Monday, April 7, 2008

ಮಳೆ ಮಂತ್ರದಂಡ ಮುಟ್ಟಿ ಅವಳಿಗೆ ಚಿಗುರು ಪುಲಕ

ಅದೇ ಕೊನೆಯ ಊರು, ಅದೇ ಕೊನೆಯ ಬಸ್ಸು. ಎರಡು ಗಂಟೆ ತಡವಾಗಿ ಆ ಊರಿಗೆ ಬಂದು ತಲುಪಿದೆ. ಬೆರಗುಗಣ್ಣಿನ ಹುಡುಗ ಬಸ್ಸಿಳಿಯುವ ಹೊತ್ತಿಗೆ ನಡುರಾತ್ರಿಗೆ ಮೂರೇ ಗಂಟೆ.
ಆ ಊರಲ್ಲಿ ಚಂದ್ರನದೇ ರಾಜ್ಯಭಾರ. ಧಾರಾಳ ಚೆಲ್ಲಿದ ಬೆಳದಿಂಗಳು. ಬೆಳದಿಂಗಳನ್ನೇ ಹಿಟು್ಟ ಮಾಡಿಕೊಂಡು ಚಿತ್ತಾರ ಬರೆದ ಕಾಡುಮರಗಳ ಹಾದಿ. ಹತ್ತಿರಕ್ಕೆ ಸ್ವಷ್ಟ. ದೂರಕ್ಕೆ ನಿಗೂಢವಾಗುವ ಪ್ರಕೃತಿ. ನಾಸ್ಕೋ ಐದೋ ಮೈಲಿ ನಡೆದಷ್ಟೂ ಹಾದಿ.
ಆ ಹಾದಿಯ ಉದ್ದಕ್ಕೂ ಹೆಸರಿರದ ಇರುಳುಹಕ್ಕಿಯ ಹಾರಾಟ, ದೂರದಲ್ಲೆಲ್ಲೋ ಊಳಿಡುವ ನರಿ, ಅದಾರಾಚೆಗಿನ ಬೆಟ್ಟದ ಮೇಲೆ ದಿಕ್ಕೆಟ್ಟು ಉರಿವ ಕಾಡಿನ ಬೆಂಕಿ, ಬಿಸಿಲೋ ಬೆಳದಿಂಗಳೋ ತಿಳಿಯದಂತೆ ಧಾರಾಕಾರ ಬೆವರುವ ಮೈ.
ಪಯಣದ ಕೊನೆಗೊಂದು ಒಂಟಿಮನೆ. ಒಂಟಿಮನೆಯ ಹಜಾರದಲ್ಲೊಂದು ಲಾಂದ್ರ. ಸುಸ್ವಾಗತ, ಕಾಲ್ತೊಳೆಯುವುದಕ್ಕೆ ಬಿಸಿನೀರು, ಬಿಸಿಬಿಸಿ ಊಟ, ಬೆಚ್ಚನೆಯ ಹಾಸಿಗೆ, ಕಣ್ತುಂಬ ಕನಸು. ಬೆಳಗಾಗೆದ್ದರೆ ಚಂದ್ರ ಅರೆಬರೆ ತೋರಿಸಿದ್ದ ಜಗತ್ತಿನ ತುಂಬ ಎಳೆಬಿಸಿಲು. ಮತ್ತದೇ ಕನಸೋ ಕಲ್ಪನೆಯೋ ರೂಪಕವೋ ಕಲೆಯೋ ತಿಳಿಯದ ಕಾಡಿನ ಲೋಕ.
ಕಾಡಲ್ಲಿ ಸ್ಕು ಹೆಜ್ಜೆ ಹಾಕಿದರೆ ಜಟಿಲವಾಗುವ ಹಾದಿ. ಅಲ್ಲೊಂದು ಕುಟಿಲ ತೊರೆ. ಜೇನುಗೂಡು, ನೇರಳೆ ಹಣ್ಣು, ರೆಂಜೆ ಹೂವಿನ ಮರ, ಆಳೆತ್ತರಕೆ್ಕ ನಿಂತ ಹೆಸರಿರದ ಮರದ ತೊಗಟೆಗೆ ಪ್ರಾಣಕಳಕೊಳ್ಳುವ ರಭಸದಲ್ಲಿ ತಲೆಯೊಡೆದುಕೊಳ್ಳುತ್ತಿರುವ ಮರಕುಟುಕ, ನೆಲ್ಲಿಕಾಯಿಯ ಮರದ ಗೆಲ್ಲುಗಳಲ್ಲಿ ಹಸಿರುಹಾವು, ಜಂಬೂನೇರಳೆ, ಕಾಲಕಾಲಕ್ಕೆ ಕರುಣಿಸಿದ ಒಂದೊಂದು ರುಚಿ. ನೆಲ್ಲಿಕಾಯಿ ತಿಂದು ತೊರೆಯ ನೀರು ಕುಡಿದರೆ ಮೈಚಾಚಿದರೆ ಇಹಕೂ ಪರಕೂ ಸೇತುವೆ.
*****
ಮೊನ್ನೆ ಮೊನ್ನೆ ವಿಕಾಸನ ಜೊತೆ ಇದನ್ನೆಲ್ಲ ಮಾತನಾಡುತ್ತ ರಾತ್ರಿ ಕಳೆಯಿತು. ನಿಗೂಢ ಮರೆಯಾಗಿ ಎಲ್ಲವೂ ನಿಚ್ಚಳವಾಗಿದೆ. ಪಯಣದ ಕೊನೆಯಲ್ಲಿ ಸಿಗುವ ಒಂಟಿಮನೆಯೊಳಗೂ ಬಿಪಾಶ ಬಸು ಕುಣಿಯುತ್ತಿರುತ್ತಾಳೆ. ಮಲ್ಲಿಕಾ ಶೆರಾವತು ಬಯಲಾಗುತ್ತಿರುತ್ತಾಳೆ. ರೂಪಕಗಳ ಜಗತ್ತು ಸತ್ತೇ ಹೋಗಿದೆ. ಕಾಡು ಮತ್ತು ನಾಡಿನ ನಡುವಣ ವ್ಯತ್ಯಾಸ ಮರೆಯಾಗಿದೆ. ಹೀಗಾಗಿ ಯಾವ ಊರಿಗೆ ಹೋದರೂ ಅದ ಗ್ವಾಡಿ, ಅದ ಸೂರು. ದಿನವೆಲ್ಲ ಬೇಜಾರು. ತಿದಿಯೊತ್ತಿ ನಿಟ್ಟುಸಿರು!
ಹೊಸ ಥರದ ಕತೆಗಳಾಗಲೀ ಕವಿತೆಗಳಾಗಲೀ ಹುಟ್ಟದೇ ಇರುವುದಕ್ಕೂ ಇದೇ ಕಾರಣ ಇರಬಹುದಾ? ಈಗ ಹಳ್ಳಿಯಿಂದ ನಗರಕ್ಕೆ ಬರುವ ಹುಡುಗನಿಗೆ ತಲ್ಲಣಗಳಿಲ್ಲ, ದಿಗ್ಭ್ರಮೆಯಿಲ್ಲ. ನಾಳೆ ಏನೆಂಬ ಚಿಂತೆಯಿಲ್ಲ. ಪುಟ್ಟ ಹಳ್ಳಿಯ ಹುಡುಗಿಯ ಪಾಲಿಗೆ ಅಮೆರಿಕಾದಂಥ ದೇಶ ಎಲ್ಲೋ ಇರುವ ದೂರದ ನಾಡಲ್ಲ. ಮೊದಲು ಕಿವಿಗಿಟ್ಟ ಟೆಲಿಫೋನು, ಮೊದಲು ಹತ್ತಿದ ಬಸ್ಸು, ಮೊದಲು ನೋಡಿದ ರೈಲು, ಕಣ್ಣ ಹತ್ತಿರದಿಂದ ನೋಡಿದ ವಿಮಾನ, ತಂತಿಯಿಲ್ಲದ ಫೋನು-ಯಾವುದೂ ಅಚ್ಚರಿ ಹುಟ್ಟಿಸುವುದಿಲ್ಲ. ಕಣ್ತೆರೆಯುವ ಹೊತ್ತಿಗೇ ಕಂದನ ಕಿವಿ ತುಂಬ ಮೊಬೈಲುನಾದ. ಅಡಿಗರ ಭೂಮಿಗೀತ ಕವನದ ಅವಸಾನ;
ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ;
ಉರುಳು- ಮೂರೇ ಉರುಳು- ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ.
ತೆಂಗುಗರಿಗಳ ಬೀಸಿ ಕೈಚಾಚಿ ಕರೆದಳು;
ಅಡಿಕೆಗೊನೆಗಿಲಕಿ ಹಿಡಿದಾಡಿಸಿದಳು.
ಕಬ್ಬಿನಾಲೆಯ ತಿರುಪಿನಲ್ಲಿ ಕುಳಿತೆರೆದಳು ಅಜಸ್ರಧಾರೆಯ ಕರುಳ ತುಡಿತವನ್ನು;
ಭತ್ತ ಗೋಧುವೆ ರಾಗಿ ಜೋಳ ಮೊರಮೊರಮೌರಿಯಲ್ಲಿ ಮಾಂಸದ ಹಾಡನೂಡಿಸಿದಳು.
ಗಂಟೆ ಗೋರಟೆ ಜಾಜಿ ಮಂದಾರ ಮಲ್ಲಿಗೆಯ ಗಂಧಗಿರಿಶಿಖರದಲಿ ಮಲಗಿಸಿದಳು.
ಹಕ್ಕಿಕೊರಳಿಂದುಗುವ, ತುಂಬಿ ಮರ್ಮರಮೊರೆವ ಜಾಮೂನು ನಾದದಲಿ ಜಾಳಿಸಿದಳು.
ಆಕಾಶದಲ್ಲಿ ಮೋಡದ ವಿಶ್ವರೂಪಕ್ಕೆ ಕೆಳಗೆ ಜೀವಜ್ಯೋತಿ ಕೂಡಿಸಿದಳು.
****
ಇವತ್ತಿನ ಅತ್ಯುತ್ತಮ ಕತೆಗಾರ ಯಾರು? ಒಳ್ಳೆಯ ಕತೆಗಳು ಎಲ್ಲಿ ಹುಟ್ಟುತ್ತಿವೆ? ಯಾವ ಕವಿತೆ ಎಲ್ಲರಿಗೂ ಇಷ್ಟವಾಗುತ್ತಿವೆ? ಸಾಹಿತ್ಯ ಎಲ್ಲರನ್ನೂ ತಲುಪುತ್ತಿದೆಯಾ?
ಇಂಥ ಅಸಂಖ್ಯ ಪ್ರಶ್ನೆಗಳನ್ನು ತರುಣ ಓದುಗರು ಕೇಳುತ್ತಾರೆ. ಬರೀ ಹಳೆಯ ಕಾಲದ ಕವಿಗಳ ಬಗ್ಗೆ ಬರೆಯಬಾರದು ಅನ್ನುವುದು ನಮ್ಮೆಲ್ಲರ ತಕರಾರು ಕೂಡ. ಹೊಸ ಕತೆಗಾರರ ಬಗ್ಗೆ ಹೊಸ ಕವಿಗಳ ಬಗ್ಗೆ, ಹೊಸ ಸಾಲುಗಳ ಬಗ್ಗೆ ಬರೆಯಬೇಕು ಅನ್ನುವುದು ಅನೇಕ ಓದುಗರ ಮತ್ತು ಬರಹಗಾರರ ಆಸೆಯೂ ಹೌದು.
ಆದರೆ ದುರಂತ ಇದು; ತಲುಪುವ ಹಾದಿಗಳು ಅನೇಕ ಆಗುತ್ತಿದ್ದಂತೆ ತಲುಪುವ ಜರೂರತ್ತು ಕಡಿಮೆಯಾಗುತ್ತಿದೆ. ಹಿಂದೆ ಇದ್ದದ್ದೇ ಒಂದು ಪತ್ರಿಕೆ. ಆ ಪತ್ರಿಕೆಯಲ್ಲಿ ಬರುತ್ತಿದ್ದದ್ದನ್ನು ಎಲ್ಲರೂ ಓದುತ್ತಿದ್ದರು. ಇದ್ದದ್ದೇ ಒಂದು ದೀಪಾವಳಿ ವಿಶೇಷಾಂಕ. ಇದ್ದದ್ದೇ ಒಂದು ರೇಡಿಯೋ. ಇವತ್ತು ಸಂವಹನ ಮಾಧ್ಯಮಗಳೇ ಅಸಂಖ್ಯ. ಒಬ್ಬೊಬ್ಬರು ಒಂದೊಂದನ್ನು ಆರಿಸಿಕೊಂಡು ಯಾರಿಗೂ ಏನೂ ತಲುಪುತ್ತಿಲ್ಲ. ಇಂಟರ್ ನೆಟ್ಟು ಇಲ್ಲದ ಕಾಲದಲ್ಲಿ ಷೇಕಪಿಯರ್ ಅಚ್ಚರಿಗೊಳಿಸುತ್ತಾ ಕನ್ನಡಕ್ಕೆ ಬಂದ, ಕೀಟ್ಸ್ , ಯೇಟ್ಸ್, ಕಮೂ, ಕಾಫ್ಕ ಬಂದರು. ಎಲಿಯಟ್ ಬಂದ. ಇವತ್ತು ಎಲ್ಲರನ್ನು ಓದುವ ಅವಕಾಶ ಇದೆ. ಯಾರೂ ಕನ್ನಡಕ್ಕೆ ಬರುತ್ತಿಲ್ಲ. ದಾರಿ ಸುಗಮವಾದ ಹಾಗೆ ಬರುತ್ತಿರುವುದು ಮೂರನೆಯ ದರ್ಜೆಯ ಲೇಖಕರು. ಮೂರನೆಯ ದರ್ಜೆಯ ಸಾಹಿತ್ಯ. ತೆರೆದುಕೊಂಡದ್ದು ಹೆದ್ದಾರಿ ಅಂದುಕೊಂಡವರಿಗೆ ಅಚ್ಚರಿ; ಯಾಕೆಂದರೆ ಆಧುನಿಕ ಸಂಪರ್ಕ ಮಾಧ್ಯಮದ ಹೆದ್ದಾರಿ ದೊಡ್ಡ ಮೋರಿಯಾಗಿಬಿಟ್ಟಿದೆ. ಅಲ್ಲಿನ ಕಸ, ಕೊಳಕು, ಅಸಹ್ಯಗಳೇ ನಮ್ಮಲ್ಲಿಗೆ ಬರಲಾರಂಭಿಸಿವೆ. ಇಂಟರ್ ನೆಟ್ಟು ತೆರೆದು ಹೆಚ್ಚಿನವರು ಯಾರೂ ಬೋಧಿಲೇರನ ಕವಿತೆ ಓದುವುದಿಲ್ಲ. ನಗ್ನಾವತಾರಿ ರಶಿಯನ್ ಹುಡುಗಿಯ ಸೈಟು ನೋಡುತ್ತಾರೆ.
ಮತ್ತೆ ಹಳೆಯ ಕವಿತೆಗಳತ್ತ ಬಂದರೆ ಅಡಿಗರೇ ಅಪರೂಪ ಆಗಿದ್ದಾರೆ. ಹಾಡಿಸಿಕೊಳ್ಳುವ ಕವಿಗಳು ಕಿವಿಗೆ ಬಿದ್ದು ಬಿದ್ದು ಉಳಕೊಂಡಿದ್ದಾರೆ. ಓದಿ ನಾಲಗೆ ತುದಿಯಲ್ಲಿ ಉಳಿವ ಕವಿಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಓದುವವರ ಸಂಖ್ಯೆ ಕೂಡ. ಏಕಾಂತದಲ್ಲಿ ಕುಳಿತು ಗಂಟೆಗಟ್ಟಲೆ ಓದಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹಲವು ಆಮಿಷಗಳು ಕರೆಯುತ್ತವೆ. ಮತ್ತೆ ಸಾಹಿತ್ಯಾಭಿರುಚಿಯನ್ನು ಬೆಳೆಸುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಮತ್ತೆ ಅದೇ ಹಳೆಯ ಕಥಾಶ್ರವಣದ ಕ್ರಮ. ಯಾರೋ ಸೊಗಸಾಗಿ ಓದುವುದು. ಎಲ್ಲರೂ ಒಂದೆಡೆ ಸೇರಿ ಕುಳಿತು ಕೇಳುವುದು. ಆತ ಓದುತ್ತಿರುವಷ್ಟು ಹೊತ್ತು, ಕೇಳುತ್ತಿರುವಷ್ಟು ಹೊತ್ತು ಅಲ್ಲಿ ಏಕಾಗ್ರತೆಯೂ ಇರುತ್ತದೆ. ಸಾಹಿತ್ಯದ ರುಚಿಯೂ ದಕ್ಕುತ್ತದೆ. ಈ ನಡುವೆ ಎಲ್ಲ ಕೇಳಲಿ ಎಂದು ನಾನು ಓದುವುದಿಲ್ಲ ಎಂಬ ಕರ್ಮಾಂತರದ ಸಂಧ್ಯಾರಾಗ.
*****
ಅಡಿಗರು ಬರೆದ ಎಳೆಹರೆಯದ ಸಾಲುಗಳಿಗೀಗ ಅರ್ಥವೇ ಇಲ್ಲದಂತಾಗಿದೆಯಾ? ಈ ಚಿತ್ರ ಎಷ್ಟು ಮಕ್ಕಳ ಕಣ್ಣಮುಂದಿದೆ;
ಹಾಡಿಯಲಿ ಮರಮರದ ಕೆಳಗೆ ಧೂಪ ದಟ್ಟಕಾಯಿ ಚಿಗಿತೆಳಮೊಳಕೆ, ನರಳು ಕೇಕೆ;
ಮಳೆಮಂತ್ರದಂಡ ಮುಟ್ಟಿದ ತಿಟ್ಟುನಿಟ್ಟಿನಲಿ ನೆಲವೆಲ್ಲ ಮೊಳೆ, ಮೊಳಕೆ, ಕೊನರು, ಸಸಿ, ಗಿಡ, ಹುಲ್ಲು;
ತೋಟಗೋರಟೆಗೆ ಮೈಯೆಲ್ಲ ಕಾಮನಬಿಲ್ಲ ಬಲ್ಬುಮಾದಕ ದೀಪ, ಚೆಲ್ಲು ಗುಲ್ಲು.
ನಂದಬಟ್ಟಲನೆತ್ತಿ ತುಟಿಗಿಟ್ಟು ನರ್ತಿಸಿತು ಅಂದುಗೆಯನಾಡಿಸುತ ಬಂದ ಭೃಂಗ;
ಹಿತ್ತಲ ಜಗಲಿಮೇಲೆ ಕುಳಿತು ಧುಮ್ಮಿಕ್ಕಿದೆನು ಕೆಳಗೆ ಮತ್ತೂ ಕೆಳಗೆ, ತಳಕೆ ಕುಂಗ.
ಹಸುರುತೆರೆ ಅಪ್ಪಳಿಸುತ್ತಿರೆ ಮೇಲೆ ನೊರೆ ಕಾರಿ, ಬೀಸುತಿರೆ ಬಿರುಗಾಳಿ, ಗುಡುಗು ಮೊಳಗೆ;
ಬೇಲಿ ಮೇಗಡೆ, ಗದ್ದೆಯಂಚಲ್ಲಿ, ತೋಪುಗಳ ಅಂಗುಲಂಗುಲದಲ್ಲಿ ತೋಟದೊಳಗೆ
ಎಲ್ಲೆಲ್ಲೂ ಹೆರಿಗೆ ಮನೆ; ಬೇನೆ, ಸಂಕಟ, ನಗೆ, ಕೊರಡು ಚಿಗುರಿದ ಚೆಲುವು, ಚೀರು, ಕೇಕೆ.
ಅಹ; ಪ್ರಾತಃಕಾಲದಲ್ಲಿ ಬೆಳಕಿನ ದಾಹ.

*****
ಇಂಥ ಕವಿತೆಯನ್ನು ನಾಟಕೀಯವಾಗಿ, ಅರ್ಥವತ್ತಾಗಿ ಓದುವವರು ಬೇಕು. ಹಾಸ್ಯೋತ್ಸವದ ಅಬ್ಬರವನ್ನು ಕೊಂಚ ಬದಿಗಿಟ್ಟು ಅರ್ಥಪೂರ್ಣ ಕವಿತೆಗಳನ್ನು ಓದಿಸಿ, ಕೇಳಿಸಿ, ಅದರ ಅರ್ಥ ಸ್ಪುರಿಸುವಂತೆ ಮಾಡಿ, ಮನಸ್ಸಿಗೆ ಮುದನೀಡಿ, ಕವಿತೆಗಳ ರುಚಿಯನ್ನು ತಿಳಿಸಿಕೊಡುವವರು ಬೇಕು. ಸಂಜೆಗೆ ಟೀವಿ ಮುಂದೆ ಕೂರುವ ಬದಲು ಆಲನಹಳ್ಳಿ, ಅನಂತಮೂರ್ತಿ, ಲಂಕೇಶರ ಕತೆಗಳನ್ನು ಕೇಳುವುದಕ್ಕೆ ಹೋಗುವ ಒಂದು ಸತ್ಸಂಪ್ರದಾಯ ಶುರುವಾಗಬೇಕು. ಸಾಹಿತ್ಯ ಓದುವುದೂ ಹೆಮ್ಮೆಯ ಸಂಗತಿಯಾಗಬೇಕು. ಕನ್ನಡ, ಕನ್ನಡಕವಿತೆ, ಕನ್ನಡಿಗ ಉಳಿಯುವುದು ಆಗ.
ಅದು ಬಿಟ್ಟು ರಜನೀಕಾಂತ್ ಸಿನಿಮಾಗಳನ್ನು ಬಹಿಷ್ತರಿಸುವ ಮೂಲಕ, ಕರುಣಾನಿಧಿಗೆ ಬೈಯುವ ಮೂಲಕ, ಕನ್ನಡಿಗರು ಕನ್ನಡಿಗತನ ತೋರುವುದಕ್ಕೆ ಸಿನಿಮಾ ನಟರ ಮುಖಕ್ಕೆ ಮಸಿ ಬಳಿಯಬೇಕು ಎನ್ನುವ ತನಕ ಭಾಷೆಯೂ ಉದ್ಧಾರ ಆಗುವುದಿಲ್ಲ, ಭಾಷಿಗರು ಕೂಡ.

Friday, March 28, 2008

ನಮ್ಮೂರ ಬಂಡಿಯಲಿ ನಿಮ್ಮೂರ ಬಿಟ್ಟಾಗ....

