Sunday, September 23, 2007

ಒಂದು ಸಂಭಾಷಣೆ, ಅದರೊಳಗೊಂದು ಶೋಧನೆ

ಹಾಗಿದ್ದರೆ ಜೀವನದ ಅರ್ಥವೇನು!
ಏನಾದರೂ ಕೇಳಲೇಬೇಕಿತ್ತು, ಕೇಳಿದೆ.
ಜೀವನಕ್ಕೆ ಅರ್ಥವಿಲ್ಲ. ನೀವೆಲ್ಲ ಅರ್ಥವಿದೆ ಅಂದುಕೊಂಡು ಓಡಾಡುತ್ತೀರಿ. ಅರ್ಥವಿದೆ ಅಂದುಕೊಂಡು ಬದುಕುತ್ತೀರಿ.
ಅದು ಅಷ್ಟೇ ಆಗಿರುವುದಕ್ಕೆ ಸಾಧ್ಯವಿಲ್ಲ. ಅರ್ಥವಿಲ್ಲ ಅನ್ನುವುದಾದರೆ ಯಾರೋ ಯಾಕೆ ಬರೆಯಬೇಕು. ಯಾರೋ ಯಾಕೆ ಓದಬೇಕು? ಯಾರೋ ಯಾಕೆ ಸಂಶೋಧನೆ ಮಾಡಬೇಕು? ಮತ್ಯಾರೋ ಯಾಕೆ ಕಷ್ಟಪಡಬೇಕು. ಯಾವುದಕ್ಕೂ ಅರ್ಥವಿಲ್ಲ ಎಂದು ಕುಳಿತುಕೊಂಡಿದ್ದರೆ ಜಗತ್ತು ಹೇಗಿರುತ್ತಿತ್ತು ಯೋಚಿಸಿ. ಈ ಯಾವ ಅಭಿವೃದ್ಧಿಯೂ ಆಗುತ್ತಿರಲಿಲ್ಲ.’
ಆಗಬೇಕಾಗಿಲ್ಲ. ನೀವೆಲ್ಲ ಮಾತಾಡುತ್ತಿರುವುದು ನಿಮ್ಮ ಸುತ್ತಮುತ್ತ ಆಗುತ್ತಿರುವ ಅಭಿವೃದ್ಧಿಯ ಬಗ್ಗೆ. ಅದರಿಂದ ಪ್ರಕೃತಿಗೆ ಯಾವ ಲಾಭವೂ ಇಲ್ಲ, ಆಸಕ್ತಿಯೂ ಇಲ್ಲ. ನೀವಿನ್ನೂ ಕಾಲಿಟ್ಟಿರದ ದುರ್ಗಮವಾದ ಅರಣ್ಯಗಳಲ್ಲಿ (ಅವರು OPAQUE FOREST ಅಂದರು) ಇನ್ನೂ ಹುಲಿಕರಡಿ ನರಿಚಿರತೆ ಗಿಳಿಕೋಗಿಲೆಗಳು ಹಾಗೇ ಬದುಕುತ್ತಿಲ್ಲವೇ? ಆ ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ ನೋಡಿ. ನೀವು ಕೋಟ್ಯಂತರ ರುಪಾಯಿ ಖರ್ಚು ಮಾಡಿ ನೋಡುತ್ತಿರುವುದು ಏನನ್ನು ಗೊತ್ತೇ? ಕಾಡಿನ ಪ್ರಾಣಿಗಳು ತಮ್ಮಿಚ್ಛೆಯಂತೆ ಬದುಕುವುದನ್ನು. ನಿಮಗೀಗ ಬೇಸಿಕ್ ಇನ್‌ಸ್ಟಿಂಕ್ಟ್ ಮುಖ್ಯ ಅನ್ನುವುದು ಗೊತ್ತಾಗಿಬಿಟ್ಟಿದೆ. ಇನ್‌ಫಾರ್ಮೇಷನ್‌ಗಿಂತ ಇನ್‌ಟ್ಯೂಷನ್ ದೊಡ್ಡದು ಅನ್ನುವುದು ಅರ್ಥವಾಗಿದೆ.
ಹಾಗಿದ್ದರೆ ವಿದ್ಯೆ, ಕಲೆ, ಸಾಧನೆ, ಸಂಶೋಧನೆಗಳ ಅರ್ಥವೇನು?’
