Thursday, December 6, 2007

ಸತ್ಪುರುಷನ ಹೆಣಕ್ಕೆ ಸಜ್ಜನನ ಹೆಗಲು ಹಾಗೂ ಧ್ಯಾನವೆಂಬ ಐಷಾರಾಮ

ಈ ಕೆಳಗಿನ ಎರಡೂ ಪದ್ಯಗಳನ್ನು ಸುಮ್ಮನೆ ಓದಿಕೊಳ್ಳಿ. ಮತ್ತೆ ಮತ್ತೆ ಓದಿಕೊಳ್ಳಿ. ಮೊದಲನೆಯದು ಎ. ಕೆ. ರಾಮಾನುಜ್ ಬರೆದದ್ದು. ಎರಡನೆಯ ಪದ್ಯ ಮೂಡ್ನಾಕೂಡು ಚಿನ್ನಸ್ವಾಮಿಯವರದು. ಎರಡರಲ್ಲೂ ಕವಿ ತಾನೊಂದು ಮರವಾಗಿರುವ ಸ್ಥಿತಿಯ ಬಗ್ಗೆ ಧ್ಯಾನಿಸಿದ್ದಾರೆ.

ಧ್ಯಾನ ಫಲಿಸಿದರೆ

ಇಡೀ ದಿನ ನಾನು ಒಂದು ಮರ
ನಾನೂ ಒಂದು ಕರಿಯ ವಾಲ್ನಟ್ ಮರ ಅಂತ
ಧ್ಯಾನ ಮಾಡಿದೆ.
ಸಂಜೆ ಹೊತ್ತಿಗೆ ಮೂರನೇ ಮನೆಯ ಬಿಳಿಜೂಲುನಾಯಿ
ಮೂಸುತ್ತಾ ಬಂದು ಹಿಂಗಾಲೆತ್ತಿ ನನ್ನ ಕಾಲ ಮೇಲೆ
ಬೆಚ್ಚಗೆ
ಒಂದ ಮಾಡಿತು.
ರಾತ್ರಿ ದೊಡ್ಡ ಮಳೆ, ಬಿರುಗಾಳಿ ಬೀಸಿ
ಬುಡಸಮೇತ ಮರ ಉರುಳಿ ಆಕಾಶಕ್ಕೆ
ಬೇರೆತ್ತಿ ತೋರಿಸಿತು.
ಮುನಿಸಿಪಾಲಿಟಿಯವರು ಲಾರಿ
ಎಲೆಕ್ಟ್ರಿಕಗರಗಸ ತಂದು ಕಡಿದು
ತುಂಬಿಕೊಂಡು ಹೋದರು.
ಬಡಗಿ ಸಣ್ಣ ಗರಗಸ ಆಡಿಸಿ ಹತ್ತರಿ ಹೊಡೆದು
ಜೇನುಗೂಡಿನ ಮೇಣ ಹಾಕಿ ಪಾಲಿಷ್ ಮಾಡಿ
ಮೇಜು ಕುರ್ಚಿ ಎಲ್ಲಾ ಮಾಡಿಕೊಟ್ಟ.
ಉಳಿದ ಎಲೆ ತೊಗಟೆ ನಾರು ಇದನ್ನೆಲ್ಲ ಅರೆದು
ಸೋಸಿ ಪೇಪ್ ಕಾರ್ಖಾನೆ
ಕಾಗದ ಮಾಡಿಕೊಟ್ಟಿತು.
ಈಗ ಇಲ್ಲಿ ಕುರ್ಚಿಯ ಮೇಲೆ ಕೂತು
ಮೇಜಿನ ಮೇಲೆ ಕಾಗದ ಹರಡಿ ಇದನ್ನೆಲ್ಲ
ಬರೆಯುತ್ತಿರುವುದು
ನಾನು ನನ್ನ ರುಂಡಮುಂಡದ ಮೇಲೆ.
ಅದೇನೋ ಕಾಲೇ ಕಂಬ ಶಿರವೇ ಕಲಶ
ಅಂದರಲ್ಲ ಹಾಗೆ ಆಗಿಬಿಟ್ಟಿದೆ.

