ಡಿಸೆಂಬರ್ ಪ್ರಾತಃಕಾಲದಲ್ಲಿ ವಾಕಿಂಗು ಹೋಗುವುದೇ ಒಂದು ವಿಲಕ್ಪಣ ಖುಷಿಯನ್ನು ಕೊಡುತ್ತದೆ. ಸಾಮಾನ್ಯವಾಗಿ ಮಂಜು ತುಂಬಿದ ಮುಂಜಾನೆಗಳನ್ನು ನಾವು ನೋಡಿ ಆನಂದಿಸುವುದು ಸಿನಿಮಾಗಳಲ್ಲಿ ಮತ್ತು ಫೊಟೋಗಳಲ್ಲಿ. ಆ ಮಂಜಿನ ನಡುವೆ ನಡೆಯಬೇಕಾಗಿ ಬಂದಾಗ ಮೊದಲು ಹಿಂಜರಿಕೆಯಾಗುತ್ತದೆ. ಆದರೆ ಒಮ್ಮೆ ಮಂಜು ಕವಿದ ಹಾದಿಗೆ ಬಿದ್ದೆವೆಂದರೆ ಮುಗಿಯಿತು. ನಿಧಾನವಾಗಿ ದೇಹ ಬಿಸಿಯಾಗುತ್ತಾ ಹೋಗುತ್ತದೆ. ಆ ವಾತಾವರಣವನ್ನು ಎದುರಿಸಲು ಸಿದ್ಧವಾಗುತ್ತದೆ.
ಇಂಥ ಮಂಜು ತುಂಬಿದ ಮುಂಜಾನೆಗಳಲ್ಲಿ ಸುಮ್ಮನೆ ನೆನಪಾಗುವವರು ಯಶವಂತ ಚಿತ್ತಾಲ. ಅವರ ಕತೆಗಳಲ್ಲಿ ಮಂಜು ಬಿದ್ದ ಹಾದಿಯಲ್ಲಿರುವಂಥ ನಿಗೂಢತೆ ಇರುತ್ತದೆ. ಮುಂದಿನ ದಾರಿಯೇ ಕಾಣಿಸದಂಥ ಸನ್ನಿವೇಶಗಳು ಬರುತ್ತವೆ. ದಿಟ್ಟತನದಿಂದ ಕಾಲು ಮುಂದಿಟ್ಟರೆ ಆ ಮಂಜು ಕ್ರಮೇಣ ಕರಗುತ್ತಾ ಹೋಗಿ ಹಾದಿ ನಿಚ್ಚಳವಾಗುತ್ತದೆ. `ನಿಚ್ಚಳ' ಅನ್ನುವುದೂ ಚಿತ್ತಾಲರಿಗೆ ತುಂಬ ಪ್ರಿಯವಾದ ಪದ.
ಒಂದೊಂದು ಸೀಸನ್ನಿನಲ್ಲಿ ಒಬ್ಬೊಬ್ಬ ಲೇಖಕನನ್ನು ಸಮಗ್ರವಾಗಿ ಓದಲು ಆರಿಸಿಕೊಳ್ಳುವುದು ಒಳ್ಳೆಯ ಕ್ರಮ. ಓದಿನಲ್ಲಿ ಆಸಕ್ತಿ ಇಲ್ಲದವರು, ಸಿನಿಮಾ ನೋಡುವುದನ್ನೋ, ಸಂಗೀತ ಕೇಳುವುದನ್ನೋ ಮಾಡಬಹುದು. ಇಷ್ಟೂ ದಿನ ಯಾವ ಶಿಸ್ತೂ ಇಲ್ಲದೇ ಮಾಡಿದ್ದನ್ನು ಒಂದಷ್ಟು ದಿನ ಶಿಸ್ತುಬದ್ಧವಾಗಿ ಮಾಡಲು ಯತ್ನಿಸಿ. ಅದರಲ್ಲೂ ಒಂದು ಥರದ ಸುಖ ಸಿಗುತ್ತದೆ.
