Wednesday, March 28, 2007

ಎರಡು ಬಯಲುಗಳಲ್ಲೂ ಒಂದೆ ಮೌನ....

ಮನುಷ್ಯನ ಅಂತರಾಳದ ದುರಂತ ಇದು;ತನಿಗಿರುವುದು ಒಂದೇ ಬಾಲ್ಯ, ಒಂದೆ ಹರೆಯ. ಆತ ಕೇವಲ ಒಂದೇ ಒಂದು ಸಾರಿ ತೀವ್ರವಾಗಿ ಪ್ರೀತಿಸಬಲ್ಲ. ಎರಡನೆಯ ಸಲದ ಪ್ರೀತಿ, ಕೇವಲ ಆಕರ್ಷಣೆಯೋ ಅನುಕೂಲವೋ, ಅಹಂಕಾರವೋ, ತೆವಲೋ ಆಗಿರುತ್ತದೆ. ಮೊದಲನೆಯ ಸಲದ್ದು ಪ್ರೀತಿ, ಆಮೇಲಿನದ್ದೆಲ್ಲ ನಟನೆ.ದು ಸ್ನೇಹಕ್ಕೂ ಒಪ್ಪುವ ಮಾತು. ಬಾಲ್ಯದಲ್ಲಿ ಕುದುರಿದ ಸ್ನೇಹದಷ್ಟು ತೀವ್ರವಾಗಿ ನಡುವಯಸ್ಸಿನ ಸ್ನೇಹ ಗಾಢವಾಗುವುದಿಲ್ಲ. ಬಾಲ್ಯದ ಗೆಳೆತನ ಮುಂಜಾವದ ಬಿಸಿಲಿನ ಹಾಗೆ ಶುರುವಾಗಿ, ದಿನದ ಏರಿಳಿತಗಳನ್ನು ಕಂಡು ಮುಸ್ಸಂಜೆಯಲ್ಲಿ ಇಂಗುತ್ತದೆ. ಆದರೆ ನಡುವಯಸ್ಸಿನ ಗೆಳೆತನ ಸಂಜೆಯ ಬಿಸಿಲಿನ ಹಾಗೆ. ಜೊತೆಗಿದ್ದಷ್ಟು ಹೊತ್ತು ಮಾತ್ರ ಆಪ್ಯಾಯಮಾನ.

ಇದು ಯೌವನ ಮತ್ತು ನಡುವಯಸ್ಸಿನ ಮಾತಾಯಿತು. ವೃದ್ಧಾಪ್ಯ ಮತ್ತು ಬಾಲ್ಯ ಹೇಗಿರುತ್ತದೆ. ಬಾಲ್ಯ ಸಾವಿನ ಕಲ್ಪನೆಯಾಗಲೀ, ನೆರಳಾಗಲೀ ಸುಳಿಯದ ಅಮರತ್ವದ ಅವ. ಮುಪ್ಪು ಈ ಜನ್ಮದಲ್ಲಾಗಲೀ, ಮರುಜನ್ಮದಲ್ಲಾಗಲೀ ನಂಬಿಕೆ ಉಳಿಸಿಕೊಳ್ಳಲಾಗದ ಕಡುಕಷ್ಟದ ಕಾಲ. ಬಾಲ್ಯದ ಗೆಳೆತನದ ಹಾಗೆ, ಮುಪ್ಪಿನ ಸ್ನೇಹ ಕೂಡ ಸೆಳೆಯುತ್ತದಾ? ಅರುವತ್ತರ ನಂತರದ ಸಂಬಂಧ ಹೇಗಿರುತ್ತದೆ? ವೃದ್ಧಾಪ್ಯದ ತಲ್ಲಣ, ಆತಂಕ ಮತ್ತು ಭರವಸೆಯಿಲ್ಲದ ಗಳಿಗೆಗಳನ್ನು ಮುಂದಿಟ್ಟುಕೊಂಡು ಕುಳಿತವನ ಕಣ್ಣಲ್ಲಿ ಜಗತ್ತು ಹೇಗೆ ಕಾಣಿಸುತ್ತದೆ.

