Monday, November 12, 2007

ಹೊಸ ನೀರು ಬಂದರೂ ಅದೇ ಪುರಾತನದಮಲು


ಇದನ್ನು ಹೇಗೆ ಶುರುಮಾಡಿದರೂ ಕೊಂಚ ನಾಟಕೀಯವಾಗುತ್ತದೆ. ಬಹುಶಃ ನಾಟಕೀಯತೆಯಲ್ಲೇ ಇದು ಆಪ್ತವಾಗುತ್ತದೋ ಏನೋ? ಕೆಲವು ಸಂಗತಿಗಳೇ ಹಾಗೆ. ಅವು ನಿಜವಾಗುವುದು ತಮ್ಮ ಉತ್ಕಟತೆಯಲ್ಲೇ; ಅರ್ಥವಾಗುವುದು ತಮ್ಮ ತೀವ್ರತೆಯಲ್ಲೇ; ಸತ್ಯಕ್ಕೆ ಹತ್ತಿರವಾಗುವುದು ಅತಿರೇಕದ ಸ್ಥಿತಿಯಲ್ಲೇ. ಉದಾ; ಸಾವು.
ಇದು ಸಾವಿನ ಕುರಿತ ಪ್ರಸ್ತಾಪ ಅಲ್ಲ. ಸಾವು ಎಲ್ಲವನ್ನೂ ಬದಲಾಯಿಸುತ್ತದೆ ಅಂತ ತಿಳಿಯುವುದು ತಪ್ಪು. ಅದಕ್ಕೆ ಆ ಶಕ್ತಿಯಿಲ್ಲ. ಸಾವಿನ ಹತ್ತಿರಕ್ಕೆ ಹೋಗಿ ಬಂದವರು ಕೂಡ ಬದಲಾಗದೆ ಇರುವುದನ್ನು ನಾವು ನೋಡಿದ್ದೇವೆ. ಸಾವಿಗೆ ಅತ್ಯಂತ ಭಯಪಡುವವರು ಕೂಡ ಅದನ್ನು ನಿರ್ಲಕ್ಷ್ಯಿಸಿರುತ್ತಾರೆ. ಅಂಥದ್ದೊಂದು ಉಡಾಫೆ ಈ ಬದುಕಿಗೆ ಸಾಧ್ಯ ಅನ್ನುವ ಕಾರಣಕ್ಕೆ ಜೀವನ ಸಾವಿಗಿಂತ ದೊಡ್ಡದು. ಸಾವನ್ನು ಕೃತಿಯ ಮೂಲಕ ಮೀರಲು ಯತ್ನಿಸಿದವರನ್ನು ನಾವು ನೋಡಿದ್ದೇವೆ. ವಿಕೃತಿಯ ಮೂಲಕ ಎದುರಿಸಲು ಯತ್ನಿಸಿದವರಿದ್ದಾರೆ. ಪ್ರಕೃತಿಯ ಮೂಲಕ ದಾಟಲು ಹೊರಟವರಿದ್ದಾರೆ. ಅದ್ಯಾವುದೂ ಇಲ್ಲಿ ಮುಖ್ಯವಲ್ಲ.
ಈಗ ಈ ಕತೆ ಕೇಳಿ. ಇದೊಬ್ಬ ಅನಾಮಿಕನ ಕತೆ. ಅವನ ಉತ್ಕಟ ಆಕಾಂಕ್ಪೆಗಳ ಕತೆ. ಇದು ಮೇಲ್ನೋಟಕ್ಕೆ ಸುಳ್ಳು ಸುಳ್ಳೇ ಕತೆ ಅನ್ನಿಸಬಹುದು. ಈ ಕತೆಯ ಮೂಲಕ ಇನ್ನೇನನ್ನೋ ನೀವು ನೋಡಲು ಯತ್ನಿಸಿದರೆ ನಿರಾಶೆಯಾಗಬಹುದು. ಆದರೂ ಇದಕ್ಕೊಂದು ವಿಚಿತ್ರ ಶಕ್ತಿಯಿದೆ ಅನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಕತೆ ಹೀಗೆ ಆರಂಭವಾಗುತ್ತದೆ;
ಕ್ಪೇಮೇಂದ್ರನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಆತನ ಮೇಲಿರುವುದು ಕೊಲೆ ಆರೋಪ. ತನ್ನ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಗಂಡ ಹೆಂಡತಿ ಮತ್ತು ಅವರ ಇಪ್ಪತ್ತಾರು ವರುಷದ ಮಗನನ್ನು ಕೊಲೆ ಮಾಡಿದ್ದಾನೆ ಅನ್ನುವ ಆರೋಪ ನಿಜವೇ ಎಂದು ನ್ಯಾಯಾಧೀಶರು ಕೇಳಿದಾಗ ಕ್ಷೇಮೆಂದ್ರ ಇಲ್ಲ ಎನ್ನಲಿಲ್ಲ. ಹೌದು ಎನ್ನಲಿಲ್ಲ. ಇದ್ದರೂ ಇರಬಹುದು. ಇಲ್ಲದೆಯೂ ಇರಬಹುದು ಎಂದು ಉತ್ತರಿಸಿದ. ಅವನ ಗಂಟಿಕ್ಕಿದ ಮುಖ, ನೋಟದಲ್ಲಿರುವ ಉಡಾಫೆ ಮತ್ತು ನ್ಯಾಯಾಧೀಶರನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಧಾಟಿಯನ್ನು ನೋಡಿದ ಎಲ್ಲರಿಗೂ ಅವನ ಮೇಲೆ ಸಿಟ್ಟು ಬಂತು.
ನ್ಯಾಯಾಧೀಶರಿಗೂ ಸಿಟ್ಟು ಬಾರದೇ ಇರಲಿಲ್ಲ. ಕೋರ್ಟಿನಲ್ಲಿ ಹಾಗೆಲ್ಲ ಅಸ್ಪಷ್ಟವಾಗಿ ಸಾಂಕೇತಿಕವಾಗಿ ಮಾತನಾಡಬಾರದು. ಕೊಲೆ ಮಾಡಿದ್ದೀಯೋ ಇಲ್ಲವೋ ಸ್ಪಷ್ಟವಾಗಿ ಹೇಳು ಎಂದು ಅವರು ಅಬ್ಬರಿಸಿದರು. ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಳ್ಳದ ಹೊರತು ಶಿಕ್ಷೆ ವಿಧಿಸುವ ಹಾಗೇ ಇರಲಿಲ್ಲ. ಯಾಕೆಂದರೆ ಕೊಲೆಯಾದ ಮನೆಯಲ್ಲಿ ಒಂದು ಹಳೆಯ ಗ್ರಾಮಾಫೋನು ಬಿಟ್ಟರೆ ಬೇರೇನೂ ಕಳುವಾಗಿರಲಿಲ್ಲ. ಆ ಗ್ರಾಮಾಫೋನಿಗೋಸ್ಕರ ಯಾರಾದರೂ ಮೂರು ಕೊಲೆ ಮಾಡುತ್ತಾರೆ ಅಂತ ಹೇಳಿದರೆ ನಂಬುವುದು ಕಷ್ಟವಾಗುತ್ತಿತ್ತು.
ಆತ ಕೊಲೆ ಮಾಡಿದೆ ಅಂತಿಟ್ಟುಕೊಳ್ಳಿ ಎಂದ.

