ಕದಡಿದ ನೀರು ಕೊಂಚ ತಿಳಿಯಾಗಿದೆ. ಯು. ಆರ್. ಅನಂತಮೂರ್ತಿ ಮಾತು ಕಡಿಮೆ ಮಾಡಿ ಓದುವುದರಲ್ಲಿ ತೊಡಗಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಎಸ್. ಎಲ್. ಭೈರಪ್ಪ ಅನಂತಮೂರ್ತಿ ಹೇಳಿಕೆಯ ಕುರಿತು ಮಾತಾಡುವುದಕ್ಕೇ ಹೋಗಲಿಲ್ಲ. ‘ಆವರಣ’ದ ಓದು ಅನ್ನುವ ಒಂದು ಚರ್ಚೆಯಲ್ಲಿ ಭಾಗವಹಿಸಿದಾಗಲೂ ಅವರು ಅನಂತಮೂರ್ತಿಯವರ ಬಗ್ಗೆ ಮಾತಾಡಲಿಲ್ಲ.
ಈ ಅನಗತ್ಯ ವಿವಾದ ನಮಗೆ ಬೇಕಿರಲಿಲ್ಲ. ನಾವ್ಯಾರೂ ಒಂದು ಕೃತಿ ವಿವಾದಾತ್ಮಕ ಅನ್ನುವ ಕಾರಣಕ್ಕೆ ಅದನ್ನು ಓದುವುದಕ್ಕೆ ಹೋಗುವುದಿಲ್ಲ. ಓದು ನಮ್ಮ ಖಾಸಗಿ ಖುಷಿ. ಕೇವಲ ವಾದ ಮಾಡುವವರೂ ಬರೆಯುವವರೂ ಚರ್ಚಾಪಟುಗಳೂ ವಿಮರ್ಶಕರೂ ಒಂದು ಕೃತಿಯನ್ನು ಅಧ್ಯಯನದ ದೃಷ್ಟಿಯಿಂದ ಓದಬಹುದು. ಅಂಥವರು ಸಾವಿರ ಓದುಗರಲ್ಲಿ ಒಬ್ಬರೋ ಇಬ್ಬರೋ ಆಗಿರಬಹುದು. ಅವರೂ ಕೂಡ ಆ ಕೃತಿಯನ್ನು ದುಡ್ಡುಕೊಟ್ಟು ಕೊಂಡುಕೊಂಡಿರಲಿಕ್ಕಿಲ್ಲ. ಕಾಂಪ್ಲಿಮೆಂಟರಿ ಕಾಪಿ ಓದಿಕೊಂಡು ಅವರು ಅಧ್ಯಯನಾಸಕ್ತರಾಗುತ್ತಾರೆ.
ಆದರೆ, ಓದುಗ? ಭೈರಪ್ಪನವರ ಪುಸ್ತಕ ಬಂದಿದೆ ಅನ್ನುವುದು ಗೊತ್ತಾಗುತ್ತಿದ್ದಂತೆ ಪಾರ್ಕಿಂಗಿಗೆ ಒದ್ದಾಡಿ, ಕೆಲಸದ ನಡುವೆ ಹೇಗೋ ಬಿಡುವು ಮಾಡಿಕೊಂಡು ಪುಸ್ತಕದಗಂಡಿಗೆ ನುಗ್ಗಿ ರಿಯಾಯಿತಿಗೂ ಕಾಯದೇ ಪುಸ್ತಕ ಕೊಂಡುಕೊಂಡು ಅದರ ಮುಖಪುಟ ಕೊಳೆಯಾಗದಂತೆ ಮನೆಗೆ ಕೊಂಡೊಯ್ದು, ತನ್ನ ಏಕಾಂತದಲ್ಲಿ ಓದುತ್ತಾ, ಗೆಳೆಯರಿಗೆ ಇಂಥದ್ದೊಂದು ಪುಸ್ತಕ ಓದ್ತಿದ್ದೇನೆ ಅಂತ ಹೇಳಿ ಸುಖಿಸುತ್ತಾ, ತನಗೆ ತಾನೇ ಹೆಮ್ಮೆ ಪಡುತ್ತಾ, ಹೊಸ ಹೊಳಹೊಂದು ಕಂಡರೆ ಖುಷಿಪಡುತ್ತಾ ಇದ್ದುಬಿಡುತ್ತಾನೆ. ಆ ಸಂಭ್ರಮ ಬೈರಪ್ಪನವರ ಕೃತಿಯ ಬಗ್ಗೆ ಮಾತ್ರವಲ್ಲ, ಅನಂತಮೂರ್ತಿ, ತೇಜಸ್ವಿ, ಕಂಬಾರ, ರವಿ ಬೆಳಗೆರೆ ಯಾರು ಬರೆದರೂ ಅವರವರ ಓದುಗರಿಗೆ ಇದ್ದೇ ಇರುತ್ತದೆ.
