Friday, February 22, 2008

ಹೂಬಿಟ್ಟ ಹುಣಿಸೇಮರದ ಇಹಪರ ಧ್ಯಾನ

ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ, ಕತ್ತಲಾದರೆ ಅದರ ನಿಗೂಢವೇ ಬೇರೆ. ಹುಣಿಸೇಮರದ ಕೊಂಬೆಗಳು ಅದೆಷ್ಟು ಗಟ್ಟಿ ಅಂದರೆ ಕೊಂಬೆಯ ತುದಿಗೆ ಹೋದರೂ ಅದು ಬಾಗುತ್ತದೆಯೇ ಹೊರತು ಮುರಿಯುವುದಿಲ್ಲ. ಹಳ್ಳಿಯ ಶಾಲೆಯ ಮೇಷ್ಟ್ರುಗಳಿಗೆ ತುಂಟ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಹುಣಿಸೆಯ ಬರಲೇ ಪಾಶುಪತಾಸ್ತ್ರ.
ಹುಣಿಸೆಯ ಮರ ಎಲ್ಲಾ ಹಳ್ಳಿಗಳಲ್ಲೂ ಸಾಮಾನ್ಯ. ಹುಣಿಸೇಹಣ್ಣಿನ ಬೆಲೆ ಎಷ್ಟೇ ಆದರೂ ಹುಣಿಸೇಮರವನ್ನು ನಗದು ಬೆಳೆಯಾಗಿ ಬೆಳೆಸಿದವರನ್ನು ನಾನಂತೂ ನೋಡಿಲ್ಲ. ಹುಣಿಸೇ ತೋಟ ಇಟ್ಟುಕೊಂಡಿದ್ದೇನೆ ಅಂತ .ಯಾವೂರ ರೈತನೂ ಹೇಳಿಕೊಂಡಂತಿಲ್ಲ. ಹುಣಿಸೇಹಣ್ಣಿಗೆ ಬೆಂಬಲ ಬೆಲೆ ಘೋಷಿಸಿ ಅಂತ ಗದ್ದಲವಾದದ್ದೂ ಗೊತ್ತಿಲ್ಲ. ಆದರೆ ಚಿತ್ರದುರ್ಗದ ಕಡೆಯ ಗೆಳೆಯರು ಅವರೂರಲ್ಲಿ ಬಂಜರು ಭೂಮಿ ಕೊಡು ಹುಣಿಸೇಮರ ಬಾಕಿ, ಹದಿನೈದೋ ಇಪ್ಪಕ್ಕೋ ವರುಷ, ಫಲಬರುವ ತನಕ ಕಾಯುತ್ತಾರಂತೆ.
ಹುಣಿಸೇಮರದ ಲಾಭನಷ್ಟದ ಕತೆ ಹೇಗಾದರೂ ಇರಲಿ. ನಿಮಗೆಂದಾದರೂ ಎಲೆಯುದುರಿಸಿಕೊಂಡು ಬೆತ್ತಲೆ ನಿಂತ ಹುಣಿಸೇಮರ ನೋಡಿದ ನೆನಪಿದೆಯಾ? ನಾನಂತೂ ಎಲೆಯುದುರಿದ ಬೋಳು ಹುಣಿಸೇಮರ ನೋಡಿಲ್ಲ. ಹಾಗೇ ಯೌವನದಿಂದ ನಳನಳಿಸುವ ಹುಣಿಸೇಮರವನ್ನು ಕೂಡ. ಸಾಮಾನ್ಯವಾಗಿ ಎಲ್ಲಾ ಹುಣಿಸೇಮರವೂ ನೂರೋ ನೂರೈವತ್ತೋ ವರುಷವಾದಂತೆ ಋಷಿಗಳ ಹಾಗೆ ಕಾಣಿಸುತ್ತದೆ.
