Thursday, February 28, 2008

ಚಲಂ: ಐವತ್ತರ ಹೆರಳಿಗೆ ಈ ಕೆಂಡಸಂಪಿಗೆ


ಒಂದು ಸುದೀರ್ಘ ನಿಟ್ಟುಸಿರು!
ಸುಡುಬಿಸಿಲೋ ಬೆಳದಿಂಗಳೋ ಗೊತ್ತಾಗದ ಸ್ಥಿತಿ. ನಿನ್ನೆ ನಾಳೆಗಳು ಒಂದಾಗಿ ನಿಂತ ವರ್ತಮಾನವೆಂಬ ನಿಶ್ಚಲ ಬಿಂದು. ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೆ ನಮಗೆ ಬೇಕಾದದ್ದು ಅಂದುಕೊಂಡು ಬಿಡುತ್ತೇವಾ? ಪ್ರೀತಿಯಲ್ಲೂ ಅಷ್ಟೇನಾ? ನಾವು ಪ್ರೀತಿಸದವರು ಸಿಕ್ಕದೇ ಹೋದಾಗ, ಸಿಕ್ಕವರನ್ನೇ ಪ್ರೀತಿಸುವುದು ರಾಜಿಯಾ? ಅಸಹಾಯಕತೆಯಾ? ಅನಿವಾರ್ಯ ಕರ್ಮವಾ? ವಿಧಿಯಾ? ಅಥವಾ ಬದುಕಿನ ವಿಲಕ್ಷಣ ವರ್ತನೆಗಳಲ್ಲಿ ಅದೂ ಒಂದಾ?
ಉತ್ತರ; ಒಂದು ಸುದೀರ್ಘ ನಿಟ್ಟುಸಿರು.
ಕಡುವ್ಯಾಮೋಹಿಯ ಹಾಗೆ, ಸಂತನ ಹಾಗೆ, ಎಲ್ಲವನ್ನೂ ಮೀರಿಯೂ ಮೀರದವನ ಹಾಗೆ, ನಮ್ಮನ್ನು ಕಂಗೆಡಿಸುವವನ ಹಾಗೆ, ನಾವು ಸಾಧನೆ, ಸುಖ, ತೃಪ್ತಿ, ನೆಮ್ಮದಿ ಅಂದುಕೊಂಡದ್ದೆಲ್ಲ ಕೇವಲ ನಮಗೆ ನಾವೇ ಹೇಳಿಕೊಂಡ ಅಪ್ಯಾಯಮಾನ ಸುಳ್ಳು ಎಂದೆನ್ನಿಸಿ ಕಂಗಾಲಾಗುವ ಹಾಗೆ, ಅದು ಅರಿವಾಗಿಯೂ ಆ ಸುಳ್ಳನ್ನು ಧಿಕ್ಕರಿಸುವ ಧೈರ್ಯವಾಗದ ಹಾಗೆ.....
ಚಲಂ ನಿಜಕ್ಕೂ ಹಾಗಿದ್ದರಾ? ನಮಗೆ ಹಾಗೆ ಕಾಣಿಸುತ್ತಿದ್ದರಾ? ಅವರೊಳಗಿನ ತಲ್ಲಣಗಳೇನಿದ್ದವು? ಅವರು ಏಕಾಂತದಲ್ಲಿ ಮುಖಾಮುಖಿಯಾಗುತ್ತಿದ್ದ ಸತ್ಯದ ಸ್ವರೂಪವೇನು? ಅವರು ಹಾಗಿದ್ದರೆ, ನಾವೇಕೆ ಹೀಗಿದ್ದೇವೆ? ಅದೇ ಭೂಮಿ, ಅದೇ ಬಾನು, ಅದೇ ಗಾಳಿ, ಅದೇ ನೀರು; ಸೃಷ್ಟಿ ಮಾತ್ರ ಬೇರೆ. ಅದು ನಮ್ಮ ಮಿತಿಯಾ? ಅವರ ಗತಿ ಮತ್ತು ಸ್ಥಿತಿಯಾ? ನಾವು ಆ ಬದುಕನ್ನು ಹೇಗೆ ನೋಡಬೇಕು? ಆಮೇಲೆ ನಮ್ಮನ್ನು ಕಾಡುವ ಅತೃಪ್ತಿಯಿಂದ ಹೇಗೆ ಪಾರಾಗಬೇಕು.
ಮತ್ತೊಂದು ಸುದೀರ್ಘ ನಿಟ್ಟುಸಿರು!
-2-
ಒಂದು ಅತಿಗೆ ಹೋಗದ ಹೊರತು ಸತ್ಯದ ಹೊಸಿಲನ್ನು ಎಡವುವುದು ಸಾಧ್ಯವೇ ಇಲ್ಲವೇನೋ? ಸದಾ, ನಿನ್ನ ಇತಿಮಿತಿಯನ್ನು ಅರಿತು ಬದುಕು ಎನ್ನುತ್ತದೆ ನಮ್ಮ ಓದು, ನಾವು ಕಲಿತ ಪಾಠ, ನಮ್ಮ ಸುತ್ತಲಿನ ಸಮಾಜ, ನಮ್ಮ ಧರ್ಮ ಮತ್ತು ನಮ್ಮ ಅಧೈರ್ಯ. ವಿವೇಕದ ಮೂಲಕ ನಾವು ದಾಟಲು ಯತ್ನಿಸುತ್ತೇವೆ ಎನ್ನುವುದು ದೊಡ್ಡ ಭ್ರಮೆ. ಜ್ಞಾನದ ಮೂಲಕ ಮೀರುತ್ತೇವೆ ಎನ್ನುವುದು ಸುಳ್ಳು. ಐಷಾರಾಮದ ಮೂಲಕ ಗೆಲ್ಲುತ್ತೇವೆ ಅನ್ನುವುದು ಲಂಪಟತನ. ಅನುಭವದ ಸೇತುವೆಯ ಮೇಲೆ ನಡೆದು ಆಚೆ ತೀರ ಸೇರುತ್ತೇವೆ ಅನ್ನುವುದು ಮೂಢನಂಬಿಕೆ. ನಾವು ಸದಾ ಸೇತುವೆಯ ನಡುವಲ್ಲೇ ಇರುತ್ತೇವೆ. ಹೊರಟ ನೆಲಕ್ಕೆ ಬಂದು ತಲುಪಲಾರೆವು, ಹೋಗಬೇಕಾದ ಜಾಗಕ್ಕೆ ಹೋಗಿ ಸೇರಲಾರೆವು. ಕೆಳಗೆ ಆರ್ಭಟಿಸುತ್ತಾ ಹರಿಯುವ ನದಿಗೆ ಧುಮುಕಿ ಪಾರಾಗಲಾರೆವು.
ಇಲ್ಲಿದ್ದೇ ಬೇರೆಯಾಗುವ ಆಶೆ, ಪಾರಾಗಿ ಎತ್ತರಕ್ಕೇರುವ ಹಂಬಲದ ನಡುವೆ ತುಯ್ಯುತ್ತಿರುವ ಮನಸ್ಸು ಚಲಂ ಆತ್ಮಕತೆಯ ಮುಂದೆ ಅರೆಕ್ಷಣ ಬೆತ್ತಲಾಗಿ ನಿಲ್ಲುತ್ತದೆ. ಹಾಗೆ ಬೆತ್ತಲೆಗೊಳಿಸುವ ಶಕ್ತಿ ಅಹಂಕಾರವಿಲ್ಲದೆ ಹುಟ್ಟಿದ ಎಲ್ಲ ಕಲೆಗೂ ಇರುತ್ತದೇನೋ? ಆದರೆ ಅಹಂಕಾರದ ಲವಲೇಶವೂ ಇಲ್ಲದೆ, ಆತ್ಮಚರಿತ್ರೆ ಬರೆಯುವುದಾದರೂ ಹೇಗೆ? ನಾನೆಂಬ ಮಮಕಾರವನ್ನು ತೊರೆದು, ತನ್ನ ಬದುಕನ್ನು ನಡುದಾರಿಯಲ್ಲಿ ಸತ್ತುಬಿದ್ದ ಅಪರಿಚಿತ ಶವವನ್ನು ನೋಡುವಷ್ಟು ಪರಕೀಯಭಾವದಿಂದ ನೋಡುವುದು ಸಾಧ್ಯವಾ?
ಚಲಂಗೆ ಅದು ಹೇಗೆ ಸಾಧ್ಯವಾಯಿತು? ಚಲಂ ಅಷ್ಟೊಂದು ತಳ್ಳಂಕಗಳ ಜೊತೆ ಹೇಗೆ ಜೀವಿಸಿದ್ದರು. ಜಗತ್ತಿನ ಜೊತೆ ಅಷ್ಟೊಂದು ಭಿನ್ನಾಭಿಪ್ರಾಯ ಇಟ್ಟುಕೊಂಡು ಹೇಗೆ ಜೀವಿಸಿದರು? ತನ್ನೊಂದಿಗೇ ಸಂಘರ್ಷ ಇಟ್ಟುಕೊಂಡು ಹೇಗೆ ಅಷ್ಟೊಂದು ಕ್ರಿಯಾಶೀಲವಾಗಿದ್ದರು? ಎಲ್ಲರನ್ನೂ ಸುಲಭವಾಗಿ ಸಂತೈಸುವ ಸಂಗತಿಗಳು ಅವರಿಗೇಕೆ ಸಾಂತ್ವನ ಹೇಳಲಿಲ್ಲ.
-3-
ಪ್ರಿಯ ರವಿ,
ಚಲಂ’ ಬಗ್ಗೆ ಕನ್ನಡದ ಓದುಗರಲ್ಲಿ ಆಸಕ್ತಿ ಹುಟ್ಟಿಸಿದವರು ನೀವು. ಈಗ ಸುಡುಸುಡು ಕೆಂಡದಂಥ ಈ ಕೃತಿಯನ್ನು ಕೈಲಿಡುತ್ತಿದ್ದೀರಿ. ಇದನ್ನು ಬರೆಯುವ ಹೊತ್ತಿಗೆ ನಿಮ್ಮಲ್ಲಿ ಮೂಡಿದ ಪ್ರಶ್ನೆಗಳನ್ನೂ ನಾನು ಊಹಿಸಿಕೊಳ್ಳಬಲ್ಲೆ. ನಿಮ್ಮ ಆಕರ್ಷಕ ಶೈಲಿಯನ್ನೂ ಬೇಕಂತಲೇ ಬದಿಗಿಟ್ಟು, ಎಷ್ಟು ವಸ್ತುನಿಷ್ಟವಾಗಿ ಹೇಳುವುದಕ್ಕೆ ಸಾಧ್ಯವೋ ಅಷ್ಟು ನಿರ್ಭಾವುಕತೆಯಿಂದ ನೀವು ಚಲಂ’ ಆತ್ಮಕತೆಯನ್ನು ಹೇಳುತ್ತಿರುವುದೇಕೆ ಅನ್ನುವುದನ್ನು ಓದುಗರೂ ಗ್ರಹಿಸಬಲ್ಲರು.
ಯಾರನ್ನೇ ಆಗಲಿ, ಒಂದೇ ಓದಿಗೆ ಆವರಿಸಿಕೊಳ್ಳುವ ವ್ಯಕ್ತಿತ್ವ ಅದು. ಚಲಂ’ ಭಾವತೀವ್ರತೆ, ವ್ಯಾಮೋಹ, ಸೆಳೆತ, ಶೃಂಗಾರದತ್ತ ಧಾವಿಸುವ ಉತ್ಕಟತೆ ಎಲ್ಲವನ್ನೂ ಮೀರಿದ್ದು ಅನುಭಾವದ ತುಡಿತ. ಇಂಥ ಅನುಭಾವವನ್ನು ತಾತ್ವಿಕತೆಯನ್ನು ಚಲಂ’ ತನ್ನ ಬದುಕನ್ನು ಸಮರ್ಥಿಸಿಕೊಳ್ಳಲು ಊರುಗೋಲು ಮಾಡಿಕೊಳ್ಳುವುದಿಲ್ಲ ಅನ್ನುವುದೇ ಇಲ್ಲಿನ ವೈಶಿಷ್ಟ್ಯ. ಹಾಗಾಗದಂತೆ ನೀವೂ ಕಟ್ಟೆಚ್ಚರ ವಹಿಸಿದ್ದೀರಿ ಅನ್ನುವುದೇ ಸಮಾಧಾನ.
ಎಷ್ಟು ನಿಚ್ಚಳವಾಗಿ ಅನ್ನಿಸಿದ್ದನ್ನು ಹೇಳುತ್ತಾ ಹೋಗುತ್ತಾರೆ ಚಲಂ’. ಅಂಥ ನಿಷ್ಠುರ ಪ್ರಾಮಾಣಿಕತೆಯೇ ಅವರ ಬದುಕನ್ನು ಗೌರವದಿಂದ ನೋಡುವಂತೆ ಮಾಡುತ್ತದೆ ಅಲ್ಲವೇ? ನಲವತ್ತು ದಾಟಿದ, ನನ್ನದಲ್ಲದ ಮತ್ಯಾವ ವಿಚಾರಧಾರೆಯೂ ನನ್ನನ್ನು ಕಸಿದುಕೊಳ್ಳಲಾರದು ಎಂದು ನಂಬಿಕೊಂಡಿರುವ ನನ್ನಂಥವನನ್ನೇ ಒಂದು ಕ್ಷಣ ಹಿಂತಿರುಗಿ ನೋಡುವಂತೆ ಮಾಡುತ್ತದೆ ಚಲಂ’ ಚರಿತೆ.
ಚಲಂ’ಗೆ ತನ್ನ ವ್ಯಕ್ತಿತ್ವದ ಕುರಿತು ಯಾವುದೇ ಪೂರ್ವಗ್ರಹಗಳಿರಲಿಲ್ಲ ಅನ್ನಿಸುತ್ತದೆ. ಹಾಗೇ, ಬದುಕಿನ ಕುರಿತೂ. ತನ್ನ ಸಿದ್ಧಾಂತಗಳನ್ನು ತಾನೇ ವಿರೋಧಿಸುವ, ತನ್ನ ನಿಲುವುಗಳನ್ನು ತಾನೇ ಒಪ್ಪದಿರುವ, ತನ್ನ ಅಸ್ತಿತ್ವವನ್ನು ನಿರಾಕರಿಸುತ್ತಲೇ ಕಾಪಾಡಿಕೊಳ್ಳುವ ಚಲಂ ಅಷ್ಟೊಂದು ಶತ್ರುಗಳನ್ನು ಸೃಷ್ಟಿಸಿಕೊಂಡದ್ದು ಅಚ್ಚರಿಯೇನಲ್ಲ. ಆದರೆ, ಅಷ್ಟೊಂದು ಅಭಿಮಾನಿಗಳನ್ನು, ಓದುಗರನ್ನು ಸಂಪಾದಿಸಿದ್ದು ಮಾತ್ರ ಪವಾಡವೇ. ಅದರ ಅರ್ಥ, ನಮ್ಮೆಲ್ಲರೊಳಗೂ ಇರುವ ಅತೃಪ್ತಿ, ನಿರಾಕರಣೆ, ಅದಮ್ಯವಾದ ಜೀವನೋತ್ಸಾಹ, ಹೊಸಿಲು ದಾಟುವ ಹಂಬಲ. ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ ಅನ್ನುವ ಮಾತಿನ ಅರ್ಥ ಸ್ಪುಟವಾಗುವುದು ಇಂಥ ಬದುಕಿಗೆ ಮುಖಾಮುಖಿ ಆದಾಗಲೇ.
ಚಲಂ ಬದುಕು ಅನುಕರಣೀಯವಲ್ಲ ಎಂದು ನೀವೇ ಹೇಳಿದ್ದೀರಿ. ಚಲಂ ಜೀವನದ ವ್ಯಾಮೋಹ, ಶೃಂಗಾರ ಮತ್ತು ಪ್ರಣಯಕ್ಕೆ ಸಂಬಂಧಿಸಿದಂತೆ ಅದು ನಿಜ. ಆದರೆ, ಚಲಂ ವಿಚಾರಧಾರೆಯಲ್ಲಿ ನಾವು ಕಂಡುಕೊಳ್ಳಬಹುದಾದ ಅನೇಕ ಸ್ವೀಕಾರಾರ್ಹ ಅಂಶಗಳಿವೆ. ನಮ್ಮ ಜೀವನೋತ್ಸಾಹವನ್ನು ಹುರಿಗೊಳಿಸುವ ಒಂದು ಜೀವತಂತುವಿದೆ. ಕಷ್ಟಕಾರ್ಪಣ್ಯಗಳನ್ನು ನಿರುಮ್ಮಳವಾಗಿ ಎದುರಿಸುವುದಕ್ಕೆ ನೆರವಾಗುವ ಸಂದೇಶವಿದೆ.
ನಮ್ಮ ತೋರಿಕೆಯನ್ನು ಆಡಂಬರವನ್ನು ಎಷ್ಟು ಚೆನ್ನಾಗಿ ಗೇಲಿ ಮಾಡುತ್ತಾರೆ ಚಲಂ. ಎಷ್ಟೇ ಬೇಡವೆಂದರೂ ಮರ್ಯಾದೆಯೆಂಬುದು ನಮ್ಮ ಮನೆಯೊಳಗೆ ತೆವಳಿಕೊಂಡು ಬಂದಿತ್ತು. ಚಿಕ್ಕಪುಟ್ಟ ಬೆಳ್ಳಿ ಬಂಗಾರದ ವಸ್ತುಗಳೂ ಮನೆಯಲ್ಲಿ ಕಾಣಿಸತೊಡಗಿದ್ದವು. ಈ ಭಿಕಾರಿಗಳನ್ನು ಮರ್ಯಾದಸ್ಥರನ್ನಾಗಿ ಮಾಡಲು ಅವುಗಳನ್ನೆಲ್ಲ ಕಂಡು ಹಿಡಿದರೇನೋ ಅನ್ನುತ್ತಿದ್ದೆ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿತ್ತು. ಆದರೆ, ಒಳಗಿನಿಂದ ಸಂತೋಷವೆಂಬುದು ಎಗರಿ ಹೋಗಿತ್ತು’.
ಬರೀ ಮರ್ಯಾದಸ್ಥರ ಪ್ರಚಂಚಕ್ಕೆ ಅವಿನಯವನ್ನು ಕಲಿಸುವ ಗುರುವಿನಂತೆಯೋ, ನೀರ ಮೇಲಿನ ಗುಳ್ಳೆಯಂತೆ ಕಾಣುವ ಸಂಸಾರಸುಖದ ಹುಸಿಸಂತೋಷವನ್ನೂ ಒಡೆಯವವರಂತೆಯೂ ಕಾಣಿಸುತ್ತಿದ್ದ ಚಲಂ’ ಆತ್ಮಕಥೆಯನ್ನು ಓದಿಸುವ ಮೂಲಕ ನಮ್ಮ ಮಿತಿಗಳನ್ನು ದಾಟುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್. ನಮ್ಮ ಘನತೆ, ಸಂಪತ್ತು, ಸಂಸಾರ, ಗೆಳೆತನ, ಬಳಗ- ಒದಗಿಸುವ ತೃಪ್ತಿಯೆಂಬ ಭಾವ ಹೇಗೆ ನಮ್ಮನ್ನು ಕುಬ್ಜರನ್ನೂ ನಿಷ್ಕ್ರಿಯರನ್ನೂ ಆಗಿಸುತ್ತಾ ಹೋಗುತ್ತದೆ. ಉಲ್ಲಂಘನೆಯ ಉತ್ಸಾಹವನ್ನು ಹೇಗೆ ಕುಂಠಿತಗೊಳಿಸುತ್ತದೆ. ನಮ್ಮ ರೆಕ್ಕೆಗಳನ್ನು ಈ ಅಲ್ಪತೃಪ್ತಿ ಹೇಗೆ ಅಡಗಿಸುತ್ತದೆ ಅನ್ನುವುದನ್ನು ಇಷ್ಟು ಸಮರ್ಥವಾಗಿ ಹೇಳುವುದು ಸಾಧ್ಯವೇ ಇಲ್ಲ.
ಎಲ್ಲ ಪೂರ್ವಯೋಜಿತ ಬದುಕಿಗೂ ಒಂದು ಮೇರೆಯಿರುತ್ತದೆ. ಆ ಮೇರೆಯೊಳಗೇ ನಾವು ಕೂಪಮಂಡೂಕಗಳಂತೆ ನೆಮ್ಮದಿಯಾಗಿರುತ್ತೇವೆ. ಅದೇ ದಿವ್ಯ ಸ್ಥಿತಿ ಎಂದು ಭಾವಿಸುತ್ತೇವೆ. ಚಲಂರಂಥ ವ್ಯಕ್ತಿತ್ವವೊಂದು ಎದುರಾದಾಗ ನಮ್ಮ ಕುಬ್ಜತೆಯ ಸಣ್ಣತನದ ನಾವು ಪರಮ ಪವಿತ್ರ, ಸುರಕ್ಷಿತ ಮತ್ತು ಸುಖದಾಯಕ ಅಂದುಕೊಂಡದ್ದರ ಅರ್ಥಹೀನತೆ ಹೊಳೆಯುತ್ತದೆ.
ಅಂಥ ಅಸಂಗತ ಬದುಕಿನ ಸತ್ಯಗಳನ್ನು ತನ್ನ ಅಸ್ತಿತ್ವದ ಮೂಲಕ ತಿಳಿಸಿಕೊಟ್ಟ ಚಲಂ’ ಬದುಕಿನ ಕತೆಯನ್ನು ಹೇಳುವ ಮೂಲಕ, ನಮ್ಮನ್ನು ಬಿಡುಗಡೆಗೊಳಿಸಿದ್ದಕ್ಕೆ ನಿಮಗೆ ಅಭಿನಂದನೆ.
ಈ ಮುಕ್ತಿಯ ಭಾವ ನಮ್ಮನ್ನು ಮತ್ತೊಂದು ಸಾಹಸದತ್ತ ಒಯ್ಯುತ್ತದೆ ಎಂದು ನಾನು ನಂಬಿದ್ದೇನೆ.

Tuesday, February 26, 2008

ಅವನು ಮರಳಿ ಬಂದಿದ್ದ..