ಆದರೆ ನಮ್ಮಂಥ ಓದುಗರ ಬಗ್ಗೆ ಈ ಲೇಖಕರಿಗೆ ನಿಜಕ್ಕೂ ಪ್ರೀತಿ ಇರುತ್ತದಾ? ಒಮ್ಮೆ ಲಂಕೇಶರು ಓದುಗನೊಬ್ಬನಿಗೆ ‘ನೀನೊಬ್ಬ ಜುಜುಬಿ ಓದುಗ’ ಎಂದು ಬೈದಿದ್ದರು. ಇವತ್ತಿಗೂ ನನ್ನ ಕೃತಿ ಏನನ್ನಿಸಿತು ಅಂತ ಒಬ್ಬ ಓದುಗನನ್ನೂ ಲೇಖಕ ಕೇಳುವುದಿಲ್ಲ. ಅವನಿಗೆ ಓದುಗರ ಅಭಿಪ್ರಾಯ ಮುಖ್ಯವೇ ಅಲ್ಲ. ಯಾಕೆಂದರೆ ಅದು ದಾಖಲಾಗುವುದಿಲ್ಲ ಅನ್ನುವುದು ಲೇಖಕನಿಗೆ ಗೊತ್ತು. ಅದರ ಬದಲು ಅವರು ವಿಮರ್ಶಕರ ಅಭಿಪ್ರಾಯಕ್ಕಷ್ಟೇ ಬೆಲೆ ಕೊಡುತ್ತಾರೆ. ಸಾಹಿತ್ಯ ಚರಿತ್ರೆಯಲ್ಲಿ ತಮಗೊಂದು ಸ್ಥಾನ ದೊರಕಿಸಿಕೊಡುವವರು ಅವರೇ ತಾನೇ?
ಆದರೆ ಯಾವ ಓದುಗ ಕೂಡ ವಿಮರ್ಶಕನನ್ನು ನೆಚ್ಚಿಕೊಂಡಿಲ್ಲ. ಕರ್ವಾಲೋ ಕುರಿತು ವಿಮರ್ಶೆ ಪ್ರಕಟವಾಗುವ ಮೊದಲೇ ಅದನ್ನು ಮೆಚ್ಚಿಕೊಂಡವರ ಸಂಖ್ಯೆ ಲಕ್ಷಾಂತರ. ‘ಪರಿಸರದ ಕತೆಗಳು’ ಕುರಿತು ವಿಮರ್ಶೆಯೇ ಬಂದಿಲ್ಲ. ಯಾಕೆಂದರೆ ಅಲ್ಲಿ ವಿಮರ್ಶಕನಿಗೆ ಪ್ರವೇಶಕ್ಕೆ ಅವಕಾಶವೇ ಇಲ್ಲವಲ್ಲ? ಹಾಗೇ, ಕಾರಂತರ ಕಾದಂಬರಿಗಳು, ಕುವೆಂಪು ಕಾದಂಬರಿಗಳೂ, ನಾವು ಓದಿದ ಎಷ್ಟೋ ಕತೆ, ಕವಿತೆ, ಕಾದಂಬರಿಗಳೂ ಯಾವ ಗದ್ದಲವನ್ನೂ ಮಾಡಲಿಲ್ಲ. ಅವರು ಕತೆಗಾರರೋ ಕಾದಂಬರಿಕಾರರೋ ಎಂದು ಪ್ರಶ್ನಿಸುವುದಕ್ಕೂ ಓದುಗರು ಹೋಗಲಿಲ್ಲ. ಕತೆ ಇಷ್ಟವಾಯಿತೋ ಇಲ್ಲವೋ ಅನ್ನುವುದನ್ನು ಬಿಟ್ಟರೆ ಅದಕ್ಕಿಂತ ಹೆಚ್ಚಿನ ಪ್ರಶ್ನೆಯನ್ನೇನೂ ಓದುಗ ಕೇಳಿಲ್ಲ.
