Wednesday, July 30, 2008

ಫಸ್ಟ್ ಹಾಫ್, ಫಸ್ಟ್ ಕಾಪಿ

ಅಜ್ಜೀಪುರ-ರವಿ
ಅಜ್ಜೀಪುರ, ರವಿ, ಶರತ್, ಕಲ್ಕೋಡ್, ನಿವೇದಿತಾ, ಶೀಲಾ ಮೇಡಂ, ಉಮೇಶ್
ಪುಸ್ತಕ ಹೀಗಿದೆ

ಫುಲ್ ಮತ್ತು ಹಾಫ್Friday, July 25, 2008

ಕಂಬನಿಯಲ್ಲಿ ನಿಮ್ಮದೆಷ್ಟು ನಮ್ಮದೆಷ್ಟು?

ಕವಿಯ ಕಂಬನಿಯಲ್ಲಿ ಕವಿಯದ್ದೆಷ್ಟು ಪರರದ್ದೆಷ್ಟು ಎಂದು ಲೆಕ್ಕ ಹಾಕುತ್ತ ಕೂರುವವನು ಒಳ್ಳೆಯ ವಿಮರ್ಶಕನೂ ಅಲ್ಲ, ಓದುಗನೂ ಆಗಲಾರ ಎಂಬ ನಂಬಿಕೆಯನ್ನು ಬಲಗೊಳಿಸಿದ್ದು ಚೇತನಾ ತೀರ್ಥಹಳ್ಳಿ ಅವರ ಭಾಮಿನಿ ಷಟ್ಪದಿ’. ಒಂದು ಕೃತಿ ಒಬ್ಬ ಓದುಗನನ್ನು ಎಷ್ಟರ ಮಟ್ಟಿಗೆ ಒಳಗೊಳ್ಳುತ್ತದೆ ಹಾಗೂ ಅವನ ಪಾಲಿಗೆ ಎಷ್ಟರ ಮಟ್ಟಿಗೆ ತೆರೆದುಕೊಳ್ಳುತ್ತದೆ ಅನ್ನುವುದು ಆಯಾ ಓದುಗನ ಅನುಭವ, ಆರ್ದ್ರತೆಗೆ ಸಂಬಂಧಿಸಿದ್ದು. ಹೀಗಾಗಿ ಪ್ರತಿಯೊಂದು ಕೃತಿಯೂ ಒಬ್ಬೊಬ್ಬನ ಪಾಲಿಗೂ ವಿಶಿಷ್ಟ, ವಿಭಿನ್ನ ಮತ್ತು ತನ್ನದೇ ಆದ ಅರ್ಥಗಳನ್ನು ಹೊರಡಿಸುತ್ತಾ ಹೋಗುತ್ತದೆ. ಅದು ಇರಬೇಕಾದದ್ದೂ ಹಾಗೆಯೇ.
ಇಂಗ್ಲಿಷಿನಲ್ಲಿ compassion ಎಂಬ ಪದವಿದೆ. ಕನ್ನಡದಲ್ಲಿ ಅದಕ್ಕೆ ಸಮಾನಾರ್ಥಕ ಪದ ಸಹಾನುಭೂತಿ. ಅದನ್ನು ನಾವು ಅನುಕಂಪ ಅನ್ನುವ ಅರ್ಥದಲ್ಲಿ ಬಳಸುತ್ತಿದ್ದರೂ ಅದರ ಮೂಲ ಅರ್ಥ ಸಹ-ಅನುಭೂತಿ. ಇಂಗ್ಲಿಷಿನಲ್ಲೂ ಅದೇ ಅರ್ಥ: com-passion. ಇನ್ನೊಬ್ಬರ ಭಾವನೆಯಲ್ಲಿ ಭಾಗಿಯಾಗುವುದು. ಬೇಡನ ಬಾಣಕ್ಕೆ ಪ್ರಾಣ ಕಳೆದುಕೊಂಡ ಕಾಮಮೋಹಿತ ಕ್ರೌಂಚದ ಸಾವಿಗೆ ಜೊತೆಗಾತಿ ಕ್ರೌಂಚ ಕಣ್ಣೀರಿಡುತ್ತಿದ್ದಾಗ ವಾಲ್ಮೀಕಿ ಅನುಭವಿಸಿದ್ದು ಅದನ್ನೇ ಇರಬೇಕು; ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ, ಯತ್ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್. ಆ ಕ್ಷಣದ ಕೋಪ, ನೋವು, ದುಃಖ ಎಲ್ಲವೂ ಒಂದೇ ಮಾತಲ್ಲಿ ಹೊರಹೊಮ್ಮಿದ್ದು ಹಾಗೆ.
ತೀವ್ರತೆಯೇ ಬರಹಗಾರನ ಶಕ್ತಿ. ಅನುಭವಕ್ಕೆ ಬಂದದ್ದು ಮಾತುಗಳಲ್ಲಿ ಸೋರಿಹೋಗದ ಹಾಗೆ ದಾಟಿಸುವುದು ಸಾಧ್ಯವಾಗಲಿ ಎಂಬ ಆಶೆಯಿಂದಲೇ ಚೇತನಾ ತೀರ್ಥಹಳ್ಳಿ ಬರೆಯುತ್ತಾರೆ. ತನಗನ್ನಿಸಿದ್ದನ್ನು ಹೇಳುವುದಕ್ಕೆ ತನ್ನದೇ ಆದ ನಿರೂಪಣಾ ಶೈಲಿಯನ್ನೂ ಕಂಡುಕೊಂಡಿದ್ದಾರೆ. ಅವರು ಆಡುತ್ತಿರುವ ಮಾತುಗಳಲ್ಲಿರುವ ಪ್ರೀತಿ, ಆಕ್ರೋಶ ಮತ್ತು ತ್ಯಕ್ತಭಾವ ತನಗೆ ಬೇಕಾದಂಥ ಅಭಿವ್ಯಕ್ತಿ ಕ್ರಮವನ್ನು ತಾನಾಗೇ ಹುಡುಕಿಕೊಂಡಂತಿದೆ. ಈ ಸಾಲುಗಳನ್ನೊಮ್ಮೆ ಓದಿ:
ಮತ್ತೆ ಮತ್ತೆ ಕ್ಲಿಪ್ಪು ಟಪಟಪಾರೆನಿಸಿ ಜುಟ್ಟು ಬಿಗಿದಳು.
ಅವಳಿನ್ನೂ ಈಗ ತಾನೆ ಹದಿಹರೆಯ ಕಳೆದವಳಂತೆ ಇದ್ದಾಳೆ. ಪ್ರಪೋಸು ಮಾಡಬರುವ ಹುಡುಗರಿಗೆ ಎಂಟು ವರ್ಷದ ಮಗು ಫ್ರೀ’ ಅಂದು ಕೆಣಕುತ್ತಾ ಬೇಸ್ತುಬೀಳಿಸುತ್ತಾಳೆ. ಹೀಗೇ ಅಲೆಯುತ್ತಿರುತ್ತಾಳೆ ದಿನವೆಲ್ಲ. ದುಡಿತ ಮುಗಿದರೂ ಮನೆ ಸೇರದೆ, ನಾಟಕ, ಉಪನ್ಯಾಸ, ಸೆಮಿನಾರುಗಳಲ್ಲಿ ಕಳೆದುಹೋಗುತ್ತಾಳೆ. ಅವಳ ವ್ಯಾನಿಟಿ ಬ್ಯಾಗಲ್ಲಿ ಸೇಫ್ಟಿಪಿನ್ನಿನ ಗೊಂಚಲು. ಕಾಲಿಗೆ ಬೆಲ್ಟಿಲ್ಲದ ಚಪ್ಪಲಿ. ಒಂಟಿಹೆಣ್ಣಿನ ಬೆಲೆ’ ಗೊತ್ತಿದೆ ಅವಳಿಗೆ.
ಅವಳ ರಾತ್ರಿಗಳೆಲ್ಲ ಬಾಲ್ಕನಿಗಳಲ್ಲಿ ಕುಂತೇ ಕಳೆಯುತ್ತದೆ.’
ಕವಿ ಸುಡುಸುಡುವ ಹೋಳಿಗೆಯ ಹೆಂಚು ಇದ್ದ ಹಾಗೆ. ಅದು ತನ್ನನ್ನು ಬೆಂಕಿಗೆ ಒಡ್ಡಿಕೊಂಡು ಕಾದು ಕೆಂಡವಾಗಿರುತ್ತದೆ. ಆದರೆ ಹೋಳಿಗೆಯನ್ನು ಎಷ್ಟು ಬೇಕೋ ಅಷ್ಟು ಸುಟ್ಟು, ಹದವಾಗಿಸಿ, ಸವಿಯಾಗಿಸಿ ನಮ್ಮ ಕೈಗಿಡುತ್ತದೆ, ಕೈಗೆ ನಾಲಗೆಗೆ ಹಿತವಾದ ಬಿಸುಪಷ್ಟೇ ತಾಕುವಂತೆ.
ಚೇತನಾ ಬರಹಗಳೂ ಹಾಗೆ ನಮ್ಮನ್ನು ಸುಡದಂತೆ, ಬಿಸುಪು ಆರದಂತೆ, ನಮ್ಮೊಳಗಿನ ಸುಡುಕೆಂಡ ನೆನಪಾಗುವಂತೆ, ಕೆಂಡದ ಹಾದಿಯಲ್ಲಿ ನಡೆದವರ ಬಗ್ಗೆ ಪ್ರೀತಿ ಮೂಡುವಂತೆ ಮಾಡುತ್ತವೆ .
*****
ಅಂಕಣ ಬರಹಗಾರರ ಕಷ್ಟ ಸುಖ ಒಂದೆರಡಲ್ಲ. ಅನಿಸಿದ್ದು ಅಂಕಣದೊಳಗೆ ಪಡಿಮೂಡುವಂತೆ ಮಾಡುವುದು, ಆ ಕ್ಷಣದ ಭಾವವನ್ನು ಕವನಕ್ಕೆ ಒಗ್ಗಿಸಿದಷ್ಟೇ ಕಷ್ಟ.
ಇಂಥದ್ದರಲ್ಲಿ ಪದಗಳನ್ನು ದುಂದುವೆಚ್ಚ ಮಾಡದ ಚೇತನಾ, ಸಂಭಾಷಣೆಯ ರೂಪದಲ್ಲಿ, ತನ್ನ ವಿಶಿಷ್ಟ ಲಹರಿಯಲ್ಲಿ, ಕಾವ್ಯದ ಸಾಲುಗಳೇನೋ ಅನ್ನಿಸುವಂತೆ ಹೇಳಿಬಿಡುತ್ತಾರೆ. ಹೀಗಾಗಿ ಅವರ ಸಾಲುಗಳಿಗೆ ಕವಿತೆಯ ಸಂದಿಗ್ಧತೆ ಪ್ರಾಪ್ತವಾಗಿದೆ.
ತಂದೆ ಅವಮಾನಿಸಲಾರ ಮಗನನ್ನ, ಅವಮಾನಿಸಲಾರ ಹೆಂಡತಿಯನ್ನ.
ಹಾದಿ ಬೀದಿಯ ಮಾತಿಗೆ ಮಮತೆ ನೊಂದಿತು’.
ಚೇತನಾರ ಬಿಸಾಡು ಆ ಹಳೆಯ ನೋವುಗಳನ್ನು..’ ಓದುತ್ತಿದ್ದಂತೆ ಎಂದೋ ಓದಿದ ನ್ಯೂಜಿಲೆಂಡಿನ ಬರಹಗಾತಿ ಕೆಥರೀನ್ ಮ್ಯಾನ್ಸ್‌ಫೀಲ್ಡ್ ಬದುಕು ಬರಹದ ನೆನಪು. ಡಿ ಎಚ್ ಲಾರೆನ್ಸ್ ಸಹವರ್ತಿಯಾಗಿದ್ದ ಕೆಥರೀನ್, ಗಾಢ ಏಕಾಂತ, ಕಾಯಿಲೆ, ಮಾತ್ಸರ್ಯದ ನಡುವೆ ಬದುಕಿದವಳು. ಅವಳ ಬರಹಗಳಲ್ಲಿ ಮಧ್ಯಮ ವರ್ಗದ ವೈವಾಹಿಕ ಮತ್ತು ಸಾಂಸಾರಿಕ ಬದುಕಿನ ದುಗುಡಗಳು ಪ್ರಜ್ಞಾಪ್ರವಾಹವಾಗಿ ಹರಿದಿವೆ. ತನ್ನ ಪ್ರಜ್ಞೆಯ ಒಂದು ಭಾಗವಾಗಿರುವ ದುಮ್ಮಾನಗಳನ್ನು ಚೇತನಾ ದಾಟಿಸುವ ಕ್ರಮದಲ್ಲೇ ನಳನಳಿಸುವ ಹೊಸತನವಿದೆ. ಆದರೆ, ಶೈಲಿಯನ್ನು ಮೆಚ್ಚಿಕೊಳ್ಳುವ ಭರದಲ್ಲಿ ಸಂವೇದನೆಯನ್ನು ಕಡೆಗಣಿಸುವ ಅಪಾಯವೂ ಇದೆ ಎನ್ನುವುದನ್ನು ಮರೆಯಬಾರದು.
ಏಕಕಾಲಕ್ಕೇ ಭಾಮಿನಿ ಷಟ್ಪದಿ’ ಮೀರಲಾಗದವರ ಕಷ್ಟವೂ, ಮೀರಬೇಕು ಅಂದುಕೊಂಡವರ ಭರವಸೆಯೂ ಆಗಿ ನಮ್ಮನ್ನು ತಲುಪುತ್ತದೆ. ಅನುದಿನದ ಅಂತರಗಂಗೆಯನ್ನು ತಮ್ಮ ತೀವ್ರ ಜೀವನೋತ್ಸಾಹ, ಛಲ ಮತ್ತು ಶ್ರಮಜೀವನದ ಮೂಲಕ ದಾಟಲು ಹೊರಟವರನ್ನು ಹುರಿದುಂಬಿಸುತ್ತದೆ. ಸೀತೆ, ರಾಧೆ, ಯಶೋಧರೆ, ಅಹಲ್ಯೆಯರ ಕುರಿತು ಬರೆಯುವ ಹೊತ್ತಿಗೆ ಚೇತನಾರಲ್ಲಿ ಕಾಣಿಸುವ ಗೊಂದಲ ಕೂಡ ಸಹಜವಾದದ್ದೇ. ಅದನ್ನು ತನ್ನ ನಿಲುವು ಎಂಬಂತೆ ಅವರು ದಾಖಲಿಸುವುದಿಲ್ಲ. ಅದು ಕೂಡ ಜಂಗಮ ಭಾವವಾಗಿಯೇ ಹೊರಹೊಮ್ಮುತ್ತದೆ. ಹೀಗಾಗಿ ಗೊತ್ತಿರುವ ಗೌತಮನ ಕತೆಯಲ್ಲೂ ಚೇತನಾ ಚಿಂತನೆ ಹಣಿಕಿಹಾಕುತ್ತವೆ:
ಇಂದ್ರ ಮೈತುಂಬ ಕಣ್ಣು ಹೊತ್ತು ಕುರುಡನಂತೆ ಸ್ವರ್ಗದ ಹಾದಿ ಹಿಡಿದ. ಅಹಲ್ಯೆ ಮೈತುಂಬ ಸೆರಗು ಹೊದ್ದು ಗಂಡನೆದುರು ಬೆತ್ತಲಾದಳು’.
ದ್ರೌಪತಿಯ ಅಂತರಂಗವನ್ನು ಬಿಚ್ಚಿಡುವ ಹೊತ್ತಿಗೆ ಚೇತನಾ ಮತ್ತಷ್ಟು ಆಳಕ್ಕಿಳಿಯುತ್ತಾರೆ. ಐವರಿಗೂ ಪರ ಸತಿಯಾಗಿಯೇ ದೂರವಾಗುತ್ತಾ, ಪರಿಪೂರ್ಣ ಪ್ರೇಮಕ್ಕಾಗಿ ಹಂಬಲಿಸುತ್ತಾ, ನಡುನಡುವೆ ಕರ್ಣನ ಕೈ ಹಿಡಿದಿದ್ದರೆ ಅಂದುಕೊಳ್ಳುತ್ತಾ ಪತಿವ್ರತೆಯ ಪಟ್ಟ ನಿಭಾಯಿಸುತ್ತಾ ಉಳಿದುಹೋದಳು.’
ಇಂಥ ಸೂಕ್ಷ್ಮ ಗ್ರಹಿಕೆಗಳಲ್ಲಿ ಚೇತನಾ ಮುಖಾಮುಖಿಯಾಗುತ್ತಾರೆ. ಅಂಕಣ ಬರಹದ ಮಿತಿಗಳನ್ನು ಮೀರುತ್ತಾರೆ. ಅಲ್ಲಲ್ಲಿ ಕವಿಯಾಗುತ್ತಾರೆ. ಮಗುವಿನ ಹುಟ್ಟಿಗೆ ನಾವೊಂದು ಪಿಳ್ಳೆ’ ನೆವ ಮಾತ್ರ ಎಂದು ಬರೆದು ಬೆಚ್ಚಿಬೀಳಿಸುತ್ತಾರೆ. ಪಿಳ್ಳೆ’ ಅಂದರೂ ಮಗುವೇ.
ಒಮ್ಮೆ ಇಡಿಯಾಗಿ ಓದಿ, ಆಗೊಮ್ಮೆ ಈಗೊಮ್ಮೆ ಒಂದೊಂದೇ ಬರಹವನ್ನು ಓದುತ್ತಾ ನಮ್ಮ ಅನುಭವದ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದಾದ ಅನೇಕ ಬರಹಗಳು ಇಲ್ಲಿವೆ. ಇವನ್ನು ಅಂಕಣಬರಹಗಳೆಂದೋ, ಪ್ರಬಂಧಗಳೆಂದೋ, ಲಹರಿಗಳೆಂದೋ ಕರೆದರೆ ಈ ಬರಹಕ್ಕಿರುವ ಬಹುಮುಖೀ ಸಾಧ್ಯತೆಗಳನ್ನು ಸೀಮಿತಗೊಳಿಸಿದಂತಾಗುತ್ತದೆ.
ಷಟ್ಪದಿಯ ಪಂಜರದಿಂದ ಭಾಮಿನಿ ಆಚೆ ಬಂದಿದ್ದಾಳೆ; ಆ ನೆನಪೇ ಈಗ ಪಂಜರದಂತೆ ಕಾಣಿಸುತ್ತಿದೆ. ಬಿಡುಗಡೆಗಾಗಿ ಕಾತರಿಸುವ ವಿಷಣ್ಣ ಮನಸ್ಸಿನಿಗೆ ಅಕ್ಷರವೇ ಮುದ್ದಿಸುವ ತುಟಿಯಾಗುವ ಪವಾಡಕ್ಕೆ ಕಣ್ತುಂಬುತ್ತಿದೆ.
-ಚೇತನಾ ತೀರ್ಥಹಳ್ಳಿ ಅವರ ಭಾಮಿನಿ ಷಟ್ಪದಿ ಸಂಕಲನಕ್ಕೆ ಬರೆದ ಮುನ್ನುಡಿ.

