Tuesday, February 5, 2008

ಇಳಿವಯಸ್ಸಿನ ಕಷ್ಟ ಹಾಗೂ ಬಲ್ಲಾಳರ ಬಂಡಾಯ!

ಇಳಿವಯಸ್ಸಿನಲ್ಲಿ ಊರು ಬಿಟ್ಟು ಬಂದವರ ಮನಸ್ಥಿತಿ ಹೇಗಿರುತ್ತದೆ? ತನಗೆ ಪರಿಚಿತವಾದ ಪರಿಸರದಿಂದ ಮತ್ತೊಂದು ಪರಿಸರಕ್ಕೆ ಕಾಲಿಟ್ಟಾಗ ಅದನ್ನು ತನ್ನ ಪರಿಸರವನ್ನಾಗಿಸಿಕೊಳ್ಳುವ ಮಾರ್ಗ ಯಾವುದು? ಅಷ್ಟಕ್ಕೂ ಒಂದು ಊರು ಅಥವಾ ಪರಿಸರ ಆಪ್ತವಾಗುವುದಕ್ಕೆ ಕಾರಣ ಏನು? ಒಂದೂರಲ್ಲಿ ಹುಟ್ಟಿ ಬೆಳೆದಿದ್ದೇವೆ ಅನ್ನುವ ಕಾರಣಕ್ಕೆ ನಾವು ಆ ಊರಲ್ಲಿ ಸುಮ್ಮನೆ ಇದ್ದುಬಿಡುತ್ತೇವಾ? ಇಲ್ಲಿರುವುದು ಸುಮ್ಮನೆ ಅಂತ ಅಂತ ನಮಗೆ ಯಾವತ್ತಾದರೂ ಅನ್ನಿಸುತ್ತದಾ?
ವ್ಯಾಸರಾಯ ಬಲ್ಲಾಳರನ್ನು ಕಂಡಾಗೆಲ್ಲ ಮೂಡುತ್ತಿದ್ದ ಪ್ರಶ್ನೆ ಇದು. ಅವರು ಬೆಂಗಳೂರಿಗೆ ಅಪರಿಚಿತರ ಹಾಗಿದ್ದರು. ಬೆಂಗಳೂರು ಅವರಿಗೆ ಅಪರಿಚಿತರಂತಿತ್ತು. ಇಬ್ಬರ ನಡುವೆ ಮಾತೇ ಸಾಧ್ಯವಿಲ್ಲವೇನೋ ಎಂಬಷ್ಟು ಮುಗುಮ್ಮಾಗಿ ಈ ಊರು ಮತ್ತು ಆ ಹಿರಿಯರು ಇದ್ದುಬಿಟ್ಟರೇನೋ?
ಇಳಿವಯಸ್ಸಿನ ಕಷ್ಟಗಳಿವು. ಅದು ಒಂದು ಕಡೆ ನೆಲೆನಿಂತ ಮನಸ್ಸನ್ನು ಕಿತ್ತು ಮತ್ತೊಂದೆಡೆ ನೆಲೆಗೊಳಿಸುವ ಕಾಲವಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಮನಸ್ಸೂ ಅಲ್ಲ. ಕಾಣದ ಕಡಲಿಗೆ ಆಗ ಮನ ಹಂಬಲಿಸುವುದಿಲ್ಲ. ಇರುವ ಜಾಗದಲ್ಲಿ ನೆಮ್ಮದಿಯನ್ನು ಹೇಗೆ ಹುಡುಕುವುದು ಎನ್ನುವ ಪ್ರಶ್ನೆಯೊಂದೇ ಮುಖ್ಯವಾಗುವ ದಿನಗಳವು.
ಅಂಥ ಅನೇಕರನ್ನು ನಾವು ನೋಡಿದ್ದೇವೆ. ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಮುಂಬಯಿಯ ಹಿರಿಯ ದಂಪತಿ ಬೆಂಗಳೂರಿಗೆ ಬಂದರು. ಇಲ್ಲಿಗೆ ಬಂದ ನಂತರ ಅವರಿಗೆ ಚಿತ್ರರಂಗದಲ್ಲಿ ಅಂಥ ಅವಕಾಶ ಸಿಗಲಿಲ್ಲ. ಸಣ್ಣಪುಟ್ಟ ಪಾತ್ರಗಳನ್ನು ಮೀರಿದ ಧನ್ಯತೆ ದೊರಕಲಿಲ್ಲ. ಆಮೇಲಾಮೇಲೆ ಚಿತ್ರರಂಗ ಕೂಡ ಅಂಥ ಪಾತ್ರಗಳ ಅಗತ್ಯವನ್ನು ನೀಗಿಕೊಂಡಿತು. ಈಗೀಗ ಬರುವ ಚಿತ್ರಗಳಲ್ಲಿ ವಯೋವೃದ್ಧರಿಗೆ ಜಾಗವೇ ಇಲ್ಲ.
ಇಂಥ ಹೊತ್ತಲ್ಲಿ ವ್ಯಾಸರಾಯ ಬಲ್ಲಾಳರು ನೆನಪಾಗುತ್ತಾರೆ. ಮುಂಬಯಿಯಲ್ಲಿದ್ದಷ್ಟು ಕಾಲವೂ ಅವರು ಚುರುಕಾಗಿದ್ದರು. ಇಲ್ಲಿಯ ಸಾಹಿತ್ಯಿಕ ರಾಜಕಾರಣದ ನೆರಳು ಅವರನ್ನು ಸೋಕಲೇ ಇಲ್ಲ. ಇಲ್ಲಿನ ಒಳಜಗಳಗಳ ಪರಿಚಯವಾಗಲೀ, ಇಲ್ಲಿ ಅಂಥದ್ದೊಂದು ಕ್ಷುದ್ರತೆ ಇದೆ ಅನ್ನುವುದಾಗಲೀ ಅವರಿಗೆ ಗೊತ್ತಿರಲಿಲ್ಲ. ಅದು ಅವರಿಗೆ ಜಗಜ್ಜಾಹೀರಾದದ್ದು ಸಾಹಿತ್ಯ ಸಮ್ಮೇಳನದ ಹೊತ್ತಲ್ಲಿ.
ಉಡುಪಿಯವರಾದ ನಿಡಂಬೂರು ವ್ಯಾಸರಾಯ ಬಲ್ಲಾಳರಿಗೆ ತಾನು ಉಡುಪಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವುದಿಲ್ಲ ಎಂದು ಊಹಿಸಲಿಕ್ಕೆ ಕಾರಣಗಳೇ ಇರಲಿಲ್ಲ. ತಾನು ಉಡುಪಿಯವನು ಎಂಬ ಹೆಮ್ಮೆ, ಪ್ರೀತಿಯ ಜೊತೆಗೇ, ತಾನು ಸಾಕಷ್ಟು ಮೌಲಿಕವಾದದ್ದನ್ನು ಬರೆದಿದ್ದೇನೆ ಎಂಬ ಅರ್ಹತೆಯೂ ಅವರ ಬೆಂಬಲಕ್ಕಿತ್ತು. ವ್ಯಾಸರಾಯ ಬಲ್ಲಾಳರು ಬರೆದ ಅನುರಕ್ತೆ’ ಸಿನಿಮಾ ಆಗಿತ್ತು. ಹಾಗೇ, ಹೇಮಂತಗಾನವೋ ವಾತ್ಸಲ್ಯಪಥವೋ ಸಿನಿಮಾ ಆಗಿತ್ತು. ಅವರ ಉತ್ತರಾಯಣ ಮೊನ್ನೆ ಮೊನ್ನೆ ಟೀವಿಯಲ್ಲಿ ಸೀರಿಯಲ್ಲಾಗಿ ಕಾಣಿಸಿಕೊಂಡಿತು. ಸಿನಿಮಾ ಜಗತ್ತಿನ ಘಟಾನುಘಟಿಗಳೆಲ್ಲ ಉತ್ತರಾಯಣ ಕಾದಂಬರಿ ಹಿಡಿದುಕೊಂಡು ಉತ್ತರಾಯಣ’, ಉತ್ತರಾಯಣ ಅಂತ ಪ್ರಚಾರ ಕೊಟ್ಟರು. ಇದಕ್ಕೂ ಮುಂಚೆ ಮೌನಿ’ಯ ಲಿಂಗದೇವರು, ಬಲ್ಲಾಳರ ಬಂಡಾಯ’ ಕಾದಂಬರಿಯನ್ನು ಸೀರಿಯಲ್ಲು ಮಾಡಿದ್ದರು.
ಅವ್ಯಾವುವೂ ಬಲ್ಲಾಳರ ಬೆಂಗಳೂರು ಬದುಕನ್ನು ಸುಗಮಗೊಳಿಸಿತು ಎಂದು ನನಗನ್ನಿಸುವುದಿಲ್ಲ. ಅವರ ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡುತ್ತೇನೆಂದು ಎಚ್ ಡಿ ಕುಮಾರಸ್ವಾಮಿ ಘೋಷಿಸಿ, ಎಸ್ ನಾರಾಯಣ್ ನಿರ್ದೇಶಕರೆಂದು ಹೇಳಿ ಪತ್ರಿಕಾಗೋಷ್ಠಿಯೂ ನಡೆಯಿತು. ಎಲ್ಲಾ ಸಿನಿಮಾ ಪತ್ರಕರ್ತರಿಗೂ ಹೆಜ್ಜೆ ಕಾದಂಬರಿಯ ಒಂದೊಂದು ಪ್ರತಿಯನ್ನೂ ಕೊಡಲಾಯಿತು ಎಂಬುದು ಹಳೇ ಸುದ್ದಿ.