ನಾನು ಸಾಗರಕ್ಕೆ ಕಾಲಿಟ್ಟದ್ದು ಪಿಯೂಸಿ ಮುಗಿಸಿದ ನಂತರ. ನಮ್ಮೂರಲ್ಲಿ ಡಿಗ್ರಿ ಕಾಲೇಜು ಇಲ್ಲದೇ ಇದ್ದದ್ದರಿಂದ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡೆ. ಸಾಗರದಲ್ಲಿ ರೂಮು ಮಾಡಿಕೊಂಡೋ ಮನೆ ಬಾಡಿಗೆಗೆ ಮಾಡಿಕೊಂಡೋ ಓದುವಷ್ಟು ಅನುಕೂಲ ನನಗಿರಲಿಲ್ಲ. ಹೀಗಾಗಿ ನನ್ನ ದೊಡ್ಡಪ್ಪ ಇಬ್ಬರು ಗೆಳೆಯರ ವಿಳಾಸ ಕೊಟ್ಟು ಅವರಲ್ಲೊಬ್ಬರ ಮನೆಯಲ್ಲಿರುವಂತೆ ಸೂಚಿಸಿದ್ದರು. ಚಂದ್ರಮಾವಿನಕೊಪ್ಪಲಿನ ರಾಜಶೇಖರ ಮೂರ್ತಿಗಳ ಮನೆ ಒಂದು. ಗಿಳಲಗುಂಡಿಯ ಶಂಕರಪ್ಪನವರ ಮನೆ ಇನ್ನೊಂದು. ನಾನು ಇಬ್ಬರ ಮನೆಗಳಿಗೂ ಹೋಗಿ, ಕೊನೆಗೆ ರಾಜಶೇಖರ ಮೂರ್ತಿಗಳ ಮನೆಯನ್ನೇ ಆರಿಸಿಕೊಂಡೆ. ಯಾಕೆಂದರೆ ಆ ಮನೆಯಲ್ಲಿ ರಾಜಶೇಖರ ಮೂರ್ತಿಗಳಾಗಲೀ ಅವರ ಕುಟುಂಬದವರಾಗಲೀ ವಾಸಮಾಡುತ್ತಿರಲಿಲ್ಲ. ಅವರ ಮಗ ಬೆಂಗಳೂರಿನಲ್ಲಿ ಓದುತ್ತಿದ್ದ. ಮೂರ್ತಿಗಳೂ ರಾಜಕೀಯದಲ್ಲಿ ಸಣ್ಣಮಟ್ಟಿಗೆ ಹೆಸರು ಮಾಡಿ ಬೆಂಗಳೂರು ಧಾರವಾಡ ಅಂತ ಓಡಾಡಿಕೊಂಡಿದ್ದರು. ಹೀಗಾಗಿ ಆ ಮನೆಯ ಏಕಾಂತ ನನಗೆ ತುಂಬ ಹಿಡಿಸಿತ್ತು.
ಚಂದ್ರಮಾವಿನಕೊಪ್ಪಲು ಸಣ್ಣ ಹಳ್ಳಿ. ರಾಜಶೇಖರ ಮೂರ್ತಿಗಳ ಮನೆ ಬಿಟ್ಟರೆ ಅಲ್ಲಿದ್ದ ಮನೆಗಳು ಏಳೋ ಎಂಟೋ. ಅವುಗಳ ಪೈಕಿ ಎರಡು ಮನೆಗಳು ಮೂರ್ತಿಗಳ ಮನೆಯ ಹತ್ತಿರವೇ ಇದ್ದವು. ಒಂದು ನಿವೃತ್ತ ಮಿಲಿಟರಿ ಅಧಿಕಾರಿ ರಾಜೇಗೌಡರ ಮನೆ. ಮತ್ತೊಂದು ಲೀಲಾಬಾಯಿ ಕಾಮ್ರ ಮನೆ. ಲೀಲಾಬಾಯಿ ಕಾಮತರಿಗೆ ಮೂವರು ಸುಂದರಿಯರಾದ ಹೆಣ್ಣುಮಕ್ಕಳು. ಅವರ ಪೈಕಿ ದೊಡ್ಡವಳ ಹೆಸರು ಸರೋಜಿನಿ. ಅವಳೂ ಲಾಲ್ ಬಹಾದೂರ್ ಕಾಲೇಜಿನಲ್ಲೇ ಪಿಯೂಸಿ ಓದುತ್ತಿದ್ದಳು. ಹೀಗಾಗಿ ನನ್ನ ಜೊತೆಗೇ ಕಾಲೇಜಿಗೆ ಬರುವುದಕ್ಕೆ ಶುರುಮಾಡಿದಳು. ಅವಳು ಅಂಗಳದಲ್ಲಿ ಅಡ್ಡಾಡುವುದನ್ನು ನೋಡಬಹುದು ಎಂದುಕೊಂಡು ಆ ಮನೆ ಕಾಣುವಂಥ ರೂಮನ್ನೇ ಆರಿಸಿಕೊಂಡು ಕಿಟಕಿ ಹತ್ತಿರವೇ ಟೇಬಲ್ ಚೇರು ಹಾಕಿಕೊಂಡು ಓದುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೆ. ಕಣ್ಣೆತ್ತಿ ನೋಡಿದರೆ ಸರೋಜಿನಿಯ ಮನೆ ಕಾಣಿಸುತ್ತಿತ್ತು. ಕೊಂಚ ಕಣ್ಣು ತಿರುಗಿಸಿದರೆ ರಾಜೇಗೌಡರ ಮನೆಯಂಗಳ ಕಾಣಿಸುತ್ತಿತ್ತು.
ರಾಜೇಗೌಡರಿಗೆ ಎಪ್ಪತ್ತು ದಾಟಿರಬಹುದು. ಆದರೂ ಗಟ್ಟಿಮುಟ್ಟಾಗಿದ್ದರು. ಬೆಳಗ್ಗೆ ಎದ್ದು ತಾವೇ ಬಾವಿಯಿಂದ ನೀರು ಸೇದಿ ಸ್ನಾನ ಮಾಡುತ್ತಿದ್ದರು. ನಂತರ ಮನೆ ಮುಂದಿನ ಪುಟ್ಟ ಕೈತೋಟದಲ್ಲಿ ಸದಾ ಏನಾದರೊಂದು ಕೆಲಸ ಮಾಡುತ್ತಿರುತ್ತಿದ್ದರು. ಅವರ ಮನೆಗೆ ಯಾರಾದರೂ ಬಂದಿದ್ದನ್ನಾಗಲೀ, ಅವರು ನಕ್ಕದ್ದನ್ನಾಗಲೀ ನಾನು ಕಂಡಿರಲಿಲ್ಲ. ತೋಟಕ್ಕೆ ಬರುವ ಮಂಗಗಳನ್ನೂ ರಾಜೇಗೌಡರು ಗುಂಡಿಟ್ಟು ಕೊಲ್ಲುತ್ತಾರೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಊರಲ್ಲಿ ಅವರಿಗೆ ಅಂಥ ಒಳ್ಳೆಯ ಹೆಸರಿರಲಿಲ್ಲ. ಮಹಾ ಜಿಪುಣ ಅನ್ನುವ ಬಿರುದಂತೂ ಅವರಿಗೆ ಅಂಟಿಕೊಂಡಿತ್ತು.
-2-
`ದರಿದ್ರದೋನೆ... ಹೋಗ್ತಿಯೋ ಇಲ್ವೋ.... ಶೂಟ್ ಮಾಡ್ತೀನಿ ನೋಡು... ಈಡಿಯಟ್...
ಹಾಗಂತ ಯಾರೋ ಯಾರನ್ನೋ ಬೈಯುವುದು ಕೇಳಿಸುವ ಹೊತ್ತಿಗೆ ನಾನು ಕಾಲೇಜಿಗೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಈ ಅಬ್ಬರದ ದನಿಕೇಳಿ ಕಿಟಕಿಯಿಂದ ಹೊರಗೆ ನೋಡಿದರೆ ಹೆಗಲಿಗೊಂದು ಕಂಬಳಿಹಾಕಿಕೊಂಡು ದೈನೇಸಿಯಂತೆ ಕಾಣುವ ಸಣಕಲನೊಬ್ಬ ರಾಜೇಗೌಡರ ಮನೆಯಂಗಳದಲ್ಲಿ ನಿಂತಿದ್ದು ಕಾಣಿಸಿತು. ಅವನನ್ನು ನೋಡಿದರೆ ಭಿಕ್ಪದವನಂತೆ ಕಾಣಿಸುತ್ತಿದ್ದ. ರಾಜೇಗೌಡರು ಕೆಂಡಾಮಂಡಲ ಸಿಟ್ಟಾಗಿ ಅವನನ್ನು ಅಟ್ಟಲು ಯತ್ನಿಸುತ್ತಿದ್ದರು. ಅವನು ಕ್ಪೀಣ ದನಿಯಲ್ಲಿ ಏನೋ ಕೇಳುತ್ತಿದ್ದ. ರಾಜೇಗೌಡರು ಬೈದಂತೆಲ್ಲ ದೂರ ಹೋಗಿ ಅವರು ಸುಮ್ಮನಾದಂತೆಲ್ಲ ಮತ್ತೆ ಹತ್ತಿರ ಬರುತ್ತಿದ್ದ.
ನಾನು ನೋಡನೋಡುತ್ತಿದ್ದಂತೆ ರಾಜೇಗೌಡರು ಮತ್ತೊಮ್ಮೆ ಜೋರಾಗಿ ಅಬ್ಬರಿಸಿ ಒಳಗೆ ಹೋದರು. ಅವನೂ ಓಡೋಡುತ್ತಾ ಅವರನ್ನು ಹಿಂಬಾಲಿಸಿಕೊಂಡು ಮನೆಯ ಎರಡು ಮೆಟ್ಟಿಲು ಹತ್ತಿ ಬೇಡತೊಡಗಿದ. ಅಷ್ಟು ಹೊತ್ತಿಗೆ ಒಳಗೆ ಹೋದ ಗೌಡರು ತಮ್ಮಕೋವಿಯೊಂದಿಗೆ ಹೊರಬಂದು ಸುಟ್ಟು ಬಿಡುತ್ತೇನೆ ಎಂಬಂತೆ ಸನ್ನೆ ಮಾಡಿದರು. ಆತ ಅದು ಈ ಮುದುಕನಿಂದ ಆಗದ ಕೆಲಸ ಎಂಬಂತೆ ಮತ್ತೊಂದು ಮೆಟ್ಟಿಲು ಹತ್ತಿದ. ಇದ್ದಕ್ಕಿದ್ದಂತೆ ಕೋವಿಯನ್ನು ಥಟ್ಟನೆ ಹಿಂದೆ ತಿರುಗಿಸಿ ಅವನನ್ನು ರಾಜೇಗೌಡರು ತಳ್ಳಿದರು. ಈ ಅನಿರೀಕ್ಪಿತ ಆಘಾತದಿಂದ ಆತ ಆಯತಪ್ಪಿ ದೊಪ್ಪನೆ ಮೆಟ್ಟಿಲಿನಿಂದ ಕೆಳಗೆ ಉರುಳಿದ. ಅವನ ಕತ್ತು ಕೊನೆಯ ಮೆಟ್ಟಿಲಿಗೆ ಸಿಕ್ಕಿ ತುಂಡಾಗಿರಬೇಕು ಅಂತ ಕಾಣುತ್ತದೆ. ಯಾಕೆಂದರೆ ಆತ ಬಿದ್ದಲ್ಲಿಂದ ಏಳಲಿಲ್ಲ.
ರಾಜೇಗೌಡರ ಮುಖದಲ್ಲಿ ಗಾಬರಿ ಕಾಣಿಸಿತು. ಕೆಳಗಿಳಿದು ಅವನ ಮೈಮುಟ್ಟಿ ಅಲ್ಲಾಡಿಸಿದರು. ನಾಡಿ ಹಿಡಿದು ನೋಡಿದರು. ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದರು. ಯಾರೂ ನೋಡುತ್ತಿಲ್ಲ ಅನ್ನುವುದನ್ನು ಖಾತ್ರಿ ಮಾಡಿಕೊಂಡು ಅವನನ್ನು ಮನೆಯೊಳಗೆ ಎಳೆದುಕೊಂಡು ಹೋದರು. ಅದಾದ ಸ್ವಲ್ಪ ಹೊತ್ತಿನ ನಂತರ ರಾಜೇಗೌಡರ ಜೀಪು ಅತೀವ ವೇಗದಿಂದ ಹೊರಟದ್ದನ್ನೂ ನಾನು ನೋಡಿದೆ. ಬಹುಶಃ ಆ ಭಿಕ್ಪುಕನ ಹೆಣವನ್ನು ಅವರು ಅದರಲ್ಲಿ ಒಯ್ದಿರಬೇಕು ಅಂದುಕೊಂಡೆ.
ಅರೆಗಳಿಗೆಯಲ್ಲಿ ನಡೆದುಹೋದ ಈ ಅನಪೇಕ್ಪಿತ ಕೊಲೆಗೆ ನನ್ನನ್ನು ಬಿಟ್ಟರೆ ಬೇರೆ ಯಾರೂ ಸಾಕ್ಪಿಯಿರಲಿಲ್ಲ. ರಾಜೇಗೌಡರು ಕೊಲೆ ಮಾಡಿದ್ದಾರೆ ಅಂತ ಹೇಳುವ ಧೈರ್ಯವೂ ನನಗೆ ಬರಲಿಲ್ಲ. ಇದಾದ ಮೂರನೆಯ ದಿನ ಚಂದ್ರವಳ್ಳಿಯ ಸಮೀಪ ಭಿಕ್ಪುಕನೊಬ್ಬ ಬಿದ್ದು ಸತ್ತದ್ದು ಪತ್ರಿಕೆಯಲ್ಲಿ ವರದಿಯಾಯಿತು. ಭಿಕ್ಪುಕನ ಸಾವು ಕೊಲೆ ಅನ್ನಿಸಿಕೊಳ್ಳುವುದಾದರೂ ಹೇಗೆ? ಅದಕ್ಕೆ ಹೆಚ್ಚಿನ ಮಹತ್ವವೇನೂ ಸಿಗಲಿಲ್ಲ.
ನಾನು ರಾಜೇಗೌಡರ ಈ ಕೃತ್ಯವನ್ನು ಬಹಿರಂಗಗೊಳಿಸಲಿಲ್ಲ ಯಾಕೆ ಅಂತ ಅನೇಕ ಸಾರಿ ಯೋಚಿಸಿದ್ದೇನೆ. ಅದಕ್ಕೆ ನನ್ನ ಭಯವೊಂದೇ ಕಾರಣವಾಗಿರಲಿಕ್ಕಿಲ್ಲ. ಎಪ್ಪತ್ತರ ಮುದುಕ ಪೊಲೀಸು, ಕೋರ್ಟು ಅಂತ ಅಲೆಯುವುದನ್ನು ನೋಡುವುದು ನನಗೆ ಬೇಕಿರಲಿಲ್ಲ. ಅಷ್ಟಕ್ಕೂ ಅದೇನೂ ಉದ್ದೇಶಪೂರ್ವಕ ಕೊಲೆ ಅಲ್ಲವಲ್ಲ?
ಆದರೆ ಆಮೇಲೆ ರಾಜೇಗೌಡರನ್ನು ನೋಡಿದಾಗೆಲ್ಲ ನನ್ನನ್ನು ಒಂದು ವಿಚಿತ್ರ ಭಾವನೆ ಕಾಡುತ್ತಿತ್ತು. ಒಂದು ವೇಳೆ ಅವರು ಕೊಲೆ ಮಾಡಿದ್ದನ್ನು ನಾನು ನೋಡಿದ್ದೇನೆ ಅಂತ ಗೊತ್ತಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತು? ನನ್ನನ್ನೂ ಅವರು ಕೊಂದುಬಿಡುತ್ತಿದ್ದರಾ? ಹೀಗೆಲ್ಲ ಯೋಚನೆಗಳು ಬರಲಾರಂಭಿಸಿ ನಾನು ಆ ಕಡೆ ನೋಡುವುದನ್ನೇ ಬಿಟ್ಟೆ.
ಅದೇ ತಿಂಗಳು ಇನ್ನೊಂದು ಅನಾಹುತವೂ ಸಂಭವಿಸಿತು. ನಾನು ಬಹುವಾಗಿ ಇಷ್ಟಪಡುತ್ತಿದ್ದ ಸರೋಜಿನಿಯ ಮದುವೆಯೂ ನಡೆದುಹೋಯಿತು. ಶೃಂಗೇರಿಯ ಕಡೆಯ ಸಂಬಂಧವೊಂದು ಕುದುರಿದ್ದರಿಂದ ಲೀಲಾಬಾಯಿ ಅವಳ ಕಾಲೇಜು ಬಿಡಿಸಿ ಮದುವೆ ಮಾಡಿಕೊಟ್ಟರು. ಅದರಿಂದ ಸರೋಜಿನಿಗೇನೂ ಅಂಥ ದುಃಖವಾದಂತೆ ಕಾಣಿಸಲಿಲ್ಲ. ಆಕೆ ಮಣಗಟ್ಟಲೆ ಬಂಗಾರ ಹೇರಿಕೊಂಡು ತನ್ನ ಸಂಭ್ರಮಕ್ಕೆ ತಾನೇ ಬೆರಗಾಗುತ್ತಾ ಓಪನ್ ಜೀಪಿನಲ್ಲಿ ಹೊರಟದ್ದನ್ನು ನಾನು ಕಣ್ಣಂಚು ಒದ್ದೆ ಮಾಡಿಕೊಂಡು ನೋಡಿದೆ.
-3-
ಅದಾಗಿ ಒಂದು ವರುಷ ಕಳೆಯಿತು. ನಾನು ಬಿ.ಎ. ಫೈನಲ್ಲಿನಲ್ಲಿದ್ದೆ. ಟಿ. ಪಿ. ಅಶೋಕರಂಥ ಮೇಷ್ಟರಿದ್ದುದರಿಂದ ಕಾಲೇಜು ಬೋರು ಅನ್ನಿಸುತ್ತಿರಲಿಲ್ಲ. ಪಾಠದ ಜೊತೆ ಸಿನಿಮಾದ ಕುರಿತೂ ಜಗತ್ತಿನ ಒಳ್ಳೊಳ್ಳೆಯ ಕೃತಿಗಳ ಕುರಿತೂ ಅವರು ಹೇಳುತ್ತಿದ್ದರು.
ಆಗಷ್ಟೇ ಮಳೆಗಾಲ ಶುರುವಾಗಿತ್ತು. ನಾನು ಒಂದು ಸಂಜೆ ಭೀಕರ ಮಳೆಗೆ ಒದ್ದೆಯಾಗಿ ಆಗಷ್ಟೇ ಮನೆಗೆ ನಡೆದು ಬರುತ್ತಿದ್ದೆ. ದಾರಿಯಲ್ಲಿ ನನ್ನ ಮೇಲೆ ಸಾಕಷ್ಟು ನೀರು ಹಾರಿಸಿಕೊಂಡು ಒಂದು ಜೀಪು ಹಾದುಹೋಯಿತು. ನನ್ನಿಂದ ಸ್ವಲ್ಪ ಮುಂದೆ ಹೋಗಿ ಇದ್ದಕ್ಕಿದ್ದಂತೆ ನಿಂತಿತು. ಜೀಪಿನ ಒಳಗೆ ನೀರು ಬೀಳದಂತೆ ಹಾಕಿದ್ದ ಟಾರ್ಪಾಲಿನ್ ಪರದೆಯನ್ನು ಸರಿಸಿ ಯಾರೋ ನನ್ನನ್ನು ಒಳಗೆ ಕರೆದರು. ಒದ್ದೆಮುದ್ದೆಯಾಗಿ ಜೀಪಿನೊಳಗೆ ಕುಳಿತವನಿಗೆ ಕಂಡದ್ದು ಸರೋಜಿನಿ. ಆಕೆ ಹೆರಿಗೆಗೆ ತವರಿಗೆ ಬಂದಿದ್ದಳು. ವರುಷಾರು ತಿಂಗಳೊಳಗೆ ಆದ ಬದಲಾವಣೆಗೆ ಬೆರಗಾಗುತ್ತಾ ನಾನು ಅವಳ ಮುಖ ನೋಡಿದೆ. ತನ್ನ ಜೊತೆಗೇ ಕಾಲೇಜಿಗೆ ಹೋಗುತ್ತಿದ್ದ ಏನೂ ತಿಳಿಯದ ಹುಡುಗನೆದುರು ಬಸುರಿಯಾಗಿ ಕುಳಿತ ಬಗ್ಗೆ ಆಕೆಗೆ ಯಾವ ಮುಜುಗರವೂ ಇದ್ದಂತೆ ನನಗೆ ಅನ್ನಿಸಲಿಲ್ಲ. ಇದ್ದಕ್ಕಿದ್ದಂತೆ ದೊಡ್ಡ ಹೆಂಗಸಾಗಿದ್ದೇನೆ ಎಂಬ ಧಾಟಿಯಲ್ಲಿ ಸರೋಜಿನಿ ನನ್ನನ್ನು ಒಂದೆರಡು ಪ್ರಶ್ನೆಗಳನ್ನು ಕೇಳಿದಳು. ನಾನು ಉತ್ತರಿಸಿದೆ.
ಇದಾದ ಒಂದು ತಿಂಗಳ ನಂತರ ಅದೇ ಕಿಟಕಿಯ ಹತ್ತಿರ ಕೂತು ಮಾರ್ಗರೆಟ್ ಅಟ್ ವುಡ್ ಳ ಮೇಲಿನ ವಿಮರ್ಶೆಗಳನ್ನು ಓದುತ್ತಿದ್ದೆ. ಕಣ್ಣು ಅಚಾನಕ ಸರೋಜಿನಿಯ ಮನೆಯ ಕಡೆ ಹರಿಯಿತು. ಗಾಬರಿಬಿದ್ದು ನೋಡಿದೆ. ಸರೋಜಿನಿಯ ಮನೆಯ ಅಂಗಳದಲ್ಲಿ ಅದೇ ಭಿಕ್ಪುಕ ನಿಂತಿದ್ದ. ನಾನು ಖಾತ್ರಿ ಪಡಿಸಿಕೊಳ್ಳಲು ಮತ್ತೊಮ್ಮೆ ನೋಡಿದೆ. ಅದೇ ಹೆಗಲ ಮೇಲೆ ಕಂಬಳಿ ಹೊದ್ದ ದೈನೇಸಿ ಮುಖದ ಭಿಕ್ಪುಕ. ನಾನು ನೋಡನೋಡುತ್ತಿದ್ದಂತೆ ಆತ ನೇರವಾಗಿ ಸರೋಜಿನಿಯ ಮನೆಯೊಳಗೆ ನುಗ್ಗಿದ.
`ಈತ ಸತ್ತಿಲ್ಲ ಹಾಗಿದ್ದರೆ. ಬಹುಶಃ ರಾಜೇಗೌಡನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿರಬೇಕು. ಹಾಗಿದ್ದರೆ ಸರೋಜಿನಿ ಮನೆಯ ಒಳಗೆ ಯಾಕೆ ಹೋದ...' ಎಂದು ಯೋಚಿಸುತ್ತಲೇ ನಾನು ಮನೆಯಿಂದ ಹೊರಗೋಡಿ ಬಂದೆ. ನೇರವಾಗಿ ಸರೋಜಿನಿಯ ಮನೆಯತ್ತ ಹೆಜ್ಜೆ ಹಾಕಿದೆ. ಆ ಭಿಕ್ಪುಕ ಏನು ಮಾಡುತ್ತಾನೆ ಅಂತ ನೋಡುವ ಕುತೂಹಲ ನನ್ನದಾಗಿತ್ತು.
ನಾನು ಸರೋಜಿನಿಯ ಮನೆಯೊಳಗೆ ಕಾಲಿಡುವ ಹೊತ್ತಿಗೆ ಅಲ್ಲಿ ಗಿಜಿಗಿಜಿ ಜನಜಂಗುಳಿ. ಒಂದು ಕ್ಪಣದ ಹಿಂದಷ್ಟೇ ಸರೋಜಿನಿ ಗಂಡಮಗುವಿಗೆ ಜನ್ಮವಿತ್ತಿದ್ದಳು. ಆ ಸಂತೋಷದಲ್ಲಿ ಅವರೆಲ್ಲ ಇದ್ದರು. ನಾನೂ ಕೂಡ ಆ ಸಂಭ್ರಮಕ್ಕೆ ಬಂದವನೆಂದುಕೊಂಡು ನನ್ನ ಬಾಯಿಗೂ ಸಕ್ಕರೆ ಹಾಕಿದರು. ಭಿಕ್ಪುಕ ಅಲ್ಲೆಲ್ಲೂ ಕಾಣಿಸಲಿಲ್ಲ. ಒಂದಿಬ್ಬರ ಬಳಿ ವಿಚಾರಿಸಿದ್ದಕ್ಕೆ ಯಾವ ಭಿಕ್ಪುಕನೂ ಬರಲಿಲ್ಲ. ನಾವೆಲ್ಲ ಆಗಿಂದಲೇ ಇಲ್ಲಿದ್ದೇವಲ್ಲ ಅಂದರು. ನಾನು ನೋಡಿದ್ದೇ ಸುಳ್ಳಿರಬಹುದೇನೋ ಅಂದುಕೊಳ್ಳುತ್ತಾ ವಾಪಸ್ಸು ಮನೆಗೆ ಬಂದೆ. ಆವತ್ತಿಡೀ ಓದುವುದಕ್ಕೆ ಸಾಧ್ಯವಾಗಲೇ ಇಲ್ಲ.
-4-
ಹಾಗಿದ್ದರೆ ಭಿಕ್ಪುಕ ಬಂದದ್ದು ಸುಳ್ಳಾ?ಅವನು ಬಂದ ಕ್ಪಣದಲ್ಲೇ ಸರೋಜಿನಿಗೆ ಮಗುವಾಗಿದೆ ಅಂದರೆ ಅವನೇ ಆ ಮಗುವಿನ ರೂಪದಲ್ಲಿ ಬಂದಿದ್ದಾನಾ? ಇತ್ಯಾದಿ ಯೋಚನೆಗಳು ನನಗೆ ಆಗಾಗ ಬರುತ್ತಿದ್ದವು. ಆದರೆ ಅವನ್ನೆಲ್ಲ ನಂಬಲು ನಾನು ಸಿದ್ಧನಿರಲಿಲ್ಲ.
ಇದಾಗಿ ಮತ್ತೆರಡು ವರುಷಗಳು ಸಂದವು. ನಾನು ಶಿವವೊಗ್ಗೆಯ ಆ ಮನೆಯಲ್ಲೇ ಇದ್ದುಕೊಂಡು ಎಂ.ಎ. ಓದುತ್ತಿದ್ದೆ. ಸರೋಜಿನಿ ಅದೇ ಸುಮಾರಿಗೆ ತನ್ನ ಮೂರು ವರುಷದ ಮಗನ ಜೊತೆ ಬಂದಿದ್ದಳು.
ಮೂರು ವರುಷಕ್ಕೆ ಆ ಮಗು ಸಾಕಷ್ಟು ತುಂಟಾಟಿಕೆ ಮಾಡುತ್ತಿತ್ತು. ಸರೋಜಿನಿ ಮಗುವನ್ನು ಮಹಡಿಯ ಮೇಲೆ ಕೂರಿಸಿ ತಾನು ಬೆಳಗಿನ ಬಿಸಿಲಿಗೆ ತಲೆಯೊಣಗಿಸಿಕೊಳ್ಳುತ್ತಾ ನಿಂತಿದ್ದಳು. ಮಗು ಮಹಡಿಯ ಒಣಗಲೆಂದು ಪೇರಿಸಿಟ್ಟಿದ್ದ ಡಬ್ಬಗಳನ್ನು ಕೋಲಿನಿಂದ ಬಡಿಯುತ್ತಾ ಸದ್ದು ಮಾಡುತ್ತಿತ್ತು. ಬಹುಶಃ ಆ ಸದ್ದು ಪಕ್ಕದ ಮನೆಯ ರಾಜೇಗೌಡರಿಗೆ ಕಿರಿಕಿರಿ ಉಂಟು ಮಾಡಿರಬೇಕು. ಅವರು ಸಿಟ್ಟಿನಿಂದ ಧಡ್ ಎಂದು ಬಾಗಿಲು ತೆರೆದು ಹೊರಬರುತ್ತಿರುವುದು ಕಾಣಿಸಿತು. ಇನ್ನೇನು ಆ ಮಗುವಿಗೆ ಹೊಡೆದೇಬಿಡುತ್ತಾರೇನೋ ಎಂಬಂತಿತ್ತು ಅವರ ಮುಖಭಾವ.
ಅವರು ಹೊರಗೆ ಬರುತ್ತಿದ್ದಂತೆ ಮಗು ಮತ್ತೊಮ್ಮೆ ಡಬ್ಬಾಗಳನ್ನು ಕೋಲಿನಿಂದ ಬಡಿಯಿತು. ಮಹಡಿಯ ಬದಿಯಲ್ಲಿಟ್ಟಿದ್ದ ಡಬ್ಬಗಳು ಹೊಡೆತಕ್ಕೆ ಜಾರಿ ಮತ್ತಷ್ಟು ಬದಿಗೆ ಸರಿದಿದ್ದವು. ಮಗುವಿನ ಆ ಹೊಡೆತಕ್ಕೆ ಅಷ್ಟೂ ಡಬ್ಬಗಳೂ ಭೀಕರ ಸದ್ದು ಮಾಡುತ್ತಾ ಜಾರಿ ಸಿಮೆಂಟಿನ ಅಂಗಳಕ್ಕೆ ಬಿದ್ದವು. ಆ ಸದ್ದಿಗೆ ನಾನೇ ಬೆಚ್ಚಿಬಿದ್ದೆ. ಅದೇ ಹೊತ್ತಿಗೆ ಮನೆಯಿಂದ ಹೊರಗೆ ಬಂದ ರಾಜೇಗೌಡ ಈ ಸದ್ದಿಗೆ ಬೆದರಿ ತಡಬಡಾಯಿಸಿ ಮೂರನೆ ಮೆಟ್ಟಿಲಿನಿಂದ ಜಾರಿದ್ದು ನನ್ನ ಕಣ್ಣಿಗೆ ಕಾಣಿಸಿತು. ಅರೆಕ್ಪಣದಲ್ಲೇ ವರುಷಗಳ ಹಿಂದೆ ಭಿಕ್ಪುಕ ಬಿದ್ದಿದ್ದ ಭಂಗಿಯಲ್ಲೇ ರಾಜೇಗೌಡನೂ ಬಿದ್ದಿದ್ದ. ಕೊನೆಯ ಮೆಟ್ಟಿಲಿಗೆ ಕತ್ತು ಹೊಡೆಸಿಕೊಂಡಿದ್ದ.
ಆತ ಸತ್ತು ಹೋಗಿದ್ದ.
-5-
ಮಾರನೆಯ ದಿನ ರಾಜೇಗೌಡನ ಅಂತ್ಯಕ್ರಿಯೆ ನಡೆಯಿತು. ಮುದುಕ ಕಾಲುಜಾರಿ ಬಿದ್ದು ಸತ್ತುಹೋದ ಎಂದು ಜನ ಮಾತಾಡಿಕೊಂಡರು. ಅದಾದ ಹನ್ನೊಂದನೇ ದಿನಕ್ಕೆ ರಾಜೇಗೌಡನ ಉತ್ತರಕ್ರಿಯೆಯೂ ನಡೆದುಹೋಯಿತು. ಬಂದಿದ್ದ ಜನ ರಾಜೇಗೌಡನ ಅಂಗಳದಲ್ಲಿ ನಿಂತು ಬೀಡಿ ಸೇದುತ್ತಾ ಮಾತಾಡಿಕೊಳ್ಳುತ್ತಿದ್ದರು. ನಾನು ಎಂದಿನಂತೆ ಕಿಟಕಿಯಿಂದ ನೋಡುತ್ತಾ ಕೂತಿದ್ದೆ.
ಇದ್ದಕ್ಕಿದ್ದಂತೆ ಆ ಭಿಕ್ಪುಕ ಮತ್ತೆ ಕಾಣಿಸಿಕೊಂಡ. ಈ ಸಾರಿ ಸರೋಜಿನಿಯ ಮನೆಯ ಬಾಗಿಲು ತೆಗೆದು ಹೊರಗೆ ಬಂದು ನಾನು ನೋಡನೋಡುತ್ತಿರುವಂತೆಯೇ ನಡೆದು ದೂರ ದೂರವಾಗುತ್ತಾ ಮರೆಯಾದ. ನಾನು ದಿಗ್ಭ್ರಾಂತನಾಗಿ ನೋಡುತ್ತಾ ಕುಳಿತಿದ್ದೆ.
ಸಂಜೆಯ ಹೊತ್ತಿಗೆ ಸರೋಜಿನಿಯ ಮಗು ಎಲ್ಲೂ ಕಾಣಿಸುತ್ತಿಲ್ಲ ಎಂಬ ಸುದ್ದಿಯ ಜೊತೆಗೇ ಸರೋಜಿನಿಯ ಮುಗಿಲು ಮುಟ್ಟುವ ಆಕ್ರಂದನ ನನ್ನ ಕಿವಿಗೆ ಬಿತ್ತು. ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದರು. ರಾಜೇಗೌಡರ ಉತ್ತರಕ್ರಿಯೆಯೆ ಬಂದವರ್ಯಾರೋ ಮಗುವನ್ನು ಕದ್ದು ಕೊಂಡು ಹೋಗಿದ್ದಾರೆ ಎಂದೂ ಕೆಲವರು ಊಹಿಸಿ ಮಾತಾಡತೊಡಗಿದರು.
ನಾನು ಏನೂ ತೋಚದೆ ಸರೋಜಿನಿಯ ಮನೆಯ ಹತ್ತಿರ ಹೋದೆ. `ಮಗು ಇವತ್ತಲ್ಲ ನಾಳೆ ಸಿಗುತ್ತೆ. ಎಲ್ಲಿಗೆ ಹೋಗುತ್ತೆ' ಅಂತ ಸರೋಜಿನಿಗೆ ಯಾರೋ ಸಮಾಧಾನ ಹೇಳುತ್ತಿದ್ದರು.
ಮಗು ಸಿಗೋಲ್ಲ ಯಾಕೆಂದರೆ....
ವಿವರಿಸುವ ಶಕ್ತಿ ನನಗಿರಲಿಲ್ಲ.

Friday, February 22, 2008

ಹೂಬಿಟ್ಟ ಹುಣಿಸೇಮರದ ಇಹಪರ ಧ್ಯಾನ

ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ, ಕತ್ತಲಾದರೆ ಅದರ ನಿಗೂಢವೇ ಬೇರೆ. ಹುಣಿಸೇಮರದ ಕೊಂಬೆಗಳು ಅದೆಷ್ಟು ಗಟ್ಟಿ ಅಂದರೆ ಕೊಂಬೆಯ ತುದಿಗೆ ಹೋದರೂ ಅದು ಬಾಗುತ್ತದೆಯೇ ಹೊರತು ಮುರಿಯುವುದಿಲ್ಲ. ಹಳ್ಳಿಯ ಶಾಲೆಯ ಮೇಷ್ಟ್ರುಗಳಿಗೆ ತುಂಟ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಹುಣಿಸೆಯ ಬರಲೇ ಪಾಶುಪತಾಸ್ತ್ರ.
ಹುಣಿಸೆಯ ಮರ ಎಲ್ಲಾ ಹಳ್ಳಿಗಳಲ್ಲೂ ಸಾಮಾನ್ಯ. ಹುಣಿಸೇಹಣ್ಣಿನ ಬೆಲೆ ಎಷ್ಟೇ ಆದರೂ ಹುಣಿಸೇಮರವನ್ನು ನಗದು ಬೆಳೆಯಾಗಿ ಬೆಳೆಸಿದವರನ್ನು ನಾನಂತೂ ನೋಡಿಲ್ಲ. ಹುಣಿಸೇ ತೋಟ ಇಟ್ಟುಕೊಂಡಿದ್ದೇನೆ ಅಂತ .ಯಾವೂರ ರೈತನೂ ಹೇಳಿಕೊಂಡಂತಿಲ್ಲ. ಹುಣಿಸೇಹಣ್ಣಿಗೆ ಬೆಂಬಲ ಬೆಲೆ ಘೋಷಿಸಿ ಅಂತ ಗದ್ದಲವಾದದ್ದೂ ಗೊತ್ತಿಲ್ಲ. ಆದರೆ ಚಿತ್ರದುರ್ಗದ ಕಡೆಯ ಗೆಳೆಯರು ಅವರೂರಲ್ಲಿ ಬಂಜರು ಭೂಮಿ ಕೊಡು ಹುಣಿಸೇಮರ ಬಾಕಿ, ಹದಿನೈದೋ ಇಪ್ಪಕ್ಕೋ ವರುಷ, ಫಲಬರುವ ತನಕ ಕಾಯುತ್ತಾರಂತೆ.
ಹುಣಿಸೇಮರದ ಲಾಭನಷ್ಟದ ಕತೆ ಹೇಗಾದರೂ ಇರಲಿ. ನಿಮಗೆಂದಾದರೂ ಎಲೆಯುದುರಿಸಿಕೊಂಡು ಬೆತ್ತಲೆ ನಿಂತ ಹುಣಿಸೇಮರ ನೋಡಿದ ನೆನಪಿದೆಯಾ? ನಾನಂತೂ ಎಲೆಯುದುರಿದ ಬೋಳು ಹುಣಿಸೇಮರ ನೋಡಿಲ್ಲ. ಹಾಗೇ ಯೌವನದಿಂದ ನಳನಳಿಸುವ ಹುಣಿಸೇಮರವನ್ನು ಕೂಡ. ಸಾಮಾನ್ಯವಾಗಿ ಎಲ್ಲಾ ಹುಣಿಸೇಮರವೂ ನೂರೋ ನೂರೈವತ್ತೋ ವರುಷವಾದಂತೆ ಋಷಿಗಳ ಹಾಗೆ ಕಾಣಿಸುತ್ತದೆ.
ಹುಣಿಸೇಮರ ಹುಟ್ಟುಹಾಕುವ ಕತೆಗಳಿಗಂತೂ ಲೆಕ್ಕವಿಲ್ಲ. ಅದು ದೆವ್ವಗಳ ಅಡಗುದಾಣ. ಹುಣಿಸೇಮರದಡಿಯಲ್ಲಿ ಮಲಗಿ ಮರಣಹೊಂದಿದವರ ಕತೆಗಳಂತೂ ಪ್ರತಿ ಹಳ್ಳಿಯಲ್ಲೂ ಇವೆ. ಹಳೆಯ ಚಂದಮಾಮಗಳಲ್ಲಂತೂ ಹುಣಿಸೇಮರದ ಜೊತೆ ದೆವ್ವ ಫ್ರೀ. ಬ್ರಹ್ಮರಾಕ್ಷಸನ ಪಾಲಿಗೂ ಹುಣಿಸೇಮರವೇ ಅಂತಃಪುರ. ಆದರೆ, ಹುಣಿಸೇಮರಕ್ಕೆ ನೇಣುಹಾಕಿಕೊಳ್ಳುವವರು ಕಡಿಮೆ. ಅದ್ಯಾಕೋ ಸತ್ತವರ ಪಾಲಿಗೆ ಪ್ರಿಯವಾದಷ್ಟು ಹುಣಿಸೇಮರ ಸಾಯುವವರ ಪಾಲಿಗೆ ಆಪ್ತವಾಗಲಿಲ್ಲ.
ಹಾಗೇ ಕವಿಗಳಿಗೂ ಕಾವ್ಯಕ್ಕೂ ಹುಣಿಸೇಹಣ್ಣು ರುಚಿಸಿದಂತಿಲ್ಲ. ಮರ ಮುಪ್ಪಾದರೆ ಹುಳಿ ಮುಪ್ಪೇ ಎಂಬ ಗಾದೆಗಷ್ಟೇ ಹುಣಿಸೇಮರ ಸೀಮಿತ. ಹುಣಿಸೇಹಣ್ಣು ಕೂಡ ವ್ಯರ್ಥಪ್ರಯತ್ನವನ್ನೂ ಸೂಚಿಸುವ ನುಡಿಗಟ್ಟನ್ನು ಕೊಟ್ಟಿತು. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಅಂತ ಹಿರಿಯರು ಈಗಲೂ ಹೇಳುವುದುಂಟು. ಇನ್ನೊಬ್ಬನ ಅಭಿವೃದ್ಧಿಯನ್ನು ಕಂಡು ಕರುಬುವವನನ್ನು ಹೊಟ್ಟೆಯಲ್ಲಿ ಹುಣಿಸೇಹಣ್ಣು ಕಿವುಚಿದಂತಾಯಿತು ಅನ್ನುತ್ತಾರೆ. ಅಷ್ಟು ಬಿಟ್ಟರೆ, ಬಸುರಿಯ ಬಯಕೆಗೆ ಮಾವಿನಕಾಯೇ ಬೇಕು. ಅದರ ಬದಲು ಅವರೇಕೆ ಹುಣಿಸೇಕಾಯಿ ಬಯಸರು?
ಕವಿಗಳು ಇಷ್ಟೊಂದು ಚೆಂದದ ಮರವನ್ನು ಬಣ್ಣಿಸದೇ ಬಿಟ್ಟರೇಕೆ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ಮೊನ್ನೆ ಬೇಂದ್ರೆ ಬರೆದ ಹೂತದ ಹುಣಸೀ’ ಕವಿತೆಯನ್ನು ನೆನಪಿಸಿದರು ಕಿ. ರಂ ನಾಗರಾಜ್. ಕವಿ ಜೀವದ ಬೇಸರ ತಣಿಸೋದಕ್ಕೆ ಬೇರೇನು ಬೇಕು, ಒಂದು ಹೂಬಿಟ್ಟ ಹುಣಿಸೇಮರ ಸಾಕು ಎಂದು ಕೊನೆಯಾಗುವ ಕವಿತೆ ಹುಣಿಸೇಮರದ ಸೊಬಗನ್ನು ವರ್ಣಿಸಿದೆ. ಆ ಕವಿತೆಗಿರುವ ಇನ್ನಿತರ ಅರ್ಥಾಂತರಗಳು ಸದ್ಯಕ್ಕೆ ಬೇಡ.
********
ಕಾವ್ಯ ವಿಮರ್ಶಕರು ಬೇರೆ ಥರ ಬರೆಯುವುದನ್ನು ಕಲಿಯಬೇಕಿದೆ. ಕವಿತೆಯನ್ನು ನಾವು ವಿಶ್ಲೇಷಿಸುವ ಕ್ರಮದಲ್ಲೇ ತಪ್ಪಿದೆ. ಸಂಸ್ಕೃತಿ ವಿಮರ್ಶೆಯ ಹೆಸರಲ್ಲಿ ತಮ್ಮ ತಮ್ಮ ವಾದಗಳನ್ನು ಮಂಡಿಸುವುದಕ್ಕೆ ಕವಿತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕವಿತೆಯನ್ನು ವಿಮರ್ಶೆ ಮಾಡುವುದು ಹಾಗಲ್ಲ. ಕವಿತೆಯ ಕಡೆ ಓದುಗ ಹೊರಳುವಂತೆ ಮಾಡುವುದು ವಿಮರ್ಶೆಯ ಉದ್ದೇಶವಾಗಬೇಕು. ಕಾವ್ಯ ವ್ಯಾಖ್ಯಾನದ ಹೆಸರಿನಲ್ಲಿ ಅಧಿಕಪ್ರಸಂಗತನವೇ ಜಾಸ್ತಿಯಾಗುತ್ತಿದೆ. ಕಾವ್ಯವನ್ನು ಹರಿಕಥೆಯಂತೆ ಬಳಸುವವರು ಹೆಚ್ಚಾಗಿದ್ದಾರೆ ಎಂದು ಮೊನ್ನೆ ಮೊನ್ನೆ ಯು ಆರ್ ಅನಂತಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಮರ್ಶೆಯನ್ನು ಓದಿ ಕಾವ್ಯವನ್ನು ಓದುವವರ ಸಂಖ್ಯೆ ಎಷ್ಟಿದೆಯೋ ಗೊತ್ತಿಲ್ಲ. ಹಾಗೇ, ಕವಿತೆಯನ್ನು ಒಂದು ಗಣಿತದ ಸೂತ್ರದಂತೆ ಅಧ್ಯಯನ ಮಾಡುವುದೋ, ಒಗಟೆಂದು ಭಾವಿಸಿ ಬಿಡಿಸಲೆತ್ನಿಸುವುದೋ ಅದೊಂದು ಅರ್ಥವಾಗದ ಕಗ್ಗ ಎಂದು ಬೇರೆಯವರ ಹತ್ತಿರ ಇದಕ್ಕೆ ಅರ್ಥವೇನು ಎಂದು ಕೇಳುವುದೋ ಕವಿತೆಯನ್ನು ಮೆಚ್ಚುವವರು ಮಾಡುವ ಕೆಲಸ ಅಲ್ಲ. ಅದೇ ಕಾರ್ಯಕ್ರಮದಲ್ಲಿ ಕಿ ರಂ ನಾಗರಾಜ್ ಹೇಳಿದ್ದು ನಿಜಕ್ಕೂ ಅರ್ಥವತ್ತಾಗಿತ್ತು. ಈ ಕವಿತೆ ಅರ್ಥವಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಉತ್ತರಿಸುತ್ತಾರಂತೆ; ಅರ್ಥವಾದಷ್ಟೇ ಕವಿತೆ. ಅದು ಪೂರ್ತಿ ಅರ್ಥವಾಗಬೇಕು ಎನ್ನುವ ಆತುರ ಯಾಕೆ? ಯಾವತ್ತೋ ಒಂದು ದಿನ ಅರ್ಥವಾಗುತ್ತೆ ಬಿಡಿ. ಅರ್ಥವಾಗದಿದ್ದರೂ ಸರಿಯೇ. ಅರ್ಥವಾಗಲೇಬೇಕು ಅನ್ನುವ ಹಠ ಯಾಕೆ?
ಅದೇ ಸರಿ. ಅರ್ಥವಾದಷ್ಟೇ ಅರ್ಥ. ಕವಿತೆ ಇನ್ನೊಬ್ಬರ ಹಾಗೆ ಅಂದುಕೊಂಡುಬಿಡೋಣ. ಜೊತೆಗಿದ್ದವರೂ ಅಷ್ಟೇ, ಎಷ್ಟು ಅರ್ಥವಾಗುತ್ತಾರೋ ಅಷ್ಟೇ.
ಉದಾಹರಣೆಗೆ ಬೈರನ್ನಿನ ವೆನ್ ವಿ ಟು ಪಾರ್ಟೆಡ್ ಕವಿತೆಯನ್ನೇ ನೋಡಿ:
WHEN we two parted
In silence and tears,
Half broken-hearted,
To sever for years,