ನೆನಪಾಗುತ್ತದೆ ಹಾಯಿಕು;

1
ದಟ್ಟವಾಗುತ್ತಿದೆ ಇರುಳು
ಬತ್ತದ ಕಣಜದಲ್ಲಿ
ಮೌನ
ಮಿರುಗುವ ಕ್ಪೀರಪಥ

ಕಣ್ಣಕೊಳದಲ್ಲಿ
ನಾಳೆ ನಾಲಗೆ ರುಚಿಯಾಗುವ
ಬಾತುಕೋಳಿಗಳ ಕವಕವ


ಪಾರಿಜಾತದ
ಹೂಗಳ ನಡುವೆ ಗುಬ್ಬಚ್ಚಿಗಳ ಕಣ್ಣಾಮುಚ್ಚಾಲೆ
ಶಿಶಿರದ ಏಕಾಂತದಲ್ಲಿ
ನಮ್ಮಪ್ಪನ ಮುದಿಗಣ್ಣಿಗೆ
ಮಂಜುಗಟ್ಟಿದ ಗಿರಿಶಿಖರ

ಸೂರ್ಯ ಗಡಗಡ
ಶಿಶಿರದಲ್ಲಿವನು ಕೊನೆಗೂ
ಮುಟ್ಟುತ್ತಾನಾ ಆಚೆದಡ*********
ಚಂದ್ರಶೇಖರ ಕಂಬಾರರ ಕವಿತೆಗಳ ಪೈಕಿ ಮತ್ತೆ ಮತ್ತೆ ಕಾಡುವ ಪದ್ಯವೊಂದಿದೆ. ಬದುಕು ಸಾವಿನ, ಪ್ರಸಿದ್ಧಿ ಮತ್ತು ಹತಾಶೆಯ, ಸತ್ಯ ಮತ್ತು ಭ್ರಮೆಯ ಜಗತ್ತನ್ನು ಅದರಷ್ಟು ಸಮರ್ಥವಾಗಿ ಹಿಡಿದಿಟ್ಟ ಮತ್ತೊಂದು ಕವಿತೆ ಕನ್ನಡದಲ್ಲಿಲ್ಲ. ನಮ್ಮ ಎಲ್ಲಾ ಚಟುವಟಿಕೆಗಳನ್ನೂ ಅದು ಅಣಕಿಸುತ್ತದೆ. ಮೇಲುಮೇಲಿನ ತತ್ವಜ್ಞಾನವನ್ನು, ಆಳಕ್ಕಿಳಿಯಲಾರದ ನಮ್ಮ ಸೋಗಲಾಡಿತನವನ್ನು, ಎದುರಿಸಲಾಗದ ದಿಗಿಲನ್ನು ಈ ಕವಿತೆ ಬೊಟ್ಟು ಮಾಡಿ ತೋರಿಸುತ್ತದೆ. ಪದ್ಯ ಶುರುವಾಗುವುದು ಹೀಗೆ;

ಹೊಂಡದ ದಂಡೆಯ ಮೇಲೆ ಒಂದು ಮರ
ಹೊಂಡದಲ್ಲಿ ಒಂದು ಮರ
ಮೇಲೆ ನಿಜವಾದ ಮರೆಳಗೆ ಬಿಂಬಿಸಿದ ಮರ

ಕೊಳದ ದಡದಲ್ಲಿರುವ ಮರ ಹಾಗೂ ಕೊಳದಲ್ಲಿ ಮೂಡಿದ ಅದರ ಪ್ರತಿಬಿಂಬವನ್ನಿಟ್ಟುಕೊಂಡು ಬರೆಯುತ್ತಾರೆ ಕಂಬಾರ. ಹೊಂಡದ ಮೇಲಿರುವ ಮರ ನಾವು, ಕೊಳದಲ್ಲಿ ಪ್ರತಿಬಿಂಬಿಸಿದ್ದು ನಮ್ಮ ಸುಪ್ತ ಮನಸ್ಸು ಅಂತಿಟ್ಟುಕೊಂಡರೆ ಹಾದಿ ಸುಗಮ. ಹಾಗಿಟ್ಟುಕೊಳ್ಳಲೇಬೇಕು ಅಂತೇನಿಲ್ಲ. ಬೇರೆ ಅರ್ಥಗಳನ್ನೂ ಅವರವರ ಭಾವಕ್ಕೆ ತಕ್ಕಂತೆ ಕಂಡುಕೊಳ್ಳಬಹುದು. ಅದು ಬದುಕು ಮತ್ತು ಸಾಹಿತ್ಯವೂ ಆಗಬಹುದು. ಏನೋ ಒಂದು!

