Monday, August 25, 2008

ಶ್ರೀನಿಧಿಯ ಕಥಾ ಸಂಕಲನ

ನನ್ನನ್ನು ನೀವು ಚಿಕ್ಕಂದಿನಿಂದಲೂ ನೋಡಿದ್ದೀರಿ. ಬಂದು ನಾಲ್ಕು ಮಾತಾಡಿ ಹರಸಿದರೆ ತುಂಬ ಖುಷಿಯಾಗುತ್ತೆ. ಬೇರೆ ಲೇಖಕರ ಕೈಲೋ ಸಿನಿಮಾ ನಟರ ಕೈಲೋ ಬಿಡುಗಡೆ ಮಾಡಿಸಬಹುದು. ಆದರೆ ಅವರಿಗೂ ನನಗೂ ವ್ಯಾವಹಾರಿಕ ಸಂಬಂಧ. ನಿಮ್ಮಷ್ಟು ಪ್ರೀತಿಯಿಂದ ಯಾರೂ ಮಾತಾಡೋದಕ್ಕೆ ಸಾಧ್ಯವಿಲ್ಲ. ನೀವು ದಯವಿಟ್ಟು ಒಪ್ಪಿಕೊಳ್ಳಬೇಕು.
ಶ್ರೀನಿಧಿ ಬರೆದ ಪತ್ರವನ್ನು ರಾಮಣ್ಣ ಮೇಷ್ಟರು ನಾಲ್ಕನೇ ಸಾರಿ ಓದಿದರು. ಅದರ ಜೊತೆಗೇ ಆತ ಕಥಾಸಂಕಲನದ ಕರಡು ಪ್ರತಿಯನ್ನೂ ಕಳಿಸಿಕೊಟ್ಟಿದ್ದ. ತನ್ನ ಕೈಯಲ್ಲಿ ಪೆಟ್ಟು ತಿಂದೂ ನಗುತ್ತಿದ್ದ ಶ್ರೀನಿಧಿ ಕಣ್ಮುಂದೆ ಬಂದ. ಅವನನ್ನು ನೋಡಿ ಇಪ್ಪತ್ತು ವರುಷವಾದರೂ ಆಗಿರಬೇಕು. ತಾನು ಅವನಿಗೆ ಪಾಠ ಹೇಳಿದ್ದು ಎಂಟನೇ ತರಗತಿಯಲ್ಲಿ. ಆಗ ಶ್ರೀನಿಧಿ ಮಹಾ ತಂಟೆಕೋರ ಹುಡುಗನಾಗಿದ್ದ. ಕ್ಲಾಸಿಗೂ ಸರಿಯಾಗಿ ಬರುತ್ತಿರಲಿಲ್ಲ. ಜೂನಿಯರ್ ಕಾಲೇಜಲ್ಲಿ ವಾರ್ಷಿಕೋತ್ಸವದ ದಿನ ನಡೆದ ಗಲಾಟೆಯಲ್ಲಿ ಅವನೂ ಭಾಗಿಯಾಗಿದ್ದನಲ್ಲವೇ ಎಂದು ರಾಮಣ್ಣ ನೆನಪಿಸಿಕೊಳ್ಳಲು ಯತ್ನಿಸಿದರು.
ಹೇಗಿದ್ದ ಹುಡುಗ ಹೇಗಾದ ಅಂತ ರಾಮಣ್ಣ ಮೇಷ್ಟರಿಗೆ ಖುಷಿಯಾಯಿತು. ತಮ್ಮ ವಿದ್ಯಾರ್ಥಿಗಳ ಪೈಕಿ ಸಾಧನೆ ಮಾಡಿದವನು ಅವನೊಬ್ಬನೇ ಇರಬೇಕು. ಅಂತೂ ದೊಡ್ಡ ಹೆಸರು ಮಾಡಿದ್ದಾನೆ. ಅದಕ್ಕಿಂತ ಹೆಚ್ಚಾಗಿ ತನ್ನನ್ನಿನ್ನೂ ಮರೆತಿಲ್ಲ ಎಂದು ರಾಮಣ್ಣ ಮೇಷ್ಟರು ಕೃತಜ್ಞರಾದರು. ತಕ್ಷಣವೇ ಶ್ರೀನಿಧಿಗೊಂದು ಪತ್ರ ಬರೆದು ತಮ್ಮ ಸಮ್ಮತಿಯನ್ನೂ ಸೂಚಿಸಿದರು.
****
ಜುಲೈ ಹನ್ನೆರಡಕ್ಕೆ ನಾನು ಊರಲ್ಲಿರೋಲ್ಲ. ಬೆಂಗಳೂರಿಗೆ ಹೋಗ್ತಿದ್ದೀನಿ. ಅಲ್ಲಿ ನನ್ನ ವಿದ್ಯಾರ್ಥಿ, ನಮ್ಮೂರಿನವನೇ, ನಿಮಗೂ ಗೊತ್ತಿರಬಹುದು, ಶ್ರೀನಿಧಿ ಅಂತ, ಅವನ ಕಥಾಸಂಕಲನ ಬಿಡುಗಡೆ. ಈಗ ಬೆಂಗಳೂರಲ್ಲಿ ದೊಡ್ಡ ಹೆಸರು ಮಾಡಿದ್ದಾನೆ ಎಂದು ಮಾರನೆ ದಿನದಿಂದ ಕೇಳಿದವರಿಗೂ ಕೇಳದೇ ಇದ್ದವರಿಗೂ ರಾಮಣ್ಣ ಹೇಳಿಕೊಂಡು ಬಂದರು.