ನಿಮ್ಮನ್ನು ನಾಶ ಮಾಡುವುದಕ್ಕೆ ಅದೇ ಸಾಕು. ವಿದ್ಯೆಯಂತೆ ವಿದ್ಯೆ, ಸುಡುಗಾಡು. ಏನು ಕಲಿಯುತ್ತಿದ್ದೀರಿ ನೀವೆಲ್ಲ. ಬದುಕಿಗೂ ನೀವು ಕಲಿಯುತ್ತಿರುವುದಕ್ಕೂ ಸಂಬಂಧ ಇದೆಯಾ? ಕಾಲ್‌ಸೆಂಟರ್‌ಗಳಲ್ಲಿ ಮಾಡೋ ಕೆಲಸಕ್ಕೂ ಅವರು ಕಲಿತದ್ದಕ್ಕೂ ಸಂಬಂಧ ಇಲ್ಲ ಅಂದೆಯಲ್ಲ? ನೀನು ಮಾಡುತ್ತಿರುವ ಕೆಲಸಕ್ಕೂ ಬದುಕಿಗೆ ಸಂಬಂಧ ಇದೆಯಾ? ಜೀವಿಸುವುದಕ್ಕೆ ಅದೆಲ್ಲ ಯಾತಕ್ಕೆ ಬೇಕು? ನಿಮ್ಮ ಪತ್ರಿಕೆ, ನಿಮ್ಮ ಕಛೇರಿ, ನಿಮ್ಮ ರಾಜ್ಯಾಂಗ, ನಿಮ್ಮ ಶಾಸಕರು, ನಿಮ್ಮ ರಾಜಕೀಯ, ನಿಮ್ಮ ಅಧಿಕಾರ ಹಸ್ತಾಂತರ ಇದೆಲ್ಲ ಇಲ್ಲದೆ ಬದುಕುವುದಕ್ಕೇ ಆಗುವುದಿಲ್ಲವಾ? ಯಾವ ಪ್ರಾಣಿಯೂ ಬೆಳಗ್ಗೆ ಎದ್ದ ತಕ್ಷಣ ಮತ್ತೊಂದು ಪ್ರಾಣಿ ಏನು ಮಾಡಿತು ಅನ್ನುವುದನ್ನು ತಿಳಿದುಕೊಳ್ಳಬಯಸುವುದಿಲ್ಲ. ಯಾವ ಹಕ್ಕಿಗೂ ರಾತ್ರಿ ಮಲಗುವ ಮುಂಚೆ ಮತ್ತೊಂದು ಜೋಡಿ ಹಕ್ಕಿ ಪ್ರೀತಿ ಮಾಡುವುದನ್ನು ನೋಡುವ ಆಸೆಯಿಲ್ಲ. ಬೇಟೆಗಾರನೊಬ್ಬ ತನ್ನ ಜೊತೆಗೇ ಇದ್ದ ತನ್ನಂತೆಯೇ ಇರುವ ಜಿಂಕೆಯೊಂದನ್ನು ಮತ್ತೊಂದು ಜಿಂಕೆ ಬಾಯಿ ಚಪ್ಪರಿಸಿಕೊಂಡು ನೋಡುವುದಕ್ಕೆ ಇಷ್ಟಪಡುವುದಿಲ್ಲ. ಆ ಸುದ್ದಿಯೂ ಅದಕ್ಕೆ ಬೇಕಿಲ್ಲ. ಆದರೆ ನಿಮಗೆ ಹಾಗಲ್ಲ, ಬೇರೆಯವರ ಕಾಮ, ಕ್ರೋಧ, ಮದ, ಮತ್ಸರಗಳ ಬಗ್ಗೆ ಆಸಕ್ತಿ. ಬೇರೊಬ್ಬ ಕೊಲೆ ಮಾಡಿದ್ದನ್ನು ಮಹಾನ್ ಆಸಕ್ತಿಯಿಂದ ಓದುತ್ತೀರಿ, ಬೇರೆಯವರ ಕಾಮಕೇಳಿಯನ್ನು ಬಾಯಲ್ಲಿ ನೀರು ಸುರಿಸಿಕೊಂಡು ನೋಡುತ್ತೀರಿ. ತೆರೆಯ ಮೇಲೆ, ರಂಗದ ಮೇಲೆ ಬದುಕನ್ನು ಮತ್ತೆ ತಂದುಕೊಂಡು...
ಅದು ನಟನೆ. ಕೇವಲ ಮನುಷ್ಯರಿಗೆ ಮಾತ್ರ ಗೊತ್ತಿರುವ ವಿದ್ಯೆ. ಬದುಕಿನ ಪ್ರತಿಬಿಂಬ. ಜೀವನದ ಪ್ರತಿರೂಪ.’
ಸುಡುಗಾಡು...ಅದು ಕಲೆಯಲ್ಲ. ಕಲೆ ಅನ್ನುವುದು ನೀವು ನಿಮ್ಮ ಮನರಂಜನೆಗೆ ಸೃಷ್ಟಿಸಿಕೊಂಡದ್ದು. ಜೀವನಕ್ಕೆ ಮನರಂಜನೆ ಬೇಕಿಲ್ಲ. ಮನಸ್ಸಿಗೆ ರಂಜನೆ ಬೇಕಿಲ್ಲ.
