Friday, September 14, 2007

ಆ ಸೇತುವೆ ಇನ್ನೂ ಕಣ್ಣ ಮುಂದೆಯೇ ಇದೆ

ಹೀಗೊಂದಷ್ಟು ಪ್ರಶ್ನೆಗಳೂ ಗೊಂದಲವೂ ರಾಮಾಯಣವೂ..

ಚಿಕ್ಕಂದಿನಲ್ಲಿ ಅಜ್ಜಿ ಅವರದೇ ಭಾಷೆಯಲ್ಲಿ ರಾಮನ ಕತೆ ಹೇಳುತ್ತಿದ್ದರು. ರಾಮ ಶಿವಧನಸ್ಸು ಮುರಿದು ಸೀತೆಯ ಕೈ ಹಿಡಿದದ್ದು, ಮಂಥರೆ ಚಾಡಿ ಹೇಳಿದ್ದು, ಕೈಕೆಯಿ ಕೆರಳಿದ್ದು, ರಾಮ ವನವಾಸಕ್ಕೆ ಹೋದದ್ದು, ಶೂರ್ಪನಖಿಯ ಮೂಗು ಕತ್ತರಿಸಿದ್ದು, ಮಾರೀಚ ಮಾಯಾ ಜಿಂಕೆಯಾಗಿ ಬಂದದ್ದು, ರಾವಣ ಸೀತೆಯನ್ನು ಕದ್ದದ್ದು, ಜಟಾಯು ರಾವಣನನ್ನು ಎದುರಿಸಿದ್ದು, ಹನುಮಂತ ಲಂಕೆಗೆ ಹಾರಿದ್ದು, ಸೀತೆಯನ್ನು ಕಂಡದ್ದು, ವಾನರ ಸೇನೆ ಕಡಲನ್ನು ದಾಟಲು ಸೇತುವೆ ಕಟ್ಟಿದ್ದು, ಆಗ ಪುಟ್ಟ ಅಳಿಲು ಸೇವೆ ಮಾಡಿದ್ದು...