ನಾನೊಂದು ಮರವಾಗಿದ್ದರೆ

ನಾನೊಂದು ಮರವಾಗಿದ್ದರೆ
ಹಕ್ಕಿಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಿಸಿಲು ನನ್ನ ಅಪ್ಪಿಕೊಂಡಾಗ
ನೆರಳಿಗಾಗುತ್ತಿರಲಿಲ್ಲ ಮೈಲಿಗೆ
ತಂಬೆಲರ ಕೂಡ ಎಲೆಗಳ ಸ್ನೇಹ
ಮಧುರವಾಗಿರುತ್ತಿತ್ತು.
ಮಳೆ ಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯುತ್ತಿರಲಿಲ್ಲ. ನಾನು
ಬೇರೂರಿ ಕುಡಿಯಿಡುತ್ತಿರುವಾಗ ಭೂದೇವಿ
ಮಡಿ ಮಡಿ ಎಂದು ಓಡುತ್ತಿರಲಿಲ್ಲ.
ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜಿ
ತುರಿಕೆ ತೀರಿಸಿಕೊಳ್ಳುವಾಗ ಅದರ ಅಂಗಾಂಗಗಳಲ್ಲಿ
ಅಡಗಿಕೊಂಡ ಮುಕ್ಕೋಟಿ ದೇವತೆಗಳು
ನನ್ನನ್ನು ಮುಟ್ಟಿಸಿಕೊಳ್ಳುತ್ತಿದ್ದರು.
ಯಾರಿಗೆ ಗೊತ್ತು
ನನ್ನ ಅಂತ್ಯಕಾಲದಲ್ಲಿ
ಕಡಿದು ತುಂಡಾದ ಒಳ ಸೀಳೊಂದು
ಹೋಮಾಗ್ನಿಯಲ್ಲಿ ಬೆಂದು
ಪಾವನವಾಗುತ್ತಿತ್ತೇನೋ
ಅಥವಾ
ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ
ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೇ?