ಬಂಡಿಹೊಳೆಯು ಸಣ್ಣ ಹಳ್ಳಿ; ನೂರೈವತ್ತೆರಡು ಮನೆಗಳು ಇರುತ್ತವೆ. ಜನಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಒಂಬೈನೂರು. ಪೂರ್ವದಿಕ್ಕಿಗೆ ಬೆಟ್ಟದ ಸಾಲು. ಉಳಿದ ದಿಕ್ಕುಗಳಲ್ಲಿ ಹೇಮಾವತಿ ನದಿ ಈ ಊರಿನ ಎಲ್ಲೆಯೆಂದು ಹೇಳಬಹುದು. ಊರಿನ ಸುತ್ತಲೂ ಪೈರುಪಚ್ಚೆಗಳಿಂದ ತುಂಬಿದ ಹೊಲಗದ್ದೆಗಳೂ ಹಸುರು ಹುಲ್ಲಿನ ಗೋಮಾಳಗಳೂ ಪ್ರಕೃತಿಯ ದಿನಕ್ಕೊಂದು ವಿಧವಾದ ಸೊಬಗಿನ ನೋಟವೂ ನಮ್ಮೂರಿನ ಕಳೆಯನ್ನು ಹೆಚ್ಚಿಸಿದ್ದವು. ಊರಿನ ಸುತ್ತಲೂ ಕಳ್ಳಿಬೂತಾಳೆಗಳ ಬಲವಾದ ಬೇಲಿಗಳಿದ್ದವು. ಇತ್ತೀಚೆಗೆ ಅದು ಕಮ್ಮಿಯಾಗುತ್ತಿದೆ. ಹೊರ ಊರುಗಳಿಂದ ಬರುವ ದಾರಿಗಳಲ್ಲಿ ಹೇಮಗಿರಿಯಿಂದ ಬರುವ ದಾರಿಯೇ ಸ್ವಲ್ಪ ಸುಮಾರಾಗಿತ್ತು. ಇದೇ ಹೆದ್ದಾರಿ. ಈ ಮಾರ್ಗವಾಗಿ ಬರುವಾಗ ಬಲಗಡೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನವು ಸಿಕ್ಕುವುದು. ಇದನ್ನು ಕಟ್ಟಿ ನೂರಾರು ವರ್ಷಗಳಾದವು. ಆಳಿದ ಮಹಾಸ್ವಾಮಿಯವರರಾದ ಮುಮ್ಮಡಿ ಕೃಷ್ಣರಾಜ ಒಡೆಯರವರ ತಾಯಿಯವರಾದ ಮಾತೃಶ್ರೀ ದೇವರಾಜಮ್ಮಣ್ಣಿಯವರು ಈ ದೇವಸ್ಥಾನವನ್ನು ಕಟ್ಟಿಸಿ ಇದರ ಸೇವೆಗಾಗಿ ವೃತ್ತಿಗಳನ್ನು ಬಿಟ್ಟಿರುವರು. ಈ ಪುಣ್ಯಾತ್ಮರ ವಿಗ್ರಹವೂ ಅವರ ಜ್ಞಾಪಕಾರ್ಥವಾಗಿ ಇದೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವುದು.
ಊರಿನ ದಕ್ಪಿಣ ಭಾಗದಲ್ಲಿ ಸ್ವಲ್ಪ ದೂರವಾಗಿ ಏಳೂರಮ್ಮನ ತೋಪು ಮತ್ತು ಗುಡಿಗಳಿವೆ. ಪೂರ್ವಕಾಲದಲ್ಲಿ ಇಲ್ಲಿಗೆ ಸುತ್ತುಮುತ್ತಲಿನ ಏಳೂರು ಶಿಡಿ ತೇರುಗಳು ಬಂದು ದೊಡ್ಡ ಜಾತ್ರೆಯಾಗಿ ಕುಸ್ತಿ ದೊಂಬರಾಟ ಎಲ್ಲ ಆಗುತ್ತಿದ್ದವಂತೆ. ಈಗ ಏನೂ ಇಲ್ಲ. ಗುಡಿಯ ಮುಂದೆ ಏಳು ಕಲ್ಲುಗಳಿವೆ. ಒಳಗೆ ಏಳು ದೇವರುಗಳಿವೆ. ನಮ್ಮೂರಿನಲ್ಲಿ ಐದಾರು ಮನೆಗಳು ಬ್ರಾಹ್ಮಣರದು. ಉಳಿದದ್ದೆಲ್ಲಾ ಒಕ್ಕಲು ಮಕ್ಕಳದು. ಬಡಗಿಗಳು ಅಕ್ಕಸಾಲಿಗಳು, ವಾದ್ಯದವರು, ಅಗಸರು, ಕುಂಬಾರರ ಒಂದೆರಡು ಮನೆಗಳಿದ್ದವು.ಊರ ಹೊರಗೆ ದಕ್ಪಿಣ ದಿಕ್ಕಿನಲ್ಲಿ ಹದಿನಾರು ಗುಡಿಸಲುಗಳಿದ್ದವಲ್ಲ ಅವೆಲ್ಲಾ ಹೊಲೆಯರದು. ಇವರು ತಮ್ಮ ಗುಡಿಸಲುಗಳ ಮಧ್ಯೆ ಒಂದು ಹೆಂಚಿನ ಮನೆಯನ್ನು ಕಟ್ಟಿ ಅದರಲ್ಲಿ ಮಾಯಮ್ಮ ದೇವರನ್ನಿಟ್ಟು ಪೂಜಿಸುತ್ತಿದ್ದರು.
ಊರಿನ ಹವಾಗುಣವು ಆರೋಗ್ಯವಾಗಿದ್ದಿತು. ವ್ಯವಸಾಯವೇ ಮುಖ್ಯವಾಗಿದ್ದುದರಿಂದ ತಿಪ್ಪೇಗುಂಡಿಗಳು ಊರಿಗೆ ಸಮೀಪವಾಗಿದ್ದವು. ಹಳೇ ಸಂಪ್ರದಾಯದ ಬೀದಿಗಳೂ ಕೆಲವಿದ್ದವು. ಬೆಳಕಿಗೆ ಅನುಕೂಲ ಕಮ್ಮಿ. ದನಕರುಗಳನ್ನು ಮನೆಯೊಳಗೆ ಕಟ್ಟುತ್ತಿದ್ದರು. ಇತ್ತೀಚೆಗೆ ಗ್ರಾಮಪಂಚಾಯ್ತಿ ಏರ್ಪಾಡಾಗಿ ಮೇಲಿನ ಕಷ್ಟಗಳೆಲ್ಲ ನಿವಾರಣೆಯಾಗುತ್ತಲಿವೆ. ಬಾಲ್ಯದಲ್ಲಿ ನೋಡಿದ ಬಂಡಿಹೊಳೆಯು ಈಗೀಗ ಗುಣಮುಖನಾದ ರೋಗಿಯು ಹಾಸಿಗೆಯಿಂದೆದ್ದು ತಿರುಗಾಡುವಂತೆ ಕಾಣುತ್ತಿದ್ದಿತು. ಊರೊಳಗೆ ಕಾಹಿಲೆ ಹರಡಿದಾಗ ಆರು ಮೈಲಿ ಆಚೆಗಿರುವ ವೈದ್ಯರು ಬಂದು ಔಷಧಿಗಳನ್ನು ಕೊಡುತ್ತಿದ್ದರು. ರೈತರು ವ್ಯವಸಾಯಕ್ಕಾಗಿ ಊರಿಗೆ ದೂರವಾದ ಬೈಲುಗಳಲ್ಲೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದುದರಿಂದ ಅನಾರೋಗ್ಯಕ್ಕೆ ಅವಕಾಶವು ಕಮ್ಮಿಯಾಗಿತ್ತು.
*****
ಅರ್ಚಕ ಬಿ. ರಂಗಸ್ವಾಮಿ ಯಾರು? ಈ ವ್ಯಕ್ತಿಯ ಬಗ್ಗೆ ಯಾಕೆ ಯಾರೂ ಬರೆದಿರಲಿಲ್ಲ. 1933ರಲ್ಲಿ ಪ್ರಕಟವಾದ ಈ ಕೃತಿಯ ಬಗ್ಗೆ ಯಾವ ವಿಮರ್ಶೆಯೂ ಯಾಕೆ ಬಂದಿಲ್ಲ. ಇದು ಬೇರೆ ಬೇರೆ ವಿಶ್ವವಿದ್ಯಾಲಯಗಳ ಜಾನಪದ ವಿದ್ಯಾರ್ಥಿಗಳಿಗೆ ಆಕರಗ್ರಂಥವಾಗಿದೆ ಎನ್ನುವ ಮಾತು ಮುನ್ನುಡಿಯಲ್ಲಿದೆ. ಆದಕೆ ಕೇವಲ ಆಕರಗ್ರಂಥವಾಗಿ ಉಳಿಯುವಂಥ ಕೃತಿಯೇ ಇದು. ನವರತ್ನರಾ್ ಅವರ ಕೆಲವು ನೆನಪುಗಳು, ಎಂ. ಆ್. ಶ್ರೀಯವರ ರಂಗಣ್ಣನ ಕನಸಿನ ದಿನಗಳು, ಬಿಜಿಎ್ ಸ್ವಾಮಿ ಬರೆದ ಹಸುರುಹೊನ್ನು ಕೃತಿಗಳಂತೆ ಇದೂ ಕೂಡ ಯಾಕೆ ಪ್ರಸಿದ್ಧವಾಗಲಿಲ್ಲ.
ಉತ್ತರಗಳನ್ನು ಮರೆತುಬಿಡೋಣ. ಕೆ. ಆ್. ಪೇಟೆ ತಾಲೂಕಿನ ಬಂಡಿಹೊಳೆ ಎಂಬ ಗ್ರಾಮದ ಕುರಿತು ಅರ್ಚಕ ಬಿ. ರಂಗಸ್ವಾಮಿ ಬರೆದಿರುವ ಈ 200 ಪುಟಗಳ ಪುಸ್ತಕವನ್ನು ತೀನಂಶ್ರೀ, ಗೊರೂರು ರಾಮಸ್ವಾಮಿ ಅಯ್ಯಂಗಾ್, ಜೀಶಂಪ ಮುಂತಾದವರು ಮೆಚ್ಚಿಕೊಂಡಿದ್ದರು ಅನ್ನುವುದು ಅವರು ಬರೆದ ಪತ್ರದಿಂದ ಗೊತ್ತಾಗುತ್ತದೆ. ಗೊರೂರು 1933ರಲ್ಲೇ ಇದನ್ನು ಆಕಸ್ಮಿಕವಾಗಿ ಓದಿ ಸಂತೋಷಪಟ್ಟದ್ದನ್ನು ಲೇಖಕರಿಗೆ ಬರೆದು ತಿಳಿಸಿದ್ದೂ ಪುಸ್ತಕದ ಕೊನೆಯಲ್ಲಿದೆ. ಅವೆಲ್ಲ ಶಿಫಾರಸುಗಳನ್ನು ಮರೆತು ಕೂಡ ಸುಖವಾಗಿ ಓದಿಸಿಕೊಂಡು ಹೋಗುವ ವಿಚಿತ್ರ ಗುಣ ಈ ಪುಸ್ತಕಕ್ಕೇ ಅದು ಹೇಗೋ ದಕ್ಕಿಬಿಟ್ಟಿದೆ.
*******
ನಮ್ಮೂರಿನ ವಾರ್ಷಿಕ ಉತ್ಪನ್ನವು ನಾಲ್ಕು ತಿಂಗಳಿಗೆ ಸಾಕಾಗುವಂತಿತ್ತು. ಮೂರು ತಿಂಗಳು ಕೂಲಿಯಿಂದ ಜೀವನ. ಇನ್ನುಳಿದ ತಿಂಗಳಲ್ಲಿ ಇದ್ದ ಗದ್ದೆ ಹೊಲ ಮಾರಿ ಜೀವನ. ಬೆಳೆಯು ಕಮ್ಮಿಯಾದ ವರ್ಷ ನಮ್ಮೂರಿನ ಪಾಡು ದೇವರಿಗೇ ಪ್ರೀತಿ. ಹರಕು ಬಟ್ಟೆಯು ಸಾರ್ವತ್ರಿಕವಾಗಿತ್ತು. ತಲೆಗೆ ಎಣ್ಣೆ ಕಾಣದವರೂ ಎರಡು ಹೊತ್ತು ಊಟವಿಲ್ಲದೇ ಇರುವವರೂ ಅನೇಕರಿದ್ದರು. ಇನ್ನೇನೂ ಉಳಿದಿಲ್ಲವೆಂದು ತಿಳಿದ ಮೇಲೆ ಕಾಫಿತೋಟಕ್ಕೆ ಹೋಗಿ ಸೇರುವ ವಾಡಿಕೆ. ಒಟ್ಟಿನ ಮೇಲೆ ಬಡತನವು ಅಸಾಧ್ಯವಾಗಿ ಸಂತೋಷದಿಂದ ನಗುವುದೂ ಮಾಮೂಲು ಮೀರಲಾಗದೇ ವಿನಾನಿಜವಾದ ಸನ್ನಿವೇಶದಿಂದ ಇರಲಿಲ್ಲ. ಕೊಟ್ಟ ಕಾಳುಗಳನ್ನು ಕಟ್ಟಿಕೊಳ್ಳಲು ತಮಗೆ ಬಟ್ಟೆಯಿಲ್ಲದುದರಿಂದ ಕಷ್ಟಪಡುವವರನ್ನೂ ನಾಚಿಕೊಳ್ಳುವವರನ್ನೂ ನೋಡಿತು ಈ ಕಣ್ಣು, ಮರುಗಿತು ಈ ಮನವು.
******
ಇದು ಮತ್ತೊಂದು ಚಿತ್ರ. ಹಳ್ಳಿಯ ಜೀವನದ ಎರಡೂ ಮುಖಗಳನ್ನೂ ರಂಗಸ್ವಾಮಿ ಕಂಡಂತೆ ತುಂಡರಿಸಿ ನಮ್ಮ ಮುಂದಿಟ್ಟಿದ್ದಾರೆ. ಆದಷ್ಟೂ ತಮ್ಮ ಸಹಾನುಭೂತಿ, ಮರುಕ ಮತ್ತು ಭಾವುಕತೆಗಳನ್ನು ಬದಿಗಿಟ್ಟು ಬರೆದಿದ್ದಾರೆ. ಇಂಥ ಪ್ರಬಂಧಗಳನ್ನು ಬರೆಯುವ ಹೊತ್ತಿಗೆ ಒಂದೋ ಅಹಂಕಾರ ಇಲ್ಲವೇ ಆತ್ಮಾನುಕಂಪ ಲೇಖಕರನ್ನು ಬಾಧಿಸುವುದಿದೆ. ಇವೆರಡರ ನೆರಳೂ ಬೀಳದಂತೆ ಬರೆಯಹೊರಟಾಗ ಅದು ವರದಿಯಾಗುವ ಅಪಾಯವೂ ಇದೆ. ಆದರೆ ರಂಗಸ್ವಾಮಿ ತಮ್ಮೂರನ್ನೂ ಸಾಧ್ಯವಾದಷ್ಟೂ ನಿರುದ್ವಿಗ್ನವಾಗಿ ನಿರುಮ್ಮಳವಾಗಿ ನೋಡಿದ್ದಾರೆ. ತಾವೂ ಕೂಡ ಅದೇ ಹಳ್ಳಿಯ ಒಂದು ಭಾಗ ಎಂಬಂತೆ ಅನುಭವಿಸಿದ್ದನ್ನು ಬರೆದಿದ್ದಾರೆ.
******
ಹಿಂದಣವರು ತಿಳಿದಿದ್ದ ಆತ್ಮೀಯ ತೃಪ್ತಿ, ಆಧ್ಯಾತ್ಮಿಕ ಶಾಂತಿಯೇ ಮುಖ್ಯಲಕ್ಪಣವಾದ ನಾಗರಿಕತೆಯು ಈಗ ಇರಲಿಲ್ಲ. ಮೊದಲ ಕಾಲದವರು ಒಬ್ಬೊಬ್ಬರಿದ್ದರಲ್ಲ ಅವರು ಮಂಡಿಯಿಂದ ಮೇಲೆ ದಟ್ಟಿ ಸುತ್ತಿದ್ದರು. ಆದರದು ಸ್ವಚ್ಛವಾಗಿತ್ತು. ಅವರ ಮೈಕಟ್ಟು ತೇರಿನ ಹೂರ್ಜಿ ಹಗ್ಗದಂತೆ ಗಟ್ಟಿಯಾಗಿಯೂ ವಿಭಕ್ತವಾಗಿಯೂ ಪುಷ್ಟವಾಗಿಯೂ ಇತ್ತು. ಮುಖದಲ್ಲಿ ಆರ್ಯಜನಾಂಗ ಸೂಚಕವಾದ ಗಂಧವಿಭೂತಿ ನಾಮದ ಚಿನ್ಹೆಗಳು ಅವರ ಅಂತಸ್ತೃಪ್ತಿಯನ್ನು ತುಂಬಿಕೊಂಡ ಮುಖಕುಂಭಕ್ಕೊತ್ತಿದ ಮುದ್ರೆಯಂತೆ ಕಾಣುತ್ತಿದ್ದವು. ಒಟ್ಟಿನ ಮೇಲೆ ಸರಳ ಜೀವನ ದೇಹಪಟುತ್ವ, ಶುಚಿತ್ವ ಸಾಮಾನ್ಯವಾಗಿ ಇಹಪರಗಳ ಜ್ಞಾನ ಇವೆಲ್ಲ ಹಳೇ ನಾಗರಿಕತೆಯ ಹಳ್ಳಿಗನ ಲಕ್ಪಣಗಳಾಗಿದ್ದಿತು. ಇತ್ತೀಚೆಗೆ ಘನಗಾಬರಿಯ ನಾಗರಿಕತೆ ಬಂದಿದೆ.
ಅರ್ಧ ಶತಮಾನಕ್ಕೆ ಹಿಂದೆ ಕೂಲಿ ಮಠಗಳಿದ್ದವು. ಆಗ ಜೈಮಿನಿ ಭಾರತ, ಅಮರಕೋಶ, ರಾಮಾಯಣ, ಅಡ್ಡ, ಹಾಗ, ಮುಪ್ಪಾಗದ ಲೆಕ್ಕಗಳು ಇವೆಲ್ಲಾ ಬಳಕೆಯಲ್ಲಿದ್ದವು. ಆಗಿನ ಕಾಲದ ಹಳಬರು ಅನೇಕವಾಗಿ ಬಾಯಲ್ಲಿ ಹೇಳುತ್ತಿದ್ದರು. ಇತ್ತೀಚೆಗೆ ನೂತನ ರೀತಿಯ ಪಾಠಶಾಲೆ ಬಂದಿದೆ. ಸಮುದ್ರದ ಏರಿಳಿತದಂತೆ ಒಂದು ಸಲ ಅತ್ಯುನ್ನತ ಸ್ಥಿತಿಗೆ ಬರುತ್ತದೆ.
ಬ್ರಾಹ್ಮಣರ ಮನೆ ನಾಲ್ಕೈದು ಮಾತ್ರವೆಂದು ಹೇಳಿದೆಯಷ್ಟೇ. ಇವರು ಸ್ನಾನ ಜಪ ದೇವರಪೂಜೆಯಲ್ಲೇ ವಿಶೇಷ ಆಸಕ್ತರಾಗಿದ್ದರು. ಶ್ರುತಿಸ್ಮೃತಿಗಳ ವಿಚಾರದಲ್ಲಿ ಸಂದೇಹ ಬಂದರೆ ಮಸೂರಿಗೆ ಹೋಗಿ ಪಂಡಿತರಿಂದ ಸರಿಯಾದ ವಿಷಯ ತಿಳಿದುಕೊಂಡು ಬರುತ್ತಿದ್ದರು. ಅಕಸ್ಮಾತ್ತು ಯಾರಾದರೂ ತಪ್ಪು ಮಾಡಿದರೆ ಇಬ್ಬರು ಬ್ರಾಹ್ಮಣರು ವಿಧಿಸಿದ ತೀರ್ಮಾನವನ್ನು ಒಪ್ಪಿಕೊಂಡು ತಪ್ಪಿನಿಂದ ಬಿಡುಗಡೆಯಾಗಬೇಕಿತ್ತು. ಮದುವೆ ಸಮಯದಲ್ಲಿ ಮತತ್ರಯ, ಸ್ಥಳ, ಪರಸ್ಥಳ, ಕಾವೇರಿ ಸಂಧ್ಯಾಮಂಟಪ ಮುಂತಾದವುಗಳಿಗೆ ತಾಂಬೂಲವೆತ್ತುತ್ತಿದ್ದರು. ಕಾವೇರಿ ಸಂಧ್ಯಾಮಂಟಪದ ತಾಂಬೂಲವನ್ನು ಯಾಕೆ ಎತ್ತಬೇಕೆಂಬ ಚರ್ಚೆ ಪ್ರತಿ ಮದುವೆಯಲ್ಲೂ ಇತ್ತು. ಒಂದು ಸಲ ಪುರೋಹಿತರಿಗೆ ತಾಂಬೂಲ ಕೊಡುವುದನ್ನು ಮರೆತರು. ` ಓಹೋ ಬ್ರಹಸ್ಪತಿ ಪೀಠಕ್ಕೆ ಅವಮಾನವಾಗಿ ಹೋಯ್ತು' ಎಂದು ಪುರೋಹಿತರು ಆಗಲೇ ಮೂಟೆ ಹೆಗಲಿಗೆ ಹಾಕಿದ್ದರು. ಅವರನ್ನು ಸಮಾಧಾನ ಮಾಡುವ ಹೊತ್ತಿಗೆ ಸಾಕಾಗಿ ಹೋಯ್ತು.
******
ನಾಸ್ಟಾಲ್ಜಿಯ ಯಾರೆಷ್ಟೇ ಕೆಟ್ಟದು ಎಂದರೂ ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ರಂಗಸ್ವಾಮಿ ಪುಸ್ತಕವನ್ನು ಓದುತ್ತಾ ಇದ್ದರೆ ಕಾಲದ ಕಾಲುವೆಯಲ್ಲಿ ಹಿಂದಕ್ಕೆ ಪ್ರಯಾಣ ಮಾಡಿದಂತೆ ಭಾಸವಾಗುತ್ತದೆ. ಬೆಂಗಳೂರಿನ ಜನಜಂಗುಳಿ, ಟೀವಿ, ಸಿನಿಮಾ, ಮೆಜೆಸ್ಟಿಕ್ಕಿನ ಗದ್ದಲ, ಕ್ರಿಕೆ್ ಮ್ಯಾಚು ಎಲ್ಲವನ್ನೂ ಮರೆತುಬಿಡಬೇಕು ಅನ್ನಿಸುತ್ತದೆ. ಊರ ತುಂಬ ದನಕರುಗಳು, ಗಾಳಿ ಮಳೆ ಬಿಸಿಲಿಗೆ ಜಪ್ಪಯ್ಯ ಎನ್ನದೆ ನಿಂತ ಮಾವಿನ ತೋಪು, ಆಷಾಢದ ಗಾಳಿಗೆ ಮನೆಯೊಳಗೆ ನುಗ್ಗಿಬರುವ ಕಸಕಡ್ಡಿ ಮರಳು ಮಣ್ಣು, ಬೇಸಗೆಯಲ್ಲೂ ತಣ್ಣಗಿರುವ ಹೊಳೆ, ಚಪ್ಪಲಿ ಹಾಕದ ಕಾಲಿಗೆ ಹಿತವಾಗಿ ಒದಗುವ ಹಳ್ಳಿಯ ನೆಲ, ಮುದ್ದೆ, ಅನ್ನ, ಸಾರು, ಚಟ್ನಿಯ ಊಟ. ಜಗಲಿಯಲ್ಲಿ ಗಾಳಿಗೆ ಕಾಯುತ್ತಾ ಮಲಗಿ ಸುಖಿಸುವ ಅಪರಾಹ್ಣ, ಶಾಲೆಯಲ್ಲಿ ಕನ್ನಡದಲ್ಲಿ ಪಾಠ ಓದುತ್ತಾ ಕನ್ನಡ ಹಾಡು ಹೇಳುವ ಮಕ್ಕಳು, ಹಬ್ಬ ಬಂದಾಗ ಹೊಸ ಬಟ್ಟೆ ತೊಟ್ಟು ಕುಣಿಯುವ ಮಕ್ಕಳು, ಹೊಳೆದಂಡೆಯಲ್ಲಿ ಗುಟ್ಟಾಗಿ ಜಿನುಗುವ ಪ್ರೀತಿ, ಧೋ ಎಂದು ಸುರಿಯವ ಮಳೆಗೆ ಸೋರುವ ಮನೆಯೊಳಗೆ ಆಡುವ ಆಟ...
ನಾಗರಿಕತೆ ಎಲ್ಲವನ್ನೂ ಮರೆಸುತ್ತದೆ. ಹಳ್ಳಿಗಳಲ್ಲೇ ಉಳಿದುಬಿಟ್ಟವರಿಗೆ ಇವು ಲಕ್ಪುರಿಯಲ್ಲ. ಆದರೆ ನಗರಕ್ಕೆ ಬಂದು ಬೀರುಬಾರುಗಳ, ಕ್ರೆಡಿ್ ಕಾರ್ಡುಗಳ, ಏಸಿ ರೂಮುಗಳ, ಚಿಕ್ ಬಿರಿಯಾನಿಗಳ ಲೋಕಕ್ಕೆ ಸಂದವರಿಗೆ ಹಳ್ಳಿಯ ಕಷ್ಟಕಾರ್ಪಣ್ಯದ ದಿನಗಳ ನೆನಪೇ ಒಂದು ಲಕ್ಪುರಿ. ಆದರೆ ಅಂಥ ವ್ಯಕ್ತಿ ಕೊಂಚ ಸೃಜನಶೀಲನೂ ಮಾನವೀಯನೂ ಆಗಿದ್ದರೆ ನೆನಪುಗಳಲ್ಲೇ ಆತ ಮರುಹುಟ್ಟು ಪಡೆಯಬಲ್ಲ ಕೂಡ.
ಹಾಗೆ ಮರುಹುಟ್ಟಿಗೆ ಕಾರಣವಾಗುವ ಶಕ್ತಿ ಅರ್ಚಕ ರಂಗಸ್ವಾಮಿಯವರ ಕೃತಿಗಿದೆ. ಎಲ್ಲಾದರೂ ಸಿಕ್ಕರೆ ಬಿಡದೆ ಓದಿ.
*****
ಬಂಡೀಹಳ್ಳಿಯ ಮಾತುಗಳು ಹೇಗಿರುತ್ತವೆ ಅನ್ನುವುದಕ್ಕೊಂದು ಉದಾಹರಣೆ ತಗೊಳ್ಳಿ;
ವಾದಿ- ಇದೋ ನೀವು ಹತ್ತೂ ಜನ ಸೇರಿದ್ದೀರಿ. ನಾನು ಬಡವೆ, ತಿರಕೊಂಡು ತಿಂಬೋಳು. ನನ್ನ ಕೋಳೀನ ನೆನ್ನೆ ರಾತ್ರಿ ಇವರಿಬ್ಬರೂ ಸೇರಿ ಮುರ್ದವ್ರೆ. ನ್ಯಾಯಾನ ನೀವೇ ಪರಿಹರಿಸಿ.
ಪ್ರತಿವಾದಿಗಳು- ನಾನಲ್ಲ, ದೇವ್ರಾಣೆ, ನನ್ನಾಣೆ, ನಿಮ್ಮಾಣೆ ನಾವಲ್ಲ.
ಮುಖಂಡರು ಕಾಗದವನ್ನು ತರಿಸಿ `ನೋಡೀ ಕೆಟ್ಹೋಗ್ತೀರಿ, ಬ್ಯಾಡೀ, ಬ್ಯಾಡೀ, ಪೊಲೀಸ್ರಿಗೆ ಅರ್ಜಿ ಕೊಡ್ತೀವಿ, ನಿಜಾ ಹೇಳ್ರೀ'
ಪ್ರತಿವಾದಿಗಳು (ಮೆತ್ತಗೆ)- ನಾವು ಬತ್ತಾ ಹರ್ಡಿದ್ದೋ, ಮೇಯೋಕೆ ಕೋಳಿಗಳು ಬಂದೊ, ದೊಣ್ಣೇಲಿ ಹಿಂಗಂದೊ ನೆಗೆದು ಬಿದ್ಹೋದೋ. ಹೊತ್ತಾರೀಕೆ ಕೊಡೋನೆ ಅಂತ ರಾತ್ರಿ ಮನೇಲಿ ಮಡಗಿದ್ದೊ.
ಮುಖಂಡರು ನಾನಲ್ಲ ನಾನಲ್ಲ ಅಂತ ಸುಳ್ಳು ಹೇಳಿದ್ದಕ್ಕಾಗಿ ನಾಲ್ಕಾಣೆ ಜುಲ್ಮಾನೆ ವಿಧಿಸಿ ನಾಲ್ಕಾಣೆಯನ್ನೂ ಕೋಳಿಗಳನ್ನೂ ವಾದಿಗೆ ಕೊಡಿಸಿ ಉಳಿದ ನಾಲ್ಕಾಣೆಯನ್ನು ಊರೊಟ್ಟಿನ ಹಣಕ್ಕೆ ಸೇರಿಸಿದರು.
ಸಭಿಕರಲ್ಲೊಬ್ಬ- ಹೋಗ್ರಯ್ಯ. ಎಂತಾ ನ್ಯಾಯ ಹೇಳಿದ್ರಿ. ಅವರಿಬ್ಬರ ಮೇಲೂ ಕೋಳಿ ಹೊರ್ಸಿ ಊರೆಲ್ಲ ಮೆರವಣಿಗೆ ಮಾಡಿಸೋದು ಬಿಟ್ಟು ಜುಲ್ಮಾನೆಯಂತೆ ಜುಲ್ಮಾನೆ.
ಮುಖಂಡರು- ಓಹೋ.. ಇಲ್ಲಿ ಸೇರಿರೋ ಜನವೇ ಊರೆಲ್ಲಾ ಆಯ್ತು. ಇನ್ನು ತಿರುಗಿ ಬೇರೆ ಮಾನಾ ಹೋಗಬೇಕೋ.
******
ಇದನ್ನು ಓದಿದ ನಂತರ ವಿವರಿಸುವುದಕ್ಕೆ ಹೋಗಬಾರದು. ಅದು ಅಧಿಕಪ್ರಸಂಗವಾಗುತ್ತದೆ.

