Sunday, December 30, 2007

ಹೆಂಡತಿಯೊಬ್ಬಳು ಮನೆಯೊಳಗೆ, ಪ್ರೇಯಸಿಯರು ಮನದೊಳಗೆ!

ಸುಮ್ಮನೆ ಕೇಳಿಕೊಳ್ಳಿ!
ಪತ್ನಿಗೆ ನಿಷ್ಠನಾಗಿರುವ ಏಕಪತ್ನೀವ್ರತಸ್ಥನ ಹೆಂಡತಿ ಸುಖವಾಗಿರುತ್ತಾಳಾ? ರಸಿಕನಾದ ಬಹುಜನಪ್ರಿಯನ ಹೆಂಡತಿ ಸುಖವಾಗಿರುತ್ತಾಳಾ?
ಎಫ್ಪೆಮ್ಮಿನ ಮಸ್ತ್ ಮಯೂರಿ ವಿಚಿತ್ರವಾಗಿ ಕರೆಯುವಂತೆ `ನಮ್ಮ ಭಾಮಂದಿರು' ಏಕಪತ್ನೀವ್ರತಸ್ಥನನ್ನೇ ಹೆಚ್ಚು ಮೆಚ್ಚುತ್ತಾರೆ. ಏಕಪತ್ನಿವ್ರತಸ್ಥ ಎನ್ನುವುದೇ ಒಂದು ಸಾಧನೆ, ಅದೇ ಒಂದು ಅರ್ಹತೆ ಎಂಬಂತೆ ಮಾತಾಡುತ್ತಾರೆ. ಒಳ್ಳೇ ಗಂಡ, ಬೇರೊಂದು ಹೆಣ್ಣನ್ನು ತಲೆಯೆತ್ತಿಯೂ ನೋಡಲ್ಲ ಅನ್ನುತ್ತಾರೆ. ಆಫೀಸು ಬಿಟ್ಟು ನೇರವಾಗಿ ಮನೆಗೇ ಬರುತ್ತಾನೆ. ಒಂದು ದುರಭ್ಯಾಸ ಇಲ್ಲ ಎಂದು ಹೇಳಿ ಹೇಳಿ ಎಲ್ಲಾ ಹವ್ಯಾಸಗಳನ್ನೂ ಹತ್ತಿಕ್ಕುವುದನ್ನೂ ನಾವು ನೋಡಿದ್ದೇವೆ.
ಈ ಒಳ್ಳೆಯತನ ಅಷ್ಟು ಒಳ್ಳೆಯದೇನಲ್ಲ. ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿ ಅನ್ನುವ ಪ್ರಶಸ್ತಿ ಗಳಿಸಿದವನು ಶ್ರೇಷ್ಠನೋ ಧೀಮಂತನೋ ಆಗಿರಬೇಕಾಗಿಲ್ಲ. ಹೇಡಿಯೂ ಆಗಿರಬಹುದು. ಇದು ಎಲ್ಲದಕ್ಕೂ ಅನ್ವಯವಾಗುತ್ತದೆ. ಬಿವಿ ಕಾರಂತರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹತ್ತು ಹನ್ನೆರಡನೆಯ ವಯಸ್ಸಿಗೆ ಅವರು ಪುತ್ತೂರಿನಿಂದ ಮೈಸೂರಿಗೆ ಓಡಿಬಂದವರು. ಅವರು ಓಡಿ ಬಂದಾಗ ಅವರ ಮನೆಯಲ್ಲಿ, ಓರಗೆಯಲ್ಲಿ, ನೆಂಟರಷ್ಟರಲ್ಲಿ ಏನೇನು ಮಾತುಕತೆ ನಡೆದಿರಬಹುದು ಊಹಿಸಿ. ಕೆಟ್ಟ ಹುಡುಗ, ಪೋಲಿಬಿದ್ದು