Monday, November 5, 2007

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ

ಕತೆಗಾರರು ಬಡತನದಲ್ಲಿ ಹುಟ್ಟುತ್ತಾರೆ. ಬಡತನದ ಅನುಭವಗಳನ್ನು ಬರೆದು ಶ್ರೀಮಂತರಾಗುತ್ತಾರೆ. ಆ ಬಡತನದ ಅನುಭವಗಳನ್ನು ಓದಿದ ಶ್ರೀಮಂತರು ತಾವೆಷ್ಟು ಬಡವರು ಅಂದುಕೊಂಡು ಒಳಗೊಳಗೇ ಕೊರಗುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಗಾಲ್ಸ್ ವರ್ದಿ. ಜಾನ್ ಗಾಲ್ಸ್ ವರ್ದಿ.
ಇಂಗ್ಲಿಷ್ ನಾಟಕಕಾರ ಮತ್ತು ಕಾದಂಬರಿಕಾರ. 1932ರಲ್ಲಿ ಅವನಿಗೆ ನೊಬೆಲ್ ಬಂತು. ಮೇಲ್ಮಧ್ಯಮ ವರ್ಗದ ಬ್ರಿಟಿಷರ ಬದುಕನ್ನೂ ಇಂಗ್ಲೆಂಡಿನ ಸಾಮಾಜಿಕ ಸ್ಥಿತಿಗತಿಯನ್ನೂ ತೆಳುವಾಗಿ ಗೇಲಿ ಮಾಡುತ್ತಾ ಬರೆದವನು ಗಾಲ್ಸ್ ವರ್ದಿ. ಆತ ಕಾದಂಬರಿಯೇ ತನ್ನ ಸಾಮಾಜಿಕ ನಿಲುವುಗಳನ್ನು ಹೇಳುವುದಕ್ಕೆ, ಚಳವಳಿಗೆ ನ್ಯಾಯಯುತ ಮಾರ್ಗ ಎಂದು ಭಾವಿಸಿದವನು. ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಗಾಢವಾಗಿ ನಂಬಿದ್ದ ಆ ಕಾಲದ ಏಕೈಕ ಸಾಹಿತಿಯೂ ಹೌದು. ಕತೆಗಾರನ ಕೆಲಸ ಸಮಸ್ಯೆಯತ್ತ ಬೆಳಕು ಚೆಲ್ಲುವುದೇ ಹೊರತು ಅದಕ್ಕೆ ಪರಿಹಾರ ಸೂಚಿಸುವುದಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದೂ ಇದೇ ಗಾಲ್ಸ್ ವರ್ದಿ.
ಗಾಲ್ಸ್ ವರ್ದಿ ಹುಟ್ಟಿದ್ದೂ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ. ಓದಿದ್ದು ಕಾನೂನು.ಓದುತ್ತಿದ್ದ ದಿನಗಳಲ್ಲಿ ಗಾಲ್ಸ್ ವರ್ದಿ ಹೆಸರು ಮಾಡಿದ್ದು ಕ್ರಿಕೆಚ್ ಮತ್ತು ಫುಟ್ ಬಾಲ್ ಆಟಗಾರನಾಗಿ.ಕಾನೂನು ಓದಿದರೂ ಗಾಲ್ಸ್ ವರ್ದಿ ವಕೀಲನಾಗಲಿಲ್ಲ. ಅಷ್ಟು ಹೊತ್ತಿಗಾಗಲೇ ಆತ ಪ್ರೇಮದಲ್ಲಿ ಸೋತಿದ್ದ. ಆಕೆಯನ್ನು ಮರೆಯುವುದಕ್ಕೋಸ್ಕರ ಪ್ರವಾಸ ಹೊರಟುನಿಂತ. ಹಾಗೆ ಹೊರಟಾಗ ಸಿಕ್ಕಿದ್ದು ಬರಹಗಾರ ಜೋಸೆಫ್ ಕಾನ್ರಾಡ್. ಆ ಭೇಟಿಯ ಪರಿಣಾಮವೆಂದರೆ ಗಾಲ್ಸ್ ವರ್ದಿ ಸಾಹಿತಿಯಾಗಲು