ಅದೇ ಕೊನೆಯ ಊರು, ಅದೇ ಕೊನೆಯ ಬಸ್ಸು. ಎರಡು ಗಂಟೆ ತಡವಾಗಿ ಆ ಊರಿಗೆ ಬಂದು ತಲುಪಿದೆ. ಬೆರಗುಗಣ್ಣಿನ ಹುಡುಗ ಬಸ್ಸಿಳಿಯುವ ಹೊತ್ತಿಗೆ ನಡುರಾತ್ರಿಗೆ ಮೂರೇ ಗಂಟೆ.
ಆ ಊರಲ್ಲಿ ಚಂದ್ರನದೇ ರಾಜ್ಯಭಾರ. ಧಾರಾಳ ಚೆಲ್ಲಿದ ಬೆಳದಿಂಗಳು. ಬೆಳದಿಂಗಳನ್ನೇ ಹಿಟು್ಟ ಮಾಡಿಕೊಂಡು ಚಿತ್ತಾರ ಬರೆದ ಕಾಡುಮರಗಳ ಹಾದಿ. ಹತ್ತಿರಕ್ಕೆ ಸ್ವಷ್ಟ. ದೂರಕ್ಕೆ ನಿಗೂಢವಾಗುವ ಪ್ರಕೃತಿ. ನಾಸ್ಕೋ ಐದೋ ಮೈಲಿ ನಡೆದಷ್ಟೂ ಹಾದಿ.
ಆ ಹಾದಿಯ ಉದ್ದಕ್ಕೂ ಹೆಸರಿರದ ಇರುಳುಹಕ್ಕಿಯ ಹಾರಾಟ, ದೂರದಲ್ಲೆಲ್ಲೋ ಊಳಿಡುವ ನರಿ, ಅದಾರಾಚೆಗಿನ ಬೆಟ್ಟದ ಮೇಲೆ ದಿಕ್ಕೆಟ್ಟು ಉರಿವ ಕಾಡಿನ ಬೆಂಕಿ, ಬಿಸಿಲೋ ಬೆಳದಿಂಗಳೋ ತಿಳಿಯದಂತೆ ಧಾರಾಕಾರ ಬೆವರುವ ಮೈ.
ಪಯಣದ ಕೊನೆಗೊಂದು ಒಂಟಿಮನೆ. ಒಂಟಿಮನೆಯ ಹಜಾರದಲ್ಲೊಂದು ಲಾಂದ್ರ. ಸುಸ್ವಾಗತ, ಕಾಲ್ತೊಳೆಯುವುದಕ್ಕೆ ಬಿಸಿನೀರು, ಬಿಸಿಬಿಸಿ ಊಟ, ಬೆಚ್ಚನೆಯ ಹಾಸಿಗೆ, ಕಣ್ತುಂಬ ಕನಸು. ಬೆಳಗಾಗೆದ್ದರೆ ಚಂದ್ರ ಅರೆಬರೆ ತೋರಿಸಿದ್ದ ಜಗತ್ತಿನ ತುಂಬ ಎಳೆಬಿಸಿಲು. ಮತ್ತದೇ ಕನಸೋ ಕಲ್ಪನೆಯೋ ರೂಪಕವೋ ಕಲೆಯೋ ತಿಳಿಯದ ಕಾಡಿನ ಲೋಕ.
ಕಾಡಲ್ಲಿ ಸ್ಕು ಹೆಜ್ಜೆ ಹಾಕಿದರೆ ಜಟಿಲವಾಗುವ ಹಾದಿ. ಅಲ್ಲೊಂದು ಕುಟಿಲ ತೊರೆ. ಜೇನುಗೂಡು, ನೇರಳೆ ಹಣ್ಣು, ರೆಂಜೆ ಹೂವಿನ ಮರ, ಆಳೆತ್ತರಕೆ್ಕ ನಿಂತ ಹೆಸರಿರದ ಮರದ ತೊಗಟೆಗೆ ಪ್ರಾಣಕಳಕೊಳ್ಳುವ ರಭಸದಲ್ಲಿ ತಲೆಯೊಡೆದುಕೊಳ್ಳುತ್ತಿರುವ ಮರಕುಟುಕ, ನೆಲ್ಲಿಕಾಯಿಯ ಮರದ ಗೆಲ್ಲುಗಳಲ್ಲಿ ಹಸಿರುಹಾವು, ಜಂಬೂನೇರಳೆ, ಕಾಲಕಾಲಕ್ಕೆ ಕರುಣಿಸಿದ ಒಂದೊಂದು ರುಚಿ. ನೆಲ್ಲಿಕಾಯಿ ತಿಂದು ತೊರೆಯ ನೀರು ಕುಡಿದರೆ ಮೈಚಾಚಿದರೆ ಇಹಕೂ ಪರಕೂ ಸೇತುವೆ.
