Friday, March 30, 2007

ಪದ್ಯ ಸಲೀಸು ಅಂದು­ಕೊಂ­ಡಿ­ರುವ ಯುವ­ಕ­ವಿ­ಗ­ಳಿಗೆ...


ಯಾರೋ ಹೇಳಿ­ದರು; ಹೊಸ­ದಾಗಿ ಬರೆ­ಯಲು ಶುರು­ಮಾ­ಡಿ­ರುವ ಲೇಖ­ಕ­ರೆಲ್ಲ ಪದ್ಯ ಬರೆ­ಯು­ತ್ತಾರೆ. ಒಂದು ಲೇಖ­ನ­ವನ್ನೋ ಕತೆ­ಯನ್ನೋ ಬರೆ­ಯಲು ತುಂಬ ಸಮಯ ಬೇಕಾ­ಗು­ತ್ತದೆ. ಆದರೆ ಪದ್ಯ ಹಾಗಲ್ಲ, ಎಲ್ಲೆಂ­ದ­ರಲ್ಲಿ ಥಟ್ಟನೆ ಬರೆ­ದು­ಬಿ­ಡ­ಬ­ಹುದು. ದೀಪಾ­ವಳಿ ವಿಶೇ­ಷಾಂ­ಕಕ್ಕೋ, ಇನ್ಯಾ­ವುದೋ ಸಂಕ­ಲ­ನಕ್ಕೋ ಪದ್ಯ ಕೇಳಿ­ದರೆ ಕೂಡಲೇ ಕಳಿ­ಸು­ತ್ತಾರೆ. ಅದೇ ಕತೆ­ಯನ್ನೋ ಪ್ರಬಂ­ಧ­ವನ್ನೋ ಕೇಳಿ­ದರೆ ತಡ­ಮಾ­ಡು­ತ್ತಾರೆ.


ಕವಿ­ತೆ­ಯೆಂ­ದರೆ ಸಂಗ್ರ­ಹ­ವಾಗಿ ಹೇಳು­ವುದು ಅನ್ನುವ ನಂಬುಗೆ ಹೊಸ­ಕಾ­ಲದ ಕವಿ­ಗ­ಳ­ಲ್ಲಿದೆ. ಬಹುಶಃ ಅದು ಎಲ್ಲ ಕಾಲದ ತರುಣ ಕವಿ­ಗ­ಳಲ್ಲೂ ಇತ್ತೆಂದು ಕಾಣು­ತ್ತದೆ. ಕವಿ­ತೆಯ ಮೂಲಕ ಏನು ಹೇಳ­ಬೇಕು ಅನ್ನು­ವುದು ಕೂಡ ಮೊದಲೇ ನಿರ್ಧಾ­ರ­ವಾ­ಗಿ­ಬಿ­ಟ್ಟಂತೆ ಅನೇ­ಕರು ಬರೆ­ಯು­ತ್ತಾರೆ. `ಸ­ಬ್ಜೆಕ್ಟು ರೆಡಿ­ಯಾ­ಗಿದೆ. ಬರೆ­ಯೋದು ಮಾತ್ರ ಬಾಕಿ. ಒಂದೆ­ರಡು ದಿನ­ದಲ್ಲಿ ಬರೆ­ದು­ಕೊ­ಡು­ತ್ತೇನೆ' ಅಂತ ಅನೇಕ ಕವಿ­ಗಳು ಹೇಳು­ವು­ದುಂಟು. ಆಧು­ನಿಕ ಸಂದ­ರ್ಭ­ದಲ್ಲಿ ನಾನು ಸ್ವತಂ­ತ್ರಳು ಅಂದು­ಕೊಂ­ಡಿ­ರುವ ಮಹಿಳೆ ಸೂಕ್ಪ್ಮಾ­ವಾಗಿ ಹಿಂದಿನ ಕಾಲ­ಕ್ಕಿಂತ ಹೆಚ್ಚು ಶೋಷ­ಣೆಗೆ ಒಳ­ಗಾ­ಗಿ­ದ್ದಾಳೆ. ಇದರ ಬಗ್ಗೆ ಒಂದು ಪದ್ಯ ಬರೀ­ತಿ­ದ್ದೀನಿ ಅಂತ ಕವಿ­ಯೊ­ಬ್ಬರು ಸಂದ­ರ್ಶ­ನ­ವೊಂ­ದ­ರಲ್ಲಿ ಹೇಳಿ­ಕೊಂ­ಡಿ­ದ್ದರು.


