Friday, February 8, 2008

ಹೊರಗುಳಿದವನ ಒಳಗುದಿ ಮತ್ತು ಖಂಡಾಂತರದ ಅಖಂಡ ಕನವರಿಕೆ

ಅವನು, ಹೆಂಡತಿಯಿಂದ ಯಾವತ್ತೋ ವಿಚ್ಚೇದನ ಪಡಕೊಂಡಿರುವ ಐವತ್ತೆರಡರ ಅವನು, ತನ್ನ ವಯಸ್ಸಿಗೆ, ತನ್ನ ಸ್ಥಿತಿಗೆ ಸಂಗಸುಖದ ಸಮಸ್ಯೆಯನ್ನು ಸರಳವಾಗಿಯೇ ಬಗೆಹರಿಸಿಕೊಂಡುಬಿಟ್ಟಿದ್ದ. ಪ್ರತಿ ಗುರುವಾರ ಮಧ್ಯಾಹ್ನ ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಾನೆ. ವಿಂಡ್ಸ್ ಮ್ಯಾನ್ಷನ್ನಿನ ಡೋರ್ ನಂ. 113ರ ಮುಂದೆ ನಿಂತು ಸರಿಯಾಗಿ ಎರಡು ಗಂಟೆಗೆ ಕಾಲಿಂಗ್ ಬೆಲ್ ಒತ್ತುತ್ತಾನೆ. ತನ್ನ ಹೆಸರು ಪಿಸುಗುಡುತ್ತಾನೆ. ಬಾಗಿಲು ತೆರೆಯುವವಳು ಸುರೈಯಾ. ಆತ ನೇರವಾಗಿ ಹಿತವಾದ ಪರಿಮಳದ, ಮೃದುಬೆಳಕಿನ ಬೆಡ್ರೂಮಿಗೆ ಹೋಗಿ ಬೆತ್ತಲಾಗುತ್ತಾನೆ. ಸುರೈಯಾ ಬಾತುರೂಮಿನಿಂದ ಹೊರಬಂದು ತನ್ನ ನೈಟಿಯನ್ನು ಕಿತ್ತೊಗೆದು ಅವನ ಪಕ್ಕ ಪವಡಿಸುತ್ತಾಳೆ. `ನನ್ನನ್ನು ಮಿಸ್ ಮಾಡ್ಕೊಂಡ್ಯಾ?' ಕೇಳುತ್ತಾಳೆ. `ಸದಾ ಮಿಸ್ ಮಾಡ್ಕೋತಿರ್ತೀನಿ' ಅನ್ನುತ್ತಾನೆ ಆತ. ಅವಳ ಸೂರ್ಯಕಿರಣಗಳು ಸೋಕಿದ ಗುರುತಿಲ್ಲದ ಜೇನುಬಣ್ಣದ ಮೈಯನ್ನೊಮ್ಮೆ ಮೃದುವಾಗಿ ಸವರುತ್ತಾನೆ. ಆಕೆ ಮೈಚಾಚುತ್ತಾಳೆ. ಅವಳ ಮೊಲೆಗಳನ್ನು ಮುದ್ದಿಸುತ್ತಾನೆ. ಅವರು ಪ್ರೀತಿ ಮಾಡುತ್ತಾರೆ.
ಸುರೈಯಾ ಎತ್ತರದ ತೆಳ್ಳಗಿನ ಹೆಣ್ಣು. ಉದ್ದಾದ ಕಪ್ಪಗಿನ ಕುರುಳು, ತೇವ ಕಂಗಳು. ಲೆಕ್ಕಪ್ರಕಾರ ಅವಳ ಅಪ್ಪನ ವಯಸ್ಸಾಗಿದೆ ಆತನಿಗೆ. ಆದರೆ ಲೆಕ್ಕಪ್ರಕಾರ ಒಬ್ಬಾತ ಹನ್ನೆರಡನೇ ವಯಸ್ಸಿಗೆ ಅಪ್ಪನಾಗಬಹುದು ಕೂಡ. ಆತ ಅವಳ ಕೂಡ ಒಂದು ವರುಷದಿಂದ ವಾರಕ್ಕೊಂದು ದಿನ ಕಳೆಯುತ್ತಾನೆ. ಅವನಿಗೆ ಅವಳಲ್ಲಿ ತೃಪ್ತಿ ಸಿಗುತ್ತದೆ. ವಾರವೆಂಬ ಮರಳುಗಾಡಿನ ನಡುವೆ ಅವಳೊಂದು ಓಯಸಿಸ್.
