Monday, June 11, 2007

L


ಅವನು ನೇಪಾಳದ ಕವಿ. ಇಂಗ್ಲಿಷಿನಲ್ಲಿ ಬರೆಯುತ್ತಾನೆ. ಬರೆದ ಒಂದೇ ಒಂದು ಕವಿತೆ ಎಲ್ಲೂ ಪ್ರಕಟವಾಗಿಲ್ಲ. ಮುಗಿಲ ಹಚ್ಚಡದ ಕೆಳಗೆ ನಿಚ್ಚಳ ಬೆಳದಿಂಗಳು ಎಂಬ ಸರಳ ಸಾಮಾನ್ಯ ಸಾಲುಗಳಿಂದ ಹಿಡಿದು `ನನ್ನ ಬದುಕು ನನ್ನದು ಅಂದುಕೊಂಡು ಬದುಕುತ್ತಿದ್ದೆ. ಒಂದು ಬೆಳಗ್ಗೆ ಕನ್ನಡಿ ನೋಡಿಕೊಂಡಾಗ ನನ್ನ ಬದಲು ನನ್ನ ಯಜಮಾನ ಕಾಣಿಸಿದ. ಕನ್ನಡಿ ಒರೆಸಿ ನೋಡಿದೆ, ಅಲ್ಲಿ ಯಜಮಾನನ ಬದಲು ಡಾಲರ್ ಇತ್ತು. ನಾನೊಂದು ಡಾಲರ್ ಮುದ್ರಿಸುವ ಯಂತ್ರ ಎಂದು ಆಮೇಲೆ ಗೊತ್ತಾಯಿತು' ಎಂಬಂಥ ಬಡಿದೆಬ್ಬಿಸುವ ಸಾಲುಗಳೂ ಅವನ ಕವಿತೆಗಳಲ್ಲಿವೆ.
ಅವನ ಹೆಸರು ಎಲ್. ಅವನೇ ರಚಿಸಿದ ಪುಟ್ಟ ವಿಸಿಟಿಂಗ್ ಕಾರ್ಡಿನಲ್ಲಿರುವುದು ಅದೊಂದೇ ಅಕ್ಪರ. ಅದರಲ್ಲಿ ವಿಳಾಸ ಕೂಡ ಇಲ್ಲ. ಒಂದು ಈಮೇಲ್ ವಿಳಾಸ ಮಾತ್ರ ಇದೆ. l@ell.com. ಕೇಳಿದರೆ ನನ್ನನ್ನು ಯಾರೂ ಸಂಪರ್ಕಿಸುವುದು ಇಷ್ಟವಿಲ್ಲ ಅನ್ನುತ್ತಾನೆ. ಅವನಾಗಿಯೂ ಯಾರನ್ನೂ ಸಂಪರ್ಕಿಸುವುದೂ ಇಲ್ಲ. ನವ್ಯದ ಆರಂಭದ ದಿನಗಳ ಉಡಾಫೆಯ ಕವಿಯಂತೆ ಕಾಣುವ ಎಲ್ ನೇಪಾಳಿ ಭಾಷೆಯಲ್ಲೇಕೆ ಬರೆಯುವುದಿಲ್ಲ.
'ಉಪಯೋಗ ಇಲ್ಲ. ನನ್ನ ಭಾಷೆ ಸತ್ತಿದೆ. ನನ್ನ ಭಾಷೆಗೆ ನಾನು ಹೇಳಬೇಕಾದ್ದನ್ನು ದಾಟಿಸುವ ಶಕ್ತಿಯಿಲ್ಲ. ನಾನು ಹೇಳಬೇಕಾದ್ದನ್ನು ನನ್ನ ಭಾಷೆ ಬಲ್ಲವರಿಗೆ ಹೇಳುವ ಅಗತ್ಯವೂ ನನಗಿಲ್ಲ. ನನ್ನ ಭಾಷೆಯ ಮಂದಿ ನನ್ನ ಭಾಷೆಯನ್ನು ಪ್ರೀತಿಸುವುದನ್ನು ಯಾವತ್ತೋ ಮರೆತಿದ್ದಾರೆ. ಅವರಿಗೆ ಇಂಗ್ಲಿಷ್ ಬೇಕು'.
ಯಾರಿಗೂ ಭಾಷೆ ಬೇಕಾಗಿರುವುದಿಲ್ಲ, ಬೇಕಾಗಿರುವುದು ಕಂಟೆಂಟ್. ಹೇಳಬೇಕಾದ ವಿಷಯ ಚೆನ್ನಾಗಿದ್ದಾಗ ಯಾವ ಭಾಷೆಯಲ್ಲಿ ಹೇಳಿದರೂ ಓದುತ್ತಾರೆ ಎಂದರೆ ಎಲ್ ಸಿಟ್ಟಾಗುತ್ತಾನೆ.
`ನಿನಗೆಲ್ಲೋ ತಲೆಕೆಟ್ಟಿದೆ. ಕಂಟೆಂಟ್ ಯಾರಿಗೆ ಬೇಕಾಗಿದೆ. ಎಲ್ಲರಿಗೂ ಬೇಕಾಗಿರುವುದು ಸಂವಹನಕ್ಕೊಂದು ಭಾಷೆ ಅಂದುಕೊಂಡರೆ ಅದೂ ತಪ್ಪು. ಎಲ್ಲರೂ ಈಗ ಮಾರುಹೋಗಿರುವುದು ಅಬ್ಬರಕ್ಕೆ, ಶಬ್ದಕ್ಕೆ. ಈಗಿನ ಹುಡುಗ ಹುಡುಗಿಯರು ಎಷ್ಟು ದೊಡ್ಡ ದನಿಯಲ್ಲಿ ಮಾತಾಡುತ್ತಾರೆ ಕೇಳಿದ್ದೀರಾ? ಯಾರಿಗಾದರೂ ಪಿಸುಮಾತಿನ ಶಕ್ತಿ ಏನು ಅಂತ ಗೊತ್ತಿದೆಯಾ? ಪ್ರೇಯಸಿಯ ಜೊತೆಗೆ ಕೂಡ ದೊಡ್ಡ ದನಿಯಲ್ಲಿ ಹರಟುತ್ತಿರುತ್ತಾರೆ. ಶಬ್ದದ ಸಾಮ್ರಾಜ್ಯದಲ್ಲಿ ನಾದಕ್ಕೆ ನಿನಾದಕ್ಕೆ ಜಾಗವೇ ಇಲ್ಲ. ಅಂಥವರಿಗೋಸ್ಕರ ಯಾಕೆ ಬರೆಯಲಿ?'
ಎಲ್ ಬೆಚ್ಚಿಬೀಳಿಸುತ್ತಾನೆ. ಕವಿ ಯಾಕೆ ಬರೆಯಲಿ ಅಂತ ಸುಮ್ಮನಾಗುವುದು ಅಪಾಯಕಾರಿ. ಅದರಲ್ಲೂ ಒಳ್ಳೆಯ ಕವಿ ಯಾರಿಗೋಸ್ಕರ ಬರೆಯಲಿ ಅನ್ನುವ ನಿಲುವು ತಾಳಿದಾಗ ಒಂದು ತಲೆಮಾರು ತುಂಬ ಮೌಲಿಕವಾದದ್ದನ್ನು ಕಳೆದುಕೊಳ್ಳುತ್ತದೆ. ತುಂಬ ಸೂಕ್ಪ್ಮವಾದದ್ದನ್ನು ಕಳೆದುಕೊಳ್ಳುತ್ತದೆ.
ಅಷ್ಟಕ್ಕೂ ಎಲ್ ಗೆ ತನ್ನ ಭಾಷೆಯ ಮೇಲೇಕೆ ಸಿಟ್ಟು? ಆ ಭಾಷೆ ಜಡ್ಡುಗಟ್ಟಿದೆಯಾ? ಅದರ ಮೂಲಕ ಏನನ್ನೂ ಹೇಳೋದಕ್ಕೆ ಸಾಧ್ಯವಿಲ್ಲ ಅನ್ನಿಸಿದೆಯಾ?