ಹೋದ, ಸದ್ಯ ನಮ್ಮ ಮಕ್ಕಳು ಹಾಗಾಗಲಿಲ್ಲವಲ್ಲ, ಚೆನ್ನಾಗಿ ಓದುತ್ತಾರೆ, ಓದದೇ ಇದ್ದರೂ ಓಡಿಹೋಗಲಿಲ್ಲ, ಮಕ್ಕಳನ್ನು ನಾವು ಹದ್ದುಬಸ್ತಿನಲ್ಲಿ ಇಟ್ಟು ಚೆನ್ನಾಗಿ ಬೆಳೆಸಿದ್ದೇವೆ ಎಂದೆಲ್ಲ ಅವರ ಹೆತ್ತವರು ಮಾತಾಡಿಕೊಂಡಿರಬಹುದು.
ಆದರೆ ಅರುವತ್ತು ವರುಷಗಳ ತರುವಾಯ ನೋಡಿದರೆ, ಚಿತ್ರ ಹೇಗೆ ಬದಲಾಗಿದೆ. ಶಿಸ್ತುಬದ್ಧವಾಗಿ, ಅಪ್ಪಅಮ್ಮಂದಿರ ಮಾತು ಕೇಳಿಕೊಂಡು, ಯಾವ ತರಲೆಯನ್ನೂ ಮಾಡದೇ ಶಾಲೆಗೆ ಹೋಗಿ ಒಳ್ಳೇ ಮಾರ್ಕು ತೆಗೆಯುತ್ತಿದ್ದ ಹುಡುಗರ ಪೈಕಿ ಯಾರ ಹೆಸರೂ ನಮಗೆ ಗೊತ್ತಿಲ್ಲ. ಬಿವಿ ಕಾರಂತರ ಜೊತೆಗೆ ಓದುತ್ತಿದ್ದ ಮೂವತ್ತೋ ಮೂವತ್ತೈದೋ ಹುಡುಗರ ಪೈಕಿ ಆ ಕಾಲಕ್ಕೆ ಕೆಟ್ಟವರಂತೆ ಕಂಡ ಕಾರಂತರೊಬ್ಬರೇ ಇವತ್ತು ಚಿರಸ್ಥಾಯಿ.
ಹೀಗಾಗಿ ಯಾವ ನಡೆಯನ್ನೂ ಆ ಕ್ಪಣಕ್ಕೆ ಹೀಗೇ ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ಹಾಗೆ ನಿರ್ಧರಿಸುವುದು ತಪ್ಪು ಕೂಡ. ಕಾಲದ ತಕ್ಕಡಿಯಲ್ಲಿ ತೂಗಿ ನೋಡಿದಾಗ ಲಘುವಾದದ್ದು ಘನವಾಗಿಯೂ ಭಾರವಾಗಿ ಕಂಡದ್ದು ಹಗುರಾಗಿಯೂ ಕಾಣುವ ಸಾಧ್ಯತೆಯಿದೆ.
ಟಿ.ಎನ್. ಸೀತಾರಮ್ ನಿರ್ದೇಶಿಸುತ್ತಿರುವ `ಮೀರಾ ಮಾಧವ ರಾಘವ'ದ ಕತೆಯನ್ನು ಯೋಚಿಸುತ್ತಿದ್ದಾಗ ನೆನಪಾದದ್ದು ಇದೆಲ್ಲ. ಏಕಪತ್ನಿವ್ರತಸ್ಥನ ಸಜ್ಜನಿಕೆ ಮತ್ತು ಬಹುಜನ ಪ್ರಿಯನ ರಸಿಕತೆ ಕೂಡ ಆಗಲೇ ಹೊಳೆದದ್ದು. ರಾಮಾಯಣ ಮತ್ತು ಭಾಗವತವನ್ನು ಮುಂದಿಟ್ಟುಕೊಂಡು ಇದನ್ನು ನೋಡೋಣ;