..... ತೊಂಬತ್ತು ನಿಮಿಷಗಳ ಸೆಷನ್ನಿಗೆ ಅವರು 400 ಡಾಲರ್ ಕೊಡುತ್ತಾನೆ. ಅದರಲ್ಲಿ ಅರ್ಧದಷ್ಟು ಆಕೆಯನ್ನು ನೋಡಿಕೊಳ್ಳುವ ಸಂಸ್ಥೆಗೆ ಹೋಗುತ್ತದೆ. ಸಂಸ್ಥೆಗೆ ಅಷ್ಟೊಂದು ಹೋಗುತ್ತದಲ್ಲ ಎನ್ನುವ ದುಃಖ ಅವನಿಗಿದೆ. ಆದರೆ ಆ ಫ್ಲಾಟ್ ಅವರಿಗೆ ಸೇರಿದ್ದು. ಒಮ್ಮೊಮ್ಮೆ ಆಕೆಯನ್ನು ಬೇರೆಲ್ಲಾದರೂ ಸಿಗೋಣ ಎನ್ನಬೇಕು ಅನ್ನಿಸುತ್ತದೆ. ಆದರೆ ಹೆಣ್ಣಿನೊಡನೆ ರಾತ್ರಿಯಿಡೀ ಕಳೆಯಬಹುದಾದರೂ ಹಗಲಲ್ಲಿ ಆಕೆಯನ್ನು ಸಹಿಸಿಕೊಳ್ಳೋದು ಕಷ್ಟ. ಅದು ಅವನ ಸ್ವಭಾವ.
ಸ್ವಭಾವಕ್ಕೆ ದಾಸನಾಗು. ಅದವನ ಸಿದಾ್ಧಂತವಲ್ಲ. ಅದನ್ನು ಸಿದಾ್ಧಂತ ಎಂದು ಕರೆದು ಗೌರವಿಸೋದಕ್ಕೆ ಅವನಿಗೆ ಇಷ್ಟವಿಲ್ಲ. ಅದು ಕಾನೂನು ಅಷ್ಟೇ.
ಅವನು ಆರೋಗ್ಯವಂತ. ಸ್ಪಷ್ಟವಾಗಿ ಯೋಚಿಸಬಲ್ಲ. ತನ್ನ ಆದಾಯದ ಮಿತಿಯಲ್ಲಿ ಬದುಕೋದು ಗೊತ್ತಿದೆ. ಸುಖಿಯಾಗಿದ್ದಾನೋ? ಹೌದು ಎನ್ನಬಹುದು. ಹಾಗಂತ ಅವನು ನಂಬಿದ್ದಾನೆ. ಆದರೆ ಈಡಿಪ್ನ ಕೊನೆಯ ಮಾತು ಅವನಿಗೆ ನೆನಪಿದೆ; ಸಾಯುವ ತನಕ ಯಾರೂ ಸುಖಿಯಲ್ಲ.
ಆ ಬೆಡ್ ರೂಮಿನಾಚೆಗೆ ಸುರೈಯಾಳ ಬದುಕೇನು ಅನ್ನೋದು ಅವನಿಗೆ ಗೊತ್ತಿಲ್ಲ. ಸುರೈಯಾ ಅವಳ ನಿಜವಾದ ಹೆಸರಲ್ಲ ಅನ್ನುವುದು ಗೊತ್ತಿದೆ. ಅವಳು ಮಕ್ಕಳ ತಾಯಿ ಅನ್ನುವುದು ಅವಳ ಸಂಗದಲ್ಲಿ ಅವನ ಅರಿವಿಗೆ ಬಂದಿದೆ. ಆಕೆಯ ವೃತ್ತಿ ಅದಲ್ಲ ಎಂಬ ಕಲ್ಪನೆಯೂ ಇದೆ. ಆಕೆ ವಾರಕ್ಕೆ ಒಂದೊ ಎರಡೋ ಮಧ್ಯಾಹ್ನ ಹೀಗೆ ದುಡಿಯುವ ನಗರದ ಹೊರವಲಯದ ಗೃಹಿಣಿಯಾಗಿರಬಹುದು ಅಂದುಕೊಂಡಿದ್ದಾನೆ.
ಆತ ಕೇ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸ್.ಮೂರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾನೆ. ಅವುಗಳು ಸಾಹಿತ್ಯವಲಯದಲ್ಲಿ ಸಂಚಲನೆಯನ್ನಲ್ಲ, ಸಣ್ಣ ಕಂಪನವನ್ನು ಉಂಟು ಮಾಡಲಿಲ್ಲ. ಸದ್ಯಕ್ಕೆ ಬೈರ್ನ ಇಟಲಿಯ ದಿನಗಳ ಬಗ್ಗೆ ಗೀತನಾಟಕ ಬರೆಯುತ್ತಿದ್ದಾನೆ.
