Friday, December 7, 2007

ಎಲ್ಲ ನದಿಗಳಿಗೂ ಕಡಲು ಇರುವುದಿಲ್ಲ...

ಕಾದಂಬರಿ ನದಿಯ ಹಾಗೆ!

ನದಿ ಹುಟ್ಟುವುದು ಒಂದು ಸಣ್ಣ ಸೆಲೆಯಾಗಿ. ಕ್ರಮೇಣ ಅದಕ್ಕೆ ಉಪನದಿಗಳು ಸೇರಿಕೊಳ್ಳುತ್ತವೆ. ಗುಪ್ತಗಾಮಿನಿಯಾಗಿ ಮತ್ತಾವುದೋ ಸೆಲೆ ಬಂದು ಕೂಡಿಕೊಳ್ಳುತ್ತದೆ. ಹೀಗೆ ತನ್ನನ್ನು ಕೂಡಿಕೊಂಡದ್ದನ್ನೆಲ್ಲ ತೆಕ್ಕೆಗೆ ತೆಗೆದುಕೊಂಡು ನದಿ ಹರಿಯುತ್ತದೆ.

ಕಾದಂಬರಿಯೂ ಹಾಗೆಯೇ. ನನ್ನ ಪ್ರಕಾರ ಸಣ್ಣಕತೆಯೆಂದರೆ ಶಿಕಾರಿ. ನಿಗೂಢದಲ್ಲಿ ಹೊಂಚಿ ಕುಳಿತವನ ಸುಳಿವೇ ತಿಳಿಯದೆ ಬರುವ ಮೃಗವನ್ನು ಕೆಡವಿ ಉರುಳಿಸುವುದು. ಕವಿತೆಯೆಂದರೆ ಬೆಸ್ತನ ಹಾಗೆ ಕಾಲದ ಹೊಳೆಗೆ ಗಾಳ ಹಾಕುತ್ತಾ ಕೂರುವುದು.

ಆದರೆ ಕಾದಂಬರಿ ಹಾಗಲ್ಲ. ಅದರ ವಿಸ್ತಾರ ದೊಡ್ಡದು; ಅದು ಒಳಗೊಳ್ಳುವ ಸಂಗತಿಗಳೂ. ಅದು ಇಡೀ ಮನುಕುಲದ ಕತೆಯೂ ಹೌದು. ಹೀಗಾಗಿ ಕಾದಂಬರಿಯ ಕರ್ತೃ ಎಲ್ಲವನ್ನೂ ಔದಾರ್ಯದಿಂದ ಮತ್ತು ಅನುಮಾನದಿಂದ ನೋಡಬೇಕಾಗುತ್ತದೆ. ಚಂಚಲತೆಯ ಜೊತೆ ತನ್ಮಯತೆಯನ್ನೂ ಗಳಿಸಿಕೊಳ್ಳಬೇಕಾಗುತ್ತದೆ.

