Sunday, June 10, 2012

ಜೋಗಿ ಕಾಲಂ- ಉದಯವಾಣಿ ಅಂಕಣ


ಜೀವನದ ಉದ್ದೇಶ ಏನು?
ಹೀಗೆ ಪರ್ಪಸ್ ಹುಡುಕುತ್ತಾ ಹೊರಟವರೆಲ್ಲ ಕೊನೆಗೆ ಹೋಗಿ ಮುಟ್ಟಿದ ಜಾಗದ ಹೆಸರು ಸುಡುಗಾಡುಹಾಗಿದ್ದರೆ ಬದುಕು ಅಷ್ಟೊಂದು ಪರ್ಪಸ್‌ಲೆಸ್ಸಾ? ಯಾವ ಉದ್ದೇಶವೂ ಇಲ್ಲದೇ ನಾವಿಲ್ಲಿ ಇದೀವಾ? ಕಾಡಿನಲ್ಲಿ ದಂಡಿಯಾಗಿ ಬೆಳೆದ ಹುಲ್ಲನ್ನು ಜಿಂಕೆ ತಿನ್ನುತ್ತಾ, ಹೆಚ್ಚಿದ ಜಿಂಕೆಗಳನ್ನು ಹುಲಿ ಕಬಳಿಸುತ್ತಾ, ಹುಲಿಯನ್ನು ಮನುಷ್ಯ ಕೊಲ್ಲುತ್ತಾ, ಮನುಷ್ಯನನ್ನು ಕಾಲ ದಂಡಿಸುತ್ತಾ ಚಕ್ರ ಪೂರ್ಣ. ಇಲ್ಲಿ ಉದ್ದೇಶ ಯಾರದ್ದು? ಪ್ರಕೃತಿಯದೇ? ಹಾಗಿದ್ದರೆ ನಮ್ಮೆಲ್ಲರಿಗಿಂತ ದೊಡ್ಡ ಉದ್ದೇಶ ಪ್ರಕೃತಿಗಿದೆಯೇ? ಅದು ಈ ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿಯೇ ಕಾಮ, ಕ್ರೋಧ, ಲೋಭ, ಮೋಹ, ಮಾತ್ಸರ್ಯಗಳನ್ನು ಬಿತ್ತಿದೆಯೇ? ಹೋಗಲಿ, ಪ್ರಕೃತಿಗಾದರೂ ಅಂಥ ಆಸೆಯೊಂದು ಯಾಕಿರಬೇಕು?
ಹುಡುಕುತ್ತಾ ಹೋದಂತೆ ಎಲ್ಲವೂ ಗೋಜಲಾಗುತ್ತಾ ಹೋಗುತ್ತದೆ. ಹುಟ್ಟಿನಷ್ಟೇ ಬಾಳು ಕೂಡ ಅರ್ಥಹೀನ ಅಂತ ಹೇಳಿದ ಗುರುವೊಬ್ಬ ನೆನಪಾಗುತ್ತಾನೆ. ಇದ್ಯಾವುದರ ಕುರಿತೂ ಯೋಚಿಸದೇ, ಥೇಟ್ ಕರಡಿಯ ಹಾಗೆ, ಜಿಂಕೆಯ ಹಾಗೆ, ಕಾಡು ಮೃಗದ ಹಾಗೆ ಬದುಕಿದ ತಾಯಂದಿರಿದ್ದಾರೆ. ತಮ್ಮ ಮಕ್ಕಳನ್ನು ಪೊರೆಯುತ್ತಾ ಯೌವನವನ್ನು ಕಳಕೊಂಡವರಿದ್ದಾರೆ. ರಾತ್ರಿ ಹಗಲು ಕಷ್ಟಪಟ್ಟು ದುಡಿಯುವ ಯಾರನ್ನೇ ಕೇಳಿ- ಮಕ್ಕಳಿಗೋಸ್ಕರ ಇದನ್ನೆಲ್ಲ ಮಾಡ್ತಿದ್ದೀನಿ ಅನ್ನುತ್ತಾರೆ. ಮಕ್ಕಳಿಗೆ ಅದೆಲ್ಲ ಬೇಕಿರುವುದಿಲ್ಲ ಎಂದು ಗೊತ್ತಿದ್ದು ಕೂಡ, ಮಕ್ಕಳಿಗಾಗಿ ಮಾಡುತ್ತಾರೆ. ಸೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವ ಅದಮ್ಯ ಆಸೆಗಳಲ್ಲಿ ಪುತ್ರೋತ್ಸಾಹವೂ ಒಂದು. ಮಕ್ಕಳಾಗದೇ ಹೋದರೆ ಅದೊಂದು ದುರ್ಭರ ಬದುಕು. ಅದೂ ಸೃಷ್ಟಿಯ ಉದ್ದೇಶಗಳಲ್ಲಿ ಒಂದಾ?
