ತರಗಲೆ ಬಿದ್ದ ಕಾಡು. ಕಾಲಡಿಯಲ್ಲಿ ಮೆತ್ತೆ ಹಾಸಿದ ಹಾಗೆ ಒಣಗಿದ ಎಲೆಗಳು ರಾಶಿ ರಾಶಿ. ಅದರ ಮೇಲೆ ಹೆಜ್ಜೆಯಿಟ್ಟರೆ ಚರಬರ ಸದ್ದು. ಸದ್ದಾಗದಂತೆ ನಡೆಯಲು ಯತ್ನಿಸಿದರೆ ಕೆದಂಬಾಡಿ ಜತ್ತಪ್ಪ ರೈಗಳ ನೆನಪು. ಅವರು ಓಡಾಡಿದ ಜಾಗಗಳಿವು. ಸುಳ್ಯ ಪುತ್ತೂರು ಪಂಜ ಶಿರಾಡಿ ವೇಣೂರಿನ ಕಾಡುಗಳು. ಇಲ್ಲಿಗೆ ಯಾವ ಕೆನ್ನೆತ್ ಅಂಡರ್ಸನ್ನೂ ಬರಲಿಲ್ಲ. ಜಿಮ್ ಕಾರ್ಬೆಟ್ ಕಾಲಿಟ್ಟಿರಲಿಲ್ಲ. ಶ್ರೀಮಂತರಾದ ಬಂಟರು ಇಲ್ಲಿಯ ಕಾಡು ಪ್ರಾಣಿಗಳನ್ನು ನಿಯಂತ್ರಿಸಿದ್ದು. ಅವರು ಕೊಂದ ಹುಲಿಗಳ ಲೆಕ್ಕ ಯಮ ನೋಡಿ ನಕ್ಕ!
ಹುಲಿ ಕೊಂದವರ ನಾಡಿನಿಂದಲೆ ಬಂದವರು ಹುಲಿ ಸಂರಕ್ಷಣೆಯ ಉಲ್ಲಾಸ ಕಾರಂತರು. ಎರಡು ಪರಸ್ಪರ ವಿರುದ್ಧ ಕಾಲಘಟ್ಟದ ನಿಲುವನ್ನು ಗಮನಿಸಿ. ಒಂದು ಕಾಲದಲ್ಲಿ ಹುಲಿ ಕೊಲ್ಲುವುದು ಅನಿವಾರ್ಯವಾಗಿತ್ತು. ಈ ಉಳಿಸುವುದು ಅನಿವಾರ್ಯವಾಗಿದೆ. ಹಾಗಿದ್ದರೂ ಮಡಿಕೇರಿಯಲ್ಲೊಂದು ನರಭಕ್ಷಕ ಹುಲಿ ಸೇರಿಕೊಂಡಿದೆಯಂತೆ. ಅದನ್ನು ಕೊಲ್ಲುವುದಕ್ಕೂ ಅಪ್ಪಣೆ ಸಿಕ್ಕಿದೆಯಂತೆ.
ಕಾಡನ್ನು ಯಾರೂ ಗುಡಿಸುವುದಿಲ್ಲ. ಹೀಗಾಗಿ ಬಿದ್ದ ಎಲೆಯೆಲ್ಲ ಮಳೆಗಾಲದಲ್ಲಿ ಕೊಳೆತು ಮಣ್ಣಾಗಿ, ಮರಕ್ಕೆ ಗೊಬ್ಬರವಾಗಿ ಅಷ್ಟರ ಮಟ್ಟಿಗೆ ಪ್ರತಿಮರವೂ ಸ್ವಾವಲಂಬಿ. ಆ ಮಣ್ಣಲ್ಲಿ ಹುಟ್ಟಿ ಸಾಯುವ ಹೆಸರಿಲ್ಲದ ಗಿಡಗಳೂ ಗೊಬ್ಬರವಾಗಿಯೇ ಸಲ್ಲುತ್ತವೆ. ಆಷಾಢದ ಗಾಳಿ ಆ ತರಗೆಲೆಗಳನ್ನು ಹಾರಿಸಿಕೊಂಡು ಹೋಗಿ, ಮೊದಲ ಮಳೆಗೆ ಅವು ಕೊಚ್ಚಿಕೊಂಡು ಹೋಗಿ ಹತ್ತಿರದ ನದಿಯನ್ನು ಸೇರಿದರೂ ಹಾಗೆ ಹೋಗುವುದು ಸಾಸಿವೆ, ಉಳಿಯುವುದು ಸಾಸಿರ.
ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಾಡುಗಳು ಮೊದಲಿನ ಕಾಡುಗಳಾಗಿ ಉಳಿದಿಲ್ಲ. ಮೊನ್ನೆ ಮೊನ್ನೆ ಮಂಗಳೂರಿನ ಅತ್ರಿ ಬುಕ್ಹೌಸ್ನ ಅಶೋಕ ವರ್ಧನ ಹೇಳುತ್ತಿದ್ದರು. ಬಿಸಲೆ ಘಾಟಿಯಲ್ಲಿ ಬಿಸಲೆ ಹಳ್ಳಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಬಲಕ್ಕೊಂದು ರಸ್ತೆ ಮಾಡಿದ್ದಾರೆ. ಆ ರಸ್ತೆಯಲ್ಲಿ ಸಾಗಿ, ಅದರ ತುದಿ ತಲುಪಿದರೆ ಕುಮಾರಧಾರಾ ನದಿಯ ಪೂರ್ತಿ ಹರಿವು ಕಾಣಿಸುತ್ತದೆ. ಅಂಥ ಜಾಗದಲ್ಲೇ ಯಾರೋ ರೆಸಾರ್ಟ್ ಮಾಡುವುದಕ್ಕೆಂದು ಎಷ್ಟೋ ಎಕರೆ ಕೊಂಡು ಕೊಂಡಿದ್ದಾರೆ. ಅಲ್ಲಿ ರೆಸಾರ್ಟ್ ಕೆಲಸ ಶುರುವಾಗಿಲ್ಲ, ಆದರೆ ಆಗಲೇ ರಸ್ತೆ ಮಾಡಿಟ್ಟಾಗಿದೆ. ಇವತ್ತಲ್ಲ ನಾಳೆ ಅದೂ ಶುರುವಾಗುತ್ತದೆ. ಸರ್ಕಾರ ಪರ್ಮಿಶನ್ ಕೊಡುವ ಹೊತ್ತಿಗೆ ಹಿಂದೆ ಮುಂದೆ ನೋಡುವುದಿಲ್ಲ.
ಬಿಸಲೆ ಘಾಟಿಯಲ್ಲಿ ಅವರದೊಂದು ಕಾಡಿದೆ. ಅಲ್ಲಿ ಓಡಾಡಿದ ಫೋಟೋಗಳನ್ನು ನೋಡುತ್ತಿದ್ದಾಗ ಖುಷಿಯಾಯಿತು. ಅಲ್ಲೊಂದು ಕಾಡು ಕೊಂಡಿದ್ದಾರೆ ಅವರು. ಕಾಡು ಕೊಂಡುಕೊಂಡಾಗ ಎಲ್ಲರೂ ಕೇಳಿದ್ದು ಒಂದೇ ಪ್ರಶ್ನೆ: ಇದರಿಂದ ಆರ್ಥಿಕವಾಗಿ ಏನು ಉಪಯೋಗ? ಹಾಕಿದ ದುಡ್ಡು ಹೇಗೆ ಪಡೆಯುತ್ತೀರಿ ಅಂತ? ಎಲ್ಲರೂ ನೋಡುವುದು ಅದೊಂದನ್ನೇ. ಹಾಕಿದ ದುಡ್ಡು ವಾಪಸ್ಸು ಬಂದುಬಿಡಬೇಕು ಅದೇ ರೂಪದಲ್ಲಿ. ಸಲೀಮ್ ಆಲಿ ಜೀವವೈವಿಧ್ಯಕ್ಕೆ ಅದಮ್ಯ ತಾಣವಾಗಬಹುದಾಗಿದ್ದ ದೊಡ್ಡ ಮರವೊಂದನ್ನು ತೋರಿಸಿದಾಗ ಅವರ ಜೊತೆಗೆ ಬಂದಿದ್ದ ವ್ಯಕ್ತಿ ಅದನ್ನು ಕಡಿದರೆ ಎಷ್ಟು ಲಾರಿ ಲೋಡು ಸೌದೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದನಂತೆ. ಅವರವರು ನೋಡುವ ಕ್ರಮವೇ ಬೇರೆ. ದೃಷ್ಟಿಕೋನವೇ ಬೇರೆ ಎಂದು ಅಶೋಕ ವರ್ಧನ ನಿಟ್ಟುಸಿರಿಟ್ಟರು.
