Sunday, March 23, 2008

ವಿಚಾರವಾದಿಗಳಿಗೆ ನಮಸ್ಕಾರ


ವಿಚಾರವಾದಿಗಳಿಗೆ ನಮಸ್ಕಾರ,
ನಿಮ್ಮ ಪತ್ರ ತಲುಪಿತು. ನಿಮ್ಮ ವಿಚಾರಧಾರೆಯೂ ಅರ್ಥವಾಯಿತು. ನಿಮ್ಮ ಕಾಳಜಿಗೆ, ಕಳಕಳಿಗೆ ನನ್ನ ಕಂಬನಿಯ ಕಪ್ಪ ಕಾಣಿಕೆ.
ಹೊರಗಡೆ ಹೋಗುವಾಗ ಬೆಕ್ಕು ಎದುರಾದರೆ ಬೆಚ್ಚಬೇಕಾಗಿಲ್ಲ. ನೆತ್ತಿಮೇಲೆ ಹಲ್ಲಿ ಬಿದ್ದರೆ ಏನೂ ಆಗುವುದಿಲ್ಲ. ಒಂಟಿ ಸೀನು ಅಪಶಕುನ ಅಲ್ಲ, ಮನೆ ಮುಂದೆ ರಂಗೋಲಿ ಹಾಕದೇ ಇದ್ದರೂ ಭೂತಪ್ರೇತಪಿಶಾಚಿಗಳು ಮನೆಯೊಳಗೆ ಬರುವುದಿಲ್ಲ, ಶ್ರೀಕೃಷ್ಣಜನ್ಮಾಷ್ಟಮಿಗೆ ಅರ್ಥವಿಲ್ಲ. ನಾಗರಹಾವು ದೇವರಲ್ಲ, ತುಳಸೀಗಿಡ ವಿಷ್ಣುವಿಗೆ ಪ್ರಿಯವಲ್ಲ, ಹುತ್ತವ ಬಡಿದರೆ ಹಾವು ಸಾಯುತ್ತದೆ, ಹಸಿರು ತೋರಣ ಬೇಕಾಗಿಲ್ಲ ಅನ್ನುವ ನಿಮ್ಮ ಕೆಚ್ಚೆದೆಯ ಮಾತುಗಳನ್ನು ಕೇಳಿ ನಮಗೂ ಆನಂದವಾಗಿದೆ. ಪ್ರಶ್ನಿಸದೇ ಏನನ್ನೂ ಒಪ್ಪಬೇಡಿ ಅನ್ನುವ ನರಸಿಂಹಯ್ಯನವರ ವಾದವೂ ನಮಗೆ ಇಷ್ಟವಾಗಿದೆ.
ನೀವು ಪವಾಡಗಳನ್ನು ನಂಬುವುದಿಲ್ಲ. ಪವಾಡಗಳ ಹಿಂದಿರುವ ಮೋಸವನ್ನು ಬಯಲು ಮಾಡುತ್ತೀರಿ. ಅವಧೂತರನ್ನು ನಂಬುವುದಿಲ್ಲ. ದೇವರುಗಳನ್ನಾಗಲೀ, ದೇವಸ್ಥಾವನ್ನಾಗಲೀ, ದೇವಸ್ಥಾನದ ಮುಂದೆ ಕಲಕದೆ ನಿಂತ ನಿಗೂಢ ಕಲ್ಯಾಣಿಯನ್ನಾಗಲೀ ನಂಬುವುದಿಲ್ಲ. ನಿಮಗೆ ತಿರುಪತಿ ಬೆಟ್ಟವಲ್ಲ. ಹರಿರಪುತ್ರ ಅಯ್ಯಪ್ಪನೂ ದೇವರಲ್ಲ. ಊರಿನ ತುಂಬ ಭಕ್ತಾದಿಗಳು ಡಿಸೆಂಬರಿನ ಚಳಿಗೆ ನಡುಗುತ್ತಾ ನಸುಕು ಮೂಡುವ ಮುನ್ನ ಎದ್ದು ತಣ್ಣೀರಲ್ಲಿ ಸ್ನಾನ ಮಾಡಿ ಅಯ್ಯಪ್ಪನ ದರ್ಶನಕ್ಕೆ ಸಿದ್ಧರಾಗುವುದನ್ನು ನೀವು ಕಾಣುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ಅಷ್ಟು ಹೊತ್ತಿಗೆಲ್ಲ ನೀರು ಬೆಚ್ಚಗೆ ಹೊದ್ದು ಮಲಗಿರುತ್ತೀರಿ.
ನಿಮ್ಮ ಪಾಲಿಗೆ ಪೂಜಾರಿ ಕೊಡುವ ತೀರ್ಥ ಮೋಸ. ಸ್ವಾತಿಹನಿ ಮುತ್ತಾಗುವುದು ಸುಳ್ಳು. ಬೆಳದಿಂಗಳ ಕುಡಿದು ಬದುಕುವ ಚಕೋರ ಪಕ್ಪಿ ಕಲ್ಪನೆ. ಮಳೆಗಾಗಿ ಕಾಯುವ ಚಾತಕ ಮತ್ತೊಂದು ಕವಿಕಲ್ಪನೆ.