ರಾಮಣ್ಣ ಮೇಷ್ಟರು ಅದೇ ಮೊದಲ ಬಾರಿಗೆ ಕಥಾಸಂಕಲನವೊಂದನ್ನು ಬಿಡುಗಡೆ ಮಾಡುವವರಿದ್ದರು. ಅವರು ಜೂನಿಯರ್ ಕಾಲೇಜಿನಲ್ಲಿದ್ದಾಗ ಕೂಡ ಅವರನ್ನು ಯಾರೂ ಪುಸ್ತಕ ಬಿಡುಗಡೆಯಂಥ ಸಮಾರಂಭಗಳಿಗೆ ಆಹ್ವಾನಿಸಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಲಯನ್ಸ್ ಕ್ಲಬ್ಬಿನವರೋ, ಯುವಕಸಂಘದವರೋ ಅವರನ್ನು ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭಕ್ಕೆ ಕರೆಸಿದ್ದು ಬಿಟ್ಟರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡದ್ದೇ ಇಲ್ಲ.
ನಿವೃತ್ತನಾಗಿ ಹನ್ನೆರಡು ವರುಷಗಳ ನಂತರ ಇದ್ದಕ್ಕಿದ್ದ ಹಾಗೆ ಒದಗಿಬಂದ ಅವಕಾಶದಿಂದ ರಾಮಣ್ಣ ಮೇಷ್ಟರಿಗೆ ರೋಮಾಂಚನವಾಯಿತು. ಶ್ರೀನಿಧಿಯ ಕಥಾಸಂಕಲನದ ಬಗ್ಗೆ ಸುದೀರ್ಘವಾಗಿ ಮಾತನಾಡಬೇಕು ಅಂದುಕೊಂಡರು. ಕ್ಯಾಲೆಂಡರ್ ತೆಗೆದು, ಸಮಾರಂಭಕ್ಕೆ ಎಷ್ಟು ದಿನ ಉಳಿದಿದೆ ಎಂದು ಲೆಕ್ಕಹಾಕಿದರು. ಪರೀಕ್ಷೆಗೆ ಸಿದ್ಧನಾಗುವ ಒಳ್ಳೆಯ ವಿದ್ಯಾರ್ಥಿಯ ಹಾಗೆ ಗಂಡ ಮಾಡಿಕೊಳ್ಳುತ್ತಿರುವ ಸಿದ್ಧತೆ ನೋಡಿ, ಸೀತಾಲಕ್ಷ್ಮಿಗೆ ಆಶ್ಚರ್ಯವಾಯಿತು.
****
ಶ್ರೀನಿಧಿಯ ಅಷ್ಟೂ ಕತೆಗಳನ್ನು ಒಂದೇ ರಾತ್ರಿ ಕುಳಿತುಕೊಂಡು ರಾಮಣ್ಣ ಮೇಷ್ಟರು ಓದಿಯೇ ಓದಿದರು. ಆಮೇಲೇ ಅವರಿಗೆ ಗಾಬರಿಯಾದದ್ದು. ಆ ಕತೆಗಳನ್ನು ಹೇಗೆ ವಿಮರ್ಶಿಸಬೇಕು ಅನ್ನುವುದು ಅವರಿಗೆ ಹೊಳೆಯಲೇ ಇಲ್ಲ. ರಾಮಣ್ಣ ಮೇಷ್ಟರು ಕನ್ನಡ ಸಣ್ಣಕಥೆಗಳ ಪ್ರಕಾಂಡ ಓದುಗರೇನೂ ಆಗಿರದೇ ಹೋದರೂ, ಸಾಕಷ್ಟು ಕತೆಗಳನ್ನು ತರಂಗ, ಸುಧಾ, ಮಯೂರ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಓದಿದ್ದರು. ಮಾಸ್ತಿ, ಅನಂತಮೂರ್ತಿ, ರಾಮಚಂದ್ರ ಶರ್ಮ, ಶ್ರೀಕೃಷ್ಣ ಆಲನಹಳ್ಳಿ ಮುಂತಾದವರ ಕತೆಗಳನ್ನು ಓದಿಕೊಂಡಿದ್ದರು.
ಶ್ರೀನಿಧಿಯ ಕತೆಗಳು ಅವರು ಓದಿದ ಯಾವ ಕತೆಗಳ ಹಾಗೂ ಇರಲಿಲ್ಲ. ಕೆಲವು ಕತೆಗಳಲ್ಲಿ ಪಾತ್ರಗಳೇ ಇರಲಿಲ್ಲ. ಕೆಲವು ಕತೆಗಳಲ್ಲಿ ಘಟನೆಗಳೇ ಇರಲಿಲ್ಲ. ಕೊನೆಯ ಕತೆಯಂತೂ ಎಷ್ಟು ಸಾರಿ ಓದಿದರೂ ಅವರಿಗೆ ಒಂದಿಷ್ಟು ಅರ್ಥವಾಗಲಿಲ್ಲ. ಆ ಕತೆಯ ಶೀರ್ಷಿಕೆ ‘ವಿಕ್ಷಿಪ್ತ’ಕ್ಕೂ ಕತೆಗೂ ಸಂಬಂಧವೇನು ಅನ್ನುವುದು ಅವರಿಗೆ ಹೊಳೆಯಲೇ ಇಲ್ಲ.
