Saturday, December 15, 2007

ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆ

-1-

ಗೋಪಾಲಕೃಷ್ಣ ಸೋಮಯಾಜಿ ಒಬ್ಬನೇ ಬರಲಿಲ್ಲ. ಅವನ ಜೊತೆಗೆ ಅವನ ಮಗಳು ನರ್ಮದೆಯೂ ಉಪ್ಪಿನಂಗಡಿಗೆ ಬಂದಳು. ನರ್ಮದೆಯ ಪುಟ್ಟ ತಂಗಿ ಜಾಹ್ನವಿಯೂ ಜೊತೆಗಿದ್ದಳು.ನರ್ಮದೆ ಆಗಷ್ಟೇ ಕೇರಳದಲ್ಲಿ ಹನ್ನೆರಡನೆ ತರಗತಿ ಓದುತ್ತಿದ್ದಳು. ಗೋಪಾಲಕೃಷ್ಣ ಸ್ಕೂಲಿನ ಮೇಷ್ಟ್ರುಗಳ ಹತ್ತಿರ ಮಾತನಾಡಿ, ಮತ್ತೆ ಪರೀಕ್ಷೆಗೆ ಹಾಜರಾಗುತ್ತಾಳೆಂದೂ ಅಷ್ಟು ದಿನ ಮನೆಯಲ್ಲೇ ಓದಿಕೊಳ್ಳುತ್ತಾಳೆಂದೂ ದಯವಿಟ್ಟು ಹಾಜರಿ ಕೊಡಬೇಕೆಂದೂ ವಿನಂತಿಸಿಕೊಂಡು ನರ್ಮದೆಯನ್ನು ಉಪ್ಪಿನಂಗಡಿಗೆ ಕರೆದುಕೊಂಡು ಬಂದಿದ್ದ.
ಅವಳನ್ನು ಗುರುವಾಯೂರಿನಲ್ಲೇ ಬಿಟ್ಟು ಬರಲು ಅವನಿಗೆ ಭಯ.ನರ್ಮದೆ ತುಂಬುಸುಂದರಿ. ಹದಿನೇಳನೆಯ ವಯಸ್ಸಿಗೇ ಯೌವನ ಅವಳನ್ನು ಮನೆತುಂಬಿಸಿಕೊಂಡಿತ್ತು. ತೆಳುಮಧ್ಯಾಹ್ನದ ನೀಲಾಕಾಶವನ್ನು ಹೋಲುವ ಕಣ್ಣುಗಳಲ್ಲಿ ಆರ್ದ್ರತೆಯಿತ್ತು. ತೇವ ಆರದ ಕೆನ್ನೆಗಳಲ್ಲಿ ಹೊಳಪಿತ್ತು. ಕೊಂಚ ಮೊಂಡು ಎನ್ನಬಹುದಾದ ಮೂಗಿನಲ್ಲಿ ಉಡಾಫೆಯಿತ್ತು. ಸಮುದ್ರದ ಅಲೆಗಳನ್ನು ನೆನಪಿಸುವಂಥ ಮುಂಗುರುಳು ಯಾವ ಬಂಧನಕ್ಕೂ ಸಿಲುಕಲಾರೆ ಎಂಬಂತೆ ಅವಳ ಹಣೆಕಪೋಲಗಳನ್ನು ಕೆಣಕುತ್ತಿತ್ತು. ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆಯಿದ್ದುದನ್ನು ಪ್ರಯತ್ನಪಟ್ಟರೆ ಗುರುತಿಸಬಹುದಾಗಿತ್ತು.
ಅಂಥ ಸುಂದರಿಯನ್ನು ಗುರುವಾಯೂರಿನಲ್ಲಿ ಬಿಟ್ಟು ಬಂದರೆ ಏನಾಗುತ್ತದೆ ಅನ್ನುವುದು ಗೋಪಾಲಕೃಷ್ಣನಿಗೆ ಗೊತ್ತಿತ್ತು. ಹೀಗಾಗಿ ಆತ ಅವಳನ್ನು ಉಪ್ಪಿನಂಗಡಿಗೆ ಕರೆತಂದು ಅಲ್ಲೇ ಓದುವಂತೆ ತಾಕೀತು ಮಾಡಿದ. ಆಕೆ ಓದಿ ಸಾಧಿಸಬಹುದಾದದ್ದೇನೂ ಇಲ್ಲ ಅನ್ನುವುದು ಅವನಿಗೆ ಗೊತ್ತಿತ್ತು.ಆದರೆ ಗೋಪಾಲಕೃಷ್ಣನ ಹೆಂಡತಿ ಮೀರಾಳ ಆಸೆ ಬೇರೆಯೇ ಆಗಿತ್ತು. ಆಕೆಗೆ ಗಂಡ ಕೈಗೊಂಡ ವೃತ್ತಿಯಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ಅವರಿವರ ಮನೆಯಲ್ಲಿ ತಿಥಿ, ಮುಂಜಿ, ಮದುವೆ ಮಾಡಿಸಿಕೊಂಡಿರುವ ಪುರೋಹಿತರ ಹೆಂಡತಿಯಾಗಿ ಬಾಳುವುದರ ಕಷ್ಟದ ಅರಿವು ಆಕೆಗಿತ್ತು. ಆ ಬದುಕಿನ ಕಠೋರ ಶ್ರದ್ಧೆಯ ನಡುವೆ ವಿಶ್ರಾಂತಿಗೆ ಬಿಡುವೇ ಇಲ್ಲ ಎನ್ನವುದು ಆಗಲೇ ಅವಳ ಗಮನಕ್ಕೆ ಬಂದಿತ್ತು.
ನರ್ಮದೆಯ ಸೌಂದರ್ಯ ಅವಳ ಅಮ್ಮ ಮೀರಾಳಿಂದ ಬಂದದ್ದು. ಆಕೆಯೂ ಅಪ್ರತಿಮ ಸುಂದರಿಯೇ. ಕಾಸರಗೋಡು ಪ್ರಾಂತ್ಯದಲ್ಲಿ ತೀರಾ ಅಪರೂಪವೆನ್ನಬಹುದಾದ ಕೋಟ ಬ್ರಾಹ್ಮಣರ ಕುಟುಂಬದ ಮಗಳು ಆಕೆ. ತಂದೆತಾಯಿಗಳು ತೀರಾ ಬಡವರಾದ್ದರಿಂದ ಗೋಪಾಲಕೃಷ್ಣ ಸೋಮಯಾಜಿಯನ್ನು ಆಕೆ ಮದುವೆಯಾಗಲೊಪ್ಪಿದ್ದು. ಆದರೆ ಆಕೆಗೆ ಆ ಮದುವೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಸಾಧ್ಯವಿದ್ದರೆ ದೂರದ ಊರಲ್ಲಿ ಆಫೀಸರ್‌ ಆಗಿದ್ದವನ ಕೈಹಿಡಿದು ಬಾಳಬೇಕು ಎಂದುಕೊಂಡಿದ್ದವಳು ಆಕೆ. ಅದಕ್ಕೆ ಪ್ರೇರಣೆಯಾದದ್ದು ಆಕೆ ಓದುತ್ತಿದ್ದ ಸಾಯಿಸುತೆಯ ಕಾದಂಬರಿಗಳು. ಅಲ್ಲಿ ಬರುವ ಸ್ನಿಗ್ಧಮುಗ್ಧ ಸುಂದರಿಯರ ಜೊತೆ ತನ್ನನ್ನು ಹೋಲಿಸಿಕೊಂಡು ಮೀರಾ ತನ್ನ ಗಿರಿಧರನಿಗಾಗಿ ಕಾಯುತ್ತಿದ್ದಳು.
ಗೋಪಾಲಕೃಷ್ಣ ಸೋಮಯಾಜಿಯನ್ನು ಮದುವೆಯಾದ ಒಂದೇ ವಾರಕ್ಕೆ ಆಕೆಗೆ ತನ್ನ ಭವಿಷ್ಯದ ಪೂರ್ತಿ ಚಿತ್ರಣ ಸಿಕ್ಕಿಬಿಟ್ಟಿತು. ಬೆಳಗಾಗೆದ್ದರೆ ಒದೆಯುವ ಗೌರಿಹಸುವನ್ನು ಪುಸಲಾಯಿಸಿ ಹಾಲು ಕರೆಯುವುದು. ನಂತರ ತಣ್ಣೀರಿನಲ್ಲಿ ಸ್ನಾನ ಮುಗಿಸಿ, ಒದ್ದೆ ಬಟ್ಟೆ ಉಟ್ಟುಕೊಂಡು ನೈವೇದ್ಯ ತಯಾರುಮಾಡುವುದು. ಅದಾದ ನಂತರ ಗಂಡ ಪೂಜೆ ಮಾಡುವ ತನಕ ಕಾದಿದ್ದು, ನಂತರ ಅವನಿಗೆ ತಿಂಡಿ ಕೊಟ್ಟು ನಂತರ ತಾನು ಕಾಫಿ ಕುಡಿಯುವುದು. ಮತ್ತೆ ಮಧ್ಯಾಹ್ನ ಯಾರದೋ ಮನೆಯಲ್ಲಿ ಸೋಮಯಾಜಿ ಊಟ ಮಾಡಿದರೆ ಅವಳಿಗೆ ಹೊತ್ತಿಗೆ ಸರಿಯಾಗಿ ಊಟ.
