ಈ ಪುಟ್ಟ ಕತೆ ಹೀಗೇ ಯಾಕಿರಬೇಕು ಅಂತ ನಂಗೊತ್ತಿಲ್ಲ. 1937ರಲ್ಲೇ ಆತ ಬರೆದ ಈ ಪುಟ್ಟ ಕತೆ ಇವತ್ತು ಓದಿದರೂ ಸಾಕು ತಲ್ಲಣಿಸುವಂತೆ ಮಾಡುತ್ತದೆ. ಬರೆದಾತನ ಹೆಸರು ಯೊಹಾನ್ನೆಸ್ ಯೆನ್ಸೆನ್ ಡೆನ್ಮಾರ್ಕಿನ ಕತೆಗಾರ.
ಈತನ ಕತೆ ಹೀಗೆ;
ಒಬ್ಬ ರೈತ. ನಾಲ್ಕು ಕಾಸು ಸಂಪಾದಿಸಿದ ನಂತರ ದುಡಿಯುವುದಕ್ಕೊಬ್ಬ ಗುಲಾಮ ಬೇಕು ಅನ್ನಿಸುತ್ತದೆ. ಸಂತೆಗೆ ಹೋಗುತ್ತಾನೆ. ಅಲ್ಲಿ ಒಬ್ಬ ವ್ಯಾಪಾರಿ ಗುಲಾಮರನ್ನು ಮಾರುತ್ತಿದ್ದಾನೆ. ರೈತನಿಗೆ ಆ ಗುಲಾಮರು ಯಾರೂ ಇಷ್ಟವಾಗಲಿಲ್ಲ.
ವ್ಯಾಪಾರಿ ಕೊನೆಗೆ ಒಳಗೆ ಮಲಗಿದ್ದ ಎಲ್ಲ ಗುಲಾಮರನ್ನೂ ಕರೆಯುತ್ತಾನೆ. ಒಬ್ಬೊಬ್ಬರನ್ನಾಗಿ ತೋರಿಸುತ್ತಾನೆ. ಪ್ರತಿಯೊಬ್ಬರನ್ನೂ ಸೂಕ್ಪ್ಮವಾಗಿ ಪರೀಕ್ಪಿಸುತ್ತಾನೆ ಗುಲಾಮ. ಕೊನೆಗೊಬ್ಬ ಗುಲಾಮನನ್ನು ಮುಂದಿಟ್ಟು `ಈತ ಹ್ಯಾಗಿದ್ದಾನೆ ನೋಡು. ಕಟ್ಟುಮಸ್ತು ಆಸಾಮಿ. ಒಂದೇಟು ಕೊಟ್ಟು ನೋಡು. ಕಮಕ್ ಕಿಮಕ್ ಅನ್ನೋಲ್ಲ. ಮಾಂಸಖಂಡಗಳು ಹೇಗಿವೆ ನೋಡು' ಎನ್ನುತ್ತಾನೆ. ಗುಲಾಮನ ಬಾಯಿ ತೆಗೆಸಿ, ಚೂರಿಯ ಹಿಡಿಯಲ್ಲಿ ಹಲ್ಲುಗಳನ್ನು ತೋರಿಸುತ್ತಾನೆ.
ರೈತ ಕೊಂಚ ಹೊತ್ತು ಯೋಚಿಸುತ್ತಾನೆ. ಪರೀಕ್ಪಿಸುವಂತೆ ಗುಲಾಮನ ಹೊಟ್ಟೆಗೊಂದು ಏಟು ಹಾಕುತ್ತಾನೆ. ಗುಲಾಮ ಮಿಸುಕಾಡೋದಿಲ್ಲ. ಪರವಾಗಿಲ್ಲ ಅನ್ನಿಸಿ ವ್ಯಾಪಾರಿ ಹೇಳಿದ ರೇಟನ್ನು ಗೊಣಗುತ್ತಲೇ ಕೊಟ್ಟು ಗುಲಾಮನನ್ನು ಮನೆಗೆ ಕರೆತರುತ್ತಾನೆ.