******
ನೀವು ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ಶಿರಾಡಿ ಘಾಟಿ ಇಳಿದ ತಕ್ಷಣ ಗುಂಡ್ಯ ಎಂಬ ಚಿಕ್ಕ ಊರು ಸಿಗುತ್ತದೆ. ಅದಕ್ಕೂ ಎರಡು ಕಿಲೋಮೀಟರ್ ಹಿಂದೆ ಸಿಗುವ ಹೆಸರಿಲ್ಲದ ಪುಟ್ಟ ಹೊಟೆಲಿನಲ್ಲಿ ನೀವು ಹುರಿದ ಮೀನು, ಬಿಸಿಬಿಸಿ ಕುಸಬಲಕ್ಕಿ ಅನ್ನ ತಿಂದು ನಿಮ್ಮ ಪ್ರಯಾಣ ಶುರುಮಾಡಬಹುದು. ಸಂಜೆಯ ತನಕ ಅದು ನಿಮ್ಮನ್ನು ಉಲ್ಲಸಿತರನ್ನಾಗಿಡುತ್ತದೆ.
ಗುಂಡ್ಯದಲ್ಲಿ ನೀವು ಬಸ್ಸಿನಿಂದಲೋ ನಿಮ್ಮ ಕಾರಿನಿಂದಲೂ ಇಳಿದು, ಅಲ್ಲೊಂದು ಜೀಪು ಬಾಡಿಗೆಗೆ ಪಡೆದುಕೊಂಡೋ, ಅಲ್ಲಿರುವ ಮಲಯಾಳಿ ಅಂಗಡಿಯಲ್ಲಿ ದಾರಿ ತಿಳಿದುಕೊಂಡು ನಡೆದುಕೊಂಡೋ ಹೋಗಿ ಬರಬಹುದಾದ ಎರಡು ಜಾಗಗಳಿವೆ. ಒಂದು ಅರಬೆಟ್ಟ, ಇನ್ನೊಂದು ಶಿರಿಬಾಗಿಲು.
ಇವೆರಡನ್ನು ತಲುಪಬೇಕಾದರೆ ಕಾಡಿನ ನಡುವೆ ನಡೆದುಕೊಂಡೇ ಹೋಗಬೇಕು. ಅದನ್ನು ಟ್ರೆಕಿಂಗ್ ಅಂದುಕೊಂಡೋ ಸಾಹಸ ಅಂದುಕೊಂಡೋ ಆದಷ್ಟು ಬೇಗ ಹೋಗಿ ಬರಬೇಕಾದ ಜಾಗ ಅಂದುಕೊಂಡೋ ಹೋಗಬೇಡಿ. ಸುಮಾರು ಎಂಟು ಕಿಲೋಮೀಟರ್ ನಡೆಯುವುದಕ್ಕೆ ತಯಾರಿದ್ದವರು ಯಾರು ಬೇಕಾದರೂ ಹೋಗಬಹುದಾದ ಜಾಗ ಇದು.
ಅಲ್ಲೇನಿದೆ ಎಂದು ಕೇಳುವುದಕ್ಕಿಂತ ನಡೆದು ಹೋಗುವ ಹಾದಿಯನ್ನು ಸವಿಯುವುದು ಒಳ್ಳೆಯದು. ಕಾಡನ್ನು ನೋಡಬಾರದು, ಕಾಡಿನ ಒಂದು ಭಾಗವೇ ಆಗಿಬಿಡಬೇಕು. ಅಲ್ಲಿ ಬಿದ್ದ ನೆರಳು, ಕಾಲಡಿಯ ತರಗೆಲೆ, ಹಾದಿಯಲ್ಲದ ಹಾದಿ, ಏದುಸಿರು ತರುವ ಏರು ಇವೆಲ್ಲದರ ನಡುವೆ ನಡೆಯುತ್ತಾ ಕೊನೆಗೆ ತಲುಪಿದರೆ ಅಲ್ಲಿ ಕಾಣಿಸುವುದು ಶಿರಿಬಾಗಿಲು ಎಂಬ ಹಳದಿ ಬೋರ್ಡು. ಅದರೆದುರು ಅನಾಥವಾಗಿ ಬಿದ್ದಂತೆ ಕಾಣುವ ಜೋಡಿ ರೇಲ್ವೆ ಹಳಿ.