ಹೀಗೆ ಶುರುವಾಗುವ ಕವಿತೆಯ ಆರಂಭದಲ್ಲೇ ವಿದಾಯದ ಸೂಚನೆಯೂ ಇದೆ. ಅದು ಎಂಥಾ ವಿದಾಯ. ಆ ಹುಡುಗಿ ಮೋಸ ಮಾಡಿ ಹೋದಳಾ, ಸತ್ತೇ ಹೋದಳಾ ಅನ್ನುವುದು ಅವರವರ ಭಾವಕ್ಕೆ ತಕ್ಕಂತೆ. ಇದನ್ನು ಓದಿದ ಅಸಂಖ್ಯಾತ ಓದುಗರ ಪ್ರತಿಕ್ರಿಯೆ ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ.
In secret we met:
In silence I grieve
That thy heart could forget,
Thy spirit deceive.
If I should meet thee
After long years,
How should I greet thee?
With silence and tears.
ರಹಸ್ಯವಾಗಿ ಸಂಧಿಸಿದೆವು, ಮೌನದಲ್ಲಿ ಸ್ಪಂದಿಸಿದೆವು. ಮರೆಯಬಹುದು ನಿನ್ನ ಮನ, ನಲುಗಬಹುದು ನಿನ್ನ
ಚೇತನ. ನಿನ್ನನ್ನು ಮತ್ತೆಂದೋ ಎಷ್ಟೋ ವರ್ಷಗಳ ನಂತರ ಕಂಡಾಗ ಹೇಗೆ ಎದುರುಗೊಳ್ಳಲಿ ಹೇಳು? ಕಂಬನಿ ಮತ್ತು ಮೌನದೊಂದಿಗೆ?
ಆ ರಹಸ್ಯ ಪ್ರಣಯವನ್ನು ಮೌನದುಂಬಿದ ಕಂಬನಿಯೊಂದಿಗೆ, ಕಂಬನಿದುಂಬಿದ ಮೌನದೊಂದಿಗೆ ಎದುರಾಗುವ ತನ್ನ ಅವಸ್ಥೆಯನ್ನು ಹೇಳಿಕೊಳ್ಳುತ್ತಿದ್ದಾನೆ ಕವಿ. ಅದೇಕೆ ರಹಸ್ಯ ಪ್ರೇಮ? ಅವಳೂ ಅವನನ್ನು ಪ್ರೀತಿಸಿದ್ದಳೇ? ಅದು ಅವನ ಪ್ರೀತಿ ಮಾತ್ರವೇ? ಅವಳು ಅವನನ್ನು ವಂಚಿಸಿದಳೇ? ಅಥವಾ ಅಕಾಲ ಮರಣಕ್ಕೆ ತುತ್ತಾದಳೇ? ಹೇಳಿಕೊಳ್ಳಲಾಗದ ಪ್ರೀತಿ ಒಳಗೆ ಬಚ್ಚಿಟ್ಟುಕೊಂಡೇ ಬಳಲಿತೇ?
ಈ ಪ್ರಶ್ನೆಗಳಿಗೆಲ್ಲ ಅವರವರೇ ಉತ್ತರ ಕಂಡುಕೊಳ್ಳಬೇಕು. ಅದು ಅವರವರ ಸತ್ಯ. ಆ ಕ್ಷಣದ ಸತ್ಯ. ಬೇರೊಬ್ಬರು ಎಷ್ಟೇ ಸಮರ್ಥವಾಗಿ ಅದನ್ನು ಸಮರ್ಥಿಸಿಕೊಂಡರೂ, ನಮಗೆಷ್ಟು ಅರ್ಥವಾಗುತ್ತದೋ ಅಷ್ಟೇ ಅರ್ಥ.
ಅದನ್ನೇ ಇನ್ನೊಂದು ಕವಿತೆಯ ಮೂಲಕ ನೋಡೋಣ:

ನಡೆದ ದಾರಿಯ ತಿರುಗಿ ನೋಡಬಾರದು ಏಕೆ
ನೋಡಿದರೆ ಆ ಹೂವೆ ನಲುಗಬಹುದು
ಮುಂದೆ ನಡೆವಾಗಲೂ ಮಾತಾಡದಿರಬೇಕೆ?
ಹೌದು. ತುಂಬಿದ ಮನವ ತುಳುಕಲಿ ಬಿಡು

ಸೋತಮಾತಿನ ನೂರು ಹಸೆಗೆ ದೀಪವನಿರಿಸು
ಮಾತಿನಷ್ಟೇ ಮೌನ ಸಫಲವೆನಿಸು
ಕಳೆದಿರುಳ ಆಚೆತುದಿಯಿಂದ ನಗೆಯನು ತರಿಸು
ಮೊದಲ ಕನಸಿಗೆ ಮತ್ತೆ ಹೇಳಿಕಳಿಸು.

ಮೊದಲ ಸಾಲನ್ನು ಕವಿ ಬರೆಯುವ ಹೊತ್ತಿಗೆ ಅವನ ಮನಸ್ಸಲ್ಲಿ ಏನಿತ್ತು ಅನ್ನುವುದು ಯಾರಿಗೂ ಗೊತ್ತಿರುವುದಕ್ಕೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಯಾವ ಕವಿಯ ಮೂಲಭಾವವೂ ನಮಗೆ ಅರ್ಥವಾಗುವುದಿಲ್ಲ. ಕವಿತೆ ಬರೆಯುವ ಹೊತ್ತಿಗೆ ಉತ್ಕಟ ಭಾವಾಭಿವ್ಯಕ್ತಿಯಲ್ಲಿ ಹುಟ್ಟುತ್ತದೆ ಅನ್ನುವುದಾದರೆ, ಅದನ್ನು ಓದುವ ಹೊತ್ತಿಗಿನ ನಮ್ಮ ಭಾವಪರಿಸರ ಅದೇ ಆಗಿರಬೇಕು ಅಂತೇನಿಲ್ಲ. ಒಂದು ಮನಸ್ಥಿತಿಯಲ್ಲಿ ಹರಳುಗಟ್ಟಿದ ಚಿಂತನೆಯನ್ನು ಮತ್ತೊಂದು ಮನಸ್ಥಿತಿಯಲ್ಲಿ ನಮ್ಮೊಳಗೆ ಆವಾಹಿಸಿಕೊಳ್ಳುತ್ತೇವೆ ಅನ್ನುವುದೇ ವಿಶೇಷ. ನಾವಿರುವ ಸ್ಥಿತಿಯಲ್ಲಿ ನಾವು ಕಾವ್ಯವನ್ನು ಸವಿಯುತ್ತೇವಾ ಅಥವಾ ಕವಿಯ ಮನಸ್ಥಿತಿಗೆ ನಾವು ತಲುಪುತ್ತೇವಾ ಅನ್ನುವುದು ಮತ್ತೊಂದು ಪ್ರಶ್ನೆ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿವುದು ಎಂದು ಕುವೆಂಪು ಹಾಡಿದ್ದನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ ಹೊಳೆಯುವುದೇ ಬೇರೆ. ಕಲಿಯುಗವನ್ನು ದ್ವಾಪರವಾಗಿಸುವ ಶಕ್ತಿ ಕವಿತೆಯಲ್ಲಿ ಇರಬೇಕಾಗುತ್ತದೆ. ಅದರ ಬದಲು ನಮ್ಮ ಕಲಿಯುಗವನ್ನು ಬೆನ್ನಿಗೆ ಕಟ್ಟಿಕೊಂಡು ನಾವು ಕವಿಯ ದ್ವಾಪರದೊಳಗೆ ಪ್ರವೇಶಿಸಲು ಯತ್ನಿಸಿದರೆ?
ಮಾತಿನಷ್ಟೇ ಮೌನ ಸಫಲವೆನಿಸು ಎನ್ನುವ ಕವಿ ಮತ್ತೊಂದು ಮಾತನ್ನೂ ಹೇಳುತ್ತಾನೆ. ಕಳೆದಿರುಳ ಆಚೆ ತುದಿಯಿಂದ ನಗೆಯನು ತರಿಸು. ಅಂದರೆ ಹಿಂದಿನ ದಿನ ಅವಳ ಮುಖದಲ್ಲಿ ನಗುವಿತ್ತು. ಅದನ್ನು ವಾಪಸ್ಸು ತರಿಸು ಅನ್ನುತ್ತಿದ್ದಾನೆ ಕವಿ. ಹಾಗೇ, ಮೊದಲ ದಿನ ಕಂಡ ಆಪ್ಯಯಾಮಾನ ಕನಸಿನ ಬಗ್ಗೆ ಅವಳು ಅವನಿಗೆಂದೋ
ಹೇಳಿಕೊಂಡಿರಬೇಕು. ಆ ಮೊದಲ ಕನಸಿಗೆ ಮತ್ತೆ ಹೇಳಿಕಳಿಸು ಅನ್ನುವ ವಿನಂತಿಯೂ ಅವನ ದನಿಯಲ್ಲಿದೆ.ಓದುಗರಾದ ನಾವೂ ಹಾಗೇ, ಕವಿ ಬರೆದಿರುಳ ಆಚೆತುದಿಯಿಂದ ಕವಿಭಾವವನ್ನು ತರಿಸುವ ಹಾಗಿದ್ದರೆ?

Thursday, February 21, 2008

ಈ ಬೇಸಗೆಯಲ್ಲಿ ಚಂದಮಾಮ ಓದೋಣವೇ?

ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು;
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ -ವಸಂತ ಋತು.
ಸಿರಿವಸಂತದ ಚೆಲುವು ಕಳೆಗುಂದಿತು;
ಉರಿಬಿಸಿಲು ನಿಟ್ಟುಸಿರ ಕದ ತೆರೆಯಿತು;
ಬಿಸಿಗಾಳಿ ಬೀದಿಯಲಿ ಸಂಚರಿಸಿತು;
ಜ್ಯೇಷ್ಠ ಆಷಾಢ - ಗ್ರೀಷ್ಮ ಋತು.
(ಕೆಎಸ್ ನ)
ಉತ್ತರ ಕರ್ನಾಟಕದ ಎಷ್ಟೋ ಹಳ್ಳಿಗಳಲ್ಲಿ ಋತು ಬದಲಾದದ್ದೇ ಗೊತ್ತಾಗುವುದಿಲ್ಲ. ಆಕಾಶದ ಬಣ್ಣ ಬದಲಾಗುವುದು ಕಣ್ಣಿಗೆ ಕಾಣುವುದಿಲ್ಲ. ಅಪರೂಪಕ್ಕೊಮ್ಮೆ ಆಕಾಶ ನೋಡಿದರೆ ಅದು ಅದೇ ಹ್ಯಾಪಮೋರೆ ಹಾಕಿಕೊಂಡು ಸ್ವಸ್ಥ ಬಿದ್ದಿರುತ್ತದೆ. ಇನ್ನು ಮಳೆಯೂ ಕೈಕೊಟ್ಟರೆ ಮಳೆಗಾಲ ಮುಗಿದದ್ದೂ ಚಳಿಗಾಲ ಬಂದದ್ದೂ ಅರಿವಾಗುವುದೇ ಇಲ್ಲ. ಕಾಲ ಯಾವುದೇ ಬದಲಾವಣೆಯಿಲ್ಲದ ಹೆದ್ದಾರಿಯಂತೆ ಚಾಚಿಕೊಂಡಿದೆಯೇನೋ ಅನ್ನಿಸುತ್ತದೆ.
ಇದೀಗ ಮತ್ತೊಂದು ಬೇಸಗೆ. ಪ್ರತಿಬೇಸಗೆಗೂ ಎರಡು ಹಂತ. ಒಂದು ಹೂವರಳುವ ವಸಂತ. ಇನ್ನೊಂದು ಕಾಯಾಗುವ ಗ್ರೀಷ್ಮ. ಇವೆರಡೂ ಋತುಗಳ ಸೊಬಗು ಸವಿಯಬೇಕಾದರೆ ಮತ್ತೆ ಹಳ್ಳಿಗೇ ಹೋಗಬೇಕು. ಮಹಾನಗರಗಳಲ್ಲಿ ಕೂಡ ಋತುವೈಭವದ ಸೊಬಗು ಅಷ್ಟಕ್ಕಷ್ಟೇ. ಅದೇ ಆಕಾಶ, ಅದೇ ಭೂಮಿ, ಅದೇ ಧೂಳು.
ಮಲೆನಾಡಿಗೆ ಹೋದರೆ ಅಲ್ಲಿ ಮಾವು, ಹಲಸು, ನೇರಳೆ ಮರಗಳು ಫಲತೊಟ್ಟು ನಿಂತದ್ದು ಕಾಣುತ್ತದೆ. ಫಲತೊಟ್ಟ ಮರಗಳನ್ನು ನೋಡುತ್ತಿದ್ದರೆ ಮಲೆನಾಡಿನಿಂದ ಬಂದ ಯಾರಿಗೇ ಆದರೂ ಮತ್ತೆ ಮತ್ತೆ ನೆನಪಾಗುವುದು ಬಾಲ್ಯ. ನಿಜವಾಗಿಯೂ ಋತುವಿಲಾಸದ ಸೊಬಗು ತಟ್ಟುವುದು ಬಾಲ್ಯಕ್ಕೆ ಮಾತ್ರ. ಯೌವನದ ಆರಂಭದ ದಿನಗಳ ತನಕ ಈ ಖುಷಿ ಇದ್ದೀತು. ಆಮೇಲೆ ಎಲ್ಲ ಋತುಗಳೂ ಒಂದೇ.
ಈಗ ಚಾಲ್ತಿಯಲ್ಲಿರುವ ಋತು ಯಾವುದು? ವಸಂತ ಎನ್ನುತ್ತದೆ ಪಂಚಾಂಗ. ಗ್ರೀಷ್ಮ ಎನ್ನುತ್ತದೆ ಧಗೆ. ಎಲ್ಲ ಕಡೆಯೂ ವೈಭವೀಕರಣವನ್ನು ನೋಡಿ ನೋಡಿ ಕಾಲಕ್ಕೆ ಕೂಡ ಸ್ವಲ್ಪ ಓವರ್ ಆಕ್ಟಿಂಗ್ ಮಾಡೋಣ ಅನ್ನಿಸಿರಬೇಕು. ಹೀಗಾಗಿ ವಸಂತದಲ್ಲೇ ಗ್ರೀಷ್ಮದ ಬಿರುಸು.
ಈ ಬೇಸಗೆಯಲ್ಲಿ ನೀವೇನು ಮಾಡುತ್ತೀರಿ ಎಂಬುದಷ್ಟೇ ಪ್ರಶ್ನೆ. ಈ ಪ್ರಶ್ನೆ ಅನ್ವಯವಾಗುವುದು ಮಕ್ಕಳಿಗೆ ಮಾತ್ರ. ಮಕ್ಕಳು ಎಂದರೆ ವಿದ್ಯಾರ್ಥಿಗಳು. ವಿದ್ಯಾಭ್ಯಾಸ ಮುಗಿಸಿದವರಿಗೆ ಎಲ್ಲಾ ಕಾಲಗಳಲ್ಲೂ ಅದೇ ಕೆಲಸ. ಹೆಚ್ಚೆಂದರೆ ಒಂದೆರಡು ದಿನ ರಜೆ ಸಿಕ್ಕೀತು. ಆದರೆ ಓದುವ ಹುಡುಗರಿಗೆ ಸುದೀರ್ಘ ರಜೆ.
ನೇರಳೆಯ ಮರದಡಿಯಲ್ಲಿ ಕೂತು ಆಕಾಶದಲ್ಲಿ ಹಾರುವ ಗಿಡುಗನತ್ತ ದೃಷ್ಟಿ ಹಾಯಿಸುತ್ತಾ ಎಸ್ಸೆಲ್ ಭೈರಪ್ಪನವರ ಕಾದಂಬರಿಗಳನ್ನು ಓದುವ ಸುಖ ಬೇಕಿದ್ದರೆ ಅದಕ್ಕೆ ಮಲೆನಾಡಿಗೇ ಹೋಗಬೇಕು. ಪುಟ್ಟದೊಂದು ಅಳಿಲು, ಪೇರಲೆ ಮರಕ್ಕೆ ಬಂದು ಕೂರುವ ಪಂಚವರ್ಣದ ಗಿಳಿ, ಎಲ್ಲಿಂದಲೋ ಹೆಕ್ಕಿ ತಂದ ಮೀನನ್ನು ಗುಳಕ್ಕನೆ ನುಂಗುವ ಮಿಶ್ರವರ್ಣದ ಮಿಂಚುಳ್ಳಿ.. ಅವೆಲ್ಲ ಎಲ್ಲಿ ಹೋದವೋ ಗೊತ್ತಿಲ್ಲ. ಈಗ ಮಿಂಚುಳ್ಳಿಗಳು ಕಾಣಿಸುವುದು ಕಿಂಗ್ ಫಿಷರ್ ಬಾಟಲಿನ ಮೇಲೆ. ಪರಮಸುಖವೆಂದರೆ ಒಂದು ತಣ್ಣನೆಯ ಬಿಯರು. ಆಮೇಲೆ ತಕರಾರಿಲ್ಲದ ತಲೆನೋವು.
ಬೇಸಗೆಯಲ್ಲಿ ಏನೇನು ಓದಬೇಕು ಎಂದು ಪುಸ್ತಕಗಳನ್ನು ಒಟ್ಟುಮಾಡುವುದೂ ಒಂದು ಹವ್ಯಾಸ. ಸ್ಕೂಲಿದ್ದಾಗ ಓದಿದರೆ ಮನೆಯಲ್ಲಿ ಬೈಗಳು. ಕತೆ ಪುಸ್ತಕ ಓದುವುದಕ್ಕೆ ದೀಪ ಉರಿಸಿದರೆ ಮನೆಯಲ್ಲಿ ಕುರುಕ್ಪೇತ್ರ. ಹೀಗಾಗಿ ಕತೆ, ಕಾದಂಬರಿಗಳಿಗೆ ಬೇಸಗೆಯ ನಂಟು. ಒಂದು ಬೇಸಗೆಯಲ್ಲಿ ಓದಿದ ಹತ್ತಾರು ಕಾದಂಬರಿಗಳು, ನೂರೆಂಟು ಕತೆಗಳು, ಏಳೋ ಎಂಟೋ ಪ್ರಬಂಧಗಳು, ಅಷ್ಟಿಷ್ಟು ಕವಿತೆಗಳು ಮತ್ತೊಂದು ಬೇಸಗೆಯ ತನಕ ಬದುಕನ್ನು ಹಸನಾಗಿಸುತ್ತಿದ್ದವು. ಓದಿದ ಕತೆಗಳ ಗುಂಗಲ್ಲೇ ಮನಸ್ಸು ಒಂದು ವರುಷ ಇಡೀ ಮಾಗುತ್ತಿತ್ತು. ಏನು ನೋಡಿದರೂ ಓದಿದ್ದು ನೆನಪಾಗುತ್ತಿತ್ತು. ಅದು ಮಲೆನಾಡ ಹುಡುಗರ ಅನುಭವ.
ಈ ಬೇಸಗೆಯಲ್ಲಿ ಏನು ಓದುತ್ತೀರಿ? ಇದು ಈ ಕಾಲಕ್ಕೆ ಹಾಕಿದ ಪ್ರಶ್ನೆ. ಈ ಪ್ರಶ್ನೆಗೆ ಮಹಾನಗರದ ಹುಡುಗರ ಬಳಿ ಉತ್ತರ ಇಲ್ಲ. ಇಂಗ್ಲಿಷ್ ಓದಬಲ್ಲ ಹುಡುಗರಾದರೂ ಹ್ಯಾರಿ ಪಾಟರ್ ಓದುತ್ತಾರೆ. ಇಯಾನ್ ಫ್ಲೆಮಿಂಗಿನ ಕಾದಂಬರಿಗಳಿಗೆ ಈಗ ಉಳಿಗಾಲವಿಲ್ಲ. ಯಾಕೆಂದರೆ ಆತ ಬರೆದದ್ದೆಲ್ಲ ಟೀವಿಯಲ್ಲಿ ಪ್ರತ್ಯಕ್ಪವಾಗುತ್ತಿದೆ. ಉಳಿದಂತೆ ಓದಬೇಕು ಅನ್ನಿಸುವಂತೆ ಬರೆಯಬಲ್ಲ ಇಂಗ್ಲಿಷ್ ಲೇಖಕರಿಲ್ಲ. ಸ್ಟೀವನ್ ಸನ್ ಬರೆದದ್ದು ಈಗಿನ ಕಾಲಕ್ಕೆ ರುಚಿಸುವುದಿಲ್ಲ.
ಈಗ ಹುಡುಗರಿಗೆ ಏನನ್ನು ಓದಿಸಬೇಕು ಅನ್ನುವ ಪ್ರಶ್ನೆ ಹೆತ್ತವರದ್ದು. ಏನನ್ನಾದರೂ ಓದಿಸಿ, ಮೊದಲು ಓದಿಸಿ ಅನ್ನೋದು ಸರಿಯಾದ ಉತ್ತರ.
ನಗರದಲ್ಲಿರುವ ಮಕ್ಕಳು ಗ್ರಾಮೀಣ ಹಿನ್ನೆಲೆಯ ಕತೆಗಳನ್ನೂ ಗ್ರಾಮೀಣ ಹಿನ್ನೆಲೆಯ ಮಕ್ಕಳು ನಗರಪ್ರಜ್ಞೆಯ ಕತೆಗಳನ್ನೂ ಓದುವುದು ಒಳ್ಳೆಯದು. ಅಂಥ ಪುಸ್ತಕಗಳನ್ನು ಒದಗಿಸುವ ಕೆಲಸವನ್ನು ಹೆತ್ತವರು ಮಾಡಬೇಕು. ತನಗೆ ಅಪರಿಚಿತವಾದ ಒಂದು ಜಗತ್ತನ್ನು ಮಗು ಕಂಡುಕೊಳ್ಳುವುದಕ್ಕೆ ಓದು ನೆರವಾಗಬೇಕು ಅನ್ನುವುದು ಒಂದು ವಾದ.
ಆದರೆ ಮಕ್ಕಳು ನಿಜವಾಗಿಯೂ ಓದಬೇಕಾದದ್ದು ಮ್ಯಾಜಿಕರಿಯಲಿಸಮ್ಮಿನ ಕತೆಗಳನ್ನು. ಇವತ್ತು ಮ್ಯಾಜಿಕರಿಯಲಿಸಂ ಅನ್ನುವುದು ಒಂದು ಸಂಕೀರ್ಣ ಸಾಹಿತ್ಯ ಪ್ರಕಾರವೋ ಸಾಹಿತ್ಯಿಕ ಪರಿಭಾಷೆಯೋ ಆಗಿ ಬಳಕೆಯಾಗುತ್ತಿದೆ ನಿಜ. ಎಂಎಸ್ಕೆ ಪ್ರಭು ಮುಂತಾದವರ ಕತೆಗಳಲ್ಲಿ ಇದನ್ನು ಕಾಣಬಹುದು ಎನ್ನುವುದೂ ಸತ್ಯ.ಆದರೆ ಮಕ್ಕಳ ಕತೆಗಳಲ್ಲಿ ಈ ಮ್ಯಾಜಿಕರಿಯಲಿಸಂ ಎಷ್ಟು ಸರಳವಾಗಿ ಕಾಣಿಸಿಕೊಂಡಿವೆ ಅನ್ನುವುದು ಕುತೂಹಲ ಹುಟ್ಟಿಸುತ್ತದೆ. ಬೇತಾಳ ಕತೆಗಳೋ ವಿಕ್ರಮಾದಿತ್ಯನ ಕತೆಗಳೋ ಸಾವಿರದೊಂದು ಕತೆಗಳೋ ಪಂಚತಂತ್ರವೋ- ಹೀಗೆ ವಿಚಿತ್ರ ಖುಷಿ ಕೊಡುವ ಬದುಕಿನ ಪಾಠ ಹೇಳುವ ಆತ್ಮವಿಶ್ವಾಸ ತುಂಬುವ ಕತೆಗಳು. ಈ ಕತೆಗಳಲ್ಲಿ ಯಾರೂ ಹೀರೋಗಳಿಲ್ಲ;ಯಾರನ್ನೂ ವೈಭವೀಕರಿಸುವುದಿಲ್ಲ.
ಎಷ್ಟೆಲ್ಲ ಹೇಳಿಕೊಂಡರೂ ಕೇಳಿಕೊಂಡರೂ ಮತ್ತದೇ ಪ್ರಶ್ನೆ; ಈ ಬೇಸಗೆಯಲ್ಲಿ ಏನು ಓದಬೇಕು? ಉರಿಬೇಸಗೆಯಲ್ಲಿ ಭೆರಪ್ಪನವರ ಪರ್ವ, ಮಳೆಗಾಲದಲ್ಲಿ ತೇಜಸ್ವಿಯವರ ನಿಗೂಢ ಮನುಷ್ಯರು, ಚಳಿಗಾಲದಲ್ಲಿ ಮಾಸ್ತಿಯವರ ಚಿಕವೀರರಾಜೇಂದ್ರ ಓದಿದ್ದನ್ನು ಮರೆಯದವರಿದ್ದಾರೆ. ಎಪ್ಪತ್ತಾರರ ಬೇಸಗೆಯಲ್ಲಿ ತನ್ನ ಮನೆಯ ಗೇರುಹಣ್ಣಿನ ತೋಟದಲ್ಲಿ ಕುಳಿತು ಒಂದೇ ಏಟಿಗೆ ಕಾನೂರು ಹೆಗ್ಗಡಿತಿ ಓದಿ ಮುಗಿಸಿದ್ದನ್ನು ಇವತ್ತಿಗೂ ಮರೆಯದಂಥ ಓದುಗರಿದ್ದಾರೆ. ಇಪ್ಪತ್ತು ವರುಷಗಳ ಹಿಂದೆ ಓದಿದ ಮಾರ್ಕ್ವೆಸ್ ನ ಲವ್ ಇನ್ ದಿ ಟೈಮ್ ಆಫ್ ಕಾಲರಾದ ಮೊದಲ ಸಾಲುಗಳು It was inevitable; the scent of bitter almonds reminded him of the fate of unrequitted love ಮರೆಯುವಂಥದ್ದೇ ಅಲ್ಲ. ಅನಂತಮೂರ್ತಿಯವರ ಭಾರತೀಪುರದ ಮೊದಲ ಸಾಲುಗಳಾದ `ಜಗನ್ನಾಥ ನಡೆಯುವಾಗ ಹೊಂಡಗಳನ್ನು ಬಳಸುವುದಿಲ್ಲ, ಹಾರುತ್ತಾನೆ' ಅನ್ನುವುದು ಕೂಡ ಅದು ಹೇಗೋ ಒಂದು ರೂಪಕವಾಗಿ ಅಪ್ರತಿಮ ಚೈತನ್ಯ, ಜೀವಂತಿಕೆ ಮತ್ತು ಉತ್ಸಾಹದ ಸಂಕೇತವಾಗಿ ಮನಸ್ಸಿನಲ್ಲಿ ಉಳಿದುಬಿಡುತ್ತದೆ.
ಅದೆಲ್ಲ ಸರಿ, ಈ ಬೇಸಗೆಯಲ್ಲಿ ನೀವೇನು ಓದುತ್ತೀರಿ?
ನಿರ್ಧರಿಸಿ. ಅದು ಮೂವತ್ತು ಗ್ರೀಷ್ಮಗಳ ನಂತರವೂ ನೆನಪಿರುತ್ತದೆ. ನೆನಪಿಡಿ.
ನಾನಂತೂ ಈ ಬೇಸಗೆಗೆ ಅಂತಲೇ ಸುಮಾರು ಅರುವತ್ತರ ದಶಕದ ಚಂದಮಾಮ ತರಿಸಿಟ್ಟಿದ್ದೇನೆ. ಅವುಗಳ ಕತೆಗಳನ್ನು ಓದುವಾಗಿನ ಖುಷಿಯೇ ಬೇರೆ. ಬೇಸಗೆ, ಬಿಸಿಲು ಮತ್ತು ವಿರಾಮಕ್ಕೆ ಚಂದಮಾಮ ಕತೆಗಳಿಗಿಂತ ಸೊಗಸಾದ ಹೊರದಾಗಿ ಮತ್ತೊಂದಿಲ್ಲ.

