Sunday, June 3, 2007

ನಾವೇಕೆ ಪ್ರೀತಿ­ಗಾಗಿ ಸಾಯು­ತ್ತೇವೆ?


ನಾವು ಸಿನಿಮಾ ನೋಡು­ವುದು ಯಾಕೆ?
ಮನ­ರಂ­ಜ­ನೆಗೆ, ಹೊತ್ತು ಕಳೆ­ಯು­ವು­ದಕ್ಕೆ, ಕಲಾ­ಪ್ರೀ­ತಿಗೆ, ಸಿನಿಮಾ ಒಂದು ಅದ್ಭುತ ಮಾಧ್ಯಮ ಎನ್ನುವ ಕಾರ­ಣಕ್ಕೆ...
ಎಲ್ಲವೂ ಸುಳ್ಳು. ಅದ್ಯಾ­ವುದೂ ಕಾರ­ಣ­ಗಳೇ ಅಲ್ಲ. ಹದಿ­ಹ­ರೆ­ಯದ ಹುಡು­ಗ­ರಿಂದ ಹಿಡಿದು ವಯಸ್ಸು ಮಾಗಿ­ಸಿದ ಪ್ರಬು­ದ್ಧರ ತನಕ ಎಲ್ಲರೂ ಚಿತ್ರ­ಮಂ­ದಿ­ರಕ್ಕೆ ಹೋಗು­ವುದು;
ಪ್ರೀತಿ­ಸು­ವು­ದನ್ನು ಕಲಿ­ಯು­ವು­ದಕ್ಕೆ.
ಇದು ನಮ್ಮ ಊಹೆ­ಯಲ್ಲ, ನಮ್ಮ ತೀರ್ಮಾ­ನವೂ ಅಲ್ಲ. ಯುರೋಪು ರಾಷ್ಟ್ರ­ಗ­ಳಲ್ಲಿ ನಡೆದ ಒಂದು ಸಮೀ­ಕ್ಪೆ­ಯಿಂದ ಹೊರ­ಬಿದ್ದ ಸತ್ಯ. ನೀವು ಸಮೀ­ಕ್ಪೆ­ಗ­ಳನ್ನು ನಂಬು­ತ್ತೀ­ರಾ­ದರೆ ಇದನ್ನೂ ನಂಬ­ಬೇಕು.
ಅಂತಿ­ಮ­ವಾಗಿ ಸಿನಿಮಾ ಕಲಿ­ಸು­ವುದು ಹೇಗೆ ಪ್ರೀತಿ­ಸ­ಬೇಕು ಅನ್ನು­ವು­ದನ್ನು. ನಮ್ಮ ಪ್ರೀತಿ­ಯನ್ನು ಹೇಗೆ ವ್ಯಕ್ತ­ಪ­ಡಿ­ಸ­ಬೇಕು ಎನ್ನು­ವು­ದನ್ನು. ನಾನು ಪ್ರೀತಿ­ಸಿದ ಹುಡು­ಗಿ­ಯನ್ನು ನಾನು ಹೇಗೆ ಕೇರ್ ಮಾಡ­ಬೇಕು, ಅವ­ಳನ್ನು ಹೇಗೆ ಮುಚ್ಚ­ಟೆ­ಯಾಗಿ ನೋಡಿ­ಕೊ­ಳ್ಳ­ಬೇಕು ಅನ್ನು­ವು­ದನ್ನು ಕಲಿ­ಸುವ ವಿಶ್ವ­ವಿ­ದ್ಯಾ­ಲಯ ಈ ಜಗ­ತ್ತಿ­ನಲ್ಲೇ ಇಲ್ಲ. ಅದ­ನ್ನೆಲ್ಲ ಯಾರೂ ಹೇಳಿ­ಕೊ­ಡು­ವುದೂ ಇಲ್ಲ. ಎಲ್ಲರೂ ಗುಟ್ಟಾಗಿ ಪ್ರೀತಿ­ಸು­ತ್ತಾರೆ, ಬಹಿ­ರಂ­ಗ­ವಾಗಿ ಮದು­ವೆ­ಯಾ­ಗು­ತ್ತಾರೆ. ಮದು­ವೆ­ಯಾದ ನಂತರ ಗಂಡ-ಹೆಂ­ಡಿರ ಸಂಬಂಧ ಹೇಗಿ­ರುತ್ತೆ ಅನ್ನು­ವುದು ಜಗ­ತ್ತಿಗೇ ಗೊತ್ತು. ಆದರೆ ಪ್ರೇಮಿ­ಸು­ವುದು ಹೇಗೆ? ಅದನ್ನು ಯಾರು ಹೇಳು­ತ್ತಾರೆ.