ಶೂದ್ರರ ಮನೆಗೆ ಪೌರೋಹಿತ್ಯಕ್ಕೆ ಹೋದರೆ ಅವರು ಬರುವ ತನಕ ಕಾಯಬೇಕು. ಊಟವಾಗುವುದು ಸಂಜೆ ನಾಲ್ಕಾಗುವುದೂ ಉಂಟು. ಮುಸ್ಸಂಜೆ ಹೊತ್ತಿಗೆ ಸೋಮಯಾಜಿ ಕುಮಾರವ್ಯಾಸ ಭಾರತದ ಪಾರಾಯಣ ಶುರುಮಾಡುತ್ತಾನೆ. ಅದನ್ನು ಭಕ್ತಿಯಿಂದ ಕೇಳುತ್ತಾ ಕುಳಿತುಕೊಳ್ಳಬೇಕು. ಆಕಳಿಕೆ ಬಂದರೂ ಆಕಳಿಸಕೂಡದು. ಅದು ಮುಗಿಯುತ್ತಿದ್ದಂತೆ ಮುತ್ತೆೈದೆಯರಿಗೆ ಕುಂಕುಮ ಕೊಡಬೇಕು. ಅವರ ಕಾಲಿಗೆ ಬೀಳಬೇಕು.ಅದರಿಂದೆಲ್ಲ ಪಾರಾದದ್ದು ಗೋಪಾಲಕೃಷ್ಣ ಸೋಮಯಾಜಿ ಊರು ಬಿಟ್ಟು ಕೇರಳಕ್ಕೆ ಹೋಗುವ ನಿರ್ಧಾರಕ್ಕೆ ಬಂದಾಗ. ಗುರುವಾಯೂರಿನ ದೇವಸ್ಥಾನದಲ್ಲಿ ಅವನಿಗೊಂದು ಕೆಲಸ ಸಿಕ್ಕಿತು. ದೇವಸ್ಥಾನದ ಪಕ್ಕದಲ್ಲೇ ಉಳಿದುಕೊಳ್ಳಲು ಮನೆಯೂ ಸಿಕ್ಕಿತು.
ದೇವಸ್ಥಾನದ ಇತರ ಅರ್ಚಕರ ಪತ್ನಿಯರೂ ಮೀರಾಳಂತೆ ಸೌಂದರ್ಯವತಿಯರೇ. ಹೀಗಾಗಿ ಅವರೆಲ್ಲರ ಆಸೆಗಳೂ ಒಂದೇ ಆಗಿದ್ದವು. ಅವರ ಜೊತೆಗೆ ಸೇರಿ ತನ್ನ ಅತೃಪ್ತ ಆಶೆಗಳನ್ನು ಹೇಳಿಕೊಳ್ಳುತ್ತಾ ಮೀರ ಕಷ್ಟಗಳನ್ನು ಮರೆತಳು. ಇಬ್ಬರು ಹೆಣ್ಣುಮಕ್ಕಳು ಎಂಟು ವರುಷದ ಅಂತರದಲ್ಲಿ ಹುಟ್ಟಿದರು. ಬದುಕು ಏಕತಾನತೆಗೆ ಹೊಂದಿಕೊಂಡಿತು.ಅಷ್ಟರಲ್ಲೇ ಮತ್ತೆ ಊರುಬಿಟ್ಟು ಹೋಗುವ ಯೋಚನೆ ಸೋಮಯಾಜಿಗೆ ಬಂದದ್ದು ಮೀರಾಳನ್ನು ಕಂಗೆಡಿಸದೇ ಇರಲಿಲ್ಲ. ಆದರೆ ಈ ಬಾರಿ ಗೋಪಾಲಕೃಷ್ಣ ಮತ್ತೊಂದಷ್ಟು ಆಮಿಷಗಳನ್ನು ಒಡ್ಡಿದ. ಎಲ್ಲ ಸರಿಹೋದರೆ ಪೌರೋಹಿತ್ಯ ಬಿಟ್ಟು ಒಂದು ಅಂಗಡಿ ತೆರೆಯುವುದಾಗಿ ಘೋಷಿಸಿದ. ವ್ಯಾಪಾರಕ್ಕೆ ಇಳಿಯುವುದಾಗಿ ಆಣೆ ಮಾಡಿದ. ಅದರಿಂದ ಪ್ರೇರಿತಳಾಗಿ ಮೀರಾ ಮಕ್ಕಳ ಸಹಿತ ಉಪ್ಪಿನಂಗಡಿಗೆ ಬಂದು ನೆಲೆಯಾದಳು.
ಆದರೆ ನಂತರ ನಡೆದ ಘಟನಾವಳಿಗಳು ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅನಂತಕೃಷ್ಣ ಸೋಮಯಾಜಿಗಳು ಮುಖ್ಯಮಂತ್ರಿಗಳು ತಮ್ಮ ಅಕೌಂಟಿನಲ್ಲಿಟ್ಟ ದುಡ್ಡನ್ನು ನಂಬಿ, ತಮಗೆ ಗೊತ್ತಿದ್ದ ಕಡೆಯಿಂದೆಲ್ಲ ಯಾಜಕರನ್ನು ಕರೆಸಿದರು. ಅವರಿಗೆಲ್ಲ ಒಂದು ಮೊತ್ತದ ಸಂಭಾವನೆ ನಿಗದಿ ಮಾಡಿದರು. ಇತ್ತ ಅಯುತ ಚಂಡಿಕಾ ಯಾಗಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಅದು ಮುಖ್ಯಮಂತ್ರಿಗಳ ಪ್ರೀತ್ಯರ್ಥ ನಡೆಯುತ್ತಿರುವ ಯಾಗ ಎನ್ನುವುದು ಜಗಜ್ಜಾಹೀರಾಗಿ ಸ್ಥಳೀಯ ರಾಜಕೀಯ ಮುಖಂಡರೆಲ್ಲ ಅದರ ಮುಂದಾಳತ್ವ ವಹಿಸಿಕೊಂಡಿದ್ದರು. ದೊಡ್ಡ ಸಂಭ್ರಮದ ವಾತಾವರಣ ನೆಲೆಗೊಂಡಿತ್ತು.