ದುರದೃಷ್ಟ. ರೈತ ಮನೆಗೆ ಕರೆತಂದ ಕೆಲವೇ ದಿನಗಳಲ್ಲಿ ಗುಲಾಮ ಕಾಯಿಲೆ ಬಿದ್ದು ಬಡವಾಗುತ್ತಾ ಹೋಗುತ್ತಾನೆ. ಅವನು ನಿತ್ಯವೂ ತಾನು ಬಿಟ್ಟು ಬಂದ ಕಾಡುಗಳಿಗಾಗಿ ಹಂಬಲಿಸುತ್ತಿದ್ದಾನೆ ಅನ್ನೋದು ರೈತನಿಗೆ ಗೊತ್ತಾಗುತ್ತದೆ. ರೈತನಿಗೆ ಆತನ ಹಂಬಲದ ಬಗ್ಗೆ ಅಂಥ ಅನಾದರವೇನೂ ಇಲ್ಲ. ಹಂಬಲಿಸುವ ಮನುಷ್ಯ ಮಾತ್ರ ಉಪಯೋಗಕ್ಕೆ ಬರಬಲ್ಲ ಅನ್ನುವುದು ರೈತನಿಗೂ ಗೊತ್ತು. ಕನಸುಗಳೂ ಆಶೆಗಳೂ ಇರುವವರನ್ನಷ್ಟೇ ದುಡಿಸಿಕೊಳ್ಳಬಹುದು. ಸ್ಥಿತಪ್ರಜ್ಞರು ದುಡಿಯುವುದಿಲ್ಲ.
ರೈತ ನಿರಾಸಕ್ತಿಯಿಂದ ಮಲಗಿರುವ ಗುಲಾಮನ ಹತ್ತಿರ ಹೋಗಿ ಹೇಳಿದ. `ನೀನೇನೂ ಚಿಂತೆ ಮಾಡಬೇಡ. ನಿನ್ನ ಕಾಡುಗಳಿರುವ ಜಾಗಕ್ಕೆ ನಾನೇ ನಿನ್ನನ್ನು ಕಳುಹಿಸುತ್ತೇನೆ. ಇದು ಪ್ರಮಾಣ. ನೀನಿನ್ನೂ ತರುಣ. ಐದೇ ಐದು ವರುಷ ಕಷ್ಟಪಟ್ಟು ಕೆಲಸ ಮಾಡು. ನಾನು ನಿನ್ನನ್ನು ಬಿಟ್ಟುಬಿಡ್ತೇನೆ. ನಿನಗಿಷ್ಟ ಬಂದ ಕಡೆ ಹೋಗುವಿಯಂತೆ. ನಾನೂ ನಿನ್ನನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದೇನೆ ಅಲ್ವಾ. ನನಗೂ ನಷ್ಟವಾಗಬಾರದು ತಿಳೀತಲ್ಲ'
ಮಾತು ಮಂತ್ರವಾಗಿ ಕೆಲಸ ಮಾಡಿತು. ಗುಲಾಮ ಮೈಮುರಿಯೆ ದುಡಿಯತೊಡಗಿದ. ರೈತ ನೋಡನೋಡುತ್ತಿದ್ದಂತೆ ಗುಲಾಮ ಬಿಡುವಿಲ್ಲದೆ ಕೆಲಸ ಮಾಡತೊಡಗಿದ. ರೈತನಿಗೆ ಕಟ್ಟಿಗೆ ಒಡೆಯುವಾಗ, ನೀರು ಸೇದುವಾಗ, ಹಾರೆಯಲ್ಲಿ ನೆಲ ಅಗೆಯುವಾಗ ತೋಳುಗಳಲ್ಲಿ ಪುಟಿಯುವ ಗುಲಾಮನ ಮಾಂಸಖಂಡಗಳನ್ನು ನೋಡುವುದೇ ಖುಷಿ ಅನ್ನಿಸತೊಡಗಿತು.
ಗುಲಾಮ ವರುಷಗಳ ಲೆಕ್ಕ ಹಾಕುತ್ತಿದ್ದ. ಐದು ವರುಷ ಎಂದರೆ ಐದು ಸಂಕ್ರಮಣಗಳು. ತನ್ನ ಕೈಯಲ್ಲಿ ಎಷ್ಟು ಬೆರಳುಗಳಿವೆಯೋ ಅಷ್ಟು ಸಂಕ್ರಮಣಗಳು. ಪ್ರತಿದಿನವೂ ಸೂರ್ಯ ಮುಳುಗುವುದನ್ನೇ ನೋಡುತ್ತಿದ್ದ ಗುಲಾಮ. ಸೂರ್ಯ ಮುಳುಗಿದಂತೆಲ್ಲ ಖುಷಿ. ಒಂದು ಕಲ್ಲೆತ್ತಿ ಪಕ್ಕಕ್ಕಿಡುತ್ತಿದ್ದ. ಮೊಟ್ಟ ಮೊದಲಿಗೆ ಸೂರ್ಯ ಪಥ ಬದಲಾಯಿಸಿದಾಗ ಗುಲಾಮ ತನ್ನ ಹೆಬ್ಬೆರಡು ಮಡಿಚಿದ. ಹಾಗೇ ಮತ್ತೊಂದು ಸಂಕ್ರಮಣ ಕಳೆಯಿತು, ತೋರು ಬೆರಳು ಮಡಿಚಿದ. ಗುಲಾಮನಿಗೆ ತನ್ನ ಬಿಡುಗಡೆಗೆ ಕಾರಣವಾಗುತ್ತಿರುವ ಎರಡು ಬೆರಳುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಉಳಿದ ಮೂರು ಬೆರಳುಗಳು ಗುಲಾಮಗಿರಿಯ ಸಂಕೇತ ಅನ್ನಿಸಿ ಬೇಸರವಾಗುತ್ತಿತ್ತು.