ಹುಣಿಸೇಮರ ಹುಟ್ಟುಹಾಕುವ ಕತೆಗಳಿಗಂತೂ ಲೆಕ್ಕವಿಲ್ಲ. ಅದು ದೆವ್ವಗಳ ಅಡಗುದಾಣ. ಹುಣಿಸೇಮರದಡಿಯಲ್ಲಿ ಮಲಗಿ ಮರಣಹೊಂದಿದವರ ಕತೆಗಳಂತೂ ಪ್ರತಿ ಹಳ್ಳಿಯಲ್ಲೂ ಇವೆ. ಹಳೆಯ ಚಂದಮಾಮಗಳಲ್ಲಂತೂ ಹುಣಿಸೇಮರದ ಜೊತೆ ದೆವ್ವ ಫ್ರೀ. ಬ್ರಹ್ಮರಾಕ್ಷಸನ ಪಾಲಿಗೂ ಹುಣಿಸೇಮರವೇ ಅಂತಃಪುರ. ಆದರೆ, ಹುಣಿಸೇಮರಕ್ಕೆ ನೇಣುಹಾಕಿಕೊಳ್ಳುವವರು ಕಡಿಮೆ. ಅದ್ಯಾಕೋ ಸತ್ತವರ ಪಾಲಿಗೆ ಪ್ರಿಯವಾದಷ್ಟು ಹುಣಿಸೇಮರ ಸಾಯುವವರ ಪಾಲಿಗೆ ಆಪ್ತವಾಗಲಿಲ್ಲ.
ಹಾಗೇ ಕವಿಗಳಿಗೂ ಕಾವ್ಯಕ್ಕೂ ಹುಣಿಸೇಹಣ್ಣು ರುಚಿಸಿದಂತಿಲ್ಲ. ಮರ ಮುಪ್ಪಾದರೆ ಹುಳಿ ಮುಪ್ಪೇ ಎಂಬ ಗಾದೆಗಷ್ಟೇ ಹುಣಿಸೇಮರ ಸೀಮಿತ. ಹುಣಿಸೇಹಣ್ಣು ಕೂಡ ವ್ಯರ್ಥಪ್ರಯತ್ನವನ್ನೂ ಸೂಚಿಸುವ ನುಡಿಗಟ್ಟನ್ನು ಕೊಟ್ಟಿತು. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಅಂತ ಹಿರಿಯರು ಈಗಲೂ ಹೇಳುವುದುಂಟು. ಇನ್ನೊಬ್ಬನ ಅಭಿವೃದ್ಧಿಯನ್ನು ಕಂಡು ಕರುಬುವವನನ್ನು ಹೊಟ್ಟೆಯಲ್ಲಿ ಹುಣಿಸೇಹಣ್ಣು ಕಿವುಚಿದಂತಾಯಿತು ಅನ್ನುತ್ತಾರೆ. ಅಷ್ಟು ಬಿಟ್ಟರೆ, ಬಸುರಿಯ ಬಯಕೆಗೆ ಮಾವಿನಕಾಯೇ ಬೇಕು. ಅದರ ಬದಲು ಅವರೇಕೆ ಹುಣಿಸೇಕಾಯಿ ಬಯಸರು?
ಕವಿಗಳು ಇಷ್ಟೊಂದು ಚೆಂದದ ಮರವನ್ನು ಬಣ್ಣಿಸದೇ ಬಿಟ್ಟರೇಕೆ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ಮೊನ್ನೆ ಬೇಂದ್ರೆ ಬರೆದ ಹೂತದ ಹುಣಸೀ’ ಕವಿತೆಯನ್ನು ನೆನಪಿಸಿದರು ಕಿ. ರಂ ನಾಗರಾಜ್. ಕವಿ ಜೀವದ ಬೇಸರ ತಣಿಸೋದಕ್ಕೆ ಬೇರೇನು ಬೇಕು, ಒಂದು ಹೂಬಿಟ್ಟ ಹುಣಿಸೇಮರ ಸಾಕು ಎಂದು ಕೊನೆಯಾಗುವ ಕವಿತೆ ಹುಣಿಸೇಮರದ ಸೊಬಗನ್ನು ವರ್ಣಿಸಿದೆ. ಆ ಕವಿತೆಗಿರುವ ಇನ್ನಿತರ ಅರ್ಥಾಂತರಗಳು ಸದ್ಯಕ್ಕೆ ಬೇಡ.
********
ಕಾವ್ಯ ವಿಮರ್ಶಕರು ಬೇರೆ ಥರ ಬರೆಯುವುದನ್ನು ಕಲಿಯಬೇಕಿದೆ. ಕವಿತೆಯನ್ನು ನಾವು ವಿಶ್ಲೇಷಿಸುವ ಕ್ರಮದಲ್ಲೇ ತಪ್ಪಿದೆ. ಸಂಸ್ಕೃತಿ ವಿಮರ್ಶೆಯ ಹೆಸರಲ್ಲಿ ತಮ್ಮ ತಮ್ಮ ವಾದಗಳನ್ನು ಮಂಡಿಸುವುದಕ್ಕೆ ಕವಿತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಕವಿತೆಯನ್ನು ವಿಮರ್ಶೆ ಮಾಡುವುದು ಹಾಗಲ್ಲ. ಕವಿತೆಯ ಕಡೆ ಓದುಗ ಹೊರಳುವಂತೆ ಮಾಡುವುದು ವಿಮರ್ಶೆಯ ಉದ್ದೇಶವಾಗಬೇಕು. ಕಾವ್ಯ ವ್ಯಾಖ್ಯಾನದ ಹೆಸರಿನಲ್ಲಿ ಅಧಿಕಪ್ರಸಂಗತನವೇ ಜಾಸ್ತಿಯಾಗುತ್ತಿದೆ. ಕಾವ್ಯವನ್ನು ಹರಿಕಥೆಯಂತೆ ಬಳಸುವವರು ಹೆಚ್ಚಾಗಿದ್ದಾರೆ ಎಂದು ಮೊನ್ನೆ ಮೊನ್ನೆ ಯು ಆರ್ ಅನಂತಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಮರ್ಶೆಯನ್ನು ಓದಿ ಕಾವ್ಯವನ್ನು ಓದುವವರ ಸಂಖ್ಯೆ ಎಷ್ಟಿದೆಯೋ ಗೊತ್ತಿಲ್ಲ. ಹಾಗೇ, ಕವಿತೆಯನ್ನು ಒಂದು ಗಣಿತದ ಸೂತ್ರದಂತೆ ಅಧ್ಯಯನ ಮಾಡುವುದೋ, ಒಗಟೆಂದು ಭಾವಿಸಿ ಬಿಡಿಸಲೆತ್ನಿಸುವುದೋ ಅದೊಂದು ಅರ್ಥವಾಗದ ಕಗ್ಗ ಎಂದು ಬೇರೆಯವರ ಹತ್ತಿರ ಇದಕ್ಕೆ ಅರ್ಥವೇನು ಎಂದು ಕೇಳುವುದೋ ಕವಿತೆಯನ್ನು ಮೆಚ್ಚುವವರು ಮಾಡುವ ಕೆಲಸ ಅಲ್ಲ. ಅದೇ ಕಾರ್ಯಕ್ರಮದಲ್ಲಿ ಕಿ ರಂ ನಾಗರಾಜ್ ಹೇಳಿದ್ದು ನಿಜಕ್ಕೂ ಅರ್ಥವತ್ತಾಗಿತ್ತು. ಈ ಕವಿತೆ ಅರ್ಥವಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಉತ್ತರಿಸುತ್ತಾರಂತೆ; ಅರ್ಥವಾದಷ್ಟೇ ಕವಿತೆ. ಅದು ಪೂರ್ತಿ ಅರ್ಥವಾಗಬೇಕು ಎನ್ನುವ ಆತುರ ಯಾಕೆ? ಯಾವತ್ತೋ ಒಂದು ದಿನ ಅರ್ಥವಾಗುತ್ತೆ ಬಿಡಿ. ಅರ್ಥವಾಗದಿದ್ದರೂ ಸರಿಯೇ. ಅರ್ಥವಾಗಲೇಬೇಕು ಅನ್ನುವ ಹಠ ಯಾಕೆ?
ಅದೇ ಸರಿ. ಅರ್ಥವಾದಷ್ಟೇ ಅರ್ಥ. ಕವಿತೆ ಇನ್ನೊಬ್ಬರ ಹಾಗೆ ಅಂದುಕೊಂಡುಬಿಡೋಣ. ಜೊತೆಗಿದ್ದವರೂ ಅಷ್ಟೇ, ಎಷ್ಟು ಅರ್ಥವಾಗುತ್ತಾರೋ ಅಷ್ಟೇ.
ಉದಾಹರಣೆಗೆ ಬೈರನ್ನಿನ ವೆನ್ ವಿ ಟು ಪಾರ್ಟೆಡ್ ಕವಿತೆಯನ್ನೇ ನೋಡಿ:
WHEN we two parted
In silence and tears,
Half broken-hearted,
To sever for years,

