Sunday, August 12, 2012

ಬೆಸ್ಟ್ ವೇ ಅಂದರೆ ಹೆಮಿಂಗ್-ವೇ


ನಾನು ಲೇಖಕನಾಗುವುದು ಹೇಗೆ. ಬರೆಯಬೇಕಾದ್ದು ಹೇಗೆ ಎಂದು ಯೋಚಿಸುವ ಪ್ರತಿಯೊಬ್ಬ ಕೂಡ ತನ್ನೊಳಗೇ ಒಂದು ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ. ಈ ಕಾಲದಲ್ಲಿ, ಎಲ್ಲ eನವೂ ಸಂಪತ್ತಿನ ಸಂಪಾದನೆಯ ಮೂಲ ಎಂದು ನಂಬಿರುವ ದಿನಗಳಲ್ಲಿ ಇದು ಮುಖ್ಯ ಅಲ್ಲ ಅಂತ ಬಹಳಷ್ಟು ಮಂದಿಗೆ ಅನ್ನಿಸಬಹುದು. ಆದರೆ ಏಕಾಂತ ಎಂಬುದೊಂದು ಎಲ್ಲರನ್ನೂ ಆವರಿಸುತ್ತದೆ. ಅಂಥ ಹೊತ್ತಲ್ಲಿ ಸಂಪತ್ತಾಗಲೀ, ಅಧಿಕಾರವಾಗಲೀ ಉಪಯೋಗಕ್ಕೆ ಬರುವುದಿಲ್ಲ. ಆ ನೆರವಾಗುವುದು ಕೇವಲ ನಮ್ಮ ಸೃಜನಶೀಲತೆ. ಅದರಲ್ಲೂ ದ್ವೀಪಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಅಂಥದ್ದೊಂದು ಅದಮ್ಯ ಆಸೆ ಮೂಡಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಅವರ ಭಾವನೆಗಳಿಗೆ ಅಲ್ಲಿ ಹೊರದಾರಿಗಳೇ ಇರುವುದಿಲ್ಲವಲ್ಲ.
ಅಂಥ ಹೊರದಾರಿಗಳಿಲ್ಲದ ಆ ಅಧಿಕಾರಿಯ ಹೆಸರು ಲೆಡರರ್. ಅವನು ಚುಂಗ್‌ಕಿಂಗ್ ದ್ವೀಪದಲ್ಲಿ ಕೆಲಸ ಮಾಡುತ್ತಿದ್ದಆಗಿನ್ನೂ ಅವನಿಗೆ ಹದಿಹರೆಯ. ಅನೇಕ ಗೆಳೆಯರು. ಮೋಜು, ಸುತ್ತಾಟ, ವಾರಾಂತ್ಯದಲ್ಲಿ ಮದ್ಯ ಸೇವನೆಯೇ ಖಯಾಲಿಯಾಗಿದ್ದ ಅವನಿಗೆ ಬರೆಯುವ ಹುಚ್ಚು. ಎಲ್ಲ ಮೋಜು ಮಸ್ತಿಗಳು ಮುಗಿದ ನಂತರ ಅವನನ್ನು ಭೀಕರವಾದ ನಿರಾಶೆ ಕಾಡುತ್ತಿತ್ತು. ಏನಾದರೂ ಅದ್ಭುತವಾದದ್ದು ಮಾಡಬೇಕು. ಈ ಜೀವನ ಹೀಗೆಯೇ ಸೋರಿ ಹೋಗುತ್ತದೆ ಅಂತ ಅನ್ನಿಸುತ್ತಿತ್ತು. ಏನು ಮಾಡಬೇಕು ಅನ್ನುವ ಕಿಂಚಿತ್ ದಾರಿಯೂ ಅವನಿಗೆ ತೋಚುತ್ತಿರಲಿಲ್ಲ . ಆಗ ಬರಹವೊಂದೇ ತನ್ನ ಹೊರದಾರಿ ಅಂತ ಅವನಿಗೆ ಅನ್ನಿಸುತ್ತಿತ್ತು.
ಆದರೆ ಹೇಗೆ ಬರೆಯಬೇಕು ಎಂದು ಹೇಳಿಕೊಡುವವರು ಯಾರೂ ಇರಲಿಲ್ಲ. ಬರೆದದ್ದು ಸರಿಯಾಗಿದೆಯೇ ಚೆನ್ನಾಗಿದೆಯೇ ಎಂದು ಹೇಳುವವರು ಇರಲಿಲ್ಲ. ಆ ದ್ವೀಪದ ತುಂಬ ಇದ್ದದ್ದು ಕಳ್ಳರು, ಕಡಲುಗಳ್ಳರು, ಬ್ರೋಕರುಗಳು ಮತ್ತು ತಲೆಹಿಡುಕರು. ಅವರ ನಡುವೆ ಇವನೊಬ್ಬ ವಿಚಿತ್ರ ಪ್ರಾಣಿಯಂತೆ ಕಾಣುತ್ತಿದ್ದ.
ಅವನಿದ್ದ ಆ ಪುಟ್ಟ ದ್ವೀಪದಂಥ ಊರಲ್ಲಿ ಮದ್ಯಕ್ಕೆ ಬರ. ಒಳ್ಳೆಯ ಸ್ಕಾಚ್‌ವಿಸ್ಕಿ ಸಿಗಬೇಕು ಅಂದರೆ ಒದ್ದಾಟ. ಆ ಕಾಲಕ್ಕೆ ಹಡಗಿನ ಕಟ್ಟೆಯ ಬಳಿ, ಕಡಲುಗಳ್ಳರಿಂದ ವಶಪಡಿಸಿಕೊಂಡ ಮಾಲುಗಳನ್ನು ಹರಾಜು ಹಾಕುತ್ತಿದ್ದರು. ಆ ಹರಾಜನ್ನು ಬ್ಲೈಂಡ್ ಆಕ್ಷನ್ ಎಂದು ಕರೆಯಲಾಗುತ್ತಿತ್ತು. ಸೀಲು ಮಾಡಲಾಗಿದ್ದ ಪೆಟ್ಟಿಗೆಗಳನ್ನು ಹರಾಜಿಗೆ ಇಡುತ್ತಿದ್ದರು. ಅದರೊಳಗೆ ಏನಿದೆ ಅನ್ನುವುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಅದನ್ನು ಹರಾಜಿನಲ್ಲಿ ಕೊಂಡುಕೊಂಡವರ ಅದೃಷ್ಟ ಚೆನ್ನಾಗಿದ್ದರೆ ಒಳ್ಳೆಯ ಮಾಲು ಸಿಗುತ್ತಿತ್ತು.
ಲೆಡರರ್‌ಗೆ ಹಾಗೆ ಹರಾಜಿನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸುವ ಚಟವಿತ್ತು. ಅನೇಕ ಬಾರಿ ಅವನಿಗೆ ಅದೃಷ್ಟ ಕೈ ಕೊಟ್ಟಿದ್ದರೂ ಮತ್ತೆ ಮತ್ತೆ ಏನನ್ನಾದರೂ ಅವನು ಕೊಳ್ಳುತ್ತಿದ್ದ. ಈ ಬಾರಿ ಅವನು ಕೊಂಡ ಪೆಟ್ಟಿಗೆಯ ಒಳಗೆ ಎರಡು ಡಜನ್ ಸ್ಕಾಚ್ ವಿಸ್ಕಿಯ ಬಾಟಲುಗಳು ಸಿಕ್ಕವು. ಅವನು ಅದು ತನ್ನ ಅದೃಷ್ಟವೆಂದೇ ಭಾವಿಸಿದ. ಎಲ್ಲರಿಗೂ ವಿಸ್ಕಿ ಬೇಕಾಗಿದ್ದುದರಿಂದ ಮತ್ತು ವಿಸ್ಕಿ ದುರ್ಲಭವಾದ್ದರಿಂದ ಅವನಿಗೆ ಸಿಕ್ಕ ಹತ್ತು ಪಟ್ಟು ಬೆಲೆಗೆ ಅನೇಕರು ಅದನ್ನು ಕೊಳ್ಳಲು ಮುಂದೆ ಬಂದರು. ಲೆಡರರ್ ಅದನ್ನು ತಾನು ಮಾರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ.
ಅದೇ ಸಮಯಕ್ಕೆ ಚುಂಗ್‌ಕಿಂಗ್‌ಗೆ ಲೇಖಕ ಹೆಮಿಂಗ್‌ವೇ ಬಂದಿದ್ದರು. ಒಂದು ತಿಂಗಳ ಭೇಟಿಗಾಗಿ ಬಂದ ಹೆಮಿಂಗ್‌ವೇ ವಿಸ್ಕಿ ಪ್ರಿಯರು. ಅವರಿಗೆ ಅಲ್ಲಿ ಸ್ಕಾಚ್‌ವಿಸ್ಕಿ ಸಿಗುವುದಿಲ್ಲ ಎಂದು ಗೊತ್ತಾಯಿತು. ಅವರ ಗೆಳೆಯರು ಲೆಡರರ್ ಬಳಿ ವಿಸ್ಕಿ ಇರುವುದಾಗಿ ಹೇಳಿದರು. ಆದರೆ ಆತ ಅದನ್ನು ಯಾರಿಗೂ ಮಾರುವುದಿಲ್ಲ ಎಂದುಬಿಟ್ಟರು. ತಾನೇ ಪ್ರಯತ್ನಿಸುವುದಾಗಿ ಹೇಳಿ ಹೆಮಿಂಗ್‌ವೇ ಒಂದು ಬೆಳಗ್ಗೆ ಲೆಡರರ್ ಮನೆಗೆ ಬಂದೇಬಿಟ್ಟರು.
ಲೆಡರರ್‌ಗೆ ಸಂತೋಷದಿಂದ ಪ್ರಾಣ ಬಿಡುವುದಷ್ಟೇ ಬಾಕಿ. ತನ್ನ ಮೆಚ್ಚಿನ ಲೇಖಕ ತನ್ನನ್ನೇ ಹುಡುಕಿಕೊಂಡು ಬಂದುಬಿಟ್ಟಿದ್ದಾನೆ. ಹೆಮಿಂಗ್‌ವೇ ತನಗೆ ವಿಸ್ಕಿ ಬೇಕು ಅಂದರು. ಎಷ್ಟು ಬೇಕಾದರೂ ದುಡ್ಡು ಕೊಡುವುದಾಗಿ ಹೇಳಿದರು. ಲೆಡರರ್ ತನಗೆ ದುಡ್ಡು ಬೇಡ ಎಂದೂ ಕತೆ ಬರೆಯುವುದನ್ನು ಹೇಳಿಕೊಡಬೇಕೆಂದೂ ಕೇಳಿಕೊಂಡ. ಹೆಮಿಂಗ್‌ವೇ ದುಡ್ಡು ತಗೊಂಡು ಮಜಾ ಮಾಡು. ಅದೆಲ್ಲ ಆಗದ್ದು ಅಂದರು. ಲೆಡರರ್ ಹಠ ಬಿಡಲಿಲ್ಲ. ಕೊನೆಗೆ ಆರು ಬಾಟಲಿ ವಿಸ್ಕಿಗೆ, ಕತೆ ಬರೆಯುವುದನ್ನು ಹೇಳಿಕೊಡುವುದಕ್ಕೆ ಹೆಮಿಂಗ್‌ವೇ ಒಪ್ಪಿಕೊಂಡರು. ಉಳಿದ ಆರು ಬಾಟಲಿಗೆ ಒಳ್ಳೆಯ ಬೆಲೆ ಕೊಟ್ಟು ಕೊಂಡುಕೊಂಡರುಅಷ್ಟೂ ದಿನ ಬ್ಲೈಂಡ್ ಆಕ್ಷನ್‌ನಲ್ಲಿ ಕಳಕೊಂಡ ಹಣ ಲೆಡರರ್‌ಗೆ ಬಂದೇ ಬಿಟ್ಟಿತು. ಹೆಮಿಂಗ್‌ವೇ ವಿಸ್ಕಿ ಬಾಟಲಿಯನ್ನು ಹೊತ್ತುಕೊಂಡು ಹೊರಟು ಹೋದರು.
ಮಾರನೇ ದಿನದಿಂದ ಲೆಡರರ್ ಹೆಮಿಂಗ್‌ವೇ ಜೊತೆ ಓಡಾಡತೊಡಗಿದ. ಹೆಮಿಂಗ್‌ವೇ ಹೇಗೆ ಗಮನಿಸುತ್ತಾರೆ, ಹೇಗೆ ಮಾತಾಡುತ್ತಾರೆ ಅನ್ನುವುದನ್ನು ಗಮನಿಸುತ್ತಿದ್ದ. ತಾನು ಲೇಖಕ ಎಂಬುದನ್ನು ಅವರು ತೋರಿಸಿಕೊಳ್ಳುತ್ತಲೇ ಇರಲಿಲ್ಲ. ಯಾವುದನ್ನೂ ಅವರು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದಾರೆ ಎಂದು ಅವನಿಗೆ ಅನ್ನಿಸಲಿಲ್ಲ. ಎಲ್ಲವನ್ನೂ ಉಡಾಪೆಯಿಂದ ನೋಡುತ್ತಾ, ನಿರಾಕರಿಸುತ್ತಾ, ಎದುರಿಗೆ ಸಿಕ್ಕ ಸಣ್ಣಪುಟ್ಟ ಮನುಷ್ಯರ ಜೊತೆ ಮಾತಾಡುತ್ತಾ, ಅವರಿಗೆ ತಮಾಷೆ ಮಾಡುತ್ತಾ, ಅವರಿಂದ ಬೈಸಿಕೊಳ್ಳುತ್ತಾ ಅವರು ತಾನೇನೂ ಅಲ್ಲ ಎಂಬಂತೆ ಇದ್ದರು.
ಲೆಡರರ್ ಇವತ್ತಿನ ಪಾಠ ಏನು ಎಂದು ಕೇಳಿದ. ಮನಸ್ಸನ್ನು ಕನ್ನಡಿಯ ಹಾಗಿಟ್ಟುಕೋ ಎಂದರು ಹೆಮಿಂಗ್‌ವೇ. ಮಾರನೇ ದಿನ ಅವನು ಬಂದಾಗ ಹೆಮಿಂಗ್‌ವೇ ನಿನ್ನ ಬಳಿ ಇದ್ದ ವಿಸ್ಕಿ ಕುಡಿದೆಯಾ ಎಂದು ಕೇಳಿದರು. ಲೆಡರರ್ ಇಲ್ಲ, ಅದನ್ನು ಒಂದು ಪಾರ್ಟಿಗೋಸ್ಕರ ಇಟ್ಟುಕೊಂಡಿದ್ದೇನೆ. ಈಗಲೇ ಕುಡಿಯುವುದಿಲ್ಲ ಎಂದ. ಹೆಮಿಂಗ್‌ವೇ ನಕ್ಕರು. ಪಾಠ ಎರಡು- ಲೇಖಕನಾದವನು ಯಾವುದನ್ನೂ ನಾಳೆಗೆಂದು ಇಟ್ಟುಕೊಳ್ಳಬಾರದು.
ಲೆಡರರ್ ಅವರಿಗೆ ಲೇಖಕ ಆಗೋದು ಹೇಗೆ ಎಂದು ಹೇಳಿ ಎಂದು ಒತ್ತಾಯಿಸಿದ. ಅವರು ಅದನ್ನೆಲ್ಲ ಹೇಳಿಕೊಡಲಿಕ್ಕೆ ಕಷ್ಟ ಅಂತ ಆವತ್ತೇ ಹೇಳಿದ್ದೇನೆ. ಆದರೂ ಒಂದು ಮಾತು ಹೇಳ್ತೀನಿ ಕೇಳು. ಒಳ್ಳೆಯ ಬಾಳು ನಡೆಸುವುದಕ್ಕೆ ಏನೇನು ಸೂತ್ರಗಳಿವೆಯೋ ಲೇಖಕ ಆಗುವುದಕ್ಕೂ ಅವೇ ಸೂತ್ರಗಳು. ಒಳ್ಳೆಯ ಮನುಷ್ಯ ಅಂತಿಮವಾಗಿ ಒಳ್ಳೆಯ ಲೇಖಕ ಆಗುತ್ತಾನೆ. ಸಜ್ಜನ, ಸುಸಂಸ್ಕೃತ, ಮಿತಭಾಷಿ, ತನ್ನ ಹಾಗೆ ಇನ್ನೊಬ್ಬರು ಎಂದು ಭಾವಿಸುವುದು ಮತ್ತು ಪ್ರಾಮಾಣಿಕವಾಗಿ ಹಾಗೆ ತಿಳಿಯುವುದು ಲೇಖಕನಾಗುವ ಮೊದಲ ಮೆಟ್ಟಲು ಅಂದರು. ಲೆಡರರ್ ಅವರ ಬಳಿ ವಾದಕ್ಕಿಳಿದ. ಲೇಖಕನಾಗಲು ಅದ್ಯಾವುದೂ ಮುಖ್ಯ ಲಕ್ಷಣ ಅಂತ ನನಗೆ ಅನ್ನಿಸುತ್ತಿಲ್ಲ ಅಂದ. ಹೆಮಿಂಗ್‌ವೇ ಸುಮ್ಮನೆ ನಕ್ಕರು. ಅವರ ಬಳಿ ಇನ್ನಷ್ಟು ಸಂಗತಿಗಳನ್ನು ಕೇಳಬೇಕು ಅಂದುಕೊಂಡ ಲೆಡರರ್ ಹೇಗಾದರೂ ಮಾಡಿ ಅವರ ಬಾಯಿ ಬಿಡಿಸಬೇಕು ಎಂದು ತೀರ್ಮಾನಿಸಿಬಿಟ್ಟಿದ್ದ.
ಆದರೆಮೂರನೇ ದಿನ ಹೆಮಿಂಗ್‌ವೇ ಹೊರಟುಬಿಟ್ಟರು. ತಿಂಗಳು ಇರಲೆಂದು ಬಂದವರಿಗೆ ಮೂರೇ ದಿನಕ್ಕೆ ಮರಳಿ ಬರಬೇಕೆಂದು ಕರೆಬಂತು. ಲೆಡರರ್‌ಗೆ ನಿರಾಶೆಯಾಯಿತು. ಹೆಮಿಂಗ್‌ವೇ ಮುಂದೊಂದು ದಿನ ಬಂದಾಗ ಪಾಠ ಮುಂದುವರಿಸುತ್ತೇನೆ ಎಂದು ಹೇಳಿ ಹೊರಟು ನಿಂತರು. ಅವನು ಪಾಠ ಹೇಳುವ ಶುಲ್ಕವೆಂದು ಕೊಟ್ಟಿದ್ದ ಆರು ಬಾಟಲಿ ವಿಸ್ಕಿಯ ದುಡ್ಡನ್ನು ಅವನ ಕೈಗಿಟ್ಟರು. ನಾನು ಪಾಠ ಹೇಳಿಕೊಡಲಾಗಲಿಲ್ಲ. ನೀನು ನಷ್ಟ ಮಾಡಿಕೊಳ್ಳಬಾರದು ಅಂದರು. ಹೊರಡುವ ಮುನ್ನ ಕೊನೆಯ ಪಾಠ ಹೇಳಿದರು- ಲೇಖಕ ತನ್ನಲ್ಲಿರುವ ವಿಸ್ಕಿಯನ್ನು ರುಚಿ ನೋಡದೇ ಬೇರೆಯವರಿಗೆ ನೀಡಬಾರದು. ವಿಸ್ಕಿ ಕೆಟ್ಟದಾಗಿದ್ದರೂ ಒಳ್ಳೆಯತನ ಬಿಡಬಾರದು.
ಲೆಡರರ್‌ಗೆ ಏನೂ ಅರ್ಥವಾಗಲಿಲ್ಲ. ಮನೆಗೆ ಬಂದು ಸುಮ್ಮನೆ ಕೂತ. ನಾಲ್ಕೈದು ದಿನ ಯೋಚಿಸಿದ. ಅವನು ಆಯೋಜಿಸಿದ್ದ ಪಾರ್ಟಿ ಸಮೀಪಿಸುತ್ತಿತ್ತು. ಇದ್ದಕ್ಕಿದ್ದಂತೆ ಹೆಮಿಂಗ್ವೇ ಹೇಳಿದ ಕೊನೆಯ ಪಾಠ ನೆನಪಾಗಿ ವಿಸ್ಕಿ ಬಾಟಲು ತೆಗೆದು ರುಚಿ ನೋಡಿದ.
ಕಳ್ಳರು ವಿಸ್ಕಿ ಬಾಟಲಿಯೊಳಗೆ ಟೀ ತುಂಬಿಸಿಟ್ಟಿದ್ದರು. ಎಲ್ಲ ಬಾಟಲಿಗಳಲ್ಲೂ ಬರೀ ಕಹಿ ಟೀ ಇತ್ತು.
ಲೆಡರರ್ ಬರೆದುಕೊಳ್ಳುತ್ತಾನೆ. ಹೆಮಿಂಗ್‌ವೇ ಕಲಿಸಿದ ಪಾಠವನ್ನು ನಾನು ಯಾವತ್ತೂ ಮರೆಯಲಾರೆ. ಅವರು ಟೀ ಬಾಟಲ್ಲಿಗೆ ಕೈ ತುಂಬ ದುಡ್ಡು ಕೊಟ್ಟಿದ್ದರು. ಯಾವತ್ತೂ ಅದರ ಬಗ್ಗೆ ಕೊರಗಲಿಲ್ಲ. ನನ್ನ ಅವಿವೇಕವನ್ನು ಆಡಿಕೊಳ್ಳಲಿಲ್ಲ. ನನ್ನ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ. ಒಳ್ಳೆಯತನ ಎಂದರೇನು ಎಂದು ಹೇಳಿಕೊಟ್ಟರು.
ನಾನು ಲೇಖಕನಾದೆ.
ಒಳ್ಳೆಯ ಲೇಖಕನಾದವನು ಒಳ್ಳೆಯ ಮನುಷ್ಯನೇನೂ ಆಗಿರಬೇಕಿಲ್ಲ ಎಂದು ಸಾಬೀತು ಪಡಿಸಿದವರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ ಬಾಳುವುದಕ್ಕಿರುವ ಸೂತ್ರಗಳೇ ಲೇಖಕನಾಗುವುದಕ್ಕೂ ಸಾಕು ಎಂದ ಹೆಮಿಂಗ್ವೇ ಕೂಡ ಹಾಗೇ ಬಾಳಿದ್ದನ್ನು ನೋಡಿದಾಗ ಬೆರಗಾಗುತ್ತೇವೆ. ಎಲ್ಲರಂತೆ ಓಡಾಡಿಕೊಂಡು, ಕೆಲಸ ಮಾಡಿಕೊಂಡು, ಲೇಖಕ ಎಲ್ಲರಂತೆ ಸಾಮಾನ್ಯ, ಬರೆಯುವ ಹೊತ್ತಲ್ಲಿ ಮಾತ್ರ ಅವನು ದಾರ್ಶನಿಕವಾಗುತ್ತಾನೆ ಎಂದು ತೋರಿಸಿಕೊಟ್ಟವರು ಅವರು.
ಎಲ್ಲ ತರುಣ ಬರಹಗಾರು ಹಿಡಿಯಬೇಕಾದ ದಾರಿ ಯಾವುದು ಎಂದು ಕೇಳಿದರೆ ನಾನು ಹೆಮಿಂಗ್-ವೇ ಅನ್ನುತ್ತೇನೆ.


