Tuesday, March 27, 2007

ಕಾಡಮೂಲಕವೇ ಪಥ ಆಗಸಕ್ಕೆ...ಒಂದು ಮಳೆಗಾಲದ ಸಂಜೆ ಬೆಂಗಳೂರಿನಿಂದ ಹೊರಟು, ಮೈಸೂರಿಗೆ ಹೋಗಿ, ಅಲ್ಲಿಂದ ಗೋಪಾಲಸ್ವಾಮಿ ಬೆಟ್ಟ ಬಳಸಿಕೊಂಡು ಗುಂಡ್ಲುಪೇಟೆಗೊಂದು ಸುತ್ತುಹೊಡೆದು, ರಸ್ತೆಯುದ್ದಕ್ಕೂ ಆನೆಯ ಊರಿಗೆ ಬಾರದಂತೆ ಮಾಡಿದ ಕಂದಕಗಳನ್ನು ನೋಡುತ್ತಾ, ಅಲ್ಲೆಲ್ಲೋ ಕೃಪಾಕರ ಮತ್ತು ಸೇನಾನಿ ಮನೆಮಾಡಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾ ಬಂಡೀಪುರದ ಕಡೆ ಹೊರಟಿದ್ದೆವು. ರಜಾದಿನಗಳಲ್ಲಿ ಸುತ್ತಾಡುವುದಕ್ಕೆ ಕಾಡಿಗಿಂತ ಸೊಗಸಾದ ಜಾಗ ಬೇರೊಂದಿಲ್ಲ. ಮಕ್ಕಳ ರಜಾ ಬಂದ ತಕ್ಪಣ, ದೇವಸ್ಥಾನ, ರೆಸಾರ್ಟು ಅಂತ ಹೊರಡುವವರು ಸ್ವಲ್ಪ ನಿಧಾನಿಸಿ ಕಾಡಿನ ಕಡೆಗೆ ಮುಖ ಮಾಡಬೇಕು. ಮಕ್ಕಳಿಗೆ ಬಾಲ್ಯದಲ್ಲೇ ಕಾಡಿನ ಬಗ್ಗೆ ಅನನ್ಯ ಪ್ರೀತಿ ಹುಟ್ಟುವ ಹಾಗೆ ಮಾಡಿಬಿಟ್ಟರೆ ಅವರಿಗೆ ಮತ್ತೇನೂ ಕಲಿಸುವ ಅಗತ್ಯವಿಲ್ಲ.


ಬಂಡೀಪುರ, ನಾಗರಹೊಳೆ, ದಾಂಡೇಲಿ, ಬನ್ನೇರುಘಟ್ಟ, ಮುತ್ತೆತ್ತಿ, ಬನ್ನೇರುಘಟ್ಟ ಮುಂತಾದ ಅಭಯಾರಣ್ಯಗಳಿಗೆ ಹೋಗುವುದರಲ್ಲಿ ಅಂಥ ಮಜವೇನಿಲ್ಲ. ಅಲ್ಲಿ ನಾವೇ ಪ್ರಾಣಿಗಳೇನೋ ಎಂಬಂತೆ ಒಂದು ಬಸ್ಸಿನಲ್ಲಿ ಎಲ್ಲರನ್ನೂ ಒಟ್ಟಿ, ಕಾಡಿನಲ್ಲಿ ಸುತ್ತಿಸಿ ವಾಪಸ್ಸು ಕರೆದುಕೊಂಡು ಬರುತ್ತಾರೆ. ಅದನ್ನೆ ಸಫಾರಿ ಅಂತ ಕರೆಯುತ್ತಾರೆ. ಬನ್ನೇರುಘಟ್ಟದಲ್ಲಂತೂ ನೂರಾಹತ್ತು ರುಪಾಯಿ ಕೊಟ್ಟರೆ, ಮಿನಿಬಸ್ಸಲ್ಲಿ ಮೂವತ್ತು ಮಂದಿಯನ್ನು ಪೇರಿಸಿಕೊಂಡು ಕಾಡಿನಲ್ಲೊಂದು ಸುತ್ತು ಕರೆದುಕೊಂಡು ಹೋಗುತ್ತಾರೆ. ಅದಕ್ಕೆ ಗ್ರಾಂಡ್ ಸಫಾರಿ ಅನ್ನುವ ಹೆಸರುಬೇರೆ. ದಾರಿಯುದ್ದಕ್ಕೂ ಹುಲಿ, ಸಿಂಹಗಳು ನಮ್ಮ ಕನ್ನಡ ಸಿನಿಮಾಗಳ ಹಿರಿಯ ನಟರ ಹಾಗೆ ಆಕಳಿಸುತ್ತಾ ಬಿದ್ದುಕೊಂಡಿರುತ್ತವೆ. ಅವನ್ನು ಕಿಟಕಿಯಿಂದ ಇಣುಕಿ ನೋಡಿ ಸಂತೋಷಪಟ್ಟುಕೊಳ್ಳಬೇಕು.


