Sunday, January 3, 2010
ಕಾವ್ಯವೀಗ ಮೃಣ್ಮಯ, ಬರುವನೇನು ಚಿನ್ಮಯ
ಎನ್ನುವ ರೂಪಕವೂ ಒಡೆದು ಬಿದ್ದ ಕೊಳಲು ನಾನು ಎಂಬ ಅಡಿಗರ ಕವಿತೆಯ ಸಾಲೂ ನಾಲ್ಕೈದು ದಿನದಿಂದ ಪೀಡಿಸುತ್ತಿವೆ. ಅಶ್ವತ್ಥ ಕಾಯಿಲೆ ಬಿದ್ದಿದ್ದಾರೆ, ಅವರು ಬದುಕಿ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಗೊತ್ತಾದ ದಿನದಿಂದ ಕಾಡುತ್ತಿರುವ ಸಾಲುಗಳಿವು. ಅವರ ಕಣ್ಮರೆಗೂ ರೂಪಕವೊಂದು ಬೇಕಾ? ಯಾರದೋ ಕವಿತೆಯ ಸಾಲು ಬೇಕಾ?
ನಂಗೇನೂ ಬರೆಯೋದಕ್ಕೆ ತೋಚುತ್ತಿಲ್ಲ. ನನ್ನದೂ ಅವನದೂ ಖಾಸಗಿ ಅನುಭವಗಳು. ಏನಂತ ಹೇಳಲಿ, ಶೂನ್ಯ ಆವರಿಸಿಕೊಂಡಿದೆ. ಒಂದಕ್ಷರ ಬರೆಯೋದಕ್ಕೆ ಆಗ್ತಿಲ್ಲ. ಅದು ಈ ಕಾಲದ ಸಮಸ್ಯೆಯೋ ನನ್ನೊಳಗಿನ ಆತಂಕವೋ ಎಲ್ಲರೂ ಹೀಗೇ ಆಗಿದ್ದಾರೋ ಒಂದೂ ಗೊತ್ತಾಗುತ್ತಿಲ್ಲ. ಅತ್ಯಂತ ನಿರುತ್ಸಾಹದ ದಿನಗಳಿವು. ಅಶ್ವತ್ಥ್ ಹೋದ ದಿನ ಬೆಳಗ್ಗಿನಿಂದ ಸಂಜೆ ತನಕ ಅವನ ಮುಂದೆ ಕೂತಿದ್ದೆವು. ಅಷ್ಟೇ ನೆನಪಿರೋದು’ ಎಂದು ಗೆಳೆಯ ಸೂರಿ ಮನಸ್ಸಿನಲ್ಲಿರೋದಕ್ಕೆ ಮಾತು ಕೊಡಲಾರದೆ ಕೂತರು.
ಅಶ್ವತ್ಥ್ ನಮಗ್ಯಾರಿಗೂ ಕೇವಲ ಗಾಯಕರೋ ಸಂಗೀತ ನಿರ್ದೇಶಕರೋ ಸ್ವರ ಸಂಯೋಜಕರೋ ಆಗಿರಲಿಲ್ಲ. ಅವರೊಂದು ಪವಾಡ. ತಿಂಗಳಾನುಗಟ್ಟಲೆ ಫೋನೂ ಇಲ್ಲ, ಮಾತೂ ಇಲ್ಲ. ಯಾರು ಎಲ್ಲಿದ್ದಾರೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಫೋನೆತ್ತಿಕೊಂಡರೆ ನಾನ್ರೀ ಅಶ್ವತ್ಥ್’ ಎಂಬ ದೊರಗು ದನಿ. ನಿನ್ನೆ ಬಿಜಾಪುರಕ್ಕೆ ಹೋಗಿದ್ದೆ. ಅಲ್ಲಮನ ವಚನಗಳನ್ನು ಹಾಡಿದೆ. ಏನು ಜನ ಅಂತೀರಿ. ನಂಗೇ ಆಶ್ಚರ್ಯ ಆಗುತ್ತೆ. ಅಷ್ಟೊಂದು ಜನ ಹಾಡು ಕೇಳೋಕೆ ಬರ್ತಾರಾ ಅಂತ. ಮೂವತ್ತು ಸಾವಿರ ಜನ ಸೇರಿದ್ರು. ಕಾರ್ಯಕ್ರಮದ ಸ್ಥಳ ಬದಲಾಯಿಸಬೇಕಾಗಿ ಬಂತು. ಅದ್ಭುತ, ಅಶ್ವತ್ಥ್‌ಗೆ ಮಾತ್ರ ಇದು ಸಾಧ್ಯ’ ಅಂತ ತಾನು ಅಶ್ವತ್ಥ್ ಅಲ್ಲವೇನೋ ಎಂಬಂತೆ ಕಾರ್ಯಕ್ರಮದ ಸೊಗಸನ್ನು ವಿವರಿಸತೊಡಗುತ್ತಿದ್ದರು. ಬೇರೆ ಯಾರೇ ಅದನ್ನು ಹೇಳಿದರೂ ಅದು ತುತ್ತೂರಿ ಅನ್ನಿಸುತ್ತಿತ್ತು. ಆದರೆ ಅಶ್ವತ್ಥರು ಅದನ್ನು ಕೂಡ ಎಷ್ಟು ಸಹಜವಾಗಿ ಹೇಳುತ್ತಿದ್ದರೆಂದರೆ ಬೇರೆ ಯಾರೋ ಅದನ್ನು ಹೇಳುತ್ತಿದ್ದಾರೆ ಎಂಬ ಬೆರಗಲ್ಲಿ ನಾವು ಅದನ್ನು ಕೇಳಿಸಿಕೊಳ್ಳುತ್ತಿದ್ದೆವು.
ಅಶ್ವತ್ಥರ ಎಪ್ಪತ್ತನೆಯ ಹುಟ್ಟುಹಬ್ಬದ ಅಭಿನಂದನಾ ಗ್ರಂಥಕ್ಕೆ ಮತ್ತೊಬ್ಬ ಗೆಳೆಯ ಸುರೇಶ್ಚಂದ್ರ ಒಂದು ಲೇಖನ ಬರೆದುಕೊಟ್ಟಿದ್ದರು. ಅದನ್ನು ಓದಿದ್ದೇ ತಡ ಅಶ್ವತ್ಥ್ ಫೋನೆತ್ತಿಕೊಂಡರು. ಸುರೇಶ್ಚಂದ್ರ ಮೆಚ್ಚುಗೆಯ ಮಾತುಗಳ ನಿರೀಕ್ಷೆಯಲ್ಲಿದ್ದಿರಬೇಕು. ಅಶ್ವತ್ಥ್ ಸುರೇಶ್ಚಂದ್ರ. ನಿನ್ನ ಲೇಖನ ಬಂತು. ಓದಿದೆ. ತಿಪ್ಪೆಗೆ ಹಾಕೋದಕ್ಕೆ ಯೋಗ್ಯವಾಗಿದೆ. ಏನು, ಕಸದ ಬುಟ್ಟಿಗಲ್ಲ, ಸೀದಾ ತಿಪ್ಪೆಗೆ ಹಾಕಬೇಕು, ಹಾಗಿದೆ. ನನ್ನ ಬಯೋಡಾಟ ಬರೆಯೋದಕ್ಕೆ ನೀನು ಬೇಕೇನಯ್ಯ, ನಂಗೊತ್ತಿಲ್ವಾ ಅದು. ನಾನೇನು ಓದಿದ್ದೀನಿ, ಎಷ್ಟು ಕೆಸೆಟ್ ಮಾಡಿದ್ದೀನಿ. ಎಷ್ಟು ಸಿನಿಮಾ ಮಾಡಿದ್ದೀನಿ ಅಂತ ಅಂಕಿಅಂಶ ನೀನು ಕೊಡಬೇಕಾ’ ಎಂದು ಒಂದೇ ಸಮ ರೇಗಿ, ನಂತರ ಬೇರೆ ಬರೆದುಕೊಡು’ ಅಂದರು. ಸುರೇಶ್ಚಂದ್ರ ಮೂರು ದಿನಗಳ ನಂತರ ಮತ್ತೊಂದು ಲೇಖನ ಕಳಿಸಿಕೊಟ್ಟರು.
ಅದಾಗಿ ಒಂದು ವಾರಕ್ಕೆ ಯಾವುದೋ ಕಾರ್ಯಕ್ರಮದಲ್ಲಿ ಸುರೇಶ್ಚಂದ್ರ-ಅಶ್ವತ್ಥ ಎದುರಾದರು. ಅಶ್ವತ್ಥರು ತಕ್ಷಣವೇ ಸುರೇಶ್ಚ್ರಂದ್ರನನ್ನು ತಬ್ಬಿ ಮುದ್ದಾಡಿ, ಎಷ್ಟು ಚೆನ್ನಾಗಿ ಬರೀತೀಯೋ... ನಿಂಗೆ ಚೆನ್ನಾಗಿ ಬರೆಯೋ ಶಕ್ತಿ ಇದೆ. ಆದ್ರೆ ಅಶ್ವತ್ಥನಿಗೆ ಇಷ್ಟು ಸಾಕು ಅನ್ನೋ ಉಡಾಫೆ. ಅದೆಲ್ಲ ಆಗೋಲ್ಲ. ನೀನು ಚೆನ್ನಾಗಿ ಬರೀತೀಯ ಅಂತ ಗೊತ್ತಿದ್ದೇ ದಬಾಯಿಸ್ದೆ. ಈಗ ಬರೆದಿರೋದು ನೋಡು. ಅದ್ಭುತ’ ಎಂದು ಕೊಂಡಾಡಿದರು.
ಅದು ಅಶ್ವತ್ಥ್. ಸಿಟ್ಟೂ ಕ್ಷಣಿಕ, ಪ್ರೀತಿ ನಿರಂತರ. ತನ್ನ ಬಗ್ಗೆ ಬರೀಬೇಕು, ಮಾತಾಡಬೇಕು ಎಂಬ ಉತ್ಸಾಹದ ನಡುವೆಯೇ ಬರೆಯೋದು ಮುಖ್ಯ ಅಲ್ಲ ಅನ್ನುವುದೂ ಅವರಿಗೆ ಗೊತ್ತಿತ್ತು. ಜನಪ್ರಿಯನಾಗಬೇಕು ಅನ್ನುವ ಹಪಹಪಿಯ ಆಚೆಗೆ ಜನಪ್ರಿಯತೆ ಪೊಳ್ಳು ಅನ್ನುವುದನ್ನೂ ಅರ್ಥ ಮಾಡಿಕೊಂಡಿದ್ದರು. ಲಕ್ಷಾಂತರ ಮಂದಿಗೆ ಹಾಡಿದಷ್ಟೇ ಉತ್ಸಾಹದಿಂದ ನಾಲ್ಕೈದು ಮಂದಿಯ ಗುಂಪಿಗೂ ಹಾಡುತ್ತಿದ್ದರು. ಹಾಡು ಅವರ ಅಭಿವ್ಯಕ್ತಿ ಮಾಧ್ಯಮ. ಆಡಿದರೂ ಹಾಡಿದರೂ ಅದರಲ್ಲೊಂದು ಅಶ್ವತ್ಥ ಛಾಯೆ. ಅವರ್ಣನೀಯ ಕಾಂತಿ.
ಕನ್ನಡ ಕವಿತೆಗಳನ್ನು ಇಡೀ ನಾಡಿಗೆ ತಲುಪಿಸಿದ್ದು, ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದು, ಸಿನಿಮಾಗಳಿಗೆ ಸಂಗೀತ ನೀಡಿದ್ದು, ಮೈಸೂರು ಮಲ್ಲಿಗೆ ಮತ್ತು ಶಿಶುನಾಳ ಶರೀಫ ಎಂಬೆರೆಡು ಚಿತ್ರಗಳನ್ನು ತನ್ನ ಸಂಗೀತದ ಬಲದಿಂದಲೇ ಗೆಲ್ಲಿಸಿದ್ದು, ಅದೇ ಸಂಗೀತದ ಬಲದಿಂದ ಸಿಂಗಾರೆವ್ವ’ಳನ್ನು ಸೋಲಿಸಿದ್ದು- ಹೀಗೆ ಅವರದು ನಿರಂತರದ ಶ್ರದ್ಧೆ. ತಾನು ಮಾಡುತ್ತಿರುವುದು, ಹಾಡುತ್ತಿರುವುದು, ಆಡುತ್ತಿರುವುದು ಸರಿಯಾ ತಪ್ಪಾ ಎಂದು ಅವರು ಯಾವತ್ತೂ ವಿಮರ್ಶೆ ಮಾಡಿಕೊಂಡವರಲ್ಲ. ನಿಮಗೆ ಸಂಗೀತ ನಿರ್ದೇಶನ ಬರೋಲ್ಲ ಅಂದರೆ ನನ್ನದು ಸ್ವರ ಸಂಯೋಜನೆ ಅಂದರು. ಕವಿತೆಗಳನ್ನು ಹೀಗೆ ಹಾಡಬೇಕು. ಅಲ್ಲಿ ಲೆಕ್ಕಾಚಾರ ಮುಖ್ಯವಲ್ಲ. ಸ್ವರ ಪ್ರಸ್ತಾರ ಮುಖ್ಯವಲ್ಲ, ಲಯಬದ್ಧತೆ ಮುಖ್ಯವಲ್ಲ. ಹಾಡುವ ರೀತಿಯಲ್ಲಿ ಭಾವ ಹೊರಹೊಮ್ಮಬೇಕು. ದೂರದಿಂದಲೇ ಎಂಬ ಸಾಲನ್ನು ದೂssssssರದಿಂದಲೇ ಎಂದು ಹಾಡಬೇಕು. ಹಾಗೆ ಹಾಡುವಾಗಲೇ ಅದು ದೂರದಿಂದ ಎನ್ನುವುದು ಹೊಳೆಯಬೇಕು. ಆ ದೂರ ಈ ಕಾವ್ಯದಲ್ಲಿ ಮೈತಾಳಬೇಕು ಎಂದು ಪ್ರತಿಪಾದಿಸುವುದು ಅವರಿಗೆ ಗೊತ್ತಿತ್ತು. ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಎಂಬುದನ್ನು ಶಾಸ್ತ್ರೀಯವಾಗಿ ಹಾಡಿದಾಗ ಅಶ್ವತ್ಥ್ ಗೇಲಿ ಮಾಡುತ್ತಿದ್ದರು. ಬಾಗಿಲೊಳು ಕೈ ಮುಗಿದು ಒಳಗೆ ಬಾ ಅನ್ನುವುದನ್ನು ಎಷ್ಟು ನಿಧಾನವಾಗಿ ಹಾಡುತ್ತಾರೆ ಅಂದರೆ ಹೊರಗೆ ನಿಂತವನನ್ನು ಒಳಗೆ ಬರುವುದಕ್ಕೇ ಇವರು ಬಿಡುವುದಿಲ್ಲ ಎಂದು ಕಾಲೆಳೆಯುತ್ತಿದ್ದರು. ಶ್ರುತಿಯೇ ಇಲ್ಲ ಅಶ್ವತ್ಥರಿಗೆ ಎಂದು ಅವರು ರೇಗುತ್ತಿದ್ದರು. ಕಾವ್ಯ ಪ್ರೀತಿಯೇ ಇಲ್ಲ ಅವರಿಗೆ ಎಂದು ಅಶ್ವತ್ಥ್ ಗುಟುರು ಹಾಕುತ್ತಿದ್ದರು.
ಕನ್ನಡ ಕಾವ್ಯ ವಾಚಕರ ಕೈಗೆ ಸಿಕ್ಕಿ ಸೊರಗಿ, ತನ್ನ ಅರ್ಥಗಳನ್ನು ನೀಗಿಕೊಂಡು ಬೆಕ್ಕಸಬೆರಗಾಗಿ ನಿಂತ ದಿನಗಳಲ್ಲಿ, ಅದನ್ನು ಸಂಗೀತದ ಮೊರದಲ್ಲಿಟ್ಟು ರಸಿಕರಿಗೆ ಬಾಗಿನ ಕೊಟ್ಟವರು ಅಶ್ವತ್ಥ್. ಕೆ ಎಸ್ ನರಸಿಂಹಸ್ವಾಮಿ, ಬಿಆರ್ ಲಕ್ಷ್ಮಣರಾವ್, ಎಚ್ ಎಸ್ ವೆಂಕಟೇಶ ಮೂರ್ತಿ ಮುಂತಾದವರೆಲ್ಲ ಓದುಬಾರದ, ಓದಲಾಗದ ಮಂದಿಗೆ ದಕ್ಕಿದ್ದು ಅಶ್ವತ್ಥರಿಂದಲೇ. ಕಾವ್ಯಕ್ಕೆ ಇರುವ ಮೂವತ್ತಮೂರೂವರೆ ಓದುಗರ ಬಡಾವಣೆಯಿಂದ ಕವಿತೆಗಳು ಹೊರಬಂದದ್ದೇ ಆಗ.
ಅಶ್ವತ್ಥರು ಭಾವಗಾಯನ ಸಂಸ್ಥಾನದ ಕೊನೆಯ ಅರಸ. ಕಾಳಿಂಗರಾವ್, ಅನಂತಸ್ವಾಮಿ ಮತ್ತು ಅಶ್ವತ್ಥ್- ತಮ್ಮ ತಮ್ಮ ಜೀವಿತಾವಧಿಯಲ್ಲಿ ಕಾವ್ಯವನ್ನು ಪೊರೆಯುತ್ತಾ ಬಂದವರು. ಅಶ್ವತ್ಥರು ಒಂದು ಹೆಜ್ಜೆ ಮುಂದೆ ಹೋಗಿ, ಕವಿಗಳ ಜೊತೆಗೆ ಕೂತು ತಾವೇ ಹಠದಿಂದ ಕವಿತೆಗಳನ್ನು ಬರೆಸಿ ಸಂಗೀತ ಸಂಯೋಜಿಸಿ ಹಾಡಲು ಆರಂಭಿಸಿದರು. ಹೀಗಾಗಿ ಸಾಕಷ್ಟು ಕವಿತೆಗಳು ಅಶ್ವತ್ಥರಿಗಾಗಿಯೇ ಹುಟ್ಟಿಕೊಂಡವು, ಅಥವಾ ಬದಲಾವಣೆ ಕಂಡವು. ಲಕ್ಷ್ಮಣರಾವ್ ಅವರ ನವ್ಯ ಕವಿತೆಗಳು ಅಶ್ವತ್ಥರಿಗಾಗಿ ಲಯಬದ್ಧ ಸಾಲುಗಳಾದವು. ಕೃಷ್ಣನ ಮೇಲೆ ಎಚ್‌ಎಸ್‌ವಿ ಒಂದಷ್ಟು ಪದ್ಯಗಳನ್ನು ಬರೆದು ಅಶ್ವತ್ಥ್ ಮುಂದಿಟ್ಟರೆ, ಅಶ್ವತ್ಥರು ಅದನ್ನು ತೂಗುಮಂಚದಲ್ಲಿಟ್ಟು ತೂಗಿದರು. ರಾಗರಥದಲ್ಲಿಟ್ಟು ಬೀಗಿದರು.
ಒಂದೊಂದು ಸಾಲನ್ನೂ ಒಂದೊಂದು ಪದವನ್ನೂ ಹೇಳಿ, ಹೇಗಿದೆ ನೋಡಿ ಈ ಪದ ಎಂದು ಬೆರಗಾಗುತ್ತಾ ಆಗುತ್ತಾ ರಾಗಸಂಯೋಜನೆ ಮಾಡುವ ಶಕ್ತಿ ಅವರಿಗಿತ್ತು. ಅದು ಶಕ್ತಿಯಲ್ಲ, ಪ್ರೀತಿ. ಅವರಿಗೆ ಕವಿತೆ ತನ್ನ ರಾಗಕ್ಕೊಪ್ಪುವ ಪದಗಳ ನಿರರ್ಥಕ ಪುಂಜವಷ್ಟೇ ಆಗಿರಲಿಲ್ಲ. ತನ್ನನ್ನು ಆವಾಹಿಸಿಕೊಂಡು ರೂಪಾಂತರಗೊಳಿಸಬಲ್ಲ ಅಪೂರ್ವ ಶಕ್ತಿ ಕಾವ್ಯಕ್ಕಿದೆ ಎಂದು ಅವರಿಗೂ ಗೊತ್ತಿತ್ತು. ಸರಳವಾದ, ಕಳಪೆಯಾದ ರಚನೆಗಳು ಅವರ ಕೈಯಲ್ಲಿ ಯಾವತ್ತೂ ಅಪೂರ್ವ
ತೇಜಸ್ಸನ್ನು ಪಡೆದುಕೊಳ್ಳುತ್ತಲೇ ಇರಲಿಲ್ಲ. ಒಂದು ಸಾರಿ ಒಬ್ಬರೇ ಕೂತು ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ’ ಹಾಡನ್ನು ಕೇಳಿನೋಡಿ. ಆ ಹಾಡು ನಿಮ್ಮಲ್ಲೂ ಸಂಭವಿಸದೇ ಹೋದರೆ ಅಶ್ವತ್ಥ್ ಹಾಡಿದ್ದೇ ಸುಳ್ಳು, ರಾಗ ಸಂಯೋಜನೆ ಮಾಡಿದ್ದೇ ಸುಳ್ಳು.
