Tuesday, June 19, 2007

ಭಟ್ಟರಿಗೆ ಮಾಸ್ತಿ ಬಂತು


ಲಕ್ಪ್ಮೀನಾರಾಯಣ ಭಟ್ಟರಿಗೆ ಮಾಸ್ತಿ ಬಂತು.
ದೊಡ್ಡ ಗಂಟಲಿನ, ಸ್ಪಷ್ಟ ಮಾತಿನ, ಕಾವ್ಯವನ್ನೂ ವಿವರಿಸಬಲ್ಲ ಅಪಾರ ಆತ್ಮವಿಶ್ವಾಸದ, ತನ್ನ ಕಾವ್ಯದಲ್ಲಿ ತಾನೇ ನಂಬಿಕೆ ಇಟ್ಟುಕೊಂಡ ಭಟ್ಟರಿಗೆ ಮಾಸ್ತಿ ಮನ್ನಣೆ.
ಅವಜ್ಞೆಗೆ ಒಳಗಾದ, ಮನ್ನಣೆಗಳು ದಕ್ಕದ, ಪ್ರಶಸ್ತಿಗಳು ಅಷ್ಟಾಗಿ ಒಲಿಯದ, ಸಾಕಷ್ಟು ಒಳ್ಳೆಯ ಕವಿತೆಗಳನ್ನು ಕೊಟ್ಟರೂ ಅಷ್ಟಾಗಿ ಗಮನ ಸೆಳೆಯದ, ಅಕ್ಪರವ್ಯಾಮೋಹಿ, ಶ್ರದ್ಧಾವಂತ, ಶ್ರಮಜೀವಿ ಭಟ್ಟರಿಗೆ ಮಾಸ್ತಿ ಪ್ರಶಸ್ತಿ.
ಶರೀಫರನ್ನು ಪರಿಚಯಿಸಿದ, ಯೇಟ್ಸನ ಕವಿತೆಗಳನ್ನು ಕನ್ನಡಿಸಿದ, ಎಲಿಯಟ್ ಪದ್ಯಗಳನ್ನು ಅನುವಾದಿಸಿದ, ಶೇಕ್ಸ್ ಪಿಯರ್ ಸಾನೆಟ್ಟುಗಳನ್ನು ಸುನೀತಗೊಳಿಸಿದ, ನಾಟಕ ಬರೆದ, ವಿಮರ್ಶೆ ಬರೆದ, ಪ್ರಬಂಧ ಬರೆದ ಭಟ್ಟರಿಗೆ ಅರ್ಹ ಗೌರವ.
*****
ಎ್. ಎಸ್. ಲಕ್ಪ್ಮೀನಾರಾಯಣ ಭಟ್ಟರಿಗೂ ಭಾವಗೀತೆಗೂ ಇರುವ ಸಂಬಂಧವನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವುದು ಕಷ್ಟ. ತುಂಬ ಸರಳವಾಗಿ, ಅಂಥ ಶ್ರಮವಿಲ್ಲದೆ ಬರೆಯುವಂತೆ ತೋರುವ ಭಟ್ಟರ ರಚನೆಗಳ ಮಾಧುರ್ಯವನ್ನು ಯಾರೂ ನಿರಾಕರಿಸುವುದಕ್ಕೆ ಸಾಧ್ಯವೇ ಇಲ್ಲ. ಅಡಿಗರ ಹಾಗೆ ಗಾಢವಾಗಿ, ಬೇಂದ್ರೆಯವರ ಹಾಗೆ ಗೂಢವಾಗಿ, ಕೆಎಸ್ ನರಸಿಂಹ ಸ್ವಾಮಿಗಳ ಹಾಗೆ ನಿಬಿಡವಾಗಿ ಭಟ್ಟರು ಬರೆದಿಲ್ಲ ಅನ್ನುವ ವಿಮರ್ಶಕರ ಸಣ್ಣ ಸಣ್ಣ ಆಕ್ಪೇಪಗಳನ್ನು ಪಕ್ಕಕ್ಕಿಟ್ಟ ಹೇಳಿ; ನಿಮ್ಮನ್ನು ಮೊದಲು ಸೆಳೆದ ಭಾವಗೀತೆ ಯಾರದ್ದು?

`ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲೀ ಸಾಲ
ಮೀಟಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ.. ಮನವು.. ಎಲ್ಲೆ ಮೀರಿತೋ..

ಇದನ್ನು ಹಾಡಿದ್ದು ಬಹುಶಃ ರತ್ನಮಾಲಾ ಇರಬೇಕು. ಈ ಸಾಲುಗಳು ಮೂಡುತ್ತಿದ್ದಂತೆಯೇ ಅದರ ಮುಂದಿನ ಸಾಲಿಗೆ ಕಾಯುತ್ತಿತ್ತು ಮನಸ್ಸು;

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಭಾವಸಂಗಮದ ಗೀತೆಗಳಿವು. ಭಟ್ಟರ ಮೇಲೆ ಅಗಾಧವಾದ ಪ್ರೀತಿ ಮತ್ತು ಗೌರವ ಹುಟ್ಟಲಿಕ್ಕೆ ಈ ಆರೆಂಟು ಸಾಲುಗಳೇ ಸಾಕು. ಆದರೆ ಭಟ್ಟರು ಇಂಥ ಅಸಂಖ್ಯ ಸಾಲುಗಳನ್ನು ಕೊಟ್ಟಿದ್ದಾರೆ;

ನೂರಾರು ನದಿ ಕುಡಿದೂ ಮೀರದಾ ಕಡಲು
ಭೋರೆಂದು ಸುರಿಸುರಿದೂ ಆರದಾ ಮುಗಿಲು
ಸೇರಿಯೂ ಕೋಟಿ ತಾರೆ ತುಂಬದಾ ಬಯಲು
ಯಾರದೀ ಮಾಯೆ ಯಾವ ಬಿಂಬದಾ ನೆರಳು.

ಶರೀಫರ ಪದ್ಯಗಳನ್ನು ಬಗೆದು ತಂದು, ಅವನ್ನೆಲ್ಲ ತಿದ್ದಿ ತೀಡಿ ಒಪ್ಪ ಮಾಡಿ ಕೊಟ್ಟ ಭಟ್ಟರು `ಕಲ್ಲು ಸಕ್ಕರೆ ಕೊಳ್ಳಿರೋ' ಎಂಬ ಪುಸ್ತಕ ಸಂಪಾದಿಸಿ ಸಣ್ಣದೊಂದು ವಿವಾದಕ್ಕೂ ಒಳಗಾದರು. ಸಾಕಷ್ಟು ಶತ್ರುಗಳನ್ನೂ ಅವರು ಸಂಪಾದಸಿದ್ದಾರೆ. ಅವರನ್ನು ಲಂಕೇಶರೂ ರಾಮಚಂದ್ರ ಶರ್ಮರೂ ಸೇರಿಕೊಂಡು ಕ್ಯಾಸೆಟ್ ಕವಿ ಎಂದು ಲೇವಡಿ ಮಾಡಿ ನಕ್ಕದ್ದು ಹಳೇ ಸುದ್ದಿ. ಶರ್ಮರ ಕವಿತೆಗಳು ಇವತ್ತು ನಾಪತ್ತೆ. ಭಟ್ಟರೂ ಚಂಡಿ ಹಿಡಿದವರಂತೆ ಅವರ ಟೀಕೆಗಳನ್ನು ನುಂಗಿ ಕೊಂಡು ಬರೆಯುತ್ತಾ ಹೋದರು. ಅದನ್ನು ವಿವಿಧ ಗಾಯಕರಿಂದ ಹಾಡಿಸಿದರು. ಗರ್ತಿಕೆರೆ ರಾಘಣ್ಣನಂಥ ಗಾಯಕರನ್ನು ಪರಿಚಯಿಸಿದರೆ. ಮೀರಾ ಭಜ್ಗಳನ್ನು ಸೊಗಸಾಗಿ ಕನ್ನಡಕ್ಕೆ ತಂದರು.
ಮೃದುಮಧುರ ಸಾಲುಗಳನ್ನು ಪ್ರೇಮ, ದಾಂಪತ್ಯ, ವಿರಹದ ಕ್ಪಣಗಳನ್ನು ರೂಪಕವಾಗಿಸುವ ದಟ್ಟಪ್ರತಿಭೆ ಭಟ್ಟರಿದೆ ಸಿದ್ಧಿಸಿಬಿಟ್ಟಿತು. ಉದಾಹರಣೆಗೆ ಅವರ ಈ ಕೆಳಗಿನ ಸಾಲುಗಳನ್ನು ಓದಿ;

ಮುಗಿಲ ಮಾಲೆ ನಭದಲಿ
ಹಾಲು ಪಯಿರು ಹೊಲದಲಿ
ರೂಪಿಸುತಿವೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ
(ಬಾರೆ ನನ್ನ ದೀಪಿಕಾ)

ತೀರುತಿರುವ ಹರುಷದಂತೆ
ಆರುತಿರುವ ದೀಪವು
ಮೀರಿ ಉರಿದು ಕೊರಗು ಹರಿದು
ಕೊನೆಯಾಯಿತು ಶಾಪವು
(ಎಂದೂ ಕಾಣದಂಥ ಕನಸು)

ಏಕೆ ಹೀಗೆ ನಮ್ಮ ನಡುವೆ
ಮಾತು ಬೆಳೆದಿದೆ
ಕುರುಡು ಹಮ್ಮು ಬೇಟೆಯಾಡಿ
ಪ್ರೀತಿ ನರಳಿದೆ


ಹಮ್ಮು ಬೆಳೆದು ನಮ್ಮ ಬಾಳು
ಆಯ್ತು ಎರಡು ಹೋಳು
ಕೂಡಿಕೊಳಲಿ ಮತ್ತೇ ಪ್ರೀತಿ
ತಬ್ಬಿಕೊಳಲಿ ತೋಳು
(ಏಕೆ ಹೀಗೆ)

ಬೆಳಕೊಂಡು ಸೀರೆಯುಟ್ಟು
ತೇಲಿ ನಡೆವ ರೂಪ
ಗರ್ಭಗುಡಿಯಲಿ ದೇವರೆದುರಲಿ
ಉರಿವ ಶಾಂತ ದೀಪ

ರಾಗದಲ್ಲಿ ಸೇರಿ ಕವಿತೆ ಹಾಡು ಮೂಡುವಂತೆ
ಸಂಜೆ ಸುಳಿವ ಗಾಳಿಗೆ ಹೊನ್ನ ಬಿಸಿಲ ಲೀಲೆಗೆ
ಮುಗಿಲಾಡುವಂತೆ
(ಎಂಥ ಚೆಲುವೆ ನನ್ನ ಹುಡುಗಿ)

****
ನವ್ಯ ಚಳವಳಿಯಲ್ಲೂ ಒಂದಷ್ಟು ಕವಿತೆಗಳನ್ನು ಬರೆದೇ ಬರೆದರು ಭಟ್ಟರು. ಆದರೆ ಅವರ ನವ್ಯ ಕವಿತೆಯ ತುಂಬ ಅಡಿಗರ ಕಾವ್ಯದ ನೆರಳು.

ಬಾ ಮಗೂ ಅಲ್ಲೆ ನಿನ್ನದೆ ಮತ್ತೆ ಹಿಂದಕ್ಕೆ
ನಿನ್ನದೇ ನೆಲಕ್ಕೆ ನಿನ್ನದೇ ಜಲಕ್ಕೆ
ನಿನ್ನ ಒಳಹೊರಗನ್ನು ಸೃಷ್ಟಿಸಿಕೊಟ್ಟ ಸತ್ವಕ್ಕೆ
ಹಿಂದುಮುಂನ್ನುಗಳ ತಕ್ಕ ಛಂದದಲ್ಲಿಟ್ಟು ನಿನ್ನ
ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ
ನಿನ್ನ ಬೆನ್ನಿಗೆ ನಿಂತ ಪುರಾಣ ಇತಿಹಾಸಗಳ
ಬಿಸಿಯುಸಿರು ಬಡಿಯುವೀ ವರ್ತಮಾನಕ್ಕೆ

ಅಡಿಗರದೇ ಲಯ. ಅಡಿಗರದ್ದೇ ಮಾತು. ಇಂಥ ಕವಿತೆಗಳ ಮೂಲಕ ಭಟ್ಟರು ನಮ್ಮನ್ನು ಕಾಡುವುದಿಲ್ಲ. ಅವರದೇನಿದ್ದರೂ ಮೊದಲೇ ಹೇಳಿದ ಹಾಗೆ `ಇಹದ ಪರಿಮಳದ ಹಾದಿ.'
ಎಪ್ಪತ್ತರಲ್ಲೂ ಭಟ್ಟರು ಉತ್ಸಾಹ ಕಳಕೊಂಡಿಲ್ಲ. ಮುಂಚಿನ ಹಾಗೇ ಜಗಳ ಆಡುತ್ತಾರೆ. ಅಮೇರಿಕಾಕ್ಕೆ ಹೋಗಿ ಭಾಷಣ ಮಾಡುತ್ತಾರೆ. ಅಲ್ಲಿ ಬಿಡುಗಡೆ ಮಾಡಿದ ಸೀಡಿಯನ್ನು ಇಲ್ಲೂ ಬಿಡುಗಡೆ ಮಾಡುತ್ತಾರೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮನೆಯಲ್ಲೇ ಕೂತು ಮಾತಾಡಿ, ಆ ಸೀಡಿಯನ್ನು ಕನ್ನಡ ಪ್ರೇಮಿ ಅಮೆರಿಕನ್ನಡಿಗರಿಗೆ ಕೊಟ್ಟು, ಅಲ್ಲಿ ಭಾಷಣ ಮಾಡಿ ಸಂಭ್ರಮಿಸುತ್ತಾರೆ.
ಬೇಸರದ ಸಂಗತಿಯೆಂದರೆ ಭಾವಗೀತೆಗಳನ್ನು ಬರೆಯುವುದನ್ನು ಬಿಟ್ಟಿದ್ದಾರೆ. ಸಂತೋಷದ ಸಂಗತಿಯೆಂದರೆ ನವ್ಯ ಕವಿತೆಗಳನ್ನೂ ಬರೆಯುವುದನ್ನೂ ನಿಲ್ಲಿಸಿದ್ದಾರೆ.
ಭಟ್ಟರ ಒಟ್ಟಾರೆ ನಿಲುವಿನ ಬಗ್ಗೆಹೇಳಬಹುದಾದ ಎರಡು ಸಾಲುಗಳನ್ನು ಅವರೇ ಬರೆದಿದ್ದಾರೆ;

ಕಲ್ಲುದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು
ಶರಣಾದ ಜೀವಕ್ಕೆ ಮರುಗಿ ಸಂತೈಸದೇ
ದೂರವಾದರೆ ಹೇಗೆ ಒಲವು.

ಟಿಪ್ಪಣಿ- ಮೇಲಿನ ಚಿತ್ರ ಅನನ್ಯಾ ಕಾಸರವಳ್ಳಿ ಅವರದ್ದು. ಭಟ್ಟರ ಕವಿತೆಗಳಿಗೂ ಅನನ್ಯಾ ಕಾಸರವಳ್ಳಿ ಅವರಿಗೂ ಸಂಬಂಧ ಇಲ್ಲ ನಿಜ. ಆದರೆ ಭಟ್ಟರ ಎಂಥಾ ಹದವಿತ್ತೇ, ಹರೆಯಕೆ ಏನು ಮುದವಿತ್ತೇ, ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವಿಯಿತ್ತೇ ಹಾಡನ್ನು ಚಿತ್ರೀಕರಿಸಿದರೆ ಆ ಪುಟ್ಟ ತುಂಟಿಯ ಪಾತ್ರಕ್ಕೆ ಅನನ್ಯಾ ಒಪ್ಪುತ್ತಾರೆ ಅಂತ ನಮಗೆ ಅನೇಕರಿಗೆ ಅನ್ನಿಸಿದ್ದಕ್ಕೆ ಆ ಫೋಟೋ. ಅನನ್ಯಾರ ಭಾವಪೂರ್ಣ ಕಣ್ಣುಗಳನ್ನು ಗಮನಿಸಿ. ಅಲ್ಲೊಂದು ಕವಿತೆ ಅವಿತು ಕೂತಂತಿದೆ.

Tuesday, June 12, 2007

ಎಷ್ಟು ಮಳೆ ಹೊಯ್ದರೂ ಏನೂ ನೆನಪಾಗ್ತಿಲ್ವಲ್ರೀ...ಕರ್ಮ!

ಬರೆ­ವ­ಣಿ­ಗೆ­ಯಲ್ಲಿ ಎರಡು ಥರ; ಆಹಾ ಎಷ್ಟು ಚೆನ್ನಾ­ಗಿದೆ ಕವಿತೆ. ಸೊಗ­ಸಾ­ಗಿದೆ ಕತೆ ಅನಿ­ಸು­ವಂತೆ ಬರೆ­ಯು­ವುದು ಒಂದು. ಆಹಾ ಎಷ್ಟು ಚೆನ್ನಾಗಿ ಬರೆ­ದಿ­ದ್ದಾನೆ ಅನ್ನಿ­ಸು­ವುದು ಮತ್ತೊಂದು. ಆಹಾ ಎಷ್ಟು ಚೆನ್ನಾ­ಗಿದೆ ಕವಿತೆ ಅನ್ನಿ­ಸಿ­ದರೆ ಕವಿತೆ ಗೆಲ್ಲು­ತ್ತದೆ, ಕವಿಯೂ ಗೆಲ್ಲು­ತ್ತಾನೆ. ಆಹಾ ಎಷ್ಟು ಚೆನ್ನಾಗಿ ಬರೆ­ದಿ­ದ್ದಾನೆ ಅನ್ನಿ­ಸಿ­ದಾಗ ಕವಿತೆ ಸೋಲು­ತ್ತದೆ, ಆ ಕ್ಪಣಕ್ಕೆ ಕವಿ ಗೆಲ್ಲು­ತ್ತಾನೆ.
ಒಬ್ಬ ಬರ­ಹ­ಗಾ­ರನ ಕಷ್ಟ ಇದೇ. ಆತ ಬರ­ಹದ ಮೇಲೆ ತನ್ನ ನೆರಳು ಕೂಡ ಸುಳಿ­ಯ­ದಂತೆ ಬರೆ­ಯ­ಬೇ­ಕಾ­ಗು­ತ್ತದೆ. ತನ್ನ ಅನು­ಭ­ವದ ಭಾರ ಕೃತಿ­ಯನ್ನು ಜಗ್ಗ­ದಂತೆ ನೋಡಿ­ಕೊ­ಳ್ಳ­ಬೇ­ಕಾ­ಗು­ತ್ತದೆ. ಆ ಕಾರ­ಣಕ್ಕೇ ಅನು­ಭ­ವ­ದಿಂದ ಒಳ್ಳೆಯ ಕೃತಿ ಬರು­ತ್ತದೆ ಅನ್ನು­ವುದು ಸುಳ್ಳು. ಅನು­ಭ­ವ­ದಿಂ­ದಲೇ ಅನೇಕ ಬಾರಿ ಬರಹ ಸೋಲು­ವು­ದುಂಟು.
ಹಾಗೇ, ಒಬ್ಬ ಲೇಖಕ ತನ್ನ ಛಾಪು ಮೂಡು­ವಂತೆ ಬರೆ­ಯು­ವುದೂ ಅಷ್ಟು ಒಳ್ಳೆ­ಯ­ದಲ್ಲ. ನನ್ನ ಶೈಲಿ­ಯಿಂ­ದಲೇ ಅದು ನನ್ನ ಬರಹ ಎಂದು ಓದು­ಗರು ಗುರು­ತಿ­ಸು­ತ್ತಾರೆ ಎಂದು ಕೆಲ­ವರು ತುಂಬ ಹೆಮ್ಮೆ­ಯಿಂದ ಹೇಳಿ­ಕೊ­ಳ್ಳು­ವು­ದುಂಟು. ಆದರೆ ಹಾಗೆ ಶೈಲಿ­ಯಿಂದ ಗುರು­ತಿ­ಸಿ­ಕೊ­ಳ್ಳು­ವುದೂ ಕೂಡ ಅಷ್ಟೇ ಕೆಟ್ಟದ್ದು. ಶೈಲಿ­ಯಿಂದ ಗುರು­ತಿ­ಸಿ­ಕೊ­ಳ್ಳುವ ಲೇಖಕ, ಕ್ರಮೇಣ ಚಿಂತ­ನಾ­ಕ್ರ­ಮ­ದಿಂದ, ವಿಚಾ­ರ­ಧಾ­ರೆ­ಯಿಂದ, ಮಂಡ­ನಾ­ವಿ­ಧಾ­ನ­ದಿಂದ ಕೂಡ ಗುರು­ತಿ­ಸಿ­ಕೊ­ಳ್ಳು­ತ್ತಾನೆ. ಬರ­ಬ­ರುತ್ತಾ ಆ ಶೈಲಿಯೇ ರಾಜ­ಕೀಯ ಪಕ್ಪದ ಗುರು­ತಿ­ನಂತೆ ಕಾಣಿ­ಸ­ತೊ­ಡ­ಗು­ತ್ತದೆ. ಒಬ್ಬ ಗಾಯ­ಕ­ನನ್ನು ದನಿಯ ಮೂಲಕ ಗುರುತು ಹಿಡಿ­ದರೆ ಅದು ಸರಿ, ರಾಗದ ಮೂಲಕ ಗುರುತು ಹಿಡಿ­ದರೆ? ಅದು ಆ ಗಾಯ­ಕನ ಮಿತಿ. ಲೇಖ­ಕನ ವಿಚಾ­ರ­ದಲ್ಲೂ ಹಾಗೆ.
ಉದಾ­ಹ­ರ­ಣೆಗೆ ಯಶ­ವಂತ ಚಿತ್ತಾ­ಲರು. ಅವರ ಕತೆ­ಯನ್ನು ಮೂರು ಪುಟ ಓದು­ವು­ದ­ರೊ­ಳಗೆ ನಿಮಗೆ ಇದು ಚಿತ್ತಾ­ಲರ ಬರ­ವ­ಣಿಗೆ ಎನ್ನು­ವುದು ಗೊತ್ತಾ­ಗಿ­ಬಿ­ಡು­ತ್ತದೆ. ಅವರು ಶೈಲಿ­ಯಲ್ಲಿ ವಿವ­ರ­ಗ­ಳಲ್ಲಿ ಮತ್ತು ಒಮ್ಮೊಮ್ಮೆ ಭಾವು­ಕ­ತೆ­ಯಲ್ಲೂ ಅದೇ ಚಿತ್ತಾ­ಲ­ರಾಗಿ ಉಳಿ­ಯು­ತ್ತಾರೆ. ಕಂಬಾ­ರರು ತಮ್ಮ ಭಾಷೆಯ ಬಳ­ಕೆ­ಯಿಂದ ಗುರು­ತಾ­ದರೆ ಚಿತ್ತಾ­ಲರು ಗುರು­ತಾ­ಗು­ವುದು ಭಾವ­ದಿಂದ. ಅದೇ ಕಾರ­ಣಕ್ಕೆ ಅವರ ನಂತ­ರದ ಕಾದಂ­ಬ­ರಿ­ಗ­ಳನ್ನು ಓದು­ವುದು ಕಷ್ಟ. ಅದೇ ಬೀದಿ­ಯಲ್ಲಿ ಅವರು ಸುತ್ತಾ­ಡು­ತ್ತಿ­ರು­ವಂತೆ ಭಾಸ­ವಾ­ಗು­ತ್ತದೆ.
ಇದಕ್ಕೆ ತದ್ವಿ­ರು­ದ್ಧ­ವಾದ ಉದಾ­ಹ­ರಣೆ ಡಿವಿ­ಜಿ­ಯ­ವ­ರದ್ದು. ಅವರು ಬರೆದ ಕೃತಿ­ಗ­ಳ­ನ್ನೆಲ್ಲ ಒಂದೊಂ­ದಾಗಿ ನೋಡುತ್ತಾ ಬನ್ನಿ. ಬಾಳಿ­ಗೊಂದು ನಂಬಿ­ಕೆ­ಯನ್ನು ಬರೆದ ಡಿವಿ­ಜಿ­ಯ­ವರೇ ಅನ್ತಃ­ಪು­ರ­ಗೀ­ತ­ವನ್ನೂ ಬರೆ­ದಿ­ದ್ದಾರೆ. ಎರ­ಡನ್ನೂ ಪ್ರತ್ಯೇ­ಕ­ವಾಗಿ ಓದಿ­ದರೆ ಅವನ್ನು ಒಬ್ಬನೇ ವ್ಯಕ್ತಿ ಬರೆ­ದಿ­ದ್ದಾನೆ ಅಂತ ಊಹಿ­ಸು­ವುದೂ ಕಷ್ಟ. ಮಹಾ­ಚು­ನಾ­ವ­ಣೆ­ಯಂಥ ಕೃತಿಯ ಜೊತೆಗೇ ಉಮ­ರನ ಒಸ­ಗೆ­ಯಿದೆ. ಸಂಸ್ಕೃ­ತಿಯ ಕುರಿ­ತಾದ ಕೃತಿ­ಯೊಂ­ದಿಗೇ ವಿದ್ಯಾ­ರಣ್ಯ ವಿಜ­ಯ­ವಿದೆ. ಇವೆ­ಲ್ಲಕ್ಕೂ ಕಳ­ಸ­ವಿ­ಟ್ಟಂತೆ `ಮಂ­ಕು­ತಿ­ಮ್ಮನ ಕಗ್ಗ'ವಿದೆ.
ಇವೆ­ಲ್ಲ­ಕ್ಕಿಂತ ಕುತೂ­ಹಲ ಹುಟ್ಟಿ­ಸು­ವುದು ಡಿವಿ­ಜಿ­ಯ­ವರು ಬರೆದ ವ್ಯಕ್ತಿ­ಚಿ­ತ್ರ­ಗಳು. ನಾವು ಭೇೇಟಿ­ಯಾದ, ಮಾತಾ­ಡಿದ, ನಮ್ಮ ಸಂಸ­ರ್ಗಕ್ಕೆ ಬಂದ ವ್ಯಕ್ತಿ­ಯನ್ನು ನಾವು ಏಕಾಂ­ತ­ದಲ್ಲಿ ನೆನ­ಪಿ­ಸಿ­ಕೊ­ಳ್ಳು­ತ್ತೇ­ವಲ್ಲ, ಅಂಥ ಬರ­ಹ­ಗಳು ಅವು. ಅದು ಹೊಗ­ಳಿ­ಕೆ­ಯಲ್ಲ, ಟೀಕೆ­ಯಲ್ಲ, ಟಿಪ್ಪ­ಣಿಯೂ ಅಲ್ಲ. ಗೆಳೆ­ಯನ ಬಗ್ಗೆ ಮತ್ತೊಬ್ಬ ಗೆಳೆ­ಯನ ಹತ್ತಿರ ಹೇಳಿ­ಕೊಂಡು ಸಂಭ್ರ­ಮಿ­ಸಿ­ದಂಥ ಬರ­ಹ­ಗಳು.
ಡಾಕ್ಟರ್ ಗುಂಡ­ಣ್ಣ­ನ­ವರ ಚಿತ್ರ ನೋಡಿ;
ಗುಂಡ­ಣ್ಣ­ನ­ವ­ರನ್ನು ನೋಡಿ­ದ್ದ­ವರು ಯಾರೂ ಅವ­ರನ್ನು ಮರೆ­ತಿ­ರು­ವುದು ಅಸಂ­ಭವ. ಅಷ್ಟು ಮನೋ­ಮು­ದ್ರ­ಕ­ವಾ­ದದ್ದು ಅವರ ವ್ಯಕ್ತಿ­ಮ­ಹಿಮೆ. ಸುಮಾರು 25-30 ವರ್ಷ­ಗಳ ಕಾಲ ಅವರ ಹೆಸರು ನೂರಾರು ಮನೆ­ಗ­ಳಲ್ಲಿ ಪ್ರತಿ­ದಿ­ನವೂ ನಚ್ಚು­ಮೆ­ಚ್ಚಿನ ಮಾತಾ­ಗಿತ್ತು. ರೋಗ ಪ್ರಸಂ­ಗ­ಗ­ಳಲ್ಲಿ ಮಾತ್ರವೇ ಅಲ್ಲ ಅವರ ನೆನಪು ಬರು­ತ್ತಿ­ದ್ದದ್ದು; ಎಂಥ ವಿಶೇಷ ಮಾನವ ಪ್ರಸಂಗ ಒದ­ಗಿ­ದರೂ ಆಗ ಆಪ್ತ ಬಂಧು­ಗಳ ಸ್ಮರಣೆ ಬಂದಂತೆ ಗುಂಡ­ಣ್ಣ­ನ­ವರ ಸ್ಮರಣೆ ಬರು­ತ್ತಿತ್ತು.
ಒಂದು ದಿನ ಸಂಜೆ ಸುಮಾರು ಏಳು ಗಂಟೆ ಇರ­ಬ­ಹುದು. ಒಬ್ಬಾ­ನೊಬ್ಬ ಮುಸ­ಲ್ಮಾನ ಸಾಹು­ಕಾ­ರರು ಒಂದು ಸೊಗ­ಸಾದ ಖಾಸ್ ಜಟ­ಕಾ­ದಲ್ಲಿ ಬಂದು ಚಿಕಿ­ತ್ಸಾ­ಲ­ಯದ ಮುಂದೆ ಇಳಿದು ಬೊಬ್ಬೆ ಹಾಕುತ್ತಾ ಒಳಗೆ ಹೆಜ್ಜೆ­ಯಿ­ಟ್ಟರು. ಹಿಂದು­ಸ್ತಾ­ನಿ­ಯಲ್ಲಿ `ಬ­ಹಳ ನೋವು ಮಹ­ರಾ­ಯರೇ, ಬಹಳ ನೋವು' ಎಂದು ಕಿರಿ­ಚಿ­ದರು.
ಗುಂಡಣ್ಣ; (ಹಿಂ­ದು­ಸ್ತಾ­ನಿ­ಯಲ್ಲಿ) ಎಲ್ಲಯ್ಯ ನೋವು?
ಸಾಹು­ಕಾರ; ಬೆಟ್ಟಿ­ನಲ್ಲಿ ಸ್ವಾಮಿ, ಬೆಟ್ಟಿ­ನಲ್ಲಿ.
ಗುಂಡಣ್ಣ; ಯಾವ ಬೆಟ್ಟಿ­ನಲ್ಲಿ? ಎಲ್ಲಿಯ ಬೆಟ್ಟಿ­ನ­ಲ್ಲಯ್ಯ? (ಎ­ಲ್ಲ­ರಿಗೂ ನಗು)
ಸಾಹು­ಕಾರ; ಎಡಗೈ ತೋರಿಸಿ - ಈ ನಡು­ಬೆ­ರ­ಳಿ­ನಲ್ಲಿ.
ಗುಂಡ­ಣ್ಣ­ನ­ವರು ಆ ಬೆರ­ಳನ್ನು ಹಿಡಿದು ನೋಡಿ­ದರು. ಆಮೇಲೆ ಇನ್ನೊಂದು ದೊಡ್ಡ ಎಲೆ­ಕ್ಟ್ರಿಕ್ ದೀಪ­ವನ್ನು ಹಾಕಿ­ನೋಡಿ -
`ಸಾ­ಹು­ಕಾ­ರರೇ ಬೆಳಗ್ಗೆ ಬನ್ನಿ ನೋಡೋಣ. ಈಗ ದೀಪದ ಬೆಳ­ಕಿ­ನಲ್ಲಿ ಇದು ಚೆನ್ನಾಗಿ ಕಾಣಿ­ಸು­ವು­ದಿಲ್ಲ' ಎಂದರು.
ಸಾಹು­ಕಾರ; ಈಗ ನಾನು ಸಾಯು­ತ್ತೇನೆ.
ಗುಂಡಣ್ಣ; ಇಲ್ಲ, ನೀವು ಸಾಯು­ವು­ದಿಲ್ಲ. ನಾನು ಭರ­ವಸೆ ಕೊಡು­ತ್ತೇನೆ. ಬೆಳಗ್ಗೆ ಬದು­ಕಿ­ರು­ತ್ತೀರಿ.
ಸಾಹು­ಕಾರ; ಇಲ್ಲ ಸ್ವಾಮಿ, ನಾನು ಈಗ ರೈಲಿಗೆ ಹೊರ­ಟಿ­ದ್ದೇನೆ. ಬೆಳಗ್ಗೆ ಈ ಊರ­ಲ್ಲಿ­ರು­ವು­ದಿಲ್ಲ.
ಗುಂಡಣ್ಣ; ಹಾಗಾ­ದರೆ ಬೆರ­ಳನ್ನು ...ದಲ್ಲಿ ಸಿಕ್ಕಿ­ಸಿ­ಕೊಳ್ಳಿ.
ಅಲ್ಲಿ­ದ್ದ­ವ­ರೆಲ್ಲ ನಕ್ಕರು. ಸಾಹು­ಕಾ­ರ­ರಿಗೆ ಕೋಪ ಬಂತು. `ಏನು ಸ್ವಾಮಿ. ಎಷ್ಟು ದಿವ­ಸ­ದಿಂದ ನಿಮ್ಮನ್ನು ನಂಬಿ­ಕೊಂ­ಡಿ­ದ್ದೇನೆ. ಎಷ್ಟು ಸಲ ನಮ್ಮ ಮನೆಗೆ ಬಂದಿ­ದ್ದೀರಿ. ಈಗ ನನಗೆ ಹೀಗೆ ಅವ­ಮಾನ ಮಾಡು­ತ್ತೀ­ರಲ್ಲ?'
ಗುಂಡಣ್ಣ; ಕೋಪ ಬೇಡ ಸಾಹೇ­ಬರೇ. ನಾನು ಹೇಳಿದ್ದು ತಪ್ಪು ಮಾತು ಏನೂ ಅಲ್ಲ. ಇಲ್ಲಿ ನಗು­ತ್ತಿ­ರುವ ಬೇಕೂ­ಫ­ರಿಗೆ ಸಂದರ್ಭ ಗೊತ್ತಿಲ್ಲ. ನಿಮ್ಮ ಬೆಟ್ಟಿ­ನಲ್ಲಿ ಏನೋ ಏಳು­ತ್ತಿದೆ. ಅದಕ್ಕೆ ತಕ್ಕ ಚಿಕಿ­ತ್ಸೆ­ಯಲ್ಲಿ ಮೂರು ಅಂಶ­ಗಳು ಸೇರಿ­ರ­ಬೇಕು; ಉಷ್ಣ, ತೇವ, ಒತ್ತಡ (heat, moisture, pressure). ಈ ಮೂರು ಅಂಶ­ಗಳು ನಾನು ಹೇಳಿದ ಜಾಗ­ದಲ್ಲಿ ಇರು­ತ್ತವೆ'.

ಈ ವಿವ­ರ­ಣೆ­ಯನ್ನು ಕೇಳಿ ಸಾಹು­ಕಾ­ರ­ರಿಗೂ ನಗು­ಬಂತು.
ಇನ್ನೊಂದು ಪ್ರಸಂಗ ಕೇಳಿ. ಇದು ಎಸ್. ವಿ. ನಂಜುಂ­ಡ­ಯ್ಯ­ನ­ವ­ರಿಗೆ ಸಂಬಂ­ಧಿ­ಸಿದ್ದು;
ನಂಜುಂ­ಡ­ಯ್ಯ­ನ­ವರು ಕೆಲವು ಕಾಲ ಶಿವ­ಮೊ­ಗ್ಗಿ­ಯ­ಲ್ಲಿ­ದ್ದಾಗ ಬೆಂಗ­ಳೂ­ರಲ್ಲಿ ಒಂದು ಪ್ರಸಂಗ ನಡೆ­ಯಿತು. ಒಬ್ಬಾ­ನೊಬ್ಬ ಯುವಕ ಬಿ.ಎ. ಪ್ಯಾ್ ಮಾಡಿ ಸರ­ಕಾ­ರದ ಚಾಕ­ರಿಗೆ ಅರ್ಜಿ ಹಾಕಿದ್ದ. ಆತ ಹೈಕೋ­ರ್ಟಿಗೂ ಅರ್ಜಿ ಹಾಕಿದ್ದ. ಒಂದಾ­ನೊಂದು ದಿನ ಹೈಕೋ­ರ್ಟಿನ ಕಾರ್ಯಾ­ಲ­ಯದ ಮುಖ್ಯಾ­ಧಿ­ಕಾ­ರಿಯು ಆತ­ನನ್ನು ಇಂಟ­ರ್ವ್ಯೂ­ಗಾಗಿ ಆಹ್ವಾ­ನಿ­ಸಿದ. ಅವರ ನಡುವೆ ನಡೆದ ಮಾತು­ಕತೆ ಹೀಗಿದೆ;
ಅಧಿ­ಕಾರಿ; ನೀವು ಯಾವ ಜಾತಿ­ಯ­ವರು.
ಯುವಕ; ನಾನು ಶ್ರೌತಿ.
ಅಧಿ­ಕಾರಿ; ಓಹೋ ಹಾಗೆಯೇ, ನಿಮ್ಮ ಜನ ಯಾರಾ­ದರೂ ದೊಡ್ಡ ಅಧಿ­ಕಾ­ರ­ಗ­ಳಲ್ಲಿ ಇದ್ದಾರೋ?
ಯುವಕ; ಯಾರೂ ಇಲ್ಲ,
ಅಧಿ­ಕಾರಿ; ಹಾಗೆಯೇ. ಅಯ್ಯೋ ಪಾಪ. ಇರಲಿ ಮುಂದಿನ ಶನಿ­ವಾರ ಬನ್ನಿ. ನೋಡಿ ಹೇಳು­ತ್ತೇನೆ.
ಯುವ­ಕನು ಹೊರ­ಟು­ಹೋದ ಮೇಲೆ ಆ ಅಧಿ­ಕಾ­ರಿಯು ಅದೇ ಚೀಫ್ ಕೋರ್ಟಿ­ನಲ್ಲಿ ತನ್ನ ಸಹೋ­ದ್ಯೋ­ಗಿ­ಯಾ­ಗಿದ್ದ ಎಂ. ಎಲ್. ಪುಟ್ಟ­ಣ್ಣ­ರನ್ನು ಕರೆದು ಕೇಳಿದ.
ಅಧಿ­ಕಾರಿ; ಶ್ರೌತಿ ಅಂದರೆ ಯಾವ ಜನ ಸ್ವಾಮಿ?
ಪುಟ್ಟಣ್ಣ; ಶ್ರೌತಿ ಅಂದರೆ ಶ್ರೋತ್ರಿಯ. ಶ್ರುತಿ ಅಂದರೆ ವೇದ. ಬ್ರಾಹ್ಮ­ಣ­ರಲ್ಲಿ ವೇದಾ­ಧ್ಯ­ಯನ ಸಂಪ­ನ್ನ­ರಾಗಿ ವೈದಿಕ ಕರ್ಮ­ನಿಷ್ಠೆ ಇಟ್ಟು­ಕೊಂ­ಡ­ವ­ರನ್ನು ಶ್ರೋತ್ರಿ­ಯರು ಎಂದು ಕರೆ­ಯು­ವುದು ಪದ್ಧತಿ.
ಅಧಿ­ಕಾರಿ; ಹಾಗಿ­ದ್ದರೆ ಅವರು ಬ್ರಾಹ್ಮ­ಣರೇ ಅಂತನ್ನಿ.
ಪುಟ್ಟಣ್ಣ; ಅಲ್ಲವೇ? ಅದ­ರ­ಲ್ಲಿಯೂ ಉತ್ತಮ ದರ್ಜೆಯ ಬ್ರಾಹ್ಮ­ಣರು.
ಅಧಿ­ಕಾರಿ; ಸರಿ­ಸರಿ. ಅದು ನನಗೆ ತಿಳಿ­ದಿ­ರ­ಲಿಲ್ಲ. ಸುಮ್ಮನೆ ಕೇಳಿದೆ
.
ಇದಾದ ನಂತರ ಆತ ಮತ್ತೆ ಕೆಲಸ ಕೇಳಿ­ಕೊಂಡು ಬರು­ತ್ತಾನೆ. ಆತ­ನಿ­ಗೊಂದು ಪರೀಕ್ಪೆ ಕೊಡು­ತ್ತಾನೆ ಅಧಿ­ಕಾರಿ. ಅದ­ರ­ಲ್ಲೇನೋ ಕರಾ­ಮತ್ತು ನಡೆ­ಸಿ­ದ್ದ­ರಿಂದ ಶ್ರೋತ್ರಿ­ಯ­ನಿಗೆ ಕೆಲಸ ಸಿಗು­ವು­ದಿಲ್ಲ. ಆತ ಈ ಕೆಲಸ ಸಿಗ­ದಿ­ರಲು ಪುಟ್ಟ­ಣ್ಣ­ಯ್ಯನೇ ಕಾರಣ ಎಂದು ಆಗ್ರಹ ಕಾರು­ತ್ತಾನೆ. ತನಗೆ ಸಂಬಂ­ಧವೇ ಇಲ್ಲದ ಸಂಗ­ತಿಗೆ ತಾನು ಬಾಧ್ಯ­ನಾದ ಸಂಗತಿ ಕೇಳಿ ಪುಟ್ಟ­ಣ್ಣ­ಯ್ಯ­ನ­ವ­ರಿಗೆ ಬೇಸ­ರ­ವಾ­ಗು­ತ್ತದೆ. ಆಗ ಅವ­ರಿಗೆ ನಂಜುಂ­ಡ­ಯ್ಯ­ನ­ವರು ಒಂದು ಪತ್ರ ಬರೆ­ಯು­ತ್ತಾರೆ;
ಶ್ರೌತಿ­ಗ­ಳಿಗೆ ನಿಮ್ಮ ಮೇಲೆ ಕೋಪ ಬಂದದ್ದು ಸಹ­ಜ­ವಾ­ಗಿಯೇ ಇದೆ. ನಿಮ್ಮನ್ನು ಆ ಅಧಿ­ಕಾರಿ ಅರ್ಥ­ವಿ­ವ­ರಣೆ ಕೇಳಿ­ದಾಗ ನೀವು ಬೇರೆ ಅರ್ಥ­ವನ್ನು ಯಾಕೆ ಹೇಳ­ಲಿಲ್ಲ. ಶ್ರುತಿ ಅಂದರೆ ಮೇಳ­ದಲ್ಲಿ ಹೊರ­ಡುವ ಒಂದು ಜೊತೆಯ ಶಬ್ದ. ಶ್ರುತಿ ಹಿಡಿ­ಯು­ವುದು ಎಂದರೆ ಓಲಗ ಊದು­ವುದು. ಆದ ಕಾರಣ ಶ್ರೌತಿ ಎಂದರೆ ಬಾಜಾ­ಬ­ಜಂ­ತ್ರಿ­ಯ­ವರು. ಹೀಗೆಂದು ನೀವು ಅರ್ಥ ಹೇಳ­ಬೇ­ಕಾ­ಗಿತ್ತು. ಹೀಗೆ ಹೇಳಿ­ದ್ದಿ­ದ್ದರೆ ಆತ­ನಿಗೆ ಚಾಕರಿ ಸಿಗು­ತ್ತಿತ್ತು. ನೀವು ಅದನ್ನು ತಪ್ಪಿ­ಸಿ­ದಿ­ರಲ್ಲ? ಚಾಕರಿ ತಪ್ಪಿಸಿ ಜಾತಿ ಉಳಿ­ಸಿ­ದರೆ ಏನಾ­ಯಿತು?
**­**
ಇಂಥ ಪ್ರಸಂ­ಗ­ಗ­ಳನ್ನು ಬರೆ­ಯು­ವು­ದಕ್ಕೆ ಹಾಸ್ಯ­ಪ್ರ­ಜ್ಞೆ­ಯಿ­ದ್ದರೆ ಸಾಲದು. ಮಾನ­ವೀ­ಯತೆ ಬೇಕು. ಇನ್ನೊ­ಬ್ಬ­ರನ್ನು ಕೂಲಂ­ಕ­ಷ­ವಾಗಿ ಗಮ­ನಿ­ಸುವ, ಪ್ರೀತಿ­ಸುವ ಮನಸ್ಸು ಬೇಕು. ವ್ಯಕ್ತಿ­ಕೇಂ­ದ್ರಿ­ತ­ವಾ­ಗುತ್ತಾ ನಡೆ­ದಿ­ರುವ ನಮಗೆ ಅಷ್ಟೆಲ್ಲ ತಾಳ್ಮೆ ಎಲ್ಲಿದೆ. ಯಾರಾ­ದರೂ ತಮ್ಮ ಬಗ್ಗೆ ಹೇಳಲು ಶುರು­ಮಾ­ಡಿ­ದರೆ ನಮಗೆ ಅಸ­ಹ­ನೆ­ಯಾ­ಗು­ತ್ತದೆ. ಕತೆ ಕೇಳುವ ಬದಲು `ಬಂದ ವಿಷಯ ಹೇಳಿ, ಹೊರ­ಟು­ಬಿಡಿ' ಅನ್ನು­ತ್ತೇವೆ.
ನಮ್ಮ ಜ್ಞಾಪಕ ಚಿತ್ರ­ಶಾ­ಲೆ­ಯಲ್ಲಿ ನೆನ­ಪು­ಗಳೇ ಇಲ್ಲ!