ನಮ್ಮಜ್ಜಿ ಸುಳ್ಳು ಹೇಳುತ್ತಿರಲಿಲ್ಲ. ಹೀಗಾಗಿ ಅವರು ಹೇಳಿದ ರಾಮಾಯಣ ಸುಳ್ಳಿನ ಕಂತೆ ಎಂದು ಆಗಲೂ ಅನ್ನಿಸಿರಲಿಲ್ಲ, ಈಗಲೂ ಅನ್ನಿಸಿರಲಿಲ್ಲ. ನಮ್ಮ ಕಲ್ಪನೆಗಳನ್ನು ವಿಸ್ತರಿಸಿ ಒಂದು ಮಾಯಾಲೋಕವನ್ನು ಸೃಷ್ಟಿಸಿದ್ದು ಅಜ್ಜಿ ಹೇಳಿದ ಈ ಕತೆ.
ಇವತ್ತು ಪುರಾತತ್ವ ಇಲಾಖೆ ಮತ್ತು ಸರ್ಕಾರ ರಾಮಾಯಣ ಬರೀ ಕಲ್ಪನೆ ಎಂದು ಪ್ರಮಾಣ ಪತ್ರ ಸಲ್ಲಿಸಿದಾಗ, ನಮ್ಮಜ್ಜಿ ನಿಜಕ್ಕೂ ತೀರಿಕೊಂಡರು.
******
ರಾಮಸೇತುವನ್ನು ಕತ್ತರಿಸಿ ದಾರಿ ಮಾಡಿಕೊಟ್ಟರೆ ಎರಡು ಊರುಗಳ ನಡುವಣ ಅಂತರ ಕಡಿಮೆಯಾಗುತ್ತದಂತೆ. ಆದರೆ ನಮ್ಮ ಮನಸ್ಸಿವಲ್ಲಿ ಬಾಲ್ಯದಿಂದ ಮನೆ ಮಾಡಿಕೊಂಡಿರುವ ರಾಮಸೇತುವನ್ನು ಹೇಗೆ ಕತ್ತರಿಸಿ ಎಸೆಯುತ್ತೀರಿ. ಯಾರ ಅನುಕೂಲಕ್ಕೋಸ್ತರ ಈ ಸಮೀಪದ ಹಾದಿ ಕೊರೆಯುತ್ತೀರಿ?
ಈ ಜಗತ್ತಿನಲ್ಲಿ ನಮ್ಮ ವಾಸಕ್ಕಿಷ್ಟು ಜಾಗ, ಪ್ರಾಣಿಗಳಿಗೊಂದಿಷ್ಟು ಜಾಗ, ಆಳುವವರಿಗೊಂದಿಷ್ಟು ಜಾಗ -ಹೀಗೆ ಎಲ್ಲರಿಗೂ ಅವರದ್ದೇ ಆದ ಸ್ಪೇಸ್ ಬಿಟ್ಟುಕೊಟ್ಟಿದ್ದೇವೆ.
ನಮ್ಮ ಕಲ್ಪನೆಗಳಿಗೂ ಒಂದಷ್ಟು ಸ್ಪೇಸ್ ಇರಲಿ. ಅದನ್ನೂ ನಾಶ ಮಾಡಿ ಏನು ಸಾಧನೆ ಮಾಡಬೇಕಾಗಿದೆ?
******
ಶ್ರೀರಾಮಚಂದ್ರನ ಕತೆ ಬರೀ ಕಲ್ಪನೆ. ರಾಮಾಯಣ ನಡೆದಿತ್ತು ಅನ್ನುವುದಕ್ಕೆ ಆಧಾರ ಇಲ್ಲ. ಆಯೋಧ್ಯೆ ಇತ್ತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಅವೆಲ್ಲವೂ ಕಾಲ್ಪನಿಕ ಕಟ್ಟುಕತೆ!
ಹಾಗಂತ ಹೇಳುವ ಮೂಲಕ ಸರ್ಕಾರ ಒಂದು ರಾಷ್ಟ್ರದ ನಂಬಿಕೆಯನ್ನೇ ಅಲ್ಲಗಳೆಯುವ ಕೆಲಸ ಮಾಡಿದೆ. ಈ ಹೇಳಿಕೆಯೇನೂ ಹೊಸದಲ್ಲ. ದಶಕಗಳ ಹಿಂದೆ ಅಕಾಡೆಮಿಕ್ ವಲಯದಲ್ಲಿ ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಸಿಂಧುತ್ವದ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಬಹುಶಃ ಅಂಥ ವಾಗ್ವಾದ ಸಾಧ್ಯವಿದ್ದದ್ದು ಭಾರತೀಯ ಸಂದರ್ಭದಲ್ಲಿ ಮಾತ್ರ. ಜಗತ್ತಿನ ಇತರೇ ಧರ್ಮಗಳ ಕುರಿತು, ದೇವರುಗಳ ಅಸ್ತಿತ್ವದ ಕುರಿತು ಯಾವ ಚರ್ಚೆಯೂ ನಡೆದಿಲ್ಲ.