ಒಂದು ಕೃತಿಯಿಂದಾಗಿ ಸಮಾಜವೇ ಬದಲಾಗುತ್ತದೆ. ಕೋಮುವಾದ, ಜಾತೀವಾದ, ಜನಾಂಗೀಯವಾದ ತಲೆದೋರುತ್ತದೆ ಅನ್ನುವುದೆಲ್ಲ ಸುಳ್ಳು ಅನ್ನಿಸುವುದಿಲ್ಲವೇ? ಆವರಣದಲ್ಲಿ ಅದೆಲ್ಲ ಇದೆ ಅಂತ ಇವರು ಹೇಳುವ ಮುಂಚೆಯೇ ಅದನ್ನು ಅರ್ಧ ಲಕ್ಷ ಮಂದಿ ಓದಿಯಾಗಿತ್ತು. ಅದರಿಂದಾಗಿ ಎಲ್ಲೂ ಸೌಹಾರ್ದ ಹಾಳಾದದ್ದು ಸುದ್ದಿಯಾಗಿಲ್ಲ. ತುಂಬ ಆಳಕ್ಕೆ ಇಳಿದು ತರ್ಕ ಕುತರ್ಕಗಳನ್ನು ಮುಂದಿಟ್ಟುಕೊಂಡು ಯೋಚಿಸುವ ಅಗತ್ಯ ಇದೆ ಅನ್ನಿಸುತ್ತದೆಯಾ? ಅಷ್ಟಕ್ಕೂ ಸಾಹಿತ್ಯ ಎನ್ನುವುದು ಇವರು ಭಾವಿಸಿದಷ್ಟು ಪ್ರಭಾವ ಬೀರುವ ಮಾಧ್ಯಮವಾ? ತಾವು ಮುಖ್ಯ ವಕ್ತಾರರು ಅಂದುಕೊಂಡಿರುವ ಸಾಹಿತಿಗಳ ಹೆಸರು ನಮ್ಮ ರಾಜ್ಯದ ಶೇಕಡಾ ಒಂದರಷ್ಟು ಮಂದಿಗೆ ಗೊತ್ತಿರಬಹುದಾ? ಅವರಲ್ಲಿ ಶೇಕಡಾ ಒಂದರಷ್ಟು ಮಂದಿ ಅವರ ವಿಮರ್ಶೆ ಓದಿರಬಹುದಾ? ಹಾಗಿದ್ದರೆ ಯಾಕೆ ಪಂಚಕೋಟಿ ಕನ್ನಡಿಗರ ನಾಡಲ್ಲಿ ಸಾವಿರ ಪ್ರತಿಗಳನ್ನು ಮಾರುವುದಕ್ಕೂ ಕಷ್ಟವಾಗುತ್ತಿದೆ?
ಸುಮ್ಮನೆ ಇದೆಲ್ಲ ನೆನಪಾಯಿತು. ಕವಿ ಯಾರು ಅನ್ನುವುದೂ ಗೊತ್ತಿಲ್ಲದೇ ಕೇಳಿ ಮೆಚ್ಚಿದ ‘ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನಾ ಕಣ್ಣಲ್ಲಿ ನಿನ್ನ ಹೆಸರು’ ಹಾಡು ನೆನಪಾಯಿತು. ಇವತ್ತಿಗೂ ಕವಿ ಯಾರೆಂದು ಗೊತ್ತಿಲ್ಲದ ಅದೆಷ್ಟೋ ಹಾಡುಗಳು ನೆನಪಾಗುತ್ತಿವೆ.
ಮಳೆ ಶುರುವಾಗುವುದರಲ್ಲಿದೆ. ಮಳೆಯ ಸಂಜೆ ಕಿಟಕಿಯ ಪಕ್ಕ ಕುಳಿತು ನೋಡುತ್ತಿದ್ದರೆ ಖುಷಿಯಾಗುತ್ತದೆ ಎಂದಾಕ್ಷಣ, ಅಲ್ಲಿ ಪಕ್ಕದ ಬೀದಿಯಲ್ಲಿ ಬಡವನ ಮನೆಗೆ ನೀರು ನುಗ್ಗುತ್ತಿದೆ. ಖುಷಿಪಡುವ ನೀನು ಜೀವವಿರೋಧಿ ಅಂದರೆ ಏನು ಸಾಯೋಣ?
Wednesday, June 6, 2007
Subscribe to:
Post Comments (Atom)
14 comments:
ಸಾಹಿತಿಗಳಲ್ಲೂ ಎಷ್ಟೊಂದು ಅಸೂಯೆ, ಅಸಮಾಧಾನ ಇರುತ್ತದೆ ಎಂಬುದೇ ನನಗೆ ಕೌತುಕದ ಸಂಗತಿ. ಇನ್ನೊಬ್ಬರಿಗೆ `ಜಾತಿ ಬಿಡಿ, ಮತ ಬಿಡಿ' ಎಂದೆಲ್ಲ ಕರೆ ನೀಡುವವರು ತಮ್ಮಲ್ಲೇ ಉಳಿದುಕೊಂಡ ಕೊಳಕನ್ನೇಕೆ ಹೊರಹಾಕುವ ಯತ್ನ ಮಾಡುವುದಿಲ್ಲ?!
ಅನಂತಮೂರ್ತಿ ಅವರ ಬರಹಗಳು ಒಂದು ಗುಂಪಿಗೆ ಮಾತ್ರ ಅರ್ಥವಾಗುತ್ತವೆ ಎಂಬ ಮಾತಿದೆ. ಅವರ ಕೃತಿಗಳು ಸಾವಿರ ಸಂಖ್ಯೆಯಲ್ಲಿ ಮಾರಾಟವಾಗುವುದೂ ಇಲ್ಲ. ಆದರೆ ಭೈರಪ್ಪ ಅವರ ಪುಸ್ತಕ ಸಿಗಬೇಕೆಂದರೆ ಗುಲ್ಬರ್ಗದಲ್ಲಿ ಒಂದು ತಿಂಗಳು ಕಾಯಬೇಕು!