ಆದರೆ ಕಾಡಿನ ಖುಷಿಯಿರುವುದು ಪ್ರಾಣಿಗಳಲ್ಲಷ್ಟೇ ಅಲ್ಲ. ನೀವು ಅಪಾರ ದೈವಭಕ್ತರಾಗಿದ್ದರೂ ಸುಬ್ರಹ್ಮಣ್ಯಕ್ಕೋ ಧರ್ಮಸ್ಥಳಕ್ಕೋ ಹೊರನಾಡಿಗೋ ಶೃಂಗೇರಿಗೋ ಹೋದಾಗ ನಿಮ್ಮ ಇಷ್ಟ ದೈವದ ದರ್ಶನ ಮಾಡಿಕೊಂಡ ನಂತರ ಒಂದು ಸುತ್ತು ಕಾಡಲ್ಲೂ ಅಡ್ಡಾಡುವುದನ್ನು ಮರೆಯಬೇಡಿ. ನಮ್ಮ ಎಲ್ಲಾ ದೇವರುಗಳೂ ಕಾಡುಪಾಲಾದವರೇ. ಹೀಗಾಗಿ ದಟ್ಟವಾದ ಕಾಡಿನ ಸೊಬಗನ್ನು ಎಲ್ಲಿ ಬೇಕಾದರೂ ಅನುಭವಿಸಬಹುದು. ಆ ಕಾಡುಗಳಲ್ಲಿ ಅಂಥ ಯಾವ ಅಪಾಯವೂ ಇರುವುದಿಲ್ಲ. ಕಾಡಿನ ನಡುವಿರುವ ಜಾಗಕ್ಕೆ ಹೋದಾಗಲೂ ರೂಮಲ್ಲಿ ಮಲಗಿಕೊಂಡು ಸ್ಟಾರ್ ಪ್ಲಸ್ ನೋಡುವುದು ಯಾವ ಕರ್ಮ?


ಕಾಡಿಗೊಂದು ವಿಶಿಷ್ಟ ಮೌನವಿದೆ. ವಿಚಿತ್ರ ಉಲ್ಲಾಸವಿದೆ. ಅಪರೂಪದ ಸ್ತಬ್ಧತೆಯಿದೆ. ಅದು ಹೊರಡಿಸುವ ಸಂಗೀತ ಕೂಡ ಅಷ್ಟೇ ವಿಶಿಷ್ಟ. ಬಜಗೋಳಿ ಎಂಬ ಊರಿನಿಂದ ಶೃಂಗೇರಿಗೆ ದಾಟಿಕೊಳ್ಳುವ ಮುಂಚೆ ಸಿಗುವ ಎಸ್ ಕೆ ಬಾರ್ಡರ್ ಎಂಬ ಪುಟ್ಟ ಊರಲ್ಲಿ, ಆಗುಂಬೆಯ ಘಾಟಿಯಲ್ಲಿ, ಚಾರ್ಮಾಡಿಯ ಓರೆಕೋರೆ ರಸ್ತೆಗಳಲ್ಲಿ, ಶಿರಾಡಿ ಘಾಟಿಯ ನಿರಾತಂಕ ಮೌನದಲ್ಲಿ, ಮಡಿಕೇರಿಯಿಂದ ಸುಳ್ಯಕ್ಕೆ ಇಳಿಯುವ ಸಂಪಾಜೆಯ ಸಂಭ್ರಮದಲ್ಲಿ ಬದುಕು ಸಂಪನ್ನಗೊಳ್ಳುವುದನ್ನು ಅನುಭವಿಸಿಯೇ ತಿಳಿಯಬೇಕು.