ಅಶ್ವತ್ಥ್ ನಂತರ ಯಾರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಫಲ್ಗುಣ, ಉಪಾಸನಾ ಮೋಹನ್ ಮುಂತಾದವರು ಭಾವಗೀತೆಯನ್ನು ಕಲಿಸುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ. ಎಂ. ಡಿ. ಪಲ್ಲವಿ ಕವಿತೆಯ ಅರ್ಥವನ್ನೆಲ್ಲ ಹೀರಿಕೊಂಡು, ತನ್ನೊಳಗೆ ಅದನ್ನು ರೂಪಾಂತರಿಸಿ ದಾಟಿಸುವ ಅಪರೂಪದ ಗಾಯಕಿಯಾಗಿದ್ದಾರೆ. ಹೊಸಬರೂ ಅಲ್ಲದ ಹಳಬರೂ ಅಲ್ಲದ ಯಶವಂತ್ ಹಳೀಬಂಡಿ, ಸುಪ್ರಿಯಾ ಆಚಾರ್ಯ, ದಿವ್ಯಾ ರಾಘವನ್ ಮುಂತಾದವರಿದ್ದಾರೆ. ಅವರನ್ನು ಮುನ್ನಡೆಸುವುದಕ್ಕೆ ಕಿಕ್ಕೇರಿ ಕೃಷ್ಣಮೂರ್ತಿಯಿದ್ದಾರೆ. ಗುರಿ ತೋರುವುದಕ್ಕೆ ಮುದ್ದು ಕೃಷ್ಣ ಇದ್ದಾರೆ.
ಆದರೆ ಇವರು ಯಾರೂ ಅಶ್ವತ್ಥರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರವಲ್ಲ. ಅವರೆಲ್ಲ ಅಶ್ವತ್ಥರ ಜತೆಗೇ ಹಾಡುತ್ತಿದ್ದವರು. ಅವರ ಸಮಕಾಲೀನರು. ಅಶ್ವತ್ಥರ ಪ್ರತಿಭೆಯನ್ನೂ ಮೀರಿಸಿದ ಜನಪ್ರಿಯತೆಯ ಪ್ರಭಾವಳಿಯನ್ನು ಮೀಟಿ ಹೊರಬರುವುದು ಇವರೆಲ್ಲರಿಗೂ ಕಷ್ಟದ ಕೆಲಸ. ಅಶ್ವತ್ಥರ ಪ್ರತಿಭೆಯನ್ನು ಹೋಲುವ ಯಾರೂ ಇಲ್ಲಿಲ್ಲ ಎಂದು ನಾವೆಲ್ಲ ನಂಬಿಕೊಂಡಾಗಿದೆ. ಅದು ಎಲ್ಲಾ ಕ್ಷೇತ್ರಗಳಲ್ಲೂ ಸಹಜ.
ಒಳ್ಳೆಯ ಕವಿತೆಯೊಂದನ್ನು ಓದಿದಾಗ ಅದನ್ನು ಯಾರಾದರೂ ಹಾಡಬೇಕಿತ್ತು ಎಂಬ ಭಾವವೇನೂ ನನ್ನಲ್ಲಿ ಮೂಡುವುದಿಲ್ಲ. ಆದರೆ ಮನಮುಟ್ಟುವಂತೆ ಹಾಡಿದಾಗ, ಈ ಕವಿತೆಯನ್ನು ನಾನು ಓದಿದ್ದೆ ಎಂಬುದು ನೆನಪಾಗುತ್ತದೆ. ಭಾವಪೂರ್ಣವಾಗಿ ಹಾಡಿ ನಮಗೆ ಆ ಕವಿತೆ ಓದುವಾಗ ಹೊಳೆದ ಅರ್ಥಕ್ಕಿಂತ ಹೆಚ್ಚಿನ ಅರ್ಥವನ್ನು ಹೊಳಯಿಸಿದರೆ ಸಂತೋಷವಾಗುತ್ತದೆ.
ಅಶ್ವತ್ಥರು ಎಷ್ಟೋ ಕವಿತೆಗಳಲ್ಲಿ ಅಂಥ ಪವಾಡ ಮಾಡಿದ್ದಾರೆ. ಚಂದ್ರನಲಿ ಚಿತ್ರಿಸಿದ ಚೆಲುವಿನನೊಳಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೇ’ ಎಂಬ ಸಾಲಿನ ಕೊನೆಗೆ ಪ್ರಶ್ನಾರ್ಥಕ ಚಿನ್ಹೆಯಿದೆಯಾ, ಆಶ್ಚರ್ಯ ಸೂಚಕ ಇದೆಯಾ, ಪೂರ್ಣ ವಿರಾಮ ಇದೆಯಾ ಎಂದು ಅಶ್ವತ್ಥರನ್ನೊಮ್ಮೆ ಕೇಳಿದ್ದೆ. ಅವರು ಆ ಮೂರೂ ಭಾವವೂ ಹೊರಹೊಮ್ಮುವಂತೆ ಆ ಸಾಲನ್ನು ಹಾಡಿ ತೋರಿಸಿದ್ದರು.
ಅದು ಅವರ ಕಾವ್ಯಪ್ರೀತಿ ಮತ್ತು ನಮ್ಮ ಕಾಲದ ಪುಣ್ಯ. ಸದ್ಯಕ್ಕಂತೂ ಕಾವ್ಯ ಮೃಣ್ಮಯ. ಅದನ್ನೆತ್ತಿಕೊಳುವ ಧೀರ ಬಂದಾಗ ಚಿನ್ಮಯ.
Monday, August 25, 2008
ಶ್ರೀನಿಧಿಯ ಕಥಾ ಸಂಕಲನ
ಶ್ರೀನಿಧಿ ಬರೆದ ಪತ್ರವನ್ನು ರಾಮಣ್ಣ ಮೇಷ್ಟರು ನಾಲ್ಕನೇ ಸಾರಿ ಓದಿದರು. ಅದರ ಜೊತೆಗೇ ಆತ ಕಥಾಸಂಕಲನದ ಕರಡು ಪ್ರತಿಯನ್ನೂ ಕಳಿಸಿಕೊಟ್ಟಿದ್ದ. ತನ್ನ ಕೈಯಲ್ಲಿ ಪೆಟ್ಟು ತಿಂದೂ ನಗುತ್ತಿದ್ದ ಶ್ರೀನಿಧಿ ಕಣ್ಮುಂದೆ ಬಂದ. ಅವನನ್ನು ನೋಡಿ ಇಪ್ಪತ್ತು ವರುಷವಾದರೂ ಆಗಿರಬೇಕು. ತಾನು ಅವನಿಗೆ ಪಾಠ ಹೇಳಿದ್ದು ಎಂಟನೇ ತರಗತಿಯಲ್ಲಿ. ಆಗ ಶ್ರೀನಿಧಿ ಮಹಾ ತಂಟೆಕೋರ ಹುಡುಗನಾಗಿದ್ದ. ಕ್ಲಾಸಿಗೂ ಸರಿಯಾಗಿ ಬರುತ್ತಿರಲಿಲ್ಲ. ಜೂನಿಯರ್ ಕಾಲೇಜಲ್ಲಿ ವಾರ್ಷಿಕೋತ್ಸವದ ದಿನ ನಡೆದ ಗಲಾಟೆಯಲ್ಲಿ ಅವನೂ ಭಾಗಿಯಾಗಿದ್ದನಲ್ಲವೇ ಎಂದು ರಾಮಣ್ಣ ನೆನಪಿಸಿಕೊಳ್ಳಲು ಯತ್ನಿಸಿದರು.
ಹೇಗಿದ್ದ ಹುಡುಗ ಹೇಗಾದ ಅಂತ ರಾಮಣ್ಣ ಮೇಷ್ಟರಿಗೆ ಖುಷಿಯಾಯಿತು. ತಮ್ಮ ವಿದ್ಯಾರ್ಥಿಗಳ ಪೈಕಿ ಸಾಧನೆ ಮಾಡಿದವನು ಅವನೊಬ್ಬನೇ ಇರಬೇಕು. ಅಂತೂ ದೊಡ್ಡ ಹೆಸರು ಮಾಡಿದ್ದಾನೆ. ಅದಕ್ಕಿಂತ ಹೆಚ್ಚಾಗಿ ತನ್ನನ್ನಿನ್ನೂ ಮರೆತಿಲ್ಲ ಎಂದು ರಾಮಣ್ಣ ಮೇಷ್ಟರು ಕೃತಜ್ಞರಾದರು. ತಕ್ಷಣವೇ ಶ್ರೀನಿಧಿಗೊಂದು ಪತ್ರ ಬರೆದು ತಮ್ಮ ಸಮ್ಮತಿಯನ್ನೂ ಸೂಚಿಸಿದರು.
ರಾಮಣ್ಣ ಮೇಷ್ಟರು ಅದೇ ಮೊದಲ ಬಾರಿಗೆ ಕಥಾಸಂಕಲನವೊಂದನ್ನು ಬಿಡುಗಡೆ ಮಾಡುವವರಿದ್ದರು. ಅವರು ಜೂನಿಯರ್ ಕಾಲೇಜಿನಲ್ಲಿದ್ದಾಗ ಕೂಡ ಅವರನ್ನು ಯಾರೂ ಪುಸ್ತಕ ಬಿಡುಗಡೆಯಂಥ ಸಮಾರಂಭಗಳಿಗೆ ಆಹ್ವಾನಿಸಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಲಯನ್ಸ್ ಕ್ಲಬ್ಬಿನವರೋ, ಯುವಕಸಂಘದವರೋ ಅವರನ್ನು ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭಕ್ಕೆ ಕರೆಸಿದ್ದು ಬಿಟ್ಟರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡದ್ದೇ ಇಲ್ಲ.
ನಿವೃತ್ತನಾಗಿ ಹನ್ನೆರಡು ವರುಷಗಳ ನಂತರ ಇದ್ದಕ್ಕಿದ್ದ ಹಾಗೆ ಒದಗಿಬಂದ ಅವಕಾಶದಿಂದ ರಾಮಣ್ಣ ಮೇಷ್ಟರಿಗೆ ರೋಮಾಂಚನವಾಯಿತು. ಶ್ರೀನಿಧಿಯ ಕಥಾಸಂಕಲನದ ಬಗ್ಗೆ ಸುದೀರ್ಘವಾಗಿ ಮಾತನಾಡಬೇಕು ಅಂದುಕೊಂಡರು. ಕ್ಯಾಲೆಂಡರ್ ತೆಗೆದು, ಸಮಾರಂಭಕ್ಕೆ ಎಷ್ಟು ದಿನ ಉಳಿದಿದೆ ಎಂದು ಲೆಕ್ಕಹಾಕಿದರು. ಪರೀಕ್ಷೆಗೆ ಸಿದ್ಧನಾಗುವ ಒಳ್ಳೆಯ ವಿದ್ಯಾರ್ಥಿಯ ಹಾಗೆ ಗಂಡ ಮಾಡಿಕೊಳ್ಳುತ್ತಿರುವ ಸಿದ್ಧತೆ ನೋಡಿ, ಸೀತಾಲಕ್ಷ್ಮಿಗೆ ಆಶ್ಚರ್ಯವಾಯಿತು.
ಶ್ರೀನಿಧಿಯ ಕತೆಗಳು ಅವರು ಓದಿದ ಯಾವ ಕತೆಗಳ ಹಾಗೂ ಇರಲಿಲ್ಲ. ಕೆಲವು ಕತೆಗಳಲ್ಲಿ ಪಾತ್ರಗಳೇ ಇರಲಿಲ್ಲ. ಕೆಲವು ಕತೆಗಳಲ್ಲಿ ಘಟನೆಗಳೇ ಇರಲಿಲ್ಲ. ಕೊನೆಯ ಕತೆಯಂತೂ ಎಷ್ಟು ಸಾರಿ ಓದಿದರೂ ಅವರಿಗೆ ಒಂದಿಷ್ಟು ಅರ್ಥವಾಗಲಿಲ್ಲ. ಆ ಕತೆಯ ಶೀರ್ಷಿಕೆ ‘ವಿಕ್ಷಿಪ್ತ’ಕ್ಕೂ ಕತೆಗೂ ಸಂಬಂಧವೇನು ಅನ್ನುವುದು ಅವರಿಗೆ ಹೊಳೆಯಲೇ ಇಲ್ಲ.
ಶ್ರೀನಿಧಿ ಇದನ್ನು ತನಗೆ ಕೊಟ್ಟು ತನ್ನನ್ನು ಪರೀಕ್ಷೆ ಮಾಡುತ್ತಿದ್ದಾನೇನೋ ಅನ್ನುವ ಅನುಮಾನವೂ ಅವರಿಗೆ ಬಂತು. ಕತೆಗಳ ಬಗ್ಗೆ ಮಾತನಾಡದೇ, ಶ್ರೀನಿಧಿಯ ಕುರಿತು ನಾಲ್ಕು ಮಾತು ಹೇಳಿ ಹರಸಿ ಬರುವುದೇ ಸರಿ. ಒಳ್ಳೆಯ ಕತೆ ಬರೆದಿದ್ದಾನೆ ಎಂದು ಹೇಳಿ, ನಾಲ್ಕೈದು ಕತೆಗಳ ಹೆಸರುಗಳನ್ನು ಉದಾಹರಿಸಿ ಬಂದರೆ ಸಾಕು ಎಂದು ಮನಸ್ಸಿನಲ್ಲೇ ಅಂದುಕೊಂಡು ರಾಮಣ್ಣ ಮೇಷ್ಟರು ನಿಸೂರಾದರು.
ಅವರ ನೆಮ್ಮದಿ ತುಂಬ ಕಾಲ ಬಾಳಿಕೆ ಬರಲಿಲ್ಲ. ಮಾರನೇ ದಿನವೇ ಪೋಸ್ಟ್ ಮ್ಯಾನ್ ದುಗ್ಗಪ್ಪ ರಾಮಣ್ಣನ ಹೆಸರಿಗೆ ಬಂದ ಪೋಸ್ಟ್ ತಂದುಕೊಟ್ಟ. ಅದರಲ್ಲಿ ಶ್ರೀನಿಧಿ ಕಳಿಸಿದ ಕವರ್ರೂ ಒಂದಿತ್ತು. ಅದನ್ನು ರಾಮಣ್ಣ ಮೇಷ್ಟರು ಪ್ರೀತಿಯಿಂದ ಸಾವಕಾಶ ಬಿಡಿಸಿ ಓದಿಕೊಂಡರು. ಅದರಲ್ಲಿದ್ದ ವಿವರಗಳ ಪೈಕಿ ಅವರನ್ನು ಕಂಗೆಡೆಸಿದ್ದು ಒಂದೇ ಒಂದು ಸಾಲು. ಕೃತಿ ಬಿಡುಗಡೆ: ಡಾ. ಪರಶಿವಮೂರ್ತಿ. ಖ್ಯಾತ ಸಾಹಿತಿ. ಕೃತಿಯ ಬಗ್ಗೆ ಮಾತು: ಮೇಲಂತಬೆಟ್ಟು ರಾಮಣ್ಣ, ನಿವೃತ್ತ ಶಿಕ್ಷಕ.
ಶ್ರೀನಿಧಿಯ ಕತೆಗಳನ್ನು ಓದಿ ಅರ್ಥಮಾಡಿಕೊಂಡು, ಘನತೆಯಿಂದ ಮಾತಾಡದೇ ಬೇರೆ ದಾರಿಯಿಲ್ಲ ಅನ್ನುವುದು ರಾಮಣ್ಣ ಮೇಷ್ಟರಿಗೆ ಖಾತ್ರಿಯಾಯಿತು. ಆವತ್ತಿಡೀ ಕುಳಿತುಕೊಂಡು ಆ ಕತೆಗಳನ್ನು ಮತ್ತೊಮ್ಮೆ ಓದಿದರು. ಅವುಗಳ ಒಳಾರ್ಥಗಳನ್ನು ಗ್ರಹಿಸುವ ಪ್ರಯತ್ನ ಮಾಡಿದರು. ಎಷ್ಟೇ ಪ್ರಯತ್ನ ಮಾಡಿದರೂ ಆ ಕತೆಗಳು ಅವರೊಳಗೆ ಇಳಿಯುತ್ತಲೇ ಇರಲಿಲ್ಲ.
ಆಗ ಅವರಿಗೆ ನೆನಪಾದದ್ದು ಮಂಗಳೂರು ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದ ಕೆ. ಟಿ. ಮಾಧವ. ಆತ ಸಣ್ಣಕತೆಗಳ ಬಗ್ಗೆ ರೀಸರ್ಚ್ ಮಾಡಿ ಡಾಕ್ಟರೇಟ್ ತಗೊಂಡಿದ್ದ ಎನ್ನುವುದನ್ನು ರಾಮಣ್ಣ ಪತ್ರಿಕೆಗಳಲ್ಲಿ ಓದಿದ್ದರು. ಹೀಗಾಗಿ ಅವನ ಹತ್ತಿರ ಮಾತಾಡುವುದೇ ಸರಿ ಎಂದುಕೊಂಡು ರಾಮಣ್ಣ ಮೇಷ್ಟರು ಮಾರನೇ ದಿನ ಹೋಗಿ ಅವನನ್ನು ಭೇಟಿಯಾದರು.
ಶ್ರೀನಿಧಿಯ ಕತೆಗಳನ್ನು ಅವನಿಗೆ ತೋರಿಸುವುದಕ್ಕೆ ಹೋಗಲಿಲ್ಲ ರಾಮಣ್ಣ. ಬದಲಾಗಿ ಈಗಿನವರ ಕತೆಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂಬ ಪೀಠಿಕೆಯೊಂದಿಗೆ ಅವರು ಮಾತು ಶುರುಮಾಡಿದರು. ಒಂದಷ್ಟು ಕತೆಗಳ ಬಗ್ಗೆ ಏನಾದರೂ ಬರೆಯೋಣ ಅಂದುಕೊಂಡಿದ್ದೆ ಎಂದರು. ಮಾಧವ ಅದಕ್ಕೆ ನನ್ನ ಡಾಕ್ಟರೇಟ್ ಗ್ರಂಥ ಸಹಾಯ ಮಾಡುತ್ತದೆ ನೋಡಿ ರಾಮಣ್ಣ ಎಂದು ಹೇಳಿ, ನಾನ್ನೂರೈವತ್ತು ರುಪಾಯಿ ತೆಗೆದುಕೊಂಡು ಆರುನೂರೈವತ್ತು ಪುಟಗಳ ಮಹಾಪ್ರಬಂಧವನ್ನು ಅವರ ಕೈಗಿಟ್ಟ.
ಒಪ್ಪಿಕೊಂಡದ್ದನ್ನು ನಿರಾಕರಿಸುವ ಹಾಗೂ ಇರಲಿಲ್ಲ. ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿ ಹೋಗದೆ ಉಳಿದರೆ ಹೇಗೆ ಎಂಬ ಯೋಚನೆ ಬಂತು. ಅದೇ ಸರಿ ಅಂದುಕೊಂಡು ಮೇಷ್ಟರು ಶ್ರೀನಿಧಿಯ ಕಥಾಸಂಕಲನವನ್ನು ಎತ್ತಿ ಪಕ್ಕಕ್ಕಿಟ್ಟು ದೊಡ್ಡದೊಂದು ಬಿಡುಗಡೆ ಸಿಕ್ಕ ಆನಂದ ಅನುಭವಿಸಿದರು.
