Friday, December 21, 2007

ಆಸ್ಕರ್ ಕನ್ನಡಕ್ಕೆ ಕೂಗಾಡಿದವರನ್ನು ನೆನೆದು

ನಾನು ಬೆಂಗಳೂರಿಗೆ ಬರುವ ತನಕ ನನಗೆ ಕುವೆಂಪು ಗೊತ್ತಿರಲಿಲ್ಲ. ಆದರೆ ಕಾರ್ನಾಡ್ ಗೊತ್ತಿತ್ತು.
ಹಾಗಂತ ಒರಿಸ್ಸಾದಿಂದ ಬಂದವರೊಬ್ಬರು ಮಾತಾಡುತ್ತಿದ್ದರು. ಕೇಳುತ್ತಿದ್ದವರ ನಮ್ಮವರ ಪೈಕಿ ಹಿರಿಯರೊಬ್ಬರು `ಕುವೆಂಪುಗಿಂತ ಕಾರ್ನಾಡರು ಶ್ರೇಷ್ಠ ಅನ್ನೋ ಥರ ಮಾತಾಡ್ತಿದ್ದೀರಲ್ರೀ' ಅಂತ ಎದ್ದು ನಿಂತು ಪ್ರತಿಭಟಿಸಿದರು. ಕನ್ನಡದ ಶಕ್ತಿ, ಕನ್ನಡದ ಪ್ರಾಣ, ಕನ್ನಡದ ತ್ರಾಣ ಕುವೆಂಪು ಅಂತ ಕಿರುಚಾಡಿದರು. ಭಾಷಣ ಮಾಡುತ್ತಿದ್ದವರಿಗೆ ಅದೊಂದೂ ಅರ್ಥವಾದಂತೆ ಕಾಣಲಿಲ್ಲ. ಯಾಕೆಂದರೆ ಇವರು ಪ್ರಶ್ನಿಸಿದ್ದು ಕನ್ನಡದಲ್ಲಿ.
ಆಮೇಲೆ ಅವರು ತಮ್ಮ ಮಾತಿನ ಇಂಗಿತ ವಿವರಿಸಿದರು. ನನಗೆ ಕಾರ್ನಾಡರು ಯಾಕೆ ಗೊತ್ತಿದ್ದರು ಅಂದರೆ ಅವರ ನಾಟಕಗಳು ಇಂಗ್ಲಿಷಿಗೆ ಅನುವಾದಗೊಂಡಿದ್ದವು. ಕುವೆಂಪು ಅವರ ಕೃತಿಗಳು ಅನುವಾದಗೊಂಡಿದ್ದವೋ ಏನೋ ಗೊತ್ತಿಲ್ಲ. ಆದರೆ ಅವು ಸುಲಭವಾಗಿ ಸಿಗುತ್ತಿರಲಿಲ್ಲ. ನಾನು ಪ್ರತಿಯೊಂದು ಭಾಷೆಯ ಲೇಖಕರ ಕುರಿತೂ ಕುತೂಹಲ ಇಟ್ಟುಕೊಂಡಿದ್ದೇನೆ. ಹಾಗೆ ನೋಡಿದರೆ ನಮ್ಮ ದೇಶೀಯ ಭಾಷೆಗಳಲ್ಲೇ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಮೊನ್ನೆ ಮೊನ್ನೆ ಪ್ರತಿಭಾ ನಂದಕುಮಾರ್ ಪದ್ಯದ ಅನುವಾದ ಓದಿದೆ. ಇಂಡಿಯಾದಲ್ಲೇ ಕವಿತೆ ಬರೆಯುತ್ತಿರುವವರ ಪೈಕಿ ಅವರು ಬೆಸ್ಟು. ಶಶಿ ದೇಶಪಾಂಡೆ ಇಂಗ್ಲಿಷಿನಲ್ಲಿ ಬರೆಯುತ್ತಾರೆ, ಆದರೆ ಅವರ ಬರಹಗಳಿಗೆ ಅಂಥ ಸತ್ವವಿಲ್ಲ. ಅವರಿಗಿಂತ ಎಂಕೆ ಇಂದಿರಾ ಬರೆದ ಫಣಿಯಮ್ಮ ಬೆಸ್ಟ್. ತೇಜಸ್ವಿಯ ಕತೆಯೊಂದನ್ನು ನಾನು ಅನುವಾದದಲ್ಲಿ ಓದಿದೆ. ದೆವ್ವಗಳಿದ್ದಾವೋ ಇಲ್ಲವೋ ಅಂತ ಸ್ಮಶಾನದಲ್ಲಿ ಕಾಯುತ್ತೂ ಕೂರುವ, ಅವರನ್ನು ಕೊನೆಗೆ ನಾಯಿ ಹಿಂಬಾಲಿಸಿಕೊಂಡು ಬರುವ ವಿಚಿತ್ರ ಕತೆ ಅದು. ಆದರೆ ನನಗೆ ಅನುವಾದದಲ್ಲಿ ಅದು ಇಷ್ಟವಾಗಿರಲಿಲ್ಲ. ಇಲ್ಲಿಗೆ ಬಂದಾಗ ಗೆಳೆಯರೊಬ್ಬರು ಅದನ್ನು ಸರಳವಾಗಿ ವಿವರಿಸಿದರು. ಎಂಥ ಗ್ರೇಟ್ ಕತೆ ಅನ್ನಿಸಿತು. ಕಾರಂತರ ಚೋಮನನ್ನೂ ಅನುವಾದದಲ್ಲಿ ಓದಿದ್ದೇನೆ. ಚೋಮಾ'ಸ್ ಡ್ರಮ್ ಅಂತೇನೋ ಅದು ಅನುವಾದಗೊಂಡಿದೆ. ಅದರ ಮೊದಲ ವಾಕ್ಯ, ಕತ್ತಲೋ ಕತ್ತಲು ಅನ್ನುವುದು ಇಂಗ್ಲಿಷಿಗೆ ಬರುವ ಹೊತ್ತಿಗೆ It's pitch dark ಅಂತಾಗಿತ್ತು. ಈಗೀಗ ಕೊಂಚ ಕನ್ನಡ ಕಲಿತ ನಂತರ ಅವರೆಡರ ವ್ಯತ್ಯಾಸ ಸ್ಪಷ್ಟವಾಗುತ್ತಿದೆ.
ಹೀಗೆ ಅವರು ಸ್ಪಷ್ಟವಾಗಿ ಮಾತಾಡುತ್ತಾ ಹೋದರು. ಇಂಥ ಪುಟ್ಟ ಸೆಗಳಲ್ಲೇ ಸತ್ಯ ಹೊರಬೀಳುತ್ತದೆ. ಗುಂಪುಗುಂಪಾಗಿ ಸೇರಿದಾಗ ಬರೀ ಪೊಲಿಟಿಕ್ ಕರೆಕಎಂಬ ಸವಕಲು ಪದಕ್ಕೆ ಅರ್ಥ ತುಂಬುವುದಕ್ಕೆ ನಾವು ಪಾಡುಪಡುತ್ತಿರುತ್ತೇವೆ.