ಸಿನಿ­ಮಾ­ಗಳು ಹೇಳು­ತ್ತವೆ, ಕಾದಂ­ಬ­ರಿ­ಗಳು ಹೇಳು­ತ್ತವೆ ಎಂಬ ಕಾರ­ಣಕ್ಕೇ ಅವು ಜನ­ಪ್ರಿ­ಯ­ವಾ­ಗಿವೆ. ಟೈಟಾ­ನಿಕಚಿತ್ರ­ವನ್ನು ನಾವು ನೋಡಿದ್ದು ಅವ­ರಿ­ಬ್ಬರ ಪ್ರೇಮದ ತೀವ್ರ­ತೆ­ಗೋ­ಸ್ಕ­ರವೇ ಹೊರತು, ಹಡಗು ಮುಳು­ಗಿದ ದುರಂ­ತ­ಕ್ಕೋ­ಸ್ಕರ ಅಲ್ಲ. ಹಡಗು ಮುಳು­ಗಿ­ದ್ದನ್ನು ಪತ್ರಿ­ಕೆ­ಯಲ್ಲಿ ಓದಿ ತಿಳಿ­ಯ­ಬ­ಹುದು. ಆದರೆ ಮುಳು­ಗು­ತ್ತಿ­ರುವ ಹಡ­ಗಿ­ನಲ್ಲಿ ಅವ­ರಿ­ಬ್ಬರೂ ಹೇಗೆ ಪ್ರೀತಿ ಮಾಡಿ­ದರು ಅನ್ನು­ವು­ದನ್ನು ಯಾರೂ ಹೇಳು­ವು­ದಿಲ್ಲ. ಈ ಜಗತ್ತೇ ಒಂದು ಸಾಗರ, ಈ ಬದುಕೇ ಒಂದು ಟೈಟಾ­ನಿಕಇದು ಮುಳು­ಗಿ­ಹೋ­ಗುವ ಮುನ್ನ ಹೇಗಯ್ಯಾ ಪ್ರೀತಿ ಮಾಡಲಿ.. ಹೇಳಿ ಕೊಡು ಬಾ..
ಹೇಳಿ­ಕೊ­ಟ್ಟಿದೆ ಸಿನಿಮಾ.
ಹಾಗಿ­ದ್ದರೆ ಪ್ರೀತಿ ಏನು? ಅದೊಂದು ಕಲೆಯಾ? ಕಲೆ­ಯಾ­ದರೆ ಅದನ್ನು ತಿಳು­ವ­ಳಿಕೆ ಮತ್ತು ಸ್ವಪ್ರ­ಯ­ತ್ನ­ದಿಂದ ಮೈಗೂ­ಡಿ­ಸಿ­ಕೊ­ಳ್ಳ­ಬೇಕಾ? ಅಥವಾ ಅದೊಂದು ಆಪ್ತ ಸಂವೇ­ದನೆ ಮಾತ್ರವಾ? ಹಾಗೊಂದು ವೇಳೆ ಅದೊಂದು ಆಪ್ತ ಸಂವೇ­ದ­ನೆ­ಯಷ್ಟೇ ಆಗಿ­ದ್ದರೆ ಅದು ಸಂಭ­ವಿ­ಸು­ವುದು ಕೇವಲ ಮ್ಯಾಟರ್ ಆಫ್ ಚಾಯ್ಸ್ ಹೌದಾ? ಅದೃ­ಷ್ಟ­ವಂ­ತರು ಮಾತ್ರ ಪ್ರೀತಿ­ಯಲ್ಲಿ ಬೀಳು­ತ್ತಾರಾ? ಹಾಗಿ­ದ್ದರೆ ಬಹು­ತೇಕ ಮಂದಿ ದುರ­ದೃ­ಷ್ಟ­ವಂ­ತರಾ?
ಪ್ರೀತಿ­ಸುವ ಹಂತ­ದಲ್ಲಿ ಎಲ್ಲರೂ ಅದೊಂದು ಕಲೆ ಎಂದೇ ನಂಬು­ತ್ತಾರೆ. ಪ್ರೀತಿ ಮಾಡೋ­ದನ್ನು ಕಲೀ­ಬೇಕು ಅಂತ ಒದ್ದಾ­ಡು­ತ್ತಾರೆ. ಬೇರೆ­ಯ­ವರ ಸಲಹೆ ತೆಗೆ­ದು­ಕೊ­ಳ್ಳು­ತ್ತಾರೆ. ಒಂದು ಹುಡು­ಗಿ­ಯನ್ನು ಪ್ರೀತಿ­ಸು­ತ್ತಿ­ದ್ದೇನೆ, ಆಕೆ­ಯನ್ನು ಹೇಗೆ ಅಪ್ರೋಚ್ ಮಾಡ­ಬೇಕು ಎಂದು ಸಲಹೆ ಕೇಳು­ತ್ತಾರೆ. ಸಲಹೆ ಸಿಗು­ವು­ದಿಲ್ಲ. ಗಂಟೆ­ಗ­ಟ್ಟಲೆ ಪಾರ್ಕಿ­ನಲ್ಲಿ ಅವನೂ ಅವಳೂ ಕೂತು ಏನು ಮಾತಾ­ಡು­ತ್ತಾರೆ ಅನ್ನು­ವುದು ಹೊರ­ಗಿ­ನಿಂದ ನೋಡುತ್ತಾ ನಿಂತ ಮುಗ್ಧ­ಮಾ­ನ­ವ­ನಿಗೆ ಗೊತ್ತಾ­ಗು­ವುದೇ ಇಲ್ಲ. ಹಾಗಂತ ಹಾಗೆ ಮಾತಾ­ಡಿದ ಹುಡು­ಗ­ನನ್ನು ಕೇಳಿ­ನೋಡಿ. ಅವನು ಏನೂ ಹೇಳು­ವು­ದಿಲ್ಲ.
ಆಗ ಪ್ರೀತಿ­ಸು­ವು­ದನ್ನು ಹೇಗಾ­ದರೂ ಕಲಿ­ಯ­ಬೇಕು ಅನ್ನಿ­ಸು­ತ್ತದೆ. ಪ್ರೇಮ­ಗೀತೆ ಕೇಳು­ತ್ತೇವೆ, ಸಿನಿಮಾ ನೋಡು­ತ್ತೇವೆ, ಪ್ರೇಮ­ಕತೆ ಓದು­ತ್ತೇವೆ. ಪ್ರೀತಿ­ಸು­ವು­ದನ್ನು ಕಲಿ­ಯು­ವು­ದಕ್ಕೆ ಏನೇನು ಸಾಧ್ಯವೋ ಅದ­ನ್ನೆಲ್ಲ ಮಾಡು­ತ್ತೇವೆ.
ಪ್ರೀತಿಯ ಸಮ­ಸ್ಯೆ­ಗಳು ಅನೇಕ. ತಾನು ಪ್ರೀತಿ­ಸು­ತ್ತಿ­ಲ್ಲವೋ ಅಥವಾ ಪ್ರೀತಿ­ಸ­ಲ್ಪ­ಡು­ತ್ತಿ­ಲ್ಲವೋ ಅನ್ನು­ವುದು ಅನೇ­ಕ­ರಿಗೆ ಗೊತ್ತಾ­ಗು­ವು­ದಕ್ಕೇ ಸಾಕಷ್ಟು ಕಾಲಾ­ವ­ಕಾಶ ಬೇಕಾ­ಗು­ತ್ತದೆ. ತನಗೆ ಪ್ರೀತಿ­ಸುವ ಶಕ್ತಿಯೇ ಇಲ್ಲ­ವೇನೋ ಅಂತಲೂ ಅನೇ­ಕ­ರಿಗೆ ಆಗಾಗ್ಗೆ ಅನಿ­ಸು­ವು­ದುಂಟು. ಪ್ರೀತಿ­ಪಾ­ತ್ರ­ನಾ­ಗು­ವುದು ಹೇಗೆ ಎನ್ನು­ವುದು ಎಲ್ಲ ಗಂಡ­ಸಿನ ಸಮಸ್ಯೆ.
ಈ ಸಮ­ಸ್ಯೆಗೆ ಗಂಡಸು ಕಂಡು­ಕೊಂ­ಡಿ­ರುವ ಪರಿ­ಹಾ­ರ­ವೆಂ­ದರೆ ಯಶ­ಸ್ಸಿನ ಮೆಟ್ಟಿ­ಲೇ­ರು­ವುದು, ಅಧಿ­ಕಾ­ರ­ದಲ್ಲಿ ಎತ್ತ­ರೆ­ತ್ತ­ರಕ್ಕೆ ಏರು­ವುದು, ಶ್ರೀಮಂ­ತ­ನಾ­ಗು­ವುದು. ಹೆಣ್ಣು ಕಂಡು­ಕೊಂ­ಡಿ­ರುವ ಮಾರ್ಗ­ವೆಂ­ದರೆ ಸುಂದ­ರಿಯೂ ಆಕ­ರ್ಷ­ಕಳೂ ಆಗು­ವುದು. ಇತ್ತಿ­ತ್ತ­ಲಾಗಿ ಅಂತ­ಸ್ತು­ಗಳ ಕಲ್ಪನೆ ಬದ­ಲಾ­ಗು­ತ್ತಿ­ದ್ದಂತೆ ಸಾಮಾ­ಜಿ­ಕ­ವಾಗಿ ತುಂಬ ರಿಫೈನ್ಡ್ ಆಗಿ ವರ್ತಿ­ಸುವ ಮೂಲಕ ಆಕ­ರ್ಷಿ­ಸುವ ಪ್ರಯ­ತ್ನ­ಗಳು ಶುರು­ವಾ­ಗಿವೆ. ತುಂಬ ಸೊಗ­ಸಾಗಿ ಮಾತಾ­ಡುವ ಮೂಲಕ, ನೆರ­ವಾ­ಗುವ ಮೂಲಕ, ವಿನ­ಯ­ದಿಂದ, ಘನ­ತೆ­ಯಿಂದ ಪರ­ಸ್ಪ­ರರು ಆಕ­ರ್ಷಿ­ಸಲು ಆರಂ­ಭಿ­ಸಿ­ದ್ದಾರೆ.