'ಎರಡೂ ಆಗಿಲ್ಲ. ಒಂದು ಭಾಷೆ ಹೀಗೆ ಆಗಾಗ ತನ್ನ ಘನತೆಯನ್ನೂ ನಂಬಿಕೆಯನ್ನೂ ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗೆ ಘನತೆ ಕಳಕೊಂಡ ಭಾಷೆಯಲ್ಲಿ ಎಷ್ಟೇ ಮೌಲಿಕವಾದ ನಿತ್ಯಸತ್ಯಗಳನ್ನು ಹೇಳಹೊರಟರೂ ಅದು ಅಷ್ಟು ಘನವಾಗಿ ಉಳಿಯುವುದಿಲ್ಲ. ಅದು ತುಂಬ ನೀರಸವೂ ಸರಳವೂ ಆಗಿ ಕಾಣಿಸುತ್ತದೆ. ಹೀಗೆ ಸರಳವಾಗುವ, ಸಸಾರವಾಗುವ ಮಾತು ಬಹಳ ಬೇಗ ಬಿದ್ದು ಹೋಗುತ್ತದೆ. ನಮ್ಮ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗಿ ಮತ್ತೊಂದು ಭಾಷೆಯ ಮೇಲಿನ ಮೋಹ ಅತಿಯಾದಾಗ ಹೀಗಾಗುತ್ತದೆ. ಆಗ ಆ ಭಾಷೆಯನ್ನೇ ಗೊಡ್ಡು ಅಂತ ತೀರ್ಮಾನಿಸಿ ಬಿಟ್ಟುಬಿಡುವುದು ಒಳ್ಳೆಯದು'.
ಅವನ ಅಳಲುಗಳು ಒಂದೆರಡಲ್ಲ. ಅವನ ಪ್ರಕಾರ ಅವನು ಬರೆಯುವುದು ತನ್ನ ಕಾಲದ ಯುವಕರಿಗೋಸ್ಕರ. ಆದರೆ ಯುವಕರು ಅದನ್ನೆಲ್ಲ ಓದುವುದಿಲ್ಲ. ತರುಣ ತರುಣಿಯರಿಗೆ ಅರ್ಥವಾಗಲಿ ಎಂದು ಬರೆದದ್ದು ಅವರನ್ನು ತಲುಪುವುದೇ ಇಲ್ಲ. ತುಂಬ ವಯಸ್ಸಾಗಿರುವ ಮುದಿ ವಿಮರ್ಶಕರು ಅವನ್ನೆಲ್ಲ ಓದಿ ತಮ್ಮ ನಿರ್ಣಯ ಮಂಡಿಸುತ್ತಾರೆ. ಕವಿತೆ ಬರೆಯುವುದು ಓದಿಗಾಗಿಯೇ ಹೊರತು ವಿಮರ್ಶೆಗಾಗಿ ಅಲ್ಲ. ವಿಮರ್ಶಕರಿಂದಾಗಿ ಕವಿತೆ ಅಮರವಾಗುತ್ತದೆ ಎಂದು ಭಾವಿಸುವವರಿದ್ದಾರೆ. ಆದರೆ ಕವಿತೆಗೆ ಗೋರಿ ಕಟ್ಟುವವರೇ ವಿಮರ್ಶಕರು'.