Friday, February 15, 2008

ಪ್ರೀತಿಯೆಂಬ ಪವಾಡ


ಪವಾಡಗಳನ್ನು ನಂಬಬೇಡಿ...
ಹಾಗಂತ ಕರೆಕೊಡುತ್ತಾವೆ ಬುದ್ಧಿಜೀವಿಗಳು. ಪವಾಡಗಳ ಹಿಂದಿನ ರಹಸ್ಯವನ್ನು ಬಯಲು ಮಾಡುವವರ ಸಂಘಗಳಿಗೂ ನಮ್ಮಲ್ಲಿ ಕೊರತೆಯಿಲ್ಲ. ವಿಚಾರವೇದಿಕೆಗಳೂ ವಿಚಾರವಾದಿಗಳೂ ದಿನನಿತ್ಯ ಪವಾಡಗಳನ್ನು ಬಯಲಿಗೆಳೆದು ಗಹಗಹಿಸಿ ನಗುತ್ತಿವೆ. ಅವರ ಹುಚ್ಚಾಟಗಳನ್ನು ನೋಡಿ ಪವಾಡಪುರುಷರೂ ಗಹಗಹಿಸುತ್ತಾರೆ.
ಪವಾಡಗಳು ಯಾಕೆ ಇಷ್ಟವಾಗುತ್ತವೆ ಯೋಚಿಸೋಣ. ಅವು ನಮ್ಮ ಎದುರಿಗಿರುವ ವಾಸ್ತವವನ್ನು ನಿರಾಕರಿಸುತ್ತವೆ. ಇದು ಹೀಗೇ ನಡೆಯಬೇಕು ಅನ್ನುವ ನಮ್ಮ ಗ್ರಹಿಕೆಯನ್ನು ಸುಳ್ಳುಮಾಡುತ್ತವೆ. ಇದು ಹೀಗೇ ನಡೆಯುತ್ತದೆ ಅನ್ನುವ ನಮ್ಮ ಪೂರ್ವನಿರ್ಧಾರವನ್ನು ತಲೆಕೆಳಗು ಮಾಡುತ್ತವೆ. ಹೀಗಾಗಿ ನೀರಸ ದೈನಿಕಕ್ಕೆ ಒಂದು ಅಚ್ಚರಿ ಪ್ರಾಪ್ತಿಯಾಗುತ್ತದೆ. ಹತ್ತಾರು ವರುಷದ ವ್ರತನೇಮಾದಿ ಪೂಜೆಗಳಿಂದ ಪ್ರಾಪ್ತಿಯಾಗದ ಆರೋಗ್ಯ ಒಂದು ಸ್ಪರ್ಶದಿಂದ ಪ್ರಾಪ್ತಿಯಾದರೆ ಯಾರು ತಾನೇ ಬೇಡ ಅನ್ನುತ್ತಾರೆ.
ಹಾಗೆ ನೋಡಿದರೆ ನಮ್ಮ ದೇಶದಲ್ಲಾದ ಅತ್ಯಂತ ದೊಡ್ಡ ಪವಾಡ ಎಂದರೆ ಸಾಮಾಜಿಕವಾಗಿ ಆದ ಬದಲಾವಣೆ. ಉದಾಹರಣೆಗೆ ಕುಂವೀಯವರ `ಬೇಟೆ' ಕಾದಂಬರಿಯಲ್ಲಿ ಆಳುಮಗನನ್ನು ಜಮೀನ್ದಾರನ ಮಗಳು ಪ್ರೀತಿಸುವುದು ಅಂಥ ಪವಾಡಗಳಲ್ಲಿ ಒಂದು. ಹನ್ನೆರಡನೇ ಶತಮಾನದಲ್ಲೇ ಕಲ್ಯಾಣದಲ್ಲಿ ಜಾತಿಪದ್ಧತಿಯನ್ನು ಶರಣರು ಮೆಟ್ಟಿನಿಲ್ಲುವಂತೆ ಮಾಡಿದ್ದು ಬಸವಣ್ಣನ ಪವಾಡ.
ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರು ಎತ್ತಕ್ಕೆತ್ತರಕ್ಕೆ ಏರಿದ್ದು, ಎತ್ತರದಲ್ಲಿದ್ದವರು ಕೆಳಗಿಳಿದದ್ದು ಮತ್ತು ಸಮಾನತೆಯನ್ನು ಎಲ್ಲರೂ ತಾತ್ವಿಕವಾಗಿ ಒಪ್ಪಿಕೊಂಡಿರುವುದು ಇವೆಲ್ಲ ನಮ್ಮ ದೇಶದಲ್ಲೇ ನಮ್ಮ ಕಣ್ಮುಂದೆಯೇ ನಡೆದುಹೋಗಿದೆ. ಇವತ್ತಿನ ಮಧ್ಯಮವರ್ಗ ಎಲ್ಲವನ್ನೂ ನಿರಾಕರಿಸುವ ದಿಟ್ಟತನ ತೋರುತ್ತಿದೆ. ಮಧ್ಯಮವರ್ಗದ ಬ್ರಾಹ್ಮಣರ ಹುಡುಗಿಯೊಬ್ಬಳು, ಕಾ್ ಸೆಂಟ್ನಲ್ಲಿ ಕೆಲಸ ಮಾಡಿ ರಾತ್ರಿ ಪಾರ್ಟಿಗಳನ್ನು ಅಟೆಂಡ್ ಮಾಡಿ ನಿರ್ಬಿಢೆಯಿಂದ ಮನೆ ಸೇರುತ್ತಾಳೆ. ಡೈವೋರ್ಸು ಮತ್ತ ವಿಧವಾ ವಿವಾಹಗಳ ಬಗ್ಗೆ ಯಾರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಮದುವೆ ಕೂಡ ಹೆಣ್ಣುಮಕ್ಕಳ ಅನಿವಾರ್ಯತೆಯಾಗಿ ಉಳಿದಿಲ್ಲ. ಹುಡುಗಿಗೆ ಗಂಡು ಸಿಕ್ಕುವುದಿಲ್ಲ ಅನ್ನುವ ಪರಿಸ್ಥಿತಿ ಬದಲಾಗಿ ಹೆಣ್ಣುಗಳೇ ಸಿಗುತ್ತಿಲ್ಲ ಅನ್ನುವ ದೂರು ಕೇಳಿಬರುತ್ತಿದೆ. ಈ ಗಂಡು ಬೇಡ ಅಂತ ಸ್ಪಷ್ಟವಾಗಿ ನಿರಾಕರಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಹತ್ತು ವರುಷಗಳ ಹಿಂದಿನ ಸ್ಥಿತಿಗೆ ತದ್ವಿರುದ್ಧವಾದ ಒಂದು ಸಮಾಜ ಇವತ್ತು ನಿರ್ಮಾಣವಾಗಿದೆ. ಬಗರೆ ಎಂಬ ಹೆಸರು ಕೂಡ ಕೇಳಿಲ್ಲದಂಥ ಗ್ರಾಮದಲ್ಲಿ ಹುಟ್ಟಿದ ಹೆಣ್ಣುಮಗಳು ಡೆಟ್ರಾಯಿಟ್ಟಿನ ಸಾಫ್ಟುವೇರ್ ಸಂಸ್ಥೆ ಸೇರಿಕೊಳ್ಳುತ್ತಾಳೆ. ಒಬ್ಬಳೇ ಡೆಟ್ರಾಯಿಟ್ಟಿಗೆ ಹೋಗಿಬರುತ್ತಾಳೆ. ಇವೆಲ್ಲವೂ ಪವಾಡಗಳೇ.
ಇಷ್ಟೇ ಅಲ್ಲ, ಇವತ್ತು ಯಾವ ಕಾಯಿಲೆಯೂ ನಮ್ಮನ್ನು ಕೊಲ್ಲುವುದಿಲ್ಲ ಮತ್ತು ಕೊಲ್ಲುವುದಕ್ಕೆ ಯಾವ ಕಾಯಿಲೆಯೂ ಬೇಕಾಗಿಲ್ಲ. ಸಾಗರ ಉಕ್ಕದೆ ನಿಂತದ್ದು ಒಂದು ಪವಾಡವಾದರೆ ಇದ್ದಕ್ಕಿದ್ದ ಹಾಗೆ ಉಕ್ಕಿದ್ದೂ ಒಂದು ಪವಾಡವೇ. ಹಿಂದೆ ಕಾಯಿಲೆಬಿದ್ದವರನ್ನು ದೇವರೋ ದೇವಮಾನವರೋ ಮಾತ್ರ ಉಳಿಸಬಲ್ಲರು ಅನ್ನುವ ನಂಬಿಕೆಯಿತ್ತು. ಜೀವವೆನ್ನುವುದು ಹಳ್ಳಿಯ ಅಳಲೆಕಾಯಿ ಪಂಡಿತನ ಪೆಟ್ಟಿಗೆಯಲ್ಲೋ ಪೂಜಾರಿಯ ಮಂತ್ರದಲ್ಲೋ ಅಡಗಿತ್ತು. ಹಳ್ಳಿಗೊಬ್ಬನೇ ವೈದ್ಯನಿದ್ದು ಅವನ ರಾಗದ್ವೇಷಗಳಿಗೆ ಅನುಗುಣವಾಗಿ ಮಂದಿ ಬದುಕುತ್ತಿದ್ದರು, ಸಾಯುತ್ತಿದ್ದರು. ಮಂತ್ರವಾದಿಗೂ ವೈದ್ಯನಿಗೂ ಜ್ಯೋತಿಷಿಗೂ ಖಗೋಲ ಶಾಸ್ತ್ರಜ್ಞನಿಗೂ ಅಂಥ ವ್ಯತ್ಯಾಸವಿರಲಿಲ್ಲ. ಅಷ್ಟೇ ಯಾಕೆ, ಬೇಸಾಯ, ಬಡಗಿ, ಕಮ್ಮಾರ, ಕುಂಬಾರ ಮುಂತಾದ ವೃತ್ತಿಗಳನ್ನು ಬಿಟ್ಟರೆ ಬೇರೆ ವೃತ್ತಿಯೂ ಇರಲಿಲ್ಲ. ಓದು ಅಷ್ಟಕ್ಕೇ ಸಾಕಾಗಿತ್ತು. ಆದರೆ ಇವತ್ತು ಬದುಕು ಮತ್ತಷ್ಟು ಸಂಕೀರ್ಣವಾಗಿಬಿಟ್ಟಿದೆ. ಮನೆಯಲ್ಲೊಂದು ಡಿಜಿಟ್ ಮೈಕ್ರೋಓವ್ ತಂದಿಟ್ಟರೆ, ಮನೆಗೆ ಹತ್ತು ನಿಮಿಷ ದೂರದಲ್ಲಿರುವಾಗಲೇ ಫೋ್ ಮಾಡಿ ಓವ್ಗೆ ಸೂಚನೆ ಕೊಟ್ಟರೆ ಧ್ವನಿಯನ್ನೇ ಗ್ರಹಿಸಿ ಮೈಕ್ರೋ ಓವ್ ಕಾರ್ಯಾರಂಭ ಮಾಡುತ್ತದೆ. ಮನೆಗೆ ಬರುವ ಹೊತ್ತಿಗೆ ಬಿಸಿಬಿಸಿ ಅಡುಗೆ ರೆಡಿಯಾಗಿರುತ್ತದೆ. ಹೆಂಡತಿಯೊಬ್ಬಳು ಮನೆಯೊಳಗಿದ್ದರೂ ಇಲ್ಲದಿದ್ದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ.
ಅದು ಪವಾಡವಲ್ಲವೇ?
******
ಹಾಗೆ ನೋಡಿದರೆ ಈ ವಿಚಾರವಾದಿಗಳಿಂದಾಗಿ ವಿಜ್ಞಾನಿಗಳಿಂದಾಗಿ ನಾವು ಬೆರಗನ್ನೇ ಕಳೆದುಕೊಂಡಿದ್ದೇವೆ. ಆಧುನಿಕತೆ ನಮ್ಮನ್ನು ಮತ್ತೊಂದು ಯಂತ್ರವನ್ನಾಗಿ ಮಾಡಿಬಿಟ್ಟಿದೆ. ಬೆಳಗ್ಗೆ ಆಫೀಸಿಗೆ ಬರುತ್ತೇವೆ, ಮೈಮುರಿಯುವಷ್ಟು ದುಡಿಯುತ್ತೇವೆ, ರಾತ್ರಿ ಹೊತ್ತಿಗೆ ಮನೆ ಸೇರುತ್ತೇವೆ. ಗೆಳೆಯರ ಜೊತೆ ಮಾತಾಡುವುದಕ್ಕೂ ಹಿಂಜರಿಯುತ್ತೇವೆ. ನಮ್ಮ ಸಮಯ ಹಾಳಾಗುತ್ತದೆ ಅಂತ ಗಾಬರಿಯಾಗುತ್ತೇವೆ. ಅಷ್ಟಕ್ಕೂ ನಮ್ಮ ಸಮಯ ದುಡಿಯುವುದರಿಂದ ಸದುಪಯೋಗ ಆಗುತ್ತದೆಯಾ? ನಾವಿಲ್ಲದೇ ಹೋದರೂ ಆ ಕೆಲಸ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದಲ್ಲ. ಅಷ್ಟಕ್ಕೂ ಆ ಕೆಲಸದಲ್ಲಿ ನಮ್ಮ ಸ್ಪರ್ಶದ ಗುರುತು ಇದೆಯಾ?
ಉದಾಹರಣೆಗೆ ಕಾರು ಫ್ಯಾಕ್ಟರಿಯನ್ನೇ ತೆಗೆದುಕೊಳ್ಳಿ. ದಿನಕ್ಕೆ ನೂರು ಕಾರು ಅಲ್ಲಿ ತಯಾರಾಗುತ್ತದೆ ಅಂತಿಟ್ಟುಕೊಳ್ಳಿ. ಆ ಕಾರನ್ನು ನಿರ್ಮಿಸುವ ಯಾರಿಗಾದರೂ ರಸ್ತೆಯಲ್ಲಿ ಓಡಾಡುವ ಒಂದು ಕಾರನ್ನು ತಾನು ನಿರ್ಮಿಸಿದೆ ಅಂತ ಹೇಳಿಕೊಳ್ಳುವ ಧೈರ್ಯವಿರಲು ಸಾಧ್ಯವಾ? ಅದೇ ಒಂದು ಸುಂದರವಾದ ಮನೆಕಟ್ಟಿಕೊಟ್ಟ ಆರ್ಕಿಟೆಕಆ ಮನೆಯನ್ನು ತೋರಿಸಿ, ಇದನ್ನು ನಾನು ಕಟ್ಟಿಸಿಕೊಟ್ಟೆ ಎನ್ನುವಷ್ಟು ಸಹಜವಾಗಿ ಕಂಪ್ಯೂಟ್ ಉದ್ಯಮದಲ್ಲಿರುವವನು ಹೇಳಬಲ್ಲನೇ? ಒಬ್ಬ ವಿದ್ಯಾರ್ಥಿಯನ್ನು ಇವತ್ತಿನ ಒಬ್ಬ ಮೇಷ್ಟ್ರು ಗುರುತಿಸಿ, ಇವನ ವ್ಯಕ್ತಿವಿಶಿಷ್ಟತೆ ನನ್ನಿಂದ ಬಂತು ಅಂತ ಹೇಳೋಕೆ ಸಾಧ್ಯವಿದೆಯೇ?
ಅಂಥ ಅವಕಾಶವಿಲ್ಲ. ಇಲ್ಲಿ ಎಲ್ಲವೂ ಯಾಂತ್ರಿಕ. ಇಂಥ ಯಾಂತ್ರಿಕತೆಯನ್ನು ನೀಗುವಂಥ ಪವಾಡ ಸಾಧ್ಯವಾಗುವುದು ಕಲೆಯಿಂದ. ಇವತ್ತು ಕಲೆ ಮತ್ತು ಕಂಪ್ಯೂಟ್ ನಡುವಿನ ವ್ಯತ್ಯಾಸ ಅಳಿಸಿಹೋಗಿದೆ. ನಾಟಕಗಳನ್ನೂ ಅಚ್ಚುಕಟ್ಟಾಗಿ ಮಾಡತೊಡಗಿದ್ದಾರೆ. ಡಿಜಿಟ್ ಧ್ವನಿ ಲಭ್ಯವಿದೆ. ಈ ಡಿಜಿಟ್ ಧ್ವನಿ ಅದೇನೇ ಮಾಡಿದರೂ ಮನುಷ್ಯರದು ಅನ್ನಿಸುವುದಿಲ್ಲ. ಮನುಷ್ಯರದು ಅನ್ನಿಸದ ಹೊರತು ಅದನ್ನು ಪ್ರೀತಿಸುವುದಾದರೂ ಹೇಗೆ? ತೆರೆಯ ಮೇಲೆ ಕಾಣುವ ಮುಖಗಳೂ ಅಷ್ಟೇ, ತಿದ್ದಿ ತೀಡಿಟ್ಟ ಗೊಂಬೆಗಳಂತೆ ಕಾಣಿಸುತ್ತಿವೆ. ಆಧುನಿಕತೆ ಮತ್ತು ತಾಂತ್ರಿಕತೆ ಕುರೂಪವೇ ಇಲ್ಲದ ಆಕೃತಿಗಳನ್ನು ತಂದು ನಮ್ಮ ಮುಂದೆ ನಿಲ್ಲಿಸುತ್ತಿದೆ. ಅಲ್ಲಿ ಪವಾಡಗಳೇ ನಡೆಯುವುದಿಲ್ಲ, ಎಲ್ಲವೂ ಕೈವಾಡವೇ.
*****
ನಿಜವಾದ ಪವಾಡ ಇರುವುದು ಸಾಹಿತ್ಯದಲ್ಲಿ. ಇವತ್ತಿಗೂ ರಾಮಾಯಣ ಮತ್ತು ಮಹಾಭಾರತ ಎಲ್ಲರಿಗೂ ಗೊತ್ತು. ಅದನ್ನು ಯಾರೂ ವಿಶೇಷವಾಗಿ ಕಲಿಯಬೇಕಾಗಿಲ್ಲ. ಅದು ಮಾತಿನೊಂದಿಗೆ, ಭಾಷೆಯೊಂದಿಗೆ ಮೈಗೂಡುತ್ತಾ ಹೋಗುತ್ತದೆ. ಅಂಥದ್ದೊಂದು ಕೃತಿಯನ್ನು ನೀಡುವುದಕ್ಕೆ ನಮ್ಮ ವಿಜ್ಞಾನಕ್ಕೋ ತಂತ್ರಜ್ಞಾನಕ್ಕೋ ಸಾಧ್ಯವಾಗಿಲ್ಲ ಅನ್ನುವುದರಲ್ಲೇ ಕಲೆಯ ಶ್ರೇಷ್ಠತೆ ಮತ್ತು ಅನನ್ಯತೆ ಅಡಗಿದೆ.
ಯಾರಾದರೂ ತೊಂದರೆಯಲ್ಲಿದ್ದಾರೆ ಅಂತ ಗೊತ್ತಾದಾಗ `ಅಯ್ಯೋ ರಾಮ' ಅನ್ನುತ್ತಿದ್ದೆವು. ಯಾರಾದರೂ ತುಂಬ ದಿನ ಕಾಣಿಸಿಕೊಳ್ಳದಿದ್ದರೆ ಅಜ್ಞಾತವಾಸ ಅಂತ ಕರೀತಿದ್ದೆವು. ತುಂಬ ಕಷ್ಟಬಂದವರಿಗೆ ವನವಾಸ ಪ್ರಾಪ್ತಿ ಎನ್ನುತ್ತಿದ್ದೆವು. ತುಂಬ ಉದಾರಿಗೆ ಧರ್ಮರಾಯ ಎಂದೂ ಧೈರ್ಯಶಾಲಿಗೆ ಭೀಮ ಎಂದೂ ಕರೆಯುವುದು ವಾಡಿಕೆಯಾಗಿತ್ತು. ಆದರೆ ಮತ್ತೊಂದು ಭಾಷೆ ಮನೆಯೊಳಗೆ ಬಂದಾಗ ಈ ಪುರಾಣದ ನುಡಿಗಟ್ಟೆಲ್ಲ ನಾಶವಾಗಿಬಿಟ್ಟಿದೆ. ಬೇರೆ ಬೇರೆ ಭಾಷೆ ಮಾತಾಡುವ ಇಬ್ಬರು ಮದುವೆಯಾದರೆ ಅವರ ಮನೆಮಾತೂ ಇಂಗ್ಲಿ್ ಆಗಿಬಿಡುತ್ತದೆ. ಅಲ್ಲಿಗೆ ಪುರಾಣ ಪ್ರತಿಮೆಗಳೂ ರೂಪಕಗಳೂ ಸಾಯುತ್ತವೆ. ನಮ್ಮೊಳಗಿನ ಪುರಾಣ ಸತ್ತುಹೋದರೆ ಉಳಿಯುವುದು ಶುಷ್ಕ ವರ್ತಮಾನ ಮಾತ್ರ. ವರ್ತಮಾನಕ್ಕೆ ಬೇರುಗಳಿಲ್ಲ!
*****
ನಿಜವಾದ ಪವಾಡ ದಿನದಿನ ನಡೆಯುತ್ತದೆ. ಎಂಥ ಆಧುನಿಕತೆಯ ನಡುವೆಯೂ ಸೂರ್ಯೋದಯವಾಗುತ್ತದೆ, ಸೂರ್ಯಾಸ್ತವಾಗುತ್ತದೆ. ಎಷ್ಟೇ ಮಾತ್ರೆತಿಂದರೂ ಪೌಷ್ಠಿಕ ಆಹಾರ ತಿಂದರೂ ದೇಹಕ್ಕೆ ದಣಿವಾಗುತ್ತದೆ. ಎಂಟು ಗಂಟೆಗಿಂತ ಜಾಸ್ತಿ ನಿದ್ರೆ ಮಾಡಲಾಗುವುದಿಲ್ಲ. ಎಂಥ ಸುಂದರಿಯೂ ಸ್ವಲ್ಪ ದಿನಕ್ಕೇ ಬೋರು ಹೊಡೆಸುತ್ತಾಳೆ. ಹೆಂಡತಿಯ ಮುಂದೆ ಬೇರೆ ಹುಡುಗಿಯರೆಲ್ಲ ಸುಂದರಿಯರಾಗಿ ಕಾಣಿಸುತ್ತಾರೆ.
ನಮ್ಮ ಮಕ್ಕಳ ಹಾಗೆ ಎಲ್ಲ ಮಕ್ಕಳನ್ನೂ ಮುದ್ದಿಸಬೇಕು ಅನ್ನಿಸುತ್ತದೆ. ಕಡಲನ್ನು ನೋಡುತ್ತಿದ್ದರೆ ಅದು ಉಕ್ಕಿ ನಮ್ಮನ್ನು ಸಾಯಿಸುತ್ತದೆ ಅನ್ನಿಸುವುದಿಲ್ಲ. ಆಕಾಶದಿಂದ ಯಾವುದೋ ಒಂದು ಉಪಗ್ರಹ ಕಳಚಿ ತಲೆಮೇಲೆ ಬೀಳಬಹುದು ಅನ್ನುವ ಭಯ ಕಾಡದಷ್ಟು ಆಕಾಶ ವಿಶಾಲವಾಗಿದೆ ಮತ್ತು ಅಲ್ಲಿಂದ ಯಾವ ಬಿಲ್ಲೂ ಕೊಡದೇ ಚಂದ್ರ ರಾತ್ರಿಯೆಲ್ಲ ಬೆಳಕು ಕೊಡುತ್ತಾನೆ.
ಸಕ್ಕರೆ ಕಾಯಿಲೆಯೊಟ್ಟಿಗೇ ನಾವು ಮತ್ತೊಂದು ಮಧು-ಚಂದ್ರಕ್ಕಾಗಿ ಹಾತೊರೆಯುತ್ತೇವೆ.
ಮತ್ತು ಒಂಟಿಯಾಗಿದ್ದಾಗ ಈಗಲೂ ನಾವು ನಮ್ಮವರನ್ನು ಪ್ರೀತಿಸುತ್ತೇವೆ.
ಅದಲ್ಲವೇ ಪವಾಡ!

Thursday, February 14, 2008

ಗೆಳೆಯನ ಆಹ್ವಾನ ಹಾಗ್ಹಾಗೇ ನಿಮಗೆ

ಕೊನೆಗೂ ಪುಸ್ತಕ ಸಿದ್ಧವಾಗಿದೆ. ತಪ್ಪೆಲ್ಲಾ ನನ್ನದೇ.
ತುಂಬಾ ಸಮಯದಿಂದ ಇಂಥ ಪುಸ್ತಕ ಮಾಡೋಣ ಹೇಳುತ್ತಾ ಇದ್ದವರು ನನ್ನ ಮೇಸ್ಟ್ರು ಪುರಂದರ ಭಟ್ಟರು.ಅವರು ಕಾರಂತರು ಕಟ್ಟಿದ ಕರ್ನಾಟಕ ಸಂಘದ ಅಧ್ವರ್ಯು.
ನಾನು ತುಂಬಾ ಶೈ.
ಕತೆ ಬರೆಯುವುದು ಗೊತ್ತು ಆದರೆ ಈ ಪುಸ್ತಕ ಮಾಡುವುದು ಅದನ್ನು ಹೊರತರುವುದು ಇತ್ಯಾದಿ ಎಲ್ಲಾ ನನಗೆ ಆಗುವ ಹೋಗುವ ಸಂಗತಿಯಲ್ಲ ಅಂತ ಸುಮ್ಮನಿದ್ದೆ.
ನನಗೆ ನನ್ನ ಕತೆಗಳ ಬಗೆಗೆ ಸದಾ ಅನುಮಾನ.
ಅಂತೂ ನಾನು ಸರಿ ಸಾರೂ ಎಂದೆ.
ಹಾಗೇ ಹೇಳಲು ನಾನು ತೆಗೆದುಕೊಂಡ ಅವಧಿ ಕೇವಲ ಎರಡೂವರೆ ವರ್ಷ.
ತಾರೀಕು ೨೪ ಇದೇ ತಿಂಗಳು ಈ ಕತೆ ಪುಸ್ತಕವನ್ನು ನಿಮ್ಮ ಕೈಗೆ ಒಪ್ಪಿಸುತ್ತಿದ್ದಾರೆ ಇದನ್ನು ಪ್ರೀತಿಯಿಂದ ರೂಪಿಸಿದ ಕರ್ನಾಟಕ ಸಂಘ.
ಪುಸ್ತಕವನ್ನು ಎತ್ತಿ ತೋರಿಸುವುದಕ್ಕೆ ಬರುವವನು ನನಗೆ ಅವನಲ್ಲದೇ ಇನ್ಯಾರೂ ಅಲ್ಲದ ನನ್ನ ಒಡನಾಡಿ ಗೆಳೆಯ ಜೋಗಿ.
ಅವರ ಜೊತೆ ಹಿರಿಯ ಸ್ನೇಹಿತ ನಾಗತಿಹಳ್ಳಿ ಚಂದ್ರಶೇಖರ್.
ನೀವೂ ಅಲ್ಲಿಗೆ ಬರಬೇಕು ಅಷ್ಟೇ..
ಬೇರೇನೂ ನನಗೆ ಗೊತ್ತಿಲ್ಲ.
ಏನೆಲ್ಲಾ ಇದೆ ಅಂತ ಅಲ್ಲಿಗೆ ಬನ್ನಿ ಗೊತ್ತಾಗುತ್ತದೆ.
ಎಲ್ಲಿಗೆ ಅಂದರೆ ಪುತ್ತೂರಿಗೆ.
ಅನುರಾಗ ವಠಾರಕ್ಕೆ.
ಬರ್ತೀರಲ್ಲ?
-ಕುಂಟಿನಿ ಗೋಪಾಲಕೃಷ್ಣ