ಕಾಡು ದಿನಕ್ಕೆ ಮೂರು ರೂಪಗಳಲ್ಲಿ, ವರುಷಕ್ಕೆ ಮೂರು ಅವತಾರಗಳಲ್ಲಿ ನಮ್ಮನ್ನು ಎದುರುಗೊಳ್ಳುತ್ತದೆ. ಬೆಳಗ್ಗೆ ನೋಡಿದ ಕಾಡು ಮಧ್ಯಾಹ್ನದ ಹೊತ್ತಿಗೆ ತನ್ನ ನಿಗೂಢತೆಯನ್ನು ಕಳಕೊಂಡು ತುಂಬ ವರುಷ ಸಂಸಾರ ಮಾಡಿದ ಸಂಗಾತಿಯ ಹಾಗಾಗಿಬಿಟ್ಟಿರುತ್ತದೆ. ಸಂಜೆಯ ಹೊತ್ತಿಗೆ ಅದು ಮತ್ತೆ ಬಣ್ಣ ಬದಲಾಯಿಸಿಕೊಂಡು ಆಕಾಶದಿಂದ ಓರೆಯಾಗಿ ಕಾಡಿನೊಳಗೆ ಬಾಣದ ಹಾಗೆ ನುಗ್ಗಲು ಯತ್ನಿಸುವ ಇಳಿಸಂಜೆಯ ಬೆಳಕಿನ ಜೊತೆ ಸೇರಿಕೊಂಡು ವಿಚಿತ್ರ ವಿನ್ಯಾಸಗಳನ್ನು ಸೃಷ್ಟಿಸಿಬಿಡುತ್ತದೆ. ರಾತ್ರಿಯಂತೂ ಕಾಡು ಸಾವಿನ ಹಾಗೆ ಕಾಣಿಸುವುದಕ್ಕೆ ಶುರುವಾಗುತ್ತದೆ. ಆದರೆ ಅದು ಆಕರ್ಷಣೆ ಹುಟ್ಟಿಸುವ ಸಾವು. ಆಳವಾದ ಹೊಳೆಯ ನಡುವಲ್ಲಿ ಹೊಕ್ಕುಳಿನ ಹಾಗೆ ಸೆಳೆಯುವ ಚಕ್ರತೀರ್ಥದ ಆಕರ್ಷಣೆಯೇ ಕಾಡಿಗೂ ಬಂದುಬಿಡುತ್ತದೆ. ಅವಳೊಮ್ಮೆ ಹೆರಳ ಕೆದರಿ, ಕಪ್ಪುಗುರುಳನ್ನು ಬೆನ್ನ ಮೇಲೆಲ್ಲ ಹರಡಿದರೆ, ದೂರದಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ..