ಅಲ್ಲಿಗೊಂದು ಅಧ್ಯಾಯ ಮುಗಿಯಿತು. ಈ ಸಂಭ್ರಮ, ಗದ್ದಲ ಮತ್ತು ಮರೆಗುಳಿತನದ ನಡುವೆ ಬಲ್ಲಾಳರು ಮೌನವಾಗಿದ್ದರು. ಮತ್ತೊಂದು ಕಾದಂಬರಿ ಬರೆಯುತ್ತಿದ್ದೇನೆ ಎಂದರು. ಅಲ್ಲಲ್ಲಿ ಭಾಷಣ ಮಾಡಿದರು, ಪುಸ್ತಕ ಬಿಡುಗಡೆ
ಮಾಡಿದರು. ಅವರ ಕಾದಂಬರಿಗಳನ್ನು ಓದಿದವರಿಗೆ ನಡುವಯಸ್ಸು ಮೀರುತ್ತಿತ್ತು. ಅವರ ಕಾದಂಬರಿಗಳನ್ನು ಪ್ರೀತಿಸಿದವರು ಓದುವ ಆಸಕ್ತಿ ಕಳಕೊಂಡಿದ್ದರು.
ಲೇಖಕ ಅಪ್ರಸ್ತುತನಾಗುತ್ತಾ ಹೋಗುವುದೇ ಹಾಗೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಕೊಳ್ಳುವ ಸಂಕ್ರಮಣಕಾಲದಲ್ಲಿ ಅನೇಕ ಒಳ್ಳೆಯ ಲೇಖಕರು ದಿವಂಗತರಾಗುತ್ತಾರೆ. ಟಿಕೆ ರಾಮರಾವ್, ತ್ರಿವೇಣಿ, ಶಾಂತಿನಾಥ ದೇಸಾಯಿ, ಶಂಕರ ಮೊಕಾಣಿ ಪುಣೇಕರ, ದೇವುಡು, ಗಳಗನಾಥ ಮುಂತಾದವರನ್ನೇ ನೋಡಿ. ಒಂದು ಕಾಲದ ಓದುವ ಅಭಿರುಚಿಯನ್ನು ಬೆಳಸಿದವರು ಮತ್ತೊಂದು ಕಾಲಕ್ಕೆ ಅನಾಮಧೇಯರು. ಕೇವಲ ಕೆಲವೇ ಮಂದಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಐವತ್ತು ವರುಷದ ಹಿಂದೆ ಗಳಗನಾಥರು ಅತ್ಯಂತ ಜನಪ್ರಿಯ ಲೇಖಕರು. ಮೂವತ್ತು ವರುಷಗಳ ಹಿಂದೆ ರಾಜ್‌ಕುಮಾರ್ ಐವತ್ತನೇ ಸಿನಿಮಾ ಎಂಬಷ್ಟೇ ಸಂಭ್ರಮದಲ್ಲಿ ಟಿಕೆ ರಾಮರಾವ್ ಐವತ್ತನೇ ಕಾದಂಬರಿ ಕೂಡ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಓದುಗರಿಗೂ ಪತ್ರಿಕೆಗಳಿಗೂ ಅದೊಂದು ಹೆಮ್ಮೆಯ ಸಂಗತಿಯಾಗಿತ್ತು.
ಬಲ್ಲಾಳರ ಕೊನೆಯ ದಿನಗಳು ಹೇಗಿದ್ದವು? ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪೀಠ ಸಿಗಲಿಲ್ಲ ಎಂಬ ನೋವನ್ನು ಮರೆಸಿದ್ದು ಮೂಡಬಿದರೆಯ ನುಡಿಸಿರಿ ಕಾರ್ಯಕ್ರಮ. ಅಲ್ಲೇ ಅವರು ಹುಟ್ಟುಹಬ್ಬ ಆಚರಿಸಿಕೊಂಡು ಕಣ್ಣೀರು ಹಾಕಿದ್ದರು. ಆವತ್ತು ಅವರನ್ನು ಅಲ್ಲಿ ನೋಡಿದ ಹಿರಿಯ ಪತ್ರಕರ್ತರೊಬ್ಬರು ಉಸುರಿದ್ದರು; ಬಲ್ಲಾಳರು ತುಂಬಾ ಸೊರಗಿಹೋಗಿದ್ದಾರೆ. ತುಂಬ ದಿನ ಬದುಕುವಂತೆ ಕಾಣಿಸುವುದಿಲ್ಲ.
