Wednesday, January 30, 2008

ವ್ಯಾಸರಾಯ ಬಲ್ಲಾಳರು ಇನ್ನಿಲ್ಲ


Tuesday, January 29, 2008

ಕವಿತೆಯನ್ನು ಮನೆ ತುಂಬಿಸಿಕೊಳ್ಳುವುದು ಹೇಗೆ?

ಕಾವ್ಯದ ಮೇಲೆ ನನಗೇನೂ ಸಿಟ್ಟಿಲ್ಲ. ಆದರೆ ಕವಿತೆ ಅರ್ಥವಾಗೋಲ್ಲ ಕಣ್ರೀ. ಕೆಲವು ಕವಿತೆಗಳಂತೂ ತುಂಬ ಕಷ್ಟ ಕೊಡುತ್ತವೆ. ಓದಿದರೆ ಮನಸ್ಸಲ್ಲಿ ಉಳಿಯುವುದಿಲ್ಲ ಎಂದು ಹೇಳುವವರಿದ್ದಾರೆ. ಅಂಥವರು ಕೂಡ ಕವಿತೆಗಳನ್ನು ವಿವರಿಸಿ ಹೇಳಿದರೆ ಓದಿ ಸಂತೋಷಪಡುತ್ತಾರೆ. ಆದರೆ ಹಾಗೆ ವಿವರಿಸಿ ಹೇಳುವುದು ಕೂಡ ಸುಲಭವಲ್ಲ. ವಿವರಿಸಿದಾಗ ಅರ್ಥವಾಗುವ ಕವಿತೆಯೇ ಬೇರೆ, ನಿಜದ ಕವಿತೆಯೇ ಬೇರೆ. ಅದೊಂದು ರೀತಿಯ ಜ್ಞಾನೋದಯದ ಹಾಗೆ ಅನ್ನುವವರೂ ಇದ್ದಾರೆ.
ಅಂತೂ ಕವಿತೆ ಅವರವರಿಗೆ ಅರ್ಥವಾಗಬೇಕು ಅನ್ನುವುದಂತೂ ಸತ್ಯ. ಹೀಗಾಗಿ ಅಂಡರ್‌ಸ್ಟಾಂಡಿಂಗ್ ಪೊಯೆಟ್ರಿ’ಯಂಥ ಪುಸ್ತಕಗಳು ಒಂದು ಹಂತದ ತನಕ ಮಾತ್ರ ನಮ್ಮನ್ನು ಕೈ ಹಿಡಿದು ನಡೆಸಬಲ್ಲವು. ಕೇವಲ, ವಿಮರ್ಶೆಗಳನ್ನು ನಂಬಿಕೊಂಡರೆ ಅವು ಹೆಚ್ಚಿನ ಸಂದರ್ಭದಲ್ಲಿ ದಾರಿತಪ್ಪಿಸುತ್ತವೆ ಅದಕ್ಕಿಂತ ದೊಡ್ಡ ಅಪಾಯವೆಂದರೆ ವಿಮರ್ಶೆಗಳು ವಿಮರ್ಶಕನ ಒಳನೋಟ, ಗ್ರಹಿಕೆ ಮತ್ತು ಅನುಭೂತಿಗೆ ಬಂದಿ. ಕವಿತೆಯ ಸಂಪೂರ್ಣ ರಸಾಸ್ವಾದನೆ ಓದುಗನಿಗೇ ಆಗಬೇಕು. ಇಂಥದ್ದೊಂದು ತಿಂಡಿ ರುಚಿಯಾಗಿದೆ ಎಂದು ಹೇಳಬಲ್ಲ ಶಕ್ತಿ ವಿಮರ್ಶಕನಿದೆ. ಆದರೆ ಅದನ್ನು ಸವಿಯುವ ಶಕ್ತಿ ಓದುಗನಿಗೆ ಇರಬೇಕಾಗುತ್ತದೆ. ಮತ್ತು ಓದುಗನ ಅಭಿರುಚಿಗೆ ತಕ್ಕಂತೆ ಕವಿತೆ ಆತನಿಗೆ ಅರ್ಥವಾಗುತ್ತಾ ಹೋಗುತ್ತದೆ.
ಕುವೆಂಪು ಬರೆದ ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು’ ಸಾಲನ್ನು ಅಪ್ಪಟ ವ್ಯವಹಾರಸ್ಥನಿಗೋ ಮನೆ ಕಟ್ಟುವ ಕಂಟ್ರಾಕ್ಟರನಿಗೋ ಹೇಳಿನೋಡಿ. ಅವನಿಗೆ ಕಾವ್ಯದ ಕುರಿತು ಯಾವ ಪ್ರೀತಿಯೂ ಇಲ್ಲದಿದ್ದಾಗ ಈ ಸಾಲುಗಳು ರುಚಿಸುವುದಕ್ಕೇ ಸಾಧ್ಯವಿಲ್ಲ. ಮನೆ ಕಟ್ಟುವುದು ಅವನ ವೃತ್ತಿಯೇ ಆದ್ದರಿಂದ ಮನೆಯನೆಂದೂ ಕಟ್ಟದಿರು ಅನ್ನುವುದು ಅವನ ವ್ಯಾವಹಾರಿಕ ಜಗತ್ತಿಗೆ ವಿರುದ್ಧವಾದ ಹೇಳಿಕೆ ಅಂತ ಅನ್ನಿಸಬಹುದು. ಹೋಗುವೆನು ನಾ, ಹೋಗುವೆನು ನಾ, ನನ್ನ ಒಲುಮೆಯ ಗೂಡಿಗೆ, ಮಳೆಯ ನಾಡಿಗೆ, ಮಳೆಯ ಬೀಡಿಗೆ’ ಎಂದು ಕುವೆಂಪು ಮೈಸೂರಿನಲ್ಲಿ ಕುಳಿತು ಬರೆದದ್ದನ್ನು ಓದಿದವನು ಇನ್ನೂ ಅಲ್ಲಿಗೆ ಅವರು ಹೋಗೇ ಇಲ್ವಲ್ಲ’ ಎಂದು ಟೀಕೆ ಮಾಡಬಹುದು. ಅದನ್ನು ಓದಿದ ಇಂಗ್ಲಿಷ್ ಪತ್ರಕರ್ತ ಕುವೆಂಪು ಮರಳಿ ಮಲೆನಾಡಿಗೆ ಹೋಗಲಿದ್ದಾರೆ ಎಂದು ವರದಿ ಮಾಡಬಹುದು.
ಆದರೆ, ಕವಿ ತನ್ನ ಭಾವಯಾನದಲ್ಲಿ ತನ್ನೂರಿಗೆ ಮರಳಿರುತ್ತಾನೆ. ಕವಿತೆ ಜರುಗುವುದೇ ಮನಸ್ಸಿನ ಅಂಗಳದಲ್ಲಿ ಅನ್ನುವುದನ್ನು ಕಲ್ಪಿಸಿಕೊಳ್ಳದ ಹೊರತು ಕವಿತೆ ಅರ್ಥಪೂರ್ಣವೂ ಆಪ್ತವೂ ಆಗುವುದಕ್ಕೆ ಸಾಧ್ಯವಿಲ್ಲ. ಕವಿತೆ ಹೇಳಿಕೆಯಲ್ಲ, ಹೇಳಿಕೆಯಾಗಬಾರದು ಕೂಡ. ಹೇಳಿಕೆಯಾಗಿ ಮೇಲ್ನೋಟಕ್ಕೆ ಕಾಣಿಸುವುದು ಕೂಡ, ಎಲ್ಲೋ ನಮ್ಮನ್ನು ತಾಕಿದರೆ ಕವಿತೆಯಾಗುತ್ತದೆ. ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು, ಅಂಥ ಪುರುಷೋತ್ತಮನ ಆ ರೂಪರೇಖೆ ಎಂಬಲ್ಲಿಯ ಪ್ರಶ್ನೆ ಕೂಡ ಕಾವ್ಯವಾಗುತ್ತಲ್ಲ ಹಾಗೆ.
ಹಾಗಿದ್ದರೆ ಕವಿತೆಯನ್ನು ಓದುವುದು ಹೇಗೆ? ಎಲ್ಲಿಂದ ಆರಂಭಿಸಬೇಕು? ನಮ್ಮೊಳಗಿನ ಭಾವಬಿಂದು ಮತ್ತು ಕವಿತೆಯ ಭಾವಸ್ಪುರಣದ ಬಿಂದು ಸಂಧಿಸುವ ಕ್ಷಣ ಯಾವುದು?
ಆನಂದಕಂದರ ಒಂದು ಸರಳ ಪದ್ಯವನ್ನು ತೆಗೆದುಕೊಳ್ಳಿ.
ನಮ್ಮ ಹಳ್ಳಿಯೂರ ನಮಗ ಪಾಡ
ಯಾತಕವ್ವಾ ಹುಬ್ಬಳ್ಳಿ ಧಾರವಾಡ
ಊರಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳನೆಳ್ಳ
ನೀರ ತರುವಾಗ ಗೆಣತ್ಯಾರ ಜೋಡ
ಯಾತಕ್ಕವ್ವಾ ಹುಬ್ಬಳ್ಳಿ ಧಾರ್‍ವಾಡ

ಯಾವುದೋ ಒಂದು ಹಳ್ಳಿಯಲ್ಲಿ ಕುಳಿತು ಹುಬ್ಬಳ್ಳಿಗೋ ಧಾರವಾಡಕ್ಕೋ ಹೋಗಲಾರದವನ ಆಲಾಪ ಅಲ್ಲ ಇದು. ಹುಬ್ಬಳ್ಳಿಗೆ ಹೋದವನಿಗೂ ಇಷ್ಟವಾಗುವಂಥ, ಹುಬ್ಬಳ್ಳಿಗೆ ಹೋಗಬೇಕು ಅಂದುಕೊಂಡಿರುವವನಿಗೂ, ಹುಬ್ಬಳ್ಳಿ ಧಾರವಾಡಕ್ಕೆ ಸಂಬಂಧವೇ ಇರದವನಿಗೂ ಆಪ್ತವಾಗುವ ಸಾಲುಗಳಿವು. ಹುಬ್ಬಳ್ಳಿ ಅಂತಿದ್ದದ್ದು ಇಂಗಳದಾಳದಲ್ಲಿ ಕೂತು ಕವಿತೆ ಓದುವವನ ಪಾಲಿಗೆ ಚಿತ್ರದುರ್ಗ ಎಂದೇ ಭಾಸವಾಗುತ್ತದೆ. ಉಪ್ಪಿನಂಗಡಿಯ ಹುಡುಗಿಗೆ ಅದು ಮಂಗಳೂರೋ ಬೆಂಗಳೂರೋ ಆಗಬಹುದು. ಹೀಗೆ ಅವರವರ ಭಾವಕ್ಕೆ, ಅನುಭವಕ್ಕೆ ತಕ್ಕಂತೆ ಕವಿತೆ ಅವರವರೊಳಗೇ ಬೆಳೆಯುತ್ತಾ ಹೋಗುತ್ತದೆ, ಅರ್ಥ ಬಿಚ್ಚಿಡುತ್ತಾ ಹೋಗುತ್ತದೆ. ಹೀಗಾಗಿ ಕವಿತೆ ನಮ್ಮ ನಮ್ಮ ಹೊಟ್ಟೆನೋವಿನ ಹಾಗೆ. ನಮ್ಮನಮ್ಮ ದಾಹದ ಹಾಗೆ. ನೀರು ನಾವೇ ಕುಡಿಯಬೇಕು.
ಇಷ್ಟಾದರೂ ಕೆಲವರು ಕವಿತೆ ಅರ್ಥವಾಗುವುದಿಲ್ಲ ಅನ್ನುತ್ತಾರೆ. ಅದರಲ್ಲಿ ಕತೆಯಿಲ್ಲ ಅನ್ನುತ್ತಾರೆ. ಇನ್ನೊಬ್ಬರಿಗೆ ಹೇಳಲಾಗುವುದಿಲ್ಲ ಅಂತಾರೆ. ಅದಕ್ಕೂ ಕಾರಣಗಳಿವೆ. ಮೊನ್ನೆ ಮೊನ್ನೆ ಮುಖ್ಯಮಂತ್ರಿ ಇನ್ ಲವ್’ ಚಿತ್ರಕ್ಕೆ ಜಯಂತ ಕಾಯ್ಕಿಣಿ ಬರೆದ ಹಾಡೊಂದರ ಸಾಲೆರಡು ಹೀಗಿದೆ: ತಂಗಾಳಿಯಲ್ಲಿ ಎಂಥ ಮಳೆಯ ಮುನ್ಸೂಚನೆ, ಸಿಗಬಾರದಿತ್ತೆ ನೀನು ಸ್ವಲ್ಪ ಬೇಗನೆ.
ತೀರ ಸರಳ ಸಾಲುಗಳು ಅನ್ನಿಸುವ ಇವು ಅವರವರ ಮನೋಭಾವಕ್ಕೆ ತಕ್ಕಂತೆ ಬದುಕಿನ ಅರ್ಥವನ್ನೇ ಹಿಡಿದಿಟ್ಟಂತ ಸಾಲುಗಳಾಗಿಯೂ ಕೇಳಿಸಬಹುದು. ಆ ಹುಡುಗಿ ಪ್ರೀತಿಸುತ್ತಾಳೆ ಅನ್ನುವುದು ಅವನಿಗೆ ಅರ್ಥವಾದ ಗಳಿಗೆ, ಆ ಹುಡುಗನಿಗೆ ತಾನೆಂದರೆ ಇಷ್ಟ ಎಂದು ಅವಳಿಗೆ ಅರ್ಥವಾದ ಕ್ಷಣ ಈ ಸಾಲಿನೊಳಕ್ಕೆ ಝಗ್ಗನೆ ವಿದ್ಯುತ್ ಹರಿಯುತ್ತದೆ. ತಣ್ಣನೆ ಗಾಳಿ ಬೀಸಿದಾಗ ಎಲ್ಲೋ ಮಳೆ ಬಂದಿರಬೇಕು ಅಂತ ನಮ್ಮಮ್ಮನೋ ನಮ್ಮಜ್ಜಿಯೋ ಹೇಳಿದ ಮಾತು ಹೀಗೆ ಪ್ರೀತಿಗೆ ಅನ್ವಯವಾದಾಗ ಆಗುವ ಆನಂದವನ್ನು ಊಹಿಸಿಕೊಳ್ಳಿ. ಪ್ರಕೃತಿಯನ್ನು ಬಿಟ್ಟು ಕವಿತೆ ಇರಲಾರದು, ಇರಬಾರದು. ಹಾಗೆ ಸಿಗಬಾರದಿತ್ತೇ ನೀನು ಸ್ವಲ್ಪ ಬೇಗನೇ ಅನ್ನುವ ಮಾತು ಕೂಡ ಆ ಕ್ಷಣದ ಅನುಭೂತಿಗೆ ಯಾರೋ ಕೊಟ್ಟ ಅಪೂರ್ವ ಮಾತಾಗಿ ನಮ್ಮನ್ನು ತಾಕುತ್ತದೆ.
ಕವಿತೆಯೊಳಗೆ ಕತೆ ಇರುವುದಿಲ್ಲ. ಕೆನೆಯಿರುತ್ತದೆ. ಮಳೆಗಾಲದ ಆರಂಭದಲ್ಲಿ ಬಿತ್ತಿದ ಬತ್ತ, ಸುಗ್ಗಿಯ ಹೊತ್ತಿಗೆ ಕಾಳುಗಟ್ಟುವ ಹಾಗೆ ಕವಿತೆ ಕೂಡ. ಮದುವೆಯ ಚಂದದ ಕ್ಷಣಗಳನ್ನು ಫೋಟೋ ಹಿಡಿದಿಡುವ ಹಾಗೆ ಅಥವಾ ಗಂಡನ ಮನೆಗೆ ಹೊರಟ ಅವಳು ತಿರುಗಿ ನೋಡುವ ಪರಿಯನ್ನು ಕಲಾವಿದನೊಬ್ಬ ಸೆರೆಹಿಡಿದ ಹಾಗೆ ಕವಿತೆ ಒಂದು ಒಂದು ಘಳಿಗೆಯನ್ನು ಒಂದು ಕ್ಷಣವನ್ನು ಹಿಡಿದು ನಿಲ್ಲಿಸುತ್ತದೆ. ಆ ಕ್ಷಣ ಕಾಲದ ಸವಾಲುಗಳನ್ನು, ಸವೆತಗಳನ್ನು, ಏರುಪೇರುಗಳನ್ನು ದಾಟಿ ಚಿರಾಯುವಾಗುತ್ತದೆ.
ತೊಟ್ಟಿಲ ಹೊತ್ಕೊಂಡು ತವರ್‍ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು
ತವರೂರ ತಿಟ್ಹತ್ತಿ ತಿರುಗಿ ನೋಡ್ಯಾಳ
ಎಂಬ ಜನಪದ ಗೀತೆಯನ್ನೇ ನೋಡಿ. ಆ ಭಾವ ಇವತ್ತಿನ ಯುಗದಲ್ಲೂ ತವರಿಂದ ಗಂಡನ ಮನೆಗೆ ಹೊರಟ ಹೆಣ್ಣನ್ನು ಒಂದರೆಕ್ಷಣ ಕಾಡದೇ ಹೋದರೆ ಕವಿತೆಯೇ ಸುಳ್ಳು, ಕವಿ ಬರೆದದ್ದೇ ಸುಳ್ಳು. ನಾವು ಓದಿದ್ದೇ ಸುಳ್ಳು. ಕವಿತೆಗೆ ಮನಸೋತದ್ದೇ ಸುಳ್ಳು.
ಹಾಗಿದ್ದರೆ ಕವಿತೆಯನ್ನು ಮನತುಂಬಿಸಿಕೊಳ್ಳುವುದು ಹೇಗೆ?
ಅದೀಗ ಕಷ್ಟದ ಕೆಲಸ. ಕವಿತೆಯನ್ನು ಹಾಡುವ ಮೂಲಕ ಮನತುಂಬಿಸಿಕೊಳ್ಳಬಹುದು ಅನ್ನುವವರಿದ್ದಾರೆ. ಆದರೆ ಎಷ್ಟೋ ಮಂದಿ ಹಾಡುವಾಗಲೂ, ಕೇಳಿಸಿಕೊಳ್ಳುವಾಗಲೂ ಅದರ ಸಾಹಿತ್ಯದ ಕಡೆ ಗಮನ ಕೊಡುವುದಿಲ್ಲ. ಎಷ್ಟೋ ಮಂದಿ ಪದಗಳನ್ನು ತಪ್ಪಾಗಿ ಉಚ್ಚರಿಸುವುದನ್ನು ನೀವೂ ಕೇಳಿರುತ್ತೀರಿ. ಅಷ್ಟಕ್ಕೂ ಪದಗಳು ಕರಗತವಾದರೆ, ಕಂಠಗತವಾದರೆ ಕವಿತೆಯನ್ನು ವಶಪಡಿಸಿಕೊಂಡ ಹಾಗೇನೂ ಅಲ್ಲ. ಯಾಕೆಂದರೆ ಕವಿತೆ ಪದಗಳಲ್ಲಿ ಅವಿತಿರುತ್ತದೆ. ಪ್ರೀತಿಯೆಂಬುದು ಅವಳಲ್ಲಿ ಅವಿತುಕೊಂಡ ಹಾಗೆ. ಅವಳನ್ನು ಅಪಹರಿಸಿಕೊಂಡು ಬಂದು ಅಶೋಕವನದಲ್ಲಿ ಬಂಧಿಸಿಟ್ಟರೆ ಅವಳ ಪ್ರೀತಿಯೂ ವಶವಾಗುತ್ತದೆ ಎಂದು ಭಾವಿಸಬೇಕಿಲ್ಲ.
ಹಾಗಿದ್ದರೆ, ಕವಿತೆಯನ್ನು ಒಲಿಸಿಕೊಳ್ಳುವುದು ಹೇಗೆ?
ಅದಕ್ಕೊಂದು ಮನಸ್ಥಿತಿ ಬೇಕಾಗುತ್ತದೆ. ಆ ಮನಸ್ಥಿತಿ ಧ್ಯಾನಕ್ಕೆ, ಪ್ರೀತಿಗೆ, ಭಕ್ತಿಗೆ ಸಮಾನವಾದದ್ದು ಎಂದು ಹೇಳಿ ಗೊಂದಲಗೊಳಿಸುವುದು ಬೇಡ. ಅದೊಂದು ರೀತಿಯಲ್ಲಿ ಸ್ನೇಹಿತನನ್ನೋ ಗೆಳತಿಯನ್ನೋ ಅರ್ಥಮಾಡಿಕೊಂಡಂತೆ. ಅವರ ಮನಸ್ಸಿನಲ್ಲೇನಿದೆ ಅನ್ನುವುದನ್ನು ಹೇಳದೇ ಅರ್ಥ ಮಾಡಿಕೊಂಡಂತೆ. ಕವಿತೆ ಹೇಳದೇ ಎಷ್ಟನ್ನೋ ಹೇಳುತ್ತಿರುತ್ತದೆ. ಹೇಳಿಯೋ ಎಷ್ಟನ್ನೋ ಮುಚ್ಚಿಟ್ಟಿರುತ್ತದೆ. ವೀಣೆಯೊಳಗೆ ಅಸಂಖ್ಯ ರಾಗಗಳು ಅಡಗಿರುವಂತೆ. ಮೀಟುವವರು ಮೀಟಿದರಷ್ಟೇ ಅದು ಹೊಮ್ಮುತ್ತದೆ.
ಕವಿತೆಯನ್ನು ಗಟ್ಟಿಯಾಗಿ ಓದಿಕೊಳ್ಳುವುದು ಅದನ್ನು ವಶಪಡಿಸಿಕೊಳ್ಳುವ ಮೊದಲ ವಿಧಾನ ಅಂತ ಅನೇಕರು ಹೇಳುತ್ತಾರೆ. ಅದು ಸುಳ್ಳಲ್ಲ. ಮಂತ್ರದ ಹಾಗೆ ಎತ್ತರದ ದನಿಯಲ್ಲಿ ಹೇಳಿಕೊಂಡಾಗ ಎಷ್ಟೋ ಸಾರಿ ಪದಗಳ ಒಳಗೆ ಅಡಗಿರುವ ಅರ್ಥಗಳು ತಾವಾಗಿಯೇ ಹೊರಹೊಮ್ಮುವುದುಂಟು. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಒಂದು ಕವಿತೆಯ ಅರ್ಥ ಕೇವಲ ಪದಗಳಲ್ಲಷ್ಟೇ ಅಡಗಿರುವುದಿಲ್ಲ. ಇಡೀ ಕವಿತೆಯೇ ಒಟ್ಟಾಗಿ ಕೆಲಸ ಮಾಡುತ್ತಾ ಒಂದು ಅರ್ಥವನ್ನು ಕಟ್ಟಿಕೊಡುತ್ತಿರುತ್ತದೆ. ನಿಸಾರರ ಕುರಿಗಳು ಸಾರ್ ಕುರಿಗಳು’ ಕವಿತೆ ಅಂಥದ್ದು. ಅದನ್ನು ಪಲ್ಲವಿ, ಚರಣಗಳಲ್ಲಿ ಓದಿ ಆನಂದಿಸುವ ಹೊತ್ತಿಗೇ ಇಡೀ ಕವಿತೆ ಕಟ್ಟಿಕೊಡುವ ಮತ್ತೊಂದು ಅರ್ಥವನ್ನು ಗ್ರಹಿಸಿಯೂ ಸಂತೋಷಪಡಬಹುದು.
ಆದರೆ, ಒಂದು ಕವಿತೆ ಸದಾ ಕಾಲ ನಮಗೆ ಸಂತೋಷ ಕೊಡಬೇಕು ಅಂತೇನೂ ಇಲ್ಲ. ಅದು ನಮ್ಮ ಭಾವನೆಗಳಿಗೆ ದನಿಯಾದಾಗ ನಮಗೆ ಅನ್ನಿಸಿದ್ದನ್ನು ಮತ್ತಷ್ಟು ಸ್ಪಷ್ಟವಾಗಿ ಹೇಳಿದಾಗ ಇಷ್ಟವಾಗುತ್ತದೆ. ಉದಾಹರಣೆಗೆ ಮೈಸೂರು ಮಲ್ಲಿಗೆಯ ಕವನಗಳನ್ನೇ ತೆಗೆದುಕೊಳ್ಳಿ. ಒಂದು ವಯೋಮಾನದಲ್ಲಿ ಬೇರೆ ಬೇರೆ ಕಾರಣಗಳಿಂದ ಇಷ್ಟವಾಗುವ ಕವಿತೆಗಳವು. ಕ್ರಮೇಣ ಅವು ಹಳೆಯ ಗೆಳೆಯನ ಹಾಗೆ ಆಪ್ತವಾಗುತ್ತವೆ. ನಮ್ಮ ಜೊತೆಗೆ ಬೆಚ್ಚಗಿರುತ್ತವೆ.
ಇಷ್ಟಾದರೂ ಕವಿತೆಯನ್ನು ಅರ್ಥಮಾಡಿಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರುವುದಿಲ್ಲ. ಬೈರನ್ ಹೇಳುತ್ತಾನೆ. ರಹಸ್ಯವಾಗಿ ಭೇಟಿಯಾದ ಹಳೆಯ ಗೆಳತಿಯನ್ನು ಎಷ್ಟೋ ದಿನಗಳ ನಂತರ ಭೇಟಿಯಾದಾಗ ಹೇಗೆ ಸ್ವಾಗತಿಸಲಿ? ಮೌನ ಮತ್ತು ಕಣ್ಣೀರಿನ ಜೊತೆಗೆ!
ಹಳೆಯ ಕವಿತೆಗಳನ್ನು ಕೂಡ ಹಾಗೇ ಮತ್ತೆ ಮತ್ತೆ ಎದುರುಗೊಳ್ಳುತ್ತಿರಬೇಕು; ಕಣ್ಣೀರು ಮತ್ತು ಮೌನದೊಂದಿಗೆ. ಅವನು ಅರ್ಥಮಾಡಿಕೊಳ್ಳಬೇಕಾದದ್ದೂ ಹಾಗೆಯೇ, ಕಣ್ಣೀರು ಮತ್ತು ಮೌನದೊಂದಿಗೆ.
(ಪವಿತ್ರಾ ಪ್ರಿಯಭಾಷಿಣಿಯ ನಕ್ಷತ್ರಕ್ಕೆ ಪಾತಿ ಕವನ ಸಂಕಲನದ ಬಿಡುಗಡೆಯ ಸಂದರ್ಭದಲ್ಲಿ ಆಡಬೇಕು ಅಂದುಕೊಂಡಿದ್ದ ಮಾತುಗಳಿವು)

Monday, January 28, 2008

ವ್ಯರ್ಥಪ್ರಶ್ನೆಗಳ ಮರೆತುಬಿಡು ಮನವೆ ಅರ್ಥವಾದಷ್ಟೇ ಅರ್ಥ

ಹಗಲು ಉರುಳುರುಳಿ ಇರುಳು ಮೂಡುವುದು
ಬದುಕಿಗುಂಟೆ ಅರ್ಥ?
ರಾತ್ರಿ ಹೊಡಮರಳಿ ಬೆಳಗು ಅರಳುವುದು
ತವಕವೆಲ್ಲ ವ್ಯರ್ಥ!

ಮೌನಮಾಯೆಯಲಿ ಮಾತು ಬಿಡಿಹೂವು ಮಾತಿಗೇಕೆ ಅರ್ಥ?
ನುಡಿಯದಿದ್ದರೂ ಬಯಲಾಗುತಿಹುದು ನಡೆನುಡಿಯ ಸುಪ್ತ ಸ್ವಾರ್ಥ!
ಬೇಡೆವೆಂದರೂ ನಿಜವ ನುಡಿಯುತಿದೆ ತಡೆಯಿರದ ಆತ್ಮಸಾಕ್ಷಿ!
ಕಂಡುಂಡ ನೋವು ಮಂದರದಿ ಮಿಡಿಯುತಿದೆ ಮನಸು ಮೂಕಪಕ್ಷಿ!


ಜೀವ ಜೀವ ಅರಿತಾಗ ಮೂಡುವುದು ಅರ್ಥಪೂರ್ಣ ಮೌನ.
ಯಾತನೆಯ ಜೇಡ ನೇಯುತಿರೆ ಬದುಕು; ಮಾತೇ ಅರ್ಥಹೀನ
ಒಲವು ನಲಿವುಗಳ ಒಡಲಾಳದಿಂದ ಮೊಳಗೀತೆ ಹೃದಯಗೀತೆ
ಮುಖವಾಡ ಸರಿದು ನಿಜಮುಖವು ಹೊಳೆದು ಸಾಮರಸ್ಯ ಮೂಡೀತೆ?

ವ್ಯರ್ಥಪ್ರಶ್ನೆಗಳ ಮರೆತುಬಿಡು ಮನವೆ ಅರ್ಥವಾದಷ್ಟೇ ಅರ್ಥ
ಅರ್ಥಮಾಡಿಸಲಿಕ್ಕೆ ಕಾದು ಕೂತಿದ್ದಾನೆ ಪ್ರಶ್ನೆಗಳ ಸೃಷ್ಟಿಕರ್ತ.

ಟಿಪ್ಪಣಿ-
ಯಾವತ್ತೋ ಬರೆದಿಟ್ಟಿದ್ದ ನಾಗರಹೊಳೆ ಪ್ರವಾಸದ ಲೇಖನಕ್ಕಾಗಿ ನನ್ನ ಡೆಸ್ಕ್ ಟಾಪ್ ಜಾಲಾಡುತ್ತಿದ್ದೆ. ಆ ಲೇಖನಕ್ಕೆ ಮೌನಮಾಯೆಯ ನಡುವೆ ರಾಗಗಳ ನೆರಳು ಅಂತ ಹೆಸರು ಕೊಟ್ಟಿದ್ದೆ ಅಂತ ನೆನಪು. ಅದನ್ನು ಹುಡುಕುತ್ತಿರುವ ಹೊತ್ತಿಗೆ ಈ ಹದಿನಾಲ್ಕು ಸಾಲುಗಳು ಸಿಕ್ಕವು.
ಇಷ್ಟು ಕೆಟ್ಟ ಕವಿತೆಯನ್ನು ನಾನ್ಯಾಕೆ ಬರೆದಿಟ್ಟುಕೊಂಡೆ. ಯಾರ ಕವಿತೆ ಇದು ಎಂದು ಮೂರು ವಾರ ಯೋಚಿಸುತ್ತಿದ್ದೆ. ಗೆಳೆಯರನ್ನೂ ಕೇಳಿ ನೋಡಿದೆ. ಯಾರಿಗೂ ಓದಿದ ನೆನಪಿರಲಿಲ್ಲ. ಇವತ್ತು ಬೆಳಗ್ಗೆ ಜ್ಯೋತಿ ಇದು ನೀವೇ ಬರೆದದ್ದಲ್ವಾ ಅಂತ ನೆನಪಿಸಿದಳು.
ಕವಿತೆ ಹೇಗಿರಬಾರದು ಅನ್ನುವುದಕ್ಕೆ ಮಾದರಿಯಾಗಿ ಇದನ್ನಿಲ್ಲಿ ಕೊಡುತ್ತಿದ್ದೇನೆ. ಇದೊಂಥರ ಪ್ರಾಕ್ಟಿಕಲ್ ಕ್ರಿಟಿಸಿಸಮ್ಮು. ನೋಡಿರಿ, ಓದಿರಿ, ಆನಂದಿಸಿರಿ ಮತ್ತು ಅನುಭವಿಸಿರಿ.
-ಜೋಗಿ