ಪುರಾಣಗಳನ್ನು ನೋಡಿದರೆ ಅಲ್ಲಿ ನಿರುದ್ದಿಶ್ಯ ಜನ್ಮವೇ ಕಾಣಸಿಗದು. ಪ್ರಸಿದ್ಧರಾದವರೆಲ್ಲರ ಹುಟ್ಟಿಗೂ ಒಂದು ಕಾರಣ, ಒಂದು ಕುಂಟು ನೆಪ. ತನ್ನನ್ನು ದ್ರೋಣ ಅವಮಾನಿಸಿದ ಎಂಬ ಕಾರಣಕ್ಕೆ ದ್ರುಪದ ತಪಸ್ಸು ಮಾಡುತ್ತಾನೆ. ದ್ರೋಣನನ್ನು ಕೊಲ್ಲುವ ಮಗನನ್ನೂ ಅರ್ಜುನನನ್ನು ಮದುವೆಯಾಗುವ ಮಗಳನ್ನೂ ಕರುಣಿಸುವಂತೆ ಕೇಳಿಕೊಳ್ಳುತ್ತಾನೆ. ದೃಷ್ಟದ್ಯುಮ್ನ-ದ್ರೌಪದಿಯರ ಜನನವಾಗುತ್ತದೆ. ಅಲ್ಲಿಗೆ ಅವರ ಹುಟ್ಟಿನ ಉದ್ದೇಶ ಅವರದ್ದಲ್ಲ, ದ್ರುಪದನದು. ಅವರಿಬ್ಬರೂ ಆಯುಧಗಳು ಮಾತ್ರ.
ಹಾಗಿದ್ದರೆ ಅವರಿಬ್ಬರ ಸ್ವಂತ ನೋವು-ನಲಿವುಗಳೇನು? ದುಗುಡಗಳೇನು? ಅವರೇಕೆ ಕಷ್ಟಪಡಬೇಕು? ಸ್ವಂತ ಉದ್ದೇಶವೇ ಇಲ್ಲದೇ ಹುಟ್ಟಿದ ದ್ರೌಪದಿ ಪಂಚಪಾಂಡವರನ್ನು ಮದುವೆಯಾಗಿ, ವಸಾಪಹರಣಕ್ಕೆ ಗುರಿಯಾಗಿ, ಪಡಬಾರದ ಪಾಡು ಪಟ್ಟಿದ್ದರ ಹಿಂದೆ ಇರುವ ಪರ್ಪಸ್, ಆಕೆಯದ್ದಲ್ಲ ಅವಳ ಅಪ್ಪನದು.