-1-
ಎ.ಕೆ. ರಾಮಾನುಜ್ ಬರೆದಿರುವ `ಧ್ಯಾನ ಫಲಿಸಿದಾಗ' ಕವಿತೆ ದೈನಿಕದಿಂದ ಆಧ್ಯಾತ್ಮಿಕ ಜಗತ್ತಿಗೆ ಏರಲು ನಿರಂತರ ಹವಣಿಸುತ್ತಾ ಒಬ್ಬ ಬರಹಗಾರನ ಶ್ರದ್ಧೆ, ನಿಷ್ಠೆ ಮತ್ತು ಏಕಾಗ್ರತೆಯ ದರ್ಶನ ಮಾಡಿಸುತ್ತದೆ. ಕವಿ ಇಲ್ಲಿ ತಾನೊಂದು ಮರ ಎಂಬಂತೆ ಧ್ಯಾನಿಸುತ್ತಾನೆ. ಈ ಧ್ಯಾನದ ಪ್ರಸ್ತಾಪದ ಮರುಸಾಲಲ್ಲೇ ಆ ಏಕಾಗ್ರತೆಯನ್ನು ಗೇಲಿ ಮಾಡುವ `ಒಂದು ನಾಯಿ ಹಿಂಗಾಲೆತ್ತಿ ಒಂದಮಾಡುವ' ಪ್ರಸ್ತಾಪವಿದೆ. ಧ್ಯಾನಸ್ಥ ಸ್ಥಿತಿಯಲ್ಲಿ ಮುಟ್ಟಬಾರದ ಶ್ವಪಚ ಶ್ವಾನದಿಂದ ಮುಟ್ಟಿಸಿಕೊಳ್ಳಬೇಕಾಗಿ ಬರುತ್ತದೆ ಅನ್ನುವುದನ್ನೂ ಕವಿ ಸೂಚ್ಯವಾಗಿ ಹೇಳುತ್ತಿರುವಂತಿದೆ. ಇಲ್ಲಿ ಕವಿ ಧ್ಯಾನದ ಸ್ಥಿತಿಯನ್ನು ಉದ್ದಕ್ಕೂ ನಿರಾಕರಿಸುತ್ತಾ ಹೋಗಿದ್ದಾರೆ ಅನ್ನುವ ಭಾವನೆಯನ್ನು ಮೂಡಿಸುತ್ತಾರೆ. ಉದಾಹರಣೆಗೆ ಧ್ಯಾನಸ್ಥನಾಗಿದ್ದ ಹೊತ್ತಲ್ಲೇ ಆ `ಮರಕವಿ'ಯನ್ನು ಗಾಳಿ ಬುಡಮೇಲು ಮಾಡುತ್ತದೆ. ಕಾರ್ಪೋರೇಷನ್ನಿನವರು ಕತ್ತರಿಸಿ ಕೊಂಡು ಹೋಗುತ್ತಾರೆ. ಬಡಗಿ ಅದರಿಂದ ಮೇಜು ಕುರ್ಚಿ ಮಾಡುತ್ತಾನೆ. ತೊಗಟೆ ಮತ್ತು ಎಲೆಗಳಿಂದ ಕಾಗದ ತಯಾರಾಗುತ್ತದೆ.
ಅಲ್ಲಿಗೇ ಕವಿತೆ ಮುಗಿದಿದ್ದರೆ ಅದೊಂದು ತಮಾಷೆಯ ಪದ್ಯವಾಗಿಯೇ ಉಳಿದುಬಿಡುತ್ತಿತ್ತು. ಧ್ಯಾನ ಫಲಿಸುವುದು ಕೊನೆಯ ಸಾಲುಗಳಲ್ಲಿ; ನಾನೀಗ ಇದನ್ನು ಬರೆಯುತ್ತಿರುವುದು ನನ್ನ ರುಂಡಮುಂಡದ ಮೇಲೆ ಎನ್ನುವ ಹೊತ್ತಿಗೆ ಕವಿಗೆ ಮತ್ತೊಂದು ಜಗತ್ತಿನ ದರ್ಶನವೂ ಆಗಿಹೋಗಿದೆ. ಕವಿ ಸತ್ತು ಬದುಕಿ ಬರೆದಾಗಲೇ ಕಾವ್ಯ ಹುಟ್ಟುತ್ತದೆ ಅನ್ನುವ ಹಳೆಯ ನಂಬಿಕೆ. ಬರೆಯುತ್ತಾ ಬರೆಯುತ್ತಾ ಆ ಅನುಭವಕ್ಕೆ ಸಾಯುತ್ತಾ ಹೋಗುತ್ತಾನೆ ಅನ್ನುವ ಪಾಶ್ಚಾತ್ಯ ಸಿದಾ್ಧಂತ, ಎಲ್ಲಾ ಅನುಭವಗಳನ್ನೂ ಆತ ಮೈಗೂಡಿಸಿಕೊಂಡು ಬರೆಯಬೇಕು, ನಾಯಿಯಿಂದ ಒಂದ ಮಾಡಿಸಿಕೊಂಡ ಅವಮಾನ, ಗರಗಸದಿಂದ ಕತ್ತರಿಸಿಕೊಂಡ ನೋವು, ರೂಪಾಂತರಗೊಂಡು ಕಾಗದವಾಗುವ ಪ್ರಕ್ರಿಯೆ, ಮೇಜುಕುರ್ಚಿಯಾಗಿ ಉಪಯುಕ್ತವಾಗುವ ಸಾಧ್ಯತೆ- ಎಲ್ಲವೂ ಇದ್ದಾಗಷ್ಟೇ ಕಾವ್ಯ ಅರ್ಥಪೂರ್ಣವಾಗುತ್ತದೆ ಎನ್ನುವ ಅರಿವಿನೊಂದಿಗೆ ಪದ್ಯ ಕೊನೆಯಾಗುತ್ತದೆ. ಕೊನೆಯಲ್ಲಿ ಬಸವಣ್ಣನ ವಚನದ ಸಾಲನ್ನು ಕೊಂಚ ತಮಾಷೆಯಾಗಿಯೇ ತಂದಿದ್ದಾರೆ ರಾಮಾನುಜ್. ಕಾಲೇ ಕಂಬ ಶಿರವೇ ಕಲಶ ಆಗುವುದು ಕೂಡ ಕಾವ್ಯದಷ್ಟೇ ಕಷ್ಟದ ಕೆಲಸ. ಕಾವ್ಯ ಬರೆಯುವಷ್ಟೇ ತಾದಾತ್ಮ್ಯದ ಕೆಲಸ ಅನ್ನುವುದನ್ನೂ ಕವಿತೆ ಸೂಕ್ಪ್ಮವಾಗಿ ಹೇಳುತ್ತದೆ. ಇಲ್ಲಿಯ ಕವಿಯ ಧ್ಯಾನ
ಐಹಿಕದ ಅವಮಾನಗಳನ್ನೂ ಪಡಿಪಾಟಲುಗಳನ್ನೂ ಮೀರಿದ್ದು. ಕವಿ ತಾನೊಂದು ಮರ ಅಂತ ಧ್ಯಾನಿಸಿದಾಗಷ್ಟೇ ಆತನಿಗೆ ಇಂಥ ಅನುಭವ ಮೂಡಲು ಸಾಧ್ಯ. ಆತ ಹಾಗೆ ಧ್ಯಾನಿಸುವುದಕ್ಕೆ ವಿರಾಮ, ನೆಮ್ಮದಿ, ಐಷಾರಾಮ ಎಲ್ಲವೂ ಬೇಕು.
-2-
ಮೂಡ್ನಾಕೂಡು ಚಿನ್ನಸ್ವಾಮಿ ಬರೆದ `ನಾನೊಂದು ಮರವಾಗಿದ್ದರೆ' ಧ್ಯಾನ ಫಲಿಸಿದಾಗದಂಥ ಕವಿತೆಗಿಂತ ಭಿನ್ನವಾದದ್ದು. ಇಲ್ಲಿ ನಾನೊಂದು ಮರವಾಗಿದ್ದರೆ ಅನ್ನುವ ಆಶಯ ಧ್ಯಾನವಲ್ಲ, ಅವಮಾನವನ್ನು ಮೀರುವ ಸನ್ನಾಹ. ತನ್ನ ಸ್ಥಿತಿಯನ್ನು ದಾಟುವ ಅಪ್ರಜ್ಞಾಪೂರ್ವಕ ಹವಣಿಕೆ. ಅದು ಕವಿಯ ಕಾವ್ಯಾತ್ಮಕ ಅಭಿವ್ಯಕ್ತಿಯೋ ಧ್ಯಾನವೋ ಅಲ್ಲ. ಅವಮಾನಿತ ವ್ಯಕ್ತಿಯೊಬ್ಬನ ಆಶಯ.
ತಾನು ಮರವಾಗಿದ್ದರೆ ತನ್ನ ಸಾಮಾಜಿಕ ನೆಲೆ, ಸ್ವೀಕಾರ ಇದಕ್ಕಿಂತ ಉತ್ತಮವಾಗಿರುತ್ತಿತ್ತು ಅನ್ನುವುದನ್ನು ಇಲ್ಲಿ ಕವಿ ಯಾವ ಸಂಕೇತಗಳ ನೆರವೂ ಇಲ್ಲದೇ ಹೇಳುತ್ತಾ ಹೋಗುತ್ತಾನೆ.
ಇಷ್ಟೊಂದು ನೇರವಾಗಿ ಮತ್ತು ಮುಕ್ತವಾಗಿ ಹೇಳುವುದು ಸಾಮಾನ್ಯವಾಗಿ ಕವಿತೆಯಾಗುವುದಿಲ್ಲ. ಕವಿಯ ಮರವಾಗಿದ್ದರೆ ಅನ್ನುವ ಕಲ್ಪಿತ ಸ್ಥಿತಿಯೂ, ಸುಂದರ ಹುಡುಗಿ ಎದೆಗವಚಿಕೊಂಡು ನಡೆಯುವ ಪುಸ್ತಕ ನಾನಾಗಿದ್ದರೆ ಅನ್ನುವ ಪಡ್ಡೆ ಹುಡುಗನ ಆಶಯಕ್ಕೂ ಮೇಲ್ನೋಟಕ್ಕೆ ಅಂಥ ವ್ಯತ್ಯಾಸ ಇಲ್ಲ. ಆದರೆ ಮೂಡ್ನಾಕೂಡು ಈ ಸರಳ ಆಶಯವನ್ನು ತಮ್ಮ ತಣ್ಣನೆಯ ವ್ಯಂಗ್ಯದಿಂದ, ನಿರುಮ್ಮಳದ ದನಿಯಿಂದ ಮತ್ತು ಒಂದು ಹಂತದಲ್ಲಿ ವಿನಯ ಎಂದೇ ಭಾಸವಾಗುವ ಮಾತುಗಳಿಂದ ಕಾವ್ಯವಾಗಿಸುತ್ತಾರೆ. ಮರವಾಗಿದ್ದರೆ ಅನ್ನುವ ಆಶಯವೊಂದು ನಮಗೇ ಗೊತ್ತಿಲ್ಲದ ಹಾಗೆ ನಮ್ಮೊಳಗೆ ರೂಪಕವಾಗಿ ಬೆಳೆಯುತ್ತದೆ.