Tuesday, March 25, 2008

ಒಂದು ಹಳೇ ಕತೆ, ಅಕಾಲ ಮಳೆ ಜೊತೆ

ನಮ್ಮೂರಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಧರೆಯ ಮೇಲೆ ಮುಸಲಧಾರೆ.
ಹೀಗೆ ಬರೆದು ಯೋಚಿಸಿದೆ. ಕುಂಭದ್ರೋಣ ಅಂದರೆ ಕುಂಭ(ಕೊಡ)ದಿಂದ ದ್ರೋಣ(ದೊನ್ನೆ)ಕ್ಕೆ ನೀರು ಸುರಿದಂತೆ ಮಳೆ. ಮುಸಲ ಅಂದರೆ ಒನಕೆ. ಒನಕೆಯಿಂದ ಕುಟ್ಟಿದಷ್ಟು ದೊಡ್ಡ ಹನಿಗಳು. ಅರ್ಥವಾಗುವುದು ಕಷ್ಟ. ಇಡೀ ನುಡಿಗಟ್ಟು ಬಳಕೆಯಿಂದ ಅರ್ಥ ಪಡೆದುಕೊಂಡಿರಬಹುದು. ಕೇಳಿ ಕೇಳಿ ಸುಮಾರಾಗಿ ಗ್ರಹಿಸಬಹುದು. ನಮ್ಮ ಪತ್ರಿಕೆಗಳು ಕೂಡ ಹೀಗೆ ಬರೆಯುವುದನ್ನು ನಿಲ್ಲಿಸಿವೆ.
ಇಂಥ ಅಕಾಲ ಮಳೆಯ ಬಗ್ಗೆ ಗೆಳೆಯ ಕುಂಟಿನಿ- http://kuntini.blogspot.com/ ಒಂದು ಲೇಖನ ಬರೆದಿದ್ದಾನೆ. ಸೊಗಸಾಗಿದೆ.
ಈ ಮಧ್ಯೆ ನನಗೂ ಉದಯ ಮರಕಿಣಿಗೂ ಕಾಡ ಬೆಳದಿಂಗಳು ಚಿತ್ರದ ಸಂಭಾಷಣೆಗೊಂದು ಪ್ರಶಸ್ತಿ ಬಂತು. ಸುವರ್ಣ ವಾಹಿನಿಯ ಜನಪ್ರಿಯ ಪ್ರಶಸ್ತಿಗಳ ನಡುವೆ ಸಿಕ್ಕ ಪ್ರಶಸ್ತಿ ಅದು. ನಮ್ಮಿಬ್ಬರಿಗೂ ಸಿಕ್ಕಿದ್ದಕ್ಕೆ ಡಬಲ್ ಸಂತೋಷ.
ಇವೆಲ್ಲದರ ಜೊತೆಗೆ ಒಂದು ಹಳೆಯ ಕತೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಸಂದರ್ಶನ
ಅವನು ಹೇಳಿದ ಸಮಯಕ್ಕೆ ಸರಿಯಾಗಿ ಬಂದ. ಕುಳಿತುಕೋ ಎಂದು ಕುರ್ಚಿ ತೋರಿಸಿದೆ. ತನ್ನನ್ನು ಪರಿಚಯಿಸಿಕೊಂಡ. ತಾನು ಇಂತಿಂಥ ಪತ್ರಿಕೆಯ ವರದಿಗಾರ ಎಂದು ಹೇಳಿಕೊಂಡ. ಕೊನೆಗೆ `ನಾನು ನಿಮ್ಮನ್ನು ಸಂದರ್ಶಿಸಲಿಕ್ಕೆ ಬಂದಿದ್ದೇನೆ' ಎಂದ.
ಯಾಕೆ?
`ಸಂದರ್ಶನಕ್ಕೆ'
`ಸರಿ... ಸರಿ... ತಿಳೀತು' ಎಂದೆ. ಆಗ ಸಂದರ್ಶನ ನೀಡುವ ಮನಸ್ಥಿತಿಯಲ್ಲಿ ನಾನಿರಲಿಲ್ಲ. ಏನೋ ಬೇಸರ. ಯಾಕೋ ದಣಿವು. ಮಾತಾಡುವುದೇ ಬೇಡ ಅನ್ನಿಸುವಂಥ ಸ್ಥಿತಿ. ಸೀದಾ ಎದ್ದು ನನ್ನ ಪುಸ್ತಕದ ಶೆಲ್ಫಿನ ಹತ್ತಿರ ಹೋದೆ. ಒಂದೆರಡು ನಿಮಿಷ ಯಾವುದೋ ಪುಸ್ತಕವನ್ನು ತೆರೆದಂತೆ ನಟಿಸಿದೆ. ಅಲ್ಲಿ ಆ ಸಂದರ್ಶಕ ಕೂತಿದ್ದಾನೆ ಅನ್ನುವುದು ನೆನಪಾಯಿತು.
`ಅದರ ಸ್ಪೆಲಿಂ್ ಹೇಗೆ?' ಕೇಳಿದೆ.
`ಯಾವುದರದ್ದು?' ಆತ ನಿರಾಸಕ್ತಿಯಿಂದ ಮರುಪ್ರಶ್ನೆ ಹಾಕಿದ. `ಅದೇ ಇಂಟರ್ ವ್ಯೂ ಅಂದ್ರಲ್ಲ?'.
ಅವನಿಗೆ ಕೊಂಚ ಇರುಸುಮುರುಸು. `ಛೇ. ಅದನ್ನೆಲ್ಲ ಕಟ್ಟಿಕೊಂಡು ಏನು ಮಾಡುತ್ತೀರಿ.'
`ನಾನದನ್ನು ಕಟ್ಟಿಕೊಳ್ಳೋದಿಲ್ಲ. ಅದರ ಅರ್ಥ ಏನೂಂತ ಹುಡುಕಲು ಯತ್ನಿಸುತ್ತಿದ್ದೇನೆ' ಎಂದೆ.
`ಅದರ ಅರ್ಥ ಏನೂಂದ್ರೆ..... ಅದನ್ನೆಲ್ಲ ಹೇಳೋಕ್ಕಾಗಲ್ಲ'
`ಬೇಡ ಬಿಡಿ. ನೀವು ಹೇಳಿದ್ದು ನನಗೆ ಅರ್ಥವಾಯ್ತು' ನಾನೆಂದೆ. ಹೀಗೆ ನಮ್ಮ ಸಂದರ್ಶನ ಶುರುವಾಯಿತು. ಆತ ಮೊದಲೇ ಸ್ಪಷ್ಟಪಡಿಸಿದ; `ನಾನು ಎಲ್ಲರಂತೆ ಮಾಮೂಲಿ ಸಂದರ್ಶನ ಮಾಡೋಲ್ಲ. ನಾನು ಪ್ರಶ್ನೆ ಕೇಳೋದು, ನೀವು ಉತ್ತರ ಹೇಳೋದು ಹಳೇ ಶೈಲಿ. ನಾನು ಬೇರೆ ಥರ ಪ್ರಶ್ನೆ ಕೇಳ್ತಾ ಹೋಗ್ತೀನಿ. ನೀವು ಉತ್ತರಿಸುತ್ತಾ ಬನ್ನಿ'.
`ಒಳ್ಳೇದು' ನಾನೆಂದೆ. `ನನಗೂ ನೆನಪಿನ ಶಕ್ತಿ ಕಡಿಮೆ. ನನ್ನ ಮಾತಲ್ಲಿ, ಮನಸ್ಸಲ್ಲಿ ಒಮ್ಮೊಮ್ಮೆ ಕಾಲ ವೇಗವಾಗಿ ಜಿಗಿಯುತ್ತೆ, ವರುಷಗಳು ಕ್ಪಣಗಳಲ್ಲಿ ಉರುಳುತ್ತವೆ. ಒಮ್ಮೊಮ್ಮೆ ಒಂದು ದಿನ ಹತ್ತು ವರುಷದಷ್ಟು ಸುದೀರ್ಘವಾಗುತ್ತದೆ. ಪರವಾಗಿಲ್ಲ ತಾನೆ?'
`ಪರವಾಗಿಲ್ಲ ಸಾ್. ನೀವು ಏನು ಹೇಳಿದರೂ ನಡೀತದೆ' ಎಂಬ ಅವನ ಮಾತಿನೊಂದಿಗೆ ಸಂದರ್ಶನ ಶುರುವಾಯಿತು.
`ನಿಮ್ಮ ವಯಸ್ಸೆಷ್ಟು?'
`ಹತ್ತೊಂಬತ್ತು, ಜೂನಿನಲ್ಲಿ'
`ಹೌದಾ? ನಾನೆಲ್ಲೋ ಮೂವತ್ತಾರೋ ಮೂವತ್ತೆಂಟು ಇರಬೇಕು ಅಂದುಕೊಂಡಿದ್ದೆ. ನೀವು ಹುಟ್ಟಿದ್ದೆಲ್ಲಿ?'
`ಮೈಸೂರಲ್ಲಿ'
`ಬರೆಯೋಕೆ ಶುರುಮಾಡಿದ್ದು'
`1936ರಲ್ಲಿ'
`ಅದು ಹ್ಯಾಗೆ ಸಾಧ್ಯ? ನಿಮಗೀಗ ಹತ್ತೊಂಬತ್ತು ವರುಷ ಅಂತೀರಿ?'
`ಗೊತ್ತಿಲ್ಲ. ಆದ್ರೆ ತುಂಬ ಕುತೂಹಲಕಾರಿಯಾಗಿದೆ ಅಲ್ವೇ'
`ಹೋಗ್ಲಿ, ನಿಮ್ಮ ಮೇಲೆ ತುಂಬ ಪ್ರಭಾವ ಬೀರಿದ, ನೀವು ಭೆಟ್ಟಿಯಾದ ಸಾಹಿತಿ ಯಾರು?'
`ಗಳಗನಾಥರು'
`ನಿಮಗೆ ಹತ್ತೊಂಬತ್ತು ವರುಷ ಅನ್ನೋದೇ ನಿಜವಾಗಿದ್ದರೆ ನೀವು ಗಳಗನಾಥರನ್ನು ಭೆಟ್ಟಿಯಾಗಿದ್ದು ಸುಳ್ಳು'
`ಅಲ್ಲಯ್ಯಾ... ನನಗಿಂತ ಜಾಸ್ತಿ ನಿನಗೇ ಗೊತ್ತಿದ್ದರೆ ನನ್ನನ್ಯಾಕೆ ಕೇಳ್ತೀಯ?'
`ಹೋಗ್ಲಿ, ನೀವು ಗಳಗನಾಥರನ್ನು ಭೆಟ್ಟಿಯಾಗಿದ್ದು ಎಲ್ಲೀಂತ ಹೇಳ್ತೀರಾ?'
`ನಾನು ಅವರ ಶವಸಂಸ್ಕಾರಕ್ಕೆ ಹೋಗಿದ್ದೆ. ಯಾರ ಜೊತೆಗೋ ಮಾತಾಡುತ್ತಿದ್ದೆ. ಗಲಾಟೆ ಮಾಡಬೇಡ ಸುಮ್ಮನಿರು ಅಂತ ಗಳಗನಾಥರೇ ಹೇಳಿದರು'
`ಸಾ್. ಅವರ ಶವಸಂಸ್ಕಾರಕ್ಕೆ ಹೋಗಿದ್ದೆ ಅಂತೀರಿ. ಅಲ್ಲಿ ಗಳಗನಾಥರೇ ಸುಮ್ನಿರು ಅಂದರು ಅಂತೀರಿ. ಸತ್ತವರು ಹ್ಯಾಗ್ರೀ ಮಾತಾಡೋಕೆ ಸಾಧ್ಯ?'
`ಗೊತ್ತಿಲ್ಲ. ಗಳಗನಾಥರು ತುಂಬ ವಿಚಿತ್ರ ವ್ಯಕ್ತಿ'
`ಆದ್ರೂ.. ಸತ್ತಿದ್ರು ಅಂತೀರಿ, ನಿಮ್ಮ ಹತ್ರ ಮಾತಾಡಿದ್ರು ಅಂತೀರಿ!'
`ಅವರು ಸತ್ತಿದ್ರು ಅಂತ ನಾನು ಹೇಳಲಿಲ್ಲ'
`ಶವಸಂಸ್ಕಾರಕ್ಕೆ ಹೋಗಿದ್ದೆ ಅಂತ ನೀವೇ ತಾನೇ ಹೇಳಿದ್ದು?'
`ಶವಸಂಸ್ಕಾರಕ್ಕೆ ಹೋಗಿದ್ದೆ ಅಂದೆ. ಸತ್ತಿದ್ದೆ ಅನ್ನಲಿಲ್ಲ?'
`ಅಂದ್ರೆ ಅವರು ಸತ್ತಿರಲಿಲ್ಲವಾ?'
`ನಂಗೊತ್ತಿಲ್ಲ, ಕೆಲವರು ಸತ್ತಿದ್ದಾರೆ ಅಂತಿದ್ರು. ಕೆಲವರು ಅವರಿನ್ನೂ ಜೀವಂತವಾಗಿದ್ದಾರೆ ಅಂತಿದ್ರು'
`ನಿಮ್ಮ ಅಭಿಪ್ರಾಯ ಏನು?'
`ಅದು ನನಗೆ ಸಂಬಂಧವಿಲ್ಲದ ವಿಷಯ. ಯಾಕೆಂದರೆ ಅದೇನೂ ನನ್ನ ಶವಸಂಸ್ಕಾರ ಅಲ್ಲವಲ್ಲ. ಸುಮ್ನೆ ಯಾಕೆ ತಲೆಕೆಡಿಸಿಕೊಳ್ಳಲಿ?'
`ಅಯ್ಯೋ... ಇದರ ಬಗ್ಗೆ ನೀವಿನ್ನೇನು ಹೇಳಿದರೂ ನನ್ನ ತಲೆಕೆಡುತ್ತೆ. ಬೇರೆ ವಿಚಾರ ಮಾತಾಡೋಣ. ಸರೀನಾ? ನೀವು ಹುಟ್ಟಿದ್ದು ಯಾವ ವರುಷ?'
`ಭಾನುವಾರ, ಅಕ್ಟೋಬರ್ ಹನ್ನೊಂದು, 1870'
`ಸಾಧ್ಯವೇ ಇಲ್ಲ. ಹಾಗಿದ್ದರೆ ನಿಮಗೆ ನೂರಮೂವತ್ತನಾಲ್ಕು ವರುಷ ಆಗಬೇಕಿತ್ತು. ಏನು ಲೆಕ್ಕಾಚಾರ ನಿಮ್ಮದು?'
`ನಾನು ಲೆಕ್ಕ ಇಟ್ಟಿಲ್ಲ'
`ಮತ್ತೆ ಮೊದಲು ಹತ್ತೊಂಬತ್ತು ವರುಷ ಅಂದ್ರಿ. ಈಗ ನೂರಮೂವತ್ತ ನಾಲ್ಕು ಅಂತಿದ್ದೀರಿ. ಅದಕ್ಕೊಂದು ಲೆಕ್ಕ ಬೇಡವೇ?'
`ಕರೆಕಸರಿಯಾಗಿ ಗುರುತಿಸಿದಿರಿ ಕಣ್ರೀ. ಎಷ್ಟೋ ಸಾರಿ ನನಗೂ ಎಲ್ಲೋ ಲೆಕ್ಕ ತಪ್ಪಿದೆ ಅನ್ನಿಸ್ತಿತ್ತು. ಆದರೆ ಏನೂಂತ ಹೊಳೀತಿರಲಿಲ್ಲ. ನೀವು ಬಿಡಿ ಜಾಣರು. ಬಹಳ ಬೇಗ ಕಂಡುಹಿಡಿದುಬಿಟ್ರಿ'
`ಥ್ಯಾಂಕಆ ವಿಷಯ ಬಿಟ್ಟುಬಿಡೋಣ. ನಿಮಗೆ ಅಣ್ಣ, ತಮ್ಮ, ತಂಗಿ ಯಾರಾದ್ರೂ ಇದ್ರಾ?'
`ಮ್.... ಬಹುಶಃ .... ಬಹುತೇಕ.. ಇದ್ರೂಂತ ಕಾಣತ್ತೆ. ನೆನಪಿಲ್ಲ'
`ನೆನಪಿಲ್ಲ. ಇಂಥ ಉತ್ತರ ಎಲ್ಲೂ ಕೇಳಿಲ್ಲ ನಾನು. ಇದೆಂಥ ವಿಚಿತ್ರ ಉತ್ತರ ಕೊಡ್ತಿದ್ದೀರಿ?'
`ವಿಚಿತ್ರಾನ.... ಯಾಕೆ?'
`ಇನ್ನೇನ್ರೀ ಮತ್ತೆ. ಅಲ್ನೋಡಿ ಗೋಡೇ ಮೇಲೆ. ಯಾರದೋ ಫೊಟೋ ತೂಗುಹಾಕಿದ್ದೀರಿ. ನಿಮ್ಮ ಸೋದರ ಅಲ್ವೇ ಅದು?'
`ಹೌದ್ಹೌದು... ಮರೆತೇಬಿಟ್ಟಿದ್ದೆ ನೋಡಿ. ನನ್ನ ಸೋದರ ಅವನು. ರಾಮಮೂರ್ತಿ ಅಂತ. ಪಾಪ'
`ಪಾಪ ಯಾಕೆ? ಅವರೀಗ ಬದುಕಿಲ್ವಾ?'
`ಗೊತ್ತಿಲ್ಲ.... ಆ ಬಗ್ಗೆ ಹೇಳೋದು ಕಷ್ಟ. ಅದೊಂದು ನಿಗೂಢ ರಹಸ್ಯ'
`ಛೇ.. ಛೇ.. ತುಂಬ ಬೇಜಾರಿನ ವಿಚಾರ. ಅವರು ಮನೆಬಿಟ್ಟು ಓಡಿಹೋದ್ರಾ? ಕಣ್ಮರೆಯಾದ್ರಾ?'
`ಒಂಥರ ಕಣ್ಮರೆಯಾದ ಹಾಗೇನೇ? ನಾವು ಅವನನ್ನು ಸುಟ್ಟೆವು'
`ಸುಟ್ಟಿರಿ.... ಸತ್ತಿದ್ದಾನೋ ಬದುಕಿದ್ದಾನೋ ಗೊತ್ತಿಲ್ದೇನೇ ಸುಟ್ಟುಬಿಟ್ರಾ?'
`ಛೇ.. ಛೇ.. ಎಂಥ ಮಾತು ಆಡ್ತೀರಿ. ಅವನು ಹೆಚ್ಚಿನಂಶ ಸತ್ತುಹೋಗಿದ್ದ. ಆಮೇಲೆ ಸುಟ್ವಿ'
`ಒಂದ್ನಿಮಿಷ... ಅವನ್ನು ಸುಟ್ಟಿರಿ ಅಂದ ಮೇಲೆ ಅವನು ಸತ್ತಿದ್ದಾನೆ ಅಂತ ಖಾತ್ರಿಯಾಯ್ತು ಅಲ್ವಾ?
`ಹಾಗಂತ ಅಂದುಕೊಂಡಿದ್ದೆವು'
`ಅಂದ್ರೆ ಅವನು ಮತ್ತೆ ಬೂದಿಯಿಂದ ಎದ್ದು ಬಂದ್ನಾ?'
`ಛೇ.. ಛೇ.. ಎಲ್ಲಾದ್ರೂ ಉಂಟೆ. ಹಾಗೇನೂ ಆಗಿಲ್ಲ'.
`ಮತ್ತೆ ... ಅದರಲ್ಲೇನಿದೆ ನಿಗೂಢ ರಹಸ್ಯ. ಮಣ್ಣಾಂಗಟ್ಟಿ. ನಿಮ್ಮ ಸಹೋದರ ಸತ್ತ, ಅವನನ್ನು ಸುಟ್ಟಿರಿ. ಅಷ್ಟೇ. ಎಲ್ಲಾ ಕಡೆ ನಡೆಯೋದೂ ಇದೇ'
` ಇಲ್ಲ. ಇದರಲ್ಲೊಂದು ವೈಶಿಷ್ಟ್ಯ ಇದೆ. ನಾನೂ ನನ್ನ ಸೋದರನೂ ಅವಳಿ-ಜವಳಿ. ಒಬ್ಬ ರಾಮಮೂರ್ತಿ ಇನ್ನೊಬ್ಬ ಕೃಷ್ಣಮೂರ್ತಿ. ಚಿಕ್ಕಂದಿನಲ್ಲಿ ಬಚ್ಚಲಮನೇಲಿ ಸ್ನಾನಕ್ಕೆ ಮಲಗಿಸಿದ್ದಾಗ ಕೆಲಸದವಳ ತಪ್ಪಿನಿಂದಾಗಿ ಇಬ್ಬರೂ ಅದಲುಬದಲು ಆಗಿಬಿಟ್ವಿ. ನಮ್ಮಿಬ್ಬರಲ್ಲಿ ಒಬ್ಬ ಸತ್ತುಹೋದ. ಸತ್ತೋನು ರಾಮಮೂರ್ತಿನಾ ಕೃಷ್ಣಮೂರ್ತಿಯಾ ಅಂತ ಕರೆಕ್ಟಾಗಿ ಗೊತ್ತಿಲ್ಲ. ಕೆಲವರು ರಾಮಮೂರ್ತಿ ಅಂತಾರೆ, ಕೆಲವರು ನಾನು ಅಂತಾರೆ'.
`ವಿಚಿತ್ರವಾಗಿದೆ. ನಿಮಗೇನನ್ನಿಸುತ್ತೆ?'
`ದೇವರಿಗೇ ಗೊತ್ತು. ಜಗತ್ತೇ ತಿಳಕೊಳ್ಳಲಿ ಅಂತ ಬಿಟ್ಟಿದ್ದೇನೆ. ಈ ನಿಗೂಢ ರಹಸ್ಯ ನನ್ನ ಬದುಕನ್ನೇ ಬಾಧಿಸುತ್ತಿದೆ ಕಣ್ರೀ. ಒಂದು ರಹಸ್ಯ ಹೇಳ್ತೀನಿ ಕೇಳಿ. ಇದುವರೆಗೆ ಇದನ್ನು ನಾನು ಯಾರಿಗೂ ಹೇಳಿಲ್ಲ. ನಮ್ಮಿಬ್ಬರಲ್ಲಿ ಒಬ್ಬನ ಮೊಳಕೈಯ ಹತ್ರ ಒಂದು ದೊಡ್ಡ ಕಪ್ಪು ಮಚ್ಚೆ ಇತ್ತು. ಆ ಮಚ್ಚೆ ಇದ್ದೋನು ನಾನು. ಮಚ್ಚೆ ಇದ್ದೋನೇ ಸತ್ತು ಹೋಗಿದ್ದು'
`ಆಯ್ತಲ್ಲ. ಇನ್ನೇನಿದೆ ನಿಗೂಢ ರಹಸ್ಯ. ಬದುಕಿರೋರು ಯಾರು ಅಂತ ಗೊತ್ತಾಯ್ತಲ್ಲ?'
`ಸ್ವಲ್ಪ ಸುಮ್ನಿರ್ತೀರಾ? ಈಗ ನಮ್ಮೆಯೋರೆಲ್ಲ ಸತ್ತಿರೋದು ನಾನಲ್ಲ, ನಮ್ಮಣ್ಣ ಅಂದುಕೊಂಡಿದ್ದಾರೆ. ಅದು ಹ್ಯಾಗೆ ತಪ್ಪು ಮಾಡಿದ್ರೋ ಗೊತ್ತಿಲ್ಲ. ಆದರೆ ಎಲ್ಲರೂ ದುಃಖದಲ್ಲಿದ್ದಾರೆ. ಈಗ ನಿಜವಾಗಿಯೂ ನಾನು ಸತ್ತಿರೋದು ಅಂತ ಗೊತ್ತಾದ್ರೆ ಎಷ್ಟು ಬೇಜಾರಾಗೋಲ್ಲ ಹೇಳಿ ಅವರಿಗೆ. ಅದಕ್ಕೇ ನಾನೂ ಸುಮ್ನಿದ್ದೀನಿ. ಯಾರಿಗೂ ಹೇಳೋಕೇ ಹೋಗಲಿಲ್ಲ. ನೀವೂ ಇದನ್ನೆಲ್ಲ ಬರೀಬೇಡಿ ಪ್ಲೀಸ್'
`ಹೌದೆ.. ತುಂಬ ಸಂತೋಷ. ನನಗೆ ಸಂದರ್ಶನಕ್ಕೆ ಬೇಕಾದಷ್ಟು ಮಾಹಿತಿ ಸಿಕ್ಕಿತು. ನಾನಿನ್ನು ಹೊರಡ್ತೀನಿ. ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಪಮಿಸಿ. ಗಳಗನಾಥರ ಶವಸಂಸ್ಕಾರದ ವಿಚಾರ ಬಹಳ ಚೆನ್ನಾಗಿತ್ತು. ಅವರು ವಿಶಿಷ್ಟ ವ್ಯಕ್ತಿ ಅಂದ್ರಲ್ಲ. ನಿಮಗೆ ಹಾಗನ್ನಿಸೋದಕ್ಕೆ ಏನು ಕಾರಣ ಅಂತ ಹೇಳ್ತೀರಾ?'
`ಅದಾ.. ಅದಂತೂ ಸತ್ಯ. ನೂರರಲ್ಲಿ ಒಬ್ಬನೂ ಅದನ್ನು ಕಂಡಿರಲಿಕ್ಕಿಲ್ಲ. ಎಲ್ಲ ಶಾಸ್ತ್ರಗಳೂ ಮುಗಿದು ಇನ್ನೇನು ಮೆರವಣಿಗೆ ಹೊರಡಬೇಕಿತ್ತು. ಶವವನ್ನು ಹೂಗಳಿಂದ ಸುಂದರವಾಗಿ ಸಿಂಗರಿಸಿದ್ದರು. ಈ ಅಂತಿಮ ದೃಶ್ಯವನ್ನು ಕಣ್ಣಾರೆ ನೋಡಬೇಕು ಅಂತ ಅವರೇ ಸ್ವತಃ ಎದ್ದು ವಾಹನದ ಡ್ರೈವರ್ ಜೊತೆ ಹೊರಟರು.'
ಸಂದರ್ಶನಕ್ಕೆ ಬಂದಿದ್ದ ಪತ್ರಕರ್ತ ಜಾಸ್ತಿ ಮಾತಾಡಲಿಲ್ಲ. ಕೃತಜ್ಞತೆ ಹೇಳಿ ಹೊರಟುಹೋದ. ಅವನ ಜೊತೆಗಿನ ಮಾತು ಚೆನ್ನಾಗಿತ್ತು. ಅವನು ಎದ್ದು ಹೋದ ನಂತರ ಬೇಜಾರಾಯಿತು.
*****
ಮಾರ್ಕ್ ಟ್ವೈನ್ ಬರೆದ ಒಂದಂಕದ ನಾಟಕದ ಓದಿ ಹೊಳೆದದ್ದು ಇದು. ಇದು ಏನನ್ನೂ ಹೇಳದೇ ಎಲ್ಲವನ್ನೂ ಹೇಳುತ್ತದೆ. ಇಲ್ಲಿರುವ ತರಲೆ, ಅಧಿಕಪ್ರಸಂಗ, ಅಸಂಗತ ಅಂಶಗಳು ಛೇಡಿಸುತ್ತಲೆ ಇನ್ನೇನೋ ಯೋಚಿಸುವಂತೆ ಮಾಡುತ್ತವೆ ಎಂದುಕೊಳ್ಳಬೇಕಿಲ್ಲ. ಇದೊಂದು ತೀರಾ ಸರಳ ನಾಟಕ. ಎಷ್ಟು ದಕ್ಕುತ್ತದೋ ಅಷ್ಟು.
ತುಂಬ ಸರಳವಾಗಿದ್ದಾಗಲೇ ನಾವು ವಿಪರೀತ ಗೊಂದಲಗೊಳ್ಳುತ್ತೇವೆ. ಗಾಬರಿಯಾಗುತ್ತೇವೆ. ಅದಕ್ಕೆ ಇದೇ ಸಾಕ್ಪಿ.