ಕೇರಳದಿಂದ ಬಂದ ಮತ್ತೊಬ್ಬ ಲೇಖಕರ ಪೈಕಿ ಕನ್ನಡ ಸಾಹಿತ್ಯ ಪರಿಷತ್ತು ಮೂರ್ಖ ಕೆಲಸ ಮಾಡುತ್ತಿದೆ. ಇಂಗ್ಲಿ್ ಬೋರ್ಡುಗಳಿಗೆ ಮಸಿ ಬಳಿಯುವುದು, ಎಲ್ಲಾ ಬೋರ್ಡುಗಳೂ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳುವುದು ಒಂದು ಭಾಷೆಯನ್ನು ಉಳಿಸುವ, ಬೆಳೆಸುವ ಕ್ರಮ ಅಲ್ಲ. ಅವರ ವಾದ ಎಷ್ಟು ಸಮರ್ಥವಾಗಿತ್ತು ಅಂದರೆ ಪರಭಾಷಿಗರಿಗೆ ಕನ್ನಡ ಕಲಿಸುವ ಮೊದಲು ನೀವು ಕನ್ನಡಿಗರಿಗೇ ಕನ್ನಡ ಓದುವುದಕ್ಕೆ ಬರೆಯುವುದಕ್ಕೆ ಕಲಿಸಬೇಕು. ಕರ್ನಾಟಕದಲ್ಲಿ ಅಕ್ಪರತೆಯ ಪ್ರಮಾಣ ಎಷ್ಟಿದೆ ಅಂತ ಅವರು ಕೇಳಿದ್ದಕ್ಕೆ ನಮ್ಮಲ್ಲಿ ಸರಿಯಾದ ಉತ್ತರ ಇರಲಿಲ್ಲ. ಮೊದಲು ಅನಕ್ಪರಸ್ತ ಕನ್ನಡಿಗರಿಗೆ ಅಕ್ಪರ ಕಲಿಸಿ, ಅವರು ಕನ್ನಡ ಓದುವಂತೆ ಮಾಡಿ. ಆಮೇಲೆ ಪರಭಾಷಿಗರು ಕನ್ನಡ ಕಲಿಯುವಂತೆ ಮಾಡೋಣ. ಅರ್ಧಕ್ಕರ್ಧದಷ್ಟು ಮಂದಿಯಾದರೂ ಭಾಷೆ ಗೊತ್ತಿಲ್ಲದವರು ಇದ್ದಾರೆ ತಾನೇ? ಅವರು ಕನ್ನಡ ಕಲಿತು ಓದೋಕೆ ಶುರುಮಾಡಿದರೆ ಸಾಕು, ಕನ್ನಡ ಉದ್ಧಾರವಾಗುತ್ತದೆ.
ಅವರ ಮತ್ತೊಂದು ವಾದ ಮತ್ತೂ ಚೆನ್ನಾಗಿತ್ತು. ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಬೇಕು. ಒಬ್ಬ ಕನ್ನಡ ಲೇಖಕ ರಾಷ್ಟ್ರಕ್ಕೆ, ದೇಶವಿದೇಶಗಳಿಗೆ ಪರಿಚಯ ಆದನೆಂದರೆ ಆ ಭಾಷೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಿತು ಅಂತಲೇ ಅರ್ಥ. ಯುರೋಪಿನ ಸಣ್ಣಪುಟ್ಟ ಭಾಷೆಗಳೆಲ್ಲ ಬದುಕಿರೋದು ಅಲ್ಲಿನ ಸಾಹಿತ್ಯದಿಂದಲೇ. ಸ್ಪ್ಯಾನಿಷ್ ಭಾಷೆ ಮಾತಾಡುವ ಮಂದಿ ಜಗತ್ತಿನಲ್ಲಿ ಕನ್ನಡಿಗರಿಗಿಂತ ಕಡಿಮೆ. ಆದರೆ ಮಾರ್ಕೆಸ್ ನಿಂದಾಗಿ ಇವತ್ತು ಎಲ್ಲರಿಗೂ ಸ್ಪ್ಯಾನಿಷ್ ಬಗ್ಗೆ ಗೊತ್ತು. ನೊಬೆಲ್ ಪ್ರಶಸ್ತಿ ಗೆದ್ದವರ ಪಟ್ಟಿ ನೋಡಿದರೆ ಅರ್ಧಕ್ಕಿಂತ ಹೆಚ್ಚು ಮಂದಿ ಇಂಗ್ಲಿಷ್ ಗೊತ್ತಿಲ್ಲದವರೇ ಇದ್ದಾರೆ. ಅವರೆಲ್ಲ ಅನುವಾದಗೊಂಡು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
ಕುವೆಂಪು ಸಾಧನೆಯೇನೂ ಕಡಿಮೆ ಅಲ್ಲ. ಅವರು ಬರೆಯುತ್ತಿದ್ದಾಗಿನ ಪರಿಸ್ಥಿತಿಯನ್ನು ನಾನು ಅಧ್ಯಯನ ಮಾಡಿದ್ದೇನೆ. ಹೇಗೆ ಅವರು ಏಕಕಾಲಕ್ಕೆ ಅನಕ್ಪರಸ್ತರ ಘನತೆಯನ್ನು ಎತ್ತಿಹಿಡಿಯುತ್ತಲೇ, ಅಕ್ಪರಸ್ತರ ಪ್ರೀತಿಯನ್ನು ಸಂಪಾದಿಸಿದರು ಅನ್ನೋದು ಕುತೂಹಲಕಾರಿ. ಅವರು ಆಡುಭಾಷೆಯಲ್ಲಿ ಬರೆದಿದ್ದರೆ ಅದನ್ನು ಸಾಹಿತ್ಯಕ್ಪೇತ್ರ ಖಂಡಿತಾ ತಿರಸ್ಕರಿಸುತ್ತಿತ್ತು. ಆದರೆ ಯಾವಾಗ ಅವರು ಶಿಷ್ಠ ಭಾಷೆಯಲ್ಲಿ ಘನವಾಗಿ ಬರೆದರೋ ಆಗ ಅವರ ಒಟ್ಟು ವ್ಯಕ್ತಿತ್ವಕ್ಕೂ ಒಂದು ಮೆರುಗು ಬಂತು. ಮಾತಾಡುವ ಮುಂಚೆ ಮಾತಾಡುವುದಕ್ಕೆ ಬೇಕಾದ ಘನತೆಯನ್ನು ಅಧಿಕಾರಯುತ ನಿಲುವನ್ನು ಗಳಿಸಿಕೊಳ್ಳುವುದು ಮುಖ್ಯ. ಹೇಳುವವನ ವ್ಯಕ್ತಿತ್ವ ಕೂಡ ಆಡುವ ಮಾತಿಗೆ ತೂಕ ತರುತ್ತದೆ.