ಉದಾಹರಣೆಗೆ ಕೈಗೆ ಸಿಕ್ಕಿದ ಪುಸ್ತಕಗಳನ್ನೆತ್ತಿಕೊಂಡು ಓದಲು ತೊಡಗುವುದು ಒಂದು ಕ್ರಮ. ಪತ್ರಿಕೆಗಳಲ್ಲಿ ಬರುವ ಸಾದರ ಸ್ವೀಕಾರ ಓದಿ ಪುಸ್ತಕ ಕೊಂಡು ಓದುವುದು ಮತ್ತೊಂದು ಕ್ರಮ. ಆಸಕ್ತಿ ಉಳಿಸಿಕೊಳ್ಳಲು, ನಮ್ಮ ಜೀವಿತವನ್ನು ಅರ್ಥಪೂರ್ಣವಾಗಿಸಲು, ಯಾಂತ್ರಿಕತೆ ಮತ್ತು ಏಕತಾನತೆಯನ್ನು ನೀಗಿಕೊಳ್ಳಲು ಸ್ವಲ್ಪ ಮಟ್ಟಿನ ಅಶಿಸ್ತು ಕೂಡ ಬೇಕಾಗುತ್ತದೆ. ಆದರೆ ಅಶಿಸ್ತಿನಷ್ಟೇ ಶಿಸ್ತು ಕೂಡ ಖುಷಿಕೊಡಬಲ್ಲದು.
ಫಾರ್ ಎ ಚೇಂಜ್ ಈ ಬೇಸಗೆಯಲ್ಲಿ ಚಿತ್ತಾಲರನ್ನು ತೆಗೆದುಕೊಳ್ಳಿ; ಅವರ ಕತೆಗಳನ್ನು ಒಂದೊಂದಾಗಿ ಓದುತ್ತಾ ಬನ್ನಿ. ಇಂತಿಷ್ಟೇ ದಿನಗಳಲ್ಲಿ ಮುಗಿಸಬೇಕು ಅನ್ನುವ ಹಠ ಬೇಡ. ಆದರೆ ವರ್ಷಾನುಗಟ್ಟಲೆ ಓದಿದರಾಯಿತು ಅನ್ನುವ ಔದಾರ್ಯವೂ ಬೇಡ. ದಿನಕ್ಕೊಂದು ಕತೆ ಅಂತಿಟ್ಟುಕೊಂಡರೂ ಒಂದು ಇಡೀ ಬೇಸಗೆಗೆ ಪೂರ್ತಿ ಸಾಕಾಗುವಷ್ಟನ್ನು ಚಿತ್ತಾಲರು ಬರೆದಿದ್ದಾರೆ.
*****
ಚಿತ್ತಾಲರು ನೆಪ ಮಾತ್ರ. ಓದು ನೆಪ ಮಾತ್ರ. ಸಂಗೀತ ಕೂಡ ಬರೀ ನೆಪ. ಇವೆಲ್ಲ ನಮ್ಮನ್ನು ನಾವು ಕಂಡುಕೊಳ್ಳುವ ಸಂಗತಿಗಳು ಅಷ್ಟೇ. ಇವೆಲ್ಲ ಇಲ್ಲದೇ ಹೋದರೂ ಬದುಕುವುದಕ್ಕೆ ಯಾವ ತೊಂದರೆಯೂ ಇಲ್ಲ, ಆದರೆ ಜೀವಿಸುವುದು ಕಷ್ಟ.
ಸುಮ್ಮನೆ ನಮ್ಮ ನಮ್ಮ ವೃತ್ತಿಗಳ ಬಗ್ಗೆ ಯೋಚಿಸೋಣ. ಒಬ್ಬ ಬ್ಯಾಂಕ್ ಅಧಿಕಾರಿ ಮುಂಜಾನೆಯಿಂದ ಸಂಜೆ ತನಕ ಬೇರೆಯವರ ದುಡ್ಡಿನ ಲೆಕ್ಕ ಇಡುತ್ತಾನೆ. ಬೇರೆಯವರಿಗೆ ಸಾಲ ಕೊಡುತ್ತಾನೆ, ಬೇರೆಯವರು ಮನೆ ಕಟ್ಟುವುದನ್ನು ನೋಡುತ್ತಾನೆ. ಕೊನೆಗೆ ಆತ ನಿವೃತ್ತನಾದಾಗ ಅದೇ ಬ್ಯಾಂಕಿನಲ್ಲಿ ಅವನಿಗೆ ಸಾಲ ಸಿಗುವುದಿಲ್ಲ. ಒಬ್ಬ ಪ್ರೊಫೆಸರ್ ಮೊಮ್ಮಗಳಿಗೆ ಅವನು ಮೂವತ್ತೆಂಟು ವರುಷ ಪಾಠ ಹೇಳಿದ ಸ್ಕೂಲಲ್ಲಿ ಸೀಟು ಸಿಗದೇ ಹೋಗಬಹುದು.ಯಾಕೆಂದರೆ ಅದು ವೃತ್ತಿ. ವೃತ್ತಿಯಲ್ಲಿ ನಮ್ಮದೇನೂ ಇರುವುದಿಲ್ಲ. ವೃತ್ತಿಗೆ ಕೌಶಲ ಬೇಕಾಗಿಲ್ಲ; ಅನುಭವ ಸಾಕು. ಹಾಗೆ ನೋಡಿದರೆ ಯಾವ ವೃತ್ತಿ ಕೂಡ ಅಂಥದ್ದೊಂದು ನೆಮ್ಮದಿಯನ್ನು ತಂದುಕೊಟ್ಟದ್ದು ಕಾಣೆ. ಶ್ರದ್ಧಯಿಂದ ಕೆಲಸ ಮಾಡಿದಾಗ ಘನತೆ ನಮ್ಮದಾಗಬಹುದು. ನಿಯತ್ತಿನಿಂದ ದುಡಿದಾಗ ಮೆಚ್ಚುಗೆ ದಕ್ಕಬಹುದು. ಆ ಮೂಲಕ ನೆಮ್ಮದಿ ಸಿಗಬಹುದು. ಆದರೆ ಸಾರ್ಥಕತೆಯಿಂದ ಬರುವಂಥ ನೆಮ್ಮದಿ?