ಹೀಗೆ ಗುಲಾಮ ಸೂರ್ಯನನ್ನು ನೋಡುತ್ತಾ ಕಾಲ ಸರಿಯುವುದನ್ನು ನೋಡುತ್ತಾ ದುಡಿಯುತ್ತಿದ್ದ ಗುಲಾಮ. ಕ್ರಮೇಣ ಅವನ ಲೆಕ್ಕಗಳು ಆಳವೂ ವಿಶಾಲವೂ ಆದವು. ಹಿಗ್ಗಿದವು. ಗೋಜಲು ಗೋಜಲಾದ ದೊಡ್ಡ ಗಂಟುಗಳಾಗಿ ಸಾಗುತ್ತಿದ್ದ ವರುಷಗಳನ್ನು ಹಿಡಿಯುವುದು ಅವನ ಅಳವಿಗೆ ಮೀರಿದ್ದು. ಆದರೆ ಹೊತ್ತು ಮುಳುಗುವ ಪುಟ್ಟ ಕ್ಪಣ ಅವನಿಗೆ ನಿಲುಕುವಂತದ್ದು. ವರ್ತಮಾನದಲ್ಲಿ ಕಣ್ಮರೆಯಾದ ಕಾಲ ಭೂತಕ್ಕೆ ಸೇರಿಕೊಳ್ಳುವ ಸೂರ್ಯಾಸ್ತದ ಘಳಿಗೆಯಲ್ಲೇ ಆತ ತನ್ನ ಬದುಕನ್ನು ಪುನರ್ರೂಪಿಸಿಕೊಳ್ಳುತ್ತಿದ್ದ. ಭೂತಕಾಲವೆನ್ನುವುದು ಎಂದೂ ಹಿಂದಿರುಗಲಾರದ ಹಾದಿಯಂತೆ, ಭವಿಷ್ಯವೆಂಬುದು ಎಂದೂ ದಾಟಲಾರದ ಮರಳುಗಾಡಿನಂತೆ ಕಾಣಿಸುತ್ತಿತ್ತು.
ಹೀಗೆ ಕಾಲದ ಬಗ್ಗೆ ಚಿಂತಿಸುತ್ತಾ ಗುಲಾಮನ ಒಳಜಗತ್ತು ವಿಸ್ತಾರಗೊಂಡಿತು.ಅವನ ಹಂಬಲವೇ ಕಾಲಕ್ಕೊಂದು ಅನಂತತೆಯನ್ನು ತಂದುಕೊಟ್ಟಿತ್ತು. ಜಗತ್ತು ಅನಂತವಾಗುತ್ತಾ ಸಾಗಿತ್ತು. ಪ್ರತಿಯೊಂದು ಸೂರ್ಯಾಸ್ತವೂ ಅವನ ಬದುಕನ್ನು ಅರ್ಥಪೂರ್ಣವಾಗಿಸುತ್ತಾ ಹೋಗುತ್ತಿತ್ತು.
ಕೊನೆಗೂ ಐದು ವರುಷ ಕಳೆಯಿತು. ಗುಲಾಮ ರೈತನ ಬಳಿಗೆ ಬಂದು ಬಿಡುಗಡೆ ಕೋರಿದ. ಕಾಡುಗಳ ನಡುವೆ ಇದ್ದ ತನ್ನ ಮನೆಗೆ ಹೋಗಬೇಕು ಅನ್ನಿಸಿತು. ರೈತ ಯೋಚಿಸಿ ಹೇಳಿದ;
`ನಿನ್ನ ಕೆಲಸಕ್ಕೆ ಮೆಚ್ಚಿದ್ದೇನೆ. ನೀನು ಹೋಗಬಹುದು. ಆದರೆ ನಿನ್ನ ಮನೆ ಎಲ್ಲಿದೆ? ಪಶ್ಚಿಮಕ್ಕಾ? ನೀನು ಆ ದಿಕ್ಕನ್ನೇ ನೋಡುತ್ತಿದ್ದುದನ್ನು ನಾನೂ ನೋಡಿದ್ದೇನೆ'
`ಹೌದು, ಪಶ್ಚಿಮಕ್ಕೆ' ಎಂದ ಗುಲಾಮ.