ಆದರೆ, ಆ ಆನಂದವನ್ನೂ ಅನುಭವಿಸುವುದಕ್ಕೆ ಅವರಿಗೆ ಶ್ರೀನಿಧಿ ಅವಕಾಶ ಕೊಡಲಿಲ್ಲ. ಉಪ್ಪಿನಂಗಡಿಯಿಂದ ರಾಮಣ್ಣ ಮೇಷ್ಟರನ್ನು ಕರೆದುಕೊಂಡು ಬರಬೇಕು ಅಂತ ಶ್ರೀನಿಧಿ, ಗೆಳೆಯ ಮೃತ್ಯುಂಜಯನಿಗೆ ಹೇಳಿದ್ದ. ಮೃತ್ಯುಂಜಯ ಹತ್ತನೇ ತಾರೀಖಿನಂದೇ ರಾಮಣ್ಣ ಮೇಷ್ಟ್ರ ಮನೆಗೆ ಹೋಗಿ ಹನ್ನೊಂದನೇ ತಾರೀಖು ಹತ್ತು ಗಂಟೆಗೆ ರೆಡಿಯಿರಿ ಮೇಷ್ಟ್ರೇ. ನಾನೇ ಕರೆದುಕೊಂಡು ಹೋಗುತ್ತೇನೆ. ಏಸಿ ಕಾರಲ್ಲಿ ಹೋಗೋಣ. ನಿಮಗೆ ಒಂದಿಷ್ಟೂ ಸುಸ್ತಾಗೋದಿಲ್ಲ. ಮಡಿಕೇರಿ ಮೇಲೆ ಹೋಗೋಣ. ಸಣ್ಣ ಘಾಟಿ ಅಂತ ಹೇಳಿ ಅವರನ್ನು ಕಂಗಾಲು ಮಾಡಿದ.
ಅವನು ಹೋದ ಕ್ಷಣದಿಂದ ಮೇಷ್ಟರು ನಿದ್ದೆ ಮಾಡಲಿಲ್ಲ. ಶ್ರೀನಿಧಿಯ ಕಥಾಸಂಕಲನವನ್ನು ಕಣ್ಣಲ್ಲಿ ಕಣ್ಣಿಟ್ಟು ಅಕ್ಷರಕ್ಷರ ಬಿಡಿಸಿ ಓದಿದರು. ಒಂದೊಂದು ಪದವನ್ನು ಹತ್ತು ಹತ್ತು ಸಲ ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರು. ಓದುತ್ತಲೇ, ತಾವು ಕನ್ನಡ ಸಣ್ಣಕಥಾ ಪ್ರಪಂಚದ ಕುರಿತು ಓದಿದ ಲೇಖನಗಳನ್ನು ಮನಸ್ಸಿಗೆ ತಂದುಕೊಂಡು ಟಿಪ್ಪಣಿ ಮಾಡಿಕೊಳ್ಳತೊಡಗಿದರು. ಜುಲೈ ಹತ್ತರ ರಾತ್ರಿ ಆ ಟಿಪ್ಪಣಿಯನ್ನು ಮುಂದಿಟ್ಟುಕೊಂಡು ಭಾಷಣ ಬರೆಯಲು ಕುಳಿತರು.
ಶ್ರೀನಿಧಿಯ ಕತೆಗಳಲ್ಲಿ ಅವರಿಗೆ ಅಲ್ಪಸ್ವಲ್ಪ ಅರ್ಥವಾದದ್ದು ಮಹಾಪ್ರಸ್ಥಾನ ಎಂಬ ಕತೆ. ನಲುವತ್ತನೇ ವಯಸ್ಸಿಗೆ ಮದುವೆಯಾಗುವ ಧೀರೇಂದ್ರನನ್ನು ಅವನ ಗೆಳೆಯರು ಇಪ್ಪತ್ಮೂರು ವರುಷದ ಹುಡುಗಿಯ ಜೊತ ಏಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಗೇಲಿ ಮಾಡುತ್ತಾರೆ. ಹಂತಹಂತವಾಗಿ ಹೇಗೆ ಆತ ವಿಫಲನಾಗುತ್ತಾ ಹೋಗುತ್ತಾನೆ ಎನ್ನುವುದನ್ನು ಹೇಳಿ ಅವನನ್ನು ಕಂಗಾಲಾಗಿಸುತ್ತಾರೆ. ಪ್ರಸ್ತದ ದಿನ ಅವನ ಉದ್ವೇಗ, ಆತಂಕ ಮಿತಿಮೀರುತ್ತದೆ. ಆಕೆ ಕೋಣೆಯ ಬಾಗಿಲು ತೆರೆಯುತ್ತಾಳೆ. ಒಳಗೆ ಬರುತ್ತಾಳೆ. ಮಲಗಿರುವ ಧೀರೇಂದ್ರನನ್ನು ಮುಟ್ಟುತ್ತಾಳೆ. ಧೀರೇಂದ್ರನ ಮೈ ಹಾವಿನ ಮೈಯಂತೆ ತಣ್ಣಗಿರುತ್ತದೆ.
ಅದನ್ನು ಮುಖ್ಯವಾಗಿಟ್ಟುಕೊಂಡು ಮಾತು ಆರಂಭಿಸಬೇಕು ಎಂದುಕೊಂಡು ರಾಮಣ್ಣ ಮೇಷ್ಟರು ಹದಿನೈದು ಪುಟಗಳ ಭಾಷಣ ಬರೆದೇ ಬರೆದರು. ಅದನ್ನು ತಾವೇ ಒಮ್ಮೆ ಓದಿದರು. ಓದಿ, ತನ್ನನ್ನು ಕರೆದೊಯ್ಯಲು ಬರಲಿರುವ ಮೃತ್ಯುಂಜಯನ ಕಾರಿಗೆ ಕಾಯುತ್ತಾ ಕೂತರು.
ಕಥಾಸಂಕಲನ ಬಿಡುಗಡೆ ಮಾಡಲು ಬಂದಿದ್ದ ಪರಶಿವಮೂರ್ತಿ ಕಣ್ಣೊರೆಸಿಕೊಂಡು ಕೈಯನ್ನು ಮುಂದಕ್ಕೆ ಕಟ್ಟಿ ವಿಷಾದದ ಪರಾಕಾಷ್ಠೆ ತಲುಪಿದವರಂತೆ ಸ್ತಬ್ಧರಾಗಿ ನಿಂತರು. ಸಭಿಕರೂ ಎದ್ದುನಿಂತರು.
Thursday, August 21, 2008
ಈ ಕತ್ತಲೊಳಗೆ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ!
ಅವಳ ದನಿಯಲ್ಲಿ ಅಪ್ಪಟ ಪ್ರಾಮಾಣಿಕತೆ ಇತ್ತು, ತೀವ್ರತೆಯಿತ್ತು. ನಂಗೂ ನೀನು ಬೇಕು ಎಂದು ಹೇಳಿಬಿಡಬೇಕು ಎಂದು ಕಾತರಿಸುವಂತ ಪ್ರೀತಿಯಿತ್ತು. ಹಾಗೆ ಹೇಳುವುದೂ ಕಷ್ಟವೇನಲ್ಲ. ಮಹಾನಗರಗಳಲ್ಲಿ ಸಂಬಂಧಗಳು ಗುಪ್ತವಾಗಿ ಹುಟ್ಟಿ, ಹೆಸರಿಲ್ಲದೆ ಬೆಳೆದು, ಕುರುಹಿಲ್ಲದೆ ಸಾಯುತ್ತವೆ. ಅಂಥ ಸಂಬಂಧಗಳನ್ನು ಸಲಹುವುದೂ ಕಷ್ಟವೇನಲ್ಲ. ಮುಸ್ಸಂಜೆಗಳಲ್ಲಿ ಮಾತು, ಒಂದು ಅಚಾನಕ ಭೇಟಿ, ಬೆರಳುಗಳ ಬೆಸುಗೆ, ಕದ್ದುಮುಚ್ಚಿ ಒಂದು ಉಮ್ಮಾ’ , ಮುಸ್ಸಂಜೆಯಲ್ಲಿ ಜಡಿಮಳೆ ಸುರಿದರೆ ತಬ್ಬುಗೆ, ಅವಳಿಗೆ ತೀರ ಬೇಸರವಾದಾಗ ಎರಡು ಸವಿಮಾತು, ಅವನು ನೊಂದಾಗ ಅವಳದೊಂದಷ್ಟು ಲವ್ ಯೂ, ಯೂ ಆರ್ ಮೈ ವರ್ಲ್ಡ್, ನಾನಿದ್ದೀನಿ ಕಣೋ, ಟೇಕ್ ಕೇರ್, ಎಲ್ಲಾ ಬಿಟ್ಟು ಬಂದ್ಬಿಡ್ತೀನಿ ನಿಂಗೋಸ್ಕರ...
ಎಲ್ಲವೂ ಸರಳ. ಮನಸು ಮಾಯೆಯ ಮಾಟ, ಮಾತು ನೊರೆತೆರೆಯಾಟ. ಇನ್ನೆಲ್ಲೋ ಇನ್ನೇನೋ ಇದೆ ಎನ್ನುವ ತಡಕಾಟ. ಮನಸಿಗೆ ಅದೆಂಥದೋ ಬೇನೆ. ಮನಸ್ಸು ಹೇಳುತ್ತದೆ: ಈ ಕತ್ತಲಲ್ಲಿ ಹುಡುಕುವುದು ಬೇಡ, ಅಲ್ಲಿಹುದು ನಿನ್ನ ವೀಣೆ!
ಮಹಾನಗರಗಳ ಜಾಡು ಬದಲಾಗಿದೆ. ದಾಂಪತ್ಯದ ಗೂಡು ಬೆಚ್ಚಗಿಲ್ಲ. ಅಭದ್ರತೆಯ ಭಯ ಕಣ್ಮರೆಯಾಗುತ್ತಿದೆ. ಒಂಟಿಯಾಗಿ ಬದುಕಬಲ್ಲೆ ಎಂಬ ಛಲ ಮತ್ತು ನೀನು ನನ್ನನ್ನು ವಿನಾಕಾರಣ ಅವಮಾನಿಸುತ್ತೀಯ ಎಂಬ ಆಕ್ರೋಶಗಳಲ್ಲಿ ದಾಂಪತ್ಯದ ಸೂರು ಸೋರತೊಡಗುತ್ತದೆ. ಮತ್ತೊಂದು ಸಂಬಂಧಕ್ಕೆ ಜೀವ ಮಿಡುಕುತ್ತದೆ. ಎಲ್ಲರೂ ಒಂದೇ ಎರಕ, ಜೊತೆಗಿರುವ ಎಲ್ಲರ ಬಾಳೂ ನರಕ ಅನ್ನುವ ಮಾತು ಆ ಕ್ಷಣ ಮರೆತುಹೋಗುತ್ತದೆ. ಅಂದಿಗಂದಿನ ಬದುಕು. ಎಲ್ಲವೂ ಆ ಕ್ಷಣದ ಸತ್ಯ ಎಂಬ ನಂಬಿಕೆ ಬಲವಾಗುತ್ತದೆ. ನಾಳೆಯೆಂಬುದು ಬರೆಯದ ಹಾಳೆ, ನಿನ್ನೆಯೆಂಬುದು ಚಿತ್ತಾದ ಓಲೆ. ನಿನ್ನೆನಾಳೆಯ ನಡುವೆ ಇಂದೆಂಬ ತೂಗುಯ್ಯಾಲೆ.
ಅದು ಸುಖದ ಹುಡುಕಾಟವಾ? ಬರೀ ಸುಖವಷ್ಟೇ ಸಾಲದು, ಸಖ ಬೇಕು, ಸಖಿ ಬೇಕು. ಅರ್ಥ ಮಾಡಿಕೊಳ್ಳುವ ಸಖ ಬೇಕು. ನೊಂದಾಗ ಸಂತೈಸಬೇಕು. ಬೇಸರದಲ್ಲಿದ್ದಾಗ ಗಲ್ಲ ಹಿಡಿದು ನಿಡುಸುಯ್ಯಬೇಕು. ತವಕದಲ್ಲಿದ್ದಾಗ ತಣಿಸಬೇಕು. ತಲ್ಲಣದಲ್ಲಿದ್ದಾಗ ಕಣ್ಣಲ್ಲಿ ಕಣ್ಣಿಟ್ಟು ನೀನು ಹಾಗಲ್ಲ, ನಿನ್ನ ಶಕ್ತಿ ನಿನಗೇ ಗೊತ್ತಿಲ್ಲ ಎಂದು ಸಾಂತ್ವನ ಹೇಳಬೇಕು.
ಅಷ್ಟೇ. ಅದು ಸಾಂತ್ವನಕ್ಕೆ ಹಾತೊರೆಯುವ ಮನ. ದಾಂಪತ್ಯದ ನಡುವೆ ಮಾತು ಸತ್ತುಹೋದಾಗ, ಮಾತು ವ್ಯವಹಾರ ಆದಾಗ ಮನಸ್ಸು ಚಿಂತಾಮಣಿಯಲ್ಲಿ ಕಂಡ ಮುಖಕ್ಕೆ ಹಾತೊರೆಯುತ್ತದೆ.
ಮತ್ತೆ ಯಾವಾಗ ಮರುಭೇಟಿ,
ಕಣ್ಣುಕಣ್ಣುಗಳ ಸಮ್ಮಿಲನ,
ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ,
ಆತ್ಮೀಯ ದೀವಿಗೆ ಬರಬಲ್ಲೆನೆ ಏಳು ಕಡಲುಗಳ ದಾಟಿ,
ಬಂದರೂ ಕೂಡ ದೊರೆವುದೆ ಹೇಳು ಈ ಇಂಥ ಸರಿಸಾಟಿ.
ಎಂಬ ಅಡಿಗರ ಪ್ರಶ್ನೆ ಅಡಿಗಡಿಗೂ ನೆನಪು. ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ, ನಿಲ್ಲದಾಯಿತೋ!
-2-
ಆಕೆ ಫ್ರಾನ್ಸೆಸ್ಕಾ. ಇಟಾಲಿಯನ್ ಸುಂದರಿ. ಗಂಡ ಮತ್ತು ಮಕ್ಕಳೊಂದಿಗೆ ಅಯೋವಾದಲ್ಲಿ ವಾಸಿಸುವಾಕೆ.. ಸುಖಜೀವಿ ಅನ್ನುವುದಕ್ಕಿಂತ ಹೆಚ್ಚಾಗಿ ಭಾವಜೀವಿ. ಅವಳ ಆಸಕ್ತಿಗಳೇ ಬೇರೆ. ಸಂಗೀತವೆಂದರೆ ಪಂಚಪ್ರಾಣ, ಸುತ್ತಾಡುವುದೆಂದರೆ ಆಸಕ್ತಿ, ಪ್ರಕೃತಿಯೆಂದರೆ ಅಕ್ಕರೆ, ಪೇಂಟಿಂಗ್, ಸಾಹಿತ್ಯ ಎಲ್ಲದರ ಮೇಲೂ ಪ್ರೀತಿ.
ಅವಳ ಗಂಡ ಕೃಷಿಕ. ಹಗಲೂ ರಾತ್ರಿ ಶ್ರಮಪಟ್ಟು ದುಡಿಯುತ್ತಾನೆ. ರಟ್ಟೆಯಲ್ಲಿ ಬಲವಿದೆ. ದುಡಿದು ಮನೆಗೆ ಬಂದರೆ ಹೊಟ್ಟೆಗೆ ಹಿಟ್ಟು, ಬೆಚ್ಚಗಿನ ನಿದ್ದೆ. ಮಧ್ಯರಾತ್ರಿಯಲ್ಲಿ ಎಚ್ಚರಗೊಂಡರೆ ಅವಳ ಸಾಂಗತ್ಯ. ಅಷ್ಟೇ ಬದುಕು. ಅವನಿಗ ಗೆಳೆಯರಿಲ್ಲ. ಮುದ್ದು ಮುದ್ದು ಮಾತಾಡುವುದು ಗೊತ್ತಿಲ್ಲ. ಓಲೈಸುವುದು ಮೊದಲೇ ತಿಳಿದಿಲ್ಲ. ಅವಳು ಹಾಡು ಕೇಳುತ್ತಿದ್ದರೆ ಅವಳು ಜೋಳದ ಬೆಲೆಯೆಷ್ಟು ಎಂದು ಕೇಳುವುದಕ್ಕೆ ಬೇರೊಂದು ಚಾನಲ್ಲು ಹಾಕುತ್ತಾನೆ.
ತಮ್ಮಿಬ್ಬರ ನಡುವೆ ಸಾಮರಸ್ಯವೇ ಇಲ್ಲ ಅನ್ನುವುದು ಅವಳಿಗೆ ಎಂದೋ ಗೊತ್ತಾಗಿಹೋಗಿದೆ. ಆದರೆ ಅದರಿಂದ ಬಿಡುಗಡೆ ಹೇಗೆ ಅನ್ನುವುದು ಅವಳಿಗೆ ಹೊಳೆದಿಲ್ಲ. ಬದುಕು ಹೀಗೇ ಇರುತ್ತದೇನೋ ಎಂಬ ನಂಬಿಕೆಯಲ್ಲಿ, ಅದಕ್ಕಿಂತ ಹೆಚ್ಚಿನದೇನೂ ಸಾಧ್ಯವಾಗದು ಎಂಬ ನಿರಾಸೆಯಲ್ಲಿ ಅವಳಿರುತ್ತಾಳೆ.
ಅಂಥ ಬರಡುಬಾಳಲ್ಲಿ ಇದ್ದಕ್ಕಿದ್ದಂತೆ ಒಂದು ಅಚ್ಚರಿ. ಗಂಡ ಮಕ್ಕಳು ಪರವೂರಿಗೆ ಹೋಗಿದ್ದಾರೆ. ಬರುವುದು ಒಂದು ವಾರ ಅನ್ನುವುದು ಖಚಿತವಾಗಿ ಗೊತ್ತು. ಆ ಸ್ವಾತಂತ್ರ್ಯಕ್ಕೆ ಮುದಗೊಳ್ಳುತ್ತಿರಬೇಕಾದರೆ ಮನಸ್ಸು, ಅವನು ಬರುತ್ತಾನೆ. ನ್ಯಾಷವಲ್ ಜಿಯಾಗ್ರಫಿಕ್ ಚಾನಲ್ಲಿನ ಫೋಟೋಗ್ರಾಫರ್. ಅವಳಿರುವ ಮ್ಯಾಡಿಸನ್ ಕೌಂಟಿಯ ಹಳೆಯ ಸುಂದರ ಸೇತುವೆಗಳ ಫೊಟೋ ತೆಗೆಯಲು ಬರುವ ಸುಂದರಾಂಗ.
ಅವಳಿಗೆ ಪ್ರೀತಿಯೆಂಬ ನವಿಲಿಗೆ ಅಷ್ಟೊಂದು ಬಣ್ಣದ ಅಸಂಖ್ಯ ಗರಿಗಳಿವೆ ಅನ್ನುವುದು ಅವಳಿಗೆ ಅರಿವಾಗುವುದೇ ಆಗ. ಅವಳು ಏನೂ ಹೇಳದೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ, ಅವಳು ಕೇಳದೇ ಎಲ್ಲವನ್ನೂ ಕೊಡುವ, ಅವಳಿಗಿಷ್ಟವಾಗುವ ಜಾಗಗಳನ್ನು ತೋರಿಸುವ, ಅವಳನ್ನು ಮಳೆಯಲ್ಲಿ ತೋಯಿಸುವ, ಕಾಮನಬಿಲ್ಲಲ್ಲಿ ಕೂರಿಸುವ, ಜಲಪಾತದಲ್ಲಿ ಜಾರಿಸುವ, ವೇಗದ ಉತ್ಕರ್ಷವನ್ನು ತೋರಿಸುವ ಎಗ್ಗಿಲ್ಲದ ಒಡನಾಡಿ.