ನಿವೃತ್ತರಾದ ನಂತರ ಮೊಮ್ಮಕ್ಕಳಿಗೆ ತೋರಿಸುವುದಕ್ಕೆ ಒಬ್ಬ ಬ್ಯಾಂಕು ಅಧಿಕಾರಿಗೋ ಒಬ್ಬ ಪತ್ರಕರ್ತನಿಗೋ ಏನು ಉಳಿದಿರುತ್ತದೆ. ಆ ಕಾಲಕ್ಕೆ ಸುದ್ದಿಯಲ್ಲಿದ್ದ ನಟನೋ ರಾಜಕಾರಣಿಯೋ ಸಾಹಿತಿಯೋ ಆಡಿದ ಮಾತುಗಳನ್ನು ವರದಿ ಮಾಡುವುದು ಕೂಡ ಮತ್ತೊಂದು ವೃತ್ತಿ ಅಷ್ಟೇ. ಆದರೆ ಅದರಲ್ಲಿ ಪತ್ರಕರ್ತನದ್ದೇನೂ ಇರುವುದಿಲ್ಲ. ಜಗತ್ತಿನಲ್ಲಿ ಎಷ್ಟು ಪತ್ರಕರ್ತರು ಬಂದು ಹೋಗಿರಬಹುದು ಯೋಚಿಸಿ; ಅವರಲ್ಲಿ ಎಷ್ಟು ಮಂದಿಯ ಹೆಸರು ನಿಮಗೆ ನೆನಪಿದೆ. ಖುಷ್ವಂತ್ ಸಿಂಗ್, ಸಚ್ಚಿದಾನಂದ ಮುಂತಾದವರು ನೆನಪಿನಲ್ಲಿ ಉಳಿದಿರುವುದು ವರದಿಗಾರಿಕೆಯಿಂದ ಅಲ್ಲ, ಅವರ ಸ್ವಂತ ಪ್ರತಿಭೆಯಿಂದ. ಅಧಿಕಾರವನ್ನು ಓಲೈಸಿದ್ದರಿಂದ ಅಲ್ಲ, ಅದನ್ನು ದೂರವಿಟ್ಟದ್ದರಿಂದ. ಈ ಮಾತು ಬೇರೆ ವೃತ್ತಿಯಲ್ಲಿದ್ದವರಿಗೂ ಒಪ್ಪುತ್ತದೆ.
ಆದ್ದರಿಂದಲೇ ಪ್ರತಿಯೊಂದು ವೃತ್ತಿಯಲ್ಲಿ ತೊಡಗಿಕೊಳ್ಳುವಾಗಲೂ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು; ಇದರಲ್ಲಿ ನಮ್ಮದೇನಿದೆ? ನಮ್ಮದೂ ಏನೂ ಇಲ್ಲ ಅಂತ ಗೊತ್ತಾದ ತಕ್ಪಣ ಅದನ್ನು ವೃತ್ತಿಯಂತೆ ನೋಡಲು ಆರಂಭಿಸಬೇಕು. ವೃತ್ತಿಗೆ ಎಷ್ಟು ಬೇಕೋ ಅಷ್ಟು. ಪ್ರೊಫೆಷನ್ ಆಗಿರುವುದು ಅಂದರೆ ಅದರಲ್ಲೇ ಮುಳುಗಿರುವುದಲ್ಲ. ಅದರ ಬಗ್ಗೆ ಎಲ್ಲಿ ಎಷ್ಟು ಮಾಹಿತಿ ಸಿಗುತ್ತದೆ ಅಂತ ತಿಳಿದುಕೊಂಡಿರುವುದು. ಅದನ್ನು ಬೇಕುಬೇಕಾದಾಗ ಬಳಸಿಕೊಳ್ಳುವಷ್ಟು ನೆನಪಿನ ಶಕ್ತಿಯನ್ನು ಉಳಿಸಿಕೊಂಡಿರುವುದು.