ಶ್ರೀರಾಮಚಂದ್ರ ಏಕಪತ್ನೀವ್ರತಸ್ಥ. ಆದರೆ ರಾಮಾಯಣದುದ್ದಕ್ಕೂ ಸೀತೆ ಶೋಕತಪ್ತೆ. ಶ್ರೀರಾಮ ಪುರುಷೋತ್ತಮ. ಆದರೆ ಅವನ ಸುತ್ತಲಿದ್ದ ಮಂದಿಗೆ ಸದಾ ಕಷ್ಟ. ಅಮ್ಮ, ಅಪ್ಪ, ಮಲತಾಯಿ, ಸೋದರ, ಮಿತ್ರ- ಎಲ್ಲರನ್ನೂ ಶ್ರೀರಾಮ ಕಷ್ಟಕ್ಕೆ ದೂಡಿದ್ದ. ಅಥವಾ ಅವನಿಗಾಗಿ ಅವನಿಂದಾಗಿ ಅವರೆಲ್ಲ ಕಷ್ಟಕ್ಕೆ ಸಿಲುಕಿಹಾಕಿಕೊಂಡಿದ್ದರು. ಕಡೆಗೆ ಅಷ್ಟೆಲ್ಲ ಕಷ್ಟಪಟ್ಟ ಸೀತೆಯನ್ನೂ ಅಗ್ನಿಪರೀಕ್ಪೆಗೆ ಒಡ್ಡುತ್ತಾನೆ ರಾಮ. ಅವನಿಗೆ ಪುರುಷೋತ್ತಮ ಅನ್ನಿಸಿಕೊಳ್ಳುವ ಆಸೆ. ಗೋಪಾಲಕೃಷ್ಣ ಅಡಿಗರು ಹೇಳುವ `ಸುಟ್ಟಲ್ಲದೆ ಮುಟ್ಟೆನೆಂಬುಡಾಫೆ'ಯ ಮತ್ತೊಂದು ವರ್ಷನ್ನು ಅದು.
ಅದೇ ಶ್ರೀಕೃಷ್ಣನನ್ನು ತೆಗೆದುಕೊಳ್ಳಿ. ಹದಿನಾರು ಸಾವಿರ ನೂರಾ ಎಂಟು ಹೆಂಡಿರಿದ್ದರೂ ರುಕ್ಮಿಣಿ ಸಂಪ್ರೀತೆ. ದಾಸರು ಹಾಡಿದ ಹಾಗೆ `ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತಾ, ಅಂಗನೆ ಲಕ್ಪ್ಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನ್ನುತ'. ರುಕ್ಮಿಣಿಯನ್ನು ಶೀಕೃಷ್ಣ ಮದುವೆಯಾದದ್ದು ಮೋಸದಿಂದ. ಅವಳನ್ನು ಶಿಶುಪಾಲನಿಗೆ ಕೊಡಬೇಕು ಎಂಬ ನಿರ್ಧಾರಕ್ಕೆ ಭೀಷ್ಮಕರಾಯ ಬಂದಿದ್ದಾಗ ಅಲ್ಲಿಗೆ ಹೋಗಿ ಅವಳನ್ನು ರಥದಲ್ಲಿ ಹಾರಿಸಿಕೊಂಡು ಬಂದು ಮದುವೆಯಾದವನು ಅವನು. ಅದೇನೇ ಇದ್ದರೂ ರುಕ್ಮಿಣಿ ಪರಮಸಂಪ್ರೀತೆ. ತುಲಭಾರದಲ್ಲಿ ತೂಗಿದಾಗಲೂ ಅವಳೇ ಒಂದು ಕೈ ಮೇಲೆ. ಜೊತೆಗೇ ಸಣ್ಣ ಸಣ್ಣ ಆಶೆಗಳ ಸತ್ಯಭಾಮೆಯೂ ಇದ್ದಾಳೆ. ಅವಳೂ ಸುಖಿಯೇ.