ಹೀಗೆ ಯಾರದೋ ಉದ್ದೇಶಕ್ಕೋಸ್ಕರ ನಾವು ಸವೆಯುತ್ತಾ ಹೋಗುತ್ತೇವಾ? ಅದರೊಳಗೆ ನಮ್ಮದೊಂದು ಉದ್ದೇಶ ಇಟ್ಟುಕೊಂಡು ಬದುಕುತ್ತೇವಾ? ಶ್ರೀರಾಮನ ಕತೆಯನ್ನೇ ತೆಗೆದುಕೊಳ್ಳಿ. ಅವನ ಉದ್ದೇಶ ದುಷ್ಟಶಿಕ್ಷಣ. ಅದಕ್ಕೋಸ್ಕರ ಆತ ಅವತಾರ ಎತ್ತಿ ಬರುತ್ತಾನೆ. ಶ್ರೀರಾಮನ ಜನನ ಆಗುವ ತನಕ ರಾವಣ ತಪ್ಪು ಮಾಡಿದ್ದಕ್ಕೆ ಉದಾಹರಣೆ ಇಲ್ಲ. ಅವನು ಬ್ರಹ್ಮರ್ಷಿಯಾಗಿದ್ದವನು, ದೈವ ಭಕ್ತ. ತನ್ನ ಪ್ರಜೆಗಳನ್ನು ಸುಖವಾಗಿ ನೋಡಿಕೊಳ್ಳುತ್ತಿದ್ದ. ಯಾರಿಗೂ ಕಷ್ಟ ಕೊಟ್ಟಿರಲಿಲ್ಲ. ಅವನ ಸಂಹಾರಕ್ಕೋಸ್ಕರ ಶ್ರೀರಾಮನ ಜನನ ಆಯ್ತು ಅನ್ನುವುದಕ್ಕೆ ರಾವಣ ತಪ್ಪಿತಸ್ಥನಲ್ಲ.
ಶ್ರೀರಾಮನ ಜನನ ಆಗಿ, ಅವನು ಸೀತೆಯನ್ನು ಮದುವೆ ಆದ ನಂತರ ರಾವಣ ಆಕೆಯನ್ನು ಅಪಹರಿಸುತ್ತಾನೆ. ಶ್ರೀರಾಮನ ಅವತಾರ ಸಂಭವಿಸದೇ ಹೋಗಿದ್ದರೆ ರಾವಣ ಕೆಟ್ಟವನಾಗುತ್ತಿರಲಿಲ್ಲ ಅಂದ ಹಾಗಾಯಿತು. ಅಂದ ಮೇಲೆ ರಾಮನ ಪರ್ಪಸ್ ಏನು? ಕೃಷ್ಣಾವತಾರದ ಕತೆಯೂ ಅದೇ. ಕಂಸನ ದ್ವೇಷ ಇದ್ದದ್ದೆ ಕೃಷ್ಣನ ಹುಟ್ಟಿನ ಕುರಿತು. ಅದನ್ನು ಬಿಟ್ಟರೆ ಅವನು ಅಂಥ ಧೂರ್ತನೇನಲ್ಲ. ಇದೀಗ ಮತ್ತೆ ಉದ್ದೇಶದ ಪ್ರಶ್ನೆ.