ನಾಲ್ಕೇ ದಿನ. ಆ ನಾಲ್ಕು ದಿನ ನಾಲ್ಕು ಶತಮಾನವಾಗಲಿ ಎಂದು ಹಂಬಲಿಸುವಂಥ ರಮ್ಯಕಾಲ. ಎಲ್ಲಾ ಬಿಟ್ಟು ಅವನೊಂದಿಗೆ ಓಡಿಬಿಡಬೇಕು ಅನ್ನಿಸುತ್ತದೆ ಆಕೆಗೆ. ಅದೇನೂ ಕಷ್ಟವೂ ಅಲ್ಲ. ಇನ್ನೇನು ಅವನ ಜೊತೆ ಹೋಗುವುದೆಂದು ನಿರ್ಧಾರವೂ ಆಗಿಬಿಡುತ್ತದೆ. ಅಲ್ಲಿಗೆ ಎಲ್ಲಾ ನಿರುತ್ಸಾಹಕ್ಕೆ, ಎಲ್ಲಾ ಯಾಂತ್ರಿಕತೆಗೆ, ಎಲ್ಲ ಬಗೆಯ ಯಾತನೆಗೆ ಕೊನೆ.
ಅವಳು ಹೋಗುವುದಿಲ್ಲ. ತಾನೇಕೆ ಹೋಗಲಿಲ್ಲ ಅವನ ಜೊತೆ ಅನ್ನುವುದನ್ನು ಆಕೆ ಒಂದು ಡೈರಿಯಲ್ಲಿ ಬರೆದಿಡುತ್ತಾಳೆ. ಅವಳು ಸತ್ತ ನಂತರ ಅದು ಮಕ್ಕಳ ಕೈಗೆ ಸಿಗುತ್ತದೆ. ಅಮ್ಮ ತಮ್ಮಿಂದ ಬಚ್ಚಿಟ್ಟ ಲೋಕದ ದರ್ಶನ ಅವರಿಗಾಗುತ್ತದೆ. ಅವಳು ಅಷ್ಟು ವರುಷ ಆ ಒರಟುತನ, ಏಕಾಂತ, ಪ್ರೇಮರಾಹಿತ್ಯ ಸ್ಥಿತಿ- ಎಲ್ಲವನ್ನೂ ಹೇಗೆ ಒಂದು ಪ್ರೀತಿಯಿಂದಾಗಿ ಸಹಿಸಿಕೊಳ್ಳಲು ಸಾಧ್ಯವಾಯಿತು ಎಂಬುದು ಅರ್ಥವಾಗುತ್ತದೆ.
ನಾನು ಅವನ ಜೊತೆ ಓಡಿಹೋಗಬಹುದಾಗಿತ್ತು. ಓಡಿ ಹೋಗಬೇಕು ಅಂದುಕೊಂಡಿದ್ದೆ. ಆದರೆ ಆ ಬದುಕಿನ ಮಿತಿಯನ್ನೂ ನಾನು ಅರ್ಥ ಮಾಡಿಕೊಂಡೆ. ಪ್ರೀತಿ ಶಾಶ್ವತವಾಗಿರಬೇಕು ಎಂದು ಬಯಸುವ ನಮ್ಮ ಸ್ವಾರ್ಥದಲ್ಲೇ ನಮ್ಮ ದುರಂತವೂ ಅಡಗಿದೆ ಅನ್ನುವುದು ಅರ್ಥವಾಯ್ತು. ಹೀಗಾಗಿ, ಆ ಪ್ರೀತಿಯ ನೆನಪಲ್ಲಿ ನಾನು ನನ್ನ ಇಡೀ ಬದುಕನ್ನು ಬೆಳಗಿಕೊಳ್ಳಬಲ್ಲೆ ಎನ್ನುವುದು ಆಕೆಗೆ ಅರ್ಥವಾಗಿಬಿಟ್ಟಿತ್ತು.
ಪ್ರೀತಿ ಶಾಶ್ವತವಲ್ಲ. ಅದರ ಮಧುರ ಅನುಭೂತಿಯಷ್ಟೇ ಶಾಶ್ವತ. ಅವನು ಕಣ್ಮರೆಯಾಗುತ್ತಾನೆ. ಅವನು ಉಳಿಸಿಹೋಗುವುದು ಆ ಕ್ಷಣಗಳು ಹೊಮ್ಮಿಸಿದ ಬೆಳಕನ್ನು ಮಾತ್ರ. ಅದು ಎಲ್ಲ ಕತ್ತಲೆಯನ್ನು ಹೊರದಬ್ಬುವುದಕ್ಕೆ ಸಾಕು.
ಹಾಗನ್ನಿಸಿದ ದಿನ ಕೊರಗು ಹರಿದಿರುತ್ತದೆ. ಬೆರಗು ಉಳಿದಿರುತ್ತದೆ!
-3-
ಬಿ ಆರ್ ಲಕ್ಷ್ಮಣರಾವ್ ಬರೆದ ಕವಿತೆಗಳನ್ನು ಸುಮ್ಮನೆ ಓದುತ್ತಾ ಕುಳಿತಾಗ ಸಿಕ್ಕ ನಾಲ್ಕಾರು ಸಾಲುಗಳು ಮತ್ತೆ ಮತ್ತೆ ಕಾಡುತ್ತಿವೆ:
ಬಾಳ ಗೆಳತಿಯೆ ತರವೇ ನನ್ನಲ್ಲಿ ಈ ಕೋಪ
ಮೊದಲಿನಂತೆ ನಾನಿಲ್ಲ ಎನ್ನುವ ಆರೋಪ
ಎಲ್ಲಾ ದಾಂಪತ್ಯದ ಆರೋಪವೂ ಅದೇ. ಮೊದಲು ನೀವು ಹೀಗಿರಲಿಲ್ಲ ಎಂಬುದು ಎಲ್ಲರ ತಕರಾರು. ಮೊದಲೂ ಆಮೇಲೂ ಹಾಗೇ ಇರುತ್ತಾರೆ ಎಲ್ಲರೂ. ಆದರೆ, ಹಾಗನ್ನಿಸುತ್ತದೆ ಅಷ್ಟೇ. ಅದನ್ನು ತುಂಬಿಕೊಳ್ಳಬೇಕಾದವರೂ ಅವರವರೇ.
ಮನೆಯ ತಲೆಬಾಗಿಲಲ್ಲಿ ಒಣಗಿದ್ದರೆ ತೋರಣ
ನಾನೊಬ್ಬನೇ ಅಲ್ಲ, ನೀನೂ ಕಾರಣ
ಅಕ್ಷಯ ಪಾತ್ರೆಯಲ್ಲ, ದಾಂಪತ್ಯದ ಒಲವು
ತಂದು ತುಂಬಬೇಕು ನಾವೇ ಪ್ರತಿಸಲವು.
ಅದು ನಾವೇ ತಂದು ತುಂಬಬೇಕಾದ ಪಾತ್ರೆ ಅನ್ನುವುದನ್ನು ನಿರಾಕರಿಸೋಣ. ಮತ್ತೆ ಮತ್ತೆ ತಂದು ತುಂಬುವುದಕ್ಕೆ ಬೇಕಾದ ಉತ್ಸಾಹವನ್ನು ಕಳೆದುಕೊಳ್ಳಲಿಕ್ಕೆ ಬದುಕಲ್ಲಿ ಸಕಾರಣಗಳಿರುತ್ತವೆ. ಆದರೆ, ಯಾರೋ ತಂದು ತುಂಬಿದ ಸಂತೋಷ ಕೂಡ ದಾಂಪತ್ಯವನ್ನು ಬೆಳಗಿಸಲಾರದೆ? ಬೇರೆಲ್ಲ ಸಂಬಂಧಗಳಿಗಿಂತ ಬೇರೆಯೇ ಆದ ಸಂಬಂಧ ಅದು. ಉಳಿದವರೊಂದಿಗೆ ಏನೆಲ್ಲ ಎಷ್ಟೆಲ್ಲ ಹಂಚಿಕೊಂಡರೂ ಕೊನೆಗೂ ಮನಸ್ಸು ತುಡಿಯುವುದು ಮರಳಿ ಮನೆಗೆ. ಆ ಮನೆಯೊಳಗೆ ಎಲ್ಲವೂ ಸ್ವಂತ. ಉಳಿಸಿಕೊಳ್ಳಬಹುದಾದ ಸಂಬಂಧ ಕಡಿದುಕೊಳ್ಳಬಹುದಾದ ಸಂಬಂಧವೂ ಹೌದಲ್ಲ! ಬೇರೊಂದು ಸಂಬಂಧದಲ್ಲಿ ಕಡಿದುಕೊಳ್ಳುವುದಕ್ಕೂ ಏನೂ ಇರುವುದಿಲ್ಲ. ಕಡಿದುಕೊಂಡಾಗ ಕನಿಷ್ಠ ವಿಷಾದ ಕೂಡ.
ಅಲ್ಲಿಂದಾಚೆ ವೆಂಕಟೇಶಮೂರ್ತಿಯವರ ನಾಲ್ಕು ಸಾಲುಗಳತ್ತ ಹೊರಳಿಕೊಂಡರೆ ಮತ್ತೊಂದು ಜಗದ ದರ್ಶನ:
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿದೋಣಿಗೆ
ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?
ಇವೆಲ್ಲಕ್ಕೂ ಉತ್ತರಿಸುವುದು ಕೆ ಎಸ್ ನ ಕವಿತೆ:
ನಗುವಾಗ ನಕ್ಕು ಅಳುವಾಗ ಅತ್ತು
ಮುಗಿದಿತ್ತು ಅರ್ಧದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ
ಬಿಳಿಬಿಳಿಯ ಹಕ್ಕಿ ಹಾರಿ.
ಹಾರದೆ ಉಳಿದ ಹಕ್ಕಿ, ಮುಗಿಯದ ಅರ್ಧ ದಾರಿ, ಕನ್ನಡಿಯಲ್ಲಿ ಮಿಂಚಿ ಮರೆಯಾದ ಮುಖ. ಅಷ್ಟು ಸಾಕಲ್ಲ. ಅಥವಾ ವಿವರವಾಗಿ ಹೇಳಬೇಕಾ-
ಈ ಕತ್ತಲೊಳಗೆ ಹುಡುಕುವುದು ಬೇಡ,
ಅಲ್ಲಿಹುದು ನಿನ್ನ ವೀಣೆ.
Wednesday, August 20, 2008
ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ...
ಈತನ ಕತೆ ಹೀಗೆ;
ಒಬ್ಬ ರೈತ. ನಾಲ್ಕು ಕಾಸು ಸಂಪಾದಿಸಿದ ನಂತರ ದುಡಿಯುವುದಕ್ಕೊಬ್ಬ ಗುಲಾಮ ಬೇಕು ಅನ್ನಿಸುತ್ತದೆ. ಸಂತೆಗೆ ಹೋಗುತ್ತಾನೆ. ಅಲ್ಲಿ ಒಬ್ಬ ವ್ಯಾಪಾರಿ ಗುಲಾಮರನ್ನು ಮಾರುತ್ತಿದ್ದಾನೆ. ರೈತನಿಗೆ ಆ ಗುಲಾಮರು ಯಾರೂ ಇಷ್ಟವಾಗಲಿಲ್ಲ.
ವ್ಯಾಪಾರಿ ಕೊನೆಗೆ ಒಳಗೆ ಮಲಗಿದ್ದ ಎಲ್ಲ ಗುಲಾಮರನ್ನೂ ಕರೆಯುತ್ತಾನೆ. ಒಬ್ಬೊಬ್ಬರನ್ನಾಗಿ ತೋರಿಸುತ್ತಾನೆ. ಪ್ರತಿಯೊಬ್ಬರನ್ನೂ ಸೂಕ್ಪ್ಮವಾಗಿ ಪರೀಕ್ಪಿಸುತ್ತಾನೆ ಗುಲಾಮ. ಕೊನೆಗೊಬ್ಬ ಗುಲಾಮನನ್ನು ಮುಂದಿಟ್ಟು `ಈತ ಹ್ಯಾಗಿದ್ದಾನೆ ನೋಡು. ಕಟ್ಟುಮಸ್ತು ಆಸಾಮಿ. ಒಂದೇಟು ಕೊಟ್ಟು ನೋಡು. ಕಮಕ್ ಕಿಮಕ್ ಅನ್ನೋಲ್ಲ. ಮಾಂಸಖಂಡಗಳು ಹೇಗಿವೆ ನೋಡು' ಎನ್ನುತ್ತಾನೆ. ಗುಲಾಮನ ಬಾಯಿ ತೆಗೆಸಿ, ಚೂರಿಯ ಹಿಡಿಯಲ್ಲಿ ಹಲ್ಲುಗಳನ್ನು ತೋರಿಸುತ್ತಾನೆ.
ರೈತ ಕೊಂಚ ಹೊತ್ತು ಯೋಚಿಸುತ್ತಾನೆ. ಪರೀಕ್ಪಿಸುವಂತೆ ಗುಲಾಮನ ಹೊಟ್ಟೆಗೊಂದು ಏಟು ಹಾಕುತ್ತಾನೆ. ಗುಲಾಮ ಮಿಸುಕಾಡೋದಿಲ್ಲ. ಪರವಾಗಿಲ್ಲ ಅನ್ನಿಸಿ ವ್ಯಾಪಾರಿ ಹೇಳಿದ ರೇಟನ್ನು ಗೊಣಗುತ್ತಲೇ ಕೊಟ್ಟು ಗುಲಾಮನನ್ನು ಮನೆಗೆ ಕರೆತರುತ್ತಾನೆ.
ದುರದೃಷ್ಟ. ರೈತ ಮನೆಗೆ ಕರೆತಂದ ಕೆಲವೇ ದಿನಗಳಲ್ಲಿ ಗುಲಾಮ ಕಾಯಿಲೆ ಬಿದ್ದು ಬಡವಾಗುತ್ತಾ ಹೋಗುತ್ತಾನೆ. ಅವನು ನಿತ್ಯವೂ ತಾನು ಬಿಟ್ಟು ಬಂದ ಕಾಡುಗಳಿಗಾಗಿ ಹಂಬಲಿಸುತ್ತಿದ್ದಾನೆ ಅನ್ನೋದು ರೈತನಿಗೆ ಗೊತ್ತಾಗುತ್ತದೆ. ರೈತನಿಗೆ ಆತನ ಹಂಬಲದ ಬಗ್ಗೆ ಅಂಥ ಅನಾದರವೇನೂ ಇಲ್ಲ. ಹಂಬಲಿಸುವ ಮನುಷ್ಯ ಮಾತ್ರ ಉಪಯೋಗಕ್ಕೆ ಬರಬಲ್ಲ ಅನ್ನುವುದು ರೈತನಿಗೂ ಗೊತ್ತು. ಕನಸುಗಳೂ ಆಶೆಗಳೂ ಇರುವವರನ್ನಷ್ಟೇ ದುಡಿಸಿಕೊಳ್ಳಬಹುದು. ಸ್ಥಿತಪ್ರಜ್ಞರು ದುಡಿಯುವುದಿಲ್ಲ.
ರೈತ ನಿರಾಸಕ್ತಿಯಿಂದ ಮಲಗಿರುವ ಗುಲಾಮನ ಹತ್ತಿರ ಹೋಗಿ ಹೇಳಿದ. `ನೀನೇನೂ ಚಿಂತೆ ಮಾಡಬೇಡ. ನಿನ್ನ ಕಾಡುಗಳಿರುವ ಜಾಗಕ್ಕೆ ನಾನೇ ನಿನ್ನನ್ನು ಕಳುಹಿಸುತ್ತೇನೆ. ಇದು ಪ್ರಮಾಣ. ನೀನಿನ್ನೂ ತರುಣ. ಐದೇ ಐದು ವರುಷ ಕಷ್ಟಪಟ್ಟು ಕೆಲಸ ಮಾಡು. ನಾನು ನಿನ್ನನ್ನು ಬಿಟ್ಟುಬಿಡ್ತೇನೆ. ನಿನಗಿಷ್ಟ ಬಂದ ಕಡೆ ಹೋಗುವಿಯಂತೆ. ನಾನೂ ನಿನ್ನನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದೇನೆ ಅಲ್ವಾ. ನನಗೂ ನಷ್ಟವಾಗಬಾರದು ತಿಳೀತಲ್ಲ'
ಮಾತು ಮಂತ್ರವಾಗಿ ಕೆಲಸ ಮಾಡಿತು. ಗುಲಾಮ ಮೈಮುರಿಯೆ ದುಡಿಯತೊಡಗಿದ. ರೈತ ನೋಡನೋಡುತ್ತಿದ್ದಂತೆ ಗುಲಾಮ ಬಿಡುವಿಲ್ಲದೆ ಕೆಲಸ ಮಾಡತೊಡಗಿದ. ರೈತನಿಗೆ ಕಟ್ಟಿಗೆ ಒಡೆಯುವಾಗ, ನೀರು ಸೇದುವಾಗ, ಹಾರೆಯಲ್ಲಿ ನೆಲ ಅಗೆಯುವಾಗ ತೋಳುಗಳಲ್ಲಿ ಪುಟಿಯುವ ಗುಲಾಮನ ಮಾಂಸಖಂಡಗಳನ್ನು ನೋಡುವುದೇ ಖುಷಿ ಅನ್ನಿಸತೊಡಗಿತು.
ಗುಲಾಮ ವರುಷಗಳ ಲೆಕ್ಕ ಹಾಕುತ್ತಿದ್ದ. ಐದು ವರುಷ ಎಂದರೆ ಐದು ಸಂಕ್ರಮಣಗಳು. ತನ್ನ ಕೈಯಲ್ಲಿ ಎಷ್ಟು ಬೆರಳುಗಳಿವೆಯೋ ಅಷ್ಟು ಸಂಕ್ರಮಣಗಳು. ಪ್ರತಿದಿನವೂ ಸೂರ್ಯ ಮುಳುಗುವುದನ್ನೇ ನೋಡುತ್ತಿದ್ದ ಗುಲಾಮ. ಸೂರ್ಯ ಮುಳುಗಿದಂತೆಲ್ಲ ಖುಷಿ. ಒಂದು ಕಲ್ಲೆತ್ತಿ ಪಕ್ಕಕ್ಕಿಡುತ್ತಿದ್ದ. ಮೊಟ್ಟ ಮೊದಲಿಗೆ ಸೂರ್ಯ ಪಥ ಬದಲಾಯಿಸಿದಾಗ ಗುಲಾಮ ತನ್ನ ಹೆಬ್ಬೆರಡು ಮಡಿಚಿದ. ಹಾಗೇ ಮತ್ತೊಂದು ಸಂಕ್ರಮಣ ಕಳೆಯಿತು, ತೋರು ಬೆರಳು ಮಡಿಚಿದ. ಗುಲಾಮನಿಗೆ ತನ್ನ ಬಿಡುಗಡೆಗೆ ಕಾರಣವಾಗುತ್ತಿರುವ ಎರಡು ಬೆರಳುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಉಳಿದ ಮೂರು ಬೆರಳುಗಳು ಗುಲಾಮಗಿರಿಯ ಸಂಕೇತ ಅನ್ನಿಸಿ ಬೇಸರವಾಗುತ್ತಿತ್ತು.
ಹೀಗೆ ಗುಲಾಮ ಸೂರ್ಯನನ್ನು ನೋಡುತ್ತಾ ಕಾಲ ಸರಿಯುವುದನ್ನು ನೋಡುತ್ತಾ ದುಡಿಯುತ್ತಿದ್ದ ಗುಲಾಮ. ಕ್ರಮೇಣ ಅವನ ಲೆಕ್ಕಗಳು ಆಳವೂ ವಿಶಾಲವೂ ಆದವು. ಹಿಗ್ಗಿದವು. ಗೋಜಲು ಗೋಜಲಾದ ದೊಡ್ಡ ಗಂಟುಗಳಾಗಿ ಸಾಗುತ್ತಿದ್ದ ವರುಷಗಳನ್ನು ಹಿಡಿಯುವುದು ಅವನ ಅಳವಿಗೆ ಮೀರಿದ್ದು. ಆದರೆ ಹೊತ್ತು ಮುಳುಗುವ ಪುಟ್ಟ ಕ್ಪಣ ಅವನಿಗೆ ನಿಲುಕುವಂತದ್ದು. ವರ್ತಮಾನದಲ್ಲಿ ಕಣ್ಮರೆಯಾದ ಕಾಲ ಭೂತಕ್ಕೆ ಸೇರಿಕೊಳ್ಳುವ ಸೂರ್ಯಾಸ್ತದ ಘಳಿಗೆಯಲ್ಲೇ ಆತ ತನ್ನ ಬದುಕನ್ನು ಪುನರ್ರೂಪಿಸಿಕೊಳ್ಳುತ್ತಿದ್ದ. ಭೂತಕಾಲವೆನ್ನುವುದು ಎಂದೂ ಹಿಂದಿರುಗಲಾರದ ಹಾದಿಯಂತೆ, ಭವಿಷ್ಯವೆಂಬುದು ಎಂದೂ ದಾಟಲಾರದ ಮರಳುಗಾಡಿನಂತೆ ಕಾಣಿಸುತ್ತಿತ್ತು.