ಆ ಕಾಡಿನ ನಡುವೆ ಒಂದು ರೇಲ್ವೆ ಸ್ಟೇಷನ್ನು ಯಾಕಿರಬೇಕು. ಅಲ್ಲೊಬ್ಬ ಬಿಹಾರಿ ಸ್ಟೇಷನ್ ಮಾಸ್ಟರ್ ಯಾಕೆ ಹಾಗೆ ನಿದ್ರಾವಸ್ಥೆಯಲ್ಲಿ ಕೂತಿದ್ದಾನೆ. ಹೊರಗಿನ ಬೆಂಚಿನ ಮೇಲೆ ಮಲಗಿರುವ ಕುರುಚಲು ಗಡ್ಡದ ಯುವಕ ಯಾರು? ಅಲ್ಲಿರುವ ನಿರ್ಜನವಾದ ಹತ್ತು ಹನ್ನೆರಡು ಮನೆಗಳು ಹಾಗೇಕೆ ಪಾಳು ಬಿದ್ದಿವೆ. ಆ ಕಡೆ ತಿರುಗಿದರೆ ಕಾಣಿಸುವ ಸುರಂಗ ಎಷ್ಟು ಕಿಲೋಮೀಟರ್ ಉದ್ದವಿದೆ. ಅದರೊಳಗೆ ಹೋದರೆ ಕಳೆದುಹೋಗುತ್ತೇವಾ, ಆ ಕಡೆಯಿಂದ ಹೊರಗೆ ಬರುವುದಕ್ಕಾಗುತ್ತಾ? ಅಲ್ಲಿರುವ ನಡೆಯಲು ಭಯವಾಗುವ ಸೇತುವೆಯಿಂದ ನದಿಗುರುಳಿದ ಆ ರೇಲ್ವೇ ಇಂಜಿನ್ನಿನ ಬೋಗಿಗಳು ಏನಾದವು? ಆ ರೇಲ್ವೆ ಇಂಜಿನ್ನಿನ ಡ್ರೈವರ್ ಬದುಕಿ ಉಳಿದಿದ್ದನಾ? ಆ ರೇಲ್ವೆ ಇಂಜಿನನ್ನು ಯಾಕಿನ್ನೂ ಮೇಲೆತ್ತಿಲ್ಲ. ಅದರ ನೆತ್ತಿಯಲ್ಲಿ ಕಾಣುವ ತುತ್ತೂರಿಯಂಥ ಹಾರ್ನುಗಳನ್ನು ಯಾಕಿನ್ನೂ ಯಾವ ಮಕ್ಕಳೂ ಕಿತ್ತುಕೊಂಡು ಹೋಗಿಲ್ಲ?
ಇಂಥ ಅಸಂಖ್ಯ ಪ್ರಶ್ನೆಗಳನ್ನಿಟ್ಟು ಕೂತುಕೊಂಡರೆ ಅಲ್ಲೊಬ್ಬ ಅಪರಿಚಿತ ಪ್ರತ್ಯಕ್ಷನಾಗುತ್ತಾನೆ. ಸೊಗಸಾಗಿ ಕನ್ನಡ ಮಾತಾಡುತ್ತಾನೆ. ಅಲ್ಲೇನು ಕೆಲಸ ಮಾಡುತ್ತಾನೋ ಗೊತ್ತಿಲ್ಲ. ದಿನಕ್ಕೊಮ್ಮೆ ಬರುವ ಬೆಂಗಳೂರು ಮಂಗಳೂರು ರೇಲು ಅಲ್ಲಿ ಒಂದು ನಿಮಿಷ ನಿಲ್ಲುತ್ತದಂತೆ. ಅದೇ ಟ್ರೇನು ವಾಪಸ್ಸು ಹೋಗುವಾಗ ನಿಲ್ಲುವುದಿಲ್ಲ. ಹೀಗಾಗಿ ಅದು ವನ್ವೇ ಸ್ಟೇಷನ್ನು.
ಇಲ್ಲೆಲ್ಲ ಸುತ್ತಾಡಬೇಡಿ. ಬೆಂಗಳೂರಿಂದ ಬಂದ ಮೂವರು ಯುವಕರು ಇಲ್ಲೇ ಕಾಣೆಯಾದದ್ದು. ಆಮೇಲೆ ಅವರ ಅಸ್ಥಿಪಂಜರವಷ್ಟೇ ಸಿಕ್ಕಿದ್ದು ಎಂದು ಹೆದರಿಸುತ್ತಾನೆ ಅವನು. ಅವರು ಹೇಗೆ ಕಾಣೆಯಾದರು, ಏನಾದರು ಎಂದು ಕೇಳಿದರೆ ಥಟ್ಟನೆ ಮೂರು ಕತೆ ಹೇಳುತ್ತಾನೆ. ಆ ಮೂರರಲ್ಲೂ ಅವನಿಗೇ ನಂಬಿಕೆ ಇಲ್ಲ.
ಅವನ ಪ್ರಕಾರ ಅಲ್ಲಿಗೆ ಬಂದ ಬೆಂಗಳೂರಿನ ಚಾರಣಿಗರು ತುಂಬ ಎತ್ತರದ ಪ್ರದೇಶಕ್ಕೆ ಹೋದರು. ಅಲ್ಲಿ ಮೋಡಗಳು ಕೈಗೆ ಸಿಗುವಂತಿದ್ದವು. ಉಸಿರಾಟದ ತೊಂದರೆಯಾಗಿ ಸತ್ತುಹೋದರು. ಅದೇನು ಹಿಮಾಲಯವಾ
ಉಸಿರಾಟದ ತೊಂದರೆ ಆಗುವುದಕ್ಕೆ ಎಂದರೆ ಅವನು ಕತೆ ಬದಲಾಯಿಸುತ್ತಾನೆ. ಹಾಗಿದ್ದರೆ, ಬಹುಶಃ ಉಪವಾಸ ಸತ್ತಿರಬೇಕು. ತಿನ್ನುವುದಕ್ಕೆ ಏನು ಸಿಗದೇ ನರಳಿ ನರಳಿ ಸತ್ತಿರಬಹುದು. ಊಟವಿಲ್ಲದೇ ಆರೇಳು ದಿನ ಉಪವಾಸ ಮಾಡಿದರೆ ಯಾರೂ ಸಾಯುವುದಿಲ್ಲ ಕಣಯ್ಯಾ ಎಂದರೆ ರಾತ್ರಿ ಹೆದರಿ ಎದೆಯೊಡೆದು ಸತ್ತಿರಬಹುದು ಎನ್ನುತ್ತಾನೆ. ಬದುಕಿರುವವರಿಗೆ ಸತ್ಯ ಗೊತ್ತಿಲ್ಲ. ಸತ್ಯ ಗೊತ್ತಿದ್ದವರು ಸತ್ತುಹೋಗಿದ್ದಾರೆ.
ಯಾವುದೋ ಚಿತ್ರಕಾರ ನಿಗೂಢತೆ ಸಾಧಿಸಲು ಬರೆದಿಟ್ಟಂತಿರುವ ಶಿರಿಬಾಗಿಲು ರೇಲ್ವೇ ಸ್ಟೇಷನ್ನಿನಿಂದ ಹಾಗೇ ನಡೆದುಕೊಂಡು ಏಳೆಂಟು ಕಿಲೋಮೀಟರ್ ನಡೆದರೆ ದಟ್ಟ ಕಾಡಿನ ನಡುವೆಯೇ ಎಡಕುಮೇರಿ ಸ್ಟೇಷನ್ನು ಸಿಗುತ್ತದೆ. ಅದಕ್ಕೂ ಮುಂಚೆ ಅರಬೆಟ್ಟ ಎನ್ನುವ ಮತ್ತೊಂದು ಸ್ಟೇಷನ್ನು ಎದುರಾಗುತ್ತದೆ. ಕಾಡು ದಟ್ಟವಾಗಿದೆ ಎನ್ನುವ ಕಾರಣಕ್ಕೆ ಹೆದರುವ ಅಗತ್ಯವೇ ಇಲ್ಲ. ಅಲ್ಲಿ ಯಾವುದೇ ಕಾಡು ಪ್ರಾಣಿಗಳಿಲ್ಲ. ಆನೆಗಳಿವೆ ಅನ್ನುತ್ತಾರೆ, ನೋಡಿದವರಿಲ್ಲ.
ಅಂಥ ಏರುಕಾಡುಗಳಲ್ಲಿ ಪ್ರಾಣಿಗಳಿರುವುದಿಲ್ಲ. ಯಾಕೆಂದರೆ ಅಲ್ಲಿ ಹುಲ್ಲು ಹುಟ್ಟುವುದಿಲ್ಲ. ಹುಲ್ಲು ಹುಟ್ಟದ ಹೊರತು ಜಿಂಕೆಗೆ ಆಹಾರ ಸಿಗುವುದಿಲ್ಲ. ಜಿಂಕೆಗಳಿಲ್ಲದ ಕಾಡಲ್ಲಿ ಹಿಂಸ್ರಪಶುಗಳಿರುವುದಿಲ್ಲ. ಹೀಗಾಗಿ ಕಾಡಿನ ನಡುವೆಯೋ, ಪಕ್ಕದಲ್ಲೋ ದೊಡ್ಡ ಹುಲ್ಲುಗಾವಲಿದ್ದರೆ, ಅಂಥ ಕಾಡು ಹಿಂಸ್ರ ಪ್ರಾಣಿಗಳಿಗೆ ಸರಿಯಾದ ಜಾಗ. ಆದರೆ ದಟ್ಟ ಕಾಡುಗಳಲ್ಲಿ ಹಾವುಗಳಿರುತ್ತವೆ. ಹೀಗೆ ನಡೆದುಹೋಗುತ್ತಿರುವಾಗ ಪಕ್ಕದಲ್ಲೇ ಮಾರುದ್ದದ್ದ ನಾಗರ ಸರಿದುಹೋದರೆ ಬೆಚ್ಚಿಬೀಳಬೇಕಾಗಿಲ್ಲ. ಅದರ ಪಾಡು ಅದಕ್ಕೆ, ನಮ್ಮದು ನಮಗೆ.