ಶ್ರೀನಿಧಿ ಇದನ್ನು ತನಗೆ ಕೊಟ್ಟು ತನ್ನನ್ನು ಪರೀಕ್ಷೆ ಮಾಡುತ್ತಿದ್ದಾನೇನೋ ಅನ್ನುವ ಅನುಮಾನವೂ ಅವರಿಗೆ ಬಂತು. ಕತೆಗಳ ಬಗ್ಗೆ ಮಾತನಾಡದೇ, ಶ್ರೀನಿಧಿಯ ಕುರಿತು ನಾಲ್ಕು ಮಾತು ಹೇಳಿ ಹರಸಿ ಬರುವುದೇ ಸರಿ. ಒಳ್ಳೆಯ ಕತೆ ಬರೆದಿದ್ದಾನೆ ಎಂದು ಹೇಳಿ, ನಾಲ್ಕೈದು ಕತೆಗಳ ಹೆಸರುಗಳನ್ನು ಉದಾಹರಿಸಿ ಬಂದರೆ ಸಾಕು ಎಂದು ಮನಸ್ಸಿನಲ್ಲೇ ಅಂದುಕೊಂಡು ರಾಮಣ್ಣ ಮೇಷ್ಟರು ನಿಸೂರಾದರು.
ಅವರ ನೆಮ್ಮದಿ ತುಂಬ ಕಾಲ ಬಾಳಿಕೆ ಬರಲಿಲ್ಲ. ಮಾರನೇ ದಿನವೇ ಪೋಸ್ಟ್ ಮ್ಯಾನ್ ದುಗ್ಗಪ್ಪ ರಾಮಣ್ಣನ ಹೆಸರಿಗೆ ಬಂದ ಪೋಸ್ಟ್ ತಂದುಕೊಟ್ಟ. ಅದರಲ್ಲಿ ಶ್ರೀನಿಧಿ ಕಳಿಸಿದ ಕವರ್ರೂ ಒಂದಿತ್ತು. ಅದನ್ನು ರಾಮಣ್ಣ ಮೇಷ್ಟರು ಪ್ರೀತಿಯಿಂದ ಸಾವಕಾಶ ಬಿಡಿಸಿ ಓದಿಕೊಂಡರು. ಅದರಲ್ಲಿದ್ದ ವಿವರಗಳ ಪೈಕಿ ಅವರನ್ನು ಕಂಗೆಡೆಸಿದ್ದು ಒಂದೇ ಒಂದು ಸಾಲು. ಕೃತಿ ಬಿಡುಗಡೆ: ಡಾ. ಪರಶಿವಮೂರ್ತಿ. ಖ್ಯಾತ ಸಾಹಿತಿ. ಕೃತಿಯ ಬಗ್ಗೆ ಮಾತು: ಮೇಲಂತಬೆಟ್ಟು ರಾಮಣ್ಣ, ನಿವೃತ್ತ ಶಿಕ್ಷಕ.
ಶ್ರೀನಿಧಿಯ ಕತೆಗಳನ್ನು ಓದಿ ಅರ್ಥಮಾಡಿಕೊಂಡು, ಘನತೆಯಿಂದ ಮಾತಾಡದೇ ಬೇರೆ ದಾರಿಯಿಲ್ಲ ಅನ್ನುವುದು ರಾಮಣ್ಣ ಮೇಷ್ಟರಿಗೆ ಖಾತ್ರಿಯಾಯಿತು. ಆವತ್ತಿಡೀ ಕುಳಿತುಕೊಂಡು ಆ ಕತೆಗಳನ್ನು ಮತ್ತೊಮ್ಮೆ ಓದಿದರು. ಅವುಗಳ ಒಳಾರ್ಥಗಳನ್ನು ಗ್ರಹಿಸುವ ಪ್ರಯತ್ನ ಮಾಡಿದರು. ಎಷ್ಟೇ ಪ್ರಯತ್ನ ಮಾಡಿದರೂ ಆ ಕತೆಗಳು ಅವರೊಳಗೆ ಇಳಿಯುತ್ತಲೇ ಇರಲಿಲ್ಲ.
ಆಗ ಅವರಿಗೆ ನೆನಪಾದದ್ದು ಮಂಗಳೂರು ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದ ಕೆ. ಟಿ. ಮಾಧವ. ಆತ ಸಣ್ಣಕತೆಗಳ ಬಗ್ಗೆ ರೀಸರ್ಚ್ ಮಾಡಿ ಡಾಕ್ಟರೇಟ್ ತಗೊಂಡಿದ್ದ ಎನ್ನುವುದನ್ನು ರಾಮಣ್ಣ ಪತ್ರಿಕೆಗಳಲ್ಲಿ ಓದಿದ್ದರು. ಹೀಗಾಗಿ ಅವನ ಹತ್ತಿರ ಮಾತಾಡುವುದೇ ಸರಿ ಎಂದುಕೊಂಡು ರಾಮಣ್ಣ ಮೇಷ್ಟರು ಮಾರನೇ ದಿನ ಹೋಗಿ ಅವನನ್ನು ಭೇಟಿಯಾದರು.
ಶ್ರೀನಿಧಿಯ ಕತೆಗಳನ್ನು ಅವನಿಗೆ ತೋರಿಸುವುದಕ್ಕೆ ಹೋಗಲಿಲ್ಲ ರಾಮಣ್ಣ. ಬದಲಾಗಿ ಈಗಿನವರ ಕತೆಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂಬ ಪೀಠಿಕೆಯೊಂದಿಗೆ ಅವರು ಮಾತು ಶುರುಮಾಡಿದರು. ಒಂದಷ್ಟು ಕತೆಗಳ ಬಗ್ಗೆ ಏನಾದರೂ ಬರೆಯೋಣ ಅಂದುಕೊಂಡಿದ್ದೆ ಎಂದರು. ಮಾಧವ ಅದಕ್ಕೆ ನನ್ನ ಡಾಕ್ಟರೇಟ್ ಗ್ರಂಥ ಸಹಾಯ ಮಾಡುತ್ತದೆ ನೋಡಿ ರಾಮಣ್ಣ ಎಂದು ಹೇಳಿ, ನಾನ್ನೂರೈವತ್ತು ರುಪಾಯಿ ತೆಗೆದುಕೊಂಡು ಆರುನೂರೈವತ್ತು ಪುಟಗಳ ಮಹಾಪ್ರಬಂಧವನ್ನು ಅವರ ಕೈಗಿಟ್ಟ.
