Tuesday, July 3, 2007

ಕನ್ನಡಿ ಒಳಗೆ ಗಳಗನಾಥರಿರಲಿಲ್ಲ...


ಗಳ­ಗ­ನಾ­ಥರು ಬೆಚ್ಚಿ­ಬಿ­ದ್ದರು!
ಯಾವ­ತ್ತಿನ ಹಾಗೆ ಕನ್ನ­ಡಿಯ ಮುಂದೆ ಹೋಗಿ ನಿಂತ ಗಳ­ಗ­ನಾ­ಥ­ರಿಗೆ ಕನ್ನ­ಡಿ­ಯಲ್ಲಿ ಪ್ರತಿ­ಬಿಂಬ ಕಾಣಿ­ಸ­ಲಿಲ್ಲ. ಕಣ್ಣು ಮಂಜಾ­ಗಿದೆ ಅನ್ನಿಸಿ ಹೊಸ­ಕಿ­ಕೊಂಡು ನೋಡಿ­ದರು. ಆದರೂ ಪ್ರತಿ­ಬಿಂಬ ಕಾಣಿ­ಸ­ಲಿಲ್ಲ. ಗಾಬ­ರಿ­ಯಿಂದ ಕಿಟ­ಕಿ­ಯಾಚೆ ನೋಡಿ­ದರು. ಹೊರಗೆ ದೂರ­ದಲ್ಲಿ ಸ್ವಸ್ಥ ನಿಂತ ಗುಡ್ಡ, ಅದರ ತುತ್ತ­ತು­ದಿ­ಯಲ್ಲಿ ಯಾರ ಹಂಗಿ­ಲ್ಲದೆ ಬೆಳೆದ ತಾಳೆ­ಮರ, ಅದರ ಬುಡ­ದಲ್ಲಿ ಚೌಡೇ­ಶ್ವ­ರಿಯ ಗುಡಿ, ಬೆಟ್ಟದ ತಡಿ­ಯಲ್ಲಿ ನಸು­ಕಂ­ದು­ಬ­ಣ್ಣದ ಹೂಮು­ಡಿದ ರೆಂಜೆ ಮರ, ಅದರ ಬುಡ­ದಲ್ಲಿ ಹರಿ­ಯು­ತ್ತಿ­ರುವ ಹೆಸ­ರಿ­ಲ್ಲದ ಹಳ್ಳ... ಎಲ್ಲವೂ ಸ್ಪಷ್ಟ­ವಾಗಿ ಕಾಣಿ­ಸಿತು.
ಮತ್ತೆ ಕನ್ನಡಿ ನೋಡಿ­ಕೊಂ­ಡರು. ಕನ್ನಡಿ ಕಣ್ಣಿಗೆ ಬಿತ್ತು;ಕ­ನ್ನ­ಡಿ­ಯೊ­ಳಗೆ ಗಳ­ಗ­ನಾ­ಥ­ರಿ­ರ­ಲಿಲ್ಲ. ಎಡ­ವನ್ನು ಬಲ­ಮಾಡಿ, ಬಲ­ವನ್ನು ಎಡ­ಮಾಡಿ ತೋರಿ­ಸುವ ಕನ್ನಡಿ ಆವತ್ತು ತನ್ನ ಮುಂದೆ ಗಳ­ಗ­ನಾ­ಥರು ನಿಂತೇ ಇಲ್ಲ­ವೇನೋ ಎಂಬಂತೆ ನಿರ್ಲಿ­ಪ್ತ­ವಾ­ಗಿ­ದ್ದೇಕೆ ಅನ್ನು­ವುದು ಗಳ­ಗ­ನಾ­ಥ­ರನ್ನು ಕಾಡ­ತೊ­ಡ­ಗಿತು. ಕೈಯೆ­ತ್ತಿ­ದ್ದರು, ಹೆಗ­ಲಿಗೆ ಹಾಕಿ­ಕೊಂ­ಡಿದ್ದ ಬೈರಾ­ಸನ್ನು ಕನ್ನಡಿ ಮುಂದೆ ಹಿಡಿ­ದರು, ಒಂದು ಹೆಜ್ಜೆ ಹಿಂದೆ ನಿಂತು ಕನ್ನ­ಡಿ­ಯಲ್ಲಿ ಬೇರೇ­ನಾ­ದರೂ ಕಾಣು­ತ್ತದಾ ನೋಡಿ­ದರು.
ಗಳ­ಗ­ನಾ­ಥ­ರೊ­ಬ್ಬ­ರನ್ನು ಬಿಟ್ಟು ಕನ್ನಡಿ, ಎಲ್ಲ­ವನ್ನೂ ಪ್ರತಿ­ಫ­ಲಿ­ಸು­ತ್ತಿತ್ತು. ಬಾಗಿ­ದಾಗ ಹೆಂಚು ಹೊದೆ­ಸಿದ ಮಾಡು, ವಾರೆ­ಯಾಗಿ ನೋಡಿ­ದಾಗ ಮೂಲೆ­ಯ­ಲ್ಲಿದ್ದ ಮಂಚ ಎಲ್ಲವೂ ಸ್ಪಷ್ಟ­ವಾಗಿ ಕಾಣು­ತ್ತಿತ್ತು. ಕನ್ನಡಿ ಯಾಕೋ ತನ್ನನ್ನು ಹಿಡಿ­ದಿ­ಡಲು ಹಿಂಜ­ರಿ­ಯು­ತ್ತಿದೆ ಅನ್ನಿಸಿ ಗಳ­ಗ­ನಾ­ಥ­ರಿಗೆ ಅವ­ಮಾ­ನ­ವಾ­ಯಿತು.