ಅವರನ್ನು ಬೆಂಗಳೂರು ಕೊನೆಗೂ ಸ್ವೀಕರಿಸಲೇ ಇಲ್ಲ. ತನ್ನೊಳಗಿನ ಸಾಹಿತಿ ಎಂದು ಅವರನ್ನು ಪರಿಗಣಿಸಲೂ ಇಲ್ಲ. ಬಲ್ಲಾಳರ ಕತೆಗಳನ್ನು ಅವರು ಬೆಂಗಳೂರಿಗೆ ಬಂದ ನಂತರ ಸಾಹಿತ್ಯ ಜಗತ್ತು ಕೂಡ ಓದಿ ಚರ್ಚಿಸಿದ್ದು ನೆನಪಿಲ್ಲ. ಅವರ ಕುರಿತು ಅಲ್ಲೊಂದು ಇಲ್ಲೊಂದು ವಿಚಾರ ಸಂಕಿರಣಗಳು ನಡೆದವು. ವರದಿಯಾದವು. ಆದರೆ ಅವರ ಕತೆಗಳನ್ನು ಮನಸ್ಸಿಗೆ ಹತ್ತಿರವಾಗಿಸಿಕೊಳ್ಳುವುದಕ್ಕೆ ನಾವೂ ಪ್ರಯತ್ನಪಡಲಿಲ್ಲವೇನೋ?
-2-
ನಮ್ಮ ಮುಪ್ಪಿನ ದಿನಗಳು ಹೇಗಿರುತ್ತವೆ? ಆ ಪ್ರಶ್ನೆಯನ್ನು ನಾವೆಂದೂ ಕೇಳಿಕೊಳ್ಳುವುದಿಲ್ಲ. ನಾವು, ಈ ತಲೆಮಾರಿಗೆ ಸೇರಿದ ಬಹಳಷ್ಟು ಮಂದಿ ಇಂಥ ಪ್ರಶ್ನೆಯನ್ನೇನೂ ಕೇಳಿಕೊಳ್ಳಬೇಕಾಗಿಲ್ಲ. ಅದರ ಬದಲು ನಮ್ಮ ಕೊನೆಯ ದಿನಗಳು ಹೇಗಿರಬೇಕು ಎಂದು ಕೇಳಿಕೊಳ್ಳುವುದೇ ಒಳ್ಳೆಯದು.
ಕೆ ಎಸ್ ನರಸಿಂಹಸ್ವಾಮಿಯವರನ್ನು ಕೊನೆಯ ದಿನಗಳಲ್ಲಿ ನೋಡಿದ್ದು ನೆನಪಾಗುತ್ತದೆ. ಅವರು ತಮ್ಮ ಮನೆಯ ಜಗಲಿಯಲ್ಲಿ ಕುಳಿತು, ಬಿಡುಗಣ್ಣಾಗಿ ಆಕಾಶ ನೋಡುತ್ತಾ ಅದೇನೋ ಧ್ಯಾನಿಸುತ್ತಿರುವಂತೆ ಕಾಣಿಸುತ್ತಿದ್ದರು. ಅವರನ್ನು ಆ ಹೊತ್ತಲ್ಲಿ ನೋಡಿದವರು, ಮೈಸೂರ ಮಲ್ಲಿಗೆಯ ಗೀತೆಗಳನ್ನು ಬರೆದವರು ಅವರೇ ಎಂದು ಊಹಿಸುವುದು ಕೂಡ ಸಾಧ್ಯವಿರಲಿಲ್ಲ. ಅದೇ ರೀತಿ, ರಂಗಭೂಮಿಯಲ್ಲಿ ದುಡಿದವರು, ಸಿನಿಮಾರಂಗದಲ್ಲಿದ್ದವರು, ಸರ್ಕಾರದ ದೊಡ್ಡ ಹುದ್ದೆಯಲ್ಲಿರುವವರು ಎಲ್ಲರೂ ತಮ್ಮ ಅಂತಿಮ ದಿನಗಳನ್ನು ಅತ್ಯಂತ ದಯನೀಯವಾಗಿ ಕಳೆದದ್ದನ್ನು ನೋಡಿದ್ದೇವೆ. ಆಗೆಲ್ಲ ನಮ್ಮನ್ನು ಇಂಥ ಪ್ರಶ್ನೆಗಳು ಕಾಡಿರಬಹುದು.
ಹಾಗೆ ನೋಡಿದರೆ ಸಾವಿಗಿಂತ ಭಯ ಹುಟ್ಟಿಸುವುದು ವೃದ್ಧಾಪ್ಯವೇ. ನಮ್ಮೂರಿನಲ್ಲಿ ಗಣಿತ ಹೇಳಿಕೊಡುತ್ತಿದ್ದ,
ವಿದ್ಯಾರ್ಥಿಗಳ ಪಾಲಿಗೆ ಸಿಂಹಸ್ವಪ್ನದಂತಿದ್ದ ಮೇಷ್ಟರೊಬ್ಬರು ಮೊನ್ನೆ ಗಲ್ಲಕ್ಕೆ ಕೈಯಿಟ್ಟುಕೊಂಡು ಅಳುತ್ತಾ ಕೂತಿದ್ದರು. ಅವರಿಗೆ ಅವರ ಮಗ ಕಪಾಳಕ್ಕೆ ಬಾರಿಸಿ ಬುದ್ಧಿ ಹೇಳಿದ್ದ. ಮಗ ಹೀಗೆ ಮಾಡಬಹುದೇ ಎಂದು ಅವರು ಊರೆಲ್ಲ ಹೇಳಿಕೊಂಡು ಓಡಾಡುತ್ತಿದ್ದರು. ಅನುಕಂಪ ಗಿಟ್ಟಿಸುತ್ತಿದ್ದಾರೋ ನ್ಯಾಯ ಕೇಳುತ್ತಿದ್ದಾರೋ ಅನ್ನುವುದು ಕೂಡ ಗೊತ್ತಾಗದಂಥ ಸ್ಥಿತಿಯಲ್ಲಿ ಅವರಿದ್ದರು.
ಕೆಲವರು ಇನ್ನೂ ಓಡಾಡುತ್ತಿರುವಾಗಲೇ ಕಣ್ಮುಚ್ಚುತ್ತಾರೆ. ವೃತ್ತಿಯಲ್ಲಿದ್ದಾಗಲೇ ಕಣ್ಮರೆಯಾಗುವುದು ಅತ್ಯಂತ ಸುಖದಾಯಕ ಸಾವು ಎಂದು ಅನೇಕ ಸಾರಿ ಅನ್ನಿಸುತ್ತದೆ. ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ- ಅನಾಯಾಸ ಸಾವು, ದೈನ್ಯವಿಲ್ಲದ ಜೀವನ ಕೊಡಿ ಎಂದು ಹಿರಿಯರು ಕೇಳಿಕೊಳ್ಳುತ್ತಿದ್ದರು.
ಇಚ್ಚಾಮರಣಿಯಾಗಿದ್ದ ಭೀಷ್ಮ, ಯಾವತ್ತೂ ಸಾಯದ ಅಶ್ವತ್ಥಾಮ- ಮುಂತಾದವರ ಕತೆಯ ನಡುವೆಯೇ ನಮ್ಮಲ್ಲಿ ಶತಾಯುಷಿಗಳೆಂದು ಕರೆದು ಸಂಭ್ರಮಿಸುವುದೂ ಇದೆ. ಮನೆಯಲ್ಲಿ ಮೊಮ್ಮಕ್ಕಳಿದ್ದಾಗ ಅದರ ಸಂಭ್ರಮವೇ ಬೇರೆ. ಆದರೆ, ನಗರಗಳಲ್ಲಿ ವೃದ್ದಾಪ್ಯವನ್ನು ತಾಳಿಕೊಳ್ಳುವುದು ನಿಜಕ್ಕೂ ಕಷ್ಟ.
ನಮ್ಮ ಮನರಂಜನಾ ಮಾಧ್ಯಮಗಳೂ ಹೇಗಾಗಿವೆ ನೋಡಿ. ಅಲ್ಲಿ ಹಿರಿಯರಿಗೆ ಸಂತೋಷ ಕೊಡುವಂಥದ್ದೇನೂ ಇದ್ದಂತಿಲ್ಲ. ಅದೇ ಹರೆಯಕ್ಕೆ ಮೆಚ್ಚುವ ಸೀರಿಯಲ್ಲುಗಳು, ಹರೆಯಕ್ಕೆ ಇಷ್ಟವಾಗುವ ಸಿನಿಮಾಗಳು, ಹರೆಯದ ಮಂದಿ ಕೂತು ನೋಡುವಂಥ ಹಾಡುಗಳು. ವೃದ್ದಾಪ್ಯದ ಪಾತ್ರಗಳಾಗಲೀ, ಕತೆಯಾಗಲೀ ನಾವು ಹೇಳುವುದಿಲ್ಲ. ನಮ್ಮ ಪುರಾಣಗಳಲ್ಲಿ ಅನೇಕ ವೃದ್ಧರು ಬರುತ್ತಿದ್ದರು. ಆದರೆ ಅವರು ಯಾರೂ ಕ್ರಿಯಾಹೀನರಾಗಿರಲಿಲ್ಲ. ನಾವು ವೃದ್ಧರೆಂದು ಪರಿಗಣಿಸುವುದು ಧೃತರಾಷ್ಟ್ರನನ್ನು. ಆತ ಆ ವಯಸ್ಸಿನಲ್ಲೂ ಪುತ್ರವ್ಯಾಮೋಹ ಬಿಟ್ಟಿರಲಿಲ್ಲ.
ಹಾಗೆ ನೋಡಿದರೆ, ಯಾವ ಪುರಾಣದಲ್ಲಿ ದಯನೀಯ ಸ್ಥಿತಿಯಲ್ಲಿ ಕುಳಿತುಕೊಂಡು ಇಡೀ ಪರಿಸರವನ್ನು ದೂಷಿಸುತ್ತಾ ಬದುಕುವ ಒಬ್ಬನೇ ಒಬ್ಬ ಮುದುಕನೋ ಮುದುಕಿಯೋ ಸಿಗುವುದಿಲ್ಲ. ಅಲ್ಲಿ ಬರುವ ವೃದ್ಧರೆಲ್ಲ ಋಷಿಮುನಿಗಳು. ಅವರು ಸಿಟ್ಟಿಗೆ ಹೆಸರುವಾಸಿ. ಸದಾ ಸುತ್ತಾಡುತ್ತಾ, ಗಮನಿಸುತ್ತಾ ಸಿಟ್ಟಾಗುತ್ತಾ ಶಾಪಕೊಡುತ್ತಾ ಇರುವವರು. ಅಂಥ ಎನರ್ಜಿ ಅವರಿಗೆ ಬಂದದ್ದಾದರೂ ಎಲ್ಲಿಂದ.
ನಿವೃತ್ತಿ ಮನುಷ್ಯನನ್ನು ಹಾಗಾಗಿಸುತ್ತದಾ? ಹಳ್ಳಿಗಳಲ್ಲಿ ಸಾಯುವ ತನಕ ದುಡಿಯುತ್ತಾ, ಹೆಂಡ ಕುಡಿದು ತೂರಾಡುತ್ತಾ ಮುದ್ಕಾ ಎಂದು ಬೈಸಿಕೊಳ್ಳುತ್ತಾ ಓಡಾಡುವ ಅರುವತ್ತು ಎಪ್ಪತ್ತು ದಾಟಿದ ಮುದುಕರನ್ನು ಈಗಲೂ ನೋಡಬಹುದು. ಹುಟ್ಟಿದೂರಲ್ಲಿ ಹುಟ್ಟಿದ ಮನೆಯಲ್ಲಿ ಅತ್ಯುತ್ಸಾಹದಿಂದ ಓಡಾಡುವ ಮುದುಕರಿದ್ದಾರೆ. ಅದೇ ಪರವೂರಿಗೋ ಪರಸ್ಥಳಕ್ಕೋ ಹೋದ ತಕ್ಷಣ ಕಂಗಾಲಾಗುತ್ತಾರೆ.