ಮತ್ತೊಮ್ಮೆ ಹೇಳುತ್ತಿದ್ದೇನೆ- ಕಾಡು ಸುತ್ತುವುದಕ್ಕೆ ಬೇಸಗೆಯಷ್ಟು ಸುಖವಾದ ಕಾಲ ಮತ್ತೊಂದಿಲ್ಲ. ನಿಚ್ಚಳವಾದ ಬೆಳಕು, ಎಲ್ಲೆಂದರಲ್ಲಿ ಮಲಗಬಹುದಾದ ಸೌಲಭ್ಯ, ಮಂಜಿನ ತಂಟೆಯಿಲ್ಲದ ಮುಂಜಾವಗಳು ನಮಗೋಸ್ಕರ ಕಾದಿರುತ್ತವೆ. ಮಂಜಿದ್ದರೆ ಸೊಗಸು ಅನ್ನುವುದೂ ಸರಿಯೇ, ಆದರೆ ಮಂಜು ದೂರದಿಂದ ನೋಡುವುದಕ್ಕೆ ಚೆಂದ. ರಸ್ತೆಯಲ್ಲಿ ಸಾಗುತ್ತಿದ್ದಾಗ ದೂರ ಬೆಟ್ಟದ ನೆತ್ತಿಯ ಮೇಲೆ, ದೂರದ ಕಾಡುಗಳ ಮೇಲೆ ಹಿಮ ಸುರಿಯುತ್ತಿದ್ದರೆ ಅದು ಸೊಗಸು. ಆದ್ರೆ ರಸ್ತೆಯನ್ನೇ ಆವರಿಸಿದ್ದರೆ ಹಿಂಸೆ.
ಜಿಮ್ ಕಾರ್ಬೆಟ್ನ ಟ್ರೀ ಟಾಪ್ಸ್ ಓದುತ್ತಿದ್ದಾಗ ಇದೆಲ್ಲ ನೆನಪಾಯಿತು. ಅವನು ಕತೆ ಹೇಳುತ್ತಾ ಕಾಡನ್ನು ಕಣ್ಮುಂದೆ ತಂದು ನಿಲ್ಲಿಸುತ್ತಾನೆ. ಕಾಡಿನ ಕತೆಗಳನ್ನು ಓದುವ ಮುಂಚೆ ಒಂದಷ್ಟು ಕಾಡಲ್ಲೂ ಅಲೆದಾಡಿದ್ದರೆ ಆ ಓದುವ ಸುಖವೇ ಬೇರೆ.
ಓದುವುದಕ್ಕಿಂತ ನೋಡುವುದೇ ಸೊಗಸು. ಹೊರಡಿ ಮತ್ತೆ, ಕಾಲ್ನಡಿಗೆಗೆ, ಕಾಡಿಗೆ.
Monday, March 17, 2008
Subscribe to:
Post Comments (Atom)
13 comments:
ಕಾಡಿನ ನಡುವಿನ ಕಾಲ್ನಡಿಗೆಯ ಸುಖವನ್ನು ಬಿಚ್ಚಿಟ್ಟದ್ದಕ್ಕೆ ಮತ್ತೆ ಮತ್ತೆ ಧನ್ಯವಾದಗಳು.
jolige thumbha kathe thaa andre hotte karguskondu bandidiralla sarina?. UPAVASAVE Jeevana anno nirdaharakke bandiddiralla sarina. Any how hote karagisuva anbhava, kadina kathegaligagi matthe barthene. please baredhu edi
ಸರ್, ನಿಮ್ಮ ’ಅವನು ಮರಳಿ ಬಂದಿದ್ದ ’ ಕಥೆ ಈ ಮೊದಲು ಓ ಮನಸೇ ಯಲ್ಲಿ ಪ್ರಕಟವಾಗಿದ್ದ ಬಗ್ಗೆ ಕಮೆಂಟ್ ನಲ್ಲಿ ಸ್ಪಷ್ಟೀಕರಣ ಕೇಳಿದ್ದೆ. ಗಮನ ಹರಿಸಬೇಕಾಗಿ ವಿನಂತಿ.
-ಅಭಿಮಾನಿ ಓದುಗ
ಹೌದಂತೆ. ನನಗೆ ನೆನಪಿಲ್ಲ. ಆದರೆ ನಾನು ಆಗಲೇ ಹೇಳಿದ ಹಾಗೆ ಕತೆಗಳನ್ನು ಬರೆದು ಇಟ್ಟುಕೊಳ್ಳುವ ಅಭ್ಯಾಸ, ಅನುಕೂಲ, ಲಕ್ಷುರಿ ನನಗಿಲ್ಲ. ಹೀಗಾಗಿ ಬರೆದ ತಕ್ಷಣ ಎಲ್ಲಿಗೋ ಕೊಟ್ಟಿರುತ್ತೇನೆ.