ಕವಿ ಸೂಕ್ಪ್ಮಜ್ಞನಲ್ಲದೇ ಹೋಗಿದ್ದರೆ ನಾನೊಂದು ಮರವಾಗಿದ್ದರೆ, ನನ್ನನ್ನು ಶ್ವಪಚನೆಂದ ಕರೆದವನ ಮೇಲೆ ಉರುಳಬಹುದಾಗಿತ್ತು. ಕೊಡಲಿಯ ಕಾವಾಗಿ ಆತನನ್ನು ಸಂಹಾರ ಮಾಡಬಹುದಾಗಿತ್ತು. ಅಂಥವರ ವಂಶ ನಿರ್ವಂಶ ಮಾಡುವ ಕಾಡ್ಗಿಚ್ಚಿಗೆ ಸೌದೆಯಾಗಿ ಒದಗಬಹುದಾಗಿತ್ತು ಎಂದೆಲ್ಲ ಹೇಳಿ ಆಕ್ರೋಶ ಸೂಚಿಸುತ್ತಿದ್ದ. ಹಾಗೆ ಹೇಳಿದಾಗ ಅದು ಸಮಾಜದಿಂದ ದೂರ ಉಳಿಯುವ, ಕನ್ನಡ ಸಿನಿಮಾಗಳಲ್ಲಿ ಕಂಡು ಬರುವ, ರೋಷಾವೇಷದ ಭಾಷಣಗಳಂತೆಯೋ, ಸಿದ್ಧಲಿಂಗಯ್ಯನವರ ಆರಂಭದ ಕವಿತೆಗಳಲ್ಲಿದ್ದ ಆಕ್ರೋಶದಂತೆಯೋ ಕಂಡುಬರುತ್ತಿತ್ತು. ಆದರೆ ನಿಮ್ಮ ಮಧ್ಯೆ ಮರವಾಗಿದ್ದಾದರೂ ನಿಮ್ಮಂತಾಗುತ್ತೇನೆ. ನಿಮಗೆ ಹತ್ತಿರವಾಗುತ್ತೇನೆ, ನಿಮ್ಮಲ್ಲೊಬ್ಬನಾಗುತ್ತೇನೆ ಅನ್ನುವ ವಿನಯವೇ ಆ ಆಕ್ರೋಶಕ್ಕಿಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಇತ್ತೀಚಿನ ವರುಷಗಳಲ್ಲಿ ಬಂದ ಒಂದು ಪರಿಪೂರ್ಣ ಕವಿತೆಯಾಗಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಕಾವ್ಯ ಕಂಗೊಳಿಸುತ್ತದೆ.
*****
ಸಾಮಾಜಿಕ ಸ್ಥಿತಿಗತಿಯೇ ಹೇಗೆ ಕಾವ್ಯಕಟ್ಟುವ ಕ್ರಮವನ್ನೂ ಚಿಂತನೆಯನ್ನೂ ಧ್ಯಾನಿಸುವ ಪರಿಯನ್ನೂ ನಿರ್ಧರಿಸುತ್ತದೆ ಅನ್ನುವುದಿಲ್ಲಿ ಕುತೂಹಲಕಾರಿ. ಮನಸ್ಸು ಮಾಡಿದರೆ ಮೂಡ್ನಾಕೂಡು ಒಂದಲ್ಲ ಒಂದು ದಿನ ಎಕೆ ರಾಮಾನುಜ್ ಬರೆದಂಥ ಪದ್ಯ ಬರೆಯಬಹುದು. ಆದರೆ ರಾಮಾನುಜ್ ಥರದ ಕವಿಗಳಿಗೆ ಮೂಡ್ನಾಕೂಡು ಬರೆದ ಹಾಗೆ ಬರೆಯುವುದು ಸಾಧ್ಯವೇ ಆಗುತ್ತಿರಲಿಲ್ಲ. ಒಂದೇ ವೇಳೆ ಬರೆದಿದ್ದರೂ ಅದು ಆರೋಪಿಸಿಕೊಂಡ ಭಾವದಂತೆ ಭಾಸವಾಗುತ್ತಿತ್ತೇ ವಿನಾ ಅದರಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇರುತ್ತಿರಲಿಲ್ಲ.
ನಮ್ಮ ಕಾವ್ಯಲೋಕ ಎಷ್ಟು ಶ್ರೀಮಂತ ಅನ್ನುವುದಕ್ಕೆ ಸಾಕ್ಪಿಯಾಗಿಯೂ ಈ ಕವಿತೆಗಳನ್ನು ಒಟ್ಟೊಟ್ಟಿಗಿಟ್ಟು ನೋಡಬಹುದು.
ಹೀಗೆ ಥಟ್ಟನೆ ಇವೆರಡೂ ಪದ್ಯಗಳು ನೆನಪಾಗುವಂತೆ ಮಾಡಿದ್ದು ಕೆ. ವಿ. ಅಕ್ಪರ ಸಂಪಾದಿಸಿದ ದೇಶಕಾಲ ಪ್ರಕಟಿಸಿದ `ಪದ್ಯದ ಮಾತು ಬೇರೆ' ಸಂಕಲನ. ಇಂಥ ಪ್ರಯತ್ನಗಳು ನಡೆದಾಗಲೇ ಕಾವ್ಯ ಮರುಹುಟ್ಟು ಪಡಕೊಳ್ಳುತ್ತಾ ಹೋಗುತ್ತದೆ ಅಲ್ಲವೇ?