ಹಾಗೇ, ಅದರಲ್ಲಿ ನಮ್ಮದೇನೂ ಇಲ್ಲ ಅಂತ ಗೊತ್ತಾದ ತಕ್ಪಣ ಮಾಡಬಹುದಾದದ್ದೆಂದರೆ ನಮ್ಮದಾಗಬಹುದಾಗ ಆಸಕ್ತಿಗಳನ್ನು ರೂಢಿಸಿಕೊಳ್ಳುವುದು. ಬ್ಯಾಂಕ್ ಉದ್ಯೋಗಿಗಳ ಸಮಾಜಸೇವೆ, ಸಾಫ್ಟ್ ವೇರ್ ನೌಕರರ ಕ್ರಿಕೆಟ್, ಸರ್ಕಾರಿ ಅಧಿಕಾರಿಗಳ ಸಂಗೀತ ಪ್ರೇಮ ಇವೆಲ್ಲ ಕೆಲವು ಉದಾಹರಣೆಗಳು.
*****
ಇದಕ್ಕೂ ಚಿತ್ತಾಲರಿಗೂ ಏನು ಸಂಬಂಧ ಅನ್ನುವ ಪ್ರಶ್ನೆ ಅಪ್ರಸ್ತುತ. ಸಂಬಂಧವೇ ಇಲ್ಲದಿರಬಹುದು. ಸಂಬಂಧ ಇಲ್ಲದಿದ್ದಾಗಲೇ ಸಂಬಂಧ ಹುಟ್ಟುತ್ತದೆ. ಸಂಬಂಧ ಇದ್ದಾಗ ಅದನ್ನು ಕಡಿದುಕೊಳ್ಳುವುದಕ್ಕಷ್ಟೇ ಅವಕಾಶ ಇರುತ್ತದೆ. ಯಶವಂತ ಚಿತ್ತಾಲರು `ಶಿಕಾರಿ' ಕಾದಂಬರಿಯಲ್ಲಿ ಹೇಳುತ್ತಾರೆ;
ಜೀವಶಕ್ತಿಯ ಮೂಲ ಸೆಲೆಗಳಲ್ಲಿ ಕಾಮಕ್ಕಿಂತ ಹೆಚ್ಚು ಬಲಶಾಲಿಯಾದದ್ದು - ತನ್ನ ಪ್ರಭುತ್ವಕ್ಕೆ ಅಧೀನವಾದ ಒಂದು ಭೌಗೋಲಿಕ ಪ್ರದೇಶದ ಅವಶ್ಯಕತೆಯೆಂದು ನಿಸರ್ಗ-ವಿಜ್ಞಾನಿಗಳಿಂದ ಈಗ ಗೊತ್ತಾಗಿದೆ. ಎಲ್ಲಾ ಪ್ರಾಣಿವರ್ಗಗಳಲ್ಲಿ ಪಶು-ಪಕ್ಪಿ, ಜಲಚರಗಳಲ್ಲಿ ಕೂಡ ಈ ಪ್ರದೇಶ ಪ್ರವೃತ್ತಿ ಸ್ಪಷ್ಟವಾಗಿ ಕಂಡು ಬಂದಿದೆಯಂತೆ. ಮಾನವನಲ್ಲೂ ಈ ಮೂಲ ಪ್ರವೃತ್ತಿ ಆಸ್ತಿಯ ಪ್ರೀತಿಯಾಗಿ, ಪ್ರಾಂತದೇಶಗಳ ಪ್ರೀತಿಯಾಗಿ ವ್ಯಕ್ತಗೊಂಡಿದೆ ಎಂಬುದು ಈ ತಜ್ಞರ ಊಹೆ. ಆದರೆ ನನ್ನ ಈ ವರೆಗಿನ ಆಯುಷ್ಯದಲ್ಲಿಬಂದ ಅನುಭವಗಳನ್ನೇ ನಂಬಿ ಹೇಳುವುದಾದರೆ ಆಸ್ತಿಗಿಂತ ಹೆಚ್ಚು ಪ್ರಭಾವಶಾಲಿಯಾದ ಪ್ರೇರಕ ಶಕ್ತಿಯೆಂದರೆ ಪ್ರತಿಯೊಬ್ಬ ವ್ಯಕ್ತಿಗೆ ತನ್ನಲ್ಲಿಯ ಕರ್ತೃತ್ವ ಶಕ್ತಿಯ, ಪುರುಷಾರ್ಥದ ಅಭಿವ್ಯಕ್ತಿಗೆ ಬೇಕೆನ್ನಿಸುವ ಕಾರ್ಯಕ್ಪೇತ್ರ, Field of action. ಈ ಕಾರ್ಯಕ್ಪೇತ್ರದಲ್ಲಿ ತನ್ನ ಪ್ರತಿಭೆಯಿಂದ ಬೆಳಕು ಬೀರುವ, ಬೆಳಗಿ ನಿಲ್ಲುವ, ಪ್ರಭುತ್ವ ಪಡೆಯುವ ಅಭಿಲಾಷೆ. ಇದುವೇ ಮಾನವನ ಎಲ್ಲಾ ಚಟುವಟಿಕೆಗಳ ಹಿಂದಿನ ಮೂಲಪ್ರವೃತ್ತಿಯ ಬಲವಿದ್ದ ಪ್ರೇರಣೆ ಎಂದು ನಾನು ನಂಬುತ್ತೇನೆ..'
****
ನಮ್ಮ ಪ್ರತಿಭೆಯ ಬೆಳಕು ಬೀರುವ ಕಾರ್ಯಕ್ಪೇತ್ರ ಯಾವುದು. ಅದರಾಚೆಗಿನ ಲೋಕ ಯಾವುದು? ನಮ್ಮ ಸಂಜೆಗಳನ್ನು ಬೆಳಗುವ ನಿಗೂಢ ಯಾವುದು? ನಮ್ಮ ದಾರಿಗಳನ್ನು ಚೆಂದಗೊಳಿಸುವ, ನಮ್ಮ ಪಯಣಗಳನ್ನು ಸುಖಮಯವಾಗಿಸುವ ಸಂಗತಿ ಯಾವುದು?
ಕಂಡುಕೊಳ್ಳಬೇಕಿದೆ!
ಚಿತ್ರ- ಅಂಕುರ್ ಬೆಟಗೇರಿ. ಅವರ ಕವಿತೆಯಷ್ಟೇ ಈ ಚಿತ್ರವೂ ಚೆನ್ನಾಗಿತ್ತು. ಬೇಸಗೆಯಲ್ಲಿ ಗಾಳಿ ಮರದ ನೆರಳು ಮತ್ತು ಅದರೆಡೆಯಿಂದ ಬೀಸಿ ಬರುವ ಗಾಳಿ ಕೊಡುವ ಖುಷಿಯ ರೂಪಕದ ಹಾಗಿದೆ ಈ ಫೊಟೋ.
8 comments:
ನಮಸ್ಕಾರ ಜೋಗಿಯವರೆ,
ನಿಮ್ಮ ಜೋಗಿಮನೆಗೆ ಆಗಾಗ ಬಂದು ಹೋಗುತ್ತಿರುವೆ. ಜೋಗಿಮನೆಯ ಒಂದು ವೈಶಿಶ್ಟ್ಯ (ನಾನು ಗಮನಿಸಿದ್ದು)- ಬಹಳಷ್ಟು ನಿಮ್ಮ ಲೇಖನಗಳು ಪ್ರಥಾಮ ಪುರುಷದಲ್ಲಿದ್ದಾವೆ. ಇದು ನಿಮ್ಮ ಇತರ ಲೇಖನಗಳಿಗಿಂತ ಅತ್ಯಂತ ಬೇರೆಯಾಗಿ ಖುಷಿಕೊಡುತ್ತದೆ. ಚಿತ್ತಾಲರ ಬಗೆಗಿನ ನಿಮ್ಮ 'ಬೇಸಗೆಯ ಓದಿನ ಲೇಖನ ಓದಿದೆ. ಕಾರ್ಯ ಕ್ಷೇತ್ರದ ಬಗ್ಗೆ ಚಿತ್ತಾಲರು ಹೇಳಿದ್ದು ನೆನಪಿಸಿದ್ದಕ್ಕೆ ಥ್ಯಾಂಕ್ಸ್.