ಹಾಗೆ ಹೇಳಿ ಕೇಳಿ ಬರು­ವುದು ಕವಿ­ತೆ­ಯಾ­ಗು­ತ್ತದಾ? ಕವಿ­ತೆಯ ಮೂಲಕ ಏನನ್ನು ಹೇಳ­ಬೇಕೋ ಅದನ್ನು ನಾಲ್ಕು ಸಾಲಲ್ಲೋ ಒಂದು ಪ್ಯಾರಾ­ದಲ್ಲೋ ಹೇಳಿ­ಬಿ­ಡ­ಬ­ಹು­ದಾ­ದರೆ ಕವಿತೆ ಯಾಕೆ ಬೇಕು? ಅದನ್ನು ಹಾಗೇ ಮಾತಲ್ಲೇ ಹೇಳಿ ಸುಖ­ವಾ­ಗಿ­ರ­ಬ­ಹು­ದಲ್ಲ? ಪದ್ಯ­ವೆಂ­ಬುದು ಕವಿ­ತೆ­ಯೆಂ­ಬುದು ಒಂದು ಮಾಧ್ಯಮ ಮಾತ್ರವಾ? ಅದು ಕೇವಲ ಒಂದು ಪ್ರಕಾ­ರವಾ? ಹಾಗೆ ಹೇಳು­ವು­ದನ್ನು ಹೀಗೆ ಹೇಳುವ ಒಂದು ವಿಧಾ­ನವಾ?


ಬಾವಿ­ಯೊ­ಳ­ಗಡೆ ನೀರು; ಮೇಲ­ಕ್ಕಾವಿ;
ಆಕಾ­ಶ­ದು­ದ್ದಕೂ ಅದರ ಕಾರಣ ಬೀದಿ;
ಕಾರ್ಮು­ಗಿಲ ಖಾಲಿ ಕೋಣೆಯ ಅಗೋ­ಚರ ಬಿಂದು
ನವ­ಮಾ­ಸವೂ ಕಾವ ಭ್ರೂಣ­ರೂಪಿ-
ಅಂತ­ರ­ಪಿ­ಶಾಚಿ ಗುಡು­ಗಾಟ, ಸಿಡಿ­ಲಿನ ಕಾಟ-
ಭೂತ­ರೂ­ಪಕ್ಕೆ ಮಳೆ ವರ್ತ­ಮಾನ.
ಅಗೆ­ದುತ್ತ ಗದ್ದೆ­ಗಳ ಕರ್ಮ­ಭೂ­ಮಿಯ ವರಣ;
ಭತ್ತ­ಗೋ­ಧುವೆ ಹಣ್ಣು ಬಿಟ್ಟ ವೃಂದಾ­ವನ.
ಗುಡಿ­ಗೋ­ಪು­ರ­ಗಳ ಬಂಗಾರ ಶಿಖರ.


ಯಾವ ಮೇಷ್ಟ್ರು ಕೂಡ ಈ ಸಾಲು­ಗ­ಳನ್ನು ಅರ್ಥ­ಮಾ­ಡಿ­ಸ­ಲಾರ. ಪದ್ಯ ಅರ್ಥ­ವಾ­ಗು­ವು­ದಕ್ಕೆ ಇರುವ ಸಂಗ­ತಿಯೇ ಅಲ್ಲ. ಅದು ಅನು­ಭ­ವ­ಕ್ಕಷ್ಟೇ ದಕ್ಕುವ ಅಕ್ಪ­ರ­ಲೋಕ. ಏನೂ ಹೇಳದೇ ಎಲ್ಲ­ವನ್ನೂ ಹೇಳು­ವುದು ಕವಿ­ತೆಯ ಜಾಯ­ಮಾನ. ಏನಾ­ದರೂ ಹೇಳ­ಲಿ­ಕ್ಕೆಂದೇ ಹೊರ­ಟರೆ ಅದು ಸುತ್ತೋ­ಲೆ­ಯಾ­ಗು­ತ್ತದೆ. ಕರ­ಪತ್ರ ವಾಗು­ತ್ತದೆ. ವರ­ದಿಯೋ ಟೀಕೆಯೋ ಹೇಳಿ­ಕೆಯೋ ಆಗು­ತ್ತದೆ. ಪದ್ಯ ಅದಾ­ವುದೂ ಅಲ್ಲ. ಅದು ಮಂತ್ರದ ಹಾಗೆ ವೇದ್ಯ­ವಾ­ಗು­ವಂ­ಥದ್ದು. ಅರ್ಥ­ವನ್ನು ಮೀರಿದ್ದು.