ಹೀಗೆ ಶುರುವಾಗುವ ಕವಿತೆಯ ಆರಂಭದಲ್ಲೇ ವಿದಾಯದ ಸೂಚನೆಯೂ ಇದೆ. ಅದು ಎಂಥಾ ವಿದಾಯ. ಆ ಹುಡುಗಿ ಮೋಸ ಮಾಡಿ ಹೋದಳಾ, ಸತ್ತೇ ಹೋದಳಾ ಅನ್ನುವುದು ಅವರವರ ಭಾವಕ್ಕೆ ತಕ್ಕಂತೆ. ಇದನ್ನು ಓದಿದ ಅಸಂಖ್ಯಾತ ಓದುಗರ ಪ್ರತಿಕ್ರಿಯೆ ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ.
In secret we met:
In silence I grieve
That thy heart could forget,
Thy spirit deceive.
If I should meet thee
After long years,
How should I greet thee?
With silence and tears.
ರಹಸ್ಯವಾಗಿ ಸಂಧಿಸಿದೆವು, ಮೌನದಲ್ಲಿ ಸ್ಪಂದಿಸಿದೆವು. ಮರೆಯಬಹುದು ನಿನ್ನ ಮನ, ನಲುಗಬಹುದು ನಿನ್ನ
ಚೇತನ. ನಿನ್ನನ್ನು ಮತ್ತೆಂದೋ ಎಷ್ಟೋ ವರ್ಷಗಳ ನಂತರ ಕಂಡಾಗ ಹೇಗೆ ಎದುರುಗೊಳ್ಳಲಿ ಹೇಳು? ಕಂಬನಿ ಮತ್ತು ಮೌನದೊಂದಿಗೆ?
ಆ ರಹಸ್ಯ ಪ್ರಣಯವನ್ನು ಮೌನದುಂಬಿದ ಕಂಬನಿಯೊಂದಿಗೆ, ಕಂಬನಿದುಂಬಿದ ಮೌನದೊಂದಿಗೆ ಎದುರಾಗುವ ತನ್ನ ಅವಸ್ಥೆಯನ್ನು ಹೇಳಿಕೊಳ್ಳುತ್ತಿದ್ದಾನೆ ಕವಿ. ಅದೇಕೆ ರಹಸ್ಯ ಪ್ರೇಮ? ಅವಳೂ ಅವನನ್ನು ಪ್ರೀತಿಸಿದ್ದಳೇ? ಅದು ಅವನ ಪ್ರೀತಿ ಮಾತ್ರವೇ? ಅವಳು ಅವನನ್ನು ವಂಚಿಸಿದಳೇ? ಅಥವಾ ಅಕಾಲ ಮರಣಕ್ಕೆ ತುತ್ತಾದಳೇ? ಹೇಳಿಕೊಳ್ಳಲಾಗದ ಪ್ರೀತಿ ಒಳಗೆ ಬಚ್ಚಿಟ್ಟುಕೊಂಡೇ ಬಳಲಿತೇ?
ಈ ಪ್ರಶ್ನೆಗಳಿಗೆಲ್ಲ ಅವರವರೇ ಉತ್ತರ ಕಂಡುಕೊಳ್ಳಬೇಕು. ಅದು ಅವರವರ ಸತ್ಯ. ಆ ಕ್ಷಣದ ಸತ್ಯ. ಬೇರೊಬ್ಬರು ಎಷ್ಟೇ ಸಮರ್ಥವಾಗಿ ಅದನ್ನು ಸಮರ್ಥಿಸಿಕೊಂಡರೂ, ನಮಗೆಷ್ಟು ಅರ್ಥವಾಗುತ್ತದೋ ಅಷ್ಟೇ ಅರ್ಥ.
ಅದನ್ನೇ ಇನ್ನೊಂದು ಕವಿತೆಯ ಮೂಲಕ ನೋಡೋಣ:

ನಡೆದ ದಾರಿಯ ತಿರುಗಿ ನೋಡಬಾರದು ಏಕೆ
ನೋಡಿದರೆ ಆ ಹೂವೆ ನಲುಗಬಹುದು
ಮುಂದೆ ನಡೆವಾಗಲೂ ಮಾತಾಡದಿರಬೇಕೆ?
ಹೌದು. ತುಂಬಿದ ಮನವ ತುಳುಕಲಿ ಬಿಡು

ಸೋತಮಾತಿನ ನೂರು ಹಸೆಗೆ ದೀಪವನಿರಿಸು
ಮಾತಿನಷ್ಟೇ ಮೌನ ಸಫಲವೆನಿಸು
ಕಳೆದಿರುಳ ಆಚೆತುದಿಯಿಂದ ನಗೆಯನು ತರಿಸು
ಮೊದಲ ಕನಸಿಗೆ ಮತ್ತೆ ಹೇಳಿಕಳಿಸು.

ಮೊದಲ ಸಾಲನ್ನು ಕವಿ ಬರೆಯುವ ಹೊತ್ತಿಗೆ ಅವನ ಮನಸ್ಸಲ್ಲಿ ಏನಿತ್ತು ಅನ್ನುವುದು ಯಾರಿಗೂ ಗೊತ್ತಿರುವುದಕ್ಕೆ ಸಾಧ್ಯವಿಲ್ಲ. ಹಾಗೆ ನೋಡಿದರೆ ಯಾವ ಕವಿಯ ಮೂಲಭಾವವೂ ನಮಗೆ ಅರ್ಥವಾಗುವುದಿಲ್ಲ. ಕವಿತೆ ಬರೆಯುವ ಹೊತ್ತಿಗೆ ಉತ್ಕಟ ಭಾವಾಭಿವ್ಯಕ್ತಿಯಲ್ಲಿ ಹುಟ್ಟುತ್ತದೆ ಅನ್ನುವುದಾದರೆ, ಅದನ್ನು ಓದುವ ಹೊತ್ತಿಗಿನ ನಮ್ಮ ಭಾವಪರಿಸರ ಅದೇ ಆಗಿರಬೇಕು ಅಂತೇನಿಲ್ಲ. ಒಂದು ಮನಸ್ಥಿತಿಯಲ್ಲಿ ಹರಳುಗಟ್ಟಿದ ಚಿಂತನೆಯನ್ನು ಮತ್ತೊಂದು ಮನಸ್ಥಿತಿಯಲ್ಲಿ ನಮ್ಮೊಳಗೆ ಆವಾಹಿಸಿಕೊಳ್ಳುತ್ತೇವೆ ಅನ್ನುವುದೇ ವಿಶೇಷ. ನಾವಿರುವ ಸ್ಥಿತಿಯಲ್ಲಿ ನಾವು ಕಾವ್ಯವನ್ನು ಸವಿಯುತ್ತೇವಾ ಅಥವಾ ಕವಿಯ ಮನಸ್ಥಿತಿಗೆ ನಾವು ತಲುಪುತ್ತೇವಾ ಅನ್ನುವುದು ಮತ್ತೊಂದು ಪ್ರಶ್ನೆ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿವುದು ಎಂದು ಕುವೆಂಪು ಹಾಡಿದ್ದನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ ಹೊಳೆಯುವುದೇ ಬೇರೆ. ಕಲಿಯುಗವನ್ನು ದ್ವಾಪರವಾಗಿಸುವ ಶಕ್ತಿ ಕವಿತೆಯಲ್ಲಿ ಇರಬೇಕಾಗುತ್ತದೆ. ಅದರ ಬದಲು ನಮ್ಮ ಕಲಿಯುಗವನ್ನು ಬೆನ್ನಿಗೆ ಕಟ್ಟಿಕೊಂಡು ನಾವು ಕವಿಯ ದ್ವಾಪರದೊಳಗೆ ಪ್ರವೇಶಿಸಲು ಯತ್ನಿಸಿದರೆ?
ಮಾತಿನಷ್ಟೇ ಮೌನ ಸಫಲವೆನಿಸು ಎನ್ನುವ ಕವಿ ಮತ್ತೊಂದು ಮಾತನ್ನೂ ಹೇಳುತ್ತಾನೆ. ಕಳೆದಿರುಳ ಆಚೆ ತುದಿಯಿಂದ ನಗೆಯನು ತರಿಸು. ಅಂದರೆ ಹಿಂದಿನ ದಿನ ಅವಳ ಮುಖದಲ್ಲಿ ನಗುವಿತ್ತು. ಅದನ್ನು ವಾಪಸ್ಸು ತರಿಸು ಅನ್ನುತ್ತಿದ್ದಾನೆ ಕವಿ. ಹಾಗೇ, ಮೊದಲ ದಿನ ಕಂಡ ಆಪ್ಯಯಾಮಾನ ಕನಸಿನ ಬಗ್ಗೆ ಅವಳು ಅವನಿಗೆಂದೋ
ಹೇಳಿಕೊಂಡಿರಬೇಕು. ಆ ಮೊದಲ ಕನಸಿಗೆ ಮತ್ತೆ ಹೇಳಿಕಳಿಸು ಅನ್ನುವ ವಿನಂತಿಯೂ ಅವನ ದನಿಯಲ್ಲಿದೆ.ಓದುಗರಾದ ನಾವೂ ಹಾಗೇ, ಕವಿ ಬರೆದಿರುಳ ಆಚೆತುದಿಯಿಂದ ಕವಿಭಾವವನ್ನು ತರಿಸುವ ಹಾಗಿದ್ದರೆ?

