Monday, April 7, 2008

ಮಳೆ ಮಂತ್ರದಂಡ ಮುಟ್ಟಿ ಅವಳಿಗೆ ಚಿಗುರು ಪುಲಕ

ಅದೇ ಕೊನೆಯ ಊರು, ಅದೇ ಕೊನೆಯ ಬಸ್ಸು. ಎರಡು ಗಂಟೆ ತಡವಾಗಿ ಆ ಊರಿಗೆ ಬಂದು ತಲುಪಿದೆ. ಬೆರಗುಗಣ್ಣಿನ ಹುಡುಗ ಬಸ್ಸಿಳಿಯುವ ಹೊತ್ತಿಗೆ ನಡುರಾತ್ರಿಗೆ ಮೂರೇ ಗಂಟೆ.
ಆ ಊರಲ್ಲಿ ಚಂದ್ರನದೇ ರಾಜ್ಯಭಾರ. ಧಾರಾಳ ಚೆಲ್ಲಿದ ಬೆಳದಿಂಗಳು. ಬೆಳದಿಂಗಳನ್ನೇ ಹಿಟು್ಟ ಮಾಡಿಕೊಂಡು ಚಿತ್ತಾರ ಬರೆದ ಕಾಡುಮರಗಳ ಹಾದಿ. ಹತ್ತಿರಕ್ಕೆ ಸ್ವಷ್ಟ. ದೂರಕ್ಕೆ ನಿಗೂಢವಾಗುವ ಪ್ರಕೃತಿ. ನಾಸ್ಕೋ ಐದೋ ಮೈಲಿ ನಡೆದಷ್ಟೂ ಹಾದಿ.
ಆ ಹಾದಿಯ ಉದ್ದಕ್ಕೂ ಹೆಸರಿರದ ಇರುಳುಹಕ್ಕಿಯ ಹಾರಾಟ, ದೂರದಲ್ಲೆಲ್ಲೋ ಊಳಿಡುವ ನರಿ, ಅದಾರಾಚೆಗಿನ ಬೆಟ್ಟದ ಮೇಲೆ ದಿಕ್ಕೆಟ್ಟು ಉರಿವ ಕಾಡಿನ ಬೆಂಕಿ, ಬಿಸಿಲೋ ಬೆಳದಿಂಗಳೋ ತಿಳಿಯದಂತೆ ಧಾರಾಕಾರ ಬೆವರುವ ಮೈ.
ಪಯಣದ ಕೊನೆಗೊಂದು ಒಂಟಿಮನೆ. ಒಂಟಿಮನೆಯ ಹಜಾರದಲ್ಲೊಂದು ಲಾಂದ್ರ. ಸುಸ್ವಾಗತ, ಕಾಲ್ತೊಳೆಯುವುದಕ್ಕೆ ಬಿಸಿನೀರು, ಬಿಸಿಬಿಸಿ ಊಟ, ಬೆಚ್ಚನೆಯ ಹಾಸಿಗೆ, ಕಣ್ತುಂಬ ಕನಸು. ಬೆಳಗಾಗೆದ್ದರೆ ಚಂದ್ರ ಅರೆಬರೆ ತೋರಿಸಿದ್ದ ಜಗತ್ತಿನ ತುಂಬ ಎಳೆಬಿಸಿಲು. ಮತ್ತದೇ ಕನಸೋ ಕಲ್ಪನೆಯೋ ರೂಪಕವೋ ಕಲೆಯೋ ತಿಳಿಯದ ಕಾಡಿನ ಲೋಕ.
ಕಾಡಲ್ಲಿ ಸ್ಕು ಹೆಜ್ಜೆ ಹಾಕಿದರೆ ಜಟಿಲವಾಗುವ ಹಾದಿ. ಅಲ್ಲೊಂದು ಕುಟಿಲ ತೊರೆ. ಜೇನುಗೂಡು, ನೇರಳೆ ಹಣ್ಣು, ರೆಂಜೆ ಹೂವಿನ ಮರ, ಆಳೆತ್ತರಕೆ್ಕ ನಿಂತ ಹೆಸರಿರದ ಮರದ ತೊಗಟೆಗೆ ಪ್ರಾಣಕಳಕೊಳ್ಳುವ ರಭಸದಲ್ಲಿ ತಲೆಯೊಡೆದುಕೊಳ್ಳುತ್ತಿರುವ ಮರಕುಟುಕ, ನೆಲ್ಲಿಕಾಯಿಯ ಮರದ ಗೆಲ್ಲುಗಳಲ್ಲಿ ಹಸಿರುಹಾವು, ಜಂಬೂನೇರಳೆ, ಕಾಲಕಾಲಕ್ಕೆ ಕರುಣಿಸಿದ ಒಂದೊಂದು ರುಚಿ. ನೆಲ್ಲಿಕಾಯಿ ತಿಂದು ತೊರೆಯ ನೀರು ಕುಡಿದರೆ ಮೈಚಾಚಿದರೆ ಇಹಕೂ ಪರಕೂ ಸೇತುವೆ.
