Tuesday, June 19, 2007

ಭಟ್ಟರಿಗೆ ಮಾಸ್ತಿ ಬಂತು


ಲಕ್ಪ್ಮೀನಾರಾಯಣ ಭಟ್ಟರಿಗೆ ಮಾಸ್ತಿ ಬಂತು.
ದೊಡ್ಡ ಗಂಟಲಿನ, ಸ್ಪಷ್ಟ ಮಾತಿನ, ಕಾವ್ಯವನ್ನೂ ವಿವರಿಸಬಲ್ಲ ಅಪಾರ ಆತ್ಮವಿಶ್ವಾಸದ, ತನ್ನ ಕಾವ್ಯದಲ್ಲಿ ತಾನೇ ನಂಬಿಕೆ ಇಟ್ಟುಕೊಂಡ ಭಟ್ಟರಿಗೆ ಮಾಸ್ತಿ ಮನ್ನಣೆ.
ಅವಜ್ಞೆಗೆ ಒಳಗಾದ, ಮನ್ನಣೆಗಳು ದಕ್ಕದ, ಪ್ರಶಸ್ತಿಗಳು ಅಷ್ಟಾಗಿ ಒಲಿಯದ, ಸಾಕಷ್ಟು ಒಳ್ಳೆಯ ಕವಿತೆಗಳನ್ನು ಕೊಟ್ಟರೂ ಅಷ್ಟಾಗಿ ಗಮನ ಸೆಳೆಯದ, ಅಕ್ಪರವ್ಯಾಮೋಹಿ, ಶ್ರದ್ಧಾವಂತ, ಶ್ರಮಜೀವಿ ಭಟ್ಟರಿಗೆ ಮಾಸ್ತಿ ಪ್ರಶಸ್ತಿ.
ಶರೀಫರನ್ನು ಪರಿಚಯಿಸಿದ, ಯೇಟ್ಸನ ಕವಿತೆಗಳನ್ನು ಕನ್ನಡಿಸಿದ, ಎಲಿಯಟ್ ಪದ್ಯಗಳನ್ನು ಅನುವಾದಿಸಿದ, ಶೇಕ್ಸ್ ಪಿಯರ್ ಸಾನೆಟ್ಟುಗಳನ್ನು ಸುನೀತಗೊಳಿಸಿದ, ನಾಟಕ ಬರೆದ, ವಿಮರ್ಶೆ ಬರೆದ, ಪ್ರಬಂಧ ಬರೆದ ಭಟ್ಟರಿಗೆ ಅರ್ಹ ಗೌರವ.
*****
ಎ್. ಎಸ್. ಲಕ್ಪ್ಮೀನಾರಾಯಣ ಭಟ್ಟರಿಗೂ ಭಾವಗೀತೆಗೂ ಇರುವ ಸಂಬಂಧವನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವುದು ಕಷ್ಟ. ತುಂಬ ಸರಳವಾಗಿ, ಅಂಥ ಶ್ರಮವಿಲ್ಲದೆ ಬರೆಯುವಂತೆ ತೋರುವ ಭಟ್ಟರ ರಚನೆಗಳ ಮಾಧುರ್ಯವನ್ನು ಯಾರೂ ನಿರಾಕರಿಸುವುದಕ್ಕೆ ಸಾಧ್ಯವೇ ಇಲ್ಲ. ಅಡಿಗರ ಹಾಗೆ ಗಾಢವಾಗಿ, ಬೇಂದ್ರೆಯವರ ಹಾಗೆ ಗೂಢವಾಗಿ, ಕೆಎಸ್ ನರಸಿಂಹ ಸ್ವಾಮಿಗಳ ಹಾಗೆ ನಿಬಿಡವಾಗಿ ಭಟ್ಟರು ಬರೆದಿಲ್ಲ ಅನ್ನುವ ವಿಮರ್ಶಕರ ಸಣ್ಣ ಸಣ್ಣ ಆಕ್ಪೇಪಗಳನ್ನು ಪಕ್ಕಕ್ಕಿಟ್ಟ ಹೇಳಿ; ನಿಮ್ಮನ್ನು ಮೊದಲು ಸೆಳೆದ ಭಾವಗೀತೆ ಯಾರದ್ದು?

`ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂತು ಬೇಲೀ ಸಾಲ
ಮೀಟಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ.. ಮನವು.. ಎಲ್ಲೆ ಮೀರಿತೋ..

ಇದನ್ನು ಹಾಡಿದ್ದು ಬಹುಶಃ ರತ್ನಮಾಲಾ ಇರಬೇಕು. ಈ ಸಾಲುಗಳು ಮೂಡುತ್ತಿದ್ದಂತೆಯೇ ಅದರ ಮುಂದಿನ ಸಾಲಿಗೆ ಕಾಯುತ್ತಿತ್ತು ಮನಸ್ಸು;

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಭಾವಸಂಗಮದ ಗೀತೆಗಳಿವು. ಭಟ್ಟರ ಮೇಲೆ ಅಗಾಧವಾದ ಪ್ರೀತಿ ಮತ್ತು ಗೌರವ ಹುಟ್ಟಲಿಕ್ಕೆ ಈ ಆರೆಂಟು ಸಾಲುಗಳೇ ಸಾಕು. ಆದರೆ ಭಟ್ಟರು ಇಂಥ ಅಸಂಖ್ಯ ಸಾಲುಗಳನ್ನು ಕೊಟ್ಟಿದ್ದಾರೆ;

ನೂರಾರು ನದಿ ಕುಡಿದೂ ಮೀರದಾ ಕಡಲು
ಭೋರೆಂದು ಸುರಿಸುರಿದೂ ಆರದಾ ಮುಗಿಲು
ಸೇರಿಯೂ ಕೋಟಿ ತಾರೆ ತುಂಬದಾ ಬಯಲು
ಯಾರದೀ ಮಾಯೆ ಯಾವ ಬಿಂಬದಾ ನೆರಳು.

ಶರೀಫರ ಪದ್ಯಗಳನ್ನು ಬಗೆದು ತಂದು, ಅವನ್ನೆಲ್ಲ ತಿದ್ದಿ ತೀಡಿ ಒಪ್ಪ ಮಾಡಿ ಕೊಟ್ಟ ಭಟ್ಟರು `ಕಲ್ಲು ಸಕ್ಕರೆ ಕೊಳ್ಳಿರೋ' ಎಂಬ ಪುಸ್ತಕ ಸಂಪಾದಿಸಿ ಸಣ್ಣದೊಂದು ವಿವಾದಕ್ಕೂ ಒಳಗಾದರು. ಸಾಕಷ್ಟು ಶತ್ರುಗಳನ್ನೂ ಅವರು ಸಂಪಾದಸಿದ್ದಾರೆ. ಅವರನ್ನು ಲಂಕೇಶರೂ ರಾಮಚಂದ್ರ ಶರ್ಮರೂ ಸೇರಿಕೊಂಡು ಕ್ಯಾಸೆಟ್ ಕವಿ ಎಂದು ಲೇವಡಿ ಮಾಡಿ ನಕ್ಕದ್ದು ಹಳೇ ಸುದ್ದಿ. ಶರ್ಮರ ಕವಿತೆಗಳು ಇವತ್ತು ನಾಪತ್ತೆ. ಭಟ್ಟರೂ ಚಂಡಿ ಹಿಡಿದವರಂತೆ ಅವರ ಟೀಕೆಗಳನ್ನು ನುಂಗಿ ಕೊಂಡು ಬರೆಯುತ್ತಾ ಹೋದರು. ಅದನ್ನು ವಿವಿಧ ಗಾಯಕರಿಂದ ಹಾಡಿಸಿದರು. ಗರ್ತಿಕೆರೆ ರಾಘಣ್ಣನಂಥ ಗಾಯಕರನ್ನು ಪರಿಚಯಿಸಿದರೆ. ಮೀರಾ ಭಜ್ಗಳನ್ನು ಸೊಗಸಾಗಿ ಕನ್ನಡಕ್ಕೆ ತಂದರು.
ಮೃದುಮಧುರ ಸಾಲುಗಳನ್ನು ಪ್ರೇಮ, ದಾಂಪತ್ಯ, ವಿರಹದ ಕ್ಪಣಗಳನ್ನು ರೂಪಕವಾಗಿಸುವ ದಟ್ಟಪ್ರತಿಭೆ ಭಟ್ಟರಿದೆ ಸಿದ್ಧಿಸಿಬಿಟ್ಟಿತು. ಉದಾಹರಣೆಗೆ ಅವರ ಈ ಕೆಳಗಿನ ಸಾಲುಗಳನ್ನು ಓದಿ;

ಮುಗಿಲ ಮಾಲೆ ನಭದಲಿ
ಹಾಲು ಪಯಿರು ಹೊಲದಲಿ
ರೂಪಿಸುತಿವೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ
(ಬಾರೆ ನನ್ನ ದೀಪಿಕಾ)

ತೀರುತಿರುವ ಹರುಷದಂತೆ
ಆರುತಿರುವ ದೀಪವು
ಮೀರಿ ಉರಿದು ಕೊರಗು ಹರಿದು
ಕೊನೆಯಾಯಿತು ಶಾಪವು
(ಎಂದೂ ಕಾಣದಂಥ ಕನಸು)

ಏಕೆ ಹೀಗೆ ನಮ್ಮ ನಡುವೆ
ಮಾತು ಬೆಳೆದಿದೆ
ಕುರುಡು ಹಮ್ಮು ಬೇಟೆಯಾಡಿ
ಪ್ರೀತಿ ನರಳಿದೆ


ಹಮ್ಮು ಬೆಳೆದು ನಮ್ಮ ಬಾಳು
ಆಯ್ತು ಎರಡು ಹೋಳು
ಕೂಡಿಕೊಳಲಿ ಮತ್ತೇ ಪ್ರೀತಿ
ತಬ್ಬಿಕೊಳಲಿ ತೋಳು
(ಏಕೆ ಹೀಗೆ)

ಬೆಳಕೊಂಡು ಸೀರೆಯುಟ್ಟು
ತೇಲಿ ನಡೆವ ರೂಪ
ಗರ್ಭಗುಡಿಯಲಿ ದೇವರೆದುರಲಿ
ಉರಿವ ಶಾಂತ ದೀಪ

ರಾಗದಲ್ಲಿ ಸೇರಿ ಕವಿತೆ ಹಾಡು ಮೂಡುವಂತೆ
ಸಂಜೆ ಸುಳಿವ ಗಾಳಿಗೆ ಹೊನ್ನ ಬಿಸಿಲ ಲೀಲೆಗೆ
ಮುಗಿಲಾಡುವಂತೆ
(ಎಂಥ ಚೆಲುವೆ ನನ್ನ ಹುಡುಗಿ)

****
ನವ್ಯ ಚಳವಳಿಯಲ್ಲೂ ಒಂದಷ್ಟು ಕವಿತೆಗಳನ್ನು ಬರೆದೇ ಬರೆದರು ಭಟ್ಟರು. ಆದರೆ ಅವರ ನವ್ಯ ಕವಿತೆಯ ತುಂಬ ಅಡಿಗರ ಕಾವ್ಯದ ನೆರಳು.

ಬಾ ಮಗೂ ಅಲ್ಲೆ ನಿನ್ನದೆ ಮತ್ತೆ ಹಿಂದಕ್ಕೆ
ನಿನ್ನದೇ ನೆಲಕ್ಕೆ ನಿನ್ನದೇ ಜಲಕ್ಕೆ
ನಿನ್ನ ಒಳಹೊರಗನ್ನು ಸೃಷ್ಟಿಸಿಕೊಟ್ಟ ಸತ್ವಕ್ಕೆ
ಹಿಂದುಮುಂನ್ನುಗಳ ತಕ್ಕ ಛಂದದಲ್ಲಿಟ್ಟು ನಿನ್ನ
ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ
ನಿನ್ನ ಬೆನ್ನಿಗೆ ನಿಂತ ಪುರಾಣ ಇತಿಹಾಸಗಳ
ಬಿಸಿಯುಸಿರು ಬಡಿಯುವೀ ವರ್ತಮಾನಕ್ಕೆ