ಈ ಸಂಭ್ರಮದ ನಡುವೆಯೇ ಅಯುತ ಚಂಡಿಕಾಯಾಗ ನಡೆದೂಹೋಯಿತು. ಅತಿಥಿಗಳು ಅಭ್ಯಾಗತರು ಬಂದರು. ಹಳ್ಳಿಗೆ ಹಳ್ಳಿಯೇ ನೆರೆದು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಸಂತೋಷಪಟ್ಟಿತು. ಧರ್ಮರಾಯನ ಅಶ್ವಮೇಧ ಯಾಗಕ್ಕೆ ಅದನ್ನು ಹೋಲಿಸಿ ಲೋಕ ಸಂತೋಷಪಟ್ಟಿತು.ಆದರೆ, ಸೋಮಯಾಜಿಗಳಿಗೆ ಸಮಸ್ಯೆ ನಂತರ ಶುರುವಾಯಿತು. ಅವರು ಕರೆಸಿಕೊಂಡ ಪುರೋಹಿತರಿಗೆ ಸಂಭಾವನೆ ಕೊಡುವುದಕ್ಕೆ ಯಾರೂ ಮುಂದೆ ಬರಲಿಲ್ಲ. ಗೋಪಾಲಕೃಷ್ಣ ಸೋಮಯಾಜಿ ಕರೆಸಿಕೊಂಡ ಅಡುಗೆಯವರಿಗೆ ಸಲ್ಲಬೇಕಾದ ಮಜೂರಿ ಕೊಡುವುದಕ್ಕೆ ಯಾರೂ ಬರಲಿಲ್ಲ. ಮುಖ್ಯಮಂತ್ರಿಯವರ ಬಳಿ ಹೋಗಿ ಕೇಳೋಣ ಎಂದುಕೊಂಡರೆ ಅಷ್ಟು ಹೊತ್ತಿಗಾಗಲೇ ಅವರು ಅಧಿಕಾರ ಕಳಕೊಳ್ಳುವ ಹಂತ ತಲುಪಿದ್ದರು. ಅವರನ್ನು ಸಂಪರ್ಕಿಸುವುದು ಕೂಡ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳು ನಿಮ್ಮ ಕೈಗೆ ಕೋಟ್ಯಂತರ ರುಪಾಯಿ ಕೊಟ್ಟಿರಬೇಕಲ್ಲ ಸೋಮಯಾಜಿಗಳೇ ಎಂದು ಊರಿನ ಮುಖಂಡರು ಕೈತೊಳೆದುಕೊಂಡರು. ಪುರೋಹಿತರ, ಅಡುಗೆಯವರ ಪೀಡನೆಯಿಂದ ಪಾರಾಗುವ ದಾರಿಕಾಣದೆ ಸೋಮಯಾಜಿಗಳು ಸಾಲ ಸೋಲ ಮಾಡಿ, ತಾವು ಆಸ್ತಿ ಮಾರಿದ ದುಡ್ಡನ್ನೂ ಸೇರಿಸಿ ಎಲ್ಲರಿಗೂ ಒಂದಷ್ಟು ಕಾಸು ಕೊಟ್ಟು ಆಪತ್ತಿನಿಂದ ಪಾರಾದರು.ಅಲ್ಲಿಗೆ ಅವರ ಖ್ಯಾತಿಯೂ ಸಾಲವೂ ಏಕಪ್ರಕಾರವಾಗಿ ಬೆಳೆದವು.
ಗೋಪಾಲಕೃಷ್ಣ ಸೋಮಯಾಜಿಯ ವ್ಯಾಪಾರ ಮಾಡುವ ಆಸೆ ಮುರುಟಿಹೋಗಿ ವಾಪಸ್ಸು ಗುರುವಾಯೂರಿಗೆ ಹೋಗುವುದಕ್ಕೂ ಸಾಧ್ಯವಾಗದೆ ಆತ ಉಪ್ಪಿನಂಗಡಿಯಲ್ಲೊಂದು ಜ್ಯೋತಿಷ್ಯಶಾಲೆ ಆರಂಭಿಸಿದ.ಸೋಮಯಾಜಿಗಳು ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಒಂಟಿಯಾದರು.

-2-

ಆನಂದನಿಗೊಂದು ಆಸೆಯಿತ್ತು.ಇಡೀ ಜಗತ್ತೇ ತನ್ನನ್ನು ಎದುರಿಸಿ ನಿಂತರೂ ಸರಿ, ಸುಗಂಧಿಯನ್ನೇ ಮದುವೆಯಾಗಬೇಕು. ಅವಳನ್ನು ಮದುವೆಯಾಗುವ ಮೂಲಕ ಇಷ್ಟು ವರ್ಷ ಅಪ್ಪ ಬದುಕಿಕೊಂಡು ಬಂದ ಏಕತಾನತೆಯ ಬದುಕಿಗೊಂದು ರೋಚಕ ತಿರುವು ನೀಡಬೇಕು. ಸುಗಂಧಿಯಂಥ ಸುಗಂಧಿಯ ಜೊತೆ ಕೂಡ ಸುಖವಾಗಿ ಬಾಳಲು ಸಾಧ್ಯ ಅನ್ನುವುದನ್ನು ತೋರಿಸಿಕೊಡಬೇಕು. ಬಿಟ್ಟುಕೊಳ್ಳುವುದರಲ್ಲೂ ಜಿಪುಣತನ ತೋರಿಸುವ ತನ್ನ ಜಾತಿಯ ಹುಡುಗಿಯರ ಮುಂದೆ ಸುಗಂಧಿಯಂಥ ಸುಂದರಿಯನ್ನು ಕಟ್ಟಿಕೊಂಡು ಓಡಾಡುತ್ತಾ ಅವರಲ್ಲಿ ಅಸೂಯೆ ಹುಟ್ಟಿಸಬೇಕು.
ಅವನ ಆಸೆಗಳಿಗೊಂದು ಹಿನ್ನೆಲೆಯೂ ಇತ್ತು. ಆನಂದ ನಡೆಯುವಾಗ ಕೊಂಚ ಕುಂಟುತ್ತಿದ್ದ. ಅದನ್ನು ಮರೆಮಾಚುವುದಕ್ಕೆ ಗಂಭೀರವಾಗಿ ನಿಧಾನವಾಗಿ ನಡೆಯುತ್ತಿದ್ದ. ಕ್ರಮೇಣ ಕೊಯಮತ್ತೂರಿಗೆ ಹೋಗಿ ಪಳನಿಸ್ವಾಮಿಯ ಹತ್ತಿರ ನವಿಲೆಣ್ಣೆ ತಿಕ್ಕಿಸಿಕೊಂಡು ಬರುವುದಕ್ಕೆ ಆರಂಭಿಸಿದ. ನಿಜವಾಗಿ ಅದು ಪರಿಣಾಮ ಬೀರಿತೋ ಅಥವಾ ಆನಂದನ ಆತ್ಮವಿಶ್ವಾಸ ಹೆಚ್ಚಿತೋ ಅವನ ಕಾಲಂತೂ ಸರಿಹೋಯಿತು.ಆದರೆ ಬಾಲ್ಯದ ಅವಮಾನವನ್ನು ಅವನು ಮರೆತಿರಲಿಲ್ಲ. ಶಾಲೆ ತಪ್ಪಿಸಿ ಗುರುವಾಯನ ಕೆರೆಯ ಹಿಂದಿನ ದಟ್ಟ ಕಾಡುಗಳಲ್ಲಿ ಅಬುಳಕ್ಕ, ಮುಳ್ಳುಹಣ್ಣು, ನೇರಳೆಹಣ್ಣು ಹುಡುಕಿಕೊಂಡು ಹೋಗುತ್ತಿದ್ದ ಆನಂದನನ್ನು ಹೆಡ್ಮಾಸ್ಟರ್‌ ನೇಮಿರಾಜ ಹೆಗಡೆಯವರು ಕರೆಸಿ ಶಾಲೆಗೆ ಮೂರು ಸುತ್ತು ಓಡುವಂತೆ ಹೇಳಿದ್ದರು.
ಕುಂಟುತ್ತಾ ಓಡಿದ ಆನಂದನನ್ನು ನೋಡಿ ಶಾಲೆಗೆ ಶಾಲೆಯೇ ನಕ್ಕಿತ್ತು. ಸುತ್ತಿ ಬಂದ ನಂತರ ಕುಂಟನಿಗೆ ಎಂಟು ಚೇಷ್ಟೆ ಅಂತ ಗಾದೆ ಇದೆ. ಅದನ್ನು ನಿನ್ನನ್ನು ನೋಡಿಯೇ ಮಾಡಿರಬೇಕು ಎಂದು ನೇಮಿರಾಜ ಹೆಗಡೆ ಗೇಲಿಮಾಡಿ ನಕ್ಕಿದ್ದರು.ಆನಂದನಿಗೆ ಆ ನಗುವನ್ನು ಮರೆಯುವುದು ಇವತ್ತಿಗೂ ಸಾಧ್ಯವಾಗಿಲ್ಲ. ಅವನ ಬ್ರಾಹ್ಮಣ್ಯ ಹೆಡೆಯೆತ್ತುವುದು ಆವಾಗಲೇ.
ತಾನೇನೂ ತಪ್ಪು ಮಾಡದೇ ಇದ್ದಾಗಲೂ ಶಿಕ್ಷೆ ಕೊಟ್ಟು ನಕ್ಕರಲ್ಲ, ಅವರನ್ನು ಮೀರಿ ಬೆಳೆಯಬೇಕು. ಅವರೆದುರೇ ತಪ್ಪು ಮಾಡಬೇಕು. ಆದರೆ ಅವರಿಗೆ ಶಿಕ್ಷಿಸುವ ಅಧಿಕಾರ ಇರಬಾರದು. ನೋಡು..... ನನಗೆ ಸರಿಯೆಂಬಂತೆ ಬದುಕುತ್ತಿದ್ದೇನೆ. ನನ್ನಿಷ್ಟದಂತೆ ನಡೆಯುತ್ತಿದ್ದೇನೆ. ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ನೇಮಿರಾಜರಿಗೆ ಹೇಳುವುದಕ್ಕೋಸ್ಕರವೇ ಆನಂದ ಏಳನೇ ಕ್ಲಾಸು ಮುಗಿಯುತ್ತಿದ್ದಂತೆ ಆ ಶಾಲೆ ಬಿಟ್ಟು, ದೂರದ ಸುಬ್ರಹ್ಮಣ್ಯದ ಕಾಲೇಜು ಸೇರಿದ.