ಹೀಗೆ ಕಾಲದ ಬಗ್ಗೆ ಚಿಂತಿಸುತ್ತಾ ಗುಲಾಮನ ಒಳಜಗತ್ತು ವಿಸ್ತಾರಗೊಂಡಿತು.ಅವನ ಹಂಬಲವೇ ಕಾಲಕ್ಕೊಂದು ಅನಂತತೆಯನ್ನು ತಂದುಕೊಟ್ಟಿತ್ತು. ಜಗತ್ತು ಅನಂತವಾಗುತ್ತಾ ಸಾಗಿತ್ತು. ಪ್ರತಿಯೊಂದು ಸೂರ್ಯಾಸ್ತವೂ ಅವನ ಬದುಕನ್ನು ಅರ್ಥಪೂರ್ಣವಾಗಿಸುತ್ತಾ ಹೋಗುತ್ತಿತ್ತು.
ಕೊನೆಗೂ ಐದು ವರುಷ ಕಳೆಯಿತು. ಗುಲಾಮ ರೈತನ ಬಳಿಗೆ ಬಂದು ಬಿಡುಗಡೆ ಕೋರಿದ. ಕಾಡುಗಳ ನಡುವೆ ಇದ್ದ ತನ್ನ ಮನೆಗೆ ಹೋಗಬೇಕು ಅನ್ನಿಸಿತು. ರೈತ ಯೋಚಿಸಿ ಹೇಳಿದ;
`ನಿನ್ನ ಕೆಲಸಕ್ಕೆ ಮೆಚ್ಚಿದ್ದೇನೆ. ನೀನು ಹೋಗಬಹುದು. ಆದರೆ ನಿನ್ನ ಮನೆ ಎಲ್ಲಿದೆ? ಪಶ್ಚಿಮಕ್ಕಾ? ನೀನು ಆ ದಿಕ್ಕನ್ನೇ ನೋಡುತ್ತಿದ್ದುದನ್ನು ನಾನೂ ನೋಡಿದ್ದೇನೆ'
`ಹೌದು, ಪಶ್ಚಿಮಕ್ಕೆ' ಎಂದ ಗುಲಾಮ.
`ಹಾಗಿದ್ದರೆ ಅದು ತುಂಬ ದೂರ. ಅಲ್ಲಿಗೆ ಹೋಗುವುದಕ್ಕೆ ನಿನ್ನ ಹತ್ತಿರ ಹಣವಾದರೂ ಎಲ್ಲಿದೆ? ದುಡ್ಡಿಲ್ಲದೆ ಅಲ್ಲಿಗೆ ಹೇಗೆ ಹೋಗ್ತೀಯ? ಒಂದು ಕೆಲಸ ಮಾಡು. ಮೂರು ವರುಷ, ಉಹುಂ.. ಎರಡೇ ಎರಡು ವರುಷ ಕೆಲಸ ಮಾಡು. ನಿಂಗೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡ್ತೀನಿ'
ಗುಲಾಮ ತಲೆದೂಗಿದ. ಮತ್ತೆ ಗೆಯ್ಮೆ ಶುರುಮಾಡಿದ. ಆದರೆ ಮೊದಲಿನಂತೆ ದಿನಗಳ ಲೆಕ್ಕ ಇಡೋದು ಅವನಿಗೆ ಸಾಧ್ಯವಾಗಲಿಲ್ಲ. ಹಗಲುಗನಸು ಕಾಣುತ್ತಿದ್ದ ಗುಲಾಮ ನಿದ್ದೆಯಲ್ಲಿ ಅಳುತ್ತಾ ಮಾತಾಡುತ್ತಿದ್ದ. ಮತ್ತೆ ಕಾಯಿಲೆ ಬಿದ್ದ.
ಈ ಬಾರಿ ರೈತ ಮತ್ತೆ ಅವನ ತಲೆಯ ಬಳಿ ಕೂತು ಪ್ರೀತಿಯಿಂದ ಮಾತಾಡಿದ;
`ನಾನೀಗ ಮುದುಕ. ನನಗೂ ಪಶ್ಚಿಮದ ಕಾಡುಗಳತ್ತ ಹೋಗಬೇಕು ಅನ್ನೋ ಹಂಬಲವಿತ್ತು. ಆದರೆ ಆಗ ನನ್ನ ಬಳಿ ದುಡ್ಡಿರಲಿಲ್ಲ. ಈಗ ದುಡ್ಡಿದ್ದರೂ ಅಲ್ಲಿಗೆ ಹೋಗಲಾರೆ. ಆದರೆ ನೀನು ಹುಡುಗ, ಬಲಶಾಲಿ. ಮೊದಲು ಕಾಯಿಲೆಯಿಂದ ಸುಧಾರಿಸಿಕೋ'.
ಗುಲಾಮನ ಕಾಯಿಲೆ ನಿಧಾನವಾಗಿ ಗುಣವಾಗತೊಡಗಿತು. ಆದರೆ ಕೆಲಸದಲ್ಲಿ ಹಳೆಯ ಉತ್ಸಾಹ ಇರಲಿಲ್ಲ. ಕೆಲಸದ ನಡುವೆ ನಿದ್ದೆ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡ. ಅದಕ್ಕೋಸ್ಕರ ರೈತನಿಂದ ಏಟು ತಿಂದ. ಬಿಕ್ಕಿ ಬಿಕ್ಕಿ ಅತ್ತ.
ಹೀಗೆ ಎರಡು ವರುಷ ಕಳೆಯಿತು. ರೈತ ಗುಲಾಮನನ್ನು ಬಿಟ್ಟುಬಿಟ್ಟ. ಗುಲಾಮ ಪಶ್ಚಿಮದ ಕಡೆಗೆ ಹೆಜ್ಜೆ ಹಾಕಿದ. ಎಷ್ಟೋ ತಿಂಗಳುಗಳ ನಂತರ ಆತ ನಿರಾಶೆ ಮತ್ತು ಹತಾಶೆಯಿಂದ ಜರ್ಜರಿತನಾಗಿ ವಾಪಸ್ಸು ಬಂದ. ಅವನಿಗೆ ತನ್ನ ಕಾಡುಗಳ ಸುಳಿವು ಸಿಕ್ಕಿರಲಿಲ್ಲ.
ರೈತ ಹೇಳಿದ `ಪೂರ್ವ ದಿಕ್ಕಿಗೆ ಹೋಗು. ಅಲ್ಲಾದರೂ ನಿನ್ನ ಕಾಡುಗಳು ಸಿಗಬಹುದು'.
ಗುಲಾಮ ಪೂರ್ವಕ್ಕೆ ಅಲೆದ. ತುಂಬ ದಿನ ನಡೆದ ನಂತರ ಅವನಿಗೆ ಅವನ ಕಾಡುಗಳು ಸಿಕ್ಕವು. ಆದರೆ ಆ ಕಾಡುಗಳ ಪರಿಚಯವೇ ಅವನಿಗೆ ಇರಲಿಲ್ಲ. ಆತ ಅಲ್ಲಿಂದಲೂ ನಿರಾಶನಾಗಿ ಮರಳಿದ, ರೈತನ ಬಳಿ ತನ್ನ ಕಾಡುಗಳು ಎಲ್ಲಿಯೂ ಇಲ್ಲ ಎಂದ. ರೈತ ಹಾಗಿದ್ದರೆ ನನ್ನ ಜೊತೆಗಿರು ಎಂದು ಪ್ರೀತಿಯಿಂದಲೇ ಹೇಳಿದ.
ಗುಲಾಮ ಅಲ್ಲೇ ಉಳಿದ. ಹೊಟ್ಟೆ ತುಂಬ ತಿನ್ನುತ್ತಿದ್ದ. ಆರೋಗ್ಯ ಕಾಪಾಡಿಕೊಳ್ಳುತ್ತಿದ್ದ. ಕಷ್ಟಪಟ್ಟು ದುಡಿಯುತ್ತಿದ್ದ. ತಪ್ಪು ಮಾಡಿದಾಗ ಏಟು ತಿನ್ನುತ್ತಿದ್ದ. ಪ್ರತಿಭಾನುವಾರ ಪಶ್ಚಿಮದತ್ತ ನೋಡುತ್ತಾ ಕೂರುತ್ತಿದ್ದ. ಕ್ರಮೇಣ ಅವನಿಗೊಬ್ಬಳು ದಾಸಿಯೂ ಸಿಕ್ಕಳು.
ವರುಷ ಸಂದವು. ರೈತನ ಮನೆಯಲ್ಲಿ ಗುಲಾಮನ ಆರು ಮಕ್ಕಳು ದುಡಿಯುತ್ತಿದ್ದರು. ಫಸಲು ಹುಲುಸಾಗಿತ್ತು. ಮಕ್ಕಳಿಗೆ ಕಾಡಿನ ಕಲ್ಪನೆಯೂ ಇರಲಿಲ್ಲ. ದುಡಿಯುತ್ತಿದ್ದರೆ ಕಾಲ ಸರಿಯುತ್ತದೆ ಮತ್ತು ನಮ್ಮನ್ನು ಶಾಶ್ವತವಾದ ಕಾಡುಗಳಿಗೆ ಕರೆದೊಯ್ಯುತ್ತಾರೆ ಎಂದು ರೈತ ಹೇಳುತ್ತಿದ್ದ. ಪ್ರತಿಭಾನುವಾರ ಗುಲಾಮ ಮಕ್ಕಳನ್ನೂ ದಿಬ್ಬದ ಮೇಲೆ ಕರೆದೊಯ್ದು ಸೂರ್ಯಾಸ್ತ ತೋರಿಸುತ್ತಿದ್ದ. ಅವರಿಗೂ ಹಂಬಲಿಸುವುದನ್ನು ಕಲಿಸುತ್ತಿದ್ದ.
ರೈತನಿಗೆ ವಯಸ್ಸಾಗಿದೆ. ಆತ ಏಳಲಾರ ಕೂರಲಾರ. ಆತನ ಮಗ ಇನ್ನೂ ಎಳಸು. ಆದರೆ ರೈತನಿಗೆ ಚಿಂತೆಯಿಲ್ಲ. ಯಾಕೆಂದರೆ ಗುಲಾಮರಿದ್ದಾರೆ. ಒಬ್ಬೊಬ್ಬರು ಬಲಶಾಲಿಗಳು. ಯಾರ ಭಯವೂ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಈ ಗುಲಾಮ ಹುಡುಗರು ಕೊಡಲಿ ಬೀಸಿ ಮರಗಳನ್ನು ಕಡಿಯುತ್ತಿದ್ದಾರೆ. ಅವರಿಗೆ ಕಾಡೇ ಇಲ್ಲ.
Tuesday, August 19, 2008
ಒಂದು ವಿಪ್ಲವ ರಾತ್ರಿಗೆ
ಕನಕನ ಹಾಗೆ ಕಿಂಡಿಯಿರದ
ಗೋಡೆಯಾಚೆಗೆ ಅರೆಬೆತ್ತಲೆ ಮೈ.
ಬಿಲ್ಲಿನ ಹಾಗೆ ಬಾಗಿದ ಬೆನ್ನಿಗೆ ಯಜುರ್ವೇದಿಗಳ
ಕುಹಕ ಮಂತ್ರೋಚ್ಚಾರ, ಶಂಖಜಾಗಟೆಯ ಜೊತೆ
ಉಚ್ಛಾಟನೆಯ ಮೊದಲ ಹಂತ.
ಅಶ್ವಯುಜ ಕಾರ್ತೀಕ-ಶರದೃತು
ಕಂಪ್ಯೂಟರಿನ ಮೇಲೆ ಬೀಜಾಕ್ಷರದ
ಕುರುಹು. ಯಾರ ಅಂಗಕ್ಕೋ ತೆಕ್ಕೆಬಿದ್ದ
ಲಿಂಗಕ್ಕೆ ಅಂಗಮರ್ದನದ
ನರುಗಂಪು.
ಶ್ರಾವಣದ ಮಳೆಗೆ
ನಡುರಾತ್ರಿಯ ಏದುಸಿರ ಲಯ.
ಮೇಷ ವೃಷಭ ಮಿಥುನ.
ಪಂಚತಂತ್ರಕ್ಕೆ
ಚತುರೋಪಾಯದ ಬೆಂಗಾವಲು.
ಚತುಷ್ಪದದಲ್ಲಿ ಭಾಮಿನಿಯ ನುಡಿಸಿದರೆ
ಕೊನೆಗೂ ಷಟ್ಪಧಿಯ ಶ್ರೀರಕ್ಷೆ.
ಮುಗಿಲಿಂದ ಮಿಂಚಿಳಿದು
ಮೈತುಂಬ ನವಿಲುಗರಿ.
ಚಂದ್ರಮಂಚಕ್ಕೆ ಬಂದ ಚಕೋರಿಗೆ
ಚಾತಕ ಪಕ್ಷಿಯ ಸುಡುದಾಹ!
ಪ್ರಭವ ವಿಭವ ಶುಕ್ಲ.
ಬಂಡೆಹೊತ್ತು ಬೆಟ್ಟ
ಹತ್ತುವ ಇಳಿವ ಸಿಸಿಫಸ್ಸನ ಕರ್ಮಕಾಂಡ.
ತುದಿಯೇರಿದ ಮರುಕ್ಷಣ
ತಳಸ್ಪರ್ಶಿ ಅನುಭವ.
ನಿರರ್ಥಕತೆಯ ಅಂತ್ಯಕ್ಕೆ
ಅನೂಹ್ಯ ತಿರುವು
ಮಾರ್ಚ್ ಏಪ್ರಿಲ್ ಮೇ
or May not.
(ಹಾಯ್ ಬೆಂಗಳೂರಲ್ಲಿ ಪ್ರಕಟಗೊಂಡಿದೆ)
Sunday, August 17, 2008
ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ!
ನಾನು ಮತ್ತು ಗೋಪಾಲಕೃಷ್ಣ ಗಾಂಧೀಪಾರ್ಕಿನ ಕಟ್ಟೆಯ ಮೇಲೆ ಕೂತು, ಸುಮಾರು ಇಪ್ಪತ್ತು ವರುಷಗಳ ಹಿಂದಿನ ಸಂಜೆಗಳನ್ನು ಮೆಲುಕುಹಾಕುತ್ತಿರುವ ಹೊತ್ತಿಗೇ, ಸೋಮಣ್ಣ ಏದುಸಿರುಬಿಡುತ್ತಾ ಓಡಿ ಬರುವುದು ಕಾಣಿಸಿತು. ಇಲ್ಲಿಂದ ಪಾರಾಗೋಣ, ಬಾ. ಸೋಮಣ್ಣನ ಕೈಗೆ ಸಿಕ್ಕಿಹಾಕ್ಕೊಂಡರೆ ಜೀವ ತಿಂತಾನೆ ಎಂದು ಎದ್ದುಹೋಗುವ ವ್ಯರ್ಥ ಪ್ರಯತ್ನ ಮಾಡಿದ ಗೋಪಾಲಕೃಷ್ಣ. ಆದರೆ, ಸೋಮಣ್ಣನ ಗುರಿ ಅವನೇ ಆಗಿದ್ದರಿಂದ ತನ್ನ ಕುಂಟುಕಾಲನ್ನು ಬೀಸ ಬೀಸ ಹಾಕುತ್ತಾ ಸೋಮಣ್ಣ ಸಮೀಪಿಸಿಯೇ ಬಿಟ್ಟ.
ಸೋಮಣ್ಣನಿಗೆ ನನ್ನ ಗುರುತು ಹತ್ತಲಿಲ್ಲ. ಅವನು ನನ್ನನ್ನು ನೋಡಿ ಇಪ್ಪತ್ತು ವರ್ಷ ಕಳೆದಿರಬೇಕು. ನಾನು ಉಪ್ಪಿನಂಗಡಿ ಬಿಡುವ ಹೊತ್ತಿಗೆ ಅವನು ಗಾಂಧೀಪಾರ್ಕಿನಿಂದ ಸರ್ಕಾರಿ ಕಾಲೇಜಿಗೆ ಹೋಗುವ ರಸ್ತೆಯಲ್ಲೊಂದು ಸ್ಕೂಟರ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ. ಅವನನ್ನು ನಮ್ಮೂರಿನ ಯಾರೂ ಮೆಕ್ಯಾನಿಕ್ ಎಂದು ಪರಿಗಣಿಸಿರಲಿಲ್ಲ. ಹೀಗಾಗಿ ಹಳೆಯ ಬಜಾಜ್ ಸ್ಕೂಟರಿನ ಪ್ಲಗ್ ಕ್ಲೀನ್ ಮಾಡುವುದಕ್ಕೋ ಕಿತ್ತುಹೋದ ಕ್ಲಚ್ ಕೇಬಲ್ ಹಾಕಿಸುವುದಕ್ಕೋ ಮಾತ್ರ ಅವನಲ್ಲಿಗೆ ಬರುತ್ತಿದ್ದುದು. ಮೇಜರ್ ರೀಪೇರಿ ಇದ್ದರೆ ಅವರೆಲ್ಲ ದೂರದ ಪುತ್ತೂರಿಗೆ ಹೋಗುತ್ತಿದ್ದರು. ಹೇಗಾದ್ರೂ ಪುತ್ತೂರು ತನಕ ಹೋಗೋ ಹಾಗೆ ಮಾಡ್ಕೊಡೋ ಮಾರಾಯ, ಅಲ್ಲಿ ರಿಪೇರಿ ಮಾಡಿಸ್ತೀವಿ ಅಂತ ಅವನ ಹತ್ತಿರವೇ ಹೇಳಿ ಹೋಗುತ್ತಿದ್ದರೂ ಅವನಿಗೇನೂ ಅದರಿಂದ ಬೇಸರ ಆಗುತ್ತಿರಲಿಲ್ಲ. ಎಲ್ಲಾದರೂ ಮಾಡಿಸ್ಕೊಳ್ಳಲಿ ಬಿಡಿ, ಊರಿನವರು ಅಂದ್ರೆ ಎಲ್ಲರಿಗೂ ಸಸಾರ. ನಮ್ಮ ಬೆಲೆ ಗೊತ್ತಾಗಬೇಕಿದ್ರೆ ಬೇರೆ ಊರಿಗೆ ಹೋಗಬೇಕು ಅಂತ ತನ್ನ ಹತಾಶೆಯನ್ನು ಇಡೀ ಊರಿನ ಮೇಲೆ ಕಾರಿಕೊಂಡು ಸೋಮಣ್ಣ ಸುಮ್ಮನಾಗುತ್ತಿದ್ದ.
ನನಗೂ ಫಕ್ಕನೆ ಸೋಮಣ್ಣನ ಗುರುತು ಹತ್ತಲಿಲ್ಲ. ನಾನು ಊರು ಬಿಡುವ ಹೊತ್ತಿಗೆ ಅವನು ನೀಲಗಪ್ಪು ಬಣ್ಣದ ಪ್ಯಾಂಟು ಅದೇ ಕಲ್ಲರಿನ ಶರ್ಟು ಹಾಕಿಕೊಂಡು ಜೋಬಲ್ಲಿ ಸದಾ ಕಟಿಂಗ್ ಪ್ಲೇಯರ್, ಸ್ಕ್ರೂಡ್ರೈವರ್ ಇಟ್ಟುಕೊಂಡು ಓಡಾಡುತ್ತಿದ್ದ. ಮೆಕ್ಯಾನಿಕ್ ಆಗಿರುವುದು ಎಂದರೆ ಕೈಗೆ ಬಟ್ಟೆಗೆ ಗ್ರೀಸ್ ಮೆತ್ತಿಕೊಂಡು ಸಾಧ್ಯವಾದಷ್ಟೂ ಕೊಳಕಾಗಿರುವುದು ಎಂದು ಅವನೇ ನಿರ್ಧಾರ ಮಾಡಿದಂತಿತ್ತು. ಅವನ ಶರ್ಟು ಮುಟ್ಟಿದರೆ, ಆಗ ತಾನೇ ಪ್ರಿಂಟಾದ ಪೇಪರ್ ಮುಟ್ಟಿದಂತೆ ಕೈಯೆಲ್ಲ ಕಪ್ಪಾಗುತ್ತಿತ್ತು.
