Wednesday, May 23, 2007

ಕಡ­ತಂ­ದದ್ದು ಮನೆ­ತ­ನಕ, ಒಡ­ಹು­ಟ್ಟಿದ್ದು ಕೊನೆ­ತ­ನಕ


ಅದು ಮುದು­ಕ­ರಿಗೆ ತಕ್ಕ ನಾಡಲ್ಲ. ತೋಳ­ಸೆ­ರೆ­ಯಲ್ಲಿ
ಯುವ­ಜ­ನರು, ಮರ­ಮ­ರ­ದಲ್ಲು ಹಕ್ಕಿ­ಗಳು
-ಎಲ್ಲ ಸಾವ­ಕೊಂಬ ಸಂತಾ­ನ­ಗಳೆ-ತಂ­ತಮ್ಮ ಹಾಡು­ಗ­ಳಲ್ಲಿ
ಸಾಲ್ಮ್ ಪಾತ­ಗಳು, ಮ್ಯಕ­ರೆಲ್ ಗಿಜಿ­ಗು­ಟ್ಟುವ ಸಮು­ದ್ರ­ಗಳು
ಭೂ, ಜಲ, ಜಂತು­ಗಳು ಇಡೀ ಗ್ರೀಷ್ಮ ಸ್ತುತಿ­ಸು­ವುದು ಮುದ­ದಲ್ಲಿ
ಪಡು­ವು­ದನ್ನು, ಹುಟ್ಟು­ವು­ದನ್ನು, ಸಾಯು­ವು­ದನ್ನು...

ಹೀಗೆ ಅನು­ವಾ­ದ­ಗೊಂ­ಡದ್ದು ಯೇಟ್ಸನ ಸೈಲಿಂಗ್ ಟು ಬೈಜಾಂ­ಟಿಯಂ ಎಂಬ ಪದ್ಯ. ಅನು­ವಾ­ದಿ­ಸಿ­ದ­ವರು ಯು. ಆರ್. ಅನಂ­ತ­ಮೂರ್ತಿ. ಇಂಥ ಪದ್ಯ­ಗಳು ಅರ್ಥ­ವಾ­ಗು­ವು­ದಿಲ್ಲ ಎಂದಾಗ ನವ್ಯದ ಎಲ್ಲ ಕವಿ­ಗಳೂ ಒಕ್ಕೊ­ರ­ಲಿ­ನಿಂದ ಹೇಳಿ­ದ್ದಿಷ್ಟೇ. ಪದ್ಯ ಓದು­ವು­ದಕ್ಕೂ ಸಿದ್ಧತೆ ಬೇಕು. ಹೀಗಾಗಿ ಪದ್ಯ ಬಗೆ­ಯುವ ಬಗೆ ಎಂಬ ಅಂಕಣ ಶುರು­ವಾ­ಯಿತು. ಒಂದು ಪದ್ಯ­ವನ್ನು ಅರ್ಥ ಮಾಡಿ­ಕೊ­ಳ್ಳು­ವುದು ಹೇಗೆ ಎಂಬ ಬಗ್ಗೆ ಪುಸ್ತ­ಕ­ಗಳು ಬಂದವು. ಅಲ್ಲಿ ಅಂಡ­ರ್­ಸ್ಟಾಂ­ಡಿಂಗ್ ಪೊಯೆಟ್ರಿ ಅಂತ ಬರೆ­ದಾಗ ಇಲ್ಲೂ ಅಂಥ­ದ್ದೇನೋ ಬಂತು.
ಮೇಲಿನ ಇಂಗ್ಲಿಷ್ ಪದ್ಯದ ಮೂಲ ಸಾಲು­ಗ­ಳನ್ನೇ ಓದಿ;
That is no country for old men. The young
In one another's arms, birds in the trees
The salmon falls, the mackerel-crowded seas,
Fish, Flesh or fowl, commend all summer long
whatever is begotten, born and dies.