ಶಿಕಾರಿಯಂಥ ಕಾದಂಬರಿಗಳನ್ನು ಓದಿದಾಗ ಇದನ್ನು ಕನ್ನಡ ಎಂ ಎ ಓದುತ್ತಿರುವ ಸಾಹಿತ್ಯದ ವಿದ್ಯಾರ್ಥಿ ಹೇಗೆ ಜೀರ್ಣಿಸಿಕೊಳ್ಳಬಲ್ಲ ಎಂದನಿಸಿತ್ತು.( ಓದಿದಾಗ ನಾನು ಚಿಕ್ಕವನೂ, ಮೂರ್ಖನೂ ಆಗಿದ್ದನೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ). ಆದರೆ, ಮೊದಲು ಮೂಡಿದ ಭಾವನೆಗಳನ್ನು ಅಷ್ಟು ಸುಲಭವಾಗಿ ಅಳಿಸುವುದು ಕಷ್ಟ. ಶಿಕಾರಿ ಬರೆದ ಕಾಲದಲ್ಲಿ ಮ್ಯಾನೇಜ್‍ಮೆಂಟ್, ಕಾರ್ಪೋರೇಟ್, ಇವೆಲ್ಲ ಕನ್ನಡದ ಓದುಗರಿಗೆ ಬರೀ ಪದಗಳಾಗಿ ಮಾತ್ರ ಪರಿಚಯವಿದ್ದವೇನೋ. ಆದರೆ, ಅಲ್ಲಿ ಎಲ್ಲಕ್ಕಿಂತ ಹೆಚ್ಚು ಕೆಲಸ ಮಾಡಿದ್ದು 'ನಿಚ್ಚಳ'ವಾಗಿ ಓದಿನ ಖುಷಿ.
ಯಾಕೆ ಹೇಳುತ್ತಿದ್ದೇನೆ ಎಂದರೆ, 'ಶಿಕಾರಿ'ಯಂತ ಒಂದು ಪ್ರೊಫ಼ೆಶನಲ್ ಕಥನ ಇಂದು ಎಷ್ಟೋ ಲೇಖಕರನ್ನು ಹುಟ್ಟಿಹಾಕಿದೆ, ಮತ್ತು ಧೈರ್ಯದಿಂದ ಅವರವರ ಕಾರ್ಯಕ್ಷೇತ್ರದ ಪರಿಧಿಯಲ್ಲಿಯೇ ಸಾಹಿತ್ಯವನ್ನೂ ಓದುವ ಮತ್ತು 'ಕೃಷಿ'ಸುವ ಖುಷಿಯನ್ನೂ ಕೊಟ್ಟಿದೆ. ಸ್ವಲ್ಪ 'ಆಟೋಬಯಾಗ್ರಫ಼ಿಕಲ್' ಅನ್ನಿಸಿದ್ದರೆ ಕ್ಷಮಿಸಿ.
ನಿಮ್ಮ ಲೇಖನಗಳನ್ನು ಬ್ಲಾಗಿಸಿ, ಓದುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಗುರು ಕಾಗಿನೆಲೆ
ಪ್ರೀತಿಯ ಗುರು,
ಹೇಗಿದ್ದೀರಿ. ನಿಮ್ಮ ಶಕುಂತಲಾ ಓದುತ್ತಿರುವ ಹೊತ್ತಿಗೇ ನಿಮ್ಮ ಚಿಪ್ಪಣಿ.
ಶಿಕಾರಿಯನ್ನು ನಾನು ಓದಿದ್ದು ಎರಡನೇ ಪಿಯೂಸಿಯಲ್ಲಿದ್ದಾಗ. ಕೊಟ್ಟು ಓದಿಸಿದ್ದು ಈಗ ಸಹ್ಯಾದ್ರಿ ಯೂನಿವರ್ಸಿಟಿಯಲ್ಲಿರುವ ಕೆ. ಕೇಶವ ಶರ್ಮ. ಆಗಲೇ ತುಂಬ ಇಷ್ಟಲಾದ ಕಾದಂಬರಿ, ನಾವೆಲ್ಲ ಸಿಗರೇಟು ಸೇದುತ್ತಾ ನಾಗಪ್ಪನ ಹಾಗೆ ಅಂದುಕೊಂಡು ಓಡಾಡುತ್ತಿದ್ದೆವು. ಚಿತ್ತಾಲರು ಕಂಡಾಪಟ್ಟೆ ಇಷ್ಟವಾಗಿದ್ದರು. ಅದೇ ಹೊತ್ತಿಗೆ ನಾನು ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿ ಚಿತ್ತಾಲರಿಗೊಂದು ಪತ್ರವನ್ನೂ ಬರೆದವು. ಚಿತ್ತಾಲರು ನಮಗೆ ಅವರೇ ಹಸ್ತಾಕ್ಷರ ಹಾಕಿದ ಸಮಗ್ರ ಕತೆಗಳ ಸಂಕಲನ ಕಳುಹಿಸಿಕೊಟ್ಟಿದ್ದರು, ದುಡ್ಡು ಕೊಡುವುದಕ್ಕೆ ನಮ್ಮಲ್ಲಿ ಆಗೆಲ್ಲಿತ್ತು?