Wednesday, June 20, 2012

ಅವನು ತಾಯಿ, ಅವನೇ ತಂದೆ: ಹೆಣ್ಣೂ ಗಂಡೂ ಒಂದೇ

ಪ್ರೆಗ್ನೆಂಟ್ ಕಿಂಗ್ ನಾಟಕದ ಒಂದು ದೃಶ್ಯ
ಕೆಲವೊಂದು ಕ್ಷಣಗಳು ನಮಗೇ ಗೊತ್ತಿಲ್ಲದ ಹಾಗೆ ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತವೆ. ಯಾರ ಜತೆಗೋ ಮಾತಾಡುತ್ತಾ ಕೂತಿರುತ್ತೀರಿ. ಅವರು ತುಂಬ ಆಸಕ್ತಿಪೂರ್ಣವಾಗಿ ಮಾತಾಡುತ್ತಿದ್ದಾರೆ. ಆ ಮಾತಿನ ನಡುವೆಯೇ ನಿಮಗೆ ಇನ್ನಿಲ್ಲದ ನಿದ್ದೆ ಬಂದುಬಿಡುತ್ತದೆ. ಒಂದೇ ಕ್ಷಣ. ಮತ್ತೆ ಥಟ್ಟನೆ ಎಚ್ಚರವಾಗುತ್ತದೆ. ಆ ಒಂದು ಕ್ಷಣದಲ್ಲಿ ಕಳೆದುಕೊಂಡಿದ್ದೇನು ಅನ್ನುವುದು ಮಾತ್ರ ಯಾವತ್ತೂ ಗೊತ್ತಾಗುವುದೇ ಇಲ್ಲ.
ಅಂಥದ್ದೊಂದು ವಿಸ್ಮೃತಿ ನಿದ್ದೆಯ ರೂಪದಲ್ಲಿ ಬರಬಹುದು, ಅನ್ಯಮನಸ್ಕತೆಯಾಗಿ ಬರಬಹುದು. ಅದೇಕೆ ಹಾಗಾಗುತ್ತದೆ ಅಂತ ಹೇಳಲಾಗದು. ಒಮ್ಮೆ ಸ್ವಿಚ್ ಆ- ಮಾಡಿ ಥಟ್ಟನೆ ಆನ್ ಮಾಡಿದಂತೆ. ಆ ಒಂದು ಕ್ಷಣದಲ್ಲಿ ಕಳಕೊಂಡದ್ದನ್ನು ಮತ್ತೆ ಪಡಕೊಳ್ಳಲಾಗುವುದೇ ಇಲ್ಲ. ಇಡೀ ಜೀವನದಲ್ಲಿ ಪಡಕೊಂಡದ್ದಕಿಂತ ಹೆಚ್ಚಿನದು ಕಳಕೊಂಡ ಆ ಒಂದು ಕ್ಷಣದಲ್ಲಿತ್ತೇನೋ ಎಂಬ ಕಳವಳ.
ದೂರ ಪ್ರಯಾಣಗಳಲ್ಲಿ ಹಾಗಾಗುತ್ತದೆಅದಕ್ಕೇ ನಾವು ಕೆಲವೊಂದು ಕೆಲಸಗಳನ್ನು ಒಂಟಿಯಾಗಿಯೇ ಮಾಡಬೇಕು. ಪ್ರವಾಸ, ಓದು, ಧ್ಯಾನ ಮತ್ತು ಪ್ರಾರ್ಥನೆ- ಏಕಾಂತದಲ್ಲೇ -ಲಿಸುತ್ತದೆ. ತುಂಬ ಮಂದಿಯನ್ನು ಕಟ್ಟಿಕೊಂಡು ಪ್ರವಾಸ ಹೋದರೆ ನಿಮಗೆ ಅದು ಅನ್ಯದೇಶ ಅನ್ನಿಸುವುದೇ ಇಲ್ಲ. ಮನೆಯಲ್ಲೋ ನಿಮ್ಮೂರಲ್ಲೇ ಇದ್ದಂತೆಯೇ ಭಾಸವಾಗುತ್ತದೆ. ಓದು ಕೂಡ ಅಷ್ಟೇ. ಗುಂಪಿನಲ್ಲಿ ಓದುತ್ತಾ ಕೂತರೆ ಪಾತ್ರಗಳು ನಿಮ್ಮೊಳಗೆ ಇಳಿಯಲು ನಿರಾಕರಿಸುತ್ತವೆ. ಅವು ರಂಜನೆ ನೀಡುತ್ತವೆ. ಪಾತ್ರಗಳಷ್ಟೇ ಆಗುತ್ತವೆ. ನಿಮ್ಮ ಮೈಮೇಲೆ ಅವು ಆವಾಹನೆ ಆಗುವುದಿಲ್ಲ. ನಮ್ಮೊಳಗೆ ದೇವರು ಬರುವ ಹಾಗೆ ಪಾತ್ರಗಳು ಬಾರದೇ ಹೋದಾಗ ಯಾವ ಕೃತಿಯೂ ನಮಗೆ ಆಪ್ತವಾಗುವುದಿಲ್ಲ. ಅರ್ಥವೂ ಆಗುವುದಿಲ್ಲ. ಆ ಪಾತ್ರದ ತುಮುಲ, ಸಂಘರ್ಷ ಮತ್ತು ತಾತ್ವಿಕತೆ ನಮ್ಮದಾಗುವುದಿಲ್ಲ.
ಒಂದು ಪಾತ್ರದ ದ್ವಂದ್ವ ನಮ್ಮದಾಗುವುದು ಹೇಗೆ? ಆ ಪಾತ್ರವನ್ನು ಕಾಡುವ ಪ್ರಶ್ನೆ ನಮ್ಮನ್ನೂ ಕಾಡಬೇಕು? ಒಂದು ಪುಟ್ಟ ಕತೆ ಕೇಳಿ. ಆತ ತಾಯಿಗೆ ಒಬ್ಬನೇ ಮಗ. ತಾಯಿ ಅವನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದಾಳೆ. ಅವನು ಬೆಳೆದು ಯುವಕನಾಗಿದ್ದಾನೆ. ತಾಯಿಗೆ ವಯಸ್ಸಾಗಿದೆ.
 ಅದೇ ಹೊತ್ತಿಗೆ ಆ ನಾಡಿಗೊಂದು ವಿಪತ್ತು ಬಂದು ಒದಗುತ್ತದೆ. ವೈರಿಗಳು ಮುತ್ತಿಗೆ ಹಾಕಿ ನಾಡನ್ನು ಕಬಳಿಸಲು ಸಂಚು ಹೂಡಿದ್ದಾರೆ. ಎಲ್ಲಾ ಯುವಕರೂ ಯುದ್ಧದಲ್ಲಿ ಭಾಗವಹಿಸಬೇಕು ಎಂದು ರಾಜ ವಿನಂತಿ ಮಾಡಿಕೊಳ್ಳುತ್ತಾನೆ.
ಈತನನ್ನು ದ್ವಂದ್ವ ಕಾಡುತ್ತದೆ. ತಾನೀಗ ಏನು ಮಾಡಬೇಕು. ತಾಯಿಯ ಜೊತೆಗಿದ್ದು ಆಕೆಯ ಆರೈಕೆ ಮಾಡಬೇಕಾ? ನಾಡಿಗಾಗಿ ಹೋರಾಡಿ ನಾಡನ್ನು ಕಾಪಾಡಬೇಕಾ? ತಾಯಿಯೋ ತಾಯಿನಾಡೋ? ಈ ಕತೆ ಇಲ್ಲಿಗೇ ನಿಂತರೆ, ನಾವು ಆ ಕತೆಯೊಳಗೆ ಹೋಗಿಬಿಟ್ಟರೆ ಆತನ ಧ್ವಂದ್ವ ನಮ್ಮದೂ ಆಗುತ್ತದೆ. ಇದಕ್ಕೆ ಕತೆಗಾರ ಕೊಟ್ಟ ಉತ್ತರ ಏನೇ ಆಗಿರಬಹುದು. ನಮ್ಮ ಉತ್ತರ ಬೇರೆಯೇ ಆಗಿರಬಹುದು. ಇವತ್ತಿನ ಸಂದರ್ಭದಲ್ಲಿ ಈ ಕೆಟ್ಟ ರಾಜಕೀಯ ವ್ಯವಸ್ಥೆ ಕಂಡು ರೋಸಿಹೋದ ಮಗ ತಾಯಿಯೇ ಸಾಕು ಅನ್ನಬಹುದು. ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಬದುಕಿದ್ದ ಯುವಕ, ತಾಯಿನಾಡೇ ಶ್ರೇಷ್ಟ ಎಂದು ಭಾವಿಸಿದ್ದಿರಬಹುದು. ಕಾಲಕಾಲಕ್ಕೆ ಉತ್ತರಗಳು ಬದಲಾಗುತ್ತಾ ಹೋಗುತ್ತವೆ. ಓದುಗನೊಳಗೂ!
ಹೀಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ ಕತೆಯೊಂದು ಕಣ್ತಪ್ಪಿನಿಂದ ನನ್ನೊಳಗೇ ಇಳಿದಿರಲಿಲ್ಲ. ಇತ್ತೀಚೆಗೆ ದೇವದತ್ತ್ ಪಟ್ಟನಾಯ್ಕ್ ನಾಟಕ ಬರೆಯುವ ತನಕ ಅದರ ಸಂಘರ್ಷ ಕೂಡ ಹೊಳೆದಿರಲಿಲ್ಲ. ಎಷ್ಟೋ ಸಾರಿ ಕೇಳಿದ, ಓದಿದ ಕತೆಯೇ ಆಗಿದ್ದರೂ ಅದರ ಸೂಕ್ಷ್ಮ ತಿಳಿದುಕೊಳ್ಳುವುದು ಕಷ್ಟ. ನಮ್ಮ ಉಡಾ- ಮತ್ತು ಅನ್ಯಮನಸ್ಕತೆ ಬಹಳಷ್ಟು ಸಲ ನಮ್ಮ ದಾರಿ ತಪ್ಪಿಸುತ್ತದೆ. ಅದೊಂದು ಸರಳವಾದ, ಮೂಢನಂಬಿಕೆಯ ಕತೆ ಅಂದುಕೊಂಡು ನಾವು ಸುಮ್ಮನಾಗುತ್ತೇವೆ. ಆದರೆ ನಮ್ಮ ಪುರಾಣದ ಪ್ರತಿಯೊಂದು ಕತೆಯೂ ಉಪಕತೆಯೂ ವಿಚಿತ್ರವಾದ ಶಕ್ತಿಯಿದೆ. ಅದು ತನ್ನೊಳಗೆ ನಮ್ಮ ಚಿಂತನೆಯನ್ನೇ ಬದಲಾಯಿಸಬಲ್ಲ ಪ್ರಶ್ನೆಯೊಂದನ್ನು ಹುದುಗಿಟ್ಟುಕೊಂಡಿರುತ್ತದೆ.
ಈ ಕತೆ ನೋಡಿ: ಆಗಷ್ಟೇ ಮದುವೆ ಆಗಿರುವ ದಂಪತಿಯ ಕತ್ತನ್ನು ಐಂದ್ರಜಾಲಿಕನೊಬ್ಬ ಕತ್ತರಿಸುತ್ತಾನೆ. ಅವನು ಪ್ರಕಾಂಡ ಮಾಯಾವಿಹಾಗೆ ಕತ್ತರಿಸಿದ ಕತ್ತನ್ನು ಅವನು ಮರಳಿ ಜೋಡಿಸುತ್ತಾನೆ. ಹಾಗೆ ಜೋಡಿಸುವ ಹೊತ್ತಿಗೆ ಒಂದು ಸಣ್ಣ ತಪ್ಪು ನಡೆದುಹೋಗುತ್ತದೆ. ಹೆಂಡತಿಯ ತಲೆಯನ್ನು ಗಂಡನಿಗೂ ಗಂಡನ ತಲೆಯನ್ನು ಹೆಂಡತಿಗೂ ಜೋಡಿಸಿಬಿಟ್ಟಿದ್ದಾನೆ ಜಾದೂಗಾರ.
ಈಗ ಹೇಳಿ, ಹೆಂಡತಿ ಯಾರು? ಗಂಡ ಯಾರು? ಗಂಡಸಿನ ತಲೆಯಿದ್ದವನೇ? ಅವನ ದೇಹ ಹೆಣ್ಣಿನದು. ಅವನು ಗರ್ಭ ಧರಿಸಬಲ್ಲ, ಹೆರಬಲ್ಲ. ಮಗುವಿಗೆ ಅವನು ತಾಯಿ. ಜಗತ್ತಿನ ಪಾಲಿಗೆ ಆ ಮಗುವಿನ ತಂದೆ. ಒಂದರ್ಥದಲ್ಲಿ ತಂದೆಯೂ ಹೌದು, ತಾಯಿಯೂ ಹೌದು. ಆದರೆ ತಂದೆಯೆಂದರೆ ತಂದೆಯಲ್ಲ. ಆ ಮಗುವಿನ ಜನ್ಮಕ್ಕೆ ಕಾರಣಳಾದದ್ದು ತಾಯಿ. ತಾಯಿ ಮುಖದ ತಂದೆ, ತಂದೆ ಮುಖದ ತಾಯಿ. ನಿರ್ಧಾರ ಮಾಡಬೇಕಾದವರು ಯಾರು? ಅಽಕಾರ ಯಾರಿಗೆ ಜಾಸ್ತಿ? ತಂದೆಯಂತೆ ಕಾಣುತ್ತಿರುವ ನನ್ನ ತಾಯಿಯೇ ಎಂದು ಮಗು ತಾಯಿಯನ್ನು ಕರೆಯಬೇಕು!
--
ಇದಕ್ಕಿಂತ ವಿಚಿತ್ರವಾದ ಕತೆಯೊಂದು ಮಹಾಭಾರತದಲ್ಲಿದೆ. ಅವನ ಹೆಸರು ಯವನಾಶ್ವ. ಅವನಿಗೆ ನೂರಾರು ಮಂದಿ ರಾಣಿಯರು. ಆದರೂ ಅವನಿಗೆ ಮಕ್ಕಳಾಗಿಲ್ಲ. ಅದರಿಂದಾಗಿ ಬೇಸರಗೊಂಡ ಆತ ಭೃಗು ಮುನಿಗಳ ಬಳಿ ಪರಿಹಾರ ಕೇಳುತ್ತಾನೆ. ಭೃಗು ಮುನಿಗಳು ಪುತ್ರಕಾಮೇಷ್ಠಿ ಯಾಗ ಮಾಡುವಂತೆ ಹೇಳುತ್ತಾರೆ. ಅದಕ್ಕೊಪ್ಪುವ ಯವನಾಶ್ವ, ಯಾಗ ಮಾಡುತ್ತಾನೆ. ಭೃಗು ಮುನಿಗಳೇ ಯಾಗ ನಡೆಸಿಕೊಡುತ್ತಾರೆ. ಯಾಗದ ನಡುವೆ ಪುತ್ರಪ್ರದವಾದ ಮಂತ್ರಗಳಿಂದ ಅಭಿಮಂತ್ರಿಸಲ್ಪಟ್ಟ ನೀರನ್ನು ಕಮಂಡಲದಲ್ಲಿ ಇಟ್ಟಿರುತ್ತಾರೆ ಭೃಗು. ತುಂಬ ದಾಹವಾಯಿತೆಂದು ಆ ನೀರಿನ ಮಹತ್ವ ತಿಳಿಯದೇ ಯವನಾಶ್ವ ಅದನ್ನು ಕುಡಿದುಬಿಡುತ್ತಾನೆ.
ಕಾಲಕ್ರಮೇಣ ಅವನೇ ಒಂದು ಮಗುವಿಗೆ ಜನ್ಮನೀಡುತ್ತಾನೆ. ಆ ಮಗುವಿನ ಹೆಸರು ಮಾಂಧಾತ. ಮಾಂಧಾತನಿಗೆ ಯವನಾಶ್ವ ತಾಯಿಯೂ ಹೌದು ತಂದೆಯೂ ಹೌದುಎರಡು ಪೂರಕವಾದ ಮತ್ತು ವಿರುದ್ಧವಾದ ಶಕ್ತಿಗಳು ಒಂದೇ ಬಿಂದುವಿನಲ್ಲಿ ಸಂಽಸಿದಾಗ ಏನಾಗಬಹುದು? ಬೀಜ ಮತ್ತು  ಭೂಮಿ ಒಂದೇ ಆದ ಅಪೂರ್ವ ಸಂಗಮದ -ಲ ಅದು. ತಂದೆಯೂ ಅವನೇ ತಾಯಿಯೂ ಅವನೇ. ಮಾಂಧಾತ ಅವನನ್ನು ಏನಂತ ಕರೆಯಬೇಕು? ಅಮ್ಮ ಅಂದರೂ ತಪ್ಪಿಲ್ಲ, ಅಪ್ಪ ಎಂದರೂ ತಪ್ಪಿಲ್ಲ.
ಯವನಾಶ್ವ ಹೇಳುತ್ತಾನೆ. ನಾನು ಗಂಡಸಾ, ಗೊತ್ತಿಲ್ಲ. ನನಗೇ ಖಚಿತವಿಲ್ಲ. ಗಂಡಸಿನ ಹಾಗೆ ನನ್ನ ದೇಹದ ಆಚೆ ನಾನು ಜೀವವೊಂದನ್ನು ಸೃಷ್ಟಿಸಿದ್ದೇನೆ. ಅದೇ ಹೊತ್ತಿಗೆ, ಆ ಜೀವ ಹೆಣ್ಣಿನಲ್ಲಾಗುವಂತೆ ನನ್ನೊಳಗೇ ಸೃಷ್ಟಿಯಾಗುತ್ತಿದೆ. ಹಾಗಿದ್ದರೆ ನಾನು ಏನಾದ ಹಾಗಾಯಿತು?
ಅದು ಯವನಾಶ್ವನ ಪ್ರಶ್ನೆಇದು ಬಂಧನವೋ ಬಿಡುಗಡೆಯೋ ಗೊತ್ತಾಗುತ್ತಿಲ್ಲ ಅನ್ನುತ್ತಾನೆ ಅವನು. ಈ ಮಧ್ಯೆ ಅವನ ತಾತ್ವಿಕ ಪ್ರಶ್ನೆ, ರಾಜತಾಂತ್ರಿಕ ಪ್ರಶ್ನೆಯೂ ಬರುತ್ತದೆ. ಮಕ್ಕಳಿಲ್ಲದವನು ರಾಜನಾಗುವಂತಿಲ್ಲ. ಅದು ನಿಯಮಹೀಗಾಗಿ ಪಟ್ಟವೇರುವುದಕ್ಕೆ ಅವನಿಗೆ ಮಗ ಬೇಕೇ ಬೇಕುಯವನಾಶ್ವನಿಗೆ ಕೊನೆಗೂ ಮಗ ಹುಟ್ಟುತ್ತಾನೆ. ಆದರೆ ಯವನಾಶ್ವ ತಂದೆಯಾದನೋ ತಾಯಿಯಾದಳೋ? ತಾಯಿಯಾದರೆ ಅವಳು ಪಟ್ಟವೇರುವಂತಿಲ್ಲ. ಹೆಣ್ಣಿಗೆ ಪಟ್ಟದ ಹಕ್ಕಿಲ್ಲ. ತಂದೆಯಾದರೆ ಮಗುವನ್ನು ಹೊತ್ತು ಹೆತ್ತದ್ದು ಹೇಗೆ?
ಈ ದ್ವಂದ್ವಕ್ಕೆ ಉತ್ತರವೇ ಇಲ್ಲವೇ?
--
ಹೆಣ್ಣು ಗಂಡಿನ ಸಂಬಂಧ, ಪರಸ್ಪರ ಇಬ್ಬರೂ ಒಂದೇ ಆಗುವ ಪವಾಡ, ಇಬ್ಬರೂ ಒಬ್ಬರೇ ಆಗಬೇಕಾದ ಅನಿವಾರ್ಯತೆ, ಕಂಪ್ಯಾಟಿಬಿಲಿಟಿಯ ಪ್ರಶ್ನೆ, ಹೊರಗೆ ಸೃಷ್ಟಿಸುವುದು ಮತ್ತು ಒಳಗೇ ಸೃಷ್ಟಿಸುವದಕ್ಕಿರುವ ವ್ಯತ್ಯಾಸ- ಇವನ್ನೆಲ್ಲ ಈ ಕತೆ ಎಷ್ಟು ಸೊಗಸಾಗಿ ಹೇಳುತ್ತದೆ ನೋಡಿ. ಬಹುಶಃ ಇದನ್ನು ಇಡಿಯಾಗಿ ಅರ್ಥ ಮಾಡಿಕೊಂಡರೆ ಗಂಡ ಹೆಂಡತಿ ನಡುವೆ ಜಗಳವೇ ಹುಟ್ಟಲಿಕ್ಕಿಲ್ಲ. ಭಾವನಾತ್ಮಕ ವ್ಯತ್ಯಾಸಗಳನ್ನು ಮಾತ್ರವಲ್ಲ, ದೈಹಿಕವಾದ ಅಂತರವನ್ನೂ ಕೂಡ ನಗಣ್ಯ ಎಂಬಂತೆ ತಳ್ಳಿಹಾಕಿ ತಮಾಶೆ ನೋಡುವ ಕತೆಯಿದು. ಇಲ್ಲಿ ಮೇಲು ಕೀಳಿನ ಪ್ರಶ್ನೆಯಿಲ್ಲ. ಅಹಂಕಾರದ ಪ್ರಸ್ತಾಪವಿಲ್ಲ. ನೂರು ಹೆಂಡಿರ ಪೈಕಿ ಯಾರೂ ತಾಯಿಯಲ್ಲ. ಹುಟ್ಟಿದ ಮಗ ಎಲ್ಲರಿಗೂ ಮಗ, ಯಾರಿಗೂ ಮಗನಲ್ಲ. ಹೀಗಾಗಿ ಅವರ ನಡುವೆಯೂ ಯಾರೂ  ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಯಾರೊಬ್ಬರೂ ರಾಜಮಾತೆ ಎಂದು ಹೆಮ್ಮೆ ಪಡುವಂತಿಲ್ಲ. ರಾಜನೂ ಅವನೇ ರಾಣಿಯೂ ಅವನೇ ಮುಂದೊಂದು ದಿನ ರಾಜಮಾತೆಯೂ ಅವನೇ.
ಗಂಡ ಹೆಂಡತಿ ಜಗಳ ಆಡುವುದಕ್ಕೆ ಏನು ಕಾರಣವೋ ಗೊತ್ತಿಲ್ಲ. ತನ್ನನ್ನು ಈತ ಕಡೆಗಣಿಸುತ್ತಿದ್ದಾನೆ ಎಂದು ಅವಳಿಗೆ ಬೇಸರ ಎನ್ನುತ್ತಾನೆ ಅವನು. ತುಂಬ ಅನ್ಯೋನ್ಯವಾಗಿದ್ದಾಗ ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ ಅಂತ ಅವನು. ಅದೂ ಒಂದು ಅರ್ಥದಲ್ಲಿ ಸರಿಯೇ ಅನ್ನಬಹುದಾದರೂ ಅಂಥ ಅನ್ಯೋನ್ಯತೆ ತಾನಾಗಿಯೇ ಸಾಧ್ಯವಾಗಬೇಕು. ನಮ್ಮ ಹಿರಿಯ ಮಿತ್ರರೊಬ್ಬರು ಅಪರಿಚಿತರನ್ನು ಯಾವತ್ತೂ ಪೂರ್ವಾನುಮತಿಯಿಲ್ಲದೇ ಭೇಟಿ ಆಗುತ್ತಿರಲಿಲ್ಲ. ಅವರು ಅದಕ್ಕೆ ಕೊಡುತ್ತಿದ್ದ ಕಾರಣ ಒಂದೇ- ಅಪರಿಚಿತರು ಬಂದಾಗ ನಾವು ಅತೀವ ಎಚ್ಚರದ ಸ್ಥಿತಿಯಲ್ಲಿರಬೇಕಾಗುತ್ತದೆ. ನಮ್ಮ ಪಾಡಿಗೆ ನಾವಿರೋದಕ್ಕೆ ಸಾಧ್ಯ ಆಗೋದಿಲ್ಲ. ಅವರು ಬರುತ್ತಿದ್ದಂತೆ ಎದ್ದು ನಿಲ್ಲಬೇಕು. ನಮಸ್ಕಾರ ಅನ್ನಬೇಕು. ಅವರನ್ನು ಓಲೈಸುತ್ತಲೇ ಇರಬೇಕು. ಆದರೆ ಆತ್ಮೀಯರು ಬಂದಾಗ ನಾವು ಹೇಗಿದ್ದೀವೋ ಹಾಗೇ ಮುಂದುವರೀಬಹುದು.
ಆತ್ಮೀಯತೆಯ  ವ್ಯಾಖ್ಯಾನ ಅಂದರೆ ಅದೇ. ಒಂದು ಮಧುರವಾದ ಸಂಬಂಧ ಏನನ್ನೂ ನಿರೀಕ್ಷಿಸುತ್ತಿರುವುದಿಲ್ಲ. ಹುಟ್ಟುಹಬ್ಬಕ್ಕೊಂದು ಹಾರೈಕೆ ಹೇಳಲಿಲ್ಲ, ನಾನು ಒಳಗೆ ಬಂದಿದ್ದನ್ನು ನೀನು ಗಮನಿಸಲೇ ಇಲ್ಲ, ಗುಡ್ ಮಾರ್ನಿಂಗ್ ಹೇಳಲಿಲ್ಲ ಎಂದೆಲ್ಲ ಸಂಗಾತಿ ರೇಗಿದರೆ ಅದೊಂದು ಕೃತಕ ಸಂಬಂಧ. ಅಕ್ಕರೆಯೂ ಆಪ್ತತೆಯೂ ಇದ್ದರೆ ಅವರು ಬಂದದ್ದೂ ಹೋದದ್ದೂ ನಮ್ಮ ಗಮನಕ್ಕೇ ಬರಕೂಡದು. ಬಂದರೂ ಅದು ತಂಗಾಳಿಯ ಹಾಗೆ, ಹೂವಿನ ಪರಿಮಳದ ಹಾಗಿರಬೇಕು. ನಮ್ಮನ್ನು ಅದು ಮುದಗೊಳಿಸಬೇಕೇ ಹೊರತು, ನಮ್ಮ ಗಮನವನ್ನು ತನ್ಮಯತೆಯನ್ನು ಬೇಡುವಂತಿರಬಾರದು.
ನಾನೇ ತಾಯಿ, ನಾನೇ ತಂದೆ ಅನ್ನುವ ಸ್ಥಿತಿಗೆ ಪ್ರತಿ ಗಂಡೂ, ಪ್ರತಿ ಹೆಣ್ಣೂ ಭಾವನಾತ್ಮಕವಾಗಿ ತಲುಪಲು ಸಾಧ್ಯವಾ ಅಂತ ಯೋಚಿಸಿದೆ. ಅದು ಅರ್ಧನಾರೀಶ್ವರತ್ವ ಅಲ್ಲ. ಅಲ್ಲಿ ಬೇಧವೇ ಇಲ್ಲ. ಹೊರರೂಪದಲ್ಲಿ ಯಾವ ಬದಲಾವಣೆಯೂ ಆಗಿರುವುದಿಲ್ಲ. ಬದಲಾಗಿರುವುದು ಒಳಜಗತ್ತು. ಸೃಜನಶೀಲತೆ ಮತ್ತು ಕರ್ತೃತ್ವಶಕ್ತಿ ಮಾತ್ರ.
Sunday, June 10, 2012