*****
ಮೊನ್ನೆ ಮೊನ್ನೆ ವಿಕಾಸನ ಜೊತೆ ಇದನ್ನೆಲ್ಲ ಮಾತನಾಡುತ್ತ ರಾತ್ರಿ ಕಳೆಯಿತು. ನಿಗೂಢ ಮರೆಯಾಗಿ ಎಲ್ಲವೂ ನಿಚ್ಚಳವಾಗಿದೆ. ಪಯಣದ ಕೊನೆಯಲ್ಲಿ ಸಿಗುವ ಒಂಟಿಮನೆಯೊಳಗೂ ಬಿಪಾಶ ಬಸು ಕುಣಿಯುತ್ತಿರುತ್ತಾಳೆ. ಮಲ್ಲಿಕಾ ಶೆರಾವತು ಬಯಲಾಗುತ್ತಿರುತ್ತಾಳೆ. ರೂಪಕಗಳ ಜಗತ್ತು ಸತ್ತೇ ಹೋಗಿದೆ. ಕಾಡು ಮತ್ತು ನಾಡಿನ ನಡುವಣ ವ್ಯತ್ಯಾಸ ಮರೆಯಾಗಿದೆ. ಹೀಗಾಗಿ ಯಾವ ಊರಿಗೆ ಹೋದರೂ ಅದ ಗ್ವಾಡಿ, ಅದ ಸೂರು. ದಿನವೆಲ್ಲ ಬೇಜಾರು. ತಿದಿಯೊತ್ತಿ ನಿಟ್ಟುಸಿರು!
ಹೊಸ ಥರದ ಕತೆಗಳಾಗಲೀ ಕವಿತೆಗಳಾಗಲೀ ಹುಟ್ಟದೇ ಇರುವುದಕ್ಕೂ ಇದೇ ಕಾರಣ ಇರಬಹುದಾ? ಈಗ ಹಳ್ಳಿಯಿಂದ ನಗರಕ್ಕೆ ಬರುವ ಹುಡುಗನಿಗೆ ತಲ್ಲಣಗಳಿಲ್ಲ, ದಿಗ್ಭ್ರಮೆಯಿಲ್ಲ. ನಾಳೆ ಏನೆಂಬ ಚಿಂತೆಯಿಲ್ಲ. ಪುಟ್ಟ ಹಳ್ಳಿಯ ಹುಡುಗಿಯ ಪಾಲಿಗೆ ಅಮೆರಿಕಾದಂಥ ದೇಶ ಎಲ್ಲೋ ಇರುವ ದೂರದ ನಾಡಲ್ಲ. ಮೊದಲು ಕಿವಿಗಿಟ್ಟ ಟೆಲಿಫೋನು, ಮೊದಲು ಹತ್ತಿದ ಬಸ್ಸು, ಮೊದಲು ನೋಡಿದ ರೈಲು, ಕಣ್ಣ ಹತ್ತಿರದಿಂದ ನೋಡಿದ ವಿಮಾನ, ತಂತಿಯಿಲ್ಲದ ಫೋನು-ಯಾವುದೂ ಅಚ್ಚರಿ ಹುಟ್ಟಿಸುವುದಿಲ್ಲ. ಕಣ್ತೆರೆಯುವ ಹೊತ್ತಿಗೇ ಕಂದನ ಕಿವಿ ತುಂಬ ಮೊಬೈಲುನಾದ. ಅಡಿಗರ ಭೂಮಿಗೀತ ಕವನದ ಅವಸಾನ;
ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ;
ಉರುಳು- ಮೂರೇ ಉರುಳು- ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ.