--
ಈ ಮಧ್ಯೆ ಒಂದು ಪುಟ್ಟ ಕತೆ ಕೇಳಿ. ಕತೆಯ ಹೆಸರು ಕ್ರಾಸ್ ಪರ್ಪಸ್. ಇದನ್ನು ನಾಟಕವಾಗಿ ಬರೆದವನು ಆಲ್ಬರ್ಟ್ ಕಮೂ. ಇಡೀ ಜೀವನದ ಉದ್ದೇಶವನ್ನು ಬುಡಮೇಲು ಮಾಡಬಲ್ಲ ದುರಂತ ಕತೆಯೊಂದು ಇದರೊಳಗೆ ಅಡಗಿದೆ. ಇಡೀ ಬದುಕೇ ಅಸಂಗತ ಅನ್ನುವ ಕಮೂ ಪ್ರಕಾರ ಜೀವನಕ್ಕೆ ಉದ್ದೇಶವೇ ಇಲ್ಲ. ಅದು ನಡೆದುಕೊಂಡು ಹೋಗುತ್ತಾ ಇರುತ್ತದೆ. ಅದಕ್ಕೆ ಅವನೊಂದು ಸೊಗಸಾದ ಉದಾಹರಣೆ ಕೊಡುತ್ತಾನೆ. ಸಿಸಿ-ಸ್ ಎಂಬ ಶಾಪಗ್ರಸ್ತ ವ್ಯಕ್ತಿಗೆ ಸಿಕ್ಕ ಕೆಲಸ ಎಂದರೆ ಚೂಪಾದ ಬೆಟ್ಟದ ತುದಿಗೆ ಉರುಟಾದ ಬಂಡೆಗಲ್ಲೊಂದನ್ನು ಉರುಳಿಸಿಕೊಂಡು ಹೋಗುವುದು. ಅದನ್ನು ಬೆಟ್ಟದ ತುದಿಯಲ್ಲಿ ಇಟ್ಟು ಬರುವುದು. ಆ ಬೆಟ್ಟ ಎಷ್ಟು ಕಡಿದಾಗಿದೆ ಹಾಗೂ ಕಲ್ಲು ಎಷ್ಟು ಉರುಟಾಗಿದೆ ಎಂದರೆ ಆತ ಕಷ್ಟಪಟ್ಟು ಅದನ್ನು ಬೆಟ್ಟದ ತುದಿಗೆ ಸಾಗಿಸಿದಂತೆಲ್ಲ ಅದು ಉರುಳಿ ಬೆಟ್ಟದ ಬುಡದಲ್ಲಿ ಬಂದು ಬಿದ್ದಿರುತ್ತದೆ. ಮತ್ತೆ ಅವನ ಕೈಂಕರ್ಯ ಶುರು. ಪ್ರಕೃತಿ ಉರುಳಿಸುತ್ತದೆ. ಪುರುಷ ತುದಿಗೆ ಒಯ್ಯುತ್ತಾನೆ. ಉದ್ದೇಶ ಅಷ್ಟೇ. ನಾವೆಲ್ಲ ಅಂಥದ್ದೇ ನಿರುಪಯುಕ್ತವಾದ, ನಿರುದ್ದಿಶ್ಯವಾದ ಆದರೆ ಯಾರಿಂದಲೋ ನಿಯಮಿಸಲ್ಪಟ್ಟ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನಾವೇನು ಯೋಚಿಸಬೇಕಾಗಿಲ್ಲ. ಶಾಪಗ್ರಸ್ತರು ಅಂದುಕೊಂಡು ಸುಮ್ಮನೆ ಕೆಲಸ ಮಾಡಿದರಾಯಿತು ಅನ್ನೋದು ಅವನ ಒಂದು ಸಿದ್ಧಾಂತ. ನಮ್ಮ ಕರ್ಮಸಿದ್ಧಾಂತಕ್ಕೆ ಇದು ಹತ್ತಿರವಾದದ್ದೂ ಹೌದು.
