ಬರೆವಣಿಗೆಯಲ್ಲಿ ಎರಡು ಥರ; ಆಹಾ ಎಷ್ಟು ಚೆನ್ನಾಗಿದೆ ಕವಿತೆ. ಸೊಗಸಾಗಿದೆ ಕತೆ ಅನಿಸುವಂತೆ ಬರೆಯುವುದು ಒಂದು. ಆಹಾ ಎಷ್ಟು ಚೆನ್ನಾಗಿ ಬರೆದಿದ್ದಾನೆ ಅನ್ನಿಸುವುದು ಮತ್ತೊಂದು. ಆಹಾ ಎಷ್ಟು ಚೆನ್ನಾಗಿದೆ ಕವಿತೆ ಅನ್ನಿಸಿದರೆ ಕವಿತೆ ಗೆಲ್ಲುತ್ತದೆ, ಕವಿಯೂ ಗೆಲ್ಲುತ್ತಾನೆ. ಆಹಾ ಎಷ್ಟು ಚೆನ್ನಾಗಿ ಬರೆದಿದ್ದಾನೆ ಅನ್ನಿಸಿದಾಗ ಕವಿತೆ ಸೋಲುತ್ತದೆ, ಆ ಕ್ಪಣಕ್ಕೆ ಕವಿ ಗೆಲ್ಲುತ್ತಾನೆ.
ಒಬ್ಬ ಬರಹಗಾರನ ಕಷ್ಟ ಇದೇ. ಆತ ಬರಹದ ಮೇಲೆ ತನ್ನ ನೆರಳು ಕೂಡ ಸುಳಿಯದಂತೆ ಬರೆಯಬೇಕಾಗುತ್ತದೆ. ತನ್ನ ಅನುಭವದ ಭಾರ ಕೃತಿಯನ್ನು ಜಗ್ಗದಂತೆ ನೋಡಿಕೊಳ್ಳಬೇಕಾಗುತ್ತದೆ. ಆ ಕಾರಣಕ್ಕೇ ಅನುಭವದಿಂದ ಒಳ್ಳೆಯ ಕೃತಿ ಬರುತ್ತದೆ ಅನ್ನುವುದು ಸುಳ್ಳು. ಅನುಭವದಿಂದಲೇ ಅನೇಕ ಬಾರಿ ಬರಹ ಸೋಲುವುದುಂಟು.
ಹಾಗೇ, ಒಬ್ಬ ಲೇಖಕ ತನ್ನ ಛಾಪು ಮೂಡುವಂತೆ ಬರೆಯುವುದೂ ಅಷ್ಟು ಒಳ್ಳೆಯದಲ್ಲ. ನನ್ನ ಶೈಲಿಯಿಂದಲೇ ಅದು ನನ್ನ ಬರಹ ಎಂದು ಓದುಗರು ಗುರುತಿಸುತ್ತಾರೆ ಎಂದು ಕೆಲವರು ತುಂಬ ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು. ಆದರೆ ಹಾಗೆ ಶೈಲಿಯಿಂದ ಗುರುತಿಸಿಕೊಳ್ಳುವುದೂ ಕೂಡ ಅಷ್ಟೇ ಕೆಟ್ಟದ್ದು. ಶೈಲಿಯಿಂದ ಗುರುತಿಸಿಕೊಳ್ಳುವ ಲೇಖಕ, ಕ್ರಮೇಣ ಚಿಂತನಾಕ್ರಮದಿಂದ, ವಿಚಾರಧಾರೆಯಿಂದ, ಮಂಡನಾವಿಧಾನದಿಂದ ಕೂಡ ಗುರುತಿಸಿಕೊಳ್ಳುತ್ತಾನೆ. ಬರಬರುತ್ತಾ ಆ ಶೈಲಿಯೇ ರಾಜಕೀಯ ಪಕ್ಪದ ಗುರುತಿನಂತೆ ಕಾಣಿಸತೊಡಗುತ್ತದೆ. ಒಬ್ಬ ಗಾಯಕನನ್ನು ದನಿಯ ಮೂಲಕ ಗುರುತು ಹಿಡಿದರೆ ಅದು ಸರಿ, ರಾಗದ ಮೂಲಕ ಗುರುತು ಹಿಡಿದರೆ? ಅದು ಆ ಗಾಯಕನ ಮಿತಿ. ಲೇಖಕನ ವಿಚಾರದಲ್ಲೂ ಹಾಗೆ.