ಅಡಿಗರದೇ ಲಯ. ಅಡಿಗರದ್ದೇ ಮಾತು. ಇಂಥ ಕವಿತೆಗಳ ಮೂಲಕ ಭಟ್ಟರು ನಮ್ಮನ್ನು ಕಾಡುವುದಿಲ್ಲ. ಅವರದೇನಿದ್ದರೂ ಮೊದಲೇ ಹೇಳಿದ ಹಾಗೆ `ಇಹದ ಪರಿಮಳದ ಹಾದಿ.'
ಎಪ್ಪತ್ತರಲ್ಲೂ ಭಟ್ಟರು ಉತ್ಸಾಹ ಕಳಕೊಂಡಿಲ್ಲ. ಮುಂಚಿನ ಹಾಗೇ ಜಗಳ ಆಡುತ್ತಾರೆ. ಅಮೇರಿಕಾಕ್ಕೆ ಹೋಗಿ ಭಾಷಣ ಮಾಡುತ್ತಾರೆ. ಅಲ್ಲಿ ಬಿಡುಗಡೆ ಮಾಡಿದ ಸೀಡಿಯನ್ನು ಇಲ್ಲೂ ಬಿಡುಗಡೆ ಮಾಡುತ್ತಾರೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಮನೆಯಲ್ಲೇ ಕೂತು ಮಾತಾಡಿ, ಆ ಸೀಡಿಯನ್ನು ಕನ್ನಡ ಪ್ರೇಮಿ ಅಮೆರಿಕನ್ನಡಿಗರಿಗೆ ಕೊಟ್ಟು, ಅಲ್ಲಿ ಭಾಷಣ ಮಾಡಿ ಸಂಭ್ರಮಿಸುತ್ತಾರೆ.
ಬೇಸರದ ಸಂಗತಿಯೆಂದರೆ ಭಾವಗೀತೆಗಳನ್ನು ಬರೆಯುವುದನ್ನು ಬಿಟ್ಟಿದ್ದಾರೆ. ಸಂತೋಷದ ಸಂಗತಿಯೆಂದರೆ ನವ್ಯ ಕವಿತೆಗಳನ್ನೂ ಬರೆಯುವುದನ್ನೂ ನಿಲ್ಲಿಸಿದ್ದಾರೆ.
ಭಟ್ಟರ ಒಟ್ಟಾರೆ ನಿಲುವಿನ ಬಗ್ಗೆಹೇಳಬಹುದಾದ ಎರಡು ಸಾಲುಗಳನ್ನು ಅವರೇ ಬರೆದಿದ್ದಾರೆ;

ಕಲ್ಲುದೇವರ ಹಾಗೆ ನಿಲ್ಲಬಾರದು ಹೀಗೆ
ಕ್ರೂರವಾದರೆ ಹೇಗೆ ಚೆಲುವು
ಶರಣಾದ ಜೀವಕ್ಕೆ ಮರುಗಿ ಸಂತೈಸದೇ
ದೂರವಾದರೆ ಹೇಗೆ ಒಲವು.

ಟಿಪ್ಪಣಿ- ಮೇಲಿನ ಚಿತ್ರ ಅನನ್ಯಾ ಕಾಸರವಳ್ಳಿ ಅವರದ್ದು. ಭಟ್ಟರ ಕವಿತೆಗಳಿಗೂ ಅನನ್ಯಾ ಕಾಸರವಳ್ಳಿ ಅವರಿಗೂ ಸಂಬಂಧ ಇಲ್ಲ ನಿಜ. ಆದರೆ ಭಟ್ಟರ ಎಂಥಾ ಹದವಿತ್ತೇ, ಹರೆಯಕೆ ಏನು ಮುದವಿತ್ತೇ, ಅಟ್ಟಿ ಹಿಡಿದು ಮುಟ್ಟಿ ತಡೆದು ಗುಟ್ಟು ಸವಿಯಿತ್ತೇ ಹಾಡನ್ನು ಚಿತ್ರೀಕರಿಸಿದರೆ ಆ ಪುಟ್ಟ ತುಂಟಿಯ ಪಾತ್ರಕ್ಕೆ ಅನನ್ಯಾ ಒಪ್ಪುತ್ತಾರೆ ಅಂತ ನಮಗೆ ಅನೇಕರಿಗೆ ಅನ್ನಿಸಿದ್ದಕ್ಕೆ ಆ ಫೋಟೋ. ಅನನ್ಯಾರ ಭಾವಪೂರ್ಣ ಕಣ್ಣುಗಳನ್ನು ಗಮನಿಸಿ. ಅಲ್ಲೊಂದು ಕವಿತೆ ಅವಿತು ಕೂತಂತಿದೆ.