ಆತ ಯಾಕೆ ಕೊಲೆ ಮಾಡಿದ ಅನ್ನುವುದಕ್ಕೆ ಪೊಲೀಸರು ಕಾರಣ ಕಂಡು ಹಿಡಿದರು. ಅದು ಹೀಗಿತ್ತು;
ಕ್ಷೇಮೇಂದ್ರ ಹಳ್ಳಿಯಿಂದ ಬಂದವನು. ತೀರಾ ಬಡವ. ಅವನ ಪಕ್ಕದ ಮನೆಯಲ್ಲಿ ಗಂಡ-ಹೆಂಡತಿ-ಮಗ ವಾಸಮಾಡುತ್ತಿದ್ದರು. ಅವರ ಬಳಿ ಒಂದು ಗ್ರಾಮಾಫೋನಿತ್ತು. ಅವರ ಬಳಿ ಇದ್ದ ಒಂದೇ ಒಂದು ಪ್ಲೇಟ್ ಹಾಕಿ ದಿನವಿಡೀ ಅಪ್ಪ ಹಾಡು ಕೇಳುತ್ತಾ ಕೂರುತ್ತಿದ್ದ. ಆ ಹಾಡು ಪಕ್ಕದ ಮನೆಯಲ್ಲಿರುವ ಕ್ಷೇಮೇಂದ್ರನಿಗೂ ಕೇಳಿಸುತ್ತಿತ್ತು.
ಕೆಲವು ತಿಂಗಳಲ್ಲೇ ಆ ಹಾಡು ಕೇಳುವುದು ಕ್ಷೇಮೇಂದ್ರನಿಗೆ ಅಭ್ಯಾಸವಾಗಿಹೋಯ್ತು. ಸದಾ ಅದೇ ಹಾಡನ್ನು ಗುನುಗುನಿಸುತ್ತಿದ್ದ. ಮರೆತು ಹೋದಾಗಲೆಲ್ಲ ಮಾರನೆ ದಿನ ಕೇಳಿಸಿಕೊಳ್ಳುತ್ತಿದ್ದ. ಈ ಮಧ್ಯೆ ಆ ಮನೆಯ ಯಜಮಾನನಿಗೆ ಉಬ್ಬಸ ಶುರುವಾಯಿತು. ಆತ ಹೊರಗಿನಿಂದ ಸ್ವಲ್ಪ ಗಾಳಿ ಒಳನುಗ್ಗಿದರೂ ಸಾಕು ಕೆಮ್ಮುತ್ತಿದ್ದ. ಹೀಗಾಗಿ ಹೊರಗಿನ ಗಾಳಿ ಒಳಗೆ ಬರಕೂಡದು ಎಂದು ಆ ಮನೆಯ ಕಿಟಕಿಗಳನ್ನು ಮುಚ್ಚಿದರು. ಒಳಗಿನಿಂದ ಹಾಡು ಕೇಳುವುದು ನಿಂತುಹೋಯಿತು. ಕ್ಪೇಮೇಂದ್ರ ಚಡಪಡಿಸಿದ.
ಆತ ಹೀಗೆ ಮೂರು ವರುಷ ಹಾಡಿಲ್ಲದೆ ಒದ್ದಾಡಿದ. ಅವನಿಗೆ ಆಗೀಗ ಹಾಡು ಅಲ್ಪಸ್ವಲ್ಪ ನೆನಪಾಗುತ್ತಿತ್ತು. ಅದನ್ನೇ ಹಾಡಿಕೊಂಡು ಆತ ಮರೆತುಹೋದ ಭಾಗಗಳನ್ನು ನೆನಪಿಸಿಕೊಳ್ಳಲು ಯತ್ನಿಸುತ್ತಿದ್ದ. ಆದರೆ ಒಂದು ನಾಲ್ಕನೆಯ ವರುಷದ ಹೊತ್ತಿಗೆ ಅವನಿಗೆ ಇಡೀ ಹಾಡು ಮರೆತುಹೋಯಿತು. ಪಕ್ಕದ ಮನೆಗೆ ಹೋಗಿ ಹಾಡು ಕೇಳಿಸುವಂತೆ ವಿನಂತಿಸಿಕೊಂಡ. ಅವರು ಆಗೋಲ್ಲ ಎಂದರು. ಸಿಟ್ಟಿಗೆದ್ದು ಆತ ಆ ಮನೆಯಲ್ಲಿದ್ದ ಮೂವರನ್ನೂ ಕೊಲೆ ಮಾಡಿ ಆ ಗ್ರಾಮಾಫೋನನ್ನು ತನ್ನ ಮನೆಗೆ ತಂದಿಟ್ಟುಕೊಂಡ.
ಹೀಗೊಂದು ಪ್ರಸಂಗವನ್ನು ವಿವರಿಸಿದ ಪೊಲೀಸರು ` ಇದೇ ಆ ಗ್ರಾಮಾಫೋನು' ಎಂದು ಒಂದು ಗ್ರಾಮಾಫೋನನ್ನು ನ್ಯಾಯಾಧೀಶರ ಮುಂದಿಟ್ಟರು. ಅದರಲ್ಲಿ ಹಾಡು ಕೇಳಿಸಿದರು. ಕ್ಷೇಮೇಂದ್ರ ಮುಗುಳುನಗುತ್ತಾ ಹಾಡು ಕೇಳುತ್ತಾ ತಾನು ಅದನ್ನು ಗುನುಗುನಿಸುತ್ತಾ ತಲೆಯಾಡಿಸಿದ. ಹಾಡು ನಿಂತೊಡನೆ ಅವನ ನಗುವೂ ನಿಂತುಹೋಯಿತು.
ಹಾಡಿಗೋಸ್ಕರ ಕೊಲೆ ಮಾಡಿದ ಎಂಬ ಕಾರಣಕ್ಕೆ ಕ್ಷೇಮೇಂದ್ರನಿಗೆ ಜೈಲು ಶಿಕ್ಪೆಯಾಯಿತು. ಆದರೆ ನ್ಯಾಯಾಧೀಶರಿಗೆ ಆ ಶಿಕ್ಪೆ ತೃಪ್ತಿ ಕೊಡಲಿಲ್ಲ. ಅವರ ಮನಸ್ಸಿನಲ್ಲಿ ಅವರು ಕೇಳಿದ ಹಾಡೇ ಸುಳಿಯುತ್ತಿತ್ತು. ಗ್ರಾಮೋಫೋನು ತರಿಸಿಕೊಂಡು ಅವರೂ ಒಂದೆರಡು ಸಾರಿ ಹಾಡು ಕೇಳಿದರು. ಮೂರನೆ ಸಲ ಹಾಡು ಕೇಳಿದವರೇ ಸೀದಾ ಜೈಲಿಗೆ ಹೋದರು. ಅಲ್ಲಿ ಶಿಕ್ಪೆ ಅನುಭವಿಸುತ್ತಿದ್ದ ಕ್ಷೇಮೇಂದ್ರನಿಗಾಗಿ ಹುಡುಕಾಡಿದರು.
ಆದರೆ ಕ್ಷೇಮೇಂದ್ರ ಜೈಲಿನಲ್ಲೇ ಇರಲಿಲ್ಲ. ಆ ಹೆಸರಿನ ಯಾರೂ ಇತ್ತೀಚಿನ ದಿನಗಳಲ್ಲಿ ಆ ಜೈಲಿಗೇ ಬಂದಿರಲಿಲ್ಲ. ಹಾಗಿದ್ದರೆ ಕ್ಷೇಮೇಂದ್ರ ಎಲ್ಲಿಗೆ ಹೋದ ಎಂಬ ಚಿಂತೆ ನ್ಯಾಯಾಧೀಶರನ್ನು ಕಾಡತೊಡಗಿತು. ಆತನಿಗಾಗಿ ಹುಡುಕುತ್ತಾ ಅವರು ಊರೆಲ್ಲ ಅಲೆದಾಡತೊಡಗಿದರು. ಆದರೆ ಆ ಊರಿನ ಯಾರೂ ಕ್ಪೇಮೇಂದ್ರನೆಂಬ ವ್ಯಕ್ತಿಯನ್ನೇ ನೋಡಿರಲಿಲ್ಲ.
ನ್ಯಾಯಾಧೀಶರಿಗೆ ಇನ್ನೂ ಕಳವಳವಾಯಿತು. ತಾನು ಶಿಕ್ಪೆ ಕೊಟ್ಟ ಮನುಷ್ಯ ಯಾವ ಜೈಲಿನಲ್ಲೂ ಇಲ್ಲ ಎಂದರೆ ಅರ್ಥವೇನು?
ಅವರು ಮತ್ತಷ್ಟು ವಿಚಾರಣೆ ನಡೆಸಿದಾಗ ಮತ್ತೊಂದು ಸತ್ಯ ಗೊತ್ತಾಗುತ್ತದೆ. ಕ್ಷೇಮೇಂದ್ರ ಅನ್ನುವ ಮನುಷ್ಯನಿಗೆ ಶಿಕ್ಪೆಯೇ ಆಗಿಲ್ಲ. ಹಾಗಿದ್ದರೆ ತಾನು ತೀರ್ಪು ನೀಡಿದ್ದು ಸುಳ್ಳಾ? ಕೊಲೆಗಾರ ತಪ್ಪಿಸಿಕೊಂಡು ಬಿಟ್ಟನೇ? ನ್ಯಾಯಾಧೀಶರು ಪೊಲೀಸರಿಗೆ ಕೊಲೆಯಾದವರ ವಿವರಗಳನ್ನು ನೀಡುವಂತೆ ಹೇಳುತ್ತಾರೆ. ಆದರೆ ಪೊಲೀಸರು ಆ ನಿರ್ದಿಷ್ಟ ದಿನ ಆ ನಿರ್ದಿಷ್ಟ ಪ್ರದೇಶದಲ್ಲಿ ಯಾವ ಕೊಲೆಯೂ ನಡೆದಿಲ್ಲ ಅನ್ನುತ್ತಾರೆ. ದಿಗ್ಭ್ರಾಂತರಾದ ನ್ಯಾಯಾಧೀಶರು ಹೋಗಿ ನೋಡಿದರೆ ಆ ಮನೆಯಲ್ಲಿ ಗಂಡ ಹೆಂಡತಿ ಮಗ ವಾಸಿಸುತ್ತಿದ್ದಾರೆ. ಪಕ್ಕದ ಮನೆಯಲ್ಲಿ ಕ್ಷೇಮೇಂದ್ರ ಎಂಬ ವ್ಯಕ್ತಿಯಿದ್ದಾನೆ.