ಅದಕ್ಕೆ ಕಾರಣವೂ ಇದೆ. ಮಹಾಕಾವ್ಯಗಳನ್ನು ಅವುಗಳಲ್ಲಿ ಬರುವ ಪಾತ್ರಗಳ ಅಸ್ತಿತ್ವವನ್ನು ಪ್ರಶ್ನಿಸುವುದೇ ಹುಂಬತನ. ಒಂದು ರಾಷ್ಟ್ರದ ಜನತೆ ಆಯಾ ದೇಶದ ಪುರಾಣಗಳನ್ನೂ, ಮಹಾಕಾವ್ಯಗಳನ್ನೂ ಭಾವನಾತ್ಮಕವಾಗಿ ಒಪ್ಪಿಕೊಂಡಿರುತ್ತಾರೆ. ಎಲ್ಲಾ ಮಹಾಕಾವ್ಯಗಳೂ ಅಂತಿಮವಾಗಿ ಜೀವನಮಟ್ಟವನ್ನು ಉತ್ತಮಗೊಳಿಸುವ, ಬದುಕುವ ಬಗೆಯನ್ನು ಕಲಿಸುವ, ನಮ್ಮ ನಡೆನುಡಿಗಳನ್ನು ನಾಗರಿಕಗೊಳಿಸುವ ಕೆಲಸವನ್ನೇ ಮಾಡುತ್ತಾ ಬಂದಿವೆ. ಒಳಿತನ್ನು ಹೇಳುವ ಕಾವ್ಯದ, ಪುರಾಣದ ಸತ್ಯಾಸತ್ಯತೆಯನ್ನು ಪ್ರಶ್ನಿಸುವುದೇ ಜೀವವಿರೋಧಿ ನಿಲುವು.
ಹಾಗೆ ನೋಡಿದರೆ, ಭಾರತದಲ್ಲಿ ಕಾನೂನು ಮತ್ತು ನ್ಯಾಯಶಾಸ್ತ್ರ ನಿಂತಿರುವುದೇ ಮಹಾಕಾವ್ಯಗಳ ತಳಹದಿಯ ಮೇಲೆ. ಅದರಲ್ಲೂ ರಾಮಾಯಣದ ಆದರ್ಶಗಳು ಭಾರತೀಯ ಜೀವನಕ್ರಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ. ನ್ಯಾಯಶಾಸ್ತ್ರದ ಮೂಲಮಂತ್ರವಾದ ಸತ್ಯಮೇವ ಜಯತೇ ಅನ್ನುವುದನ್ನೂ, ಧರ್ಮೋ ರಕ್ಷತಿ ರಕ್ಷಿತಃ ಅನ್ನುವುದನ್ನೂ ಪ್ರತಿಪಾದಿಸುವ ಕಥಾನಕ ಅದು. ಭಾರತೀಯ ನ್ಯಾಯಸಂಹಿತೆ ಕೂಡ ಬ್ರಿಟಿಷರ ಪ್ರವೇಶ ಆಗುವ ತನಕ ಭಾರತೀಯ ಧರ್ಮಸಂಹಿತೆಯ ಒಂದು ಭಾಗವೇ ಆಗಿತ್ತು.
ಇದೀಗ ಪುರಾಣಗಳನ್ನೇ ಅಲ್ಲಗಳೆಯುವ ಮೂಲಕ, ತರ್ಕ ಮತ್ತು ಸಾಕ್ಷ್ಯಗಳ ಅಗತ್ಯವನ್ನು ಪುರಾಣಕ್ಕೂ ವಿಸ್ತರಿಸುವ ಮೂಲಕ ಭಾರತೀಯರ ನಂಬಿಕೆಯನ್ನೇ ಅಲ್ಲಾಡಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಒಂದು ಕಡೆ, ಪುರಾಣಗಳಾಗಲೀ, ಇತಿಹಾಸವಾಗಲೀ ಇಲ್ಲದ ರಾಷ್ಟ್ರಗಳು ತಮಗೊಂದು ಐತಿಹ್ಯ ಇರಬೇಕಿತ್ತು ಎಂದು ತುಡಿಯುತ್ತಿರುವ ಹೊತ್ತಲ್ಲಿ, ಇರುವ ಐತಿಹ್ಯವನ್ನು, ಪರಂಪರೆಯ ಶ್ರೀಮಂತಿಕೆಯನ್ನು ನಿರಾಕರಿಸುವ ಮೂಲಕ ಭಾರತದ ಸಮೃದ್ಧ ಪರಂಪರೆಯನ್ನು ಸರ್ಕಾರ ಧಿಕ್ಕರಿಸುವುದಕ್ಕೆ ಹೊರಟಿದೆ.