ಎಂಟನೆ ತರಗತಿಯಲ್ಲಿದ್ದಾಗಲೇ ನೇಮಿರಾಜರ ಮುಂದೆ ಸಿಗರೇಟು ಸೇದುತ್ತಾ ನಡೆದ. ನೇಮಿರಾಜರು ಕರೆದು ಬುದ್ಧಿ ಹೇಳಿದ್ದರು.‘ಇಷ್ಟು ಸಣ್ಣ ವಯಸ್ಸಿನಲ್ಲಿ ಸಿಗರೇಟು ಸೇದಬಾರದು?’‘ನನಗೂ ನಿಮಗೂ ಏನು ಸಂಬಂಧ ? ನಿಮ್ಮ ಕೆಲಸ ನೋಡಿಕೊಳ್ಳಿ’ ಕಟುವಾಗಿ ಉತ್ತರಿಸಿದ್ದ ಆನಂದ.
ಆಮೇಲೆ ಅವನಿಗೆ ತನ್ನ ಉತ್ತರವನ್ನು ತಿದ್ದಿಕೊಳ್ಳಬಹುದಾಗಿತ್ತು ಅನ್ನಿಸಿತು.
ಅದಾದ ಮೂರು ವರುಷಗಳ ನಂತರವೂ ಅವನು ನೇಮಿರಾಜರನ್ನು ಬಿಡಲಿಲ್ಲ. ಅವರು ಲಕ್ಷ್ಮೀ ನಿವಾಸಕ್ಕೆ ಕಾಪಿ ಕುಡಿಯುವುದಕ್ಕೆ ಬಂದಾಗ ಹೇಳಿದ್ದ.‘ನೀವೇನು ಸರ್‌. ನಿಮಗೆ ಬೇಜಾರೂ ಆಗೋಲ್ವಾ? ಈ ಮಕ್ಕಳಿಗೆ ಈತ ಗಣಪ, ಆತ ಈಶ ಅನ್ನುವ ಪಾಠವನ್ನು ಎಷ್ಟು ವರ್ಷ ಅಂತ ಹೇಳಿಕೊಡ್ತೀರಿ ? ನಿಮ್ಮ ಜೀವನ ಇಷ್ಟಕ್ಕೇ ಸೀಮಿತ ಆಯ್ತು ಅಂತ ನಿಮಗೆ ಬೇಸರ ಆಗೋಲ್ವಾ? ಬದುಕೆಂದರೆ ಅಷ್ಟೇನಾ ಸಾರ್‌? ಮಕ್ಕಳಿಗೆ ಅ ಆ ಇ ಈ ಕಲಿಸೋದು. ಅಲ್ಲಿಂದ ಮುಂದೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ ? ಇನ್ನೊಂದು ಐದಾರು ವರ್ಷಕ್ಕೆ ರಿಟೈರ್‌ ಆಗ್ತೀರಿ. ಏನು ಸಾಧಿಸಿದ ಹಾಗಾಯ್ತು? ನೀವು ಕಲಿಸಿದ ವಿದ್ಯಾರ್ಥಿಗಳು ದೊಡ್ಡ ಸಾಹಿತಿಗಳೋ ಮಂತ್ರಿಗಳೋ ಕಲಾವಿದರೋ ಅಧಿಕಾರಿಗಳೋ ಆಗ್ತಾರೆ. ಆಗಿರಬಹುದು. ಆದರೆ ನೀವು ಏನು ಮಾಡಿದ ಹಾಗಾಯ್ತು ಸರ್‌. ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ? ಸರ್ಕಾರ ಕೊಡುವ ತಿಂಗಳ ಸಂಬಳ... ಎಷ್ಟು ಹೇಳಿ.... ಎಂಟುನೂರು ರುಪಾಯಿ... ಅಷ್ಟೆ ಅಲ್ವಾ.... ಅಂದರೆ ವರ್ಷಕ್ಕೆ ಅಬ್ಬಾ ಅಂದ್ರೆ ಹತ್ತು ಸಾವಿರ. ನೀವು ಮೂವತ್ತು ವರುಷ ಸರ್ವೀಸು ಮಾಡಿದ್ದೀರಾ... ಮೂವತ್ತು ಗುಣಿಸು ಹತ್ತು ಸಾವಿರ.. ಅಂದ್ರೆ ಮೂರು ಲಕ್ಷ. ಏನು ಬರುತ್ತೆ ಮೂರು ಲಕ್ಷಕ್ಕೆ... ಒಂದು ಮನೆ ತಗೋಳ್ಳೋಕ್ಕಾಗುತ್ತಾ..... ಮಗಳ ಮದುವೆ ಮಾಡೋಕ್ಕಾಗುತ್ತಾ... ಅದನ್ನು ಯೋಚನೆ ಮಾಡಿದ್ದೀರಾ.... ಅದನ್ನೆಲ್ಲ ಯೋಚನೆ ಮಾಡೋದು ಬಿಟ್ಟು ಸುಮ್ನೆ ಸಣ್ಣ ಮಕ್ಕಳನ್ನು ಅವಮಾನ ಮಾಡಿ ಸಂತೋಷ ಅನುಭವಿಸ್ತೀರಲ್ಲ. ನಿಮಗೆ ನೆನಪುಂಟಾ.... ನಾನು ಕುಂಟ ಅಂತ ಗೊತ್ತಿದ್ದೂ ನನ್ನನ್ನು ಶಾಲೆಯ ಸುತ್ತಲೂ ಓಡಿಸಿದ್ದು... ಸರಿಯಲ್ಲ ಸರ್‌. ನಾನು ಅವಮಾನವನ್ನು ನುಂಗಿಕೊಂಡೆ. ಆದರೆ ನಿಮಗೇನಾಯ್ತು ? ಹಾಗೇ ಇದ್ದೀರಿ...ಆನಂದ ಮಾತಾಡುತ್ತಾ ಆಡುತ್ತಾ ತನಗೇ ಗೊತ್ತಿಲ್ಲದ ಹಾಗೆ ಆರ್ದ್ರನಾಗಿದ್ದ.

