Sunday, June 10, 2012

ಜೋಗಿ ಅವರ “ಫೇಸ್‌ಬುಕ್ ಡಾಟ್‌ಕಾಮ್/ಮಾನಸ ಜೋಶಿ”

-ಟಿ.ಪಿ.ಅಶೋಕ
ಹೇಳಿ ಕೇಳಿ ಇದು ಸಂಪರ್ಕ ಮಾಧ್ಯಮಗಳ ಕಾಲ. ಮಾಹಿತಿಯೊಂದನ್ನು ಕ್ಷಣ ಮಾತ್ರದಲ್ಲಿ ಬೇಕೆನಿಸಿದ ಕಡೆ ರವಾನಿಸಬಹುದಾದ ಕಾಲ. ನಮ್ಮ ಅನುಭವ-ಚಟುವಟಿಕೆಗಳು ಮಾಧ್ಯಮಗಳ ಸ್ವರೂಪವನ್ನು  ರೂಪಿಸುತ್ತಿವೆಯೋ ಅಥವಾ ಮಾಧ್ಯಮಗಳೇ ನಮ್ಮ ಚಿಂತನೆ-ಕ್ರಿಯೆಗಳನ್ನು ನಿರ್ಧರಿಸುತ್ತಿವೆಯೋ ಎಂದು ನಿಖರವಾಗಿ ಹೇಳಲಾಗದ ಕಾಲ ಇದು.    ನಮ್ಮ ಅಭಿರುಚಿ, ಆದ್ಯತೆ, ಆಶೋತ್ತರಗಳು ನಮ್ಮದಾಗಿ ಉಳಿದಿರುವುದೆಷ್ಟು,   ಮಾಧ್ಯಮಗಳಿಂದ ಪ್ರಭಾವಿತವಾಗಿರುವುದೆಷ್ಟು ಎಂಬ ಲೆಕ್ಕವೂ ಸರಿಯಾಗಿ ಸಿಗುತ್ತಿಲ್ಲಕೊಳ್ಳುಬಾಕ ಸಂಸ್ಕೃತಿಯು ಇವುಗಳಿಂದ ಪೋಷಣೆ ಪಡೆಯುತ್ತಿದೆಯೋ ಇಲ್ಲವೇ ಇವು ಕೊಳ್ಳುಬಾಕ ಸಂಸ್ಕೃತಿಯ ಉಪಪರಿಣಾಮಗಳೋ ಎಂದು ಗೆರೆಕೊಯ್ದು ಹೇಳಲಾರದಷ್ಟು ಅವು ಒಂದರೊಳಗೊಂದು ಬೆರೆತುಹೋಗಿಬಿಟ್ಟಿವೆ. ಸದಾ ಇನ್ನೊಬ್ಬರೊಂದಿಗೆ ಮಾತನಾಡುತ್ತಾಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಬೇಡದ ನೂರು ಉಸಾಬರಿಗಳಿಗೆ ಅನಿವಾರ್ಯ ಸಾಕ್ಷಿಗಳಾಗುತ್ತಾ ತೀರಾ ಬಹಿರಂಗದಲ್ಲಿ ಬದುಕುತ್ತಿರುವ ನಾವು ಎಷ್ಟರ ಮಟ್ಟಿಗೆ ನಮ್ಮ ಅಂತರಂಗದೊಂದಿಗೆ ಸಂಪರ್ಕ ಸಾಧಿಸಿದ್ದೇವೆ? ನಮ್ಮ ಖಾಸಗಿ ಬದುಕನ್ನು ನಮಗಾಗಿ ಉಳಿಸಿಕೊಂಡಿದ್ದೇವೆ? ನಾಗಾಲೋಟದಿಂದ ಓಡುತ್ತಿದ್ದರೂ ನಿಜವಾಗಿ ಯಾವುದರ ಹಿಂದೆ ಓಡುತ್ತಿದ್ದೇವೆ ಎಂಬ ಸ್ಪಷ್ಟತೆಯಾದರೂ ಇದೆಯೆ? ಮಾತುಗಳ, ಚಿತ್ರಗಳ, ಬರಹಗಳ ವಿನಿಮಯ ಸತತವಾಗಿ ಸಾಗುತ್ತಿದ್ದರೂ ನಮಗೆ ಬೇಕಾದ ಮನುಷ್ಯಸಂಪರ್ಕ ನಿಜವಾಗಿ ಸಿಕ್ಕಿದೆಯೆ?   