ಅಷ್ಟಕ್ಕೂ ತಾನೇನು ಮಾಡಿ­ದ್ದೇನೆ ಅಂತ ಗಳ­ಗ­ನಾ­ಥರು ಕನ್ನಡಿ ಮುಂದೆ ನಿಂತೇ ಯೋಚಿ­ಸ­ತೊ­ಡ­ಗಿ­ದರು. ಒಳಗೆ ಹೆಂಡತಿ ಅಡು­ಗೆಯ ಸಿದ್ಧ­ತೆ­ಯ­ಲ್ಲಿ­ದ್ದ­ವಳು ಮೂರ­ನೆಯ ಮಗ­ಳಿಗೆ ದಬ­ದಬ ಬಡಿ­ಯು­ತ್ತಿ­ದ್ದಳು. ಮೊದಲ ಮಗಳು ಕಾಲೇ­ಜಿಗೆ ಹೊರ­ಡಲು ಸಿದ­್ಧ­ಳಾ­ಗುತ್ತಾ ಗಳ­ಗ­ನಾ­ಥರು ಕ್ಷೌರ ಮುಗಿಸಿ ಕನ್ನಡಿ ಬಿಟ್ಟೇ­ಳು­ವು­ದನ್ನೇ ಕಾಯು­ತ್ತಿ­ದ್ದಳು. ಗಳ­ಗ­ನಾ­ಥರು ಅನು­ಮಾ­ನದ ಪ್ರಾಣಿ­ಯಂತೆ ಮತ್ತೆ ಮತ್ತೆ ಕನ್ನಡಿ ನೋಡು­ವು­ದನ್ನು ನೋಡಿ ಬೇಜಾ­ರಾಗಿ ` ಸಾಕು, ಬಾರಪ್ಪಾ, ನಾನು ಕಾಲೇ­ಜಿಗೆ ಹೊರ­ಡ­ಬೇಕು' ಅನ್ನುತ್ತಾ ಅವ­ರನ್ನು ಪಕ್ಕಕ್ಕೆ ಕರೆ­ದಳು.
ಗಳ­ಗ­ನಾ­ಥರು ಮಗಳು ಮೇಕಪ್ಪು ಮಾಡಿ­ಕೊ­ಳ್ಳು­ವು­ದನ್ನು ದೂರ ನಿಂತು ಗಮ­ನಿ­ಸಿ­ದರು. ಅವ­ಳಿಗೆ ಅವಳ ಪ್ರತಿ­ಬಿಂಬ ಕಾಣು­ತ್ತಿದೆ ಅನ್ನು­ವುದು ಅವಳ ಭಾವ­ಭಂ­ಗಿ­ಯಿಂ­ದಲೇ ತಿಳಿ­ಯು­ತ್ತಿತ್ತು. ತುಟಿ­ಯನ್ನು ಅಗ­ಲಿಸಿ ಲಿ್­ಸ್ಟಿಕ್ಕು ಮೆತ್ತಿ­ಕೊಂಡು ಆಮೇಲೆ ಎರಡೂ ತುಟಿ­ಯನ್ನು ಒತ್ತಿ­ಕೊಂಡು ತುಟಿ­ಯಾ­ಚೆಗೆ ಸರಿದ ಲಿ್­ಸ್ಟಿ­ಕ್ಕನ್ನು ಟವ­ಲಿನ ಚುಂಗಿ­ನಿಂದ ವರೆ­ಸಿ­ಕೊಂಡು ಕಣ್ಣನ್ನು ವಿಕಾರ ಮಾಡಿ ಕಣ್ಕಪ್ಪು ಹಚ್ಚಿ­ಕೊಂಡು ಮುಂಗು­ರುಳು ತೀಡಿ­ಕೊ­ಳ್ಳುತ್ತಾ ಇದ್ದ ಮಗ­ಳನ್ನು ಕನ್ನಡಿ ಕಣ್ತುಂ­ಬಿ­ಕೊಂ­ಡಿದೆ. ಹಾಗಿ­ದ್ದರೆ ಆಗ ತಾನು ಕನ್ನಡಿ ನೋಡಿದ್ದೇ ಸುಳ್ಳಿ­ರ­ಬೇಕು. ಅದು ತನ್ನನ್ನು ನಿರಾ­ಕ­ರಿ­ಸಿದ್ದೇ ಸುಳ್ಳಿ­ರ­ಬೇಕು. ನೋಡಿಯೇ ಬಿಡೋಣ ಅಂತ ಗಳ­ಗ­ನಾ­ಥರು ಛಂಗನೆ ಕನ್ನಡಿ ಮುಂದೆ ಜಿಗಿ­ದರು. ಅವರು ಜಿಗಿದ ರಭ­ಸಕ್ಕೆ ಕನ್ನಡಿ ಮುಂದೆ ನಿಂತಿದ್ದ ಮಗಳು ಅನಾ­ಮ­ತ್ತಾಗಿ ಪಕ್ಕಕ್ಕೆ ಸರಿದು ಅಪ್ಪ­ನನ್ನು ಗದ­ರಿ­ಕೊಂ­ಡಳು.
ಗಳ­ಗ­ನಾ­ಥ­ರಿಗೆ ಕನ್ನ­ಡಿ­ಯೊ­ಳಗೆ ಗಳ­ಗ­ನಾ­ಥರು ಕಾಣಿ­ಸ­ಲಿಲ್ಲ.