ಜೋಗಿ ಕಾಲಂ- ಉದಯವಾಣಿ ಅಂಕಣ


ಜೀವನದ ಉದ್ದೇಶ ಏನು?
ಹೀಗೆ ಪರ್ಪಸ್ ಹುಡುಕುತ್ತಾ ಹೊರಟವರೆಲ್ಲ ಕೊನೆಗೆ ಹೋಗಿ ಮುಟ್ಟಿದ ಜಾಗದ ಹೆಸರು ಸುಡುಗಾಡುಹಾಗಿದ್ದರೆ ಬದುಕು ಅಷ್ಟೊಂದು ಪರ್ಪಸ್‌ಲೆಸ್ಸಾ? ಯಾವ ಉದ್ದೇಶವೂ ಇಲ್ಲದೇ ನಾವಿಲ್ಲಿ ಇದೀವಾ? ಕಾಡಿನಲ್ಲಿ ದಂಡಿಯಾಗಿ ಬೆಳೆದ ಹುಲ್ಲನ್ನು ಜಿಂಕೆ ತಿನ್ನುತ್ತಾ, ಹೆಚ್ಚಿದ ಜಿಂಕೆಗಳನ್ನು ಹುಲಿ ಕಬಳಿಸುತ್ತಾ, ಹುಲಿಯನ್ನು ಮನುಷ್ಯ ಕೊಲ್ಲುತ್ತಾ, ಮನುಷ್ಯನನ್ನು ಕಾಲ ದಂಡಿಸುತ್ತಾ ಚಕ್ರ ಪೂರ್ಣ. ಇಲ್ಲಿ ಉದ್ದೇಶ ಯಾರದ್ದು? ಪ್ರಕೃತಿಯದೇ? ಹಾಗಿದ್ದರೆ ನಮ್ಮೆಲ್ಲರಿಗಿಂತ ದೊಡ್ಡ ಉದ್ದೇಶ ಪ್ರಕೃತಿಗಿದೆಯೇ? ಅದು ಈ ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿಯೇ ಕಾಮ, ಕ್ರೋಧ, ಲೋಭ, ಮೋಹ, ಮಾತ್ಸರ್ಯಗಳನ್ನು ಬಿತ್ತಿದೆಯೇ? ಹೋಗಲಿ, ಪ್ರಕೃತಿಗಾದರೂ ಅಂಥ ಆಸೆಯೊಂದು ಯಾಕಿರಬೇಕು?
ಹುಡುಕುತ್ತಾ ಹೋದಂತೆ ಎಲ್ಲವೂ ಗೋಜಲಾಗುತ್ತಾ ಹೋಗುತ್ತದೆ. ಹುಟ್ಟಿನಷ್ಟೇ ಬಾಳು ಕೂಡ ಅರ್ಥಹೀನ ಅಂತ ಹೇಳಿದ ಗುರುವೊಬ್ಬ ನೆನಪಾಗುತ್ತಾನೆ. ಇದ್ಯಾವುದರ ಕುರಿತೂ ಯೋಚಿಸದೇ, ಥೇಟ್ ಕರಡಿಯ ಹಾಗೆ, ಜಿಂಕೆಯ ಹಾಗೆ, ಕಾಡು ಮೃಗದ ಹಾಗೆ ಬದುಕಿದ ತಾಯಂದಿರಿದ್ದಾರೆ. ತಮ್ಮ ಮಕ್ಕಳನ್ನು ಪೊರೆಯುತ್ತಾ ಯೌವನವನ್ನು ಕಳಕೊಂಡವರಿದ್ದಾರೆ. ರಾತ್ರಿ ಹಗಲು ಕಷ್ಟಪಟ್ಟು ದುಡಿಯುವ ಯಾರನ್ನೇ ಕೇಳಿ- ಮಕ್ಕಳಿಗೋಸ್ಕರ ಇದನ್ನೆಲ್ಲ ಮಾಡ್ತಿದ್ದೀನಿ ಅನ್ನುತ್ತಾರೆ. ಮಕ್ಕಳಿಗೆ ಅದೆಲ್ಲ ಬೇಕಿರುವುದಿಲ್ಲ ಎಂದು ಗೊತ್ತಿದ್ದು ಕೂಡ, ಮಕ್ಕಳಿಗಾಗಿ ಮಾಡುತ್ತಾರೆ. ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಅದಮ್ಯ ಆಸೆಗಳಲ್ಲಿ ಪುತ್ರೋತ್ಸಾಹವೂ ಒಂದು. ಮಕ್ಕಳಾಗದೇ ಹೋದರೆ ಅದೊಂದು ದುರ್ಭರ ಬದುಕು. ಅದೂ ಸೃಷ್ಟಿಯ ಉದ್ದೇಶಗಳಲ್ಲಿ ಒಂದಾ?
ಪುರಾಣಗಳನ್ನು ನೋಡಿದರೆ ಅಲ್ಲಿ ನಿರುದ್ದಿಶ್ಯ ಜನ್ಮವೇ ಕಾಣಸಿಗದು. ಪ್ರಸಿದ್ಧರಾದವರೆಲ್ಲರ ಹುಟ್ಟಿಗೂ ಒಂದು ಕಾರಣ, ಒಂದು ಕುಂಟು ನೆಪ. ತನ್ನನ್ನು ದ್ರೋಣ ಅವಮಾನಿಸಿದ ಎಂಬ ಕಾರಣಕ್ಕೆ ದ್ರುಪದ ತಪಸ್ಸು ಮಾಡುತ್ತಾನೆ. ದ್ರೋಣನನ್ನು ಕೊಲ್ಲುವ ಮಗನನ್ನೂ ಅರ್ಜುನನನ್ನು ಮದುವೆಯಾಗುವ ಮಗಳನ್ನೂ ಕರುಣಿಸುವಂತೆ ಕೇಳಿಕೊಳ್ಳುತ್ತಾನೆ. ದೃಷ್ಟದ್ಯುಮ್ನ-ದ್ರೌಪದಿಯರ ಜನನವಾಗುತ್ತದೆ. ಅಲ್ಲಿಗೆ ಅವರ ಹುಟ್ಟಿನ ಉದ್ದೇಶ ಅವರದ್ದಲ್ಲ, ದ್ರುಪದನದು. ಅವರಿಬ್ಬರೂ ಆಯುಧಗಳು ಮಾತ್ರ.
ಹಾಗಿದ್ದರೆ ಅವರಿಬ್ಬರ ಸ್ವಂತ ನೋವು-ನಲಿವುಗಳೇನು? ದುಗುಡಗಳೇನು? ಅವರೇಕೆ ಕಷ್ಟಪಡಬೇಕು? ಸ್ವಂತ ಉದ್ದೇಶವೇ ಇಲ್ಲದೇ ಹುಟ್ಟಿದ ದ್ರೌಪದಿ ಪಂಚಪಾಂಡವರನ್ನು ಮದುವೆಯಾಗಿ, ವಸಾಪಹರಣಕ್ಕೆ ಗುರಿಯಾಗಿ, ಪಡಬಾರದ ಪಾಡು ಪಟ್ಟಿದ್ದರ ಹಿಂದೆ ಇರುವ ಪರ್ಪಸ್, ಆಕೆಯದ್ದಲ್ಲ ಅವಳ ಅಪ್ಪನದು.
ಹೀಗೆ ಯಾರದೋ ಉದ್ದೇಶಕ್ಕೋಸ್ಕರ ನಾವು ಸವೆಯುತ್ತಾ ಹೋಗುತ್ತೇವಾ? ಅದರೊಳಗೆ ನಮ್ಮದೊಂದು ಉದ್ದೇಶ ಇಟ್ಟುಕೊಂಡು ಬದುಕುತ್ತೇವಾ? ಶ್ರೀರಾಮನ ಕತೆಯನ್ನೇ ತೆಗೆದುಕೊಳ್ಳಿ. ಅವನ ಉದ್ದೇಶ ದುಷ್ಟಶಿಕ್ಷಣ. ಅದಕ್ಕೋಸ್ಕರ ಆತ ಅವತಾರ ಎತ್ತಿ ಬರುತ್ತಾನೆ. ಶ್ರೀರಾಮನ ಜನನ ಆಗುವ ತನಕ ರಾವಣ ತಪ್ಪು ಮಾಡಿದ್ದಕ್ಕೆ ಉದಾಹರಣೆ ಇಲ್ಲ. ಅವನು ಬ್ರಹ್ಮರ್ಷಿಯಾಗಿದ್ದವನು, ದೈವ ಭಕ್ತ. ತನ್ನ ಪ್ರಜೆಗಳನ್ನು ಸುಖವಾಗಿ ನೋಡಿಕೊಳ್ಳುತ್ತಿದ್ದ. ಯಾರಿಗೂ ಕಷ್ಟ ಕೊಟ್ಟಿರಲಿಲ್ಲ. ಅವನ ಸಂಹಾರಕ್ಕೋಸ್ಕರ ಶ್ರೀರಾಮನ ಜನನ ಆಯ್ತು ಅನ್ನುವುದಕ್ಕೆ ರಾವಣ ತಪ್ಪಿತಸ್ಥನಲ್ಲ.
ಶ್ರೀರಾಮನ ಜನನ ಆಗಿ, ಅವನು ಸೀತೆಯನ್ನು ಮದುವೆ ಆದ ನಂತರ ರಾವಣ ಆಕೆಯನ್ನು ಅಪಹರಿಸುತ್ತಾನೆ. ಶ್ರೀರಾಮನ ಅವತಾರ ಸಂಭವಿಸದೇ ಹೋಗಿದ್ದರೆ ರಾವಣ ಕೆಟ್ಟವನಾಗುತ್ತಿರಲಿಲ್ಲ ಅಂದ ಹಾಗಾಯಿತು. ಅಂದ ಮೇಲೆ ರಾಮನ ಪರ್ಪಸ್ ಏನು? ಕೃಷ್ಣಾವತಾರದ ಕತೆಯೂ ಅದೇ. ಕಂಸನ ದ್ವೇಷ ಇದ್ದದ್ದೆ ಕೃಷ್ಣನ ಹುಟ್ಟಿನ ಕುರಿತು. ಅದನ್ನು ಬಿಟ್ಟರೆ ಅವನು ಅಂಥ ಧೂರ್ತನೇನಲ್ಲ. ಇದೀಗ ಮತ್ತೆ ಉದ್ದೇಶದ ಪ್ರಶ್ನೆ.
--
ಈ ಮಧ್ಯೆ ಒಂದು ಪುಟ್ಟ ಕತೆ ಕೇಳಿ. ಕತೆಯ ಹೆಸರು ಕ್ರಾಸ್ ಪರ್ಪಸ್. ಇದನ್ನು ನಾಟಕವಾಗಿ ಬರೆದವನು ಆಲ್ಬರ್ಟ್ ಕಮೂ. ಇಡೀ ಜೀವನದ ಉದ್ದೇಶವನ್ನು ಬುಡಮೇಲು ಮಾಡಬಲ್ಲ ದುರಂತ ಕತೆಯೊಂದು ಇದರೊಳಗೆ ಅಡಗಿದೆ. ಇಡೀ ಬದುಕೇ ಅಸಂಗತ ಅನ್ನುವ ಕಮೂ ಪ್ರಕಾರ ಜೀವನಕ್ಕೆ ಉದ್ದೇಶವೇ ಇಲ್ಲ. ಅದು ನಡೆದುಕೊಂಡು ಹೋಗುತ್ತಾ ಇರುತ್ತದೆ. ಅದಕ್ಕೆ ಅವನೊಂದು ಸೊಗಸಾದ ಉದಾಹರಣೆ ಕೊಡುತ್ತಾನೆ. ಸಿಸಿ-ಸ್ ಎಂಬ ಶಾಪಗ್ರಸ್ತ ವ್ಯಕ್ತಿಗೆ ಸಿಕ್ಕ ಕೆಲಸ ಎಂದರೆ ಚೂಪಾದ ಬೆಟ್ಟದ ತುದಿಗೆ ಉರುಟಾದ ಬಂಡೆಗಲ್ಲೊಂದನ್ನು ಉರುಳಿಸಿಕೊಂಡು ಹೋಗುವುದು. ಅದನ್ನು ಬೆಟ್ಟದ ತುದಿಯಲ್ಲಿ ಇಟ್ಟು ಬರುವುದು. ಆ ಬೆಟ್ಟ ಎಷ್ಟು ಕಡಿದಾಗಿದೆ ಹಾಗೂ ಕಲ್ಲು ಎಷ್ಟು ಉರುಟಾಗಿದೆ ಎಂದರೆ ಆತ ಕಷ್ಟಪಟ್ಟು ಅದನ್ನು ಬೆಟ್ಟದ ತುದಿಗೆ ಸಾಗಿಸಿದಂತೆಲ್ಲ ಅದು ಉರುಳಿ ಬೆಟ್ಟದ ಬುಡದಲ್ಲಿ ಬಂದು ಬಿದ್ದಿರುತ್ತದೆ. ಮತ್ತೆ ಅವನ ಕೈಂಕರ್ಯ ಶುರು. ಪ್ರಕೃತಿ ಉರುಳಿಸುತ್ತದೆ. ಪುರುಷ ತುದಿಗೆ ಒಯ್ಯುತ್ತಾನೆ. ಉದ್ದೇಶ ಅಷ್ಟೇ. ನಾವೆಲ್ಲ ಅಂಥದ್ದೇ ನಿರುಪಯುಕ್ತವಾದ, ನಿರುದ್ದಿಶ್ಯವಾದ ಆದರೆ ಯಾರಿಂದಲೋ ನಿಯಮಿಸಲ್ಪಟ್ಟ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನಾವೇನು ಯೋಚಿಸಬೇಕಾಗಿಲ್ಲ. ಶಾಪಗ್ರಸ್ತರು ಅಂದುಕೊಂಡು ಸುಮ್ಮನೆ ಕೆಲಸ ಮಾಡಿದರಾಯಿತು ಅನ್ನೋದು ಅವನ ಒಂದು ಸಿದ್ಧಾಂತ. ನಮ್ಮ ಕರ್ಮಸಿದ್ಧಾಂತಕ್ಕೆ ಇದು ಹತ್ತಿರವಾದದ್ದೂ ಹೌದು.
ಅವನ ಕ್ರಾಸ್ ಪರ್ಪಸ್ ನಾಟಕ ಮತ್ತಷ್ಟು ಗಾಢವಾಗಿದೆ. ಒಂದು ಹಳ್ಳಿಯ ಒಂಟಿ ಮನೆಯಲ್ಲಿ ತಾಯಿ ಮಗಳು ಇದ್ದಾರೆ. ಮಗ ದೂರದೇಶಕ್ಕೆ ಹೋಗಿದ್ದಾನೆ. ಚಿಕ್ಕಂದಿನಲ್ಲೇ ಮನೆ ಬಿಟ್ಟು ಓಡಿ ಹೋಗಿದ್ದಾನೆ. ತಾಯಿ ಮಗಳು ಬಡತನದಲ್ಲಿದ್ದಾರೆ. ಆ ಹಾದಿಯಲ್ಲಿ ಹಾದುಹೋಗುವವರಿಗೆ ಮಲಗಲು ಜಾಗ, ಊಟ ತಿಂಡಿ ಕೊಟ್ಟು ಅದರಿಂದ ಬರುವ ಹಣದಿಂದ ಹೊಟ್ಟೆಹೊರೆಯುತ್ತಿರುತ್ತಾರೆಆ ಕಷ್ಟಕಾರ್ಪಣ್ಯ ಅವರನ್ನು ಕಟುವಾಗಿಸಿದೆ, ಅವರಲ್ಲಿ ಯಾವ ಪ್ರೀತಿಯೂ ಉಳಿದಿಲ್ಲ. ಈ ಮಧ್ಯೆ ಮಗನ ಪತ್ರ ಬರುತ್ತದೆ. ನಾನು ಮುಂದಿನ ವಾರ ಮನೆಗೆ ಬರುತ್ತಿದ್ದೇನೆ ಎಂದು ಮಗ ಬರೆದಿದ್ದಾನೆ. ತಾಯಿ-ಮಗಳು ಖುಷಿಯಾಗುತ್ತಾರೆ. ಬರುವ ಮಗನನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಈಗ ಅವರ ಜೀವನಕ್ಕೊಂದು ಉದ್ದೇಶ ಬಂದಿದೆ.