ನಿಮ್ಮ ಪಾಲಿಗೆ ಕಾವ್ಯವೂ ಸುಳ್ಳು, ಕಲ್ಪನೆಯೂ ಸುಳ್ಳು. ರಾಮಾಯಣ ನಡೆದೇ ಇಲ್ಲ, ಮಹಾಭಾರತ ಘಟಿಸಿಯೇ ಇಲ್ಲ. ಶ್ರೀಕೃಷ್ಣ ಇರಲೇ ಇಲ್ಲ, ಆಯೋಧ್ಯೆಯ ಪಕ್ಕದಲ್ಲಿ ಸರಯೂ ನದಿ ಹರಿಯುತ್ತಲೇ ಇರಲಿಲ್ಲ. ಶಕುಂತಲೆ ಉಂಗುರ ಶಚೀತೀರ್ಥಕ್ಕೆ ಬಿದ್ದದ್ದು ಸುಳ್ಳು, ಕಳ್ಳ ಇಂದ್ರ ಚುಮುಚುಮು ಮುಂಜಾನೆ ಗೌತಮನ ಆಶ್ರಮಕ್ಕೆ ಬಂದು ಅಹಲ್ಯೆಯ ಜೊತೆ ಸುಖಿಸಿದ್ದೂ ಸುಳ್ಳು!
ವಿಚಾರವಾದಿಗಳಿಗೆ ನಮಸ್ಕಾರ!
******
ನಮಗೆ ಪವಾಡಗಳು ಬೇಕು. ಸಂಜೆಯ ಹೊತ್ತಿಗೆ ಮೊಗ್ಗಾಗಿದ್ದ ಗುಲಾಬಿ ಬೆಳಗಾಗುವಷ್ಟರಲ್ಲಿ ಅರಳಿರಬೇಕು. ಆಗುಂಬೆಯ ತುತ್ತತುದಿಗೆ ಹೋಗಿ ನಿಂತರೆ ಅಲ್ಲಿ ಪ್ರತಿಸಂಜೆ ಸೂರ್ಯ ಮುಳುಗಬೇಕು. ಆಗಷ್ಟೇ ಮಿಂದು ಕೈಲಿ ನೀಲಾಂಜನ ಹಿಡಕೊಂಡು ಬಂದ ತುಂಬುತೋಳಿನ ಚೆಲುವೆಗೆ ಮನಸೋಲಬೇಕು. ದಾವಣಗೆರೆಯ ಬೆಣ್ಣೆಮಸಾಲೆ ನಾಲಗೆಯ ತುದಿಯಲ್ಲಿ ಕರಗಬೇಕು. ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು ಅಂತ ಕವಿ ಬರೆರೆ ಖುಷಿಯಾಗಬೇಕು!
ವಿಚಾರವಾದ ನಮಗೆ ಸಾಕು!
ಪ್ರಶ್ನಿಸದೇ ಒಪ್ಪಬೇಡಿ ಅನ್ನುವ ಬೋಧೆಯೂ ಸಾಕು, ವಾದವೂ ಸಾಕು. ನಾವು ಏನನ್ನೂ ಪ್ರಶ್ನಿಸುವುದೇ ಬೇಡ. ಪ್ರಶ್ನಿಸುವುದೂ ಇಲ್ಲ. ಪ್ರಶ್ನೆಗಳ ಶರಪಂಜರದಲ್ಲಿ ಮಲಗಿ ಬೆನ್ನು ಹುಣ್ಣಾಗಿದೆ. ಅನುಮಾನವೆಂಬ ಬೇವು ನಮ್ಮ ಅಮೃತಘಳಿಗೆಗಳ ಮಾವನ್ನು ಕಹಿಯಾಗಿಸುತ್ತಿದೆ.
ಮನೆಯ ಬಾಗಿಲಿಗೆ ಹಬ್ಬಕ್ಕೆ ಹಸಿರು ತೋರಣ ಕಟ್ಟಬೇಡಿ ಅಂದಿರಿ. ರಂಗೋಲಿ ಯಾಕಿಡುತ್ತೀರಿ ಅಂತ ಕೇಳಿದಿರಿ. ಅವಳ ಹಣೆಯಲ್ಲಿ ಕುಂಕುಮ ಯಾಕೆ, ಇವನ ಕೈಗೆ ಕಡಗ ಯಾಕೆ? ಹಣೆಗೇಕೆ ಬೇಕು ವಿಭೂತಿ, ಕುಂಕುಮ ರಕ್ಪೆ? ಹಬ್ಬಕ್ಕೆ ಯಾಕೆ ಗಣೇಶ? ವರುಷಕ್ಕೊಮ್ಮೆ ಯಾಕೆ ತೀರ್ಥಯಾತ್ರೆ? ಯಜ್ಞಯಾಗಾದಿಗಳು ಯಾಕೆ? ದೇಗುಲಗಳಲ್ಲಿ ಸಾಮೂಹಿಕ ಊಟವೇಕೆ? ದೇವರಿಗೇಕೆ ಹವಿಸ್ಸು? ಎಂಬಿತ್ಯಾದಿ ಪ್ರಶ್ನೆಗಳನ್ನು ನೀವು ಕೇಳುತ್ತಾ ಹೋಗುತ್ತೀರಿ. ಹಠಮಾರಿಗಳಂತೆ ವಾದಿಸುತ್ತೀರಿ.