ನೇಮಿರಾಜರಿಗೆ ಏನನ್ನಿಸಿತ್ತೋ ಏನೋ ಅವರೂ ವಿಷಾದದಿಂದ ಕೂತಿದ್ದರು. ಲಕ್ಷ್ಮೀ ನಿವಾಸದ ಮಂದಿ ನಿಬ್ಬೆರಗಾಗಿ ಅರ್ಧ ತಿಂದ ಬನ್ಸು, ಬಿಸ್ಕುಟ್‌ ರೊಟ್ಟಿಗಳನ್ನು ಮುರಿದು ಬಾಯಿಗೆ ಹಾಕಿಕೊಳ್ಳುವುದನ್ನೂ ಮರೆತು ಕೂತಿದ್ದರು. ಅಷ್ಟು ಹೇಳಿ ಆನಂದ ಅಪಾರ ದುಃಖಿತನಂತೆ ಬೇಕಂತಲೇ ಮತ್ತಷ್ಟು ಕುಂಟುತ್ತಾ ಹೊರಗೆ ನಡೆದಿದ್ದ. ತನ್ನ ಬೆನ್ನ ಹಿಂದೆ ಒಂದು ಗೆಲುವಿದೆ ಅಂತ ಆಗ ಅವನಿಗೆ ಅನ್ನಿಸಿತ್ತು.ಅದು ಆನಂದನ ಒರಟುತನದ ಒಂದು ರೂಪ ಮಾತ್ರ. ತನ್ನ ಬದುಕೇ ಬದುಕು. ಅದಕ್ಕೆ ಯಾರ ಕಟ್ಟುಪಾಡುಗಳೂ ಇಲ್ಲ ಎಂಬಂತೆ ಅವನು ಬದುಕುತ್ತಾ ಬಂದಿದ್ದಾನೆ. ತನ್ನನ್ನು ಯಾರೂ ಮೀರಬಾರದು ಎಂಬ ಕಾರಣಕ್ಕೆ ಅನಗತ್ಯವಾಗಿ ಕಟುವಾಗುತ್ತಾನೆ. ಕಣ್ಣಿಗೆ ಕೈಹಾಕಿದಂತೆ ಮಾತಾಡುತ್ತಾನೆ.
ಸುಗಂಧಿಯನ್ನು ನೋಡದೆ ತುಂಬ ದಿನವಾಯಿತು ಅಂದುಕೊಂಡ. ನಿರಂಜನನ ಸಾವಿನ ಗಲಾಟೆಯಲ್ಲಿ ಅವಳನ್ನು ಮರೆತೇ ಬಿಟ್ಟೆನಲ್ಲ ಅಂತ ಹಳಹಳಿಸಿದ. ಆ ಗುರುವಾರದ ಮಧ್ಯಾಹ್ನ ತನ್ನ ಆಫೀಸಿನ ಬಾಗಿಲು ಮುಚ್ಚಿ, ಗೇರುಕಟ್ಟೆಯಲ್ಲೊಂದು ಬೀಡಿ ಕಾರ್ಮಿಕರ ಸಭೆ ಇದೆ, ಬರಬೇಕು ಎಂದು ಆಹ್ವಾನ ಪತ್ರ ತಂದುಕೊಟ್ಟ ಪುಟ್ಟಣ್ಣನನ್ನು ಆಫೀಸಿನ ಹೊರಗೆ ನಿಲ್ಲಿಸಿಯೇ ಎರಡೇ ನಿಮಿಷ ಮಾತಾಡಿಸಿ, ಆನಂದ ಸುಗಂಧಿಯ ಮನೆ ಕಡೆ ಹೆಜ್ಜೆಹಾಕಿದ.ಸುಗಂಧಿಯ ಅಂಗಳದಲ್ಲಿ ನೆರಳಿತ್ತು. ಕೋಳಿಯಾಂದು ತನ್ನ ಮರಿಗಳೊಂದಿಗೆ ಇಡೀ ಮನೆಯ ಸರ್ವಾಧಿಕಾರಿ ತಾನೇ ಎಂಬಂತೆ ಗಂಭೀರವಾಗಿ ಅಂಗಳದಲ್ಲೇ ಕವಾಯತು ನಡೆಸಿತ್ತು. ಗೇಟು ತೆಗೆದು ಬದಿಗಿಟ್ಟು ಸುಗಂಧಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಾ, ಅವಳನ್ನು ಹೇಗೆ ರಮಿಸಬೇಕೆಂದು ಒಳಗೊಳಗೇ ಮುದಗೊಳ್ಳುತ್ತಾ ಆನಂದ ಅಂಗಳವನ್ನು ದಾಟಿ ಎರಡು ಮೆಟ್ಟಲು ಹತ್ತಿ ಬಾಗಿಲ ಹತ್ತಿರ ನಿಂತು ಬಾಗಿಲ ಮೇಲೆ ಮೆತ್ತಗೆ ಬಡಿದ.
ಒಳಗೆ ಪಾತ್ರೆ ಬಿದ್ದ ಸದ್ದಾಯಿತು. ಪಾತ್ರೆ ಇಡುವ ಹಲಗೆಯ ಮೇಲೆ ಸ್ವಸ್ಥ ಮಲಗಿಕೊಂಡಿದ್ದ ಬೆಕ್ಕು ಸುಖವಾಗಿ ನೆಲಕ್ಕೆ ಜಿಗಿದು ಮೈಮುರಿದು ಎತ್ತಲೋ ಓಡಿಹೋಯಿತು.
ಆನಂದ ಬಾಗಿಲ ಪಕ್ಕದಲ್ಲಿದ್ದ ಕಿಟಕಿಯಲ್ಲಿ ನೋಡುತ್ತಿದ್ದವನು ಮತ್ತೊಮ್ಮೆ ಸುಗಂಧೀ ಎಂದು ಕರೆದ.