`ಹಾಗಿದ್ದರೆ ಅದು ತುಂಬ ದೂರ. ಅಲ್ಲಿಗೆ ಹೋಗುವುದಕ್ಕೆ ನಿನ್ನ ಹತ್ತಿರ ಹಣವಾದರೂ ಎಲ್ಲಿದೆ? ದುಡ್ಡಿಲ್ಲದೆ ಅಲ್ಲಿಗೆ ಹೇಗೆ ಹೋಗ್ತೀಯ? ಒಂದು ಕೆಲಸ ಮಾಡು. ಮೂರು ವರುಷ, ಉಹುಂ.. ಎರಡೇ ಎರಡು ವರುಷ ಕೆಲಸ ಮಾಡು. ನಿಂಗೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡ್ತೀನಿ'
ಗುಲಾಮ ತಲೆದೂಗಿದ. ಮತ್ತೆ ಗೆಯ್ಮೆ ಶುರುಮಾಡಿದ. ಆದರೆ ಮೊದಲಿನಂತೆ ದಿನಗಳ ಲೆಕ್ಕ ಇಡೋದು ಅವನಿಗೆ ಸಾಧ್ಯವಾಗಲಿಲ್ಲ. ಹಗಲುಗನಸು ಕಾಣುತ್ತಿದ್ದ ಗುಲಾಮ ನಿದ್ದೆಯಲ್ಲಿ ಅಳುತ್ತಾ ಮಾತಾಡುತ್ತಿದ್ದ. ಮತ್ತೆ ಕಾಯಿಲೆ ಬಿದ್ದ.
ಈ ಬಾರಿ ರೈತ ಮತ್ತೆ ಅವನ ತಲೆಯ ಬಳಿ ಕೂತು ಪ್ರೀತಿಯಿಂದ ಮಾತಾಡಿದ;
`ನಾನೀಗ ಮುದುಕ. ನನಗೂ ಪಶ್ಚಿಮದ ಕಾಡುಗಳತ್ತ ಹೋಗಬೇಕು ಅನ್ನೋ ಹಂಬಲವಿತ್ತು. ಆದರೆ ಆಗ ನನ್ನ ಬಳಿ ದುಡ್ಡಿರಲಿಲ್ಲ. ಈಗ ದುಡ್ಡಿದ್ದರೂ ಅಲ್ಲಿಗೆ ಹೋಗಲಾರೆ. ಆದರೆ ನೀನು ಹುಡುಗ, ಬಲಶಾಲಿ. ಮೊದಲು ಕಾಯಿಲೆಯಿಂದ ಸುಧಾರಿಸಿಕೋ'.
ಗುಲಾಮನ ಕಾಯಿಲೆ ನಿಧಾನವಾಗಿ ಗುಣವಾಗತೊಡಗಿತು. ಆದರೆ ಕೆಲಸದಲ್ಲಿ ಹಳೆಯ ಉತ್ಸಾಹ ಇರಲಿಲ್ಲ. ಕೆಲಸದ ನಡುವೆ ನಿದ್ದೆ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡ. ಅದಕ್ಕೋಸ್ಕರ ರೈತನಿಂದ ಏಟು ತಿಂದ. ಬಿಕ್ಕಿ ಬಿಕ್ಕಿ ಅತ್ತ.
ಹೀಗೆ ಎರಡು ವರುಷ ಕಳೆಯಿತು. ರೈತ ಗುಲಾಮನನ್ನು ಬಿಟ್ಟುಬಿಟ್ಟ. ಗುಲಾಮ ಪಶ್ಚಿಮದ ಕಡೆಗೆ ಹೆಜ್ಜೆ ಹಾಕಿದ. ಎಷ್ಟೋ ತಿಂಗಳುಗಳ ನಂತರ ಆತ ನಿರಾಶೆ ಮತ್ತು ಹತಾಶೆಯಿಂದ ಜರ್ಜರಿತನಾಗಿ ವಾಪಸ್ಸು ಬಂದ. ಅವನಿಗೆ ತನ್ನ ಕಾಡುಗಳ ಸುಳಿವು ಸಿಕ್ಕಿರಲಿಲ್ಲ.