ಇಂಗ್ಲಿಷ್ ಬಲ್ಲ­ವ­ರಿಗೆ ಇವ­ತ್ತಿಗೂ ಇಂಗ್ಲಿಷೇ ಸುಲಭ. ಇಂಗ್ಲಿಷ್ ತಿಳಿ­ಯ­ದ­ವ­ರಿಗೆ ಅದು ಕನ್ನಡ ಅನು­ವಾ­ದ­ದಲ್ಲೂ ತಿಳಿ­ಯದು. ಹಾಗಿದ್ದೂ ಅಂಥ ಅನು­ವಾ­ದದ ಪ್ರಯ­ತ್ನ­ಗಳು ತುಂಬ ಗಂಭೀ­ರ­ವಾ­ಗಿಯೇ ನಡೆ­ದವು.
ಕಾವ್ಯದ ಅನು­ವಾದ ಕಷ್ಟ ಅನ್ನು­ವು­ದಕ್ಕೆ ಅನೇಕ ಕಾರ­ಣ­ಗ­ಳನ್ನು ಕೊಡ­ಬ­ಹುದು. ಎಕೆ ರಾಮಾ­ನು­ಜ್ ಕೂಡ ಕೂಡಲ ಸಂಗಮ ಅನ್ನು­ವು­ದನ್ನು God of meeting rivers ಎಂದು ಅನು­ವಾ­ದಿಸಿ ನಗೆ­ಪಾ­ಟಲು ಮಾಡಿ­ದ್ದರು. ನಮ್ಮ ಭಾವ­ಗೀ­ತೆ­ಗ­ಳನ್ನು ಕೂಡ ಅನು­ವಾ­ದಿ­ಸು­ವುದು ಕಷ್ಟವೇ. ಯಾಕೆಂ­ದರೆ ಕವಿತೆ ಒಂದು ಮಣ್ಣಿನ ಗುಣ­ವನ್ನು ಮೈಗೂ­ಡಿ­ಸಿ­ಕೊಂಡು ಅರ­ಳಿ­ರುತ್ತೆ. ನಮ್ಮ ಸಂಪ್ರ­ದಾಯ, ತಿಳು­ವ­ಳಿಕೆ, ನೆನಪು, ಗ್ರಹಿಕೆ ಮತ್ತು ಆಚಾ­ರ­ವಿ­ಚಾ­ರ­ಗಳ ಜೊತೆಗೇ ಕವಿತೆ ಹುಟ್ಟು­ತ್ತದೆ. ತೀರಾ ಸರ­ಳ­ವಾದ `ನ­ವಿ­ಲೂರ ಮನೆ­ಯಿಂದ ನುಡಿ­ಯೊಂದ ತಂದಿ­ಹೆನು, ಬಳೆಯ ತೊಡಿ­ಸು­ವು­ದಿಲ್ಲ ನಿಮಗೆ' ಎಂಬ ಸಾಲನ್ನು ಇಂಗ್ಲಿ­ಷಿಗೆ ಅನು­ವಾ­ದಿ­ಸಿ­ದರೆ ಅವ­ರಿಗೆ ಏನು ಅರ್ಥ­ವಾ­ಗು­ತ್ತದೆ. ಯಾವತ್ತೂ ಬಳೆ­ಯನ್ನೇ ತೊಡ­ದ­ವರು, ಬಳೆ­ಗಾ­ರ ಗಂಡ­ಸಿಗೆ ಬಳೆ ತೊಡಿ­ಸು­ವು­ದಿಲ್ಲ ಎಂಬ ಸಾಲಿನ ಹಿಂದಿನ ಗೇಲಿ­ಯನ್ನೋ ನವಿ­ಲೂರ ಮನೆ­ಯಿಂದ ತಂದ ನುಡಿ­ಯನ್ನೋ ಹೇಗೆ ಗ್ರಹಿ­ಸು­ತ್ತಾರೆ. ಹಾಗೇ ಯೇಟ್ಸ್ ಮತ್ತು ಕೀಟ್ಸ್ ಕೂಡ. ಅಲ್ಲಿಯ ಕಾವ್ಯ­ವನ್ನು ಅಲ್ಲಿಗೆ ಒಪ್ಪು­ವಂತೆ ಸವಿ­ಯ­ಬೇಕು. ಅನು­ವಾ­ದಿ­ಸು­ವು­ದಕ್ಕೇ ಹೋಗ­ಬಾ­ರದು. ಎಲ್ಲೋ ಒಂದೆ­ರಡು ಎಲ್ಲ­ರಿಗೂ ಒಪ್ಪುವ ಸಾಲು­ಗಳು ಇಷ್ಟ­ವಾ­ದರೆ ಸಂತೋ­ಷ­ಪ­ಡ­ಬೇಕು.
ಅದ­ರಲ್ಲೂ ಕನ್ನ­ಡ­ದಿಂದ ಬೇರೆ ಭಾಷೆಗೆ ಅನು­ವಾ­ದಿ­ಸು­ವು­ದಕ್ಕೆ ಕಷ್ಟ­ವಾ­ಗುವ ಪದ್ಯ­ಗ­ಳೆಂ­ದರೆ ದಾಸ­ರವು.
ಇದೊಂದು ಕೀರ್ತ­ನೆ­ಯನ್ನೇ ನೋಡಿ;