ಆ ಕತೆಯನ್ನೂ ಓ ಮನಸೆಗೆ ಕೊಟ್ಟಿದ್ದೆ ಅಂತ ಕಾಣುತ್ತೆ. ಅದು ಮೊನ್ನೆ ಹುಡುಕುತ್ತಿದ್ದಾಗ ನನ್ನ ಕಂಪ್ಯೂಟರಿನಲ್ಲಿ ಸಿಕ್ಕಿತು.ಅಷ್ಟೇ.
-ಜೋಗಿ
ಸೊಗಸಾದ ಚಾರಣಗಾಥೆ...."ಕಾಡು ಸುತ್ತುವುದಕ್ಕೆ ಬೇಸಗೆಯಷ್ಟು ಸುಖವಾದ ಕಾಲ ಮತ್ತೊಂದಿಲ್ಲ." - ಒಪ್ಪುವಂಥ ಮಾತೇ, ಆದರೆ ಗ್ರೀನ್ ರೂಟ್ ನಲ್ಲಿ ಒಮ್ಮೆ ಮಳೆ ಸುರಿವ ಸಮಯದಲ್ಲಿ ಕಾಲಿಟ್ಟು ಅದರ ಅನುಭವ ಪಡೆಯಿರಿ. ಸುರಿವ ಮಳೆ, ಜಾರುವ ರೈಲು ಹಾದಿಯ ಮೇಲೆ ಹೋಗುವ ಮಜಾನೇ ಬೇರೆ.
ಪ್ರೀತಿಯ ಜೋಗಿ,
ಅದು ನಮ್ಮ ಜುಗಾರಿ ಕ್ರಾಸಿನ ಕಾಡು.. :)
ಎಡಕುಮೇರಿ ನನಗೆ ತುಂಬ ಇಷ್ಟವಾದ ರೇಲ್ವೆ ಸ್ಟೇಷನ್. ಮುಂಚೆ ಮೀಟರ್ ಗೇಜ್ ರೈಲು ಓಡುತ್ತಿದ್ದಾಗ ನಾವು ಗೆಳೆಯರು ಅಲ್ಲಿಗೆ ಟ್ರೆಕ್ ಹೋಗಿದ್ವಿ. ಆಗೆಲ್ಲ ಅಲ್ಲಿ ಅವಶೇಷಗಳು ಕಡಿಮೆಯಿತ್ತು. ಬದುಕು ಮೆತ್ತಗೆ ಮೀಟರ್ ಗೇಜ್ ಹಾಗೆ ನಿಧಾನ ಸರಿಯುತ್ತಿತ್ತು. ಹಾಗೇ ಆ ಕಡೆ ಈ ಕಡೆ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹಚ್ಚಗೆ ನಗುವ ಕಾಡಿತ್ತು. ಇತ್ತೀಚೆಗೆ ಹೋಗಿಲ್ಲ. ಹೋಗಲೇಬೇಕೆನ್ನಿಸುತ್ತಿದೆ ನಿಮ್ಮ ಬರಹ ಓದಿ.
ಆಮೇಲೆ ದೂರದರ್ಶನದವರು ಈ ದಾರಿಯ ಬಗ್ಗೆ..ಶಿರಿವಾಗಿಲುನಿಂದ ಎಡಕುಮೇರಿಯ ವರೆಗಿನ ಹಸಿರುಹಾದಿಯ ಬಗ್ಗೆ ಒಂದು ತುಂಬ ಚೊಲೋ ಇರೊ ಡಾಕ್ಯುಮೆಂಟರಿ ಮಾಡಿದ್ದರು. ಹಳೇದು. ಆಗಾಗ ಬರ್ತಾ ಇರತ್ತೆ. ಆ ಹಸಿರು, ಕಾಡು, ಘಟ್ಟ ಸುತ್ತಿ ಇಳಿವ ದಾರಿ, ಆಳಕ್ಕೆ ರಭಸದಲ್ಲಿ ಹರಿವ ಹೊಳೆಗಳು, ಎರಡೂ ತುದಿಗಳಲ್ಲಿ ಬೆಳಕಿನ ಪಂಜು ಹೊತ್ತು ನಿಂತಿರುವ ಕತ್ತಲು ಸುರಂಗಗಳು.. ನಿಧಾನ ಚಲನೆ ಎಲ್ಲ ತುಂಬ ಖುಶಿ ಕೊಡತ್ತೆ.