ಊಟ ಕೊಡುತ್ತದೆ ಅನ್ನುವ ಕಾರಣಕ್ಕೆ ಆತ ಪಾಠ ಮಾಡುತ್ತಾನೆ. ಬೋಧನೆ ವಿನಯವನ್ನು ಕಲಿಸುತ್ತದೆ ಎಂದು ನಂಬಿದ್ದಾನೆ. ವ್ಯಂಗ್ಯವಾಗಿ ಹೇಳುವುದಾದರೆ ಕಲಿಸುವವನು ತುಂಬ ಪ್ರಬುದ್ಧವಾದ ಪಾಠಗಳನ್ನು ಕಲಿಯುತ್ತಾನೆ. ಕಲಿಯಲಿಕ್ಕೆಂದು ಬಂದವನು ಏನನ್ನೂ ಕಲಿಯೋದಿಲ್ಲ ಎಂಬುದು ಅವನ ನಂಬಿಕೆಗಳಲ್ಲೊಂದು.
ತನ್ನನ್ನು ಸುಖವಾಗಿ ಇಡುವುದಕ್ಕೆ ವಾರಕ್ಕೆ ತೊಂಬತ್ತು ನಿಮಿಷಗಳ ಸ್ತ್ರೀಸಂಗ ಸಾಕಲ್ಲ ಎಂದು ಯೋಚಿಸಿದಾಗ ಅವನಿಗೇ ಆಶ್ಚರ್ಯವಾಗುತ್ತದೆ. ಹೆಂಡತಿ ಬೇಕು, ಮನೆ ಬೇಕು, ಮದುವೆಯೆಂಬ ವ್ಯವಸ್ಥೆ ಬೇಕು ಎಂದೆಲ್ಲ ಒಮ್ಮೆ ಯೋಚಿಸಿದ್ದವನು ನಾನೇನಾ ಎಂದಾತ ಬೆರಗಾಗುತ್ತಾನೆ. ತನ್ನ ಅಗತ್ಯಗಳು ಚಿಟ್ಟೆಯಷ್ಟು ಹಗುರವಾಗಿದ್ದವಲ್ಲ ಅನ್ನಿಸುತ್ತದೆ.
********
ಇವು ನೊಬೆಲ್ ಪ್ರಶಸ್ತಿ ವಿಜೇತ ಜಾನ್ ಮ್ಯಾಕವೆಲ್ ಕುಟ್ಸೀ ಬರೆದ ಡಿಸ್ ಗ್ರೇಸ್' ಕಾದಂಬರಿಯ ಮೊದಲ ಅಧ್ಯಾಯದ ತುಣುಕುಗಳು. ನೆನಪು ಅವರಿಬ್ಬರ ನಡುವೆ ಜ್ವರದಂತೆ ಜೋತುಬಿದ್ದಿತ್ತು ಎಂಬ ಪ್ರಖರವಾದ ರೂಪಕಗಳು ಈ ಕಾದಂಬರಿಯಲ್ಲಿ ಮೇಲಿಂದ ಮೇಲೆ ಬರುತ್ತವೆ. ಹುಡುಗರ ಬಯಕೆ ನೋಟದ ಭಾರ ಹುಡುಗಿಯರಿಗೆ ಬಹುಬೇಗ ಅರ್ಥವಾಗುತ್ತದೆ ಎಂಬ ಸೂಕ್ಪ್ಮ ಗ್ರಹಿಕೆಗಳೂ ಇಲ್ಲಿವೆ. ಇದೇ ಕೃತಿಗೆ 1999ರಲ್ಲಿ ಬೂಕ್ ಪ್ರಶಸ್ತಿಯೂ ಬಂದಿದೆ.
ಮೂವತ್ತನಾಲ್ಕನೇ ವಯಸ್ಸಿಗೆ ಬರೆಯುವುದಕ್ಕೆ ಶುರುಮಾಡಿದ ಕುಟ್ಸೀ ಜಗತ್ಪ್ರಸಿದ್ಧನಾದದ್ದು 1980ರಲ್ಲಿ ಹೊರಬಂದ ವೇಟಿಂಗ್ ಫಾರ್ ಬಾರ್ಬೇರಿಯನ್ಸ್ ಕಾದಂಬರಿಯ ಮೂಲಕ. ಎರಡು ಬಾರಿ ಆತ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಆತ ಬರೆಯುತ್ತಿರುವ ಕೃತಿಯ ಹೆಸರು ` ಎಲಿಜಬೆತ ಕಾಸ್ಟೆಲೋ; ಎಂಟು ಪಾಠಗಳು, 2003. ಅದು ಕಾದಂಬರಿಯೋ ಪ್ರಬಂಧ ಸಂಕಲವೋ ಅನ್ನುವುದನ್ನು ಆತನೇ ಇನ್ನೂ ತೀರ್ಮಾನಿಸಿದಂತಿಲ್ಲ.