Sunday, July 20, 2008

ಇಲ್ಲಿ ಹೆಜ್ಜೆ­ಯಿ­ಡುವ ಹೆಣ್ಣಿ­ಗಿ­ರುವ ಭಯ ಅನಾ­ದಿಯು..

ಅದು ಕವಿ­ತೆಯಾ? ಕಥ­ನವಾ? ಕವಿ­ತೆಯ ಮೂಲಕ ಹೇಳುವ ಕತೆಯಾ, ಕತೆಯೇ ಕವಿ­ತೆ­ಯಾದ ಬೆರಗಾ?
ಹೀಗೆ ಶುರು­ವಾ­ಗು­ತ್ತದೆ ಅದು;
ಬೆಕ್ಕು ಬರು­ವು­ದಿಲ್ಲ ಮಗೂ, ಹಾಲು ಮಡಕೆ ಮುಚ್ಚಿಡು.
ಕತ್ತ­ಲಲ್ಲಿ ಎಡ­ವ­ದಂತೆ ದೀಪ­ವೊಂದು ಹಚ್ಚಿಡು.
ಬೆಕ್ಕು ಬರು­ವು­ದಿಲ್ಲ ಅನ್ನು­ತ್ತಲೇ ಹಾಲು ಮಡಕೆ ಮುಚ್ಚಿಡು ಅಂತ ಬರೆ­ಯು­ತ್ತಾನೆ ಕವಿ. ಅಂದರೆ ಸಾಮಾನ್ಯ ತಿಳು­ವ­ಳಿ­ಕೆಗೆ ತದ್ವಿ­ರುದ್ದ ಯೋಚನೆ. ಬೆಕ್ಕು ಬರು­ತ್ತದೆ ಹಾಲು ಮಡಕೆ ಮುಚ್ಚಿಡು ಅನ್ನು­ವುದು ಒಂದು ಥರ. ಅಧರ ಮುಂದಿನ ಸಾಲಲ್ಲೇ ಕತ್ತ­ಲಲ್ಲಿ ಎಡ­ವ­ದಂತೆ ದೀಪ­ವೊಂದು ಹಚ್ಚಿಡು ಅನ್ನುವ ಮತ್ತೊಂದು ಅಚ್ಚರಿ.
ಇದನ್ನು ಇಲ್ಲಿಗೇ ಬಿಟ್ಟು ಕವಿ ಮತ್ತೆ­ಲ್ಲಿಗೋ ಜಿಗಿ­ಯು­ತ್ತಾನೆ;
ಬೆಟ್ಟ­ಗ­ಳಿಗೆ ಹಗ­ಲಿ­ರುಳೂ ನೀಲ ನೀಲ ನಿದ್ದೆಯು
ಊರ ಸುತ್ತ ತೆನೆ­ಗ­ಳಿಂದ ತೊನೆವ ಹಸಿರು ಗದ್ದೆಯು
ಸಾಲು ಮರದ ನೆರ­ಳಿ­ನಲ್ಲಿ ಹಾವಿ­ನಂಥ ಹಾದಿಯು
ಇಲ್ಲಿ ಹೆಜ್ಜೆ­ಯಿ­ಡುವ ಹೆಣ್ಣಿ­ಗಿ­ರುವ ಭಯ ಅನಾ­ದಿಯು.