4 comments:

Joey said...

ಜೋಗಿ ಉರ್ಫ್ ಗಿರೀಶ್ ರಾವ್, ಈ ಬರಹ ನನಗೆ ತುಂಬಾ ಇಷ್ಟವಾಯಿತು. ಬೇರೆ ಬೇರೆ ಕಾಲಘಟ್ಟದಲ್ಲಿ ಇಬ್ಬರು ಮಹನೀಯರು ಹೀಗೆ ತಮ್ಮ ಆಶಯಗಳನ್ನು ಒಂದೇ ವಸ್ತುವಿನೋಡನೆ ಹೋಲಿಸಿಕೊಂಡು ಬರೆದಿರುವುದನ್ನು ನೋಡಿದರೆ ಸೋಜಿಗವೆನಿಸುತ್ತದೆ. ನಾನು ಈ ಎರಡೂ ಪದ್ಯವನ್ನೂ ಓದಿರಲಿಲ್ಲ. ಎರಡನೆಯ ಪದ್ಯ ಸ್ವಲ್ಪ ನೇರವಾಗಿದ್ದರೂ, ಮೊದಲ ಪದ್ಯಕ್ಕೆ ನೀವು ನೀಡಿದ ವಿವರಣೆ ನನ್ನನ್ನು ಮತ್ತಷ್ಟು ಗಾಢವಾಗಿ ಸೆಳೆಯಿತು. ನಿಮ್ಮ ಈ ಬರಹಕ್ಕೆ ನನ್ನ ನಾಲ್ಕು ನಾಲ್ಕು ನನ್ನಿ.

Anu said...

First poem is simply good sir. and i feel it has flavor of practical things...which was held in our society and all trees are cut like this and road side area looks graveyard...

Anonymous said...

ಮೊದಲು ಕವಿತೆಯನ್ನು ಓದಿದಾಗ ಮೂಡ್ನಾಕೋಡು ಚಿನ್ನಸ್ವಾಮಿಯವರ ಕವಿತೆಯಲ್ಲಿನ ವಿನಯ ನನ್ನಲ್ಲಿ ಗೊಂದಲ ಹುಟ್ಟಿಸಿತು. ಅವಮಾನವನ್ನು ಸಹಿಸಿದ ಮನುಷ್ಯನ ಆಶಯವನ್ನು ಹೀಗೆ ಹೇಳಬಹುದೇ ಎಂಬ ಸಂಶಯ ಮೂಡಿತು. ಬಹುಶಃ ಜಾತಿ ಪದ್ಧತಿಯಂತಹ ವ್ಯವಸ್ಥೆಯನ್ನು ಹೆಗಲ ಮೇಲಿನ ಹೊರೆಯಂತೆ ಭಾವಿಸಿಕೊಂಡ, ಅದು ತನ್ನ ಹಣೆಬರಹ ಎಂದು ತೀರ್ಮಾನಿಸಿದ ದಲಿತನ ಆಶಯವನ್ನು ಕವಿತೆ ಬಿಂಬಿಸುವಂತೆ ಕಾಣುತ್ತದೆ.
ಕವಿತೆಗಳಿಗೆ ಮರುಹುಟ್ಟು ನೀಡುವ ಪ್ರಕಾರಗಳಲ್ಲಿ ನಿಮ್ಮ ಬರಹವೂ ಸೇರುತ್ತದೆಯಲ್ಲವೇ...

ಸುಪ್ರೀತ್

Anonymous said...

The first poem got me laughing for a while. This happens to many folks who constantly dream about the person they love. It could be anybody you met/saw on the internet/movie but, have not met in reality. Sometimes we think so much about them that we forget about reality. You cut/burn a finger thinking about them. You only realize this when the pain sets in after cutting/burning.