ಮೇಲೆ ಸೂಚಿ­ಸಿದ ಗೋಪಾ­ಲ­ಕೃಷ್ಣ ಅಡಿ­ಗರ `ಭೂತ' ಕವ­ನ­ವನ್ನು ಓದುತ್ತಾ ಹೋಗಿ; ಹುಟ್ಟು, ಸಾವು, ವಿಷಾದ, ಅವ­ಮಾನ, ತಲ್ಲಣ, ನಿರಾಶೆ ಎಲ್ಲವೂ ಸುತ್ತಿ ಸುಳಿದು ಹೋಗು­ತ್ತವೆ. ಕೊನೆ­ಯಲ್ಲಿ ಕಣ್ಣ­ಮುಂದೆ ಅನೂ­ಹ್ಯ­ವಾದ ಚಿತ್ರ­ವೊಂ­ದನ್ನು ಅನಾ­ಯಾ­ಸ­ವಾಗಿ ಮೂಡು­ತ್ತದೆ. ಭೂತ ರೂಪಕ್ಕೆ ಮಳೆ ವರ್ತ­ಮಾನ ಅನ್ನುವ ಸಾಲಿಗೆ ಬರುವ ಹೊತ್ತಿಗೆ ಸಾವು ಬದು­ಕಾಗಿ ಮಾರ್ಪಾಟು ಹೊಂದಿ­ರು­ತ್ತದೆ.
ಇದು ಎಲ್ಲ­ರಿಗೂ ಹೀಗೇ ಆಗ­ಬೇ­ಕೆಂ­ದಿಲ್ಲ. ಕವಿ­ತೆಯ ಶಕ್ತಿಯೇ ಅದು. ಅದು ಒಬ್ಬೊ­ಬ್ಬ­ರನ್ನು ಒಂದೊಂದು ತೆರ­ನಾಗಿ ಸ್ಪರ್ಶಿ­ಸು­ತ್ತದೆ;


ಮೈಯೆಲ್ಲ ಗಡ­ಗು­ಟ್ಟು­ತ್ತ­ಲಿ­ದೆಯೇ?
ಬೆದ­ರಿ­ಸಿ­ದ­ವ­ರಾರು?
ಮುಖ ತೊಯ್ದಿದೆ, ಕಣ್ಣೀ­ರಿನ ಹನಿ­ಯನು
ಹರಿ­ಯಿ­ಸಿ­ದ­ವ­ರಾರು?
ಯಾರೂ ಕಾಣದ ಆ ಮರೆ­ಯೊ­ಳಗೆ
ಕುಲು­ಕುಲು ಎನು­ತಿದೆ ಮೆಲು­ನ­ಗೆಯ ನೊರೆ
ನಿನ್ನೆಯ ಹಾಡಿನ ದನಿ­ಯಿನ್ನೂ ಗುಣು-
ಗುಣಿ­ಸುವ ಮಾಯೆ­ಯೆಂ­ಥದು ಹೇಳು.
ಏ ಗಾಳಿ,
ಆ ಕತೆ­ಯ­ನೊ­ರೆದು ಮುಂದಕೆ ತೆರಳು


**­*­**


ಕವಿ­ತೆ­ಯೆಂ­ದರೆ ಬದುಕು. ಬರೆ­ಯ­ದಿ­ರು­ವುದು ಸಾವು. ಅಡಿ­ಗ­ರೊಮ್ಮೆ ಹೇಳಿ­ದರು;ಕಾವ್ಯ ನನಗೆ ಜೀವ­ನ್ಮ­ರ­ಣದ ಪ್ರಶ್ನೆ. ಬಹುಶಃ ಅದೇ ಸರಿ. ಹಸಿ­ವೆಯ ಹಾಗೆ ಕಾಡ­ದಿ­ದ್ದರೆ, ದಾಹದ ಹಾಗೆ ಕಂಗೆ­ಡಿ­ಸದೇ ಇದ್ದರೆ, ಕಾಮದ ಹಾಗೆ ತಪಿ­ಸದೇ ಇದ್ದರೆ, ಸಾವಿನ ಹಾಗೆ ಮೋಹಿ­ಸದೇ ಹೋದರೆ ಪದ್ಯ ಬರೆ­ಯ­ಬಾ­ರದು. ಕವಿತೆ ಬರೆದು ಕವಿ­ಯಲ್ಲ ಅನ್ನಿ­ಸಿ­ಕೊ­ಳ್ಳುವ ಬದಲು, ಬರೆ­ಯದೇ ಒಂದಲ್ಲ ಒಂದು ದಿನ ಕವಿ­ಯಾ­ದೇನು ಅಂತ ಕಾಯು­ವುದು ಮೇಲು.