****
ಸಣ್ಣಕತೆ ಎಂಬ ಪ್ರಕಾರವೇ ಕನ್ನಡದ್ದಲ್ಲ. ಇಂಗ್ಲಿಷ್ನಲ್ಲಿ ಶಾರ್ಟ್ ಸ್ಟೋರಿ ಎಂಬ ಪ್ರಕಾರ ಇತ್ತು. ಕನ್ನಡಕ್ಕೂ ಅದು ಬಂತು. ಕನ್ನಡದಲ್ಲಿ ಸಣ್ಣಕತೆಯನ್ನು ಪ್ರಚುರಪಡಿಸಿದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್. ಅವರದು ನವೋದಯದ ಶೈಲಿ, ನಂತರ ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಚಳವಳಿಗಳಲ್ಲಿ ಸಣ್ಣ ಕತೆ ಬೆಳೆಯಿತು ಮುಂತಾದ ವಿವರಗಳನ್ನು ರಾಮಣ್ಣ ಮೇಷ್ಟ್ರು ಆಸಕ್ತಿಯಿಂದ ಓದಿ ಟಿಪ್ಪಣಿ ಮಾಡಿಕೊಂಡರು. ಎಸ್ ದಿವಾಕರ್ ಹೊರತಂದಿದ್ದ ಶತಮಾನದ ಸಣ್ಣಕತೆಗಳು ಪುಸ್ತಕವನ್ನು ಕೊಂಡು ತಂದು, ದಿವಾಕರ್ ಬರೆದಿದ್ದ ಪಾಂಡಿತ್ಯ ಪೂರ್ಣ ಮುನ್ನುಡಿಯನ್ನು ಓದಿ ಬೆರಗಾದರು. ಅದನ್ನು ಓದುತ್ತಿದ್ದಂತೆ ಶ್ರೀನಿಧಿಯ ಕತೆಗಳ ಕುರಿತು ಮಾತಾಡುವುದಕ್ಕೆ ತಮಗಿರುವ ಜ್ಞಾನ ಏನೇನೂ ಸಾಲದು ಅಂತ ಅವರಿಗೆ ಅನ್ನಿಸಿಬಿಟ್ಟಿತು.
ಒಪ್ಪಿಕೊಂಡದ್ದನ್ನು ನಿರಾಕರಿಸುವ ಹಾಗೂ ಇರಲಿಲ್ಲ. ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿ ಹೋಗದೆ ಉಳಿದರೆ ಹೇಗೆ ಎಂಬ ಯೋಚನೆ ಬಂತು. ಅದೇ ಸರಿ ಅಂದುಕೊಂಡು ಮೇಷ್ಟರು ಶ್ರೀನಿಧಿಯ ಕಥಾಸಂಕಲನವನ್ನು ಎತ್ತಿ ಪಕ್ಕಕ್ಕಿಟ್ಟು ದೊಡ್ಡದೊಂದು ಬಿಡುಗಡೆ ಸಿಕ್ಕ ಆನಂದ ಅನುಭವಿಸಿದರು.
ಆದರೆ, ಆ ಆನಂದವನ್ನೂ ಅನುಭವಿಸುವುದಕ್ಕೆ ಅವರಿಗೆ ಶ್ರೀನಿಧಿ ಅವಕಾಶ ಕೊಡಲಿಲ್ಲ. ಉಪ್ಪಿನಂಗಡಿಯಿಂದ ರಾಮಣ್ಣ ಮೇಷ್ಟರನ್ನು ಕರೆದುಕೊಂಡು ಬರಬೇಕು ಅಂತ ಶ್ರೀನಿಧಿ, ಗೆಳೆಯ ಮೃತ್ಯುಂಜಯನಿಗೆ ಹೇಳಿದ್ದ. ಮೃತ್ಯುಂಜಯ ಹತ್ತನೇ ತಾರೀಖಿನಂದೇ ರಾಮಣ್ಣ ಮೇಷ್ಟ್ರ ಮನೆಗೆ ಹೋಗಿ ಹನ್ನೊಂದನೇ ತಾರೀಖು ಹತ್ತು ಗಂಟೆಗೆ ರೆಡಿಯಿರಿ ಮೇಷ್ಟ್ರೇ. ನಾನೇ ಕರೆದುಕೊಂಡು ಹೋಗುತ್ತೇನೆ. ಏಸಿ ಕಾರಲ್ಲಿ ಹೋಗೋಣ. ನಿಮಗೆ ಒಂದಿಷ್ಟೂ ಸುಸ್ತಾಗೋದಿಲ್ಲ. ಮಡಿಕೇರಿ ಮೇಲೆ ಹೋಗೋಣ. ಸಣ್ಣ ಘಾಟಿ ಅಂತ ಹೇಳಿ ಅವರನ್ನು ಕಂಗಾಲು ಮಾಡಿದ.