ಆದರೆ, ಆ ಸಂಜೆ ನಮ್ಮಮುಂದೆ ಹಾಜರಾದ ಸೋಮಣ್ಣ ಹಾಗಿರಲಿಲ್ಲ. ಬಿಳಿ ಪ್ಯಾಂಟು, ಬಿಳಿ ಶರ್ಟು, ಬೆಳ್ಳಗಿನ ಚಪ್ಪಲಿ, ಎಡಗೈಯಲ್ಲಿ ನಾಲ್ಕು , ಬಲಗೈಯಲ್ಲಿ ಎರಡು ಉಂಗುರ ಹಾಕಿಕೊಂಡಿದ್ದ. ಅವನ ಮಾತೂ ಬದಲಾಗಿತ್ತು.
‘ಒಂದು ಅನಾಹುತ ಆಗಿದೆ. ನೀವೇ ಏನಾದ್ರೂ ಮಾಡಬೇಕು’ ಎಂದು ಸೋಮಣ್ಣ ನನ್ನ ಮುಂದೆ ಹೇಳಲೋ ಬೇಡವೋ ಅಂತ ಅನುಮಾನಿಸಿದ. ಗೋಪಿ ನನ್ನ ಪರಿಚಯ ಮಾಡಿಕೊಡುತ್ತಾನೆ ಎಂದು ನನಗೆ ಖಾತ್ರಿಯಾಗುತ್ತಿದ್ದಂತೆ ನಾನು ‘ ನೀವು ಮಾತಾಡಿಕೊಳ್ಳಿ, ನಾನೀಗ ಬಂದೆ’ ಎಂದು ವಜ್ರನ ಅಂಗಡಿಯತ್ತ ಕಾಲು ಹಾಕಿದೆ.
‘ಅಯ್ಯೋ, ಅವನ ಸಮಸ್ಯೆಗೆ ಪರಿಹಾರವೇ ಇಲ್ಲ, ಮಾರಾಯ. ಯಾವತ್ತೂ ಇದೇ ರಗಳೆ’ ಅನ್ನುತ್ತಾ ಗೋಪಿ ಬೇಸರದ ಮುಖ ಮಾಡಿಕೊಂಡು ಸಿಗರೇಟು ಸೇದುತ್ತಾ ನಿಂತ ನನ್ನ ಹತ್ತಿರ ಬರುವ ಹೊತ್ತಿಗೆ ಪೂರ್ತಿ ಕತ್ತಲಾಗಿತ್ತು. ಸೋಮಣ್ಣ ಮತ್ತೆ ಮತ್ತೆ ಗೋಪಿಗೆ ಕೈ ಸನ್ನೆ ಮಾಡುತ್ತಾ ಶಿವಕೀರ್ತಿ ಹೊಟೆಲಿನ ಪಕ್ಕದಲ್ಲಿದ್ದ ಬಾರಿನೊಳಗೆ ಕಣ್ಮರೆಯಾದ. ಸೋಮಣ್ಣನ ಸಮಸ್ಯೆ ಏನು ಎಂದು ಕೇಳುವ ಉತ್ಸಾಹವೂ ನನ್ನಲ್ಲಿರಲಿಲ್ಲ. ನಮ್ಮ ಸಂಜೆಯನ್ನು ಹಾಳು ಮಾಡಿದವನ ಬಗ್ಗೆ ಸಿಟ್ಟು ಉಕ್ಕುತ್ತಿತ್ತು.
ಸುರೇಂದ್ರನ ಪುಟ್ಟ ಗೂಡಲ್ಲಿ ನಾವು ಸ್ಥಾಪಿತರಾಗಿ, ಅವನು ಬಹಳ ದಿನಗಳಿಂದ ನನಗೋಸ್ಕರ ಅಂತ ತಂದಿಟ್ಟಿದ್ದ ವಿಸ್ಕಿಗೆ ತುಟಿಯಿಟ್ಟಾಗ ಸೋಮಣ್ಣನ ಕತೆ ಮತ್ತೆ ಬಿಚ್ಚಿಕೊಂಡಿತು. ಆ ದಿನಗಳಲ್ಲಿ ಸೋಮಣ್ಣ ನಮ್ಮ ತಮಾಷೆಗೆ ವಸ್ತುವಾಗಿದ್ದವನು. ಅವನನ್ನು ನಾವೆಲ್ಲ ಆಕ್ಸಿಡೆಂಟ್ ಸೋಮಣ್ಣ ಅಂತಲೇ ಕರೆಯುತ್ತಿದ್ದದ್ದು. ಅವನು ವಿಧವಿಧವಾಗಿ ಅಪಘಾತಕ್ಕೆ ತುತ್ತಾಗುತ್ತಿದ್ದ.
ಅವನು ತಲೆಯೊಡೆದುಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾಗ ಒಂದು ಸ್ವಾರಸ್ಯಕರ ಕತೆ ಹಬ್ಬಿತ್ತು. ಆಗಷ್ಟೇ, ಸೋಮಣ್ಣ ನಮ್ಮೂರ ಶಾನುಭೋಗರ ಆಸ್ಟಿನ್ ಆಫ್ ಇಂಗ್ಲೆಂಡ್ ಕಾರನ್ನು ರಿಪೇರಿ ಮಾಡುವುದಾಗಿ ಹೇಳಿ ತಂದಿಟ್ಟುಕೊಂಡಿದ್ದ.ಅವರಿಗೆ ಯಾವುದೋ ಕಾಲದಲ್ಲಿ ಯಾರೋ ಬ್ರಿಟಿಷ್ ಅಧಿಕಾರಿ ಬಳುವಳಿಯಾಗಿ ಕೊಟ್ಟ ಕಾರದು. ನಮ್ಮೂರಿನ ದೇವಸ್ಥಾನದ ಜಾತ್ರೆಗೆ ಅದೇ ಕಾರಲ್ಲಿ ಅವರು ಬರಬೇಕು. ಆ ದಿನ ಬಿಟ್ಟರೆ ಆ ಕಾರು ಓಡಿದ್ದನ್ನು ಯಾರೂ ಕಂಡಿಲ್ಲ. ಉಳಿದ ದಿನಗಳಲ್ಲಿ ಅದು ರಿಪೇರಿಯಲ್ಲಿರುತ್ತಿತ್ತು. ಅದರ ಸ್ಪೇರ್ ಪಾರ್ಟುಗಳೂ ಸಿಗುತ್ತಿರಲಿಲ್ಲ.
ಅದನ್ನು ರಿಪೇರಿ ಮಾಡುವ ಗುರುತರ ಜವಾಬ್ದಾರಿ ಹೊತ್ತುಕೊಂಡು ಉಪ್ಪಿನಂಗಡಿ ಪೇಟೆಗೆ ತಂದ ಸೋಮಣ್ಣ ಅದರಿಂದಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಅವನ ಎರಡು ತಿಂಗಳ ಸತತ ಪ್ರಯತ್ನದಿಂದ ಒಂದು ಮುಂಜಾನೆ ಆ ಕಾರು ಅಂತೂ ಸ್ಟಾರ್ಟಾಯಿತು. ಆ ಖುಷಿಯಲ್ಲಿ ಅವನು ಅದನ್ನು ಶಾನುಭೋಗರ ಮನೆಗೆ ತಲುಪಿಸಲು ಹೊರಟಿದ್ದ. ವೇಗ ಕಮ್ಮಿಮಾಡಿದರೆ ಇಂಜಿನ್ನಿಗೆ ಪೆಟ್ರೋಲು ಸರಬರಾಜಾಗದೇ ಬಂದ್ ಬೀಳುತ್ತಿತ್ತು. ಹೀಗಾಗಿ ಅವನು ಒಂದು ವೇಗವನ್ನು ಮೇಂಟೇನ್ ಮಾಡಲೇಬೇಕಿತ್ತು.
ಹಾಗೆ ಒಂದೇ ವೇಗದಲ್ಲಿ ತನ್ನ ಮನೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ಸೋಮಣ್ಣನ ಮುಂದೆ ಸೊಸೈಟಿಗೆ ಹಾಲು ಒಯ್ಯುತ್ತಿದ್ದ ಸೀನ ಸೈಕಲ್ಲಿನಲ್ಲಿ ಹೋಗುತ್ತಿದ್ದ. ಅವನ ವೇಗಕ್ಕೂ ಸೋಮಣ್ಣನ ವೇಗಕ್ಕೂ ತಾಳೆಯಾಗುತ್ತಿರಲಿಲ್ಲ. ಸೋಮಣ್ಣ ಎಷ್ಟು ಹಾರ್ನ್ ಮಾಡಿದರೂ ಸೀನ ಸೈಡ್ ಬಿಟ್ಟುಕೊಡಲಿಲ್ಲ. ಸೋಮಣ್ಣನ ಪಿತ್ಥ ನೆತ್ತಿಗೇರಿ, ಮತ್ತಷ್ಟು ಹಾರ್ನ್ ಮಾಡಿದರೂ ಸೀನ ತಿರುಗಿಯೂ ನೋಡಲಿಲ್ಲ. ಹಾವಿನ ಹಾಗೆ ರಸ್ತೆತುಂಬ ಹರಿದಾಡುತ್ತಾ ತನ್ನ ವೇಗದಲ್ಲೇ ಸಾಗುತ್ತಿದ್ದ. ಕೊನೆಗೆ ಸೋಮಣ್ಣ ಕ್ಲಚ್ ಮೇಲೆ ಕಾಲಿಟ್ಟು ಅನಗತ್ಯವಾಗಿ ಆಕ್ಸಲರೇಟರ್ ತುಳಿದು ಕಾರೋಡಿಸಬೇಕಾಗಿ ಬಂತು.
ಮುಖ್ಯರಸ್ತೆಗೆ ಬರುತ್ತಿದ್ದಂತೆ ಸೋಮಣ್ಣ ಕೆಂಡಾಮಂಡಲವಾಗಿದ್ದ. ಸೀನನನ್ನು ಓವರ್ ಟೇಕ್ ಮಾಡಿಕೊಂಡು ಹೋಗಿ, ಅವನ ಸೈಕಲ್ಲಿನ ಮುಂದೆ ಕಾರು ನಿಲ್ಲಿಸಿ, ‘ಕೊಲ್ತೀನಿ ನಿನ್ನ, ಫಟಿಂಗ’ ಎಂದು ಅವಡುಗಚ್ಚಿ ಕಾರಿಂದ ಹೊರಗೆ ತಲೆ ಅಪ್ಪಳಿಸಿ ಅಬ್ಬರಿಸಿದ.
ಅವನಿಗೆ ಎಚ್ಚರವಾದದ್ದು ಕೆಜಿಭಟ್ಟರ ಆಸ್ಪತ್ರೆಯಲ್ಲೇ. ಸಿಟ್ಟಿನ ಭರದಲ್ಲಿ ಕಾರಿನ ಗಾಜು ಏರಿಸಿದ್ದನ್ನೂ ಮರೆತು ಸೋಮಣ್ಣ ತಲೆಯನ್ನು ಬಲವಾಗಿ ಹೊರಗೆ ಹಾಕಿ, ಸೀನನತ್ತ ಆರ್ಭಟಿಸಿದ್ದ. ಆ ರಭಸಕ್ಕೆ ಕಾರಿನ ಗಾಜು ಪುಡಿಪುಡಿಯಾಗಿ ಸೋಮಣ್ಣನ ಹಣೆ ಒಡೆದುಹೋಗಿತ್ತು. ಹೊರಗೆ ಸೈಕಲ್ಲಿಗೆ ಕತ್ತರಿಕಾಲು ಹಾಕಿ ನಿಂತಿದ್ದ ಸೀನನಿಗೆ ಸೋಮಣ್ಣ ತನ್ನ ಮುಂದೆ ಕಾರು ನಿಲ್ಲಿಸಿ ಗಾಜಿಗೆ ತಲೆ ಚಚ್ಚಿಕೊಂಡದ್ದು ಯಾಕೆ ಅನ್ನುವುದು ಗೊತ್ತೇ ಆಗಿರಲಿಲ್ಲ.
ಅಂಥ ಸೋಮಣ್ಣನಿಗೆ ಇದ್ದಕ್ಕಿದ್ದಂತೆ ಲಾರಿ ಕೊಳ್ಳುವ ಹುಚ್ಚು ಹಿಡಿಯಿತಂತೆ. ‘ಸುಬ್ರಹ್ಮಣ್ಯದ ಇಸ್ಮಾಯಿಲ್ ಸಾಹೇಬರು ಇವನ ತಲೆ ಕೆಡಿಸಿದ್ದು. ಒಳ್ಳೇ ಬಾಡಿಗೆ ಸಿಗುತ್ತೆ, ಲಾರಿ ತಗೊಳ್ಳಿ ಅಂತ ಇಸ್ಮಾಯಿಲ್ ಸಾಹೇಬರಿಗೆ ದುಬೈಯಲ್ಲಿರುವ ಅವರ ಅಣ್ಣನ ಮಗ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದನಂತೆ. ಅದಕ್ಕೆ ಬೇಕಾದ ದುಡ್ಡನ್ನೂ ಅವನೇ ಕಳಿಸಿಕೊಟ್ಟಿದ್ದನಂತೆ.
ಕೊನೆಗೂ ಇಸ್ಮಾಯಿಲ್ ಸಾಹೇಬರು ಮನಸ್ಸು ಮಾಡಿ ಸೆಕೆಂಡ್ ಹ್ಯಾಂಡ್ ಲಾರಿಯೊಂದನ್ನು ಕೊಂಡು ತಂದರು. ಅದನ್ನು ಓಡಿಸುವುದಕ್ಕೆ ಕೇರಳದಿಂದ ಹಮೀದ್ ಎಂಬ ತಾರುಣ್ಯ ಉಕ್ಕುವ ಡ್ರೈವರನನ್ನೂ ಗೊತ್ತು ಮಾಡಿಕೊಂಡರು.
ಅವನು ಸಾಹೇಬರ ಮನೆಯಲ್ಲಿದ್ದದ್ದು ಮೂರೇ ವಾರ. ಒಂದು ಬೆಳಗ್ಗೆ ಎದ್ದು ನೋಡುವ ಹೊತ್ತಿಗೆ ಸಾಹೇಬರ ಮೂರನೇ ಹೆಂಡತಿ ಜಲೀಲಳೂ ಇರಲಿಲ್ಲ. ಹಮೀದನೂ ಇರಲಿಲ್ಲ. ತನ್ನನ್ನು ಈ ಸಂಕಟಕ್ಕೆ ತಳ್ಳಿದ್ದು ಲಾರಿಯೇ ಎಂದು ನಿರ್ಧರಿಸಿದ ಸಾಹೇಬರು ಲಾರಿ ಮಾರಲು ನಿರ್ಧಾರ ಮಾಡಿಬಿಟ್ಟಿದ್ದರು. ೨೦೦೫ ಮಾಡೆಲ್ ಲಾರಿ, ಐದೇ ಲಕ್ಷ, ಎಲ್ಲ ಚೆನ್ನಾಗಿ ಆದರೆ ಎರಡೇ ವರ್ಷಕ್ಕೆ ದುಡಿಯಬಹುದು, ಬ್ಯಾಂಕ್ ಲೋನ್ ಕೂಡ ಸಿಗುತ್ತೆ ಅಂತ ಇಸ್ಮಾಯಿಲ್ ಸಾಹೇಬರು ಆಕರ್ಷಕವಾಗಿ ಹೇಳಿದ್ದನ್ನು ಕೇಶವ ಮಣಿಯಾಣಿ ಸೋಮಣ್ಣನಿಗೆ ಹೇಳಿ ತಲೆಕೆಡಿಸಿದ. ಸೋಮಣ್ಣ ಸಿಂಡಿಕೇಟ್ ಬ್ಯಾಂಕಲ್ಲಿ ಐದು ಲಕ್ಷ ಸಾಲ ಮಾಡಿ ಲಾರಿ ಕೊಂಡುಕೊಂಡೇ ಬಿಟ್ಟ.
ಚಿಕ್ಕನಾಯಕನ ಹಳ್ಳಿಯಿಂದ ಮಂಗಳೂರಿಗೆ ಅದಿರು ಸಾಗಿಸುವ ಲಾರಿಗಳ ಸಾಲಿಗೆ ಸೋಮಣ್ಣನ ಲಾರಿಯೂ ಸೇರಿಕೊಂಡಿತು. ಮೂರು ತಿಂಗಳು ಒಳ್ಳೆಯ ಲಾಭವೂ ಬಂತು. ಸೋಮಣ್ಣ ಊರವರ ಹತ್ತಿರ ಈ ತೋಟ, ಹೈನುಗಾರಿಕೆ, ಕೃಷಿ ಎಲ್ಲಾ ವೇಶ್ಟು. ಒಂದು ಲಾರಿ ಇಟ್ಟುಕೊಂಡ್ರೆ ಆರಾಮಾಗಿ ಬದುಕಬಹುದು. ನಾನು ಇಷ್ಟರಲ್ಲೇ ಇನ್ನೊಂದು ಲಾರಿ ತಗೋತೀನಿ’ ಅಂತೆಲ್ಲ ಹೇಳುತ್ತಿದ್ದ. ಎಲ್ಲರೂ ಅಸೂಯೆ ಪಡುವ ಹಾಗೆ ಹೊಸ ಅವತಾರದಲ್ಲಿ ಕಂಗೊಳಿಸತೊಡಗಿದ.
ಆದರೆ, ಒಮ್ಮೆ ಮಾರನಹಳ್ಳಿ ಚೆಕ್‌ಪೋಸ್ಟಿನ ಹತ್ತಿರ ಲಾರಿ ಕೆಟ್ಟು ನಿಂತಿತು. ಡ್ರೈವರ್ ಮೋನಪ್ಪ ಇಂಜಿನ್ ಆಯಿಲ್ ಚೆಕ್ ಮಾಡಿರಲಿಲ್ಲ ಎಂದು ಸೋಮಣ್ಣ ಅವನ ಮೇಲೆ ಕೂಗಾಡಿದ. ಲಾರೀನ ಸರ್ವೀಸೇ ಮಾಡಿಸ್ತಿರಲಿಲ್ಲ. ಈ ಸ್ಕೂಟರ್‌ನ ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡುವವ ಲಾರಿ ಸರ್ವೀಸ್ ಮಾಡ್ತೀನಿ ಅಂದ್ರೆ ಹೀಗೇ ಆಗೋದು ಅಂತ ಮೋನಪ್ಪ ಎಲ್ಲರ ಹತ್ತಿರವೂ ಸೋಮಣ್ಣನೇ ಲಾರಿ ರಿಪೇರಿ ಮಾಡುತ್ತಿದ್ದದ್ದನ್ನು ಗುಟ್ಟಾಗಿ ಹೇಳಿಕೊಂಡು ಬಂದ. ಹೀಗೆ ಎರಡು ಮೂರು ಸಾರಿ ಆಗುವಷ್ಟರಲ್ಲಿ ಚಿಕ್ಕನಾಯ್ಕನಹಳ್ಳಿಯಲ್ಲಿ ಗ್ರಾಮಸ್ಥರೆಲ್ಲ ದಂಗೆಯೆದ್ದು ಗಣಿಗಾರಿಕೆ ನಿಂತೇ ಹೋಯಿತು. ಸೋಮಣ್ಣನ ಲಾರಿ ಅವನ ಮನೆ ಮುಂದಿನ ರಸ್ತೆ ಬದಿಯಲ್ಲಿ ಠಿಕಾಣಿ ಹೂಡಿತು.