ಕಾವ್ಯಕ್ಕೆ ವಿಚಿ­ತ್ರ­ವಾದ ಸಮ­ಸ್ಯೆ­ಗ­ಳಿವೆ. ಅನಂ­ತ­ಮೂ­ರ್ತಿ­ಯ­ವರ ಬರ­ಹ­ಗ­ಳಲ್ಲಿ ಆಗುವ ಹಾಗೆ, ಎಷ್ಟೋ ಸಾರಿ ಗದ್ಯಕ್ಕೆ ಪದ್ಯದ ತಳ­ಮ­ಳ­ಗ­ಳನ್ನು ಹೊತ್ತು­ಕೊ­ಳ್ಳುವ ಶಕ್ತಿ­ಯಿದೆ. ಆದರೆ ಪದ್ಯ ಹಾಗಲ್ಲ, ಅದು ಗದ್ಯದ ಭಾರಕ್ಕೆ ಮುಳು­ಗು­ತ್ತದೆ. ಜಯಂತ ಕಾಯ್ಕಿಣಿ ಬರೆದ ಅನೇಕ ಕವಿ­ತೆ­ಗ­ಳನ್ನೂ ಇದಕ್ಕೆ ಉದಾ­ಹ­ರ­ಣೆ­ಯಾಗಿ ಕೊಡ­ಬ­ಹುದು.


ಕವಿ­ಗಳ ಸಮ­ಸ್ಯೆ­ಯೆಂ­ದರೆ ಅವರು ಗೊತ್ತಿ­ರುವ ಸಂಗ­ತಿ­ಗಳ ಕುರಿತು ಬರೆ­ಯು­ತ್ತಾರೆ. ಗೊತ್ತಿ­ರು­ವು­ದರ ಕುರಿತು ಬರೆ­ದದ್ದು ಯಾವತ್ತೂ ಕವಿತೆ ಆಗ­ಲಾ­ರದು. ಬರೆ­ಯುವ ಹೊತ್ತಿಗೆ ಕವಿಗೂ ಗೊತ್ತಿ­ಲ್ಲದೇ ಹೋದದ್ದು ಮಾತ್ರ ಕಾವ್ಯ­ವಾಗಿ ಒಡ­ಮೂ­ಡು­ತ್ತದೆ. ಮಹಾ­ಭಾ­ರ­ತವೋ ರಾಮಾ­ಯ­ಣವೋ ಕಾವ್ಯ­ವಾ­ಗು­ವುದ ಅದ­ರ­ಲ್ಲಿ­ರುವ ಕಥ­ನದ ಅಂಶ­ದಿಂ­ದಲ್ಲ, ಬೆರ­ಗು­ಗೊ­ಳಿ­ಸುವ ಕವಿಗೂ ಗೊತ್ತಿ­ಲ್ಲದ ಸತ್ಯ­ಗಳ ಅನಾ­ವ­ರ­ಣ­ದಿಂದ.


ಗೊತ್ತಿ­ಲ್ಲದ್ದು ಗೊತ್ತಾ­ಗುವ ಕ್ಪಣಕ್ಕೆ ಒಳ್ಳೆಯ ಉದಾ­ಹ­ರಣೆ ಲಂಕೇ­ಶರ ಅವ್ವ;


ಕಾಲು ಶತ­ಮಾ­ನದ ಬಳಿಕ;
ಜಗ­ಳ­ಗಂ­ಟಿ­ಯಾ­ಗಿದ್ದ ಈ ಅವ್ವ ಈಗ ನನ್ನಲ್ಲಿ
ವಿನಯ ಮತ್ತು ಮೌನ.