Sunday, March 23, 2008

ವಿಚಾರವಾದಿಗಳಿಗೆ ನಮಸ್ಕಾರ


ವಿಚಾರವಾದಿಗಳಿಗೆ ನಮಸ್ಕಾರ,
ನಿಮ್ಮ ಪತ್ರ ತಲುಪಿತು. ನಿಮ್ಮ ವಿಚಾರಧಾರೆಯೂ ಅರ್ಥವಾಯಿತು. ನಿಮ್ಮ ಕಾಳಜಿಗೆ, ಕಳಕಳಿಗೆ ನನ್ನ ಕಂಬನಿಯ ಕಪ್ಪ ಕಾಣಿಕೆ.
ಹೊರಗಡೆ ಹೋಗುವಾಗ ಬೆಕ್ಕು ಎದುರಾದರೆ ಬೆಚ್ಚಬೇಕಾಗಿಲ್ಲ. ನೆತ್ತಿಮೇಲೆ ಹಲ್ಲಿ ಬಿದ್ದರೆ ಏನೂ ಆಗುವುದಿಲ್ಲ. ಒಂಟಿ ಸೀನು ಅಪಶಕುನ ಅಲ್ಲ, ಮನೆ ಮುಂದೆ ರಂಗೋಲಿ ಹಾಕದೇ ಇದ್ದರೂ ಭೂತಪ್ರೇತಪಿಶಾಚಿಗಳು ಮನೆಯೊಳಗೆ ಬರುವುದಿಲ್ಲ, ಶ್ರೀಕೃಷ್ಣಜನ್ಮಾಷ್ಟಮಿಗೆ ಅರ್ಥವಿಲ್ಲ. ನಾಗರಹಾವು ದೇವರಲ್ಲ, ತುಳಸೀಗಿಡ ವಿಷ್ಣುವಿಗೆ ಪ್ರಿಯವಲ್ಲ, ಹುತ್ತವ ಬಡಿದರೆ ಹಾವು ಸಾಯುತ್ತದೆ, ಹಸಿರು ತೋರಣ ಬೇಕಾಗಿಲ್ಲ ಅನ್ನುವ ನಿಮ್ಮ ಕೆಚ್ಚೆದೆಯ ಮಾತುಗಳನ್ನು ಕೇಳಿ ನಮಗೂ ಆನಂದವಾಗಿದೆ. ಪ್ರಶ್ನಿಸದೇ ಏನನ್ನೂ ಒಪ್ಪಬೇಡಿ ಅನ್ನುವ ನರಸಿಂಹಯ್ಯನವರ ವಾದವೂ ನಮಗೆ ಇಷ್ಟವಾಗಿದೆ.
ನೀವು ಪವಾಡಗಳನ್ನು ನಂಬುವುದಿಲ್ಲ. ಪವಾಡಗಳ ಹಿಂದಿರುವ ಮೋಸವನ್ನು ಬಯಲು ಮಾಡುತ್ತೀರಿ. ಅವಧೂತರನ್ನು ನಂಬುವುದಿಲ್ಲ. ದೇವರುಗಳನ್ನಾಗಲೀ, ದೇವಸ್ಥಾವನ್ನಾಗಲೀ, ದೇವಸ್ಥಾನದ ಮುಂದೆ ಕಲಕದೆ ನಿಂತ ನಿಗೂಢ ಕಲ್ಯಾಣಿಯನ್ನಾಗಲೀ ನಂಬುವುದಿಲ್ಲ. ನಿಮಗೆ ತಿರುಪತಿ ಬೆಟ್ಟವಲ್ಲ. ಹರಿರಪುತ್ರ ಅಯ್ಯಪ್ಪನೂ ದೇವರಲ್ಲ. ಊರಿನ ತುಂಬ ಭಕ್ತಾದಿಗಳು ಡಿಸೆಂಬರಿನ ಚಳಿಗೆ ನಡುಗುತ್ತಾ ನಸುಕು ಮೂಡುವ ಮುನ್ನ ಎದ್ದು ತಣ್ಣೀರಲ್ಲಿ ಸ್ನಾನ ಮಾಡಿ ಅಯ್ಯಪ್ಪನ ದರ್ಶನಕ್ಕೆ ಸಿದ್ಧರಾಗುವುದನ್ನು ನೀವು ಕಾಣುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ಅಷ್ಟು ಹೊತ್ತಿಗೆಲ್ಲ ನೀರು ಬೆಚ್ಚಗೆ ಹೊದ್ದು ಮಲಗಿರುತ್ತೀರಿ.
ನಿಮ್ಮ ಪಾಲಿಗೆ ಪೂಜಾರಿ ಕೊಡುವ ತೀರ್ಥ ಮೋಸ. ಸ್ವಾತಿಹನಿ ಮುತ್ತಾಗುವುದು ಸುಳ್ಳು. ಬೆಳದಿಂಗಳ ಕುಡಿದು ಬದುಕುವ ಚಕೋರ ಪಕ್ಪಿ ಕಲ್ಪನೆ. ಮಳೆಗಾಗಿ ಕಾಯುವ ಚಾತಕ ಮತ್ತೊಂದು ಕವಿಕಲ್ಪನೆ.
ನಿಮ್ಮ ಪಾಲಿಗೆ ಕಾವ್ಯವೂ ಸುಳ್ಳು, ಕಲ್ಪನೆಯೂ ಸುಳ್ಳು. ರಾಮಾಯಣ ನಡೆದೇ ಇಲ್ಲ, ಮಹಾಭಾರತ ಘಟಿಸಿಯೇ ಇಲ್ಲ. ಶ್ರೀಕೃಷ್ಣ ಇರಲೇ ಇಲ್ಲ, ಆಯೋಧ್ಯೆಯ ಪಕ್ಕದಲ್ಲಿ ಸರಯೂ ನದಿ ಹರಿಯುತ್ತಲೇ ಇರಲಿಲ್ಲ. ಶಕುಂತಲೆ ಉಂಗುರ ಶಚೀತೀರ್ಥಕ್ಕೆ ಬಿದ್ದದ್ದು ಸುಳ್ಳು, ಕಳ್ಳ ಇಂದ್ರ ಚುಮುಚುಮು ಮುಂಜಾನೆ ಗೌತಮನ ಆಶ್ರಮಕ್ಕೆ ಬಂದು ಅಹಲ್ಯೆಯ ಜೊತೆ ಸುಖಿಸಿದ್ದೂ ಸುಳ್ಳು!
ವಿಚಾರವಾದಿಗಳಿಗೆ ನಮಸ್ಕಾರ!
******
ನಮಗೆ ಪವಾಡಗಳು ಬೇಕು. ಸಂಜೆಯ ಹೊತ್ತಿಗೆ ಮೊಗ್ಗಾಗಿದ್ದ ಗುಲಾಬಿ ಬೆಳಗಾಗುವಷ್ಟರಲ್ಲಿ ಅರಳಿರಬೇಕು. ಆಗುಂಬೆಯ ತುತ್ತತುದಿಗೆ ಹೋಗಿ ನಿಂತರೆ ಅಲ್ಲಿ ಪ್ರತಿಸಂಜೆ ಸೂರ್ಯ ಮುಳುಗಬೇಕು. ಆಗಷ್ಟೇ ಮಿಂದು ಕೈಲಿ ನೀಲಾಂಜನ ಹಿಡಕೊಂಡು ಬಂದ ತುಂಬುತೋಳಿನ ಚೆಲುವೆಗೆ ಮನಸೋಲಬೇಕು. ದಾವಣಗೆರೆಯ ಬೆಣ್ಣೆಮಸಾಲೆ ನಾಲಗೆಯ ತುದಿಯಲ್ಲಿ ಕರಗಬೇಕು. ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು ಅಂತ ಕವಿ ಬರೆರೆ ಖುಷಿಯಾಗಬೇಕು!
ವಿಚಾರವಾದ ನಮಗೆ ಸಾಕು!
ಪ್ರಶ್ನಿಸದೇ ಒಪ್ಪಬೇಡಿ ಅನ್ನುವ ಬೋಧೆಯೂ ಸಾಕು, ವಾದವೂ ಸಾಕು. ನಾವು ಏನನ್ನೂ ಪ್ರಶ್ನಿಸುವುದೇ ಬೇಡ. ಪ್ರಶ್ನಿಸುವುದೂ ಇಲ್ಲ. ಪ್ರಶ್ನೆಗಳ ಶರಪಂಜರದಲ್ಲಿ ಮಲಗಿ ಬೆನ್ನು ಹುಣ್ಣಾಗಿದೆ. ಅನುಮಾನವೆಂಬ ಬೇವು ನಮ್ಮ ಅಮೃತಘಳಿಗೆಗಳ ಮಾವನ್ನು ಕಹಿಯಾಗಿಸುತ್ತಿದೆ.
ಮನೆಯ ಬಾಗಿಲಿಗೆ ಹಬ್ಬಕ್ಕೆ ಹಸಿರು ತೋರಣ ಕಟ್ಟಬೇಡಿ ಅಂದಿರಿ. ರಂಗೋಲಿ ಯಾಕಿಡುತ್ತೀರಿ ಅಂತ ಕೇಳಿದಿರಿ. ಅವಳ ಹಣೆಯಲ್ಲಿ ಕುಂಕುಮ ಯಾಕೆ, ಇವನ ಕೈಗೆ ಕಡಗ ಯಾಕೆ? ಹಣೆಗೇಕೆ ಬೇಕು ವಿಭೂತಿ, ಕುಂಕುಮ ರಕ್ಪೆ? ಹಬ್ಬಕ್ಕೆ ಯಾಕೆ ಗಣೇಶ? ವರುಷಕ್ಕೊಮ್ಮೆ ಯಾಕೆ ತೀರ್ಥಯಾತ್ರೆ? ಯಜ್ಞಯಾಗಾದಿಗಳು ಯಾಕೆ? ದೇಗುಲಗಳಲ್ಲಿ ಸಾಮೂಹಿಕ ಊಟವೇಕೆ? ದೇವರಿಗೇಕೆ ಹವಿಸ್ಸು? ಎಂಬಿತ್ಯಾದಿ ಪ್ರಶ್ನೆಗಳನ್ನು ನೀವು ಕೇಳುತ್ತಾ ಹೋಗುತ್ತೀರಿ. ಹಠಮಾರಿಗಳಂತೆ ವಾದಿಸುತ್ತೀರಿ.
ಅದ್ಯಾರೋ ಬೆಂಕಿಕುಂಡ ಹಾಯುವ ಬೆರಗು ನಮ್ಮದಾಗಿತ್ತು. ಅದರಲ್ಲಿ ಬೆರಗೇನಿಲ್ಲ, ವಿಜ್ಞಾನ ಅಂದಿರಿ. ಕೆನ್ನೆಗೆ ತ್ರಿಶೂಲ ಚುಚ್ಚಿಕೊಂಡರೆ ನೋವಾಗುವುದಿಲ್ಲ ಅಂತ ಮಾಡಿ ತೋರಿಸಿದಿರಿ! ಬೆನ್ನುಹುರಿಗೆ ಕೊಂಡಿ ಸಿಕ್ಕಿಸಿ ಸಿಡಿಯಲ್ಲಿ ನೇತಾಡುವುದು ಸರಳ ಅಂತ ನಕ್ಕಿರಿ. ಕೆಂಡ ತುಂಬಿದ ಕಾವಡಿ ಹೆಗಲ ಮೇಲೆ ಹೊತ್ತು ಹೆಗಲು ಸುಟ್ಟರೆ ಅದರಲ್ಲಿ ಭಕ್ತಿ ಕಾಣಲಿಲ್ಲ, ಮೂಢನಂಬಿಕೆಯೇ ಕಂಡಿತು ನಿಮಗೆ..
*****
ಈ ವಿಚಾರವಾದ ಬಂದದ್ದಾದರೂ ಎಲ್ಲಿಂದ? ಮೊದಮೊದಲು ಕೇವಲ ಆಚಾರಗಳನ್ನು ಪ್ರಶ್ನಿಸುತ್ತಿದ್ದವರು ಇದೀಗ ವಿಚಾರಕ್ಕೂ ತಲೆಹಾಕಿದ್ದೀರಿ. ಅಬ್ರಹಾಂ ಕೋವೂರು ಆ ಕಾಲಕ್ಕೆ ದೇವರಿಲ್ಲ ಅಂತ ಹೇಳಿಯೇ ದೇವರಾದ. ಭಾರತೀಯ ದೇವರು,ದಿಂಡರ ಬಗ್ಗೆ ಬರೆದು ಇನ್ಯಾರೋ ದೊಡ್ಡವನಾದ. ನಿರಾಕರಿಸುವುದು ಸುಲಭ, ಸೃಷ್ಟಿಸುವುದು ಕಷ್ಟ.
ಮೊನ್ನೆ ಯಾರೋ ಅಂದರು; ಬಡವರನ್ನು ಕರೆದು ಅವರ ಹತ್ತಿರ ನಿಮ್ಮಿಂದ ಮಾಡುವುದಕ್ಕಾಗದ ಕೆಲಸ ಮಾಡಿಸಿ, ಅವರಿಗೆ ಚೂರುಪಾರು ತಿನ್ನಲು ಕೊಡುತ್ತಾರೆ ಪಾಪ, ಅವರನ್ನು ಶೋಷಿಸುತ್ತಾರೆ. ಹೀಗೆ ಹೇಳುವವರೇ ಯಾರದೋ ಕಾಲು ಹಿಡಿದು ಸ್ಕಾಲರ್ ಶಿಪ್ಪು ಪಡೆಯುತ್ತಾರೆ. ಸಣ್ಣ ಪುಟ್ಟ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅವರವರಿಗೆ ಅವರವರ ಅಗತ್ಯಗಳಿರುತ್ತವೆ. ಅವನ್ನೆಲ್ಲ ಸಾರಾಸಗಟು ಶೋಷಣೆ ಅಂತ ಕರೆಯುವುದು ಸರಿಯಾ? ಕೇಳಬಾರದ ಪ್ರಶ್ನೆಗಳಿವು.
ವಿಜ್ಞಾನ ಎಲ್ಲ ಮೂಢನಂಬಿಕೆಗಳನ್ನೂ ಅಳಿಸಿಹಾಕುತ್ತದೆ ಅಂತ ನಂಬುವ ಕಾಲವೊಂದಿತ್ತು. ಇವತ್ತು ವಿಜ್ಞಾನಕ್ಕಿಂತ ದೊಡ್ಡ ಮೂಢನಂಬಿಕೆ ಮತ್ತೊಂದಿಲ್ಲ ಎಂಬಂತೆ ಭಾಸವಾಗತೊಡಗಿದೆ. ಕವೆಕೋಲು ಹಿಡಿದುಕೊಂಡು ನೀರು ಗುರುತಿಸುವ ಪಂಡಿತರಿದ್ದರು ಹಿಂದೆ. ಈಗ ಅದಕ್ಕೊಂದು ಇಲಾಖೆಯಿದೆ. ಅವರು ತೋರಿಸಿದಲ್ಲಿ ಅಗೆದರೆ ನೀರು ಸಿಕ್ಕರೆ ಸಿಕ್ಕಿತು. ಸಿಗದೇ ಹೋದರೆ ವಿಚಾರವಾದಿಗಳು ಅದನ್ನು ಮೂಢನಂಬಿಕೆ ಅನ್ನುವುದಿಲ್ಲ!
ಆರೋಗ್ಯಭಾಗ್ಯವೂ ಅಷ್ಟೇ. ಸ್ವಾತಂತ್ರ ಬಂದ ಆರಂಭದಲ್ಲಿ ನಗರ ಅಂದರು, ಆಧುನಿಕತೆ ಅಂದರು, ಆಲೋಪತಿ ಅಂದರು. ಇವತ್ತು ಆಲೋಪತಿಯನ್ನು ಪರ್ಯಾಯ ವ್ಯೆದ್ಯಪದ್ದತಿಗಳು ಮೀರಿಸುತ್ತಿವೆ. ಆಯುರ್ವೇದ ಏನಂತದೆ ಅಂತ ಹುಡುಕುತ್ತಿದ್ದೇವೆ. ಆದರೆ ಅಷ್ಟು ಹೊತ್ತಿಗಾಗಲೇ ಆಯುರ್ವೇದ ಸಸ್ಯಗಳನ್ನೆಲ್ಲ ನಾಶ ಮಾಡಿದ್ದೂ ಆಗಿದೆ. ಗುರುತು ಮರೆತದ್ದೂ ಆಗಿದೆ.
ಗಜಿಬಿಜಿಯ ನಗರಗಳಲ್ಲಿ ಕಿಕ್ಕಿರಿದ ಜನಸಂದಣಿಗಳಲ್ಲಿ ಇವತ್ತು ಹಳ್ಳಿಯ ನೆನಪು. ಮಲ್ಲೇಶ್ವರಂನ ಜನನಿಬಿಡ ಬೀದಿಯಲ್ಲಿ ಹಳ್ಳಿಮನೆ. ರಿಂಗು ರಸ್ತೆಯಲ್ಲಿ ಹಳ್ಳಿಡಾಬಾ. ಯಾವೂರಿಗೆ ಹೋದರೂ ನಮ್ಮೂರ ಹೊಟೆಲ್ಲು. ಇಪ್ಪತ್ತೆಂಟಂತಸ್ತಿನ ತುತ್ತತುದಿಯಲ್ಲಿ ಬಿದಿರಿನ ಮನೆ, ಎದುರು ಎರಡು ಕುಬ್ಜ ಉದ್ಯಾನ!
ಅತ್ತ ಸಾಗುವುದೋ ಇತ್ತ ಸಾಗುವುದೋ ತಿಳಿಯದ ದಿಕ್ಕೆಟ್ಟ ಬದುಕು!
*******
ನಂಬಿಕೆಗಳ ಜೊತೆ ಅದರ ಈಸ್ತೆಟಿಕ್ ಅಂಶವನ್ನೂ ಕಳೆದುಕೊಳ್ಳುತ್ತಿದ್ದೇವಾ? ವಿಚಾರವಾದ ಅಂತಿಮವಾಗಿ ನಮ್ಮನ್ನು ಅಮಾನವೀಯರನ್ನಾಗಿಸುತ್ತಾ? ಆಧುನಿಕತೆಯ ಪರಿಣಾಮ ನಮ್ಮನ್ನು ನೆಮ್ಮದಿಯಿಂದ ಇಟ್ಟ ಸಂಗತಿಗಳಿಂದ ವಿಮುಖರಾಗುವುದಾ? ಪ್ರಶ್ನಿಸುತ್ತಲೇ ಹೋದರೆ ಒಪ್ಪುವುದು ಏನನ್ನು?
ಇಂಥ ಪ್ರಶ್ನೆಗಳನ್ನು ಮುಂದಿಟ್ಟರೆ ವಿಚಾರವಾದಿಗಳು ಅದಕ್ಕೆ ಬೇರೆಯೇ ಅರ್ಥ ಕೊಡುತ್ತಾರೆ. ಬೇರೆಯೇ ಲೇಬಲ್ಲು ಹಚ್ಚುತ್ತಾರೆ.
ಅಡಿಗರು ಎಂದೋ ಬರೆದ ಪದ್ಯವೊಂದು ಬೇಡವೆಂದರೂ ನೆನಪಾಗುತ್ತಿದೆ;
ತಿಂದದ್ದು ಸರಿಯಾಗಿ ರಕ್ತವಾಗುವ ಹಾಗೆ
ಅನುಗ್ರಹಿಸು; ಅರಗದಂಥ ಕಚ್ಚಾ ಗಾಳಿಗೀಳುಗಳ
ಕಾಗದದ ಮೇಲೆಲ್ಲ ಕಾರಿಕೊಳ್ಳದ ಹಾಗೆ
ಏರ್ಪಡಿಸು ಸಹಜ ಹೊರದಾರಿಗಳ; ರಹದಾರಿಗಳ
ಕೊಡು ಎಲ್ಲರಿಗೂ ತಮ್ಮ ತಮ್ಮ ಖಾಸಗಿ ಮನೆಗೆ.
ಎಲ್ಲಕ್ಕಿಂತ ಹೆಚ್ಚಾಗಿ

ಒಂದು ತುತ್ತನ್ನು ಮೂವತ್ತೆರಡು ಸಲ ಜಗಿದು, ನುರಿಸಿ
ಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯ
ಶಾಸ್ತ್ರದ ಮೊದಲ ಪಾಠ ಕಲಿಸು. ಕಲಿಸದಿದ್ದರೂ ಕೂಡ
ಕಲಿತಿಲ್ಲ ಎಂಬ ನೆನಪುಳಿಸು. ಉಳ್ಳಾಗಡ್ಡೆ
ತಿಂದು ಕೊರಳೆಲ್ಲ ಕಸ್ತೂರಿಯಾಗುವುದೆಂಬ
ಭ್ರಮೆಯ ಕಳೆ. ದೊಡ್ಡ ದೊಡ್ಡ ಮಾತುಗಳ ಬೆಲೂನು
ಹಿದ್ದುವಾಗೆಲ್ಲ ತಾಗಿಸು ನಿಜದ ಸೂಜಿಮೊನೆ.
-(ಪ್ರಾರ್ಥನೆ)
ವಿಚಾರವಾದಕ್ಕೆ ಮತ್ತೊಮ್ಮೆ ದೊಡ್ಡ ನಮಸ್ಕಾರ!


ಟಿಪ್ಪಣಿ- ಈ ಫೋಟೋ ಕಳುಹಿಸಿಕೊಟ್ಟವರು ನಾಗರಾಜ ವಸ್ತಾರೆ. ಈ ಜಾಗ, ಅಲ್ಲಿನ ಘಮಘಮ, ಪ್ರಶಾಂತತೆ ಎಲ್ಲವೂ ವೇದ್ಯವಾಗುವಂತೆ ತೆಗೆದ ಈ ಚಿತ್ರ ನಂಗಿಷ್ಟ.

Monday, March 17, 2008

ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ!