ರಾಮಾಯಣ ಭಾರತೀಯ ಮನಸ್ಸುಗಳ ಪಾಲಿಗೆ ಯಾವತ್ತೂ ಯಾರೋ ಕಲ್ಪಿಸಿಕೊಂಡು ಬರೆದ ಕಟ್ಟುಕತೆ ಆಗಿರಲೇ ಇಲ್ಲ. ಅದು ಕೇವಲ ತಾಳೆಗರಿಗಳಲ್ಲಿ ಅವಿತುಕುಳಿತ ಕಾವ್ಯವಷ್ಟೇ ಅಲ್ಲ ಅನ್ನುವುದಕ್ಕೆ ದೇಶಾದ್ಯಂತ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ರಾಮಾಯಣದ ಪಾತ್ರಗಳು ಸಂಚರಿಸಿದ ಪ್ರದೇಶಗಳು ದಕ್ಷಿಣ ಮತ್ತು ಉತ್ತರ ಭಾರತಗಳಲ್ಲಿ ಕಾಣಸಿಗುತ್ತವೆ. ಸೀತಾಮಾತೆ ನೀರು ಕುಡಿದ ಎಂದೂ ಬತ್ತದ ಚಿಲುಮೆಗಳು, ಶ್ರೀರಾಮಚಂದ್ರ ಕುಳಿತ ಕಲ್ಲು, ಲಕ್ಷಣತೀರ್ಥ, ರಾಮತೀರ್ಥ, ಹನುಮಗಿರಿ- ಮುಂತಾದ ಜಾಗಗಳ ಐತಿಹ್ಯವನ್ನೂ ಸರ್ಕಾರದ ಹೇಳಿಕೆ ಅಲ್ಲಗಳೆದಿದೆ. ರಾಮಾಯಣ ಕಟ್ಟುಕತೆ ಅನ್ನುವ ಮೂಲಕ ದೇಶಾದ್ಯಂತ ಹಬ್ಬಿರುವ ಇಂಥ ಅಸಂಖ್ಯಾತ ಪ್ರಾದೇಶಿಕ ಅಚ್ಚರಿಗಳ ಹಿಂದಿರುವ ಬೆರಗನ್ನೂ ಅದು ಅಳಿಸಿಹಾಕಲು ಹೊರಟಿದೆ.
ರಾಮರಾಜ್ಯದ ಕಲ್ಪನೆಯನ್ನೇ ನೋಡಿ. ಇದೇ ರಾಜಕಾರಣಿಗಳು ‘ನಮ್ಮದು ರಾಮರಾಜ್ಯ’ ಎನ್ನುತ್ತಾರೆ. ಆ ಹೊತ್ತಿಗೆ ಅವರಿಗೆ ರಾಮಾಯಣ ಕಟ್ಟುಕತೆ ಅನ್ನುವುದು ಮನಸ್ಸಿನಲ್ಲಿರುವುದಿಲ್ಲ. ಅವರ ಅನುಕೂಲಕ್ಕೆ ರಾಮಾಯಣ ಬೇಕು. ಧರ್ಮನಿಷ್ಠೆ, ಪುರುಷೋತ್ತಮತ್ವ, ಸದಾಚಾರ ಸಂಪನ್ನತೆ, ಸತ್ಯಸಂಧತೆಯನ್ನು ಉದಾಹರಿಸಲು ರಾಮಾಯಣ ಬೇಕು.
ಪುರಾತತ್ವ ಇಲಾಖೆಯದು ಮತ್ತೊಂದು ರೀತಿಯ ಎಡಬಿಡಂಗಿ ನಿಲುವು. ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಜಾಗಗಳನ್ನು ಪುರಾತತ್ವ ಇಲಾಖೆ ಗುರುತಿಸಿ ಅದನ್ನು ಕಾಪಾಡುವ ಹೊಣೆ ಹೊತ್ತುಕೊಂಡಿದೆ. ನಮ್ಮ ಬಹುತೇಕ ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡು ನಿಯಂತ್ರಿಸುತ್ತದೆ. ಅವುಗಳಿಂದ ಬರುವ ಆದಾಯದ ಮೇಲೆ ಸರ್ಕಾರಕ್ಕೆ ಹಕ್ಕಿದೆ ಅಂದಾದರೆ ಅವುಗಳನ್ನು ನಂಬಿ ಬರುವ ಭಕ್ತರ ನಂಬಿಕೆಗಳಿಗೆ ಸರ್ಕಾರದಲ್ಲಿ ಬೆಲೆಯೇ ಇಲ್ಲವೇ?