Friday, January 25, 2008

ಕಾಗದದ ದೋಣಿ

ಅವನಿಗೆ ಹೋಮ್ ವರ್ಕ್ ಮಾಡಿಸೋದಿತ್ತು. ವಾಕಿಂಗ್ ಹೋಗೋದಾದರೆ ನೀವೊಬ್ಬರೇ ಹೋಗಿ. ಶ್ರೀನಿಥಿಯನ್ನು ಕರಕೊಂಡು ಹೋಗಬೇಡಿ ಅಂತ ಸುಮಿತ್ರೆ ತಾಕೀತು ಮಾಡಿದ್ದು ಅದು ಮೂವತ್ತಾರನೇ ಸಲ. ಶ್ರೀಕಂಠಯ್ಯ ಅವಳ ಮಾತನ್ನೂ ಆವತ್ತೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದು ದೊಡ್ಡದೊಂದು ರಾದ್ಧಾಂತಕ್ಕೆ ಕಾರಣವಾಗುತ್ತದೆ ಅನ್ನುವ ಕಲ್ಪನೆ ಅವರಿಗಿರಲೂ ಇಲ್ಲ.
ಆ ರಾದ್ಧಾಂತವಾದದ್ದು ಮೂರು ತಿಂಗಳ ನಂತರ. ಶ್ರೀನಿಧಿ ಇಂಗ್ಲಿಷ್‌ನಲ್ಲಿ ಕೇವಲ ಎಪ್ಪತ್ತೆರಡು ಅಂಕ ತೆಗೆದುಕೊಂಡಿದ್ದ. ಎಂಟು ಮಾರ್ಕ್ ಜಾಸ್ತಿ ಬಂದಿದ್ದರೆ ಅಹಲ್ಯಾಳ ಮಗಳು ಜಾನ್ಹವಿ ಕ್ಲಾಸಿಗೇ ಫಸ್ಟ್ ಬರುತ್ತಿರಲಿಲ್ಲ ಅನ್ನುವ ಸಂಗತಿ ಸುಮಿತ್ರೆಯನ್ನೂ ಹಗಲಿರುಳೂ ಬಾಧಿಸಿತು. ಮೂರು ವರುಷಗಳಿಂದ ಶ್ರೀನಿಧಿಯೇ ಕ್ಲಾಸಿಗೆ ಫಸ್ಟ್. ಈ ಸಾರಿ ಜಾನ್ಹವಿ ಮುಂದೆ ಬಂದಿದ್ದಾಳೆ. ಇನ್ನು ಅಹಲ್ಯೆ ಬಂದು ಹಂಗಿಸುತ್ತಾಳೆ. ಅವಳ ಮಾತು ಕೇಳಿಸಿಕೊಳ್ಳುತ್ತಾ ಸುಮ್ಮನೆ ಕೂರಬೇಕು ಅನ್ನುವುದು ನೆನಪಾದಂತೆ ಸುಮಿತ್ರೆಯ ರಕ್ತ ಕುದಿಯಿತು.
ಆವತ್ತು ರಾತ್ರಿ ಎರಡರಲ್ಲೊಂದು ತೀರ್ಮಾನ ಆಗಬೇಕು ಅಂತ ಸುಮಿತ್ರೆ ಹಠ ಹಿಡಿದಳು. ಶ್ರೀಧರ ಮನೆಗೆ ಬಂದು ಇನ್ನೇನು ಸುಧಾರಿಸಿಕೊಳ್ಳುವ ಹೊತ್ತಿಗೆ ಅವನ ಮುಂದೆ ಮಗಮ ಮಾರ್ಕ್ಸ್ ಕಾರ್ಡ್ ತಂದಿಟ್ಟಳು. ಪ್ರತಿಸಾರಿಯೂ ಅವಳೇ ಅದಕ್ಕೆ ಸೈನ್ ಮಾಡುತ್ತಿದ್ದದ್ದು. ನಿಮ್ಮ ಮಗನ ಸಾಧನೆ ನೋಡಿ, ನೀವೇ ಸೈನ್ ಮಾಡಿ ಅಂತ ಅದನ್ನು ಅವನ ಮುಂದಿಟ್ಟು ಮುನಿಸಿಕೊಂಡು ಅಡುಗೆ ಮನೆಯೊಳಗೆ ಕಣ್ಮರೆಯಾದಳು ಸುಮಿತ್ರೆ.
ಪರಿಸ್ಥಿತಿ ಗಂಭೀರವಾಗಿದೆ ಅಂದುಕೊಂಡ ಶ್ರೀಧರ. ಎಲ್ಲ ಸರಿಹೋಗುತ್ತೆ ಅಂದುಕೊಂಡು ಸುಮ್ಮನಾದ. ಅಷ್ಟೂ ವರುಷಗಳ ದಾಂಪತ್ಯದಲ್ಲಿ ಅವನಿಗೊಂದು ಸತ್ಯ ಅರ್ಥವಾಗಿತ್ತು. ಮನಸ್ತಾಪಗಳು ಮಾತಿನ ಹೊಸಿಲು ದಾಟದಂತೆ ನೋಡಿಕೊಳ್ಳಬೇಕು. ಮೌನ ಎಲ್ಲವನ್ನೂ ಬಗೆಹರಿಸುತ್ತದೆ.
ಆವತ್ತು ಅವನ ನಿರೀಕ್ಷೆ ಸುಳ್ಳಾಯಿತು. ರಾತ್ರಿ ಊಟಕ್ಕೆ ಕುಳಿತಾಗ ಸುಮಿತ್ರೆ ನಿರ್ಲಿಪ್ತವಾಗಿ ತನ್ನ ತೀರ್ಮಾನ ಹೇಳಿಬಿಟ್ಟಳು:
ನಾನು ನನ್ನ ಮಗನನ್ನು ರೆಸಿಡೆನ್ಶಿಯಲ್ ಸ್ಕೂಲಿಗೆ ಸೇರಿಸಬೇಕು ಅಂತ ತೀರ್ಮಾನ ಮಾಡಿದ್ದೇನೆ. ಮನೆಯಲ್ಲಿದ್ದರೆ ಅವನು ಹಾಳಾಗಿ ಹೋಗುತ್ತಾನೆ. ಕೊನೆಗೆ ನಿಮ್ಮ ತಮ್ಮನ ಹಾಗೆ ಮೆಕ್ಯಾನಿಕ್ಕೋ ನಿಮ್ಮ ಚಿಕ್ಕಪ್ಪನ ಮಗನ ಹಾಗೆ ಕಂಡಕ್ಟರ್ರೋ ಆಗುತ್ತಾನೆ. ಮಕ್ಕಳನ್ನು ಬೆಳೆಸೋದು ಓದಿಸೋದು ನಿಮ್ಮ ಕಾಲದ ಹಾಗಲ್ಲ. ಆಗ ಇಂಥ ಸ್ಪರ್ಧೆ ಇರಲಿಲ್ಲ. ಈಗ ಒಳ್ಳೆಯ ಕೆಲಸ ಇಲ್ಲದಿದ್ದರೆ ಹೆಣ್ಣೂ ಸಿಗೋಲ್ಲ. ಮದುವೆಯೂ ಆಗೋಲ್ಲ. ಮಕ್ಕಳನ್ನು ವಂಶೋದ್ಧಾರಕ ಅಂತ ಕರೆದುಕೊಂಡು ಓಡಾಡಿದರೆ ಆಗಲಿಲ್ಲ. ಮದುವೆಯೇ ಆಗದ ಮೇಲೆ ವಂಶೋದ್ಧಾರದ ಮಾತೆಲ್ಲಿಂದ ಬರಬೇಕು..
ಹೀಗೆ ಶ್ರೀಕಂಠಯ್ಯನ ಮರ್ಮಕ್ಕೆ ನಾಟುವ ಹಾಗೆ, ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ ಎಂದು ಶ್ರೀಧರನಿಗೆ ಅರ್ಥ ಆಗುವ ಹಾಗೆ ತಣ್ಣಗಿನ ದನಿಯಲ್ಲೇ ವಿವರಿಸಿದಳು. ಅವಳು ಅಡುಗೆ ಮನೆಯಿಂದ ಡೈನಿಂಗ್ ಟೇಬಲ್ಲಿಗೆ ಓಡಾಡುತ್ತಾ, ಕೆಲವು ಮಾತುಗಳು ಸ್ಪಷ್ಟವಾಗಿ ಕೇಳಿಸುವಂತೆ, ಕೆಲವು ಅಸ್ಪಷ್ಟವಾಗಿ ತಲುಪುವಂತೆ, ಕೆಲವೊಂದನ್ನು ಗೊಣಗು ದನಿಯಲ್ಲಿ ಊಹೆಗೆ ಬಿಡುವಂತೆ ಹೇಳಿದ ಶೈಲಿ ಒಂದಷ್ಟು ನಾಟಕಗಳಲ್ಲಿ ನಟಿಸಿ ಅನುಭವವಿದ್ದ ಶ್ರೀಧರನಿಗೆ ಇಷ್ಟವಾಯಿತು.
ಆ ಮಾತುಗಳನ್ನೆಲ್ಲ ತನ್ನನ್ನೇ ಬೆರಳು ಮಾಡಿ ತೋರಿಸುತ್ತಿವೆ ಅನ್ನುವುದು ಶ್ರೀಕಂಠಯ್ಯನಿಗೆ ಅರ್ಥವಾಗಿತ್ತು. ಅದಕ್ಕೆ ತಾನು ಉತ್ತರಿಸುವ ಬದಲು ಶ್ರೀಥರ ಉತ್ತರ ಕೊಟ್ಟರೆ ಚೆನ್ನಾಗಿರುತ್ತೆ ಅಂತಲೂ ಅವನಿಗೆ ಅನ್ನಿಸಿತ್ತು. ಅಂಥ ಸಾಹಸಕ್ಕೆ ಶ್ರೀಧರ ಕೈ ಹಾಕದ್ದು ನೋಡಿ ಶ್ರೀಕಂಠಯ್ಯ ಹೇಡಿ ಮುಂಡೇದು’ ಅಂತ ಮಗನನ್ನು ಬೈದುಕೊಂಡ.
ಸುಮಿತ್ರೆ ಕೊನೆಯಲ್ಲಿ ತನ್ನ ತೀರ್ಮಾನವನ್ನೂ ಹೇಳಿದಳು. ಅವನನ್ನು ನನ್ನ ಸುಪರ್ದಿಗೆ ಬಿಡೋದಾದರೆ ಅವನು ಇದೇ ಸ್ಕೂಲಿಗೆ ಹೋಗಲಿ. ಮನೇಲೇ ಇರಲಿ. ಬೇರೆ ಯಾರೂ ಅವನ ಕಾಳಜಿ ತಗೊಳ್ಳುವುದು ಬೇಕಾಗಿಲ್ಲ. ಇದರ ಬಗ್ಗೆ ಚರ್ಚೆಯೂ ಬೇಕಿಲ್ಲ. ಯಾವುದಕ್ಕೂ ನಾಳೆ ಬೆಳಗ್ಗೆ ನಿಮ್ಮ ನಿರ್ಧಾರ ಹೇಳಿ.
ನಿರ್ಧಾರ ಆಗಲೇ ಆಗಿಹೋಗಿದೆ ಅಂತ ಶ್ರೀಧರ ಮುಖ ನೋಡಿದಾಗಲೇ ಶ್ರೀಕಂಠಯ್ಯನಿಗೆ ಗೊತ್ತಾಗಿಹೋಯಿತು. ಅವನಿಗೆ ಮಗನನ್ನು ನೋಡಿಕೊಳ್ಳುವಷ್ಟು ವ್ಯವಧಾನವೂ ಇರಲಿಲ್ಲ. ಮಗ ಏನಾದರೂ ಓದಿ ಒಂದು ಕೆಲಸ ಅಂತ ಸಿಕ್ಕಿಬಿಟ್ಟರೆ ಸಾಕು ಅನ್ನುವ ಸಣ್ಣ ಆಶೆಯೊಂದನ್ನು ಬಿಟ್ಟರೆ ಅವನು ಮತ್ತೇನನ್ನೋ ಸಾಧಿಸಬೇಕು ಅನ್ನುವ ಮಹತ್ವಾಕಾಂಕ್ಷೆಯೂ ಇರಲಿಲ್ಲ. ತಾನು ಶಾಲೆಗೆ ಹೋಗುತ್ತಿದ್ದ ದಿನಗಳು ಅವನಿಗಿನ್ನೂ ಚೆನ್ನಾಗಿ ನೆನಪಿದ್ದವು. ಆಗ ನೀನೇನು ಓದುತ್ತಿದ್ದೀಯಾ, ಕ್ಲಾಸಿಗೆ ಹೋಗಿದ್ದೆಯಾ, ಪರೀಕ್ಷೆ ಪಾಸಾದೆಯಾ ಅಂತ ಕೇಳುವವರೂ ಇರಲಿಲ್ಲ. ಸದ್ಯಕ್ಕೆ ಅವನಿಗೆ ಬೇಕಾಗಿದ್ದು ನೆಮ್ಮದಿ. ಸುಮಿತ್ರೆಯ ಭಾಷಣದಿಂದ ಪಾರಾದರೆ ಅವನಿಗೆ ಸಾಕಿತ್ತು.
-೨-
ಆವತ್ತಿನಿಂದ ಶ್ರೀಕಂಠಯ್ಯನವರ ಸಮಸ್ಯೆ ಶುರುವಾಯಿತು. ಮೊಮ್ಮಗನನ್ನು ಶ್ರೀಕಂಠಯ್ಯನ ಸಮೀಪ ಸುಳಿಯುವುದಕ್ಕೂ ಬಿಡಲಿಲ್ಲ ಸುಮಿತ್ರೆ. ಅವನಿಗೊಂದು ಟೈಮ್ ಟೇಬಲ್ಲೂ ಸಿದ್ಧವಾಯಿತು. ಬೆಳಗ್ಗೆ ಎದ್ದ ತಕ್ಷಣ ಕಿತ್ತಲೆ ಹಣ್ಣಿನ ಜ್ಯೂಸು ಒಂದು ಗಂಟೆ ಓದು. ಅರ್ಧಗಂಟೆ ಪೋಗೋ ಚಾನಲ್ಲು. ಆಮೇಲೆ ಸ್ಕೂಲು. ಸ್ಕೂಲಿನಿಂದ ಬಂದ ತಕ್ಷಣ ಸ್ವಿಮಿಂಗ್ ಕ್ಲಾಸು. ಆಮೇಲೆ ಅರ್ಧಗಂಟೆ ಆಟ. ನಂತರ ಓದು, ಹೋಮ್‌ವರ್ಕ್. ಒಂಬತ್ತು ಗಂಟೆಗೆ ಅರ್ಧಗಂಟೆ ಟೀವಿ. ನಂತರ ನಿದ್ದೆ. ಮತ್ತೊಂದು ದಿನ. ಮತ್ತದೇ ದಿನಚರಿ.
ಶ್ರೀಧರ ಆಫೀಸಿಗೆ ಹೋಗಿ ಬರುತ್ತಿದ್ದ. ಸುಮಿತ್ರೆ ಮನೆ-ಮಗ ಅಂತ ತನ್ನ ಜಗತ್ತನ್ನು ಸೃಷ್ಟಿಸಿಕೊಂಡಿದ್ದಳು. ಆ ಜಗತ್ತಿನಲ್ಲಿ ತನಗೆ ಪ್ರವೇಶವಿಲ್ಲ ಅನ್ನುವ ಭಾವನೆ ಕ್ರಮೇಣ ಮೂಡತೊಡಗಿತು. ಮನೆಯೊಳಗೇ ತಾನೊಂಥರ ಅಸ್ಪೃಶ್ಯನಾಗಿದ್ದೇನೆ ಅಂತಲೂ ಅನ್ನಿಸತೊಡಗಿತು.
ಅಂಥದ್ದೇ ಭಾವನೆ ಶ್ರೀನಿಧಿಯನ್ನೂ ಕಾಡುತ್ತಿದೆ ಅಂತ ಶ್ರೀಕಂಠಯ್ಯನಿಗೆ ಅವನ ಕಣ್ಣುಗಳನ್ನು ನೋಡಿದಾಗೆಲ್ಲ ಅನ್ನಿಸುತ್ತಿತ್ತು. ಹುಡುಗಾಟವಾಗಲೀ, ಬಾಲ್ಯದ ಬೆರಗಾಗಲೀ ಅದರಲ್ಲಿ ಕಾಣಿಸುತ್ತಿರಲಿಲ್ಲ. ಅವನೊಂದು ಯಂತ್ರದ ಥರ ದುಡಿಯುತ್ತಿದ್ದಾನಾ ಅಥವಾ ಓದುತ್ತಿದ್ದಾನಾ ಅನ್ನುವ ಗುಮಾನಿಯೂ ಮೂಡತೊಡಗಿತು. ಬಾಲಕಾರ್ಮಿಕರಿಗಿಂತ ಕಠಿಣವಾದ ಬದುಕು ಅದಾಗಿರಬಹುದೇ ಎಂಬ ಊಹೆಯಲ್ಲಿ ಅವರು ಆಗಾಗ ಮೊಮ್ಮಗನನ್ನು ಗಮನಿಸುತ್ತಾ ಅವನಲ್ಲಾಗುವ ಬದಲಾವಣೆಯನ್ನು ನೋಡುತ್ತಾ ಮರುಗುತ್ತಾ ಸುಮಿತ್ರೆಯ ಶಿಸ್ತುಬದ್ಧತೆಯ ಬಗ್ಗೆ ಸಿಟ್ಟುಗೊಳ್ಳುತ್ತಾ ಉಳಿದುಬಿಟ್ಟರು.
ಸುಮಿತ್ರೆಗಂತೂ ಇದರಿಂದ ಸಂತೋಷವಾಗಿತ್ತು. ಕೊನೆಗೂ ಮಗ ಚೆನ್ನಾಗಿ ಓದುತ್ತಿದ್ದಾನೆ. ಶಿಸ್ತುಬದ್ಧವಾಗಿ ಬದುಕುತ್ತಿದ್ದಾನೆ. ಈ ಸಾರಿ ಕ್ಲಾಸಿಗೆ ಫಸ್ಟ್ ಬರುತ್ತಿದ್ದಾನೆ ಅಂತ ಅವಳಿಗೆ ಖಾತ್ರಿಯಾಗಿತ್ತು. ಇದನ್ನು ಜಾಸ್ತಿ ದಿನ ಗಂಡನೂ ಮಾವನೂ ಉಳಿಯುವುದಕ್ಕೆ ಬಿಡುವುದಿಲ್ಲ ಅನ್ನುವ ಗುಮಾನಿಯೂ ಅವಳಿಗಿತ್ತು. ಅದನ್ನು ದಿಟ್ಟವಾಗಿ ಎದುರಿಸುವ ಸಕಲೋಪಾಯಗಳನ್ನು ಅವಳು ಯೋಚಿಸಿಕೊಂಡು ಬಿಟ್ಟಿದ್ದಳು.
ಸುಮಿತ್ರೆ ಹಿನ್ನೆಲೆಯನ್ನು ಯೋಚಿಸಿದರೆ ಅದು ಸಹಜವೆಂದೇ ಹೇಳಬೇಕು. ಅವಳು ಮದುವೆಯಾದ ಆರಂಭದಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದಳು. ಮದುವೆಗೆ ಮುಂಚೆ ತನ್ನ ಕುಟುಂಬದಲ್ಲಿ ನೆಂಟರಿಷ್ಟರ ಕೈಯಿಂದ ಅವಳು ಸಾಕಷ್ಟು ಅವಮಾನಿತೆಯಾಗಿದ್ದಳು. ನೋಡುವುದಕ್ಕೆ ಅಷ್ಟೇನೂ ಸುಂದರಿಯಲ್ಲದ, ಅಂಥ ಅನುಕೂಲಸ್ಥೆಯೂ ಅಲ್ಲದ ಸುಮಿತ್ರೆಯೊಳಗೆ ತೀರದ ಅಸಂಖ್ಯ ಆಸೆಗಳಿದ್ದವು. ಮದುವೆಯಾದ ಮೇಲೆ ಅವನ್ನೆಲ್ಲ ತೀರಿಸಿಕೊಳ್ಳಬೇಕು ಎಂದು ಅವಳು
ಅಂದುಕೊಂಡಿದ್ದಳು.
ಆದರೆ ಅದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ ಶ್ರೀಧರ. ಅವನೊಬ್ಬ ಅಂಥ ಮಹಾತ್ವಕಾಂಕ್ಷೆಯೇ ಇಲ್ಲದ.ಉಡಾಫೆಯ ಮನುಷ್ಯ ಅನ್ನುವುದು ಅವಳಿಗೆ ಗೊತ್ತಾಗಿಹೋಯಿತು. ಅವನ ಮೂಲಕ ತನ್ನನ್ನು ಗುರುತಿಸಿಕೊಳ್ಳುವುದು ಸಾಧ್ಯ ಇಲ್ಲ ಅನ್ನುವುದು ಅವಳಿಗೆ ಖಾತ್ರಿಯಾಗಿಬಿಟ್ಟಿತು.
ಅದೇ ಹೊತ್ತಿಗೆ ಶ್ರೀನಿಧಿ ಹುಟ್ಟಿದ್ದು. ತನ್ನ ಓರಗೆಯ ಗೆಳತಿಯರ ಸಂಬಂಧಿಕರು ತಮ್ಮ ಮಕ್ಕಳ ಬಗ್ಗೆ ಹೇಳುವುದನ್ನು ಕೇಳಿ ಕೇಳಿ ಅವಳಿಗೆ ಸಾಕಷ್ಟು ರೇಜಿಗೆ ಅನ್ನಿಸಿತ್ತು. ಹೇಗಾದರೂ ಮಾಡಿ ತನ್ನ ಸರೀಕರ ಎದುರು ತಾನೂ ಏನನ್ನಾದರೂ ಸಾಧಿಸಿ ತೋರಿಸಬೇಕು ಅನ್ನುವ ಆಸೆಯಿತ್ತು.
ಆ ಆಸೆಗೆ ಒತ್ತಾಸೆಯಾಗಿ ಒದಗಿ ಬಂದದ್ದು ಶ್ರೀನಿಧಿ. ತನ್ನ ಮಗನ ಸಾಧನೆಯ ಮೂಲಕ ತನ್ನನ್ನು ಪ್ರಕಟಪಡಿಸಿಕೊಳ್ಳಬಹುದು ಅನ್ನುವುದು ಅವಳಿಗೆ ಹೊಳೆದದ್ದು ಮೂರನೇ ಕ್ಲಾಸಿನಲ್ಲಿ ಓದುತ್ತಿರುವಾಗಲೇ ಶ್ರೀನಿಧಿ ಟೀವಿಯಲ್ಲಿ ಕಾಣಿಸಿಕೊಂಡಾಗ. ಅವನು ಟೀವಿಯೊಂದರ ಹಾಡುವ ಕಾರ್ಯಕ್ರಮದಲ್ಲಿ ಚೆನ್ನಾಗಿ ಹಾಡಿ ಮೆಚ್ಚುಗೆ ಗಳಿಸಿದ ನಂತರ ತುಂಬ ಮಂದಿ ಅವಳ ಹತ್ತಿರ ಮಾತಾಡಿದರು. ಅವಳಿಲ್ಲದಾಗಲೂ ನಮ್ಮ ಸುಮಿತ್ರೆಯ ಮಗ ಟೀವಿಲಿ ಬಂದಿದ್ದ ಅಂತ ಮಾತಾಡಿಕೊಂಡರು. ನಿನ್ನ ಮಗನ ವಿಷ್ಯಾನೇ ಮಾತಾಡ್ತಿದ್ವಿ ಅಂತ ಅನೇಕರು ಹೇಳಿದರು.
ಆವತ್ತಿನಿಂದ ಸುಮಿತ್ರೆಯ ನಿರ್ಧಾರ ಗಟ್ಟಿಯಾಯಿತು. ಶ್ರೀನಿಧಿಗೆ ಏನೇನು ಕಲಿಸಬೇಕು, ಹೇಗೆ ಅವನನ್ನು ಒಂದು ಎತ್ತರಕ್ಕೆ ಏರುವ ಹಾಗೆ ಮಾಡಬೇಕು. ಹೇಗೆ ತನ್ನ ಅವಮಾನಗಳನ್ನೆಲ್ಲ ಮೀರುವುದಕ್ಕೆ ಅವನು ಕಾರಣ ಆಗಬೇಕು ಅನ್ನುವುದನ್ನೆಲ್ಲ ಅವಳು ಲೆಕ್ಕ ಹಾಕಿದಳು. ಅದೇ ಹೊತ್ತಿಗೆ ಅವಳಿಗೆ ತಾನೂ ಬದಲಾಗಬೇಕು ಅನ್ನಿಸಿತು. ತಾನು ಗಂಭೀರೆಯಾಗಿ ಕಾಣಿಸುತ್ತಿಲ್ಲ ಅನ್ನಿಸಿತು. ಹೀಗಿದ್ದರೆ ಆಗುವುದಿಲ್ಲ ಅಂದುಕೊಂಡು ಒಂದಷ್ಟು ದುಬಾರಿ ಬೆಲೆಯ ಚೂಡಿದಾರಗಳು ಅವಳ ವಾರ್ಡ್‌ರೋಬ್ ಸೇರಿದವು. ಕಾಟನ್ ಸೀರೆಗಳು ಬಂದವು. ಮಾತಿನಲ್ಲಿ ಹದವಾಗಿ ಇಂಗ್ಲಿಷ್ ಬೆರೆತಿತು. ತಾಯಿಗೂ ಮಗನೂ ಒಂದೇ ಸಾರಿ ಮತ್ತೊಂದು ವರ್ಗದ ಪ್ರಜೆಗಳಾಗಿ ರೂಪಾಂತರ ಹೊಂದುತ್ತಿದ್ದಾರೆ ಅನ್ನುವುದು ಶ್ರೀಕಂಠಯ್ಯನಿಗೂ ಶ್ರೀಧರನಿಗೂ ಏಕಕಾಲಕ್ಕೆ ಅರಿವಾಗುತ್ತಾ ಬಂತು.
ಶ್ರೀನಿಧಿಗೆ ಅವಳು ಕೇವಲ ಓದುವುದನ್ನು ಮಾತ್ರ ಕಲಿಸಲಿಲ್ಲ. ಜೊತೆಗೇ, ಹೇಗೆ ಎಲ್ಲಿ ಯಾವಾಗ ಎಷ್ಟು ಮಾತಾಡಬೇಕು. ಹೇಗೆ ಡ್ರೆಸ್ ಹಾಕಬೇಕು, ಎಷ್ಟು ನಗಬೇಕು. ಯಾವುದರಲ್ಲಿ ಎಷ್ಟು ಆಸಕ್ತಿ ವಹಿಸಬೇಕು. ತನ್ನ ಜೊತೆಗಾರ ಹುಡುಗರಿಗಿಂತ ಹೇಗೆ ಭಿನ್ನವಾಗಿ ಕಾಣಿಸಬೇಕು ಅನ್ನುವುದನ್ನೂ ಕಲಿಸಿಕೊಟ್ಟಳು. ನೋಡ ನೋಡುತ್ತಿದ್ದ ಹಾಗೆ ಶ್ರೀನಿಧಿ ತನ್ನ ವಯಸ್ಸಿಗಿಂತ ಇಪ್ಪತ್ತು ವರುಷ ದೊಡ್ಡವನ ಕಾಣಿಸತೊಡಗಿದ.
-೩-
ಶ್ರೀನಿಧಿ ಈ ಮಧ್ಯೆ ಕಳೆದುಕೊಂಡ ಬಾಲ್ಯದ ಹುಡುಗಾಟ, ಬೆರಗು ಇವುಗಳನ್ನು ದಾಖಲಿಸುವುದು ಇಲ್ಲಿನ ಉದ್ದೇಶ ಅಲ್ಲ. ಅದು ಒಬ್ಬೊಬ್ಬರನ್ನು ಒಂದೊಂದು ಥರ ಕಾಡುತ್ತದೆ. ಮಕ್ಕಳು ನಮ್ಮ ದೇಶದಲ್ಲಿ ಇವತ್ತು ಹೆತ್ತವರ ಆಶೋತ್ತರಗಳನ್ನು ಪೂರ್ತಿ ಮಾಡುವ ಸಾಧನಗಳಂತೆ ಬಳಕೆಯಾಗುತ್ತವೆ ಅನ್ನುವುದನ್ನು ನೀವು ಒಪ್ಪುತ್ತೀರೋ ಇಲ್ಲವೋ ಗೊತ್ತಿಲ್ಲ. ಮಕ್ಕಳಿಗೆ ಚಂದದ ಬಟ್ಟೆ ಹಾಕಿ, ತಾವು ಬಾಲ್ಯದಲ್ಲಿ ಕಳೆದುಕೊಂಡ ಅನುಕೂಲಗಳು ಅವರಿಗೆ ಸಿಗುವಂತೆ ಮಾಡಿ ಸಂತೋಷಪಡುವಷ್ಟಕ್ಕೆ ಹೆತ್ತವರ ಸಂತೋಷ ಮತ್ತು ಸೆಲ್ಫ್ ಐಡೆಂಟಿಫಿಕೇಷನ್ ನಿಂತರೆ ಸಂತೋಷ. ಆದರೆ ಅದು ಮಕ್ಕಳನ್ನು ಪೂರ್ತಿಯಾಗಿ ರೂಪಿಸುವ ಮಟ್ಟಕ್ಕೆ ಬೆಳೆದರೆ ಏನಾಗುತ್ತದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು.
ಈ ಕತೆಯಲ್ಲಿ ಬರುವ ತಾತ ಶ್ರೀಕಂಠಯ್ಯ ಕ್ರಮೇಣ ತಾನು ನಿರುಪಯುಕ್ತ ಅನ್ನುವ ಭಾವನೆಯನ್ನು
ಬೆಳೆಸಿಕೊಳ್ಳುತ್ತಾನೆ. ಮಗನಿಗೆ ಆಕೆ ಎಲ್ಲ ಜಾಣತನವನ್ನೂ ಕಲಿಸಿಕೊಟ್ಟಿದ್ದಾಳೆ, ಜ್ಞಾನಭಂಡಾರ ಆಗುವಂತೆ ಮಾಡಿದ್ದಾಳೆ. ಆದರೆ ಕಾಗದದ ದೋಣಿ ಮಾಡುವ ಸರಳ ಕಲೆ, ಗಾಳಿಪಟ ಹಾರಿಸುವ ಸಂತೋಷ, ಎದ್ದು ಬಿದ್ದು ಸೈಕಲ್ ಕಲಿಯುವ ಖುಷಿ ಎಲ್ಲವೂ ಅವರಿಗೆ ಎರವಾಗಿದೆ.
ಮುದುಕರಿಗೆ ತಾವು ನಿರುಪಯುಕ್ತ ಅನ್ನಿಸುವಂತೆ ಮಾಡಿದ್ದು ನಮ್ಮ ಕಾಲದ ದೊಡ್ಡ ಸೋಲು. ಅವರೊಳಗಿರುವ ಅನುಭವ, ಕಲಾವಂತಿಕೆಯನ್ನು, ಕಲ್ಪನಾಶಕ್ತಿ ಮಕ್ಕಳಿಗೆ ವರ್ಗವಾಗುತ್ತಿಲ್ಲ. ಶ್ರೀನಿಧಿಯಂಥ ಮಕ್ಕಳು ಹಿರಿಯ ಥರ ಮಾತಾಡುತ್ತಿದ್ದಾರೆ. ಹಿರಿಯರ ಮುದುಕರಂತಾಗಿದ್ದಾರೆ. ಮುದುಕರು ಬದುಕಿದ್ದೂ ಸತ್ತಿದ್ದಾರೆ.
ಈ ಸ್ಥಿತಿಯಿಂದ ಪಾರಾಗುವುದು ಹೇಗೆ?
ಒಂದು ಗುಡ್ಡದ ಮೇಲೆ ನಿಂತುಕೊಂಡು ಅಜ್ಜ ಮಾಡಿಕೊಟ್ಟ ಗಾಳಿಪಟವನ್ನು ಪುಟ್ಟ ಹುಡುಗ ಹಾರಿಸುವ ದೃಶ್ಯ, ಸಣ್ಣ ಕೊಳದಲ್ಲಿ ತಾತನ ಮಾರ್ಗದರ್ಶನದಲ್ಲಿ ಮಗು ಮಾಡಿದ ದೋಣಿಯನ್ನು ತೇಲಿಬಿಡುವ ಆಪ್ಯಾಯಮಾನ ಕ್ಷಣ, ಗಿರಿಗಿಟ್ಲೆಯನ್ನು ಗಾಳಿಗೆದುರಾಗಿ ಹಿಡಿದು ಓಡುತ್ತಿರುವ ಕಂದನ ಕಾಲನ್ನೇ ನೋಡುತ್ತಿರುವ ತಾತ..
ಈ ಮೂರು ದೃಶ್ಯಗಳನ್ನು ಸುಮ್ಮನೆ ಕಣ್ಮುಂದೆ ತಂದುಕೊಂಡು ಈ ಕತೆಯನ್ನು ಮುಗಿಸೋಣ. ಇದು ಕತೆಯಲ್ಲ ಅನ್ನಿಸಿದರೆ ನಿಮ್ಮ ಅನಿಸಿಕೆ ವಾಸ್ತವ. ವಾಸ್ತವ ಅನ್ನಿಸಿದರೆ ಅದು ದುರಂತ.

Wednesday, January 23, 2008

ಕಣ್ಣೀರಿನ ಹಾದಿಯಲ್ಲಿ ಕಣ್ತೆರೆಸುವ ಕವಿತೆ

ರಾಮಾಯಣದಲ್ಲಿ ಸೀತೆ ಪಡುವ ಪಾಡನ್ನು ನಾವು ಅತ್ಯಂತ ಆಸಕ್ತಿಯಿಂದ ಓದುತ್ತೇವಲ್ಲ? ಮಹಾಭಾರತದಲ್ಲಿ ದ್ರೌಪದಿಗೆ ಎದುರಾಗುವ ಕಷ್ಟಗಳನ್ನು ಓದಿ ಆನಂದಪಡುತ್ತೇವಲ್ಲ? ಸಾಹಿತ್ಯಕೃತಿಗಳಲ್ಲಿ ಬರುವ ದಾರುಣವಾದ ನೋವು ಕೂಡ ನಮ್ಮನ್ನು ಮುದಗೊಳಿಸುವ ಶಕ್ತಿ ಹೊಂದಿದೆಯಲ್ಲ? ಹಾಗಿದ್ದರೆ ಮಾನವೀಯತೆ, ದಯೆ, ಕರುಣೆಗೆ ಅವಕಾಶವೆಲ್ಲಿ?
ಕವಿ ಕೆ.ಎಸ್.ನ. ಕೇಳಿದರು;
ನೊಂದ ನೋವನ್ನಷ್ಟೆ ಹಾಡಲೇಬೇಕೇನು?
ಬೇಡವೇ ಯಾರಿಗೂ ಸಿರಿಮಲ್ಲಿಗೆ?

ಅದೇ ಸರಿಯಲ್ಲವೇ? ನೋವಿನ ಕತೆಯನ್ನೋ ಕವಿತೆಯನ್ನೋ ಯಾರಾದರೂ ಯಾಕೆ ಬರೆಯಬೇಕು? ಜೀವನದಲ್ಲಿ ಎದುರಾಗುವ ದಾರುಣವಾದ ದುಃಖಗಳನ್ನು ನಾವು ಎಂದಾದರೂ ಸವಿದಿದ್ದೇವೆಯೇ? ಅವನ್ನು ಸುಂದರ ಎಂದು ಕರೆದದ್ದೇವಾ? ಹಾಗಿರುವಾಗ ಅದೇ ಕತೆಯಾಗಿ ಬಂದಾಗ ಯಾಕೆ ಸುಂದರಕಾಂಡ ಆಗುತ್ತದೆ?
ಅದು ಸಾಹಿತ್ಯಕ್ಕಿರುವ ಶಕ್ತಿ. ಸತ್ಯಕ್ಕಿರುವ ಶಕ್ತಿ. ಒಂದು ಸಾಹಿತ್ಯಕೃತಿಯಲ್ಲಿ ನಮ್ಮನ್ನು ತಟ್ಟುವುದು, ಮುದಗೊಳಿಸುವುದು ಅಲ್ಲಿ ಗೋಚರವಾಗುವ ಸತ್ಯ. ಸತ್ಯ ಸಂತೋಷ ಕೊಟ್ಟಷ್ಟು ಇನ್ಯಾವುದೂ ಸಂತೋಷ ಕೊಡಲಾರದು. ಅಪ್ರಾಮಾಣಿಕ ಕೃತಿಗಳು ನಮ್ಮನ್ನು ಅಷ್ಟಾಗಿ ಕಾಡದೇ ಇರುವುದಕ್ಕೆ ಅದೇ ಕಾರಣ. ಲೇಖಕ ಬರೆಯುತ್ತಿರುವುದು ಸುಳ್ಳು ಅಂತ ಅನ್ನಿಸಿದ ತಕ್ಪಣವೇ ಒಂದು ಸಾಹಿತ್ಯ ಕೃತಿ ಬಿದ್ದು ಹೋಗುತ್ತದೆ.
ಹಾಗಿದ್ದರೆ ಲೇಖಕ, ಕವಿ, ಸಾಹಿತಿ ಹೇಳುತ್ತಿರುವುದು ನಿಜವಾ? ಅದೂ ಅಲ್ಲ. ಆತ ಬರೆಯುವುದೇ ಕತೆಯನ್ನು, ಅದು ಫ್ಯಾಕಅಲ್ಲ, ಫಿಕ್ಪ್. ಅಂದರೆ ಕಲ್ಪನೆ. ಆ ಕಲ್ಪನೆಯಲ್ಲೂ ಪ್ರಾಮಾಣಿಕತೆ ಇರಬೇಕು ಅಂತ ಬಯಸುವುದು ಎಂಥ ವಿರೋಧಾಭಾಸ.
ಆ ಕಾರಣಕ್ಕೆ ಸಾಹಿತ್ಯ ಎನ್ನುವುದು ಅತ್ಯಂತ ಸಂಕೀರ್ಣವಾದದ್ದು. ಒಂದು ಕತೆಯಲ್ಲೋ ಕಾದಂಬರಿಯಲ್ಲೋ ಪಾತ್ರಗಳನ್ನು ಮೀರಿ ಲೇಖಕ ಮಾತಾಡಲು ಯತ್ನಿಸಿದಾಗ ಅಲ್ಲಿ ಅಪ್ರಾಮಾಣಿಕತೆ ಕಂಡೀತು. ಅದು ಹೇಗೋ ಏನೋ ಓದುತ್ತಾ ಓದುತ್ತಾ ಒಂದು ಪಾತ್ರ ಸಹಜವಾಗಿಯೇ ನಮಗೆ ಇಷ್ಟವಾಗುತ್ತದೆ. ನಿಜಜೀವನದಲ್ಲಿ ಆದ ಹಾಗೆ.
ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಶಶಿಕುಮಾರ ಸೈಕಲ್ಲಿನಿಂದ ಬಿದ್ದು ಗಾಯಮಾಡಿಕೊಂಡ ಎನ್ನುವುದು ಶಶಿಕುಮಾರನನ್ನು ಬಲ್ಲವರಿಗೆ ಮಾತ್ರ ಕೆಟ್ಟ ಸುದ್ದಿ. ಉಳಿದವರ ಪಾಲಿಗೆ ಅದು ಸುದ್ದಿಯೇ ಅಲ್ಲ. ಎಲ್ಲೋ ಬದುಕಿರುವ ಶಶಿಕುಮಾರ ಎಂಬ ವ್ಯಕ್ತಿ ಸೈಕಲ್ಲಿನಿಂದ ಬಿದ್ದು ಮೊಣಕಾಲು ಮುರಿಸಿಕೊಂಡದ್ದನ್ನು ನಾವು ತುಂಬ ನಿರ್ಲಿಪ್ತಭಾವದಿಂದಲೇ ನೋಡಬಲ್ಲೆವು.
ಆದರೆ, ನಾವು ನೋಡುತ್ತಿರುವ ಯಾವುದೋ ಒಂದು ಸೀರಿಯಲ್ಲಿನ ಪಾತ್ರಕ್ಕೆ ಏನಾದರೂ ಆದರೆ ಮನಸ್ಸು ಮಿಡಿಯುತ್ತದೆ. ಓದುತ್ತಿರುವ ಕಾದಂಬರಿಯ ನಾಯಕಿ ಕಣ್ಣೀರು ಮಿಡಿದರೆ ನಾವೂ ಕಣ್ಣೀರು ಹಾಕುತ್ತೇವೆ. ಬದುಕಿರುವ ಒಬ್ಬ ವ್ಯಕ್ತಿಗಿಂತ ಕಾಲ್ಪನಿಕ ಪಾತ್ರವೊಂದು ಇಷ್ಟವಾಗುವುದು ಯಾಕೆ?
ಸಿಂಪಲ್!
ಆ ಪಾತ್ರ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿಬಿಟ್ಟಿರುತ್ತದೆ. ಒಂದು ವೈರುದ್ಧ್ಯ ಗಮನಿಸಿ. ನಾವು ನಮಗಿಂತ ತುಂಬ ದೂರದಲ್ಲಿರುವ, ರಕ್ತಮಾಂಸಗಳಿಂದ ಕೂಡಿರದ, ಎಂದೂ ನಮ್ಮ ಮುಂದೆ ಧುತ್ತೆಂದು ಹಾಜರಾಗದ ವ್ಯಕ್ತಿಗಳ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಯನ್ನು ನಮ್ಮ ಕಣ್ಮುಂದಿರುವ ವ್ಯಕ್ತಿಗಳ ಮೇಲೆ ಇಟ್ಟುಕೊಂಡಿರುವುದಿಲ್ಲ. ಬಂಗಾರದ ಮನುಷ್ಯ ಚಿತ್ರದ ನಾಯಕನನ್ನು ಪ್ರೀತಿಸಿದಷ್ಟು ಗಾಢವಾಗಿ ಪಕ್ಕದ ಮನೆಯ ರೈತನನ್ನು ಪ್ರೀತಿಸಲಾಗುವುದಿಲ್ಲ. ಕರ್ವಾಲೋ ಕಾದಂಬರಿಯ ಮಂದಣ್ಣನಂಥ ಹತ್ತಾರು ಮಂದಿ ಸುತ್ತಮುತ್ತ ಇದ್ದರೂ ಅವರನ್ನು ನಾವು ನಮ್ಮೊಳಗೆ ಕರೆದುಕೊಳ್ಳುವುದಿಲ್ಲ.
ಯಾಕಿರಬಹುದು ಅಂತ ಯೋಚಿಸಿದ್ದೀರಾ?
ಅದಕ್ಕೂ ನಮ್ಮ ಮನಸ್ಸೇ ಕಾರಣ. ನಮ್ಮ ಸುತ್ತಮುತ್ತಲಿರುವ ವ್ಯಕ್ತಿಗಳಿಗೆ ನಮ್ಮಂತೆಯೇ ಅಹಂಕಾರವಿದೆ. ಕಾದಂಬರಿಯ ಪಾತ್ರಗಳಿಗೆ ಅಹಂಕಾರ ಇರುವುದಿಲ್ಲ. ಅವು ನಮ್ಮ ಯೋಚನೆಗೆ ವಿರುದ್ಧವಾಗಿ ವರ್ತಿಸುತ್ತಾವೆ ಎಂಬ ಭಯವಿರೋದಿಲ್ಲ. ಅವುಗಳು ಯಾವತ್ತೂ ನಮ್ಮ ಅಹಂಕಾರವನ್ನು ಚಿಂದಿಮಾಡುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಒಂದು ಪಾತ್ರದ ಅಹಂಕಾರ, ನಮ್ಮ ಅಹಂಕಾರವೇ ಆಗಿಬಿಡುತ್ತದೆ. ಈ ಪರಕಾಯ ಪ್ರವೇಶ ಮತ್ತೊಬ್ಬ ಜೀವಂತ ವ್ಯಕ್ತಿಯ ಜೊತೆ ಸಾಧ್ಯವಾಗುವುದಿಲ್ಲ.ಯಾಕೆಂದರೆ ಅವನನ್ನು ನಾವು ಪ್ರೀತಿಸದಷ್ಟೇ ಅನುಮಾನದಿಂದ ನೋಡುತ್ತೇವೆ. ಅವನು ನಮ್ಮ ಊಹೆ ಮತ್ತು ಲೆಕ್ಕಾಚಾರಗಳನ್ನು ಮೀರಬಲ್ಲ ಎಂಬ ಗುಮಾನಿ ಇರುತ್ತದೆ. ಪಾತ್ರಗಳು ಹಾಗಲ್ಲ, ಅವು ತಮ್ಮ ಪರಿಧಿಯನ್ನು ದಾಟಿ ಯಾವತ್ತೂ ಆಚೆ ಬರುವುದಿಲ್ಲ.
ಕಲೆಯೆಂದರೆ ಹಾಗೇ. ಅದು ಮಾನವಸಹಜವಾದ ಎಲ್ಲ ಕ್ಪುದ್ರತೆಗಳನ್ನೂ ಮೀರುತ್ತದೆ. ಒಂದು ಕ್ಪಣವಾದರೂ ನಮ್ಮನ್ನು ನಮ್ಮ ವರ್ತಮಾನದಿಂದ ಆಚೆಗೆ ಕರೆದೊಯ್ಯುತ್ತದೆ. ಹಾಗೆ ಪೂರ್ತಿಯಾಗಿ ಕರೆದೊಯ್ಯುವುದು ಕೂಡ ಒಳ್ಳೆಯದಲ್ಲ. ಅದು ಪಲಾಯನವಾದ. ಪೂರ್ತಿ ಇಲ್ಲೇ ಉಳಿಯುವುದೂ ಒಳ್ಳೆಯದಲ್ಲ; ಅದು ರಿಯಲಿಸಂ. ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ ಎಂಬ ದ್ವಂದ್ವವೇ ಜೀವಂತಿಕೆಯ ಲಕ್ಪಣ.
ಹೊಸ ಹುಡುಗರು ಸಾಹಿತ್ಯದ ಉಪಯೋಗ ಏನು ಎಂದು ಕೇಳುತ್ತಾರೆ. ಸಾಹಿತ್ಯಕ್ಕಿಂತ ಸಾಮಾನ್ಯ ಜ್ಞಾನ ಮುಖ್ಯ ಎಂದು ಭಾವಿಸುತ್ತಾರೆ. ಶ್ರೀಲಂಕಾಕ್ಕೆ ಸ್ವಾತಂತ್ರ ಬಂದಿದ್ದು ಯಾವಾಗ ಎಂದು ತಿಳಿದುಕೊಂಡಿರುವವನಿಗಿಂತ ಶ್ರೀಲಂಕಾದ ಸಾಗರತೀರದ ಗಾಳಿಗೆ ಎಂಥ ಪರಿಮಳವಿರುತ್ತೆ ಅನ್ನುವುದರ ಬಗ್ಗೆ ಆಸಕ್ತಿ ಇಟ್ಟುಕೊಳ್ಳುವುದು ಒಳ್ಳೆಯದು.
ಇಡೀ ಜಗತ್ತೇ ನಮ್ಮೊಳಗೆ ತುಂಬಿಕೊಳ್ಳುವುದು ಮಾಹಿತಿಯಿಂದಲ್ಲ, ಸಾಹಿತ್ಯದಿಂದ. ನೇಪಾಳದ ಮೇಲೊಂದು ಪುಟ್ಟ ಟಿಪ್ಪಣಿ ಬರೆ ಎಂದಾಗ ನೇಪಾಳದ ರಾಜಧಾನಿ ಯಾವುದು? ಅಲ್ಲಿಯ ಜನಸಂಖ್ಯೆ ಎಷ್ಟು? ಅಲ್ಲಿನ ಪ್ರಧಾನಿ ಯಾರು ಎಂದು ಬರೆದರೆ ಯಾರಿಗೂ ಆಸಕ್ತಿಯಿಲ್ಲ. `ನೇಪಾಳದ ಚಹದಂಗಡಿಯಲ್ಲಿ ಕಂಪಿಸುವ ಕೈಗಳಿಂದ ಚಹಾ ತಂದುಕೊಟ್ಟ ಹುಡುಗಿಯ ಹೆರಳಲ್ಲಿದ್ದದ್ದು ನಮ್ಮಕ್ಕ ಮುಡಿಯುತ್ತಿದ್ದ ನಂದಬಟ್ಟಲ ಹೂವು' ಎಂದಾಗಲೇ ಅದು ನಮ್ಮ ನೇಪಾಳವಾಗುತ್ತದೆ.
ಇದನ್ನು ಯಾವ ಶಿಕ್ಪಣ ನೀಡಬಲ್ಲದು?