ಒಂದು ಟಿಪ್ಪಣಿ- ಕೊಂಕಣಿ ಮಾತೃಭಾಷೆ ಆಗಿರುವ ಆಸ್ಕರ್ ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ತಪ್ಪಾಗಿ ಒಂದೆರಡು ಪದಗಳನ್ನು ಉಚ್ಛರಿಸಿದರು. ಅಷ್ಟಕ್ಕೇ ಸಿಟ್ಟಾದ ಕನ್ನಡ ಹೋರಾಟಗಾರರು ಗದ್ದಲ ಆರಂಭಿಸಿದರು. ಇದು ಕನ್ನಡಕ್ಕಷ್ಟೇ ಸೀಮಿತವಾದ ವಿಚಿತ್ರ ಪ್ರತಿಭಟನೆ. ಮುಂದೆ ಆಸ್ಕರ್ ಎಂದೂ ಸಾಹಿತ್ಯ ಸಮ್ಮೇಳನಕ್ಕೆ ಬರುವುದಿಲ್ಲ. ಕನ್ನಡ ಮಾತಾಡುವುದಿಲ್ಲ.
ಪಾರ್ವತಮ್ಮ ರಾಜ್ ಕುಮಾರ್ ಹೇಳುತ್ತಿದ್ದರು- ನಮ್ಮ ಕನ್ನಡ ಪ್ರೀತಿ ವಿಚಿತ್ರ. ಹೊರಗಿನಿಂದ ಪ್ರತಿಭಾವಂತರನ್ನು ಕರೆಸುತ್ತೇವೆ. ಅವರು ಇಂಗ್ಲಿಷಿನಲ್ಲಿ ಮಾತಾಡುವಾಗ ಒಂದು ಕೀರಲು ಸ್ವರ ಕನ್ನಡದಲ್ಲಿ ಮಾತಾಡಯ್ಯೋ ಅಂತ ಕಿರುಚುತ್ತದೆ. ಆತ ಕನ್ನಡ ಮಾತಾಡಿದರೆ ನಮ್ಮ ಭಾಷೆ ಉಳಿಯುತ್ತಾ ಇಲ್ಲವಾ ಬೇರೆ ಪ್ರಶ್ನೆ. ಕನ್ನಡದ ಮಾನವಂತೂ ಹೋಗುತ್ತೆ.