Monday, June 11, 2007

L


ಅವನು ನೇಪಾಳದ ಕವಿ. ಇಂಗ್ಲಿಷಿನಲ್ಲಿ ಬರೆಯುತ್ತಾನೆ. ಬರೆದ ಒಂದೇ ಒಂದು ಕವಿತೆ ಎಲ್ಲೂ ಪ್ರಕಟವಾಗಿಲ್ಲ. ಮುಗಿಲ ಹಚ್ಚಡದ ಕೆಳಗೆ ನಿಚ್ಚಳ ಬೆಳದಿಂಗಳು ಎಂಬ ಸರಳ ಸಾಮಾನ್ಯ ಸಾಲುಗಳಿಂದ ಹಿಡಿದು `ನನ್ನ ಬದುಕು ನನ್ನದು ಅಂದುಕೊಂಡು ಬದುಕುತ್ತಿದ್ದೆ. ಒಂದು ಬೆಳಗ್ಗೆ ಕನ್ನಡಿ ನೋಡಿಕೊಂಡಾಗ ನನ್ನ ಬದಲು ನನ್ನ ಯಜಮಾನ ಕಾಣಿಸಿದ. ಕನ್ನಡಿ ಒರೆಸಿ ನೋಡಿದೆ, ಅಲ್ಲಿ ಯಜಮಾನನ ಬದಲು ಡಾಲರ್ ಇತ್ತು. ನಾನೊಂದು ಡಾಲರ್ ಮುದ್ರಿಸುವ ಯಂತ್ರ ಎಂದು ಆಮೇಲೆ ಗೊತ್ತಾಯಿತು' ಎಂಬಂಥ ಬಡಿದೆಬ್ಬಿಸುವ ಸಾಲುಗಳೂ ಅವನ ಕವಿತೆಗಳಲ್ಲಿವೆ.
ಅವನ ಹೆಸರು ಎಲ್. ಅವನೇ ರಚಿಸಿದ ಪುಟ್ಟ ವಿಸಿಟಿಂಗ್ ಕಾರ್ಡಿನಲ್ಲಿರುವುದು ಅದೊಂದೇ ಅಕ್ಪರ. ಅದರಲ್ಲಿ ವಿಳಾಸ ಕೂಡ ಇಲ್ಲ. ಒಂದು ಈಮೇಲ್ ವಿಳಾಸ ಮಾತ್ರ ಇದೆ. l@ell.com. ಕೇಳಿದರೆ ನನ್ನನ್ನು ಯಾರೂ ಸಂಪರ್ಕಿಸುವುದು ಇಷ್ಟವಿಲ್ಲ ಅನ್ನುತ್ತಾನೆ. ಅವನಾಗಿಯೂ ಯಾರನ್ನೂ ಸಂಪರ್ಕಿಸುವುದೂ ಇಲ್ಲ. ನವ್ಯದ ಆರಂಭದ ದಿನಗಳ ಉಡಾಫೆಯ ಕವಿಯಂತೆ ಕಾಣುವ ಎಲ್ ನೇಪಾಳಿ ಭಾಷೆಯಲ್ಲೇಕೆ ಬರೆಯುವುದಿಲ್ಲ.
'ಉಪಯೋಗ ಇಲ್ಲ. ನನ್ನ ಭಾಷೆ ಸತ್ತಿದೆ. ನನ್ನ ಭಾಷೆಗೆ ನಾನು ಹೇಳಬೇಕಾದ್ದನ್ನು ದಾಟಿಸುವ ಶಕ್ತಿಯಿಲ್ಲ. ನಾನು ಹೇಳಬೇಕಾದ್ದನ್ನು ನನ್ನ ಭಾಷೆ ಬಲ್ಲವರಿಗೆ ಹೇಳುವ ಅಗತ್ಯವೂ ನನಗಿಲ್ಲ. ನನ್ನ ಭಾಷೆಯ ಮಂದಿ ನನ್ನ ಭಾಷೆಯನ್ನು ಪ್ರೀತಿಸುವುದನ್ನು ಯಾವತ್ತೋ ಮರೆತಿದ್ದಾರೆ. ಅವರಿಗೆ ಇಂಗ್ಲಿಷ್ ಬೇಕು'.
ಯಾರಿಗೂ ಭಾಷೆ ಬೇಕಾಗಿರುವುದಿಲ್ಲ, ಬೇಕಾಗಿರುವುದು ಕಂಟೆಂಟ್. ಹೇಳಬೇಕಾದ ವಿಷಯ ಚೆನ್ನಾಗಿದ್ದಾಗ ಯಾವ ಭಾಷೆಯಲ್ಲಿ ಹೇಳಿದರೂ ಓದುತ್ತಾರೆ ಎಂದರೆ ಎಲ್ ಸಿಟ್ಟಾಗುತ್ತಾನೆ.
`ನಿನಗೆಲ್ಲೋ ತಲೆಕೆಟ್ಟಿದೆ. ಕಂಟೆಂಟ್ ಯಾರಿಗೆ ಬೇಕಾಗಿದೆ. ಎಲ್ಲರಿಗೂ ಬೇಕಾಗಿರುವುದು ಸಂವಹನಕ್ಕೊಂದು ಭಾಷೆ ಅಂದುಕೊಂಡರೆ ಅದೂ ತಪ್ಪು. ಎಲ್ಲರೂ ಈಗ ಮಾರುಹೋಗಿರುವುದು ಅಬ್ಬರಕ್ಕೆ, ಶಬ್ದಕ್ಕೆ. ಈಗಿನ ಹುಡುಗ ಹುಡುಗಿಯರು ಎಷ್ಟು ದೊಡ್ಡ ದನಿಯಲ್ಲಿ ಮಾತಾಡುತ್ತಾರೆ ಕೇಳಿದ್ದೀರಾ? ಯಾರಿಗಾದರೂ ಪಿಸುಮಾತಿನ ಶಕ್ತಿ ಏನು ಅಂತ ಗೊತ್ತಿದೆಯಾ? ಪ್ರೇಯಸಿಯ ಜೊತೆಗೆ ಕೂಡ ದೊಡ್ಡ ದನಿಯಲ್ಲಿ ಹರಟುತ್ತಿರುತ್ತಾರೆ. ಶಬ್ದದ ಸಾಮ್ರಾಜ್ಯದಲ್ಲಿ ನಾದಕ್ಕೆ ನಿನಾದಕ್ಕೆ ಜಾಗವೇ ಇಲ್ಲ. ಅಂಥವರಿಗೋಸ್ಕರ ಯಾಕೆ ಬರೆಯಲಿ?'
ಎಲ್ ಬೆಚ್ಚಿಬೀಳಿಸುತ್ತಾನೆ. ಕವಿ ಯಾಕೆ ಬರೆಯಲಿ ಅಂತ ಸುಮ್ಮನಾಗುವುದು ಅಪಾಯಕಾರಿ. ಅದರಲ್ಲೂ ಒಳ್ಳೆಯ ಕವಿ ಯಾರಿಗೋಸ್ಕರ ಬರೆಯಲಿ ಅನ್ನುವ ನಿಲುವು ತಾಳಿದಾಗ ಒಂದು ತಲೆಮಾರು ತುಂಬ ಮೌಲಿಕವಾದದ್ದನ್ನು ಕಳೆದುಕೊಳ್ಳುತ್ತದೆ. ತುಂಬ ಸೂಕ್ಪ್ಮವಾದದ್ದನ್ನು ಕಳೆದುಕೊಳ್ಳುತ್ತದೆ.
ಅಷ್ಟಕ್ಕೂ ಎಲ್ ಗೆ ತನ್ನ ಭಾಷೆಯ ಮೇಲೇಕೆ ಸಿಟ್ಟು? ಆ ಭಾಷೆ ಜಡ್ಡುಗಟ್ಟಿದೆಯಾ? ಅದರ ಮೂಲಕ ಏನನ್ನೂ ಹೇಳೋದಕ್ಕೆ ಸಾಧ್ಯವಿಲ್ಲ ಅನ್ನಿಸಿದೆಯಾ?
'ಎರಡೂ ಆಗಿಲ್ಲ. ಒಂದು ಭಾಷೆ ಹೀಗೆ ಆಗಾಗ ತನ್ನ ಘನತೆಯನ್ನೂ ನಂಬಿಕೆಯನ್ನೂ ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗೆ ಘನತೆ ಕಳಕೊಂಡ ಭಾಷೆಯಲ್ಲಿ ಎಷ್ಟೇ ಮೌಲಿಕವಾದ ನಿತ್ಯಸತ್ಯಗಳನ್ನು ಹೇಳಹೊರಟರೂ ಅದು ಅಷ್ಟು ಘನವಾಗಿ ಉಳಿಯುವುದಿಲ್ಲ. ಅದು ತುಂಬ ನೀರಸವೂ ಸರಳವೂ ಆಗಿ ಕಾಣಿಸುತ್ತದೆ. ಹೀಗೆ ಸರಳವಾಗುವ, ಸಸಾರವಾಗುವ ಮಾತು ಬಹಳ ಬೇಗ ಬಿದ್ದು ಹೋಗುತ್ತದೆ. ನಮ್ಮ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗಿ ಮತ್ತೊಂದು ಭಾಷೆಯ ಮೇಲಿನ ಮೋಹ ಅತಿಯಾದಾಗ ಹೀಗಾಗುತ್ತದೆ. ಆಗ ಆ ಭಾಷೆಯನ್ನೇ ಗೊಡ್ಡು ಅಂತ ತೀರ್ಮಾನಿಸಿ ಬಿಟ್ಟುಬಿಡುವುದು ಒಳ್ಳೆಯದು'.
ಅವನ ಅಳಲುಗಳು ಒಂದೆರಡಲ್ಲ. ಅವನ ಪ್ರಕಾರ ಅವನು ಬರೆಯುವುದು ತನ್ನ ಕಾಲದ ಯುವಕರಿಗೋಸ್ಕರ. ಆದರೆ ಯುವಕರು ಅದನ್ನೆಲ್ಲ ಓದುವುದಿಲ್ಲ. ತರುಣ ತರುಣಿಯರಿಗೆ ಅರ್ಥವಾಗಲಿ ಎಂದು ಬರೆದದ್ದು ಅವರನ್ನು ತಲುಪುವುದೇ ಇಲ್ಲ. ತುಂಬ ವಯಸ್ಸಾಗಿರುವ ಮುದಿ ವಿಮರ್ಶಕರು ಅವನ್ನೆಲ್ಲ ಓದಿ ತಮ್ಮ ನಿರ್ಣಯ ಮಂಡಿಸುತ್ತಾರೆ. ಕವಿತೆ ಬರೆಯುವುದು ಓದಿಗಾಗಿಯೇ ಹೊರತು ವಿಮರ್ಶೆಗಾಗಿ ಅಲ್ಲ. ವಿಮರ್ಶಕರಿಂದಾಗಿ ಕವಿತೆ ಅಮರವಾಗುತ್ತದೆ ಎಂದು ಭಾವಿಸುವವರಿದ್ದಾರೆ. ಆದರೆ ಕವಿತೆಗೆ ಗೋರಿ ಕಟ್ಟುವವರೇ ವಿಮರ್ಶಕರು'.
ಇಂಥ ಪ್ರಖರ ಯೋಚನೆಯ ಎಲ್ ಕವಿತೆ ಬಿಟ್ಟು ಬೇರೆ ಏನನ್ನೂ ಬರೆಯುವುದಿಲ್ಲ. ಸಾಹಿತ್ಯ ಅಂದರೆ ಕವಿತೆ ಅನ್ನುವುದು ಅವನ ನಂಬಿಕೆ. ಹೇಳಬೇಕಾದದ್ದನ್ನು ಉದ್ದುದ್ದಕ್ಕೆ ಗದ್ಯದಲ್ಲಿ ಹೇಳುವುದಕ್ಕೆ ಕವಿತ್ವ ಯಾಕೆ ಬೇಕು? ಮೂರು ಪದಗಳಲ್ಲಿ ನಿನಗನ್ನಿಸಿದ್ದನ್ನೆಲ್ಲ ಹೇಳಿಬಿಡು. ಅದು ಮುನ್ನೂರು ಪದಗಳಲ್ಲಿ ಕೇಳುವವನನ್ನು ತಲುಪಲಿ. ಅರ್ಥವಾಗುವಾಗ ವಿವರಗಳು ತುಂಬಿಕೊಳ್ಳಲಿ. ಅದು ಬಿಟ್ಟು ಹೇಳುವಾಗಲೇ ವಿವರಗಳನ್ನು ಕೊಟ್ಟರೆ ಕೇಳುವವನ ಪ್ರತಿಭೆಯನ್ನು ನೀನು ನಿರ್ಲಕ್ಪ್ಯ ಮಾಡಿದಂತಾಗುತ್ತದೆ ತಿಳಕೋ' ಎಂದು ಸಿಟ್ಟಾಗುತ್ತಾನೆ ಎಲ್.
ಎಲ್ ಅಷ್ಟು ಸಂಗ್ರಹವಾಗಿ ಬರೆಯಬಲ್ಲ ಕೂಡ.`ಸಾವು ನಾಮಪದ, ಬದುಕು ಕ್ರಿಯಾಪದ. ಬಿಡುವಿದ್ದರೆ ಸಾವು, ಬಿಡುವಿಲ್ಲದ ಬದುಕು. ಸಾವು ಬಿಡು-ಗಡೆ' ಎನ್ನುವುದು ಅವನ ಮತ್ತೊಂದು ಕವಿತೆ. ಅದು ಎಲ್ ಮಾತುಗಳ ಹಾಗೆ ವಿಕ್ಪಿಪ್ತವಾಗುತ್ತಾ ಸಾಗುತ್ತದೆ.
ಎಲ್ ನೇಪಾಳಿಯಲ್ಲಿ ಬರೆದರೆ ಅವನ ಕವಿತೆಗಳು ಅಚ್ಚಾಗುತ್ತಿದ್ದವಾ?
`ಅವನಿಗೂ ಗೊತ್ತಿಲ್ಲ. ಅಚ್ಚಾಗುವುದಕ್ಕಿಂತ ಓದುವುದು ಮುಖ್ಯ. ಓದಿಸಿಕೊಳ್ಳುವವರು ಇಲ್ಲದ ಮೇಲೆ ಅಚ್ಚಾದರೆಷ್ಟು? ಆಗದಿದ್ದರೆಷ್ಟು? ಯಾರೂ ಓದುವುದು ಬೇಡ ಎಂದು ಬರೆಯುವವನು ಕವಿಯಲ್ಲ, ವ್ಯಾಮೋಹಿ. ಎಲ್ಲರೂ ಓದಲಿ ಎಂದು ಬರೆಯುವವನೂ ಕವಿಯಲ್ಲ, ವ್ಯಾಮೋಹಿ. ಈ ಎರಡೂ ವ್ಯಾಮೋಹವನ್ನು ಮೀರಿದಾಗಲೇ ನಾನು ಹುಟ್ಟುತ್ತೇನೆ, ಬದುಕುತ್ತೇನೆ ಮತ್ತು .....
ಸಾ ಯು ವ ದಿ ಲ್ಲ!
ಎಲ್. ಎಲ್ಲೆಲ್ಲಿಯೂ ಎಲ್. ಎಲ್ಲೆಲ್ಲೆಲ್ಲೆಲ್ಲೆಲ್!



Wednesday, June 6, 2007

ನಾನೊಬ್ಬ ಜುಜುಬಿ ಓದುಗ. ನನ್ನ ಹಾಡು ನನ್ನದು

ಕದಡಿದ ನೀರು ಕೊಂಚ ತಿಳಿಯಾಗಿದೆ. ಯು. ಆರ್. ಅನಂತಮೂರ್ತಿ ಮಾತು ಕಡಿಮೆ ಮಾಡಿ ಓದುವುದರಲ್ಲಿ ತೊಡಗಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಎಸ್. ಎಲ್. ಭೈರಪ್ಪ ಅನಂತಮೂರ್ತಿ ಹೇಳಿಕೆಯ ಕುರಿತು ಮಾತಾಡುವುದಕ್ಕೇ ಹೋಗಲಿಲ್ಲ. ‘ಆವರಣ’ದ ಓದು ಅನ್ನುವ ಒಂದು ಚರ್ಚೆಯಲ್ಲಿ ಭಾಗವಹಿಸಿದಾಗಲೂ ಅವರು ಅನಂತಮೂರ್ತಿಯವರ ಬಗ್ಗೆ ಮಾತಾಡಲಿಲ್ಲ.
ಈ ಅನಗತ್ಯ ವಿವಾದ ನಮಗೆ ಬೇಕಿರಲಿಲ್ಲ. ನಾವ್ಯಾರೂ ಒಂದು ಕೃತಿ ವಿವಾದಾತ್ಮಕ ಅನ್ನುವ ಕಾರಣಕ್ಕೆ ಅದನ್ನು ಓದುವುದಕ್ಕೆ ಹೋಗುವುದಿಲ್ಲ. ಓದು ನಮ್ಮ ಖಾಸಗಿ ಖುಷಿ. ಕೇವಲ ವಾದ ಮಾಡುವವರೂ ಬರೆಯುವವರೂ ಚರ್ಚಾಪಟುಗಳೂ ವಿಮರ್ಶಕರೂ ಒಂದು ಕೃತಿಯನ್ನು ಅಧ್ಯಯನದ ದೃಷ್ಟಿಯಿಂದ ಓದಬಹುದು. ಅಂಥವರು ಸಾವಿರ ಓದುಗರಲ್ಲಿ ಒಬ್ಬರೋ ಇಬ್ಬರೋ ಆಗಿರಬಹುದು. ಅವರೂ ಕೂಡ ಆ ಕೃತಿಯನ್ನು ದುಡ್ಡುಕೊಟ್ಟು ಕೊಂಡುಕೊಂಡಿರಲಿಕ್ಕಿಲ್ಲ. ಕಾಂಪ್ಲಿಮೆಂಟರಿ ಕಾಪಿ ಓದಿಕೊಂಡು ಅವರು ಅಧ್ಯಯನಾಸಕ್ತರಾಗುತ್ತಾರೆ.
ಆದರೆ, ಓದುಗ? ಭೈರಪ್ಪನವರ ಪುಸ್ತಕ ಬಂದಿದೆ ಅನ್ನುವುದು ಗೊತ್ತಾಗುತ್ತಿದ್ದಂತೆ ಪಾರ್ಕಿಂಗಿಗೆ ಒದ್ದಾಡಿ, ಕೆಲಸದ ನಡುವೆ ಹೇಗೋ ಬಿಡುವು ಮಾಡಿಕೊಂಡು ಪುಸ್ತಕದಗಂಡಿಗೆ ನುಗ್ಗಿ ರಿಯಾಯಿತಿಗೂ ಕಾಯದೇ ಪುಸ್ತಕ ಕೊಂಡುಕೊಂಡು ಅದರ ಮುಖಪುಟ ಕೊಳೆಯಾಗದಂತೆ ಮನೆಗೆ ಕೊಂಡೊಯ್ದು, ತನ್ನ ಏಕಾಂತದಲ್ಲಿ ಓದುತ್ತಾ, ಗೆಳೆಯರಿಗೆ ಇಂಥದ್ದೊಂದು ಪುಸ್ತಕ ಓದ್ತಿದ್ದೇನೆ ಅಂತ ಹೇಳಿ ಸುಖಿಸುತ್ತಾ, ತನಗೆ ತಾನೇ ಹೆಮ್ಮೆ ಪಡುತ್ತಾ, ಹೊಸ ಹೊಳಹೊಂದು ಕಂಡರೆ ಖುಷಿಪಡುತ್ತಾ ಇದ್ದುಬಿಡುತ್ತಾನೆ. ಆ ಸಂಭ್ರಮ ಬೈರಪ್ಪನವರ ಕೃತಿಯ ಬಗ್ಗೆ ಮಾತ್ರವಲ್ಲ, ಅನಂತಮೂರ್ತಿ, ತೇಜಸ್ವಿ, ಕಂಬಾರ, ರವಿ ಬೆಳಗೆರೆ ಯಾರು ಬರೆದರೂ ಅವರವರ ಓದುಗರಿಗೆ ಇದ್ದೇ ಇರುತ್ತದೆ.
ಆದರೆ ನಮ್ಮಂಥ ಓದುಗರ ಬಗ್ಗೆ ಈ ಲೇಖಕರಿಗೆ ನಿಜಕ್ಕೂ ಪ್ರೀತಿ ಇರುತ್ತದಾ? ಒಮ್ಮೆ ಲಂಕೇಶರು ಓದುಗನೊಬ್ಬನಿಗೆ ‘ನೀನೊಬ್ಬ ಜುಜುಬಿ ಓದುಗ’ ಎಂದು ಬೈದಿದ್ದರು. ಇವತ್ತಿಗೂ ನನ್ನ ಕೃತಿ ಏನನ್ನಿಸಿತು ಅಂತ ಒಬ್ಬ ಓದುಗನನ್ನೂ ಲೇಖಕ ಕೇಳುವುದಿಲ್ಲ. ಅವನಿಗೆ ಓದುಗರ ಅಭಿಪ್ರಾಯ ಮುಖ್ಯವೇ ಅಲ್ಲ. ಯಾಕೆಂದರೆ ಅದು ದಾಖಲಾಗುವುದಿಲ್ಲ ಅನ್ನುವುದು ಲೇಖಕನಿಗೆ ಗೊತ್ತು. ಅದರ ಬದಲು ಅವರು ವಿಮರ್ಶಕರ ಅಭಿಪ್ರಾಯಕ್ಕಷ್ಟೇ ಬೆಲೆ ಕೊಡುತ್ತಾರೆ. ಸಾಹಿತ್ಯ ಚರಿತ್ರೆಯಲ್ಲಿ ತಮಗೊಂದು ಸ್ಥಾನ ದೊರಕಿಸಿಕೊಡುವವರು ಅವರೇ ತಾನೇ?
ಆದರೆ ಯಾವ ಓದುಗ ಕೂಡ ವಿಮರ್ಶಕನನ್ನು ನೆಚ್ಚಿಕೊಂಡಿಲ್ಲ. ಕರ್ವಾಲೋ ಕುರಿತು ವಿಮರ್ಶೆ ಪ್ರಕಟವಾಗುವ ಮೊದಲೇ ಅದನ್ನು ಮೆಚ್ಚಿಕೊಂಡವರ ಸಂಖ್ಯೆ ಲಕ್ಷಾಂತರ. ‘ಪರಿಸರದ ಕತೆಗಳು’ ಕುರಿತು ವಿಮರ್ಶೆಯೇ ಬಂದಿಲ್ಲ. ಯಾಕೆಂದರೆ ಅಲ್ಲಿ ವಿಮರ್ಶಕನಿಗೆ ಪ್ರವೇಶಕ್ಕೆ ಅವಕಾಶವೇ ಇಲ್ಲವಲ್ಲ? ಹಾಗೇ, ಕಾರಂತರ ಕಾದಂಬರಿಗಳು, ಕುವೆಂಪು ಕಾದಂಬರಿಗಳೂ, ನಾವು ಓದಿದ ಎಷ್ಟೋ ಕತೆ, ಕವಿತೆ, ಕಾದಂಬರಿಗಳೂ ಯಾವ ಗದ್ದಲವನ್ನೂ ಮಾಡಲಿಲ್ಲ. ಅವರು ಕತೆಗಾರರೋ ಕಾದಂಬರಿಕಾರರೋ ಎಂದು ಪ್ರಶ್ನಿಸುವುದಕ್ಕೂ ಓದುಗರು ಹೋಗಲಿಲ್ಲ. ಕತೆ ಇಷ್ಟವಾಯಿತೋ ಇಲ್ಲವೋ ಅನ್ನುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನ ಪ್ರಶ್ನೆಯನ್ನೇನೂ ಓದುಗ ಕೇಳಿಲ್ಲ.
ಒಂದು ಕೃತಿಯಿಂದಾಗಿ ಸಮಾಜವೇ ಬದಲಾಗುತ್ತದೆ. ಕೋಮುವಾದ, ಜಾತೀವಾದ, ಜನಾಂಗೀಯವಾದ ತಲೆದೋರುತ್ತದೆ ಅನ್ನುವುದೆಲ್ಲ ಸುಳ್ಳು ಅನ್ನಿಸುವುದಿಲ್ಲವೇ? ಆವರಣದಲ್ಲಿ ಅದೆಲ್ಲ ಇದೆ ಅಂತ ಇವರು ಹೇಳುವ ಮುಂಚೆಯೇ ಅದನ್ನು ಅರ್ಧ ಲಕ್ಷ ಮಂದಿ ಓದಿಯಾಗಿತ್ತು. ಅದರಿಂದಾಗಿ ಎಲ್ಲೂ ಸೌಹಾರ್ದ ಹಾಳಾದದ್ದು ಸುದ್ದಿಯಾಗಿಲ್ಲ. ತುಂಬ ಆಳಕ್ಕೆ ಇಳಿದು ತರ್ಕ ಕುತರ್ಕಗಳನ್ನು ಮುಂದಿಟ್ಟುಕೊಂಡು ಯೋಚಿಸುವ ಅಗತ್ಯ ಇದೆ ಅನ್ನಿಸುತ್ತದೆಯಾ? ಅಷ್ಟಕ್ಕೂ ಸಾಹಿತ್ಯ ಎನ್ನುವುದು ಇವರು ಭಾವಿಸಿದಷ್ಟು ಪ್ರಭಾವ ಬೀರುವ ಮಾಧ್ಯಮವಾ? ತಾವು ಮುಖ್ಯ ವಕ್ತಾರರು ಅಂದುಕೊಂಡಿರುವ ಸಾಹಿತಿಗಳ ಹೆಸರು ನಮ್ಮ ರಾಜ್ಯದ ಶೇಕಡಾ ಒಂದರಷ್ಟು ಮಂದಿಗೆ ಗೊತ್ತಿರಬಹುದಾ? ಅವರಲ್ಲಿ ಶೇಕಡಾ ಒಂದರಷ್ಟು ಮಂದಿ ಅವರ ವಿಮರ್ಶೆ ಓದಿರಬಹುದಾ? ಹಾಗಿದ್ದರೆ ಯಾಕೆ ಪಂಚಕೋಟಿ ಕನ್ನಡಿಗರ ನಾಡಲ್ಲಿ ಸಾವಿರ ಪ್ರತಿಗಳನ್ನು ಮಾರುವುದಕ್ಕೂ ಕಷ್ಟವಾಗುತ್ತಿದೆ?
ಸುಮ್ಮನೆ ಇದೆಲ್ಲ ನೆನಪಾಯಿತು. ಕವಿ ಯಾರು ಅನ್ನುವುದೂ ಗೊತ್ತಿಲ್ಲದೇ ಕೇಳಿ ಮೆಚ್ಚಿದ ‘ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನಾ ಕಣ್ಣಲ್ಲಿ ನಿನ್ನ ಹೆಸರು’ ಹಾಡು ನೆನಪಾಯಿತು. ಇವತ್ತಿಗೂ ಕವಿ ಯಾರೆಂದು ಗೊತ್ತಿಲ್ಲದ ಅದೆಷ್ಟೋ ಹಾಡುಗಳು ನೆನಪಾಗುತ್ತಿವೆ.
ಮಳೆ ಶುರುವಾಗುವುದರಲ್ಲಿದೆ. ಮಳೆಯ ಸಂಜೆ ಕಿಟಕಿಯ ಪಕ್ಕ ಕುಳಿತು ನೋಡುತ್ತಿದ್ದರೆ ಖುಷಿಯಾಗುತ್ತದೆ ಎಂದಾಕ್ಷಣ, ಅಲ್ಲಿ ಪಕ್ಕದ ಬೀದಿಯಲ್ಲಿ ಬಡವನ ಮನೆಗೆ ನೀರು ನುಗ್ಗುತ್ತಿದೆ. ಖುಷಿಪಡುವ ನೀನು ಜೀವವಿರೋಧಿ ಅಂದರೆ ಏನು ಸಾಯೋಣ?