ಉದಾಹರಣೆಗೆ ಯಶವಂತ ಚಿತ್ತಾಲರು. ಅವರ ಕತೆಯನ್ನು ಮೂರು ಪುಟ ಓದುವುದರೊಳಗೆ ನಿಮಗೆ ಇದು ಚಿತ್ತಾಲರ ಬರವಣಿಗೆ ಎನ್ನುವುದು ಗೊತ್ತಾಗಿಬಿಡುತ್ತದೆ. ಅವರು ಶೈಲಿಯಲ್ಲಿ ವಿವರಗಳಲ್ಲಿ ಮತ್ತು ಒಮ್ಮೊಮ್ಮೆ ಭಾವುಕತೆಯಲ್ಲೂ ಅದೇ ಚಿತ್ತಾಲರಾಗಿ ಉಳಿಯುತ್ತಾರೆ. ಕಂಬಾರರು ತಮ್ಮ ಭಾಷೆಯ ಬಳಕೆಯಿಂದ ಗುರುತಾದರೆ ಚಿತ್ತಾಲರು ಗುರುತಾಗುವುದು ಭಾವದಿಂದ. ಅದೇ ಕಾರಣಕ್ಕೆ ಅವರ ನಂತರದ ಕಾದಂಬರಿಗಳನ್ನು ಓದುವುದು ಕಷ್ಟ. ಅದೇ ಬೀದಿಯಲ್ಲಿ ಅವರು ಸುತ್ತಾಡುತ್ತಿರುವಂತೆ ಭಾಸವಾಗುತ್ತದೆ.
ಇದಕ್ಕೆ ತದ್ವಿರುದ್ಧವಾದ ಉದಾಹರಣೆ ಡಿವಿಜಿಯವರದ್ದು. ಅವರು ಬರೆದ ಕೃತಿಗಳನ್ನೆಲ್ಲ ಒಂದೊಂದಾಗಿ ನೋಡುತ್ತಾ ಬನ್ನಿ. ಬಾಳಿಗೊಂದು ನಂಬಿಕೆಯನ್ನು ಬರೆದ ಡಿವಿಜಿಯವರೇ ಅನ್ತಃಪುರಗೀತವನ್ನೂ ಬರೆದಿದ್ದಾರೆ. ಎರಡನ್ನೂ ಪ್ರತ್ಯೇಕವಾಗಿ ಓದಿದರೆ ಅವನ್ನು ಒಬ್ಬನೇ ವ್ಯಕ್ತಿ ಬರೆದಿದ್ದಾನೆ ಅಂತ ಊಹಿಸುವುದೂ ಕಷ್ಟ. ಮಹಾಚುನಾವಣೆಯಂಥ ಕೃತಿಯ ಜೊತೆಗೇ ಉಮರನ ಒಸಗೆಯಿದೆ. ಸಂಸ್ಕೃತಿಯ ಕುರಿತಾದ ಕೃತಿಯೊಂದಿಗೇ ವಿದ್ಯಾರಣ್ಯ ವಿಜಯವಿದೆ. ಇವೆಲ್ಲಕ್ಕೂ ಕಳಸವಿಟ್ಟಂತೆ `ಮಂಕುತಿಮ್ಮನ ಕಗ್ಗ'ವಿದೆ.