1 comment:

Anonymous said...

ಈ ವಿಶ್ಯ ಆಗೊವಾಗ ನಾವು ಅಲ್ಲೇ ಪಕ್ಕದ ಬೊಕ್ಕ್ಸ್ ಸ್ಟಲ್ಲ್ಗಳಲ್ಲಿ window shoppin ಮಾಡ್ತಾ ವಿವೇಕಾನನಂದರ smartness ನ ಹೊಗಳ್ತಾ ನಿಂತಿದ್ದ್ವಿ sudden ಆಗಿ ಯಕ್ಷಗಾನದ sound ಕೇಳಿ ಬೆಚ್ಚಿ ಬಿದ್ದೆ. 'ಎನಾಯ್ತಪ್ಪ ಸಾಹಿತ್ಯ ಸಮ್ಮೇಳನದಲ್ಲೂ ಯಕ್ಷಗಾನವೇ??' ಅಂತ ಯೋಚಿಸುತ್ತಿರುವಾಗ ಇದೆಲ್ಲ ಕಾಮನ್ನು ನಿವು books ನೋಡಿ ಅಂದ್ರು ಬುಕ್ ಸ್ಟಾಲ್ ನವರು.. ಅಮೇಲೇ ಗೊತ್ತಾಗಿದ್ದು ಅದು ಯಕ್ಷಗಾನ ಅಲ್ಲ so called ಕನ್ನಡ ಪ್ರೇಮಿಯ ಪ್ರಲಾಪ ಅಂತ!

ಮಲ್ನಡ್ ಹುಡ್ಗಿ