*****


ಇಂಥ ಕಾಡಿಗೆ ನುಗ್ಗುವ ಮುಂಚೆ ನೀವು ಮರೆಯಬೇಕಾದ ಕೆಲವು ವ್ಯಕ್ತಿಗಳಿದ್ದಾರೆ. ಅಂಥವರ ಪೈಕಿ ಪರಿಸರವಾದಿಗಳು ಮತ್ತು ವೈಲ್ಡ್ ಲೈಫ್ ಕನ್ಸರ್ವೇಟರ್ಸ್. ಇವರ ಕಾಯಿಲೆ ಒಂದೇ. ಕಾಡನ್ನು ತಾವೇ ಗುತ್ತಿಗೆಗೆ ತೆಗೆದುಕೊಂಡಂತೆ ವರ್ತಿಸುತ್ತಾರೆ. ನಾವು ಒಮ್ಮೆ ಬಂಡೀಪುರಕ್ಕೆ ಆತುಕೊಂಡಂತಿರುವ ಬುಶ್ ಬೆಟ್ಟದ ಕಾಡುಗಳಲ್ಲಿ ಅಲೆದಾಡುತ್ತಿದ್ದಾಗ ಕೆಮರಾ ಹಿಡಿದುಕೊಂಡು ವಿಪರೀತ ಸದ್ದು ಮಾಡುವ ಒಂದು ತರಕಲಾಂಡಿ ಜೀಪಿನಲ್ಲಿ ಬಂದ ಮೂವರು ಕಾಡಿನಲ್ಲಿ ಅಲೆದಾಡುವುದು ಎಂಥ ಅಪಾಯ ಎಂದು ಅಕಾರವಾಣಿಯಿಂದ ಉಪದೇಶ ಮಾಡಲು ಆರಂಭಿಸಿದ್ದರು. ತಮಾಷೆಯೆಂದರೆ ಅವರ ಜೀಪಿನ ಸದ್ದು, ಅದರಿಂದ ಹೊರಹೊಮ್ಮುತ್ತಿದ್ದ ಹೊಗೆ ಮತ್ತು ಅವರ ಆರ್ಭಟಕ್ಕಿಂತ ದೊಡ್ಡ ಪರಿಸರ ಹಾನಿ ಆಗುವುದು ಸಾಧ್ಯವೇ ಇರಲಿಲ್ಲ. ನಮ್ಮ ಕಾಡುಗಳಲ್ಲಿ ಸುತ್ತಾಡಿ, ಅರಣ್ಯ ಇಲಾಖೆಯ ಸಖ್ಯ ಬೆಳೆಸಿಕೊಂಡು ಪ್ರಾಣಿಗಳ ಫೋಟೊ ತೆಗೆದು ಅವನ್ನು ಮಾರಿ ಹೊಟ್ಟೆಹೊರೆಯುವವರೂ ಇವತ್ತು ವನ್ಯಸಂರಕ್ಪಕರು. ಕೆಎಂ ಚಿನ್ನಪ್ಪನವರಂಥ ನಿಜವಾದ ಕಾಳಜಿಯುಳ್ಳವರ ಜೊತೆ, ಉಲ್ಲಾಸ ಕಾರಂತರಂಥ ನಿಜವಾದ ಪ್ರೀತಿ ಉಳ್ಳವರ ನಡುವೆಯೇ ಇದನ್ನೆ ದಂಧೆ ಮಾಡಿಕೊಂಡಿರುವವರೂ ಇದ್ದಾರೆ. ಬಡವರ ಪಾಲನೆ ಮಾಡುವ ಎನ್ ಜಿ ಓಗಳ ಹಾಗೆ, ಸಿಟಿಯಲ್ಲಿ ಕೂತುಕೊಂಡು ಬಿಯ್ ಹೀರುತ್ತಾ ಲ್ಯಾಪ್ ಟಾಪಲ್ಲಿ ಕಾಡಿನ ಬಗ್ಗೆ ವಿಚಿತ್ರ ವರದಿ ತಯಾರಿಸಿ ಅದನ್ನು ವಿದೇಶಿ ಸಂಸ್ಥೆಗಳಿಗೆ ಕಳುಹಿಸಿ ಅಲ್ಲಿಂದ ಗ್ರಾಂಟ್ ತರಿಸಿಕೊಂಡು ಪ್ರಾಣಿ ರಕ್ಪಣೆ ಮಾಡುವವರ ತಂಡವೂ ಇದೆ. ಅಂಥವರಿಂದ ದೂರ ನಿಂತು ನೋಡಿದಾಗಲೇ ಕಾಡಿನ ಸೌಂದರ್ಯ ಮನಸ್ಸಿಗೆ ತಾಕುತ್ತದೆ.