ಅಂದರೆ ವ್ಯಕ್ತಿ­ತ್ವದ ಒಳ್ಳೆಯ ಗುಣ­ಗ­ಳನ್ನು ಬಿಟ್ಟು ಪ್ರೀತಿ ಬಾಳ­ಲಾ­ರದು. ಅದು ನಂಬಿ­ರು­ವುದು ಕೇವಲ ಸಂಪತ್ತು, ಘನತೆ, ಸದ್ಗುಣ ಮತ್ತು ಸಚ್ಚಾ­ರಿ­ತ್ರ­ಗ­ಳನ್ನು ಅಂದ­ಹಾ­ಗಾ­ಯಿತು. ಜೊತೆ­ಗೊಂ­ದಷ್ಟು ಸೌಂದರ್ಯ ಮತ್ತು ಸವಿ­ಮಾ­ತು­ಗಳು ಸೇರಿ­ದರೆ ಯಾರು ಯಾರನ್ನು ಬೇಕಾ­ದರೂ ಪ್ರೀತಿ­ಸ­ಬ­ಹುದಾ?
ಇಲ್ಲಿಯೇ ಪ್ರೀತಿ­ಸು­ವುದು, ಪ್ರೀತಿ­ಸ­ಲ್ಪ­ಡು­ವುದು ಅಷ್ಟು ಮುಖ್ಯವಾ ಎಂಬ ಪ್ರಶ್ನೆಯೂ ಮೂಡು­ತ್ತದೆ. ಮದು­ವೆ­ಯಾದ ನಂತ­ರವೂ ಪ್ರೀತಿ­ಸದೇ ಇರು­ವ­ವ­ರನ್ನು, ಪ್ರೀತಿ­ಸಿಯೂ ಮದು­ವೆ­ಯಾ­ಗ­ದ­ವ­ರನ್ನು ನಾವು ಕಾಣು­ತ್ತೇವೆ. ಎಷ್ಟೋ ಪ್ರಕ­ರ­ಣ­ಗ­ಳಲ್ಲಿ ಪ್ರೀತಿ ಎಂಬುದು ಏಕಾಂ­ತ­ದಿಂದ ಪಾರಾ­ಗುವ ವಿಫಲ ಯತ್ನ­ವಷ್ಟೇ ಆಗಿ­ರು­ತ್ತದೆ. ಮತ್ತೆಷ್ಟೋ ಪ್ರಯ­ತ್ನ­ಗ­ಳಲ್ಲಿ ಪ್ರೀತಿ ಏಕಾಂ­ಗಿ­ತ­ನ­ವನ್ನು ಸಫ­ಲ­ವಾಗಿ ಹುಟ್ಟು­ಹಾ­ಕು­ತ್ತದೆ.
ನಾವು ಪ್ರೀತಿ­ಸು­ವು­ದನ್ನು ಕಲಿ­ತದ್ದು ಇಂಗ್ಲಿ­ಷ­ರಿಂದ ಅಂದು­ಕೊಂ­ಡಿ­ದ್ದೇವೆ. ನಮ್ಮ ಇಂಗ್ಲಿಷ್ ವಿದ್ಯಾ­ಭ್ಯಾಸ, ನಡ­ವ­ಳಿಕೆ ಎಲ್ಲವೂ ಅಮೆ­ರಿಕಾ ಮತ್ತು ಇಂಗ್ಲೆಂ­ಡಿ­ನಿಂದ ಆಮ­ದಾ­ದದ್ದು. ಇವತ್ತು ನಾವು ಅಮೆ­ರಿ­ಕ್ ಸಂಸ್ಕೃ­ತಿ­ಯನ್ನೇ ಹೆಚ್ಚು ಉದಾ­ರ­ವಾಗಿ ಸ್ವೀಕ­ರಿ­ಸಿ­ದ್ದರೂ ಪ್ರೀತಿಯ ಮೊದಲ ಪಾಠ­ಗ­ಳನ್ನು ನಮಗೆ ಕಲಿ­ಸಿ­ದ­ವರು ಬ್ರಿಟಿ­ಷರು. ಆದರೆ ಬ್ರಿಟಿ­ಷರು