ಅಪ್ಪ ಇವ­ತ್ಯಾಕೆ ಇಷ್ಟು ಹೊತ್ತು ಕನ್ನಡಿ ಮುಂದೆ ನಿಂತಿ­ದ್ದಾರೆ ಅಂತ ಅಚ್ಚ­ರಿ­ಪ­ಡುತ್ತಾ ಮಗಳು ಅಪ್ಪನ ಮುಖ ನೋಡು­ತ್ತಲೇ ಗಾಬ­ರಿ­ಯಾ­ದಳು. `ಇ­ದ್ಯಾ­ಕಪ್ಪಾ ನಿನ್ನ ಮುಖ ಹಾಗಾ­ಗಿದೆ. ರಾತ್ರಿ ನಿದ್ದೆ ಮಾಡಿಲ್ವಾ. ಕಣ್ಣು ನೋಡು, ಎಷ್ಟೊಂದು ಕೆಂಪ­ಗಿದೆ' ಅಂದಳು. ಗಳ­ಗ­ನಾ­ಥ­ರಿಗೆ ಮತ್ತಷ್ಟು ಗಾಬ­ರಿ­ಯಾ­ಯಿತು. `ಯಾಕೇ, ಏನಾ­ಗಿದ್ಯೇ' ಅಂತ ಕೇಳಿ­ದರು ಗಳ­ಗ­ನಾ­ಥರು. `ನಂಗೆ ನೋಡೋ­ಕ್ಕಾ­ಗಲ್ಲ... ನೀವೇ ಒಂದ್ಸಾರಿ ಕನ್ನ­ಡೀಲಿ ಮುಖ ನೋಡ್ಕೊ­ಳ್ಳೀಪ್ಪಾ' ಎನ್ನುತ್ತಾ ಮಗಳು ಪುಸ್ತಕ ಹಿಡ­ಕೊಂಡು ಬೀದಿಗೆ ಬಿದ್ದಳು.
**­*­**
ಆವ­ತ್ತಿಡೀ ಗಳ­ಗ­ನಾ­ಥ­ರನ್ನು ಕನ್ನಡಿ ಕಾಡಿತು. ಎದು­ರಿಗೆ ಸಿಕ್ಕ­ವ­ರೆಲ್ಲ `ಇ­ದೇನು ಹೀಗಾ­ಗಿ­ಹೋ­ಗಿ­ದ್ದೀರಿ, ಆರೋಗ್ಯ ಸರಿ­ಯಿಲ್ವೇ' ಅಂತ ಕೇಳಿ ಕೇಳಿ ಸತಾ­ಯಿ­ಸಿ­ದರು. ಹೇಗಾ­ಗಿ­ದ್ದೀನಿ ಅಂತ ನೋಡಿ­ಕೊ­ಳ್ಳಲು ಕನ್ನಡಿ ಮುಂದೆ ನಿಂತರೆ ಕನ್ನ­ಡಿ­ಯಲ್ಲಿ ತನ್ನ ಮುಖ ಮಾತ್ರ ಕಾಣಿ­ಸು­ತ್ತಿ­ರ­ಲಿಲ್ಲ. ಮನೆಯ ಕನ್ನ­ಡಿ­ಯೊಂದೇ ತನಗೆ ಕೈಕೊ­ಟ್ಟಿ­ರ­ಬೇಕು ಅಂದು­ಕೊಂಡು ಗಳ­ಗ­ನಾ­ಥರು ತಾನು ಸಾಮಾ­ನ್ಯ­ವಾಗಿ ಹೋಗುವ ಗೋವಿಂ­ದನ ಕ್ಷೌರ­ದಂ­ಗ­ಡಿಗೆ ಹೋದರು. ಗೋವಿಂದ ಅಂಗಡಿ ತುಂಬ ಕನ್ನ­ಡಿ­ಗ­ಳನ್ನು ಇಟ್ಟಿದ್ದ. ಒಂದು ಮುಖ­ವನ್ನು ಹತ್ತಾಗಿ ಇಪ್ಪ­ತ್ತಾಗಿ ತೋರಿ­ಸು­ವಂತೆ ಅವು­ಗ­ಳನ್ನು ಜೋಡಿ­ಸಿದ್ದ.
ಕ್ಷೌರ­ದಂ­ಗ­ಡಿಗೆ ಹೋಗು­ತ್ತಲೆ ಅವ­ರನ್ನು ಕುರ್ಚಿ­ಯಲ್ಲಿ ಕೂರಿ­ಸಿಯೇ ಬಿಟ್ಟ ಗೋವಿಂದ. ಗಳ­ಗ­ನಾ­ಥರು ಮತ್ತೊಮ್ಮೆ ಬೆಚ್ಚಿ­ಬಿ­ದ್ದರು. ಅವ­ರಿಗೆ ಖಾಲಿ ಖುರ್ಚಿ ಕಾಣು­ತ್ತಿತ್ತೇ ವಿನಃ ಅದ­ರಲ್ಲಿ ಕೂತ ಗಳ­ಗ­ನಾ­ಥರು ಕಾಣಿ­ಸ­ಲಿಲ್ಲ. ತಲೆಯ ಮೇಲ್ಗಡೆ ಗೋವಿಂ­ದನ ಕತ್ತರಿ ಆಡುವ ಸದ್ದು ಕೇಳಿ­ಸು­ತ್ತಿತ್ತು. ಮೈಮೇಲೆ ಕತ್ತ­ರಿ­ಸಿದ ಕೂದಲು ಬೀಳು­ತ್ತಿತ್ತು. ಆದರೆ ಕನ್ನಡಿ ಮೌನ­ವಾ­ಗಿತ್ತು. ಕನ್ನಡಿ ತನ್ನ ಮೇಲೆ ಯಾಕೋ ಮುನಿ­ಸಿ­ಕೊಂ­ಡಿದೆ ಅನ್ನಿಸಿ ಗಳ­ಗ­ನಾ­ಥ­ರಿಗೆ ಒಂಥ­ರದ ಭಯ ಕಾಡ­ತೊ­ಡ­ಗಿತು. ಇದ್ದ­ಕ್ಕಿದ್ದ ಹಾಗೆ ತಾನು ನಿಜ­ವಾ­ಗಿಯೂ ಇದ್ದೇನೋ ಇಲ್ಲವೋ ಅನ್ನುವ ಅನು­ಮಾನ ಕಾಡ­ತೊ­ಡ­ಗಿತು. ತಲೆ­ಬ­ಗ್ಗಿಸಿ ತಮ್ಮ ಕೈಕಾ­ಲು­ಗ­ಳನ್ನೂ ಹೊಟ್ಟೆ­ಯನ್ನೂ ನೋಡಿ­ಕೊಂ­ಡರು. ಗೋವಿಂದ ತಲೆ­ಯನ್ನು ಹಿಂದಕ್ಕೆ ಹಿಡಿ­ದೆತ್ತಿ ಕತ್ತ­ರಿ­ಸ­ತೊ­ಡ­ಗಿದ.
ಗೋವಿಂ­ದ­ನಿಗೆ ಕಾಸು ಕೊಟ್ಟು ಹೊರ­ಬಂ­ದಾಗ ಗಳ­ಗ­ನಾ­ಥ­ರಿಗೆ ಎಂಥ ಅನಾ­ಥ­ಪ್ರಜ್ಞೆ ಕಾಡ­ತೊ­ಡ­ಗಿತು ಅಂದರೆ ಇಡೀ ಜಗ­ತ್ತಿ­ನಲ್ಲಿ ತಾನು ಯಾರಿಗೂ ಕಾಣಿ­ಸು­ತ್ತಿ­ಲ್ಲ­ವೇನೋ ಅನ್ನುವ ಅನು­ಮಾನ ಕಾಡ­ತೊ­ಡ­ಗಿತು. ಇಂಥ ಸಮಸ್ಯೆ ಯಾರಿ­ಗಾ­ದರೂ ಎದು­ರಾ­ಗಿ­ದೆಯಾ? ಡಾಕ್ಟರ ಹತ್ತಿರ ಹೋದರೆ ಇದಕ್ಕೆ ಔಷಧಿ ಸಿಗ­ಬ­ಹುದಾ? ಇದು ಕಣ್ಣಿನ ದೋಷವೋ ಕನ್ನ­ಡಿಯ ದೋಷವೋ?
ಅದೇ ಹೊತ್ತಿಗೆ ಅವ­ರಿಗೆ ಶಾಸ್ತ್ರಿ­ಗಳು ನೆನ­ಪಾ­ದರು. ಶಾಸ್ತ್ರಿ ಮಹಾ್ ಪಂಡಿ­ತರು. ಆಯು­ರ್ವೇದ ಮತ್ತು ಜ್ಯೋತಿ­ಷ್ಯ­ಶಾಸ್ತ್ರ ಎರ­ಡನ್ನೂ ಬಲ್ಲ­ವರು. ಅವರ ಬಳಿಗೆ ಸ್ನಾನ ಮಾಡದೇ ಹೋಗು­ವಂ­ತಿ­ರ­ಲಿಲ್ಲ. ಗಳ­ಗ­ನಾ­ಥರು ಓಡೋಡಿ ಮನೆಗೆ ಬಂದು ಸ್ನಾನ ಮುಗಿ­ಸಿ­ದರು. ಸ್ನಾನ ಮಾಡುವ ಹೊತ್ತಿಗೆ ನೀರ ಹಂಡೆ­ಯ­ಲ್ಲಾ­ದರೂ ತನ್ನ ಮುಖ ಕಂಡೀತು ಅಂತ ಹಾರೈ­ಸಿ­ದರು; ಹಂಡೆಯ ನೀರು ಕಂಪಿ­ಸು­ತ್ತಿತ್ತು. ಅದ­ರೊ­ಳಗೆ ಯಾರ ಮುಖವೂ ಇರ­ಲಿಲ್ಲ.
**­*­**
ಶಾಸ್ತ್ರಿ­ಗಳ ಹತ್ತಿರ ಗಳ­ಗ­ನಾ­ಥರು ತಮ್ಮ ಸಮ­ಸ್ಯೆ­ಯ­ನ್ನೇನೂ ಹೇಳಿ­ಕೊ­ಳ್ಳ­ಲಿಲ್ಲ. ಕನ್ನ­ಡಿ­ಯಲ್ಲಿ ಮುಖ ಕಾಣು­ವು­ದಿಲ್ಲ ಅನ್ನು­ವು­ದನ್ನು ಹೇಳಿ­ಕೊ­ಳ್ಳು­ವುದು ಹೇಗೆ ಅನ್ನುವ ಪ್ರಶ್ನೆ­ಗಿನ್ನೂ ಅವ­ರಿಗೆ ಉತ್ತರ ಸಿಕ್ಕಿ­ರ­ಲಿಲ್ಲ. ಹೀಗೆ ತಮ್ಮ ಕೆಮ್ಮು, ಬೆನ್ನು ನೋವು­ಗಳ ಬಗ್ಗೆ ಮಾತಾ­ಡಿ­ದರು. ಮೊದ­ಲನೆ ಮಗ­ಳಿಗೆ ಯಾವ ಕಡೆಯ ಗಂಡು ಸಿಗ­ಬ­ಹುದು ಅಂತ ವಿಚಾ­ರಿ­ಸಿ­ದರು.
ಕೊನೆ­ಯಲ್ಲಿ ಎದ್ದು ಬರು­ವಾಗ ಗಳ­ಗ­ನಾ­ಥರು ಕೇಳಿ­ಯೇ­ಬಿ­ಟ್ಟರು.`ಶಾ­ಸ್ತ್ರಿ­ಗಳೇ. ಮೊನ್ನೆ ನಮ್ಮ ಹಳೆಯ ಪರಿ­ಚ­ಯದ ಒಬ್ಬರು ಸಿಕ್ಕರು. ಅವ­ರ­ದ್ದೊಂದು ವಿಚಿತ್ರ ಸಮಸ್ಯೆ. ಕನ್ನಡಿ ಮುಂದೆ ನಿಂತರೆ ಅವ­ರಿಗೆ ಅವರ ಮುಖ ಕಾಣಿ­ಸೋ­ದಿ­ಲ್ಲ­ವಂತೆ' ಅಂದರು.
ಶಾಸ್ತ್ರಿ­ಗಳು ಒಂಚೂರೂ ಯೋಚಿ­ಸದೇ ಹೇಳಿ­ದರು; `ಆ ಹೊತ್ತಿಗೆ ಅದು ಹಾಗೇ' ಎನ್ನುತ್ತಾ ಶಾಸ್ತ್ರಿ­ಗಳು ಎದ್ದು ಒಳಗೆ ಹೋದರು.