6 comments:

ಸಿಂಧು Sindhu said...

ಪ್ರೀತಿಯ ಜೋಗಿ,

ನಿಮ್ಮ ಕತೆಯ ನೇಯ್ಗೆಗೆ ಮನಸ್ಸು ಸೂರೆಹೋಗಿದೆ.
ಬದುಕಿನ ಸರಳ ಸಂಗತಿಗಳನ್ನು ನಿಗೂಢವೆಂಬಂತೆ,
ಆಹಾ ಓಹೋ ಎನ್ನಬೇಕಾಗುವಂತೆ, ಮತ್ತು ಅವು ಮನದ ಮಡಿಕೆಗಳಲ್ಲಿ ಬೆಚ್ಚನೆ ನೆನಪಾಗಿ ನಿಲ್ಲುವಂತೆ ಬರೆಯುತ್ತೀರ.

ಕಾಯುತ್ತಿರುತ್ತೇನೆ ಮುಂದಿನ ಎಲ್ಲ ಕಂತುಗಳಿಗಾಗಿ..

ಪ್ರೀತಿಯಿಂದ
ಸಿಂಧು

Anonymous said...

@JOgi

ಬೆಳ್ಬೆಳ್ಗೆ ಎದ್ದು ಜೋಗಿ ಕತೆಗಳನ್ನ ಓದೋಕ್ಕೆ ಶುರು ಮಾಡಿದೆ.

ಆ ಕತೆಗಳೆಲ್ಲಾ ತುಂಬ ಸಹಜವಾಗಿ ತುಂಬ different ಆದ ಏನನ್ನೋ ಹೆಳುತ್ತಾ ಇವೆ ಅನ್ನಿಸುತ್ತಾ..ಏನು ಹೇಳುತ್ತಿವೆ ಅಂತ ಗೊತ್ತಾಗೋದ್ರೊಳಗೆ ಮುಗಿದು ಹೋಗಿ ಅಚ್ಚರಿ ಪಡಿಸಿ ಸುಮ್ಮನಾಗುತ್ತವೆ.

ಕತೆ ಹೇಳುತ್ತಿರುವವನಿಗೆ ಓದುಗನನ್ನು ಅಚ್ಚರಿಪಡಿಸುತ್ತಿದ್ದೇನೆಂಬುದರ ಬಗ್ಗೆ ಚೂರೂ ಹೆಮ್ಮೆ ಇಲ್ಲವೇನೋ ಅನ್ನುವಂತೆ ಒಂದರಮೇಲೊಂದು ಕತೆ ಬೆಳೆಯುತ್ತಾ ಹೋಗಿ ಅಚ್ಚರಿ ಸಹಜತೆಯೋ? ಸಹಜತೆಯೇ ಅಚ್ಚರಿಯೋ? ಎಂದು confuse ಮಡುತ್ತವೆ.

ಇಲ್ಲಿ ಬಂದರೆ ಇನ್ನೊಂದು ಕತೆ. ಇಷ್ಟವಾಯಿತು.

ಮಲ್ನಡ್ ಹುಡ್ಗಿ

Anonymous said...

ಜೋಗಿ ಜಾತ್ರೆ ದುನಿಯಾದಲ್ಲಿ ವೀಕ್ಷಿಸಲು ಇಲ್ಲೊಮ್ಮೆ ಭೇಟಿಯಾಗಿ
http://kannada.webdunia.com/miscellaneous/literature/articles/0712/15/1071215052_1.htm

-ಜಾಲಕ

vee ಮನಸ್ಸಿನ ಮಾತು said...

ಯಾವಾಗ ಬಂದ್ರಿ ಉಡುಪಿಯಿಂದ? ಹೇಗಿತ್ತು ಸಾಹಿತ್ಯೊತ್ಸವ

ಸುಶ್ರುತ ದೊಡ್ಡೇರಿ said...

ಒಂದಕ್ಕೊಂದು ಸಂಬಂಧವಿಲ್ಲದ ಎರಡು ಕತೆಗಳು, ಇವೆರಡಕ್ಕೂ ಸಂಬಂಧಿಸದ ಟೈಟಲ್ಲು, ಮೂರೂ ಸೇರಿ ಏನೋ ಸಂಬಂಧ ಇರಬಹುದೇನೋ ಎಂಬ ಅನುಮಾನ ಮೂಡಿಸಿ ಮತ್ತೊಮ್ಮೆ ಓದಿಸಿಕೊಂಡು, ಕೊನೆಗೂ ಅರ್ಥವಾಯಿತೋ ಇಲ್ಲವೋ ಅಥವಾ ಅರ್ಥವಾದದ್ದೇ ಸರಿಯರ್ಥವೋ ಅಲ್ಲವೋ ಎಂದೆಲ್ಲಾ ಸಂಶಯ ಕಾಡಿ... ನಿಮ್ಮ ಒಟ್ಟೂ ಬ್ಲಾಗಿನ ಮೇಲೆ ಪ್ರೀತಿ ಉಕ್ಕುವಂತೆ, ಮುಂದಿನ ಬರಹಗಳಿಗೆ ಕಾಯುವಂತೆ ಮಾಡುತ್ತದೆ. ಕವಿತೆಯಂತೆ ಕಾಡುತ್ತವೆ.

GODLABEELU said...

Sir, Enntha bareeli? summane nimma kathe oduve. Thank u sir.

- Godlabeelu