******


ಹುಲಿಯ ಬಗ್ಗೆ, ತಮ್ಮ ಕಾಡಿನ ಅನುಭವಗಳ ಬಗ್ಗೆ ಉಲ್ಲಾಸ ಕಾರಂತರು ಮೂರು ಪುಸ್ತಕ ಬರೆದಿದ್ದಾರೆ. ಮೂರನ್ನೂ ನವಕರ್ನಾಟಕದ ರಾಜಾರಾಮ್ ಪ್ರಕಟಿಸಿದ್ದಾರೆ. ಈ ಮೂರೂ ಪುಸ್ತಕಗಳು ಕೂಡ ಒಂದೆ ಗುಟುಕಿಗೆ ಓದಿ ಮುಗಿಸುವಂಥ ಚೆಂದದ ಕೃತಿಗಳು.ಕೆಲವು ವರುಷಗಳ ಹಿಂದೆ ನಾಗರಹೊಳೆಯ ಅನುಭವಗಳನ್ನು ಕೆಎಂ ಚಿನ್ನಪ್ಪ ಬರೆದಿದ್ದರು. ಅದನ್ನು ನಿರೂಪಿಸಿದವರು ಟಿ. ಎಸ್. ಗೋಪಾಲ್. ತೇಜಸ್ವಿಯವರ ಸರಳ ಶೈಲಿಯನ್ನು ಹೋಲುವ ಭಾಷೆ ಟಿ. ಎಸ್. ಗೋಪಾಲ್ ಅವರಿಗೂ ತಕ್ಕಮಟ್ಟಿಗೆ ಸಿದ್ಧಿಸಿದೆ. ಕೆಲವು ಕಡೆ ಉದ್ದೇಶಪೂರ್ವಕವಾಗಿ ಸರಳವಾಗಿದೆ ಅನ್ನಿಸಿದರೂ ಓದುವುದಕ್ಕೆ ತೊಂದರೆ ಆಗುವುದಿಲ್ಲ. ಅವರು ಉಲ್ಲಾಸ ಕಾರಂತರ ಅನುಭವಗಳನ್ನು ಅಕ್ಪರ ರೂಪಕ್ಕೆ ತಂದಿದ್ದಾರೆ. ಇದೊಂದು ಅನುಭವ ಕೇಳಿ;