ನ್ಯಾಯಾಧೀಶರು ವಿಚಾರಿಸಿದಾಗ ಆ ಮನೆಯ ಯಜಮಾನ ಹೇಳುತ್ತಾನೆ; ಕೊಲೆಗಿಲೆ ಏನೂ ನಡೆದಿಲ್ಲ. ಆದರೆ ನಮ್ಮ ಮನೆಯಲ್ಲಿದ್ದ ಗ್ರಾಮಾಫೋನು ಕಳುವಾಗಿದೆ. ಅದನ್ನು ತಾವು ಹುಡುಕಿಸಿಕೊಟ್ಟರೆ ಸಾಕು.
ನ್ಯಾಯಾಧೀಶರಿಗೆ ನಿಜವಾಗಿಯೂ ಭಯವಾಗುತ್ತದೆ. ನೇರವಾಗಿ ಮನೆಗೆ ಹೋಗಿ ನೋಡಿದರೆ ಅವರ ಮಂಚದ ಪಕ್ಕದಲ್ಲೇ ಆ ಗ್ರಾಮಾಫೋನಿದೆ.
ನ್ಯಾಯಾಧೀಶರು ಆತಂಕ ತಾಳಲಾರದೆ ಡ್ರಾಯ್ ಎಳೆದು ರಿವಾಲ್ವರ್ ಕೈಗೆತ್ತಿಕೊಂಡು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಕಥೆ ಹೀಗೆ ಮುಗಿಯುತ್ತದೆ. ಒಂದು ದಂತಕತೆಯಂತೆ, ಆಖ್ಯಾನದಂತೆ ಸಾಗುವ ಈ ಕತೆಯಲ್ಲಿ ತರ್ಕವಿಲ್ಲ, ರೂಪಕಗಳಿವೆ. ರೂಪಕಗಳಂತೆ ಕಾಣುವ ಸಂಕೇತಗಳಿವೆ. ಈ ರೂಪಕಗಳಿಗೆ ರೂಪ ಕೊಡುತ್ತಾ ಹೋದರೆ ಮರೆತ ರಾಗಗಳು ಕಣ್ಣಮುಂದೆ ಸುಳಿಯುತ್ತವೆ.
*****
ಇಷ್ಟಕ್ಕೂ ಕತೆ ಏನು ಹೇಳುತ್ತದೆ?
ನ್ಯಾಯಾಧೀಶ ಕಳ್ಳನಾದ ದುರಂತವನ್ನೇ?
ಆ ಗ್ರಾಮಾಫೋನು ಯಾವುದಕ್ಕೆ ಸಂಕೇತ?
ಕ್ಷೇಮೇಂದ್ರನ ಮುಗ್ಧತೆಗೇ?
ಯೋಚಿಸುತ್ತಾ ಹೋದರೆ ಮತ್ತೊಂದು ಸಿದ್ಧಾಂತವನ್ನೇ ಈ ಕತೆ ಹೊಳೆಯಿಸುತ್ತದೆ. ನಾವು ಹೇಗೆ ಕ್ಪಣಕ್ಪಣಕ್ಕೂ ಪುನರ್ನಿರ್ಮಾಣಗೊಳ್ಳುತ್ತಾ ಹೋಗುತ್ತೇವೆ ಅನ್ನುವುದನ್ನು ಸಾಕ್ಪಿ ಸಮೇತ ಮುಂದಿಡುತ್ತದೆ. ಇದು ಅರ್ಥವಾಗಬೇಕಿದ್ದರೆ ಹೀಗೊಂದಷ್ಟು ವಿವರಗಳಿಗೆ ಸಾಗಬೇಕು.
ನಾವೆಲ್ಲರೂ ಹುಟ್ಟುವುದು ಒಂದೂರಿನಲ್ಲಿ. ಬೆಳೆಯುವುದು ಮತ್ತೊಂದೂರಿನಲ್ಲಿ. ಊರು ಒಂದೇ ಆಗಿದ್ದಾಗ ಕಾಲ ಬದಲಾಗುತ್ತದೆ. ಒಂದು ಕಾಲದೇಶದಲ್ಲಿ ಜನ್ಮತಳೆದ ನಾವು ಕ್ಪಣಕ್ಪಣವೂ ಹೊಸ ಹುಟ್ಟು ಪಡೆಯುತ್ತಾ ಹೋಗುತ್ತೇವೆ. ಮೇಡ್ ಇನ್ ಇಂಡಿಯಾದ ಮನುಷ್ಯ ಒಂದಷ್ಟು ವರುಷ ಅಮೆರಿಕಾದಲ್ಲಿ ವಾಸವಾಗಿದ್ದರೆ ರೀಮೇಡ್ ಇನ್ ಅಮೆರಿಕಾ ಆಗುತ್ತಾನೆ. ಆ ಅವಧಿಯಲ್ಲಿ ಆತನ ಹುಟ್ಟುಗುಣಗಳು ಬದಲಾಗಿರುತ್ತವೆ. ಹವ್ಯಾಸ, ಶೈಲಿ ಎಲ್ಲವೂ ಬೇರೆಯೇ ಆಗಿರುತ್ತದೆ.
ಬೇಕಿದ್ದರೆ ನೋಡಿ. ಹಳ್ಳಿಯಲ್ಲಿದ್ದಾಗ ಹರಿವ ತೊರೆಯ ನೀರು ಕುಡಿಯುತ್ತಿದ್ದ ಹುಡುಗ, ನಗರಕ್ಕೆ ಬಂದು ಅಧಿಕಾರಿಯಾಗುತ್ತಿದ್ದಂತೆ ಬಾಟಲು ನೀರಿಗೆ ಮೊರೆಹೋಗುತ್ತಾನೆ. ಮತ್ತೊಮ್ಮೆ ಆತ ಹಳ್ಳಿಗೆ ಕಾಲಿಟ್ಟರೂ ತೊರೆಯ ನೀರು ಕುಡಿಯುವುದಿಲ್ಲ. ಇದನ್ನು ಹೈಜೀನಿಕ್ ಎಂದು ಭಾವಿಸಬಹುದಾದರೂ ಇಂಥ ಅನೇಕ ಬದಲಾವಣೆಗಳು ಒಬ್ಬನನ್ನು ಮಾರ್ಪಾಡು ಮಾಡುವುದನ್ನು ನಾವು ನೋಡಬಹುದು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬಂದು ವಾಸಿಸಿದ ತಕ್ಪಣ ಹೊಸ ಪರಿಸರದ ಸಂಸ್ಕೃತಿ ಮತ್ತು ಸಂಗತಿಗಳು ಆತನನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತವೆ. ಅವುಗಳೇ ಪರಮಶ್ರೇಷ್ಠ ಅನ್ನುವ ಭಾವನೆ ದಟ್ಟವಾಗುತ್ತದೆ. ಯಾವುದು ಹೊಸತೋ ಅದನ್ನು ಬದುಕು ಆಯ್ದುಕೊಳ್ಳುತ್ತದೆ. ಹಳೆಯದನ್ನು ತಿರಸ್ಕಾರದಿಂದ ನೋಡುತ್ತದೆ.
ಹಾಗಿದ್ದರೆ ಪುನರ್ನಿರ್ಮಾಣದ ಪ್ರಭಾವಗಳನ್ನು ಮೀರುವುದು ಹೇಗೆ? ಅದನ್ನು ಸಾಂಸ್ಕೃತಿಕವಾಗಿ ಮೀರಬೇಕಾ? ಅಥವಾ ಸಾಮಾಜಿಕವಾಗಿಯೋ? ನಮ್ಮನ್ನು ರೂಪಿಸಿದ ಪ್ರದೇಶದ ಬಗ್ಗೆ ಪ್ರೀತಿ ಇಟ್ಟುಕೊಂಡೂ ಅದರಿಂದ ನಾವೇಕೆ ಕಳಚಿಕೊಳ್ಳಲು ಯತ್ನಿಸುತ್ತೇವೆ. ಆ ಪರಿಸರಕ್ಕೆ ನಮ್ಮ ದೌರ್ಬಲ್ಯಗಳೂ ಗೊತ್ತಿವೆ ಎಂಬ ಭಯದಿಂದಲೇ? ನಾವು ಪಡಕೊಂಡ ಜ್ಞಾನವಷ್ಟೇ ಶಾಶ್ವತ ಎಂಬ ಭ್ರಮೆಯಿಂದಲೇ? ಹಳೆಯ ದಿನಗಳ ಭಾರದಿಂದ ಪೂರ್ತಿ ಹಗುರಾಗುವ ಆಸೆಯೇ? ಆ ಆಸೆಗೆ ಅರ್ಥವೇನು?
ಸಾಹಿತ್ಯವನ್ನೇ ನೋಡಿ. ಒಬ್ಬ ಕವಿ ಆರಂಭದ ದಿನದಲ್ಲಿ ಬರೆದ ಕವಿತೆಗೂ ಅದಾದ ಮೂವತ್ತು ವರುಷಗಳ ನಂತರ ಬರೆದ ಕವಿತೆಗೂ ಅದೆಂಥ ವ್ಯತ್ಯಾಸ ಇರುತ್ತದೆ ಗೊತ್ತೇ? ಈ ವ್ಯತ್ಯಾಸ ಓದಿನಿಂದ ಬಂದಿದ್ದಲ್ಲ. ತಿಳುವಳಿಕೆಯಿಂದ ಬಂದಿದ್ದಲ್ಲ, ಗ್ರಹಿಕೆಯಿಂದ ಬಂದಿದ್ದೂ ಅಲ್ಲ. ಅದು ಪ್ರಜ್ಞಾಪೂರ್ವಕವಾದದ್ದು. ತನ್ನ ವ್ಯಕ್ತಿತ್ವದ ಒಂದು ಭಾಗವಾಗಿರುವ ಭೂತಕಾಲವನ್ನು ಮೀರುವ ಹಂಬಲದಿಂದ ಹುಟ್ಟಿದ್ದು.
ಈ ಎರಡು ದೃಷ್ಟಾಂತಗಳನ್ನು ನೋಡಿ. ಇವನ್ನು ಪಿ. ಲಂಕೇಶರ ಚಿತ್ರಸಮೂಹದಿಂದ ಆಯ್ದುಕೊಳ್ಳಲಾಗಿದೆ.