`ಆವರಣ'ದ ಬಗ್ಗೆ ಮಾತಾಡಿ ಅನಂತಮೂರ್ತಿ ಕೆಟ್ಟರು; ಸುಮ್ಮನೇ ಇದ್ದು ಭೈರಪ್ಪ ವಿವಾದವನ್ನು ಎಂಜಾಯ್ ಮಾಡಿದರು ಎಂಬ ಭಾವನೆ ನಮ್ಮಲ್ಲಿ ಮೂಡಿದ್ದಂತೂ ಸುಳ್ಳಲ್ಲ...! ಅನಂತಮೂರ್ತಿಗೆ ವಿಮರ್ಶೆ ಮಾಡುವ ಹಕ್ಕಿದೆ; ಆದರೆ ಅದು ಒಂದು ಮಟ್ಟಕ್ಕೆ ತಲುಪಿದರೆ ಪರಿಣಾಮ ಏನೆಂಬುದು ಉಳಿದ ಅಂಥ `ಸ್ವಭಾವ'ದ ಸಾಹಿತಿಗಳಿಗೆ ಪಾಠ ಕಲಿಸಿದೆ!
-ಆತೀಪಿ
1976ರಲ್ಲಿ ನಾನು ಟಿ ಕೆ ರಾಮರಾವ್ ಕಾದಂಬರಿಗಳನ್ನು ಓದ್ತಾ ಇದ್ದೆ. ಆಮೇಲೆ ನನಗೆ ಚಿತ್ತಾಲರ ಶಿಕಾರಿ ಓದಲು ಕೊಟ್ಟರು. ಅದನ್ನೂ ಓದಿದೆ. ಓದುತ್ತಾ ಓದುತ್ತಾ ಬೆಳೆದೆ ಅಂದುಕೊಂಡು ಸಂತೋಷಪಡುತ್ತಿದ್ದೆ. ಅನಂತಮೂರ್ತಿ ಸಂಸ್ಕಾರ ಮೆಚ್ಕೊಂಡಿದ್ದೆ. ಆಗ ಅನಂತಮೂರ್ತಿ ಯಾರು ಅಂತಲೂ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಗೊತ್ತಾಗದೇ ಇದ್ದರೆ ಚೆನ್ನಾಗಿತ್ತು ಅನ್ನಿಸಿತ್ತು.
ಮುಖಪುಟ ಹರಿದು ಹೋಗಿ ಲೇಖಕ ಯಾರು ಅಂತಲೇ ಗೊತ್ತಿಲ್ಲದ ಎಷ್ಟೋ ಪುಸ್ತಕಗಳನ್ನು ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಿಂದ ತಂದು ಓದಿದ್ದಿದೆ. ಪುತಿನ ಬರೆದದ್ದು ಎಂದು ನೆನಪು- ಮಾಡುವವನದಲ್ಲ ಹಾಡು, ಹಾಡುವವನದು.
ನೀವು ಹೇಳಿದ ಹಾಗೆ ನನಗೆ ಜುಜುಬಿ ಓದುಗನಾಗಿಯೇ ಉಳಿಯುವುದಕ್ಕೆ ಇಷ್ಟ.
-ನರಸಿಂಹ ಭಟ್.ಕೆ.
>>>>>ಮಳೆ ಶುರುವಾಗುವುದರಲ್ಲಿದೆ. ಮಳೆಯ ಸಂಜೆ ಕಿಟಕಿಯ ಪಕ್ಕ ಕುಳಿತು ನೋಡುತ್ತಿದ್ದರೆ ಖುಷಿಯಾಗುತ್ತದೆ ಎಂದಾಕ್ಷಣ, ಅಲ್ಲಿ ಪಕ್ಕದ ಬೀದಿಯಲ್ಲಿ ಬಡವನ ಮನೆಗೆ ನೀರು ನುಗ್ಗುತ್ತಿದೆ. ಖುಷಿಪಡುವ ನೀನು ಜೀವವಿರೋಧಿ ಅಂದರೆ ಏನು ಸಾಯೋಣ?>>>>
ಸಾಲು ತುಂಬಾ ಇಷ್ಟವಾಯಿತು...
"ಮಳೆ ಶುರುವಾಗುವುದರಲ್ಲಿದೆ. ಮಳೆಯ ಸಂಜೆ ಕಿಟಕಿಯ ಪಕ್ಕ ಕುಳಿತು ನೋಡುತ್ತಿದ್ದರೆ ಖುಷಿಯಾಗುತ್ತದೆ ಎಂದಾಕ್ಷಣ, ಅಲ್ಲಿ ಪಕ್ಕದ ಬೀದಿಯಲ್ಲಿ ಬಡವನ ಮನೆಗೆ ನೀರು ನುಗ್ಗುತ್ತಿದೆ. ಖುಷಿಪಡುವ ನೀನು ಜೀವವಿರೋಧಿ ಅಂದರೆ ಏನು ಸಾಯೋಣ?"