ತೆಂಗುಗರಿಗಳ ಬೀಸಿ ಕೈಚಾಚಿ ಕರೆದಳು;
ಅಡಿಕೆಗೊನೆಗಿಲಕಿ ಹಿಡಿದಾಡಿಸಿದಳು.
ಕಬ್ಬಿನಾಲೆಯ ತಿರುಪಿನಲ್ಲಿ ಕುಳಿತೆರೆದಳು ಅಜಸ್ರಧಾರೆಯ ಕರುಳ ತುಡಿತವನ್ನು;
ಭತ್ತ ಗೋಧುವೆ ರಾಗಿ ಜೋಳ ಮೊರಮೊರಮೌರಿಯಲ್ಲಿ ಮಾಂಸದ ಹಾಡನೂಡಿಸಿದಳು.
ಗಂಟೆ ಗೋರಟೆ ಜಾಜಿ ಮಂದಾರ ಮಲ್ಲಿಗೆಯ ಗಂಧಗಿರಿಶಿಖರದಲಿ ಮಲಗಿಸಿದಳು.
ಹಕ್ಕಿಕೊರಳಿಂದುಗುವ, ತುಂಬಿ ಮರ್ಮರಮೊರೆವ ಜಾಮೂನು ನಾದದಲಿ ಜಾಳಿಸಿದಳು.
ಆಕಾಶದಲ್ಲಿ ಮೋಡದ ವಿಶ್ವರೂಪಕ್ಕೆ ಕೆಳಗೆ ಜೀವಜ್ಯೋತಿ ಕೂಡಿಸಿದಳು.
****
ಇವತ್ತಿನ ಅತ್ಯುತ್ತಮ ಕತೆಗಾರ ಯಾರು? ಒಳ್ಳೆಯ ಕತೆಗಳು ಎಲ್ಲಿ ಹುಟ್ಟುತ್ತಿವೆ? ಯಾವ ಕವಿತೆ ಎಲ್ಲರಿಗೂ ಇಷ್ಟವಾಗುತ್ತಿವೆ? ಸಾಹಿತ್ಯ ಎಲ್ಲರನ್ನೂ ತಲುಪುತ್ತಿದೆಯಾ?
ಇಂಥ ಅಸಂಖ್ಯ ಪ್ರಶ್ನೆಗಳನ್ನು ತರುಣ ಓದುಗರು ಕೇಳುತ್ತಾರೆ. ಬರೀ ಹಳೆಯ ಕಾಲದ ಕವಿಗಳ ಬಗ್ಗೆ ಬರೆಯಬಾರದು ಅನ್ನುವುದು ನಮ್ಮೆಲ್ಲರ ತಕರಾರು ಕೂಡ. ಹೊಸ ಕತೆಗಾರರ ಬಗ್ಗೆ ಹೊಸ ಕವಿಗಳ ಬಗ್ಗೆ, ಹೊಸ ಸಾಲುಗಳ ಬಗ್ಗೆ ಬರೆಯಬೇಕು ಅನ್ನುವುದು ಅನೇಕ ಓದುಗರ ಮತ್ತು ಬರಹಗಾರರ ಆಸೆಯೂ ಹೌದು.