ಶೃಂಗಾ­ರ­ವಾ­ಗಿ­ಹುದು ಶ್ರೀಹ­ರಿಯ ಮಂಚ
ಅಂಗನೆ ರುಕ್ಮಿ­ಣಿ­ಯ­ರಸ ಮಲ­ಗಿ­ರುವ ಮಂಚ

ಬಡಗಿ ಮುಟ್ಟದ ಮಂಚ ಕಡ­ಲಿ­ನೊ­ಳ­ಗಿನ ಮಂಚ
ಮೃಡನ ತೋಳಿ­ನಲಿ ಅಡ­ಗಿ­ರುವ ಮಂಚ
ಸಡ­ಗ­ರ­ವುಳ್ಳ ಮಂಚ ಹೆಡೆ­ಯುಳ್ಳ ಹೊಸ ಮಂಚ

... ಹೀಗೆ ಸಾಗು­ತ್ತದೆ ಈ ಗೀತೆ. ಇದನ್ನು ಯಾರಾ­ದರೂ ಇಂಗ್ಲಿ­ಷಿಗೆ ಫ್ರೆಂಚಿಗೂ ಅನು­ವಾ­ದಿ­ಸಿ­ದರೆ ಅಲ್ಲಿಯ ಓದು­ಗ­ನಿಗೆ ಏನಾ­ದರೂ ದಕ್ಕು­ವು­ದಕ್ಕೆ ಸಾಧ್ಯವೇ? ಎಷ್ಟೇ ಟಿಪ್ಪ­ಣಿ­ಗ­ಳನ್ನು ಕೊಟ್ಟರೂ ಈ ಕಲ್ಪನೆ ಮೂಡು­ವು­ದಕ್ಕೆ ಸಾಧ್ಯವೇ?
ಈ ಒಂದೇ ಒಂದು ಹಾಡು ಹತ್ತಾರು ಕತೆ­ಗ­ಳನ್ನು ಹೇಳು­ತ್ತದೆ ಅನ್ನು­ವು­ದನ್ನು ಗಮ­ನಿಸಿ. ಪಲ್ಲ­ವಿ­ಯಲ್ಲೇ ಇದು ಅಂಗನೆ ರುಕ್ಮಿ­ಣಿ­ಯ­ರಸ ಅನ್ನು­ವಲ್ಲಿ, ಶ್ರೀಹ­ರಿಯ ಪತ್ನಿ ರುಕ್ಮಿಣಿ ಅನ್ನು­ತ್ತದೆ. ಅಲ್ಲಿಗೆ ಕೃಷ್ಣಾ­ವ­ತಾ­ರದ ಕತೆ ಗೊತ್ತಿ­ಲ್ಲ­ದ­ವ­ರಿಗೆ ರುಕ್ಮಿ­ಣಿಯೇ ಲಕ್ಪ್ಮಿ ಅನ್ನು­ವುದು ಗೊತ್ತಾ­ಗು­ವುದು ಸಾಧ್ಯ­ವಿಲ್ಲ. ಅಲ್ಲಿಂದ ಮುಂದೆ ಬಡಗಿ ಮುಟ್ಟದ ಮಂಚ ಎನ್ನು­ವು­ದನ್ನು ಅರ್ಥ­ಮಾ­ಡಿ­ಕೊಂ­ಡರೂ ಹಾಲಿನ ಸಮು­ದ್ರ­ದಲ್ಲಿ ವಿಷ್ಣು ಮಲ­ಗಿ­ರು­ತ್ತಾನೆ ಎನ್ನುವ ಕಲ್ಪನೆ ಇಲ್ಲ­ದ­ವ­ರಿಗೆ ಕಡ­ಲಿ­ನೊ­ಳ­ಗಿಹ ಮಂಚ ಎಂಬ ಸಾಲು ಗ್ರಹಿ­ಕೆಗೆ ನಿಲು­ಕದ್ದು. ಶಿವ ತೋಳಿಗೆ ಹಾವನ್ನು ಸುತ್ತಿ­ಕೊಂ­ಡಿ­ರು­ತ್ತಾನೆ ಅನ್ನೋದು ಗೊತ್ತಾ­ಗದ ಹೊರತು ಮೃಡನ ತೋಳಿ­ನಲಿ ಅಡ­ಗಿ­ರುವ ಮಂಚ ಎಂಬು­ದರ ಗೂಢಾರ್ಥ ಅರಿ­ವಾ­ಗದು. ಮತ್ತೆ ಈಶ್ವ­ರ­ನನ್ನು ಮೃಡ ಎಂದೇಕೆ ಕರೆ­ಯು­ತ್ತಾರೆ ಅನ್ನು­ವು­ದಕ್ಕೆ ಮತ್ತೊಂದು ಕತೆ ಕೇಳ­ಬೇ­ಕಾ­ಗು­ತ್ತದೆ.