ಇದನ್ನು ವಿಸ್ತರಿಸುವುದು ಬೇಡ. ಬಲ್ಲಾಳರ ಸಾವು ಇದನ್ನೆಲ್ಲ ನೆನಪಿಸಿತು. ನಮ್ಮ ಜೀವನ ವಿಧಾನ, ಬದುಕಿನ ಕುರಿತ ಪ್ರೀತಿ, ಬದಲಾಗುವ ಗುಣ ಇವುಗಳೇ ನಮ್ಮ ವಯಸ್ಸನ್ನು ನಿರ್ಧರಿಸುತ್ತವೆ ಎಂದು ಕಾಣುತ್ತದೆ. ಎಂಬತ್ತು ಸಮೀಪಿಸುತ್ತಿರುವ ರಂಗಕರ್ಮಿ ಎ ಎಸ್ ಮೂರ್ತಿಗಳನ್ನೇ ನೋಡಿ. ಅವರಿಗೆ ವಯಸ್ಸಾಗಿದೆ ಎಂದು ಯಾರು ತಾನೇ ಹೇಳಬಲ್ಲರು. ಹಾಗೇ, ಕಾರಂತರು ಎಂದೂ ವಯಸ್ಸಾದಂತೆ ಕಾಣಲಿಲ್ಲ. ಇವತ್ತು ಕೂಡ ಕಂಬಾರ, ಅನಂತಮೂರ್ತಿ ಯೌವನದಿಂದ ನಳನಳಿಸುವಂತೆ ಕಾಣಿಸುತ್ತಾರೆ. ದೇವಾನಂದ್ ಮಾತು ಬಿಡಿ, ನಮ್ಮ ಗಂಗೂಬಾಯಿ ಹಾನಗಲ್ ವಯಸ್ಸು ಕೂಡ ಕಾಣಿಸುವುದಿಲ್ಲ.
ವಯಸ್ಸನ್ನು ಮೀರುವುದು ಕ್ರಿಯಾಶೀಲತೆಯಲ್ಲಿದೆಯಾ? ನೋಡುವವರ ಪ್ರೀತಿಯಲ್ಲಿದೆಯಾ?
ಕೆಎಸ್‌ನ ಎಪ್ಪತ್ತು ದಾಟಿದ ನಂತರ ಬರೆದರು:

ತುಂಬಿದಿರುಳಿನ ನಡುವೆ ನಾನು ಕಿರುದೋಣಿಯಲಿ
ಈಗಲೇ ಹೊರಟಿರುವೆ ಆಚೆ ದಡಕೆ
ಬದುಕಿ ಬಾಳುವ ಮಂದಿಗರ್ಥವಾಯಿತು ಕವಿತೆ
ಅನುಭವಗಳಾಚೆಗಿದೆ ನನ್ನ ಬದುಕೆ.

9 comments:

ARUN MANIPAL said...

ಇದು ಹೀಗು ಕೂಡ ಆಗಬಹುದು ಒಳ್ಳೆಯ ಯವ್ವನವಿರುವಾಗ ಮುಂಬಯಿಯಿಗೋ,ದುಬಾಯಿಗೋ,ಅಮೆರಿಕಕ್ಕೋ ಪ್ರಯೋಜನಕ್ಕೆ ಬರುವಂತವರು ತಮ್ಮ ವ್ರದ್ಯಾಪ್ಯಕ್ಕೆ ಮಾತ್ರ ಹುಟ್ಟೂರನ್ನೊ ಅಥವಾ ತಮ್ಮ ಮೂಲಬೇರುಗಳನ್ನು ಹುಡುಕ ಹೊರಟಾಗ ಅದು ಅವರನ್ನು ಅಥವಾ ಅವರು ಅದನ್ನು ಅರ್ಥಮಾಡಕೊಳ್ಳದೆ ಹೋಗಬಹುದು.ಆಗ ಆಗುವ ಇಂಥ ತೊಳಲಾಟ ದೇವರಿಗೆ ಪ್ರೀತಿ.

Anonymous said...