ಆ ಹೊತ್ತಿಗೆ ಅಂದರೆ ಯಾವ ಹೊತ್ತಿಗೆ? ಸಾಯುವ ಕಾಲಕ್ಕೆ ಎಂದಿ­ರ­ಬ­ಹುದೇ? ಸತ್ತ ಮೇಲೆ ಈ ದೇಹ ಇರು­ವು­ದಿ­ಲ್ಲ­ವಂತೆ. ಮನಸ್ಸು ಮಾತ್ರ ಓಡಾ­ಡುತ್ತಾ ಇರು­ತ್ತ­ದಂತೆ. ಹಾಗಿ­ದ್ದರೆ ತಾನು ಸತ್ತು ಹೋಗಿ­ರ­ಬ­ಹುದೇ? ಹಾಗಿ­ದ್ದರೆ ಬೇರೆ­ಯ­ವ­ರಿಗೆ ಯಾಕೆ ಕಾಣಿ­ಸು­ತ್ತಿ­ದ್ದೇನೆ? ಅವರ ಪಾಲಿಗೆ ಬದುಕಿ, ತನ್ನ ಪಾಲಿಗೆ ಸತ್ತು ಹೋಗಿ­ದ್ದೇನಾ?
ಹಾಗಾ­ಗಲು ಸಾಧ್ಯವೇ? ಇನ್ನೊ­ಬ್ಬ­ರಿ­ಗಷ್ಟೇ ಯಾರಾ­ದರೂ ಬದು­ಕಿ­ರು­ತ್ತಾರಾ? ಹಾಗಿ­ದ್ದರೆ ನನ­ಗಷ್ಟೇ ಬದು­ಕಿದ್ದು, ಇನ್ನೊ­ಬ್ಬರ ಪಾಲಿಗೆ ಸತ್ತಂ­ತಿ­ದ್ದರೆ ನಾನು ನನಗೆ ಮಾತ್ರ ಕಾಣಿ­ಸು­ತ್ತೇನಾ?
ಗಳ­ಗ­ನಾ­ಥರು ಯೋಚಿ­ಸು­ತ್ತಲೇ ಮನೆಗೆ ಬಂದರು. ಕೊನೆಯ ಬಾರಿಗೆ ಕನ್ನಡಿ ಮುಂದೆ ನಿಂತು ಮುಖ ನೋಡಿ­ಕೊ­ಳ್ಳು­ತ್ತೇನೆ. ಬಹುಶಃ ಈಗ ಕಾಣಿ­ಸಿ­ದರೂ ಕಾಣಿ­ಸ­ಬ­ಹುದು ಅಂತ ಆಶೆ­ಪ­ಟ್ಟರು. ಅಂಗ­ಳಕ್ಕೆ ಬಂದು ಕಾಲು­ತೊ­ಳೆದು ಬಾಗಿಲು ತಟ್ಟಿ­ದರು. ಬಾಗಿಲು ತೆರೆ­ದು­ಕೊಂ­ಡಿತು.
ನೇರ­ವಾಗಿ ಒಳಗೆ ಹೋಗಿ ಕನ್ನಡಿ ಮುಂದೆ ನಿಂತರು. ಕನ್ನ­ಡಿ­ಯೊ­ಳಗೆ ಯಾರೂ ಕಾಣಿ­ಸ­ಲಿಲ್ಲ. ಮತ್ತೆ ಮತ್ತೆ ದಿಟ್ಟಿ­ಸಿ­ನೋ­ಡಿ­ದರೆ ಅದ­ರೊ­ಳಗೆ ನಿಧಾ­ನ­ವಾಗಿ ಹೆಂಡ­ತಿಯ ಮುಖ ಕಾಣಿ­ಸಿತು.
ಗಳ­ಗ­ನಾ­ಥರು ತಿರುಗಿ ನೋಡಿ­ದರು. ಆಗಷ್ಟೇ ಸ್ನಾನ­ಮು­ಗಿಸಿ ಒದ್ದೆ ಕೂದ­ಲಿ­ಗೊಂದು ಟವ್ ಕಟ್ಟಿ­ಕೊಂಡು ಕುಂಕುಮ ಇಡುತ್ತಾ ಹೆಂಡತಿ ನಿಂತಿ­ದ್ದಳು. ಎದು­ರಿಗೇ ನಿಂತ ತನ್ನನ್ನು ನೋಡಿ­ದರೂ ನೋಡದ ಹಾಗೆ ಸುಮ್ಮ­ನಿ­ದ್ದ­ವ­ಳನ್ನು ಕಂಡು ಗಳ­ಗ­ನಾ­ಥ­ರಿಗೆ ಗಾಬ­ರಿ­ಯಾ­ಯಿತು. ಏನೋ ಹೇಳಲು ಯತ್ನಿ­ಸಿ­ದರು. ಏನೂ ಹೇಳ­ಲಿಲ್ಲ ಅನ್ನಿ­ಸಿತು.
ಹೆಂಡತಿ ಒದ್ದೆ ಕೂದ­ಲನ್ನು ಬಿಚ್ಚಿ ಹರ­ವಿ­ಕೊ­ಳ್ಳುತ್ತಾ ಮಗ­ಳನ್ನು ಕೇಳಿ­ದಳು;
ಅಪ್ಪ ಎಲ್ಲಿಗೆ ಹೋಗ್ತೀನಿ ಅಂದ್ರು?
ಮಗಳು ಒಬ್ಬಳೇ ಕೂತು ಚೌಕಾ­ಭಾರ ಆಡು­ತ್ತಿ­ದ್ದ­ವಳು;
`ನಂ­ಗೊ­ತ್ತಿಲ್ಲ' ಅಂದಳು.