Sunday, June 3, 2007

ನಾವೇಕೆ ಪ್ರೀತಿ­ಗಾಗಿ ಸಾಯು­ತ್ತೇವೆ?


ನಾವು ಸಿನಿಮಾ ನೋಡು­ವುದು ಯಾಕೆ?
ಮನ­ರಂ­ಜ­ನೆಗೆ, ಹೊತ್ತು ಕಳೆ­ಯು­ವು­ದಕ್ಕೆ, ಕಲಾ­ಪ್ರೀ­ತಿಗೆ, ಸಿನಿಮಾ ಒಂದು ಅದ್ಭುತ ಮಾಧ್ಯಮ ಎನ್ನುವ ಕಾರ­ಣಕ್ಕೆ...
ಎಲ್ಲವೂ ಸುಳ್ಳು. ಅದ್ಯಾ­ವುದೂ ಕಾರ­ಣ­ಗಳೇ ಅಲ್ಲ. ಹದಿ­ಹ­ರೆ­ಯದ ಹುಡು­ಗ­ರಿಂದ ಹಿಡಿದು ವಯಸ್ಸು ಮಾಗಿ­ಸಿದ ಪ್ರಬು­ದ್ಧರ ತನಕ ಎಲ್ಲರೂ ಚಿತ್ರ­ಮಂ­ದಿ­ರಕ್ಕೆ ಹೋಗು­ವುದು;
ಪ್ರೀತಿ­ಸು­ವು­ದನ್ನು ಕಲಿ­ಯು­ವು­ದಕ್ಕೆ.
ಇದು ನಮ್ಮ ಊಹೆ­ಯಲ್ಲ, ನಮ್ಮ ತೀರ್ಮಾ­ನವೂ ಅಲ್ಲ. ಯುರೋಪು ರಾಷ್ಟ್ರ­ಗ­ಳಲ್ಲಿ ನಡೆದ ಒಂದು ಸಮೀ­ಕ್ಪೆ­ಯಿಂದ ಹೊರ­ಬಿದ್ದ ಸತ್ಯ. ನೀವು ಸಮೀ­ಕ್ಪೆ­ಗ­ಳನ್ನು ನಂಬು­ತ್ತೀ­ರಾ­ದರೆ ಇದನ್ನೂ ನಂಬ­ಬೇಕು.
ಅಂತಿ­ಮ­ವಾಗಿ ಸಿನಿಮಾ ಕಲಿ­ಸು­ವುದು ಹೇಗೆ ಪ್ರೀತಿ­ಸ­ಬೇಕು ಅನ್ನು­ವು­ದನ್ನು. ನಮ್ಮ ಪ್ರೀತಿ­ಯನ್ನು ಹೇಗೆ ವ್ಯಕ್ತ­ಪ­ಡಿ­ಸ­ಬೇಕು ಎನ್ನು­ವು­ದನ್ನು. ನಾನು ಪ್ರೀತಿ­ಸಿದ ಹುಡು­ಗಿ­ಯನ್ನು ನಾನು ಹೇಗೆ ಕೇರ್ ಮಾಡ­ಬೇಕು, ಅವ­ಳನ್ನು ಹೇಗೆ ಮುಚ್ಚ­ಟೆ­ಯಾಗಿ ನೋಡಿ­ಕೊ­ಳ್ಳ­ಬೇಕು ಅನ್ನು­ವು­ದನ್ನು ಕಲಿ­ಸುವ ವಿಶ್ವ­ವಿ­ದ್ಯಾ­ಲಯ ಈ ಜಗ­ತ್ತಿ­ನಲ್ಲೇ ಇಲ್ಲ. ಅದ­ನ್ನೆಲ್ಲ ಯಾರೂ ಹೇಳಿ­ಕೊ­ಡು­ವುದೂ ಇಲ್ಲ. ಎಲ್ಲರೂ ಗುಟ್ಟಾಗಿ ಪ್ರೀತಿ­ಸು­ತ್ತಾರೆ, ಬಹಿ­ರಂ­ಗ­ವಾಗಿ ಮದು­ವೆ­ಯಾ­ಗು­ತ್ತಾರೆ. ಮದು­ವೆ­ಯಾದ ನಂತರ ಗಂಡ-ಹೆಂ­ಡಿರ ಸಂಬಂಧ ಹೇಗಿ­ರುತ್ತೆ ಅನ್ನು­ವುದು ಜಗ­ತ್ತಿಗೇ ಗೊತ್ತು. ಆದರೆ ಪ್ರೇಮಿ­ಸು­ವುದು ಹೇಗೆ? ಅದನ್ನು ಯಾರು ಹೇಳು­ತ್ತಾರೆ.
ಸಿನಿ­ಮಾ­ಗಳು ಹೇಳು­ತ್ತವೆ, ಕಾದಂ­ಬ­ರಿ­ಗಳು ಹೇಳು­ತ್ತವೆ ಎಂಬ ಕಾರ­ಣಕ್ಕೇ ಅವು ಜನ­ಪ್ರಿ­ಯ­ವಾ­ಗಿವೆ. ಟೈಟಾ­ನಿಕಚಿತ್ರ­ವನ್ನು ನಾವು ನೋಡಿದ್ದು ಅವ­ರಿ­ಬ್ಬರ ಪ್ರೇಮದ ತೀವ್ರ­ತೆ­ಗೋ­ಸ್ಕ­ರವೇ ಹೊರತು, ಹಡಗು ಮುಳು­ಗಿದ ದುರಂ­ತ­ಕ್ಕೋ­ಸ್ಕರ ಅಲ್ಲ. ಹಡಗು ಮುಳು­ಗಿ­ದ್ದನ್ನು ಪತ್ರಿ­ಕೆ­ಯಲ್ಲಿ ಓದಿ ತಿಳಿ­ಯ­ಬ­ಹುದು. ಆದರೆ ಮುಳು­ಗು­ತ್ತಿ­ರುವ ಹಡ­ಗಿ­ನಲ್ಲಿ ಅವ­ರಿ­ಬ್ಬರೂ ಹೇಗೆ ಪ್ರೀತಿ ಮಾಡಿ­ದರು ಅನ್ನು­ವು­ದನ್ನು ಯಾರೂ ಹೇಳು­ವು­ದಿಲ್ಲ. ಈ ಜಗತ್ತೇ ಒಂದು ಸಾಗರ, ಈ ಬದುಕೇ ಒಂದು ಟೈಟಾ­ನಿಕಇದು ಮುಳು­ಗಿ­ಹೋ­ಗುವ ಮುನ್ನ ಹೇಗಯ್ಯಾ ಪ್ರೀತಿ ಮಾಡಲಿ.. ಹೇಳಿ ಕೊಡು ಬಾ..
ಹೇಳಿ­ಕೊ­ಟ್ಟಿದೆ ಸಿನಿಮಾ.
ಹಾಗಿ­ದ್ದರೆ ಪ್ರೀತಿ ಏನು? ಅದೊಂದು ಕಲೆಯಾ? ಕಲೆ­ಯಾ­ದರೆ ಅದನ್ನು ತಿಳು­ವ­ಳಿಕೆ ಮತ್ತು ಸ್ವಪ್ರ­ಯ­ತ್ನ­ದಿಂದ ಮೈಗೂ­ಡಿ­ಸಿ­ಕೊ­ಳ್ಳ­ಬೇಕಾ? ಅಥವಾ ಅದೊಂದು ಆಪ್ತ ಸಂವೇ­ದನೆ ಮಾತ್ರವಾ? ಹಾಗೊಂದು ವೇಳೆ ಅದೊಂದು ಆಪ್ತ ಸಂವೇ­ದ­ನೆ­ಯಷ್ಟೇ ಆಗಿ­ದ್ದರೆ ಅದು ಸಂಭ­ವಿ­ಸು­ವುದು ಕೇವಲ ಮ್ಯಾಟರ್ ಆಫ್ ಚಾಯ್ಸ್ ಹೌದಾ? ಅದೃ­ಷ್ಟ­ವಂ­ತರು ಮಾತ್ರ ಪ್ರೀತಿ­ಯಲ್ಲಿ ಬೀಳು­ತ್ತಾರಾ? ಹಾಗಿ­ದ್ದರೆ ಬಹು­ತೇಕ ಮಂದಿ ದುರ­ದೃ­ಷ್ಟ­ವಂ­ತರಾ?
ಪ್ರೀತಿ­ಸುವ ಹಂತ­ದಲ್ಲಿ ಎಲ್ಲರೂ ಅದೊಂದು ಕಲೆ ಎಂದೇ ನಂಬು­ತ್ತಾರೆ. ಪ್ರೀತಿ ಮಾಡೋ­ದನ್ನು ಕಲೀ­ಬೇಕು ಅಂತ ಒದ್ದಾ­ಡು­ತ್ತಾರೆ. ಬೇರೆ­ಯ­ವರ ಸಲಹೆ ತೆಗೆ­ದು­ಕೊ­ಳ್ಳು­ತ್ತಾರೆ. ಒಂದು ಹುಡು­ಗಿ­ಯನ್ನು ಪ್ರೀತಿ­ಸು­ತ್ತಿ­ದ್ದೇನೆ, ಆಕೆ­ಯನ್ನು ಹೇಗೆ ಅಪ್ರೋಚ್ ಮಾಡ­ಬೇಕು ಎಂದು ಸಲಹೆ ಕೇಳು­ತ್ತಾರೆ. ಸಲಹೆ ಸಿಗು­ವು­ದಿಲ್ಲ. ಗಂಟೆ­ಗ­ಟ್ಟಲೆ ಪಾರ್ಕಿ­ನಲ್ಲಿ ಅವನೂ ಅವಳೂ ಕೂತು ಏನು ಮಾತಾ­ಡು­ತ್ತಾರೆ ಅನ್ನು­ವುದು ಹೊರ­ಗಿ­ನಿಂದ ನೋಡುತ್ತಾ ನಿಂತ ಮುಗ್ಧ­ಮಾ­ನ­ವ­ನಿಗೆ ಗೊತ್ತಾ­ಗು­ವುದೇ ಇಲ್ಲ. ಹಾಗಂತ ಹಾಗೆ ಮಾತಾ­ಡಿದ ಹುಡು­ಗ­ನನ್ನು ಕೇಳಿ­ನೋಡಿ. ಅವನು ಏನೂ ಹೇಳು­ವು­ದಿಲ್ಲ.
ಆಗ ಪ್ರೀತಿ­ಸು­ವು­ದನ್ನು ಹೇಗಾ­ದರೂ ಕಲಿ­ಯ­ಬೇಕು ಅನ್ನಿ­ಸು­ತ್ತದೆ. ಪ್ರೇಮ­ಗೀತೆ ಕೇಳು­ತ್ತೇವೆ, ಸಿನಿಮಾ ನೋಡು­ತ್ತೇವೆ, ಪ್ರೇಮ­ಕತೆ ಓದು­ತ್ತೇವೆ. ಪ್ರೀತಿ­ಸು­ವು­ದನ್ನು ಕಲಿ­ಯು­ವು­ದಕ್ಕೆ ಏನೇನು ಸಾಧ್ಯವೋ ಅದ­ನ್ನೆಲ್ಲ ಮಾಡು­ತ್ತೇವೆ.
ಪ್ರೀತಿಯ ಸಮ­ಸ್ಯೆ­ಗಳು ಅನೇಕ. ತಾನು ಪ್ರೀತಿ­ಸು­ತ್ತಿ­ಲ್ಲವೋ ಅಥವಾ ಪ್ರೀತಿ­ಸ­ಲ್ಪ­ಡು­ತ್ತಿ­ಲ್ಲವೋ ಅನ್ನು­ವುದು ಅನೇ­ಕ­ರಿಗೆ ಗೊತ್ತಾ­ಗು­ವು­ದಕ್ಕೇ ಸಾಕಷ್ಟು ಕಾಲಾ­ವ­ಕಾಶ ಬೇಕಾ­ಗು­ತ್ತದೆ. ತನಗೆ ಪ್ರೀತಿ­ಸುವ ಶಕ್ತಿಯೇ ಇಲ್ಲ­ವೇನೋ ಅಂತಲೂ ಅನೇ­ಕ­ರಿಗೆ ಆಗಾಗ್ಗೆ ಅನಿ­ಸು­ವು­ದುಂಟು. ಪ್ರೀತಿ­ಪಾ­ತ್ರ­ನಾ­ಗು­ವುದು ಹೇಗೆ ಎನ್ನು­ವುದು ಎಲ್ಲ ಗಂಡ­ಸಿನ ಸಮಸ್ಯೆ.
ಈ ಸಮ­ಸ್ಯೆಗೆ ಗಂಡಸು ಕಂಡು­ಕೊಂ­ಡಿ­ರುವ ಪರಿ­ಹಾ­ರ­ವೆಂ­ದರೆ ಯಶ­ಸ್ಸಿನ ಮೆಟ್ಟಿ­ಲೇ­ರು­ವುದು, ಅಧಿ­ಕಾ­ರ­ದಲ್ಲಿ ಎತ್ತ­ರೆ­ತ್ತ­ರಕ್ಕೆ ಏರು­ವುದು, ಶ್ರೀಮಂ­ತ­ನಾ­ಗು­ವುದು. ಹೆಣ್ಣು ಕಂಡು­ಕೊಂ­ಡಿ­ರುವ ಮಾರ್ಗ­ವೆಂ­ದರೆ ಸುಂದ­ರಿಯೂ ಆಕ­ರ್ಷ­ಕಳೂ ಆಗು­ವುದು. ಇತ್ತಿ­ತ್ತ­ಲಾಗಿ ಅಂತ­ಸ್ತು­ಗಳ ಕಲ್ಪನೆ ಬದ­ಲಾ­ಗು­ತ್ತಿ­ದ್ದಂತೆ ಸಾಮಾ­ಜಿ­ಕ­ವಾಗಿ ತುಂಬ ರಿಫೈನ್ಡ್ ಆಗಿ ವರ್ತಿ­ಸುವ ಮೂಲಕ ಆಕ­ರ್ಷಿ­ಸುವ ಪ್ರಯ­ತ್ನ­ಗಳು ಶುರು­ವಾ­ಗಿವೆ. ತುಂಬ ಸೊಗ­ಸಾಗಿ ಮಾತಾ­ಡುವ ಮೂಲಕ, ನೆರ­ವಾ­ಗುವ ಮೂಲಕ, ವಿನ­ಯ­ದಿಂದ, ಘನ­ತೆ­ಯಿಂದ ಪರ­ಸ್ಪ­ರರು ಆಕ­ರ್ಷಿ­ಸಲು ಆರಂ­ಭಿ­ಸಿ­ದ್ದಾರೆ.
ಅಂದರೆ ವ್ಯಕ್ತಿ­ತ್ವದ ಒಳ್ಳೆಯ ಗುಣ­ಗ­ಳನ್ನು ಬಿಟ್ಟು ಪ್ರೀತಿ ಬಾಳ­ಲಾ­ರದು. ಅದು ನಂಬಿ­ರು­ವುದು ಕೇವಲ ಸಂಪತ್ತು, ಘನತೆ, ಸದ್ಗುಣ ಮತ್ತು ಸಚ್ಚಾ­ರಿ­ತ್ರ­ಗ­ಳನ್ನು ಅಂದ­ಹಾ­ಗಾ­ಯಿತು. ಜೊತೆ­ಗೊಂ­ದಷ್ಟು ಸೌಂದರ್ಯ ಮತ್ತು ಸವಿ­ಮಾ­ತು­ಗಳು ಸೇರಿ­ದರೆ ಯಾರು ಯಾರನ್ನು ಬೇಕಾ­ದರೂ ಪ್ರೀತಿ­ಸ­ಬ­ಹುದಾ?
ಇಲ್ಲಿಯೇ ಪ್ರೀತಿ­ಸು­ವುದು, ಪ್ರೀತಿ­ಸ­ಲ್ಪ­ಡು­ವುದು ಅಷ್ಟು ಮುಖ್ಯವಾ ಎಂಬ ಪ್ರಶ್ನೆಯೂ ಮೂಡು­ತ್ತದೆ. ಮದು­ವೆ­ಯಾದ ನಂತ­ರವೂ ಪ್ರೀತಿ­ಸದೇ ಇರು­ವ­ವ­ರನ್ನು, ಪ್ರೀತಿ­ಸಿಯೂ ಮದು­ವೆ­ಯಾ­ಗ­ದ­ವ­ರನ್ನು ನಾವು ಕಾಣು­ತ್ತೇವೆ. ಎಷ್ಟೋ ಪ್ರಕ­ರ­ಣ­ಗ­ಳಲ್ಲಿ ಪ್ರೀತಿ ಎಂಬುದು ಏಕಾಂ­ತ­ದಿಂದ ಪಾರಾ­ಗುವ ವಿಫಲ ಯತ್ನ­ವಷ್ಟೇ ಆಗಿ­ರು­ತ್ತದೆ. ಮತ್ತೆಷ್ಟೋ ಪ್ರಯ­ತ್ನ­ಗ­ಳಲ್ಲಿ ಪ್ರೀತಿ ಏಕಾಂ­ಗಿ­ತ­ನ­ವನ್ನು ಸಫ­ಲ­ವಾಗಿ ಹುಟ್ಟು­ಹಾ­ಕು­ತ್ತದೆ.
ನಾವು ಪ್ರೀತಿ­ಸು­ವು­ದನ್ನು ಕಲಿ­ತದ್ದು ಇಂಗ್ಲಿ­ಷ­ರಿಂದ ಅಂದು­ಕೊಂ­ಡಿ­ದ್ದೇವೆ. ನಮ್ಮ ಇಂಗ್ಲಿಷ್ ವಿದ್ಯಾ­ಭ್ಯಾಸ, ನಡ­ವ­ಳಿಕೆ ಎಲ್ಲವೂ ಅಮೆ­ರಿಕಾ ಮತ್ತು ಇಂಗ್ಲೆಂ­ಡಿ­ನಿಂದ ಆಮ­ದಾ­ದದ್ದು. ಇವತ್ತು ನಾವು ಅಮೆ­ರಿ­ಕ್ ಸಂಸ್ಕೃ­ತಿ­ಯನ್ನೇ ಹೆಚ್ಚು ಉದಾ­ರ­ವಾಗಿ ಸ್ವೀಕ­ರಿ­ಸಿ­ದ್ದರೂ ಪ್ರೀತಿಯ ಮೊದಲ ಪಾಠ­ಗ­ಳನ್ನು ನಮಗೆ ಕಲಿ­ಸಿ­ದ­ವರು ಬ್ರಿಟಿ­ಷರು. ಆದರೆ ಬ್ರಿಟಿ­ಷರು ತಮ್ಮ ದೇಶ­ದಲ್ಲಿ ನಮ­ಗಿಂತ ಹೆಚ್ಚು ಸಂಪ್ರ­ದಾ­ಯ­ಸ್ಥರೂ ಕಟ್ಟು­ನಿ­ಟ್ಟಿ­ನ­ವರೂ ಆಗಿ­ದ್ದ­ವರು. ಭಾರ­ತೀಯ ಕಾವ್ಯ­ಗ­ಳಲ್ಲಿ ದುಷ್ಯಂತ, ಶಕುಂ­ತ­ಲೆ­ಯ­ರಿ­ದ್ದಾರೆ, ಅಮೃ­ತ­ಮತಿ ಮತ್ತು ಅಷ್ಟಾ­ವ­ಕ್ರ­ರಿ­ದ್ದಾರೆ, ಯಶೋ­ಧರ ಚರಿ­ತೆ­ಯಿದೆ. ಇಂಗ್ಲಿಷ್ ಪ್ರೇಮ­ಕಾವ್ಯ ಆ ಮಟ್ಟಿಗೆ ತುಂಬ ಬಡ­ತ­ನದ್ದು. ಅಲ್ಲಿ­ರುವ ಏಕೈಕ ಜನ­ಪ್ರಿಯ ಪ್ರೇಮ­ಜೋಡಿ ರೊಮಿಯೋ-ಜೂ­ಲಿ­ಯಟ್. ಅದೂ ದುರಂತ ಪ್ರೇಮ.
ಬೇರೆ ದೇಶ­ಗಳ ಪ್ರೇಮ ಚರಿ­ತ್ರೆ­ಗ­ಳನ್ನೇ ನೋಡಿ, ಗ್ರೀಕ್ ರೋಮ್ ಮುಂತಾದ ತುಂಬ ಪ್ರಾಚೀ­ನ­ವಾದ ಪುರಾಣ ಕಥಾ­ನ­ಕ­ಗ­ಳಿ­ರು­ವಲ್ಲಿ ಕೂಡ ಭಾರ­ತ­ದ­ಲ್ಲಿ­ರು­ವಷ್ಟು ಗಾಢ­ವಾದ ಪ್ರೇಮ, ವಿರ­ಹ­ಗಳ ಕತೆ­ಯಿಲ್ಲ. ಅಲ್ಲಿ­ರು­ವುದು ಕೇವಲ ಕಾಂಪ್ಲೆ­ಕ್ಸು­ಗಳು. ಪ್ರೇಮವೂ ಒಂದು ಕಾಂಪ್ಲೆಕ್ಸು. ಅದು ಕಾಮ­ವಾಗಿ ಬದ­ಲಾ­ಗು­ತ್ತದೆ. ಆದರೆ ನಮ್ಮ ಪುರಾ­ಣ­ಗ­ಳಲ್ಲಿ ಕಾಮಕ್ಕೂ ಪ್ರೇಮಕ್ಕು ಅಂಥ ದೊಡ್ಡ ವ್ಯತ್ಯಾ­ಸ­ವೇ­ನಿಲ್ಲ. ಎರಡೂ ಕೂಡ ಆರೋ­ಗ್ಯ­ಕ­ರ­ವಾದ ಪ್ರಕ್ರಿಯೆ.
ಇವತ್ತು ಕೂಡ ಪ್ರೇಮ­ಚಿ­ತ್ರ­ಗಳು ಜನ­ಪ್ರಿ­ಯ­ವಾ­ಗಿ­ದ್ದರೆ ಒಪ್ಪ­ಬ­ಹು­ದಾ­ಗಿತ್ತು. ಆದರೆ ಆಗೊಂದು ಈಗೊಂದು ಬಂದು ಹೋಗುವ ಸುಂದರ ಪ್ರೇಮ­ಕ­ತೆ­ಗ­ಳನ್ನು ಬಿಟ್ಟರೆ ಈಗಿನ ಆಸ­ಕ್ತಿ­ಗಳೇ ಬೇರೆ. ಗಂಡಸು ಮತ್ತು ಹೆಂಗಸು ಕೊಳ್ಳು­ಬಾ­ಕ­ತ­ನ­ದತ್ತ ಮಾರು­ಹೋ­ಗಿ­ದ್ದಾರೆ. ಹೀಗೆ ತಮ್ಮ ಏಕಾಂತ ಮತ್ತು ವ್ಯಸ­ನ­ಗ­ಳನ್ನು ಬೇರೆ ಬೇರೆ ಆಸ­ಕ್ತಿ­ಗಳ ಮೂಲಕ ತೀರಿ­ಸಿ­ಕೊ­ಳ್ಳು­ತ್ತಿ­ದ್ದಾರೆ. ಕಂತಿ­ನಲ್ಲಿ ಏನೇನೋ ಸಾಮಾನು ಕೊಂಡು ಮನೆ­ತುಂ­ಬಿ­ಸಿ­ಕೊ­ಳ್ಳುವ ಗಂಡು­ಹೆ­ಣ್ಣು­ಗಳೂ ತಮ­ಗೆ­ದು­ರಾ­ಗುವ ವ್ಯಕ್ತಿ­ಗ­ಳನ್ನೂ ಹಾಗೇ ನೋಡಲು ಆರಂ­ಭಿ­ಸಿ­ದ್ದಾರೆ. ಆಕ­ರ್ಷಕ ಎನ್ನು­ವುದು ನಾಲ್ಕಂಕಿ ಸಂಬಳ, ಸ್ವಂತ­ದ್ದೊಂದು ಮನೆ, ಓಡಾ­ಡಲು ಕಾರು, ಕ್ರೆಡಿಟ್ ಕಾರ್ಡು, ಕ್ಲಬ್ಬು ಮೆಂಬ­ರ್­ಶಿ­ಪ್ಪು­ಗ­ಳಾಗಿ ಅರ್ಥ ಪಡೆ­ದು­ಕೊಂ­ಡಿದೆ. ಓಣಿಯ ತಿರು­ವಿನ ಬೋರ್ ವೆಲ್ ಪಕ್ಕ ನಿಂತು ಪಿಸು­ಗು­ಟ್ಟುವ ಗಂಡು­ಹೆ­ಣ್ಣು­ಗಳ ಪ್ರೀತಿ ಹಳೆ­ಯ­ದಾ­ಗಿದೆ.
ಚೌಕಾ­ಸಿ­ಯಾ­ಗಿದ್ದ ಪ್ರೀತಿ ಇವತ್ತು ಲೆಕ್ಕಾ­ಚಾ­ರ­ಗ­ಳನ್ನು ದಾಟಿ ನಿಂತಿದೆ. ನನಗೆ ಪ್ರೀತಿ­ಸೋ­ದಕ್ಕೆ ಪುರು­ಸೊ­ತ್ತಿಲ್ಲ. ನಿನ­ಗೇನು ಬೇಕು ಕೇಳು ತಂದು­ಹಾ­ಕು­ತ್ತೀನಿ ಎಂಬ­ಲ್ಲಿಗೆ ಬಂದು ನಿಂತಿದೆ. ಪ್ರೀತಿ­ಸ­ದಿ­ದ್ದರೆ ಹಾಳಾ­ಗಿ­ಹೋಗು, ನನಗೆ ಇಂಥದ್ದು ಬೇಕು ಎಂದು ಕೇಳು­ವ­ಲ್ಲಿಗೆ ತಲು­ಪಿದೆ.
ಹೀಗಾಗಿ ಪ್ರೇಮಿ­ಗ­ಳೀಗ ಸಿನಿಮಾ ನೋಡು­ವು­ದಿಲ್ಲ, ಪಿಸು­ಗು­ಟ್ಟು­ವು­ದಿಲ್ಲ, ಕಟ್ಟೆಯ ಬಳಿಯೋ ಬೆಟ್ಟದ ಬಳಿಯೋ ನಿಂತು ಮಾತಾ­ಡು­ವು­ದಿಲ್ಲ. ಆ ಬೆಟ್ಟ­ದಲ್ಲಿ ಬೆಳ­ದಿಂ­ಗ­ಳಲ್ಲಿ ಸುಳಿ­ದಾ­ಡ­ಬೇಡ ಗೆಳತಿ ಎಂದು ಈತ ಹಾಡು­ವು­ದಿಲ್ಲ.
ಬದ­ಲಾಗಿ ಎಸ್ಸೆ­ಮ್ಮೆ­ಸ್ಸು­ಗಳೂ ಈ ಮೇಲು­ಗಳೂ ಚಾಟ್ ­ಗಳೂ ಎಕ್ಸ್­ಚೇಂ­ಜಾ­ಗು­ತ್ತಿ­ರು­ತ್ತವೆ. ತನು­ಮ­ನ­ಧ­ನ­ಗ­ಳನ್ನು ಒತ್ತೆ­ಯಿಟ್ಟು ದಕ್ಕಿ­ಸಿ­ಕೊ­ಳ್ಳ­ಬೇ­ಕಾ­ಗಿದ್ದ ಪ್ರೀತಿಗೆ ಈಗ ಧನ­ವೊಂ­ದಿ­ದ್ದರೆ ಸಾಕು.
ಧನ­ವಿ­ದ್ದರೆ ಬಾ, ಈ ತನುವೂ ನಿನ್ನದು ಮನವೂ ನಿನ್ನದು ಎನ್ನು­ವ­ವರು ಸಾಲು­ಗಟ್ಟಿ ನಿಲ್ಲು­ತ್ತಾರೆ.
ಈಗ ಹೇಳಿ.
ಪ್ರೀತಿ ಕಲೆಯಾ, ವಿಜ್ಞಾ­ನವಾ ಅಥವಾ....
ಕೇವಲ ಅಜ್ಞಾ­ನವಾ?