ಮುಳುಗುವ ಸಂಜೆಯ ಸೂರ್ಯನ ಕಿರಣಗಳು ಕಾಡಿನ ಎಲೆಗಳ ನಡುವೆ ತೂರಿಬಂದು ಹುಲಿಯ ಮೈಯನ್ನು ಹೊಳೆಯ ತಾಮ್ರವರ್ಣಕ್ಕೆ ಪರಿವರ್ತಿಸಿದ್ದವು. ಮೇಲುಭಾಗದ ಚರ್ಮ ಕಡುಕಿತ್ತಳೆ ಬಣ್ಣದ್ದಾದರೆ, ಕೆಳಭಾಗ, ಹೊಟ್ಟೆ, ಒಳಗಾಲುಗಳ ಬಣ್ಣ ಎದ್ದು ಕಾಣುವಂಥ ಬಿಳುಪು. ತುಂಬು ಶರೀರದ ಮೇಲೆಲ್ಲ ವಿಶಿಷ್ಟವಾದ ಕಪ್ಪು ಪಟ್ಟೆಗಳ ವಿನ್ಯಾಸದ ಚಿತ್ತಾರ.
ನಾಗರಹೊಳೆ ಕಾಡಿನ ಅಂತರಾಳದಲ್ಲೊಂದು ಕಡೆ, ಕಾಲುಚಾಚಿ ಮಲಗಿದ್ದ ಹುಲಿಯ ಸುತ್ತ ಗುಂಪುಕಟ್ಟಿ ಬೆವರಿಳಿಸುತ್ತ ನಿಂತ ನಮ್ಮ ಗುಂಪನ್ನು ಯಾರಾದರೂ ಅಪರಿಚಿತನೊಬ್ಬ ಕಂಡಿದ್ದರೆ ಏನೆಂದು ಭಾವಿಸುತ್ತಿದ್ದನೋ ಏನೋ? ಬಹುಶಃ ಅವನಿಗೆ ಬ್ರಿಟಿಷ್ ದೊರೆಗಳ ಕಾಲದ ಶಿಕಾರಿಯ ಯಾವುದೋ ಮಸುಕು ಫೋಟೋ ಜ್ಞಾಪಕಕ್ಕೆ ಬರುತ್ತಿತ್ತೆಂದು ಕಾಣುತ್ತದೆ. ಇನ್ನೂ ಸ್ವಲ್ಪ ಹತ್ತಿರ ಬಂದಿದ್ದರೆ, ಅವನಿಗೆ ಹಳೆಯ ಚಿತ್ರದಲ್ಲಿನ ಪಿತ್ ಹ್ಯಾಟ್ ಧರಿಸಿದ ಬಿಳಿಯ ದೊರೆಯಾಗಲೀ, ಪೇಟಧಾರಿ ಮಹಾರಾಜನಾಗಲೀ ಕಾಣಿಸುತ್ತಿರಲಿಲ್ಲ. ಹುಲಿಯ ದೇಹದ ಮೇಲೆ ಬೂಟುಗಾಲಿರಿಸಿ, ಬಲಗೈಲಿ ಬಂದೂಕು ಹಿಡಿದ ಠೀವಿ ಇಲ್ಲಿರಲಿಲ್ಲ. ಇನ್ನೂ ಸಮೀಪಕ್ಕೆ ಬಂದರೆ ಗೊತ್ತಾಗುತ್ತಿತ್ತು, ಈ ಹುಲಿ ಸತ್ತಿಲ್ಲ, ಜೀವಂತವಾಗಿದೆಯೆಂದು. ಹುಲಿಯ ಪಕ್ಕ ಟಾರ್ಪಾಲಿನ ಮೇಲಿದ್ದ ಆಯುಧ ಗುಂಡು ತುಂಬಿಸಿದ ಕೋವಿಯಲ್ಲ. ಅದು ಕೇವಲ ಅರಿವಳಿಕೆ ಮದ್ದು ತುಂಬಿದ ಸಿರಿಂಜುಗಳನ್ನು ಮಾತ್ರ ಸದ್ದಿಲ್ಲದೆ ಹಾರಿಸಬಲ್ಲ ಡಾರ್ಟ್ ಎಂದು ತಿಳಿಯುತ್ತಿತ್ತು.
ನಮ್ಮ ಗುಂಪಿನಲ್ಲಿದ್ದವರು ಖಾಕಿ ಬಟ್ಟೆ ತೊಟ್ಟ ಸ್ಥಳೀಯ ಜೇನುಕುರುಬ ಬುಡಕಟ್ಟು ಜನಾಂಗದ ಜನ. ತಮ್ಮಲ್ಲೆ ಗೊಣಗೊಣ ಮಾತನಾಡಿಕೊಳ್ಳುತ್ತಾ, ಸುತ್ತ ಹಾರಾಡುವ ನೀಲಿನೊಣಗಳಂತೆ ಸದ್ದು ಮಾಡುತ್ತಿದ್ದರು. ಅವರೆಲ್ಲರ ಹಿಂದೆ ಎತ್ತರವಾಗಿ ನಿಂತಿದ್ದರು, ಆರಡಿ ನಾಲ್ಕಿಂಚಿನ ಉಕ್ಕಿನ ಮನುಷ್ಯ- ರೇಂಜ್ ಚಿಣ್ಣಪ್ಪ!
(ಹುಲಿರಾಯನ ಆಕಾಶವಾಣಿ, ನವಕರ್ನಾಟಕ ಪ್ರಕಾಶನ)

ಇಂಥ ಪುಸ್ತಕಗಳು ಕಾಡಿನ ಕುರಿತ ನಮ್ಮ ಪ್ರೀತಿಯನ್ನು ಹೆಚ್ಚಿಸುತ್ತವೆ. ಹಾಗೇ ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಬೇಟೆಯ ಅನುಭವಗಳನ್ನೂ ಕೆದಂಬಾಡಿ ಜತ್ತಪ್ಪ ರೈ ಬರೆದ ಕಾಡಿನ ಕತೆಗಳನ್ನೂ ಓದಬಹುದು. ಇವೆಲ್ಲಕ್ಕಿಂತ ಶ್ರೇಷ್ಠವಾದದ್ದು ಕಾನೂರು ಸುಬ್ಬಮ್ಮ ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು. ಇವೆರಡನ್ನು ಓದುತ್ತಿದ್ದರೆ ಸಹ್ಯಾದ್ರಿಯ ಶ್ರೇಣಿಯಲ್ಲಿ ಹತ್ತಾರು ದಿನಗಳ ಕಾಲ ನಡೆದಾಡಿ ಬಂದ ಅನುಭವವಾಗುತ್ತದೆ.