ಇನ್ನೂ ಮುಂದಕ್ಕೆ ಓದು­ತ್ತಿ­ದ್ದಂತೆ ಮತ್ತೊಂ­ದೊಂದೇ ಕತೆ­ಗಳು ಎದು­ರಾ­ಗು­ತ್ತವೆ. ಕಾಳ­ಗ­ದೊ­ಳ­ರ್ಜು­ನನ ಮಕುಟ ಕೆಡ­ಹಿದ ಮಂಚ ಎಂಬ ಸಾಲಿ­ನಲ್ಲಿ ತಕ್ಪ­ಕನ ಕತೆ­ಯಿದೆ. ಅರ್ಜು­ನನ ಮಕು­ಟ­ವನ್ನೇ ಅದ್ಯಾಕೆ ಕೆಡ­ವಿತು ಅನ್ನು­ವುದು ಮತ್ತೊಂದು ಕತೆ.
ಕತೆ­ಯನ್ನು ಅನು­ವಾ­ದಿ­ಸ­ಬ­ಹುದು. ನಾಟ­ಕ­ವನ್ನು ಮತ್ತೊಂದು ಭಾಷೆಗೆ ಅಳ­ವ­ಡಿ­ಸ­ಬ­ಹುದು. ಕಷ್ಟ­ಪ­ಟ್ಟರೆ ಪ್ರಬಂ­ಧ­ವನ್ನೂ ನಮ್ಮ­ದ­ಲ್ಲದ ಭಾಷೆ­ಯಿಂದ ತಂದು ಓದಿ ಸುಖಿ­ಸ­ಬ­ಹುದು. ಆದರೆ ಕಾವ್ಯ ಮಾತ್ರ ಅದೇ ಭಾಷೆ­ಯಲ್ಲಿ ಹುಟ್ಟ­ಬೇಕು. ಅಷ್ಟೇ ಅಲ್ಲ, ಒಂದು ಭಾಷೆ­ಯಲ್ಲಿ ಒಂದು ರೂಪ­ದಲ್ಲಿ ಅರ­ಳಿದ ಕವಿ­ತೆ­ಯನ್ನು ಮತ್ತೊಂದು ರೂಪ­ದಲ್ಲಿ ಪ್ರಕ­ಟ­ಪ­ಡಿ­ಸು­ವುದೂ ಕಷ್ಟವೇ. ಮಂಕು­ತಿ­ಮ್ಮನ ಕಗ್ಗ­ವನ್ನೋ, ಅಂತಃ­ಪು­ರ­ಗೀ­ತೆ­ಯನ್ನೋ ಇನ್ನೊಂದು ಥರ ಬರೆ­ಯ­ಬ­ಹುದಾ ಯೋಚಿಸಿ ನೋಡಿ!
ಸರ್ವಜ್ಞ ಬರೆದ ಮೂರು ಸಾಲಿನ ತ್ರಿಪ­ದಿ­ಗ­ಳನ್ನು ಮತ್ತೊಂದು ಭಾಷೆಗೆ ಅನು­ವಾ­ದಿ­ಸ­ಲಿಕ್ಕೆ ಹೊರ­ಟರೆ ಎಂಥ ಅನಾ­ಹು­ತ­ವಾ­ದೀತು ಯೋಚಿಸಿ;
ಬೆರೆ­ವಂಗೆ ರೋಗ­ವೂ ಮೊರೆ­ವಂಗೆ ರಾಗ­ವೂ
ಬರೆ­ವಂಗೆ ಓದು- ಬರು­ವಂತೆ ಸಾಧಿ­ಪ­ಗೆ
ಬಾರ­ದಿ­ಹು­ದುಂಟೆ? ಸರ್ವಜ್ಞ.

