Sunday, March 25, 2007

ರಾಘವೇಂದ್ರ ಖಾಸನೀಸ- ಬದುಕು ಮುಗಿದು ಕತೆ ಶುರುವಾದದ್ದು ಎಲ್ಲಿ?

ನಾನು ರವಿ ಬೆಳಗೆರೇನ ನೋಡಬೇಕು. ಅವನಿಗೆ ಮಾತ್ರ ನನ್ನ ಮಾತು ಅರ್ಥ ಆಗ್ತದೆ. ನಿಮಗೆ ಏನೂ ತಿಳಿಯೂದಿಲ್ಲ. ನನ್ನ ರವಿ ಆಫೀಸಿಗೆ ಕರಕೊಂಡು ಹೋಗ್ರೀ..ಖಾಸನೀಸರು ಕೊನೆಯ ಬಾರಿ ಆಸ್ಪತ್ರೆ ಸೇರುವುದಕ್ಕೆ ಎರಡು ದಿನ ಮುಂಚೆ ಹಾಗಂದಿದ್ದರು ಅಂತ ಅವರ ಕೊನೇ ಮಗಳು ಅರ್ಚನಾ ಅನನ್ಯಾ ಆಸ್ಪತ್ರೆಯ ವಾರ್ಡ್ ನಂಬರ್ ಇನ್ನೂರ ಏಳರಲ್ಲಿ ಕೈಮುಗಿದು, ಕಣ್ಣುತುಂಬಿಕೊಂಡು ಹೇಳುವ ಹೊತ್ತಿಗೆ ಖಾಸನೀಸರು ವಿಸ್ಮೃತಿ ಮತ್ತು ವಿಕಲ್ಪದ ಸ್ಥಿತಿಯಿಂದ ಪಾರಾಗುವುದಕ್ಕೆ ಕೇವಲ ಒಂದೂವರೆ ಗಂಟೆಯಷ್ಟೇ ಉಳಿದಿತ್ತು ಅನ್ನುವುದು ನನಗಾಗಲೀ, ಆಕೆಗಾಗಲೀ ಗೊತ್ತಿರಲಿಲ್ಲ.
ಖಾಸನೀಸರ ದೇಹ ಹೊರಜಗತ್ತಿನ ಪರಿವೆ ಇಲ್ಲದೆ, ಒಳಜಗತ್ತಿನ ಪರಿವೆಯೂ ಇಲ್ಲದೆ ಮುದುಡಿ ಮಲಗಿತ್ತು. ತಬ್ಬಲಿಗಳು ಎಂಬ ಮನುಕುಲದ ಯಾತನೆಯನ್ನೆಲ್ಲ ಕ್ರೋಢೀಕರಿಸಿ ಬರೆದಂತಿದ್ದ ಕತೆಯನ್ನು ಬರೆದ ಖಾಸನೀಸರಂಥ ಖಾಸನೀಸರನ್ನು ಕೂಡ ಬದುಕು ಮತ್ತು ಸಾವು ಹೀಗೆ ನಡೆಸಿಕೊಳ್ಳುತ್ತದಾ ಎಂಬ ದಿಗ್ಭ್ರಮೆಯಲ್ಲಿ ನಾನು ನಿಂತುಬಿಟ್ಟಿದ್ದೆ. ಆಸ್ಪತ್ರೆಯ ಸಿಬ್ಬಂದಿಗಳ ಪೈಕಿ ಯಾರಿಗೂ ಅವರು ಬರೆದ ಕತೆಗಳ ಶ್ರೇಷ್ಠತೆ, ಅಕ್ಪರದ ಮೂಲಕ ಅವರು ಹಿಡಿದಿಟ್ಟ ಸತ್ಯಸುಳ್ಳಿನ ಕಲ್ಪನೆ ಇರುವುದಕ್ಕೆ ಸಾಧ್ಯವೇ ಇರಲಿಲ್ಲ.
ಡಾಕ್ಟರುಗಳ ಪ್ರಕಾರ ಖಾಸನೀಸರು ಒಳರೋಗಿ! ಪಾರ್ಕಿನ್ಸ್ ಎಂಬ ಕ್ಪುದ್ರ ಕಾಯಿಲೆ ನಾಲ್ಕನೆ ಹಂತಕ್ಕೆ ತಲುಪಿರುವ, ಯಾವ ಔಷ ಕೂಡ ಉಳಿಸಲಾರದ, ವೈದ್ಯ ಜಗತ್ತು ಕೈಕಟ್ಟಿಕೊಂಡು ವಿರ್ವಿಣ್ಣವಾಗುವಂತೆ ಮಾಡಿದ ರೋಗವೊಂದನ್ನು ಮೈದುಂಬಿಕೊಂಡಿರುವ ಪೇಷಂಟು! ಖಾಸನೀಸರು ಯಾವತ್ತೂ `ಪೇಷಂಟ್' ಆಗಿರಲೇ ಇಲ್ಲ. ಅವರು ಬರೆದ ಕತೆಗಳಲ್ಲಿನ ಜೀವನೋತ್ಸಾಹಕ್ಕೆ ಎಣೆಯಿಲ್ಲ. ಅತೀವ ಕಷ್ಟ ಮತ್ತು ಅಸೀಮ ಯಾತನೆಯನ್ನು ಚಿತ್ರಿಸುವ ಹೊತ್ತಿಗೂ ಅವರು ಬದುಕಿನಿಂದ ವಿಮುಖರಾಗುವುದಿಲ್ಲ. ಅಮರತ್ವದ ಕಡೆಗೆ ಅವರ ಪಾತ್ರಗಳು ತುಡಿಯದೇ ಇದ್ದರೂ ಅಂಥ ಆಶೆಯೊಂದು ಎಲ್ಲಾ ಪಾತ್ರಗಳಲ್ಲೂ ಜೀವಂತವಾಗಿರುತ್ತದೆ. ಸುಖದ ಅಲೆಯೊಂದು ಅನವರತ ಪ್ರವಹಿಸುತ್ತಿರುವ ಶಾಂತಸಾಗರದಂತೆ ಅವರ ಕತೆಗಳನ್ನು ನಮಗೆ ಭಾಸವಾಗುತ್ತವೆ. ಸಂಕಷ್ಟಗಳ ನಡುವೆಯೇ ಸುಖವನ್ನು ಹುಡುಕುವ ಪ್ರಯತ್ನ ಮಾಡಬೇಕು ಎಂಬ ಎಚ್ಚರ ಮತ್ತು ಅಸಹಾಯಕತೆ ಎರಡನ್ನೂ ಮುಂದಿಟ್ಟುಕೊಂಡು ಖಾಸನೀಸರು ಕಥಾಯಾನಕ್ಕೆ ಹೊರಡುತ್ತಾರೆ.
ಖಾಸನೀಸರು ಸುಮಾರು ಇಪ್ಪತೈದು ವರುಷಗಳ ಕಾಲ ಲೈಬ್ರೇರಿಯ್ ಆಗಿದ್ದವರು. ಬೆಂಗಳೂರು ಯೂನಿವರ್ಸಿಟಿಯಲ್ಲಿ ಕೆಲಸ ಮಾಡಿದವರು. ವಿಜಾಪುರದ ಇಂಡಿಯಿಂದ ಬೆಂಗಳೂರಿಗೆ ಬಂದು ಇಲ್ಲಿ ಮನೆ ಮಾಡಿ, ಸಂಸಾರ ಹೂಡಿ ತನ್ನ ಮೌನ ಮತ್ತು ಸಂಕೋಚಗಳ ನಡುಗುಡ್ಡೆಯಲ್ಲಿ ಬಾಳುತ್ತಿದ್ದವರು ಖಾಸನೀಸ;