ಇವೆಲ್ಲಕ್ಕಿಂತ ಕುತೂಹಲ ಹುಟ್ಟಿಸುವುದು ಡಿವಿಜಿಯವರು ಬರೆದ ವ್ಯಕ್ತಿಚಿತ್ರಗಳು. ನಾವು ಭೇೇಟಿಯಾದ, ಮಾತಾಡಿದ, ನಮ್ಮ ಸಂಸರ್ಗಕ್ಕೆ ಬಂದ ವ್ಯಕ್ತಿಯನ್ನು ನಾವು ಏಕಾಂತದಲ್ಲಿ ನೆನಪಿಸಿಕೊಳ್ಳುತ್ತೇವಲ್ಲ, ಅಂಥ ಬರಹಗಳು ಅವು. ಅದು ಹೊಗಳಿಕೆಯಲ್ಲ, ಟೀಕೆಯಲ್ಲ, ಟಿಪ್ಪಣಿಯೂ ಅಲ್ಲ. ಗೆಳೆಯನ ಬಗ್ಗೆ ಮತ್ತೊಬ್ಬ ಗೆಳೆಯನ ಹತ್ತಿರ ಹೇಳಿಕೊಂಡು ಸಂಭ್ರಮಿಸಿದಂಥ ಬರಹಗಳು.
ಡಾಕ್ಟರ್ ಗುಂಡಣ್ಣನವರ ಚಿತ್ರ ನೋಡಿ;
ಗುಂಡಣ್ಣನವರನ್ನು ನೋಡಿದ್ದವರು ಯಾರೂ ಅವರನ್ನು ಮರೆತಿರುವುದು ಅಸಂಭವ. ಅಷ್ಟು ಮನೋಮುದ್ರಕವಾದದ್ದು ಅವರ ವ್ಯಕ್ತಿಮಹಿಮೆ. ಸುಮಾರು 25-30 ವರ್ಷಗಳ ಕಾಲ ಅವರ ಹೆಸರು ನೂರಾರು ಮನೆಗಳಲ್ಲಿ ಪ್ರತಿದಿನವೂ ನಚ್ಚುಮೆಚ್ಚಿನ ಮಾತಾಗಿತ್ತು. ರೋಗ ಪ್ರಸಂಗಗಳಲ್ಲಿ ಮಾತ್ರವೇ ಅಲ್ಲ ಅವರ ನೆನಪು ಬರುತ್ತಿದ್ದದ್ದು; ಎಂಥ ವಿಶೇಷ ಮಾನವ ಪ್ರಸಂಗ ಒದಗಿದರೂ ಆಗ ಆಪ್ತ ಬಂಧುಗಳ ಸ್ಮರಣೆ ಬಂದಂತೆ ಗುಂಡಣ್ಣನವರ ಸ್ಮರಣೆ ಬರುತ್ತಿತ್ತು.
ಒಂದು ದಿನ ಸಂಜೆ ಸುಮಾರು ಏಳು ಗಂಟೆ ಇರಬಹುದು. ಒಬ್ಬಾನೊಬ್ಬ ಮುಸಲ್ಮಾನ ಸಾಹುಕಾರರು ಒಂದು ಸೊಗಸಾದ ಖಾಸ್ ಜಟಕಾದಲ್ಲಿ ಬಂದು ಚಿಕಿತ್ಸಾಲಯದ ಮುಂದೆ ಇಳಿದು ಬೊಬ್ಬೆ ಹಾಕುತ್ತಾ ಒಳಗೆ ಹೆಜ್ಜೆಯಿಟ್ಟರು. ಹಿಂದುಸ್ತಾನಿಯಲ್ಲಿ `ಬಹಳ ನೋವು ಮಹರಾಯರೇ, ಬಹಳ ನೋವು' ಎಂದು ಕಿರಿಚಿದರು.
ಗುಂಡಣ್ಣ; (ಹಿಂದುಸ್ತಾನಿಯಲ್ಲಿ) ಎಲ್ಲಯ್ಯ ನೋವು?