ಉಂಡು ಕೆಂಡವ ಕಾಸಿ ಉಂಡು ಶತ­ಪಥ ನಡೆ­ದು
ಉಂಡೆ­ಡದ ಮಗ್ಗುಲಲಿ ಮಲಗೆ ವೈದ್ಯ­ನಾ
ಭಂಡಾ­ಟ­ವಿಲ್ಲ! ಸರ್ವಜ್ಞ.
ಚಿತ್ರ- ಈ ಫೊಟೋ ಕಳುಹಿಸಿಕೊಟ್ಟದ್ದು ಗೆಳೆಯ ಹರಿಪ್ರಸಾದ್. ಅವರಿಗೆ ಅವರ ಗೆಳೆಯರಾರೋ ಕಳುಹಿಸಿದರಂತೆ. ಇದನ್ನು ಹಿಡಿದವನ ಹೆಸರು ಕೃಷ್ಣ ಘುಲೆ. ಹಾವು ಹಿಡಿಯುವುದರಲ್ಲಿ ಆತ ನಿಷ್ಣಾತ. ಈ ಇಪ್ಪತ್ತು ಕೇಜಿ ತೂಗುವ ಹನ್ನೆರಡು ಅಡಿ 3 ಇಂಚು ಉದ್ದದ ಹಾವನ್ನು ಆತ ಹಿಡಿದದ್ದು ಗೋವಾದಲ್ಲಿ.

14 comments:

suptadeepti said...

ಶ್ರೀಹರಿಯ ಮಂಚವನ್ನು ಪತಾಕೆಯಾಗಿ ಹಿಡಿದಿರುವ ಪುಣ್ಯಾತ್ಮ ಯಾರಪ್ಪ ಇದು? ಚಿತ್ರ ನೋಡಿಯೇ ಭಯವಾಯ್ತು. ಅವರ ಎದುರಿಗೆ ನಿಲ್ಲಲು ಹೇಳಬೇಡಿ. ಪ್ಲೀಸ್.

pradyumna said...

good concept......

jai said...

Where can I get High resolutiuon Photo of this snake? Where exactly was this snake caught or any details of this Snake?

SHREE said...

ನೂರಕ್ಕೆ ನೂರು ಒಪ್ಪಿಕೊಳ್ಳಬೇಕಾದ ಮಾತು ಹೇಳಿದ್ದೀರ ಜೋಗಿ ಸರ್..

rumbleramble said...

Jogi Jangamare, malegaalada ee sanjeyalli olleya vichara tilidaddu kene bereta, ghama ghamisuva haalannu kudidantaayitu-- chaliyu doora, bechchane hitavada anubhava bere. aha!!!

pushpa said...

ahudahudu, oppide. astuddada havu edurige ittu howda alva andre enta kelidru yes, yes!
pushpa, manglooru.

Anonymous said...