ಕಲಿಯುವಾಶೆಯ ಮನದಿ ಬೆಳಗಿರಲಿ ಬೆಳ್ಳಿ;
ನವಿಲು ಗರಿಗೆದರಿರಲಿ ಕವಿಯ ಮನದಲ್ಲಿ!
ಮನೆಯಲ್ಲಿ ಅರ್ಧಾಂಗಿ ರಂಭೆಯಾಗಿರಲಿ;
ಮನೆಮನೆಯ ಗೋವುಗಳು ಗಂಗೆಯಾಗಿರಲಿ;
ಮಳೆ ಬರಲಿ ನಮ್ಮಿಳೆಗೆ ಮಧು ಹನಿಯಲಿಲ್ಲಿ;
ಹಸುರಾಗಲೆಮ್ಮ ನೆಲ ಹೂ ಚುಕ್ಕಿ ಚೆಲ್ಲಿ!
(ಹಾರೈಕೆ, 1956)


ಹದಿನೆಂಟು ವರುಷದ ಹಿಂದೆ ಕಂಡ ನವಿಲು
ಇಂದು ಕನಸು.
ಕನಸಿನಲ್ಲಿ ಕಂಡ ನವಿಲು
ನರಿಯಾಗುವ ಸಂಭವಕ್ಕೆ
ನಡುಗುವ ಅಗತ್ಯ ಕೂಡ ಇಲ್ಲ.
(ಕನಸಿನಲ್ಲಿ ಕಂಡ ನವಿಲು, 1997)