Tuesday, January 22, 2008

ಜಾಕ್ ಲಂಡನ್

ನಾನು ಹುಟ್ಟಿದ್ದು ಶ್ರಮಿಕ ವರ್ಗದಲ್ಲಿ. ಜೀವನೋತ್ಸಾಹ, ಗುರಿ, ಆದರ್ಶ ಇವೆಲ್ಲ ನಮ್ಮಂಥವರ ಪಾಲಿಗೆ ಆಗಿಬಾರದ ಪದಗಳು ಅಂತ ಬಾಲ್ಯದಲ್ಲೇ ಅನ್ನಿಸಿತು. ಯಾಕೆಂದರೆ ನಾನು ಹುಟ್ಟಿಬೆಳೆದ ವಾತಾವರಣ ಅಷ್ಟೊಂದು ಜಡವೂ, ದರಿದ್ರವೂ ಆಗಿತ್ತು. ನಾನು ಜೀವನದ ಅತ್ಯಂತ ಕೆಳಸ್ತರದಲ್ಲಿದ್ದೆ. ಹೀಗಾಗಿ ನನಗೆ ಬದುಕು ಕೊಟ್ಟದ್ದು ಅತ್ಯಂತ ಅಸಹನೀಯವೂ ನೀಚವೂ ಆದದ್ದನ್ನು. ಅದನ್ನು ಮೀರುವ ಶಕ್ತಿ ಕೂಡ ನನಗಿರಲಿಲ್ಲ.
ನನ್ನ ಕಣ್ಮುಂದೆ ಉಳ್ಳವರ ಗೋಪುರವಿತ್ತು. ಕಣ್ಣೆತ್ತಿ ನೋಡಿದಾಗಲೆಲ್ಲ ನನಗೂ ಆ ಗೋಪುರ ಏರಬೇಕೆಂಬ ಆಸೆಯಾಗುತ್ತಿತ್ತು. ಅಲ್ಲಿ ಬಣ್ಣಬಣ್ಣದ ಬಟ್ಟೆತೊಟ್ಟ ಗಂಡಸರೂ ಉದ್ದುದ್ದ ಲಂಗ ತೊಟ್ಟ ಹುಡುಗಿಯರೂ ಇದ್ದರು.ಒಳ್ಳೆಯ ಊಟ ಪುಷ್ಕಳವಾಗಿ ಸಿಗುತ್ತಿತ್ತು. ಇದು ಹೊಟ್ಟೆ ಪಾಡಿಗಾದರೆ ಆತ್ಮಕ್ಕೆ ಬೇಕಾದದ್ದೂ ಆ ಗೋಪುರದಲ್ಲಿದೆ ಅಂದುಕೊಂಡಿದ್ದೆ. ಪರಿಶುದ್ಧತೆ, ಶಾಂತಿ, ನಿಸ್ವಾರ್ಥ ಮತ್ತು ಒಳ್ಳೆಯ ಆಲೋಚನೆಗಳು ಎತ್ತರದ ಮನೆಯಲ್ಲಿರುತ್ತವೆ ಅಂತ ಭಾವಿಸಿದ್ದೆ. ನನ್ನ ಈ ಯೋಚನೆಗೆ ಕಾರಣ ನಾನು ಓದುತ್ತಿದ್ದ `ಸಾಗರ ತೀರ'ದ ಕಾದಂಬರಿಗಳು. ಅವುಗಳ ಪ್ರಕಾರ ಕೆಟ್ಟವರನ್ನನೂ ದುಷ್ಟರನ್ನೂ ಬಿಟ್ಟರೆ ಮೇಲಂತಸ್ತಿನಲ್ಲಿರುವ ಎಲ್ಲರೂ ಶುದ್ಧಚಾರಿತ್ರದ ಉದ್ಬೋಧ ಯೋಚನೆಗಳ ಘನವಂತರು. ಸದಾ ಸತ್ಕಾರ್ಯಗಳನ್ನು ಮಾಡುತ್ತಿರುವವರು. ನಾನಿದನ್ನು ಒಪ್ಪಿಕೊಂಡೇ ಬಿಟ್ಟಿದ್ದೆ. ಈ ಬದುಕನ್ನು ಸುಂದರವಾಗಿಸಿದವರು ಅವರೇ ಎಂದೂ ನಾನು ನಂಬಿದ್ದೆ.
ಆದರೆ ಆದರ್ಶ ಮತ್ತು ಭ್ರಮೆಗಳ ವಿಕಲತೆಯನ್ನು ಜನ್ಮಕ್ಕಂಟಿಸಿಕೊಂಡು ಶ್ರಮಿಕ ವರ್ಗದಿಂದ ಮೇಲಕ್ಕೇರುವುದು ಅಷ್ಟೇನೂ ಸುಲಭವಾಗಿರಲಿಲ್ಲ. ನನಗೊಂದು ಏಣಿಯೂ ಸುಲಭದಲ್ಲಿ ಸಿಗಲಿಲ್ಲ. ಮೇಲೆರಲು ಹೋದ ನನಗೆ ಮೊದಲು ಎದುರಾದದ್ದು ಚಕ್ರಬಡ್ಡಿಯ ಲೆಕ್ಕ. ಎತ್ತರದಲ್ಲಿರುವ ಮನುಷ್ಯನ ಮೆದುಳು ಎಷ್ಟು ಜಾಣತನದ ಲೆಕ್ಕಾಚಾರ ಹಾಕಬಲ್ಲದು ಎಂಬುದು ನನಗೆ ಮೊದಲ ಬಾರಿಗೆ ಅರ್ಥವಾಯಿತು. ಆಮೇಲೆ ನನ್ನ ಓರಗೆಯ ಮಂದಿಯ ಸಂಬಳ, ಜೀವನಮಟ್ಟ, ಖರ್ಚುಗಳನ್ನೆಲ್ಲ ನಾನು ಲೆಕ್ಕ ಹಾಕಿದೆ. ಅದರ ಪ್ರಕಾರ ನಾನು ತಕ್ಪಣವೇ ಕೆಲಸ ಮಾಡಿ ಐವತ್ತು ವರುಷಗಳ ಕಾಲ ಎಡೆಬಿಡದೆ ದುಡಿದರೆ ಮಾತ್ರ ಎತ್ತರದಲ್ಲಿರುವವರು ಅನುಭವಿಸುವಂಥ ಐಷಾರಾಮದ ರುಚಿ ನೋಡಬಹುದು ಅನ್ನುವುದು ಗೊತ್ತಾಯಿತು. ಆಗಲೇ ನಾನು ಮದುವೆಯಾಗಬಾರದು ಎಂದು ತೀರ್ಮಾಸಿದ್ದು. ಆಗಷ್ಟೇ ಶ್ರಮಿಕ ವರ್ಗದ ಬಹುದೊಡ್ಡ ಅನಾಹುತಕಾರಿ ಸಂಗತಿಯಾದ ಕಾಯಿಲೆಯಿಂದ ಪಾರಾಗಲು ಸಾಧ್ಯ ಅನ್ನಿಸಿತು.
ಆದರೆ ಕೇವಲ ಬದುಕಿ ಉಳಿಯುವುದಕ್ಕಿಂತ, ಕಸವಾಗಿಯೋ ಧೂಳಾಗಿಯೋ ಬದುಕುವುದಕ್ಕಿಂತ ಹೆಚ್ಚಿನದನ್ನು ನನ್ನ ಬದುಕು ನನ್ನಿಂದ ಅಪೇಕ್ಪಿಸುತ್ತಿತ್ತು. ನಾನು ಆರಂಭದಲ್ಲಿ ಪೇಪ್ ಹಂಚುವ ಹುಡುಗನಾಗಿ ಕಾಣಿಸಿಕೊಂಡೆ. ಆಗ ನನಗೆ ಹತ್ತು ವರುಷ. ನನ್ನ ಸುತ್ತಮುತ್ತಲ ಕ್ಪುದ್ರತೆ ಮತ್ತು ನನಗಿಂತ ಎತ್ತರದಲ್ಲಿರುವ ಸ್ವರ್ಗ. ಆ ಸ್ವರ್ಗಾರೋಹಣಕ್ಕೆ ಬೇರೆಯೇ ಏಣಿ ಬಳಸಬೇಕು ಅಂತ ನನಗೆ ಅನ್ನಿಸಿದ್ದು ಆಗಲೇ. ಅದು ವ್ಯಾಪಾರದ ಏಣಿ. ನೂರು ರುಪಾಯಿ ಸಂಪಾದಿಸಿ ವರುಷಕ್ಕೆ ಐದು ರುಪಾಯಿ ಬಡ್ಡಿಗೆ ಬ್ಯಾಂಕಿನಲ್ಲಿಡುವುದಕ್ಕಿಂತ ಐದು ರುಪಾಯಿಗೆ ಎರಡು ಪೇಪರ್ ಕೊಂಡುಕೊಂಡು ಏಳು ರುಪಾಯಿಗೆ ಅದನ್ನು ಮಾರುವುದು ಹೆಚ್ಚು ಲಾಭದ್ದು ಅನ್ನಿಸಿತು. ಹತ್ತೇ ವರುಷಕ್ಕೆ ನಾನೊಬ್ಬ ಬೋಳು ತಲೆಯ ಚಾಣಾಕ್ಪ ವ್ಯಾಪಾರಿಯಾಗುವ ಕನಸು ಕಂಡೆ.
ಹದಿನಾರನೇ ವಯಸ್ಸಿಗೇ ನಾನು ನಿಜಕ್ಕೂ ರಾಜಕುಮಾರ ಎಂದೇ ಕರೆಸಿಕೊಳ್ಳುತ್ತಿದ್ದೆ. ಆ ಬಿರುದು ಕೊಟ್ಟವರು ಕಳ್ಳರು. ಮುತ್ತುಕಳ್ಳರ ರಾಜಕುಮಾರ ಎಂದು ಅವರು ನನಗೆ ಬಿರುದು ಕೊಟ್ಟರು. ನಾನು ಒಂದು ಮೆಟ್ಟಿಲು ಮೇಲಕ್ಕೇರಿದ್ದೆ. ನಾನೂ ಬಂಡವಾಳಶಾಹಿಯಾಗಿದ್ದೆ. ಸಂಪಾದನೆಯಲ್ಲಿ ಮೂರನೆ ಎರಡನ್ನು ನಾನಿಟ್ಟುಕೊಂಡು ಮೂರನೇ ಒಂದರಷ್ಟನ್ನು ನನ್ನ ಜೊತೆಗಿದ್ದ ಹುಡುಗರಿಗೆ ಹಂಚುತ್ತಿದ್ದೆ. ಅವರು ನನ್ನಷ್ಟೇ ಕಷ್ಟಪಟ್ಟಿದ್ದರೂ ಅವರಿಗೆ ನನ್ನ ಅರ್ಧದಷ್ಟೂ ಸಿಗುತ್ತಿರಲಿಲ್ಲ.
ಇದಾದ ನಂತರ ಒಂದು ರಾತ್ರಿ ಚೀನೀ ಮೀನುಗಾರರ ಗುಡಿಸಲಿಗೆ ಹೋಗಿ ಅವರ ಬಲೆಗಳನ್ನೂ ಹಗ್ಗಗಳನ್ನೂ ಕದ್ದುಕೊಂಡು ಬಂದೆ. ಅವುಗಳು ತುಂಬ ದುಬಾರಿ. ಹೀಗೆ ಕದ್ದು ತಂದದ್ದನ್ನು ನಾನು ಕಳ್ಳತನ ಎಂದು ಕರೆಯಲಿಲ್ಲ. ಇದು ಕೂಡ ಬಂಡವಾಳಶಾಹಿಯ ಶೈಲಿ ಅಂದುಕೊಂಡೆ. ಬಂಡವಾಳಶಾಹಿ ಕೂಡ ತನ್ನ ಸುತ್ತಮುತ್ತಲಿನವರ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಾನೆ. ಒಂದು ರೀತಿಯಲ್ಲಿ ಅದೂ ದೋಚಿದಂತೆ ಅಲ್ಲವೇ? ಅವರು ವ್ಯವಸ್ಥೆಯನ್ನು ಬಳಸುತ್ತಿದ್ದರು, ನಾನು ಗ್ ಬಳಸಿದೆ ಅಷ್ಟೇ.
******
ಹೀಗೆ ಬರೆದವನು ಜಾಕಲಂಡನ್. ಆತ ಸಮಾಜವಾದಿ, ಕೋಟ್ಯಧಿಪತಿ. ಬುದ್ಧಿವಂತ ಪಟಿಂಗ. ಅನುಪಮ ಜೀವನೋತ್ಸಾಹಿ. ಇವನಷ್ಟು ಕಾಂಟ್ರಡಿಕ್ಪನ್ ಇಟ್ಟುಕೊಂಡು ಬದುಕಿದವನು ಮತ್ತೊಬ್ಬ ಸಿಗಲಾರ. ನಲುವತ್ತನೆಯ ವಯಸ್ಸಿಗೆ ಅತಿಯಾಗಿ ಮಾರ್ಫಿನ್ ನುಂಗಿ ಪ್ರಾಣಬಿಟ್ಟ ಜಾಕಲಂಡ್ನದ್ದು ವಿರೋಧಾಭಾಸಗಳ ಸರಮಾಲೆ. ಅವನು ಜಗತ್ತಿನ ಅತ್ಯಂತ ದೊಡ್ಡ ಮೊತ್ತದ ಸಂಭಾವನೆ ಪಡೆದ ಬರಹಗಾರ. ಅಷ್ಟೇ ಜನಪ್ರಿಯ ಕೂಡ. ಆತನ ಬರಹ, ಅದಕ್ಕೆ ಪ್ರೇರಣೆಯಾದ ಬದುಕು ಎಂರಡೂ ಅವನನ್ನು ಅಂತಾರಾಷ್ಟ್ರೀಯ ದಂತಕತೆಯನ್ನಾಗಿಸಿತು.
ಈ ವಿವಾದಾತ್ಮಕ ಜಾಣ ಸ್ವಲ್ಪ ಬುಧ್ಧಿಯಿದ್ದರೆ ಸಾಕು, ಎಂಥವರನ್ನೂ ಮೋಸ ಮಾಡಬಹುದು ಎಂದೂ ಎಲ್ಲಾ ಸಿದ್ದಾಂತಗಳನ್ನು ನಮಗೆ ಬೇಕಾದಂತೆ ತಿರುಚಿ ಬಳಸಿಕೊಳ್ಳಬಹುದು ಎಂದೂ ತೋರಿಸಿಕೊಟ್ಟವನು.
*****
ಜಾಕಲಂಡನ್ ಬರೆಯುತ್ತಾನೆ;
ಎಲ್ಲಾ ಕಡೆಯೂ ಒಂದೇ. ಅಪರಾಧ, ವಂಚನೆ. ಬದುಕಿರುವವರೆಲ್ಲ ಪರಿಶುದ್ಧರೂ ಅಲ್ಲ, ಸಜ್ಜನರೂ ಅಲ್ಲ. ಪರಿಶುದ್ಧರೂ ಸಜ್ಜನರೂ ಆಗಿರುವವರು ಯಾರೂ ಬದುಕಿಲ್ಲ. ಈ ಮಧ್ಯೆ ಒಂದು ಹತಾಶ ಗುಂಪಿದೆ. ಅವರು ಸಜ್ಜನರೂ ಅಲ್ಲ, ಬದುಕಿಯೂ ಇಲ್ಲ; ಕೇವಲ ಪರಿಶುದ್ದರು. ಯಾಕೆಂದರೆ ಅವರು ಉದ್ದೇಶಪೂರ್ವಕವಾಗಿಯೋ ಪ್ರತ್ಯಕ್ಪವಾಗಿಯೋ ಪಾಪ ಮಾಡುವುದಿಲ್ಲ. ಚಾಲ್ತಿಯಲ್ಲಿರುವ ಅನೈತಿಕತೆಯ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಗುಪ್ತವಾಗಿ ಪಾಪಗಳನ್ನು ಸಂಚಯಿಸಿಕೊಳ್ಳುತ್ತಿದ್ದಾರೆ. ಅವರು ನಿಜಕ್ಕೂ ಘನತೆಯುಳ್ಳವರೇ ಆಗಿದ್ದರೆ ಬದುಕಿರುತ್ತಿದ್ದರು. ವಂಚನೆಯ ಲಾಭದಲ್ಲಿ ತಮಗೂ ಒಂದು ಪಾಲು ಸಿಗಲಿ ಎನ್ನುತ್ತಿರಲಿಲ್ಲ.
ಬೌದಿ್ಧಕವಾಗಿ ನನಗೆ ಬೋರು ಹೊಡೆಯುವುದಕ್ಕೆ ಶುರುವಾಗಿದೆ. ನೈತಿಕವಾಗಿ, ಆಧ್ಯಾತ್ಮಿಕವಾಗಿ ನಾನು ಘಾಸಿಗೊಂಡಿದ್ದೇನೆ. ನನ್ನ ಬೌದಿ್ಧಕತೆ, ಆದರ್ಶ, ನಿರಿಗೆಗಟ್ಟದ ಉಪದೇಶಕರು, ಒಡೆದು ಹೋದ ಉಪನ್ಯಾಸಕರು,ಶುದ್ಧಮನಸ್ಸಿನ, ತಾನೆಲ್ಲಿದ್ದೇನೆ ಅನ್ನುವುದು ಸ್ಪಷ್ಟವಾಗಿ ಗೊತ್ತಿರುವ ಶ್ರಮಿಕರು ನೆನಪಾಗುತ್ತಿದ್ದಾರೆ. ಸೂರ್ಯತಾರೆಯರ ಬೆಳಕಲ್ಲಿ ಮಿಂದ ಸೋಜಿಗದ ಜಗ ಕಣ್ಮುಂದೆ ತೆರೆದುಕೊಳ್ಳುತ್ತಿದೆ.
ನಾನು ಮತ್ತೆ ನನ್ನ ಶ್ರಮಿಕ ವರ್ಗದತ್ತ ಮರಳುತ್ತಿದ್ದೇನೆ. ಮೇಲೇರುವ ಆಸೆ ನನಗಿಲ್ಲ. ಏರುವ ಉದ್ದೇಶವೂ ನನಗಿಲ್ಲ. ಉಪ್ಪರಿಗೆಯಲ್ಲಿರುವ ಮಂದಿ ನನಗೆ ಯಾವ ಆಶ್ಚರ್ಯವನ್ನೂ ಸಂತೋಷವನ್ನೂ ಕೊಡುತ್ತಿಲ್ಲ. ನಾನು ಇಲ್ಲಿಯೇ ಸುಖಿ. ಈ ಶ್ರಮವೇ ನನಗೆ ಸಾಕು.
ಇಂದಲ್ಲ ನಾಳೆ ಮತ್ತೊಂದಷ್ಟು ಮಂದಿ ನಮ್ಮೊಟ್ಟಿಗೆ ಬರುತ್ತಾರೆ. ನಾವು ಆಗ ಈ ಉಪ್ಪರಿಗೆಯನ್ನು ಅದರ ಕೊಳೆತ ಬದುಕಿನ ಜೊತೆ ಪೊಳ್ಳು ಆದರ್ಶದ ಜೊತೆ ಬುಡಮೇಲೆ ಮಾಡುತ್ತೇವೆ. ಅವರ ಸ್ವಾರ್ಥ ಮತ್ತು ಮೆಟೀರಿಯಲಿಸಮ್ಮು ಜೊತೆಗೇ ಮಣ್ಣಾಗುತ್ತದೆ. ನಾವು ಈ ಮಂದಿರವನ್ನು ಶುದ್ಧಗೊಳಿಸುತ್ತೇವೆ. ಆಗ ಅಲ್ಲಿಯ ಪ್ರತಿಯೊಂದು ಕೋಣೆಯಲ್ಲೂ ಹೊಸ ಬೆಳಕು, ಜೀವಂತಿಕೆ, ಘನತೆ ಮತ್ತು ಹೊಸ ಉಸಿರು.
ಇದು ನನ್ನ ಕನಸು. ಹೊಟ್ಟೆಪಾಡನ್ನು ಮೀರಿದ ಕನಸುಗಳು ಮನುಷ್ಯನ ಕಣ್ಣುತುಂಬಲಿ ಎನ್ನುವುದು ನನ್ನಾಸೆ. ಆದರೆ ಮೊದಲು ಹೊಟ್ಟೆ ತುಂಬಬೇಕು.
ಯಾರೋ ಹೇಳಿದ್ದು ನೆನಪಾಗುತ್ತಿದೆ; ಕಾಲದ ಪಾವಟಿಗೆಯಿಂದ ಬರಿಗಾಲ ಶ್ರಮಿಕರು ಮೇಲೇರುವ, ಪಾಲಿಷ್ ಹಾಕಿದ ಬೂಟುಗಳು ಕೆಳಗಿಳಿಯುವ ಸದ್ದು ಅನುರಣಿಸುತ್ತಲೇ ಇರುತ್ತದೆ, ಸದಾ.

Thursday, January 17, 2008

ದಂಗೆಯ ಮುಂಚಿನ ದಿನಗಳು

ಕ್ರಾಂತಿಯೆಂಬುದು ಸಹಜ.
ಪ್ರತಿಯೊಬ್ಬನೊಳಗೂ ದಿನದಿನ ಕ್ಪಣಕ್ಪಣ ಕ್ರಾಂತಿಯಾಗುತ್ತಲೇ ಇರುತ್ತದೆ. ಕ್ರಾಂತಿ ಎಂದರೆ ಸಾಮಾನ್ಯ ಅರ್ಥದಲ್ಲಿ ಕ್ರಮಿಸುವುದು ಅಂದರೆ ನಡೆಯುವುದು. ವಿಶೇಷಾರ್ಥದಲ್ಲಿ ದಾಟುವುದು, ಮೀರುವುದು, ಅತಿಕ್ರಮಿಸುವುದು. ಕ್ರಾಂತಿಯ ಮೂಲಗುಣ ಉಲ್ಲಂಘನೆ.
ಇಂಥ ಉಲ್ಲಂಘನೆ ನಮ್ಮೊಳಗೂ ಆಗಾಗ ಆಗುತ್ತಲೇ ಇರುತ್ತದೆ. ಎಲ್ಲ ಬದಲಾವಣೆಗೂ ಈ ಉಲ್ಲಂಘನೆಯೇ ಕಾರಣ. ಅದಕ್ಕೊಂದು ಕತೆಯೂ ಮಹಾಭಾರತದಲ್ಲಿದೆ. ಒಮ್ಮೆ ವೃತ್ರ ಎಂಬಾತನನ್ನು ನಿಷ್ಕಾರಣವಾಗಿ ಕೊಂದನೆಂಬ ಕಾರಣಕ್ಕೆ ಇಂದ್ರ ತನ್ನ ಪದವಿ ಕಳೆದುಕೊಳ್ಳುತ್ತಾನೆ. ದೇವತೆಗಳಿಗೂ ಇಂದ್ರನನ್ನು ನೋಡಿ ನೋಡಿ ಬೇಜಾರಾಗಿತ್ತೆಂದು ಕಾಣುತ್ತದೆ. ಆಗಾಗ ಇಂಥ ಅಪದ್ಧಗಳನ್ನು ಮಾಡುತ್ತಲೇ ಇರುವ, ರಾಕ್ಷಸರಿಂದ ಹೊಡೆತ ತಿಂದು ಓಡಿಹೋಗುವ ದೇವೇಂದ್ರನ ಸಹವಾಸವೇ ಬೇಡ ಅಂದುಕೊಂಡು ಅವರೆಲ್ಲರೂ ಭೂಲೋಕದಲ್ಲಿರುವ ನಹುಷನನ್ನು ರಾಜನನ್ನಾಗಿ ಮಾಡಲು ನಿರ್ಧರಿಸುತ್ತಾರೆ. ಅವನ ಹತ್ತಿರ ಹೋಗಿ ತಮ್ಮ ಬೇಡಿಕೆಯನ್ನೂ ಮುಂದಿಡುತ್ತಾರೆ.
ಮೊದಲು ನಹುಷ ಅದಕ್ಕೆ ಒಪ್ಪುವುದಿಲ್ಲ. ನಾನು ಆ ಸ್ಥಾನಕ್ಕೆ ಅನರ್ಹ ಅನ್ನುತ್ತಾನೆ. ಆದರೆ ದೇವತೆಗಳು ಆತನ ಮನವೊಲಿಸಿ ದೇವಲೋಕದ ಪಟ್ಟಕ್ಕೇರಿಸುತ್ತಾರೆ. ಅಲ್ಲಿಂದ ಅವನು ತನ್ನೊಳಗಿನ ಮಾತುಗಳನ್ನೇ ಉಲ್ಲಂಘಿಸುತ್ತಾ ಹೋಗುತ್ತಾನೆ.
ತಾನು ದೇವಲೋಕದ ಅಪತಿ ಅನ್ನುವ ಅಹಂಕಾರ ಮತ್ತು ಉಡಾಫೆ ನಿಧಾನವಾಗಿ ವಿನಯ ಮತ್ತು ವಿಧೇಯತೆಯನ್ನು ಉಲ್ಲಂಘಿಸುತ್ತದೆ. ನಹುಷನ ಒಳಗೊಂದು ಕ್ರಾಂತಿಯಾಗುತ್ತದೆ. ನಾನು ದೇವೇಂದ್ರನಾದರೆ ದೇವೇಂದ್ರನ ಹೆಂಡತಿ ನನಗೂ ಹೆಂಡತಿಯಾಗಬೇಕಲ್ಲ ಎಂಬ ವಿಚಿತ್ರ ತರ್ಕ ಅವನನ್ನು ಒಮ್ಮೆ ಬೆಚ್ಚಿಬೀಳಿಸುತ್ತದೆ. ಇಂದ್ರನ ಹೆಂಡತಿ ಶಚೀದೇವಿಯನ್ನು ನನ್ನ ಅಂತಃಪುರಕ್ಕೆ ಕಳುಹಿಸಿ ಅನ್ನುತ್ತಾನೆ ನಹುಷ.
ನಹುಷ ಶಾಶ್ವತವಾಗಿ ಇಂದ್ರನಾಗಿರಲು ಸಾಧ್ಯವಿಲ್ಲ ಅನ್ನುವ ಸತ್ಯ ಶಚೀದೇವಿಗೆ ಗೊತ್ತಿತ್ತು ಅಂತ ಕಾಣುತ್ತದೆ. ಆಕೆ ನಹುಷನ ಆಹ್ವಾನವನ್ನು ನಿರಾಕರಿಸುತ್ತಾಳೆ. ಗುರು ಬ್ರಹಸ್ಪತಿಯಲ್ಲಿಗೆ ಓಡಿ ಹೋಗಿ ರಕ್ಪಣೆ ಕೋರುತ್ತಾಳೆ. ಬ್ರಹಸ್ಪತಿ ಆಕೆಗೆ ಅಭಯ ನೀಡಿ ಇಲ್ಲೇ ಇರು, ನಿನ್ನ ಗಂಡ ವಾಪಸ್ಸು ಬರುತ್ತಾನೆ ಅಂತ ಭರವಸೆ ಕೊಡುತ್ತಾನೆ.
ಶಚೀದೇವಿ ಒಪ್ಪದೇ ಇದ್ದದ್ದು ಕೇಳಿ ನಹುಷ ಸಿಟ್ಟಲ್ಲಿ ಧಗಧಗಿಸುತ್ತಾನೆ. ಎಲ್ಲರನ್ನೂ ನಾಶ ಮಾಡುವುದಾಗಿ ಕೂಗಾಡುತ್ತಾನೆ. ಶಚೀ ಬೇರೊಬ್ಬನ ಹೆಂಡತಿ. ನೀನು ಬಯಸೋದು ತಪ್ಪು ಅನ್ನುವ ಮಾತು ಅವನಿಗೆ ಪಥ್ಯವಾಗುವುದಿಲ್ಲ. ಇಂದ್ರನ ಸ್ವಭಾವ ಮತ್ತು ಕಾರ್ಯಾಚರಣೆಗಳನ್ನು ಬಲ್ಲ ನಹುಷನ ಪ್ರಕಾರ ದೇವೇಂದ್ರ ಕೂಡ ಯಾರನ್ನೂ ಪರಸತಿ ಎಂದು ಕಂಡವನಲ್ಲ. ಒಂದು ಉದಾಹರಣೆ; ಅಹಲ್ಯಾ.
`ನಿಮ್ಮ ಇಂದ್ರ ಪರಸ್ತ್ರೀ ಹಿಂದೆ ಬಿದ್ದಾಗ ನೀವು ಎಂದಾದರೂ ಅದು ತಪ್ಪು ಅಂತ ಹೇಳಿದ್ದಿರಾ? ನನಗೇಕೆ ಉಪದೇಶ ಮಾಡುತ್ತೀರಿ. ಪರಸ್ತ್ರೀ ಅಂದ ಮೇಲೆ ಯಾರ ಹೆಂಡತಿಯಾದರೇನಂತೆ. ಶಚೀದೇವಿ ಬಂದು ಅವಳನ್ನು ಒಪ್ಪಿಸಿಕೊಳ್ಳಲಿ. ಅಥವಾ..'
ಆಗ ಬ್ರಹಸ್ಪತಿ ಆಕೆಗೊಂದು ಉಪಾಯ ಹೇಳಿಕೊಡುತ್ತಾನೆ; ನಹುಷನ ಹತ್ತಿರ ಕಾಲಾವಕಾಶ ಕೇಳು' ಅನ್ನುತ್ತಾನೆ. ಅಂತೆಯೇ ಶಚೀದೇವಿ ನಹುಷನ ಮುಂದೆ ನಿಂತು `ನನ್ನ ಗಂಡ ಎಲ್ಲಿದ್ದಾನೆ? ಬದುಕಿದ್ದಾನೋ ಸತ್ತಿದ್ದಾನೋ ತಿಳಕೊಳ್ಳಬೇಕು. ಅವನು ಸತ್ತಿದ್ದಾನೆ ಅಂತ ಗೊತ್ತಾದರೆ ಯಾವ ಪಾಪಪ್ರಜ್ಞೆಯೂ ಇಲ್ಲದೆ ನಿನ್ನನ್ನು ಸೇರುತ್ತೇನೆ. ಅವನಿಗಾಗಿ ಹುಡುಕಾಟ ನಡೆಸುವುದಕ್ಕೆ ಅವಕಾಶ ಕೊಡು' ಅನ್ನುತ್ತಾಳೆ. ಅವನು ಅನುಮತಿ ಕೊಟ್ಟು ಕಳುಹಿಸುತ್ತಾನೆ.
ಇದೇ ಹೊತ್ತಿಗೆ ದೇವೇಂದ್ರ ಒಂದು ತಾವರೆಯ ದಂಟಿನೊಳಗೆ ಸೂಕ್ಪ್ಮರೂಪದಲ್ಲಿ ಅಡಗಿಕೊಂಡಿರುತ್ತಾನೆ. ಅವನನ್ನು ಶಚೀದೇವಿ ಕಂಡಾಗ ಆತ ಹೇಳುತ್ತಾನೆ; `ಅವನ ಆಹ್ವಾನವನ್ನು ಒಪ್ಪಿಕೋ. ಆದರೆ ನಿನ್ನ ಮನೆಗೆ ಬರುವಾಗ ಸಪ್ತರ್ಷಿಗಳು ಹೊತ್ತ ಪಲ್ಲಕಿಯ ಮೇಲೆ ಬರಬೇಕೆಂದು ಆಜ್ಞಾಪಿಸು. ನಹುಷ ನಾಶವಾಗುತ್ತಾನೆ.'
ಒಂದು ಅಪವಿತ್ರ ಸಂಗಮಕ್ಕೆ ಋಷಿಗಳೇ ಸಾರಥಿಯಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಶಚೀದೇವಿ ಹೇಳುತ್ತಾಳೆ; ನೀನು ನನ್ನ ಪಾಲಿಗೆ ತ್ರಿಮೂರ್ತಿಗಳಿಗಿಂತ ದೊಡ್ಡವನು. ಸಪ್ತರ್ಷಿಗಳು ಹೊರುವ ಪಲ್ಲಕಿಯಲ್ಲಿ ಆಗಮಿಸಿದರೆ ಅದರ ಸಂಭ್ರಮವೇ ಬೇರೆ. ಹಾಗೇ ಬಾ'.
ನಹುಷ ಸಪ್ತರ್ಷಿಗಳನ್ನು ಕರೆಸುತ್ತಾನೆ. ಋಷಿಗಳು ಅವನನ್ನು ಹೊತ್ತುಕೊಂಡು ಹೊರಡುತ್ತಾರೆ. ಈ ಅನಾಹುತವನ್ನು ಜಗತ್ತು ನಿಬ್ಬೆರಗಾಗಿ ನೋಡುತ್ತದೆ. ಆದರೆ ಇದಕ್ಕಿಂತಲೂ ಭೀಕರವಾದದ್ದೊಂದು ಘಟನೆ ನಡೆಯುತ್ತದೆ.
ಅದೇ ನಿಜವಾದ ಉಲ್ಲಂಘನೆ!
ಶಚೀದೇವಿಯನ್ನು ಆದಷ್ಟೂ ಬೇಗ ಸೇರುವ ಆತುರದಲ್ಲಿರುವ ನಹುಷ ಎಲ್ಲರಿಗಿಂತ ಮುಂದೆ ನಿಧಾನವಾಗಿ ನಡೆಯುತ್ತಿದ್ದ ಅಗಸ್ತ್ಯಮುನಿಯನ್ನು ಪಾದದಿಂದ ತಿವಿದು `ಸರ್ಪ... ಸರ್ಪ' ಎನ್ನುತ್ತಾನೆ. ಸರ್ಪ ಅಂದರೆ ಬೇಗ ಸರಿ ಅನ್ನುವ ಅರ್ಥವೂ ಇದೆ. ಸಿಟ್ಟಿಗೆದ್ದ ಅಗಸ್ತ್ಯ `ನೀನು ಸರ್ಪವಾಗು' ಎಂದು ಶಪಿಸುತ್ತಾನೆ.
ಅಲ್ಲಿಗೆ ನಹುಷನ ಪತನವಾಗುತ್ತದೆ. ಆತ ಬೃಹದಾಕಾರದ ಹೆಬ್ಬಾವಾಗಿ ಕಾಡಿನತ್ತ ಹರಿದುಹೋಗುತ್ತಾನೆ.
ಈ ಕತೆಯನ್ನು ಉಪಲವ್ಯನಗರದಲ್ಲಿ ಶಲ್ಯ ಧರ್ಮರಾಯನಿಗೆ ಹೇಳುತ್ತಾನೆ. ಧರ್ಮರಾಯನೂ ದ್ರೌಪದಿಯೂ ರಾಜ್ಯ ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಇಂದ್ರನಂಥವರಿಗೇ ಹೀಗಾಗಿತ್ತು. ಆದರೆ ಎಲ್ಲವೂ ಸುಖಾಂತವಾಯಿತು. ನಿಮ್ಮ ವಿಚಾರದಲ್ಲೂ ಹಾಗೇ ಆಗುತ್ತದೆ ಅನ್ನುತ್ತಾನೆ ಶಲ್ಯ. ನಹುಷನ ಹಾಗೆ ಧುರ್ಯೋಧನ ಕೂಡ ನಾಶವಾಗಿ ಹೋಗುತ್ತಾನೆ ಅಂತ ಶಾಪ ಹಾಕಿ ಹೊರಡುತ್ತಾನೆ ಶಲ್ಯ.
ಅಷ್ಟು ಹೇಳಿದ ನಂತರ ಆತ ಧುರ್ಯೋಧನನ ಪರವಾಗಿ ಯುದ್ಧ ಮಾಡುತ್ತಾನೆ!
ಈ ಕತೆಗೂ ಮಹಾಭಾರತಕ್ಕೂ ಇನ್ನೊಂದು ಸಂಬಂಧವೂ ಇದೆ. ವನವಾಸದಲ್ಲಿದ್ದ ಭೀಮನನ್ನು ಇದೇ ಹೆಬ್ಬಾವಾಗಿ ಬಿದ್ದಿದ್ದ ನಹುಷ ಸುತ್ತುಹಾಕಿ ಕೊನೆಗೆ ಧರ್ಮರಾಯ ಅದರ ಪ್ರಶ್ನೆಗಳಿಗೆ ಉತ್ತರಿಸಿ ಭೀಮನನ್ನು ಬಿಡಿಸುತ್ತಾನೆ. ಅದು ಯಕ್ಪಪ್ರಶ್ನೆಯಂಥ ಮತ್ತೊಂದು ಕತೆ.

Tuesday, January 15, 2008

ನದಿ ಹರಿಯಿತು

ಕಾದಂಬರಿಯ ಬಿಡುಗಡೆ ಸಮಾರಂಭದಲ್ಲಿ
ಹಿರಿಯ ವಿಮರ್ಶಕ ಎಚ್ ಎಸ್ ರಾಘವೇಂದ್ರರಾವ್, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹಾಗೂ ಬಿ ಸುರೇಶ್

Monday, January 14, 2008

ಕೊನೆಯ ಮಾತುಗಳು ಅವನಿಗೆ ಕೇಳಿಸಲಿಲ್ಲ!