ನಡುಗುಡ್ಡೆ ಬಹಳ ಚಿಕ್ಕದು. ಹಾಗೆ ನೋಡಿದರೆ ಅದು ನಡುಗುಡ್ಡೆ ಅಲ್ಲವೇ ಅಲ್ಲ. ಕೃಷ್ಣಾನದಿಯ ವಿಶಾಲವಾದ ಪಾತ್ರದ ಮಧ್ಯೆ ಅನಾದಿಕಾಲದ ಹಿಂದೆ ಎತ್ತರವಾಗಿ ಸಿಡಿದೆದ್ದ ಪ್ರಚಂಡ ಬಂಡೆಗಳ ಸಮೂಹವೇ ಆ ನಡುಗುಡ್ಡೆ. ಅಲ್ಲಿ ಮೀನುಗಾರರ ಸುಳಿವಿಲ್ಲ. ಪ್ರವಾಸಿಗಳ ಕಾಟವಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಕೊರಚಲು ಕೊರಚಲಾಗಿ ಬೆಳೆದ ಸಸ್ಯರಾಶಿಯ ಮೇಲೆ ಗೂಡು ಕಟ್ಟಿಕೊಂಡಿರುವ ಅಸಂಖ್ಯ ಕಾಗೆಗಳ ಸಮೂಹವೇ ಆ ದ್ವೀಪದ ವಾರಸುದಾರರು.