ಇವೆರಡರ ವ್ಯತ್ಯಾಸ ದಟ್ಟವಾಗಿದೆ. ಇಲ್ಲಿ ಗ್ರಹಿಕೆ ಬದಲಾಗಿದೆ ಅನ್ನುವುದು ತುಂಬ ದುಬಾರಿ ಹೇಳಿಕೆಯಾಗುತ್ತದೆ. ಬದಲಾಗುವುದು ನಮ್ಮ ಒಟ್ಟು ದೃಷ್ಟಿಕೋನ. ನಾವು ಸಂಗತಿಗಳನ್ನು ಗ್ರಹಿಸುವ ಕ್ರಮ ಮಾತ್ರ ಅದೇ ಆಗಿದ್ದರೂ ಗ್ರಹಿಸುವ ಪರಿಸರ ಬೇರೆಯಾಗಿರುತ್ತದೆ. ಹೀಗಾಗಿ ಹಳೆಯದೆಲ್ಲ ಒಂದೋ ಸ್ವರ್ಗದಂತೆ ಅಥವಾ ನರಕದಂತೆ ಕಾಣಿಸತೊಡಗುತ್ತದೆ.
****
ಇಷ್ಟು ಹೇಳಿ ನಿಲ್ಲಿಸುವುದು ಸುಲಭ. ಆದರೆ ಇದಕ್ಕೆ ಇನ್ನೊಂದು ಆಯಾಮವೂ ಇದೆ. ಕ್ಷೇಮೇಂದ್ರನ ಕತೆಯಲ್ಲಿ ಬರುವ ಮ್ಯಾಜಿಕ್ ರಿಯಲಿಸಮ್ಮು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಂಡಿರುತ್ತದೆ. ನಮ್ಮ ಕಣ್ಮುಂದೆ ಇಲ್ಲದೆ ಇರುವ ಸಂಗತಿಗಳನ್ನು ನಾವು ಸುಖಕ್ಕೋಸ್ಕರ, ಸಂಕಟಕ್ಕೋಸ್ಕರ ಊಹಿಸಿಕೊಳ್ಳುತ್ತೇವೆ. ನಮ್ಮ ಅನುಕೂಲಕ್ಕೋಸ್ಕರ ಬದಲಾಯಿಸುತ್ತೇವೆ. ಭದ್ರಾವತಿಯಿಂದ ಬಂದು ಬೆಂಗಳೂರಲ್ಲಿ ನೆಲೆಸಿದ ವ್ಯಕ್ತಿಗೆ ಕ್ರಮೇಣ ಭದ್ರಾವತಿಯ ಪೇಪರ್ ಟೌನಿನ ಹಳೆಯ ಆಟೋ ಮತ್ತು ಭದ್ರಾ ನದಿಯ ನೀರು ತನ್ನನ್ನು ಎಂದೂ ಕಾಡದ ಸಂಗತಿಯಾಗಬೇಕೇಂಬ ಆಸೆಯಿರುತ್ತದೆ. ನಡುವಯಸ್ಸು ತಲುಪುತ್ತಿದ್ದಂತೆ ಬಾಲ್ಯದಲ್ಲಿ ಕೇಳಿದ ಅಮ್ಮನ ಜೋಗುಳ ಕೂಡ ಚರಮಗೀತೆಯಂತೆ ಮರುದನಿಸುತ್ತದೆ.
ನಾವು ಕ್ಪಣಕ್ಪಣಕ್ಕೂ ಪುನರ್ನಿರ್ಮಾಣಗೊಳ್ಳುತ್ತಾ ಸಾಗುತ್ತೇವೆ.
ಮೇಡ್ ಇನ್ ಬ್ಯಾಲದಕೆರೆ ಎನ್ನುತ್ತಿದ್ದವನು ಸ್ವಲ್ಪ ಕಾಲದ ನಂತರ ರೀಮೇಡ್ ಇನ್ ಬ್ಯಾಂಗಲೂರ್ ಎಂದುಕೊಂಡು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ಓಡಾಡಲು ಆರಂಭಿಸುತ್ತಾನೆ.
ಬ್ಯಾಲದಕೆರೆ ಯಾಕಾದರೂ ಇದೆಯೋ ಅನ್ನಿಸುತ್ತದೆ!