ಷೇಕ್ಸ್ ಪಿಯರ್ ಸಾನೆಟ್ಟುಗಳನ್ನು ಕನ್ನಡದಲ್ಲಿ ಓದಿದಾಗ, ಕಾಳಿದಾಸನ ಶಾಕುಂತಲ ಅಥವಾ ಮೇಘದೂತವನ್ನು ಎಸ್.ವಿ.ಪರಮೇಶ್ಬರ ಭಟ್ಟರು ಅನುವಾದಿಸಿದ ಹಳೆಗನ್ನಡದಲ್ಲಿ ಓದಿದಾಗ ಹೀಗೇ ಅನ್ನಿಸಿತ್ತು. ಹಾಗಂತ ಪರಮೇಶ್ವರ ಭಟ್ಟರು ಸಾಮಾನ್ಯರೇನಲ್ಲ. ಆದರೆ, ಪ್ರತಿ ಭಾಷೆಗೂ ಅದರದ್ದೇ ಶಬ್ದಲಾಲಿತ್ಯವಿರುತ್ತದೆ. ಅದನ್ನು ಉಳಿಸಿಕೊಂಡು ಅನುವಾದ ಮಾಡುವುದು ಕಷ್ಟ. ಶಬ್ದಲಾಲಿತ್ಯಕ್ಕೆ ಗಮನ ಕೊಟ್ಟರೆ ಅರ್ಥ ಕೆಡುವ ಅಪಾಯ. ಕಾವ್ಯವನ್ನು ಅದದೇ ಭಾಷೆಯಲ್ಲಿ ಓದುವುದು ಒಳ್ಳೆಯದು. ಇಷ್ಟಕ್ಕೂ ನನಗೆ ಆ ಭಾಷೆ ಬರುವುದಿಲ್ಲ, ಹಾಗಾಗಿ ಓದಲು ಸಾಧ್ಯವಿಲ್ಲ ಎಂದರೆ ಭಾರೀ ನಷ್ಟವೇನೂ ಇಲ್ಲವಲ್ಲ! ಒಂದು ಮಜಾ ಏನು ಅಂದ್ರೆ, ನಮಗೆ ಎರಡೂ ಭಾಷೆ ಗೊತ್ತಿದ್ದಾಗ ಮಾತ್ರ ಈ ಕೊರತೆ ಕಾಣಿಸುತ್ತದೆ. ಕನ್ನಡಕ್ಕೆ ಅನುವಾದಿಸಿದ ಉರ್ದು ಕವಿತೆಗಳನ್ನು ಯಾವ ತಕರಾರಿಲ್ಲದೆ ಓದುವುದಿಲ್ಲವೇ?
- ಸೀತಾಳಭಾವಿ

Kamalakar said...

ನಾನು ಸೀತಾಳಭಾವಿಯರ ಜತೆ ಒಪ್ಪುತ್ತೇನೆ. ಅನುವಾದ ಕುರಿತಾದ ಅಸಡ್ದೆಯ ಹಿಂದೆ ಜೋಗಿಯವರು ಮೂಲ ಮತ್ತು ಅನುವಾದಿತಗಳ ನಡುವೆ ಏರ್ಪಡಿಸಿಕೊಳ್ಳುವ ಮೌಲ್ಯ ಇದೆ. ಈ ಮೌಲ್ಯದ ಪ್ರಕಾರ ಅನುವಾದಿತ ಕೃತಿ ತನ್ನ ಮೂಲದ ನೆರಳು, ದಾಸ, ಮೂಲದಂತೇ ಇರಬೇಕಾದದ್ದು. ಹಾಗೇನೂ ಆಗಬೇಕಾಗಿಲ್ಲವಲ್ಲ. ಹಲವರು ಅನ್ನುವ ಹಾಗೆ, ಅನುವಾದವೂ ಒಂದು ಮೂಲ ಕೃತಿಯೇ. ಯಾಕೆಂದರೆ ಯಾವ ಕೃತಿಯೂ ಆತ್ಯಂತಿಕವಾದ ಒಂದೇ ರೂಪದಲ್ಲಿರಲಾರದ್ದರಿಂದ, ಅನುವಾದಿತ ಕೃತಿ ಮೂಲಕ್ಕೆ ತಕ್ಕದ್ದೋ ಅಲ್ಲವೋ ಅನ್ನುವ ತೀರ್ಮಾನವೇ ಬೇಕಿಲ್ಲ. ಏಕಭಾಷಿಗಳ ದೃಷ್ಟಿಯಲ್ಲಿ ನೋಡಿದರೆ, ಜೋಗಿಯವರು ಅನ್ನುವ ಅಸಾಧ್ಯತೆ ಹೇಗೆ ದ್ವಿಭಾಷಿಗಳ ಒತ್ತಾಯದ ದೃಷ್ಟಿಕೋನ ಎಂದು ಅರಿವಿಗೆ ಬರುತ್ತದೆ.
ಕಮಲಾಕರ

ಗಿರೀಶ್ ರಾವ್, ಎಚ್ (ಜೋಗಿ) said...