ಹಾಗಂತ `ಅಶ್ವಾರೋಹಿ' ಕತೆಯ ತಂದೆ ಅಂದುಕೊಳ್ಳುತ್ತಾನೆ. ಅವನಿಗೂ ನಡುಗುಡ್ಡೆಯ ವ್ಯಾಮೋಹ. ತಾಯಿಯ ಜಗತ್ತೇ ಬೇರೆ ಹೇಳುತ್ತದೆ;

ನಮ್ಮ ದಾಂಪತ್ಯ ಜೀವನವನ್ನು ಹಿಂದಿರುಗಿ ನೋಡಿದಾಗ, ಕಾಲ ಪ್ರವಾಹದಲ್ಲಿ ನಮ್ಮ ಬಾಳದೋಣಿ ತೇಲಿಕೊಂಡು ಬಂದಾಗ, ನನಗೆ ಕಾಣಿಸಿದ್ದಿಷ್ಟು; ಅಲ್ಲಿ, ಎಲ್ಲಿಯೂ ವಿಶ್ರಮಿಸಲು ದಾರಿಯಲ್ಲಿ ನಡುಗುಡ್ಡೆಗಳೇ ಸಿಗಲಿಲ್ಲ.ನಾವಿಬ್ಬರೂ ಜತೆಗೂಡಿ ಹುಟ್ಟುಹಾಕುತ್ತಾ ಹೊರಟಾಗ ಈ ಪಯಣ ಎಲ್ಲಿಗೆ ಎನ್ನುವ ನಿಶ್ಚಿತವಾದ ಪೂರ್ವಕಲ್ಪನೆಯೂ ಇರಲಿಲ್ಲ.ಖಾಸನೀಸರು ಬದುಕಿದ್ದೂ ಹಾಗೇ. ಅವರನ್ನು ತುಂಬ ಕಾಡಿದ್ದು ಮಗ ರಾಜೀವನ ಪಲಾಯನ. ಮಗ ಯಾಕೆ ಮನೆ ಬಿಟ್ಟು ಓಡಿಹೋದ ಅನ್ನುವುದು ಅವರಿಗೆ ಬಗೆಹರಿಯದ ಪ್ರಶ್ನೆ ಆಗಿತ್ತು;

ರಿತ್ವಿಕನ ಈ ದುರ್ದೆಶೆಗೆ ತಾವೇ ಹೊಣೆ ಅನ್ನುವ ಕಾರಣ ಅವರಿಗೆ ಹೊಳೆದಿರಬಹುದೆ? ಚಿಕ್ಕಂದಿನಿಂದಲೂ ಅವನಿಗೆ ಬೇಡಿದಷ್ಟು ಹಣ ನೀಡಿದರು. ಆದರೆ ಪ್ರೀತಿಯನ್ನು ನೀಡಲಿಲ್ಲ. ಅವನಿಗೆ ಸ್ವಾತಂತ್ರ ಕೊಟ್ಟಿದ್ದೇನೆಂದು ಭ್ರಮಿಸಿ, ಸ್ವೈರವೃತ್ತಿ ಕಲಿಸಿದರು. ಅವನು ಒಬ್ಬ ನಿರ್ದಯಿ ಕಟುಕನಾಗಿ ಬೆಳೆದ. ತಂದೆ ಮಗನ ಸಂಬಂಧವೇ ಚಿಗುರಲಿಲ್ಲ. ಅಂತೆಯೇ, ಅವನು ಪುನಃ ಪುನಃ ಮನೆ ಬಿಟ್ಟು ಓಡಿಹೋಗಿ, ದುಡ್ಡಿನಿಂದ ಹೆಚ್ಚಿನ ದುಡ್ಡಿಗಾಗಿ ಏನೆಲ್ಲವನ್ನೂ ಮಾಡಿ, ಕೊನೆಯ ಮಟ್ಟವಾದ ಮಾದಕದ್ರವ್ಯ ಸೇವನೆಯ ವ್ಯಸನಕ್ಕೂ ಬಿದ್ದ. ಮನೆಯ ಎಲ್ಲರ ಜೊತೆಯಲ್ಲೂ ಅವನ ಸಂಬಂಧಗಳು ಎಂದೋ ಕುಸಿದುಬಿದ್ದಿದ್ದವು.
(ಅಶ್ವಾರೋಹಿ)