ಎಷ್ಟು ದಿನಾ ಆಗಿತ್ತು ನಿಮ್ ಜೊತೆ ಮಾತಾಡಿ..ಅದ್ಕೆ ತುಂಬ ಬರೆದ್ ಬಿಟ್ಟೆ. ಸಾರಿ..
ಪ್ರೀತಿಯಿಂದ
ಸಿಂಧು.
ಅಲ್ಲಿ ಯಾವುದೇ ಕಾಡು ಪ್ರಾಣಿಗಳಿಲ್ಲ. ಆನೆಗಳಿವೆ ಅನ್ನುತ್ತಾರೆ, ನೋಡಿದವರಿಲ್ಲ.
ಜೋಗಿಯವರೇ,ಎಡಕುಮೇರಿ ಹತ್ತಿರದಲ್ಲೇ ಆನೆಯನ್ನು ನೋಡಿ ನಮ್ಮ ಕಾಲ್ನಡಿಗೆ ನಿಲ್ಲಿಸಿ ಅರ್ಧ ತಾಸು ಅದು ಹೋಗುವವರೆಗೂ ಕಮಕ್ ಕಿಮಕ್ ಅನ್ನದೇ ಕೂತು ಕಾಯ್ದ ನಾವು ೮ ಜನ ಗೆಳೆಯರು ಇನ್ನೂ ಬದುಕಿದ್ದೇವೆ ;)thanx
ಚೆನ್ನಾಗಿದೆ ಅಣ್ಣ.....
ಕಾಡು ಕಾಡುತ್ತಿದೆ. ನಿಮ್ಮ ಬರಹ ಓದಿ ಮತ್ತೆ ಕಾಡಿನೆಡೆಗಿನ ಸೆಳೆತ ತೀವ್ರವಾಗಿದೆ. ಬರಹಕ್ಕೊಂದು thanks.
ನಿಮ್ಮಷ್ಟು active bloggers ಕನ್ನಡದಲ್ಲಿ ಯಾರೂ ಸದ್ಯಕ್ಕಿಲ್ಲ. quality & quantity ಎರಡರಲ್ಲೂ ನೀವು no.1. ಇಷ್ಟು ದಿನ ನಿಮ್ಮ ಲೇಖನಗಳನ್ನು ನೋಡದೆ ಕಣ್ಣಿಗೂ ತುಕ್ಕು ಹಿಡಿದಂತಾಗಿತ್ತು.
ಹೀಗೇ ನೀವು ಬರೀತಾ ಇರಿ. ನಾವೂ ಓದ್ತಾ ಇರ್ತೇವೆ ಹೀಗೇ.
ನೀನು ಕಾಡಿಗೆ ಹೋಗಿದ್ದು ಸರಿ ಆದರೆ ನನ್ನ ಬಿಟ್ಟು ಹೋಗಿದ್ದು ಯಾಕೆ.. ಇನ್ನೊಂದ್ ಸತಿ ಹಂಗ್ ಮಾಡಿದ್ರೆ ಹುಶಾರ್....
ಯಾಮಿನಿ
ondistu kaadina photo nu haaki, sir. Dhanyavadagalu
ನನಗೆ ಒಂದು ಪಿಕ್ನಿಕ್ ಹೋಗಿಬಂದ ಅನುಭವವಾಯಿತು. ಜತೆಗೆ ನಮ್ಮೂರು ಕೂಡ ನೆನಪಾಯಿತು. (ಸಾಗರ) ತುಂಬಾ ದಿನಗಳ ನಂತರದ ಭೇಟಿ ಅಷ್ಟೇ ಖುಷಿ ಕೊಟ್ಟಿತು.
ಧನ್ಯವಾದಗಳು ಸಾರ್.....
ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ ಎಂದು ಹೇಳಿ ಸ್ವಲ್ಪವೇ ಬಣ್ಣಿಸಿ ನಮ್ಮ ಹೊಟ್ಟೆಯೊಳ್ಗೆ ಉರಿ ಹಾಕಿಬಿಟ್ರಲ್ಲಾ ಸಾರ್, ಈ ಬೇಸಗೆಗೆ ಹೊರಡಲೇ ಬೇಕೆನಿಸುತ್ತಿದೆ. ಟ್ರೈ ಮಾಡ್ಬೇಕು.
ಚೆನ್ನಾಗಿದೆ ಸಾರ್, ಬರಹ. ನಿಜ, ಕಾಡಿನ ಬಗ್ಗೆ ಓದೋ ಮೊದಲು ಸ್ವಲ್ಪ ಕಾಡಿನ ನೆನಪು ನೆಂಚಿಕೊಳ್ಳಲಿಕ್ಕೆ ಇರಬೇಕು. ಆಗಲೇ ಸೊಗಸು.
ನಾವಡ
Post a Comment