ಅಷ್ಟಕ್ಕೂ ರಾಮಾಯಣ ನಡೆದೇ ಇಲ್ಲ ಎಂದು ಸರ್ಟಿಫಿಕೇಟು ಕೊಟ್ಟ ಪುರಾತತ್ವ ಇಲಾಖೆಯ ಪಂಡಿತೋತ್ತಮರು ಆ ಕುರಿತು ಏನು ಅಧ್ಯಯನ ಮಾಡಿದ್ದಾರೆ. ಲಕ್ಷಾಂತರ ವರುಷಗಳ ಹಿಂದಿನ ‘ಕಥೆ’ಯನ್ನು ಪುರಸ್ಕರಿಸುವುದಕ್ಕಾಗಲೀ ನಿರಾಕರಿಸುವುದಕ್ಕಾಗಲೀ ಅವರ ಬಳಿ ಸಾಕ್ಷಿ ಏನಿದೆ? ಪುರಾತತ್ವ ಇಲಾಖೆಗೆ ನಮ್ಮ ಪುರಾಣದ ಕಲ್ಪನೆಗಳನ್ನು ನಿರಾಕರಿಸುವ ಹಕ್ಕು ಕೊಟ್ಟವರು ಯಾರು? ಅದರಲ್ಲೂ, ನಾಲ್ಕೈದು ತಿಂಗಳ ಅವಧಿಯಲ್ಲಿ ಸದರಿ ಇಲಾಖೆ ರಾಮಾಯಣ ಕಾಲ್ಪನಿಕ ಎನ್ನುವ ನಿರ್ಧಾರಕ್ಕೆ ಬಂದದ್ದಾದರೂ ಹೇಗೆ? ಭಾರತೀಯ ವೈದ್ಯಶಾಸ್ತ್ರ ಕೂಡ ಪುರಾತನ ಋಷಿಮುನಿಗಳ ಗ್ರಂಥದಿಂದ ಪಡಿಮೂಡಿದ್ದಲ್ಲವೇ? ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ವೈಮಾನಿಕ ಶಾಸ್ತ್ರ, ಸಂಖ್ಯಾಶಾಸ್ತ್ರ- ಎಲ್ಲವೂ ಭಾರತೀಯ ಪರಂಪರೆಯಿಂದ ಸಾಕಷ್ಟು ಅಂಶಗಳನ್ನು ಪಡೆದುಕೊಂಡೇ ಅಭಿವೃದ್ಧಿ ಹೊಂದಿದ್ದಲ್ಲವೇ?
ಸರ್ಕಾರದ ಒಂದು ಪ್ರಮಾಣ ಪತ್ರ, ನಮ್ಮ ದೇಶದ ಎಲ್ಲ ಕವಿಗಳನ್ನೂ, ಸಂತರನ್ನೂ, ಮಹಾಕಾವ್ಯಗಳನ್ನೂ, ಇವುಗಳ ಆಧಾರದ ಮೇಲೆ ಜನತೆಯ ನಂಬಿಕೆಗೆ ಪಾತ್ರವಾಗಿರುವ ಎಲ್ಲಾ ಧರ್ಮಕ್ಷೇತ್ರಗಳನ್ನೂ ಒಂದೇ ಏಟಿಗೆ ನಿರಾಕರಿಸುವಂಥ ಕೆಲಸ ಮಾಡಿದೆ. ಶ್ರೀರಾಮಚಂದ್ರ ಪ್ರತಿಷ್ಠಾಪಿಸಿದ ಎಂಬ ನಂಬಿಕೆಯಿರುವ ರಾಮೇಶ್ವರ, ರಾವಣ ಶಿವನಿಂದ ಪಡೆದ ಆತ್ಮಲಿಂಗ ನೆಲೆಗೊಂಡ ಕ್ಷೇತ್ರ ಎಂದು ಭಕ್ತರು ನಂಬಿರುವ ಗೋಕರ್ಣ- ಮುಂತಾದ ಹತ್ತು ಹಲವು ಧಾರ್ಮಿಕ ಕೇಂದ್ರಗಳ ಬಗ್ಗೆ ಇರುವ ನಂಬಿಕೆಗಳನ್ನೂ ಈ ಪ್ರಮಾಣಪತ್ರ ತಳ್ಳಿಹಾಕಿದಂತಾಗುವುದಿಲ್ಲವೇ?
ಜಗತ್ತಿನ ರಾಷ್ಟ್ರಗಳ ಪೈಕಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿರುವ ದೇಶ ನಮ್ಮದು. ಇಂಥ ಪರಂಪರೆಯೊಂದರ ಗುರುತಿಸಿಕೊಳ್ಳುವುದಕ್ಕೆ ಅನೇಕ ರಾಷ್ಟ್ರಗಳು ತವಕಿಸುತ್ತಿರುವ ಹೊತ್ತಲ್ಲಿ, ಪಡೆದುಕೊಂಡಿರುವುದನ್ನು ಒಂದು ಚಿಲ್ಲರೆ ಕಾರಣಕ್ಕಾಗಿ ಕಳೆದುಕೊಳ್ಳುವ ಅವಿವೇಕಕ್ಕೆ ನಮ್ಮ ಸರ್ಕಾರ ಕೈ ಹಾಕಿರುವುದು ಮತ್ತಷ್ಟು ಸಮಸ್ಯೆಗಳಿಗೆ ಬೀಜವಾಗಬಹುದು. ಉದಾಹರಣೆಗೆ ರಾಮನೇ ಕಲ್ಪನೆ ಎಂದಾದರೆ ರಾಮಜನ್ಮಭೂಮಿ ವಿವಾದದ ಕತೆ ಏನು?