ಹೀಗೆ ಕತೆ ಮತ್ತು ಬದುಕು ಎಲ್ಲೋ ಸಂಗಮಿಸಿದೆ ಎಂಬ ಭ್ರಮೆ ಹುಟ್ಟಿಸುವಂತೆ ಬರೆದವರು ಖಾಸನೀಸ. ಅವರ ಕತೆಗಳು ಅವರ ಆತ್ಮಚರಿತ್ರೆಯ ಭಾಗಗಳೇನೋ ಎಂಬಂತೆ ನಮ್ಮನ್ನು ತಟ್ಟುತ್ತದೆ. ಎಷ್ಟೋ ಕಡೆ ಅವು ನಮ್ಮ ಆತ್ಮಚರಿತ್ರೆಯೂ ಇರಬಹುದೇನೋ ಅನ್ನಿಸುತ್ತದೆ. ಬದುಕಿನ ಕ್ರೌರ್ಯ, ಅನೂಹ್ಯ ಮತ್ತು ಅಚ್ಚರಿಯನ್ನು ಅವರು ಸೆರೆಹಿಡಿಯುವ ರೀತಿ ನೋಡಿ;

"ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಕುದುರೆಯ ಮೇಲೇರಿ ಸಾಗುತ್ತಾನೆ. ಇದು ಕತೆ ಕನಸು ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾಗಿದ್ದು, ದಾರಿಯಲ್ಲಿ ಏನನ್ನೂ ಗುರುತಿಸಲಿಕ್ಕಾಗುವುದಿಲ್ಲ. ನಿರ್ಜನವಾದ ಆ ಪ್ರದೇಶದಲ್ಲಿ ತೆಳ್ಳಗಿನ ಹಿಮದ ಪದರಿನ ಮೇಲೆ ಕುದುರೆಯ ಖುರಪುಟದ ಸದ್ದೂ ಇಲ್ಲದೆ ಸಾಗಿರುವ ಆ ಕುದುರೆ ಸವಾರನು ಕೊನೆಗೊಮ್ಮೆ. ನೆರೆದಿದ್ದ ಜನರ ಚಿಕ್ಕ ಗುಂಪೊಂದನ್ನು ಗಮನಿಸಿ ಕುದುರೆಯನ್ನು ನಿಲ್ಲಿಸುತ್ತಾನೆ. ಜನ ಅವನನ್ನು ಸುತ್ತುಗಟ್ಟಿ, ತಬ್ಬಿಬ್ಬಾಗಿ, ಯಾಕೋ ಪವಾಡ ಪುರುಷನನ್ನು ನೋಡಿದಂತೆ ನೋಡುತ್ತಾರೆ. ತಾನು ಹುಡುಕಲಿದ್ದ ಸರೋವರನ್ನು ಹೆಸರಿಸಿ `ಅದೆಲ್ಲಿ' ಎಂದು ಅವರಿಗೆ ಸವಾರ ಕೇಳುತ್ತಾನೆ. ನೆರೆದವರೆಲ್ಲ ಮೂಕ ವಿಸ್ಮಿತರು. ಅವರಲ್ಲೊಬ್ಬ ಹೇಳುತ್ತಾನೆ; `ನೀವು ಇದುವರೆಗೆ ಬಂದದ್ದೇ ಆ ಸರೋವರದ ಮೇಲಿಂದ. ಅದು ದಾರಿಯಲ್ಲ, ಮೇಲೆ ಕಾಣುವ ತೆಳ್ಳಗೆ ಹೆಪ್ಪುಗಟ್ಟಿದ ಹಿಮ. ಆ ಸರೋವರದ ಮೇಲಿನ ಪಾತಳಿ.' ಅಶ್ವಾರೋಹಿ ಅವಾಕ್ಕಾದ. ತಾನು ಬಂದದ್ದು ನೀರಿನ ಮೇಲಿಂದ! ನಿಶ್ಚಿತವಾಗಿದ್ದ ಸಾವಿನ ಕಲ್ಪನೆಯನ್ನು ಅವನು ಸಹಿಸದಾದ. ಅದರಿಂದಾದ ಆಘಾತದಿಂದ ತಕ್ಪಣ ಅಲ್ಲಿಯೇ ಕುಸಿದುಬಿದ್ದ.'