ಆದರೆ ಈ ಕಾಲ ಕಷ್ಟದ್ದು. ನಮ್ಮ ಅನುಭವಗಳಲ್ಲಿ ಟೊಳ್ಳೆಷ್ಟು , ನಿಜವೆಷ್ಟು ಅನ್ನುವುದು ನಮಗೇ ಅರಿವಾಗದ ಕಾಲ. ನಮ್ಮನ್ನು ಯಾವ್ಯಾವ ಶಕ್ತಿಗಳೋ ನಿಯಂತ್ರಿಸುತ್ತವೆ. ಜಾತಿ, ರಾಜಕಾರಣ ಮತ್ತು ಧರ್ಮ ನಮ್ಮ ಶ್ರದ್ಧೆಯನ್ನು ಮೀರಿ ವ್ಯಾಪಿಸಿದೆ. ಹಳ್ಳಿಗಳು ಕ್ರಮೇಣ ನಗರಗಳಾಗುತ್ತಿವೆ. ಟೀವಿ ಎಂಬ ಮಾಯೆ ಪ್ರತಿಯಾಬ್ಬರನ್ನೂ ವಿಶಿಷ್ಟವಾಗಿ ತಬ್ಬಿದೆ. ಎಲ್ಲೋ ಏನೋ ತಪ್ಪಿದೆ ಎಂಬ ಶಂಕೆಯಲ್ಲೇ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾಗಿದೆ.
ನದಿಯ ನೆನಪಿನ ಹಂಗು ಇಂಥ ಕಷ್ಟಕಾಲದಲ್ಲಿ ಹುಟ್ಟಿದ ಕೃತಿ. ಅದರ ಮೂಲಸೆಲೆ ಯಾವುದು ಅನ್ನುವುದು ನನಗೂ ಮರೆತುಹೋಗಿದೆ. ನದಿಗೆ ನೆನಪುಗಳಿರುವುದಿಲ್ಲ ಅನ್ನುತ್ತಾರೆ. ಯಾಕೆಂದರೆ ಅದು ಎಲ್ಲವನ್ನೂ ತೊಳೆಯುತ್ತಾ ಸಾಗುತ್ತದೆ. ಆದರೆ ನದಿಯ ನೆನಪಿನ ಹಂಗಿನಿಂದ ನೀವ್ಯಾರೂ ಪಾರಾಗಲಾರಿರಿ ಅನ್ನುವುದು ನನಗೆ ಗೊತ್ತಿದೆ. ಇದ್ದ ನದಿಗಿಂತ ಗಾಢವಾಗಿ ಇರದ ನದಿ ಕಾಡುತ್ತದೆ. ನೋಡಿದ ಮುಖಕ್ಕಿಂತ ತೀವ್ರವಾಗಿ ನೋಡದ ಮುಖ ಕಾಡುವ ಹಾಗೆ!

ಬರೆಯುವುದು ಎಂದರೆ ದಾಖಲಿಸುವುದು, ಅದಕ್ಕಿಂತ ಹೆಚ್ಚಾಗಿ ಕನೆಕ್ಟ್ ಮಾಡುವುದು. ಈ ಕಾದಂಬರಿ ನಿಮ್ಮನ್ನೂ ನನ್ನನ್ನೂ ಕನೆಕ್ಟ್ ಮಾಡುವ ಹಾಗೆ, ನಿಮ್ಮನ್ನೂ ನಿಮ್ಮ ಬಾಲ್ಯವನ್ನೂ ಸೇರಿಸಲಿ. ನಿಮ್ಮ ನೆನಪುಗಳ ಜೊತೆ ವಾಸ್ತವವನ್ನು ಬೆಸೆಯಲಿ.

ಈ ಕೃತಿಗೆ ಅಂಥ ಮಹದೋದ್ದೇಶಗಳಿಲ್ಲ . ಇದು ಪ್ರೀತಿಯಿಂದ ಬರೆಸಿಕೊಂಡ, ಪ್ರೀತಿಯಿಂದ ಓದಿಸಿಕೊಳ್ಳಬೇಕಾದ ಪ್ರಸಂಗ. ಇದು ಯಾವ ರೂಪದಲ್ಲಿ ತನ್ನನ್ನು ಪ್ರಕಟಿಸಿಕೊಳ್ಳುತ್ತದೆ ಎಂಬ ಕುತೂಹಲ ನಿಮ್ಮಷ್ಟೇ ನನಗೂ ಇದೆ. ಹೀಗಾಗಿ ಲೇಖಕ ಕೂಡ ಇಲ್ಲಿ ಒಬ್ಬ ಓದುಗನಷ್ಟೇ ಮುಗ್ಧ ಕುತೂಹಲಿ.