ರೈತ ಹೇಳಿದ `ಪೂರ್ವ ದಿಕ್ಕಿಗೆ ಹೋಗು. ಅಲ್ಲಾದರೂ ನಿನ್ನ ಕಾಡುಗಳು ಸಿಗಬಹುದು'.
ಗುಲಾಮ ಪೂರ್ವಕ್ಕೆ ಅಲೆದ. ತುಂಬ ದಿನ ನಡೆದ ನಂತರ ಅವನಿಗೆ ಅವನ ಕಾಡುಗಳು ಸಿಕ್ಕವು. ಆದರೆ ಆ ಕಾಡುಗಳ ಪರಿಚಯವೇ ಅವನಿಗೆ ಇರಲಿಲ್ಲ. ಆತ ಅಲ್ಲಿಂದಲೂ ನಿರಾಶನಾಗಿ ಮರಳಿದ, ರೈತನ ಬಳಿ ತನ್ನ ಕಾಡುಗಳು ಎಲ್ಲಿಯೂ ಇಲ್ಲ ಎಂದ. ರೈತ ಹಾಗಿದ್ದರೆ ನನ್ನ ಜೊತೆಗಿರು ಎಂದು ಪ್ರೀತಿಯಿಂದಲೇ ಹೇಳಿದ.
ಗುಲಾಮ ಅಲ್ಲೇ ಉಳಿದ. ಹೊಟ್ಟೆ ತುಂಬ ತಿನ್ನುತ್ತಿದ್ದ. ಆರೋಗ್ಯ ಕಾಪಾಡಿಕೊಳ್ಳುತ್ತಿದ್ದ. ಕಷ್ಟಪಟ್ಟು ದುಡಿಯುತ್ತಿದ್ದ. ತಪ್ಪು ಮಾಡಿದಾಗ ಏಟು ತಿನ್ನುತ್ತಿದ್ದ. ಪ್ರತಿಭಾನುವಾರ ಪಶ್ಚಿಮದತ್ತ ನೋಡುತ್ತಾ ಕೂರುತ್ತಿದ್ದ. ಕ್ರಮೇಣ ಅವನಿಗೊಬ್ಬಳು ದಾಸಿಯೂ ಸಿಕ್ಕಳು.
ವರುಷ ಸಂದವು. ರೈತನ ಮನೆಯಲ್ಲಿ ಗುಲಾಮನ ಆರು ಮಕ್ಕಳು ದುಡಿಯುತ್ತಿದ್ದರು. ಫಸಲು ಹುಲುಸಾಗಿತ್ತು. ಮಕ್ಕಳಿಗೆ ಕಾಡಿನ ಕಲ್ಪನೆಯೂ ಇರಲಿಲ್ಲ. ದುಡಿಯುತ್ತಿದ್ದರೆ ಕಾಲ ಸರಿಯುತ್ತದೆ ಮತ್ತು ನಮ್ಮನ್ನು ಶಾಶ್ವತವಾದ ಕಾಡುಗಳಿಗೆ ಕರೆದೊಯ್ಯುತ್ತಾರೆ ಎಂದು ರೈತ ಹೇಳುತ್ತಿದ್ದ. ಪ್ರತಿಭಾನುವಾರ ಗುಲಾಮ ಮಕ್ಕಳನ್ನೂ ದಿಬ್ಬದ ಮೇಲೆ ಕರೆದೊಯ್ದು ಸೂರ್ಯಾಸ್ತ ತೋರಿಸುತ್ತಿದ್ದ. ಅವರಿಗೂ ಹಂಬಲಿಸುವುದನ್ನು ಕಲಿಸುತ್ತಿದ್ದ.
ರೈತನಿಗೆ ವಯಸ್ಸಾಗಿದೆ. ಆತ ಏಳಲಾರ ಕೂರಲಾರ. ಆತನ ಮಗ ಇನ್ನೂ ಎಳಸು. ಆದರೆ ರೈತನಿಗೆ ಚಿಂತೆಯಿಲ್ಲ. ಯಾಕೆಂದರೆ ಗುಲಾಮರಿದ್ದಾರೆ. ಒಬ್ಬೊಬ್ಬರು ಬಲಶಾಲಿಗಳು. ಯಾರ ಭಯವೂ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಈ ಗುಲಾಮ ಹುಡುಗರು ಕೊಡಲಿ ಬೀಸಿ ಮರಗಳನ್ನು ಕಡಿಯುತ್ತಿದ್ದಾರೆ. ಅವರಿಗೆ ಕಾಡೇ ಇಲ್ಲ.
