ ಅನ್ನುವುದು ಗೊತ್ತಿದ್ದರೂ ಆ ಕಣ್ಣ ಕಳವಳ ಏನೆಂಬುದನ್ನು ತಿಳಿದುಕೊಳ್ಳಲು ರಸ್ತೆ ಯಾವತ್ತೂ ಆಸಕ್ತಿ ತೋರಿರಲೇ ಇಲ್ಲ. ತನ್ನುದ್ದ ಚಾಚಿಕೊಳ್ಳುವ ರಾತ್ರಿ, ಹಗಲು ತನ್ನನ್ನು ಮುತ್ತಿಕೊಳ್ಳುವ ನೆರಳು ಮತ್ತು ಎಂದಾದರೊಮ್ಮೆ ಅತಿಥಿಯ ಹಾಗೆ ಬಂದು ಹೋಗುವ ಮಳೆಯ ಕುರಿತೂ ರಸ್ತೆಗೆ ಆಸಕ್ತಿ ಇರಲಿಲ್ಲ.
ಆ ಮುಸ್ಸಂಜೆ ತನ್ನ ಮೇಲೆ ಉಪ್ಪುನೀರ ಬಿಂದುಗಳನ್ನು ಅಲ್ಲಲ್ಲಲ್ಲಿ ಸುರಿಸುತ್ತಾ ಹೋಗುತ್ತಿದ್ದ ಕಣ್ಣುಗಳ ಮೇಲೆ ರಸ್ತೆಗೆ ಇದ್ದಕ್ಕಿದ್ದಂತೆ ಕರುಣೆ ಉಕ್ಕಿಬಂತು. ಆ ನೀರ ಬಿಂದುಗಳನ್ನು ಅದು ವಿಪರೀತ ದಾಹಗೊಂಡ ಮನುಷ್ಯನ ಹಾಗೆ ಕುಡಿದು ಸುಮ್ಮಗಾಯಿತು. ಹಾಗೆ ಕುಡಿದ ಉಪ್ಪುನೀರ ಬಿಂದುಗಳನ್ನು ಹಳದಿ ಹೂವಿನ ಬದಲಾಗಿ ನೀಲಿ ಹೂವುಗಳಿಗೆ ದಾನ ಕೊಡಬೇಕು ಅನ್ನುವ ಆಸೆಯೊಂದು ಮೂಡಿ ರಸ್ತೆ ಒಮ್ಮೆ ಮೈಮುರಿಯಿತು.
ಆ ಮೈಮುರಿಯುವ ಸಂಭ್ರಮಕ್ಕೆ ಅದಕ್ಕೆ ತನ್ನನ್ನು ತುಳಿಯುತ್ತಾ ಸಾಗುತ್ತಿದ್ದ ಕಾಲುಗಳ ಪರಿವೆಯೇ ಇರಲಿಲ್ಲ.
ಇನ್ನು ನಾನು ಅರಳಿಸುವ ಹಳದಿ ಹೂವು ಕೆಂಪುಬಣ್ಣದ ಹಣೆಬೊಟ್ಟಿಟ್ಟುಕೊಂಡು ಕಣ್ತೆರೆಯುತ್ತದೆ ಅನ್ನುವ ಕಲ್ಪನೆ ರಸ್ತೆಗೆ ಇರಲಿಲ್ಲ. ಪ್ರೀತಿಸುವವರನ್ನೂ ದ್ವೇಷಿಸುವವರನ್ನು ಸಮಾನವಾಗಿ ಪ್ರೀತಿಸುತ್ತೇನೆ ಎಂದುಕೊಂಡು ರಸ್ತೆ ಭಗವದ್ಗೀತೆಗೆ
ಶರಣಾಗುವ ಹೊತ್ತಿಗೆ, ಶಾಕುಂತಲೇ ರಸ್ತೆಯಿಂದಾಚೆ ಬಂದಾಗಿತ್ತು. ಅದಕ್ಕೂ ಮುಂಚೆ..
ಶಾಕುಂತಲೆಯ ಬೆರಳು ಕಲ್ಲೊಂದಕ್ಕೆ ಎಡವಿತು. ಒಂದು ಹನಿ ನೆತ್ತರು ರಸ್ತೆ ಪಾಲಾಯಿತು.
-೩-
ತಾನು ಹುಟ್ಟಿದ್ದನ್ನೇ ಮರೆತ ಕತ್ತಲು ಮತ್ತು ತಾನು ತಲುಪಿದ್ದನ್ನೆ ಮರೆತ ರಸ್ತೆ ಎರಡನ್ನೂ ದಾಟಿಕೊಂಡು ಕಾಲುಗಳು ಮನೆಯ ಬಾಗಿಲಿಗಾಗಿ ಹುಡುಕಾಡಿದವು. ಬಾಗಿಲು ಮುಚ್ಚಿತ್ತು. ಕತ್ತಲು ಕಣ್ಮುಚ್ಚಿಕೊಂಡು ಕಾವಲು ಕಾಯುತ್ತಿತ್ತು.
ಮಂದ ಬೆಳಕಿಗಾಗಿ ಕಣ್ಣು ಹಂಬಲಿಸಿತು. ಬಾಗಿಲು ಬಡಿಯುವುದಕ್ಕೆ ಕೈಗಳು ಕಾದು ಕಂಪಿಸುತ್ತಿದ್ದವು. ತನ್ನ ಕೈ ಹೊರಡಿಸುವ ಸದ್ದು, ತನ್ನನ್ನು ಶಾಶ್ವತವಾಗಿ ಮತ್ತೊಂದು ಜಗತ್ತಿನ ಪಾಲಿಗೆ ಎರವಾಗುವಂತೆ ಮಾಡುತ್ತದೆ ಎಂಬ ಕಲ್ಪನೆ ಆ ಕೈಗಿತ್ತು. ಬೆರಳುಗಳು ತಾನಾಗಿ ಮಡಿಸಿಕೊಂಡವು. ನಡುಬೆರಳು ಬಾಗಿ, ಬಾಗಿಲನ್ನು ಎರಡು ಸಾರಿ ತಟ್ಟಿತು.