ಮುಂದಿನ ಸಾಲುಗಳಲ್ಲಿ ಕಂಬಾರ ಇವೆರಡನ್ನೂ ವಿಸ್ತರಿಸುತ್ತಾ, ಅನ್ವಯಿಸುತ್ತಾ ಹೋಗುತ್ತಾರೆ;

ತೆರೆ ಎದ್ದಾಗ ಒಂದು ನಡುಗುತ್ತದೆ
ಇನ್ನೊಂದು ನಗುತ್ತದೆ

ತೆರೆ ಏಳದ ಹೊರತು ಯಾವುದು ನಿಜವಾದ ಮರ, ಯಾವುದು ಬಿಂಬಿಸಿದ ಮರ ಅನ್ನುವುದು ಥಟ್ಟನೆ ಹೊಳೆಯದು. ಅದರ ಚಿತ್ರ ಬರೆದು ತೆಲೆಕೆಳಗಾಗಿಸಿದರೆ ಎರಡೂ ಒಂದೇ ಥರ ಕಾಣಿಸೀತು. ಆದರೆ ಸತ್ವ ಗೊತ್ತಾಗಬೇಕಿದ್ದರೆ ತೆರೆ ಏಳಬೇಕು.
ತೆರೆ ಎದ್ದಾಗ ನಡುವುದು ಮರವಲ್ಲ, ನೀರು. ನೀರು ಕಂಪಿಸಿದರೆ ಮರವೂ ಕಂಪಿಸೀತು. ಕಂಪಿಸುವುದು ನೀರೊಳಗಿನ ಮರ, ದಡದ ಮೇಲಿರುವ ಮರ ನಗುತ್ತದೆ. ಆ ನಗು ಕೂಡ ಹೊಂಡದಲ್ಲಿನ ಮರದಲ್ಲಿ ಬಿಂಬಿಸುತ್ತದಾ?

ಹಾಗೆ ಬಿಂಬಿಸದೇ ಹೋದರೆ ಅದು ಬಿಂಬಿಸಿದ ಮರ ಹೇಗಾದೀತು? ಪ್ರತಿಬಿಂಬದಲ್ಲಿ ಆದ ಬದಲಾವಣೆ ಮೂಲದಲ್ಲೂ ಆಗದೇ ಹೋದರೆ ಎರಡಕ್ಕೂ ಸ್ವತಂತ್ರ ಅಸ್ತಿತ್ವವಿದೆ ಅನ್ನೋಣವೇ? ಬಿಂಬ-ಪ್ರತಿಬಿಂಬಗಳ ಇಂಬುಗೆಡಿಸಿದ್ದು ಹಾಗಾದರೆ, ಮರವೇ, ಮಾಧ್ಯಮವೇ? ಕವಿಯ ಮರೆವೇ?

ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒಂದೇ ಈ ಮರಗಳಿಗೆ

ಈ ಮೂಲಭೂತ ಎಚ್ಚರದೊಂದಿಗೆ ಕವಿ ನಮ್ಮ ಮುಂದೆ ಮತ್ತೊಂದಷ್ಟು ವಿಚಿತ್ರ ಸತ್ಯಗಳನ್ನು ಇಡುತ್ತಾರೆ;