ಏನಾದ್ರೂ ಬಾಡಿಗೆ ಇದ್ರೆ ಹೇಳಿ ಅಂತ ಸೋಮಣ್ಣ ಅಡಕೆ ತೋಟದವರ ಹತ್ತಿರ ಕೇಳಿನೋಡಿದ. ಅವರೆಲ್ಲ ಮಾರುತಿ ಓಮ್ನಿ ಕೊಂಡುಕೊಂಡು, ಅದರ ಹಿಂದಿನ ಸೀಟು ಕಿತ್ತುಹಾಕಿ, ಅದರಲ್ಲೇ ಅಡಕೆ ಸಾಗಿಸುವ ಉಪಾಯ ಕಂಡುಕೊಂಡಿದ್ದರು. ಲಾರಿಯಲ್ಲಿ ಸಾಗಿಸುವಷ್ಟು ಅಡಕೆ ಯಾರ ಬಳಿಯೂ ಇರಲಿಲ್ಲ. ಉಪ್ಪಿನಂಗಡಿಯಿಂದ ಮಂಗಳೂರಿಗೆ ನೇತ್ರಾವತಿ ನದಿಯಿಂದ ಮರಳು ಸಾಗಿಸಿ ದುಡ್ಡು ಮಾಡಬಹುದು ಅನ್ನುವ ಉಪಾಯವನ್ನು ಮೋನಪ್ಪನೇ ಸೂಚಿಸಿದ. ಆದರೆ ಉಪ್ಪಿನಂಗಡಿ ಮಂಡಲ ಪಂಚಾಯತ್‌ನವರು ಆ ವರ್ಷದ ಮರಳು ತೆಗೆಯುವ ಕಂಟ್ರಾಕ್ಟನ್ನು ಇನ್ಯಾರಿಗೋ ಕೊಟ್ಟುಬಿಟ್ಟಿದ್ದರು.
ಈ ಮಧ್ಯೆ ಬ್ಯಾಂಕಿನವರು ಸೋಮಣ್ಣನಿಗೆ ಕಂತು ಕಟ್ಟುವಂತೆ ಪೀಡಿಸತೊಡಗಿದರು. ಒಂದು ರಾತ್ರಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅದರ ಹಿಂಭಾಗ ಸೊಟ್ಟಗಾಯಿತು.
******
ಸೋಮಣ್ಣನ ದುರಾದೃಷ್ಟ ಶುರುವಾದದ್ದೇ ಆಮೇಲೆ ಎಂದ ಗೋಪಾಲಕೃಷ್ಣ. ಅವನ ಲಾರಿಯನ್ನು ಕೇಳಿಕೊಂಡು ಸಕಲೇಶಪುರದಿಂದ ಇಬ್ಬರು ವ್ಯಾಪಾರಿಗಳು ಬಂದಿದ್ದರಂತೆ. ಸಕಲೇಶಪುರದ ಹತ್ತಿರ ರೆಸಾರ್ಟ್ ಕಟ್ಟುತ್ತಿದ್ದೇವೆ. ಮರಮಟ್ಟು ಸಾಗಿಸೋದಕ್ಕೆ ಬೇಕು ಎಂದವರು ಲಾರಿಯನ್ನು ಬಾಡಿಗೆಗೆ ಕೇಳುವುದಕ್ಕೆ ಬಂದಿದ್ದರು. ಬಾಡಿಗೆಗೆ ಕೊಡೋದಿಲ್ಲ, ಬೇಕಿದ್ರೆ ಮಾರ್ತೀನಿ ಅಂದ ಸೋಮಣ್ಣ. ಐದು ಲಕ್ಷಕ್ಕೆ ಮಾತಾಗಿ, ಮೂರೂವರೆ ಲಕ್ಷಕ್ಕೆ ಲಾರಿ ಮಾರಾಟವೂ ಆಯ್ತು.
ಈಗ ಸೋಮಣ್ಣನ ಸಮಸ್ಯೆ ಏನು ಅನ್ನುವುದು ಅರ್ಥವಾಗಲಿಲ್ಲ. ಗೋಪಾಲಕೃಷ್ಣ ವಿವರಿಸಿದ ಬ್ಯಾಂಕ್ ಲೋನ್ ತೀರಿಸದೇ ಲಾರಿ ಅವರ ಹೆಸರಿಗೆ ಟ್ರಾನ್ಸ್‌ಫರ್ ಮಾಡುವ ಹಾಗಿರಲಿಲ್ಲ. ಅವರೂ ಆರ್‌ಸಿ ಬುಕ್ ಆಮೇಲೆ ಕೊಡ್ತೀನಿ
ಅಂದದ್ದಕ್ಕೆ ಒಪ್ಪಿಕೊಂಡಿದ್ದರಂತೆ. ಹೀಗಾಗಿ ಲಾರಿ ಅವರ ಕೈಲಿತ್ತು, ಮಾಲೀಕತ್ವ ಸೋಮಣ್ಣನ ಹೆಸರಲ್ಲಿತ್ತು.
ಆ ಲಾರಿ ಬಿಸಲೆ ಘಾಟಿಯಲ್ಲಿ ಕಳ್ಳನಾಟ ಸಾಗಿಸುವಾಗ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿತ್ತು. ಡ್ರೈವರ್ ಲಾರಿಯಿಂದ ಜಿಗಿದು ಪರಾರಿಯಾಗಿದ್ದ. ಮೂಲ ಹುಡುಕಿದ ಪೊಲೀಸರು ಸೋಮಣ್ಣನ ಮನೆಗೆ ಬಂದು ಬೆದರಿಕೆ ಹಾಕಿ ಹೋಗಿದ್ದರು. ಈ ಮಧ್ಯೆ ಬ್ಯಾಂಕಿನವರು ಸಾಲ ತೀರಿಸದೇ ಲಾರಿ ಮಾರಿದ್ದು ಅಪರಾಧ ಎಂದು ಅವನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೆದರಿಸಿದ್ದರು. ಲಾರಿ ಉಪ್ಪಿನಂಗಡಿ ಸ್ಟೇಷನ್ನಿನ ಮುಂದೆ ಕಳ್ಳನಾಟ ತುಂಬಿಕೊಂಡು ನಿಂತಿತ್ತು. ಅದನ್ನು ಬಿಡಿಸಿಕೊಡಿ ಅಂತ ಕೇಳಿಕೊಳ್ಳುವುದಕ್ಕೆ ಆ ಸಂಜೆ ಸೋಮಣ್ಣ ಗಾಂಧೀಪಾರ್ಕಿಗೆ ಬಂದದ್ದು. ಅವನು ಈ ಸಮಸ್ಯೆಯಿಂದ ಪಾರಾಗುವುದು ಸಾಧ್ಯವೇ ಇಲ್ಲ ಅನ್ನಿಸಿತು ನನಗೆ.
******
ಅದಾದ ನಾಲ್ಕು ತಿಂಗಳ ನಂತರ ನಾನು ಮತ್ತೊಮ್ಮೆ ನಮ್ಮೂರಿಗೆ ಹೋದೆ. ಗೋಪಾಲಕೃಷ್ಣ, ಸುರೇಂದ್ರನ ಜೊತೆ ಮಾತಾಡುವ ಹೊತ್ತಿಗೆ ಸೋಮಣ್ಣ ನೆನಪಾದ. ಅವನಿಗೇನಾಗಿದೆ, ಆರಾಮಾಗಿ ಓಡಾಡಿಕೊಂಡಿದ್ದಾನೆ. ಮೂರೂವರೆ ಲಕ್ಷ ಹೊಡ್ಕೊಂಡು ಬಿಟ್ಟ’ ಅಂದ ಗೋಪಾಲಕೃಷ್ಣ.
ಆವತ್ತು ಗೋಪಾಲಕೃಷ್ಣ ಅದ್ಯಾರಿಗೋ ಮಾತಾಡಿ, ಹಳೇ ತಾರೀಖಿಗೆ ಲಾರಿ ಕಳುವಾಗಿದೆ ಎಂದು ಪೊಲೀಸ್ ಕಂಪ್ಲೇಂಟ್ ರಿಜಿಸ್ಟರ್ ಮಾಡಿಸಿಕೊಟ್ಟನಂತೆ. ಅಲ್ಲಿಗೆ, ಲಾರಿ ಕದ್ದು, ಕಳ್ಳನಾಟ ಸಾಗಿಸಿದ ಅಪರಾಧ ಇನ್ಯಾರಿಗೋ ವರ್ಗವಾಯಿತು. ಬ್ಯಾಂಕಿನವರಿಗೆ ಕಂತು ಕಟ್ಟೋದಕ್ಕಾಗೋಲ್ಲ, ಲಾರಿ ಮಾರಿಕೊಳ್ಳಿ ಅಂತ ಹೇಳಿ ಸೋಮಣ್ಣ ಬಚಾವಾದ. ಕೇಸು ಮುಗಿಯುವ ತನಕ ಲಾರಿ ಬಿಡುವುದಿಲ್ಲ ಅಂತ ಪೊಲೀಸರು ಪಟ್ಟು ಹಿಡಿದರು.. ಸಕಲೇಶಪುರದವರು ಕೊಟ್ಟ ಮೂರೂವರೆ ಲಕ್ಷ ಸೋಮಣ್ಣನಿಗೆ ಲಾಭ. ಈಗ ಒಂದು ೪೦೫ ಟೆಂಪೋ ತಗೊಂಡಿದ್ದಾನೆ ಎಂದು ಸುರೇಂದ್ರ ಗಹಗಹಿಸಿ ನಕ್ಕ.
ನನಗೆ ಒಂದು ಕ್ಷಣ ನಾನು ಎಲ್ಲಿದ್ದೇನೆ ಅನ್ನುವುದೇ ಮರೆತಂತಾಯಿತು. ಹೊರಗೆ ನಡುರಾತ್ರಿಯ ಕಾಳಗತ್ತಲು. ಧಾರಾಕಾರ ಮಳೆ. ಹೊರಜಗತ್ತಿಗೂ ನಮಗೂ ನಾನಿರುವ ಬೆಂಗಳೂರಿಗೂ ಸೋಮಣ್ಣನಿಗೂ ಏನು ಸಂಬಂಧ ಅನ್ನುವುದೇ ಹೊಳೆಯಲಿಲ್ಲ. ಸೋಮಣ್ಣನ ಇಡೀ ಕತೆ ನನ್ನೊಳಗೆ ಗಾಳಿಯಂತ್ರದ ಹಾಗೆ ಸುತ್ತುತ್ತಿತ್ತು. ಸೋಮಣ್ಣ ನಿಜಕ್ಕೂ ಅದನ್ನೆಲ್ಲ ಯಾವ ಉತ್ಸಾಹದಿಂದ ಮಾಡುತ್ತಿದ್ದಾನೆ. ಮತ್ತೆ ಮತ್ತೆ ಅಪಘಾತಕ್ಕೆ ತುತ್ತಾಗುವ ಅವನನ್ನು ಮತ್ತೂ ಬದುಕುವಂತೆ ಪ್ರೇರೇಪಿಸುವ ಶಕ್ತಿ ಯಾವುದು. ಅದು ಅವನೊಳಗಿನ ಅಜ್ಞಾನದಿಂದ ಹುಟ್ಟಿದ್ದಾ, ಹುಂಬತನದಿಂದ ಬಂದದ್ದಾ, ನಾಚಿಕೆಗೀಡಿತನದಿಂದ ಹುಟ್ಟಿದ್ದಾ ಎಂದು ಯೋಚಿಸುತ್ತಾ ನಾನು ಮಂಕಾಗಿ ಕುಳಿತದ್ದನ್ನು ನೋಡಿ ಸುರೇಂದ್ರ ಉಪ್ಪಿನಕಾಯಿ ತುಂಬಿದ್ದ ಪ್ಲೇಟನ್ನು ಮುಂದಿಟ್ಟು ಒಂಚೂರು ನೆಂಚಿಕೋ, ಎಲ್ಲ ಸರಿಹೋಗುತ್ತೆ’ ಅಂದ.
Friday, August 15, 2008
ಕುಲವೊಂದು ಕವಲೆರಡು


ಎರಡು ಸಂತೋಷದ ಸುದ್ದಿಗಳನ್ನು ಹಂಚಿಕೊಳ್ಳಬೇಕಿದೆ. ನಮ್ಮೆಲ್ಲರ ಪ್ರೀತಿಯ ಕತೆಗಳನ್ನು ಬರೆದ ನೇಮಿಚಂದ್ರ ಈ ಸಾರಿಯ ಫಿಷ್ ಮಾರ್ಕೆಟ್ಟಿನಲ್ಲಿ ನಮ್ಮನ್ನು ಎದುರಾಗಲಿದ್ದಾರೆ. ನೇಮಿಚಂದ್ರ ಅನ್ನುವ ಹೆಸರಲ್ಲೇ ಅನೇಕ ನಿಗೂಢಗಳಿವೆ. ನೇಮಿಚಂದ್ರ ಅವರ ಕಾವ್ಯನಾಮವಾ ಎಂದು ಕೇಳುವವರಿಂದ ಹಿಡಿದು, ಅವರ ಮಿಸೆಸ್ ಹೆಸರೇನು ಅಂತ ಕುತೂಹಲಿಗಳಾಗುವವರ ತನಕ, ನೇಮಿಚಂದ್ರ ಆಸಕ್ತಿ ಉಳಿಸಿಕೊಂಡವರು. ಹತ್ತು ಹಲವು ಸಂಗತಿಗಳ ಕುರಿತು, ಅದೇ ಆಸ್ಥೆ, ಆಸಕ್ತಿ ಮತ್ತು ಪ್ರೀತಿ ಇಟ್ಟುಕೊಂಡು ಬರೆಯುವವರು. ಅವರು ಫಿಶ್ ಮಾರ್ಕೆಟ್ಟಿಗೆ ಬರುತ್ತಿರುವುದು ಸಂತೋಷ. ಅವರ ಕತೆ ಕಾದಂಬರಿ ಮತ್ತು ಪ್ರವಾಸ ಕಥನಗಳ ಜೊತೆಗೆ ಅವರನ್ನು ಎದುರುಗೊಳ್ಳೋಣ.
ಆ ಶನಿವಾರ ಬಿಟ್ಟು ಸೋಮವಾರಕ್ಕೆ ದಾಟಿಕೊಂಡರೆ ಚೇತನಾ ತೀರ್ಥಹಳ್ಳಿ ಕಥಾ ಸಂಕಲನ ಬಿಡುಗಡೆ. ಸೆನೆಟ್ ಹಾಲ್-ನಲ್ಲಿ ಕಥಾ ಕಾಲಕ್ಷೇಪ. ಆವತ್ತು ವೇದಿಕೆಯಲ್ಲಿ ಎಲ್ಲರಿಗೂ ವಿವೇಕ. ಸಭಾಂಗಣವೇ ಟೀನಾ ಝೋನ್, ಮಯೂರ-ವರ್ಮ ಬಸವರಾಜ್ ಕೂಡ ಜೊತೆಗಿರುತ್ತಾರೆ. ತೀರ್ಥಹಳ್ಳಿಯ ಚೇತನಾರಷ್ಟೇ ಚಂದಕ್ಕೆ ಪುಸ್ತಕವೂ ಹೊರಬಂದಿದೆ.
ಎರಡೂ ಸಂಭ್ರಮಗಳೂ ಈ ಮಳೆಗಾಲದ ತಂಪುಹೊತ್ತಲ್ಲಿ ನಿಮ್ಮನ್ನು ಬೆಚ್ಚಗಿರಿಸಲಿ, ವಿಸ್ಕಿಯಂತೆ.
Tuesday, August 5, 2008
ಮುಸ್ಸಂಜೆಯ ಮೂರು ಗಳಿಗೆ
ಅಷ್ಟು ಹೊತ್ತಿಗೆ ಬೆಳಕಾಯಿತು. ದೂರದಲ್ಲೆಲ್ಲೋ ಟ್ರೇನು ಬಂದು ನಿಂತ ಸದ್ದು. ಆ ಸದ್ದಿಗೂ ಕತ್ತಲೆಯ ಸುದ್ದಿ ತಿಳಿದಿತ್ತೋ ಎಂಬಂತೆ ಎಂದಿಗಿಂತ ವೇಗವಾಗಿಯೇ ಅದು ಆ ಕತ್ತಲನ್ನು ಆಗಷ್ಟೇ ಹೊರಹಾಕಿದ್ದ ಮನೆಯ ಒಳಗನ್ನೂ ತಲುಪಿತು.
ಬೆಳಕು ಆವತ್ತು ಮಾತಾಡಲಿಲ್ಲ. ಮಾತಾಡುವುದಕ್ಕೆ ಏನೂ ಉಳಿದೇ ಇಲ್ಲವೇನೋ ಎಂಬಂತೆ ಕತ್ತಲು ಕೂಡ ನೆರಳಿನ ಕೂಡ ಜಗಳ ಆಡುತ್ತಿರಲಿಲ್ಲ. ನಾವಿಬ್ಬರೂ ಸಹಬಾಳ್ವೆ ನಡೆಸಬೇಕಾದ ಜಾಗ ಇದು ಎನ್ನುವುದು ಸ್ಪಷ್ಟವಾಗಿ ಗೊತ್ತಿದ್ದವರ ಹಾಗೆ ಅವೆರಡೂ ಒಂದೇ ತಾಯಿಯ ಮಕ್ಕಳೋ ಎಂಬಷ್ಟು ಸಹಜವಾಗಿ ಆಪ್ತವಾಗಿ ಒಡನಾಡಿಕೊಂಡಿದ್ದವು.
ಮನೆಗೆ ಅಂಗಳ ಇರಲಿಲ್ಲ. ಬೀದಿಗೇ ಚಾಚಿಕೊಂಡಿದ್ದ ಬಾಗಿಲು. ಹಾದಿಹೋಕ ತಪ್ಪಿ ಒಂದು ಹೆಜ್ಜೆ ಪಕ್ಕಕ್ಕಿಟ್ಟರೆ ಮನೆಯೊಳಗೆ ಬರಬಹುದಾಗಿತ್ತು. ಆದರೆ, ಹಾಗೆ ತಪ್ಪಿ ಒಳಬಂದವರನ್ನು ಆ ಮನೆ ಯಾವತ್ತೂ ನೋಡಿರಲಿಲ್ಲ. ಬರಬೇಕಾಗಿದ್ದವರೇ ಬಾರದೇ ಉಳಿದ ಮನೆ ಅದು. ಹೀಗಾಗಿ ಅಪರಿಚಿತರ ಪಾಲಿಗಂತೂ ಅದು ಮುಚ್ಚಿದ ಬಾಗಿಲು. ಆ ಬಾಗಿಲಿಗೆ ಒಮ್ಮೊಮ್ಮೆ ಬೀಗ ಜೋತುಬಿದ್ದು, ಇಡೀ ಮನೆಯ ರಕ್ಷಣೆಯ ಹೊಣೆ ನನ್ನದು ಎನ್ನುವ ಅಹಂಕಾರದಲ್ಲಿ ಕೂತಿರುತ್ತಿತ್ತು. ಅದರ ಅಹಂಕಾರವನ್ನು ಅಣಕಿಸುತ್ತಾ, ಕಳ್ಳರ ಅತೀವ ಚಾಣಾಕ್ಷತನಗಳು ಆ ಮನೆಯ ಮುಂದೆಯೇ ಓಡಾಡಿದ್ದುಂಟು. ಅಂಥ ಜಾಣ್ಮೆಗೆ ಸವಾಲಾಗುವ ಶಕ್ತಿಯಂತೂ ಆ ಬೀಗಕ್ಕಿರಲಿಲ್ಲ. ಅದು ಅಷ್ಟು ವರುಷ ನಿಯತ್ತಿನ ಕಾವಲುಗಾರನಾಗಿ ಉಳಿದಿದ್ದಕ್ಕೆ ಕಾರಣ ಅದನ್ನು ಮುಟ್ಟದೇ ಮುಂದೆ ಸಾಗಿದ ಕಸಬುಗಾರಿಕೆಯ ಕರುಣೆಯೇ ಹೊರತು, ಬೀಗದ ಶಕ್ತಿಸಾಮರ್ಥ್ಯ ಅಲ್ಲ.