ಖಾಸನೀಸರು ಇದಕ್ಕೊಂದು ಟಿಪ್ಪಣಿ ಬರೆಯುತ್ತಾರೆ;

"ನನಗೂ ಇದ್ದಕ್ಕಿದ್ದಂತೆ, ಅಂಥದ್ದೇ ಆಘಾತದ ಅನುಭವವಾಯಿತು. ಸಾವು, ಹುಟ್ಟಿದಂದಿನಿಂದಲೂ ಬೇತಾಳದಂತೆ ನನ್ನ ಬೆನ್ನ ಮೇಲೆ ಕುಳಿತು ಹೊಂಚು ಹಾಕಿಕೊಂಡೇ ಇದೆ. ಸಾವಿನ ತೆಳ್ಳಗಿನ ಶಿಥಿಲ ಹಿಮಪಾತಳಿಯ ಮೇಲೆಯೇ ನಡೆಯುತ್ತಾ ಬಂದಿದ್ದೇನೆ. ರಿತ್ವಿಕ್ ಹಾಗೂ ಚಾರು ನನ್ನ ಹಾಗೇ ಸರೋವರವೊಂದನ್ನು ಹುಡುಕುತ್ತಾ ಹೊರಟಿದ್ದಾರೆ. ಆದರೆ ಅವರಿಗೆ ಗೊತ್ತೇ ಇಲ್ಲ, ತಾವು ನಡೆಯುತ್ತಿರುವ ಸರೋವರದ ನೀರ ಮೇಲಿಂದಲೇ ತಾವು ನಡೆಯುತ್ತಾ ಹೊರಟಿದ್ದಾರೆಂಬುದು.'ಅದು ನಮಗಾದರೂ ಗೊತ್ತಿದೆಯಾ?

******

ತುಂಬ ಸರಳವಾಗಿ, ಕಠೋರ ಸತ್ಯವನ್ನು ಹೇಳಬಲ್ಲ ವಿಚಿತ್ರ ಶಕ್ತಿಯೊಂದು ಖಾಸನೀಸರಿಗೆ ಸಿದ್ಧಿಸಿತ್ತು. ಸಾವಿನ ಕಲ್ಪನೆಯಿಂದ ಹುಟ್ಟಿದ ಧೈರ್ಯ ಅದಾಗಿತ್ತೋ ಎಂದು ಊಹಿಸುವುದು ಕೂಡ ಕಷ್ಟ. ಆದರೆ ಕೆಲವೊಮ್ಮೆ ಅವಧೂತನ ವಿಲಕ್ಪಣ ಅರಿವು, ನಿರಾಸಕ್ತಿ ಹಾಗೂ ಸತ್ಯಸಂಧತೆ ಬಂದುಬಿಡುತ್ತಿತ್ತು.

"ಇದ್ದಕ್ಕಿದ್ದಂತೆ ನಾನಾಡಿದ ಮಾತುಗಳೆಲ್ಲ ಒಡೆದುಹೋಗಿ, ಅರ್ಥ ಸೋರಿ, ಶಬ್ದಗಳು ಬರೀ ತಿರುಳಿಲ್ಲದ ತೊಗಟೆಗಳಂತೆ ನನಗೆ ಭಾಸವಾಗುತ್ತಿವೆ. ತುಂಬ ದಣಿದಿದ್ದೀಯ. ಇಂದ್ರಿಯಗಳ ಮೇಲಿನ ನಿನ್ನ ಹತೋಟಿ ಕ್ರಮೇಣ ತಪ್ಪತೊಡಗಿದಂತೆ ನನಗೆ ಭಾಸವಾಗುತ್ತಿದೆ. ದೃಷ್ಟಿಯು ವಿಕೇಂದ್ರಿತವಾಗಿ, ಕಣ್ಣೆದುರಿನ ಪ್ರತಿಮೆಗಳು ಛಿನ್ನ, ವಿಚ್ಛಿನ್ನವಾದಂತೆನಿಸುತ್ತಿದೆ.
ತಿನ್ನು, ಉಣ್ಣು, ಮಲಗು, ಬದುಕು. ಮನುಷ್ಯನ ಬಾಳುವೆಗೆ ಸಲ್ಲದ ಮೌಲ್ಯಗಳನ್ನು ಆರೋಪಿಸುವ ಭ್ರಮೆಗೊಳಗಾಗಬೇಡ.'