Wednesday, May 23, 2007

ಕಡ­ತಂ­ದದ್ದು ಮನೆ­ತ­ನಕ, ಒಡ­ಹು­ಟ್ಟಿದ್ದು ಕೊನೆ­ತ­ನಕ


ಅದು ಮುದು­ಕ­ರಿಗೆ ತಕ್ಕ ನಾಡಲ್ಲ. ತೋಳ­ಸೆ­ರೆ­ಯಲ್ಲಿ
ಯುವ­ಜ­ನರು, ಮರ­ಮ­ರ­ದಲ್ಲು ಹಕ್ಕಿ­ಗಳು
-ಎಲ್ಲ ಸಾವ­ಕೊಂಬ ಸಂತಾ­ನ­ಗಳೆ-ತಂ­ತಮ್ಮ ಹಾಡು­ಗ­ಳಲ್ಲಿ
ಸಾಲ್ಮ್ ಪಾತ­ಗಳು, ಮ್ಯಕ­ರೆಲ್ ಗಿಜಿ­ಗು­ಟ್ಟುವ ಸಮು­ದ್ರ­ಗಳು
ಭೂ, ಜಲ, ಜಂತು­ಗಳು ಇಡೀ ಗ್ರೀಷ್ಮ ಸ್ತುತಿ­ಸು­ವುದು ಮುದ­ದಲ್ಲಿ
ಪಡು­ವು­ದನ್ನು, ಹುಟ್ಟು­ವು­ದನ್ನು, ಸಾಯು­ವು­ದನ್ನು...

ಹೀಗೆ ಅನು­ವಾ­ದ­ಗೊಂ­ಡದ್ದು ಯೇಟ್ಸನ ಸೈಲಿಂಗ್ ಟು ಬೈಜಾಂ­ಟಿಯಂ ಎಂಬ ಪದ್ಯ. ಅನು­ವಾ­ದಿ­ಸಿ­ದ­ವರು ಯು. ಆರ್. ಅನಂ­ತ­ಮೂರ್ತಿ. ಇಂಥ ಪದ್ಯ­ಗಳು ಅರ್ಥ­ವಾ­ಗು­ವು­ದಿಲ್ಲ ಎಂದಾಗ ನವ್ಯದ ಎಲ್ಲ ಕವಿ­ಗಳೂ ಒಕ್ಕೊ­ರ­ಲಿ­ನಿಂದ ಹೇಳಿ­ದ್ದಿಷ್ಟೇ. ಪದ್ಯ ಓದು­ವು­ದಕ್ಕೂ ಸಿದ್ಧತೆ ಬೇಕು. ಹೀಗಾಗಿ ಪದ್ಯ ಬಗೆ­ಯುವ ಬಗೆ ಎಂಬ ಅಂಕಣ ಶುರು­ವಾ­ಯಿತು. ಒಂದು ಪದ್ಯ­ವನ್ನು ಅರ್ಥ ಮಾಡಿ­ಕೊ­ಳ್ಳು­ವುದು ಹೇಗೆ ಎಂಬ ಬಗ್ಗೆ ಪುಸ್ತ­ಕ­ಗಳು ಬಂದವು. ಅಲ್ಲಿ ಅಂಡ­ರ್­ಸ್ಟಾಂ­ಡಿಂಗ್ ಪೊಯೆಟ್ರಿ ಅಂತ ಬರೆ­ದಾಗ ಇಲ್ಲೂ ಅಂಥ­ದ್ದೇನೋ ಬಂತು.
ಮೇಲಿನ ಇಂಗ್ಲಿಷ್ ಪದ್ಯದ ಮೂಲ ಸಾಲು­ಗ­ಳನ್ನೇ ಓದಿ;
That is no country for old men. The young
In one another's arms, birds in the trees
The salmon falls, the mackerel-crowded seas,
Fish, Flesh or fowl, commend all summer long
whatever is begotten, born and dies.


ಇಂಗ್ಲಿಷ್ ಬಲ್ಲ­ವ­ರಿಗೆ ಇವ­ತ್ತಿಗೂ ಇಂಗ್ಲಿಷೇ ಸುಲಭ. ಇಂಗ್ಲಿಷ್ ತಿಳಿ­ಯ­ದ­ವ­ರಿಗೆ ಅದು ಕನ್ನಡ ಅನು­ವಾ­ದ­ದಲ್ಲೂ ತಿಳಿ­ಯದು. ಹಾಗಿದ್ದೂ ಅಂಥ ಅನು­ವಾ­ದದ ಪ್ರಯ­ತ್ನ­ಗಳು ತುಂಬ ಗಂಭೀ­ರ­ವಾ­ಗಿಯೇ ನಡೆ­ದವು.
ಕಾವ್ಯದ ಅನು­ವಾದ ಕಷ್ಟ ಅನ್ನು­ವು­ದಕ್ಕೆ ಅನೇಕ ಕಾರ­ಣ­ಗ­ಳನ್ನು ಕೊಡ­ಬ­ಹುದು. ಎಕೆ ರಾಮಾ­ನು­ಜ್ ಕೂಡ ಕೂಡಲ ಸಂಗಮ ಅನ್ನು­ವು­ದನ್ನು God of meeting rivers ಎಂದು ಅನು­ವಾ­ದಿಸಿ ನಗೆ­ಪಾ­ಟಲು ಮಾಡಿ­ದ್ದರು. ನಮ್ಮ ಭಾವ­ಗೀ­ತೆ­ಗ­ಳನ್ನು ಕೂಡ ಅನು­ವಾ­ದಿ­ಸು­ವುದು ಕಷ್ಟವೇ. ಯಾಕೆಂ­ದರೆ ಕವಿತೆ ಒಂದು ಮಣ್ಣಿನ ಗುಣ­ವನ್ನು ಮೈಗೂ­ಡಿ­ಸಿ­ಕೊಂಡು ಅರ­ಳಿ­ರುತ್ತೆ. ನಮ್ಮ ಸಂಪ್ರ­ದಾಯ, ತಿಳು­ವ­ಳಿಕೆ, ನೆನಪು, ಗ್ರಹಿಕೆ ಮತ್ತು ಆಚಾ­ರ­ವಿ­ಚಾ­ರ­ಗಳ ಜೊತೆಗೇ ಕವಿತೆ ಹುಟ್ಟು­ತ್ತದೆ. ತೀರಾ ಸರ­ಳ­ವಾದ `ನ­ವಿ­ಲೂರ ಮನೆ­ಯಿಂದ ನುಡಿ­ಯೊಂದ ತಂದಿ­ಹೆನು, ಬಳೆಯ ತೊಡಿ­ಸು­ವು­ದಿಲ್ಲ ನಿಮಗೆ' ಎಂಬ ಸಾಲನ್ನು ಇಂಗ್ಲಿ­ಷಿಗೆ ಅನು­ವಾ­ದಿ­ಸಿ­ದರೆ ಅವ­ರಿಗೆ ಏನು ಅರ್ಥ­ವಾ­ಗು­ತ್ತದೆ. ಯಾವತ್ತೂ ಬಳೆ­ಯನ್ನೇ ತೊಡ­ದ­ವರು, ಬಳೆ­ಗಾ­ರ ಗಂಡ­ಸಿಗೆ ಬಳೆ ತೊಡಿ­ಸು­ವು­ದಿಲ್ಲ ಎಂಬ ಸಾಲಿನ ಹಿಂದಿನ ಗೇಲಿ­ಯನ್ನೋ ನವಿ­ಲೂರ ಮನೆ­ಯಿಂದ ತಂದ ನುಡಿ­ಯನ್ನೋ ಹೇಗೆ ಗ್ರಹಿ­ಸು­ತ್ತಾರೆ. ಹಾಗೇ ಯೇಟ್ಸ್ ಮತ್ತು ಕೀಟ್ಸ್ ಕೂಡ. ಅಲ್ಲಿಯ ಕಾವ್ಯ­ವನ್ನು ಅಲ್ಲಿಗೆ ಒಪ್ಪು­ವಂತೆ ಸವಿ­ಯ­ಬೇಕು. ಅನು­ವಾ­ದಿ­ಸು­ವು­ದಕ್ಕೇ ಹೋಗ­ಬಾ­ರದು. ಎಲ್ಲೋ ಒಂದೆ­ರಡು ಎಲ್ಲ­ರಿಗೂ ಒಪ್ಪುವ ಸಾಲು­ಗಳು ಇಷ್ಟ­ವಾ­ದರೆ ಸಂತೋ­ಷ­ಪ­ಡ­ಬೇಕು.
ಅದ­ರಲ್ಲೂ ಕನ್ನ­ಡ­ದಿಂದ ಬೇರೆ ಭಾಷೆಗೆ ಅನು­ವಾ­ದಿ­ಸು­ವು­ದಕ್ಕೆ ಕಷ್ಟ­ವಾ­ಗುವ ಪದ್ಯ­ಗ­ಳೆಂ­ದರೆ ದಾಸ­ರವು.
ಇದೊಂದು ಕೀರ್ತ­ನೆ­ಯನ್ನೇ ನೋಡಿ;


ಶೃಂಗಾ­ರ­ವಾ­ಗಿ­ಹುದು ಶ್ರೀಹ­ರಿಯ ಮಂಚ
ಅಂಗನೆ ರುಕ್ಮಿ­ಣಿ­ಯ­ರಸ ಮಲ­ಗಿ­ರುವ ಮಂಚ

ಬಡಗಿ ಮುಟ್ಟದ ಮಂಚ ಕಡ­ಲಿ­ನೊ­ಳ­ಗಿನ ಮಂಚ
ಮೃಡನ ತೋಳಿ­ನಲಿ ಅಡ­ಗಿ­ರುವ ಮಂಚ
ಸಡ­ಗ­ರ­ವುಳ್ಳ ಮಂಚ ಹೆಡೆ­ಯುಳ್ಳ ಹೊಸ ಮಂಚ

... ಹೀಗೆ ಸಾಗು­ತ್ತದೆ ಈ ಗೀತೆ. ಇದನ್ನು ಯಾರಾ­ದರೂ ಇಂಗ್ಲಿ­ಷಿಗೆ ಫ್ರೆಂಚಿಗೂ ಅನು­ವಾ­ದಿ­ಸಿ­ದರೆ ಅಲ್ಲಿಯ ಓದು­ಗ­ನಿಗೆ ಏನಾ­ದರೂ ದಕ್ಕು­ವು­ದಕ್ಕೆ ಸಾಧ್ಯವೇ? ಎಷ್ಟೇ ಟಿಪ್ಪ­ಣಿ­ಗ­ಳನ್ನು ಕೊಟ್ಟರೂ ಈ ಕಲ್ಪನೆ ಮೂಡು­ವು­ದಕ್ಕೆ ಸಾಧ್ಯವೇ?
ಈ ಒಂದೇ ಒಂದು ಹಾಡು ಹತ್ತಾರು ಕತೆ­ಗ­ಳನ್ನು ಹೇಳು­ತ್ತದೆ ಅನ್ನು­ವು­ದನ್ನು ಗಮ­ನಿಸಿ. ಪಲ್ಲ­ವಿ­ಯಲ್ಲೇ ಇದು ಅಂಗನೆ ರುಕ್ಮಿ­ಣಿ­ಯ­ರಸ ಅನ್ನು­ವಲ್ಲಿ, ಶ್ರೀಹ­ರಿಯ ಪತ್ನಿ ರುಕ್ಮಿಣಿ ಅನ್ನು­ತ್ತದೆ. ಅಲ್ಲಿಗೆ ಕೃಷ್ಣಾ­ವ­ತಾ­ರದ ಕತೆ ಗೊತ್ತಿ­ಲ್ಲ­ದ­ವ­ರಿಗೆ ರುಕ್ಮಿ­ಣಿಯೇ ಲಕ್ಪ್ಮಿ ಅನ್ನು­ವುದು ಗೊತ್ತಾ­ಗು­ವುದು ಸಾಧ್ಯ­ವಿಲ್ಲ. ಅಲ್ಲಿಂದ ಮುಂದೆ ಬಡಗಿ ಮುಟ್ಟದ ಮಂಚ ಎನ್ನು­ವು­ದನ್ನು ಅರ್ಥ­ಮಾ­ಡಿ­ಕೊಂ­ಡರೂ ಹಾಲಿನ ಸಮು­ದ್ರ­ದಲ್ಲಿ ವಿಷ್ಣು ಮಲ­ಗಿ­ರು­ತ್ತಾನೆ ಎನ್ನುವ ಕಲ್ಪನೆ ಇಲ್ಲ­ದ­ವ­ರಿಗೆ ಕಡ­ಲಿ­ನೊ­ಳ­ಗಿಹ ಮಂಚ ಎಂಬ ಸಾಲು ಗ್ರಹಿ­ಕೆಗೆ ನಿಲು­ಕದ್ದು. ಶಿವ ತೋಳಿಗೆ ಹಾವನ್ನು ಸುತ್ತಿ­ಕೊಂ­ಡಿ­ರು­ತ್ತಾನೆ ಅನ್ನೋದು ಗೊತ್ತಾ­ಗದ ಹೊರತು ಮೃಡನ ತೋಳಿ­ನಲಿ ಅಡ­ಗಿ­ರುವ ಮಂಚ ಎಂಬು­ದರ ಗೂಢಾರ್ಥ ಅರಿ­ವಾ­ಗದು. ಮತ್ತೆ ಈಶ್ವ­ರ­ನನ್ನು ಮೃಡ ಎಂದೇಕೆ ಕರೆ­ಯು­ತ್ತಾರೆ ಅನ್ನು­ವು­ದಕ್ಕೆ ಮತ್ತೊಂದು ಕತೆ ಕೇಳ­ಬೇ­ಕಾ­ಗು­ತ್ತದೆ.
ಇನ್ನೂ ಮುಂದಕ್ಕೆ ಓದು­ತ್ತಿ­ದ್ದಂತೆ ಮತ್ತೊಂ­ದೊಂದೇ ಕತೆ­ಗಳು ಎದು­ರಾ­ಗು­ತ್ತವೆ. ಕಾಳ­ಗ­ದೊ­ಳ­ರ್ಜು­ನನ ಮಕುಟ ಕೆಡ­ಹಿದ ಮಂಚ ಎಂಬ ಸಾಲಿ­ನಲ್ಲಿ ತಕ್ಪ­ಕನ ಕತೆ­ಯಿದೆ. ಅರ್ಜು­ನನ ಮಕು­ಟ­ವನ್ನೇ ಅದ್ಯಾಕೆ ಕೆಡ­ವಿತು ಅನ್ನು­ವುದು ಮತ್ತೊಂದು ಕತೆ.
ಕತೆ­ಯನ್ನು ಅನು­ವಾ­ದಿ­ಸ­ಬ­ಹುದು. ನಾಟ­ಕ­ವನ್ನು ಮತ್ತೊಂದು ಭಾಷೆಗೆ ಅಳ­ವ­ಡಿ­ಸ­ಬ­ಹುದು. ಕಷ್ಟ­ಪ­ಟ್ಟರೆ ಪ್ರಬಂ­ಧ­ವನ್ನೂ ನಮ್ಮ­ದ­ಲ್ಲದ ಭಾಷೆ­ಯಿಂದ ತಂದು ಓದಿ ಸುಖಿ­ಸ­ಬ­ಹುದು. ಆದರೆ ಕಾವ್ಯ ಮಾತ್ರ ಅದೇ ಭಾಷೆ­ಯಲ್ಲಿ ಹುಟ್ಟ­ಬೇಕು. ಅಷ್ಟೇ ಅಲ್ಲ, ಒಂದು ಭಾಷೆ­ಯಲ್ಲಿ ಒಂದು ರೂಪ­ದಲ್ಲಿ ಅರ­ಳಿದ ಕವಿ­ತೆ­ಯನ್ನು ಮತ್ತೊಂದು ರೂಪ­ದಲ್ಲಿ ಪ್ರಕ­ಟ­ಪ­ಡಿ­ಸು­ವುದೂ ಕಷ್ಟವೇ. ಮಂಕು­ತಿ­ಮ್ಮನ ಕಗ್ಗ­ವನ್ನೋ, ಅಂತಃ­ಪು­ರ­ಗೀ­ತೆ­ಯನ್ನೋ ಇನ್ನೊಂದು ಥರ ಬರೆ­ಯ­ಬ­ಹುದಾ ಯೋಚಿಸಿ ನೋಡಿ!
ಸರ್ವಜ್ಞ ಬರೆದ ಮೂರು ಸಾಲಿನ ತ್ರಿಪ­ದಿ­ಗ­ಳನ್ನು ಮತ್ತೊಂದು ಭಾಷೆಗೆ ಅನು­ವಾ­ದಿ­ಸ­ಲಿಕ್ಕೆ ಹೊರ­ಟರೆ ಎಂಥ ಅನಾ­ಹು­ತ­ವಾ­ದೀತು ಯೋಚಿಸಿ;
ಬೆರೆ­ವಂಗೆ ರೋಗ­ವೂ ಮೊರೆ­ವಂಗೆ ರಾಗ­ವೂ
ಬರೆ­ವಂಗೆ ಓದು- ಬರು­ವಂತೆ ಸಾಧಿ­ಪ­ಗೆ
ಬಾರ­ದಿ­ಹು­ದುಂಟೆ? ಸರ್ವಜ್ಞ.