ಸಾಹುಕಾರ; ಬೆಟ್ಟಿನಲ್ಲಿ ಸ್ವಾಮಿ, ಬೆಟ್ಟಿನಲ್ಲಿ.
ಗುಂಡಣ್ಣ; ಯಾವ ಬೆಟ್ಟಿನಲ್ಲಿ? ಎಲ್ಲಿಯ ಬೆಟ್ಟಿನಲ್ಲಯ್ಯ? (ಎಲ್ಲರಿಗೂ ನಗು)
ಸಾಹುಕಾರ; ಎಡಗೈ ತೋರಿಸಿ - ಈ ನಡುಬೆರಳಿನಲ್ಲಿ.
ಗುಂಡಣ್ಣನವರು ಆ ಬೆರಳನ್ನು ಹಿಡಿದು ನೋಡಿದರು. ಆಮೇಲೆ ಇನ್ನೊಂದು ದೊಡ್ಡ ಎಲೆಕ್ಟ್ರಿಕ್ ದೀಪವನ್ನು ಹಾಕಿನೋಡಿ -
`ಸಾಹುಕಾರರೇ ಬೆಳಗ್ಗೆ ಬನ್ನಿ ನೋಡೋಣ. ಈಗ ದೀಪದ ಬೆಳಕಿನಲ್ಲಿ ಇದು ಚೆನ್ನಾಗಿ ಕಾಣಿಸುವುದಿಲ್ಲ' ಎಂದರು.
ಸಾಹುಕಾರ; ಈಗ ನಾನು ಸಾಯುತ್ತೇನೆ.
ಗುಂಡಣ್ಣ; ಇಲ್ಲ, ನೀವು ಸಾಯುವುದಿಲ್ಲ. ನಾನು ಭರವಸೆ ಕೊಡುತ್ತೇನೆ. ಬೆಳಗ್ಗೆ ಬದುಕಿರುತ್ತೀರಿ.
ಸಾಹುಕಾರ; ಇಲ್ಲ ಸ್ವಾಮಿ, ನಾನು ಈಗ ರೈಲಿಗೆ ಹೊರಟಿದ್ದೇನೆ. ಬೆಳಗ್ಗೆ ಈ ಊರಲ್ಲಿರುವುದಿಲ್ಲ.
ಗುಂಡಣ್ಣ; ಹಾಗಾದರೆ ಬೆರಳನ್ನು ...ದಲ್ಲಿ ಸಿಕ್ಕಿಸಿಕೊಳ್ಳಿ.
ಅಲ್ಲಿದ್ದವರೆಲ್ಲ ನಕ್ಕರು. ಸಾಹುಕಾರರಿಗೆ ಕೋಪ ಬಂತು. `ಏನು ಸ್ವಾಮಿ. ಎಷ್ಟು ದಿವಸದಿಂದ ನಿಮ್ಮನ್ನು ನಂಬಿಕೊಂಡಿದ್ದೇನೆ. ಎಷ್ಟು ಸಲ ನಮ್ಮ ಮನೆಗೆ ಬಂದಿದ್ದೀರಿ. ಈಗ ನನಗೆ ಹೀಗೆ ಅವಮಾನ ಮಾಡುತ್ತೀರಲ್ಲ?'
ಗುಂಡಣ್ಣ; ಕೋಪ ಬೇಡ ಸಾಹೇಬರೇ. ನಾನು ಹೇಳಿದ್ದು ತಪ್ಪು ಮಾತು ಏನೂ ಅಲ್ಲ. ಇಲ್ಲಿ ನಗುತ್ತಿರುವ ಬೇಕೂಫರಿಗೆ ಸಂದರ್ಭ ಗೊತ್ತಿಲ್ಲ. ನಿಮ್ಮ ಬೆಟ್ಟಿನಲ್ಲಿ ಏನೋ ಏಳುತ್ತಿದೆ. ಅದಕ್ಕೆ ತಕ್ಕ ಚಿಕಿತ್ಸೆಯಲ್ಲಿ ಮೂರು ಅಂಶಗಳು ಸೇರಿರಬೇಕು; ಉಷ್ಣ, ತೇವ, ಒತ್ತಡ (heat, moisture, pressure). ಈ ಮೂರು ಅಂಶಗಳು ನಾನು ಹೇಳಿದ ಜಾಗದಲ್ಲಿ ಇರುತ್ತವೆ'.