ಅವನ ಕ್ರಾಸ್ ಪರ್ಪಸ್ ನಾಟಕ ಮತ್ತಷ್ಟು ಗಾಢವಾಗಿದೆ. ಒಂದು ಹಳ್ಳಿಯ ಒಂಟಿ ಮನೆಯಲ್ಲಿ ತಾಯಿ ಮಗಳು ಇದ್ದಾರೆ. ಮಗ ದೂರದೇಶಕ್ಕೆ ಹೋಗಿದ್ದಾನೆ. ಚಿಕ್ಕಂದಿನಲ್ಲೇ ಮನೆ ಬಿಟ್ಟು ಓಡಿ ಹೋಗಿದ್ದಾನೆ. ತಾಯಿ ಮಗಳು ಬಡತನದಲ್ಲಿದ್ದಾರೆ. ಆ ಹಾದಿಯಲ್ಲಿ ಹಾದುಹೋಗುವವರಿಗೆ ಮಲಗಲು ಜಾಗ, ಊಟ ತಿಂಡಿ ಕೊಟ್ಟು ಅದರಿಂದ ಬರುವ ಹಣದಿಂದ ಹೊಟ್ಟೆಹೊರೆಯುತ್ತಿರುತ್ತಾರೆಆ ಕಷ್ಟಕಾರ್ಪಣ್ಯ ಅವರನ್ನು ಕಟುವಾಗಿಸಿದೆ, ಅವರಲ್ಲಿ ಯಾವ ಪ್ರೀತಿಯೂ ಉಳಿದಿಲ್ಲ. ಈ ಮಧ್ಯೆ ಮಗನ ಪತ್ರ ಬರುತ್ತದೆ. ನಾನು ಮುಂದಿನ ವಾರ ಮನೆಗೆ ಬರುತ್ತಿದ್ದೇನೆ ಎಂದು ಮಗ ಬರೆದಿದ್ದಾನೆ. ತಾಯಿ-ಮಗಳು ಖುಷಿಯಾಗುತ್ತಾರೆ. ಬರುವ ಮಗನನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಈಗ ಅವರ ಜೀವನಕ್ಕೊಂದು ಉದ್ದೇಶ ಬಂದಿದೆ.
ಮಗನಿಗೋಸ್ಕರ ಒಳ್ಳೆಯ ತಿಂಡಿ, ಒಳ್ಳೆಯ ಬಟ್ಟೆ, ಚೆಂದಗೆ ಅಲಂಕಾರಗೊಂಡ ಮನೆ ಇವೆಲ್ಲ ಬೇಕು ಅಂತ ತಾಯಿಮಗಳಿಗೆ ಅನ್ನಿಸುತ್ತದೆ. ಆದರೆ ಬಡತನದಲ್ಲಿ ಅದೆಲ್ಲ ಸಾಧ್ಯವಾಗುವುದಿಲ್ಲ. ಏನಾದರೂ ಮಾಡಬೇಕು ಅಂತ ಯೋಚಿಸುತ್ತಿರುವ ಹೊತ್ತಿಗೆ  ಅವರ ಮನೆಗೊಬ್ಬ ಶ್ರೀಮಂತ ಗಿರಾಕಿ ಬರುತ್ತಾನೆ. ಅವನು ರಾತ್ರಿ ಅಲ್ಲಿ ಉಳಿಯುತ್ತೇನೆ ಎಂದು ಹೇಳುತ್ತಾನೆ.
ರಾತ್ರಿ ತಾಯಿ ಮಗಳು ಒಂದು ಕ್ರೂರ ಯೋಚನೆ ಮಾಡುತ್ತಾರೆ. ಮಗನನ್ನು ಸ್ವಾಗತಿಸಲು ಹಣ ಬೇಕು. ಈಗ ಬಂದಿರುವ ಗಿರಾಕಿ ಶ್ರೀಮಂತನಂತೆ ಕಾಣುತ್ತಾನೆ. ಅವನನ್ನು ಕೊಂದು ಅವನಲ್ಲಿರುವ ಹಣ ದೋಚಿಬಿಡೋಣ. ಅದೊಂದೇ ದಾರಿ. ಇದೊಂದೇ ಒಂದು ಕೊಲೆ ಮಾಡಿದರೆ ಸಾಕು, ನಾವೆಲ್ಲರೂ ಸುಖವಾಗಿರುತ್ತೇವೆ. ಮಗನೂ ಸಂತೋಷಪಡುತ್ತಾನೆ. ಹಾಗಂದುಕೊಂಡು ಆ ರಾತ್ರಿ ತಾಯಿ ಮಗಳೂ ಅವನನ್ನು ಕೊಲ್ಲುತ್ತಾರೆ.