ಉಂಡು ಕೆಂಡವ ಕಾಸಿ ಉಂಡು ಶತ­ಪಥ ನಡೆ­ದು
ಉಂಡೆ­ಡದ ಮಗ್ಗುಲಲಿ ಮಲಗೆ ವೈದ್ಯ­ನಾ
ಭಂಡಾ­ಟ­ವಿಲ್ಲ! ಸರ್ವಜ್ಞ.
ಚಿತ್ರ- ಈ ಫೊಟೋ ಕಳುಹಿಸಿಕೊಟ್ಟದ್ದು ಗೆಳೆಯ ಹರಿಪ್ರಸಾದ್. ಅವರಿಗೆ ಅವರ ಗೆಳೆಯರಾರೋ ಕಳುಹಿಸಿದರಂತೆ. ಇದನ್ನು ಹಿಡಿದವನ ಹೆಸರು ಕೃಷ್ಣ ಘುಲೆ. ಹಾವು ಹಿಡಿಯುವುದರಲ್ಲಿ ಆತ ನಿಷ್ಣಾತ. ಈ ಇಪ್ಪತ್ತು ಕೇಜಿ ತೂಗುವ ಹನ್ನೆರಡು ಅಡಿ 3 ಇಂಚು ಉದ್ದದ ಹಾವನ್ನು ಆತ ಹಿಡಿದದ್ದು ಗೋವಾದಲ್ಲಿ.

Monday, May 21, 2007

ತಿಳಿ­ಯದೇ ಔಷಧಿ ಕುಡಿ­ದರೂ ರೋಗ ಮಾಯವಾಗುವ ಹಾಗೆ...

ಪುರಾ­ಣ­ದಲ್ಲಿ ಬರುವ ಪ್ರತಿ­ಯೊಂದು ಕತೆ­ಯೊ­ಳಗೂ ಇರುವ ಮ್ಯಾಜಿ­ಕ್ ರಿಯ­ಲಿ­ಸ­ಮ್ಮಿನ ಅಂಶ­ಗ­ಳನ್ನು ನೋಡಿ­ದರೆ ಅಚ್ಚ­ರಿ­ಯಾ­ಗು­ತ್ತದೆ. ಅಷ್ಟೇ ಅಲ್ಲ, ಒಂದು ಕತೆಗೂ ಅದಕ್ಕೆ ಸಂಬಂ­ಧವೇ ಇಲ್ಲ­ವೆಂದು ತೋರುವ ಮತ್ತೊಂದು ಕತೆಗೂ ಆಳ­ದ­ಲ್ಲೊಂದು ಸಂಬಂ­ಧ­ವಿ­ರು­ವು­ದನ್ನು ಗಮ­ನಿ­ಸಿ­ದರೆ ಮಹಾ­ಭಾ­ರ­ತ­ದಂಥ ಮಹಾ­ಕಾ­ವ್ಯ­ವನ್ನು ಕವಿ ಎಷ್ಟು ಎಚ್ಚ­ರ­ದಿಂದ ಬರೆ­ದಿ­ದ್ದಾನೆ ಅನ್ನು­ವುದು ಅರ್ಥ­ವಾ­ಗು­ತ್ತದೆ. ಸಾವಿ­ರಾರು ಪಾತ್ರ­ಗಳು ಬಂದಿ­ದ್ದರೂ ಅಲ್ಲಿ ಪಾತ್ರ­ಗಳ ನಡು­ವಿನ ಸಂಬಂಧ ಮತ್ತು ವಯಸ್ಸು ಎಲ್ಲೂ ಏರು­ಪೇ­ರಾ­ಗಿಲ್ಲ. ಸಾಮಾ­ನ್ಯ­ವಾಗಿ ಮಹಾ­ಕಾ­ದಂ­ಬ­ರಿ­ಗ­ಳನ್ನು ಬರೆ­ಯುವ ಹೊತ್ತಿಗೆ, ಅದ­ರಲ್ಲೂ ಪೂರ್ವ­ಜ­ನ್ಮದ ಕತೆ­ಗ­ಳನ್ನು ಹೇಳು­ತ್ತಿ­ರು­ವಾಗ ಇಂಥ ಏರು­ಪೇ­ರು­ಗ­ಳಿಗೆ ಅವ­ಕಾ­ಶ­ವಿ­ರು­ತ್ತದೆ. ಅದ­ನ್ನೆಲ್ಲ ಗಮ­ನ­ದ­ಲ್ಲಿ­ಟ್ಟು­ಕೊಂಡೇ ಕವಿ ಅದ­ನ್ನೆಲ್ಲ ಹೆಣೆ­ಯುತ್ತಾ ಹೋಗಿದ್ದು ಆತನ ಪ್ರತಿ­ಭೆಗೆ ಸಾಕ್ಪಿ.
ಇನ್ನೊಂದು ಕುತೂ­ಹ­ಲ­ಕರ ಸಂಗ­ತಿ­ಯೆಂ­ದರೆ ಇಡೀ ಮಹಾ­ಭಾ­ರ­ತ­ವನ್ನು ಒಬ್ಬರು ಇನ್ನೊ­ಬ್ಬ­ರಿಗೆ ಹೇಳಿ­ದಂತೆ ರಚಿ­ತ­ಗೊಂ­ಡದ್ದು. ಅಲ್ಲಿ ಯಾವು­ದನ್ನೂ ಕವಿ ತನ್ನ­ದೆಂದು ಹೇಳು­ವು­ದಿಲ್ಲ. ಭಾರತ ಮತ್ತು ಭಾಗ­ವತ ಎರಡೂ ಕೂಡ ಯಾರೋ ಯಾರಿಗೋ ಹೇಳಿ­ದ್ದನ್ನು ಕವಿ ಇಲ್ಲಿ ಹೇಳು­ತ್ತಿ­ದ್ದಾನೆ ಅಷ್ಟೇ. ಹೀಗಾಗಿ ಕವಿಗೆ ಗೊತ್ತಿ­ರು­ವು­ದೆಲ್ಲ ಕೇಳಿದ ಕತೆ­ಗಳೇ.
ಉದಾ­ಹ­ರ­ಣೆಗೆ ಪರೀ­ಕ್ಪಿ­ತ­ರಾ­ಜ­ನಿಗೆ ಶುಕ­ಮುನಿ ಹೇಳಿದ ಅಸಂಖ್ಯ ಕತೆ­ಗಳ ಪೈಕಿ ಅಜಾ­ಮಿ­ಳನ ಕತೆಯೂ ಒಂದು. ಅದು ಹೀಗೆ ಆರಂ­ಭ­ವಾ­ಗು­ತ್ತದೆ;
ಪರೀ­ಕ್ಪಿ­ದ್ರಾಜ; ಗುರು­ದೇವಾ, ಅರಿತೋ ಅರಿ­ಯ­ದೆಯೋ ಪಾಪ ಮಾಡಿದ ಮೇಲೆ ನರ­ಕ­ಶಿ­ಕ್ಪೆ­ಯನ್ನು ಅನು­ಭ­ವಿ­ಸ­ಲೇ­ಬೇ­ಕ­ಲ್ಲವೆ? ಅದ­ರಿಂದ ತಪ್ಪಿ­ಸಿ­ಕೊ­ಳ್ಳಲು ಉಪಾ­ಯ­ವೇನು?
ಶುಕ­ಮುನಿ; ರೋಗಕ್ಕೆ ತಕ್ಕ ಚಿಕಿತ್ಸೆ ಮಾಡುವ ಹಾಗೆ, ಪಾಪಕ್ಕೆ ತಕ್ಕ ಪ್ರಾಯ­ಶ್ಚಿತ್ತ ಮಾಡಿ­ಕೊ­ಳ್ಳ­ಬೇಕು.
ಪರೀ­ಕ್ಪಿ­ದ್ರಾಜ; ಆನೆಯು ನೀರಿ­ನಲ್ಲಿ ಮುಳುಗಿ, ಪುನಃ ಮಣ್ಣನ್ನು ಮೈಮೇಲೆ ಎರ­ಚಿ­ಕೊ­ಳ್ಳುವ ಹಾಗೆ ಪ್ರಾಯ­ಶ್ಚಿತ್ತ ಮಾಡಿ­ಕೊಂಡು ಪುನಃ ಪಾಪ ಮಾಡಿ­ದರೆ?
ಶುಕ­ಮುನಿ;ಪ್ರಾ­ಯ­ಶ್ಚಿ­ತ್ತ­ವೆಂ­ಬುದು ರೋಗದ ಉಪ­ಶ­ಮ­ನ­ಕ್ಕಾಗಿ ತೆಗೆ­ದು­ಕೊ­ಳ್ಳುವ ಔಷಧಿ ಇದ್ದ­ಹಾಗೆ. ಅದ­ರಿಂದ ರೋಗ ಪೂರ್ತಿ ವಾಸಿ­ಯಾ­ಗು­ವು­ದೇನೂ ಇಲ್ಲ. ಕರ್ಮ­ದಿಂದ ಕರ್ಮಕ್ಕೆ ಪರಿ­ಹಾ­ರ­ವೆಂ­ದಿಗೂ ಆಗು­ವು­ದಿಲ್ಲ. ಪ್ರಾಯ­ಶ್ಚಿ­ತ್ತ­ದಿಂದ ತಾತ್ಕಾ­ಲಿ­ಕ­ವಾದ ಪಾಪ ನೀಗು­ತ್ತ­ದೆಯೇ ಹೊರತು ಹಿಂದು­ಮುಂ­ದಿನ ಕರ್ಮ ನಿವಾ­ರ­ಣೆ­ಯಾ­ಗದು.
ಪರೀ­ಕ್ಪಿತ; ಹಾಗಿ­ದ್ದರೆ ಕರ್ಮ ಬುಡ­ಸ­ಮೇತ ನಿರ್ಮೂಲ ಮಾಡು­ವುದು ಹೇಗೆ?
ಈ ಪ್ರಶ್ನೆಗೆ ಉತ್ತ­ರ­ವಾಗಿ ಶುಕ­ಮುನಿ ಕತೆ­ಯೊಂ­ದನ್ನು ಹೇಳು­ತ್ತಾರೆ. ಅದು ಅಜಾ­ಮಿಳ ಎಂಬ ಬ್ರಾಹ್ಮ­ಣನ ಕತೆ. ಅದು ಹೀಗೆ;
ಅಜಾ­ಮಿಳ ಕನ್ಯಾ­ಕು­ಬ್ಜದ ಪ್ರಜೆ. ವೇದ­ಪಾ­ರಂ­ಗತ. ಆಚಾ­ರ­ವಂತ. ಪರ­ಸ್ತ್ರೀ­ಯನ್ನು ಕಣ್ಣೆ­ತ್ತಿಯೂ ನೋಡ­ದ­ವನು, ದಯಾಳು, ಪರೋ­ಪ­ಕಾರಿ.
ಈತ ಒಮ್ಮೆ ಕಾಡಿಗೆ ಹೋದಾಗ ಸುಂದ­ರಿ­ಯಾದ ಹೆಣ್ಣೊ­ಬ್ಬ­ಳನ್ನು ನೋಡು­ತ್ತಾನೆ. ಅವಳು ಕಂಠ­ಪೂರ್ತಿ ಹೆಂಡ ಕುಡಿದು ಮತ್ತೇ­ರಿ­ದ್ದಾಳೆ. ಅವಳ ಜೊತೆ­ಗೊಬ್ಬ ಹುಡುಗ ಅವ­ಳಷ್ಟೇ ನಿರ್ಲಜ್ಜ ಸ್ಥಿತಿ­ಯಲ್ಲಿ ಕುಡಿದು ಮತ್ತೇ­ರಿ­ದ್ದಾನೆ. ಇಬ್ಬರೂ ವಿನೋದ ವಿಹಾ­ರ­ದಲ್ಲಿ ಮಗ್ನ­ರಾ­ಗಿ­ದ್ದಾರೆ.
ಅದನ್ನು ನೋಡಿದ ದಿನ­ದಿಂದ ಅಜಾ­ಮಿ­ಳನ ಬಾಳಿನ ದಾರಿ ಬೇರೆ­ಯಾ­ಯಿತು. ಆತ ಆ ಹೆಣ್ಣಿನ ಚಿಂತೆ­ಯಲ್ಲಿ ಮುಳು­ಗಿದ. ಅವ­ಳನ್ನು ಒಲಿ­ಸಿ­ಕೊ­ಳ್ಳುವ ಪ್ರಯ­ತ್ನಕ್ಕೆ ಬಿದ್ದ. ತನ್ನ ಮಡ­ದಿ­ಯನ್ನು ಮರೆತು ಸಂಪಾ­ದ­ನೆ­ಯ­ನ್ನೆಲ್ಲ ಅವಳ ಕಾಲ­ಡಿಗೆ ಸುರಿದ. ಮನೆ, ಆಸ್ತಿ ಎಲ್ಲರೂ ಕರ­ಗಿ­ಹೋಗಿ ನಿರ್ಗ­ತಿ­ಕ­ನಾದ. ಕೊನೆಗೆ ಮೋಸ, ವಂಚನೆ, ಕಳ್ಳ­ತನ ಮಾಡುವ ಮಟ್ಟ­ಕ್ಕಿ­ಳಿದ.
ಕ್ರಮೇಣ ಅದೇ ಅವನ ವೃತ್ತಿಯೂ ಆಗಿ­ಹೋ­ಯಿತು. ಹಣ­ವಿ­ಲ್ಲದ ದಿನ ಪ್ರಾಣಿ­ಗ­ಳನ್ನು ಕೊಂದು ಮಾಂಸ ತಿನ್ನುತ್ತಾ ಆತ ಕಾಲ­ಕ­ಳೆದ. ಹತ್ತು ಮಕ್ಕ­ಳಿದ್ದ ಅವನ ಕೊನೆಯ ಮಗನ ಹೆಸರು ನಾರಾ­ಯಣ. ಎಂಬ­ತ್ತೆಂ­ಟನೆ ವಯ­ಸ್ಸಿಗೆ ಕಾಯಿಲೆ ಬಿದ್ದು ಬಸ­ವ­ಳಿದ ಆತ ಕೊನೆಯ ಮಗ­ನಾದ ನಾರಾ­ಯ­ಣನ ಹೆಸರು ಕರೆ­ಯುತ್ತಾ ಆತ ತನ್ನ ಬಳಿ­ಯಲ್ಲೇ ಇರ­ಬೇಕು ಅಂತ ಬಯ­ಸು­ತ್ತಿದ್ದ. ಇಂತಿಪ್ಪ ಒಂದು ದಿನ ಅವನ ಮುಂದೆ ಯಮ­ದೂ­ತರು ಬಂದು ನಿಂತಾಗ ಅಜಾ­ಮಿಳ `ನಾ­ರಾ­ಯಣಾ' ಎಂದು ಮಗ­ನನ್ನು ಕೂಗಿ ಕರೆದ.
ತಕ್ಪಣ ಅಲ್ಲಿ ಯಮ­ದೂ­ತರ ಪಕ್ಕ­ದಲ್ಲಿ ದೇವ­ದೂ­ತರೂ ಪ್ರತ್ಯ­ಕ್ಪ­ರಾ­ದರು. ಯಮ­ದೂ­ತ­ರಿಗೂ ದೇವ­ದೂ­ತ­ರಿಗೂ ಜಗಳ ಶುರು­ವಾ­ಯಿತು. ಅಜಾ­ಮಿಳ ಮಹಾ­ಪಾ­ಪಿ­ಯೆಂದೂ ಆತ ಯಮ­ಲೋ­ಕಕ್ಕೆ ಸಲ್ಲ­ಬೇ­ಕೆಂದೂ ಯಮ­ದೂ­ತರು ವಾದಿ­ಸಿ­ದರು. ಮರ­ಣ­ಕಾ­ಲ­ದಲ್ಲಿ ಅಜಾ­ಮಿಳ ನಾರಾ­ಯಣ ಸ್ಮರಣೆ ಮಾಡಿ­ದ್ದ­ರಿಂದ ಅವನು ಯಮ­ಲೋ­ಕಕ್ಕೆ ಹೋಗ­ಕೂ­ಡ­ದೆಂದು ದೇವ­ದೂ­ತರು ವಾದ­ಕ್ಕಿ­ಳಿ­ದರು. ಅವ­ರಿ­ಬ್ಬರ ನಡುವೆ ಹೀಗೆ ಮಾತಾ­ಯಿತು;
ದೇವ­ದೂತ; ಧರ್ಮಾ­ಧ­ರ್ಮದ ನಿರ್ಣಯ ಹೇಗೆ?
ಯಮ­ದೂತ; ವೇದ ಒಪ್ಪಿದ್ದು ಧರ್ಮ. ಅದಕ್ಕೆ ವಿರೋ­ಧ­ವಾ­ದದ್ದು ಅಧರ್ಮ. ಭಗ­ವಂತ ವೇದ­ಸ್ವ­ರೂಪ. ಆದ್ದ­ರಿಂದ ಅಧರ್ಮ ಮಾಡಿ­ದ­ವನು ಶಿಕ್ಪಾರ್ಹ.
ದೇವ­ದೂತ; ಜಗ­ತ್ತಿನ ಎಲ್ಲರೂ ಮಾಡುವ ಪಾಪ­ಗ­ಳನ್ನು ನೀವು ಕಣ್ಣಿಟ್ಟು ನೋಡು­ತ್ತೀರೋ?
ಯಮ­ದೂತ; ನಾವು ನೋಡ­ದಿ­ದ್ದರೂ ಸೂರ್ಯ, ಅಗ್ನಿ, ಆಕಾಶ, ದೇವ­ತೆ­ಗಳು, ಗೋವು­ಗಳು, ಚಂದ್ರ, ಸಂಧ್ಯೆ, ಜಲ, ಭೂಮಿ, ಕಾಲ, ಯಮ­ಧರ್ಮ ಎಂಬ ಹನ್ನೊಂದು ಮಂದಿ ಸದಾ ನೋಡು­ತ್ತಿ­ರು­ತ್ತಾರೆ.
ದೇವ­ದೂತ; ಹಾಗಿ­ದ್ದರೆ ಮನು­ಷ್ಯರು ಒಳ್ಳೆಯ ಕೆಲ­ಸ­ಗ­ಳನ್ನೇ ಮಾಡುತ್ತಾ ದೇವರ ಪ್ರೀತಿಗೆ ಪಾತ್ರ­ರಾಗಿ ಸುಖ­ವಾಗಿ ಇರು­ವು­ದಿಲ್ಲ ಯಾಕೆ?
ಯಮ­ದೂತ; ಇರ­ಬ­ಹುದು, ಆದರೆ ಇರು­ವು­ದಿ­ಲ್ಲ­ವಲ್ಲ? ಅವ­ರಿ­ಗದು ಸಾಧ್ಯ­ವಲ್ಲ. ಇಂದಿನ ದೇಹ­ಪೋ­ಷ­ಣೆಗೆ ಅಗ­ತ್ಯ­ವಾದ ಕೆಲಸ ಮಾಡುತ್ತಾ ಪಾಪ­ಗ­ಳನ್ನೂ ಮಾಡು­ತ್ತಾರೆ.
ದೇವ­ದೂತ; ಕೆಲಸ ಮಾಡು­ವುದು ದೇಹ, ಅದೇ ಬಿದ್ದು ಹೋದ ಮೇಲೆ ಶಿಕ್ಪೆ ಯಾರಿಗೆ?
ಯಮ­ದೂತ; ಪಂಚ­ಭೂ­ತ­ಗ­ಳಿಂ­ದಾದ ಈ ದೇಹ­ದಲ್ಲಿ ಐದು ಕರ್ಮೇಂ­ದ್ರಿ­ಯ­ಗ­ಳಿವೆ. ಇವು ಮನ­ಸ್ಸಿಗೆ ಅಧೀನ. ಸ್ಥೂಲ­ದೇಹ ಬಿದ್ದು ಹೋದರೂ ಲಿಂಗ­ದೇಹ ಅವ­ನಿಗೆ ಅಂಟಿ­ಕೊಂ­ಡಿ­ರು­ತ್ತದೆ. ಅದು ಈ ಜನ್ಮದ ಪಾಪ­ಗ­ಳನ್ನು ಹೊತ್ತು­ಕೊಂಡೇ ಮುಂದಿನ ಜನ್ಮಕ್ಕೆ ಹೋಗು­ತ್ತದೆ.
ದೇವ­ದೂತ; ಅದೆಲ್ಲ ಸರಿ, ಆದರೆ ನೀವೊಂದು ತಪ್ಪು ಮಾಡಿ­ದ್ದೀರಿ. ಅಜಾ­ಮಿಳ ಸಾಯುವ ಕಾಲಕ್ಕೆ ನಾರಾ­ಯಣ ಎಂದು ವಿಷ್ಣು­ವಿನ ಹೆಸರು ಕರೆ­ದಿ­ದ್ದಾನೆ. ಹೀಗಾಗಿ ಅವನ ಪಾಪ­ಗ­ಳೆಲ್ಲ ನಾಶ­ವಾ­ಗಿವೆ.
ಯಮ­ದೂತ; ಆದರೆ ಅಜಾ­ಮಿಳ ಕರೆ­ದದ್ದು ಹರಿ­ಯ­ನ್ನಲ್ಲ, ತನ್ನ ಮಗ­ನನ್ನು.
ದೇವ­ದೂತ; ಆದ­ರೇ­ನಂತೆ. ತಿಳಿದೋ ತಿಳಿ­ಯ­ದೆಯೋ ದೇವರ ಹೆಸರು ಕೂಗಿ­ದರೆ ಪಾಪ ನಾಶ­ವಾ­ಗು­ತ್ತದೆ. ತಿಳಿ­ಯದೇ ಔಷಧಿ ಕುಡಿ­ದರೆ ರೋಗ ಗುಣ­ವಾ­ಗು­ವು­ದಿ­ಲ್ಲವೇ?
ಅಲ್ಲಿಗೆ ವಾದ ಮುಗಿ­ಯು­ತ್ತದೆ. ಯಮ­ದೂ­ತರು ವಿಷ್ಣು­ದೂ­ತರ ಮಾತಿಗೆ ಗೌರವ ಕೊಟ್ಟು ಅಜಾ­ಮಿ­ಳ­ನನ್ನು ಬಿಡು­ತ್ತಾರೆ. ಅಜಾ­ಮಿಳ ವಿಷ್ಣು­ಸ­ನ್ನಿ­ಧಿ­ಯನ್ನು ಸೇರು­ತ್ತಾನೆ.
ತುಂಬ ಸರ­ಳ­ವಾದ ಉಪಾ­ಯ­ವೊಂ­ದನ್ನು ಶುಕ­ಮುನಿ, ಪರೀ­ಕ್ಪಿ­ತ­ನಿಗೆ ಬೋಧಿ­ಸಿ­ದ್ದಾರೆ. ಪಾಪ­ನಾ­ಶಕ್ಕೆ ನಾಮ­ಸ್ಮ­ರ­ಣೆ­ಗಿಂತ ಒಳ್ಳೆಯ ಉಪಾಯ ಬೇರೊಂ­ದಿಲ್ಲ. ಅದಕ್ಕೇ ಹಿಂದಿನ ಕಾಲದ ಮಂದಿ ಮಕ್ಕ­ಳಿಗೆ ಶಂಕರ, ನಾರಾ­ಯಣ ಎಂಬಿ­ತ್ಯಾದಿ ಹೆಸ­ರಿ­ಡು­ತ್ತಿ­ದ್ದರು.
ತಮಾ­ಷೆ­ಯೆಂ­ದರೆ ಈಗಿನ ಕೆಲವು ಹೆಸ­ರು­ಗಳು ಕೂಡ ಆ ಅರ್ಥದಲ್ಲಿ ಪಾಪೋಹಂ ಆಗಿವೆ. ಉದಾ­ಹ­ರ­ಣೆಗೆ ಮಿಲನ್, ರತಿ, ಮಿಥುನ್!