ಹೀಗೊಂದು ಚಿತ್ರಣ ಕೊಟ್ಟ ಕವಿ ಜಿಗಿ­ಯು­ವುದು ಊರಿನ ವರ್ಣ­ನೆಗೆ. ಆ ಊರಿನ ವರ್ಣ­ನೆಯೋ ಮತ್ತೂ ವಿಚಿತ್ರ;
ಊರು ಉಡಿ­ಯೊ­ಳಿ­ಟ್ಟು­ಕೊಂಡು ನಿಂತ ತೆಂಗು ಅಡ­ಕೆಯು
ಸಾಲ­ದಲ್ಲಿ ಸೋಲಿ­ನಲ್ಲಿ ಬೇಯು­ವ­ವರ ಮಡ­ಕೆಯು
ಮುಗಿಲು ಹರಿದ ಹಾಗೆ ಸುರಿ­ದು­ಬಿದ್ದ ಮಳೆಯ ನೀರಿಗೂ
ನೆಲದ ನೋವು ಎದೆಯ ಕಾವು ಆರ­ಲಿಲ್ಲ ಯಾರಿಗೂ.
ಈ ಊರಿನ ಚಿತ್ರ­ದಿಂದ ಒಂದು ಕ್ಲೋಸ­ಪ್ಪಿಗೆ ಹೊರ­ಳು­ತ್ತದೆ ಕವಿತೆ. ಅದೂ ಎಷ್ಟು ಚೆನ್ನಾ­ಗಿದೆ ನೋಡಿ;
ಇಲ್ಲೆ ಇದ್ದ ಮಂಜು­ಗೌಡ ಕೆರೆಯ ಬಯ­ಲಿ­ನಂ­ಚಿಗೆ
ಹೂವ ಹೊದಿ­ಸು­ತಿತ್ತು ಬಳ್ಳಿ ಹೆಣೆದ ಮನೆಯ ಹೆಂಚಿಗೆ
ಅವ­ನಿ­ಗಿ­ದ್ದ­ಳೊಬ್ಬ ಮಗಳು, ನಾಗಿ ನಾಗ­ವೇ­ಣಿಯು
ಹಾವಿ­ನಂಥ ಜಡೆಯ ತುಂಬ ಹೂವ ಮುಡಿವ ರಾಣಿಯು
ಇದು ಮತ್ತಷ್ಟು ಸಮೀಪ ಚಿತ್ರ. ಊರಿ­ನಿಂದ ಮನೆಗೆ ಬಂದು, ಮನೆ­ಯಿಂದ ನಾಗಿಯ ಕಡೆ ಹೊರಳಿ ಕವಿ­ಕೆ­ಮರಾ ನಿಲ್ಲು­ವುದು ಅವಳ ಮುಂದೆ;
ಬೊಗ­ಸೆ­ಗಣ್ಣು, ಗಲ್ಲ­ದಲ್ಲಿ ಮೂಡಿ ನಗೆಯ ಮಲ್ಲಿಗೆ
ಕಂಪು ಸೂಸಿ ಕರೆ­ಯು­ತಿತ್ತು ಕನ­ಸು­ಗ­ಳನು ಮೆಲ್ಲಗೆ
ಅವಳ ನುಡಿಯ ಮಿಂಚು­ಕಿ­ಡಿಯ ಹೊತ್ತಿ­ಸಿತ್ತು ಸುತ್ತಲೂ
ಅವಳ ನಗೆಯ ನೂರು ಬಗೆಯ ನೆನಪು ಬುಗ್ಗೆ ಎತ್ತಲೂ
ಅಲ್ಲಿಗೆ ನಾಗಿಯ ಸೌಂದ­ರ್ಯದ ವರ್ಣನೆ ಕೊನೆ­ಯಾ­ಗು­ತ್ತದೆ. ಮತ್ತೆ ಶುರು­ವಾ­ಗು­ವುದು ಅವಳ ದೈನಿಕ. ಕಷ್ಟದ ಬದುಕು. ಆ ಕಷ್ಟ­ದಲ್ಲೂ ಒಂದು ಚೆಲು­ವಿದೆ ಅನ್ನು­ತ್ತಿ­ದ್ದಾನಾ ಕವಿ;
ಹೊಳೆಯ ಅಲೆ­ಗ­ಳೆ­ತ್ತಿ­ಕೊಂಡು ಸಾಗು­ವಂತೆ ನಾವೆಗೆ
ಹಾಡು ಹರಿದು ಹೋಗು­ವಂತೆ ಮಾವಿ­ನಿಂದ ಮಾವಿಗೆ
ಹುಲ್ಲು ಹೊರೆಯ ಹೊತ್ತು­ಕೊಂಡು ಅವಳು ಬರುವ ಹೊತ್ತಿಗೆ
ಸೂರ್ಯ­ನೇಕೋ ತಣ್ಣ­ಗಾದ ನಿಂತ­ರೂನು ನೆತ್ತಿಗೆ.
**­*­**
ಸುಬ್ಬಣ್ಣ ರಂಗ­ನಾಥ ಎಕ್ಕುಂಡಿ ಅವರ ಕಥನ ಗೀತ `ನಾ­ಗಿಯ ಕತೆ' ಹೀಗೆ ಶುರು­ವಾ­ಗು­ತ್ತದೆ. ಕೆ ಎ್ ನರ­ಸಿಂಹ ಸ್ವಾಮಿಯ ಹಾಗೆ ಎಕ್ಕುಂಡಿ ಕೂಡ ಮೃದು ಮಧುರ ಪದ­ಗ­ಳನ್ನೇ ಬಳ­ಸು­ತ್ತಾರೆ. ಪ್ರೀತಿಯೇ ಮೈವೆ­ತ್ತಂತೆ ಬರೆ­ಯು­ತ್ತಾರೆ. ಕತೆಗೆ ಕೂಡ ಕವಿ­ತೆಯ ಸ್ಪರ್ಶ ಕೊಡ­ಲೆ­ತ್ನಿ­ಸು­ತ್ತಾರೆ. ಅವಳ ಚೆಲು­ವನ್ನು ಬರೀ ಮಾತು­ಗ­ಳಲ್ಲಿ ವರ್ಣಿ­ಸಿ­ದರೆ ಸಾಲದು ಅನ್ನಿಸಿ ಕವಿ ಮತ್ತೊಂದು ಹಂತಕ್ಕೆ ಜಿಗಿ­ಯು­ತ್ತಾರೆ;
ಅವಳ ಹಗುರು ಹೆಜ್ಜೆ­ಯಲ್ಲಿ ಚೆಲುವು ಹೆಜ್ಜೆ ಇಟ್ಟಿತು
ಗೇರು ಹೂವಿ­ನಂತೆ ಪ್ರೀತಿ ಎದೆಗೆ ಲಗ್ಗೆ ಇಟ್ಟಿತು.
ಅವಳ ಕೈಯ ಕೊಡವ ಕಂಡು ನೀರು ಬೇಗ ತುಂಬದು
ನಿಲ್ಲು ನಾಗಿ ನಿಲ್ಲು ನೋಡ­ಬೇಕು ನಿನ್ನ­ನೆಂ­ಬುದು.
ಈ ವರ್ಣ­ನೆಯ ನಂತರ ಕತೆ ಶುರು­ವಾ­ಗು­ತ್ತದೆ. ತನ್ನೂ­ರಿನ ಜಾತ್ರೆಗೆ ನಾಗಿ ಹೋಗು­ತ್ತಾಳೆ. ದುಂಡು ಕುಂಕುಮ ಇಟ್ಟು, ಹಸಿರು ಸೀರೆ­ಯುಟ್ಟು, ಹೊಳೆವ ರವಿಕೆ ತೊಟ್ಟು ತಾಯಿಯ ಜೊತೆ ರಥೋ­ತ್ಸವ ನೋಡಲು ಹೋಗು­ತ್ತಾಳೆ. ಹಾದಿ­ಯಲ್ಲಿ ಆಕೆ­ಗೊಂದು ಬೆಕ್ಕು ಸಿಗು­ತ್ತದೆ. ಎಷ್ಟು ಚೆಂದ ಬೆಕ್ಕು ಅನ್ನುತ್ತಾ ಅದನ್ನು ಅಮ್ಮ­ನಿಗೆ ತೋರಿ­ಸು­ತ್ತಾಳೆ ಆಕೆ. ಅದನ್ನು ಎತ್ತಿ ಎದೆ­ಗೊ­ತ್ತಿ­ಕೊಂಡು ಮುದ್ದಿ­ಸು­ತ್ತಾಳೆ.
ತಾಯಿ ಮಗಳು ಅಲ್ಲಿಂದ ಸಂತೆಗೆ ಹೋಗು­ತ್ತಾರೆ. ಸಂತೆ­ಯಲ್ಲಿ ಅವ­ರಿಗೆ ಅನೇ­ಕಾ­ನೇಕ ಅನು­ಭ­ವ­ಗ­ಳಾ­ಗು­ತ್ತವೆ. ಅಲ್ಲಿ ಆಕೆ ಅವ­ನನ್ನು ೇಟಿ­ಯಾ­ಗು­ತ್ತಾಳೆ.
ಯಾರ­ವನು?
ಚಿಗುರು ಮೀಸೆ ಎಳೆಯ ನಗೆಯ ರೂಪ­ವಂತ ಆತನು
ಎದೆಯ ಕದವ ತೆರೆದು ನುಡಿದ ಕಣ್ಣಿ­ನಲ್ಲೆ ಮಾತನು
ಕಣ್ಣು ಕಣ್ಣಿ­ನಲ್ಲಿ ಕೂಡಿ ಝಳ­ಪಿ­ಸಿತ್ತು ಮಿಂಚನು
ಪ್ರೀತಿ­ಯೆಂಬ ಸಿಡಿಲು ಹೊಡೆ­ಯು­ತಿತ್ತು ಹಾಕಿ ಹೊಂಚನು

ಪ್ರೀತಿ­ಯನ್ನು ಸಿಡಿಲು ಅಂತ ಕರೆ­ಯು­ತ್ತಾರೆ ಎಕ್ಕುಂಡಿ. ಆ ೇಟಿಯ ನಂತರ, ಕಣ್ಣು­ಕ­ಣ್ಣು­ಗಳ ಸಮಾ­ಗ­ಮದ ನಂತ­ರದ ಸ್ಥಿತಿ­ಯನ್ನು ಅವರು ವರ್ಣಿ­ಸು­ವುದು ಯಾವ ಪ್ರೇಮ­ಗೀ­ತೆಗೆ ಕಡಿಮೆ ಹೇಳಿ?

ಯಾರು ಹಾಕಿ ಹೋದ­ರ­ವಳ ಎದೆಗೆ ಗಂಧ­ಧೂ­ಪವ
ಯಾರು ಹೊತ್ತಿ­ಸಿ­ಟ್ಟ­ರೊ­ಳಗೆ ಬಂಗಾ­ರದ ದೀಪವ
ಯಾವ ಕೆರೆಗೆ ಯಾವ ಕರೆಗೆ ಹಾರು­ತಿ­ಹವು ಕೊಕ್ಕರೆ?
ಯಾವ ತಾರೆ ಇಲ್ಲಿ ಸೂರೆ ಮಾಡು­ತಿ­ಹವು ಅಕ್ಕರೆ?

ಈ ನಾಲ್ಕು ಪ್ರಶ್ನೆ­ಗ­ಳಲ್ಲಿ ಪ್ರೇಮದ ಸಾರ­ಸ­ರ್ವ­ಸ್ವ­ವನ್ನೂ ಹೇಳುವ ರೀತಿ ನೋಡಿ. ಇದ್ದ­ಕ್ಕಿ­ದ್ದಂತೆ ಹಾಜ­ರಾ­ಗುವ ಕೊಕ್ಕ­ರೆಯ ರೂಪ­ಕ­ವನ್ನು ಗಮ­ನಿಸಿ. ಯಾವ ಕೆರೆಗೆ ಯಾರ ಕರೆಗೆ ಹಾರು­ತಿ­ಹವು ಕೊಕ್ಕರೆ ಅನ್ನುವ ಸಾಲಿ­ನಲ್ಲಿ ಸೆಳೆ­ತ­ವನ್ನು ಹೇಳಿ­ರುವ ರೀತಿ ಬೆರ­ಗು­ಗೊ­ಳಿ­ಸು­ತ್ತದೆ.
ಜೊತೆಗೇ ಬೆಕ್ಕನ್ನೂ ಪ್ರೀತಿಯ ರೂಪ­ಕ­ವಾಗಿ ತರು­ತ್ತಾರೆ ಅವರು. ಆದರೆ ಈ ಪ್ರೀತಿ ಉಳಿ­ಯು­ತ್ತದಾ? ಅದನ್ನೂ ಮತ್ತೊಂದು ಸೊಗ­ಸಾದ ಉಪ­ಮೆಯ ಮೂಲಕ ಹೇಳಿ­ಬಿ­ಡು­ತ್ತಾರೆ ಅವರು;
ಪ್ರೀತಿ ಹೊತ್ತಿ­ಸಿಟ್ಟ ದೀಪ ದಾರಿ­ಯಲ್ಲಿ ಕತ್ತಲು
ದೀಪ ನಿಲ್ಲ­ಬ­ಹುದೆ ಇಲ್ಲಿ ಗಾಳಿ ಬಂದು ಮುತ್ತಲು

ಇದರ ಜೊತೆಗೇ ಪ್ರೀತಿಯ ತೀವ್ರ­ತೆ­ಯನ್ನು ಹೇಳುವ ಮತ್ತೊಂದು ಸಾಲು;
ಪ್ರೀತಿ ಪಂಜು ಹೊತ್ತಿ­ಸಿತ್ತು ನಾಗ­ವೇಣಿ ನಾಗಿಗೆ
ಆರಂ­ಭ­ದಲ್ಲಿ ಬರುವ ಬೆಕ್ಕಿನ ಪ್ರಸ್ತಾಪ ಹೀಗೆ ಕತೆ­ಯಲ್ಲಿ ಮತ್ತೆ ಮರು­ಕ­ಳಿ­ಸು­ತ್ತದೆ. ಯಾಕೆ ಬೆಕ್ಕಿನ ಬಗ್ಗೆ ಕವಿತೆ ಶುರು­ವಾ­ಗು­ತ್ತದೆ ಅನ್ನು­ವುದು ಗೊತ್ತಾ­ಗ­ಬೇ­ಕಾ­ದರೆ ನಾಗ­ವೇಣಿ ಪ್ರೀತಿ­ಯಲ್ಲಿ ಬಂಧಿ­ಯಾ­ಗುವ ತನಕ ಕಾಯ­ಬೇಕು. ಆಕೆ ಬೆಕ್ಕನ್ನು ಎದೆ­ಗ­ವ­ಚಿ­ಕೊಂಡು ಅದರ ಸಂಸ­ರ್ಗ­ದಲ್ಲಿ ತನ್ನ ಪ್ರೀತಿ­ಯನ್ನು ತೋಡಿ­ಕೊ­ಳ್ಳುವ ಹೊತ್ತಿಗೇ ಅವ­ಳಿಗೆ ಮತ್ತೊಂದು ಅನು­ಭ­ವ­ವಾ­ಗು­ತ್ತದೆ;
ಸಾಲು­ಮ­ರದ ನೆರ­ಳಿ­ನಲ್ಲಿ ಹಾವಿ­ನಂಥ ಹಾದಿಗೆ
ಕೈಯ­ಳೊಂದು ದೀಪ ಹಿಡಿದು ಸಾಗು­ತಿ­ರಲು ನಾಗಿಗೆ
ತೆರೆದ ಹಾಲು ಮಡಕೆ ನೋಡಿ ಬಿಳಿಯ ಬೆಕ್ಕು ಹಾರಿತು
ಕತ್ತ­ಲಲ್ಲಿ ಎಡ­ಹು­ವಂತೆ ಹಿಡಿದ ದೀಪ ಆರಿತು.
ನಾಗಿ ಪ್ರೀತಿಯ ಸೆಳೆ­ತಕ್ಕೆ ಸಿಕ್ಕಿ ಮನೆ­ಬಿಟ್ಟು ಹೋಗು­ತ್ತಾಳೆ. ಅವ­ಳನ್ನು ಹಾವಿ­ನಂಥ ಹಾದಿ ಅದೆ­ಲ್ಲಿಗೋ ಕರೆ­ದೊ­ಯ್ಯು­ತ್ತದೆ. ಹಾಗೆ ಸಾಗಿ­ಹೋದ ಹಾದಿ­ಯಲ್ಲಿ ನಾಗ­ವೇಣಿ ಕೊನೆಗೂ ಕಂಡ­ದ್ದೇನು? ಅಲ್ಲಿ ಆಕೆಗೆ ಎದು­ರಾ­ದ­ದ್ದೇನು? ಬಿಳಿಯ ಬೆಕ್ಕು ಹಾರಿ, ದೀಪ­ವಾ­ರಿದ ಮೇಲೆ ಪ್ರೀತಿ ಅವ­ಳನ್ನು ದಡ ಸೇರಿ­ಸು­ತ್ತದಾ?
ಅದ್ಯಾ­ವು­ದನ್ನೂ ಕವಿ ಹೇಳು­ವು­ದಿಲ್ಲ. ಅಲ್ಲಿಂದ ಫೋಕ್ ತಿರು­ಗು­ವುದು ಅವಳ ಮನೆಯ ಕಡೆಗೆ. ಮನೆ­ಯಲ್ಲಿ ಅವ­ಳಿ­ಗಾಗಿ ಹುಡು­ಕಾಟ ನಡೆ­ದಿದೆ.
ತಾಯಿ ಬಂದು ನಾಗಿ ಎಂದು ಅಲ್ಲಿ ಇಲ್ಲಿ ಕರೆ­ದಳು
ಮಂಜು ಗೌಡ ಮಗಳ ಹುಡುಕಿ ಊರು­ಕೇರಿ ಅಲೆ­ದನು
ಪ್ರೀತಿ ಹೆಜ್ಜೆ­ಯಿ­ಡುವ ಹಾದಿ ಹಿಂದೆ ಬರದ ಹಾದಿಯು
ಇಲ್ಲೆ ಅಲ್ಲ­ವೇನು ಹೆಣ್ಣಿ­ಗಿ­ರುವ ಭಯ ಅನಾ­ದಿಯು