7 comments:

raju hulkod said...

HI,
"ಬ್ರಹ್ಮರಾಕ್ಷಸನ ಪಾಲಿಗೂ ಹುಣಿಸೇಮರವೇ ಅಂತಃಪುರ. ಆದರೆ, ಹುಣಿಸೇಮರಕ್ಕೆ ನೇಣುಹಾಕಿಕೊಳ್ಳುವವರು ಕಡಿಮೆ. ಅದ್ಯಾಕೋ ಸತ್ತವರ ಪಾಲಿಗೆ ಪ್ರಿಯವಾದಷ್ಟು ಹುಣಿಸೇಮರ ಸಾಯುವವರ ಪಾಲಿಗೆ ಆಪ್ತವಾಗಲಿಲ್ಲ "This is something to think about.

and

"ನಿನ್ನನ್ನು ಮತ್ತೆಂದೋ ಎಷ್ಟೋ ವರ್ಷಗಳ ನಂತರ ಕಂಡಾಗ ಹೇಗೆ ಎದುರುಗೊಳ್ಳಲಿ ಹೇಳು? ಕಂಬನಿ ಮತ್ತು ಮೌನದೊಂದಿಗೆ"...better not to think about it.

ಸಿಂಧು Sindhu said...

ಪ್ರೀತಿಯ ಜೋಗಿ,
ಕ್ಲೀನ್ ಬೋಲ್ಡ್ ಆಗಿ ಬಿಟ್ಟಿದೀನಿ ಈ ಲೇಖನಕ್ಕೆ.

ಸೋತ ಮಾತಿನ ಹಸೆಗೆ ದೀಪವಿಟ್ಟ ಮೌನದ ಮೆಲ್ನಗೆಗೆ,
ಮೊದಲ ಕನಸಿಗೆ ಹೇಳಿಕಳಿಸಬೇಕಿದೆ. ಆದರೂ ರಾಜು ಬರೆದಿರುವುದು ನಿಜ....ಹೇಗೆ ಎದುರುಗೊಳ್ಳಲಿ? ಮೌನ ಮತ್ತು ಕಂಬನಿಯೊಂದಿಗೆ! ನೆನೆಸಿಕೊಂಡರೇ ಮನಸು ಮುದುಡಿಹೋಗುತ್ತೆ..better not to think about it.

ಹುಣಿಸೇ ಮರದ ಬಣ್ಣನೆ ಅದರ ಹುಳಿಚಿಗುರಿನಷ್ಟೇ ಸ್ವಾರಸ್ಯವಾಗಿದೆ.

ಪ್ರೀತಿಯಿಂದ
ಸಿಂಧು

Anonymous said...

ಕವಿತೆ ಹೆಣ್ಣಿನ ಹಾಗೆ!. ಒಲಿದರೆ ಹೆಂಡತಿ ಮುನಿದರೆ ಮದರ್ ಇನ್ ಲಾ!.
Dr.D.M.Sagar

SHREE said...

ನಮಗೆಷ್ಟು ಅರ್ಥವಾಗುತ್ತದೋ ಅಷ್ಟೇ ಅರ್ಥ... SATHYA!
- SHREE

Anonymous said...

ನಿಮ್ಮ ಲೇಖನಗಳು ವಿಚಾರ ಸಮೃದ್ಧಿಗಿಂತ ಆಕರ್ಷಕವಾಗಿರುವುದಕ್ಕೇ ಹೆಚ್ಚು ಒತ್ತು ಕೊಡುತ್ತವೆ. ತೋಟ ಶೃಂಗಾರ ಒಳಗೆ ಗೋಳಿ ಸೊಪ್ಪು ಎಂಬ ಗಾದೆ ನೆನಪಿಗೆ ಬರುತ್ತದೆ.

ಮಲ್ಲಿಕಾಜು೯ನ ತಿಪ್ಪಾರ said...
This comment has been removed by the author.
ಮಲ್ಲಿಕಾಜು೯ನ ತಿಪ್ಪಾರ said...

hoo bitta hunisemarad Ehapar Dhyan tumba chennagide.. Hunesemarad vrathant. Sir.. Hunuse maranu ele udurisittave,, hageye hos chigurinondige nalnalisuttave... Namm oralli nodidini nanu

Any way lekhan tumba chennagide sir...

Tippar