ತಮ್ಮ ದೇಶ­ದಲ್ಲಿ ನಮ­ಗಿಂತ ಹೆಚ್ಚು ಸಂಪ್ರ­ದಾ­ಯ­ಸ್ಥರೂ ಕಟ್ಟು­ನಿ­ಟ್ಟಿ­ನ­ವರೂ ಆಗಿ­ದ್ದ­ವರು. ಭಾರ­ತೀಯ ಕಾವ್ಯ­ಗ­ಳಲ್ಲಿ ದುಷ್ಯಂತ, ಶಕುಂ­ತ­ಲೆ­ಯ­ರಿ­ದ್ದಾರೆ, ಅಮೃ­ತ­ಮತಿ ಮತ್ತು ಅಷ್ಟಾ­ವ­ಕ್ರ­ರಿ­ದ್ದಾರೆ, ಯಶೋ­ಧರ ಚರಿ­ತೆ­ಯಿದೆ. ಇಂಗ್ಲಿಷ್ ಪ್ರೇಮ­ಕಾವ್ಯ ಆ ಮಟ್ಟಿಗೆ ತುಂಬ ಬಡ­ತ­ನದ್ದು. ಅಲ್ಲಿ­ರುವ ಏಕೈಕ ಜನ­ಪ್ರಿಯ ಪ್ರೇಮ­ಜೋಡಿ ರೊಮಿಯೋ-ಜೂ­ಲಿ­ಯಟ್. ಅದೂ ದುರಂತ ಪ್ರೇಮ.
ಬೇರೆ ದೇಶ­ಗಳ ಪ್ರೇಮ ಚರಿ­ತ್ರೆ­ಗ­ಳನ್ನೇ ನೋಡಿ, ಗ್ರೀಕ್ ರೋಮ್ ಮುಂತಾದ ತುಂಬ ಪ್ರಾಚೀ­ನ­ವಾದ ಪುರಾಣ ಕಥಾ­ನ­ಕ­ಗ­ಳಿ­ರು­ವಲ್ಲಿ ಕೂಡ ಭಾರ­ತ­ದ­ಲ್ಲಿ­ರು­ವಷ್ಟು ಗಾಢ­ವಾದ ಪ್ರೇಮ, ವಿರ­ಹ­ಗಳ ಕತೆ­ಯಿಲ್ಲ. ಅಲ್ಲಿ­ರು­ವುದು ಕೇವಲ ಕಾಂಪ್ಲೆ­ಕ್ಸು­ಗಳು. ಪ್ರೇಮವೂ ಒಂದು ಕಾಂಪ್ಲೆಕ್ಸು. ಅದು ಕಾಮ­ವಾಗಿ ಬದ­ಲಾ­ಗು­ತ್ತದೆ. ಆದರೆ ನಮ್ಮ ಪುರಾ­ಣ­ಗ­ಳಲ್ಲಿ ಕಾಮಕ್ಕೂ ಪ್ರೇಮಕ್ಕು ಅಂಥ ದೊಡ್ಡ ವ್ಯತ್ಯಾ­ಸ­ವೇ­ನಿಲ್ಲ. ಎರಡೂ ಕೂಡ ಆರೋ­ಗ್ಯ­ಕ­ರ­ವಾದ ಪ್ರಕ್ರಿಯೆ.
ಇವತ್ತು ಕೂಡ ಪ್ರೇಮ­ಚಿ­ತ್ರ­ಗಳು ಜನ­ಪ್ರಿ­ಯ­ವಾ­ಗಿ­ದ್ದರೆ ಒಪ್ಪ­ಬ­ಹು­ದಾ­ಗಿತ್ತು. ಆದರೆ ಆಗೊಂದು ಈಗೊಂದು ಬಂದು ಹೋಗುವ ಸುಂದರ ಪ್ರೇಮ­ಕ­ತೆ­ಗ­ಳನ್ನು ಬಿಟ್ಟರೆ ಈಗಿನ ಆಸ­ಕ್ತಿ­ಗಳೇ ಬೇರೆ. ಗಂಡಸು ಮತ್ತು ಹೆಂಗಸು ಕೊಳ್ಳು­ಬಾ­ಕ­ತ­ನ­ದತ್ತ ಮಾರು­ಹೋ­ಗಿ­ದ್ದಾರೆ. ಹೀಗೆ ತಮ್ಮ ಏಕಾಂತ ಮತ್ತು ವ್ಯಸ­ನ­ಗ­ಳನ್ನು ಬೇರೆ ಬೇರೆ ಆಸ­ಕ್ತಿ­ಗಳ ಮೂಲಕ ತೀರಿ­ಸಿ­ಕೊ­ಳ್ಳು­ತ್ತಿ­ದ್ದಾರೆ. ಕಂತಿ­ನಲ್ಲಿ ಏನೇನೋ ಸಾಮಾನು ಕೊಂಡು ಮನೆ­ತುಂ­ಬಿ­ಸಿ­ಕೊ­ಳ್ಳುವ ಗಂಡು­ಹೆ­ಣ್ಣು­ಗಳೂ ತಮ­ಗೆ­ದು­ರಾ­ಗುವ ವ್ಯಕ್ತಿ­ಗ­ಳನ್ನೂ ಹಾಗೇ ನೋಡಲು ಆರಂ­ಭಿ­ಸಿ­ದ್ದಾರೆ. ಆಕ­ರ್ಷಕ ಎನ್ನು­ವುದು ನಾಲ್ಕಂಕಿ ಸಂಬಳ, ಸ್ವಂತ­ದ್ದೊಂದು ಮನೆ, ಓಡಾ­ಡಲು ಕಾರು, ಕ್ರೆಡಿಟ್ ಕಾರ್ಡು, ಕ್ಲಬ್ಬು ಮೆಂಬ­ರ್­ಶಿ­ಪ್ಪು­ಗ­ಳಾಗಿ ಅರ್ಥ ಪಡೆ­ದು­ಕೊಂ­ಡಿದೆ. ಓಣಿಯ ತಿರು­ವಿನ ಬೋರ್ ವೆಲ್ ಪಕ್ಕ ನಿಂತು ಪಿಸು­ಗು­ಟ್ಟುವ ಗಂಡು­ಹೆ­ಣ್ಣು­ಗಳ ಪ್ರೀತಿ ಹಳೆ­ಯ­ದಾ­ಗಿದೆ.
ಚೌಕಾ­ಸಿ­ಯಾ­ಗಿದ್ದ ಪ್ರೀತಿ ಇವತ್ತು ಲೆಕ್ಕಾ­ಚಾ­ರ­ಗ­ಳನ್ನು ದಾಟಿ ನಿಂತಿದೆ. ನನಗೆ ಪ್ರೀತಿ­ಸೋ­ದಕ್ಕೆ ಪುರು­ಸೊ­ತ್ತಿಲ್ಲ. ನಿನ­ಗೇನು ಬೇಕು ಕೇಳು ತಂದು­ಹಾ­ಕು­ತ್ತೀನಿ ಎಂಬ­ಲ್ಲಿಗೆ ಬಂದು ನಿಂತಿದೆ. ಪ್ರೀತಿ­ಸ­ದಿ­ದ್ದರೆ ಹಾಳಾ­ಗಿ­ಹೋಗು, ನನಗೆ ಇಂಥದ್ದು ಬೇಕು ಎಂದು ಕೇಳು­ವ­ಲ್ಲಿಗೆ ತಲು­ಪಿದೆ.
ಹೀಗಾಗಿ ಪ್ರೇಮಿ­ಗ­ಳೀಗ ಸಿನಿಮಾ ನೋಡು­ವು­ದಿಲ್ಲ, ಪಿಸು­ಗು­ಟ್ಟು­ವು­ದಿಲ್ಲ, ಕಟ್ಟೆಯ ಬಳಿಯೋ ಬೆಟ್ಟದ ಬಳಿಯೋ ನಿಂತು ಮಾತಾ­ಡು­ವು­ದಿಲ್ಲ. ಆ ಬೆಟ್ಟ­ದಲ್ಲಿ ಬೆಳ­ದಿಂ­ಗ­ಳಲ್ಲಿ ಸುಳಿ­ದಾ­ಡ­ಬೇಡ ಗೆಳತಿ ಎಂದು ಈತ ಹಾಡು­ವು­ದಿಲ್ಲ.
ಬದ­ಲಾಗಿ ಎಸ್ಸೆ­ಮ್ಮೆ­ಸ್ಸು­ಗಳೂ ಈ ಮೇಲು­ಗಳೂ ಚಾಟ್ ­ಗಳೂ ಎಕ್ಸ್­ಚೇಂ­ಜಾ­ಗು­ತ್ತಿ­ರು­ತ್ತವೆ. ತನು­ಮ­ನ­ಧ­ನ­ಗ­ಳನ್ನು ಒತ್ತೆ­ಯಿಟ್ಟು ದಕ್ಕಿ­ಸಿ­ಕೊ­ಳ್ಳ­ಬೇ­ಕಾ­ಗಿದ್ದ ಪ್ರೀತಿಗೆ ಈಗ ಧನ­ವೊಂ­ದಿ­ದ್ದರೆ ಸಾಕು.
ಧನ­ವಿ­ದ್ದರೆ ಬಾ, ಈ ತನುವೂ ನಿನ್ನದು ಮನವೂ ನಿನ್ನದು ಎನ್ನು­ವ­ವರು ಸಾಲು­ಗಟ್ಟಿ ನಿಲ್ಲು­ತ್ತಾರೆ.
ಈಗ ಹೇಳಿ.
ಪ್ರೀತಿ ಕಲೆಯಾ, ವಿಜ್ಞಾ­ನವಾ ಅಥವಾ....
ಕೇವಲ ಅಜ್ಞಾ­ನವಾ?