ಅವನು ಹೋದ ಕ್ಷಣದಿಂದ ಮೇಷ್ಟರು ನಿದ್ದೆ ಮಾಡಲಿಲ್ಲ. ಶ್ರೀನಿಧಿಯ ಕಥಾಸಂಕಲನವನ್ನು ಕಣ್ಣಲ್ಲಿ ಕಣ್ಣಿಟ್ಟು ಅಕ್ಷರಕ್ಷರ ಬಿಡಿಸಿ ಓದಿದರು. ಒಂದೊಂದು ಪದವನ್ನು ಹತ್ತು ಹತ್ತು ಸಲ ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರು. ಓದುತ್ತಲೇ, ತಾವು ಕನ್ನಡ ಸಣ್ಣಕಥಾ ಪ್ರಪಂಚದ ಕುರಿತು ಓದಿದ ಲೇಖನಗಳನ್ನು ಮನಸ್ಸಿಗೆ ತಂದುಕೊಂಡು ಟಿಪ್ಪಣಿ ಮಾಡಿಕೊಳ್ಳತೊಡಗಿದರು. ಜುಲೈ ಹತ್ತರ ರಾತ್ರಿ ಆ ಟಿಪ್ಪಣಿಯನ್ನು ಮುಂದಿಟ್ಟುಕೊಂಡು ಭಾಷಣ ಬರೆಯಲು ಕುಳಿತರು.
ಶ್ರೀನಿಧಿಯ ಕತೆಗಳಲ್ಲಿ ಅವರಿಗೆ ಅಲ್ಪಸ್ವಲ್ಪ ಅರ್ಥವಾದದ್ದು ಮಹಾಪ್ರಸ್ಥಾನ ಎಂಬ ಕತೆ. ನಲುವತ್ತನೇ ವಯಸ್ಸಿಗೆ ಮದುವೆಯಾಗುವ ಧೀರೇಂದ್ರನನ್ನು ಅವನ ಗೆಳೆಯರು ಇಪ್ಪತ್ಮೂರು ವರುಷದ ಹುಡುಗಿಯ ಜೊತ ಏಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಗೇಲಿ ಮಾಡುತ್ತಾರೆ. ಹಂತಹಂತವಾಗಿ ಹೇಗೆ ಆತ ವಿಫಲನಾಗುತ್ತಾ ಹೋಗುತ್ತಾನೆ ಎನ್ನುವುದನ್ನು ಹೇಳಿ ಅವನನ್ನು ಕಂಗಾಲಾಗಿಸುತ್ತಾರೆ. ಪ್ರಸ್ತದ ದಿನ ಅವನ ಉದ್ವೇಗ, ಆತಂಕ ಮಿತಿಮೀರುತ್ತದೆ. ಆಕೆ ಕೋಣೆಯ ಬಾಗಿಲು ತೆರೆಯುತ್ತಾಳೆ. ಒಳಗೆ ಬರುತ್ತಾಳೆ. ಮಲಗಿರುವ ಧೀರೇಂದ್ರನನ್ನು ಮುಟ್ಟುತ್ತಾಳೆ. ಧೀರೇಂದ್ರನ ಮೈ ಹಾವಿನ ಮೈಯಂತೆ ತಣ್ಣಗಿರುತ್ತದೆ.
ಅದನ್ನು ಮುಖ್ಯವಾಗಿಟ್ಟುಕೊಂಡು ಮಾತು ಆರಂಭಿಸಬೇಕು ಎಂದುಕೊಂಡು ರಾಮಣ್ಣ ಮೇಷ್ಟರು ಹದಿನೈದು ಪುಟಗಳ ಭಾಷಣ ಬರೆದೇ ಬರೆದರು. ಅದನ್ನು ತಾವೇ ಒಮ್ಮೆ ಓದಿದರು. ಓದಿ, ತನ್ನನ್ನು ಕರೆದೊಯ್ಯಲು ಬರಲಿರುವ ಮೃತ್ಯುಂಜಯನ ಕಾರಿಗೆ ಕಾಯುತ್ತಾ ಕೂತರು.
****
ಇವತ್ತು ನನ್ನ ಕಥಾಸಂಕಲನದ ಕುರಿತು ನನ್ನ ಪರಮ ಪ್ರೀತಿಯ ಗುರುಗಳಾದ ರಾಮಣ್ಣ ಮೇಷ್ಟ್ರು ಮಾತನಾಡಬೇಕಿತ್ತು. ನನ್ನ ಕತೆಗಳ ಮೇಲೆ ಅವರು ಹದಿನೈದು ಪುಟಗಳ ವಿಸ್ತೃತವಾದ ವಿಮರ್ಶೆಯನ್ನೂ ಬರೆದಿಟ್ಟಿದ್ದರು. ಅವರು ನಿನ್ನೆ ರಾತ್ರಿಯಷ್ಟೇ ದಿವಂಗತರಾದರು. ಈ ಹೊತ್ತು ನಮ್ಮೊಂದಿಗೆ ಇಲ್ಲದಿರುವ ಅವರ ಆತ್ಮಕ್ಕೆ ಚಿರಶಾಂತಿ ಕೋರೋಣ. ಈಗ ಎರಡು ನಿಮಿಷಗಳ ಮೌನ ಎಂದು ಶ್ರೀನಿಧಿ ಮಾತು ಶುರುಮಾಡಿದ.
ಕಥಾಸಂಕಲನ ಬಿಡುಗಡೆ ಮಾಡಲು ಬಂದಿದ್ದ ಪರಶಿವಮೂರ್ತಿ ಕಣ್ಣೊರೆಸಿಕೊಂಡು ಕೈಯನ್ನು ಮುಂದಕ್ಕೆ ಕಟ್ಟಿ ವಿಷಾದದ ಪರಾಕಾಷ್ಠೆ ತಲುಪಿದವರಂತೆ ಸ್ತಬ್ಧರಾಗಿ ನಿಂತರು. ಸಭಿಕರೂ ಎದ್ದುನಿಂತರು.