******
ಸೀತಾರಾಮ್ ಹೇಳಿದ ಕತೆಯಲ್ಲೂ ಇಂಥದ್ದೇ ಒಂದು ವಿಚಿತ್ರ ಸಂಯೋಗವಿದೆ. ಕಾಲದ ಕುಲುಮೆಯಲ್ಲಿ ಕಾದು ನಮ್ಮನಮ್ಮ ಪಾತ್ರಕ್ಕೊಗ್ಗುವ ಮೂರ್ತಿಯಾಗುವ ನಾವು ನಮಗೇ ಗೊತ್ತಿಲ್ಲದ ಹಾಗೆ ಇನ್ನೇನೋ ಆಗುತ್ತಾ ಹೋಗುತ್ತೇವೆ. ಇಡೀ ರಾಷ್ಟ್ರಕ್ಕೇ ಅಪೂರ್ವ ಬುದ್ಧಿವಂತರಂತೆ ಕಾಣಿಸಿದ ಸರ್ ಎಂ ವಿಶ್ವೇಶ್ವರಯ್ಯ ಅವರ ಪತ್ನಿಯ ಕಣ್ಣಿಗೆ ಅಂಥ ಗ್ರೇಟ್ ಅನ್ನಿಸಲಿಲ್ಲ. ಕಸ್ತೂರಬಾ ಕಣ್ಣಿಗೆ ಗಾಂಧೀಜಿಯ ಶ್ರೇಷ್ಠತೆ ಅರ್ಥವಾಗಿರಲಿಕ್ಕಿಲ್ಲ. ಸಹವಾಸ, ಸಹಚರ್ಯ ಎನ್ನುವುದು ನಮ್ಮ ಸಂವೇದನೆಯನ್ನು ಕೊಲ್ಲುತ್ತಾ ಹೋಗುತ್ತದೆ. ಹೊರಗಿನಿಂದ ನೋಡುವವರಿಗೆ ನಿಜಕ್ಕೂ ಮಾನವೀಯರೂ ಹಾಸ್ಯಪ್ರಜ್ಞೆ ಉಳ್ಳ ಧೀಮಂತರೂ ಆಗಿ ಕಾಣಿಸುವ ವ್ಯಕ್ತಿಗಳು ಜೊತೆಗೇ ವಾಸಿಸುವವರ ಪಾಲಿಗೆ ಕ್ರೂರಿಗಳಾಗಿ ಕಾಣಿಸಬಹುದು.
ಆದರೆ ಅದನ್ನೆಲ್ಲ ಅದುಮಿಟ್ಟುಕೊಂಡು ಬದುಕುವವರೂ ಇದ್ದಾರೆ. ಹಾಗೆ ಬದುಕುವುದು ಆ ಸವಲತ್ತುಗಳಿಗೋಸ್ಕರ. ಜನಪ್ರಿಯ ವಾಣಿಜ್ಯೋದ್ಯಮಿಯ ಜೊತೆಗೆ ಸಂಸಾರ ಮಾಡುವುದು ಆಕೆಗೆ ಸಾಧ್ಯವೇ ಇರುವುದಿಲ್ಲ. ಆದರೆ ಅವನನ್ನು ತೊರೆದು ಹೋಗಿ ಬದುಕುವ ಕಷ್ಟ ಆಕೆಗೆ ಬೇಡವಾಗಿರುತ್ತದೆ. ಹೀಗಾಗಿ ಅಲ್ಲಿದ್ದುಕೊಂಡೇ ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಂಡು ಆಕೆ ಜೀವಿಸುತ್ತಾಳೆ. ಆಕೆಯ ಮನಸ್ಸು ಇನ್ನೆಲ್ಲೋ ಇರುತ್ತದೆ, ದೇಹ ಅಲ್ಲಿರುತ್ತದೆ. ಇಂಥದ್ದೊಂದು ವಿಭಜಿತ ಸ್ಥಿತಿಯಲ್ಲೇ ಬದುಕು ಸಾಗುತ್ತದೆ.