ಹಾಗೆ ಗೊತ್ತಿ­ಲ್ಲದೇ ಹುಟ್ಟಿದ್ದು ರಾಮಾ­ಯಣ. ಗೊತ್ತಿ­ಲ್ಲದೇ ಹುಟ್ಟಿದ್ದು ಕುಮಾ­ರ­ವ್ಯಾ­ಸನ ಭಾರತ. ಬೇಂದ್ರೆಯ ಎಷ್ಟೋ ಕವಿ­ತೆ­ಗ­ಳಿಗೆ ಗೊತ್ತಿಲ್ಲ, ಗುರಿ­ಯಿಲ್ಲ. ತುಂಬ ಸರ­ಳ­ವಾಗಿ ಹೇಳ­ಬೇ­ಕೆಂ­ದರೆ ಕೆಎಸ್ ನರಸಿಂಹಸ್ವಾಮಿ ಬರೆ­ದದ್ದೂ ಅದೇ;
ಗೋರಿ­ದೀ­ಪದ ಕೆಳಗೆ ಹಲ್ಲಿ ಐದರ ಹರಕೆ
ತಳ­ವಿ­ರದ ತಟ್ಟೆ­ಯಲ್ಲಿ ಐದು ಗೆಜ್ಜೆ
ಪಳ­ಯು­ಳಿಕೆ ಕನ­ಸಾ­ಚೆ­ಗೈದು ಬಣ್ಣದ ಹಸೆಗೆ
ಬಂದ ಸುಂದರಿ ನಿನಗೆ ಎಷ್ಟು ಲಜ್ಜೆ?


ಮಾತಿ­ನಲ್ಲಿ ಹುಟ್ಟಿದ್ದು ಗದ್ಯ, ಆತ್ಮ­ದಲ್ಲಿ ಹುಟ್ಟಿದ್ದು ಪದ್ಯ; ಒಳ್ಳೆಯ ಕವಿ­ಗಾಗಿ ಮಾತಿ­ಗಾಗಿ ತಡ­ಕಾ­ಡು­ತ್ತಾನೆ. ಥಟ್ಟನೆ ಹೊರ­ಹೊ­ಮ್ಮಿ­ದರೆ ಅದು ಚಿಕ್ಕ­ಮ­ಗ­ಳೂರು ಕಣ್ಣ್ ಸಾಹಿ­ತ್ಯ­ವಾ­ಗು­ತ್ತ­ದೆಯೇ ಹೊರತು ಕವಿತ್ವ ಆಗು­ವು­ದಿಲ್ಲ. ಕವಿ ಏನನ್ನೋ ಹೇಳ­ಹೊ­ರ­ಟಾಗ ಅದು ಅನು­ಭ­ವವೂ ಆಗಿ­ರು­ವು­ದಿಲ್ಲ, ಅನು­ಭಾ­ವವೂ ಆಗಿ­ರು­ವು­ದಿಲ್ಲ. ಅವೆ­ರ­ಡನ್ನೂ ಮೀರಿದ ಇನ್ನೇನೋ ಆಗಿ ಅವ­ನಿಗೇ ಗೊತ್ತಾ­ಗದ ಹಾಗೆ ಬರೆ­ಸಿ­ಕೊಂಡು ಬಿಡು­ತ್ತದೆ;


Nor dread nor hope attend
A dying animal;
A man awaits his end
Dreading and hoping all
Many times he died
Many times rose again
A great man in his pride
confronting murderous man
casts derision upon
Supersession of breath;
He knows death to the bone
Man has created death.