37 comments:

Anonymous said...

sir,
onde salakke odi mugisida mele kathege yestu ayamagaliveyalla antha annisutha hoyithu.
indina 'bidugade samarambha'vannu adharvagittukondu vyangya,tamashe, vishadada pataliyalli nirUpithavada vishista kathe idu.
keep writing sir
-vikas negiloni

shreedevi kalasad said...

ಜೋಗಿಯವರೆ,
ಒಬ್ಬರಿಗೊಬ್ಬರು ಬೆನ್ನು ತಟ್ಟಿಕೊಳ್ಳುವುದನ್ನು ಕಲಿತಿರುವ ಇಂದಿನವರ ಮುಂದೆ ಮೇಷ್ಟ್ರ ಪ್ರಾಮಾಣಿಕತನ ಹೆಚ್ಚು ಆಪ್ತವಾಗುತ್ತದೆ. ಹಾಗೆಯೇ ಪ್ರಖ್ಯಾತರಿಂದ ಪುಸ್ತಕ ಬಿಡುಗಡೆಯಾಗಬೇಕು, ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎಂಬ ವ್ಯಾಪಾರಿ ಮನಸ್ಸುಗಳ ಮಧ್ಯೆ ಶ್ರೀನಿಧಿಯ ಸರಳತೆ ಸಂವೇದನಾಶೀಲ ಮನಸ್ಸಿಗೆ ಸಾಕ್ಷಿ. ಕಥಾಸಂಕಲನದ ಕಥೆಯನ್ನು ಪ್ರಾರಂಭಿಸಿ, ಅರ್ಧಕ್ಕೆ ನಿಲ್ಲಿಸಿರುವ ರೀತಿ ಮಿಂಚಿನಂತೆ ಬಂದು ಮಾಯವಾಗುತ್ತದೆ.

Harish - ಹರೀಶ said...

ಚೆನ್ನಾಗಿದೆ. ಒಂದೇ ಸಲಕ್ಕೆ ಓದಿಸಿಕೊಂಡು ಹೋಗುತ್ತದೆ.

Anonymous said...

DEVAREE !
-Harish Kera

NilGiri said...

ನಾನೆಲ್ಲೋ " ತುಂತುರು ಹನಿಗಳ" ಶ್ರೀನಿಧಿ ಅವರು ಕಥಾಸಂಕಲನ ಬಿಡುಗಡೆ ಮಾಡ್ತಿರ ಬಹುದು, ಅದಕ್ಕೆ ನಿಮಗೆ ಕರೆದಿರಬಹುದು ಅಂತಾ ಓದ್ಕೊಂಡು ಹೋದ್ರೆ...!

ಶ್ರೀನಿಧಿ.ಡಿ.ಎಸ್ said...

ಯಾರದೋ ಬ್ಲಾಗು ರೋಲಲ್ಲಿ ಅಪ್ ಡೇಟ್ ನೋಡಿ ಮೊನ್ನೆ ತಾನೆ ಟಿ.ಜಿ.ಶ್ರೀನಿಧಿ ಯ ಪುಸ್ತಕ ಬಿಡುಗಡೆ ಆಯ್ತು, ನಾನಂತೂ ಏನೂ ಬರ್ದಿಲ್ಲ, ಈ ಹೊಸ ಶ್ರೀನಿಧಿ ಯಾರಪಾ ಅಂತ ತಲೆ ಕೆಡ್ಸಿಕೊಂಡೆ!!!:)

ಕಥೆ ಸೂಪರ್ರು.

rj said...

ವ್ಹಾ!
ಕತೆಯೊಂದು ತನ್ನನ್ನು ತಾನು ಯಾರ ಹಂಗಿಲ್ಲದೇ ಬಿಡಿಸಿಕೊಳ್ಳುವದು ಹೀಗೆಯೇ..
ಮೇಷ್ಟ್ರ ಮುಗ್ಧತನ ತನ್ನ ಪೊರೆ ಕಳಚಿಕೊಂಡು ಹ್ಯಾಗೆ pretendತನಕ್ಕಿಳಿದು ಮತ್ತೆಲ್ಲೋ
ನಾಶವಾದ ರೀತಿ ಕಂಡು ಪಿಚ್ಚೆನಿಸಿತು.
ಇಲ್ಲಿ ಆ ಬಡಪಾಯಿ ಮೇಷ್ಟ್ರನ್ನ ಕೊಂದಿದ್ದು ಯಾರು?
ಶ್ರೀನಿಧಿಯ ಪ್ರೀತಿಯಾ?
ಆಮಂತ್ರಣದ ರೀತಿಯಾ?
ಡಾಕ್ಟರೇಟ್ ಪ್ರಬಂಧವಾ?
ಅಥವಾ ಕೊನೆಗೂ ಎಲ್ಲಾ ಅರ್ಥಮಾಡಿಕೊಂಡುಬಿಟ್ಟೆ ಎಂದು ವಿಪರೀತ ಖುಶಿಯಾಗಿ ಹಾರ್ಟ್ ಆಟ್ಯಾಕ್...?
ಒಟ್ಟಿನಲ್ಲಿ ದಿಗ್ಭ್ರಮೆಗೊಳಿಸಬಲ್ಲ ಅಂತ್ಯ!
-ರಾಘವೇಂದ್ರ ಜೋಶಿ.