ಆದರೆ ದುರಂತ ಇದು; ತಲುಪುವ ಹಾದಿಗಳು ಅನೇಕ ಆಗುತ್ತಿದ್ದಂತೆ ತಲುಪುವ ಜರೂರತ್ತು ಕಡಿಮೆಯಾಗುತ್ತಿದೆ. ಹಿಂದೆ ಇದ್ದದ್ದೇ ಒಂದು ಪತ್ರಿಕೆ. ಆ ಪತ್ರಿಕೆಯಲ್ಲಿ ಬರುತ್ತಿದ್ದದ್ದನ್ನು ಎಲ್ಲರೂ ಓದುತ್ತಿದ್ದರು. ಇದ್ದದ್ದೇ ಒಂದು ದೀಪಾವಳಿ ವಿಶೇಷಾಂಕ. ಇದ್ದದ್ದೇ ಒಂದು ರೇಡಿಯೋ. ಇವತ್ತು ಸಂವಹನ ಮಾಧ್ಯಮಗಳೇ ಅಸಂಖ್ಯ. ಒಬ್ಬೊಬ್ಬರು ಒಂದೊಂದನ್ನು ಆರಿಸಿಕೊಂಡು ಯಾರಿಗೂ ಏನೂ ತಲುಪುತ್ತಿಲ್ಲ. ಇಂಟರ್ ನೆಟ್ಟು ಇಲ್ಲದ ಕಾಲದಲ್ಲಿ ಷೇಕಪಿಯರ್ ಅಚ್ಚರಿಗೊಳಿಸುತ್ತಾ ಕನ್ನಡಕ್ಕೆ ಬಂದ, ಕೀಟ್ಸ್ , ಯೇಟ್ಸ್, ಕಮೂ, ಕಾಫ್ಕ ಬಂದರು. ಎಲಿಯಟ್ ಬಂದ. ಇವತ್ತು ಎಲ್ಲರನ್ನು ಓದುವ ಅವಕಾಶ ಇದೆ. ಯಾರೂ ಕನ್ನಡಕ್ಕೆ ಬರುತ್ತಿಲ್ಲ. ದಾರಿ ಸುಗಮವಾದ ಹಾಗೆ ಬರುತ್ತಿರುವುದು ಮೂರನೆಯ ದರ್ಜೆಯ ಲೇಖಕರು. ಮೂರನೆಯ ದರ್ಜೆಯ ಸಾಹಿತ್ಯ. ತೆರೆದುಕೊಂಡದ್ದು ಹೆದ್ದಾರಿ ಅಂದುಕೊಂಡವರಿಗೆ ಅಚ್ಚರಿ; ಯಾಕೆಂದರೆ ಆಧುನಿಕ ಸಂಪರ್ಕ ಮಾಧ್ಯಮದ ಹೆದ್ದಾರಿ ದೊಡ್ಡ ಮೋರಿಯಾಗಿಬಿಟ್ಟಿದೆ. ಅಲ್ಲಿನ ಕಸ, ಕೊಳಕು, ಅಸಹ್ಯಗಳೇ ನಮ್ಮಲ್ಲಿಗೆ ಬರಲಾರಂಭಿಸಿವೆ. ಇಂಟರ್ ನೆಟ್ಟು ತೆರೆದು ಹೆಚ್ಚಿನವರು ಯಾರೂ ಬೋಧಿಲೇರನ ಕವಿತೆ ಓದುವುದಿಲ್ಲ. ನಗ್ನಾವತಾರಿ ರಶಿಯನ್ ಹುಡುಗಿಯ ಸೈಟು ನೋಡುತ್ತಾರೆ.
ಮತ್ತೆ ಹಳೆಯ ಕವಿತೆಗಳತ್ತ ಬಂದರೆ ಅಡಿಗರೇ ಅಪರೂಪ ಆಗಿದ್ದಾರೆ. ಹಾಡಿಸಿಕೊಳ್ಳುವ ಕವಿಗಳು ಕಿವಿಗೆ ಬಿದ್ದು ಬಿದ್ದು ಉಳಕೊಂಡಿದ್ದಾರೆ. ಓದಿ ನಾಲಗೆ ತುದಿಯಲ್ಲಿ ಉಳಿವ ಕವಿಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಓದುವವರ ಸಂಖ್ಯೆ ಕೂಡ. ಏಕಾಂತದಲ್ಲಿ ಕುಳಿತು ಗಂಟೆಗಟ್ಟಲೆ ಓದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹಲವು ಆಮಿಷಗಳು ಕರೆಯುತ್ತವೆ. ಮತ್ತೆ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಮತ್ತೆ ಅದೇ ಹಳೆಯ ಕಥಾಶ್ರವಣದ ಕ್ರಮ. ಯಾರೋ ಸೊಗಸಾಗಿ ಓದುವುದು. ಎಲ್ಲರೂ ಒಂದೆಡೆ ಸೇರಿ ಕುಳಿತು ಕೇಳುವುದು. ಆತ ಓದುತ್ತಿರುವಷ್ಟು ಹೊತ್ತು, ಕೇಳುತ್ತಿರುವಷ್ಟು ಹೊತ್ತು ಅಲ್ಲಿ ಏಕಾಗ್ರತೆಯೂ ಇರುತ್ತದೆ. ಸಾಹಿತ್ಯದ ರುಚಿಯೂ ದಕ್ಕುತ್ತದೆ. ಈ ನಡುವೆ ಎಲ್ಲ ಕೇಳಲಿ ಎಂದು ನಾನು ಓದುವುದಿಲ್ಲ ಎಂಬ ಕರ್ಮಾಂತರದ ಸಂಧ್ಯಾರಾಗ.