ನನಗೊಂದು ಮನೆ ಬೇಕು. ಊರಿಂದ ಹೊರಗಿದ್ದಷ್ಟೂ ವಾಸಿ, ಆದರೆ ತೀರ ದೂರ ಬೇಡ. ಫೋನ್ ಮಾಡಿದರೆ ಡಾಕ್ಟರ್ ಅರ್ಧಗಂಟೆಯಲ್ಲಿ ಬರುವಂತಿರಬೇಕು. ನಾನೊಬ್ಬನೇ ವಾಸ ಮಾಡುತ್ತೇನಾದ್ದರಿಂದ ತುಂಬ ಹೊರಗಿದ್ದರೆ ಕಳ್ಳರ ಕಾಟ. ಊರೊಳಗಿನ ಗದ್ದಲವೂ ನನಗೆ ಹಿಡಿಸುವುದಿಲ್ಲ. ಅಂಥ ಮನೆಯಿದ್ದರೆ ನೋಡಿ’
ಇಲ್ಲಿ ಮನೆ ಬಾಡಿಗೆಗೆ, ಕ್ರಯಕ್ಕೆ, ಭೋಗ್ಯಕ್ಕೆ ದೊರೆಯುತ್ತದೆ ಅನುಭವ ಬೋರ್ಡು ತಗಲಿಸಿಕೊಂಡ ಆಫೀಸಿನ ಒಳಗೆ ಕುಳಿತಿದ್ದ ಕೃಷ್ಣಮೂರ್ತಿಯ ಹತ್ತಿರ ನಲುವತ್ತು ದಾಟಿದ ಚಕ್ರಪಾಣಿ ಹೀಗೆ ವಿವರಿಸುತ್ತಿರುವ ಹೊತ್ತಿಗೆ ಕೃಷ್ಣಮೂರ್ತಿಯ ಮನಸ್ಸು ತನ್ನ ಪಟ್ಟಿಯಲ್ಲಿರುವ ಮನೆಗಳಿಗೆಲ್ಲ ಮರುಭೇಟಿ ನೀಡುತ್ತಿತ್ತು. ಎದುರಿಗೆ ಕುಳಿತ ಅಪರಿಚಿತ ಚಕ್ರಪಾಣಿಯನ್ನು ಕೃಷ್ಣಮೂರ್ತಿ ಮತ್ತೊಮ್ಮೆ ನೋಡಿದ. ತೆಳ್ಳಗೆ, ಎತ್ತರಕ್ಕಿದ್ದ ಆತ ಅರ್ಧಕ್ಕೇ ಕೆಲಸ ಬಿಟ್ಟು ಬಂದ ಸೈನಿಕನ ಥರ ಕಾಣಿಸುತ್ತಿದ್ದ. ಕಣ್ಣುಗಳಲ್ಲಿ ನಿಶ್ಚಲತೆಯಿತ್ತು. ಮಾತು ಸ್ಪಷ್ಟವಾಗಿತ್ತು. ಯಾವುದನ್ನೂ ಎರಡನೆಯ ಸಾರಿ ಹೇಳಲಾರೆ ಎನ್ನುವ ಸ್ಪಷ್ಟತೆಯೂ ಇತ್ತು.
ಭದ್ರಾವತಿಯಂಥ ಊರಲ್ಲಿ ಅವನು ಯಾಕೆ ಮನೆ ಹುಡುಕುತ್ತಿದ್ದಾನೆ ಅನ್ನುವ ಪ್ರಶ್ನೆಗೆ ಮಾತ್ರ ಕೃಷ್ಣಮೂರ್ತಿಗೆ ಉತ್ತರ ಸಿಕ್ಕಿರಲಿಲ್ಲ. ಅದಕ್ಕೂ ತನಗೂ ಸಂಬಂಧವಿಲ್ಲ ಅಂದುಕೊಂಡು ಆತ ತನ್ನ ಕರಾರುಗಳನ್ನೂ ಸ್ಪಷ್ಟವಾಗಿ ಹೇಳಿದ.
ಮನೆ ತೋರಿಸುತ್ತೇನೆ. ಮೂರು ಮನೆಗಳನ್ನು ತೋರಿಸುವುದಕ್ಕೆ ನೀವು ಹಣ ಕೊಡ?ಕಾಗಿಲ್ಲ. ಆದರೆ ನನ್ನ ಸ್ಕೂಟರಿಗೆ ಪೆಟ್ರೋಲು ಹಾಕಬೇಕು. ಮೂರು ಮನೆಗಳೂ ಇಷ್ಟವಾಗದೇ ಹೋದರೆ ಮತ್ತೊಂದಷ್ಟು ಮನೆ ತೋರಿಸುತ್ತೇನೆ. ಪ್ರತಿಮನೆಗೆ ನೂರು ರುಪಾಯಿ ಕೊಡಬೇಕಾಗುತ್ತದೆ. ನನ್ನ ಕಮಿಷನ್ ಎರಡು ಪರ್ಸೆಂಟ್’.
ಒಪ್ಪಿದೆ. ಪೆಟ್ರೋಲು ಚಾರ್ಜು ಕೊಡುವ ಪ್ರಶ್ನೆಯಿಲ್ಲ. ನನ್ನ ಕಾರಿನಲ್ಲೇ ಹೋಗೋಣ’ ಅಂದ ಚಕ್ರಪಾಣಿ. ಅಲ್ಲಿಗೆ ಮಾತು ಮುಗಿಯಿತು.
ಆವತ್ತು ಸಂಜೆಯಿಂದಲೇ ಮನೆಗಳ ಬೇಟೆ ಶುರುವಾಯಿತು. ಚಕ್ರಪಾಣಿಯ ಕಾರಿನ ಮುಂದಿನ ಸೀಟಲ್ಲಿ ಕುಳಿತುಕೊಂಡು, ಆತ ಒಂದರ ಮೇಲೊಂದರಂತೆ ಸೇದುತ್ತಿದ್ದ ಸಿಗರೇಟಿನ ಹೊಗೆಗೆ ಮುಖ ಕಿವುಚಿಕೊಳ್ಳುತ್ತಾ ಕೃಷ್ಣಮೂರ್ತಿ ಆತನಿಗೆ ಆವತ್ತು ಎರಡು ಮನೆಗಳನ್ನು ತೋರಿಸಿದ. ಚಕ್ರಪಾಣಿಯ ಮುಖದಲ್ಲಿ ತೃಪ್ತಿಯ ಕುರುಹು ಕಾಣಿಸಲಿಲ್ಲ. ಹೀಗೆ ಒಂದು ವಾರದಲ್ಲಿ ಕೃಷ್ಣಮೂರ್ತಿ ತನಗೆ ಗೊತ್ತಿರುವ ಹದಿನೇಳು ಮನೆಗಳನ್ನು ತೋರಿಸಿದಾಗಲೂ ಚಕ್ರಪಾಣಿ ಯಾವುದನ್ನೂ ಇಷ್ಟಪಡಲಿಲ್ಲ. ಇಷ್ಟಪಡದೇ ಇರುವುದಕ್ಕೆ ಕಾರಣಗಳನ್ನೂ ಕೊಡಲಿಲ್ಲ ಆತ.
ಆತ ಮನೆ ಕೊಳ್ಳಲಿಕ್ಕೇ ಬಂದಿದ್ದಾನಾ? ಅವನಿಗೆಂಥ ಮನೆ ಬೇಕು ಅನುಭವ ಅನುಮಾನ ಮತ್ತು ಪ್ರಶ್ನೆ ಕೃಷ್ಣಮೂರ್ತಿಯ ಮನಸ್ಸಿನಲ್ಲಿ ಏಳನೆಯ ಸಂಜೆ ಉದ್ಭವವಾಯಿತು. ಅದನಿ?ಗ ಕೇಳಿಯೇ ಬಿಡ?ಕು ಅನು?ವ ನಿರ್ಧಾರ ಕೃಷ್ಣಮೂರ್ತಿಯ ಮನಸ್ಸಿನಲ್ಲಿ ಹರಳುಗಟ್ಟುವ ಹೊತ್ತಿಗೆ ಅವರು ಕಡೂರು-ಭದ್ರಾವತಿ ರಸ್ತೆಯಲ್ಲಿ ವಾಪಸ್ಸು ಬರುತ್ತಿದ್ದರು. ಕೃಷ್ಣಮೂರ್ತಿ ಬಾಯಿತೆರೆಯಬೇಕು ಅನುವವಷ್ಟರಲ್ಲಿ ಚಕ್ರಪಾಣಿ ಕಾರು ನಿಲ್ಲಿಸಿದ. ಕೃಷ್ಣಮೂರ್ತಿಯ ಕಣ್ಣಲ್ಲಿ ಮೂಡಿದ ಪ್ರಶ್ನಾರ್ಥಕ ಚಿನ್ಹೆ ಮಾತಾಗುವ ಮುಂಚೆಯೇ ಎಡಕ್ಕೆ ಕೈ ತೋರಿಸಿ ಕೇಳಿದ: ಇಂಥ ಮನೆ ಬೇಕು ನನಗೆ’.
ಅವನು ಕೈ ತೋರಿಸಿದ ಮನೆಯತ್ತ ನೋಡಿದ ಕೃಷ್ಣಮೂರ್ತಿ. ಅದೊಂದು ಹಳೆಯ ಕಾಲದ ಮನೆ. ಕೃಷ್ಣಮೂರ್ತಿಗೆ ಗೊತ್ತಿದ್ದದ್ದೇ. ಅರ್ಧ ಎಕರೆ ಜಾಗದಲ್ಲಿ ಕಟ್ಟಿದ್ದ ದೊಡ್ಡ ಮನೆ ಅದು. ಮನೆಗೆ ಸುತ್ತಲೂ ಮರದ ಬೇಲಿಯಿತ್ತು. ಅದು ಗೆದ್ದಲು ಹಿಡಿದು ಕುಂಬಾಗಿತ್ತು. ಮನೆ ಕೂಡ ಸುಸ್ಥಿತಿಯಲ್ಲಿರಲಿಲ್ಲ. ಆ ಮನೆಯೂ ಕೃಷ್ಣಮೂರ್ತಿಯ ಪಟ್ಟಿಯಲ್ಲಿತ್ತು. ಕೃಷ್ಣಮೂರ್ತಿ ಒಬ್ಬನೇ ಅಲ್ಲ, ಭದ್ರಾವತಿಯ ಎಲ್ಲಾ ರಿಯಲ್ ಎಸ್ಟೇಟ್ ಏಜಂಟರ ಪಟ್ಟಿಯಲ್ಲೂ ಆ ಮನೆಯಿತ್ತು. ಆದರೆ ಅವನು ಅದನು? ಇದುವರೆಗೂ ಯಾರಿಗೂ ತೋರಿಸಿರಲಿಲ್ಲ.
ಆ ಮನೆ ನಿಮಗೆ ಆಗೋದಿಲ್ಲ ಬಿಡಿ’ ಅಂದ ಕೃಷ್ಣಮೂರ್ತಿ. ಯಾಕೆ ಅನ್ನುವ ಪ್ರಶ್ನೆ ಚಕ್ರಪಾಣಿಯ ಹುಬ್ಬಿನಲ್ಲಿ ಪ್ರತ್ಯಕ್ಷವಾಯಿತು.
ಅಯ್ಯೋ ಬಿಡಿ ಸಾರ್. ಅದು ಸುಭದ್ರಮ್ಮ ಎಂಬ ಮುದುಕಿಯ ಮನೆ. ಅದನ್ನವಳು ಮಾರಬೇಕು ಅಂತಿದ್ದಾಳೆ. ಭದ್ರಾವತಿಯ ಎಲ್ಲಾ ಎಸ್ಟೇಟ್ ಏಜಂಟರಿಗೂ ಹೇಳಿದ್ದಾಳೆ. ತಲೆ ಕೆಟ್ಟ ಘಾಟಿ ಮುದುಕಿ ಅದು. ಮೂವತ್ತು ಲಕ್ಷ ಹೇಳ್ತಿದ್ದಾಳೆ. ಆ ಮನೆಯನ್ನು ನೀವು ಹತ್ತು ಲಕ್ಷಕ್ಕೂ ತೆಗೆದುಕೊಳ್ಳೋದಿಲ್ಲ’ ಅಂದ ಕೃಷ್ಣಮೂರ್ತಿ.
ಆಕೆ ಎಷ್ಟಾದರೂ ಹೇಳಲಿ. ಮಾರಬೇಕು ಅಂದುಕೊಂಡಿದ್ದರೆ ಮಾತುಕತೆಗೆ ಕೂತು ರೇಟು ನಿಗದಿ ಮಾಡೋಣಂತೆ’ ಅಂದ ಚಕ್ರಪಾಣಿ. ಚೌಕಾಸಿ ಇಲ್ಲ ಅಂದುಬಿಟ್ಟಿದ್ದಾಳೆ ಅವಳು. ಹೇಳಿದ್ನಲ್ಲ. ಒಂಥರ ತಿಕ್ಕಲು ಅವಳು. ಮೂವತ್ತು ಲಕ್ಷಕ್ಕಿಂತ ನೂರು ರುಪಾಯಿ ಕಡಿಮೆಗೂ ಒಪ್ಪೋಲ್ಲ ಆಕೆ’ ಅಂದ ಕೃಷ್ಣಮೂರ್ತಿ. ಅದನ್ನು ತೋರಿಸುವ ಆಸಕ್ತಿಯೇ ಅವನಿಗೆ ಇರಲಿಲ್ಲ.
ಬನ್ನಿ, ಮಾತಾಡೋಣ. ಮನೆ ಚೆನ್ನಾಗಿದೆ. ನನಗಿಂತ ಹಳೆಯ ಮನೆಯೇ ಇಷ್ಟ’ ಎಂದು ಚಕ್ರಪಾಣಿ ಮನೆಯನ್ನೊಮ್ಮೆ ನೋಡಿದ. ಹಳೇ ಕಾಲದ, ಬಂಗಲೆಯಂಥ ಮನೆ. ಮಹಡಿ, ಬಿಸಿಲುಮಚ್ಚು ಎಲ್ಲವೂ ಇದ್ದ ಆ ಮನೆ ಒಂದು ಕಾಲದಲ್ಲಿ ಯಾರೋ ಬ್ರಿಟಿಷ್ ಅಧಿಕಾರಿಗೆ ಸೇರಿದ್ದ ಮನೆಯಾಗಿರಬೇಕು ಅಂದುಕೊಂಡ ಚಕ್ರಪಾಣಿ. ರಿಪೇರಿ ಮಾಡಿಸಿದರೆ ಅದೊಂದು ಕಲಾತ್ಮಕವಾದ ಮನೆಯಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಕೃಷ್ಣಮೂರ್ತಿಯ ಮುಖ ನೋಡಿದ. ಬನ್ನಿ, ಮಾತಾಡೋಣ’ ಎಂದು ಕರೆದ.
ಕೃಷ್ಣಮೂರ್ತಿ ಸುತರಾಂ ಒಪ್ಪಲಿಲ್ಲ. ನಾನು ಆ ಮುದುಕಿ ಮುಖ ನೋಡೋದಕ್ಕೂ ಇಷ್ಟಪಡೋಲ್ಲ. ಬೇಕಿದ್ದರೆ ನೀವು ಮಾತಾಡಿಕೊಂಡು ಬನ್ನಿ. ಅದರಿಂದ ಬರುವ ಕಮಿಷನ್ನೂ ನನಗೆ ಬೇಕಾಗಿಲ್ಲ’ ಅಂದ ಕೃಷ್ಣಮೂರ್ತಿ. ಆ ಮುದುಕಿ ಮನೆ ಮಾರುವುದಿಲ್ಲ ಅನ್ನುವುದು ಅವನಿಗೆ ಖಾತ್ರಿಯಾಗಿತ್ತು.
******
ಮಾರನೇ ದಿನ ಹತ್ತು ಗಂಟೆಗೆ ಚಕ್ರಪಾಣಿ, ಸುಭದ್ರಮ್ಮ ಮುಂದೆ ಕೂತಿದ್ದ. ಸುಭದ್ರಮ್ಮ ಘಾಟಿ, ಹಠಮಾರಿ ಅನ್ನುವುದು ಅವಳ ನಿಲುವಿನಿಂದಲೇ ಚಕ್ರಪಾಣಿಗೆ ಅರ್ಥವಾಯಿತು. ಮನೆ ಕೊಳ್ಳಲು ಬಂದಿದ್ದೇನೆ ಅಂತ ಹೇಳಿದ ತಕ್ಷಣ ಆಕೆ ಕೇಳಿದ್ದು ಬೆಲೆ ಎಷ್ಟೆಂದು ಗೊತ್ತಲ್ಲ’ ಎಂದು. ತಲೆಯಾಡಿಸಿ ಒಳಗೆ ಬಂದಿದ್ದ ಚಕ್ರಪಾಣಿ.
ಸುಭದ್ರಮ್ಮ ಮಾತಾಡಿದಳು. ಚೌಕಾಸಿ ಮಾಡುವುದಾದರೆ ಮಾತಾಡುವ ಅಗತ್ಯ ಇಲ್ಲ. ನಾನು ಮನೆಯನ್ನು ತೋರಿಸುವುದೂ ಇಲ್ಲ. ಕಂತಾಗಿ ಹಣ ಕೊಡುತ್ತೇನೆ, ಒಪ್ಪಂದ ಮಾಡಿಕೊಳ್ಳೋಣ ಅಂತಾದರೆ ನನಗೆ ಆಸಕ್ತಿಯಿಲ್ಲ. ಮೂವತ್ತು ಲಕ್ಷ ಕೊಟ್ಟು ಮನೆ ಕೊಂಡುಕೊಳ್ಳ?ಕು ಅಷ್ಟೇ’.
ಚಕ್ರಪಾಣಿ ತನೆ?ಲ್ಲ ಚಾಕಚಕ್ಯತೆಯನ್ನೂ ಬಳಸುತ್ತಾ ಮಾತಿಗಿಳಿದ. ನಾನೊಬ್ಬನೇ ಇರೋದು, ಹೆಂಡತಿ ತೀರಿಕೊಂಡಳು ಮಕ್ಕಳು ವಿದೇಶದಲ್ಲಿದ್ದಾರೆ. ಒಂಟಿತನ ಕಿತ್ತು ತಿನ್ನುತ್ತಿದೆ. ಕೊನೆಯ ವರುಷಗಳನ್ನು ಹೀಗೆ ಪರವೂರಲ್ಲಿ
ಕಳೆಯುವ ಆಶೆ’ ಎಂದು ಕೊಂಚ ಭಾವನಾತ್ಮಕವಾಗಿ ಮಾತಾಡಿದ. ಆದ್ದರಿಂದ ಬೆಲೆ ಕಡಿಮೆ ಮಾಡಿಕೊಳ್ಳಿ ಅಂದ.
ಸುಭದ್ರಪ್ಪ ಅದ್ಯಾವುದಕ್ಕೂ ಜಗ್ಗಲಿಲ್ಲ. ಚೌಕಾಸಿ ಮಾಡುವುದಾದರೆ ನೀವಿನ್ನು ಹೊರಡಬಹುದು’ ಎಂದು ಎದ್ದು ನಿಂತಳು. ಅವಳ ಮೇಲೆ ಕೆಂಡಾಮಂಡಲ ಸಿಟ್ಟು ಬಂತು ಚಕ್ರಪಾಣಿಗೆ. ಆದರೆ ಮನೆ ಅವನಿಗೆ ಇಷ್ಟವಾಗಿತ್ತು. ತನ್ನ ಮೊಂಡು ಹಠ ಅವಳು ಬಿಡುವುದಿಲ್ಲ ಅನ್ನುವುದೂ ಖಾತ್ರಿಯಾಯಿತು. ಸರಿ, ಒಪ್ಪಿಗೆ’ ಅಂದುಬಿಟ್ಟ ಚಕ್ರಪಾಣಿ. ಸುಭದ್ರಮ್ಮನ ಮುಖದಲ್ಲಿ ಮಂದಹಾಸ ಸುಳಿಯಿತು. ಮಾತಿನ ವರಸೆಯೇ ?ದಲಾಯಿತು.
ಕೂತ್ಕೊಳ್ಳಿ. ಮೂವತ್ತು ಲಕ್ಷ. ಒಂದೇ ಸಾರಿ ಕೊಡಬೇಕು, ಒಪ್ಪಿಗೆ ತಾನೇ’ ಅಂತ ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಕೇಳಿದಳು ಸುಭದ್ರಮ್ಮ. ಮಾತು ಕೊಟ್ಟ ಮೇಲೆ ಮುಗೀತು. ಈ ವಾರವೇ ವ್ಯವಹಾರ ಮುಗಿಸೋಣ’ ಎನ್ನುತ್ತಾ ಚಕ್ರಪಾಣಿ ಒಂದು ಲಕ್ಷ ರುಪಾಯಿ ಅವಳ ಮುಂದಿಟ್ಟ.
ದುಡ್ಡು ನೋಡುತ್ತಲೇ ಸುಭದ್ರಮ್ಮನ ಮುಖ ಅರಳಿತು. ತಾನು ನೋಡಿದ ಗಂಟು ಮುಖದ ಮುದುಕಿ ಇವಳೇನಾ ಎಂದು ಚಕ್ರಪಾಣಿ ಅಚ್ಚರಿಪಡುವಷ್ಟು ಆಕೆ ಬದಲಾದಳು. ಇರಿ, ಕಾಫಿ ತರ್ತೀನಿ’ ಅಂದಳು. ಕಾಫಿ ಬೇಡ, ತುಂಬ ಸೆಕೆ. ಲಿಂಬೆ ಪಾನಕ ತರುತ್ತೇನೆ’ ಎಂದು ಎದ್ದು ಹೋದಳು.
ಚಕ್ರಪಾಣಿ ಮನೆಯನ್ನೊಮ್ಮೆ ಗಮನಿಸಿದ. ದೊಡ್ಡ ಮನೆ, ಸಣ್ಣಸಣ್ಣ ರೂಮುಗಳು. ಎಷ್ಟೋ ಕೋಣೆಗಳ ಬಾಗಿಲು ತೆಗೆಯದೇ ಯಾವುದೋ ಕಾಲವಾದಂತಿತ್ತು. ಎದ್ದು ಗೋಡೆಯ ಪಕ್ಕಕ್ಕಿದ್ದ ಮೇಜಿನ ಮೇಲೆ ಕೈಯಿಟ್ಟ. ಮೇಜು ಕಿರುಗುಟ್ಟಿತು. ಚಕ್ರಪಾಣಿ ಕೈಗೆ ಧೂಳು ಮೆತ್ತಿಕೊಂಡಿತ್ತು. ಈ ಮನೆಗೆ ಮೂವತ್ತು ಲಕ್ಷ ಕೊಟ್ಟದ್ದು ಗೊತ್ತಾದರೆ ಎಲ್ಲರೂ ತನ್ನ ಅವಿವೇಕವನ್ನು ಎಷ್ಟು ಆಡಿಕೊಂಡು ನಗಬಹುದು ಎಂದು ಯೋಚಿಸುತ್ತದ್ದಂತೆ ಮುದುಕಿ ಪಾನಕದೊಂದಿಗೆ ಪ್ರತ್ಯಕ್ಷವಾದಳು.
*****
ಸುಡುಬೇಸಗೆಯ ನಡು ಹೊತ್ತಲ್ಲಿ ತಣ್ಣಗಿನ ಪಾನಕ ಹೀರಿ ಸುಖಿಸುತ್ತಾ ಚಕ್ರಪಾಣಿ ಅವಳ ಮುಖ ನೋಡಿದ. ಸುಭದ್ರಮ್ಮ ಮತ್ತೆ ಮುಗುಳ್ನಕ್ಕಳು.
ಈ ಮನೆಗೆ ಮೂವತ್ತು ಲಕ್ಷ ದುಬಾರಿ ಅಂತ ನನಗೆ ಗೊತ್ತಿದೆ. ಇದನ್ನು ಯಾರೂ ಕೊಳ್ಳುವುದಕ್ಕೆ ಬರುವುದಿಲ್ಲ ಅನ್ನುವುದೂ ನನಗೆ ಗೊತ್ತಿತ್ತು. ನನಗೆ ಈ ಮನೆಯನ್ನು ಮಾರುವುದಕ್ಕೆ ಮನಸ್ಸಿರಲಿಲ್ಲ. ಅದಕ್ಕೆ ಅಷ್ಟೊಂದು ಬೆಲೆ ಹೇಳುತ್ತಿದ್ದೆ. ಈ ಮನೆಯ ಜೊತೆ ನನ್ನ ನೆನಪುಗಳಿವೆ’ ಅಂದಳು ಸುಭದ್ರಮ್ಮ. ಚಕ್ರಪಾಣಿ ಕುತೂಹಲದಿಂದ ಕೇಳಿಸಿಕೊಂಡ.
ನಾನೊಬ್ಬಳೇ ಕಳೆದ ಹನ್ನೊಂದು ವರುಷಗಳಿಂದ ಈ ಮನೆಯಲ್ಲಿದ್ದೇನೆ. ನನ್ನ ಮಗ ಒಂಬತ್ತು ವರುಷದ ಹಿಂದೆ ಮನೆಬಿಟ್ಟು ಹೋದ. ಪೋಲಿ ಬಿದ್ದು ಹೋಗಿದ್ದ. ಎಲ್ಲಿಗೆ ಹೋಗಿದ್ದನೋ ಗೊತ್ತಿಲ್ಲ, ಒಂಭತ್ತು ವರುಷದ ಹಿಂದೆ ಮರಳಿ ಬಂದ’ ಮುದುಕಿ ಕಣ್ಣೊರೆಸಿಕೊಂಡಳು. ಚಕ್ರಪಾಣಿ ಸುಮ್ಮನಿದ್ದ. ಮಗ ಎಲ್ಲಿದ್ದಾನೆ ಈಗ ಎಂಬ ಪ್ರಶ್ನೆಯೊಂದಿಗೆ ಅವನ ಕಣ್ಣುಗಳು ಮನೆಯನ್ನೊಮ್ಮೆ ಸ್ಕಾನ್ ಮಾಡಿದವು.
ಅವನಿಲ್ಲ. ಮನೆಗೆ ಬರುವ ಹೊತ್ತಿಗೆ ಅವನೊಂದಿಗೆ ಒಂದು ದೊಡ್ಡ ಚೀಲ ಇತ್ತು. ಅದರಲ್ಲೇನಿದೆ ಅಂತ ನಾನು ಕೇಳುವುದಕ್ಕೆ ಹೋಗಲಿಲ್ಲ. ಅಂತೂ ವಾಪಸ್ಸು ಬಂದನಲ್ಲ ಅನ್ನೋ ಸಂತೋಷದಲ್ಲಿ ನಾನಿದ್ದೆ. ಆದರೆ ಆ ಸಂತೋಷ ತುಂಬ ದಿನ ಉಳಿಯಲಿಲ್ಲ.’ ಮುದುಕಿ ಕಣ್ಣೊರೆಸಿಕೊಂಡಳು.
ಏನಾಯ್ತು’ ಚಕ್ರಪಾಣಿ ಕೇಳಿದ.
ಮಗ ಮನೆಗೆ ಬಂದ ನಾಲ್ಕನೆಯ ರಾತ್ರಿ ಒಬ್ಬ ಅಪರಿಚಿತ ಮನೆಗೆ ಬಂದ. ನನ್ನ ಮಗ ಅವನನ್ನು ಕರೆದುಕೊಂಡು ಕೋಣೆಗೆ ಹೋದ. ಒಳಗೆ ಇಬ್ಬರೂ ಏರುದನಿಯಲ್ಲಿ ಮಾತಾಡುವುದು ಕೇಳಿಸಿತು. ಆ ಮಾತು ಕ್ರಮೇಣ ತಾರಕಸ್ಥಾಯಿಗೆ ಹೋಯಿತು. ಆ ಧ್ವನಿ ನಿಂತದ್ದು ಗುಂಡಿನ ಸದ್ದಿನಿಂದ. ನಾನು ಮಲಗುವ ಕೋಣೆಯಿಂದ ಎದ್ದು ಬಂದು ನೋಡುವ
ಹೊತ್ತಿಗೆ ನನ್ನ ಮಗನ ಕೋಣೆಯ ಬಾಗಿಲು ತೆರೆದಿತ್ತು. ಅಪರಿಚಿತ ಮಾಯವಾಗಿದ್ದ. ನನ್ನ ಮಗ ಸತ್ತು ಬಿದ್ದಿದ್ದ’
ಅಯ್ಯೋ ದೇವರೇ’ ಚಕ್ರಪಾಣಿ ಅಯಾಚಿತವಾಗಿ ಉಸುರಿದ.
ಪೊಲೀಸರು ಬಂದರು. ತನಿಖೆ ನಡೆಸಿದರು. ನನ್ನ ಮಗ ತನ್ನ ಗೆಳೆಯನ ಜೊತೆ ಸೇರಿ ರಾಜಮನೆತನಕ್ಕೆ ಸೇರಿದ ಮುದುಕಿಯೊಬ್ಬಳನ್ನು ಕೊಂದು ಅವಳ ಖಜಾನೆಯಿಂದ ಹತ್ತು ಕೋಟಿ ಬೆಲೆ ಬಾಳುವ ಬಂಗಾರ ದೋಚಿದ್ದರು ಅನ್ನುವುದು ಗೊತ್ತಾಯಿತು. ಆವತ್ತು ಬಂದವನು ಅವರಲ್ಲೊಬ್ಬ. ಇಬ್ಬರಿಗೂ ಹಂಚಿಕೆ ವಿಚಾರದಲ್ಲಿ ಜಗಳ ಆಗಿ ನನ್ನ ಮಗನನ್ನು ಕೊಂದಿದ್ದ ಅವನು. ಅವನಿನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಅವನು ಕದ್ದ ಬಂಗಾರದೊಂದಿಗೆ ಓಡಿ ಹೋಗಿದ್ದಾನೆ ಅಂತ ಪೊಲೀಸರು ಅಂದುಕೊಂಡಿದ್ದಾರೆ. ಆದರೆ ನನ್ನ ಮಗ ಆ ಬಂಗಾರವನ್ನು ಈ ಮನೆಯಲ್ಲೇ ಎಲ್ಲೋ ಅಡಗಿಸಿಟ್ಟಿದ್ದಾನೆ ಅಂತ ನನಗೆ ಗೊತ್ತಿತ್ತು. ಅದೆಲ್ಲಿದೆ ಅಂತ ನನಗೆ ಗೊತ್ತಿಲ್ಲ. ನಾನು ಹುಡುಕುವುದಕ್ಕೂ ಹೋಗಲಿಲ್ಲ. ಆದರೆ ಈ ಮನೆಯೊಳಗೇ ಇದೆ ಅನ್ನುವುದರಲ್ಲಿ ಅನುಮಾನ ಇಲ್ಲ’.
ಚಕ್ರಪಾಣಿ ಕಣ್ಣು ಕುತೂಹಲದಿಂದ ಕಿರಿದಾದವು. ಕತೆ ಕೇಳಿ ಅವನು ಸುಸ್ತಾದಂತೆ ಕಾಣಿಸಿದ. ಏನೋ ಹೇಳಲು ಯತ್ನಿಸಿದ. ಮಾತು ಹೊರಬರಲಿಲ್ಲ.
ಆ ಸತ್ಯ ನನ್ನ ಮಗನನ್ನು ಕೊಂದ ಅಪರಿಚಿತನಿಗೂ ಗೊತ್ತು. ಅವನು ಒಂದಲ್ಲ ಒಂದು ದಿನ ಅದನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಾನೆ ಅನುವುದು ನನಗೆ ಗೊತ್ತಿತ್ತು. ಅದಕ್ಕೆ ಈ ಮನೆಗೆ ಯಾರೂ ಕೊಳ್ಳಲಾಗದಷ್ಟು ಬೆಲೆ ಇಟ್ಟಿದ್ದೆ. ಹತ್ತು ಕೋಟಿ ಬಂಗಾರ ಇರುವ ವಿಚಾರ ಗೊತ್ತಿರುವ ಆ ಕೊಲೆಗಾರ ಇದನ್ನು ಕೊಳ್ಳುತ್ತಾನೆ ಅನ್ನುವುದರಲ್ಲಿ ನನಗೆ ಅನುಮಾನವೇ ಇರಲಿಲ್ಲ’
ಚಕ್ರಪಾಣಿ ಕುರ್ಚಿಯಲ್ಲಿ ಹಿಂದಕ್ಕೆ ಒರಗಿದ. ಯಾಕೋ ತಲೆ ಸುತ್ತಿದಂತಾಯಿತು. ಮುದುಕಿ ಅಸ್ಪಷ್ಟವಾಗಿ ಕಾಣಿಸತೊಡಗಿದಳು. ತುಟಿ ಮರಗಟ್ಟಿದಂತಾಗಿ ನಿಧಾನವಾಗಿ ಕೈಯೆತ್ತಿ ತುಟಿ ಸವರಿಕೊಂಡ. ನೀರು, ದಾಹ’ ಅಂದ.
ಮುದುಕಿ ನಕ್ಕಳು.
ನೀನೀಗ ಬಂದಿದ್ದೀಯಾ. ನನ್ನ ಮಗನನ್ನು ಕೊಂದವನ ಮೇಲೆ ನಾನು ಸೇಡು ತೀರಿಸಿಕೊಳ್ಳಬೇಕಾಗಿತ್ತು. ತೀರಿಸಿಕೊಂಡೆ. ನೀನೀಗ ಕುಡಿದ ಪಾನಕದಲ್ಲಿ ವಿಷ ಬೆರೆಸಿದ್ದೆ’ ಅಂದಳು.
ಚಕ್ರಪಾಣಿಗೆ ಕೊನೆಯ ಮಾತುಗಳು ಕೇಳಿಸಲಿಲ್ಲ.

ಟಿಪ್ಪಣಿ
ಇದನ್ನು ಬರೆದ ಇಂಗ್ಲಿಷ್ ಕತೆಗಾರನ ಹೆಸರು ನೆನಪಿಲ್ಲ. ಇದನು? ಸುಮೂರು ಇಪ್ಪತೈದು ವರುಷಗಳ ಹಿಂದೆಯೇ ಯಾರೋ ಕನ್ನಡಕ್ಕೆ ಅನುವಾದಿಸಿದ್ದರು.