ಮಗನಿಗೋಸ್ಕರ ಒಳ್ಳೆಯ ತಿಂಡಿ, ಒಳ್ಳೆಯ ಬಟ್ಟೆ, ಚೆಂದಗೆ ಅಲಂಕಾರಗೊಂಡ ಮನೆ ಇವೆಲ್ಲ ಬೇಕು ಅಂತ ತಾಯಿಮಗಳಿಗೆ ಅನ್ನಿಸುತ್ತದೆ. ಆದರೆ ಬಡತನದಲ್ಲಿ ಅದೆಲ್ಲ ಸಾಧ್ಯವಾಗುವುದಿಲ್ಲ. ಏನಾದರೂ ಮಾಡಬೇಕು ಅಂತ ಯೋಚಿಸುತ್ತಿರುವ ಹೊತ್ತಿಗೆ  ಅವರ ಮನೆಗೊಬ್ಬ ಶ್ರೀಮಂತ ಗಿರಾಕಿ ಬರುತ್ತಾನೆ. ಅವನು ರಾತ್ರಿ ಅಲ್ಲಿ ಉಳಿಯುತ್ತೇನೆ ಎಂದು ಹೇಳುತ್ತಾನೆ.
ರಾತ್ರಿ ತಾಯಿ ಮಗಳು ಒಂದು ಕ್ರೂರ ಯೋಚನೆ ಮಾಡುತ್ತಾರೆ. ಮಗನನ್ನು ಸ್ವಾಗತಿಸಲು ಹಣ ಬೇಕು. ಈಗ ಬಂದಿರುವ ಗಿರಾಕಿ ಶ್ರೀಮಂತನಂತೆ ಕಾಣುತ್ತಾನೆ. ಅವನನ್ನು ಕೊಂದು ಅವನಲ್ಲಿರುವ ಹಣ ದೋಚಿಬಿಡೋಣ. ಅದೊಂದೇ ದಾರಿ. ಇದೊಂದೇ ಒಂದು ಕೊಲೆ ಮಾಡಿದರೆ ಸಾಕು, ನಾವೆಲ್ಲರೂ ಸುಖವಾಗಿರುತ್ತೇವೆ. ಮಗನೂ ಸಂತೋಷಪಡುತ್ತಾನೆ. ಹಾಗಂದುಕೊಂಡು ಆ ರಾತ್ರಿ ತಾಯಿ ಮಗಳೂ ಅವನನ್ನು ಕೊಲ್ಲುತ್ತಾರೆ.
ಅವನೇ ಚಿಕ್ಕಂದಿನಲ್ಲಿ ಓಡಿಹೋದ ಮಗ ಅನ್ನೋದು ಮಾರನೇ ದಿನ ಅವನ ಗೆಳೆಯ ಬಂದಾಗ ಗೊತ್ತಾಗುತ್ತದೆ. ತನ್ನ ತಾಯಿ ಅಕ್ಕ ಯಾವ ಸ್ಥಿತಿಯಲ್ಲಿದ್ದಾರೆ ಎಂದು ನೋಡುವುದಕ್ಕೆ ಅವನು ಅಲ್ಲಿಗೆ ಅತಿಥಿಯ ರೂಪದಲ್ಲಿ ಬಂದಿರುತ್ತಾನೆ. ಮಗನಿಗೋಸ್ಕರ ಮಗನನ್ನೇ ಕೊಲ್ಲುತ್ತಾಳೆ ಆ ತಾಯಿ.
ಕ್ರಾಸ್ ಪರ್ಪಸ್ ಅಂದರೆ ಇದು. ಉದ್ದೇಶದ ಉದ್ದೇಶವೇ ವ್ಯತಿರಿಕ್ತವಾಗುವುದು. ಅಂದುಕೊಂಡದ್ದು ಆಗದೇ ಹೋಗುವುದು.
--
ಮತ್ತೆ ನಮ್ಮ ಜೀವನದ ಉದ್ದೇಶವೇನು ಎಂಬ ಪ್ರಶ್ನೆಗೆ ಬಂದರೆ ನಿರುತ್ತರ. ಅವಧೂತರೊಬ್ಬರು ಹೇಳುತ್ತಿದ್ದ ಮಾತು ನೆನಪಾಗುತ್ತದೆ. ನಾವು ಜೀವನ ಪೂರ್ತಿ ದುಡಿಯುತ್ತೇವೆ. ಏನೋ ಮಹತ್ತಾದುದನ್ನು ಸಾಽಸುತ್ತೇವೆ ಎಂದುಕೊಂಡು ಹೋರಾಡುತ್ತಿರುತ್ತೇವೆ. ಹೊಡೆದಾಟ, ಜಗಳ, ಕದನ, ಸ್ನೇಹ, ಪ್ರೇಮ, ಕಾಮ- ಹೀಗೆ ವಿವಿಧ ಭಾವನೆಗಳು ನಮ್ಮಲ್ಲಿ ಮೂಡಿ ಮರೆಯಾಗುತ್ತವೆ. ಅವುಗಳೇ ನಮ್ಮನ್ನು ನಿಯಂತ್ರಿಸುವುದೂ ಉಂಟು, ಆದರೆ ಅದ್ಯಾವುದೂ ತಪ್ಪಲ್ಲ. ನಮ್ಮ ಜೀವನದ ಉದ್ದೇಶ ನಮಗೆ ಗೊತ್ತಾಗಕೂಡದು.
ಗೊತ್ತಾಗಿಬಿಟ್ಟರೆ, ಆ ಉದ್ದೇಶ ಮುಗಿದ ನಂತರ ನಾವು ಬದುಕಿರುವ ಅಗತ್ಯ ಇರುವುದಿಲ್ಲ. ಉದಾಹರಣೆಗೆ ಹುಟ್ಟಿ, ಒಂದು ಮನೆ ಕಟ್ಟುವುದು ನಿನ್ನ ಉದ್ದೇಶ ಎಂದು ಗೊತ್ತಾಗಿಬಿಟ್ಟಿತು ಅಂತಿಟ್ಟುಕೋ. ಮನೆ ಕಟ್ಟಿದ ನಂತರ ನಿನ್ನ ಜೀವನದ ಉದ್ದೇಶ ಮುಗಿಯಿತು. ಆಮೇಲೆ ನಿನಗಿಲ್ಲಿ ಕೆಲಸ ಇಲ್ಲ. ನೀನು ಸಾಯಲೇಬೇಕು. ಅದೇ ಉದ್ದೇಶ ಗೊತ್ತಿಲ್ಲ ಅಂತಿಟ್ಟುಕೋ, ಆಗ ನೀನು ಚಿರಂಜೀವಿಯಾಗಬೇಕು ಅಂದುಕೊಳ್ಳುತ್ತಿ. ಬದುಕುತ್ತಾ ಹೋಗುತ್ತಿ. ಸಾವೆಂಬ ಪರಕೀಯ ನಿನ್ನ ಹಿಂದಿದ್ದಾನೆ ಅನ್ನುವುದನ್ನು ಮರೆಯುತ್ತಿ.
ಅದೂ ನಿಜವೇ. ಅವತಾರಗಳಿಗೆ ಉದ್ದೇಶಗಳಿರುತ್ತವೆ, ಶಿವ ತನ್ನ ಜಟೆಯನ್ನು ಕೊಡವಿ ಮಹಾಕಾಲನನ್ನು ಸೃಷ್ಟಿಸಿದ ಹಾಗೆ. ಅವನ ಉದ್ದೇಶ ಯಾರೋ ಒಬ್ಬನನ್ನು ಕೊಂದುಬರುವುದು ಮಾತ್ರ. ಅಲ್ಲಿಗೆ ಅವನ ಬದುಕಿನ ಉದ್ದೇಶವೂ ಮುಗಿದಂತೆ.
ಬದುಕುವುದಕ್ಕೆ ಇರುವ ಕಾರಣಗಳನ್ನು ಸಾಯುವುದಕ್ಕೆ ಇರುವ ಕಾರಣಗಳೆಂದು ಭಾವಿಸುವುದಕ್ಕೂ ಅಡ್ಡಿಯಿಲ್ಲ. ನಾನೇಕೆ ಬದುಕುತ್ತೇನೆ ಎಂಬ ಪ್ರಶ್ನೆ ಮನುಷ್ಯನನ್ನು ಬಿಟ್ಟರೆ ಮತ್ತಾವ ಜೀವಿಗೂ ಹುಟ್ಟುವುದೇ ಇಲ್ಲವೇನೋ? ನಮ್ಮನ್ನು ಒಂಥರದ ಆಧ್ಯಾತ್ಮಿಕತೆ, ವೈರಾಗ್ಯ ಮತ್ತು ಬೌದ್ಧಿಕತೆ ಅಟ್ಟಿಸಿಕೊಂಡು ಬರುತ್ತಿರುತ್ತದೆ. ನಾವು ನಮ್ಮ ಓದು, ಚಿಂತನೆ ಮತ್ತು ಗ್ರಹಿಕೆಯ ಮೂಲಕ ನಮ್ಮನ್ನೇ ಮೀರುವ ಪ್ರಯತ್ನ ಮಾಡುತ್ತಿರುತ್ತೇವಾ?
ಏನು ನಿನ್ನ ಜೀವನದ ಉದ್ದೇಶ ಎಂದು ಯಾರಾದರೂ ಕೇಳಿದರೆ ಜೀವಿಸುವುದು ಅಂತ ಸರಳವಾಗಿ ಹೇಳಿದರೆ ಸಾಕು. ಆದರೆ ಜೀವಿಸುವುದು ಎಂಬುದೇ ನೂರೆಂಟು ರಗಳೆಗಳನ್ನು ಒಳಗೊಂಡಿದೆ. ಅದರ ಬದಲು ಸಾಯುವುದು ಅಂತ ಹೇಳಿದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ. ಜೀವಿಸುವುದರ ಮತ್ತೊಂದು ತುದಿಯಲ್ಲಿ ಸಾವು ಕಾಯುತ್ತಿದೆ.
ಪ್ರೀತಿಸುವ ತಾಯಿಯೇ ಆ ಪ್ರೀತಿಗೋಸ್ಕರ ಮಗನನ್ನು ಕೊಲ್ಲುತ್ತಾಳೆ. ತಾಯಿ ಪ್ರೀತಿಯನ್ನು ಅರಿಯಲೆಂದು ರಹಸ್ಯವಾಗಿ ಬರುವ ಮಗ, ಅವಳ ಪ್ರೀತಿಯನ್ನು ಸಾವಿನಲ್ಲಿ ಅರಿಯುತ್ತಾನೆ. ತನ್ನ ತಾಯಿ ತನ್ನನ್ನು ತನಗೋಸ್ಕರ ಕೊಂದಳೆಂದು ಅವನಿಗೆ ಕೊನೆಯ ಕ್ಷಣದ ತನಕವೂ ಅರಿವಾಗದೇ ಹೋದದ್ದೆ ಅವನ ಜೀವನದ ಉದ್ದೇಶ ಇದ್ದಿರಬಹುದೇ?ಜೋಗಿ ಅವರ “ಫೇಸ್‌ಬುಕ್ ಡಾಟ್‌ಕಾಮ್/ಮಾನಸ ಜೋಶಿ”

-ಟಿ.ಪಿ.ಅಶೋಕ
ಹೇಳಿ ಕೇಳಿ ಇದು ಸಂಪರ್ಕ ಮಾಧ್ಯಮಗಳ ಕಾಲ. ಮಾಹಿತಿಯೊಂದನ್ನು ಕ್ಷಣ ಮಾತ್ರದಲ್ಲಿ ಬೇಕೆನಿಸಿದ ಕಡೆ ರವಾನಿಸಬಹುದಾದ ಕಾಲ. ನಮ್ಮ ಅನುಭವ-ಚಟುವಟಿಕೆಗಳು ಮಾಧ್ಯಮಗಳ ಸ್ವರೂಪವನ್ನು  ರೂಪಿಸುತ್ತಿವೆಯೋ ಅಥವಾ ಮಾಧ್ಯಮಗಳೇ ನಮ್ಮ ಚಿಂತನೆ-ಕ್ರಿಯೆಗಳನ್ನು ನಿರ್ಧರಿಸುತ್ತಿವೆಯೋ ಎಂದು ನಿಖರವಾಗಿ ಹೇಳಲಾಗದ ಕಾಲ ಇದು.    ನಮ್ಮ ಅಭಿರುಚಿ, ಆದ್ಯತೆ, ಆಶೋತ್ತರಗಳು ನಮ್ಮದಾಗಿ ಉಳಿದಿರುವುದೆಷ್ಟು,   ಮಾಧ್ಯಮಗಳಿಂದ ಪ್ರಭಾವಿತವಾಗಿರುವುದೆಷ್ಟು ಎಂಬ ಲೆಕ್ಕವೂ ಸರಿಯಾಗಿ ಸಿಗುತ್ತಿಲ್ಲಕೊಳ್ಳುಬಾಕ ಸಂಸ್ಕೃತಿಯು ಇವುಗಳಿಂದ ಪೋಷಣೆ ಪಡೆಯುತ್ತಿದೆಯೋ ಇಲ್ಲವೇ ಇವು ಕೊಳ್ಳುಬಾಕ ಸಂಸ್ಕೃತಿಯ ಉಪಪರಿಣಾಮಗಳೋ ಎಂದು ಗೆರೆಕೊಯ್ದು ಹೇಳಲಾರದಷ್ಟು ಅವು ಒಂದರೊಳಗೊಂದು ಬೆರೆತುಹೋಗಿಬಿಟ್ಟಿವೆ. ಸದಾ ಇನ್ನೊಬ್ಬರೊಂದಿಗೆ ಮಾತನಾಡುತ್ತಾಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಬೇಡದ ನೂರು ಉಸಾಬರಿಗಳಿಗೆ ಅನಿವಾರ್ಯ ಸಾಕ್ಷಿಗಳಾಗುತ್ತಾ ತೀರಾ ಬಹಿರಂಗದಲ್ಲಿ ಬದುಕುತ್ತಿರುವ ನಾವು ಎಷ್ಟರ ಮಟ್ಟಿಗೆ ನಮ್ಮ ಅಂತರಂಗದೊಂದಿಗೆ ಸಂಪರ್ಕ ಸಾಧಿಸಿದ್ದೇವೆ? ನಮ್ಮ ಖಾಸಗಿ ಬದುಕನ್ನು ನಮಗಾಗಿ ಉಳಿಸಿಕೊಂಡಿದ್ದೇವೆ? ನಾಗಾಲೋಟದಿಂದ ಓಡುತ್ತಿದ್ದರೂ ನಿಜವಾಗಿ ಯಾವುದರ ಹಿಂದೆ ಓಡುತ್ತಿದ್ದೇವೆ ಎಂಬ ಸ್ಪಷ್ಟತೆಯಾದರೂ ಇದೆಯೆ? ಮಾತುಗಳ, ಚಿತ್ರಗಳ, ಬರಹಗಳ ವಿನಿಮಯ ಸತತವಾಗಿ ಸಾಗುತ್ತಿದ್ದರೂ ನಮಗೆ ಬೇಕಾದ ಮನುಷ್ಯಸಂಪರ್ಕ ನಿಜವಾಗಿ ಸಿಕ್ಕಿದೆಯೆ?   ಕಳೆದ ನಾಲ್ಕಾರು ವರುಷಗಳಲ್ಲಿ ಈ ಕುರಿತು ಧ್ಯಾನಿಸುವ ಹಲವು ಕತೆ-ಕವಿತೆಗಳು ಪ್ರಕಟವಾಗಿರುವುದು ಕಾಕತಾಳೀಯವೇನಲ್ಲ. ಇಂಥ ಒಂದು ಮಾದರಿ ಎಂಬಂತೆ ಜೋಗಿ ಅವರ “ಫೇಸ್‌ಬುಕ್ ಡಾಟ್‌ಕಾಮ್/ ಮಾನಸ ಜೋಶಿ ಅಥವಾ ಮಾನಸ ಸರೋವರ ಎಂಬ ವ್ರತಮಂಜರಿ” (೨೦೧೨, ಅಂಕಿತ ಪುಸ್ತಕ, ಬೆಂಗಳೂರು) ಎಂಬ ಕತೆಯನ್ನು ಓದಿಕೊಳ್ಳಬಹುದು. ಓರ್ವ ‘ಮೀಡಿಯಾ ಸ್ಯಾವಿ’ ಬರಹಗಾರರೊಬ್ಬರಿಂದಲೇ ಈ ಕತೆ ರಚಿತವಾಗಿರುವುದು ಗಮನಾರ್ಹ.