******
ಖಾಸನೀಸರ ಪಾರ್ಕಿನ್ಸನ್ ಕಾಯಿಲೆಗೆ ತೆಗೆದುಕೊಳ್ಳುತ್ತಿದ್ದ ಔಷಯಿಂದಾಗಿ ಅವರನ್ನು ಒಂಥರದ ಹೆಲ್ಯೂಸಿನೇಷ್ ಕಾಡುತ್ತಿತ್ತು. ಆ ಭ್ರಮೆಯಲ್ಲಿ ಅವರು ಏನನ್ನೋ ಕಾಣುತ್ತಿದ್ದರು. ಯಾರೋ ಬಂದಂತೆ, ಮಾತಾಡಿದಂತೆ, ಏನನ್ನೋ ಹೇಳಿದಂತೆ, ಏನನ್ನೋ ಕೇಳಿಸಿಕೊಂಡಂತೆ ಅವರಿಗೆ ಭಾಸವಾಗುತ್ತಿತ್ತು. ಅದು ಭ್ರಮೆಯೋ ವಾಸ್ತವವೋ ಎಂದು ನಿರ್ಧರಿಸುವ ಸ್ಥಿತಿಯಲ್ಲೂ ಅವರು ಇರಲಿಲ್ಲ. ಆದರೆ ಅವರು ಭ್ರಮಾಧೀನರು ಅನ್ನುವ ಸಂಗತಿ ಮನೆಯವರಿಗೆ ಗೊತ್ತಿತ್ತು.ಅಂಥ ಭ್ರಮಾಧೀನ ಸ್ಥಿತಿಯ ಉತ್ತುಂಗದಲ್ಲಿ ಅವರಂಥ ಸೂಕ್ಪ್ಮ ಮನಸ್ಸಿನ ಲೇಖಕನಿಗೆ ನಿಜಕ್ಕೂ ಏನನ್ನಿಸಿರಬೇಡ? ಭ್ರಮೆ ಮತ್ತು ವಾಸ್ತವದ ನಡುವಿನ ತೆಳ್ಳಗಿನ ಗೆರೆ ಮಾಯವಾಗಿ, ನಿನ್ನೆ ಮತ್ತು ಇಂದುಗಳು ಕಲಸಿಹೋಗಿ, ದೇಶಕಾಲದ ಪರಿವೆ ಇಲ್ಲದೆ ಸುಮಾರು ವರುಷಗಳ ಕಾಲ ಖಾಸನೀಸರು ರಾಜಾಜಿನಗರದ ಮನೆಯಲ್ಲಿ ಹೆಂಡತಿ ಮತ್ತು ಮಗಳ ಜೊತೆಗಿದ್ದರು. ಅವರೆಲ್ಲರನ್ನೂ ಪೊರೆದದ್ದು ಖಾಸನೀಸರ ಪೆನ್ಶನ್ನು ಮತ್ತು ಪತ್ನಿ ಕಾಂತಾರ ಸ್ವಾಭಿಮಾನ.
ಖಾಸನೀಸರನ್ನು ಅತೀವ ಅನುಕಂಪದಲ್ಲೋ ಸಹಾನುಭೂತಿಯಿಂದಲೋ ನೋಡುವುದು ಬೇಡ. ಅವರಿಗೆ ಅದು ಇಷ್ಟವಾಗುತ್ತಿರಲಿಲ್ಲ. ಒಬ್ಬ ಪ್ರತಿಭಾವಂತ ಕತೆಗಾರ. ಶ್ರೇಷ್ಠ ಕತೆಗಳನ್ನು ಬರೆದು ನಿರ್ಗಮಿಸಿದ ಧೀಮಂತ ಎಂಬ ಭಾವನೆಯನ್ನಷ್ಟೇ ಉಳಿಸಿಕೊಂಡು ಅವರ ನೆನಪನ್ನು ಚಿರಗೊಳಿಸುವ ಆಸೆಯೊಂದಿಗೆ ಈ ಪುಟ್ಟ ಟಿಪ್ಪಣಿ ಮುಗಿಯುತ್ತದೆ. ಖಾಸನೀಸರ ಬಗ್ಗೆ ಕೇಳಿದ್ದು ಹೇಳಿದ್ದು ಎಲ್ಲವೂ ಸುಳ್ಳಾಗಲಿ, ಅವರು ಬರೆದ ಉತ್ಕೃಷ್ಠ ಕತೆಗಳಷ್ಟೇ ನಿಜವಾಗಲಿ;
ಗೋಳಗುಮ್ಮಟದಲ್ಲಿ ದನಿ ಒಂದಕ್ಕೆ ಹತ್ತಾದರೆ ಆ ತಪ್ಪು ಅದರದೇ ಹೊರತು ಮಾತಾಡಿದವನದಲ್ಲ!