Sunday, January 13, 2008

ನಾಲ್ಕು ಮೊಳ ಕನಕಾಂಬರ ಮತ್ತು ಹೆದ್ದಾರಿ ಹಾಸಿದ ರಾಮಚರಿತ


ಭಾರತೀಪ್ರಿಯರ `ಮೋಚಿ' ಅನ್ನುವ ಕತೆ ಓದಿದ್ದು ನೆನಪಿದೆಯಾ? ಪ್ರಗತಿಶೀಲರ ಕಾಲದ ಕತೆ ಅದು. ಅದನ್ನು ಮತ್ತೆ ಓದುತ್ತಿದ್ದರೆ ಇವತ್ತು ಹಲವಾರು ಪ್ರಶ್ನೆಗಳು ಮೂಡುತ್ತವೆ. ಆ ಪ್ರಶ್ನೆಗಳತ್ತ ಗಮನ ಹರಿಸುವ ಮೊದಲು ಕತೆಯ ಒಂದು ತುಣುಕು;
ಕಥಾನಾಯಕ ಹಿಂದಿನ ದಿನ ರಾತ್ರಿ ರಾಚ ಎಂಬ ಮೋಚಿಯ ಬಳಿಗೆ ಹೋಗಿ ಚಪ್ಪಲಿ ಹೊಲಿಸಿಕೊಂಡು ಬಂದಿದ್ದಾನೆ. ರಾತ್ರಿಯೆಲ್ಲ ಕಥಾನಾಯಕನಿಗೆ ಅವನದೇ ಕನಸು. ಕನಸಲ್ಲಿ ಆತ ಕನವರಿಸಿಕೊಳ್ಳುವುದನ್ನು ಕಂಡು ಹೆಂಡತಿ ಏನೆಂದು ಕೇಳುತ್ತಾಳೆ. ಕಥಾನಾಯಕ ಏನೂ ಹೇಳುವುದಿಲ್ಲ. ಮುಂದೆ ಕತೆ ಹೀಗೆ ಸಾಗುತ್ತದೆ.
`ಕಮಲು ಸುಮ್ಮನೆ ಮಲಗಿಕೊಂಡಳು. ನನಗೆ ಪುನಃ ನಿದ್ದೆ ಹತ್ತಲಿಲ್ಲ. ಹಾಗೇ ಕಣ್ಣುಮುಚ್ಚಿಕೊಂಡೆ. ಹಿಂದಿನ ಸಂಜೆ ನಾನು ಜೋಡು ಹೊಲಿಸುವುದಕ್ಕೆ ಹೋದದ್ದು ಥಟ್ಟನೆ ನೆನಪಿಗೆ ಬಂದಿತು. ನಾನು ಹೋಗುತ್ತಿದ್ದಾಗ ದಾರಿಯಲ್ಲಿ ಮೋಚಿಯೊಬ್ಬನು ಕೆಲಸವಿಲ್ಲದೆ ಕುಳಿತು ತನ್ನ ಸಣ್ಣ ಹಾರೆಗಳನ್ನು ಒಂದಕ್ಕೊಂದು ಬಡಿದು ತಾಳದಂತೆ ಕುಟ್ಟುತ್ತಾ ಅದೇನೋ ಕುರುಕಲು ಪದ ಹೇಳಿಕೊಳ್ಳುತ್ತಿದ್ದದ್ದು; ನನ್ನನ್ನು ಕಂಡು ಹಾರೆಗಳನ್ನು ಕೆಳಗಿಟ್ಟು -`ಬನ್ನಿ ಮಾಸಾಮಿ' ಎಂದದ್ದು; ಕಡೆಗೆ ನಾನು ಕೊಟ್ಟ ಅರ್ಧಾಣೆಯಲ್ಲೇ ತೃಪ್ತನಾದದ್ದು... ಎಲ್ಲಾ ಜ್ಞಾಪಕಕ್ಕೆ ಬಂದಿತು.
ತಲೆಯೆತ್ತಿ ಅವಳ ಮುಖವನ್ನೇ ನೋಡಿದೆ. ನನ್ನನ್ನು ಮಾತಾಡಿಸಿದಾಗ ಅರಳಿದ್ದ ನಗೆಮುಗುಳು ಇನ್ನೂ ಅವಳ ತುಟಿಯ ಮೇಲೆ ಲಾಸ್ಯವಾಡುತ್ತಿರುವಂತಿತ್ತು. ದೂರ ಸರಿದು ಒಂದು ಪಕ್ಕಕ್ಕೆ ತಿರುಗಿ ಕಣ್ಣುಮುಚ್ಚಿಕೊಂಡೆ. ಅದೇ ಚಿತ್ರ; ತಾಳ ಕುಟ್ಟುತ್ತಿದ್ದ, ಕೆದರಿದ ತಲೆಯ, ಬಿಸಿಲಿನಿಂದ ಬೆಂದ ಮುಖದ ರಾಚ! ಅವನದೇ ನಗುಮೊಗ. ಪುನಃ ನನ್ನನ್ನೇ ನೋಡುತ್ತಾ `ಬನ್ನಿ ಮಾಸಾಮಿ' ಎಂದ ಹಾಗಾಯಿತು.
ರಾಚ ತನ್ನ ಮನೆಯಲ್ಲಿ- ಮುರುಕು ಗುಡಿಸಲಿನಲ್ಲಿ- ಮಲಗಿರಬಹುದಲ್ಲವೆ? ಅವನು, ಅವನ ಹೆಂಡಕಿ, ಅವನ ಮಕ್ಕಳು? ನನ್ನ ಹಾಗೆ? ಛೇ, ಎಲ್ಲಿಯ ಸಾಮ್ಯ? ನಾನೆಲ್ಲಿ-ಅವನೆಲ್ಲಿ? ಜೋಡು ಹೊಲಿಯುವ ರಾಚ ಅವನು... ಇಲ್ಲಿ ನಾನು- ನನ್ನವಳು. ಸೊಗಸಾದ ಮನೆ; ಮೆತ್ತನೆಯ ಹಾಸಿಗೆ; ಬೇಕು ಬೇಕಾದ ಪದಾರ್ಥಗಳು. ಇದು ಅವನಿಗಿಲ್ಲ- ಇಲ್ಲ; ಹೌದು- ಅವನ ಕರ್ಮ. ನಾನೆಂಥ ಹುಚ್ಚ! ಅವನು ಯಾರು? ನಾನು ಯಾರು? ಬಡತನ ... ಬಡತನ.. ಅವನು ಕೇಳಿಕೊಂಡು ಬಂದದ್ದು... ಅವನ ಜೀವನ ಅದು.. ಕೇವಲ ವಿಧಿಲಿಖಿತ. ಆದರೂ... ಆದರೂ... ಇದೇನು? ನನ್ನ ಕಣ್ಣಿಂದ ನೀರು! ಕಂಬನಿಯನ್ನು ಚಿಮ್ಮಿದೆ. ಬಗೆ ಹರಿಯಲಿಲ್ಲ.'
ಮಾರನೆಯ ದಿನ ನಾಯಕ ಮತ್ತೆ ಮೋಚಿಯ ಹತ್ತಿರ ಹೋಗುತ್ತಾನೆ. ಮತ್ತೆ ಚಪ್ಪಲಿ ಹೊಲಿಯಲು ಹೇಳುತ್ತಾನೆ.
`ಐ.. ಇದ್ಯಾನಾ ಬುದ್ಧಿ... ನೆನ್ನಿ ವೊಲ್ದಿದ್ದಲ್ವಾ?' ಕೇಳುತ್ತಾನೆ ಮೋಚಿ.
`ಇವತ್ತೂ ಹೊಲಿ' ಅನ್ನುತ್ತಾನೆ ನಾಯಕ.ಚಪ್ಪಲಿ ಹೊಲಿದಾದ ನಂತರ ` ಏನು ಕೊಡ್ಬೇಕೋ' ಕೇಳ್ತಾನೆ.
`ಯಾನೂ ಬೇಡ ಬುದ್ದೀ' ಅಂತಾನೆ ಮೋಚಿ.
ಮುಂದೆ ಕತೆಯಲ್ಲಿ ಇನ್ನೇನೇನೋ ನಡೆಯುತ್ತದೆ. ಮೋಚಿಯ ಮನೆಗೆ ನಾಯಕ ಹೋಗುತ್ತಾನೆ. ಮೋಚಿಗೆ ನಾಕೈದು ಮಕ್ಕಳಿವೆ. ಹೆಂಡತಿ ತೀರಿಕೊಂಡಿದ್ದಾಳೆ. ಅವನಿಗೆ ದುಡ್ಡು ಕೊಡಲು ಮುಂದಾಗುತ್ತಾನೆ. ಮೋಚಿ ನಿರಾಕರಿಸಿ ನಾಳೆ ತಗೊಳ್ಳುವುದಾಗಿ ಹೇಳುತ್ತಾನೆ. ನಾಳೆ ಹೋಗುವ ಹೊತ್ತಿಗೆ ಅಲ್ಲಿ ಮೋಚಿ ಇರುವುದಿಲ್ಲ. ಅವನು ಜಾಗ ಖಾಲಿ ಮಾಡಿಕೊಂಡು ಬೇರೆ ಕಡೆಗೆ ಹೋಗಿರುತ್ತಾನೆ. ನಾಯಕ ಆ ರಾತ್ರಿ ಯೋಚಿಸುತ್ತಾನೆ;
`ನಾನೆಂಥ ಹುಚ್ಚ! ಅವನ ಕೈ ಹಿಡಿದೆತ್ತಬೇಕೆಂದು ಬಗೆದೆ. ಅವನ ದಾರಿದ್ರದ ಅಳಲನ್ನು ತಣಿಸುವುದಕ್ಕೆ ತವಕಗೊಂಡೆ. ನಾನು ಯಾರು ಅದನ್ನು ಮಾಡುವುದಕ್ಕೆ? ನನ್ನಿಂದ ತನಗೆ ತೊಂದರೆಯಾಗಬಹುದೆಂದು ಅವನು ಭಾವಿಸಿದನೆ? ನನ್ನ ಉಪಕಾರದ ಹೊರೆ ಅವನಿಗೆ ಬೇಡವಾಯಿತು. ಅವನದು ನಿಸ್ವಾರ್ಥ ಜೀವನ. ದುಡಿದು ಹೊಟ್ಟೆ ಹೊರೆಯುವ ಬಗೆ; ನೊಂದು ನೋವನ್ನು ನುಂಗಿಕೊಳ್ಳುವ ಸ್ವಭಾವ. ಅವನ ಬಗೆಗೆ ನಾನು ತುಂಬ ವ್ಯತಿರಿಕ್ತವಾಗಿ ನಡೆದೆ. ನನ್ನಿಂದ ಅವನು ಆ ಸ್ಥಳವನ್ನು ಬಿಟ್ಟು ಹೊರಟುಹೋದ. ಎಲ್ಲಿಗೆ?
******
ಈಗ ಇನ್ನೊಂದು ಕತೆ ತೆಗೆದುಕೊಳ್ಳೋಣ. ಲಂಕೇಶರ `ಗಿಳಿಯು ಪಂಜರದೊಳಿಲ್ಲ'. ನವ್ಯ ತಲೆಮಾರಿನ ಕತೆ. ಈ ಕತೆಯಲ್ಲಿ ನಾಯಕ ಕ್ಷೌರಿಕನ ಬಳಿಗೆ ಹೋಗುತ್ತಾನೆ. ಕ್ಪೌರಿಕನ ಹತ್ತಿರ ಅವನ ಸುಖ-ದುಃಖಗಳನ್ನು ತಿಳಿದುಕೊಳ್ಳುತ್ತಾನೆ. ಮತ್ತೊಂದು ದಿನ ನಾಯಕನ ಹತ್ತಿರ ಕ್ಪೌರಿಕ ತನ್ನವರ್ಯಾರಿಗೋ ಅಸೌಖ್ಯ ಎಂದು ಹೇಳಿ ಸ್ವಲ್ಪ ಹಣ ಕೇಳುತ್ತಾನೆ. ನಾಯಕನಿಗೆ ಅವನ ಬಗ್ಗೆ ಅನುಮಾನ. ದುಡ್ಡು ಕೊಟ್ಟರೆ ಆತ ಮೋಸ ಮಾಡುತ್ತಾನೇನೋ ಎಂಬ ಅಪನಂಬಿಕೆ. ಆದರೆ ಹಾಗಂತ ಹೇಳೋದಕ್ಕೆ ಹಿಂಜರಿಕೆ. ತನ್ನನ್ನು ಆತ ತಪ್ಪು ತಿಳಿಯಬಹುದು ಎಂಬ ಭಯ. ಆತನಿಂದ ಹೇಗಾದರೂ ತಪ್ಪಿಸಿಕೊಳ್ಳುವ ಸಲುವಾಗಿ ನಾಯಕ ಮನೆಗೆ ಬಾ ಕೊಡ್ತೀನಿ ಅನ್ನುತ್ತಾನೆ. ಆತ ಮನೆಗೆ ಬರಲಿಕ್ಕಿಲ್ಲ ಎಂಬ ಧೈರ್ಯ ನಾಯಕನಿಗೆ.
ಆದರೆ ಆತ ಮನೆಗೂ ಬರುತ್ತಾನೆ. ಆತ ಬಂದಿದ್ದು ಗೊತ್ತಾಗುತ್ತಿದ್ದಂತೆ ನಾಯಕ ಮನೆಯೊಳಗೆ ಅಡಗಿ ಕುಳಿತು `ಅವರಿಲ್ಲ' ಎಂದು ಹೇಳಿಸುತ್ತಾನೆ. ಬಂದಾತ ನಿರಾಶೆಯಿಂದ ಮರಳುತ್ತಾನೆ. ಇದಾಗಿ ತುಂಬ ದಿನಗಳ ನಂತರ ಪಾಪಪ್ರಜ್ಞೆಯಿಂದ ನರಳುತ್ತಾ ನಾಯಕ ಆತನ ಅಂಗಡಿಯತ್ತ ಹೋದಾಗ ಅದು ಬಾಗಿಲು ಹಾಕಿದೆ. ಅವನು ಎಲ್ಲಿಗೋ ಹೊರಟುಹೋದ ಎಂದು ಯಾರೋ ಹೇಳುತ್ತಾರೆ.
*******
ಈ ಎರಡೂ ಕತೆಗಳನ್ನು ಒಂದರ ಮುಂದೆ ಒಂದನ್ನಿಟ್ಟು ನೋಡಿದಾಗ ಎರಡು ಕಾಲಘಟ್ಟದ ಮನಸ್ಥಿತಿಗಳು ಸ್ಪಷ್ಟವಾಗುತ್ತವೆ. ಅವು ಆಯಾ ಕಾಲಘಟ್ಟದಲ್ಲಿ ಇಡೀ ಸಮಾಜ ತಳೆದ ನಿಲುವು ಆಗಿರಬಹುದು, ಆಗಿಲ್ಲದೆಯೂ ಇರಬಹುದು. ಆದರೆ ಸಾಹಿತ್ಯದಲ್ಲಿ ಪ್ರತಿಬಿಂಬಿತವಾದ ನಿಲುವುಗಳಂತೂ ಹೌದು.
ಭಾರತೀಪ್ರಿಯರ ಕತೆಯಲ್ಲಿ ಮೋಚಿಯ ಕಷ್ಟಕಾರ್ಪರ್ಣ್ಯಗಳನ್ನು ಕಂಡು ಮನಕರಗಿ ಆತನಿಗೆ ನೆರವಾಗಲು ನಾಯಕ ತಾನೇ ಮುಂದಾಗುತ್ತಾನೆ. ಆದರೆ ಅಂಥ ಸಹಾಯ ತನಗೆ ಬೇಕಿಲ್ಲ ಎಂದು ಸ್ವಾಭಿಮಾನದಿಂದಲೋ ಎಂಬಂತೆ ಮೋಚಿ ಬೇರೆ ಕಡೆಗೆ ಹೊರಟು ಹೋಗುತ್ತಾನೆ. ಈ ಕತೆಯ ನಾಯಕನಿಗೆ ಆತನನ್ನು ಉದಾ್ಧರ ಮಾಡುವ ಆಸೆ. ತಾನು ಅವನಿಗೆ ಸಹಾಯ ಮಾಡಲಾಗಲಿಲ್ಲವಲ್ಲ ಎಂಬ ಪಾಪಪ್ರಜ್ಞೆ. ಅವನು ಮುರುಕು ಗುಡಿಸಲಲ್ಲಿರುವಾಗ ತಾನು ಸುಪ್ಪತ್ತಿಗೆಯ ಮೇಲೆ ಹೇಗಿರಲಿ ಎಂಬ ಪ್ರಶ್ನೆ.
ಅದೇ ಲಂಕೇಶರ ಕತೆಗೆ ಬಂದಾಗ ನಾಯಕ ಬದಲಾಗಿದ್ದಾನೆ. ಅವನಿಗೆ ಕ್ಪೌರಿಕನ ಸ್ಥಿತಿಯ ಬಗ್ಗೆ ಮಾಹಿತಿ ಬೇಕು. ಆದರೆ ಅವನ ಕಷ್ಟಗಳಿಗೆ ನೆರವಾಗುವುದು ಬೇಕಿಲ್ಲ. ಜೊತೆಗೆ ಕ್ಪೌರಿಕನ ಪ್ರಾಮಾಣಿಕತೆಯ ಬಗ್ಗೆಯೇ ನಾಯಕನಿಗೆ ಅನುಮಾನ. ಮೊದಲ ಕತೆಯಲ್ಲಿ ನಾಯಕನೇ ಹಣ ಕೊಡಲು ಮುಂದಾದಾಗ ಮೋಚಿ ನಿರಾಕರಿಸುತ್ತಾನೆ. ಎರಡನೆಯ ಕತೆಯಲ್ಲೇ ಕ್ಪೌರಿಕ ಹಣ ಕೇಳಿದಾಗ ನಾಯಕ ಕೊಡದೇ ಜಾರಿಕೊಳ್ಳುತ್ತಾನೆ.
ತುಂಬ ಸ್ಪಷ್ಟವಾಗಿದೆ ವ್ಯತ್ಯಾಸ. ಆದರೆ ಆಳದಲ್ಲಿ ಎರಡೂ ಕತೆ ಧ್ವನಿಸುವುದು ಒಂದೇ ಭಾವವನ್ನು. ಹಣ ಕೊಡಲು ಬಯಸಿ ಕೊಡಲಾಗದೇ ಭಾರತೀಪ್ರಿಯ ನಾಯಕ ಅನುಭವಿಸುವ ಪಾಪಪ್ರಜ್ಞೆಯೂ, ಹಣ ಕೊಡಲಿಷ್ಟವಿಲ್ಲದೇ ಕ್ಪೌರಿಕ ಕಣ್ಮರೆಯಾದಾಗ ಪಾಪಪ್ರಜ್ಞೆ ಅನುಭವಿಸುವ ಲಂಕೇಶರ ನಾಯಕನೂ ಅಂತರಾಳದಲ್ಲೇ ಒಬ್ಬನೆ. ಆದರೆ ಭಾರತೀಪ್ರಿಯರ ನಾಯಕನಲ್ಲಿರುವ ಉದಾತ್ತ ಮನೋಭಾವ ನಮಗೀಗ ಪೊಳ್ಳು ಅನ್ನಿಸುತ್ತದೆ. ಲಂಕೇಶರ ನಾಯಕ ಅನುಮಾನ ಸಹಜ ಅನ್ನಿಸುತ್ತದೆ. ಮೊದಲನೆಯದು ಆದರ್ಶ, ಎರಡನೆಯದು ವಾಸ್ತವ. ಭಾರತೀಪ್ರಿಯರದ್ದು ವೇದಿಕೆಯ ಮೇಲಿನ ಮಾತು; ಲಂಕೇಶರದ್ದು ಅಂತರಂಗದ ಮಾತು. ಸಾರ್ವಜನಿಕವಾಗಿ ಮಾತಾಡುವ ಹೊತ್ತಿಗೆ ಭಾರತೀಪ್ರಿಯರ ನಿಲುವು ಚಪ್ಪಾಳೆ ಗಿಟ್ಟಿಸಿಕೊಳ್ಳಬಲ್ಲದು. ಖಾಸಗಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದಾಗ ಲಂಕೇಶರ ನಾಯಕನಂತೆ ನಾವೆಲ್ಲ ವರ್ತಿಸಬಹುದು.
ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕು. ಲಂಕೇಶರ ಕತೆಯ ಕ್ಪೌರಿಕನಿಗೆ ಈ ಘಟನೆಯ ನಂತರ ಮಾನವೀಯತೆಯ ಕುರಿತಾದ ನಂಬಿಕೆ ಹೊರಟುಹೋಗಬಹುದು. ಆದರೆ ಭಾರತೀಪ್ರಿಯರ ನಾಯಕ ತನ್ನ ಕರ್ತೃತ್ವ ಶಕ್ತಿಯ ಬಗೆಗಿನ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಹಿಂದಿನ ರಾತ್ರಿ ಹೊಲಿದ ಚಪ್ಪಲಿಯನ್ನೇ ಮತ್ತೆ ಹೊಲಿ ಅಂತ ನಾಯಕ ಕೊಟ್ಟಾಗ ಆತನಿಗೆ ಥಟ್ಟನೆ ಅನ್ನಿಸುವುದು; ನಾನು ಹೊಲಿದದ್ದು ಸರಿಯಾಗಿಲ್ಲ. ಈ ಅಳುಕಲ್ಲೇ ಆತ ಮತ್ತೊಮ್ಮೆ ಹೊಲಿಯುತ್ತಾನೆ. ತನ್ನ ಕೆಲಸದಲ್ಲಿ ಏನೋ ದೋಷವಿತ್ತು ಎಂದು ಆತ ಭಾವಿಸುವುದರಿಂದ ಎರಡನೆಯ ಸಾರಿ ಆತ ಹಣ ತೆಗೆದುಕೊಳ್ಳಲೂ ಹಿಂಜರಿಯುತ್ತಾನೆ. ಅವನಿಗೆ ತನ್ನ ನೈಪುಣ್ಯತೆಯ ಬಗೆಗಿನ ಆತ್ಮವಿಶ್ವಾಸವೇ ಹೊರಟುಹೋದರೂ ಆಶ್ಚರ್ಯವಿಲ್ಲ.
ಮೋಚಿಯ ನಷ್ಟ ದೊಡ್ಡದಾ? ಇಲ್ಲ, ಕ್ಪೌರಿಕನದ್ದಾ? ಒಂದು ವೇಳೆ ಕತೆಯ ಅಂತ್ಯವನ್ನು ಕೊಂಚ ಬದಲಾಯಿಸಿ ನೋಡಿದರೆ ಏನಾಗುತ್ತದೆ? ಮೋಚಿ ನಾಯಕ ಕೊಟ್ಟ ಹಣವನ್ನು ತೆಗೆದುಕೊಂಡಿದ್ದರೆ ಅವನ ಸ್ಥಿತಿ ಬದಲಾಗುತ್ತಿತ್ತಾ?
ಇಲ್ಲ.
ಬದಲಾಗುತ್ತಿದ್ದದ್ದು ನಾಯಕನ ಸ್ಥಿತಿ. ಆತನ ಪಾಪಪ್ರಜ್ಞೆ ಕೊಂಚ ಕಡಿಮೆಯಾಗುತ್ತಿತ್ತು. ತನ್ನ ಐಷಾರಾಮವನ್ನು ಆತ ಇನ್ನಷ್ಟು ಮುಕ್ತ ಸ್ಥಿತಿಯಲ್ಲಿ ಅನುಭವಿಸಬಹುದಾಗಿತ್ತು. ತಾನು ಒಬ್ಬ ಬಡವನಿಗೆ ನೆರವಾದೆ ಎನ್ನುವುದು ಅವನು ಸಮಾನತೆಯಿಂದ ಮತ್ತಷ್ಟು ದೂರ ಸರಿಯುವುದಕ್ಕೊಂದು ನೆಪವಾಗುತ್ತಿತ್ತು. `ಅವನಿಗೆ ಹತ್ತು ರುಪಾಯಿ ಕೊಟ್ಟಿದ್ದೇನೆ. ನಾನೀಗ ನೂರು ರುಪಾಯಿಯನ್ನು ಹೊಂದಬಹುದು' ಎಂಬ ವಿಚಿತ್ರ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಅವನಲ್ಲಿ ಮೂಡಿಸುತ್ತಿತ್ತು.
ಲಂಕೇಶರ ನಾಯಕನೂ ಅಷ್ಟೇ. ಆತನೇನಾದರೂ ಕ್ಪೌರಿಕನಿಗೆ ಹಣ ಕೊಟ್ಟಿದ್ದರೆ ಆತ ಅದನ್ನು ಮರಳಿಸದೇ ಇದ್ದಿದ್ದರೆ ಆ ನಾಯಕ ಮಾನವೀಯತೆಯಲ್ಲಿ ನಂಬಿಕೆ ಕಳಕೊಳ್ಳುತ್ತಿದ್ದ. `ಅವನಿಗೆ ಸಹಾಯ ಮಾಡಲಾಗಲಿಲ್ಲವಲ್ಲ' ಎಂಬ ಪಾಪಪ್ರಜ್ಞೆ, `ಅವನಿಗೆ ನೆರವಾದೆ' ಎನ್ನುವ ಅಹಂಕಾರಕ್ಕಿಂತ ದೊಡ್ಡದು ಮತ್ತು ಮುಖ್ಯವಾದದ್ದು. ಮೋಚಿಯ ನಾಯಕ ಒಬ್ಬನ ಕಷ್ಟಕ್ಕೆ ಮಿಡಿಯುವ ಮೂಲಕ ತನ್ನೆಲ್ಲ ಪಾಪವನ್ನೂ ನೀಗಿಕೊಂಡರೆ, ಲಂಕೇಶರ ನಾಯಕ ಒಬ್ಬನಿಗೆ ನೆರವಾಗದೇ ಉಳಿಯುವ ಮೂಲಕ ಮತ್ತಷ್ಟು ಪಾಪಪ್ರಜ್ಞೆ ತುಂಬಿಕೊಳ್ಳುತ್ತಾನೆ.
*****
ಸಾಹಿತ್ಯದಲ್ಲಿ ಶ್ರೇಷ್ಠತೆಯ ಪ್ರಶ್ನೆ ಬಂದಾಗ, ಮನುಷ್ಯನ ಪರಿಪೂರ್ಣತೆಯ ಪ್ರಶ್ನೆ ಬಂದಾಗ ಥಟ್ಟನೆ ನೆನಪಾಗುವುದು ಈ ಎರಡು ಕತೆಗಳು. ನಮ್ಮ ಶ್ರೇಣಿಕೃತ ಸಮಾಜ ಹೇಗಿದೆಯೆಂದರೆ ಮೇಲುಸ್ತರದಲ್ಲಿರುವ ಒಬ್ಬ ವ್ಯಕ್ತಿಗೆ ಅತ್ಯಂತ ಆಪ್ತ ಎನ್ನಿಸುವ ಸಾಹಿತ್ಯ, ಕೆಳಸ್ತರದಲ್ಲಿರುವ ಒಬ್ಬ ವ್ಯಕ್ತಿಗೆ ತಟ್ಟದೆಯೇ ಇರಬಹುದು. ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? ಎನ್ನುವ ತುಡಿತ ಮೇಲುವರ್ಗದ ಮನುಷ್ಯನಿಗೆ ಸಹಜ. ಕೆಳವರ್ಗದವನಿಗೆ? ಆತ ಪುರುಷೋತ್ತಮನಾಗುವ ಮೊದಲು ಮನುಷ್ಯನಾಗಬೇಕಿದೆ. ಶ್ರೇಷ್ಠನಾಗುವ ಮೊದಲು ಸಮಾನನಾಗಬೇಕಿದೆ. ಒಬ್ಬ ಮೋಚಿಗೆ ಅನ್ನಿಸಿದ್ದೇ ಒಬ್ಬ ಬೂಟು ತೊಟ್ಟವನಿಗೂ ಅನ್ನಿಸಬೇಕಾದರೆ ಆಗ ಸಮಾಜ ಹೇಗಿರಬೇಕು ಎಂಬುದನ್ನು ಯೋಚಿಸಬೇಕು. ಒಳ್ಳೆಯ ಬಟ್ಟೆ ತೊಡಬೇಕು ಎನ್ನುವುದು ಕೆಟ್ಟ ಯೋಚನೆಯೇನಲ್ಲ. ಆದರೆ ಬಟ್ಟೆಯನ್ನೇ ತೊಡದವನಿಗೆ ಒಳ್ಳೆಯ ಬಟ್ಟೆ ಮುಖ್ಯವಲ್ಲ; ಬಟ್ಟೆ ಮುಖ್ಯ.
ನಮ್ಮ ಸಣ್ಣಪುಟ್ಟ ಕೆಲಸಗಳನ್ನೂ ಆಧುನಿಕತೆ ಕಸಿದುಕೊಳ್ಳುತ್ತಿದೆ. ಹೆದ್ದಾರಿಗಳ ಪಕ್ಕದಲ್ಲಿ ನಸುಕಿನಲ್ಲಿ ಮೂರು ಮೊಳ ಕನಕಾಂಬರ ಹೂವನ್ನು ಯಮವೇಗದಿಂದ ಹಾದುಹೋಗುವ ವಿದೇಶಿ ಕಾರುಗಳ ಮುಂದೆ ಹಿಡಿದು ಮೊಳ ಒಂದಕ್ಕೆ ಒಂದು ರುಪಾಯಿಯಂತೆ ಮಾರುವ ಪುಟ್ಟ ಹುಡುಗಿಯ ಚಿತ್ರ ನಮ್ಮ ಕಣ್ಮುಂದೆ ಮತ್ತೆ ಮತ್ತೆ ಸುಳಿಯುತ್ತದೆ. ಹಾಗೆ ಎಷ್ಟು ಹೂಮಾಲೆಗಳನ್ನು ಮಾರಿದರೆ ಆಕೆ ಒಂದು ವಿದೇಶಿ ಕಾರು ಕೊಳ್ಳಬಹುದು?
ಈ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಆ ಪುಟ್ಟ ಹುಡುಗಿಯ ಕೈಯಲ್ಲಿರುವ ಕನಕಾಂಬರದ ಮಾಲೆಗೂ ಅವಳು ನಿಂತುಕೊಂಡಿರುವ ಆ ಮುಂಜಾವದ ಇಬ್ಬನಿಗೂ ಬೆಲೆ ಕಟ್ಟಲಿಕ್ಕಾಗುವುದಿಲ್ಲ ಅಂತ ನಾವು ಮಾತಾಡಿಕೊಳ್ಳುತ್ತೇವೆ.
ಆದರೆ ಇಬ್ಬನಿಯೂ ಹೂವೂ ಅದ್ಭುತ ಅನ್ನಿಸುವುದು ಕಾರಲ್ಲಿ ಬೆಚ್ಚಗೆ ಕುಳಿತಿರುವಾಗಲೇ! ಅದನ್ನು ಮಾರುವ ಹುಡುಗಿಗೆ ಅದು ಅನ್ನ, ಬಟ್ಟೆ, ಪುಸ್ತಕ.
ಮಧ್ಯಾಹ್ನದ ಒಳಗೆ ಮಾರಾಟವಾಗದೇ ಹೋದರೆ ಮತ್ತೊಂದು ದಿನದ ಪುಷ್ಕಳ ಉಪವಾಸ.

Friday, January 11, 2008

ನೋಡಿ ಸ್ವಾಮಿ, ನಾವಿರೋದೆ ಹೀಗೆ...

ನೀವು, ಭಾರತೀಯರು, ಪರವಾಗಿಲ್ಲ. ದಿನಕ್ಕೆ ಕನಿಷ್ಠ ಐದು ಮೆಗಾ ಸೀರಿಯ್ ನೋಡುತ್ತೀರಿ. ಒಂದೋ ಎರಡೋ ಸಿನಿಮಾ ನೋಡುತ್ತೀರಿ. ಇದರ ಮಧ್ಯೆ ಸಾಕಷ್ಟು ಹರಟುತ್ತೀರಿ. ಏನನ್ನು ಬೇರೆಯವರ ಹತ್ತಿರ ಹೇಳಿಕೊಳ್ಳಬಾರದೋ ಅದನ್ನೆಲ್ಲ ಹೇಳಿಕೊಳ್ಳುತ್ತೀರಿ. ನಿಮಗೆ ಅಪಾರವಾದ ಬಿಡುವಿದೆ. ಭಾರತೀಯ ಮಹಿಳೆಯಷ್ಟು ಸುಖಿ ಬೇರೆ ಯಾರೂ ಇಲ್ಲ.'
ಹೀಗೊಂದು ಟಿಪ್ಪಣಿ ಬರೆದಾಕೆ ಐರ್ಲೆಂಡಿನ ಅಂಕಣಗಾರ್ತಿ. ಆಕೆ ಇದನ್ನು ಅಗಾಧವಾದ ಸಿಟ್ಟಿನಿಂದ ಮತ್ತು ಅಸಹನೆಯಿಂದ ಬರೆದಿದ್ದಾಳೆ. ಅವಳ ಮುಖ್ಯ ವಾದ ಇಷ್ಟೇ. ಭಾರತೀಯ ಮಹಿಳೆಯರು ಸೋಮಾರಿಗಳು. ಗಂಡಸರು ಮಹಿಳೆಯರಿಗಿಂತಲೂ ಸೋಮಾರಿಗಳು. ಇಬ್ಬರಿಗೂ ಅಂಥ ಗುರಿಯೇನಿಲ್ಲ. ಇಬ್ಬರೂ ನಾಳೆಯ ಬಗ್ಗೆ ಚಿಂತಿಸುವುದೇ ಇಲ್ಲ. ಒಂದು ದಿನ ಕೆಲಸ ಮಾಡಿ ಮೂರು ದಿನ ಊಟ ಮಾಡುತ್ತಾರೆ. ನಾಲ್ಕನೆಯ ದಿನ ಮತ್ತೆ ಕೆಲಸ ಸಿಕ್ಕೇ ಸಿಗುತ್ತದೆಂದು ಕಾಯುತ್ತಾರೆ. ಸಿಗದಿದ್ದರೆ ಉಪವಾಸ ಇರುವುದಕ್ಕೂ ಗೊತ್ತಿದೆ. ಯಾರೊಬ್ಬರಿಗೂ ಕೈಲಿ ದುಡ್ಡಿಲ್ಲದೆ ಉಪವಾಸ ಇರುವ ಸ್ಥಿತಿಯ ಬಗ್ಗೆ ಕೆಟ್ಟೆನಿಸುವುದೂ ಇಲ್ಲ. ಅವರನ್ನು ನೋಡುತ್ತಾ ಇರುವವರಿಗೆ ಅವರ ಬಗ್ಗೆ ಸಿಟ್ಟು ಬರುವುದೂ ಇಲ್ಲ. ಅವರಿಗೆ ಯಾರೂ ಬುದ್ಧಿ ಹೇಳುವುದಕ್ಕೂ ಹೋಗುವುದಿಲ್ಲ.
ಆ ಅಂಕಣಗಾರ್ತಿಗೆ ಈ ಮನಸ್ಥಿತಿ ಗೊತ್ತಾದದ್ದು ಆಕೆ ಭಾರತದಲ್ಲಿ ಉಳಿದುಕೊಂಡ ಹದಿನಾರು ತಿಂಗಳ ಅವಧಿಯಲ್ಲಿ ಮನೆಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಮೂಲಕ. ಆಕೆ ಭಾರತಕ್ಕೆ ಬಂದದ್ದು ಕಾದಂಬರಿ ಬರೆಯುವುದಕ್ಕೆ. ಆದರೆ ಇವತ್ತಿಗೆ ಬೇಕಾದ ಕಾದಂಬರಿ ಬರೆಯುವ ವಸ್ತು ಭಾರತದಲ್ಲೇ ಇಲ್ಲ ಅನ್ನಿಸಿ ವಾಪಸ್ಸು ಮರಳಿದಳಂತೆ. ಕೊನೆಗೆ ಆಕೆ ಬರೆದದ್ದು ಭಾರತದ ಬಗ್ಗೆ ಒಂದು ಸುದೀರ್ಘ ಟಿಪ್ಪಣಿ.
ಆಕೆ ಈ ಮನಸ್ಥಿತಿಯನ್ನು ಭಾರತೀಯ ತತ್ವಶಾಸ್ತ್ರದ ಪರಿಣಾಮ ಎನ್ನುತ್ತಾಳೆ.ಅಮೆರಿಕಾದ ಮಂದಿಗೊಂದು ತಮ್ಮದೇ ಆತ ತಾತ್ವಿಕತೆಯಿಲ್ಲ, ಪುರಾಣವಿಲ್ಲ, ತಮ್ಮ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಯಾವುದೇ ಪೂಜಾರ್ಹ ಗ್ರಂಥಗಳ ಆಧಾರವಿಲ್ಲ. ಹೀಗಾಗಿ ಅವರು ಕಷ್ಟಪಟ್ಟು ದುಡಿಯುತ್ತಾರೆ. ದುಡಿಯದೇ ಹೋದರೆ, ಆ ಮೂಲಕ ಬಡವರಾದರೆ ಅವರನ್ನು ಉಳಿದವರು ಅನುಕಂಪದಿಂದ ನೋಡುವುದಿಲ್ಲ, ಬದಲಾಗಿ ಅಸಹ್ಯಪಡುತ್ತಾರೆ. ಅದೇ ಭಾರತದಲ್ಲಿ ಬಡವರ ಬಗ್ಗೆ ಯಾರಿಗೂ ಅಸಹ್ಯವಿಲ್ಲ; ಬದಲಾಗಿ ಅನನ್ಯವಾದ ಅನುಕಂಪವಿದೆ. ಭಿಕ್ಪೆ ಬೇಡುವ ಕೈಗೆ ಐವತ್ತು ಪೈಸೆ ಹಾಕದೇ ಹೋದರೆ ಭಾರತೀಯರು ದಿನವಿಡೀ ಪಶ್ಚಾತ್ತಾಪದಿಂದ ಬೇಯುತ್ತಾರೆ. ಊಟ ಮಾಡಿ ಹೊರಗೆ ಬರುತ್ತಿದ್ದಂತೆ ಹೊಟೆಲ್ಲಿನ ಹೊರಗಡೆ ಭಿಕ್ಪುಕರು ಆರ್ತನಾದದೊಂದಿಗೆ ಎದುರಾಗುತ್ತಾರೆ. ಅವರಿಗೆ ಭಿಕ್ಪೆ ಹಾಕದೇ ಹೋದರೆ ತಿಂದ ಅನ್ನ ಅಜೀರ್ಣವಾಗುತ್ತದೋ ಎಂಬ ಅಪರಾಧೀ ಪ್ರಜ್ಞೆ ಭಾರತೀಯರನ್ನು ಕಾಡುತ್ತದೆ. ಹೀಗೆ ಪ್ರತಿಯೊಬ್ಬರೂ ಇನ್ನೊಬ್ಬರ ದೈನೇಸಿ ಸ್ಥಿತಿಗೆ ತಾವೂ ಕಾರಣರೇನೋ ಎಂಬಂತೆ ಭಾವಿಸಿ ವರ್ತಿಸುತ್ತಾರೆ.
ಈ ವಿಶ್ಲೇಷಣೆ ಕೇಳುವುದಕ್ಕೆ ನಿಜಕ್ಕೆ ಹತ್ತಿರವಿದ್ದಂತಿದೆ. ಅಷ್ಟೇ ಅಲ್ಲ, ಆಕೆಯ ಟಿಪ್ಪಣಿಯಲ್ಲಿನ ವಿವರಗಳು ನಮ್ಮ ದೈನಂದಿನ ಬದುಕಿನ ವರ್ತನೆಗಳನ್ನೆಲ್ಲ ಒಂದೊಂದಾಗಿ ಪರಿಶೀಲಿಸುವಂತಿದೆ. ಇಲ್ಲಿನ ಪ್ರತಿಯೊಬ್ಬರೂ ಕನಸುಗಾರರು. ಬಡತನ ಆತ್ಮಾನುಕಂಪ ಮತ್ತು ದೈನ್ಯ ತುಂಬಿ ತುಳುಕುತ್ತಿರುವ ತಮಿಳುನಾಡಿನ ಬಡವರು ಕಾಣುವಂಥ ಕನಸನ್ನು ಬೇರೆ ಯಾರೂ ಕಾಣಲು ಸಾಧ್ಯವಿಲ್ಲ. ತಮ್ಮನ್ನು ಆಳುವವರು ದೇವರೆಂದು ಅವರು ಈಗಲೂ ನಂಬಿದ್ದಾರೆ. ಒಂದಲ್ಲ ಒಂದು ದಿನ ತಮ್ಮ ಬದುಕೂ ಹಟಾತ್ತಾಗಿ ಬದಲಾಗುತ್ತದೆ ಎಂದುಕೊಂಡಿದ್ದಾರೆ. ತೀರಾ ಕೆಳಗಿನಿಂದ ತುಂಬ ಎತ್ತರಕ್ಕೆ ಏರಿದ ವ್ಯಕ್ತಿಯ ಉದಾಹರಣೆಯೇ ಅವರಿಗೆ ಸ್ಪೂರ್ತಿಯಾಗುತ್ತದೆ. ಅಂಥ ಬದಲಾವಣೆಯ ಹಿಂದಿರುವ ಶ್ರಮವನ್ನು ಗುರುತಿಸುವುದಿಲ್ಲ ಅವರು, ಬರೀ ಗ್ರಾಫನ್ನಷ್ಟೇ ನೋಡುತ್ತಾರೆ.
ಇನ್ನೊಂದು ರಾಜ್ಯದಲ್ಲಿ ಮತ್ತೊಂದು ಮೆಂಟಾಲಿಟಿಯಿದೆ. ಶ್ರೀಮಂತರನ್ನು ಬಡವರೆಲ್ಲ ಗೇಲಿ ಮಾಡುತ್ತಾ ಜೀವಿಸುತ್ತಾರೆ; ಶ್ರೀಮಂತರು ಕೋಟ್ಯಂತರ ರುಪಾಯಿ ಖರ್ಚು ಮಾಡಿ ಮದುವೆ ಮಾಡುತ್ತಾರೆ. ಮೂರೇ ತಿಂಗಳಲ್ಲಿ ಗಂಡ-ಹೆಂಡತಿ ಬೇರಾಗಿರುತ್ತಾರೆ. ಹೊತ್ತಿಗೆ ಸಾವಿರ ರುಪಾಯಿ ಖರ್ಚುಮಾಡಿ ತಿಂಡಿ ತಿನ್ನುತ್ತಾರೆ; ಮುಂಜಾನೆ ಎದ್ದು ಅದನ್ನು ಕರಗಿಸೋದಕ್ಕೆ ಜಾಗಿಂ್ ಹೊರಡುತ್ತಾರೆ. ತುಂಬ ಕ್ಲೀ್ ಆಗಿರಬೇಕು ಎಂದು ಮಣ್ಣಿನ ಮೇಲೆ ಕಾಲಿಡುವುದೇ ಇಲ್ಲ; ಆದರೆ ವಾರಕ್ಕೊಮ್ಮೆ ಹೋಗಿ ಮೈಗೆಲ್ಲ ಮಣ್ಣು ಮೆತ್ತಿಕೊಂಡು ಥೆರಪಿ ಮಾಡಿಸಿಕೊಳ್ಳುತ್ತಾರೆ. ತಮ್ಮ ಭಾಷೆಯ ಕತೆಗಳನ್ನು ಓದುವುದಿಲ್ಲ, ಸಿನಿಮಾಗಳನ್ನೂ ನೋಡುವುದಿಲ್ಲ. ಆದರೆ ಅದಕ್ಕಿಂತ ಕಳಪೆಯಾದ ಇಂಗ್ಲಿ್ ಧಾರಾವಾಹಿಗಳು ನೋಡಿ ಪೆಕರು ಪೆಕರಾಗಿ ನಗುತ್ತಿರುತ್ತಾರೆ. ಇಂಗ್ಲಿ್ ಮಾತಾಡುವುದು ಗೌರವ ಎಂದು ಭಾವಿಸುತ್ತಾರೆ. ಆದರೆ ಕಕ್ಕಸ್ಸಿನಲ್ಲಿ ಕೂತಾಗ ಮಾತೃಭಾಷೆಯಲ್ಲಿ ದೇವರ ಸ್ಮರಣೆ ಮಾಡುತ್ತಾರೆ.
ಹೀಗೆ ಗೇಲಿ ಮಾಡುವ ಮೂಲಕವೇ ಭಾರತದ ಬಡವರು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದಾರೆ ಎನ್ನುವ ಅಂಶವೂ ಆಕೆಯ ಟಿಪ್ಪಣಿಯಲ್ಲಿದೆ. ಡ್ರೀ್‌ಸ ಅ್ಲಿಮಿಟೆ್ ಎನ್ನುವುದು ಭಾರತೀಯರ ಮೂಲಚಿಂತವೆ. ಆಂಧ್ರಪ್ರದೇಶಕ್ಕೋ ಮಹಾರಾಷ್ಟ್ರಕ್ಕೋ ಹೋಗಿ ನೋಡಿದರೆ ಅಲ್ಲಿನ ಮಂದಿ ಕಾಣುವ ಕನಸು ಎಷ್ಟು ಸಿನಿಮೀಯ ಅನ್ನುವುದು ಗೊತ್ತಾಗುತ್ತದೆ. ಸಿನಿಮಾಗಳಲ್ಲಿ ತೀರ ಬಡವನಾದ ನಾಯಕ, ಇದ್ದಕ್ಕಿದ್ದಂತೆ ಶ್ರೀಮಂತ ಹುಡುಗಿಯ ಜೊತೆ ಆಸ್ಟ್ರೇಲಿಯಾದಲ್ಲಿ ಕುಣಿದು ಕುಪ್ಪಳಿಸುವುದು ಕೂಡ ಭಾರತದ ಕನಸುಗಳಲ್ಲಿ ಒಂದು. ಅದಕ್ಕಿಂತ ದೊಡ್ಡ ಕನಸೆಂದರೆ ಬಡವ ಶ್ರೀಮಂತಳನ್ನು ಮದುವೆಯಾಗುವುದು. ಮತ್ತು ಆ ನಂತರ ಆ ಶ್ರೀಮಂತ ಹೆಂಗಸನ್ನು ಪಳಗಿಸಿ ಆಕೆಯೂ ಬಡತನವನ್ನು ಒಪ್ಪಿಕೊಳ್ಳುವಂತೆ ಮಾಡುವುದು.
ಅಂದರೆ ನಮ್ಮ ಒಟ್ಟಾರೆ ಆಶಯ ಏನು? ಶ್ರೀಮಂತರು ಬಡವರಾಗಬೇಕು ಎನ್ನುವುದೇ, ಬಡವರು ಶ್ರೀಮಂತರಾಗಬೇಕು ಎನ್ನುವುದೇ. ಎಲ್ಲರೂ ಸಮಾನರಾಗಬೇಕೇ ಎನ್ನುವುದೇ. ಯಾವುದೇ ಒಂದು ಸಿನಿಮಾದಲ್ಲೋ ಧಾರಾವಾಹಿಯಲ್ಲೋ ಕತೆಯಲ್ಲೋ ಒಬ್ಬ ಬಡವ ಶ್ರೀಮಂತನಾಗುತ್ತಾನೆ, ರ್ರೀಮಂತ ಹುಡುಗಿಯನ್ನು ಮದುವೆಯಾಗುತ್ತಾನೆ. ಆಕೆಯನ್ನು ಬಡವಳನ್ನಾಗಿ ಮಾಡುತ್ತಾನೆ. ಒಳ್ಳೆಯ ಊಟ ಮಾಡುತ್ತಿದ್ದ ಆಕೆಗೆ ಒಣರೊಟ್ಟಿ ತಿನ್ನಿಸುತ್ತಾನೆ, ಒಳ್ಳೆಯ ಉಡುಪು ತೊಡುತ್ತಿದ್ದ ಆಕೆ ಹರಿದ ಬಟ್ಟೆ ತೊಡುತ್ತಾಳೆ. ಪ್ರೇಕ್ಪಕರಿಗೆ ಖುಷಿಯಾಗುತ್ತದೆ. ಅಂದರೆ ಎತ್ತರದಲ್ಲಿದ್ದವರು ತಮ್ಮ ಮಟ್ಟಕ್ಕೆ ಇಳಿದು ಬರಬೇಕು ಅನ್ನುವುದೇ ಭಾರತದ ಮನಸ್ಥಿತಿ.
ಹೀಗೆ ಆಕೆಯ ವಾದ ಸಾಗುತ್ತದೆ. ಇದನ್ನು ಕುತೂಹಲಕ್ಕಾಗಿಯಾದರೂ ಒಂದಷ್ಟು extentionಗಳ ಜೊತೆ ನೋಡುತ್ತಾ ಹೋಗಬಹುದು.
ಭಾರತೀಯ ಸಾಹಿತ್ಯ, ಪುರಾಣ ಮತ್ತು ಜಾನಪದ ಕತೆಗಳ ಒಳಹೊರಗನ್ನೂ ಈಕೆ ಜಾಲಾಡಿದ್ದಾಳೆ. ಇವತ್ತು ಪ್ರಸಾರವಾಗುವ ಧಾರಾವಾಹಿಗಳಿಂದ ಹಿಡಿದು, ಜಾನಪದ ಕತೆಗಳಲ್ಲಿ ಬರುವ ವಿವರಗಳ ತನಕ ಎಲ್ಲದರಲ್ಲೂ ವಿಧಿಯಾಟದ ಬಗ್ಗೆ ಎಲ್ಲರಿಗೂ ನಂಬಿಕೆ. ಮನುಷ್ಯಪ್ರಯತ್ನದ ಬಗ್ಗೆ ಅಂಥ ಗೌರವವೇನಿಲ್ಲ. ಶ್ರೀಮಂತಿಕೆ, ಐಷಾರಾಮದ ಕುರಿತು ಒಂದು ರೀತಿಯ ಹೇವರಿಕೆ. ಐಷಾರಾಮ ಮತ್ತು ಸುಖ ಮನುಷ್ಯನನ್ನು ಕೆಟ್ಟವನ್ನಾಗಿಯೂ ಮೋಕ್ಪದೂರನನ್ನಾಗಿಯೂ ಮಾಡುತ್ತದೆ ಎಂಬ ನಂಬಿಕೆ. ಹೀಗಾಗಿ ಒಳ್ಳೆಯ ಮನೆ, ಕೈತುಂಬ ದುಡ್ಡು, ಸುಂದರ ಹೆಂಡತಿ, ಒಳ್ಳೆಯ ಸಂಸಾರ ಇರುವ ಮನುಷ್ಯ ಇಲ್ಲಿ ಸುಖಿಯಲ್ಲ. ತಾನೇನೋ ಮಾಡಬಾರದ್ದನ್ನು ಮಾಡಿದ್ದೇನೋ ಎಂಬಂತೆ ಚಡಪಡಿಸುತ್ತಿರುತ್ತಾನೆ. ಅದೇ ಹೀನಾಯ ಸ್ಥಿತಿಯಲ್ಲಿರುವವನು ನೆಮ್ಮದಿಯಾಗಿರುತ್ತಾನೆ.
ಇದು ಸರಿಯಾ ತಪ್ಪಾ ಅನ್ನುವುದಾಗಲೀ, ಆಕೆ ಯೋಚಿಸಿದ್ದು ನಮ್ಮ ನಡವಳಿಕೆಗೆ ಹೊಂದುತ್ತದೆಯೋ ಇಲ್ಲವೋ ಅನ್ನುವುದಾಗಲೀ ಮುಖ್ಯವಲ್ಲ. ಇಂಥ ವಿಶ್ಲೇಷಣೆಗಳು ನಮ್ಮನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುವುದಿಲ್ಲವೇ? ನಮ್ಮ ವರ್ತನೆ ಮತ್ತು ಚಿಂತನೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವುದಿಲ್ಲವೇ? ಹಾಗೆ ನೋಡಿದರೆ ಆಕೆ ಯೋಚಿಸಿದ್ದೆಲ್ಲ ಸುಳ್ಳಿರಬಹುದು. ಭಾರತೀಯರು ತಮ್ಮ ತಮಾಷೆ ಮಾಡುವ ಗುಣದಿಂದಲೇ ಅಪಾರವಾದ ಮನೋಶಕ್ತಿಯನ್ನು ಪಡಕೊಂಡಿರಬಹುದು. ತಮ್ಮ ನಿರ್ಲಕ್ಷ್ಯ ಮತ್ತು ಉಡಾಫೆಯಿಂದಲೇ ಬದುಕನ್ನು ಅರ್ಥಮಾಡಿಕೊಂಡಿರಬಹುದು. ತಮ್ಮ ದೈನ್ಯ ಮತ್ತು ಕನಸು ಕಾಣುವ ಗುಣದಿಂದಲೇ ಎಲ್ಲವನ್ನೂ ಮೀರುವ ಯತ್ನ ಮಾಡಿರಬಹುದು. ಪುರಾಣಗಳ ಥರ ಎಲ್ಲವನ್ನೂ ಸೃಷ್ಟಿಸಿಕೊಳ್ಳುತ್ತಾ ನಾಶ ಮಾಡುತ್ತಾ ಬದುಕುತ್ತಿರಬಹುದು.
ಯಾರಿಗೆ ಗೊತ್ತು?
ನಮ್ಮ ಶಕ್ತಿ ನಮ್ಮ ಬಡತನದಲ್ಲೂ ದಾಹದಲ್ಲೂ ನಿರಾಕರಣೆಯಲ್ಲೂ ಅನುಕಂಪದಲ್ಲೂ ಅಡಗಿರಬಹುದು.

ಮೊನ್ನೆ ಆಕಸ್ಮಿಕವಾಗಿ ಆಕಾಶ ಕಣ್ಣಿಗೆ ಬಿದ್ದು..