6 comments:

Thyampanna Shetty said...

Nice post. This shows how the majority Hindus are ridiculed on daily basis by the elite intellectuals and socialists in the pretext of secular society. If it shows anything, it is the moral bankruptcy of these folks targeting Hindu sentiments.

Though I am tired of asking this question – let me ask again. Where are these folks when it comes to gods worshipped by other religions? Do they have intellectual honesty to go after other faiths and submit similar reports questioning the very existence of Allah or Jesus Christ? Well, we all know the answer – Don’t we? :)

Anonymous said...

ನಿರ್ವೀರ್ಯ ಜನ ನಮ್ಮವರು! ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ .

-klm

dinesh said...

ರಾವಣನ ದುಷ್ಟಬುದ್ಧಿಯ ರಾಜಕಾರಣಿಗಳೇ ಇರುವಾಗ.. ರಾಮ ಇದ್ದಾ ಅನ್ನೊದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ...?

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ said...

ನನ್ನ ಪಾಲಿಗೆ ನೀವು ಮಾನಸ ಗುರು

ನನ್ನ ಬ್ಲಾಗ್ ನಿಮ್ಮ ಕಣ್ಣಿಗೆ ಬೀಳಲಿ ಎಂಬ ಆಸೆಯಿಂದ ಈ ಕೊಂಡಿಯ ರವಾನೆ

http://kavimanasu.blogspot.com/

vee ಮನಸ್ಸಿನ ಮಾತು said...

ಸರ್ ಸಣ್ಣ ಕಥೆಗಳನ್ನ ಬರೆಯಿರಿ. ಕಾದಂಬರಿನ ಕಂಪ್ಯೂಟರ್ ಮುಂದೆ ಕೂತು ಓದಲು ಆಗಲ್ಲ...

Anonymous said...

preetiya Jogi,
This is pretty serious. Sri Rama may be a true avathara or it could be imaginary. But I am surprised that people at the top of our nations hierarchy have made an attempt to distrurb the peace of a nation, where majority of hindus believe in Gods and godesses.For most of us, believeing in Gods is a comfort factor and it is also the fear and respect attached with this unknown or divine , that holds up the morality of the majority. The symbolic representation of the higher existense/the supreme is within the reach of the ordinary like us and trying to belittle these representations that we as Hindus believe and respect is unpardonable. So with this war what is the authority trying to prove? Are they trying to convert all of us in to aethists over night? I wonder as to what was the need to shake the strong riligious foundation that we have imbibed? I pray that this forest fire dies down quickly.