******
ಕುಟ್ಸೀ ಮೂಲತಃ ಕಾಫ್ಕಾ ತರಹದ ಬರಹಗಾರ. ಅವನ ಕತೆಗಳಲ್ಲಿ ಒಬ್ಬ ವ್ಯಕ್ತಿ ವಿನಾಕಾರಣ ಶಿಕ್ಪೆ ಅನುಭವಿಸುತ್ತಲೇ ಇರುತ್ತಾನೆ. ಡಿಸ್ ಗ್ರೇಸ್' ನಲ್ಲೂ ಅಷ್ಟೇ ತಾನು ಮಾಡಿದ್ದು ತಪ್ಪು ಎಂದು ಖಾತ್ರಿಯಾಗದವನಿಗೂ ಶಿಕ್ಪೆಯಾಗುತ್ತದೆ. ಕೊನೆತನಕವೂ ಆ ಶಿಕ್ಪೆಯನ್ನು ಒಪ್ಪಿಕೊಳ್ಳುವುದಕ್ಕೆ ಅವನಿಗೆ ಸಾಧ್ಯವೇ ಆಗುವುದಿಲ್ಲ.
ದಕ್ಪಿಣ ಆಫ್ರಿಕಾದ ರಾಜಕೀಯ ಪರಿಸ್ಥಿತಿಯನ್ನೂ ಅಲ್ಲಿನ ಕಷ್ಟಪರಂಪರೆಯನ್ನೂ ಓದಿ ಬಲ್ಲವರಿಗೆ ಕುಟ್ಸೀ ಕಾದಂಬರಿಗಳ ಮೂಲ ಹೊಳೆದೀತು. ನಮಗೆ ದಕ್ಪಿಣ ಆಫ್ರಿಕಾ ಪರಿಚಿತವಾಗಿದ್ದರೆ ಅದಕ್ಕೆ ಮೊದಲ ನೆಪ ಕ್ರಿಕೆ್. ಎರಡನೆಯ ಕೊಂಡಿ ಗಾಂಧಿ. ಗಾಂಧಿ ತಮ್ಮ ಹೋರಾಟ ಶುರುಮಾಡಿದ್ದು ದಕ್ಪಿಣ ಆಫ್ರಿಕಾದಲ್ಲಿ ಎಂದು ಓದಿದ್ದು ಈಗ ಕೇವಲ ನೆನಪು. ಇತ್ತೀಚೆಗೆ ದಕ್ಪಿಣಾ ಆಫ್ರಿಕಾದ ಸ್ವಾತಂತ್ರ ಪುರುಷನೆಂಬ ಕಾರಣಕ್ಕೆ ನೆಲ್ಸ್ ಮಂಡೇಲಾ ಪತ್ರಿಕೆಗಳಲ್ಲಿ ಕಾಣಿಸಿಕೊಂಡರು. ಆದರೆ ದಕ್ಪಿಣ ಆಫ್ರಿಕಾದ ರಾಜಧಾನಿ ಪ್ರಿಟೋರಿಯಾ, ಜೋಹಾ್‌ಸಬರ್‌ನಷ್ಟು ಜನಪ್ರಿಯವೇನಲ್ಲ.
ಇದನ್ನೆಲ್ಲ ಹೊರತಾಗಿಸಿ ನೋಡಿದರೂ ದಕ್ಪಿಣ ಆಫ್ರಿಕಾದ ಆಸುಪಾಸಿನ ದೇಶಗಳು ಅಚ್ಚರಿ ಹುಟ್ಟಿಸುತ್ತವೆ. ದಕ್ಪಿಣ ಆಫ್ರಿಕಾದ ಪಕ್ಕದಲ್ಲೇ ಇರುವ ಜಿಂಬಾಬ್ವೆ, ಕೀನ್ಯಾ ಮೊದಲಾದವುಗಳೆಲ್ಲ ಅದು ಹೇಗೋ ಕ್ರಿಕೆ್ನಲ್ಲಿ ಆಸಕ್ತಿ ಬೆಳೆಸಿಕೊಂಡವು. ಅಲ್ಲಿನ ಕಪ್ಪು ಕಪ್ಪು ಹುಡುಗರು ಕ್ರಿಕೆ್ ಕಲಿಗಳಾಗಿ ಆ ದೇಶಕ್ಕೊಂದು ಹೆಸರು ತಂದುಕೊಟ್ಟರು. ಕ್ರಿಕೆ್ ಜನಪ್ರಿಯವಾಗುವ ಮುಂಚೆ ಜಿಂಬಾಬ್ವೆಯಾಗಲೀ, ಕೀನ್ಯವಾಗಲೀ ಜಗತ್ತಿಗೆ ಪರಿಚಿತವಾಗಿರಲೇ ಇಲ್ಲ. ಪಕ್ಕದ ಆಲ್ಜೀರಿಯಾದಿಂದ ನೈಜೀರಿಯಾದಿಂದ ಕವಿಗಳು ಬಂದಿದ್ದರು. ಕಾದಂಬರಿಗಳು ಬಂದಿದ್ದವು. ಚಿನುವಾ ಅಚಿಬೆಯ ಮೂಲಕ ಸಾಹಿತ್ಯಾಸಕ್ತರಿಗೆ ದಕ್ಪಿಣ ಆಫ್ರಿಕಾದ ನೆರೆಯ ರಾಷ್ಟ್ರಗಳು ಗೊತ್ತಿದ್ದವು. ಆದರೆ ಸಾಹಿತ್ಯಕ್ಕಿಂತ ಹೊರತಾಗಿ ಆ ದೇಶಗಳು ಹೆಸರು ಮಾಡಿರಲಿಲ್ಲ.
ಇವತ್ತಿಗೂ ಭೂಪಟದಲ್ಲಿ ಸಾಕಷ್ಟು ಹಸುರಾಗಿ ಕಾಣುವ ದಕ್ಪಿಣ ಆಫ್ರಿಕಾದ ಚದರ ಕಿಲೋಮೀಟ್ ಜನಸಂಖ್ಯೆ 33. ಅದೇ ಹಾಂಗ್ ಕಾಂಗ್ ನಲ್ಲಿ ಒಂದು ಚದರ ಕಿಲೋಮೀಟರಿಗೆ 6628 ಮಂದಿ ಇದ್ದಾರೆ. ಭಾರತದಲ್ಲಿ ಜನದಟ್ಟಣೆ ಚದರ ಕಿಲೋಮೀಟರಿಗೆ 308; ಆಸ್ಟ್ರೇಲಿಯಾದಲ್ಲದು ಕೇವಲ 2. ಹಾಗಿದ್ದರೂ ಆಸ್ಟ್ರೇಲಿಯಾ ಮುಂದಿದೆ. ದಕ್ಪಿಣ ಆಫ್ರಿಕಾ ಹಿಂದಿದೆ. ಅದಕ್ಕೆ ಕಾರಣ ವಸಾಹತುಶಾಹಿ ಎನ್ನುವವರಿದ್ದಾರೆ. ಹಾಗೆ ನೋಡಿದರೆ ನಮಗೂ ದಕ್ಪಿಣ ಆಫ್ರಿಕಾಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಎರಡೂ ಏಕಪ್ರಕಾರವಾಗಿ ಸ್ವಾತಂತ್ರಕ್ಕೋಸ್ಕರ ಹೋರಾಡಿವೆ. ಗಾಂಧಿಗೆ ಭಾರತದ ಸ್ವಾತಂತ್ರದ ಕಲ್ಪನೆ ಹುಟ್ಟಿದ್ದು ಅಲ್ಲೇ ತಾನೆ?
ಇಷ್ಟೆಲ್ಲ ವಿವರಗಳನ್ನಿಟ್ಟುಕೊಂಡು ನೋಡಿದಾಗ ದಕ್ಪಿಣ ಆಪ್ರಿಕಾದ ಸಾಹಿತ್ಯ ನಮಗೆ ಮುಖ್ಯವಾಗುತ್ತದೆ. ಇವತ್ತು ತುಂಬ ಚೆನ್ನಾಗಿ ಬರೆಯುತ್ತಿರುವವರು ದಕ್ಪಿಣ ಆಫ್ರಿಕಾದಂಥ ನಿರ್ಲಕ್ಪ್ಯಿತ ಖಂಡಾಂರಗಳ ಲೇಖಕರೇ. ಅವರ ಅನುಭವ ಇನ್ನೂ ಮೊಂಡಾಗಿಲ್ಲ. ಅವರ ಕಷ್ಟಗಳಿನ್ನೂ ಮೊನಚು ಕಳಕೊಂಡಿಲ್ಲ. ಆರ್ಥಿಕತೆ ಮತ್ತು ಉದಾರೀಕರಣದಿಂದ ಭಾರತದಲ್ಲಾಗುತ್ತಿರುವಂತೆ, ಅಮೆರಿಕಾದಲ್ಲಿ ಎಂದೋ ಆಗಿರುವಂತೆ ಏಕಸಂಸ್ಕೃತಿ ಆವರಿಸಿಕೊಂಡಿಲ್ಲ. ಹೀಗಾಗಿ ನೈಜೀರಿಯಾದ ಒಬ್ಬ ಲೇಖಕ ತನ್ನ ಜನಾಂಗದ ನೋವುಗಳನ್ನು ಅತ್ಯಂತ ಸಮರ್ಥವಾಗಿ ಹೇಳಬಲ್ಲ. ಯಾವ ದೈನೇಸಿ ಭಾವನೆಯ ಲೇಪವೂ ಇಲ್ಲದೆ ಸಿಟ್ಟಾಗಬಲ್ಲ.