ಯೇಟ್ಸನ ಈ ಪದ್ಯದ ಸೊಬ­ಗನ್ನು ನೋಡಿ. ಇಲ್ಲಿಯ ಒಂದು ಅಕ್ಪ­ರ­ವನ್ನು ಕಿತ್ತರೂ ಕೂಡ ಇಡೀ ಪದ್ಯ ಅರ್ಥ ಕಳ­ಕೊ­ಳ್ಳು­ತ್ತದೆ. ಸಾವಿನ ನಿಗೂ­ಢ­ತೆ­ಯನ್ನು ಮೀರಿ ನಿಲ್ಲುವ ಪ್ರಯತ್ನ ಇದಲ್ಲ. ಕೇವಲ ಚಿಂತ­ನೆ­ಗ­ಳನ್ನೇ ಹರ­ಳು­ಗ­ಟ್ಟಿ­ರುವ ಈ ಸಾಲು­ಗ­ಳನ್ನು ಒಟ್ಟಾಗಿ ಓದಿ­ಕೊಂ­ಡಾಗ ಅವು ಕೇವಲ ಚಿಂತ­ನೆ­ಗ­ಳಷ್ಟೇ ಆಗಿ ಉಳಿ­ಯು­ವು­ದಿಲ್ಲ. ಕೊನೆ­ಯಲ್ಲಿ ಅರಿ­ವಾ­ಗುವ ಭಾವ ಇಡೀ ಕವಿ­ತೆ­ಯನ್ನು ಬೆಳ­ಕಾ­ಗಿ­ಸು­ತ್ತದೆ. ಮನುಷ್ಯ ತನ್ನ ಯೋಚ­ನೆ­ಯಲ್ಲಿ, ಬುದ್ಧಿ­ವಂ­ತಿ­ಕೆ­ಯಲ್ಲಿ, ಜ್ಞಾನ­ದಲ್ಲಿ ಸಾಯುವ ಮೊದಲೇ ಸಾವನ್ನು ಕಾಣ­ಬಲ್ಲ. ಅದರ ಭೀಕ­ರ­ತೆ­ಯನ್ನು ಅರಿ­ಯ­ಬಲ್ಲ. ಆದರೆ ಪ್ರಾಣಿ­ಗ­ಳಿಗೆ ಸಾವೆಂ­ಬುದೇ ಇಲ್ಲ. ಯಾಕೆಂ­ದರೆ ಅವು­ಗ­ಳಿಗೆ ಸಾವಿನ ಬಗ್ಗೆ ಏನೇನೂ ಗೊತ್ತಿಲ್ಲ!
ಒಂದು ಕವಿ­ತೆ­ಯಲ್ಲಿ ಒಬ್ಬ ಕವಿಯ ವ್ಯಕ್ತಿತ್ವ ಅಭಿ­ವ್ಯ­ಕ್ತ­ಗೊ­ಳ್ಳು­ತ್ತದೆ ಅನ್ನು­ವುದೂ ಸುಳ್ಳು. ಕವಿ ಯಾವುದು ಅಲ್ಲವೋ ಅದು ಕವಿ­ತೆ­ಯಾಗಿ ಮೂಡು­ತ್ತದೆ. ಹೀಗಾಗಿ ಬೇಂದ್ರೆ ಹೇಳಿದ್ದು ನಿಜ; ಬೇಂದ್ರೆ­ಯೊ­ಳಗೆ ಒಬ್ಬ ಕವಿ­ಯಿ­ದ್ದಾನೆ. ಆ ಕವಿ ಬೇಂದ್ರೆಯೇ ಆಗಿ­ರ­ಬೇ­ಕಿಲ್ಲ. ಹಾಗೆ ನೋಡಿ­ದರೆ ಯಾವ ಲೇಖ­ಕನೂ ಇಡಿ­ಯಾಗಿ ಅವ­ನೊ­ಬ್ಬನೇ ಆಗಿ­ರು­ವು­ದಿಲ್ಲ. ಆತ ತನ್ನ ಕಾಲದ ಅಸಂ­ಖ್ಯಾತ ರೂಪ­ಕ­ಗಳ, ಪ್ರತಿ­ಮೆ­ಗಳ, ತಲ್ಲ­ಣ­ಗಳ ಒಟ್ಟು ಮೊತ್ತ.


ದೇವರು ರುಜು ಮಾಡಿ­ದನು; ಕವಿ ಪರ­ವ­ಶ­ನಾ­ಗುವ ಅದ ನೋಡಿ­ದನು!


ಅಲ್ಲಿ ಬರೀ ಕುವೆಂಪು ಮಾತ್ರ ಇದ್ದಿ­ದ್ದರೆ ಬಹುಶಃ ಅವರು ಪರ­ವ­ಶ­ರಾ­ಗು­ತ್ತಿ­ರ­ಲಿಲ್ಲ; ಬರೀ ನೋಡು­ತ್ತಿ­ದ್ದರು.

(ಚಿತ್ರ- ಅಪಾರ.)

ನನ್ನ ಸಂಕಲನವೊಂದಕ್ಕೆ ಅಪಾರ ವಿನ್ಸಾಸಗೊಳಿಸಿದ್ದು.

8 comments:

sritri said...

ಹೀಗೆ ಅಂತರ್ಜಾಲದಲ್ಲಿ ದಿಕ್ಕು,ದಿಸೆಯಿಲ್ಲದೆ ಅಲೆವಾಗ ಜೋಗಿ ಮನೆ ಕಾಣಸಿಕ್ಕಿತು. ತಂಪಾಗಿದೆ ಇಲ್ಲಿ. ಆಗಾಗ ಬಂದು ಇಲ್ಲಿ ಠಿಕಾಣಿ ಹೂಡಿದರೆ ನಿಮಗೇನು ತೊಂದರೆ ಇಲ್ಲ ತಾನೇ?