 ಮೊಬೈಲು, ಸಿಮ್‌ಕಾರ್ಡು, ಲ್ಯಾಪ್‌ಟಾಪು, ಫೇಸ್‌ಬುಕ್ಕು, ಮೆಸೇಜು, ಫ್ರೆಂಡ್‌ರಿಕ್ವೆಸ್ಟು, ಟೀವಿ, ಕ್ಯಾಮೆರಾ, ಪ್ರೋಗ್ರಾಮು, ‘ರಿಯಾಲಿಟಿ’ ಶೋ, ಪ್ರೆಸ್ ಕಾನ್‌ಫೆರನ್ಸ್ , ಟೇಪು, ಟಿಸಿಆರ್, ಟೀಆರ್‌ಪಿಗಳ ಲೋಕದಲ್ಲಿ ಆತ್ಮಗಳೇ ಕಳೆದು ಹೋಗುತ್ತಿರುವ ಸ್ಥಿತಿಯನ್ನು ಜೋಗಿ ಅವರ ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಈ ಪದಗಳು ಮತ್ತು ಪರಿಕಲ್ಪನೆಗಳು ಇಂಗ್ಲಿಷ್ ಭಾಷೆಯಲ್ಲಿ ಸೂಚಿತವಾಗುತ್ತಿದ್ದು ನಾವು ಕೇವಲ ಅವುಗಳ ಸರಳ ತದ್ಭವಗಳನ್ನು ಬಳಸುತ್ತಿರುವುದು ಈ ಸ್ಥಿತಿಗೆ ಬರೆಯಬಹುದಾದ ಭಾಷ್ಯವೇ ಅನ್ನಿಸುತ್ತದೆ. ನಮ್ಮ ಭೌತಿಕ ಮತ್ತು ಮನೋಲೋಕಗಳಲ್ಲಿ ಸಂಭವಿಸುತ್ತಿರುವ ಪಲ್ಲಟಗಳು ಭಾಷಿಕ ವಿನ್ಯಾಸದಲ್ಲೂ ಕಂಡುಬರುತ್ತಿವೆ. ಅಪರಿಚಿತರೊಂದಿಗೆ ಸಂಪರ್ಕ ಸಾಧಿಸಲು ಇಷ್ಟೆಲ್ಲ ಪರಿಕರ-ಪರಿಕಲ್ಪನೆಗಳು  ಒದಗಿಬರುತ್ತಿರುವಂತೆಯೇ ಒಂದು ಕುಟುಂಬದ ಸದಸ್ಯರ ನಡುವೆಯೇ ಸಂಪರ್ಕಗಳು ಕಡಿದು ಬೀಳುತ್ತಿರುವ ವ್ಯಂಗ್ಯವೂ ನಮ್ಮನ್ನು ಕೆಣಕುತ್ತಿದೆ. ಜೋಗಿ ಅವರ ಕತೆಯ ಆರಂಭದಲ್ಲೇ “ಮಾನಸ ಜೋಶಿಯ ಮೊಬೈಲು ಕಳೆದುಹೋಗಿತ್ತು” ಎಂಬ ವಾಕ್ಯ ಕಾಣಿಸಿಕೊಳ್ಳುವುದು ಕಾಕತಾಳೀಯವಲ್ಲ. ಇನ್ನೊಂದು ಸಿಮ್ ಕಾರ್ಡನ್ನು ಮೊಬೈಲಿಗೆ ಸೇರಿಸಿ ಅದು ಆಕ್ಟಿವೇಟ್ ಆಗುವವರೆಗೆ   ಬುದ್ಧಿಯೇ ಓಡದ ಸ್ಥಿತಿ ಅವಳದು.  “ ಒಂದು ಕಾಲದಲ್ಲಿ ನೂರು ನೂರೈವತ್ತು ನಂಬರುಗಳು ಬಾಯಿಗೇ ಬರುತ್ತಿದ್ದವು. ಈಗ ಗಂಡನ ನಂಬರೂ ನೆನಪಿರೋದಿಲ್ಲ. ಮಿಸ್ ಕಾಲ್ ಕೊಡು, ಸೇವ್ ಮಾಡ್ಕೊತೀನಿ. ಆ ನಂಬರಿನತ್ತ ಕಣ್ಣು ಹಾಯಿಸುವುದಕ್ಕೂ ಪುರುಸೊತ್ತಿಲ್ಲ. ಮಾನಸ ಜೋಶಿಯ ಸದ್ಯದ ಸ್ಥಿತಿ ಇದು: ದುಡಿಯಬೇಕು ಅನ್ನುವ ಹಂಬಲ ಕ್ರಮೇಣ ಅಭ್ಯಾಸದಂತೆ ಆಗಿ ಹೋಗಿ, ಬೆಳಗಾಗೆದ್ದರೆ ಎಲ್ಲಿಗಾದರೂ ಹೊರಟು ಬಿಡಬೇಕು ಅನ್ನುವ ಆತುರ... ಬಿಸಿಲು, ಬೆಂಕಿ, ಬಾಕಿ ಉಳಿದಿರುವ ಕೆಲಸ, ಆಫೀಸು ಹೊತ್ತಿನಲ್ಲಿ ಫೋನ್ ಎತ್ತಿಕೊಳ್ಳದ ಗಂಡ, ದೂರದಲ್ಲಿ ಎಲ್ಲೋ ಓದುತ್ತಿರುವ ಮಗ, ಮನೆಯಲ್ಲಿ, ಹುಳಿಗೆ ಉಪ್ಪು ಹಾಕೇ ಇಲ್ವಲ್ಲೇ ನೀನು ಎಂದು ಮತ್ತಷ್ಟು ಉಪ್ಪು ಹಾಕುವ ಅತ್ತೆ.  ಕುಟುಂಬ ಸದಸ್ಯರೊಂದಿಗಿನ ಸಂಬಂಧದಲ್ಲಿ ಟೆನ್ಶನ್, ಆಫೀಸಿನಲ್ಲಿ ಟೆನ್ಶನ್. ಆದರೂ ಊಟ-ನಿದ್ರೆಗಿಂತ ಲ್ಯಾಪ್‌ಟ್ಯಾಪು-ಫೇಸ್‌ಬುಕ್ಕಿಗೇ ಹೆಚ್ಚಿನ ಆದ್ಯತೆ. ಕಂಡಿರದ, ಕೇಳಿರದ ಅಪರಿಚಿತರೊಂದಿಗೆ ಬಿಚ್ಚಿಕೊಳ್ಳುವ, ತೋಡಿಕೊಳ್ಳುವ ಆತುರ, ಆತಂಕ. ಕುಟ್ಟುತ್ತಾಳೆ: ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿವುದೇ ಜೀವನ? ಇರದುದು ಸಿಕ್ಕಾಗ ಇರುವುದರಂತೆಯೇ ಕಂಡೀತಾ? ಇರುವುದು ಮತ್ತು ಇರದುದರ ನಡುವೆ ಇರುವುದೇ ಬದುಕಾ? ಶೇರ್ ಮಾಡುತ್ತಿದ್ದಂತೆ ಲೈಕ್ ಕಾಣಿಸಿಕೊಂಡಿತು. ಯಾರೂಂತ ನೋಡಿದಳು. ತಿರುಮಲೇಶ್.

ಈ ತಿರುಮಲೇಶ್ ಮಾನಸಳನ್ನು ಒಮ್ಮೆಯೂ ನೇರವಾಗಿ ಭೇಟಿಯಾಗಿಲ್ಲ. ಅವಳೊಡನೆ ಚಾಟ್ ಮಾಡಿ ಹಲವು ದಿನಗಳೇ ಆಗಿವೆ. ಆದರೂ, ಆ ಸ್ಟೇಟಸ್ ಮೆಸೇಜು ತನ್ನನ್ನು ಕುರಿತೇ ಹಾಕಿದ್ದಾಳೆ ಅನ್ನುವ ಬಗ್ಗೆ ತಿರುಮಲೇಶನಿಗೆ ಯಾವ ಅನುಮಾನವೂ ಉಳಿಯಲಿಲ್ಲ.ಇದು ಈ ಕತೆಯ ಮೊದಲ ವಾಕ್ಯ. ಪರಸ್ಪರ ಅಪರಿಚಿತರಾಗಿರುವ ಇಬ್ಬರು ಅತೃಪ್ತರ ನಡುವಣ ಈ ‘ಚಾಟ್’ ಸಮಕಾಲೀನ ನಾಗರೀಕತೆಯ ಸ್ವರೂಪವನ್ನು ಅದರದೇ ಪರಿಭಾಷೆಯಲ್ಲಿ ಕಟ್ಟಿಕೊಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಆದರೆ ಇವರಿಬ್ಬರೂ ಮಾತನಾಡಿಕೊಳ್ಳುವುದು ಪರಸ್ಪರ ತಮ್ಮ ನಡುವೆ ಮಾತ್ರ ಅಲ್ಲ ಎಂಬುದನ್ನು ಕತೆ ದಾಖಲಿಸುತ್ತಾ ಹೋಗುತ್ತದೆ: “ಸ್ಟೇಟಸ್ಸು ಮೆಸೇಜು ಸರಳವಾಗಿತ್ತು: ನೀನು ಮೊದಲೇ ಸಿಕ್ಕಿದ್ದರೆ ನಾನು ಇದಕ್ಕಿಂತ ಹೆಚ್ಚು ಸುಖವಾಗಿರುತ್ತಿದ್ದೆ. ತಡವಾಗಿ ಸಿಗದೇ ಹೋದರೂ ಸುಖವಾಗಿರುತ್ತಿದ್ದೆ. ನೀನು ಸಿಕ್ಕಿಯೇ ಬಿಟ್ಟೆ. ನನಗೆ ಆಯ್ಕೆಗಳಿಲ್ಲ ಈಗ. ತಿರುಮಲೇಶ ಅವಳ ರೂಪವನ್ನು ಧ್ಯಾನಿಸುತ್ತಾ ಲೈಕ್ ಬಟನ್ ಒತ್ತಿದ. ಯೂ, ಕೇಶವ್, ಶ್ವೇತಾ ಭಟ್, ಆರತಿ, ಮೋಹನ್ ಅಂಡ್ ಜಯತೀರ್ಥ ಅದರ್ಸ್ ಲೈಕ್ಸ್ ದಿಸ್ ಅಂತ ಓದಿಕೊಂಡು ಆರತಿಯ ಪ್ರೊಫೈಲ್ ಕ್ಲಿಕ್ ಮಾಡಿದ. ಯಾರದೋ ಫೋಟೋ ಹಾಕಿದ್ದಳು. ಫ್ರೆಂಡ್ ರಿಕ್ವೆಸ್ಟ್ ಕಳಿಸಲೇ ಎಂದು ಯೋಚಿಸುತ್ತಲೇ ಆಡ್ ಫ್ರೆಂಡ್ ಒತ್ತಿದ.” ತಿರುಮಲೇಶ್ ಮಾನಸಳ ಮೆಸೇಜಿನ ಹಿಂದಿರಬಹುದಾದ ಅವಳ ಮನಸ್ಥಿತಿ, ಸ್ವಭಾವ, ತನ್ನ ಗಂಡನೊಂದಿಗೆ ಇರಬಹುದಾದ ಅವಳ ಸಂಬಂಧ, ಅವಳು ತನ್ನನ್ನು ಮನೆಗೆ ಕರೆಯಬಹುದೇ, ಅವಳು ತನ್ನನ್ನು ಪ್ರೀತಿಸುತ್ತಿರಬಹುದೇ ಎಂದೆಲ್ಲ ಯೋಚಿಸುತ್ತ ಅವಳ ಮೆಸೇಜಿಗೆ ಒಂದು ಕಾಮೆಂಟು ಬರೆಯುತ್ತಾನೆ: “ಬಂದೇ ಬರತವ ಕಾಲ...ಮಂದಾರ ಕನಸನು ಕಂಡಂಥ ಮನಸನು ಒಂದು ಮಾಡುವ ಸ್ನೇಹಜಾಲ...?”  ಆದರೆ ಮಾನಸಳ ಮೆಸೇಜಿಗೆ  ಬೇರೆ ಕಾಮೆಂಟುಗಳು ಬರುವುದನ್ನೂ ಕತೆ ದಾಖಲಿಸುತ್ತದೆ.  ಒಂದು ದಿನ ಅವರಿಬ್ಬರೂ ಲಘುವಾಗಿ ಚಾಟ್ ಮಾಡುತ್ತಾರೆ ಕೂಡ. ಅವನು ನಂಬರ್ ಕೇಳಿದರೆ ‘ಸಿಕ್ಕಾಗ ಕೊಡ್ತೀನಿ’ ಎಂದು ಕಳಚಿಕೊಳ್ಳುತ್ತಾಳೆ. ಮಾರನೆಯ ದಿನ ಫೇಸ್‌ಬುಕ್ಕಿಗೆ ಲಾಗಿನ್ ಆದಾಗ ತಿರುಮಲೇಶನು ಆನ್‌ಲೈನ್ ಇರುವುದು ಗೊತ್ತಾಗಿ ‘ಮತ್ತೆ ಮಾತನಾಡಿಯಾನು ಎಂದುಕೊಂಡು ಚಾಟ್ ಆಫ್‌ಲೈನ್ ಮಾಡಿಕೊಂಡು ಬ್ರೌಸಿಂಗ್ ಶುರುಮಾಡಿದಳು.’ ಲ್ಯಾಪ್‌ಟ್ಯಾಪಿನೊಂದಿಗೆ ಆಡುತ್ತಿದ್ದರೂ ಮಾನಸ ಯೋಚಿಸುತ್ತಿದ್ದುದೇ ಬೇರೆ: “ಆ ಅಪರಾತ್ರಿಯಲ್ಲಿ ಎಲ್ಲರೂ ಯಾಕೆ ಎಚ್ಚರವಾಗಿರುತ್ತಾರೆ? ಯಾಕೆ ತನ್ನ ಸ್ಟೇಟಸ್ಸಿಗೆ ಲೈಕುಗಳನ್ನು ಹಾಕುತ್ತಿದ್ದಾರೆ? ಯಾಕೆ ತಮಗೆ ತೋಚಿದ ಕಾಮೆಂಟುಗಳನ್ನು ಮಾಡುತ್ತಾರೆ? ಯಾರಿಗೂ ನಿದ್ದೆಯೆಂಬುದೇ ಇಲ್ಲವೇ? ಎಲ್ಲರೂ ತನ್ನ ಹಾಗೆ ದುಃಖಿಗಳೇ? ರೋಸಿಹೋದವರೇ? ಎಲ್ಲರ ಮನೆಯಲ್ಲೂ ಇದೇ ಕತೆಯಾ? ನಾವು ಯಾವುದಕ್ಕೆ ಹಂಬಲಿಸುತ್ತಿದ್ದೇವೆ? ಯಾರೋ ಸಿಗಲಿ ಎಂದು ಕಾಯುತ್ತೇವಾ? ಸಿಕ್ಕವರು ನಮ್ಮವರಾಗುತ್ತಾರಾ? ಸೇಫ್ಟಿ ಝೋನಿನಲ್ಲಿನಿಂತು ಆಟವಾಡುತ್ತಿದ್ದೇವಾ? ಅತ್ತೆಗೆ ಇದ್ಯಾವುದೂ ಸುಖವೇ ಇಲ್ಲದೆ ಇದ್ದದ್ದರಿಂದ ಹಾಗಾಡುತ್ತಾರಾ? ನಾನೂ ಕೂಡ ಅತ್ತೆ ಮಾಡುತ್ತಿರುವುದನ್ನೇ ಬೇರೆ ಥರ ಮಾಡುತ್ತಿದ್ದೇನಾ?  ಇತ್ತ ತಿರುಮಲೇಶನ ಸ್ಥಿತಿ ಇದು: ಬಹುಶಃ ಕನೆಕ್ಷನ್ ಎರರ್ ಇರಬೇಕು. ಅದಕ್ಕೆ ಅವಳು ಕಾಣಿಸುತ್ತಿಲ್ಲ. ಈಗ ಬಂದರೆ ಚೆನ್ನಾಗಿ ಮಾತಾಡಿಸಬೇಕು. ಫ್ಲರ್ಟ್ ಮಾಡಬೇಕು. ಒಲಿಸಿಕೊಳ್ಳಬೇಕು. ಚೆಂದಾಕಿದ್ದಾಳೆ ಹುಡುಗಿ...ಎಂದು ಲೆಕ್ಕ ಹಾಕುತ್ತಾ ತಿರುಮಲೇಶ ಕಂಪ್ಯೂಟರ್ ಮುಂದೆ ತುಂಬ ಹೊತ್ತು ಕಲ್ಲಾಗಿ ಕೂತಿದ್ದ. ಆಮೇಲೆ ನಿದ್ದೆ ಹೋದ. ಅಂದರೆ ಚಾಟ್‌ಗಳು ಎಷ್ಟೇ ಸುಂದರವಾಗಿರಲಿ ಫೇಸ್‌ಬುಕ್ಕಿನಲ್ಲಿ ಬಿಂಬಿತವಾಗುವುದು ಚಾಟ್ ಮಾಡುವವರ ನಿಜವಾದ ‘ಫೇಸ್’ ಅಲ್ಲ ಎಂಬುದನ್ನು ಜೋಗಿ ಅವರ ಕಥೆ ಸೂಚಿಸುವಂತಿದೆ. ತಮಗೇ ನರಕವಾಗಿರುವ ತಮ್ಮದೇ ನಿಜವಾದ ‘ಫೇಸ್’ ಅನ್ನು ಕ್ಷಣಕಾಲ ಕಳಚಿ ಗ್ರಾಹಕ ಬಳಕೆಗೆ ಒಗ್ಗುವ, ಸಲ್ಲುವ ಫೇಸ್ ಒಂದನ್ನು ಆರೋಪಿಸಿಕೊಂಡು-ಅಂದರೆ ಆತ್ಮವಂಚನೆ ಮಾಡಿಕೊಂಡು-ಅದರಲ್ಲಿ ಸುಖಿಸುವ ವರ್ಗದ ನಿಜವಾದ ‘ಫೇಸ್’ ಅನ್ನು ಅನಾವರಣ ಮಾಡುವುದು ಈ ಕತೆಯ ಇಂಗಿತಗಳಲ್ಲಿ ಒಂದಾಗಿರಬಹುದು.

ಮಾನಸ ಮತ್ತು ತಿರುಮಲೇಶರ ಪಾತ್ರಚಿತ್ರಣಗಳಲ್ಲಿಯೂ ಜೋಗಿ ಎರಡು ಬೇರೆ ಬೇರೆ ಮಾದರಿಗಳನ್ನು ಅನುಸರಿಸಿದ್ದಾರೆ. ಮಾನಸಳದು ತುಸು ಸಾಂಪ್ರದಾಯಕ ಪಾತ್ರ. ಆಧುನಿಕ ಜಗತ್ತನ್ನು 
ಪ್ರವೇಶಿಸಿದ್ದರೂ ಅವಳು ಸಾಂಪ್ರದಾಯಕ ಜಗತ್ತಿನಿಂದ ಪೂರಾ ಕಡಿದುಕೊಂಡು ಬಂದಿಲ್ಲ. ಅವಳ ಜಗತ್ತು ಭಿನ್ನ ಭಿನ್ನ ಸ್ವಭಾವದ ‘ನಿಜ’ ಮನುಷ್ಯರಿಂದ ಆವೃತವಾಗಿದೆ. ಮನೆಯೊಳಗಿನ ಅವಳ ಸಮಸ್ಯೆಗಳು, ವೃತ್ತಿ ಜೀವನದ ಒತ್ತಡಗಳು, ಇವುಗಳಿಂದ ರೂಪುಗೊಂಡಿರುವ ಅವಳ ಭಾವಸ್ಥಿತಿ ಎಲ್ಲವಕ್ಕೂ ಒಂದು ‘ವಾಸ್ತವಿಕ’ ಸ್ಪರ್ಶವಿದೆ. ಅಂದರೆ ಅವಳಿಗೆ ಒಂದು ದತ್ತವಾದ ‘ಫೇಸ್’ ಇದೆ. ಅದರಿಂದ ರೋಸಿಹೋಗಿರುವ ಅವಳು ಇನ್ನೊಂದು  ‘ಫೇಸ್’ ಅನ್ನು ರೂಪಿಸಿಕೊಳ್ಳಲು ಹೆಣಗುತ್ತಿದ್ದಾಳೆ.  ಆದರೆ ನಾವು ಕಾಣುವ-ಅಂದರೆ ಲೇಖಕ ನಮಗೆ ತೋರಿಸುವ-ತಿರುಮಲೇಶನ ಫೇಸ್ ಕೇವಲ ಫೇಸ್‌ಬುಕ್ಕಿನಲ್ಲಿ ಕಾಣುವ ಫೇಸ್. ಅಂದರೆ ನಿಜವಾಗಿ ‘ಫೇಸ್‌ಲೆಸ್’. ಈ ಎರಡು ಪಾತ್ರಮಾದರಿಗಳ ವೈದೃಶ್ಯದಲ್ಲಿ ಬದಲಾಗುತ್ತಿರುವ ನಾಗರೀಕತೆಯ ಲಯವನ್ನು ಹಿಡಿಯುವುದು ಲೇಖಕರ ಉದ್ದೇಶವೆಂದು ತೋರುತ್ತದೆ. ಕತೆಯಲ್ಲಿ ಕಾಣಬಹುದಾದಂತೆ ತಿರುಮಲೇಶನಿಗೆ ‘ವರ್ಚ್‌ಯಲ್’ ಪ್ರಪಂಚದಲ್ಲಿ ಮಾತ್ರ ಅಸ್ತಿತ್ವವಿದೆ. ಅಲ್ಲಿ ಅವನು ತನ್ನ ಅದೃಷ್ಟವನ್ನು ಪರೀಕ್ಷಿಸಬೇಕಾಗಿದೆ. ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗಿದೆ. ತಿರುಮಲೇಶ ಒಂದು ಆಯ್ಕೆ ಮಾಡಿಕೊಳ್ಳುವುದೂ,   ಅದನ್ನು ಹಿಂಬಾಲಿಸಲು ಹಂಬಲಿಸುವುದೂ, ನಿಜ. ಆದರೆ ಈ ಹೊಸ ಜಗತ್ತಿನಲ್ಲಿ ಹೊಸ ಆಯ್ಕೆಗಳನ್ನು ಮಾಡಿಕೊಳ್ಳುವುದೂ ಕೆಲಕಾಲ ಅವುಗಳ ಜೊತೆ ‘ಸಂಪರ್ಕ’ದಲ್ಲಿರಲು ಹವಣಿಸುವುದೂ ಅಷ್ಟೇ ನಿಜ. ವಾಸ್ತವಿಕ ಜಗತ್ತಿನ ಜಂಜಾಟಗಳಿಂದ ತಪ್ಪಿಸಿಕೊಂಡು ವರ್ಚುಯಲ್ ಜಗತ್ತಿನಲ್ಲಿ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳನ್ನು  ಸ್ಥಾಪಿಸಿಕೊಳ್ಳಲು ಹೆಣಗುತ್ತಿರುವ ಒಂದು ವರ್ಗದ ಮನಸ್ಥಿತಿಗೆ ಪ್ರಾತಿನಿಧಿಕವೆಂಬಂತೆ ಜೋಗಿ ಅವರ ಕತೆಯ ಕೊನೆಯ ಭಾಗವನ್ನು ಗಮನಿಸಬಹುದು. ಇದು ಕೇವಲ ಕತೆಯ ಕೊನೆಯ ಭಾಗ, ಆದರೆ ನಿಜವಾಗಿ ತಿರುಮಲೇಶನ ವರ್ಚುಯಲ್ ಬದುಕಿನ ಹೊಸ ಅಧ್ಯಾಯ. ಅಂದರೆ ಜೋಗಿ ಅವರ ಕತೆಗೆ ಸಾಂಪ್ರದಾಯಕ, ಅಂತಿಮ ಮುಕ್ತಾಯ ಎಂಬುದೇನೂ ಇಲ್ಲ. ಈ ಕತೆಯನ್ನು ಮುಂದೆ ಅವರೇ ಅಥವಾ ಅವರಂಥ ಬೇರೊಬ್ಬ ಕತೆಗಾರ ಮುಂದುವರೆಸಬಹುದು ಎಂಬ ಮುಕ್ತಬಂಧ ಈ ರಚನೆಗಿದೆ: “ ತಿರುಮಲೇಶ ಎಷ್ಟು ಹುಡುಕಿದರೂ ಮಾನಸ ಜೋಶಿ ಪತ್ತೆಯಾಗಲಿಲ್ಲ. ಚಾಟ್ ರೆಕಾರ್ಡಿನಲ್ಲೂ ಇರಲಿಲ್ಲ. ಸರ್ಚ್ ಕೊಟ್ಟು ಹುಡುಕಿದರೂ ನಾಪತ್ತೆ. ಬಹುಶಃ ಅವಳ ಅಕೌಂಟು ಹ್ಯಾಕ್ ಆಗಿರಬೇಕು ಅಂದುಕೊಂಡು ಮಾನಸ ಅಂತ ಹೊಡೆದಾಗ ಕಾಣಿಸಿಕೊಂಡ ಮಾನಸಾ ರೆಡ್ಡಿ ಎಂಬ ಹೆಸರನ್ನು ಕ್ಲಿಕ್ ಮಾಡಿದ. ಮೈತುಂಬಿಕೊಂಡ ನೀಲಿ ಟೀ ಶರ್ಟಿನ ಹುಡುಗಿ ಕಾಣಿಸಿಕೊಂಡಳು. ತಿರುಮಲೇಶ ಅವಳ ಪ್ರೊಫೈಲಿನ ಮೇಲಿದ್ದ ಆಡ್‌ಫ್ರೆಂಡ್ ಬಟನ್ ಒತ್ತಿದ. ಮರುಕ್ಷಣವೇ ಮಾನಸಾ ರೆಡ್ಡಿ ನಿಮ್ಮ ಗೆಳೆಯರಾಗಿರಲು ಒಪ್ಪಿದ್ದಾರೆ ಎಂಬ ಸಂದೇಶ ಕಾಣಿಸಿಕೊಂಡಿತು. ತಿರುಮಲೇಶ ಅವಳ ಹೆಸರಿನ ಚಾಟ್ ಬಾಕ್ಸು ಓಪನ್ ಮಾಡಿ ಹಾಯ್ ಅಂತ ಕುಟ್ಟಿದ.”