ಗೆಳೆಯರೇ,

ಈ ಭಾನುವಾರ, ಜುಲೈ 8,2007, ಬೆಳಗ್ಗೆ ಹತ್ತೂವರೆಗೆ ನನ್ನ ಕಥಾಸಂಕಲನ ಬಿಡುಗಡೆ. ರವಿ ಬೆಳಗೆರೆ ಪುಸ್ತಕ ಬಿಡುಗಡೆ ಮಾಡುತ್ತಾರೆ. ಟಿಎನ್ ಸೀತಾರಾಮ್ ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಎಚ್ ಆರ್ ರಂಗನಾಥ್ ಅಧ್ಯಕ್ಷತೆ ವಹಿಸುತ್ತಾರೆ. ಇಪ್ಪತ್ತೊಂದು ಕತೆಗಳಿರುವ ಆ ಸಂಕಲನದ ಒಂದು ಕತೆ ಇದು. ಸೂರಿ ಮುನ್ನುಡಿ ಮತ್ತು ವಿವೇಕ ಶಾನಭಾಗ ಬೆನ್ನುಡಿ ಬರೆದಿದ್ದಾರೆ. ಅಂಕಿತದ ಕಂಬತ್ತಳ್ಳಿ ಪ್ರಕಾಶ್ ಪುಸ್ತಕ ಹೊರತಂದಿದ್ದಾರೆ.ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬಿಡುಗಡೆ.
ದಯವಿಟ್ಟು ಬನ್ನಿ.