******


ಕಾಡಿನಲ್ಲಿ ಅಲೆದಾಡುವುದೂ ಅಪಾಯ. ಸಕಲೇಶಪುರದ ಸಮೀಪ ಮೂವರು ಹಾಗೇ ಮಾಯವಾಗಿಹೋದರು. ಕಾರ್ಕಳ, ಶೃಂಗೇರಿ, ಚಿಕ್ಕಮಗಳೂರಿನ ಕಡೆ ನಕ್ಸಲರಿದ್ದಾರೆ ಎಂದು ಹೆದರಿಸುವವರಿದ್ದಾರೆ. ಆದರೆ ಅದ್ಯಾವುದೂ ಸಮಸ್ಯೆಯೇ ಅಲ್ಲ. ಸಕಲೇಶಪುರದಿಂದ ಸುಮ್ಮನೆ ಶನಿವಾರ ಸಂತೆ ಬಳಸಿಕೊಂಡು ಬಿಸಲೆ ಘಾಟಿಯ ಕಡೆ ನಡೆದುಬಿಟ್ಟರೆ ಕಣ್ಮುಂದೆ ಹಬ್ಬಿದ ಮಹಾರಣ್ಯ ಸರಣಿ ಬೆಚ್ಚಿಬೀಳಿಸುತ್ತದೆ. ಸರ್ರನೆ ಹೋಗಿ ಮಂಜುನಾಥನಿಗೊಂದು ಸುತ್ತುಬಂದು ಭರ್ರನೆ ವಾಪಸ್ಸು ಬರುತ್ತೇವೆ ಅನ್ನುವ ಧೋರಣೆ ಇದ್ದರೆ ಕಾಡಿನ ಮಾತು ಬಿಡಿ. ಆದರೆ ದೇವರು ಕೂಡ ಸಿಗುವುದು ಕಾಡಿನಲ್ಲೇ. ಅಷ್ಟಲ್ಲದೇ ಗೋಪಾಲಕೃಷ್ಣ ಅಡಿಗರು ಬರೆದಿದ್ದಾರಾ?; ಕಾಡಮೂಲಕವೇ ಪಥ ಆಗಸಕ್ಕೆ...


ಕಾಡು ನಿಮ್ಮನ್ನು ಚಿಗುರಿಸಲಿ, ಅರಳಿಸಲಿ, ಹಳೆಯ ಎಲೆಗಳು ಉದುರಿ ಹೊಸ ಎಲೆಗಳು ಚಿಗುರಲಿ.


(ಚಿತ್ರ- ಮೌನಿ ನಿರ್ದೇಶಕ ಲಿಂಗದೇವರು, ಚಿತ್ರಲೋಕದ ಗೆಳೆಯ ವೀರೇಶ್, ದಟ್ಸ್ ಕನ್ನಡ ಶಾಮ್ ಮತ್ತು ಕನ್ನಡ ಪ್ರಭದ ಉದಯ ಮರಕಿಣಿ ಜೊತೆಗೆ, ಕಬಿನಿ ಹಿನ್ನೇರಿನ ಪರಿಸರದಲ್ಲಿ.)


ಫೋಟೋ- ಕೆ. ಎಂ. ವೀರೇಶ್.

1 comment:

Haldodderi Sudhindra said...

‘ಗಿರಿ’ಕಂದರ ಮೋಹಿತರ ಪ್ರವಾಸ ಕಥನ ಖುಷಿ ಕೊಟ್ಟಿತು. ಗೃಹಪ್ರವೇಶಕ್ಕೆ ಕರೆಯಲು ನೀವು ಮರೆತಿದ್ದರೂ ಜೋಗಿ ಮನೆಗೆ ನನ್ನದು ನಿತ್ಯ ಪ್ರವೇಶ. ‘ಬ್ಲಾಗ’ಮಂಡಲದಲ್ಲಿನ ಈ ಭೋರ್ಗರೆತ ನಿರಂತರವಾಗಿರಲಿ, boreಗರೆಯದೆಯೆ!