ಕಳೆದ ನಾಲ್ಕಾರು ವರುಷಗಳಲ್ಲಿ ಈ ಕುರಿತು ಧ್ಯಾನಿಸುವ ಹಲವು ಕತೆ-ಕವಿತೆಗಳು ಪ್ರಕಟವಾಗಿರುವುದು ಕಾಕತಾಳೀಯವೇನಲ್ಲ. ಇಂಥ ಒಂದು ಮಾದರಿ ಎಂಬಂತೆ ಜೋಗಿ ಅವರ “ಫೇಸ್‌ಬುಕ್ ಡಾಟ್‌ಕಾಮ್/ ಮಾನಸ ಜೋಶಿ ಅಥವಾ ಮಾನಸ ಸರೋವರ ಎಂಬ ವ್ರತಮಂಜರಿ” (೨೦೧೨, ಅಂಕಿತ ಪುಸ್ತಕ, ಬೆಂಗಳೂರು) ಎಂಬ ಕತೆಯನ್ನು ಓದಿಕೊಳ್ಳಬಹುದು. ಓರ್ವ ‘ಮೀಡಿಯಾ ಸ್ಯಾವಿ’ ಬರಹಗಾರರೊಬ್ಬರಿಂದಲೇ ಈ ಕತೆ ರಚಿತವಾಗಿರುವುದು ಗಮನಾರ್ಹ.

 ಮೊಬೈಲು, ಸಿಮ್‌ಕಾರ್ಡು, ಲ್ಯಾಪ್‌ಟಾಪು, ಫೇಸ್‌ಬುಕ್ಕು, ಮೆಸೇಜು, ಫ್ರೆಂಡ್‌ರಿಕ್ವೆಸ್ಟು, ಟೀವಿ, ಕ್ಯಾಮೆರಾ, ಪ್ರೋಗ್ರಾಮು, ‘ರಿಯಾಲಿಟಿ’ ಶೋ, ಪ್ರೆಸ್ ಕಾನ್‌ಫೆರನ್ಸ್ , ಟೇಪು, ಟಿಸಿಆರ್, ಟೀಆರ್‌ಪಿಗಳ ಲೋಕದಲ್ಲಿ ಆತ್ಮಗಳೇ ಕಳೆದು ಹೋಗುತ್ತಿರುವ ಸ್ಥಿತಿಯನ್ನು ಜೋಗಿ ಅವರ ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಈ ಪದಗಳು ಮತ್ತು ಪರಿಕಲ್ಪನೆಗಳು ಇಂಗ್ಲಿಷ್ ಭಾಷೆಯಲ್ಲಿ ಸೂಚಿತವಾಗುತ್ತಿದ್ದು ನಾವು ಕೇವಲ ಅವುಗಳ ಸರಳ ತದ್ಭವಗಳನ್ನು ಬಳಸುತ್ತಿರುವುದು ಈ ಸ್ಥಿತಿಗೆ ಬರೆಯಬಹುದಾದ ಭಾಷ್ಯವೇ ಅನ್ನಿಸುತ್ತದೆ. ನಮ್ಮ ಭೌತಿಕ ಮತ್ತು ಮನೋಲೋಕಗಳಲ್ಲಿ ಸಂಭವಿಸುತ್ತಿರುವ ಪಲ್ಲಟಗಳು ಭಾಷಿಕ ವಿನ್ಯಾಸದಲ್ಲೂ ಕಂಡುಬರುತ್ತಿವೆ. ಅಪರಿಚಿತರೊಂದಿಗೆ ಸಂಪರ್ಕ ಸಾಧಿಸಲು ಇಷ್ಟೆಲ್ಲ ಪರಿಕರ-ಪರಿಕಲ್ಪನೆಗಳು  ಒದಗಿಬರುತ್ತಿರುವಂತೆಯೇ ಒಂದು ಕುಟುಂಬದ ಸದಸ್ಯರ ನಡುವೆಯೇ ಸಂಪರ್ಕಗಳು ಕಡಿದು ಬೀಳುತ್ತಿರುವ ವ್ಯಂಗ್ಯವೂ ನಮ್ಮನ್ನು ಕೆಣಕುತ್ತಿದೆ. ಜೋಗಿ ಅವರ ಕತೆಯ ಆರಂಭದಲ್ಲೇ “ಮಾನಸ ಜೋಶಿಯ ಮೊಬೈಲು ಕಳೆದುಹೋಗಿತ್ತು” ಎಂಬ ವಾಕ್ಯ ಕಾಣಿಸಿಕೊಳ್ಳುವುದು ಕಾಕತಾಳೀಯವಲ್ಲ. ಇನ್ನೊಂದು ಸಿಮ್ ಕಾರ್ಡನ್ನು ಮೊಬೈಲಿಗೆ ಸೇರಿಸಿ ಅದು ಆಕ್ಟಿವೇಟ್ ಆಗುವವರೆಗೆ   ಬುದ್ಧಿಯೇ ಓಡದ ಸ್ಥಿತಿ ಅವಳದು.  “ ಒಂದು ಕಾಲದಲ್ಲಿ ನೂರು ನೂರೈವತ್ತು ನಂಬರುಗಳು ಬಾಯಿಗೇ ಬರುತ್ತಿದ್ದವು. ಈಗ ಗಂಡನ ನಂಬರೂ ನೆನಪಿರೋದಿಲ್ಲ. ಮಿಸ್ ಕಾಲ್ ಕೊಡು, ಸೇವ್ ಮಾಡ್ಕೊತೀನಿ. ಆ ನಂಬರಿನತ್ತ ಕಣ್ಣು ಹಾಯಿಸುವುದಕ್ಕೂ ಪುರುಸೊತ್ತಿಲ್ಲ. ಮಾನಸ ಜೋಶಿಯ ಸದ್ಯದ ಸ್ಥಿತಿ ಇದು: ದುಡಿಯಬೇಕು ಅನ್ನುವ ಹಂಬಲ ಕ್ರಮೇಣ ಅಭ್ಯಾಸದಂತೆ ಆಗಿ ಹೋಗಿ, ಬೆಳಗಾಗೆದ್ದರೆ ಎಲ್ಲಿಗಾದರೂ ಹೊರಟು ಬಿಡಬೇಕು ಅನ್ನುವ ಆತುರ... ಬಿಸಿಲು, ಬೆಂಕಿ, ಬಾಕಿ ಉಳಿದಿರುವ ಕೆಲಸ, ಆಫೀಸು ಹೊತ್ತಿನಲ್ಲಿ ಫೋನ್ ಎತ್ತಿಕೊಳ್ಳದ ಗಂಡ, ದೂರದಲ್ಲಿ ಎಲ್ಲೋ ಓದುತ್ತಿರುವ ಮಗ, ಮನೆಯಲ್ಲಿ, ಹುಳಿಗೆ ಉಪ್ಪು ಹಾಕೇ ಇಲ್ವಲ್ಲೇ ನೀನು ಎಂದು ಮತ್ತಷ್ಟು ಉಪ್ಪು ಹಾಕುವ ಅತ್ತೆ.  ಕುಟುಂಬ ಸದಸ್ಯರೊಂದಿಗಿನ ಸಂಬಂಧದಲ್ಲಿ ಟೆನ್ಶನ್, ಆಫೀಸಿನಲ್ಲಿ ಟೆನ್ಶನ್. ಆದರೂ ಊಟ-ನಿದ್ರೆಗಿಂತ ಲ್ಯಾಪ್‌ಟ್ಯಾಪು-ಫೇಸ್‌ಬುಕ್ಕಿಗೇ ಹೆಚ್ಚಿನ ಆದ್ಯತೆ. ಕಂಡಿರದ, ಕೇಳಿರದ ಅಪರಿಚಿತರೊಂದಿಗೆ ಬಿಚ್ಚಿಕೊಳ್ಳುವ, ತೋಡಿಕೊಳ್ಳುವ ಆತುರ, ಆತಂಕ. ಕುಟ್ಟುತ್ತಾಳೆ: ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿವುದೇ ಜೀವನ? ಇರದುದು ಸಿಕ್ಕಾಗ ಇರುವುದರಂತೆಯೇ ಕಂಡೀತಾ? ಇರುವುದು ಮತ್ತು ಇರದುದರ ನಡುವೆ ಇರುವುದೇ ಬದುಕಾ? ಶೇರ್ ಮಾಡುತ್ತಿದ್ದಂತೆ ಲೈಕ್ ಕಾಣಿಸಿಕೊಂಡಿತು. ಯಾರೂಂತ ನೋಡಿದಳು. ತಿರುಮಲೇಶ್.