ಆಮೇಲೆ ಚಿತ್ತಾಲರ ಜೊತೆ ಮಾತಾಡಿದ್ದು, ಮಾತು ತಪ್ಪಿದ್ದು, ಅವರು ಮುನಿಸಿಕೊಂಡದ್ದು-ಹೀಗೆ ತುಂಬ ದೂರ ಬಂದಿದ್ದೇನೆ. ಇದನ್ನೆಲ್ಲ ನಿಮ್ಮ ಪತ್ರ ನೆನಪಿಸಿತು.
ಥ್ಯಾಂಕ್ಸ್.
ಕತೆ ಬರೆಯಿರಿ,ಓದಿಸಿ.
ಜೋಗಿ
ಜೋಗಿಯವರೆ,
ಚಿತ್ತಾಲರ ಕತೆಗಳ ಜಗತ್ತಿನಲ್ಲಿ ಕಳೆದುಹೋಗಿ ನಾನೂ ಖುಷಿಪಡುತ್ತೇನೆ. ಅವರ "ಸೆರೆ" ಕತೆಯನ್ನು ಯವನಿಕಾದಲ್ಲಿ ತುಂಬಾ ಹಿಂದೆ ಏಕಪಾತ್ರ ನಾಟಕವಾಗಿ ಮಾಡಿ ಖುಷಿಪಟ್ಟಿದ್ದೆ!
ಇತ್ತೀಚೆಗೆ ಮತ್ತೆ ಮತ್ತೆ ನೆನಪಿಗೆ ಬರುತ್ತಿರುವ ಒಂದು ವಿಷಯ ಏನು ಗೊತ್ತ? ರವೀಂದ್ರ ಕಲಾಕ್ಷೇತ್ರದ ಅತಿಥಿಕೊಠಡಿಯಲ್ಲಿ ಒಮ್ಮೆ ಚಿತ್ತಾಲರ ಮಾತು(ವರ್ಷ ನೆನಪಿಲ್ಲ). ತಮ್ಮ ಕತೆ ಬರೆಯುವಾಗಿನ ಅನುಭವ. ಕತೆಗೆ ತೆರೆದುಕೊಳ್ಳುವ ಪ್ರಕ್ರಿಯೆ ಬಗ್ಗೆ ಅವರ ವಿಶೇಷ ಒಳನೋಟಗಳು. ಜತೆಗೆ ಗೆಸ್ಟಾಲ್ಟ್‌ಗಳ ಬಗ್ಗೆ ಮಾತಾಡಿ, ಒಂದು ಬಿಳಿಹಾಳೆಯ ಬೋರ್ಡಿನ ಮೇಲೆ ಚಿತ್ತಾರಗಳನ್ನು ಬರೆದು ಗೆಸ್ಟಾಲ್ಟ್ ಮೂಲದ ವಿನ್ಯಾಸಗಳ ಸಹಾಯದಿಂದ ತಮ್ಮ ಸೃಜನಪ್ರಕ್ರಿಯೆಯನ್ನು ವಿವರಿಸಲು ಪ್ರಯತ್ನಪಟ್ಟಿದ್ದು. ಡಿ.ಆರ್.ನಾಗರಾಜ್ ಅವರನ್ನು ತರಾಟೆಗೆ ತೆಗೊಂಡು - 'ನಿಮ್ಮ ಸೃಜನಶೀಲತೆಯ ಬಗ್ಗೇನೆ ನನಗೆ ಅನುಮಾನ ಬರುತ್ತಿದೆ' ಎಂದದ್ದು... ಇವೆಲ್ಲಾ ಎಲ್ಲಾದರೂ ದಾಖಲಾಗಿದೆಯೆ? ದಾಖಲಾಗಬೇಕೆ?
ವಂದನೆಗಳೊಂದಿಗೆ.