ಅದ್ಯಾರೋ ಬೆಂಕಿಕುಂಡ ಹಾಯುವ ಬೆರಗು ನಮ್ಮದಾಗಿತ್ತು. ಅದರಲ್ಲಿ ಬೆರಗೇನಿಲ್ಲ, ವಿಜ್ಞಾನ ಅಂದಿರಿ. ಕೆನ್ನೆಗೆ ತ್ರಿಶೂಲ ಚುಚ್ಚಿಕೊಂಡರೆ ನೋವಾಗುವುದಿಲ್ಲ ಅಂತ ಮಾಡಿ ತೋರಿಸಿದಿರಿ! ಬೆನ್ನುಹುರಿಗೆ ಕೊಂಡಿ ಸಿಕ್ಕಿಸಿ ಸಿಡಿಯಲ್ಲಿ ನೇತಾಡುವುದು ಸರಳ ಅಂತ ನಕ್ಕಿರಿ. ಕೆಂಡ ತುಂಬಿದ ಕಾವಡಿ ಹೆಗಲ ಮೇಲೆ ಹೊತ್ತು ಹೆಗಲು ಸುಟ್ಟರೆ ಅದರಲ್ಲಿ ಭಕ್ತಿ ಕಾಣಲಿಲ್ಲ, ಮೂಢನಂಬಿಕೆಯೇ ಕಂಡಿತು ನಿಮಗೆ..
*****
ಈ ವಿಚಾರವಾದ ಬಂದದ್ದಾದರೂ ಎಲ್ಲಿಂದ? ಮೊದಮೊದಲು ಕೇವಲ ಆಚಾರಗಳನ್ನು ಪ್ರಶ್ನಿಸುತ್ತಿದ್ದವರು ಇದೀಗ ವಿಚಾರಕ್ಕೂ ತಲೆಹಾಕಿದ್ದೀರಿ. ಅಬ್ರಹಾಂ ಕೋವೂರು ಆ ಕಾಲಕ್ಕೆ ದೇವರಿಲ್ಲ ಅಂತ ಹೇಳಿಯೇ ದೇವರಾದ. ಭಾರತೀಯ ದೇವರು,ದಿಂಡರ ಬಗ್ಗೆ ಬರೆದು ಇನ್ಯಾರೋ ದೊಡ್ಡವನಾದ. ನಿರಾಕರಿಸುವುದು ಸುಲಭ, ಸೃಷ್ಟಿಸುವುದು ಕಷ್ಟ.
ಮೊನ್ನೆ ಯಾರೋ ಅಂದರು; ಬಡವರನ್ನು ಕರೆದು ಅವರ ಹತ್ತಿರ ನಿಮ್ಮಿಂದ ಮಾಡುವುದಕ್ಕಾಗದ ಕೆಲಸ ಮಾಡಿಸಿ, ಅವರಿಗೆ ಚೂರುಪಾರು ತಿನ್ನಲು ಕೊಡುತ್ತಾರೆ ಪಾಪ, ಅವರನ್ನು ಶೋಷಿಸುತ್ತಾರೆ. ಹೀಗೆ ಹೇಳುವವರೇ ಯಾರದೋ ಕಾಲು ಹಿಡಿದು ಸ್ಕಾಲರ್ ಶಿಪ್ಪು ಪಡೆಯುತ್ತಾರೆ. ಸಣ್ಣ ಪುಟ್ಟ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅವರವರಿಗೆ ಅವರವರ ಅಗತ್ಯಗಳಿರುತ್ತವೆ. ಅವನ್ನೆಲ್ಲ ಸಾರಾಸಗಟು ಶೋಷಣೆ ಅಂತ ಕರೆಯುವುದು ಸರಿಯಾ? ಕೇಳಬಾರದ ಪ್ರಶ್ನೆಗಳಿವು.
ವಿಜ್ಞಾನ ಎಲ್ಲ ಮೂಢನಂಬಿಕೆಗಳನ್ನೂ ಅಳಿಸಿಹಾಕುತ್ತದೆ ಅಂತ ನಂಬುವ ಕಾಲವೊಂದಿತ್ತು. ಇವತ್ತು ವಿಜ್ಞಾನಕ್ಕಿಂತ ದೊಡ್ಡ ಮೂಢನಂಬಿಕೆ ಮತ್ತೊಂದಿಲ್ಲ ಎಂಬಂತೆ ಭಾಸವಾಗತೊಡಗಿದೆ. ಕವೆಕೋಲು ಹಿಡಿದುಕೊಂಡು ನೀರು ಗುರುತಿಸುವ ಪಂಡಿತರಿದ್ದರು ಹಿಂದೆ. ಈಗ ಅದಕ್ಕೊಂದು ಇಲಾಖೆಯಿದೆ. ಅವರು ತೋರಿಸಿದಲ್ಲಿ ಅಗೆದರೆ ನೀರು ಸಿಕ್ಕರೆ ಸಿಕ್ಕಿತು. ಸಿಗದೇ ಹೋದರೆ ವಿಚಾರವಾದಿಗಳು ಅದನ್ನು ಮೂಢನಂಬಿಕೆ ಅನ್ನುವುದಿಲ್ಲ!