ಅವರೊಂದಿಗೆ ಮಾತಾಡಿ ಉಪಯೋಗವಿಲ್ಲ ಅನ್ನಿಸಿತು. ಎಲ್ಲವನ್ನೂ ನಿರಾಕರಿಸುವುದು ಕೂಡ ಜೀವನ್ಮುಖಿ ಧೋರಣೆ ಅಲ್ಲವಲ್ಲ. ಅವರ ಹಾಗೆ ಮಾತಾಡುತ್ತಾ ಹೋದರೆ ಎಲ್ಲವನ್ನೂ ತಳ್ಳಿಹಾಕುತ್ತಾ ಬರಬಹುದು. ಆದರೆ ಅವರು ನಿಜಕ್ಕೂ ಹೇಳಹೊರಟದ್ದೇನು ಅನ್ನುವುದನ್ನು ತಿಳಿದುಕೊಳ್ಳಬೇಕು ಅನ್ನಿಸಿತು. ಕೊಂಚ ಕಟುವಾಗಿಯೇ ಪ್ರತಿಕ್ರಿಯಿಸುವುದು ಒಳ್ಳೆಯದು ಎಂದುಕೊಂಡು ನೇರವಾಗಿ ಕೇಳಿದೆ.
ನಿಮ್ಮ ಈ ತತ್ವಜ್ಞಾನ ಕೂಡ ಹಾಗಿದ್ದರೆ ಬದುಕಿಗೆ ಬೇಕಾಗಿಲ್ಲ. ನಿಮ್ಮ ಉಪದೇಶ ಕೂಡ ಬೇಕಾಗಿಲ್ಲ. ಅವರವರು ಅವರಿಗೆ ಇಷ್ಟಬಂದಂತೆ ಬದುಕಿಕೊಳ್ಳಲು ಬಿಡಿ’.
ನೀವ್ಯಾರೂ ನಿಮಗಿಷ್ಟಬಂದಂತೆ ಬದುಕುತ್ತಿಲ್ಲ. ನಿಮ್ಮೆದುರಿಗಿರುವ ಒಂದು ಮಾದರಿಯನ್ನು ಅನುಸರಿಸುತ್ತಿದ್ದೀರಿ ಅಷ್ಟೇ. ನಕಲು... ಪ್ರತಿ ಬದುಕೂ ನಕಲು. ಮಗ ತಂದೆಯನ್ನು, ತಂದೆ ತಾತನನ್ನು , ತಾತ ಮುತ್ತಾತನನ್ನು, ಮುತ್ತಾತ ತನ್ನ ಪೂರ್ವಜನನ್ನು ನಕಲು ಮಾಡಿಕೊಂಡೇ ಬಂದಿದ್ದೀರಿ. ಅದರಿಂದ ಹೊರಗೆ ಬರುವ ಧೈರ್ಯ ನಿಮಗಿಲ್ಲ. ಸ್ವಂತವಾಗಿ ಯೋಚಿಸುವ ಶಕ್ತಿಯೇ ನಿಮಗಿಲ್ಲ.
ನಿಮ್ಮ ಪ್ರಕಾರ ಯೋಚಿಸುವುದೇ ತಪ್ಪಲ್ಲವೇ? ಬದುಕಿಗೆ ಯೋಚನೆ, ಚಿಂತನೆ ಯಾಕೆ ಬೇಕು?
ಅದೀಗ ಸರಿಯಾದ ಪ್ರಶ್ನೆ. ಚಿಂತನೆ ಬೇಡ ಅಂತಲೇ ನಾನು ಹೇಳುತ್ತಿರುವುದು. ಆದರೆ ನಿಮ್ಮೆಲ್ಲರ ನಡವಳಿಕೆಯೂ ನಿಂತಿರುವುದು ಚಿಂತನೆಯ ಮೇಲೆ. ನೀವೆಲ್ಲ ಬೇರೆಯವರಿಗೋಸ್ಕರ ಬದುಕುತ್ತಿದ್ದೀರಿ. ನಿಮ್ಮ ಜೊತೆಗಾರರನ್ನು ಮೀರಿಸುವ ಆಶೆ ನಿಮಗೆ. ಅದೆಂಥ ಕೆಟ್ಟ ಆಶೆ ಅನ್ನುವುದು ನಿಮಗೆ ಗೊತ್ತಿದೆಯಾ? ಅರ್ಥ ಆಗಿದೆಯಾ? ನಿಮ್ಮ ಸಹಜೀವಿಯನ್ನು ಹಣಿಯುವುದಕ್ಕೆ ಅವನಿಗಿಂತ ಮೇಲು ಅನ್ನಿಸಿಕೊಳ್ಳುವುದಕ್ಕೆ ನೀವೆಷ್ಟು ಹೆಣಗಾಡುತ್ತೀರಿ? ಅವನಿಗಿಂತ ಒಳ್ಳೆಯ ಬಟ್ಟೆ, ಅವನಿಗಿಂತ ದೊಡ್ಡ ಮನೆ, ಅವನಿಗಿಂತ ದುಬಾರಿ ಕಾರು, ಅವನಿಗಿಂತ ಚೆಂದದ ಹೆಂಡತಿ, ಅವಳಿಗಿಂತ ಶ್ರೀಮಂತ ಗಂಡ, ಅವರಿಗಿಂತ ವಿಧೇಯ ಮಕ್ಕಳು ಅಂತೆಲ್ಲ ಬೀಗುತ್ತೀರಿ. ನಿಮಗೆ ನಾಚಿಕೆಯಾಗಬೇಕು? ನೀವು ಯಾವತ್ತಾದರೂ ನಿಮಗೋಸ್ಕರ ಬದುಕಿದ್ದಿದೆಯಾ? ಒಬ್ಬಂಟಿಯಾಗಿದ್ದಾಗ ಕೂಡ ನಿಮ್ಮ ಬಗ್ಗೆ ಯೋಚಿಸುತ್ತೀರಾ? ನಿಮ್ಮ ಮನಸ್ಸಿನೊಳಗೆ ಬೇರೆಯವರೇ ಕೂತು ನಿಮ್ಮನ್ನು ನಿಯಂತ್ರಿಸುತ್ತಿರುತ್ತಾರಲ್ಲ, ಅದಕ್ಕೇನಂತೀರಿ?
ಈ ಪ್ರಶ್ನೆಗಳಿಗೆ ಉತ್ತರ ಇರಲಿಲ್ಲ. ಅವುಗಳಲ್ಲಿ ಕೆಲವು ಹೌದಲ್ಲ ಅನ್ನಿಸುವ ಪ್ರಶ್ನೆಗಳಿದ್ದವು. ಮತ್ತೆ ಕೆಲವು ಭಯ ಹುಟ್ಟಿಸುವಂತಿದ್ದವು. ನಾವು ನಮಗೋಸ್ಕರ ಬದುಕಲು ಏನು ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ. ಅದನ್ನೇ ಕೇಳಿದೆ.
ಅದನ್ನು ನೀವೇ ಕಂಡುಕೊಳ್ಳಬೇಕು. ಪ್ರತಿಯೊಬ್ಬನೂ ತನಗೋಸ್ಕರ ತಾನು ಹೇಗೆ ಬದುಕಬೇಕು ಅನ್ನುವುದು ಅರ್ಥ ಮಾಡಿಕೊಳ್ಳಬೇಕು. ನಾನು ಅದನ್ನು ಕಂಡುಕೊಂಡಿದ್ದೇನೆ. ಅದು ನನಗಷ್ಟೇ ಸಾಧ್ಯವಿರುವ, ಬೇಕಾಗಿರುವ ಕ್ರಮ. ಅದನ್ನು ನಿಮಗೆ ಹೇಳುವುದಕ್ಕಾಗಲೀ, ಅನ್ವಯಿಸುವುದಕ್ಕಾಗಲೀ ಸಾಧ್ಯವಿಲ್ಲ. ನಿಮ್ಮ ಬದುಕು ನಿಮ್ಮದು, ನಿಮಗಷ್ಟೇ ಸ್ವಂತ.
ಇದೀಗ ಸಿಕ್ಕಿಬಿದ್ದರು ಎಂದು ಖುಷಿಯಾಯಿತು. ಅವರ ವಾದವನ್ನು ಅವರೇ ನಿರಾಕರಿಸುತ್ತಿದ್ದಾರೆ. ಅದನ್ನಿಟ್ಟುಕೊಂಡು ಮತ್ತೊಂದು ಪ್ರಶ್ನೆ ಹಾಕಿದೆ.
ಪ್ರಾಣಿಗಳ ಥರ ಇರಬೇಕು. ಯಾರೂ ವಿಶಿಷ್ಟ ಅಲ್ಲ. ಯಾರ ಬದುಕಲ್ಲೂ ವಿಶೇಷ ಇಲ್ಲ. ಎಲ್ಲ ಜೀವಗಳ ಉದ್ದೇಶವೂ ಒಂದೇ, ಜೀವಿಸುವುದು ಅಂದಿರಲ್ಲ. ಈಗ ಅವರವರ ಬದುಕನ್ನು ಅವರವರು ಕಂಡುಕೊಳ್ಳಬೇಕು ಅನ್ನುತ್ತೀರಲ್ಲ. ನಿಮ್ಮ ಮಾತಲ್ಲೇ ವಿರೋಧಾಭಾಸ ಇದೆ’.
ವಿರೋಧಾಭಾಸ ಜೀವನದಲ್ಲೇ ಇದೆ. ನಾನು ಹೇಳಿದ್ದನ್ನು ಒಂದೊಂದು ಘಟಕವಾಗಿ ತೆಗೆದುಕೊಂಡು ಅರ್ಥ ಮಾಡಿಕೊಂಡರೆ ನಿಮಗೆ ವಿರೋಧಾಭಾಸ ಕಾಣುತ್ತದೆ. ಸಮಗ್ರವಾಗಿ ನೋಡಿದರೆ ಅದರ ಸಮನ್ವಯ ಹೊಳೆಯುತ್ತದೆ.
ನೀವು ಹತ್ತು ತೆಂಗಿನ ಮರ ಒಂದೇ ದಿನ, ಒಂದೇ ಮಣ್ಣಲ್ಲಿ ನೆಟ್ಟು ನೋಡಿ. ಅದಕ್ಕೆ ಒಂದೇ ಥರ ನೀರು ಹನಿಸುತ್ತೀರಿ. ಹತ್ತೂ ಮರಗಳು ಬೆಳೆದ ನಂತರ ಹೋಗಿ ಗಮನಿಸಿ. ಸೂಕ್ಷ್ಮವಾಗಿ ಗಮನಿಸದ ಹೊರತು ಆ ಹತ್ತು ಮರಗಳೂ ಒಂದೇ ಥರ ಕಾಣಿಸುತ್ತವೆ. ಆದರೆ ಗಮನಿಸಿ ನೋಡಿದರೆ ವ್ಯತ್ಯಾಸ ಗೊತ್ತಾಗುತ್ತದೆ. ಒಂದು ಮರದಂತೆ ಇನ್ನೊಂದಿರುವುದಿಲ್ಲ. ಫಸಲು ಕೂಡ ಅಷ್ಟೇ. ಯಾಕೆ ಎಲ್ಲ ಮರಗಳು ಒಂದೇ ಥರ ಇರೋದಿಲ್ಲ ಹೇಳಿ..
ಮರಗಳನ್ನು ಯಾಕೆ ಗಮನಿಸಬೇಕು? ಅದಕ್ಕೂ ನನ್ನ ಬದುಕಿಗೂ ಏನು ಸಂಬಂಧ?’
ನಿಮ್ಮನ್ನು ಒಂದು ದುರ್ಭರವಾದ ಕಾಡಿನ ಮಧ್ಯೆ ಬಿಟ್ಟು ಬರುತ್ತಾರೆ ಅಂತಿಟ್ಟುಕೊಳ್ಳಿ. ಆಗ ಏನು ಮಾಡುತ್ತೀರಿ? ಅಲ್ಲಿಂದ ಹೊರಬರುವ ದಾರಿ ಗೊತ್ತಿರುವುದಿಲ್ಲ. ತಿನ್ನುವುದಕ್ಕೆ, ಕುಡಿಯುವುದಕ್ಕೆ ಏನೂ ಇರುವುದಿಲ್ಲ. ಆಗ ಹಸಿವೆ ತಾಳಲಾರದೆ ಕೈಗೆ ಸಿಕ್ಕಿದ ಸೊಪ್ಪನ್ನೋ ಹಣ್ಣನ್ನೋ ತಿನ್ನುತ್ತೀರಿ. ಅದನ್ನೇ ತಿಂದು ಬದುಕುವುದಕ್ಕೆ ನೋಡುತ್ತೀರಿ. ರುಚಿಯಾಗಿದ್ದನ್ನು ಆರಿಸಿಕೊಳ್ಳುತ್ತೀರಿ. ಯಾವ ಹಣ್ಣು ತಿನ್ನಬೇಕು, ಯಾವುದು ವಿಷ ಎಂದು ಹೇಗೆ ಗುರುತಿಸುತ್ತೀರಿ? ಅದಕ್ಕಾಗಿ ನೀವು ತಿನ್ನುವ ಮೊದಲು ಆ ಹಣ್ಣನ್ನು ಯಾವುದಾದರೂ ಹಕ್ಕಿಯೋ ಪ್ರಾಣಿಯೋ ತಿನ್ನುತ್ತದಾ ಎಂದು ನೋಡುತ್ತೀರಿ. ಹಕ್ಕಿ ತಿನ್ನುತ್ತಿದ್ದರೆ ನೀವೂ ತಿನ್ನುತ್ತೀರಿ. ಹೀಗೆ ಲಕ್ಷಾಂತರ ವರುಷಗಳ ಹಿಂದೆ ನಿಮ್ಮ ಮೂಲಮಾನವ ಬದುಕುವುದನ್ನು ಕಲಿತ. ಹಣ್ಣುಗಳನ್ನು ಎಚ್ಚರಿಕೆ ವಹಿಸಿ ತಿಂದ. ಆಮೇಲೆ ಅವುಗಳನ್ನು ಬೆಳೆಯತೊಡಗಿದ. ಅಂಥ ಸ್ಥಿತಿಯಲ್ಲಿ ಯಾವ ರಂಜನೆ ಇತ್ತು, ಯಾವ ಕಲೆಯಿತ್ತು. ಯಾವ ಕಾಡು ಪ್ರಾಣಿಯ ಬಾಯಿಗೂ ಬೀಳದೇ, ಹಸಿವೆ ಬೀಳದೇ ಬದುಕುವುದಷ್ಟೇ ಮುಖ್ಯವಾಗಿದ್ದ ದಿನಗಳವು. ಈಗ ಆ ಹುಡುಕಾಟ ನಿಂತಿದೆ. ಯಾರೋ ಅನ್ನ ಸಂಪಾದಿಸಿ ನಿಮ್ಮ ತಟ್ಟೆಗೆ ಸುರಿಯುತ್ತಾರೆ. ಅದನ್ನು ನೀವು ಪುಷ್ಕಳವಾಗಿ ತಿನ್ನುತ್ತೀರಿ. ದೇಹಕ್ಕೆ ಅಗತ್ಯವಿಲ್ಲದೇ ಇದ್ದರೂ ತಿನ್ನುತ್ತೀರಿ. ನಿಮ್ಮ ವಯಸ್ಸು ಮೂವತ್ತು ದಾಟಿದ್ದರೆ ನೀವು ಮತ್ತೆ ತಿನ್ನುವ ಅಗತ್ಯವಿಲ್ಲ ಗೊತ್ತೇ?
ಅಂದರೆ, ತಿನ್ನದೇ ಹೋದರೆ ಬದುಕೋದು ಹೇಗೆ?’
ತಿನ್ನುವುದಕ್ಕೆ ಮೂರು ಕಾರಣ. ಬೆಳವಣಿಗೆಗೆ, ಉಳಿವಿಗೆ, ರುಚಿಗೆ. ಮೂವತ್ತರ ತನಕ ಬೆಳವಣಿಗೆಗೆ, ಆಮೇಲೆ ಉಳಿವಿಗೆ ತಿನ್ನುತ್ತಿದ್ದರೆ ಸಾಕು. ನೀವು ರುಚಿಗೆ ತಿನ್ನುವುದಕ್ಕೆ ಹೋಗುತ್ತೀರಿ. ತಿನ್ನುವುದನ್ನೂ ಅದಕ್ಕೋಸ್ಕರ ಅಡುಗೆ ಮಾಡುವುದನ್ನೂ ವೃತ್ತಿ ಮಾಡಿಕೊಂಡು ಬಿಟ್ಟಿದ್ದೀರಿ. ಯಾವ ಪ್ರಾಣಿಲೋಕದಲ್ಲಾದರೂ ಇಂಥದ್ದೊಂದು ವೈಚಿತ್ರ್ಯ ಕಂಡಿದ್ದೀರಾ? ನೀವು ಜೊತೆ ಸೇರುವುದಾದರೂ ಯಾಕೆ? ಊಟ ಮಾಡುವುದಕ್ಕೆ. ಹುಟ್ಟಿದರೂ ಊಟ, ಸತ್ತರೂ ಊಟ, ಸಂತೋಷಕ್ಕೂ ಊಟ, ದುಃಖಕ್ಕೂ ಊಟ. ಎಲ್ಲದಕ್ಕೂ ಭೂರಿಭೋಜನ. ಎದುರು ಸಿಕ್ಕಿದವರೆಲ್ಲರ ಹತ್ರಾನೂ ಕೇಳ್ತೀರಿ, ಊಟ ಆಯ್ತಾ. ಮದುವೆಗೆ ಹೋಗಿ ಬಂದರೆ ಕೇಳ್ತೀರಿ, ಊಟ ಚೆನ್ನಾಗಿತ್ತಾ. ತಿನ್ನೋದು ಬಿಟ್ಟರೆ ಬೇರೆ ಯೋಚನೆ ನಿಮಗಿದೆಯಾ?
ಹಾಗಿದ್ದರೆ ಜೀವನದ ಅರ್ಥವೇನು?
ಕೇಳಲೇಬೇಕಾಗಿತ್ತು, ಕೇಳಿದೆ.
ಅದಕ್ಕೆ ಅವರು ಉತ್ತರಿಸಲಿಲ್ಲ. ಎದ್ದು ಹೋದರು. ಗಣೇಶ ಚತುರ್ಥಿಯ ಹಿಂದಿನ ದಿನ ಹೊರಟೇಹೋದರು ಎಂದು ಹಳೆಯ ಮಿತ್ರ ಫೋನ್ ಮಾಡಿ ಹೇಳಿದ.
ಹಾಗಿದ್ದರೆ ಜೀವನದ ಅರ್ಥವೇನು?
ಇನ್ಯಾವತ್ತೂ ಕೇಳಬಾರದು ಅಂದುಕೊಂಡಿದ್ದೇನೆ, ಯಾರನ್ನೂ!