13 comments:

Keshav Kulkarni said...

ಜೋಗಿ,

ತುಂಬ ಕ್ಲಿಷ್ಟದ ವಿಚಾರವನ್ನು ಒಂದು ಕತೆಯ ಮೂಲಕ ತುಂಬ ಚೆನ್ನಾಗಿ ಬರೆದಿದ್ದೀರಾ!

ನಾವು ಬೆಳೆದ ಹಳ್ಳಿ-ಊರು ಒಂದೇ ಕಾಲಕ್ಕೆ ಬೇಕು-ಬೇಡ ಅನಿಸುವ ವಿಚಿತ್ರ ಸಂಧಿಗ್ದತೆ ಬರುವುದು, ನಾವು ನಮ್ಮ ಸಾಂಸ್ಕೃತಿಕ ಪ್ರಜ್ಞೆಯನ್ನು ಇನ್ನೂ ಸಾಯದೆ ಉಳಿದಿರುವಂತೆ ನೋಡಿಕೊಳ್ಳಲು ಹೆಣಗುತ್ತಿರುವುದರಿಂದಲೇ?

'ನಡುವಯಸ್ಸು ತಲುಪುತ್ತಿದ್ದಂತೆ ಬಾಲ್ಯದಲ್ಲಿ ಕೇಳಿದ ಅಮ್ಮನ ಜೋಗುಳ ಕೂಡ ಚರಮಗೀತೆಯಂತೆ ಮರುದನಿಸುತ್ತದೆ.' ಮತ್ತು ' ನ್ಯಾಯಾಧೀಶರು ಆತಂಕ ತಾಳಲಾರದೆ ಡ್ರಾಯ್ ಎಳೆದು ರಿವಾಲ್ವರ್ ಕೈಗೆತ್ತಿಕೊಂಡು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.' :- ದುರಂತದಿಂದ ದುರಂತದೆಡೆಗೆ ಸಾಗುವುದೇ ಬದುಕೇ?

ಕೇಶವ
www.kannada-nudi.blogspot.com

Anonymous said...