Wednesday, August 20, 2008
Subscribe to:
Post Comments (Atom)
14 comments:
ಆದಿಯಲ್ಲಿ ಕತ್ತಿಯಹರಿತದಲ್ಲಿ ದಂತಪರೀಕ್ಷೆಯ ದೃಶ್ಯವೇ ಮುಂದಿನ ಕಥಾವಸ್ತುವಿನ ಧ್ವನಿ. ಮಾನವವೀಯತೆಯನ್ನೇ ಪರಿಹಾಸಮಾಡುವಂತಿದೆ. ಹೆಜ್ಜೆ ಹೆಜ್ಜೆಗೂ ಶೋಷಣೆಯ ಬಿಂಬ ತೋರಿದರೂ ನೌಕರನ (ಗುಲಾಮ ಎನ್ನಲಾರೆ) ಆಶಾಕಿರನವೇ ಕಣ್ಣನ್ನು ಕುಕ್ಕಿ ರೈತನ ಕಟುಪಾತ್ರವನ್ನು ಮರೆಸುತ್ತದೆ. ದಾಸಿಯ ಪ್ರವೇಶ ಕೊಂಚ ಅಸಹಜ ಎನ್ನಿಸಿದರೂ "a blend of soft water to cool the intoxicating complexity" ರೀತಿಯಲ್ಲಿ ಕಥೆಯು ಅಪೇಕ್ಷಿಸುವ ಮುಕ್ತಾಯವನ್ನು ಸಫಲಗೊಳಿಸುತ್ತದೆ. ಅಂತ್ಯದಲ್ಲಿ ರೈತನ ನಿಶ್ಚಿಂತೆ, ಬಾಲಕ ರೈತ (ಭವಿಷ್ಯ ವಾಣಿ !), ಬಹುಸಂಖ್ಯಾತರಾದ ರೈತಪುತ್ರರೂ ಎಲ್ಲವೂ ಸಾಂಕೇತಿಕ. A symbolic representation of ironical sense rampant throughout, rather in an undiscovered flow. ಕಥೆಯ ಪರಿಹಾಸದ ಕಟುಸತ್ಯವು ಕಡೆಯಲ್ಲಿ ನೌಕರನ ಕೊಡಲಿಯ ಮಾದರಿಯಲ್ಲೀ ನಮ್ಮನ್ನು ಪ್ರಹರಿಸುತ್ತದೆ.
ಇಷ್ಟೇ ಇಷ್ಟು ಕಥೆ ಎಷ್ಟೆಲ್ಲಾ ಹೇಳುತ್ತದೆ, ಅಲ್ವಾ..?
"ಹಂಬಲಿಸುವ ಮನುಷ್ಯ ಮಾತ್ರ ಉಪಯೋಗಕ್ಕೆ ಬರಬಲ್ಲ ಅನ್ನುವುದು ರೈತನಿಗೂ ಗೊತ್ತು. ಕನಸುಗಳೂ ಆಶೆಗಳೂ ಇರುವವರನ್ನಷ್ಟೇ ದುಡಿಸಿಕೊಳ್ಳಬಹುದು. ಸ್ಥಿತಪ್ರಜ್ಞರು ದುಡಿಯುವುದಿಲ್ಲ." - ಈ ವಾಕ್ಯ ಇಸ್ತವೈತು. ಬಹಳ ಅರ್ಥಪೂರ್ಣವಾದುದು ಎಂದಿನ್ನಿಸಿತು.
ಮೇಲ್ನೋಟಕ್ಕೆ ಈ ಕತೆ ಪ್ರಾಚೀನವಾದ ಯಾವುದೊ ಹಳ್ಳಿಯ ರೈತನ ಕತೆ ಎನ್ನಿಸಿದರೂ, ಆಳದಲ್ಲಿ ಇದು ಒಂದು ಸಮಕಾಲೀನ ಭವಣೆಯ ಕತೆ ಎನ್ನುವುದು ಕತೆಯ ಕೊನೆ ಕೊನೆಗೆ ಸ್ಪಷ್ಟವಾಗುತ್ತ ಹೋಗುತ್ತದೆ. ಇಲ್ಲಿನ ಧನವಂತ ರೈತ ಪ್ರಸ್ತುತ ಪಾಶ್ಚ್ಯಾತ್ಯ ಮುಂದುವರೆದ ದೇಶಗಳನ್ನು ಪ್ರತಿನಿಧಿಸುತ್ತಾನೆ. ನಮ್ಮಂತಹ ಚಾಕರಿ ಮಾಡುವ ಗುಲಾಮರೆಸ್ತೋ ಮಂದಿ.