Wednesday, February 13, 2008

ಬಿಡುವಿಲ್ಲದ ಪೂರ್ಣಪ್ರಜ್ಞರಿಗೆ ಶ್ರದ್ಧಾಂಜಲಿ

ಬಹುಶಃ ವೀರಪ್ಪ ಮೊಯಿಲಿಯೊಬ್ಬರನ್ನು ಬಿಟ್ಟರೆ ಈ ಕಾಲದಲ್ಲಿ ಮತ್ಯಾರೂ ಮಹಾಕಾವ್ಯ ಬರೆಯುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಕಾಣುತ್ತದೆ. ಮೊಯಿಲಿಯವರದ್ದು ವಿರಾಮ ಪ್ರತಿಭೆ. ಅವರಿಗೆ ಬೇಕಷ್ಟು ಪುರುಸೊತ್ತಿದೆ ಎಂದು ಬರೆಯುತ್ತಾರೆ. ಓದುಗರಿಗೂ ಅಷ್ಟು ವಿರಾಮ ಮತ್ತು ಸಹನೆ ಇದೆಯೋ ಎಂದು ನೋಡುವುದಕ್ಕೆ ಅವರು ಹೋಗುವುದಿಲ್ಲ. ನಮ್ಮ ಸಾಹಿತ್ಯ ವಿಮರ್ಶಕರಿಗೋ ಮೊಯಿಲಿ ಬರೆದದ್ದು ಮಹಾಕೃತಿ. ಕನ್ನಡ ಸಾಹಿತ್ಯದಲ್ಲೊಂದು ಮೊಯಿಲಿಗಲ್ಲು!
ಮೌಲಿಕವಾದದ್ದನ್ನು ಬರೆದಿಲ್ಲ ಅನ್ನುವ ತಕರಾರಿನಷ್ಟು ವಿಸ್ತೃತವಾಗಿ ಬರೆದಿದ್ದಾರೆ ಅನ್ನುವ ತಕರಾರು ಮೌಲಿಕವಲ್ಲ. ಒಬ್ಬ ಹುಡುಗ ಮತ್ತು ಹುಡುಗಿ ೇಟಿಯಾಗಿ ಪರಸ್ಪರರನ್ನು ಪ್ರೀತಿಸಿ ಎಲ್ಲ ವಿರೋಧಗಳ ನಡುವೆ ಮದುವೆಯಾಗಿ ಮುಂದಿನ ತಲೆಮಾರಿನ ಸೃಷ್ಟಿಗೆ ಕಾರಣವಾಗುವ ನೂರಾರು ಪುಟಗಳ ಕತೆಯನ್ನು ಡುಂಡಿರಾಜ್ ಥರ ` ಅವಳು ಅಕಸ್ಮಾತ್ ಸಿಕ್ಕಳು, ನನ್ನನ್ನು ನೋಡಿ ನಕ್ಕಳು, ನಮಗೀಗ ಇಬ್ಬರು ಮಕ್ಕಳು' ಎಂದು ಒಂಬತ್ತು ಪದಗಳಲ್ಲಿ ಮುಗಿಸಿದರೆ ನವರಸಗಳ ಗತಿಯೇನಾಗಬೇಡ?
ಆದರೆ ಇವತ್ತಿನ ಓದುಗರ ಪ್ರಮುಖ ದೂರು `ಪುರುಸೊತ್ತಿಲ್ಲ' ಅನ್ನುವುದು. ಈ ಪುರುಸೊತ್ತಿಲ್ಲ ಎಂಬ ವಾದಕ್ಕೆ ಇವತ್ತು ಅರ್ಥವೇ ಇಲ್ಲ. ಬೆಂಗಳೂರಿನಲ್ಲಿರುವ ಬಹುತೇಕ ಓದುಗರಿಗೆ ಖಂಡಿತ ಓದುವುದಕ್ಕೆ ಬೇಕಾದ ಕಾಲಾವಕಾಶ ತಾನಾಗಿಯೇ ಸಿಗುತ್ತದೆ. ಮೂವತ್ತೋ ಐವತ್ತೋ ವರುಷಗಳ ಹಿಂದೆ ಹೋಗಿ ನೋಡಿ. ಆಗ ಮಿಕ್ಸಿ ಇರಲಿಲ್ಲ, ವಾಷಿಂ್ ಮೆಷೀನು ಇರಲಿಲ್ಲ, ಈಮೇಲು, ಫೋನುಗಳು ಬಹುತೇಕರಿಗೆ ಇರಲಿಲ್ಲ. ಎಲ್ಲರ ಬಳಿಯೂ ಸ್ಕೂಟರಿರಲಿಲ್ಲ. ಬಸ್ಸಿನಲ್ಲೇ ಓಡಾಡಿದರೂ ಎಲ್ಲರಿಗೂ ಓದುವುದಕ್ಕೆ ಬಿಡುವಿತ್ತು. ಮನೆ ಕೆಲಸ ತಾವೇ ಮಾಡಿಕೊಂಡರೂ ಹೆಣ್ಣುಮಕ್ಕಳು ಓದುತ್ತಿದ್ದರು.
ಈಗ ಆಧುನಿಕತೆಯಿಂದ ಉಳಿಸಿದ ಎಲ್ಲ ಸಮಯವನ್ನೂ ಆಧುನಿಕತೆಯೇ ನುಂಗುತ್ತಿದೆ. ದಿನಕ್ಕೆ ಕನಿಷ್ಠ ಮೂರು ಗಂಟೆಯನ್ನು ಟೀವಿ, ಒಂದು ಗಂಟೆಯನ್ನು ಟೆಲಿಫೋನು ಕಸಿದುಕೊಳ್ಳುತ್ತದೆ. ನಗರದ ಷೋಕಿಗಳು ಮತ್ತೊಂದೆರಡು ಗಂಟೆಗೆ ಕತ್ತರಿ ಹಾಕುತ್ತವೆ. ಆಫೀಸು ಬಿಟ್ಟು ನೇರವಾಗಿ ಮನೆಗೆ ಹೋಗುವುದು ಗಂಡನಿಗೂ ಶೋೆಯಲ್ಲ, ಹೆಂಡತಿಗೂ ರುಚಿಸುವುದಿಲ್ಲ. ಹೀಗಾಗಿ ಕ್ಲಬ್ಬಿಗೊಂದು ಭೇಟಿ ಅನಿವಾರ್ಯ ಕರ್ಮವಾಗಿದೆ.
ಇಂಥ ದಿನಗಳಲ್ಲಿ ಯಾರನ್ನಾದರೂ `ಭೆರಪ್ಪನವರ ಹೊಸ ಕಾದಂಬರಿ ಓದಿದ್ರಾ' ಎಂದು ಕೇಳಿನೋಡಿ. ನಿಮ್ಮನ್ನು ಅವರು ವಿಚಿತ್ರವಾಗಿ ನೋಡುತ್ತಾರೆ. `ನಾನು ಕಾದಂಬರಿಯೆಲ್ಲ ಓದೋಲ್ಲ' ಅಂದುಬಿಡುತ್ತಾರೆ. ಕೆಲವೇ ವರುಷಗಳ ಹಿಂದೆ ಹೊಸದೊಂದು ಕಾದಂಬರಿ ಓದಿಲ್ಲ ಅನ್ನುವುದನ್ನು ತಪ್ಪೊಪ್ಪಿಗೆಯ ಧಾಟಿಯಲ್ಲಿ ಹೇಳುತ್ತಿದ್ದವರು ಈಗೀಗ ಹೆಮ್ಮೆಯಿಂದ ಹೇಳಲು ಆರಂಭಿಸಿದ್ದಾರೆ. ಇದಕ್ಕೆ ಕಾರಣ ಏನು?
ಈ ಪ್ರಶ್ನೆಯನ್ನು ಜಾರ್ಜ್ ಆರ್ವೆಲ್ ಅರ್ಧಶತಮಾನದ ಹಿಂದೆಯೇ ಎತ್ತಿದ್ದ. ಕಾದಂಬರಿಯನ್ನು ಓದುಗ ಹೀಗೆ ಏಕಾಏಕಿಯಾಗಿ ನಿರಾಕರಿಸುವುದಕ್ಕೆ ಕಾರಣ ಅವುಗಳ ಗುಣಮಟ್ಟವಲ್ಲ. ಅಷ್ಟೇ ಕಳಪೆಯಾದ ಬೇರೆ ಕೃತಿಗಳನ್ನು ಜನ ಓದುತ್ತಿದ್ದಾರೆ. ಹೀಗಾಗಿ ಸಾಹಿತ್ಯವನ್ನು ಜನ ನಿರಾಕರಿಸುತ್ತಿದ್ದರೆ ಅದಕ್ಕೆ ಓದುಗರ ತಿಳುವಳಿಕೆ ಅಗಾಧವಾಗಿ ಹೆಚ್ಚಾಗಿದೆ ಅನ್ನುವಂತಿಲ್ಲ. ಸಾಕಷ್ಟು ಒಳ್ಳೆಯ ಕಾದಂಬರಿಯೊಂದನ್ನು ಬರೆಯುವ ವ್ಯಕ್ತಿಗಿಂತ ಇವತ್ತು ಒಂದು ಕಳಪೆ ಧಾರಾವಾಹಿಗೆ ಸಂಭಾಷಣೆ ಬರೆಯುವವನು ಶ್ರೇಷ್ಠ ಅನ್ನಿಸಿಕೊಂಡು ಬಿಡುತ್ತಾನೆ. ತುಂಬ ಒಳ್ಳೆಯ ಸಿನಿಮಾ ಮಾಡುವ ವ್ಯಕ್ತಿಗಿಂತ ಟೀವಿಯಲ್ಲಿ ದಿನಕ್ಕೊಂದು ಕಸದಂಥ ಎಪಿಸೋಡು ಕೊಡುವವನೇ ದೊಡ್ಡವನಾಗುತ್ತಾನೆ. ನಮ್ಮ ಶ್ರೇಷ್ಠತೆಯ ಮಾನದಂಡವೇ ಬದಲಾಗಿದೆ. ಶ್ರೇಷ್ಠತೆ ಅನ್ನುವುದು ಇವತ್ತು ಬಿಡುವು, ಸುಲಭವಾಗಿ ಸಿಗುವುದು ಮತ್ತು ಪುನರಾವರ್ತನೆಗೆ ಸಂದ ಸಂಗತಿ. ನಾವು ಬಿಡುವಿದ್ದಾಗ ತುಂಬ ಸುಲಭವಾಗಿ ನೋಡುವುದಕ್ಕೋ ಓದುವುದಕ್ಕೋ ಸಿಗುವ ಏನೇ ಆದರೂ ಶ್ರೇಷ್ಠ. ದುರ್ಲಭವಾದದ್ದರ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ.
ಇತ್ತೀಚೆಗೆ ಕಾದಂಬರಿಗಳನ್ನು ಬರೆಯುವವರಿಲ್ಲ ಅನ್ನುತ್ತಾರೆ. ವಾರಪತ್ರಿಕೆಗಳಲ್ಲಿ ಅದೇ ಹಳೆಯ `ಮಹಿಳಾ ಲೇಖಕಿ'ಯರ ಮತ್ತು `ಪುರುಷ ಲೇಖಕಿ'ಯರ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟವಾಗುತ್ತವೆ. ಅವು ಪುಸ್ತಕ ರೂಪದಲ್ಲಿ ಹೊರಬಂದಾಗ ಖಾತ್ರಿಯಾಗಿ ಓದುವುದು ಇಬ್ಬರು; ಮುನ್ನುಡಿ ಬರೆಯುವ ಅನಾಮಿಕ ಮತ್ತು ಪತ್ರಿಕೆಗಳಲ್ಲಿ ವಿಮರ್ಶೆ ಬರೆಯುವ ನಿಷ್ಪಾಪಿ. ಸ್ನೇಹಿತರೇ ಈಗ ಕಾದಂಬರಿಗಳನ್ನು ಓದುವುದಿಲ್ಲ. ಕೊಟ್ಟ ಕಾದಂಬರಿಗಳನ್ನು ಮನೆಯಲ್ಲಿಟ್ಟು ಸಿಕ್ಕಾಗೆಲ್ಲ ಅವರ ಗೆಳೆಯರಿಗೆ ` ಮೈ ಫ್ರೆಂಡ್. ಲಿಟರರಿ ಮ್ಯಾನ್. ರೈಟರ ಆಫ್ ಗುಡ್ ಬುಕ್ಸ್ ಎಂದು ಪರಿಚಯಿಸುತ್ತಾರೆ ಅಷ್ಟೇ.
ಒಳ್ಳೆ ಕಾದಂಬರಿಗಳು ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೂ ಸುಲಭ. ಒಳ್ಳೆಯ ಕಾದಂಬರಿಗಳನ್ನು ಬರೆಯುವವರಿಗೆ ತಮ್ಮ ಓದುಗರು ಯಾರೆಂಬುದೇ ಗೊತ್ತಿಲ್ಲ. ಹೀಗಾಗಿ ಅಡ್ರೆಸ್ಸಿಲ್ಲದ ವ್ಯಕ್ತಿಗೆ ಪತ್ರ ಬರೆದಂತೆ, ಕಾದಂಬರಿ ಬರೆಯುವುದೂ ಒಂದು ನಿಷ್ಫಲ ಕ್ರಿಯೆ ಅನ್ನುವುದು ಲೇಖಕರಿಗೂ ಗೊತ್ತಾಗಿಬಿಟ್ಟಿದೆ. ಹೀಗೆ ಓದುಗರೂ ಲೇಖಕರೂ ಕೈಬಿಟ್ಟಿದ್ದರಿಂದ ಕಾದಂಬರಿ ಅನಾಥವಾಗಿದೆ ಅಷ್ಟೇ ಅಲ್ಲ, ತನ್ನ ಘನತೆಯನ್ನೂ ಕಳಕೊಂಡುಬಿಟ್ಟಿದೆ.
ಕಾದಂಬರಿಗಳು ತಾವಾಗಿಯೇ ಸತ್ತವೋ ಅವನ್ನು ಯಾರಾದರೂ ಕೊಲೆಮಾಡಿದರೋ ಅನ್ನುವುದೂ ಪತ್ತೆಯಾಗಬೇಕಿದೆ. ಕಾದಂಬರಿಗಳ ಬೆನ್ನುಡಿ ಬರೆಯುವವರು ಅವುಗಳ ಬೆನ್ನಿಗೆ ಚೂರಿ ಹಾಕುತ್ತಾರೆ ಅನ್ನುವುದನ್ನು ನಿರಾಕರಿಸುವುದು ಕಷ್ಟ. ಮೊನ್ನೆ ಒಂದು ಕಾದಂಬರಿ ಕೈಗೆ ಸಿಕ್ಕಿತು. ಆಮೇಲೆ ಅದು ಆತ್ಮ ಕಥನ ಎನ್ನುವುದು ಗೊತ್ತಾಯಿತು. ಅದರ ಬೆನ್ನುಡಿಯಲ್ಲಿದ್ದ ಬರಹ ಹೀಗಿತ್ತು. ಇದನ್ನು ಎಲ್ಲ ಅಚ್ಚಿನ ತಪ್ಪುಗಳೊಂದಿಗೆ ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ;
` ನಮ್ಮ ಲಕ್ಪ್ಮ್ಜಿ ಬಹು ಸವೇದನಾಶೀಲ ಬರೆಹಗಾರ. ಅವರು ಬದುಕು ಮತ್ತು ಬರೆಹವನ್ನು ಒಂದರ ಪಕ್ಕ ಮತ್ತೊಂದನ್ನು ಇಟ್ಟುಕೊಂಡು ಬದುಕುತ್ತಿದ್ದಾರೆ. ಇದು ಬದುಕಿನ ವಿಶೇಷ. ಅವರ `ಸಂಬೋಳಿ' ಆತ್ಮಕಥನ ಸಹಸ್ರಾರು ವರ್ಷಗಳ ಆದಿದ್ರಾವಿಡ ಜನಾಂಗದ ಪೂರ್ವಸ್ಮೃತಿಯನ್ನೂ ಸಹಸ್ರಾರು ವರ್ಷಗಳ ನಂತರ ಪಡೆದುಕೊಳ್ಳುತ್ತಿರುವ ಬದುಕನ್ನುಏಕಕಾಲಕ್ಕೆ ತನ್ನ ಮುಷ್ಟಿಯಲ್ಲಿ ಹಿಡಿದು ನೋಡುತ್ತದೆ. ಸಂಬೋಳಿ ಓದುತ್ತಿರುವಾಗ ಎಲ್ಲರ ಮನಸ್ಸಿನ ಕನ್ನಡಿಯಲ್ಲೂ ಇದು ಊರುತ್ತದೆ.
ಆತ್ಮಕಥನವೆಂದರೆ ಅದೊಂದು ಬೆಂಕಿಯ ಉಂಡೆ. ಅದೊಂದು ಅಪಾರ ಹಸಿವು. ಇಷ್ಟು ಮಾತ್ರವಲ್ಲ ಅದೊಂದು ತಲ್ಲಣದ ಪರ್ವ ಕೂಡಾ. ಸಂಬೋಳಿ ಆತ್ಮಕಥನ ಇದನ್ನೆಲ್ಲ ತನ್ನ ಬೊಗಸೆಯಲ್ಲಿ ಹಿಡಿದುಕೊಳ್ಳುತ್ತದೆ. ನಾವೂ ನೀವೂ ಈ ಕೃತಿಯೊಳಗೆ ಕೂಡೋಣ. ಕೂಡಿ ಕೂಡುವ ಬದುಕಿನಲ್ಲಿ ನಾವು ಲಯಗೊಳ್ಳೋಣ. ಅಲ್ಲವೇ?'
ಇದನ್ನು ಓದಿದ ನಂತರವೂ ಯಾರಾದರೂ ಪುಸ್ತಕ ಕೊಳ್ಳುವ ಮನಸ್ಸು ಮಾಡಿದರೆ ಅದು ಶತಮಾನದ ಅಚ್ಚರಿ. ಸವೇದನಾಶೀಲ ಬರೆಹಗಾರ ಅನ್ನುವ ಪದವೇ ಓದುವುದರಿಂದ ಆಗುವ ವೇದನೆಯನ್ನು ಸೂಚಿಸುತ್ತದೆ.` ಮನಸ್ಸಿನ ಕನ್ನಡಿಯಲ್ಲಿ ಊರುತ್ತದೆ' ಅನ್ನುವ ಪ್ರಯೋಗವನ್ನೇ ನೋಡಿ. ಮನಸ್ಸಿನಲ್ಲಿ ಊರುತ್ತದೆ ಅಂದರೆ ಸಾಕಿತ್ತು. ಕನ್ನಡಿಯಲ್ಲಿ ಯಾವುದೂ ಊರುವುದಿಲ್ಲ, ಮೂಡಿ ಮರೆಯಾಗುತ್ತದೆ ಅಷ್ಟೇ. ಕೊನೆಯಲ್ಲಿ ಬರುವ `ಕೂಡಿ ಕೂಡುವ ಬದುಕಿನಲ್ಲಿ ನಾವು ಲಯಗೊಳ್ಳೋಣ'ದ ನಂತರ ಅಲ್ಲವೇ? ಎಂದು ಕೇಳಲಾಗಿದೆ. ಲಯಗೊಳ್ಳೋಣ ಅನ್ನುವುದು ಆಹ್ವಾನ. ಅದಾದ ನಂತರ ಅಲ್ಲವೇ ಎಂಬ ಅನುಮಾನ ಯಾಕೆ ಬೇಕಿತ್ತು?
ಈ ಬೆನ್ನುಡಿಯ ಹಿಂಸೆಯನ್ನು ಮರೆತು ನೋಡಿದರೆ ಲಖ್ಮಣ್ ಅವರ ಪುಸ್ತಕ ನಿಜಕ್ಕೂ ಚೆನ್ನಾಗಿದೆ. ಈ ಭಾಷೆಯೇ ಎಷ್ಟು ನವಿರಾಗಿದೆ ನೋಡಿ;
`ನಾನು ದಿನಾಲೂ ಎದ್ಕೂಡ್ಲೆ ಕರೇಗುಟ್ಟಿಗೆ ಹೋಗ್ತಿದ್ದೆ. ಆ ಹೊತ್ತು ಚಡ್ಡೀ ಬಿಚ್ಕೊಂಡು ಕಲ್ಬಂಡೆ ಮರೆಯಾಗೆ ಕುಂತಿದ್ದೆ. ಒಂದ್ಮೊಲ ಕುಣ್ಕಂಡು ಕುಣ್ಕಂಡು ನನ್ನೆದ್ರುಗೇನೆ ಬರ್ತಿತ್ತು. ಎದ್ದು ಒಂದ್ಕಲ್ನ ತಕ್ಕೊಂಡು ಬೀಸ್ದೆ. ಆ ಮೊಲ ಚಂಗ್ ಚಂಗ್ನೆ ಎಗರ್ಕೊಂಡು ಓಡ್ತು. ಅದ್ರಿಂದೇನೆ ಅಷ್ಟು ದೂರ ಓಡ್ದೆ. ಮೊಲ ಮಂಗಮಾಯವಾಯ್ತು.
ಯಾದಾನಾ ಗಿಡ್ದಾಗೆ ತೂರ್ಕಂಡಿರ್ಬೋದಾ ಅನ್ಕೊಂಡು ಮೆಲ್ಲಮೆಲ್ಲಗೆ ಹೆಜ್ಜೆ ಹಾಕ್ತಾ ಹದ್ದಿನ್ಕಣ್ಣಾಗಿದ್ದೆ.
ಅಲ್ಲೊಂದು ಕೊರಕಲ್ನಾಗೆ ನಮ್ಮಟ್ಟಿ ತೋಟಿ ಬೈರಣ್ಣ ಎಮ್ಮೆಕರ್ದ ಚರ್ಮ ಸುಲೀತಿದ್ದ. ನಾನು ಬೆರಗಾಗಿ ಅವುನ್ನೇ ನೋಡ್ತಿದ್ದೆ. ಬೈರಣ್ಣ ಯಾಕೋ ಕತ್ತೆತ್ತಿ ಸುತ್ತಮುತ್ತ ನೋಡ್ದ. ನಾನು ಅವನ ಕಣ್ಗೆ ಬಿದ್ಕೂಡ್ಳೆ ಕೈ ಸನ್ನೆ ಮಾಡ್ದ. ನಾನು ಅವ್ನತ್ರಿಕೆ ಹೋದೆ. ಎಮ್ಮೆ ಕರ್ದ ಕಾಲ್ನ ತೋರಿಸ್ತಾ ಇದ್ನ ಹಿಡ್ಕೋ ಆಜ್ಞಾಪಿಸ್ದ. ಹಿಡ್ಕಂಡೆ. ಒಂದ್ಕಡೆಯಿಂದ ನಾಜೂಕಾಗಿ ಚರ್ಮ ಸುಲೀತಿದ್ದ. ಬೈರಣ್ಣನ ಕೈಚಳಕಕ್ಕೆ ನಾನು ಬೆರ್ಗಾಗಿದ್ದೆ. ಎಲ್ಲಿದ್ವೋ ರಣಹದ್ದುಗಳು ನಮ್ಮ ತಲೆಮೇಲೆ ಕೀ್ ಕೀ್ ಅಂತ ಹಾರಾಡ್ತಿದ್ದೋ. ಬೈರಣ್ಣ ಕತ್ತೆತ್ತಿ ಅವ್ಗುಳ್ನ ನೋಡಿ ಇವ್ರಮ್ಮು್ ಹದ್ಗುಳ್ನಾ...'
ಇದನ್ನು ಓದಿ ಸುಖಿಸುವವರಿಗೆ ಸ್ಪಂದಿಸುವವರಿಗೆ ಅನುಭೂತಿ ಹೊಂದುವವರಿಗೆ `ಬದುಕು ಮತ್ತು ಬರೆಹವನ್ನು ಒಂದರ ಪಕ್ಕ ಮತ್ತೊಂದನ್ನು ಇಟ್ಟುಕೊಂಡು...' ಇತ್ಯಾದಿಗಳು ಬೇಕಾ?

Saturday, February 9, 2008

ಹಾಗಿ­ದ್ದರೆ ನಾನೇಕೆ ಓದ­ಬೇಕು?

ನಾನೇಕೆ ಓದು­ತ್ತೇನೆ?
ಈ ಪ್ರಶ್ನೆಗೆ ಇವತ್ತು ಉತ್ತರ ಹುಡು­ಕು­ವುದು ಕಷ್ಟ. ಕೇವಲ ಖುಷಿ­ಗೋ­ಸ್ಕರ ಓದು­ವು­ದಕ್ಕೆ ಇವತ್ತು ಯಾರಿಗೂ ಪುರು­ಸೊ­ತ್ತಿಲ್ಲ. ಓದು­ವು­ದ­ರಿಂದ ವ್ಯಕ್ತಿತ್ವ ವಿಕ­ಸ­ನ­ಗೊ­ಳ್ಳು­ತ್ತದೆ ಅನ್ನು­ವು­ದನ್ನು ಯಾರೂ ನಂಬು­ವು­ದಿಲ್ಲ. ಓದು­ವು­ದ­ರಿಂದ ಜೀವ­ನ­ಪ್ರೀತಿ ಹೆಚ್ಚಾ­ಗು­ತ್ತದೆ ಎನ್ನು­ವ­ವರು ಸಿಗು­ವು­ದಿಲ್ಲ. ಮನ­ರಂ­ಜ­ನೆ­ಗಾಗಿ ಬೇರೆ ಮಾಧ್ಯ­ಮ­ಗ­ಳಿವೆ.ನ­ಮಗೆ ಬೇಕಾ­ದದ್ದು ಮಾಹಿತಿ ಮಾತ್ರ ಅನ್ನು­ವ­ವರು ಹೆಚ್ಚಾ­ಗು­ತ್ತಿ­ದ್ದಾರೆ. ಹೀಗಾಗಿ ಒಂದು ಜೀವ­ನ­ಚ­ರಿ­ತ್ರೆ­ಯನ್ನೋ ಒಂದು ಕಾದಂ­ಬ­ರಿ­ಯನ್ನೋ ಇಡಿ­ಯಾಗಿ ಓದಿ ಸುಖಿ­ಸುವ ಅಗತ್ಯ ಯಾರಿಗೂ ಕಂಡು­ಬ­ರು­ತ್ತಿಲ್ಲ.
ಹಾಗೆ ಹೇಳಿ­ದರೆ ಇದನ್ನು ಕೇವಲ ವಾದ­ಕ್ಕಾಗಿ ಹೇಳ­ಲಾ­ಗು­ತ್ತಿದೆ ಎಂದು ವಾದಿ­ಸು­ವ­ವ­ರಿ­ದಿ­ದ್ದಾರೆ. ಅಂಕಿ-ಅಂ­ಶ­ಗ­ಳನ್ನು ಕೊಟ್ಟು ಇಂತಿಷ್ಟು ಮಂದಿ ಪುಸ್ತಕ ಓದೇ ಓದು­ತ್ತಾರೆ ಎಂದು ಹೇಳು­ವ­ವ­ರಿ­ದ್ದಾರೆ. ಆದರೆ ಅಂಕಿ-ಅಂ­ಶ­ಗ­ಳಿ­ಗಿಂತ ಮುಖ್ಯ­ವಾಗಿ ಗಮ­ನಿ­ಸ­ಬೇ­ಕಾದ ಅಂಶ ಇನ್ನೊಂ­ದಿದೆ. ಅದು ಇವ­ತ್ತಿನ ಓದು­ಗ­ರಿಗೆ ಇಷ್ಟ­ವಾ­ಗುವ ಸಾಹಿತ್ಯ ಸೃಷ್ಟಿ­ಯಾ­ಗು­ತ್ತಿ­ದೆಯೇ ಎನ್ನುವ ಪ್ರಶ್ನೆ.
ಕೆ. ಎ್. ನರ­ಸಿಂ­ಹ­ಸ್ವಾಮಿ ತೀರಿ­ಕೊಂ­ಡಾಗ ಅವರ ಹಾಡು­ಗಳ ಮೂಲ­ಕವೇ ಅವ­ರಿಗೆ ಶ್ರದಾ­್ಧಂ­ಜಲಿ ಅರ್ಪಿ­ಸುವ ಕಾರ್ಯ­ಕ್ರ­ಮ­ವೊಂದು ನಡೆ­ಯಿತು. ಅಲ್ಲಿಗೆ ಬಂದಿ­ದ್ದ­ವ­ರೆಲ್ಲ ಮಧ್ಯ­ವ­ಯ­ಸ್ಕರು; ಅವ­ರನ್ನು ಕರೆ­ತ­ರ­ಬೇ­ಕಾದ ಅನಿ­ವಾ­ರ್ಯಕ್ಕೆ ಬಂದಿದ್ದ ಬೆರ­ಳೆ­ಣಿ­ಕೆಯ ತರುಣ-ತ­ರು­ಣಿ­ಯರು. ಕೆ. ಎ್.ನ. ಮೂರು ತಲೆ­ಮಾ­ರಿನ ಜವ್ವ­ನಿ­ಗ­ರನ್ನೂ ದಂಪ­ತಿ­ಗ­ಳನ್ನೂ ಆಪ್ತ­ವಾಗಿ ಆವ­ರಿ­ಸಿ­ಕೊಂ­ಡ­ವರು. ಅವರು ಇವ­ತ್ತಿನ ಏರು­ಜ­ವ್ವ­ನೆ­ಯ­ರಿ­ಗೇಕೆ ಇಷ್ಟ­ವಾ­ಗು­ವು­ದಿಲ್ಲ?
ನವ­ತ­ರುಣ-ತ­ರು­ಣಿ­ಯರ ಬಳಿ ಉತ್ತರ ಸಿದ­್ಧ­ವಾ­ಗಿದೆ; `ಕೆ­ಎ­್ನ ನಿಮ್ಮ ಕಾಲಕ್ಕೇ ಸರಿ. ಅವರು ಬರೆ­ದ­ದ್ದನ್ನು ನಾವೂ ಓದಿ ಹತ್ತಿ­ರ­ವಾ­ಗೋ­ದಕ್ಕೆ ಯತ್ನಿ­ಸಿ­ದೆವು. ಆದರೆ ನಮ­ಗ್ಯಾಕೋ ಅದು ರುಚಿ­ಸಲೇ ಇಲ್ಲ. ತುಂಬ ಔ್­ಡೇ­ಟೆ್ ಕವಿ ಅವರು. ಅಂಥ ಸೂಕ್ಪ್ಮ ಸಂವೇ­ದ­ನೆ­ಗಳು ಈಗ ಯಾರಲ್ಲೂ ಇಲ್ಲ.
ಅಂದರೆ?
ತಾರು­ಣ್ಯದ ಸಂವೇ­ದ­ನೆ­ಗಳೂ ಬದ­ಲಾ­ಗಿ­ಹೋ­ಗಿ­ದ್ದಾವಾ?
`ಹೌದು. ನಮ್ಮೂರ ಬಂಡಿ­ಯಲಿ ನಿಮ್ಮೂರ ಬಿಟ್ಟಾಗ ಓಡಿ­ದುದು ದಾರಿ ಬೇಗ' ಅಂತ ಬರೆ­ದಿ­ದ್ದಾರೆ. ಈಗ ಬಂಡಿ ಎಲ್ಲಿದೆ? ಕಾರಲ್ಲಿ ಝಮ್ಮಂತ ಹೋಗಿ ಬರು­ತ್ತೇವೆ? ಬಸ್ಸಲ್ಲಿ ಚೆನ್ನಾಗಿ ನಿದ್ದೆ ಹೊಡೀತಾ ಊರಿಗೆ ಹೋಗು­ತ್ತೇವೆ'.
ಅದೆಲ್ಲ ಸರಿ. ಕಾರನ್ನೋ ಬಸ್ಸನ್ನೋ ಬಂಡಿ ಅಂದು­ಕೊ­ಳ್ಳ­ಬ­ಹು­ದಲ್ಲ?
`ಆ­ದರೆ ಏರುತ ಇಳಿ­ಯುತ ರಾಯರು ಬಂದರು ದೂರದ ಊರಿಂದ. ಕಣ್ಣನು ಕಡಿ­ದರು ನಿದ್ದೆಯು ಬಾರದು ಪದು­ಮಳು ಒಳ­ಗಿಲ್ಲ ಅಂದರೆ ನಮಗೆ ಹ್ಯಾಗೆ ಅರ್ಥ­ವಾ­ಗ­ಬೇಕು? ಈಗ ಆಕೆ ಪೀರಿ­ಯ­್‌ಸ­ನ­ಲ್ಲಿ­ದ್ದರೂ ಜೊತೆಗೇ ಇರು­ತ್ತಾಳೆ. ನಮ್ಮ ಹತ್ತಿ­ರವೇ ನ್ಯಾ್­ಕಿ್ ತರಿ­ಸು­ತ್ತಾಳೆ.'
ಅದೆಲ್ಲ ನಿಮ್ಮಿ­ಬ್ಬರ ನಡು­ವಿನ ಹೊಂದಾ­ಣಿ­ಕೆಗೆ ಸಂಬಂ­ಧಿ­ಸಿದ್ದು. ಆದರೆ ನರ­ಸಿಂ­ಹ­ಸ್ವಾಮಿ ಬರೆ­ದಂಥ ಮೃದು­ವಾದ ಭಾವ­ನೆಗೆ ಅವ­ಕಾ­ಶವೇ ಇಲ್ಲ ಅಂತೀರಾ? ಯಾವತ್ತೂ ನಿಮಗೆ ಹಾಗೆಲ್ಲ ಅನ್ನಿ­ಸಲೇ ಇಲ್ಲವೇ?
`ಇಲ್ಲ. ಮೊದಲ ದಿನ ಮೌನ... ಅಳುವೇ ತುಟಿಗೆ ಬಂದಂತೆ.. ಅನ್ನುವ ಸಾಲು ನನಗೆ ಹೇಗೆ ಹೊಂದ­ಬೇಕು? ನನ್ನ ಹತ್ತಿರ ಮೊಬೈ­ಲಿದೆ. ಗಂಡನ ಮನೆಗೆ ಬಂದ ತಕ್ಪಣ ಫೋ್ ಮಾಡಿ ಅಮ್ಮನ ಹತ್ತಿರ ಮಾತಾ­ಡಿದೆ. ಮತ್ತೆ­ರಡು ಸಾರಿ ತಂಗಿ ಫೋ್ ಮಾಡಿದ್ಳು. ಸುಮ್ನೆ ತರಲೆ ಮಾಡ್ತಾಳೆ ಅಂತ ರಿಸೀ್ ಮಾಡ್ಲಿಲ್ಲ. ತುಂಟ ಮೆಸೇ್ ಕಳಿ­ಸಿ­ದ್ದಾಳೆ'
`ನ­ಥಿಂ್ ಈ್ ಸೋ ಸೆಂಟಿ­ಮೆಂ­ಟ್. ಸುಮ್ನೆ ಹುಡು­ಗರು ಟೆನ್ಷ್ ಮಾಡ್ಕೋ­ತಾರೆ. ಹುಡು­ಗಿ­ಯನ್ನು ತವ­ರಿಗೆ ಕಳಿ­ಸು­ವಾದ ಅಳೋದು ಕೇವಲ ಫಾರ್ಮಾ­ಲಿಟಿ ಅಷ್ಟೇ. ಒಬ್ಬಳೇ ಮಗ­ಳೆಂದು ನೀವೇಕೆ ಕೊರ­ಗು­ವಿರಿ? ಒಬ್ಬಳೇ ಮಡದಿ ಎನಗೆ? ಹಬ್ಬ­ದೂ­ಟದ ನಡುವೆ ಕಣ್ಣೀರ ಸುರಿ­ಸ­ದಿರಿ, ಸುಮ್ಮ­ನಿರಿ ಮಾವ­ನ­ವರೇ ಎಂಬ ಮಾತು ನಮ­ಗಂತೂ ಹೊಂದೋಲ್ಲ ಬಿಡಿ' ಅನ್ನು­ತ್ತಾರೆ ನವ­ದಂ­ಪ­ತಿ­ಗಳು.
ಅಲ್ಲಿಗೆ ಸಾಹಿತ್ಯ ತನ್ನ ಮಾಂತ್ರಿ­ಕತೆ ಕಳ­ಕೊಂ­ಡಿ­ದೆಯಾ? ಅಥವಾ ಕಳೆದ ಹತ್ತು ದಶ­ಕ­ಗ­ಳಲ್ಲಿ ನಿಧಾ­ನ­ವಾಗಿ ಆದ ಬದ­ಲಾ­ವ­ಣೆ­ಯನ್ನು ಮೀರಿ­ಸು­ವಂಥ ಬದ­ಲಾ­ವಣೆ ದಿಡೀ­ರನೆ ಸಂಭ­ವಿ­ಸಿ­ದೆಯಾ? ಅದನ್ನು ಹಿಡಿ­ದಿ­ಡುವ ಸಾಹಿತ್ಯ ನಮ್ಮಲ್ಲಿ ಸೃಷ್ಟಿ­ಯಾ­ಗು­ತ್ತಿಲ್ಲ ಅನ್ನೋ­ಣವೇ? ಹಾಗಿ­ದ್ದರೆ ಇದೇ ಹುಡುಗ-ಹು­ಡು­ಗಿ­ಯರು ಮೆಚ್ಚಿ ಗುನು­ಗು­ನಿ­ಸುವ ಇಂಗ್ಲಿಷ್ ಪಾಪ್ ಸಾಂಗು­ಗ­ಳಲ್ಲಿ ಅಂಥ ಸಾಹಿತ್ಯ ಏನಿದೆ?
ಅದ­ಕ್ಕೋ­ಸ್ಕ­ರವೇ ಒಂದು ಕೆಸೆಟ್ ತರಿಸಿ ಕಷ್ಟ­ಪಟ್ಟು ಕೇಳಿ­ದರೆ ಅದ­ರ­ಲ್ಲಿ­ದ್ದದ್ದು ಇಷ್ಟೇ;
If I had to live my life without you near me
The days would all be empty
The nights would seem so long
With you I see forever oh so clearly
I might have been in love before
But it never felt this strong
Our dreams are young and we both know
They'll take us where we want to go
Hold me now, touch me now
I don't want to live without you