26 comments:

sritri said...

ಜೋಗಿಯವರೇ, ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಕೆಗಳು. ನಿಮ್ಮ ಪುಸ್ತಕ ಕಡಲೀಚೆಗೂ ತೇಲಿ ಬರಲಿ.

ಏನ್ ಗುರು said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ: http://enguru.blogspot.com

Vikram Hathwar said...

Dear Jogi,

Congrats!! & Thank You!!

Wish the function goes very well.

suptadeepti said...

ನಮಸ್ಕಾರ ಜೋಗಿ ಸರ್,
ನಿಮ್ಮ ಪುಸ್ತಕಕ್ಕೆ ಸ್ವಾಗತ. ಇನ್ನೊಂದು ತಿಂಗಳೊಳಗೆ ನನ್ನ ಬುಟ್ಟಿಗೆ ಅದನ್ನು ತುಂಬಿಕೊಳ್ಳಲಿದ್ದೇನೆ ಅನ್ನುವ ಖುಷಿ ನನಗೆ.

ಸಮಾರಂಭಕ್ಕೆ ಶುಭ ಹಾರೈಕೆಗಳು.

ಅನಂತ said...

ತುಂಬ ಚೆನ್ನಾಗಿದೆ...!

mohan said...

jogi

tumbaa khushiyayitu pustakada suddi keli
nimma baravanige nijakkoo modi haakuttade.
ashte alla aalochanege hachchuttade
navu odi namma kaige sikkada eshtondu notagalu nimage siguttade.

suri kathegalu innoo manadolage guyguduttiruvaagale nimma pustakada habba
nijakku neevondu nimmade dari srishtisikondiddeeri

besarada vishayavendare jogimane blog innashtu speed up aagabeku
dooradalli kulita namage blog ootavannadaroo badisi
-g n mohan

Mahantesh said...

Sir,
pustak bidugade ellide aMta kottiddare chennagirodu..

ಸಿಂಧು Sindhu said...

ಪ್ರಿಯ ಜೋಗಿ,

ನಿಮ್ಮ ಎಂದಿನ ಮಾಂತ್ರಿಕ ಮೋಡಿ, ಎಲ್ಲರಿಗೂ ಕಾಣದ ವಿಶಿಷ್ಟ ಕವಿದೃಷ್ಟಿ..

ಎಲ್ಲೂ ನಿಲ್ಲಿಸದೆ ಓದುವಂತೆ.. ಪುಟ್ಟ ಫ್ರೇಮಿನಲ್ಲಿ ಹಿಡಿದಿಟ್ಟ ಅಸೀಮ ಆಕಾಶ..

ಖಂಡಿತ ಅವತ್ತೇ ತಗೊಂಡು ಓದುತ್ತೀನಿ..

ನೀಲಿಬಾನಿನ ಚುಕ್ಕಿಹಬ್ಬದಂತೆ ಇರುತ್ತದೆ ಸಂಕಲನ ಅಂತ ಗೊತ್ತು ನನಗೆ..

Kaadu Harate said...

Jogiyavare,

Shubha haaraikegalu,

Pusthak bidugade elliantane Baredilla

ಸುಶ್ರುತ ದೊಡ್ಡೇರಿ said...

ಖಂಡಿತಾ ಬರ್ತೀನಿ ಸರ್... ಸಿಗೋಣ ಅಲ್ಲೇ ಹಾಗಾದ್ರೆ..

ಗಿರೀಶ್ ರಾವ್, ಎಚ್ (ಜೋಗಿ) said...

ಪ್ರೀತಿ ತೋರಿಸಿದ ಎಲ್ಲ ಗೆಳೆಯರಿಗೂ ಥ್ಯಾಂಕ್ಸ್. ಬ್ಲಾಗ್ ಬರಹ ನಿಧಾನವಾಗುತ್ತಿದೆ. ಅದಕ್ಕೆ ಕಾರಣ ಮಳೆಗಾಲದ ಪ್ರಯಾಣ. ಒಂದಷ್ಟು ದಿನ ಊರಿಗೆ ಹೋಗಿ ಬಂದೆ. ಅಲ್ಲೊಂದಷ್ಟು ಗೆಳೆಯರು, ಮಳೆ, ಕರೆಂಟಿಲ್ಲದ ದಿನರಾತ್ರಿ, ಸಿಗದ ಫೋನು, ಕೆಲಸ ಮಾಡದ ಇಂಟರ್ ನೆಟ್ಟು.. ಹೀಗೆ ಅಡೆತಡೆಗಳ ಮೆರವಣಿಗೆ. ಅವೆಲ್ಲ ಖುಷಿಕೊಟ್ಟ ಅಡೆತಡೆಗಳೇ ಅಂದ್ಕೊಳ್ಳಿ ಮತ್ತೆ.

Anonymous said...

Galaganaathara Kannadi kathe ishtavaaythu. Kaarykramakake bartheeni Sir. Pusthakavannoo oduve. Heege innashtu kathe, pusthaka barthaa irli annode nan aashaya.

-Godlabeelu Parameshwara

musafir said...