ನೀನೊಂದು ಮರ ಹತ್ತಿದರೆನ್ನೊಂದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ

ಇದು ನೋಡಿ ಸಮಸ್ಯೆ. ನಾವು ಇಹದಲ್ಲಿ ತಲೆಮೇಲಾಗಿ ಹತ್ತುತ್ತಿದ್ದೇವೆ ಅಂದುಕೊಳ್ಳುವ ಹೊತ್ತಿಗೇ ಇನ್ನೆಲ್ಲೋ ತಲೆಕೆಳಗಾಗಿ ಇಳಿಯುತ್ತಿರುತ್ತೇವೆ. ನಮ್ಮನ್ನು ಎತ್ತರಕ್ಕೆ ಕೊಂಡೊಯ್ದ ಏಣಿ ಕೂಡ ಮತ್ತೆಲ್ಲೋ ನಮ್ಮನ್ನು ಕೆಳಗೆ ಇಳಿಸಿರುತ್ತದೆ. ಹತ್ತುವುದು ಕೂಡ ಇಳಿಯುವುದೇ ತಾನೇ!ಂದು ಪುಟ್ಟ ಉದಾಹರಣೆ ತೆಗೆದುಕೊಳ್ಳಿ. ಯಾವ ಖ್ಯಾತಿಯಾಗಲೀ, ಪ್ರಸಿದ್ಧಿಯಾಗಲೀ ಇಲ್ಲದೇ ಇದ್ದ ದಿನಗಳಲ್ಲಿ ಇಡೀ ಊರೇ ಅವನದ್ದಾಗಿರುತ್ತದೆ. ಆತ ಎಲ್ಲಿ ಬೇಕಾದರೂ ಓಡಾಡಬಲ್ಲ, ಯಾರ ಜೊತೆ ಬೇಕಿದ್ದರೂ ಮಾತಾಡಬಲ್ಲ, ಎಲ್ಲಾದರೂ ಇರಬಲ್ಲ, ಹೇಗಾದರೂ ಬದುಕಬಲ್ಲ. ಆದರೆ ಅವನು ಸ್ಟಾ್ ಆದ ಅಂತಿಟ್ಟುಕೊಳ್ಳಿ. ಕೋಟ್ಯಂತರ ರುಪಾಯಿ ಸಂಪಾದಿಸಿದ ಅಂತಿಟ್ಟುಕೊಳ್ಳಿ. ಅವನ ಜಗತ್ತು ಇದ್ದಕ್ಕಿದ್ದಂತೆ ಕುಗ್ಗಿಹೋಗುತ್ತದೆ. ಅಷ್ಟಗಲದ ಕೋಣೆ, ಕಪ್ಪುಗಾಜಿನ ಕಾರು, ಯಾರನ್ನೂ ಮಾತಾಡಿಸಲಾರದ, ನೋಡಲಾರದ ಸ್ಥಿತಿ. ಬೆರೆಯುವುದಂತೂ ಆಗದ ಮಾತು.ದು ನಿಜವಾದ ಮರವೋ ಬಿಂಬಿಸಿದ ಮರವೋ? ಅವನು ಹತ್ತಿದ್ದಾನೋ ಇಳಿದ್ದಿದಾನೋ?

ಮ್ಯಾಲೆ ನೀಲಿಯ ಬಯಲು
ಕೆಳಗದರ ನಕಲು
ಎರಡು ಬಯಲುಗಳಲ್ಲು ಒಂದೆ ಮೌನ

ಮೌನವನ್ನು ಮೀರುವ ಬಗೆಯೆಂತು? ಅದನ್ನು ಮೀರುವುದು ನಮ್ಮ ಉದ್ದೇಶವೋ, ಗುರಿಯೋ, ಅನಿವಾರ್ಯವೋ, ಕರ್ಮವೋ, ಕರ್ತವ್ಯವೋ? ಪ್ರಶ್ನೆಗಳನ್ನು ಬದಿಗಿಟ್ಟು ಕಂಬಾರರು ಆತ್ಮಕ್ಕೆ ಲಗ್ಗೆ ಹಾಕುತ್ತಾರೆ:

ಹತ್ತುತ್ತಾ ಹತ್ತುತ್ತಾ ಗಾಳಿಯಾಗುತ್ತಿ ಅಂತ ತಿಳಿ
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂಳಿಯೋದು ನಿನ್ನ ಕೈ ಮೀರಿದ್ದು.