ಅವನೇ ಚಿಕ್ಕಂದಿನಲ್ಲಿ ಓಡಿಹೋದ ಮಗ ಅನ್ನೋದು ಮಾರನೇ ದಿನ ಅವನ ಗೆಳೆಯ ಬಂದಾಗ ಗೊತ್ತಾಗುತ್ತದೆ. ತನ್ನ ತಾಯಿ ಅಕ್ಕ ಯಾವ ಸ್ಥಿತಿಯಲ್ಲಿದ್ದಾರೆ ಎಂದು ನೋಡುವುದಕ್ಕೆ ಅವನು ಅಲ್ಲಿಗೆ ಅತಿಥಿಯ ರೂಪದಲ್ಲಿ ಬಂದಿರುತ್ತಾನೆ. ಮಗನಿಗೋಸ್ಕರ ಮಗನನ್ನೇ ಕೊಲ್ಲುತ್ತಾಳೆ ಆ ತಾಯಿ.
ಕ್ರಾಸ್ ಪರ್ಪಸ್ ಅಂದರೆ ಇದು. ಉದ್ದೇಶದ ಉದ್ದೇಶವೇ ವ್ಯತಿರಿಕ್ತವಾಗುವುದು. ಅಂದುಕೊಂಡದ್ದು ಆಗದೇ ಹೋಗುವುದು.
--
ಮತ್ತೆ ನಮ್ಮ ಜೀವನದ ಉದ್ದೇಶವೇನು ಎಂಬ ಪ್ರಶ್ನೆಗೆ ಬಂದರೆ ನಿರುತ್ತರ. ಅವಧೂತರೊಬ್ಬರು ಹೇಳುತ್ತಿದ್ದ ಮಾತು ನೆನಪಾಗುತ್ತದೆ. ನಾವು ಜೀವನ ಪೂರ್ತಿ ದುಡಿಯುತ್ತೇವೆ. ಏನೋ ಮಹತ್ತಾದುದನ್ನು ಸಾಽಸುತ್ತೇವೆ ಎಂದುಕೊಂಡು ಹೋರಾಡುತ್ತಿರುತ್ತೇವೆ. ಹೊಡೆದಾಟ, ಜಗಳ, ಕದನ, ಸ್ನೇಹ, ಪ್ರೇಮ, ಕಾಮ- ಹೀಗೆ ವಿವಿಧ ಭಾವನೆಗಳು ನಮ್ಮಲ್ಲಿ ಮೂಡಿ ಮರೆಯಾಗುತ್ತವೆ. ಅವುಗಳೇ ನಮ್ಮನ್ನು ನಿಯಂತ್ರಿಸುವುದೂ ಉಂಟು, ಆದರೆ ಅದ್ಯಾವುದೂ ತಪ್ಪಲ್ಲ. ನಮ್ಮ ಜೀವನದ ಉದ್ದೇಶ ನಮಗೆ ಗೊತ್ತಾಗಕೂಡದು.
ಗೊತ್ತಾಗಿಬಿಟ್ಟರೆ, ಆ ಉದ್ದೇಶ ಮುಗಿದ ನಂತರ ನಾವು ಬದುಕಿರುವ ಅಗತ್ಯ ಇರುವುದಿಲ್ಲ. ಉದಾಹರಣೆಗೆ ಹುಟ್ಟಿ, ಒಂದು ಮನೆ ಕಟ್ಟುವುದು ನಿನ್ನ ಉದ್ದೇಶ ಎಂದು ಗೊತ್ತಾಗಿಬಿಟ್ಟಿತು ಅಂತಿಟ್ಟುಕೋ. ಮನೆ ಕಟ್ಟಿದ ನಂತರ ನಿನ್ನ ಜೀವನದ ಉದ್ದೇಶ ಮುಗಿಯಿತು. ಆಮೇಲೆ ನಿನಗಿಲ್ಲಿ ಕೆಲಸ ಇಲ್ಲ. ನೀನು ಸಾಯಲೇಬೇಕು. ಅದೇ ಉದ್ದೇಶ ಗೊತ್ತಿಲ್ಲ ಅಂತಿಟ್ಟುಕೋ, ಆಗ ನೀನು ಚಿರಂಜೀವಿಯಾಗಬೇಕು ಅಂದುಕೊಳ್ಳುತ್ತಿ. ಬದುಕುತ್ತಾ ಹೋಗುತ್ತಿ. ಸಾವೆಂಬ ಪರಕೀಯ ನಿನ್ನ ಹಿಂದಿದ್ದಾನೆ ಅನ್ನುವುದನ್ನು ಮರೆಯುತ್ತಿ.
ಅದೂ ನಿಜವೇ. ಅವತಾರಗಳಿಗೆ ಉದ್ದೇಶಗಳಿರುತ್ತವೆ, ಶಿವ ತನ್ನ ಜಟೆಯನ್ನು ಕೊಡವಿ ಮಹಾಕಾಲನನ್ನು ಸೃಷ್ಟಿಸಿದ ಹಾಗೆ. ಅವನ ಉದ್ದೇಶ ಯಾರೋ ಒಬ್ಬನನ್ನು ಕೊಂದುಬರುವುದು ಮಾತ್ರ. ಅಲ್ಲಿಗೆ ಅವನ ಬದುಕಿನ ಉದ್ದೇಶವೂ ಮುಗಿದಂತೆ.
ಬದುಕುವುದಕ್ಕೆ ಇರುವ ಕಾರಣಗಳನ್ನು ಸಾಯುವುದಕ್ಕೆ ಇರುವ ಕಾರಣಗಳೆಂದು ಭಾವಿಸುವುದಕ್ಕೂ ಅಡ್ಡಿಯಿಲ್ಲ. ನಾನೇಕೆ ಬದುಕುತ್ತೇನೆ ಎಂಬ ಪ್ರಶ್ನೆ ಮನುಷ್ಯನನ್ನು ಬಿಟ್ಟರೆ ಮತ್ತಾವ ಜೀವಿಗೂ ಹುಟ್ಟುವುದೇ ಇಲ್ಲವೇನೋ? ನಮ್ಮನ್ನು ಒಂಥರದ ಆಧ್ಯಾತ್ಮಿಕತೆ, ವೈರಾಗ್ಯ ಮತ್ತು ಬೌದ್ಧಿಕತೆ ಅಟ್ಟಿಸಿಕೊಂಡು ಬರುತ್ತಿರುತ್ತದೆ. ನಾವು ನಮ್ಮ ಓದು, ಚಿಂತನೆ ಮತ್ತು ಗ್ರಹಿಕೆಯ ಮೂಲಕ ನಮ್ಮನ್ನೇ ಮೀರುವ ಪ್ರಯತ್ನ ಮಾಡುತ್ತಿರುತ್ತೇವಾ?
ಏನು ನಿನ್ನ ಜೀವನದ ಉದ್ದೇಶ ಎಂದು ಯಾರಾದರೂ ಕೇಳಿದರೆ ಜೀವಿಸುವುದು ಅಂತ ಸರಳವಾಗಿ ಹೇಳಿದರೆ ಸಾಕು. ಆದರೆ ಜೀವಿಸುವುದು ಎಂಬುದೇ ನೂರೆಂಟು ರಗಳೆಗಳನ್ನು ಒಳಗೊಂಡಿದೆ. ಅದರ ಬದಲು ಸಾಯುವುದು ಅಂತ ಹೇಳಿದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ. ಜೀವಿಸುವುದರ ಮತ್ತೊಂದು ತುದಿಯಲ್ಲಿ ಸಾವು ಕಾಯುತ್ತಿದೆ.