15 comments:

sritri said...

ಎಲ್ಲಿ ಜಾರಿತೋ ಹಾಡಿರುವ ಗಾಯಕಿ ರತ್ನಮಾಲಾ ಅಲ್ಲ, ಸುಲೋಚನ(ಇದು ರಾಮಮಂದಿರ ಖ್ಯಾತಿ)

ಸಿಂಧು Sindhu said...

ಹಾಡು ಹಕ್ಕಿಯಂತೆ ಬರೆದವರು ಭಟ್ಟರು. ಎಲ್ಲರೂ ಗಂಭೀರ ಕಾವ್ಯ ಬರೆದರೆ ಇವತ್ತಿನ ಸುಗಮಸಂಗೀತದ ಲಘು ಬಿಗುವಾಗಿರುತ್ತಿತ್ತೇನೋ? ನೆನಪುಗಳ ಮಧುರ ಅಧಿವೇಶನಕೆ ಕಳೆದು ಹೋದ ಪ್ರಿಯ ಗೆಳೆಯನ ಕರೆಯುವ ಅವರ ಸುನೀತಗಳು ಕನ್ನಡಕ್ಕೆ ಒಂದು ಒಳ್ಳೆಯ ಕೊಡುಗೆ.

ಅವರ 'ಎಂದೂ ಕಾಣದಂಥ ಕನಸು' ಕವಿತೆ ನನ್ನನ್ನು ಯಾವತ್ತೂ ಕಾಡಿದ ಹಾಡು. ಹಾಡಿದವರು, ಸಂಯೋಜಿಸಿದವರು ಅಶ್ವತ್ಥ್. ... ಬೆರೆಗು ಮುಳ್ಳು, ಕಲ್ಲಿಗೂ..ಕವಿತೆ ಬರೆದ ಕಂಪು ಬಂತು ಅಲ್ಲಿ ಇಲ್ಲಿ ಎಲ್ಲಿಯೂ..

ಧನ್ಯವಾದಗಳು ಕಂಪು ಹರಡಿದ್ದಕ್ಕೆ.

Anonymous said...

radhika said,
bhattara kavanagalannu matte nevarisuvante madida jogige thank u. chendaneya salella jogi blogalli innu chendavagide.

Anonymous said...

ಭಟ್ಟರಿಗೆ ಕಂಗ್ರಾಟ್ಸ್.
ಭಟ್ಟರ `ಎಲ್ಲಿ ಜಾರಿತೋ ಮನವು...' ಕವಿತೆ
`ಅನನ್ಯ' ಭಾವನೆಗಳ ಒರತೆ
ಅದರಲಿ ಜೋಗಿ, ನಿಮ್ಮ ವಿಷಯದ ಆಯ್ಕೆ ಅನನ್ಯ
ಸುಳ್ಳಲ್ಲ, ಇದು ನಿಜಕ್ಕೂ `ಅನನ್ಯ'!

-ಸೇನ್

avadhi said...

dear jogi

please visit
avadhi.wordpress.com

for a writeup on jogi and jogimane
ello jogappa nin aramane..

-avadhi balaga

Anonymous said...

Jogi,
In Ananya Kasaravalli photo her smile seemed impressive.I could not see any poetry in her eyes. Photo focus brings smile to the forefront as I see it.
Regards
Vijayshankar

suptadeepti said...