ರಸ್ತೆ ಆಚೆ ಬದಿಗೆ ಬೀದಿದೀಪವಿತ್ತು. ಅದರ ಬೆಳಕಿಗೆ ಮನೆಯೊಳಗಿನ ಕತ್ತಲೆಯ ಬಗ್ಗೆ ಅತೀವ ಮರುಕವೂ ಇತ್ತು. ಬಾಗಿಲು ತೆಗೆದಾಗೊಮ್ಮೆ ಆ ಬೆಳಕು ಮನೆಯೊಳಗೆ ಕಾಲಿಟ್ಚು ಒಳಗೆ ಮನೆಮಾಡಿದ್ದ ಅರೆಗತ್ತಲ ಹರೆಯಕ್ಕೊಂದು ಕಣ್ಣುಹೊಡೆದು ಮರಳುತ್ತಿತ್ತು. ಆ ಕತ್ತಲನ್ನು ಕೂಡಿ, ತನ್ನ ಪ್ರಜ್ವಲತೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಅವಕಾಶವಂತೂ ಅದಕ್ಕೆ ಸಿಕ್ಕಿರಲೇ ಇಲ್ಲ. ಆ ಬಗ್ಗೆ ಬೀದಿ ದೀಪದ ಬೆಳಕಿಗೆ ಅಪಾರ ಸಿಟ್ಟೂ ಇದ್ದಂತಿತ್ತು. ಆದರೆ ಆ ಸಿಟ್ಟನ್ನು ವಿಷಾದದ ಅರಿವೆಯಲ್ಲಿ ಸುತ್ತಿಟ್ಟು ಅದು ಮಂದವಾಗಿ ಉರಿಯುತ್ತಿತ್ತು.
ಅಡುಗೆ ಮನೆಯಲ್ಲಿ ತಟ್ಟೆ ಸದ್ದು ಮಾಡಿತು. ಅದಕ್ಕೆ ವರಾಂಡದಲ್ಲಿ ಕುರ್ಚಿಯ ಮೇಲೆ ಕೂತಿದ್ದ ಕಾಲುಗಳು ಭಂಗಿ ಬದಲಾಯಿದವು. ಸ್ವಲ್ಪ ಹೊತ್ತಿಗೆಲ್ಲ ಶಂಖದ ದನಿ ಮನೆಯೊಳಗಿನ ಅರೆಗತ್ತಲ ನಿದ್ದೆಯನ್ನು ಅರೆಕ್ಷಣ ಓಡಿಸುತ್ತದೆ ಅನ್ನುವುದು ಕತ್ತಲೆಗೂ ಗೊತ್ತಿತ್ತು.
ಮನೆಯೊಳಗೆ ಅದೇನೋ ಸದ್ದಾಯಿತು. ಆ ಅಪರಿಚಿತ ಸದ್ದಿಗೆ ನಾಲ್ಕು ಕಣ್ಣುಗಳೂ ನಾಲ್ಕು ಕಿವಿಗಳೂ ಚುರುಕಾದವು. ಆ ಸದ್ದಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಎಂಟೂ ದಿಕ್ಕುಗಳೂ ತೆಪ್ಪಗಿದ್ದವು. ಆ ನೀರವದಲ್ಲಿ ದೂರದಲ್ಲೆಲ್ಲೋ ಮಳೆಯಾದ ಘಮಲು ತೇಲಿಕೊಂಡು ಬಂದು ಕತ್ತಲ ಮೈಗೆ ಸವರಿತು.
ಕತ್ತಲು ಪುಳಕಗೊಂಡು, ಆ ಪರಿಮಳಕ್ಕೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟಿತು.
ಕೇಶವಮೂರ್ತಿ ರೇಲು ಬಂತು, ಹೋಯ್ತು ಎಂದು ಪಿಸುಗುಟ್ಟಿಕೊಂಡರು. ಶಾಂತಮ್ಮನ ನಿಟ್ಟುಸಿರು ಆ ಪಿಸುಮಾತಿಗೆ ಮುತ್ತಿಡಲು ಹೆಜ್ಜೆ ಮುಂದಿಟ್ಟಿತು. ಅವೆರಡೂ ಕ್ಷಣಾರ್ಧದಲ್ಲಿ ದಿವಂಗತವಾದವು.
-೨-
ಹೊರಟ ಹಾದಿಯಲ್ಲಿ ಹೂಬಿಸಿಲಿತ್ತು. ಅದು ಮಧ್ಯಾಹ್ನದ ಹೊತ್ತಿಗೆ ದೂರ್ವಾಸರ ಹಾಗೆ ಕೆಂಡಾಮಂಡಲವಾಗಿ, ಮತ್ತೆ ಊರ್ವಶಿಯ ಹಾಗೆ ತಂಪಾಗಿ, ಕೊನೆಯಲ್ಲಿ ಮೇನಕೆಯ ಹಾಗೆ ಮೈ ಚಾಚಿಕೊಳ್ಳುವುದಕ್ಕೆ ಕಾಯುತ್ತಿತ್ತು.
ಚಿರಪರಿಚಿತ ರಸ್ತೆ. ತನ್ನನ್ನು ತುಳಿದು ಸಾಗಿದವರನ್ನು ಅದು ಯಾವತ್ತೂ ನಿರಾಸೆ ಮಾಡಿದ್ದಿಲ್ಲ. ಹೊರಟವರನ್ನು ಹೊರಟಲ್ಲಿಗೆ ತಲುಪಿಸಿ ಮರಳಿ ಕರೆತಂದ ಖ್ಯಾತಿ ಅದಕ್ಕಿತ್ತು.
ಚಪ್ಪಲಿ ತೊಟ್ಟ ಪಾದಗಳ ವಿಚಾರದಲ್ಲಿ ಆ ರಸ್ತೆಗೆ ತಕರಾರು. ಬರಿಗಾಲಲ್ಲಿ ನಡೆಯುವವರನ್ನು ಕಂಡರೆ ಅಚ್ಚುಮೆಚ್ಚು. ತೀರ ಸಂತೋಷ ಉಕ್ಕಿದಾಗ ಒಂದೆರಡು ಹಳದಿ ಹೂವುಗಳನ್ನು ಅರಳಿಸಿ ಅದು ರೋಮಾಂಚಗೊಳ್ಳುತ್ತಿತ್ತು. ಆ ಹೂವುಗಳಿಗೆ ದೀರ್ಘಾಯುಷ್ಯವಿಲ್ಲ ಎನ್ನುವ ಕೊರಗೂ ಆ ರಸ್ತೆಗಿತ್ತು. ಆದರೆ, ಶಾಶ್ವತವಾದದ್ದು ಯಾವತ್ತೂ ಸುಂದರವಾಗಿರುವುದಿಲ್ಲ ಎಂಬ ಸತ್ಯವನ್ನು ಅನೇಕರು ಆ ರಸ್ತೆಗೆ ಕಲಿಸಿಕೊಟ್ಟಿದ್ದರು.
ತನಗೊಂದು ಕೊನೆಯಿದೆ ಮತ್ತು ಮೊದಲಿದೆ ಅನ್ನುವುದೇ ಗೊತ್ತಿಲ್ಲದ ಹುಂಬ ರಸ್ತೆ ಅದು. ನಡೆದಷ್ಟೂ ತೆರೆದುಕೊಳ್ಳುತ್ತಿದ್ದ ಅದನ್ನು ಮೆಟ್ಟಿಕೊಂಡು ಹೊರಟವ ಕಾಲುಗಳೆಲ್ಲ ಅರ್ಧಕ್ಕೇ ಹಳಿ ಬದಲಾಯಿಸುತ್ತಿದ್ದವು. ತನ್ನನ್ನು ನಂಬಿದವರನ್ನು ಒಂದು ಗುರಿಗೆ ಖಂಡಿತಾ ತಲುಪಿಸಬಲ್ಲೆ ಎಂಬ ನಂಬಿಕೆಯಿಂದ ಆ ರಸ್ತೆ, ತನ್ನನ್ನೇ ನೆಚ್ಚಿಕೊಂಡು ನಡೆಯುವ ಕಾಲುಗಳಿಗಾಗಿ ಕಾಯುತ್ತಿತ್ತು.
ಅದರ ಆಯಸ್ಸೇನೂ ತೀರಿರಲಿಲ್ಲ. ಧೋ ಎಂದು ಮಳೆಸುರಿದಾಗ ಅದು ತನ್ನ ಸ್ವರೂಪ ಕಳಕೊಂಡು ಎಡಬಲದ ಬಯಲಲ್ಲಿ ಒಂದಾಗುತ್ತಿತ್ತು. ಮತ್ತೆ ಬೇಸಗೆ ಕಾಲಿಟ್ಟಾಗ ಅದು ಮತ್ತೆ ಹಳೆಯ ರೂಪಕ್ಕೇ ಬರುತ್ತಿತ್ತು. ಚಳಿಗಾಲದಲ್ಲಿ ರಸ್ತೆ ನಡುವೆ ಬೆಳೆದ ಹುಲ್ಲಿನ ತುದಿಯಲ್ಲಿ ಕಿರುಜೇಡ ಕಟ್ಟಿದ ಬಲೆಗೆ ಮಂಜಿನ ಹನಿಗಳು ಮುತ್ತಿನ ತೋರಣ ಕಟ್ಟಿ ಸಂಭ್ರಮಿಸುತ್ತಿದ್ದವು. ಅಂಥ ರಸ್ತೆಯ ಮೇಲೆ ಕಾಲಿಟ್ಟ ಆ ಪಾದಗಳು ಆದಷ್ಟು ಬೇಗ ರಸ್ತೆಯ ಸಹವಾಸ ಮುಗಿದರೆ ಸಾಕಪ್ಪ ಎಂಬಂತೆ ದಾಪುಗಾಲು ಹಾಕಿದ್ದವು.
ತನ್ನನ್ನು ತುಳಿಯುವ ಕಾಲುಗಳು ದಾರಿತಪ್ಪದಂತೆ ಕಾಪಾಡುವ ಕಣ್ಣುಗಳು ತನ್ನ ಮೇಲಿದೆ ಅನ್ನುವುದು ಗೊತ್ತಿದ್ದರೂ ಆ ಕಣ್ಣ ಕಳವಳ ಏನೆಂಬುದನ್ನು ತಿಳಿದುಕೊಳ್ಳಲು ರಸ್ತೆ ಯಾವತ್ತೂ ಆಸಕ್ತಿ ತೋರಿರಲೇ ಇಲ್ಲ. ತನ್ನುದ್ದ ಚಾಚಿಕೊಳ್ಳುವ ರಾತ್ರಿ, ಹಗಲು ತನ್ನನ್ನು ಮುತ್ತಿಕೊಳ್ಳುವ ನೆರಳು ಮತ್ತು ಎಂದಾದರೊಮ್ಮೆ ಅತಿಥಿಯ ಹಾಗೆ ಬಂದು ಹೋಗುವ ಮಳೆಯ ಕುರಿತೂ ರಸ್ತೆಗೆ ಆಸಕ್ತಿ ಇರಲಿಲ್ಲ.
ಆ ಮುಸ್ಸಂಜೆ ತನ್ನ ಮೇಲೆ ಉಪ್ಪುನೀರ ಬಿಂದುಗಳನ್ನು ಅಲ್ಲಲ್ಲಲ್ಲಿ ಸುರಿಸುತ್ತಾ ಹೋಗುತ್ತಿದ್ದ ಕಣ್ಣುಗಳ ಮೇಲೆ ರಸ್ತೆಗೆ ಇದ್ದಕ್ಕಿದ್ದಂತೆ ಕರುಣೆ ಉಕ್ಕಿಬಂತು. ಆ ನೀರ ಬಿಂದುಗಳನ್ನು ಅದು ವಿಪರೀತ ದಾಹಗೊಂಡ ಮನುಷ್ಯನ ಹಾಗೆ ಕುಡಿದು ಸುಮ್ಮಗಾಯಿತು. ಹಾಗೆ ಕುಡಿದ ಉಪ್ಪುನೀರ ಬಿಂದುಗಳನ್ನು ಹಳದಿ ಹೂವಿನ ಬದಲಾಗಿ ನೀಲಿ ಹೂವುಗಳಿಗೆ ದಾನ ಕೊಡಬೇಕು ಅನ್ನುವ ಆಸೆಯೊಂದು ಮೂಡಿ ರಸ್ತೆ ಒಮ್ಮೆ ಮೈಮುರಿಯಿತು.
ಆ ಮೈಮುರಿಯುವ ಸಂಭ್ರಮಕ್ಕೆ ಅದಕ್ಕೆ ತನ್ನನ್ನು ತುಳಿಯುತ್ತಾ ಸಾಗುತ್ತಿದ್ದ ಕಾಲುಗಳ ಪರಿವೆಯೇ ಇರಲಿಲ್ಲ.
ಇನ್ನು ನಾನು ಅರಳಿಸುವ ಹಳದಿ ಹೂವು ಕೆಂಪುಬಣ್ಣದ ಹಣೆಬೊಟ್ಟಿಟ್ಟುಕೊಂಡು ಕಣ್ತೆರೆಯುತ್ತದೆ ಅನ್ನುವ ಕಲ್ಪನೆ ರಸ್ತೆಗೆ ಇರಲಿಲ್ಲ. ಪ್ರೀತಿಸುವವರನ್ನೂ ದ್ವೇಷಿಸುವವರನ್ನು ಸಮಾನವಾಗಿ ಪ್ರೀತಿಸುತ್ತೇನೆ ಎಂದುಕೊಂಡು ರಸ್ತೆ ಭಗವದ್ಗೀತೆಗೆ
ಶರಣಾಗುವ ಹೊತ್ತಿಗೆ, ಶಾಕುಂತಲೇ ರಸ್ತೆಯಿಂದಾಚೆ ಬಂದಾಗಿತ್ತು. ಅದಕ್ಕೂ ಮುಂಚೆ..
ಶಾಕುಂತಲೆಯ ಬೆರಳು ಕಲ್ಲೊಂದಕ್ಕೆ ಎಡವಿತು. ಒಂದು ಹನಿ ನೆತ್ತರು ರಸ್ತೆ ಪಾಲಾಯಿತು.
-೩-
ತಾನು ಹುಟ್ಟಿದ್ದನ್ನೇ ಮರೆತ ಕತ್ತಲು ಮತ್ತು ತಾನು ತಲುಪಿದ್ದನ್ನೆ ಮರೆತ ರಸ್ತೆ ಎರಡನ್ನೂ ದಾಟಿಕೊಂಡು ಕಾಲುಗಳು ಮನೆಯ ಬಾಗಿಲಿಗಾಗಿ ಹುಡುಕಾಡಿದವು. ಬಾಗಿಲು ಮುಚ್ಚಿತ್ತು. ಕತ್ತಲು ಕಣ್ಮುಚ್ಚಿಕೊಂಡು ಕಾವಲು ಕಾಯುತ್ತಿತ್ತು.
ಮಂದ ಬೆಳಕಿಗಾಗಿ ಕಣ್ಣು ಹಂಬಲಿಸಿತು. ಬಾಗಿಲು ಬಡಿಯುವುದಕ್ಕೆ ಕೈಗಳು ಕಾದು ಕಂಪಿಸುತ್ತಿದ್ದವು. ತನ್ನ ಕೈ ಹೊರಡಿಸುವ ಸದ್ದು, ತನ್ನನ್ನು ಶಾಶ್ವತವಾಗಿ ಮತ್ತೊಂದು ಜಗತ್ತಿನ ಪಾಲಿಗೆ ಎರವಾಗುವಂತೆ ಮಾಡುತ್ತದೆ ಎಂಬ ಕಲ್ಪನೆ ಆ ಕೈಗಿತ್ತು. ಬೆರಳುಗಳು ತಾನಾಗಿ ಮಡಿಸಿಕೊಂಡವು. ನಡುಬೆರಳು ಬಾಗಿ, ಬಾಗಿಲನ್ನು ಎರಡು ಸಾರಿ ತಟ್ಟಿತು.
ಬಾಗಿಲು ರಸ್ತೆಗೆ ತೆರೆದುಕೊಂಡಿತು. ಒಳಗಿದ್ದ ಅರೆಬೆಳಕು, ಹೊರಗಿದ್ದ ಕತ್ತಲೆಯ ಸೊಂಟಕ್ಕೆ ಕೈ ಹಾಕಿ ಬರಸೆಳೆಯಿತು. ಮುಗಿದು ಹೋದ ಕತೆಯ ನಂತರ ಉಳಿದಿರಬಹುದಾದ ವಿಷಾದದ ಹಾಗೆ ಬೆಳಕು ನರಳಿತು.
ಕಣ್ಣಂಚಿನಲ್ಲಿ ನೀರಾಡಿತು. ಮತ್ತೆರಡು ಕಾಲುಗಳಿಗೆ ಮತ್ತೆರಡು ಕಣ್ಣುಗಳು ಹುಡುಕಾಡಿದವು. ನಾಲ್ಕು ಕಣ್ಣು ಎಂಟಾಗದ ಅಚ್ಚರಿ ಮತ್ತು ಆತಂಕವನ್ನು ಮತ್ತಷ್ಟು ಸ್ಪಷ್ಟಪಡಿಸಲು ಕತ್ತಲೆ ಅಂಜಿಕೊಂಡಿತು. ಬೆಳಕು ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ದೀಪದ ತುದಿಗೆ ಆತುಕೊಂಡಿತ್ತು.
ಮೂರು ಕಣ್ಣುಗಳು ಆರಾದವು. ಆರು ಕಣ್ಣುಗಳಲ್ಲಿ ಆರಿದ ಬೆಳಕು ಕತ್ತಲೆಯನ್ನೂ ಅಂಜಿಸುವಂತಿತ್ತು. ದೂರದಲ್ಲೆಲ್ಲೋ ಮೋಡದ ಮೇಲೆ ಚಿನ್ನದ ನೀರು, ಚೆಲ್ಲುತ ಸಾಗಿದೆ ಹೊನ್ನಿನ ತೇರೂ..’ ಎಂಬ ದನಿ ಕತ್ತಲನ್ನು ಕೂಡಿ ಕಳೆದುಹೋಗುತ್ತಿತ್ತು. ಇದ್ದಕ್ಕಿದ್ದಂತೆ ಮತ್ತೊಂದು ರೇಲು ಬಂದು ನಿಂತ ಸದ್ದಿಗೆ ಭೂಮಿ ಕಂಪಿಸಿತು. ಆ ರೇಲು ನಿಂತಂತೆ ಮಾಡಿ ಮತ್ತೆ ಅದೇ ರಭಸದಲ್ಲಿ ಸಿಳ್ಳೆಯ ದನಿಯಂತೆ ಕಿವಿಮರೆಯಾಯಿತು.
-೪-
ಏನಾಯ್ತು, ಕೇಶಮೂರ್ತಿ ಕೇಳಲೋ ಬೇಡವೋ ಎಂಬ ಸಂದಿಗ್ಧದಲ್ಲಿ ಕೇಳಿ, ಉತ್ತರಕ್ಕಾಗಿ ಕಾದರು. ಶಾಂತಮ್ಮ ಶಕುಂತಲೆಯ ಮಾತು ಬೆಳಕಾಗಲಿ ಎಂದು ಎತ್ತಲೋ ನೋಡಿದರು. ಅವರೆತ್ತ ನೋಡಿದರು ಅನ್ನುವುದು ಕತ್ತಲಿಗೂ ಕಾಣಿಸಲಿಲ್ಲ.
ಶಕುಂತಲೆ ಎಚ್ಚರವೂ ಅಲ್ಲದ, ಸಾವೂ ಅಲ್ಲದ, ಅರಿವೂ ಅಲ್ಲದ, ಪರಿವೆಯೂ ಇಲ್ಲದ ದನಿಯಲ್ಲಿ ವಾಪಸ್ ಬಂದುಬಿಟ್ಟೆ’ ಅಂದಳು.
ಕತ್ತಲು ಮತ್ತು ಬೆಳಕು ಮತ್ತೆ ಸಂಧಿಸುವ ಮತ್ತೊಂದು ಸಂಧ್ಯಾಕಾಲಕ್ಕೆ ಕುಕ್ಕರಗಾಲಲ್ಲಿ ಕಾಯುತ್ತಾ ಕೂತವು.
ಕತ್ತಲು ಬೆಳೆಯುತ್ತಿತ್ತು.
ಬೆಳಕು ಅಳಿಯುತ್ತಿತ್ತು.