5 comments:

sandeep said...

'Jogi'Yavre nimdu yavooru?..bejaru madkobedi :)

sandeep said...

gottatytu bidi uppinangadi alwa?

ಸಿಂಧು Sindhu said...

ಪ್ರೀತಿಯ ಜೋಗಿ,

ಜೀವನದ ಅರ್ಥವೇನು? ಮತ್ತು ಅದರ ಅರ್ಥ ಇದೇ ಅಂತ ಗೊತ್ತಾಗಿಬಿಟ್ಟರೆ ಮುಂದೆ ಬದುಕುವುದು ಹೇಗೆ..? ಹುಡುಕಲಿಕ್ಕೇನುಳಿಯುತ್ತದೆ? ನಮ್ಮ ಉಪನಿಷತ್ತಿನ ಬ್ರಹ್ಮಸತ್ಯವೇ ಜೀವನದ ಸತ್ಯ ಮಿಥ್ಯ ಎಲ್ಲವೂ ಅಲ್ಲವಾ? ನೇತಿ - ನ ಇತಿ.. :)
ನಿಮ್ಮ ಬರಹ ತುಂಬ ಇಷ್ಟವಾಯಿತು..ಇನ್ನೊಂದ್ನಾಲ್ಕು ದಿನ ಮಾಡುವ ಎಲ್ಲ ಕೆಲಸದಲ್ಲೂ ಅರ್ಥ ಹುಡುಕುವ ಹುಡುಗಾಟ..

ನಿಮ್ಮ ಸಂಭಾಷಣೆಯಲ್ಲಿದ್ದ ಅವರು ಯಾರು? - ಜೇಕೆ ಮತ್ತು ಯೂಜಿಯ ಛಾಯೆ.. ಆದರೆ ಅವರಿಬ್ಬರೂ ಚೌತಿಯ ಹಿಂದಿನ ದಿನ ಹೋಗಿದ್ದಲ್ಲವಲ್ಲ?

ಪ್ರೀತಿಯಿರಲಿ,
ಸಿಂಧು

ವಿಕ್ರಮ ಹತ್ವಾರ said...

ಹತ್ತಾರು ವಿಷಯಗಳನ್ನ ಒಂದೇ ಕಡೆ ಎಳೆದು ಕಂಫ್ಯೂಶನ್ನೋ ಕಂಫ್ಯೂಶನ್. ತರ್ಕಕ್ಕೆ ಕೂತರೆ ಇದೇ ಸಮಸ್ಯೆ ಅಂತ ಕಾಣುತ್ತೆ.