ಭಟ್ಟರ ಕವಿತೆಗಳಲ್ಲಿ ವಿಷಯ ವೈಶಾಲ್ಯವಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಕೈಯಾಡಿಸಿರುವ ಭಟ್ಟರಿಗೆ ಸಂದ ಪ್ರಶಸ್ತಿ ಹಿಗ್ಗು ತಂದಿದೆ. ಭಟ್ಟರಿಗೆ ಅಭಿನಂದನೆಗಳು. ಆ ಬಗ್ಗೆ ಬರೆದ ನಿಮಗೆ ಧನ್ಯವಾದಗಳು.

pradyumna said...

ಧನ್ಯವಾದಗಳು ಜೋಗಯ್ಯ....

SHREE said...

ಲಕ್ಷ್ಮೀನಾರಾಯಣ ಭಟ್ಟರನ್ನು,ಅವರ ಹೃದಯತಟ್ಟುವ ಹಾಡುಗಳನ್ನು, ನೆನಪು ಮಾಡಿದ್ದಕ್ಕೆ ಥ್ಯಾಂಕ್ಯೂ ಸರ್.... :)

ನಿಮ್ಮ ಮಾತು ನಿಜ. ಎಂಥಾ ಹದವಿತ್ತೇ, ಹರಯಕೆ- ಹಾಡಿಗೆ ಅನನ್ಯ ಚೆನ್ನಾಗಿ ಹೊಂದಿಕೊಳ್ಳುತ್ತಾರೆ... ಆದರೆ ಈ ಚಿತ್ರದಲ್ಲಲ್ಲ. ಮೇಕಪ್ ಹೆಚ್ಚಾಗಿದೆ, ಗಮನ ಆಕೆಯ ಕಣ್ಣಿನ ಮೇಲೆ ಹೋಗುವುದಿಲ್ಲ. ಮತ್ತೆ ಕಣ್ಣು ಭಾವಗಳನ್ನು ಸೂಸುವಂತೆ ಚಿತ್ರಿತವಾಗಿಲ್ಲ.

Mallikarjun said...

Sir lekhan tumba chennagide moodi bandide

Anonymous said...

I heard that yesterday S.L. Bhairappa's speech was very boring while during the Masti award function. I did not attend. But, heard a few friends saying like that. Was it really boring? any comments/ reports on the speech?
Aaasaktha

condumdots said...

Yesss!, definitely she has a poetry in her eyes. Wish I could peep into them!

Dr.D.M.Sagar
Canada

Anonymous said...

NSL is excellant! You should see the preparations he make for whatever he does. He has got a vast knowledge about literature, music, arts etc. He is a perfectionist yet easily approchable without any hanguos.-malnad

Anonymous said...

Hello jogi sir.
while just wandering in this e-world i came to your home. its really nice. but i have a big complaint on you. in my home we bring kannada prabha. i like its all other things but not one. the saptahika prabha. its so taste less. why dont you make it same tasty as your blog

Sreeharsha said...

ಹೌದು. ನಿಮ್ಮ ಮಾತು ಬಹಳ ಸತ್ಯ.
ಭಟ್ಟರ ಕವಿತೆಗಳನ್ನು ಓದುತ್ತಿದ್ದರೆ, ಯಾವುದೋ ಲೋಕದಲ್ಲಿ ತೇಲಿ ಹೋಗುವ೦ತಾಗುತ್ತದೆ.
ಹಾಗೆಯೇ, ಅನನ್ಯ ಕಾಸರವಳ್ಳಿಯವರ ನೇತ್ರಗಳ ಬಗ್ಗೆ ನಿಮ್ಮ ಅಭಿಪ್ರಾಯ ಸರಿಯಾದದ್ದೇ. ಆಕೆ ಅದ್ಭುತವಾದ ನಟಿ. ಮೃದುಮಾತುಗಳಲ್ಲಿ, ನಿರ್ಮಲ ಕ೦ಗಳಲ್ಲಿ ಎಲ್ಲವನ್ನೂ ಹೇಳಿಬಿಡುತ್ತಾರೆ.

~ಹರ್ಷ