ಈ ಸರಳ ಸಾಲು­ಗಳೇ ಇವ­ತ್ತಿನ ಇಂಗ್ಲಿಷ್ ಬಲ್ಲ ತರುಣ-ತ­ರು­ಣಿ­ಯರ ಪ್ರೇಮ­ಗೀತೆ. ಇದ­ಕ್ಕಿಂತ ಸಾವಿರ ಪಾಲು ಉತ್ತ­ಮ­ವಾದ ಹಾಡನ್ನು ನರ­ಸಿಂ­ಹ­ಸ್ವಾಮಿ, ಬೇಂದ್ರೆ, ಕುವೆಂಪು ಬರೆ­ದಿ­ದ್ದಾರೆ ಅಂದರೆ ಒಪ್ಪು­ವು­ದಕ್ಕೆ ಹುಡು­ಗರು ತಯಾ­ರಿಲ್ಲ. ಅವ­ರೆಲ್ಲ ಬರೆ­ದಿ­ರ­ಬ­ಹುದು, ಅದರೆ ಅದನ್ನು ನಮಗೆ ಬೇಕಾದ ಫಾರ್‌­ನಲ್ಲಿ ಪ್ರೆಸೆಂಟ್ ಮಾಡು­ವುದೂ ಮುಖ್ಯ. ಜಾರ್ಜ್ ಬೆನ್ಸ­ನ್ ಹಾಡು ಕೇಳು­ತ್ತಿ­ದ್ದರೆ ನನ­ಗದು ಪೂರ್ತಿ­ಯಾಗಿ ಅರ್ಥ­ವಾ­ಗು­ತ್ತದೆ. ಅದು ನನ್ನ ಭಾಷೆ­ಯ­ಲ್ಲಿದೆ ಎನ್ನು­ತ್ತಾರೆ ಯೌವ­ನಿ­ಗರು.
ಅದನ್ನೂ ತಳ್ಳಿ­ಹಾ­ಕು­ವಂ­ತಿಲ್ಲ. ಈಗ ಸ್ನೇಹ ಮತ್ತು ಪ್ರೀತಿ ದೇಶ­ಭಾ­ಷೆ­ಗಳ ಎಲ್ಲೆ ದಾಟಿದೆ. ಜಾತಿಯ ಹಂಗನ್ನು ಮೀರಿದೆ. ಹೀಗಾಗಿ ಸಾರ್ವ­ತ್ರಿ­ಕ­ವಾದ ಒಂದು ಭಾಷೆ ಪ್ರೇಮಿ­ಗ­ಳಿಗೆ ಬೇಕಾ­ಗಿದೆ. ಕನ್ನ­ಡ­ದಲ್ಲಿ ಪ್ರೇಮಿ­ಸ­ಲಿಕ್ಕೆ ಹೊರ­ಡುವ ಹುಡುಗ ತನ್ನ ಮಿತಿ­ಯೊ­ಳಗೇ ಇರ­ಬೇ­ಕಾ­ಗು­ತ್ತದೆ. ಕನ್ನ­ಡದ ಹುಡುಗ ಪಂಜಾ­ಬಿನ ಹುಡು­ಗಿ­ಯನ್ನು ಪ್ರೀತಿ­ಸಿ­ದರೆ ಇಬ್ಬ­ರಿಗೂ ಅರ್ಥ­ವಾ­ಗುವ ಒಂದು ಭಾಷೆ­ಯಲ್ಲಿ ಅನು­ಸಂ­ಧಾನ ಬೇಕಾ­ಗು­ತ್ತದೆ. ನಮ್ಮ ಶಿಕ್ಪಣ ಆ ಇಬ್ಬ­ರಿಗೂ ಅನು­ಕೂ­ಲ­ವಾ­ಗುವ ಇಂಗ್ಲಿ­ಷನ್ನು ಕೊಟ್ಟು­ಬಿ­ಟ್ಟಿದೆ. ಅಲ್ಲಿಗೆ ಪಂಜಾ­ಬಿಯೂ ಸಾಯು­ತ್ತದೆ; ಕನ್ನ­ಡವೂ ಸಾಯು­ತ್ತದೆ. ಅವ­ರಿ­ಬ್ಬರೂ ಇಂಗ್ಲಿ­ಷಲ್ಲಿ ಮಾತಾ­ಡು­ತ್ತಾರೆ. ಮಕ್ಕಳು ಅರ್ಧ ಪಂಜಾಬಿ, ಅರ್ಧ ಇಂಗ್ಲಿಷ್ ಕಲಿ­ಯು­ತ್ತವೆ. ಆದರೆ ಇಂಗ್ಲಿಷ್ ಮಾತ­ನಾ­ಡು­ತ್ತವೆ.
ಇದ­ನ್ನೆಲ್ಲ ಮೀರಿಯೂ ಕನ್ನಡ ಬದು­ಕು­ವಂತೆ ಮಾಡು­ವುದು ಹೇಗೆ? ಕನ್ನ­ಡ­ದಲ್ಲಿ ಅರ್ಥ­ಪೂರ್ಣ ಸಾಹಿತ್ಯ ಬಂದಿದೆ, ಬರು­ತ್ತಿದೆ ಎಂದು ನಂಬಿ­ಸು­ವುದು ಹೇಗೆ? ಪ್ರೇಮ­ಕ್ಕಿಂತ ಭಾಷೆ ದೊಡ್ಡದು ಎಂದು ಒಪ್ಪಿ­ಸುವ ಶಕ್ತಿ ಯಾರಿ­ಗಿದೆ?
ಈ ಹಿನ್ನೆ­ಲೆ­ಯಲ್ಲಿ `ನಾ­ನೇಕೆ ಓದು­ತ್ತೇನೆ' ಎಂಬ ಪ್ರಶ್ನೆಗೆ ಅರ್ಥ ಬರು­ತ್ತದೆ. ಒಬ್ಬ ಕನ್ನ­ಡದ ಬರ­ಹ­ಗಾರ ಓದು­ವು­ದನ್ನು ಬರೆ­ಯು­ವು­ದನ್ನು ಇವತ್ತು ಮತ್ತೊಬ್ಬ ಓದು­ತ್ತಾನೆ ಅನ್ನುವ ನಂಬಿ­ಕೆ­ಯಿಲ್ಲ. ಹೀಗಾಗಿ ಒಬ್ಬನೇ ಸಾಹಿ­ತಿ­ಯನ್ನು ಓದುವ ಇಬ್ಬರು ಮುಖಾ­ಮು­ಖಿ­ಯಾ­ಗು­ವು­ದಿಲ್ಲ. ಯಾಕೆಂ­ದರೆ ಎಂಥ ಶ್ರೇಷ್ಠ ಕೃತಿಯೇ ಆದರೂ ಸಾವಿರ ಪ್ರತಿ ಖರ್ಚಾ­ಗುವ ಹೊತ್ತಿಗೆ ಏದು­ಸಿ­ರು­ಬಿ­ಡು­ತ್ತದೆ. ಐದು ಕೋಟಿ ಕನ್ನ­ಡಿ­ಗರ ಪೈಕಿ ಒಂದು ಕಾದಂ­ಬ­ರಿ­ಯನ್ನು ಕೇವಲ ಒಂದು ಸಾವಿರ ಮಂದಿ ಓದು­ತ್ತಾರೆ. ಅಂದರೆ ಒಟ್ಟು ಜನ­ಸಂ­ಖ್ಯೆಯ ಶೇಕಡಾ .002 ಮಂದಿಗೆ ಮಾತ್ರ ಸಾಹಿತ್ಯ ಬೇಕು!
ಹಾಗಿ­ದ್ದರೆ ನಾನೇಕೆ ಓದ­ಬೇಕು?

Friday, February 8, 2008

ಹೊರಗುಳಿದವನ ಒಳಗುದಿ ಮತ್ತು ಖಂಡಾಂತರದ ಅಖಂಡ ಕನವರಿಕೆ

ಅವನು, ಹೆಂಡತಿಯಿಂದ ಯಾವತ್ತೋ ವಿಚ್ಚೇದನ ಪಡಕೊಂಡಿರುವ ಐವತ್ತೆರಡರ ಅವನು, ತನ್ನ ವಯಸ್ಸಿಗೆ, ತನ್ನ ಸ್ಥಿತಿಗೆ ಸಂಗಸುಖದ ಸಮಸ್ಯೆಯನ್ನು ಸರಳವಾಗಿಯೇ ಬಗೆಹರಿಸಿಕೊಂಡುಬಿಟ್ಟಿದ್ದ. ಪ್ರತಿ ಗುರುವಾರ ಮಧ್ಯಾಹ್ನ ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಾನೆ. ವಿಂಡ್ಸ್ ಮ್ಯಾನ್ಷನ್ನಿನ ಡೋರ್ ನಂ. 113ರ ಮುಂದೆ ನಿಂತು ಸರಿಯಾಗಿ ಎರಡು ಗಂಟೆಗೆ ಕಾಲಿಂಗ್ ಬೆಲ್ ಒತ್ತುತ್ತಾನೆ. ತನ್ನ ಹೆಸರು ಪಿಸುಗುಡುತ್ತಾನೆ. ಬಾಗಿಲು ತೆರೆಯುವವಳು ಸುರೈಯಾ. ಆತ ನೇರವಾಗಿ ಹಿತವಾದ ಪರಿಮಳದ, ಮೃದುಬೆಳಕಿನ ಬೆಡ್ರೂಮಿಗೆ ಹೋಗಿ ಬೆತ್ತಲಾಗುತ್ತಾನೆ. ಸುರೈಯಾ ಬಾತುರೂಮಿನಿಂದ ಹೊರಬಂದು ತನ್ನ ನೈಟಿಯನ್ನು ಕಿತ್ತೊಗೆದು ಅವನ ಪಕ್ಕ ಪವಡಿಸುತ್ತಾಳೆ. `ನನ್ನನ್ನು ಮಿಸ್ ಮಾಡ್ಕೊಂಡ್ಯಾ?' ಕೇಳುತ್ತಾಳೆ. `ಸದಾ ಮಿಸ್ ಮಾಡ್ಕೋತಿರ್ತೀನಿ' ಅನ್ನುತ್ತಾನೆ ಆತ. ಅವಳ ಸೂರ್ಯಕಿರಣಗಳು ಸೋಕಿದ ಗುರುತಿಲ್ಲದ ಜೇನುಬಣ್ಣದ ಮೈಯನ್ನೊಮ್ಮೆ ಮೃದುವಾಗಿ ಸವರುತ್ತಾನೆ. ಆಕೆ ಮೈಚಾಚುತ್ತಾಳೆ. ಅವಳ ಮೊಲೆಗಳನ್ನು ಮುದ್ದಿಸುತ್ತಾನೆ. ಅವರು ಪ್ರೀತಿ ಮಾಡುತ್ತಾರೆ.
ಸುರೈಯಾ ಎತ್ತರದ ತೆಳ್ಳಗಿನ ಹೆಣ್ಣು. ಉದ್ದಾದ ಕಪ್ಪಗಿನ ಕುರುಳು, ತೇವ ಕಂಗಳು. ಲೆಕ್ಕಪ್ರಕಾರ ಅವಳ ಅಪ್ಪನ ವಯಸ್ಸಾಗಿದೆ ಆತನಿಗೆ. ಆದರೆ ಲೆಕ್ಕಪ್ರಕಾರ ಒಬ್ಬಾತ ಹನ್ನೆರಡನೇ ವಯಸ್ಸಿಗೆ ಅಪ್ಪನಾಗಬಹುದು ಕೂಡ. ಆತ ಅವಳ ಕೂಡ ಒಂದು ವರುಷದಿಂದ ವಾರಕ್ಕೊಂದು ದಿನ ಕಳೆಯುತ್ತಾನೆ. ಅವನಿಗೆ ಅವಳಲ್ಲಿ ತೃಪ್ತಿ ಸಿಗುತ್ತದೆ. ವಾರವೆಂಬ ಮರಳುಗಾಡಿನ ನಡುವೆ ಅವಳೊಂದು ಓಯಸಿಸ್.
..... ತೊಂಬತ್ತು ನಿಮಿಷಗಳ ಸೆಷನ್ನಿಗೆ ಅವರು 400 ಡಾಲರ್ ಕೊಡುತ್ತಾನೆ. ಅದರಲ್ಲಿ ಅರ್ಧದಷ್ಟು ಆಕೆಯನ್ನು ನೋಡಿಕೊಳ್ಳುವ ಸಂಸ್ಥೆಗೆ ಹೋಗುತ್ತದೆ. ಸಂಸ್ಥೆಗೆ ಅಷ್ಟೊಂದು ಹೋಗುತ್ತದಲ್ಲ ಎನ್ನುವ ದುಃಖ ಅವನಿಗಿದೆ. ಆದರೆ ಆ ಫ್ಲಾಟ್ ಅವರಿಗೆ ಸೇರಿದ್ದು. ಒಮ್ಮೊಮ್ಮೆ ಆಕೆಯನ್ನು ಬೇರೆಲ್ಲಾದರೂ ಸಿಗೋಣ ಎನ್ನಬೇಕು ಅನ್ನಿಸುತ್ತದೆ. ಆದರೆ ಹೆಣ್ಣಿನೊಡನೆ ರಾತ್ರಿಯಿಡೀ ಕಳೆಯಬಹುದಾದರೂ ಹಗಲಲ್ಲಿ ಆಕೆಯನ್ನು ಸಹಿಸಿಕೊಳ್ಳೋದು ಕಷ್ಟ. ಅದು ಅವನ ಸ್ವಭಾವ.
ಸ್ವಭಾವಕ್ಕೆ ದಾಸನಾಗು. ಅದವನ ಸಿದಾ್ಧಂತವಲ್ಲ. ಅದನ್ನು ಸಿದಾ್ಧಂತ ಎಂದು ಕರೆದು ಗೌರವಿಸೋದಕ್ಕೆ ಅವನಿಗೆ ಇಷ್ಟವಿಲ್ಲ. ಅದು ಕಾನೂನು ಅಷ್ಟೇ.
ಅವನು ಆರೋಗ್ಯವಂತ. ಸ್ಪಷ್ಟವಾಗಿ ಯೋಚಿಸಬಲ್ಲ. ತನ್ನ ಆದಾಯದ ಮಿತಿಯಲ್ಲಿ ಬದುಕೋದು ಗೊತ್ತಿದೆ. ಸುಖಿಯಾಗಿದ್ದಾನೋ? ಹೌದು ಎನ್ನಬಹುದು. ಹಾಗಂತ ಅವನು ನಂಬಿದ್ದಾನೆ. ಆದರೆ ಈಡಿಪ್ನ ಕೊನೆಯ ಮಾತು ಅವನಿಗೆ ನೆನಪಿದೆ; ಸಾಯುವ ತನಕ ಯಾರೂ ಸುಖಿಯಲ್ಲ.
ಆ ಬೆಡ್ ರೂಮಿನಾಚೆಗೆ ಸುರೈಯಾಳ ಬದುಕೇನು ಅನ್ನೋದು ಅವನಿಗೆ ಗೊತ್ತಿಲ್ಲ. ಸುರೈಯಾ ಅವಳ ನಿಜವಾದ ಹೆಸರಲ್ಲ ಅನ್ನುವುದು ಗೊತ್ತಿದೆ. ಅವಳು ಮಕ್ಕಳ ತಾಯಿ ಅನ್ನುವುದು ಅವಳ ಸಂಗದಲ್ಲಿ ಅವನ ಅರಿವಿಗೆ ಬಂದಿದೆ. ಆಕೆಯ ವೃತ್ತಿ ಅದಲ್ಲ ಎಂಬ ಕಲ್ಪನೆಯೂ ಇದೆ. ಆಕೆ ವಾರಕ್ಕೆ ಒಂದೊ ಎರಡೋ ಮಧ್ಯಾಹ್ನ ಹೀಗೆ ದುಡಿಯುವ ನಗರದ ಹೊರವಲಯದ ಗೃಹಿಣಿಯಾಗಿರಬಹುದು ಅಂದುಕೊಂಡಿದ್ದಾನೆ.
ಆತ ಕೇ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸ್.ಮೂರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾನೆ. ಅವುಗಳು ಸಾಹಿತ್ಯವಲಯದಲ್ಲಿ ಸಂಚಲನೆಯನ್ನಲ್ಲ, ಸಣ್ಣ ಕಂಪನವನ್ನು ಉಂಟು ಮಾಡಲಿಲ್ಲ. ಸದ್ಯಕ್ಕೆ ಬೈರ್ನ ಇಟಲಿಯ ದಿನಗಳ ಬಗ್ಗೆ ಗೀತನಾಟಕ ಬರೆಯುತ್ತಿದ್ದಾನೆ.
ಊಟ ಕೊಡುತ್ತದೆ ಅನ್ನುವ ಕಾರಣಕ್ಕೆ ಆತ ಪಾಠ ಮಾಡುತ್ತಾನೆ. ಬೋಧನೆ ವಿನಯವನ್ನು ಕಲಿಸುತ್ತದೆ ಎಂದು ನಂಬಿದ್ದಾನೆ. ವ್ಯಂಗ್ಯವಾಗಿ ಹೇಳುವುದಾದರೆ ಕಲಿಸುವವನು ತುಂಬ ಪ್ರಬುದ್ಧವಾದ ಪಾಠಗಳನ್ನು ಕಲಿಯುತ್ತಾನೆ. ಕಲಿಯಲಿಕ್ಕೆಂದು ಬಂದವನು ಏನನ್ನೂ ಕಲಿಯೋದಿಲ್ಲ ಎಂಬುದು ಅವನ ನಂಬಿಕೆಗಳಲ್ಲೊಂದು.
ತನ್ನನ್ನು ಸುಖವಾಗಿ ಇಡುವುದಕ್ಕೆ ವಾರಕ್ಕೆ ತೊಂಬತ್ತು ನಿಮಿಷಗಳ ಸ್ತ್ರೀಸಂಗ ಸಾಕಲ್ಲ ಎಂದು ಯೋಚಿಸಿದಾಗ ಅವನಿಗೇ ಆಶ್ಚರ್ಯವಾಗುತ್ತದೆ. ಹೆಂಡತಿ ಬೇಕು, ಮನೆ ಬೇಕು, ಮದುವೆಯೆಂಬ ವ್ಯವಸ್ಥೆ ಬೇಕು ಎಂದೆಲ್ಲ ಒಮ್ಮೆ ಯೋಚಿಸಿದ್ದವನು ನಾನೇನಾ ಎಂದಾತ ಬೆರಗಾಗುತ್ತಾನೆ. ತನ್ನ ಅಗತ್ಯಗಳು ಚಿಟ್ಟೆಯಷ್ಟು ಹಗುರವಾಗಿದ್ದವಲ್ಲ ಅನ್ನಿಸುತ್ತದೆ.
********
ಇವು ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಮ್ಯಾಕವೆಲ್ ಕುಟ್ಸೀ ಬರೆದ ಡಿಸ್ ಗ್ರೇಸ್' ಕಾದಂಬರಿಯ ಮೊದಲ ಅಧ್ಯಾಯದ ತುಣುಕುಗಳು. ನೆನಪು ಅವರಿಬ್ಬರ ನಡುವೆ ಜ್ವರದಂತೆ ಜೋತುಬಿದ್ದಿತ್ತು ಎಂಬ ಪ್ರಖರವಾದ ರೂಪಕಗಳು ಈ ಕಾದಂಬರಿಯಲ್ಲಿ ಮೇಲಿಂದ ಮೇಲೆ ಬರುತ್ತವೆ. ಹುಡುಗರ ಬಯಕೆ ನೋಟದ ಭಾರ ಹುಡುಗಿಯರಿಗೆ ಬಹುಬೇಗ ಅರ್ಥವಾಗುತ್ತದೆ ಎಂಬ ಸೂಕ್ಪ್ಮ ಗ್ರಹಿಕೆಗಳೂ ಇಲ್ಲಿವೆ. ಇದೇ ಕೃತಿಗೆ 1999ರಲ್ಲಿ ಬೂಕ್ ಪ್ರಶಸ್ತಿಯೂ ಬಂದಿದೆ.
ಮೂವತ್ತನಾಲ್ಕನೇ ವಯಸ್ಸಿಗೆ ಬರೆಯುವುದಕ್ಕೆ ಶುರುಮಾಡಿದ ಕುಟ್ಸೀ ಜಗತ್ಪ್ರಸಿದ್ಧನಾದದ್ದು 1980ರಲ್ಲಿ ಹೊರಬಂದ ವೇಟಿಂಗ್ ಫಾರ್ ಬಾರ್ಬೇರಿಯನ್ಸ್ ಕಾದಂಬರಿಯ ಮೂಲಕ. ಎರಡು ಬಾರಿ ಆತ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಆತ ಬರೆಯುತ್ತಿರುವ ಕೃತಿಯ ಹೆಸರು ` ಎಲಿಜಬೆತ ಕಾಸ್ಟೆಲೋ; ಎಂಟು ಪಾಠಗಳು, 2003. ಅದು ಕಾದಂಬರಿಯೋ ಪ್ರಬಂಧ ಸಂಕಲವೋ ಅನ್ನುವುದನ್ನು ಆತನೇ ಇನ್ನೂ ತೀರ್ಮಾನಿಸಿದಂತಿಲ್ಲ.
******
ಕುಟ್ಸೀ ಮೂಲತಃ ಕಾಫ್ಕಾ ತರಹದ ಬರಹಗಾರ. ಅವನ ಕತೆಗಳಲ್ಲಿ ಒಬ್ಬ ವ್ಯಕ್ತಿ ವಿನಾಕಾರಣ ಶಿಕ್ಪೆ ಅನುಭವಿಸುತ್ತಲೇ ಇರುತ್ತಾನೆ. ಡಿಸ್ ಗ್ರೇಸ್' ನಲ್ಲೂ ಅಷ್ಟೇ ತಾನು ಮಾಡಿದ್ದು ತಪ್ಪು ಎಂದು ಖಾತ್ರಿಯಾಗದವನಿಗೂ ಶಿಕ್ಪೆಯಾಗುತ್ತದೆ. ಕೊನೆತನಕವೂ ಆ ಶಿಕ್ಪೆಯನ್ನು ಒಪ್ಪಿಕೊಳ್ಳುವುದಕ್ಕೆ ಅವನಿಗೆ ಸಾಧ್ಯವೇ ಆಗುವುದಿಲ್ಲ.
ದಕ್ಪಿಣ ಆಫ್ರಿಕಾದ ರಾಜಕೀಯ ಪರಿಸ್ಥಿತಿಯನ್ನೂ ಅಲ್ಲಿನ ಕಷ್ಟಪರಂಪರೆಯನ್ನೂ ಓದಿ ಬಲ್ಲವರಿಗೆ ಕುಟ್ಸೀ ಕಾದಂಬರಿಗಳ ಮೂಲ ಹೊಳೆದೀತು. ನಮಗೆ ದಕ್ಪಿಣ ಆಫ್ರಿಕಾ ಪರಿಚಿತವಾಗಿದ್ದರೆ ಅದಕ್ಕೆ ಮೊದಲ ನೆಪ ಕ್ರಿಕೆ್. ಎರಡನೆಯ ಕೊಂಡಿ ಗಾಂಧಿ. ಗಾಂಧಿ ತಮ್ಮ ಹೋರಾಟ ಶುರುಮಾಡಿದ್ದು ದಕ್ಪಿಣ ಆಫ್ರಿಕಾದಲ್ಲಿ ಎಂದು ಓದಿದ್ದು ಈಗ ಕೇವಲ ನೆನಪು. ಇತ್ತೀಚೆಗೆ ದಕ್ಪಿಣಾ ಆಫ್ರಿಕಾದ ಸ್ವಾತಂತ್ರ ಪುರುಷನೆಂಬ ಕಾರಣಕ್ಕೆ ನೆಲ್ಸ್ ಮಂಡೇಲಾ ಪತ್ರಿಕೆಗಳಲ್ಲಿ ಕಾಣಿಸಿಕೊಂಡರು. ಆದರೆ ದಕ್ಪಿಣ ಆಫ್ರಿಕಾದ ರಾಜಧಾನಿ ಪ್ರಿಟೋರಿಯಾ, ಜೋಹಾ್‌ಸಬರ್‌ನಷ್ಟು ಜನಪ್ರಿಯವೇನಲ್ಲ.
ಇದನ್ನೆಲ್ಲ ಹೊರತಾಗಿಸಿ ನೋಡಿದರೂ ದಕ್ಪಿಣ ಆಫ್ರಿಕಾದ ಆಸುಪಾಸಿನ ದೇಶಗಳು ಅಚ್ಚರಿ ಹುಟ್ಟಿಸುತ್ತವೆ. ದಕ್ಪಿಣ ಆಫ್ರಿಕಾದ ಪಕ್ಕದಲ್ಲೇ ಇರುವ ಜಿಂಬಾಬ್ವೆ, ಕೀನ್ಯಾ ಮೊದಲಾದವುಗಳೆಲ್ಲ ಅದು ಹೇಗೋ ಕ್ರಿಕೆ್ನಲ್ಲಿ ಆಸಕ್ತಿ ಬೆಳೆಸಿಕೊಂಡವು. ಅಲ್ಲಿನ ಕಪ್ಪು ಕಪ್ಪು ಹುಡುಗರು ಕ್ರಿಕೆ್ ಕಲಿಗಳಾಗಿ ಆ ದೇಶಕ್ಕೊಂದು ಹೆಸರು ತಂದುಕೊಟ್ಟರು. ಕ್ರಿಕೆ್ ಜನಪ್ರಿಯವಾಗುವ ಮುಂಚೆ ಜಿಂಬಾಬ್ವೆಯಾಗಲೀ, ಕೀನ್ಯವಾಗಲೀ ಜಗತ್ತಿಗೆ ಪರಿಚಿತವಾಗಿರಲೇ ಇಲ್ಲ. ಪಕ್ಕದ ಆಲ್ಜೀರಿಯಾದಿಂದ ನೈಜೀರಿಯಾದಿಂದ ಕವಿಗಳು ಬಂದಿದ್ದರು. ಕಾದಂಬರಿಗಳು ಬಂದಿದ್ದವು. ಚಿನುವಾ ಅಚಿಬೆಯ ಮೂಲಕ ಸಾಹಿತ್ಯಾಸಕ್ತರಿಗೆ ದಕ್ಪಿಣ ಆಫ್ರಿಕಾದ ನೆರೆಯ ರಾಷ್ಟ್ರಗಳು ಗೊತ್ತಿದ್ದವು. ಆದರೆ ಸಾಹಿತ್ಯಕ್ಕಿಂತ ಹೊರತಾಗಿ ಆ ದೇಶಗಳು ಹೆಸರು ಮಾಡಿರಲಿಲ್ಲ.
ಇವತ್ತಿಗೂ ಭೂಪಟದಲ್ಲಿ ಸಾಕಷ್ಟು ಹಸುರಾಗಿ ಕಾಣುವ ದಕ್ಪಿಣ ಆಫ್ರಿಕಾದ ಚದರ ಕಿಲೋಮೀಟ್ ಜನಸಂಖ್ಯೆ 33. ಅದೇ ಹಾಂಗ್ ಕಾಂಗ್ ನಲ್ಲಿ ಒಂದು ಚದರ ಕಿಲೋಮೀಟರಿಗೆ 6628 ಮಂದಿ ಇದ್ದಾರೆ. ಭಾರತದಲ್ಲಿ ಜನದಟ್ಟಣೆ ಚದರ ಕಿಲೋಮೀಟರಿಗೆ 308; ಆಸ್ಟ್ರೇಲಿಯಾದಲ್ಲದು ಕೇವಲ 2. ಹಾಗಿದ್ದರೂ ಆಸ್ಟ್ರೇಲಿಯಾ ಮುಂದಿದೆ. ದಕ್ಪಿಣ ಆಫ್ರಿಕಾ ಹಿಂದಿದೆ. ಅದಕ್ಕೆ ಕಾರಣ ವಸಾಹತುಶಾಹಿ ಎನ್ನುವವರಿದ್ದಾರೆ. ಹಾಗೆ ನೋಡಿದರೆ ನಮಗೂ ದಕ್ಪಿಣ ಆಫ್ರಿಕಾಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಎರಡೂ ಏಕಪ್ರಕಾರವಾಗಿ ಸ್ವಾತಂತ್ರಕ್ಕೋಸ್ಕರ ಹೋರಾಡಿವೆ. ಗಾಂಧಿಗೆ ಭಾರತದ ಸ್ವಾತಂತ್ರದ ಕಲ್ಪನೆ ಹುಟ್ಟಿದ್ದು ಅಲ್ಲೇ ತಾನೆ?
ಇಷ್ಟೆಲ್ಲ ವಿವರಗಳನ್ನಿಟ್ಟುಕೊಂಡು ನೋಡಿದಾಗ ದಕ್ಪಿಣ ಆಪ್ರಿಕಾದ ಸಾಹಿತ್ಯ ನಮಗೆ ಮುಖ್ಯವಾಗುತ್ತದೆ. ಇವತ್ತು ತುಂಬ ಚೆನ್ನಾಗಿ ಬರೆಯುತ್ತಿರುವವರು ದಕ್ಪಿಣ ಆಫ್ರಿಕಾದಂಥ ನಿರ್ಲಕ್ಪ್ಯಿತ ಖಂಡಾಂರಗಳ ಲೇಖಕರೇ. ಅವರ ಅನುಭವ ಇನ್ನೂ ಮೊಂಡಾಗಿಲ್ಲ. ಅವರ ಕಷ್ಟಗಳಿನ್ನೂ ಮೊನಚು ಕಳಕೊಂಡಿಲ್ಲ. ಆರ್ಥಿಕತೆ ಮತ್ತು ಉದಾರೀಕರಣದಿಂದ ಭಾರತದಲ್ಲಾಗುತ್ತಿರುವಂತೆ, ಅಮೆರಿಕಾದಲ್ಲಿ ಎಂದೋ ಆಗಿರುವಂತೆ ಏಕಸಂಸ್ಕೃತಿ ಆವರಿಸಿಕೊಂಡಿಲ್ಲ. ಹೀಗಾಗಿ ನೈಜೀರಿಯಾದ ಒಬ್ಬ ಲೇಖಕ ತನ್ನ ಜನಾಂಗದ ನೋವುಗಳನ್ನು ಅತ್ಯಂತ ಸಮರ್ಥವಾಗಿ ಹೇಳಬಲ್ಲ. ಯಾವ ದೈನೇಸಿ ಭಾವನೆಯ ಲೇಪವೂ ಇಲ್ಲದೆ ಸಿಟ್ಟಾಗಬಲ್ಲ.
ಆದರೆ ಮುಂದುವರಿದ ಮತ್ತು ಆರ್ಥಿಕವಾಗಿ ತುಂಬ ಎತ್ತರದಲ್ಲಿರುವ ದೇಶ ಇಂಥ ಸಾಂಸ್ಕೃತಿಕ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತಾ ಹೋಗುತ್ತದೆ. ಇಂಗ್ಲೆಂಡಿನಲ್ಲಿ ಕಾವ್ಯದ ಕಾಲ ಮುಗಿದುಹೋಗಿದೆ. ನಾಟಕಗಳಿಗೆ ಹೆಸರುವಾಸಿಯಾಗಿದ್ದ ಇಂಗ್ಲಿಷ್ ಭಾಷೆ ಬರಡಾಗಿದೆ. ಅಮೆರಿಕಾದಲ್ಲಿ ಹೆಸರಿಸಬಲ್ಲ ಲೇಖಕರೇ ಇಲ್ಲ. ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುವಂಥ ಕತೆಗಳನ್ನು ಕೊಟ್ಟ ರಷ್ಯ ಇವತ್ತು ಕತೆಗಳೇ ಇಲ್ಲದ ದೇಶವಾಗಿ ಅಸ್ವಸ್ಥ ತೊಳಲುತ್ತಿದೆ. ಪುಷ್ಕಿನ್, ಗೊಗೊಲ್, ಚೆಕಾಫ್, ಗಾರ್ಕಿ, ಇವಾನ್ ಬುನಿನ್, ಟಾಲ್ ಸ್ಟಾಯ್ ಮುಂತಾದ ಸಾಹಿತಿಗಳನ್ನು ಕಂಡ ರಷ್ಯಾ ಇವತ್ತು ತನ್ನ ಕಾಲದ ತಳಮಳಗಳನ್ನು ಹಿಡಿದಿಡಲಾರದ ತಡಕಾಡುತ್ತಿದೆ. ಕಾರ್‌ಮಾಕನನ್ನು ಕಂಡ ಜರ್ಮನಿಯಲ್ಲಿ ಇವತ್ತು ಬೆಂಗಳೂರಿನ ಉತ್ತರಾದಿ ಮಠದಿಂದ ಹೋದ ಮಧ್ವವಟುಗಳು ಕಂಗೊಳಿಸುತ್ತಿದ್ದಾರೆ. ಲೆನಿನ್, ಸೋಲ್ಜೆನಿತ್ಸಿನ್ ಮತ್ತು ಟ್ರಾಟ್ಸ್ಕಿಯಂಥವರಿದ್ದ ರಷ್ಯಾದಲ್ಲಿ ಪುತ್ತಿಗೆ ಮಠಾಧೀಶರು ಮಧ್ವಾಚಾರ್ಯರು ಏನೆಂದರು ಎಂದು ಉಪದೇಶ ಕೊಟ್ಟು ಬರುತ್ತಾರೆ.
ಇಂಥ ಪರಿಸ್ಥಿತಿಯಲ್ಲಿ ಜೆ. ಎಂ. ಕುಟ್ಸಿಯಂಥವರು ಬರೆಯುವ ಕಾದಂಬರಿಗಳು ಮುಖ್ಯವಾಗುತ್ತವೆ. ಆಫ್ರಿಕಾಕ್ಕೆ ಅನ್ಯನಾಗಿಯೇ ಉಳಿದ ಕುಟ್ಸೀ ಕಲಿತದ್ದು ಜರ್ಮ್ ಮತ್ತು ಇಂಗ್ಲಿಷ್ ಭಾಷೆಗಳನ್ನು. ಓದಿದ್ದು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ. ಇಂಗ್ಲೆಂಡ್ ಮತ್ತು ಅಮೆರಿಕಾಗಳಲ್ಲಿ ಜೀವಿಸಿದ ಕುಟ್ಸೀ ಸದ್ಯಕ್ಕೆ ಆಸ್ಟ್ರೇಲಿಯಾದ ಅಡಿಲೇಡ್ ಯೂನಿವರ್ಸಿಟಿಯಲ್ಲಿದ್ದಾರೆ.