ಆರೋಗ್ಯಭಾಗ್ಯವೂ ಅಷ್ಟೇ. ಸ್ವಾತಂತ್ರ ಬಂದ ಆರಂಭದಲ್ಲಿ ನಗರ ಅಂದರು, ಆಧುನಿಕತೆ ಅಂದರು, ಆಲೋಪತಿ ಅಂದರು. ಇವತ್ತು ಆಲೋಪತಿಯನ್ನು ಪರ್ಯಾಯ ವ್ಯೆದ್ಯಪದ್ದತಿಗಳು ಮೀರಿಸುತ್ತಿವೆ. ಆಯುರ್ವೇದ ಏನಂತದೆ ಅಂತ ಹುಡುಕುತ್ತಿದ್ದೇವೆ. ಆದರೆ ಅಷ್ಟು ಹೊತ್ತಿಗಾಗಲೇ ಆಯುರ್ವೇದ ಸಸ್ಯಗಳನ್ನೆಲ್ಲ ನಾಶ ಮಾಡಿದ್ದೂ ಆಗಿದೆ. ಗುರುತು ಮರೆತದ್ದೂ ಆಗಿದೆ.
ಗಜಿಬಿಜಿಯ ನಗರಗಳಲ್ಲಿ ಕಿಕ್ಕಿರಿದ ಜನಸಂದಣಿಗಳಲ್ಲಿ ಇವತ್ತು ಹಳ್ಳಿಯ ನೆನಪು. ಮಲ್ಲೇಶ್ವರಂನ ಜನನಿಬಿಡ ಬೀದಿಯಲ್ಲಿ ಹಳ್ಳಿಮನೆ. ರಿಂಗು ರಸ್ತೆಯಲ್ಲಿ ಹಳ್ಳಿಡಾಬಾ. ಯಾವೂರಿಗೆ ಹೋದರೂ ನಮ್ಮೂರ ಹೊಟೆಲ್ಲು. ಇಪ್ಪತ್ತೆಂಟಂತಸ್ತಿನ ತುತ್ತತುದಿಯಲ್ಲಿ ಬಿದಿರಿನ ಮನೆ, ಎದುರು ಎರಡು ಕುಬ್ಜ ಉದ್ಯಾನ!
ಅತ್ತ ಸಾಗುವುದೋ ಇತ್ತ ಸಾಗುವುದೋ ತಿಳಿಯದ ದಿಕ್ಕೆಟ್ಟ ಬದುಕು!
*******
ನಂಬಿಕೆಗಳ ಜೊತೆ ಅದರ ಈಸ್ತೆಟಿಕ್ ಅಂಶವನ್ನೂ ಕಳೆದುಕೊಳ್ಳುತ್ತಿದ್ದೇವಾ? ವಿಚಾರವಾದ ಅಂತಿಮವಾಗಿ ನಮ್ಮನ್ನು ಅಮಾನವೀಯರನ್ನಾಗಿಸುತ್ತಾ? ಆಧುನಿಕತೆಯ ಪರಿಣಾಮ ನಮ್ಮನ್ನು ನೆಮ್ಮದಿಯಿಂದ ಇಟ್ಟ ಸಂಗತಿಗಳಿಂದ ವಿಮುಖರಾಗುವುದಾ? ಪ್ರಶ್ನಿಸುತ್ತಲೇ ಹೋದರೆ ಒಪ್ಪುವುದು ಏನನ್ನು?
ಇಂಥ ಪ್ರಶ್ನೆಗಳನ್ನು ಮುಂದಿಟ್ಟರೆ ವಿಚಾರವಾದಿಗಳು ಅದಕ್ಕೆ ಬೇರೆಯೇ ಅರ್ಥ ಕೊಡುತ್ತಾರೆ. ಬೇರೆಯೇ ಲೇಬಲ್ಲು ಹಚ್ಚುತ್ತಾರೆ.
ಅಡಿಗರು ಎಂದೋ ಬರೆದ ಪದ್ಯವೊಂದು ಬೇಡವೆಂದರೂ ನೆನಪಾಗುತ್ತಿದೆ;
ತಿಂದದ್ದು ಸರಿಯಾಗಿ ರಕ್ತವಾಗುವ ಹಾಗೆ
ಅನುಗ್ರಹಿಸು; ಅರಗದಂಥ ಕಚ್ಚಾ ಗಾಳಿಗೀಳುಗಳ
ಕಾಗದದ ಮೇಲೆಲ್ಲ ಕಾರಿಕೊಳ್ಳದ ಹಾಗೆ
ಏರ್ಪಡಿಸು ಸಹಜ ಹೊರದಾರಿಗಳ; ರಹದಾರಿಗಳ
ಕೊಡು ಎಲ್ಲರಿಗೂ ತಮ್ಮ ತಮ್ಮ ಖಾಸಗಿ ಮನೆಗೆ.
ಎಲ್ಲಕ್ಕಿಂತ ಹೆಚ್ಚಾಗಿ