11 comments:

pradyumna said...

"ಪ್ರೀತಿ" ಮಾಡಿದವರಿಗೇ ಗೊತ್ತಾಗೋದು ಇದೆಲ್ಲ.....ಅಲ್ಲವೇ ’ಜೋಗಯ್ಯ’.

VENU VINOD said...

oHo, hagAdre cinema anNodu LOVE UNIVERSITY

ಸುಪ್ರೀತ್.ಕೆ.ಎಸ್. said...

ಸಿನೆಮಾ ನೋಡೋದು ಪ್ರೀತಿ ಮಾಡೋದನ್ನು ಕಲಿಯೋದಿಕ್ಕಾಗಿ ಅನ್ನೋದಾದರೆ ನಿಜವಾದ ಪ್ರೀತಿಯಿಂದ ವಂಚಿತರಾಗುತ್ತಿರುವ ಇಂದಿನ ಮಂದಿ ಹೆಚ್ಚೆಚ್ಚು ಪ್ರೀತಿಯ ಸಿನೆಮಾಗಳಿಗೆ ಎಡತಾಕಬೇಕು ಅಲ್ಲವೇ? ಹೆಚ್ಚೆಚ್ಚು ಭಾವಗೀತೆಗಳಿಗೆ ಕಿವಿಯಾಗಬೇಕು ಅಲ್ಲವೇ?

ಶೆಟ್ಟರು (Shettaru) said...

ಪ್ರೀತಿ, ಪ್ರೇಮ, ಮನಸು, ಹೃದಯ ಇವು ಮನುಷ್ಯನನ್ನು ಎಂದಿಗೂ ಬಿಟ್ಟು ಹೋಗಲಾರವು, ಇವುಗಳಿಲ್ಲದೇ ಮನುಷ್ಯ ಸಾಯಲಾರ ನಿಜ, ಆದರೆ ಈ ಬದುಕನ್ನು ಕೂಡ ಬದುಕಂತೆ ಬಾಳಲಾರ.

HNS said...

ಪ್ರೀತಿ ಕಲೆಯಾ, ವಿಜ್ಞಾ­ನವಾ ಅಥವಾ....
ಕೇವಲ ಅಜ್ಞಾ­ನವಾ?.....

ಬಹುಶಃ ವಿಜ್ಞಾನವೇ ಇರಬೇಕು. ಕಾರಣ, ಅದೊಂದು Chemistry ಅಂದ ತತ್ವಜ್ಞಾನಿಗಳೊಬ್ಬರ ಉಲ್ಲೇಖ ನೆನಪಿಗೆ ಬರುತ್ತಿದೆ, ಅವರ ಹೆಸರು ನೆನಪಾಗುತ್ತಿಲ್ಲ. Chemistry ಸರಿಯಾಗಿದ್ದರೆ ಪ್ರೀತಿಯೂ ನೆಟ್ಟಗಾಗಿರುತ್ತೆ ಎನ್ನುವುದು ವಿಜ್ಞಾನದ ಮಾತೊ? ಅಥವಾ ಅಜ್ಞಾನದ ಮಾತೊ? ಜೋಗಿ ನಿರ್ಣಯಿಸಬೇಕು!
- ಹಾಲ್ದೊಡ್ಡೇರಿ

ಪ್ರವೀಣ್ ಮಾವಿನಸರ said...

ಪ್ರೀತಿ ಕಲೆಯೂ ಅಲ್ಲ, ವಿಜ್ಞಾ­ನವೂ ಅಲ್ಲ. ಅದೊಂದು ಸಹಜ ಪ್ರಕ್ರಿಯೆ ಅಷ್ಟೆ. ಪ್ರತಿ ಹುಲು ಮಾನವ ಒಂದಲ್ಲ ಒಂದು ರೀತಿ ಪ್ರೀತಿಗೆ ಒಳಗಾಗಿರುತ್ತಾನೆ.ಸಿನಿಮಾ, ಪುಸ್ತಕ ಮತ್ತಿತರ ಮಾಧ್ಯಮಗಳು ಪ್ರೀತಿ ತೀವ್ರತೆ ಹೆಚ್ಚಿಸುತ್ತವೆ.

Anonymous said...

ಅಂಥ ಯಾವ ದೊಡ್ಡ ದೊಡ್ಡ ಅರ್ಥಗಳನ್ನೂ ಪ್ರೀತಿಗೆ ಹೇಳಬೇಡಿ. ಪ್ರೀತಿ ಅಂದರೆ ಸಿಂಪಲ್, ಅದೊಂದು ಹುಚ್ಚು! ಒಂದಷ್ಟು ದಿನ ಒಂದೊಂದು ಹುಚ್ಚು. ಸಾಯೋವರೆಗೂ ಒಂದಲ್ಲಾ ಒಂದು ಹುಚ್ಚು ಇದ್ದೇ ಇರುತ್ತೆ. ಹಾಗಾಗಿಯೇ ನಾವು ಸಾಯೋವರೆಗೂ ಪ್ರೀತಿ ಇರುತ್ತೆ.
- ಸೀತಾಳಭಾವಿ

suresh said...