ಮತ್ತೆ ಓದಿದಾಗ ವಿರುದ್ಧಾರ್ಥ ಬರುತ್ತದೆ ಅನಿಸಿ ಸರಿಪಡಿಸುತ್ತಿದ್ದೇನೆ-
"ಡಿ.ಆರ್.ನಾಗರಾಜ್ ಚಿತ್ತಾಲರನ್ನು ತರಾಟೆಗೆ ತೆಗೊಂಡು - 'ನಿಮ್ಮ ಸೃಜನಶೀಲತೆಯ ಬಗ್ಗೇನೆ ನನಗೆ ಅನುಮಾನ ಬರುತ್ತಿದೆ' ಎಂದದ್ದು..."
True, Chittal has written some wonderful stories and great novels. Some what bommiya hullu hore like Rashid’s haalu kudidha huduga always haunts me. One should reads Chittal during rainly season particularly in the evening at Malnad. That experience can be very different. In addition to Shikari, one should take a note of Purushottama. Some what that book has not been widly discussed in literary circle. In fact some what Chittal has not been discussed in detail and hence most of his stories possibilities are yet unknown to many readers.
Thanks for rekindling the interest on some of great works and writer in Kannada.
Ashok Hegde
'ಶಿಕಾರಿ'ಯನ್ನು ನನ್ನ ಕಾಲೇಜಿನ ಮೊದಲ ವರ್ಷದಲ್ಲಿದ್ದಾಗ ಮೊದಲ ಬಾರಿಗೆ ಕೈಗೆತ್ತಿಕೊಂಡಿದ್ದೆ. ಆದರೆ ಮೂರು ಪುಟ ಓದುವಷ್ಟರಲ್ಲಿ ಸುಸ್ತಾಗಿದ್ದೆ. ಮುಂದೆ ಹೋಗಲಿಕ್ಕೆ ಆಗಿರಲೇ ಇಲ್ಲ. ಅಷ್ಟೊಂದು ಕಬ್ಬಿಣದ ಕಡಲೆಯಂತೆ ಭಾಸವಾಗಿತ್ತು ಅದು. ನಾನು ಇದನ್ನು ಓದಲಿಕ್ಕೆ ಅರ್ಹನೇ ಅಲ್ಲವೇನೋ ಅಂದುಕೊಂಡು ಪಕ್ಕಕ್ಕೆ ಎತ್ತಿಟ್ಟಿದ್ದೆ. ನಂತರ ಈ ಬೆಂಗ್ಳೂರಿಗೆ ಬಂದು, ಕೆಲಸ-ಗಿಲಸಕ್ಕೆ ಸೇರಿ ಆಮೇಲೊಂದು ದಿನ ಕೈಗೆತ್ತಿಕೊಂಡು ಕುಳಿತೆ ನೋಡಿ, ಉಫ್! ಪೂರ್ತಿ ಮುಗಿಸಿಯಾದಮೇಲೇ ಕೆಳಗಿಟ್ಟಿದ್ದು. Its a great experience reading it. ಆಮೇಲೆ ಚಿತ್ತಾಲರ ಎಲ್ಲಾ ಪುಸ್ತಕಗಳನ್ನೂ ಕೊಂಡುತಂದು ಓದಿದೆ ಬಿಡಿ!
ನಮಸ್ಕಾರ ಜೋಗಿ,
ಅಶೋಕ್ ಹೇಳಿದಂತೆ, ಚಿತ್ತಾಲರ "ಪುರುಷೋತ್ತಮ" ಕೂಡಾ ಉತ್ತಮ ಕಾದಂಬರಿ. ಒಬ್ಬ ವ್ಯಕ್ತಿ ವ್ಯವಸ್ಥೆಯ ಕುಹಕಗಳಲ್ಲಿ ಹೇಗೆ ಸಿಲುಕುತ್ತಾ ಹೋಗುತ್ತಾನೆ, ಮತ್ತು ಅಂತಃಸತ್ವ ಇದ್ದ ಗಟ್ಟಿಗ ಅದರಿಂದ ಹೊರಬರಲು ಹೇಗೆ ಹೆಣಗಿ ವಿಜಯಿಯಾಗುತ್ತಾನೆ(!?) ಅನ್ನುವ ಕಥಾನಕ- ಅದ್ಭುತ ಅನ್ನಿಸಿದೆ. ಚಿತ್ತಾಲರನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
Your article about Chittal took me to a new world. I cannot express it in words.I had read 'Shikari' when I was in college. Your article brought back those same sweet memories.I liked your second part of the article about 'profession' and 'creativity'. It opened a new insight in me.
Thanks a lot.
Umesh
Post a Comment