ಅಲ್ಲಿಗೆ ಪದ್ಯ ಮುಗಿ­ಯು­ತ್ತದೆ. ಪ್ರೀತಿಯ ಹಾದಿ­ಯಲ್ಲಿ, ಆ ಅನಾ­ದಿ­ಯಲ್ಲಿ ಹೊರ­ಟಾಕೆ ಎಲ್ಲಿಗೆ ತಲು­ಪು­ತ್ತಾಳೆ. ಅವಳ ಅನಾದಿ ಭಯ­ವನ್ನು ಪ್ರೀತಿ ನಿವಾ­ರಿಸಿ ಅಭಯ ಹಸ್ತ ನೀಡು­ತ್ತದಾ? ಅವಳು ಪ್ರೀತಿ­ಯಲ್ಲಿ ಗೆಲ್ಲು­ತ್ತಾಳಾ? ಈ ಎಲ್ಲಾ ಪ್ರಶ್ನೆ­ಗ­ಳಿಗೆ ಕವಿತೆ ಉತ್ತ­ರಿ­ಸು­ವು­ದಿಲ್ಲ. ನಾಗಿ ಪ್ರೀತಿ­ಯನ್ನು ಹುಡು­ಕಿ­ಕೊಂಡು ಹೊರ­ಟ­ಲ್ಲಿದೆ ಕತೆ ಮುಗಿ­ಯು­ತ್ತದೆ. ಮುಂದಿ­ನದು ಮುಂದಿನ ಕತೆ. ಅದರ ಸುಳಿವು ಬೇಕಿ­ದ್ದರೆ ಬೇರೆ ಪದ್ಯ­ಗ­ಳನ್ನು ಓದ­ಬೇಕು.
ಅದರ ಮುಂದಿನ ಪದ್ಯ­ದಲ್ಲೇ ಬರುವ ಎರಡು ಸಾಲು­ಗಳು ನಾಗಿಯ ಭವಿ­ಷ್ಯದ ಕತೆ­ಯೇನೋ ಎಂಬಂತೆ ಕಾಡು­ತ್ತದೆ. ಆ ಪದ್ಯದ ಹೆಸರು `ಹು­ಡು­ಗಿಯ ಕತೆ'.
ಮುರಿ­ದು­ಹೋದ ಗುಡಿ­ಸ­ಲೊಂದು ಹರಿ­ದು­ಹೋದ ಚಾಪೆಯು
ತೊಟ್ಟು­ಕೊಂಡ ಲಂಗ­ದಲ್ಲಿ ಎಂಟೋ ಹತ್ತೋ ತೇಪೆಯು
ಸೊರ­ಗಿ­ಹೋದ ಕೊರ­ಗಿ­ಹೋದ ಮೈಯ ಕೆಂಡ ಕೆಂಡವು
ಪುಟ್ಟ ಹುಡುಗಿ ಅವಳ ಕಣ್ಣು ಏನೋ ಏನೋ ಕಂಡವು
ಯಾರಿ­ವಳು? ನಾಗಿಯ ಮಗಳಾ? ನಾಗಿಯಾ? ಅಥವಾ ನಾಗಿ­ಯಂಥ ಮತ್ಯಾ­ವುದೋ ಹುಡು­ಗಿಯಾ? ಯಾವ ಸೂಚ­ನೆಯೂ ಇಲ್ಲ. ಪ್ರೀತಿ ಕೂಡ ವಿಷಾ­ದ­ದಲ್ಲಿ, ಅಗ­ಮ್ಯ­ದಲ್ಲಿ, ನಿಗೂ­ಢ­ದಲ್ಲಿ ಕೊನೆ­ಯಾ­ಗು­ತ್ತದೆ. ಮತ್ತೊಂದು ಪದ್ಯಕ್ಕೆ ನಾವು ದಾಟಿ­ಕೊ­ಳ್ಳು­ವಂತೆ ಮಾಡು­ತ್ತದೆ.
**­*­*­*­**
ಕವನ ಕತೆ ಹೇಳ­ಬಾ­ರದು ಅನ್ನು­ವುದು ನವ್ಯರ ನಿಯಮ. ಅದೇ­ನಿ­ದ್ದರೂ ಒಂದು ಭಾವ­ವನ್ನು ಹಿಡಿ­ದಿ­ಡ­ಬೇಕು. ಆ ಕ್ಪಣ ಮನ­ಸ್ಸಿ­ನಲ್ಲಿ ಮೂಡಿ ಮರೆ­ಯಾದ ಒಂದು ಲಹ­ರಿ­ಯ­ನ್ನಷ್ಟೇ ದಾಖ­ಲಿ­ಸ­ಬೇಕು. ಒಂದು ಮುಂಜಾನೆ, ಒಂದು ಅಗ­ಲಿಕೆ, ಒಂದು ಹಂಬಲ, ಒಂದು ಪ್ರತೀ­ಕ್ಪೆ­ಗ­ಳನ್ನು ಹೇಳಿ­ದರೆ ಅದು ಕವಿತೆ ಎಂದೇ ನವೋ­ದ­ಯದ ಮಂದಿ ನಂಬಿ­ದಂ­ತಿತ್ತು. ನವ್ಯರು ಅದನ್ನು ಕೊಂಚ ವಿಸ್ತ­ರಿಸಿ, ಸುಪ್ತ­ಮ­ನ­ಸ್ಸಿನ ಅತೃಪ್ತ ಆಶೆ­ಗ­ಳನ್ನು `ದೀ­ಪ­ವಿ­ರದ ಹಾದಿ­ಯಲ್ಲಿ ತಡ­ವ­ರಿ­ಸುವ ನುಡಿ'ಗ­ಳನ್ನು ಮಾತಾ­ಡಿ­ಸಲು ಯತ್ನಿ­ಸಿ­ದರು.
ಕಾವ್ಯ ನಿಜಕ್ಕೂ ತನ್ನ ಸ್ವರೂ­ಪ­ವನ್ನು ಬದ­ಲಾ­ಯಿ­ಸಿದ್ದು ಅಮೇ­ಲಾ­ಮೇಲೆ. ಖಡ್ಗ­ವಾ­ಗಲಿ ಕಾವ್ಯ ಎಂದರು. ಅದು ಬಿಡು­ಗ­ಡೆಯ ಹಾದಿ ಎಂದರು. ಅದು ಅಭಿ­ವ್ಯಕ್ತಿ ಅಂದರು. ಅದನ್ನು ಅಸ್ತ್ರ ಎಂದು ಕರೆದು ಬೆನ್ತ­ಟ್ಟಿ­ಕೊಂ­ಡರು. ಕವಿತೆ ಅಸ್ತ್ರವೂ ಅಲ್ಲ, ವಿಮೋ­ಚ­ನೆಯ ಹಾದಿಯೂ ಅಲ್ಲ. ಅದೊಂದು ಕತೆ ಹೇಳುವ ವಿಧಾನ ಮಾತ್ರ ಎಂದು ಅನಾ­ದಿ­ಕಾ­ಲ­ದಿಂದ ನಂಬಿ­ಕೊಂಡು ಬಂದದ್ದು ಕ್ರಮೇಣ ಮರೆ­ಯಾ­ಯಿತು. ಇವತ್ತು ಕಥನ ಕವಿ­ಗಳೇ ಇಲ್ಲ. ಕವ­ನ­ದೊ­ಳಗೆ ಕತೆ­ಗ­ಳಿಲ್ಲ, ವ್ಯಥೆ­ಗ­ಳಷ್ಟೇ ಇವೆ.
ನಮ್ಮ ಮಹಾ­ಕಾ­ವ್ಯ­ಗ­ಳೆಲ್ಲ ಕಥನ ಕವ­ನ­ಗಳೇ. ತಿಳಿಯ ಹೇಳುವ ಕೃಷ್ಣ ಕತೆ­ಯನು ಎಂದೇ ಕುಮಾ­ರ­ವ್ಯಾಸ ತನ್ನ ಕಾವ್ಯ­ವನ್ನು ಆರಂ­ಭಿ­ಸು­ತ್ತಾನೆ. ಕಾವ್ಯ ಎಂದಾ­ಕ್ಪಣ ಅದು ಯಾರ ಕತೆ ಎನ್ನು­ವುದು ಮೊದಲು ದಾಖ­ಲಾ­ಗ­ಬೇಕು ಅನ್ನು­ತ್ತಿ­ದ್ದರು ಆ ಕಾಲದ ವಿಮ­ರ್ಶ­ಕರು. ಜನ­ಸಾ­ಮಾ­ನ್ಯರ ಕತೆ ಕಾವ್ಯ­ವಾ­ಗು­ವು­ದಕ್ಕೆ ಯೋಗ್ಯ­ವಲ್ಲ. ಅದಕ್ಕೆ ರಾಜಾ­ಧಿ­ರಾ­ಜರ, ಚಕ್ರ­ವ­ರ್ತಿ­ಗಳ, ಶ್ರೇಷ್ಠ ವಂಶ­ದಲ್ಲಿ ಹುಟ್ಟಿ­ದ­ವರ ಕತೆಯೇ ಬೇಕು ಎಂದು ಆದಿ­ಕ­ವಿ­ಗಳೂ ಅವರ ನಂತರ ಬಂದ ಅನಾ­ದಿ­ಕ­ವಿ­ಗಳೂ ನಂಬಿ­ದಂ­ತಿತ್ತು.
ಕವಿ­ತೆ­ಯನ್ನು ಹೇಗೆ ಹೇಗೆಲ್ಲಾ ಬಳ­ಸ­ಬ­ಹುದು ಎಂದು ತೋರಿ­ಸಿ­ಕೊ­ಟ್ಟ­ವರು ಬೇಂದ್ರೆ ಮತ್ತು ಅಡಿಗ. ಅವ­ರಿ­ಬ್ಬರ ಕವಿ­ತೆ­ಗ­ಳಲ್ಲಿ ಕಾಣಿ­ಸುವ ಭಾವ, ಕೇವಲ ಭಾವ­ವಾ­ಗಷ್ಟೇ ಉಳಿ­ಯು­ವು­ದಿಲ್ಲ. ಅದು ಮಾತಲ್ಲಿ ಹೇಳ­ಲಾ­ಗ­ದ್ದನ್ನು ಹೇಳು­ತ್ತದೆ. ನಮ್ಮ ಅನೂಹ್ಯ ಆಶೆ­ಗ­ಳಿಗೆ, ಅನಿ­ಸಿ­ಕೆ­ಗ­ಳಿಗೆ ದನಿ­ಯಾ­ಗು­ತ್ತದೆ. ಕೆಎಸ್ ನ ಕವಿ­ತೆ­ಗಳು ಕಥನ ಕವ­ನದ ಧಾಟಿ­ಯಲ್ಲೇ ಇದ್ದಂತೆ ಕಂಡರೂ- ಗಂಡು, ಹೆಣ್ಣು, ಪ್ರೀತಿ, ಮದುವೆ, ದಾಂಪತ್ಯ, ಬಳೆ­ಗಾರ, ತಾಯ್ತನ, ಮಗು, ಕುಟುಂಬ- ಎಲ್ಲವೂ ಬಂದರೂ ಅದು ಕೇವಲ ಅಷ್ಟೇ ಆಗಿ ಉಳಿ­ಯು­ವು­ದಿಲ್ಲ.
ಹುತ್ತ­ಗ­ಟ್ಟದೆ ಚಿತ್ತ ಮತ್ತೆ ಕೆತ್ತೀ­ತೇನು
ಅಂಥ ಪುರು­ಷೋ­ತ್ತ­ಮನ ರೂಪ­ರೇಷೆ
ಎಂದು ಕೇಳುತ್ತಾ ಅದ್ಯಂತ ರಹಿತ ಸ್ಥಿತಿ­ಯನ್ನು ತಲು­ಪು­ತ್ತದೆ.

ಒಂದು ಆಹ್ವಾನ-
ಮುಂದಿನ ಭಾನುವಾರ, 27ನೇ ಜುಲೈ 2008, ಎಕ್ಕುಂಡಿಯವರ ಸಮಗ್ರ ಕಾವ್ಯ ಬೆಳ್ಳಕ್ಕಿ ಹಿಂಡು ಬಿಡುಗಡೆ. ಅನಂತಮೂರ್ತಿಯವರು ಕೃತಿಯನ್ನು ಬಿಡುಗಡೆ ಮಾಡುತ್ತಾರೆ, ಆನಂದ ಝಂಜರವಾಡ ಮತ್ತು ಜಿ ಎನ್ ಮೋಹನ್ ಮಾತಾಡುತ್ತಾರೆ. ಆನಂತರ ಎಕ್ಕುಂಡಿಯವರ ಕವಿತೆಗಳನ್ನು ಸಿ ಆರ್ ಸಿಂಹ, ಜಿಕೆ ಗೋವಿಂದರಾವ್, ಎಚ್ ಎಸ್ ವಿ, ಕಾಯ್ಕಿಣಿ, ದಿವಾಕರ್, ರವೀಂದ್ರಕುಮಾರ್, ಬಿಳಿಗೆರೆ, ಮಮತಾ ಜಿ ಸಾಗರ, ಬಿ ಸುರೇಶ, ರೋಸಿ ಡಿಸೋಜಾ ಮತ್ತು ರಘುನಂದನ ಓದುತ್ತಾರೆ.
ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಸೆನೆಟ್ ಹಾಲ್ ಗೆ ಬಂದರೆ ಎಕ್ಕುಂಡಿ ಕಾವ್ಯಲೋಕ ತೆರೆದುಕೊಳ್ಳುತ್ತದೆ.
ಅಂದ ಹಾಗೆ ಇದು ಸಂಚಯದ ಸಂಚು.

Thursday, July 17, 2008

ಬಾಕಿ ಮೊಕ್ತ

ಕಡಲನ್ನು ಸೇರುತ್ತೇನೆ ಎಂದು
ಗೊತ್ತಿಲ್ಲದ ನದಿ
ಕಡಲು ಸೇರಿದ ತಕ್ಷಣ ತನ್ನ ಅಸ್ತಿತ್ವವನ್ನೆ
ಕಳಕೊಳ್ಳುವ ಸೋಜಿಗವ
ಧ್ಯಾನಿಸುತ್ತೇನೆ.

ಧ್ಯಾನಿಸಿದರೆ ಕವಿ
ಋಷಿಯಾಗುತ್ತಾನಂತೆ
ಯೇಟ್ಸನಂತೆ
ನನಗೋ ಬೋಧಿಲೇರನ ಹಾಗೆ
ಸಂತನಾಗುವ ಆಸೆ;
ಅಕಾಲದಲ್ಲಿ ದಿವಂಗತನಾಗಿ.

ಮಾಡ್ ಗಾನ್ ಬೆನ್ನಿಗೆ ಬಿದ್ದ
ಯೇಟ್ಸ್‌ಗೆ ಕೊನೆಗೂ ದಕ್ಕಿದ್ದು ಎರಡೇ ಸಾಲು;
Why, what could she have done, being what she is?
Was there another Troy for her to burn?
ನಾನು ಪ್ರೀತಿಸಿ ಕವಿತೆ ಬರೆಯುತ್ತೇನೆ
ಎಂದು ಅವಳಿಗೆ ಹೊಟ್ಟೆಕಿಚ್ಚು
ನಾನು ಕವಿತೆ ಬರೆದು ಪ್ರೀತಿಸುತ್ತೇನೆ
ಎಂದು ಇವನಿಗೆ ಗುಮಾನಿ.

ತನ್ನನ್ನು ಕೂಡಿದ ನದಿಯ
ನೀರಿನ ರುಚಿ
ಕಡಲಿಗೆ ನೆನಪುಂಟೆ?
ನೆನಪನ್ನೂ ರುಚಿಯನ್ನೂ
ಕಡಲಲ್ಲಿ ಕಳಕೊಂಡಿದ್ದಕ್ಕೆ
ನದಿಗೆ ಕೊರಗುಂಟೆ?

ವರುಣಸೂಕ್ತ ಪಠಿಸುವ ಹೊತ್ತಿಗೇ
ಅಗ್ನಿಕಾರ್ಯ ಶುರು.
ಕಡಲೊಳಗೂ ಸುಡುಕೆಂಡ
ಬಡಬಾಗ್ನಿ;ಬಾಕಿ ಮೊಕ್ತ.

Wednesday, July 16, 2008

ಮತ್ಸ್ಯಗಂಧಿ ಗೆಳೆಯನ ಪ್ರೀತಿಗೆ..