ತರಗಲೆ ಬಿದ್ದ ಕಾಡು. ಕಾಲಡಿಯಲ್ಲಿ ಮೆತ್ತೆ ಹಾಸಿದ ಹಾಗೆ ಒಣಗಿದ ಎಲೆಗಳು ರಾಶಿ ರಾಶಿ. ಅದರ ಮೇಲೆ ಹೆಜ್ಜೆಯಿಟ್ಟರೆ ಚರಬರ ಸದ್ದು. ಸದ್ದಾಗದಂತೆ ನಡೆಯಲು ಯತ್ನಿಸಿದರೆ ಕೆದಂಬಾಡಿ ಜತ್ತಪ್ಪ ರೈಗಳ ನೆನಪು. ಅವರು ಓಡಾಡಿದ ಜಾಗಗಳಿವು. ಸುಳ್ಯ ಪುತ್ತೂರು ಪಂಜ ಶಿರಾಡಿ ವೇಣೂರಿನ ಕಾಡುಗಳು. ಇಲ್ಲಿಗೆ ಯಾವ ಕೆನ್ನೆತ್ ಅಂಡರ್‌ಸನ್ನೂ ಬರಲಿಲ್ಲ. ಜಿಮ್ ಕಾರ್ಬೆಟ್ ಕಾಲಿಟ್ಟಿರಲಿಲ್ಲ. ಶ್ರೀಮಂತರಾದ ಬಂಟರು ಇಲ್ಲಿಯ ಕಾಡು ಪ್ರಾಣಿಗಳನ್ನು ನಿಯಂತ್ರಿಸಿದ್ದು. ಅವರು ಕೊಂದ ಹುಲಿಗಳ ಲೆಕ್ಕ ಯಮ ನೋಡಿ ನಕ್ಕ!
ಹುಲಿ ಕೊಂದವರ ನಾಡಿನಿಂದಲೆ ಬಂದವರು ಹುಲಿ ಸಂರಕ್ಷಣೆಯ ಉಲ್ಲಾಸ ಕಾರಂತರು. ಎರಡು ಪರಸ್ಪರ ವಿರುದ್ಧ ಕಾಲಘಟ್ಟದ ನಿಲುವನ್ನು ಗಮನಿಸಿ. ಒಂದು ಕಾಲದಲ್ಲಿ ಹುಲಿ ಕೊಲ್ಲುವುದು ಅನಿವಾರ್ಯವಾಗಿತ್ತು. ಈ ಉಳಿಸುವುದು ಅನಿವಾರ್ಯವಾಗಿದೆ. ಹಾಗಿದ್ದರೂ ಮಡಿಕೇರಿಯಲ್ಲೊಂದು ನರಭಕ್ಷಕ ಹುಲಿ ಸೇರಿಕೊಂಡಿದೆಯಂತೆ. ಅದನ್ನು ಕೊಲ್ಲುವುದಕ್ಕೂ ಅಪ್ಪಣೆ ಸಿಕ್ಕಿದೆಯಂತೆ.
ಕಾಡನ್ನು ಯಾರೂ ಗುಡಿಸುವುದಿಲ್ಲ. ಹೀಗಾಗಿ ಬಿದ್ದ ಎಲೆಯೆಲ್ಲ ಮಳೆಗಾಲದಲ್ಲಿ ಕೊಳೆತು ಮಣ್ಣಾಗಿ, ಮರಕ್ಕೆ ಗೊಬ್ಬರವಾಗಿ ಅಷ್ಟರ ಮಟ್ಟಿಗೆ ಪ್ರತಿಮರವೂ ಸ್ವಾವಲಂಬಿ. ಆ ಮಣ್ಣಲ್ಲಿ ಹುಟ್ಟಿ ಸಾಯುವ ಹೆಸರಿಲ್ಲದ ಗಿಡಗಳೂ ಗೊಬ್ಬರವಾಗಿಯೇ ಸಲ್ಲುತ್ತವೆ. ಆಷಾಢದ ಗಾಳಿ ಆ ತರಗೆಲೆಗಳನ್ನು ಹಾರಿಸಿಕೊಂಡು ಹೋಗಿ, ಮೊದಲ ಮಳೆಗೆ ಅವು ಕೊಚ್ಚಿಕೊಂಡು ಹೋಗಿ ಹತ್ತಿರದ ನದಿಯನ್ನು ಸೇರಿದರೂ ಹಾಗೆ ಹೋಗುವುದು ಸಾಸಿವೆ, ಉಳಿಯುವುದು ಸಾಸಿರ.
ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಾಡುಗಳು ಮೊದಲಿನ ಕಾಡುಗಳಾಗಿ ಉಳಿದಿಲ್ಲ. ಮೊನ್ನೆ ಮೊನ್ನೆ ಮಂಗಳೂರಿನ ಅತ್ರಿ ಬುಕ್‌ಹೌಸ್‌ನ ಅಶೋಕ ವರ್ಧನ ಹೇಳುತ್ತಿದ್ದರು. ಬಿಸಲೆ ಘಾಟಿಯಲ್ಲಿ ಬಿಸಲೆ ಹಳ್ಳಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಬಲಕ್ಕೊಂದು ರಸ್ತೆ ಮಾಡಿದ್ದಾರೆ. ಆ ರಸ್ತೆಯಲ್ಲಿ ಸಾಗಿ, ಅದರ ತುದಿ ತಲುಪಿದರೆ ಕುಮಾರಧಾರಾ ನದಿಯ ಪೂರ್ತಿ ಹರಿವು ಕಾಣಿಸುತ್ತದೆ. ಅಂಥ ಜಾಗದಲ್ಲೇ ಯಾರೋ ರೆಸಾರ್ಟ್ ಮಾಡುವುದಕ್ಕೆಂದು ಎಷ್ಟೋ ಎಕರೆ ಕೊಂಡು ಕೊಂಡಿದ್ದಾರೆ. ಅಲ್ಲಿ ರೆಸಾರ್ಟ್ ಕೆಲಸ ಶುರುವಾಗಿಲ್ಲ, ಆದರೆ ಆಗಲೇ ರಸ್ತೆ ಮಾಡಿಟ್ಟಾಗಿದೆ. ಇವತ್ತಲ್ಲ ನಾಳೆ ಅದೂ ಶುರುವಾಗುತ್ತದೆ. ಸರ್ಕಾರ ಪರ್ಮಿಶನ್ ಕೊಡುವ ಹೊತ್ತಿಗೆ ಹಿಂದೆ ಮುಂದೆ ನೋಡುವುದಿಲ್ಲ.
ಬಿಸಲೆ ಘಾಟಿಯಲ್ಲಿ ಅವರದೊಂದು ಕಾಡಿದೆ. ಅಲ್ಲಿ ಓಡಾಡಿದ ಫೋಟೋಗಳನ್ನು ನೋಡುತ್ತಿದ್ದಾಗ ಖುಷಿಯಾಯಿತು. ಅಲ್ಲೊಂದು ಕಾಡು ಕೊಂಡಿದ್ದಾರೆ ಅವರು. ಕಾಡು ಕೊಂಡುಕೊಂಡಾಗ ಎಲ್ಲರೂ ಕೇಳಿದ್ದು ಒಂದೇ ಪ್ರಶ್ನೆ: ಇದರಿಂದ ಆರ್ಥಿಕವಾಗಿ ಏನು ಉಪಯೋಗ? ಹಾಕಿದ ದುಡ್ಡು ಹೇಗೆ ಪಡೆಯುತ್ತೀರಿ ಅಂತ? ಎಲ್ಲರೂ ನೋಡುವುದು ಅದೊಂದನ್ನೇ. ಹಾಕಿದ ದುಡ್ಡು ವಾಪಸ್ಸು ಬಂದುಬಿಡಬೇಕು ಅದೇ ರೂಪದಲ್ಲಿ. ಸಲೀಮ್ ಆಲಿ ಜೀವವೈವಿಧ್ಯಕ್ಕೆ ಅದಮ್ಯ ತಾಣವಾಗಬಹುದಾಗಿದ್ದ ದೊಡ್ಡ ಮರವೊಂದನ್ನು ತೋರಿಸಿದಾಗ ಅವರ ಜೊತೆಗೆ ಬಂದಿದ್ದ ವ್ಯಕ್ತಿ ಅದನ್ನು ಕಡಿದರೆ ಎಷ್ಟು ಲಾರಿ ಲೋಡು ಸೌದೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದನಂತೆ. ಅವರವರು ನೋಡುವ ಕ್ರಮವೇ ಬೇರೆ. ದೃಷ್ಟಿಕೋನವೇ ಬೇರೆ ಎಂದು ಅಶೋಕ ವರ್ಧನ ನಿಟ್ಟುಸಿರಿಟ್ಟರು.
******
ನೀವು ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ಶಿರಾಡಿ ಘಾಟಿ ಇಳಿದ ತಕ್ಷಣ ಗುಂಡ್ಯ ಎಂಬ ಚಿಕ್ಕ ಊರು ಸಿಗುತ್ತದೆ. ಅದಕ್ಕೂ ಎರಡು ಕಿಲೋಮೀಟರ್ ಹಿಂದೆ ಸಿಗುವ ಹೆಸರಿಲ್ಲದ ಪುಟ್ಟ ಹೊಟೆಲಿನಲ್ಲಿ ನೀವು ಹುರಿದ ಮೀನು, ಬಿಸಿಬಿಸಿ ಕುಸಬಲಕ್ಕಿ ಅನ್ನ ತಿಂದು ನಿಮ್ಮ ಪ್ರಯಾಣ ಶುರುಮಾಡಬಹುದು. ಸಂಜೆಯ ತನಕ ಅದು ನಿಮ್ಮನ್ನು ಉಲ್ಲಸಿತರನ್ನಾಗಿಡುತ್ತದೆ.
ಗುಂಡ್ಯದಲ್ಲಿ ನೀವು ಬಸ್ಸಿನಿಂದಲೋ ನಿಮ್ಮ ಕಾರಿನಿಂದಲೂ ಇಳಿದು, ಅಲ್ಲೊಂದು ಜೀಪು ಬಾಡಿಗೆಗೆ ಪಡೆದುಕೊಂಡೋ, ಅಲ್ಲಿರುವ ಮಲಯಾಳಿ ಅಂಗಡಿಯಲ್ಲಿ ದಾರಿ ತಿಳಿದುಕೊಂಡು ನಡೆದುಕೊಂಡೋ ಹೋಗಿ ಬರಬಹುದಾದ ಎರಡು ಜಾಗಗಳಿವೆ. ಒಂದು ಅರಬೆಟ್ಟ, ಇನ್ನೊಂದು ಶಿರಿಬಾಗಿಲು.
ಇವೆರಡನ್ನು ತಲುಪಬೇಕಾದರೆ ಕಾಡಿನ ನಡುವೆ ನಡೆದುಕೊಂಡೇ ಹೋಗಬೇಕು. ಅದನ್ನು ಟ್ರೆಕಿಂಗ್ ಅಂದುಕೊಂಡೋ ಸಾಹಸ ಅಂದುಕೊಂಡೋ ಆದಷ್ಟು ಬೇಗ ಹೋಗಿ ಬರಬೇಕಾದ ಜಾಗ ಅಂದುಕೊಂಡೋ ಹೋಗಬೇಡಿ. ಸುಮಾರು ಎಂಟು ಕಿಲೋಮೀಟರ್ ನಡೆಯುವುದಕ್ಕೆ ತಯಾರಿದ್ದವರು ಯಾರು ಬೇಕಾದರೂ ಹೋಗಬಹುದಾದ ಜಾಗ ಇದು.
ಅಲ್ಲೇನಿದೆ ಎಂದು ಕೇಳುವುದಕ್ಕಿಂತ ನಡೆದು ಹೋಗುವ ಹಾದಿಯನ್ನು ಸವಿಯುವುದು ಒಳ್ಳೆಯದು. ಕಾಡನ್ನು ನೋಡಬಾರದು, ಕಾಡಿನ ಒಂದು ಭಾಗವೇ ಆಗಿಬಿಡಬೇಕು. ಅಲ್ಲಿ ಬಿದ್ದ ನೆರಳು, ಕಾಲಡಿಯ ತರಗೆಲೆ, ಹಾದಿಯಲ್ಲದ ಹಾದಿ, ಏದುಸಿರು ತರುವ ಏರು ಇವೆಲ್ಲದರ ನಡುವೆ ನಡೆಯುತ್ತಾ ಕೊನೆಗೆ ತಲುಪಿದರೆ ಅಲ್ಲಿ ಕಾಣಿಸುವುದು ಶಿರಿಬಾಗಿಲು ಎಂಬ ಹಳದಿ ಬೋರ್ಡು. ಅದರೆದುರು ಅನಾಥವಾಗಿ ಬಿದ್ದಂತೆ ಕಾಣುವ ಜೋಡಿ ರೇಲ್ವೆ ಹಳಿ.
ಆ ಕಾಡಿನ ನಡುವೆ ಒಂದು ರೇಲ್ವೆ ಸ್ಟೇಷನ್ನು ಯಾಕಿರಬೇಕು. ಅಲ್ಲೊಬ್ಬ ಬಿಹಾರಿ ಸ್ಟೇಷನ್ ಮಾಸ್ಟರ್ ಯಾಕೆ ಹಾಗೆ ನಿದ್ರಾವಸ್ಥೆಯಲ್ಲಿ ಕೂತಿದ್ದಾನೆ. ಹೊರಗಿನ ಬೆಂಚಿನ ಮೇಲೆ ಮಲಗಿರುವ ಕುರುಚಲು ಗಡ್ಡದ ಯುವಕ ಯಾರು? ಅಲ್ಲಿರುವ ನಿರ್ಜನವಾದ ಹತ್ತು ಹನ್ನೆರಡು ಮನೆಗಳು ಹಾಗೇಕೆ ಪಾಳು ಬಿದ್ದಿವೆ. ಆ ಕಡೆ ತಿರುಗಿದರೆ ಕಾಣಿಸುವ ಸುರಂಗ ಎಷ್ಟು ಕಿಲೋಮೀಟರ್ ಉದ್ದವಿದೆ. ಅದರೊಳಗೆ ಹೋದರೆ ಕಳೆದುಹೋಗುತ್ತೇವಾ, ಆ ಕಡೆಯಿಂದ ಹೊರಗೆ ಬರುವುದಕ್ಕಾಗುತ್ತಾ? ಅಲ್ಲಿರುವ ನಡೆಯಲು ಭಯವಾಗುವ ಸೇತುವೆಯಿಂದ ನದಿಗುರುಳಿದ ಆ ರೇಲ್ವೇ ಇಂಜಿನ್ನಿನ ಬೋಗಿಗಳು ಏನಾದವು? ಆ ರೇಲ್ವೆ ಇಂಜಿನ್ನಿನ ಡ್ರೈವರ್ ಬದುಕಿ ಉಳಿದಿದ್ದನಾ? ಆ ರೇಲ್ವೆ ಇಂಜಿನನ್ನು ಯಾಕಿನ್ನೂ ಮೇಲೆತ್ತಿಲ್ಲ. ಅದರ ನೆತ್ತಿಯಲ್ಲಿ ಕಾಣುವ ತುತ್ತೂರಿಯಂಥ ಹಾರ್ನುಗಳನ್ನು ಯಾಕಿನ್ನೂ ಯಾವ ಮಕ್ಕಳೂ ಕಿತ್ತುಕೊಂಡು ಹೋಗಿಲ್ಲ?
ಇಂಥ ಅಸಂಖ್ಯ ಪ್ರಶ್ನೆಗಳನ್ನಿಟ್ಟು ಕೂತುಕೊಂಡರೆ ಅಲ್ಲೊಬ್ಬ ಅಪರಿಚಿತ ಪ್ರತ್ಯಕ್ಷನಾಗುತ್ತಾನೆ. ಸೊಗಸಾಗಿ ಕನ್ನಡ ಮಾತಾಡುತ್ತಾನೆ. ಅಲ್ಲೇನು ಕೆಲಸ ಮಾಡುತ್ತಾನೋ ಗೊತ್ತಿಲ್ಲ. ದಿನಕ್ಕೊಮ್ಮೆ ಬರುವ ಬೆಂಗಳೂರು ಮಂಗಳೂರು ರೇಲು ಅಲ್ಲಿ ಒಂದು ನಿಮಿಷ ನಿಲ್ಲುತ್ತದಂತೆ. ಅದೇ ಟ್ರೇನು ವಾಪಸ್ಸು ಹೋಗುವಾಗ ನಿಲ್ಲುವುದಿಲ್ಲ. ಹೀಗಾಗಿ ಅದು ವನ್‌ವೇ ಸ್ಟೇಷನ್ನು.
ಇಲ್ಲೆಲ್ಲ ಸುತ್ತಾಡಬೇಡಿ. ಬೆಂಗಳೂರಿಂದ ಬಂದ ಮೂವರು ಯುವಕರು ಇಲ್ಲೇ ಕಾಣೆಯಾದದ್ದು. ಆಮೇಲೆ ಅವರ ಅಸ್ಥಿಪಂಜರವಷ್ಟೇ ಸಿಕ್ಕಿದ್ದು ಎಂದು ಹೆದರಿಸುತ್ತಾನೆ ಅವನು. ಅವರು ಹೇಗೆ ಕಾಣೆಯಾದರು, ಏನಾದರು ಎಂದು ಕೇಳಿದರೆ ಥಟ್ಟನೆ ಮೂರು ಕತೆ ಹೇಳುತ್ತಾನೆ. ಆ ಮೂರರಲ್ಲೂ ಅವನಿಗೇ ನಂಬಿಕೆ ಇಲ್ಲ.
ಅವನ ಪ್ರಕಾರ ಅಲ್ಲಿಗೆ ಬಂದ ಬೆಂಗಳೂರಿನ ಚಾರಣಿಗರು ತುಂಬ ಎತ್ತರದ ಪ್ರದೇಶಕ್ಕೆ ಹೋದರು. ಅಲ್ಲಿ ಮೋಡಗಳು ಕೈಗೆ ಸಿಗುವಂತಿದ್ದವು. ಉಸಿರಾಟದ ತೊಂದರೆಯಾಗಿ ಸತ್ತುಹೋದರು. ಅದೇನು ಹಿಮಾಲಯವಾ
ಉಸಿರಾಟದ ತೊಂದರೆ ಆಗುವುದಕ್ಕೆ ಎಂದರೆ ಅವನು ಕತೆ ಬದಲಾಯಿಸುತ್ತಾನೆ. ಹಾಗಿದ್ದರೆ, ಬಹುಶಃ ಉಪವಾಸ ಸತ್ತಿರಬೇಕು. ತಿನ್ನುವುದಕ್ಕೆ ಏನು ಸಿಗದೇ ನರಳಿ ನರಳಿ ಸತ್ತಿರಬಹುದು. ಊಟವಿಲ್ಲದೇ ಆರೇಳು ದಿನ ಉಪವಾಸ ಮಾಡಿದರೆ ಯಾರೂ ಸಾಯುವುದಿಲ್ಲ ಕಣಯ್ಯಾ ಎಂದರೆ ರಾತ್ರಿ ಹೆದರಿ ಎದೆಯೊಡೆದು ಸತ್ತಿರಬಹುದು ಎನ್ನುತ್ತಾನೆ. ಬದುಕಿರುವವರಿಗೆ ಸತ್ಯ ಗೊತ್ತಿಲ್ಲ. ಸತ್ಯ ಗೊತ್ತಿದ್ದವರು ಸತ್ತುಹೋಗಿದ್ದಾರೆ.
ಯಾವುದೋ ಚಿತ್ರಕಾರ ನಿಗೂಢತೆ ಸಾಧಿಸಲು ಬರೆದಿಟ್ಟಂತಿರುವ ಶಿರಿಬಾಗಿಲು ರೇಲ್ವೇ ಸ್ಟೇಷನ್ನಿನಿಂದ ಹಾಗೇ ನಡೆದುಕೊಂಡು ಏಳೆಂಟು ಕಿಲೋಮೀಟರ್ ನಡೆದರೆ ದಟ್ಟ ಕಾಡಿನ ನಡುವೆಯೇ ಎಡಕುಮೇರಿ ಸ್ಟೇಷನ್ನು ಸಿಗುತ್ತದೆ. ಅದಕ್ಕೂ ಮುಂಚೆ ಅರಬೆಟ್ಟ ಎನ್ನುವ ಮತ್ತೊಂದು ಸ್ಟೇಷನ್ನು ಎದುರಾಗುತ್ತದೆ. ಕಾಡು ದಟ್ಟವಾಗಿದೆ ಎನ್ನುವ ಕಾರಣಕ್ಕೆ ಹೆದರುವ ಅಗತ್ಯವೇ ಇಲ್ಲ. ಅಲ್ಲಿ ಯಾವುದೇ ಕಾಡು ಪ್ರಾಣಿಗಳಿಲ್ಲ. ಆನೆಗಳಿವೆ ಅನ್ನುತ್ತಾರೆ, ನೋಡಿದವರಿಲ್ಲ.
ಅಂಥ ಏರುಕಾಡುಗಳಲ್ಲಿ ಪ್ರಾಣಿಗಳಿರುವುದಿಲ್ಲ. ಯಾಕೆಂದರೆ ಅಲ್ಲಿ ಹುಲ್ಲು ಹುಟ್ಟುವುದಿಲ್ಲ. ಹುಲ್ಲು ಹುಟ್ಟದ ಹೊರತು ಜಿಂಕೆಗೆ ಆಹಾರ ಸಿಗುವುದಿಲ್ಲ. ಜಿಂಕೆಗಳಿಲ್ಲದ ಕಾಡಲ್ಲಿ ಹಿಂಸ್ರಪಶುಗಳಿರುವುದಿಲ್ಲ. ಹೀಗಾಗಿ ಕಾಡಿನ ನಡುವೆಯೋ, ಪಕ್ಕದಲ್ಲೋ ದೊಡ್ಡ ಹುಲ್ಲುಗಾವಲಿದ್ದರೆ, ಅಂಥ ಕಾಡು ಹಿಂಸ್ರ ಪ್ರಾಣಿಗಳಿಗೆ ಸರಿಯಾದ ಜಾಗ. ಆದರೆ ದಟ್ಟ ಕಾಡುಗಳಲ್ಲಿ ಹಾವುಗಳಿರುತ್ತವೆ. ಹೀಗೆ ನಡೆದುಹೋಗುತ್ತಿರುವಾಗ ಪಕ್ಕದಲ್ಲೇ ಮಾರುದ್ದದ್ದ ನಾಗರ ಸರಿದುಹೋದರೆ ಬೆಚ್ಚಿಬೀಳಬೇಕಾಗಿಲ್ಲ. ಅದರ ಪಾಡು ಅದಕ್ಕೆ, ನಮ್ಮದು ನಮಗೆ.
ಮತ್ತೊಮ್ಮೆ ಹೇಳುತ್ತಿದ್ದೇನೆ- ಕಾಡು ಸುತ್ತುವುದಕ್ಕೆ ಬೇಸಗೆಯಷ್ಟು ಸುಖವಾದ ಕಾಲ ಮತ್ತೊಂದಿಲ್ಲ. ನಿಚ್ಚಳವಾದ ಬೆಳಕು, ಎಲ್ಲೆಂದರಲ್ಲಿ ಮಲಗಬಹುದಾದ ಸೌಲಭ್ಯ, ಮಂಜಿನ ತಂಟೆಯಿಲ್ಲದ ಮುಂಜಾವಗಳು ನಮಗೋಸ್ಕರ ಕಾದಿರುತ್ತವೆ. ಮಂಜಿದ್ದರೆ ಸೊಗಸು ಅನ್ನುವುದೂ ಸರಿಯೇ, ಆದರೆ ಮಂಜು ದೂರದಿಂದ ನೋಡುವುದಕ್ಕೆ ಚೆಂದ. ರಸ್ತೆಯಲ್ಲಿ ಸಾಗುತ್ತಿದ್ದಾಗ ದೂರ ಬೆಟ್ಟದ ನೆತ್ತಿಯ ಮೇಲೆ, ದೂರದ ಕಾಡುಗಳ ಮೇಲೆ ಹಿಮ ಸುರಿಯುತ್ತಿದ್ದರೆ ಅದು ಸೊಗಸು. ಆದ್ರೆ ರಸ್ತೆಯನ್ನೇ ಆವರಿಸಿದ್ದರೆ ಹಿಂಸೆ.
ಜಿಮ್ ಕಾರ್ಬೆಟ್‌ನ ಟ್ರೀ ಟಾಪ್ಸ್ ಓದುತ್ತಿದ್ದಾಗ ಇದೆಲ್ಲ ನೆನಪಾಯಿತು. ಅವನು ಕತೆ ಹೇಳುತ್ತಾ ಕಾಡನ್ನು ಕಣ್ಮುಂದೆ ತಂದು ನಿಲ್ಲಿಸುತ್ತಾನೆ. ಕಾಡಿನ ಕತೆಗಳನ್ನು ಓದುವ ಮುಂಚೆ ಒಂದಷ್ಟು ಕಾಡಲ್ಲೂ ಅಲೆದಾಡಿದ್ದರೆ ಆ ಓದುವ ಸುಖವೇ ಬೇರೆ.
ಓದುವುದಕ್ಕಿಂತ ನೋಡುವುದೇ ಸೊಗಸು. ಹೊರಡಿ ಮತ್ತೆ, ಕಾಲ್ನಡಿಗೆಗೆ, ಕಾಡಿಗೆ.

Saturday, March 1, 2008

ಕಾಡು ಕರೆಯುತಿದೆ, ನವಿಲು ಕುಣಿಯುತಿದೆ

ಸುಸ್ತಾಗಿದೆ.
ಹೊಸದೇನಾದರೂ ಬೇಕಿದೆ.
ಅದೇ ಬೆಂಗಳೂರು, ಅದೇ ರಸ್ತೆ, ಅದೇ ಓಡಾಟ, ಅದೇ ನಾನು, ಅದೇ ನೀವು, ಅದೇ ಅಕ್ಷರ.
ಸಾಕಾಗಿದೆ.
ಬರೋಬ್ಬರಿ ಹದಿನೈದು ದಿನಗಳ ವನವಾಸ ಮತ್ತು ಅಜ್ಞಾತವಾಸ.
ಮೊಬೈಲಿಗೆ ರಜೆ. ಫೋನಿಗೆ ಸಿಗುವುದಿಲ್ಲ. ಪತ್ರಿಕೆ ಓದುವುದಿಲ್ಲ. ರೇಡಿಯೋ ಕೇಳುವುದಿಲ್ಲ, ಟೀವಿಯ ಸಾಂಗತ್ಯವೇ ಇಲ್ಲ.
ಕಾಡು ಬಾ ಅನ್ನುತ್ತಿದೆ.
ಹೊರಟು ನಿಂತವನಿಗೆ ನೆನಪಾದದ್ದು
ಬಾಲ್ ಡಿಲಾನ್ ಹಾಡು ಮಾತ್ರ:
Once upon a time you dressed so fine
You threw the bums a dime in your prime, didn't you?
People'd call, say, "Beware doll, you're bound to fall"
You thought they were all kiddin' you
You used to laugh about
Everybody that was hangin' out
Now you don't talk so loud
Now you don't seem so proud
About having to be scrounging for your next meal.

How does it feel
How does it feel
To be without a home
Like a complete unknown
Like a rolling stone?

You've gone to the finest school all right, Miss Lonely
But you know you only used to get juiced in it
And nobody has ever taught you how to live on the street
And now you find out you're gonna have to get used to it
You said you'd never compromise
With the mystery tramp, but now you realize
He's not selling any alibis
As you stare into the vacuum of his eyes
And ask him do you want to make a deal?

How does it feel
How does it feel
To be on your own
With no direction home
Like a complete unknown
Like a rolling stone?

You never turned around to see the frowns on the jugglers and the clowns
When they all come down and did tricks for you
You never understood that it ain't no good
You shouldn't let other people get your kicks for you
You used to ride on the chrome horse with your diplomat
Who carried on his shoulder a Siamese cat
Ain't it hard when you discover that
He really wasn't where it's at
After he took from you everything he could steal.

How does it feel
How does it feel
To be on your own
With no direction home
Like a complete unknown
Like a rolling stone?

Princess on the steeple and all the pretty people
They're drinkin', thinkin' that they got it made
Exchanging all kinds of precious gifts and things
But you'd better lift your diamond ring, you'd better pawn it babe
You used to be so amused
At Napoleon in rags and the language that he used
Go to him now, he calls you, you can't refuse
When you got nothing, you got nothing to lose
You're invisible now, you got no secrets to conceal.