ಅದೆಲ್ಲಾ ಸರಿ, ಈ ಸಿನಿಮಾದವರಿಗೆ ಪ್ರೀತಿ ಮಾಡೋದ್ ಹೀಗೇ ಅಂತ ಹೇಳಿಕೊಟ್ಟೋರ್ಯಾರೋ?! ಅವರು ಯಾವ ಯುನಿವರ್ಸಿಟಿಯಿಂದ ಪ್ರೀತಿಯ ಟಿಪ್ಸ್ ಪಡೆದಿದ್ದಾರೋ?!
-ಸುರೇಶ್ ಕೆ.

Anonymous said...

....yaakandre preethi elladeidre naave saaythivi....

suptadeepti said...

ಪ್ರೀತಿ-- ಕಲೆಯಲ್ಲ, ವಿಜ್ಞಾನವಲ್ಲ, ಅಜ್ಞಾನ ಮೊದಲೇ ಅಲ್ಲ; ಎಲ್ಲ ಭೌತಿಕ ಪ್ರಕ್ರಿಯೆಗಳನ್ನು ಮೀರಿದ ಮಾನಸಿಕ ನೆಲೆ. ಅದನ್ನು ಅರ್ಥ ಮಾಡಿಕೊಳ್ಳದೆ ಕ್ಷಣಿಕ ಧನ-ದೌಲತ್ತುಗಳ ಅಳತೆಯಲ್ಲಿ ಸಿಲುಕುವ ಉದಾಹರಣೆಗಳು ಈಗ ನಮ್ಮ ಮುಂದೆ ಬೇಕಾದಷ್ಟಿವೆ. ಪ್ರೀತಿ ಇದನ್ನೆಲ್ಲ ಮೀರಿ ನಿಲ್ಲಬೇಕು. ಮನಸ್ಸು ಬೆಳೆಯಬೇಕು, ಮಾಗಬೇಕು.

ಇನ್ನು ಸಿನೆಮಾಗಳು ಪ್ರೀತಿಯ ಪಾಠ ಹೇಳುವ ಬಗ್ಗೆ ನನ್ನ ಸಹಮತವಿಲ್ಲ. ಶಕುಂತಲೆ ಯಾವ ಸಿನೆಮಾ ನೋಡಿದ್ದಳು? ರೋಮಿಯೋ ಯಾವ ಆದರ್ಶ ಹೀರೋನನ್ನು ಅನುಕರಿಸಿದ್ದ? ರಾಧಾ ಮಾಧವರಿಗೆ ಯಾರು ಗುರು? ನಳ-ದಮಯಂತಿಯ ಪ್ರೀತಿಗೆ ಯಾರ ಸ್ಪೂರ್ತಿ? ಪ್ರಶ್ನೆಗಳು ಬೇಕಾದಷ್ಟಿವೆ, ಉತ್ತರ ಕೊಡುವ ಸಿನೆಮಾ ಇಲ್ಲ. ಬೇಕಾಗಿಲ್ಲ.

ಚೇತನ್ said...

ನಾವು ಪ್ರೀತಿ ಸಬ್ಜೆಕ್ಟಿನ ಸಿನಿಮಾ ನೋಡೋಕೆ, ಇಷ್ಟಪಡೋಕೆ ಒಂದೇ ಕಾರಣ :- ಮನಸ್ಸಿಗೆ ಪ್ರಾಕೃತಿಕವಾಗಿ ಪ್ರೀತಿ ಅಂದ್ರೆ ಇಷ್ಟ. ಅಷ್ಟೇ. ಪ್ರೀತಿಸುವುದನ್ನು ಕಲಿಯುವುದಕ್ಕಾಗಿ ಅಲ್ಲ - ಯೂರೋಪಿನಲ್ಲಿ ಹಾಗಿರಬಹುದು; ಇಲ್ಲಂತೂ ಅಲ್ಲವೇ ಅಲ್ಲ.

ಪ್ರೀತಿಯ ಸುತ್ತಲಿನ ಮಧುರ ಗೀತೆಗಳು, ಸುಂದರ ದೃಶ್ಯಗಳು, ಹ್ಯಾಂಡ್‌ಸಮ್ ಅನ್ಡ್ ಬ್ಯೂಟಿಫುಲ್ ಹೀರೋ, ಹೀರೋಯಿನ್ ನೋಡಲು.

ಹೀರೋ ಹೀರೋಯಿನ್ ಕುರೂಪಿಗಳಾಗಿದ್ರೆ ಟೈಟಾನಿಕ್ ಸಿನಿಮಾಗೆ ಮತ್ತೆ ಮತ್ತೆ ಹೋಗ್ತಾ ಇದ್ವಾ?