*****
ಅಡಿಗರು ಬರೆದ ಎಳೆಹರೆಯದ ಸಾಲುಗಳಿಗೀಗ ಅರ್ಥವೇ ಇಲ್ಲದಂತಾಗಿದೆಯಾ? ಈ ಚಿತ್ರ ಎಷ್ಟು ಮಕ್ಕಳ ಕಣ್ಣಮುಂದಿದೆ;
ಹಾಡಿಯಲಿ ಮರಮರದ ಕೆಳಗೆ ಧೂಪ ದಟ್ಟಕಾಯಿ ಚಿಗಿತೆಳಮೊಳಕೆ, ನರಳು ಕೇಕೆ;
ಮಳೆಮಂತ್ರದಂಡ ಮುಟ್ಟಿದ ತಿಟ್ಟುನಿಟ್ಟಿನಲಿ ನೆಲವೆಲ್ಲ ಮೊಳೆ, ಮೊಳಕೆ, ಕೊನರು, ಸಸಿ, ಗಿಡ, ಹುಲ್ಲು;
ತೋಟಗೋರಟೆಗೆ ಮೈಯೆಲ್ಲ ಕಾಮನಬಿಲ್ಲ ಬಲ್ಬುಮಾದಕ ದೀಪ, ಚೆಲ್ಲು ಗುಲ್ಲು.
ನಂದಬಟ್ಟಲನೆತ್ತಿ ತುಟಿಗಿಟ್ಟು ನರ್ತಿಸಿತು ಅಂದುಗೆಯನಾಡಿಸುತ ಬಂದ ಭೃಂಗ;
ಹಿತ್ತಲ ಜಗಲಿಮೇಲೆ ಕುಳಿತು ಧುಮ್ಮಿಕ್ಕಿದೆನು ಕೆಳಗೆ ಮತ್ತೂ ಕೆಳಗೆ, ತಳಕೆ ಕುಂಗ.
ಹಸುರುತೆರೆ ಅಪ್ಪಳಿಸುತ್ತಿರೆ ಮೇಲೆ ನೊರೆ ಕಾರಿ, ಬೀಸುತಿರೆ ಬಿರುಗಾಳಿ, ಗುಡುಗು ಮೊಳಗೆ;
ಬೇಲಿ ಮೇಗಡೆ, ಗದ್ದೆಯಂಚಲ್ಲಿ, ತೋಪುಗಳ ಅಂಗುಲಂಗುಲದಲ್ಲಿ ತೋಟದೊಳಗೆ
ಎಲ್ಲೆಲ್ಲೂ ಹೆರಿಗೆ ಮನೆ; ಬೇನೆ, ಸಂಕಟ, ನಗೆ, ಕೊರಡು ಚಿಗುರಿದ ಚೆಲುವು, ಚೀರು, ಕೇಕೆ.
ಅಹ; ಪ್ರಾತಃಕಾಲದಲ್ಲಿ ಬೆಳಕಿನ ದಾಹ.