ಥ್ಯಾಂಕ್ಯೂ ಕೇಶವ್.
ನಿಮ್ಮ ಪ್ರಶ್ನೆಗೆ ನನಗಂತೂ ಉತ್ತರ ಹೊಳೆಯುತ್ತಿಲ್ಲ. ಎರಡೂ ಪ್ರಶ್ನೆಗಳಿಗೂ ನೇರವಾದ ಉತ್ತರ ಇಲ್ಲವೇನೋ ಅನ್ನಿಸುತ್ತಿದೆ. ಉತ್ತರ ಹುಡುಕದೇ ಇರುವುದೇ ಮೇಲೇನೋ.
ಜೋಗಿ

Anonymous said...

i am nidhi. thumba chennagide. nange matte illi kaada beladingala dhwani kelisthu.

ಟೀನಾ said...

ಜೋಗಿಯವರೆ,
ಕ್ಷೇಮೇಂದ್ರನ ಕಥೆ ಓದುತ್ತ ಯಾರದೊ ಕನಸಿನೊಳಹೊಕ್ಕ ಅನುಭವ. ನಾವೆಲ್ಲ ಹೀಗೆ ಯಾವಯಾವುದೊ ಅನುಭವ, ಅನುಭಾವಗಳ threshold (ಹೊಸ್ತಿಲು)ಗಳ ಮೇಲೆ ನಿಂತು ಅನುಮಾನಿಸಿಕೊಳ್ತಾ ಬದುಕು ಕಟ್ತಲೋ, ಕೆಡವ್ತಲೋ ಹೋಗೋದು, ಯಾವಾಗ ಈ ದೀರ್ಘ ಕನಸಿಂದ ಎಚ್ಚರವಾಗುತ್ತೊ ಅಂತ ಕಾಯೋದು..ಎಲ್ಲವೂನೂ ಯೋಚನೆ ಮಾಡಿದರೆ ಹೊಸದೊಂದು ಅನುಭೂತಿ..ಲಂಕೇಶರ ಕವನಗಳ ತುಣುಕುಗಳನ್ನ ಚಪ್ಪರಿಸುತ್ತ ಇದೇನೆ.
ಥ್ಯಾಂಕ್ಯೂ!
- ಟೀನಾ.

Anonymous said...

Dear Jogi,
The story sounded weird in terms of reality and existantialism, however, you gave an interpretation making it more close to our lives.

I don't agree with Keshava when he said - duranthadinda duranthadedege saaguvude baduke?.

It depends on how we look at things. Durantha or Sukhantha are our "de-constructions" of natural manifestations. According to me, any experience in life comes in diametrically opposite "ways" or as dilemma (dwandwa). Essentially, life is more like "buy this and get that free" .

We ask questions and we answer to other's questions - why?, probably there are no questions, this is just a way we like to communicate with each other.

regards
Dr.D.M.Sagar
Canada

ಶಾಂತಲಾ ಭಂಡಿ said...

ತುಂಬಾ ಚೆನ್ನಾಗಿದೆ.
ಆಳದ ನಿದ್ದೆಯ ಕನಸೊಂದರಿಂದ ಎದ್ದು ಬಂದಂತ ಅನುಭವ.
ಕತೆಯೊಳಗೆ ಕಳೆದು ಹೋಗಿದ್ದೆ.

Anonymous said...

ಡಿಯರ್ ಟೀನಾ
ಥ್ಯಾಂಕ್ಸ್.ಲಂಕೇಶರ ಮೊದಲ ಸಂಕಲನದ ಕವಿತೆಗಳು ನಿಜಕ್ಕೂ ಚೆನ್ನಾಗಿವೆ.ನನಗೆ ತುಂಬಾ ಇಷ್ಟವಾಗುವ ಮತ್ತೊಂದು ಕವನ ಎಲ್ಲಿದ್ದೇ ಇಲ್ಲಿ ತಂಕ ಎಲ್ಲಿಂದ ಬಂದ್ಯವ್ವ. ಅದೇ ಚಿತ್ರದ ಮತ್ತೊಂದು ಹಾಡು ಇನ್ನೂ ಸೊಗಸಾಗಿದೆ
ಕರಿಯವ್ವನ ಗುಡಿತಾವ
ಅರಳ್ಯಾವೆ ಬಿಳಿಹೂವು
ಸೀಮೆಯ ಜನ ಕುಣಿದು ನಕ್ಕಾಂಗ್ಹದ
ತುಂಟ ಹುಡುಗ್ಯಾರಿಲ್ಲಿ
ನೆಪ ಹೇಳಿ ಬರುತಾರೆ
ಹರೆಯದ ಬಲೆಯಲ್ಲಿ ಸಿಕ್ಕಾಂಗ್ಹದ

ಡಿಯರ್ ಸಾಗರ್,
ನಾವು ಪ್ರಶ್ನೆಗಳನ್ನು ಕೇಳುತ್ತೇವೆ. ಅದೇ ಪ್ರಶ್ನೆಗಳನ್ನು ಬೇರೆಯವರು ಕೇಳಿದಾಗ ಅದಕ್ಕೆ ಮಹಾಪಂಡಿತರಂತೆ ಉತ್ತರಿಸುತ್ತೇವೆ. ಹಾಗೆ ನೋಡಿದರೆ ಪ್ರಶ್ನೆಗಳೇ ಇರುವುದಿಲ್ಲ ಅನ್ನುವ ಮಾತು ಇಷ್ಟವಾಯಿತು.

ಶಾಂತಲಾ
ನಿಮ್ಮ ಸೈಟ್ ನೋಡಿದೆ. ಕವಿತೆ ಇಷ್ಟವಾಯಿತು.
ಕ್ಷಮೇಂದ್ರನ ಕತೆಯನ್ನು ಮೊದಲ ಬಾರಿ ಓದಿದಾದ ನನಗೂ ಹಾಗೆ ಅನ್ನಿಸಿತ್ತು.
-ಜೋಗಿ

Anonymous said...