ನದಿ ನಿಮ್ಮ ಬಳಿಗೆ ಹರಿದು ಬಂದಿದೆ. ಇನ್ನು ಮೇಲೆ ನೀವುಂಟು ನದಿಯುಂಟು. ಮುಂದಿನದು ದೇವರಾ ಚಿತ್ತ.
****
ಇದನ್ನು ಗೆಳೆಯ ಎಸ್ ಕೆ ಶಾಮಸುಂದರ್ ತಮ್ಮ ವೆಬ್ ಸೈಟಿನಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ. ಮಿತ್ರರಾದ ಬಿ. ಸುರೇಶ್ ನಾಕುತಂತಿ ಪ್ರಕಾಶನದಲ್ಲಿ ಇದನ್ನು ಪ್ರಕಟಿಸುತ್ತಿದ್ದಾರೆ. ಕಾದಂಬರಿಯನ್ನು ಓದಿದ ಅನೇಕ ಓದುಗ ಮಿತ್ರರು ಮೆಚ್ಚುಗೆಯ ಮಾತಾಡಿದ್ದಾರೆ. ಗೆಳೆಯ ಗುರುಪ್ರಸಾದ ಕಾಗಿನೆಲೆ ಮುನ್ನುಡಿ ಬರೆದು ಹಾರೈಸಿದ್ದಾರೆ. ಹಸ್ತಪ್ರತಿಯಲ್ಲೇ ಓದಿದ ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮೆಚ್ಚಿ ಹರಸಿದ್ದಾರೆ. ಅಪಾರ ರಘು ನನ್ನ ಕಾಟವನ್ನೆಲ್ಲ ಸಹಿಸಿಕೊಂಡು ಮುಖಪುಟ ಮಾಡಿಕೊಟ್ಟಿದ್ದಾರೆ.
ಇವರೆಲ್ಲರಿಗೆ ಕೃತಜ್ಞತೆ ಮತ್ತು ಪ್ರೀತಿ.
ಉದಯ ಮರಕಿಣಿ, ಸೂರಿ, ಎಚ್ ಆರ್ ರಂಗನಾಥ್, ರವಿ ಹೆಗಡೆ, ರವಿ ಬೆಳಗೆರೆ, ಲಿಂಗದೇವರು, ವಿವೇಕ್ ಶಾನಭಾಗ, ಟಿ ಎನ್ ಸೀತಾರಾಮ್, ಡಾವೆಂಕಿ, ಕಾನುಗೋಡು ರಾಜೇಶ್, ಕುಂಟಿನಿ, ಗಣೇಶ್, ಜಿ ಎನ್ ಮೋಹನ್, ವೀರೇಶ್, ವಸುಧೇಂದ್ರ - ಹೀಗೆ ಎಲ್ಲಾ ಗೆಳೆಯರ ಪ್ರೀತಿ ಜಾರಿಯಲ್ಲಿದೆ. ಬೆಳದಿಂಗಳ ಹಾಗೆ ಆಪ್ಯಾಯಮಾನವಾಗಿದೆ. ಓದುಗರ ಪ್ರೀತಿ ಗರಿಕೆಯ ಕುಡಿಯಂತೆ ಹಬ್ಬುತ್ತಿದೆ.
-ಜೋಗಿ

(ನದಿಯ ನೆನಪಿನ ಹಂಗು -ಕಾದಂಬರಿಗೆ ಬರೆದ ಮುನ್ನುಡಿ)

6 comments:

ಜಿ ಎನ್ ಮೋಹನ್ said...

dear jogi
thanks
'vinaakaarana preethigaagi....'
-G N Mohan

ಜಿ ಎನ್ ಮೋಹನ್ said...

dear jogi
thanks
'vinaakaarana preethigaagi....'

ಮಲ್ಲಿಕಾಜು೯ನ ತಿಪ್ಪಾರ said...

nice munnudi sir

Anonymous said...

ಚೆನ್ನಾಗಿದೆ. ಆದ್ರೆ ಕಾದಂಬರಿನ ಯಾವಾಗ ಅಪ್‌ಡೇಟ್ ಮಾಡ್ತೀರಾ ಸಾರ್?? ಮೊದ್ಲು ಓದಿದ್ದೆಲ್ಲ ಮರ್ತೋಗ್ತಿದೆ...

-ಶರಣ್ಯಾ

veena said...

ಶ್ಯಾಮ್ ಸುಂದರ್ ಅವರ ವೆಬ್ ಸೈಟ್ ಲಿಂಕ್ ಕಳುಹಿಸಿ ನಮ್ಮನ್ನು ಉದ್ದಾರ ಮಾಡಿ ಗುರು

ಸುಪ್ತದೀಪ್ತಿ suptadeepti said...

ಜೋಗಿ ಸರ್, ತಪ್ಪೊಪ್ಪಿಗೆಯೊಂದಿಗೆ ಅಭಿನಂದನೆಗಳನ್ನೂ ಹಾಸುತ್ತಿದ್ದೇನೆ, ಒಪ್ಪಿಸಿಕೊಳ್ಳಿ.

Vee... ಇಲ್ಲಿದೆ ದಟ್ಸ್-ಕನ್ನಡದಲ್ಲಿ ಕಾದಂಬರಿ:

http://thatskannada.oneindia.in/literature/novel/index.html