ತೀರ್ಮಾನಿಸಿದ್ದು. ಕೊಂಚ ಸಂಕೋಚದಿಂದಲೇ ಆತ ನಾಲ್ಕು ಕೃತಿಗಳನ್ನು ಜಾನ್ ಸಿನ್ ಜಾನ್ ಎಂಬ ಗುಪ್ತನಾಮದಲ್ಲಿ ಬರೆದ. ತುಂಬ ವರುಷದ ನಂತರ ಗಾಲ್ಸ್ ವರ್ದಿಯೇ ತಾನು ಆರಂಭದಲ್ಲಿ ಬರೆದದ್ದೆಲ್ಲ ತುಂಬ ಭಾರವಾಗಿದ್ದ ಬರಹಗಳು ಮತ್ತು ಅವುಗಳ ಮೇಲೆ ಕಿಪ್ಲಿಂಗ್ ಪ್ರಭಾವ ಧಾರಾಳವಾಗಿತ್ತು ಎಂದು ಹೇಳಿ ಅವನ್ನೆಲ್ಲ ನಿರಾಕರಿಸಿದ್ದೂ ಉಂಟು.
ಗಾಲ್ಸ್ ವರ್ದಿಯ ಮದುವೆಯೂ ವಿಚಿತ್ರವಾಗಿದೆ. ಮದುವೆಯಾದ ಹತ್ತುವರುಷಗಳ ತನಕ ಆತ ಅದನ್ನು ಬಹಿರಂಗಪಡಿಸಲಿಲ್ಲ. ಈ ಮದುವೆ ತನ್ನ ಅಪ್ಪನನ್ನು ಕೆರಳಿಸಬಹುದು ಎಂಬ ಕಾರಣಕ್ಕೆ. ಆತನ ಅನೇಕ ಕಾದಂಬರಿಗಳ ನಾಯಕಿಯರಿಗೆ ಆಕೆಯೇ ಸ್ಪೂರ್ತಿಯಾಗಿದ್ದಳು.ಒಂದು ಕಾಲದಲ್ಲಿ ಆತ ಕುದುರೆಗಳ ಮೇಲೊಂದು ಥೀಸೀಸ್ ಬರೆಯಲು ಹೊರಟಿದ್ದ. ಆ ಅನುಭವ ಅವನ ಕತೆಗಳಲ್ಲೂ ನಾಟಕಗಳಲ್ಲೂ ಬಂದಿವೆ. ಒಂದು ಸಂಭಾಷಣೆ ಹೀಗಿದೆ;
ಹುಡುಗಿ- ನಿಂಗೆ ಹುಡುಗೀರ್ನ ಕಂಡ್ರಾಗೋಲ್ಲ. ಅಲ್ವಾ..
ಆತ- ಅಷ್ಟಕ್ಕಷ್ಟೇ..
ಹುಡುಗಿ- ಯಾಕೇಂತ ಹೇಳಬಾರ್ದಾ?
ಆತ- ಹೇಳ್ಲೇಬೇಕೂಂದ್ರೆ ಹುಡುಗೀರು ಕುದುರೆಗಳಿಗಿಂತ ಹರಾಮಿಯರು.
ಹುಡುಗಿ- ಹರಾಮಿತನ ತುಂಬ್ದೋರು ಯಾರು?
ಆತ- ಎಲ್ಲರೂ ಗಂಡಸರೇ ಅಂತಾರೆ. ನೀನೂ ಅದನ್ನ ನಂಬ್ತೀಯಾ.
ಹುಡುಗಿ - ಗೊತ್ತಿಲ್ಲಪ್ಪ. ಕುದುರೆಗಳಿಗೂ ಹರಾಮಿತನ ತುಂಬೋದು ಗಂಡಸರೇನಾ?
ಇದು ಎಸ್ಕೇಪ್ ನಾಟಕದ ಒಂದು ಪುಟ್ಟ ದೃಶ್ಯ. ಈ ನಾಟಕ ಎರಡು ಬಾರಿ ಸಿನಿಮಾ ಆಯಿತು. ಟ್ವೆಂಟಿಯ್ ಸೆಂಚುರಿ ಫಾಕ್ಸ್ ಇದನ್ನು ಚಲನಚಿತ್ರವಾಗಿಸಿದಾಗ ರೆಕ್ಸ್ ಹ್ಯಾರಿಸನ್ ಮುಖ್ಯ ಪಾತ್ರದಲ್ಲಿದ್ದ. ಇದರ ಕತೆಯೂ ಕನ್ನಡಕ್ಕೆ ಒಗ್ಗುವಂಥದ್ದೇ. ಒಬ್ಬ ನಿಯತ್ತಿನ ಮನುಷ್ಯ ಒಬ್ಬ ವೇಶ್ಯೆಯನ್ನು ಭೇಟಿಯಾಗುತ್ತಾನೆ. ಅವಳನ್ನು ರಕ್ಪಿಸುವ ಭರದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡುತ್ತಾನೆ. ಜೈಲಿನಿಂದ ತಪ್ಪಿಸಿಕೊಂಡು ಓಡುತ್ತಾನೆ. ಈ ಹಂತದಲ್ಲಿ ಹೊಸ ಹೊಸ ಅನುಭವಗಳಿಗೆ ಪಕ್ಕಾಗುತ್ತಾನೆ. ಇದಿಷ್ಟು ಕತೆ.ಗಾಲ್ಸ್ ವರ್ದಿಯ ಮತ್ತೊಂದು ಪುಟ್ಟ ಕತೆ ಹೀಗಿದೆ. ಒಂದು ಮಾಗಿಯ ಸಂಜೆ ಗೆಳೆಯರೆಲ್ಲ ತೋಟದ ಮನೆಯಲ್ಲಿ ಸೇರಿಕೊಂಡು ಗುಂಡು ಹಾಕುತ್ತಿರ್ತುತಾರೆ. ಮಾತುಗಳು ಅವರ ಕೈಯಲ್ಲಿನ ಸಿಗರೇಟಿನಿಂದ ಉದುರುವ ಕಿಡಿಗಳಂತೆ ಬಿದ್ದು ಸತ್ತು ಹೋಗುತ್ತಿರುತ್ತದೆ. ಅವರು ಹಾಗೇ ಮಾತಾಡುತ್ತಿರಬೇಕಾದರೆ ಅಲ್ಲಿಗೆ ಆ ಊರಿನಲ್ಲೇ ಕುಪ್ರಸಿದ್ಧಳಾದ ಹೆಣ್ಣು ಬರುತ್ತಾಳೆ.ಅಲ್ಲಿಗೆ ಮಾತು ನಿಲ್ಲುತ್ತದೆ. ಪ್ರತಿಯೊಬ್ಬನಿಗೂ ಅವಳನ್ನು ಕಂಡರೆ ಭಯ. ಅವಳಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ಆಶೆ. ಆಕೆ ಅಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಪ್ರತಿಯೊಬ್ಬರೂ ಆ ರಾತ್ರಿ ಆಕೆಯೊಡನೆ ಅಪರಿಚಿತರಂತೆ ವರ್ತಿಸುತ್ತಾರೆ. ಪ್ರತಿಯೊಬ್ಬರೂ ಅವಳೊಂದಿಗೆ ಸುಖಿಸಿದವರೇ. ಆದರೆ ಎಲ್ಲರೊಂದಿಗೆ ಇರುವಾಗ ಆಕೆ ಎದುರಾದ ತಕ್ಪಣ ಪ್ರತಿಯೊಬ್ಬರ ನೈತಿಕ ಪ್ರಜ್ಞೆ, ಸ್ವಾಭಿಮಾನ, ಅಂತಸ್ತು ಜಾಗೃತವಾಗುತ್ತದೆ. ಕೊನೆಗೆ ಒಬ್ಬೊಬ್ಬರಾಗಿ ಅಲ್ಲಿಂದ ಎದ್ದು ಹೋಗುತ್ತಾರೆ. ಕೊನೆಗೆ ಉಳಿಯುವ ಒಬ್ಬಾತ ಆಕೆಯನ್ನು ತಬ್ಬಿ ಕರೆದುಕೊಂಡು ಹೋಗುತ್ತಾನೆ.ಮೇಲ್ಮಧ್ಯಮವರ್ಗದ ನೈತಿಕತೆಯ ಬಲೂನನ್ನು ಇಂಥ ಕತೆಗಳ ಮೂಲಕ ಗಾಲ್ಸ್ ವರ್ದಿ ಒಡೆಯುತ್ತಿದ್ದ.ಬಹುಶಃ ಕತೆಗಾರರನ್ನು ಕಂಡರೆ ಇದೇ ಕಾರಣಕ್ಕೆ ಪ್ರಜೆಗಳಿಗೂ ಪ್ರಭುಗಳಿಗೂ ಭಯ. ಲೇಖಕರು ಎಲ್ಲರ ಪೊಳ್ಳನ್ನು ಒಡೆಯುತ್ತಿರುತ್ತಾರೆ. ನೈತಿಕತೆಯನ್ನು ಗೇಲಿ ಮಾಡುತ್ತಾರೆ. ದೊಡ್ಡ ದನಿಯಲ್ಲಿ ಅಸಂಬದ್ಧ ಭಾಷಣ ಮಾಡುವವನ ಮುಂದೆ ನಿಂತು ಕೀರಲು ದನಿಯಲ್ಲಿ ಕಿಚಾಯಿಸುತ್ತಾರೆ.ಬೇಕಿದ್ದರೆ ನೋಡಿ; ಒಳ್ಳೆಯ ಸಾಹಿತಿಗಳೆಲ್ಲ ಆಯಾ ದೇಶದ ವಿರುದ್ಧ ತಿರುಗಿಬಿದ್ದವರೇ. ದೇಶಪ್ರೇಮಿ ಖಂಡಿತಾ ಒಳ್ಳೆಯ ಲೇಖಕ ಆಗಲಾರ. ಪ್ರಭುತ್ವವನ್ನು ಮೆಚ್ಚಿಕೊಂಡು ಹಾಡುವವನು ಒಳ್ಳೆಯ ಕವಿ ಆಗಲಾರ.