ಇಂಥ ಪ್ರಖರ ಯೋಚನೆಯ ಎಲ್ ಕವಿತೆ ಬಿಟ್ಟು ಬೇರೆ ಏನನ್ನೂ ಬರೆಯುವುದಿಲ್ಲ. ಸಾಹಿತ್ಯ ಅಂದರೆ ಕವಿತೆ ಅನ್ನುವುದು ಅವನ ನಂಬಿಕೆ. ಹೇಳಬೇಕಾದದ್ದನ್ನು ಉದ್ದುದ್ದಕ್ಕೆ ಗದ್ಯದಲ್ಲಿ ಹೇಳುವುದಕ್ಕೆ ಕವಿತ್ವ ಯಾಕೆ ಬೇಕು? ಮೂರು ಪದಗಳಲ್ಲಿ ನಿನಗನ್ನಿಸಿದ್ದನ್ನೆಲ್ಲ ಹೇಳಿಬಿಡು. ಅದು ಮುನ್ನೂರು ಪದಗಳಲ್ಲಿ ಕೇಳುವವನನ್ನು ತಲುಪಲಿ. ಅರ್ಥವಾಗುವಾಗ ವಿವರಗಳು ತುಂಬಿಕೊಳ್ಳಲಿ. ಅದು ಬಿಟ್ಟು ಹೇಳುವಾಗಲೇ ವಿವರಗಳನ್ನು ಕೊಟ್ಟರೆ ಕೇಳುವವನ ಪ್ರತಿಭೆಯನ್ನು ನೀನು ನಿರ್ಲಕ್ಪ್ಯ ಮಾಡಿದಂತಾಗುತ್ತದೆ ತಿಳಕೋ' ಎಂದು ಸಿಟ್ಟಾಗುತ್ತಾನೆ ಎಲ್.
ಎಲ್ ಅಷ್ಟು ಸಂಗ್ರಹವಾಗಿ ಬರೆಯಬಲ್ಲ ಕೂಡ.`ಸಾವು ನಾಮಪದ, ಬದುಕು ಕ್ರಿಯಾಪದ. ಬಿಡುವಿದ್ದರೆ ಸಾವು, ಬಿಡುವಿಲ್ಲದ ಬದುಕು. ಸಾವು ಬಿಡು-ಗಡೆ' ಎನ್ನುವುದು ಅವನ ಮತ್ತೊಂದು ಕವಿತೆ. ಅದು ಎಲ್ ಮಾತುಗಳ ಹಾಗೆ ವಿಕ್ಪಿಪ್ತವಾಗುತ್ತಾ ಸಾಗುತ್ತದೆ.
ಎಲ್ ನೇಪಾಳಿಯಲ್ಲಿ ಬರೆದರೆ ಅವನ ಕವಿತೆಗಳು ಅಚ್ಚಾಗುತ್ತಿದ್ದವಾ?
`ಅವನಿಗೂ ಗೊತ್ತಿಲ್ಲ. ಅಚ್ಚಾಗುವುದಕ್ಕಿಂತ ಓದುವುದು ಮುಖ್ಯ. ಓದಿಸಿಕೊಳ್ಳುವವರು ಇಲ್ಲದ ಮೇಲೆ ಅಚ್ಚಾದರೆಷ್ಟು? ಆಗದಿದ್ದರೆಷ್ಟು? ಯಾರೂ ಓದುವುದು ಬೇಡ ಎಂದು ಬರೆಯುವವನು ಕವಿಯಲ್ಲ, ವ್ಯಾಮೋಹಿ. ಎಲ್ಲರೂ ಓದಲಿ ಎಂದು ಬರೆಯುವವನೂ ಕವಿಯಲ್ಲ, ವ್ಯಾಮೋಹಿ. ಈ ಎರಡೂ ವ್ಯಾಮೋಹವನ್ನು ಮೀರಿದಾಗಲೇ ನಾನು ಹುಟ್ಟುತ್ತೇನೆ, ಬದುಕುತ್ತೇನೆ ಮತ್ತು .....
ಸಾ ಯು ವ ದಿ ಲ್ಲ!
ಎಲ್. ಎಲ್ಲೆಲ್ಲಿಯೂ ಎಲ್. ಎಲ್ಲೆಲ್ಲೆಲ್ಲೆಲ್ಲೆಲ್!10 comments:

Alpazna said...

Lಲ್ಲಿ ಹುಡುಕುವುದು ಅವರ ಬರಹಗಳನ್ನು?

ಗಿರೀಶ್ ರಾವ್, ಎಚ್ (ಜೋಗಿ) said...

ನಿಜವಾಗಿಯೂ ಗೊತ್ತಿಲ್ಲ. ಅವನ ಒಂದಷ್ಟು 'ಗೀಚು'ಗಳು ನನ್ನಲ್ಲಿವೆ. ನಾನೇ ಕಾಪಿ ಮಾಡಿಕೊಂಡದ್ದು. ಅವನು ನನಗೆ ಸಿಕ್ಕಿದ್ದು ಕೌಲಾಲಂಪುರದ ಮ್ಯೂಸ್ ಬಾರ್ ನಲ್ಲಿ. ಅಲ್ಲಿ ಬ್ಲಾಕ್ ಲೇಬಲ್ ವಿಸ್ಕಿಗೆ ಕೋಕ್ ಸೇರಿಸಿಕೊಂಡು ಅದರ ಮೇಲೊಂದಷ್ಟು ಐಸ್ ಗುಡ್ಡೆ ಹಾಕಿಕೊಂಡು ಕುಡಿಯುತ್ತಿದ್ದ. ಉಡಾಫೆಯ ಮನುಷ್ಯನಂತೆ ಕಾಣಿಸುತ್ತಿದ್ದ. ಅವನನ್ನು ನನಗೆ ಪರಿಚಯ ಮಾಡಿಕೊಟ್ಟದ್ದು ರಾಜ್ ಕುಮಾರ್ ಎಂಬ ಮಲೇಷಿಯಾದಲ್ಲಿ ನೆಲೆಸಿರುವ ತಮಿಳು ಗೈಡ್.

pradyumna said...

"L"ಎಲ್ಲಿ ನೋಡಲಿ "L"ಅನ್ನೆ ಕಾಣುವೆ...~~~...
ಚೆನ್ನಾಗಿದೆ..ಚೆನ್ನಾಗಿದೆ....

ಶ್ರೀವತ್ಸ ಜೋಶಿ said...

"ಒಳ್ಳೆಯ ಕವಿ ಯಾರಿಗೋಸ್ಕರ ಬರೆಯಲಿ ಅನ್ನುವ ನಿಲುವು ತಾಳಿದಾಗ ಒಂದು ತಲೆಮಾರು ತುಂಬ ಮೌಲಿಕವಾದದ್ದನ್ನು, ಸೂಕ್ಪ್ಮವಾದದ್ದನ್ನು ಕಳೆದುಕೊಳ್ಳುತ್ತದೆ..."

ಹಾಗಾದರೆ, ನೀನ್Rಇಗಾದೆಯೋ Lಎಯ್ ನೇಪಾಳಕವಿಯೇ?

SHREE said...

’ನಮ್ಮ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗಿ ಮತ್ತೊಂದು ಭಾಷೆಯ ಮೇಲಿನ ಮೋಹ ಅತಿಯಾದಾಗ ಹೀಗಾಗುತ್ತದೆ. ಆಗ ಆ ಭಾಷೆಯನ್ನೇ ಗೊಡ್ಡು ಅಂತ ತೀರ್ಮಾನಿಸಿ ಬಿಟ್ಟುಬಿಡುವುದು ಒಳ್ಳೆಯದು'...
- ಹೀಗೆ ಯೋಚಿಸುವ ಜನ ನಮ್ಮಲ್ಲೂ ಬೇಕಾದಷ್ಟಿದ್ದಾರಲ್ಲ? ಬರೀ Lಲ್ಲೇ ಯಾಕೆ? ಓ, ಅದಕ್ಕೆನೆ ’ಎಲ್. ಎಲ್ಲೆಲ್ಲಿಯೂ ಎಲ್. ಎಲ್ಲೆಲ್ಲೆಲ್ಲೆಲ್ಲೆಲ್” ಅಂದ್ರಾ? :)

balappa said...

taleharategaLu L illa?

yaatrika said...