How does it feel
How does it feel
To be on your own
With no direction home
Like a complete unknown
Like a rolling stone?

ನಮಸ್ಕಾರ
ಮಾರ್ಚ್ 18, 2008ರ ಮಂಗಳವಾರ ಭೆಟ್ಟಿಯಾಗೋಣ.

-ಜೋಗಿ

Thursday, February 28, 2008

ಚಲಂ: ಐವತ್ತರ ಹೆರಳಿಗೆ ಈ ಕೆಂಡಸಂಪಿಗೆ


ಒಂದು ಸುದೀರ್ಘ ನಿಟ್ಟುಸಿರು!
ಸುಡುಬಿಸಿಲೋ ಬೆಳದಿಂಗಳೋ ಗೊತ್ತಾಗದ ಸ್ಥಿತಿ. ನಿನ್ನೆ ನಾಳೆಗಳು ಒಂದಾಗಿ ನಿಂತ ವರ್ತಮಾನವೆಂಬ ನಿಶ್ಚಲ ಬಿಂದು. ಬದುಕೆಂದರೆ ಗೊತ್ತಿಲ್ಲದ ಗುರಿಯಿಲ್ಲದ ಹಾದಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕುತ್ತಾ ಹೋಗುವ ನಿರಂತರ ಪಯಣವಾ? ಹಾಗೆ ಸಾಗುತ್ತಾ ಸಾಗುತ್ತಾ ಸಿಕ್ಕಿದ್ದನ್ನೆ ನಮಗೆ ಬೇಕಾದದ್ದು ಅಂದುಕೊಂಡು ಬಿಡುತ್ತೇವಾ? ಪ್ರೀತಿಯಲ್ಲೂ ಅಷ್ಟೇನಾ? ನಾವು ಪ್ರೀತಿಸದವರು ಸಿಕ್ಕದೇ ಹೋದಾಗ, ಸಿಕ್ಕವರನ್ನೇ ಪ್ರೀತಿಸುವುದು ರಾಜಿಯಾ? ಅಸಹಾಯಕತೆಯಾ? ಅನಿವಾರ್ಯ ಕರ್ಮವಾ? ವಿಧಿಯಾ? ಅಥವಾ ಬದುಕಿನ ವಿಲಕ್ಷಣ ವರ್ತನೆಗಳಲ್ಲಿ ಅದೂ ಒಂದಾ?
ಉತ್ತರ; ಒಂದು ಸುದೀರ್ಘ ನಿಟ್ಟುಸಿರು.
ಕಡುವ್ಯಾಮೋಹಿಯ ಹಾಗೆ, ಸಂತನ ಹಾಗೆ, ಎಲ್ಲವನ್ನೂ ಮೀರಿಯೂ ಮೀರದವನ ಹಾಗೆ, ನಮ್ಮನ್ನು ಕಂಗೆಡಿಸುವವನ ಹಾಗೆ, ನಾವು ಸಾಧನೆ, ಸುಖ, ತೃಪ್ತಿ, ನೆಮ್ಮದಿ ಅಂದುಕೊಂಡದ್ದೆಲ್ಲ ಕೇವಲ ನಮಗೆ ನಾವೇ ಹೇಳಿಕೊಂಡ ಅಪ್ಯಾಯಮಾನ ಸುಳ್ಳು ಎಂದೆನ್ನಿಸಿ ಕಂಗಾಲಾಗುವ ಹಾಗೆ, ಅದು ಅರಿವಾಗಿಯೂ ಆ ಸುಳ್ಳನ್ನು ಧಿಕ್ಕರಿಸುವ ಧೈರ್ಯವಾಗದ ಹಾಗೆ.....
ಚಲಂ ನಿಜಕ್ಕೂ ಹಾಗಿದ್ದರಾ? ನಮಗೆ ಹಾಗೆ ಕಾಣಿಸುತ್ತಿದ್ದರಾ? ಅವರೊಳಗಿನ ತಲ್ಲಣಗಳೇನಿದ್ದವು? ಅವರು ಏಕಾಂತದಲ್ಲಿ ಮುಖಾಮುಖಿಯಾಗುತ್ತಿದ್ದ ಸತ್ಯದ ಸ್ವರೂಪವೇನು? ಅವರು ಹಾಗಿದ್ದರೆ, ನಾವೇಕೆ ಹೀಗಿದ್ದೇವೆ? ಅದೇ ಭೂಮಿ, ಅದೇ ಬಾನು, ಅದೇ ಗಾಳಿ, ಅದೇ ನೀರು; ಸೃಷ್ಟಿ ಮಾತ್ರ ಬೇರೆ. ಅದು ನಮ್ಮ ಮಿತಿಯಾ? ಅವರ ಗತಿ ಮತ್ತು ಸ್ಥಿತಿಯಾ? ನಾವು ಆ ಬದುಕನ್ನು ಹೇಗೆ ನೋಡಬೇಕು? ಆಮೇಲೆ ನಮ್ಮನ್ನು ಕಾಡುವ ಅತೃಪ್ತಿಯಿಂದ ಹೇಗೆ ಪಾರಾಗಬೇಕು.
ಮತ್ತೊಂದು ಸುದೀರ್ಘ ನಿಟ್ಟುಸಿರು!
-2-
ಒಂದು ಅತಿಗೆ ಹೋಗದ ಹೊರತು ಸತ್ಯದ ಹೊಸಿಲನ್ನು ಎಡವುವುದು ಸಾಧ್ಯವೇ ಇಲ್ಲವೇನೋ? ಸದಾ, ನಿನ್ನ ಇತಿಮಿತಿಯನ್ನು ಅರಿತು ಬದುಕು ಎನ್ನುತ್ತದೆ ನಮ್ಮ ಓದು, ನಾವು ಕಲಿತ ಪಾಠ, ನಮ್ಮ ಸುತ್ತಲಿನ ಸಮಾಜ, ನಮ್ಮ ಧರ್ಮ ಮತ್ತು ನಮ್ಮ ಅಧೈರ್ಯ. ವಿವೇಕದ ಮೂಲಕ ನಾವು ದಾಟಲು ಯತ್ನಿಸುತ್ತೇವೆ ಎನ್ನುವುದು ದೊಡ್ಡ ಭ್ರಮೆ. ಜ್ಞಾನದ ಮೂಲಕ ಮೀರುತ್ತೇವೆ ಎನ್ನುವುದು ಸುಳ್ಳು. ಐಷಾರಾಮದ ಮೂಲಕ ಗೆಲ್ಲುತ್ತೇವೆ ಅನ್ನುವುದು ಲಂಪಟತನ. ಅನುಭವದ ಸೇತುವೆಯ ಮೇಲೆ ನಡೆದು ಆಚೆ ತೀರ ಸೇರುತ್ತೇವೆ ಅನ್ನುವುದು ಮೂಢನಂಬಿಕೆ. ನಾವು ಸದಾ ಸೇತುವೆಯ ನಡುವಲ್ಲೇ ಇರುತ್ತೇವೆ. ಹೊರಟ ನೆಲಕ್ಕೆ ಬಂದು ತಲುಪಲಾರೆವು, ಹೋಗಬೇಕಾದ ಜಾಗಕ್ಕೆ ಹೋಗಿ ಸೇರಲಾರೆವು. ಕೆಳಗೆ ಆರ್ಭಟಿಸುತ್ತಾ ಹರಿಯುವ ನದಿಗೆ ಧುಮುಕಿ ಪಾರಾಗಲಾರೆವು.
ಇಲ್ಲಿದ್ದೇ ಬೇರೆಯಾಗುವ ಆಶೆ, ಪಾರಾಗಿ ಎತ್ತರಕ್ಕೇರುವ ಹಂಬಲದ ನಡುವೆ ತುಯ್ಯುತ್ತಿರುವ ಮನಸ್ಸು ಚಲಂ ಆತ್ಮಕತೆಯ ಮುಂದೆ ಅರೆಕ್ಷಣ ಬೆತ್ತಲಾಗಿ ನಿಲ್ಲುತ್ತದೆ. ಹಾಗೆ ಬೆತ್ತಲೆಗೊಳಿಸುವ ಶಕ್ತಿ ಅಹಂಕಾರವಿಲ್ಲದೆ ಹುಟ್ಟಿದ ಎಲ್ಲ ಕಲೆಗೂ ಇರುತ್ತದೇನೋ? ಆದರೆ ಅಹಂಕಾರದ ಲವಲೇಶವೂ ಇಲ್ಲದೆ, ಆತ್ಮಚರಿತ್ರೆ ಬರೆಯುವುದಾದರೂ ಹೇಗೆ? ನಾನೆಂಬ ಮಮಕಾರವನ್ನು ತೊರೆದು, ತನ್ನ ಬದುಕನ್ನು ನಡುದಾರಿಯಲ್ಲಿ ಸತ್ತುಬಿದ್ದ ಅಪರಿಚಿತ ಶವವನ್ನು ನೋಡುವಷ್ಟು ಪರಕೀಯಭಾವದಿಂದ ನೋಡುವುದು ಸಾಧ್ಯವಾ?
ಚಲಂಗೆ ಅದು ಹೇಗೆ ಸಾಧ್ಯವಾಯಿತು? ಚಲಂ ಅಷ್ಟೊಂದು ತಳ್ಳಂಕಗಳ ಜೊತೆ ಹೇಗೆ ಜೀವಿಸಿದ್ದರು. ಜಗತ್ತಿನ ಜೊತೆ ಅಷ್ಟೊಂದು ಭಿನ್ನಾಭಿಪ್ರಾಯ ಇಟ್ಟುಕೊಂಡು ಹೇಗೆ ಜೀವಿಸಿದರು? ತನ್ನೊಂದಿಗೇ ಸಂಘರ್ಷ ಇಟ್ಟುಕೊಂಡು ಹೇಗೆ ಅಷ್ಟೊಂದು ಕ್ರಿಯಾಶೀಲವಾಗಿದ್ದರು? ಎಲ್ಲರನ್ನೂ ಸುಲಭವಾಗಿ ಸಂತೈಸುವ ಸಂಗತಿಗಳು ಅವರಿಗೇಕೆ ಸಾಂತ್ವನ ಹೇಳಲಿಲ್ಲ.
-3-
ಪ್ರಿಯ ರವಿ,
ಚಲಂ’ ಬಗ್ಗೆ ಕನ್ನಡದ ಓದುಗರಲ್ಲಿ ಆಸಕ್ತಿ ಹುಟ್ಟಿಸಿದವರು ನೀವು. ಈಗ ಸುಡುಸುಡು ಕೆಂಡದಂಥ ಈ ಕೃತಿಯನ್ನು ಕೈಲಿಡುತ್ತಿದ್ದೀರಿ. ಇದನ್ನು ಬರೆಯುವ ಹೊತ್ತಿಗೆ ನಿಮ್ಮಲ್ಲಿ ಮೂಡಿದ ಪ್ರಶ್ನೆಗಳನ್ನೂ ನಾನು ಊಹಿಸಿಕೊಳ್ಳಬಲ್ಲೆ. ನಿಮ್ಮ ಆಕರ್ಷಕ ಶೈಲಿಯನ್ನೂ ಬೇಕಂತಲೇ ಬದಿಗಿಟ್ಟು, ಎಷ್ಟು ವಸ್ತುನಿಷ್ಟವಾಗಿ ಹೇಳುವುದಕ್ಕೆ ಸಾಧ್ಯವೋ ಅಷ್ಟು ನಿರ್ಭಾವುಕತೆಯಿಂದ ನೀವು ಚಲಂ’ ಆತ್ಮಕತೆಯನ್ನು ಹೇಳುತ್ತಿರುವುದೇಕೆ ಅನ್ನುವುದನ್ನು ಓದುಗರೂ ಗ್ರಹಿಸಬಲ್ಲರು.
ಯಾರನ್ನೇ ಆಗಲಿ, ಒಂದೇ ಓದಿಗೆ ಆವರಿಸಿಕೊಳ್ಳುವ ವ್ಯಕ್ತಿತ್ವ ಅದು. ಚಲಂ’ ಭಾವತೀವ್ರತೆ, ವ್ಯಾಮೋಹ, ಸೆಳೆತ, ಶೃಂಗಾರದತ್ತ ಧಾವಿಸುವ ಉತ್ಕಟತೆ ಎಲ್ಲವನ್ನೂ ಮೀರಿದ್ದು ಅನುಭಾವದ ತುಡಿತ. ಇಂಥ ಅನುಭಾವವನ್ನು ತಾತ್ವಿಕತೆಯನ್ನು ಚಲಂ’ ತನ್ನ ಬದುಕನ್ನು ಸಮರ್ಥಿಸಿಕೊಳ್ಳಲು ಊರುಗೋಲು ಮಾಡಿಕೊಳ್ಳುವುದಿಲ್ಲ ಅನ್ನುವುದೇ ಇಲ್ಲಿನ ವೈಶಿಷ್ಟ್ಯ. ಹಾಗಾಗದಂತೆ ನೀವೂ ಕಟ್ಟೆಚ್ಚರ ವಹಿಸಿದ್ದೀರಿ ಅನ್ನುವುದೇ ಸಮಾಧಾನ.
ಎಷ್ಟು ನಿಚ್ಚಳವಾಗಿ ಅನ್ನಿಸಿದ್ದನ್ನು ಹೇಳುತ್ತಾ ಹೋಗುತ್ತಾರೆ ಚಲಂ’. ಅಂಥ ನಿಷ್ಠುರ ಪ್ರಾಮಾಣಿಕತೆಯೇ ಅವರ ಬದುಕನ್ನು ಗೌರವದಿಂದ ನೋಡುವಂತೆ ಮಾಡುತ್ತದೆ ಅಲ್ಲವೇ? ನಲವತ್ತು ದಾಟಿದ, ನನ್ನದಲ್ಲದ ಮತ್ಯಾವ ವಿಚಾರಧಾರೆಯೂ ನನ್ನನ್ನು ಕಸಿದುಕೊಳ್ಳಲಾರದು ಎಂದು ನಂಬಿಕೊಂಡಿರುವ ನನ್ನಂಥವನನ್ನೇ ಒಂದು ಕ್ಷಣ ಹಿಂತಿರುಗಿ ನೋಡುವಂತೆ ಮಾಡುತ್ತದೆ ಚಲಂ’ ಚರಿತೆ.
ಚಲಂ’ಗೆ ತನ್ನ ವ್ಯಕ್ತಿತ್ವದ ಕುರಿತು ಯಾವುದೇ ಪೂರ್ವಗ್ರಹಗಳಿರಲಿಲ್ಲ ಅನ್ನಿಸುತ್ತದೆ. ಹಾಗೇ, ಬದುಕಿನ ಕುರಿತೂ. ತನ್ನ ಸಿದ್ಧಾಂತಗಳನ್ನು ತಾನೇ ವಿರೋಧಿಸುವ, ತನ್ನ ನಿಲುವುಗಳನ್ನು ತಾನೇ ಒಪ್ಪದಿರುವ, ತನ್ನ ಅಸ್ತಿತ್ವವನ್ನು ನಿರಾಕರಿಸುತ್ತಲೇ ಕಾಪಾಡಿಕೊಳ್ಳುವ ಚಲಂ ಅಷ್ಟೊಂದು ಶತ್ರುಗಳನ್ನು ಸೃಷ್ಟಿಸಿಕೊಂಡದ್ದು ಅಚ್ಚರಿಯೇನಲ್ಲ. ಆದರೆ, ಅಷ್ಟೊಂದು ಅಭಿಮಾನಿಗಳನ್ನು, ಓದುಗರನ್ನು ಸಂಪಾದಿಸಿದ್ದು ಮಾತ್ರ ಪವಾಡವೇ. ಅದರ ಅರ್ಥ, ನಮ್ಮೆಲ್ಲರೊಳಗೂ ಇರುವ ಅತೃಪ್ತಿ, ನಿರಾಕರಣೆ, ಅದಮ್ಯವಾದ ಜೀವನೋತ್ಸಾಹ, ಹೊಸಿಲು ದಾಟುವ ಹಂಬಲ. ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ ಅನ್ನುವ ಮಾತಿನ ಅರ್ಥ ಸ್ಪುಟವಾಗುವುದು ಇಂಥ ಬದುಕಿಗೆ ಮುಖಾಮುಖಿ ಆದಾಗಲೇ.
ಚಲಂ ಬದುಕು ಅನುಕರಣೀಯವಲ್ಲ ಎಂದು ನೀವೇ ಹೇಳಿದ್ದೀರಿ. ಚಲಂ ಜೀವನದ ವ್ಯಾಮೋಹ, ಶೃಂಗಾರ ಮತ್ತು ಪ್ರಣಯಕ್ಕೆ ಸಂಬಂಧಿಸಿದಂತೆ ಅದು ನಿಜ. ಆದರೆ, ಚಲಂ ವಿಚಾರಧಾರೆಯಲ್ಲಿ ನಾವು ಕಂಡುಕೊಳ್ಳಬಹುದಾದ ಅನೇಕ ಸ್ವೀಕಾರಾರ್ಹ ಅಂಶಗಳಿವೆ. ನಮ್ಮ ಜೀವನೋತ್ಸಾಹವನ್ನು ಹುರಿಗೊಳಿಸುವ ಒಂದು ಜೀವತಂತುವಿದೆ. ಕಷ್ಟಕಾರ್ಪಣ್ಯಗಳನ್ನು ನಿರುಮ್ಮಳವಾಗಿ ಎದುರಿಸುವುದಕ್ಕೆ ನೆರವಾಗುವ ಸಂದೇಶವಿದೆ.
ನಮ್ಮ ತೋರಿಕೆಯನ್ನು ಆಡಂಬರವನ್ನು ಎಷ್ಟು ಚೆನ್ನಾಗಿ ಗೇಲಿ ಮಾಡುತ್ತಾರೆ ಚಲಂ. ಎಷ್ಟೇ ಬೇಡವೆಂದರೂ ಮರ್ಯಾದೆಯೆಂಬುದು ನಮ್ಮ ಮನೆಯೊಳಗೆ ತೆವಳಿಕೊಂಡು ಬಂದಿತ್ತು. ಚಿಕ್ಕಪುಟ್ಟ ಬೆಳ್ಳಿ ಬಂಗಾರದ ವಸ್ತುಗಳೂ ಮನೆಯಲ್ಲಿ ಕಾಣಿಸತೊಡಗಿದ್ದವು. ಈ ಭಿಕಾರಿಗಳನ್ನು ಮರ್ಯಾದಸ್ಥರನ್ನಾಗಿ ಮಾಡಲು ಅವುಗಳನ್ನೆಲ್ಲ ಕಂಡು ಹಿಡಿದರೇನೋ ಅನ್ನುತ್ತಿದ್ದೆ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿತ್ತು. ಆದರೆ, ಒಳಗಿನಿಂದ ಸಂತೋಷವೆಂಬುದು ಎಗರಿ ಹೋಗಿತ್ತು’.
ಬರೀ ಮರ್ಯಾದಸ್ಥರ ಪ್ರಚಂಚಕ್ಕೆ ಅವಿನಯವನ್ನು ಕಲಿಸುವ ಗುರುವಿನಂತೆಯೋ, ನೀರ ಮೇಲಿನ ಗುಳ್ಳೆಯಂತೆ ಕಾಣುವ ಸಂಸಾರಸುಖದ ಹುಸಿಸಂತೋಷವನ್ನೂ ಒಡೆಯವವರಂತೆಯೂ ಕಾಣಿಸುತ್ತಿದ್ದ ಚಲಂ’ ಆತ್ಮಕಥೆಯನ್ನು ಓದಿಸುವ ಮೂಲಕ ನಮ್ಮ ಮಿತಿಗಳನ್ನು ದಾಟುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್. ನಮ್ಮ ಘನತೆ, ಸಂಪತ್ತು, ಸಂಸಾರ, ಗೆಳೆತನ, ಬಳಗ- ಒದಗಿಸುವ ತೃಪ್ತಿಯೆಂಬ ಭಾವ ಹೇಗೆ ನಮ್ಮನ್ನು ಕುಬ್ಜರನ್ನೂ ನಿಷ್ಕ್ರಿಯರನ್ನೂ ಆಗಿಸುತ್ತಾ ಹೋಗುತ್ತದೆ. ಉಲ್ಲಂಘನೆಯ ಉತ್ಸಾಹವನ್ನು ಹೇಗೆ ಕುಂಠಿತಗೊಳಿಸುತ್ತದೆ. ನಮ್ಮ ರೆಕ್ಕೆಗಳನ್ನು ಈ ಅಲ್ಪತೃಪ್ತಿ ಹೇಗೆ ಅಡಗಿಸುತ್ತದೆ ಅನ್ನುವುದನ್ನು ಇಷ್ಟು ಸಮರ್ಥವಾಗಿ ಹೇಳುವುದು ಸಾಧ್ಯವೇ ಇಲ್ಲ.
ಎಲ್ಲ ಪೂರ್ವಯೋಜಿತ ಬದುಕಿಗೂ ಒಂದು ಮೇರೆಯಿರುತ್ತದೆ. ಆ ಮೇರೆಯೊಳಗೇ ನಾವು ಕೂಪಮಂಡೂಕಗಳಂತೆ ನೆಮ್ಮದಿಯಾಗಿರುತ್ತೇವೆ. ಅದೇ ದಿವ್ಯ ಸ್ಥಿತಿ ಎಂದು ಭಾವಿಸುತ್ತೇವೆ. ಚಲಂರಂಥ ವ್ಯಕ್ತಿತ್ವವೊಂದು ಎದುರಾದಾಗ ನಮ್ಮ ಕುಬ್ಜತೆಯ ಸಣ್ಣತನದ ನಾವು ಪರಮ ಪವಿತ್ರ, ಸುರಕ್ಷಿತ ಮತ್ತು ಸುಖದಾಯಕ ಅಂದುಕೊಂಡದ್ದರ ಅರ್ಥಹೀನತೆ ಹೊಳೆಯುತ್ತದೆ.
ಅಂಥ ಅಸಂಗತ ಬದುಕಿನ ಸತ್ಯಗಳನ್ನು ತನ್ನ ಅಸ್ತಿತ್ವದ ಮೂಲಕ ತಿಳಿಸಿಕೊಟ್ಟ ಚಲಂ’ ಬದುಕಿನ ಕತೆಯನ್ನು ಹೇಳುವ ಮೂಲಕ, ನಮ್ಮನ್ನು ಬಿಡುಗಡೆಗೊಳಿಸಿದ್ದಕ್ಕೆ ನಿಮಗೆ ಅಭಿನಂದನೆ.
ಈ ಮುಕ್ತಿಯ ಭಾವ ನಮ್ಮನ್ನು ಮತ್ತೊಂದು ಸಾಹಸದತ್ತ ಒಯ್ಯುತ್ತದೆ ಎಂದು ನಾನು ನಂಬಿದ್ದೇನೆ.

Tuesday, February 26, 2008

ಅವನು ಮರಳಿ ಬಂದಿದ್ದ..