ಆದರೆ ಮುಂದುವರಿದ ಮತ್ತು ಆರ್ಥಿಕವಾಗಿ ತುಂಬ ಎತ್ತರದಲ್ಲಿರುವ ದೇಶ ಇಂಥ ಸಾಂಸ್ಕೃತಿಕ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತಾ ಹೋಗುತ್ತದೆ. ಇಂಗ್ಲೆಂಡಿನಲ್ಲಿ ಕಾವ್ಯದ ಕಾಲ ಮುಗಿದುಹೋಗಿದೆ. ನಾಟಕಗಳಿಗೆ ಹೆಸರುವಾಸಿಯಾಗಿದ್ದ ಇಂಗ್ಲಿಷ್ ಭಾಷೆ ಬರಡಾಗಿದೆ. ಅಮೆರಿಕಾದಲ್ಲಿ ಹೆಸರಿಸಬಲ್ಲ ಲೇಖಕರೇ ಇಲ್ಲ. ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುವಂಥ ಕತೆಗಳನ್ನು ಕೊಟ್ಟ ರಷ್ಯ ಇವತ್ತು ಕತೆಗಳೇ ಇಲ್ಲದ ದೇಶವಾಗಿ ಅಸ್ವಸ್ಥ ತೊಳಲುತ್ತಿದೆ. ಪುಷ್ಕಿನ್, ಗೊಗೊಲ್, ಚೆಕಾಫ್, ಗಾರ್ಕಿ, ಇವಾನ್ ಬುನಿನ್, ಟಾಲ್ ಸ್ಟಾಯ್ ಮುಂತಾದ ಸಾಹಿತಿಗಳನ್ನು ಕಂಡ ರಷ್ಯಾ ಇವತ್ತು ತನ್ನ ಕಾಲದ ತಳಮಳಗಳನ್ನು ಹಿಡಿದಿಡಲಾರದ ತಡಕಾಡುತ್ತಿದೆ. ಕಾರ್‌ಮಾಕನನ್ನು ಕಂಡ ಜರ್ಮನಿಯಲ್ಲಿ ಇವತ್ತು ಬೆಂಗಳೂರಿನ ಉತ್ತರಾದಿ ಮಠದಿಂದ ಹೋದ ಮಧ್ವವಟುಗಳು ಕಂಗೊಳಿಸುತ್ತಿದ್ದಾರೆ. ಲೆನಿನ್, ಸೋಲ್ಜೆನಿತ್ಸಿನ್ ಮತ್ತು ಟ್ರಾಟ್ಸ್ಕಿಯಂಥವರಿದ್ದ ರಷ್ಯಾದಲ್ಲಿ ಪುತ್ತಿಗೆ ಮಠಾಧೀಶರು ಮಧ್ವಾಚಾರ್ಯರು ಏನೆಂದರು ಎಂದು ಉಪದೇಶ ಕೊಟ್ಟು ಬರುತ್ತಾರೆ.
ಇಂಥ ಪರಿಸ್ಥಿತಿಯಲ್ಲಿ ಜೆ. ಎಂ. ಕುಟ್ಸಿಯಂಥವರು ಬರೆಯುವ ಕಾದಂಬರಿಗಳು ಮುಖ್ಯವಾಗುತ್ತವೆ. ಆಫ್ರಿಕಾಕ್ಕೆ ಅನ್ಯನಾಗಿಯೇ ಉಳಿದ ಕುಟ್ಸೀ ಕಲಿತದ್ದು ಜರ್ಮ್ ಮತ್ತು ಇಂಗ್ಲಿಷ್ ಭಾಷೆಗಳನ್ನು. ಓದಿದ್ದು ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ. ಇಂಗ್ಲೆಂಡ್ ಮತ್ತು ಅಮೆರಿಕಾಗಳಲ್ಲಿ ಜೀವಿಸಿದ ಕುಟ್ಸೀ ಸದ್ಯಕ್ಕೆ ಆಸ್ಟ್ರೇಲಿಯಾದ ಅಡಿಲೇಡ್ ಯೂನಿವರ್ಸಿಟಿಯಲ್ಲಿದ್ದಾರೆ.