ಬಾಗಿಲು ರಸ್ತೆಗೆ ತೆರೆದುಕೊಂಡಿತು. ಒಳಗಿದ್ದ ಅರೆಬೆಳಕು, ಹೊರಗಿದ್ದ ಕತ್ತಲೆಯ ಸೊಂಟಕ್ಕೆ ಕೈ ಹಾಕಿ ಬರಸೆಳೆಯಿತು. ಮುಗಿದು ಹೋದ ಕತೆಯ ನಂತರ ಉಳಿದಿರಬಹುದಾದ ವಿಷಾದದ ಹಾಗೆ ಬೆಳಕು ನರಳಿತು.
ಕಣ್ಣಂಚಿನಲ್ಲಿ ನೀರಾಡಿತು. ಮತ್ತೆರಡು ಕಾಲುಗಳಿಗೆ ಮತ್ತೆರಡು ಕಣ್ಣುಗಳು ಹುಡುಕಾಡಿದವು. ನಾಲ್ಕು ಕಣ್ಣು ಎಂಟಾಗದ ಅಚ್ಚರಿ ಮತ್ತು ಆತಂಕವನ್ನು ಮತ್ತಷ್ಟು ಸ್ಪಷ್ಟಪಡಿಸಲು ಕತ್ತಲೆ ಅಂಜಿಕೊಂಡಿತು. ಬೆಳಕು ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ದೀಪದ ತುದಿಗೆ ಆತುಕೊಂಡಿತ್ತು.
ಮೂರು ಕಣ್ಣುಗಳು ಆರಾದವು. ಆರು ಕಣ್ಣುಗಳಲ್ಲಿ ಆರಿದ ಬೆಳಕು ಕತ್ತಲೆಯನ್ನೂ ಅಂಜಿಸುವಂತಿತ್ತು. ದೂರದಲ್ಲೆಲ್ಲೋ ಮೋಡದ ಮೇಲೆ ಚಿನ್ನದ ನೀರು, ಚೆಲ್ಲುತ ಸಾಗಿದೆ ಹೊನ್ನಿನ ತೇರೂ..’ ಎಂಬ ದನಿ ಕತ್ತಲನ್ನು ಕೂಡಿ ಕಳೆದುಹೋಗುತ್ತಿತ್ತು. ಇದ್ದಕ್ಕಿದ್ದಂತೆ ಮತ್ತೊಂದು ರೇಲು ಬಂದು ನಿಂತ ಸದ್ದಿಗೆ ಭೂಮಿ ಕಂಪಿಸಿತು. ಆ ರೇಲು ನಿಂತಂತೆ ಮಾಡಿ ಮತ್ತೆ ಅದೇ ರಭಸದಲ್ಲಿ ಸಿಳ್ಳೆಯ ದನಿಯಂತೆ ಕಿವಿಮರೆಯಾಯಿತು.
-೪-
ಏನಾಯ್ತು, ಕೇಶಮೂರ್ತಿ ಕೇಳಲೋ ಬೇಡವೋ ಎಂಬ ಸಂದಿಗ್ಧದಲ್ಲಿ ಕೇಳಿ, ಉತ್ತರಕ್ಕಾಗಿ ಕಾದರು. ಶಾಂತಮ್ಮ ಶಕುಂತಲೆಯ ಮಾತು ಬೆಳಕಾಗಲಿ ಎಂದು ಎತ್ತಲೋ ನೋಡಿದರು. ಅವರೆತ್ತ ನೋಡಿದರು ಅನ್ನುವುದು ಕತ್ತಲಿಗೂ ಕಾಣಿಸಲಿಲ್ಲ.
ಶಕುಂತಲೆ ಎಚ್ಚರವೂ ಅಲ್ಲದ, ಸಾವೂ ಅಲ್ಲದ, ಅರಿವೂ ಅಲ್ಲದ, ಪರಿವೆಯೂ ಇಲ್ಲದ ದನಿಯಲ್ಲಿ ವಾಪಸ್ ಬಂದುಬಿಟ್ಟೆ’ ಅಂದಳು.
ಕತ್ತಲು ಮತ್ತು ಬೆಳಕು ಮತ್ತೆ ಸಂಧಿಸುವ ಮತ್ತೊಂದು ಸಂಧ್ಯಾಕಾಲಕ್ಕೆ ಕುಕ್ಕರಗಾಲಲ್ಲಿ ಕಾಯುತ್ತಾ ಕೂತವು.
ಕತ್ತಲು ಬೆಳೆಯುತ್ತಿತ್ತು.
ಬೆಳಕು ಅಳಿಯುತ್ತಿತ್ತು.

Wednesday, July 30, 2008

ಫಸ್ಟ್ ಹಾಫ್, ಫಸ್ಟ್ ಕಾಪಿ

ಅಜ್ಜೀಪುರ-ರವಿ
ಅಜ್ಜೀಪುರ, ರವಿ, ಶರತ್, ಕಲ್ಕೋಡ್, ನಿವೇದಿತಾ, ಶೀಲಾ ಮೇಡಂ, ಉಮೇಶ್
ಪುಸ್ತಕ ಹೀಗಿದೆ

ಫುಲ್ ಮತ್ತು ಹಾಫ್