ಒಂದು ತುತ್ತನ್ನು ಮೂವತ್ತೆರಡು ಸಲ ಜಗಿದು, ನುರಿಸಿ
ಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯ
ಶಾಸ್ತ್ರದ ಮೊದಲ ಪಾಠ ಕಲಿಸು. ಕಲಿಸದಿದ್ದರೂ ಕೂಡ
ಕಲಿತಿಲ್ಲ ಎಂಬ ನೆನಪುಳಿಸು. ಉಳ್ಳಾಗಡ್ಡೆ
ತಿಂದು ಕೊರಳೆಲ್ಲ ಕಸ್ತೂರಿಯಾಗುವುದೆಂಬ
ಭ್ರಮೆಯ ಕಳೆ. ದೊಡ್ಡ ದೊಡ್ಡ ಮಾತುಗಳ ಬೆಲೂನು
ಹಿದ್ದುವಾಗೆಲ್ಲ ತಾಗಿಸು ನಿಜದ ಸೂಜಿಮೊನೆ.
-(ಪ್ರಾರ್ಥನೆ)
ವಿಚಾರವಾದಕ್ಕೆ ಮತ್ತೊಮ್ಮೆ ದೊಡ್ಡ ನಮಸ್ಕಾರ!


ಟಿಪ್ಪಣಿ- ಈ ಫೋಟೋ ಕಳುಹಿಸಿಕೊಟ್ಟವರು ನಾಗರಾಜ ವಸ್ತಾರೆ. ಈ ಜಾಗ, ಅಲ್ಲಿನ ಘಮಘಮ, ಪ್ರಶಾಂತತೆ ಎಲ್ಲವೂ ವೇದ್ಯವಾಗುವಂತೆ ತೆಗೆದ ಈ ಚಿತ್ರ ನಂಗಿಷ್ಟ.