ನಾನು ಸಾಗರಕ್ಕೆ ಕಾಲಿಟ್ಟದ್ದು ಪಿಯೂಸಿ ಮುಗಿಸಿದ ನಂತರ. ನಮ್ಮೂರಲ್ಲಿ ಡಿಗ್ರಿ ಕಾಲೇಜು ಇಲ್ಲದೇ ಇದ್ದದ್ದರಿಂದ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡೆ. ಸಾಗರದಲ್ಲಿ ರೂಮು ಮಾಡಿಕೊಂಡೋ ಮನೆ ಬಾಡಿಗೆಗೆ ಮಾಡಿಕೊಂಡೋ ಓದುವಷ್ಟು ಅನುಕೂಲ ನನಗಿರಲಿಲ್ಲ. ಹೀಗಾಗಿ ನನ್ನ ದೊಡ್ಡಪ್ಪ ಇಬ್ಬರು ಗೆಳೆಯರ ವಿಳಾಸ ಕೊಟ್ಟು ಅವರಲ್ಲೊಬ್ಬರ ಮನೆಯಲ್ಲಿರುವಂತೆ ಸೂಚಿಸಿದ್ದರು. ಚಂದ್ರಮಾವಿನಕೊಪ್ಪಲಿನ ರಾಜಶೇಖರ ಮೂರ್ತಿಗಳ ಮನೆ ಒಂದು. ಗಿಳಲಗುಂಡಿಯ ಶಂಕರಪ್ಪನವರ ಮನೆ ಇನ್ನೊಂದು. ನಾನು ಇಬ್ಬರ ಮನೆಗಳಿಗೂ ಹೋಗಿ, ಕೊನೆಗೆ ರಾಜಶೇಖರ ಮೂರ್ತಿಗಳ ಮನೆಯನ್ನೇ ಆರಿಸಿಕೊಂಡೆ. ಯಾಕೆಂದರೆ ಆ ಮನೆಯಲ್ಲಿ ರಾಜಶೇಖರ ಮೂರ್ತಿಗಳಾಗಲೀ ಅವರ ಕುಟುಂಬದವರಾಗಲೀ ವಾಸಮಾಡುತ್ತಿರಲಿಲ್ಲ. ಅವರ ಮಗ ಬೆಂಗಳೂರಿನಲ್ಲಿ ಓದುತ್ತಿದ್ದ. ಮೂರ್ತಿಗಳೂ ರಾಜಕೀಯದಲ್ಲಿ ಸಣ್ಣಮಟ್ಟಿಗೆ ಹೆಸರು ಮಾಡಿ ಬೆಂಗಳೂರು ಧಾರವಾಡ ಅಂತ ಓಡಾಡಿಕೊಂಡಿದ್ದರು. ಹೀಗಾಗಿ ಆ ಮನೆಯ ಏಕಾಂತ ನನಗೆ ತುಂಬ ಹಿಡಿಸಿತ್ತು.
ಚಂದ್ರಮಾವಿನಕೊಪ್ಪಲು ಸಣ್ಣ ಹಳ್ಳಿ. ರಾಜಶೇಖರ ಮೂರ್ತಿಗಳ ಮನೆ ಬಿಟ್ಟರೆ ಅಲ್ಲಿದ್ದ ಮನೆಗಳು ಏಳೋ ಎಂಟೋ. ಅವುಗಳ ಪೈಕಿ ಎರಡು ಮನೆಗಳು ಮೂರ್ತಿಗಳ ಮನೆಯ ಹತ್ತಿರವೇ ಇದ್ದವು. ಒಂದು ನಿವೃತ್ತ ಮಿಲಿಟರಿ ಅಧಿಕಾರಿ ರಾಜೇಗೌಡರ ಮನೆ. ಮತ್ತೊಂದು ಲೀಲಾಬಾಯಿ ಕಾಮ್ರ ಮನೆ. ಲೀಲಾಬಾಯಿ ಕಾಮತರಿಗೆ ಮೂವರು ಸುಂದರಿಯರಾದ ಹೆಣ್ಣುಮಕ್ಕಳು. ಅವರ ಪೈಕಿ ದೊಡ್ಡವಳ ಹೆಸರು ಸರೋಜಿನಿ. ಅವಳೂ ಲಾಲ್ ಬಹಾದೂರ್ ಕಾಲೇಜಿನಲ್ಲೇ ಪಿಯೂಸಿ ಓದುತ್ತಿದ್ದಳು. ಹೀಗಾಗಿ ನನ್ನ ಜೊತೆಗೇ ಕಾಲೇಜಿಗೆ ಬರುವುದಕ್ಕೆ ಶುರುಮಾಡಿದಳು. ಅವಳು ಅಂಗಳದಲ್ಲಿ ಅಡ್ಡಾಡುವುದನ್ನು ನೋಡಬಹುದು ಎಂದುಕೊಂಡು ಆ ಮನೆ ಕಾಣುವಂಥ ರೂಮನ್ನೇ ಆರಿಸಿಕೊಂಡು ಕಿಟಕಿ ಹತ್ತಿರವೇ ಟೇಬಲ್ ಚೇರು ಹಾಕಿಕೊಂಡು ಓದುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೆ. ಕಣ್ಣೆತ್ತಿ ನೋಡಿದರೆ ಸರೋಜಿನಿಯ ಮನೆ ಕಾಣಿಸುತ್ತಿತ್ತು. ಕೊಂಚ ಕಣ್ಣು ತಿರುಗಿಸಿದರೆ ರಾಜೇಗೌಡರ ಮನೆಯಂಗಳ ಕಾಣಿಸುತ್ತಿತ್ತು.
ರಾಜೇಗೌಡರಿಗೆ ಎಪ್ಪತ್ತು ದಾಟಿರಬಹುದು. ಆದರೂ ಗಟ್ಟಿಮುಟ್ಟಾಗಿದ್ದರು. ಬೆಳಗ್ಗೆ ಎದ್ದು ತಾವೇ ಬಾವಿಯಿಂದ ನೀರು ಸೇದಿ ಸ್ನಾನ ಮಾಡುತ್ತಿದ್ದರು. ನಂತರ ಮನೆ ಮುಂದಿನ ಪುಟ್ಟ ಕೈತೋಟದಲ್ಲಿ ಸದಾ ಏನಾದರೊಂದು ಕೆಲಸ ಮಾಡುತ್ತಿರುತ್ತಿದ್ದರು. ಅವರ ಮನೆಗೆ ಯಾರಾದರೂ ಬಂದಿದ್ದನ್ನಾಗಲೀ, ಅವರು ನಕ್ಕದ್ದನ್ನಾಗಲೀ ನಾನು ಕಂಡಿರಲಿಲ್ಲ. ತೋಟಕ್ಕೆ ಬರುವ ಮಂಗಗಳನ್ನೂ ರಾಜೇಗೌಡರು ಗುಂಡಿಟ್ಟು ಕೊಲ್ಲುತ್ತಾರೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಊರಲ್ಲಿ ಅವರಿಗೆ ಅಂಥ ಒಳ್ಳೆಯ ಹೆಸರಿರಲಿಲ್ಲ. ಮಹಾ ಜಿಪುಣ ಅನ್ನುವ ಬಿರುದಂತೂ ಅವರಿಗೆ ಅಂಟಿಕೊಂಡಿತ್ತು.
-2-
`ದರಿದ್ರದೋನೆ... ಹೋಗ್ತಿಯೋ ಇಲ್ವೋ.... ಶೂಟ್ ಮಾಡ್ತೀನಿ ನೋಡು... ಈಡಿಯಟ್...
ಹಾಗಂತ ಯಾರೋ ಯಾರನ್ನೋ ಬೈಯುವುದು ಕೇಳಿಸುವ ಹೊತ್ತಿಗೆ ನಾನು ಕಾಲೇಜಿಗೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಈ ಅಬ್ಬರದ ದನಿಕೇಳಿ ಕಿಟಕಿಯಿಂದ ಹೊರಗೆ ನೋಡಿದರೆ ಹೆಗಲಿಗೊಂದು ಕಂಬಳಿಹಾಕಿಕೊಂಡು ದೈನೇಸಿಯಂತೆ ಕಾಣುವ ಸಣಕಲನೊಬ್ಬ ರಾಜೇಗೌಡರ ಮನೆಯಂಗಳದಲ್ಲಿ ನಿಂತಿದ್ದು ಕಾಣಿಸಿತು. ಅವನನ್ನು ನೋಡಿದರೆ ಭಿಕ್ಪದವನಂತೆ ಕಾಣಿಸುತ್ತಿದ್ದ. ರಾಜೇಗೌಡರು ಕೆಂಡಾಮಂಡಲ ಸಿಟ್ಟಾಗಿ ಅವನನ್ನು ಅಟ್ಟಲು ಯತ್ನಿಸುತ್ತಿದ್ದರು. ಅವನು ಕ್ಪೀಣ ದನಿಯಲ್ಲಿ ಏನೋ ಕೇಳುತ್ತಿದ್ದ. ರಾಜೇಗೌಡರು ಬೈದಂತೆಲ್ಲ ದೂರ ಹೋಗಿ ಅವರು ಸುಮ್ಮನಾದಂತೆಲ್ಲ ಮತ್ತೆ ಹತ್ತಿರ ಬರುತ್ತಿದ್ದ.
ನಾನು ನೋಡನೋಡುತ್ತಿದ್ದಂತೆ ರಾಜೇಗೌಡರು ಮತ್ತೊಮ್ಮೆ ಜೋರಾಗಿ ಅಬ್ಬರಿಸಿ ಒಳಗೆ ಹೋದರು. ಅವನೂ ಓಡೋಡುತ್ತಾ ಅವರನ್ನು ಹಿಂಬಾಲಿಸಿಕೊಂಡು ಮನೆಯ ಎರಡು ಮೆಟ್ಟಿಲು ಹತ್ತಿ ಬೇಡತೊಡಗಿದ. ಅಷ್ಟು ಹೊತ್ತಿಗೆ ಒಳಗೆ ಹೋದ ಗೌಡರು ತಮ್ಮಕೋವಿಯೊಂದಿಗೆ ಹೊರಬಂದು ಸುಟ್ಟು ಬಿಡುತ್ತೇನೆ ಎಂಬಂತೆ ಸನ್ನೆ ಮಾಡಿದರು. ಆತ ಅದು ಈ ಮುದುಕನಿಂದ ಆಗದ ಕೆಲಸ ಎಂಬಂತೆ ಮತ್ತೊಂದು ಮೆಟ್ಟಿಲು ಹತ್ತಿದ. ಇದ್ದಕ್ಕಿದ್ದಂತೆ ಕೋವಿಯನ್ನು ಥಟ್ಟನೆ ಹಿಂದೆ ತಿರುಗಿಸಿ ಅವನನ್ನು ರಾಜೇಗೌಡರು ತಳ್ಳಿದರು. ಈ ಅನಿರೀಕ್ಪಿತ ಆಘಾತದಿಂದ ಆತ ಆಯತಪ್ಪಿ ದೊಪ್ಪನೆ ಮೆಟ್ಟಿಲಿನಿಂದ ಕೆಳಗೆ ಉರುಳಿದ. ಅವನ ಕತ್ತು ಕೊನೆಯ ಮೆಟ್ಟಿಲಿಗೆ ಸಿಕ್ಕಿ ತುಂಡಾಗಿರಬೇಕು ಅಂತ ಕಾಣುತ್ತದೆ. ಯಾಕೆಂದರೆ ಆತ ಬಿದ್ದಲ್ಲಿಂದ ಏಳಲಿಲ್ಲ.
ರಾಜೇಗೌಡರ ಮುಖದಲ್ಲಿ ಗಾಬರಿ ಕಾಣಿಸಿತು. ಕೆಳಗಿಳಿದು ಅವನ ಮೈಮುಟ್ಟಿ ಅಲ್ಲಾಡಿಸಿದರು. ನಾಡಿ ಹಿಡಿದು ನೋಡಿದರು. ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದರು. ಯಾರೂ ನೋಡುತ್ತಿಲ್ಲ ಅನ್ನುವುದನ್ನು ಖಾತ್ರಿ ಮಾಡಿಕೊಂಡು ಅವನನ್ನು ಮನೆಯೊಳಗೆ ಎಳೆದುಕೊಂಡು ಹೋದರು. ಅದಾದ ಸ್ವಲ್ಪ ಹೊತ್ತಿನ ನಂತರ ರಾಜೇಗೌಡರ ಜೀಪು ಅತೀವ ವೇಗದಿಂದ ಹೊರಟದ್ದನ್ನೂ ನಾನು ನೋಡಿದೆ. ಬಹುಶಃ ಆ ಭಿಕ್ಪುಕನ ಹೆಣವನ್ನು ಅವರು ಅದರಲ್ಲಿ ಒಯ್ದಿರಬೇಕು ಅಂದುಕೊಂಡೆ.
ಅರೆಗಳಿಗೆಯಲ್ಲಿ ನಡೆದುಹೋದ ಈ ಅನಪೇಕ್ಪಿತ ಕೊಲೆಗೆ ನನ್ನನ್ನು ಬಿಟ್ಟರೆ ಬೇರೆ ಯಾರೂ ಸಾಕ್ಪಿಯಿರಲಿಲ್ಲ. ರಾಜೇಗೌಡರು ಕೊಲೆ ಮಾಡಿದ್ದಾರೆ ಅಂತ ಹೇಳುವ ಧೈರ್ಯವೂ ನನಗೆ ಬರಲಿಲ್ಲ. ಇದಾದ ಮೂರನೆಯ ದಿನ ಚಂದ್ರವಳ್ಳಿಯ ಸಮೀಪ ಭಿಕ್ಪುಕನೊಬ್ಬ ಬಿದ್ದು ಸತ್ತದ್ದು ಪತ್ರಿಕೆಯಲ್ಲಿ ವರದಿಯಾಯಿತು. ಭಿಕ್ಪುಕನ ಸಾವು ಕೊಲೆ ಅನ್ನಿಸಿಕೊಳ್ಳುವುದಾದರೂ ಹೇಗೆ? ಅದಕ್ಕೆ ಹೆಚ್ಚಿನ ಮಹತ್ವವೇನೂ ಸಿಗಲಿಲ್ಲ.
ನಾನು ರಾಜೇಗೌಡರ ಈ ಕೃತ್ಯವನ್ನು ಬಹಿರಂಗಗೊಳಿಸಲಿಲ್ಲ ಯಾಕೆ ಅಂತ ಅನೇಕ ಸಾರಿ ಯೋಚಿಸಿದ್ದೇನೆ. ಅದಕ್ಕೆ ನನ್ನ ಭಯವೊಂದೇ ಕಾರಣವಾಗಿರಲಿಕ್ಕಿಲ್ಲ. ಎಪ್ಪತ್ತರ ಮುದುಕ ಪೊಲೀಸು, ಕೋರ್ಟು ಅಂತ ಅಲೆಯುವುದನ್ನು ನೋಡುವುದು ನನಗೆ ಬೇಕಿರಲಿಲ್ಲ. ಅಷ್ಟಕ್ಕೂ ಅದೇನೂ ಉದ್ದೇಶಪೂರ್ವಕ ಕೊಲೆ ಅಲ್ಲವಲ್ಲ?
ಆದರೆ ಆಮೇಲೆ ರಾಜೇಗೌಡರನ್ನು ನೋಡಿದಾಗೆಲ್ಲ ನನ್ನನ್ನು ಒಂದು ವಿಚಿತ್ರ ಭಾವನೆ ಕಾಡುತ್ತಿತ್ತು. ಒಂದು ವೇಳೆ ಅವರು ಕೊಲೆ ಮಾಡಿದ್ದನ್ನು ನಾನು ನೋಡಿದ್ದೇನೆ ಅಂತ ಗೊತ್ತಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತು? ನನ್ನನ್ನೂ ಅವರು ಕೊಂದುಬಿಡುತ್ತಿದ್ದರಾ? ಹೀಗೆಲ್ಲ ಯೋಚನೆಗಳು ಬರಲಾರಂಭಿಸಿ ನಾನು ಆ ಕಡೆ ನೋಡುವುದನ್ನೇ ಬಿಟ್ಟೆ.
ಅದೇ ತಿಂಗಳು ಇನ್ನೊಂದು ಅನಾಹುತವೂ ಸಂಭವಿಸಿತು. ನಾನು ಬಹುವಾಗಿ ಇಷ್ಟಪಡುತ್ತಿದ್ದ ಸರೋಜಿನಿಯ ಮದುವೆಯೂ ನಡೆದುಹೋಯಿತು. ಶೃಂಗೇರಿಯ ಕಡೆಯ ಸಂಬಂಧವೊಂದು ಕುದುರಿದ್ದರಿಂದ ಲೀಲಾಬಾಯಿ ಅವಳ ಕಾಲೇಜು ಬಿಡಿಸಿ ಮದುವೆ ಮಾಡಿಕೊಟ್ಟರು. ಅದರಿಂದ ಸರೋಜಿನಿಗೇನೂ ಅಂಥ ದುಃಖವಾದಂತೆ ಕಾಣಿಸಲಿಲ್ಲ. ಆಕೆ ಮಣಗಟ್ಟಲೆ ಬಂಗಾರ ಹೇರಿಕೊಂಡು ತನ್ನ ಸಂಭ್ರಮಕ್ಕೆ ತಾನೇ ಬೆರಗಾಗುತ್ತಾ ಓಪನ್ ಜೀಪಿನಲ್ಲಿ ಹೊರಟದ್ದನ್ನು ನಾನು ಕಣ್ಣಂಚು ಒದ್ದೆ ಮಾಡಿಕೊಂಡು ನೋಡಿದೆ.
-3-
ಅದಾಗಿ ಒಂದು ವರುಷ ಕಳೆಯಿತು. ನಾನು ಬಿ.ಎ. ಫೈನಲ್ಲಿನಲ್ಲಿದ್ದೆ. ಟಿ. ಪಿ. ಅಶೋಕರಂಥ ಮೇಷ್ಟರಿದ್ದುದರಿಂದ ಕಾಲೇಜು ಬೋರು ಅನ್ನಿಸುತ್ತಿರಲಿಲ್ಲ. ಪಾಠದ ಜೊತೆ ಸಿನಿಮಾದ ಕುರಿತೂ ಜಗತ್ತಿನ ಒಳ್ಳೊಳ್ಳೆಯ ಕೃತಿಗಳ ಕುರಿತೂ ಅವರು ಹೇಳುತ್ತಿದ್ದರು.
ಆಗಷ್ಟೇ ಮಳೆಗಾಲ ಶುರುವಾಗಿತ್ತು. ನಾನು ಒಂದು ಸಂಜೆ ಭೀಕರ ಮಳೆಗೆ ಒದ್ದೆಯಾಗಿ ಆಗಷ್ಟೇ ಮನೆಗೆ ನಡೆದು ಬರುತ್ತಿದ್ದೆ. ದಾರಿಯಲ್ಲಿ ನನ್ನ ಮೇಲೆ ಸಾಕಷ್ಟು ನೀರು ಹಾರಿಸಿಕೊಂಡು ಒಂದು ಜೀಪು ಹಾದುಹೋಯಿತು. ನನ್ನಿಂದ ಸ್ವಲ್ಪ ಮುಂದೆ ಹೋಗಿ ಇದ್ದಕ್ಕಿದ್ದಂತೆ ನಿಂತಿತು. ಜೀಪಿನ ಒಳಗೆ ನೀರು ಬೀಳದಂತೆ ಹಾಕಿದ್ದ ಟಾರ್ಪಾಲಿನ್ ಪರದೆಯನ್ನು ಸರಿಸಿ ಯಾರೋ ನನ್ನನ್ನು ಒಳಗೆ ಕರೆದರು. ಒದ್ದೆಮುದ್ದೆಯಾಗಿ ಜೀಪಿನೊಳಗೆ ಕುಳಿತವನಿಗೆ ಕಂಡದ್ದು ಸರೋಜಿನಿ. ಆಕೆ ಹೆರಿಗೆಗೆ ತವರಿಗೆ ಬಂದಿದ್ದಳು. ವರುಷಾರು ತಿಂಗಳೊಳಗೆ ಆದ ಬದಲಾವಣೆಗೆ ಬೆರಗಾಗುತ್ತಾ ನಾನು ಅವಳ ಮುಖ ನೋಡಿದೆ. ತನ್ನ ಜೊತೆಗೇ ಕಾಲೇಜಿಗೆ ಹೋಗುತ್ತಿದ್ದ ಏನೂ ತಿಳಿಯದ ಹುಡುಗನೆದುರು ಬಸುರಿಯಾಗಿ ಕುಳಿತ ಬಗ್ಗೆ ಆಕೆಗೆ ಯಾವ ಮುಜುಗರವೂ ಇದ್ದಂತೆ ನನಗೆ ಅನ್ನಿಸಲಿಲ್ಲ. ಇದ್ದಕ್ಕಿದ್ದಂತೆ ದೊಡ್ಡ ಹೆಂಗಸಾಗಿದ್ದೇನೆ ಎಂಬ ಧಾಟಿಯಲ್ಲಿ ಸರೋಜಿನಿ ನನ್ನನ್ನು ಒಂದೆರಡು ಪ್ರಶ್ನೆಗಳನ್ನು ಕೇಳಿದಳು. ನಾನು ಉತ್ತರಿಸಿದೆ.
ಇದಾದ ಒಂದು ತಿಂಗಳ ನಂತರ ಅದೇ ಕಿಟಕಿಯ ಹತ್ತಿರ ಕೂತು ಮಾರ್ಗರೆಟ್ ಅಟ್ ವುಡ್ ಳ ಮೇಲಿನ ವಿಮರ್ಶೆಗಳನ್ನು ಓದುತ್ತಿದ್ದೆ. ಕಣ್ಣು ಅಚಾನಕ ಸರೋಜಿನಿಯ ಮನೆಯ ಕಡೆ ಹರಿಯಿತು. ಗಾಬರಿಬಿದ್ದು ನೋಡಿದೆ. ಸರೋಜಿನಿಯ ಮನೆಯ ಅಂಗಳದಲ್ಲಿ ಅದೇ ಭಿಕ್ಪುಕ ನಿಂತಿದ್ದ. ನಾನು ಖಾತ್ರಿ ಪಡಿಸಿಕೊಳ್ಳಲು ಮತ್ತೊಮ್ಮೆ ನೋಡಿದೆ. ಅದೇ ಹೆಗಲ ಮೇಲೆ ಕಂಬಳಿ ಹೊದ್ದ ದೈನೇಸಿ ಮುಖದ ಭಿಕ್ಪುಕ. ನಾನು ನೋಡನೋಡುತ್ತಿದ್ದಂತೆ ಆತ ನೇರವಾಗಿ ಸರೋಜಿನಿಯ ಮನೆಯೊಳಗೆ ನುಗ್ಗಿದ.
`ಈತ ಸತ್ತಿಲ್ಲ ಹಾಗಿದ್ದರೆ. ಬಹುಶಃ ರಾಜೇಗೌಡನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿರಬೇಕು. ಹಾಗಿದ್ದರೆ ಸರೋಜಿನಿ ಮನೆಯ ಒಳಗೆ ಯಾಕೆ ಹೋದ...' ಎಂದು ಯೋಚಿಸುತ್ತಲೇ ನಾನು ಮನೆಯಿಂದ ಹೊರಗೋಡಿ ಬಂದೆ. ನೇರವಾಗಿ ಸರೋಜಿನಿಯ ಮನೆಯತ್ತ ಹೆಜ್ಜೆ ಹಾಕಿದೆ. ಆ ಭಿಕ್ಪುಕ ಏನು ಮಾಡುತ್ತಾನೆ ಅಂತ ನೋಡುವ ಕುತೂಹಲ ನನ್ನದಾಗಿತ್ತು.
ನಾನು ಸರೋಜಿನಿಯ ಮನೆಯೊಳಗೆ ಕಾಲಿಡುವ ಹೊತ್ತಿಗೆ ಅಲ್ಲಿ ಗಿಜಿಗಿಜಿ ಜನಜಂಗುಳಿ. ಒಂದು ಕ್ಪಣದ ಹಿಂದಷ್ಟೇ ಸರೋಜಿನಿ ಗಂಡಮಗುವಿಗೆ ಜನ್ಮವಿತ್ತಿದ್ದಳು. ಆ ಸಂತೋಷದಲ್ಲಿ ಅವರೆಲ್ಲ ಇದ್ದರು. ನಾನೂ ಕೂಡ ಆ ಸಂಭ್ರಮಕ್ಕೆ ಬಂದವನೆಂದುಕೊಂಡು ನನ್ನ ಬಾಯಿಗೂ ಸಕ್ಕರೆ ಹಾಕಿದರು. ಭಿಕ್ಪುಕ ಅಲ್ಲೆಲ್ಲೂ ಕಾಣಿಸಲಿಲ್ಲ. ಒಂದಿಬ್ಬರ ಬಳಿ ವಿಚಾರಿಸಿದ್ದಕ್ಕೆ ಯಾವ ಭಿಕ್ಪುಕನೂ ಬರಲಿಲ್ಲ. ನಾವೆಲ್ಲ ಆಗಿಂದಲೇ ಇಲ್ಲಿದ್ದೇವಲ್ಲ ಅಂದರು. ನಾನು ನೋಡಿದ್ದೇ ಸುಳ್ಳಿರಬಹುದೇನೋ ಅಂದುಕೊಳ್ಳುತ್ತಾ ವಾಪಸ್ಸು ಮನೆಗೆ ಬಂದೆ. ಆವತ್ತಿಡೀ ಓದುವುದಕ್ಕೆ ಸಾಧ್ಯವಾಗಲೇ ಇಲ್ಲ.
-4-
ಹಾಗಿದ್ದರೆ ಭಿಕ್ಪುಕ ಬಂದದ್ದು ಸುಳ್ಳಾ?ಅವನು ಬಂದ ಕ್ಪಣದಲ್ಲೇ ಸರೋಜಿನಿಗೆ ಮಗುವಾಗಿದೆ ಅಂದರೆ ಅವನೇ ಆ ಮಗುವಿನ ರೂಪದಲ್ಲಿ ಬಂದಿದ್ದಾನಾ? ಇತ್ಯಾದಿ ಯೋಚನೆಗಳು ನನಗೆ ಆಗಾಗ ಬರುತ್ತಿದ್ದವು. ಆದರೆ ಅವನ್ನೆಲ್ಲ ನಂಬಲು ನಾನು ಸಿದ್ಧನಿರಲಿಲ್ಲ.
ಇದಾಗಿ ಮತ್ತೆರಡು ವರುಷಗಳು ಸಂದವು. ನಾನು ಶಿವವೊಗ್ಗೆಯ ಆ ಮನೆಯಲ್ಲೇ ಇದ್ದುಕೊಂಡು ಎಂ.ಎ. ಓದುತ್ತಿದ್ದೆ. ಸರೋಜಿನಿ ಅದೇ ಸುಮಾರಿಗೆ ತನ್ನ ಮೂರು ವರುಷದ ಮಗನ ಜೊತೆ ಬಂದಿದ್ದಳು.
ಮೂರು ವರುಷಕ್ಕೆ ಆ ಮಗು ಸಾಕಷ್ಟು ತುಂಟಾಟಿಕೆ ಮಾಡುತ್ತಿತ್ತು. ಸರೋಜಿನಿ ಮಗುವನ್ನು ಮಹಡಿಯ ಮೇಲೆ ಕೂರಿಸಿ ತಾನು ಬೆಳಗಿನ ಬಿಸಿಲಿಗೆ ತಲೆಯೊಣಗಿಸಿಕೊಳ್ಳುತ್ತಾ ನಿಂತಿದ್ದಳು. ಮಗು ಮಹಡಿಯ ಒಣಗಲೆಂದು ಪೇರಿಸಿಟ್ಟಿದ್ದ ಡಬ್ಬಗಳನ್ನು ಕೋಲಿನಿಂದ ಬಡಿಯುತ್ತಾ ಸದ್ದು ಮಾಡುತ್ತಿತ್ತು. ಬಹುಶಃ ಆ ಸದ್ದು ಪಕ್ಕದ ಮನೆಯ ರಾಜೇಗೌಡರಿಗೆ ಕಿರಿಕಿರಿ ಉಂಟು ಮಾಡಿರಬೇಕು. ಅವರು ಸಿಟ್ಟಿನಿಂದ ಧಡ್ ಎಂದು ಬಾಗಿಲು ತೆರೆದು ಹೊರಬರುತ್ತಿರುವುದು ಕಾಣಿಸಿತು. ಇನ್ನೇನು ಆ ಮಗುವಿಗೆ ಹೊಡೆದೇಬಿಡುತ್ತಾರೇನೋ ಎಂಬಂತಿತ್ತು ಅವರ ಮುಖಭಾವ.
ಅವರು ಹೊರಗೆ ಬರುತ್ತಿದ್ದಂತೆ ಮಗು ಮತ್ತೊಮ್ಮೆ ಡಬ್ಬಾಗಳನ್ನು ಕೋಲಿನಿಂದ ಬಡಿಯಿತು. ಮಹಡಿಯ ಬದಿಯಲ್ಲಿಟ್ಟಿದ್ದ ಡಬ್ಬಗಳು ಹೊಡೆತಕ್ಕೆ ಜಾರಿ ಮತ್ತಷ್ಟು ಬದಿಗೆ ಸರಿದಿದ್ದವು. ಮಗುವಿನ ಆ ಹೊಡೆತಕ್ಕೆ ಅಷ್ಟೂ ಡಬ್ಬಗಳೂ ಭೀಕರ ಸದ್ದು ಮಾಡುತ್ತಾ ಜಾರಿ ಸಿಮೆಂಟಿನ ಅಂಗಳಕ್ಕೆ ಬಿದ್ದವು. ಆ ಸದ್ದಿಗೆ ನಾನೇ ಬೆಚ್ಚಿಬಿದ್ದೆ. ಅದೇ ಹೊತ್ತಿಗೆ ಮನೆಯಿಂದ ಹೊರಗೆ ಬಂದ ರಾಜೇಗೌಡ ಈ ಸದ್ದಿಗೆ ಬೆದರಿ ತಡಬಡಾಯಿಸಿ ಮೂರನೆ ಮೆಟ್ಟಿಲಿನಿಂದ ಜಾರಿದ್ದು ನನ್ನ ಕಣ್ಣಿಗೆ ಕಾಣಿಸಿತು. ಅರೆಕ್ಪಣದಲ್ಲೇ ವರುಷಗಳ ಹಿಂದೆ ಭಿಕ್ಪುಕ ಬಿದ್ದಿದ್ದ ಭಂಗಿಯಲ್ಲೇ ರಾಜೇಗೌಡನೂ ಬಿದ್ದಿದ್ದ. ಕೊನೆಯ ಮೆಟ್ಟಿಲಿಗೆ ಕತ್ತು ಹೊಡೆಸಿಕೊಂಡಿದ್ದ.
ಆತ ಸತ್ತು ಹೋಗಿದ್ದ.
-5-
ಮಾರನೆಯ ದಿನ ರಾಜೇಗೌಡನ ಅಂತ್ಯಕ್ರಿಯೆ ನಡೆಯಿತು. ಮುದುಕ ಕಾಲುಜಾರಿ ಬಿದ್ದು ಸತ್ತುಹೋದ ಎಂದು ಜನ ಮಾತಾಡಿಕೊಂಡರು. ಅದಾದ ಹನ್ನೊಂದನೇ ದಿನಕ್ಕೆ ರಾಜೇಗೌಡನ ಉತ್ತರಕ್ರಿಯೆಯೂ ನಡೆದುಹೋಯಿತು. ಬಂದಿದ್ದ ಜನ ರಾಜೇಗೌಡನ ಅಂಗಳದಲ್ಲಿ ನಿಂತು ಬೀಡಿ ಸೇದುತ್ತಾ ಮಾತಾಡಿಕೊಳ್ಳುತ್ತಿದ್ದರು. ನಾನು ಎಂದಿನಂತೆ ಕಿಟಕಿಯಿಂದ ನೋಡುತ್ತಾ ಕೂತಿದ್ದೆ.
ಇದ್ದಕ್ಕಿದ್ದಂತೆ ಆ ಭಿಕ್ಪುಕ ಮತ್ತೆ ಕಾಣಿಸಿಕೊಂಡ. ಈ ಸಾರಿ ಸರೋಜಿನಿಯ ಮನೆಯ ಬಾಗಿಲು ತೆಗೆದು ಹೊರಗೆ ಬಂದು ನಾನು ನೋಡನೋಡುತ್ತಿರುವಂತೆಯೇ ನಡೆದು ದೂರ ದೂರವಾಗುತ್ತಾ ಮರೆಯಾದ. ನಾನು ದಿಗ್ಭ್ರಾಂತನಾಗಿ ನೋಡುತ್ತಾ ಕುಳಿತಿದ್ದೆ.
ಸಂಜೆಯ ಹೊತ್ತಿಗೆ ಸರೋಜಿನಿಯ ಮಗು ಎಲ್ಲೂ ಕಾಣಿಸುತ್ತಿಲ್ಲ ಎಂಬ ಸುದ್ದಿಯ ಜೊತೆಗೇ ಸರೋಜಿನಿಯ ಮುಗಿಲು ಮುಟ್ಟುವ ಆಕ್ರಂದನ ನನ್ನ ಕಿವಿಗೆ ಬಿತ್ತು. ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದರು. ರಾಜೇಗೌಡರ ಉತ್ತರಕ್ರಿಯೆಯೆ ಬಂದವರ್ಯಾರೋ ಮಗುವನ್ನು ಕದ್ದು ಕೊಂಡು ಹೋಗಿದ್ದಾರೆ ಎಂದೂ ಕೆಲವರು ಊಹಿಸಿ ಮಾತಾಡತೊಡಗಿದರು.
ನಾನು ಏನೂ ತೋಚದೆ ಸರೋಜಿನಿಯ ಮನೆಯ ಹತ್ತಿರ ಹೋದೆ. `ಮಗು ಇವತ್ತಲ್ಲ ನಾಳೆ ಸಿಗುತ್ತೆ. ಎಲ್ಲಿಗೆ ಹೋಗುತ್ತೆ' ಅಂತ ಸರೋಜಿನಿಗೆ ಯಾರೋ ಸಮಾಧಾನ ಹೇಳುತ್ತಿದ್ದರು.
ಮಗು ಸಿಗೋಲ್ಲ ಯಾಕೆಂದರೆ....
ವಿವರಿಸುವ ಶಕ್ತಿ ನನಗಿರಲಿಲ್ಲ.