ಈ ವಿವರಣೆಯನ್ನು ಕೇಳಿ ಸಾಹುಕಾರರಿಗೂ ನಗುಬಂತು.
ಇನ್ನೊಂದು ಪ್ರಸಂಗ ಕೇಳಿ. ಇದು ಎಸ್. ವಿ. ನಂಜುಂಡಯ್ಯನವರಿಗೆ ಸಂಬಂಧಿಸಿದ್ದು;
ನಂಜುಂಡಯ್ಯನವರು ಕೆಲವು ಕಾಲ ಶಿವಮೊಗ್ಗಿಯಲ್ಲಿದ್ದಾಗ ಬೆಂಗಳೂರಲ್ಲಿ ಒಂದು ಪ್ರಸಂಗ ನಡೆಯಿತು. ಒಬ್ಬಾನೊಬ್ಬ ಯುವಕ ಬಿ.ಎ. ಪ್ಯಾ್ ಮಾಡಿ ಸರಕಾರದ ಚಾಕರಿಗೆ ಅರ್ಜಿ ಹಾಕಿದ್ದ. ಆತ ಹೈಕೋರ್ಟಿಗೂ ಅರ್ಜಿ ಹಾಕಿದ್ದ. ಒಂದಾನೊಂದು ದಿನ ಹೈಕೋರ್ಟಿನ ಕಾರ್ಯಾಲಯದ ಮುಖ್ಯಾಧಿಕಾರಿಯು ಆತನನ್ನು ಇಂಟರ್ವ್ಯೂಗಾಗಿ ಆಹ್ವಾನಿಸಿದ. ಅವರ ನಡುವೆ ನಡೆದ ಮಾತುಕತೆ ಹೀಗಿದೆ;
ಅಧಿಕಾರಿ; ನೀವು ಯಾವ ಜಾತಿಯವರು.
ಯುವಕ; ನಾನು ಶ್ರೌತಿ.
ಅಧಿಕಾರಿ; ಓಹೋ ಹಾಗೆಯೇ, ನಿಮ್ಮ ಜನ ಯಾರಾದರೂ ದೊಡ್ಡ ಅಧಿಕಾರಗಳಲ್ಲಿ ಇದ್ದಾರೋ?
ಯುವಕ; ಯಾರೂ ಇಲ್ಲ,
ಅಧಿಕಾರಿ; ಹಾಗೆಯೇ. ಅಯ್ಯೋ ಪಾಪ. ಇರಲಿ ಮುಂದಿನ ಶನಿವಾರ ಬನ್ನಿ. ನೋಡಿ ಹೇಳುತ್ತೇನೆ.
ಯುವಕನು ಹೊರಟುಹೋದ ಮೇಲೆ ಆ ಅಧಿಕಾರಿಯು ಅದೇ ಚೀಫ್ ಕೋರ್ಟಿನಲ್ಲಿ ತನ್ನ ಸಹೋದ್ಯೋಗಿಯಾಗಿದ್ದ ಎಂ. ಎಲ್. ಪುಟ್ಟಣ್ಣರನ್ನು ಕರೆದು ಕೇಳಿದ.
ಅಧಿಕಾರಿ; ಶ್ರೌತಿ ಅಂದರೆ ಯಾವ ಜನ ಸ್ವಾಮಿ?