Friday, May 18, 2007

ಅಂಥ ಸುಂದರಿಯನ್ನೂ ಅವನು ಕಣ್ಣೆತ್ತಿ ನೋಡಲಿಲ್ಲ!

ಓದುತ್ತಾ ಕುಳಿತರೆ ಬೆರಗುಗೊಳಿಸುವುದು ಇವತ್ತಿಗೂ ಕುಮಾರವ್ಯಾಸನ ಭಾರತ. ಅದರಲ್ಲಿ ಬರುವ ಪ್ರತಿಯೊಂದು ಪ್ರಸಂಗದ ಕುರಿತೂ ಸುದೀರ್ಘವಾಗಿ ಬರೆಯಬಹುದು. ಬಿಡಿಸುತ್ತಾ ಹೋದಂತೆ ಅರಳಿಕೊಳ್ಳುತ್ತಾ ಹೋಗುವ ಪದ್ಯಗಳನ್ನು ಕುಮಾರವ್ಯಾಸ ಬರೆದಿದ್ದಾನೆ.
ಈ ಪ್ರಸಂಗದಲ್ಲಿ ರಸಿಕ ಶಿಖಾಮಣಿ ಎಂದು ಕರೆಸಿಕೊಂಡ ಅರ್ಜುನ ಕೂಡ ಸಂಯಮದಿಂದ ವರ್ತಿಸಿದ ಒಂದು ಸನ್ನಿವೇಶದ ಚಿತ್ರಣ ಇದೆ. ಅನೇಕ ಕಾರಣಗಳಿಗೆ ಇದು ನನಗಿಷ್ಟ. ಇದರಲ್ಲಿ ಅರ್ಜುನನಾಗಿ ರಾಜ್ ಕುಮಾರ್ , ಊರ್ವಶಿಯಾಗಿ ಜಯಪ್ರದ ನಟಿಸಿದ್ದರೆ ಹೇಗಿರುತ್ತಿತ್ತು ಅಂತ ಇದನ್ನು ಓದುವಾಗೆಲ್ಲ ಅನ್ನಿಸುತ್ತಿತ್ತು.



ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೋ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿದೇವತೆಯೋ ವರ್ಣಿಸುವೊಡರಿದೆಂದ

ಕುಮಾರವ್ಯಾಸ ಶೃಂಗಾರರಸಕ್ಕೆ ಇಳಿದನೆಂದರೆ ಅವನದು ನಿಜಕ್ಕೂ ಕಂಠಪತ್ರದ ಉಲುಹುಗೆಡದಗ್ಗಳಿಕೆಯೇ! ಚೆಲುವೆಯರ ರೂಪವನ್ನು ಹಾಗೇ ಮನಸ್ಸಿನ ಮುಂದೆ ಸಾಕಾರಗೊಳ್ಳುವಂತೆ ವರ್ಣಿಸುತ್ತಾನೆ ಅವನು. ದ್ರೌಪದಿಯ ವರ್ಣನೆಯೇ ಇರಬಹುದು. ಅರಣ್ಯಪರ್ವದಲ್ಲಿ ಬರುವ ಊರ್ವಶಿಯ ಸೊಬಗಿನ ವರ್ಣನೆಯೇ ಇರಬಹುದು, ಅವನದ್ದು ಅಖಂಡ ರಸಿಕತೆ. ಶೃಂಗಾರಕ್ಕಿಳಿದರೆ ಅವನಿಗೆ ಅಲ್ಲಿ ಯಾವ ಸಂಕೋಚವೂ ಇಲ್ಲ. ಏನು ಮಾಡಿದರೂ ಮಾಫಿ. ಏನು ನೋಡಿದರೂ ಮಾಫಿ!
ಕುಮಾರವ್ಯಾಸನ ವರ್ಣನೆಗೆ ಊರ್ವಶಿಯೇ ಆಗಬೇಕು ಅಂತೇನಿಲ್ಲ. ಅದು ದ್ರೌಪದಿಯಾದರೂ ಸರಿಯೇ. ಕಥಾನಾಯಕಿಯನ್ನೂ ಕುಮಾರವ್ಯಾಸ ಅಪ್ಪಟ ರಸಿಕತೆಯಿಂದ ವರ್ಣಿಸುತ್ತಾನೆ;
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ

ಇದನ್ನು ವಿವರಿಸುವ ಅಗತ್ಯವಿಲ್ಲ. ಇದರ ಮುಂದಿನ ಸಾಲಲ್ಲಿ ಕುಮಾರವ್ಯಾಸ ಮತ್ತೂ ರಸಿಕನಾಗುತ್ತಾನೆ; ಹೊಲಬುಗೆಡವೇ ಹೊಳೆವ ವಕ್ಪಸ್ಥಳದೊಳಗೆ ಜನದೃಷ್ಟಿ.. ಅವಳ ಹೊಳೆವ ಎದೆಯೊಳಗೆ ಸಿಲುಕಿದ ದೃಷ್ಟಿ ದಾರಿತಪ್ಪುತ್ತದಂತೆ. ಹೆಣ್ಣು ಹೇಗಿರಬೇಕು ಅನ್ನುವ ವಿವರವನ್ನೂ ಅವನು ಕೊಡುತ್ತಾನೆ;
ಅಸಿಯ ನಡುವಿನ ನಿಮ್ನನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಜಾನು ಜಂಘೆಯ ಚರಣ ಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪ...
ಸಪೂರ ಸೊಂಟ, ಗುಳಿಬಿದ್ದ ಹೊಕ್ಕಳು, ಎದೆಯ ನಡುವಿನಿಂದ ಹೊಕ್ಕಳಿನ ತನಕ ರೇಖಾಕೃತಿಯಲ್ಲಿರುವ ಕಂಡೂ ಕಾಣದಂತಿರುವ ತೆಳುಕೂದಲ ಸಾಲು, ತುಂಬುಸ್ತನ, ಹೊಳೆಯುವ ತೊಡೆ, ಮಿನುಗುವ ಮೀನಖಂಡ... ಹೀಗೆ ವರ್ಣನೆ ಸಾಗುತ್ತದೆ. ಸಣ್ಣ ಸಣ್ಣ ವಿವರಗಳನ್ನು ಕೂಡ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾನೆ ಅವನು. ಗಂಡಸಿನ ಸೌಂದರ್ಯವನ್ನು ಭರತೇಶವಭವದಲ್ಲಿ ವರ್ಣಿಸಿದಷ್ಟೇ ಸೊಗಸಾಗಿ ಇಲ್ಲಿ ಹೆಣ್ಣಿನ ಸೌಂದರ್ಯದ ವಿವರಗಳು ಬರುತ್ತವೆ.
ಆದರೆ ಊರ್ವಶಿ ಮತ್ತು ಅರ್ಜುನರ ಪ್ರೇಮ ಪ್ರಕರಣವನ್ನು ವರ್ಣಿಸುವ ರೀತಿಯೇ ಬೇರೆ.
ಬಂದಳೂರ್ವಶಿ ಬಳ್ಳಿ ಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜ ಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾರವದ ಸೊಗ
ಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ

ಸುಳಿ ಮಿಂಚ ಬಳ್ಳಿಯ ನಡುವೆ ಮರಿಮುಗಿಲೊಂದು ಇಳಿದ ಹಾಗೆ ಪಲ್ಲಕ್ಕಿಯಿಂದ ಊರ್ವಶಿ ಇಳಿದು ಬಂದಳು ಅನ್ನುತ್ತಾನೆ ಕುಮಾರವ್ಯಾಸ. ಹೆಣ್ಣನ್ನು ಹೋಲಿಸುವ ಹೊತ್ತಿಗೆ ಅವನು ಆಶ್ಚರ್ಯಕರವಾಗಿ ಮುಗಿಲನ್ನು ಹೋಲಿಕೆಯಾಗಿ ತೆಗೆದುಕೊಳ್ಳುತ್ತಾನೆ. ಸಾಮಾನ್ಯವಾಗಿ ಎಲ್ಲರೂ ಮುಗಿಲನ್ನು ಹೋಲಿಕೆಯಾಗಿ ತೆಗೆದುಕೊಳ್ಳುವುದು ಮುಂಗುರುಳಿಗೆ. ಕುಮಾರವ್ಯಾಸ ಅದಕ್ಕೇ ವಿಶಿಷ್ಟ.

ಈ ಕತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇವತೆಗಳ ಶತ್ರುಗಳನ್ನು ಗೆದ್ದ ಅರ್ಜುನನನ್ನು ಇಂದ್ರ ಕರೆಸಿಕೊಂಡಿದ್ದಾನೆ. ಅವನಿಗೆ ಸನ್ಮಾನ ಗೌರವ ನಡೆಯುತ್ತದೆ. ಇಂದ್ರನ ಮಗನೂ ಆಗಿದ್ದರಿಂದ ಅರ್ಜುನನಿಗೆ ವಿಶೇಷ ಮರ್ಯಾದೆಯಿದೆ.
ಆಮೇಲೆ ಅರ್ಜುನನಿಗೆ ಜೊತೆಯಾಗಲು ಊರ್ವಶಿಯನ್ನು ಕಳುಹಿಸಿಕೊಡುತ್ತಾನೆ ಇಂದ್ರ. ಊರ್ವಶಿ ಅತೀವ ಸಂತೋಷದಿಂದ ಅರ್ಜುನನನ್ನು ನೋಡಲು ಬರುತ್ತಾಳೆ. ಅರ್ಜುನ ಉಳಿದುಕೊಂಡಿದ್ದ ಮನೆಯ ಮುಂದೆ ಅವಳು ಮೇನೆಯಿಂದ ಇಳಿಯುವುದು ಹೀಗೆ;
ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಯೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕಂಡಳಂಗನೆ ಮಣಿಯ ಮಂಚದಲಿ
ನವಿಲುಗಣ್ಣಿನ ಹೆಣ್ಣುಗಳು ಬಾಗಿಲು ಬಾಗಿಲಲ್ಲಿ ನಿಂತಿದ್ದರು. ಅಂತಃಪುರದ ಬಾಗಿಲಲ್ಲಿ ಚಾಮರದ ಜೊತೆ ಚಪಲೆಯರಿದ್ದರು, ಹೆಣ್ಣನ್ನು ಚಂಚಲೆ ಅನ್ನುವ ಬದಲು ಚಪಲೆ ಅನ್ನುತ್ತಾರೆ ಕುಮಾರವ್ಯಾಸ. ಅವರ ನಡುವೆ ಆ `ಗರುವೆ' ಶತಯಾಗ ಸುತನನ್ನು ಮಣಿಯ ಮಂಚದಲ್ಲಿ ನೋಡುತ್ತಾಳಂತೆ. ಶತಯಾಗ ಅಂದರೆ ಇಂದ್ರ. ನೂರು ಅಶ್ವಮೇಧ ಯಾಗಗಳನ್ನು ಮಾಡಿದವನು ಇಂದ್ರ, ಅರ್ಜುನ ಇಂದ್ರನ ಮಗ ಅನ್ನುವುದನ್ನು ಉದ್ದಕ್ಕೂ ಹೇಳುತ್ತಲೇ ಬರುತ್ತಾನೆ ಕವಿ. ಅದಕ್ಕೆ ಕಾರಣ ಮುಂದೆ ಸಿಗುತ್ತದೆ.
ಆಕೆ ಒಳಗೆ ಬರುತ್ತಾಳೆ. ಅವಳ ಕುಡಿನೋಟದಲ್ಲಿ ಬೆಳಕು ಸೂಸುತ್ತದೆ. ತನ್ನ ಗೆಳತಿಯರ ಕೊರಳಿನ ಸುತ್ತ ಕೈಹಾಕಿಕೊಂಡು ಆಕೆ ಅವನ ಮಂದೆ ನಿಲ್ಲುತ್ತಾಳೆ. ತರುಣಿ ನಿಂದಳು ನೃಪಕುಲತಿಲಕನ ಅಂಗೋಪಾಂಗದಲಿ ಹರಹಿದಳು ಕಣ್ಮನವಾ..
ಅಷ್ಟು ಹೊತ್ತಿಗೆ ಅರ್ಜುನ ಮಲಗಿದ್ದ. ಆಕೆಯ ಆಗಮನದಿಂದ ಮಲಗಿದ್ದವನ ಎದೆಯೊಳಗೂ ನದಿಯೊಂದು ಓಡಿದಂತಾಗುತ್ತದೆ. ಆತ ಎದ್ದು ನೋಡುತ್ತಾನೆ; ಮೈ ಮುರಿದು ಕಂಡನಪೂರ್ವ ಪರಿಮಳ ಸಾರ್ಥದಲಿ ಪಾರ್ಥ, ಕರಣ ಲಹರಿಯ ದಿವ್ಯ ರತ್ನಾಭರಣ ರುಚಿರತರ ಪ್ರಭಾ ಪಂಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ..
ಆಗ ಎಚ್ಚರಾಗುತ್ತದೆ ಅವನ ವಿವೇಕ. ಆ ಸೌಂದರ್ಯವನ್ನು ನೋಡಿಯೂ ಆತ ಸ್ಥಿಮಿತ ಕಳಕೊಳ್ಳುವುದಿಲ್ಲ ಅನ್ನುವುದನ್ನು ಸೂಚಿಸುತ್ತಾನೆ ಕುಮಾರವ್ಯಾಸ. ಬಂದವಳು ಊರ್ವಶಿ, ಇಂದ್ರನ ರಾಣಿ. ಇಂದ್ರ ತನಗೆ ತಂದೆ. ಅವನ ಅಂತಃಪುರದೊಳಗೆ ಇರುವ ಊರ್ವಶಿ ತನಗೆ ತಾಯಿ ಸಮಾನ. ಆತ ಥಟ್ಟನೆ ಯಾವ ತಪ್ಪು ಅಭಿಪ್ರಾಯಕ್ಕೂ ಅವಕಾಶ ಕೊಡದೇ ಕೇಳುತ್ತಾನೆ;
ಈ ಮಗನಿಂದ ಏನಾಗಬೇಕಿತ್ತು ಹೇಳಿ?
ಊರ್ವಶಿ ಅದನ್ನು ನಿರೀಕ್ಪಿಸಿರಲೇ ಇಲ್ಲ.
ನುಡಿಗೆ ಬೆರಗಾದಳು, ಮನೋಜನ ಸಡಗರಕೆ ತೆಕ್ಕಿದಳು, ಪಾರ್ಥನ ನಡವಳಿಗೆ ಮೆಚ್ಚಿದಳು, ಬೆಚ್ಚಿದಳಂಗಜಾಸ್ತ್ರದಲಿ. ಕಡುಗಿದಳು ಖಾತಿಯಲಿ ಲಜ್ಜೆಯ ಬಿಡೆಯದಲಿ ಭಯಗೊಂಡಳಂಗನೆ ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ.
ಅವಳಿಗೆ ಆಗ ಅನ್ನಿಸಿದ್ದಿಷ್ಟು; ಇವನು ವಿಕಲ ಮತಿಯೋ ನಪುಂಸಕನೋ ಜಡಭರತನೋ ಶ್ರೋತ್ರಿಯನೋ ರೋಗಗ್ರಸ್ತನೋ ಖಳನೋ ಖೂಳನೋ ಅಥವಾ ಇದೊಂದು ಮಾನವ ವಿಕಾರವೇ? ತನ್ನ ಎಡಗಾಲಿನಿಂದ ವಿಕಟ ತಪಸಿನ ದೇವ ದಾನವರ ಕಿರೀಟವನ್ನೇ ಒದ್ದಂಥ ಈ ಸುಂದರಿಗೆ ಇಂಥ ಅಪಮಾನವೇ..
ಅಲ್ಲಿ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯುತ್ತದೆ. ಹೇಗಾದರೂ ಅರ್ಜುನನನ್ನು ಪಡೆದೇ ತೀರುತ್ತೇನೆ ಎಂಬಂತೆ ಊರ್ವಶಿ ಮುನ್ನುಗ್ಗುತ್ತಾಳೆ. ಆತನ ನಿರಾಕರಣೆ ತನ್ನ ಸೌಂದರ್ಯಕ್ಕೇ ಒಡ್ಡಿದ ಸವಾಲು ಎಂದು ನಿರ್ಧರಿಸುತ್ತಾಳೆ. ಅರ್ಜುನ ತರ್ಕಬದ್ಧವಾಗಿಯೇ ತನ್ನ ವಾದ ಮಂಡಿಸುತ್ತಾನೆ; ನೋಡಮ್ಮಾ ನೀನು ಬಹಳ ಹಿಂದೆ ನಮ್ಮ ಕುಲದ ಹಿರಿಯನಾದ ಪುರೂರವನ ಹೆಂಡತಿಯಾಗಿದ್ದೆ. ಅವನ ಮಗ ಆಯು. ಅವನ ಮಗ ನಹುಷ. ಆಮೇಲೆ ನಹುಷನಿಂದ ನಮ್ಮ ರಾಜಪರಂಪರೆ ಹುಟ್ಟಿತು. ಹೀಗಾಗಿ ನೀವು ನಮ್ಮ ಹಿರಿಯಜ್ಜಿ ಅನ್ನುತ್ತಾನೆ. ಅದಕ್ಕೆ ಆಕೆ ಹೇಳುತ್ತಾಳೆ; ಇಂಥ ಲೆಕ್ಕಾಚಾರವೆಲ್ಲ ಪಕ್ಕಕ್ಕಿಡು. ಅದೇನಿದ್ದರೂ ನಿಮ್ಮ ಜಗತ್ತಿನದು. ಇಲ್ಲಿ ಅದೆಲ್ಲ ಇಲ್ಲ. ತಾತಮುತ್ತಾತ ಮರಿತಾತ ಎಲ್ಲರಿಗೂ ನಾನೊಬ್ಬಳೇ. ಸುಮ್ಮನೆ ಬಂದು ನನ್ನನ್ನು ಸ್ವೀಕರಿಸು ಅಂತಾಳೆ ಆಕೆ.
ಅರ್ಜುನ ಅದಕ್ಕೊಂದು ವಾದ ಮಂಡಿಸುತ್ತಾನೆ; ನಿಮ್ಮ ರೀತಿನೀತಿ ಬೇರೆ ಅಂತೀರಿ ಒಪ್ಪಿಕೊಳ್ಳೋಣ. ಆದರೆ ನಾನು ಮನುಷ್ಯ. ಈ ಜನ್ಮದಲ್ಲಿ ಅದರ ಧರ್ಮ ಪಾಲಿಸುತ್ತೇನೆ. ಸತ್ತು ದೇವಲೋಕಕ್ಕೆ ಬಂದ ಮೇಲೆ ಮುಂದಿನ ಮಾತು. ಊರ್ವಶಿ ಅದಕ್ಕೆ ಗೇಲಿ ಮಾಡುತ್ತಾಳೆ;
ಅಹುದಹುದಲೇ ಶ್ರೌತಪಥದಲಿ
ಬಹಿರಿ ನೀವೇ ಸ್ಮಾರ್ತವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ..
ಒಂದು ಹೆಣ್ಣನ್ನು ಐದು ಮಂದಿ ಅನುಭವಿಸ್ತಾ ಇರೋ ನೀವು ಬಲು ಪ್ರಾಮಾಣಿಕರು ಬಿಡಿ ಅಂತ ಗೇಲಿ ಮಾಡುತ್ತಾಳೆ ಊರ್ವಶಿ. ಏನು ಹೇಳಿದರೂ ಆಕೆ ಒಪ್ಪದೇ ಇರುವಾಗ ಊರ್ವಶಿ ಸಿಟ್ಟಾಗುತ್ತಾಳೆ. ಅವಳು ಬೈಯುವ ಭಾಷೆ ಕೂಡ ಅಷ್ಟೇ ಕಟುವಾಗಿದೆ. ಅವಳ ಸೌಂದರ್ಯಕ್ಕೂ ಆ ಭಾಷೆಗೂ ಸಂಬಂಧವೇ ಇಲ್ಲವೇನೋ ಅನ್ನುವಂತಿದೆ;

ಎಲವೋ ಭಂಡರ ಭಾವ, ಖೂಳರ ನಿಳಯ, ಖಳರಧಿನಾಥ, ವಂಚಕ ತಿಲಕ, ಗಾವಿಲರೊಡೆಯ, ದುಷ್ಟನಾಯಕರ ಬಂಧು.. ಹಾಗಂತ ಬೈದು ಆಕೆ ಶಪಿಸುತ್ತಾಳೆ;
ನರಮೃಗಾಧಮ ನಿಮ್ಮ ಭಾರತ ವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು. ಹೋಗಿ ಯಾರ ಹತ್ರ ಬೇಕಾದ್ರೂ ಹೇಳಿಕೋ ಆದರೆ ಈ ಶಿಕ್ಪೆ ನಿನಗೆ ತಪ್ಪದು.
ಅರ್ಜುನ ಅಂದುಕೊಳ್ಳುತ್ತಾನೆ;
ತಪಸ್ಸು ಮಾಡಿದಾಗ ಪಾಶುಪತ ಸಿಕ್ಕಿತು. ಧರ್ಮವೇ ತಪಸ್ಸು ಎಂದು ಆಚರಿಸಿದ್ದಕ್ಕೆ ಸಿಕ್ಕಿದ್ದು ಈ ಷಂಡತನದ ಶಾಪ!
ಇಂಥ ನಾಟಕೀಯ ಕತೆಯೊಳಗಿನ ರೋಚಕತೆ, ಶೃಂಗಾರ ಮತ್ತು ಊರ್ವಶಿಯ ವ್ಯಾಮೋಹವನ್ನೂ ಮೀರುವ ಅರ್ಜುನನ ನಿಲುವು ಗಮನಾರ್ಹ.


ಚಿತ್ರ- ರವಿವರ್ಮನ ಕಲಾಕೃತಿ. ದ್ರೌಪದಿ ಸೈರಂಧ್ರಿಯಾಗಿ ಸುದೇಷ್ಣೆಯ ಅಪ್ಪಣೆಯ ಮೇರೆಗೆ ಕೀಚಕನಿಗೆ ಹಾಲು-ಜೇನು ಕೊಂಡೊಯ್ಯುತ್ತಿದ್ದಾಳೆ.
ಚಿತ್ರಕೃಪೆ-http://commons.wikimedia.org/wiki/Raja_Ravi_Varma

Tuesday, May 8, 2007

ಕರಿಯವ್ವನ ಗುಡಿತಾವ ಅರಳ್ಯಾವೆ ಬಿಳಿಹೂವು..