Friday, February 22, 2008

ಹೂಬಿಟ್ಟ ಹುಣಿಸೇಮರದ ಇಹಪರ ಧ್ಯಾನ

ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ, ಕತ್ತಲಾದರೆ ಅದರ ನಿಗೂಢವೇ ಬೇರೆ. ಹುಣಿಸೇಮರದ ಕೊಂಬೆಗಳು ಅದೆಷ್ಟು ಗಟ್ಟಿ ಅಂದರೆ ಕೊಂಬೆಯ ತುದಿಗೆ ಹೋದರೂ ಅದು ಬಾಗುತ್ತದೆಯೇ ಹೊರತು ಮುರಿಯುವುದಿಲ್ಲ. ಹಳ್ಳಿಯ ಶಾಲೆಯ ಮೇಷ್ಟ್ರುಗಳಿಗೆ ತುಂಟ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಹುಣಿಸೆಯ ಬರಲೇ ಪಾಶುಪತಾಸ್ತ್ರ.
ಹುಣಿಸೆಯ ಮರ ಎಲ್ಲಾ ಹಳ್ಳಿಗಳಲ್ಲೂ ಸಾಮಾನ್ಯ. ಹುಣಿಸೇಹಣ್ಣಿನ ಬೆಲೆ ಎಷ್ಟೇ ಆದರೂ ಹುಣಿಸೇಮರವನ್ನು ನಗದು ಬೆಳೆಯಾಗಿ ಬೆಳೆಸಿದವರನ್ನು ನಾನಂತೂ ನೋಡಿಲ್ಲ. ಹುಣಿಸೇ ತೋಟ ಇಟ್ಟುಕೊಂಡಿದ್ದೇನೆ ಅಂತ .ಯಾವೂರ ರೈತನೂ ಹೇಳಿಕೊಂಡಂತಿಲ್ಲ. ಹುಣಿಸೇಹಣ್ಣಿಗೆ ಬೆಂಬಲ ಬೆಲೆ ಘೋಷಿಸಿ ಅಂತ ಗದ್ದಲವಾದದ್ದೂ ಗೊತ್ತಿಲ್ಲ. ಆದರೆ ಚಿತ್ರದುರ್ಗದ ಕಡೆಯ ಗೆಳೆಯರು ಅವರೂರಲ್ಲಿ ಬಂಜರು ಭೂಮಿ ಕೊಡು ಹುಣಿಸೇಮರ ಬಾಕಿ, ಹದಿನೈದೋ ಇಪ್ಪಕ್ಕೋ ವರುಷ, ಫಲಬರುವ ತನಕ ಕಾಯುತ್ತಾರಂತೆ.
ಹುಣಿಸೇಮರದ ಲಾಭನಷ್ಟದ ಕತೆ ಹೇಗಾದರೂ ಇರಲಿ. ನಿಮಗೆಂದಾದರೂ ಎಲೆಯುದುರಿಸಿಕೊಂಡು ಬೆತ್ತಲೆ ನಿಂತ ಹುಣಿಸೇಮರ ನೋಡಿದ ನೆನಪಿದೆಯಾ? ನಾನಂತೂ ಎಲೆಯುದುರಿದ ಬೋಳು ಹುಣಿಸೇಮರ ನೋಡಿಲ್ಲ. ಹಾಗೇ ಯೌವನದಿಂದ ನಳನಳಿಸುವ ಹುಣಿಸೇಮರವನ್ನು ಕೂಡ. ಸಾಮಾನ್ಯವಾಗಿ ಎಲ್ಲಾ ಹುಣಿಸೇಮರವೂ ನೂರೋ ನೂರೈವತ್ತೋ ವರುಷವಾದಂತೆ ಋಷಿಗಳ ಹಾಗೆ ಕಾಣಿಸುತ್ತದೆ.
ಹುಣಿಸೇಮರ ಹುಟ್ಟುಹಾಕುವ ಕತೆಗಳಿಗಂತೂ ಲೆಕ್ಕವಿಲ್ಲ. ಅದು ದೆವ್ವಗಳ ಅಡಗುದಾಣ. ಹುಣಿಸೇಮರದಡಿಯಲ್ಲಿ ಮಲಗಿ ಮರಣಹೊಂದಿದವರ ಕತೆಗಳಂತೂ ಪ್ರತಿ ಹಳ್ಳಿಯಲ್ಲೂ ಇವೆ. ಹಳೆಯ ಚಂದಮಾಮಗಳಲ್ಲಂತೂ ಹುಣಿಸೇಮರದ ಜೊತೆ ದೆವ್ವ ಫ್ರೀ. ಬ್ರಹ್ಮರಾಕ್ಷಸನ ಪಾಲಿಗೂ ಹುಣಿಸೇಮರವೇ ಅಂತಃಪುರ. ಆದರೆ, ಹುಣಿಸೇಮರಕ್ಕೆ ನೇಣುಹಾಕಿಕೊಳ್ಳುವವರು ಕಡಿಮೆ. ಅದ್ಯಾಕೋ ಸತ್ತವರ ಪಾಲಿಗೆ ಪ್ರಿಯವಾದಷ್ಟು ಹುಣಿಸೇಮರ ಸಾಯುವವರ ಪಾಲಿಗೆ ಆಪ್ತವಾಗಲಿಲ್ಲ.
ಹಾಗೇ ಕವಿಗಳಿಗೂ ಕಾವ್ಯಕ್ಕೂ ಹುಣಿಸೇಹಣ್ಣು ರುಚಿಸಿದಂತಿಲ್ಲ. ಮರ ಮುಪ್ಪಾದರೆ ಹುಳಿ ಮುಪ್ಪೇ ಎಂಬ ಗಾದೆಗಷ್ಟೇ ಹುಣಿಸೇಮರ ಸೀಮಿತ. ಹುಣಿಸೇಹಣ್ಣು ಕೂಡ ವ್ಯರ್ಥಪ್ರಯತ್ನವನ್ನೂ ಸೂಚಿಸುವ ನುಡಿಗಟ್ಟನ್ನು ಕೊಟ್ಟಿತು. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಅಂತ ಹಿರಿಯರು ಈಗಲೂ ಹೇಳುವುದುಂಟು. ಇನ್ನೊಬ್ಬನ ಅಭಿವೃದ್ಧಿಯನ್ನು ಕಂಡು ಕರುಬುವವನನ್ನು ಹೊಟ್ಟೆಯಲ್ಲಿ ಹುಣಿಸೇಹಣ್ಣು ಕಿವುಚಿದಂತಾಯಿತು ಅನ್ನುತ್ತಾರೆ. ಅಷ್ಟು ಬಿಟ್ಟರೆ, ಬಸುರಿಯ ಬಯಕೆಗೆ ಮಾವಿನಕಾಯೇ ಬೇಕು. ಅದರ ಬದಲು ಅವರೇಕೆ ಹುಣಿಸೇಕಾಯಿ ಬಯಸರು?
ಕವಿಗಳು ಇಷ್ಟೊಂದು ಚೆಂದದ ಮರವನ್ನು ಬಣ್ಣಿಸದೇ ಬಿಟ್ಟರೇಕೆ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ಮೊನ್ನೆ ಬೇಂದ್ರೆ ಬರೆದ ಹೂತದ ಹುಣಸೀ’ ಕವಿತೆಯನ್ನು ನೆನಪಿಸಿದರು ಕಿ. ರಂ ನಾಗರಾಜ್. ಕವಿ ಜೀವದ ಬೇಸರ ತಣಿಸೋದಕ್ಕೆ ಬೇರೇನು ಬೇಕು, ಒಂದು ಹೂಬಿಟ್ಟ ಹುಣಿಸೇಮರ ಸಾಕು ಎಂದು ಕೊನೆಯಾಗುವ ಕವಿತೆ ಹುಣಿಸೇಮರದ ಸೊಬಗನ್ನು ವರ್ಣಿಸಿದೆ. ಆ ಕವಿತೆಗಿರುವ ಇನ್ನಿತರ ಅರ್ಥಾಂತರಗಳು ಸದ್ಯಕ್ಕೆ ಬೇಡ.
********
ಕಾವ್ಯ ವಿಮರ್ಶಕರು ಬೇರೆ ಥರ ಬರೆಯುವುದನ್ನು ಕಲಿಯಬೇಕಿದೆ. ಕವಿತೆಯನ್ನು ನಾವು ವಿಶ್ಲೇಷಿಸುವ ಕ್ರಮದಲ್ಲೇ ತಪ್ಪಿದೆ. ಸಂಸ್ಕೃತಿ ವಿಮರ್ಶೆಯ ಹೆಸರಲ್ಲಿ ತಮ್ಮ ತಮ್ಮ ವಾದಗಳನ್ನು ಮಂಡಿಸುವುದಕ್ಕೆ ಕವಿತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕವಿತೆಯನ್ನು ವಿಮರ್ಶೆ ಮಾಡುವುದು ಹಾಗಲ್ಲ. ಕವಿತೆಯ ಕಡೆ ಓದುಗ ಹೊರಳುವಂತೆ ಮಾಡುವುದು ವಿಮರ್ಶೆಯ ಉದ್ದೇಶವಾಗಬೇಕು. ಕಾವ್ಯ ವ್ಯಾಖ್ಯಾನದ ಹೆಸರಿನಲ್ಲಿ ಅಧಿಕಪ್ರಸಂಗತನವೇ ಜಾಸ್ತಿಯಾಗುತ್ತಿದೆ. ಕಾವ್ಯವನ್ನು ಹರಿಕಥೆಯಂತೆ ಬಳಸುವವರು ಹೆಚ್ಚಾಗಿದ್ದಾರೆ ಎಂದು ಮೊನ್ನೆ ಮೊನ್ನೆ ಯು ಆರ್ ಅನಂತಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಮರ್ಶೆಯನ್ನು ಓದಿ ಕಾವ್ಯವನ್ನು ಓದುವವರ ಸಂಖ್ಯೆ ಎಷ್ಟಿದೆಯೋ ಗೊತ್ತಿಲ್ಲ. ಹಾಗೇ, ಕವಿತೆಯನ್ನು ಒಂದು ಗಣಿತದ ಸೂತ್ರದಂತೆ ಅಧ್ಯಯನ ಮಾಡುವುದೋ, ಒಗಟೆಂದು ಭಾವಿಸಿ ಬಿಡಿಸಲೆತ್ನಿಸುವುದೋ ಅದೊಂದು ಅರ್ಥವಾಗದ ಕಗ್ಗ ಎಂದು ಬೇರೆಯವರ ಹತ್ತಿರ ಇದಕ್ಕೆ ಅರ್ಥವೇನು ಎಂದು ಕೇಳುವುದೋ ಕವಿತೆಯನ್ನು ಮೆಚ್ಚುವವರು ಮಾಡುವ ಕೆಲಸ ಅಲ್ಲ. ಅದೇ ಕಾರ್ಯಕ್ರಮದಲ್ಲಿ ಕಿ ರಂ ನಾಗರಾಜ್ ಹೇಳಿದ್ದು ನಿಜಕ್ಕೂ ಅರ್ಥವತ್ತಾಗಿತ್ತು. ಈ ಕವಿತೆ ಅರ್ಥವಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಉತ್ತರಿಸುತ್ತಾರಂತೆ; ಅರ್ಥವಾದಷ್ಟೇ ಕವಿತೆ. ಅದು ಪೂರ್ತಿ ಅರ್ಥವಾಗಬೇಕು ಎನ್ನುವ ಆತುರ ಯಾಕೆ? ಯಾವತ್ತೋ ಒಂದು ದಿನ ಅರ್ಥವಾಗುತ್ತೆ ಬಿಡಿ. ಅರ್ಥವಾಗದಿದ್ದರೂ ಸರಿಯೇ. ಅರ್ಥವಾಗಲೇಬೇಕು ಅನ್ನುವ ಹಠ ಯಾಕೆ?
ಅದೇ ಸರಿ. ಅರ್ಥವಾದಷ್ಟೇ ಅರ್ಥ. ಕವಿತೆ ಇನ್ನೊಬ್ಬರ ಹಾಗೆ ಅಂದುಕೊಂಡುಬಿಡೋಣ. ಜೊತೆಗಿದ್ದವರೂ ಅಷ್ಟೇ, ಎಷ್ಟು ಅರ್ಥವಾಗುತ್ತಾರೋ ಅಷ್ಟೇ.
ಉದಾಹರಣೆಗೆ ಬೈರನ್ನಿನ ವೆನ್ ವಿ ಟು ಪಾರ್ಟೆಡ್ ಕವಿತೆಯನ್ನೇ ನೋಡಿ:
WHEN we two parted
In silence and tears,
Half broken-hearted,
To sever for years,

ಹೀಗೆ ಶುರುವಾಗುವ ಕವಿತೆಯ ಆರಂಭದಲ್ಲೇ ವಿದಾಯದ ಸೂಚನೆಯೂ ಇದೆ. ಅದು ಎಂಥಾ ವಿದಾಯ. ಆ ಹುಡುಗಿ ಮೋಸ ಮಾಡಿ ಹೋದಳಾ, ಸತ್ತೇ ಹೋದಳಾ ಅನ್ನುವುದು ಅವರವರ ಭಾವಕ್ಕೆ ತಕ್ಕಂತೆ. ಇದನ್ನು ಓದಿದ ಅಸಂಖ್ಯಾತ ಓದುಗರ ಪ್ರತಿಕ್ರಿಯೆ ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ.
In secret we met:
In silence I grieve
That thy heart could forget,
Thy spirit deceive.
If I should meet thee
After long years,
How should I greet thee?
With silence and tears.
ರಹಸ್ಯವಾಗಿ ಸಂಧಿಸಿದೆವು, ಮೌನದಲ್ಲಿ ಸ್ಪಂದಿಸಿದೆವು. ಮರೆಯಬಹುದು ನಿನ್ನ ಮನ, ನಲುಗಬಹುದು ನಿನ್ನ
ಚೇತನ. ನಿನ್ನನ್ನು ಮತ್ತೆಂದೋ ಎಷ್ಟೋ ವರ್ಷಗಳ ನಂತರ ಕಂಡಾಗ ಹೇಗೆ ಎದುರುಗೊಳ್ಳಲಿ ಹೇಳು? ಕಂಬನಿ ಮತ್ತು ಮೌನದೊಂದಿಗೆ?
ಆ ರಹಸ್ಯ ಪ್ರಣಯವನ್ನು ಮೌನದುಂಬಿದ ಕಂಬನಿಯೊಂದಿಗೆ, ಕಂಬನಿದುಂಬಿದ ಮೌನದೊಂದಿಗೆ ಎದುರಾಗುವ ತನ್ನ ಅವಸ್ಥೆಯನ್ನು ಹೇಳಿಕೊಳ್ಳುತ್ತಿದ್ದಾನೆ ಕವಿ. ಅದೇಕೆ ರಹಸ್ಯ ಪ್ರೇಮ? ಅವಳೂ ಅವನನ್ನು ಪ್ರೀತಿಸಿದ್ದಳೇ? ಅದು ಅವನ ಪ್ರೀತಿ ಮಾತ್ರವೇ? ಅವಳು ಅವನನ್ನು ವಂಚಿಸಿದಳೇ? ಅಥವಾ ಅಕಾಲ ಮರಣಕ್ಕೆ ತುತ್ತಾದಳೇ? ಹೇಳಿಕೊಳ್ಳಲಾಗದ ಪ್ರೀತಿ ಒಳಗೆ ಬಚ್ಚಿಟ್ಟುಕೊಂಡೇ ಬಳಲಿತೇ?
ಈ ಪ್ರಶ್ನೆಗಳಿಗೆಲ್ಲ ಅವರವರೇ ಉತ್ತರ ಕಂಡುಕೊಳ್ಳಬೇಕು. ಅದು ಅವರವರ ಸತ್ಯ. ಆ ಕ್ಷಣದ ಸತ್ಯ. ಬೇರೊಬ್ಬರು ಎಷ್ಟೇ ಸಮರ್ಥವಾಗಿ ಅದನ್ನು ಸಮರ್ಥಿಸಿಕೊಂಡರೂ, ನಮಗೆಷ್ಟು ಅರ್ಥವಾಗುತ್ತದೋ ಅಷ್ಟೇ ಅರ್ಥ.
ಅದನ್ನೇ ಇನ್ನೊಂದು ಕವಿತೆಯ ಮೂಲಕ ನೋಡೋಣ:

ನಡೆದ ದಾರಿಯ ತಿರುಗಿ ನೋಡಬಾರದು ಏಕೆ
ನೋಡಿದರೆ ಆ ಹೂವೆ ನಲುಗಬಹುದು
ಮುಂದೆ ನಡೆವಾಗಲೂ ಮಾತಾಡದಿರಬೇಕೆ?
ಹೌದು. ತುಂಬಿದ ಮನವ ತುಳುಕಲಿ ಬಿಡು

ಸೋತಮಾತಿನ ನೂರು ಹಸೆಗೆ ದೀಪವನಿರಿಸು
ಮಾತಿನಷ್ಟೇ ಮೌನ ಸಫಲವೆನಿಸು
ಕಳೆದಿರುಳ ಆಚೆತುದಿಯಿಂದ ನಗೆಯನು ತರಿಸು
ಮೊದಲ ಕನಸಿಗೆ ಮತ್ತೆ ಹೇಳಿಕಳಿಸು.

ಮೊದಲ ಸಾಲನ್ನು ಕವಿ ಬರೆಯುವ ಹೊತ್ತಿಗೆ ಅವನ ಮನಸ್ಸಲ್ಲಿ ಏನಿತ್ತು ಅನ್ನುವುದು ಯಾರಿಗೂ ಗೊತ್ತಿರುವುದಕ್ಕೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಯಾವ ಕವಿಯ ಮೂಲಭಾವವೂ ನಮಗೆ ಅರ್ಥವಾಗುವುದಿಲ್ಲ. ಕವಿತೆ ಬರೆಯುವ ಹೊತ್ತಿಗೆ ಉತ್ಕಟ ಭಾವಾಭಿವ್ಯಕ್ತಿಯಲ್ಲಿ ಹುಟ್ಟುತ್ತದೆ ಅನ್ನುವುದಾದರೆ, ಅದನ್ನು ಓದುವ ಹೊತ್ತಿಗಿನ ನಮ್ಮ ಭಾವಪರಿಸರ ಅದೇ ಆಗಿರಬೇಕು ಅಂತೇನಿಲ್ಲ. ಒಂದು ಮನಸ್ಥಿತಿಯಲ್ಲಿ ಹರಳುಗಟ್ಟಿದ ಚಿಂತನೆಯನ್ನು ಮತ್ತೊಂದು ಮನಸ್ಥಿತಿಯಲ್ಲಿ ನಮ್ಮೊಳಗೆ ಆವಾಹಿಸಿಕೊಳ್ಳುತ್ತೇವೆ ಅನ್ನುವುದೇ ವಿಶೇಷ. ನಾವಿರುವ ಸ್ಥಿತಿಯಲ್ಲಿ ನಾವು ಕಾವ್ಯವನ್ನು ಸವಿಯುತ್ತೇವಾ ಅಥವಾ ಕವಿಯ ಮನಸ್ಥಿತಿಗೆ ನಾವು ತಲುಪುತ್ತೇವಾ ಅನ್ನುವುದು ಮತ್ತೊಂದು ಪ್ರಶ್ನೆ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿವುದು ಎಂದು ಕುವೆಂಪು ಹಾಡಿದ್ದನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ ಹೊಳೆಯುವುದೇ ಬೇರೆ. ಕಲಿಯುಗವನ್ನು ದ್ವಾಪರವಾಗಿಸುವ ಶಕ್ತಿ ಕವಿತೆಯಲ್ಲಿ ಇರಬೇಕಾಗುತ್ತದೆ. ಅದರ ಬದಲು ನಮ್ಮ ಕಲಿಯುಗವನ್ನು ಬೆನ್ನಿಗೆ ಕಟ್ಟಿಕೊಂಡು ನಾವು ಕವಿಯ ದ್ವಾಪರದೊಳಗೆ ಪ್ರವೇಶಿಸಲು ಯತ್ನಿಸಿದರೆ?
ಮಾತಿನಷ್ಟೇ ಮೌನ ಸಫಲವೆನಿಸು ಎನ್ನುವ ಕವಿ ಮತ್ತೊಂದು ಮಾತನ್ನೂ ಹೇಳುತ್ತಾನೆ. ಕಳೆದಿರುಳ ಆಚೆ ತುದಿಯಿಂದ ನಗೆಯನು ತರಿಸು. ಅಂದರೆ ಹಿಂದಿನ ದಿನ ಅವಳ ಮುಖದಲ್ಲಿ ನಗುವಿತ್ತು. ಅದನ್ನು ವಾಪಸ್ಸು ತರಿಸು ಅನ್ನುತ್ತಿದ್ದಾನೆ ಕವಿ. ಹಾಗೇ, ಮೊದಲ ದಿನ ಕಂಡ ಆಪ್ಯಯಾಮಾನ ಕನಸಿನ ಬಗ್ಗೆ ಅವಳು ಅವನಿಗೆಂದೋ
ಹೇಳಿಕೊಂಡಿರಬೇಕು. ಆ ಮೊದಲ ಕನಸಿಗೆ ಮತ್ತೆ ಹೇಳಿಕಳಿಸು ಅನ್ನುವ ವಿನಂತಿಯೂ ಅವನ ದನಿಯಲ್ಲಿದೆ.ಓದುಗರಾದ ನಾವೂ ಹಾಗೇ, ಕವಿ ಬರೆದಿರುಳ ಆಚೆತುದಿಯಿಂದ ಕವಿಭಾವವನ್ನು ತರಿಸುವ ಹಾಗಿದ್ದರೆ?