ಆಕಾಶ ನೋಡುವುದಕ್ಕೆ ನೂಕುನುಗ್ಗಲೇ ಎನ್ನುವ ಗಾದೆಯೊಂದು ಚಾಲ್ತಿಯಲ್ಲಿದೆ. ಅದರ ಅರ್ಥ ಆಕಾಶ ವಿಶಾಲವಾಗಿದೆಯೆಂದೋ ಅದನ್ನು ನೋಡುವುದೂ ಅಂಥ ವಿಶೇಷ ಅಲ್ಲವೆಂದೂ ಆಕಾಶವನ್ನು ಯಾರು ಯಾವಾಗ ಬೇಕಾದರೂ ನೋಡಬಹುದೆಂದೂ ಇರಬಹುದು. ಈ ಮಾತಿನಲ್ಲಿ ಆಕಾಶದ ಬಗ್ಗೆ ನಮಗೆಷ್ಟು ಕೀಳುಭಾವನೆ ಇದೆ ಅನ್ನುವುದೂ ಗೊತ್ತಾಗುತ್ತದೆ. ಆಕಾಶ ನೋಡುವುದು ನಮ್ಮ ಮಟ್ಟಿಗೆ ಒಂದು ಅರ್ಥಹೀನ ಕ್ರಿಯೆ. ತಲೆಯೆತ್ತಿ ನೋಡಿದರೆ ಆಕಾಶ ಕಾಣುತ್ತದೆ ಎಂಬಲ್ಲಿಗೆ ಮುಗೀತು.
ಆಕಾಶ ಒಂದು ಬೋಧಿವೃಕ್ಪ. ನನಗೆ ಸುದ್ದಿ ಕೊಡೋದು ಆ ಆಕಾಶ ಅನ್ನುವ ಅರ್ಥ ಬರುವ ಸಾಲೊಂದನ್ನು ತಮಿಳು ಚಿತ್ರಕವಿ ವೈರಮುತ್ತು ಬರೆದಿದ್ದರು. ನಾವು ಏನೂ ಹೊಳೆಯದಿದ್ದಾಗ ಆಕಾಶ ನೋಡುತ್ತೇವೆ. ಗೊತ್ತಿಲ್ಲದ ಪ್ರಶ್ನೆ ಎದುರಾದಾಗ ಆಕಾಶ ನೋಡುತ್ತೇವೆ. ಗೊತ್ತಿಲ್ಲದ ವ್ಯಕ್ತಿಯಾದ ದೇವರ ಪ್ರಸ್ತಾಪ ಬಂದಾಗ ಆಕಾಶ ನೋಡುತ್ತೇವೆ. ಹೀಗಾಗಿ ಆಕಾಶ ಎನ್ನುವುದು ನಮ್ಮ ಪಾಲಿಗೆ ಗೊತ್ತಿಲ್ಲದ ಎಲ್ಲದಕ್ಕೂ ಉತ್ತರ ಸಿಗುವ ಇ್ಫಾರ್ಮೇಶ್ ಸೆಂಟ್; ಮಾಹಿತಿ ಕೇಂದ್ರ ಇರಬಹುದೇ?
ನಾವು ಆಕಾಶವನ್ನು ತುಂಬ ಕಡೆಗಣಿಸುತ್ತೇವೆ ಅನ್ನುವುದಂತೂ ನಿಜ. ಸದಾ ತಲೆಮೇಲಿರುತ್ತೆ ಅನ್ನುವ ಉಡಾಫೆ. ಯಾವತ್ತೂ ಕಳಚಿಬೀಳೋದಿಲ್ಲ ಅನ್ನುವ ಅಭಯ. ನನ್ನೊಬ್ಬದೇನಲ್ಲವಲ್ಲ ಎಂಬ ನಿರ್ಲಕ್ಪ್ಯ.ಯಾರಪ್ಪನ ಸೊತ್ತೂ ಅಲ್ಲವಲ್ಲ ಎಂಬ ಧೈರ್ಯ. ಯಾವಾಗ ಬೇಕಾದರೂ ನೋಡ್ಕೋಬಹುದು ಅನ್ನುವ ನಿರಾಳ. ಇವೆಲ್ಲ ಸೇರಿ ನಮ್ಮನ್ನು ಆಕಾಶ ನೋಡುವುದಕ್ಕೆ ಅವಕಾಶ ಮಾಡಿಕೊಡುವುದೇ ಇಲ್ಲ. ಬೆಂಗಳೂರಿನಂಥ ಊರುಗಳಲ್ಲಿ ಆಕಾಶ ನೋಡುವುದಕ್ಕೆಂದೇ ನೆಹರೂ ಪ್ಲಾನಟೇರಿಯಮ್ಮಿಗೆ ಹೋಗುವವರಿದ್ದಾರೆ. ಕಣ್ಣೆತ್ತಿ ನೋಡಿದರೆ ಕಾಣುವುದಕ್ಕೆ ತಾರಾಲಯಕ್ಕೆ ಯಾಕೆ ಹೋಗಬೇಕು. ತಾರಮ್ಮಯ್ಯ ತಂದು ತೋರಮ್ಮಯ್ಯ ಅಂತ ಆಕಾಶವನ್ನು ಯಾರಾದರೂ ತೋರಬೇಕೇ?
ಆಕಾಶದ ಬಗ್ಗೆ ಯಾರು ಏನೇನು ಬರೆದಿದ್ದಾರೆ ಅಂತ ಹುಡುಕಿದರೆ ಸಿಕ್ಕಿದ್ದು ಕೆಲವೇ ಕೆಲವು ಪ್ರಾಸಂಗಿಕ ಉಲ್ಲೇಖಗಳು ಮಾತ್ರ. ಖಗೋಲ ವಿಜ್ಞಾನಿಗಳಿಗೆ ಆಕಾಶ ಮುಗಿಯದ ಪ್ರಶ್ನೆಗಳ ಸರಮಾಲೆ. ಕವಿಗಳಿಗೆ ಆಕಾಶ ಕವಿಸಮಯ. ವಿಜ್ಞಾನಿಗಳು ಮತ್ತು ಕವಿಗಳನ್ನು ಬಿಟ್ಟರೆ ಎಲ್ಲವನ್ನೂ ಬೆರಗಿನಿಂದ ನೋಡುವವರು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲವೇನೋ ಅನ್ನಿಸುತ್ತದೆ. ಇವರಿಬ್ಬರ ನಡುವೆ ಒಂದೇ ಒಂದು ವ್ಯತ್ಯಾಸವೆಂದರೆ ಕವಿಗಳು ಬೆರಗು ಹುಟ್ಟಿಸುತ್ತಾರೆ; ವಿಜ್ಞಾನಿಗಳು ಬೆರಗು ಕಳೆದು ಬೆತ್ತಲಾಗಿಸುತ್ತಾರೆ. `ಬಾನಿನಲ್ಲಿ ಒಂಟಿತಾರೆ, ಸೋನೆ ಸುರಿವ ಇರುಳ ಮೋರೆ, ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ' ಎಂದು ಲಕ್ಪ್ಮೀನಾರಾಯಣ ಭಟ್ಟರು ಬರೆದ ಸೊಗಸಾಗ ಗೀತೆ ವಿಜ್ಞಾನಿಯ ಕೈಗೆ ಸಿಕ್ಕರೆ ಬಾನು, ಒಂಟಿತಾರೆ, ಸೋನೆ, ಇರುಳು, ನೀರೆ ಎಲ್ಲವೂ ವ್ಯಾಖ್ಯಾನಕ್ಕೆ ಒಳಗಾಗಿ ಚಿಂದಿಯಾಗುತ್ತದೆ. ವಿಜ್ಞಾನಿಯ ಪಾಲಿಗೆ ಚಂದ್ರಮಂಚವೂ ಇಲ್ಲ, ಚಕೋರವೂ ಇಲ್ಲ, ಚಾತಕ ಪಕ್ಪಿಯೂ ಇಲ್ಲ. ಬೆರಗು ಉಳಿಯಬೇಕಿದ್ದರೆ ಅಜ್ಞಾನಿಯಾಗಿರುವುದೇ ವಾಸಿ.
ಮತ್ತೆ ಆಕಾಶಕ್ಕೆ ಬಂದರೆ ಅದನ್ನು ಇನ್ನಿಲ್ಲದಂತೆ ಬಳಸಿಕೊಂಡದ್ದು ಸಿನಿಮಾ ಸಾಹಿತಿಗಳು. ಒಂದು ಕಾಲದಲ್ಲಿ ಆಕಾಶ ಎಂಬ ಪದವಿಲ್ಲದೆ ಚಿತ್ರಗೀತೆಗಳು ಮುಗಿಯುತ್ತಿರಲಿಲ್ಲ;ಶುರುವಾಗುತ್ತಿರಲಿಲ್ಲ. ಹೆಣ್ಣಿನ ಕೈಬಿಡುವುದಿಲ್ಲ ಅನ್ನುವುದಕ್ಕೂ ಆಕಾಶದ ಹೋಲಿಕೆ, ಪ್ರೇಯಸಿ ಆಕಾಶದೀಪ, ಮದುವೆಯಾಗುವ ಹುಡುಗಿ ಆಕಾಶದಿಂದ ಧರೆಗಿಳಿದ ರಂಭೆ, ಪ್ರಿಯಕರ ಆಕಾಶದಲ್ಲಿರುವ ರವಿ.. ಹೀಗೆ ಮಾತು ಮಾತಿಗೆ ಆಕಾಶದ ಪ್ರಸ್ತಾಪ. ಬಹುಶಃ ಪ್ರೇಮಿಗಳಂಥ ಆಕಾಶಕಾಯ ಮತ್ತೊಂದಿಲ್ಲ!
ಕನ್ನಡ ಕವಿಗಳೂ ಆಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಕಾಡಮೂಲಕವೆ ಪಥ ಆಗಸಕ್ಕೆ, ಧ್ರುವನಕ್ಪತ್ರಕ್ಕೆ ಅನ್ನುವ ಅಡಿಗರ ಸಾಲು ನಮ್ಮ ಕಷ್ಟಕಾರ್ಪಣ್ಯದ ಹಾದಿ ಕೊನೆಗೆ ಶ್ರೇಷ್ಠತೆಯತ್ತ ನಮ್ಮನ್ನು ಒಯ್ಯುವುದರ ಕುರಿತಾಗಿತ್ತು.ಕೆಎ್ನರಸಿಂಹಸ್ವಾಮಿಯವರಂತೂ ಆಕಾಶಕ್ಕೇ ಕಣ್ಣುನೆಟ್ಟು ಕೂತವರ ಹಾಗೆ ಪ್ರತಿಯೊಂದು ಕವಿತೆಯಲ್ಲೂ ಆಕಾಶವನ್ನೇ ತಂದರು. ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಾಗ ರಾಯರು ಮಾವನ ಮನೆಗೆ ಬರುತ್ತಾರೆ. ಕೋಟಿಕಂಗಳ ಥಳಥಳಿಪ ತಾರೆಯಲಿ ಸ್ವಪ್ನ ಸುಂದರಿ ಕಾಣಿಸುತ್ತಾಳೆ. ಅವರಿಗೆ ಕಂಡ ಮೋಡಗಳಲ್ಲೂ ಪ್ರೇಮಪಲ್ಲವಿ;
ಶ್ರೀಕೃಷ್ಣನಂತೊಂದು ಮುಗಿಲು
ರಾಧೆಯಂತಿನ್ನೊಂದು ಮುಗಿಲು
ಹೊಳೆದಾರಿ ಕಾಯುವ ಮುಗಿಲು
ಜರತಾರಿ ಸೆರಗಿನ ಮುಗಿಲು
ಕೆನ್ನೆ ಕೆಂಪಾದೊಂದು ಮುಗಿಲು ಎಲ್ಲಿ
ಇನ್ನೊಂದು ಮುತ್ತೆನುವ ಮುಗಿಲು!
ಈ ಜಗತ್ತಿಗೆ ಎಲ್ಲವನ್ನೂ ಕೊಡುವುದು ಆಕಾಶವೇ ಅಲ್ಲವೇ? ಅಲ್ಲಿಂದಲೆ ಬೆಳಕು, ಅಲ್ಲಿಂದಲೆ ಬಿಸುಪು, ಅಲ್ಲಿಂದಲೇ ಗಾಳಿ, ಅಲ್ಲಿಂದಲೇ ಮಳೆ. ಆಕಾಶಕ್ಕೆ ಮುಖಮಾಡಿ ಎದ್ದರಷ್ಟೇ ಬೆಳೆ. ಇಷ್ಟೆಲ್ಲ ಕೊಡುವ ಆಕಾಶವೋ ಪರಮ ಉದಾರಿ. ಅದು ಯಾವತ್ತೂ ಏನನ್ನೂ ತನ್ನಲ್ಲಿ ಇಟ್ಟುಕೊಂಡದ್ದಿಲ್ಲ. ಬೆಳಗ್ಗೆ ಬಿಸಿಲನ್ನೂ ರಾತ್ರಿ ತಂಬೆಳಕನ್ನೂ ಕೊಡುತ್ತ ಬಂದಿದೆ; ಆಕಾಶದಂಥ ಮುಕ್ತ ಮನಸ್ಸು ಮತ್ತೊಂದಿಲ್ಲ. ಅಲ್ಲಿ ನೀವು ಏನನ್ನೂ ಬಚ್ಚಿಡಲಾರಿರಿ. ಎಂಥ ಜಿಪುಣನೂ ದುಡ್ಡನ್ನು ಹುಗಿದಿಡುವುದು ಈ ನೆಲದೊಳಗೇ!
****
ಆಕಾಶದಲ್ಲೇನಿದೆ ವೈವಿಧ್ಯ ಎಂದು ಕೇಳಬೇಡಿ. ಆಕಾಶಕ್ಕೋ ಕ್ಪಣಕೊಂದು ಬಣ್ಣ. ಸಂಜೆಗೆಂಪಿನ ಆಕಾಶ, ಶಿಶಿರದ ನೀಲಾಕಾಶ, ಆಷಾಢದ ಬರಿ ಆಕಾಶ, ಶ್ರಾವಣದ ಕಪ್ಪು ಮೋಡ ಮುಂಗುರುಳ ಆಕಾಶ, ಬೆಳಗಿನ ಸ್ತಬ್ದ ಆಕಾಶ, ಸಂಜೆಯ ಮುಗ್ದ ಆಕಾಶ, ಮಧ್ಯಾಹ್ನದ ಕ್ರೂರ ಆಕಾಶ, ರಾತ್ರಿಯ ನಿಗೂಢ ಆಕಾಶ- ಹೀಗೆ ಆಕಾಶಕ್ಕೆ ಹಲವು ಮುಖಗಳು. ಕಂಡವರಿಗಷ್ಟೇ ಕಂಡೀತು,ಆದರೆ ಎಲ್ಲರಿಗೂ ಉಂಟು ಕಾಣುವುದಕ್ಕೆ ಅವಕಾಶ.
ಹಾಗೆ ನೋಡಿದರೆ ಆವತ್ತಿನ ನಮ್ಮ ಭಾವಲಹರಿಯನ್ನು ನಿಯಂತ್ರಿಸುವುದು ಆಕಾಶವೇ. ಆಕಾಶ ಮೋಜ ಕವಿದುಕೊಂಡು ಬಿಮ್ಮಗಿದ್ದರೆ ಮನಸ್ಸೂ ಬಿಮ್ಮಗೆ ಇದ್ದುಬಿಡುತ್ತದೆ. ಆಕಾಶ ನೀಲಿಯಾಗಿ ಥಳಥಳಿಸುತ್ತಿದ್ದರೆ, ಮನಸ್ಸೂ ಪ್ರಫುಲ್ಲವಾಗಿರುತ್ತದೆ. ಅಲ್ಲಲ್ಲಿ ಮೋಡಗಳು ತೇಲುತ್ತಾ ಆಕಾಶ ಕಡಲಿನ ಹಾಗಿದ್ದರೆ ಮನಸ್ಸು ಹಾಯಿಹಡಗಿನ ಹಾಗೆ ತೇಲುತ್ತದೆ. ದಿಗಿಲಿಲ್ಲದ ಆಕಾಶದಲ್ಲಿ ಮನ ಮುಗಿಲಾಗುತ್ತದೆ.
ನಾವು ಆಕಾಶ ನೋಡದೆ ಅದೆಷ್ಟು ವರುಷಗಳಾದವೋ ಏನೋ? ಆಕಾಶ ನೋಡುವುದಕ್ಕೂ ನಮಗೆ ವ್ಯವಧಾನವಿಲ್ಲ. ಆಗೀಗ ಆಕಾಶದಲ್ಲಿ ಹಾರುವ ವಿಮಾನವನ್ನು ನೋಡುತ್ತೇವೆ; ಆಗೀಗ ನಾವೇ ಆಕಾಶಕ್ಕೆ ಹಾರುತ್ತೇವೆ. ಗಗನಗಾಮಿಯಾದವನಿಗೆ ಆಕಾಶ ಖಂಡಿತಾ ಕಾಣುವುದಿಲ್ಲ. ಯಾಕೆಂದರೆ ಅವನೂ ಆಕಾಶದ ಒಂದು ಭಾಗವಾಗಿಬಿಡುತ್ತಾನೆ.
ಆದರೆ ಆಕಾಶದಿಂದ ಬಂದಿಳಿಯುವ ಅನ್ಯಗ್ರಹ ಜೀವಿಗಳ ಕತೆಯಿಂದ ಹಿಡಿದು ಆಕಾಶದಲ್ಲಿ ನಿಂತುಕೊಂಡು ಪುಷ್ಪವೃಷ್ಟಿಗೈಯುತ್ತಿದ್ದ ದೇವತೆಗಳ ತನಕ, ಈ ಆಕಾಶವನ್ನು ನಮ್ಮ ಇತಿಹಾಸಪುರಾಣಕತೆಗಳು ಆವರಿಸಿಕೊಂಡಿವೆ. ಇವತ್ತಿಗೂ ಸತ್ತವನು ಮೇಲೆ ಹೋದ ಅನ್ನುತ್ತಾರೆ. ದೇವರೆಲ್ಲಿದ್ದಾನೆ ಅಂದರೆ ಆಕಾಶ ತೋರಿಸುತ್ತಾರೆ. ಆಕಾಶದ ಬೀದಿಯಲ್ಲಿ ನಿತ್ಯ ಸಂಚರಿಸುವ ಸೂರ್ಯ, ಚಂದ್ರರಿದ್ದಾರೆ. ಆಕಾಶ ಮಳೆಗಾಲದಲ್ಲಿ ಮುನಿಸಿಕೊಂಡ ಪ್ರೇಯಸಿಯ ಹಾಗೆ, ಬೇಸಿಗೆಯಲ್ಲಿ ದುಷ್ಟ ಯಜಮಾನನ ಹಾಗೆ, ಮಳೆಗಾಲದಲ್ಲಿ ಸೋರುವ ಛತ್ರಿಯ ಹಾಗೆ, ಕಾರ್ತೀಕದಲ್ಲಿ ದೀಪ ಹಚ್ಚಿಟ್ಟ ಅಂಗಳದ ಹಾಗೆ ಭಾಸವಾಗುತ್ತದೆ. ನಾವೂ ಆಕಾಶದ ಒಂದು ಭಾಗವಾಗಬೇಕು ಅನ್ನಿಸುತ್ತದೆ.
ಅನಂತ ಅವಕಾಶಕ್ಕೆ ಸ್ಕೈ ಈ್ ದಿ ಲಿಮಿ್ ಅಂತಾರೆ. ಅದು ಸರಿಯಾದ ಉಪಮೆ ಹೌದೋ ಅಲ್ಲವೋ ಗೊತ್ತಿಲ್ಲ. ಯಾಕೆಂದರೆ ನಮ್ಮ ನಮ್ಮ ಆಕಾಶ ನಮ್ಮದು. ಎಲ್ಲಾ ಆಕಾಶವೂ ನಮ್ಮದಾಗುತ್ತದೆ ಅನ್ನುವ ನಂಬಿಕೆಯೂ ಇರಕೂಡದು. ನಮ್ಮ ಹುಟ್ಟಿದೂರಿನ ಆಕಾಶಕ್ಕಾಗಿ ಮುಂದೊಂದು ದಿನ ಮತ್ತೊಂದೂರಲ್ಲಿ ಹುಡುಕಿದರೆ ಸಿಕ್ಕೀತು ಅನ್ನುವ ಭರವಸೆಯಿಲ್ಲ.
ಆಕಾಶ ಎಲ್ಲಾ ಕಡೆ ಒಂದೇ ಥರ ಅನ್ನುತ್ತಾರೆ. ಅದೂ ಸುಳ್ಳು. ನೀವು ಬಾಲ್ಯದಲ್ಲಿ ಕಂಡ ಆಕಾಶ, ಈಗ ನಿಮಗೆ ಕಾಣದು. ನಮ್ಮೂರಲ್ಲಿ ಸ್ಕೂಲಿಗೆ ಹೋಗುತ್ತಾ ತಲೆಯೆತ್ತಿ ನೋಡಿದಾಗ ಕಂಡ ಆಕಾಶಕ್ಕಾಗಿ ಹುಡುಕುತ್ತಲೇ ಇದ್ದೇನೆ. ಅದು ಮತ್ತೆಲ್ಲೂ ಕಾಣಿಸಿಲ್ಲ. ಆದರೆ ಆಕಾಶಕ್ಕೆ ಸಾವಿಲ್ಲ ಅನ್ನುತ್ತಾರೆ. ಸತ್ತವರು ಮೇಲಕ್ಕೆ ಹೋಗುತ್ತಾರೆ ಅಂದ ಮೇಲೆ ಆಕಾಶವೇ ಸತ್ತರೆ ಅದೆಲ್ಲಿಗೆ ಹೋಗಬೇಕು ಹೇಳಿ?
ಒಂದೇ ಒಂದು ಪ್ರಶ್ನೆ; ನಮ್ಮ ಬಾಲ್ಯದ ಆಕಾಶ ಈಗ ಕಾಣುವುದಿಲ್ಲ ಅನ್ನೋದಂತೂ ನಿಜ. ಕಣ್ಮರೆಯಾದದ್ದು ಆಕಾಶವೋ ಅದನ್ನು ನೋಡುವ ಮನಸ್ಸೋ? ಮನವಿಲ್ಲದರನ್ನು ಆಕಾಶವಾದರೂ ಏನು ಮಾಡೀತು?
ಮನೆಯ ಕಿಟಕಿಯಿಂದ ಕಾಣುವ ತೇಪೆ ಆಕಾಶ ನೋಡುತ್ತಾ ಅದನ್ನು ನಮ್ಮೊಳಗೆ ಆವಾಹಿಸಿಕೊಳ್ಳಲು ಯತ್ನಿಸುತ್ತಾ ಬದುಕು ಸಾಗುತ್ತದೆ. ಆಕಾಶ ಉಚಿತವಾದ್ದರಿಂದ ತೇಪೆ ಆಕಾಶವೇ ಯಾಕೆ ಬೇಕು. ಇಡೀ ಆಕಾಶವನ್ನು ತುಂಬಿಕೊಳ್ಳೋಣ. ಆಗ ಮಂಜಾಗಿ, ಈಗ ಮಳೆಯಾಗಿ, ಮತ್ತೊಮ್ಮೆ ಹಿತವಾದ ಬಿಸಿಲ ಹೂಮಳೆಯಾಗಿ ನಮ್ಮೆಡೆಗೆ ಇಳಿದು ಬರುವ ಆಕಾಶದ ಎತ್ತರಕ್ಕೆ ಒಮ್ಮೆಯಾದರೂ ಏರುವುದು ಹೇಗೆ?
ಆಕಾಶಕ್ಕೆ ಏಣಿ ಹಾಕೋಕೆ ಸಾಧ್ಯವೇ ಅಂತಾರೆ! ಮನಸ್ಸಿದ್ದರೆ ಮಾರ್ಗವಿದೆ.

Wednesday, January 9, 2008

ಕನ್ನಡ ಕುವರಿಯ ಮುಡಿಗೆ ಕೆಂಡಸಂಪಿಗೆ..

ಆಗ ನಾವು ಉಪ್ಪಿನಂಗಡಿಯಲ್ಲಿದ್ದೆವು.
ಅದೇ ಹೊತ್ತಿಗೆ ಕೈಗೆ ಸಿಕ್ಕಿದ್ದು ರಶೀದರ ಹಾಲು ಕುಡಿದ ಹುಡುಗಾ ಕಥಾಸಂಕಲನ. ಅದನ್ನು ಮೊದಲು ಸಂಪಾದಿಸಿದ್ದು ಗೆಳೆಯ ಅಶ್ರಫ್. ಅದೆಲ್ಲಿಂದ ತಂದನೋ ಗೊತ್ತಿಲ್ಲ. ಓದಿ ನನ್ನ ಕೈಗೆ ಕೊಟ್ಟ. ನಾನು ಓದಿ ಖುಷಿಪಟ್ಟು ಅದನ್ನು ಯಾರಿಗೂ ಕೊಡುವುದಿಲ್ಲ ಎಂದು ಹೇಳಿ ನಮ್ಮಲ್ಲೇ ಜಗಳವಾಗಿ ಝೆರಾಕ್ಸು ಮಾಡಿಸಿ ಎಲ್ಲರೂ ಓದಿ ರಶೀದನ್ನು ಆರಾಧಿಸಲು ಆರಂಭಿಸುವ ಹೊತ್ತಿಗೆ ರಶೀದ್ ಮತ್ತೆ ಮಾಯವಾದರು.
ಆಮೇಲೆ ಅವರು ಕಾಣಿಸಿಕೊಂಡದ್ದು ಲಂಕೇಶ್ ಪತ್ರಿಕೆಯಲ್ಲಿ. ಆಗ ಅವರು ನೇಪಾಳದಲ್ಲೋ ಶಿಲ್ಲಾಂಗಿನಲ್ಲೋ ಇದ್ದರು. ಅಲ್ಲಿಂದ ಲಂಕೇಶರಿಗೆ ಪತ್ರ ಬರೆಯುತ್ತಿದ್ದರು.ಕೊನೆಕೊನೆಗೆ ಅದು ಕಣ್ಮರೆಯಾಗುತ್ತಾ ರಶೀದ್ ಮತ್ತೆ ಮಾಯವಾದರು. ಅದಾದ ನಂತರ ಅವರ ಧ್ವನಿ ಕೇಳಿಸಿದ್ದು ಮೈಸೂರು ಆಕಾಶವಾಣಿಯಲ್ಲಿ. ಅದರ ಜೊತೆಜೊತೆಗೇ ಮೈಸೂರು ಪೋಸ್ಟ್ ಬ್ಲಾಗಿನಲ್ಲಿ.
ಇದೀಗ ರಶೀದ್ ಆಕಾಶವಾಣಿ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಕೆಂಡಸಂಪಿಗೆ ಎನ್ನುವ -ವೆಬ್ ಪತ್ರಿಕೆ- ಆರಂಭಿಸಿದ್ದಾರೆ. ಅನೇಕ ಬ್ಲಾಗಿಗರಿಂದ, ಬರೆಯುವುದನ್ನು ಬಿಟ್ಟಿದ್ದ ಅನೇಕ ಸೋಮಾರಿಗಳಿಂದ ಬರೆಸಿದ್ದಾರೆ.
ಸಿಂಧು, ಶ್ರೀರಾಮ್, ಚೇತನಾ ಹೀಗೆ ಈಗಾಗಲೇ ಬ್ಲಾಗ್ ಮತ್ತು ಬರಹಗಳಿಂದ ಪರಿಚಯವಾಗಿರುವ ಮೆಚ್ಚಿನ ಹೆಸರುಗಳ ಜೊತಗೇ ಒಂದು ಅಚ್ಚರಿಯನ್ನೂ ಕೊಟ್ಟಿದ್ದಾರೆ ರಶೀದ್.
ಅದು ರಾಜೇಶ್ವರಿ ತೇಜಸ್ವಿಯವರ ಬರಹ. ಅವರ ಮನೆಗೆ ಸುಮಾರು ಹದಿನೈದು ಸಲವಾದರೂ ಹೋಗಿರಬಹುದು ನಾನು. ಯಾವತ್ತೂ ಅವರು ಬರೆಯಬಹುದು ಎಂದು ಯೋಚಿಸಿರಲೇ ಇಲ್ಲ. ಕಾಫಿ ಗಿಡದಲ್ಲಿ ಅರಳಿರುವ ಹೂವಿನ ಹಾಗೆ, ಮುದ ಕೊಡುವ ಈ ಬರಹದ ಒಂದು ತುಣುಕು ಇಲ್ಲಿದೆ. ಇದು ಸಣ್ಣ ಸ್ಯಾಂಪಲ್ ಅಷ್ಟೇ. ಪೂರ್ತಿ ಬರಹಕ್ಕೆ ಕೆಂಡಸಂಪಿಗೆ ಮುಡಿಯಿರಿ.

ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ

ಒಂದು ಕಾಲದಲ್ಲಿ ತರುಣರಿಗೆ ಕಾಫಿ ತೋಟದವರ ಅಳಿಯನಾಗುವುದೇ ಹೆಬ್ಬಯಕೆ. ಅಥವಾ ಇವರ ಮನೆಯಂಗಳದಲ್ಲಿ ಬೆಳೆದ ಮಗಳನ್ನು ಸೊಸೆ ಮಾಡಿಕೊಳ್ಳುವುದೆಂದರೆ ಬಯಲು ಸೀಮೆ ಕಡೆಯವರಿಗೆ ಹಿರಿಹಿರಿ ಹಿಗ್ಗು. ಈಗ ಸ್ವಲ್ಪ ಪರಿಸ್ಥಿತಿ ಬದಲಾಯಿಸಿದೆ. ಎಲ್ಲರ ಆರ್ಥಿಕ ಸ್ಥಿತಿ ಬದಲಿಸಿದಂತೆ. ಮುಳ್ಳಯ್ಯನ ಗಿರಿ ಚಂದ್ರದ್ರೋಣ ಪರ್ವತದ ತಪ್ಪಲಿನ (ಬಾಬಾ ಬುಡನ್‌ಗಿರಿ) ಕಡೆಯಿಂದಲೂ ಬೇಲೂರಿನ ಕಡೆಯಿಂದಲೂ ಮೂಡಿಗೆರೆಗೆ ಬಂದು ಹ್ಯಾಂಡ್‌ಪೋಸ್ಟ್‌ನಲ್ಲಿ ಹಾಯ್ದು ಕುದುರೆಮುಖ ತಲುಪುವವರೆಗೂ ಉದ್ದಕ್ಕೂ ಕಾಣಸಿಗುವುದು ಕಾಫಿತೋಟವೇ. ಸಾಮಾನ್ಯವಾಗಿ ಏಪ್ರಿಲ್ , ಮೇನಲ್ಲಿ ಹೂವಿನ ಮಳೆ ಆಗುತ್ತೆ.ಈ ಮಳೆ ತೋಟದ ಮಾಲೀಕನನ್ನು ಆಡಿಸುತ್ತೆ ಕುಣಿಸುತ್ತೆ. ಒಳ್ಳೆ ಮಳೆ ಅಂದರೆ ಅಂದಾಜು ಒಂದು ಇಂಚು ಮಳೆಯಾದರೆ ಹೂ ಚೆನ್ನಾಗಿ ಅರಳುವ ನಿರೀಕ್ಷೆ ಇದ್ದರೂ ಸಾಕು ಬ್ಯಾಂಕಿನ ಮುಂದೆ ಕ್ಯೂ ದೊಡ್ಡದಂತೆ, ಹೊಸ ಮಾಡಲ್‌ಕಾರು ಕೊಳ್ಳಲೋ ಬದಲಿಸಲೋ ಹವಣಿಕೆಯಲ್ಲಿರುತ್ತಾರೆ. ಎಲ್ಲರಿಗೂ ಗೊತ್ತಿರುವ ವಿಷಯ ಮದುವೆ ಮಾರ್ಕೆಟ್ಟೂ ಕುದುರುತ್ತೆಂದು. ರಸ್ತೆಯಲ್ಲಿ ಸಿಕ್ಕಿದವರೆಲ್ಲಾ ನಿಮಗೆಷ್ಟಾತು ಮಳೆಯೆಂದು ವಿಚಾರ ವಿನಿಮಯ ಮಾಡಿಕೊಳ್ಳುವವರೆ.ಈ ಹೂಮಳೆ ಬಂದು ಎಂಟು ಹತ್ತು ದಿನಗಳ ನಂತರ ಕಾಫಿ ಹೂ ಅರಳುತ್ತೆ. ಈಗ ನೋಡಿ ತೋಟದ ಗತ್ತೇ ಬೇರೆ. ಇದರ ಸೊಬಗು ಬಲು ಚೆಂದ. ಇಡೀ ನಾಡೇ ಸೊಬಗನ್ನು ಸೂಸುತ್ತಿರುತ್ತೆ. ಇದರ ಸುವಾಸನೆ ಹಿನ್ನೆಲೆ ತಂಬೂರಿ ಶ್ರುತಿಯಂತೆ ಎಲ್ಲೆಲ್ಲೂ ವಾತಾವರಣವೇ ಅದಾಗುತ್ತೆ. ಪಚೇಂದ್ರಿಯಕ್ಕೇ ಸಂತೋಷ ಕೊಡುತ್ತೆ. ಇದು ರಮಣೀಯ ದೃಶ್ಯ. ಕುವೆಂಪು ಅವರು ಹೇಳಿದಂತೆ ‘ಅದ್ಭುತ ! ಹೂವಿನ ಚೆಲುವನ್ನು ಕಣ್ಣು ನೋಡಿ ಪೂರೈಸಲಾಗುವುದಿಲ್ಲ. ಹೂವಿನ ಕಡಲಿನ ಮಧ್ಯೆ ತೇಲಾಡಿ ಆ ಸೌಂದರ್ಯದಲ್ಲಿ ಓಲಾಡಿ ಆ ವೈಭವವನ್ನು ಅನುಭವಿಸಿಯೇ ಸವಿಯಬೇಕು !’ ಕಾಫಿ ಹೂ ಅರಳಿದಾಗ ಮುಂಜಾನೆಯಲ್ಲಿ ಮಧು ಹೀರಲು ಬರುವ ಜೇನಿನ ಜೇಂಕಾರಕ್ಕೆ ಓಂಕಾರವಾಗಿ ಬೇರೊಂದು ಲೋಕವೇ ತೆರೆದುಕೊಳ್ಳುತ್ತೆ. ಜೇನು ಮುತ್ತುವುದು ಪರಾಗ ಸ್ಪರ್ಶಕ್ಕೆ ಅತಿಮುಖ್ಯವಾದದ್ದು.
ಈ ಸಮಯದಲ್ಲೇನಾದರೂ ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ ಆವರಿಸುವುದೇ ಸೈ. ಆ ವರ್ಷದ ಇಳುವರಿ ಕಡಿಮೆಯಾಗುತ್ತೆನ್ನುವುದು ನಮ್ಮ ಅನುಭವವೇ ಆಗಿದೆ. ಈ ಹೂವಿನ ಜೇನು ತೆಳ್ಳಗೆ ನೀರಿನಂತೆ ಇರುತ್ತೆ. ಹೂವಿನ ಗಾಢ ಪರಿಮಳವೂ ಇರುತ್ತೆ. ತಿನ್ನಲು ನೆಕ್ಕಲು ಬಲು ರುಚಿ. ಬನ್ನಿ ಒಮ್ಮೆಯಾದರೂ ಅನುಭವಿಸಿ ಆನಂದಿಸಿರಿ ಈ ಅದ್ಭುತವನ್ನು.
Tuesday, January 8, 2008

ಈ ವಾರದ ಕೊನೆಗೊಂದು ನಾಟಕ ನೋಡೋಣ ಅಂತ...


ನೀನಾನಾದ್ರೆ ನಾನೀನೇನಾ ನಾಟಕದಲ್ಲಿ ಸಿಹಿಕಹಿಚಂದ್ರು ಮತ್ತು ಶ್ರೀನಿವಾಸಪ್ರಭು

ಸೂರಿಯವರ ನಗಿಸುವ ನಾಟಕ ನೀನಾನಾದ್ರೆನಾನೀನೇನಾ ಈ ಶನಿವಾರ, ಜನವರಿ 12 ಮತ್ತು ಭಾನುವಾರ, ಜನವರಿ 13 ರಂದು ರಂಗಶಂಕರದಲ್ಲಿದೆ. ಶನಿವಾರ ಸಂಜೆ 7.30ಕ್ಕೆ ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30 ಕ್ಕೆ.
ಪ್ರವೇಶ -ಎಪ್ಪತ್ತು ರೂಪಾಯಿಗಳು. ಟಿಕೆಟ್ ಬೇಕಿದ್ದರೆ ಸಂಪರ್ಕ-9886924362.