ಹೀಗೊಂದು ಆಯಾಮ ಇರಬಹುದು ಎಂದು ನಾನೂ ಯೋಚಿಸಿರಲಿಲ್ಲ. ನನಗೂ ಅದು ಹೊಳೆದಿರಲಿಲ್ಲ. ಆದರೂ ಆ ನಿಲುವು ಯಾಕೋ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶ್ರೀ ಕೃಷ್ಣ ಹಿಂತಿರುಗಿ ಬಂದಾಗ ದ್ವಾರಕೆ ಅವನನ್ನು ಒಫ್ಪಿಕೊಂಡಿತ್ತಲ್ಲವೇ ಎಂದು ಯೋಚಿಸುತ್ತಿದ್ದೇನೆ.
ಹಾಗೇ, ತನ್ನೂರಲ್ಲೇ ಉಳಿದುಹೋದ ಹಿರಿಯರ ಪಾಡು ಮತ್ತೊಂದು ಥರದ್ದು. ಅವರಿಗೆ ಸೀಮೋಲ್ಲಂಘನೆಯ ಸುಖವೂ ಇಲ್ಲ. ತನ್ನೂರಿನ ಬಗ್ಗೆ ಪ್ರೀತಿಯೂ ಇಲ್ಲದಂತಾಗಿರಬಹುದಲ್ಲ.
-ಜೋಗಿ
ಪಶ್ಚಾಲ್ಲೇಖ-
ನಿಮ್ಮ ನೀರ ದಾರಿಯ ಹೆಜ್ಜೆ ಓದಿದೆ. ಕವಿತೆ ಬರಹ ಇಷ್ಟವಾಯಿತು. ಮಳೆಯಲ್ಲಿ ಮಳೆಯಾಗು ಬಾರೆ-ಯಂಥ ಸಾಲುಗಳು ಖುಷಿಕೊಟ್ಟವು.

ಸುಪ್ತದೀಪ್ತಿ suptadeepti said...

ಅರುಣ್ ಹೇಳಿದ ಮಾತು ಹೌದೆನಿಸುತ್ತದೆ. ವೃದ್ಧಾಪ್ಯದಲ್ಲಿ ಮತ್ತೆ ತಮ್ಮೂರಿಗೆ ಹಿಂತಿರುಗಿದ ಹಿರಿಯ ಜೀವಿಗಳು ಅಲ್ಲಿನ ಬದಲಾದ ಪರಿಸರಕ್ಕೆ, ಹೊಸ ಪೀಳಿಗೆಯ ಜನಗಳಿಗೆ ಹೊಂದಿಕೊಳ್ಳಲಾಗದೆ ಹೋದಾಗ ಆಗುವ ಮಾನಸಿಕ ತೊಳಲಾಟ- ಬಹುಶಃ ನರಕಕ್ಕೆ ಸಮ ಅನ್ನಬಹುದೇನೊ.

ಪ್ರಾಯ ಸಂದ ಬಳಿಕ (ಮಕ್ಕಳೊಂದಿಗೇ ಆಗಲಿ) ಹೊಸ ಊರಿನಲ್ಲಿ ಹೊಸದಾಗಿ ಜೀವನ ಆರಂಭಿಸುವುದೂ ಹೀಗೇ ಇರುತ್ತದೆ.

ದ್ವಾರಕೆ-ಶ್ರೀಕೃಷ್ಣನ ಸಂಬಂಧ ಇಂಥ ಹೋಲಿಕೆಗೆ ಹೊರತಾದದ್ದು. ದ್ವಾರಕಾವಾಸಿಗಳು ಅವನನ್ನು ದೊರೆಯಾಗಿ, ದೇವರಾಗಿ ಕಂಡಿದ್ದರಲ್ಲ!

Anonymous said...

ಬೇರೆ ದೇಶಗಳಷ್ಟು ದೂರ ಹೋಗುವುದೇಕೆ? ಹುಟ್ಟಿದೂರಿನಿಂದ ನೂರಾರು ಮೈಲು ದೂರದ ಪಟ್ಟಣಗಳ ಪಾಲಾದವರ ಪಾಡೂ ಇದಕ್ಕಿಂತ ಹೊರತಾಗಿಲ್ಲ. ಯೌವನದಲ್ಲಿ ಹೊಸ ಊರಿಗೆ ಹೊಂದಿಕೊಳ್ಳಲು ಮಾಡುವ ಹೋರಾಟಕ್ಕೊಂದು ಗುರಿ ಇರುತ್ತದೆ, ಇದು ಲೋಕಕ್ಕೆ ಅರ್ಥವೂ ಆಗುತ್ತದೆ. ಆದರೆ ನಿವೃತ್ತಿಯ ನಂತರ, ಮತ್ತೊಂದು ಹೋರಾಟ ಆರಂಭಿಸುವ ಮನಸ್ಥಿತಿ ಹೆಚ್ಚಿನವರಲ್ಲಿ ಇರುವುದಿಲ್ಲ. ಅವರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಲೋಕಕ್ಕೆ ಬೇಕಾಗಿರುವುದಿಲ್ಲ. ಅಂತಹ ಅಬ್ಬೆಪಾರಿತನ ಯಾರಾರಿಗೂ ಬೇಡ.

Anonymous said...

ನಮ್ಮ ಮುಪ್ಪಿನ ದಿನಗಳು ಹೇಗಿರುತ್ತವೆ? ಆ ಪ್ರಶ್ನೆಯನ್ನು ನಾವೆಂದೂ ಕೇಳಿಕೊಳ್ಳುವುದಿಲ್ಲ. ನಾವು, ಈ ತಲೆಮಾರಿಗೆ ಸೇರಿದ ಬಹಳಷ್ಟು ಮಂದಿ ಇಂಥ ಪ್ರಶ್ನೆಯನ್ನೇನೂ ಕೇಳಿಕೊಳ್ಳಬೇಕಾಗಿಲ್ಲ. ಅದರ ಬದಲು ನಮ್ಮ ಕೊನೆಯ ದಿನಗಳು ಹೇಗಿರಬೇಕು ಎಂದು ಕೇಳಿಕೊಳ್ಳುವುದೇ ಒಳ್ಳೆಯದು.
- These lines catchy!. Yes, our youthness and oldness are squeezed and condensed in call centres, BPO's and MNC's.