- ನಕ್ಕು ಸುಸ್ತಾಯ್ತು :)
ಮಳೆಯನ್ನು ನೋಡಿ ಮನಸು ಖುಷಿ ಪಡುವುದು ಅತ್ಯಂತ ಸಹಜ. ಅದೂ ಕಿಟಕಿಯಲ್ಲಿ ಕುಳಿತು. ಏಕೆಂದರೆ ಮನಸಿಗೆ ಚನ್ನಾಗಿ ಗೊತ್ತು ನಾನು ಬೆಚ್ಚಗೆ ಮನೆಯೊಳಗೆ ಚಹದೊಂದಿಗೆ ಕುಳಿತಿದ್ದೇನೆ ಎಂದು. ಆದರೆ ಬೀದಿಯಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ಅಡ್ಡಾಡುತ್ತಿರುವವನಿಗೆ, ಮನೆಯ ಮಾಡು ಸೋರುತ್ತಿರುವವನಿಗೆ, ಬೀದಿಯ ಮಳೆ ನೀರು ಮನೆಯೊಳಕ್ಕೆ ನುಗ್ಗುತ್ತಿರುವವನಿಗೆ ಇಂತಹ ಯೋಚನೆ ಬರಲು ಸಾಧ್ಯವೇ ಇಲ್ಲ.
ಈ ಮನಸ್ಥಿತಿಯಿಂದಲೂ ಆವರಣವನ್ನು ಅವಲೋಕಿಸಬಹುದೇನೋ?
ಕೊನೆಯ ಪ್ಯಾರಾ ಅದೆಷ್ಟು ಇಷ್ಟವಾಯಿತೆಂದರೆ, ಅದನ್ನು ನನ್ನ ಇವತ್ತಿನ ಸ್ಟೇಟಸ್ ಮೆಸೇಜ್ ಮಾಡಿಕೊಂಡಿದ್ದೇನೆ! :)
ಪ್ರಿಯ ಜೋಗಿ,
ನಿಮ್ಮದು ನಿಜಕ್ಕೂ ಮೆಚ್ಚತಕ್ಕ ನಿಲುವೇ ಸರಿ. ಓದುವುದು ಹಾಗೂ ಬರೆಯುವದು ತೀರಾ ಖಾಸಗಿಯಾದ ಅನುಭವ. ಅದೆಲ್ಲಾ ಸರಿ,ಇಂಥದೊಂದು ಕೃತಿಯನ್ನು ಹೀಗೆ ಓದಬೇಕು, ಅದರಿಂದ ಇಂಥದೇ ಅರ್ಥ ಹೊರಡಿಸಿಕೊಳ್ಳಬೇಕು, ಅದು ಹೀಗ್ಹೀಗೆ ಭಾವನೆಗಳನ್ನು ಉತ್ಪತ್ತಿ ಮಾಡುತ್ತದೆ ಎಂದು ಹೇಳಲು ಓದುವುದೇನು ಬರೀ ರಸಾಯನಿಕ ಶಾಸ್ತ್ರದ ಪ್ರಕ್ರಿಯೆಯಾ.... ಪ್ರೀತಿಯಿಂದ
ಪ್ರಿಯ ಜೋಗಿ,
ಓದು ನಮ್ಮ ಖಾಸಗಿ ಖುಷಿ.
ಯಾವ ಓದುಗ ಕೂಡ ವಿಮರ್ಶಕನನ್ನು ನೆಚ್ಚಿಕೊಂಡಿಲ್ಲ..
ಕತೆ ಇಷ್ಟವಾಯಿತೋ ಇಲ್ಲವೋ ಅನ್ನುವುದನ್ನು ಬಿಟ್ಟರೆ..
ಒಂದು ಕೃತಿಯಿಂದಾಗಿ ಸಮಾಜವೇ ಬದಲಾಗುತ್ತದೆ....ಅನ್ನುವುದೆಲ್ಲ ಸುಳ್ಳು ಅನ್ನಿಸುವುದಿಲ್ಲವೇ?
ಓದುಗ ಜೀವಗಳಿಗೆ ಹತ್ತಿರವಾದ ಮಾತುಗಳು. ದಾಖಲು ಮಾಡಿ ಅಕ್ಷರ ರೂಪ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಮಾಡುವವನದಲ್ಲ ಹಾಡು, ಹಾಡುವವನದು..ಪು.ತಿ.ನ.ರ ಸಾಲುಗಳು, ಮತ್ತು ನಿಮ್ಮ ಕೊನೆಯ ಸಾಲುಗಳು ತುಂಬ ಹಿಡಿಸಿದವು..ನಿಮ್ಮೆಲ್ಲ ಬರಹಗಳ ಮಾಂತ್ರಿಕ ಮೋಡಿಯಂತೆ.