ಪುಟ್ಟಣ್ಣ; ಶ್ರೌತಿ ಅಂದರೆ ಶ್ರೋತ್ರಿಯ. ಶ್ರುತಿ ಅಂದರೆ ವೇದ. ಬ್ರಾಹ್ಮಣರಲ್ಲಿ ವೇದಾಧ್ಯಯನ ಸಂಪನ್ನರಾಗಿ ವೈದಿಕ ಕರ್ಮನಿಷ್ಠೆ ಇಟ್ಟುಕೊಂಡವರನ್ನು ಶ್ರೋತ್ರಿಯರು ಎಂದು ಕರೆಯುವುದು ಪದ್ಧತಿ.
ಅಧಿಕಾರಿ; ಹಾಗಿದ್ದರೆ ಅವರು ಬ್ರಾಹ್ಮಣರೇ ಅಂತನ್ನಿ.
ಪುಟ್ಟಣ್ಣ; ಅಲ್ಲವೇ? ಅದರಲ್ಲಿಯೂ ಉತ್ತಮ ದರ್ಜೆಯ ಬ್ರಾಹ್ಮಣರು.
ಅಧಿಕಾರಿ; ಸರಿಸರಿ. ಅದು ನನಗೆ ತಿಳಿದಿರಲಿಲ್ಲ. ಸುಮ್ಮನೆ ಕೇಳಿದೆ.
ಇದಾದ ನಂತರ ಆತ ಮತ್ತೆ ಕೆಲಸ ಕೇಳಿಕೊಂಡು ಬರುತ್ತಾನೆ. ಆತನಿಗೊಂದು ಪರೀಕ್ಪೆ ಕೊಡುತ್ತಾನೆ ಅಧಿಕಾರಿ. ಅದರಲ್ಲೇನೋ ಕರಾಮತ್ತು ನಡೆಸಿದ್ದರಿಂದ ಶ್ರೋತ್ರಿಯನಿಗೆ ಕೆಲಸ ಸಿಗುವುದಿಲ್ಲ. ಆತ ಈ ಕೆಲಸ ಸಿಗದಿರಲು ಪುಟ್ಟಣ್ಣಯ್ಯನೇ ಕಾರಣ ಎಂದು ಆಗ್ರಹ ಕಾರುತ್ತಾನೆ. ತನಗೆ ಸಂಬಂಧವೇ ಇಲ್ಲದ ಸಂಗತಿಗೆ ತಾನು ಬಾಧ್ಯನಾದ ಸಂಗತಿ ಕೇಳಿ ಪುಟ್ಟಣ್ಣಯ್ಯನವರಿಗೆ ಬೇಸರವಾಗುತ್ತದೆ. ಆಗ ಅವರಿಗೆ ನಂಜುಂಡಯ್ಯನವರು ಒಂದು ಪತ್ರ ಬರೆಯುತ್ತಾರೆ;
ಶ್ರೌತಿಗಳಿಗೆ ನಿಮ್ಮ ಮೇಲೆ ಕೋಪ ಬಂದದ್ದು ಸಹಜವಾಗಿಯೇ ಇದೆ. ನಿಮ್ಮನ್ನು ಆ ಅಧಿಕಾರಿ ಅರ್ಥವಿವರಣೆ ಕೇಳಿದಾಗ ನೀವು ಬೇರೆ ಅರ್ಥವನ್ನು ಯಾಕೆ ಹೇಳಲಿಲ್ಲ. ಶ್ರುತಿ ಅಂದರೆ ಮೇಳದಲ್ಲಿ ಹೊರಡುವ ಒಂದು ಜೊತೆಯ ಶಬ್ದ. ಶ್ರುತಿ ಹಿಡಿಯುವುದು ಎಂದರೆ ಓಲಗ ಊದುವುದು. ಆದ ಕಾರಣ ಶ್ರೌತಿ ಎಂದರೆ ಬಾಜಾಬಜಂತ್ರಿಯವರು. ಹೀಗೆಂದು ನೀವು ಅರ್ಥ ಹೇಳಬೇಕಾಗಿತ್ತು. ಹೀಗೆ ಹೇಳಿದ್ದಿದ್ದರೆ ಆತನಿಗೆ ಚಾಕರಿ ಸಿಗುತ್ತಿತ್ತು. ನೀವು ಅದನ್ನು ತಪ್ಪಿಸಿದಿರಲ್ಲ? ಚಾಕರಿ ತಪ್ಪಿಸಿ ಜಾತಿ ಉಳಿಸಿದರೆ ಏನಾಯಿತು?