ಪ್ರದ್ಯುಮ್ನ ಭಟ್ said...

ಅಬ್ಬಬ್ಬಾ!!!!

ವಿಕ್ರಮ ಹತ್ವಾರ said...

Pure Jogi Wit....matte nimma saraLeekaraNa sootra.

mruganayanee said...

lots of insigths in the story... but its the biting bitter truth of contemprary literary field..

by the way ಈ ಸರಳೀಕರಣ ಅಂದ್ರೇನು?

ಹರೀಶ್ said...

ತೀರಾ ಅನಿರೀಕ್ಷಿತ ಎಂಡಿಂಗ್. ಸ್ವಲ್ಪ ಬೇಜಾರಾಯಿತು.

ಮಲ್ಲಿಕಾಜು೯ನ ತಿಪ್ಪಾರ said...

ಅದನ್ನು ತಾವೇ ಒಮ್ಮೆ ಓದಿದರು. ಓದಿ, ತನ್ನನ್ನು ಕರೆದೊಯ್ಯಲು ಬರಲಿರುವ ಮೃತ್ಯುಂಜಯನ ಕಾರಿಗೆ ಕಾಯುತ್ತಾ ಕೂತರು.

E linegalli ramanna mestra savavannu soochyavgi tilisidira sir??? Illi mrutuyanjay annodu soavin sanketvayita???

But... Story is super Sir

ಮಲ್ಲಿಕಾಜು೯ನ ತಿಪ್ಪಾರ said...

ಅದನ್ನು ತಾವೇ ಒಮ್ಮೆ ಓದಿದರು. ಓದಿ, ತನ್ನನ್ನು ಕರೆದೊಯ್ಯಲು ಬರಲಿರುವ ಮೃತ್ಯುಂಜಯನ ಕಾರಿಗೆ ಕಾಯುತ್ತಾ ಕೂತರು.

E linegalli ramanna mestra savavannu soochyavgi tilisidira sir??? Illi mrutuyanjay annodu soavin sanketvayita???

But... Story is super Sir

Santhosh Ananthapura said...

ಮೃತ್ಯುಂಜಯ ನ ಕಾರಿಗೆ ಕಾಯುತ್ತಾ ಕುಳಿತರು... ಒಳ್ಳೆಯ ಸಂಕೇತ. ಇದನ್ನು ಓದುತ್ತಿದ್ದರೆ ಇಲ್ಲೇ ಎಲ್ಲೋ ನಡೆದ ದೈನಂದಿನ ಘಟನೆಯಷ್ಟು ಸರಳವಾಗಿದೆ. ಆದರೆ ಅರ್ಥಗರ್ಭಿತವಾಗಿದೆ. ರಿಯಲಿ ಟಚಿಂಗ್ ಸ್ಟೋರೀ ಸರ್. ಕೀಪ್ ರಾಕಿಂಗ್

Anonymous said...

nanu idakke munche EE reethi nanna abhipraya tilisilla...AAdre kathe -nimma ella kathegalanthe- tumba chennagide..nange modalige enoo artha agirliaa..aadre yochne madta madta swalpa swalpa holeethu..
Thanks
Gaurish S Akki

ರೇಣುಕಾ ನಿಡಗುಂದಿ said...

ನಾನೂ ’ತುಂತುರ ಹನಿಗಳ’ ಶ್ರೀನಿಧಿ ಪುಸ್ತಕ ಅಂತಲೇ ತಿಳಿದು ಓದಿಕೊಂಡು ಹೋಗ್ತಾ ಇದ್ದೆ.
ಬಾಯಿ, ಮನಸ್ಸು ಮೂಕವಾಗಿಹೋಯಿತು ಮೇಷ್ಟ್ರ ಗುಂಗಿನಲ್ಲಿ..
ಸುಪರ್ ಕಥೆ, ಪ್ರೀತಿಯಿಂದ, ರೇಣುಕಾ

Anonymous said...

Dear Jogi Sir!

I surprised you in Nagathihalli's Script Workshop by wishing you when you are wishing your known fans. But this story "Sree Nidhia Katha Sankalana" really gave a shock! This story gave us the true relationship between the teacher and the student. But an abrupt ending.

With Love - Gubbachhi Sathish, Gubbi.

Gubbachhi Sathish said...

Really you are a master story-teller Sir.

Anonymous said...

super sir nanna hesru nodi shock aaythu..
-shrinidhi.d

ವಿಕ್ರಮ ಹತ್ವಾರ said...

Jogi-
hosabana kathe oduttaa oduttaa ...baDapaayi mEshtru sattE hOguttaane...adu nimma excellent wit.


"by the way ಈ ಸರಳೀಕರಣ ಅಂದ್ರೇನು?"

Plz refer to Jogi's writeups on bhashe and chiranjeevitva.

I think this story is a complete package of Jogi's views on - 'chiranjeevitva' and 'bhaashe'.

The beauty of this story is, it can be seen in a two contradicting views.

1) A generation gap. A old man who is unable to copeup with the modern thoughts.