ಮಾತ್ರವಲ್ಲ, "ಗುಲಾಮಗಿರಿ" ಮುಗಿದ ಮೇಲೆ ಕುಉದ ನಾವು ನಮ್ಮ ನಮ್ಮ "ಕಾಡು" ಗಳನ್ನೂ ಮರಳಿ ಹುದುಕಲಾರೆವು. ಅಂದು ಹುಟ್ಟಿ ಬೆಳೆದ ಆ ಕಾಡು ಇಂದು ಗುರುತು ಸಿಗಲಾರದಸ್ತು ಬದಲಾಗಿದೆ. ಒಟ್ಟಿನಲ್ಲಿ, ಬಹಳಷ್ಟು ಅನಿವಾರ್ಯ ಹಾಗು ಅಸಂಗತ ವಿದ್ಯಮಾನಗಳಲ್ಲಿ ಬಂಧಿಯಾಗುವ ಚಿತ್ರಣ ಈ ಕತೆಯಲ್ಲಿ ಇದೆ ಎಂದು ನನ್ನ ಭಾವನೆ.
ಜೋಗಿಯವರು ಈ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರೆ ಸಂತೋಷ.
Dr.D.M.Sagar
ನಮ್ಮ ನಿಮ್ಮೆಲ್ಲ್ರರ ಕತೆಯು ಇದೇ ಅಲ್ಲವೇ? ಕೆಲಸಕ್ಕೆಂದು ಹಳ್ಳಿ ಬಿಟ್ಟು ಡೆಲ್ಲಿ (ನಗರ)ಗೆ ಬರುವುದು.ಇಲ್ಲಿ ಇದ್ದಾಗ ನಾವು ಬೆಳೆದ ಪರಿಸರದ ತೀವ್ರ ಸೆಳೆತ.ಆದರೆ ಅಲ್ಲಿಗೆ ಹೋಗಿ ಮತ್ತೆ ಶಾಶ್ವತವಾಗಿ ಉಳಿಯಲಾಗದ ಸ್ಥಿತಿ.
ಪ್ರಿಯ ಜೋಗಿ ಅವರೆ...
ಬೆಳಿಗ್ಗೆಯೇ ಕಥೆಯನ್ನ ಓದಿದ್ದೆ. ಕಾಡುತ್ತಲೇ ಇತ್ತು. ಸಂಜೆ ಗೆಳೆಯನೊಂದಿಗೆ ಪ್ರಯಾಣಿಸುತ್ತ ಈ ಕಥೆಯನ್ನವರಿಗೆ ಹೇಳಿದೆ.ಕಥೆಹೇಳಿ/ಕೇಳಿ ಮುಗಿದಾದ ಮೇಲೆ ಆಸ್ವಾದನೆಯೊಳಗಿನ ಏಕತಾನತೆಯ ಮೌನ. ಮೌನವಾದ ಕಣ್ಣುಗಳಲ್ಲೆಲ್ಲ ರೈತ ಹಾಗೂ ಗುಲಾಮ ಇಬ್ಬರೇ ಇದ್ದಿದ್ದು. ಕಥೆ ಮುಗಿದ ಮೇಲೂ ಅದರ ಬಗ್ಗೆಯೇ ಮಾತಾಡುವ ಮನಸ್ಸು ಇರಲಿಲ್ಲ. ತಾವೇ ತಾವಾಗಿ ಕಾಡುವ ಕಥೆಗಳನ್ನ/ವಿಷಯಗಳನ್ನ ಮತ್ತೆ ಮತ್ತೆ ಕಲಕಿಕೊಳ್ಳಬಾರದು ಅನ್ನಿಸಿದ ಮೌನವದು. ರೈತ ಹಾಗೂ ಗುಲಾಮ ಎರಡೂ ಪಾತ್ರಗಳೂ ಹುಟ್ಟಿದಾಗಿಂದ ಒಡೆಯ ಹಾಗೂ ಒಕ್ಕಲಿಗರೆಂಬ ಹೆಸರಲ್ಲಿ ನಮಗೆಲ್ಲ ಪರಿಚಿತರೇ ಆಗಿದ್ದಕ್ಕಿರಬೇಕು, ಕಥೆ ಮುಗಿದ ಮೇಲೂ ಕಾಡುತ್ತದೆ. ನಮ್ಮೊಳಗೇ ಉಳಿಯುತ್ತದೆ.
"ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ..." ಮತ್ತೆ ಬಣ್ಣಿಸುವುದು ಬೇಡ, ದಕ್ಕಿದಷ್ಟೇ ಕಾಡುತ್ತಿದೆ ಬೇಕಾದಷ್ಟು.