ಗೆಳೆಯ ಜಿ ಎನ್ ಮೋಹನ್ ಫಿಶ್ ಮಾರ್ಕೆಟ್ಟಿಗೆ ಕರೆದಿದ್ದಾರೆ. ಮೀನೆಂದರೆ ಇಬ್ಬರಿಗೂ ಪಂಚಪ್ರಾಣ. ಫಿಶ್ ಮಾರ್ಕೆಟ್ಟು ಕೂಡ. ಷೇಕ್ಸ್ ಪಿಯರನಿಗೂ ಫಿಶ್ ಮಾರ್ಕೆಟ್ಟು ಇಷ್ಟವಿತ್ತಂತೆ! ಓದಿ ನೋಡಿ. ಮಜವಾಗಿದೆ.

William Shakespeare is a successful playwright living in old London. He’s smart, he’s funny, and he’s got the world at his fingertips. He’s the Stephen King of his day and everyone wants to be him. So what does he do? He gives someone a chance. In what many deem as a medieval publicity stunt, Shakespeare announces that he will pick someone to be his apprentice. Everyone in London is eligible, and wherever Shakespeare goes, people try to stand out. However, Shakespeare soon proves remarkably picky about whom he will take on.
Then, one day at the local fishmarket, Shakespeare sees Corbin Mantruck. He’s dirty, he’s poor, and he speaks in iambic pentameter. He’s perfect. Shakespeare has found his apprentice. Shakespeare makes Corbin Mantruck bathe, take that hat off, and then he begins to teach him the ways of the playwright.
It’s a huge surprise when we find that Corbin is an exceptional apprentice playwright. He soon begins writing plays that Shakespeare could only dream of writing. Though Mantruck’s plays aren’t in iambic pentameter, Shakespeare is stunned to see that they are, in fact, in diambic decameter and triambic pentakaidecameter. Corbin’s plays are so good that only William Shakespeare is able to appreciate them fully. It’s Good Will Hunting all over again.
But Shakespeare has grown used to wealth, celebrity, and velvet clothes. He’s long been known as the greatest playwright that ever lived and now he’s scared to give it up. And while Corbin Mantruck locks himself up in a room and continues writing plays, Shakespeare puts on Mantruck’s plays as if they were his own.
England loves the new plays and all the shows sell out except the first one. Shakespeare becomes even more famous and wealthy as the new plays have even more explosions, nudity, and swears, all of which leave audiences gasping for more.
Shakespeare knows he’s living a lie though, and his fame becomes empty and his riches become worthless. And boy does he start drinking. Though he receives Tony award after Tony award for Mantruck’s plays, they are just constant reminders of how fucking great Corbin Mantruck really is. In one stunning scene, after a Tony Awards, a jealous and drunken Shakespeare intrudes on the reclusive Mantruck. Shakespeare tells Mantruck that all of Mantruck’s plays have been garbage. Garbage! Amazingly, Mantruck agrees with Shakespeare, (!) but he tells him that the one he is writing now is his masterpiece. His masterpiece!
Shakespeare reads the first draft of Corbin Mantruck’s masterpiece and it blows his boots off it’s so good. Ashamed and crying, Shakespeare gets on his knees and confesses his plagerism crimes to Corbin Mantruck. What can he do? he pleads, What can he do to make it up to Corbin Mantruck? Mantruck tells Shakespeare that the only way he can make it up is to win London’s annual marathon race and donate the £500,000 prize to the local fish market.
Shakespeare can’t do it alone. His drinking problem has made him overweight and out-of-shape and he’s in no condition to run a marathon. Fortunately, Corbin Mantruck has an idea. He quickly sets to work writing a new play, a play where Shakespeare is the star. In the play, Shakespeare’s character does warm ups, jumps rope, eats healthy, and quits drinking. To rehearse for the play, Shakespeare does all these things. Soon he has abs of steel and he’s very in shape. It’s a true testament to Corbin Mantruck’s playwrighting ability.
On the day of the big race, both Shakespeare and Mantruck line up as contestants. They’re longshots because they’re up against known cheaters Christopher Marlowe, Francis Bacon, Barry Allen, and Edward de Vere, all of whom are dressed solely in black 15th century running gear.
The race starts and sure enough, Marlowe puts tranquilizers in Shakespeare’s water, Bacon cuts Shakespeare’s Achilles’ heel, Allen uses his powers, and de Vere uses his roller-skate shoes. It’s looking bad for Shakespeare, and he’s upset because he really wants win the money for the fish market so he can make up his plagiarism crimes to Corbin Mantruck.
Corbin Mantruck, expecting these troubles, is quick to react. In no time at all he writes another script in which Marlowe, Bacon, Allen, and de Vere all die before completing the race. Quickly, Mantruck passes out the screenplay to each of the four cheaters. Soon they are all dead, and Mantruck’s only problem now is getting the tranquilized and crippled Shakespeare across the finish line. In an act of complete heroism, Corbin Mantruck writes a script giving him the strength to pick up William Shakespeare and carry him across the finish line. As they cross the finish line together, Mantruck tells Shakespeare that he never cared about the plagerism. He just cared about their friendship. The movie closes as we watch Corbin Mantruck’s masterpiece play. It is called “Shakespeare’s Apprentice,” and it’s the Corbin and Shakespeare’s story
.

Saturday, July 12, 2008

ಫಸ್ಟ್ ಹಾಫ್


ಗೆಳೆಯ ರವಿ ಬೆಳಗೆರೆಗೆ ಐವತ್ತು. ಲೇಖಕರಿಗೆ ಕ್ರಿಯಾಶೀಲರಿಗೆ ಐವತ್ತೆಂದರೆ ಏರುಜವ್ವನ. ಐವತ್ತರ ತನಕದ ಬಾಲಲೀಲೆ, ಹುಡುಗಾಟ , ತಾರುಣ್ಯದ ಸೆಳೆತಗಳಿಂದ ಪಾರಾಗುವ ವಯಸ್ಸಲ್ಲದೇ ಹೋದರೂ, ಇವೆಲ್ಲದರ ಜೊತೆಗೇ ತನ್ನನ್ನು ತಾನು ಮೀರುವುದಕ್ಕೆ ಹಂಬಲಿಸುವ ವಯಸ್ಸಂತೂ ಹೌದು.
ಫಸ್ಚ್ ಹಾಫ್ ಭರ್ಜರಿಯಾಗಿದ್ದಾಗಲೇ ನೆಕ್ಸ್ಟ್ ಹಾಫ್ ರೋಚಕವಾಗಿರುತ್ತದೆ. ಮೊದಲ ಇನ್ನಿಂಗ್ಸಿನಲ್ಲಿ ಬಾರಿಸಿದ ರನ್ನುಗಳೇ ಎರಡನೆಯ ಇನ್ನಿಂಗ್ಸನ್ನು ಕುತೂಹಲಕಾರಿ ಆಗಿಸುವುದು. ಫಸ್ಟ್ ಹಾಫ್ ಹೇಗಿತ್ತು ಎಂದು ತಿಳಿದುಕೊಳ್ಳಬಯಸುವವರಿಗೆ ಇಲ್ಲಿದೆ, ಒಂದು ಸುಂದರ ಪುಸ್ತಕ- ಫಸ್ಟ್ ಹಾಫ್.
ಶರತ್ ಕಲ್ಕೋಡ್ ಸಂಪಾದಕತ್ವದಲ್ಲಿ, ನಿವೇದಿತಾ ಅಕ್ಕರೆ ಮತ್ತು ಶ್ರಮದೊಂದಿಗೆ, ರವಿ ಅಜ್ಜೀಪುರ ಪುಟವಿನ್ಯಾಸಗೊಂದಿಗೆ ಸಿದ್ಧವಾಗಿರುವ ಪುಸ್ತಕದ ಪುಟಗಳನ್ನು ನೋಡುತ್ತಲೇ ದಂಗಾಗಿಬಿಟ್ಟೆ. ನಿವೇದಿತಾ ಪುಸ್ತಕ ಮಾಡುತ್ತಿದ್ದೇವೆ ಅಂದಾಗ ಅದೂ ಇನ್ನೊಂದು ನೂರಿನ್ನೂರು ಪುಟಗಳ ಪುಸ್ತಕವಾಗುತ್ತೆ ಅಂದುಕೊಂಡಿದ್ದೆ. ಆದರೆ ಅದು ಪ್ರತಿ ಮನೆಯ ಕಪಾಟನ್ನು ಚೆಂದವಾಗಿಸಬಲ್ಲ, ಪ್ರತಿ ಟೇಬಲ್ಲಿಗೂ ಕಳೆಕೊಡಬಲ್ಲ, ಮತ್ತೆ ಮತ್ತೆ ಓದಬಲ್ಲ ಕೃತಿಯಾಗುತ್ತೆ ಅನ್ನುವ ಅರಿವಿರಲಿಲ್ಲ.
ಪುಸ್ತಕದ ಮುಖಪುಟ ಇಲ್ಲಿದೆ. ಅಭಿನಂದನ ಗ್ರಂಥ ಎಂದು ಕರೆಯುವುದಕ್ಕೆ ಮನಸ್ಸಾಗುತ್ತಿಲ್ಲ. ಅದು ರವಿಯನ್ನು ಪ್ರೀತಿಸುವ ಎಲ್ಲರ ಅಕ್ಕರೆಯೂ ಒಂದೆಡೆ ಸೇರಿದ ಚಾಕಲೇಟ್ ಬುಟ್ಟಿ.
ಮುಖಪುಟವೇ ಎಲ್ಲಾ ಹೇಳುತ್ತದೆ, ನೋಡಿರಲ್ಲ.

Wednesday, July 9, 2008

ಹಯವದನಂ ಧ್ಯಾಯೇತ್..

ಕಾಡು
ಕುದುರೆ
ಮುಂಜಾವದ ಕನಸಲ್ಲಿ
ಕಾಣಿಸಿಕೊಂಡರೆ
ಫ್ರಾಯ್ಡ್
ಪ್ರಕಾರ ಕಾಮ.
ಕಂಬಾರರದ್ದೂ ಅದೇ ಅರ್ಥ.

ಧಾವಿಸುವ
ಎಲ್ಲಕ್ಕೂ ಅಶ್ವಶಕ್ತಿ.
ನಿಂತಲ್ಲೇ ಮೇಲೆ
ಕೆಳಗೆ
ಠಳಾಯಿಸುವ ಇಂಜಿನ್ನಿನ
ಪಿಸ್ಟನ್ನಿಗೂ
ಅದೇ ಹಾರ್ಸ್ ಪವರ್.

ಕಡಲ ತಡಿಯಲ್ಲಿ
ಕೆನೆಯುವ ಕುದುರೆ
ಕಂಡರೆ
ವಾತ್ಸಾಯನನಿಗೆ
ಅಮೃತ ಮಹೋತ್ಸವ.

ಅವಳಿಗೆ ಕುದುರೆ
ಸವಾರಿಯ ಗೀಳು.
ಮರದ ಕುದುರೆಗೆ ಕಾಲಿಲ್ಲ.
ಕಾಡು ಕುದುರೆಗೆ
ಲಗಾಮಿಲ್ಲ.
ಅದು ಗೊತ್ತಿದ್ದೂ
ಅಂಗಾಂಗ
ಸುಡುಗಾಡು.

ಆನೆಯ ಹೆಸರಲ್ಲಿ ಸತ್ತ
ಅಶ್ವತ್ಥಾಮ
ಚಿರಂಜೀವಿ.