At least I didnot want this 'life', I still don't understand how the hell 'exciton-phonon' coupling (some hardcore physics concept) is related to my life!.

Dr.D.M.Sagar
Canada

Anonymous said...

ನನಗೆ ತಿಳಿದ೦ತೆ ’ಇನ್ನು ಬದುಕು ಸಾಕು’ ಎ೦ದು ತೀರ್ಮಾನಿಸಿದಾಗ ಬದುಕು ನೀರಸವೆನಿಸುತ್ತೆ. ಅದನ್ನು ಇತರರು ಕೂಡಲೇ ಗುರುತಿಸುತ್ತಾರೆ. ವಯಸ್ಸು ಕ್ರಿಯಶೀಲತೆಗೆ ಅಡ್ಡಿಯಾಗಲು ಸಾಧ್ಯವೇ ಇಲ್ಲ. ಇಳಿವಯಸ್ಸಿನಲ್ಲೂ ಗ೦ಗೂಬಾಯಿ, ಅಮಿತಾಬ್ ಬಚ್ಚನ್, ಎ ಪಿ ಜೆ ಅಬ್ದುಲ್ ಕಲಾಮ್, ಎಮ್ ಎಫ್ ಹುಸೇನ್ ಇವರೆಲ್ಲ ಎಷ್ಟು ಕ್ರಿಯಾಶೀಲರಾಗಿದ್ದಾರೆ ನೋಡಿ.

ARUN MANIPAL said...

@ಹಾಗೇ, ತನ್ನೂರಲ್ಲೇ ಉಳಿದುಹೋದ ಹಿರಿಯರ ಪಾಡು ಮತ್ತೊಂದು ಥರದ್ದು. ಅವರಿಗೆ ಸೀಮೋಲ್ಲಂಘನೆಯ ಸುಖವೂ ಇಲ್ಲ. ತನ್ನೂರಿನ ಬಗ್ಗೆ ಪ್ರೀತಿಯೂ ಇಲ್ಲದಂತಾಗಿರಬಹುದಲ್ಲ.

ಪ್ರೀತಿಯ ಜೋಗಿ...

ಹಾಗಾದರೆ ನಿಮ್ಮ "ಕಾಡಬೆಳದಿಂಗಳು" ಏನು ಹೇಳಲಿಕ್ಕೆ ಹೊರಟಿದೆ ಅನ್ನುವುದರ ಬಗ್ಗೆ ನನಗೆ ತುಂಬಾ ಗೊಂದಲವಾಗುತ್ತದೆ.

Anonymous said...

Preetiya jogi,
A very intense article. The only possible route will be to develop a sense of belonging irrespective of age. I have seen elderly who blame the surroundings and making their lives miserable, at the same time have also seen elderly who contribute and belong to the surroundings inspite of the changed circumstances. So my analysis is to change with time, belong and contribute. And not to forget, the financial independence. As you have rightly suggested, we have the opportunity to plan for our oldage and also chart a course for how not to live, rather how to live with contentment, with or without immediate family.

ಬಾನಾಡಿ said...

ಆಪ್ತವಾಗದ ಪರಿಸರದಲ್ಲಿ ಅಪರಿಚಿತನಾಗಿ ಬದುಕಿನ ಕೊನೆಯ ಕ್ಷಣಗಳನ್ನು ಕಳೆಯಲು ಕಾರಣ, ಯವ್ವನದಲ್ಲಿ ಕಳಕೊಂಡ ಬಾಲ್ಯದ ದಿನಗಳನ್ನು ವೃದ್ದ್ಯಾಪದಲ್ಲಿ ಪಡೆಯೋಣ ಎಂಬ ಆಸೆಯಿರಬೇಕು. ನಮ್ಮಲ್ಲೂ ಅನೇಕರು ವೃತ್ತಿ ಜೀವನ ಮುಗಿಸಿ ಮತ್ತೆ ನಮ್ಮ ಊರಿಗೇ ಹೋಗಿ ಅಲ್ಲಿನ ಜನರೊಂದಿಗಿರೋಣ ಎಂದು ಕನಸು ಕಟ್ಟುವುದು ಇದೆ. ಹಿಂದೆ ನಮ್ಮ ನಮ್ಮ ಊರಲ್ಲಿದ್ದ ನಮ್ಮ ಸಹವರ್ತಿಗಳು ನಾವು ಅಲ್ಲಿ ತಲುಪುವಾಗ ಇರಲಾರರು. ಜನಗಳು ಹೊಸಬರು.
ಇನ್ನು ಬಲ್ಲಾಳರಂತ ಸಾಹಿತಿಗಳ ಸೂಕ್ಷ್ಮ ಮನಸ್ಸಿನಲ್ಲಿ ಇವೆಲ್ಲ ಹೇಗೆ ನಡೆಯಿತೋ ಊಹಿಸುವುದು ಅಸಾಧ್ಯ.
ಬಾನಾಡಿ