ಸೂರಿಯ ಮಾತುಗಳೊಂದಿಗೆ ಒಂದು ರಂಗು ರಂಗು ರಂಗಸಂಜೆ


ಷೇಕ್ಸ್ ಪಿಯರ್ ಹೇಗಿದ್ದ. ಅವನು ನಮ್ಮ ಹಾಗೆ ಕೊಂಚ ಎಡವಟ್ಟನೂ ಸೋಮಾರಿಯೂ ಆಗಿರಲಿಲ್ಲವೇ? ಎಲ್ಲರೂ ಮೇಷ್ಟ್ರುಗಳ ಥರ ಇದ್ದು ಬಿಟ್ಟರೆ ಬರೆದದ್ದೆಲ್ಲ ಪಠ್ಯವಾಗುತ್ತದೆಯೇ ವಿನಾ ಕಾವ್ಯವಾಗುವುದು ಸಾಧ್ಯವಾ? ಬದುಕಲ್ಲಿ ಶಿಸ್ತು ಮುಖ್ಯವಾ? ಶಿಸ್ತಿನಿಂದ ಬದುಕುತ್ತಾ ಬದುಕುತ್ತಾ ಯಾಂತ್ರಿಕವಾಗುತ್ತಾ ಹೋಗುತ್ತೇವಾ? ಷೇಕ್ಸ್ ಪಿಯರ್ ಅಸಾಧ್ಯ ಅಶಿಸ್ತಿನ ಜಗಳಗಂಟ, ವ್ಯಾಮೋಹಿ, ಕುಡುಕನಾಗಿದ್ದ ಅಂತ ಊಹಿಸಿದರೆ ಅದು ತಪ್ಪಾ? ಹಾಗೆಲ್ಲ ಯೋಚಿಸುವ ಹೊತ್ತಿಗೇ ಷೇಕ್ಸ್ ಪಿಯರ್ ಹೇಳಿದ್ದು ನೆನಪಾಗುತ್ತದೆ; Suit the word to the action, the action to the word. ಬಸವಣ್ಣನವರ ಮಾತಲ್ಲಿ ಹೇಳುವುದಾದರೆ ನುಡಿದಂತೆ ನಡೆ, ನಡೆದಂತೆ ನುಡಿ. ಅದೇ ಅಂತರಂಗ ಶುದ್ಧಿ. ಮತ್ತೆ ಮತ್ತೆ ಷೇಕ್ಸ್ ಪಿಯರ್ ನೆನಪಾಗುತ್ತಿದ್ದಾನೆ. ಅವನ ನಾಟಕವನ್ನು ಮೊಟ್ಟ ಮೊದಲು ನೋಡಿದ ಮಹಿಳೆಯೊಬ್ಬರು ಇದೇನ್ರೀ ಬರೀ ಉದ್ಗಾರಗಳೇ ಇವೆಯಲ್ಲ ಅಂತ ಉದ್ಗರಿಸಿದ್ದಳಂತೆ. ಷೇಕ್ಸ್ ಪಿಯರ್ ಅನೇಕರಿಗೆ ಗೊತ್ತಿರುವುದು ಆತನ ಪ್ರಸಿದ್ಧ ಕೊಟೇಶ್ಗಳ ಮೂಲಕ. ಆತನ ನಾಟಕದ ಸಂಭಾಷಣೆಗಳೆಲ್ಲ ತತ್ವಶಾಸ್ತ್ರದ ಸಾಲುಗಳಂತಿದ್ದವು. ಪ್ರೇಮಕ್ಕೆ, ಕಾಮಕ್ಕೆ, ಮದುವೆಗೆ, ವ್ಯಾಮೋಹಕ್ಕೆ, ಸಾವಿಗೆ, ಬದುಕಿಗೆ ಅವನ ಬಳಿ ಮಾತುಗಳಿದ್ದವು. ಆ ಮಾತುಗಳೋ ಬುದ್ಧಿಜೀವಿಗಳ ಹೇಳಿಕೆಗಳಂತಿರಲಿಲ್ಲ. ಜನಪದದ ಜಾಣನ ಸರಳ ಉದ್ಗಾರಗಳಂತೆ ತೋರುತ್ತಿದ್ದವು. ಹೆಣ್ಣನ್ನು ಹೊಗಳುವ ಹೊತ್ತಿಗೂ ಆತ ಸುಮ್ಮನೆ ; age cannot wither her, nor custom stale her infinite variety ಅಂದುಬಿಡುತ್ತಿದ್ದ. ತೃಪ್ತಿಯಾಗುವಂತೆ ಬಡಿಸಿದ ಮೇಲೂ ಹಸಿವೆ ಉಳಿಯುವಂತೆ ಮಾಡಬಲ್ಲವಳು ಅನ್ನುತ್ತಿದ್ದ. ಹರೆಯ ಮತ್ತು ವೃದ್ಧಾಪ್ಯ ಎಂದೂ ಜೊತೆಗಿರಲಾರದು. ಹರೆಯ ಬೇಸಗೆಯ ಸುಡುಹಗಲು, ವೃದ್ದಾಪ್ಯ ಚಳಿಗಾಲದ ಇಳಿಸಂಜೆ ಎಂದು ಸರಳವಾಗಿ ಮಾತಾಡಿಸಿಬಿಡುತ್ತಿದ್ದ. ಕುಡಿತದ ಮಾತು ಬಂದಾಗ ಅಷ್ಟೇ ಬಿಡುಬೀಸಾಗಿ `ಆಲ್ಕೋಹಾಲು ಆಸೆಗಳನ್ನು ಕೆರಳಿಸುತ್ತದೆ, ಕ್ರಿಯೆಯನ್ನು ಮಂಕುಗೊಳಿಸುತ್ತದೆ' ಅಂತ ಅಪ್ಪಟ ಅನುಭವಿಯ ಮಾತು ಆಡಿಬಿಡುತ್ತಿದ್ದ. ನಮ್ಮ ಕಷ್ಟಕ್ಕೆ ನಮ್ಮ ಹತ್ರಾನೇ ಪರಿಹಾರ ಇದೆ. ಆದ್ರೆ ನಾವು ಉದಾರಿಗಳು. ಸುಮ್ಮನೆ ದೇವರು ಕಾಪಾಡಿದ ಅಂತೀವಿ ಎಂದು ಗೇಲಿ ಮಾಡುತ್ತಿದ್ದ. ತುಂಬ ಕಾವ್ಯಾತ್ಮಕವಾಗಿ ಕಾಲದ ಕೇಳದ ಹೆಜ್ಜೆಯ ಸದ್ದು ಎಂದು ಬರೆದುಬಿಡುತ್ತಿದ್ದ. ಪ್ರೀತಿ ನಿನ್ನನ್ನು ಕಷ್ಟಕ್ಕೆ ಸಿಲುಕಿಸಿತು ಅಂತ ಒಂದೇ ಒಂದು ಸಲ ಅಂದುಕೊಂಡರೂ ಸಹಿತ ನೀನು ಪ್ರೀತಿಸಿದ್ದೇ ಸುಳ್ಳು ಅಂದುಬಿಡಬಲ್ಲ ಶಕ್ತಿ ಅವನಿಗಿತ್ತು. ಹೆಂಗಸರ ಬಗ್ಗೆ ತುಂಬ ಪ್ರೀತಿಯಿಂದಲೇ ತಮಾಷೆ ಮಾಡುತ್ತಿದ್ದ; ನಾನು ಹೆಣ್ಣು ಕಣೋ. ನನ್ನ ಪ್ರಕಾರ ಯೋಚನೆ ಮಾಡೋದು ಅಂದ್ರೆ ಮಾತಾಡೋದು ಎಂದು ತನ್ನ ಪಾತ್ರವೊಂದರ ಕೈಲಿ ಹೇಳಿಸಿದ್ದ. ಹೀಗೆ ಶೇಕಓದುತ್ತಾ ಹೋದರೆ ನೆನಪಾಗುವುದು ನಮ್ಮ ಜನಪದ. ಅವನು ಇಂಗ್ಲೆಂಡಿನ ಜನಪದವೇ ಆಗಿದ್ದನೋ ಏನೋ? ಅವನು ತುಂಬ ಪಾಲಿಷ್ಡ್ ಆದ ಕವಿ ಆಗಿದ್ದಿರಲಾರ. ಅವನು ನಾಟಕಗಳನ್ನು ಒಂದು ಕಡೆ ಶಿಸ್ತಿನಿಂದ ಕೂತು ಬರೆದಿರಲಿಕ್ಕಿಲ್ಲ. ಒಂದೇ ಸಾರಿ ಇಡೀ ನಾಟಕವನ್ನು ಬರೆದು ಕೊಟ್ಟಿರಲಿಕ್ಕಿಲ್ಲ. ಅವನು ತುಂಬ ಚಂಚಲನಾಗಿರಬೇಕು. ಹಾಗನ್ನಿಸುತ್ತದೆ. ಅವನು ನಿಜಕ್ಕೂ ಹೇಗಿದ್ದ ಅನ್ನುವುದನ್ನು ತಿಳಿಯುವುದು ಕಷ್ಟವೇನಲ್ಲ. ಆತನ ಜೀವನ ಚರಿತ್ರೆಯೇ ಮೂರು ಸಾವಿರ ಪುಟಗಳಷ್ಟು ಅಚ್ಚಾಗಿದೆ. ಒಬ್ಬೊಬ್ಬರು ಒಂದೊಂದು ಥರ ಅವನ ಬಗ್ಗೆ ಬರೆದಿದ್ದಾರೆ. ಆದರೆ ನಮಗದು ಮುಖ್ಯವಾಗುವುದೇ ಇಲ್ಲ. ಕವಿಯ ಬಗ್ಗೆ ನಾವು ಊಹಿಸಿಕೊಂಡದ್ದು ಉತ್ತಮ, ಬೇರೆಯವರಿಂದ ಕೇಳಿದ್ದು ಮಧ್ಯಮ, ಓದಿ ತಿಳಿದದ್ದು ಅಧಮ. ಯಾಕೆಂದರೆ ಬರೆಯುವ ಹೊತ್ತಿಗೆ ಅಲ್ಲಿ ತಮಾಷೆ, ವ್ಯಂಗ್ಯ, ಆಪ್ತತೆ, ಪ್ರೀತಿ ಎಲ್ಲಾ ನಾಶವಾಗಿರುತ್ತದೆ. ಕೇವಲ ಪದವ್ಯಾಮೋಹ ಮತ್ತು ನಮ್ಮನ್ನು ನಾವು ಕಂಡುಕೊಳ್ಳುವ ಕಷ್ಟವಷ್ಟೇ ಉಳಿದಿರುತ್ತದೆ.


******


ಹೀಗೆ ಷೇಕ್ಸಪಿಯರ್ ಈ ನಡುಬೇಸಗೆಯ ಸುಡುಸುಡು ಸಂಜೆ ನೆನಪಾಗುವಂತೆ ಮಾಡಿದ್ದು ಸೂರಿ. ಷೇಕ್ಸಪಿಯರ್ ನಾಟಕವೊಂದನ್ನು ಅವರು ಕನ್ನಡಕ್ಕೆ ತಂದಿದ್ದಾರೆ. ಕಾಮಿಡಿ ಆಫ್ ಎರರ್ಸ್ ನಾಟಕವನ್ನು ನಮ್ಮ ಭಾಷೆ, ನಮ್ಮ ನುಡಿಗಟ್ಟು, ನಮ್ಮ ತಮಾಷೆಗಳನ್ನಿಟ್ಟುಕೊಂಡು ನಮ್ಮ ಮುಂದಿಟ್ಟಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಹೆಸರು ನೀನಾನಾದ್ರೆ ನಾ ನೀನೇನಾ?. ಷೇಕ್ಸಪಿಯರ್ ಭಾಷೆಯನ್ನು ಅನುವಾದಿಸುವುದು ಕಷ್ಟ. ಹದಿನಾರನೇ ಶತಮಾನದ ಸುಮಾರಿಗೆ ಆತ ಬರೆದ ನಾಟಕವನ್ನು ಯಥಾವತ್ತಾಗಿ ಕನ್ನಡಕ್ಕೆ ತರುವುದೂ ದಡ್ಡತನ. ಸೂರಿ ಆ ಕೆಲಸ ಮಾಡುವುದಕ್ಕೆ ಹೋಗಿಲ್ಲ. ಇಡೀ ನಾಟಕ ಸೂರಿಯ ಪ್ರತಿಭೆಯಲ್ಲಿ ಅರಳಿಕೊಂಡಿದೆ. ಅಲ್ಲಿ ಆಡುವ ಮಾತುಗಳು ನಮ್ಮವು ಅನ್ನಿಸುವಂತೆ ಮುಂದಿನ ಮಾತು ನಮಗೆ ಹೊಳೆದೂ ಹೊಳೆಯದಂತೆ ಹೊಳೆಯದೆಯೂ ಹೊಳೆಯುವಂತೆ ಸೂರಿ ಬರೆಯಬಲ್ಲರು. ಒಂದು ಅನುವಾದದ ಶಕ್ತಿ ಇರುವುದು ಅಂಥ ಭಾವಾನುವಾದದಲ್ಲೇ. ಸೂರಿ ಕನ್ನಡ ಸಿನಿಮಾಗಳನ್ನು ದಂಡಿಯಾಗಿ ಗೇಲಿ ಮಾಡುತ್ತಾರೆ. ಕನ್ನಡ ಸಿನಿಮಾಗಳಲ್ಲಿ ಒಂದೊಂದು ಸನ್ನಿವೇಶಕ್ಕೂ ಒಂದೊಂದು ಹಾಡು ಬಳಸುವುದು ಈ ನಾಟಕದಲ್ಲಿ ನಗು ಹುಟ್ಟಿಸುತ್ತದೆ. ಈ ನಾಟಕ ನೋಡಿದ ನಂತರ, ಹಳೆಯ ಕನ್ನಡ ಸಿನಿಮಾ ನೋಡಿದರೆ ಮತ್ತಷ್ಟು ನಗು ಉಕ್ಕುವುದು ಖಂಡಿತಾ. ಅದರಲ್ಲೂ ಕಳೆದು ಹೋದ ಮಕ್ಕಳನ್ನು ಹುಡುಕುವ ಮಾರ್ತಾಂಡರಾಯ ಹಾಡುವ `ಯುನೈಟಿಂಗ್ ಸಾಂಗ್' ಚಿಕ್ಕ ಮಕ್ಕಳು.. ಚಿಕ್ಕ ಚಿಕ್ಕ ಮಕ್ಕಳು, ಪುಟ್ಟ ಮಕ್ಕಳು ಪುಟ್ಟ ಪುಟ್ಟ ಮಕ್ಕಳು' ಅದ್ಭುತ ಕಲ್ಪನೆ. ಇಡೀ ನಾಟಕ ನಿಲ್ಲುವುದು ಮಾತಿನ ಮೇಲೆ. ಮಾತಲ್ಲೇ ಅವರು ನಗೆಯ ಸೌಧ ಕಟ್ಟುತ್ತಾರೆ. ನಾನು ಯಾರು ಅನ್ನುವುದನ್ನು ಪಾತ್ರಗಳೇ ಮರೆತಿವೆಯೇನೋ ಅನ್ನುವ ಅನುಮಾನ ಹುಟ್ಟಿಸುವಂಥ ಗೊಂದಲವನ್ನೂ ಅವರು ನಿರಾಯಾಸದಿಂದ ನಿಭಾಯಿಸಿದ್ದಾರೆ. ಇದನ್ನೇ ಸಿನಿಮಾ ಮಾಡುವುದು ಸುಲಭ. ಯಾಕೆಂದರೆ ಸಿನಿಮಾದಲ್ಲಿ ದ್ವಿಪಾತ್ರದ ಅನುಕೂಲವಿದೆ. ನಾಟಕದಲ್ಲಿ ಹಾಗಲ್ಲ. ಎರಡೂ ಪಾತ್ರಗಳು ಏಕಕಾಲದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಹಾಗಿದ್ದೂ ಅಲ್ಲಿ ಇಬ್ಬರಿದ್ದಾರೆ ಅನ್ನಿಸುತ್ತಿರಬೇಕು. ಆ ಗೊಂದಲದಲ್ಲೇ ಹಾಸ್ಯ ಸೃಷ್ಟಿಯಾಗಬೇಕು. ಅದನ್ನು ಸಾಧಿಸಬೇಕಿದ್ದರೆ ತುಂಬ ನಾಜೂಕಾದ ಲೆಕ್ಕಾಚಾರದ ಮಾತುಗಳು ಮತ್ತು ಸನ್ನಿವೇಶಗಳು ಬೇಕಾಗುತ್ತವೆ. ಅದನ್ನು ಗಣಿತಜ್ಞನ ಪರಿಣತಿಯಿಂದ ಸೂರಿ ಸಾಧಿಸಿದ್ದಾರೆ. ಕೊನೆಯ ಸನ್ನಿವೇಶವಂತೂ ಅವರ ಕಲ್ಪನಾಶಕ್ತಿಗೆ ಕನ್ನಡಿ ಹಿಡಿಯುತ್ತದೆ. ತಾವೇ ಸೃಷ್ಟಿಸಿದ ನಾಲ್ಕು ಪಾತ್ರಗಳನ್ನು ಎರಡಕ್ಕೆ ಇಳಿಸುವಲ್ಲಿ ಅವರ ಜಾಣ್ಮೆ ವ್ಯಕ್ತವಾಗುತ್ತದೆ. ಖಳನಾಯಕನ ಪಾತ್ರವಂತೂ ನಮ್ಮ ಚಿತ್ರರಂಗದ ಡಾನ್ ಗಳನ್ನು ನಿವಾಳಿಸಿ ಎಸೆಯುವಂತಿದೆ. ಆತನ ಅಸಹಾಯಕತೆ, ಗೊಂದಲ ಮತ್ತು ಮಿತಿಗಳನ್ನು ಸೂರಿ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾರೆ. ನರಸಿಂಹಯ್ಯನವರ ಕಾದಂಬರಿಯನ್ನು ಓದಿ ಅದರ ಸನ್ನಿವೇಶಗಳನ್ನು ಊಹಿಸಿಕೊಳ್ಳುವುದೂ ಮಜವಾಗಿದೆ.

Monday, January 7, 2008

ಅಕ್ಷರದೆಳ್ಳು, ಒಳ್ಳೇ ಮಾತು..


Sunday, January 6, 2008

ಆರೋಗ್ಯವೇ ಭಾಗ್ಯ ಅನ್ನುವ ಹಳೆಯ ಸಾಲುಗಳನ್ನು ನಿರಾಕರಿಸುತ್ತಾ..

ಕಾಯಿಲೆ ಬಿದ್ದಾಗ ಸಿಗುವಷ್ಟು ಅನುಭವ ನಮಗೆ ಮತ್ತೆಲ್ಲೂ ಸಿಗುವುದಿಲ್ಲ ಅನ್ನುವ ರಾಬರ್ಟ್ ಲಿಂಡ್‌ನ ಮಾತಲ್ಲಿ ನನಗೆ ಪೂರ್ತಿ ನಂಬಿಕೆಯಿದೆ. ಜ್ವರವೋ, ನೆಗಡಿಯೋ ಆಗಿ ಬಿದ್ದುಕೊಂಡಿದ್ದಾಗ ಆಗುವ ಅನುಭವಗಳಂತೂ ಅನುಭವಾತೀತ. ಆಗಂತೂ ಪರತತ್ವದ ಸಕಲ ಸಿದ್ಧಾಂತವೂ ಅರ್ಥವಾಗಿ ಹೋಗುತ್ತದೆ. ದೈವಿಕವಾದ ಅನುಭವಗಳೂ ಆಗುತ್ತವೆ. ಇದ್ದಕ್ಕಿದ್ದಂತೆ ಬುದ್ಧ ನೆನಪಾಗಿ ಆಶೆಯೇ ದುಃಖಕ್ಕೆ ಮೂಲ ಅನ್ನುವುದು ಕಣ್ಣಿಗೆ ಕಟ್ಟುತ್ತದೆ. ಮಹಾತ್ಮ ಗಾಂಧಿ ಕಾಯಿಲೆಗಳ ಬಗ್ಗೆ ಮಾತಾಡಿದ್ದನ್ನು ನೆನಪಿಸಿಕೊಳ್ಳುತ್ತೇವೆ. ನಮ್ಮ ದುರಭ್ಯಾಸಗಳೂ ದೇಹದ ಬಗ್ಗೆ ಯಾರ್‍ಯಾರೋ ಹೇಳಿದ ಮಾತುಗಳೂ ಸಾವಿನ ಕುರಿತ ಅಸಂಖ್ಯ ಕೊಟೇಶನ್ನುಗಳೂ ನೆನಪಿಗೆ ಬರುತ್ತವೆ. ಕಾಯಿಲೆ ನಮ್ಮನ್ನು ಜ್ಞಾನಿಯನ್ನಾಗಿ ಮಾಡಿಬಿಡುತ್ತದೆ. ಬಹುಶಃ ನಮಗೆ ಜ್ಞಾನೋದಯವಾಗುವುದು ಸಾವು ಬದುಕುಗಳ ಹೊಸಿಲಲ್ಲಿ ಮಲಗಿದ್ದಾಗಲೇ.
ಸಾವು ನಿಧಾನವಾಗಿ ಬರುವುದು ಬೇರೆ, ಇದ್ದಕ್ಕಿದ್ದ ಹಾಗೆ ಬಂದು ಹೋಗುವುದು ಬೇರೆ. ಕೆಲವೊಮ್ಮೆ ಸಾವೆಂಬ ಮೋಹಿನಿ ನಮ್ಮ ಕಣ್ಮುಂದೆಯೇ ಸಾಗಿಹೋಗಿ, ಆಕೆಯ ಸೆರಗಷ್ಟೇ ನಮ್ಮನ್ನು ಸ್ಪರ್ಶಿಸಿರುತ್ತದೆ. ಆಕೆ ಹಾಕಿಕೊಂಡ ಅತ್ತರಿನ ಗಮಗಮವಷ್ಟೇ ನಮ್ಮ ಮೂಗಿಗೆ ತಾಕಿರುತ್ತದೆ. ಅಷ್ಟೇ ಸಾಕು, ಈ ಜೀವಕ್ಕೆ ಎಂಬಂತೆ ನಾವು ಮತ್ತೊಂದಷ್ಟು ದಿನ ಅತ್ಯಂತ ನಿಸ್ಪೃಹರಾಗಿ ಮಾತಾಡಲು ಯತ್ನಿಸುತ್ತೇವೆ. ಕಣ್ಣೆದುರಿಗೇ ಇದ್ದ ಜೀವವೊಂದು ಕಣ್ಮರೆಯಾಗಿ ಹೋದಾಗ ಸೃಷ್ಟಿಯಾಗುವ ಶೂನ್ಯದಲ್ಲಿ ಬದುಕಿರುವ ಜೀವ ತನ್ನನ್ನು ತಿದ್ದಿಕೊಳ್ಳಲು ಯತ್ನಿಸುವುದು ಕೂಡ ಒಂದು ರೀತಿಯಲ್ಲಿ ವಿಪರ್ಯಾಸವೇ.
ಕಾಯಿಲೆ ಬಿದ್ದುಕೊಂಡಿದ್ದಾಗ ಕಣ್ಣಮುಂದೆ ಅಷ್ಟೂ ವರುಷಗಳ ಬದುಕು ಮೆರವಣಿಗೆ ಹೊರಡುತ್ತದೆ. ಕಳೆದ ಕೆಲವು ವರುಷಗಳನ್ನು ಅರ್ಥಪೂರ್ಣವಾಗಿ ಬದುಕಬಹುದಿತ್ತಲ್ಲ ಅನ್ನಿಸುವುದಕ್ಕೆ ಶುರುವಾಗುತ್ತದೆ. ಇನ್ನಾದರೂ ಒಳ್ಳೆಯ ಬದುಕನ್ನು ಬದುಕಬೇಕು ಅನ್ನುವ ಪ್ರಜ್ಞೆ ಮೊಳೆಯುತ್ತದೆ. ಅದನ್ನು ನಮ್ಮವರು ಸ್ಮಶಾನ ವೈರಾಗ್ಯ ಎಂದು ಕರೆದು ಒಂದೇ ಮಾತಲ್ಲಿ ತಳ್ಳಿ ಹಾಕಿದ್ದಾರೆ. ಆದರೆ ಒಂದು ಕ್ಷಣ ಬಂದುಹೋಗುವ ವೈರಾಗ್ಯ ಕೂಡ ಬದುಕನ್ನು ಅಷ್ಟರ ಮಟ್ಟಿಗೆ ಬದಲಾಯಿಸುತ್ತದೆ ಎಂದು ಯಾಕೆ ನಂಬಬಾರದು. ಸಾವು, ವೃದ್ದಾಪ್ಯ ಮತ್ತು ರುಜಿನವನ್ನು ಕಂಡ ಸಿದ್ಧಾರ್ಥ ಅದರಿಂದ ಪಾರಾಗಲು ಹೊರಟು ತಥಾಗತನಾದದ್ದು ಒಂದು ಕತೆ. ಗೆಲುವಿನ ಉತ್ತುಂಗದಲ್ಲಿದ್ದಾಗ ಅದರ ಅಪ್ರಯೋಜಕತೆಯನ್ನೂ ಸೋಲಿನ ಅವಮಾನವನ್ನೂ ಏಕಕಾಲಕ್ಕೆ ಅನುಭವಿಸಿದವನು ಬಾಹುಬಲಿ. ಸೋತವನಿಗೆ ಯಾವತ್ತೂ ಜ್ಞಾನೋದಯ ಆಗುವುದಿಲ್ಲ ಅನ್ನುವುದು ಅಲ್ಲಿಗೆ ಶತಸ್ಸಿದ್ಧ. ಸೋತವನಿಗೆ ಆಗುವ ಜ್ಞಾನೋದಯವನ್ನು ಕನ್ನಡ ಸಿನಿಮಾ ಬಿಟ್ಟರೆ ಬೇರೆ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಕನ್ನಡ ಸಿನಿಮಾ ಮತ್ತು ಹಳೆಯ ನಾಟಕಗಳಲ್ಲಿ ಮಾತ್ರ ಸೋತ ಖಳನಾಯಕ- ನಾನು ಸೋತುಬಿಟ್ಟೆ ಕಣೋ, ನಂಗೀಗ ಬುದ್ಧಿ ಬಂತು. ನನ್ನ ಕ್ಷಮಿಸಿಬಿಡು ಅಂತಾನೆ. ಅಂಥ ಜ್ಞಾನೋದಯದ ಬಗ್ಗೆ ನಮ್ಮಲ್ಲಿ ಗೌರವ ಇಲ್ಲ.
ನೋವುಗಳ ಪೈಕಿ ನಮ್ಮನ್ನು ಅತ್ಯಂತ ಸುಲಭವಾಗಿ ಮೋಕ್ಷಗಾಮಿಗಳನ್ನಾಗಿಸುವುದು ಹಲ್ಲುನೋವು. ಹಲ್ಲು ಜ್ಞಾನಕೇಂದ್ರಕ್ಕೂ ಬುದ್ಧಿಕೇಂದ್ರಕ್ಕೂ ಭಾವಕೇಂದ್ರಕ್ಕೂ ಹತ್ತಿರದಲ್ಲೇ ಇರುವುದರಿಂದ ಅದರ ಪರಿಣಾಮ ತುಸು ಹೆಚ್ಚೇ ಇರುತ್ತದೆ. ಹಲ್ಲು ನೋವಿನಿಂದ ನರಳುವ ವ್ಯಕ್ತಿಗೆ ಅವನು ತುಂಬ ಮೆಚ್ಚುವಂಥ ಸಂಗತಿಗಳ ಬಗ್ಗೆ ಹೇಳಿ ನೋಡಿ. ಐಶ್ವರ್ಯ ರೈ, ಜಾಮೂನು, ಮಸಾಲೆದೋಸೆ, ಕೋಟ್ಯಂತರ ರುಪಾಯಿ ಆಸ್ತಿ ಎಲ್ಲವನ್ನೂ ಆತ ಒಂದೇ ಏಟಿಗೆ ತಿರಸ್ಕರಿಸಬಲ್ಲ. ಎಂಥದೇ ಐಹಿಕ ಆಮಿಷಗಳನ್ನು ಪಕ್ಕಕ್ಕೆ ಸರಿಸಬಲ್ಲ. ಅದು ನಿಜವಾದ ಜ್ಞಾನೋದಯದ ಸ್ಥಿತಿ.
ಹಾಗಂತ ಅದೇ ಹಲ್ಲುನೋವು ಶಾಶ್ವತವಾಗಿದ್ದರೆ ಆತ ಜ್ಞಾನಿಯಾಗುತ್ತಾನಾ? ಖಂಡಿತಾ ಇಲ್ಲ. ನೋವು ಅಭ್ಯಾಸವಾದರೆ ಆತ ಸಿನಿಕನಾಗುತ್ತಾನೆ. ನೋವಿನ ಜೊತೆಗೇ ಬದುಕುವುದಕ್ಕೆ ಆರಂಭಿಸುತ್ತಾನೆ. ಅಶ್ವತ್ಥಾಮನ ಹಾಗೆ ಹುಣ್ಣನ್ನಿಟ್ಟುಕೊಂಡು ಬದುಕುವುದನ್ನು ಅಭ್ಯಾಸ ಮಾಡಿಕೊಂಡವನಿಗೂ ಜ್ಞಾನೋದಯ ಸ್ಥಿತಿ ಲಭಿಸುವುದಿಲ್ಲ. ಸಿದ್ಧಾರ್ಥ ಅಪರೂಪಕ್ಕೊಮ್ಮೆ ಸಾವುನೋವುಗಳನ್ನು ಕಂಡದ್ದರಿಂದ ಅದರಿಂದ ಪಾರಾಗುವುದಕ್ಕೆ ನೋಡಿದ. ಅದರ ನಡುವೆಯೇ ಬದುಕುತ್ತಿರುವವನಿಗೆ ಆ ಪರಿಣಾಮ ಅಷ್ಟೊಂದು ಗಾಢವಾಗಿರುವುದಿಲ್ಲ.
ಜಗತ್ತಿನಲ್ಲಿ ಎರಡೇ ಥರದ ಮಂದಿ; ನೋವುಳ್ಳವರು ಮತ್ತು ನೋವಿಲ್ಲದವರು. ಅವರಲ್ಲೂ ಎರಡು ಥರದ ಜನ; ನೋವನ್ನು ತೋರಿಸುವವರು, ತೋರಿಸದೇ ಇರುವವರು. ನೋವನ್ನು ತೋರಿಸದೇ ಓಡಾಡುವವರ ಬಗ್ಗೆ ಅನುಕಂಪ ಇಟ್ಟುಕೊಳ್ಳೋಣ. ಸಣ್ಣ ನೋವಾದಾಗಲೂ ಹಾಹಾಕಾರ ಮಾಡಿ, ರಂಪ ಎಬ್ಬಿಸಿ, ಗಲಾಟೆ ಮಾಡಿ, ಇಡೀ ನಾಡಿಗೇ ತನ್ನ ನೋವು ತಿಳಿಯುವಂತೆ ಮಾಡುವ ಮಂದಿ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಒಂದು ಶತಮಾನಗಳ ಕಾಲ ಒಬ್ಬ ವ್ಯಕ್ತಿಯ ಕಾಯಿಲೆಗಳ ಬಗ್ಗೆ ಓದುತ್ತಾ ಕನ್ನಡ ಮನಸ್ಸು ಪ್ರಬುದ್ಧಗೊಂಡದ್ದು ನಿಮಗೆ ಗೊತ್ತಿದೆ. ಆ ನೋವು ಸಾಹಿತ್ಯವೂ ಇತಿಹಾಸವೂ ಆಗಿರಲಿಲ್ಲ ಅನ್ನುವುದೂ ಗಮನಾರ್ಹ.
ನೋವುಗಳನ್ನು ಅತ್ಯಂತ ನಿಕೃಷ್ಟವಾಗಿ ನೋಡುವವರು ವೈದ್ಯರು. ಅವರ ಪಾಲಿಗೆ ಯಾವ ನೋವೂ ನೋವೇ ಅಲ್ಲ. ನೋವಿನ ಮೂಲಕ ನಾವು ಮತ್ತೊಂದು ಸ್ಥಿತಿಗೆ ತಲುಪುವುದು ಅವರಿಗೆ ಇಷ್ಟವಿಲ್ಲ. ನೀವು ಅತ್ಯಂತ ಭಯಾನಕವಾದ ನೋವಿನಿಂದ ನರಳುತ್ತಿದ್ದರೂ ಕೂಡ ವೈದ್ಯರು ನಸುನಗುತ್ತಾ ಆ ಗಾಯವನ್ನು ವೀಕ್ಷಿಸುತ್ತಾರೆ. ಪರವಾಗಿಲ್ಲ, ಇದು ಎಷ್ಟೋ ಬೆಟರ್ರು ಅನ್ನುತ್ತಾರೆ. ಅಂದರೆ ಅದಕ್ಕಿಂತಲೂ ಹೀನಾಯವಾದ ನೋವಿನ ಸ್ಥಿತಿಯೊಂದಿದೆ. ಅದಕ್ಕೆ ಹೋಲಿಸಿದರೆ ಇದು ವಾಸಿ ಅನ್ನುವುದು ಅವರ ಮಾತಿನ ಅರ್ಥ ಎಂದು ನಾವು ಭಾವಿಸುತ್ತೇವೆ. ಆದರೆ ಯಥಾರ್ಥದಲ್ಲಿ ಆ ಮಾತು ಅವರ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತೆ ಅಂತ ಇತ್ತೀಚೆಗೆ ಅರಿವಾಗಿದೆ.
ರೋಗಿಗಳನ್ನು ನೋಡುವುದಕ್ಕೆ ಬರುವವರು ಕೂಡ ತತ್ವಜ್ಞಾನಿಗಳೇ ಆಗಿಬಿಡುತ್ತಾರೆ ಅನ್ನುವುದು ವಿಶೇಷ. ಜ್ಞಾನ ಹೇಗೆ ಜ್ಞಾನವನ್ನೇ ತನ್ನ ಸುತ್ತ ಪಸರಿಸುತ್ತದೆ ಅನ್ನುವುದಕ್ಕೆ ಅದೊಂದು ಉದಾಹರಣೆ. ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕಾ ಬರುತ್ತವೆ? ಅನ್ನುವ ತೀರಾ ಸಾಮಾನ್ಯವಾದ ಸತ್ವಪೂರ್ಣ ಹೇಳಿಕೆಯಿಂದ ಹಿಡಿದು, ಇದನ್ನು ನೀನು ಮೀರಬಲ್ಲೆ ಕಣಯ್ಯಾ ಎಂದು ಆತ್ಮವಿಶ್ವಾಸವನ್ನು ತುಂಬುವವರ ತನಕ ಎಲ್ಲರೂ ಆ ಕ್ಷಣಕ್ಕೆ ಬುದ್ಧರೇ. ಮತ್ತೆ ಕೆಲವರು ಉದಾಹರಣೆ ಮತ್ತು ತೌಲನಿಕ ಅಧ್ಯಯನಗಳ ಮೂಲಕ ನಿಮ್ಮನ್ನು ಸಾಂತ್ವನಗೊಳಿಸುವುದುಂಟು. ಬೀಪಿ ೧೨೦/೧೮೦ ಅಂಥ ಹೇಳಿದ ತಕ್ಷಣ, ಇದ್ಯಾವ ಮಹಾ ಬಿಡಿ. ಕೇಶವರಾಯರಿಗೆ ೧೬೦/೨೦೦ ಆಗಿತ್ತು ಅಂದುಬಿಡುತ್ತಾರೆ. ಅದರಿಂದ ಸಮಾಧಾನಿಗಳಾಗಬೇಡಿ. ಕೇಶವರಾಯರು ಏನಾದರು ಅಂತ ಕೇಳಿನೋಡಿ; ಮಾರನೇ ದಿನ ಸತ್ತುಹೋದರು ಅಂತ ಸಂತಾಪಸೂಚಕ ದನಿಯಲ್ಲಿ ಹೇಳುತ್ತಾರೆ. ಇದು ಮತ್ತೊಂದು ರೀತಿಯ ವೇದಾಂತ.
ಆಲನಹಳ್ಳಿ ಕೃಷ್ಣ ತೀರಿಕೊಂಡಾಗ, ತೇಜಸ್ವಿಯವರು ನಮ್ಮದೆಲ್ಲ ಗ್ಯಾರಂಟಿ ಪಿರಿಯಡ್ ಆಗಿಹೋಗಿದೆ’ ಅನ್ನುವ ಅರ್ಥದಲ್ಲಿ ಬರೆದಿದ್ದರು. ಓರಗೆಯ ಮಂದಿ ತೀರಿಕೊಂಡಾಗ ತುಂಬ ಕಂಗಾಲಾದವರಿದ್ದಾರೆ. ಓರಗೆಯ ಮಂದಿ ಕಾಯಿಲೆ ಬಿದ್ದಾಗ ಹುಷಾರಾದವರಿದ್ದಾರೆ. ಆದರೆ ತುಂಬ ಚಿಕ್ಕ ವಯಸ್ಸಿನ ಗೆಳೆಯರ ಸಾವು ಮನಸ್ಸಿನಲ್ಲಿ ಬೇರೆಯೇ ಥರದ ಪರಿಣಾಮವನ್ನು ಮೂಡಿಸುತ್ತದೆ. ಅಲ್ಲಿ ನಮ್ಮನ್ನು ಉಳಿಸಿಕೊಳ್ಳಬೇಕು ಅನ್ನುವ ಎಚ್ಚರಕ್ಕಿಂತ ಹೆಚ್ಚಾಗಿ, ಸಾವೆಂಬ ಪರಕೀಯ ಯಾವ ಸುಳಿವನ್ನೂ ಕೊಡದೇ ಬಂದೆರಗುವ ಕೌರ್ಯದ ಕುರಿತ ಸಿಟ್ಟೇ ತುಂಬಿರುತ್ತದೆ.
ನಮ್ಮ ದುಶ್ಚಟಗಳನ್ನು ಸಮರ್ಥಿಸಿಕೊಳ್ಳಲು ನಾವು ಬೇರೆಯವರ ಸಾವನ್ನು ಉದಾಹರಣೆಯನ್ನಾಗಿ
ಬಳಸುವುದುಂಟು. ಯಾರಾದರೂ ಹೃದಯಾಘಾತದಿಂದ ತೀರಿಕೊಂಡ ಸುದ್ದಿ ಬಂದಾಗ ಎದುರಾಗುವ ಮೊದಲ ಪ್ರಶ್ನೆ. ಆತ ಸಿಗರೇಟು ಸೇದುತ್ತಿದ್ನಾ?’ ಹೌದು’ ಅಂದರೆ ಸಿಗರೇಟು ಸೇದುವವರಿಗೆ ಕೊಂಚ ಬೇಸರವಾಗುತ್ತೆ. ಇಲ್ಲ ಅಂದುಬಿಟ್ಟರೆ ಅವರು ಮತ್ತೊಂದು ಸಿಗರೇಟು ಹಚ್ಚಿಕೊಳ್ಳುತ್ತಾರೆ. ನೋಡಿದ್ರಾ? ಸಾವಿಗೆ ಕಾರಣವೇ ಬೇಕಿಲ್ಲ. ಅದು ಸುಮ್ಸುಮ್ನೆ ಬರಬಹುದು ಅನ್ನುತ್ತಾರೆ. ನಮ್ಮ ಶಿಸ್ತಿರದ ಜೀವನಕ್ಕೊಂದು ಸಮರ್ಥನೆ ಸಿಗುತ್ತದೆ.
ಶಿಸ್ತಿರದ ಜೀವನ ಅನ್ನುವುದು ಕೂಡ ಒಂದು ತಪ್ಪು ಪರಿಕಲ್ಪನೆ. ತುಂಬ ಶಿಸ್ತಿನಿಂದ ಬದುಕುವ ಮನುಷ್ಯನನ್ನೂ ಕಾಯಿಲೆಗಳು ಕಾಡಬಹುದು. ಸಾವು ಸೆಳೆದೊಯ್ಯಬಹುದು. ಸಾವು ಮತ್ತು ಕಾಯಿಲೆಯ ವಿಚಾರದಲ್ಲಿ ಯಾವುದೇ ಕಾನೂನುಗಳೂ ಅನ್ವಯಗೊಳ್ಳುವುದಿಲ್ಲ.

ಕಾಯಿಲೆ ಬಿದ್ದವರನ್ನು ನೋಡಲು ಹೋದಾಗ ತುಂಬ ಸೆನ್ಸಿಬಲ್ ಆದವರು ಆಡಬಹುದಾದ ಒಂದೇ ಮಾತು; ಇವತ್ತು ಪರವಾಗಿಲ್ಲ, ತುಂಬ ಸುಧಾರಿಸಿದ್ದೀಯ. ದಪ್ಪಗಿರುವವರನ್ನು ಕಂಡಾಗ ತೆಳ್ಳಗಿರುವವವರು ಆಡುವ ಸುಳ್ಳು ಮಾತು; ಏನ್ರೀ, ಒಂದು ಸುತ್ತು ತೆಳ್ಳಗಾಗಿದ್ದೀರಿ’ಯಂತೆ ಇದು ಕೂಡ ಆಪ್ಯಾಯಮಾನ.
ಕಾಯಿಲೆ ಬಿದ್ದ ವೈದ್ಯರನ್ನು ನೋಡುವುದೆಂದರೆ ನನಗೆ ಸಂಕಟ. ಯಾಕೆಂದರೆ ಅವರಿಗೆ ತಾವೇಕೆ ಕಾಯಿಲೆ ಬಿದ್ದಿದ್ದೇವೆ ಅನ್ನುವುದು ಸ್ಪಷ್ಟವಾಗಿ ಗೊತ್ತಿರುತ್ತದೆ. ಬೇರೆಯವರನ್ನು ನಿಮಗೇನೂ ಆಗಿಲ್ಲ, ಸುಮ್ನಿರಿ ಅಂತ ಹೇಳಿ ನಂಬಿಸುವ ಹಾಗೆ ವೈದ್ಯರು ತಮ್ಮನ್ನೇ ನಂಬಿಸಿಕೊಳ್ಳಲಾರರು. ನಾವೂ ಕೂಡ ಅವರನ್ನು ನೋಡುವುದಕ್ಕೆ ಹೋದಾಗ ಬೇಗ ವಾಸಿಯಾಗುತ್ತೆ ಅಂತ ಹೇಳೋ ಹಾಗಿರಲ್ಲ. ಏನು ಹೇಳಿದರೂ ಅದು ಸುಳ್ಳೆಂದು ಅವರಿಗೂ ನಮಗೂ ಗೊತ್ತಿರುತ್ತೆ. ನಾವು ಸುಳ್ಳು ಹೇಳುತ್ತಿದ್ದೇವೆ ಅನ್ನೋದು ಅವರಿಗೆ ಗೊತ್ತಿದೆ ಅನ್ನೋದು ನಮಗೂ ಗೊತ್ತಿರುತ್ತೆ. ಅದು ನಮಗೆ ಗೊತ್ತಿದೆ ಅನ್ನೋದು ಅವರಿಗೂ ಗೊತ್ತಿರತ್ತೆ. ಹೀಗೊಂದು ಸುಳ್ಳಿನ ಪ್ರಪಂಚದಲ್ಲಿ ಆದರ್ಶ ದಂಪತಿಗಳಂತೆ ಬಾಳುವುದು ಕಷ್ಟವೇ ಸರಿ.
ಕತೆಗಾರ ಸುರೇಂದ್ರನಾಥ್ ಅವರ ಒಂದು ಕತೆಯಲ್ಲಿ ಪೃಷ್ಟದಲ್ಲಿ ಕುರು ಎದ್ದ ವ್ಯಕ್ತಿಯೊಬ್ಬ ಅದನ್ನು ಹೆಂಡತಿಗೆ ಕೂಡ ತೋರಿಸುವುದಕ್ಕೆ ಸಂಕೋಚಗೊಂಡು ತೊಳಲಾಡುವ ಸನ್ನಿವೇಶ ಬರುತ್ತದೆ. ಕೊನೆಗೆ ಅದನ್ನು ಹೆಂಡತಿಯೇ ಹಿಚುಕಿ ಹಾಕಿ ಅವರನ್ನು ನೋವು ಮತ್ತು ಸಂಕಟದಿಂದ ವಿಮುಕ್ತಳನ್ನಾಗಿಸುತ್ತಾಳೆ. ಈ ರೂಪಕ ನನಗೆ ತುಂಬ ಮೆಚ್ಚುಗೆಯಾದ ಮೆಟಫರ್‌ಗಳಲ್ಲೊಂದು. ಅದು ಕೇವಲ ಕುರುವಷ್ಟೇ ಆಗಿರಬೇಕಿಲ್ಲ; ಮನಸ್ಸಿಗೆ ಸಂಬಂಧಿಸಿದ್ದೋ, ಉದ್ಯೋಗಕ್ಕೆ ಸಂಬಂಧಿಸಿದ್ದೋ, ಬದುಕಿಗೆ ಸಂಬಂಧಿಸಿದ್ದೋ ಆಗಿರಬಹುದು. ಎಷ್ಟೋ ಕಾಯಿಲೆಗಳಿಗೆ ಔಷಧಿ ಬೇಕಾಗಿಲ್ಲ, ಅದು ಪಕ್ಕದಲ್ಲೇ ಇರುತ್ತದೆ ಅನ್ನುವುದನ್ನೂ ಈ ಸಾಲು ಹೇಳುತ್ತದೆ ಅನ್ನುವುದು ಈಗ ಅಸ್ಪಷ್ಟವಾಗಿ ಹೊಳೆಯುತ್ತಿದೆ.
ವಾಕಿಂಗು, ಎಕ್ಸರ್‌ಸೈಜು ಎಲ್ಲಾ ರೋಗಕ್ಕೂ ಮದ್ದು ಅನ್ನುತ್ತಾರೆ. ಆದರೆ ಅದಕ್ಕಿಂತ ಸುಲಭವಾದ ಔಷಧಿ ಮಾತ್ರೆ ಅನ್ನುವ ಗೆಳೆಯರಿದ್ದಾರೆ. ಒಬ್ಬ ಬರಹಗಾರನನ್ನು ಯಾವ ಓದುಗ ಕೂಡ ನೀನು ಆರೋಗ್ಯವಾಗಿದ್ದೀಯಾ? ಹೇರ್‌ಕಟ್ ಮಾಡಿಸಿಕೊಂಡಿದ್ದೀಯಾ? ಒಳ್ಳೇ ಚಪ್ಪಲಿ ಹಾಕಿದ್ದೀಯಾ?’ ಅಂತ ಕೇಳುವುದಿಲ್ಲ. ನೀನು ಚೆನ್ನಾಗಿ ಬರೀತೀಯಾ ಅಂತಷ್ಟೇ ಕೇಳುತ್ತಾರೆ. ಒದ್ದಾಡಿಯೋ, ಕಷ್ಟಪಟ್ಟೋ ಆತ ಚೆನ್ನಾಗಿ ಬರೆಯಬೇಕು. ಆಗಲೇ ಓದುಗರ ಕಣ್ಣಲ್ಲಿ ಅವನು ಅಪ್ಪಟ ಆರೋಗ್ಯವಂತನಂತೆ ಕಾಣಿಸುತ್ತಾನೆ.