*****
ಮೊನ್ನೆ ಮೊನ್ನೆ ವಿಕಾಸನ ಜೊತೆ ಇದನ್ನೆಲ್ಲ ಮಾತನಾಡುತ್ತ ರಾತ್ರಿ ಕಳೆಯಿತು. ನಿಗೂಢ ಮರೆಯಾಗಿ ಎಲ್ಲವೂ ನಿಚ್ಚಳವಾಗಿದೆ. ಪಯಣದ ಕೊನೆಯಲ್ಲಿ ಸಿಗುವ ಒಂಟಿಮನೆಯೊಳಗೂ ಬಿಪಾಶ ಬಸು ಕುಣಿಯುತ್ತಿರುತ್ತಾಳೆ. ಮಲ್ಲಿಕಾ ಶೆರಾವತು ಬಯಲಾಗುತ್ತಿರುತ್ತಾಳೆ. ರೂಪಕಗಳ ಜಗತ್ತು ಸತ್ತೇ ಹೋಗಿದೆ. ಕಾಡು ಮತ್ತು ನಾಡಿನ ನಡುವಣ ವ್ಯತ್ಯಾಸ ಮರೆಯಾಗಿದೆ. ಹೀಗಾಗಿ ಯಾವ ಊರಿಗೆ ಹೋದರೂ ಅದ ಗ್ವಾಡಿ, ಅದ ಸೂರು. ದಿನವೆಲ್ಲ ಬೇಜಾರು. ತಿದಿಯೊತ್ತಿ ನಿಟ್ಟುಸಿರು!
ಹೊಸ ಥರದ ಕತೆಗಳಾಗಲೀ ಕವಿತೆಗಳಾಗಲೀ ಹುಟ್ಟದೇ ಇರುವುದಕ್ಕೂ ಇದೇ ಕಾರಣ ಇರಬಹುದಾ? ಈಗ ಹಳ್ಳಿಯಿಂದ ನಗರಕ್ಕೆ ಬರುವ ಹುಡುಗನಿಗೆ ತಲ್ಲಣಗಳಿಲ್ಲ, ದಿಗ್ಭ್ರಮೆಯಿಲ್ಲ. ನಾಳೆ ಏನೆಂಬ ಚಿಂತೆಯಿಲ್ಲ. ಪುಟ್ಟ ಹಳ್ಳಿಯ ಹುಡುಗಿಯ ಪಾಲಿಗೆ ಅಮೆರಿಕಾದಂಥ ದೇಶ ಎಲ್ಲೋ ಇರುವ ದೂರದ ನಾಡಲ್ಲ. ಮೊದಲು ಕಿವಿಗಿಟ್ಟ ಟೆಲಿಫೋನು, ಮೊದಲು ಹತ್ತಿದ ಬಸ್ಸು, ಮೊದಲು ನೋಡಿದ ರೈಲು, ಕಣ್ಣ ಹತ್ತಿರದಿಂದ ನೋಡಿದ ವಿಮಾನ, ತಂತಿಯಿಲ್ಲದ ಫೋನು-ಯಾವುದೂ ಅಚ್ಚರಿ ಹುಟ್ಟಿಸುವುದಿಲ್ಲ. ಕಣ್ತೆರೆಯುವ ಹೊತ್ತಿಗೇ ಕಂದನ ಕಿವಿ ತುಂಬ ಮೊಬೈಲುನಾದ. ಅಡಿಗರ ಭೂಮಿಗೀತ ಕವನದ ಅವಸಾನ;
ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ;
ಉರುಳು- ಮೂರೇ ಉರುಳು- ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ.
ತೆಂಗುಗರಿಗಳ ಬೀಸಿ ಕೈಚಾಚಿ ಕರೆದಳು;
ಅಡಿಕೆಗೊನೆಗಿಲಕಿ ಹಿಡಿದಾಡಿಸಿದಳು.
ಕಬ್ಬಿನಾಲೆಯ ತಿರುಪಿನಲ್ಲಿ ಕುಳಿತೆರೆದಳು ಅಜಸ್ರಧಾರೆಯ ಕರುಳ ತುಡಿತವನ್ನು;
ಭತ್ತ ಗೋಧುವೆ ರಾಗಿ ಜೋಳ ಮೊರಮೊರಮೌರಿಯಲ್ಲಿ ಮಾಂಸದ ಹಾಡನೂಡಿಸಿದಳು.