14 comments:

ಪೂರ್ಣ ವಿ-ರಾಮ said...

ತುಂಬಾ ಅರ್ಥ ಹಾಗೂ ಭಾವಭರಿತವಾಗಿದೆ. ನನ್ನ ಪ್ರಕಾರ ಬುದ್ದಿಜೀವಿಗಳೆನಿಸಿಕೊಂಡ ಕೆಲವರು ನಿಮ್ಮ ಈ ಲೇಖನವನ್ನು ಖುದ್ದಾಗಿ ಓದಬೇಕು.

ಕೊನೆಗಿರುವ ಪ್ರಾರ್ಥನೆಯನ್ನು
ಮತ್ತೊಮ್ಮೆ ಮೆಲುಕುಹಾಕುತ್ತಾ...
ನಮಸ್ಕಾರಗಳು.(ನನ್ನ ಅಭಿಪ್ರಾಯದಲ್ಲಿ ತಪ್ಪಿದ್ದರೆ ಕ್ಷಮಿಲಿ)

Sree said...
This comment has been removed by the author.
Sree said...

ನನ್ನೊಳಗಿನ ದ್ವಂದ್ವಗಳಿಗೆ ಜೋಗುಳದಂತಿದೆ ನಿಮ್ಮ ಈ ಬರಹ! ಥ್ಯಾಂಕ್ಸ್ ಸರ್!!

Anonymous said...

jogiyvre,
ee lekan nanu ello odid nenepaguttide. ide blognlli neevu barediddira atva berello bredddnnu illi hakiddira?? nange eko anumana
SUMA K.R.
MANGALORE.

Anonymous said...

namaste Jogi avare,

bahaLa artha Purna hAgU sAndarbhika baraha.
ella bageya `ati'gaLannu naanu virOdhistEne. hagenda matrakke namma samskruti, jeevanada jote nirupadraviyagi hondikondiruvudannu biDutta bandare, badukina svarasya elli uLideetu?
vaicharikate, pragati ityadigaLa hesaralli nambikegalannu nirakarisuvavarige ee uttara chennagide. thanks.
- Chetana

AVALU said...

vicharavadigaligu namskara, AVARANNU VIRODISUVVARIGU NAMASKARA HELU GURU

Anonymous said...

ವೈಜ್ನಾನಿಕವಾಗಿರಬೇಕೋ ಅಥವಾ ಪ್ರಖಾಂದ ವಿಚಾರವಾದಿಯಾಗಿರಬೇಕೋ?. ಅವರವರ ವಿವೇಕಕ್ಕೆ ಬಿಟ್ಟ ವಿಚಾರ. ಉದಾಹರಣೆಗೆ, ಕೌಟುಮ್ಬಿಕವಾದ ಒಂದು ಸಮಾರಂಭದಲ್ಲಿ ಸರತಿಯ ಸಾಲಿನಲ್ಲಿ ನಿಂತು ತೀರ್ಥ ತೆಗೆದುಕೊಳ್ಳುವಾಗ -ನಾನು ವಿಜ್ಞಾನಿ ಎಂದು ತಿರಸ್ಕರಿಸುವುದು ಎಸ್ಟು ಸರಿ?. ಹಾಗೆಯೇ, ನೂರೊನ್ದು ಡಿಗ್ರಿ ಜ್ವರ ಇದ್ದಾಗ ವ್ಯ್ದ್ಯರಲ್ಲಿ ಹೋಗುವುದನ್ನು ಬಿಟ್ಟು ತೀರ್ಥ ಹಾಕಿಸಿಕೊಲ್ಲುವುದು ಎಸ್ಟು ಸರಿ?. ವಿವೆಕವೇ ಶ್ರೇಷ್ಟ ಎಂದು ನನ್ನ ಭಾವನೆ.

Dr.D.M.Sagar

ಕನ್ನಡ ರಂಗ ಭೂಮಿ said...