Tuesday, July 8, 2008

ಮೋಟರ್ ಬೋಟು ಅವಳಿಗೆ ಇಷ್ಟವಿಲ್ಲ

ಕಣ್ಣ ದಡಕ್ಕೆ
ಸುಮ್ಮನೆ ಅಪ್ಪಳಿಸಿದರೆ
ಅಲೆ.
ಒಳಹೊಕ್ಕು ಎಲ್ಲ
ತೆಕ್ಕೆಗೆ ದಕ್ಕಿಸಿಕೊಂಡು
ಒಯ್ದರೆ
ಹೆದ್ದೆರೆ.
ಕೊಂದು
ಮುಂದುವರಿದರೆ
ಸುನಾಮಿ.
ಅವಳು ಅರಬೀ
ಸಮುದ್ರ
ವ್ಯಾಮೋಹಿ ಅಲೆ
ಮಾರಿ.

ಮುಟ್ಟಿದ ಮೂರನೆಯ
ಸಂಜೆ
ಮುಟ್ಟಿದ್ದು ನಿಜವೋ ಸುಳ್ಳೋ
ಅನುಮಾನ.
ಮತ್ತೊಂದು ಸ್ಪರ್ಶಕ್ಕೆ
ಅವಳು
ನವನವೋನ್ಮೇಷಶಾಲಿನಿ.

ದೋಣಿಯೋ ತೆಪ್ಪವೋ
ತೇಲಿದರೆ ಕಡಲಾಸೆ
ಮುಳುಗಿದರೆ
ಒಡಲಾಳ.

watch fish
watching you
watching them

Thursday, July 3, 2008

ನಮ್ಮೊಳಗೊಬ್ಬ ಯೂಲಿಸಿಸ್!

ಮತ್ತೆ ಅಡಿಗರಿಂದಲೇ ಆರಂಭಿಸಬೇಕು!
ಒಂದೊಂದು ಭಾಷೆಗೆ ಹಾಗೆ ಒಬ್ಬೊಬ್ಬ ಕವಿ ಕೀಲಿಕೈ. ಹುಡುಕುತ್ತಾ ಹೋದರೆ ಒಬ್ಬೊಬ್ಬನೂ ಕೀಲಿ ಕೈ. ಆಲ್ರ್ಪೆಡ್ ಟೆನಿಸನ್‌ನ ಯೂಲಿಸಿಸ್’ ಕವಿತೆ ಓದುತ್ತಿದ್ದಾಗ ನೆನಪಾದದ್ದು ಅಡಿಗರ ಅದೇ ಹಳೇ ಸಾಲು: ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಅವನಿಗಾದದ್ದು ಅದೇ. ಅಗಾಧವಾದ ರಾಜ್ಯವನ್ನು ತನ್ನದಾಗಿಸಿಕೊಂಡಿದ್ದಾನೆ. ವೀರ ಎಂದು ಕರೆಸಿಕೊಂಡಿದ್ದಾನೆ. ಬಂಧು ಮಿತ್ರರಿದ್ದಾರೆ, ಖ್ಯಾತಿಯಿದೆ. ಅವನು ಸುಖವಾಗಿರಬಹುದಿತ್ತು ಅಲ್ಲೇ, ಹಾಗೇ, ಇದ್ದ ಹಾಗೆ. ಆದರೆ ಅವನು ಸುಖವಾಗಿಲ್ಲ. ಮತ್ತೇನೋ ಸೆಳೆತ, ಮತ್ತೇನೋ ತುಡಿತ. ಅವನು ಹೇಳುತ್ತಾನೆ:
ಇಲ್ಲ, ಸುಖವಿಲ್ಲ
ಕೆಲಸವಿಲ್ಲದ ಆಲಸಿ ದೊರೆ
ಪಾಳುಬಿದ್ದ ನೆಲದಲ್ಲಿ ಯೌವನ ಸಂದ ಹೆಂಡತಿಯ ಜೊತೆ
ಅಗ್ಗಿಷ್ಟಿಕೆಯ ಮುಂದೆ ಕೂತಿದ್ದೇನೆ.
ಉಣ್ಣುತ್ತಾ, ಮಲಗುತ್ತಾ, ಮೇಯುತ್ತಾ
ಸ್ವಂತಿಕೆಯ ಅರಿವಿಲ್ಲದ
ಈ ಅನಾಗರಿಕರಿಗೆ ಅಪರ ನ್ಯಾಯದ
ಪಾಠ ಹೇಳುತ್ತಾ..

ಶೂರನಾದ ನಾಯಕನಿಗೆ ತನ್ನ ಪ್ರಜೆಗಳ ಬಗ್ಗೆ ಅನ್ನಿಸುವುದಿಷ್ಟು. ಅವರು ಆಳಿಸಿಕೊಳ್ಳುವುದಕ್ಕೇ ಲಾಯಕ್ಕು. ಸ್ವಯಂಪ್ರಭೆಯಿಲ್ಲದ ಮೂರ್ಖರು ಅವರು. ದಂಡಿಸಿ ಅವರನ್ನು ದಾರಿಗೆ ತರಬೇಕು, ಆದರೆ ಯಾವ ಪುರುಷಾರ್ಥಕ್ಕೆ. ಅವರು ಯಾವ ಜನ್ಮಕ್ಕೆ ಉದ್ಧಾರವಾದಾರು? ಅವರನ್ನು ಉದ್ಧರಿಸಿದರೂ ದಕ್ಕುವುದೆಷ್ಟು?
ಅವನ ಮುಂದೆ ಪ್ರಶ್ನೆಗಳ ಸರಪಣಿ. ಅದರ ಜೊತೆಗೇ ತಾನು ಇವರಂತಲ್ಲ ಎಂಬ ನಂಬಿಕೆ. ಸಾಧಿಸಬೇಕಾದದ್ದು ಇನ್ನೆಷ್ಟೋ ಇದೆ ಎಂಬ ನಿರೀಕ್ಷೆ. ಮಹತ್ವಾಕಾಂಕ್ಷೆಯ ಹಡಗಿನಲ್ಲಿ ಸಂಚಾರ ಹೊರಟಿದೆ ಅವನ ಮನಸ್ಸು.

ಇಲ್ಲ, ನಾನು ನೆಲೆ ನಿಲ್ಲಲಾರೆ
ಬದುಕನ್ನು ತಳಮಟ್ಟ ಹೀರಬೇಕು ನಾನು
ಎಲ್ಲ ಕಂಡಿದ್ದೇನೆ,. ಸುಖಿಸಿದ್ದೇನೆ, ನೊಂದಿದ್ದೇನೆ.
ನನ್ನನ್ನು ಪ್ರೀತಿಸುವವರ ಜೊತೆಗೂ, ಒಬ್ಬಂಟಿಯಾಗಿಯೂ.
ಎತ್ತರಿಸಿ ನುಗ್ಗುವ ಕಡಲ ಅಲೆಗಳ
ಚಂಡಮಾರುತದ, ಮಬ್ಬು ಕವಿದ ಸಾಗರವ
ಮೆಟ್ಟಿ ಸಾಗಿದ್ದೇನೆ.
ಸಾಹಸಕ್ಕೊಂದು ಹೆಸರಾಗಿದ್ದೇನೆ.

ಕಳೆದ ಕಾಲವ ನೆನೆಯುತ್ತದೆ ಮನ. ಆ ಸಾಹಸ, ಆ ರೋಮಾಂಚ ಎಲ್ಲವೂ ಮುಗಿದಿದೆ. ನಿನ್ನ ಅವತಾರ ಪೂರ್ತಿಯಾಯಿತು ಎಂಬಂತೆ ಎಲ್ಲ ತಣ್ಣಗಾಗಿದೆ. ಆದರೆ ಮತ್ತೆ ಆ ರೋಚಕತೆ ಬೇಕೆನ್ನುತ್ತದೆ ಮನಸ್ಸು. ಕ್ರಿಯಾಶೀಲ ಜೀವ ಹಾಗೆ ತುಡಿಯುವುದು ತಪ್ಪೇ? ಹಾಗಿದ್ದರೆ ವಿಶ್ರಾಂತಿಯೇ ಬೇಡವೇ? ವಿಶ್ರಾಂತಿಯ ಸಮಯದಲ್ಲೂ ಕ್ರಾಂತಿಯ ಚಿಂತೆಯೇ?

ಹೊಸ ಅನುಭವಕ್ಕೆ ಹಸಿದವನಂತೆ
ಸುತ್ತಾಡಿದೆ, ಅಲೆಮಾರಿ ಬದುಕಲ್ಲಿ ಏನೇನೆಲ್ಲ ಕಂಡೆ.
ಆ ಊರು, ಆ ಜನ, ಆ ಮನ, ಆ ಪರಿಸರ, ಆ ಅಧಿಕಾರ
ಹೋದೆಡೆಯೆಲ್ಲ ನನಗೆ ಸಿಕ್ಕಿದ್ದು ಗೌರವದ ಸ್ವಾಗತ.
ನನ್ನ ಸಮಕಾಲೀನರ ಜೊತೆ ಕಾದಾಡಿದ ಉನ್ಮತ್ತ ಮತ್ತು.
ಗಾಳಿ ತೊನೆಯುವ ಟ್ರಾಯ್ ನೆಲದಲ್ಲಿ ಯುದ್ಧಾಸಕ್ತ ಕ್ಷಣ.
ನಾನು ಕಂಡದ್ದೆಲ್ಲ ನಾನೇ ಆದ ಜೀವನ.
ಪಡೆದ ಅನುಭವ, ನಡೆದ ಹಾದಿ
ತಂದು ನಿಲ್ಲಿಸಿದ್ದು ಮತ್ತೊಂದು ದಿಡ್ಡಿಬಾಗಿಲಿನ ಮುಂದೆ
ಅದರಾಚೆ ನಾನು ನಡೆಯದ ದಾರಿ.
ಸಾಗಿದಂತೆಲ್ಲ ಮಸುಕಾಗುವ ಸೀಮಾರೇಖೆ.
ಅಷ್ಟಕ್ಕೂ ಕೊನೆಯೆಂಬುದು ಎಷ್ಟು ನೀರಸ?
ನಿಷ್ಕ್ರಿಯತೆಯ ತುಕ್ಕು ಹಿಡಿಸಿಕೊಂಡು
ಕ್ರಿಯಾಶೀಲತೆಯಲ್ಲಿ ಥಳಥಳಿಸದೆ
ಉಸಿರಾಟವೇ ಬದುಕು ಎಂಬಂತೆ ಬದುಕುವುದೂ
ಒಂದು ಬದುಕಾ?

ಇಲ್ಲ , ಸುಖವಿಲ್ಲ. ಪುರುಷಾರ್ಥವಿಲ್ಲ. ಹಾಗನ್ನಿಸುವುದು ಬೆಳೆಯುವ ಸೂಚನೆಯಾ? ಎಷ್ಟು ಕಷ್ಟ ನಿರ್ಧರಿಸುವುದು ಯೋಚಿಸಿ. ಒಂದರಿಂದ ಇನ್ನೊಂದಕ್ಕೆ ಜಿಗಿಯುತ್ತಾ ಸಾಗುವವನು ಕೊನೆಗೆ ಎಲ್ಲಿಗೆ ತಲುಪುತ್ತಾನೆ. ಕೊನೆಯೆಂಬುದೇ ಇಲ್ಲದ ಬದುಕಿದೆಯಾ? ಇರಬೇಕಾ? ಎಲ್ಲಿಯೂ ನಿಲ್ಲದಿರು, ಕೊನೆಯನೆಂದು ಮುಟ್ಟದಿರು, ಮನೆಯನೆಂದು ಕಟ್ಟದಿರು ಅಂದಿದ್ದು ಅದಕ್ಕೇನಾ?