10 comments:

ವಿಕ್ರಮ ಹತ್ವಾರ said...

AWESOME!.... AWESOME!!

ದೇಶಪ್ರೇಮಿ ಒಳ್ಳೆಯ ಲೇಖಕ ಆಗಲಾರ ಅಂದದ್ದು ಯಾಕೋ ಸರಿ ಕಾಣಲಿಲ್ಲ. ದೇಶಪ್ರೇಮಿಗಳು ಪ್ರಭುತ್ವದ ವಿರುದ್ಧ ತಿರುಗಿ ಬೀಳುವುದಿಲ್ಲ ವ್ಯವಸ್ಥೆಯನ್ನು ಮೂದಲಿಸುವುದಿಲ್ಲ ಅಂತೇನು ಇಲ್ಲವಲ್ಲ.

Keshav Kulkarni said...

ವಿಕ್ರಮ್,
ಜೋಗಿಯವರು ದೇಶಪ್ರೇಮಿ ಅಂತ ಬರೆದಿಲ್ಲ. ಪ್ರಭುತ್ವವನ್ನು ಒಪ್ಪಿಕೊಂಡವನು ಅಂತ ಬರೆದಿದ್ದಾರೆ. ದೇಶಪ್ರೇಮಿಗೂ ಪ್ರಭುತ್ವವನ್ನು ಒಪ್ಪಿಕೊಂಡವನಿಗೂ ತುಂಬ ವ್ಯತ್ಯಾಸವಿದೆ.

ಜೋಗಿ,
ತುಂಬ ಚೆನ್ನಾಗಿ ಬರೆದಿದ್ದೀರಿ.
ಕೇಶವ

suptadeepti said...

ಜೋಗಿ,
ಒಳ್ಳೆಯ ವೈಚಾರಿಕ ಲೇಖನ. ಸಾಹಿತಿಯ ಸಾಮಾಜಿಕ ಹೊಣೆಯನ್ನು ಮತ್ತೆ ನೆನಪಿಸಿದ್ದೀರಿ.

"ದೇಶಪ್ರೇಮಿ ಖಂಡಿತಾ ಒಳ್ಳೆಯ ಲೇಖಕ ಆಗಲಾರ."-- ವಾಕ್ಯ ನನಗೂ ಸರಿ ಅನ್ನಿಸಲಿಲ್ಲ. ಅದರ ನಂತರದ ವಾಕ್ಯವೂ ಪ್ರಶ್ನಾರ್ಹ (ಪಂಪನ ಒಂದು ಉದಾಹರಣೆಯೇ ಸಾಕು). ನಿಮ್ಮ ಮಾತನ್ನು ಪುಷ್ಠೀಕರಿಸಲು ನೀವು ಕೊಟ್ಟ ಉದಾಹರಣೆಯನ್ನು ಸೀಮಿತ ದೃಷ್ಟಿಯಲ್ಲಿ ಒಪ್ಪಿಕೊಳ್ಳಬಹುದು, ಅವರ ಸಾಹಿತ್ಯದ ಒಟ್ಟಂದದ ನೋಟದಲ್ಲಲ್ಲ.

ನನ್ನ ಎರಡಾಣೆ, ಅಷ್ಟೇ.

Anonymous said...