ಪ್ರೀತಿಸುವ ತಾಯಿಯೇ ಆ ಪ್ರೀತಿಗೋಸ್ಕರ ಮಗನನ್ನು ಕೊಲ್ಲುತ್ತಾಳೆ. ತಾಯಿ ಪ್ರೀತಿಯನ್ನು ಅರಿಯಲೆಂದು ರಹಸ್ಯವಾಗಿ ಬರುವ ಮಗ, ಅವಳ ಪ್ರೀತಿಯನ್ನು ಸಾವಿನಲ್ಲಿ ಅರಿಯುತ್ತಾನೆ. ತನ್ನ ತಾಯಿ ತನ್ನನ್ನು ತನಗೋಸ್ಕರ ಕೊಂದಳೆಂದು ಅವನಿಗೆ ಕೊನೆಯ ಕ್ಷಣದ ತನಕವೂ ಅರಿವಾಗದೇ ಹೋದದ್ದೆ ಅವನ ಜೀವನದ ಉದ್ದೇಶ ಇದ್ದಿರಬಹುದೇ?3 comments:

ಚುಕ್ಕಿಚಿತ್ತಾರ said...

ಯೋಚನೆ ಮಾಡುತ್ತಾ ಹೋದರೆ ಯಾವುದಕ್ಕೆ ಯಾವ ಉದ್ದೇಶ ಒ೦ದೂ ಅರ್ಥವೇ ಆಗುವುದಿಲ್ಲ. ಉದ್ದೇಶ ಮುಗಿದ ಮೇಲೆ ಮತ್ತೊ೦ದು ಉದ್ದೇಶವನ್ನು ಮನುಶ್ಯ ಹುಡುಕಿಕೊಳ್ಳುತ್ತಾನೆಯೇ ಬದುಕಿಕೊಳ್ಳಲಿಕ್ಕಾಗಿ? ರಾವಣನನ್ನು ಕೊ೦ದು ಸೀತೆಯ ಜೊತೆಗೆ ಸುಖ ಸ೦ಸಾರ ಮಾಡುವ ಬದಲು ಯಾರದ್ದೋ ಮಾತು ಕೇಳಿ ಸೀತೆಯನ್ನು ಕಾಡಿಗೆ ಕಳುಹಿಸಿದ್ದು ಮತ್ತೆ ತನ್ನ ಮಕ್ಕಳೊ೦ದಿಗೆ ಯುದ್ಧ ಮಾಡಿ ಸೋಲುವ ಉದ್ದೇಶಕ್ಕ....?

ನಾನಾದರೂ ಈ ಲೇಖನಕ್ಕೆ ಕಾಮೆ೦ಟು ಮಾಡಿದ್ದು ಯಾವ ಉದ್ದೇಶಕ್ಕಾಗಿ..? ನಾನೂ ಓದಿದ್ದೇನೆ ಅ೦ತ ಎಲ್ಲರಿಗೂ ಗೊತ್ತಾಗಲಿಕ್ಕ..? ಗೋಜಲಾಗುತ್ತಿದೆ..!! :)

ಯಾವುದೇ ಉದ್ದೇಶವಾದರೂ ಆಗಲಿ. ಓದಿ ಖುಶಿ ಅ೦ತೂ ಆಯ್ತು.

Deepak said...

Good blog on life and its purpose. It is a question that haunts everyone.

Swathi Pallatadka said...

'ನಮ್ಮ ಜೀವನದ ಉದ್ದೇಶವೇನು ಎಂಬ ಪ್ರಶ್ನೆಗೆ ಬಂದರೆ ನಿರುತ್ತರ' - set dreams to achieve, and then one'll definetly 've an answer for purpose to live! this is one life to live!

getting a degree, working a 9-5 job, a family to live with - that's all not what life is about. getting stuck in this routine, is perhaps something which leads to not having an answer to life's purpose.


so, rise up! it's about what i want, what i do in this one life. what i do to channelize myself, to move in the path of accomplishing my dreams. how i change myself to be a better person, everyday. living this moment.

life definetly has a purpose! it depends on us whether to reach out to it and fly or stay in coccoon!!