*****
ಇಂಥ ಕವಿತೆಯನ್ನು ನಾಟಕೀಯವಾಗಿ, ಅರ್ಥವತ್ತಾಗಿ ಓದುವವರು ಬೇಕು. ಹಾಸ್ಯೋತ್ಸವದ ಅಬ್ಬರವನ್ನು ಕೊಂಚ ಬದಿಗಿಟ್ಟು ಅರ್ಥಪೂರ್ಣ ಕವಿತೆಗಳನ್ನು ಓದಿಸಿ, ಕೇಳಿಸಿ, ಅದರ ಅರ್ಥ ಸ್ಪುರಿಸುವಂತೆ ಮಾಡಿ, ಮನಸ್ಸಿಗೆ ಮುದನೀಡಿ, ಕವಿತೆಗಳ ರುಚಿಯನ್ನು ತಿಳಿಸಿಕೊಡುವವರು ಬೇಕು. ಸಂಜೆಗೆ ಟೀವಿ ಮುಂದೆ ಕೂರುವ ಬದಲು ಆಲನಹಳ್ಳಿ, ಅನಂತಮೂರ್ತಿ, ಲಂಕೇಶರ ಕತೆಗಳನ್ನು ಕೇಳುವುದಕ್ಕೆ ಹೋಗುವ ಒಂದು ಸತ್ಸಂಪ್ರದಾಯ ಶುರುವಾಗಬೇಕು. ಸಾಹಿತ್ಯ ಓದುವುದೂ ಹೆಮ್ಮೆಯ ಸಂಗತಿಯಾಗಬೇಕು. ಕನ್ನಡ, ಕನ್ನಡಕವಿತೆ, ಕನ್ನಡಿಗ ಉಳಿಯುವುದು ಆಗ.
ಅದು ಬಿಟ್ಟು ರಜನೀಕಾಂತ್ ಸಿನಿಮಾಗಳನ್ನು ಬಹಿಷ್ತರಿಸುವ ಮೂಲಕ, ಕರುಣಾನಿಧಿಗೆ ಬೈಯುವ ಮೂಲಕ, ಕನ್ನಡಿಗರು ಕನ್ನಡಿಗತನ ತೋರುವುದಕ್ಕೆ ಸಿನಿಮಾ ನಟರ ಮುಖಕ್ಕೆ ಮಸಿ ಬಳಿಯಬೇಕು ಎನ್ನುವ ತನಕ ಭಾಷೆಯೂ ಉದ್ಧಾರ ಆಗುವುದಿಲ್ಲ, ಭಾಷಿಗರು ಕೂಡ.
Monday, April 7, 2008
Subscribe to:
Post Comments (Atom)
11 comments:
ಆಯಾ ಕಾಲಕ್ಕೆ ತಕ್ಕಂತಹ ಬದಲಾವಣೆಗಳು ಆಗಲೇ ಬೇಕಲ್ಲವೇ...ಈ ರೀತಿ ಬದಲಾವಣೆಗಳಿಂದಲ್ಲವೇ ಲೇಖನಿಗೆ ಖಡ್ಗಕ್ಕಿಂತ ಜಾಸ್ತಿ ಶಕ್ತಿ...ಬಂದಿದ್ದು...........ಎಲ್ಲರಿಗೂ ಮಲ್ಲಿಕಾಳ ಮೇಲೆ ಮನಸಾಗಬೇಕಿಲ್ಲವಲ್ಲ.....
ಬೋಧೀ ಕಥೆಯನ್ನು ಓದುತ್ತಾರೋ ಇಲ್ಲವೋ ಗೊತ್ತಿಲ್ಲ "ಜೋಗಿ" ಕಥೆಯನ್ನಂತೂ ಓದುತ್ತಾರೆ.... ಪುಸ್ತಕ ಮರೆಯಾಗಿರ ಬಹುದು...ಓದುವ ಶೈಲಿ ಬದಲಾಗಿರಬಹುದು ಆದರೆ ಎಲ್ಲಿಯವರೆಗೆ ಬರೆಯುವ ನಿಮ್ಮಂತವರು ಇರುತ್ತಾರೋ .....ಅಲ್ಲಿಯವರೆಗೆ ನನ್ನಂತಹ ಒದುಗರೂ ಇರುತ್ತಾರ
ರಜನಿಯ ಚಿತ್ರವನ್ನು ಬಹಿಷ್ಕರಿಸಿಯೇ ಹೋರಾಟ ಮಾಡಬೇಕೇ ಎಂಬ ಮಾತು ಸತ್ಯ...ಆದರೆ ಕೆಣಕಿದರೆ ಸುಮ್ಮನೆ ಕೂರಲಾದೀತೇ...ವಜ್ರವನ್ನು ವಜ್ರದಿಂದಲೇ ಕಡಿಯಬೇಕಲ್ಲವೇ?????.... ಈ ಚಾಳಿ ಪ್ರಾರಂಭವಾದ್ದು ಅವರಿಂದಲೇ ಅಲ್ಲವೇ?????