ಸೀತಾಳಭಾವಿ ಮತ್ತು ಕಮಲಾಕರ್ ವಾದ ನನಗೂ ಒಪ್ಪಿಗೆಯೇ. ನಾನು ಹೇಳುತ್ತಿರುವುದು ಅನುವಾದದ ಭಾಷೆಯ ಬಗ್ಗೆ ಅಲ್ಲ, ಸನ್ನಿವೇಶಧ ಬಗ್ಗೆ. ಮಾನವ ಸಂಬಂಧಗಳ ಕುರಿತು ಮಾತಾಡುವಾಗ ಅನುವಾದದಲ್ಲಿ ಅಂಥ ತಪ್ಪುಗಳೇನೂ ಆಗಲಾರವು. ಆದರೆ, ಯಾವಾಗ ನಾವು ಸನ್ನಿವೇಶ, ಸಂದರ್ಭದ ಕುರಿತು ಹೇಳುತ್ತೇವೋ, ಆಗ ಓದುಗನಿಗೆ ಅನುವಾದ ಅರ್ಥವಾಗುವ ಸಂಭಾವ್ಯ ಕಡಿಮೆ. ವೈಯನ್ಕೆ ಹೇಳುತ್ತಿದ್ದರು- ಒಂದು ಇಂಗ್ಲಿಷ್ ನಾಟಕವನ್ನು ಅನುವಾದಿಸುವ ಹೊತ್ತಲ್ಲಿ ಲಂಕೇಶ್- o olive tree..ಎಂಬ ಉದ್ಗಾರವನ್ನು ಓ ಜೀವವೃಕ್ಷವೇ ಎಂದು ಮಾಡಿದ್ದರಂತೆ. ಇತ್ತೀಚೆಗೆ ಕರೀಗೌಡ ಬೀಚನಹಳ್ಳಿಯವರು ಕತೆಯೊಂದನ್ನು ಅನುವಾದಿಸುವ ಹೊತ್ತಿಗೆ she made a boat from trunk ಅನ್ನುವುದನ್ನು ಪೆಟ್ಟಿಗೆಯಿಂದ ಮಾಡಿದ ದೋಣಿ ಎಂದು ಬಳಸಿದ್ದರು. ದಾಸರ ಪದಗಳನ್ನೇ ನೋಡಿ-
ಯಮಸುತನ ರಾಣಿಗೆ ಅಕ್ಷಯ ವಸನವನಿತ್ತೆ
ಸಮಯದಲ್ಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ..
ಎಂಬ ಸಾಲು ಮತ್ತೊಂದು ದೇಶದ ಭಾಷೆಗೆ ಹೋದಾಗ ಯಮಸುತ, ಅವನ ರಾಣಿ, ಅಕ್ಷಯ ವಸನ, ಅಜಮಿಳನ ಕತೆ ಎಲ್ಲವನ್ನೂ ಹೇಳಬೇಕಾಗುತ್ತದೆ. ಇಲ್ಲದೇ ಹೋದರೆ ರೆಫರೆನ್ಸ್ ಟು ಕಾಂಟೆಕ್ಸ್ಟೇ ತಪ್ಪಿಗೋಗುತ್ತದೆ.
ಉರ್ದು ಕವಿತೆಗಳ ಭಾವ ಪ್ರೇಮ. ಪ್ರೇಮದ ಬಗ್ಗೆ ಯಾವ ಭಾಷೆಯಲ್ಲಿ ಹೇಳಿದರೂ ಇಷ್ಟವಾಗುತ್ತದೆ. ಅದೇ ಯೇಟ್ಸೇ ಕವಿತೆಗಳನ್ನು ಹಾಗೆ ಅರ್ಥಮಾಡಿಕೊಳ್ಳಿ ನೋಡೋಣ.
-ಜೋಗಿ

suptadeepti said...