ದಾರೀಲಿ ನೆನೆದೆ ಕೈಹಿಡಿದೆ ನೀನು
ತಣ್ಣಗೆ ಅಂತ ನಾ ತಿಳಿದು
ಬಿಡಲೊಲ್ಲೆ ಇನ್ನೂನೂ ಬೂದಿ ಮುಚ್ಚೀದ
ಕೆಂಡ ಇದಂಥ ಹೊಳೆದು
ಮಗಿಲನ ಕತ್ತರಿಸಿ ನೆಲಕ ಬಿದ್ದರ
ನೆಲಕ ನೆಲಿ ಎಲ್ಲಿನ್ನ
ಆ ಗಾದಿ ಮಾತು ನಂಬಿ ನಾನು
ದೇವರಂಥ ತಿಳಿದಿಯೇನ ನೀ ನನ್ನ


ಆ ಹುಡುಗ ಉತ್ಸಾಹದಿಂದ ಹಾಡುತ್ತಿದ್ದ. ದನಿಯಲ್ಲಿ ಆರ್ದ್ರತೆಯೂ ಇತ್ತು, ವಿಷಾದವೂ ಇತ್ತು. ಅದನ್ನು ಮೀರಿದ ಅಬ್ಬರವಿತ್ತು. ಸತ್ತ ಮಗನನ್ನು ಎದುರಿಗೆ ಮಲಗಿಸಿಕೊಂಡು ಬೇಂದ್ರೆ ಬರೆದ ಪದ್ಯ ಅದು. ಅದನ್ನು ಅಷ್ಟೊಂದು ಅಬ್ಬರದಿಂದ ಹಾಡಬಾರದು ಅಂತ ಹೇಳಬೇಕೋ ಬೇಡವೋ ಗೊಂದಲವಾಯಿತು. ಪದ್ಯದ ಗುಣವೇ ಅದು. ಅದನ್ನು ಕವಿ ಯಾವ ಸ್ಥಿತಿಯಲ್ಲಿ ಬರೆದಿದ್ದಾನೆ ಅನ್ನೋದು ಓದುಗನಿಗೆ ಯಾಕೆ ಮುಖ್ಯವಾಗಬೇಕು. ಓದುಗ ತನ್ನ ಸ್ಥಿತಿಯ ಜೊತೆ ಅದನ್ನು ಹೋಲಿಸಿಕೊಂಡು, ತನ್ನ ಅವಸ್ಥೆಗೆ ಅದನ್ನು ಸಮೀಕರಿಸಿಕೊಂಡು ಹಾಡುತ್ತಾನೆ. ಹಾಗೆ ಹಾಡಿದ ತಕ್ಪಣವೇ ಅದು ನಮ್ಮ ಹಾಡಾಗುತ್ತದೆ. ಕಾಪಿರೈಟ್ ಕಾನೂನಿನ ಪ್ರಕಾರ ಅದರ ಹಕ್ಕು ಕವಿಯದ್ದೇ ನಿಜ. ಆದರೆ ಭಾವನಾತ್ಮಕವಾಗಿ ಅದು ನಮ್ಮ ಹಾಡೇ. ಹಾಗಾಗದೇ ಹೋದ ಎಷ್ಟೋ ಹಾಡುಗಳು ಕೇವಲ ಕವಿಯ ಹಾಡಷ್ಟೇ ಆಗಿ ಉಳಿದುಬಿಟ್ಟಿವೆ. ಲೋಕದ ಹಾಡಾಗದ ಹೊರತು ಏನು ಸುಖ?
ಮೇಲಿನ ಕವಿತೆಯಲ್ಲಿ ಬೇಂದ್ರೆ ಬರೆದ ಅರ್ಥವೇ ಬೇರೆ. ಆತ ಹಾಡುವಾಗ ಹೊಮ್ಮುತ್ತಿದ್ದ ಅರ್ಥವೇ ಬೇರೆ. ಬೇಂದ್ರೆ ಬರೆದದ್ದು ಹೀಗೆ;
ಧಾರೀಲೆ ನೆನೆದ ಕೈಹಿಡಿದೆ ನೀನು
ತಣ್ಣಗ ಅಂತನ ತಿಳಿದು
ಬಿಡವೊಲ್ಲಿ ಇನ್ನೂನು ಬೂದಿ ಮುಚ್ಚಿದ
ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ
ನೆಲಕ ನೆಲ ಎಲ್ಲನ್ನ

ಹಾಡುವ ಉತ್ಸಾಹದಲ್ಲಿ ಅರ್ಥ ಮಾಡಿಕೊಳ್ಳುವ ಆತುರದಲ್ಲಿ ಧಾರೆಯೆರೆದು ಕೊಡುವಾಗ ನೆನೆದ ಕೈ ಹಿಡಿದದ್ದು -ದಾರೀಲಿ ನೆನೆದೆ ಕೈ ಹಿಡಿದೆ ಆಗುತ್ತದೆ. ಅದು ತಪ್ಪೇನಲ್ಲ. ಈಗ ಧಾರೆಯಲ್ಲಿ ಏನೇನು ನಡೆಯುತ್ತದೆ ಅನ್ನುವುದೂ ಹೆಚ್ಚಿನವರಿಗೆ ಗೊತ್ತಿಲ್ಲ. ರಿಜಿಸ್ಟ್ರಾರ್ ಕಛೇರಿಯಲ್ಲೋ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡೋ ಮದುವೆ ಆಗುವವರ ಕೈ ಧಾರೆಯಲ್ಲಿ ನೆನೆಯುವುದೂ ಇಲ್ಲ. ಅವರು ನೆನೆಯುವುದು ದಾರಿಯಲ್ಲಿ, ಕೈ ಹಿಡಿಯುವುದು ದಾರಿಯಲ್ಲೇ. ಹಾಗೇ ಮುಗಿಲು ಕಪ್ಪರಿಸಿ ನೆಲಕ್ಕೆ ಬೀಳುವುದು ಅಂದರೆ ಮುಗಿಲು ಕತ್ತರಿಸಿ ಬೀಳುವುದಲ್ಲ!
ಆದರೆ ಹೇಗೆ ನಾವೆಲ್ಲ ನಮಗೆ ಬೇಕಾದಂತೆ ಕವಿತೆಗಳನ್ನು ಅರ್ಥಮಾಡಿಕೊಳ್ಳುತ್ತಾ ಖುಷಿ ಪಡುತ್ತಾ ಹೋಗುತ್ತೇವೆ ಅನ್ನುವುದು ಕುತೂಹಲಕಾರಿ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಥರ ಅರ್ಥವಾಗುವ, ಒಬ್ಬೊಬ್ಬರ ಮುಂದೆ ಒಂದೊಂದು ಅರ್ಥ ಹೊರಡಿಸುವ ಶಕ್ತಿ ಒಳ್ಳೆಯ ಪದ್ಯಕ್ಕೆ ಮಾತ್ರ ಇರುತ್ತದೆ. ಚಿತ್ರಗೀತೆಗೂ ಕವಿಗಳ ಹಾಡಿಗೂ ಏನು ವ್ಯತ್ಯಾಸ ಅಂತ ಗೆಳೆಯರೊಬ್ಬರು ಕೇಳಿದರು. ಎರಡೂ ಹಾಡೇ ತಾನೇ? ನೀವ್ಯಾಕೆ ಚಿತ್ರಗೀತೆಗಳ ಕುರಿತು ಬರೆಯಬಾರದು. ಬೇಂದ್ರೆಯಷ್ಟೇ ಚೆನ್ನಾಗಿ ಹಂಸಲೇಖ ಕೂಡ ಬರೆಯುತ್ತಾರೆ ಅಂದರು. ಕವಿ ಸಾಂದರ್ಬಿಕವನ್ನು ಸಾರ್ವತ್ರಿಕ ಆಗಿಸಬಲ್ಲ. ಸಿನಿಮಾ ಕವಿಗೆ ಆ ಶಕ್ತಿಯಿರುವುದಿಲ್ಲ. ಆ ಹಾಡುಗಳನ್ನು ಹಾಡಲು ಅಂಥದ್ದೇ ಸಂದರ್ಭಕ್ಕಾಗಿ ಹುಡುಕಾಡಬೇಕಾಗುತ್ತದೆ. ಕವಿಗಳು ಬರೆದ ಹಾಡು ಕೂಡ ಈ ಅಪಾಯದಿಂದ ಎಷ್ಟೋ ಸಲ ಪಾರಾಗುವುದಿಲ್ಲ. ಆದರೆ ಬೇಂದ್ರೆಯ ನೀ ಹೀಂಗ ನೋಡಬ್ಯಾಡ ನಿನ್ನ ದಿನೇ ದಿನೇ ಅರ್ಥವಾಗುತ್ತಾ ಹೋಗುವ, ಓದಿದಷ್ಟೂ ನಾವು ಬೆಳೆದಷ್ಟೂ ಬೆಳೆಯುತ್ತಾ ಹೋಗುವ ಕವಿತೆ. ಬೇಕಿದ್ದರೆ ಈ ಕೊನೆಯ ಸಾಲುಗಳನ್ನು ನೋಡಿ;
ಇಬ್ಬನಿ ತೊಳೆದರು ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿವೀ ಚಂದಿರನ ಹೆಣಾ ಬಂತೋ ಮುಗಿಲಾಗ ತೇಲತ ಹಗಲ


ಕವಳಿ ಕಂಟಿಯಾ ಹಣ್ಣನ್ನು ಇಬ್ಬನಿ ತೊಳೆದರೂ ಯಾಕೆ ಹಾಲು ಮೆತ್ತಿದಂತಿರುತ್ತದೆ. ದಿಗಿಲಾಗಿ ಜೀವ ಏನನ್ನುತ್ತದೆ? ಹುಣ್ಣಿವೀ ಚಂದಿರನ ಹೆಣಾ ಹಗಲೇ ಯಾಕೆ ಮುಗಿಲಾಗೆ ತೇಲಿ ಬರುತ್ತದೆ? ಹುಣ್ಣಿಮೆಯ ದಿನ ಸೂರ್ಯಾಸ್ತದೊಂದಿಗೆ ಚಂದ್ರೋದಯವಾಗಿ, ಸೂರ್ಯೋದಯದೊಂದಿಗೆ ಚಂದ್ರಾಸ್ತ ತಾನೇ?
ಇದೇ ಕವಿತೆಯ ಕೊನೆಯ ಸಾಲು ಕೇಳಿ;
ಎವೆಬಡಿಸಿ ಕೆಡವು. ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
ಬಿರಿಗಣ್ಣು ಬೇಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ ಅನ್ನುವುದೆಲ್ಲ ಸರಿಯೆ. ಆದರೆ ಎವೆಬಡಿಸಿ ಕೆಡವು ಅನ್ನೋದು ಏನು? ಕೆಡವು ಅಂದರೆ ಕೆಡಹು ಅಂತಲಾ..
******
ಇಂಥ ಒಗಟಿನ ಸಾಲುಗಳ ಸೊಬಗು ಒಂದು ಕಡೆಯಾದರೆ ಅರ್ಥವಾದರೂ ಮತ್ತೆ ಮತ್ತೆ ಅರ್ಥಮಾಡಿಕೊಳ್ಳಬೇಕು ಅನ್ನಿಸುವಂಥ ಸಾಲುಗಳು ಮತ್ತೊಂದು ಕಡೆ. ಖರ್ಜೂರದ ಸವಿ ತುಂಬ ಹೊತ್ತು ನಾಲಗೆಯಲ್ಲೇ ನೆಲೆಯಾಗಿ ಸುಖ ಕೊಡುವ ಹಾಗೆ ಮಾಯಾಕಿನ್ನರಿಯ ಸಾಲುಗಳು ಕೂಡ ಘಮಘಮಿಸುತ್ತಿರುತ್ತವೆ;
ಆಡುತಾಡುತ ಬಂದು ಸಿಂಗಾರ ಸೊಳ್ಳಿ ಹಾಂಗ
ಹಾಡಿಲೆ ಕಿವಿಗಲ್ಲ ಕಡಿದ್ಯೇನ
ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ
ಗುಣುಗುಣು ಗೊಣಗುಟ್ಟಿ ನುಡಿದ್ಯೇನ
ತನ್ನೊಡೆಯನ ಕೂಡ ಚಿನ್ನಾಟ ನಡಿಸೀದ
ಕುನ್ನಿ ಕುಂಞಗುಡುವಾಟ ಹಿಡಿದ್ಯೇನ
ಮುಟ್ಟಿದರೆ ಮುರುಕುವ ವಯ್ಯಾರ ಕಲಿತೆಲ್ಲಿ
ಸುಳ್ಳೇನ ಸಿಡಿಮಿಡಿ ಸಿಡಿದ್ಯೇನ
ಮರುಳು ಸಿದ್ಧನನ್ನು ಮಯಾ ಕಿನ್ನರಿ ಮರುಳು ಮಾಡುವ ರೀತಿಯನ್ನು ನೋಡಿ. ಇದನ್ನು ಯಾರು ತಾನೇ ದೃಶ್ಯದಲ್ಲಿ ಹಿಡಿದಿಡಲು ಸಾಧ್ಯ. ಬಹುಶಃ ಎಲ್ಲಾ ಮಾಧ್ಯಮಗಳು ಅಕ್ಪರಕ್ಕೆ ಶರಣಾಗಬೇಕು ಅನ್ನುವುದಕ್ಕೆ ಇಂಥ ಕಲ್ಪನೆಗಳೇ ಕಾರಣ ಇರಬೇಕು. ಯಾಕೆಂದರೆ ಇವನ್ನು ಯಾರು ಕೂಡ visualise ಮಾಡಲಾರರು. ಹಾಗೆ ಕಣ್ಮುಂದೆ ತಂದೊಡನೆ ಅದು ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಹಾಡನ್ನು ನಾಗಾಭರಣ ಚಿತ್ರೀಕರಿಸಿದಷ್ಟೇ ಪೇಲವವಾಗಿ, ಸಪ್ಪೆಯಾಗಿ ಕಾಣುತ್ತದೆ. ಇದರ ಮುಂದಿನ ಸಾಲುಗಳಂತೂ ಇನ್ನೂ ಅದ್ಭುತ.
ಎದೆಗೊತ್ತಿ ಹಿಡಿದರು ಮುತ್ತಿಟ್ಟು ಮತ್ತಿಷ್ಟು
ಮುಳುಮುಳು ಸುಮ್ಮನೆ ಅತ್ತೇನ
ಕೈಯಾಡಿಸಿದಂತೆ ಮೈಕದ್ದು ನಡುಗುವಿ
ಇದು ಹೊಸ ಗಮಕದ ಗತ್ತೇನ
ಮೊದಲ ಭೆಟ್ಟಿಗೆ ಬಂದ ಮಳ್ಹೆಣ್ಣು ಮಾಡಿಧಾಂಗ
ತುಟಿ ಕಚ್ಚಿ ತಡವರಿಸಿ ತಡದೇನ..
ಈ ಸಾಲುಗಳಲ್ಲಿ ಸೊಗಸಾದ ಲಯವಿದೆ. ನಾಟ್ಯವಿದೆ. ಪದಗಳಲ್ಲೇ ಎಲ್ಲಾ ಕಲಾಮಾಧ್ಯಮದ ಸಾಧ್ಯತೆಗಳನ್ನು ಬೇಂದ್ರೆ ತಂದುಬಿಟ್ಟಿದ್ದಾರೆ. ಆಕೆ ತುಟಿ ಕಚ್ಚಿ ತಡೆಯುವ ನಾಟ್ಯವಿದೆ, ಗಮಕದ ಗತ್ತಿದೆ, ಮುತ್ತಿಟ್ಟು ಮತ್ತಿಷ್ಟು ಸುಮ್ಮನೆ ಅಳುವ ನಟನೆಯಿದೆ.ಮುಂದೆ ಆಕೆಯನ್ನು ಆತ ಕರೆಯುವ ರೀತಿ ಕೇಳಿ;
ಕರಗಿ ಬಾ, ಅರಗಿ ಬಾ, ಎರಗಿ ಬಾ ಸಣ್ಣಾಗಿ
ಸಕ್ಕರೆ ಬೆರೆಧಾಂಗ ಹಾಲಾಗ

ಅಲ್ಲಿಂದ ಮುಂದೆ ನಡೆಯುವುದೆಲ್ಲ ಎಲ್ಲ ಮಾತನ್ನೂ ಮೀರಿದ್ದು. ಕೇವಲ ಅನೂಹ್ಯ ಪದಗಳಷ್ಟೇ ಕಟ್ಟಿಕೊಡಬಹುದಾದಂಥದ್ದು. ಕೇವಲ ಅನುಭವದಿಂದ ಅರಿಯಬೇಕಾದ್ದು. ಆ ಅನುಭವವೂ ಎಂಥಾದ್ದು. ಜ್ಞಾನೋದಯದಂಥದ್ದು. ಅನುಭವಿಸಬೇಕಾದದ್ದೂ ಮನಸ್ಸಿನೊಳಗೆ.
ನಲ್ಲ ಮುಟ್ಟಿದ ಗಲ್ಲ, ನಲ್ಲೆಯ ಮೈಯೆಲ್ಲ
ಹಿಗ್ಗಿನ ಮುಳ್ಳಿಗೆ ಸಿಕ್ಕ್ಹಾಂಗ
ಜುಮುಜುಮು ರುಮುಜುಮು ಗಂಗುಣು ದುಮುದುಮು
ನಾದದ ನದಿಯೊಂದು ನಡೆಧಾಂಗ
ಗಲ್ಲ ಗಲ್ಲಕೆ ಹಚ್ಚಿ ನಲ್ಲನಲ್ಲೆಯರಿರುಳು
ಗುಜುಗುಜು ಗುಲುಗುಲು ನುಡಿಧಾಂಗ
ಅದಕ್ಕೇ ಹೇಳಿದ್ದು ಇದು ಐಹಿಕ, ದೈಹಿಕ ಅನುಭವಕ್ಕೆ ದಕ್ಕುವಂಥದ್ದು ಅಲ್ಲವೇ ಅಲ್ಲ ಅಂತ. ನಲ್ಲೆಯ ಮೈ ಹಿಗ್ಗಿನ ಮುಳ್ಳಿಗೆ ಸಿಕ್ಕ ರೋಮಾಂಚನ ಗಂಡಸಿನ ಅನುಭವಕ್ಕೆ ಬಾರದ ಸಂಗತಿ. ಎಷ್ಟೋ ದಾಂಪತ್ಯದಲ್ಲಿ ಗಲ್ಲಗಲ್ಲಕ್ಕೆ ಹಚ್ಚಿ ನಲ್ಲನಲ್ಲೆಯರು ಇರುಳಿಡೀ ಗುಜುಗುಜು ಗುಲುಗುಲು ನುಡಿಯುವುದೂ ಕಷ್ಟವೇ.
ಮುಂದೆ ಮತ್ತೊಂದು ಘಟ್ಟಕ್ಕೆ ಆ ಜಗತ್ತು ದಾಟಿಕೊಳ್ಳುತ್ತದೆ. ಅಲ್ಲಿ ಬೇಂದ್ರೆ ಬಳಸುವ ರೂಪಕವನ್ನು ಅಪೂರ್ವ.
ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದ ನಿಂಧಾಂಗ
ಈ ಸಾಲುಗಳನ್ನು ಇಡಿಯಾಗಿ ಅರ್ಥಮಾಡಿಕೊಳ್ಳುವುದು ಕೂಡ ಪ್ರಯಾಸವೇ. ಅದು ಎಷ್ಟು ದಕ್ಕುತ್ತದೋ ಅಷ್ಟೇ. ಅವರವರ ಬಾಯಿ ರುಚಿಗೆ ತಕ್ಕಂತೆ ಕಲ್ಲುಸಕ್ಕರೆ ತನ್ನ ರುಚಿಯನ್ನು ಬಿಟ್ಟುಕೊಡುವಂತೆ, ಬೇಂದ್ರೆ ಕಾವ್ಯ. ನಮ್ಮ ನಾಲಗೆಯ ರುಚಿ ಸರಿಯಾಗಿದ್ದರೆ ಕಾವ್ಯವೂ ಅರ್ಥವಾಗುತ್ತದೆ.
ಹಾಸಾದ ಹಾಡೀಗೆ ಹೊಕ್ಕಾತು ಕಿನ್ನರಿ
ನೇಯ್ಗಿಯೊಳಗೆ ನೂಲು ಹೋಧಾಂಗ
ಹಾಸು-ಹೊಕ್ಕು ಅನ್ನುವ ನುಡಿಗಟ್ಟನ್ನು ಇದಕ್ಕಿಂತ ಚೆನ್ನಾಗಿ ಹಿಡಿದಿಟ್ಟ ಸಾಲು ಕನ್ನಡದಲ್ಲಿದೆಯೇ?
ಜಗತ್ತಿನಲ್ಲೇ ಬೇಂದ್ರೆಗಿಂತ ಅರ್ಥಪೂರ್ಣವಾಗಿ ಬರೆದ ಕವಿ ಸಿಗುವುದಕ್ಕೆ ಸಾಧ್ಯವೇ?
*****
ಹಳೆಯ ಮಾತು;
ಪ್ರತಿಭೆಗೂ ಪ್ರಕೃತಿಗೂ ಸಂಬಂಧವೇ ಇಲ್ಲ. ಪ್ರಕೃತಿ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಅತ್ಯಂತ ಪ್ರತಿಭಾವಂತನನ್ನೂ ಅತ್ಯಂತ ದಡ್ಡನನ್ನೂ ಕಾಲ ನಿರ್ದಯವಾಗಿ ಕೊಲ್ಲುತ್ತದೆ. ನಿಸರ್ಗಕ್ಕೆ ನಮ್ಮ ಹಾಡು, ಕತೆ, ಕವಿತೆ, ಅಭಿನಯ, ನಗು, ಉಲ್ಲಾಸ ಯಾವುದೂ ಬೇಕಾಗಿಲ್ಲ. ಅದನ್ನು ವಿಧಿಯೆನ್ನುತ್ತಾರೆ, ದೈವ ಅನ್ನುತ್ತಾರೆ. ನೂರೆಂಟು ಹೆಸರಿಟ್ಟು ಕರೆದು ಗೌರವಿಸಿ, ಭಕ್ತಿಯಿಂದ ನಮಿಸಿ, ಧಿಕ್ಕರಿಸಿ ಸಾಗುತ್ತಾರೆ.
ಕರಿಯವ್ವನ ಗುಡಿತಾವ ಪಣತೊಟ್ಟು ಗೆದ್ದವರು
ಇನ್ನೂ ಬದುಕೇ ಅವರೆ ಸರದಾರರು
ಕಥೆ ನಡೆದ ದಿನದಿಂದ ಕೆಂಪಾಗಿ ಹರಿದವಳೆ
ಕತೆಗಳ ಮಾರಾಣಿ ಐರಾವತಿ
ಅಂತ ಬರೆದ ಲಂಕೇಶ್, ಮತ್ತೊಂದು ಸಾಲು ಬರೆದರು;
ಯೌವನದಲ್ಲಿ ಹುಲಿಗಳ ಬೇಟೆಯಾಡಿದ
ಶೂರ
ಇಳಿವಯಸ್ಸಿನಲ್ಲಿ ತಾನು ಕೊಂದ
ಹುಲಿಯ ಚರ್ಮಗಳ ತೋರಿಸಿ
ನಿಮ್ಮನ್ನು ನಂಬಿಸಲು ಯತ್ನಿಸುತ್ತಾನೆ.


ಎಲ್ಲವೂ ಅಷ್ಟೇ!