*******
ಒಂದು ರಾಷ್ಟ್ರದಲ್ಲಾಗುವ ರಾಜಕೀಯ ಬದಲಾವಣೆಗಳು ಮನುಷ್ಯನ ಸಂಕಟವನ್ನು ಖಂಡಿತಾ ಅಳಿಸಲಾರವು ಎನ್ನುವುದನ್ನು ಕುಟ್ಸೀಯ ಡಿಸ್ ಗ್ರೇಸ್' ಕಾದಂಬರಿ ಹೇಳುತ್ತದೆ ಅನ್ನುತ್ತಾರೆ. ಯಾರು ರಾಜ್ಯ ಆಳಿದರೇನು, ರಾಗಿ ಬೀಸೋದು ತಪ್ಪೋದಿಲ್ಲ ಎನ್ನುವ ನಮ್ಮ ಜನಪದದ ಗಾದೆಯಷ್ಟೇ ಸರಳವಾದ ಸತ್ಯ ಇದು. ಎಲ್ಲಾ ಸತ್ಯಗಳೂ ಅಷ್ಟೇ ಸರಳವಾಗಿರುತ್ತವೆ. ಅಷ್ಟೇ ಹತ್ತಿರವಾಗಿರುತ್ತವೆ. ಹತ್ತಿರವಾಗಿವೆ ಮತ್ತು ಸರಳವಾಗಿವೆ ಎಂಬ ಕಾರಣಕ್ಕೆ ಅವು ನಮಗೆ ಮುಖ್ಯವಾಗದೇ ಹೋಗುತ್ತವೆ. ತೀರಾ ಸದರವಾಗಿಬಿಡುತ್ತವೆ.
ಇಂಥ ಸದರಗೊಂಡ ಜನಪದೀಯ ಸತ್ಯಗಳು ಮತ್ತೆ ಅನಾವರಣಗೊಳ್ಳುವುದು ಅರ್ಥ ಪಡೆದುಕೊಳ್ಳುವುದು ಹೊಸ ರಾಜಕೀಯ ಸಂದರ್ಭದೊಂದಿಗೆ ಮುಖಾಮುಖಿಯಾದಾಗ. ಹಾಗೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಸಾಹಿತ್ಯ ಮಾಡಬೇಕು. ದಶಕಗಳ ಹಿಂದೆ ಬಂದ `ತುಘಲಕ'ನಾಟಕದಲ್ಲಿ ಚರಿತ್ರೆಯೊಂದಿಗೆ ವರ್ತಮಾನ ಮುಖಾಮುಖಿಯಾಯಿತು. ಕುಟ್ಸೀಯವರ `ಡಿಸ್ ಗ್ರೇಸ್' ನಲ್ಲಿ ಗಂಡಸಿನ ಅಹಂಕಾರ ಮತ್ತು ಅಸಹಾಯಕತೆ ಎದುರುಬದುರಾಗಿದೆ.
ಕಾದಂಬರಿಯ ಮತ್ತೆರಡು ಸಾಲುಗಳು ಹೀಗಿವೆ;
`ಆ ಹುಡುಗಿಯ ಜೊತೆಗೆ ನಿನಗೆ ಸಂಬಂಧ ಇದ್ದಿದ್ದು ನಿಜವೇ?'
ಖಂಡಿತಾ ನಿಜ.
`ಸೀರಿಯಸ್?'
`ಸೀರಿಯಸ್ ಆಗಿತ್ತೋ ಇಲ್ಲವೋ ಅನ್ನೋದರಿಂದ ಪರಿಸ್ಥಿತಿ ಬದಲಾಗುತ್ತಾ? ಒಂದು ವಯಸ್ಸು ದಾಟಿದ ನಂತರ ಎಲ್ಲ ಸಂಬಂಧಗಳೂ ಸೀರಿಯಸ್ಸೇ... ಹೃದಯಾಘಾತದ ಹಾಗೆ'.
ಒಂದು ಕೃತಿಯೂ ಹಾಗೇ.

Tuesday, February 5, 2008

ಇಳಿವಯಸ್ಸಿನ ಕಷ್ಟ ಹಾಗೂ ಬಲ್ಲಾಳರ ಬಂಡಾಯ!

ಇಳಿವಯಸ್ಸಿನಲ್ಲಿ ಊರು ಬಿಟ್ಟು ಬಂದವರ ಮನಸ್ಥಿತಿ ಹೇಗಿರುತ್ತದೆ? ತನಗೆ ಪರಿಚಿತವಾದ ಪರಿಸರದಿಂದ ಮತ್ತೊಂದು ಪರಿಸರಕ್ಕೆ ಕಾಲಿಟ್ಟಾಗ ಅದನ್ನು ತನ್ನ ಪರಿಸರವನ್ನಾಗಿಸಿಕೊಳ್ಳುವ ಮಾರ್ಗ ಯಾವುದು? ಅಷ್ಟಕ್ಕೂ ಒಂದು ಊರು ಅಥವಾ ಪರಿಸರ ಆಪ್ತವಾಗುವುದಕ್ಕೆ ಕಾರಣ ಏನು? ಒಂದೂರಲ್ಲಿ ಹುಟ್ಟಿ ಬೆಳೆದಿದ್ದೇವೆ ಅನ್ನುವ ಕಾರಣಕ್ಕೆ ನಾವು ಆ ಊರಲ್ಲಿ ಸುಮ್ಮನೆ ಇದ್ದುಬಿಡುತ್ತೇವಾ? ಇಲ್ಲಿರುವುದು ಸುಮ್ಮನೆ ಅಂತ ಅಂತ ನಮಗೆ ಯಾವತ್ತಾದರೂ ಅನ್ನಿಸುತ್ತದಾ?
ವ್ಯಾಸರಾಯ ಬಲ್ಲಾಳರನ್ನು ಕಂಡಾಗೆಲ್ಲ ಮೂಡುತ್ತಿದ್ದ ಪ್ರಶ್ನೆ ಇದು. ಅವರು ಬೆಂಗಳೂರಿಗೆ ಅಪರಿಚಿತರ ಹಾಗಿದ್ದರು. ಬೆಂಗಳೂರು ಅವರಿಗೆ ಅಪರಿಚಿತರಂತಿತ್ತು. ಇಬ್ಬರ ನಡುವೆ ಮಾತೇ ಸಾಧ್ಯವಿಲ್ಲವೇನೋ ಎಂಬಷ್ಟು ಮುಗುಮ್ಮಾಗಿ ಈ ಊರು ಮತ್ತು ಆ ಹಿರಿಯರು ಇದ್ದುಬಿಟ್ಟರೇನೋ?
ಇಳಿವಯಸ್ಸಿನ ಕಷ್ಟಗಳಿವು. ಅದು ಒಂದು ಕಡೆ ನೆಲೆನಿಂತ ಮನಸ್ಸನ್ನು ಕಿತ್ತು ಮತ್ತೊಂದೆಡೆ ನೆಲೆಗೊಳಿಸುವ ಕಾಲವಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮನಸ್ಸೂ ಅಲ್ಲ. ಕಾಣದ ಕಡಲಿಗೆ ಆಗ ಮನ ಹಂಬಲಿಸುವುದಿಲ್ಲ. ಇರುವ ಜಾಗದಲ್ಲಿ ನೆಮ್ಮದಿಯನ್ನು ಹೇಗೆ ಹುಡುಕುವುದು ಎನ್ನುವ ಪ್ರಶ್ನೆಯೊಂದೇ ಮುಖ್ಯವಾಗುವ ದಿನಗಳವು.
ಅಂಥ ಅನೇಕರನ್ನು ನಾವು ನೋಡಿದ್ದೇವೆ. ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಮುಂಬಯಿಯ ಹಿರಿಯ ದಂಪತಿ ಬೆಂಗಳೂರಿಗೆ ಬಂದರು. ಇಲ್ಲಿಗೆ ಬಂದ ನಂತರ ಅವರಿಗೆ ಚಿತ್ರರಂಗದಲ್ಲಿ ಅಂಥ ಅವಕಾಶ ಸಿಗಲಿಲ್ಲ. ಸಣ್ಣಪುಟ್ಟ ಪಾತ್ರಗಳನ್ನು ಮೀರಿದ ಧನ್ಯತೆ ದೊರಕಲಿಲ್ಲ. ಆಮೇಲಾಮೇಲೆ ಚಿತ್ರರಂಗ ಕೂಡ ಅಂಥ ಪಾತ್ರಗಳ ಅಗತ್ಯವನ್ನು ನೀಗಿಕೊಂಡಿತು. ಈಗೀಗ ಬರುವ ಚಿತ್ರಗಳಲ್ಲಿ ವಯೋವೃದ್ಧರಿಗೆ ಜಾಗವೇ ಇಲ್ಲ.
ಇಂಥ ಹೊತ್ತಲ್ಲಿ ವ್ಯಾಸರಾಯ ಬಲ್ಲಾಳರು ನೆನಪಾಗುತ್ತಾರೆ. ಮುಂಬಯಿಯಲ್ಲಿದ್ದಷ್ಟು ಕಾಲವೂ ಅವರು ಚುರುಕಾಗಿದ್ದರು. ಇಲ್ಲಿಯ ಸಾಹಿತ್ಯಿಕ ರಾಜಕಾರಣದ ನೆರಳು ಅವರನ್ನು ಸೋಕಲೇ ಇಲ್ಲ. ಇಲ್ಲಿನ ಒಳಜಗಳಗಳ ಪರಿಚಯವಾಗಲೀ, ಇಲ್ಲಿ ಅಂಥದ್ದೊಂದು ಕ್ಷುದ್ರತೆ ಇದೆ ಅನ್ನುವುದಾಗಲೀ ಅವರಿಗೆ ಗೊತ್ತಿರಲಿಲ್ಲ. ಅದು ಅವರಿಗೆ ಜಗಜ್ಜಾಹೀರಾದದ್ದು ಸಾಹಿತ್ಯ ಸಮ್ಮೇಳನದ ಹೊತ್ತಲ್ಲಿ.
ಉಡುಪಿಯವರಾದ ನಿಡಂಬೂರು ವ್ಯಾಸರಾಯ ಬಲ್ಲಾಳರಿಗೆ ತಾನು ಉಡುಪಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವುದಿಲ್ಲ ಎಂದು ಊಹಿಸಲಿಕ್ಕೆ ಕಾರಣಗಳೇ ಇರಲಿಲ್ಲ. ತಾನು ಉಡುಪಿಯವನು ಎಂಬ ಹೆಮ್ಮೆ, ಪ್ರೀತಿಯ ಜೊತೆಗೇ, ತಾನು ಸಾಕಷ್ಟು ಮೌಲಿಕವಾದದ್ದನ್ನು ಬರೆದಿದ್ದೇನೆ ಎಂಬ ಅರ್ಹತೆಯೂ ಅವರ ಬೆಂಬಲಕ್ಕಿತ್ತು. ವ್ಯಾಸರಾಯ ಬಲ್ಲಾಳರು ಬರೆದ ಅನುರಕ್ತೆ’ ಸಿನಿಮಾ ಆಗಿತ್ತು. ಹಾಗೇ, ಹೇಮಂತಗಾನವೋ ವಾತ್ಸಲ್ಯಪಥವೋ ಸಿನಿಮಾ ಆಗಿತ್ತು. ಅವರ ಉತ್ತರಾಯಣ ಮೊನ್ನೆ ಮೊನ್ನೆ ಟೀವಿಯಲ್ಲಿ ಸೀರಿಯಲ್ಲಾಗಿ ಕಾಣಿಸಿಕೊಂಡಿತು. ಸಿನಿಮಾ ಜಗತ್ತಿನ ಘಟಾನುಘಟಿಗಳೆಲ್ಲ ಉತ್ತರಾಯಣ ಕಾದಂಬರಿ ಹಿಡಿದುಕೊಂಡು ಉತ್ತರಾಯಣ’, ಉತ್ತರಾಯಣ ಅಂತ ಪ್ರಚಾರ ಕೊಟ್ಟರು. ಇದಕ್ಕೂ ಮುಂಚೆ ಮೌನಿ’ಯ ಲಿಂಗದೇವರು, ಬಲ್ಲಾಳರ ಬಂಡಾಯ’ ಕಾದಂಬರಿಯನ್ನು ಸೀರಿಯಲ್ಲು ಮಾಡಿದ್ದರು.
ಅವ್ಯಾವುವೂ ಬಲ್ಲಾಳರ ಬೆಂಗಳೂರು ಬದುಕನ್ನು ಸುಗಮಗೊಳಿಸಿತು ಎಂದು ನನಗನ್ನಿಸುವುದಿಲ್ಲ. ಅವರ ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡುತ್ತೇನೆಂದು ಎಚ್ ಡಿ ಕುಮಾರಸ್ವಾಮಿ ಘೋಷಿಸಿ, ಎಸ್ ನಾರಾಯಣ್ ನಿರ್ದೇಶಕರೆಂದು ಹೇಳಿ ಪತ್ರಿಕಾಗೋಷ್ಠಿಯೂ ನಡೆಯಿತು. ಎಲ್ಲಾ ಸಿನಿಮಾ ಪತ್ರಕರ್ತರಿಗೂ ಹೆಜ್ಜೆ ಕಾದಂಬರಿಯ ಒಂದೊಂದು ಪ್ರತಿಯನ್ನೂ ಕೊಡಲಾಯಿತು ಎಂಬುದು ಹಳೇ ಸುದ್ದಿ.

ಅಲ್ಲಿಗೊಂದು ಅಧ್ಯಾಯ ಮುಗಿಯಿತು. ಈ ಸಂಭ್ರಮ, ಗದ್ದಲ ಮತ್ತು ಮರೆಗುಳಿತನದ ನಡುವೆ ಬಲ್ಲಾಳರು ಮೌನವಾಗಿದ್ದರು. ಮತ್ತೊಂದು ಕಾದಂಬರಿ ಬರೆಯುತ್ತಿದ್ದೇನೆ ಎಂದರು. ಅಲ್ಲಲ್ಲಿ ಭಾಷಣ ಮಾಡಿದರು, ಪುಸ್ತಕ ಬಿಡುಗಡೆ
ಮಾಡಿದರು. ಅವರ ಕಾದಂಬರಿಗಳನ್ನು ಓದಿದವರಿಗೆ ನಡುವಯಸ್ಸು ಮೀರುತ್ತಿತ್ತು. ಅವರ ಕಾದಂಬರಿಗಳನ್ನು ಪ್ರೀತಿಸಿದವರು ಓದುವ ಆಸಕ್ತಿ ಕಳಕೊಂಡಿದ್ದರು.
ಲೇಖಕ ಅಪ್ರಸ್ತುತನಾಗುತ್ತಾ ಹೋಗುವುದೇ ಹಾಗೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಕೊಳ್ಳುವ ಸಂಕ್ರಮಣಕಾಲದಲ್ಲಿ ಅನೇಕ ಒಳ್ಳೆಯ ಲೇಖಕರು ದಿವಂಗತರಾಗುತ್ತಾರೆ. ಟಿಕೆ ರಾಮರಾವ್, ತ್ರಿವೇಣಿ, ಶಾಂತಿನಾಥ ದೇಸಾಯಿ, ಶಂಕರ ಮೊಕಾಣಿ ಪುಣೇಕರ, ದೇವುಡು, ಗಳಗನಾಥ ಮುಂತಾದವರನ್ನೇ ನೋಡಿ. ಒಂದು ಕಾಲದ ಓದುವ ಅಭಿರುಚಿಯನ್ನು ಬೆಳಸಿದವರು ಮತ್ತೊಂದು ಕಾಲಕ್ಕೆ ಅನಾಮಧೇಯರು. ಕೇವಲ ಕೆಲವೇ ಮಂದಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಐವತ್ತು ವರುಷದ ಹಿಂದೆ ಗಳಗನಾಥರು ಅತ್ಯಂತ ಜನಪ್ರಿಯ ಲೇಖಕರು. ಮೂವತ್ತು ವರುಷಗಳ ಹಿಂದೆ ರಾಜ್‌ಕುಮಾರ್ ಐವತ್ತನೇ ಸಿನಿಮಾ ಎಂಬಷ್ಟೇ ಸಂಭ್ರಮದಲ್ಲಿ ಟಿಕೆ ರಾಮರಾವ್ ಐವತ್ತನೇ ಕಾದಂಬರಿ ಕೂಡ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಓದುಗರಿಗೂ ಪತ್ರಿಕೆಗಳಿಗೂ ಅದೊಂದು ಹೆಮ್ಮೆಯ ಸಂಗತಿಯಾಗಿತ್ತು.
ಬಲ್ಲಾಳರ ಕೊನೆಯ ದಿನಗಳು ಹೇಗಿದ್ದವು? ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪೀಠ ಸಿಗಲಿಲ್ಲ ಎಂಬ ನೋವನ್ನು ಮರೆಸಿದ್ದು ಮೂಡಬಿದರೆಯ ನುಡಿಸಿರಿ ಕಾರ್ಯಕ್ರಮ. ಅಲ್ಲೇ ಅವರು ಹುಟ್ಟುಹಬ್ಬ ಆಚರಿಸಿಕೊಂಡು ಕಣ್ಣೀರು ಹಾಕಿದ್ದರು. ಆವತ್ತು ಅವರನ್ನು ಅಲ್ಲಿ ನೋಡಿದ ಹಿರಿಯ ಪತ್ರಕರ್ತರೊಬ್ಬರು ಉಸುರಿದ್ದರು; ಬಲ್ಲಾಳರು ತುಂಬಾ ಸೊರಗಿಹೋಗಿದ್ದಾರೆ. ತುಂಬ ದಿನ ಬದುಕುವಂತೆ ಕಾಣಿಸುವುದಿಲ್ಲ.
ಅವರನ್ನು ಬೆಂಗಳೂರು ಕೊನೆಗೂ ಸ್ವೀಕರಿಸಲೇ ಇಲ್ಲ. ತನ್ನೊಳಗಿನ ಸಾಹಿತಿ ಎಂದು ಅವರನ್ನು ಪರಿಗಣಿಸಲೂ ಇಲ್ಲ. ಬಲ್ಲಾಳರ ಕತೆಗಳನ್ನು ಅವರು ಬೆಂಗಳೂರಿಗೆ ಬಂದ ನಂತರ ಸಾಹಿತ್ಯ ಜಗತ್ತು ಕೂಡ ಓದಿ ಚರ್ಚಿಸಿದ್ದು ನೆನಪಿಲ್ಲ. ಅವರ ಕುರಿತು ಅಲ್ಲೊಂದು ಇಲ್ಲೊಂದು ವಿಚಾರ ಸಂಕಿರಣಗಳು ನಡೆದವು. ವರದಿಯಾದವು. ಆದರೆ ಅವರ ಕತೆಗಳನ್ನು ಮನಸ್ಸಿಗೆ ಹತ್ತಿರವಾಗಿಸಿಕೊಳ್ಳುವುದಕ್ಕೆ ನಾವೂ ಪ್ರಯತ್ನಪಡಲಿಲ್ಲವೇನೋ?
-2-
ನಮ್ಮ ಮುಪ್ಪಿನ ದಿನಗಳು ಹೇಗಿರುತ್ತವೆ? ಆ ಪ್ರಶ್ನೆಯನ್ನು ನಾವೆಂದೂ ಕೇಳಿಕೊಳ್ಳುವುದಿಲ್ಲ. ನಾವು, ಈ ತಲೆಮಾರಿಗೆ ಸೇರಿದ ಬಹಳಷ್ಟು ಮಂದಿ ಇಂಥ ಪ್ರಶ್ನೆಯನ್ನೇನೂ ಕೇಳಿಕೊಳ್ಳಬೇಕಾಗಿಲ್ಲ. ಅದರ ಬದಲು ನಮ್ಮ ಕೊನೆಯ ದಿನಗಳು ಹೇಗಿರಬೇಕು ಎಂದು ಕೇಳಿಕೊಳ್ಳುವುದೇ ಒಳ್ಳೆಯದು.
ಕೆ ಎಸ್ ನರಸಿಂಹಸ್ವಾಮಿಯವರನ್ನು ಕೊನೆಯ ದಿನಗಳಲ್ಲಿ ನೋಡಿದ್ದು ನೆನಪಾಗುತ್ತದೆ. ಅವರು ತಮ್ಮ ಮನೆಯ ಜಗಲಿಯಲ್ಲಿ ಕುಳಿತು, ಬಿಡುಗಣ್ಣಾಗಿ ಆಕಾಶ ನೋಡುತ್ತಾ ಅದೇನೋ ಧ್ಯಾನಿಸುತ್ತಿರುವಂತೆ ಕಾಣಿಸುತ್ತಿದ್ದರು. ಅವರನ್ನು ಆ ಹೊತ್ತಲ್ಲಿ ನೋಡಿದವರು, ಮೈಸೂರ ಮಲ್ಲಿಗೆಯ ಗೀತೆಗಳನ್ನು ಬರೆದವರು ಅವರೇ ಎಂದು ಊಹಿಸುವುದು ಕೂಡ ಸಾಧ್ಯವಿರಲಿಲ್ಲ. ಅದೇ ರೀತಿ, ರಂಗಭೂಮಿಯಲ್ಲಿ ದುಡಿದವರು, ಸಿನಿಮಾರಂಗದಲ್ಲಿದ್ದವರು, ಸರ್ಕಾರದ ದೊಡ್ಡ ಹುದ್ದೆಯಲ್ಲಿರುವವರು ಎಲ್ಲರೂ ತಮ್ಮ ಅಂತಿಮ ದಿನಗಳನ್ನು ಅತ್ಯಂತ ದಯನೀಯವಾಗಿ ಕಳೆದದ್ದನ್ನು ನೋಡಿದ್ದೇವೆ. ಆಗೆಲ್ಲ ನಮ್ಮನ್ನು ಇಂಥ ಪ್ರಶ್ನೆಗಳು ಕಾಡಿರಬಹುದು.
ಹಾಗೆ ನೋಡಿದರೆ ಸಾವಿಗಿಂತ ಭಯ ಹುಟ್ಟಿಸುವುದು ವೃದ್ಧಾಪ್ಯವೇ. ನಮ್ಮೂರಿನಲ್ಲಿ ಗಣಿತ ಹೇಳಿಕೊಡುತ್ತಿದ್ದ,
ವಿದ್ಯಾರ್ಥಿಗಳ ಪಾಲಿಗೆ ಸಿಂಹಸ್ವಪ್ನದಂತಿದ್ದ ಮೇಷ್ಟರೊಬ್ಬರು ಮೊನ್ನೆ ಗಲ್ಲಕ್ಕೆ ಕೈಯಿಟ್ಟುಕೊಂಡು ಅಳುತ್ತಾ ಕೂತಿದ್ದರು. ಅವರಿಗೆ ಅವರ ಮಗ ಕಪಾಳಕ್ಕೆ ಬಾರಿಸಿ ಬುದ್ಧಿ ಹೇಳಿದ್ದ. ಮಗ ಹೀಗೆ ಮಾಡಬಹುದೇ ಎಂದು ಅವರು ಊರೆಲ್ಲ ಹೇಳಿಕೊಂಡು ಓಡಾಡುತ್ತಿದ್ದರು. ಅನುಕಂಪ ಗಿಟ್ಟಿಸುತ್ತಿದ್ದಾರೋ ನ್ಯಾಯ ಕೇಳುತ್ತಿದ್ದಾರೋ ಅನ್ನುವುದು ಕೂಡ ಗೊತ್ತಾಗದಂಥ ಸ್ಥಿತಿಯಲ್ಲಿ ಅವರಿದ್ದರು.
ಕೆಲವರು ಇನ್ನೂ ಓಡಾಡುತ್ತಿರುವಾಗಲೇ ಕಣ್ಮುಚ್ಚುತ್ತಾರೆ. ವೃತ್ತಿಯಲ್ಲಿದ್ದಾಗಲೇ ಕಣ್ಮರೆಯಾಗುವುದು ಅತ್ಯಂತ ಸುಖದಾಯಕ ಸಾವು ಎಂದು ಅನೇಕ ಸಾರಿ ಅನ್ನಿಸುತ್ತದೆ. ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ- ಅನಾಯಾಸ ಸಾವು, ದೈನ್ಯವಿಲ್ಲದ ಜೀವನ ಕೊಡಿ ಎಂದು ಹಿರಿಯರು ಕೇಳಿಕೊಳ್ಳುತ್ತಿದ್ದರು.
ಇಚ್ಚಾಮರಣಿಯಾಗಿದ್ದ ಭೀಷ್ಮ, ಯಾವತ್ತೂ ಸಾಯದ ಅಶ್ವತ್ಥಾಮ- ಮುಂತಾದವರ ಕತೆಯ ನಡುವೆಯೇ ನಮ್ಮಲ್ಲಿ ಶತಾಯುಷಿಗಳೆಂದು ಕರೆದು ಸಂಭ್ರಮಿಸುವುದೂ ಇದೆ. ಮನೆಯಲ್ಲಿ ಮೊಮ್ಮಕ್ಕಳಿದ್ದಾಗ ಅದರ ಸಂಭ್ರಮವೇ ಬೇರೆ. ಆದರೆ, ನಗರಗಳಲ್ಲಿ ವೃದ್ದಾಪ್ಯವನ್ನು ತಾಳಿಕೊಳ್ಳುವುದು ನಿಜಕ್ಕೂ ಕಷ್ಟ.
ನಮ್ಮ ಮನರಂಜನಾ ಮಾಧ್ಯಮಗಳೂ ಹೇಗಾಗಿವೆ ನೋಡಿ. ಅಲ್ಲಿ ಹಿರಿಯರಿಗೆ ಸಂತೋಷ ಕೊಡುವಂಥದ್ದೇನೂ ಇದ್ದಂತಿಲ್ಲ. ಅದೇ ಹರೆಯಕ್ಕೆ ಮೆಚ್ಚುವ ಸೀರಿಯಲ್ಲುಗಳು, ಹರೆಯಕ್ಕೆ ಇಷ್ಟವಾಗುವ ಸಿನಿಮಾಗಳು, ಹರೆಯದ ಮಂದಿ ಕೂತು ನೋಡುವಂಥ ಹಾಡುಗಳು. ವೃದ್ದಾಪ್ಯದ ಪಾತ್ರಗಳಾಗಲೀ, ಕತೆಯಾಗಲೀ ನಾವು ಹೇಳುವುದಿಲ್ಲ. ನಮ್ಮ ಪುರಾಣಗಳಲ್ಲಿ ಅನೇಕ ವೃದ್ಧರು ಬರುತ್ತಿದ್ದರು. ಆದರೆ ಅವರು ಯಾರೂ ಕ್ರಿಯಾಹೀನರಾಗಿರಲಿಲ್ಲ. ನಾವು ವೃದ್ಧರೆಂದು ಪರಿಗಣಿಸುವುದು ಧೃತರಾಷ್ಟ್ರನನ್ನು. ಆತ ಆ ವಯಸ್ಸಿನಲ್ಲೂ ಪುತ್ರವ್ಯಾಮೋಹ ಬಿಟ್ಟಿರಲಿಲ್ಲ.
ಹಾಗೆ ನೋಡಿದರೆ, ಯಾವ ಪುರಾಣದಲ್ಲಿ ದಯನೀಯ ಸ್ಥಿತಿಯಲ್ಲಿ ಕುಳಿತುಕೊಂಡು ಇಡೀ ಪರಿಸರವನ್ನು ದೂಷಿಸುತ್ತಾ ಬದುಕುವ ಒಬ್ಬನೇ ಒಬ್ಬ ಮುದುಕನೋ ಮುದುಕಿಯೋ ಸಿಗುವುದಿಲ್ಲ. ಅಲ್ಲಿ ಬರುವ ವೃದ್ಧರೆಲ್ಲ ಋಷಿಮುನಿಗಳು. ಅವರು ಸಿಟ್ಟಿಗೆ ಹೆಸರುವಾಸಿ. ಸದಾ ಸುತ್ತಾಡುತ್ತಾ, ಗಮನಿಸುತ್ತಾ ಸಿಟ್ಟಾಗುತ್ತಾ ಶಾಪಕೊಡುತ್ತಾ ಇರುವವರು. ಅಂಥ ಎನರ್ಜಿ ಅವರಿಗೆ ಬಂದದ್ದಾದರೂ ಎಲ್ಲಿಂದ.
ನಿವೃತ್ತಿ ಮನುಷ್ಯನನ್ನು ಹಾಗಾಗಿಸುತ್ತದಾ? ಹಳ್ಳಿಗಳಲ್ಲಿ ಸಾಯುವ ತನಕ ದುಡಿಯುತ್ತಾ, ಹೆಂಡ ಕುಡಿದು ತೂರಾಡುತ್ತಾ ಮುದ್ಕಾ ಎಂದು ಬೈಸಿಕೊಳ್ಳುತ್ತಾ ಓಡಾಡುವ ಅರುವತ್ತು ಎಪ್ಪತ್ತು ದಾಟಿದ ಮುದುಕರನ್ನು ಈಗಲೂ ನೋಡಬಹುದು. ಹುಟ್ಟಿದೂರಲ್ಲಿ ಹುಟ್ಟಿದ ಮನೆಯಲ್ಲಿ ಅತ್ಯುತ್ಸಾಹದಿಂದ ಓಡಾಡುವ ಮುದುಕರಿದ್ದಾರೆ. ಅದೇ ಪರವೂರಿಗೋ ಪರಸ್ಥಳಕ್ಕೋ ಹೋದ ತಕ್ಷಣ ಕಂಗಾಲಾಗುತ್ತಾರೆ.