ಗಂಟೆ ಗೋರಟೆ ಜಾಜಿ ಮಂದಾರ ಮಲ್ಲಿಗೆಯ ಗಂಧಗಿರಿಶಿಖರದಲಿ ಮಲಗಿಸಿದಳು.
ಹಕ್ಕಿಕೊರಳಿಂದುಗುವ, ತುಂಬಿ ಮರ್ಮರಮೊರೆವ ಜಾಮೂನು ನಾದದಲಿ ಜಾಳಿಸಿದಳು.
ಆಕಾಶದಲ್ಲಿ ಮೋಡದ ವಿಶ್ವರೂಪಕ್ಕೆ ಕೆಳಗೆ ಜೀವಜ್ಯೋತಿ ಕೂಡಿಸಿದಳು.
****
ಇವತ್ತಿನ ಅತ್ಯುತ್ತಮ ಕತೆಗಾರ ಯಾರು? ಒಳ್ಳೆಯ ಕತೆಗಳು ಎಲ್ಲಿ ಹುಟ್ಟುತ್ತಿವೆ? ಯಾವ ಕವಿತೆ ಎಲ್ಲರಿಗೂ ಇಷ್ಟವಾಗುತ್ತಿವೆ? ಸಾಹಿತ್ಯ ಎಲ್ಲರನ್ನೂ ತಲುಪುತ್ತಿದೆಯಾ?
ಇಂಥ ಅಸಂಖ್ಯ ಪ್ರಶ್ನೆಗಳನ್ನು ತರುಣ ಓದುಗರು ಕೇಳುತ್ತಾರೆ. ಬರೀ ಹಳೆಯ ಕಾಲದ ಕವಿಗಳ ಬಗ್ಗೆ ಬರೆಯಬಾರದು ಅನ್ನುವುದು ನಮ್ಮೆಲ್ಲರ ತಕರಾರು ಕೂಡ. ಹೊಸ ಕತೆಗಾರರ ಬಗ್ಗೆ ಹೊಸ ಕವಿಗಳ ಬಗ್ಗೆ, ಹೊಸ ಸಾಲುಗಳ ಬಗ್ಗೆ ಬರೆಯಬೇಕು ಅನ್ನುವುದು ಅನೇಕ ಓದುಗರ ಮತ್ತು ಬರಹಗಾರರ ಆಸೆಯೂ ಹೌದು.
ಆದರೆ ದುರಂತ ಇದು; ತಲುಪುವ ಹಾದಿಗಳು ಅನೇಕ ಆಗುತ್ತಿದ್ದಂತೆ ತಲುಪುವ ಜರೂರತ್ತು ಕಡಿಮೆಯಾಗುತ್ತಿದೆ. ಹಿಂದೆ ಇದ್ದದ್ದೇ ಒಂದು ಪತ್ರಿಕೆ. ಆ ಪತ್ರಿಕೆಯಲ್ಲಿ ಬರುತ್ತಿದ್ದದ್ದನ್ನು ಎಲ್ಲರೂ ಓದುತ್ತಿದ್ದರು. ಇದ್ದದ್ದೇ ಒಂದು ದೀಪಾವಳಿ ವಿಶೇಷಾಂಕ. ಇದ್ದದ್ದೇ ಒಂದು ರೇಡಿಯೋ. ಇವತ್ತು ಸಂವಹನ ಮಾಧ್ಯಮಗಳೇ ಅಸಂಖ್ಯ. ಒಬ್ಬೊಬ್ಬರು ಒಂದೊಂದನ್ನು ಆರಿಸಿಕೊಂಡು ಯಾರಿಗೂ ಏನೂ ತಲುಪುತ್ತಿಲ್ಲ. ಇಂಟರ್ ನೆಟ್ಟು ಇಲ್ಲದ ಕಾಲದಲ್ಲಿ ಷೇಕಪಿಯರ್ ಅಚ್ಚರಿಗೊಳಿಸುತ್ತಾ ಕನ್ನಡಕ್ಕೆ ಬಂದ, ಕೀಟ್ಸ್ , ಯೇಟ್ಸ್, ಕಮೂ, ಕಾಫ್ಕ ಬಂದರು. ಎಲಿಯಟ್ ಬಂದ. ಇವತ್ತು ಎಲ್ಲರನ್ನು ಓದುವ ಅವಕಾಶ ಇದೆ. ಯಾರೂ ಕನ್ನಡಕ್ಕೆ ಬರುತ್ತಿಲ್ಲ. ದಾರಿ ಸುಗಮವಾದ ಹಾಗೆ ಬರುತ್ತಿರುವುದು ಮೂರನೆಯ ದರ್ಜೆಯ ಲೇಖಕರು. ಮೂರನೆಯ ದರ್ಜೆಯ ಸಾಹಿತ್ಯ. ತೆರೆದುಕೊಂಡದ್ದು ಹೆದ್ದಾರಿ ಅಂದುಕೊಂಡವರಿಗೆ ಅಚ್ಚರಿ; ಯಾಕೆಂದರೆ ಆಧುನಿಕ ಸಂಪರ್ಕ ಮಾಧ್ಯಮದ ಹೆದ್ದಾರಿ ದೊಡ್ಡ ಮೋರಿಯಾಗಿಬಿಟ್ಟಿದೆ. ಅಲ್ಲಿನ ಕಸ, ಕೊಳಕು, ಅಸಹ್ಯಗಳೇ ನಮ್ಮಲ್ಲಿಗೆ ಬರಲಾರಂಭಿಸಿವೆ. ಇಂಟರ್ ನೆಟ್ಟು ತೆರೆದು ಹೆಚ್ಚಿನವರು ಯಾರೂ ಬೋಧಿಲೇರನ ಕವಿತೆ ಓದುವುದಿಲ್ಲ. ನಗ್ನಾವತಾರಿ ರಶಿಯನ್ ಹುಡುಗಿಯ ಸೈಟು ನೋಡುತ್ತಾರೆ.
ಮತ್ತೆ ಹಳೆಯ ಕವಿತೆಗಳತ್ತ ಬಂದರೆ ಅಡಿಗರೇ ಅಪರೂಪ ಆಗಿದ್ದಾರೆ. ಹಾಡಿಸಿಕೊಳ್ಳುವ ಕವಿಗಳು ಕಿವಿಗೆ ಬಿದ್ದು ಬಿದ್ದು ಉಳಕೊಂಡಿದ್ದಾರೆ. ಓದಿ ನಾಲಗೆ ತುದಿಯಲ್ಲಿ ಉಳಿವ ಕವಿಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಓದುವವರ ಸಂಖ್ಯೆ ಕೂಡ. ಏಕಾಂತದಲ್ಲಿ ಕುಳಿತು ಗಂಟೆಗಟ್ಟಲೆ ಓದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹಲವು ಆಮಿಷಗಳು ಕರೆಯುತ್ತವೆ. ಮತ್ತೆ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಮತ್ತೆ ಅದೇ ಹಳೆಯ ಕಥಾಶ್ರವಣದ ಕ್ರಮ. ಯಾರೋ ಸೊಗಸಾಗಿ ಓದುವುದು. ಎಲ್ಲರೂ ಒಂದೆಡೆ ಸೇರಿ ಕುಳಿತು ಕೇಳುವುದು. ಆತ ಓದುತ್ತಿರುವಷ್ಟು ಹೊತ್ತು, ಕೇಳುತ್ತಿರುವಷ್ಟು ಹೊತ್ತು ಅಲ್ಲಿ ಏಕಾಗ್ರತೆಯೂ ಇರುತ್ತದೆ. ಸಾಹಿತ್ಯದ ರುಚಿಯೂ ದಕ್ಕುತ್ತದೆ. ಈ ನಡುವೆ ಎಲ್ಲ ಕೇಳಲಿ ಎಂದು ನಾನು ಓದುವುದಿಲ್ಲ ಎಂಬ ಕರ್ಮಾಂತರದ ಸಂಧ್ಯಾರಾಗ.
*****
ಅಡಿಗರು ಬರೆದ ಎಳೆಹರೆಯದ ಸಾಲುಗಳಿಗೀಗ ಅರ್ಥವೇ ಇಲ್ಲದಂತಾಗಿದೆಯಾ? ಈ ಚಿತ್ರ ಎಷ್ಟು ಮಕ್ಕಳ ಕಣ್ಣಮುಂದಿದೆ;
ಹಾಡಿಯಲಿ ಮರಮರದ ಕೆಳಗೆ ಧೂಪ ದಟ್ಟಕಾಯಿ ಚಿಗಿತೆಳಮೊಳಕೆ, ನರಳು ಕೇಕೆ;
ಮಳೆಮಂತ್ರದಂಡ ಮುಟ್ಟಿದ ತಿಟ್ಟುನಿಟ್ಟಿನಲಿ ನೆಲವೆಲ್ಲ ಮೊಳೆ, ಮೊಳಕೆ, ಕೊನರು, ಸಸಿ, ಗಿಡ, ಹುಲ್ಲು;
ತೋಟಗೋರಟೆಗೆ ಮೈಯೆಲ್ಲ ಕಾಮನಬಿಲ್ಲ ಬಲ್ಬುಮಾದಕ ದೀಪ, ಚೆಲ್ಲು ಗುಲ್ಲು.