ಅನಿವಾಸಿ said...

ಪದ್ಯದ ಬಗ್ಗೆ ಇಷ್ಟು ಸುಂದರವಾಗಿ ಬರೆದಿರುವುದು ಓದಿ ಬಹಳ ಕಾಲ ಆಗಿತ್ತು. ಕಾವ್ಯ ಅನ್ನೋದು ಪದ್ಯದಲ್ಲಿ ಮಾತ್ರ ಇರೋದಲ್ವಲ್ಲ... ಲಂಕೇಶರ ಟೀಕೆ-ಟಿಪ್ಪಣಿ ನೆನಪಿಗೆ ಬಂತು. ಬಹಳ ಬಹಳ ಬಹಳ ಥ್ಯಾಂಕ್ಸ್...

http://anivaasi.blogspot.com

Jogimane said...

ಅತಿಥಿ ದೇವೋ ಭವ.
ನೆಂಟರು ಪರಮನೆಂಟ ಆದರೂ ಸಂತೋಷವೇ. ಮನೆ ಚಿಕ್ಕದು, ಆದರೆ ಸೊಳ್ಳೆ ಕಾಟ ಇಲ್ಲ.

ಅನಿವಾಸಿಯವರಿಗೊಂದು ಥ್ಯಾಂಕ್ಸ್. ನಿಮ್ಮ ನಿವಾಸಕ್ಕೂ ಹೋಗಿ ಬಂದೆ. ಸೇತುವೆಯನ್ನು ನೋಡಿ ಬಂದೆ, ದಾಟಲಿಲ್ಲ.
ಥ್ಯಾಂಕ್ಸ್...

suptadeepti said...

ನಮಸ್ಕಾರ ಜೋಗಿ. ಹೀಗೇ ತಿರುಗಾಡುತ್ತಾ ಬಂದೆ; ನಿಮ್ಮ ಮನೆ ಸಿಕ್ಕಿತು. ಆಸರಿಗೆ ಅಕ್ಕರೆಯ ಅಕ್ಷರ ಪಾನಕ ಇತ್ತು, ಇನ್ನೇನು ಬೇಕು? ಒಂದಿಷ್ಟು ನಿಂತೆ, ಕೂತೆ.

ಪದ್ಯ ಸಲೀಸು ಅಂತ ನಾನೂ ಅಂದುಕೊಂಡಿದ್ದೇನೆ; ಆದರೆ ಅಕ್ಷರಗಳನ್ನು ಕರೆದು ಸಾಲಿನಲ್ಲಿ ನಿಲ್ಲಿಸಿ, ಕೂರಿಸಿ ಪದ್ಯ ಬರೆಯುವುದು ನನ್ನ ಜಾಯಮಾನವಲ್ಲ, ಅದು ನನ್ನದಲ್ಲದ ಪದ್ಯ. ನಿಮ್ಮದೇ ಒಂದು ಮಾತಿನಂತೆ ಪದ್ಯ ತನ್ನ-ತಾನೇ ಬರೆಸಿಕೊಳ್ಳುತ್ತದೆ, ಯಾರೂ ಬರೆಯುವುದಲ್ಲ. ಆಮೇಲೆ ಒಮ್ಮೆ ಓದಿ, "ಇದನ್ನು ನಾನೇ ಬರೆದೆನೆ?" ಅನ್ನುವ ಬೆರಗು ಮಾತ್ರ ನನ್ನದು. ಪದ್ಯ ನನ್ನ ಕಡೆ ನಕ್ಕ ಹಾಗೆ ಗದ್ಯ ನಗದು, ಅದಕ್ಕಾಗಿ ಪದ್ಯ ನನಗಿಷ್ಟ.

Anonymous said...

It captures a mood of poetry very well. All good creative work, tends to capture the unknown through the known process. That leap should happen. Unless that happens I believe, creative expression does not climb the peak. I like your blog and it is different from rest. Like a honest diary it reads.

I want to you write on Gangdhar Cittal. His 72 poems are all time great and exemplary how an individual experience translate into the man kind challenge.

Btw, I also liked way you have written on Khasaneesar. Ashwrohi, I felt it did not make the transition from individual experience – however any great writings always will lend to debate. You could have avoided narrating his person tragedies. I always afraid, knowing writer background in details may hamper good reading (not necessarily). Those generation are different, Lankesh, URA, Desai, Srikrishna Alanahalli, Devanur, Tejashwi all have written deep and insightful stories and we can read N number of times same. Each time it appears as new

Warm Regards
ashok

ಸುಶ್ರುತ ದೊಡ್ಡೇರಿ said...