ಆದರೆ ಮತ್ತೆ ಕೆಲವರು ಅದನ್ನು ಮೀರುತ್ತಾರೆ. ತುಂಬ ತೀವ್ರವಾಗಿ ಬದುಕುವ ನಿರ್ಧಾರಕ್ಕೆ ಬರುತ್ತಾರೆ. ಆ ತೀವ್ರತೆಯಲ್ಲಿ ಉರಿದು ಬೂದಿಯಾಗುತ್ತೇವೇ ವಿನಾ, ಬೂದಿ ಮುಚ್ಚಿದ ಕೆಂಡದ ಹಾಗೆ ಇರುವುದಿಲ್ಲ ಅನ್ನುತ್ತಾರೆ. ಅಂಥವರನ್ನು ಹಿಡಿದಿಡುವುದು ಕಷ್ಟದ ಕೆಲಸ. ಯಾವ ಐಷಾರಾಮ, ಪ್ರತಿಷ್ಠೆ, ಶಿಷ್ಟಾಚಾರ ಕೂಡ ಅವರನ್ನು ಬಂಧಿಸಲಾರದು.
ಪಾತಿವ್ರತ್ಯ, ಸಹಜೀವನ, ಬಂಧನ ಇತ್ಯಾದಿಗಳು ಹೊಸ ಅರ್ಥವನ್ನು ಪಡೆದುಕೊಳ್ಳುತ್ತಿರುವ ಇವತ್ತಿನ ಪರಿಸರದಲ್ಲಿ ಸೀತಾರಾ್ ಹೇಳುತ್ತಿರುವ ಕತೆ ಹೆಣ್ಣಿನ ಒಳಮನಸ್ಸನ್ನು ಶೋಧಿಸುವ ಪ್ರಯತ್ನ.
*******
ಅರ್ಥಪೂರ್ಣ ಸಿನಿಮಾ ಮಾಡಬೇಕು ಎಂದು ಹೊರಡುವವರಿಗೆ ಇದು ಕಷ್ಟಕಾಲ. ಕನ್ನಡ ಚಿತ್ರರಂಗವನ್ನು ಐವತ್ತು ವರುಷ ಆಳಿದ ಕತೆಗಳನ್ನೇ ನೋಡಿ. ಸಾಹಿತ್ಯದಲ್ಲಿರುವಂತೆ ಇಲ್ಲೂ ವಿವಿಧ ಘಟ್ಟಗಳನ್ನು ನೀವು ಗುರುತಿಸಬಹುದು. ಆರಂಭದಲ್ಲಿ ಇತಿಹಾಸ ಮತ್ತು ಪುರಾಣದ ಕತೆಗಳನ್ನು ಸಿನಿಮಾ ಮಾಡುತ್ತಿದ್ದರು. ದಶಾತತಾರದಿಂದ ಬಭ್ರುವಾಹನನ ತನಕ ಎಲ್ಲವೂ ಬಂತು. ಆಮೇಲೆ ಸಾಮಾಜಿಕ ಸಿನಿಮಾಗಳು ಬಂದವು. ಅಲ್ಲಿದ್ದ ಕತೆಗಳಲ್ಲಿ ಒಂದಾಗಿ ಬಾಳು, ಬಂಗಾರದ ಮನುಷ್ಯ, ಕರುಣೆಯೆ ಕುಟುಂಬದ ಕಣ್ಣು ಮುಂತಾದ ಕತೆಗಳೇ ಹೆಚ್ಚು. ಆಗಷ್ಟೇ ಒಡೆಯುತ್ತಿದ್ದ ಅವಿಭಕ್ತ ಕುಟುಂಬವನ್ನು ಹಿಡಿದಿಡುವ ಪ್ರಯತ್ನಗಳಾಗಿದ್ದವು ಅವು.
ಅದು ಭೂಮಾಲೀಕರ ಕಾಲವೂ ಆಗಿತ್ತು. ಊರಿಗೊಬ್ಬ ಜಮೀನ್ದಾರನಿದ್ದ, ಪಟೇಲನಿದ್ದ. ಅವರ ವಿರುದ್ಧ ತಿರುಗಿ ಬೀಳುವ ರೋಷತಪ್ತ ಯುವಕರ ಕತೆ ಬಂತು. ಜಮೀನ್ದಾರನ ಮಗಳನ್ನು ಪ್ರೀತಿಸ ಮದುವೆಯಾಗುವ ಕತೆಗಳು ಬಂದವು. ಜಮೀನ್ದಾರರು ತೋಪೆದ್ದು ಹೋಗಿ ತೋಪೇಗೌಡರಾಗುತ್ತಿರುವ ಕಾಲಕ್ಕೆ ಜಾತಿಸಮಸ್ಯೆ ತಲೆಯೆತ್ತಿತ್ತು, ಮೇಲುಜಾತಿಯ ಹುಡುಗಿಯನ್ನು ಕೆಳಜಾತಿಯ ಹುಡುಗ ಪ್ರೀತಿಸಿ ಮದುವೆಯಾಗುವುದು ಜನಪ್ರಿಯವಾಯಿತು. ಈ ಮಧ್ಯೆ ಅತ್ತೆಸೊಸೆ, ವಿಧವಾ ವಿವಾಹ, ಬಾಲ್ಯವಿವಾಹ ಮುಂತಾದ ಸಾಮಾಜಿಕ ಪಿಡುಗುಗಳ ಕತೆಗಳು ಬಂದುಹೋದವು. ದೇಶಪ್ರೇಮ, ಕನ್ನಡಪ್ರೇಮದ ಕತೆಗಳೂ ಬಂದವು.
ಈಗ ಅವ್ಯಾವುವೂ ಸಮಸ್ಯೆಗಳೇ ಅಲ್ಲ. ಅಂತಸ್ತು, ಜಾತಿ ಅಂದಾಕ್ಪಣ ಜನ ತಮಾಷೆ ಮಾಡುತ್ತಾರೆ. ಪ್ರೇಮದ ಕುರಿತ ಚಿತ್ರಗಳು ಒಂದೋ ಎರಡೋ ಬರಬಹುದು. ಮನುಷ್ಯ ಸಂಬಂಧಗಳ ವಿವಿಧ ಆಯಾಮಗಳನ್ನು ಶೋಧಿಸುವ ಚಿತ್ರಗಳು ಅಲ್ಲೊಂದು ಇಲ್ಲೊಂದು ಯಶಸ್ವಿಯಾಗುತ್ತಿವೆ. ನಾಯಕ ರೌಡಿಯಾಗುವ ಕತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನೂ ಪ್ರೇಕ್ಪಕರ ನಿರಾಕರಿಸಿದ್ದಾನೆ.
ಈಗ ನಮಗೆ ನಿಜಕ್ಕೂ ಏನು ಬೇಕು?
ಈ ಪ್ರಶ್ನೆಗೆ ಹಿಂದಿ, ತೆಲುಗು, ಕನ್ನಡ, ತಮಿಳು ಸೇರಿದಂತೆ ಎಲ್ಲೂ ಉತ್ತರ ಸಿಗುತ್ತಿಲ್ಲ. ಇಂಟರ್ ನೆಟ್ ಬಂದ ನಂತರ ಸೆಕ್ಸು ಕೂಡ ರಹಸ್ಯವಾಗಿ ಉಳಿದಿಲ್ಲ. ರಾಜಕಾರಣಿಗಳು ಭ್ರಷ್ಟರು ಅನ್ನುವುದು ಕಥಾವಸ್ತುವೇ ಅಲ್ಲ.
ಹಾಗಿದ್ದರೆ ಎಲ್ಲರನ್ನೂ ಸೆಳೆಯುವಂಥ ಕತೆ ಯಾವುದು?
ಸಾಹಿತ್ಯ, ಸಿನಿಮಾ ಎರಡೂ ಜೊತೆಯಾಗಿ ಹುಡುಕಾಡುತ್ತಿದೆ. ಬಹುಶಃ ವ್ಯಕ್ತಿತ್ವ ವಿಕಸನದ ಕತೆ, ಕೀಳರಿಮೆಯನ್ನು ಮೀರುವ ಕತೆ, ತನ್ನೊಳಗಿನ ಮರಳುಗಾಡನ್ನು ದಾಟುವ ಕತೆಯನ್ನು ಯಾರಾದರೂ ಸಿನಿಮಾ ಮಾಡಿದರೆ ಇಷ್ಟವಾಗಬಹುದೋ ಏನೋ?
ಯಾಕೆಂದರೆ ಈ ಕಾಲದ ಶತ್ರು ಒಳಗೇ ಇದ್ದಾನೆ.