ಮತ್ತೊಂದು ಒಳ್ಳೆಯ ಕಥೆಯನ್ನ ಎಂದಿನಂತೆ ಸುಂದರವಾಗಿ ಹಂಚಿಕೊಂಡಿದ್ದಕ್ಕೆ ಧನ್ಯವಾದ.
ಪ್ರೀತಿಯಿಂದ,
-ಶಾಂತಲಾ ಭಂಡಿ.
ಕಾಡೋ ಕತೆ.. ಥ್ಯಾಂಕ್ಸ್..
ಜೋಗಿಯವರೆ,
ಕತೆ ‘ಕಾಡು’ತ್ತಿದೆ.
ಮೌನ ಬೇಕೆನ್ನಿಸುತ್ತಿದೆ.
ಆದರೂ ‘ಕಾಡು’ ಬಿಡುತ್ತಿಲ್ಲ.
-ಶ್ರೀದೇವಿ ಕಳಸದ
ಶೋಷಣೆಯ ಧೀರ್ಘ ನಿಟ್ಟುಸಿರು.
Translation ತುಂಬಾ ಚೆನ್ನಾಗಿದೆ.
ಅಧ್ಬುತ ಸಂವೇದನೆಯನ್ನು ಅಭಿವ್ಯಕ್ತಿಸುವ ಸದಾ 'ಕಾಡು'ವ ಕಥೆ
urina berina nenapu bengalurinali kadutade.... nimma baraha helodu ade tane
ಪ್ರೀತಿಯ ಜೋಗಿ,
ತುಂಬ ಇಷ್ಟವಾದ ಕತೆ ಇದು. ವ್ಯಾಪಾರದ ಬದುಕಿನ ಸೂತ್ರಗಳು ಮತ್ತು ಗುಲಾಮಗಿರಿ, ಜೀವನಪ್ರೀತಿ ಮತ್ತು ಬದುಕನ್ನ ಸಹ್ಯವಾಗಿಸುವ ಪರಿಸರ, ನಮ್ಮದೆನ್ನಿಸುವ ಎಲ್ಲವೂ ಕನ್ನಡಿಯ ಗಂಟಾಗುವ ಕ್ಷಣಗಳು.. ತುಂಬ ಒಳ್ಳೆಯ ಅಭಿವ್ಯಕ್ತಿ.
ಮೊನ್ನೆ ಯಾವಾಗಲೋ ಅರ್ಧರಾತ್ರಿಯಲ್ಲಿ ಉದಯಸಿನೆಮಾದಲ್ಲಿ ಬರುತ್ತಿದ್ದ ದೇವರಕಾಡು ಸಿನೆಮಾ ನೋಡಿದ ಸಂಗಾತಿ ಮರುದಿನ ಬೆಳಿಗ್ಗೆ ಹೇಳಿದ ಕತೆ ನೆನಪಾಯಿತು. ಆದರೆ ಅದು ವಿಷಾದಯೋಗವಲ್ಲ.. ಜೀವನಯೋಗ..
ಇಂತಹ ಕತೆಗಳನ್ನ, ಓದನ್ನ ಹಂಚಿಕೊಂಡಿದ್ದಕ್ಕೆ ತುಂಬ ಧನ್ಯವಾದಗಳು.
ಪ್ರೀತಿಯಿಂದ
ಸಿಂಧು
ಕನಸುಗಳೂ ಆಶೆಗಳೂ ಇರುವವರನ್ನಷ್ಟೇ ದುಡಿಸಿಕೊಳ್ಳಬಹುದು. ಸ್ಥಿತಪ್ರಜ್ಞರು ದುಡಿಯುವುದಿಲ್ಲ.
Melina salugalu nannanu yochanege talliide. idu ondu kathegintha hechhagi naijatheyeno annisatodagide. THANKS FOR IT.
ಕನಸುಗಳೂ ಆಶೆಗಳೂ ಇರುವವರನ್ನಷ್ಟೇ ದುಡಿಸಿಕೊಳ್ಳಬಹುದು. ಸ್ಥಿತಪ್ರಜ್ಞರು ದುಡಿಯುವುದಿಲ್ಲ.
Melina salugalu nannanu yochanege talliide. idu ondu kathegintha hechhagi naijatheyeno annisatodagide. THANKS FOR IT.
ಪೌಲೋ ಕೋಯೆಲೋನ ದಿ ಅಲ್ ಕೆಮಿಸ್ಡ್ ನೆನಪಾಯಿತು ..ಅದೂ ಮಧ್ಯದಲ್ಲೊಂದು ಕಡೆ ಹೀಗೆ ಅನ್ನಿಸುತ್ತದೆ..;)
Post a Comment