ಸಾಹಿತ್ಯದ ಬಗ್ಗೆ ನೀವು ಹೇಳಿದ್ದು ಬಹಳ ಸತ್ಯದ ವಿಚಾರವೆ..
ಆದರೆ "ಅವಳ ಕಣ್ಣು ಮಲ್ಪೆ ಮೀನು"ಅಂತ ರಣ ಭಯಂಕರ ಸಾಹಿತ್ಯ ಸಾಲು ರಚಿಸಿ ಹಾಡಿದಾಗ ಇದ್ಯಾವ ರೀತಿ ಅಂತ ಭ್ರಮನಿರಸನವಾಗುತ್ತದೆ..ಒಮ್ಮೊಮ್ಮೆ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ....
ನೀವು ಹೇಳೋದು ಸತ್ಯ. ಆದರೆ ಈ ತರಾತುರಿ ಭರಿತ ಜೀವನದಲ್ಲಿ ಸಾಹಿತ್ಯ, ಕವಿತೆ ವಾಚನೆ ಮಾಡೋದು ಅದನ್ನ ಕೇಳೊಕ್ಕೆ ಹೋಗೋದು ತುಂಬ ಕಷ್ಟ. ನೀವು ಹಾಗೂ ನಿಮ್ಮ ಸ್ನೇಹಿತರು ಆ ತರಹದ ಕಾರ್ಯಕ್ರಮ ಮಾಡೋ ಹಾಗಿದ್ರೆ ದಯವಿಟ್ಟು ತಿಳಿಸಿ ನಮ್ಮ ಕಯ್ಯಾಲ್ಲದನ್ನು ಮಾಡ್ತೀವಿ.
ನಮಸ್ತೆ,
ಕೀಟ್ಸ್ , ಯೇಟ್ಸ್, ಕಮೂ, ಕಾಫ್ಕ , ಎಲಿಯಟ್ ಮುಂತಾದವರು ಬಂದರೆ ಮಾತ್ರ ಅದು ಮೊದಲನೇ ದರ್ಜೆ ಸಾಹಿತ್ಯ ಎಂದೇಕೆ? ಬರೇ ಅಡಿಗರ ಪದ್ಯ, ಕಾರ್ನಾಡರ ನಾಟಕದಿಂದ ಎಲ್ಲಾ ವರ್ಗಗಳನ್ನೂ ಕನ್ನಡ ಓದಿನಲ್ಲಿ ಹಿಡಿದಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಇಂತಹುದರಿಂದಲೇ ಕನ್ನಡ ಬಹಳ ಸೀಮಿತವಾಗಿ ಉಳಿದುಬಿಟ್ಟಿರುವುದು.
ರಜನೀಕಾಂತರ ಸಿನೆಮಾ ಸುಟ್ಟರೆ, ಕರುಣಾನಿಧಿಗೆ ಬೈದರೆ ಕನ್ನಡ ಉದ್ಧಾರವಾಗುತ್ತದೆ ಎಂದು ಯಾರೂ ಹೋರಾಟ ಮಾಡುತ್ತಿಲ್ಲ. ಅಲ್ಲಿ ನೆಡೆಯುತ್ತಿರುವ ಹೋರಾಟವೇ ಬೇರೇದುಕ್ಕಾಗಿ. ಅವರು ರಾಜಕೀಯ ಬೆಂಬಲಿತ ಕುತಂತ್ರ ನೆಡೆಸುತ್ತಿರುವಾಗ ನಾವು ಪುಸ್ತಕ ಓದುತ್ತಾ, ಕವನ ವಾಚನ ಮಾಡುತ್ತಾ, ಕನ್ನಡ ಹಾಡು ಕೇಳುತ್ತಾ ಕೂತರೆ ಉದ್ಧಾರ ಆದೀತೆ ಕನ್ನಡ, ಕರ್ನಾಟಕ?! ಯಾವುದನ್ನು ಯಾವುದಕ್ಕೋ ಲಿಂಕ್ ಮಾಡಿ ಸಮರ್ಥಿಸುವುದು ತರವಲ್ಲ. ಇಲ್ಲಿ ಪುಸ್ತಕ ಓದುತ್ತಾ, ಕವನ ಬರೆಯುತ್ತಾ ಕೂತುಕೊಂಡರೆ ಅಲ್ಲಿ ಕರ್ನಾಟಕದ ಭೂಮಿ ಹೋಗುತ್ತದೆ, ಕನ್ನಡಿಗ ನೀರಿಲ್ಲದೆ ಒದ್ದಾಡಬೇಕಾಗುತ್ತದೆ. ಅದೆಲ್ಲ ಸರಿಯಿದ್ದರೆ ಆಮೇಲೆ ತಾನೆ ಕನ್ನಡ, ಕನ್ನಡಕವಿತೆ, ಕನ್ನಡಿಗ ಉಳಿಯುವುದು .