6 comments:

Anonymous said...

"ಕಸ್ತೂರಬಾ ಕಣ್ಣಿಗೆ ಗಾಂಧೀಜಿಯ ಶ್ರೇಷ್ಠತೆ ಅರ್ಥವಾಗಿರಲಿಕ್ಕಿಲ್ಲ" - ಇಂತಹ ಸತ್ಯಾಸತ್ಯತೆ ಗೊತ್ತಿರದ ಉದಾಹರಣೆ ನೀಡುವುದು ಸರಿಯೇ?

Anonymous said...

ನೀವು ಕೆ ಸತ್ಯನಾರಾಯಣ ಬರೆದ ಇನ್ನೊಬ್ಬ ಗಾಂಧಿಯ ಹೆಂಡತಿ ಕತೆಯನ್ನು ಓದಬೇಕಾಗಿ ವಿನಂತಿ. ಸಾಧ್ಯವಾದರೆ ಅರುಣ್ ಗಾಂಧಿ ಬರೆದ ಕಸ್ತೂರ್ ಬಾ - ಎ ಲೈಫ್ ಓದಿ. ಆದರೆ ಗಾಂಧಿ ಮತ್ತು ಕಸ್ತೂರ್ ಬಾ ಬಗ್ಗೆ ಇಂಥ ಹೇಳಿಕೆ ನೀಡುವುದಕ್ಕೆ ಏನನ್ನೂ ಓದಬೇಕಾಗಿಲ್ಲ. ಗಾಂಧಿಯನ್ನು ಅರಿಯುವುದು ಅವರವರವ ಅರಿವಿಗೆ ಬಿಟ್ಟದ್ದು ಸತ್ಯಾಸತ್ಯತೆಯ ಮಾತು ಕಲೆಯಲ್ಲಿ ಬರುವುದೇ ಇಲ್ಲ. ಅದು ಚರಿತ್ರೆಗೆ ಸಂಬಂಧಿಸಿದ್ದು.
-ಜೋಗಿ

Arun said...

ಪ್ರೀತಿಯ ಜೋಗಿ,
ಪ್ರಸ್ತುತ ರಂಗಭೂಮಿಗು ಇಂತದ್ದೆ ಸಮಸ್ಯೆ ಕಾಡುತ್ತಿದೆಯಾ...?
ಅಥವಾ ರಂಗ ನಾಟಕಗಳು ಇವೆಲ್ಲವನ್ನು ಮೀರಿ ನಿಂತಿದೆಯಾ..?

Anonymous said...

The writing sounds like mentioning merely a naive message such as - Maasti was a DULL writer than Ananthmurthy.
For you literature people, Rama doesnot appeal much, as his life was not composed of the common amusements, whereas Krishna's life was composed of lot of such amusements, including ups and downs. That is absolutely nothing to do with ekapathni or bahupathni!.

Dear Jogi, as usual, your style is excellent, however, the content is shit (sorry) this time.

Dr.D.M.Sagar

Anonymous said...

Also, Jogi!,
I don't quite agree with the statement that - sathya sathyatheya maathu kaleyalli baruvudilla, adu charithre maathra".
We know very well that there can be many false and fictions in an art, however, if fiction itself can create an art - there should be at least a dozen of novels about advocates/lawers who lie in the court and win cases!. In fact, a lawer's routine should itself has been a great epic much better than Ramayana or Mahabharatha!.


D.M.Sagar

Anonymous said...

Hi Jogi,

Nice article.
-Suma.