ಸುಪ್ತದೀಪ್ತಿ,
ನಿಮ್ಮ ಮಾತು ನಿಜ.ರಾಷ್ಟ್ರಪ್ರೇಮಿಯಾಗಿದ್ದ ಕುವೆಂಪು ಅದಕ್ಕೆ ಉದಾಹರಣೆ. ಹಾಗೇ ಮಾಸ್ತಿ ಕೂಡ ರಾಷ್ಟ್ರಾಭಿಮಾನಿಗಳಾಗಿದ್ದರು. ನಾನು ಹೇಳಹೊರಟಿದ್ದು ಅದಲ್ಲ. ರಾಷ್ಟ್ರಪ್ರೇಮ ಬರಹದಲ್ಲಿ ಕಾಣಿಸಿಕೊಂಡಾಗ ಅದು ಗೊಡ್ಡು ಹೊಗಳಿಕಯ ಮಟ್ಟದಲ್ಲೇ ಉಳಿಯುತ್ತದೆ. ದೇಶಪ್ರೇಮ, ಪ್ರಾದೇಶಿಕ ಪ್ರೇಮ, ನಮ್ಮ ನಮ್ಮ ಜಾತಿಯ ಕುರಿತ ಪ್ರೀತಿ ಇವೆಲ್ಲ ವೈಯಕ್ತಿಕವಾಗಿ ಸರಿ. ಅದು ಸಾಹಿತ್ಯಕ್ಕೂ ದಾಟಿಕೊಳ್ಳಬಾರದು. ಹಾಗೇನಾದರೂ ಆದರೆ ಸಾಹಿತ್ಯ ಘೋಷಣೆಯೋ ಮ್ಯಾನಿಫೆಸ್ಟೋವೋ ಆಗುತ್ತದೆ. ಅಲ್ಲವೇ.
ಜೋಗಿ

suptadeepti said...

ಜೋಗಿ,
ಈಗ ನಿಮ್ಮ ಮಾತು, ಉದ್ದೇಶ ಸ್ಫುಟವಾಯಿತು; ಧನ್ಯವಾದಗಳು.

suptadeepti said...

ಜೋಗಿ,
ದೀಪಾವಳಿಯ ಶುಭಾಶಯಗಳು:


ಹಬ್ಬಗಳ ಹಾರದಲಿ ಪದಕ ದೀವಳಿಗೆ
ದೀಪಗಳ ಬೆಳಕಿನಲಿ ನಗುವಿರಲಿ ಜೊತೆಗೆ
ಎಲ್ಲ ಮನೆಗಳ ತುಂಬ ಸುಖಶಾಂತಿಯಿರಲಿ
ನಮ್ಮ ಹಾರೈಕೆಗಳು ನಿಮ್ಮೊಡನೆ ಬರಲಿ

ನಿಮ್ಮೆಲ್ಲರಿಗೂ ಬೆಳಕಿನ ಹಬ್ಬ ಸಂತಸ ತರಲಿ.

Anonymous said...

lekhana chennagide. nivu yavattu hige thumba different agi barithira. i suport kulkarnis worsds. hange nimma prithi illada mele serial yake hange yelitidirA

ವಿವೇಕ ಶಾನಭಾಗ said...

ನೀವು ಬೇಂದ್ರೆಯವರ ಲೇಖನ 'ಬಡತನವು ಸಾಹಿತ್ಯದ ವಸ್ತುವೇಕಾಗಿದೆ?' ಎಂಬುದನ್ನು ಓದಿ. ಇದು "ಸಾಹಿತ್ಯದ ವಿರಾಟ್ ಸ್ವರೂಪ" ಎಂಬ ಅತ್ಯುತ್ತಮವಾದ ಪುಸ್ತಕದಲ್ಲಿ ಇದೆ. ಸುಮಾರು ಸಾವಿರ ಪುಟಗಳ ಈ ಪುಸ್ತಕದ ಮರುಮುದ್ರಣವಾಗದ ಹಾಗೆ ವಾಮನ ಬೇಂದ್ರೆಯವರು ನೋಡಿಕೊಂಡಿದ್ದಾರೆ!! ತಾವೂ ಮಾಡುವುದಿಲ್ಲ ಬೇರೆಯವರಿಗೂ ಕೊಡುವುದಿಲ್ಲ ಎಂಬುದು ಅವರ ಧೋರಣೆ. ನೆರಳಚ್ಚು ಮಾಡಿಸಿಕೊಂಡಾದರೂ ಇಟ್ಟುಕೊಳ್ಳಬೇಕಾದ ಪುಸ್ತಕವಿದು.

condumdots said...

"Prabhuthva vannu oppikondava olleya saahithi aagalaara"!! -

a small comment - Ananthamurthy avaranna nodidre haage kanisodillappa!

regards
Dr.D.M.Sagar
Canada

jithendra said...

jogi sir

deshapremiyadava olleya lekhakanaagalaara emba maatu ondathra dalli nija.. deshapremigalu kelavomme bariya hogalu bhata raagi bittirutttare.

anda haage "jogi' hesarina nija artha tiliyitu... really interesting...
-jitendra. mysore