*****

One equal temper of heroic hearts,
Made weak by time and fate,
but strong in will
To strive, to seek, to find, and not to yield.
ಕಾಲ ಮತ್ತು ವಿಧಿ ವೀರಾವೇಶವನ್ನು ಮಂಕಾಗಿಸುತ್ತದೆ ನಿಜ, ಆದರೆ ದೃಢಮನಸ್ಸಿದ್ದರೆ ಸಾಕು, ಹುಡುಕುವುದಕ್ಕೆ, ಹೊರಡುವುದಕ್ಕೆ, ಗೆಲ್ಲುವುದಕ್ಕೆ. ಕಾಲಕ್ಕೆ ಬಲಿಯಾಗದೆ ಉಳಿಯುವುದಕ್ಕೆ. ಆಗಾಗ ಎದುರಾಗುವ ದುರ್ಬಲ ಕ್ಷಣಗಳನ್ನು ಮೀರುವುದಕ್ಕೆ ಅನ್ನುತ್ತಾನೆ ಟೆನಿಸನ್. ಆ ವೀರನ ಮೂಲಕ ನಮ್ಮೊಳಗೂ ಮತ್ತೆ ಚಿಗುರುವ, ಮತ್ತೆ ಎದುರಿಸುವ, ಮತ್ತೊಂದು ಹುಡುಕಾಟಕ್ಕೆ ಸಿದ್ಧರಾಗುವ ಹುಮ್ಮಸ್ಸನ್ನು ತುಂಬುತ್ತಾನೆ.
ಅಡಿಗರು ಹೇಳಿದ್ದು ಅದನ್ನೇನಾ?

ಬಾವಿಯೊಳಗಡೆ ನೀರು, ಮೇಲಕ್ಕಾವಿ
ಆಕಾಶದುದ್ದಕ್ಕೂ ಅದರ ಕಾರಣ ಬೀದಿ
ಕಾರ್ಮುಗಿಲ ಖಾಲಿ ಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ
ಭೂತ ರೂಪಕ್ಕೆ ಮಳೆ ವರ್ತಮಾನ
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ
ಭತ್ತಗೋಧುವೆ ಹಣ್ಣು ಬಿಟ್ಟ ಬೃಂದಾವನ
ಗುಡಿಗೋಪುರಗಳ ಬಂಗಾರ ಶಿಖರ

ಪದ್ಯಕ್ಕೆ ಹೊಸ ಅರ್ಥಗಳು ಹೊಳೆಯುತ್ತಾ ಹೋಗುವುದೇ ಹೀಗೆ. ಯಾವುದೋ ಒಂದು ಇಂಗ್ಲಿಷ್ ಕವಿತೆ ಕನ್ನಡದ ಒಂದು ಕವಿತೆ ಅರ್ಥವಾಗುವುದಕ್ಕೆ ನೆಪವಾಗಬಹುದು. ಭೂತರೂಪಕ್ಕೆ ಮಳೆ ವರ್ತಮಾನ ಎಂದರೆ ಮೋಡಗಟ್ಟಿದ್ದ ನಿಷ್ಕ್ರಿಯ ಮನಸ್ಸು ಮಳೆಯಾಗಿ ಕ್ರಿಯಾಶೀಲವೂ ಸೃಜನಶೀಲವೂ ಆಗುವುದಕ್ಕೆ ರೂಪಕವಾಗಬಹುದು.
ಇಲ್ಲಿ ನಾವು ತಳೆಯಬೇಕಾಗ ನಿಲುವು .ಯಾವುದು? ಸದಾ ಹೊಸದಕ್ಕೆ ಹೊಸ ಅನುಭವಕ್ಕೆ ತುಡಿಯುತ್ತಿರಬೇಕಾ? ಹಾಗೆ ತುಡಿಯುವುದೇ ಬದುಕಾಗಬೇಕಾ? ಅಥವಾ ಒಂದು ಯಶಸ್ಸನ್ನು ಸಾಧನೆಯನ್ನು ಸುಮ್ಮನೆ ಕೂತು ಸವಿಯಬೇಕಾ? ಸವಿಯುತ್ತಿರುವ ಹೊತ್ತಿಗೆ ನಾವು ಸವೆಯುತ್ತಲೂ ಇರುತ್ತೇವಲ್ಲ? ನಾಳೆ ಅದೇ ಗೆಲುವು ನಮ್ಮ ಪಾಲಿಗೆ ಏನೂ ಅಲ್ಲ ಅನ್ನಿಸಲಿಕ್ಕಿಲ್ಲವೇ?
ಮತ್ತೊಂದು ದಂಡಯಾತ್ರೆ, ಮತ್ತೊಂದು ದಿಗ್ವಿಜಯದ ಆಸೆ ಕೂಡ ಪ್ರಾಪಂಚಿಕವಾ ಅನ್ನುವ ಅನುಮಾನ? ಸುಮ್ಮನುಳಿಯುವುದು ಸರಿಯಾ ಎಂಬ ಗುಮಾನಿ. ಕ್ರಿಯೆಯ ರೋಚಕತೆಯಲ್ಲಿ ಬದುಕು ಅರಳಿಕೊಳ್ಳಬೇಕಾ ಅಥವಾ ಗುರಿಯತ್ತ ಧಾವಿಸುತ್ತಿರಬೇಕಾ ಎಂಬ ಪ್ರಶ್ನೆಯೊಂದಿಗೆ ಈ ಎರಡೂ ಕವಿತೆಗಳೂ ನಮ್ಮನ್ನು ಮತ್ತಷ್ಟು ಪ್ರಶ್ನೆಗಳಿಗೆ ಗುರಿಮಾಡುತ್ತವೆ.
ಉತ್ತರವೇ ಸಿಗದೇ ಕೂತಿದ್ದಾಗ ಅವಳು ಕೇಳುತ್ತಾಳೆ:
ಯೌವನ ಸಂದ ಹೆಂಡತಿಯ ಜೊತೆ ಕೂತಿದ್ದಾನಲ್ಲ ಅವನು. ಅವಳ ಯೌವನದಲ್ಲಿ ಅವನೆಲ್ಲಿದ್ದ? ಅವಳ ಜೊತೆಗಿದ್ದನಾ? ಇರಲಿಲ್ಲ ಅಂದ ಮೇಲೆ ಅವಳಿಗೆ ಅವನ ಸಾಹಸದಿಂದ ಯಶಸ್ಸಿನಿಂದ ಏನು ದಕ್ಕಿತು? ಅವನು ಗೆದ್ದು ಬರುತ್ತಾನೆಂಬ ನಿರೀಕ್ಷೆಯಲ್ಲಿ ಕುಳಿತ ಅವಳ ಬದುಕಿಗೆ ಅರ್ಥವೇನು? ಅವನಂತೆಯೇ ಅವಳ ಮನಸ್ಸು ಕೂಡ ಭೂತರೂಪದ ಮಳೆಯ ವರ್ತಮಾನಕ್ಕೆ ಕಾಯುವುದಿಲ್ಲವೇ?
ಅವಳು ಮಳೆಯಾಗುವುದು ಯಾವಾಗ?
ಆಷಾಢದ ಆಗಸದಲ್ಲಿ ಮೋಡ ದಟ್ಟೈಸುತ್ತಿದೆ. ಅದನ್ನು ಯಾವುದೋ ಗಾಳಿ ಮತ್ತೆಲ್ಲಿಗೋ ಕೊಂಡೊಯ್ಯುತ್ತದೆ. ಅವಳ ಪ್ರಶ್ನೆಯೆಂಬ ಅಗಿಷ್ಟಿಕೆಯ ಮುಂದೆ ಮನಸ್ಸು ಕಾಯಿಸಿಕೊಳ್ಳುತ್ತಾ ಕೂತಿದ್ದೇನೆ.
ನಿಗಿನಿಗಿಕೆಂಡ ಕಾಯುತ್ತಿದೆ!

Wednesday, July 2, 2008

ಆಷಾಢಕ್ಕೆ ಮುನ್ನ ಅರಳಿತು ಮೇಫ್ಲವರ್

ಪಂಚ್ ಕಜ್ಜಾಯ
ಪ್ರಕಾಶ-ಕ

ಟೀನಾ ಝೋನ್


ಮೇ ಫ್ಲವರ್ ನಗುಚಿತ್ತಾರದ ಮನೆ

ಗೆಳೆಯ ಜಿ ಎನ್ ಮೋಹನ್ ಏನಾದರೊಂದು ಮಾಡುತ್ತಲೇ ಇರುತ್ತಾರೆ. ಏನು ಮಾಡಿದರೂ ಮೆಚ್ಚುಗೆ ಆಗುವಂತೆ ಮಾಡುತ್ತಾರೆ. ಹಾಗಂತ ಅದನ್ನು ತಾವೊಬ್ಬರೇ ಮಾಡುವುದಿಲ್ಲ, ಎಲ್ಲರೂ ಒಳಗೊಳ್ಳುವ ಹಾಗೆ ಮಾಡುತ್ತಾರೆ.
ಅವರ ಹೊಸ ಸಾಹಸದ ಹೆಸರು ಮೇ ಫ್ಲವರ್ ಮೀಡಿಯಾ ಹೌಸ್. ಯಮುನಾಬಾಯಿ ರಸ್ತೆಯ ಪುಟ್ಟ ಮನೆಯೊಂದರಲ್ಲಿ ಮೇ ಫ್ಲವರ್ ಅರಳಿದೆ. ಅಲ್ಲೇನು ಮಾಡುತ್ತೀರಿ ಅನ್ನುವ ಕುತೂಹಲಕ್ಕೆ ಮತ್ತೆ ಅವರದೇ ತುಂಟ ಉತ್ತರ.
ಮೊನ್ನೆ, ಸೋಮವಾರ ಈ ಮೇ ಫ್ಲವರ್ ಗೆಳೆಯರಿಗೆ ತೆರೆದುಕೊಂಡಿತು. ಕೂತು ಮಾತಾಡುವುದಕ್ಕೆ, ಒಳ್ಳೆಯ ಸಿನಿಮಾ ನೋಡುವುದಕ್ಕೆ ಕಾವ್ಯದ ಕುರಿತು ಚರ್ಚಿಸುವುದಕ್ಕೆ, ಹರಟೆ ಕೊಚ್ಚುವುದಕ್ಕೆ, ಪಟ್ಟಾಂಗಕ್ಕೆ - ಹೀಗೆ ಎಲ್ಲಾ ಬೌದ್ಧಿಕ ಸೃಜನಶೀಲ ಚಟುವಟಿಕೆಗಳಿಗೆ ಅದೀಗ ಸಂಗಮಸ್ಥಾನ.
ಮನೆಯೊಳಗಣ ಸೊಬಗನ್ನು ಸವಿಯುವುದಕ್ಕಾದರೂ ನೀವಲ್ಲಿಗೆ ಹೋಗಬೇಕು. ಹೋಗುವಾಗ ಎಚ್ಚರಿಕೆ- ಕೈಯಲ್ಲೊಂದು ಪುಸ್ತಕ, ಮನಸ್ಸಲ್ಲೊಂದು ಒಳ್ಳೆಯ ಅಲೋಚನೆ, ಸುಪ್ತಮನಸ್ಸಿನಲ್ಲೊಂದು ಕವಿತೆಯ ಸಾಲು ಇರಲಿ.
ಕೂಡಿ ಕಲೆತು ಬೆಳೆಯುವುದಕ್ಕೊಂದು ನೆಲೆ ಒದಗಿಸಿಕೊಟ್ಟ ಮೋಹನತಾಣ, ಅವರನ್ನೂ ಸಮೃದ್ಧವಾಗಿಸಲಿ.