*******
ಒಂದು ರಾಷ್ಟ್ರದಲ್ಲಾಗುವ ರಾಜಕೀಯ ಬದಲಾವಣೆಗಳು ಮನುಷ್ಯನ ಸಂಕಟವನ್ನು ಖಂಡಿತಾ ಅಳಿಸಲಾರವು ಎನ್ನುವುದನ್ನು ಕುಟ್ಸೀಯ ಡಿಸ್ ಗ್ರೇಸ್' ಕಾದಂಬರಿ ಹೇಳುತ್ತದೆ ಅನ್ನುತ್ತಾರೆ. ಯಾರು ರಾಜ್ಯ ಆಳಿದರೇನು, ರಾಗಿ ಬೀಸೋದು ತಪ್ಪೋದಿಲ್ಲ ಎನ್ನುವ ನಮ್ಮ ಜನಪದದ ಗಾದೆಯಷ್ಟೇ ಸರಳವಾದ ಸತ್ಯ ಇದು. ಎಲ್ಲಾ ಸತ್ಯಗಳೂ ಅಷ್ಟೇ ಸರಳವಾಗಿರುತ್ತವೆ. ಅಷ್ಟೇ ಹತ್ತಿರವಾಗಿರುತ್ತವೆ. ಹತ್ತಿರವಾಗಿವೆ ಮತ್ತು ಸರಳವಾಗಿವೆ ಎಂಬ ಕಾರಣಕ್ಕೆ ಅವು ನಮಗೆ ಮುಖ್ಯವಾಗದೇ ಹೋಗುತ್ತವೆ. ತೀರಾ ಸದರವಾಗಿಬಿಡುತ್ತವೆ.
ಇಂಥ ಸದರಗೊಂಡ ಜನಪದೀಯ ಸತ್ಯಗಳು ಮತ್ತೆ ಅನಾವರಣಗೊಳ್ಳುವುದು ಅರ್ಥ ಪಡೆದುಕೊಳ್ಳುವುದು ಹೊಸ ರಾಜಕೀಯ ಸಂದರ್ಭದೊಂದಿಗೆ ಮುಖಾಮುಖಿಯಾದಾಗ. ಹಾಗೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಸಾಹಿತ್ಯ ಮಾಡಬೇಕು. ದಶಕಗಳ ಹಿಂದೆ ಬಂದ `ತುಘಲಕ'ನಾಟಕದಲ್ಲಿ ಚರಿತ್ರೆಯೊಂದಿಗೆ ವರ್ತಮಾನ ಮುಖಾಮುಖಿಯಾಯಿತು. ಕುಟ್ಸೀಯವರ `ಡಿಸ್ ಗ್ರೇಸ್' ನಲ್ಲಿ ಗಂಡಸಿನ ಅಹಂಕಾರ ಮತ್ತು ಅಸಹಾಯಕತೆ ಎದುರುಬದುರಾಗಿದೆ.
ಕಾದಂಬರಿಯ ಮತ್ತೆರಡು ಸಾಲುಗಳು ಹೀಗಿವೆ;
`ಆ ಹುಡುಗಿಯ ಜೊತೆಗೆ ನಿನಗೆ ಸಂಬಂಧ ಇದ್ದಿದ್ದು ನಿಜವೇ?'
ಖಂಡಿತಾ ನಿಜ.
`ಸೀರಿಯಸ್?'
`ಸೀರಿಯಸ್ ಆಗಿತ್ತೋ ಇಲ್ಲವೋ ಅನ್ನೋದರಿಂದ ಪರಿಸ್ಥಿತಿ ಬದಲಾಗುತ್ತಾ? ಒಂದು ವಯಸ್ಸು ದಾಟಿದ ನಂತರ ಎಲ್ಲ ಸಂಬಂಧಗಳೂ ಸೀರಿಯಸ್ಸೇ... ಹೃದಯಾಘಾತದ ಹಾಗೆ'.
ಒಂದು ಕೃತಿಯೂ ಹಾಗೇ.