ಜೋಗಿಯವರ ವಾದಕ್ಕೆ ನನ್ನದೂ ಒಂದು ಓಟು. ಅನುವಾದ (ಭಾವಾನುವಾದವೇ ಇರಲಿ, ಪೂರ್ಣಾನುವಾದವೇ ಇರಲಿ) ಅದು ಭಾರತೀಯ ಭಾಷೆಯಿಂದ ಭಾರತೀಯ ಭಾಷೆಗೆ ಅಷ್ಟೊಂದು ಬದಲಾಗಲಾರದು (ಬೇಂದ್ರೆಯವರ "ಕನ್ನಡ ಮೇಘದೂತ"ವನ್ನು ಇಲ್ಲಿ ಸ್ಮರಿಸಬಹುದು; ಅದೊಂದು ಅದ್ಭುತ ಕನ್ನಡೀಕರಣ). ಆದರೆ ಭಾವಸಂದರ್ಭ ಬದಲಾಗುವ ಆಂಗ್ಲ ಅಥವಾ ಇನ್ನಿತರ ಭಾಷೆಗಳಿಂದ ಕನ್ನಡಕ್ಕಾಗಲೀ, ಕನ್ನಡದಿಂದ ಪ್ರಪಂಚದ ಬೇರೆ ಭಾಷೆಗಾಗಲೀ ಸಾಹಿತ್ಯ ಭಾಷೋಲ್ಲಂಘನ ಮಾಡಬೇಕಾದರೆ ತೊಡಕುಗಳು ಸಹಜ.

dinesh said...

ಭಾಷೆಗೂ ಭಾವನೆಗೂ ಇರುವ ಸಂಬಂಧವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್....

Raghavendra said...

ಕನ್ನಡದಿಂದ (ಅಥವಾ ಯಾವುದೇ ಭಾರತೀಯ ಭಾಷೆಯಿಂದ) ಇಂಗ್ಲೀಷ್ ಗೆ ಅನುವಾದಿಸುವಾಗ ಪಾಶ್ಚಾತ್ಯ (ಅಥವಾ ಭಾರತೀಯರಲ್ಲದ) ಓದುಗರನ್ನು ಗಮನದಲ್ಲಿರಿಸಿಕೊಂಡು, ಅವರಿಗೆ ಅನುಕೂಲವಾಗುವಂತೆ ಅನುವಾದಿಸಲು ಹೊರಟರೆ ಅನುವಾದ ಕೆಟ್ಟು ಹೋಗುವ ಸಾಧ್ಯತೆಯೇ ಹೆಚ್ಚು (ಕೂಡಲಸಂಗಮದೇವ God of meeting rivers ಆಗುವಂತೆ).

ಈಗ ಬ್ಲಾಗ್ ಅನ್ನುವ ಶಬ್ದವನ್ನೇ ತೆಗೆದುಕೊಳ್ಳೋಣ, ಅದೆಷ್ಟು ಸುಲಭವಾಗಿ ಅದನ್ನು ಇಂಗ್ಲೀಷ್ ಮತ್ತು ಕನ್ನಡ (ಬ್ಲಾಗುವುದು) ಭಾಷೆಗಳು ತಮ್ಮದನ್ನಾಗಿ ಮಾಡಿಕೊಂಡವು ನೋಡಿ. ಹಾಗೇ ಯಾಕೆ ಭಾರತೀಯ ಭಾಷೆಯ ಶಬ್ದಗಳೂ “ಕಾವ್ಯ”ದ ಅನುವಾದದಲ್ಲಿ ಹಾಗೆಯೇ ಬಳಕೆಯಾಗಬಾರದು?

ಘಂಟಾನಾದ, ಮಂಗಳಾರತಿ ಎಂಬಂತಹ ಶಬ್ದಗಳ ಪ್ರತಿಮೆ, ವಿಶಾಲಾರ್ಥಗಳನ್ನು ಕಟ್ಟಿಕೊಡಲು ಯಾವ ಶಬ್ದಗಳಿವೆ ಇಂಗ್ಲೀಷ್ ನಲ್ಲಿ? We should use the word ``mangalarathi'' itself instead of searching an English word for it.
Let the reader of that poetry take the pain of finding the meaning of that ``image''. ಬರೀ ಸಾಹಿತ್ಯ ಹೋದರೆ ಸಾಕಾಗದು, ಅದು ಶಬ್ದಸಹಿತವಾಗಿ (ಪ್ರತಿಮಾಸಹಿತವಾಗಿ) ಬೇರೆ ಭಾಷೆಗೆ ಹೋಗಬೇಕು, ಹೀಗನ್ನಿಸುತ್ತದೆ ನನಗೆ. ಅಂಕಿತನಾಮವೂ ಅನುವಾದವಾಗಿಬಿಟ್ಟರೆ ಹೇಗೆ?

NNANEE RAAAJAAA said...

respected sir, it is really interesting to read your writings

Hariprasad said...

nice concept....it should be view by so called our NAVYA Poets