ಪ್ರೀತಿಯಿರಲಿ,
ಸಿಂಧು
ಛೆ!!!
ಹೊಲಸು ರಾಜಕೀಯ ಎನ್ನುವ ಪರಿಸ್ಥಿತಿ ಇತ್ತು...!
ಆದರೆ ಈಗ?
ಹೊಲಸು ಸಾಹಿತಿಗಳು!
ಟೀಕಿಸುವುದಿದ್ದರೆ... ಖುದ್ದಾಗಿ ಪತ್ರ ಬರೆಯಲಿ...ಮನೆಗೆ ಹೋಗಿ ವಾದ ಮಾಡಲಿ...ಆದರೆ ಅನಕ್ಷರಸ್ತರ ಹಾಗೆ ಬೀದಿ ಜಗಳ I hate it...ನಾನೊಬ್ಬನೆ ಅಲ್ಲ ಎಲ್ಲ ಕನ್ನಡಿಗರೊ!!!!
hfjhj
ಓದುಗ ಜುಜುಬಿಯಾಗಿಯೇ ಇರಲಿ, ಕೊಂಡು ಓದುತ್ತಾನೆ. ನನಗೂ ಹಾಗೇ ಇರಲು ಖುಷಿ, ಯಾರ ರಗಳೆ ಬೇಡ.
ಹಗರಣ ಮಾಡುವವರಿಗೆ ಏನಾದರೊಂದು ಕಾರಣ ಬೇಕು, ಎಲ್ಲೋ ಏನೋ ಸಿಕ್ಕೇ ಸಿಗುತ್ತದೆ (ಹುಡುಕಿಕೊಳ್ಳುತ್ತಾರೆ). ಮೌನದ ನಿಲುವಿನಲ್ಲಿ ಹಿರಿಯರು ಇನ್ನೂ ಗೌರವ ಪಡೆಯುತ್ತಾರೆ. ಸಧ್ಯ ನಡೆದದ್ದೂ ಅಷ್ಟೇ. ಅಲ್ಲವೆ?
ಕೊನೆಯ ಸಾಲುಗಳಿಗೆ ನನ್ನ ಮತವೂ ಇದೆ. ಎಲ್ಲ ಅಭಿಪ್ರಾಯಗಳಲ್ಲೂ ಕೊರೆ ಹುಡುಕುವವರಿಗೆ ಏನು ಮಾಡೋಣ? ನೆರೆಗೆ ಅಂಜುವವರು ಒಂದು ಕಡೆಯಾದರೆ ಬರಕ್ಕೆ ಹೆದರುವವರು ಇನ್ನೊಂದು ಕಡೆ. "ಲೋಕೋ ಭಿನ್ನ ರುಚಿಃ" ಅನ್ನುವುದು ಇದಕ್ಕೇ ತಾನೇ!
ಆತ್ಮೀಯ ಜೋಗಿ,
ಸೈನೇಡ್ ಸಿನಿಮಾ ತಂಡದವರು ಆ ಚಿತ್ರದ ಕುರಿತಾಗಿ ಕೊಡುತ್ತಿದ್ದ ಹೇಳಿಕೆಗೂ ಚಿತ್ರದಲ್ಲಿ ಕಾಣುತ್ತಿದ್ದ ನಿಲುವಿಗೂ ಇರುವ ವ್ಯತ್ಯಾಸದ ಬಗ್ಗೆ ಬರೆದಾಗ, ನಟಿಯೊಬ್ಬರು ಹೇಳಿದ್ದರು- 'He is just a viewer. We should not take him seriously' ಅಂತ. ಅವರಿಗೆ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಿಲ್ಲ, ಬೇರೊಬ್ಬ ನಟಿಯ ಕುರಿತಾಗಿ ಮೆಚ್ಚಿ ಬರೆದಿದ್ದು ಸಿಟ್ಟು ತರಿಸಿತ್ತು.