ಸರ್, ನಿಮ್ಮನ್ನು ಬ್ಲಾಗ್ಲೋಕದಲ್ಲಿ ಕಂಡು ಸಿಕ್ಕಾಪಟ್ಟೆ ಖುಷಿಯಾಯಿತು. 'ಹಾಯ್'ನಲ್ಲಿ ನಿಮ್ಮ ಬರಹಗಳನ್ನು ಓದಿ ಮೊದಮೊದಲು ಹುಚ್ಚು ಹಿಡಿಯುವಂತಾಗುತ್ತಿತ್ತು: 'ಯಾರಪ್ಪಾ ಈಕೆ ಜಾನಕಿ...' ಅಂತ. ಕೊನೆಗೆ ಅದು 'ರವಿ ಕಾಣದ್ದನ್ನೂ ಕಾಣುವ' ಜೋಗಿ ಅಂತ ಗೊತ್ತಾಯಿತು.'ಜಾನಕಿ ಕಾಲಂ' ಹೆಸರಿನಲ್ಲಿ ಆ ಬರಹಗಳು ಪುಸ್ತಕವಾಗಿ ಪ್ರಕಟವಾಗಿದೆ ಅಂತ ಗೊತ್ತಾದ ತಕ್ಷಣ ಹೋಗಿ ಕೊಂಡುಬಂದು ನನ್ನ ಲೈಬ್ರರಿಗೆ ಸೇರಿಸಿದ್ದೆ.

ನನ್ನನ್ನು ಅದೆಷ್ಟೋ ಒಳ್ಳೆಯ ಕೃತಿಗಳನ್ನು ಓದುವಂತೆ ಪ್ರೇರೇಪಿಸಿದ್ದು ನಿಮ್ಮ ಬರಹಗಳು ಸರ್. ಕತೆ, ಕವಿತೆಗಳ ರಚನೆಯ ಬಗ್ಗೆ ನೀವು ಬರೆದ ಬರಹಗಳೇ ನನ್ನ ಬ್ಲಾಗ್-ಬರಹಗಳಿಗೆ ಇವತ್ತಿಗೂ ಮಾರ್ಗದರ್ಶಿಗಳು. ಥ್ಯಾಂಕ್ಸ್ ಎ ಲಾಟ್ ಫಾರ್ ದಟ್.

ಈಗ ಇಲ್ಲಿ ಸಿಕ್ಕಿದ್ದೀರಾ, ಇನ್ನು ಬಿಡುವುದಿಲ್ಲ ಬಿಡಿ :)

Jogimane said...

ಪ್ರಿಯ ಅಶೋಕ್
ನಿಮ್ಮ ಮಾತು ಸರಿ. ಲೇಖಕರ ಖಾಸಗಿ ಸಂಕಟಗಳು ಅವರ ಬರಹವನ್ನು ಓದುವ ಹೊತ್ತಿಗೆ ಓದುಗನನ್ನು ಯಾವತ್ತೂ ಪ್ರಭಾವಿಸುವಂತಿರಬಾರದು. ನಾನು ಖಾಸನೀಸರ ನೋವಿನ ಬಗ್ಗೆ ಬರೆಯಬಾರದಿತ್ತು ಅಂತ ಈಗ ಅನ್ನಿಸುತ್ತಿದೆ. ನಿಮ್ಮ ಸಲಹೆಗೆ ಥ್ಯಾಂಕ್ಸ್.
ಗಂಗಾಧರ ಚಿತ್ತಾಲರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಶ್ರೀವತ್ಸ ಜೋಶಿ said...

"ಪದ್ಯಂ ವಧ್ಯಂ ಗದ್ಯಂ ಹೃದ್ಯಂ" ಎಂದ ಪಿ.ಇ.ಟಿ ಮಾಸ್ಟ್ರು (= ನಂದಳಿಕೆ ಲಕ್ಷ್ಮೀನಾರಾಯಣ = ಮುದ್ದಣ) ಮತ್ತು ನಾನು ಒಂದೇ ತಾಲೂಕಿನವರು (ಕಾರ್ಕಳ) ಆದ್ದರಿಂದ ನನಗೂ ಪದ್ಯ ಅಷ್ಟಕ್ಕಷ್ಟೇ!