****
ಇಂಥ ಪ್ರಸಂಗಗಳನ್ನು ಬರೆಯುವುದಕ್ಕೆ ಹಾಸ್ಯಪ್ರಜ್ಞೆಯಿದ್ದರೆ ಸಾಲದು. ಮಾನವೀಯತೆ ಬೇಕು. ಇನ್ನೊಬ್ಬರನ್ನು ಕೂಲಂಕಷವಾಗಿ ಗಮನಿಸುವ, ಪ್ರೀತಿಸುವ ಮನಸ್ಸು ಬೇಕು. ವ್ಯಕ್ತಿಕೇಂದ್ರಿತವಾಗುತ್ತಾ ನಡೆದಿರುವ ನಮಗೆ ಅಷ್ಟೆಲ್ಲ ತಾಳ್ಮೆ ಎಲ್ಲಿದೆ. ಯಾರಾದರೂ ತಮ್ಮ ಬಗ್ಗೆ ಹೇಳಲು ಶುರುಮಾಡಿದರೆ ನಮಗೆ ಅಸಹನೆಯಾಗುತ್ತದೆ. ಕತೆ ಕೇಳುವ ಬದಲು `ಬಂದ ವಿಷಯ ಹೇಳಿ, ಹೊರಟುಬಿಡಿ' ಅನ್ನುತ್ತೇವೆ.
ನಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ನೆನಪುಗಳೇ ಇಲ್ಲ!
Tuesday, June 12, 2007
Subscribe to:
Post Comments (Atom)
9 comments:
ಏನೂ ನೆನಪಾಗದ ಕರ್ಮ ಅಂತ ಹೇಳುತ್ತಲೇ,ಬರಹದಲ್ಲಿ ಆಸಕ್ತಿಯಿರುವವರು ಯಾವಾಗಲೂ ನೆನಪಿಟ್ಟುಕೊಳ್ಳಬೇಕಾದಂತಹ ಬರಹವೊಂದನ್ನ ಬರೆಯುವುದು ನಿಮ್ಮ ಸತ್ವ.
"ಹಾಸ್ಯಪ್ರಜ್ಞೆಯಿದ್ದರೆ ಸಾಲದು. ಮಾನವೀಯತೆ ಬೇಕು. ಇನ್ನೊಬ್ಬರನ್ನು ಕೂಲಂಕಷವಾಗಿ ಗಮನಿಸುವ, ಪ್ರೀತಿಸುವ ಮನಸ್ಸು ಬೇಕು...
ನಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ನೆನಪುಗಳೇ ಇಲ್ಲ!..."
ಸೃಜನಶೀಲತೆಗೆ ಅತ್ಯವಶ್ಯಕ ಬೇಕಾದವನ್ನು ಡಿ.ವಿ.ಜಿ.ಯವರ ನುಡಿಚಿತ್ರಗಳಿಂದ ಕಟ್ಟಿಕೊಟ್ಟಿದ್ದೀರಿ. ಧನ್ಯವಾದಗಳು.
"ನಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ನೆನಪುಗಳೇ ಇಲ್ಲ!"
ಇವೆ, ಬಹುಶಃ modern art ಅಥವಾ abstract art ನಂತೆ, ಅಸಾಂಪ್ರದಾಯಿಕ (unconventional)ರೂಪದಲ್ಲಿವೆ!
ನಿಮ್ಮ ಮಾತು ಅಕ್ಷರಶಃ ಸತ್ಯ....
ಧನ್ಯವಾದಗಳು......
ನಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ನೆನಪುಗಳೇ ಇಲ್ಲ!
ನಿಜ. ಒಂದೊಮ್ಮೆ ಇದ್ದರೂ ವ್ಯಕ್ತಪಡಿಸಲು ಹಲವರಿಗೆ ನೂರಾರು ಅಡ್ಡಿಗಳು. ಕಾಲ ಎಲ್ಲವನ್ನು ಬದಲಿಸುತ್ತಿದೆ. ಈ ಲೇಖನ ನನ್ನಂತಹ ಕಿರಿಯರಿಗೆ ಮಾರ್ಗದರ್ಶಿ.
chennagide kanri nimma baravanige.. adre adeko brown colour balasiddarinda odoke irritation aguthe
"ಆ ಕಾರಣಕ್ಕೇ ಅನುಭವದಿಂದ ಒಳ್ಳೆಯ ಕೃತಿ ಬರುತ್ತದೆ ಅನ್ನುವುದು ಸುಳ್ಳು. ಅನುಭವದಿಂದಲೇ ಅನೇಕ ಬಾರಿ ಬರಹ ಸೋಲುವುದುಂಟು."
"ಒಬ್ಬ ಲೇಖಕ ತನ್ನ ಛಾಪು ಮೂಡುವಂತೆ ಬರೆಯುವುದೂ ಅಷ್ಟು ಒಳ್ಳೆಯದಲ್ಲ."
ಒಪ್ಪಲೇಬೇಕಾದ ಮಾತಿದು. ಕೆಲವು ವಿಮರ್ಶಕರು ಛಾಪನ್ನೇ ಹುಡುಕುತ್ತಿರುತ್ತಾರೆ ಮತ್ತು ಅದು ಕಂಡಂತೇ ಹೊಗಳಿಕೆ ಶುರು ಮಾಡ್ತಾರೆ. ಬರಹಕ್ಕೆ ಬರಹಗಾರ ಕಾರಣಮಾತ್ರವೇ ಹೊರತು, ಅದರ ಅಂತರಾಳವೋ, ಅರ್ಥಬೀಜವೋ ಆಗಲಾರ. ಹಾಗಾದರೆ ಬರಹ ಏಕದನಿಯ ಸೊರಗಾಗುತ್ತದೆ.
ಚೆನ್ನಾಗಿ ಬರೆದಿದ್ದೀರಿ.
ಕಮಲಾಕರ
"ನಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ ನೆನಪುಗಳೇ ಇಲ್ಲ!..."
ಎಂಬ ಮಾತು ನನಗೆ ಒಪ್ಪಿಗೆಯಾಗಲಿಲ್ಲ. ನಮಗೆ ನೆನಪುಗಳಿವೆ. ಬರಹಕ್ಕಿಳಿಸುವ ಸಾಮರ್ಥ್ಯವಿಲ್ಲವೆಂದರೆ ಒಪ್ಪಬಹುದೇನೊ. ನಿಮ್ಮ ಲೇಖನ ನನಗೆ ಸ್ಫೂರ್ತಿ ನೀಡದೇ? !
Jogi,
D.G.G's Jnapaka Chitra Shaale is always a great reading. It is store house of knowledge, information and history. In a way history is not a seperate identity as Bairappa's sees it. History is part of our life as DVG and K.V.Subbanna and people like them see it in the context of India. Smruthi is the word used by Subbanna for that. When history is not that long a past DVG called it "Jnapaka". One of the great minds of Kannada. Thanks for brining back the meory of DVG. Incidentally my collection of pen pictures written by me in the past more than 20 years (More than 22 of them starting from bendre, BGL Swamy, Biligiri, Professor CDN etc.,) is going for print. Raghavendra Patil of Samvaadha Prakashana wants to publish it.
Regards
Vijayshankar
ಇದು ಹುಡುಕು ನೋಡಿ
http://www.yanthram.com/kn/
Post a Comment