ಅದೇನೋ ಸರಿ. ಆದರೆ, ಅನಂತಮೂರ್ತಿಯವರ ಭಾಷಣ:
’ಭೈರಪ್ಪ ನನ್ನ ಜೊತೆಯ ಬರಹಗಾರ..........ಮಹತ್ವದ ಲೇಖಕ ಅಂತ ನನಗೆ ಅನಿಸಿಲಿಲ್ಲ’
’ಆವರಣ ಒಳ್ಳೆಯ ಕೃತಿ ಅಲ್ಲ.............ಗೃಹಭಂಗ ಒಳ್ಳೆಯ ಕೃತಿ’
’ಟ್ರೆಡಿಶನಲಿಶ್ಟ್, ನನ್ನನ್ನು ನಿರಂತರವಾಗಿ ವಿರೋಧಿಸುತ್ತಲೇ ಇದ್ದ ಶಂಕರ ಮೊಕಾಶಿ ಬಹಳ ದೊಡ್ಡ ಬರಹಗಾರ’
ಬಹಿರಂಗವಾಗಿ ಜಗಳ ಆಡಬಾರದಾಗಿತ್ತು, ಸರಿ. ಭೈರಪ್ಪನವರ ಕೃತಿಗಳು ನನಗೇಕೆ ಇಷ್ಟ ಆಗೋದಿಲ್ಲ ಅಂತ ’ಅನಂತಮೂರ್ತಿ’ ಹೇಳಬಾರದಿತ್ತಾ?. ಸಾಮಾನ್ಯ ಓದುಗ ಒಬ್ಬ ಹೇಳಿದರೆ ಅದು ಅಂತ ದೊಡ್ಡ ವಿಷಯ ಅಲ್ಲವಾ?. ಆವರಣ ಕಾದಂಬರಿ ಭೈರಪ್ಪನವರ ಅಭಿಮಾನಿಗಳಿಗೇ ಖುಷಿ ಕೊಡಲಿಲ್ಲ ಅಂತ ಅವರ ಅಭಿಮಾನಿ ಒಬ್ಬರು ಬರೆದಿದ್ದರು.
ಬಹಳ ಮಂದಿ ಓದಿದ್ದಾರೆ ಅಂದ ಮಾತ್ರಕ್ಕೆ ಅದು ಒಳ್ಳೆಯ ಕೃತಿಯಾ?. ಕೇವಲ ವಿವಾದದಿಂದಾಗಿ ಪ್ರಚಾರ ಪಡೆದು ಹೆಚ್ಚು ಮಾರಾಟವಾಗುವ ಕೃತಿ ಒದುಗರನ್ನು ಹೆಚ್ಚಿಸಿದೆ ಅನ್ನಬಹುದಾ?. ಆವರಣದ ಅವಶ್ಯಕತೆ ಇತ್ತಾ?- ಅಂತ ಒಂದು ಕಡೆ ಅನಿಸಿದರೆ. ಇಂದೊಂದು ಕೃತಿ ಬೇಕಾಗಿತ್ತು, ನಮ್ಮೆಲ್ಲ ಬೂಟಾಟಿಕೆಯನ್ನ ಕಳಚಿಕೊಳ್ಳುವುದಕ್ಕೆ ಅಂತ ಅನಿಸುತ್ತದೆ. ರಂಜನೆ ಅನ್ನುವುದು ಸುಳ್ಳು. ಆದರೆ, ಸತ್ಯಾನ್ವೇಷನೆ ಅನ್ನೋದನ್ನ ಕೇಳಿ ಕೇಳಿ ಆ ಪದವೂ ಸವಕಲಾಗಿದೆ.
ಒಂದು ಕೃತಿಯಿಂದಾಗಿ ಕ್ರಾಂತಿ ಆಗುತ್ತದೆ ಅನ್ನುವುದು ಸುಳ್ಳಿರಬಹುದು. ಆದರೆ, ಒಂದು ಕೃತಿ ’ಓದುಗ’ರಲ್ಲಿ ಕೊಂಚ ಮಟ್ಟಿನ ಅಭಿಪ್ರಾಯಗಳನ್ನು ಸ್ವಲ್ಪ ಸಮಯಕ್ಕಾದರು ಉಳಿಸುತ್ತದೆ. ಅಂತಹ ವಿಚಾರಗಳು ನಿರಂತರವಾಗಿ ಬರುತ್ತಲೇ ಇದ್ದಾಗ ಒಂದು ಪ್ರಜ್ಞೆಯನ್ನು/ಅಭಿರುಚಿಯನ್ನು ಬೆಳೆಸಿಯೇ ಬೆಳಸುತ್ತದೆ. ಅಂತಹ ಪ್ರಜ್ಞೆಯಿಂದಲೇ, ಅದರಿಂದ ಹೊಮ್ಮಿದ ವಿವಿಧ ಅಭಿವ್ಯಕ್ತಿಗಳಿಂದಲೇ ಅಲ್ಲವೆ ನಾಡು, ದೇಶ, ಸಂಸ್ಕೃತಿಗಳು ಅರ್ಥ ಪಡೆದುಕೊಳ್ಳುವುದು?.