-ಅಜಯ
ಬೆಂಗಳೂರು
ಮನೆಯ ಬಾಗಿಲು ತೆಗೆದಿದ್ದಕ್ಕೆ ಖುಶಿಯಾಗಿದೆ. ಹೊಸ ಬರಹದೊಡನೆ ಸ್ವಾಗತಿಸಿದ್ದ್ರೆ ಚೆನ್ನಾಗಿತ್ತು.
ಧನ್ಯವಾದಗಳು.
ರಾಘವೇಂದ್ರ ಕೆಸವಿನಮನೆ.
Hai,
(W)Right thing, right approach.
Nothing Left !
- Harish Kera
padhyagaLu arthavaagalilla.... havdhu yaaraadarU artha maaDisabEku Odi hELabEku. blaagina baagilu matte terediddu khuShiyaayithu.
matte nivu nanna nInu aMta karIbahudu. nanna kathege kaameMTisi harasiddakke dhanyavaadhagaLu. ;-)
ಈ ಬ್ಲಾಗ್ ಓದಿ ವಿಷಾದವಾಯಿತು. ಅಚ್ಚರಿಯಿರದ ತಲೆಮಾರು, ಅದಕ್ಕೊಂದು ಅಡಿಗರ ಪದ್ಯ, ಒಳ್ಳೆಯ ಬರಹಗಾರರಿರದ ಶೋಚನೆ, ಅದಕ್ಕೊಂದು ಅಡಿಗರ ಪದ್ಯ, ನಂತರ ಯಾವುದರತ್ತವೂ ಹರಿಯದ ಯೋಚನೆ ಮತ್ತಾವುದನ್ನೋ ಬಯ್ಯುವಲ್ಲಿಗೆ ಬಂದು ನಿಂತಿದೆ.
ಹಿಂದೆ ಪ್ರಚೋದನೆ ಹೊರಗಿನಿಂದ ಬಂದಿತ್ತು, ಇಂದು ಕಸ ಬರುತ್ತಿದೆಯನ್ನುವ ಕ್ಷುಲ್ಲಕತೆಗೆ ಏನು ಹೇಳುವುದು? ಅಡಿಗರು ಏಂದೋ ಹೊಸತಲೆಮಾರಿನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು ಎಂದು ಸುಮಾರು ೨೦ ವರ್ಷದ ಮೇಲೆ ಜ್ಞಾನೋದಯವಾಗುತ್ತಿದೆಯೆ?
ನಮ್ಮ ಸಾಹಿತಿಗಳು ಎಂದೂ ಸಮುದಾಯ/ಸಂಸ್ಕೃತಿಯ ಕೆಲಸಕ್ಕೆ ಮುಂದಾಗಿಲ್ಲ. ಇಂದೂ ಇಲ್ಲ. ಬರೇ ದೂರವುದೊಂದೇ.
- ಚೆಂಗಣ್ಣ ತಿಳಿಗೊಳ
Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the MP3 e MP4, I hope you enjoy. The address is http://mp3-mp4-brasil.blogspot.com. A hug.
Post a Comment