4 comments:

Anonymous said...

jogi..XOXO..hugs and kisses..delete madbedi. inyaav reeti hELbeku gottilla.

ಸುಧನ್ವಾ said...

'ಶ್ರೀ ಮನ್ಮಹಾಭಾರತ ಕಥಾಮೃತಂ’ ಎಂಬ ಭಾರತದಲ್ಲಿ ಸತ್ಯವತಿ-ಶಂತನುವಿನ ಮೊದಲ ರಾತ್ರಿಯ ಬಗ್ಗೆ ದೇರಾಜೆ ಸೀತಾರಾಮಯ್ಯರು ಬರೆದದ್ದು ಹೀಗೆ -

ದಾಶರಾಜನ ಮನೆಯಲ್ಲಿದ್ದವಳು, ಬೆಸ್ತರ ಒಡನಾಟ, ಅರಮನೆಯ ಕುರಿತಾದ ವ್ಯವಹಾರ-ತಾನು ಹೇಗೆ? ಎಂಬಿತ್ಯಾದಿ ಸಂಕೋಚಗಳಿಂದ ಖಿನ್ನಳಾಗಿರುವಳೆಂದು ಅರಸನು ಎಣಿಸಿಕೊಂಡು, ನಾಲ್ಕು ದಿನ ಹೋದಮೇಲೆ ಸರಿ ಹೋಗುತ್ತಾಳೆ ಎಂದು ಭಾವಿಸಿ ಅವನ ಚಿಂತೆಯಲ್ಲೇ ಮುಳುಗಿದನು. ಹಿರಿಯ ಮಗನ ಸುಖವೆಲ್ಲವೂ ಹಾಳಾಯಿತು-ಅವನೇ ತನಗೆ ಮದುವೆ ಮಾಡಿಸಿದನು-ಲೋಕರೂಢಿಗೆ ವಿಪರೀತವಾಯಿತು ಎಂದು ಅರಸನು ದುಮ್ಮಾನಗೊಂಡಿದ್ದಾನೆ ಎಂದು ಎಣಿಸಿಕೊಂಡು ಸ್ವಲ್ಪ ದಿವಸದ ಮೇಲೆ ತಾನಾಗಿ ಸರಿಹೋಗಬಹುದು ಎಂದು ಭಾವಿಸಿಕೊಂಡು ಅವಳು ತನ್ನ ಚಿಂತೆಯಲ್ಲೇ ಮುಳುಗಿದಳು !

'ನೆನಪು ಅವರಿಬ್ಬರ ನಡುವೆ ಜ್ವರದಂತೆ ಜೋತುಬಿದ್ದಿತ್ತು’ ಎಂದು ಕುಟ್ಸೀ ಬರೆದಿದ್ದಾನೆಂಬುದನ್ನು ಓದಿದಾಗ ಇದು ನೆನಪಾಯಿತು. ನಿಮ್ಮ ಚಾಕಚಕ್ಯತೆಯ ಬರೆಹ ಎಂದಿನಂತೆ ಚೆನ್ನಾಗಿದೆ.

Keshav Kulkarni said...

ಮೊದಲ ಕೆಲವು ಸಾಲುಗಳನ್ನು ಓದುತಿದ್ದಂತೆ ಬಸು ಭಟ್ಟಾಚಾರಯನ ಆಸ್ಠಾ ಚಿತ್ರ ನೆನಪಾಯಿತು.

ಕೇಶವ

Ultrafast said...

ಲೆಕ್ಕಪ್ರಕಾರ ಅವಳ ಅಪ್ಪನ ವಯಸ್ಸಾಗಿದೆ ಆತನಿಗೆ. ಆದರೆ ಲೆಕ್ಕಪ್ರಕಾರ ಒಬ್ಬಾತ ಹನ್ನೆರಡನೇ ವಯಸ್ಸಿಗೆ ಅಪ್ಪನಾಗಬಹುದು ಕೂಡ- This is a new calculation!.

D.M.Sagar