ನಂದಬಟ್ಟಲನೆತ್ತಿ ತುಟಿಗಿಟ್ಟು ನರ್ತಿಸಿತು ಅಂದುಗೆಯನಾಡಿಸುತ ಬಂದ ಭೃಂಗ;
ಹಿತ್ತಲ ಜಗಲಿಮೇಲೆ ಕುಳಿತು ಧುಮ್ಮಿಕ್ಕಿದೆನು ಕೆಳಗೆ ಮತ್ತೂ ಕೆಳಗೆ, ತಳಕೆ ಕುಂಗ.
ಹಸುರುತೆರೆ ಅಪ್ಪಳಿಸುತ್ತಿರೆ ಮೇಲೆ ನೊರೆ ಕಾರಿ, ಬೀಸುತಿರೆ ಬಿರುಗಾಳಿ, ಗುಡುಗು ಮೊಳಗೆ;
ಬೇಲಿ ಮೇಗಡೆ, ಗದ್ದೆಯಂಚಲ್ಲಿ, ತೋಪುಗಳ ಅಂಗುಲಂಗುಲದಲ್ಲಿ ತೋಟದೊಳಗೆ
ಎಲ್ಲೆಲ್ಲೂ ಹೆರಿಗೆ ಮನೆ; ಬೇನೆ, ಸಂಕಟ, ನಗೆ, ಕೊರಡು ಚಿಗುರಿದ ಚೆಲುವು, ಚೀರು, ಕೇಕೆ.
ಅಹ; ಪ್ರಾತಃಕಾಲದಲ್ಲಿ ಬೆಳಕಿನ ದಾಹ.

*****
ಇಂಥ ಕವಿತೆಯನ್ನು ನಾಟಕೀಯವಾಗಿ, ಅರ್ಥವತ್ತಾಗಿ ಓದುವವರು ಬೇಕು. ಹಾಸ್ಯೋತ್ಸವದ ಅಬ್ಬರವನ್ನು ಕೊಂಚ ಬದಿಗಿಟ್ಟು ಅರ್ಥಪೂರ್ಣ ಕವಿತೆಗಳನ್ನು ಓದಿಸಿ, ಕೇಳಿಸಿ, ಅದರ ಅರ್ಥ ಸ್ಪುರಿಸುವಂತೆ ಮಾಡಿ, ಮನಸ್ಸಿಗೆ ಮುದನೀಡಿ, ಕವಿತೆಗಳ ರುಚಿಯನ್ನು ತಿಳಿಸಿಕೊಡುವವರು ಬೇಕು. ಸಂಜೆಗೆ ಟೀವಿ ಮುಂದೆ ಕೂರುವ ಬದಲು ಆಲನಹಳ್ಳಿ, ಅನಂತಮೂರ್ತಿ, ಲಂಕೇಶರ ಕತೆಗಳನ್ನು ಕೇಳುವುದಕ್ಕೆ ಹೋಗುವ ಒಂದು ಸತ್ಸಂಪ್ರದಾಯ ಶುರುವಾಗಬೇಕು. ಸಾಹಿತ್ಯ ಓದುವುದೂ ಹೆಮ್ಮೆಯ ಸಂಗತಿಯಾಗಬೇಕು. ಕನ್ನಡ, ಕನ್ನಡಕವಿತೆ, ಕನ್ನಡಿಗ ಉಳಿಯುವುದು ಆಗ.
ಅದು ಬಿಟ್ಟು ರಜನೀಕಾಂತ್ ಸಿನಿಮಾಗಳನ್ನು ಬಹಿಷ್ತರಿಸುವ ಮೂಲಕ, ಕರುಣಾನಿಧಿಗೆ ಬೈಯುವ ಮೂಲಕ, ಕನ್ನಡಿಗರು ಕನ್ನಡಿಗತನ ತೋರುವುದಕ್ಕೆ ಸಿನಿಮಾ ನಟರ ಮುಖಕ್ಕೆ ಮಸಿ ಬಳಿಯಬೇಕು ಎನ್ನುವ ತನಕ ಭಾಷೆಯೂ ಉದ್ಧಾರ ಆಗುವುದಿಲ್ಲ, ಭಾಷಿಗರು ಕೂಡ.