ನಮ್ಮನ್ನು ರೂಪಿಸಿದ ಪ್ರದೇಶದ ಬಗ್ಗೆ ಪ್ರೀತಿ ಇಟ್ಟುಕೊಂಡೂ ಅದರಿಂದ ನಾವೇಕೆ ಕಳಚಿಕೊಳ್ಳಲು ಯತ್ನಿಸುತ್ತೇವೆ.

This question haunts me in many ways....I was not that daring to accept the answers which I got.but now after reading ur write up (especially the story of the judge...)I feel, if we accept the answers nd face it once we wil never try to run away 4m the roots nd soil of which we r made.

Mruganayanee

Anonymous said...

ಡಿಯರ್ ಮೃಗನಯನೀ,
ನಂಗನ್ನಿಸುತ್ತೆ, ನಾವು ನಮ್ಮ ಪರಿಸರದಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯ ಅಂತ. ಅದು ನನ್ನ ವಯಸ್ಸಿನಲ್ಲಿ ಅಲ್ಲ, ಇಪ್ಪತ್ತೈದರ ಒಳಗೆ. ನಮ್ಮ ಪರಿಸರದ ಮಿತಿ ಮತ್ತು ಶಕ್ತಿ ಎರಡೂ ನಮಗೆ ಗೊತ್ತಿರುತ್ತದೆ. ನಾವು ತುಂಬ ಆಪ್ತವಾಗಿ ಬಲ್ಲ ಲೋಕದಲ್ಲಿ ಹೊಸದೇನನ್ನು ಹುಡುಕಲು ಸಾಧ್ಯ ಅಂತ ನಿಮಗೂ ಅನ್ನಿಸಿಲ್ಲವೇ?
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಎಂಬ ಸಾಲು ಮತ್ತು ಶಿವರುದ್ರಪ್ಪನವರ
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ
ಸುಯ್ಯುತಿದೆ.
ಕಾಣಬಲ್ಲೆನೇ ಒಂದು ದಿನ
ಕಡಲೊಳು ಕರಗಲಾರೆನೇ ಒಂದು ದಿನ

-ಮತ್ತೆ ಮತ್ತೆ ನೆನಪಾಗುತ್ತದೆ.
-ಜೋಗಿ

Anonymous said...

ನಿಧಿ,
ಅಂದರೆ ಶ್ರೀನಿಧೀನಾ
ಜೋಗಿ

Anonymous said...

http://www.kannadalyrics.com/?q=taxonomy/term/175

suptadeepti said...

ನಮಸ್ಕಾರ ಜೋಗಿ,
"ಬದಲಾಗುವುದು ನಮ್ಮ ಒಟ್ಟು ದೃಷ್ಟಿಕೋನ. ನಾವು ಸಂಗತಿಗಳನ್ನು ಗ್ರಹಿಸುವ ಕ್ರಮ ಮಾತ್ರ ಅದೇ ಆಗಿದ್ದರೂ ಗ್ರಹಿಸುವ ಪರಿಸರ ಬೇರೆಯಾಗಿರುತ್ತದೆ."...."ನಾವು ಕ್ಪಣಕ್ಪಣಕ್ಕೂ ಪುನರ್ನಿರ್ಮಾಣಗೊಳ್ಳುತ್ತಾ ಸಾಗುತ್ತೇವೆ."

ಇವೆರಡರಲ್ಲಿ ಹೊಂದಾಣಿಕೆಯಿದೆ. ಆದರೆ, -"ಹೀಗಾಗಿ ಹಳೆಯದೆಲ್ಲ ಒಂದೋ ಸ್ವರ್ಗದಂತೆ ಅಥವಾ ನರಕದಂತೆ ಕಾಣಿಸತೊಡಗುತ್ತದೆ"- ಈ ಮಾತು ಅಷ್ಟು ಸರಿ ಅನ್ನಿಸಲಿಲ್ಲ. ನಾವು ಬದಲಾಗುತ್ತಿರುವ ಮಾತ್ರಕ್ಕೆ ಹಳೆಯದೆಲ್ಲವನ್ನೂ ಬ್ರ್ಯಾಂಡ್ ಮಾಡೋದು ಎಷ್ಟು ಸರಿ? ಬದಲಾವಣೆ ಬೇಕು. ನಿರಂತರ ಬದಲಾವಣೆ ಬೆಳವಣಿಗೆಗೆ ಪೂರಕ. ಆದರೆ, ಬಾಲ್ಯದಲ್ಲಿ ಕೇಳಿದ ಅಮ್ಮನ ಜೋಗುಳವನ್ನೂ ನೆನಪಿನಲ್ಲಿ ಸವಿಯುತ್ತಾ ಇಂದಿನ ಹಾಡುಗಳನ್ನೂ ಕೇಳಿಸಿಕೊಳ್ಳೋಣ. ಅದು ನಮ್ಮ ಪಾಸ್ಟ್... ಇದು ನಮ್ಮ ಪ್ರೆಸೆಂಟ್. ಅಂದಿಗೆ ಅದು ಸರಿ, ಇಂದಿಗೆ ಇದು. ಇವೆರಡನ್ನು ಹೋಲಿಸಿಕೊಳ್ಳುವ ಅಗತ್ಯವಿದೆಯೆ? ಅಥವಾ ಯಾವುದಾದರೊಂದನ್ನು ತಿರಸ್ಕರಿಸುವ ಅಗತ್ಯವೂ ಇಲ್ಲವಲ್ಲ. ಬದಲಾವಣೆಯ ಜೊತೆಜೊತೆಗೆ ನಿರಾಕರಣ ಬೇಕಾಗಿಲ್ಲ, ಸಮೀಕರಣ ಬೇಕು, ಇದು ನನ್ನ ಅಭಿಪ್ರಾಯ.

Anonymous said...

kaliyutthiruvagindalu nimma lekhanagala abhimaniyaada nanage -
musukidee pabbinali kai hidiou nadesennanu- inda ididu- kaada beladingaluvaregina - jogappana aramanegalu chennagiye kandive
jogimaneyalli `chennagilla' Emba male hani soruvudilla..!
jogi mane `thumbida mane'yagali...
- mahesh bhagiratha
staff correspondent, mysore,