ಇದನ್ನು ವಿಸ್ತರಿಸುವುದು ಬೇಡ. ಬಲ್ಲಾಳರ ಸಾವು ಇದನ್ನೆಲ್ಲ ನೆನಪಿಸಿತು. ನಮ್ಮ ಜೀವನ ವಿಧಾನ, ಬದುಕಿನ ಕುರಿತ ಪ್ರೀತಿ, ಬದಲಾಗುವ ಗುಣ ಇವುಗಳೇ ನಮ್ಮ ವಯಸ್ಸನ್ನು ನಿರ್ಧರಿಸುತ್ತವೆ ಎಂದು ಕಾಣುತ್ತದೆ. ಎಂಬತ್ತು ಸಮೀಪಿಸುತ್ತಿರುವ ರಂಗಕರ್ಮಿ ಎ ಎಸ್ ಮೂರ್ತಿಗಳನ್ನೇ ನೋಡಿ. ಅವರಿಗೆ ವಯಸ್ಸಾಗಿದೆ ಎಂದು ಯಾರು ತಾನೇ ಹೇಳಬಲ್ಲರು. ಹಾಗೇ, ಕಾರಂತರು ಎಂದೂ ವಯಸ್ಸಾದಂತೆ ಕಾಣಲಿಲ್ಲ. ಇವತ್ತು ಕೂಡ ಕಂಬಾರ, ಅನಂತಮೂರ್ತಿ ಯೌವನದಿಂದ ನಳನಳಿಸುವಂತೆ ಕಾಣಿಸುತ್ತಾರೆ. ದೇವಾನಂದ್ ಮಾತು ಬಿಡಿ, ನಮ್ಮ ಗಂಗೂಬಾಯಿ ಹಾನಗಲ್ ವಯಸ್ಸು ಕೂಡ ಕಾಣಿಸುವುದಿಲ್ಲ.
ವಯಸ್ಸನ್ನು ಮೀರುವುದು ಕ್ರಿಯಾಶೀಲತೆಯಲ್ಲಿದೆಯಾ? ನೋಡುವವರ ಪ್ರೀತಿಯಲ್ಲಿದೆಯಾ?
ಕೆಎಸ್‌ನ ಎಪ್ಪತ್ತು ದಾಟಿದ ನಂತರ ಬರೆದರು:

ತುಂಬಿದಿರುಳಿನ ನಡುವೆ ನಾನು ಕಿರುದೋಣಿಯಲಿ
ಈಗಲೇ ಹೊರಟಿರುವೆ ಆಚೆ ದಡಕೆ
ಬದುಕಿ ಬಾಳುವ ಮಂದಿಗರ್ಥವಾಯಿತು ಕವಿತೆ
ಅನುಭವಗಳಾಚೆಗಿದೆ ನನ್ನ ಬದುಕೆ.

Friday, February 1, 2008

ಸತ್ಯವಾನನಿಗೆ ಸಾವಿತ್ರೀ.... ಸಾವಿತ್ರಿಗೂ ಅದು ಗೊತ್ತಿತ್ರೀ..

ಕದ್ದುಕೊಂಡು ಹೋದ ಸೀತೆಯನ್ನು ಕಾಪಾಡುವುದಕ್ಕೆ ಸಮುದ್ರವನ್ನೇ ದಾಟಿಹೋಗಿ ರಾವಣನನ್ನು ಕೊಲ್ಲುವ ಶ್ರೀರಾಮನ ಕತೆಯನ್ನೂ ರಾಜಾರೋಷವಾಗಿ ಒಯ್ಯುತ್ತಿರುವ ಸತ್ಯವಾನನ ಪ್ರಾಣವನ್ನು ಯಮನಿಂದ ಕಾಪಾಡಿಕೊಳ್ಳಲು ಅವನೊಡನೆ ಸಂವಾದಕ್ಕೆ ನಿಂತು ಯಮನಂಥ ಯಮನನ್ನೇ ಸೋಲಿಸಿದ ಸಾವಿತ್ರಿಯ ಕತೆಯನ್ನೂ ಓದಿಕೊಂಡವರಿಗೆ ಹಲವು ಅನುಮಾನಗಳು ಕಾಡುತ್ತವೆ. ಸರಳವಾಗಿ ಯೋಚಿಸಬಲ್ಲ ಎಲ್ಲರಲ್ಲೂ ಇಂಥ ಪ್ರಶ್ನೆಗಳು ಮೂಡಬಹುದು. ಹೆಂಡತಿಗೋಸ್ಕರ ಒಂದು ಸಂಸ್ಥಾನದ ಎದುರು ನಿಂತು ಹೋರಾಡಿದ ಶ್ರೀರಾಮನ ಮುಂದೆ ಗಂಡನಿಗಾಗಿ ಯಮನನ್ನೇ ಎದುರಿಸಿ ನಿಂತ ಸಾವಿತ್ರಿ ದೊಡ್ಡವಳಾಗಿ ಕೆಲವರಿಗಾದರೂ ಕಾಣಿಸಬಹುದು.
ಈ ಎರಡೂ ಕತೆಗಳನ್ನು ಮುಂದಿಟ್ಟುಕೊಂಡು ಸುಮ್ಮನೆ ಯೋಚಿಸುತ್ತಾ ಕೂತರೆ ಕೆಲವು ಸಂಗತಿಗಳು ಶುಭ್ರವಾಗುತ್ತವೆ; ಶ್ರೀರಾಮನಿಗೆ ಸೀತೆಯನ್ನು ಹುಡುಕಿ ತರುವುದು ಅವನ ಶೌರ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ಅವನ ಮತ್ತು ಅವನ ಕಾಲದ ಗಂಡಸರ ಪ್ರಕಾರ ಅದು ಅವನ ಕರ್ತವ್ಯವೂ ಆಗಿತ್ತು. ಶ್ರೀರಾಮನ ವಿರಹವೇದನೆಯ ತೀವ್ರತೆಯಲ್ಲಿ ಕರ್ತವ್ಯದ ಕರೆಯೂ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರಾಮ ಎಲ್ಲರಿಗೂ ರಮಣೀಯನಾಗಿರಲು ಯತ್ನಿಸಿದವನು. ತಾನು ಬಲ್ಲ ಸೀತೆಗಿಂತ ಒಬ್ಬ ಅಗಸನ ಮಾತೇ ಅವನಿಗೆ ಮುಖ್ಯವಾಗುತ್ತದೆ. ಎಲ್ಲ ಗಂಡಸರ ಹಾಗೆ ಅವನಿಗೂ ಸೀತೆ ಸುವರ್ಣಪುತ್ಥಳಿ. ಅಂದರೆ ಆಕೆ ಅಮೂಲ್ಯ, ಆದರೆ ಮೌನಿ. ಮತ್ತೊಬ್ಬ ಗಂಡಸಿಗೆ ಎಂದೂ ರಕ್ತಮಾಂಸಗಳಲ್ಲಿ ಒದಗಕೂಡದ ಸುಂದರಿ.
ಆದರೆ ಸಾವಿತ್ರಿಗೆ ಯಮನನ್ನು ಗೆದ್ದು ಸತ್ಯವಾನನನ್ನು ಹಿಂದಕ್ಕೆ ತರುವುದು ಕರ್ತವ್ಯವಾಗಿರಲಿಲ್ಲ. ಅವಳು ಹೆಚ್ಚೆಂದರೆ ಸತ್ಯವಾನನ ಜೊತೆ ಸಾಯಬಹುದಿತ್ತು. ಆಕೆಗೆ ತನ್ನ ಹೋರಾಟ ತನ್ನ ಶಕ್ತಿಯನ್ನೂ ಶೌರ್ಯವನ್ನೂ ಪ್ರದರ್ಶಿಸುವ ಒಂದು ಅವಕಾಶ ಆಗಿರಲಿಲ್ಲ. ಯಾಕೆಂದರೆ ಆಕೆ ಹೋರಾಟಕ್ಕೆ ನಿಂತದ್ದು ಯಮನ ಕೂಡೆ. ಯಮನಿಂದ ತನ್ನ ಗಂಡನನ್ನು ರಕ್ಷಿಸಿಕೊಳ್ಳುತ್ತೇನೆ ಎಂದು ಆಕೆ ಸಂಪೂರ್ಣವಾಗಿ ನಂಬಿರಲಿಕ್ಕೂ ಸಾಧ್ಯವಿಲ್ಲ. ಹೀಗಾಗಿ ಆಕೆಯದು ಒಂದು ಅರ್ಥದಲ್ಲಿ ಅಪನಂಬಿಕೆಯಿಂದ ಆರಂಭವಾದ ಪರಿಣಾಮದ ಸ್ಪಷ್ಟ ಕಲ್ಪನೆಯಿಲ್ಲದ ಹೋರಾಟ.
ಶ್ರೀರಾಮನ ಹೋರಾಟಕ್ಕೆ ಮತ್ತೊಂದು ರೀತಿಯ ಬೆಂಬಲವೂ ಇತ್ತು. ರಾವಣ ಸೀತೆಯನ್ನು ಕದ್ದುಕೊಂಡು ಹೋಗಿದ್ದು ಧರ್ಮಬಾಹಿರ. ಅದೊಂದು ಅನ್ಯಾಯದ ಕಾರ್ಯ. ಹೀಗಾಗಿ ರಾಮನ ಬೆಂಬಲಕ್ಕೆ ಇಡೀ ಜಗತ್ತೇ ನಿಲ್ಲುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಆತನಿಗೆ ತನ್ನದು ಧರ್ಮಯುದ್ಧ ಎಂಬ ನಂಬಿಕೆಯ ಬೆಂಬಲವೂ ಇತ್ತು. ಆದರೆ ಸಾವಿತ್ರಿಯದು ಹಾಗಲ್ಲ. ಯಮ ಆಕೆಯ ಗಂಡನ ಪ್ರಾಣವನ್ನು ಒಯ್ದದ್ದು ಅಪರಾಧವಲ್ಲ, ಅನ್ಯಾಯವಲ್ಲ. ಅದು ಅವನ ಕರ್ತವ್ಯಪಾಲನೆಯ ಒಂದು ಅಂಗ. ಹೀಗಾಗಿ ಸಾವಿತ್ರಿಗೆ ತನ್ನ ಗಂಡನನ್ನು ಮರಳಿ ಪಡೆಯುವಲ್ಲಿ ಯಾವ ಸಮರ್ಥನೆಯೂ ಲೋಕದ ಬೆಂಬಲವೂ ಇರುವುದಕ್ಕೆ ಸಾಧ್ಯವಿರಲಿಲ್ಲ.
ರಾಮನ ಅದೃಷ್ಟ ನೋಡಿ. ಅವನಿಗೆ ಎದುರಾಗಿದ್ದವನು ರಾವಣ. ಯಾವತ್ತಿದ್ದರೂ ಸಾಯುವವನು. ಆದರೆ ಸಾವಿತ್ರಿಯ ಶತ್ರುವೇ ಸಾವು. ಆತನಿಗೆ ಸಾವಿಲ್ಲ.
ಇವೆಲ್ಲಕ್ಕಿಂತ ಮುಖ್ಯವಾದ, ಸುಮ್ಮನೆ ನೋಡಿದಾಗ ತುಂಬ ಭಾವನಾತ್ಮಕ ಎನ್ನಿಸುವ ಒಂದು ಅಂಶವನ್ನು ಗಮನಿಸಿ;
ರಾಮನ ಹೋರಾಟ, ಗೆಲುವು ಎಲ್ಲವೂ ಸೀತೆಗೆ ತಿಳಿಯುತ್ತಿತ್ತು ಮತ್ತು ಸೀತೆಗೆ ಇದೆಲ್ಲ ತಿಳಿಯುತ್ತಿದೆ ಅನ್ನುವುದೇ ಆತನಲ್ಲಿ ಸ್ಪೂರ್ತಿಯನ್ನು ತುಂಬಬಹುದಾಗಿತ್ತು. ಆದರೆ ಸಾವಿತ್ರಿಯ ಹೋರಾಟವಾಗಲೀ, ಶ್ರಮವಾಗಲೀ ಸತ್ಯವಾನನಿಗೆ ತಿಳಿಯುವ ಸಾಧ್ಯತೆಯೇ ಇರಲಿಲ್ಲ. ನಿದ್ದೆಯಿಂದಲೋ ಒಂದು ಕ್ಪಣಿಕ ಮೂರ್ಛೆಯಿಂದಲೋ ಎದ್ದವನಂತೆ ಎದ್ದು ಕೂತ ಸತ್ಯವಾನನಿಗೆ ಸಾವಿತ್ರಿಯ ಗೆಲುವು ಒಂದು ಕತೆಯ ರೂಪದಲ್ಲಿ ವೇದ್ಯವಾಗಿರಬೇಕು.
ಹಾಗಿದ್ದರೂ ನಾವು ಸಾವಿತ್ರಿಯ ಕತೆಯನ್ನು ಒಂದೇ ಸಾಲಲ್ಲಿ ಕೇಳಿ ಮರೆಯುತ್ತೇವೆ. ಶ್ರೀರಾಮ ಫೊಟೋಸ್ಥಿತನಾಗುತ್ತಾನೆ.
*******
ಜಗತ್ತಿನ ಎಲ್ಲ ಮಹಾಕೃತಿಗಳೂ ಹುಟ್ಟುವುದು ವಿರಹದಲ್ಲಿ ಅನ್ನುವುದನ್ನು ರಾಮಾಯಣ ತೋರಿಸಿದೆ. ಇರುವುದೆಲ್ಲವನ್ನು ಧರ್ಮರಕ್ಪಣೆಗಾಗಿ ತೊರೆಯುವುದು ಕೂಡ ಕಾವ್ಯಕ್ಕೆ ವಸ್ತುವಾಗಿದೆ. ಹಾಗೆ ನೋಡುತ್ತಾ ಹೋದರೆ ಪಾಂಡವರು ರಾಜ್ಯ ಕಳಕೊಂಡದ್ದರಿಂದ ಎದುರಿಸಬೇಕಾಗಿ ಬಂದ ಕಷ್ಟನಿಷ್ಠುರಕ್ಷೋೆಗಳೇ ಮಹಾಭಾರತಕ್ಕೆ ವಸ್ತು. ಹರಿಶ್ಚಂದ್ರ ರಾಜ್ಯ ಕಳಕೊಂಡು ಸ್ಮಶಾನವಾಸಿಯಾದದ್ದೇ ಹರಿಶ್ಚಂದ್ರ ಕಾವ್ಯದ ಜೀವಾಳ. ಸೀತೆ ರಾಮನನ್ನು ಕಳಕೊಂಡದ್ದೇ ರಾಮಾಯಣಕ್ಕೆ ಮೂಲ. ಯಾವತ್ತು ಕೂಡ ಗಳಿಸುವುದು ಮತ್ತು ಗೆಲ್ಲುವುದು ಯಾವ ಮಹಾಕಾವ್ಯದ ವಸ್ತುವೂ ಆಗಿಲ್ಲ. ಕೊನೆಯಲ್ಲಿ ಗೆಲುವು ಅವರದಾಗುತ್ತದೆ ನಿಜ. ಅದೇನಿದ್ದರೂ ಕೃತಿಗೊಂದು ಮಂಗಳ ಹಾಡುವುದಕ್ಕೆ ಒದಗಿಬರುವ ಸ್ಥಿತಿ. ಆ ಗೆಲುವಿನಿಂದಾಗಿ ಕೃತಿ ಗೆಲ್ಲುವುದಿಲ್ಲ. ಕೃತಿ ಆಪ್ತವಾಗುವುದು ಪಾತ್ರಗಳು ಅನುಭವಿಸಿದ ನೋವಿನಿಂದ. ರಾಮಾಯಣದ ಕೊನೆಯಲ್ಲಿ ರಾವಣ ಸತ್ತು ಸೀತೆ ಶ್ರೀರಾಮನನ್ನು ಸೇರುವ ದೃಶ್ಯ ಅಂತ ಖುಷಿಕೊಡುವುದಿಲ್ಲ. ಆದರೆ ಸೀತೆಯನ್ನು ರಾವಣ ಅಪಹರಿಸುವ ಸನ್ನಿವೇಶ ಕಣ್ಣೀರು ತರಿಸುತ್ತದೆ. ಗದಾಯುದ್ಧದಲ್ಲಿ ಭೀಮ ದುರ್ಯೋಧನನ ತೊಡೆ ಮುರಿಯುವ ಸನ್ನಿವೇಶಕ್ಕಿಂತ ದ್ರೌಪದಿಯ ವಸ್ತ್ರಾಪಹರಣವೇ ನೆನಪಲ್ಲಿ ಉಳಿಯುತ್ತದೆ. ವೀರರಸಕ್ಕಿಂತ ಕರುಣಾರಸಕ್ಕೇ ಮನಸ್ಸು ಮೊರೆಯಿಡುತ್ತದೆ.
ಇದು ಮಹಾಕಾವ್ಯಗಳ ಮಾತಾಯಿತು. ನಮ್ಮ ಕಾಲಕ್ಕೆ ಬಂದರೆ ಎಲ್ಲ ಒಳ್ಳೆಯ ಕೃತಿಗಳಿಗೆ ಮೂಲವಾಗಿರುವುದು ಅವಮಾನ. ಒಬ್ಬ ವ್ಯಕ್ತಿ ತಾನು ಎದುರಿಸಿದ ಅವಮಾನಕರ ಸ್ಥಿತಿಯನ್ನು ಮೀರುವುದಕ್ಕೆ ಯತ್ನಿಸುವುದೇ ನಮ್ಮ ಕಾಲದ ವಸ್ತು. ಆ ಅವಮಾನ ವೈಯಕ್ತಿಕ ನೆಲೆಯದ್ದಾಗಿರಬಹುದು, ರಾಷ್ಟ್ರೀಯ ನೆಲೆಯದ್ದಾಗಿರಬಹುದು, ಜಾತಿಯಿಂದಾಗಿ, ಧರ್ಮದಿಂದಾಗಿ, ಸಂಪತ್ತಿನಿಂದಾಗಿ ಅನುಭವಿಸಬೇಕಾಗಿ ಬಂದದ್ದಾಗಿರಬಹುದು. ಇದನ್ನು ಇನ್ನಷ್ಟು ಸರಳಗೊಳಿಸುವುದಾದರೆ ಬಹುತೇಕ ಕೃತಿಗಳ ವಸ್ತು ಸಮಾನತೆಯ ತುಡಿತ. ಮಹಾಕಾವ್ಯಗಳದ್ದು ರಾಜಮಹಾರಾಜರ ಕತೆ. ಅಲ್ಲಿ ಜನಜೀವನ ಹೇಗಿತ್ತು ಅನ್ನುವುದರ ಕುರಿತಾಗಲೀ ಒಬ್ಬ ಬಡ ರೈತನ ಕಷ್ಟಗಳೇನಿದ್ದವು ಎನ್ನುವ ಕುರಿತಾಗಲೀ ಪ್ರಸ್ತಾಪವೇ ಇರುವುದಿಲ್ಲ. ಶ್ರೀರಾಮನು ಪ್ರಜಾನುರಾಗಿಯಾಗಿದ್ದ ಎಂಬಲ್ಲಿಗೆ ಪ್ರಜೆಗಳ ಕತೆ ನಿಲ್ಲುತ್ತದೆ. ಲಾಲೂ ಪ್ರಸಾದನನ್ನು ಜನಪ್ರಿಯ ನಾಯಕ ಎಂದಷ್ಟೇ ಅದು ಸುಳ್ಳಾಗಿರಲಿಕ್ಕೂ ಸಾಧ್ಯ.
ಈ ಸಮಾನತೆಯ ತುಡಿತ ಒಂದು ಸಾಹಿತ್ಯ ಪ್ರಕಾರದ ಲಕ್ಪಣವಾಗಲೀ ಒಂದು ಚಳುವಳಿಯ ಗುಣವಾಗಲೀ ಅಲ್ಲ. ಇವತ್ತು ಸ್ತ್ರೀವಾದದ ಬಗ್ಗೆ ಘನವಾಗಿ ಚರ್ಚಿಸುವವರು ಕಾನೂರು ಹೆಗ್ಗಡಿತಿಯ ಸೀತೆಯ ಒಪ್ಪಿಗೆಯಲ್ಲೇ ಒಂದು ರೀತಿಯ ವಿರೋಧವೂ ವ್ಯಕ್ತವಾಗುವುದನ್ನು ಕಾಣಬಹುದು. ಸಂಸ್ಕಾರದ ಚಂದ್ರಿ ಕಂಡುಕೊಳ್ಳುವ ಸಮಾನತೆಯ ಸುಖವನ್ನು ಕುಸುಮಬಾಲೆಯ ಕುಸುಮ ಚನ್ನನೊಂದಿಗೆ ಕಂಡುಕೊಳ್ಳುವ ಸಮಾನತೆಗೆ ಹೋಲಿಸಬಹುದೆ?
ಸಾಹಿತ್ಯ ಅರ್ಥಪೂರ್ಣವಾಗುವುದು ಆಪ್ತವಾಗುವುದು ಹೋಲಿಕೆಗಳಿಂದಲೇ. ಅದನ್ನು ತುಲನಾತ್ಮಕ ಅಧ್ಯಯನ ಎಂದು ಕರೆದ ಕ್ಲಿಷ್ಟಗೊಳಿಸುವುದು ಬೇಡ. coparitive literature ಎಂಬ ಹೆಸರಿನಿಂದ ಕರೆದು ದೂರವಿಡುವುದೂ ಬೇಡ. ಹೋಲಿಕೆಗೆ ಪರಿಭಾಷೆಯೂ ಇರದಿರಲಿ. ಆದರೆ ಸುಮ್ಮನೆ ಎರಡು ಪಾತ್ರಗಳನ್ನು ಕಣ್ಣಮುಂದಿಟ್ಟುಕೊಂಡು ನೋಡಿ; ಶಿಕಾರಿಯ ನಾಗಪ್ಪನಿಗೂ ಅವಸ್ಥೆಯ ಕೃಷ್ಣಪ್ಪನಿಗೂ ಇರುವ ವ್ಯತ್ಯಾಸ ಮತ್ತು ಸಾಮ್ಯ ನಿಮಗೆ ತಿಳಿಯುತ್ತದೆ.
*******
ಇಲ್ಲೆರಡು ಪದ್ಯಗಳಿವೆ. ಒಂದು ಅನಂತಮೂರ್ತಿಯವರ ರಾಜನ ಹೊಸವರುಷದ ಬೇಡಿಕೆಗಳು. ಇನ್ನೊಂದು ಗೋಪಾಲಕೃಷ್ಣ ಅಡಿಗರ ಪ್ರಾರ್ಥನೆ. ಅನಂತಮೂರ್ತಿಯವರು ಕವಿತೆ ಬರೆದದ್ದು ಜನವರಿ 1957ರಲ್ಲಿ. ಅಡಿಗರು ಅದೇ ವರುಷದ ಜೂ್ನಲ್ಲಿ. ಎರಡರ ಒಂದಷ್ಟು ಸಾಲುಗಳನ್ನು ಓದಿ;
-1-
ಸ್ವಾಮಿ
ಕೆನೆಯುವುದಿಲ್ಲವೇಕಯ್ಯ ಅಗಸನ ಕತ್ತೆ ಕುದುರೆಯಂತೆಂದು ನಿನ್ನ ಸೃಷ್ಟಿಯ ಗುಟ್ಟ
ಕೆದಕಬಂದವನಲ್ಲ; ಕೆಡಕು ಬಯಸಿದ್ದಿಲ್ಲ;ಧೈರ್ಯವೂ ಇಲ್ಲ.
(ರಾಜನ ಹೊಸ ವರುಷದ ಬೇಡಿಕೆಗಳು)
ಪ್ರಭೂ,
ಪರಾಕುಪಂಪನ್ನೊತ್ತಿಯೊತ್ತಿ ನಡಬಗ್ಗಿರುವ
ಬೊಗಳುಸನ್ನಿಯ ಹೊಗಳುಭಟ ಖಂಡಿತ ಅಲ್ಲ;
ಬಾಲವಾಡಿಸಿ ಹೊಸೆದು ಹೊಟ್ಟೆ ಡೊಗ್ಗುಸಲಾಮು
ಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ.
(ಪ್ರಾರ್ಥನೆ)
-2-
ಉಂಡವರ ತೇಗು ಉಳಿದವರ ಕೊರಳ ಉರುಲಾಗದಿರಲಿ.
ಹೊಟ್ಟೆಯ ಮೇಲೆ ಹೊಡೆಯುವುದೆ ಕೆಲವರಿಗೆ ದೊಡ್ಡ ಗಮ್ಮತ್ತು ಆಗದಿದ್ದರಷ್ಟೇ ತೃಪ್ತಿ
ಸಂಪೂರ್ಣವಲ್ಲದಿದ್ದರೂ ಸರಿಯೆ ಡೊಂಕುಬಾಲವ ಸ್ವಲ್ಪವಾದರೂ ತಿದ್ದು ಅಥವಾ
ಯಾರೂ ತೆಗೆಯದ ಹಾಗೆ ನಳಿಕೆಯನು ಹಾಕು.
(ರಾಜನ ಹೊಸವರುಷದ ಬೇಡಿಕೆಗಳು)
ವಾಸಿಮಾಡಯ್ಯ ಈ ಜಲೋದರದ ಭಾರದ ಜಡ್ಡ
ಕಮರುತೇಗಿನ ಕಪಿಲೆಹೊಡೆದು ಹಗಲೂ ಇರುಳು
ತೇಗಿಗೊಂದು ಅಮೋಘ ಸ್ಪೂರ್ತಿಗೀತವ ಕರೆವ
ರೋಗದ ಫಸಲನಾದಷ್ಟ ಸವರೋ ತಂದೆ.
(ಪ್ರಾರ್ಥನೆ)
-3-
ಜಡ್ಡು ಕಟ್ಟಿಸುವ ನಿರ್ವಿಕಾರದ ಮಂಕು ಬಡಿದಂಥ ಖೋಜರಾಜರು ನಾವು
ಬಯಕೆಯಾತುರವಿರದೆ
ತೊಡೆ ನಡುವೆ ಕೈಮುಗಿವ ದೈನ್ಯ ಭಂಗಿಗಳಲ್ಲಿ ಕೂತು ಕಾದಿಹೆವೆಂದು
ನೀನು ಕೇಳಿರಬಹುದು;
ದಯವಿಟ್ಟು ನಮ್ಮೆಡೆಗೆ ನಿರಿಯ ಚಿಮ್ಮಿಸಿ ನಡೆದು ಬರಲಷ್ಟು ಹುಡುಗಿಯರು.
(ರಾಜನ ಹೊಸ ವರುಷದ ಬೇಡಿಕೆಗಳು)
ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು;
ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನು.....
ಮೇಲು ಮಾಳಿಗೆಯ ಕಿರುಕೋಣೆ ಮೈಮರೆವನ್ನು
ತಕ್ಕ ತೊಡೆನಡುವೆ ಧಾತುಸ್ಖಲನದೆಚ್ಚರವ..
ಕಳುಹಿಸಯ್ಯಾ ಬಳಿಗೆ ಕೃಪೆತಳೆದು ಆಗಾಗ್ಗೆ
ವಾಸ್ತವದ ಹೆಣ್ಣುಗಳ, ನಿಜದ ತೊಡೆಗಳ, ಆತ್ಮ
ಹೊಕ್ಕು ತಿಕ್ಕಲು ತಕ್ಕ ಸುಕ್ಕಿರದ ಹೊಸ ತೊಗಲುಗಳ.
ಇದರ ಹಿಂದೊಂದು ಪ್ರಸಂಗವಿದೆ. ರಾಜನ ಹೊಸ ವರ್ಷದ ಬೇಡಿಕೆಗಳು ಕವಿತೆಯನ್ನು ಬರೆದು ಅದನ್ನು ಓದಲೆಂದು ಅಡಿಗರಿಗೆ ಕೊಟ್ಟಿದ್ದರು. ಅದಾದ ಕೆಲವು ದಿನಗಳ ನಂತರ ಆ ಪದ್ಯಕ್ಕೆ ಪ್ರತಿಕ್ರಿಯೆಯಾಗಿ ಅಡಿಗರು ಪ್ರಾರ್ಥನೆ ಬರೆದು ಅನಂತಮೂರ್ತಿಯವರಿಗೆ ತೋರಿಸಿದರು. ಅನಂತಮೂರ್ತಿಯವರ ಕಾವ್ಯಭಾವವನ್ನೇ ಇಟ್ಟುಕೊಂಡು ಅದನ್ನು ಒಂದು ಪರಿಪೂರ್ಣ ಕವಿತೆಯನ್ನಾಗಿ ಮಾಡಿದ್ದರು ಅಡಿಗರು. ಅದನ್ನು ಓದಿದ ನಂತರ ಅನಂತಮೂರ್ತಿ ತಮ್ಮ ಕವಿತೆಯೇನೇನೂ ಅಲ್ಲ ಎಂದು ಅದನ್ನು ಹರಿದೆಸೆದರು ಎನ್ನುವ ಪ್ರಸಂಗವನ್ನು ಕತೆಗಾರ ಜಿ. ಎ್. ಸದಾಶಿವ ನೆನಪಿಸಿಕೊಳ್ಳುತ್ತಾರೆ.
ಅನಂತಮೂರ್ತಿಯವರ ಇಲ್ಲಿಯವರೆಗಿನ ಪದ್ಯಗಳು ಸಂಕಲನದಲ್ಲಿ ಮೇಲಿನ ಪದ್ಯ ಸಿಗುತ್ತದೆ. ಅಡಿಗರ ಪ್ರಾರ್ಥನೆಯಂತೂ ಲೋಕವಿಖ್ಯಾತ. ಎರಡನ್ನೂ ಹೋಲಿಸಿಕೊಂಡು ಒಂದೇ ಕಾಲಮಾನದಲ್ಲಿ ಬರೆದ ಎರಡು ಕವಿತೆಗಳು ಒಂದೇ ಭಾವಕ್ಕೆ ಕಟ್ಟುಬಿದ್ದಿದ್ದರೂ ಹೇಗೆ ವಿಸ್ತಾರಗೊಳ್ಳುತ್ತಾ ಹೋಗಬಹುದು ಅನ್ನುವುದನ್ನು ನೆನೆಯುವುದು ಎಂಥ ಖುಷಿಯ ಕೆಲಸ!
ಅಂದಹಾಗೆ ಇದರ ಜೊತೆಗೇ ಓದಿಕೊಳ್ಳಬಹುದಾದ ಮತ್ತೊಂದು ಪದ್ಯ ಥಾಮ್ ಗ್ರೇ ಬರೆದ Hymn to Adveristy
ಅಲ್ಲಿರುವ ನಾಲ್ಕೇ ನಾಲ್ಕು ಸಾಲುಗಳು ಹೀಗೆ;
Thy philosphic train be there
To soften, not to wound my heart.
The generous spark extinct receive,
Teach me to love and to forgive,
Exact my own defects to scan,
What others are to feel, and know myself a man.