                                  ******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-೫೭೭ ೪೦೧
Friday, June 8, 2012

ಹಾರಿಹೋದ ಗಿಳಿ, ಗಾಯಗೊಂಡ ಕತ್ತು, ಪ್ರಾಣವೆಂಬ ಪಕ್ಷಿ


ನಿರುಮ್ಮಳವಾಗಿ ಶುರುವಾದ ಒಂದು ಬೆಳಗ್ಗೆ ಅವಳು ತೇಲಿಕೊಂಡು ಊರಿನೊಳಗೆ ಬಂದಳು. ಅವಳನ್ನು ಸ್ವಾಗತಿಸುವುದಕ್ಕೆ ಊರಿನ ಬಾಗಿಲಲ್ಲಿ ಯಾರೂ ಇರಲಿಲ್ಲ. ದಿಡ್ಡಿ ಬಾಗಿಲ ಹತ್ತಿರ ಸುಂಕ ವಸೂಲಿ ಮಾಡುವವನು ತಿಂಡಿಗೋ ಸ್ನಾನಕ್ಕೋ ಹೋಗಿದ್ದ. ಹೀಗಾಗಿ ಅವಳು ನುಸುಳಿ ಒಳಗೆ ಬಂದದ್ದು ಯಾರಿಗೂ ಗೊತ್ತೇ ಆಗಲಿಲ್ಲ.
ಅವಳಿಗೆ ಆ ಊರಲ್ಲಿ ಗೊತ್ತಿದ್ದವರು ಯಾರೂ ಇರಲಿಲ್ಲ. ಯಾರ ಮನೆಯ ಬಾಗಿಲನ್ನೂ ತಟ್ಟಬಾರದು ಅಂತ ಅವಳು ನಿರ್ಧಾರ ಮಾಡಿಬಿಟ್ಟಿದ್ದಳು. ಏನಿದ್ದರೂ ರಾಜನ ಬಳಿ ಕೇಳಬೇಕು. ಮಹಾರಾಜ ಕೊಟ್ಟರೆ ಅವನು ಗೆಲ್ಲುತ್ತಾನೆ. ಕೊಡದಿದ್ದರೆ ಅವನು ಸೋಲುತ್ತಾನೆ. ಅವನ ಸೋಲುಗೆಲುವುಗಳು ನಿರ್ಧಾರ ಆಗಿಬಿಡಲಿ ಎಂದು ನೇರವಾಗಿ ಅರಮನೆಯತ್ತ ಹೆಜ್ಜೆ ಹಾಕಿದಳು. ಮಹಾದ್ವಾರದ ಬಳಿ ಗಸ್ತು ಕಾಯುತ್ತಿದ್ದ ಸೈನಿಕರಿಗೆ  ಅವಳು ಕಾಣಿಸಲಿಲ್ಲ. ಒಳ ಬಾಗಿಲಲ್ಲಿ ಭರ್ಜಿ ಹಿಡಿದು ನಿಂತವರ ಕಣ್ಣಿಗೂ ಅವಳು ಬೀಳಲಿಲ್ಲ. ಅರಗಿಳಿಯಾಗಿ ಅರಮನೆಯೊಳಗೆ ಕಾಲಿಟ್ಟಳು. ಅಂತಃಪುರದೊಳಗೆ ಹೋಗಿ ಮಹಾರಾಜನ ಮುಂದೆ ನಿಂತಳು.
ಮಹಾರಾಜ ಸುಸ್ಥಿತಿಯಲ್ಲಿರಲಿಲ್ಲ. ಅವನು ರಾಜಕ್ಷೌರಿಕನ ಎದುರು ಕುಳಿತಿದ್ದ. ಅವಳು ಬಂದಿದ್ದನ್ನೂ ಅವನು ಗಮನಿಸಲಿಲ್ಲ. ಕ್ಷೌರಿಕನ ಜತೆ ಮಾತಾಡುತ್ತಿದ್ದ. ಅವರಿಬ್ಬರ ಮಾತು ಕೇಳುತ್ತಾ ಅವಳು ಸುಮ್ಮನೆ ನಿಂತಳು.
ಪ್ರಜೆಗಳೆಲ್ಲ ಸುಖವಾಗಿದ್ದಾರಾ?’
ಹಾಗಂದುಕೊಳ್ಳಬಹುದು.’
ನನಗೆ ಪ್ರಾಮಾಣಿಕವಾದ ಉತ್ತರ ಬೇಕು. ನನ್ನ ರಾಜ್ಯದಲ್ಲಿ ಅಧರ್ಮ ತಲೆಯೆತ್ತುವಂತಿಲ್ಲ. ಯಾರೂ ಯಾರನ್ನೂ ವಂಚಿಸಕೂಡದು. ಯಾರನ್ನೂ ಯಾರೂ ಹಿಂಸಿಸಕೂಡದು. ಪ್ರೇಮ, ಪ್ರೀತಿಗಳಿಂದ ತುಂಬಿರಬೇಕು. ಅರಳುವ ಒಂದೊಂದು ಹೂವು ಕೂಡ ಸುಗಂಧವನ್ನೇ ಬೀರಬೇಕು. ಮಕ್ಕಳು ಆರೋಗ್ಯಕರವಾಗಿ, ಮಹಿಳೆಯರು ಸಂತೋಷಕರವಾಗಿ, ಗಂಡಸರು ಉತ್ಸಾಹಿತರಾಗಿ, ಮುದುಕರು ನೆಮ್ಮದಿಯಿಂದ ಇರಬೇಕು. ಅದು ಸಾಧ್ಯವಾಗಿದೆಯಾ?’
ಕ್ಷೌರಿಕನಿಗೆ ಏನು ಉತ್ತರಿಸಬೇಕು ಅಂತ ತಿಳಿಯದಾಯಿತು. ಅರಸನ ಕತ್ತು ತನ್ನ ಕೈಯಲ್ಲಿದೆ. ಅರಸ ತನ್ನನ್ನು ಕೊಲ್ಲಲಾರ. ಕೈಯಲ್ಲಿರುವ ಕತ್ತನ್ನು ತಾನು ಕತ್ತರಿಸಲಾರೆ. ಅದು ತನ್ನ ವೃತ್ತಿಗೆ ಬಗೆಯುವ ದ್ರೋಹ. ಸತ್ಯ ಹೇಳಲೋ ಬೇಡವೋ? ಪ್ರಭುವಿನ ಎದುರು ಸುಳ್ಳಾಡಿದರೆ ರೌರವ ನರಕ.
ನಿನಗೆ ಉತ್ತರ ಕೊಡಲಿಕ್ಕಾಗುತ್ತದೋ ಇಲ್ಲವೋಎಂದು ಮಹಾರಾಜನ ದನಿ ಬಿರುಸಾಯಿತು. ಮತ್ತೆ ತಗ್ಗಿದ ದನಿಯಲ್ಲಿ ಹೇಳತೊಡಗಿದ. ‘ನನ್ನನ್ನು ಅರ್ಥ ಮಾಡಿಕೋ. ನಮ್ಮಪ್ಪನ ಹಾಗಲ್ಲ ನಾನು. ಅವರು ದರ್ಪದಿಂದ ಆಳಿದರು. ನಾನು ವಿನಯದಿಂದ ಗೆಲ್ಲಲು ಹೊರಟಿದ್ದೇನೆ. ಅವರು ಅಹಂಕಾರದಿಂದ ಬಾಳಿದರು. ನಾನು ಸಂತನ ಹಾಗಿರಲು ಬಯಸುತ್ತೇನೆ. ನನ್ನ ಸಿಟ್ಟು ನನ್ನದಲ್ಲ ಎಂದುಕೊಂಡು ಸಿಟ್ಟಾಗುತ್ತೇನೆ. ನನ್ನ ನಿರ್ಧಾರದಿಂದ ನನಗೆ ಲಾಭ ಆಗಕೂಡದು. ಪ್ರಜೆಗಳಿಗೆ ಲಾಭ ಆಗಬೇಕು ಎಂಬುದೇ ನನ್ನಾಸೆ. ನನ್ನ ಆಳ್ವಿಕೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿ, ಹೆಣ್ಣಾಗಲೀ ಗಂಡಾಗಲಿ ಅತೃಪ್ತಿಯ ಮಾತಾಡಕೂಡದು. ನೀನು ಊರೂರು ಸುತ್ತುವವನು. ಕ್ಷೌರ ಮಾಡೋ ಹೊತ್ತಲ್ಲಿ ಎಲ್ಲರೂ ನಿನಗೆ ರಹಸ್ಯಗಳನ್ನು ಹೇಳುತ್ತಿರುತ್ತಾರೆ. ಅವನ್ನು ನನಗೆ ಹೇಳು.’
ಕ್ಷೌರಿಕ ಒಂದು ಕ್ಷಣ ಸುಮ್ಮನಿದ್ದ. ಮತ್ತೆ ದಿಟ್ಟತನದಿಂದ ಹೇಳಿದ. ‘ನಾನೇನೇ ಹೇಳಿದರೂ ನೀವು ಸಿಟ್ಟಾಗಬಾರದು, ಬೇಸರ  ಮಾಡಿಕೊಳ್ಳಬಾರದು. ನನ್ನನ್ನು ಗಲ್ಲಿಗೇರಿಸಬಾರದು. ಹಾಗಂತ ಮಾತು ಕೊಡಿ.’
ಮಹಾರಾಜನಿಗೆ ಅಚ್ಚರಿಯಾಯಿತು. ಅಂಥದ್ದೊಂದು ರಹಸ್ಯ ಇವನ ಬಳಿ ಇರುವುದಕ್ಕಾದರೂ ಸಾಧ್ಯವಾ? ಅಂಥದ್ದೊಂದಿದ್ದರೆ ತಿಳಿದುಕೊಳ್ಳಲೇಬೇಕು. ಇಲ್ಲದೇ ಹೋದರೆ ನನ್ನ ಆಡಳಿತದಲ್ಲೊಂದು ಕೊರತೆ ಉಳಿದುಬಿಡುತ್ತದೆ. ತಾನಂದುಕೊಂಡ ಸಮಾಜ ಸೃಷ್ಟಿಸಲು ಸಾಧ್ಯವೇ ಆಗುವುದಿಲ್ಲ.
ಹೇಳು, ನಿನ್ನನ್ನು ಕ್ಷಮಿಸುತ್ತಿದ್ದೇನೆ. ಅದೆಂಥಾ ಮಹಾಪರಾಧ ಮಾಡಿದರೂ ನಿನ್ನನ್ನು ನಾನು ಶಿಕ್ಷೆಗೆ ಒಳಪಡಿಸುವುದಿಲ್ಲ. ಸಿಂಹಾಸನದ ಮೇಲಾಣೆ
ಅಷ್ಟೇ ಅಲ್ಲ. ಸಮಸ್ಯೆಯನ್ನು ಹೇಳಿದ ನಂತರ ಅದಕ್ಕೆ ಪರಿಹಾರವನ್ನೂ ಸೂಚಿಸಬೇಕು.’
ಮಹಾರಾಜ ಒಪ್ಪಿಗೆಯಿಂದ ತಲೆಯಾಡಿಸಿದ.‘ ನಾನು ಸಮಸ್ಯೆ ಇಂಥದ್ದು ಎಂದು ಗೊತ್ತಾದರೆ ಪರಿಹಾರ ಸೂಚಿಸದೇ ಇರುವುದಕ್ಕೆ ಕಾರಣವೇ ಇಲ್ಲ. ನನ್ನ ಸಾಮ್ರಾಜ್ಯವನ್ನು ಒತ್ತೆಯಿಟ್ಟಾದರೂ ತಕ್ಕ ಪರಿಹಾರ ಕೊಡಿಸುತ್ತೇನೆ. ಹೇಳು’.
ಕ್ಷೌರಿಕ ಬಾಯ್ತೆಗೆಯುವುದಕ್ಕೆ ಮುಂಚೆ ಅವಳು ಮಾತಾಡಿದಳು. ‘ಬೇಡ ದೊರೆ. ಮಾತು ಕೊಡಬೇಡ. ಆಮೇಲೆ ತುಂಬಾ ಕಳೆದುಕೊಳ್ಳಬೇಕಾಗುತ್ತದೆ’.
ಅವಳಾಡಿದ ಮಾತು ಕ್ಷೌರಿಕನಿಗೆ ಕೇಳಲಿಲ್ಲ. ಮಹಾರಾಜನಿಗಷ್ಟೇ ಕೇಳಿಸಿತು. ಅವನು ಅಚ್ಚರಿಯಿಂದ ತಿರುಗಿ ನೋಡಬೇಕು ಅಂದುಕೊಂಡ. ಆದರೆ ಕತ್ತು ಕ್ಷೌರಿಕನ ಕೈಯಲ್ಲಿತ್ತು. ಅಲ್ಲಾಡುವ ಹಾಗಿರಲಿಲ್ಲ. ಹೀಗಾಗಿ ಅವಳು ಯಾರೆಂದು ನೋಡುವುದಕ್ಕಾಗದೇ ಅವನು ಕೇಳಿದ ಯಾರು ನೀನು, ಯಾಕೆ ಮಾತು ಕೊಡಬೇಡ ಅನ್ನುತ್ತಿದ್ದಿ. ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಹೇಡಿಯಲ್ಲ ನಾನು. ನನ್ನ ಸಂಪತ್ತು, ಶೌರ್ಯ, ಸಾಮರ್ಥ್ಯಗಳ ಮೇಲೆ ಯಾರಿಗೂ ಅನುಮಾನ ಇಲ್ಲ. ನಿನಗಿದೆಯಾ?’
ಆಕೆ ನಕ್ಕಳು. ಮಹಾರಾಜನಿಗೆ ಮಾತ್ರ ಅದು ಕೇಳಿಸಿತು. ನಗು ಮುಗಿಯುತ್ತಿದ್ದಂತೆ ಉತ್ತರ ಬಂತು.‘ದೊರೆ, ನೀನು ನಾಡನ್ನಾಳಬಲ್ಲೆ, ದೇಶವನ್ನಾಳಬಲ್ಲೆ, ಭೂಮಂಡಲವನ್ನೇ ಆಳಬಲ್ಲೆ. ಆದರೆ ಮನಸ್ಸನ್ನು ಪ್ರತಿಬಂಽಸಲಾರೆ. ಯೋಚನೆಗಳನ್ನು ನಿರ್ಬಂಽಸಲಾರೆ. ನೀನು ಆಳುವ ಜಗತ್ತನ್ನು ಯಾರು ಬೇಕಾದರೂ ಆಳಬಲ್ಲರು. ಅದಕ್ಕೆ ಬೇಕಾಗಿರುವುದು ಹುಂಬತನ, e, ಅಮಾನವೀಯತೆ ಮತ್ತು ದರ್ಪ. ನಾನು ಆಳುತ್ತಿದ್ದೇನೆ ಅನ್ನುವುದು ನಿನ್ನ ಭ್ರಮೆ. ಪ್ರಜೆಗಳು ದುಡಿಯುತ್ತಿದ್ದಾರೆ. ಪ್ರಜೆಗಳು ತಿನ್ನುತ್ತಿದ್ದಾರೆ. ಮದುವೆಯಾಗುತ್ತಾರೆ, ಮಕ್ಕಳನ್ನು ಹೆರುತ್ತಾರೆ. ಆ ಮಕ್ಕಳಿಗೋಸ್ಕರ ಮತ್ತಷ್ಟು ದುಡಿಯುತ್ತಾರೆ. ಕಣ್ಮುಂದೆ ಬಿದ್ದಿರುವ ಭೂಮಿಯನ್ನು ದುಡ್ಡುಕೊಟ್ಟು ಕೊಳ್ಳುತ್ತಾರೆ. ಅದಕ್ಕೆ ಬೇಲಿ ಹಾಕಿ ತಮ್ಮದು ಅನ್ನುತ್ತಾರೆ. ನೀನು ಅವರನ್ನು ಶ್ರೀಮಂತರನ್ನಾಗಿ ಮಾಡಬಲ್ಲೆ. ಅದಕ್ಕೇ ಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಲ್ಲೆ.’
ಮಹಾರಾಜನಿಗೆ ನಗು ಬಂತು. ಈಕೆ ಯಾರೋ ಮೂರ್ಖಳಂತೆ ಮಾತಾಡುತ್ತಿದ್ದಾಳೆ ಅಂದುಕೊಂಡ. ಅವಳಿಗೆ ರಾಜನೀತಿಯ ಪಾಠ ಕಲಿಸುವುದಾದರೂ ಹೇಗೆ? ಉತ್ತರ ಕೊಡದಿರುವುದೇ ಒಳ್ಳೆಯದು ಅಂದುಕೊಂಡು ಸುಮ್ಮನಾದ. ಕ್ಷೌರಿಕ ತನ್ನ ಕೆಲಸ ಮುಂದುವರಿಸಿದ್ದ. ಮಹಾರಾಜ ಗಂಭೀರವಾಗಿ ಹೇಳಿದ. ‘ಶ್ರಮಕ್ಕೆ ತಕ್ಕ ಪ್ರತಿ-ಲ ಸಿಗುವಂತೆ ಮಾಡುವವನು ಮಹಾರಾಜ. ಅವನ ಕೆಲಸ ಅಷ್ಟೇ. ಆ ಪ್ರತಿ-ಲದ ಸುಖ ಶ್ರಮಿಕನ ಕಣ್ಣಲ್ಲಿ ಪ್ರತಿ-ಲಿಸುತ್ತದೆ. ರೈತ ಗದ್ದೆ ಉಳುತ್ತಾನೆ, ಬಿತ್ತುತ್ತಾನೆ. ಬೆಳೆ ಬರುತ್ತದೆ. ಅದೇ ಅಲ್ಲವೇ ಜಗತ್ತು?’
ಮತ್ತೆ ಅವಳು ನಕ್ಕಳು. ‘ಶ್ರಮದ ಪ್ರತಿ-. ಪ್ರತಿ-ಲದ ಸುಖ. ಒಂದಕ್ಕೊಂದು ಸಂಬಂಧವೇ ಇಲ್ಲ. ರೈತ ಬಿತ್ತುತ್ತಾನೆ, ಬೆಳೆಯುತ್ತಾನೆ. ಮತ್ತೆ ಬಿತ್ತುತ್ತಾನೆ. ಮತ್ತೆ -ಸಲು ಬರುತ್ತದೆ. ಈ ಚಕ್ರ ಸುತ್ತುತ್ತಲೇ ಇರುತ್ತದೆ. ನಿನ್ನದೇನು ಪಾಲಿದೆ ಅದರಲ್ಲಿ. ಮಣ್ಣು ನಿನ್ನದಲ್ಲ, ಬೀಜ ನಿನ್ನದಲ್ಲ. ಯಾವ ದೇಶದಲ್ಲಿ ಬಿತ್ತಿದರೂ ಬೆಳೆ ಬಂದೇ ಬರುತ್ತದೆ. ಅದಕ್ಕೆ ದೊರೆ ಯಾಕೆ ಬೇಕು?’
ಮಹಾರಾಜನಿಗೆ ಕಸಿವಿಸಿಯಾಯಿತು. ಅವಳು ಕೇಳುತ್ತಿರುವುದರಲ್ಲೂ ಅರ್ಥವಿದೆ. ಏಕಕಾಲಕ್ಕೆ ಇಬ್ಬರು ಅತೃಪ್ತರು. ತನ್ನ ಆಡಳಿತದ ಬಗ್ಗೆ ಅವಳಿಗೂ ಖುಷಿಯಿಲ್ಲ. ಕ್ಷೌರಿಕನಿಗೂ ತೃಪ್ತಿಯಿದ್ದಂತಿಲ್ಲ. ಹಾಗಿದ್ದರೆ ಎಲ್ಲೋ ಏನೋ ತಪ್ಪಾಗಿರಲೇಬೇಕು. ಅದನ್ನು ಸರಿ ಮಾಡಿಕೊಳ್ಳುವುದು ನನ್ನ ಕರ್ತವ್ಯ ಎಂದು ಮನಸ್ಸಿನಲ್ಲೇ ನಿರ್ಧರಿಸಿದ ಮಹಾರಾಜ ಮತ್ತೆ ಅವಳನ್ನು ಕೇಳಿದ.
ನಿನ್ನ ಮಾತಿನ ಅರ್ಥವೇನು?’
ಅವಳು ಮಗದೊಮ್ಮೆ ನಕ್ಕಳು. ಆ ನಗುವಿನಲ್ಲಿ ಅವನಿಗೆ ಪ್ರಶ್ನೆಗಳು ಕಾಣಿಸಿದವು. ತನ್ನ ಅಸ್ತಿತ್ವವನ್ನೇ ಅವಳು ಅಲ್ಲಾಡಿಸುತ್ತಿದ್ದಾಳೆ ಎಂಬಂತೆ ಭಾಸವಾಯಿತು. ಅವಳೆಡೆಗೆ ತಿರುಗಿ ನೋಡಿದ. ಅಲ್ಲಿ ಯಾರೂ ಇರಲಿಲ್ಲ. ಬರೀ ದನಿಯಷ್ಟೇ ಬರುತ್ತಿತ್ತು. ಗಿಳಿಯೊಂದು ಹಾರಿ ಅವನ ಎಡದಿಕ್ಕಲ್ಲಿ ಕೂತಿತು.
ನಿನಗೆ ಏಕಾಂತದಲ್ಲಿ ನಂಬಿಕೆ ಇದೆಯಾ? ’ ಅವಳು ಕೇಳಿದಳು. ‘ನಿನ್ನ ಪ್ರಜೆಗಳು ನಿನ್ನವರಲ್ಲ, ನಿನ್ನ ರಾಜ್ಯ ನಿನ್ನದಲ್ಲ. ನಿನ್ನ ಸಂಪತ್ತು ನಿನ್ನದಲ್ಲ. ಮೂರ್ಖನಿಗೆ ಯಾತನೆಗಳಿರುವುದಿಲ್ಲ. ಹುಂಬನಿಗೆ ಪ್ರಶ್ನೆಗಳಿರುವುದಿಲ್ಲ. ದಡ್ಡನಿಗೆ ಅನುಮಾನಗಳಿರುವುದಿಲ್ಲ. ನೀನು ಈ ಕೋಟೆ ನಿನ್ನನ್ನು ರಕ್ಷಿಸುತ್ತದೆ ಎಂದು ನಂಬಿದವನು. ನಾನು ಪ್ರಜೆಗಳನ್ನು ಸಂತೋಷವಾಗಿಟ್ಟಿದ್ದೇನೆ ಎಂದುಕೊಂಡಿರುವವನು. ನೀನು ಕೊಡುವುದಕ್ಕೂ ಅವರು ಪಡೆಯುವುದಕ್ಕೂ ಸಂಬಂಧವೇ ಇಲ್ಲ. ನೀನು ಯಾವತ್ತಾದರೂ ನಿನ್ನ ಮೊದಲನೇ ರಾಣಿಯ ಜೊತೆ ಸುಖಿಸಿದ್ದೀಯಾ? ಪ್ರೇಮದಲ್ಲಿ ನೀನು ಕೊಡುವುದೇ ಬೇರೆ, ಅವಳು ಪಡಕೊಳ್ಳುವುದೇ ಬೇರೆ. ನೀನು ಕೊಟ್ಟಷ್ಟೂ ಅವಳಿಗೆ ದಕ್ಕಿರೋದಿಲ್ಲ. ಅವಳಿಗೆ ದಕ್ಕಿದ್ದನ್ನು ನೀನು ಕೊಟ್ಟಿರುವುದಿಲ್ಲ. ಈ ಸಾಮ್ರಾಜ್ಯವನ್ನು ಮೀರಿದ, ಯಾರ ಅಳವಿಗೂ ಸಿಗದ, ಯಾರೂ ಬೇಲಿ ಹಾಕಲಾರದ ಮತ್ತೊಂದು ಲೋಕ ಪ್ರತಿಯೊಬ್ಬರೊಳಗೂ ಇದೆ. ನೀನು ಕೊಟ್ಟಿರೋ ಅಲ್ಪಸುಖವನ್ನು ಅನುಭವಿಸುತ್ತಾ ಅವರೆಲ್ಲ  ಆ ಮಹತ್ತರ ಸುಖದಿಂದ ವಂಚಿತರಾಗುತ್ತಿದ್ದಾರೆ. ನೀನು ಅವರಿಗೆ ಮೋಸ ಮಾಡುತ್ತಿದ್ದೀಯ.’
ಮಹಾರಾಜ ನೋಡುತ್ತಿದ್ದಂತೆ ಗಿಳಿ ಹಾರಿಹೋಯಿತು. ಗವಾಕ್ಷಿಯ ಮೂಲಕ ಹೊರಗೆ ಹೋಗಿದ್ದನ್ನು ಮಾಹರಾಜ ನೋಡಿದ. ಅವಳು ಹೇಳಿದ ಮಾತು ಒಂದಿಷ್ಟೂ ಅರ್ಥವಾಗಿರಲಿಲ್ಲ. ಕ್ಷೌರಿಕ ಮಹಾರಾಜನ ಗಡ್ಡಕ್ಕೆ ಕೈ ಹಾಕಿದ. ಹರಿತವಾದ ಅಲಗಿನಿಂದ ಕ್ಷೌರ ಶುರು ಮಾಡಿದ. ಮಹಾರಾಜನತ್ತ ತಿರುಗಿ ಹೇಳಲೇಎಂದು ಕೇಳಿದ. ಮಹಾರಾಜ ಹೇಳು ಅಂತ ತಲೆಯಾಡಿಸಿದ.
ನಮ್ಮ ರಾಜ್ಯದ ಹೆಣ್ಣೊಬ್ಬಳು ನನ್ನ ಮುಂದೆ ಒಂದು ಬೇಡಿಕೆ ಇಟ್ಟಿದ್ದಾಳೆ. ಅವಳಿಗೆ ಗಂಡನ ಜೊತೆಗಿನ ಬಾಳು ಸಾಕಾಗಿದೆಯಂತೆ. ನನ್ನ ಸಂಸರ್ಗ, ಸನಿಹ, ಸಾಂಗತ್ಯ ಅವಳಿಗೆ ಬೇಕಂತೆ. ಈ ರಾಜ್ಯದಲ್ಲಿ ಯಾರು ಏನು ಕೇಳಿದರೂ ಇಲ್ಲ ಎನ್ನಬಾರದು ಎಂದು ತಾವೇ ನಿಯಮ ಮಾಡಿದ್ದೀರಿ. ಈಗೇನು ಮಾಡಲಿ. ಇದರಿಂದ ನಾನೂ ಬೇಸರದಲ್ಲಿದ್ದೇನೆ. ಅವಳು ನೊಂದಿದ್ದಾಳೆ’.
ಮಹಾರಾಜನಿಗೆ ಅವಳು ಹೇಳಿದ ಮಾತು ಅರ್ಥವಾಗುತ್ತಿದೆ ಅನ್ನಿಸಿತುಎಲ್ಲ ನಿಯಮಗಳೂ ಸುಳ್ಳಾಗುವ, ಎಲ್ಲಾ ಕಾನೂನುಗಳೂ ಪೊಳ್ಳಾಗುವ, ಎಲ್ಲ ನಿರ್ಧಾರಗಳೂ ಜೊಳ್ಳಾಗುವ ಮತ್ತೊಂದು ಜಗತ್ತು ಇದೆ ಹಾಗಿದ್ದರೆ. ಅದನ್ನು ತಾನು ಆಳಬಲ್ಲೆನೇ? ಗೆಲ್ಲಬಲ್ಲೆನೇ? ಆ ಜಗತ್ತು ತನ್ನೊಳಗಿದೆಯೋ ಪ್ರಜೆಗಳ ಒಳಗಿದೆಯೋ?
ನೀನೇನು ಹೇಳಿದೆ?’
ಮಹಾಪ್ರಭುಗಳ ಬಳಿ ಮಾತಾಡುತ್ತೇನೆ ಎಂದು ಹೇಳಿದೆ. ಅವಳ ಆಸೆ ಇಷ್ಟೇ. ನಾನು ಅವಳ ಗಂಡನನ್ನು ಸಾಯಿಸಬೇಕು. ಅವಳನ್ನು ಜೊತೆಗಿಟ್ಟುಕೊಳ್ಳಬೇಕು. ಅವಳಿಗೆ ಆಗಲೇ ಸಂತೋಷ. ಅದನ್ನು ಅವಳು ಅತ್ಯಂತ ದೈನ್ಯದಿಂದ ಕೇಳಿಕೊಂಡಿದ್ದಾಳೆ. ನಾನೇನು ಮಾಡಲಿ?’
ಇದು ಸಂದಿಗ್ಧ ಪರಿಸ್ಥಿತಿ ಅನ್ನಿಸಿತು. ಮಹಾರಾಜನ ಬಳಿಯೇ ಕೊಲೆ ಮಾಡಲು ಅನುಮತಿ ಕೇಳುತ್ತಿದ್ದಾನೆ. ಈ ತಪ್ಪಿಗೆ ಅವನನ್ನು ಗಲ್ಲಿಗೇರಿಸಬೇಕು. ಆದರೆ ಮಾತು ಕೊಟ್ಟಾಗಿದೆ.’
ತುಂಬ ಹಿಂಸೆ, ಕ್ರೂರಗಂಡನನ್ನು ಕೊಲ್ಲುವುದು ಕೌರ್ಯವೋ, ಆ ಹೆಣ್ಣಿನ ಆಸೆಯನ್ನು ಹತ್ತಿಕ್ಕುವುದು ಕ್ರೌರ್ಯವೋ? ನಾನೀಗ ಏನು ಮಾಡಲಿ ಹೇಳಿ ಪ್ರಭೂ.’
ಮಹಾರಾಜನಿಗೆ ಅವಳು ಗಿಳಿಯಾಗಿ ಹಾರಿಹೋಗುವ ಮುನ್ನ ಆಡಿದ ಮಾತುಗಳು ನೆನಪಾದವು. ಎಲ್ಲ ಮಿತಿಮೀರುತ್ತಿದೆ ಅನ್ನಿಸಿತು. ಜೋರಾಗಿ ಉಸಿರೆಳೆದುಕೊಂಡು ಗಂಡನನ್ನು ಕೊಂದುಬಿಡು. ಅದರ ಪಾಪದ ಹೊಣೆ ನನ್ನದು. ಅಷ್ಟಕ್ಕೂ ಆ ಹೆಣ್ಣು ಯಾರೆಂದು ಹೇಳಿಬಿಡುಅಂದ.
ಎಳಕೊಂಡ ಉಸಿರು ಬಿಡುವ ಮೊದಲು ಕ್ಷೌರಿಕನ ಕತ್ತಿ ಮಹಾರಾಜನ ಕೊರಳನ್ನು ಕತ್ತರಿಸಿತು. ಕತ್ತಲು ಕವಿಯುವ ಮುನ್ನ ಕ್ಷೌರಿಕ ಹೇಳಿದ್ದು ಕೇಳಿಸಿತು.  ‘ಮಹಾರಾಣಿ ಪ್ರಭೂ. ಆ ಹೆಣ್ಣು ಮಹಾರಾಣಿ