ಈ ತಿರುಮಲೇಶ್ ಮಾನಸಳನ್ನು ಒಮ್ಮೆಯೂ ನೇರವಾಗಿ ಭೇಟಿಯಾಗಿಲ್ಲ. ಅವಳೊಡನೆ ಚಾಟ್ ಮಾಡಿ ಹಲವು ದಿನಗಳೇ ಆಗಿವೆ. ಆದರೂ, ಆ ಸ್ಟೇಟಸ್ ಮೆಸೇಜು ತನ್ನನ್ನು ಕುರಿತೇ ಹಾಕಿದ್ದಾಳೆ ಅನ್ನುವ ಬಗ್ಗೆ ತಿರುಮಲೇಶನಿಗೆ ಯಾವ ಅನುಮಾನವೂ ಉಳಿಯಲಿಲ್ಲ.ಇದು ಈ ಕತೆಯ ಮೊದಲ ವಾಕ್ಯ. ಪರಸ್ಪರ ಅಪರಿಚಿತರಾಗಿರುವ ಇಬ್ಬರು ಅತೃಪ್ತರ ನಡುವಣ ಈ ‘ಚಾಟ್’ ಸಮಕಾಲೀನ ನಾಗರೀಕತೆಯ ಸ್ವರೂಪವನ್ನು ಅದರದೇ ಪರಿಭಾಷೆಯಲ್ಲಿ ಕಟ್ಟಿಕೊಡುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಆದರೆ ಇವರಿಬ್ಬರೂ ಮಾತನಾಡಿಕೊಳ್ಳುವುದು ಪರಸ್ಪರ ತಮ್ಮ ನಡುವೆ ಮಾತ್ರ ಅಲ್ಲ ಎಂಬುದನ್ನು ಕತೆ ದಾಖಲಿಸುತ್ತಾ ಹೋಗುತ್ತದೆ: “ಸ್ಟೇಟಸ್ಸು ಮೆಸೇಜು ಸರಳವಾಗಿತ್ತು: ನೀನು ಮೊದಲೇ ಸಿಕ್ಕಿದ್ದರೆ ನಾನು ಇದಕ್ಕಿಂತ ಹೆಚ್ಚು ಸುಖವಾಗಿರುತ್ತಿದ್ದೆ. ತಡವಾಗಿ ಸಿಗದೇ ಹೋದರೂ ಸುಖವಾಗಿರುತ್ತಿದ್ದೆ. ನೀನು ಸಿಕ್ಕಿಯೇ ಬಿಟ್ಟೆ. ನನಗೆ ಆಯ್ಕೆಗಳಿಲ್ಲ ಈಗ. ತಿರುಮಲೇಶ ಅವಳ ರೂಪವನ್ನು ಧ್ಯಾನಿಸುತ್ತಾ ಲೈಕ್ ಬಟನ್ ಒತ್ತಿದ. ಯೂ, ಕೇಶವ್, ಶ್ವೇತಾ ಭಟ್, ಆರತಿ, ಮೋಹನ್ ಅಂಡ್ ಜಯತೀರ್ಥ ಅದರ್ಸ್ ಲೈಕ್ಸ್ ದಿಸ್ ಅಂತ ಓದಿಕೊಂಡು ಆರತಿಯ ಪ್ರೊಫೈಲ್ ಕ್ಲಿಕ್ ಮಾಡಿದ. ಯಾರದೋ ಫೋಟೋ ಹಾಕಿದ್ದಳು. ಫ್ರೆಂಡ್ ರಿಕ್ವೆಸ್ಟ್ ಕಳಿಸಲೇ ಎಂದು ಯೋಚಿಸುತ್ತಲೇ ಆಡ್ ಫ್ರೆಂಡ್ ಒತ್ತಿದ.” ತಿರುಮಲೇಶ್ ಮಾನಸಳ ಮೆಸೇಜಿನ ಹಿಂದಿರಬಹುದಾದ ಅವಳ ಮನಸ್ಥಿತಿ, ಸ್ವಭಾವ, ತನ್ನ ಗಂಡನೊಂದಿಗೆ ಇರಬಹುದಾದ ಅವಳ ಸಂಬಂಧ, ಅವಳು ತನ್ನನ್ನು ಮನೆಗೆ ಕರೆಯಬಹುದೇ, ಅವಳು ತನ್ನನ್ನು ಪ್ರೀತಿಸುತ್ತಿರಬಹುದೇ ಎಂದೆಲ್ಲ ಯೋಚಿಸುತ್ತ ಅವಳ ಮೆಸೇಜಿಗೆ ಒಂದು ಕಾಮೆಂಟು ಬರೆಯುತ್ತಾನೆ: “ಬಂದೇ ಬರತವ ಕಾಲ...ಮಂದಾರ ಕನಸನು ಕಂಡಂಥ ಮನಸನು ಒಂದು ಮಾಡುವ ಸ್ನೇಹಜಾಲ...?”  ಆದರೆ ಮಾನಸಳ ಮೆಸೇಜಿಗೆ  ಬೇರೆ ಕಾಮೆಂಟುಗಳು ಬರುವುದನ್ನೂ ಕತೆ ದಾಖಲಿಸುತ್ತದೆ.  ಒಂದು ದಿನ ಅವರಿಬ್ಬರೂ ಲಘುವಾಗಿ ಚಾಟ್ ಮಾಡುತ್ತಾರೆ ಕೂಡ. ಅವನು ನಂಬರ್ ಕೇಳಿದರೆ ‘ಸಿಕ್ಕಾಗ ಕೊಡ್ತೀನಿ’ ಎಂದು ಕಳಚಿಕೊಳ್ಳುತ್ತಾಳೆ. ಮಾರನೆಯ ದಿನ ಫೇಸ್‌ಬುಕ್ಕಿಗೆ ಲಾಗಿನ್ ಆದಾಗ ತಿರುಮಲೇಶನು ಆನ್‌ಲೈನ್ ಇರುವುದು ಗೊತ್ತಾಗಿ ‘ಮತ್ತೆ ಮಾತನಾಡಿಯಾನು ಎಂದುಕೊಂಡು ಚಾಟ್ ಆಫ್‌ಲೈನ್ ಮಾಡಿಕೊಂಡು ಬ್ರೌಸಿಂಗ್ ಶುರುಮಾಡಿದಳು.’ ಲ್ಯಾಪ್‌ಟ್ಯಾಪಿನೊಂದಿಗೆ ಆಡುತ್ತಿದ್ದರೂ ಮಾನಸ ಯೋಚಿಸುತ್ತಿದ್ದುದೇ ಬೇರೆ: “ಆ ಅಪರಾತ್ರಿಯಲ್ಲಿ ಎಲ್ಲರೂ ಯಾಕೆ ಎಚ್ಚರವಾಗಿರುತ್ತಾರೆ? ಯಾಕೆ ತನ್ನ ಸ್ಟೇಟಸ್ಸಿಗೆ ಲೈಕುಗಳನ್ನು ಹಾಕುತ್ತಿದ್ದಾರೆ? ಯಾಕೆ ತಮಗೆ ತೋಚಿದ ಕಾಮೆಂಟುಗಳನ್ನು ಮಾಡುತ್ತಾರೆ? ಯಾರಿಗೂ ನಿದ್ದೆಯೆಂಬುದೇ ಇಲ್ಲವೇ? ಎಲ್ಲರೂ ತನ್ನ ಹಾಗೆ ದುಃಖಿಗಳೇ? ರೋಸಿಹೋದವರೇ? ಎಲ್ಲರ ಮನೆಯಲ್ಲೂ ಇದೇ ಕತೆಯಾ? ನಾವು ಯಾವುದಕ್ಕೆ ಹಂಬಲಿಸುತ್ತಿದ್ದೇವೆ? ಯಾರೋ ಸಿಗಲಿ ಎಂದು ಕಾಯುತ್ತೇವಾ? ಸಿಕ್ಕವರು ನಮ್ಮವರಾಗುತ್ತಾರಾ? ಸೇಫ್ಟಿ ಝೋನಿನಲ್ಲಿನಿಂತು ಆಟವಾಡುತ್ತಿದ್ದೇವಾ? ಅತ್ತೆಗೆ ಇದ್ಯಾವುದೂ ಸುಖವೇ ಇಲ್ಲದೆ ಇದ್ದದ್ದರಿಂದ ಹಾಗಾಡುತ್ತಾರಾ? ನಾನೂ ಕೂಡ ಅತ್ತೆ ಮಾಡುತ್ತಿರುವುದನ್ನೇ ಬೇರೆ ಥರ ಮಾಡುತ್ತಿದ್ದೇನಾ?  ಇತ್ತ ತಿರುಮಲೇಶನ ಸ್ಥಿತಿ ಇದು: ಬಹುಶಃ ಕನೆಕ್ಷನ್ ಎರರ್ ಇರಬೇಕು. ಅದಕ್ಕೆ ಅವಳು ಕಾಣಿಸುತ್ತಿಲ್ಲ. ಈಗ ಬಂದರೆ ಚೆನ್ನಾಗಿ ಮಾತಾಡಿಸಬೇಕು. ಫ್ಲರ್ಟ್ ಮಾಡಬೇಕು. ಒಲಿಸಿಕೊಳ್ಳಬೇಕು. ಚೆಂದಾಕಿದ್ದಾಳೆ ಹುಡುಗಿ...ಎಂದು ಲೆಕ್ಕ ಹಾಕುತ್ತಾ ತಿರುಮಲೇಶ ಕಂಪ್ಯೂಟರ್ ಮುಂದೆ ತುಂಬ ಹೊತ್ತು ಕಲ್ಲಾಗಿ ಕೂತಿದ್ದ. ಆಮೇಲೆ ನಿದ್ದೆ ಹೋದ. ಅಂದರೆ ಚಾಟ್‌ಗಳು ಎಷ್ಟೇ ಸುಂದರವಾಗಿರಲಿ ಫೇಸ್‌ಬುಕ್ಕಿನಲ್ಲಿ ಬಿಂಬಿತವಾಗುವುದು ಚಾಟ್ ಮಾಡುವವರ ನಿಜವಾದ ‘ಫೇಸ್’ ಅಲ್ಲ ಎಂಬುದನ್ನು ಜೋಗಿ ಅವರ ಕಥೆ ಸೂಚಿಸುವಂತಿದೆ. ತಮಗೇ ನರಕವಾಗಿರುವ ತಮ್ಮದೇ ನಿಜವಾದ ‘ಫೇಸ್’ ಅನ್ನು ಕ್ಷಣಕಾಲ ಕಳಚಿ ಗ್ರಾಹಕ ಬಳಕೆಗೆ ಒಗ್ಗುವ, ಸಲ್ಲುವ ಫೇಸ್ ಒಂದನ್ನು ಆರೋಪಿಸಿಕೊಂಡು-ಅಂದರೆ ಆತ್ಮವಂಚನೆ ಮಾಡಿಕೊಂಡು-ಅದರಲ್ಲಿ ಸುಖಿಸುವ ವರ್ಗದ ನಿಜವಾದ ‘ಫೇಸ್’ ಅನ್ನು ಅನಾವರಣ ಮಾಡುವುದು ಈ ಕತೆಯ ಇಂಗಿತಗಳಲ್ಲಿ ಒಂದಾಗಿರಬಹುದು.