"ಹೇಳುವಾಗಲೇ ವಿವರಗಳನ್ನು ಕೊಟ್ಟರೆ ಕೇಳುವವನ ಪ್ರತಿಭೆಯನ್ನು ನೀನು ನಿರ್ಲಕ್ಪ್ಯ ಮಾಡಿದಂತಾಗುತ್ತದೆ" - ತುಂಬಾ ಇಷ್ಟವಾಯಿತು. ನಿಜವಲ್ಲವೆ - ಬೇಂದ್ರೆ,ಡಿವಿಜಿ,ಕುವೆಂಪುರವರ ಕೃತಿಗಳಿಗೆ ಎಷ್ಟು ವಿಮರ್ಶೆಗಳು ಬಂದರೂ ಇನ್ನೂ ಬರುತ್ತಲೇ ಇರುತ್ತವೆ. ಎಷ್ಟು ಓದಿದರೂ ಬರಿದಾಗಲಾರವು ಅವು. ಆದರೆ ಮುನ್ನೂರು ಪದಗಳಲ್ಲಿ ಹೇಳಬೇಕಾದ್ದನ್ನು ಮೂರು ಪದಗಳಲ್ಲಿ ಹೇಳಿ ಮುಗಿಸಿದರೆ ಅದನ್ನು ಮುನ್ನೂರಕ್ಕೆ ವಿಸ್ತರಿಸಿ ಅರ್ಥೈಸುವ ತಾಳ್ಮೆ, ಅನುಭಾವಗಳು ಓದುಗನಿಗಿರುತ್ತವೆಯೇ? ಇದ್ದರೂ ಎಲ್ಲರಿಗೂ ಒಂದೇ ಪ್ರಮಾಣದಲ್ಲಿರಲಂತೂ ಸಾಧ್ಯವಿಲ್ಲ. ಇದಕ್ಕೆ ಹೊರತಾಗಿ, ಕವಿಗಾದ ಅರ್ಥವನ್ನು ಮೀರಿ ಹೊಸ ಮಿಂಚು ಹೊಳೆಸುವುದೂ ಓದುಗನಿಗೆ ಸಾಧ್ಯವಾಗಬಹುದಾದರೂ ಅದು ವಿರಳ. "ಪದ್ಯಂ ವಧ್ಯಂ ಗದ್ಯಂ ಹೃದ್ಯಂ" ಅನ್ನುವ ಮಾತು ಬಹುಶಃ ಪದ್ಯದ ಅರ್ಥಗೌರವದ ಹೊರೆಯನ್ನು ತಾಳಲಾಗದೇ ಬಂದಿರುವ ಉದ್ಗಾರವಿರಬಹುದು.
ಇರಲಿ, Lನ್ನು ಪರಿಚಯಿಸಿದಕ್ಕಾಗಿ ನಿಮಗೆ ಧನ್ಯವಾದಗಳು.

Anonymous said...

`ಕನ್ನಡಿ ಒರೆಸಿ ನೋಡಿದೆ
ಅಲ್ಲಿ ಯಜಮಾನನ ಬದಲು ಡಾಲರ್ ಇತ್ತು...'
ನನಗೆ ಕವಿತೆಗಳು ಅಷ್ಟೇನೂ ಆಸಕ್ತಿ ಹುಟ್ಟಿಸೋಲ್ಲ. ಆದರೆ `ಎಲ್' ಬರೆದ ಈ ಕವಿತೆ ಸಾಲು ಬೆಚ್ಚಿ ಬೀಳಿಸಿತು. ಯಾರಿಗಾದರೂ ಪಿಸುಗುಡುವಿಕೆ ಅರ್ಥ ಗೊತ್ತಿದೆಯಾ? ಎಂಬ ಆತನ ಮಾತು ತುಂಬ ಹಿಡಿಸಿತು.
-ಆತೀಪಿ

ಅಲೆಮಾರಿ said...

ಚೆನ್ನಾಗಿದೆ.

ಅಲೆಮಾರಿ said...

ಚೆನ್ನಾಗಿದೆ