ಈ ವಿಚಾರವಾದಿಗಳು ಇಲ್ಲದಿದ್ರೆ ಏನಾಕ್ತಿತ್ತು ಅಂತ.....ಅದೂ ಬೇಕು- ಇದೂ ಬೇಕು...ಬದುಕು ಮುಖ್ಯ ಅನ್ನೊ ಅರಿವಿರಬೆಕು...ಡಿ.ಎಂ. ಸಾಗರ್ ಮಾತು ಸರಿ....

krutavarma said...

ಇದ್ದ ತೆಂಗಿನ ಮರವನ್ನು ಕಡಿದು, ಅದೇ ಜಾಗದಲ್ಲ ಕತ್ತಲಲ್ಲಷ್ಟೆ ಅದರ ಇರುವು ಅರಿವಾಗುವಂಥ artificial ತೆಂಗಿನ ಮರ ಇಟ್ಟು ಬೆರಗಾಗುತ್ತೇವೆ. ಸೊಂಪಾಗಿ ಬೆಳೆದ ಮಾವಿನ ತೋಪನ್ನು ಬೋಳಾಗಿಸಿ ದೊಡ್ಡ ದೊಡ್ಡ apartments ಕಟ್ಟಿ, ಅಳಿದುಳಿದ ಖಾಲಿ ಜಾಗದಲ್ಲಿ ಒಂದೆರಡು ಮಾವಿನ ಸಸಿಗಳನ್ನು ನೆಟ್ಟು, ಅದರ ಆರೈಕೆಗೊಬ್ಬ ಆಳನ್ನಿಟ್ಟು ಸಂಭ್ರಮಿಸ್ತೇವೆ.
ಈಗ ಯಾವ ವಸ್ತುವೂ, ವಿಷಯವೂ ನಮ್ಮನ್ನು ಬೆರಗುಗೊಳಿಸುವುದಿಲ್ಲ.

ವಿನಾಯಕ ಕೆ.ಎಸ್ said...

ಖಂಡಿತವಾಗಿಯೂ ಪ್ರಗತಿಪರತೆಯ ಪರಿಭಾಷೆ ಬದಲಾಗಬೇಕಿದೆ ಸಾರ್. ಲೇಖನ ತುಂಬಾ ಅರ್ಥಗರ್ಭಿತವಾಗಿತ್ತು. ನಿಮ್ಮಂತಹವರು ಇಂತಹ ಲೇಖನಕ್ಕೆ ನಾಂದಿ ಹಾಡಿರುವುದು ನಿಜಕ್ಕೂ ಸಿದ್ದಾಂತೀಯ ಲೋಕದಲ್ಲಿ ಒಂದು ಹೊಸ ಅಲೆಯನ್ನು ಹುಟ್ಟುಹಾಕಬಹುದೆಂಬ ಪುಟ್ಟದೊಂದು ಆಸೆ ನಮ್ಮದು!

ಚಂದಿನ said...

ಜೋಗಿ ಅವರೇ ನಮಸ್ತೆ,

ಈಗಾಗಲೇ ಈ ಲೇಖನ ಓದಿದ ನೆನಪು,

ಖಚಿತ ಪಡಿಸುವಿರೆಂದು ಈ ಹುರುಪು,


- ಚಂದಿನ

ಕೂಗು....ಎನ್ನ ಮನುಕುಲಕೆ !!!
http://www.koogu.blogspot.com

Anonymous said...

ಜಾನಕಿ ಕಾಲಂ-1 ನಲ್ಲೋ 2 ನಲ್ಲೋ ಈ ಲೇಖನ ಇದೆ.
-ಜೋಗಿ

Prashant said...
This comment has been removed by the author.
prashant said...

ಅತ್ಯಂತ ಸುಂದರ ಬರಹ.
ಅಲ್ಲಮ ಹೇಳಿದಂತೆ - "ತರ್ಕವೆಂಬುದು ತಗರನ ಹೋರಟೆ". ತರ್ಕ, ವಿಚಾರಗಳು ನಮಗೆ ಅತ್ಯಂತ ಅವಶ್ಯಕ.
ಆದರೆ ನಮಗೆ ತಿಳಿದಿರುವುದು ಅತ್ಯಂತ ಅಲ್ಪ ಎಂಬ ತಿಳಿವಳಿಕೆ ನಮ್ಮನ್ನು ಕಾಪಾಡಲಿ!

-ಪ್ರಶಾಂತ