3 comments:

SJoshi said...

ಖಾಸನೀಸರ ಬಗ್ಗೆ ಖಾಸಾ ಆಗಿ ಬರೆದ ಈ ಟಿಪ್ಪಣಿಗಳು ನನಗೆ ತುಂಬ ಹಿಡಿಸಿದುವು. ಕೊನೆಯಲ್ಲಿನ "ಗೋಳಗುಮ್ಮಟದಲ್ಲಿ ದನಿ ಒಂದಕ್ಕೆ ಹತ್ತಾದರೆ ಆ ತಪ್ಪು ಅದರದೇ ಹೊರತು ಮಾತಾಡಿದವನದಲ್ಲ!" ಅಂತೂ ಬಹುವಾಗಿ ಕಾಡಿತು!
ಬ್ಲಾಗ್ ಹೀಗೆಯೇ ನಿಮ್ಮ ಛಾಪಿನ 'ವಿಶಿಷ್ಟ ಮಾದಕತೆ' ತುಂಬಿಕೊಂಡಿರಲಿ.

Jogimane said...

ಖಾಸನೀಸರ ಸಮಗ್ರ ಕಥೆಗಳು ಸಂಕಲನವನ್ನು ಪ್ರಿಸಮ್ ಹೊರತಂದಿದೆ. ಅದರಲ್ಲಿ ಒಂಬತ್ತು ಕತೆಗಳಿವೆ. ಖಾಸನೀಸರು ಇಪ್ಪತ್ತೈದು ಕತೆಗಳನ್ನು ಬರೆದಿದ್ದಾರೆ ಅಂತ ಅನೇಕರು ಬರೆದಿದ್ದಾರೆ. ನನ್ನ ಗಮನಕ್ಕೆ ಬಂದಿರುವುದು ಈ ಒಂಬತ್ತು ಕತೆಗಳು ಮಾತ್ರ.
ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಗೆಳೆಯ ಸೂರಿ ಖಾಸನೀಸರ ಬಗ್ಗೆ ಒಂದು ಸೊಗಸಾದ ಟಿಪ್ಪಣಿ ಬರೆದಿದ್ದಾರೆ. ಅವರ ಖಾಸ ಅನುಭವದಿಂದ ಹೆಕ್ಕಿ ತೆಗೆದ ಆ ಬರಹದಲ್ಲಿ ಖಾಸನೀಸರ ವಿನಯ ಮತ್ತು ಸಜ್ಜನಿಕೆಯ ಚಿತ್ರ ಸಿಗುತ್ತದೆ.
-ಜೋಗಿ

Kiran said...

ದಟ್ಸ್ ಕನ್ನಡದಲ್ಲಿ ಓದುವ ಮೊದಲು ಕನ್ನಡದಲ್ಲಿ ಇಂಥಹ ಒಬ್ಬ ಕಥೆಗಾರರಿದ್ದಾರೆಂಬುದೇ ನನಗೆ ತಿಳಿದಿರಲಿಲ್ಲ. ಮೊರ್ತಿ, ತೇಜಸ್ವಿಗಳಂತಹ ಕೆಲವೇ ಕೆಲವು ಕಥೆಗಾರರ ಹಿಂದೆ ಬೀಳುವ ಕನ್ನಡ ಪತ್ರಿಕೆಗಳು, ವಿಮರ್ಶಕರು ಖಾಸನೀಸರಂಥ ಕತೆಗಾರರನ್ನು ಓದುಗರ ಬಳಿ ಕೊಂಡೊಯ್ಯದಿದ್ದುದು ವಿಪರ್ಯಾಸ.