ಇನ್ನೊಬ್ಬರನ್ನ ನೋಡಿ ಇನ್ನೊಬ್ಬರಿಗಾಗಿ ಬದುಕಬೇಡ ಅನ್ನೋದು ಮಾತ್ಸರ್ಯದಿಂದ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ ಅನ್ನುವುದಷ್ಟಕ್ಕೆ ಸೀಮಿತ. ತನ್ನನ್ನೇ ತಾನು ನೋಡಬಾರದು, ಪ್ರಪಂಚದ ಬಗ್ಗೆ ಆಲೋಚಿಸಲೇ ಬಾರದು ಬೆರೆಯಲೇ ಬಾರದು ಎಂದರೆ?. ಜಗತ್ತಿನಲ್ಲಿ ಯಾವ ಪ್ರಾಣಿಗೂ ಇರದೇ ಇರುವುದು ಮನುಷ್ಯನಿಗೆ ಹೇಗೆ ಬಂತು?. ಬೆಳವಣಿಗೆ ಆಲೋಚನೆ ಮನುಷ್ಯನ ಸಹಜ ಪ್ರಕೃತಿ. ಅದನ್ನೇ ನಿರಾಕರಿಸಿದರೆ ಪ್ರಕೃತಿಯನ್ನೇ ನಿರಾಕರಿಸಿದಂತೆ ಆಗುವುದಿಲ್ಲವೆ?. ಆನೆ ಬದುಕಿದ ಹಾಗೆ ಹಂದಿ ಬದುಕುವುದಿಲ್ಲ, ಹಂದಿ ಬದುಕಿದ ಹಾಗೆ ಮನುಷ್ಯ ಬದುಕುವುದಿಲ್ಲ. ಒಂದು ಮರದಂತೆ ಮತ್ತೊಂದಿಲ್ಲ. ಒಂದೇ ಮರದ ಒಂದು ಎಲೆಯಂತೆ ಮತ್ತೊಂದಿಲ್ಲ!.

ಶಿವಾಜಿನಗರದ ಫುಟ್ಪಾತಿನಲ್ಲಿ ಚಪ್ಪಲಿ ಮಾರುವ ಅಂಕಲ್ ಒಬ್ಬರು ಹೇಳಿದ್ದು ಜ್ಞಾಪಕಕ್ಕೆ ಬಂತು: 'ಊರಿನಲ್ಲಿ ಇರುವವರ -- ಎಲ್ಲ ತೊಳೆಯೋಕೆ ಹೋಗಬೇಡ, ನಿನ್ನ -- ನೀ ತೊಳ್ಕೋ'.

ಎಷ್ಟು ಸಿಂಪಲ್ ಅಲ್ವಾ?

Anonymous said...

ವಯಸ್ಸು ಮತ್ತು ಅನುಭವಕ್ಕೆ ತಕ್ಕಹಾಗೆ ಆಲೋಚನೆಗಳು ಬದಲಾಗುವುದು ಸಹಜ. ಆಫೀಸಿನಿಂದ ಮನೆಗೆ ಬರ್ತಾ ನನ್ನ ೪ ವರ್ಷದ ಮಗನಿಗೆ ಲಾಲಿಪಪ್ ತೆಗೆದುಕೊಂಡು ಹೋಗಿ ಕೊಟ್ಟರೆ ಅವನಿಗೆ ಆಗುವ ಸಂತೋಷ ನನ್ನ ೯೦ ವರ್ಷದ ತಾತನಿಗೆ ಆಗೋದು ಹೇಗೆ ಸಾಧ್ಯ ಹೇಳಿ.

ನನ್ನ ಮಗನ ಜೊತೆ “ಈ ಜೀವನಕ್ಕೆ ಅರ್ಥ ಇಲ್ಲ” ಅಂತ ವಾದಿಸಿದರೆ ಅವನಿಗೆ ಅರ್ಥ ಆಗುತ್ತಾ? ಅಥವಾ, ಕಾರ್ಟೂನ್ ನೋಡಿ ಕುಣಿಯೋ ಅವನ ಸ್ವಭಾವ ನನಗೆ ಅರ್ಥ ಆಗುತ್ತಾ?

ನಮಗೆ ಒಂದು ಸಂತೋಷವನ್ನು ಅನುಭವಿಸುವುದಕ್ಕೆ ಆಗದಿದ್ದರೆ ಅಟ್ಲೀಸ್ಟ್ ಅದನ್ನು ಅನುಭವಿಸಬಲ್ಲವರಾದ್ರೂ ಎನ್ಜಾಯ್ ಮಾಡ್ಲಿ ಅನ್ನೋ ಮನೋಭಾವ ಇರಬೇಕು. ಹಾಗೆಯೇ, ಆ ಸಂತೋಷವನ್ನು ಅನುಭವಿಸಲಿಕ್ಕಾಗದವರ ಬಗ್ಗೆ ಸಹಾನುಭೂತಿಯೂ ಇರಬೇಕು.