2) On the other hand it also convey the simplicity of the man. He has lived a simple life and things are not so complicated to him as it to the younger generation.

Shekar Poorna said it right, sanna kathe hegirabeku anta kelidre jogi kathegaLige beTTu maaDi tOrisabahudu.

This is my elaboration on my previous comment.

ದಿವಂಗತ said...

ಚೆನ್ನಾಗಿದೆ ಸರ್

Jayalaxmi.Patil said...

mEshTra taLamaLa eshTOndu sahajavaagi mooDide andre naane aa sthiteelidinEno anno bhaava aavarisitu kshaNa kaala...

Anonymous said...

ramanna meshtru athmahatye madi kondare ? intha bashana naanu mada bekalla antha ?

ರಾಜ್ said...

Hi friend,

i too doing blogging in a blogspot.com in kannada, is it any option is there where i can write directly in kannada.. coz whenever i post a post typed in nudi, it will not work in some systems..
is it any option is there

http://santhvana.blogspot.com

ಋಷ್ಯಶೃಂಗ said...

Dear sir
Please visit my blog
http://rishyashringa.blogspot.com/

shreeshum said...

ಜೋಗಿ ಸರ್
ಇದು ಕಥೆಯಾ..?. ನಾನು ನಿಜ ಅಂದ್ಕೊಂಡಿದ್ದೆ. ಕಾಮೆಂಟ್ ನೋಡಿದ್ಮೇಲೆ ಗೊತ್ತಾಗಿದ್ದು.
ಮತ್ತೆ ಓದಿದೆ.

H.S. Dharmendra said...

A perfect ending for the story. The way the story starts and gets further, there is an ominous feel which gets real in the end. Very nice way of unfolding the story. Sorry for commenting in English, this is quite fast compared to using quillpad and other methods.

I do blog in Kannada where I post my quadruplets and other poems. Please visit and leave your valuable comments. Thank you.

http://onderadumaatu.blogspot.com

kaligananath gudadur said...

sir, nimma matugalu nijakku shrinidhi ashte alla nammantavrigellarigu kai hididu nadesuttave. -kaligananath gudadur

ಚಿತ್ರಾ ಕರ್ಕೇರಾ said...

ಸರ್..ನಾನೂ 'ತುಂತುರು ಹನಿ ಶ್ರೀನಿಧಿ ಕಥಾಸಂಕಲನ ತಂದ್ನಾ?'ಅಂತ ಓಡೋಡಿ ಬಂದ್ರೆ..ಇದು ಬೇರೇನೇ ಶ್ರೀನಿಧಿ..ಅಂತೂ ಓದುವಾಗೇ ಆಯಿತು. ಮೇಷ್ಟ್ರು ಮತ್ತು ಶ್ರೀನಿಧಿ ಇಬ್ಬರೂ ತುಂಬಾ ಆಪ್ತವಾಗಿಬಿಡ್ತಾರೆ..
-ಚಿತ್ರಾ

Balasubramanya said...

enu blog ge bareyodu bittiro hege?

Raghavendra said...

http://chaitrapatha.blogspot.com/2009/04/blog-post.html

Anonymous said...

ಜೋಗಿ,
ಹೇಗಿದ್ದೀರಿ? ಬಹಳ ಬಿಸಿ ಅಂತ ಕಾಣ್ತದೆ. ಈ ಬಾರಿಯ ದೇಶಕಾಲದಲ್ಲಿ ನಿಮ್ಮ ಕತೆಗಳ ಬಗ್ಗೆ ವಿಮರ್ಶಕ ವಿಜಯಶಂಕರ ಬರೆದಿದ್ದಾರೆ. ಅದನ್ನು ನೋಡಿದಿರಾ? ನಿಮ್ಮ ಕತೆಗಳು ಜನಪ್ರಿಯವಾಗುತ್ತಿರುವ ಸಂದರ್ಭದ ವಿಶ್ಲೇಷಣೆಯನ್ನು ಮಾಡುವ ಪ್ರಯತ್ನ ಆ ಲೇಖನದಲ್ಲಿದೆ. ಅದರ ಬಗ್ಗೆ ಎನಿ ಕಾಮೆಂಟ್ಸ್?

ಇತಿ,
ಆಸಕ್ತ ಓದುಗ

ರೂಪಾ said...

ಸಾರ್
ಕಥೆಯ ಅಂತ್ಯ ಅನಿರೀಕ್ಷಿತವಾಗಿತ್ತು
ಕೊನೆಗೂ ಮಾಸ್ತರರು ಭಾಷಣಕ್ಕೆ ಸಿದ್ದರಾದರಲ್ಲ ಎಂದು ಕೊನೆಯ ಪ್ಯಾರ ಓದುತ್ತಿದ್ದಂತೆ ಮನಸ್ಸು ಒಂದು ಕ್ಷಣ ಸ್ತಬ್ದವಾಯ್ತು

ಧ್ವನಿ said...

mattomme blogngaladalli nimmannu nodi santosha vaytu

muroor said...

Guru - adello ninna ella kathegu hariyuva antara gangeyondannu ivattu kandukondante anisuttide nannolage...

muroor said...

Guru - adello ninna ella kathegu hariyuva antara gangeyondannu ivattu kandukondante anisuttide nannolage...

-shishira

Anonymous said...

sir,

kathe thumba chennagidi. moda modalu nim melina abhimannake sumne nanu nimma kathenella odatha edde. ega nim jothege nimma baravanigegu abhimani agi hogidine

nimma abhimani