ಕೇವಲ ಓದಿನ ಖುಷಿ ಅನ್ನುವುದಾದರೆ ವಿಶ್ಲೇಷಣೆ ಯಾಕೆ?. ಮನುಷ್ಯನ ಸ್ವಭಾವವೇ ಹಾಗಲ್ಲವಾ, ಮನಸ್ಸಿಗೆ ನಾಟಿದ್ದನ್ನು ಯಾವುದೇ ಒತ್ತಾಯವಿಲ್ಲದೆ ತನ್ನಿಂತಾನೇ ಎಂಬಂತೆ ಬುದ್ಧಿ ಮಥಿಸುವುದಕ್ಕೆ ಶುರುಮಾಡುವುದು?. ಆ ಮಂಥನವೇ ನಡೆಯಬಾರದು ಎಂದರೆ ಮನುಷ್ಯನ ಬೌದ್ಧಿಕತೆಯನ್ನೇ ಅದುಮಿ ನಿರಾಕರಿಸಿದ ಹಾಗಲ್ಲವೇ?. ನರಸಿಂಹಸ್ವಾಮಿ, ಭೈರಪ್ಪ, ಅನಂತಮೂರ್ತಿ, ಕಾರಂತರು, ಕುಮಾರವ್ಯಾಸ, ಶಂಕರಾಚಾರ್ಯ; ಮೊದಲ ಹೆಜ್ಜೆ ಓದು. ಹಾಗೇ ಸುಮ್ಮನೆ ಅಂತ ಅಲ್ಲಿಗೇ ನಿಲ್ಲಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲವಲ್ಲ. ’ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ’ ಅನ್ನುವಂತಹ ಸರಳವಾದ ಸಾಲುಗಳು ಕೂಡ ಮತ್ತೆ ಮತ್ತೆ ಬಂದು ಕಾಡುತ್ತಲೇ ಇರುತ್ತವಲ್ಲ. ನಿಮ್ಮದೇ ಲೇಖನಗಳಲ್ಲಿ ಈ ವಿಶ್ಲೇಷಿಸುವ ಗುಣ ಕಂಡುಬರುತ್ತದೆ.
ಅನಂತಮೂರ್ತಿಯವರು ಹೇಳಿದ್ದೆಲ್ಲ ಸರಿ. ಎಲ್ಲರೂ ಒಂದಾಗಿ ಬಾಳುವ ಕನಸು ಕಾಣಬೇಕು ನಿಜ. ಆದರೆ, ಆ ಕನಸನ್ನು ಒಡೆಯುವಂತಹ ದಿಕ್ಕಿನಲ್ಲಿ ಭೈರಪ್ಪನವರ ಕೃತಿ ಇದೆ ಅನ್ನುವ ಆರೋಪ ಸರಿಯಾ?. ಅನಂತಮೂರ್ತಿಯವರ ಜಾಣತನ ಇರುವುದೇ ಇಲ್ಲಿ. ಅಸೂಯೆ-ದ್ವೇಷ ಕಾಣಿಸದಂತೆ ಸರಿಯಾದದ್ದನ್ನು ಹೇಳಿ ಆರೋಪ ಮಾಡುವುದು. ಆವರಣದಲ್ಲಿ ಮುಸಲ್ಮಾರ ಕುರಿತಾಗಿ ದ್ವೇಷ ಬರುವಂತೆ, ಅವರೊಡನೆ ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲವೆಂಬಂತೆ ಅಭಿಪ್ರಾಯ ಮೂಡಿಸುವ ಅಂಶಗಳು ಯಾವುವು ಅಂತ ಈವರೆಗೆ ಯಾರೂ ಸಮರ್ಥವಾಗಿ ವಿಶ್ಲೇಷಣೆ ಮಾಡಿದ್ದಿಲ್ಲ. ಭೈರಪ್ಪನವರ ಜಾಣತನವೆಂದರೆ- ಮೌನ!. ನಾವು ಬಡಪಾಯಿ ಓದುಗರು ಬರಹದಲ್ಲಿ ಕಷ್ಟಪಟ್ಟು ಟೈಪ್ ಮಾಡಿ ಕಮೆಂಟ್ಸ್ ಹಾಕುವುದು.
-ವಿಕ್ರಮ ಹತ್ವಾರ
ಮಳೆ ಶುರುವಾಗುವುದರಲ್ಲಿದೆ. ಮಳೆಯ ಸಂಜೆ ಕಿಟಕಿಯ ಪಕ್ಕ ಕುಳಿತು ನೋಡುತ್ತಿದ್ದರೆ ಖುಷಿಯಾಗುತ್ತದೆ ಎಂದಾಕ್ಷಣ, ಅಲ್ಲಿ ಪಕ್ಕದ ಬೀದಿಯಲ್ಲಿ ಬಡವನ ಮನೆಗೆ ನೀರು ನುಗ್ಗುತ್ತಿದೆ. ಖುಷಿಪಡುವ ನೀನು ಜೀವವಿರೋಧಿ ಅಂದರೆ ಏನು ಸಾಯೋಣ.
Thumba artha garbithavagide.
Godlabeelu
Sir, nange baraha sigalilla. Lekhana thumba chennaagide. Koneya saalugalentoo... `nanna haadu nannadu..'
Post a Comment