ಯಾರಿಗೂ ಬೇಡವೆ ಸಿರಿ ಮಲ್ಲಿಗೆ?

ಮಾತು ಬರುವುದು ಎಂದು ಮಾತಾಡುವುದು ಬೇಡ
ಒಂದು ಮಾತಿಗೆ ಎರಡು ಅರ್ಥವುಂಟು.

ಈ ಜಗತ್ತಿನಲ್ಲಿ ಕವಿತೆ ಬರೆಯುವಷ್ಟು ಸುಲಭದ ಮತ್ತು ಐಷಾರಾಮದ ಕೆಲಸ ಮತ್ತೊಂದಿಲ್ಲ ಎಂದು ಭಾವಿಸಿರುವ ತರುಣರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಪರ ಬಲ್ಲ ಪ್ರತಿಯೊಬ್ಬನೂ ಒಂದಲ್ಲ ಒಂದು ಕವನವನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಬರೆದವನೇ ಆಗಿರುತ್ತಾನೆ. ಹಾಗೆ ಬರೆದ ಒಂದೇ ಕವನವನ್ನಿಟ್ಟುಕೊಂಡು ತಾನು ಕವಿ ಎಂದು ಸಾಧಿಸುವ ಹುಮ್ಮಸ್ಸು ಆತನಿಗೆ ಬಂದುಬಿಟ್ಟರೆ ಪತ್ರಿಕೆಗಳ ಸಂಪಾದಕರನ್ನು ಕಾವ್ಯಸರಸ್ವತಿಯೇ ಕಾಪಾಡಬೇಕು.
ಕವಿತೆ ಬರೆಯುವುದು ಕಷ್ಟ ಅಂತ ಇಂಥ ಕವಿಗಳನ್ನು ನಂಬಿಸಲು ಯತ್ನಿಸಿ ಸೋತವರ ಸಂಖ್ಯೆ ದೊಡ್ಡದು. ಗಮಗಮಾಗಮಾಡಿಸ್ತಾವ ಮಲ್ಲಿಗೆ, ನೀ ಹೊರಟದ್ದೀಗ ಎಲ್ಲಿಗಿ? ಅಂತ ಬೇಂದ್ರೆ ಬರೆದದ್ದು ಪದ್ಯ ಹೌದಾದರೆ ಆಟೋ ಹಿಂದೆ ಬರೆದ `ಮೈಸೂರು ಮಲ್ಲಿಗೆ, ನೀ ಹೋಗಬೇಕು ಎಲ್ಲಿಗೆ?' ಎಂದು ಬರೆದದ್ದು ಯಾಕೆ ಕವನ ಆಗುವುದಿಲ್ಲ ಎಂಬ ಘನಗಂಭೀರ ಪ್ರಶ್ನೆಯನ್ನು ಎಸೆದು ಕಂಗಾಲು ಮಾಡುವವರಿದ್ದಾರೆ. ಇಂಥವರಿಗೆ ಬೇಂದ್ರೆಯ ಕವಿತೆಯ ಕೇಂದ್ರ, ರೂಪಕ, ಸಂಕೀರ್ಣತೆ ಮತ್ತು ಸತ್ವದ ಕುರಿತು ಹೇಳುವುದರಿಂದ ಏನೇನೂ ಉಪಯೋಗವಿಲ್ಲ. ಯಾಕೆಂದರೆ ಅವರ ಪ್ರಶ್ನೆ ಅಷ್ಟು ಆಳವಾದದ್ದೇನೂ ಆಗಿರುವುದಿಲ್ಲ.
ಮೊದಲೆಲ್ಲ ಒಂದು ಲೋಕರೂಢಿಯಾದ ಅಭಿರುಚಿಯಿತ್ತು. ಇದು ಚೆನ್ನಾಗಿದೆ ಅಂತ ಹತ್ತು ಮಂದಿ ಹೇಳಿದರೆ ಅದು ಚೆನ್ನಾಗಿರುತ್ತಿತ್ತು. ಈಗ ಒಂದು ಕವಿತೆ ಚೆನ್ನಾಗಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ` ಇವರ ಕಾವ್ಯವು ಶೋಷಿತ ಜನಾಂಗದ ಪ್ರತಿನಿಧಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ಈ ಕವಿತೆಗೊಂದು ಆಂತರಿಕ ಸೌಂದರ್ಯ ತಾನೇ ತಾನಾಗಿ ಪ್ರಾಪ್ತಿಯಾಗಿಬಿಟ್ಟಿದೆ. ಇಂಥ ಕವಿತೆಗಳು ತಮ್ಮನ್ನು ಶೋಷಿಸುವವರ ವಿರುದ್ಧ ದಂಗೆಯೇಳುವಂತೆ ಕಾಣಿಸುತ್ತವಾದ್ದರಿಂದ ಇವುಗಳನ್ನು ನಾವು ಬೇರೆಯೇ ನೆಲೆಯಲ್ಲಿ ನೋಡಬೇಕು' ಅಂತ ವಿಮರ್ಶಕನೊಬ್ಬ ಅಪ್ಪಣೆ ಕೊಡಿಸಿದರೆ ಆ ಬಗ್ಗೆ ಅಪಸ್ವರ ಎತ್ತುವ ಧೈರ್ಯ ಯಾವನಿಗೂ ಇರುವುದಿಲ್ಲ. ಒಂದು ವೇಳೆ ಯಾರಾದರೂ ಅದರ ಬಗ್ಗೆ ಮತ್ತೊಂದು ಮಾತಾಡಿದರೆ ಆತ ಪ್ರಗತಿವಿರೋಧಿ ಅನ್ನಿಸಿಕೊಳ್ಳುತ್ತಾನೆ.
ಹೋಗಲಿ, ಇಂಥ ಕವಿಗಳನ್ನು ಹಿಡಿದು ನಿಲ್ಲಿಸಿ, ನಿನ್ನ ಮೆಚ್ಚಿನ ಕವಿ ಯಾರೆಂದು ಕೇಳಿದರೆ ಅವರು ಯಾರ ಹೆಸರನ್ನೂ ಹೇಳುವುದಿಲ್ಲ. `ನಾವು ಯಾರನ್ನೂ ಓದಿಲ್ಲ. ಈ ಕವಿತೆ ಹುಟ್ಟಿದ್ದು ಜೀವನಾನುಭವದಿಂದ' ಅನ್ನುತ್ತಾರೆ. ಇಂಥ ಮಾತನ್ನು ನಾವು ಧಿಕ್ಕರಿಸುವ ಹಾಗೇ ಇಲ್ಲ. ಒಂದು ವೇಳೆ ಕಾವ್ಯಪರಂಪರೆ, ಸಾಹಿತ್ಯ ಚರಿತ್ರೆ ಮುಂತಾಗಿ ಮಾತೆತ್ತಿದರೆ ಕಾರಂತರು ಯಾರ ಕಾದಂಬರಿಯನ್ನೂ ಓದುತ್ತಿರಲಿಲ್ಲ ಗೊತ್ತೇ?, ಆದಿಕವಿ ಪಂಪ ಯಾರನ್ನು ಓದಿದ್ದ ಹೇಳಿ? ಅವನೇ ಆದಿಕವಿ ಅಂದ ಮೇಲೆ ಆತನಿಗೆ ಓದುವುದಕ್ಕಾದರೂ ಯಾರಿದ್ದರು ಎಂದು ತಮ್ಮನ್ನು ಸಾರಾಸಗಟಾಗಿ ಪಂಪನಿಗೋ ಕಾರಂತರಿಗೋ ಹೋಲಿಸಿಕೊಂಡು ಬಿಡುತ್ತಾರೆ. ಅಲ್ಲಿಗೆ ಆ ಮಾತು ಮೂಕವಾಗುತ್ತದೆ.
ಮತ್ತೆ ಕೆಲವರಿದ್ದಾರೆ; ಕವನ ಸಂಕಲನಗಳನ್ನು ಸುಂದರವಾಗಿ ಮುದ್ರಿಸಿ, ಅದಕ್ಕೊಂದು ಅಷ್ಟೇ ಸುಂದರವಾದ ಮುನ್ನುಡಿಯನ್ನೂ ಬರೆಸಿ, ಮುಖಪುಟಕ್ಕೆ ಖ್ಯಾತ ಕಲಾವಿದರಿಂದ ಚಿತ್ರ ಬರೆಸಿ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಾರೆ. ಮುನ್ನುಡಿಯಲ್ಲಿ ಆ ಕವಿತೆಯನ್ನು ಖ್ಯಾತನಾಮರು ಅನಿವಾರ್ಯವಾಗಿ ಹೊಗಳಿರುತ್ತಾರೆ. ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಅವನ್ನು ಬಿಡುಗಡೆ ಮಾಡುವವರು ಹೊಗಳಿಯೇ ಹೊಗಳುತ್ತಾರೆ. ಹಾಗೆ ಹೊಗಳಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಅಲ್ಲಿಗೆ ಆ ಕವಿತೆ ಚಿರಾಯುವಾಗುತ್ತದೆ.
ನರಸಿಂಹಸ್ವಾಮಿ ಒಂದು ಪದ್ಯ ಬರೆದು ಅದನ್ನು ಅತ್ಯಂತ ಸಂಕೋಚದಿಂದ ಡಿವಿಜಿಯವರಿಗೋ ಡಿಎಲ್ಎನ್ ಅವರಿಗೋ ತೋರಿಸುವ ಪರಿಪಾಠವಿತ್ತು. ಹಾಗೆ ತೋರಿಸುವ ಹೊತ್ತಿಗೆ ಕವಿಗೆ ಎಷ್ಟೊಂದು ಸಂಕೋಚ ಇರುತ್ತಿತ್ತು ಅನ್ನುವುದನ್ನು ಕೆ ಎಸ್ ನ, ಅಡಿಗ ಮುಂತಾದವರೆಲ್ಲ ಬರೆದುಕೊಂಡಿದ್ದಾರೆ.
ಕವಿತೆ ಬರೆಯುವುದನ್ನು ಕನಿಷ್ಠ ಇಪ್ಪತ್ತು ವರುಷ ನಿಷೇಧಿಸದೇ ಹೋದರೆ ಎಂಥ ಅಪಾಯ ಆಗಬಹುದು ಅನ್ನುವುದನ್ನು ಊಹಿಸುವುದು ಕಷ್ಟ. ಕವಿತೆಯ ಮಾನ ಮತ್ತು ಪ್ರಾಣ ಎರಡೂ ಉಳಿಯಬೇಕಿದ್ದರೆ ಮುಂದಿನ ಇಪ್ಪತ್ತು ವರುಷ ಯಾರೂ ಕವಿತೆಗಳನ್ನು ಬರೆಯಬಾರದೆಂದೂ ಬರೆದರೂ ಅವುಗಳನ್ನೂ ಪ್ರಕಟಿಸಬಾರದೆಂದೂ ಸರ್ಕಾರ ಕಾನೂನು ಮಾಡಬೇಕಿದೆ. ಎಪ್ಪತ್ತರ ದಶಕದ ತನಕ ಬಂದ ಕವಿತೆಗಳನ್ನು ನಮ್ಮ ಹಳೆಯ ಕಾವ್ಯಗಳನ್ನೂ ಮರುಮುದ್ರಿಸಿ ಓದಿಸುವ ಕೆಲಸ ಮೊದಲು ಶುರುವಾಗಬೇಕಿದೆ.
*****
ಒಂದು ಸಣ್ಣ ಉದಾಹರಣೆ; ಇವತ್ತು ಕಿವಿಗೆ ಬೀಳುತ್ತಿರುವ ಭಾವಗೀತೆಗಳನ್ನೇ ಕೇಳಿ. ಅವೆಲ್ಲವನ್ನೂ ಬರೆದವರು ಹಳೆಯ ಕಾಲದ ಕವಿಗಳು ಮತ್ತು ಹಳೆಯ ಕಾಲದ ಕವಿಗಳಂತೆ ಬರೆಯುತ್ತಿರುವ ಕೆಲವರು. ಅದು ಬಿಟ್ಟರೆ ಹೊಸಕಾವ್ಯದ ಯಾವ ಗೀತೆಯನ್ನಾದರೂ ಹಾಡಲು ಸಾಧ್ಯವೇ? ಹಾಡಲು ಸಾಧ್ಯ ಎಂದು ಹಠ ತೊಟ್ಟು ಹಾಡಿದ `ಕುರಿಗಳು ಸಾರ್ ಕುರಿಗಳು' ಗೀತೆಯನ್ನು ಅನಂತಸ್ವಾಮಿ ಬಿಟ್ಟು ಬೇರೆ ಯಾರಾದರೂ ಹಾಡಿದ್ದು ಕೇಳಿದ್ದೀರಾ? ಇವತ್ತೂ ಭಾವಗೀತೆಯೆಂದರೆ ಬೇಂದ್ರೆ, ಕುವೆಂಪು, ಕೆ ಎಸ ನ, ಭಟ್ಟ, ಅಡಿಗ, ಪುತಿನ, ಕಣವಿ, ಮಾಸ್ತಿ, ಜಿಎಸ್ಸೆಸ್.. ಅದರಾಚೆಗೀಚೆಗೆ ಬರೆದುದನ್ನು ಓದಲೂ ಸಲ್ಲ, ಹಾಡಲೂ ಸಲ್ಲ.
ಕವಿತೆ ಬರೆಯುವುದಕ್ಕೆ ಕೇವಲ ವೇದನೆಯೋ ಸಂವೇದನೆಯೋ ಇದ್ದರಷ್ಟೇ ಸಾಲದು. ಅದಕ್ಕೆ ಸ್ವರಜ್ಞಾನ, ಲಯಬದ್ಧತೆ, ಆದಿಪ್ರಾಸ, ಅಂತ್ಯಪ್ರಾಸ, ಕಿವಿಗೆ ಇಂಪಾಗಿ ಕೇಳುವಂತೆ ಬರೆಯಬಲ್ಲ ಪ್ರತಿೆ ಎಲ್ಲವೂ ಇರಬೇಕಾಗುತ್ತದೆ.
ಆದರೆ ಈಗೀಗ ಕಾವ್ಯ ಎಂಥವರ ತೊತ್ತಾಗುತ್ತಿದೆ ಎನ್ನುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಸಿನಿಮಾರಂಗಕ್ಕೆ ಬಂದರೆ ಅಲ್ಲಿ ಪ್ರತಿಯೊಬ್ಬನೂ ಕವಿಯೇ. ಹಿಂದೆ ಪುಟ್ಟಣ್ಣ ಕಣಗಾ್, ಸಿದ್ಧಲಿಂಗಯ್ಯ, ರವಿ, ದೊರೆ-ಭಗವಾ್ ಮುಂತಾದ ನಿರ್ದೇಶಕರು ಕವಿಗಳಿಗೆ ಗೌರವ ಕೊಡುತ್ತಿದ್ದರು. ಕವಿಗಳಿಂದ ಹಾಡು ಬರೆಸುತ್ತಿದ್ದರು. ಆ ಹಾಡಿಗೆ ಅತ್ಯುತ್ತಮ ಸಂಗೀತ ನಿರ್ದೇಶಕರಿಂದ ಸ್ವರಸಂಯೋಜನೆ ಮಾಡಿಸುತ್ತಿದ್ದರು. ಹಿಂದಿಯಲ್ಲಿ ಇವತ್ತಿಗೂ ಯಾವ ನಿರ್ದೇಶಕನೂ ಹಾಡು ಬರೆಯುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ರಾ್ಗೋಪಾ್ ವರ್ಮಾ ಮಣಿರತ್ನಂ ಮುಂತಾದ ನಿರ್ದೇಶಕರೂ ಕೂಡ ಒಳ್ಳೆಯ ಗೀತರಚನಕಾರರಿಂದ ಹಾಡು ಬರೆಸುತ್ತಾರೆ. ತಮಿಳು, ತೆಲುಗಲ್ಲೂ ಯಾವ ನಿರ್ದೇಶಕನೂ ಹಾಡು ಬರೆಯುತ್ತೇನೆ ಅಂತ ಹೊರಡುವುದಿಲ್ಲ.
ಕನ್ನಡದ ದುಸ್ಥಿತಿ ನೋಡಿ; ಇಲ್ಲಿ ಪ್ರತಿಯೊಬ್ಬ ನಿರ್ದೇಶಕನೂ ಸ್ವತಃ ಗೀತರಚನಕಾರ. ಅದರಿಂದಾದ ಅಧ್ವಾನವೆಂದರೆ ಒಂದೇ ಒಂದು ಹಾಡು ಕೂಡ ಕೇಳುವಂತಿರುವುದಿಲ್ಲ. ಒಳ್ಳೆಯ ಹಾಡು ಬೇಕಿದ್ದರೆ ದಶಕಗಳ ಹಿಂದೆ ಹೋಗಬೇಕಾಗಿದೆ. ಕವಿಗಳೇ ಇಷ್ಟು ಬುದಿ್ಧಗೇಡಿಗಳಾಗಿರುವಾಗ ಕೇಳುಗರಿಗೆ ಕವಿತ್ವದ ರುಚಿ ಹೇಗೆ ದಕ್ಕೀತು. ಅಲ್ಲಿಗೆ ಒಂದು ಅಭಿರುಚಿಯೇ ಕೆಟ್ಟಂತಾಯಿತು.
*****
ಲಕ್ಪ್ಮೀಶ ಕವಿ ತನ್ನ ಕಾವ್ಯ ಹೇಗಿರಬೇಕು ಅನ್ನುವುದನ್ನು ಹೀಗೆ ಬರೆದ;
ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ
ತಾರದೆ ನಿಜಾನ್ವಯಕ್ರಿಯೆಗಳ್ಗೆ ದೂಷಣಂ
ಬಾರದೆ ವಿಶೇಷಗುಣ ಗಣಕಲಾ ಗೌರವಂ ತೀರದೆ ದುರುಕ್ತಿಗಳ್ಗೆ
ಸೇರದೆ ಸುಮಾರ್ಗದೊ್ ನಡೆವ ಸತ್ಪುರುಷನ ಗ
ಭೀರದಶೆಯಂ ಪೋಲ್ವ ಕಾವ್ಯಪ್ರಬಂಧಮಂ
ಶಾರದೆಯ ಕರುಣದಿಂ ಪೇಳ್ವನಾಂ ದೋಷಮಂ ತೊರೆದೆಲ್ಲರುಂ ಕೇಳ್ವುದು
ಇದನ್ನು ವಿವರಿಸಿದರೆ ಕನ್ನಡ ಬಲ್ಲವರನ್ನು ಅವಮಾನಿಸಿದಂತಾಗುತ್ತದೆ.
ನೆನಪು; ಡಿವಿಜಿ ಅವರು ಕೆ ಎಸ್ ನ ಕವನ ಸಂಕಲನ ಓದಿ ಹೀಗೆ ಬರೆದರು; ಮಲ್ಲಿಗೆಯ ತೋಟದಲ್ಲಿ ನಿಂತಾಗ ಧಾರಾಳವಾಗಿ ಉಸಿರಾಡಿರೆಂದು ಕನ್ನಡಿಗರಿಗೆ ಹೇಳಬೇಕಾದ ಕಾಲ ಬೇಗ ಕಳೆದುಹೋಗಲಿ. ನಿಮ್ಮ ಮಲ್ಲಿಗೆಯ ಬಳ್ಳಿ ಎಲ್ಲಾ ಋತುಗಳಲ್ಲಿಯೂ ನಗುನಗುತಿರಲಿ.
ಇದನ್ನು ಅವರು ಬರೆದದ್ದು ಡಿಸೆಂಬರ್ 31, 1941ರಂದು. ಈಗ ಮಲ್ಲಿಗೆಯ ತೋಟ ಯಾವುದೆನ್ನುವುದೇ ಮರೆತುಹೋಗಿದೆಯಲ್ಲ.

Tuesday, January 1, 2008

ಗೆಳೆಯನ ಹೊಸ ಸಂಕಲನವನ್ನು ಪ್ರೀತಿಸುತ್ತಾ..

1984. ಉಪ್ಪಿನಂಗಡಿ.
ಆಗಿನ್ನೂ ಅಲ್ಲಿ ರಬ್ಬರ್ ತೋಟ ಇರಲಿಲ್ಲ. ದಟ್ಟವೂ ಅಲ್ಲದ ತೆಳುವೂ ಅಲ್ಲದ ಕಾಡು. ಅದರ ನಡುವೆ ಕಾಳಗತ್ತಲಲ್ಲಿ ಕುಳಿತು ಭಾವಗೀತೆಗಳನ್ನು ಗುನುಗುತ್ತಲೋ, ನಾಳೆ ಬರೆಯಬೇಕಾದ ಕತೆಗಳ ಕುರಿತು ಮಾತಾಡುತ್ತಲೋ, ನಮ್ಮೊಂದಿಗೆ ಓದುತ್ತಿದ್ದ ಹುಡುಗಿಯರ ಬಗ್ಗೆ ತಮಾಷೆಯಾಗಿ ಮಾತಾಡುತ್ತಲೋ ಹಿರಿಯ ಲೇಖಕರನ್ನು ಗೇಲಿ ಮಾಡುತ್ತಲೋ ಕೂತಿರುತ್ತಿದ್ದ ಇಬ್ಬರು ಹುಡುಗರ ಪೈಕಿ ಒಬ್ಬನ ಹೆಸರು ಕುಂಟಿನಿ ಗೋಪಾಲಕೃಷ್ಣ. ಇನ್ನೊಬ್ಬ ನಾನು.
ಹಾಗೆ ಕಳೆದ ರಾತ್ರಿಗಳಿಗೆ ಲೆಕ್ಕವಿಲ್ಲ. ಆ ರಾತ್ರಿಗಳಲ್ಲಿ ಆಡಿದ ಮಾತುಗಳಲ್ಲಿ ಬಂದುಹೋಗದ ಸಂಗತಿಗಳಿಲ್ಲ. ಪತ್ರಿಕೋದ್ಯಮ, ಸಾಹಿತ್ಯ, ಕಾವ್ಯ, ಅಧ್ಯಾಪನ, ಪುರಾಣ ಎಲ್ಲವೂ ಆಸಕ್ತಿಯ ಸಂಗತಿಗಳೇ. ತೀರಾ ಉತ್ಸಾಹ ಬಂದರೆ ಇಬ್ಬರೂ ಎದ್ದು ಯಾವುದೋ ಕಮ್ಮಟಕ್ಕೋ ಸೆಮಿನಾರಿಗೋ ಇನ್ಯಾವುದೋ ಊರಿಗೋ ಹೊರಟು ನಿಂತೆವೆಂದರೆ ಅಲ್ಲಿನ ಗಮ್ಮತ್ತೇ ಬೇರೆ. ಅಲ್ಲಿ ನಾನು ಇಂಗ್ಲಿಷ್ ಪತ್ರಿಕೆಯ ವರದಿಗಾರ. ಅವನು ಸಂಶೋಧನ ವಿದ್ಯಾರ್ಥಿ. ನಾನು ಜಾನಪದ ಅಧ್ಯಯನಕಾರ, ಅವನು ಖ್ಯಾತ ಛಾಯಾಗ್ರಾಹಕ. ನಾನು ಕವಿ, ಅವನು ವಿಮರ್ಶಕ. ಹೀಗೆ ಹೆಸರು, ಊರು ಎಲ್ಲ ಬದಲಾಯಿಸಿಕೊಂಡು ಸುಳ್ಳು ಸುಳ್ಳೇ ಹೇಳಿಕೊಂಡು ಆಗಷ್ಟೇ ಬಿಡುಗಡೆಯಾದ ಹೊಸ ಪುಸ್ತಕಗಳ ಬಗ್ಗೆ ಮಾತಾಡುತ್ತಾ, ಹಿರಿಯ ಲೇಖಕರನ್ನು ನಮ್ಮದೇ ಶೈಲಿಯಲ್ಲಿ ಗೇಲಿ ಮಾಡುತ್ತಾ, ಎಲ್ಲಾ ವಾದಗಳನ್ನೂ ಖಂಡಿಸುತ್ತಾ ಧೀರರಂತೆ ಶೂರರಂತೆ ಕಾಣಿಸಿಕೊಳ್ಳುತ್ತಾ ಓಡಾಡಿದ್ದು ಬರೀ ನೆನಪಲ್ಲ.
ಆಗೆಲ್ಲ ಇಬ್ಬರಿಗೂ ಕತೆ ಬರೆಯುವ ಹುಚ್ಚು. ಭಾಷಣದ ಹುಚ್ಚು. ನಾನು ಉಗ್ಗುತ್ತಾ ಉಗ್ಗುತ್ತಾ ಭಾಷಣ ಮಾಡಿದ ಸಂಜೆ ಅವನು ಚಾಚಿಕೊಂಡಿದೆ ಬದುಕು ರಸ್ತೆಯಂತೆ’ ಎಂಬ ಸೊಗಸಾದ ಕವಿತೆ ಬರೆದು ನಖಶಿಖಾಂತ ಉರಿಯುವಂತೆ ಮಾಡುತ್ತಿದ್ದ. ನಾನು ಅವನ ಕೆಮೆರಾ ಕೆಡಿಸಿ ಅವನನ್ನು ರೇಗಿಸುತ್ತಿದ್ದೆ. ಮೂರು ದಿನ ಮೌನ, ಮೂರನೆಯ ಸಂಜೆ ಮತ್ತೆ ಒಡನಾಟ. ನಮ್ಮೂರಿನ ಇತರ ಗೆಳೆಯರ ಪಾಲಿಗೆ ನಮ್ಮಿಬ್ಬರ ಸ್ನೇಹ ಬಿಡಿಸಲಾರದ ಒಗಟು. ಅವನು ಕಾಯಿಲೆ ಬಿದ್ದ ಒಂದು ರಾತ್ರಿ ನಾನು ಅತ್ತು ಕೂಗಾಡಿ ರಾತ್ರೋ ರಾತ್ರಿ ಅವನ ಮನೆಗೆ ಹೋದದ್ದು ನೆನಪು.
ಬೆಂಗಳೂರಿಗೆ ಬಂದು ನವ್ಯಕವಿಗಳ ದುಶ್ಚಟಗಳನ್ನೆಲ್ಲ ಕಲೆದು ಎಲ್ಲವನ್ನೂ ವ್ಯಂಗ್ಯ ಮತ್ತು ಉಡಾಫೆಯಿಂದ ನೋಡುತ್ತಾ ನಮ್ಮ ನಮ್ಮ ಪಾಡಿಗೆ ಬರೆಯುತ್ತಿದ್ದ ದಿನಗಳಲ್ಲಿ ಅವನು ನನ್ನ ಪಾಲಿನ ತೇಜಸ್ವಿ. ನಾನು ಅವನ ಪಾಲಿನ ಲಂಕೇಶ.
***
ಇದೆಲ್ಲ ಆಗಿ ಕಾಲು ಶತಮಾನ ಕಳೆದಿದೆ. ನನ್ನ ಮೀಸೆ ಬೆಳ್ಳಗಾಗಿದೆ. ಅವನ ಹಣೆ ಅಗಲವಾಗುತ್ತಿದೆ. ನಾವಿಬ್ಬರು ಸೇರುವುದು ಕಡಿಮೆಯಾಗಿದೆ. ಒಬ್ಬರು ಬರೆದದ್ದನ್ನು ಇನ್ನೊಬ್ಬರು ಓದುತ್ತೇವೆ ಅನ್ನುವುದೂ ಖಾತ್ರಿಯಿಲ್ಲ. ಓದದಿದ್ದರೂ ಅವನೇನು ಬರೆಯುತ್ತಾನೆ ಅನ್ನುವುದು ಗೊತ್ತಾಗುತ್ತದೆ. ಅವನಿಗೂ ಅಷ್ಟೇ..
ಕುಂಟಿನಿ ಬೆಂಗಳೂರಿಗೆ ಬಂದಿದ್ದರೆ ಏನೇನಾಗುತ್ತಿದ್ದ ಎಂದು ಹೇಳುವುದು ಕಷ್ಟ. ಅವನ ಪ್ರತಿಭೆ, ಶ್ರದ್ಧೆ ಮತ್ತು ಜೀವನೋತ್ಸಾಹ ಹಾಗೆ ಉಳಿದುಕೊಂಡಿದೆ. ರಾಜಧಾನಿಯಲ್ಲಿ ಅದಕ್ಕೊಂದು ಸ್ಪಷ್ಟ ರೂಪ ಸಿಗುತ್ತಿತ್ತು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವನು ನಮ್ಮೂರಲ್ಲೇ ಉಳಿದುಕೊಂಡ. ಚೆಂದದ ಮನೆ ಕಟ್ಟಿ, ಕಾರುಕೊಂಡುಕೊಂಡು, ಕತೆಗಳನ್ನು ಓದುತ್ತಾ ಬರೆಯುತ್ತಾ ಇದ್ದುಬಿಟ್ಟ. ಇಬ್ಬರೂ ಬಿಡುವಾಗಿದ್ದ ಮುಸ್ಸಂಜೆಯೋ ಮುಂಜಾನೆಯೋ ಮಾತಿಗೆ ಬಿದ್ದರೆ ಕಾಲ ಮತ್ತೆ ಕಾಲು ಶತಮಾನ ಹಿಂದಕ್ಕೆ ಓಡುತ್ತದೆ. ಮತ್ತೆ ಇಬ್ಬರೂ ಜಿದ್ದಿಗೆ ಬಿದ್ದು ಕತೆ ಬರೆಯುತ್ತೇವೆ.
ತಿಂಗಳ ಹಿಂದೆ ಕುಂಟಿನಿಯ ಕವಿತೆ ಓದಿ ಬೆರಗಾದೆ. ನಾಲ್ಕೇ ನಾಲುಗಳ ಪುಟ್ಟ ಕವಿತೆಯ ಮೂಲಕ ಕುಂಟಿನಿ ತನ್ನ ಪ್ರತಿಭಾವಲಯವನ್ನು ವಿಸ್ತರಿಸಿಕೊಂಡಿದ್ದಾನೆ. ಈ ನಾಲ್ಕು ನಾಲ್ಕು ಸಾಲುಗಳನ್ನು ಓದಿ:
-೧-
ಒಂದು ತೆರೆಯನ್ನೂ
ಹಿಡಿದಿಡಲಾಗದ ಮಾನವ
ಸಮುದ್ರದೆದುರು ಸೋಲೊಪ್ಪಿಕೊಂಡಿರುವುದನ್ನು
ನದಿಗಳು ಬಂದು
ತಿಳಿಸಿದವು.
-೨-
ಎಲೆಗಳಲ್ಲಿ ಅಡಗಿದ್ದ
ರಾತ್ರಿ ಇಬ್ಬನಿ
ಕತ್ತಲಿನ ಅಚ್ಚರಿಗಳನ್ನು
ಹಗಲಿಗೆ ಹೇಳದೇ
ಆರಿಹೋಯಿತು
-೩-
ಎರಡು ದೀಪಗಳನ್ನು
ಹಚ್ಚಿ
ಕತ್ತಲನ್ನು ನೋಡಿದೆ
ಎರಡು
ಬೆಳಕಿರಲಿಲ್ಲ.

ಇಂಥ ಪದ್ಯಗಳಲ್ಲೇ ಕುಂಟಿನಿ ನನಗೆ ಅಪರಿಚಿತನಾದದ್ದು. ಅವನೊಳಗೆ ಕವಿತೆಗಳಿವೆ ಅನ್ನುವುದು ನನಗೆ ಗೊತ್ತಿರಲಿಲ್ಲ. ತುಂಬಾ ಮಾತಾಡುವವನ ಒಳಗೆ ಕವಿತೆ ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ನನ್ನ ನಂಬಿಕೆಯನ್ನು ಸುಳ್ಳಾಗಿಸಿದವರು ಇಬ್ಬರು; ಕುಂಟಿನಿ ಮತ್ತು ಕಾಯ್ಕಿಣಿ.
ಕುಂಟಿನಿಯ ಕಥಾಸಂಕಲನವೊಂದನ್ನು ಬಾಕಿನ ಪ್ರಕಟಿಸಿದ್ದರು. ನನ್ನ ಸಂಕಲನ ಬರುವುದಕ್ಕೆ ಮುಂಚೆಯೇ ಅದು ಪ್ರಕಟವಾಗಿತ್ತು. ಎಲ್ಲಾ ಹೊಸಬರ ಸಂಕಲನದ ಹಾಗೆಯೇ ಅದು ಕೂಡ ವರ್ತಮಾನಕ್ಕೆ ಸಲ್ಲಲಿಲ್ಲ. ಇದೀಗ ಕುಂಟಿನಿ ಎರಡನೆ ಸಂಕಲನ ಹೊರತರುತ್ತಿದ್ದಾನೆ. ಅವನ ಕತೆಗಳಲ್ಲಿ ನನಗೆ ನಿಷ್ಠುರ ಪ್ರಾಮಾಣಿಕತೆ ಮತ್ತು ಅಪರಿಮಿತ ಉತ್ಸಾಹ ಮಿಕ್ಕಿದಂತೆ ಕಾಣುತ್ತದೆ. ಮಾತನ್ನು ತನ್ನ ಕೃತಿಯಲ್ಲಿ ಮೀರಬಲ್ಲ ನನ್ನ ಗೆಳೆಯ ಅನ್ನುವ ಪ್ರೀತಿಯನ್ನು ಮುಚ್ಚಿಟ್ಟೂ ನಾನು ಈ ಮಾತುಗಳನ್ನು ಆಡಬಲ್ಲೆ. ಅದು ಕುಂಟಿನಿಯ ಸೃಜನಶೀಲತೆಗೆ ಒಬ್ಬ ಓದುಗನಾಗಿ ಸಲ್ಲಿಸಬೇಕಾದ ಗೌರವ ಎಂದೂ ನಾನು ಭಾವಿಸಿದ್ದೇನೆ.
ನೇತ್ರಾವತಿಯ ದಂಡೆಯಲ್ಲಿ ಅಡ್ಡಾಡುತ್ತಾ, ಚಾರ್ಮಾಡಿ, ಶಿಬಾಜೆ, ನೆಲ್ಯಾಡಿ, ಸಕಲೇಶಪುರ, ಸಾಗರ, ಆಗುಂಬೆಯ ಕಾಡುಗಳಲ್ಲಿ ಅಲೆದಾಡುತ್ತಾ, ಕತೆಗಳ ಶಿಕಾರಿ ಮಾಡುತ್ತಾ ಕಳೆದ ದಿನಗಳ ನೆನಪನ್ನು ಅವನ ಕತೆಗಳು ಮತ್ತೆ ಕಣ್ಮುಂದೆ ತಂದಿಟ್ಟಿವೆ. ಅವನು ಕತೆಯಿಂದ ಕತೆಗೆ ಬೆಳೆಯುತ್ತಾ ಹೋಗುವುದನ್ನು ನಾನು ಅಚ್ಚರಿ ಮತ್ತು ಪ್ರೀತಿಯಿಂದ ನೋಡುತ್ತಿದ್ದೇನೆ. ಕುಂಟಿನಿ ಮೊನ್ನೆ ಮೊನ್ನೆ ಬರೆದ ಸಣ್ಣಕತೆ ಕೊಲೆಗಾರ ಗಂಗಣ್ಣ’ ಓದಿದಾಗ ಮತ್ತೆ ಅಸೂಯೆಯಾಯಿತು.
ಎಂದೂ ಬರೆದು ಮುಗಿಸುವ ಆತುರಕ್ಕಾಗಿಯೋ, ಬರೆದೇ ತೀರಬೇಕು ಎಂಬ ಹಠಕ್ಕಾಗಿಯೋ, ಅನುಭವವನ್ನು ಕತೆಯಾಗಿಸಲೇಬೇಕು ಎಂಬ ಜಿದ್ದಿನಿಂದಲೋ ಬರೆದವನಲ್ಲ ಕುಂಟಿನಿ. ಅವನ ಪಾಲಿಗೆ ಕತೆಯೆಂದರೆ ಅನಿವಾರ್ಯ ಕರ್ಮ. ಒಮ್ಮೊಮ್ಮೆ ರೇಜಿಗೆ ಹುಟ್ಟಿಸುವ ನಮ್ಮೂರಿನ ಏಕತಾನತೆ, ನಡುಬೇಸಗೆಯ ಸುಡುಬಿಸಿಲಿನ ನಿಷ್ಕ್ರಿಯ ತೀವ್ರತೆ, ಮಳೆಗಾಲದ ಬೋಗಾರು ಮುಸ್ಸಂಜೆಯ ನಿರುತ್ಸಾಹ ಇವುಗಳನ್ನೆಲ್ಲ ಮೀರುವುದಕ್ಕೆ ಅವನು ಬರೆಯುತ್ತಾನೆ ಎನ್ನುವುದು ನನ್ನ ಗುಮಾನಿ. ನಾನಾದರೂ ಅಲ್ಲಿದ್ದರೆ ಅದೇ ಕಾರಣಕ್ಕೆ ಬರೆಯುತ್ತಿದ್ದೆ.
ಕತೆಗಳನ್ನು ಯಾರು ಬೇಕಾದರೂ ಬರೆಯಬಹುದು. ಆದರೆ ಭೇಟಿಯಾದಾಗ ಜನ್ಮಾಂತರದ ಗೆಳೆತನವೇನೋ ಎಂದೆನ್ನಿಸುವಂತೆ ತಬ್ಬಿಕೊಳ್ಳುವ ಆಪ್ತತೆ, ದೂರದಲ್ಲಿದ್ದಾಗಲೂ ಜೊತೆಗಿದ್ದಾನೆ ಅನ್ನಿಸುವಂಥ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳುವುದು ಕಷ್ಟ. ನಮ್ಮಿಬ್ಬರ ಮಧ್ಯೆ ಅಂಥದ್ದೊಂದು ಸ್ನೇಹ ಸಾಧ್ಯವಾಗಿದೆ. ನಮ್ಮಿಬ್ಬರ ಬರೆವಣಿಗೆಯನ್ನೂ ಮೀರಿದ ಗೆಳೆತನ ಅದು. ಈ ಸ್ನೇಹದಿಂದಲೇ ಹುಟ್ಟಿದ ಕತೆಗಳು ಇವು. ನನ್ನ ಬರಹಗಳೂ ಹಾಗೆಯೇ. ಹೀಗಾಗಿ ನಾನು ಬರೆದದ್ದನ್ನು ಕುಂಟಿನಿಯೂ ಬರೆಯಬಹುದಾಗಿತ್ತು, ಅವನು ಬರೆದದ್ದನ್ನು ನಾನೂ ಬರೆಯಬಹುದಾಗಿತ್ತು ಅನ್ನುವುದೇ ನಮ್ಮಿಬ್ಬರ ಬರಹಗಳ ಅನನ್ಯತೆ.
ಈ ಸಾಲುಗಳಲ್ಲಿ ವಿರೋಧಾಭಾಸ ಹಣಿಕಿಹಾಕಿದೆ ಎಂದು ನಿಮಗೇನಾದರೂ ಅನ್ನಿಸಿದರೆ ನಮ್ಮಿಬ್ಬರ ಉತ್ತರವೂ ವಿನಯಪೂರ್ವಕ ಮೌನ ಮಾತ್ರ.

-ಅವನು ಗಿರೀಶ ಎಂದೇ ಇವತ್ತಿಗೂ ಕರೆಯುವ
ಜೋಗಿ