ಹತ್ತಿದವರು ಸ್ವರ್ಗ ಸೇರುವರೆಂದು ಸುದ್ದಿ
ನಮಗದು ಖಾತ್ರಿಯಿಲ್ಲ
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೋಬಹುದು.

ಅಲ್ಲಿಗೆ ಕತೆ ಮುಗಿಯುತ್ತದೆ. ಕವಿತೆ ಮತ್ತೊಂದು ಸ್ತರಕ್ಕೆ ಏರುತ್ತದೆ. ಏರುತ್ತಾ ನಮ್ಮನ್ನೂ ಜೊತೆಗೇ ಕರೆದೊಯ್ಯುತ್ತದೆ. ಇಡೀ ಬದುಕಿನ ಸಾವಿನ ಅವರೆಡರೂ ಕೂಡಿಕೊಂಡಿರುವ ಕತ್ತಲುಬೆಳಕಿನ ಗಳಿಗೆಯನ್ನು ಅವರು ಹಿಡಿದಿಟ್ಟು ಹೇಳುತ್ತಾರೆ;ಕತೆಯ ದುರಂತದೋಷ ಯಾವುದೆಂದರೆ;

ನಿಜವಾದ ಮರ ಮತ್ತು
ನೀರಿನ ಮರವೆರಡೂ ಒಂದಾದ ಸ್ಥಳ
ಮಾಯವಾಗಿರೋದು

ಬದುಕು-ಸಾವು ಸಂಸುವ ಜಾಗದ ಹಾಗೆ, ಏಕಾಂತ ಮತ್ತು ಲೋಕಾಂತ ಮುಟ್ಟಿರುವ ಜಾಗ ದೂರವಾಗಿರುವ ಹಾಗೆ, ಕತ್ತಲು ಬೆಳಕು ಕೂಡದೆಯೂ ಕೂಡಿದ ಹಾಗೆ. ಮುಟ್ಟಿಯೂ ಮುಟ್ಟದ ಹಾಗೆ. ಕತ್ತಲು ಮುಟ್ಟಿದರೆ ಬೆಳಕು ಮೈಲಿಗೆಯಾಗುವ ಹಾಗೆ. ಬೆಳಕು ಮುಟ್ಟಿದರೆ ಕತ್ತಲೆ ಸಾಯುವ ಹಾಗೆ!

ಹಾಗಿದ್ದರೆ ನಾವೇನು ಮಾಡಬೇಕು..
ಅದಕ್ಕೇ ಹೇಳುತ್ತೇನೆ ಗೆಳೆಯಾ
ಮ್ಯಾಲೆ ಹತ್ತಿದರೂ
ತಲೆ ಕೆಳಗಾಗಿ ನೇತಾಡುವುದು ತಪ್ಪಿದ್ದಲ್ಲ
ಮ್ಯಾಲಿಂದ ಜಿಗಿದು ತಳಮುಟ್ಟಿ
ಮಾಯವಾದ ನೆಲವ
ಹುಡುಕಬೇಕೋ ಹುಡುಕಿ ಬದುಕಬೇಕೋ..

ಹಾಗಂತ ಹುಡುಕುತ್ತಾ ಹೊರಟರೆ, ಯಾರಾದರೂ ಮಾತಾಡಿಯಾರು ಎಂದು ಕಾದರೆ, ಎಲ್ಲೋ ದನಿ ಕೇಳೀತು ಎಂದು ಕಾತರಿಸಿದರೆ ಎರಡು ಬಯಲುಗಳಲ್ಲೂ ಒಂದೆ ಮೌನ.

2 comments:

Kiran said...

ಇದು ಕನ್ನಡಪ್ರಭದ ಜೋಗಿಯವರ ಮನೇನಾ??

Jogimane said...

ಹೌದು ಕಿರಣ್
ಇದು ಅದೇ ಜೋಗಿಯ ಮನೆ.
ಸುಸ್ಸಾಗತ