Sunday, May 20, 2012

ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲಅವನು ರಾಕ್ಷಸ.ಒಂದು ಕಾಲದಲ್ಲಿ ಅವನು ಗಂಧರ್ವ. ಯಾವುದೋ ತಪ್ಪಿಗಾಗಿ ಶಾಪಗ್ರಸ್ತ. ಅವನನ್ನು ರಾಕ್ಷಸನಾಗು ಎಂದು ಶಪಿಸಿದ್ದು ಒಬ್ಬಳು ಗಂಧರ್ವ ಕನ್ನಿಕೆ. ಅವಳನ್ನು ಆತ ಮೋಹಿಸಿದ್ದ. ಅವಳನ್ನು ಮುಟ್ಟಲು ಹೋಗಿದ್ದ. ನನ್ನೊಡನೆ ರಾಕ್ಷಸನಂತೆ ವರ್ತಿಸಿದ್ದಕ್ಕಾಗಿ ನಿನಗಿದು ಶಾಪ ಎಂದು ಸಿಟ್ಟಿನಿಂದ ಹೇಳಿ, ನೀನು ರಾಕ್ಷಸನಾಗಿ ಭೂಮಿಯಲ್ಲಿ ಹುಟ್ಟು ಎಂದಾಕೆ ಶಾಪ ಕೊಟ್ಟಿದ್ದಳು.
ತಪ್ಪಾಯಿತು ಬಿಟ್ಟು ಬಿಡು ಅಂತ ಅವನೇನೂ ಬೇಡಿಕೊಳ್ಳಲಿಲ್ಲ. ಗಂಧರ್ವನಾಗಿದ್ದು ಅವನಿಗೂ ಸಾಕಾಗಿತ್ತು. ತುಂಬ ಒಳ್ಳೆಯತನ ಸಹಜವಲ್ಲ ಅನ್ನುವುದು ಅವನಿಗೂ ಅರ್ಥವಾಗತೊಡಗಿತ್ತು. ಗಂಧರ್ವಲೋಕ ಮನುಷ್ಯರಿಗೆ ಸುಂದರ. ಅಲ್ಲಿ ಎಲ್ಲರೂ ಒಳ್ಳೆಯವರೇ. ಹಸಿವಿಲ್ಲ, ನಿದ್ದೆಯ ಹಂಗಿಲ್ಲ. ಕಣ್ಣೆದುರು ಅನಂತವಾಗಿ ಬಿದ್ದ ಕಾಲ. ಸಾವಿಲ್ಲದ, ಮರುಹುಟ್ಟಿನ ಆಸೆಯೂ ಇಲ್ಲದ ನಿರಂತರ ಜೀವನ. ಪಾಪವೂ ಇಲ್ಲ, ಪುಣ್ಯವೂ ಇಲ್ಲ, ಅವೆರಡಕ್ಕೆ ಕಾರಣವಾಗುವ ಕ್ರಿಯೆಯೇ ಇಲ್ಲ.
ಆ ಗಂಧರ್ವ ಭಗವದ್ಗೀತೆ ಓದಿದ್ದ. ಅರ್ಜುನನ ವಿಷಾದ, ಕೃಷ್ಣನ ಸಾಂತ್ವನ ಕೇಳಿಸಿಕೊಂಡಿದ್ದ. ಅವನು ಯಾವತ್ತೂ ಸಿಟ್ಟು ಮಾಡಿಕೊಂಡಿರಲಿಲ್ಲ. ಸಿಟ್ಟಾಗುವುದು ಅಂದರೇನು ಅನ್ನುವುದೂ ಗೊತ್ತಿರಲಿಲ್ಲ. ಭೂಮಿಯ ಮೇಲೆ ಸುತ್ತಾಡುವಾಗೆಲ್ಲ ಅಲ್ಲಿ ಜನ ಸಿಟ್ಟಿನಿಂದ ಕಿರುಚಾಡುವುದು, ಪ್ರೇಮಿಸುವುದು, ಕಾಮಿಸುವುದು, ಜಗಳ ಆಡುವುದು, ಹೊಟ್ಟೆಕಿಚ್ಟಿನಿಂದ ಶಾಪ ಹಾಕುವುದು ನೋಡಿದ್ದ.
ಆ ಜಗತ್ತಿಗೂ ಈ ಜಗತ್ತಿಗೂ ಇರುವ ವ್ಯತ್ಯಾಸ ಅವನಿಗೆ ಅರ್ಥವಾಗತೊಡಗಿತ್ತು. ಮಂದಿ ಸುಳ್ಳೇ ಸುಳ್ಳೇ ಹಾಗೆಲ್ಲ ಆಡುತ್ತಿದ್ದಾರೆ ಅನ್ನಿಸುತ್ತಿತ್ತು. ಅದೆಲ್ಲ ಒಂದು ನಾಟಕದಂತೆ ಭಾಸವಾಗುತ್ತಿತ್ತು. ಕುಡಿದು ಬಂದ ಗಂಡ, ಹೆಂಡತಿಗೆ ಹಿಗ್ಗಾಮುಗ್ಗಾ ಬಾರಿಸುತ್ತಿದ್ದ. ನೀನು ನೆಗೆದುಬಿದ್ದು ಸಾಯ ಎಂದು ಅವಳು ಬೈಯುತ್ತಿದ್ದಳು. ಅವಳು ಪತಿವ್ರತೆಯೇ ಆಗಿದ್ದಲ್ಲಿ ಅವನು ಸತ್ತು ಹೋಗುತ್ತಾನಲ್ಲ ಅಂತ ಇವನಿಗೆ ಗಾಬರಿ ಆಗುತ್ತಿತ್ತು. ಅಂಥದ್ದೇನೂ ನಡೆಯುತ್ತಿರಲಿಲ್ಲ. ಅವಳು ಅವನನ್ನು ಕೂಡಿ ಮಕ್ಕಳು ಹುಟ್ಟುತ್ತಿದ್ದವು. ಆ ಮಕ್ಕಳನ್ನೇ ಅವರಿಬ್ಬರೂ ಯಾಕಾದ್ರೋ ಹುಟ್ಟಿದ್ರೋ ಎಂದು ಬೈಯುತ್ತಿದ್ದರು.
ಇದನ್ನೆಲ್ಲ ನೋಡುತ್ತಿದ್ದ ಗಂಧರ್ವನಿಗೆ ಸಹವಾಸ ದೋಷದಿಂದಲೋ ಏನೋ ಸಿಟ್ಟು ಬರಲು ಶುರುವಾಯಿತು. ತನ್ನ ಸುತ್ತಲಿನವರೆಲ್ಲ ಬಸಳೆಸೊಪ್ಪಿನಂತೆ ಕಾಣತೊಡಗಿದರು. ಗಂಧರ್ವರ ದೊರೆ  ಅಮೃತಬಳ್ಳಿಯಂತೆ ಕಾಣಿಸಿದ, ಅವನ ಹೆಂಡತಿ ಅಲಂಕಾರ ಮಾಡಿಕೊಂಡು ಕೇದಗೆಹೂವಿನ ಸುವಾಸನೆಯಂತೆ ನಿಧಾನ ಚಲಿಸುತ್ತಿದ್ದಳು. ಅವಳನ್ನು ಗಂಧರ್ವರ ದೊರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅವರ ಸಂಖ್ಯೆ ಜಾಸ್ತಿಯಾಗುತ್ತಲೂ ಇರಲಿಲ್ಲ, ಕಡಿಮೆಯಾಗುತ್ತಲೂ ಇರಲಿಲ್ಲ. ಎಲ್ಲಾ ಒಂದೇ ಥರಹದ ಮುಖಗಳು, ಬದಲಾಗದ ವಯಸ್ಸು, ತಾಯ್ತನವಿಲ್ಲದ ಹೆಣ್ಣುಗಳು, ಅಪ್ಪನಾಗುವ ಹೆಮ್ಮೆಗೆ ಅವಕಾಶವೇ ಇಲ್ಲದ ಗಂಡಸರು.
ಗಂಧರ್ವ ಸಿಟ್ಟು ಬಂದು ಅದೇ ವಿಕಾರದಲ್ಲಿ ಹೋಗಿ ಅವಳನ್ನು ತಬ್ಬಿಕೊಂಡಿದ್ದ. ಅಂಥ ಬಿರುಸನ್ನು ಅವಳು ಯಾವತ್ತೂ ಕಂಡಿರಲಿಲ್ಲ. ವಿನಯದಿಂದ ಜತೆಗಿರೋಣ ಬಾ ಅಂದಿದ್ದರೆ ಅವಳೇನೂ ನಿರಾಕರಿಸುತ್ತಿರಲಿಲ್ಲ. ಅವನು ತನ್ನ ಮೇಲೆ ದಬ್ಬಾಳಿಕೆ ನಡೆಸುವುದಕ್ಕೆ ಬಂದಿದ್ದಾನೆ, ರಾಕ್ಷಸರ ಥರ ವರ್ತಿಸುತ್ತಿದ್ದಾನೆ ಅನ್ನಿಸಿದ್ದೇ ತಡ ಅವಳಿಗೂ ಸಿಟ್ಟು ಬಂತು. ಶಾಪ ಕೊಟ್ಟೇ ಬಿಟ್ಟಳು.
ಭೂಮಿಯಲ್ಲಿ ಯಾರೋ ಯಾರನ್ನೋ ರಾಕ್ಷಸ ಅಂತ ಬೈಯುತ್ತಿದ್ದರು. ಸುಂದರಿಯನ್ನು ನೋಡಿದವನೊಬ್ಬ ಗಂಧರ್ವಗಾನವಾಣಿ ಎಂದು ಹೊಗಳುತ್ತಿದ್ದ. ಇಂಥ ಯದ್ವಾತದ್ವಾ ಜಗತ್ತಿನಲ್ಲಿ ಒಂಥರಾ ಮಜಾ ಸಿಗತೊಡಗಿತು ಅವನಿಗೆ. ಅವನನ್ನು ಕಂಡರೆ ಜನ ಹೆದರುತ್ತಿದ್ದರು. ಕೈ ಮುಗಿಯುತ್ತಿದ್ದರು. ಗಂಧರ್ವರ ರಾಜನಿಗೇ ಯಾರೂ ನಮಸ್ಕರಿಸಿದ್ದನ್ನು ಅವನು ನೋಡಿರಲಿಲ್ಲ. ಹೀಗಾಗಿ ಸುಮ್ಮನೆ ಯಾರನ್ನೋ ಹೆದರಿಸುತ್ತಾ, ತಮಾಷೆ ನೋಡುತ್ತಾ ರಾಕ್ಷಸ ತುಂಬ ದಿನ ಭೂಮಿಯಲ್ಲೇ ಸುಖವಾಗಿದ್ದ.