ಮಾನಸ ಮತ್ತು ತಿರುಮಲೇಶರ ಪಾತ್ರಚಿತ್ರಣಗಳಲ್ಲಿಯೂ ಜೋಗಿ ಎರಡು ಬೇರೆ ಬೇರೆ ಮಾದರಿಗಳನ್ನು ಅನುಸರಿಸಿದ್ದಾರೆ. ಮಾನಸಳದು ತುಸು ಸಾಂಪ್ರದಾಯಕ ಪಾತ್ರ. ಆಧುನಿಕ ಜಗತ್ತನ್ನು 
ಪ್ರವೇಶಿಸಿದ್ದರೂ ಅವಳು ಸಾಂಪ್ರದಾಯಕ ಜಗತ್ತಿನಿಂದ ಪೂರಾ ಕಡಿದುಕೊಂಡು ಬಂದಿಲ್ಲ. ಅವಳ ಜಗತ್ತು ಭಿನ್ನ ಭಿನ್ನ ಸ್ವಭಾವದ ‘ನಿಜ’ ಮನುಷ್ಯರಿಂದ ಆವೃತವಾಗಿದೆ. ಮನೆಯೊಳಗಿನ ಅವಳ ಸಮಸ್ಯೆಗಳು, ವೃತ್ತಿ ಜೀವನದ ಒತ್ತಡಗಳು, ಇವುಗಳಿಂದ ರೂಪುಗೊಂಡಿರುವ ಅವಳ ಭಾವಸ್ಥಿತಿ ಎಲ್ಲವಕ್ಕೂ ಒಂದು ‘ವಾಸ್ತವಿಕ’ ಸ್ಪರ್ಶವಿದೆ. ಅಂದರೆ ಅವಳಿಗೆ ಒಂದು ದತ್ತವಾದ ‘ಫೇಸ್’ ಇದೆ. ಅದರಿಂದ ರೋಸಿಹೋಗಿರುವ ಅವಳು ಇನ್ನೊಂದು  ‘ಫೇಸ್’ ಅನ್ನು ರೂಪಿಸಿಕೊಳ್ಳಲು ಹೆಣಗುತ್ತಿದ್ದಾಳೆ.  ಆದರೆ ನಾವು ಕಾಣುವ-ಅಂದರೆ ಲೇಖಕ ನಮಗೆ ತೋರಿಸುವ-ತಿರುಮಲೇಶನ ಫೇಸ್ ಕೇವಲ ಫೇಸ್‌ಬುಕ್ಕಿನಲ್ಲಿ ಕಾಣುವ ಫೇಸ್. ಅಂದರೆ ನಿಜವಾಗಿ ‘ಫೇಸ್‌ಲೆಸ್’. ಈ ಎರಡು ಪಾತ್ರಮಾದರಿಗಳ ವೈದೃಶ್ಯದಲ್ಲಿ ಬದಲಾಗುತ್ತಿರುವ ನಾಗರೀಕತೆಯ ಲಯವನ್ನು ಹಿಡಿಯುವುದು ಲೇಖಕರ ಉದ್ದೇಶವೆಂದು ತೋರುತ್ತದೆ. ಕತೆಯಲ್ಲಿ ಕಾಣಬಹುದಾದಂತೆ ತಿರುಮಲೇಶನಿಗೆ ‘ವರ್ಚ್‌ಯಲ್’ ಪ್ರಪಂಚದಲ್ಲಿ ಮಾತ್ರ ಅಸ್ತಿತ್ವವಿದೆ. ಅಲ್ಲಿ ಅವನು ತನ್ನ ಅದೃಷ್ಟವನ್ನು ಪರೀಕ್ಷಿಸಬೇಕಾಗಿದೆ. ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗಿದೆ. ತಿರುಮಲೇಶ ಒಂದು ಆಯ್ಕೆ ಮಾಡಿಕೊಳ್ಳುವುದೂ,   ಅದನ್ನು ಹಿಂಬಾಲಿಸಲು ಹಂಬಲಿಸುವುದೂ, ನಿಜ. ಆದರೆ ಈ ಹೊಸ ಜಗತ್ತಿನಲ್ಲಿ ಹೊಸ ಆಯ್ಕೆಗಳನ್ನು ಮಾಡಿಕೊಳ್ಳುವುದೂ ಕೆಲಕಾಲ ಅವುಗಳ ಜೊತೆ ‘ಸಂಪರ್ಕ’ದಲ್ಲಿರಲು ಹವಣಿಸುವುದೂ ಅಷ್ಟೇ ನಿಜ. ವಾಸ್ತವಿಕ ಜಗತ್ತಿನ ಜಂಜಾಟಗಳಿಂದ ತಪ್ಪಿಸಿಕೊಂಡು ವರ್ಚುಯಲ್ ಜಗತ್ತಿನಲ್ಲಿ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವಗಳನ್ನು  ಸ್ಥಾಪಿಸಿಕೊಳ್ಳಲು ಹೆಣಗುತ್ತಿರುವ ಒಂದು ವರ್ಗದ ಮನಸ್ಥಿತಿಗೆ ಪ್ರಾತಿನಿಧಿಕವೆಂಬಂತೆ ಜೋಗಿ ಅವರ ಕತೆಯ ಕೊನೆಯ ಭಾಗವನ್ನು ಗಮನಿಸಬಹುದು. ಇದು ಕೇವಲ ಕತೆಯ ಕೊನೆಯ ಭಾಗ, ಆದರೆ ನಿಜವಾಗಿ ತಿರುಮಲೇಶನ ವರ್ಚುಯಲ್ ಬದುಕಿನ ಹೊಸ ಅಧ್ಯಾಯ. ಅಂದರೆ ಜೋಗಿ ಅವರ ಕತೆಗೆ ಸಾಂಪ್ರದಾಯಕ, ಅಂತಿಮ ಮುಕ್ತಾಯ ಎಂಬುದೇನೂ ಇಲ್ಲ. ಈ ಕತೆಯನ್ನು ಮುಂದೆ ಅವರೇ ಅಥವಾ ಅವರಂಥ ಬೇರೊಬ್ಬ ಕತೆಗಾರ ಮುಂದುವರೆಸಬಹುದು ಎಂಬ ಮುಕ್ತಬಂಧ ಈ ರಚನೆಗಿದೆ: “ ತಿರುಮಲೇಶ ಎಷ್ಟು ಹುಡುಕಿದರೂ ಮಾನಸ ಜೋಶಿ ಪತ್ತೆಯಾಗಲಿಲ್ಲ. ಚಾಟ್ ರೆಕಾರ್ಡಿನಲ್ಲೂ ಇರಲಿಲ್ಲ. ಸರ್ಚ್ ಕೊಟ್ಟು ಹುಡುಕಿದರೂ ನಾಪತ್ತೆ. ಬಹುಶಃ ಅವಳ ಅಕೌಂಟು ಹ್ಯಾಕ್ ಆಗಿರಬೇಕು ಅಂದುಕೊಂಡು ಮಾನಸ ಅಂತ ಹೊಡೆದಾಗ ಕಾಣಿಸಿಕೊಂಡ ಮಾನಸಾ ರೆಡ್ಡಿ ಎಂಬ ಹೆಸರನ್ನು ಕ್ಲಿಕ್ ಮಾಡಿದ. ಮೈತುಂಬಿಕೊಂಡ ನೀಲಿ ಟೀ ಶರ್ಟಿನ ಹುಡುಗಿ ಕಾಣಿಸಿಕೊಂಡಳು. ತಿರುಮಲೇಶ ಅವಳ ಪ್ರೊಫೈಲಿನ ಮೇಲಿದ್ದ ಆಡ್‌ಫ್ರೆಂಡ್ ಬಟನ್ ಒತ್ತಿದ. ಮರುಕ್ಷಣವೇ ಮಾನಸಾ ರೆಡ್ಡಿ ನಿಮ್ಮ ಗೆಳೆಯರಾಗಿರಲು ಒಪ್ಪಿದ್ದಾರೆ ಎಂಬ ಸಂದೇಶ ಕಾಣಿಸಿಕೊಂಡಿತು. ತಿರುಮಲೇಶ ಅವಳ ಹೆಸರಿನ ಚಾಟ್ ಬಾಕ್ಸು ಓಪನ್ ಮಾಡಿ ಹಾಯ್ ಅಂತ ಕುಟ್ಟಿದ.”

                                  ******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-೫೭೭ ೪೦೧
3 comments:

ನಟರಾಜು ಎಸ್ ಎಂ said...

ಈ ಬಾರಿ ಬೆಂಗಳೂರಿಗೆ ಬಂದಾಗ ತಮ್ಮ ಪುಸ್ತಕ ಓದಬೇಕು ಎನಿಸುತ್ತದೆ..

ಕಡಲ ತೀರದ ಕಾಡು ಮಲ್ಲಿಗೆ!! said...

reviwe nalle kathe odida haage aytu. chennagide. like,share , comment gala madhye enliightment. face book tilidu mado tappina hage....

ಕಡಲ ತೀರದ ಕಾಡು ಮಲ್ಲಿಗೆ!! said...

reviwe nalle kathe odida haage aytu. chennagide. like,share , comment gala madhye enliightment. face book tilidu mado tappina hage....