ಜೋಗಿ ಸಾರ್,
ಅದು ಮಾಯಾ ಕನ್ನಡಿಯೂ ಅಲ್ಲ, ಗಳಗನಾಥರು ಮಾಯಾವಿಯೂ ಅಲ್ಲ. ಮತ್ಯಾಕೆ ಕನ್ನಡಿಯಲ್ಲಿ ಗಳಗನಾಥರಿಲ್ಲ? ಕಥೆ ಓದಿ ಬೆರಗಾಗದೆ. ಉಳಿದ ಕಥೆಗಳನ್ನು ಓದುವುದಕ್ಕೆ ಕಾಯ್ತೀನಿ.

Kannada kanmani said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

ಸುಸಂಕೃತ said...

ಗಳಗನಾಥರು ಕನ್ನಡಿಯೊಳಗಿಲ್ಲದ ಕಾರಣ ತಿಳಿಯುವ ವೇಳೆಗೆ ಅವರ ಹೆಂಡತಿ ಒದ್ದೆ ಕೂದಲಿಗೆ ಟವೆಲ್ ಸುತ್ತಿ ಹಣೆಗೆ ಕುಂಕುಮ ಇಡುತ್ತಾ ನಿಂತಿರೋ ಫ್ರೇಮ್ ಸಕತ್ತಾಗಿದೆ!
ಪುಸ್ತಕ ಬಿಡುಗಡೆ ವಿಷಯ ಓದಿ ಸಂತಸವಾಯ್ತು. ಹಾರ್ದಿಕ ಶುಭಾಶಯಗಳು. ಹೀಗೇ ಬರೀತಿರಿ...

ಪ್ರವೀಣ್ ಮಾವಿನಸರ said...

ಸಾರ್, ಪುಸ್ತಕ ಬಿಡುಗಡೆ ವಿಷಯ ಓದಿ ಸಂತಸವಾಯ್ತು. ಶುಭ ಹಾರೈಕೆಗಳು.

M.K.Hegde said...

Jogi Sir,
wish the programm succuss
MK

VENU VINOD said...

ಜೋಗಿಯವರೆ,
ಪುಸ್ತಕ ಬಿಡುಗಡೆ ಅರ್ಥಾತ್ ಹೆರಿಗೆಯ ಸಂತಸದಲ್ಲಿರುವ ನಿಮಗೆ ಅಭಿನಂದನೆ.
ಪುಸ್ತಕದಂಗಡಿಯಲ್ಲಿ ಕಾಯುತ್ತೇನೆ.

dinesh said...

ಜೋಗಿ ಸರ್... ಬಹಳ ಹಿಂದೆ ಚಿತ್ತಾಲರ ’ಪಯಣ’ ಕಥೆ ಓದಿದ್ದೆ.. ನಿಮ್ಮ ಕಥೆ ಅದನ್ನು ನೆನಪಿಸಿತು..ಕಥೆ ತುಂಬಾ ಚೆನ್ನಾಗಿದೆ..ಪುಸ್ತಕಕ್ಕಾಗಿ ಕಾಯುತ್ತಿದ್ದೆನೆ...

Sanath said...

ಜೋಗಿ ಸಾರ್ ನಮಸ್ಕಾರ,
ನಿಮ್ಮ ಪುಸ್ತಕಕ್ಕಾಗಿ ಕಾಯಿತ್ತಿದ್ದೇನೆ.

ಸಮಾರಂಭಕ್ಕೆ ಶುಭ ಹಾರೈಕೆಗಳು.

suresh said...

ಜೋಗಿ, ನೀವು `ಬರೆಯಬಾರದು' ಅಂದುಕೊಂಡಿರುವುದನ್ನೆಲ್ಲ ಬೇಗ ಬೇಗ ಬರೆದುಬಿಡಿ. ಯಾಕೆಂದರೆ ನಮಗೆ ಅದನ್ನೆಲ್ಲ `ಓದಬಾರದು' ಅನ್ನಿಸೋದೇ ಇಲ್ವಲ್ಲ!!

Anonymous said...

JOGI nimma kathegalige Munnudi- Bennudiya hangeke?
ellavannoo meeriddu nimmakathegalu antha nannanisike. kongu oduthene, Shubhavagali....

Prasanna L.M said...

jogi avare, shubha haraikegalu, kathe chennagidhe.. ella kathegalu heege channagirutte antha baavisuve... nanna dondu chikka salahe, nimma blog template design change maadidre chennagirutte ansutte..

Anonymous said...

galaganatharu estavadru. `duradalli swastha ninta gudda'ne hechchu kaditu. pustakakkagi salalli nintiddene.
- radhika vitla.

pradyumna said...

al d best brother

ಮಹೇಶ ಎಸ್ ಎಲ್ said...

ಜೋಗಿ ಸರ್ ಜೋಗಿ ಕಥೆಗಳು ಬಗ್ಗೆ ಇಲ್ಲಿ ನನಗನಿಸಿದ್ದನ್ನು ಹೇಳಿದ್ದೆನೆ ತಪ್ಪಿದ್ದರೆ ಮನ್ನಿಸಿ
ಬ್ಲಾಗಿಗೊಮ್ಮೆ ಭೇಟಿಕೊಡಿ. http://maheshsl.blogspot.com