-2-
ಅತ್ತ ಗಂಧರ್ವನನ್ನು ಶಪಿಸಿದ ನಂತರ ಆಕೆಗೆ ತಾನು ಹಾಗೆ ಮಾಡಬಾರದಿತ್ತು ಅನ್ನಿಸಿತು. ಆಕೆಗೂ ಗಂಧರ್ವಲೋಕದ ನಯನಾಜೂಕುಗಳು ಬೋರು ಹೊಡೆಸಿದ್ದವು. ತನ್ನನ್ನು ರಾಕ್ಷಸನಂತೆ ಸಮೀಪಿಸಿದ ಒರಟಾಗಿ ಅಪ್ಪಿದ ಗಂಧರ್ವನನ್ನು ಆಕೆ ಹುಡುಕಿಕೊಂಡು ತಿರುಗಾಡಿದಳು. ಅವನಾಗಲೇ ಭೂಲೋಕಕ್ಕೆ ಹೋಗಿದ್ದ.  ಅವಳಿಗೂ ಭೂಲೋಕಕ್ಕೆ ಹೋಗಿ ಅವನನ್ನು ಭೇಟಿ ಮಾಡಿ ಕ್ಷಮೆ ಕೇಳಬೇಕು ಅನ್ನಿಸಿತು. ಅವಳು ಭೂಲೋಕಕ್ಕೆ ಹೋಗುವ ಹಾಗಿರಲಿಲ್ಲ. ಒಂದು ವೇಳೆ ಹೋದರೆ ಅಲ್ಲೇ  ಹದಿನಾರು ವರುಷ ಕಳೆಯಬೇಕಿತ್ತು. ಗಂಧರ್ವ ಕನ್ನಿಕೆಯರು ಬೇಕು ಬೇಕಾದಾಗೆಲ್ಲ ಭೂಮಿಗೆ ಹೋಗಿ ಅಲ್ಲಿರುವ ಮಹಾರಾಜರನ್ನು ಆಕರ್ಷಿಸಿ, ಅವರಿಗೆ ಮಕ್ಕಳನ್ನು ಹೆತ್ತುಕೊಟ್ಟು ಮರಳುವುದನ್ನು ನೋಡಿದ ಗಂಧರ್ವ ರಾಜ ಹಾಗೊಂದು ನಿಯಮ ಮಾಡಿಬಿಟ್ಟಿದ್ದ.
ಗಂಧರ್ವಲೋಕದಿಂದ ನೋಡಿದಾಗ ತಾನು ಶಪಿಸಿದ ಗಂಧರ್ವ ಎಲ್ಲೂ ಕಾಣಿಸಲಿಲ್ಲ. ಅವನನ್ನು ಗುರುತು ಹಿಡಿಯುವುದೂ ಕಷ್ಟವೆಂದು ಅವಳಿಗೆ ಗೊತ್ತಿತ್ತು. ಅವನ ರಾಕ್ಷಸ ರೂಪಲ್ಲಿ ಅಲೆದಾಡುತ್ತಿರುವುದರಿಂದ ಅವನನ್ನು ನೋಡದೇ ಮಾತಾಡದೇ ಪತ್ತೆ ಮಾಡುವುದು ಸಾಧ್ಯವೇ ಇಲ್ಲ ಅನ್ನುವುದೂ ಅರ್ಥವಾಗಿತ್ತು. ಅವನ ಚಿಂತೆ ಬಿಟ್ಟು ಬಿಡುವುದೇ ವಾಸಿ ಅನ್ನಿಸಿ, ತನ್ನ ಲೋಕದಲ್ಲೇ ಇದ್ದ ಗಂಧರ್ವರ ಹಿಂದೆ ಕೆಲವು ದಿನ ಸುತ್ತಾಡಿದಳು. ಸುಖಿಸಿದಳು. ಅವನ ಸ್ಪರ್ಶದ ಮುಂದೆ ಅವರ ಮೃದುಮಧುರ ಸಲ್ಲಾಪಗಳು ಸಪ್ಪೆ ಅನ್ನಿಸಿದವು. ಯಾರೂ ತನಗಾಗಿ ಹಂಬಲಿಸುತ್ತಿಲ್ಲ ಅನ್ನಿಸಿತು. ಎಲ್ಲರಿಗೂ ಅದೊಂದು ಯಾಂತ್ರಿಕ ಕ್ರಿಯೆ. ಪ್ರೀತಿಯೇ ಬೇಕಿಲ್ಲ ಅಲ್ಲಿ. ಪ್ರೀತಿಸದೇ ಹೋದರೂ ದಕ್ಕುತ್ತಾರೆ ಎಂದು ಗಂಧರ್ವರೆಲ್ಲ ನಿರ್ಲಿಪ್ತರೂ ಅನ್ಯಮನಸ್ಕರೂ ಆಗಿದ್ದರು. ಅದರಿಂದ ಆಕೆಗೆ ಪಾರಾಗಲೇ ಬೇಕಿತ್ತು.
ಕೊನೆಗೆ, ಏನಾದರಾಗಲಿ ಎಂದುಕೊಂಡು ಗಂಧರ್ವಕನ್ನಿಕೆ ಭೂಮಿಗೆ ಹೋಗಲು ನಿರ್ಧಾರ ಮಾಡಿದಳು. ಹದಿನಾರು ವರ್ಷ ಕಳೆಯುವುದೇನೂ ಕಷ್ಚವಲ್ಲ. ರಾಕ್ಷಸ ಸಿಕ್ಕರೆ ಅವನ ಜೊತೆಗೇ ಸಂಸಾರ ಮಾಡುವುದು, ಇಲ್ಲದಿದ್ದರೆ ಅವನಿಗಾಗಿ ಹುಡುಕಿಕೊಂಡು ಅಲೆಯುವುದು ಎಂದು ತೀರ್ಮಾನ ಮಾಡಿ ಭೂಮಿಗೆ ಜಿಗಿದೇ ಬಿಟ್ಟಳು.
-3-
ಎಷ್ಟೋ ತಿಂಗಳು, ಎಷ್ಟೋ ದಿನ, ಎಷ್ಟೋ ವರ್ಷ ಅವಳು ಅವನಿಗಾಗಿ ಹುಡುಕಿಕೊಂಡು ಅಲೆದಳು. ಅವನ ಸ್ಪರ್ಶ ಮಾತ್ರ ಅವಳಿಗೆ ಪರಿಚಿತವಿತ್ತು. ಹೀಗಾಗಿ ಅವಳು ಅವನನ್ನು ಹುಡುಕುವ ಹಾದಿಯಲ್ಲಿ ಅನೇಕ ರಾಕ್ಷಸರನ್ನು ಸ್ಪರ್ಶಿಸಬೇಕಾಗಿ ಬಂತು. ರಾಕ್ಷಸರ ಸಂಖ್ಯೆಯೋ ಸಾವಿರಾರು. ಒಂದು ದೇಶಕ್ಕೆ ಹೋಗುವುದು. ಅಲ್ಲಿರುವ ರಾಕ್ಷಸನ ಜೊತೆ ಒಂದಷ್ಟು ಹೊತ್ತು ಕಳೆಯುವುದು. ಅವನ ಸ್ಪರ್ಶಕ್ಕೆ ನಲುಗುವುದು. ಇವನಲ್ಲ ಎಂದುಕೊಂಡು ಮತ್ತೆ ಹುಡುಕಾಡುವುದು. ಹೀಗೆ ಅವಳ ಪ್ರಯಾಣ ಸಾಗಿತ್ತು.
ಆರೇಳು ವರ್ಷಗಳಲ್ಲಿ ಅವಳು ಭೂಲೋಕದಲ್ಲಿರುವ ಎಲ್ಲಾ ರಾಕ್ಷಸರನ್ನೂ ಸ್ಪರ್ಶಿಸಿಬಿಟ್ಟಿದ್ದಳು. ಅವನು ಸಿಕ್ಕಿರಲಿಲ್ಲ.  ಒಂದು ರಾತ್ರಿ ಯೋಚಿಸುತ್ತಾ ಕುಳಿತ ಅವಳಿಗೊಂದು ಅನುಮಾನ ಶುರುವಾಯಿತು. ತಾನು ಆ ತನ್ನ ಪ್ರೀತಿಯ ರಾಕ್ಷಸನ ಸ್ಪರ್ಶವನ್ನು ಮರೆತೇಬಿಟ್ಟಿದ್ದೇನಾ. ನಿಜವಾಗಿಯೂ ಅವನ ಸ್ಪರ್ಶ ಹೇಗಿತ್ತು. ಸಾವಿರಾರು ರಾಕ್ಷಸರನ್ನು ಮುಟ್ಟಿ ತಡವಿದ ತನ್ನ ಮೈಮನಗಳು ಆ ಸ್ಪರ್ಶವನ್ನು ಗುರುತಿಸುವಲ್ಲಿ ಸೋತಿದೆಯಾ? ಅಷ್ಟಕ್ಕೂ ಅವನ ಸ್ಪರ್ಶ ಹೇಗಿತ್ತು. ಎಲ್ಲಾ ರಾಕ್ಷಸರ ಸ್ಪರ್ಶವೂ ಒಂದೇ ಥರ ಇರುತ್ತದಾ.
ಇದಕ್ಕೆ ಬೇರೇನಾದರೂ ಮಾಡಬೇಕು ಅಂದುಕೊಂಡು ಆಕೆ ಮತ್ತೊಂದು ಉಪಾಯ ಹುಡುಕಿದಳು. ತಾನು ಶಪಿಸಿದ ರಾಕ್ಷಸನಿಗೊಂದು ಉಃಶಾಪ ಕೊಡುವುದು. ನಿನ್ನನ್ನು ನಾನು ಪ್ರೀತಿಯಿಂದ ಸ್ಪರ್ಶಿಸಿದ ತಕ್ಷಣ ನೀನು ಮತ್ತೆ ಗಂಧರ್ವನಾಗುತ್ತಿ ಅಂತ ಶಾಪವಿಮೋಚನೆಯ ಮಾರ್ಗ ತೋರಿಸುವುದು, ಭೂಲೋಕದಲ್ಲಿರುವ ತನಗೆ ಆ ಶಕ್ತಿ ಇದೆಯಾ. ಗಂಧರ್ವರಾಜನನ್ನು ಮನಸ್ಸಿನಲ್ಲೇ ಸ್ಮರಿಸಿ, ತನ್ನ ಶ್ರದ್ಧೆಯನ್ನೆಲ್ಲ ಒಂದು ಬಿಂದುವಿಗೆ ತಂದು ನಿಲ್ಲಿಸಿ, ಆಕೆ ತಾನು ಶಪಿಸಿದ ಗಂಧರ್ವನಿಗೆ ಶಾಪವಿಮೋಚನೆಗೊಂದು ಮಾರ್ಗ ಕಲ್ಪಿಸಿದಳು. ನಾನು ಯಾರನ್ನು ರಾಕ್ಷಸನಾಗು ಎಂದು ಶಪಿಸಿದ್ದೆನೋ ಅವನು ನನ್ನ ಸ್ಪರ್ಶದಿಂದ ಮತ್ತೆ ಗಂಧರ್ವನಾಗಲಿ ಎಂದು ಉಸುರಿದಳು.
ಮತ್ತೆ ಶುರುವಾಯಿತು ಅವಳ ಹುಡುಕಾಟ.ಮತ್ತೆ ಮತ್ತೆ ರಾಕ್ಷಸರನ್ನು ಸ್ಪರ್ಶಿಸುವ ಆಟ. ಅವನಲ್ಲ, ಇವನಲ್ಲ, ಮೂರನೆಯವನೂ ಅಲ್ಲ, ಮತ್ತೊಬ್ಬನೂ ಅಲ್ಲ, ಮಗದೊಬ್ಬನೂ ಅಲ್ಲ. ದಿನದಿನವೂ ಹೊಸ ರಕ್ಕಸರ ಜೊತೆ ಆಟ, ಬೇಟ. ಅವನ ಬಿಟ್ಟು ಅವನ ಬಿಟ್ಟು ಅವನ್ಯಾರು ಎಂಬ ಪರದಾಟ. ಹೀಗೆ ಸಾಗುತ್ತಾ ಸಾಗುತ್ತಾ ವರ್ಷಗಳು ಉರುಳಿದವು.
ಕೊನೆಗೊಂದು ದಿನ ಅವಳು ಬಯಸಿದ ಗಳಿಗೆ ಬಂದೇ ಬಂತು. ಜಿಂಕೆಯೊಂದನ್ನು ತನ್ನ ಕಬಂಧಬಾಹು ಚಾಚಿ ಹಿಡಿದ ಅವನು ಅದನ್ನು ಕಚಕ್ಕನೆ ಕತ್ತರಿಸಿ ತಿಂದ. ಅವನ ಬಳಿಸಾರಿ ವಯ್ಯಾರದಲ್ಲಿ ನಿಂತು ಗಂಧರ್ವಕನ್ನಿಕೆ ಬಿಂಕ ತೋರಿದಳು. ಅವನು ಕೈಲಿದ್ದ ಜಿಂಕೆ ಬಿಸುಟು ಅವಳೆಡೆಗೆ ಬಂದ. ಅವಳನ್ನು ಎತ್ತರಿಂದ ನೋಡಿದ. ಅವಳು ಅವನ ಕೈ ಹಿಡಿದೆಳೆದಳು. ಮೃದುವಾದಳು, ಮುದ್ದಾಡಿದಳು. ಉನ್ಮತ್ತ ಸ್ಥಿತಿಯಲ್ಲಿ ಅವನು ಇದ್ದಕ್ಕಿದ್ದಂತೆ ಗಂಧರ್ವನಾಗಿ ರೂಪಾಂತರ ಹೊಂದಿದ. ಅವಳ ಸಂತೋಷ ಹೇಳತೀರದು. ಅವನನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಾ, ಇವತ್ತಿಗೆ ನನ್ನ ಹುಡುಕಾಟ ಫಲಿಸಿತು ಎಂದಳು. ಬಾ ನನ್ನ ಜೊತೆ ಎಂದು ಕರೆದಳು.
ಗಂಧರ್ವ ಅವಳನ್ನು ಒಮ್ಮೆ ಹೀನಾಯವಾಗಿ ನೋಡಿ ನಿನ್ನಂಥವಳಿಗೆ ಗಂಧರ್ವರೇ ಬೇಕಾ. ಯಾರಾದರೂ ರಾಕ್ಷಸರನ್ನು ಹುಡುಕಿಕೋ , ರಾಕ್ಷಸಿ ಎಂದು ಹೇಳಿ ಆಕಾಶಕ್ಕೆ ಹಾರಿದ.
-4-

ನಮ್ಮ ಹುಡುಕಾಟಗಳೇ ಹಾಗೆ. ಇದಲ್ಲ ಅದು, ಅದಲ್ಲ ಇದು ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದದ್ದನ್ನು ದೂರಕ್ಕೆ ತಳ್ಳುತ್ತಾ, ಯಾವತ್ತೋ ದೂರ ತಳ್ಳಿದ್ದಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ ಇದು ನನ್ನದಲ್ಲ ಎಂದು ಗೊಣಗುತ್ತಾ, ಮತ್ಯಾವುದು ಅಂತ ಹುಡುಕುತ್ತಾ ಹೋಗುವುದು. ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೇ ಬಾಳಬೇಕಾಗಿ ಬರುವುದು.
ರಾಕ್ಷಸರೊಳಗೇ ಹುದುಗಿರುವ ಗಂಧರ್ವನನ್ನು ಹುಡುಕುವುದು ಕಷ್ಟ. ಅದರಲ್ಲೂ ಯಾವ ರಾಕ್ಷಸನೊಳಗೆ ಗಂಧರ್ವನಿದ್ದಾನೆ ಅಂತ ಹೇಳುವುದೂ ಕಷ್ಟ. ರಾಕ್ಷಸನೂ ಸಾಮಾನ್ಯನೇನಲ್ಲ. ಅವನೂ ಕಿಲಾಡಿ. ತನ್ನೊಳಗೆ ಗಂಧರ್ವನಿದ್ದಾನೆ ಎಂದು ಅವನು ಹೇಳಿಕೊಳ್ಳದೇ ಇರಬಹುದು. ಅವಳನ್ನು ದೂರ ಇಡಲು ಅವನು ಥೇಟ್ ರಾಕ್ಷಸನಂತೆಯೇ ವರ್ತಿಸತೊಡಗಬಹುದು.
ರಾಕ್ಷಸನೊಳಗಿನ ಗಂಧರ್ವನನ್ನು ಹುಡುಕುವುದೋ ಗಂಧರ್ವನೊಳಗಿನ ರಾಕ್ಷಸನನ್ನು ಹುಡುಕುವುದೋ ಅನ್ನುವುದೇ ಸ್ಪಷ್ಟವಿಲ್ಲ, ನಮಗೆ ಇಷ್ಟವಾಗುವುದು ರಾಕ್ಷಸನೋ ಗಂಧರ್ವನೋ ಗೊತ್ತಿಲ್ಲ. ಮೊದಲು ಸ್ಪರ್ಶಿಸಿದಾಗಲೇ ಅವನನ್ನು ಶಪಿಸದೇ ಹೋಗಿದ್ದರೆ ಅವಳ ಬದುಕು ಏನಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕರೆ ನಮ್ಮ ಬದುಕಿಗೂ ಉತ್ತರ ಸಿಕ್ಕಂತಾಗುತ್ತದೆ.
ಹಾಗೆಲ್ಲ ಬದುಕು ಸುಲಭವಾಗಿ ಯಾವ ಪ್ರಶ್ನೆಗೂ ಉತ್ತರ ಕೊಡುವುದಿಲ್ಲ. ನಾಳೆ ಬಾ ಅನ್ನುತ್ತದೆ. ಮತ್ತೊಂದು ನಾಳೆಗಾಗಿ, ಮತ್ತೊಬ್ಬ ರಾಕ್ಷಸನಿಗಾಗಿ, ಅವನೊಳಗಿರಬಹುದಾದ ಗಂಧರ್ವನಿಗಾಗಿ ನಾವು ಕಾಯುತ್ತಾ ಹೋಗುತ್ತೇವೆ.
ಆ ಗಂಧರ್ವನ ಬಳಿ ಹೋಗುವ ಹೊತ್ತಿಗೆ ನಾವೂ ರಾಕ್ಷಸರೇ ಆಗಿರುತ್ತೇವೆ.